ಸುಮಾರು ಇಪ್ಪತ್ತೈದು ವರ್ಷಗಳ ಮುನ್ನ ನನ್ನ ಸಂಗೀತಗುರುಗಳ ಗಾನದ ಧ್ವನಿಮುದ್ರಣಕ್ಕಾಗಿ ಅರವಿಂದ್ ಸ್ಟುಡಿಯೋಗೆ ಹೋಗಿದ್ದಾಗ ಸ್ವಲ್ಪ ಹೊತ್ತಿಗೇ ಅಲ್ಲಿಯ ಸಿಬ್ಬಂದಿಯ ನಡುವೆ ಸಂಭ್ರಮೋತ್ಸಾಹಗಳು ಪುಟಿದೆದ್ದವು. ಏಕೆಂದರೆ ಕೆಲವೇ ನಿಮಿಷಗಳಲ್ಲಿ ಪ್ರಖ್ಯಾತ ನೇಪಥ್ಯಗಾಯಕ ಎಸ್. ಪಿ. ಬಾಲಸುಬ್ರಹ್ಮಣ್ಯಂ ಅವರು ತಮ್ಮ ಹಾಡೊಂದರ ಧ್ವನಿಮುದ್ರಣಕ್ಕೆ ಅಲ್ಲಿ ಬರಲಿದ್ದರು. ಮೊದಲಿನಿಂದಲೂ ಘಂಟಸಾಲ ವೇಂಕಟೇಶ್ವರರಾಯರ ಹಾಗೂ ಪಿ. ಬಿ. ಶ್ರೀನಿವಾಸರ ಗಾನಮಾಧುರ್ಯಕ್ಕೆ ಮಾರುಹೋಗಿದ್ದ ನಾನು ಬಾಲು ಅವರ (ಇದು ಅವರ ಅಶೇಷ ಅಭಿಮಾನಿಗಳು ಆತ್ಮೀಯತೆಯಿಂದ ಕರೆಯುವ ಪರಿ) ಪ್ರತಿಭೆಯನ್ನು ಮೆಚ್ಚಿಕೊಂಡಿದ್ದರೂ ಅದಕ್ಕೆ ಮನಸೋತಿರಲಿಲ್ಲ. ಹೀಗಾಗಿ ಸಂಭ್ರಮವಿಲ್ಲದಿದ್ದರೂ ಕೌತುಕದಿಂದ ಅತ್ತ ಇಣಿಕಿದೆ. ಆ ವೇಳೆಗಾಗಲೇ ಹಿನ್ನೆಲೆಹಾಡಿಕೆಯ ಜಗತ್ತಿನಲ್ಲಿ ಅನಭಿಷಿಕ್ತ, ಅಲ್ಲಲ್ಲ ವಿಧ್ಯುಕ್ತವಾಗಿ ಅಭಿಷಿಕ್ತಸಮ್ರಾಟರೇ ಆಗಿದ್ದ ಬಾಲು ಅವರು ತುಂಬ ನಿರಾಡಂಬರವಾಗಿ ನಗುನಗುತ್ತಲೇ ಎಲ್ಲರನ್ನೂ ಮಾತನಾಡಿಸಿಕೊಂಡು ಸ್ಟುಡಿಯೋ ಕೋಣೆಗೆ ಹೆಜ್ಜೆ ಇರಿಸಿದರು. ಅದೊಂದು ತೆಲುಗು ಸಿನೆಮಾದ ಹಾಡಿನ ಧ್ವನಿಮುದ್ರಣ. ಅದರ ಸಂಗೀತನಿರ್ದೇಶಕ ಚಿತ್ರರಂಗಕ್ಕೆ ಹೊಸಬ. ಪ್ರಾಯಶಃ ಆ ಸಿನೆಮಾಗೆ ಸಂಬಂಧಿಸಿದವರೆಲ್ಲ ಚಿಕ್ಕ ವಯಸ್ಸಿನವರೇ. ಅವರ ಯಾರ ವಿವರಗಳೂ ನನಗೀಗ ನೆನಪಿನಲ್ಲಿಲ್ಲ. ಅಷ್ಟೇಕೆ, ಆ ಚಲನಚಿತ್ರದ ಹೆಸರೂ ಮನಸ್ಸಿನಲ್ಲುಳಿದಿಲ್ಲ. ಬಾಲು ಎಲ್ಲರನ್ನೂ ಸ್ನೇಹಾದರಗಳಿಂದ ನಡಸಿಕೊಂಡು ಕೆಲವೇ ನಿಮಿಷಗಳಲ್ಲಿ ಅವಲೀಲೆಯಿಂದ ಹಾಡನ್ನು ಮುಗಿಸಿಕೊಟ್ಟಿದ್ದು ಮಾತ್ರ ಚೆನ್ನಾಗಿ ನೆನಪಿದೆ. ಬಹುಶಃ ಒಂದೇ ಟೇಕ್ಗೆ ಹಾಡು ಓಕೆ ಆಗಿತ್ತು.
ನನ್ನ ಅಳತೆಯಲ್ಲಂತೂ ಅದು ತೀರ ಸಾಧಾರಣಸ್ತರದ ಸಂಗೀತಸಂಯೋಜನೆ. ಆದರೆ ಬಾಲು ಅಂಥ ಸಾಮಾನ್ಯಗೀತಕ್ಕೂ ಅದರ ಅರ್ಹತೆ ಮೀರಿ ಜೀವ ತುಂಬಿದ್ದರು. ವಿಶೇಷತಃ ‘ಜವರಾಲಾ’ ಎಂಬ ಅದರ ಒಂದು ಸೊಲ್ಲನ್ನು ಅವರು ಹೃದಯಸ್ಪರ್ಶಿಯಾಗಿ ಪಲುಕಿದ್ದರು. ಬಾಲು ಅವರ ಗಾನಕ್ಕೆ ಅರ್ಪಿತವಾಗದ ನನಗೇ ಈ ಪಲುಕು ಚೆಲುವೆನಿಸಿತ್ತೆಂದರೆ ಅಲ್ಲಿದ್ದ ಸಿನೆಮಾ ಸಿಬ್ಬಂದಿಗೆ ಇನ್ನೇನೆನಿಸಿರಬೇಡ! ಎಲ್ಲರೂ ಅಹಮಹಮಿಕೆಯಿಂದ ಅಬ್ಬರದ ಮೆಚ್ಚುಗೆಯನ್ನು ಸಲ್ಲಿಸಿದ್ದರು. ಇವಾವುದಕ್ಕೂ ಕರಗಿಹೋಗದ ಬಾಲು ತಮ್ಮ ಮಗನ ವಯಸ್ಸಿನ ಸಂಗೀತನಿರ್ದೇಶಕನಿಗೆ ಹೀಗೆ ಹೇಳಿದ್ದರು: “ಅಬ್ಬಾಯ್, ನೀವು ಇಂತಟಿತೋನೆ ಮುರಿಸಿಪೋಕು. ನಾ ಕಾಲ್ಶೀಟ್ ಇಂಕಾ ಉಂದಿ. ನೀಕು ಎಂತ ಎಫೆಕ್ಟ್ ಕಾವಾಲೋ ಎಟ್ಲಾಂಟಿ ಭಾವಂ ಕಾವಾಲೋ ದಾನ್ನಿ ಮೊಹಮಾಟಂ ಲೇಕುಂಡ ಚೆಪ್ಪು. ಅಂತಾ ವಚ್ಚೇಟಟ್ಲು ಚೇದ್ದಾಮ್.” (ಅಪ್ಪಾ, ನೀನು ಇಷ್ಟಕ್ಕೇ ತೃಪ್ತಿಗೊಳ್ಳಬೇಡ. ನನ್ನ ಕಾಲ್ಶೀಟ್ ಇನ್ನೂ ಉಳಿದಿದೆ. ನಿನಗೆ ಎಂಥ ಎಫೆಕ್ಟ್ ಬೇಕೋ ಇನ್ನೆಂಥ ಭಾವ ಬೇಕೋ ಅದನ್ನು ಸಂಕೋಚವಿಲ್ಲದೆ ಹೇಳು. ಅದೆಲ್ಲ ಬರುವಂತೆ ಮಾಡೋಣ.) ಆ ತರುಣ ಏನನ್ನೂ ಹೇಳುವ ಸ್ಥಿತಿಯಲ್ಲಿರಲಿಲ್ಲ! ಅವನ ಸಂಗೀತಸಂಯೋಜನೆಗೆ ಮೀರಿದ ಸೊಗಸು ಆಗಲೇ ಸಿದ್ಧವಾಗಿತ್ತು. ಆದರೂ ಬಾಲು ಅವರು ಬಿಡದೆ ಮತ್ತೆ ಹಲವಾರು ಬಾರಿ ಪಲ್ಲವಿಯನ್ನು ಹಾಡಿದರು; ‘ಜವರಾಲಾ’ಎಂಬ ಪದಕ್ಕೆ ಬೇರೆ ಬೇರೆ ಸಂಗತಿಗಳನ್ನು ಜೋಡಿಸಿದರು. ಕಡೆಗೆ ಆ ಹಾಡಿನ ಪೂರ್ಣರೂಪ ಏನಾಯಿತೋ ತಿಳಿಯದು; ನಾನು ಮಾತ್ರ ಬಾಲು ಅವರ ಬದ್ಧತೆಗೆ ಮರುಳಾಗಿದ್ದೆ. ಇಂಥ ಘಟನೆಗಳು ಅವರ ಬದುಕಿನಲ್ಲಿ ನೂರಾರು ನಡೆದುಹೋಗಿರಬಹುದು. ಅವರಿಗೆ ಇದು ಸಹಜವೇ ಆಗಿರಬಹುದು. ಆದರೆ ನನ್ನ ಪಾಲಿಗೆ ಅವರ ವ್ಯಕ್ತಿತ್ವವನ್ನು ದಕ್ಕಿಸಿಕೊಟ್ಟ ಘಟನೆ ಇದು. ಧ್ವನಿಮುದ್ರಣದ ಬಳಿಕ ಹೊರಬಂದ ಅವರಿಗೆ ನನ್ನ ಮೂಕನಮಸ್ಕಾರವನ್ನು ಸಲ್ಲಿಸಿದೆ.
ಅನಂತರದ ದಿನಗಳಲ್ಲಿ ಬಾಲು ಅವರ ಹಾಡುಗಳ ಸ್ವಾರಸ್ಯವನ್ನು ಮತ್ತಷ್ಟು ನಿಶಿತವಾಗಿ ಪರಿಶೀಲಿಸತೊಡಗಿದೆ. ಮೊದಲಿನ ಅಭಿಪ್ರಾಯಗಳು ತೀರ ಮಾರ್ಪಡಲಿಲ್ಲವಾದರೂ ಅವರ ವ್ಯಕ್ತಿತ್ವದ ಆಕರ್ಷಣೆ ಮಾತ್ರ ಹೆಚ್ಚುತ್ತಲೇ ಹೋಯಿತು. ಇಂದಿಗೂ ಅದು ಬೆಳೆಯುತ್ತಿದೆ. ಹಾಗೆಂದು ನಾನು ಅವರನ್ನು ಕಂಡು ಮಾತನಾಡಿಸಿದ್ದು ತುಂಬ ಬಾರಿಯಲ್ಲ; ಹೆಚ್ಚೆಂದರೆ ಐದಾರು ಬಾರಿ ಮಾತ್ರ. ಆದರೆ ಅವರ ಹಾಡಿಕೆಯನ್ನಲ್ಲದೆ ಮಾತು-ಬರೆಹಗಳನ್ನೂ ಸಾಕಷ್ಟು ಗಮನಿಸಿಕೊಂಡು ಬಂದಿದ್ದೇನೆ. ಒಂದು ಮಾತಿನಲ್ಲಿ ಹೇಳುವುದಾದರೆ ಆತ ನಮ್ಮ ಕಾಲದ ಸರ್ವೋಚ್ಚ ನೇಪಥ್ಯಗಾಯಕ ಮಾತ್ರವಲ್ಲ, ಹಿನ್ನೆಲೆಹಾಡಿನ ವಿಶ್ವಕೋಶ. ಅವರಿಗಿಂತ ಉತ್ತಮರೆನಿಸಬಲ್ಲ-ಅವರೇ ಹೇಳಿಕೊಳ್ಳುವಂತೆ ಅವರನ್ನು ತುಂಬ ಪ್ರಭಾವಿಸಿದ ಮೊಹಮ್ಮದ್ ರಫಿ ಮತ್ತು ಎಸ್. ಜಾನಕಿ ಅವರನ್ನೊಳಗೊಳ್ಳುವ-ಹಲವರು ಗಾಯಕರಿದ್ದಾರೆ. ಆದರೆ ಇವರಾರೂ ತಮ್ಮ ಕಲಾಕ್ಷೇತ್ರದ ಮೂಲ-ಚೂಲಗಳನ್ನು ಬಾಲು ಅವರಂತೆ ಬಲ್ಲವರಾಗಿ, ಎಲ್ಲರಿಗೂ ತಿಳಿಸಿಕೊಟ್ಟ ದಾಖಲೆ ಉಳಿದಿಲ್ಲ. ಮತ್ತೂ ಸ್ಪಷ್ಟವಾಗಿ ಹೇಳುವುದಾದರೆ, ಬಾಲು ಅವರು ಪ್ರತಿಭಾನ್ವಿತರಾದ ಕಲಾವಿದರು ಮಾತ್ರವಲ್ಲ, ಧೀಮಂತರಾದ ಕಲಾಕೋವಿದರೂ ಹೌದು. ನಾನು ಓದಿ, ಕೇಳಿ, ಸಾಕ್ಷಾತ್ತಾಗಿ ಮಾತನಾಡಿ ತಿಳಿದ ಮತ್ತೆಷ್ಟೋ ಮಂದಿ ಹಿನ್ನೆಲೆಹಾಡುಗಾರರಿಗಿಂತ ಆತ ಮಿಗಿಲಾದ ಬಹುಮುಖಪ್ರತಿಭಾಶಾಲಿ; ವಿಶಿಷ್ಟಾರ್ಥದಲ್ಲಿ ವಿದ್ವಾಂಸ. ಚಲನಚಿತ್ರಸಂಗೀತದ ಎಷ್ಟೋ ಮಂದಿಗೆ ತಮ್ಮದಾದ ಚೌಕಟ್ಟಿನಲ್ಲಿ ಕೆಲಸ ಮಾಡಿಕೊಂಡು ಹೋಗುವುದಷ್ಟೇ ತಿಳಿದಿರುತ್ತದೆ. ಅದರಲ್ಲಿ ಅವರು ಅತ್ಯುತ್ತಮರೂ ಆಗಿರುತ್ತಾರೆ. ಬಾಲು ಅವರು ಮಾತ್ರ ಆ ಚೌಕಟ್ಟನ್ನು ಮೀರಿದ ಪ್ರಜ್ಞಾವಂತರು. ಹೀಗಾಗಿಯೇ ಅವರು ನಟನೆ-ಕಂಠದಾನಗಳಂಥ ಆಚೀಚಿನ ವಲಯಗಳಿಗೂ ವಿಸ್ತರಿಸಿಕೊಂಡದ್ದಲ್ಲದೆ ರಿಯಾಲಿಟಿ ಶೋಗಳ ನಿರ್ವಹಣೆಗೂ ಮುಂದಾದರು. ಅಷ್ಟೇ ಅಲ್ಲ, ಈ ಎಲ್ಲ ಕ್ಷೇತ್ರಗಳಲ್ಲಿ ತಮ್ಮ ನೇಪಥ್ಯಗಾಯಕತ್ವದ ಪ್ರಭಾವಲಯದ ಮೇಲೆ ಬಾಳದೆ ಅಲ್ಲಿಯದೇ ಆದ ಮೌಲ್ಯಕ್ಕೆ ಬದ್ಧರಾಗಿ ದೊಡ್ಡದನ್ನು ಸಾಧಿಸಿದರು. ಪ್ರಾಯಶಃ ಚಲನಚಿತ್ರದ ನಿರ್ಮಾಪಕರಾಗಿ ಅವರು ದೊಡ್ಡ ಯಶಸ್ಸನ್ನು ಗಳಿಸಲಿಲ್ಲವೆಂಬುದನ್ನು ಬಿಟ್ಟರೆ ಮಿಕ್ಕೆಲ್ಲ ರೀತಿಯಿಂದ ಚಿತ್ರರಂಗದ ಇತಿಹಾಸಪುರುಷರಲ್ಲಿ ಒಬ್ಬರಾಗಿ ನಿಲ್ಲುತ್ತಾರೆ.
*****
ಶ್ರೀಪತಿ ಪಂಡಿತಾರಾಧ್ಯುಲ ಬಾಲಸುಬ್ರಹ್ಮಣ್ಯಂ ಹುಟ್ಟಿದ್ದು ಅಂದಿನ ಮದರಾಸು ಪ್ರಾಂತಕ್ಕೆ ಸೇರಿದ ಆಂಧ್ರಪ್ರದೇಶದ ನೆಲ್ಲೂರಿನಲ್ಲಿ; 1946ನೆಯ ಇಸವಿಯ ಜೂನ್ ನಾಲ್ಕರಂದು. ತಂದೆ ಸಾಂಬಮೂರ್ತಿಯವರು ಹರಿಕಥಾಕಾರರು, ಸಂಗೀತ-ಸಾಹಿತ್ಯಗಳಲ್ಲಿ ಒಳ್ಳೆಯ ಗತಿಯುಳ್ಳವರು. ತಾಯಿ ಶಕುಂತಲಮ್ಮನವರು. ಬಾಲ್ಯದಿಂದ ಕಲಿಕೆಯಿಲ್ಲದೆಯೇ ಒಲಿದು ಬಂದ ಹಾಡುಗಾರಿಕೆಯಲ್ಲಿ ಬಾಲು ನಿಸ್ಸೀಮ. ಅದೇ ಊರಿನಲ್ಲಿದ್ದ ಹಾಡುಗಳ ಧ್ವನಿಮುದ್ರಿಕೆಗಳನ್ನು ಮಾರುವ ಅಂಗಡಿಯಲ್ಲಿ ತೂಗುಹಾಕಿದ್ದ ಅಂದಿನ ಪ್ರಸಿದ್ಧಗಾಯಕರ ಛಾಯಾಚಿತ್ರಗಳನ್ನು ನೋಡುತ್ತ ಮೈಮರೆಯುತ್ತಿದ್ದ ಬಾಲುವಿಗೆ ತಾನೂ ಒಂದು ದಿನ ಆ ಪಂಕ್ತಿಯಲ್ಲಿ ಶಾಶ್ವತಸ್ಥಾನ ಗಳಿಸುವೆನೆಂಬ ಊಹೆಯೂ ಇರಲಿಲ್ಲ. ಆಗೀಗ ಶಾಲೆ-ಕಾಲೇಜುಗಳ ಉತ್ಸವ-ಸ್ಪರ್ಧೆಗಳಲ್ಲಿ ಹಾಡಿ ಜನಾದರಣೆ ಗಳಿಸಿದ್ದ ಬಾಲು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಪಾಲ್ಗೊಂಡ ಒಂದು ಸ್ಪರ್ಧೆ ಆತನ ಬದುಕಿಗೆ ಹೊಸ ತಿರುವನ್ನಿತ್ತಿತು. ಅಂದಿನ ಸ್ಪರ್ಧೆಯ ಬಹುಮಾನವಿತರಕರಾಗಿ ಬಂದವರು ಎಸ್. ಜಾನಕಿ. ಅವರು ಆ ವೇಳೆಗಾಗಲೇ ಹಿನ್ನೆಲೆಹಾಡಿಕೆಯಲ್ಲಿ ಪ್ರತಿಷ್ಠಿತರಾಗಿದ್ದರು. ಆ ಸ್ಪರ್ಧೆಯಲ್ಲಿ ಬಾಲು ಗಳಿಸಿದ್ದು ಎರಡನೆಯ ಸ್ಥಾನವನ್ನು. ಆಯೋಜಕರ ಅಪೇಕ್ಷೆಯ ಮೇರೆಗೆ ನಾಲ್ಕು ಮಾತುಗಳನ್ನಾಡಲು ಮುಂದಾದ ಜಾನಕಿಯವರು ತಮಗೆ ಸಹಜವಾದ ದಿಟ್ಟತನದಿಂದ ಹೀಗೆ ಹೇಳಿದರಂತೆ: “ಇಂದಿನ ಸ್ಪರ್ಧೆಯಲ್ಲಿ ಮೊದಲ ಬಹುಮಾನವನ್ನು ಗಳಿಸಿದವರು ಚೆನ್ನಾಗಿಯೇ ಹಾಡಿದರಾದರೂ ಅವರದು ಮೂಲದ ಧ್ವನಿಯನ್ನೇ ಯಥಾವತ್ತಾಗಿ ಅನುಕರಿಸುವ ಜಾಡು. ಹಾಗಲ್ಲದೆ ತನ್ನದಾದ ಧ್ವನಿಯಲ್ಲಿ ಹಾಡಿ ಎರಡನೆಯ ಸ್ಥಾನ ಗಳಿಸಿದ ಹುಡುಗನೇ ಹೆಚ್ಚಿನ ಪ್ರಶಸ್ತಿಗೆ ಅರ್ಹ.” ಬಳಿಕ ಅವರು ಬಾಲುವಿಗೆ ಕೊಟ್ಟ ಸಲಹೆ: “ನಿನ್ನ ಕಂಠದಲ್ಲಿ ಹೊಸತನವಿದೆ, ಹಾಡಿಕೆಯಲ್ಲಿ ಆಕರ್ಷಣೆಯಿದೆ. ನೀನೇಕೆ ಹಿನ್ನೆಲೆಹಾಡುಗಾರನಾಗಬಾರದು?” ಎಂದು. ತಾನೆಲ್ಲಿ, ಶಾಸ್ತ್ರೀಯಸಂಗೀತವನ್ನೇ ಅರಿಯದ ತನ್ನ ಹಿನ್ನೆಲೆಯಲ್ಲಿ? ಇಂಥ ಕನಸು ಎಂದಾದರೂ ನನಸಾದೀತೇ ಎಂಬ ಬಾಲುವಿನ ಸಂದೇಹಕ್ಕೆ ಜಾನಕಿಯವರೇ ಸಮಾಧಾನ ಹೇಳಿದರು: “ಹಿನ್ನೆಲೆಹಾಡಿಕೆಗೆ ಬೇಕಾದ ಪರಿಕರ ಬರಿಯ ಶಾಸ್ತ್ರೀಯಸಂಗೀತವಲ್ಲ. ಹಾಗೆ ನೋಡಿದರೆ ನಾನೂ ಅದನ್ನು ಕ್ರಮವಾಗಿ ಕಲಿತಿಲ್ಲ. ನೇಪಥ್ಯಗಾಯಕನಾಗಲು ನೀನೇಕೆ ಪ್ರಯತ್ನಿಸಬಾರದು?”
ಹೀಗೆ ಬೀಜಾಂಕುರವಾದ ಬಯಕೆ ಬಾಲುವನ್ನು ಎ.ಎಂ.ಐ.ಇ. ಪರೀಕ್ಷೆಯ ನೆವದಿಂದ ಅಂದಿನ ಮದರಾಸು ಪಟ್ಟಣಕ್ಕೆ ಕರೆತಂದಿತು. ಓದಿನೊಟ್ಟಿಗೆ ಅವಕಾಶಗಳಿಗಾಗಿ ಅಲೆತ ಮೊದಲಾಯಿತು. ಆ ಮಹಾನಗರದ ಸಾಂಸ್ಕೃತಿಕವೇದಿಕೆಯೊಂದು ಏರ್ಪಡಿಸಿದ ಸಿನೆಮಾ ಹಾಡಿನ ಸ್ಪರ್ಧೆಯಲ್ಲಿ ಬಾಲು ಪಾಲ್ಗೊಂಡಾಗ ತೀರ್ಪುಗಾರರಾಗಿ ಘಂಟಸಾಲ ವೇಂಕಟೇಶ್ವರರಾವ್, ಪೆಂಡ್ಯಾಲ ನಾಗೇಶ್ವರರಾವ್ ಮತ್ತು ಎಸ್. ಪಿ. ಕೋದಂಡಪಾಣಿಗಳಂಥ ಅತಿರಥ-ಮಹಾರಥರಿದ್ದರು. ಇವರೆಲ್ಲ ಬಾಲುವಿಗೆ ಮೊದಲ ಸ್ಥಾನವನ್ನಿತ್ತರು. ಮಾತ್ರವಲ್ಲ, ಮನಸಾರೆ ಮೆಚ್ಚಿ ಹರಸಿದರು. ಕೋದಂಡಪಾಣಿಯವರಂತೂ ಈತನ ಪಾಲಿಗೆ ಗಾಡ್ಫಾದರ್ ಆದರು. ತಾವೇ ದುಂಬಾಲುಬಿದ್ದು ನಿರ್ಮಾಪಕ-ನಿರ್ದೇಶಕರಿಗೆ, ಸಂಗೀತಸಂಯೋಜಕರಿಗೆ ಬಾಲುವಿನ ಪರವಾಗಿ ಶಿಫಾರಸು ಮಾಡತೊಡಗಿದರು. ಆದರೆ ಅದು ಫಲಿಸಿದ್ದು ಅವರದೇ ಸಂಗೀತನಿರ್ದೇಶನದಲ್ಲಿ ರೂಪುಗೊಂಡ ‘ಶ್ರೀಶ್ರೀಶ್ರೀಮರ್ಯಾದರಾಮನ್ನ’ಎಂಬ ಚಿತ್ರದ ‘ಏಮಿ ಈ ವಿಂತ ಮೋಹಂ’ಎಂಬ ಹಾಡಿನ ಮೂಲಕ. ಇದು ನಡೆದದ್ದು 1966ರ ಡಿಸೆಂಬರ್ ಹದಿನೈದರಂದು. ಈ ಆಸುಪಾಸಿನಲ್ಲಿಯೇ ಬಾಲು ಅವರ ಮೊದಲ ಕನ್ನಡದ ಹಾಡು ‘ಕನಸಿದೋ ನನಸಿದೋ’ಹೊರಬಂದಿತು. ಬಳಿಕ ತಮಿಳಿನ ಚಿತ್ರರಂಗಕ್ಕೂ ಪ್ರವೇಶ ದಕ್ಕಿಸಿಕೊಂಡ ಬಾಲು ಹಂತಹಂತವಾಗಿ ಮುಂದೆ ಬಂದರು. ಈ ಅವಧಿಯಲ್ಲಿ ದಕ್ಕಿದ ಯಾವ ಅವಕಾಶವೂ ಅವರನ್ನು ನಾಟಕೀಯವಾಗಿ ಒಮ್ಮೆಲೆ ಗಗನಕ್ಕೇರಿಸಲಿಲ್ಲ. ಸತತವಾದ ಪ್ರಯತ್ನ, ದಣಿವರಿಯದ ದೀಕ್ಷೆ ಮತ್ತು ಪ್ರಾಮಾಣಿಕವಾದ ಪರಿಶ್ರಮಗಳು ಅವರನ್ನು ಹಲವು ವರ್ಷಗಳ ಅವಧಿಯಲ್ಲಿ ಗಣ್ಯಕಲಾವಿದನನ್ನಾಗಿ ರೂಪಿಸಿದವು.
1974-75ರ ಹೊತ್ತಿಗೆ ಬಾಲು ನೇಪಥ್ಯಗಾಯಕರಲ್ಲಿ ಪ್ರಮುಖರಾಗಿ ಹೆಸರು ಗಳಿಸಿದ್ದರು. ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂ ಭಾಷೆಗಳ ಚಿತ್ರರಂಗ ಅವರ ಆಡುಂಬೊಲವಾಗಿತ್ತು. ಹಿರಿಯ ಕಲಾವಿದರ ಜೊತೆಯಲ್ಲಿ ಹಾಡುವ, ಪ್ರಖ್ಯಾತ ಸ್ವರಸಂಯೋಜಕರ ನೇತೃತ್ವದಲ್ಲಿ ದುಡಿಯುವ ವಿಪುಲಾವಕಾಶಗಳು ಬಂದಿದ್ದವು. ಎಂಬತ್ತರ ದಶಕದ ಹೊತ್ತಿಗಂತೂ ಅವರು ದಕ್ಷಿಣಭಾರತದ ನೇಪಥ್ಯಗಾನದ ಸಾರ್ವಭೌಮರಾಗಿದ್ದರು. ಅನಂತರ ಆದದ್ದೆಲ್ಲ ಇದೀಗ ಇತಿಹಾಸ.
ಬಾಲು ಅವರ ಸಾಧನೆಗಳ ಪಟ್ಟಿ ಹಿರಿದು. ಅದಕ್ಕೆ ದಕ್ಕಿದ ಅರ್ಹಪುರಸ್ಕಾರಗಳ ಪಟ್ಟಿಯೂ ನಿಡಿದು. ಕೆಲವೊಂದು ಮುಖ್ಯಾಂಶಗಳನ್ನು ಹೀಗೆ ಸಂಗ್ರಹಿಸಬಹುದು: ಸುಮಾರು ನಲವತ್ತು ಸಾವಿರ ಹಾಡುಗಳನ್ನು ಹದಿನಾರು ಭಾಷೆಗಳಲ್ಲಿ ಹಾಡಿದ ಹೆಮ್ಮೆ; ಒಂದೇ ದಿನದೊಳಗೆ ಇಪ್ಪತ್ತೊಂದು ಕನ್ನಡಹಾಡುಗಳನ್ನು ಧ್ವನಿಮುದ್ರಿಸಿದ ದಾಖಲೆ (8.2.1981); ಒಂದೇ ದಿನದಲ್ಲಿ ಹತ್ತೊಂಬತ್ತು ತಮಿಳುಹಾಡುಗಳನ್ನೂ ಹದಿನಾರು ಹಿಂದಿಹಾಡುಗಳನ್ನೂ ಹಾಡಿದ ಸಾಧನೆ; ನೂರಕ್ಕೂ ಹೆಚ್ಚು ಚಲನಚಿತ್ರಗಳ ಸಂಗೀತನಿರ್ದೇಶನ; ಆಂಧ್ರ, ತಮಿಳುನಾಡು, ಕರ್ಣಾಟಕ ಸರ್ಕಾರಗಳ ಅತ್ಯುಚ್ಚಸಮ್ಮಾನ; ಅತ್ಯುತ್ತಮ ಹಿನ್ನೆಲೆಹಾಡಿಕೆಗಾಗಿ ಆರು ಬಾರಿ ರಾಷ್ಟ್ರಪ್ರಶಸ್ತಿ; ಅತ್ಯುತ್ತಮ ನೇಪಥ್ಯಗಾನಕ್ಕಾಗಿ ಆಂಧ್ರಪ್ರದೇಶದಿಂದ ಇಪ್ಪತ್ತೈದು ಬಾರಿ ನಂದಿ ಪುರಸ್ಕಾರ; ಫಿಲ್ಮ್ಫೇರ್ ಪ್ರಶಸ್ತಿ; ಎನ್.ಟಿ.ಆರ್. ರಾಷ್ಟ್ರಿಯಪುರಸ್ಕಾರ; ಪದ್ಮಶ್ರೀ (2001) ಮತ್ತು ಪದ್ಮಭೂಷಣ (2011). ಇವಲ್ಲದೆ ಸಹೃದಯರಿಂದ, ಸಂಘ-ಸಂಸ್ಥೆಗಳಿಂದ ದೇಶ-ವಿದೇಶಗಳಲ್ಲಿ ಸಂದ ಸಮ್ಮಾನ-ಪುರಸ್ಕಾರಗಳಿಗೆ ಕೊನೆ-ಮೊದಲಿಲ್ಲ.
*****
ಬಾಲು ಅವರು ಕೇವಲ ನೇಪಥ್ಯಗಾಯಕರಾಗಿ ಸೀಮಿತರಾಗದೆ ಪೂರ್ಣಪ್ರಮಾಣದ ನಟರಾಗಿಯೂ ಮೂರು-ನಾಲ್ಕು ಭಾಷೆಗಳಲ್ಲಿ ಬೆಳ್ಳಿಯ ತೆರೆಯನ್ನು ನೂರಾರು ಬಾರಿ ಅಲಂಕರಿಸಿದ್ದಾರೆ. ‘ಪೆಳ್ಳಂಟೆ ನೂರೇಳ್ಳ ಪಂಟ’ (1969) ಎಂಬ ತೆಲುಗು ಚಿತ್ರದಲ್ಲಿ ಮೊದಲಿಗೆ ನಟಿಸಿದ ಬಾಲು ‘ಕೇಳಡೀ ಕಣ್ಮಣಿ’ (1990) ಎಂಬ ತಮಿಳು ಚಿತ್ರದಲ್ಲಿ ನಾಯಕನಾಗಿ ರಸಿಕರ ಮೆಚ್ಚುಗೆ ಪಡೆದು ‘ಮಿಥುನಂ’ (2012) ಎಂಬ ತೆಲುಗು ಚಿತ್ರದಲ್ಲಿ ತಾವು ನೀಡಿದ ಪ್ರಬುದ್ಧ ಅಭಿನಯಕ್ಕಾಗಿ ನಂದಿ ಪ್ರಶಸ್ತಿಯನ್ನು ಪಡೆದದ್ದೊಂದು ಸ್ಮರಣೀಯಸಾಧನೆ. ಇದೇ ರೀತಿ ಕಂಠದಾನದ ಕಲಾವಿದರಾಗಿ ಬಾಲು ಮಾಡಿದ ವಿಕ್ರಮ ಮೆಚ್ಚುವಂಥದ್ದು. ಕಮಲಹಾಸನ್, ವಿಷ್ಣುವರ್ಧನ್, ರಜನೀಕಾಂತ್, ಗಿರೀಶ್ ಕಾರ್ನಾಡ್, ಅನಿಲ್ ಕಪೂರ್, ಸಲ್ಮಾನ್ ಖಾನ್, ತಾಯಿ ನಾಗೇಶ್, ಅರ್ಜುನ್ ಸರ್ಜಾ, ಬಾಲಕೃಷ್ಣ, ರಘುವರನ್, ಕಾರ್ತಿಕ್, ಮೋಹನ್, ಬೆನ್ ಕಿಂಗ್ಸ್ಲೆ ಮುಂತಾದ ಪ್ರಸಿದ್ಧನಟರಿಗೆ ಬಾಲು ಕಂಠದಾನ ನೀಡಿದ ಕೌಶಲ ವಿಸ್ಮಯಾವಹ. ವಿಶೇಷತಃ ಕಮಲಹಾಸನ್ ನಟಿಸಿದ ‘ದಶಾವತಾರಂ’ಚಿತ್ರದ ಏಳು ವಿಭಿನ್ನಪಾತ್ರಗಳಿಗೆ ಅಷ್ಟೇ ವಿಭಿನ್ನವಾದ ಧ್ವನಿದಾನ ಮಾಡಿರುವುದು ದೊಡ್ಡ ಸಾಧನೆ. ಈ ಪಾತ್ರಗಳು ಹಲವು ಭಾಷೆಗಳಲ್ಲಿ ಮಾತನಾಡಿರುವುದಲ್ಲದೆ ಹಲವು ದೇಶಗಳ ವಿಭಿನ್ನವಯಸ್ಸುಗಳ ಹಿನ್ನೆಲೆಯವಾಗಿವೆ. ಇವುಗಳ ಪೈಕಿ ಒಂದು ಪಾತ್ರ ಹಣ್ಣುಹಣ್ಣು ಮುದುಕಿ! ಬಾಲು ಅವರಿಗೆ ‘ಅನ್ನಮಯ್ಯ’ಚಿತ್ರದ ಕಂಠದಾನಕ್ಕಾಗಿ ನಂದಿ ಪುರಸ್ಕಾರವೂ ಸಂದಿದೆ.
*****
ಇಷ್ಟೆಲ್ಲ ಸಾಧನೆ-ಸಿದ್ಧಿಗಳ ಸರದಾರರಾದ ಬಾಲು ಅವರಿಗೆ ಇವೆಲ್ಲ ಸಾಧ್ಯವಾದದ್ದಾದರೂ ಹೇಗೆಂಬ ಅಚ್ಚರಿಯ ಪ್ರಶ್ನೆ ಮೂಡುವುದು ಸಹಜ. ಅವರ ಸಾಧನೆಯ ಕೇಂದ್ರಬಿಂದು ನೇಪಥ್ಯಗಾನ. ಇದರ ಸ್ವಾರಸ್ಯಗಳನ್ನು ಪರಿಶೀಲಿಸೋಣ. ನಮ್ಮ ದೇಶದ ಚಲನಚಿತ್ರಜಗತ್ತಿನ ಗಾಯಕರು ಸಹಜವಾಗಿಯೇ ಸ್ಫೂರ್ತಿ ಗಳಿಸಿದ್ದು ರಂಗಸಂಗೀತದಿಂದ. ಉತ್ತರಭಾರತದಲ್ಲಿ ಮೊಹಮ್ಮದ್ ರಫಿ ಅವರ ಪ್ರವೇಶದವರೆಗೆ ಹಿನ್ನೆಲೆಯ ಹಾಡುಗಾರರು ತಮ್ಮ ಹಾಡಿಕೆಯಲ್ಲಿ ಸಂಗೀತ-ಸಾಹಿತ್ಯಗಳ ಅಂಶಗಳಿಗೆ ಮನ್ನಣೆ ನೀಡಿದಷ್ಟು ಅಭಿನಯಾಂಶಕ್ಕೆ ಅವಧಾನವಿರಿಸಿದಂತೆ ಕಾಣದು. ಇದೇ ಪರಿಸ್ಥಿತಿ ದಕ್ಷಿಣಭಾರತದಲ್ಲಿ ಕೂಡ ಇದ್ದಿತು. ಇದನ್ನು ಪರಿವರ್ತಿಸಿದ ಶ್ರೇಯಸ್ಸು ಪ್ರಧಾನವಾಗಿ ಬಾಲು ಅವರಿಗೆ ಸಲ್ಲಬೇಕು. ದಿಟವೇ, ಅವರ ಹಿಂದಿನ ಪೀಳಿಗೆಯವರಾದ ಘಂಟಸಾಲ, ಪಿ. ಬಿ. ಶ್ರೀನಿವಾಸ್, ಎ. ಎಂ. ರಾಜಾ, ಸೀರ್ಗಾಳಿ ಗೋವಿಂದರಾಜನ್, ಟಿ. ಎಂ. ಸೌಂದರರಾಜನ್ ಮುಂತಾದ ಘಟಾನುಘಟಿಗಳು ಶ್ರುತಿ-ಲಯಗಳ ಸಿದ್ಧಿಯಲ್ಲಿ, ರಾಗಭಾವಗಳ ಶುದ್ಧತೆಯಲ್ಲಿ ಬಾಲು ಅವರಿಗಿಂತ ಮಿಗಿಲು. ಆದರೆ ಇವರಲ್ಲಿಲ್ಲದ ನಾಟ್ಯಾಯಮಾನತೆ ಬಾಲು ಅವರ ಹಾಡಿಕೆಯಲ್ಲಿರುವುದು ಮರೆಯಲಾಗದ ಸತ್ಯ. ಇದಕ್ಕೆ ಭಾರತೀಯಸಮಾಜ ಮತ್ತದರ ಪ್ರತಿಬಿಂಬವೇ ಆದ ಚಲನಚಿತ್ರದ ರೀತಿ-ನೀತಿಗಳೂ ಕಾರಣವೆಂಬುದರಲ್ಲಿ ಸಂದೇಹವಿಲ್ಲ. ಅರವತ್ತರ ದಶಕದವರೆಗೆ ನಿರಪವಾದವೆಂಬಂತೆ ದಕ್ಷಿಣಭಾರತದ ನಾಯಕನಟರು ಹಾಡುಗಳಿಗೆ ಗಂಭೀರವಾದ ನಡೆ-ನಿಲವುಗಳಿಂದ ಮತ್ತು ಸಂಯಮಪೂರ್ಣವಾದ ಮುಖಮುದ್ರಿಕೆಗಳಿಂದ ಅಭಿನಯಿಸುತ್ತಿದ್ದರು. ಹೀಗಾಗಿ ಇಂಥ ಹಾಡುಗಳಿಗೆ ಹೆಚ್ಚಿನ ನಾಟ್ಯಾಯಮಾನತೆ ಅವಶ್ಯವಾಗಿರಲಿಲ್ಲ. ಆದರೆ ದಕ್ಷಿಣಭಾರತದಲ್ಲಿ ಹಿಂದಿ ಚಿತ್ರಗಳ ಪ್ರಭಾವ ಮತ್ತು ಹಾಲಿವುಡ್ನ ಮ್ಯೂಸಿಕಲ್ಸ್ ಪ್ರಕಾರದ ಅನುಕರಣೆ ತಲೆದೋರುತ್ತಿದ್ದಂತೆಯೇ ಇವನ್ನೆಲ್ಲ ಮೈಗೂಡಿಸಿಕೊಂಡ ಕಂಠಕ್ಕಾಗಿ ಸುಪ್ತವಾದ ಅನ್ವೇಷಣೆ ಮೊದಲಾಯಿತು. ಆ ಬೇಡಿಕೆಯನ್ನು ಸಮರ್ಥವಾಗಿ ಪೂರೈಸಿದ್ದು ಬಾಲು ಅವರೇ. ಆ ಮುನ್ನ ಹಾಸ್ಯಪಾತ್ರಗಳ ಹಾಡುಗಳಲ್ಲಿ ಮಾತ್ರ ಇಣಿಕುತ್ತಿದ್ದ ಧ್ವನಿವಿಕಾರಗಳು ನಾಯಕ-ನಾಯಿಕೆಯರ ಶೃಂಗಾರಗೀತಗಳಲ್ಲಿ ಕೂಡ ಮೈದಾಳಿದವು. ಈ ಕೆಲವು ಅಂಶಗಳನ್ನು ಹಿಂದಿನ ಹಿನ್ನೆಲೆಹಾಡುಗಾರರೂ ಅಷ್ಟಿಷ್ಟು ಮೈಗೂಡಿಸಿಕೊಳ್ಳಲು ನೋಡಿದ್ದರೂ ಅವನ್ನು ಅನ್ವಯಿಸಿಕೊಳ್ಳುವಾಗ ಅದೇನೋ ಹಿಡಿತ, ಮತ್ತೇನೋ ಮುಜುಗರ, ಇನ್ನೇನೋ ಹಿಂಜರಿಕೆಗಳು ಅಡ್ಡಿಯಾದಂತಿವೆ. ಇವನ್ನು ಆ ಕಾಲದ ಇಂಥ ಹಾಡುಗಳನ್ನು ಆಲಿಸುವಾಗ ನಾವು ಸುಲಭವಾಗಿ ಗುರುತಿಸಬಹುದು. ಈ ಮುನ್ನ ಹೆಸರಿಸಿದ ಹಲವು ಹಿರಿಯ ಗಾಯಕರಿಗಿಂತ ಬಾಲು ಅವರು ಇಪ್ಪತ್ತು-ಇಪ್ಪತ್ತೈದು ವರ್ಷಗಳಿಗೆ ಚಿಕ್ಕವರು. ಹೀಗಾಗಿ ಅವರು ತಮ್ಮ ತಲೆಮಾರಿನ ಮಾರ್ಪಾಡಿಗೆ ಸೊಗಸಾಗಿ ಹೊಂದಿಕೊಂಡದ್ದಷ್ಟೇ ಅಲ್ಲ, ತಮ್ಮ ನಚ್ಚಿನ ಗಾಯಕ ರಫಿ ಅವರ ಸ್ಫೂರ್ತಿಯಿಂದ ಹೊಸಹೊಸ ಸಾಹಸಗಳನ್ನೂ ಮಾಡಿದರು.
ಚಲನಚಿತ್ರದ ಹಾಡುಗಳೆಲ್ಲ ಮುಖ್ಯವಾಗಿ ಹಾಸ್ಯ-ಶೃಂಗಾರಗಳ ಸುತ್ತಲೇ ತಿರುಗುತ್ತಿರುತ್ತವೆ. ಆಗೀಗ ಕರುಣ-ರೌದ್ರಗಳಿಗೂ ಎಡೆಯಿರುತ್ತದೆ. ವಿಶೇಷತಃ ಸಾಮಾಜಿಕಚಿತ್ರಗಳಲ್ಲಿ ಹಾಸ್ಯ-ಶೃಂಗಾರಗಳಿಗೇ ಅಗ್ರತಾಂಬೂಲ. ಹಾಸ್ಯದಲ್ಲಿ ಧ್ವನಿವಿಕಾರಗಳಿಗೆ ಹೆಚ್ಚಿನ ಅವಕಾಶವಿರುತ್ತದೆ. ಶೃಂಗಾರದ ತುಂಟತನ, ಚೆಲ್ಲುತನ ಮತ್ತು ಒನಪು-ಒಯ್ಯಾರಗಳಿಗೆ ಅನುಕೂಲಿಸುವಂತೆ ಕಂಠದ ಬಾಗು-ಬಳುಕುಗಳು ಬಂದಷ್ಟೂ ಚೆನ್ನ. ಇವನ್ನೆಲ್ಲ ಬಾಲು ಅವರ ಕಂಠದಲ್ಲಿ ಕೇಳಬಹುದಷ್ಟೇ ಅಲ್ಲ, ಕಾಣಬಹುದು ಎಂಬುದೇ ವಿಶೇಷ! ಆದರೆ ಅವರು ಬರಿಯ ಮಿಮಿಕ್ರಿ ಕಲಾವಿದನಂತಾಗದೆ ಸ್ವಚ್ಛವಾದ ಉಚ್ಚಾರಣೆ ಮತ್ತು ಮನಮುಟ್ಟುವ ಸಾಹಿತ್ಯಶುದ್ಧಿಯಿಂದ ಗೌರವ ಗಳಿಸಿದ್ದಾರೆ. ಯಾವುದೇ ಭಾಷೆಯ ಹಾಡನ್ನು ಹಾಡುವಾಗಲೂ ಅವರು ಅದರ ನೈಸರ್ಗಿಕ ನಾದಸೌಂದರ್ಯವನ್ನು ಉಳಿಸಿಕೊಂಡಿದ್ದಾರೆ. ಒಬ್ಬ ಪಿ. ಬಿ. ಶ್ರೀನಿವಾಸ್ ಅವರನ್ನುಳಿದರೆ ದಕ್ಷಿಣಭಾರತದ ಆ ಕಾಲದ ಯಾವ ಗಾಯಕನ ದನಿಯನ್ನು ಕೇಳಿದರೂ ಅವರವರ ಮಾತೃಭಾಷೆಯ ದಟ್ಟವಾದ ವಾಸನೆ ಎದ್ದುತೋರುತ್ತಿತ್ತು. ಬಾಲು ಈ ಮಿತಿಯನ್ನು ಚೆನ್ನಾಗಿ ಮೀರಿದರು. ವಿಶೇಷವೆಂದರೆ ಇಂಥ ಮಿತಿ ಗಾಯನಿಯರನ್ನು ಹೆಚ್ಚಾಗಿ ಕಾಡಿಲ್ಲ.
‘ಏಕ್ ದೂಜೇ ಕೇ ಲಿಯೇ’ ಚಿತ್ರದಿಂದ ಬಾಲಿವುಡ್ಡಿನ ಬಾಗಿಲು ತಟ್ಟಿದ ಬಾಲು ಅವರನ್ನು ಅಲ್ಲಿಯ ಜನ ಮೊದಮೊದಲಿಗೆ ‘ಮದ್ರಾಸಿ’ಯೆಂದು ಮೂದಲಿಸಿ ಮೂಗುಮುರಿದರೂ ಸುಮಾರು ಹತ್ತು ವರ್ಷಗಳ ಕಾಲ ಏಳುನೂರಕ್ಕೂ ಹೆಚ್ಚು ಹಿಂದಿ ಹಾಡುಗಳನ್ನು ಹಾಡುವ ಅವಕಾಶ ಅವರಿಗೆ ಸಿಕ್ಕಿತೆಂದರೆ ಸಾಮಾನ್ಯದ ಮಾತಲ್ಲ.
ಬಾಲು ಅವರ ಹಾಡಿಕೆಯ ನಾಟ್ಯಾಯಮಾನತೆಗೆ ಪಿ. ಸುಶೀಲಾ ಅವರೂ ಸೇರಿದಂತೆ ದಕ್ಷಿಣಭಾರತದ ಹೆಚ್ಚಿನ ಗಾಯನಿಯರು ಸ್ಪಂದಿಸುವುದು ಕಷ್ಟವಾಯಿತೆಂದರೆ ಹೊಸ ಸವಾಲುಗಳಿಗೆ ಹೊಂದಿಕೊಳ್ಳುವ ಕ್ಲೇಶ ಎಂಥದ್ದೆಂದು ತಿಳಿಯದಿರದು. ಇದಕ್ಕೆ ಅಪವಾದವಾಗಿ ನಿಂತವರು ಎಸ್. ಜಾನಕಿ ಮಾತ್ರ. ಆದರೆ ನನ್ನ ದೃಷ್ಟಿಯಲ್ಲಿ ಇವರಿಬ್ಬರ ಹಾಡಿಕೆಯ ನಾಟ್ಯಾಯಮಾನತೆಯೇ ಅವರ ಗಾನಗಾಂಭೀರ್ಯವನ್ನು ಕುಗ್ಗಿಸಿದೆ, ನಾದಮಾಧುರ್ಯವನ್ನು ತಗ್ಗಿಸಿದೆ. ಹಿನ್ನೆಲೆಹಾಡಿಕೆಯಲ್ಲಿ ನಾಟ್ಯಾಯಮಾನತೆಯು ಆಯಾ ಚಲನಚಿತ್ರದ ದೃಶ್ಯಕ್ಕೆ ಎಷ್ಟು ಒದಗಿಬರುವುದೋ ಆ ಮಟ್ಟಿಗೆ ಆ ಹಾಡೊಂದನ್ನೇ ಆಲಿಸುವಾಗ ಅನುಕೂಲಿಸದು. ಅಷ್ಟೇಕೆ, ಅದು ಆಗ ಶ್ರುತಿಕಟುವೇ ಆಗುತ್ತದೆ. ನಿಜವೇ, ಚಲನಚಿತ್ರದ ಹಾಡಿನ ಮುಖ್ಯಪ್ರಯೋಜನ ಅಲ್ಲಿಯ ಕಥೆ, ಪಾತ್ರ ಮತ್ತು ದೃಶ್ಯಗಳ ಸಂವಿಧಾನಕ್ಕೆ ಪೂರಕವಾಗುವುದರಲ್ಲಿದೆ. ಆದರೆ ಆ ಹಾಡು ತನ್ನಂತೆಯೇ ಶ್ರೋತೃಗಳ ಹೃದಯದಲ್ಲಿ ಶಾಶ್ವತಸ್ಥಾನವನ್ನು ಗಳಿಸಬೇಕೆಂದರೆ ಶ್ರುತಿ-ಲಯ-ರಾಗ-ಭಾವಗಳ ದೃಷ್ಟಿಯಿಂದ ಸಮೃದ್ಧವಾಗಿ, ಸಾಹಿತ್ಯಸೌಂದರ್ಯದಿಂದ ಸಂಪನ್ನವಾಗಿ ಸಲ್ಲಬೇಕು. ಬಹುಶಃ ಈ ಕಾರಣದಿಂದಲೇ ಇಂದಿನ ರಸಿಕರು ಅರವತ್ತರ ದಶಕಕ್ಕಿಂತ ಹಿಂದಿನ ಹಾಡುಗಳನ್ನೇ ಮತ್ತೆ ಮತ್ತೆ ಆಲಿಸಲು ಆಶಿಸುತ್ತಾರೆ; ಅನಂತರಕಾಲದ ಹಾಡುಗಳನ್ನು ಚಲನಚಿತ್ರದ ದೃಶ್ಯಮಾಧ್ಯಮದಿಂದ ಬೇರ್ಪಡಿಸಿ ಸ್ವತಂತ್ರವಾಗಿ ಕೇಳಲು ಅಷ್ಟಾಗಿ ಬಯಸುವುದಿಲ್ಲ. ಚೋದ್ಯವೆಂದರೆ ಕಣ್ಣು ಹಳಸುವಷ್ಟು ಬೇಗ ಕಿವಿ ಹಳಸದು! ಹೀಗಾಗಿ ಎಪ್ಪತ್ತರ ದಶಕದ ಅನಂತರದ ಹಾಡುಗಳು ತಮ್ಮ ದೃಶ್ಯಗಳ ಮೂಲಕ ಸಹಜವಾಗಿಯೇ ಕಣ್ಣು ಕಿಸುರಾಗುವ ಕಾರಣ ರಸಿಕರಿಗೆ ನಿರೀಕ್ಷಿತರಂಜನೆಯನ್ನು ನೀಡುತ್ತಿಲ್ಲ. ಪ್ರಕೃತಿಯನ್ನು ಅದೆಷ್ಟು ಬಾರಿ ಕಂಡಾಗಲೂ ಹಳತಾಗಿ ತೋರುವುದಿಲ್ಲ. ಆದರೆ ಔಪಯೋಗಿಕಸ್ತರದ ಸಂಸ್ಕೃತಿಯು ಕಾಲಪ್ರವಾಹದಲ್ಲಿ ಬೇಗ ಮಾಸಿಹೋಗುತ್ತದೆ. ಈ ಸಮಸ್ಯೆ ಅಭಿಜಾತಸಂಸ್ಕೃತಿಯನ್ನು ಹೆಚ್ಚಾಗಿ ಕಾಡದು. ಆದುದರಿಂದಲೇ ಆಭಿಜಾತ್ಯದ ಸಮೃದ್ಧಿ ಹೆಚ್ಚಾಗಿರುವ ಕಲೆಗಳಿಗೆ ಬಾಳಿಕೆ ಹೆಚ್ಚು. ಇದಕ್ಕೆ ಚಲನಚಿತ್ರಸಂಗೀತವೂ ಹೊರತಲ್ಲ.
*****
ನಾಟ್ಯಾಯಮಾನತೆಯಂತೆಯೇ ಬಾಲು ಅವರ ಹಾಡುಗಳಲ್ಲಿ ಎದ್ದುಕಾಣುವ ಮತ್ತೊಂದು ಗುಣ ವೈವಿಧ್ಯ. ಇವರ ಪೂರ್ವಸೂರಿಗಳಲ್ಲಿ ಮೊಹಮ್ಮದ್ ರಫಿ ಅವರು ಇಂಥ ವೈವಿಧ್ಯವನ್ನು ನೀಡಿದವರಲ್ಲಿ ಅಗ್ರಗಣ್ಯರು. ಆದರೆ ಅವರನ್ನೂ ಮೀರಿಸುವಂತೆ ಬಾಲು ಅವರ ವೈವಿಧ್ಯಸಮೃದ್ಧಿ ಮೆರೆದಿದೆ. ನಾಯಕ, ಪ್ರತಿನಾಯಕ, ವಿದೂಷಕ, ಯುವಕ, ಮುದುಕ, ನಾಗರಕ, ಜಾನಪದ ಮುಂತಾದ ಎಲ್ಲ ಬಗೆಯ ಪಾತ್ರಗಳಿಗೂ ಸಲ್ಲುವ ಹಾಗೆ ಬಾಲು ಹಾಡಿರುವುದಲ್ಲದೆ ಅವರು ಪಾಶ್ಚಾತ್ತ್ಯ ಮತ್ತು ಪೌರಸ್ತ್ಯ ಸಂಗೀತಗಳ ಅನೇಕಪ್ರಕಾರಗಳನ್ನು ತಮ್ಮ ದನಿಯಲ್ಲಿ ಪರಿಣಾಮಕಾರಿಯಾಗಿ ಪಲುಕಿಸಿದ್ದಾರೆ. ಅನೇಕಭಾಷೆಗಳಲ್ಲಿ ಹಾಡಿದ ಶ್ರೇಯಸ್ಸು ಇವರದಾದ ಕಾರಣ ಆಯಾ ಭಾಷೆಗಳ ಸಂಸ್ಕೃತಿಗಳಿಗೆ ನಿಕಟವಾದ ಸಂಗೀತಪದ್ಧತಿಗಳೂ ಇವರ ಗೀತಗಳಲ್ಲಿ ಮಿಂಚಿವೆ. ಇಂಥ ವೈವಿಧ್ಯ ಬಾಲಿವುಡ್ ಗಾಯಕರಿಗೆ ದಕ್ಕುವುದು ಕಷ್ಟ. ಕೇವಲ ಕನ್ನಡದ ಒಂದೆರಡು ಉದಾಹರಣೆಗಳನ್ನು ಗಮನಿಸಿದರೆ ಸಾಕು, ಬಾಲು ಅವರ ಗಾನವೈವಿಧ್ಯ ಮನದಟ್ಟಾಗುತ್ತದೆ.
ಅವರ ಆರಂಭಿಕಗೀತಗಳಲ್ಲಿ ಒಂದಾದ ‘ಶುಭಾಶಯ’ (‘ಸೀತಾ’ ಚಲನಚಿತ್ರ) ಒಂದು ಕಾಲದ ಮದುವೆಯ ಮನೆಯ ಆರ್ಕೆಸ್ಟ್ರಾಗಳಿಗೆ ಅನಿವಾರ್ಯವಾಗಿತ್ತು. ಇದು ಅಸ್ವಸ್ಥನಾದ ಮಿತ್ರನೊಬ್ಬ ತನ್ನ ಗೆಳೆಯನ ಮದುವೆಯಲ್ಲಿ ನಿವೇದಿಸಿದ ಹಾರೈಕೆಯ ಹಾಡು. ಬಾಲು ಅವರು ಇಡಿಯ ಪ್ರಸಂಗವೇ ತಮ್ಮ ದನಿಯಲ್ಲಿ ಧ್ವನಿತವಾಗುವಂತೆ ಹಾಡಿದ್ದಾರೆ. ಇಲ್ಲಿರುವುದು ಅಪ್ಪಟ ಸ್ನೇಹ, ವಾತ್ಸಲ್ಯ. ಅವರ ಮತ್ತೊಂದು ಗೀತ ‘ಆಸೆಯ ಭಾವ’ (‘ಮಾಂಗಲ್ಯಭಾಗ್ಯ’) ಮಧುರವಾದ ಶೃಂಗಾರದ ಸಾಕಾರ. ‘ನಿನ್ನ ನೀನು ಮರೆತರೇನು’ (‘ದೇವರ ಕಣ್ಣು’) ಎಂಬುದು ಅನ್ಯಾಪದೇಶದ ಸೊಗಸುಳ್ಳ ಪ್ರಸನ್ನಗೀತ. ಈ ಮೂರೂ ಹಾಡುಗಳು ಆಭೇರಿ ಅಥವಾ ಭೀಮ್ಪಲಾಸ್ ರಾಗದಲ್ಲಿವೆ. ಇವುಗಳಿಂದ ವ್ಯಕ್ತವಾಗುವ ರಸ-ಭಾವಗಳು ಮಾತ್ರ ಪ್ರಸ್ಫುಟವಾಗಿ ವಿಭಿನ್ನ, ವಿನೂತನ. ಇವುಗಳಲ್ಲೆಲ್ಲ ಇರುವ ಮತ್ತೊಂದು ಸಾಮ್ಯ ಮಾಧುರ್ಯ ಮತ್ತು ಪ್ರಸಾದಗುಣಗಳ ಹೃದ್ಯವಾದ ಸಂಗಮ. ಇಂತಲ್ಲದೆ ಉಲ್ಲಾಸ, ಆಕ್ರೋಶ ಮತ್ತು ಉನ್ಮಾದಗಳು ತುಂಬಿದ ಹಾಡುಗಳಿಗೆ ಕೊರತೆಯಿಲ್ಲ. ಉದಾ: ‘ಸಂತೋಷಕ್ಕೆ ಹಾಡು’ (‘ಗೀತಾ’), ‘ಹಾವಿನ ದ್ವೇಷ’ (‘ನಾಗರಹಾವು’), ‘ನನಗಾಗಿಯೇ ಈ ಅಂದವು’ (‘ಸಹೋದರರ ಸವಾಲ್’) ಮುಂತಾದವು. ಇವುಗಳಲ್ಲಿ ಯಾವುದೊಂದನ್ನೂ ಹಿಂದಿನ ಪೀಳಿಗೆಯ ಗಾಯಕರು ಹಾಡಿ ಸೈ ಎನ್ನಿಸಿಕೊಳ್ಳಲು ಸಾಧ್ಯವಿಲ್ಲ. ಇಂಥ ಸಾವಿರಾರು ಹಾಡುಗಳು ಬಾಲು ಅವರ ಬತ್ತಳಿಕೆಯಿಂದ ಹೊಮ್ಮಿವೆ.
ಮೊದಲಿನಿಂದಲೂ ಬಾಲು ಅವರು ಪಾತ್ರಗಳಿಗೆ ತಕ್ಕಂತೆ ಧ್ವನಿಗಳನ್ನು ಮಾರ್ಪಡಿಸಿ ಹಾಡುತ್ತಾರೆಂಬ ಖ್ಯಾತಿ ಇದೆ. ಇಂಥ ಗುಣ ಮಿಕ್ಕ ಹಲವು ಹಿಂದಿನ ಗಾಯಕರಲ್ಲಿದ್ದರೂ ಇವರ ವಿಶೇಷವೆಂದರೆ ಆಯಾ ನಟರ ಕಂಠವನ್ನೇ ಮಿಡಿಯುತ್ತಿರುವಂತೆ ಹಾಡುವುದು. ಕನ್ನಡದಲ್ಲಿ ಶ್ರೀನಾಥ್ ಮತ್ತು ವಿಷ್ಣುವರ್ಧನ್ ಅವರಿಬ್ಬರಿಗೂ ಒಟ್ಟಿಗೆ ಹಾಡಿದ ‘ಕೃಷ್ಣಸ್ವಾಮಿ ರಾಮಸ್ವಾಮಿ’ (‘ಕಿಲಾಡಿ ಜೋಡಿ’) ಗೀತವನ್ನು ನಾವಿಲ್ಲಿ ನೆನೆಯಬಹುದು. ಇವರ ಮುಂದಿನ ತಲೆಮಾರಿನವರಾದ ಶಿವರಾಜ್ ಕುಮಾರ್ (‘ಶಿಲೆಗಳು ಸಂಗೀತವಾ ಹಾಡಿವೆ’; ‘ರಥಸಪ್ತಮಿ’), ರವಿಚಂದ್ರನ್ (‘ಕರುನಾಡ ತಾಯಿ’; ‘ನಾನು ನನ್ನ ಹೆಂಡತಿ’) ಮುಂತಾದವರ ದನಿಯನ್ನು ಹೋಲುವಂತೆಯೂ ಹಾಡಿರುವುದು ಗಮನಾರ್ಹ. ಅಷ್ಟೇಕೆ, ‘ಗಡಿಬಿಡಿ ಗಂಡ’ ಚಿತ್ರಕ್ಕಾಗಿ ಏಕಕಾಲದಲ್ಲಿ ಹಿರಿಯ ಹಾಸ್ಯನಟ ತಾಯಿ ನಾಗೇಶ್ ಮತ್ತು ಈಚಿನವರಾದ ರವಿಚಂದ್ರನ್ ಅವರಿಗೆ ಹಾಡಿರುವ ಪರಿ ವಿಸ್ಮಯಾವಹ (‘ನೀನು ನೀನೇ’). ತೆಲುಗಿನ ಹಾಸ್ಯನಟರಾದ ಅಲ್ಲು ರಾಮಲಿಂಗಯ್ಯ, ರಾಜಬಾಬು, ಕೆ. ವಿ. ಚಲಂ ಮುಂತಾದ ಎಷ್ಟೋ ಮಂದಿಗೆ ಬಾಲು ಅವರೇ ಹಾಡಿನ ಹಿರಿಮೆಯನ್ನು ಕಲ್ಪಿಸಿರುವುದು. ತಮಿಳಿನಲ್ಲಿ ಕಮಲಹಾಸನ್ ಮತ್ತು ರಜನೀಕಾಂತ್ ಅವರಂಥ ವಿಭಿನ್ನಶೈಲಿಯ ನಟರಿಗೆ ಹಾಡಿ ಗೆದ್ದಿರುವಂತೆಯೇ ತೆಲುಗಿನಲ್ಲಿ ಘಂಟಸಾಲ ಅವರೇ ಧ್ವನಿಯಾಗಿದ್ದ ಎನ್. ಟಿ. ರಾಮರಾವ್ ಮತ್ತು ಎ. ನಾಗೇಶ್ವರ ರಾವ್ ಅವರಿಬ್ಬರಿಗೂ ಅವರದಾದ ಶೈಲಿಯಲ್ಲಿ ಹಾಡಿದ್ದಾರೆ. ಇದಕ್ಕೊಂದು ಮಾರ್ಮಿಕ ಉದಾಹರಣೆಯೆಂದರೆ ಎನ್. ಟಿ. ಆರ್. ಅವರಿಗೆ ‘ದಾನವೀರಶೂರ ಕರ್ಣ’ ಚಿತ್ರದಲ್ಲಿ ಹಾಡಿದ ‘ಚಿತ್ರಂ ಭಳಾರೆ ವಿಚಿತ್ರಂ’ ಮತ್ತು ಎ. ಎನ್. ಆರ್. ಅವರಿಗೆ ‘ಪ್ರೇಮಾಭಿಷೇಕಂ’ ಚಿತ್ರದಲ್ಲಿ ಹಾಡಿದ ‘ಆಗದು ಆಗದು’ ಗೀತಗಳು. ಈ ಇಬ್ಬರು ಮಹಾನಟರ ಧ್ವನಿಸ್ವರೂಪಗಳನ್ನು ಬಲ್ಲವರಿಗೆ ಈ ಸಾಹಸ ಎಷ್ಟು ಕಷ್ಟವೆಂದು ಗೊತ್ತು. ಈ ಬಗೆಗೆ ಬಾಲು ಅವರೇ ಒಮ್ಮೆ ಹೇಳಿದ್ದರು: “ನಾನು ಗಾಯಕರ ಕಂಠವನ್ನು ಹೆಚ್ಚಾಗಿ ಅನುಸರಿಸುವುದಿಲ್ಲ; ಅವರ ಧ್ವನಿಯ ಏರಿಳಿತಗಳು, ಉಚ್ಚಾರಣೆಯ ಕ್ರಮ, ದೇಹಭಾಷೆ ಮತ್ತು ಶ್ರುತಿಗಳನ್ನು ಗಮನಿಸಿಕೊಂಡು ಹಾಡುತ್ತೇನೆ. ಇದು ಅವರ ಭೌತಿಕಧ್ವನಿಗಿಂತ ಮಿಗಿಲಾಗಿ ಭಾವಧ್ವನಿಗೆ ಹತ್ತಿರವಿರುವ ಕಾರಣ ಯಶಸ್ವಿ ಅನುಕರಣೆಯೆನಿಸುತ್ತದೆ.” ದಿಟವೇ, ಇದು ಮತ್ತೂ ಮಿಗಿಲಾದ ಸಾಧನೆ.
ಬಾಲು ಶಾಸ್ತ್ರೀಯಸಂಗೀತದ ಸಂಕೀರ್ಣತೆಗಳಿರುವ ಹಾಡುಗಳನ್ನು ಸಾಕಷ್ಟು ಸಂಖ್ಯೆಯಲ್ಲಿ ಹಾಡಿದ್ದಾರೆ. ತೆಲುಗಿನಲ್ಲಿ ಇವುಗಳ ಪ್ರಮಾಣ ಹೆಚ್ಚು. ‘ಶಂಕರಾಭರಣಂ’ ಚಿತ್ರಕ್ಕಾಗಿ ಅವರು ಹಾಡಿದ ಬಗೆ, ಅದಕ್ಕಾಗಿ ಮಾಡಿಕೊಂಡ ಸಿದ್ಧತೆ ಮತ್ತು ಇದರಿಂದಾದ ಪರಿಣಾಮ ದಂತಕಥೆಯಂತಾಗಿದೆ. ಇಲ್ಲಿಯ ಹಾಡುಗಳನ್ನು ಬಿಟ್ಟೂ ಗಮನಿಸುವುದಾದರೆ, ‘ವಿಧಾತ ತಲಪುನ’ (‘ಸಿರಿವೆನ್ನೆಲ’), ‘ನಾದವಿನೋದಮು’ (‘ಸಾಗರಸಂಗಮಂ’), ‘ಕೊಲುವೈ ಉನ್ನಾಡೇ’ (‘ಸ್ವರ್ಣಕಮಲಂ’) ಮುಂತಾದ ಗೀತಗಳಿವೆ. ಕೆ. ವಿಶ್ವನಾಥ್ ಅವರ ಚಿತ್ರಗಳಿಗೆ ಮಾತ್ರ ತಮ್ಮ ಮಧುರಗೀತಗಳನ್ನು ಸೀಮಿತವಾಗಿಸದೆ ಮತ್ತೆಷ್ಟೋ ನಿರ್ದೇಶಕರ ನಿರ್ಮಿತಿಗಳಲ್ಲಿಯೂ ಬಾಲು ಅದ್ಭುತವಾದ ಹಾಡುಗಳನ್ನು ಹಾಡಿದ್ದಾರೆ. ‘ಆಡವೇ ಮಯೂರಿ’ (‘ಚೆಲ್ಲೆಲಿ ಕಾಪುರಮು’), ‘ಅಭಿನವತಾರವೋ’ (‘ಶಿವರಂಜಿನಿ’), ‘ನಾ ಪಾಟ ಪಂಚಾಮೃತಂ’ (‘ಅಲ್ಲರಿ ಮೊಗುಡು’), ‘ಶ್ರೀತುಂಬುರು-ನಾರದ’ (‘ಭೈರವದ್ವೀಪಂ’) ಮುಂತಾದ ಅತ್ಯಂತ ಕ್ಲಿಷ್ಟವಾದ ಹಾಡುಗಳನ್ನು ಲೀಲಾಜಾಲವಾಗಿ ಹಾಡಿರುವುದು ಸ್ಮರಣೀಯ.
ಚಲನಚಿತ್ರಗೀತಗಳನ್ನಷ್ಟೇ ಅಲ್ಲದೆ ಖಾಸಗಿಯಾದ ಆಲ್ಬಂಗಳನ್ನೂ ಬಾಲು ಬಹುಸಂಖ್ಯೆಯಲ್ಲಿ ಹೊರತಂದಿದ್ದಾರೆ. ವಿಶೇಷತಃ ಭಕ್ತಿಗೀತಗಳು, ಸ್ತೋತ್ರಗಳು ಇಲ್ಲಿ ಸೇರಿವೆ. ಇವುಗಳ ಪೈಕಿ ಪ್ರಾತಿನಿಧಿಕವಾಗಿ ‘ಶಿವಾಷ್ಟಕ’, ‘ಬಿಲ್ವಾಷ್ಟಕ’, ‘ವಿಶ್ವನಾಥಾಷ್ಟಕ’ ಮುಂತಾದುವನ್ನು ಹೆಸರಿಸಬಹುದು. ಇಲ್ಲೆಲ್ಲ ಅವರ ಉಚ್ಚಾರಣಶುದ್ಧಿ ಎದ್ದುತೋರುತ್ತದೆ. ಒಟ್ಟಿನಲ್ಲಿ ಬಾಲು ಅವರ ಹಾಡುಗಳ ವೈವಿಧ್ಯ-ಸೌಂದರ್ಯಗಳನ್ನು ವಿವೇಚಿಸುವುದೆಂದರೆ ಅದೊಂದು ಮಹಾಗ್ರಂಥವೇ ಆಗುತ್ತದೆ. ಇವರಷ್ಟು ಸಮೃದ್ಧಸಂಖ್ಯೆಯ ಹಾಡುಗಳಲ್ಲಿ ಎಲ್ಲ ರಸಗಳನ್ನೂ ಬಿಂಬಿಸಿದವರು ಇಲ್ಲವೆಂದರೆ ಅತಿಶಯವಲ್ಲ.
*****
ಬಾಲು ಅವರ ವ್ಯಕ್ತಿತ್ವದ ಮಹನೀಯತೆ ಅವರ ಗಾಯಕತ್ವಕ್ಕಿಂತ ಮಿಗಿಲೆಂದರೆ ತಪ್ಪಾಗದು. ಸಾಧನೆ, ಸಿದ್ಧಿ, ಖ್ಯಾತಿ, ಲೋಕಪ್ರೀತಿಗಳೆಲ್ಲ ಎಣೆಯಿಲ್ಲದಷ್ಟು ಪ್ರಮಾಣದಲ್ಲಿ ಅವರಿಗೆ ಸಂದಿದ್ದರೂ ಸ್ವಸ್ಥಾನಪರಿಜ್ಞಾನವುಳ್ಳ, ಪ್ರಾಮಾಣಿಕವಾದ ನಮ್ರತೆ ತಳೆದ ಅಪೂರ್ವವ್ಯಕ್ತಿತ್ವ ಅವರದು. ಇಂಥ ಮಂದಿ ಯಾವುದೇ ರಂಗದಲ್ಲಿ ವಿರಳ. ಚಲನಚಿತ್ರಪ್ರಪಂಚದಲ್ಲಿ ಮತ್ತೂ ವಿರಳ. ಇಂದಿಗೂ ಅವರು ತಮಗೆ ಶಾಸ್ತ್ರೀಯಸಂಗೀತದಲ್ಲಿ ಹೆಚ್ಚಿನ ಗತಿಯಿಲ್ಲವೆಂಬ ವಾಸ್ತವವನ್ನು ನಮ್ರತೆಯಿಂದ ನಿವೇದಿಸುತ್ತಾರೆ. ಆರಂಭಿಕದಿನಗಳಲ್ಲಿ ತಮ್ಮನ್ನು ಹರಸಿ ಬೆಳೆಸಿದ ಹಿರಿಯರನ್ನು ಮತ್ತೆ ಮತ್ತೆ ನೆನೆಪಿಸಿಕೊಂಡು ನಮಿಸುತ್ತಾರೆ. ತಮ್ಮ ಕ್ಷೇತ್ರದ ಪೂರ್ವಸೂರಿಗಳಿಗೆ, ಹಿರಿಯ ಸಹಕಲಾವಿದರಿಗೆ ಶಿಷ್ಯನಂತೆ ನಡೆದುಕೊಳ್ಳುತ್ತಾರೆ, ಮುಂದಿನ ಪೀಳಿಗೆಯ ಕಲಾವಿದರಿಗೆ ಅಕ್ಕರೆ-ಅಭಿಮಾನಗಳನ್ನೂ ಹಂಚುತ್ತಾರೆ. ಅವರು ‘ಶಂಕರಾಭರಣಂ’ ಚಿತ್ರಕ್ಕೆ ತಾನು ಹಾಡಿದಲ್ಲಿ ಆ ಸಿನೆಮಾ ಹಾಳಾದೀತೆಂಬ ಕಳವಳವನ್ನು ವ್ಯಕ್ತಪಡಿಸಿದ್ದಲ್ಲದೆ ಜೇಸುದಾಸ್ ಅಥವಾ ಬಾಲಮುರಳೀಕೃಷ್ಣರನ್ನು ಇದಕ್ಕಾಗಿ ಕೇಳಿಕೊಳ್ಳುವುದು ಶ್ರೇಯಸ್ಕರವೆಂದು ಅಣ್ಣ ವಿಶ್ವನಾಥ್ ಅವರನ್ನು ಒತ್ತಾಯಿಸಿದ್ದರು. ಬಳಿಕ ಸಂಗೀತನಿರ್ದೇಶಕ ಕೆ. ವಿ. ಮಹಾದೇವನ್ ಮತ್ತು ಅವರ ಸಹಾಯಕ ಪುಹಳೇಂದಿ ಅವರು ಪಟ್ಟುಹಿಡಿದು ಬಾಲು ಅವರನ್ನೇ ಒಪ್ಪಿಸಿದರು. ಆಗ ಎರಡು ತಿಂಗಳ ಕಾಲ ಪುಹಳೇಂದಿ ಅವರ ಮಾರ್ಗದರ್ಶನದಲ್ಲಿ ಅಹೋರಾತ್ರ ಅಭ್ಯಾಸ ಮಾಡಿ ಬಾಲು ಸಿದ್ಧರಾದರು. ಇದನ್ನೆಲ್ಲ ಕೃತಜ್ಞತೆಯಿಂದ, ನಿಃಸಂಕೋಚವಾಗಿ ಅವರು ಈಗಲೂ ಹೇಳಿಕೊಳ್ಳುತ್ತಾರೆ.
ಬಾಲು ತಮ್ಮ ಹಿನ್ನೆಲೆಹಾಡಿಕೆಯ ಗುರು ಕೋದಂಡಪಾಣಿಯವರ ಹೆಸರಿನಲ್ಲಿ ಧ್ವನಿಮುದ್ರಣಕೇಂದ್ರವನ್ನು ಸ್ಥಾಪಿಸಿದ್ದಲ್ಲದೆ ಅನುದಿನವೂ ಅವರ ನೆನಪಿನಿಂದ ಗದ್ಗದಿತರಾಗುತ್ತಾರೆ. ಘಂಟಸಾಲ ಅವರ ಬಗೆಗಂತೂ ಬಾಲು ತೋರುವ ಭಕ್ತಿ ಎಣೆಯಿಲ್ಲದ್ದು. ಹೈದರಾಬಾದಿನಲ್ಲಿ ಅವರ ಆಳೆತ್ತರದ ಕಂಚಿನ ಪ್ರತಿಮೆಯನ್ನು ಸ್ಥಾಪಿಸಿದ್ದಲ್ಲದೆ ಅದರ ಉದ್ಘಾಟನೆಗಾಗಿ ಭಾರತದ ಪ್ರಮುಖ ಸಿನೆಮಾ ಗಾಯಕರನ್ನೆಲ್ಲ ಆಹ್ವಾನಿಸಿದ್ದರು. ಘಂಟಸಾಲ ಅವರನ್ನು ಕುರಿತು ಒಂದು ಪುಸ್ತಕವನ್ನೂ ಹೊರತಂದಿದ್ದಾರೆ. ಜೇಸುದಾಸ್ ಅವರಿಗೆ ಅದೊಮ್ಮೆ ಪಾದಪೂಜೆಯನ್ನೇ ಮಾಡಿದ್ದರು. ಇನ್ನು ಪಿ. ಬಿ. ಶ್ರೀನಿವಾಸ್ ಮತ್ತು ಎಸ್. ಜಾನಕಿಯವರಲ್ಲಿ ಬಾಲು ಇರಿಸಿರುವ ಪ್ರೀತಿ ಕಾವ್ಯೋಪಮ. ಪಿ. ಸುಶೀಲಾ ಅವರ ಶಿಸ್ತನ್ನು ಮತ್ತೆ ಮತ್ತೆ ನೆನೆಯುತ್ತಾರೆ. ಚಿಕ್ಕವರಾದ ಚಿತ್ರಾ, ಮನೋ (ನಾಗುರ್ ಬಾಬು) ಮುಂತಾದವರಲ್ಲಿ ಬಾಲು ಅವರದು ಹೇಳತೀರದ ವಾತ್ಸಲ್ಯ. ತಾವು ಹಾಡಬೇಕಿದ್ದ ಗೀತವೊಂದಕ್ಕೆ ಟ್ರ್ಯಾಕ್ ಹಾಡಿದ್ದ ಮನೋ ಅವರ ಧ್ವನಿಯನ್ನಾಲಿಸಿದ ಬಾಲು ತಾನು ಮತ್ತೆ ಆ ಹಾಡನ್ನು ಹಾಡಬೇಕಿಲ್ಲವೆಂದೂ ಟ್ರ್ಯಾಕನ್ನೇ ಉಳಿಸಿಕೊಳ್ಳಬೇಕೆಂದೂ ಆಗ್ರಹಿಸಿ ಗೆದ್ದಿದ್ದರು. ಹೀಗೆ ಇವರ ಮೂಲಕ ಹಿನ್ನೆಲೆಹಾಡುಗಾರರಾದ ಟ್ರ್ಯಾಕ್ ಗಾಯಕರ ಸಂಖ್ಯೆ ಸಾಕಷ್ಟಿದೆ. ತೀರ ಇತ್ತೀಚಿನ ಗಾಯಕರಾದ ಶ್ರೀಕೃಷ್ಣ, ಹೇಮಚಂದ್ರ, ಸುನೀತಾ, ಕಲ್ಪನಾ ಮುಂತಾದ ಅದೆಷ್ಟೋ ಮಂದಿಗೆ ಮಾರ್ಗದರ್ಶಿ ಇವರೇ.
ನೂರು ಕೈಯಲ್ಲಿ ಹಣ-ಹೆಸರುಗಳನ್ನು ಸಂಪಾದಿಸಿದರೂ ಅದನ್ನು ಸಾವಿರ ಕೈಗಳಿಂದ ಆತ್ಮೀಯರೊಡನೆ ಹಂಚಿಕೊಳ್ಳುವ ಔದಾರ್ಯ ಬಾಲು ಅವರದು. ಹೀಗಾಗಿಯೇ ಅವರ ಗೆಳೆಯರ ಬಳಗ ದೊಡ್ಡದು. ಗೆಳೆಯರಿಗಾಗಿ ಅದೆಷ್ಟೋ ಬಾರಿ ತೊಂದರೆಗೆ ಒಳಗಾದದ್ದೂ ಉಂಟು. ಆದರೆ ಅದರಿಂದ ಮನಸ್ಸನ್ನು ಕಹಿ ಮಾಡಿಕೊಳ್ಳದ, ಸ್ನೇಹ-ವಿಶ್ವಾಸಗಳಲ್ಲಿ ನಂಬಿಕೆ ಕಳೆದುಕೊಳ್ಳದ ಪರಿಪಾಕ ಅವರದು. ತಮ್ಮ ನಿರೀಕ್ಷೆಯ ಮಟ್ಟಕ್ಕೆ ಮಗ ಮುಂದುವರಿಯದಿದ್ದರೂ ಆತನ ಗುಣ-ದೋಷಗಳನ್ನು ಸಾರ್ವಜನಿಕವಾಗಿಯೇ ವಿಮರ್ಶೆ ಮಾಡುವ ನಿರ್ಮಮತೆ ಹಿರಿದಾದುದು. ಸಂದರ್ಶನವೊಂದರಲ್ಲಿ ಅವರು ಹೀಗೆ ಹೇಳಿಕೊಂಡಿದ್ದರು: “ನನಗಿರುವ ಬಲು ದೊಡ್ಡ ಬಲವೆಂದರೆ ನನ್ನ ಮಿತಿ-ಅಶಕ್ತಿಗಳ ಪರಿಜ್ಞಾನ. ನನ್ನ ಹಾಡುಗಳಲ್ಲಿ ನಾನು ಮಾಡಿರಬಹುದಾದ ತಪ್ಪು ಎಲ್ಲರಿಗಿಂತ ಚೆನ್ನಾಗಿ ನನಗೇ ಗೊತ್ತು. ಇಷ್ಟಾದರೂ ನನಗೆ ಗತವನ್ನು ಕುರಿತು ಮುಜುಗರವಿಲ್ಲ. ಇದೇ ಬದುಕನ್ನು ಮತ್ತೆ ಬದುಕಬೇಕೆಂಬ ಆಸೆ ನನಗಿದೆ. ಆದರೆ ಹಳೆಯದೊಂದೂ ನೆನಪಿನಲ್ಲಿರಬಾರದು. ಏಕೆಂದರೆ ಭವಿಷ್ಯದ ಜ್ಞಾನ ವರ್ತಮಾನದ ಬೆರಗು-ನಲಿವುಗಳನ್ನು ಇಲ್ಲವಾಗಿಸುತ್ತದೆ.”
ಇಷ್ಟೆಲ್ಲ ಒಳ್ಳೆಯತನದ ವ್ಯಕ್ತಿ ವ್ಯವಹಾರದಕ್ಷರಲ್ಲ ಎಂದೆನಿಸಬಹುದು. ಆದರೆ ಬಾಲು ಅವರಲ್ಲಿ ವ್ಯವಹಾರದಕ್ಷತೆಯೂ ಸಾಕಷ್ಟಿದೆ. ಹಾಗಲ್ಲವಾದರೆ ಅವರು ಇಷ್ಟು ಕಾಲ ಚಿತ್ರರಂಗದಂಥ ಭಯಾನಕ ಉದ್ಯಮದಲ್ಲಿ ಉಳಿಯಲಾಗುತ್ತಿರಲಿಲ್ಲ. ಅವರೇ ಸಂದರ್ಶನವೊಂದರಲ್ಲಿ ನಿರ್ದಾಕ್ಷಿಣ್ಯವಾಗಿ ಹೀಗೆ ಹೇಳಿದ್ದರು: “ಈ ರಂಗದಲ್ಲಿ ಯಾರಿಗೆ ಯಾರೂ ಉಪಕಾರ ಮಾಡುವುದಿಲ್ಲ. ಒಬ್ಬ ಪ್ರತಿಭಾನ್ವಿತನಿಗೆ ಅವಕಾಶ ಬಂದರೆ ಅದು ಲಾಭದಾಯಕವೆಂಬ ಕಾರಣದಿಂದಲೇ ಆಗಿರುವುದಲ್ಲದೆ ಸ್ನೇಹ-ದಾಕ್ಷಿಣ್ಯಗಳಿಂದ ಅಲ್ಲ. ಹಾಗೆಂದ ಮಾತ್ರಕ್ಕೆ ಇಲ್ಲಿ ಯಾರೂ ಉಪಕಾರ ಮಾಡಬಾರದೆಂದಲ್ಲ.” ಇದೇ ರೀತಿ ತಮ್ಮ ಪ್ರತಿಭೆಯನ್ನು ಕುರಿತೂ ಸ್ಪಷ್ಟವಾಗಿ ಸಾರಿದ್ದರು: “ಹೌದು, ನಾನು ಒಳ್ಳೆಯ ಗಾಯಕ. ತುಂಬ ಒಳ್ಳೆಯ ಹಾಡುಗಳನ್ನೇ ಹಾಡಿದ್ದೇನೆ. ಆದರೆ ನಾನೊಬ್ಬನೇ ಗಾಯಕನಲ್ಲ. ಎಷ್ಟೋ ಗಾಯಕರ ಪೈಕಿ ನಾನೂ ಒಬ್ಬ. ಮಾತ್ರವಲ್ಲ, ಒಳ್ಳೆಯ ಗಾಯಕರ ಪೈಕಿ ನಾನೂ ಒಬ್ಬ. ನನಗೆ ತುಂಬ ಒಳ್ಳೆಯ ಅವಕಾಶಗಳು ಬಂದವು; ನಾನವನ್ನು ನನ್ನ ಶಕ್ತಿ ಮೀರಿ ಚೆನ್ನಾಗಿ ಬಳಸಿಕೊಂಡೆ. ನನ್ನ ಯಶಸ್ಸಿನ ರಹಸ್ಯ ಇಷ್ಟೇ.” ಈ ಮಾತುಗಳಲ್ಲಿ ಕೀಳರಿಮೆಯಿಲ್ಲದ ನಮ್ರತೆ, ಮೇಲರಿಮೆಯಿಲ್ಲದ ಆತ್ಮಗೌರವ ಮತ್ತು ವಾಸ್ತವಕ್ಕೆ ವಿಮುಖವಾಗದ ಘನತೆಗಳಿವೆ.
ಸಿನೆಮಾ ಜಗತ್ತಿನ ಸಿಹಿ-ಕಹಿಗಳನ್ನು ಸ್ಪಷ್ಟವಾಗಿ ಶ್ರೋತೃಗಳ ಮುಂದಿಡುವ ಬಾಲು ಹೊಸ ಪೀಳಿಗೆಯ ಕಲಾವಿದರ ಪಾಡನ್ನು ಚೆನ್ನಾಗಿ ಚಿತ್ರಿಸುತ್ತಾರೆ. ಅದರ ತಾತ್ಪರ್ಯ ಹೀಗೆ: ಇಂದಿನ ಹಾಡುಗಾರರಲ್ಲಿ ಪ್ರತಿಭೆಗೆ ಕೊರತೆಯಿಲ್ಲ. ಕಲಿಕೆಗೆ ಬೇಕಾದ ಎಲ್ಲ ಬಗೆಯ ಸವಲತ್ತುಗಳೂ ಸರಿಮಿಗಿಲಾಗಿ ಸಿಗುತ್ತಿವೆ. ಆದರೆ ಯಾರಿಗೂ ಸತತವಾದ ಅವಕಾಶಗಳು ಸಿಗುತ್ತಿಲ್ಲ. ನಾನೂ ಸೇರಿದಂತೆ ನಮ್ಮ ಕಾಲದ ಹೆಚ್ಚಿನ ಕಲಾವಿದರಿಗೆ ಅವರವರ ಪ್ರತಿಭೆಗಳನ್ನು ಸಾಬೀತುಗೊಳಿಸಬಲ್ಲ ಸಂಖ್ಯೆಯ ಅವಕಾಶಗಳು ದಕ್ಕಿದುವು; ಎಲ್ಲ ಮುಖ್ಯಗಾಯಕರೂ ತಮ್ಮದಾದ ಸ್ವತಂತ್ರಶೈಲಿಗಳನ್ನು ರೂಪಿಸಿಕೊಂಡು ವೈಶಿಷ್ಟ್ಯವನ್ನು ಮೆರೆಯಲು ಸಾಧ್ಯವಾಯಿತು. ಈ ಮಾತು ಸಂಗೀತಸಂಯೋಜಕರಿಗೂ ಸಲ್ಲುತ್ತದೆ. ಎಂಥ ಕಲ್ಪವೃಕ್ಷದ ಸಸಿಯೂ ಒಂದು ಮಟ್ಟಕ್ಕೆ ಬೆಳೆಯುವವರೆಗೆ ನೀರು-ಗೊಬ್ಬರಗಳ ಪೂರೈಕೆ ಅನಿವಾರ್ಯ. ಅಲ್ಲಿಯವರೆಗೆ ಅದರಿಂದ ಹೂ-ಹಣ್ಣುಗಳನ್ನು ಎಣೆಮೀರಿ ನಿರೀಕ್ಷಿಸುವುದೂ ಸಲ್ಲ. ಆದರೆ ಇಂದು ಎಲ್ಲರೂ ‘ಅಭಿನವಮಧುಲೋಲುಪ’ರಾಗಿದ್ದಾರೆ.
ಹೊಸತನದ ಹೊಯ್ಲು ಅದೆಷ್ಟು ಪ್ರಬಲವೂ ನಿರ್ದಯವೂ ಆಗಿದೆಯೆಂದರೆ ಎಂಥ ಕಲಾವಿದನಿಗೂ ಹದಿನೈದಿಪ್ಪತ್ತು ಹಾಡುಗಳನ್ನು ಸಿನೆಮಾಗೆ ಹಾಡುವ ಅವಕಾಶ ಸಿಗದಂತಾಗಿದೆ! ಒಂದು ಚಿತ್ರದ ಒಬ್ಬನೇ ನಾಯಕನ ಎಲ್ಲ ಹಾಡುಗಳನ್ನು ಒಬ್ಬನೇ ಗಾಯಕ ಹಾಡುವ ಅವಕಾಶವಿರಲಿ, ಒಂದೇ ಹಾಡಿನಲ್ಲಿ ಮೂರು-ನಾಲ್ಕು ಗಾಯಕರು ಪಲ್ಲವಿ, ಅನುಪಲ್ಲವಿ, ಚರಣಗಳನ್ನು ಹಂಚಿಕೊಂಡು ಹಾಡಬೇಕಾದ ದುರವಸ್ಥೆಯಿದೆ. ಇಂಥ ಇಕ್ಕಟ್ಟಿನಲ್ಲಿ ಪ್ರತಿಭೆಯೊಂದನ್ನು ಪರಿಚಯಿಸಿಕೊಳ್ಳಲಾದರೂ ಅವಕಾಶವೆಲ್ಲಿ? ಅದರ ಪರೀಕ್ಷೆಯಂತೂ ದೂರವೇ ಉಳಿಯಿತು. ಸಿನೆಮಾ ಹಾಡೊಂದು ತೆರೆಯ ಮೇಲೆ ಕಾಣಿಸಿಕೊಳ್ಳುವ ಮುನ್ನವೇ ಗಾಯಕ ಹಳಬನಾಗಿರುತ್ತಾನೆ, ಅವನ ಧ್ವನಿ ಸಿನೆಮಾ ಜಗತ್ತಿಗೆ ಹಳಸಲಾಗಿರುತ್ತದೆ. ಇದಕ್ಕಿಂತ ವಿಪರ್ಯಾಸವುಂಟೇ!
ಇದು ನಿಜಕ್ಕೂ ಆತಂಕಕಾರಿಯಾದ ವಾಸ್ತವ. ಎಲ್ಲ ಕ್ಷೇತ್ರಗಳಲ್ಲಿಯೂ ಇಂಥ ವಿದ್ಯಮಾನ ದೃಷ್ಟಚರ. ಬಾಲು ಅವರಂಥ ಪ್ರಬುದ್ಧರು ಇದನ್ನು ಗಮನಿಸಿದ್ದಾರೆಂದರೆ ಕಲಾಜಗತ್ತು ಮತ್ತೂ ಎಚ್ಚರದಿಂದ ಪರಿಕಿಸಬೇಕು.
ಇದನ್ನೆಲ್ಲ ಗಮನಿಸಿದಾಗ ಬಾಲು ಅವರು ಪರಮಗಂಭೀರ ವ್ಯಕ್ತಿಯೆಂಬ ಸೀಮಿತಭಾವ ಬರಬಹುದು. ವಸ್ತುತಃ ದಾಖಲೆಗೆ ಸಿಗುವಂತೆ ಅವರಷ್ಟು ವಿನೋದಶೀಲರಾದ ಗಾಯಕರೇ ಇಲ್ಲವೆಂದರೆ ಅತಿಶಯೋಕ್ತಿಯಲ್ಲ. ಯಾವುದನ್ನೂ ‘ಮಿಸ್ಟಿಫೈ’ ಮಾಡದ ಚಿಕಿತ್ಸಕದೃಷ್ಟಿ ಅವರಿಗಿರುವಂತೆಯೇ ಎಲ್ಲಿಯೂ ಸಿನಿಕತನ ತೋರದ ಭಾವೋನ್ನತಿಯೂ ಉಂಟು. ಹೀಗಾಗಿಯೇ ಅವರ ಹಾಸ್ಯ-ವಿನೋದಗಳಲ್ಲಿ ತುಂಟತನವಿದ್ದರೂ ತಿರಸ್ಕಾರವಿರುವುದಿಲ್ಲ; ಸಲಿಗೆಯಿದ್ದರೂ ಹೀಯಾಳಿಕೆಯಿರುವುದಿಲ್ಲ. ತಮ್ಮ ಸಹಗಾಯಕರಿಂದ ಮೊದಲ್ಗೊಂಡು ಸ್ನೇಹಿತರವರೆಗೆ ಎಲ್ಲೆಡೆ ಹುಚ್ಚು ಹಾಸ್ಯದ ಹೊಳೆ ಹರಿಸುತ್ತಾರೆ.
ಎಸ್. ಜಾನಕಿ ಹಾಡುವಾಗ ಕೈಯಲ್ಲೊಂದು ಚಿಕ್ಕ ಕರವಸ್ತ್ರವನ್ನೋ ಸೆರಗಿನ ತುದಿಯನ್ನೋ ಹಿಡಿದು ಮಗ್ನತೆಯಿಂದ ಮೈಕಿನ ಮುಂದೆ ನಿಲ್ಲುವರಷ್ಟೆ. ಅದನ್ನು ಗಮನಿಸಿದ ಬಾಲು ಧ್ವನಿಮುದ್ರಣ ಮೊದಲಾಗುತ್ತಿದ್ದಂತೆಯೇ ಸರಕ್ಕನೆ ಅವನ್ನು ಆಕೆಯ ಕೈಯಿಂದ ಕಸಿಯುತ್ತಾರೆ. ಅವಿಲ್ಲದೆ ಅಂಥ ಮಹಾಗಾಯನಿಗೆ ದನಿಯೇ ಏಳುವುದಿಲ್ಲ! ಮುನಿದು ಬೆನ್ನಟ್ಟಿ ಬಂದರೆ ಸ್ಟುಡಿಯೋದಲ್ಲೆಲ್ಲ ಜೂಟಾಟವಾಡಿಸುತ್ತಾರೆ! ಸಹಗಾಯಕರನ್ನು ಅದೆಷ್ಟೋ ಬಾರಿ ನಗಿಸಿದಾಗ ಅವರು ಅಕ್ಕರೆಯಿಂದ “ಬಾಲು ತಮ್ಮ ಗಂಟಲನ್ನು ಹಾಳು ಮಾಡಲೆಂದೇ ಹೀಗೆ ಆಟವಾಡಿಸಿದರು” ಎಂದು ಆಡಿಕೊಂಡದ್ದೂ ಉಂಟು. ಏನೇ ವಿನೋದ ಮಾಡಲಿ ಅದರಲ್ಲಿ ತಮ್ಮನ್ನೂ ಸೇರಿಸಿಕೊಂಡು, ತಮ್ಮ ಸ್ಥೂಲಾಂಗ ಮತ್ತು ದೋಷ-ದೌರ್ಬಲ್ಯಗಳನ್ನೂ ಕೂಡಿಸಿಕೊಂಡು ನಗಿಸುವ ಕಾರಣ ಯಾರೂ ಅವರಲ್ಲಿ ಹುಳುಕನ್ನು ಹುಡುಕಲಾರರು.
*****
ಸುಮಾರು ಇಪ್ಪತ್ತೈದು ವರ್ಷಗಳಿಂದ ಬಾಲು ಅವರು ನಡಸಿಕೊಂಡು ಬಂದ ಕನ್ನಡ ಮತ್ತು ತೆಲುಗು ರಿಯಾಲಿಟಿ ಶೋ ‘ಎದೆ ತುಂಬಿ ಹಾಡಿದೆನು’ ಹಾಗೂ ‘ಪಾಡುತಾ ತೀಯಗಾ’. ಇವುಗಳ ಪ್ರಸ್ತಾವವಿಲ್ಲದೆ ಅವರ ಸಾಧನೆಯನ್ನೂ ವ್ಯಕ್ತಿತ್ವವನ್ನೂ ಕಲ್ಪಿಸಿಕೊಳ್ಳಲಾಗದು. ಕಿರುತೆರೆಯಲ್ಲಿ ಹುಚ್ಚುಹೊಳೆಯಾಗಿ ಹರಿದ ರಿಯಾಲಿಟಿ ಶೋಗಳಿಗೆ ಕೊರತೆಯಿಲ್ಲ. ಸಿನೆಮಾ ಹಾಡುಗಳನ್ನು ಕುರಿತೇ ಸಾಕಷ್ಟು ಶೋಗಳಿವೆ. ಸೋನು ನಿಗಮ್, ವಿಜಯ ಪ್ರಕಾಶ್, ಮನೋ, ರಾಜೇಶ್ ಕೃಷ್ಣನ್ ಮುಂತಾದ ಎಷ್ಟೋ ಮಂದಿ ಹಲವು ಭಾಷೆಗಳಲ್ಲಿ ಇಂಥವನ್ನು ಸಾಗಿಸಿಕೊಂಡು ಬಂದಿದ್ದಾರೆ. ಆದರೆ ಇವರಾರೂ ಎಟುಕಿಸಿಕೊಳ್ಳಲಾಗದ ಎತ್ತರ ಬಾಲು ಅವರದೆಂದರೆ ಯಾರನ್ನೂ ಅಪಮಾನಿಸಿದಂತಲ್ಲ. ಈ ಶೋಗಳ ಮೂಲಕ ನೂತನಪ್ರತಿಭೆಗಳಿಗೆ ಅವಕಾಶವಾಗುತ್ತದೆ, ಕಲಾಪ್ರಸಾರವಾಗುತ್ತದೆ, ಹೊಸಬರಿಗೆ ಕಲೆಯ ಸೂಕ್ಷ್ಮಗಳೆಷ್ಟೋ ತಿಳಿಯುತ್ತವೆ, ಚಿತ್ರರಂಗದ ಪರಂಪರೆಯ ಪರಿಚಯವೂ ಆಗುತ್ತದೆ. ಇವೆಲ್ಲದರ ಜೊತೆಗೆ ಬಾಲು ಅವರು ತಮ್ಮ ವ್ಯಕ್ತಿತ್ವ, ವಿದ್ವತ್ತೆ ಮತ್ತು ಅನುಭವಗಳಿಂದ ಕಾಣಿಸುವ ಹೊಳಹುಗಳು ಮಾತ್ರ ಅವರಿಗೇ ಸಾಧ್ಯ. ವಿಶೇಷತಃ ‘ಪಾಡುತಾ ತೀಯಗಾ’ ಸರಣಿಯಲ್ಲಿ ಬಾಲು ಅವರು ತಾಳುವ ತ್ರಿವಿಕ್ರಮಾವತಾರ ಅನ್ಯಾದೃಶ. ಹೇಳಿ ಕೇಳಿ ತೆಲುಗು ಅವರ ಮಾತೃಭಾಷೆ. ತಾಯ್ನೆಲ ಅವರಿಗೆ ಅಮಿತವಾದ ಆತ್ಮವಿಶ್ವಾಸವನ್ನೂ ನೀಡುತ್ತದೆ. ಕನ್ನಡ ಅವರ ಪಾಲಿಗೆ ಸಾಕುತಾಯಿ ಮಾತ್ರ. ಜೊತೆಗೆ ಕನ್ನಡನಾಡಿನ ಸಂಸ್ಕೃತಿ-ರಾಜಕೀಯಗಳ ಒಳಸುಳಿಗಳೂ ಅಷ್ಟಾಗಿ ತಿಳಿಯದ ಕಾರಣ ಅವರು ಅಳುಕಿನಿಂದಲೇ ನಯಮಾರ್ಗವನ್ನು ಹಿಡಿಯುತ್ತಾರೆ. ಇದು ತೆಲುಗಿನ ಕಾರ್ಯಕ್ರಮಗಳಿಗೆ ಹೋಲಿಸಿದರೆ ಸಹಜವಾಗಿಯೇ ಮಂಕಾಗುತ್ತದೆ. ಹೀಗಾಗಿ ‘ಪಾಡುತಾ ತೀಯಗಾ’ ಸರಣಿಗಳನ್ನು ಗಮನದಲ್ಲಿರಿಸಿಕೊಂಡು ಕೆಲವು ಅಂಶಗಳನ್ನು ಪರಿಶೀಲಿಸೋಣ.
ಹಿರಿಯರು-ಕಿರಿಯರೆನ್ನದೆ ಎಲ್ಲ ಸ್ಪರ್ಧಿಗಳಿಗೂ ಸ್ನೇಹ-ಗೌರವಗಳನ್ನು ಸಲ್ಲಿಸುವುದಲ್ಲದೆ ಅನೌಪಚಾರಿಕವಾದ ವಾತ್ಸಲ್ಯ-ವಿನೋದಗಳನ್ನು ಬಾಲು ಬಿಂಬಿಸುತ್ತಾರೆ. ಇದು ತುಂಬ ಅಕೃತಕ ಹಾಗೂ ಆಕರ್ಷಕ. ಈ ಗುಣವನ್ನು ಮಿಕ್ಕವರಾರೂ ಮೈಗೂಡಿಸಿಕೊಳ್ಳಲಾಗಿಲ್ಲ. ಆಯಾ ಕಾರ್ಯಕ್ರಮಕ್ಕೆ ಬರುವ ನಿರ್ಣಾಯಕರ ಅಧಿಕೃತಪರಿಚಯವನ್ನು ಆತ್ಮೀಯವಾಗಿ ಮಾಡಿಕೊಡುವ ಬಾಲು ಅತಿಥಿದೇವೋ ಭವ ಎಂಬ ನುಡಿಗೆ ವ್ಯಾಖ್ಯಾನವಾಗುತ್ತಾರೆ. ಮಾತ್ರವಲ್ಲ, ಹಿಮ್ಮೇಳದ ಕಲಾವಿದರಿಗೂ ಆಗಿಂದಾಗ್ಗೆ ಅರ್ಹವಾದ ಮೆಚ್ಚುಗೆ ಅವರಿಂದ ಸಲ್ಲುತ್ತಿರುತ್ತದೆ. ಇವೆಲ್ಲ ಕಟ್ಟಳೆಯಂತೆ ಸಾಗದೆ ಅಂತಃಪ್ರೀತಿಯ ನೈಜಾಭಿವ್ಯಕ್ತಿಗಳಾಗಿ ತೋರಿಕೊಳ್ಳುವ ಮೂಲಕ ಉಂಟಾಗುವ ಪರಿಣಾಮ ಅನ್ಯಾದೃಶ. ಸ್ಪರ್ಧಿಗಳ ಶ್ರುತಿ, ಲಯ, ಸಾಹಿತ್ಯ ಮತ್ತು ಉಚ್ಚಾರಣೆಗಳ ಓರೆ-ಕೋರೆಗಳನ್ನು ನಯವಾಗಿಯೇ ಆದರೂ ನಿಖರವಾಗಿ ತಿದ್ದುವ ಬಾಲು ಆಯಾ ಸಂದರ್ಭಗಳಲ್ಲಿ ತಿಳಿಸಿಕೊಡುವ ಕಲಾರಹಸ್ಯಗಳು ನಿಜಕ್ಕೂ ಅದ್ಭುತ. ನಾನು ಇಂದಿಗೂ ಈ ಕಾರ್ಯಕ್ರಮಗಳ ಹಾಡಿಕೆಯನ್ನು ಹಾರಿಸಿ ಬಾಲು ಅವರ ಟೀಕೆ-ಟಿಪ್ಪಣಿಗಳನ್ನೇ ಸಲಹೆ-ಸೂಚನೆಗಳನ್ನೇ ಮತ್ತೆ ಮತ್ತೆ ಯೂಟ್ಯೂಬಿನಲ್ಲಿ ಆಲಿಸುತ್ತಿರುತ್ತೇನೆ. ಇವು ನನಗೆ ಚಲನಚಿತ್ರಸಂಗೀತದ ಸೂಕ್ಷ್ಮಗಳೆಷ್ಟನ್ನೋ ಕರುಣಿಸಿವೆ. ಹೀಗೆ ಇವು ನನಗೇ ಇಷ್ಟು ನೆರವಾಗಬಲ್ಲುವಾದರೆ ಕಲಾವಿದರಿಗೆ ಮತ್ತೆಷ್ಟು ಬೆಳಕಾಗಬಲ್ಲುವು!
ಆಯಾ ಹಾಡುಗಳ ಲೇಖಕ, ಸ್ವರಸಂಯೋಜಕ ಮತ್ತು ಗಾಯಕರ ವೈಶಿಷ್ಟ್ಯಗಳನ್ನು ಸ್ವಾನುಭವದೊಡನೆ ವಿವರಿಸುವಾಗ ಬಾಲು ಅವರು ಪೂರ್ಣಪ್ರಮಾಣದ ಸಹೃದಯವಿದ್ವಾಂಸರೇ ಆಗುತ್ತಾರೆ. ಈ ಸಂದರ್ಭದಲ್ಲಿ ಅವರ ನಾಲಗೆಯ ತುದಿಯಲ್ಲಿ ಚಲನಚಿತ್ರಸಂಗೀತದ ಸಮಗ್ರೇತಿಹಾಸವೇ ನಲಿದಾಡುತ್ತದೆ. ಸಿನೆಮಾ ಹಾಡುಗಳ ಪ್ರಾಯೋಗಿಕವಿಮರ್ಶೆ ಇದಕ್ಕಿಂತ ಸೊಗಸಾಗಿ ಸಾಗಲು ಸಾಧ್ಯವಿಲ್ಲ. ಇದು ಕೇವಲ ಯಾವುದೋ ಒಂದು ಭಾಷೆಯ ಚಲನಚಿತ್ರಗಳ ಹಾಡುಗಳಿಗೆ ಸೀಮಿತವಾಗದೆ ಇಡಿಯ ದಕ್ಷಿಣಭಾರತದ ಚಿತ್ರಸೀಮೆಗೆ ವ್ಯಾಪಿಸಿಕೊಳ್ಳುವುದನ್ನೂ ಕೆಲವೊಮ್ಮೆ ಉತ್ತರಭಾರತದ ಚಿತ್ರರಂಗಕ್ಕೆ ಕೂಡ ಕೈಚಾಚುವುದನ್ನೂ ಕಾಣಬಹುದು. ಅನೌಪಚಾರಿಕತೆ ಮತ್ತು ಅಧಿಕೃತತೆಗಳು ಕಲಾಮೀಮಾಂಸೆಯನ್ನು ಹೇಗೆ ಬೋಧ-ಮೋದಗಳ ಆಡುಂಬೊಲವಾಗಿ ಮಾಡಬಲ್ಲುವೆಂಬುದಕ್ಕೆ ಬಾಲು ಅವರ ಪ್ರತಿಯೊಂದು ವಿವರಣೆಯೂ ನಿದರ್ಶನ. ಇದು ಸಾಮಾನ್ಯದ ಸಾಧನೆಯಲ್ಲ.
ಪ್ರಸ್ತುತಕಾರ್ಯಕ್ರಮದಲ್ಲಿ ಎಲ್ಲ ಬಗೆಯ ಹಾಡುಗಳಿಗೆ ಅವಕಾಶವಿದ್ದರೂ ಮಾಧುರ್ಯಪ್ರಧಾನವಾದ ಗೀತಗಳಿಗೆ ಅಗ್ರತಾಂಬೂಲವಿತ್ತಿರುವುದು ಸಂತಸದ ಸಂಗತಿ. ಜೊತೆಗೆ ಶಾಸ್ತ್ರೀಯಸಂಗೀತದ ಮೆರುಗಿರುವ ಹಾಡುಗಳು ಅವಿರಳವಾಗಿ ಕೇಳಿಬರುವುದು ಮತ್ತೂ ಒಳ್ಳೆಯ ಬೆಳೆವಣಿಗೆ. ಇವೆಲ್ಲಕ್ಕಿಂತ ಮಿಗಿಲಾಗಿ ತೆಲುಗಿನ ರಂಗಭೂಮಿಯ ಪದ್ಯಗಳನ್ನು ಹಾಡಿಸುವ ಪರಿ ಅತ್ಯಂತ ಹೃದ್ಯ. ಇದು ಮರೆತುಹೋದ ಒಂದು ಮಹಾಜಗತ್ತನ್ನೇ ನಮ್ಮ ಮುಂದೆ ತರುವ ಸ್ತುತ್ಯಯತ್ನ. ಪ್ರತಿಯೊಬ್ಬ ಸ್ಪರ್ಧಿಯ ಹಾಡಿಕೆಯನ್ನು ವಿಮರ್ಶಿಸುವಾಗ ನೋವು-ನಂಜುಗಳಿಗೆ ಅವಕಾಶವಿಲ್ಲದಂತೆ ನೇರನುಡಿಯಲ್ಲಿ ಬಾಲು ಅವರ ಹಿತಕಥನ ಸಾಗುತ್ತದೆ. ಧ್ವನಿವರ್ಧಕವನ್ನು ಬಳಸಿಕೊಳ್ಳುವ ಬಗೆ, ಉಸಿರನ್ನು ನಿಯಂತ್ರಿಸಿಕೊಳ್ಳುವ ಕ್ರಮ, ಶ್ರುತಿ-ಲಯಗಳನ್ನು ಹಿಡಿಯುವ ರೀತಿ, ಹಾಡಿನ ಸಂಗತಿಗಳನ್ನೆಲ್ಲ ಚ-ತು ತಪ್ಪದೆ ಒಪ್ಪಿಸುವ ಜಾಣ್ಮೆ, ಹಿಮ್ಮೇಳವನ್ನು ಒಲಿಸಿಕೊಳ್ಳುವ ಬಗೆ ಮುಂತಾದ ಎಷ್ಟೋ ವಿಚಾರಗಳನ್ನು ತಮ್ಮ ಐವತ್ತು ವರ್ಷಗಳ ಅನುಭವದ ಹಿನ್ನೆಲೆಯಲ್ಲಿ ಬಾಲು ಹಂಚಿಕೊಳ್ಳುವಾಗ ಯಾವುದೇ ಬಗೆಯ ವ್ಯಾಸಮುಷ್ಟಿ ಕಾಡುವುದಿಲ್ಲ. ಎಲ್ಲ ವಿದ್ಯಾರಹಸ್ಯಗಳನ್ನೂ ಹೀಗೆ ಹಂಚಿಕೊಳ್ಳುವ ಮನಸ್ಸು ಮತ್ತು ಗೊಂದಲಕ್ಕೆ ಸ್ವಲ್ಪವೂ ಎಡೆಯಾಗದಂತೆ ವಿಚಾರವನ್ನು ಎಳೆಯೆಳೆಯಾಗಿ ಬಿಡಿಸಿಡುವ ಕ್ರಮ ಅವರೊಬ್ಬರಿಗೇ ಸಂದ ಸಂಪತ್ತಿ.
ಸ್ವದೇಶದಲ್ಲಿ ಮಾತ್ರವಲ್ಲದೆ ವಿದೇಶದಲ್ಲಿಯೂ ‘ಪಾಡುತಾ ತೀಯಗಾ’ ಜಯಭೇರಿ ಬಾರಿಸಿದೆ. ಅಲ್ಲಿಯ ಭಾರತೀಯರ ಮಕ್ಕಳಿಗೆ ನಮ್ಮ ನುಡಿಯನ್ನು ಈ ಮೂಲಕ ಕಲಿಸಬಹುದೆಂದು ಬಾಲು ಅವರು ಸಾಬೀತು ಮಾಡಿದ ಬಗೆ ವಿಸ್ಮಯಾವಹ. ಈ ಕಾರ್ಯಕ್ರಮಗಳಲ್ಲಿ ಸುಮ್ಮನೆ ಗಿಳಿಯೋದಿನಂತೆ ಹಾಡುಗಳನ್ನು ಹಾಡಲು ಬಿಡುವುದಿಲ್ಲ. ಅದೆಷ್ಟೋ ಬಾರಿ ಸ್ಪರ್ಧಿಗಳು ತಾವು ಹಾಡಲಿರುವ ಗೀತಗಳ ತಾತ್ಪರ್ಯವನ್ನು ತಿಳಿಸಬೇಕಲ್ಲದೆ ಕಠಿಣಪದಗಳಿಗೆ ನಿಖರವಾದ ಅರ್ಥವನ್ನೂ ಹೇಳಬೇಕು, ವಿನಿಯುಕ್ತವಾದ ರಾಗ-ತಾಳಗಳ ಮಾಹಿತಿಯನ್ನೂ ನೀಡಬೇಕು. ಮಾತ್ರವಲ್ಲ, ತಮ್ಮ ತಂದೆ-ತಾಯಿ, ಸಂಗೀತ-ಸಾಹಿತ್ಯಗಳ ಗುರುಗಳು ಹಾಗೂ ಕಲೆಯ ಪರಂಪರೆಯನ್ನು ಕುರಿತು ಗೌರವವನ್ನೂ ಯುಕ್ತರೀತಿಯಲ್ಲಿ ಸಲ್ಲಿಸಬೇಕಿರುತ್ತದೆ. ಇವನ್ನೆಲ್ಲ ಮಕ್ಕಳು ಪ್ರಬುದ್ಧವಾಗಿ ನಡೆಸಿಕೊಡುವಾಗ ಸಿನೆಮಾ ಸಂಗೀತದ ನೆವದಲ್ಲಿ ಸೊಗಸಾದ ಸಂಸ್ಕಾರಪ್ರಸಾರ ಕೂಡ ಸಾಗುತ್ತಿದೆಯೆಂಬ ಕೃತಾರ್ಥತೆ ಮೂಡದಿರದು. ಇಷ್ಟೆಲ್ಲವನ್ನೂ ಸ್ಪರ್ಧಿಗಳಿಂದ ನಿರೀಕ್ಷಿಸುವ ಬಾಲು ತಾವೇ ಅವರಿಗೆ ಕಣ್ಣೆದುರಿನ ಆದರ್ಶವಾಗಿರುವುದು ಮಹತ್ತ್ವದ ಸಂಗತಿ. ಹೀಗಾಗಿ ಸ್ಪರ್ಧಿಗಳು ಯಾವೊಂದು ಅಂಶದಲ್ಲಿ ಎಡವಿದರೂ ಬಾಲು ಅವರ ಅಕ್ಕರೆಯ ನೆರವಿನ ಕೈ ಮುಂದೆ ಚಾಚುತ್ತದೆ. ಇಂಥ ರಿಯಾಲಿಟಿ ಶೋಗಳ ಪರಮಾರ್ಥವಿರುವುದು ಸ್ಪರ್ಧೆಯಲ್ಲಲ್ಲ, ಸಂತೋಷದಲ್ಲಿ; ಗೆಲವಿನಲ್ಲಲ್ಲ, ತಿಳಿವಿನಲ್ಲಿ ಎಂಬುದನ್ನು ಬಾಲು ಅವರು ಮತ್ತೆ ಮತ್ತೆ ನೆನಪಿಸುತ್ತಿರುತ್ತಾರೆ. ಹೀಗಾಗಿಯೇ ‘ಪಾಡುತಾ ತೀಯಗಾ’ ಸರಣಿಗಳಲ್ಲಿ ಸೋತವರಿಗೆ ಸಂಕಟ ಕಡಮೆ, ಗೆದ್ದವರಿಗೆ ಅಹಂಕಾರ ಕಡಮೆ. ಇತ್ತೀಚೆಗೆ ಈ ಸರಣಿಗೆ ಬೆಳ್ಳಿಹಬ್ಬವಾದಾಗ ಪ್ರತಿಯೊಂದು ವರ್ಷ ಗೆದ್ದ ಸ್ಪರ್ಧಿಗಳ ಸಮಾವೇಶ ಏರ್ಪಟ್ಟಿತ್ತು. ಅವರಲ್ಲಿ ಹಲವರು ಇಂದಿನ ಯಶಸ್ವಿಕಲಾವಿದರಾಗಿದ್ದಾರೆ, ಮತ್ತೆ ಕೆಲವರಿಗೆ ಹೆಚ್ಚಿನ ಅವಕಾಶಗಳೇ ಬಂದಿಲ್ಲ. ಯಾರನ್ನೂ ತಿವಿಯದ ಬಾಲು ಸಂಗೀತವು ಅವರ ಬದುಕಿನಲ್ಲಿ ಮಿಗಿಲಾದ ನೆಮ್ಮದಿಯನ್ನು ತಂದಿರುವುದರ ಬಗೆಗೆ ಗಮನ ಹರಿಯುವಂತೆ ಮಾಡಿದರು. ಇವೆಲ್ಲ ರಜೋಗುಣವೇ ತಾಂಡವಿಸುವ ಈ ಕ್ಷೇತ್ರದಲ್ಲಿ ಊಹಿಸಲೂ ಕಷ್ಟ.
ಈ ಸರಣಿಗಳ ಆದ್ಯಂತ ಬಾಲು ಅವರ ಹಾಸ್ಯಪ್ರಜ್ಞೆ ಮತ್ತು ಆಶುಸ್ಫೂರ್ತಿಯ ಚಮತ್ಕಾರಗಳು ಶರದಾಕಾಶದ ನಕ್ಷತ್ರಗಳಂತೆ ಮಿನುಗುತ್ತಿರುತ್ತವೆ. ಅವರು ಸ್ಪರ್ಧಿಗಳನ್ನು ಮಾತೃವಾತ್ಸಲ್ಯದಿಂದ ಕಿಚಾಯಿಸುವುದನ್ನಾಗಲಿ, ಸಂಗೀತಜಗತ್ತಿನ
ಅತಿರಥ-ಮಹಾರಥರ ವ್ಯಕ್ತಿವಿಶೇಷಗಳನ್ನು ಮಿಮಿಕ್ರಿ ಮಾಡಿ ತೋರಿಸುವುದನ್ನಾಗಲಿ ಅನುಭವಿಸಿ ಅರಿಯಬೇಕಲ್ಲದೆ ಬಣ್ಣಿಸಿ ಮುಗಿಸಲಾಗದು. ಉದಾ: ಸ್ವರಸಮ್ರಾಟರೆಂದು ಹೆಸರಾಗಿದ್ದ ಗಾಯಕ-ಸಂಗೀತನಿರ್ದೇಶಕ ಸಾಲೂರಿ ರಾಜೇಶ್ವರರಾವ್ ಅವರ ನಾಸಿಕಧ್ವನಿಯನ್ನು ಅನುಕರಿಸಿ ಬಾಲು ಹಾಡುವುದಾಗಲಿ, ಮಾತನಾಡುವುದಾಗಲಿ ಯಾರಿಗೂ ಬೇಸರವೆನಿಸದೆ ಸಾಲೂರಿ ಅವರ ಮಹನೀಯತೆಯನ್ನೇ ಮನದಟ್ಟಾಗಿಸುತ್ತದೆ. ಎ. ಆರ್. ರೆಹಮಾನ್ ಅವರ ಸಂಗೀತಸಂಯೋಜನೆಯ ಲಯಗಾರಿಕೆ ಮತ್ತು ಅಲ್ಲಲ್ಲಿ ಮಿಂಚುವ ಶಾಸ್ತ್ರೀಯಸಂಗತಿಗಳ ಜರಿಯಂಚಿನ ಚಿತ್ತಾರಗಳನ್ನು ಹೇಳುತ್ತಲೇ ಆತ ಸಂಗೀತನಿರ್ದೇಶಕನಿಗಿಂತ ಮಿಗಿಲಾಗಿ ಒಳ್ಳೆಯ ಶಬ್ದತಂತ್ರಜ್ಞ (ಸೌಂಡ್ ಎಂಜಿನಿಯರ್) ಎಂಬ ಮಾರ್ಮಿಕವಿಮರ್ಶೆಯನ್ನು ಬಾಲು ಮಾಡುವಾಗ ಎಲ್ಲ ವಿವೇಕಿಗಳೂ ಸಹಮತ ನೀಡುವಂತಾಗುತ್ತದೆ.
ಗುಣಗ್ರಹಣಕ್ಕೆ ಬಾಲು ಅವರು ಪರ್ಯಾಯಪದ. ಇದು ಕೇವಲ ಅಂತರಂಗದ ಅನುಭೂತಿಯಾಗದೆ ಬಹಿರಂಗದ ಅಭಿವ್ಯಕ್ತಿಯಾಗಿಯೂ ಉಕ್ಕುತ್ತದೆ. ಜಗತ್ತಿನಲ್ಲಿ ಎಷ್ಟೋ ಬಾರಿ ಇವೆರಡರ ಸುಂದರಸಮಾಯೋಗ ಸಿಗುವುದಿಲ್ಲ. ಅದೆಷ್ಟೋ ಮಂದಿ ಸ್ಪರ್ಧಿಗಳನ್ನು ಮೆಚ್ಚಿಕೊಳ್ಳುವಾಗ ಬಾಲು ಅವರು “ನಿಮ್ಮ ಇಂಥ ಯೋಗ್ಯತೆ ನನ್ನದಾಗಿಲ್ಲ. ನಾನು ಮಾಡಿದ ತಪ್ಪುಗಳನ್ನು ನೀವು ಮಾಡುತ್ತಿಲ್ಲ” ಎಂದು ಕೊಂಡಾಡಿರುವುದುಂಟು. ಅದೊಮ್ಮೆ ಪ್ರವೀಣ್ ಕುಮಾರ್ ಎಂಬ ತರುಣ ‘ಹರಿಶ್ಚಂದ್ರ’ನಾಟಕದ ಪದ್ಯವೊಂದನ್ನು ಶ್ರವಣಾಭಿರಾಮವಾಗಿ ಹಾಡಿದಾಗ ಬಾಲು ಎದ್ದುನಿಂತು ಕೈಮುಗಿದು ಚಪ್ಪಾಳೆ ತಟ್ಟಿದ್ದಲ್ಲದೆ “ಅವತಲ ಪೋ. ನೀವಿಕ್ಕಡ ಎಕ್ಕುವ ನಿಲುಚುಕೋ ವದ್ದು. ಇಂಕಾ ಎಕ್ಕುವ ಸೇಪು ನೀವು ನಿಲಿಸ್ತೇ ನೇನು ವಚ್ಚಿ ನೀ ಕಾಳ್ಲು ಪಟ್ಟುಕೊಂಟಾನು. ಅಲಾ ಚೇಸ್ತೆ ನೀಕು ಅಶ್ರೇಯಸ್ಸನಿ ಜಂಕುತುನ್ನಾನು” (ರಂಗದಿಂದಾಚೆ ಹೋಗು. ನೀನಿಲ್ಲಿ ಹೆಚ್ಚು ಹೊತ್ತು ನಿಲ್ಲಬೇಡ. ಹಾಗೆ ನಿಂತಲ್ಲಿ ನಾನು ಧಾವಿಸಿ ಬಂದು ನಿನ್ನ ಕಾಲು ಹಿಡಿಯುತ್ತೇನೆ. ಅದು ನಿನಗೆ ಅಮಂಗಳ ಎಂದಷ್ಟೇ ನಾನು ಹಿಂಜರಿದಿದ್ದೇನೆ) ಎಂದಿದ್ದರು! ಮಹಾವೃಕ್ಷವೊಂದು ಎಳೆಯ ಮೊಳಕೆಗಳಿಗೆ ಇದಕ್ಕಿಂತ ಮಿಗಿಲಾಗಿ ಮನ್ನಣೆ ಸಲ್ಲಿಸಲು ಸಾಧ್ಯವಿಲ್ಲ. ಇದನ್ನು ನಾಟಕವೆಂದು ಮೂಗು ಮುರಿಯಬಲ್ಲ ಅಸೂಯಾಗ್ರಸ್ತರು ಇರಬಹುದು. ಆದರೆ ಬಾಲು ಅವರ ಮಟ್ಟಕ್ಕೇರಿದ ಯಾರಿಗೂ ಇಂಥ ನಾಟಕ ಅನಪೇಕ್ಷಿತ ಎಂಬುದರಲ್ಲಿ ಸ್ವಲ್ಪವೂ ಸಂದೇಹವಿಲ್ಲ.
ಸಂಕ್ಷೇಪಿಸಿ ಹೇಳುವುದಾದರೆ, ‘ಪಾಡುತಾ ತೀಯಗಾ’ ಕೇವಲ ರಿಯಾಲಿಟಿ ಶೋ ಅಲ್ಲ. ಅದು ರಿಯಾಲಿಟಿ ಅಷ್ಟೇ. ಇದಾದರೂ ಸಾಧಿತವಾಗಿರುವುದು ಬಾಲು ಅವರ ಸಮರ್ಪಿತಭಾವದಿಂದ. ಈ ನಿಟ್ಟಿನಲ್ಲಿ ಈ-ಟೀವಿಯ ಬದ್ಧತೆ ಮತ್ತು ಪ್ರೋತ್ಸಾಹಗಳು ಅವಿಸ್ಮರಣೀಯ.
*****
ಬಾಲು ಅವರು ಚಲನಚಿತ್ರರಂಗದಿಂದ ಆಚೆಗೂ ತಮ್ಮ ಅವಧಾನವಿರಿಸಿದ್ದಾರೆ. ದೇಶಪ್ರೇಮ ಮತ್ತು ಸಮಾಜಹಿತಗಳು ಅವರನ್ನು ಆರೋಗ್ಯಕರವಾಗಿ ಪ್ರಭಾವಿಸಿವೆ. ತಮ್ಮ ಈಚಿನ ವರ್ಷಗಳ ಕಾರ್ಯಕ್ರಮಗಳಲ್ಲೆಲ್ಲ ಅವರು ಸಭ್ಯತೆ, ಸುಸಂಸ್ಕೃತಿ, ಪೌರಕರ್ತವ್ಯ, ರಾಷ್ಟ್ರಕತತ್ತ್ವ, ಸ್ವಾಸ್ಥ್ಯಸಂಹಿತೆಗಳಂಥ ಎಷ್ಟೋ ಮೌಲ್ಯಗಳನ್ನು ಕುರಿತು ಕಳಕಳಿಯಿಂದ ಹೇಳುತ್ತಿರುತ್ತಾರೆ; ವಚನಗಳನ್ನೋ ವೇಮನನ ಪದ್ಯಗಳನ್ನೋ ಸಂದರ್ಭೋಚಿತವಾಗಿ ಆಯ್ದು ಹಾಡಿ ಜನಮಾನಸದ ಸಂವೇದನೆಯನ್ನು ಸೂಕ್ಷ್ಮಗೊಳಿಸುತ್ತಿರುತ್ತಾರೆ. ಇತ್ತೀಚಿನ ಕರೋನಾ ಕೋಲಾಹಲದ ನಡುವೆಯೂ ‘ಸಿಂಪ್ಲಿ ಎಸ್.ಪಿ.ಬಿ.’ ಎಂಬ ಹತ್ತಾರು ಕಂತುಗಳ ಯೂಟ್ಯೂಬ್ ಸರಣಿಯನ್ನು ಮೂರು-ನಾಲ್ಕು ಭಾಷೆಗಳಲ್ಲಿ ನೀಡಿ ತಮ್ಮ ನೆನಪುಗಳನ್ನು ದಾಖಲಿಸುತ್ತಿದ್ದಾರೆ. ಇದು ಮುಖ್ಯವಾಗಿ ಕೃತಜ್ಞತಾರ್ಪಣೆಯೇ ಆಗಿದೆ. ಇಷ್ಟು ದೊಡ್ಡ ಸಾಧಕ, ಈ ಮಟ್ಟದ ಜನಪ್ರಿಯತೆಯನ್ನು ಗಳಿಸಿದ ಕಲಾವಿದ ಕೃತಜ್ಞತೆಯಿಂದ ತುಂಬಿತುಳುಕುತ್ತಿರುವುದನ್ನು ಕಂಡಾಗ ಈ ಮಹಾಮೌಲ್ಯದ ಹಿರಿಮೆ ಎಷ್ಟೆಂದು ಸ್ಫುರಿಸದಿರದು. ಇದು ಒಂದು ದೇಶಕ್ಕೇ ಮಾದರಿಯಾಗಬಲ್ಲ ಸದ್ವರ್ತನೆ.
ಸರ್ವಮತಸಹಿಷ್ಣುತೆ ಉಳ್ಳ ಬಾಲು ಬೇರೆ ಬೇರೆ ಮತಗಳ ಮಹಿಮೆಯನ್ನು ಬಿತ್ತರಿಸುವ ಎಷ್ಟೋ ಗೀತಗಳನ್ನು ಹಾಡಿದ್ದರೂ ಅಪ್ಪಟ ಸನಾತನಧರ್ಮಿಯಾಗಿ ಉಳಿದಿದ್ದಾರೆ. ಮಾತ್ರವಲ್ಲ, ನೆಲ್ಲೂರಿನಲ್ಲಿರುವ ತಮ್ಮ ಪಿತ್ರಾರ್ಜಿತವಾದ ಮನೆಯನ್ನು ವೇದಪಾಠಶಾಲೆಗಾಗಿ ಕಂಚಿ ಕಾಮಕೋಟಿ ಪೀಠಕ್ಕೆ ದಾನವಿತ್ತಿದ್ದಾರೆ. ನಮ್ಮ ದೇವ-ದೇವಿಯರನ್ನು ಕುರಿತು ಸಾವಿರಾರು ಭಕ್ತಿಗೀತಗಳನ್ನು ಹಾಡಿದ್ದಾರೆ. ವಿವಿಧಸಂದರ್ಭಗಳಲ್ಲಿ ತಮ್ಮ ಕುಲ-ಗೋತ್ರಗಳನ್ನು ಹೇಳಿಕೊಳ್ಳಲು ಹಿಂಜರಿಯದೆ ಲಲಾಟಲಾಂಛನಗಳನ್ನು ಶ್ರದ್ಧೆಯಿಂದ ಮೆರೆಸಿದ್ದಾರೆ; ಶಿರಡಿ, ತಿರುಪತಿ, ಶಬರಿಮಲೆ ಮುಂತಾದ ಕ್ಷೇತ್ರಗಳನ್ನೆಲ್ಲ ಭಕ್ತಿಯಿಂದ ಸಂದರ್ಶಿಸಿದ್ದಾರೆ. ರಸನಿಷ್ಠವಾದ ಭಾರತೀಯಸಾಹಿತ್ಯಪರಂಪರೆಗೆ ಅಧ್ಯಯನಪೂರ್ಣವಾದ ಗೌರವವನ್ನು ಸಲ್ಲಿಸುತ್ತ ಬಂದಿದ್ದಾರೆ. ಭೂಗತಜಗತ್ತಿನ ಪಾತಕಿಗಳೊಂದಿಗೆ ಅನೈತಿಕಮೈತ್ರಿ, ದೇಶದ್ರೋಹಿಗಳೊಡನೆ ನಿರ್ಲಜ್ಜವಾದ ಸ್ನೇಹ ಮತ್ತು ಸನಾತನಧರ್ಮದ ಹೀಗಳೆಕೆಗಳನ್ನೇ ಉಸಿರಾಟವೆಂಬಂತೆ ಮಾಡುತ್ತಿರುವ ಎಷ್ಟೋ ಮಂದಿ ಚಿತ್ರಸೀಮೆಯೆಂಬ ಪ್ರಾಸಾದಕ್ಕೆ ಬಾವಲಿಗಳಂತೆ ಜೋತುಬಿದ್ದಿರುವಾಗ ಅಲ್ಲಿಯ ನಂದನವನದಲ್ಲೊಂದು ಪಾರಿಜಾತದಂತೆ ಪರಿಮಳಿಸುತ್ತಿರುವ ಬಾಲು ಅವರ ವ್ಯಕ್ತಿತ್ವ ಚಿರಸ್ಮರಣೀಯ. ಇಂಥ ವ್ಯಕ್ತಿ ನಮ್ಮೊಡನೆ ಮತ್ತೂ ಹತ್ತು ಕಾಲ ಅರ್ಥಪೂರ್ಣವಾಗಿ ಬಾಳಲಿ.