ಈಗ್ಗೆ ಎರಡು ತಿಂಗಳ ಹಿಂದೆಯಷ್ಟೆ ನಮ್ಮನ್ನಗಲಿದ ಸಾಹಿತ್ಯಕ್ಷೇತ್ರ ಮೇರು, ಶಬ್ದಶಾಸ್ತ್ರಪಾರೀಣ ಜಿ. ವೆಂಕಟಸುಬ್ಬಯ್ಯ ಅವರೊಡನೆ ಹತ್ತಾರು ವರ್ಷಗಳ ನಿಕಟ ಸಂಪರ್ಕದ ಧನ್ಯತೆ ಪಡೆದ ಕೊರ್ಗಿ ಶಂಕರನಾರಾಯಣ ಉಪಾಧ್ಯಾಯರು ಈ ನುಡಿನಮನದಲ್ಲಿ ‘ಜೀವಿ’ಯವರ ವ್ಯಕ್ತಿತ್ವಮಾಧುರ್ಯದ ಹಲವು ವಿರಳ ಝಳಕುಗಳನ್ನು ಹಾರ್ದವಾಗಿ ಮೆಲುಕುಹಾಕಿದ್ದಾರೆ. ಸಮುನ್ನತ ಸಾರಸ್ವತ ಸಾಧನೆಯಷ್ಟೆ ‘ಜೀವಿ’ಯವರ ಸರಸತೆ-ಲೋಕಾಭಿಮುಖ ಸ್ಪಂದನಶೀಲತೆಗಳೂ ಸ್ಪೃಹಣೀಯವಾಗಿದ್ದವು.

ಎಂದೂ ಮಸುಳದ, ಮರೆಯಾಗದ, ಮಂಕಾಗದ, ಪ್ರಭಾತಪ್ರಸೂನದ ಆಹ್ಲಾದದ ಮಂದಸ್ಮಿತ ಅವರ ಮೊಗದಿಂದ ಮಾಸಿದ್ದೇ ಇಲ್ಲ. ಆ ಚಾರುಹಾಸದ ಹಿಂದೆ ಶತಮಾನದ ಜೀವನಸಂತೃಪ್ತಿ ಇದೆ; ಜಿಜೀವಿಷೆಯ ಧನ್ಯತೆ ಇದೆ; ಶುಭ್ರತೆ ಇದೆ; ಸ್ವಚ್ಛತೆ ಇದೆ. ಚಾಂದ್ರ ಶೀತಲತೆ ಇದೆ; ಲೋಕಸ್ನೇಹಸಾಂದ್ರತೆ ಇದೆ. ಭಾವನಿರ್ಭರತೆಯ ತುಳುಕಿದೆ; ಅನುಭವಪ್ರಾಮಾಣ್ಯದ ಪುರಾವೆ ಇದೆ; ಜೀವನಪ್ರೀತಿಯ ಸರಿತ್ಸ್ರೋತವಿದೆ. ಕರ್ಮಶೀಲತೆಯ ಬದ್ಧತೆ ಇದೆ; ಮನಃಶುದ್ಧತೆಯ ಸ್ಫಾಟಿಕ್ಯವಿದೆ. ಅಲ್ಲಿ… ಅಲ್ಲಿ… ಅಲ್ಲಿ… ‘ಜೀವಿ’ತ್ವ ಇದೆ.
ಸುಮಾರು ಇಪ್ಪತ್ತೈದು ವರ್ಷಗಳಿಂದ ಅತ್ಯಂತ ನೈಕಟ್ಯದಿಂದ ಈ ಧೀಮಂತಮಹಿಮರನ್ನು ಕಂಡ ಸ್ವಾನುಭವದಿಂದ ಅವರ ಅಂತರ್ಬಹಿಶ್ಚಿತ್ರವನ್ನು ನನ್ನ ಮಿತಿಯಲ್ಲಿ ಗ್ರಹಿಸಿದ ಬಗೆ – ನೊರೆಯುಕ್ಕುವ ಕಡಲಲೆಯ ಮೊಗೆನಗೆ. ಗಂಜಾಂ ವೆಂಕಟಸುಬ್ಬಯ್ಯ, ಜಿ. ವೆಂಕಟಸುಬ್ಬಯ್ಯ – ಹೀಗೆ ಹೇಳಿದರೆ ಯಾರೋ ಅಪರಿಚಿತರ ವಿಳಾಸ ಹುಡುಕಿದಂತಾದೀತು. ಅದನ್ನೇ ‘ಜೀವಿ’
ಅಂದರೆ, ‘ಓ, ಅವರಾ? ಆಗಲೇ ಹೇಳಬಾರದಿತ್ತಾ’ ಎಂದು ಕನ್ನಡನಾಡಿನ ಅಕ್ಷರ ಬಲ್ಲ ಮಕ್ಕಳೂ ಉಗ್ಗಡಿಸಿಯಾವು. ‘ಜೀವಿ’ ಎಂಬೆರಡಕ್ಷರದಿಂದ ಕರ್ಣಾಟದಲ್ಲಿ ಕರ್ಣಾಟನ ಮಾಡಿದ ಸಾರಸ್ವತ ತಪಸ್ವಿ. ಪ್ರೊ|| ಜಿ. ವೆಂಕಟಸುಬ್ಬಯ್ಯ (೨೩.೦೮.೧೯೧೩ – ೧೯.೦೪.೨೦೨೧). ಅವರ ಹೆಸರಿನ ಮೊದಲ ಇನಿಶಿಯಲ್ಲು ಜಿ(G), ಎರಡನೆಯದು ವಿ(V) ಜಿoಡಿ Venkatasubbaiah. ವೈಲಕ್ಷಣ್ಯವೆಂದರೆ, ಕನ್ನಡಭಾಷೆಗೆ ಶಾಶ್ವತವಾದ ನಿಘಂಟಿನ ಗಂಟನ್ನು ಸಂಪಾದಿಸಿಕೊಟ್ಟ ಗಂಜಾಂ ವೆಂಕಟಸುಬ್ಬಯ್ಯನವರಿಗೆ ಗಂಟುಬಿದ್ದ ಪ್ರಥಿತನಾಮ ಇಂಗ್ಲಿಷಿನ ಇನಿಶಿಯಲ್ಲು ದಾಖಲಿಸಿದ GV. ಇಂಗ್ಲಿಷ್ ಭಾಷೆಯ ಜಾಯಮಾನಕ್ಕನುಗುಣವಾಗಿ ಅಕ್ಷರೋಚ್ಚಾರದ ದೀರ್ಘತೆಯಿಂದಾಗಿ ‘ಜಿ’ ಇದ್ದದ್ದು ‘ಜೀ’ ಆಗಿ ‘ವಿ’ ಹ್ರಸ್ವದಲ್ಲಿ ತನ್ನ ತಾವನ್ನು ಕಂಡುಕೊಂಡು ‘ಜೀವಿ’ತ್ವದ ಪಟ್ಟಕಟ್ಟಿತು. ಗುಂಡಪ್ಪನವರು ಡೀವೀಜಿ ಆದಂತೆ, ಸೀತಾರಾಮಯ್ಯನವರು ವೀಸೀ ಆದಂತೆ (ಸೀತಾರಾಮಯ್ಯ ಎಸ್ ಆಗದೇ ಕನ್ನಡಾಂಗ್ಲ ಬಾಂಧವ್ಯದ ಕೂಡಾವಳಿಯಿಂದ ವೀಸೀ), ವೆಂಕಟಸುಬ್ಬಯ್ಯನವರು ‘ಜೀವಿ’ ಯಾದರು. ಕನ್ನಡದ ಚೈತನ್ಯದ ಜೀವಿಯಾದರು. ಪುಣ್ಯಜೀವಿಯಾದರು. ಧನ್ಯಜೀವಿ ಆದರು. GV ಎನ್ನುವ ಎರಡು ಇಂಗ್ಲಿಷ್ ಅಕ್ಷರ ಸೇರಿ ಕನ್ನಡ ಶಬ್ದವಾದ ‘ಜೀವಿ’ಯಾಗಿ ವೆಂಕಟಸುಬ್ಬಯ್ಯನವರನ್ನು ಸಾಹಿತ್ಯಚರಿತ್ರಲೋಕದಲ್ಲಿ ಸಂಸ್ಥಾಪಿಸಿದ್ದು ಆಕಸ್ಮಿಕವಲ್ಲ – ಆಲೋಚಿತ.
ಆಲೋಚಿತವೆಂದರೆ, ಕಾಲದ ಸಂಕಲ್ಪವೇ ಆಗಿತ್ತೆಂದು ಅನಿಸುತ್ತದೆ. ಇಲ್ಲವಾದರೆ ತಾನು ವೈದ್ಯನಾಗಬೇಕೆಂದು ವಿದ್ಯಾರ್ಥಿದೆಸೆಯಲ್ಲಿ ಹಂಬಲವಿಟ್ಟುಕೊಂಡಿದ್ದ ತರುಣ ವೆಂಕಟಸುಬ್ಬಯ್ಯನಿಗೆ ವಿಧಿಯು ಬೆಂಬಲ ಕೊಡುವ ಕರುಣವನ್ನು ತೋರದೇ (ಸಾಮಾನ್ಯವಾಗಿ) ಅನಾಕರ್ಷಕವೂ ಅಲಾಭದಾಯಕವೂ ದುಷ್ಕರವೂ ದುರ್ಗಮ್ಯವೂ ಆದ ಭಾಷಾಕ್ಷೇತ್ರವೆಂಬ ಕುರುಕ್ಷೇತ್ರದ ಕುಲುಮೆಯತ್ತ ಸೆಳೆದದ್ದಾದರೂ ಯಾಕೆ? ಜೀವಿಯವರಿಗೆ ವೈದ್ಯತ್ವ ದಕ್ಕದ ನಷ್ಟವೆಂಬುದು ಕನ್ನಡ ಭಾಷಾಲೋಕಕ್ಕೆ ತವನಿಧಿಯಾಗಿ ಮಾರ್ಪಟ್ಟು, ಜೀವಿಯವರನ್ನು ಕನ್ನಡಭಾಷಾಕಾಶದ ಧ್ರುವತಾರಾಪೀಠದಲ್ಲಿ ಪ್ರತಿಷ್ಠಾಪಿಸಿದ್ದು – ದೇಶಭಾಗ್ಯ. ಆ ಪೀಠೌನ್ನತ್ಯವೇ ‘ನಿಘಂಟುಕಾರ’ನೆಂಬ ಬಿರುದಿನ ಶಬ್ದಾಸನ.
ಕನ್ನಡ ಭಾಷಾನಿಘಂಟುವಿನ ನಿರ್ಮಾಣವು ೧೯೫೬ರಲ್ಲೇ ಆರಂಭವಾಗಿ ಎ.ಎನ್. ಮೂರ್ತಿರಾಯರು, ಕ.ವೆಂ. ರಾಘವಾಚಾರ್ಯ, ತೀ.ನಂ.ಶ್ರೀ. ಮೊದಲಾದ ಅತಿರಥ ಮಹಾರಥರ ಆಧ್ಯಕ್ಷ್ಯವಿದ್ದೂ ಸಾಹಿತ್ಯಪರಿಷತ್ತಿನ ಈ ‘ನಿಘಂಟು ಯೋಜನೆ’ ಕೂರ್ಮಾಯಣದಲ್ಲಿ ಕಾಲೆಳೆದು ಸಾಗುತ್ತಿತ್ತೆನ್ನಬಹುದು. ಒಂದು ಸಂಪುಟವೂ ಮೆಯ್ ಹೊರೆದಿರಲಿಲ್ಲ. ೧೯೬೪ರಲ್ಲಿ ಜೀವಿಯವರು ಪರಿಷತ್ತಿನ ಅಧ್ಯಕ್ಷರಾದ ಮೇಲೆ ಗಮನಿಸಿದರೆ ಸುಮಾರು ನೂರು ಪುಟಗಳಷ್ಟು ಗಬ್ಬಗಟ್ಟಿತ್ತು. ‘ಸರಕಾರದಿಂದ ಸಾರ್ವಜನಿಕರಿಂದ ಲಕ್ಷಾಂತರ ರೂಪಾಯಿ ಸಂಗ್ರಹ ಮಾಡಿಯಾಗಿದ್ದರೂ ನಿಘಂಟೂ ಇಲ್ಲ ಇಡಿಗಂಟೂ ಇಲ್ಲ’ ಎಂಬ ಜಾಡಿನ ಜನಾಪವಾದದ ಅಪಪ್ರಥೆ ಜೀವಿಯವರ ಕಿವಿತನಕ ಬಂತು. ಮುಖಭಂಗಿತರಾದದ್ದು ಜೀವಿ. ಏನೇ ಆಗಲಿ, ನೂರಾದರೆ ನೂರು, ಅಷ್ಟೇ ಪುಟದ ಮೊದಲ ನಿಘಂಟನ್ನು ಬಿಡುಗಡೆ ಮಾಡುವ ದಿನಾಂಕವನ್ನೂ ತಿಂಗಳೊಂದರ ಮೊದಲು ಜಾಹೀರು ಮಾಡಿಯೇಬಿಟ್ಟರು ಜೀವಿ. ಅಚ್ಚಾದ ಪುಟಗಳನ್ನು ಸೇರಿಸಿ, ಬಿಡುಗಡೆಯ ಹಿಂದಿನ ರಾತ್ರಿ ಒಂದಷ್ಟು ಸಮಾನಾಸಕ್ತರೊಂದಿಗೆ ಕಲೆತು ಸ್ವತಃ ಬೈಂಡೂ ಮಾಡಿ, ಮರುವಗಲು ಎಸ್. ನಿಜಲಿಂಗಪ್ಪ, ರಾಮಕೃಷ್ಣ ಹೆಗಡೆ, ಎಸ್.ಆರ್. ಕಂಠಿ ಮೊದಲಾದವರ ಸಮಕ್ಷ ಕನ್ನಡಶಾರದೆಯ ಉಡಿ ತುಂಬಿಸಿದರು.
ನಿಘಂಟಿನ ಕೆಲಸ ಏನೂ ಆಗುತ್ತಿಲ್ಲವೆಂಬ ಮಿಥ್ಯಾರೋಪವನ್ನು ಜೀವಿಯವರು ಹೀಗೆ ಅಪನೋದಿಸಿದ್ದೇನೋ ಖರೆ. ಆದರೆ ೧೯೬೯ರಲ್ಲಿ ಪರಿಷತ್ತಿನ ಅಧ್ಯಕ್ಷಸ್ಥಾನದಿಂದ ಇವರು ನಿವೃತ್ತರಾದ ಮೇಲೆ, ನಿಘಂಟಿನ ಕೈಂರ್ಯವೂ ನಿವೃತ್ತವಾಯಿತು. ವಿಜಯಾ ಕಾಲೇಜಿನ ಪ್ರಾಂಶುಪಾಲತ್ವದಿಂದ ೧೯೭೩ರಲ್ಲಿ ಜೀವಿಯವರು ನಿವೃತ್ತರಾದಾಗ, ಗೂಡೊಳಗೆ ಮೂಕವಾಗಿ ಕೂತು ಕಾಯುತ್ತಿದ್ದ ನಿಘಂಟುಶಿಶು, ಜೀವಿಯವರತ್ತ ಕೊರಳೆತ್ತಿ ಕೂಗುಹಾಕಿತ್ತು. ‘ಬೃಹನ್ನಿಘಂಟು ಸಮಿತಿ’ಯ ಪ್ರಧಾನ ಸಂಪಾದಕ ಹುದ್ದೆಯ ಜಾಹೀರಾತು, ಅರ್ಜಿದಾರರಿಲ್ಲದೆ ನಿಷ್ಕಲವಾಗಿತ್ತು! ಜೀವಿಯವರು ಕೆಲಸದಿಂದ ನಿವೃತ್ತರಾಗುವುದನ್ನೇ ಕಾಯುತ್ತಿದ್ದ ಪ್ರಾಜ್ಞರು, ಅವರನ್ನು ಕರೆದು ಸಂಪಾದಕನ ಸುಖಾಸನದಲ್ಲಿ ಸಂಪ್ರತಿಷ್ಠಾಪಿಸಿದರು.
ಮೂಲಪ್ರೇರಣೆ
ನಿಘಂಟುವಿನಂತಹ ಸಂಕ್ಲಿಷ್ಟಕಾರ್ಯದಲ್ಲಿ ಜೀವಿಯವರು ತೊಡಗಿಕೊಳ್ಳಲು ಮೂಲಕಾರಣ-ಪ್ರೇರಕರೆಂದರೆ ಎ.ಆರ್. ಕೃಷ್ಣಶಾಸ್ತ್ರಿಗಳು. ಸೂಕ್ಷ್ಮೇಕ್ಷಣರಾದ ಶಾಸ್ತ್ರಿಗಳು ಜೀವಿಯವರ ಅಧ್ಯಯನದ ಆಸಕ್ತಿ ಶ್ರದ್ಧೆ ಅಕಿಂಚನತೆಗಳನ್ನು ಹತ್ತಿರದಿಂದ ಗಮನಿಸಿದ್ದರು. ಆದ್ದರಿಂದಲೇ ಇವರ ಮೇಲೆ ಪೂರ್ಣಪ್ರತ್ಯಯವನ್ನಿಟ್ಟಿದ್ದರು. ಬಾಯಾರೆ ಇವರಿಗೆ ಹೇಳಿದ್ದರು ಕೂಡ. ‘ಇದು (ನಿಘಂಟು) ಪೂರ್ತಿ ಆಗಬೇಕೆಂದರೆ, ಕನಿಷ್ಠ ಅಂದರೂ ೫೦-೬೦ ವರ್ಷ ಬೇಕಾಗುತ್ತದೆ. ನೀನಿನ್ನೂ ಪ್ರಾಯದವ. ನಿನ್ನ ಜೀವಾವಧಿಯಲ್ಲೇ ಈ ಯಜ್ಞ ಮುಗೀತು ಅಂದ್ರೆ, ನೀನೇ ಅದೃಷ್ಟವಂತನಯ್ಯ! ಚೂರೇ ಚೂರು ತಪ್ಪಿಲ್ಲದ ಹಾಗೆ ನಿಘಂಟು ನಿರ್ಮಾಣ ಆಗಬೇಕು’ ಎಂದು ಶಾಸ್ತ್ರಿಗಳು ಆದೇಶಾನುಗ್ರಹ ಮಾಡಿದರು. ನಿಘಂಟುನಿಷ್ಠಾಕ್ರಿಯೆಗಳನ್ನು ವಿವರವಾಗಿ ಹೇಳಿಕೊಟ್ಟರು. ವೈದಿಕನಿಘಂಟು, ಯಾಸ್ಕನ ನಿರುಕ್ತವನ್ನೂ ಶಾಸ್ತ್ರಿಗಳೇ ಇವರಿಗೆ ಪಾಠಮಾಡಿದರು. ಶಾಸ್ತ್ರಿಗಳಿಂದ ಭಾಷಾದೀಕ್ಷಿತರಾಗಿ ಜೀವಿಯವರು ನಿಘಂಟಿಗೆ ಧುರಂಧರರಾದರು.
ಲೇಖನಾರಂಭದಲ್ಲಿ ಹೇಳಿದಂತೆ, ಜೀವಿಯವರು ನಿಘಂಟುಕ್ಷೇತ್ರಕ್ಕೆ ಬಂದುದು ಆಕಸ್ಮಿಕವಲ್ಲ. ಭಾಷಾವಿಷಯಕವಾದ ಆಸಕ್ತಿಯೂ ಕುತೂಹಲವೂ ಅವರರಿವಿಲ್ಲದೆಯೆ ಬಾಲ್ಯದಿಂದಲೇ ಬೆಂಬತ್ತಿತ್ತು. ಬ್ರಾಹ್ಮೀ ಮುಹೂರ್ತದಲ್ಲಿ ನದೀಸ್ನಾನಕ್ಕೆಂದು ತೆರಳುತ್ತಿದ್ದ ಜೀವಿಯವರ ಅಜ್ಜ, ದಾರಿಯುದ್ದಕ್ಕೂ ತಾರಸ್ಥಾಯಿಯಲ್ಲಿ ಅಮರಕೋಶವನ್ನು ಹೇಳಿಕೊಳ್ಳುತ್ತಿದ್ದರು. ಅಜ್ಜನ ಹೆಜ್ಜೆಗುರುತಲ್ಲಿ ಜೊತೆಯಾಗಿ ಹೋಗುತ್ತಿದ್ದ ಪೋರ ವೆಂಕಟು, ಅಜ್ಜನ ಮುಖೋದ್ಗಾರದ ಅಮರಶ್ಲೋಕಗಳನ್ನು ಕೇಳಿಕೇಳಿಯೇ ಇಡೀ ಕೋಶವನ್ನು ಹೃದಯಸ್ಥಗೊಳಿಸಿಕೊಂಡ. ಜೀವಿಯವರ ತಂದೆಯವರೂ ಮೇಷ್ಟ್ರು. ಸಂಸ್ಕೃತ ಕನ್ನಡ ಎರಡೂ ಅವರಿಗೆ ವಾಚೋವಿಧೇಯ. ಮನೆಯಲ್ಲಿ ದೊಡ್ಡ ಲೈಬ್ರೆರಿ ಇತ್ತು. ಪಂಪ, ರನ್ನ, ರುದ್ರಭಟ್ಟ, ಮುದ್ದಣ, ಕಮಲಭವ ಮಂತಾದ ಮನೀಷಿಗಳ ಕಾವ್ಯಗಳ ಪಾಠವು ಇವರಿಗೆ ಸಾನುಕ್ರಮವಾಗಿ ತಂದೆಯವರಿಂದಲೇ ಆಗಿತ್ತು. ನಾಗೇಶರಾಯರು ಎಂಬವರಿಂದ ಮಧುಗಿರಿಯಲ್ಲಿ ಪ್ರೌಢವಾದ ಇಂಗ್ಲಿಷ್ ಪಾಠವು ಶಾಸ್ತ್ರೀಯವಾಗಿ ಆಗಿತ್ತು. ಸ್ವಾಧ್ಯಾಯದಿಂದ ಸಂಸ್ಕೃತವನ್ನೂ ಆಪೋಶಿಸಿದರು. ಕಿಡಿಸೂಸುವ

ಕಿಚ್ಚಿಗೆ ಬೀಸುಗಾಳಿಯು ಉರಿ ಎಬ್ಬಿಸುವಂತೆ, ಕಾಲೇಜಿನ ಕಲಿಕೆಯಲ್ಲಿ ಕುವೆಂಪು, ಬಿ.ಎಂ.ಶ್ರೀ. ರಾಳ್ಳಪಲ್ಳಿ ಅನಂತಕೃಷ್ಣ ಶರ್ಮಾ, ಡಿ.ಎಲ್. ನರಸಿಂಹಾಚಾರ್, ಟಿ.ಎಸ್. ವೆಂಕಣ್ಣಯ್ಯ, ತೀ.ನಂ. ಶ್ರೀಕಂಠಯ್ಯನವರಂತಹ ದಿಗ್ದಂತಿಗಳ ಅಧ್ಯಾಪನ-ಸಹಯೋಗ ಸಿಕ್ಕಿತು. ಹಾಗಾಗಿ, ಜೀವಿಯವರಿಗೆ ಬಾಲ್ಯದಿಂದಲೂ ಭಾಷೆ ಎಂಬುದು ಬರೀ ಬಾಯಿಮಾತಿನ ಬಾಬತ್ತಾಗದೆ ಹೃದಯವ್ಯಾಪಾರದ ಅಭಿವ್ಯಕ್ತಿಯಾಗಿತ್ತು. ಇಂತಹ ಹಿನ್ನೆಲೆಯೇ ಜೀವಿಯವರನ್ನು ಯಾರೂ ಬರಲೊಪ್ಪದ ಆ ಸಂಪಾದಕನ ಚೇಂಬರಿಗೆ ಕರೆದೊಯ್ದದ್ದು.
ಕೀರ್ತಿ, ಹಣ, ಸ್ವಾತಂತ್ರ್ಯ – ಈ ಮೂರೂ ಇಲ್ಲದ ನಿಘಂಟುಕರ್ಮವೆಂಬ ಶುಷ್ಕಮೂರ್ತಿಯ ನಿತ್ಯಾರ್ಚನೆಯ ಹೊಣೆಯನ್ನು ಜೀವಿಯವರು ಸೋತ್ಸಾಹರಾಗಿ ಹೊತ್ತರು. ಸಂಪಾದಕ ಅಂದರೆ ಕರ್ಣಧಾರ. ಸಹಯಾನಿಗಳು ಎಂಟುಜನ ವಿದ್ವಾಂಸರು, ಹಸ್ತಪ್ರತಿ ತಯಾರಿಸುವುದು ಅವರೆಲ್ಲರ ಕೆಲಸ. ಮೊದಲೇ ಕೃಷ್ಣಶಾಸ್ತ್ರಿಗಳಿಂದ ಉಪದಿಷ್ಟರಾದ ಜೀವಿಯವರು ಸ್ವಭಾವತಃ ನಿಷ್ಠಕರ್ಮಯೋಗಿ. ಶಿಸ್ತು ಎಂಬುದು ಉಸಿರಲ್ಲೆ ಬಿಡಾರ ಮಾಡಿದೆ. ಜೊತೆಗಾರರಿಂದಲೂ ಅದೇ ಬದ್ಧತೆಯನ್ನು ಅವರು ನಿರೀಕ್ಷಿಸುತ್ತಾರೆ. ಈಗ್ಗೆ ೫೦ ವರ್ಷದ ಹಿಂದೆ, ಈಗಿನಂತೆ ಸಂಗ್ರಹಕ್ಕೆ ಅನುಕೂಲಿಸುವ ಯಾವ ತಾಂತ್ರಿಕತೆಯೂ ಇರಲಿಲ್ಲ. ಟೈಪ್ರೈಟರ ಒದಗಣೆಯೂ ಇಲ್ಲದ ದುಸ್ಸಹ ಸನ್ನಿವೇಶ. ಎಲ್ಲ ಪ್ರಕ್ರಿಯೆಯೂ ಮ್ಯಾನ್ಯುವಲ್.
‘ರಾಮನು ಕಾಡಿಗೆ ಹೋದನು’ ಇದೊಂದು ವಾಕ್ಯ. ಇದರಲ್ಲಿ ಇರುವ ಮೂರು ಶಬ್ದಕ್ಕೆ ಮೂರು ಚೀಟಿ ಮಾಡಬೇಕು. ಒಂದು ‘ರಾಮ’, ಎರಡನೆಯದು ‘ಕಾಡು’, ಮೂರನೆಯದು ‘ಹೋಗು’. ಈ ಒಂದೊಂದು ಶಬ್ದವೂ ಯಾವಯಾವ ಕಾವ್ಯಗಳಲ್ಲಿ, ಗ್ರಂಥಗಳಲ್ಲಿ ಪ್ರಯೋಗ ಆಗಿದೆ ಎಂಬುದಕ್ಕೆ, ಕನಿಷ್ಠ ಹದಿನೈದು ಉದಾಹರಣೆಗಳನ್ನು ಗುಡ್ಡೆಹಾಕಬೇಕು. ಈ ಕೆಲಸಕ್ಕೆ, ಖಾಯಂ ಅಲ್ಲದ ಹೊರಗಿನ ಹಲವು ಪಂಡಿತರನ್ನು ನಿಯಮಿಸುತ್ತಿದ್ದರು. ಆ ಕರ್ಮವ್ರತಿಗಳು ಜೀವಿಯವರ ಮಾರ್ಗದರ್ಶನಾನುಸಾರ ಒಟ್ಟಯಿಸಿದ ಸಂಗ್ರಹವನ್ನು ಕೊಟೇಶನ್ನ್ ಮಾಡಿ, ಪಿಜನ್ಹೋಲ್ ಮಾಡಿ ಕ್ರಮವಾಗಿ ತುಂಬಿಸಿಡುತ್ತಿದ್ದರು. ಅಕಾರಾದಿಯಾಗಿ ಜೋಡಿಸುವುದಕ್ಕೇ ತಿಂಗಳುಗಟ್ಟಲೆ ಹಿಡಿಯುತ್ತಿತ್ತು. ಅಕಸ್ಮಾತ್ ಈ ದಾಸ್ತಾನಿನಲ್ಲಿ ಯಾವುದೇ ಒಂದು ತುಂಡು ಕಾಗದವು ಕಾಣೆಯಾದರೂ ನಷ್ಟ ನಷ್ಟವೇ. ಪುನಃಪ್ರಾಪ್ತಿಗೆ ಹೊಲಬಿಲ್ಲ.

ಶಬ್ದಜಾಲ-ಮಹಾರಣ್ಯ
‘ಇನಿತೂ ತಪ್ಪಿಲ್ಲದಂತೆ ನಿಘಂಟು ಇರಬೇಕು’ಎಂಬ ಕೃಷ್ಣಶಾಸ್ತ್ರಿಗಳ ಗುರ್ವಾದೇಶವು ಜೀವಿಯವರಿಗೆ ಜೀವಕ್ಕಿಂತ ಹೆಚ್ಚು ಅನುಷ್ಠೇಯವಾಗಿತ್ತು. ಏನೋ ಒಂದು ಕಾಟಾಚಾರಕ್ಕೆ ದಾಖಲಿಸಿ ಕೈಕೊಡಹಿಬಿಡೋಣ ಎಂಬ ಆಲಸ್ಯವೋ ಔದಾಸೀನ್ಯವೋ ನಿರ್ಲಕ್ಷ್ಯವೋ ಸುತರಾಂ ಜೀವಿಯವರ ನೆರಳತ್ತಲೂ ಸುಳಿಯಗೊಡಲಿಲ್ಲ. ಅಂತಹ ಒಂದು ಶಬ್ದಕಂಟಕವು ನಿಘಂಟು ನಿರ್ಮಾಣಾವಸರದಲ್ಲಿ ಜೀವಿಯವರನ್ನು ಜೀಕಿತ್ತು. ಆ ಶಬ್ದ, ‘ಖುಭುಕಿ’. ಒಬ್ಬ ಪಂಡಿತರು ಕನ್ನಡ ಪಂಚತಂತ್ರ ಪುಸ್ತಕದಲ್ಲಿ ತಲಾಶುಮಾಡಿದ ತರ್ಲೆ ಶಬ್ದ ‘ಖುಭುಕಿ’. ಮಂತ್ರಣಸಭೆಯಲ್ಲಿ ಆ ಪಂಡಿತರು ಈ ಶಬ್ದವನ್ನು ತೋರಿಸಿ, ‘ಆ ಖುಭುಕಿಗೂಡಿನೊಳ್ ಮರಿಗಳಂ’ ಅಂತ ವಾಕ್ಯವಿದೆ ಎಂದು ನಿದರ್ಶಿಸಿದರು. ಒಂದಷ್ಟು ಚರ್ಚೆ ಆಗಿ ಸಭಾವಿಸರ್ಜನೆಯೂ ಆಯ್ತು. ಸಿದ್ದಯ್ಯ ಪುರಾಣಿಕರು ‘ಖುಭಕ್ ಅಂತ ಪ್ರಾಣಿ ಇದೆ. ಹಾಗೇ ಬರೀಬಹುದಲ್ವಾ’ ಅಂತಲೂ ಅಂದರು. ಸಂಪಾದಕ ಜೀವಿಯವರಿಗೆ ಇಲ್ಲೇನೋ ಎಡವಟ್ಟಾಗಿದೆ ಎಂದೆನಿಸಿತು. ಅಸಮರ್ಪಕ ಪರಿಶೀಲನೆ ಅನಿಸಿತು. ಮೂಲಪ್ರತಿಯನ್ನು ತರಿಸಿ, ಆ ವಾಕ್ಯವಿದ್ದ ಪ್ರಕರಣವನ್ನು ಆದ್ಯಂತ ಓದಿದರು. ರಾಣಿಯೊಬ್ಬಳ ಕಂಠೀಹಾರವನ್ನು ಕಾಗೆಯೊಂದು ಅಪಹರಿಸಿ ಹುತ್ತದಲ್ಲಿ ಹಾಕಿ, ಅಲ್ಲಿದ್ದ ನಾಗರಹಾವನ್ನು ಜನರು ಕೊಂದು… ಹೀಗೆ ಸಾಗುತ್ತದೆ ಕಥೆ. ಆಗ ಜೀವಿಯವರಿಗೆ ನಿಚ್ಚಳವಾಯಿತು, ಅಲ್ಲಿ ಗ್ಯಾಪ್ ಇಲ್ಲ ಅಂತ. ‘ಆ ಖುಭಕಿ’ ಅಲ್ಲ, ‘ಆಖುಭುಕಿ’. ಆಖು
ಅಂದರೆ ಇಲಿ, ಭುಕ್ ತಿನ್ನುವುದು. ಇಲಿತಿನ್ನುಗ. ಅಂದರೆ ಹಾವು.
ಭಾಷೆಯ ಹುತ್ತದಿಂದ ಇದೊಂದು ಶಬ್ದವನ್ನು ಹೊರತೆಗೆಯಲಿಕ್ಕೆ ತಗಲಿದ ಕಾಲಾವಧಿ ಬರೋಬ್ಬರಿ ಮೂರು ಗಂಟೆ. ಆಖುಭುಕಿಯಂತಹ ಅಪರಿಚಿತವಾದ ಅನುಪಯುಜ್ಯವಾದ ಮೂರುಸಾವಿರಕ್ಕೂ ಮಿಕ್ಕ ಶಬ್ದಗಳಿಗೆ ಜೀವಿಯವರು ತಮ್ಮನ್ನು ತೆತ್ತುಕೊಂಡದ್ದಲ್ಲ – ತೇಯ್ದುಕೊಂಡಿದ್ದಾರೆ, ಹಾಸಾಭರಣರಾಗಿ.
ಜೀವಿಯಂತಹ ಜೀವಿಯವರನ್ನೇ ಮೂರು ಹಗಲು ಮೂರು ರಾತ್ರಿ ಹಿಪ್ಪಿಹಿಂಡಿದ ಇನ್ನೊಂದು ಶಬ್ದ ‘ಚದುರರಸ’. ಹಡಪದ ಅಪ್ಪಣ್ಣನ ಒಂದು ವಚನ ‘ಬೆಲ್ಲಕ್ಕೆ ಚದುರರಸ ಉಂಟಲ್ಲದೆ ಸಿಹಿಗೆ ಉಂಟೇ ಅಯ್ಯ’. ಚತುರವು ಚದುರವಾಗುತ್ತದೆ.
ಆದರೆ ರಸಕ್ಕೇನು ಸಂಬಂಧ? ಎರಡು ರೇಫಗಳು ಒಟ್ಟು ಬಂದು ಜೀವಿಯವರಿಗೆ ರೋಪ್ ಹಾಕುತ್ತಿದ್ದವು. ರಾತ್ರಿ ನಿದ್ರೆಯಲ್ಲೂ ಚದುರರಸ ಬೆಚ್ಚಿಬೀಳಿಸುತ್ತಿತ್ತು. ಚದುರರಸದ ಗುಂಗಿನಿಂದ ಬಿಡಿಸಿಕೊಳ್ಳಲಾಗದಷ್ಟು ನಿಮಗ್ನತೆ ಬಂದು, ಆವರ್ತಾವರ್ತವಾಗಿ ಅದೇ ಶಬ್ದವನ್ನು ಮರುನುಡಿಯುತ್ತಿದ್ದಾಗ, ಆಹಾ, ವಿದ್ಯುತ್ಸ್ಫುರಣ! ಚತುರಶ್ರದ ತದ್ಭವ ಚದುರಸ. ಅಂದರೆ ಚೌಕ. ಬೆಲ್ಲದ ಅಚ್ಚಿನಾಕಾರ ಚೌಕವಿದ್ದೀತೇ ಹೊರತು, ಸಿಹಿಗೆ ಉಂಟೇ ಅಯ್ಯಾ! ಪ್ರತಿಮಾಡುವವರ ಕೈತಪ್ಪೋ, ಕಣ್ತಪ್ಪೋ, ಅರಿವುದಪ್ಪೋ! ಹೆಚ್ಚುವರಿ ರಕಾರ ಸೇರ್ಪಡೆಯಾಗಿ ಹೆಚ್ಚು ವರಿ ಮಾಡಿತ್ತು.
ಹೀಗೆ ಗಾಳಿಯೊಂದಿಗಿನ ಆಹ್ಲಾದಕರವಾದ ಗುದ್ದಾಟದಲ್ಲಿ ಏಗುತ್ತಲೇ, ಭರ್ತಿ ಇಪ್ಪತ್ತು ವರ್ಷ ನಿಘಂಟಿನ ನೀರನಿಧಿ (ಸಮುದ್ರ)ಯಲ್ಲಿ ನಿಷ್ಠಾನೈರಂರ್ಯದಲ್ಲಿ ತಮ್ಮನ್ನು ಅದ್ದಿಕೊಂಡರು. ಒಟ್ಟು ಎಂಟು ಸಂಪುಟಗಳ ಶಬ್ದಸವನ. ಭಾರತದ ಮಿಕ್ಕ ಯಾವ ಭಾಷೆಯಲ್ಲೂ ಇಂತಹ ನಿಘಂಟು ನಿರ್ಮಾಣವಾಗಿಲ್ಲ. ಇದೊಂದು ಯುಗಮಾನದ ಘಟನೆ. ನಿಘಂಟುರಚನಾಶಾಸ್ತ್ರಕ್ಕೆ ಜೀವಿಯವರು ಪರಮಾಚರ್ಯರಾದರು. ನಿಘಂಟಿನ ಕಗ್ಗಂಟಿಂದ ಹೊರಬಂದಾಗ ಜೀವಿಯವರ ವಯಸ್ಸು ಎಂಬತ್ತು ಮುಟ್ಟಿ, ಆಚೆಗೆ ಕಾಲಿಟ್ಟಿತ್ತು. ಆದರೆ, ಮುಪ್ಪು ಮೆಯ್ಯನ್ನಾಗಲಿ ಮನಸ್ಸನ್ನಾಗಲಿ ಮುಟ್ಟಿರಲಿಲ್ಲ. ಕಾರಣ, ಕೇವಲ ಕಠೋರನಿಷ್ಠೆಯಲ್ಲ, ಅದಕ್ಕಿಂತಲೂ ಅಧಿಕವಾದ ಕರ್ತವ್ಯಪ್ರೀತಿ. ಭಾಷಾಕ್ಷೇತ್ರ ಅವರಾಗಿ ಅಪ್ಪಿಕೊಂಡದ್ದು, ಒಪ್ಪಿಕೊಂಡದ್ದು. ಅವರ ಕಣ್ಗಾಪಿನಲ್ಲಿ ಅಚ್ಚಾದ ನಿಘಂಟಿನ ಪ್ರತಿಯೊಂದು ಶಬ್ದವೂ ಜೀವಿಯವರ ಹೃತ್ಸಂತಾನ. ಎಲ್ಲ ಪದಗಳೂ ಜೀವಿಯವರ ನಿಷ್ಕಲ್ಮಷವಾದ ಎದೆಯಾಳದ ಒಲವಿನಿಂದ ಲಾಲಿ ಹಾಡಿಸಿಕೊಂಡವುಗಳೇ. ಆ ಮಟ್ಟದ ಪ್ರೀಣನತೀವ್ರತೆ ಇದ್ದಲ್ಲಿ ಮಾತ್ರ ಜರೆಯೂ ಹಿಂಜರಿಯುತ್ತದೆ. ಪೂರ್ಣಶಃ ಅಷ್ಟೋತ್ತರಶತವರ್ಷ ಭಾವಸಮೃದ್ಧವಾಗಿ ಬದುಕಿದ ಜೀವಿಯವರು ಕೊನೆತನಕವೂ ಮುಪ್ಪಾಗಲೇ ಇಲ್ಲ. ಮನಸ್ಸಷ್ಟೇ ಅಲ್ಲ, ದೇಹವೂ ವಾರ್ಧಕಕ್ಕೆ ವಾಲಲೇ ಇಲ್ಲ. ಒಂದು ಡಿಗ್ರಿಯಷ್ಟೂ ಅವರ ದೇಹ ಪಾದಾದಿಕೇಶಾಂತ, ಬಾಗಲಿಲ್ಲ. ಕಾರಣ, ನಮ್ರತೆ (ಬಾಗುವಿಕೆ) ಅವರ ಆತ್ಮಗುಣವಾಗಿತ್ತೇ ವಿನಾ ದೇಹಗುಣವಾಗಿರಲಿಲ್ಲ.
‘ಸ್ವಸ್ಥಾನ-ಪರಿಜ್ಞಾನ’
ಜೀವಿಯವರು ಅತ್ಯಂತ ಪುಣ್ಯಶಾಲಿಗಳು. ಅವರ ಒಟ್ಟು ಜೀವಿತದಲ್ಲಿ ನಾಲ್ಕು ತಲೆಮಾರಿನೊಂದಿಗೆ ನಿಕಟಸಂಪರ್ಕವಿದ್ದ ಧೀಮಂತ ಜೀವಿ. ಅವರು ಬದುಕಿದ್ದೂ ತೆರೆಬಾಗಿಲ ಮುಕ್ತಾಲಯದಲ್ಲಿ. ‘ಆ ನೋ ಭದ್ರಾಃ ಕ್ರತವೋ ಯಂತು ವಿಶ್ವತಃ’ ಎಂಬುದು ಅವರ ಜೀವನತತ್ತ್ವವೇ ಆಗಿತ್ತು. ತಿಳಿವಿನ ಬೆಳಕು ಎಲ್ಲೆಡೆಯಿಂದ ಬಂದರೂ ಸ್ವೀಕರಿಸುವ ವಿನಯವು ಜೀವಿಯವರ ಆತ್ಮಗುಣ ಆಗಿತ್ತು. ಹಿರಿಯರಿಂದ ಎಷ್ಟೆಲ್ಲ ಸಾಧ್ಯವೋ ಅಷ್ಟೂ ಸದಂಶಗಳನ್ನೂ ಸಚ್ಛೀಲಚಾರಿತ್ರ್ಯಗಳನ್ನೂ ಗ್ರಹಿಸಿದ್ದಾರೆ, ಅಳವಡಿಸಿಕೊಂಡಿದ್ದಾರೆ. ಗಮನಾರ್ಹ ಅಂಶವೆಂದರೆ, ತಾನು ಪಡೆದ ಅಮೂಲ್ಯ ಪಾಠಗಳನ್ನು ಅದರ ಎಲ್ಲ ವಿವರಗಳೊಂದಿಗೆ ನೆನಪಿಟ್ಟುಕೊಂಡುದು.
ಆಗಷ್ಟೇ ಜೀವಿಯವರ ಕನ್ನಡ ಎಂ.ಎ. ಮುಗಿದಿತ್ತು. ಇವರು ಚಿನ್ನದ ಪದಕ ಪಡೆದ ಪ್ರತಿಭಾವಂತ. ಮೈಸೂರಲ್ಲಿ ಘಟಿಕೋತ್ಸವ ಸಮಾರಂಭ. ವೇದಿಕೆಯಲ್ಲಿ ಶ್ರೀಮನ್ಮಹಾರಾಜರು ವಿರಾಜಮಾನರಾಗಿದ್ದಾರೆ. ಸನ್ಯಾನ್ಯ ಗಣ್ಯರೂ ಉಪಸ್ಥಿತರಾಗಿದ್ದಾರೆ. ಗೋಲ್ಡ್ಮೆಡಲಿನ ಜೀವಿಯವರು ವೇದಿಕೆಯ ಎಡತುದಿಯಲ್ಲಿ ತಾರುಣ್ಯದ ಸಹಜವಾದ ಗತ್ತಿನಲ್ಲಿ ಪದಕ ಪಡೆದ ಪ್ರೌಢಿಯಲ್ಲಿ ಆಸೀನರಾಗಿದ್ದಾರೆ. ಬಲ ತುದಿಯಲ್ಲಿ ಡಿ.ವಿ.ಜಿ.ಯವರು ಕುಳಿತಿದ್ದಾರೆ. ಸಭಾಕಲಾಪ ನಡೆಯುತ್ತಿದೆ. ಡಿ.ವಿ.ಜಿ. ತಮ್ಮ ಎಡಗಡೆಯ ತುದಿಯಲ್ಲಿ ಝಾಪಿನ ಭಂಗಿಯಲ್ಲಿ ಕುಳಿತ ಜೀವಿಯನ್ನು ಗಮನಿಸುತ್ತಲೇ ಇದ್ದರು. ಕಸಿವಿಸಿಗೊಳ್ಳುತ್ತಿದ್ದರು. ಒಳಗೊಳಗೇ ಚಡಪಡಿಸುತ್ತಿದ್ದರು. ಕೊನೆಗೂ ತಡೆಯಲಾಗದೆ ಜೀವಿಯವರು ತಮ್ಮತ್ತ ತಿರುಗಿದಾಗ, ಕೈಯಲ್ಲಿ ಸನ್ನೆಮಾಡಿ ಸೂಚನೆ ಕೊಟ್ಟರು. ಡಿ.ವಿ.ಜಿ.ಯವರ ಹಸ್ತಾಭಿನಯದ ಮುದ್ರಾರ್ಥ ಏನೆಂದು ಜೀವಿಗೆ ನಾಟಲಿಲ್ಲ. ಇನ್ನೂ ಕೊಂಚ ಸೆಟೆದು ಕೂತರು ಜೀವಿ. ಡಿ.ವಿ.ಜಿ.ಯವರ ತಳಮಳ ತುದಿಮುಟ್ಟಿತು. ಜೀವಿ ತಮ್ಮತ್ತ ನೋಡಿದಾಗ ಕಣ್ಣಲ್ಲೇ ತಡೆದು, ತಮ್ಮ ಎಡಗಾಲ ಮೇಲೆ ಬಲಗಾಲನ್ನಿಟ್ಟು, ತತ್ಕ್ಷಣ ಕೆಳಗಿಳಿಸಿ ಸಮಭಂಗಿಯಲ್ಲಿ ಕುಳಿತುಕೊಳ್ಳಬೇಕಾದ ವಿನಯವನ್ನು ಡೆಮೋ ಮಾಡಿದರು. ಆಗ ಜೀವಿಯವರಿಗೆ ಪ್ರಮಾದದ ಅರಿವಾಯಿತು. ಕಾಲ ಮೇಲೆ ಕಾಲು ಹಾಕಿ ಕುಳಿತಿದ್ದ ಜೀವಿ ಸರಕ್ಕನೆ ಸಮಸ್ಥಿತಿಗೆ ಬಂದರು. ಬಳಿಕ ಡಿ.ವಿ.ಜಿ.ಯವರು ಇವರಿಗೆ ಹೇಳಿದ್ದು – ಸ್ವಸ್ಥಾನ ಪರಿಜ್ಞಾನದ ಪಾಠ.
ಆದಿತ್ಯಹೃದಯ
ಜೀವಿಯವರ ವಾಙ್ಮಯಕೃಷಿ ನಿರವಧಿಕವಾದದ್ದು. ಅವರ ನೆನಪು ಅಗಾಧ, ಗಾಢ. ಅವರ ಸ್ಮೃತಿಕೋಶವೂ ಭಾವಕೋಶವೂ ಅವಿಕಲ್ಪವಾದುದು. ತಾವು ಯಾವತ್ತೂ ಓದಿದ ಸಾಹಿತ್ಯದ ನಿರಂತರ ಮನನ ಮಾಡುತ್ತಾ ಇರುವುದು ಅವರ ಜಾಗ್ರತ ಹೃದಯೋದ್ಯೋಗ. ಆ ವಾಙ್ಮಯರಾಶಿಯಲ್ಲಿ ಅವರ ಹೃದಯಕ್ಕೆ ಅತ್ಯಂತ ಹತ್ತಿರ ಆದದ್ದು ಮಹಾಭಾರತ ಹಾಗೂ ರಾಮಾಯಣ. ಕುಮಾರವ್ಯಾಸ ಮತ್ತು ಪಂಪ ಅವರ ನಿತ್ಯದ ಒಡನಾಡಿಗಳು. ಓದಿದಷ್ಟೂ ಹೊಸ ಹೊಸ ಹೊಳಹನ್ನು ಕೊಡುವ ಕಾವ್ಯಗಳು ಅವು ಎಂಬುದು ಅವರ ಕೊಂಡಾಟ. ಅವರು ಆಗಾಗ ಭೇಟಿ ಆಗುವ ಕವಿ, ವಾಲ್ಮೀಕಿ. ಇತ್ತೀಚಿನ ವರ್ಷದಲ್ಲಿ ಜೀವಿಯವರನ್ನು ಕಾಡಿದ್ದು ‘ಆದಿತ್ಯಹೃದಯ’. ಅದಕ್ಕಾಗಿ ಆಲೋಡನ. ಆಗ ಅವರಿಗೆ ಕಂಡ ವಾಲ್ಮೀಕಿ-ಕಾವ್ಯಶಿಲ್ಪನದ ಮರ್ಮ ಚಿಂತನೀಯವಾದುದು.
ಇದ್ದಕ್ಕಿದ್ದಂತೆ ರಣಭೂಮಿಗೆ ಬಂದ ಅಗಸ್ತ್ಯಋಷಿಗಳು ಶ್ರೀರಾಮನಿಗೆ ‘ಆದಿತ್ಯಹೃದಯ’ ಉಪದೇಶಿಸಿ ತೆರಳುತ್ತಾರೆ. ವಾಲ್ಮೀಕಿಗಳು ಆ ಶ್ಲೋಕಭಾಗವನ್ನು ‘ಆದಿತ್ಯಹೃದಯ’ ಎಂಬ ಹೆಸರಿಂದಲೇ ಕೋದಿದ್ದಾರೆ. ಆದಿತ್ಯಸ್ತುತಿ, ಆದಿತ್ಯಸ್ತೋತ್ರ ಅಂತೆಲ್ಲ ಯಾಕೆ ಹೇಳಲಿಲ್ಲ? ಯಾಕೆಂದರೆ, ಅದು ಮಹರ್ಷಿಗಳ ಕಾವ್ಯಸಂವಿಧಾನದ ಸೂಕ್ಷ್ಮತೆ. ರಣರಂಗಕ್ಕೆ ಋಷಿಗಳನ್ನು ಪ್ರವೇಶಿಸುವುದಕ್ಕೆ ಅರಣ್ಯಕಾಂಡದಲ್ಲೇ ಪೂರ್ವರಂಗ ನಿರ್ಮಾಣವಾಗಿತ್ತು. ಆಗಲೇ ಅಗಸ್ತ್ಯರು ಮಹಾಸ್ತ್ರಗಳನ್ನು ಶ್ರೀರಾಮನಿಗೆ ಉಪದೇಶಿಸಿದ್ದರು. ಯುದ್ಧಭೂಮಿಯಲ್ಲಿ ರಾವಣಸಂಹಾರಕ್ಕೆ ದಾರಿಗಾಣದಾದ ರಾಮನಿಗೆ ಅಗಸ್ತ್ಯರು ಆದಿತ್ಯಹೃದಯ ಜಪಿಸಲು ಹೇಳುತ್ತಾರೆ.
ಇಲ್ಲಿ ‘ಹೃದಯ’ ಎಂಬ ಶಬ್ದ ಮುಖ್ಯ. ರಾವಣನ ತಲೆಯನ್ನು ಕತ್ತರಿಸುತ್ತಾ ಇದ್ದರೆ, ಅದು ಮತ್ತೆ ಚಿಗುರುತ್ತಿತ್ತಷ್ಟೆ! ಬ್ರಹ್ಮಾಸ್ತ್ರವನ್ನು ಪ್ರಯೋಗಿಸಲು ಮಾತಲಿ ಸಲಹೆ ನೀಡಿದಾಗ, ‘ತತಃ ಸಂಸ್ಮಾರಿತೋ ರಾಮಃ ತೇನ ವಾಕ್ಯೇನ ಮಾತಲೇಃ’- ಇಲ್ಲಿ ಸ್ಮರಿಸಿದ್ದು ‘ಹೃದಯಭೇದನ’ದ ಲಕ್ಷ್ಯವನ್ನು. ರಾವಣಹೃದಯವನ್ನು ಗುರಿಯಾಗಿಸಬೇಕೆಂಬ ಸೂಕ್ಷ್ಮವನ್ನು ಕಾವ್ಯಧ್ವನಿಯಾಗಿಸಿದ್ದು ವಾಲ್ಮೀಕಿ!….ಇಂತಹದು ಜೀವಿಯವರ ಕಾವ್ಯಕುತೂಹಲ.
ನಿಃಸ್ಪೃಹ, ನಿರ್ಲಿಪ್ತ
ಬದುಕಿನುದ್ದಕ್ಕೂ ಜೀವಿಸಿದ್ದು ಸಾಹಿತ್ಯಸಂಯೋಗದಲ್ಲಿ, ಅಕ್ಷರೋದ್ಯೋಗದಲ್ಲಿ. ಶಾಸ್ತ್ರ, ದರ್ಶನ, ಕಾವ್ಯ, ವಿಜ್ಞಾನ, ಕ್ರೀಡೆ, ಕನ್ನಡಭಾಷೆ, ಕನ್ನಡನಾಡು, ಶಾಸನ… ಒಂದೇ ಎರಡೇ! ಅವರು ಬರೆದ ಇತರೇತರ ಬರೆಹಗಳ ಲೆಕ್ಕವನ್ನು ಅವರೇ ಇಟ್ಟವರಲ್ಲ. ಆ ಕಾಲದಲ್ಲಿ ಪ್ರಚಾರದಲ್ಲಿದ್ದ ಹೆಚ್ಚಿನ ಎಲ್ಲ ಪತ್ರಿಕೆಗಳಿಗೆ ನಿಯತವಾಗಿ ಲೇಖನ ಬರೆದುಕೊಟ್ಟಿದ್ದರು. ವಿಲಕ್ಷಣತೆ ಎಂದರೆ, ಯಾವ ಪುಸ್ತಕವನ್ನೂ ಪ್ರಕಟಿಸಲಿಲ್ಲ. ಬರೆದದ್ದೆಲ್ಲವನ್ನೂ ಪುಸ್ತಕವಾಗಿಸಬಹುದು, ಪುಸ್ತಕವಾಗಿಸಬೇಕೆಂಬ ಸ್ಪೃಹೆಯೇ ಇರಲಿಲ್ಲ. ಜೀವಿಯವರ ಪುತ್ರ ಅರುಣ, ತಂದೆಯವರ ದಾಸ್ತಾನಿನ ಮೇಲೆ ಕಣ್ಣಾಡಿಸಿದಾಗಲೇ ಎಷ್ಟೊಂದು ಅಮೂಲ್ಯನಿಧಿ ಇದೆ ಎಂದು ಗೊತ್ತಾದದ್ದು. ಲಬ್ಧವಿರುವ ಬರೆಹಗಳನ್ನು ಸಂಕಲಿಸಿದರೆ ೩-೪ ಸಂಪುಟವಾಗುವಷ್ಟು ಸರಕಿತ್ತು. ‘ಯಾಕೆ ಪುಸ್ತಕವೋ? ಈಗಾಗಲೇ ಜನ ಓದಿದ್ದಾರೆ. ಅದೂ ಅಲ್ಲದೆ ಇತ್ತೀಚಿನ ದಿನಗಳಲ್ಲಿ ನನಗಿಂತಲೂ ದೊಡ್ಡ ದೊಡ್ಡ ವಿದ್ವಾಂಸರು ಬರ್ತಿದ್ದಾರೆ, ಬರೀತಿದ್ದಾರೆ. ನಾನು ಬರೆದಿದ್ದು ಪುಸ್ತಕಕ್ಕೆ ಅಂತ ಅಲ್ಲಪ್ಪ’ ಅನ್ನುತ್ತಿದ್ದವರು ಜೀವಿ. ಪುಸ್ತಕ ಆಗದೆ ಇರುವುದರ ಇನ್ನೊಂದು ಕಾರಣ, ಜೀವಿಯವರು ಯಾವತ್ತೂ ಯಾವ ಪ್ರಕಾಶಕರ ಹಿಂದೆಬಿದ್ದವರೂ ಅಲ್ಲ, ಹೋದವರೂ ಅಲ್ಲ. ಹಾಗಂತ, ಇವರಾಗಿ ಹೇಳಿ ಬರೆಯಿಸಿದ ವಿದ್ವಾಂಸರ ಪುಸ್ತಕವನ್ನು ಜೀವಿ, ಸ್ವಂತ ಖರ್ಚಿನಲ್ಲಿ ಪ್ರಕಟಿಸಿದ್ದುಂಟು. ೧೮ ವರ್ಷ ಪ್ರಜಾವಾಣಿಯಲ್ಲಿ ಅವಿಚ್ಛಿನ್ನವಾಗಿ ಬಂದ ‘ಇಗೋ ಕನ್ನಡ’ದ ಕತೆಯೂ ಡಿಟ್ಟೋ. ಅರುಣನ ಒತ್ತಾಯದಿಂದ ಅವರ ಬರೆಹಗಳ ಪುಸ್ತಕಗಳು ವಾಗ್ದೇವಿಯ ಭಂಡಾರದಲ್ಲಿ ಸೇರ್ಪಡೆಯಾದವು. ತನ್ನ ಅಕ್ಷರಕೃಷಿಯ ಬಗ್ಗೆ ಒಚ್ಚಿಟಿಕೆಯಷ್ಟೂ ವ್ಯಾಮೋಹ ಇಲ್ಲದ ಜೀವಿ, ಬರೆವ ಇತರರನ್ನು ಪ್ರೋತ್ಸಾಹಿಸುವುದರಲ್ಲಿ ಮೊದಲಿಗ. ಅದರಲ್ಲೂ ಯಾರು ಯಾರು ಯಾವ ಕ್ಷೇತ್ರದಲ್ಲಿ ಸಮರ್ಥರಿದ್ದಾರೆ ಎಂದು ಹುಡುಕಿ, ಕರೆದು, ಒತ್ತಾಯಿಸಿ ಕೃತಿಗಳನ್ನು ಬರೆಸುತ್ತಿದ್ದರು. ಹೆಚ್ಚೇನು, ಸ್ವತಃ ಗುಪ್ತನಾಮಗಳಲ್ಲಿ ಲೇಖನ ಬರೆಯುತ್ತಿದ್ದು, ತಮಗೆ ತಾವೇ ಅಪರಿಚಿತರಂತಿದ್ದುಬಿಡುತ್ತಿದ್ದರು.
‘ಕಲಾಜೀವಿ’ ಎಂಬ ನಾಮಸಂಕೇತದಲ್ಲಿ ವಿಶ್ವದ ಪ್ರಸಿದ್ಧ ವಿಜ್ಞಾನಿಗಳ ಪರಿಚಯದ ಲೇಖನಸರಣಿಯನ್ನು ತಂದಿದ್ದರು. ಅವರ ನೂರೆಂಟನೆಯ ವಯಸ್ಸಿನವರೆಗೂ, ಬೇರೆ ಬೇರೆ ಭಾಷೆಗಳಲ್ಲಿರುವ ಅಮೂಲ್ಯ ಗ್ರಂಥಗಳು ಕನ್ನಡಕ್ಕೆ ಅನುವಾದವಾಗಿ ಬರಲೇಬೇಕು, ಕನ್ನಡ ಭಾಷಾಸಾಹಿತ್ಯ ಸರ್ವದಾ ಸಕಲಸಂಪನ್ನವಾಗಿರಬೇಕು – ಎಂಬ ಕಾಳಜಿ, ತುಡಿತ ಜಾಗ್ರತವಾಗಿತ್ತು. ಕನ್ನಡ ಮಾತೃಭಾಷೆಯಾಗಿರುವ ವಿದ್ವಾಂಸರು ಇತರ ಭಾಷಾಕೃತಿಗಳನ್ನು ಕನ್ನಡಕ್ಕೆ ತರಬೇಕಾದ್ದು ಅವರ ಭಾಷಾಋಣ ಅಂತ ಖಡಕ್ಕಾಗಿ ಹೇಳುತ್ತಿದ್ದರು. ಜೀವಿಯವರ ಕನ್ನಡ ಭಾಷಾಪ್ರೀತಿಯು ಅಪ್ರಮೇಯವಾದುದು.
ಸ್ಮೃತಿಚಿತ್ರಸಾಹಿತ್ಯ ಪ್ರಕಾರದ ‘ಸಿರಿಗನ್ನಡ ಸಾರಸ್ವತರು’ ಸಮಗ್ರವಾಗಿ ಬಂದದ್ದು ೨೦೧೦ರಲ್ಲಿ. ‘ಕನ್ನಡವನ್ನು ಉಳಿಸಿ ಬೆಳೆಸಿದವರು’, ‘ಮಾರ್ಗದರ್ಶಕರು’ ಎಂಬ ಹೆಸರಲ್ಲಿ ಬೆಳಕು ಕಂಡ ಬರೆಹಗಳು ಕೊನೆಯದಾಗಿ ‘ಸಿರಿಗನ್ನಡ ಸಾರಸ್ವತರು’ ಆಗಿ ಪ್ರಕಟವಾಯಿತು. ೫೪ ಭಾಷಾವ್ರತಿಗಳ ವ್ಯಕ್ತಿಪರಿಚಯದ ಗ್ರಂಥ. ಸುಮಾರು ಮುಕ್ಕಾಲುಪಾಲು ಅಲ್ಲಿರುವ ಕನ್ನಡಭಾಷಾಭೂಷಣರು, ಜೀವಿಯವರ ನೇರ ಪರಿಚಯವಿರುವವರು. ಜೀವಿಯವರು ಎಷ್ಟು ಮೃದುವೋ ವಿಷಯನಿರೂಪಣೆಯಲ್ಲಿ ಅಷ್ಟೇ ನಿಷ್ಠುರ, ಸ್ಪಷ್ಟ, ಪ್ರಮಾಣಿಕ. ಕಿಟ್ಟೆಲ್ ಬಗ್ಗೆ ಬರೆದಾಗ, ‘ಕಿಟ್ಟೆಲ್ ಕನ್ನಡಕ್ಕೆ ನಿಘಂಟು ಕೊಟ್ಟದ್ದು ದೊಡ್ಡ ಕೆಲಸವೇನೋ ಹೌದು. ಆದರೆ ಆತ, ಕನ್ನಡದ ಉದ್ಧಾರಕ್ಕೇನೂ ಆ ಮಹತ್ಕಾರ್ಯ ಮಾಡಿದ್ದಲ್ಲ. ತನ್ನ ಮತಪ್ರಚಾರ ಆತನ ಪ್ರಥಮೋದ್ದೇಶ’ ಎಂದು ನೇರನುಡಿಗಳಲ್ಲಿ ಹೇಳಿದ್ದಾರೆ.
ಅರ್ಥಶಾಸ್ತ್ರಪಾರೀಣ
ಜೀವಿಯವರಿಗೆ ಅರ್ಥಶಾಸ್ತ್ರದಲ್ಲೂ ಪ್ರವೇಶವಿತ್ತು. ಅವರ ಕಾಲೇಜುಮೇಟ್ ಎಚ್. ವೆಂಕಟಸುಬ್ಬಯ್ಯ ಅರ್ಥಶಾಸ್ತ್ರದ ಎಂ.ಎ. ಇವರಿಬ್ಬರೂ ಗಲಸ್ಯ ಕಂಠಸ್ಯ ಮಿತ್ರರು. ಜೀವಿಯವರ ಜ್ಞಾನಕುತೂಹಲಕ್ಕೆ ಎಲ್ಲೆ ಇಲ್ಲವಷ್ಟೆ! ತನ್ನ ಮಿತ್ರನಿಂದ ಅರ್ಥಶಾಸ್ತ್ರದ ಮೂಲಚೂಲಗಳನ್ನು ಅರಿತು ಅಧ್ಯಯನ ಮಾಡಿದರು. ಎಚ್. ವೆಂಕಟಸುಬ್ಬಯ್ಯ ‘ಹಿಂದೂ’ ಪತ್ರಿಕೆಗೆ ಲಂಡನ್ನಿನಿಂದ ಆರ್ಥಿಕಾಂಕಣವನ್ನು ನಿಯತವಾಗಿ ಕಳಿಸುತ್ತಿದ್ದರು. ಆ ಅಂಕಣಬರೆಹಗಳನ್ನು ಕನ್ನಡಕ್ಕೆ ಅನುವಾದಿಸಿಕೊಟ್ಟದ್ದು ಅನಾಮಿಕರಾದ ಜೀವಿ. ಅರ್ಥಶಾಸ್ತ್ರಾನುಭವದ ಈ ಹಿನ್ನೆಲೆಯಿಂದ ಅವರು ಪಾರ್ಲಿಮೆಂಟಿನ ಬಜೆಟ್ ಮಂಡನೆಯ ಅಧಿವೇಶನದ ಖಾಯಂ ಪ್ರೇಕ್ಷಕರಾಗಿರುತ್ತಿದ್ದರು – ಮೊನ್ನೆಯವರೆಗೂ.
ವ್ಯಕ್ತಿತ್ವದ ವರ್ಚಸ್ಸು
‘ರಾಮಕೃಷ್ಣ ಸ್ಟೂಡೆಂಟ್ಸ್ ಹೋಮ್’ ಸಂಸ್ಥೆಯ ಪರ್ಮನೆಂಟ್ ಅಧ್ಯಕ್ಷರು ಜೀವಿ. ತನಗೆ ವಯಸ್ಸಾಗಿದೆ ಬಿಟ್ಟುಬಿಡಿ ಅಂತ ಕೇಳಿಕೊಂಡರೂ ಸಂಸ್ಥೆಯು ಜೀವಿಯವರನ್ನು ಕದಲಿಸಲಿಲ್ಲ. ಕೆಲ ವರ್ಷಗಳ ಹಿಂದೆ, ಕಟ್ಟಡವನ್ನು ಹೊಸದಾಗಿ ಕಟ್ಟುವ ಪ್ರಸ್ತಾವ ಮೀಟಿಂಗ್ನಲ್ಲಿ ಬಂತು. ಬಹುಮಹಡಿ ಕಟ್ಟಡದ ಯೋಜನೆ ಅದು. ಜೀವಿಯವರು ಮೀಟಿಂಗ್ನಲ್ಲಿ, ‘ಆಯ್ತು, ನಿರ್ಮಾಣದ ಅಂದಾಜು ಬಜೆಟ್ಟಿನ ಸಮಗ್ರ ವರದಿ ತಯಾರು ಮಾಡಿಕೊಡಿ’ ಅಂದಾಗ ಹೌಹಾರಿದ್ದು ಸದಸ್ಯರು. ‘ಏನ್ ತಮಾಷೆನಾ, ಕೋಟಿಗಟ್ಟಲೆ ಖರ್ಚು ಸಾರ್. ನಮ್ಮ ಹತ್ರ ದಮಡಿನೂ ಇಲ್ಲ. ಜಾಗ ಇದೆ, ವಿದ್ಯಾರ್ಥಿಗಳು ಹೆಚ್ಚಿದ್ದಾರೆ. ಹೀಗೊಂದು ಭವನನಿರ್ಮಾಣ ಸಾಧ್ಯತೆ ಅಂತಷ್ಟೇ ಸೂಚಿಸಿದ್ದು ಸರ್’ ಅಂದರು. ‘ಮೊದಲು ಸರಿಯಾದವರನ್ನು ನೋಡಿ ಪಕ್ಕಾ ಬಜೆಟ್ಟಿನ ಕರಡುಪ್ರತಿ ನನಗೆ ತಂದು ಕೊಡಿ’ ಎಂದು ಹುಕುಂ ಹೊರಡಿಸಿದರು ಜೀವಿ.
ಪ್ರೊಪೋಸಲ್ ಇಟ್ಟವರೂ ಅಳುಕಿದ್ದರು. ಕಟ್ಟಡದ ನೀಲಿ ನಕ್ಷೆ, ಅಂದಾಜುವೆಚ್ಚದ ತಪಶೀಲು ಜೀವಿಯವರ ಕೈಗೆ ಬಂತು. ಜೀವಿ ತಮ್ಮ ಅಧಿಕಾರವ್ಯಾಪ್ತಿಯಲ್ಲಿ, ತಮ್ಮ ಹೆಸರಲ್ಲಿ ಒಂದು ಮನವಿ ಪತ್ರ ಸಿದ್ಧಗೊಳಿಸಿ, ಪರಿಚಿತ ದಾನಿಗಳಿಗೆ, ಹೋಮ್ನ ಹಳೆವಿದ್ಯಾರ್ಥಿಗಳಿಗೆ ಪೋಸ್ಟಿಸಿದರು. ಬಜೆಟ್ಟಿನಲ್ಲಿ ನಮೂದಿಸಿದ ಮೊಬಲಗಿಗೂ ಮಿಕ್ಕು ಹಣಸಂಗ್ರಹವಾಯಿತು, ಕೇವಲ ನಾಲ್ಕು ತಿಂಗಳಲ್ಲಿ! (ಇಂತಹ ವ್ಯಕ್ತಿತ್ವದ ಪ್ರಭಾವಳಿಯನ್ನು ಎಂದೆಂದೂ ಸ್ವಂತಕ್ಕೆ ಬಳಸಿದವರೇ ಅಲ್ಲ ಜೀವಿ.) ಬೆರಗಿನ ಸಂಗತಿ ಎಂದರೆ ಹೋಮ್ನ ಕಟ್ಟಕಡೆಯ ಮೀಟಿಂಗನ್ನು ಜೀವಿ ಅಟೆಂಡ್ ಮಾಡಿದ್ದು ೨೦೨೦ರಲ್ಲಿ, – ಕೊರೋನಾ ಪರಿಣಾಮದ ಆನ್ಲೈನ್ನಲ್ಲಿ – ನೂರೆಂಟರಲ್ಲಿ.
ಬ್ಯಾಡ್ಮಿಂಟನ್ ಕೋಚ್
ಜೀವಿಯವರು ತಾರುಣ್ಯದಲ್ಲಿ ಅತ್ಯುತ್ತಮ ಕ್ರೀಡಾಪಟು. ಅದರಲ್ಲೂ ಟೇಬಲ್ ಟೆನ್ನಿಸ್ಸಿನ ಛಾಂಪಿಯನ್. ಕೇರಂನಲ್ಲಿ ಅಪ್ರತಿಮ. ಚದುರಂಗದಲ್ಲಿ ಚಟುಲ. ವಿಂಬಲ್ಡನ್ ಟೆನಿಸ್ ಆರಂಭವಾಯ್ತೆಂದರೆ ಪ್ರತಿಯೊಂದು ಮ್ಯಾಚಿಗೂ ಇವರು ಸಿದ್ಧಪ್ರೇಕ್ಷಕ. ಫೈನಲ್ ಮುಗಿಯುವ ವರೆಗೂ ಆ ನಿಷ್ಠೆಗೆ ವೈಕಲ್ಯವಿಲ್ಲ. ಟೆನಿಸಿನಲ್ಲಿ ಜೀವಿಯವರ ಪ್ರಭುತ್ವ ಎಷ್ಟಿತ್ತು ಎನ್ನುವುದಕ್ಕೆ ದೊಡ್ಡ ನಿದರ್ಶನವಿದು.
ಅರುಣರ ಮಗಳು (ಜೀವಿಯ ಮೊಮ್ಮಗಳು) ಶಾಲೆಗೆ ಹೋಗುವಾಗ ಶಾಲೆಯಲ್ಲಿ ಬ್ಯಾಡ್ಮಿಂಟನ್ ಗುಂಪಿಗೆ ಸೇರಿದ್ದಳು. ಅವಳ ಗೆಳತಿ ಬೇರಾರೋ ಪ್ರತಿಷ್ಠಿತ ಕೋಚಿನಿಂದ ತರಬೇತಿ ಪಡೆದು, ಬೇರೆ ಬೇರೆ ಸ್ಪರ್ಧೆಯಲ್ಲಿ ಭಾಗವಹಿಸುತ್ತಿದ್ದಳು. ‘ನೀನೂ ಸ್ಪರ್ಧೆಗೆ ಹೋಗಬೇಕೆಂದಾದರೆ ಒಳ್ಳೆ ಕೋಚ್ಅನ್ನು ಹುಡುಕು, ಅಭ್ಯಾಸಮಾಡು. ಇಲ್ಲಾದರೆ ಆ ಮಟ್ಟಕ್ಕೆ ಹೋಗೋಕಾಗಲ್ಲ’ ಎಂದು ಸ್ಕೂಲಿನ ಗೈಡ್ ಹೇಳಿದ್ದನ್ನು ಮನೆಗೆ ಬಂದು ಯಥಾವತ್ತು ಒಪ್ಪಿಸಿ, ‘ತಾತ, ನಿಮಗೆ ಯಾರಾದರೂ ಬ್ಯಾಡ್ಮಿಂಟನ್ ಕೋಚ್ ಗೊತ್ತಾ?’ ಅಂತ ಮೊಮ್ಮಗಳು ಕೇಳಿದಳು. ‘ಹೂಂ, ಗೊತ್ತುಕಣಮ್ಮಾ. ಒಳ್ಳೆ ಕೋಚೇ ಇದ್ದಾರೆ. ನಾನು ಕರೆಸ್ತೇನೆ. ನಿನ್ನ ಟೈಮಿಂಗ್ ಹೇಳು’ ಅಂದರು ಅಜ್ಜ. ಸಂಜೆ ನಾಲ್ಕುಗಂಟೆಗೆ ಸಮಯ ನಿಗದಿ ಆಯ್ತು. ಬ್ಯಾಟು ಹಿಡಕೊಂಡು ಮೊಮ್ಮಗಳು ಮನೆಯ ಎದುರಿನ ಬಯಲಿಗೆ ಬಂದಳು ಕೋಚ್ನ ನಿರೀಕ್ಷೆಯಲ್ಲಿ. ಸರಿಯಾಗಿ ನಾಲ್ಕು ಗಂಟೆಗೆ (ಸಮಯಪಾಲನೆಯಲ್ಲಿ ಜೀವಿ ಸಾಕ್ಷಾತ್ ಯಮ) ಬ್ಯಾಟ್ ಹಿಡಿದು ಕಣಕ್ಕೆ ಬಂದದ್ದು ಯಾರು? ತಾತ ಜೀವಿ! ನಿತ್ಯವೂ ಅಭ್ಯಾಸ. ಬ್ಯಾಟ್ ಹಿಡಿಯೋದು, ಪ್ಲೇಸ್ಮೆಂಟ್, ಮೂವ್ಮೆಂಟ್, ಮಣಿಕಟ್ಟಿನ ಚಲನೆ, ದೃಷ್ಟಿನಿಕ್ಷೇಪ… ಆ ಹುಡುಗಿ ಶಾಲೆಯಲ್ಲಿ ಮಾತ್ರ ಅಲ್ಲ ಜಿಲ್ಲಾಮಟ್ಟದಲ್ಲಿ ಛಾಂಪಿಯನ್ ಆದಳು. ವಿಶ್ವವಿದ್ಯಾಲಯದಲ್ಲೂ ಮಿಂಚಿದಳು.
ಬ್ಯಾಡ್ಮಿಂಟನ್ ಕೋಚ್ ಆದಾಗ ಜೀವಿಯವರ ವಯಸ್ಸು ಎಂಬತ್ತೂ ಪ್ಲಸ್. ಕೇರಂನಲ್ಲಿ ಜೀವಿ ಸ್ಟ್ರೈಕರ್ ಹಿಡಿದರು ಅಂದರೆ ಅಷ್ಟೂ ಕಾಯಿಗಳನ್ನು ಹೊಂಡಕ್ಕೆ ಸಾಲುಸಾಲಾಗಿ ತಳ್ಳಿಯೇ ಏಳುವುದು – ನೂರರ ಅನಂತರವೂ.
ಪೌರೋಹಿತ್ಯ
ಮಂತ್ರಸಂಹಿತೆಯು ಜೀವಿಯವರಿಗೆ ಆನುವಂಶಿಕಾನುಗ್ರಹ. ಬೇಡ ಅಂದರೂ ಜನ್ಮಜಾತವಾದ ವೇದವಾಙ್ಮಯಸಂಸ್ಕಾರ ಹೃದ್ಗತವಾಗಿಯೇ ಇರುತ್ತದೆ. ತಮ್ಮ ಮನೆಯಲ್ಲಿ ಪ್ರತಿವರ್ಷದ ಗೌರಿ-ಗಣೇಶವ್ರತದ ಪುರೋಹಿತರು ಸ್ವತಃ ಜೀವಿ. ಸಟೀಕಾ ವ್ರತರತ್ನ ಪುಸ್ತಕ, ನೆಪಕ್ಕೆ ಕೈಯಲ್ಲಿ. ಮಂತ್ರಪ್ರವಹಣ ಸರಾಗ. ಜೀವಿಯವರ ಪತ್ನಿ ಪೂಜೆ ಮಾಡುವ ಕರ್ತೃ. ಎಲ್ಲ ಮುಗಿದು ಕೃಷ್ಣಾರ್ಪಣ ಆದರೂ ಪುರೋಹಿತ ಜೀವಿ ಮಣೆಬಿಟ್ಟು ಏಳದೆ ಮುಗುಂ ಕುಳಿತಿರುವವರು. ಏನು ಅಂತ ಕೇಳಿದರೆ, ‘ಉಪಾಯನ ಕೊಡಲಿಲ್ಲ, ದಾನ ಕೊಡಲಿಲ್ಲ, ದಕ್ಷಿಣೆ ಕೊಡಲಿಲ್ಲ. ಪುರೋಹಿತ ಅಂದ್ರೆ ಅಷ್ಟೊಂದು ಅಗ್ಗ ಅಂತ ತಿಳ್ಕೊಂಡಿದ್ದೀರಾ?’ ಅಂತ ಘೊಳ್ಳ ನಕ್ಕು, ಹಕ್ಕು ಚಲಾಯಿಸುತ್ತಿದ್ದರು.
ಸಂಸಿದ್ಧತೆಯ ಬದ್ಧತೆ
ಧಾರವಾಡ ವಿಶ್ವವಿದ್ಯಾಲಯದ ಉಪಕುಲಪತಿ ರಾಮೇಗೌಡರು ಜೀವಿಯವರ ಮನೆಗೆ ಬರುತ್ತಾರೆ. ಶಿ.ಶಿ. ಬಸವನಾಳರ ದತ್ತಿ ಮಾಲಿಕೆಯಲ್ಲಿ ‘ನಿಘಂಟು ಶಾಸ್ತ್ರ ಪರಿಚಯ’ದ ಉಪನ್ಯಾಸವನ್ನು ನೀಡುವಂತೆ ಕೇಳಿಕೊಳ್ಳುತ್ತಾರೆ. ಒಂದೂವರೆ ತಿಂಗಳ ಕಾಲಾವಕಾಶ ಇರುತ್ತದೆ. ಮೂರು ದಿನದ ಉಪನ್ಯಾಸ. ಜೀವಿ ಒಪ್ಪಿಕೊಳ್ಳುತ್ತಾರೆ. ವಾರದೊಳಗೆ ಜೀವಿಯವರು ರಾಮೇಗೌಡರಿಗೆ ‘ನನ್ನ ಭಾಷಣವನ್ನು ಪೂರ್ತಿ ಬರೆದು, ತಯಾರಾಗಿದ್ದೇನೆ. ನೀವು ಪುಸ್ತಕ ತರುವುದಾದರೆ ಈಗಲೇ ಕಳಿಸುತ್ತೇನೆ’ ಎಂದು ಪತ್ರಿಸುತ್ತಾರೆ. ಬೆಕ್ಕಸಬೆರಗಾದವರು ರಾಮೇಗೌಡರು! ‘ಎಷ್ಟೊಂದು ದತ್ತಿ ಉಪನ್ಯಾಸ ಆಗಿದೆ, ನಾವು ಉಪನ್ಯಾಸಕರಿಗೆ ಸೂಕ್ತ ಸಂಭಾವನೆ, ಸವಲತ್ತನ್ನು ಒದಗಿಸಿಯೂ, ತಮ್ಮ ಭಾಷಣವನ್ನು ಬರೆದುಕೊಡಲು ಎಷ್ಟು ಸತಾಯಿಸುತ್ತಾರೆ! ನಿಮ್ಮ ಬದ್ಧತೆ, ಸಿದ್ಧತೆ ಎಲ್ಲ ಭಾಷಣಕಾರರಿಗೂ ಪರಮಾದರ್ಶ. ಈ ರೀತಿಯ ಪ್ರಕರಣ, ನಾನು ನೋಡಿದ್ದರಲ್ಲಿ ಸರ್ವಂ ಪ್ರಥಮ’ ಎಂದು ಪ್ರಾಂಜಲವಾಗಿ ಅಭಿನಂದಿಸುತ್ತಾರೆ. ಐತಿಹಾಸಿಕವೆಂಬಂತೆ, ಧಾರವಾಡದಲ್ಲಿ ದತ್ತಿ ಉಪನ್ಯಾಸದ ದಿವಸವೇ ‘ನಿಘಂಟು ಶಾಸ್ತ್ರ ಪರಿಚಯ’ ಪುಸ್ತಕವು, ಪ್ರಸಾರಾಂಗ ಉಪನ್ಯಾಸ ಮಾಲಿಕೆಯ ಪುಷ್ಪವಾಗಿ ಜೀವಿಯವರ ಕೈಯಿಂದಲೇ ಅರಳುವ ಏರ್ಪಾಟು ಮಾಡುತ್ತಾರೆ.
ಹಸುರುಹೊನ್ನೊಲವು
ಜೀವಿ ಸದಾಸರ್ವದಾ ಉತ್ಸಾಹದ ಊಟೆ. ತಂದ್ರಾವಸ್ಥೆ ಎಂಬುದು ಅವರ ದಿನಚರಿಯಲ್ಲಿ ಇರಲೇ ಇಲ್ಲ. ಜಗತ್ತಿಗೆ ಸರ್ವಕ್ಷಣದಲ್ಲೂ ತೆರೆದ ಮನಸ್ಸು. ಕುತೂಹಲವೇ ಅವರ ಸ್ಥಾಯಿ. ನಾಟಕ, ಸಂಗೀತ, ನೃತ್ಯ, ಸಭಾಸಮಾರಂಭಗಳಿಗೆ ಇಡುಗಾಲಲ್ಲಿ ನಿಲ್ಲುತ್ತಿದ್ದರು. ‘ನೀವು ಕರ್ಕೊಂಡು ಹೋಗ್ತೀರಾದ್ರೆ ಬರಲಿಕ್ಕೆ ನನ್ನ ತಕರಾರಿಲ್ಲ’ – ಇದು ಜೀವಿಯವರ ಸಿದ್ಧೋಕ್ತಿ. ತನಗೆ ಪುರಸೊತ್ತಿದ್ದಾಗಲೆಲ್ಲ ಜೀವಿಯವರನ್ನು ಕಾರಲ್ಲಿ ಕೂರಿಸಿಕೊಂಡು ಕರ್ಯಕ್ರಮಗಳಿಗೆ ಕರೆದೊಯ್ಯುತ್ತಿದ್ದವರಲ್ಲಿ ಸಹೃದಯದ ಭಾನು ಒಬ್ಬರು. ‘ಭಾರತೀಯ ತೋಟಗಾರಿಕೆ ಸಂಶೋಧನ ಸಂಸ್ಥೆ’ಯಲ್ಲಿ ಮುಖ್ಯ ಅಭಿಯಂತಾ ಆಗಿರುವ ಭಾನು (ಭಾನುಪ್ರಕಾಶ್) ಸಂಸ್ಥೆಯ ಕನ್ನಡ ಸಂಘದ ವಾರ್ಷಿಕ ಕಾರ್ಯಕ್ರಮಕ್ಕೆ ಜೀವಿಯವರನ್ನು ಸಗೌರವವಾಗಿ ಆಹ್ವಾನಿಸಿದರು. ಹೆಸರುಘಟ್ಟದ ಫಾಸಲೆಯಲ್ಲಿರುವ ಆ ಸಂಸ್ಥೆಗೆ ನಿಗದಿತ ದಿನದಂದು ಭಾನುಸಾರಥ್ಯದಲ್ಲಿ ಭಾಷಾಭೀಷ್ಮರು ಬಿಜಯಂಗೈದರು. ಸುಮಾರು ೬೦೦ ಎಕರೆ ವಿಸ್ತೀರ್ಣದ ನಿಚ್ಚಹಸುರುಡೆಯ ಚೆಲುದಾಣ ಅದು. ಅಲ್ಲಿಯ ಚೆಲ್ಲುವರಿದ ವನಶ್ರೀಗೆ ಜೀವಿ ಮನಸೋತರು. ಬೀಜ, ಹೂವು, ತರಕಾರಿ, ಹಣ್ಣುಗಳ ಬೆಳೆಯ ಬಗ್ಗೆ ಸಂಶೋಧನೆ ಮಾಡುವ ಸಂಸ್ಥೆಯ ಕಾರ್ಯವೈವಿಧ್ಯಕ್ಕೆ ಜೀವಿ ಅರಳುಗಣ್ಣಾದರು. ಕಸಿ ಮಾಡುವ ವಿಧಾನವನ್ನು ಕೇಳಿ ತಿಳಿದುಕೊಂಡರು.
ಸಭಾಕಾರ್ಯಕ್ರಮ ಮುಗಿದ ಮೇಲೆ ಸಂಸ್ಥೆಯವರು ಜೀವಿಯವರಿಂದ ಒಂದು ಸಂಪಿಗೆ ಗಿಡವನ್ನು ನೆಡಿಸಿದರು. ‘ನನ್ನ ಹೆಸರಲ್ಲಿ ಒಂದು ಸಂಪಿಗೆ ಮರ ಬೆಳೀತ್ತೆ’ ಅಂತ ಬೆಳ್ನಗೆ ಚೆಲ್ಲಿದರು. ಭಾನು ಆಗಾಗ ಜೀವಿಯವರ ಮನೆಗೆ ಬರುತ್ತಲೇ ಇದ್ದರಷ್ಟೆ! ಭಾನು ಬಂದಾಗಲೆಲ್ಲ ‘ನನ್ನ ಸಂಪಿಗೆ ಗಿಡ ಹೇಗಿದೆ?’ ಅಂತ ಹಿರಿಯನ ಕಳಕಳಿಯಲ್ಲಿ ಜೀವಿ ವಿಚಾರಿಸುತ್ತಿದ್ದರು. ಸೊಂಪಾಗಿ ಆ ಸಂಪಿಗೆ ಬೆಳೆಯುತ್ತಿತ್ತು. ಚಂಪಕಾಕ್ಷೇಮಶ್ರವಣದಿಂದ ಅವರು ಹೆಮ್ಮೆಪಡುತ್ತಿದ್ದರು.
ಜೀವಿಯವರ ಮನೆಯ ಕೈದೋಟದಲ್ಲಿ ಒಂದು ದೊಡ್ಡ ಲಿಂಬೆಯ ಗಿಡವಿತ್ತು. ಜೀವಿ ದಂಪತಿಗಳ ಅಕ್ಕರೆಯ ಆರೈಕೆಯಲ್ಲಿ ಮೈದುಂಬಿ ನಂಬಿದವರಿಗೆ ಇಂಬಾದ ಜಂಬೀರಸಸ್ಯಕ್ಕೆ ಯಾವುದೋ ಹುಳದ ಕಾಟ ಹತ್ತಿ ಸೊರಗುತ್ತಿತ್ತು. ಭಾನುವಿಗೆ ಅದರ ಚಿಕಿತ್ಸೆಯ ಹೊಣೆ ಹೊರಿಸಿದರು ಜೀವಿ. ಒಂದಷ್ಟು ಕೃಮಿಭುಕ್ತಪತ್ರಗಳನ್ನು ತಮ್ಮ ಸಂಶೋಧಕಮಿತ್ರರಿಗೆ ಹಸ್ತಾಂತರಿಸಿದರು ಭಾನು. ಅಂತೂ IIHRನ ವಿಜ್ಞಾನಿಗಳ ಸಲಹೆಯಿಂದ ಆ ಲಿಂಬೆಗಿಡವು ನೀರೋಗದೃಢಕಾಯವಾಗಿ ಫಲವತಿಯೂ ಆಯಿತು. ಈ ಜಂಬೀರೋಪಚಾರದಲ್ಲಿ ಹೆಜ್ಜೆಹೆಜ್ಜೆಗೂ ಉದ್ಗ್ರೀವರಾಗಿ ತೊಡಗಿಸಿಕೊಂಡ ಜೀವಿ, ಮರುಹುಟ್ಟೊಡೆದ ಸಸ್ಯದಿಂದ ಎಷ್ಟೊಂದು ಹೊಂಪುಳಿಯೋದರು ಎಂದರೆ… ಅವರ ಹೊಳೆಗಣ್ಣಿನ ಹೊನಲನ್ನು ಕಂಡೇ ಅನುಭವಿಸಬೇಕು.
ಯಾವ ಸಂಖ್ಯೆ ದೊಡ್ಡದು?
ಗೋಖಲೆ ಸಂಸ್ಥೆಗೂ ಜೀವಿಯವರಿಗೂ ಜ್ಞಾತಿಸಂಬಂಧವಿತ್ತು. ಡಿ.ವಿ.ಜಿ. ತನ್ನ ಬಗ್ಗೆ ಹರಿಸುತ್ತಿದ್ದ ವಾತ್ಸಲ್ಯಧಾರೆಗೆ ಅವರು ಹನಿಗಣ್ಣಾಗುತ್ತಿದ್ದರು. ಗೋಖಲೆಯ ಗೌರವ ಕಾರ್ಯದರ್ಶಿಗಳಾದ ಎಸ್.ಆರ್. ರಾಮಸ್ವಾಮಿಯವರ ಬಗ್ಗೆ ಅವರದು ಕೇವಲ ಪ್ರೀತಿ. ಗೋಖಲೆಯಲ್ಲಿ ನಿರಂತರ ನಡೆದ ಸಭಾಸತ್ರದ ಪಟ್ಟಿಕೆಯನ್ನು ಇಟ್ಟುಕೊಂಡಿರುತ್ತಿದ್ದರು. ತಮಗೆ ಇಷ್ಟವಾಗುವ ಕಾರ್ಯಕ್ರಮವಿದ್ದರೆ ‘ನಾನು ನೋಡಬೇಕಲ್ಲಾ’ ಅಂತ ಹೊರಗಾಲಾಗುತ್ತಿದ್ದರು.

ವರ್ಷ ೨೦೦೬. ಒಮ್ಮೆ ಲೋಕಾಭಿರಾಮವಾಗಿ ಮಾತನಾಡುತ್ತ “ಒಂದು ತಾಳಮದ್ದಳೆ ನೋಡಬೇಕೆನಿಸಿದೆಯಲ್ಲ?” ಎಂದರು. ಜೀವಿಯವರ ಅಪೇಕ್ಷೆಯೆಂದರೆ ನಮಗೆಲ್ಲ ಆದೇಶ ತಾನೆ! ಅನತಿಕಾಲದಲ್ಲಿ ಗೋಖಲೆ ಸಂಸ್ಥೆಯಲ್ಲಿ ಒಂದು ತಾಳಮದ್ದಳೆ ಕಾರ್ಯಕ್ರಮವನ್ನು ಏರ್ಪಡಿಸಲಾಯಿತು ಮಾತ್ರವಲ್ಲ, ಅದು ಜೀವಿ ಗೌರವಾರ್ಥ ಎಂದೂ ಅಂಕಿತಮಾಡಲಾಯಿತು; ಅರ್ಥಧಾರಿಗಳ ಉತ್ಸಾಹ ದುಪ್ಪಟ್ಟಾಯಿತು. ಮೂರು ಗಂಟೆಗಳ ಇಡೀ ಕಾರ್ಯಕ್ರಮವನ್ನು ಜೀವಿ ತಲ್ಲೀನತೆಯಿಂದ ವೀಕ್ಷಿಸಿ ಆಸ್ವಾದಿಸಿ ಕಲಾವಿದರನ್ನೆಲ್ಲ ಹಾರ್ದವಾಗಿ ಅಭಿನಂದಿಸಿದರು. ಅರ್ಥಧಾರಿಗಳೆಲ್ಲ ಪುಲಕಗೊಂಡರು.
ಒಮ್ಮೆ, ಅವರಿಗೆ ರನ್ನನ ಗದಾಯುದ್ಧದ ಕುರಿತು ತಾವೇ ಒಂದು ಉಪನ್ಯಾಸವನ್ನು ಮಾಡಬೇಕೆಂಬ ಉಮೇದು ಬಂತು. ಎಷ್ಟೆಂದರೂ ಕನ್ನಡ ಮೇಷ್ಟ್ರಲ್ಲವೇ? ಗೋಖಲೆಯಲ್ಲಿ ಎಸ್.ಆರ್. ರಾಮಸ್ವಾಮಿ ಅವಕಾಶವನ್ನು ಕಲ್ಪಿಸಿದರು, ೨೯-೦೭-೨೦೦೯ರಂದು. ಸರಿಸುಮಾರು ಮುಕ್ಕಾಲು ಗಂಟೆ ನಿರರ್ಗಳವಾಗಿ ತಾರೋಚ್ಚಾರದಲ್ಲಿ ಅಸ್ಖಲಿತವಾಗಿ ಘಂಟಾಸ್ಪಷ್ಟತೆಯಲ್ಲಿ ಬಳಲಿಕೆಯ ಕುರುಹೂ ಇಲ್ಲದೆ ಕುರುಪತಿಯ ಚರಿತಾರ್ಥವನ್ನು ವ್ಯಾಖ್ಯಾನಿಸಿದರು (ಆಗ ಅವರು ೯೭). ೧೭-೦೩-೨೦೧೧ರಂದು ಡಿ.ವಿ.ಜಿ.ಯವರ ‘ಶ್ರೀರಾಮಪರೀಕ್ಷಣಂ’ ಕೃತಿಯ ಅಹಲ್ಯೋದ್ಧಾರದ ಕುರಿತು, ೧-೧೦-೨೦೧೨ರಂದು ವಿ. ಸೀತಾರಾಮಯ್ಯನವರನ್ನು ಕುರಿತು ಗೋಖಲೆಯಲ್ಲಿ ಜೀವಿಯವರು ಉತ್ಸಾಹಪೂರ್ಣ ಉಪನ್ಯಾಸ ನೀಡಿದರು.
೨೦-೦೩-೨೦೧೧, ಗೋಖಲೆಯಲ್ಲಿ ಬೆಳಗೆರೆ ಕೃಷ್ಣಶಾಸ್ತ್ರಿಗಳ ಕೃತಿ ‘ಯೇಗ್ದಾಗೆಲ್ಲ ಐತೆ’ಯ ನಾಟಕ ಪ್ರದರ್ಶನ. ಶಾಸ್ತ್ರಿಗಳು ಹಾಗೂ ಜೀವಿಯವರು ಪ್ರಥಮಪಂಕ್ತಿಯ ಪ್ರಧಾನಪ್ರೇಕ್ಷಕರು. ಇಬ್ಬರೂ ಹಳೆಯ ಗೆಳೆಯರು. ಸಲುಗೆಯ ಸ್ನೇಹಿತರು. ನಾಟಕ ಮುಗಿದ ಮೇಲೆ ಭಾನುರವರ ಕಾರು ಹತ್ತಿದರು ಪ್ರವೃದ್ಧರು. ಜೀವಿ ಹಿಂದಿನ ಸೀಟಿನಲ್ಲಿ ಶಾಸ್ತ್ರಿಗಳ ಜೊತೆಗೆ ಕುಳಿತಕೂಡಲೆ ಹರಟೆಕಟ್ಟೆ ಚಾಲೂ ಆಯಿತು. ‘ನಾವಿಬ್ಬರೂ ಸಂಬಳ ತಕೊಂಡದ್ದಕ್ಕಿಂತ ಈಗ ಪಡೀತಾ ಇರೋ ಪಿಂಚಣೀನೇ ಹೆಚ್ಚಿನ ಮೊತ್ತದ್ದು. ಮಾಡಿದ ಸರ್ವೀಸಿಗಿಂತ ನಿವೃತ್ತಿಯ ಅವಧೀನೇ ಇನ್ನೂ ಬೆಳೀತಾ ಇದೆ’ ಅಂದರು, ಬೆಳಗೆರೆ ಶಾಸ್ತ್ರಿಗಳು. ಹೆಮ್ಮೆಯಿಂದ ಹರಿದುಕ್ಕಿದ ಸೋದ್ಗಾರದ ಹಾಸ ಜೀವಿಯವರದು. ‘ನಿನಗಿಂತ ನಾನು ಮೂರು ವರ್ಷ ದೊಡ್ಡವ, ಗೊತ್ತಲ್ಲಾ?’ ಅಂತಂದು ಜೀವಿ ತಮ್ಮ ಜ್ಯೇಷ್ಠತಾಪ್ರತಿಷ್ಠೆಗೆ ನುಡಿಕೀಲಿಯನ್ನು ತಿರುಗಿಸಿದರು. ‘ಸಾಧ್ಯವೇ ಇಲ್ಲ, ನಾನು ನಿನಗಿಂತ ದೊಡ್ಡವ, ತಿಳಿದಿರಲಿ’ ಎಂಬ ವಕಾಲತ್ತು ಶಾಸ್ತ್ರಿಗಳದು. ‘ಅದ್ ಹ್ಯಾಗೆ, ನಾನು ೯೮, ನೀನು ೯೫, ಯಾರಪ್ಪ ಹಿರೇರು?’ ‘ನಾನೇ, ನಾನೇ ನಿನಗಿಂತ ಹಿರಿಯ. ನಿಂಗೇನ್ ಲೋಕಜ್ಞಾನ ಇಲ್ವಾ? ಒಂದು, ಎರಡು, ಮೂರು… ಹೇಳ್ತಾಹೋಗು, ಮೊದಲು ಬರೋದು ತೊಂಬತ್ತೈದಾ, ತೊಂಬತ್ತೆಂಟಾ? ಮೊದಲು ಬರೋದು ದೊಡ್ಡದು ತಾನೇ?’ ಶಾಸ್ತ್ರಿಗಳ ಗಾಳಿಗನ್ನಿಗೆ ಸ್ಫೋಟವಾದ ಜೀವಿಯವರ ನಗೆಯ ಹೊಯ್ಲಿಗೆ ಭಾನು ಹಿಡಿದಿದ್ದ ಸ್ಟೇರಿಂಗ್ ಕೊಸರಾಡಿತು.
ತಮ್ಮ ಜಾಗ ಬಂದಾಗ ಇಳಿದ ಶಾಸ್ತ್ರಿಗಳು ‘ಭಾನು, ವೆಂಕಟಸುಬ್ಬಯ್ಯನನ್ನು ಬೆಳಗೆರೆ ಶಾಲೆಗೆ ಕರ್ಕೊಂಡು ಬಾ. ಇಂತಹ ಮಹನೀಯರನ್ನು ಪ್ರಾಜ್ಞರನ್ನು ಧೀಮಂತರನ್ನು ಮಕ್ಕಳು ಕಣ್ಣಾರೆ ನೋಡಬೇಕು. ಕಂಡ ಧನ್ಯತೆ ಮಕ್ಕಳ ಬಾಳನ್ನು ಬೆಳಗಬೇಕು. ಸಮಾಜಕ್ಕೆ ಆದರ್ಶವಾಗಿ ಬಾಳುವವರು ಕಮ್ಮಿ ಆಗ್ತಿದ್ದಾರಪ್ಪ. ಕರ್ಕೊಂಡು ಬಾ’ ಅಂತ ಭಾನುವಲ್ಲಿ ಬಿನ್ನವಿಸಿದರು.
ಆತ್ಮವ್ಯಾಮೋಹದೂರತೆ
ಜಿ. ವೆಂಕಟಸುಬ್ಬಯ್ಯನವರ ಉಚ್ಛ್ರಾಯವು ಸಮಾಜಮುಖದಲ್ಲಿ ಆರಂಭವಾದದ್ದೇ ಎಂಬತ್ತರ ಹರೆಯದ ಬಳಿಕ. ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ ಬರಬೇಕಾದರೆ ನೂರರ ಹೊಸ್ತಿಲು ಕಾಣಬೇಕಾಯ್ತು. ಪದ್ಮಶ್ರೀ ಸಮನಿಸಿದಾಗ ೧೦೪. ಕೇಂದ್ರಸಾಹಿತ್ಯ ಅಕಾಡೆಮಿಯ ಭಾಷಾಸಮ್ಮಾನ್ ಭೂಷಿತರಾದಾಗ ೧೦೫. ಆದರೆ ಜೀವಿಯವರು ಎಲ್ಲ ಅಂಟುನಂಟುಗಳಿಂದ ದೂರ. ತನ್ನನ್ನು ಸಮಾಜ ಆದರಿಸಲಿಲ್ಲ, ಗುರುತಿಸಲಿಲ್ಲ, ತಡವಾಗಿ ಗೌರವಿಸುತ್ತದೆ ಇತ್ಯಾದಿ ಯಾವ ಹಳಹಳಿಕೆಯಾಗಲಿ, ನ್ಯಕ್ಕಾರವಾಗಲಿ ಅವರಲ್ಲಿ ಎಳ್ಳಷ್ಟೂ ಇರಲಿಲ್ಲ. ಪದವಿ-ಪ್ರತಿಷ್ಠೆ-ಪುರಸ್ಕಾರಾದಿಗಳಿಗೆ ಎಂದೂ ಆತ್ಮದೈನ್ಯವನ್ನು ಆತುಗೊಂಡವರಲ್ಲ. ಯಾರದೋ ಚುಂಗು ಹಿಡಿದು ವಶೀಲಿಯಲ್ಲಿ ಆತ್ಮಗೌರವವನ್ನು ಅಡಯಿಟ್ಟವರಲ್ಲ. ಭಾಗ್ಯಾಯತ್ತವಾಗಿ ಬಂದುದನ್ನು ಗೊಣಗದೇ ಸ್ವೀಕರಿಸಿದ್ದೂ ಅವರ ಮಹನೀಯತೆಯೇ. ಇದು ಅವರ ಔದರ್ಯವೂ ಅಲ್ಲ ದೌರ್ಬಲ್ಯವೂ ಅಲ್ಲ – ಸಹಜ ಸ್ವಭಾವವಷ್ಟೆ. ಕಾರಣ, ಅವರು ಯಾವಾಗಲೂ ವಾರ್ತಮಾನಿಕರಾಗಿಯೇ ಇದ್ದವರು. ತಮ್ಮ ಭೂತಕಾಲದ ಹೆಚ್ಚುಗಾರಿಕೆಯನ್ನು ಜಾನಿಸುತ್ತಾ ವರ್ತಮಾನವನ್ನು ವಿಡಂಬಿಸುತ್ತಾ ಲೋಕದೂಷಣವನ್ನು ಮಾಡುವ ವಿಕೃತಿಗೆ ಅವರು ಜಾರಲೇ ಇಲ್ಲ. ಜೀವಿಯವರು ಕಾಲದೊಂದಿಗೆ ತಮ್ಮನ್ನು ನಿರಂತರ ಪುನರ್ನವೀಕರಿಸಿಕೊಳ್ಳುತ್ತಾ ಇಂದಿಂದಿನ ಜನರೊಂದಿಗೆ, ಕಾಲಧರ್ಮದೊಂದಿಗೆ ಸೇರಿಕೊಳ್ಳುತ್ತಿದ್ದರು.
ಕಾವ್ಯಾಲಾಪ ವಿನೋದಶೀಲ
ತಿಂಗಳೊಪ್ಪತ್ತಿಗೆ ಜೀವಿಯವರನ್ನು ಭೇಟಿ ಮಾಡಿ ಒಂದಷ್ಟು ಹೊತ್ತು ಪಟ್ಟಾಂಗ ಹೊಡೆದು ಬರುವ ವಾಡಿಕೆಯನ್ನು ಕರೋನಾ ಆರಂಭ ಆಗುವುದರ ತನಕವೂ ನಾನು ಜಾರಿಯಲ್ಲಿಟ್ಟುಕೊಂಡಿದ್ದೆ. ಅಷ್ಟೂ ಭೇಟಿಗಳಲ್ಲಿ ಅಚ್ಚಳಿಯದೇ ಕಣ್ಣಲ್ಲಿ ಮೂಡಿದ ಬಿಂಬವೆಂದರೆ, ನಿರಹಂಕಾರರಾಗಿ, ಸಾರಲ್ಯದ ಸಂಲಾಪದಲ್ಲಿ ಹೆಗಲಲ್ಲಿ ಕೈಯಿಟ್ಟು ಸಮಸ್ಕಂಧರಾಗಿ ನಮ್ಮೊಂದಿಗೆ ಅಂಡಲೆಯ ಹೊರಟ ಜೀವದ ನೇಹಿಗನ ಚಿತ್ರ, ಹಾಗೂ ತನ್ನ ಹಿರಿಮೆಗರಿಮೆಗಳ ತಲೆಯೊಜ್ಜೆ ಇಲ್ಲದೆ ಕಿರಿಯರೊಂದಿಗೆ ಬೆರೆತು ಕಿರಿದಾಗುವ ಅವರ ಸನ್ಮನುಷ್ಯತ್ವದ ಸದ್ಗುಣ. ಆ ಗುಣ ಎಂದರೆ ಮುಕ್ತತೆ. ನಮಗಿಂತ ಎರಡುಪಟ್ಟು ವಯಸ್ಸಿನವರು ಜೀವಿ ಅಂತ ನಮಗಾರಿಗೂ ಅನಿಸಿದ್ದೇ ಇಲ್ಲ. ಮನೆಯೊಳ ಹೊಗುತ್ತಿದ್ದ ಹಾಗೇ ಶುಭ್ರಾತಿಶುಭ್ರ ಆಹರ್ಯಧಾವಲ್ಯದಲ್ಲಿ ಕುಳಿತ ಜೀವಿ, ‘ಓಹೋಹೋ ಬನ್ನಿ, ಬನ್ನಿ’ ಎಂದು ದನಿಯೇರಲ್ಲಿ ಸ್ವಾಗತಿಸುವ ಸೌಖ್ಯವೇ ಅನನ್ಯ. ಹಲವುಬಾರಿ ಕಲಾ-ಸಾಹಿತ್ಯವಲಯದ, ಗೆಳೆಯರನ್ನೂ ಗುಡ್ಡೆಗಟ್ಟಿಕೊಂಡು ಹೋಗುತ್ತಿದ್ದೆ. ಪ್ರತಿಯೊಬ್ಬರ ಪೂರ್ವಾಪರವನ್ನೂ ವಿಚಾರಿಸಿ, ತಮ್ಮ ನೇಹದ ತೆಕ್ಕೆಗೆ ಸೆಳೆದುಕೊಂಡುಬಿಡುತ್ತಿದ್ದರು.

ಲಯಬದ್ಧವಾಗಿ ಪದ್ಯಬರೆವ ಒಂದಷ್ಟು ಎಳಸುಗಳನ್ನೂ ಅವರ ಸಾನ್ನಿಧ್ಯಕ್ಕೆ ಕರೆದುಕೊಂಡು ಹೋಗುತ್ತಿದ್ದೆ. ಎಲ್ಲರ ರಚನೆಗಳನ್ನು ಕೇಳಿ ಆಸ್ವಾದಿಸಿ ‘ವಾಂಡರ್ಫುಲ್’ ‘ವೇರಿ ಗುಡ್’ ಅಂತ ಆಕಂಠವಾಗಿ ಹೊಮ್ಮಿಸುತ್ತಿದ್ದ ಅವರ ಒಂದು ಉದ್ಗಾರವೇ ಮಹೋಪಹಾರ. ‘ನಾನು ಸಾಯೋತನಕ ಕನ್ನಡ ಬಾಳತ್ತೆ’ ಅಂತ ಜಾನುಸ್ಫಾಲನದಲ್ಲಿ, ಅಂಬೆಗಾಲು ಕಬ್ಬಿಗರತ್ತ ಮಿನುಗುಗಣ್ಣನ್ನು ಹೊರಳಿಸಿ ಮೆಚ್ಚುಗೆಯನ್ನು ಪ್ರಕಟಿಸುತ್ತಿದ್ದರು. ಈ ಜುಣುಗುಕವಿಗಳ ಮಂದೆಯಲ್ಲಿ ತಮ್ಮ ಕವನಸಂಕಲನವನ್ನು ಪ್ರಕಟಿಸಿದವರೂ ಇರುತ್ತಿದ್ದರು. ‘ಜೀವಿಯವರಿಗೆ ಈ ಪುಸ್ತಕ ಕೊಡಬಹುದಾ?’ ಎಂಬ ಅಳುಕು. ಅವರ ಕೈಯಲ್ಲಿಟ್ಟಾಗ ‘ವಾಂಡರ್ಫುಲ್’ ಅನ್ನುತ್ತಾ ಪುಸ್ತಕ ಸವರಿ, ಪುಟ ತೆರೆದು ಕಣ್ಣಾಡಿಸಿ ಹತ್ತಾರು ಸಾಲು ಓದುತ್ತಿದ್ದರಲ್ಲಾ… ಬರೆದಾತನಿಗೆ ಸ್ವರ್ಗ ಮಾರುದೂರ ಅಷ್ಟೆ!
ಜೀವಿಯಂತಹ ಮನೀಷಾಮಹಾಚಲರಿಂದ ತಮ್ಮ ಕೃತಿಗಳಿಗೆ ಮುನ್ನುಡಿ ಬರೆಸಿಕೊಳ್ಳಬೇಕೆಂಬ ಬಯಕೆ ಯಾರಿಗೆ ತಾನೆ ಇಲ್ಲದಿದ್ದೀತು? ಹಲವರು ಈ ಅಭ್ಯರ್ಥನದಿಂದ ಅವರನ್ನು ಬಳಿಸಾರುತ್ತಿದ್ದರು. ಮುನ್ನುಡಿಯನ್ನು ಕೇಳಿದವರಿಗೆ ಜೀವಿಯವರು ಎಂದೂ ಇನ್ನುಡಿಯಾಡಿದವರಲ್ಲ. ಬರೆದವನ ಬಯೋಡೇಟವನ್ನೂ ಕೇಳಿದವರಲ್ಲ. ಕನ್ನಡದಲ್ಲಿ ಬರೆಯುತ್ತಾರೆ ಎಂಬುದೇ ಅವರ ಸ್ವೀಕೃತಿಗೆ ಮುಖ್ಯವಾದ ಕಾರಣ. ಯಾವುದೇ ಕೃತಿ ಇರಲಿ, ಇಡೀ ಪುಸ್ತಕವನ್ನು ಕೂಲಂಕಷವಾಗಿ ಓದಿಯೇ ಮುನ್ನುಡಿ ಬರೆಯುತ್ತಿದ್ದರು. ಹಾರಿಕೆಯ ಪದವಿನ್ಯಾಸದ ಢೋಂಗಿ ಮುನ್ನುಡಿಯಲ್ಲ. ತಮ್ಮ ಅಭಿಪ್ರಾಯವನ್ನು ಯಾವುದೇ ರಾಜಿಯಿಲ್ಲದೇ ನೇರವಾಗಿ ನಮೂದಿಸುತ್ತಿದ್ದರು. ಅಷ್ಟೇ ಅಲ್ಲ, ಹೇಳಿಕೇಳಿ ನೈಘಂಟುಕರು, ಶಬ್ದಗಳ ತಿದ್ದುಪಡಿ, ಟಂಕನದೋಷನಿವಾರಣೆ(Proof)ಗಳನ್ನೂ ಮಾಡಿ ಮರಳಿಸುತ್ತಿದ್ದರು.
ಒಮ್ಮೆ ರಾಷ್ಟ್ರೋತ್ಥಾನದ ಪ್ರಕಟಣೆಯ ನಾಲ್ಕು ಪುಸ್ತಕಗಳನ್ನು ಅವರ ಕೈಯಲ್ಲಿಟ್ಟಾಗ ‘ಯಾರು, ರಾಮಸ್ವಾಮಿ ಬರೆದಿದ್ದಾನಾ, ವಾಂಡರ್ಫುಲ್. ಇನ್ನು ಹದಿನೈದು ದಿನಕ್ಕೆ ನನಗೆ ಆಹಾರ ಆಯ್ತು. ಥ್ಯಾಂಕ್ಸ್’ ಅಂತ ನಗೆಯಲೆ ಹಾಯಿಸಿದ್ದರು.
ಆತ್ಮಹಾಸ
ಜೀವಿಯವರ ಇಳಿವಯಸ್ಸಿನ ಲವಲವಿಕೆಯ ಮಾತೃಕೆ ಇದ್ದದ್ದು ಅವರ ಆತ್ಮಹಾಸದಲ್ಲಿ. ತನ್ನನ್ನು ಗೇಲಿಮಾಡಿಕೊಳ್ಳುವ ಲಾಘವದಲ್ಲಿ ಖುಷಿಪಡುತ್ತಿದ್ದರು. ಒಮ್ಮೆ ನಾನು ಅವರ ಮನೆಗೆ ಹೋದಾಗ, ನೆರೆಮನೆಯ ತರುಣನೊಬ್ಬ ಬಂದು ಅವರಿಗೆ ನಮಸ್ಕರಿಸಿ, ಕೊಂಚ ಹೊತ್ತು ಮಾತಾಡಿ ಹೊರಡುವಾಗ ‘ಆರೋಗ್ಯ ನೋಡ್ಕೊಳಿ ಸಾರ್’ಅಂತ ವಿನಯದಲ್ಲಿ ಹೇಳಿದ. ‘ನಾನೇನ್ ಆರೋಗ್ಯ ನೋಡ್ಕೊಳ್ಳೋದು! ಆರೋಗ್ಯವೇ ನನ್ನನ್ನು ನೋಡ್ಕೊಳ್ಳಬೇಕು’ ಜೀವಿಯವರ ಅವಧೂತೋದ್ಗಾರ.
ಅದೊಂದಿನದ ಭೇಟಿಯಲ್ಲಿ ಯಾಕೋ ತುಸು ಮಂಕಾಗಿದ್ದರು. “ಬೆಳಗಿಂದ ಕೊಂಚ ಗಿಡ್ಡಿನೆಸ್ ಇದೆ. ‘ಗಿಡ್ಡಿ’ಅಂದ್ರೆ ಕನ್ನಡದ್ದಲ್ಲ ಸ್ವಾಮಿ, ಇಂಗ್ಲೀಷಿಂದು. ನೋಡಿ ಎಂಥ ವಿಪರ್ಯಾಸ! ಈ ವಯಸ್ಸಲ್ಲಿ ವೆಂಕಟಸುಬ್ಬಯ್ಯನಿಗೆ ‘ತಲೆತಿರ್ಗ್ತಾ’ ಇದೆ”. ಅಲ್ಲೂ ಅವರ ಆತ್ಮಹಾಸದ ಆಲಾಪಾಂದೋಲನ.
ಅವರನ್ನು ನೋಡಲಿಕ್ಕೆ ಹೋದ ನಾನು ಪಟ್ಟಾಂಗ ಮುಗಿಸಿ ಹೊರಡುವಾಗ ಕಾಲಿಗೆ ಹಣೆಹಚ್ಚಿ ನಮಸ್ಕರಿಸುವುದು ವಾಡಿಕೆ. ಆಗ ಅವರು ಹೇಳುತ್ತಿದ್ದ ಮಾತೂ ಮರುನುಡಿಕೆಯೇ. “ಇದೆಲ್ಲಾ ಬೇಡ ಉಪಾಧ್ಯಾಯರೇ, ಇದೊಂದು ದೊಡ್ಡ ಹಿಂಸೆ. ಹೆಚ್ಚು ಹೆಚ್ಚು ವಯಸ್ಸಾಗ್ತಾ ಇದ್ದ ಹಾಗೆ, ಕಾಲಿಗೆ ಬೀಳೋವರನ್ನ ತಾಳ್ಕೊಳ್ಳೋದು ಇದ್ಯಲ್ಲ, ಭಾರೀ ಕಿರಿಕಿರಿ ಮಾಡುತ್ತೆ.” ನಾನಾಧ್ವನಿಪೂರ್ಣವಾದ ದರ್ಶನೋಕ್ತಿ.
‘ಸಂತೋಷಂ ಜನಯೇತ್ ಪ್ರಾಜ್ಞಃ’
ಯಾವುದೇ ಬಯಕೆಗಳನ್ನು ಹಲುಬುತ್ತಾ, ಕರುಬುತ್ತಾ, ಗೊಣಗುತ್ತಾ, ಅತೃಪ್ತಿಯ ಜೋಕಾಲಿಯಲ್ಲಿ ಜೀಕುತ್ತಾ ನವೆದವರಲ್ಲ ಜಿ. ವೆಂಕಟಸುಬ್ಬಯ್ಯ. ಸಮೃದ್ಧವಾದ ಬಾಳನ್ನು ಬಾಳಿದ್ದೇನೆ ಎಂಬ ಪೂರ್ಣತೃಪ್ತಿಯನ್ನು ತುಂಬಿಕೊಂಡಿದ್ದರು. ಅದರ ಫಲಿತಕ್ಕೆ ನಿರಂತರ ಸಾಕ್ಷಿಯಾಗಿದ್ದದ್ದು ಪ್ರಸನ್ನವಾದ ಅವರ ಮುಖಮುಕುರ. ‘ಮರಿಮಕ್ಕಳವರೆಗಿನ ತನ್ನದೇ ಕರುಳಕುಡಿಗಳನ್ನು ಕಂಡಾಯ್ತು, ನೂರಾ ಎಂಟು ವರ್ಷದ ಕಾಲಲೀಲೆಗಳನ್ನು ನೋಡಿಯಾಯ್ತು. ಬದುಕಿನಲ್ಲಿ ಯಾವ ಅಪೇಕ್ಷೆಯೂ ಬಾಕಿ ಉಳಿಯಲಿಲ್ಲ. ಎಲ್ಲ ನಿಗಲಗಳಿಂದಲೂ ಮುಕ್ತನಾಗಿದ್ದೇನೆ’ – ಇದು ಜೀವಿಯವರು ಬಾಯಾರೆ ಹೇಳಿದ ಚರಮಭಾರತಿ. ‘ಬಂದದ್ದನ್ನು ಬಂದಂತೆಯೇ ಸ್ವೀಕರಿಸಬೇಕು. ಅನುಭವಿಸಬೇಕು. ಬಯಕೆಗಳ ಮೂಟೆ ಹೊತ್ತು ಬಸವಳಿಯಬಾರದು. ಯಾರಿಗೂ ಕೇಡೆಣಿಸಬಾರದು. ಪರಹಿತವೇ ಪರಮಲಕ್ಷ್ಯವಾಗಬೇಕು. ಸಾಧ್ಯವಾದರೆ ಜನರೊಂದಿಗೆ ಸಂತೋಷವನ್ನು ಹಂಚಬೇಕು. ಇದಕ್ಕಿಂತ ಇನ್ನಾವ ಭಾಗ್ಯವೂ ಇಲ್ಲ’ – ಜೀವಿಯವರು ಅರುಣರಿಗೆ ಆಗಾಗ ಹೇಳುತ್ತಿದ್ದ ಅನುಭವೋಪದೇಶವಿದು.
ಜೀವಿಗೆ ಎಷ್ಟೊಂದು ಲೋಕಜೀವಿತ್ವದ ತುಡಿತವಿತ್ತೆಂದರೆ… ೨೦೨೦ ಮಾರ್ಚ್ನಿಂದ ಕೊರೋನಾ ದುಷ್ಪರ್ವ ಶುರುವಾದಂದಿನಿಂದ, ಅವರ ಮನೆಗೆ ಯಾರೂ ಬರಲಾರದ ಸ್ಥಿತಿ ನಿರ್ಮಾಣವಾಯ್ತು. ತಿಂಗಳು ತಿಂಗಳು ಉರುಳಿದರೂ ಮಗ, ಸೊಸೆ ಬಿಟ್ಟರೆ, ಬಂದು ಹೋಗುವ ಒಂದು ಪಿಳ್ಳೆಯೂ ಇಲ್ಲ. ಸದ್ಯದ ವಿಷಮಪರಿಸ್ಥಿತಿಯನ್ನು ಅರುಣ ಮಂದಟ್ಟು ಮಾಡುತ್ತಿದ್ದರು. ಅದು ಜೀವಿಯವರಿಗೆ ಅರ್ಥವೂ ಆಗುತ್ತಿತ್ತು. ಆದರೆ ಜನಸಂಸರ್ಗವಿಲ್ಲದ ಬದುಕು, ಅವರ ಅಳವಿಗೆ ಒಗ್ಗುತ್ತಿರಲಿಲ್ಲ. “ಜನರು ಬರೋದಿಲ್ಲ, ಯಾರ ಮುಖವೂ ಕಾಣೋದಿಲ್ಲ. ಜಗಳವನ್ನೂ ಮಾಡಲಿಕ್ಕೆ ಇಲ್ಲ ಅಂದರೆ ಅದೆಂತಹ ಬಾಳು? ಜನರ ಜೊತೆಗೆ ಬೆರೀಲಿಕ್ಕೆ ಮಾತಾಡಲಿಕ್ಕೆ ಅವಕಾಶ ಇಲ್ಲ ಅಂದಮೇಲೆ ಬದುಕಿರೋದ್ಯಾಕೆ? ಬದುಕಿಗೇನು ಅರ್ಥ?’ ಜೀವಿಯವರು ನಿಡುಸುಯ್ದು ಕೇಳುತ್ತಿದ್ದ ಪ್ರಶ್ನೆಗೆ ಉತ್ತರ ಕೊಡಬಹುದಾದವನು ಕಾಲಪುರುಷನೊಬ್ಬನೇ.
ಜಿ. ವೆಂಕಟಸುಬ್ಬಯ್ಯನವರೇ, ನಾವು ನಿಮ್ಮೊಂದಿಗೆ ಬೆರೆತಿದ್ದೇವೆ, ಹರಟೆ ಹೊಡೆದಿದ್ದೇವೆ, ಮತ್ತೆ ಮತ್ತೆ ನೋಡಿದ್ದೇವೆ ಎಂಬುದೇ ನಮ್ಮ ಜೀವಮಾನದ ಹೆಮ್ಮೆ. ನಿಮ್ಮನ್ನು ಭೇಟಿ ಮಾಡಿ ಹೊರಡುವಾಗ ನಮ್ಮನ್ನು ಬೀಳ್ಕೊಡಲು ಮನೆಬಾಗಿಲವರೆಗೆ ಬಂದು ಅರ್ಧಬಾಗಿಲಿಗೆ ಒರಗಿ, ಆಪ್ತತೆಯೇ ಆಕಾರಪಡೆದ ಹಾಲುಬೆಳದಿಂಗಳ ತಣ್ಪು ನಗೆ ಬೀರುತ್ತಾ, ಶುಭವಿದಾಯವನ್ನು ಸೂಚಿಸಲು ಬಲಗೈ ಎತ್ತಿ ಮೃದುವಾಗಿ ಬೀಸುತ್ತಾ, ನಾವು ನಿಮ್ಮ ಕಣ್ಣಿಂದ ಮರೆಯಾಗುವ ತನಕವೂ ಕದಲದೇ ಕದದೊಂದಿಗೆ ಕದವಾಗಿ ನಿಲ್ಲುತ್ತಿದ್ದ ನಿಮ್ಮ ಮಹನೀಯ ಮೂರ್ತಿ ನಮ್ಮ ಕಣ್ಣಗುಡಿಯಲ್ಲಿ ಅವಿಚಲಿತವಾಗಿ ಪ್ರತಿಷ್ಠಿತವಾಗಿದೆ. ಇದೇ ರೀತಿ ಕೈಬೀಸಿ ಕೊರಳೆತ್ತಿ ನಿಮ್ಮನ್ನು ಬೀಳ್ಕೊಡಲು ನಮಗೆ ನೀವು ಆಸ್ಪದವನ್ನೇ ಕೊಡದೇ ಅಮರರಾದಿರಿ.
ಪ್ರೊ|| ಜಿ. ವೆಂಕಟಸುಬ್ಬಯ್ಯನವರ ಜೀವನ – ಪಕ್ಷಿನೋಟ
೨೩-೮-೧೯೧೩ – ಜನನ
೧೯೩೩ – ಲಕ್ಷ್ಮೀ ಅವರೊಂದಿಗೆ – ವಿವಾಹ
೧೯೩೭ – ಕನ್ನಡ ಎಂ.ಎ. ಪದವಿ – ಮೈಸೂರು ವಿ.ವಿ.ಯಿಂದ.
೧೯೩೯ – ಬಿ.ಟಿ. ಪದವಿ – ಮೈಸೂರು ವಿ.ವಿ.ಯಿಂದ.
೧೯೩೯ – ಮಂಡ್ಯ ಮುನಿಸಿಪಲ್ ಶಾಲೆಯಲ್ಲಿ ಶಿಕ್ಷಕ
೧೯೩೯-೪೩ – ಮೈಸೂರಿನ ಮಹಾರಾಜ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕ
೧೯೪೩ – ದಾವಣಗೆರೆ ಹೈಸ್ಕೂಲಿನಲ್ಲಿ ಅಧ್ಯಾಪಕ
೧೯೪೩-೭೨ – ಬೆಂಗಳೂರಿನ ವಿಜಯ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕ
೧೯೭೨-೭೩ – ವಿಜಯ ಸಂಜೆ ಕಾಲೇಜಿನ ಪ್ರಿನ್ಸಿಪಾಲ್, ಬಳಿಕ ನಿವೃತ್ತಿ
೧೯೫೪-೫೬ – ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿ
೧೯೬೦-೬೪ – ಮೈಸೂರು ವಿಶ್ವವಿದ್ಯಾನಿಲಯದ ಅಕಾಡೆಮಿಕ್ ಕೌನ್ಸಿಲ್ ಸದಸ್ಯ
೧೯೬೪-೬೯ – ಬೆಂಗಳೂರು ವಿಶ್ವವಿದ್ಯಾನಿಲಯದ ಸೆನೆಟ್ ಸದಸ್ಯ
೧೯೬೪-೬೯ – ಬೆಂಗಳೂರು ವಿವಿ ಅಕಾಡೆಮಿಕ್ ಕೌನ್ಸಿಲ್ನ ಸದಸ್ಯ
೧೯೬೪-೬೭ – ಬೆಂಗಳೂರು ವಿವಿ ಕನ್ನಡ ಪರೀಕ್ಷಾ ಸಮಿತಿ ಅಧ್ಯಕ್ಷ
೧೯೬೪-೬೯ – ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ
೧೯೬೪-೬೯ – ‘ಕನ್ನಡ ನುಡಿ’ ಪತ್ರಿಕೆಯ ಸಂಪಾದಕ
೧೯೬೫-೬೭ – ಕನ್ನಡ ವಿಶ್ವಕೋಶ ಸಮಿತಿಯ ಸದಸ್ಯ
೧೯೭೩-೮೦ – ಕನ್ನಡ-ಕನ್ನಡ ಕೋಶದ ಪ್ರಧಾನ ಸಂಪಾದಕ
೧೯೮೦-೯೨ – ಕನ್ನಡ-ಕನ್ನಡ ಕೋಶ ಸಮಿತಿಯ ಅಧ್ಯಕ್ಷ ಹಾಗೂ ಪ್ರಧಾನ ಸಂಪಾದಕ
೧೯೬೫-೭೦ – ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯ
೧೯೬೫-೭೦ – ಕೇಂದ್ರ ಸರ್ಕಾರದ ಭಾರತೀಯ ಭಾಷಾ ಸಮಿತಿಯಲ್ಲಿ ಕನ್ನಡದ ಪ್ರತಿನಿಧಿ
೧೯೭೦-೮೫ – ಆಂಧ್ರಪ್ರದೇಶದ ‘ಶಬ್ದಸಾಗರ’ ಸಮಾಲೋಚನ ಸಮಿತಿಯ ಸದಸ್ಯ
೧೯೭೩-೯೦ – ಭಾರತೀಯ ನಿಘಂಟುಕಾರರ ಸಂಘದ ಉಪಾಧ್ಯಕ್ಷ
೧೯೭೯-೮೯ – ಕರ್ನಾಟಕ ಜಾನಪದ ಟ್ರಸ್ಟಿನ ಆಡಳಿತ ಮಂಡಳಿ ಸದಸ್ಯ
೧೯೯೨ ರಿಂದ – ಇನ್ಸ್ಟಿಟ್ಯೂಟ್ ಆಫ್ ಏಷ್ಯನ್ ಸ್ಟಡೀಸ್, ಚೆನ್ನೆöÊ ಅವರ ಬಹುಭಾಷಾ ನಿಘಂಟಿಗೆ ಸಲಹೆಗಾರ
೧೧೯೭ ರಿಂದ – ಕರ್ನಾಟಕ ಸರ್ಕಾರದ ಜನಪ್ರಿಯ ಸಾಹಿತ್ಯ ಪ್ರಕಟನ ಸಮಿತಿ ಅಧ್ಯಕ್ಷ
೧೯೯೭-೯೮ – ಅಧ್ಯಕ್ಷ ‘ಪಂಪಪ್ರಶಸ್ತಿ’ ಆಯ್ಕೆ ಸಮಿತಿ
೨೦೧೧ – ೭೭ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷ
೨೦೧೭ – ಪದ್ಮಶ್ರೀ
೧೯-೪-೨೦೨೧ – ನಿಧನ
ಗ್ರಂಥಗಳು (ನಿಘಂಟು ಸಹಿತ)
೧. ಐಬಿಎಚ್ ಕನ್ನಡ-ಕನ್ನಡ ಇಂಗ್ಲಿಷ್ ನಿಘಂಟು
(ಇತರರೊಡನೆ)
೨. ಕನ್ನಡ-ಕನ್ನಡ ಸಂಕ್ಷಿಪ್ತ ನಿಘಂಟು (ಇತರರೊಡನೆ)
೩. ಮುದ್ದಣ ಪದಪ್ರಯೋಗ ಕೋಶ
೪. ಇಗೋ ಕನ್ನಡ – ಸಾಮಾಜಿಕ ಕನ್ನಡ ನಿಘಂಟು
(ಭಾಗ-೧, ೨, ೩)
೫. ಪತ್ರಿಕಾ ಪದಕೋಶ
೬. ಎರವಲು ಪದಕೋಶ
೭. ಕನ್ನಡ ಕ್ಲಿಷ್ಟ ಪದಕೋಶ
೮. ಪ್ರೊ| ಜಿ.ವಿ. ಪ್ರಿಸಮ್ ಇಂಗ್ಲಿಷ್-ಕನ್ನಡ ನಿಘಂಟು
೯. ಕನ್ನಡ ನಿಘಂಟು ಪರಿವಾರ
೧೦. Kannada Lexicography and other Articles
೧೧. ಅನುಕಲ್ಪನೆ (ವಿಮರ್ಶೆ)
೧೨. ಕನ್ನಡ ಶಾಸನ ಪರಿಚಯ
೧೩. ಕನ್ನಡ ಸಾಹಿತ್ಯ ನಡೆದು ಬಂದ ದಾರಿ
೧೪. ಡಿ.ವಿ. ಗುಂಡಪ್ಪ
(ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಕಟಣೆ)
೧೫. ಸಾಹಿತ್ಯ ಮತ್ತು ಶಿಕ್ಷಣ
೧೬. ಇಣುಕು ನೋಟ
೧೭. ಕುಮಾರವ್ಯಾಸನ ಅಂತರಂಗ – ಯುದ್ಧ
ಪಂಚಕದಲ್ಲಿ
೧೮. ಚಿಣ್ಣರ ಚಿತ್ರರಾಮಾಯಣ
೧೯. ಸಿರಿಗನ್ನಡ ಸಾರಸ್ವತರು
೨೦. ಮುದ್ದಣ ಭಂಡಾರ – (ಭಾಗ ೧, ೨)
೨೧. ಕರ್ನಾಟಕ ಏಕೀಕರಣದ ಅನುಭವಗಳು
(ಇದಲ್ಲದೆ ಇನ್ನಷ್ಟು ಗ್ರಂಥಗಳು, ಅನುವಾದಗಳು – ಒಟ್ಟು ೧೪೬ ಪುಸ್ತಕಗಳು)
ಸನ್ಮಾನ, ಪ್ರಶಸ್ತಿ-ಪುರಸ್ಕಾರ
೧. ಸಾರ್ವಜನಿಕ ಸನ್ಮಾನ – ಅಭಿನಂದನ ಗ್ರಂಥ ಸಮರ್ಪಣೆ – ೧೯೭೬
೨. ಕರ್ನಾಟಕ ಸಾಹಿತ್ಯ ಅಕಾಡೆಮಿ ಬಹುಮಾನ – ೧೯೮೭
೩. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ – ೧೯೯೧
೪. ಮಾಂಟ್ರಿಯಲ್, ಕನ್ನಡ ಸಮ್ಮೇಳನದಲ್ಲಿ ಮುಖ್ಯ ಅತಿಥಿ – ೧೯೯೨
೫. ಕರ್ನಾಟಕ ಸಾಹಿತ್ಯ ಅಕಾಡೆಮಿ ಗೌರವ ಪ್ರಶಸ್ತಿ – ೧೯೯೭
೬. ‘ಶಂಬಾ ಪ್ರಶಸ್ತಿ’ – ೧೯೯೮
೭. ‘ಸೇಡಿಯಾಪು ಪ್ರಶಸ್ತಿ’ – ೧೯೯೯
೮. ‘ಶಿವರಾಮ ಕಾರಂತ ಪ್ರಶಸ್ತಿ’ – ೧೯೯೯
೯. ಕರ್ನಾಟಕ ಪತ್ರಿಕಾ ಅಕಾಡೆಮಿ ವಿಶೇಷ ಪ್ರಶಸ್ತಿ – ೨೦೦೦
೧೦. ‘ಅಂಕಣಶ್ರೀ’ ಪ್ರಶಸ್ತಿ – ೨೦೦೨
೧೧. ಪೇಜಾವರ ಮಠದ ಶ್ರೀಕೃಷ್ಣಾನುಗ್ರಹ ಪ್ರಶಸ್ತಿ – ೨೦೦೪
೧೨. ಮಾಸ್ತಿ ಪ್ರಶಸ್ತಿ – ೨೦೦೫
೧೩. ಗೊರೂರು ಪ್ರಶಸ್ತಿ – ೨೦೦೫
೧೪. ನಾಡೋಜ ಗೌರವ ಪದವಿ – ೨೦೦೫
೧೫. ಆಳ್ವಾಸ್ ನುಡಿಸಿರಿ ಅಧ್ಯಕ್ಷತೆ – ೨೦೦೭
೧೬. ಅನಕೃ ನಿರ್ಮಾಣ್ ಪ್ರಶಸ್ತಿ – ೨೦೦೮
೧೭. ಕೇಶವ ಪ್ರಶಸ್ತಿ (ತಾಳ್ತಜೆ ಕೇಶವ ಭಟ್ಟರ ಸ್ಮರಣೆಗೆ) – ೨೦೧೦
೧೮. ಗೋಕಾಕ್ ಪ್ರಶಸ್ತಿ -೨೦೧೦
೧೯. ಕನ್ನಡ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ – ೨೦೧೦
೨೦. ಕನ್ನಡ ವಿಜ್ಞಾನ ಪರಿಷತ್ತಿನ ರಜತೋತ್ಸವ ಪ್ರಶಸ್ತಿ -೨೦೧೦
೨೧. ಕಲಾ ಗಂಗೋತ್ರಿಯ ರಂಗಸಮ್ಮಾನ – ೨೦೧೦
೨೨. ಎಪತ್ತೇಳನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ – ೨೦೧೦
೨೩. ಶ್ರೀ ವನಮಾಲಿ ಸೇವಾ ಪ್ರಶಸ್ತಿ – ೨೦೧೧
೨೪. ಕುಲಪತಿ ಡಾ|| ಕೆ. ಎಮ್. ಮುನ್ಷಿ ಸಮ್ಮಾನ – ೨೦೧೨
೨೫. ಪಂಪ ಪ್ರಶಸ್ತಿ – ೨೦೧೪
೨೬. ಪದ್ಮಶ್ರೀ – ೨೦೧೭
೨೭. ಕೇಂದ್ರ ಸಾಹಿತ್ಯ ಅಕಾಡೆಮಿಯ ಭಾಷಾ ಸಮ್ಮಾನ ಪುರಸ್ಕಾರ – ೨೦೧೮
ಅಭಿನಂದನಾ ಗ್ರಂಥಗಳು
೧. ಸಾಹಿತ್ಯ ಜೀವಿ – ೧೯೭೪ರಲ್ಲಿ, ಜಿ.ವಿ.ಯವರ ೬೦ನೇ ಹುಟ್ಟುಹಬ್ಬದ ಸಂದರ್ಭದಲ್ಲಿ
ಸಮರ್ಪಿತ ಅಭಿನಂದನಾ ಗ್ರಂಥ
೨. ಶಬ್ದ ಸಾಗರ – ೨೦೦೪ರಲ್ಲಿ ಜಿ.ವಿ. ಯವರ ೯೦ನೇ ವರ್ಷದ ಹುಟ್ಟುಹಬ್ಬದ
ಸಂದರ್ಭದಲ್ಲಿ ಸಮರ್ಪಿತ ಅಭಿನಂದನಾ ಗ್ರಂಥ
೩. ಪ್ರೊ| ಜಿ.ವಿ. ಜೀವ-ಭಾವ – ಭಾರತೀಯ ವಿದ್ಯಾಭವನದಿಂದ ಪ್ರಕಟಿತ
ಕಿರುಹೊತ್ತಿಗೆ – ೨೦೦೫
೪. ಕನ್ನಡದ ಜೀವ ಪ್ರೊ| ಜಿ.ವಿ. – ಜಿ.ವಿ.ಯವರ ಜೀವನ ಮತ್ತು ಕಾರ್ಯದ
ಕುರಿತಾದ ಲೇಖನಗಳ ಸಂಗ್ರಹ. ಪ್ರಕಾಶಕರು : ಸುಂದರ ಪ್ರಕಾಶನ
೫. ವಿದ್ವಜ್ಜೀವಿತ – ರಾಷ್ಟçಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಉಡುಪಿ ಇವರು
ಪ್ರಕಟಿಸಿರುವ ಗೌರವ ಗ್ರಂಥ – ೨೦೧೧
ಡಾಕ್ಯುಮೆಂಟರಿ ಸಿನೆಮಾ
೧. ಲಿಪ್ಯಂತರ – ರಾಜರ್ಷಿ ಡಾ|| ವೀರೇಂದ್ರ ಹೆಗ್ಗಡೆಯವರ ಶ್ರೀ ಧರ್ಮಸ್ಥಳ
ಮಂಜುನಾಥೇಶ್ವರ ಟ್ರಸ್ಟ್ ನಿರ್ಮಿಸಿದ ಜಿ.ವಿ.ಯವರ ಕುರಿತಾದ ಡಾಕ್ಯುಮೆಂಟರಿ
ಸಿನೆಮಾ; ನಿರ್ದೇಶಕರು; ಶ್ರೀ ಸುಚೇಂದ್ರ ಪ್ರಸಾದ್ – ೨೦೧೦
ದತ್ತಿನಿಧಿ, ಚಿನ್ನದ ಪದಕಗಳು
೧. ಮೈಸೂರು ಮತ್ತು ಬೆಂಗಳೂರು ವಿಶ್ವವಿದ್ಯಾಲಯಗಳಲ್ಲಿ ಜಿ.ವಿ.ಯವರ ಹೆಸರಿನಲ್ಲಿ
ಚಿನ್ನದ ಪದಕಗಳು – ೧೯೭೪ರಿಂದ
೨. ಪ್ರೊ| ಜಿ.ವಿ.ಯವರ ಪತ್ನಿ ಶ್ರೀಮತಿ ಜಿ.ವಿ. ಲಕ್ಷ್ಮಿಯವರ ಹೆಸರಿನಲ್ಲಿ ಸಾಹಿತ್ಯ
ಪರಿಷತ್ತಿನಲ್ಲಿ ದತ್ತಿನಿಧಿ ಸ್ಥಾಪನೆ- ವಾರ್ಷಿಕ ಉಪನ್ಯಾಸವೊಂದರ ಆಯೋಜನೆಗೆ – ೧೯೭೪
೩. ಗೋಖಲೆ ಸಾರ್ವಜನಿಕ ವಿಚಾರಸಂಸ್ಥೆ ಮತ್ತು ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್
ವರ್ಲ್ಡ್ ಕಲ್ಚರ್ಗಳಲ್ಲಿ ದತ್ತಿನಿಧಿ ಸ್ಥಾಪನೆ- ವಾರ್ಷಿಕ ಉಪನ್ಯಾಸಗಳಿಗಾಗಿ – ೨೦೧೦
೪. ಜಿ.ವಿ.ಯವರ ಹೆಸರಿನಲ್ಲಿ ಯುವ ಸಂಶೋಧಕರಿಗೆ ಬಹುಮಾನ ನೀಡುವುದಕ್ಕಾಗಿ
ಕನ್ನಡ ವಿಶ್ವವಿದ್ಯಾನಿಲಯದಲ್ಲಿ ಒಂದು ಲಕ್ಷ ರೂಪಾಯಿಗಳ ದತ್ತಿನಿಧಿ ಸ್ಥಾಪನೆ –
M/s Bosch Ltd., Bangalore (A German Automobile Company) ಇವರಿಂದ – ೨೦೧೧
***