“ಕೇಳ್ರೇ, ನಾವು ಈ ವಾರ ಶಿವಮೊಗ್ಗಕ್ಕೆ ಹೋಗ್ತಾ ಇದ್ವಿ. ದಾರಿಯಲ್ಲಿ ಒಂದಷ್ಟು ಹೆಣ್ಣುಮಕ್ಕಳು ಸೇರಿ ತಮ್ಮನ್ನು ಚುಡಾಯಿಸಿದ ಹುಡುಗನನ್ನು ಹಿಡಿದು ಬಡಿಯುತ್ತಾ ಇದ್ರು. ಈಗಿನ ಕಾಲದ ಹೆಣ್ಣುಮಕ್ಳು ನಮ್ಮ ಹಾಂಗಲ್ಲ ಕಣ್ರೆ” ಭಾನುವಾರ ಸಂಜೆಯ ನಮ್ಮ ಫ್ಲ್ಯಾಟಿನ ಹೆಂಗಸರ ಗುಂಪಿನ ಹರಟೆಯಲ್ಲಿ ಗೆಳತಿಯೊಬ್ಬಳು ಹೇಳಿದಾಗ ಗುಂಪಿನಲ್ಲಿ ಜೋರಾದ ನಗು. ನನಗಂತೂ ಆ ಹೆಣ್ಣುಮಕ್ಕಳು ಕಿತ್ತೂರರಾಣಿ ಚೆನ್ನಮ್ಮರಂತೆ ಭಾಸವಾಗಿದ್ದು ಸುಳ್ಳಲ್ಲ.
“ವಾವ್, ಎಷ್ಟು ಧೈರ್ಯ! ಹೀಗಿರಬೇಕು ಹೆಣ್ಣುಮಕ್ಕಳೆಂದರೆ. ‘ಯತ್ರ ನಾರ್ಯಸ್ತು ಪೂಜ್ಯಂತೇ’ ಎಂದು ಸುಮ್ಮನೇ ಹೇಳಿದ್ದಾರಾ? ಹೆಣ್ಣಿಗೆ ಗೌರವ ಕೊಡದಿದ್ದರೆ ಕೊಡುವುದನ್ನು ಹೆಣ್ಣೇ ಕಲಿಸಬೇಕು.” ನನ್ನ ಕೈಯೂ ಮುಷ್ಟಿಬಿಗಿದಿತ್ತು.
“ಅಲ್ಲ, ಆ ಗಂಡಸಿಗೆ ತಣ್ಣಗೆ ಇರಲಿಕ್ಕೆ ಏನಾಗಿತ್ತು ಧಾಡಿ? ಮಾರಾಯ್ತಿ, ಸುಮ್ನೆ ಹೋಗಿಹೋಗಿ ಹೆಣ್ಣುಮಕ್ಳ ಹತ್ರ ಹೊಡ್ತ ತಿನ್ನೂದಾ” ಮಂಗಳೂರಿನ ಗೆಳತಿ ಹೇಳುತ್ತಿದ್ದಳು.
ದಿನವೂ ಪತ್ರಿಕೆಯಲ್ಲಿ ಬಾಲಕಿಯ ಮೇಲೆ ಅತ್ಯಾಚಾರ, ಮಹಿಳೆಗೆ ಇರಿದು ಕೊಲೆ, ವರದಕ್ಷಿಣೆ ಕಿರುಕುಳ, ಇವೆಲ್ಲದರ ಜೊತೆಗೆ ಗಂಡ ಹೆಂಡತಿಗೆ ಹೊಡೆಯುವ ಗುಸುಗುಸು ಸುದ್ದಿ ಇಂಥವೇ ಕೇಳಿ ಓದಿ ನನ್ನ ಮನಸ್ಸಿನಲ್ಲಿ ‘ಈ ಪರಿ ಹೆಂಗಸರನ್ನು ಹಿಂಸಿಸುವ ಗಂಡಸರಿಗೆ ನಾಲ್ಕು ಬಡಿಯಬೇಕು’ ಎನ್ನುವ ಆಸೆ ಸದ್ದಿಲ್ಲದೆ ಮೊಳೆಯತೊಡಗಿತ್ತು. ಹಾಗಾಗಿ ನಾನು ಕೂಡ “ಏ ಹೋಗ್ಲಿ ಬಿಡೆ. ಅವರೂ ಚೆನ್ನಾಗಿ ಬಾರಿಸಿದ್ರಲ್ಲ. ಖುಷಿ ಆಯ್ತು ನನಗೆ’’ ಎನ್ನುತ್ತ ನನ್ನ ಆಸೆಯೇ ತೀರಿದಂತೆ ಖುಷಿಪಟ್ಟೆ.
ಮಹಿಳಾಮಣಿಗಳ ಮೀಟಿಂಗ್ ಮುಗಿಯುವ ಸಮಯವಾಯ್ತು. ‘ಅಬ್ಬಾ! ಹೆಂಗಸರು ಒಮ್ಮೆ ಕೈಗೆ ಕೋಲು ಹಿಡಿದಾಗಲೇ ಗಂಡಸು ಸುಧಾರಿಸುತ್ತಾನೆ’ – ಪಕ್ಕದ ಮನೆ ನಳಿನಿ ಜಡ್ಜಮೆಂಟ್ ಕೊಟ್ಟದ್ದಲ್ಲದೆ, ಇನ್ನೂ ಒಂದು ಹೊಸ ವಿಷಯವನ್ನು ನಮ್ಮ ಕಿವಿಗೆ ಹಾಕಿಯೇ ಆಕೆ ಮನೆಗೆ ಹೋದದ್ದು.
‘ಲಠ್ಮಾರ್ ಹೋಳಿ’
ಅವಳು ಮೊದಲೊಂದು ಫ್ಲ್ಯಾಟ್ನಲ್ಲಿ ಬಾಡಿಗೆಗೆ ಇದ್ದಳಂತೆ. ಇವರ ಕುಟುಂಬಕ್ಕೆ ಹತ್ತಿರವಾದವರು ಉತ್ತರಪ್ರದೇಶದ ಒಂದು ಕುಟುಂಬ.
“ನಿಮಗೆ ಗೊತ್ತಾ? ಮಥುರಾದ ಬಳಿ ಇರುವ ಬರಸಾನಾದಲ್ಲಿ ಹೋಳಿಹಬ್ಬದಲ್ಲಿ ಹೆಂಗಸರು ಗಂಡಸರಿಗೆ ಕೋಲಿನಿಂದ ಬಡಿಯುತ್ತಾರಂತೆ!”
ನನ್ನ ಕಿವಿ ನೆಟ್ಟಗಾಗಿ ನಳಿನಿ ಹೇಳಿದ್ದನ್ನೆಲ್ಲ ಕೇಳಿಸಿಕೊಳ್ಳತೊಡಗಿತು.
“ಅದೆಂಥದು ಗಂಡಸಿಗೆ ಹೊಡಿಯೂ ಹಬ್ಬ?” ಮಂಗಳೂರಿನ ಸ್ನೇಹಿತೆ ರಾಗ ಎಳೆದಾಗ ನಳಿನಿ,
“ನಮ್ಮದು ಸಾಂಸ್ಕೃತಿಕವಾಗಿ ವೈವಿಧ್ಯ ಇರುವ ದೇಶ ಅಲ್ವಾ. ಎಲ್ಲರೂ ಅವರವರದೇ ಆದ ಬಗೆಯಲ್ಲಿ ಹಬ್ಬವನ್ನು ಆಚರಿಸುವ ರೂಢಿ ಇದೆ. ಅದರಲ್ಲೂ ಹಬ್ಬ ಆಚರಿಸುವುದರಲ್ಲಿ ನಮಗೆ ಉತ್ಸಾಹ, ನಿಷ್ಠೆ ತುಸು ಜಾಸ್ತಿಯೆ. ನಮ್ಮ ಹಬ್ಬಗಳೇ ಒಂದು ಬಗೆಯಲ್ಲಿ ಅಧ್ಯಯನ ಮಾಡುವುದಕ್ಕೆ ಒಳ್ಳೆಯ ವಸ್ತು ಅಲ್ವಾ. ಹೋಳಿ ಎಂದರೂ ಅಷ್ಟೆ; ಎಷ್ಟೊಂದು ವೈವಿಧ್ಯಮಯವಾಗಿ ಆಚರಿಸುತ್ತಾರೆ ಗೊತ್ತಾ?” ಹಾಗೆಂದು ಮಂಗಳೂರಿನ ಗೆಳತಿಗೆ ಉತ್ತರಿಸುತ್ತ ತನ್ನ ಹಳೆಯ ಗೆಳತಿಯ ಸಂಭಾಷಣೆಗಳನ್ನು ಎಳೆದು ಎಳೆದು ಹೇಳತೊಡಗಿದಳು.
“ಶ್ರೀಕೃಷ್ಣನ ಬಗ್ಗೆ ನಮ್ಮಲ್ಲಿ ಅದೆಷ್ಟು ಕಥೆಗಳಿವೆಯೋ, ನಮಗೂ ಗೊತ್ತಿಲ್ಲ ಬಿಡಿ. ಆತ ಹುಟ್ಟಿದ್ದು ದೇವಕಿಯ ಹೊಟ್ಟೆಯಲ್ಲಾದರೂ ಬೆಳೆದದ್ದು ಮಾತ್ರ ಯಶೋದೆಯ ಮಡಿಲಲ್ಲಿ. ಬಾಲಕ ಕೃಷ್ಣ ಸಕತ್ ತುಂಟತನ ಮಾಡುತ್ತಿದ್ದನಂತಲ್ಲ; ಆತ ನಂದಗ್ರಾಮದವನಾಗಿದ್ದ. ಆಗಾಗ ಪಕ್ಕದ ಬರಸಾನಾ ಗ್ರಾಮಕ್ಕೆ ಹೋಗಿಬರುತ್ತಿದ್ದನಂತೆ. ಅದು ಆತನ ಪ್ರೀತಿಯ ರಾಧೆಯ ಹಳ್ಳಿ. ಒಮ್ಮೆ ಹೀಗಾಯ್ತಂತೆ….”
“ಅಯ್ಯೋ, ಗಂಡಸರಿಗೆ ಹೊಡಿಯೂದಕ್ಕೂ ಕೃಷ್ಣಂಗೂ ಏನ್ರಿ ಸಂಬಂಧ?”
ನಮ್ಮ ಮಂಗಳೂರಿನ ಗೆಳತಿಗೆ ಆತುರ ಜಾಸ್ತಿ. ಮಧ್ಯೆ ಕೇಳಿದ್ದಕ್ಕೆ ನಳಿನಿಗೆ ಕೋಪ ಬಂದೇಬಿಡ್ತು.
“ಸ್ವಲ್ಪ ಸುಮ್ನಿರ್ತೀಯಾ. ಮೊದಲು ಕೇಳಿಸ್ಕೋಬೇಕು. ಒಮ್ಮೆ ಕೃಷ್ಣ ಹೋಳಿಹಬ್ಬಕ್ಕೆ ಮುನ್ನಾದಿನವೇ ಬರಸಾನಾ ಹಳ್ಳಿಗೆ ತನ್ನ ಸ್ನೇಹಿತರ ಜೊತೆಗೆ ಹೋಗಿದ್ದನಂತೆ. ಹೇಳಿಕೇಳಿ ಬಣ್ಣದ ಹಬ್ಬ ಅದು. ಹೋಗಿದ್ದವರು ಸುಮ್ಮನೆ ಇರದೆ ರಾಧೆಯನ್ನೂ ಅವಳ ಸ್ನೇಹಿತೆಯರನ್ನೂ ಚುಡಾಯಿಸಿದ್ದಾರೆ. ಚುಡಾಯಿಸಿದಾಗ ಅವರಿಗೆ ಕೋಪಬಂದು ಕೈಗೆ ಕೋಲು ತೆಗೆದುಕೊಂಡು ಹೊಡೆದು ಹುಡುಗರನ್ನು ಓಡಿಸಿದರಂತೆ. ಅದರ ಸಂಕೇತವಾಗಿ ‘ಲಠ್ಮಾರ್ ಹೋಳಿ’ಯ ಆಚರಣೆ. ಆಚರಣೆಯ ಹಿನ್ನೆಲೆ ಇದು. ಗೊತ್ತಾಯ್ತಾ?” ನಳಿನಿಗೆ ನಮ್ಮೆಲ್ಲರಿಗೂ ಏನಾದರೂ ವಿಚಾರ ತಿಳಿಸುವ ಆಸೆ ಬಹಳ. “ಈ ಬಗೆಯಲ್ಲಿ ಹೊಡೆದು ಗಂಡಸರಿಗೆ ಬುದ್ಧಿಕಲಿಸೂದಾ?” ಮಂಗಳೂರಿನ ಗೆಳತಿಗೆ ಪ್ರಶ್ನೆ ಹುಟ್ಟುವುದು ಜಾಸ್ತಿ.
“ಇನ್ನೂ ಇದೆ ತಡಿಯೆ. ಅದೆಲ್ಲ ಹಬ್ಬದ ತಮಾಷೆಗೆ ಮಾತ್ರ. ನೀವು ಲಠ್ಮಾರ್ ಹೋಳಿಯನ್ನು ಯೂಟ್ಯೂಬ್ನಲ್ಲಿ ನೋಡಿ. ಎಂಥಾ ಮಜ ಗೊತ್ತಾ? ಹೋಳಿಹಬ್ಬಕ್ಕೆ ಮೂರು-ನಾಲ್ಕು ದಿನ ಇರುವಾಗಲೆ ಬ್ರಜ್ಭೂಮಿಯ ಹೋಳಿ ಆಚರಣೆ ಶುರುವಾಗುತ್ತದೆ.
ಮೊದಲು ‘ಲಡ್ಡುಮಾರ್’
ಲಠ್ಮಾರ್ ಹೋಳಿಗೆ ಮೊದಲು ‘ಲಡ್ಡು ಮಾರ್’ ಹೋಳಿ ಆಚರಿಸಲಾಗುತ್ತದೆ. ಬರಸಾನಾ ಗ್ರಾಮದಿಂದ ನಂದಗ್ರಾಮಕ್ಕೆ ಹೋಳಿ ಆಡಲಿಕ್ಕೆ ನಿಮಂತ್ರಣವನ್ನು ತೆಗೆದುಕೊಂಡು ಹೋಗಲಾಗುತ್ತದೆ. ಬಳಿಕ ನಂದಗ್ರಾಮದಿಂದ ಒಬ್ಬ ಪಂಡಾ ಅಥವಾ ಪಂಡಿತರು ಬರಸಾನಾ ಗ್ರಾಮಕ್ಕೆ ಬಂದು ನಿಮಂತ್ರಣವನ್ನು ಸ್ವೀಕರಿಸಿ ಖುಷಿಯನ್ನು ಆಚರಿಸುವುದೇ ಲಡ್ಡುಮಾರ್ ಹೋಳಿ. ಪ್ರಸಾದ ವಿನಿಮಯವೂ ನಡೆಯುತ್ತದೆ. ಪಂಡಿತನ ಝೋಲಿಯನ್ನು ಲಡ್ಡುವಿನಿಂದ ಭರ್ತಿ ಮಾಡಲಾಗುತ್ತದೆ. ಅವರಿಗೆ ಬರಸಾನಾದ ಗೋಪಿಕೆಯರು ರಂಗು ಬಳಿದು ಖುಷಿ ಆಚರಿಸುತ್ತಾರೆ. ನಂದಗ್ರಾಮದಿಂದಲೂ ಹೋಳಿ ಆಡಲಿಕ್ಕೆ ಗಂಡಸರು ಬಂದು ಹೆಂಗಸರು ಅವರಿಗೆ ರಂಗು ಬಳಿದು ಖುಷಿ ಆಚರಿಸುತ್ತಾರೆ. ಲಡ್ಡುಮಾರ್ ಹೋಳಿಯಲ್ಲಿ ರಾಧಾರಾಣಿಯನ್ನು ಚಿಕ್ಕಬಾಲಕಿಯಾಗಿ ಪರಿಗಣಿಸುವುದು ವಿಶೇಷ. ಅವಳು ಬರಸಾನಾದ ಮನೆಯ ಮಗಳು. ಮನೆಯಲ್ಲಿ ಪುಟ್ಟಮಕ್ಕಳಿಗೆ ಪ್ರಿಯವಾದ ವಸ್ತುಗಳನ್ನೆಲ್ಲ ತರುವಂತೆ ಪೀಪಿ, ಲಡ್ಡು, ಆಟಿಕೆ, ವಸ್ತ್ರಗಳನ್ನೆಲ್ಲ ಒಂದು ಟೋಕರಿಯಲ್ಲಿ ಇಟ್ಟು ರಾಧಾರಾಣಿಯ ಮಂದಿರಕ್ಕೆ ಹೋಗಿ ಅಲ್ಲಿ ನೈವೇದ್ಯ ಮಾಡಿ ಬಳಿಕ ಪ್ರಸಾದವನ್ನು ಸ್ವೀಕರಿಸಿ ಮಂದಿರದ ಮೇಲ್ಭಾಗದಿಂದ ಕೆಳಗೆ ನೆರೆದ ಜನಸಮೂಹದೆಡೆಗೆ ಪ್ರಸಾದವನ್ನು ಎಸೆಯುವ ಮೂಲಕ ಹಂಚಲಾಗುತ್ತದೆ. ನೆರೆದ ಸಮೂಹವು ಪ್ರಸಾದವನ್ನು ಹಿಡಿಯುತ್ತದೆ. ಅದನ್ನು ಇಟ್ಟುಕೊಂಡರೆ ಅದೃಷ್ಟವೆಂಬ ನಂಬಿಕೆ ಇದೆ.
‘ರಂಗ್ ರಂಗೀಲೀ ಗಲಿ’
ಲಾಠ್ ಎಂದರೆ ಬಡಿಗೆ, ಮಾರ್ ಎಂದರೆ ಹೊಡೆಯುವುದು. ನಂದಗ್ರಾಮದ ಹುಡುಗರನ್ನು ‘ಹೊರಿಯಾರೇ’ ಎಂದು ಕರೆಯುತ್ತಾರೆ. ಉತ್ಸವಕ್ಕೆ ಉತ್ತರಪ್ರದೇಶದ ಮಥುರಾದ ಸುತ್ತಮುತ್ತಲ ಗ್ರಾಮದಿಂದಲೂ ಸಾವಿರಾರು ಜನ ಬರಸಾನಾ ಗ್ರಾಮದಲ್ಲಿರುವ ರಾಧಾರಾಣಿ ದೇವಸ್ಥಾನಕ್ಕೆ ಬರುತ್ತಾರೆ. ಸಣ್ಣ ಪೂಜೆಯ ಬಳಿಕ ದೇವಸ್ಥಾನದ ಅಂಗಳದಲ್ಲಿ ಮತ್ತು ‘ರಂಗ್ ರಂಗೀಲೀ ಗಲೀ’ ಎಂದು ಕರೆಯುವ ದೇವಸ್ಥಾನದ ಎದುರಿನ ಚಿಕ್ಕ ಗಲ್ಲಿಗಳಲ್ಲಿ ಸೇರುತ್ತಾರೆ.
ಹೆಂಗಸರು ಗಂಡಸರ ಮೇಲೆ ಬಣ್ಣ ಎರಚುವ ಮೂಲಕ ಆಚರಣೆಯು ಆರಂಭವಾಗುತ್ತದೆ. ಹಳ್ಳಿಗರು ಜನಪದ ಹಾಡನ್ನು ಹಾಡುತ್ತಾರೆ, ಹೆಂಗಸರು ನೃತ್ಯ ಮಾಡಿ ಪ್ರೇಕ್ಷಕರನ್ನು ರಂಜಿಸುತ್ತಾರೆ. ಆಗೆಲ್ಲ ಅಲ್ಲಿರುವ ತಿಂಡಿ ಅಂಗಡಿಗಳು ‘ಥಂಡೈ’ ಎಂದು ಕರೆಯುವ ತಂಪುಪಾನೀಯದಿಂದ ತುಂಬಿಹೋಗುತ್ತವೆ. ಅದರಲ್ಲಿ ಭಾಂಗ್ ಬಳಕೆ ಮಾಡುತ್ತಾರಂತೆ!
“ಹೌದಾ!” ಮತ್ತೊಬ್ಬ ಸ್ನೇಹಿತೆ ಇಂತಹ ಹೆಸರನ್ನೂ ಕೇಳುವ ಇಚ್ಛೆ ಇದ್ದವಳಲ್ಲ.
“ಹಬ್ಬದ ವೇಳೆಗೆ ಮಾತ್ರ ಅದನ್ನು ತೆಗೆದುಕೊಳ್ಳುವ ರೂಢಿ ಇರಬಹುದಪ್ಪ. ಲಡ್ಡುಮಾರ್ ಹೋಳಿ ಕಳೆದು ಲಠ್ಮಾರ್ ಹೋಳಿ ದಿನ ಗಂಡಸರು ಬರಸಾನಾಕ್ಕೆ ಬಂದು ಸೇರುತ್ತಿದ್ದಂತೆ ಹೆಂಗಸರ ಮೇಲೆ ಬಣ್ಣ ಎರಚುವ ಪ್ರಯತ್ನ ಮಾಡುತ್ತಾರೆ. ಆಗ ಹೆಂಗಸರು ಕೈಗೆ ಉದ್ದುದ್ದ ಬಡಿಗೆ ತೆಗೆದುಕೊಂಡು ಗಂಡಸರಿಗೆ ಹೊಡೆಯುವ ಹಾಗೆ ಮಾಡುತ್ತಾರೆ, ಗಂಡಸರು ತಗಡಿನ ಗುರಾಣಿಯನ್ನು ತಲೆಯ ಮೇಲಿಟ್ಟುಕೊಂಡು ತಮ್ಮನ್ನು ರಕ್ಷಿಸಿಕೊಳ್ಳುವುದನ್ನು ನೋಡುವುದು ಮಜಾ ಎನ್ನಿಸುತ್ತದೆ. ಹೊಡೆಯಬೇಡಿರೆಂದು ಕೈಮುಗಿಯುವವರೂ ಇದ್ದಾರೆ. ಗಂಡಸರು ಹಾಗೆ ರಕ್ಷಣೆ ಮಾಡಿಕೊಳ್ಳುತ್ತಿರುವಾಗ ಅಲ್ಲಿದ್ದ ಇತರ ಹೆಂಗಸರು ಇನ್ನೂ ಗಟ್ಟಿಯಾಗಿ ಹೊಡೆಯುವುದಕ್ಕೆ ಕೂಗಿ ಕಿರುಚಿ ಪ್ರೇರಣೆ ನೀಡುತ್ತಾರೆ. ಇವೆಲ್ಲ ಮೋಜಿಗಾಗಿ.”
“ಅಲ್ಲ, ಗಂಡಸರಿಗೆ ಹೆಣ್ಣನ್ನು ಗೌರವಿಸು, ಇಲ್ಲವಾದರೆ ಹೀಗೆ ಹೊಡೆತ ಬೀಳುತ್ತದೆ ಎನ್ನುವುದನ್ನು ಕಲಿಸುವ ಆಚರಣೆ ಅಲ್ಲವೇ ಇದು?” ನನ್ನ ಪ್ರಶ್ನೆ ಹೊರಬರುತ್ತಿದ್ದಂತೆ,
“ಅಯ್ಯೋ ರಾಮ, ಎಲ್ಲಿ ಬಿಡ್ತೀಯಾ ನಿನ್ನ ಪತ್ರಿಕೆಬುದ್ಧಿ. ನನಗೆ ಅದೆಲ್ಲ ಗೊತ್ತಿಲ್ಲಮ್ಮ. ಹೀಗೊಂದು ಆಚರಣೆ ಇದೆಯಂತೆ” ಎನ್ನುತ್ತ ನಳಿನಿ ಅಡುಗೆಗೆ ಹೊತ್ತಾಯಿತೆಂದು ಓಡಿದರೆ, ಮಂಗಳೂರ ಗೆಳತಿಯೂ “ಬರತೆ ಮಾರಾಯ್ತಿ. ಕೆಸುವಿನಎಲೆ ಊರಿಂದ ಬಂದಿದೆ. ಪತ್ರೊಡೆ ಮಾಡಲಿಕ್ಕುಂಟು” ಎನ್ನುತ್ತ ಮನೆಗೆ ಹೊರಟಳು.
ಮಿಠಾಯಿ, ಪಿಠಾಯಿ, ಥಂಡಾಯಿ
ನನಗೋ ಈ ಹಬ್ಬ ಹೇಗಿರುತ್ತದೆ ಎಂದು ನೋಡುವ ಕುತೂಹಲ. ಯೂಟ್ಯೂಬ್ ತೆರೆದೆ. ಬಗೆಬಗೆಯ ವೀಡಿಯೋ ನೋಡುತ್ತ ಲಠ್ಮಾರ್ ಹೋಳಿ ಮಜಾ ಅನುಭವಿಸಿದೆ. ಅವರು ಹೊಡೆಯುವ ಪರಿ, ಗಂಡಸರಂತೂ ಏನೋ ತಪ್ಪುಮಾಡಿ ಸಿಕ್ಕಿಕೊಂಡವರಂತೆ ತಲೆಯಮೇಲೆ ತಗಡಿನ ಗುರಾಣಿಯನ್ನು ಇಟ್ಟುಕೊಂಡು
ಹೆಂಗಸರು ಹೊಡೆದಷ್ಟೂ ಹೊಡೆತವನ್ನು ತಿನ್ನುವುದು; ನೋಡಿಯೇ ಅನುಭವಿಸಬೇಕು. ನಂದಗ್ರಾಮದ ಹುಡುಗರು ಫಾಲ್ಗುಣಮಾಸ ಶುಕ್ಲಪಕ್ಷದ ನವಮಿಯಂದು ಲಠ್ಮಾರ್ ಹೋಳಿಯಲ್ಲಿ ಭಾಗವಹಿಸಲು ಸಾಂಪ್ರದಾಯಿಕ ಉಡುಗೆ ತೊಟ್ಟು ನಂದಗ್ರಾಮದ ನಂದಲಾಲ ಮಂದಿರದಿಂದ ತಮ್ಮ ಪ್ರಯಾಣವನ್ನು ಆರಂಭಿಸಿ ಬರಸಾನಾ ಕಡೆಗೆ ಹೋಗುತ್ತಾರೆ. ಅಲ್ಲಿ ರಾಧಾರಮಣ ಮಂದಿರಕ್ಕೆ ಹೋಗಿ ಅಲ್ಲಿಂದ ಪ್ರಿಯಾಕುಂಡಕ್ಕೆ ಹೋಗಿ ತಮ್ಮನ್ನು ಶೃಂಗರಿಸಿಕೊಳ್ಳುತ್ತಾರೆ. ನಂತರ ನೋಡಬೇಕು ರಂಗ್ ರಂಗೀಲೀ ಗಲಿಯ ರಂಗುರಂಗಿನಹೋಳಿಯನ್ನು. ಬ್ರಜ್ವಾಸಿಗಳು ಆಚರಿಸುವ ಈ ಹೋಳಿಯನ್ನು ಶತಮಾನಗಳಿಂದ ಇದೇ ರೀತಿ ಆಚರಿಸಿಕೊಂಡು ಬರಲಾಗುತ್ತಿದೆ. ‘ಕೃಷ್ಣ ಹೀಗೆ ಬರುತ್ತಿದ್ದ, ರಾಧೆ ತನ್ನ ಸ್ನೇಹಿತೆಯರೊಡಗೂಡಿ ಆತನಿಗೆ ಇದೇ ರೀತಿ ಪ್ರೇಮ ತುಂಬಿ ಹೊಡೆಯುತ್ತಿದ್ದಳು’ ಎನ್ನುವುದು ಅಲ್ಲಿನವರ ನಂಬಿಕೆ. ಪಂಜಾಬ್ ಲುಧಿಯಾನಾ ದೆಹಲಿಯಿಂದೆಲ್ಲ ಇಲ್ಲಿ ಹೋಳಿ ಆಡಲು ಬರುತ್ತಾರೆ. ಬರಸಾನಾದ ಈ ಹೋಳಿ ಆಚರಣೆಯು ವಿಶ್ವಪ್ರಸಿದ್ಧವಾದದ್ದು. ಗಂಡಸರನ್ನು, ‘ಹೊಡೆದರೆ ನೋವಾಗುವುದಿಲ್ಲವೇ?’ ಎಂದು ಕೇಳಿದರೆ ‘ಇಲ್ಲಪ್ಪಾ, ಇದು ರಾಧೆಯ ಸ್ಥಳ” ಎನ್ನುತ್ತಾರೆ. (‘ನಮ್ಮ ತಲೆ ಕಲ್ಲುಬಂಡೆಯಂತೆ’ ಎಂದವರೂ ಇದ್ದಾರೆ ಬಿಡಿ.) ಎಲ್ಲರ ಬಾಯಲ್ಲೂ ರಾಧೆ-ಕೃಷ್ಣನದೇ ಜಪ. ಜೈಕಾರ. ಹಾಡು, ನೃತ್ಯ, ಬಣ್ಣಗಳಿಂದ ಆ ಪ್ರದೇಶವೆಲ್ಲ ತುಂಬಿಹೋಗುತ್ತದೆ. ಹೆಂಗಸರಂತೂ ಕೈಯಲ್ಲಿ ಕೋಲು ಹಿಡಿದೇ ಗಂಡಸರನ್ನು ಸ್ವಾಗತಿಸುತ್ತಾರೆ. ‘ಮಿಠಾಯಿ, ಪಿಠಾಯಿ, ಥಂಡಾಯಿ’ ಇವುಗಳಿಂದ ಹೋಳಿಹಬ್ಬವು ಬಣ್ಣ ತುಂಬಿಕೊಂಡು ಬದುಕಿಗೆ ಹೊಸರಂಗನ್ನು ತುಂಬುತ್ತದೆ. ಇದು ತಮಾಷೆಗೆ ಹೊಡೆದ ಹೊಡೆತವಾದದ್ದಾದರೂ ಇಲ್ಲಿ ಹೊಡೆತ ತಿಂದ ಯಾವ ಗಂಡಸೂ ಬಹುಶಃ ಜೀವನದಲ್ಲಿ ಸ್ತ್ರೀಯರನ್ನು ಅವಮಾನಿಸುವುದಿಲ್ಲ.
ಇನ್ನೊಂದು ಬಗೆ
ಇನ್ನೊಂದು ಬಗೆಯ ಆಚರಣೆಯಲ್ಲಿ ಗಂಡಸರು ಕೈಯಲ್ಲಿ ಉದ್ದನೆಯ ಕೋಲು ಹಿಡಿದು ಓಡತೊಡಗುತ್ತಾರೆ.
ಗ್ರಾಮದ ಗಲ್ಲಿಗಲ್ಲಿ ತಿರುಗುತ್ತ ಓಡುತ್ತಿದ್ದರೆ ಹೆಂಗಸರು ಸಹ ಉದ್ದನೆಯ ಕೋಲನ್ನು ಹಿಡಿದುಕೊಂಡು ಅವರ ಹಿಂದೆಹಿಂದೆ ಓಡಿಹೋಗಿ ಅವರ ಕೋಲಿಗೆ ತಮ್ಮ ಕೋಲಿನಿಂದ ಹೊಡೆಯುತ್ತಾರೆ. ಗಂಡಸರು ಓಡೋಡಿ ತಪ್ಪಿಸಿಕೊಳ್ಳುತ್ತಾರೆ. ಬರಸಾನಾದ ಪಂಡಾಗಳ ನೃತ್ಯ, ಗೋಕುಲದ ‘ಛಡಿಮಾರ್ ಹೋಳಿ’ಯನ್ನೂ ಎಂಜಾಯ್ ಮಾಡಿಯೇ ಮಾಡಿದೆ. ಅಲ್ಲೂ ಹೆಂಗಸರ ಕೈಯಲ್ಲಿ ಉದ್ದುದ್ದ ಕೋಲು.
ಮಾರ್ರ್ರೆ!
ನಾನೀಗ ಮಥುರಾದಲ್ಲಿದ್ದೆ. ಹೋಳಿಹಬ್ಬದ ಸಂಭ್ರಮ ಅಲ್ಲೆಲ್ಲ ಹರಡಿತ್ತು. ಬಣ್ಣ ಎಲ್ಲ ಕಡೆ ಮಾರಾಟವಾಗುತ್ತಿತ್ತು. ಮಥುರಾ ನೋಡಿ ರಾಧೆಯ ಊರಾದ ಬರಸಾನಾಕ್ಕೆ ಹೋಗಿ ಆ ಊರನ್ನೆಲ್ಲ ಸುತ್ತಿದೆ. ಹೋಳಿ ಆಚರಣೆ ಆರಂಭವಾಗಿತ್ತು. ನನ್ನಂತೆ ದೆಹಲಿ, ಗುಜರಾತ್ ಕಡೆಯಿಂದೆಲ್ಲ ಗಂಡಸರು ಹೆಂಗಸರು ಲಾಠ್ಮಾರ್ ಹೋಳಿ ಮಜಾ ತೆಗೆದುಕೊಳ್ಳಲಿಕ್ಕೆ ಸೇರಿದ್ದರು. ಹೋಳಿ ಆರಂಭವಾಗಿ ಹೊಡೆಯಲಿಕ್ಕೆ ಶುರುಮಾಡಿದ್ದೆ ತಡ, ಎಲ್ಲರಿಗೂ ಉಮೇದು ಬಂತು ನೋಡಿ! ನಾವೆಲ್ಲ ಕೋಲು ಹಿಡಿದು ಗಂಡಸರಿಗೆ ಹೊಡೆಯುವುದು, ಗಂಡಸರು ತಲೆಯ ಮೇಲೆ ಗುರಾಣಿಯನ್ನು ಅಡ್ಡಹಿಡಿದುಕೊಂಡು ಬೀಳುತ್ತಿದ್ದ ಪೆಟ್ಟನ್ನೆಲ್ಲ ತಿನ್ನುತ್ತಿದ್ದರೆ ನಮಗೆ ಎಲ್ಲಿಲ್ಲದ ಉಮೇದು.
ಹಾಗೇ ಹೊಡೆದೆ ಹೊಡೆದೆ ಹೊಡೆದೆ…. ನೋಡಿ “ಏಯ್ ಯಾಕೆ ನನಗೆ ಹೊಡೆಯುತ್ತೀಯಾ, ಏನಾದರೂ ಕನಸು ಬಿತ್ತೇನೆ?” ಪತಿರಾಯರು ಅಲುಗಾಡಿಸುತ್ತ ಎಬ್ಬಿಸುತ್ತಿದ್ದರೆ ನಾನು ದಡಬಡನೆ ಎದ್ದು ಸುತ್ತಲೂ ನೋಡತೊಡಗಿದ್ದೆ. ನನ್ನ ಅವಸ್ಥೆ ನೋಡಿ ಅವರು ನಗುತ್ತಿದ್ದರೆ, ಸುಖಾಸುಮ್ಮನೆ ಅವರಿಗೆ ಹೊಡೆದದ್ದಕ್ಕಾಗಿ ನಾಚಿಕೆಯಿಂದ ತಲೆತಗ್ಗಿಸಿದೆ.