ನಾನು ಹುಟ್ಟಿದ್ದು ಆರ್ಥಿಕವಾಗಿ ಕೆಳಮಧ್ಯಮವರ್ಗದ ಕುಟುಂಬದಲ್ಲಿ. ಬಾಲ್ಯದಲ್ಲಿ ಯಾವುದೇ ವಿಶೇಷ ಸವಲತ್ತುಗಳಿರಲಿಲ್ಲ. ಆದರೆ ಸಾಂಸ್ಕೃತಿಕವಾಗಿ ಶ್ರೀಮಂತ ವಾತಾವರಣವಿತ್ತು. ನಿರರ್ಗಳವಾಗಿ, ಶ್ರುತಿ-ಸ್ವರ-ಲಯಬದ್ಧವಾಗಿ ಅಪಾರ ಸಂಖ್ಯೆಯಲ್ಲಿ ದೇವರನಾಮಗಳನ್ನು ಹಾಡುತ್ತಿದ್ದರು ತಂದೆ ರಾಮರಾವ್, ತಾಯಿ ಅಂಬುಜಮ್ಮ. ಅಮ್ಮ ಸಣ್ಣಪ್ರಮಾಣದಲ್ಲಿ ಹರಿಕಥೆಯನ್ನೂ ಹೇಳುತ್ತಿದ್ದರು. ಶ್ರಾವಣಮಾಸದ ಶುಕ್ರವಾರ-ಶನಿವಾರ ಗೌರಿಯ ಹಾಡು; ಆರತಿ ಹಾಡು; ದೇವಸ್ಥಾನದಲ್ಲಿ ಭಜನೆ, ಶಂಕರಜಯಂತಿ ಅಂದರೆ ನಾಟಕ, ಹಾಡಿನ ಸ್ಪರ್ಧೆ… ಈ ಎಲ್ಲ ಹಾಡುಗಳಿಗೆ ಎಲ್ಲೋ ಒಂದುಕಡೆ ಶಾಸ್ತ್ರೀಯ ಸಂಗೀತದ ರಾಗಗಳ ಜಾಡು, ಮೂಲ, ಛಾಯೆ ಖಾಯಂ ಆಗಿ ಇರುತ್ತಿತ್ತು. ತಾಲ್ಲೂಕು ಆಫೀಸಿನಲ್ಲಿ ನೌಕರಿ ಇದ್ದರೂ ಹವ್ಯಾಸಿ ಕಲಾವಿದರಾಗಿ ನಾಟಕಗಳನ್ನು ಆಡುವುದು ನನ್ನ ತಂದೆಯ ಹವ್ಯಾಸ. ಅದಕ್ಕೆ ಪೂರಕವಾದಷ್ಟು ಸಂಗೀತದ ಅಭ್ಯಾಸ ಅವರಿಗಿತ್ತು. ಇದರ ಪ್ರಭಾವ ನನ್ನ ಮೇಲೆಯೂ ಆಯಿತು. ಹಾಗೂ ಹೀಗೂ ಮನೆಯಲ್ಲಿ ಒಂದು ಫಿಲಿಪ್ಸ್ ರೇಡಿಯೋ ಖಾಯಂ ಇರುತ್ತಿತ್ತು. ಆಗ ಅದಕ್ಕೆ ಪೋಸ್ಟ್ ಆಫೀಸಿನಲ್ಲಿ ಲೈಸೆನ್ಸ್ ಬೇರೆ ಪಡೆಯಬೇಕಿತ್ತು. ಅದೇನೇ ಇರಲಿ, ರೇಡಿಯೋದಲ್ಲಿ ಆಕಾಶವಾಣಿ ಕೇಂದ್ರದಿಂದ ದಿನಕ್ಕೆ ಮೂರುಬಾರಿ ಶಾಸ್ತ್ರೀಯ ಸಂಗೀತ, ಆಗಾಗ ಸಿನೆಮಾ ಹಾಡುಗಳು – ಅದರಲ್ಲೂ ‘ಸಂಧ್ಯಾರಾಗ’ ಚಿತ್ರದ ‘ನಂಬಿದೆ ನಿನ್ನ ನಾದದೇವತೆಯೇ…’ – ನನ್ನ ಬಾಲ್ಯದ ಮುಗ್ಧ ಮನದ ಮೇಲೆ ಅಚ್ಚಳಿಯದ ಪರಿಣಾಮ ಬೀರಿತ್ತು. ರಾಗ-ತಾಳದ ಹೆಸರು ಗೊತ್ತಿಲ್ಲ, ಹಾಡಲು ಬೇಕಾದ ಕಲಿಕೆ ಪರಿಶ್ರಮದ ಅರಿವಿಲ್ಲ; ಆದರೂ ಅನುಕರಣೆಯಿಂದ ಅದನ್ನೇ ಹಾಡುವ ಪ್ರಯತ್ನ ನಡೆದಿತ್ತು. ಒಂದು ಹಂತದ ವರೆಗೆ ಯಶಸ್ಸು ಕಂಡಿದ್ದೂ ಆಯಿತು. 1979ರಲ್ಲಿ ಹೊಸಪೇಟೆಯಲ್ಲಿ ಬಿ.ಎ. ಮುಗಿಸಿ, ಇತಿಹಾಸದಲ್ಲಿ ಎಂ.ಎ. ಮಾಡುವುದಕ್ಕಾಗಿ ಧಾರವಾಡಕ್ಕೆ ಪಯಣ. ಅಲ್ಲಿ ಎಂ.ಎ., ಪಿಎಚ್.ಡಿ. ಮುಗಿಯುವ ಹೊತ್ತಿಗೆ ಆರುವರ್ಷದ ‘ಸಂಗೀತರತ್ನ’ ಪದವಿಯೂ ಪಡೆದದ್ದಾಯಿತು. ಸರ್ವಶ್ರೀ ಮನ್ಸೂರ್, ರಾಜಗುರು, ಸಂಗಮೇಶ್ವರ ಗುರವ್, ಪಂಚಾಕ್ಷರಿ ಮತ್ತಿಗಟ್ಟಿ – ಮುಂತಾದ ದಿಗ್ಗಜರಿಂದ ತಾಲೀಮು. 1986ರಿಂದ ಪಂ|| ಮಾಧವಗುಡಿಯವರಿಂದ ಕಿರಾನಾ ಘರಾನೆಯ ಪಂ|| ಭೀಮಸೇನ್ ಜೋಶಿ ಅವರ ಶೈಲಿಯಲ್ಲಿ ಗಾಯನ ಕಲಿಕೆ ಆರಂಭ. 1996-2006 ಜೈಪುರ ಘರಾನೆಯ ಪಂ|| ಮತ್ತಿಗಟ್ಟಿ ಅವರು ಬೆಂಗಳೂರಿನ ನನ್ನ ಮನೆಗೆ ಬಂದು ತಾಲೀಮು ನೀಡಿದರು. 1988-91 ಆಕಾಶವಾಣಿ ಬೆಂಗಳೂರಲ್ಲಿ ಅಧಿಕಾರಿಯಾಗಿ ಸೇವೆಸಲ್ಲಿಸಿ, ಸಂಗೀತಸಾಧನೆಗೆ ಸಮಯ ಸಾಲದೆಂದು ರಾಜೀನಾಮೆ ನೀಡಿದ್ದಾಯಿತು. ಇಲ್ಲಿಂದ ಪ್ರಾರಂಭ… ವೃತ್ತಿಪರವಾಗಿ ನನ್ನ ಸಂಗೀತ ಜೀವನ. 1992ರಲ್ಲಿ ಒಂದು ಕಾರ್ಪೊರೇಟ್ ಸಂಸ್ಥೆಯ ವಾರ್ಷಿಕೋತ್ಸವದಲ್ಲಿ ನನ್ನ ಹಾಡುಗಾರಿಕೆ ಏರ್ಪಾಡಾಗಿತ್ತು. ಮೂರುಗಂಟೆಗಳ ಕಾಲದ ಕಾರ್ಯಕ್ರಮ ಮುಗಿದ ಮೇಲೆ ಒಬ್ಬ ಸೂಟ್ಧಾರಿ ವ್ಯಕ್ತಿ ನನ್ನೆದುರಿಗೆ ಬಂದು, “ಬಹಳ ಚೆನ್ನಾಗಿ ಹಾಡಿದ್ದೀರಿ ಡಾ|| ಹವಾಲ್ದಾರ್” ಎಂದು ಅಭಿನಂದಿಸಿದರು. ನಾನು ಕೃತಜ್ಞತೆಯಿಂದ ಧನ್ಯವಾದ ಹೇಳಿ ನನ್ನ ತಂಬೂರಿಗೆ ಕವರ್ ಹಾಕುತ್ತಾ ಇದ್ದೆ. ಅವರು ಮಾತು ಮುಂದುವರಿಸಿ – “ಹವಾಲ್ದಾರ್, ನೀವೇನು ಮಾಡುತ್ತೀರಿ?” ಎಂದರು. “ಸರ್, ನಾನು ಹಾಡುತ್ತೀನಿ” ಎಂದೆ. “ಹೌದು, ನಾನು ಈಗತಾನೇ ಕೇಳಿದೆ. ವಿಷಯ ಅದಲ್ಲ, ನಿಮ್ಮ ಹೆಸರಿನ ಮೊದಲಿಗೆ ಡಾಕ್ಟರ್ ಎಂದು ಇದೆಯಲ್ಲಾ… ನೀವೇನು ಹೃದಯತಜ್ಞರೋ, ಮನೋರೋಗತಜ್ಞರೋ, ಕೀಲು-ಮೂಳೆತಜ್ಞರೋ?” ಎಂದರು. (ಮನಸ್ಸಿನಲ್ಲಿ ನಾನು ಹೃದಯ ಮತ್ತು ಮನಸ್ಸು ಎರಡಕ್ಕೂ ಮಾಧುರ್ಯದ ಚಿಕಿತ್ಸೆ ನೀಡಬಲ್ಲೆ ಎಂದು ಹೇಳಿಕೊಂಡೆ.) ಅವರಿಗೆ ಉತ್ತರಿಸುತ್ತಾ, “ಇಲ್ಲ, ನಾನು ಶಾಸ್ತ್ರೀಯಸಂಗೀತ ಗಾಯಕ” ಎಂದು ಮತ್ತೆ ಒತ್ತಿಹೇಳಿದೆ. ಅವರ ತಾಳ್ಮೆಯ ಕಟ್ಟೆಯೊಡೆದು, “ಅದು ಸರಿ, ಊಟಕ್ಕೆ, ಉಪಜೀವನಕ್ಕೆ ಏನು ಮಾಡುತ್ತೀರಿ? ಏನಾದರೂ ಕೆಲಸ…?” ಎಂದು ನನ್ನ ಮುಂದೆಯೇ ಆಲಾಪ ಹಾಡಿದರು. ನಾನು ವಿನಮ್ರನಾಗಿಯೇ ಹೇಳಿದೆ – “ನಾನು ‘ಸಂಗೀತದ ಐತಿಹಾಸಿಕ ಬೆಳವಣಿಗೆ’ ಬಗ್ಗೆ ಸಂಶೋಧನೆ ಮಾಡಿ ಪಿಎಚ್.ಡಿ. ಮಾಡಿದ್ದೇನೆ. ಸರ್ – ಶಾಸ್ತ್ರೀಯ ಸಂಗೀತ ಕಲಿಸುವುದು, ಅಭ್ಯಾಸಮಾಡುವುದು, ಹಾಡುವುದು, ಕಾರ್ಯಕ್ರಮ ನೀಡುವುದು ಇದರಿಂದ ನನ್ನ ಜೀವನ -ಉಪಜೀವನಕ್ಕೆ ಬೇಕಾದ ಎಲ್ಲ ಪರಿಕರಗಳನ್ನೂ ಗೌರವ ಹಾಗೂ ಸಮಾಧಾನದಿಂದ ಸಂಪಾದಿಸುತ್ತಿದ್ದೇನೆ” – ಎಂದಾಗ ಅವರ ಮುಖದಲ್ಲಿ ಒಂದು ಮುಗುಳ್ನಗೆ, ನಿರಾಳತೆ ಎರಡೂ ಕಾಣಿಸಿದವು.
ಈ ಘಟನೆಯ ಔಚಿತ್ಯ ಇಷ್ಟೆ: ನಮ್ಮ ಸಮಾಜ, ನಾಗರಿಕತೆ, ಆಧುನೀಕರಣ, ಸಾಂಸ್ಕøತಿಕ ಪರಿಜ್ಞಾನ ಇವೆಲ್ಲಾ ಪ್ರಬುದ್ಧವಾಗಿವೆ ಎಂದುಕೊಂಡ, 1993ರ ಕಾಲಘಟ್ಟದಲ್ಲಿ, ಒಬ್ಬ ಸಹೃದಯ ಮಿತ್ರರು ಸಂಗೀತದಿಂದ ಗೌರವಯುತ ಜೀವನ ನಡೆಸಬಹುದು ಎನ್ನುವುದರ ಬಗ್ಗೆ ತೋರಿದ ಆಶ್ಚರ್ಯ ಹಾಗೂ ಮುಗ್ಧತೆ.
ಹೀಗಿರುವಾಗ ನಮ್ಮ ಶಾಸ್ತ್ರೀಯ ಕಲೆಗಳು, ಅದರ ಸಾಧಕರು ಯಾವ ಆಧಾರದ ಮೇಲೆ ಮುಂದುವರಿದಿದ್ದಾರೆ ಎನ್ನುವುದನ್ನು ಪರೀಕ್ಷಿಸೋಣ.
ಸಂಗೀತ ಕಲಿಕೆ
ಯಾವುದೇ ಕ್ಷೇತ್ರದಲ್ಲಿ ಮಹೋನ್ನತ ಸಾಧನೆ ಮಾಡಿ ಇತಿಹಾಸದಲ್ಲಿ ದಂತಕಥೆಯಾಗಿ ದಾಖಲಾಗಬೇಕಾದರೆ ಕಲಿಕೆಯ ಬುನಾದಿ ಭದ್ರವಾಗಿರಬೇಕು. ಒಬ್ಬ ಮಹಾನ್ ಗುರುವಿನ ಮಾರ್ಗದರ್ಶನ, ವಿದ್ಯಾರ್ಥಿಯ ಸತತ ಪರಿಶ್ರಮ, ಚಿಂತನ, ಮಂಥನ, ಸಮಕಾಲೀನ ಆಗುಹೋಗುಗಳಿಗೆ ಸ್ಪಂದಿಸುವ ಮನಃಸ್ಥಿತಿ – ಈ ಎಲ್ಲ ಅಂಶಗಳನ್ನೊಳಗೊಂಡ ನಿರಂತರ ಸುದೀರ್ಘ ಪಯಣವೇ ಸಾಧನೆಯ ಗುರಿಯೆಡೆಗೆ ನಮ್ಮನ್ನು ಕರೆದೊಯ್ಯಬಹುದು. ‘ಆರ್ಯ ಸಂಗೀತ ವಿದ್ಯಾಲಯ’ ಸ್ಥಾಪಿಸಿದ ಉಸ್ತಾದ್ ಅಬ್ದುಲ್ ಕರೀಂ ಖಾನ್ ವಿದ್ಯಾರ್ಥಿಗಳಿಂದ ‘ಕನಿಷ್ಠ ಏಳು ವರ್ಷ ಸಂಗೀತ ಕಲಿತೇ ಕಲಿಯುತ್ತೇನೆ’ – ಎಂದು ಮುಚ್ಚಳಿಕೆ ಬರೆಸಿಕೊಳ್ಳುತ್ತಿದ್ದರು. ಖಾನ್ ಸಾಹೇಬರ ಧ್ವನಿಮುದ್ರಣವನ್ನು ಕೇಳಿ, ಪ್ರಭಾವಿತನಾಗಿ 11 ವರ್ಷದ ಬಾಲಕ ‘ಭೀಮಸೇನ’ ತಂದೆತಾಯಿಗೂ ತಿಳಿಸದೆ ‘ಗುರು’ ‘ಧ್ವನಿ’ಯನ್ನು ಹುಡುಕಿಕೊಂಡು ಮನೆಬಿಟ್ಟು ನಡೆದಿದ್ದಾಗಿತ್ತು. ಮುಂದೆ ಸವಾಯಿ ಗಂಧರ್ವರಿಂದ ವಿದ್ಯೆ ಕಲಿತು ಹಲವಾರು ಸಮಕಾಲೀನ ಪಂಡಿತರ ಗಾಯಕರ ವಿಚಾರಗಳನ್ನು ಮೈಗೂಡಿಸಿಕೊಂಡು, ಸ್ವಪ್ರತಿಭೆಯ ಮೆರುಗನ್ನೂ ಸೇರಿಸಿಕೊಂಡು, ಮುಂದೊಂದುದಿನ ಅವರು ‘ಭಾರತರತ್ನ’ರಾದದ್ದು ಈಗ ಇತಿಹಾಸ. ಕಿರಿಯಪೀಳಿಗೆಯ ಗಾಯಕರಲ್ಲಿ ಭೀಮಸೇನ ಜೋಶಿಯವರ ಪ್ರಭಾವಕ್ಕೆ ಒಳಗಾಗದವರನ್ನು ಕಾಣುವುದು ಅತಿ ವಿರಳ.
ಇದೇ ಸವಾಯಿ ಗಂಧರ್ವರ ಹತ್ತಿರ ಪಾಠ ಕಲಿಯಲು ಯುವತಿ ಗಂಗೂಬಾಯಿ ಹಾನಗಲ್ ಆರಕ್ಷಣೆಯಿಲ್ಲದ ರೈಲುಬೋಗಿಯಲ್ಲಿ ತಂಬೂರಿ ಸಮೇತ ಪ್ರಯಾಣ ಮಾಡುತ್ತಿದ್ದರು. ಗುರುಗಳಿಗೆ ಅನಾರೋಗ್ಯವಿದ್ದಾಗ, ಗಂಗೂಬಾಯಿ ತಮ್ಮ ಮನೆಯಲ್ಲಿ ಆ ಗುರುಗಳನ್ನು ಇರಿಸಿಕೊಂಡು, ಸೇವೆ ಮಾಡಿ, ಸಂಗೀತ ಕಲಿತು ಮಹೋನ್ನತ ಕಲಾವಿದೆಯಾದರು.
ಪಂ|| ನೀಲಕಂಠಬುವಾ ಮೀರಜ್ಕರ್ ಅವರಿಂದ ಹಲವಾರು ವರ್ಷ ಮಲ್ಲಿಕಾರ್ಜುನ ಮನ್ಸೂರ್ ಹಾಗೂ ಪಂಚಾಕ್ಷರಿ ಗವಾಯಿಗಳು ಗ್ವಾಲಿಯರ್ ಪರಂಪರೆ ಹಾಡುಗಾರಿಕೆಯನ್ನು ಕಲಿತರು. ಅನಂತರ ಮಂಜೀಖಾನ್ – ಬುರ್ಜಿಖಾನ್ ಅವರಲ್ಲಿ ಕಲಿಕೆ ಮುಂದುವರಿಸಿ ಮನ್ಸೂರರು ಜೈಪುರ ಶೈಲಿಯ ಕಳಸಪ್ರಾಯರಾದರು. ಉಸ್ತಾದ್ ಅಬ್ದುಲ್ ವಹೀದ್ಖಾನರಿಂದ ಕಿರಾನಾ ಪರಂಪರೆಯನ್ನು ಕಲಿತ ಪಂಚಾಕ್ಷರಿ ಗವಾಯಿಗಳು ಮುಂದೊಂದು ದಿನ ‘ವೀರೇಶ್ವರ ಪುಣ್ಯಾಶ್ರಮ’ ಸ್ಥಾಪಿಸಿ ರಾಜಗುರು, ಮತ್ತಿಗಟ್ಟಿ, ಪುಟ್ಟರಾಜ ಗವಾಯಿ, ಪ್ರಭುದೇವ ಸಾಲಿಮಠ – ಹೀಗೆ ನೂರಾರು ಶಿಷ್ಯರನ್ನು ತಯಾರು ಮಾಡಿದರು.
ಕೋಲ್ಕತಾದಲ್ಲಿರುವ ಗಾಯಕಿ ಹಾಗೂ ಸಂಗೀತ ವಿಮರ್ಶಕಿ ಮೀನಾ ಬ್ಯಾನರ್ಜಿ ಅವರ ಹತ್ತಿರ ಒಮ್ಮೆ ಚರ್ಚಿಸಿದಾಗ ಅವರು ಹೇಳಿದರು: “ಪಶ್ಚಿಮಬಂಗಾಳದಲ್ಲಿ ಬಹುಪಾಲು ಎಲ್ಲ ಮಧ್ಯಮವರ್ಗದ ಕುಟುಂಬದಲ್ಲಿ ಹೆಣ್ಣು-ಗಂಡಿನ ಭೇದವಿಲ್ಲದೆ ಶಾಸ್ತ್ರೀಯ ಸಂಗೀತ ಕಲಿಕೆ ಅವಿಚ್ಛಿನ್ನ ಹಾಗೂ ಅನಿವಾರ್ಯ ಅಂಗವಾಗಿತ್ತು. ಯಾರಿಗೂ ವೃತ್ತಿಪರ ಗಾಯಕವಾದಕರಾಗಿ ಉಪಜೀವನ ನಡೆಸುವ ಒತ್ತಡ/ಉದ್ದೇಶ ಯಾವುದೂ ಇರಲಿಲ್ಲ. ಆದರೆ ಕಲಿಕೆ ಮಾತ್ರ ಶಿಸ್ತು, ಸಂಯಮ, ಸಂಪ್ರದಾಯಬದ್ಧವಾಗಿರುತ್ತಿತ್ತು. ಇವೆಲ್ಲ ನಮಗೆ ಜೀವನದಲ್ಲಿ ಒಳ್ಳೆಯ ಮೌಲ್ಯ, ತಾಳ್ಮೆ, ಸೌಂದರ್ಯಪ್ರಜ್ಞೆ, ಸಂವಹನಶಕ್ತಿ ಬೆಳೆಸಿಕೊಂಡು – ಏನಾದರೂ ಆಗು, ಮೊದಲು ಮಾನವನಾಗು ಎಂಬ ಹಾಗೆ – ಒಳ್ಳೆಯ ನಾಗರಿಕ, ಪ್ರಜೆಗಳಾಗಲು ಪ್ರೇರಕವಾಯ್ತು” ಎಂದರು. ಶೇಕ್ಸ್ಪಿಯರ್ ಒಂದೆಡೆ ಹೇಳುತ್ತಾನೆ: “If the King loved music, there will be less violence in the country” – ರಾಜನು ಸಂಗೀತಪ್ರಿಯ, ಕಲಾಪೋಷಕನಾದರೆ ರಾಜ್ಯದಲ್ಲಿ ಹಿಂಸಾಚಾರ ಕಡಮೆ ಇರುತ್ತದೆ.
‘ಅಲ್ಲರೀ, ಇರೋದೇ ಏಳು ಸ್ವರ ಅಂತೀರಿ; ಜೀವನಪೂರ್ತಿ ಕಲಿಯೋದು ಏನಿರುತ್ತೆ?’ – ಎಂದು ಹಲವರು, ಹಲವಾರು ಬಾರಿ ಪ್ರಶ್ನೆ ಕೇಳಿದ್ದಾರೆ ನನಗೆ. ಈ ಆಧುನಿಕ Instant, Disposable ಯುಗದಲ್ಲಿ ಪ್ರಬುದ್ಧ, ಸಮೃದ್ಧ, ತಾಳ್ಮೆಯುತ ಕಲಿಕೆಯ ಮಹತ್ತ್ವವನ್ನು ಮತ್ತೆ ಹೇಳಬೇಕಾಗಿದೆ. ಶ್ರೇಷ್ಠ ವಾಗ್ಗೇಯಕಾರ ಮೈಸೂರು ವಾಸುದೇವಾಚಾರ್ಯರು ವಿದ್ಯಾರ್ಥಿಯಾಗಿದ್ದಾಗ, ಮೈಸೂರು ಅರಸರಿಂದ ವಿದ್ಯಾರ್ಥಿವೇತನ ಪಡೆದು ತಮಿಳುನಾಡಿನ ಪಟ್ಟಣಂ ಸುಬ್ರಹ್ಮಣ್ಯ ಅಯ್ಯರ್ ಅವರ ಹತ್ತಿರ ಕಲಿಯಲು ಗುರುಕುಲವಾಸಕ್ಕೆ ಹೋಗುತ್ತಾರೆ. ಅಲ್ಲಿಗೆ ಹೋಗುವ ಮೊದಲು ಹಲವಾರು ವರ್ಷದ ಸಂಗೀತ ಕಲಿಕೆ ಆಗಿತ್ತು. ಆದರೂ ಮೊದಲು ಒಂದು ವರ್ಷ ಅವರಿಗೆ ಪ್ರತಿದಿನ ಸ್ವಲ್ಪ ಕಾಲ ರಾಗ ‘ಬೇಗಡೆ’ ನಂತರ ಬೇರೆ ರಾಗಗಳ ಪಾಠ ನಡೆಯುತ್ತಿತ್ತು.
ಸುಮಾರು ಹದಿನೈದು ವರ್ಷದ ಹಿಂದೆ, ಒಬ್ಬ ಪೋಷಕರು ನನ್ನ ಮನೆಗೆ ಅವರ ಮಗನನ್ನು ಕರೆದುಕೊಂಡು ಬಂದು, “ಸರ್, ನನ್ನ ಮಗ ಟಿವಿ ರಿಯಾಲಿಟಿ ಷೋನಲ್ಲಿ ಸೆಮಿಫೈನಲ್ಗೆ ಬಂದಿದ್ದಾನೆ. ಅವನಿಗೀಗ ‘ಸಂಧ್ಯಾರಾಗ’ ಚಿತ್ರದ ‘ನಂಬಿದೆ ನಿನ್ನ ನಾದದೇವತೆಯೆ…’ ಹಾಡು ಹಾಡಬೇಕು. ದಯವಿಟ್ಟು ಅದೊಂದು ಹಾಡು ಒಂದು ವಾರದಲ್ಲಿ ಕಲಿಸಿಕೊಡಿ. ನೀವು ಕೇಳಿದಷ್ಟು ಹಣ ಕೊಡುತ್ತೀವಿ” (ಹಳ್ಳಿ ಊರಿನ ಹನುಮನಿಗೆ ಕೊಟ್ಟಂತೆ) ಅಂದರು. ನನಗೆ ಆಶ್ಚರ್ಯ ಮತ್ತು ನಗು ಏಕಕಾಲಕ್ಕೆ… “ನೋಡ್ರಿ, ಆ ಹಾಡನ್ನು ಭೀಮಸೇನ ಜೋಶಿಯವರು ಹಾಡಿದಾಗ ಅವರಿಗೆ 45ರ ಹರೆಯ. ಅಷ್ಟು ಹೊತ್ತಿಗೆ ಅವರು 35 ವರ್ಷ ಸಂಗೀತ ದಿನಕ್ಕೆ 8-10 ಗಂಟೆ ಅಭ್ಯಾಸ ಮಾಡಿದ್ದರು. ನಿಮ್ಮ ಹುಡುಗ ತಂಬೂರಿಯನ್ನೇ ನೋಡಿಲ್ಲ… ಒಂದು ವಾರದಲ್ಲಿ ಏನ್ರೀ ಕಲಿಸೋದು?” ಎಂದು ಹೇಳಿ ಟಿವಿ, ಟಿಆರ್ಪಿ, ಹಣ ಯಾವುದೇ ಆಮಿಷಕ್ಕೆ ಒಳಗಾಗದೆ ಅವರನ್ನು ವಾಪಸ್ ಕಳಿಸಿದೆ.
ಸಂಗೀತ ಕಲಿಕೆಯ ಪ್ರಾಥಮಿಕ ಹಂತದಿಂದ ಶಾಲೆಯಲ್ಲಿ, ಮನೆಯಲ್ಲಿ ಒಂದು ವಾತಾವರಣವಿದ್ದರೆ ಅದರ ಮಹತ್ತ್ವವೇ ಬೇರೆ. ನಾನು ಎಂ.ಎ. ಇತಿಹಾಸ ಓದಿದ್ದು. ಅದರಲ್ಲೂ Cultural History – ಸಾಂಸ್ಕೃತಿಕ ಇತಿಹಾಸ ಎಂದೇ ಒಂದು ವಿಷಯ ಇತ್ತು. ಅದರಲ್ಲಿ ನಾವು ಓದಿದ್ದು ಕದಂಬ, ಚಾಲುಕ್ಯ, ಹೊಯ್ಸಳ, ವಿಜಯನಗರ ಇವೇ ಮುಂತಾದ ವಾಸ್ತುಶಿಲ್ಪ ಶೈಲಿಯ ಬಗ್ಗೆ ಮಾತ್ರ. ತಮಿಳುನಾಡಿನ ‘ಸಂಗಂ’ ಸಾಹಿತ್ಯ, ಶಿಲಪ್ಪದಿಗಾರಂ, ತಿರುಕ್ಕುರಳ್ ಎಲ್ಲ ಪರಿಚಯ ಮಾಡಿಕೊಂಡಾಯಿತು. ಆದರೆ ಸಮುದ್ರಗುಪ್ತ ವೀಣೆ ಹಿಡಿದ ನಾಣ್ಯ, ಅಕ್ಬರನ ಆಸ್ಥಾನದಲ್ಲಿದ್ದ ತಾನಸೇನ, ವಿಜಯವಿಠಲ ದೇವಸ್ಥಾನದ ಸ್ವರ ಮಿಡಿಯುವ ಕಂಬಗಳನ್ನು ಬಿಟ್ಟರೆ ಸಂಗೀತದ ವಿಷದವಾದ ಅಧ್ಯಯನ-ಅಭ್ಯಾಸ ಎಲ್ಲಿಯೂ ಇಲ್ಲ. ಪುರಂದರದಾಸರು ಕರ್ನಾಟಕ ಸಂಗೀತಪಿತಾಮಹ, ಶರಣರ ‘ಬತ್ತೀಸ ರಾಗದ ಹಾಡಯ್ಯ’ ಉಲ್ಲೇಖ ಬಿಟ್ಟರೆ, ಇತಿಹಾಸ-ಸಂಗೀತದ ವಿದ್ಯಾರ್ಥಿಗಳಿಗೆ ಎಲ್ಲಿಯೂ ಹೆಚ್ಚು ಮಾಹಿತಿ ಇಲ್ಲ.
ಜನಪ್ರಿಯ, ನುರಿತ ಸರೋದ್ ವಾದಕಿ ಡಾ|| ಚಂದ್ರಿಮಾ ಮಜುಂದಾರ್ (ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ) ಅವರ ಅಭಿಪ್ರಾಯವೂ ಇದೇ. “ಜಯದೇವನ ಗೀತಗೋವಿಂದ, ಕಬೀರ ತುಳಸೀದಾಸರ ಉಲ್ಲೇಖ ಹಿಂದೀ ಪಠ್ಯದಲ್ಲಿ ಇರುತ್ತಿತ್ತು. ಆದರೆ ಇವರಾರೂ ವಾಗ್ಗೇಯಕಾರರಲ್ಲ, ಇವರ ರಚನೆಗಳನ್ನು ಆಗೊಮ್ಮೆ ಈಗೊಮ್ಮೆ ನೃತ್ಯಕ್ಕೆ, ಭಜನ್ ಎಂದು ವೇದಿಕೆಯ ಮೇಲೆ ಬಳಸುವುದುಂಟು” – ಎನ್ನುತ್ತಾರೆ ಚಂದ್ರಿಮಾಜೀ.
ದೂರಿನ ಬಗ್ಗೆ ಹೆಮ್ಮೆ!
ನನ್ನ ಮಕ್ಕಳಾದ ಓಂಕಾರ, ಕೇದಾರ ಶಿಶುವಿಹಾರಕ್ಕೆ ಹೋಗುತ್ತಿದ್ದಾಗ (ಎಲ್.ಕೆ.ಜಿ. – ಯು.ಕೆ.ಜಿ.) ಆ ಶಿಕ್ಷಕಿಯರಿಂದ ದೂರು: “ನಿಮ್ಮ ಮಕ್ಕಳು ನರ್ಸರಿ ಪದ್ಯಗಳನ್ನು ಹಾಡಲ್ಲ; ದಾಸರಪದ, ಛೋಟಾ ಖಯಾಲ್ ಹಾಡ್ತೀವಿ ಎನ್ನುತ್ತಾರೆ” ಎಂದು. ಮಕ್ಕಳ ವಿರುದ್ಧ ಈ ದೂರಿನ ಬಗ್ಗೆ ನನಗೆ ಹೆಮ್ಮೆಯಿತ್ತು. . ‘Ba-ba black sheep’, ‘Rain rain go away’, ‘Gingle bell’ ಪದ್ಯಗಳಿಂದ ನಮಗೇನಾಗಬೇಕಿದೆ? ಒಂದು ಮುದ್ದಾದ ವಚನ ಹೇಳಿಕೊಡಬಹುದಲ್ಲವೆ?
ಸಂಗೀತಪ್ರಿಯ, ನಿವೃತ್ತ ಐ.ಎ.ಎಸ್. ಅಧಿಕಾರಿ ಎಸ್. ಎಂ. ಆಚಾರ್ಯ, ಈಗ ಮೈಸೂರಿನ ‘ಪುಷ್ಕರಿಣಿ’ ಸ್ಕೂಲಿನ ವ್ಯವಸ್ಥಾಪಕರು, ಹೇಳುತ್ತಾರೆ: “ಡಾ. ಹವಾಲ್ದಾರ್, ನೀವೊಂದು ಪಠ್ಯಕ್ರಮ ರೂಪಿಸಿಕೊಡಿ. ಕನಿಷ್ಟ ನಮ್ಮ ಶಾಲೆಯಲ್ಲಾದರೂ ಬದಲಾವಣೆ ತರಲು ನಾನು ಸಿದ್ಧನಿದ್ದೇನೆ” ಎಂದು. “ಧಾರವಾಡದಲ್ಲಿ ಅಸಿಸ್ಟೆಂಟ್ ಕಮಿಷನರ್ ಆಗಿದ್ದಾಗ ಆಫೀಸಿನ ನಂತರ, ಹೆಚ್ಚುವರಿ ಕೆಲಸಕ್ಕೆ ಕಡತಗಳ ಸಮೇತ ಉಸ್ತಾದ್ ಬಾಲೇಖಾನರ ಮನೆಗೆ ಹೋಗುತ್ತಿದ್ದೆ. ‘ಖಾನ್ ಸಾಹೇಬರೇ, ನೀವು ದಯವಿಟ್ಟು ರಿಯಾಜ್ ಮಾಡಿ; ನಿಮ್ಮ ಪರವಾನಗಿಯಿಂದ, ಅದನ್ನು ಕೇಳುತ್ತ ನಾನು ನನ್ನ ಕೆಲಸ ಮುಂದುವರಿಸುತ್ತೇನೆ’ ಎನ್ನುತ್ತಿದ್ದೆ. ಎಂದರು ಎಸ್. ಎಂ. ಆಚಾರ್ಯರು. ಇದು ಸಂಗೀತದ ಸಾಂತ್ವನದ ಗುಣ.
‘ಈ ನಿಮ್ಮ ಶಾಸ್ತ್ರೀಯ ಕಲೆಗಳು ಸುಶಿಕ್ಷಿತರಿಗೆ, ಮೇಲ್ವರ್ಗದವರಿಗೆ ಮಾತ್ರ’ ಎಂದು ವಾದಿಸುವ ಒಂದು ಸಮೂಹವಿದೆ; ‘ಕುರಿತೋದದೆಯುಂ ಕಾವ್ಯಪ್ರಯೋಗ ಪರಿಣತಮತಿಗಳ್’ – ಎಂಬ ಕವಿರಾಜಮಾರ್ಗದ ನುಡಿಯಂತೆ. ಕನ್ನಡಿಗರು ಮತ್ತು ಭಾರತೀಯರು ಒಂದು ಹಂತದವರೆಗೆ ಸಾಂಸ್ಕೃತಿಕ ಹಾಗೂ ಕಲಾತ್ಮಕವಾಗಿ ಪ್ರಬುದ್ಧರು ಎಂಬ ಆಶಯವಿದೆ. “ನನ್ನ ಊರಾದ ಸಂತೆಶಿವರದಲ್ಲಿ, ನನ್ನ ಬಾಲ್ಯದಲ್ಲಿ, ಯಾರದಾದರೂ ಮನೆಯ ಜಗುಲಿಯಲ್ಲಿ ಕುಮಾರವ್ಯಾಸಭಾರತದ ಪ್ರವಚನ ನಡೆಯುತ್ತಿತ್ತು. ಆಗ ಇಂದು ಯಾವ ಪ್ರಸಂಗ ಬೇಕು ಎಂದರೆ, ಕರ್ಣನ ಪ್ರಸಂಗ, ಗದಾಯುದ್ಧದ ಪ್ರಸಂಗ, ದ್ರೌಪದಿ ವಸ್ತ್ರಾಪಹರಣ – ಹೀಗೆ ಕೋರಿಕೆ ಬರುತ್ತಿತ್ತು, ಕುಳಿತ ಜನಸಾಮಾನ್ಯರಿಂದ. ಅವರಾರೂ ಶಾಲೆಗೆ ಹೋದವರಲ್ಲ; ಓದಿದವರಲ್ಲ. ಆದರೂ ಮಹಾಕಾವ್ಯದ ಪ್ರತಿಯೊಂದು ಪ್ರಸಂಗವೂ ಅವರ ಮನದಲ್ಲಿತ್ತು” – ಎಂದಿದ್ದಾರೆ ಎಸ್. ಎಲ್. ಭೈರಪ್ಪನವರು.
ಇತ್ತೀಚೆಗೆ ಗುರುಕುಲ ಸಂಪ್ರದಾಯ, ಶಾಸ್ತ್ರೀಯ ಕಲೆಗಳ ಪರಂಪರೆಯನ್ನು ಪ್ರಶ್ನಿಸುವುದೇ ಒಂದು ಪ್ರತಿಷ್ಠೆಯ ಸಂಕೇತವಾಗಿರುವುದು ದುರದೃಷ್ಟಕರ ಬೆಳವಣಿಗೆ. ಕರ್ನಾಟಕ ಸಂಗೀತದಲ್ಲಿ ಕೇವಲ ‘ತ್ರಿಮೂರ್ತಿಗಳು’ (ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶಾಮಶಾಸ್ತ್ರಿ) ಇವರ ರಚನೆಗಳನ್ನೇ ಏಕೆ ಹಾಡಬೇಕು, ಇವುಗಳಲ್ಲಿ ಜಾತ್ಯತೀತತೆಯ ಸೊಗಡಿಲ್ಲ. ಕೇವಲ ಹಿಂದೂ ದೇವರ ಸ್ತುತಿಯಲ್ಲೇ ಇವೆ ಎಂಬ ಅಪವಾದವೂ ಕೇಳಿಬಂದದ್ದುಂಟು. ಈ ಯಾವುದೇ ವಾಗ್ಗೇಯಕಾರರು ನಮ್ಮ ರಚನೆಗಳನ್ನೇ ಹಾಡಿ ಎಂದು ಯಾರಿಗೂ ಒತ್ತಾಯಿಸಿಲ್ಲ. ರಾಗದ ಭಾವ, ಸೌಂದರ್ಯ, ಶಾಸ್ತ್ರ, ಮಾಧುರ್ಯ ಇವೆಲ್ಲವನ್ನೂ ಒಳಗೊಂಡಂತೆ ಹೊಸ ಪೀಳಿಗೆಯವರು ತ್ರಿಮೂರ್ತಿಗಳ ರಚನೆಗಳಿಗಿಂತ ಪ್ರಬುದ್ಧವಾದ ರಚನೆಗಳನ್ನು ಮಾಡಿ, ಹಾಡಿದರೆ ಅವನ್ನು ಆಸ್ವಾದಿಸಲು ಯಾರಿಗೂ ಅಭ್ಯಂತರವಿಲ್ಲ.
ಕಾಲ ಮತ್ತು ಸಮುದ್ರದ ಅಲೆಗಳು ಯಾರ ಅಪ್ಪಣೆಗೂ ಕಾಯುವುದಿಲ್ಲ. (‘Time and tide waits for no man.’) ಹಾಗೆಯೇ ಜೀವನದ ಕಾಲಚಕ್ರವೂ ಕೂಡ. ಎಂತಹ ಮಹಾನ್ ವ್ಯಕ್ತಿ, ಕಲಾವಿದ, ಕ್ರೀಡಾಪಟು, ಧರ್ಮಗುರು, ರಾಜ, ಮಂತ್ರಿ, ಯಾರೇ ಆಗಿರಲಿ ತಮ್ಮ ಸಮಯ ಮುಗಿದ ಮೇಲೆ ನೇಪಥ್ಯಕ್ಕೆ ಸರಿಯಲೇಬೇಕು. ಹೀಗೆಯೆ ಹಲವಾರು ದಿಗ್ಗಜಕಲಾವಿದರು ಈಗ ಕೇವಲ ‘ನೆನಪು’ಗಳಾಗಿ ಉಳಿದು, ಅವರ ಸಂಗೀತ, ಶಿಷ್ಯರು, ಪರಂಪರೆಯ ಮೂಲಕ ನಮ್ಮ-ನಿಮ್ಮ ಮಧ್ಯೆ ಇದ್ದಾರೆ; ಇರುತ್ತಾರೆ. ಇತ್ತೀಚೆಗೆ (ಕಳೆದ ಕೆಲವು ದಶಕಗಳಲ್ಲಿ) ಭೀಮಸೇನ ಜೋಶಿ, ರವಿಶಂಕರ್, ಜಸ್ರಾಜ್, ಗಂಗೂಬಾಯಿ ಹಾನಗಲ್, ಎಂ. ಎಸ್. ಸುಬ್ಬುಲಕ್ಷ್ಮಿ, ಬಾಲಮುರಳೀಕೃಷ್ಣ, ಬಿಸ್ಮಿಲ್ಲಾಖಾನ್, ವಿಲಾಯತ್ಖಾನ್, ಮಲ್ಲಿಕಾರ್ಜುನ ಮನ್ಸೂರ್, ಕುಮಾರಗಂಧರ್ವ ಇನ್ನೂ ಮುಂತಾದ ದಿಗ್ಗಜರನ್ನು ಕಳೆದುಕೊಂಡಿದ್ದೇವೆ. ಹಾಗಾದರೆ ಸಂಗೀತಪ್ರಪಂಚದ ಭವಿಷ್ಯವೇನು? ಇನ್ನು ಮುಂದೆ ಇಂತಹ ಕಲಾವಿದರು ಮತ್ತೆ ಬರುವರೇ? – ಎನ್ನುವ ಚರ್ಚೆ ಸದಾ ನಡೆದಿದೆ; ನಡೆಯುತ್ತಿದೆ.
ದಿಗ್ಗಜಕಲಾವಿದರು ಎಂದರೆ ಯಾರು? ಅವರ ಈ ಎತ್ತರದ ಸಾಧನೆಗೆ ಕಾರಣಗಳೇನು? ಈ ಮೇಲೆ ಉದಾಹರಿಸಿದ ಹೆಸರುಗಳ ಆ ಮಟ್ಟದ ಸಾಧನೆ ಮುಂದಿನ ದಿನಗಳಲ್ಲೂ ಬಂದೀತೇ? ಅದಕ್ಕೆ ಯಾರು ಹೊಣೆ? ಕೇವಲ ಕಲಾವಿದನೆ? ಅವನ ಪ್ರಯತ್ನವೇ, ಪ್ರತಿಭೆಯೇ, ಸಾಧನೆಯೇ? ಅವನನ್ನು ಪೋಷಿಸುವ ಸಮಾಜವೇ, ಸಮಾಜವನ್ನು ನಿಯಂತ್ರಿಸುವ ಸರ್ಕಾರವೇ ಅಥವಾ ಈ ಎಲ್ಲ ಅಂಶಗಳನ್ನೂ ಒಳಗೊಂಡ ಒಂದು ಸಂಪೂರ್ಣ ಕಾಲಚಕ್ರವೇ? – ಇದಕ್ಕೆ ಉತ್ತರವನ್ನು ಹುಡುಕೋಣ.
‘ಇವರೇ ಮೇರುಕಲಾವಿದ/ಕಲಾವಿದೆ’ಎಂದು ನಿಖರವಾಗಿ ಹೇಳುವುದು ಕಷ್ಟ. ಸಂಗೀತದ ಮಟ್ಟಿಗೆ ಶ್ರುತಿಶುದ್ಧಿ, ಲಯಸಿದ್ಧಿ, ಭಾವಸಮೃದ್ಧಿಗಳ ಜೊತೆಗೆ ಕಲ್ಪನಾ ಶ್ರೀಮಂತಿಕೆ ಇದ್ದರೆ ಮಾತ್ರ ಅವರನ್ನು ಈ ಪಂಕ್ತಿಗೆ ಸೇರಿಸಬಹುದು; ಎಲ್ಲ್ಲ ಕಲಾವಿದರಲ್ಲೂ ಈ ಗುಣಗಳು ಸಮಪ್ರಮಾಣದಲ್ಲಿ ಕಾಣುವುದು ಕಷ್ಟ; ಯಾವುದಾದರೂ ಒಂದು ಅಂಶ ಪ್ರಮುಖವಾಗಿರಬಹುದೆಂಬುದು ಶತಾವಧಾನಿ ಡಾ|| ರಾ. ಗಣೇಶ್ ಅವರ ಅನಿಸಿಕೆ.
ಒಬ್ಬ ಕಲಾವಿದ ಶ್ರೇಷ್ಠತೆಯನ್ನು ಸಾಧಿಸಲು ಅಭಿಜಾತಪ್ರತಿಭೆ, ಆ ಪ್ರತಿಭೆಯನ್ನು ಒರೆಗೆ ಹಚ್ಚಿ ಪುಟವಿಟ್ಟ ಚಿನ್ನದಂತೆ ಹೊಳಪು ನೀಡಲು ಹೇರಳವಾದ ಅವಕಾಶಗಳು, ಹಾಗೆಯೇ ಇವೆರಡನ್ನೂ ಒಟ್ಟುಗೂಡಿಸಿ ಕನಿಷ್ಟ ಐದಾರು ದಶಕಗಳ ಕಾಲ ತಮ್ಮ ಗಾಯನ – ವಾದನದಲ್ಲಿ ಕ್ರಿಯಾಶೀಲತೆಯನ್ನು ಉಳಿಸಿಕೊಂಡು ಸ್ವಂತಿಕೆಯ ಛಾಪು ಮೂಡಿಸುವವರೇ ದಿಗ್ಗಜರಾಗಿ ಅಜರಾಮರರಾಗಿ ಉಳಿಯುತ್ತಾರೆ. ಎಷ್ಟೋ ಜನ ಮಹಾನ್ ಗುರುಗಳ ಶಿಷ್ಯಂದಿರು, ಕೆಲವೊಮ್ಮೆ, ಅವಕಾಶದ ಕೊರತೆ ಹಾಗೂ ಸ್ವಂತಿಕೆಯ ಲಯವನ್ನು ಕಂಡುಕೊಳ್ಳದೇ ಗುರುವಿನ ನೆರಳಿನಲ್ಲೇ ಉಳಿದ ಉದಾಹರಣೆಗಳು ಸಾಕಷ್ಟಿವೆ.
“ಉಸ್ತಾದ್ ಅಮೀರ್ಖಾನ್ ಖಯಾಲ್ ಗಾಯಕಿಗೆ ಹೊಸ ಆಯಾಮ ನೀಡಿದರು. ಪಂ|| ರವಿಶಂಕರ್ ವಿಶ್ವಾದ್ಯಂತ ನಮ್ಮ ಕಲೆಯನ್ನು ಪಸರಿಸಿದರು; ಸಹಕಲಾವಿದರಿಗೆ ಗೌರವದ ಸ್ಥಾನ ಕಲ್ಪಿಸಿದರು. ವಿಲಾಯತ್ಖಾನ್ ತಂತ್ರಗಾರಿಕೆಯ ಜೊತೆಗೆ ಸಂವೇದನಶೀಲತೆಗೆ ಒತ್ತುಕೊಟ್ಟರು. ಅಲಿ ಅಕ್ಬರ್ಖಾನ್ ಸರೋದ್ವಾದನದ ನಾದ ಸೌಕರ್ಯವೇ ವಿಶೇಷವಾಗಿತ್ತು; ಅವರ ರಾಗವಿಸ್ತಾರದಲ್ಲಿ ಅಲೌಕಿಕ ಅನುಭವವಿತ್ತು. ಗಿರಿಜಾದೇವಿ ಅವರ ಗಾಯನದಲ್ಲಿ ಸರಳತೆ ಹಾಗೂ ಗಂಗಾ-ಜಮುನೀ ತೆಹಜೀಬ್ನ ಶ್ರೀಮಂತಿಕೆ ಮತ್ತು ನಾಗರಿಕತೆ ಇತ್ತು. ಭೀಮಸೇನರ ಗಾಯನದಲ್ಲಿ ನಾದಸೌಲಭ್ಯ ಹಾಗೂ ಭೋರ್ಗರೆವ ಪ್ರವಾಹದ ಶಕ್ತಿಯಿತ್ತು. ಇವರೆಲ್ಲ ನನ್ನ ಅನುಭವಕ್ಕೆ ಬಂದ ಮಹಾನ್ ಕಲಾವಿದರು” ಎಂದವರು ಕೋಲ್ಕತ್ತಾದ ಮೀನಾ ಬ್ಯಾನರ್ಜಿ; ‘ನನ್ನ ಮಟ್ಟಿಗೆ ಇವರೆಲ್ಲರೂ ಶ್ರೇಷ್ಠ ಹಾಗೂ ನಾನು ಹೆಸರಿಸದ ಇನ್ನಷ್ಟು ಮಂದಿ ಕಲಾವಿದರು ಇದ್ದಾರೆ’ ಎಂದರು.
ಈ ಎಲ್ಲ ಕಲೆಗಳು ಅನುಭವವೇದ್ಯ ಕಲೆಗಳು. ಕಲಾವಿದನ ಕಲಾಶ್ರೀಮಂತಿಕೆಯನ್ನು ಆನಂದಿಸಿ-ಅನುಭವಿಸಿ-ಅನುರಣಿಸಲು ಶ್ರೋತೃವಿಗೂ ಒಂದುಮಟ್ಟದ ಸಂಸ್ಕಾರ, ಭಾವಾಸ್ವಾದನಶ್ರೀಮಂತಿಕೆ ಅತ್ಯಗತ್ಯ. ಉಳಿದವರೂ ತಮ್ಮ ತಮ್ಮ ಅನುಭವದ ಪರಿಧಿಯಲ್ಲಿ ಕಲೆಯನ್ನು ಆಸ್ವಾದಿಸಬಹುದು. ನಮ್ಮ ದೈನಂದಿನ ವಿದ್ಯಾಭ್ಯಾಸದ – ಪರೀಕ್ಷೆಯ ಮಾನದಂಡ 35 ಅಂಕ ಬಂದವರು ತೇರ್ಗಡೆ ಆದ ಹಾಗೆ ಹೇಳಲಾಗುವುದಿಲ್ಲ; ‘ಅವರವರ ಭಾವಕ್ಕೆ ಅವರವರ ಭಕುತಿಗೆ’ ಅಂದ ಹಾಗೆ.
ಕಳೆದ ಐದು ದಶಕಗಳಿಂದ ವಿದ್ಯಾರ್ಥಿಯಾಗಿ, ಹಾಡುಗಾರರಾಗಿ, ಗುರುವಾಗಿ, ಶ್ರೋತೃವಾಗಿ ಸಂಗೀತಪ್ರಪಂಚದಲ್ಲಿ ತೊಡಗಿಸಿಕೊಂಡಿದ್ದಾರೆ ಶ್ರೀ ಸದಾಶಿವಂ. ಅವರ ತಂದೆ ಅನಂತರಾಮನ್ ಕೋಲ್ಕತಾದಲ್ಲಿ ‘ಗುರುಗುಹ ಸಂಗೀತ ಸಭೆ’ನಡೆಸುತ್ತಿದ್ದರು. ಮುತ್ತುಸ್ವಾಮಿ ದೀಕ್ಷಿತರ ಶಿಷ್ಯಪರಂಪರೆಯವರು. ಹಿಂದೂಸ್ತಾನೀ ಸಂಗೀತ ಕೇಳುವಿಕೆಯಲ್ಲೂ ಪ್ರವೇಶವಿದೆ. “ಬಹುಭಾಷೆಯಲ್ಲಿ ಹಾಡುವ ಪರಿಣತಿ, ವಾಗ್ಗೇಯಕಾರರಾಗಿ ಕೊಡುಗೆ, ಭಾವಪೂರ್ಣ ಹೃದಯಸ್ಪರ್ಶಿ ಸಂವೇದನಶೀಲ ಹಾಡುಗಾರಿಕೆ, ನುಡಿಸಾಣಿಕೆ, ನಿರರ್ಗಳವಾದ ಶೈಲಿಯನ್ನು ಹೊಂದಿರುವುದು, ಶಿಷ್ಯಪರಂಪರೆಯನ್ನು ತಯಾರುಮಾಡುವುದು – ಇವು ಒಬ್ಬ ಮಹಾನ್ ಕಲಾವಿದನ/ಕಲಾವಿದರ ಲಕ್ಷಣ. ಎಂ. ಎಸ್. ಸುಬ್ಬುಲಕ್ಷ್ಮಿ, ಬಾಲಮುರಳಿ, ಲಾಲ್ಗುಡಿ ಜಯರಾಮನ್, ವೀಣೆ ಬಾಲಚಂದರ್, ಮಾಂಡೋಲಿನ್ ಶ್ರೀನಿವಾಸ್, ಟಿ. ಎನ್. ಶೇಷಗೋಪಾಲನ್ ನನ್ನ ಪ್ರಕಾರ ಈ ಸಾಲಿಗೆ ಸೇರುತ್ತಾರೆ.
ಉಳಿದ ಕಲಾವಿದರ ಕೊಡುಗೆಯ ಬಗ್ಗೆಯೂ ನನಗೆ ಅಪಾರ ಗೌರವವಿದೆ” ಎನ್ನುತ್ತಾರೆ ಸದಾಶಿವಂ.
ಒಂದು ನಿರ್ದಿಷ್ಟ ‘ಬಾಣಿ’(ವಾಣಿ)ಯನ್ನು ಸೃಷ್ಟಿಸಿ, ಸ್ಥಾಪಿಸಿ ಮುಂದಿನ ಪೀಳಿಗೆಗೆ ಸಮಾಜಕ್ಕೆ ಬಳುವಳಿಯಾಗಿ ನೀಡುವ ಕೆಲಸವನ್ನು ಕರ್ನಾಟಕಸಂಗೀತದಲ್ಲಿ ಜಿ. ಎನ್. ಬಾಲಸುಬ್ರಹ್ಮಣ್ಯಂ, ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್, ಚೆಂಬೈ ವೈದ್ಯನಾಥ ಭಾಗವತರ್, ಮಧುರೈ ಮಣಿ ಅಯ್ಯರ್, ಎಂ. ಎಸ್. ಗೋಪಾಲಕೃಷ್ಣನ್, ಪಾಲ್ಘಾಟ್ ಮಣಿ ಅಯ್ಯರ್, ಉಮಯಾಳಪುರಂ ಶಿವರಾಮನ್, ವೀಣೆ ಶೇಷಣ್ಣ, ಆರ್. ಕೆ. ಶ್ರೀಕಂಠನ್ ಮುಂತಾದವರು ಮಾಡಿದ್ದಾರೆ. ಹಿಂದೂಸ್ತಾನೀ ಪದ್ಧತಿಯಲ್ಲಿ ಕುಮಾರಗಂಧರ್ವ, ಜಸ್ರಾಜ್, ಬಡೇ ಗುಲಾಂ ಅಲೀ ಖಾನ್, ಅಬ್ದುಲ್ ಕರೀಂ ಖಾನ್, ಉಸ್ತಾದ್ ಅಲ್ಲಾರಖಾ ಖಾನ್, ಹರಿಪ್ರಸಾದ್ ಚೌರಾಸಿಯಾ, ಶಿವಕುಮಾರ್ ಶರ್ಮಾ, ಬಿಸ್ಮಿಲ್ಲಾಖಾನ್ ಇವರ ಕೊಡುಗೆ ಅಮೋಘ. ಕೇವಲ ದೊಡ್ಡ ಹೆಸರುಗಳನ್ನು ಪಟ್ಟಿಮಾಡುವುದಷ್ಟೆ ಈ ಲೇಖನದ ಉದ್ದೇಶವಲ್ಲ. ಇನ್ನು ಮುಂದೆ ಬರುವ ದಿನಗಳಲ್ಲಿ ಈ ಪಟ್ಟಿಯನ್ನು ಹೇಗೆ ದೊಡ್ಡದು ಮಾಡಬಹುದು ಎನ್ನುವುದು ನಮ್ಮ ಚಿಂತನೆಯ ವ್ಯಾಪ್ತಿ ಹಾಗೂ ಆಯಾಮ.
ಪ್ರಕ್ರಿಯೆ – ಸವಾಲುಗಳು
ಈ ಎಲ್ಲ ಕಲಾವಿದರು ಸಾಧನೆಗೈದು, ಹಾಡಿ-ನುಡಿಸಿ, ಸ್ವತಃ ಖುಷಿಪಟ್ಟು, ಬೇರೆಯವರಿಗೆ ನಿಃಸ್ವಾರ್ಥವಾಗಿ ಸಂತಸ ಹಂಚಿದ ದಿನಗಳಿಗೂ (ಕೇವಲ 40-50 ವರ್ಷಗಳ ಹಿಂದೆ) ಮತ್ತು ಇಂದಿಗೂ ಏನಾದರೂ ಗಮನಾರ್ಹ ಬದಲಾವಣೆ ಇದೆಯೇ? ಹಾಗಿದ್ದಲ್ಲಿ ಅದು ನಮ್ಮ ಸಂಗೀತದ ಮೂಲ ಉದ್ದೇಶ, ಆಂತರ್ಯ, ಪಯಣದ ಹಾದಿ, ದಿಗ್ಗಜರನ್ನು ರೂಪಿಸುವ ಪ್ರಕ್ರಿಯೆಯಲ್ಲಿ ಏನಾದರೂ ಸವಾಲುಗಳಿವೆಯೇ? – ಇವನ್ನು ಚರ್ಚಿಸೋಣ.
ದಿಲೀಪ್ ರಾಂಜೇಕರ್ ಮೂಲತಃ ಪುಣೆಯವರು; ಈಗ ಬೆಂಗಳೂರಿನಲ್ಲಿದ್ದಾರೆ. ಮೊದಲು ‘ವಿಪ್ರೋ’ದಲ್ಲಿ ಕೆಲಸ; ಈಗ ‘ಅಜೀಂ ಪ್ರೇಮ್ಜೀ ಫೌಂಡೇಶನ್’ನಲ್ಲಿ ಸಿಇಓ ಆಗಿದ್ದಾರೆ. ದೇಶಾದ್ಯಂತ ಹಿಂದುಳಿದ ಪ್ರದೇಶಗಳ ಪ್ರಾಥಮಿಕ ಶಾಲೆಗಳಲ್ಲಿ ಪಠ್ಯಕ್ರಮ, ಶಿಕ್ಷಣಪದ್ಧತಿಯಲ್ಲಿ ಬದಲಾವಣೆಗಳನ್ನು ತಂದು ದೊಡ್ಡಮಟ್ಟದ, ಪ್ರಾಮಾಣಿಕ ಕೆಲಸ ಮಾಡುತ್ತಿದ್ದಾರೆ. ಇವರೊಬ್ಬ ಸಂಗೀತಪ್ರೇಮಿಯೂ ಹೌದು. ನನ್ನಲ್ಲಿ ನಾಲ್ಕು ವರ್ಷ ಸಂಗೀತ ಕಲಿತದ್ದೂ ಉಂಟು. ಹಳೆಯ ಕಾಲದ ಸುಮಧುರ ಸಿನೆಮಾ ಹಾಡುಗಳಿಂದ ಹಿಡಿದು ಭೀಮಸೇನ ಜೋಶಿ, ಕುಮಾರಗಂಧರ್ವ, ಪ್ರಭಾ ಅತ್ರೆ ಅವರಂತಹ ದಿಗ್ಗಜರ ಸಂಗೀತವನ್ನು ಸೂಕ್ಷ್ಮವಾಗಿ ಗ್ರಹಿಸಿ ಆಸ್ವಾದಿಸಬಲ್ಲರು.
“ನನ್ನ ಬಾಲ್ಯದ ದಿನಗಳಲ್ಲಿ ತಂದೆಯವರ ಜೊತೆಗೆ ಶಾಸ್ತ್ರೀಯ ಸಂಗೀತ ಕೇಳಲು ರಾತ್ರಿಯಿಡೀ ನಡೆಯುವ ಕಾರ್ಯಕ್ರಮಗಳಿಗೆ ಹೋಗುತ್ತಿದ್ದೆ. ಗಾಯನದ ವ್ಯಾಕರಣ ಗೊತ್ತಿರದಿದ್ದರೂ ಮಾಧುರ್ಯ ನನ್ನ ಮನಸೆಳೆಯುತ್ತಿತ್ತು. ಆಗಿನ ದಿನಗಳಲ್ಲಿ ಪುಣೆಯಲ್ಲಿ ಗಣೇಶನ ಹಬ್ಬ
ಅಂದರೆ ಸಂಗೀತದ ಹಬ್ಬ. ಹತ್ತು ದಿನದ ಉತ್ಸವದಲ್ಲಿ ಮಾಣಿಕ್ವರ್ಮ, ವಸಂತರಾವ್ ದೇಶಪಾಂಡೆ, ಸುಧೀರ್ ಫಡಕೆ ಅವರ ಗೀತರಾಮಾಯಣ, ಭೀಮಸೇನ ಜೋಶಿ, ಕಿಶೋರಿ ಅಮೋನ್ಕರ್ ಈ ಶ್ರೇಣಿಯ ಕಲಾವಿದರ ಕಾರ್ಯಕ್ರಮಗಳು ಬೇರೆ ಬೇರೆ ಬಡಾವಣೆಗಳಲ್ಲಿ ಇರುತ್ತಿದ್ದವು. ರಸಿಕರಿಗೆ ಆಯ್ಕೆ ಮಾಡಿಕೊಳ್ಳುವುದೇ ಒಂದು ಸಮಸ್ಯೆ ಆಗುತ್ತಿತ್ತು. We were spoilt for choice. ಹಾಗೆಯೇ ಮುಂದಿನ ಹತ್ತು ದಿನಗಳಲ್ಲಿ ಇವೇ ಕಲಾವಿದರು ಒಂದು ವೇದಿಕೆಯಿಂದ ಇನ್ನೊಂದು ವೇದಿಕೆಗೆ ಬರುತ್ತಿದ್ದರು. ನಾಲ್ಕಾರು ದಿನಗಟ್ಟಲೆ, ಒಂದೇ ಊರಿನಲ್ಲಿ, ಕೆಲವೊಮ್ಮೆ ಅವೇ ರಸಿಕರು ಕಲಾವಿದರನ್ನು ಹಿಂಬಾಲಿಸಿ ಬಂದಿರಲೂಬಹುದು; ಹಾಡು, ನುಡಿಸಾಣಿಕೆಯಲ್ಲಿ ನಿನ್ನೆಗಿಂತ ಇಂದು, ಇಂದಿಗಿಂತ ನಾಳೆ ಉತ್ಕೃಷ್ಠತೆ ಸಾಧಿಸುವ ಅವಕಾಶ ಮತ್ತು ಸವಾಲು ಎರಡೂ ಇತ್ತು” ಎನ್ನುತ್ತಾರೆ ರಾಂಜೇಕರ್.
ಕಳೆದ 32 ವರ್ಷಗಳಿಂದ ನಾನು ಬೆಂಗಳೂರಿನಲ್ಲಿ ಇದ್ದೇನೆ. ಇಲ್ಲಿಯವರೆಗೆ ನಾನು ಮೂರು ಬಾರಿ ಗಣೇಶೋತ್ಸವದಲ್ಲಿ ಹಾಡಿದ ನೆನಪು. ಪ್ರತಿ ವರ್ಷವೂ ನಾನೇ ಹಾಡಬೇಕೆಂಬ ನಿಯಮವೇನೂ ಇಲ್ಲ. ಇದೇ ಸಮಸ್ಯೆ – ಅಳಲು; ನನ್ನ ಸಮಕಾಲೀನ ಶಾಸ್ತ್ರೀಯ ಸಂಗೀತ ಕಲಾವಿದರದೂ ಸಹ. ಅವಕಾಶ ಇಲ್ಲದಿದ್ದರೆ ಕಲಾವಿದ ಬೆಳೆಯುವುದಾದರೂ ಹೇಗೆ, ಧೀಮಂತನಾಗುವುದು ಹೇಗೆ? ಅವನ ಕಲೆ ಶ್ರೀಮಂತವಾಗುವುದು ಹೇಗೆ? ಈಗ ಗಣೇಶನ ಹಬ್ಬದ ಉತ್ಸವದಲ್ಲಿ ಸಿನೆಮಾ ಹಾಡಿನ ಆರ್ಕೆಸ್ಟ್ರಾ ತಂಡಗಳೇ ಹೆಚ್ಚು. ನಾನು ಸಹ 1976-79ರಲ್ಲಿ ಹೊಸಪೇಟೆಯಲ್ಲಿ ಆರ್ಕೆಸ್ಟ್ರಾದಲ್ಲಿ ಹಾಡುತ್ತಿದ್ದೆ. ಅಂದಿನ ಕಾಲದ ಮತ್ತು ಇಂದಿನ ದಿನಗಳ ಸಿನೆಮಾ ಹಾಡುಗಳ ಧಾಟಿ, ಭಾಷೆ, ವಾದ್ಯಸಂಯೋಜನೆ ಎಲ್ಲದರಲ್ಲೂ ಅಜಗಜಾಂತರ ವ್ಯತ್ಯಾಸವಿದೆ. ಇಂದಿನ ಗಣೇಶ ಹಬ್ಬದಲ್ಲಿ, ಇತ್ತೀಚೆಗೆ ಹಾಸ್ಯಗೋಷ್ಟಿಗಳ ಸಂಖ್ಯೆಯೂ ಜಾಸ್ತಿಯಾಗಿದೆ. ಜನಸಾಮಾನ್ಯರು ಸಹಜವಾಗಿ ನಗುವ ಶಕ್ತಿಯನ್ನೇ ಕಳೆದುಕೊಂಡಿದ್ದಾರೆಯೆ? ಬೇರೆಯವರು ನಮಗೆ ಕಚಗುಳಿಯಿಟ್ಟು ನಗಿಸಬೇಕೆ? ಉತ್ತರ ಕರ್ನಾಟಕದ ಭಾಷೆ ಎಂದರೆ ಹಾಸ್ಯಾಸ್ಪದವೇ? ಹಾಸ್ಯ ಪ್ರಚೋದಕವೇ? ವರಕವಿ ದ. ರಾ. ಬೇಂದ್ರೆಯವರ ಅದ್ಭುತ ಕವನಗಳು ಧಾರವಾಡ ಭಾಷೆಯಲ್ಲಿ ಇವೆ ಅಲ್ಲವೇ? ಅವೆಷ್ಟು ಪ್ರಬುದ್ಧ, ಅವೆಷ್ಟು ಸುಂದರ!
ಡಾ|| ಚಂದ್ರಿಮಾ ಮಜುಂದಾರ್, ಸರೋದ್ವಾದಕಿ ಅವರ ಬಗ್ಗೆ ಲೇಖನದಲ್ಲಿ ಈ ಮೊದಲು ಉಲ್ಲೇಖಿಸಿದ್ದೆ. ಅವರಿರುವುದು ದೆಹಲಿಯಲ್ಲಿ. ಪಂ|| ನರೇಂದ್ರನಾಥ್ ಧರ್ ಅವರಿಂದ ಸರೋದ್ ಕಲಿತಿದ್ದಾರೆ. ಅರ್ಥಶಾಸ್ತ್ರದಲ್ಲಿ ಪಿಎಚ್.ಡಿ. ಮಾಡಿದ್ದಾರೆ. ನಾನು ದೆಹಲಿಗೆ ಹೋದಾಗ ಸಂಗೀತದ ವಿಷಯದ ಬಗ್ಗೆ ನನ್ನ-ಅವರ ಮಧ್ಯೆ ಸಂವಾದ-ಚರ್ಚೆ ನಡೆಯುತ್ತದೆ. ಅವರು ತಮ್ಮ ದುರ್ಗಾಪೂಜಾ ಉತ್ಸವದ ಬಗ್ಗೆ ಹೇಳುತ್ತಿದ್ದರು: “ನಾಗರಾಜ್ಜೀ, ನಮ್ಮ ಅಪಾರ್ಟ್ಮೆಂಟ್ ಸಂಕೀರ್ಣದಲ್ಲಿ ಸಾವಿರಾರು ಮನೆಗಳಿವೆ. ವರ್ಷಾನುಗಟ್ಟಲೆಯಿಂದ ದಸರಾ-ದುರ್ಗಾಪೂಜೆ ವಿಜೃಂಭಣೆಯಿಂದ ನಡೆಯುತ್ತದೆ.
ಎಲ್ಲರ ಕೋರಿಕೆಯ ಮೇರೆಗೆ ಒಂದೆರಡು ಬಾರಿ ನಾನು ಸರೋದ್ ನುಡಿಸಿದ್ದೇನೆ. ಅನಂತರದ ದಿನಗಳಲ್ಲಿ ಒತ್ತಾಯದ ಮೇರೆಗೆ ಸಾಂಸ್ಕೃತಿಕ ಸಮಿತಿಯ ಸದಸ್ಯಳೂ ಆದೆ. ಅಂದಿನಿಂದ ಇಂದಿನವರೆಗೆ ಬಹಳ ಪ್ರಯಾಸದಿಂದ ಒಂದೆರಡು ಬಾರಿ ಶಾಸ್ತ್ರೀಯ ಸಂಗೀತಗಾರರನ್ನು ಕರೆಸುವಲ್ಲಿ ಜಯ ಕಂಡಿದ್ದೇನೆ. ಆದರೂ ಬೇರೆ ಸದಸ್ಯರು ‘ಅಯ್ಯೋ, ಅವರು ಸಿತಾರ್ನ ಅಷ್ಟೂ ತಂತಿಗಳನ್ನು ಶ್ರುತಿ ಮಾಡುವಷ್ಟರಲ್ಲಿ 20 ನಿಮಿಷ ಸಮಯ ಹಾಳಾಗುತ್ತದೆ’ ಎನ್ನುತ್ತಾರೆ. ಆರ್ಕೆಸ್ಟ್ರಾದವರು ದೊಡ್ಡ ದೊಡ್ಡ ಸ್ಪೀಕರ್, ಸೌಂಡ್ಚೆಕ್, ಥಳಕಿನ ದೀಪಾಲಂಕಾರ ಮಾಡುತ್ತಿರುವಾಗ ಕೇಳುಗರು 45 ನಿಮಿಷ ಸುಮ್ಮನೆ ತಾಳ್ಮೆಯಿಂದ ಕಾಯುತ್ತಾ ಕುಳಿತಿರುತ್ತಾರೆ ಮತ್ತು ಆ ತಂಡಕ್ಕೆ ನೀಡುವ ಸಂಭಾವನೆಯ ಕಾಲುಭಾಗವನ್ನೂ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ನೀಡಲು ಒಪ್ಪುವುದಿಲ್ಲ. ನಮ್ಮ ಶಾಸ್ತ್ರೀಯ ಕಲಾವಿದರಿಗೆ ದುಬಾರಿ ಹೋಟೆಲ್ನಲ್ಲಿ ವಾಸವೂ ಇಲ್ಲ; ನನ್ನ ಮನೆಯಲ್ಲಿಯೇ ಅವರಿಗೆ ಆತಿಥ್ಯ ನೀಡಿದ್ದೇನೆ” – ಎಂದರು. ‘ಇನ್ನು ಕೆಲವು ಬಾರಿ ಸಮಿತಿಯವರು ನಮ್ಮವರಲ್ಲಿ ಒಬ್ಬರಾದ ನೀವೇ ಅರ್ಧಗಂಟೆ ಸರೋದ್ ನುಡಿಸಿಬಿಡಿ’ ಎನ್ನುತ್ತಾರೆ. ಹೀಗಾದರೆ ನಮ್ಮ ಶಾಸ್ತ್ರೀಯ ಕಲೆಗಳು – ಕಲಾವಿದರು ಶ್ರೀಮಂತರಾಗುವುದು ಯಾವಾಗ? ಅಕ್ಕಿ-ಬೇಳೆಯ ಚಿಂತೆಯನ್ನು ಬಿಟ್ಟು ಸಮಾಧಾನ ಚಿತ್ತದಿಂದ ಅಭ್ಯಾಸಮಾಡಿ ರಾಗದಲ್ಲಿ ಹೊಸತನದ ಅನ್ವೇಷಣೆ ಮಾಡುವುದು ಯಾವಾಗ?”
ಆದರ್ಶ ಮೇಲ್ಪಂಕ್ತಿ
“ಸಮಕಾಲೀನ ಕಲಾಪ್ರಪಂಚದ ಮೇಲೆ ಒಂದು ಗಾಢವಾದ ಪರಿಣಾಮ ಬೀರಬೇಕು. ಅವರ ವ್ಯಕ್ತಿತ್ವ ಮತ್ತು ಕಲೆ ಎರಡಕ್ಕೂ ಒಂದು ಹೊಳೆಯುವ ಪ್ರಭಾವಳಿ (Aura-magic) ಇರಬೇಕು. ಕಲಾತ್ಮಕ ದೃಷ್ಟಿಯಿಂದ ಕಿರಿಯ ಪಂಕ್ತಿಗೆ ಅನುಕರಣೀಯರಾಗಿ, ಸ್ಫೂರ್ತಿದಾಯಕರಾಗಿರಬೇಕು. ನನ್ನ ಮಟ್ಟಿಗೆ ಇಂತಹವರು ದಿಗ್ಗಜ ಕಲಾವಿದರು ಆಗಿದ್ದಾರೆ” – ಎನ್ನುತ್ತಾರೆ ಎಸ್. ಆರ್. ರಾಮಕೃಷ್ಣ. ವೃತ್ತಿಯಿಂದ ಪತ್ರಿಕಾಕರ್ತ, ಪ್ರವೃತ್ತಿಯಿಂದ ಸಂಗೀತಗಾರರೂ, ಸಂಯೋಜಕರೂ ಆಗಿರುವ ಎಸ್. ಆರ್. ರಾಮಕೃಷ್ಣ ನನಗೆ ಕಳೆದ ಮೂವತ್ತು ವರ್ಷಗಳಿಂದ ಪರಿಚಯ. ನನ್ನೊಡನೆ ಹಾರ್ಮೋನಿಯಂ ನುಡಿಸಿದ್ದಾರೆ. “ಇಂದಿನ ಆಧುನಿಕೀಕರಣ, ನಗರೀಕರಣ, ನಾಗರಿಕತೆಯ ಬೆನ್ನುಹತ್ತಿದ ನಮ್ಮ ಜೀವನಶೈಲಿ ಒಂದು ಕಡೆ ತದೇಕಚಿತ್ತದಿಂದ ಕುಳಿತು ಸಂಗೀತ ಕೇಳುವ ವ್ಯವಧಾನವನ್ನು ಕಳೆದುಕೊಂಡಿದೆ. ಬೆಂಗಳೂರಿನ ಯಲಹಂಕದಿಂದ ಜಯನಗರದವರೆಗೆ ಬಂದು, ಎಂತಹ ಮಹಾನ್ ಕಲಾವಿದರಿದ್ದರೂ, ರಸಿಕರು ಸಂಗೀತ ಕೇಳಲು ಹಿಂಜರಿಯುತ್ತಾರೆ. ಅದು ಹಿರಿಯ ನಾಗರಿಕರಾದರೆ ಕೆಲವೊಮ್ಮೆ ಮನೆಯಲ್ಲಿ ಮಕ್ಕಳು ಅವರನ್ನು ಕಾರ್ಯಕ್ರಮಕ್ಕೆ ಕರೆತರುವಲ್ಲಿ ಹಾಗೂ ಸಂಗೀತದಲ್ಲಿ ಎರಡರಲ್ಲೂ ಆಸಕ್ತಿ ತೋರದಿರಬಹುದು” ಎಂದರು ಎಸ್. ಆರ್. ರಾಮಕೃಷ್ಣ.
ದೇಶದ ದೂರ ದೂರದ ಮೂಲೆ ಮೂಲೆಗಳಿಂದ ಮಹಾನ್ ಕಲಾವಿದರು ಬಂದಿರುವಾಗ, ನಾವು ಅವರ ಸಂಗೀತವನ್ನು ಸವಿಯಲು ನಮ್ಮ ಊರಿನಲ್ಲೇ ಒಂದು ಕಡೆಯಿಂದ ಇನ್ನೊಂದು ಕಡೆಗೆ ಹೋಗುವುದೇ ಸವಾಲಾಗಿರುವುದು ದುರದೃಷ್ಟಕರ. ಕುಂದಗೋಳದ/ಪುಣೆಯ ಸವಾಯಿಗಂಧರ್ವ ಉತ್ಸವ, ಜಲಂಧರ್ನಲ್ಲಿ ನಡೆಯುವ ಹರಿವಲ್ಲಭ ಸಂಗೀತ ಸಮ್ಮೇಳನ ಇವಕ್ಕೆಲ್ಲ ಡಾ|| ಎಸ್. ಎಲ್. ಭೈರಪ್ಪನವರು ತಮ್ಮ ಸ್ವಂತ ಖರ್ಚಿನಲ್ಲಿ ಹೋಗಿ ದಿನ-ರಾತ್ರಿ ಸಂಗೀತ ಕೇಳಿ ಬಂದಿದ್ದಾರೆ. ಹೀಗಾಗಿ ಅವರ ಸಾಹಿತ್ಯದಲ್ಲಿ ಸಂಗೀತದ ರಾಗಗಳ ಪ್ರಭಾವವನ್ನು ಕಾಣಬಹುದು. ನಾನು ಅಮೇರಿಕೆಯ ಚಿಕಾಗೋದ Elmhuerst ಕಾಲೇಜಿಗೆ ಸಂಗೀತಕ್ಕಾಗಿ ವಿಸಿಟಿಂಗ್ ಪ್ರೊಫೆಸರ್ ಆಗಿ ಹೋಗಿದ್ದೆ. ಅಲ್ಲಿ ನನ್ನ ಸಹಅಧ್ಯಾಪಕರಾಗಿರುವ Prof. Mark Harbold ಭಾರತಕ್ಕೆ ಆರು ಬಾರಿ ಬಂದಿದ್ದಾರೆ. ಹಾಗೆಯೇ ಪ್ರತಿಸಾರಿಯೂ ತಿರುವಯ್ಯಾರ್ನಲ್ಲಿ ನಡೆಯುವ ತ್ಯಾಗರಾಜ ಉತ್ಸವಕ್ಕೆ ಸ್ವಂತ ಆಸಕ್ತಿ-ಖರ್ಚಿನಿಂದ ಹೋಗಿ ಕೇಳಿ ಆನಂದಿಸಿದ್ದಾರೆ. ಮಹಾನ್ ಕಲಾವಿದರು ಸೃಷ್ಟಿಯಾಗಲು ಸಮಾಜವೂ ಶ್ರೋತೃವರ್ಗವೂ ಒಂದು ಪ್ರಮಾಣದ ತ್ಯಾಗ-ಚಿಂತನೆಗೆ ತಯಾರಿರಬೇಕು. ಇದು ಕೇವಲ ಕಲಾವಿದನ ಜವಾಬ್ದಾರಿಯಲ್ಲ.
“ಶಾಸ್ತ್ರೀಯ ಕಲೆಗಳಲ್ಲಿ ಮಹತ್ಸಾಧನೆ ಮಾಡಲು ಹೊರಟಿರುವ ಕಲಾವಿದರು ಲೌಕಿಕ-ಆರ್ಥಿಕ ಮಾನದಂಡಗಳಿಂದ ನೋಡುವುದಾದರೆ, ಒಂದು ಪ್ರಮಾಣದ ಬಡತನವನ್ನು ಒಪ್ಪಿಕೊಂಡು ತ್ಯಾಗಕ್ಕೆ ಸಿದ್ಧರಿರಬೇಕು. (‘ಆಸ್ಟೆರಿಟಿ’) ಅಂತಾರೆ ಹಿರಿಯ ಕಲಾವಿಮರ್ಶಕ ಶತಾವಧಾನಿ ಗಣೇಶ್. ಈ ಅಭಿಪ್ರಾಯಕ್ಕೆ ನನ್ನದು ಸಂಪೂರ್ಣ ಸಮ್ಮತಿ ಇದೆ. ಅಂತಹ ಕಲಾವಿದರ ಜೀವನವನ್ನು ನಾನು ಕಣ್ಣಾರೆ ಕಂಡಿದ್ದೇನೆ. ಹಾಗೆಯೇ “ಬೆಂಗಳೂರು ನಾಗರತ್ನಮ್ಮ ತಮ್ಮ ಜೀವಮಾನದ ಗಳಿಕೆಯನ್ನು ತಿರುವಯ್ಯಾರ್ನಲ್ಲಿ ತ್ಯಾಗರಾಜರ ಮಂದಿರ ಕಟ್ಟಿಸಲು ವಿನಿಯೋಗಿಸಿದರು. ಹಾಗೆಯೇ ಅತಿ ಪ್ರಯಾಸ ಪ್ರಯತ್ನದಿಂದ ಬಿಡಾರಂ ಕೃಷ್ಣಪ್ಪನವರು ಮೈಸೂರಲ್ಲಿ ಪ್ರಸನ್ನ ಸೀತಾರಾಮ ಮಂದಿರ ಕಟ್ಟಿಸಿದರು. ಇವು ದೇವಸ್ಥಾನಕ್ಕಿಂತ ಹೆಚ್ಚಾಗಿ ಕಲೆ-ಕಲಾವಿದರು ಬೆಳೆಯಲು ವೇದಿಕೆ ಹಾಗೂ ಪ್ರೇರಣೆಯಾಗಿ ನಿಂತಿವೆ. ಪುರಂದರದಾಸರ ‘ಕೆರೆಯ ನೀರನು ಕೆರೆಗೆ ಚೆಲ್ಲಿ’ ಎಂಬ ಕೃತಿಗೆ ಈ ಎರಡು ನಿದರ್ಶನಗಳು ಜ್ವಲಂತ ಸಾಕ್ಷಿಯಾಗಿವೆ.”
ಸಂಗೀತ ಕ್ಷೇತ್ರದಲ್ಲಿ ಮಹತ್ಸಾಧನೆ ಮಾಡಿದ ಐದು ಮೇರು ಕಲಾವಿದರಿಗೆ ದೇಶದ ಅತ್ಯುನ್ನತ ಗೌರವ ‘ಭಾರತರತ್ನ’ಸಂದಿದೆ. ಇನ್ನೆಷ್ಟೋ ಜನ ಅರ್ಹರಿದ್ದಾರೆ. ನನ್ನ ಅನುಭವದಿಂದ ಹೇಳುವುದಾದರೆ ಈವರೆಗೆ ಯಾವುದೇ ಶಾಸ್ತ್ರೀಯ ಕಲಾವಿದನ ಮನೆಯ ಮೇಲೆ IT raid ಆಗಿದ್ದು ನೆನಪಿಲ್ಲ. ಆದರೆ ಬೇರೆ ಕ್ಷೇತ್ರದ ಅನನುಭವಿ, ವೃತ್ತಿಪರರ ಮನೆಯ ಮೇಲೆ ಏನೆಲ್ಲ ಆಗಿದೆ ಎನ್ನುವುದು ಈಗ ಇತಿಹಾಸ. ಇದರ ಸಾರ ಇಷ್ಟೆ: ಕಲೆಯ ಸಾಧನೆ ಪ್ರಾಮಾಣಿಕತೆಯನ್ನೂ ಕಲಿಸುತ್ತದೆ.
ಈ ಮುಂಚೆ ದೇಶದ ನಗರಪ್ರದೇಶಗಳಲ್ಲಿ ಸಂಗೀತರಸಿಕರಿಗೆ ಇರಬಹುದಾದ ಸಮಸ್ಯೆಗಳ ಬಗ್ಗೆ ಒಂದು ಚಿಂತನೆಯಾಯಿತು. ಆದರೆ ಕೇವಲ ರಾಜ್ಯದ ರಾಜಧಾನಿಗಳು, ದೇಶದ ಹಿರಿಯ ಪಟ್ಟಣಗಳಲ್ಲಿ ಮಾತ್ರ ಯಾವುದೇ ಶಾಸ್ತ್ರೀಯ ಕಲೆಗಳು ಬೆಳೆಯುವ ಆವಶ್ಯಕತೆಯಿಲ್ಲ. ಹಳ್ಳಿ-ತಾಲ್ಲೂಕು-ಜಿಲ್ಲಾ ಮಟ್ಟದಲ್ಲೂ ಕಲೆ-ಶ್ರೋತೃವಿನ ನಡುವೆ ಸಂವಾದ ಏರ್ಪಡಬೇಕಾಗಿದೆ. ನನಗೆ ನೆನಪಿದ್ದ ಹಾಗೆ ನನ್ನ ಹುಟ್ಟೂರು ಹೊಸಪೇಟೆಗೆ ಪಂ|| ಭೀಮಸೇನ ಜೋಶಿ ಬಂದು ಹಾಡಿದ ದಾಖಲೆ ಇಲ್ಲ. 1978ರಲ್ಲಿ ಒಮ್ಮೆ ಬಾಲಮುರಳೀಕೃಷ್ಣ ಬಂದಿದ್ದರು.
“ಯಾವುದೇ ಆಯ್ದ ಕ್ಷೇತ್ರದಲ್ಲಿ ಪರಿಪೂರ್ಣತೆ, ಶ್ರೇಷ್ಠತೆಯನ್ನು ಸಾಧಿಸಿ, ತಮ್ಮ ಸಮಕಾಲೀನ ಪೀಳಿಗೆಯ ಸಾಧಕರಿಗೆ ಸ್ಫೂರ್ತಿಯಾಗಿ, ಮಾರ್ಗರೂಪಕರಾಗಿ, ಸವಾಲು ಎಸೆಯುವಂತಹ ವ್ಯಕ್ತಿಗಳನ್ನು ನಾನು ದಿಗ್ಗಜರೆಂದು ಪರಿಗಣಿಸುತ್ತೇನೆ. ಅನಂತರ ಹೊಸತನವನ್ನು ಆವಿಷ್ಕರಿಸಿ, ಪ್ರತಿದಿನವೂ ತಾವು ಹಾಕಿದ ಶ್ರೇಷ್ಠತೆಯ ಗಡಿಗಳನ್ನು ತಾವೇ ದಾಟುತ್ತ ಹೊಸ ದಾಖಲೆ ಬರೆಯುವವರು ಇತಿಹಾಸದಲ್ಲಿ ದಾಖಲಾಗುತ್ತಾರೆ. ನನಗೆ ಲಿಯೊನಾರ್ಡೋ ಡಾವಿಂಚಿ, ನೆಲ್ಸನ್ ಮಂಡೇಲಾ, ಮಹಾತ್ಮಾ ಗಾಂಧಿ, ಹರಿಪ್ರಸಾದ್ ಚೌರಾಸಿಯಾ, ಭೀಮಸೇನ ಜೋಶಿ ದಿಗ್ಗಜರು” ಎಂದರು ವಿಶ್ರಾಂತ ಐ.ಎ.ಎಸ್. ಅಧಿಕಾರಿ ಎಸ್. ಎಂ. ಆಚಾರ್ಯ.
ಕ್ರೀಡೆ ಮುಂತಾದ ಕ್ಷೇತ್ರಗಳಲ್ಲಿ ನಮ್ಮ ಶ್ರೇಷ್ಠತೆಯನ್ನು ಸ್ಥಾಪಿಸಲು ನೀವೊಬ್ಬ ಎದುರಾಳಿಯನ್ನು ಸೋಲಿಸಬೇಕಾಗುತ್ತದೆ. ಅಂದಿನ ದಿನದ ಮಟ್ಟಿಗೆ ನಿಮ್ಮ ಎದುರಾಳಿ ದುರ್ಬಲ ಪ್ರದರ್ಶನ ನೀಡಿದಾಗ ನೀವು ಅವರ ಮೇಲೆ ಮೇಲುಗೈ ಸಾಧಿಸಿದರೆ ಅಂದಿನ ಮಟ್ಟಿಗೆ ನೀವು ವಿಜಯಿಗಳು ಹಾಗೂ ಚಾಂಪಿಯನ್.
ಆದರೆ ಅದು ನಿಮ್ಮ ಸಂಪೂರ್ಣ ಶಕ್ತಿಯನ್ನು ಓರೆಗೆ ಹಚ್ಚಿ ನೋಡದಿರಬಹುದು!? ಕಲಾಪ್ರಕಾರಗಳಲ್ಲಿ – ಸಂಗೀತದಲ್ಲಿ ಎದುರಾಳಿ ಸ್ಪರ್ಧೆ ಇಲ್ಲ. ಇಂದಿಗಿಂತ ನಾಳೆ ನಾನು ಇನ್ನೂ ಚೆನ್ನಾಗಿ ಹಾಡಬೇಕು ಎಂಬ ಗುರಿಗೆ ಸ್ವತಃ ಕಲಾವಿದನೇ ಒಂದು ಮಾನದಂಡವನ್ನು ನಿರ್ಮಿಸಿಕೊಳ್ಳುತ್ತಾನೆ. ಇದು ಪ್ರತಿ ದಿನವೂ ಹೊಸ ಎತ್ತರವನ್ನು ತೋರಿಸುವ ಪ್ರಕ್ರಿಯೆ. ಸಮಾಜದ ವಿವಿಧ ಆಯಾಮ, ಅನುಭವ, ನೋಡುವ ದೃಷ್ಟಿಯ ಆಧಾರದಿಂದ ನಮ್ಮ ಸಂಗೀತದಲ್ಲೂ ಕಲಾವಿದರ ಕೊಡುಗೆ, ಹಿರಿಮೆ, ಶ್ರೇಷ್ಠತೆಯನ್ನು ಅಳೆಯಲಾಗುತ್ತದೆ.
ಬೇಕು – ಅವಕಾಶ, ಸಹಕಾರ
ಕ್ರೀಡೆ ಮತ್ತು ಬೇರೆ ಕ್ಷೇತ್ರಗಳಿಗೆ ಹೋಲಿಸಿ ನೋಡಿದರೆ, ಕಲಾಪ್ರಕಾರಗಳಲ್ಲಿ ಶ್ರೇಷ್ಠತೆಯನ್ನು ಸಾಧಿಸುವ ಪಥವೇ ಬೇರೆ. ಮೂವತ್ತೈದನೆಯ ವಯಸ್ಸಿನಲ್ಲಿ ಕ್ರೀಡಾಪಟು ಹಲವಾರು ವಿಶ್ವದಾಖಲೆಗಳನ್ನು ನಿರ್ಮಿಸಿ ನೇಪಥ್ಯಕ್ಕೆ ಸರಿದರೆ, ಭೀಮಸೇನ ಜೋಶಿ ಅವರು ಅರವತ್ತನೆಯ ವಯಸ್ಸಿನ ಸನ್ಮಾನ ಸಮಾರಂಭದ ಭಾಷಣದಲ್ಲಿ – “ನನಗ ಈಗ ಅಲ್ಲೊಂದು ಇಲ್ಲೊಂದು ಸ್ವರ ತಿಳೀಲಿಕ್ಕೆ ಹತ್ತಿದೆ” ಎಂದದ್ದು ಈಗ ಇತಿಹಾಸ ಮತ್ತು ಯುವ ಕಲಾವಿದರಿಗೊಂದು ಪಾಠ.
ಕುಮಾರಗಂಧರ್ವ, ಮ್ಯಾಂಡೋಲಿನ್ ಶ್ರೀನಿವಾಸ್ ಅವರಂಥ ಅಪರೂಪದ ಉದಾಹರಣೆಗಳನ್ನು ಹೊರತುಪಡಿಸಿದರೆ, ಕಲಾವಿದನ ಮನಸ್ಸು, ಜೀವನ, ದುಃಖ, ಸಂಘರ್ಷ, ಹೋರಾಟ, ಸಂತಸ, ವಿರಹ, ಪುನರ್ಮಿಲನದ ಅನುಭವಗಳು ಮಾಗಿದಷ್ಟೂ ಅವರ ಕಲಾವಂತಿಕೆಯೂ ಮಾಗುತ್ತದೆ. 10ನೇ ವಯಸ್ಸಿನಲ್ಲಿ ಯಾವುದೇ ಮಗುವಿನ ಧ್ವನಿ-ಗಂಟಲು ಚುರುಕಾಗಿ, ಲಯ-ಶ್ರುತಿ ಜ್ಞಾನವೂ ಅಮೋಘವಾಗಿರಬಹುದು. ಆದರೆ ಬಿಹಾಗ್ ರಾಗದ ವಿಪ್ರಲಂಭ ಶೃಂಗಾರ, ದರಬಾರಿ ಕಾನಡಾ ರಾಗದ ಅಂತರ್ಮುಖಿ ಗುಣಗಳನ್ನು ಹಾಡು-ನುಡಿಸಾಣಿಕೆಯಲ್ಲಿ ಮೂಡಿಸಬೇಕಾದರೆ ಜೀವನದ ಅನುಭವ ಮುಖ್ಯ. ಆದ್ದರಿಂದ ಒಬ್ಬ ಕಲಾವಿದ ಶ್ರೇಷ್ಠತೆ, ಪರಿಪಕ್ವತೆ, ಮಾಗಿದ ಸಂಗೀತ ನೀಡಬೇಕಾದರೆ ಒಂದಷ್ಟು ಕಾಲ ಅಭ್ಯಾಸ, ದುಡಿಮೆ, ಚಿಂತನೆ, ಮಂಥನ, ಸಾಧನೆಯನ್ನು ಪ್ರಸ್ತುತಪಡಿಸಲು ಸಾಕಷ್ಟು ಅವಕಾಶಗಳೂ ಬೇಕು; ಸಮಾಜದ, ಕುಟುಂಬದ, ಪರಿಸರದ ಪ್ರೀತಿಯ ಸಹಕಾರವೂ ಬೇಕು.
ಕಾರ್ಯಕ್ರಮ – ಆಯೋಜನೆ, ರೂಪರೇಷೆ
ಕಳೆದ 50 ವರ್ಷಗಳಲ್ಲಿ ಹಂತಹಂತವಾಗಿ ಸಂಗೀತದಲ್ಲಿ ಹಲವಾರು ಬದಲಾವಣೆಗಳು ಆಗಿವೆ. ಒಬ್ಬರೇ ಕಲಾವಿದರು 3-4 ಗಂಟೆ ಕಚೇರಿ ನೀಡುವ ಪರಿಪಾಠದಲ್ಲಿ ವ್ಯತ್ಯಾಸವಾಗಿದೆ. ಈಗ ಯುವ ಕಲಾವಿದರಿಗೆ 45 ನಿಮಿಷ; ಹಿರಿಯ ಕಲಾವಿದರಿಗೆ 90 ನಿಮಿಷ. ಒಂದು ಸಂಜೆಯಲ್ಲಿ ಮೂರು ನಾಲ್ಕು ಕಲಾವಿದರ ಪ್ಯಾಕೇಜ್ ಬಂದಿದೆ. ಇದು ಕೇಳುಗರು ಮತ್ತು ಕಲಾವಿದರು ಇಬ್ಬರಲ್ಲೂ 4 ಗಂಟೆ ಒಂದೆಡೆ ಏಕಾಗ್ರಚಿತ್ತದಿಂದ ಕೂಡುವ ವ್ಯವಧಾನವನ್ನು ಮಾಯವಾಗಿಸಿದೆ.
1990ರ ದಶಕದಲ್ಲಿ ನಾನೇ ಮೂರು ಗಂಟೆ ಕಾರ್ಯಕ್ರಮ ನೀಡಿದ್ದೆ. 2002ರಲ್ಲಿ ನಾನು ಅಮೆರಿಕೆಯ ಪ್ರವಾಸದಲ್ಲಿದ್ದಾಗ ನ್ಯೂಯಾರ್ಕ್ನಲ್ಲಿ ನನ್ನೊಂದು ಕಾರ್ಯಕ್ರಮ. ಅಲ್ಲಿಗೆ ವಾಷಿಂಗ್ಟನ್ನಿಂದ 5 ಗಂಟೆ ಕಾರಿನಲ್ಲಿ ಪ್ರಯಾಣ ಮಾಡಿ ಒಬ್ಬ ಸಂಗೀತ ರಸಿಕರು ಬಂದಿದ್ದರು. ಕಾರ್ಯಕ್ರಮಕ್ಕೆ ಮುನ್ನ ನಾನು ತಂಬೂರಿ ಶ್ರುತಿಗೊಳಿಸಿ ವೇದಿಕೆಗೆ ಬರುವ ತಯಾರಿಯಲ್ಲಿದ್ದಾಗ, ಆ ವ್ಯಕ್ತಿ ಬಂದು “ಹವಾಲ್ದಾರರೇ, ನಿಮ್ಮ ಸಂಗೀತ ಕೇಳಲು ನಾನು ಅಷ್ಟು ದೂರದಿಂದ ಬಂದಿದ್ದೇನೆ ಮತ್ತು ನಾಳೆ ನಾನು ಕಾರ್ಯಬಾಹುಳ್ಯದಿಂದ ಭಾರತಕ್ಕೆ ವಾಪಸ್ ಹೋಗುತ್ತಿದ್ದೇನೆ. ನಿಮ್ಮ ಈ ಪ್ರವಾಸದ ಇನ್ನಾವುದೇ ಕಾರ್ಯಕ್ರಮವನ್ನು ಕೇಳಲು ನನಗೆ ಅವಕಾಶವಿಲ್ಲ. ನಾನು ಅಮೆರಿಕೆಗೆ ವಾಪಸ್ ಬರುವ ಹೊತ್ತಿಗೆ ಇನ್ನೆರಡು ತಿಂಗಳ ನಂತರ ನೀವು ಭಾರತಕ್ಕೆ ವಾಪಸ್ ಹೋಗಿರುತ್ತೀರಿ. ಆದ್ದರಿಂದ ದಯವಿಟ್ಟು ಇಂದು ಕನಿಷ್ಠ ಆರು ಗಂಟೆಯಷ್ಟಾದರೂ ಕಾರ್ಯಕ್ರಮ ನೀಡಿ, ಬೇರೆ ಬೇರೆ ರಾಗಗಳನ್ನು ಹಾಡಿ” ಎಂದು ವಿನಂತಿಸಿಕೊಂಡರು. ನಾನು ಬಹಳ ಪ್ರೀತಿ ಮತ್ತು ಶ್ರದ್ಧೆಯಿಂದ ಮೂರು ಗಂಟೆ ಹಾಡಿದ ನಂತರ ಹತ್ತು ನಿಮಿಷ ವಿಶ್ರಾಂತಿ ತೆಗೆದುಕೊಂಡು ಮತ್ತೆ ಮೂರು ಗಂಟೆ ಹಾಡಿದೆ.
ಇತ್ತೀಚಿನ ಹಂಪಿ ಉತ್ಸವದಲ್ಲಿ 30 ನಿಮಿಷ, ದಸರಾ ಅರಮನೆಯಲ್ಲಿ ಒಂದು ಗಂಟೆ ಕಾರ್ಯಕ್ರಮ ಆಗಿದೆ. ಆಯೋಜಕರ ಓಡಾಟ, ಮೈಕಾ(Mike)ಸುರನ ಹೊಂದಾಣಿಕೆಯ ಮಧ್ಯೆ ಕೆಲವೊಮ್ಮೆ ವಾದ್ಯಗಳನ್ನು ಶ್ರುತಿಗೊಳಿಸಲು 10-15 ನಿಮಿಷ ಬೇಕಾಗುತ್ತದೆ. ಈ ಮಧ್ಯೆ ಗಣ್ಯರು, ರಾಜಕೀಯ ವ್ಯಕ್ತಿಗಳ ಅಧ್ಯಕ್ಷತೆ ಇದ್ದರೆ ಒಂದು ರಾಗದ ಎರಡನೆಯ ರಚನೆಯನ್ನು ಹಾಡುವ ಮಧ್ಯೆಯೇ ವೇದಿಕೆಗೆ ಬಂದು, (ಚಪ್ಪಲಿ ತೊಟ್ಟುಕೊಂಡು, ಕೈಯಲ್ಲಿ ಮೊಬೈಲ್ ಹಿಡಿದು) ಹೂವಿನ ಹಾರ ಹಾಕಿ, ಹಾಕಿಸಿಕೊಂಡು ಮೊಬೈಲ್ ಕಿವಿಗಿಟ್ಟುಕೊಂಡೇ ಹೊರಡುವ, ರಸಭಂಗ ಉಂಟಾಗುವ ಸಂದರ್ಭಗಳು ಸಾಮಾನ್ಯವಾಗಿವೆ.
ಸರ್ಕಾರ ಹಾಗೂ ಶಾಸ್ತ್ರೀಯ ಕಲೆಗಳು
“ಮೊದಲಿನಿಂದ ರಾಜಾಶ್ರಯದಲ್ಲಿದ್ದ ಸಂಗೀತ, ಸಂಗೀತಗಾರರು ಈಗ ಸರ್ಕಾರ, ಸಣ್ಣಪುಟ್ಟ ಸಂಘಸಂಸ್ಥೆಗಳ ಆಶ್ರಯಕ್ಕೆ ಮೊರೆ ಹೋಗಿವೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಂಗೀತ, ನೃತ್ಯ, ಸಾಹಿತ್ಯ ಹೀಗೆಲ್ಲ ಬೇರೆ ಅಕಾಡೆಮಿಗಳನ್ನು ಸ್ಥಾಪಿಸಿ, ಕೆಲವು ಕಾರ್ಯಕ್ರಮಗಳನ್ನು ಆಯೋಜಿಸಿ, ಪ್ರಶಸ್ತಿ-ಪುರಸ್ಕಾರಗಳನ್ನು ಕೊಟ್ಟು ಕಲೆ-ಕಲಾವಿದರನ್ನು ಪ್ರೋತ್ಸಾಹಿಸುತ್ತ ಬಂದಿವೆ. ಇವುಗಳ ಉದ್ದೇಶ ಒಳ್ಳೆಯದಾದರೂ ಇವುಗಳ ಆಡಳಿತ ಮಂಡಳಿ, ಕಾರ್ಯರೂಪಕ್ಕೆ ತರುವಲ್ಲಿ ಇನ್ನಷ್ಟು ಕಾಳಜಿ ವಹಿಸಬೇಕಿದೆ. ಉದಾಹರಣೆಗೆ ಹಂಪಿ ಉತ್ಸವದ ಆಸುಪಾಸಿನಲ್ಲೇ ಕೊಪ್ಪಳ ಜಿಲ್ಲಾಧಿಕಾರಿಗಳಿಂದ ತುಂಗಭದ್ರೆಯ ಇನ್ನೊಂದು ತೀರದಲ್ಲಿ, ಕೇವಲ ಮೂರು ದಿನದ ಅಂತರದಲ್ಲೇ ಆನೆಗುಂದಿ ಉತ್ಸವ ನಡೆಸುತ್ತಾರೆ. ಇಲ್ಲಿ ಕಲಾವಿದರ ಆಯ್ಕೆಗೆ ಸ್ಥಳೀಯ ಜನನಾಯಕರ ಹಾಗೂ ಐ.ಎ.ಎಸ್. ಮುಂತಾದವರನ್ನೊಳಗೊಂಡ ಸಮಿತಿ. ಇವರಲ್ಲಿ ಕೆಲವೊಮ್ಮೆ ಸ್ಥಳೀಯ ಪ್ರತಿಭೆಗೆ ಹೆಚ್ಚು ಅವಕಾಶ ಎನ್ನುವ ವಾದ ಕೂಡ. ಆದರೂ ‘ಸೋನು ನಿಗಮ್’ ಮತ್ತು ತಂಡ ಬಂದು ಕೆಲವು ಕನ್ನಡ ಸಿನೆಮಾ ಹಾಡುಗಳು (ಉಚ್ಚಾರ ದೇವರಿಗೇ ಪ್ರೀತಿ) 2 ಗಂಟೆ ಕಾಲ ಹಾಡಿ-ಕುಣಿದು-ಕುಪ್ಪಳಿಸಿ ಅತಿ ಹೆಚ್ಚು ಹಣ ಪಡೆದು ಹೋಗಿರುವ ಉದಾಹರಣೆಗಳಿವೆ. ಒಂದು ಉತ್ಸವದಲ್ಲಿ ಒಮ್ಮೆ ಭಾಗವಹಿಸಿದ್ದ ಶಾಸ್ತ್ರೀಯ ಸಂಗೀತ ಕಲಾವಿದರು ಮತ್ತೊಮ್ಮೆ ಹಾಡಲು-ನುಡಿಸಲು 15-20 ವರ್ಷ ಕಾದಿರುವ ಪ್ರಮೇಯ ಉಂಟು. ಅವರ ಹಾಡಿಕೆ, ದೈಹಿಕ ಸಾಮಥ್ರ್ಯ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಬಾರಿ ಬಾರಿ ಕರೆಸುವುದರಲ್ಲಿ ಏನೂ ನಷ್ಟವಿಲ್ಲ. ಆದರೆ ಒಬ್ಬ ಜನಪ್ರತಿನಿಧಿ 3-4 ಬಾರಿ ಆಯ್ಕೆಯಾಗಿ ಶಾಸಕನಾಗಿ 15-20 ವರ್ಷ ಇರಬಹುದಾದರೆ, ಕಲಾವಿದರು 2-3 ಬಾರಿ ಒಂದು ಉತ್ಸವದಲ್ಲಿ ಹಾಡಿದರೆ ತಪ್ಪೇನು?
“ಎರಡನೇ ವಿಶ್ವ ಯುದ್ಧ ನಡೆದ ಸಮಯದಲ್ಲಿ ಎರಡು ವರ್ಷಗಳ ಕಾಲ ಡಾನ್ ಬ್ರಾಡ್ಮನ್ ಕ್ರಿಕೆಟ್ ಆಡಲಾಗಲಿಲ್ಲ. ಅವರ ಆಟದ ಲಯ ಉತ್ತುಂಗದಲ್ಲಿತ್ತು. ಅದನ್ನೂ ನೋಡಲಾಗಲಿಲ್ಲ. ಅವರು ಹೆಚ್ಚು ದಾಖಲೆ ಬರೆಯಲಾಗಲಿಲ್ಲ ಎಂದು ಹಲವಾರು ಕ್ರಿಕೆಟ್ ಇತಿಹಾಸಕಾರರು ಮರುಗಿದ ನಿದರ್ಶನಗಳಿವೆ. ಈ ಉದಾಹರಣೆ ಯಾವುದೇ ಶ್ರೇಷ್ಠ ಕಲಾವಿದನ ಜೀವಮಾನದ ಅವಕಾಶಗಳು-ಸಾಧನೆಗೂ ಅನ್ವಯವಾಗುವುದಿಲ್ಲವೇ?
“ಉಳಿದಂತೆ ಅಕಾಡೆಮಿಗಳು ವಾರ್ಷಿಕ ಪ್ರಶಸ್ತಿ, ಒಂದೆರಡು ಮುದ್ರಣ, ಒಂದಷ್ಟು ಶಿಷ್ಯವೇತನ ಕೊಡುವುದಷ್ಟೇ ಅಲ್ಲದೆ ಹಿರಿಯ ಕಲಾವಿದರಿಂದ ಸಂವಾದ, ಕಾರ್ಯಾಗಾರ, ಚರ್ಚೆ, ಹೊಸ ಸಂಗೀತ ರಚನೆಗಳನ್ನು ಮಾಡುವ ಕಮ್ಮಟ – ಇಂತಹುದೆಲ್ಲ ಪ್ರಯೋಗ ಮಾಡಬಹುದು. ಶ್ರೇಷ್ಠ ಕವಿ-ಕವಿತೆ-ಹಿರಿಯ ಸಂಗೀತಗಾರರನ್ನು ಮುಖಾಮುಖಿ ಕರೆತಂದು ಕ್ರಿಯಾತ್ಮಕ ಹಾಡು ರಚನೆ ಮಾಡಬಹುದು” ಎನ್ನುವುದು ಎಸ್. ಆರ್. ರಾಮಕೃಷ್ಣ ಅವರ ಸಲಹೆ.
“ಸರ್ಕಾರದಲ್ಲಿ ಯೋಜನೆಗಳಿವೆ, ಯೋಚನೆಗಳಿವೆ. ಆದರೆ ಅವುಗಳನ್ನು ಜಾರಿಗೊಳಿಸುವಲ್ಲಿ ಇನ್ನೂ ಹೆಚ್ಚಿನ ಅರ್ಥಪೂರ್ಣತೆ ಬೇಕು. ಕಲಾತ್ಮಕ ದೃಷ್ಟಿ ಬೇಕು. ಯಾವುದೋ ಅನುಭವ, ಹಿನ್ನೆಲೆ, ಪದವಿ ಇದ್ದ ಮಾತ್ರಕ್ಕೆ ಇಂತಹ ಪರಂಪರಾಗತ ಕಲೆಗಳ ಆಯೋಜನೆ, ಪುನರುತ್ಥಾನಕ್ಕೆ ಬೇಕಾದ ಮಾಹಿತಿ, ದೃಷ್ಟಿಕೋನ ಎರಡೂ ಇರುವುದಿಲ್ಲ. ಆ ಅಧಿಕಾರಿಗಳ ವ್ಯಾಪ್ತಿ-ಕಾರ್ಯಕ್ಷೇತ್ರವೇ ಬೇರೆ” – ಎಂದರು ನಿವೃತ್ತ ಐ.ಎ.ಎಸ್. ಅಧಿಕಾರಿ ಎಸ್. ಎಂ. ಆಚಾರ್ಯ. ಬರೀ ಅಕಾಡೆಮಿಗಳು, ಉತ್ಸವಗಳು ಅಷ್ಟೇ ಅಲ್ಲ, ವಾರ್ತಾ ಮತ್ತು ಪ್ರಚಾರ ಇಲಾಖೆ; ಪೂರ್ವ, ಪಶ್ಚಿಮ, ಉತ್ತರ, ದಕ್ಷಿಣ, ಕೇಂದ್ರ ಸಾಂಸ್ಕøತಿಕ ವಲಯ ಹಾಗೂ ಕೇಂದ್ರಗಳೂ ಇವೆ. ಇಲ್ಲಿಯೂ ಕಾರ್ಯವೈಖರಿಯಲ್ಲಿ ಮಹತ್ತ್ವದ ಬದಲಾವಣೆ ಬರಬೇಕಿದೆ. ಹಿರಿಯ ಕಲಾವಿದರ ಜೀವನ-ಸಾಧನೆಯ ಮೇಲೆ ಬೆಳಕು ಚೆಲ್ಲುವ ಸಾಕ್ಷ್ಯಚಿತ್ರಗಳು-ಸಂದರ್ಶನಗಳು ಒಳ್ಳೆ ಕಲಾವಿದರÀ ಸುಪರ್ದಿಯಲ್ಲಿ ನಿರ್ದೇಶಿಸಲ್ಪಟ್ಟು ದಾಖಲಾಗಬೇಕು.
ಆಕಾಶವಾಣಿ
ಹಲವಾರು ದಶಕಗಳಿಂದ ರಾಷ್ಟ್ರಾದ್ಯಂತ ಆಕಾಶವಾಣಿ-ಪ್ರಸಾರಭಾರತಿಯು ಸಂಗೀತವನ್ನು ಉಳಿಸಿ, ಬೆಳೆಸಿ, ಪರಿಚಯಿಸಿ, ದಾಖಲಿಸುವಲ್ಲಿ ಮಹತ್ತ್ವದ ಪಾತ್ರ ವಹಿಸುತ್ತ್ತ ಬಂದಿದೆ.
ಆದರೆ ಇಲ್ಲಿಯ ಧ್ವನಿಭಂಡಾರ(Archives)ದಲ್ಲಿ ಇರುವ ಧ್ವನಿಮುದ್ರಿಕೆಗಳು ಸದುಪಯೋಗ ಹೆಚ್ಚಿನ ಪ್ರಮಾಣದಲ್ಲಿ ಆಗಬೇಕಿದೆ. ಆಡಳಿತಾತ್ಮಕ ಚಿಂತನೆಯ ಜೊತೆಗೆ ಕಲೆಯ, ಸಂಗೀತದ ಬೆಳವಣಿಗೆಯ ದೃಷ್ಟಿಯಿಂದ ಕೆಲಸ ಮಾಡುವ ಅಧಿಕಾರಿಗಳಿಗೆ ಹೆಚ್ಚು ಸ್ವಾತಂತ್ರ್ಯ ನೀಡಬೇಕು. ಕ್ರಿಕೆಟ್ ವೀಕ್ಷಕ ವಿವರಣೆಗೆ ಇರುವಷ್ಟು ಮಹತ್ತ್ವ ನಮ್ಮಲ್ಲಿ ಕಲಾಪ್ರಕಾರಗಳ ಪ್ರಚಾರಕ್ಕೆ, ದಾಖಲೀಕರಣಕ್ಕೆ, ದಿಗ್ಗಜರ ಸಂದರ್ಶನಗಳಿಗೆ ನೀಡಬಹುದಿತ್ತೇನೋ!
ದೂರದರ್ಶನ
ರಾಷ್ಟ್ರೀಯ ಪ್ರಸಾರವಾಹಿನಿ ದೂರದರ್ಶನದಲ್ಲೂ ವಾರಕ್ಕೊಮ್ಮೆ ರಾಷ್ಟ್ರೀಯ ಸಂಗೀತ-ನೃತ್ಯ ಕಾರ್ಯಕ್ರಮ ಇರುತ್ತದೆ. ಅದೂ ಪ್ರಸಾರದ ವೇಳೆ ರಾತ್ರಿ 10.30ಕ್ಕೆ. ಇದನ್ನು ನೋಡಿ ಪ್ರೇರಣೆ ಪಡೆಯಬಯಸುವ ಮಕ್ಕಳು ಹೋಮ್ವರ್ಕ್ ಮಾಡಿ ಸುಸ್ತಾಗಿ ಮಲಗಿರುತ್ತಾರೆ. ಇತ್ತೀಚೆಗೆ ‘ಡಿಡಿ-ಭಾರತಿ’ ಕಲೆಗಳಿಗೆ ಸಂಬಂಧಪಟ್ಟಂತೆ ಒಂದಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿದೆ.
ಖಾಸಗಿ ಮಾಧ್ಯಮ ವಾಹಿನಿಗಳು
ಶಾಸ್ತ್ರೀಯ ಕಲೆಗಳನ್ನು ಪ್ರಚಾರ-ಪ್ರಸಾರ ಮಾಡಿ ದಿಗ್ಗಜ ಕಲಾವಿದರನ್ನು ರೂಪಿಸುವಲ್ಲಿ ಈ ಕ್ಷೇತ್ರ ಸಂಪೂರ್ಣವಾಗಿ ಸೋತಿದೆ ಅಥವಾ ಪ್ರಯತ್ನವನ್ನೇ ಮಾಡಿಲ್ಲ ಎಂದು ಹೇಳಬೇಕಾಗಿದೆ. ಸಿನೆಮಾ ಹಾಡುಗಳ ಸುತ್ತಮುತ್ತ ಹೆಣೆದ ರಿಯಾಲಿಟಿ ಶೋಗಳು ಮಕ್ಕಳು, ಪೋಷಕರು, ಅಮಾಯಕ ಪ್ರೇಕ್ಷಕ ವರ್ಗವನ್ನು ಸಂಪೂರ್ಣ ತಪ್ಪುದಾರಿಗೆಳೆಯುತ್ತಿವೆ. ಮುಂಬಯಿ ಮೂಲದ ‘Insync’ ವಾಹಿನಿಯು ಸಂಗೀತಕ್ಕಾಗಿಯೇ ಮೀಸಲಾದರೂ, ಅದರ ವ್ಯಾಪ್ತಿ ರಾಷ್ಟ್ರೀಯ ಮಟ್ಟದಲ್ಲಿದ್ದರೂ, ಪಾಲ್ಗೊಳ್ಳುವ ಕಲಾವಿದರು ಮುಂಬಯಿ-ದೆಹಲಿ ನಗರಗಳ ಸುತ್ತಮುತ್ತಲಿನವರೇ ಹೆಚ್ಚು. ಹಾಗೆಯೇ ಕಲಾವಿದರು Fusion ಹೆಸರಿನಡಿಯಲ್ಲಿ ಯಾರು ಏನುಬೇಕಾದರೂ ಮಾಡಬಹುದೆಂಬ ಪರವಾನಿಗೆ ದೊರೆತಂತಾಗಿದೆ. ವೀಣೆ ಶೇಷಣ್ಣ, ಟಿ. ಆರ್. ಮಹಾಲಿಂಗಂ, ಪನ್ನಾಲಾಲ್ ಘೋಷ್, ನಿಖಿಲ್ ಬ್ಯಾನರ್ಜಿ ಇಂತಹ ಕಲಾವಿದರು ಯಾವುದೇ ಪಾಶ್ಚಿಮಾತ್ಯತೆಯ ಥಳುಕಿನ ಹಂಗಿಲ್ಲದೆ ಶುದ್ಧಸಂಗೀತವನ್ನು ನೀಡಿ ಮೇರುಕಲಾವಿದರಾದರು. ಎರಡು ಸಂಸ್ಕೃತಿ-ಸಂಗೀತ ಪದ್ಧತಿಗಳನ್ನು ಒಂದುಗೂಡಿಸುವ ಅಪರೂಪದ ಪ್ರಯತ್ನ ಅನನುಭವಿ ಯುವಕರ ಕೈಗೆ ಸಿಕ್ಕು, Fusion ಬದಲು Confusion ಹೆಚ್ಚಾಗಿದೆ. ತ್ಯಾಗರಾಜರ ಕೃತಿ, ಅದಾರಂಗ್-ಸದಾರಂಗ್ ಅವರ ಖಯಾಲ್ ರಚನೆಗಳಿಗೆ ರಿದಂಪ್ಯಾಡ್, ಗಿಟಾರ್, chord ನುಡಿಸಿದರೆ ಅದು Fusion ಆಗುವುದಿಲ್ಲ. ಒಟ್ಟಾರೆಯಾಗಿ ಪಾಶ್ಚಾತ್ಯ ದೇಶ, ಸಂಸ್ಕೃತಿ, ಅಲ್ಲಿನ ಆಡಳಿತ ವರ್ಗ ಇವುಗಳ ಮೇಲೆ ಕೆಲವು ಭಾರತೀಯರಿಗಿರುವ ಮೋಹ, ಮಾನಸಿಕ-ಬೌದ್ಧಿಕ-ಕಲಾತ್ಮಕ ಕೀಳರಿಮೆ, ಗುಲಾಮಗಿರಿ ಇವನ್ನು ತೊಡೆದುಹಾಕಿ ನಮ್ಮ ಕಲೆ, ಸಂಸ್ಕೃತಿಯ ಶ್ರೇಷ್ಠತೆಯನ್ನು ಮೆರೆಯಬೇಕಿದೆ.
ನಮ್ಮ ಮಹಾನ್ ಕಲಾವಿದರ ಸಾಧನೆಗೆ, ಹೊರಗಿನ, ನಮ್ಮ ಕಲೆಯನ್ನು ಅರ್ಥಮಾಡಿಕೊಳ್ಳದ ಯಾವುದೇ ಸಂಸ್ಥೆಯಿಂದ ಮನ್ನಣೆ, ಪುರಸ್ಕಾರ, ಪ್ರಶಸ್ತಿ ಯಾವುದೂ ಬೇಕಾಗಿಲ್ಲ. ಹಾಗೆಯೇ ಹೊರದೇಶದ ಮೈಕೆಲ್ ಜಾಕ್ಸನ್, ಟೀನಾ ಟರ್ನರ್ ಇವರಾರಿಗೂ ನಾವು ನಮ್ಮ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ ಕೊಡುವುದಿಲ್ಲ, ಅದಕ್ಕೆ ಅವರು ಹಾತೊರೆಯುವುದೂ ಇಲ್ಲ. “ನಮ್ಮ ಮಾರವಾ ರಾಗದ ರಿಷಭ್ ಮತ್ತು ಧೈವತ ಸ್ವರದ ಪ್ರಮಾಣ ಹೊರಗಿನವರಿಗೇನು ತಿಳಿತೈತಿರೀ” ಅಂತಿದ್ರು ಮಲ್ಲಿಕಾರ್ಜುನ ಮನ್ಸೂರ್.
ಕಾರ್ಪೊರೇಟ್ ಸಂಸ್ಥೆಗಳು
ತಮ್ಮ ವಾರ್ಷಿಕ ಆದಾಯದ ಒಂದು ಚಿಕ್ಕ ಭಾಗವನ್ನು ಸಿಎಸ್ಆರ್ (ಕಾರ್ಪೊರೇಟ್ ಸೋಷಿಯಲ್ ರೆಸ್ಪಾನ್ಸಿಬಿಲಿಟಿ), ಸಾಮಾಜಿಕ ಜವಾಬ್ದಾರಿ ಎಂಬ ನಾಮಾರ್ಥದಲ್ಲಿ ಕೆಲವೊಮ್ಮೆ ಸಂಗೀತ ಕಾರ್ಯಕ್ರಮಗಳು ಆಯೋಜಿತವಾಗುತ್ತವೆ. ಆಯಾ ಕಂಪೆನಿಯ ಮುಖ್ಯಸ್ಥ ಸಂಗೀತಾಭಿಮಾನಿ, ಅದರ ಬಗ್ಗೆ ಅರಿತವ-ನುರಿತವನಾಗಿರಬೇಕಾಗಿಲ್ಲ. ಯಾರೋ ಇವೆಂಟ್ ಮ್ಯಾನೇಜರ್ ಮೂಲಕ ಅತಿ ಜನಪ್ರಿಯ ಕಲಾವಿದರನ್ನು ಕರೆಸಿ, ದುಂದುವೆಚ್ಚದಲ್ಲಿ, ವೈಭವೋಪೇತವಾಗಿ ಕಾರ್ಯಕ್ರಮಗಳು ನಡೆಯುತ್ತವೆ. ‘ಜನಪ್ರಿಯತೆ – ಶ್ರೇಷ್ಠಗುಣಮಟ್ಟ’ ಎರಡೂ ಒಂದೇ ಕಡೆ ಸಿಗುವುದು ಅಪರೂಪ. ಅತಿ ಜನಪ್ರಿಯರಾದವರು ದಿಗ್ಗಜರೂ, ಶಾಸ್ತ್ರಬದ್ಧ ಸಂಗೀತಗಾರರೂ ಆಗಿರಲೇಬೇಕೆಂಬುದಿಲ್ಲ. ಹಾಗೆಯೇ ಅತ್ಯಂತ ಶುದ್ಧ-ಸಂಪ್ರದಾಯಬದ್ಧ ಸಂಗೀತ ನೀಡುವ ಕಲಾವಿದರು ಅತಿ ಜನಪ್ರಿಯರಾಗಿರುವ ಸಂದರ್ಭಗಳೂ ಕಡಮೆ. ಆದರೆ ಸಂಗೀತಾಭಿರುಚಿ ಬೆಳೆಸಿಕೊಳ್ಳುತ್ತಿರುವ ಹೊಸ ಶ್ರೋತೃ, ಹೃದಯ, ಮನಸ್ಸುಗಳೂ ಈ ಕಾರ್ಪೊರೇಟ್ ಶೋ ಆಡಂಬರಕ್ಕೆ ಮಾರುಹೋಗಿ ತಪ್ಪುದಾರಿ ಹಿಡಿಯುವ ಸಾಧ್ಯತೆ ಇದೆ. “ಮಲ್ಟಿನ್ಯಾಷನಲ್ ಕಂಪೆನಿಗಳು ಕೆಲವೊಮ್ಮೆ Fusion – ಬಹುವಾದ್ಯ ಅಥವಾ ಹಾಡು-ವಾದ್ಯ ಎಲ್ಲ ಮೇಳಗಳಿರುವ ಕಾರ್ಯಕ್ರಮಕ್ಕೆ ಒತ್ತಾಯಿಸುತ್ತಾರೆ. ಇದಕ್ಕೆ ಹಣವೂ ಹೊರದೇಶದಿಂದ ಬರುತ್ತದೆ. ಆಗ ಕಲಾವಿದರ ಬಗ್ಗೆ ನಿರ್ಣಯ ಮಾಡುವುದು ಯಾರದೋ ಜವಾಬ್ದಾರಿ” – ಎನ್ನುತ್ತಾರೆ ಎಸ್. ಆರ್. ರಾಮಕೃಷ್ಣ. ಗಂಡು-ಹೆಣ್ಣು ಕಲಾವಿದರ ಜುಗಲ್ಬಂದಿ; ಶ್ರುತಿಸಾಮ್ಯತೆ ಇರುವುದಿಲ್ಲ; ಪಿಯಾನೋ-ಸಂತೂರ್, ವಯೋಲಿನ್, ವೀಣೆ ಎಲ್ಲ ಒಟ್ಟಿಗೆ ನುಡಿಸಿದರೆ ಅತಿ ಹೆಚ್ಚೆಂದರೆ ಅದೊಂದು ಆರ್ಕೆಸ್ಟ್ರಾ ಪೀಸ್ ಆಗಬಹುದು. ಪಕ್ಕವಾದ್ಯಗಳ ಅಬ್ಬರ, ಥಳಕಿನ ಪ್ರಚಾರ ಇವೆಲ್ಲದರ ಮಧ್ಯೆ ಸಾತ್ತ್ವಿಕ ಕಲೆ ಹಿನ್ನೆಲೆಗೆ ಸೇರಿಬಿಡುತ್ತದೆ. ಸಂಗೀತ ಕ್ಷೇತ್ರದ ಹಿರಿಯ ಕಲಾವಿದರನ್ನು, ಗುರುಗಳನ್ನು ಸಂಪರ್ಕಿಸಿ, ಯುವಕಲಾವಿದರನ್ನು 5ರಿಂದ 8 ವರ್ಷ ಕಂಪೆನಿಗಳಲ್ಲಿ ನೌಕರರಾಗಿ ಸೇವೆಗೆ ಇಟ್ಟುಕೊಳ್ಳಬಹುದು. ಅಷ್ಟೂ ವರ್ಷಗಳೂ ಅವರ ಸಂಗೀತಸಾಧನೆಗೆ ಗಮನಹರಿಸಲು ಅವಕಾಶ ನೀಡಿ, ಕೈ ತುಂಬಾ ಸಂಬಳವನ್ನು ನೀಡಿ, ಕಂಪೆನಿಯ ಯಾವುದೇ ಸಭೆ, ಸಮಾರಂಭ, Product Launching ಸಂದರ್ಭದಲ್ಲಿ ಅವರ ಕಾರ್ಯಕ್ರಮ ಆಯೋಜಿಸಬಹುದು. ಕಂಪೆನಿಯ ಪ್ರೋತ್ಸಾಹ ಇದ್ದಷ್ಟು ಕಾಲ ಆ ಯುವ ಕಲಾವಿದರು ಸಂಪೂರ್ಣ ಸಾಧನೆಯ ಕಡೆಗೆ ಗಮನ ಹರಿಸಬಹುದು. ಮುಂದೆ ಕೆಲವು ದಶಕಗಳ ನಂತರ ಆ ಯುವಕ-ಯುವತಿಯರೇ ಮೇರು ಕಲಾವಿದರಾಗಬಹುದಲ್ಲವೇ…? ಇಂತಹ ಅವಕಾಶ ಸಿಕ್ಕಿದ್ದೇ ಆದಲ್ಲಿ ಆ ಕಲಾವಿದರು ಜೀವನಪೂರ್ತಿ ಆ ಸಂಸ್ಥೆಯನ್ನು ನೆನೆಯುತ್ತಾ, ಅವರ ಉಪಕಾರಕ್ಕೆ ಕೃತಜ್ಞರಾಗಿರುತ್ತಾರೆ.
ITC ಯವರು ಕೋಲ್ಕತಾದಲ್ಲಿ ಒಂದು ಗುರುಕುಲ ಸ್ಥಾಪಿಸಿ ಒಂದು ಹಂತದ ಸತ್ಕಾರ್ಯ ಮಾಡಿದ್ದಾರೆ. ಈ ಮೊದಲು ಬ್ಯಾಂಕ್ಗಳಲ್ಲಿ, ಖಾಸಗಿ ಕಂಪೆನಿಗಳಲ್ಲಿ ಕ್ರಿಕೆಟ್ ಆಟಗಾರರಿಗೆ ನೌಕರಿಕೊಟ್ಟು, ತಂಡಗಳನ್ನೂ ಕಟ್ಟಿ, ಕೆಲವರನ್ನು ಅಂತಾರಾಷ್ಟ್ರೀಯ ಆಟಗಾರರನ್ನಾಗಿಸಿದ ಹೇರಳ ಉದಾಹರಣೆಗಳಿವೆ. ಆದರೆ ಸಂಗೀತ, ನೃತ್ಯ-ಸಾಹಿತ್ಯ ಯಾವುದೇ ಕಲಾಪ್ರಕಾರದಲ್ಲಿ ಪ್ರವರ್ಧಮಾನಕ್ಕೆ ಬರುತ್ತಿರುವವರಿಗೆ ಈ ತರಹ ಅವಕಾಶ ಸಿಕ್ಕಿರುವುದು ನನಗೆ ನೆನಪಿಲ್ಲ. ನಮ್ಮ ರಾಷ್ಟ್ರದ ಹಾಗೂ ಹಲವಾರು ರಾಜ್ಯಗಳ ಕ್ರಿಕೆಟ್ ಆಡಳಿತ ಮಂಡಳಿಯ ಅಧ್ಯಕ್ಷತೆ ಪದಾಧಿಕಾರಿಗಳ ಹುದ್ದೆಗೆ ಹೇರಳವಾದ ಸಂಖ್ಯೆಯಲ್ಲಿ ರಾಜಕಾರಣಿಗಳು ಬಂದು ಹೋಗಿದ್ದಾರೆ.
ಆದರೆ ಸಂಗೀತ-ನೃತ್ಯ-ಸಾಹಿತ್ಯ-ಜಾನಪದ ಕಲೆಗಳನ್ನು ಪೋಷಿಸುವ ಯಾವುದೇ ಖಾಸಗಿ ಸಂಸ್ಥೆ ಅಥವಾ ಸರ್ಕಾರಿ ವಿಭಾಗಗಳು ಇಲ್ಲ; ನಾಯಕತ್ವ ವಹಿಸಲು ಯಾರ ಆಸಕ್ತಿ, ಪೈಪೋಟಿ ಕಾಣಸಿಗುವುದಿಲ್ಲ.
ಈ ಮುಂಚೆ ಆಗಿಹೋದ ದಿಗ್ಗಜರ ಜೀವನಶೈಲಿ-ಆದ್ಯತೆಗಳು ಬೇರೆ ಆಗಿದ್ದವು. ಆದ್ದರಿಂದ ಈ ತರಹ ಯಾವುದೇ ಬಾಹ್ಯ ಸಂಸ್ಥೆ, ಪ್ರಪಂಚದ ಸಹಾಯವಿಲ್ಲದೆ ಅವರು ದೊಡ್ಡ ಕಲಾವಿದರಾದರು. ಇಂದಿನ ದಿನಗಳಲ್ಲಿ ವ್ಯವಸ್ಥೆಯಲ್ಲಿ ಬದಲಾವಣೆ ಬೇಕಾಗಿದೆ.
ಅಕ್ಷರ–ಮುದ್ರಣ ಮಾಧ್ಯಮ ಹಾಗೂ ಸಂಗೀತ
ಪ್ರತಿದಿನವೂ ವೃತ್ತಪತ್ರಿಕೆಗಳಲ್ಲಿ ‘ನಗರದಲ್ಲಿ ಇಂದು’ ಕಾರ್ಯಕ್ರಮದ ವಿವರಣೆ ಇರುತ್ತದೆ. ಕೆಲವು ಪತ್ರಿಕೆಗಳಲ್ಲಿ ಮಾತ್ರ ವಾರಕ್ಕೊಮ್ಮೆ ವಿಶೇಷವಾಗಿ ಕಲೆ-ಸಂಸ್ಕøತಿಯ ಬಗ್ಗೆ ಒಂದು ಪುರವಣಿ ಇರುತ್ತದೆ. ಹಿರಿಯ ಕಲಾವಿದರು ಅಸುನೀಗಿದಾಗ ಅವರ ಬಗ್ಗೆ ಒಂದಷ್ಟು ಲೇಖನ-ನೆನಪು-ನುಡಿನಮನಗಳು ತರಾತುರಿಯಲ್ಲಿ ಬರುತ್ತವೆ. ಕಲಾವಿದರು ಬದುಕಿದ್ದಾಗ ಆಗಾಗ ಅವರ ಕಲೆಯ ಮೇಲೆ ಬೆಳಕು ಚೆಲ್ಲುವ ಪ್ರಯತ್ನ ಮಾಡಿದರೆ ಯುವಜನಾಂಗಕ್ಕೆ ಪ್ರೇರಣೆಯಾದೀತು. ಪತ್ರಿಕೆ, ಮಾಸಿಕಗಳಲ್ಲಿ ಆಗೊಮ್ಮೆ-ಈಗೊಮ್ಮೆ ಅಪರೂಪವಾಗಿ ವೈಚಾರಿಕ ಲೇಖನಗಳು ಬರುತ್ತವೆ. “ಸಂಗೀತಗಾರರು ವಿಮರ್ಶೆ-ಟೀಕೆಯನ್ನು ಸ್ವಾಗತಿಸುವುದಿಲ್ಲ; ಸ್ವೀಕರಿಸುವುದಿಲ್ಲ; ಕೇವಲ ಹೊಗಳಿಕೆಯನ್ನೇ ನಿರೀಕ್ಷಿಸುತ್ತಾರೆ” ಎಂದರು ಎಸ್. ಆರ್. ರಾಮಕೃಷ್ಣ. ಇದು ಸಂಗೀತಗಾರರಷ್ಟೇ ಅಲ್ಲ, ಸಾಮಾನ್ಯವಾಗಿ ಯಾರೂ ಸಾರ್ವಜನಿಕವಾಗಿ ಟೀಕೆಯನ್ನು ಒಪ್ಪುವುದಿಲ್ಲ. ಅಂದಮಾತ್ರಕ್ಕೆ ಕಲಾವಿದರು ವಿಮರ್ಶೆ- ಟೀಕೆಯನ್ನು ಮೀರಿ ಬೆಳೆದವರು ಎಂಬರ್ಥವೂ ಅಲ್ಲ. ಆದರೆ ವಿಮರ್ಶೆಯನ್ನು ಬರೆಯುವವರಿಗೆ ಸಂಗೀತದ ಸೌಂದರ್ಯ-ವ್ಯಾಕರಣ-ಚಿಂತನೆಯ ಬಗ್ಗೆ ಯಾವ ಪ್ರಮಾಣದ ಪ್ರವೇಶ-ತಿಳಿವಳಿಕೆ ಇದೆ ಎನ್ನುವುದೂ ಮುಖ್ಯ.
“ಭೀಮಸೇನ ಜೋಶಿಯವರು ದೇವರ ನಾಮಗಳನ್ನು ರಾಗ ಮತ್ತು ತಾಳಬದ್ಧವಾಗಿ ಹಾಡಿದರು” ಎಂಬ ವಿಮರ್ಶೆಯನ್ನು ಒಂದು ವೃತ್ತಪತ್ರಿಕೆಯಲ್ಲಿ ಓದಿದ್ದು, ನನ್ನ ಮನದಲ್ಲಿ ಇಂದೂ ಉಳಿದಿದೆ. ಆದರೆ ಇದರ ಮರ್ಮ ನನಗೆ ಅರ್ಥವಾಗಲಿಲ್ಲ. ಭೀಮಸೇನರು ರಾಗ ಮತ್ತು ತಾಳವನ್ನು ಬಿಟ್ಟು ಹಾಡಿದ ನಿದರ್ಶನ ನನ್ನ ಗಮನಕ್ಕಂತೂ ಬಂದಿಲ್ಲ!
ಸಾಹಿತ್ಯವಿಮರ್ಶೆಯಂತೆ ಸಂಗೀತವಿಮರ್ಶೆಯೂ ಒಂದು ಜ್ಞಾನಶಾಖೆಯಾಗಿ ಬೆಳೆಯಬೇಕು. ಇದಕ್ಕೆ
ಅಕಾಡೆಮಿ, ಪತ್ರಕರ್ತರು, ಸಂಗೀತಗಾರರು, ಸಂಗೀತದ ವಿದ್ಯಾರ್ಥಿಗಳು, ಕಲಾರಸಿಕರು ಒಟ್ಟುಗೂಡಿ ನಿರಂತರ ಪ್ರಯತ್ನದಿಂದ ಒಂದು ರೂಪ ನೀಡಬಹುದು. ಕಾಲೇಜು-ಸ್ನಾತಕಮಟ್ಟದಲ್ಲೂ ಕಲಾವಿಮರ್ಶೆ ಒಂದು ಐಚ್ಛಿಕ ವಿಷಯವಾದರೆ ಕಲಾವಿದರನ್ನು – ದಿಗ್ಗಜ ಕಲಾವಿದರನ್ನಾಗಿ ಮಾಡುವಲ್ಲಿ ಇನ್ನೊಂದು ಆಯಾಮ ನಿರ್ಮಾಣಗೊಳ್ಳುತ್ತದೆ. ಸಂಗೀತ ಕಲಿಯಲು ಪ್ರಾರಂಭಿಸಿದವರೆಲ್ಲ ಕಲಾವಿದರಾಗುವುದಿಲ್ಲ. ಹಾಗೆಯೇ ಕನ್ನಡ ಇಂಗ್ಲಿಷ್ ಎಂ.ಎ. ಓದಿದವರೆಲ್ಲ ಸಾಹಿತಿಗಳೂ ಆಗುವುದಿಲ್ಲ. ಈ ಎರಡೂ ವರ್ಗಗಳನ್ನು ಒಂದೆಡೆ ಮಾಡಿ ತಾಲೀಮು, ಮಾರ್ಗದರ್ಶನ ನೀಡಿದರೆ ಸಂಗೀತದಲ್ಲೂ constructive criticism ಬರಬಹುದು.
ಕರ್ನಾಟಕದಲ್ಲಿ ಅಕಾಡೆಮಿಯಿಂದ ‘ನಾದನೃತ್ಯ’ ತ್ರೈಮಾಸಿಕ ಬರುತ್ತದೆ. ಪಂ|| ಶೇಷಾದ್ರಿ ಗವಾಯಿಗಳು ಸ್ವಂತ ಆಸಕ್ತಿ-ಖರ್ಚಿನಿಂದ ‘ಗಾಯನ ಗಂಗಾ’ ತಿಂಗಳಿಗೊಂದು ಪತ್ರಿಕೆ ತರುತ್ತಿದ್ದರು. ಆಕಾಶವಾಣಿಯೂ ಒಂದು ಸಂಚಿಕೆ ತರುತ್ತಿದ್ದಂತೆ ನೆನಪು. ಬಹಳ ಹಿಂದೆ ಉತ್ತರಪ್ರದೇಶದ ಹಾತರಸದಿಂದ ‘ಸಂಗೀತ’ ಎಂಬ ಮಾಸಿಕ ಹೊರಬರುತ್ತಿತ್ತು. “ಬಿಬಿಸಿಯವರು ಸಂಗೀತವಿಮರ್ಶೆಯ ಬಗ್ಗೆ ಮ್ಯಾಗಜಿನ್ ತರುತ್ತಾರೆ; ಒಟ್ಟಾರೆ ಪಾಶ್ಚಿಮಾತ್ಯ ದೇಶಗಳಲ್ಲಿ ಸಂಗೀತದ ದಾಖಲೀಕರಣವೂ ಹೆಚ್ಚು ಕ್ರಮಬದ್ಧ” ಎಂದರು ಗೆಳೆಯ ರಾಮಕೃಷ್ಣ. ಕಲೆ-ಕಲಾವಿದರ ಜೀವನ-ಬೆಳವಣಿಗೆಯನ್ನು ಅಕ್ಷರ ರೂಪದಲ್ಲಿ ದಾಖಲಿಸುವುದು ದಿಗ್ಗಜರನ್ನು ರೂಪಿಸುವಲ್ಲಿ ಸಹಾಯವಾದೀತು.
“ಹಿಂದೊಮ್ಮೆ ‘ಆನಂದ ಬಾಜಾರ್ ಪತ್ರಿಕೆ’ಯಲ್ಲಿ ಸಂಗೀತ ವಿಮರ್ಶೆ ನುರಿತವರಿಂದ ಬರುತ್ತಿತ್ತು. ಆದರೆ ಈಗ ಕಾರ್ಯಕ್ರಮ ಮುಗಿದ ಎಷ್ಟೋ ದಿನಗಳ ನಂತರ ಒಂದು ಚಿಕ್ಕ ವರದಿ ಬರುತ್ತದೆ; ವಿಶ್ಲೇಷಣೆ, ವಿಮರ್ಶೆ ಬರುವುದಿಲ್ಲ. ಇದು ಬಹಳ ನಿರಾಶಾದಾಯಕ” ಎಂದರು ಮೀನಾ ಬ್ಯಾನರ್ಜಿ. ಮಲೆಯಾಳಿ ಪತ್ರಿಕೆ ‘ದೇಶಾಭಿಮಾನಿ’ಯ ಉಪಸಂಪಾದಕ ಶಿಬು ಮಹಮ್ಮದ್(ಇವರ ಮಗಳು ಕ್ಯಾಲಿಕಟ್ನಿಂದ ಬಂದು ನನ್ನ ಬಳಿ ಸಂಗೀತ ಕಲಿಯುತ್ತಾರೆ) ಅವರ ಪ್ರಕಾರ “ವಿಶೇಷ ಪರಿಣತಿ ಇರುವವರಿಂದ ಆದ್ಯತೆಯ ಮೇರೆಗೆ ಪತ್ರಿಕೆಗಳಲ್ಲಿ ಕಲಾಪ್ರಕಾರಗಳ ವಿಮರ್ಶೆ ಇಲ್ಲ” ಎನ್ನುತ್ತಾರೆ.
ಸ್ವಯಂ ಘೋಷಿತ ಸಾಮಾಜಿಕ ಜಾಲತಾಣ ಹಾಗೂ ಪ್ರಚಾರ
ಫೇಸ್ಬುಕ್, ಯೂಟ್ಯೂಬ್, ವಾಟ್ಸಾಪ್, ಇನ್ಸ್ಸ್ಟಾಗ್ರಾಂ ಹಾಗೂ ಅಂತರ್ಜಾಲದ ಮೂಲಕ ಎಲ್ಲ ತರಹದ ಸಂಗೀತ-ನೃತ್ಯಗಳು ಬಿತ್ತರಗೊಳ್ಳುತ್ತಿವೆ. ಇದಕ್ಕೆ ಯಾವುದೇ ಆಡಿಷನ್, ಧ್ವನಿಪರೀಕ್ಷೆ, ನಿಯಂತ್ರಣಮಾರ್ಗ, ಮಾನದಂಡ ಯಾವುದೂ ಇಲ್ಲ. ತಂತ್ರಜ್ಞಾನ ಬೆಳೆದಂತೆ ನಮ್ಮ ಮೊಬೈಲ್ ಫೋನ್ಗಳಿಂದ ಏನನ್ನಾದರೂ ಕಳಿಸುವ, ಸೃಷ್ಟಿಸುವ ಸಾಮಥ್ರ್ಯ ಎಲ್ಲರ ಬೆರಳತುದಿಯಲ್ಲಿದೆ. ಅತ್ಯಂತ ಹಿರಿಯ ಕಲಾವಿದರ, ತುಂಬಾ ಹಿಂದಿನ ಅಪರೂಪದ ‘ಖಾಸಾ ಬೈಠಕ್’ನ ಧ್ವನಿಮುದ್ರಣಗಳು, ಎಲ್ಲರಿಗೂ ಉಚಿತವಾಗಿ ಲಭ್ಯವಾಗುತ್ತಿರುವುದು ಒಂದೆಡೆಯಾದರೆ, ‘ಭಾಗ್ಯದ ಲಕ್ಷ್ಮೀ ಬಾರಮ್ಮಾ.’ ಹಾಡಿಗೆ ‘ಶುಕ್ರವಾರದ ನಮಾಜಿನ ವೇಳೆಗೆ’ ಎಂದು ಸೇರಿಸಿ ಹಾಡುವ ತುಣುಕುಗಳೂ ಲಭ್ಯ! ಪುರಂದರದಾಸರ ಸಾಹಿತ್ಯ ಹಾಗೂ ಭೀಮಸೇನರ ಹಾಡಿನ ಜೊತೆ ಹಾಸ್ಯ-ಸರಸ ಒಂದು ದೃಷ್ಟಿಯಿಂದ ಉದ್ಧಟತನವೇ ಸರಿ. ಈ ತರಹದ ಹಲವಾರು ಉದಾಹರಣೆಗಳಿವೆ. ಈ ಸ್ವಯಂಘೋಷಿತ, ಕಲ್ಪಿತ ಮಾಧ್ಯಮ ವೇದಿಕೆಗಳಲ್ಲಿ ನಿನ್ನೆ-ಮೊನ್ನೆ ಕಲಿಯಲಾರಂಭಿಸಿದವರು ಕಲಾವಿದರಾಗಿ ಹೊಮ್ಮುವ-ಬಿಂಬಿಸಿಕೊಳ್ಳುವ ಅಪಾಯ ಹೆಚ್ಚಾಗಿದೆ. ಗಂಗೂಬಾಯಿ ಹಾನಗಲ್ ಅವರು ರೇಡಿಯೋದಲ್ಲಿ ಹಾಡಲು ಕೆಲವಾರು ಬಾರಿ ಹುಬ್ಬಳ್ಳಿಯಿಂದ ಮುಂಬಯಿಗೆ ತಂಬೂರಿ ಸಮೇತ ರೈಲಿನಲ್ಲಿ ಹೋಗಿದ್ದುಂಟು.
ಟಿವಿ, ಟೇಪ್ರೆಕಾರ್ಡರ್, ಸಿಡಿ, ಯೂಟ್ಯೂಬ್, ಫೇಸ್ಬುಕ್ ಲೈವ್, ವಾಟ್ಸಾಪ್ನಲ್ಲಿ ಹರಿದಾಡುವ ಸಣ್ಣಪುಟ್ಟ ತುಣುಕುಗಳು ಅಂತರ್ಜಾಲದಲ್ಲಿ ಉಪಲಬ್ಧವಿರುವ ಎಲ್ಲ ತರಹದ ಒಳ್ಳೆಯ, ಮಧ್ಯಮ ಗುಣಮಟ್ಟದ ಹಾಗೂ ಸ್ವಯಂಘೋಷಿತ ಸಂಗೀತ-ನೃತ್ಯಗಳ ಭರಾಟೆಯ ಜೊತೆಗೆ ನಿಜವಾದ ಸಂಗೀತ ಕಾರ್ಯಕ್ರಮ, ಸಭೆ, ಕಲಾವಿದರು ಸ್ಪರ್ಧಿಸುವ ಸ್ಥಿತಿ ಮೂವತ್ತು ವರ್ಷದ ಹಿಂದಿರಲಿಲ್ಲ. ಹಾಗೆಯೇ ಒಂದು ಹಾಡುಗಾರಿಕೆ-ನೃತ್ಯವನ್ನು ಸಭಾಂಗಣದಲ್ಲಿ ಕುಳಿತು ನೇರವಾಗಿ ಕೇಳಿ, ಕಲಾವಿದರೊಡನೆ ಕಣ್ಣಲ್ಲೇ ಸಂವಹಿಸಿ ಆನಂದ ಪಡೆಯುವ ಕ್ಷಣಗಳು ಈ ಯಾವುದೇ ಮಾಧ್ಯಮದಲ್ಲಿ ಇರುವುದಿಲ್ಲ. ನಮ್ಮ ಹಿಂದಿನ ತಲೆಮಾರಿನ ದಿಗ್ಗಜರು ಇಂತಹ ಸವಾಲು ಪರಿಸ್ಥಿತಿಯನ್ನು ಎದುರಿಸಲಿಲ್ಲ ಎನ್ನುವುದೇ ಸಮಾಧಾನ.
ದಿಗ್ಗಜರ ಸೃಷ್ಟಿಯತ್ತ…
ನಮ್ಮ ಶಾಸ್ತ್ರೀಯ ಕಲೆ-ಕಲಾವಿದರನ್ನು, ಮತ್ತೊಮ್ಮೆ ದಿಗ್ಗಜರನ್ನು ಸೃಷ್ಟಿಸುವಲ್ಲಿ ಏನು ಪ್ರಯತ್ನ ಮಾಡಬಹುದೆಂದು ಸಕಾರಾತ್ಮಕವಾಗಿ ಕೆಲವು ಅಂಶಗಳನ್ನು ಹುಡುಕೋಣ.
1. ಶಾಲಾ ಹಂತದಲ್ಲಿ ಈಗಾಗಲೇ ಕಂಪ್ಯೂಟರ್ ಬಳಕೆ-ತಿಳಿವಳಿಕೆ ನೀಡುವಂತೆ ಸಂಗೀತವನ್ನೂ ಒಂದು ಐಚ್ಛಿಕ ವಿಷಯವಾಗಿಡಬೇಕು. ಇಲ್ಲಿ ಕೇವಲ
ಒಂದೆರಡು ದೇಶಭಕ್ತಿಗೀತೆ, ಭಾವಗೀತೆ, ಭಜನೆ ಅಷ್ಟೇ ಅಲ್ಲದೆ ಕೆಲವೊಂದು ಸರಳ, ಸುಂದರ ರಾಗಗಳು, ರಚನೆಗಳನ್ನು ಕಲಿಸಬೇಕು. ಪ್ರತಿಯೊಂದು ಮಗುವೂ ಕಲಿಯದಿದ್ದರೂ, ಈ ತರಹ ಒಂದು ಸಂಗೀತ, ಹಾಡು, ರಚನೆ ಇದೆಯೆನ್ನುವ ಕಲ್ಪನೆಯಾದರೂ ಅದರ ಮನದಲ್ಲಿ ಮೂಡುತ್ತದೆ.
2. ಕಾಲೇಜು-ವಿಶ್ವವಿದ್ಯಾನಿಲಯಗಳಲ್ಲೂ ಬೋಧಕರನ್ನು ನೇಮಿಸುವಾಗ ಯುಜಿಸಿ ಕೆಲವು ನಿಯಮಗಳನ್ನು ತಕ್ಕಮಟ್ಟಿಗೆ ಮಾರ್ಪಾಡು ಮಾಡಿ ನುರಿತ ಕಲಾವಿದರ ಆಯ್ಕೆಯಾಗಬೇಕು. ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಲ್ಲಿ ಪಂ|| ಮನ್ಸೂರ್, ರಾಜಗುರು, ಸಂಗಮೇಶ್ವರ ಗುರವ್, ಪಂಚಾಕ್ಷರಿ ಮತ್ತಿಗಟ್ಟಿ, ಕರ್ನಾಟಕ ಕಾಲೇಜಿನಲ್ಲಿ ವೆಂಕಟೇಶಕುಮಾರ್ ಇವರೆಲ್ಲ ಗುರುಗಳಾಗಿದ್ದರು. ಇವರಾರೂ M.Music ಮಾಡಿದವರಲ್ಲ. ಇಂತಹ ಹಲವಾರು ಉದಾಹರಣೆಗಳು ದೇಶದ ಬೇರೆ ವಿದ್ಯಾಲಯಗಳಲ್ಲೂ ಆಗಿಹೋಗಿವೆ. ಪಂ|| ಓಂಕಾರ್ನಾಥ್ ಠಾಕೂರ್ ಅವರು ಬನಾರಸ್ ಹಿಂದೂ ವಿಶ್ವವಿದ್ಯಾನಿಲಯದಲ್ಲಿ ಸಂಗೀತ ವಿಭಾಗದ ಮುಖ್ಯಸ್ಥರಾಗಿದ್ದರು.
3. ನಾವು ನೋಡಲಿ-ಬಿಡಲಿ, ಒಪ್ಪಲಿ-ಒಪ್ಪದಿರಲಿ, ಟಿವಿ ಒಂದು ಪ್ರಭಾವಶಾಲಿ ಮಾಧ್ಯಮ. ಖಾಸಗಿ ಚಾನೆಲ್ಗಳು, ಅವುಗಳ ಕಾರ್ಯಕ್ರಮ, ನಿರ್ಧಾರಗಳು ಸ್ವಂತ ಮಾಲೀಕರದಾದರೂ, ಎಲ್ಲೋ ಒಂದು ಕಡೆ ಕಲೆ-ಸಂಸ್ಕೃತಿಯ ಬಗ್ಗೆ ಅರಿವು ನೀಡುವ ಕಾರ್ಯಕ್ರಮ ನೀಡುವಂತೆ ಸರ್ಕಾರ ಮಾರ್ಗಸೂಚಿ ನೀಡಬೇಕು. ಯಾವುದೋ ಜನಪ್ರಿಯ ವ್ಯಕ್ತಿ,
ರಾಜಕಾರಣಿ, ಯಾವುದಾದರೂ ಆಪಾದನೆಗೆ ಒಳಗಾಗಿ ಬಂಧಿಸಲ್ಪಟ್ಟಾಗ ಪರಪ್ಪನ ಅಗ್ರಹಾರದ ಜೈಲಿನವರೆಗೆ ಅವರನ್ನು ಕಾರಿನಲ್ಲಿ ಕ್ಯಾಮರಾಗಳೊಡನೆ ಹಿಂಬಾಲಿಸಿ ಬಿತ್ತರಗೊಳಿಸುವುದರಲ್ಲಿ ಸ್ವಲ್ಪ ಸಮಯ, ಶ್ರಮ, ಸಂಪನ್ಮೂಲಗಳನ್ನು ವಾರಕ್ಕೊಮ್ಮೆಯಾದರೂ ಕಲಾಪ್ರಸಾರ-ಪ್ರಚಾರಕ್ಕೆ ಬಳಸಬಹುದು. ಮತ್ತೊಮ್ಮೆ ಆಯ್ಕೆ ನಿರ್ಧಾರ ಮಾಲೀಕರದೇ ಎನ್ನುವಲ್ಲಿ ಎರಡನೇ ಮಾತಿಲ್ಲ.
4. ಸರ್ಕಾರವು ಆಯೋಜಿಸುವ ಹಲವಾರು ಜಿಲ್ಲಾಮಟ್ಟದ ಉತ್ಸವಗಳಲ್ಲೂ ಶಾಸ್ತ್ರೀಯ ಕಲಾಪ್ರಕಾರಗಳ ಸೋದಾಹರಣ ಕಾರ್ಯಕ್ರಮ, ಶ್ರೋತೃಗಳೊಡನೆ ಸಂವಾದ, ಪ್ರಶ್ನೋತ್ತರ, ಅನಂತರ ಪೂರ್ಣಪ್ರಮಾಣದ ಸಂಗೀತ-ನೃತ್ಯ ನಡೆಯಬೇಕು. ಶಾಸ್ತ್ರೀಯ ಕಲೆಗಳು ಬೇರೆ ಲೋಕದಿಂದ ಬಂದಿಲ್ಲ; ನಮ್ಮ ಆರತಿ ಹಾಡು, ಜೋಗುಳ, ಶ್ಲೋಕ, ವಚನ, ಭಕ್ತಿಗೀತೆ ಎಲ್ಲದಕ್ಕೂ ರಾಗದ-ತಾಳದ ಹಿನ್ನೆಲೆ ಇದೆ ಎನ್ನುವ ವಿಷಯದಲ್ಲಿ ಜನರಲ್ಲಿ ಅರಿವು ಮೂಡಿಸಬೇಕು.
5. ಸಾರ್ವಜನಿಕ ವೇದಿಕೆಗಳಲ್ಲೂ ಒಂದೇ ಸಂಜೆ ಮೂರು ಕಲಾವಿದರ ಕಾರ್ಯಕ್ರಮ ಆಯೋಜಿಸುವ ಬದಲು ಒಬ್ಬರು – ಹೆಚ್ಚೆಂದರೆ ಇಬ್ಬರು ತಲಾ ಎರಡು ಗಂಟೆ ಕಾರ್ಯಕ್ರಮ ನೀಡುವಂತಾಗಬೇಕು.
6. ಶಾಸ್ತ್ರೀಯ ಸಂಗೀತ, ನೃತ್ಯ, ಜಾನಪದ ಕಲೆ, ಸುಗಮ ಸಂಗೀತ ಯಾವುದೇ ಕ್ಷೇತ್ರವಿರಲಿ ಕನಿಷ್ಠ ಮೂರು ದಶಕ ಕಲಿಕೆ, ಪ್ರದರ್ಶನ, ಸಂಶೋಧನೆ, ಬೋಧನೆ ಮಾಡಿದವರಿಗೆ ಒಂದು ಗೌರವಯುತ ಧನವನ್ನು ಮಾಸಾಶನವಾಗಿ ನೀಡಬಹುದು. ಕೇವಲ ಒಂದು ಬಾರಿ ಶಾಸಕರು-ಸಂಸದರು ಆದವರಿಗೆ ಜೀವನಪೂರ್ತಿ ನಿವೃತ್ತಿವೇತನ ನೀಡುವ ಕಾನೂನು ಇರುವಾಗ, ಕಲೆಗಳ ಬೆಳವಣಿಗೆಯ ದೃಷ್ಟಿಯಿಂದ ಕಲಾವಿದರ ಪೋಷಣೆಯೂ ಆವಶ್ಯಕ.
ಹಿರಿಯ ಗಾಯಕಿ ಡಾ|| ಗಂಗೂಬಾಯಿ ಹಾನಗಲ್ ಅವರನ್ನು ಸಂಗೀತದ ಭವಿಷ್ಯದ ಬಗ್ಗೆ ಕೇಳಿದಾಗ ಅವರು ಹೇಳಿದ್ದು – “ಸಂಗೀತ ಅಂದರ್ರಾ… ಒಂದು ಅವಿಭಕ್ತ ಕುಟುಂಬದಲ್ಲಿ, ಪಡಸಾಲಿಯೊಳಗ ತೊಟ್ಟಿಲು ಕಟ್ಟಿ ಕೂಸನ್ನು ಮಲಗಿಸಿದ್ದಾಗ ಒಂದಷ್ಟು ಹೊತ್ತು ತಾಯಿ ಜೋಗುಳ ಹಾಡಿ ತೂಗ್ತಾಳ. ಆಮೇಲೆ ಅಡಿಗಿ ಕೆಲಸಕ್ಕ ಒಳಗ ಹೋಗ್ತಾಳ. ಕೂಸು ಅತ್ತರೆ ಮತ್ತಾರೋ ಬಂದು ತೊಟ್ಟಿಲ ತೂಗ್ತಾರ, ಇನ್ನು ಸ್ವಲ್ಪ ಹೊತ್ತಿನ ನಂತರ ಮತ್ತೆ ಚಿಕ್ಕಮ್ಮ, ಚಿಕ್ಕಪ್ಪ, ಸೋದರಮಾವ ಯಾರೋ ಬಂದು ತೂಗ್ತಾರ. ಒಟ್ಟಿನ ಮ್ಯಾಲೆ ಅದು ನಿಂದ್ರೋದಿಲ್ಲ. ಹಂಗ ಉಯ್ಯಾಲಿ, ತೊಟ್ಟಿಲು ಪಯಣ ಖಾಯಂ ನಡೀತದ; ನಮ್ಮ ಸಂಗೀತಾನೂ ಹಂಗ, ಹೆಂಗೋ, ಯಾರೋ ಬರ್ತಾರ. ಮುಂದ ನಡೀತದ, ಖಾಯಂ ಇರ್ತದ” ಎಂದರು. ಇದು ಅನುಭವಸ್ಥರ – ದೂರದೃಷ್ಟಿಯ ಆಶಾದಾಯಕ ಮಾತು. ಈಗ ನಾವು ಅವಿಭಕ್ತ ಕುಟುಂಬದಿಂದ ನ್ಯೂಕ್ಲಿಯರ್ ಕುಟುಂಬದ ಕಡೆಗೆ ವಾಲುತ್ತಾ ಇದ್ದೇವೆ. ಕೆಲವು ದಂಪತಿಗಳಂತೂ ಮಕ್ಕಳ ಜವಾಬ್ದಾರಿಯೇ ಬೇಡ ಅಂತಾರೆ; ಹಾಗಾದರೆ ತೊಟ್ಟಿಲು ಕಟ್ಟೋದು ಎಲ್ಲಿ, ಯಾವಾಗ? ಸ್ವಲ್ಪ ಸ್ವಾರ್ಥದ ಪರಿಧಿಯನ್ನು ದಾಟಿ ಹೊರಗೆ ನೋಡೋಣ. ಏಳು ಸ್ವರದ ಸುಂದರ ಪ್ರಪಂಚದಲ್ಲಿ ಎಲ್ಲರೂ ಆನಂದವಾಗಿ ವಿಹರಿಸೋಣ. ನಗರ-ಹಳ್ಳಿ ಎಂಬ ಭೇದವಿಲ್ಲದೆ ಪ್ರತಿಯೊಂದು ಮನೇಲಿ ಟಿವಿ, ಕೇಬಲ್ ಕನೆಕ್ಷನ್, ಹಲವಾರು ಮೊಬೈಲ್ ಫೋನ್ ಇದ್ದಹಾಗೆ, ಕನಿಷ್ಠ ಐದು ಮನೇಲಿ ಒಂದಾದರೂ ತಂಬೂರಿ, ಹಾಡು, ಸಿತಾರ, ವೀಣೆ, ಕೊಳಲು, ತಬಲಾ, ಮೃದಂಗ ನಾದ ಕೇಳೋಣ.