ಹೋಳಿಹಬ್ಬದ ಮೇಲೆ ಚಿತ್ರರಂಗಕ್ಕೆ ಮೊದಲಿನಿಂದಲೂ ಏನೊ ಒಂದು ತರಹದ ಪ್ರೀತಿ. ಈ ಹಬ್ಬದ ಸೀಕ್ವೆನ್ಸನ್ನು ಸಿನೆಮಾದಲ್ಲಿ ಹೇಗೆ ಬೇಕಾದರೂ ಬಳಸಬಹುದು. ಈ ಹಬ್ಬದ ಚಿತ್ರೀಕರಣವಿದೆ ಎಂದು ತಿಳಿದರೆ ನಿರ್ದೇಶಕರಿಗೆ ಉತ್ಸಾಹ, ಕ್ಯಾಮರಾಮನ್‍ಗೆ ರೋಮಾಂಚನ, ನಟ-ನಟಿಯರಿಗೆ ಪುಳಕ. ಈ ಹಬ್ಬವೇ ಹೋಳಿ. ಕಪ್ಪು-ಬಿಳುಪು ಸಿನೆಮಾಗಳಲ್ಲೂ ಓಕುಳಿಯಾಡಲಾಗಿತ್ತು ಎಂದರೆ ಈ ಹಬ್ಬದ ಮೇಲೆ ಸಿನಿರಂಗದವರಿಗೆ ಇರುವ ಒಲವನ್ನು ಅರ್ಥಮಾಡಿಕೊಳ್ಳಬಹುದು.
ಹೋಳಿಹಬ್ಬವನ್ನು ಭಾರತೀಯ ಚಲನಚಿತ್ರಗಳಲ್ಲಿ ಅದ್ಭುತವಾಗಿ ಚಿತ್ರಿಸಲಾಗಿದೆ. ಅದ್ಧೂರಿ ತಾರಾಗಣ, ಭರ್ಜರಿ ಸೆಟ್, ನೂರಾರು ನೃತ್ಯಗಾರರು, ಕುರ್ಚಿಯಿಂದ ಪುಟಿದೆದ್ದು ಹೆಜ್ಜೆಹಾಕಲು ಪ್ರೇರೇಪಿಸುವ ಉನ್ಮಾದದ ಸಂಗೀತ, ‘ಕರಿಮೋಡಕಿಂತ ಸೊಗಸು ಮುಂಗುರುಳ ಮೋಹಕ ಬಣ್ಣ, ಬಿಳಿದಂತಕಿಂತ ಚೆಲುವು ನಿನ್ನೊಡಲ ಮೋಹಕ ಬಣ್ಣ’ ಎಂಬಂತಹ ಹಾಡಿನ ಸಾಲುಗಳು, ಹಾಡಿನಲ್ಲಿ ನಿಧಾನವಾಗಿ ವಿವಿಧ ಬಣ್ಣಗಳಲ್ಲಿ ಮಿಂದೇಳುವ ನಟ-ನಟಿ, ಕಂಡೂ ಕಾಣದಂತೆ ಮಿಂಚಿನಂತೆ ಬಂದು ಹೋಗುವ ಮೈಮಾಟ – ಹೀಗೆ ಚಲನಚಿತ್ರಗಳಲ್ಲಿ 1930ರ ದಶಕದಿಂದ ಆರಂಭಿಸಿ ಇತ್ತೀಚಿನವರೆಗೂ ಹೋಳಿಹಬ್ಬವನ್ನು ರಮಣೀಯವಾಗಿ, ಸುಂದರವಾಗಿ, ಮನಸ್ಸಿಗೂ ಇಂದ್ರಿಯಗಳಿಗೂ ಮುದ ನೀಡುವಂತೆ ಚಿತ್ರಿಸಲಾಗಿದೆ. ಇದಕ್ಕಾಗಿ ನಿರ್ದೇಶಕ, ಕ್ಯಾಮರಾಮನ್, ನಟ-ನಟಿ, ಗೀತರಚನಕಾರ, ಸಂಗೀತ ನಿರ್ದೇಶಕ, ವಸ್ತ್ರವಿನ್ಯಾಸಕ, ನೃತ್ಯನಿರ್ದೇಶಕ, ಸಂಕಲನಕಾರ – ಎಲ್ಲರೂ ಶ್ರಮಿಸಿದ್ದಾರೆ.
ಐದಾರು ದಶಕಗಳ ಹಿಂದಿನ ಹೋಳಿಯ ಹಾಡುಗಳು ಇಂದಿನ ಹೋಳಿಯ ಸಂಭ್ರಮದಲ್ಲಿ ಹೋಟೆಲ್, ರಿಸಾರ್ಟ್, ಬಡಾವಣೆ, ಆರ್ಕೆಸ್ಟ್ರಾ, ಗೆಳೆಯ-ಗೆಳತಿಯರ ಪಟಾಲಂ, ಡಿಜಿಟಲ್ ಸಂಗೀತ ಕಾರ್ಯಕ್ರಮ, ಎಫ್.ಎಂ.ಗಳಲ್ಲಿ ಮತ್ತೆ ಮತ್ತೆ ಕೇಳಿಸುತ್ತಿರುವುದೇ ಇವುಗಳ ಜನಪ್ರಿಯತೆಗೆ ಸಾಕ್ಷಿ. ‘ಸಿಲ್‍ಸಿಲಾ’ ಚಿತ್ರದ ‘ರಂಗ ಬರಸೇ ಭೀಗೇ ಚುನರವಾಲೀ’, ‘ಶೋಲೆ’ ಚಿತ್ರದ ‘ಹೋಲೀ ಕೇ ದಿನ್ ದಿಲ್ ಖಿಲ್ ಜಾತೇ ಹೈ’ ಮುಂತಾದ ಹಾಡುಗಳು ಮೂರುತಲೆಮಾರುಗಳ ಹೋಳಿಯ ಸಂಭ್ರಮಕ್ಕೆ ಕಾರಣವಾಗಿವೆ. ‘ನವರಂಗ್’ ಸಿನೆಮಾದ ಹಾಡುಗಳು ಜನಪ್ರಿಯತೆಯ ಜೊತೆಗೆ ಗೀತರಚನಕಾರ, ನಟಿ, ನೃತ್ಯನಿರ್ದೇಶಕ, ಸಂಗೀತನಿರ್ದೇಶಕ ಹಾಗೂ ನಿರ್ದೇಶಕರ ಪ್ರತಿಭೆಗೆ ಸಾಕ್ಷಿಯಾಗಿವೆ.
ಹೋಳಿಗೆ ತನ್ನದೇ ಆದ ಇತಿಹಾಸವಿದೆ. ಮನುಷ್ಯನ ರಸಿಕತೆ, ಶೃಂಗಾರ ಕಲ್ಪನೆ, ವಯಸ್ಸಿಗೆ ಬಂದ ಹೆಣ್ಣು-ಗಂಡುಗಳು ಸಾಮಾಜಿಕ ಚೌಕಟ್ಟಿನಲ್ಲಿಯೇ ಕೀಟಲೆ ಮಾಡಿಕೊಂಡು ಓಕುಳಿಯಾಡಿ ಒಬ್ಬರನ್ನೊಬ್ಬರು ಅರ್ಥಮಾಡಿಕೊಳ್ಳುವ ದೃಷ್ಟಿಯಿಂದ ನಮ್ಮ ಹಿರಿಯರು ಕಂಡುಕೊಂಡ ಉತ್ಸವವೇ ಹೋಳಿಹಬ್ಬ.
ರಾಸ್‍ಲೀಲಾ, ಲಠ್‍ಮಾರ್ ಹೋಳಿ, ಕಾಮಣ್ಣನ ಹಬ್ಬ, ಭಾಂಗ್ ಸೇವನೆ, ಕ್ರಾಸ್ ಡ್ರೆಸ್ಸಿಂಗ್, ಬೊಬ್ಬೆಹೊಡೆಯುವುದು, ತೃತೀಯ ಲಿಂಗಿಗಳ ನೃತ್ಯ ಎಲ್ಲವೂ ಹೋಳಿಯ ಜೊತೆ ಬೆರೆತುಕೊಂಡ ಆಚರಣೆಗಳು. ಉಳಿದ ಸಮಯದಲ್ಲಿ ನಿಷಿದ್ಧವಾಗಿರುವ ಚುಡಾಯಿಸುವಿಕೆ, ಕಿರುಚಾಟ, ವಿಪರೀತ ಕುಣಿತ – ಎಲ್ಲಕ್ಕೂ ಹೋಳಿಹಬ್ಬದಂದು ಮಾತ್ರ ಅಧಿಕೃತ ಮುದ್ರೆ. ಹಾಗಾಗಿಯೇ ಉತ್ತರಭಾರತದಲ್ಲಿ ಹೇಳುವುದು – “ಹೋಲೀ ಹೈ ಭಾಯ್ ಹೋಲೀ ಹೇ, ಬುರಾ ನ ಮಾನೋ ಹೋಲೀ ಹೈ’’ (ಹೋಲಿ ಇದೆಯಪ್ಪ ಹೋಲಿ ಇದೆ, ತಪ್ಪು ತಿಳ್ಕೋಬೇಡಿ ಹೋಲಿ ಇದೆ).
ಹೆಣ್ಣನ್ನು ಕೇವಲ ಭೋಗವಸ್ತುವೆಂದುಕೊಂಡಿರುವ ವಿದೇಶೀ ಮತ, ಜಾತಿ, ತತ್ತ್ವಗಳಿಗೆ ಹೋಳಿ ಸದಾ ಅಶ್ಲೀಲವಾಗಿ ಕಂಡಿದೆ. ಆದರೆ ಆರೋಗ್ಯಕರ ಸಮಾಜಕ್ಕೆ ಹೋಳಿಯಂತಹ ಆಚರಣೆ ಎಷ್ಟು ಮುಖ್ಯ ಎಂದು ನಮ್ಮ ಪೂರ್ವಜರು ನೂರಾರು ವರ್ಷಗಳ ಹಿಂದೆಯೇ ವಸಂತೋತ್ಸವ, ಹೋಳಿಯ ಮೂಲಕ ಕಂಡುಕೊಂಡಿದ್ದರು.
ಇಂತಹ ಹೋಳಿಯನ್ನು ಭಾರತದ ಭಾಗಶಃ ಎಲ್ಲ ಭಾಷೆಗಳ ಚಿತ್ರಗಳು – ಮುಖ್ಯವಾಗಿ ಹಿಂದಿ – ಪರಿಣಾಮಕಾರಿಯಾಗಿ, ಕಾವ್ಯಾತ್ಮಕವಾಗಿ, ಶೃಂಗಾರಕಾವ್ಯವಾಗಿ ಬಳಸಿಕೊಂಡಿವೆ. ಹೋಳಿಹಾಡುಗಳಲ್ಲಿ ಚಿತ್ರಕ್ಕೆ ಮಹತ್ತ್ವದ ತಿರುವು ನೀಡಲಾಗಿದೆ, ಕಾಮೆಡಿ ಸೃಷ್ಟಿಸಲಾಗಿದೆ, ಪ್ರೇಮನಿವೇದನೆ ಮಾಡಲಾಗಿದೆ, ಹಾಗೆಯೇ ಹಲವೊಮ್ಮೆ ಸಾಮಾಜಿಕ ಹೋರಾಟದ ಸ್ವರೂಪವನ್ನೂ ನೀಡಲಾಗಿದೆ.
ಹೋಳಿಹಾಡುಗಳನ್ನು, ಸಂದರ್ಭಗಳನ್ನು ಚಲನಚಿತ್ರಗಳಲ್ಲಿ ಅಳವಡಿಸಿಕೊಳ್ಳುವ ಪರಿಪಾಟಿ ಸ್ವಾತಂತ್ರ್ಯಪೂರ್ವದಲ್ಲೇ ಕಾಣಬಹುದು. 1931ರಲ್ಲಿ ತೆರೆಕಂಡ ಚಿತ್ರ ‘ಘರ್ ಕೀ ಲಕ್ಷ್ಮೀ’. ನಿರ್ದೇಶಕರು ಕಾಂಜಿಭಾಯಿ ರಾಠೋಡ್. ಬಹುಶಃ ಹೋಳಿ ಕುರಿತು ಚಲನಚಿತ್ರದಲ್ಲಿ ಬಂದ ಮೊದಲ ಗೀತೆ ‘ಮೋಪೆ ಡಾರ್ ಗಯೋ ರಂಗ್ ಕೇ ಗಗರ್, ಕೈಸಾ ಧೋಕಾ ಕಿಯಾ’ ಈ ಚಿತ್ರದ್ದು.
ಅದಾದ ಬಳಿಕ 1940ರಲ್ಲಿ ಮೆಹಬೂಬ್‍ಖಾನ್ ನಿರ್ದೇಶನದ ಚಿತ್ರ ‘ಔರತ್’ ಬಿಡುಗಡೆಯಾಯಿತು. ಸರ್ದಾರ್ ಅಖ್ತರ್ ನಟನೆಯ ಈ ಚಿತ್ರದಲ್ಲಿ ಬರುವ ಹಾಡು ‘ಜಮುನಾ ತಟ್ ಶ್ಯಾಮ್ ಖೇಲೇ ಹೋಲೀ, ಜಮುನಾ ತಟ್’. ಡಾ. ಸಫ್ದರ್ ಸಾಹಿತ್ಯಕ್ಕೆ ಸಂಗೀತ ನೀಡಿದ್ದು ಅನಿಲ್ ಬಿಸ್ವಾಸ್. (ಹದಿನೇಳು ವರ್ಷಗಳ ಬಳಿಕ ಬಂದ ಮಹತ್ತ್ವದ ಚಿತ್ರ ‘ಮದರ್ ಇಂಡಿಯಾ’ಕ್ಕೂ, ‘ಔರತ್’ಗೂ ಸಂಬಂಧವಿದೆ. ವಾಸ್ತವವಾಗಿ ‘ಔರತ್’ ಚಿತ್ರವೇ 1957ರಲ್ಲಿ ‘ಮದರ್ ಇಂಡಿಯಾ’ ಮೂಲಕ ಹೊಸರೂಪದಲ್ಲಿ ಮತ್ತೊಮ್ಮೆ ಮೆಹಬೂಬ್‍ಖಾನ್ ನಿರ್ದೇಶನದಲ್ಲಿ ಬೆಳ್ಳಿತೆರೆಗೆ ಬಂದಿತು.)
1955ರಲ್ಲಿ ಬಿಡುಗಡೆಯಾದ ‘ಇನ್ಸಾನಿಯತ್’ ಚಿತ್ರದಲ್ಲಿ ಕೂಡ ಹೋಳಿಯ ಹಾಡಿದೆ. ‘ತೇರೇ ಸಂಗ್ ಸಂಗ್ ಸಂಗ್ ಪಿಯಾ ಖೇಲ್’ ಹಾಡನ್ನು ಹಾಡಿದ್ದು ಲತಾ ಮಂಗೇಶ್ಕರ್. ಸಿ. ರಾಮಚಂದ್ರ ಸಂಗೀತದಲ್ಲಿ ಶಿಳ್ಳೆಯನ್ನು ಕೂಡ ತಾಳಕ್ಕೆ ತಕ್ಕಂತೆ ಬಳಸಿರುವುದು ವಿಶೇಷ. ಹೋಳಿಯ ಹಾಡಿನಲ್ಲಿ ಶಿಳ್ಳೆ ಇರದಿದ್ದರೆ ಹೇಗೆ ಅಲ್ಲವೆ!
ಆದರೆ ಈ ಎಲ್ಲ ಹೋಳಿಯ ಹಾಡುಗಳಿಗಿಂತ ಜನಪ್ರಿಯತೆಯನ್ನು ಗಳಿಸಿದ ಹಾಡು ‘ಹೋಲೀ ಆಯೀ ರೇ ಕನ್ಹಾಯಿ ಹೋಲೀ ಆಯೀ ರೇ’ 1957ರಲ್ಲಿ ಬೆಳ್ಳಿತೆರೆಗೆ ಬಂತು, ‘ಮದರ್ ಇಂಡಿಯಾ’ ಚಿತ್ರದ ಮೂಲಕ.
ಭಾರತಕ್ಕೆ ಸ್ವಾತಂತ್ರ್ಯ ಬಂದು, ಚಿತ್ರರಂಗದಲ್ಲಿ ಸಾಕಷ್ಟು ಪ್ರಯೋಗಗಳು ನಡೆಯುತ್ತಿದ್ದ ಕಾಲ. ಮೆಹಬೂಬ್ ಖಾನ್ ನಿರ್ದೇಶನದ ಈ ಚಿತ್ರ ಭಾರತೀಯ ಚಿತ್ರರಂಗದಲ್ಲಿ ಹೊಸ ಮೈಲುಗಲ್ಲನ್ನೇ ಸ್ಥಾಪಿಸಿತು. ಬಾಕ್ಸ್‍ಆಫೀಸ್ ಗಳಿಕೆಗಿಂತ ತನ್ನ ಸಂದೇಶದ ಮೂಲಕ ಅದು ಮನೆಮಾತಾಯಿತು. ಹಳ್ಳಿಯ ಧೂರ್ತ ಲೇಣಿದೇಣಿಗಾರನ ವಿರುದ್ಧ ಹೋರಾಟ ನಡೆಸುವ ಹೆಣ್ಣುಮಗಳೊಬ್ಬಳ ಕಥೆ ಇದು. ನರ್ಗೀಸ್, ರಾಜಕುಮಾರ್, ಸುನೀಲ್‍ದತ್, ರಾಜೇಂದ್ರಕುಮಾರ್ ಇದ್ದ ಅದ್ಧೂರಿ ತಾರಾಗಣ. ಭಾರತೀಯಸಮಾಜ ಮತ್ತು ಮಹಿಳೆಯ ಕುರಿತು ಇದ್ದ ಋಣಾತ್ಮಕ ಭಾವನೆಯನ್ನು ಅಂತಾರಾಷ್ಟ್ರೀಯಮಟ್ಟದಲ್ಲಿ ತೊಳೆದುಹಾಕಿದ ಚಿತ್ರವೆಂದು ಖ್ಯಾತಿ ಗಳಿಸಿತು.
ಹೋಳಿಯ ಕುರಿತು ತುಂಬಾ ಅದ್ಧೂರಿಯಾಗಿ ಚಿತ್ರಿತಗೊಂಡ ಮೊದಲ ಹಾಡು ಇದೇ ಚಿತ್ರದ್ದು ಎನ್ನಬಹುದು. ಹಾಡು ಆರಂಭವಾಗುವುದೇ ಹೆಣ್ಣೊಬ್ಬಳು ಗಂಡಿನ ವೇಷ ಧರಿಸಿ ನೃತ್ಯ ಮಾಡುವುದರೊಂದಿಗೆ. ಹಾಡಿನ ಆರಂಭದಲ್ಲಿ ಫ್ರೇಮ್‍ನಲ್ಲಿ ಬಣ್ಣಗಳು ನಿಧಾನವಾಗಿ ತೂರಿಕೊಂಡು ಬರುವುದೇ ಒಂದು ಚೆಂದ. ಇದೇ ಹಾಡಿನ ಸಂದರ್ಭದಲ್ಲಿಯೇ ‘ಮದರ್ ಇಂಡಿಯಾ’ ತಿರುವು ಪಡೆಯುತ್ತದೆ. ಲೇಣಿದೇಣಿಗಾರನ ಮಗಳು, ಬಿರ್ಜುನ (ಸುನಿಲ್‍ದತ್) ತಾಯಿಯ ಬಳೆಗಳನ್ನು ತೋರಿಸುತ್ತ ಬಿರ್ಜುನನ್ನು ಅಣಕಿಸುತ್ತಾಳೆ. ಆ ಬಳೆಗಳನ್ನು ಲೇಣಿದೇಣಿಗಾರ, ಬಿರ್ಜುನ ತಾಯಿಯಿಂದ ಮೋಸಮಾಡಿ ಪಡೆದುಕೊಂಡಿರುತ್ತಾನೆ. ಹಾಡಿನ ಕೊನೆಯಲ್ಲಿ ಬಿರ್ಜು ಆ ಬಳೆಗಳನ್ನು ತೆಗೆಯಲು ಹೋದಾಗ ಆತನ ಮೇಲೆ ಹೆಣ್ಣಿನ ಮಾನದ ಮೇಲೆ ಕೈಹಾಕಿದ ಆರೋಪ ಬಂದು ಗದ್ದಲ ಆರಂಭವಾಗುತ್ತದೆ. ಹೋಳಿಯ ಸಂದರ್ಭದ ಈ ಗಲಾಟೆಯೇ ಮುಂದೆ ನಡೆಯುವ ಎಲ್ಲ ಘಟನೆಗಳ ಮೂಲ. ಹೆಣ್ಣಿನ ಮಾನ ಹಾಗೂ ಮಗನ ಪ್ರಾಣವನ್ನು ಆಯ್ಕೆ ಮಾಡಿಕೊಳ್ಳಬೇಕಾದ ಪ್ರಸಂಗ ಬಂದಾಗ, ತಾಯಿಯಾದವಳು (ನರ್ಗೀಸ್) ಹೆಣ್ಣಿನ ಮಾನವನ್ನೇ ಆಯ್ಕೆ ಮಾಡಿಕೊಂಡು ಮಗನನ್ನು ಕೊಲ್ಲುತ್ತಾಳೆ. ತಾಯಿಯ ಮಡಿಲಲ್ಲಿ ಬಿರ್ಜು ಪ್ರಾಣ ಬಿಡುತ್ತಾನೆ. ಹೀಗೆ ತಾಯಿಯ ಮಡಿಲಲ್ಲಿ ಪ್ರಾಣಬಿಡುವ ದೃಶ್ಯ ಸುನೀಲ್‍ದತ್‍ಗೆ ಅಪಾರ ಕೀರ್ತಿ ತಂದರೆ, ಇದೇ ರೀತಿಯ ಸನ್ನಿವೇಶ ಸುನೀಲ್‍ದತ್ ಮಗ ಸಂಜಯ್ ದತ್‍ನ ಮೇಲೆ ‘ವಾಸ್ತವ್’ ಚಿತ್ರದಲ್ಲಿ ಚಿತ್ರಿತವಾಗಿದೆ. ಅಲ್ಲಿ ಕೂಡ ತಾಯಿ ಮಗನನ್ನು ಕೊಲ್ಲುತ್ತಾಳೆ. ಇದು ಸಂಜಯ್‍ದತ್‍ನನ್ನು ಜನಪ್ರಿಯಗೊಳಿಸಿತು. ಹೀಗೆ ಹೋಳಿಯ ಸಂದರ್ಭ ‘ಮದರ್ ಇಂಡಿಯಾ’ ಚಿತ್ರದ ಪ್ರಮುಖ ಘಟ್ಟ.
1971ರಲ್ಲಿ ತೆರೆ ಕಂಡ ರಾಜೇಶ್ ಖನ್ನಾ, ಆಶಾ ಪಾರೇಖ್ ಅಭಿನಯದ ಚಿತ್ರ ‘ಕಟಿ ಪತಂಗ್’. ಅದರಲ್ಲಿನ ಹಾಡು ‘ಆಜ್ ನಾ ಛೋಡೇಂಗೆ ಬಸ್ ಹಮ್ ಜೋಲೀ’. ಹಲವಾರು ಹಿಟ್ ಹಾಡುಗಳನ್ನು ನೀಡಿರುವ ಆರ್.ಡಿ. ಬರ್ಮನ್ ಈ ಹಾಡಿನ ಸಂಗೀತ ನಿರ್ದೇಶಕರು. ಕಿಶೋರ್‍ಕುಮಾರ್ ಹಾಗೂ ಲತಾ ಮಂಗೇಶ್ಕರ್ ಯುಗಳ ಸ್ವರದಲ್ಲಿ ಬಂದ ಈ ಹಾಡು ಇಂದಿಗೂ ಡಿಜೆಗಳ ಅತ್ಯಾಪ್ತ ಹಾಡು. ವಿಶೇಷವೆಂದರೆ ಕಮಲ್ (ರಾಜೇಶ್ ಖನ್ನಾ) ಎಷ್ಟೇ ಉತ್ಸಾಹದಿಂದ ಕರೆದರೂ ಮಧು (ಆಶಾ ಪಾರೇಖ್) ಕೊನೆಯವರೆಗೂ ಹೋಳಿ ಆಡಲು ಬರುವುದಿಲ್ಲ. ಆಕೆ ವಿಧವೆಯಾಗಿರುವುದೇ ಇದಕ್ಕೆ ಕಾರಣ. ತನ್ನ ಎಲ್ಲ ಸಂಕಟಗಳನ್ನೂ, ಸಮಾಜದ ಭೀತಿಯನ್ನೂ, ತನ್ನ ದುರದೃಷ್ಟವನ್ನೂ ಈ ಹಾಡಿನಲ್ಲಿ ಹೇಳಿಕೊಂಡರೆ, ಸಮಾಜದ ಬಗ್ಗೆ ಚಿಂತೆ ಮಾಡದೆ ಮುಂದಿರುವ ಬಂಗಾರದಂತಹ ಬದುಕನ್ನು ಬಣ್ಣದಿಂದ ಅಲಂಕರಿಸುವಂತೆ ಕಮಲ್ ಹೇಳುತ್ತಾನೆ. ವಿಧವೆಯಾಗಿರುವುದರಿಂದ ಬಿಳಿಸೀರೆ ಉಟ್ಟ ಮಧು ಹಿಂಜರಿಯುತ್ತಾಳೆ. ಆದರೆ ಹಾಡಿನ ಕೊನೆಯಲ್ಲಿ ಆಕೆಯನ್ನು ಗುಂಪಿಗೆ ಕರೆದು, ಆಕೆಯ ಬಿಳಿಬಣ್ಣದ ಸೀರೆಯ ಮೇಲೆ ಬಣ್ಣವನ್ನು ಹಾಕುವ ಮೂಲಕ, ಮಹಿಳಾ ಸ್ವಾತಂತ್ರ್ಯದ ಕುರಿತಂತೆ ಜಡ್ಡುಗಟ್ಟಿರುವ ಸಮಾಜಕ್ಕೆ ಹಲವು ಸಂದೇಶಗಳನ್ನು ನೀಡುತ್ತಾನೆ ಕಮಲ್. ಹೋಳಿಯಂತಹ ಹಾಡಿನಲ್ಲಿ ಶೃಂಗಾರ ಹಾಗೂ ಕರುಣ ಎರಡೂ ರಸಗಳನ್ನು ಉಕ್ಕಿಸುವ ಹಾಡು ಇದು.
ಇನ್ನು ಭಾರತೀಯ ಸಿನಿರಂಗ ಕಂಡ ಶ್ರೇಷ್ಠ ಚಿತ್ರ 1975ರಲ್ಲಿ ತೆರೆಕಂಡ ರಮೇಶ್ ಸಿಪ್ಪಿ ನಿರ್ದೇಶನದ ‘ಶೋಲೇ’. ಇದರಲ್ಲಿನ ‘ಹೋಲೀ ಕೇ ದಿನ್ ದಿಲ್ ಖಿಲ್ ಜಾತೇ ಹೈ’ ಹಾಡು ಬಣ್ಣಗಳು ಬೆಳ್ಳಿಪರದೆಯ ಮೇಲೆ ಎಂತಹ ಪ್ರಭಾವವನ್ನು ಬೀರಬಲ್ಲವು ಎಂಬುದಕ್ಕೆ ಸಾಕ್ಷಿ. ಈ ಹಾಡು ಕೂಡ ಆರ್.ಡಿ. ಬರ್ಮನ್, ಕಿಶೋರ್‍ಕುಮಾರ್ ಮತ್ತು ಲತಾ ಮಂಗೇಶ್ಕರ್ ಕಾಂಬಿನೇಶನ್ನಿನ ಹಾಡು. ಬರೆದವರು ಆನಂದ್ ಭಕ್ಷಿ. ಹಾಡಿನ ವಿಶೇಷವೆಂದರೆ ವಸ್ತ್ರವಿನ್ಯಾಸ. ಬಹುತೇಕ ಹೋಳಿಹಾಡುಗಳಲ್ಲಿ ನಟ-ನಟಿಯರು, ನೃತ್ಯಗಾರರು ಬಿಳಿಬಣ್ಣದ ಕಾಸ್ಟ್ಯೂಮ್ ಧರಿಸಿದರೆ ಈ ಹಾಡಿನಲ್ಲಿ ಧರ್ಮೇಂದ್ರ, ಹೇಮಾಮಾಲಿನಿ, ಅಮಿತಾಭ್ ಬಚ್ಚನ್ ಸೇರಿದಂತೆ ಎಲ್ಲರೂ ಆಗಲೇ ವಿವಿಧ ಬಣ್ಣಗಳ ಕಾಸ್ಟ್ಯೂಮನ್ನೇ ಧರಿಸಿದ್ದಾರೆ. ಹಾಗಾಗಿ ಬಣ್ಣದ ಮೇಲೆ ಬಣ್ಣ. ಇಡೀ ಹಾಡಿನಲ್ಲಿ ಭಿನ್ನವಾಗಿ ಎದ್ದು ಕಾಣುವ ಒಂದೇ ಬಣ್ಣವೆಂದರೆ ಬಿಳಿಸೀರೆಯುಟ್ಟಿರುವ ಜಯಾಭಾದುರಿಯದ್ದು.
1981ರಲ್ಲಿ ತೆರೆಕಂಡ ಯಶ್ ಚೋಪ್ರಾ ನಿರ್ದೇಶನದ ‘ಸಿಲ್‍ಸಿಲಾ’ ಚಿತ್ರ ಹಲವು ಕಾರಣಗಳಿಂದ ಖ್ಯಾತಿ ಗಳಿಸಿತು. ಇದರ ‘ರಂಗ್ ಬರಸೇ ಭೀಗೇ ಚುನರವಾಲೀ’ ಹಾಡನ್ನು ಬರೆದದ್ದು ತಂದೆಯಾದರೆ, ಹಾಡಿದ್ದು ಮಗ. ಅಂದರೆ ಹರಿವಂಶರಾಯ್ ಬಚ್ಚನ್ ಗೀತೆ ರಚಿಸಿದ್ದರೆ, ಅಮಿತಾಭ್ ಬಚ್ಚನ್ ಹಾಡಿದ್ದಾರೆ. (ಹೋಳಿಯ ಕುರಿತೇ ಅಮಿತಾಭ್ ಹಾಡಿದ ಮತ್ತೊಂದು ಹಾಡೆಂದರೆ 2003ರಲ್ಲಿ ತೆರೆಕಂಡ ‘ಬಾಗ್ ಬಾನ್’ ಚಿತ್ರದ ‘ಹೋರಿ ಖೇಲೇ ರಘುವೀರಾ ಅವಧ್ ಮೇಂ’). ಅಮಿತ್ ಮಲ್ಹೋತ್ರಾ (ಅಮಿತಾಭ್ ಬಚ್ಚನ್) ಹಾಗೂ ಚಾಂದನಿ (ರೇಖಾ) ನಡುವಿನ ಪ್ರೀತಿ ಈ ಹಾಡಿನಲ್ಲೇ ಜಗಜ್ಜಾಹೀರಾಗುತ್ತದೆ. ಅಮಿತ್ ಮಲ್ಹೋತ್ರಾ ಭಾಂಗ್ ಕುಡಿದ ಗುಂಗಿನಲ್ಲಿ ಚಾಂದನಿ ಜೊತೆಗೆ ‘ಓವರ್ ಆಗಿ ಆಡುವುದನ್ನು’ ನೋಡಿದ ಡಾ. ವಿ.ಕೆ. ಆನಂದ್ (ಸಂಜೀವ್‍ಕುಮಾರ್) ಹಾಗೂ ಶೋಭಾ ಮಲ್ಹೋತ್ರಾ(ಜಯಾಭಾದುರಿ)ಗೆ ಮೊಸರಲ್ಲಿ ಕಲ್ಲಿರುವುದು ಗೊತ್ತಾಗುತ್ತದೆ. ಅಂತೂ ಅದುಮಿಟ್ಟ ಪ್ರೀತಿಯನ್ನು ಹೇಳಿಕೊಳ್ಳಲು ಹೋಳಿಹಬ್ಬವೇ ಬರಬೇಕಾಯಿತು!
ಹಿಂದೆ ಬೀಳದ ಕನ್ನಡ ಚಿತ್ರರಂಗ
ಹೋಳಿಯ ಹಾಡುಗಳನ್ನು ಬಳಸಿಕೊಳ್ಳುವಲ್ಲಿ ಕನ್ನಡ ಚಿತ್ರರಂಗವೂ ಹಿಂದೆಬಿದ್ದಿಲ್ಲ. ಬಣ್ಣಗಳೆಂದರೆ ಕನ್ನಡಿಗರಿಗೆ ಇಂದಿಗೂ ನೆನಪಾಗುವ ಹಾಡು ಮೂರು ದಶಕಗಳ ಹಿಂದಿನ ‘ಬಣ್ಣ ನನ್ನ ಒಲವಿನ ಬಣ್ಣ’. ಚಿತ್ರ ‘ಬಂಧನ’. ಉಷಾ ನವರತ್ನರಾಂ ಅವರ ಕಾದಂಬರಿ ಆಧಾರಿತ ಈ ಚಿತ್ರವನ್ನು ನಿರ್ದೇಶಿಸಿದ್ದು ಎಸ್.ವಿ. ರಾಜೇಂದ್ರಸಿಂಗ್ ಬಾಬು. ಹಳ್ಳಿಯಲ್ಲಿ ವೈದ್ಯಕೀಯ ಶಿಬಿರಕ್ಕೆ ತೆರಳುವ ಮಾರ್ಗದಲ್ಲಿ ವೈದ್ಯರ ತಂಡದ ಮೇಲೆ ಹೋಳಿಹಬ್ಬದ ಗುಂಗಿನಲ್ಲಿರುವ ತಂಡವೊಂದು ಬಣ್ಣವೆರಚುತ್ತದೆ. ಮೈತುಂಬಾ ಬಣ್ಣಗಳನ್ನು ಮಾಡಿಕೊಂಡ ಡಾ. ಆನಂದ್ (ವಿಷ್ಣುವರ್ಧನ್), ಡಾ. ನಂದಿನಿ(ಸುಹಾಸಿನಿ)ಯ ಪ್ರೀತಿಯಲ್ಲಿ ಬೀಳುತ್ತಾರೆ. ಹಾಗೆಯೇ ಕನಸು ಕಾಣುತ್ತಾರೆ. ಆ ಕನಸೇ ‘ಬಣ್ಣ ನನ್ನ ಒಲವಿನ ಬಣ್ಣ’ ಹಾಡು. ಆರ್.ಎನ್. ಜಯಗೋಪಾಲ್ ರಚಿಸಿರುವ ಸಾಹಿತ್ಯಕ್ಕೆ ಸ್ವರ ಸಂಯೋಜಿಸಿದವರು ಎಂ. ರಂಗರಾವ್. ಹಾಡಿದ್ದು ನಮ್ಮೆಲ್ಲರ ಅಚ್ಚುಮೆಚ್ಚಿನ ಎಸ್.ಪಿ. ಬಾಲಸುಬ್ರಹ್ಮಣ್ಯಂ ಹಾಗೂ ಎಸ್. ಜಾನಕಿ. ಹಾಡಿನುದ್ದಕ್ಕೂ ಆನಂದ್ ಹಾಗೂ ನಂದಿನಿ ಹಲವು ಕಾಸ್ಟ್ಯೂಮ್‍ಗಳನ್ನು ಬದಲಿಸಿದ್ದಾರೆ. ಹಾಡು ಆರಂಭವಾಗುವುದೇ ನಂದಿನಿ 6 ಬಣ್ಣಗಳ ಬೇರೆ ಬೇರೆ ಸೀರೆಗಳನ್ನು ಉಟ್ಟು ಸಂಭ್ರಮಿಸುವ ಮೂಲಕ. ಹಾಡಿನುದ್ದಕ್ಕೂ ಆನಂದ್ ನಂದಿನಿಯ ಮೇಲೆ ವಿವಿಧ ಬಣ್ಣಗಳ ನೀರನ್ನು ಸುರಿಯುತ್ತಾರೆ. ಗಮನಿಸಬೇಕಾದ ಅಂಶವೆಂದರೆ ಸಾಮಾನ್ಯವಾಗಿ ಹೋಳಿಯ ಎಲ್ಲ ಹಾಡುಗಳಲ್ಲಿ ಹೀರೋಯಿನ್ ಮೇಲೆ ಹೀರೋ ಬಣ್ಣ ಚೆಲ್ಲುವುದು, ಪಿಚಕಾರಿಯಿಂದ ನೀರು ಹಾರಿಸುವುದು, ಸೀರೆ ತೋಯಿಸುವುದು ಮಾಡಿದರೆ, ಈ ಹಾಡಿನಲ್ಲಿ ಮಾತ್ರ ಒಂದು ದೃಶ್ಯದಲ್ಲಿ ನಂದಿನಿ, ಆನಂದ್ ಮೇಲೆ ಹಾಲು ಸುರಿದು ಅವರನ್ನು ತೊಯ್ಯಿಸುತ್ತಾರೆ. ಆ ಸಂದರ್ಭದಲ್ಲಿ ಹಾಡಿನ ಲೈನ್ ಹೀಗಿದೆ – ‘ನೊರೆಹಾಲಿಗಿಂತ ಬಿಳುಪು ಈ ನಿನ್ನ ಮನಸಿನ ಬಣ್ಣ, ಮುಂಜಾನೆ ಮಂಜಿನ ಹಾಗೆ ತಂಪಾದ ಮಾತಿನ ಬಣ್ಣ’. ಒಮ್ಮುಖ ಪ್ರೀತಿ ಸಾಧ್ಯವಿಲ್ಲವಲ್ಲವೆ?
1993ರಲ್ಲಿ ತೆರೆಕಂಡ ಹಿಂದಿ ಚಲನಚಿತ್ರ ‘ಡರ್’. ಇದರ ರಿಮೇಕ್ ಕನ್ನಡದಲ್ಲಿ ಆಗಿದ್ದು 2000 ಇಸವಿಯಲ್ಲಿ, ‘ಪ್ರೀತ್ಸೆ’ ಎಂಬ ಹೆಸರಿನಿಂದ. ‘ಡರ್’ನಲ್ಲಿ ‘ಅಂಗ್ ಸೇ ಅಂಗ್ ಲಗಾನಾ’ ಹಾಡು ಹಾಗೂ ಕನ್ನಡದಲ್ಲಿ ‘ಹೋಳಿ ಹೋಳಿ ಹೋಳಿ ಹೋಳಿ’ ಹಾಡು ಎರಡೂ ತೀರ ಜನಪ್ರಿಯವಾದವು.
1984ರಲ್ಲಿ ‘ಫಿಲಂ ಆಂಡ್ ಟೆಲೆವಿಷನ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ’ದ ವಿದ್ಯಾರ್ಥಿಕಾರ್ಯಾಗಾರದ ಭಾಗವಾಗಿ ರೂಪಗೊಂಡ ಸಿನೆಮಾ ‘ಹೋಲೀ’. ಮಹೇಶ್ ಎಲಕುಂಚವಾರ್ ಅವರ ನಾಟಕವನ್ನೇ ಸಿನೆಮಾವನ್ನಾಗಿ ಮಾಡಲಾಯಿತು. ಕೇತನ್ ಮೆಹ್ತಾ ನಿರ್ದೇಶನದ ಈ ಚಿತ್ರ, ಹೋಳಿಯ ಸಂದರ್ಭದಲ್ಲಿ ಕಾಲೇಜಿಗೆ ರಜೆ ನೀಡದೆ ಇದ್ದಾಗ ನಡೆಯುವ ಕುರಿತ ಘಟನೆಯದ್ದಾಗಿದೆ. ಆಶುತೋಷ ಗೋವರೀಕರ್, ಆಮೀರ್‍ಖಾನ್ (ಆಗಿನ್ನೂ ಆಮೀರ್ ಹುಸೇನ್), ಓಂ ಪುರಿ, ದೀಪ್ತಿ ನವಲ್, ಮೋಹನ್ ಗೋಖಲೆ, ಪರೇಶ್ ರಾವಲ್, ಶ್ರೀರಾಮ್ ಲಾಗೂ, ನಾಸಿರುದ್ದೀನ್ ಷಾ ತಾರಾಗಣದ ಈ ಚಿತ್ರ, ಆಮೀರ್‍ಖಾನ್‍ರ ಮೊದಲ ಚಿತ್ರವೂ ಹೌದು.
ಸನ್ನಿ ದೇವಲ್ ಅವರ ‘ಯೇ ಢಾಯಿ ಕಿಲೋ ಕಾ ಹಾತ್’ ಹಾಗೂ ‘ತಾರೀಖ್ ಪೇ ತಾರೀಖ್’ ಡೈಲಾಗ್‍ಗಳಿಂದ ಪ್ರಸಿದ್ಧವಾದ, ಹೆಣ್ಣೊಬ್ಬಳು ವ್ಯವಸ್ಥೆಯ ವಿರುದ್ಧ ಹೋರಾಡುವ ಚಿತ್ರಕಥೆಯನ್ನು ಹೊಂದಿರುವ, ದಿಟ್ಟ ಚಲನಚಿತ್ರ ರಾಜ್‍ಕುಮಾರ್ ಸಂತೋಷಿ ನಿರ್ದೇಶನದ ‘ದಾಮಿನಿ’. 1993ರಲ್ಲಿ ತೆರೆಕಂಡ ಈ ಚಿತ್ರದಲ್ಲಿ ಸನ್ನಿದೇವಲ್, ರಿಷಿಕಪೂರ್, ಅಮರೀಷ್ ಪುರಿ, ಮೀನಾಕ್ಷಿ ಶೇಷಾದ್ರಿ, ರೋಹಿಣಿ ಹಟ್ಟಂಗಡಿ, ಪರೇಶ್ ರಾವಲ್, ಕುಲಭೂಷಣ ಖರಬಂದಾ ನಟಿಸಿದ್ದಾರೆ. ಹೋಳಿಯ ಸಂದರ್ಭದಲ್ಲಿ ಮುಖಕ್ಕೆ ಸಂಪೂರ್ಣ ಬಣ್ಣ ಬಳಿದುಕೊಂಡು, ಮನೆಯ ಕೆಲಸದವಳ ಮೇಲೆ ಮನೆಯೊಡೆಯನ ಮಗ ಹಾಗೂ ಸ್ನೇಹಿತರು ನಡೆಸುವ ಅತ್ಯಾಚಾರ, ಅದನ್ನು ಮುಚ್ಚಿಹಾಕುವ ದುಷ್ಟಶಕ್ತಿಗಳ ಹುನ್ನಾರ, ಆ ಹುನ್ನಾರದ ವಿರುದ್ಧ ದಾಮಿನಿಯ (ಮೀನಾಕ್ಷಿ ಶೇಷಾದ್ರಿ) ಹೋರಾಟದ ಸುತ್ತ ಈ ಚಿತ್ರವಿದೆ. ಅತ್ಯಾಚಾರದ ಸಂದರ್ಭದಲ್ಲಿ ಆರೋಪಿಗಳು ಬಣ್ಣ ಹಚ್ಚಿಕೊಂಡಿದ್ದರಿಂದ ಅವರ ಮುಖ ಸರಿಯಾಗಿ ಕಾಣಿಸುವುದಿಲ್ಲ. ಇದನ್ನೇ ಬಂಡವಾಳ ಮಾಡಿಕೊಂಡ ಲಾಯರ್ ಚಡ್ಡಾ (ಅಮರೀಷ್ ಪುರಿ) ಕೋರ್ಟಿನಲ್ಲಿ ಬಣ್ಣ ಬಳಿದುಕೊಂಡಿರುವ ಏಳೆಂಟು ಜನರನ್ನು ಕರೆತಂದು ಅದರಲ್ಲಿ ಅತ್ಯಾಚಾರ ಮಾಡಿದವರು ಯಾರೆಂದು ಕೇಳಿ ದಾಮಿನಿಯನ್ನು ಒತ್ತಡಕ್ಕೆ ಸಿಲುಕಿಸುತ್ತಾನೆ. ಇಡೀ ಚಿತ್ರ ಮಹಿಳೆಯ ಹೋರಾಟ, ಅತ್ಯಾಚಾರ ಸಂತ್ರಸ್ತೆಗೆ ಮಾಧ್ಯಮಗಳು ಎಸೆಯುವ ಪ್ರಶ್ನೆ, ನ್ಯಾಯಪ್ರಕ್ರಿಯೆಯ ವಿಳಂಬನೀತಿ, ಹಣದ ಮುಂದೆ ಶರಣಾಗುವ ಪೊಲೀಸ್ ಇಲಾಖೆ, ಕೊನೆಗೆ ಸಾಮಾನ್ಯ ಮನುಷ್ಯನೂ ಕೈಗೆ ಕಲ್ಲೆತ್ತಿಕೊಂಡು ದುಷ್ಟಕೂಟದ ವಿರುದ್ಧ ಸೆಟೆದು ನಿಲ್ಲುವಂತಹ ಅಂಶಗಳಿಂದ ವಿಶಿಷ್ಟವೆನಿಸುತ್ತದೆ.
ಹೋಳಿಯ ಪರಿಕಲ್ಪನೆ, ಹಾಡುಗಳು ಇರುವ ಚಲನಚಿತ್ರಗಳು ಇಂದಿಗೂ ಬರುತ್ತಲೇ ಇವೆ. ‘ಯೇ ಜವಾನೀ ಹೈ ದಿವಾನೀ’ (2013) ಚಿತ್ರದ ‘ಬಲಮ್ ಪಿಚಕಾರಿ ಜೋ ತೂನ್ಹೇ ಮುಝೇ ಮಾರೀ’, ‘ಬದರಿನಾಥ್ ಕೀ ದುಲ್ಹನಿಯಾ’ (2017)ದ ಟೈಟಲ್ ಟ್ರಾಕ್, ಹೋಳಿಯ ಹಾಡುಗಳಿರುವ ಇತ್ತೀಚಿನ ಚಿತ್ರಗಳು.
ಮಥುರಾದ ‘ಲಠ್‍ಮಾರ್ ಹೋಲೀ’ (ಹೆಂಗಸರು ಗಂಡಸರಿಗೆ ಕೋಲಿನಿಂದ ಹೊಡೆಯುವುದು, ಗಂಡಸರು ಗುರಾಣಿಯಿಂದ ರಕ್ಷಣೆ ಪಡೆಯುವ ಸಾಂಪ್ರದಾಯಿಕ ಆಚರಣೆ) ಸುಂದರವಾಗಿ ಚಿತ್ರಿತವಾಗಿರುವುದು 2017ರಲ್ಲಿ ತೆರೆಗೆ ಬಂದ ‘ಟಾಯ್ಲೆಟ್ ಏಕ್ ಪ್ರೇಮ್‍ಕಥಾ’ದಲ್ಲಿ. ಮನೆಯಲ್ಲಿ ಶೌಚಾಲಯ ಇಲ್ಲದ್ದರಿಂದ ಆಗುವ ಅನಾಹುತಗಳ ಸುತ್ತ ಹೆಣೆದಿರುವ ಕಥೆ ಇದು. ಅಕ್ಷಯ್‍ಕುಮಾರ್, ಭೂಮಿ ಪೆಡ್ನೇಕರ್, ಅನುಪಮ್ ಖೇರ್, ಸಚಿನ್ ಖೇಡೆಕರ್ ಅಭಿನಯಿಸಿರುವ ಈ ಚಿತ್ರದಲ್ಲಿ, ಕೇಶವ್ (ಅಕ್ಷಯ್ ಕುಮಾರ್), ಜಯಾ ಶರ್ಮಾ(ಭೂಮಿ ಪೆಡ್ನೆಕರ್)ಳನ್ನು ಮದುವೆಯಾಗುತ್ತಾನೆ. ಆದರೆ ಗಂಡನ ಮನೆಯಲ್ಲಿ ಶೌಚಾಲಯವಿಲ್ಲದ್ದರಿಂದ ಜಯಾ ಸಾಕಷ್ಟು ಕಷ್ಟಪಡುತ್ತಾಳೆ. ಶೌಚಾಲಯ ಸಮಸ್ಯೆಯಿಂದ ರೋಸಿಹೋದ ಜಯಾ ತವರಿಗೆ ಹೋಗುತ್ತಾಳೆ. ಈ ಎಲ್ಲ ಗೊಂದಲಗಳ ನಡುವೆ ಚಿತ್ರಿತವಾದ ಹಾಡು ‘ಗೋರೀ ತು ಲಠ್ ಮಾರ್’. ಗರಿಮಾ ವಹಾಲ್ ಹಾಗೂ ಸಿದ್ಧಾರ್ಥ್ ಸಿಂಗ್ ಬರೆದಿರುವ ಹಾಡನ್ನು ಹಾಡಿದ್ದು ಸೋನು ನಿಗಮ್ ಹಾಗೂ ಪಲಕ್ ಮುಚ್ಛಲ್.
ಐತಿಹ್ಯಗಳ ಪ್ರಕಾರ ಮಹಾಭಾರತದ ಸಂದರ್ಭದಲ್ಲಿ ಮಥುರಾದಲ್ಲಿ ಗೋಪಿಕೆಯರನ್ನು ಗೊಲ್ಲಬಾಲರು ಕಾಡಿಸುತ್ತಾರೆ. ಸಿಟ್ಟಾದ ಗೋಪಿಕೆಯರು ಕೋಲಿನಿಂದ ಗೊಲ್ಲಬಾಲರಿಗೆ ಹೊಡೆಯುತ್ತಾರೆ. ಇದರ ಆಚರಣೆಯೇ ಮಥುರಾದ ‘ಲಠ್ ಮಾರ್ ಹೋಲೀ’ ಎಂಬುದು ನಂಬಿಕೆ.
ಪುರುಷಪ್ರಧಾನ ಸಮಾಜದಲ್ಲಿ ಸ್ತ್ರೀ ಅನೇಕ ಹೊಂದಾಣಿಕೆಗಳನ್ನು ಮಾಡಿಕೊಳ್ಳಬೇಕಾಗುತ್ತದೆ. ಸಮಾಜ ಎಷ್ಟೇ ಆಧುನಿಕವಾಗಿದ್ದರೂ ಸ್ತ್ರೀ ಸಂವೇದನೆಯನ್ನು ಅರ್ಥಮಾಡಿಕೊಳ್ಳುವಲ್ಲಿ, ಸ್ತ್ರೀಯರಿಗೆ ಬೇಕಾದ ದೈಹಿಕ ಮತ್ತು ಮಾನಸಿಕ ಅನುಕೂಲತೆಗಳನ್ನು ಸೃಷ್ಟಿಸಿಕೊಡುವಲ್ಲಿ ಪುರುಷಪ್ರಧಾನ ವ್ಯವಸ್ಥೆ ಇನ್ನೂ ಯಶಸ್ವಿಯಾಗಿಲ್ಲ. ಹೀಗಾಗಿ ಮಹಿಳೆಯರು ತಮ್ಮ ಕೋಪವನ್ನು ಪುರುಷರ ಮೇಲೆ ತೀರಿಸಿಕೊಳ್ಳಲು ‘ಲಠ್ ಮಾರ್ ಹೋಲೀ’ ಅವಕಾಶ ಒದಗಿಸುತ್ತದೆ ಎಂಬುದು ಸಮಾಜವಿಜ್ಞಾನಿಗಳ ಅಭಿಪ್ರಾಯ. ‘ಟಾಯ್ಲೆಟ್ ಏಕ್ ಪ್ರೇಮ್‍ಕಥಾ’ದಲ್ಲೂ ಕೇಶವ್ ಇದನ್ನೇ ಹೇಳುತ್ತಾನೆ. “ನಾನು ಇದುವರೆಗೂ ನಿನ್ನ ಮೇಲೆ ಮಾಡಿರುವ ಶೋಷಣೆಯ ಪ್ರತೀಕಾರ ತೀರಿಸಿಕೋ. ನನಗೆ ಹೊಡೆ” ಎಂದು ಹೇಳಿ ಕೊನೆಗೆ ತನ್ನ ಗುರಾಣಿಯನ್ನು ಬಿಟ್ಟುಬಿಡುತ್ತಾನೆ. ಜಯಾ ಆತನಿಗೆ ನೇರವಾಗಿಯೇ ಕೋಲಿನಿಂದ ಹೊಡೆಯುತ್ತಾಳೆ. ಸಿಟ್ಟು, ದ್ವೇಷ, ಅಸಹಾಯಕತೆಯ ನಡುವೆಯೇ ಹೋಳಿಯ ರಂಗಿನಲ್ಲಿ ದಂಪತಿಯ ಪ್ರೇಮ ಅರಳುತ್ತದೆ.
ಇಷ್ಟೇ ಅಲ್ಲದೆ, ‘ಮಶಾಲ್’ ಚಿತ್ರದ ಕಿಶೋರ್‍ಕುಮಾರ್-ಲತಾ ಜೋಡಿಯ ‘ಓ ಹೋಲೀ ಆಯಿ ಹೋಲೀ ಆಯಿ ದೇಖೋ ಹೋಲೀ ಆಯಿ ರೇ’, ‘ನದಿಯಾ ಕೇ ಪಾರ್’ ಚಿತ್ರದ ಚಂದ್ರಾಣಿ ಮುಖರ್ಜಿ, ಹೇಮಲತಾ ಹಾಗೂ ಜಸ್ಪಾಲ್‍ಸಿಂಗ್ ಧ್ವನಿಯಲ್ಲಿ ಮೂಡಿಬಂದಿರುವ ‘ಜೋಗಿಜೀ ಧೀರೇ ಧೀರೇ, ನದೀ ಕೇ ತೀರೆ ತೀರೆ’ ಹಾಡುಗಳೂ ಜನಪ್ರಿಯವಾಗಿದೆ. ಮರಾಠಿ, ತೆಲುಗು, ಓಡಿಯಾ, ಭೋಜಪುರಿ ಚಿತ್ರಗಳಲ್ಲೂ ಕೂಡ ಹೋಳಿಹಾಡುಗಳು ವಿಜೃಂಭಿಸಿವೆ.
ಹೋಳಿ ಹಾಡು – ಶೃಂಗಾರದ ವೈಭವೀಕರಣ
ಕೆಲ ದಶಕಗಳ ಹಿಂದೆ ‘ಹೋಳಿಯ ಹಾಡುಗಳು ನಟಿಯ ಮೈಮಾಟವನ್ನು ತೋರಿಸಲಷ್ಟೇ ಸೀಮಿತವಾಗಿವೆ, ಹೋಳಿಯ ಹೆಸರಿನಲ್ಲಿ ನಟಿಗೆ ಬಿಳಿ ಸೀರೆ ಉಡಿಸಿ, ಆಕೆಯನ್ನು ನೀರಿನಲ್ಲಿ ನೆನೆಯುವಂತೆ ಮಾಡಿ ಅಶ್ಲೀಲತೆಯನ್ನು ವಿಜೃಂಭಿಸಲಾಗುತ್ತಿದೆ’ ಎಂಬ ಆರೋಪ ಮಡಿವಂತರಿಂದ ಕೇಳಿಬಂದಿತ್ತು. ಐಟಂಸಾಂಗ್‍ಗಳು, ಹಸಿ-ಬಿಸಿ ದೃಶ್ಯಗಳನ್ನು ಎಗ್ಗಿಲ್ಲದೆ ಚಿತ್ರದಲ್ಲಿ ತುರುಕಿಸುವ ಸ್ವಾತಂತ್ರ್ಯವಿದೆ ಈ ಕಾಲದಲ್ಲಿ. ವಾಸ್ತವವಾಗಿ ಶೃಂಗಾರ, ರಸಿಕತೆಯನ್ನು ತೋರಿಸಲು ಹೋಳಿ ಹಾಡುಗಳು ಆಗಿನ ಕಾಲದಲ್ಲಿ ನಿರ್ದೇಶಕರಿಗೆ ಪರ್ಯಾಯ ಆಯ್ಕೆಗಳಾಗಿದ್ದವು. ಆದರೆ ಆಯ್ಕೆಯ ಸ್ವಾತಂತ್ರ್ಯವನ್ನು ಭಾರತೀಯ ನಿರ್ದೇಶಕರು ಸಮರ್ಪಕವಾಗಿಯೇ ಬಳಸಿಕೊಂಡಿದ್ದಾರೆ. ಎಲ್ಲೂ ಅಶ್ಲೀಲತೆಯ ಭಾವ ಮೂಡಿಸದೆ, ಚೌಕಟ್ಟನ್ನು ಮುರಿಯುವ ಸಂದರ್ಭ ಎದುರಾದಾಗ ಅಂತಹ ಸಂದರ್ಭದಲ್ಲಿ ಬಣ್ಣ ಹಾರಿಸಿ ಆ ದೃಶ್ಯವನ್ನು ತೋರಿಸದೇ ತೋರಿಸಿದ್ದಾರೆ. ಇದು ನಿರ್ದೇಶಕರ ಜಾಣ್ಮೆ.
ಚಿತ್ರರಂಗ ಹಾಗೂ ಹೋಳಿ ಒಂದನ್ನೊಂದು ಬಿಟ್ಟಿರಲಾರದಂತೆ ಬೆಸೆದುಕೊಂಡಿವೆ. ಬಣ್ಣಗಳಿಗೂ ಬಣ್ಣದ ಬದುಕಿಗೂ, ಬಣ್ಣದ ಪರದೆಗೂ, ಇರುವ ಸಂಬಂಧ ಕಾಲಚಕ್ರ ತಿರುಗಿದಂತೆ ಮತ್ತಷ್ಟು ಬೆಸೆಯುತ್ತಿದೆ. ಕಪ್ಪು-ಬಿಳುಪು ಚಲನಚಿತ್ರಗಳ ಕಾಲದಲ್ಲೇ ಬಣ್ಣಗಳನ್ನು ತೋರಿಸಲು ಪ್ರಯತ್ನಪಟ್ಟ ಚಿತ್ರರಂಗ, ಇಂದಿನ ವಿಆರ್ (ವರ್ಚುವಲ್ ರಿಯಾಲಿಟಿ) ಕಾಲದಲ್ಲಿ ಹೋಳಿಯನ್ನು ಮುಂದಿಟ್ಟುಕೊಂಡು ಮತ್ತಷ್ಟು ಪ್ರಯತ್ನಗಳನ್ನು ಮಾಡಲು ಮುಂದಾಗಿದೆ. 2ಡಿ ಅಥವಾ ವಿಆರ್, ಬೆಳ್ಳಿಪರದೆಯ ಓಕುಳಿಯಾಟ ಹೇಗೇ ನಡೆದರೂ ಪ್ರೇಕ್ಷಕನ ಮನರಂಜನೆಯಂತೂ ಹೋಳಿಯಿಂದ ಹೆಚ್ಚಾಗುತ್ತಲೇ ಇರುತ್ತದೆ. ಚಿತ್ರರಂಗ ಹಾಗೂ ಹೋಳಿಯ ಬಂಧ ಹೀಗೆಯೆ ಮುಂದುವರಿಯಲಿ. ಬೆಳ್ಳಿಪರದೆ ಮತ್ತಷ್ಟು ಬಣ್ಣಗಳಿಂದ ಸಿಂಗಾರಗೊಳ್ಳಲಿ.
ಬಣ್ಣಗಳನ್ನು ಸಂಭ್ರಮಿಸುವ ‘ನವರಂಗ್’ ಚಲನಚಿತ್ರ
ಬಣ್ಣಗಳನ್ನು ಸಂಭ್ರಮಿಸುವ ಎಲ್ಲ ಚಲನಚಿತ್ರಗಳ ಮಧ್ಯೆ ವಿಭಿನ್ನವಾಗಿ ನಿಲ್ಲುವುದು 1959ರಲ್ಲಿ ತೆರೆಗೆ ಬಂದ ‘ನವರಂಗ್’. ಅದರ ಕಥೆ, ಹಾಡುಗಳು, ನೃತ್ಯ, ನೃತ್ಯದ ಪ್ರಯೋಗಗಳು, ಹಾಡಿನ ಸಾಹಿತ್ಯ, ಸಂಗೀತ, ಆನೆಯ ಕುಣಿತ ಎಲ್ಲವೂ ಇಂದಿಗೂ ಜನಪ್ರಿಯ. ವಿ. ಶಾಂತಾರಾಮ್ ನಿರ್ದೇಶನದ ಈ ಸಿನೆಮಾದಲ್ಲಿ ಅಭಿನಯಿಸಿದ್ದು ಸಂಧ್ಯಾ ಹಾಗೂ ಮಹಿಪಾಲ್. ಸಿ. ರಾಮಚಂದ್ರ ಸಂಗೀತ ನಿರ್ದೇಶಿಸಿದರೆ, ಸಾಹಿತ್ಯರಚನೆ ಪ್ರಸಿದ್ಧ ಕವಿ ಭರತ್ ವ್ಯಾಸ್‍ರದ್ದು. ಒಂದಕ್ಕಿಂತ ಒಂದು ಹಾಡು ವಾಹ್ ಎನ್ನಿಸುತ್ತವೆ. ಅದರಲ್ಲಿನ ರಂಗುರಂಗಾದ ಹಾಡು ಹೀಗಿದೆ –
ಅಟಕ ಅಟಕ ಝಟಪಟ ಪನಘಟ ಪರ
ಚಟಕ ಮಟಕ ಏಕ ನಾರ ನವೇಲಿ
ಗೋರಿ ಗೋರಿ ಗ್ವಾಲನ ಕೀ ಛೋರಿ ಚಲೀ
ಚೋರಿ ಚೋರಿ ಮುಖ ಮೋರಿ ಮೋರಿ
ಮುಸಕಾಯೆ ಅಲಬೇಲೀ
ಕಂಕರಿ ಗಲೇ ಮೇ ಮಾರಿ ಕಂಕರಿ ಕನ್ಹೈಯೆ ನೇ
ಪಕರಿ ಬಾಂಹ್ ಔರ ಕೀ ಅಟಖೇಲೀ
ಭರಿ ಪಿಚಕಾರಿ ಮಾರಿ ಸಾರರರರರರ
ಭೋಲೀ ಪನಿಹಾರಿ ಬೋಲೀ
ಅರೆ ಜಾರೆ ಹಟ್ ನಟಖಟ್ ನಾ ಛೂರೆ ಮೇರಾ
ಘೂಂಗಟ್,
ಪಲಟ್ ಕೇ ದೂಂಗೀ ಆಜ್ ತುಝೆ ಗಾಲಿ ರೇ,
ಮುಝೇ ಸಮಝೋ ನ ತುಮ್ ಭೋಲೀ
ಭಾಲಿ ರೇ
ಇದು ಕೂಡ ಡ್ರೀಮ್ ಸೀಕ್ವೆನ್ಸ್. ಚಿತ್ರದಲ್ಲಿ ದಿವಾಕರ್ (ಮಹಿಪಾಲ್) ತನ್ನ ಪತ್ನಿ ಜಮುನಾಳನ್ನು (ಸಂಧ್ಯಾ) ಮೋಹಿನಿ ಎಂದು ಕಲ್ಪಿಸಿಕೊಂಡು ಹಾಡುಕಟ್ಟಿ ಹಾಡುತ್ತಿರುತ್ತಾನೆ. ಆ ಸಂದರ್ಭದ ಹೋಲಿ ಹಾಡು ಇದು. ವಿಶೇಷವೆಂದರೆ ಸಂಧ್ಯಾ ಅವರು ಪುರುಷ ಹಾಗೂ ಸ್ತ್ರೀ ಎರಡೂ ಆಗಿ ನರ್ತಿಸಿದ್ದಾರೆ. ಒಂದು ಹಂತದಲ್ಲಿ ಮುಂದಿನಿಂದ ಸ್ತ್ರೀಯಾಗಿ ತಿರುಗಿ ನಿಂತಾಗ ಪುರುಷನಾಗಿ ಕೊಂಚವೂ ಹೆಜ್ಜೆತಪ್ಪದೆ ಸಂಧ್ಯಾ ನರ್ತಿಸಿರುವುದು ವಿಶೇಷ. ಗಣೇಶ ಮೂರ್ತಿಯ ಮುಂದೆ ನಾಟ್ಯವಾಡುತ್ತಿರಬೇಕಾದರೆ ಅಲ್ಲಿ ಸ್ವತಃ ಗಣಪತಿಯೇ ಆನೆಯ ರೂಪದಲ್ಲಿ ಬಂದು ತಾನೂ ಕೂಡ ನರ್ತಿಸುತ್ತಾನೆ. ಸಿ. ರಾಮಚಂದ್ರ ಇಲ್ಲಿ ಕೂಡ ಶಿಳ್ಳೆಯನ್ನು ಅದ್ಭುತವಾಗಿ ಬಳಸಿದ್ದಾರೆ. ಹಾಡಿನ ಕೊನೆಯಲ್ಲಿ ಸಂಧ್ಯಾಳ ದೇಹದಿಂದ ಪಿಚಕಾರಿಯಂತೆ ಬಣ್ಣದ ನೀರು ಚಿಮ್ಮಿ ಚಿಮ್ಮಿ ಬರುವುದಂತೂ ಕಣ್ಣಿಗೆ ಹಬ್ಬ. ಗಜರಾಜ ಕೂಡ ಖುಷಿಯಾಗಿ ಸೊಂಡಿಲಿನಿಂದ ಬಣ್ಣದ ನೀರನ್ನು ಸಿಡಿಸುತ್ತಾನೆ.
ಒಟ್ಟಿನಲ್ಲಿ ಹೇಳಬೇಕೆಂದರೆ ಹೋಳಿಯ ಹಾಡುಗಳಲ್ಲಿ ಅಷ್ಟೇ ಅಲ್ಲ, ಭಾರತೀಯ ಚಿತ್ರರಂಗದ ಎಲ್ಲ ಹಾಡುಗಳಲ್ಲಿಯೂ ಈ ಹಾಡು ನೃತ್ಯ, ಸಾಹಿತ್ಯ, ಸಂಗೀತ, ವಸ್ತ್ರವಿನ್ಯಾಸ, ಪರಿಕಲ್ಪನೆಯ ದೃಷ್ಟಿಯಿಂದ ವಿಭಿನ್ನ ಎನಿಸುತ್ತದೆ. ಈ ಹಾಡಿಗೆ ಟಕ್ಕರ್ ಕೊಡುವಂತಹ ಹಾಡು ಇನ್ನೂ ಕೂಡ ಬಂದಿಲ್ಲ ಎಂದೇ ಹೇಳಬಹುದು.