ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ
ಪ್ರಕಟಣೆಯ
59ನೇ
ವರ್ಷ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

Utthana > ಉತ್ಥಾನ ಡಿಸೆಂಬರ್ 2020 > ಅಜ್ಞಾತ ಅಂಚೆಚೀಟಿ ಸಂಗ್ರಾಹಕ ಎಚ್. ಲಕ್ಷ್ಮೀನಾರಾಯಣ ಭಟ್ಟ

ಅಜ್ಞಾತ ಅಂಚೆಚೀಟಿ ಸಂಗ್ರಾಹಕ ಎಚ್. ಲಕ್ಷ್ಮೀನಾರಾಯಣ ಭಟ್ಟ

 “ಇದು ನೋಡಿ, ನನ್ನ ಸ್ಟಾಂಪ್ ಕಲೆಕ್ಷನ್” ಎಂದು ಲಕ್ಷ್ಮಿನಾರಾಯಣ ಭಟ್ ಅವರು ತಮ್ಮ

ಅಂಚೆಚೀಟಿ ಸಂಗ್ರಹವಿರುವ ಆಲ್ಬಂ ಅನ್ನು ಹೆಮ್ಮೆಯಿಂದ ಸವರುತ್ತ ತೆರೆ ತೋರಿಸತೊಡಗಿದಾಗ ಅಂಚೆಚೀಟಿ ಸಂಗ್ರಹದ ಬಗ್ಗೆ ಕೇಳಿಯಷ್ಟೆ ಗೊತ್ತಿದ್ದ ನಾನು ಕೂಡ ಅವರೊಡನೆ ಅಂಚೆಚೀಟಿ ಲೋಕಕ್ಕೆ ಹೋದೆ.

“ಇವೆಲ್ಲ ನೋಡಿ, ಅಂಚೆಮುದ್ರೆ ಒತ್ತಿರದ ಸ್ಟಾಂಪ್‍ಗಳು; ನಾನೇ ಅಂಚೆಕಚೇರಿಗೆ ಹೋಗಿ ತಾಸುಗಟ್ಟಲೆ ಸಾಲಿನಲ್ಲಿ ನಿಂತು ಖರೀದಿಸಿ ತಂದದ್ದು. ಇವು ಮುದ್ರೆ ಇರುವಂತಹ ಸ್ಟಾಂಪ್‍ಗಳು; ಪತ್ರಗಳು ಬಂದಾಗ ಜೋಪಾನವಾಗಿ ಎತ್ತಿಟ್ಟುಕೊಂಡವು. ಇವಲ್ಲದೆ ನನಗೆ ಗಣಪತಿಯ ಮೂರ್ತಿಗಳನ್ನೂ, ನಾಣ್ಯಗಳನ್ನೂ ಸಂಗ್ರಹಿಸುವ ಹವ್ಯಾಸವೂ ಇದೆ. ಅವುಗಳೂ ತುಂಬಾ ಇವೆ ನನ್ನ ಬಳಿ” ಎನ್ನುತ್ತ ಸ್ಟಾಂಪ್ ಸಂಗ್ರಹಿಸಿರುವ ಆಲ್ಬಂನ ಒಂದೊಂದೇ ಪುಟ ತೆರೆದು ತೋರಿಸತೊಡಗಿದ ಭಟ್ಟರ ಮುಖದ ತುಂಬ ಖುಷಿಯ ನಗು ಇತ್ತು.

ಕ್ಷಣಾರ್ಧದಲ್ಲಿ ಸುದ್ದಿಯನ್ನು ನೀಡಬಲ್ಲ, ವಿದೇಶದಲ್ಲಿರುವ ಮಕ್ಕಳನ್ನು ನಿಮಿಷದಲ್ಲೇ ಸಂಪರ್ಕಿಸಲು ಸಾಧ್ಯವಾಗಿಸಿದ ಈ-ಮೇಲ್, ವಾಟ್ಸಾಪ್ ಭರಾಟೆಯಲ್ಲಿ ದಿನಗಟ್ಟಲೆ ವಿಳಂಬವಾಗಿ ಸುದ್ದಿಯನ್ನು ತಲಪಿಸುವ ಅಂಚೆಯಣ್ಣನ ಉಪಸ್ಥಿತಿ ಇಂದು ಪ್ರಸ್ತುತವಾಗಿ ಉಳಿದಿಲ್ಲ. ಅಂಚೆಕಚೇರಿಯು ಇತಿಹಾಸಕ್ಕೆ ಸೇರಿ ಮ್ಯೂಸಿಯಂ ಆಗಬಾರದು ಎಂದು ಕೇಂದ್ರಸರ್ಕಾರ ಏನೆಲ್ಲ ಕಸರತ್ತು ನಡೆಸಿದೆಯಾದರೂ, ಜನಮಾನಸದಲ್ಲಿ ಅಂಚೆಗೆ ಮೊದಲಿನ ಪ್ರಾಮುಖ್ಯ ಉಳಿದಿಲ್ಲವೆಂಬುದು ಕಹಿಸತ್ಯ. ಇನ್ನು ಅಂಚೆಚೀಟಿಯ ಪಾಡು ಕೇಳುವುದೇ ಬೇಡ. ಸನ್ನಿವೇಶ ಹೀಗೆಯೇ ಮುಂದುವರಿದರೆ, ಭವಿಷ್ಯದ ಪೀಳಿಗೆಗೆ ಅಂಚೆಚೀಟಿಯ ಬಗ್ಗೆ, ಅದರ ಮಹತ್ತ್ವದ ಬಗ್ಗೆ ತಿಳಿಸಬೇಕೆಂದರೆ ಅದು ಅಂಚೆಚೀಟಿ ಸಂಗ್ರಹಕಾರರಿಂದ ಮಾತ್ರ ಸಾಧ್ಯ.

‘ಫೈಲ್ಯಾಟಲಿ’ ಎಂದು ಕರೆಸಿಕೊಳ್ಳುವ ಅಂಚೆಚೀಟಿ ಸಂಗ್ರಹಿಸುವ ಹವ್ಯಾಸವನ್ನು 1774ರಿಂದ ಆರಂಭಿಸಿದವನು ಐರ್‍ಲೆಂಡ್‍ನ ‘ರಿಸೀವರ್ ಜನರಲ್ ಆಫ್ ಡ್ಯೂಸ್’ ಜಾನ್ ಬುರ್ಕೆ.

ಅಂಚೆಚೀಟಿಯನ್ನು ಸಂಗ್ರಹಿಸಿ ಆಗಬೇಕಾದದ್ದು ಏನು? – ಎನ್ನುವ ಆಸಡ್ಡೆಯೂ ಇದೆಯೆನ್ನಿ. ಪತ್ರ ಹರಿಯುವಾಗ ಅಂಚೆಚೀಟಿಯನ್ನೂ ಹರಿದು ಎಸೆಯುವವರೇ ಹೆಚ್ಚು. ಅಂತಹವರ ಮಧ್ಯೆ ಕೆಲವರು ಓಡಿಹೋಗಿ ಹರಿಯದಿರುವ ಅಂಚೆಚೀಟಿಯನ್ನು ಜೋಪಾನವಾಗಿ ಎತ್ತಿಟ್ಟುಕೊಂಡು ಒಟ್ಟುಗೂಡಿಸಿ ಅದಕ್ಕಾಗಿಯೇ ಇರುವ ಆಲ್ಬಂನಲ್ಲಿ ಕೂಡಿಟ್ಟು ಕಾಪಿಟ್ಟುಕೊಳ್ಳುವವರು ಇತಿಹಾಸವನ್ನು, ಮಾಹಿತಿಕಣಜವನ್ನು ಸಂಗ್ರಹಿಸಿ ಭವಿಷ್ಯಕ್ಕೆ ನೀಡುತ್ತಿದ್ದಾರೆ ಎನ್ನುವುದು ಬಹಳಷ್ಟು ಜನರಿಗೆ ಗೊತ್ತಿರಲಿಕ್ಕಿಲ್ಲ.

ಲಕ್ಷ್ಮೀನಾರಾಯಣ ಭಟ್ಟರು ಅಂತಹ ಅಂಚೆಚೀಟಿ ಸಂಗ್ರಹಕಾರರಲ್ಲಿ ಒಬ್ಬರು. “ಈ ರೀತಿ ಸಂಗ್ರಹಿಸುವ ಹವ್ಯಾಸಕ್ಕೆ ಪಾಯ ಹಾಕಿಕೊಟ್ಟವರು ನಮ್ಮ ತಂದೆಯವರೇ”ಎನ್ನುತ್ತ  ಕ್ರೆಡಿಟ್ ಅನ್ನು ತಮ್ಮ ತಂದೆಯವರಿಗೇ ನೀಡುತ್ತಾರೆ ಅವರು.

“ನಾನಾಗ ಏಳನೇ ತರಗತಿಯ ವಿದ್ಯಾರ್ಥಿ. ತಂದೆಯವರು ಜೀವನೋಪಾಯಕ್ಕೆಂದು ಅಂಗಡಿ ನಡೆಸುತ್ತಿದ್ದರು. ಅಂಗಡಿಗೆ ಬರುತ್ತಿದ್ದ ಪತ್ರಗಳಲ್ಲಿ ಇದ್ದ ಸ್ಟಾಂಪ್ ಅನ್ನು ಜೋಪಾನ ಮಾಡಿ ತಂದು ನನಗೆ ನೀಡುತ್ತಿದ್ದರು. ಅಂದಿನಿಂದ ಇಂದಿನವರೆಗೂ ನನಗೆ ಅಂಚೆಚೀಟಿ ಸಂಗ್ರಹ ಹವ್ಯಾಸವಾಗಿ ಮುಂದುವರಿದಿದೆ” ಎನ್ನುವ ಭಟ್ಟರು ತಾವು ಮೊದಲಿದ್ದ ಕಂಪೆನಿಯ ಕೆಲಸಕ್ಕೆಂದು ಆಗಾಗ್ಗೆ ಅಂಚೆಕಚೇರಿಗೆ ಹೋಗಬೇಕಾಗುತ್ತಿತ್ತು. ಹೊಸ ಸ್ಟಾಂಪ್‍ಗಳು ಬಿಡುಗಡೆಯಾದಾಗ ಅದನ್ನು ಅಂಚೆಕಚೇರಿಯಲ್ಲಿನ ನೋಟಿಸ್‍ಬೋರ್ಡಿಗೆ ಹಾಕಿರುತ್ತಿದ್ದುದನ್ನು ಗಮನಿಸಿ, ಸ್ವಂತ ಹಣದಿಂದ ಖರೀದಿಸಿಯೂ ಸಂಗ್ರಹಿಸಿದ್ದಾರೆ.

ಅಂಚೆಚೀಟಿಯೇ! ಅದರಲ್ಲೇನಿರುತ್ತದೆ? –

ಎಂದುಕೊಂಡು ಲಕ್ಷ್ಮೀನಾರಾಯಣ ಭಟ್ಟರ ಅಂಚೆಚೀಟಿಯ ಸಂಗ್ರಹವನ್ನೇನಾದರೂ ನೋಡಿದರೆ ನಾವು ಗಮನಿಸಿರದ ಹಲವಾರು ಸಂಗತಿಗಳು ನಮ್ಮ ಗಮನಕ್ಕೆ ಬರುತ್ತವೆ.

‘ಭಾರತ-ಭಾರತಿ’ ಪುಸ್ತಕಗಳು ಕಿರಿಯರಿಗಾಗಿ ರಾಷ್ಟ್ರೋತ್ಥಾನ ಸಾಹಿತ್ಯದಿಂದ ಪ್ರಕಟವಾದ ವ್ಯಕ್ತಿಪರಿಚಯಮಾಲೆ. ಅದರಲ್ಲಿ ಬರುವ ಪ್ರತಿಯೊಬ್ಬ ವ್ಯಕ್ತಿಗಳ ಅಂಚೆ ಚೀಟಿಯೂ ಇವರ ಅಂಚೆಚೀಟಿ ಸಂಗ್ರಹದಲ್ಲಿರುವುದು ವಿಶೇಷ. ಹೊಸವರ್ಷ, ದೀಪಾವಳಿ ಶುಭಾಶಯಗಳ ಅಂಚೆಚೀಟಿ, ಕೋಲ್ಕತಾದ ದಸ್ಸೆಹರಾದ ದುರ್ಗಿ, ಜಯದೇವನ ಗೀತಗೋವಿಂದದ ಚಿತ್ರಗಳ ಸರಣಿಯ ಅಂಚೆಚೀಟಿ, ಭಗವದ್ಗೀತೆ, ಶಂಖ, ಜೆಮ್ಸ್, ಜ್ಯುವೆಲ್ಲರಿ, ಮೈಕೆಲ್ ಏಂಜೆಲೊ ರಚನೆಯ ವರ್ಣಚಿತ್ರಗಳು, ಮಧುಬನಿ ಕಲೆಯ ಚಿತ್ರಗಳು, ರಾಗಮಾಲಾ ಚಿತ್ರಗಳು, ವೀಣೆಯ ಚಿತ್ರ, ಸಂಗೀತಗಾರರ ಚಿತ್ರಗಳು, ನೃತ್ಯದ ಪ್ರಕಾರಗಳು, ನಾಟ್ಯ ಶಿವ, ನಮ್ಮ ದೇವಾಲಯಗಳು, ಬೇರೆಬೇರೆ ಧರ್ಮದ ದೇವಾಲಯಗಳು, ಪಾರಂಪರಿಕ ಕಟ್ಟಡಗಳು, ಭಾರತೀಯ ವಿದ್ಯಾಭವನ, ನಮ್ಮ ಕೋಟೆಯ ಚಿತ್ರಗಳು, ಭಾಕ್ರಾ ಆಣೆಕಟ್ಟು, ಹೂವು-ಹಣ್ಣಿನ ಚಿತ್ರಗಳು, ಅನ್ಯಾನ್ಯ ವನ್ಯಜೀವಿಗಳು, ಪಕ್ಷಿಗಳು, ರೈಲ್ವೇಡಬ್ಬಿಗಳು, ವಿಮಾನಗಳು, ಹಡಗಿನ ಚಿತ್ರ, ಸೇನಾ ಸಾಮಗ್ರಿಗಳು, ಮಗು ಅಂಕಲಿಪಿ ಓದುತ್ತಿರುವ 1979ರ ಚಿತ್ರ, ಸ್ಟಾಂಪ್ ಸಂಗ್ರಹಿಸಿ ಒಪ್ಪವಾಗಿ ಜೋಡಿಸುತ್ತಿರುವ ಹುಡುಗಿ, ಮಕ್ಕಳೇ ರಚಿಸಿರುವ ಚಿತ್ರಕಲೆ, ಸಣ್ಣಪರಿವಾರ-ಸುಖೀ ಪರಿವಾರದ ಚಿತ್ರ, ವಿಶ್ವ ಆರೋಗ್ಯ ದಿನಾಚರಣೆ ಅಂಗವಾಗಿ  ನೇತ್ರದಾನ, ಒಲಿಂಪಿಕ್ಸ್, ಬಗೆಬಗೆಯ ಕ್ರೀಡೆಗಳು, ಭಾರತೀಯ ಮೂರು ಸೇನಾದಳಗಳ ಸೈನಿಕರು, ಯೋಗದಿನದ ಅಂಗವಾಗಿ ಬಿಡುಗಡೆಯಾದ ಸ್ಟಾಂಪ್, ಯೂನಿಸೆಫ್‍ನ 40ನೇ ವಾರ್ಷಿಕ ದಿನಾಚರಣೆಯ ಸ್ಟಾಂಪ್, ಕೃಷಿ ಚಟುವಟಿಕೆ, ತೆಂಗಿನಮರ ಇಂತಹ ಹತ್ತುಹಲವು ಬಗೆಯ ಅಂಚೆಚೀಟಿಗಳು ನಮ್ಮ ಗಮನ ಸೆಳೆಯುತ್ತವೆ.

 ಇವಲ್ಲದೆ, ವಿದೇಶೀ ಅಂಚೆಚೀಟಿಗಳದೇ ಒಂದು ಪುಟ್ಟ ಆಲ್ಬಂ ಮಾಡಿದ್ದಾರೆ. ಸಾಮಾನ್ಯವಾಗಿ ಯಾವುದಾದರೂ ಪ್ರಸಿದ್ಧ ಸಂಸ್ಥೆ, ಕಟ್ಟಡ, ವ್ಯಕ್ತಿ ಮೊದಲಾದ ಶತಮಾನೋತ್ಸವವಾದಾಗ ಅದರ ನೆನಪಿಗೆ ಸ್ಟಾಂಪ್ ಹೊರತರಲಾಗುತ್ತದೆ. “ರಾ.ಸ್ವ. ಸಂಘದ ಸಂಸ್ಥಾಪಕರಾದ ಡಾ. ಕೇಶವ ಬಲಿರಾಂ ಹೆಡಗೆವಾರ್ ಅವರ ಶತಮಾನೋತ್ಸವಕ್ಕೆ ಬಿಡುಗಡೆ ಮಾಡಿದ ಅಂಚೆಚೀಟಿಯನ್ನು ದಿನಗಟ್ಟಲೇ ನಿಂತು ಖರೀದಿ ಮಾಡಿದ್ದೇನೆ”ಎನ್ನುತ್ತ ಅಂಚೆಚೀಟಿ ಸಂಗ್ರಹದ ಕುರಿತಾದ ತಮ್ಮ ಆಸಕ್ತಿಯ ಕಥೆಯನ್ನು ಹೇಳುತ್ತಾರೆ.

ಈಗಾಗಲೇ ಹೇಳಿರುವಂತೆ ಇವರಿಗೆ ನಾಣ್ಯ ಸಂಗ್ರಹಿಸುವ ಹವ್ಯಾಸವೂ ಇದ್ದು 1807ರ ಅವಧಿಯಿಂದಲೂ ಇದ್ದ ನಾಣ್ಯಗಳು ಇವರ ಬಳಿ ಇವೆ. ಶ್ರೀರಾಮ ತನ್ನ ಸಹೋದರರು ಹಾಗೂ ಸೀತೆಯೊಡಗೂಡಿ ಇದ್ದ ಪಟ್ಟಾಭಿಷೇಕದ ದೃಶ್ಯ, ಶ್ರೀಕೃಷ್ಣ ರಾಧೆಯ ಚಿತ್ರವಿರುವ ಹಳೆಯ ನಾಣ್ಯಗಳು ಮನಮೋಹಕವಾಗಿವೆ.

ಹಾಗೆಂದು ಇವರು ತಮ್ಮ ಸಂಗ್ರಹವನ್ನು ಇಲ್ಲಿಯವರೆಗೆ ಎಲ್ಲೂ ಪ್ರದರ್ಶನಕ್ಕೆ ಇಟ್ಟಿಲ್ಲ, ಫೈಲ್ಯಾಟಲಿ ಕ್ಲಬ್ ಸೇರಿಲ್ಲ. “ನನಗೆ ಕಾರ್ಯದೊತ್ತಡದಿಂದ ಅಂತಹ ಯಾವುದೇ ವಿಶೇಷ ಚಟುವಟಿಕೆಗಳಲ್ಲಿ ಭಾಗವಹಿಸಲಾಗಿಲ್ಲವಾದರೂ ಬೇಸರವೇನೂ ಇಲ್ಲ; ಇದು ನನ್ನದೊಂದು ಅಸೆಟ್ ಎಂದೇ ಭಾವಿಸುವೆ. ಮುಂದಿನ ಪೀಳಿಗೆಗೆ ಮಾಹಿತಿ ಒದಗಿಸುವುದಕ್ಕೆ ಇದು ತುಂಬ ನೆರವಾಗುತ್ತದೆ” ಎನ್ನುವ ಲಕ್ಷ್ಮೀನಾರಾಯಣ ಭಟ್ಟ ಅವರಂತಹ ಅಂಚೆಚೀಟಿ ಸಂಗ್ರಹಕಾರರ ಸಂಖ್ಯೆ ಇನ್ನಷ್ಟು ಹೆಚ್ಚಲಿ. 

ವಿಳಾಸ: ಎಚ್. ಲಕ್ಷ್ಮೀನಾರಾಯಣ ಭಟ್ಟ

93/2, ‘ಸೇವಾಸೌಧ’, ಕೆಂಪೇಗೌಡನಗರ ಮುಖ್ಯರಸ್ತೆ

ಬೆಂಗಳೂರು – 560 004

ಮೊ: 99450 36300

ನಿಮ್ಮ ಪ್ರತಿಕ್ರಿಯೆ ನೀಡಿ

ಉತ್ಥಾನ - ಸದಭಿರುಚಿಯ ಮಾಸಪತ್ರಿಕೆ

`ಉತ್ಥಾನ’ : ೧೯೬೫ರಿಂದ ಪ್ರಕಟವಾಗುತ್ತಿರುವ ಕನ್ನಡದ ಹೆಮ್ಮೆಯ ಸದಭಿರುಚಿಯ ಮಾಸಪತ್ರಿಕೆ. ರಾಜ್ಯದಾದ್ಯಂತ ಪ್ರಸರಣ ಇರುವ ಸಂಚಿಕೆಯು ಈಗ ಕ್ರೌನ್‌ ಚತುರ್ದಳ ಆಕಾರದಲ್ಲಿ ೧೧೨ ವರ್ಣಪುಟಗಳಲ್ಲಿ ವೈವಿಧ್ಯಮಯ ಲೇಖನ, ನುಡಿಚಿತ್ರ, ಸಾಹಿತ್ಯದ ಬರಹಗಳನ್ನು ಪ್ರಕಟಿಸುತ್ತಿದೆ.  ಸಂಚಿಕೆಯ ಬೆ ಲೆ ೨೦ ರೂ.

Utthana
Kannada Monthly Magazine ​
Utthana Trust
Keshavashilpa, Kempegowda Nagara
Bengaluru - 560019
Karnataka State , INDIA

Phone : 080-26612732
Email : [email protected]

ಉತ್ಥಾನದ ಹೊಸ ಪ್ರಕಟಣೆಗಳ ಬಗ್ಗೆ ನಿಮ್ಮ ಈಮೈಲ್‌ ಅಂಚೆಪೆಟ್ಟಿಗೆಯಲ್ಲೇ ಮಾಹಿತಿ ಪಡೆಯಿರಿ. ಇದಕ್ಕಾಗಿ ನಮ್ಮ ವಾರ್ತಾಪತ್ರಕ್ಕೆ ಉಚಿತವಾಗಿ ಚಂದಾದಾರರಾಗಿ