ಹಿಂದೂ ಜೀವನಶೈಲಿಯ ಕುರಿತ ವ್ಯಾಖ್ಯಾನವು ಶೈಲಿ ಮತ್ತು ವಸ್ತು ಹಾಗೂ ರೀತಿ ಮತ್ತು ನೀತಿ ಇವುಗಳ ಕುರಿತ ಚಿಂತನೆಯನ್ನು ಒಳಗೊಳ್ಳುತ್ತದೆ. ಧರ್ಮವು ನೀತಿಯಾದರೆ, ಸಂಸ್ಕøತಿಯು ರೀತಿಯಾಗುತ್ತದೆ. ಧರ್ಮವು ವಸ್ತು, ಸಂಸ್ಕøತಿಯು ಶೈಲಿ.
‘ಸಂಸ್ಕøತಿ’– ಪದವಿಶೇಷ
ಶೈಲಿಯು ಒಳ್ಳೆಯದು, ಕೆಟ್ಟದ್ದು, ಸಾಧಾರಣ ಈ ಮೂರೂ ಆಗಬಹುದು. ಆದರೆ ಸಾಧಾರಣವಾದದ್ದಾಗಲಿ, ಕೆಟ್ಟದ್ದಾಗಲಿ ಉಲ್ಲೇಖಾರ್ಹವಲ್ಲ; ಬದಲಾಗಿ ‘ಉತ್ತಮಶೈಲಿ’ಎನ್ನುವುದೇ ಅಂತರಾರ್ಥ. ಸಾಧಾರಣ ಕೃತಿಯು ಪ್ರಕೃತಿವಿಕಾರವಾದರೆ ವಿಕೃತಿ; ಸಮ್ಯಕ್ ಆದರೆ ಸಂಸ್ಕøತಿ.
‘ಸಿವಿಲೈsಜೇಶನ್’ಪದವು ಸಂಸ್ಕøತಿ ಪದಕ್ಕೆ ಸರಿಯಾದ ವಿವರಣೆಯಾಗುವುದಿಲ್ಲ. ಅದು ಪುರಕ್ಕೆ, ನಗರಕ್ಕೆ ಸಂಬಂಧಪಟ್ಟದ್ದಾಗಿದ್ದು, ಅಲ್ಲಿ ಶಿಷ್ಟಾಚಾರಕ್ಕೆ, ಪ್ರದರ್ಶನಕ್ಕೆ ಪ್ರಾಧಾನ್ಯ.
ಕಲ್ಟ್ನಿಂದ ಕಲ್ಚರ್ ಆಗಿದೆ. ಒಂದು ನಿರ್ದಿಷ್ಟ ಆಚರಣೆಯುಳ್ಳ ಗುಂಪಿಗೆ ಕಲ್ಟ್ ಎನ್ನುತ್ತಾರೆ. ಆ ಗುಂಪಿನ ಆಚರಣೆಯು ಜಾಗತಿಕವಾಗಬೇಕೆಂದಿಲ್ಲ. ಉತ್ತಮವಾಗಿದ್ದರೆ ಮಾತ್ರ ಅನುಸರಿಸಬಹುದು. ಸಂಸ್ಕøತಿಯೆನ್ನುವುದು ಜಾಗತಿಕವಾದದ್ದು.
ಶಾಲಾವಾರ್ಷಿಕೋತ್ಸವದÀ ಕಾರ್ಯಕ್ರಮದಲ್ಲಿ ‘ಸಾಂಸ್ಕøತಿಕ ಕಾರ್ಯಕ್ರಮ’ಎಂದು ಕರೆಯುವ ಒಂದು ಅವಧಿಯಿರುತ್ತದೆ. ಮಕ್ಕಳು ತಮಗಿಷ್ಟವಾದ ಹಾಡನ್ನು ಹಾಡಿ, ನಾಟಕವನ್ನೋ, ನೃತ್ಯವನ್ನೋ ಮಾಡಿ ಪ್ರೇಕ್ಷಕರನ್ನು ರಂಜಿಸುವ ಕಾರ್ಯಕ್ರಮ ಅದು. ಅದು ‘ಮನರಂಜನಾ ಕಾರ್ಯಕ್ರಮ’ಅಥವಾ
‘ಕಲಾಪ್ರದರ್ಶನ’.
ಮಿಶ್ರಸಂಸ್ಕøತಿ, ಬಹುಸಂಸ್ಕøತಿ ಎಂಬ ಪದಗಳ ಬಳಕೆ ಅಲ್ಲಲ್ಲಿ ಆಗುತ್ತಿರುವುದನ್ನು ಕಾಣುತ್ತಿದ್ದೇವೆ. ಅರ್ಬನ್ ನಕ್ಸಲರು ಕಲಾಪ್ರಕಾರವನ್ನೇ ಸಂಸ್ಕøತಿ ಎಂದು ಅನ್ವಯಿಸುವುದೂ ಇದಕ್ಕೆ ಕಾರಣ. ಇದು ತಪ್ಪು ಕಲ್ಪನೆಗೆ ಅವಕಾಶ ಒದಗಿಸುತ್ತಿದೆ. ಕಲೆಯಲ್ಲಿ ಸಂಸ್ಕøತಿ ಅರಳಬೇಕೇ ವಿನಾ ಕಲೆಯೇ ಸಂಸ್ಕøತಿಯಲ್ಲ; ಬದಲಾಗಿ ಅದು ವಿಕೃತವೂ ಆಗಬಹುದು. ಆ ರೀತಿ ವಿಕೃತವಾಗುವುದೂ ನಮ್ಮ ಗಮನಕ್ಕೆ ಬರುತ್ತಿರುತ್ತದೆ. ಸುಸಂಸ್ಕøತವಾದರೆ ಕಲೆ ಹಿತವಾಗಿರುತ್ತದೆ. ಆದರೆ ಕಲೆಯೇ ಸಂಸ್ಕøತಿಯಾಗಲಾರದು.
ಈ ರೀತಿ ನಾಗರಿಕತೆ, ಕಲ್ಚರ್, ಮನರಂಜನೆ, ಕಲಾಪ್ರಕಾರಗಳು ಇವಾವುವೂ ಸಂಸ್ಕøತಿ ಎನ್ನುವುದಕ್ಕೆ ಪರ್ಯಾಯಪದಗಳಲ್ಲ; ಸಂಸ್ಕøತಿ ಎನ್ನುವುದು ‘ಸಂಸ್ಕøತಿ’ಅಷ್ಟೇ.
ಸಂಸ್ಕøತಿ ಎಂದರೆ ಸಮ್ಯಕ್ ಕೃತಿ ಎಂದಾಗುತ್ತದೆ. ಸಮ್ಯಕ್ ಕೃತಿ ಎಂದರೆ ಸರಿಯಾಗಿರುವÀ, ಒಳ್ಳೆಯ, ಚೆನ್ನಾಗಿರುವ ಕೃತಿ. ಆಟವಿರಬಹುದು, ಊಟವಿರಬಹುದು; ಯಾವುದೋ ವಸ್ತುವಿನ ತಯಾರಿಕೆಯೇ ಇರಬಹುದು; ಅದರ ನಿಯಮಕ್ಕೆ ತಕ್ಕಂತೆ ಆ ಕೃತಿ ಆಗಿರಬೇಕು.
ಸಿಂಪಿಗನಿಗೆ ನಮಗೆ ಬೇಕಾದ ಉಡುಗೆಯನ್ನು ಹೊಲಿಯಲು ಹೇಳಿರುತ್ತೇವೆ. ಉಡುಗೆ ನಮ್ಮ ಅಳತೆಗೆ ತಕ್ಕಂತೆ ಇರಬೇಕು, ಇದು ‘ಸತ್ಯಂ’.
ಬೇಸಿಗೆಯಲ್ಲಿ ಹತ್ತಿಬಟ್ಟೆಯ ಉಡುಗೆಯನ್ನು, ಹಾಗೆಯೇ ಚಳಿಗಾಲದಲ್ಲಿ ಉಣ್ಣೆಬಟ್ಟೆಯ ಉಡುಗೆಯನ್ನು ಅಪೇಕ್ಷಿಸುತ್ತೇವೆ. ನಮಗೆ ಬೇಕಾದ ಅಳತೆಯ ಆರ್ಸಿಸಿ ಮನೆಯನ್ನು ಕಟ್ಟಿರುತ್ತೇವೆ; ಆದರೆ ಚಳಿಗಾಲದಲ್ಲಿ ಅತಿಯಾದ ಚಳಿ, ಬೇಸಗೆಯಲ್ಲಿ ತೀವ್ರ ಸೆಖೆ. ಇಲ್ಲಿ ಹಿತದ ಅನುಭವ ನಮಗಾಗುವುದಿಲ್ಲ. ಆದರೆ ಮರದ ಮನೆಗಳು ‘ಉಷ್ಣಕಾಲೇ ಭವೇತ್ ಶೀತಂ, ಶೀತಕಾಲೇ ಭವೇತ್ ಉಷ್ಣಃ’ – ಇದು ‘ಶಿವಂ’.
ಸಿಂಪಿಗ ಹೊಲಿದ ಬಟ್ಟೆಯಾಗಲಿ, ನಾವು ಕಟ್ಟಿದ ಮನೆಯಾಗಲಿ ನೋಡಲು ಚೆನ್ನಾಗಿರಬೇಕು. ಅದರ ಸೌಂದರ್ಯ ಎದ್ದುಕಾಣುವಂತೆ ಅದರ ವಿನ್ಯಾಸವಿರಬೇಕು. ಜೊತೆಗೆ ಒಳಾಂಗಣ ಅಲಂಕರಣವೂ ಚೆನ್ನಾಗಿದ್ದರೆ ಎಲ್ಲರ ಗಮನವನ್ನೂ ಸೆಳೆಯುತ್ತದೆ. ಅದು ‘ಸುಂದರಂ’.
ಸಂತ ಭದ್ರಗಿರಿ ಅಚ್ಯುತದಾಸರು ಹೇಳಿದ ಒಂದು ಮಾತು; “ಸಂಗೀತ ಬಾಲವಿದ್ದಂತೆ, ಸಾಹಿತ್ಯ ಆಕಳಿದ್ದಂತೆ. ಸಾಹಿತ್ಯವನ್ನು ಸಂಗೀತ ಅನುಸರಿಸಬೇಕಲ್ಲದೆ, ಸಂಗೀತದ ಅನುಕೂಲಕ್ಕೋಸ್ಕರ ಸಾಹಿತ್ಯವನ್ನು ತಪ್ಪಾಗಿ ಹೇಳಬಾರದು. ಹಾಗೆ ಮಾಡಿದಾಗ ಸಂಗೀತವೇನೋ ಹೇಳುವುದಕ್ಕೆ ಸುಲಭವಾಗಬಹುದು, ಆದರೆ ಅದು ಸಮ್ಯಕ್ ಆಗುವುದಿಲ್ಲ. ಚಾಮುಂಡೇಶ್ವರಿ ಎಂದಿದ್ದಲ್ಲಿ ‘ಚಾ’ ಬೇರೆ ಮಾಡಿ, ಉಳಿದ ಭಾಗವನ್ನು ಬೇರೆ ಹಾಡಿದರೆ ಹಿತವೆನಿಸುವುದಿಲ್ಲ.”
ಹೀಗೆ ಸಂಸ್ಕøತಿ ಎಂದರೆ ಯಾವುದೇ ಕೃತಿಯು ಇನ್ನಷ್ಟು-ಮತ್ತಷ್ಟು ಚೆನ್ನಾಗಿ ಆಗುವುದು. ಕೃತಿಯು ಸತ್ಯಂ-ಶಿವಂ-ಸುಂದರಂ ಆಗಿ ಇರುವುದು. ಈ ಹಿನ್ನೆಲೆಂiÀiಲ್ಲಿ ಹಿಂದೂ ಜೀವನಶೈಲಿಯನ್ನು ಅವಲೋಕಿಸಬೇಕು.
‘ಸಮ್ಯಕ್ ಕೃತಿ’
ಜನನ-ಮರಣದ ಮಧ್ಯದ ಅವಧಿಯಲ್ಲಿ, ಬೆಳಗ್ಗೆಯಿಂದ ರಾತ್ರಿಯವರೆಗೆ ನಾವು ಎಷ್ಟೋ ಕೆಲಸಗಳನ್ನು ಮಾಡುತ್ತಿರುತ್ತೇವೆ. ಅವೆಲ್ಲವೂ ಸಮ್ಯಕ್ ಆಗಬೇಕು. ಅಂತಹ ಕೃತಿಗಳು ನಾಲ್ಕು ಬಗೆ: 1. ವೈಯಕ್ತಿಕ, 2. ಸಾಮಾಜಿಕ, 3. ಪರಿಸರ ಸಂಬಂಧಿ, 4. ದೈವ ಸಂಬಂಧಿ.
ವೈಯಕ್ತಿಕವಾಗಿ ಪ್ರತಿಯೊಬ್ಬನೂ ತನಗಾಗಿ ಒಂದಷ್ಟು ಕೆಲಸ ಮಾಡಿಕೊಳ್ಳುತ್ತಾನೆ. ಅದು ಸುಸಂಸ್ಕøತವಾಗಿರಬೇಕು. ಸಂಸ್ಕøತಿಯಿಂದ ಜೀವನ ಸಹ್ಯವಾಗುತ್ತದೆ. ನಾವು ನಮಗಾಗಿ ಮಾಡಿಕೊಳ್ಳುವ ಕೆಲಸದಲ್ಲಿ ವಿಕೃತಿಯಾದರೆ ಅದು ಬೇರೆಯವರಿಗೆ ತೊಂದರೆ, ಕಿರಿಕಿರಿಯನ್ನುಂಟುಮಾಡುತ್ತದೆ. ಕೆಮ್ಮುವಾಗ, ಸೀನುವಾಗ, ಉಗುಳುವಾಗ, ಸ್ನಾನಮಾಡುವಾಗ, ಮಾತನಾಡುವಾಗ ಹೀಗೆ ಈ ಎಲ್ಲದರಲ್ಲೂ ಹಿತವಿರುವಂತೆ ಎಚ್ಚರವಹಿಸಬೇಕು.
ಎರಡನೆಯದಾಗಿ, ಇನ್ನೊಬ್ಬ ವ್ಯಕ್ತಿಗೆ ಸಂಬಂಧಿಸಿ ನಾವು ಮಾಡುವ ಕೆಲಸಗಳು ಸರಿಯಾಗಿ, ಹಿತವಾಗಿ, ಚೆನ್ನಾಗಿ ಇರಬೇಕಾಗುತ್ತದೆ.
ಮೂರನೆಯದಾಗಿ ನಮ್ಮ ಸುತ್ತಮುತ್ತಲ ಪರಿಸರ, ಪ್ರಾಣಿಪಕ್ಷಿ, ಗಿಡಮರತೊರೆ, ಕಲ್ಲು-ಗುಡ್ಡ ಇವೆಲ್ಲವೂ ಪರಮಾತ್ಮಸೃಷ್ಟಿಯೇ ಆಗಿದ್ದು ಅವುಗಳ ಜೊತೆಗಿನ ನಮ್ಮ ವ್ಯವಹಾರವೂ ಸುಸಂಸ್ಕøತವಾಗಿರಬೇಕು.
ದೇವರಿಗೆ ಸಂಬಂಧಿಸಿದ ಶ್ರದ್ಧೆ, ನಂಬಿಕೆಗಳು ವ್ಯಕ್ತಿಯ ಬದುಕಿನಲ್ಲಿ ಬಹುದೊಡ್ಡ ಪ್ರಭಾವವನ್ನು ಬೀರುತ್ತವೆ. ದೈವಸಂಬಂಧಿ ವಿಷಯದಲ್ಲಿ ಸಂಸ್ಕøತಿ ಅರಳದಿದ್ದರೆ ಅದು ರಕ್ತಪಾತ-ಉಗ್ರವಾದಕ್ಕೆ ಕಾರಣವಾಗಬಹುದು.
ವೈಯಕ್ತಿಕ
ಸ್ವಂತಕ್ಕೆ ಸಂಬಂಧಪಟ್ಟ, ನಮ್ಮ ಜೀವನನಿರ್ವಹಣೆಗೆ ಮಾಡುವ ಕೆಲಸಗಳು ಜೈವಿಕ ಕರ್ಮಗಳು. ಉದಾಹರಣೆಗೆ ಸ್ವಚ್ಛತೆ. ಶರೀರವನ್ನು ಸ್ವಚ್ಛಗೊಳಿಸುವುದು ಕೃತಿ, ಅಸ್ವಚ್ಛತೆ ವಿಕೃತಿ.
ಇಷ್ಟ ಬಂದಾಗ ಕೈಕಾಲು ತೊಳೆಯುವ ಸ್ವಚ್ಛತೆಯ ಕೃತಿ ತಿಳಿದವರ ಸಲಹೆಯಿಂದ ಸ್ನಾನದ ಹಂತ ತಲಪಿತು. ಸ್ನಾನದ ಪ್ರಕ್ರಿಯೆಯಿಂದ ಆ ಕೃತಿ ಇನ್ನಷ್ಟು ಸಮ್ಯಕ್ ಆಯಿತು. ಯಾವಾಗಾದರೊಮ್ಮೆ ಮಾಡುವ ಸ್ನಾನವನ್ನು ನಿಶ್ಚಿತ ಸಮಯದಲ್ಲೇ ಮಾಡು ಎನ್ನುವ ಮೂಲಕ ಆ ಕೃತಿ ಇನ್ನೂ ಒಂದಷ್ಟು ಸಮ್ಯಕ್ ರೂಪ ಪಡೆಯಿತು. ‘ಪ್ರಾತಃಸ್ನಾನಂ ಗವಾಂ ಸೇವಾ ಆರಾಮಃ ಪುಷ್ಪವಾಟಿಕಾ| ಸ್ವಾಸ್ಥ್ಯಾಯ ಚ ಸುಖಾಯ ಚ||’ ಎನ್ನುತ್ತಾರೆ. ದಿನದ ಯಾವುದೋ ಒಂದು ಅವಧಿಯಲ್ಲಿ ಮಾಡುವ ಸ್ನಾನವನ್ನು ‘ತುಸು ಬೇಗನೇ ಮಾಡು’ ಎನ್ನುವ ಸಲಹೆಯೊಂದಿಗೆ ಸ್ನಾನದ ಕ್ರಿಯೆ ಇನ್ನಷ್ಟು ಸಮ್ಯಕ್ ರೂಪ ಹೊಂದಿತು. ‘ಸ್ನಾನವನ್ನು ಆಹಾರಸೇವನೆಗಿಂತ ಮುನ್ನವೇ ಮಾಡಿದರೆ ಒಳ್ಳೆಯದು’ ಎನ್ನುವ ರೂಢಿಯೊಂದಿಗೆ ಸ್ನಾನ ಇನ್ನಷ್ಟು ಸಮ್ಯಕ್ ಆಯಿತು. ಸ್ನಾನವನ್ನು ಸೂರ್ಯೋದಯಕ್ಕಿಂತ ಮುಂಚೆ ಮಾಡುವುದು ಇನ್ನೂ ಉತ್ತಮವೆನ್ನುವ ರೂಢಿಯಿಂದಾಗಿ ಸ್ನಾನವೆಂಬ ಕೃತಿ ಮತ್ತಷ್ಟು ಸಮ್ಯಕ್ ಆಯಿತು. ಹೀಗೆ ಸ್ನಾನವೆಂಬ ಕೃತಿಯು ಸಮ್ಯಕ್ ಆಗುತ್ತ ಸ್ನಾನದ ಸಂಸ್ಕøತಿ ಅರಳಿತು.
ಶೀತ, ಕೆಮ್ಮು, ನೆಗಡಿ, ಅಜೀರ್ಣವಿದ್ದಾಗ ಸ್ನಾನ ಮಾಡಬಾರದು ಅಥವಾ ತಲೆಗೆ ತಣ್ಣೀರಿನ ಸ್ನಾನ ಮಾಡದೆ ಬಿಸಿನೀರಿನ ಸ್ನಾನ ಮಾಡಬೇಕು. ಆದರೆ ಆರೋಗ್ಯದಿಂದಿದ್ದಾಗ ಹೊರಗಡೆಯ ಶೀತದಿಂದ ನಮಗೆ ಚಳಿ ಆಗುತ್ತದೆಂದು ತಲೆಗೆ ಬಿಸಿನೀರಿನ ಸ್ನಾನ ಮಾಡಕೂಡದು. ಕುತ್ತಿಗೆಯಿಂದ ಕೆಳಗಡೆ ಮಾತ್ರ ಬಿಸಿನೀರಿನ ಸ್ನಾನ ಮಾಡಬಹುದು. ‘ಉಷ್ಣಾಂಬುನಾ ಅಧಃಕಾಯಸ್ಯ ಪರಿಷೇಕೋ ಬಲಾವಹಃ| ತೇನೈವ ಚ ಉತ್ತಮಾಂಗಸ್ಯ ಬಲಹೃತ್ ಕೇಶ ಚಕ್ಷುಷಾಂ||’.
‘ನಾಪ್ಸು ಮೂತ್ರ ಪುರೀಷಂ ಕುರ್ಯಾತ್’ – ನದಿಯಲ್ಲಿ ಸ್ನಾನ ಮಾಡುವಾಗ ಮಲಮೂತ್ರ ವಿಸರ್ಜನೆ ಸಲ್ಲದು. ಅದರಿಂದ ಹೆತ್ತತಾಯಿಯನ್ನು ಕೆಟ್ಟದೃಷ್ಟಿಯಿಂದ ನೋಡಿದಷ್ಟು ಪಾಪ ಬರುತ್ತದೆ.
ಸ್ನಾನ ಮಾಡುವುದು ಹೇಗೆ ಎನ್ನುವುದು ಸಂಸ್ಕøತಿಯ ಒಂದು ಭಾಗವಾದರೆ, ಮಾಡದಿರುವುದು ಸಂಸ್ಕøತಿಯ ಇನ್ನೊಂದು ಭಾಗ. ‘ನ ಸ್ನಾನಮಾಚರೇತ್ ಭುಕ್ತ್ವಾ’- ಊಟ ಆದ ತಕ್ಷಣ ಸ್ನಾನ ಮಾಡಬಾರದು; ಅದರಿಂದ ಜೀರ್ಣಶಕ್ತಿಗೆ ತೊಂದರೆಯುಂಟಾಗುತ್ತದೆ. ‘ನಾತುರೇ’- ರೋಗವಿದ್ದಾಗ ಸ್ನಾನ ಬೇಡ. ‘ನ ಮಹಾನಿಶಿ’ಮಧ್ಯರಾತ್ರಿಯಲ್ಲಿ ಸ್ನಾನ ಬೇಡ. ‘ನಾವಿಜ್ಞಾತೇ ಜಲಾಶಯೇ’ಆಳ ಗೊತ್ತಿಲ್ಲದ ಕೊಳ, ಸರೋವರದಲ್ಲಿ ಸ್ನಾನ ಮಾಡುವುದು ಬೇಡ.
‘ಸ್ನಾನಮರ್ದಿತನೇತ್ರಸ್ಯ ಕರ್ಣ ರೋಗಾತಿಸಾರಿಷು| ಆಧ್ಮಾನ ಪೀನಸಾಜೀರ್ಣ ಭುಕ್ತವತ್ಸು ಚ ಗರ್ಹಿತಂ|’ ಅರ್ದಿತ ರೋಗ, ನೇತ್ರ ರೋಗ, ಆಸ್ಯ (ಬಾಯಿಗೆ ಸಂಬಂಧಪಟ್ಟ) ರೋಗ, ಕರ್ಣ ರೋಗ, ಅತಿಸಾರ, ಆಧ್ಮಾನ, ಅಜೀರ್ಣದಂತಹ ಕಾಯಿಲೆ ಇರುವಾಗ ಸ್ನಾನ ಮಾಡಬಾರದು. ಆರೋಗ್ಯರಕ್ಷಣೆಯ ಕಾಳಜಿ ಇಲ್ಲಿದೆ.
ಹೀಗೆ ಸ್ನಾನವೆನ್ನುವ ಕೃತಿಯೊಂದು ಮನುಷ್ಯಜೀವನದಲ್ಲಿ ಚೆನ್ನಾಗಿ ಆಗುತ್ತ ಆಗುತ್ತ ಸಂಸ್ಕøತಿಯಾಗುತ್ತದೆ.
ಇದೇ ರೀತಿ ಊಟ, ನಿದ್ರೆ, ಮಾತು, ಸ್ವಚ್ಛತೆ ಇತ್ಯಾದಿ ಎಲ್ಲ ವೈಯಕ್ತಿಕ ಕೃತಿಗಳಲ್ಲೂ ಸಂಸ್ಕøತಿಯನ್ನು ಸಾಧಿಸಬೇಕು.
ಸಾಮಾಜಿಕ
ಇನ್ನೊಬ್ಬರ ಜೊತೆಗಿನ ನಮ್ಮ ವ್ಯವಹಾರಗಳು ಸುಸಂಸ್ಕøತವಾಗಿರಬೇಕು. ಸ್ತ್ರೀ-ಪುರುಷ ನಡುವಿನ ಸಂಬಂಧದ ಆಚರಣೆಗಳೇನಿವೆಯೋ ಅವನ್ನು ಸುಸಂಸ್ಕøತವಾಗಿ ಮಾಡಬೇಕೆಂಬ ಕಾರಣದಿಂದ ‘ಮಾತೃವತ್ ಪರದಾರೇಷು’ಎನ್ನುವ ನಿಬಂಧನೆಯನ್ನಿಟ್ಟರು. ಬೇರೆ ಹೆಣ್ಣುಮಕ್ಕಳನ್ನು ತಾಯಿಯಂತೆ ನೋಡಬೇಕು, ಸ್ತ್ರೀ-ಪುರುಷ ಸಂಬಂಧದಲ್ಲಿ ಒಬ್ಬರಿಗೊಬ್ಬರು ಎಚ್ಚರಿಕೆಯಿಂದ ಇರಬೇಕು.
ಅತ್ಯಾಚಾರವೆಂಬುದು ದೊಡ್ಡ ಸಾಮಾಜಿಕ ಪಿಡುಗಾಗಿದ್ದು, ಅದಕ್ಕೆ ತತ್ಕಾಲೀನ, ಪಶ್ಚಾತ್ಕಾಲೀನ, ದೀರ್ಘಕಾಲೀನ ಎಂಬ ಮೂರು ಮುಖದ ಪರಿಹಾರ ಇದೆ.
ಅತ್ಯಾಚಾರದಂತಹ ಪ್ರಸಂಗಗಳು ಎದುರಾದಾಗ ಆ ಪರಿಸ್ಥಿತಿಯನ್ನು ನಿವಾರಿಸಲು ಅಗತ್ಯವಾದ ಕರಾಟೆ ಇತ್ಯಾದಿ ತರಬೇತಿ, ಸಹಾಯವಾಣಿ ಸಂಖ್ಯೆ ಪೂರೈಕೆ, ‘ಮೇರೀ ಸಹೇಲೀ’ಯೋಜನೆ ಇತ್ಯಾದಿ ರಕ್ಷಣಾತ್ಮಕ ವ್ಯವಸ್ಥೆಗಳು ತತ್ಕಾಲೀನ ಪರಿಹಾರದಲ್ಲಿ ಬರುತ್ತವೆ.
ಪಶ್ಚಾತ್ಕಾಲೀನ ಪರಿಹಾರವೆಂದರೆ ಅಂತಹ ತಪ್ಪನ್ನು ಮಾಡಿದ ಪುರುಷನಿಗೆ ಅತ್ಯಂತ ಕಠಿಣ ಶಿಕ್ಷೆ ನೀಡುವ ಮೂಲಕ ಅಂತಹ ಕೃತ್ಯವನ್ನು ಎಸಗುವ ಕುರಿತು ಎಚ್ಚರಿಕೆ ನೀಡುವುದು, ತನ್ಮೂಲಕ ಭಯ ಹುಟ್ಟಿಸುವುದು. ಇವೆರಡೂ ಅತ್ಯಾಚಾರ ಸಮಸ್ಯೆಗೆ ಮೂರನೇ ಎರಡರಷ್ಟು ಮಾತ್ರ ಪರಿಹಾರ ನೀಡಬಹುದಾಗಿದೆ.
ಮೂರನೆಯದು ದೀರ್ಘಕಾಲೀನ ಪರಿಹಾರ. ಅತ್ಯಾಚಾರದಂತಹ ಸಮಸ್ಯೆಯನ್ನು ಎದುರಿಸಲು ಸ್ತ್ರೀ-ಪುರುಷರಿಬ್ಬರೂ ಅಂತಹ ಪ್ರಸಂಗಗಳೇ ಎದುರಾಗದ ಹಾಗೆ ಎಚ್ಚರಿಕೆ ತೆಗೆದುಕೊಳ್ಳುವುದು, ಅಂತಹ ಸನ್ನಿವೇಶ ಎದುರಾದರೂ ಸಂಯಮ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಪುರುಷನಿಗೆ ಸಂಸ್ಕಾರ ನೀಡುವುದು. ಈ ಬಗೆಯ ಪರಿಹಾರದಲ್ಲಿ ಇಬ್ಬರ ಪಾತ್ರವೂ ಮಹತ್ತ್ವದ್ದಾಗಿರುತ್ತದೆ. ಈ ಮಾರ್ಗದಲ್ಲಿ ಯಶಸ್ಸು ದೊರಕಬೇಕಾದರೆ ಬೆಳೆಯುವ ಮಕ್ಕಳಿಗೆ ಜೀವನದ ಶಿಸ್ತನ್ನು ಕಲಿಸಬೇಕಾಗುತ್ತದೆ.
ವಿದ್ಯೆ ಕಲಿಯಬೇಕಾದ ಸಮಯದಲ್ಲಿ ಪ್ರೇಮಪತ್ರ ಬರೆಯುವುದು, ನಿರಾಸೆಯಿಂದ ಆತ್ಮಹತ್ಯೆ ಮಾಡಿಕೊಳ್ಳುವುದು ಇವೆಲ್ಲ ಸರಿಯಾದ ಮಾರ್ಗವಲ್ಲ. ಪ್ರೇಮವಾಗಲಿ ಕಾಮವಾಗಲಿ ತಪ್ಪಲ್ಲ. ಆದರೆ ಅದಕ್ಕೊಂದು ಸಮಯ, ವಯಸ್ಸು ಇದೆಯಲ್ಲವೇ? ಸುಖದ ಜೊತೆಗೆ ಹೊಣೆಯೂ ಬರುತ್ತದೆ. ವಿವೇಕವಿಲ್ಲದ ವಯಸ್ಸಿನಲ್ಲಿ ಎಲ್ಲವೂ ಸುಖವಾಗಿಯೇ ತೋರುತ್ತದೆಯೇ ಹೊರತು ಅದರ ಹಿಂದಿರುವ ಜವಾಬ್ದಾರಿ ಕಾಣುವುದಿಲ್ಲ. ಶರೀರ ಸಿದ್ಧವಾದಾಗ, ವಿದ್ಯಾಭ್ಯಾಸವೆಲ್ಲ ಮುಗಿದು ಗಳಿಕೆಯನ್ನು ಆರಂಭಿಸಿದಾಗ ಪಾಲಕರೇ ವಿವಾಹದ ವ್ಯವಸ್ಥೆ ಮಾಡುತ್ತಾರೆ. ಜೀವನದ ಆರಂಭದ ದಿನಗಳಲ್ಲಿ ಭವಿಷ್ಯಕ್ಕೆ ಅಡಿಪಾಯ ಹಾಕಬೇಕು. ಹುಡುಗ-ಹುಡುಗಿಯರು ಉತ್ತಮಮಾರ್ಗದಲ್ಲಿ ಬೆಳೆಯುವ ವಾತಾವರಣವನ್ನು ನಿರ್ಮಿಸಬೇಕು, ಒಳ್ಳೆಯ ದೃಷ್ಟಿಕೋನವನ್ನು ಬೆಳೆಸಬೇಕು. ‘ಘೃತಕುಂಭ ಇವಾ ನಾರೀ ತಪ್ತಾಂಗಾರ ಇವ ಪುರುಷಃ| ತಸ್ಮಾತ್ ಘೃತಶ್ಚ ವಹ್ನಿಶ್ಚ ನೈಕತ್ರ ಸ್ಥಾಪಯೇತ್ ಬುಧಾಃ||’ ಎನ್ನುವ ಮಾತಿದೆ. ಹೆಣ್ಣು ತುಪ್ಪತುಂಬಿದ ಗಡಿಗೆ, ಗಂಡು ಕಾಯುವ ಕೆಂಡ. ಬುದ್ಧಿವಂತನಾದವನು ಇವೆರಡನ್ನೂ ಹತ್ತಿರ ಇಡುವುದಿಲ್ಲ.
ಬ್ರಹ್ಮಚರ್ಯದಲ್ಲಿ ನೈಷ್ಠಿಕ, ವೈವಾಹಿಕ ಎನ್ನುವ ಎರಡು ಬಗೆಗಳು. ‘ಬ್ರಹ್ಮಚರ್ಯ’ ಎನ್ನುವುದರ ತಾತ್ತ್ವಿಕ ಅರ್ಥ ಬ್ರಹ್ಮದಲ್ಲಿಯೇ ಮಗ್ನನಾಗಿರುವುದು ಎಂಬುದಾಗಿದೆ. ವಿವಾಹವಾದವರಿಗೂ ನಮ್ಮ ಸಂಸ್ಕøತಿಯು ಕಟ್ಟುಪಾಡುಗಳನ್ನು ವಿಧಿಸುತ್ತದೆ. ತಂದೆಯೂ ಮಗಳೊಂದಿಗೆ ಒಂದೇ ಆಸನದಲ್ಲಿ ಕುಳಿತುಕೊಳ್ಳಬಾರದು ಎಂಬ ನಿಯಮಗಳೂ ಇವೆ.
ವೃದ್ಧನೋರ್ವ ತಿಂಗಳ ಮಗುವಿಗೂ ‘ಅಮ್ಮಾ’ ಎಂದು ಸಂಬೋಧಿಸುವುದು ನಮ್ಮ ಸಂಸ್ಕøತಿಯ ವಿಶೇಷ. ವಿವೇಕಾನಂದರು ಲಂಡನ್ನಿನಲ್ಲಿ ಒಮ್ಮೆ ಒಬ್ಬ ಹುಡುಗಿಗೆ ವಿಳಾಸ ಕೇಳಲಿಕ್ಕೆಂದು ಆಕೆಯನ್ನು ‘ಅಮ್ಮಾ!’ ಎಂದು ಸಂಬೋಧಿಸಿದಾಗ ಆಕೆಗೆ ಕೋಪವೇ ಬಂದಿತು. ವಿಳಾಸ ಕೇಳಿ ತೊಂದರೆ ಮಾಡಿದ್ದಕ್ಕಲ್ಲ, ‘ಅಮ್ಮಾ’ ಎಂದು ಸಂಬೋಧಿಸಿದ್ದಕ್ಕೆ. ‘ತಾನಿನ್ನೂ ಮಗುವನ್ನು ಹೆತ್ತಿಲ್ಲ, ಆಗಲೇ ಅಮ್ಮನೆಂದು ಕರೆಯುವುದೇ?’ – ಇದು ಅವರ ದೃಷ್ಟಿಕೋನ. ಅಮ್ಮ ಎನ್ನುವುದು ಅಲ್ಲಿ ಶಾರೀರಿಕ ಪ್ರಕ್ರಿಯೆ. ಆದರೆ ನಮ್ಮಲ್ಲಿ ಭಾವಾತ್ಮಕ ಅಂಶ. ಅಮ್ಮಾ ಎಂದರೆ ನಮಗೆ ‘ಆಕೆ ನಮ್ಮನ್ನು ಸಲಹುತ್ತಾಳೆ’ ಎನ್ನುವ ಭಾವ ಇದೆಯೇ ಹೊರತು, ಮಗುವನ್ನು ಹೆತ್ತಳು, ಎನ್ನುವ ಅರ್ಥ ಮಾತ್ರವೇ ಇಲ್ಲ.
ಪತಿ-ಪತ್ನಿ, ತಂದೆ-ಮಕ್ಕಳು, ರಾಜ-ಪ್ರಜೆ ಇಂತಹ ಎಲ್ಲ ಸಂಬಂಧಗಳಿಗೂ ಇಂತಹ ಅನೇಕ ನಿಬಂಧನೆಗಳನ್ನು ನಮ್ಮಲ್ಲಿ ಹಾಕಲಾಗಿದೆ. ರಾಮ ಓರ್ವ ಆದರ್ಶ ಪುತ್ರ, ಮಿತ್ರ, ಸಹೋದರ. ಎಲ್ಲದರಲ್ಲೂ ಆತ ಆದರ್ಶ. ತಂದೆಯ ಮಾತನ್ನು ಉಳಿಸುವುದಕ್ಕಾಗಿ ಸ್ವತಃ ಕಾಡಿಗೆ ಹೋದನಾತ.
ಪಾಂಡವರ ಬಗ್ಗೆ ಹೇಳುವ ಮಾತು ಹೀಗಿದೆ: ಒಬ್ಬರನ್ನೊಬ್ಬರು ನೋಡಿದಾಗ ಅವರಿಗೆ ಆನಂದವಾಗುತ್ತಿತ್ತು. ಎಷ್ಟೇ ಕಷ್ಟನಷ್ಟ ಬಂದರೂ ಒಗ್ಗಟ್ಟಾಗಿದ್ದು ಗೆದ್ದು ಬದುಕಿದರು ಅವರು. ಪರಸ್ಪರ ಅರ್ಥ ಮಾಡಿಕೊಂಡು, ಒಪ್ಪಿಕೊಂಡು ಬದುಕಿದರು. ಆದರೆ ದುರ್ಯೋಧನನ ನಡೆ ಎಲ್ಲವೂ ತದ್ವಿರುದ್ಧ.
ಸಮಷ್ಟಿಪ್ರಜ್ಞೆಯನ್ನು ಕಲಿಸುವುದಕ್ಕೆ ನಮ್ಮಲ್ಲಿ ಕುಟುಂಬಪದ್ಧತಿ ಎಂಬ ಸುಂದರ ವ್ಯವಸ್ಥೆಯಿದೆ. ಪಾಶ್ಚಿಮಾತ್ಯಸಮಾಜದ ಅತಿಚಿಕ್ಕ ಘಟಕ ವ್ಯಕ್ತಿಯಾದರೆ ಪೌರಸ್ತ್ಯರಲ್ಲಿ, ಅದರಲ್ಲೂ ಭಾರತದಲ್ಲಿ ಅದು ಕುಟುಂಬವಾಗಿದೆ. ಒಬ್ಬರಿದ್ದವರು ಇಬ್ಬರಾದಾಗ ಅಲ್ಲಿ ಸುಖದ ಜೊತೆಜೊತೆಗೆ ಜವಾಬ್ದಾರಿಯೂ ಬರುತ್ತದೆ. ಜೊತೆಯಲ್ಲಿರುವ ಇನ್ನೊಬ್ಬರಿಗೆ ತೊಂದರೆ ಆಗದ ಹಾಗೆ, ಅಷ್ಟೇ ಅಲ್ಲ ಅನುಕೂಲವಾಗುವಂತೆ ಬದುಕುವ ಹೊಣೆ ಇರುತ್ತದೆ. ಮಕ್ಕಳು, ತಂದೆ-ತಾಯಿ, ಅತ್ತೆ-ಮಾವ, ಅಜ್ಜ-ಅಜ್ಜಿ, ನೆಂಟರಿಷ್ಟರು ಇವರೆಲ್ಲರ ಜೊತೆಯಲ್ಲಿ, ಎಲ್ಲರನ್ನೂ ಅರ್ಥಮಾಡಿಕೊಂಡು, ಯಾರಿಗೂ ತೊಂದರೆ ಆಗದಂತೆ, ಮನೆಯ ಅಭಿವೃದ್ಧಿಯ ಜೊತೆಗೆ ವೈಯಕ್ತಿಕ ಏಳ್ಗೆಯನ್ನೂ ಕಂಡುಕೊಂಡು ಬದುಕುವ ಜವಾಬ್ದಾರಿ ಅದು. ತನಗಿಂತ ಹಿರಿಯರಲ್ಲಿ ಗೌರವ, ಸಮಾನರಲ್ಲಿ ಸ್ನೇಹ, ಚಿಕ್ಕವರಲ್ಲಿ ಪ್ರೀತಿ, ಈ ಬಗೆಯಲ್ಲಿ ನಡವಳಿಕೆಯಲ್ಲಿ ತನ್ನದೇ ಆದ ನಾಜೂಕು ಇರುತ್ತದೆ. ‘ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ’- ತಾಯಿ, ತಂದೆ, ಆಚಾರ್ಯ, ಅತಿಥಿಗಳನ್ನು ದೇವರೆಂದೇ ಭಾವಿಸಬೇಕು ಎನ್ನುತ್ತದೆ ನಮ್ಮ ಪರಂಪರೆ. “ಭೂಮಿಗಿಂತ ತೂಕವಾದದ್ದು, ಆಕಾಶಕ್ಕಿಂತ ಎತ್ತರವಾದದ್ದು ಯಾವುದು?” ಎನ್ನುವ ಯಕ್ಷನ ಪ್ರಶ್ನೆಗೆ ಧರ್ಮರಾಯ ‘ಭೂಮಿಗಿಂತ ತೂಕವಾದ್ದು ತಾಯಿ, ಆಕಾಶಕ್ಕಿಂತ ಎತ್ತರವಾದದ್ದು ತಂದೆ’ ಎನ್ನುವ ಉತ್ತರ ನೀಡುತ್ತಾನೆ.
ಮಿತ್ರನೆಂದರೆ ‘ಮೋದಯತಿ, ತಾರಯತಿ’ ಎನ್ನುವ ಅರ್ಥವಿದೆ. ‘ಮೋದಯತಿ’ ಎಂದರೆ ಆನಂದವನ್ನು ಕೊಡುವವ. ನಮಗೆ ಬೇಸರವಾಗಿದ್ದಾಗ ಸ್ನೇಹಿತರ ಬಳಿ ಹೋಗುತ್ತೇವೆ. ಅಂತಹ ಸಮಯದಲ್ಲಿ ಮಿತ್ರನೇ ನಮಗೆ ಸಮಾಧಾನ, ಆನಂದ ನೀಡಬಲ್ಲ. ಏಕೆಂದರೆ ಸ್ನೇಹ ಎಂದಾಗ ಅಲ್ಲಿ ವಿಮರ್ಶೆ ಪ್ರಧಾನ ಅಲ್ಲ. ಕಠೋರ ವಿಮರ್ಶಕನು ಸ್ನೇಹಿತನಾಗಲಾರ.
‘ತಾರಯತಿ’ ಎಂದರೆ ಕಷ್ಟಕಾಲದಲ್ಲಿ ರಕ್ಷಿಸುವವನು ಎಂದರ್ಥ. ನಮ್ಮ ಕಷ್ಟಕಾಲದಲ್ಲಿ ನಮಗೆ ಸಮಾಧಾನ, ಕೈಲಾದಷ್ಟು ನೆರವು ನೀಡುವವ ಮಿತ್ರ. ಸ್ನೇಹ ಎಂದರೆ ಜಿಡ್ಡು ಎಂದರ್ಥ. ಎರಡು ಗಟ್ಟಿವಸ್ತುಗಳ ಪರಸ್ಪರ ಘರ್ಷಣೆಯಲ್ಲಿ ಅಹಿತವಾಗುತ್ತದೆ; ಆಗ ಅಲ್ಲಿ ಸ್ನೇಹವನ್ನು ಬಳಸಲಾಗುತ್ತದೆ. ಉದಾಹರಣೆಗೆ, ಯಂತ್ರಗಳ ಭಾಗಗಳ ಮಧ್ಯೆ ಎಣ್ಣೆ ಬಳಸುವ ಮೂಲಕ ಘರ್ಷಣೆಯನ್ನು ಕಡಮೆ ಮಾಡಲಾಗುತ್ತದೆ.
ಹೀಗೆ ಸ್ತ್ರೀ-ಪುರುಷ, ತಂದೆ-ತಾಯಿ, ಗುರು, ಅತಿಥಿ, ಮಿತ್ರ ಮೊದಲಾದವರ ವ್ಯವಹಾರವನ್ನು ವಿವರಿಸಿದ್ದು ಸಾಮಾಜಿಕ ಸಂಬಂಧ.
ಪರಿಸರಸಂಬಂಧೀ
ಭೂಕಂಪ, ಭೂತಾಪ ಏರಿಕೆ, ಪ್ರವಾಹ ಈ ಎಲ್ಲ ಸಮಸ್ಯೆಗಳು ತಲೆದೋರಿದಾಗ ನಮಗೆ ಸಮಸ್ಯೆ ದುರ್ಭರವಾಗಬಾರದು ಎನ್ನುವ ಕಾರಣಕ್ಕಾಗಿ ಪರಿಸರದ ಬಗ್ಗೆ ಕಾಳಜಿ ವ್ಯಕ್ತಪಡಿಸುವಷ್ಟು ನಾವು ಸಂವೇದನಾಶೀಲರಾಗಿದ್ದೇವೆ. ಆದರೆ ಅದಕ್ಕಿಂತ ಹೆಚ್ಚಾಗಿ ನನ್ನಂತೆಯೇ ಎಲ್ಲರೂ ಸಮಾನ ಅಧಿಕಾರವುಳ್ಳವರು ಎನ್ನುವ ಭಾವನೆಯಿಂದ ಸುತ್ತಲ ಪರಿಸರದ ಜೊತೆಗೆ ವ್ಯವಹರಿಸುವುದು ನಿಜವಾದ ಶ್ರದ್ಧೆ. ಪರಮಾತ್ಮನ ಈ ಸೃಷ್ಟಿಯಲ್ಲಿ ಪುರುಷನು ಕೇಂದ್ರ; ಉಳಿದ ಜಗತ್ತು ಇರುವುದು ಅವನ ಸುಖಕ್ಕಾಗಿ; ಮರ ಕಡಿಯುವುದು, ನೀರನ್ನು ಯಥೇಚ್ಛ ಬಳಸುವುದು, ಪ್ರಾಣಿಗಳನ್ನು ಕೊಲ್ಲುವುದು ಇವೆಲ್ಲ ಅವನ ಹಕ್ಕು – ಎಂದೇ ಕೆಲವರು ಭಾವಿಸುತ್ತಾರೆ. ಆದರೆ ವಾಸ್ತವದಲ್ಲಿ ಸೃಷ್ಟಿಯ ಕೇಂದ್ರ ಪುರುಷ ಅಲ್ಲ, ಪರಮಾತ್ಮ. ಎಲ್ಲರಿಗೂ ಸಮಾನವಾದ ಅವಕಾಶಗಳಿವೆ. ಆನೆಗೆ ಬದುಕಲು ಇರುವಷ್ಟೇ ಹಕ್ಕು ಇರುವೆಗೂ ಇದೆ. ಮನುಷ್ಯನು ಪ್ರಾಣಿ-ಪಶು-ಪಕ್ಷಿ, ಗಿಡ-ಮರಗಳಿಂದ ಏನನ್ನಾದರೂ ಪಡೆದುಕೊಳ್ಳುವುದು ಅವನ ಹಕ್ಕಲ್ಲ; ಅವನಿಗೆ ಅವು ಮಾಡಿದ ಉಪಕಾರ. ಹಾಗಾಗಿ ಅವುಗಳನ್ನು ಕೃತಜ್ಞತೆಯಿಂದ ನೋಡಬೇಕು. ಇದು ಪರಿಸರಸಂರಕ್ಷಣೆಯ ಯೋಗ್ಯ ದೃಷ್ಟಿ.
‘ವಿಷ್ಣುಪತ್ನಿ ನಮಸ್ತುಭ್ಯಂ ಪಾದಸ್ಪರ್ಶಂ ಕ್ಷಮಸ್ವ ಮೇ’, ‘ಮಾತಾ ಭೂಮಿಃ, ಪುತ್ರೋýಹಂ ಪೃಥಿವ್ಯಾಃ’, ‘ಜನನೀ ಜನ್ಮಭೂಮಿಶ್ಚ ಸ್ವರ್ಗಾದಪಿ ಗರೀಯಸೀ’ – ಭೂಮಿಯು ನಮಗೆ ತಾಯಿ ಎನ್ನುವ ಹಿನ್ನೆಲೆಯಲ್ಲಿ ಇವೆಲ್ಲ ಮಾತುಗಳಿವೆ. ಭೂಮಿ ವಿಷ್ಣುವಿನ ಪತ್ನಿ. ಗಂಗೆಯನ್ನು ಶಿವ ತನ್ನ ಜಟೆಯಲ್ಲಿಟ್ಟುಕೊಂಡು ಗಂಗಾಧರನಾದ. ಗಂಗೆಯ ದರ್ಶನ, ಪಾನದಿಂದ ನಾವು ಪಾವನರಾಗುತ್ತೇವೆ. ಎಲ್ಲ ನೀರು ನಮಗೆ ಗಂಗಾಸಮಾನ. ನೀರು ನಮ್ಮ ಪಾಲಿಗೆ ಗಂಗಾಮಾತಾ.
ಒಮ್ಮೆ ಹೀಗಾಯಿತು – ರೈಲಿನಲ್ಲಿ ಇಬ್ಬರು ವಿದ್ಯಾವಂತರು ಕಿಟಕಿಯ ಪಕ್ಕಗಳಲ್ಲೇ ಕುಳಿತಿದ್ದರು. ಸೂಟುಬೂಟಿನ ಉಡುಗೆ, ಕೈಯಲ್ಲಿ ಉರಿಯುವ ಸಿಗರೇಟು. ತುಸುಹೊತ್ತಿನಲ್ಲೇ ಒಬ್ಬ ಭಿಕ್ಷುಕಿ ತನ್ನ ಮಗುವಿನೊಡನೆ ಅಲ್ಲಿಗೆ ಬಂದು ಕುಳಿತಳು. ಮುಂದೆ ಗಡಗಡ ಸದ್ದು ಬರತೊಡಗಿತು. ಕಾರಣ, ರೈಲು ಗಂಗಾನದಿಯ ಸೇತುವೆಯ ಮೇಲೆ ಹೋಗುತ್ತಿದೆ. ಸೂಟುಬೂಟಿನ ಇವರಿಬ್ಬರೂ ಕೈ ಹೊರಕ್ಕೆ ಹಾಕಿ ತಮ್ಮ ಉರಿಯುವ ಸಿಗರೇಟಿನಿಂದ ಬೂದಿಯನ್ನು ನದೀನೀರಿಗೆ ಕೊಡವಿದರು. ಭಿಕ್ಷುಕಿಯ ಮಗು ನೀರನ್ನು ಕಂಡು ‘ಪಾನೀ ಪಾನೀ’ ಎಂದು ಕೈ ತಟ್ಟಿತು. ಆಗ ಆ ತಾಯಿ ಮಗುವಿನ ಕೆನ್ನೆಯ ಮೇಲೆ ಪ್ರೀತಿಯಿಂದ ಹೊಡೆದು ಹೇಳಿದಳು “ಪಾನೀ ನಹೀ, ಗಂಗಾಮಯ್ಯಾ ಬೋಲೋ”.
ಒಮ್ಮೆ ಗಾಂಧಿಯವರು ಊಟ ಮಾಡಿದ ಬಳಿಕ ಕೈತೊಳೆಯುವ ಸಂದರ್ಭದಲ್ಲಿ ಹೆಚ್ಚು ನೀರು ಬಳಸಿದರು. ‘ಮಾತನಾಡುತ್ತ ತುಂಬ ನೀರು ಬಳಸಿಬಿಟ್ಟೆ’ ಎಂದು ಪೇಚಾಡಿಕೊಂಡರು. ಆಗ “ಅರೆ! ಗಾಂಧಿಜೀ, ಪ್ರಯಾಗದಲ್ಲಿ ತ್ರಿವೇಣೀ ಸಂಗಮವೇ ಇದೆ. ಅಷ್ಟು ಯಾಕೆ ಚಿಂತೆಮಾಡುತ್ತೀರಿ?” ಎಂದರು ನೆಹರೂ. ಗಾಂಧಿಯವರು “ನೀರು ಇದೆ, ಆದರೆ ಅದು ನನಗೊಬ್ಬನಿಗೇ ಅಲ್ಲವಲ್ಲ” ಎಂದರಂತೆ.
ಗಿಡಮರ, ಕಲ್ಲುಮಣ್ಣು, ಹಾವುಹಸುಗಳನ್ನು ಪೂಜೆ ಮಾಡುವ ನಮಗೆ ಅವೆಲ್ಲ ಸಂಕೇತಗಳು. ಅರ್ಥವಾಗದವರಿಗೆ ಅವು ಎಲಿಫೆಂಟ್ ಗಾಡ್, ಮಂಕಿ ಗಾಡ್, ಸರ್ಪೆಂಟ್ ಗಾಡ್ ಎನಿಸಬಹುದು. ಆದರೆ ನಾವು ಪೂಜಿಸುವುದು ಬರಿಯ ಕಲ್ಲನ್ನಲ್ಲ, ಅದರೊಳಗಿನ ದೇವರನ್ನು. ಕಲ್ಲಿನಲ್ಲಿ, ವೃಕ್ಷದಲ್ಲಿ, ಹಾವಿನಲ್ಲಿ ಎಲ್ಲದರಲ್ಲೂ ದೇವರಿದ್ದಾನೆ. ಕುಂಡಲಿನೀಶಕ್ತಿಯ ಸಂಕೇತವಾಗಿ ನಾಗಾರಾಧನೆ ಮಾಡುತ್ತೇವೆ. ಆಕಾಶ ಮಹಾಭೂತದ ಅಧಿದೇವತೆಯಾಗಿ ಗಣೇಶನನ್ನು ಆರಾಧಿಸುತ್ತೇವೆ. ಹನುಮಂತನು ರಾಮದೂತ, ರಾಮಪ್ರಿಯ, ರಾಮಭಕ್ತ, ರಾಮದಾಸ. ಆತನ ಸಾಹಸ-ಸಮರ್ಪಣೆ ನಮಗೆ ಆದರ್ಶ. ಹಾಗಾಗಿಯೇ ನಮ್ಮಲ್ಲಿ ಕೋತಿಗಳನ್ನು ಕಂಡರೆ ಕೈಮುಗಿಯುತ್ತಾರೆ, ಕೋತಿಗಳನ್ನು ಕೊಲ್ಲಬಾರದು ಎನ್ನುತ್ತಾರೆ. ಕೋತಿಗಳು ಸತ್ತರೆ ಸಂಸ್ಕಾರ ಮಾಡುವ ಜನರಿದ್ದಾರೆ ನಮ್ಮಲ್ಲಿ.
ಹೀಗೆ ಪರಮಾತ್ಮನ ಸೃಷ್ಟಿ ಏನಿದೆÉಯೋ ಅದೆಲ್ಲದರ ಜೊತೆಗೆ ನಮ್ಮ ವ್ಯವಹಾರ ಚೆನ್ನಾಗಿ, ಸೂಕ್ಷ್ಮವಾಗಿ, ಪ್ರೀತಿಯಿಂದ ಕೂಡಿರಬೇಕು. ಬದುಕುವುದಕ್ಕೆ ಎಲ್ಲರಿಗೂ ಇಲ್ಲಿ ಅವಕಾಶವಿರಬೇಕು. ಇದು ಜೀವನಶೈಲಿಯ ಮತ್ತೊಂದು ರೀತಿ.
ದೈವಸಂಬಂಧಿ
ರಿಲಿಜನ್ ಎಂಬ ವ್ಯವಸ್ಥೆಯಲ್ಲಿ ಕೆಲವರು ಜೆಹಾದಿಗಳು, ಇವಾಂಜಲಿಸ್ಟರು ಜಗತ್ತಿನಲ್ಲಿ ಅಶಾಂತಿಯನ್ನು ನಿರ್ಮಾಣಮಾಡುವ ಪ್ರಯತ್ನ ನಡೆಸಿದ್ದಾರೆ. ಹಿಂದುತ್ವವು ದೇವರ ವಿಷಯದಲ್ಲಿ ಉತ್ತಮ ಮಾರ್ಗವನ್ನು ತೋರುತ್ತದೆ. “ದೇವರು ಯಾವುದೋ ಒಂದು ಸ್ಥಳದಲ್ಲಿ ಮಾತ್ರ ಇಲ್ಲ, ಅವನು ಎಲ್ಲರಲ್ಲೂ, ಎಲ್ಲೆಡೆಯೂ ಇದ್ದಾನೆ” – ಎನ್ನುವ ತತ್ತ್ವದಲ್ಲಿ ನಂಬಿಕೆ ನಮ್ಮದು. ಹಾಗಾಗಿಯೇ ನಾವು ಎಲ್ಲ ಕಡೆಯೂ ದೇವಾಲಯ ಕಟ್ಟುತ್ತೇವೆ. ಗುಡಿಯ ಮೂರ್ತಿಯಲ್ಲಿ ನಾವು ಕಲ್ಲನ್ನು ನೋಡುವುದಿಲ್ಲ, ದೇವರನ್ನು ಕಾಣುತ್ತೇವೆ. ಒಬ್ಬ ಮನುಷ್ಯನಿಗೆ ಮಾಡುವ ಎಲ್ಲ ಉಪಚಾರಗಳು ದೇವರಿಗೂ ಸಲ್ಲುತ್ತವೆÉ. ಗಂಟೆ ಬಾರಿಸಿ ಒಳಗೆ ಹೋಗುತ್ತೇವೆ, ಮೂರ್ತಿಗೆ ಸ್ನಾನ ಮಾಡಿಸಿ, ಪರದೆ ಎಳೆದು ಅಲಂಕಾರ ಮಾಡುತ್ತೇವೆ. ನೈವೇದ್ಯದ ಹೆಸರಿನಲ್ಲಿ ಊಟ ನೀಡುತ್ತೇವೆ. ಅಡುಗೆ ಮನೆಯಲ್ಲಿದ್ದಾಗ ಹೋಳಿಗೆ ಎಂದು ಕರೆದರೆ ದೇವರ ಮುಂದೆ ‘ನೈವೇದ್ಯ’ವೆನಿಸಿಕೊಳ್ಳುತ್ತದೆ, ಅಲ್ಲಿಂದ ಹೊರತಂದಾಗ ‘ಪ್ರಸಾದ’ ವಾಗುತ್ತದೆ. ಲಿಂಗದ ಮೇಲೆ ಬೀಳುವ ನೀರು ಕೆಳಗೆಬಂದಾಗ ತೀರ್ಥ. ಇವೆಲ್ಲ ‘ಕಲ್ಲಿನಲ್ಲೂ ದೇವರಿದ್ದಾನೆ’ ಎಂದು ನಂಬುವವರಿಗೆ.
ಗಂಧಮಾದನ ಪರ್ವತದಿಂದ ಸೌಗಂಧಿಕಾ ಪುಷ್ಪವನ್ನು ತರುವುದಕ್ಕೆ ಭೀಮನು ಹೊರಟಾಗ ಅವನನ್ನು ಪರೀಕ್ಷಿಸಲೆಂದು ದಾರಿಗಡ್ಡವಾಗಿ ಮಲಗಿದ್ದ ಹನುಮಂತ ‘ನೀನು ಯಾಕೆ ನನ್ನನ್ನು ಹಾರಿಕೊಂಡು ಹೋಗಬಾರದು?’ ಎಂದ. ಭೀಮ ಉತ್ತರಿಸುತ್ತಾನೆ -‘ನಿನ್ನಲ್ಲಿರುವ ಪರಮಾತ್ಮನನ್ನು ಗೌರವಿಸಬೇಕು ಎನ್ನುವ ಉದ್ದೇಶದಿಂದ ನಾನು ಹಾಗೆ ಮಾಡುತ್ತಿಲ್ಲ. ಇಲ್ಲದಿದ್ದರೆ ಹನುಮಂತ ಸಾಗರವನ್ನು ಹಾರಿಕೊಂಡು ಹೋದಹಾಗೆ ನಿನ್ನನ್ನು ಹಾರಿಕೊಂಡು ಹೋಗಿಬಿಡುತ್ತಿದ್ದೆ.’ ನಮ್ಮ ಪಕ್ಕದಲ್ಲಿ ಕುಳಿತಿದ್ದವರ ಕಾಲಿಗೆ ನಮ್ಮ ಕಾಲು ತಗುಲಿದರೆ ಕೂಡಲೇ ಅವರನ್ನು ಮುಟ್ಟಿ ಕಣ್ಣಿಗೆ ಒತ್ತಿಕೊಳ್ಳುತ್ತೇವೆ.
‘ತಾನಾಗಬಲ್ಲನಿಲ್ಲಿ ನರನು ನಾರಾಯಣ’. ಯಾರು ಬೇಕಾದರೂ ಇಲ್ಲಿ ದೇವರಾಗಬಹುದು. ಪರಿಪೂರ್ಣತೆಯ ಪ್ರಾಪ್ತಿಗಾಗಿ ಸಾಧನೆ ಮಾಡುತ್ತ ಸಿದ್ಧಿ ಪಡೆಯುವವರು ದೇವರು ಎಂದೇ ಪೂಜೆ ಪಡೆಯುತ್ತಾರೆ ಇಲ್ಲಿ.
‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಇದು ವಿವೇಕಾನಂದರ ಚಿಕಾಗೋ ಭಾಷಣದ ಸಾರ. ಅಲ್ಲಿ ಅವರು ಪ್ರತಿಪಾದಿಸಿದ ವಿಷಯ ಪೂಜಾಪದ್ಧತಿಗಳ ಸ್ವಾತಂತ್ರ್ಯ. ದೇವರು ಒಬ್ಬನೇ, ಆದರೆ ಯಾವ ಹೆಸರಿನಿಂದಲೂ ಕರೆಯಬಹುದು, ಪೂಜಿಸಬಹುದು. ಬಸವಣ್ಣನವರು ಹೇಳಿದರು – “ದೇವನೊಬ್ಬ, ನಾಮ ಹಲವು”. ವಿವೇಕಾನಂದರ ಚಿಕಾಗೋ ಭಾಷಣದ ಸಾರವನ್ನು ಎಲ್ಲೆಡೆ ಸಾರುವ ಮೂಲಕ ಮಾತ್ರವೇ ಇಂದು ನಮ್ಮನ್ನು ಕಾಡುತ್ತಿರುವ ಭಯೋತ್ಪಾದನೆಯೆಂಬ ರೋಗಕ್ಕೆ ಮದ್ದನ್ನೆರೆಯಬಹುದು. ‘ಋಜುಕುಟಿಲನಾನಾಪಥಜುಷಾಂ ಪಯಸಾಂ ಅರ್ಣವ ಇವ|’ ನದಿಯು ಸಮುದ್ರವನ್ನು ಸೇರುವುದಕ್ಕೆ ನೇರವಾದ, ವಕ್ರವಾದ ಮಾರ್ಗಗಳನ್ನೆಲ್ಲ ಅನುಸರಿಸುವಂತೆ ನಾವು ಯಾವ ಹೆಸರಿನಲ್ಲಾದರೂ, ಯಾವ ದಾರಿಯಲ್ಲಾದರೂ ದೇವರನ್ನು ಪೂಜಿಸಬಹುದು. ವೈದಿಕರ ಇಂದ್ರ, ಯಮ, ವೇದಾಂತಿಗಳ ಬ್ರಹ್ಮ, ಶೈವರ ಶಿವ, ವೈಷ್ಣವರ ವಿಷ್ಣು, ಬೌದ್ಧರ ಬುದ್ಧ, ಜೈನರ ಅರ್ಹನ್, ಸಿಖ್ಖರ ಅಕಾಲ್ ಅಷ್ಟೇ ಅಲ್ಲದೆ ಶಾಸ್ತಾ, ಕುಮಾರ ಇತ್ಯಾದಿ ಎಲ್ಲ ಹೆಸರೂ ದೇವರ ನಾಮಗಳೇ. ಆ ಗುಂಪಿಗೆ ನಾವು ‘ಗಾಡ್’ಮತ್ತು ‘ಅಲ್ಲಾ’ ರನ್ನೂ ಸೇರಿಸಿಕೊಳ್ಳಲು ಸಿದ್ಧ. ಹಾಗಾಗಿಯೇ ಹಿಂದೂಸ್ತಾನದಲ್ಲಿ ಎಲ್ಲ ಪೂಜಾಪದ್ಧತಿಯವರೂ ನಿಶ್ಚಿಂತೆಯಿಂದ, ನೆಮ್ಮದಿಯಿಂದ ಬದುಕುವುದಕ್ಕೆ ಸಾಧ್ಯವಾಗಿದೆ.
ರಾಷ್ಟ್ರೀಯತೆಗೆ ಬುನಾದಿ ಸಂಸ್ಕøತಿ
ನಮ್ಮ ರಾಷ್ಟ್ರೀಯತೆಯ ಹಿಂದಿನ ಶಕ್ತಿ ನಮ್ಮ ಸಂಸ್ಕøತಿಯೇ ಆಗಿದೆ. ಜಗತ್ತಿನಲ್ಲಿ ಅನೇಕ ದೇಶಗಳು ನಿರ್ಮಾಣವಾಗುವುದಕ್ಕೆ ಒಬ್ಬ ರಾಜ ಕಾರಣನಾದ. ಅದರಿಂದ ನೇಶನ್-ಸ್ಟೇಟ್ಸ್ಗಳು ನಿರ್ಮಾಣಗೊಂಡವು. ಇಂಗ್ಲೆಂಡ್, ಜರ್ಮನಿಯಂತಹ ದೇಶಗಳ ಒಗ್ಗಟ್ಟಿಗೆ ಭಾಷೆಯೂ ಕಾರಣವಾಯಿತು. ಇನ್ನು ಕೆಲವು ಗುಂಪುಗಳ ಅಸ್ತಿತ್ವಕ್ಕೆ ರಿಲಿಜನ್ ಕಾರಣವಾಗಿದೆ. ಕೆಲವು ದೇಶಗಳ ಅಸ್ತಿತ್ವಕ್ಕೆ ಯಾವುದೊ ಒಂದು ವಿಚಾರ ಕಾರಣವಾಯಿತು. ಆದರೆ ರಾಜ್ಯ, ಭಾಷೆ, ದೇವರು, ವಿಚಾರಗಳು ಈ ಎಲ್ಲದರಲ್ಲಿ ಅನೇಕತೆ ಇರುವುದಾದರೂ ಹಿಂದೂಗಳು ಒಟ್ಟಿಗೇ ಬದುಕುವುದಕ್ಕೆ ಸಾಧ್ಯವಾಗಿರುವುದು ನಮ್ಮ ಸಂಸ್ಕøತಿಯಿಂದ. ನಮ್ಮ ರಾಷ್ಟ್ರೀಯತೆಯ ಆಧಾರ ನಮ್ಮ ಸಂಸ್ಕøತಿ.
‘ನ್ಯಾಶನಾಲಿಟಿ’ ರಾಷ್ಟ್ರೀಯತೆಯಲ್ಲ. ದೇಶಗಳ ಸಮೂಹದಲ್ಲಿ ತನ್ನ ದೇಶವನ್ನು ರಕ್ಷಿಸುವÀ ಎಚ್ಚರಿಕೆಯನ್ನು ‘ನ್ಯಾಶನಾಲಿಟಿ’ ಎನ್ನುತ್ತಾರೆ. ಅದರಲ್ಲಿ ಸಂಕುಚಿತತೆ, ಗಡಿವಿವಾದ, ಒಬ್ಬರಿಗೊಬ್ಬರಿಗೆ ದ್ವೇಷ ಎಲ್ಲವೂ ಇದೆ. ಆದರೆ ಸಂಪೂರ್ಣ ಜಗತ್ತನ್ನೇ ಒಂದು ಕುಟುಂಬವಾಗಿ ಭಾವಿಸುವುದನ್ನು ‘ರಾಷ್ಟ್ರೀಯತೆ’ ಎನ್ನುತ್ತಾರೆ. ರಾಷ್ಟ್ರೀಯತೆಯ ವಿಚಾರವು ವೇದಮೂಲವಾದುದು. ನ್ಯಾಶನಾಲಿಟಿಯ ಜಾಗೃತಿಯು 15ನೇ ಶತಮಾನÀದಲ್ಲಿ ಯೂರೋಪಿನಲ್ಲಿ ಥಿಯೋಕ್ರಸಿಯ ವಿರುದ್ಧವಾಗಿ ಮೂಡಿತು. ನ್ಯಾಶನಾಲಿಟಿಗೆ ಆಧಾರ ಭಾಷೆ ಇತ್ಯಾದಿ ಇರಬಹುದು; ಆದರೆ ರಾಷ್ಟ್ರೀಯತೆಗೆ ಆಧಾರ ಸಂಸ್ಕøತಿ ಮಾತ್ರವೇ. ಇಡೀ ಜಗತ್ತೇ ಒಂದು ಕುಟುಂಬವಾಗಬೇಕಾದರೆ ಅದಕ್ಕೆ ತ್ಯಾಗ ಮುಖ್ಯ. ತ್ಯಾಗವೆನ್ನುವುದು ಸಂಸ್ಕøತಿಯ ಉತ್ಕøಷ್ಟವಾದ ಅಭಿವ್ಯಕ್ತಿ. ಹೀಗೆ ರಾಷ್ಟ್ರೀಯತೆಗೆ ಆಧಾರ ಸಂಸ್ಕøತಿ, ನಮ್ಮದು ಸಾಂಸ್ಕøತಿಕ ರಾಷ್ಟ್ರೀಯತೆ.
ಹಿಟ್ಲರನ ‘ನ್ಯಾಶನಾಲಿಟಿ’ಗೂ, ರಾ.ಸ್ವ. ಸಂಘದ ‘ರಾಷ್ಟ್ರೀಯತೆ’ಗೂ ಅಜಗಜಾಂತರವಿದೆ. ಶ್ರೀಗುರೂಜೀಯವರು ಸಂಘದ ಬಗ್ಗೆ ಮಾತನಾಡುವಾಗ ‘ಆರ್ಎಸ್ಎಸ್ ಈಸ್ ನಾಟ್ ಆ್ಯನ್ ಆರ್ಗನೈಸೇಶನ್ ಇನ್ ದ ಸೊಸೈಟಿ; ಬಟ್ ಇಟ್ ಈಸ್ ಆರ್ಗನೈಸಿಂಗ್ ದ ಸೊಸೈಟಿ’ ಎನ್ನುತ್ತಿದ್ದರು. ನ್ಯಾಶನಾಲಿಟಿಯು ಒಂದು ಗುಂಪನ್ನು ಪ್ರತಿನಿಧಿಸುತ್ತದೆ. ರಾಷ್ಟ್ರೀಯತೆಯು ಜಗತ್ತನ್ನೇ ಒಂದು ಕುಟುಂಬವಾಗಿ ರೂಪಿಸುತ್ತದೆ.
ನಮ್ಮನ್ನು ಒಂದುಮಾಡಿರುವುದು ನಮ್ಮ ಜೀವನಶೈಲಿ. ಯಾವುದೇ ಭಾಷೆಯವರಿದ್ದರೂ ಅವರೆಲ್ಲರೂ ರಾಮಾಯಣವನ್ನು ಓದುತ್ತಾರೆ, ಗೋವನ್ನು ಪೂಜೆ ಮಾಡುತ್ತಾರೆ, ಕಾವಿಯನ್ನು ಒಪ್ಪಿಕೊಳ್ಳುತ್ತಾರೆ. ಕೃಷ್ಣ ಎಲ್ಲರಿಗೂ ಬೇಕು. ಎಲ್ಲ ಕಡೆಯೂ ಭೂಮಿಯನ್ನು, ವೃಕ್ಷವನ್ನು ಪೂಜೆ ಮಾಡುತ್ತಾರೆ. ಎಲ್ಲ ಕಡೆಯೂ ನಾಗಾರಾಧನೆ ಇದೆ. ಭೂಮಿ-ಭಾಷೆಯ ಹೆಸರಿನಲ್ಲಿ ಕಲಹ ಮಾಡುವವರು ಇಲ್ಲವೆಂದಲ್ಲ. ಆದರೆ ಎಲ್ಲವನ್ನೂ ಮರೆತು ಪ್ರಯಾಗ, ಕಾಶಿ, ರಾಮೇಶ್ವರ, ಕಂಚಿಯಂತಹ ತೀರ್ಥಸ್ಥಳಕ್ಕೆ ಎಲ್ಲರೂ ಭೇಟಿ ನೀಡುತ್ತಾರೆ. ತೀರ್ಥಯಾತ್ರೆ ನಮ್ಮನ್ನೆಲ್ಲ ಒಗ್ಗೂಡಿಸಿದೆ. ‘ಮಾತೃದೇವೋ ಭವ, ಪಿತೃದೇವೋ ಭವ, ಆಚಾರ್ಯದೇವೋ ಭವ, ಅತಿಥಿದೇವೋ ಭವ’ ಈ ಮಾತುಗಳು ಎಲ್ಲ ಕಡೆಯೂ ನಮಗೆ ಕೇಳಿಸುತ್ತವೆ. ಹಬ್ಬ-ಹರಿದಿನಗಳು ಎಲ್ಲರ ಆಚರಣೆಯ ಶ್ರದ್ಧಾಕೇಂದ್ರಗಳಾಗಿವೆ. ಜಾತ್ರೆ ಎಲ್ಲ ಕಡೆಯೂ ನಡೆಯುತ್ತದೆ. ನಂಬಿಕೆಗಳು, ಗಾದೆಗಳು ಎಲ್ಲ ಕಡೆಯೂ ಒಂದೇ ಆಗಿವೆ. ಸಂಸ್ಕøತವು ನಮ್ಮ ಎಲ್ಲ ಭಾಷೆಗಳಲ್ಲೂ ಹಾಸುಹೊಕ್ಕಾಗಿಹೋಗಿದೆ. ದೀಪದ ಆರಾಧನೆ, ಋಷಿಗೋತ್ರ ಅನುಸರಣೆ, ಪಿತೃಪೂಜೆ, ತಪ್ಪಿಗೆ ಪ್ರಾಯಶ್ಚಿತ್ತ ಇತ್ಯಾದಿಗಳು ಭಾಷೆ-ಪ್ರಾಂತಗಳÀನ್ನೂ ಮೀರಿ ಸಮಾನವಾಗಿ ಆಚರಣೆಯಲ್ಲಿ ಇರುವಂಥವು.
ಹೀಗೆ ನಮ್ಮ ಸಂಸ್ಕøತಿಯು ನಮ್ಮ ರಾಷ್ಟ್ರೀಯತೆಗೆ ಆಧಾರ. ಈ ಸಂಸ್ಕøತಿಗೆ ಜಗತ್ತನ್ನೇ ಒಂದುಮಾಡುವ ಶಕ್ತಿಯಿದೆ. ಇದೇ ಹಿಂದೂಜೀವನಶೈಲಿಯ ವಿಶೇಷತೆ.