–ಮಹಾದೇವಯ್ಯ ಕರದಳ್ಳಿ
ಡಿಸೆಂಬರ್ 12, 1930ರಂದು ಬೆಳಗ್ಗೆ 11 ಗಂಟೆಗೆ ಮುಂಬಯಿಯ ಹನುಮಾನ ರಸ್ತೆಯಲ್ಲಿ ವಿದೇಶೀ ವಸ್ತ್ರಗಳನ್ನು ತುಂಬಿಕೊಂಡ ಲಾರಿಯು ಮುಂದುವರಿಯುವುದನ್ನು ತಡೆಗಟ್ಟಲು ರಸ್ತೆಗೆ ಅಡ್ಡಲಾಗಿ ಸತ್ಯಾಗ್ರಹಿಯೊಬ್ಬ ಮಲಗಿದ. ಆಂಗ್ಲ ಸಾರ್ಜಂಟ್ ಅವನ ತಲೆಯ ಮೇಲೆ ಲಾರಿ ಓಡಿಸಿದಾಗ ವಿಪರೀತ ಪೆಟ್ಟಾಗಿ ನಿರಂತರ ರಕ್ತಸ್ರಾವವಾಗುತ್ತಿದ್ದ ಅವನನ್ನು ಗೋಕುಲ್ದಾಸ್ ತೇಜಪಾಲ್ ಆಸ್ಪತ್ರೆಗೆ ಸೇರಿಸಿದರು. ಚಿಕಿತ್ಸೆ ಫಲಕಾರಿಯಾಗದೆ ಸಂಜೆ 4.50ಕ್ಕೆ ತನ್ನ ಅಂತಿಮಶ್ವಾಸದೊಂದಿಗೆ ಆತನು ಹುತಾತ್ಮನಾದ.
ಸಾಮಾನ್ಯರಲ್ಲಿ ಸಾಮಾನ್ಯನಾದ ಕೂಲಿಕಾರನೊಬ್ಬ ಹೀಗೆ ಸ್ವದೇಶೀ-ಸ್ವಾತಂತ್ರ್ಯಕ್ಕಾಗಿ ಪ್ರಾಣವನ್ನೇ ಅರ್ಪಿಸಿದ ಈ ಸುದ್ದಿ ನಗರದಲ್ಲೆಲ್ಲ ಹರಡಿತು. ಮರುದಿನ ನಡೆದ ಅಂತಿಮಯಾತ್ರೆಯಲ್ಲಿ ಸ್ವಾತಂತ್ರ್ಯ ಹೋರಾಟದ ಮುಂಚೂಣಿ ನಾಯಕರಾದ ಕನ್ನಯ್ಯಲಾಲ್ ಮುನ್ಶಿ, ಲೀಲಾವತಿಬಾಯಿ ಮುನ್ಶಿ, ಜಮನಾದಾಸ್, ವೀರ ನರೀಮನ್, ಮದನಶೆಟ್ಟಿ, ಮೆಹರ್ ಅಲಿಯಂಥ ಗಣ್ಯರ ನೇತೃತ್ವದಲ್ಲಿ ಶ್ರದ್ಧಾಂಜಲಿ ಅರ್ಪಿಸಲು ಲಕ್ಷಗಟ್ಟಲೆಯಲ್ಲಿ ಜನರು ಭಾಗವಹಿಸಿದರು. ಒಂದೇ ದಿನದಲ್ಲಿ ಲೋಕಪ್ರಸಿದ್ಧನಾದ ಆ ಸತ್ಯಾಗ್ರಹಿ ಬಲಿದಾನಿಯೇ ಬಾಬುಗೇನು.
ಸ್ವದೇಶೀ ಭಾವನೆ ಚಿಗುರಿಸುವ ಅನವರತ ಪ್ರಯತ್ನದ ಭಾಗವಾಗಿ ಗಾಂಧಿಯವರು ಚರಖಾ ಮತ್ತು ಖಾದಿಯನ್ನು ಆಂದೋಲನದ ಭಾಗವಾಗಿಸಿ ಅದಾಗಲೇ ಪ್ರಚಾರಮಾಡಿದ್ದರು. ಮೇಲಿನ ಘಟನೆಯಿಂದಾಗಿ ಸ್ವದೇಶೀ ಚಳವಳಿಯಲ್ಲಿ ಮನಃಪೂರ್ತಿ ಭಾಗವಹಿಸಿ ಅಮರನಾದ ಬಾಬುಗೇನುವಿನ ಹೆಸರು ಸ್ವದೇಶೀ ಚಳವಳಿ ಜೊತೆಗೆ ಅಭಿನ್ನವಾಗಿ ಸೇರ್ಪಡೆಯಾಯಿತು.
ಬಾಲ ಗಂಗಾಧರ ತಿಲಕ ಮತ್ತು ಗಾಂಧಿಯವರ ‘ಸ್ವದೇಶೀ ಸ್ವೀಕಾರ, ವಿದೇಶೀ ಬಹಿಷ್ಕಾರ’ ಶಸ್ತ್ರಗಳಿಂದ ಸುಸಜ್ಜಿತನಾದ ಬಾಬುಗೇನು ಸ್ವಾತಂತ್ರ್ಯದ ಹುಚ್ಚು ಹಚ್ಚಿಕೊಂಡ ಸಾಮಾನ್ಯ ಕೂಲಿಕಾರ, ಪರತಂತ್ರದ ಭಾರತದಲ್ಲಿ ಕಾಂಗ್ರೆಸ್ ಪಕ್ಷದ ನಾಲ್ಕಾಣೆಯ ಸಾಮಾನ್ಯ ಸದಸ್ಯ. ವಿದೇಶೀ ವಸ್ತುಗಳನ್ನು ಹೊತ್ತುಕೊಂಡು ಬರುತ್ತಿದ್ದ ಲಾರಿಯನ್ನು ತಡೆಯಲು ಅದರ ಮುಂದೆ ಮಲಗಿ ಹುತಾತ್ಮನಾಗುವ ಗೌರವಕ್ಕೆ ಪಾತ್ರನಾದ ಬಾಬುಗೇನು ಸ್ವದೇಶೀ ಆಂದೋಲನಕ್ಕೆ ವೇಗ ನೀಡಲು ಭಾರತದ ಜನತೆಗೆ ದೊರೆತ ಉತ್ತಮ ಪ್ರೇರಣೆ ಬಾಬುಗೇನು ಬಲಿದಾನವಲ್ಲದೆ ಮತ್ತೊಂದು ಇರಲಾರದು. ಬಾಬುಗೇನು ಆತ್ಮಬಲಿದಾನದ ಕಥೆ ಸ್ವತಂತ್ರ ಭಾರತದ ಸ್ವದೇಶೀ ಆಂದೋಲನದ ಮುನ್ನಡೆಗೆ ಸ್ಫೂರ್ತಿ ನೀಡುತ್ತದೆ.
ಬಾಬುಗೇನುವಿನ ತ್ಯಾಗಮಯ ಚರಿತ್ರೆಗೆ ಮುನ್ನ ಸ್ವದೇಶೀ ಆಂದೋಲನ ಆರಂಭವಾಗುವ ಸನ್ನಿವೇಶಗಳನ್ನು ಮೆಲುಕು ಹಾಕುವುದು ಅತ್ಯಂತ ಅವಶ್ಯವಾಗಿದೆ. ಭಾರತದಲ್ಲಿನ ಸಾಮ್ರಾಜ್ಯವಾದಿ ಬ್ರಿಟಿಷ್ ಸರ್ಕಾರ ದೇಶದಲ್ಲಿನ ಆರ್ಥಿಕ ಸಂಪನ್ಮೂಲಗಳನ್ನು ಲೂಟಿಮಾಡುವ ಕಾರ್ಯವನ್ನು ಯೋಜನಾಬದ್ಧವಾಗಿ ನಡೆಸಿತು. ಇಂಗ್ಲೆಂಡ್ ತನ್ನ ಫ್ಯಾಕ್ಟರಿ ಉತ್ಪಾದನೆ ಹೆಚ್ಚಿಸಲು ಭಾರತದ ಕಚ್ಚಾವಸ್ತುಗಳನ್ನು ಖರೀದಿಸಿ ಅಲ್ಲಿಂದ ತಯಾರಾದ ಸಿದ್ಧವಸ್ತುಗಳನ್ನು ಭಾರತದ ಮಾರುಕಟ್ಟೆಯಲ್ಲಿ ಮಾರಾಟ ಮಾಡಿ ಎರಡೂ ಕೈಗಳಿಂದ ಸಂಪತ್ತನ್ನು ಲೂಟಿ ಮಾಡುತ್ತಿತ್ತು. ಭಾರತದ ಆರ್ಥಿಕತೆಯನ್ನು ಹದಗೆಡಿಸುವ ಮೂಲಕ ಭಾರತದ ಸ್ವಾತಂತ್ರ್ಯಹೋರಾಟದ ಟೊಂಕ ಮುರಿಯುವ ದುಷ್ಟ ಯೋಚನೆ ಮತ್ತು ಯೋಜನೆ ಬ್ರಿಟಿಷರದ್ದಾಗಿತ್ತು. ಬ್ರಿಟಿಷರ ಧೂರ್ತ ವಿಚಾರಕ್ಕೆ ತಡೆಗೋಡೆ ನಿರ್ಮಿಸಿ ಭಾರತೀಯರಲ್ಲಿ ಭಾರತೀಯತೆಯನ್ನು ಅರಳಿಸಲು ಸಾವರಕರ್ ಸ್ವದೇಶೀ ಆಂದೋಲನವನ್ನು ಆರಂಭಿಸಿದ್ದರು. ಪುಣೆಯಲ್ಲಿ 7.10.1905ರಂದು ಯುವಕ ಸಾವರಕರ್ ಏರ್ಪಡಿಸಿದ ವಿದೇಶೀ ವಸ್ತ್ರಗಳ ಹೋಳಿ ದಹನದ ಕಾರ್ಯಕ್ರಮ ದೇಶದಲ್ಲಿಯೇ ಪ್ರಪ್ರಥಮ ಎನ್ನಬಹುದು. ಅಲ್ಲಿಂದ ಪ್ರಭಾವಿ ಕಾರ್ಯಕ್ರಮಗಳ ಮೂಲಕ ಸ್ವದೇಶೀ ಕುರಿತ ಜನಜಾಗರಣ ಆರಂಭವಾಯಿತು. ವಿದೇಶೀವಸ್ತ್ರ ದಹನದಂತಹ ಕಾರ್ಯಕ್ರಮದಲ್ಲಿ ಜನತೆ ಉತ್ಸಾಹದಿಂದ ಭಾಗವಹಿಸತೊಡಗಿದರು.
“ವಿದೇಶೀವಸ್ತುಗಳ ದಹನ ಮಾಡಿ ಹೋಳಿ ಆಚರಿಸುವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೋರಾಟಗಾರ ದೇಶಭಕ್ತ ನರಸಿಂಹ ಚಿಂತಾಮಣ ಕೇಳಕರ್ ‘ಸ್ವದೇಶೀ ಸ್ವೀಕಾರ, ವಿದೇಶೀ ಬಹಿಷ್ಕಾರ’ ಕುರಿತು ಸಾರ್ವಜನಿಕರನ್ನು ಉದ್ದೇಶಿಸಿ ಭಾಷಣ ಮಾಡಿ ತಮ್ಮ ಪೂರ್ಣ ಬೆಂಬಲ ನೀಡಿದರು. “ವಿದೇಶೀವಸ್ತ್ರ-ವಸ್ತುಗಳನ್ನು ಪೂರ್ಣರೂಪದಲ್ಲಿ ದಹಿಸಬೇಕು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ನಮ್ಮದೇ ಹಣ ನೀಡಿ ಖರೀದಿಸಿದ ವಿದೇಶೀ ವಸ್ತ್ರಗಳನ್ನು ಸುಡುವುದರಿಂದ ನಮಗೆ ಆರ್ಥಿಕಹಾನಿ ಆಗುತ್ತದೆ. ಆದ್ದರಿಂದ ಹೊಸವಸ್ತುಗಳ, ಹೊಸ ವಿದೇಶೀ ವಸ್ತ್ರಗಳ ಖರೀದಿಯನ್ನು ಬಹಿಷ್ಕರಿಸಬೇಕು ಎಂಬ ಕಾರ್ಯಕ್ರಮ ರೂಪಿಸಬೇಕು. ಮೊದಲೇ ಖರೀದಿಸಿದ ವಸ್ತ್ರ-ವಸ್ತುಗಳ ದಹನ ವಿಷಯ ಕುರಿತು ಮತ್ತೊಮ್ಮೆ ವಿಚಾರ ಮಾಡಬೇಕೆನ್ನುವುದು ನನ್ನ ಅಭಿಮತ” ಎಂದರು. ವಿದೇಶೀ ವಸ್ತ್ರಗಳ ಹೋಳಿ ಆಚರಿಸಿ ಸಂಭ್ರಮಿಸುತ್ತಿದ್ದ ಶ್ರೋತೃಗಳಲ್ಲಿ ಈ ರೀತಿಯ ಅಧ್ಯಕ್ಷೀಯ ಭಾಷಣ ಕೇಳಿ ಪರ ವಿರೋಧ ಚರ್ಚೆ ಆರಂಭವಾಯಿತು. ತಕ್ಷಣ ತಿಲಕರು ಎದ್ದು ನಿಂತು ಹೇಳಿದರು – “ಸ್ವದೇಶೀ ಕುರಿತಾಗಿ ಪ್ರಖರ ಭಾವನೆ ಜಾಗೃತಗೊಳಿಸಬೇಕಾಗಿದೆ. ಸ್ವದೇಶೀ ಆಂದೋಲನದಲ್ಲಿ ಆರ್ಥಿಕ ಲಾಭ ಹಾನಿ ಲೆಕ್ಕ ಹಾಕಬಾರದು. ಅದರಿಂದ ಆಂದೋಲನದ ತೀವ್ರತೆ ಕಡಮೆ ಆಗುತ್ತದೆ. ಆದ್ದರಿಂದ ನಾವೆಲ್ಲರೂ ಎಲ್ಲ ವಿದೇಶೀ ವಸ್ತ್ರ-ವಸ್ತುಗಳನ್ನು ದಹಿಸಿ ಹೋಳಿ ಆಚರಿಸುವ ಕುರಿತು ಒತ್ತಾಸೆ ನೀಡಬೇಕಾಗಿದೆ.” ತಿಲಕರ ಭಾಷಣದ ನಂತರ ಯುವಕರು ಉತ್ಸಾಹದಿಂದ ವಿದೇಶೀ ವಸ್ತ್ರಗಳ ದಹನ ಮಾಡಿ ಕಾಮದಹನದ ರೀತಿಯಲ್ಲಿ ಹೋಳಿ ಆಚರಿಸಿದರು.
ಒಂದು ಸಲ ಭಾರತೀಯರಿಗೆ ವಿದೇಶೀ ವಸ್ತುಗಳ ವ್ಯಾಮೋಹ ಹತ್ತಿಬಿಟ್ಟರೆ ಸ್ವದೇಶೀ, ಸ್ವ-ಸಂಸ್ಕೃತಿ, ಸ್ವಧರ್ಮ ಮತ್ತು ಸ್ವಭಾಷೆ ಮುಂತಾದ ವಿಚಾರಗಳು ತಾವಾಗಿ ಹಳಸುತ್ತವೆ ಹಾಗೂ ವಿದೇಶೀ ವಸ್ತುಗಳ ಬಳಕೆ ರಾಷ್ಟ್ರದ್ರೋಹ ಎಂಬುದು ಮಸ್ತಿಷ್ಕದಿಂದ ಮರೆಯಾಗುತ್ತದೆ ಎಂಬ ಧೂರ್ತತನದ ಚಿಂತನೆ ಬ್ರಿಟಿಷರದ್ದಾಗಿತ್ತು. ಅದಕ್ಕಾಗಿ ವಿದೇಶೀ ವಸ್ತುಗಳ ಮೂಲಕ ಮನೋದಾಸ್ಯ ನಿರ್ಮಿಸಲು ಭಾರತೀಯ ಶಿಕ್ಷಣದಲ್ಲಿ ಆಮೂಲಾಗ್ರ ಬದಲಾವಣೆ ತಂದರು. ಬ್ರಿಟಿಷ್ ಶಿಕ್ಷಣದ ಮೂಲಕ ಪಾಶ್ಚಾತ್ಯೀಕರಣವನ್ನು ಆಧುನಿಕೀಕರಣ ಎಂದು ಬಿಂಬಿಸುವ ಕೆಲಸಕ್ಕೆ ಚಾಲನೆ ಸಿಕ್ಕಿತು. ಆಂಗ್ಲಶಿಕ್ಷಣ ಪಡೆದವರು ಭಾರತೀಯ ಶಿಕ್ಷಣ, ಸಂಸ್ಕೃತಿಯನ್ನು ಕಾಲಬಾಹಿರ ಎಂದು ಕರೆದು ಪಾಶ್ಚಾತ್ಯೀಕರಣವನ್ನು ಆಧುನಿಕೀಕರಣ ಎನ್ನುವ ವರ್ಗದ ಹುಟ್ಟಿಗೆ ಕಾರಣರಾದರು. ಆಂಗ್ಲರು ತಮ್ಮ ಬೇರುಗಳನ್ನು ಭದ್ರಗೊಳಿಸುವ ವಾತಾವರಣ ನಿರ್ಮಿಸಿದರು. ಆಂಗ್ಲಭಾಷೆ ಕಲಿತವರು ಆತ್ಮವಿಸ್ಮೃತಿಯಿಂದ ಸ್ವಭಾಷೆಯನ್ನೂ ಮಾತೃಭಾಷೆಯನ್ನೂ ಧಿಕ್ಕರಿಸತೊಡಗಿದರು. ಸ್ವ-ಉದ್ಯೋಗ, ಸ್ವಾವಲಂಬನೆ ಮತ್ತು ಸ್ವಾಭಿಮಾನಗಳಿಗೆ ವಿದಾಯ ಹೇಳಿದರು. ವಿದೇಶೀ ಸಂಸ್ಕೃತಿ ಸ್ವೀಕರಿಸಿ ವಿದೇಶೀ ವಸ್ತುಗಳ ಬಳಕೆಯನ್ನೆ ಹೆಮ್ಮೆಯುಕ್ತ ಜೀವನ ಎಂದು ಭಾವಿಸಿದರು. ಕೆಸರಿನಲ್ಲಿ ಕಮಲ ಉದಯಿಸುವಂತೆ ಆಂಗ್ಲಶಿಕ್ಷಣ ಪಡೆದವರಲ್ಲಿ ಮಹರ್ಷಿ ಅರವಿಂದರು, ನ್ಯಾ. ಮಹಾದೇವ ಗೋವಿಂದ ರಾನಡೆಯಂಥವರು ಕೆಲವರು ಆಂಗ್ಲರ ಕುತಂತ್ರವನ್ನು ಅರಿತರು. ರಾನಡೆಯವರು ವಿದೇಶೀ ವಸ್ತುಗಳ ವ್ಯಾಪಾರದಿಂದ ಭಾರತವನ್ನು ಲೂಟಿಮಾಡುವ ಹುನ್ನಾರ ಅರಿತರು. ಯಂತ್ರಗಳಿಂದ ಉತ್ಪಾದನೆ ಹೆಚ್ಚಿಸಿಕೊಳ್ಳುವ, ಕಡಮೆ ಗುಣಮಟ್ಟದ ವಸ್ತುಗಳಿಗೆ ಬೆಲೆಹೆಚ್ಚಿಸಿ ಲಾಭ ಬಾಚಿಕೊಳ್ಳುವ ಕುನೀತಿಯನ್ನು ತೆರೆಸರಿಸಿ ನೋಡಿದರು. ಭಾರತದ ಸಂಪತ್ತು ದೋಚುವ ಬ್ರಿಟಿಷರ ದುಷ್ಟಪ್ರವೃತ್ತಿಯ ವಿರುದ್ಧ ಸ್ವಾವಲಂಬನೆ, ಸ್ವಾಭಿಮಾನಯುಕ್ತ ಸ್ವದೇಶೀ ಜೀವನವನ್ನು ಜನಜಾಗರಣದ ಆಂದೋಲನವನ್ನಾಗಿ ಮುನ್ನಡೆಸಿದರು.
ಸ್ವರಾಜ್ಯಕ್ಕಾಗಿ ಸ್ವದೇಶೀ
ಭಾರತದಲ್ಲಿ ಬ್ರಿಟಿಷರ ಆರ್ಥಿಕನೀತಿಯನ್ನು ವಿರೋಧಿಸಲು ತಿಲಕರು ಮತ್ತು ಗಾಂಧಿಯವರು ಒಂದೇ ನಾಣ್ಯದ ಎರಡು ಮುಖಗಳಂತಿರುವ ಸ್ವದೇಶೀ ಸ್ವೀಕಾರ, ವಿದೇಶೀ ಬಹಿಷ್ಕಾರ ವಿಷಯವನ್ನು ಸ್ವಾತಂತ್ರ್ಯ ಸಂಗ್ರಾಮದ ಪ್ರಮುಖ ಅಸ್ತ್ರವನ್ನಾಗಿಸಿದರು. ಸ್ವದೇಶೀ ಎಂಬುದು ಕೇವಲ ವಸ್ತುಗಳಿಗೆ ಸೀಮಿತವಾಗದೆ ಸ್ವದೇಶೀಭಾವದವರೆಗೆ ವಿಸ್ತರಿಸಬೇಕು. ಸ್ವದೇಶೀ ಸ್ವೀಕಾರ ರಾಷ್ಟ್ರಭಕ್ತಿಯ ಪ್ರಕಟೀಕರಣವಾಗಿದೆ. ಸ್ವದೇಶೀ ವಸ್ತು ಬಳಕೆ ರಾಷ್ಟ್ರಭಕ್ತಿಯ ಅಭಿವ್ಯಕ್ತಿಯ ಸಾಧನವಾಗಿದೆ. ಆದ್ದರಿಂದ ಜನರಲ್ಲಿ ನೈತಿಕತೆ ಮತ್ತು ರಾಷ್ಟ್ರೀಯತೆಯನ್ನು ಜಾಗೃತಗೊಳಿಸಲು ಸ್ವಾತಂತ್ರ್ಯ ಹೋರಾಟಕ್ಕೆ ವೇಗ ನೀಡಲು ತಿಲಕರು ಮತ್ತು ಗಾಂಧಿಯವರು ಸ್ವದೇಶೀ ಆಂದೋಲನಕ್ಕೆ ಚಾಲನೆ ನೀಡಿದರು. ಬಡವರಿಂದ ಶ್ರೀಮಂತರ ವರೆಗೆ, ನಗರ-ಗ್ರಾಮವಾಸಿಗಳವರೆಗೆ, ಕೃಷಿಕರಿಂದ ಕೂಲಿಕಾರರ ವರೆಗೆ ಸ್ವದೇಶೀ ಆಂದೋಲನವನ್ನು ಮುಟ್ಟಿಸಿ ಜನರಲ್ಲಿ ಜಾಗೃತಿ ಮೂಡಿಸಿದರು. ಜನರು ಸ್ವಾತಂತ್ರ್ಯ ಹೋರಾಟದಲ್ಲಿ ಸೈನಿಕರಂತೆ ಹೋರಾಡಲು ಸಿದ್ಧರಾದರು. ತಮ್ಮ ನಾಯಕರ ಕರೆಗೆ ಓಗೊಟ್ಟು ಸತ್ಯಾಗ್ರಹದಲ್ಲಿ ಧುಮುಕಿ ಪ್ರಾಣ ಪಣಕ್ಕೊಡ್ಡಿದವರ ಅಗ್ರಪಂಕ್ತಿಯಲ್ಲಿ ಬಾಬುಗೇನು ಬಲಿದಾನ ಶ್ರೇಷ್ಠವಾಗಿದೆ.
ಗಾಂಧಿಯವರ ಕರೆಗೆ ಓಗೊಟ್ಟು ಸತ್ಯಾಗ್ರಹದಲ್ಲಿ ಭಾಗವಹಿಸಲು ಬಾಬುಗೇನು ಕಾಂಗ್ರೆಸ್ ಪಕ್ಷಕ್ಕೆ ನಾಲ್ಕಾಣೆ ನೀಡಿ ಸಾಮಾನ್ಯ ಸದಸ್ಯನಾದನು (ಕ್ರ. ಸಂಖ್ಯೆ 8194). ದೇಶದಲ್ಲಿರುವ ಸಾಮಾನ್ಯ ಕೂಲಿಕಾರರಂತೆ ಬಡವರಲ್ಲಿ ಬಡವನಾಗಿ ಬದುಕುತ್ತಿದ್ದವನು ತಾನೂ ಸ್ವದೇಶೀ ಆಂದೋಲನದತ್ತ ಆಕರ್ಷಿತನಾಗಿ ಆಂದೋಲನದಲ್ಲಿ ಸತ್ಯಾಗ್ರಹಿಯಾಗಿ ಪೂರ್ಣಪ್ರಮಾಣದಲ್ಲಿ ಭಾಗವಹಿಸಿದನು.
ಸಾಮಾನ್ಯನಿಂದ ಅಸಾಮಾನ್ಯನಾಗುವತ್ತ
ಪುಣೆ ಜಿಲ್ಲೆಯ ಅಂಬೆಗಾಂವ ತಾಲ್ಲೂಕಿನ ಬೆಟ್ಟಗಳ ಸಾಲಿನಲ್ಲಿನ ಮಹಾಳುಂಗೆ ಪಡವಳ ಗ್ರಾಮ ಬಾಬುಗೇನು ಜನ್ಮಸ್ಥಳ. ಪುಣೆ-ನಾಸಿಕ ಹೆದ್ದಾರಿಯ ಕಳಂಬ ಗ್ರಾಮದಿಂದ ಪಶ್ಚಿಮಕ್ಕೆ 6 ಕಿ.ಮೀ. ದೂರಸಾಗಿದರೆ ಆ ಗ್ರಾಮ ಸಿಗುತ್ತದೆ. ಗ್ರಾಮದ ಉತ್ತರದಲ್ಲಿ ಶಿವಾಜಿ ಮಹಾರಾಜರ ಜನ್ಮಸ್ಥಳ ಶಿವನೇರಿದುರ್ಗವಿದೆ. ಪೂರ್ವದಲ್ಲಿ ನಂದೂರ ವಿಠಲವಾಡಿ, ದಕ್ಷಿಣದ ಸಾಕೋರೆ ಗ್ರಾಮದ ಪಕ್ಕದಲ್ಲಿ ಅಂಬೆಗಾಂವ ತಾಲ್ಲೂಕಿನ ಜೀವನದಿ ಘೋಡನದಿ ಇದೆ.
ಪ್ರಕೃತಿಯ ಮಡಿಲಿನ ಸುಂದರವಾದ ಗ್ರಾಮದಲ್ಲಿ ಬಾಬುಗೇನು ತಂದೆ ಜ್ಞಾನಬಾನು ತನ್ನ ಪತ್ನಿ ಕೊಂಡಬಾಯಿಯೊಡಗೂಡಿ ನಾಲ್ಕಾರು ಸಯೀದ ಜನರ ಕುಟುಂಬಗಳ ಗುಡಿಸಲುಗಳ ನಡುವೆ ಗುಡಿಸಲು ನಿರ್ಮಿಸಿಕೊಂಡು ಬಾಳುತ್ತಿದ್ದ. ಕೃಷಿಯೋಗ್ಯ ಭೂಮಿ ಇರದಿದ್ದರಿಂದ ಬೆವರು ಸುರಿಸಿ ದುಡಿದು ಜೀವನ ಮಾಡುತ್ತಿದ್ದರು. ಬೆಳಗಿನಿಂದ ಸಂಜೆಯವರೆಗೆ ದುಡಿದರೂ ಪರಿವಾರದವರ ತುತ್ತು ಅನ್ನಕ್ಕೆ ಕಷ್ಟವಾಗುತ್ತಿತ್ತು. ಬೆಳಗ್ಗೆ ಎದ್ದ ಕೂಡಲೆ ಇಂದು ಹೊಟ್ಟೆ ತುಂಬಿಸುವ ಊಟ ಸಿಗಲು ಏನು ಮಾಡಬೇಕು ಎಂಬ ಪ್ರಶ್ನೆ ನಿತ್ಯ ಕಾಡುತ್ತಿತ್ತು.
ಬಾಬುಗೇನುವಿಗೆ ಭೀಮಾ ಮತ್ತು ಕುಶ ಎಂಬ ಇಬ್ಬರು ಸೋದರರಿದ್ದರು. 1908ರಲ್ಲಿ ಮೂರನೆಯ ಮಗನಾಗಿ ಬಾಬುಗೇನು ಜನಿಸಿದ. ಆನಂತರ ಎರಡೂವರೆ ವರ್ಷಕ್ಕೆ ನಾಮಿ ಎಂಬ ತಂಗಿ ಜನಿಸಿದಳು. ಕುಟುಂಬದ ಆರು ಜನರಿಗೆ ಅಶನ ಒದಗಿಸುವುದು ಒಂದು ದೊಡ್ಡ ಸಮಸ್ಯೆಯಾಗಿತ್ತು. ಅಡ್ಡಾದಿಡ್ಡಿ ಶ್ರಮದ ಪ್ರಯತ್ನದಿಂದ ಜ್ಞಾನಬಾ ಆರೋಗ್ಯ ಹದಗೆಟ್ಟಿತು. ಚಿಕಿತ್ಸೆ ಮತ್ತು ಔಷಧಕ್ಕಾಗಿ ದುಡ್ಡಿಲ್ಲದಿದ್ದರಿಂದ ಸ್ವಾಸ್ಥ್ಯ ಕೆಟ್ಟು 1909ರಲ್ಲಿ ಸಾವಿಗೆ ಶರಣಾದನು. ಆ ಬಳಿಕ ತಾಯಿ ಕೊಂಡಬಾಯಿ ಮಕ್ಕಳ ಜೊತೆಗೆ ಕೂಲಿನಾಲಿ ಮಾಡತೊಡಗಿದಳು. ಭೀಮಾ ಮತ್ತು ಕುಶರನ್ನು ಗ್ರಾಮದ ದನಕರುಗಳನ್ನು ಕಾಯಲು ಕಳಿಸಿದಳು.
ಕಾಲ ಕಳೆಯುತ್ತಿದ್ದಂತೆ ಬಾಬುಗೇನು ಬೆಳೆದು ದೊಡ್ಡವನಾದ. ಕುಶಾಗ್ರಮತಿಯಾದ ಬಾಬು ವಿದ್ಯೆ ವ್ಯವಹಾರವನ್ನು ತಕ್ಷಣ ಅರಿತುಕೊಳ್ಳುತ್ತಿದ್ದ. ತಾಯಿ ಮಗನಿಗೆ ಶಾಲೆಗೆ ಕಳಿಸುವಷ್ಟು ಶಕ್ತಳಾಗಿರಲಿಲ್ಲ. ಆದ್ದರಿಂದ ಬಾಬು ಮನೆಯಲ್ಲಿದ್ದ ಒಂದು ಆಕಳು, ಒಂದು ಎತ್ತು ಮತ್ತು ಎರಡು ಆಡುಗಳನ್ನು ಪಕ್ಕದ ಕಾಡಿನಲ್ಲಿ ಮೇಯಿಸಲು ಒಯ್ಯುತ್ತಿದ್ದನು. ಕೆಲವು ಸಲ ಎತ್ತನ್ನು ಅನ್ಯರಿಗೆ ಬಾಡಿಗೆ ಕೊಡಲಾಗುತ್ತಿತ್ತು. ಹಸು, ಆಡಿನ ಹಾಲು ಮಕ್ಕಳ ಪಾಲನೆಗೂ, ಎತ್ತಿನ ಬಾಡಿಗೆಯಿಂದ ಬಂದ ಆದಾಯ ಜೀವನನಿರ್ವಹಣೆಗೂ ಉಪಯೋಗವಾಗುತ್ತಿತ್ತು.
ಒಂದು ದಿನ ಓಡೋಡುತ್ತ ಮನೆಗೆ ಬಂದ ಮಗ ಬಾಬು ‘ಕಾಡಿನಲ್ಲಿ ನಮ್ಮ ಎತ್ತು ಮತ್ತಿತರ ಎತ್ತುಗಳ ಜೊತೆ ಕಾದಾಡುವಾಗ ಕೆಳಗೆ ಬಿದ್ದು ಸತ್ತುಹೋಯಿತು’ ಎಂಬ ಆಘಾತಕಾರಿ ಸುದ್ದಿ ತಂದದ್ದು ಪರಿವಾರಕ್ಕೆ ದೌರ್ಭಾಗ್ಯವಾಗಿ ಕಾಡಿತು. ಉಪಜೀವನದ ಹಣಕ್ಕಾಗಿ ಆಡು ಮತ್ತು ಆಕಳನ್ನು ಮಾರಬೇಕಾಯಿತು. ಬಾಬುಗೆ ಕೆಲಸವಿಲ್ಲದಾಯಿತು. ಅನಿವಾರ್ಯವಾಗಿ ತಾಯಿ ಮೂರು ಮಕ್ಕಳನ್ನು ಅನ್ಯರಲ್ಲಿ ಕೆಲಸಕ್ಕೆ ಇಟ್ಟಳು. ಪುಟ್ಟಮಗಳು ನೇಮಿಯನ್ನು ಕಟ್ಟಿಕೊಂಡು ಮುಂಬಯಿಯ ಘೋಡಪಡೇವದ ಢಾಕೂ ಪ್ರಭುವಾಡಿಯಲ್ಲಿನ ಸೋದರನ ಆಶ್ರಯಕ್ಕೆ ಸೇರಿದಳು.
ಬೇರೆಯವರಲ್ಲಿ ಕೃಷಿಕಾರ್ಮಿಕನಾಗಿ ಕೆಲಸ ಮಾಡಲು ಬಾಬುಗೇನುವಿಗೆ ಒಗ್ಗಲಿಲ್ಲ. ತಾಯಿಯಿಲ್ಲದ ಬೇಸರದಿಂದಾಗಿ ಕೆಲಸ ಕಷ್ಟಕರ ಅನ್ನಿಸಿತು. ಅವನು ತನ್ನ ಗೆಳೆಯರ ಬಳಗದೊಡನೆ ತಿರುಗುತ್ತ ಕಾಲಹರಣದಲ್ಲಿ ತೊಡಗಿದನು. ಅಲ್ಪಸ್ವಲ್ಪ ಅಭ್ಯಾಸ ಮಾಡಿದ್ದರಿಂದ ಓದುವ ಅಭ್ಯಾಸ ಮಾತ್ರ ಅಂಟಿಕೊಂಡಿತ್ತು.
ಸೋದರರು ಸಿಕ್ಕಾಗ ಇವನ ಸ್ವೇಚ್ಛಾಚಾರ ಕಂಡು ಕೋಪಿಸುತ್ತ ಇದ್ದರು. ಆದರೂ ಅವನು ಕೂಲಿ ಮಾಡಲು ಮನಸ್ಸು ಮಾಡಲಿಲ್ಲ.
ಯುವಕ ಬಾಬುಗೇನುವಿಗೆ ಊರಲ್ಲಿ ಖಾಲಿ ಕೂಡುವುದಕ್ಕಿಂತ ಮುಂಬಯಿಗೆ ಹೋದರೆ ಮತ್ತಾವುದಾದರೂ ಉದ್ಯೋಗ ಮಾಡಬಹುದು ಮತ್ತು ಹೊಸದಾಗಿ ಏನನ್ನಾದರೂ ಕಲಿಯಬಹುದು ಎಂಬ ಯೋಚನೆ ಬಂದಿತು. ಆದರೆ ಮುಂಬಯಿಗೆ ಹೋಗುವ ಟಿಕೆಟ್ಗಾಗಿ ಹಣ ಹೊಂದಿಸುವುದು ಹೇಗೆ ಎಂಬ ಸಮಸ್ಯೆ ಕಾಡಿತು. ಸೋದರರಾದ ಭೀಮಾ ಮತ್ತು ಕುಶ ಊಟಕ್ಕೆ ಕಷ್ಟಪಡುತ್ತಿರುವಾಗ ಅವರ ಹತ್ತಿರ ದುಡ್ಡಿನ ಸಹಾಯ ಕೇಳುವಂತಿರಲಿಲ್ಲ. ತನ್ನ ಗೆಳೆಯ ಪ್ರಹ್ಲಾದನೊಡನೆ ಮುಂಬಯಿಗೆ ಹೋಗುವ ಕುರಿತು ಚರ್ಚಿಸಿದ. ಪ್ರಹ್ಲಾದನಿಗೂ ಊರಲ್ಲಿರುವುದು ಇಷ್ಟವಿರಲಿಲ್ಲ. ಅವನು ತಂದೆಯ ಜೇಬಿನಿಂದ ಐದು ರೂ. ಕದ್ದು ತಂದ. ಇಬ್ಬರೂ ಸೇರಿ ಮುಂಬಯಿಗೆ ಬಂದರು.
ಬಾಬು ತಾಯಿಯಲ್ಲಿಗೆ ಬಂದ ಮೇಲೆ ಅವಳ ಕಷ್ಟಗಳು ಹೆಚ್ಚಾದವು. ಸೋದರನ ಹತ್ತಿರ ಮೂರು ಜನ ಇರುವುದು ಅಸಾಧ್ಯ ಎನ್ನಿಸಿತು. ಅವಳು ಕೊಂಡಾಜಿ ನಾರಾಯಣ ಸಯೀದ ಅವರ ಸಹಕಾರದಿಂದ ಪರೇಲ್ ಬಾರಾಚಾಲಿಯಲ್ಲಿ ಒಂದು ಪುಟ್ಟ ಕೋಣೆ ಬಾಡಿಗೆಗೆ ಪಡೆದು ಪ್ರತ್ಯೇಕವಾಗಿ ವಾಸಿಸತೊಡಗಿದರು. ಆ ಓಣಿಯಲ್ಲಿ ಹಿಂದೂ ಮುಸ್ಲಿಮರು ಒಟ್ಟಾಗಿ ಇರುತ್ತಿದ್ದರು. ಆಂಗ್ಲರ ಒಡೆದು ಆಳುವ ನೀತಿಯಂತೆ ಹಿಂದೂ ಮುಸ್ಲಿಮರು ಒಟ್ಟಾಗಿ ಇರುವುದನ್ನು ಸಹಿಸದೆ ಅವರು ಆಗಾಗ ಪರಸ್ಪರ ಜಗಳ ಹಚ್ಚುತ್ತಿದ್ದರು. ದಂಗೆಗಳಾಗುತ್ತಿದ್ದವು. ಆಗೆಲ್ಲ ಜ್ವಾಲಾಮುಖಿಯ ಮೇಲೆ ಕುಳಿತಂತೆ ಆಗುತ್ತಿತ್ತು. ಆದರೆ ಕೊಂಡಾಬಾಯಿಗೆ ಹೆಚ್ಚಿನ ಬಾಡಿಗೆ ಮೇಲೆ ಬೇರೆ ಕಡೆಗೆ ಹೋಗುವ ಶಕ್ತಿ ಇರಲಿಲ್ಲ. ಮತ್ತೊಂದು ಕಾರಣವೆಂದರೆ ತಾನು ಕೆಲಸಕ್ಕೆ ಹೋಗುವ ಪರಿಚಯದ ಗಿರಣಿ ಹತ್ತಿರದಲ್ಲಿದ್ದು ಕೆಲಸಕ್ಕೆ ಹೋಗಲು ಅನುಕೂಲವಾಗುತ್ತಿತ್ತು. ಮಗಳು ಓಣಿಯಲ್ಲಿನ ಕೆಲವು ಮನೆಗಳಲ್ಲಿ ಬಟ್ಟೆ-ಬಾಂಡಿ ಕೆಲಸಕ್ಕೆ ಹೋಗುತ್ತಿದ್ದಳು. ಬಾಬು ಸಹ ತಾಯಿಯ ಗಿರಣಿಯಲ್ಲಿ ತಾತ್ಕಾಲಿಕವಾಗಿ ಕೆಲಸ ಆರಂಭಿಸಿದ. ಕೆಲಸ ಇಲ್ಲದಾಗ ಗೆಳೆಯ ಪ್ರಹ್ಲಾದನ ಭೇಟಿಗೆ ಹೋಗಿ ಗಂಟೆಗಟ್ಟಲೆ ಹರಟೆ ಹೊಡೆದು ಬರುತ್ತಿದ್ದ. ಪ್ರಹ್ಲಾದ ನಾಲ್ಕನೆ ತರಗತಿಯವರೆಗೆ ಓದಿದ್ದರಿಂದ ಪತ್ರಿಕೆಯಲ್ಲಿ ಬರುವ ದೇಶದಲ್ಲಿ ನಡೆಯುತ್ತಿರುವ ವಿದ್ಯಮಾನಗಳ ಮಾಹಿತಿಯನ್ನು ಬಾಬು ಜೊತೆಗೆ ಹಂಚಿಕೊಳ್ಳುತ್ತಿದ್ದನು. ಪ್ರಹ್ಲಾದನಿಗೆ ಬಾಬುಗೇನು ಕುರಿತು ಪ್ರೀತಿ ಮತ್ತು ಕಾಳಜಿ ಇತ್ತು. ಅವನ ಕಷ್ಟದ ಸಂದರ್ಭದಲ್ಲಿ ಕೈಹಿಡಿದು ಸಹಾಯ ಮಾಡುತ್ತಿದ್ದನು.
ಸ್ವದೇಶೀ ಸತ್ಯಾಗ್ರಹಿ
ಬಾರಾಚಾಲಿಯಲ್ಲಿ ರಾಷ್ಟ್ರೀಯ ವಿಚಾರಧಾರೆ ಹೊಂದಿದ್ದ ಮುಸ್ಲಿಂಶಿಕ್ಷಕನ ಸಂಪರ್ಕ ಬಾಬುಗೇನುವಿಗೆ ಬಂದಿತು. ಬಾಬು ಅವನಿಗೆ ‘ಚಾಚಾ’ ಎಂದು ಕರೆಯುತ್ತಿದ್ದನು. “ಯಾವ ನೆಲದಲ್ಲಿ ಹುಟ್ಟಿದ್ದೇವೆಯೋ ಆ ಭೂಮಿಯ ಮಕ್ಕಳು ನಾವು. ನಮ್ಮ ದೇಶವನ್ನು ಬ್ರಿಟಿಷ್ ಗುಲಾಮಿತನದಿಂದ ಮುಕ್ತಮಾಡುವುದು ನಮ್ಮ ಆದ್ಯಕರ್ತವ್ಯ” – ಎಂದು ಚಾಚಾ ಹೇಳುತ್ತಿದ್ದನು. ಆಂಗ್ಲರ ಬರ್ಬರತೆಯನ್ನು, ಕುಕೃತ್ಯಗಳನ್ನು ಮತ್ತು ಅನ್ಯಾಯಗಳನ್ನು ಬಾಬುವಿಗೆ ವಿವರಿಸುತ್ತಿದ್ದನು. ಗಿರಣಿಯ ಯುವ ಕೂಲಿಕಾರನ ಮನದಲ್ಲಿ ದೇಶಭಕ್ತಿಯ ಬೀಜವನ್ನು ಬಿತ್ತಿದನು. ರೌಲೆಟ್ ಕಾಯಿದೆಯಿಂದಾಗಬಹುದಾದ ಅನ್ಯಾಯ, ಮೋಸವನ್ನು ತಿಳಿಸಿದನು. ಜಲಿಯನ್ವಾಲಾಬಾಗ್ನಲ್ಲಿ ಆಂಗ್ಲ ಅಧಿಕಾರಿಯಿಂದ ನಡೆದ ಭೀಕರ ಹತ್ಯಾಕಾಂಡದ ಚಿತ್ರಸಹಿತ ಮಾಹಿತಿ ಒದಗಿಸಿದನು. ಸಹಸ್ರಾರು ನಿರಪರಾಧಿ ಜನರ ಮೇಲೆ ಗುಂಡಿನ ಮಳೆಗರೆದ ಜನರಲ್ ಡಯರ್ನ ಕ್ರೂರತನ ಅರಿತು ವ್ಯಗ್ರನಾದನು. ಬಾಬು ಅಸಹಕಾರ ಮತ್ತು ಸತ್ಯಾಗ್ರಹದ ಕುರಿತು ಅರಿತುಕೊಂಡನು. ಜಲಿಯನ್ವಾಲಾಬಾಗ್ ಹತ್ಯಾಕಾಂಡ ವಿಚಾರಣೆ ಮಾಡುವ ಹಂಟರ್ ಆಯೋಗವನ್ನು ಗಾಂಧಿಯವರು ಅಸಹಕಾರ ಮತ್ತು ಸತ್ಯಾಗ್ರಹದ ಮೂಲಕ ವಿರೋಧಿಸುವುದನ್ನು ಬೆಂಬಲಿಸಿದನು. ಚಾಚಾನು ಬಾಬುವಿಗೆ ಹಿಂದೂ ಮುಸ್ಲಿಂರ ನಡುವೆ ವೈಮನಸ್ಸು ತಂದು ದಂಗೆ ಎಬ್ಬಿಸುವ ಬ್ರಿಟಿಷರ ಕುತಂತ್ರವನ್ನು ತಿಳಿಸಿದನು. ಜಿಹಾದ್, ಜಿಹಾದ್ ಎಂದು ಚೀರುತ್ತ ಹೊಡಿ-ಬಡಿ-ಕಡಿ ಎನ್ನುವ ಮುಸ್ಲಿಂ ಯುವಕರು ಆಂಗ್ಲರ ಕಾರಣದಿಂದ ಅಸಹಿಷ್ಣುಗಳಾಗಿದ್ದಾರೆ. ಹಿಂದೂ ದೇವಸ್ಥಾನಗಳನ್ನು ಹಾಳುಮಾಡುವುದರಲ್ಲಿ ಮತ್ತು ಮಹಿಳೆಯರ ಜೊತೆಯಲ್ಲಿ ಅನುಚಿತ ವರ್ತನೆಯಲ್ಲಿ ತೊಡಗಿದ್ದಾರೆ ಎಂಬ ಎಲ್ಲ ಸಂಗತಿ ತಿಳಿಸುವಾಗ ಚಾಚಾನ ಕಣ್ಣುಗಳಲ್ಲಿ ನೀರು ಹನಿಯುತ್ತಿದ್ದವು.
ಸೆಪ್ಟೆಂಬರ್ 1920ರ ಕೋಲ್ಕತಾ ಅಧಿವೇಶನದಲ್ಲಿ ದೇಶದಲ್ಲಿ ಸರ್ಕಾರಿ ವಿದ್ಯಾಲಯಗಳಲ್ಲಿ ಪ್ರವೇಶ ಸಿಕ್ಕ ಮತ್ತು ಸಿಗದ ವಿದ್ಯಾರ್ಥಿಗಳಿಗಾಗಿ ರಾಷ್ಟ್ರೀಯ ವಿದ್ಯಾಲಯವನ್ನು ಆರಂಭಿಸಲು ಕಾಂಗ್ರೆಸ್ ಕರೆನೀಡಿತು. ಕಾಂಗ್ರೆಸ್ ಕರೆಗೆ ಓಗೊಟ್ಟು ತಮ್ಮ ವೃತ್ತಿಯನ್ನು ತ್ಯಜಿಸಿ ರಾಷ್ಟ್ರೀಯ ವಿದ್ಯಾಲಯದಲ್ಲಿ ಕಲಿಸಲು ಅನೇಕ ಶಿಕ್ಷಕರು ಮುಂದೆಬಂದರು. ಅಂತಹವರಲ್ಲಿ ಚಾಚಾ ಕೂಡ ಒಬ್ಬನಾಗಿದ್ದನು. ರಾಷ್ಟ್ರಭಕ್ತಿಯ ಕಾರಣದಿಂದಾಗಿ ತನ್ನ ಮತಾಂಧ ಮಕ್ಕಳಿಂದ ದೂರವಾಗಿರಬೇಕಾಯ್ತು.
ಚಾಚಾನ ಮಗ ವಾಲೀದ ಮತಾಂಧತನಕ್ಕೆ ಬಲಿಯಾಗಿ ಚಾಚಾನ ವಿಚಾರಗಳಿಗೆ ವಿರುದ್ಧವಾಗಿದ್ದನು. ಹಿಂದೂ-ಮುಸ್ಲಿಂ ದಂಗೆಗಳಲ್ಲಿ ಕ್ರಿಯಾಶೀಲನಾಗಿ ಭಾಗಿಯಾಗುತ್ತಿದ್ದನು. ತಂದೆಯ ಹತ್ತಿರ ಬಂದು ತಾನೂ ಇಷ್ಟು ಹಿಂದೂ ಮನೆಗಳನ್ನು ಲೂಟಿ ಮಾಡಿದೆ ಮತ್ತು ಮಹಿಳೆಯರನ್ನು ಭ್ರಷ್ಟರನ್ನಾಗಿಸಿದ್ದೇನೆ ಎಂದು ಹೆಮ್ಮೆಯಿಂದ ಹೇಳುತ್ತಿದ್ದನು. ಅದನ್ನು ಕೇಳಿ ಚಾಚಾ ಅಧೀರನಾಗುತ್ತಿದ್ದನು. ಒಂದು ದಂಗೆಯಲ್ಲಿ ಆತ ವಿಪರೀತ ಗಾಯಗೊಂಡನು. ಚಾಚಾನನ್ನು ಕರೆದುಕೊಂಡು ಕರಾಚಿಗೆ ಹೋಗಬಯಸಿದನು. ಚಾಚಾ ಒಪ್ಪದ ಕಾರಣ ತಾನೊಬ್ಬನೇ ಕರಾಚಿಗೆ ಹೋದನು. ದುಃಖಿತನಾದ ಚಾಚಾ ತನ್ನ ಮಗ ಮರಣಹೊಂದಿದ್ದಾನೆಂದು ಭಾವಿಸಿ ಬದುಕುತ್ತಿದ್ದನು.
ಚಾಚಾನಿಗೆ ಬಾಬುಗೇನು ಮಗನ ರೂಪದಲ್ಲಿ ಮರಳಿ ಬಂದಂತೆ ಆಗಿತ್ತು. ಬಾಬು ಚಾಚಾನ ಮನದ ಮಾತುಗಳನ್ನು ಆಸಕ್ತಿಯಿಂದ ಆಲಿಸುತ್ತಿದ್ದನು. ಚಾಚಾ ಅವನನ್ನು ಮಾನಸಿಕವಾಗಿ ಗಾಂಧಿಯವರ ಶಿಷ್ಯನನ್ನಾಗಿಸಿದನು ಮತ್ತು ತಾನು ವೃದ್ಧನಾದದ್ದರಿಂದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಲು ಬಾಬುಗೇನುವನ್ನು ತನ್ನ ಉತ್ತರಾಧಿಕಾರಿಯಂತೆ ಬೆಳೆಸಿದನು.
ಕಂಟಕಾಕೀರ್ಣ ಮಾರ್ಗ
ಬಾಬು ಸ್ವಭಾವತಃ ಕೋಪಿಷ್ಠನಾಗಿದ್ದನು. ಭಾವಾವೇಶದಲ್ಲಿ ಏನನ್ನೂ ಮಾಡಲು ಹಿಂದೆಗೆಯುತ್ತಿರಲಿಲ್ಲ. ಚಾಚಾ ಕ್ರಮೇಣ ಅವನ ಕೋಪದ ಸ್ವಭಾವಕ್ಕೆ ಅಂಕುಶಹಾಕಿ ತಿದ್ದಿತೀಡಿದ್ದು ಮಾತ್ರವಲ್ಲ, ಗಾಂಧಿಯವರ ಅಹಿಂಸೆ ಮತ್ತು ಸತ್ಯಾಗ್ರಹದ ವಿಚಾರಗಳನ್ನು ಮನನ ಮಾಡಿಸಿದನು. 1926-27ರಲ್ಲಿ ಬಾಬುಗೇನು ತನ್ನ ಗೆಳೆಯ ಪ್ರಹ್ಲಾದನ ಜೊತೆಗೂಡಿ ಕಾಂಗ್ರೆಸ್ ಸೇರಿ ಸ್ವಾತಂತ್ರ್ಯ ಸಂಗ್ರಾಮದ ಸತ್ಯಾಗ್ರಹದ ಕಾರ್ಯಕ್ರಮಗಳಲ್ಲಿ ಭಾಗವಹಿಸಲಾರಂಭಿಸಿದನು. ಪ್ರಹ್ಲಾದ ರಾವುತ್ ಕಲಾಬಾದೇವಿ ಕಾಂಗ್ರೆಸ್ ಕಮಿಟಿಯ ಪದಾಧಿಕಾರಿಯಾದನು. ಅವನಿಂದಾಗಿ ಬಾಬು ಕನ್ನಯ್ಯಲಾಲ್ ಮುನ್ಶಿ, ಲೀಲಾವತಿಬಾಯಿ ಮುನ್ಶಿ, ಜಮನಾದಾಸ್, ವೀರ ನರೀಮನ್, ಮದನಶೆಟ್ಟಿ, ಮೆಹರ್ ಅಲಿಯಂತಹ ಗಣ್ಯ ಕಾಂಗ್ರೆಸ್ ನಾಯಕರ ಸಂಪರ್ಕಕ್ಕೆ ಬಂದನು. ಅವರೊಂದಿಗೆ ಒಡನಾಟ ಮುಂದುವರಿದದ್ದರಿಂದ ಬಾಬು ಕಾಂಗ್ರೆಸಿನ ಸಕ್ರಿಯ ಕಾರ್ಯಕರ್ತನಾದನು.
ಮೇ-ಜೂನ್ 1927ರಲ್ಲಿ ಕೋಮುದಂಗೆಗಳು ನಡೆದವು. ಬಾಬು ಮತ್ತು ಪ್ರಹ್ಲಾದ ಜೊತೆಗೂಡಿ ದೊಡ್ಡ ದೊಡ್ಡ ನಾಯಕರಿಂದಾಗದ ಕೆಲಸವನ್ನು ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡಿ ತಮ್ಮ ಓಣಿಯಲ್ಲಿ ಸೌಹಾರ್ದ ಮತ್ತು ಸಾಮರಸ್ಯ ಸ್ಥಾಪಿಸಿದರು. ಅಸಂಭವವಾದದ್ದನ್ನು ಸಾಧ್ಯವಾಗಿಸಿದರು.
ಮುಂಬಯಿ, ಲಾಹೋರ್, ಬಿಹಾರ, ಬರೇಲಿ, ನಾಗಪುರ ಮುಂತಾದ ಪ್ರದೇಶಗಳಲ್ಲಿ ಕೋಮುದಂಗೆಗಳು ನಡೆದವು. 250 ಜನ ಮರಣಹೊಂದಿ, 25000 ಜನ ಗಾಯಗೊಂಡರು. ಇವರಲ್ಲಿ ಹಿಂದೂಗಳೇ ಹೆಚ್ಚಿನ ಸಂತ್ರಸ್ತರಾಗಿದ್ದರು. ಇಂತಹ ಪರಿಸ್ಥಿತಿಯಲ್ಲಿ ಬಾಬುಗೇನು ಮತ್ತು ಪ್ರಹ್ಲಾದ ಗಲಭೆಪೀಡಿತ ಪ್ರದೇಶದಲ್ಲಿ ಬ್ರಿಟಿಷರ ವಿರುದ್ಧದ ಅಸ್ತ್ರವಾದ ಸ್ವದೇಶೀ ಪ್ರಚಾರ ಪ್ರಸಾರಕಾರ್ಯ ಕೈಗೊಂಡರು. ವಿದೇಶೀ ವಸ್ತುಗಳ ಬಹಿಷ್ಕಾರ, ಖಾದಿಯ ಬಳಕೆಯ ಬಗೆಗೆ ದಿನದಲ್ಲಿ 8-10 ಗಂಟೆಗಳ ಕಾಲ ಪ್ರಚಾರ ಮಾಡುತ್ತಿದ್ದರು. ಬಾಬು ತನ್ನದೇ ಆದ ಸ್ವತಂತ್ರ ಸ್ವಯಂಸೇವಕರ ವಾಹಿನಿ ಸಂಘಟಿಸಿದನು. ಅವರೆಲ್ಲರ ಸಹಕಾರದಿಂದ ‘ಚರಖಾ ಫಂಡ್’ ಸ್ಥಾಪಿಸಿದನು. ಚರಖಾಗಳನ್ನು ಖರೀದಿಸಲಾಯ್ತು. ಅವರೆಲ್ಲರೂ ನಿತ್ಯ ನೂಲು ತೆಗೆದು ಖಾದಿಬಟ್ಟೆ ಸಿದ್ಧಪಡಿಸಬೇಕಾಗಿತ್ತು. ಗಿರಣಿಯಲ್ಲಿನ ಕಾರ್ಮಿಕರು ಸಹ ಖಾದಿ ಧರಿಸುವಂತೆ ಪ್ರೇರೇಪಿಸಿದನು.
ಈ ವೇಳೆಗೆ ಬಾಬುವಿನ ಅಣ್ಣ ದೀರ್ಘಕಾಲದ ಅನಾರೋಗ್ಯದಿಂದ ತೀರಿಕೊಂಡನು. ಕುಶನಿಗೆ ವಿವಾಹ ಆಗಲು ಸಾಧ್ಯವಾಗಿರಲಿಲ್ಲ. ಬಾಬು ಪರಿವಾರದ ನಿರ್ವಹಣೆಗಾಗಿ ತಾಯಿಯ ಕೈಗೆ ಸ್ವಲ್ಪ ಹಣ ನೀಡಿದನು. ತಾಯಿ ಮಗಳ ಜೊತೆಗೆ ಊರಿಗೆ ಮರಳಿ ಕುಶನ ವಿವಾಹ ನಿಶ್ಚಯಿಸಿ ತಿಳಿಸಿದಳು. ಬಾಬು ಮದುವೆಗೆ ಬರುವ ಭರವಸೆ ನೀಡಿದನು. ಆದರೆ ಸ್ವಾತಂತ್ರ್ಯ ಹೋರಾಟದ ಭರದಲ್ಲಿ ಅಣ್ಣನ ವಿವಾಹಕ್ಕೆ ಹೋಗಲಾಗಲಿಲ್ಲ.
ಸ್ವಾತಂತ್ರ್ಯ ಹೋರಾಟ ಸಾಧನೆಗೆ ಸ್ವದೇಶೀ ಸರಿಯಾದ ದಾರಿ ಎಂದು ತಿಳಿದು ಆಚರಿಸಿದವನು ಬಾಬುಗೇನು.
1928ರಲ್ಲಿ ಸೈಮನ್ ಕಮಿಷನ್ ಭಾರತಕ್ಕೆ ಬರುವುದಿತ್ತು. ಕಾಂಗ್ರೆಸ್ ಸೈಮನ್ ಕಮಿಷನ್ ವಿರೋಧಿಸಲು ನಿರ್ಧರಿಸಿತು. ಗಾಂಧಿಯವರು ವೈಸರಾಯ್ ಲಾರ್ಡ್ ಇರ್ವಿನ್ರಿಗೆ ಸೈಮನ್ ಕಮಿಷನ್ ಬಂದರೆ ಅದನ್ನು ತಾವು ಬಲವನ್ನೆಲ್ಲ ಉಪಯೋಗಿಸಿ ವಿರೋಧಿಸುತ್ತೇವೆ ಎಂದು ತಿಳಿಸಿದರು. ಇವೆಲ್ಲದರ ನಡುವೆ ಬ್ರಿಟಿಷ್ ಸರ್ಕಾರ ಸೈಮನ್ ಭೇಟಿ ನಿಶ್ಚಯಮಾಡಿತು. ‘ಗೋ ಬ್ಯಾಕ್ ಸೈಮನ್’ ಎಂಬ ಘೋಷಣೆ ದೇಶಾದ್ಯಂತ ಮೊಳಗಿದವು. ಬಾಬುಗೇನು ಪೂರ್ಣಪ್ರಮಾಣದಲ್ಲಿ ಸ್ವಾತಂತ್ರ್ಯಸಂಗ್ರಾಮದಲ್ಲಿ ಧುಮುಕಲು ನಿರ್ಧರಿಸಿ ತನ್ನ ವೃದ್ಧ ತಾಯಿ ಮತ್ತು ತಂಗಿಯನ್ನು ಊರಿಗೆ ಕಳಿಸಿದ್ದನು. ತಾನು ವಿವಾಹ ಆಗಲು ಸಿದ್ಧನಿರುವುದಾಗಿ ತಿಳಿಸಿ ಊರಲ್ಲಿ ಒಳ್ಳೆಯ ಹುಡುಗಿ ಇದ್ದಲ್ಲಿ ಹುಡುಕು ಎಂದೂ ತಿಳಿಸಿದ್ದನು. ತಾಯಿಯು ಮಗನ ವಿವಾಹದ ಭವ್ಯ ಕನಸು ಕಾಣುತ್ತ ಊರಿಗೆ ಮರಳಿದ್ದಳು. ಏಕಾಂಗಿಯಾದ ಬಾಬು ‘ಸೈಮನ್ ಹಿಂದಿರುಗಿ’ ಎನ್ನುವ ಚಳವಳಿಯಲ್ಲಿ ತನ್ನನ್ನು ಪೂರ್ಣರೂಪದಲ್ಲಿ ತೊಡಗಿಸಿಕೊಂಡನು.
ವೀರ ಸತ್ಯಾಗ್ರಹಿ
ಫೆಬ್ರುವರಿ 3, 1928ರಂದು ತನ್ನ ತಾನಾಜಿ ಪಡೆಯ ಸ್ವಯಂಸೇವಕರ ತಂಡದೊಂದಿಗೆ ಮುಂಬಯಿಯಲ್ಲಿ ಹಿಂದೆಂದೂ ನಡೆಸದ ರೀತಿಯಲ್ಲಿ ಮೆರವಣಿಗೆ ಸಂಘಟಿಸಿದನು. ಪ್ರದರ್ಶನಕಾರಿಗಳು ಕಪ್ಪುಧ್ವಜದೊಂದಿಗೆ ಬ್ರಿಟಿಷ್ವಿರೋಧಿ ಘೋಷಣೆ ಕೂಗುತ್ತ ಬೃಹತ್ ಮೆರವಣಿಗೆ ನಡೆಸಿದರು. ಪೆÇಲೀಸರು ಲಾಠಿಚಾರ್ಜ್ ಮಾಡಿದರು. ಸತ್ಯಾಗ್ರಹಿಗಳಾದ ಅವರು ಎಲ್ಲವನ್ನೂ ಮೌನವಾಗಿ ಸಹಿಸಿದರು. ದೆಹಲಿ, ಕೋಲ್ಕತಾ, ಪಾಟ್ನಾ, ಲಾಹೋರ್, ಚೆನ್ನೈ, ಮುಂಬಯಿಗಳ ವಿವಿಧ ಪ್ರದೇಶದಲ್ಲಿ ಸತ್ಯಾಗ್ರಹ ನಡೆಸಲಾಯಿತು. ಪ್ರದರ್ಶನಗಳು ಉತ್ಸಾಹಪೂರ್ಣವಾಗಿದ್ದವು. ಮೆರವಣಿಗೆಯ ನೇತೃತ್ವವಹಿಸಿದ್ದ ಲಾಲಾ ಲಜಪತರಾಯ್ರವರು ಲಾಠಿಚಾರ್ಜ್ನಲ್ಲಿ ಗಂಭೀರವಾಗಿ ಗಾಯಗೊಂಡು ಅನಂತರ ಹುತಾತ್ಮರಾದರು. ದೇಶದಲ್ಲಿ ಲಜಪತರಾಯ್ರ ಬಲಿದಾನದ ಸುದ್ದಿ ಕಾಳ್ಗಿಚ್ಚಿನಂತೆ ಹಬ್ಬಿತು. ಸ್ವಾತಂತ್ರ್ಯ ಆಂದೋಲನ ದೇಶದಲ್ಲಿ ತೀವ್ರವಾಗತೊಡಗಿತು. ನಿಃಶಸ್ತ್ರರಾದ ಸತ್ಯಾಗ್ರಹಿಗಳು ಶಾಂತಿಯಿಂದ ಸತ್ಯಾಗ್ರಹದಲ್ಲಿ ಪಾಲ್ಗೊಂಡರು. ಬ್ರಿಟಿಷ್ ಆಡಳಿತದ ಕಡು ವಿರೋಧದ ನಡುವೆಯೂ ಜನಸಾಮಾನ್ಯರು ಭಾಗವಹಿಸಿದರು.
ಲಾಲಾ ಲಜಪತರಾಯ್ರ ಕಗ್ಗೊಲೆಗೆ ಸೇಡು ತೀರಿಸಿಕೊಳ್ಳಲು ಭಗತ್ಸಿಂಗ್, ರಾಜಗುರು, ಸುಖದೇವ್ 17.9.1928ರಂದು ಸ್ಯಾಂಡರ್ಸ್ ವಧೆ ಮಾಡಿದರು. ರಾಜಗುರು ಪುಣೆ ಜಿಲ್ಲೆಯವರಾಗಿದ್ದು ಬಾಬುಗೇನುವಿನ ಹತ್ತಿರದ ಗ್ರಾಮದವರಾಗಿದ್ದರು. ಯುವಕ ರಾಜಗುರು ಬಗ್ಗೆ ಬಾಬುಗೇನುವಿಗೆ ವಿಶೇಷ ಅಭಿಮಾನವಿದ್ದುದರಿಂದ ಅವರ ಬಲಿದಾನ ಬಾಬುವಿಗೆ ಪ್ರೇರಣೆ ನೀಡಿತು.
ಸತ್ಯಾಗ್ರಹ
ಗಾಂಧಿಯವರ ಮೇಲೆ ಬಾಬುಗೇನುವಿಗೆ ಅಪಾರ ಶ್ರದ್ಧೆಯಿತ್ತು. ಸ್ವಾತಂತ್ರ್ಯಗಳಿಸಲು ಗಾಂಧಿಯವರ ಸತ್ಯಾಗ್ರಹದ ಮಾರ್ಗವೇ ಸರಿಯೆಂದು ಅವನು ನಂಬಿದ್ದನು. ತನ್ನ ತಾನಾಜಿ ಪಥಕದ ಜೊತೆಗೂಡಿ ಬಡಾಲಾ ಎಂಬಲ್ಲಿ ಸತ್ಯಾಗ್ರಹ ಮಾಡಿದನು. ಪೊಲೀಸರ ಅಮಾನವೀಯ ಲಾಠಿ ಎಟಿಗೆ ಎದಿರೇಟು ಎನ್ನುವಂತೆ ಜನ ಸಹಸ್ರಾಧಿಕ ಸಂಖ್ಯೆಯಲ್ಲಿ ಸತ್ಯಾಗ್ರಹದಲ್ಲಿ ಭಾಗವಹಿಸತೊಡಗಿದರು. ಸತ್ಯಾಗ್ರಹಿಗಳನ್ನು ಪ್ರಾಣಿಗಳಿಗಿಂತ ಕಡೆಯಾಗಿ ವ್ಯಾನ್ಗಳಲ್ಲಿ ತುಂಬಿ ಸೆರೆಮನೆಗೆ ಕಳಿಸತೊಡಗಿದ್ದಲ್ಲದೆ, ಅಲ್ಲಿ ಕಠಿಣಶಿಕ್ಷೆ ನೀಡಿ ಹಿಂಸಿಸಿದರು. ಬಾಬುನಂತಹ ಯುವಕರು ಹಿಂಸೆಯ ವಿರುದ್ಧ ಅಹಿಂಸೆಯೆಂಬ ಪ್ರತಿ ಅಸ್ತ್ರದಿಂದ ಎಲ್ಲ ಶಿಕ್ಷೆಗಳನ್ನು ಸಂತೋಷವಾಗಿ ಅನುಭವಿಸಿದರು. ಬಾಬು ಮತ್ತು ಅವನ ಪ್ರಾಣಸ್ನೇಹಿತ ಪ್ರಹ್ಲಾದ ಜೈಲಿನಲ್ಲಿನ ಸಹಕಾರಿಗಳಿಗೆ ಬ್ರಿಟಿಷರ ಕುತಂತ್ರ ವಿವರಿಸಿ ದೇಶಭಕ್ತಿಯ ಪಾಠ ಕಲಿಸುತ್ತಿದ್ದರು.
ಬಾಬು ಮತ್ತು ಪ್ರಹ್ಲಾದ ಇರುವ ಸೆರೆಮನೆಗೆ ಶಂಕರ ಎನ್ನುವ ಸ್ನೇಹಿತ ಬಂದು ತಾಯಿಯ ಮರಣದ ವರ್ತಮಾನ ತಿಳಿಸುತ್ತಿದ್ದಂತೆ ಬಾಬು ದುಃಖಿತನಾದನು. ಪ್ರಹ್ಲಾದ ಸಾಂತ್ವನ ಹೇಳಿದನು. ಭಾರತಮಾತೆಯನ್ನು ದಾಸ್ಯದ ಶೃಂಖಲೆಯಿಂದ ಮುಕ್ತಮಾಡಲು ತಾನು ಏನನ್ನಾದರೂ ಮಾಡಲು ಈಗ ಪೂರ್ಣ ಸ್ವತಂತ್ರ ಎಂದು ಸಮಾಧಾನ ಮಾಡಿಕೊಂಡನು.
ಸೆರೆಮನೆಯಿಂದ ಹೊರಬರುತ್ತಿದ್ದಂತೆ ಸತ್ಯಾಗ್ರಹ ಚಟುವಟಿಕೆಗಳಲ್ಲಿ ಮತ್ತೆ ತೊಡಗಿಕೊಂಡನು. ಸ್ವಲ್ಪದಿನಗಳ ನಂತರ ಪ್ರಹ್ಲಾದ ಮತ್ತು ಶಂಕರ ಭೇಟಿ ಮಾಡಲು ಬಂದಾಗ ಬಾಬು ‘ನೀವು ನನ್ನ ಕೋಣೆಯ ಕಡೆ ಹೋಗಿದ್ದೀರಾ? ಚಾಚಾ ಹೇಗಿದ್ದಾರೆ?’ – ಎಂದು ಕ್ಷೇಮ ವಿಚಾರಿಸಿದನು. ಆಗ ಅವರು ಭಾರವಾದ ದನಿಯಲ್ಲಿ ರೂಮಲ್ಲಿ ‘ಬೇರೆಯವರು ಇದ್ದಾರೆ.
ಹಿಂದು ಮುಸ್ಲಿಂ ಗಲಭೆಯಲ್ಲಿ ಗಂಭೀರವಾಗಿ ಗಾಯಗೊಂಡ ಚಾಚಾನನ್ನು ಪೊಲೀಸರು ಆಸ್ಪತ್ರೆಗೆ ಸೇರಿಸಿದರು. ಆಮೇಲೆ ಅವರ ಕುರಿತು ಮಾಹಿತಿ ಇಲ್ಲ’ ಎಂದು ತಿಳಿಸಿದರು. ‘ಅಲ್ಲಿಂದ ಬಹಳ ಜನ ಜಾಗ ಖಾಲಿ ಮಾಡಿದರು. ಮೊದಲಿನವರು ಈಗ ಅಲ್ಲಿ ಇಲ್ಲ’ ಎಂದರು. ಚಾಚಾನ ಅಗಲಿಕೆಯ ಸಮಾಚಾರ ಅತೀವ ದುಃಖ ತಂದಿತು. ತಂದೆಯಿಲ್ಲದ ನನಗೆ ತಂದೆಸ್ವರೂಪವಾಗಿ ಚಾಚಾ ಬೆಳೆಸಿದರು. ಈಗ ನಾನು ನಿಜವಾಗಿ ಅನಾಥನಾದಂತೆ ಅನ್ನಿಸುತ್ತದೆ – ಎಂದು ಬಾಬು ಉದ್ಗರಿಸಿದ. ಮೂವರು ಗೆಳೆಯರೂ ದುಃಖತಪ್ತರಾಗಿ ಕುಳಿತರು.
1930 ಅಕ್ಟೋಬರ್ನಲ್ಲಿ ಬಾಬುಗೇನು, ಪ್ರಹ್ಲಾದ ಮತ್ತು ಶಂಕರ ಸೆರೆಮನೆಯಿಂದ ಬಿಡುಗಡೆ ಹೊಂದಿದರು. ಸ್ಯಾಂಡರ್ಸ್ ಹತ್ಯೆ ಆರೋಪದಲ್ಲಿ ಭಗತ್ಸಿಂಗ್, ರಾಜಗುರು ಮತ್ತು ಸುಖದೇವರಿಗೆ ಗಲ್ಲುಶಿಕ್ಷೆ ಆಗಿದ್ದುದರ ಪ್ರತೀಕಾರ ತೆಗೆದುಕೊಳ್ಳುವುದು ಹೇಗೆ ಎಂದು ಯೋಚಿಸುತ್ತಿದ್ದಾಗ ಪ್ರಹ್ಲಾದ ‘ನಿಃಶಸ್ತ್ರ ಸತ್ಯಾಗ್ರಹದ ಮೇಲೆ ದೃಢವಿಶ್ವಾಸ ಇಡಬೇಕು. ಹಿಂಸೆಯ ಕಡೆ ತಿರುಗದೇ ನಾವೆಲ್ಲ ಒಟ್ಟಾಗಿ ಚರಖಾದಿಂದ ನೂಲುತೆಗೆಯುವುದು, ಸ್ವದೇಶೀ ಪ್ರಚಾರ, ಪ್ರಸಾರ, ಮತ್ತು ವಿದೇಶೀ ಬಹಿಷ್ಕಾರ ಆಂದೋಲನವನ್ನು ಚುರುಕುಗೊಳಿಸಬೇಕು’ ಎಂದು ಸಲಹೆ ನೀಡಿದನು. ಬಾಬುಗೇನು ಸಂಪೂರ್ಣ ಸ್ವದೇಶಿಯಾಗಿದ್ದನು. ಯೋಧನಂತೆ ಸ್ವದೇಶೀ ಆಂದೋಲನದಲ್ಲಿ ಭಾಗವಹಿಸಿದನು. ಮನೆಮನೆಗಳಿಗೆ ಹೋಗಿ ಸ್ವದೇಶೀ ಸ್ವೀಕಾರ, ವಿದೇಶೀ ಬಹಿಷ್ಕಾರ ಸಂಕಲ್ಪ ಮಾಡಿಸಿದನು. ಸ್ವದೇಶೀ ಮಹತ್ತ್ವವನ್ನು ತಿಳಿಸಿ ರಾಷ್ಟ್ರಭಕ್ತಿ ಅರಳಿಸುವ ನಿರಂತರ ಪ್ರಯತ್ನವನ್ನು ಮುಂದುವರಿಸಿದನು.
ಸ್ವಾತಂತ್ರ್ಯ ಹೋರಾಟದ ರಹದಾರಿಗಳು
ಗಾಂಧಿಯವರ ಆಹ್ವಾನದ ಮೇರೆಗೆ ಸಾವಿರಾರು ಸಮರ್ಪಿತ ಕಾರ್ಯಕರ್ತರು ಚರಖಾದಿಂದ ನೂಲುವುದು, ನೇಯುವುದು, ಸ್ವದೇಶೀ ವಸ್ತುಗಳನ್ನು ಬಳಸುವುದು – ಇವು ದೇಶಭಕ್ತಿಯ ಪ್ರಕಟೀಕರಣ ಎಂಬುದನ್ನು ಜನರಿಗೆ ಮನಗಾಣಿಸಿದರು. ಮಹಿಳೆಯರು, ಯುವತಿಯರೂ ನೂಲುವ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಬ್ರಿಟಿಷ್ ಗಿರಣಿಗಳಲ್ಲಿನ ಕಾರ್ಮಿಕರಿಗೂ ಸಹ ನೂಲುವುದು ದೇಶಭಕ್ತಿಯ ಕಾರ್ಯ ಎಂಬುದು ಮನದಟ್ಟಾಗತೊಡಗಿತು. ದಿನದಿಂದ ದಿನಕ್ಕೆ ಆಂದೋಲನ ಬೆಳೆಯುತ್ತಿದ್ದಂತೆ ಅದು ಆಂಗ್ಲರ ವಸ್ತ್ರೋದ್ಯಮಕ್ಕೆ ಸವಾಲಾಯಿತು. ಗಾಂಧಿಯವರು ಸ್ವತಂತ್ರ ಭಾರತವು ಸ್ವಾವಲಂಬಿ (ಆತ್ಮನಿರ್ಭರ) ಭಾರತ ಆಗಬೇಕು ಎಂಬ ಕಲ್ಪನೆಯನ್ನು ಜನರಲ್ಲಿ ಮೂಡಿಸಿದರು. ಎಲ್ಲಿಯವರೆಗೆ ಸಾಧ್ಯವೋ ಅಲ್ಲಿಯವರೆಗೆ ಸ್ಥಳೀಯವಾಗಿ ಉತ್ಪಾದಿಸುವ ವಸ್ತುಗಳನ್ನೇ ಬಳಸಬೇಕು, ವಿದೇಶೀ ಉತ್ಪಾದನೆಗಳನ್ನು ಬಹಿಷ್ಕರಿಸಬೇಕು ಎಂದು ಜನರನ್ನು ಹುರಿದುಂಬಿಸಿದರು.
ಸ್ವದೇಶೀ ಆಂದೋಲನ ಜನರಲ್ಲಿ ಸ್ವಾಭಿಮಾನ ಬಡಿದೆಬ್ಬಿಸಿತು. ಅದು ದೇಶದಲ್ಲಿನ ನಿರುದ್ಯೋಗ, ದಾರಿದ್ರ್ಯ, ಮೇಲು-ಕೀಳು ಭಾವನೆಗಳನ್ನು ನಷ್ಟ ಮಾಡುವ ಸಾಧನವಾಯಿತು. ಉತ್ಪಾದನೆಯ ವಿಕೆಂದ್ರೀಕರಣವನ್ನು ಸಾಧಿಸುವುದರಿಂದ ಭ್ರಷ್ಟಾಚಾರ, ಕಲಬೆರಕೆ, ಕಾಳಸಂತೆ ವ್ಯಾಪಾರಕ್ಕೆ ಕಡಿವಾಣ ಬಿದ್ದು ಗ್ರಾಹಕರ ರಕ್ಷಣೆಯಾಗುತ್ತದೆ. ಸ್ವದೇಶಿಯಿಂದ ರೋಜಿ-ರೋಟಿ ಸಿಗುತ್ತದೆ. ಪರಿಸರ ಸಂರಕ್ಷಣೆ, ನೈತಿಕ-ಆಧ್ಯಾತ್ಮಿಕ ವಿಕಾಸ ಸಾಧಿಸಬಹುದು. ಪಾರಿವಾರಿಕ ಸಂಬಂಧಗಳು ಸುಧಾರಿಸುತ್ತವೆ. ಸ್ವದೇಶೀ ಜೀವನಶೈಲಿಯಿಂದ ಆಧುನಿಕ ಯಂತ್ರಯುಗದಿಂದ ಆಗುತ್ತಿರುವ ಮಾನವನ ಶೋಷಣೆ, ಅನ್ಯಾಯ, ಏಕಾಧಿಕಾರ ತಪ್ಪಿಸಲು ಸಾಧ್ಯ ಎಂದು ಗಾಂಧಿಯವರು ಪ್ರತಿಪಾದಿಸುತ್ತಿದ್ದರು.
1930ರ ದೀಪಾವಳಿಯಿಂದ ವಿದೇಶೀ ವಸ್ತುಗಳ ಬಹಿಷ್ಕಾರ ಆಂದೋಲನ ಬಲವಾಯಿತು. ವಿವಿಧೆಡೆಗಳಲ್ಲಿ ಪ್ರದರ್ಶನಗಳು ಏರ್ಪಾಡಾದವು. ಮುಂಬಯಿಯಲ್ಲಿ ಅಂತಾರಾಷ್ಟ್ರೀಯ ಬಂದರು ಇದೆ. ಅಲ್ಲಿಂದಲೇ ವಿದೇಶೀ ವಸ್ತುಗಳನ್ನು ದೇಶಾದ್ಯಂತ ಕಳಿಸಲಾಗುತ್ತಿತ್ತು. ಕಾಂಗ್ರೆಸ್ ವಿದೇಶೀ ವಸ್ತುಗಳ ವಿತರಣೆಯನ್ನು ಮೂಲದಲ್ಲೇ ತಡೆದರೆ ದೇಶದ ತುಂಬ ಪ್ರಭಾವ ಆಗುತ್ತದೆ ಎಂದು ಯೋಚಿಸಿ ವಿದೇಶೀ ವಸ್ತುಗಳನ್ನು ತಡೆಯುವ (ಪಿಕೆಟಿಂಗ್) ಕಾರ್ಯಕ್ರಮವನ್ನು ಆಯೋಜಿಸಿತು. ಬಾಬುಗೇನು ವಿದೇಶೀ ವಸ್ತುಗಳನ್ನು ತಡೆಯಲು ಧರಣಿಯನ್ನು ಆರಂಭಿಸಿದನು.
ಹುತಾತ್ಮನಾದ ಬಾಬುಗೇನು
ಕಾಂಗ್ರೆಸ್ ಕರೆಯಿಂದ ಉತ್ತೇಜಿತನಾದ ಬಾಬುಗೇನು ತನ್ನ ತಾನಾಜಿ ಪಡೆಯ ಎಲ್ಲ ಸ್ವಯಂಸೇವಕರನ್ನು ಸಿದ್ಧಗೊಳಿಸಿದನು. ವಿದೇಶೀ ವಸ್ತುಗಳನ್ನು ತರುತ್ತಿದ್ದ ಲಾರಿಯನ್ನು ತಡೆಯಲು ಕಾರ್ಯಕ್ರಮ ರೂಪಿಸಿದನು. 12 ಡಿಸೆಂಬರ್ 1930ರ ಶುಕ್ರವಾರದಂದು ಸತ್ಯಾಗ್ರಹ ಮಾಡಲು ನಿರ್ಧರಿಸಲಾಯಿತು. ದಾಮೋದರ ಖೇತಸಿ ಮತ್ತು ಕಸಮ್ ರೆಹಮಾನ್ ಖರೀದಿಸಿದ ಮೆಂಚೆಷ್ಟರ್ನ ವಿದೇಶೀ ವಸ್ತುಗಳಿಂದ ತುಂಬಿದ ಲಾರಿಯು ಮುಂಬಯಿಯ ಕಲಾಬಾದೇವಿ ಇಲಾಖೆಯ ಗೋದಾಮಿನಿಂದ ಮುಂಬಯಿ ಕೋಟ್ ಮಾರ್ಕೆಟ್ ತಲಪಬೇಕಿತ್ತು. ಅದರ ಜವಾಬ್ದಾರಿಯನ್ನು ಜಾರ್ಜ್ ಫ್ರೇಜರ್ಗೆ ವಹಿಸಲಾಗಿತ್ತು.
ಮುಂಬಯಿಯ ಮುಲಾಜಿ ಜೇಠಾ ಮಾರ್ಕೆಟ್ನಿಂದ ಇಂಗ್ಲೆಂಡ್ನಲ್ಲಿ ಸಿದ್ಧವಾದ ಉಣ್ಣೆಯ ಬಟ್ಟೆಗಳನ್ನು ಲಾರಿಯಿಂದ ಕಳಿಸಬೇಕಾಗಿತ್ತು. ಅವುಗಳನ್ನು ತಡೆಯುವ ಜವಾಬ್ದಾರಿ ಮುಂಬಯಿ ಕಾಂಗ್ರೆಸ್ ಬಾಬುಗೇನು ಮತ್ತು ಅವನ ತಾನಾಜಿ ಪಡೆಗೆ ವಹಿಸಿತ್ತು. ಕಾಂಗ್ರೆಸ್ ಆದೇಶಾನುಸಾರ ಬಾಬುಗೇನು ಸಿದ್ಧತೆಗಳನ್ನು ಆರಂಭಿಸಿದನು. ಅವನ ಸಹಾಯಕನಾಗಿ ಪ್ರಹ್ಲಾದ ರಾವುತ ಮತ್ತು ಶಂಕರ ಆವಟೆ ನಿಂತರು. ತಾನಾಜಿ ಪಡೆಯ ಸತ್ಯಾಗ್ರಹಿಗಳು ವಿದೇಶೀ ವಸ್ತುಗಳನ್ನು ತುಂಬಿದ ಲಾರಿಗಳನ್ನು ತಡೆಯಲು ನಿರ್ಧರಿಸಿ ಘೋಷಣೆ ಮಾಡಿದರು. ಮುಂಬಯಿಯ ಜನ ಸತ್ಯಾಗ್ರಹವನ್ನು ನೋಡಲು ಕಾತರರಾಗಿದ್ದರು. ಫ್ರೇಜರ್ಗೂ ಸತ್ಯಾಗ್ರಹದ ಮಾಹಿತಿ ಇದ್ದುದರಿಂದ ಅವನು ಪ್ರಿನ್ಸೆಸ್ ರಸ್ತೆಯ ಪೆÇಲೀಸ್ ಠಾಣೆಯಿಂದ ಹೆಚ್ಚಿನ ಬಲವನ್ನು ತರಿಸಿಕೊಂಡಿದ್ದನು. ಅಂದು ಬೆಳಗ್ಗೆ 10.30ಕ್ಕೆ ಸತ್ಯಾಗ್ರಹಿಗಳು ಗುಂಪುಗಳಲ್ಲಿ ‘ಭಾರತ ಮಾತಾ ಕೀ ಜೈ’, ‘ಗಾಂಧಿಜೀ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳನ್ನು ಕೂಗುತ್ತ ಭಾರಿಸಂಖ್ಯೆಯಲ್ಲಿ ಸೇರಲಾರಂಭಿಸಿದರು. ಸತ್ಯಾಗ್ರಹವನ್ನು ನೋಡಲು ಬಂದಿದ್ದ ಜನ ಸಹ ಉತ್ಸಾಹಿತರಾಗಿ ಘೋಷಣೆಗಳಿಗೆ ದನಿಗೂಡಿಸುತ್ತಿದ್ದರು. 11 ಗಂಟೆಗೆ ಸರಿಯಾಗಿ ಬಾಬೂಗೇನು ತಾನಾಜಿ ಪಥಕದ ಸತ್ಯಾಗ್ರಹಿಗಳೊಂದಿಗೆ ಆಗಮಿಸಿದನು. ಕಲಾಬಾದೇವಿ ಮಾರ್ಗದಿಂದ ವಿದೇಶೀ ವಸ್ತ್ರ ತುಂಬಿದ ಲಾರಿ ಮುನ್ನಡೆಯಿತು. ಬಾಬು ತನ್ನ ಸಹಯೋಗಿ ಘೋಂಡೂ ರೇವಣಕರ್ಗೆ ಲಾರಿಯನ್ನು ತಡೆಯಲು ಸೂಚಿಸಿದನು. ಲಾರಿಯ ಎಡಬಲದಲ್ಲಿ ಪೊಲೀಸ್ ಬಂದೋಬಸ್ತ್ ಇತ್ತು. ಘೋಂಡೂ ರೇವಣಕರ್ ತಿರಂಗಾ ಧ್ವಜದೊಂದಿಗೆ ಲಾರಿಯ ಮುಂದೆ ಬರಲು, ಲಾರಿ ಡ್ರೈವರ್ ಬ್ರೇಕ್ ಹಾಕಿದಾಗ ರೇವಣಕರ್ನಿಂದ ಒಂದು ಅಡಿ ದೂರದಲ್ಲಿ ಲಾರಿ ನಿಂತಿತು. ‘ಭಾರತ ಮಾತಾ ಕೀ ಜೈ’, ‘ವಂದೇ ಮಾತರಂ’ ಘೋಷಣೆಗಳು ಮುಗಿಲುಮುಟ್ಟಿದವು. ಪೊಲೀಸರು ಲಾರಿಯ ಎದುರಿನಿಂದ ರೇವಣಕರನನ್ನು ಎಳೆದುಹಾಕಿದರು. ಲಾರಿ ಮತ್ತೆ ಮುನ್ನಡೆಯಿತು. ಎರಡನೇ ಸತ್ಯಾಗ್ರಹಿ ಭೀಮಾ ಘೋಂಡೂ ಲಾರಿಯ ಎದುರು ಬಂದನು. ಪೊಲೀಸರು ಅವನನ್ನೂ ಎಳೆದು ಹಾಕಿದರು. ತುಕಾರಾಮ ನಾಥೂ ಮೋಹಿತೆ ಮೂರನೇ ಸತ್ಯಾಗ್ರಹಿ ಲಾರಿಯ ಮುಂದೆ ಬಂದು ಮಲಗಿದನು. ಪೆÇಲೀಸರು ಲಾರಿಯ ಎದುರು ಬರುತ್ತಿದ್ದ ಸತ್ಯಾಗ್ರಹಿಗಳನ್ನು ಒಬ್ಬೊಬ್ಬರನ್ನಾಗಿ ಎಳೆದುಹಾಕಿದರು.
ಪೊಲೀಸ್ ಅಧಿಕಾರಿಗಳ ಸಹನೆಯ ಕಟ್ಟೆಯೊಡೆಯಿತು. ಕೋಪ ಏರತೊಡಗಿತು. ಸತ್ಯಾಗ್ರಹಿಗಳ ಮೇಲೆ ಲಾಠಿ ಬೀಸತೊಡಗಿದರು. ಸದ್ದುಗದ್ದಲ ಹೆಚ್ಚಾಯಿತು. ಲಾರಿ ಸ್ವಲ್ಪ ಸ್ವಲ್ಪವಾಗಿ ಮುಂದೆ ಸಾಗತೊಡಗಿತು. ಬಾಬುಗೇನು ಜೋರಾಗಿ ‘ಭಾರತ ಮಾತಾ ಕೀ ಜೈ’ ಘೋಷಣೆ ಹಾಕುತ್ತ ಲಾರಿಯ ಮುಂದೆ ಬಂದು ಸ್ವತಃ ಮಲಗಿದನು. ಘೋಷಣೆಗಳು ಮುಗಿಲು ಮುಟ್ಟಲಾರಂಭಿಸಿದವು. ಸಾರ್ಜಂಟ್ ಕೋಪಾವಿಷ್ಟರಾಗಿ ‘ಲಾರಿಯನ್ನು ಮುಂದೆ ಚಾಲಿಸು, ಯಾರು ಸತ್ತರೂ ಪರವಾಗಿಲ್ಲ, ಮುನ್ನಡೆ’ ಎಂದು ಡ್ರೈವರ್ಗೆ ಆದೇಶಿಸಿದನು. ಬಲವೀರಸಿಂಹ ಎಂಬ ಭಾರತೀಯನು ಲಾರಿ ಡ್ರೈವರ್ ಆಗಿದ್ದ. ಸತ್ಯಾಗ್ರಹಿಗಳ ಉತ್ಸಾಹ ಕಂಡು ಲಾರಿ ಮುನ್ನಡೆಸದೇ ನಿಲ್ಲಿಸಿಬಿಟ್ಟನು. ಸತ್ಯಾಗ್ರಹಿಗಳ ಘೋಷಣೆ ಉತ್ಸಾಹ ಕಂಡು ಕ್ರುದ್ಧನಾದ ಸಾರ್ಜಂಟ್ ಡ್ರೈವರನನ್ನು ಕೆಳಗಿಳಿಸಿ ತಾನೇ ಲಾರಿ ನಡೆಸುತ್ತ ಬಾಬುಗೇನು ಶರೀರದ ಮೇಲೆ ಲಾರಿ ನಡೆಸಿದನು. ಬಾಬುಗೇನುವಿನ ತಲೆಗೆ ದೊಡ್ಡ ಗಾಯವಾಗಿ ಗಂಭೀರ ಪರಿಸ್ಥಿತಿ ನಿರ್ಮಾಣವಾಯಿತು. ರಕ್ತ ಧಾರಾಕಾರವಾಗಿ ಹರಿಯತೊಡಗಿತು.
ಪೊಲೀಸರ ಪ್ರಹಾರದಿಂದ ಅನೇಕ ಸತ್ಯಾಗ್ರಹಿಗಳು ಗಾಯಗೊಂಡರು. ಲಾರಿಯ ಎದುರು ರಕ್ತದ ಕೋಡಿ ಹರಿಯಿತು. ಮೂರ್ಛಿತನಾದ ಬಾಬುಗೇನುವನ್ನು ಕಂಡು ಜನ ಸಂತಪ್ತರಾದರು. ಆದರೆ ಅವರೆಲ್ಲ ಸತ್ಯಾಗ್ರಹವ್ರತಸ್ಥರಾಗಿದ್ದರು. ಆದರೂ ಕುಪಿತರಾಗಿ ಡ್ರೈವರ್ ಸ್ಥಾನದಲ್ಲಿದ್ದ ಸಾರ್ಜಂಟನತ್ತ ಕಲ್ಲು ಎಸೆಯಲಾರಂಭಿಸಿದರು. ಕೆಲವರು ಲಾರಿಯ ಟೈರ್ನ ಗಾಳಿಯನ್ನು ಹೊರಕ್ಕೆಬಿಟ್ಟು ಲಾರಿಯು ಮುಂದೆ ಹೋಗದಂತೆ ಮಾಡಿದರು. ಗಾಯಗೊಂಡ ಸತ್ಯಾಗ್ರಹಿಗಳನ್ನು, ಸಾರ್ಜಂಟ್ನನ್ನು ಮತ್ತು ಮರಣಶಯ್ಯೆಯಲ್ಲಿದ್ದ ಬಾಬುಗೇನುವನ್ನು ಸಮೀಪದ ಗೋಕುಲ್ದಾಸ್ ತೇಜಪಾಲ್ ಆಸ್ಪತ್ರೆಗೆ ಸೇರಿಸಿದರು. ಸತ್ಯಾಗ್ರಹಿಗಳ ಸಹಿತ ಬಾಬುಗೇನುವನ್ನು ಆಸ್ಪತ್ರೆಗೆ ಸೇರಿಸಿದ ಸುದ್ದಿ ತಿಳಿದ ಜನರು ಆಸ್ಪತ್ರೆಯನ್ನು ಸುತ್ತುವರಿದು ಒಳಗೆ ನುಗ್ಗಲು ಪ್ರಯತ್ನಿಸಿದರು. ಪೊಲೀಸರು ಲಾಠಿಚಾರ್ಜ್ ಮಾಡಿದಾಗ ಕೆಲವರ ಕೈ-ಕಾಲು, ತಲೆಗೆ ಪೆಟ್ಟಾಯಿತು. ಆದರೂ ಜನ ಹಿಂದೆ ಸರಿಯಲಿಲ್ಲ. ಆಗಿನ ಗೃಹಮಂತ್ರಿ ಜೆ.ಇ.ವಿ. ಹಟ್ಸನ್, ಪೊಲೀಸ್ ಕಮೀಷನರ್ ವಿಲ್ಸನ್ ಪರಿಸ್ಥಿತಿಯನ್ನು ನಿಯಂತ್ರಿಸಲು ಹೆಚ್ಚಿನ ಪೊಲೀಸ್ ಪಡೆಯೊಂದಿಗೆ ಆಸ್ಪತ್ರೆಗೆ ಧಾವಿಸಿದರು. ಗುಂಪನ್ನು ಲಾಠಿಪ್ರಹಾರ ಮಾಡಿ ಚದುರಿಸಿದರು. 12.30ಕ್ಕೆ ಬಾಬುಗೇನುವನ್ನು ಆಪರೇಷನ್ ಟೇಬಲ್ಗೆ ಸಾಗಿಸಲಾಯಿತಾದರೂ ಚಿಕಿತ್ಸೆ ಫಲಕಾರಿಯಾಗದೆ ಆತನು 4.30ರ ಹೊತ್ತಿಗೆ ಸ್ವರ್ಗಕ್ಕೆ ವೀರಯೋಧನಾಗಿ ಪಯಣಿಸಿದನು.
ಸಂಜೆ 5 ಗಂಟೆಗೆ ಬಾಬುಗೇನುವಿನ ಮರಣದ ಸುದ್ದಿ ಪ್ರಕಟವಾಗಿ ಮುಂಬಯಿಯ ತುಂಬ ಹರಡಿತು. ಸ್ವದೇಶೀಗಾಗಿ ಬಲಿಯಾದ ಬಾಬುಗೇನುವಿನ ಅಂತಿಮ ದರ್ಶನಕ್ಕಾಗಿ ಜನ ಮತ್ತೆ ಆಸ್ಪತ್ರೆಯತ್ತ ಧಾವಿಸಿದರು. ತಮ್ಮ ಟೋಪಿ ತೆಗೆದು ಜೇಬಲ್ಲಿಟ್ಟುಕೊಂಡು ತಲೆಬಾಗಿ ಶ್ರದ್ಧಾಸುಮನ ಸಲ್ಲಿಸಿದರು. ಮುಂಬಯಿ ಪಟ್ಟಣದ ಕಾರೊನರ್ (ಅಪಮೃತ್ಯು ವಿಚಾರಕ) ರಾವ್ಬಹಾದುರ್ ಬಿ.ಎಮ್. ಆಠವಲೆ ತನ್ನ ಹ್ಯಾಟ್ ತೆಗೆದು ಅಭಿವಾದನ ಮಾಡಲಿಲ್ಲ. ಕೆಲ ಯುವಕರು ಅವನನ್ನು ದಕ್ಕಾಮುಕ್ಕ ಮಾಡಿದರು. ಪೊಲೀಸರು ಆಠವಲೆಯನ್ನು ದೂರ ಸಾಗಿಸಿದರು. ಬಾಬುವಿನ ಶವವನ್ನು ಕಾಂಗ್ರೆಸ್ ನಾಯಕರಿಗೆ ಒಪ್ಪಿಸಿದರು.
ಕಾಂಗ್ರೆಸ್ ನಾಯಕರು ಬಾಬುಗೇನು ಶವವನ್ನು ಮಾಂಡೊವಿಯ ಕಾಂಗ್ರೆಸ್ ಹೌಸ್ನಲ್ಲಿ ಇಡಲು ನಿರ್ಧರಿಸಿದರು. ರಾತ್ರಿ 7 ಗಂಟೆಗೆ ಜಿ.ಟಿ. ಆಸ್ಪತ್ರೆಯಿಂದ ನಡೆದ ಮೌನಯಾತ್ರೆಗೆ ನಾಗರಿಕರು ಜೊತೆಗೂಡಿದರು.
ಅಂತಿಮದರ್ಶನದ ನಂತರ ಮರಳುವಾಗ ಕಲಾಬಾದೇವಿ, ಪಾಯಧುಣಿ, ಧೋಭಿತಲಾಬ ಮುಂತಾದ ಸ್ಥಳಗಳಲ್ಲಿ ಜನರು ಗುಂಪು ಗುಂಪಾಗಿ ವಿದೇಶೀ ವಸ್ತ್ರಗಳ ದಹನ ಹೋಳಿ ಆಚರಿಸಿದರು. ಪೊಲೀಸರು ರಾತ್ರಿ 2 ಗಂಟೆಯವರೆಗೆ ಬೆಂಕಿ ಆರಿಸಲು ಪ್ರಯತ್ನಿಸಿದರು. 13.12.1930ರಂದು ಜನರು ಸ್ವ-ಇಚ್ಛೆಯಿಂದ ಬಂದ್ ಆಚರಿಸಿದರು. ಬೆಳಗ್ಗೆ 8 ಗಂಟೆಗೆ ಕಾಂಗ್ರೆಸ್ ವತಿಯಿಂದ ಬಾಬುಗೇನುವಿನ ಅಂತಿಮಯಾತ್ರೆ ಆರಂಭವಾಯಿತು. ಮಂತ್ರಘೋಷದ ಜೊತೆಗೆ ಸತ್ಯಾಗ್ರಹಿಗಳು ಹೆಜ್ಜೆ ಹೆಜ್ಜೆಗೆ ಹೆಗಲು ಕೊಡುತ್ತಿದ್ದರು. ಮಹಿಳೆಯರು ಸೇರಿದಂತೆ ಸಾವಿರಾರು ನಾಗರಿಕರು, ಮುಂಬಯಿಯ ಹೆಸರಾಂತ ಕಾಂಗ್ರೆಸ್ ನಾಯಕರು ಭಾಗವಹಿಸಿದರು. ಲೋಕಮಾನ್ಯ ತಿಲಕರ ಸಮಾಧಿಸ್ಥಳದಲ್ಲಿ ಬಾಬುಗೇನು ಅಂತಿಮಸಂಸ್ಕಾರಕ್ಕಾಗಿ ಜನ ಪಟ್ಟುಹಿಡಿದರು. ಪೊಲೀಸರು ಮತ್ತು ಜನರ ಮಧ್ಯೆ ಜಟಾಪಟಿ ನಡೆಯಿತು. ಮಿಲ್ಟ್ರಿಯವರು ಬಂದು ಜನರನ್ನು ಚದುರಿಸಿದರು. ಪೂರ್ವನಿರ್ಧಾರಿತ ಜಾಗದಲ್ಲಿ ಅಂತಿಮ ಸಂಸ್ಕಾರ ನಡೆಸಲು ಕಾಂಗ್ರೆಸ್ ನಾಯಕರು ಜನರನ್ನು ಶಾಂತಗೊಳಿಸಿ ಅವರ ಮನವೊಲಿಸಿದರು. ಬಾಬುವಿನ ಊರಿಂದ ಬಂದ ಗ್ರಾಮಸ್ಥರು ಅಂತ್ಯೇಷ್ಟಿಯಲ್ಲಿ ಭಾಗವಹಿಸಿ ಶ್ರದ್ಧಾಂಜಲಿ ಸಲ್ಲಿಸಿದರು.
ಬಾಬು ಸ್ವದೇಶೀಗಾಗಿ ಮಾಡಿದ ಬಲಿದಾನವನ್ನು ಇಡೀ ದೇಶ ಸ್ಮರಿಸಿತು. ಅಂದೇ ಸಂಜೆ ಎಸ್ಪ್ಲೆನೇಡ್ ಮೈದಾನದಲ್ಲಿ ಶ್ರದ್ಧಾಂಜಲಿ ಅರ್ಪಿಸಲು ಆಯೋಜಿಸಿದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಜನ ತಿರಂಗಾ ಹಿಡಿದು ‘ಭಾರತ್ ಮಾತಾಕೀ ಜೈ’ ಘೋಷಣೆಗಳೊಂದಿಗೆ ಬಂದರು. ಅಧ್ಯಕ್ಷತೆ ವಹಿಸಿದ್ದ ಲೀಲಾವತಿ ಮುನ್ಶಿಯವರು ಮಾತಾಡುತ್ತ “ಬಾಬು ಯಾವುದೇ ಅಪಘಾತದಲ್ಲಿ ಸಾವನ್ನಪ್ಪಿಲ್ಲ. ಅವನು ತನ್ನ ಸ್ವದೇಶೀ ಹೋರಾಟಕ್ಕಾಗಿ ಹುತಾತ್ಮನಾಗಿದ್ದಾನೆ. ಎಲ್ಲರೂ ಹೇಳುವಂತೆ ಲಾರಿ ಬಡಿದು ಸತ್ತಿದ್ದಾನೆ ಎಂಬುದು ಶುದ್ಧ ಸುಳ್ಳಾಗಿದೆ. ಬ್ರಿಟಿಷರು ಅವನನ್ನು ಬಡಿದು ಸಾಯಿಸಿದ್ದಾರೆ. ಆಂಗ್ಲರು ಬೇಕೆಂದೇ ಸುಳ್ಳುಸುದ್ದಿ ಹಬ್ಬಿಸುತ್ತಿದ್ದಾರೆ. ಬಾಬು ಬಲಿದಾನ ಕಣ್ಣಾರೆ ಕಂಡ ಸಾವಿರಾರು ಜನರು ಸಾಕ್ಷಿಗಳಾಗಿ ನಮ್ಮ ನಡುವೆ ಇದ್ದಾರೆ. ಬಾಬು ಹುತಾತ್ಮನಾಗಿದ್ದಾನೆ. ಸಭೆಯಲ್ಲಿ ಭಾಗವಹಿಸಿದ ಜನ ಸ್ವದೇಶೀ ವ್ರತಧಾರಿಗಳಾಗಿ ಸ್ವದೇಶೀ ಸ್ವೀಕರಿಸಿದರೆ ಅದು ಬಾಬುಗೇನುವಿಗೆ ನಿಜವಾದ ಶ್ರದ್ಧಾಂಜಲಿ ಅರ್ಪಿಸಿದಂತೆ ಆಗುತ್ತದೆ” ಎಂದರು.
ಜಮನಲಾಲ್ ಮೆಹತಾ ಮಾತಾಡಿ “ಸ್ವದೇಶೀ ಆಂದೋಲನವನ್ನು ಸಶಕ್ತವಾಗಿ, ಸಮರ್ಥವಾಗಿ ಮುನ್ನಡೆಸುವುದೇ ಬಾಬುಗೇನುಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ” ಎಂದರು. ಸಭೆಯಲ್ಲಿ ಬಾಬುಗೇನು ಬಲಿದಾನವಾದ ಮಾರ್ಗವನ್ನು ‘ಬಾಬುಗೇನು ಮಾರ್ಗ’ ಎಂದು ಹೆಸರಿಡುವ ಠರಾವು ಅಂಗೀಕರಿಸಲ್ಪಟ್ಟಿತು. ಅಂದಿನಿಂದ ಬಾಬುಗೇನುವಿನ ಬಲಿದಾನ ಸ್ಥಳ ತೀರ್ಥಕ್ಷೇತ್ರವಾಯಿತು. ಮುಂದೆ ಆ ಮಾರ್ಗಕ್ಕೆ ‘ಹುತಾತ್ಮ ಬಾಬುಗೇನು ಮಾರ್ಗ’ ಎಂದು ಹೆಸರಿಡಲಾಯಿತು. ಪುಣೆ ಸೇರಿದಂತೆ ಅನೇಕ ಪಟ್ಟಣಗಳಲ್ಲಿ ಬಾಬುಗೇನು ಸ್ಮøತಿಯಲ್ಲಿ ವೃತ್ತಗಳನ್ನು ನಿರ್ಮಿಸಲಾಯಿತು. ಬಾಬುಗೇನು ವಿದ್ಯಾಲಯ ಸ್ಥಾಪನೆಯಾಯಿತು. ಇಡೀ ದೇಶದಲ್ಲಿ ಡಿಸೆಂಬರ್ 12ನ್ನು ‘ಸ್ವದೇಶೀದಿನ’ವನ್ನಾಗಿ ಆಚರಿಸಲಾಗುತ್ತಿದೆ. 1969ರ ಮುಂಬಯಿ ಕಾಂಗ್ರೆಸ್ ಅಧಿವೇಶನದ ಸ್ಥಳವನ್ನು ‘ಹುತಾತ್ಮ ಬಾಬುಗೇನು ನಗರ’ ಎಂದು ಹೆಸರಿಸಲಾಯಿತು. ಅಂಬೇಗಾಂವ್ ತಾಲ್ಲೂಕಿನಲ್ಲಿ ಒಂದು ಆಣೆಕಟ್ಟು ಕಟ್ಟಿ ಅದಕ್ಕೆ ‘ಹುತಾತ್ಮ ಬಾಬುಗೇನೂ ಸಾಗರ’ ಎಂದು ಹೆಸರಿಟ್ಟರು.
ಇದೀಗ 6 ವರ್ಷಗಳಿಂದ ರಾಷ್ಟ್ರೀಯ ಮತ್ತು ಸ್ವದೇಶೀ ಚಿಂತನೆಯ ಸರ್ಕಾರ ಕೇಂದ್ರದಲ್ಲಿ ಆಡಳಿತ ನಡೆಸುತ್ತಿದೆ. ಆಂಗ್ಲ ಶಿಕ್ಷಣ ಪ್ರಭಾವದಿಂದ ಉಂಟಾಗಿದ್ದ ಪಾಶ್ಚಾತ್ಯೀಕರಣ ಎಂದರೆ ಆಧುನಿಕೀಕರಣ, ಪ್ರಗತಿಪರ; ಸ್ವದೇಶೀ ಎಂದರೆ ಪುರಾತನಕಾಲದ್ದು, ಆಧುನಿಕತೆ ವಿರೋಧಿ ಎಂಬ ಭಾವ ಭಾರತೀಯರಲ್ಲಿ ಮರೆಯಾಗಿ ಅದರ ಜಾಗದಲ್ಲಿ ‘ಸ್ವಾವಲಂಬನೆಗಾಗಿ ಸ್ವದೇಶೀ’ ಎಂಬ ಭಾವ ಬಲಿಯುತ್ತಿದೆ. ವಿದೇಶೀ ಶಿಕ್ಷಣದ ಪ್ರಭಾವದ ಫಲಸ್ವರೂಪವಾಗಿ ಗುಲಾಮಿತನ, ಆತ್ಮಗ್ಲಾನಿ, ಆತ್ಮವಿಸ್ಮೃತಿ, ಆತ್ಮನಿಂದೆ ಮುಂತಾದವುಗಳ ಪ್ರಭಾವ ಕಡಮೆಯಾಗಿದೆ. ಸ್ವದೇಶೀ ಆಂದೋಲನದ ಮೂಲಕ ನಡೆಯುವ ಜನಜಾಗರಣ ಕಾರ್ಯದಲ್ಲಿ ಜನರ ಉತ್ಸಾಹ ವರ್ಧಿಸುತ್ತಿದೆ. ನಮ್ಮ ಜೀವನಶೈಲಿಯಂತೆ ನಮ್ಮ ಆರ್ಥಿಕತೆ ನಿರ್ಮಾಣ ಆಗುತ್ತದೆ ಎಂದು ಅರಿತು ಸ್ವದೇಶೀ ಆಂದೋಲನವನ್ನು ವಸ್ತುಗಳಿಗೆ ಸೀಮಿತಗೊಳಿಸದೇ ಅದನ್ನು ಜೀವನಶೈಲಿಯಾಗಿ ಅಳವಡಿಸಿಕೊಳ್ಳಬೇಕಾಗಿದೆ. ಪ್ರಧಾನಿಯವರು ಹೇಳಿದಂತೆ ಸ್ವಾವಲಂಬನೆ (ಆತ್ಮನಿರ್ಭರ) ಮತ್ತು ಲೋಕಲ್ ವೋಕಲ್ (ಸ್ಥಾನೀಯ ವಸ್ತುಗಳಿಗೆ ಪ್ರೊತ್ಸಾಹ) ವಿಷಯಗಳನ್ನು ರೂಢಿಸಿಕೊಳ್ಳಬೇಕಾಗಿದೆ. ಸ್ವ-ಉದ್ಯೋಗದಿಂದ ಸ್ವಾವಲಂಬನೆ ಸಾಧಿಸಬಹುದು. ಅಂದು ಬಾಬುಗೇನು ಸಮರ್ಪಿಸಿಕೊಂಡ ಸ್ವದೇಶೀ ಆಂದೋಲನವನ್ನು ಸರ್ವವ್ಯಾಪಿ, ಸರ್ವಸ್ಪರ್ಶಿಯಾಗಿಸುವ ಜವಾಬ್ದಾರಿ ನಿರ್ವಹಿಸಬೇಕಾಗಿದೆ. ಸ್ವದೇಶೀ ಆಂದೋಲನದ ಮೂಲತತ್ತ್ವ ‘ಸ್ವದೇಶೀ ಸ್ವೀಕಾರ ಮತ್ತು ವಿದೇಶೀ ಬಹಿಷ್ಕಾರ’ವನ್ನು ನಿಜಾರ್ಥದಲ್ಲಿ ಪಾಲಿಸುವ ಮೂಲಕ ರಾಷ್ಟ್ರಭಕ್ತಿಯ ಪ್ರಕಟೀಕರಣ ಆಗುತ್ತದೆ ಮತ್ತು ಬಾಬುಗೇನುವಿಗೆ ರಾಷ್ಟ್ರದ ಜನತೆ ಸಲ್ಲಿಸುವ ನೈಜ ಶ್ರದ್ಧಾಂಜಲಿ ಆಗುತ್ತದೆ. [ಆಧಾರ : ‘ಬಾಬುಗೇನು ಸ್ವದೇಶೀ ಪ್ರಥಮ್ ಬಲಿದಾನಿ’; ಹಿಂದಿ: ಪ್ರೊ. ಡಾ. ರಾಮ್ ಬಿವಲಕರ್. ಹಿಂದಿ ರೂಪಾಂತರ : ಮುಕುಂದ್ ಗೋರೆ; ಮುನ್ನುಡಿ: ದತ್ತೋಪಂತ್ ಠೇಂಗಡಿಜೀ.]