ಅಹಿಂಸೆಯು ಬುದ್ಧ ಮಹಾವೀರರ ಕಾಲದಲ್ಲಿ ಒಂದು ಉಪದೇಶವಾಗಿ ಇಲ್ಲಿಯ ಬದುಕಿನ ಮೇಲೆ ಪ್ರಭಾವ ಬೀರಿತ್ತು. ಅಹಿಂಸೆಯನ್ನು ಆಳಕ್ಕೂ ಸೂಕ್ಷ್ಮಕ್ಕೂ ಒಯ್ದಿದ್ದು ಬೌದ್ಧಕ್ಕಿಂತ ಅಧಿಕತರವಾಗಿ ಜೈನಪಂಥವೇ. ಆದರೆ ಅಲ್ಲಿಯೂ ಅದೊಂದು ಮತೀಯ ಆಚರಣೆಯಾಗಿ ಪ್ರಧಾನತೆಯನ್ನು ಪಡೆದಿತ್ತೇ ವಿನಾ ತಾತ್ತ್ವಿಕ ವಸ್ತುವಾಗಿ ಅಲ್ಲ. ಅಂದರೆ: ಜೈನರಲ್ಲಿ ಅಹಿಂಸೆಯೆನ್ನುವುದು ಬದುಕಿನಲ್ಲಿ ಅಳವಡಿಸಿಕೊಳ್ಳಬೇಕಾದ ಒಂದು ಮತೀಯ ಭಾವ ಮತ್ತು ತಾತ್ತ್ವಿಕ ಆದರ್ಶ. ದುಃಖವನ್ನು ತನ್ನ ತತ್ತ್ವಶೋಧದ ಮುಖ್ಯ ಕಾರಣವಸ್ತುವಾಗಿ ತೊಡಗಿಸಿದ ಬುದ್ಧನೂ ಪ್ರಪಂಚದ ಬದುಕು ದುಃಖಮಯವಾಗಿದೆ, ಈ ದುಃಖಕ್ಕೆ ಕಾರಣವಿದೆ, ಕಾರಣವನ್ನು ನಿವಾರಿಸಬಹುದಾಗಿದೆ ಮತ್ತು ದುಃಖನಿವಾರಣೆಗೆ ಮಾರ್ಗವಿದೆ ಎಂಬ ನಾಲ್ಕು ಆರ್ಯಸತ್ಯಗಳನ್ನು ಮೂಲ ತಾತ್ತ್ವಿಕಸಂದೇಶವಾಗಿ ಪ್ರಸ್ತುತಪಡಿಸಿದ. ದಯೆ, ಶಾಂತಿಯ ಜೊತೆಗೆ ಅಹಿಂಸೆಯನ್ನೂ ಒಂದು ಪರಿಕರವಾಗಿ ಆತ ಉಪದೇಶಿಸಿದ್ದು ಸುಖಮಯ ಬದುಕಿಗಾಗಿ. ತಾತ್ತ್ವಿಕವಾಗಿ ಆತ ಉಪದೇಶಿಸಿದ್ದು ಅತಿಯಾದ ಸುಖಲೋಲುಪತೆಯಾಗಲಿ ಅತಿಯಾದ ದೇಹದಂಡನೆಯಾಗಲಿ ಸಲ್ಲದೆನ್ನುವ ಮಧ್ಯಮಮಾರ್ಗವನ್ನು. ಅಂದರೆ: ಈ ಎರಡೂ ಪಂಥಗಳು ಅಹಿಂಸೆಯನ್ನು ಒಂದು ಮತೀಯ ಭಾವವನ್ನಾಗಿ ಪ್ರಚುರಪಡಿಸಿದವೇ ವಿನಾ ಒಂದು ತಾತ್ತ್ವಿಕ ಆದರ್ಶವಾಗಿ ಅಲ್ಲ ಎನ್ನುವುದು ಗಮನಿಸತಕ್ಕ ವಿಷಯ.
ಬುದ್ಧಪೂರ್ವ ಮತ್ತು ಬುದ್ಧೋತ್ತರ ಭಾರತೀಯ ವಾಙ್ಮಯಗಳಲ್ಲಿಯೂ ಅಹಿಂಸೆಯ ಉಲ್ಲೇಖ ಇದ್ದೇ ಇದೆ. ಅಲ್ಲೆಲ್ಲ ಅದು ಸಾಧನೆಗೆ ಬೇಕಾದ ಆತ್ಮಸಂಯಮದ ಒಂದು ಪರಿಕರವಾಗಷ್ಟೆ ಉಲ್ಲೇಖಿಸಲ್ಪಟ್ಟಿದೆ, ಒಂದು ಸ್ವತಂತ್ರ ತತ್ತ್ವಜ್ಞಾನವಾಗಿ ಅಲ್ಲ.
ಮತೀಯ ಭಾವದ್ರವ್ಯ
ಬುದ್ಧ ಮಹಾವೀರರ ಬಳಿಕ ಅವರ ತತ್ತ್ವಜ್ಞಾನವು ಒಂದಷ್ಟು ವಿಕಾಸಪಥವನ್ನು ಕಂಡಿತು. ಅವುಗಳಲ್ಲಿ ಪಂಗಡಗಳು, ಒಳಪಂಗಡಗಳೂ ಸೃಷ್ಟಿಯಾದವು. ಜೈನಪಂಥವು ಪ್ರಪ್ರಾಚೀನವಾದದ್ದು. ಅದಕ್ಕೆ ನೂತನತೆಯನ್ನು ತಂದುಕೊಟ್ಟು ಪ್ರಚುರಪಡಿಸಿದವರು ಮಹಾವೀರ. ಆತ ಬುದ್ಧನ ಸಮಕಾಲೀನ. ಆದರೆ ಜೈನದರ್ಶನದ ಸಂಪಾದನಕಾರ್ಯ ನಡೆದುದು ತೀರಾ ತಡವಾಗಿ, ಕ್ರಿ.ಶ. ಐದನೆಯ ಶತಮಾನದಲ್ಲಿ. ಆಗ ದೇವರ್ಧಿ ಎಂಬವರ ಅಧ್ಯಕ್ಷತೆಯಲ್ಲಿ ಆ ಕಾರ್ಯವು ನಡೆಯಿತು. ಅದಕ್ಕೆ ಮೊದಲಿದ್ದ ಪೂರ್ವಾಗಮಗಳನ್ನು ವ್ಯವಸ್ಥಿತಗೊಳಿಸಲಾಯಿತು. ಅನಂತರ ಬಂದ ದರ್ಶನಕಾರರಿಂದ ಜೈನದರ್ಶನವು ಪ್ರಸಿದ್ಧಿಯನ್ನು ಪಡೆಯಿತು.
ಬುದ್ಧ ಯಾವುದೇ ಗ್ರಂಥವನ್ನು ಬರೆದಿಲ್ಲ. ಆತನ ಉಪದೇಶಗಳು ಜನರ ಬಾಯಲ್ಲಿದ್ದವು. ಬುದ್ಧನ ಶಿಷ್ಯರಾದ ಮಹಾಕಶ್ಯಪ, ಉಪಾಲಿ ಮುಂತಾದವರು ಸೇರಿ ಈ ಉಪದೇಶಗಳನ್ನು ಸಂಗ್ರಹಿಸಿ ಉಪದೇಶಸಂಬಂಧಿಯಾದ ಸುತ್ತಪಿಟಕ, ಆಚಾರಸಂಬಂಧಿಯಾದ ವಿನಯಪಿಟಕ ಮತ್ತು ದರ್ಶನಸಂಬಂಧಿಯಾದ ಅಭಿಧಮ್ಮಪಿಟಕ ಎಂದು ಮೂರಾಗಿ ಅವುಗಳನ್ನು ವಿಂಗಡಿಸಿದರು.
ಹೀಗೆ ಮಹಾವೀರ ಮತ್ತು ಬುದ್ಧ ಇಬ್ಬರ ವಿಚಾರಗಳೂ ನಮಗೆ ದಕ್ಕಿರುವುದು ನೇರವಾಗಿ ಅಲ್ಲ, ತೀರಾ ಪರೋಕ್ಷವಾಗಿ. ಅನಂತರದ ದಿನಗಳಲ್ಲಿ ಅವುಗಳಲ್ಲಿ ಪಂಗಡ ಉಪಪಂಗಡಗಳು ಬೆಳೆದು ಮೂಲವಿಚಾರವು ಸಾಕಷ್ಟು ಪರಿವರ್ತನೆಯಾಗಿರುವ ಸಾಧ್ಯತೆಗಳಿವೆ. ಹೀಗೆ ಅಹಿಂಸೆಯ ಹರಿಕಾರತ್ವವನ್ನು ಬುದ್ಧನ ಮೇಲೆ ಹೊರಿಸುವಲ್ಲಿ ಇಷ್ಟೆಲ್ಲ ತೊಡಕುಗಳಿವೆ. ಇಷ್ಟಾಗಿ, ಆತನಿಂದ ಅದು ಮೇಲೆ ಹೇಳಿದಂತೆ ಪ್ರಾಚುರ್ಯಕ್ಕೆ ಬಂತೆಂದು ಹೇಳಿದರೂ ಅದು ಮತೀಯ ಉಪದೇಶವಾಗಿಯೇ ವಿನಾ ತತ್ತ್ವಜ್ಞಾನದ ಭಾಗವಾದ ಪ್ರಧಾನಸಿದ್ಧಾಂತವಾಗಿ ಅಲ್ಲ.
ಯೋಗಮಾರ್ಗದಲ್ಲಿಯ ಒಂದು ಹೆಜ್ಜೆ
ತತ್ತ್ವಜ್ಞಾನವು ತೊಡಗುವುದು ಒಂದು ಶೋಧನೆಲೆಯ ಪ್ರಯಾಸವಾಗಿ. ಬದುಕಿನಲ್ಲಿ ಆಚರಿಸಬೇಕಾದ ಸಂಗತಿಗಳನ್ನು ವಿವರಿಸುವುದು ಅದರ ಕೆಲಸವಲ್ಲ. ಅಹಿಂಸೆಯು ಬದುಕಿನ ಆಚರಣೆಗೆ ಸಂಬಂಧಿಸಿದ ಒಂದು ಬಗೆಯ ದಾರಿ. ಷಡ್ದರ್ಶನಗಳಲ್ಲಿ ಯೋಗವು ತಾತ್ತ್ವಿಕ ಚರ್ಚೆಗಿಂತ ಮುಖ್ಯವಾಗಿ ಆಚರಣೆಯ ಸಂಗತಿಗಳಿಗೆ ಒತ್ತು ನೀಡಿದೆ. ಹಾಗೆ ಆಚರಣಸಂಬಂಧಿಯಾಗಿಯೂ ಅದು ದರ್ಶನವೆನಿಸಿದೆ. ದರ್ಶನಶಾಸ್ತçಗಳ ಸರಣಿಯಲ್ಲಿ ಇದೊಂದು ಅಪವಾದ. ಇದರಲ್ಲಿ ಜಿಜ್ಞಾಸೆಗೆ ಅವಕಾಶವಿಲ್ಲ. ತತ್ತ್ವಜಿಜ್ಞಾಸೆ ಅದರ ಗುರಿಯೂ ಅಲ್ಲ. ಸಾಧನೆ ಮಾಡುವುದಷ್ಟೇ ಇಲ್ಲಿ ಮುಖ್ಯ. ಪತಂಜಲಿ ಇದರ ಪ್ರವರ್ತಕ. ಆದರೆ ಯೋಗದ ಮೂಲಪ್ರವರ್ತಕ ಹಿರಣ್ಯಗರ್ಭನೆಂದೇ ಹೇಳಲಾಗುತ್ತದೆ. ಕ್ರಿ.ಪೂ. ಎರಡನೆಯ ಶತಮಾನದ ಪತಂಜಲಿ ಯೋಗಸೂತ್ರಗಳನ್ನು ನೀಡಿದಾತ; ಸಾಧನೆಯ ಭಾಗವಾಗಿ ಅಷ್ಟಾಂಗಯೋಗವನ್ನು ಉಪದೇಶಿಸಿದಾತ. ಅಷ್ಟಾಂಗದಲ್ಲಿ ಬರುವ ಮೊದಲ ಅಂಗವಾದ ‘ಯಮ’ದಲ್ಲಿ ಐದು ವಿಧಗಳಿವೆ. ಅದರಲ್ಲಿ ಮೊದಲನೆಯದೇ ಅಹಿಂಸೆ. ಉಳಿದ ನಾಲ್ಕೆಂದರೆ: ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹ. ಯಾವುದೇ ಕಾಲದಲ್ಲೂ ಎಲ್ಲ ವಿಧದಲ್ಲೂ ಯಾವುದೇ ಪ್ರಾಣಿಗಳಿಗೆ ಹಿಂಸೆ ಮಾಡದಿರುವುದೇ ಅಹಿಂಸೆ – ಇದು ಅಹಿಂಸೆಯ ಕುರಿತ ಸರಳ ಸ್ಪಷ್ಟ ವ್ಯಾಖ್ಯಾನ.
ಅಂದರೆ ಜಿಜ್ಞಾಸಾಸಂಬಂಧಿಯಲ್ಲದ, ಸಾಧನಸಂಬಂಧಿಯಷ್ಟೆ ಆದ ದರ್ಶನವೊಂದರ ಎಂಟು ಅಂಗಗಳಲ್ಲಿ ಒಂದರ ಐದು ವಿಧಗಳಲ್ಲಿ ಒಂದಾಗಿ ಅಹಿಂಸೆಯು ಒಂದು ಸ್ಥಾನವನ್ನು ಪಡೆದುಕೊಂಡಿದೆಯೇ ವಿನಾ ತತ್ತ್ವಜ್ಞಾನದ ಭಾಗವಾಗಿಯಲ್ಲ. ಮನಸ್ಸು ಮತ್ತು ಶರೀರದ ಸಾಧನೆಗೆ ಸಂಬಂಧಿಸಿದ ಯೋಗಶಾಸ್ತçದಲ್ಲಿ ಅದು ಇದ್ದರೂ ಒಂದು ಪ್ರಕಾರವಾಗಿ ಇದೆಯೇ ವಿನಾ ಅದೇ ಸರ್ವಸ್ವವಾಗಿ ಅಲ್ಲ. ಆದರೆ ಸಾಧನೆಗೆ ಅಥವಾ ಆಚರಣೆಗೆ ಸಂಬಂಧಿಸಿದಂತೆ ಅಹಿಂಸೆಗೆ ಒಂದು ಮುಖ್ಯ ಸ್ಥಾನವಿದ್ದೇ ಇದೆ. ಇದು ಇಲ್ಲಿಯ ಮುಖ್ಯ ಗ್ರಹಿಕೆ. ಭಾರತೀಯ ತತ್ತ್ವಜ್ಞಾನದಲ್ಲಿ ಅಹಿಂಸೆಯ ಪಾತ್ರ ಬಲು ದೊಡ್ಡದು ಎಂಬಂತೆ ಒಂದು ಬೀಸುಧ್ವನಿ ಆಗಾಗ್ಗೆ ಕೇಳಿಬರುತ್ತಿರುವ ಸಂದರ್ಭದಲ್ಲಿ ಇವಿಷ್ಟನ್ನು ಇಲ್ಲಿ ಉಲ್ಲೇಖಿಸಬೇಕಾಯಿತು.
ಇತಿಹಾಸವಾದ ಮೊದಲ ಸಂಗ್ರಾಮ
ಅಹಿಂಸೆಯು ಮತ್ತೊಮ್ಮೆ ಸಾರ್ವಜನಿಕವಾಗಿ ಮೊಳಗಿದ್ದು ಭಾರತದ ಸ್ವಾತಂತ್ರ್ಯ ಹೋರಾಟದ ಎರಡನೆಯ ಘಟ್ಟದಲ್ಲಿ. ಅದರಲ್ಲಿಯೂ ಗಾಂಧಿಯವರ ಪ್ರವೇಶವಾದ ಬಳಿಕ. ಮೊದಲ ಘಟ್ಟದಲ್ಲಿ ಆ ಹೋರಾಟ ಸಾಧ್ಯವಾದುದು ಸಶಸ್ತ್ರವಾಗಿ. ಇಡಿಯ ದೇಶ ಸಮಗ್ರವಾಗಿ ಸ್ಪಂದಿಸಿದ ಹೋರಾಟವಾಗಿತ್ತದು. ಅದರಲ್ಲಿ ದೇಶೀಯ ರಾಜರೂ ಪಾಲ್ಗೊಂಡಿದ್ದರು, ಆಂಗ್ಲರ ಸೈನ್ಯದಲ್ಲಿದ್ದ ಭಾರತೀಯ ಸೈನಿಕರೂ ಕೈಜೋಡಿಸಿದ್ದರು. ಇಷ್ಟೊಂದು ಸಂಕೀರ್ಣವಾದ ಬೃಹದ್ ದೇಶ, ತಮ್ಮ ವಿರುದ್ಧವಾಗಿ ಇಲ್ಲಿ ನಡೆದಿರುವ ತಮ್ಮದೇ ಸೈನಿಕರೂ ಪಾಲ್ಗೊಂಡಿರುವ ಸಶಸ್ತçಕ್ರಾಂತಿಯ ಆಸೇತುಹಿಮಾಚಲ ವ್ಯಾಪ್ತಿಯನ್ನು ಹೊಂದಿದ ಜಾಲದ ಒಂದು ಸಣ್ಣ ಸುಳಿವು ಕೂಡಾ ಆಂಗ್ಲರಿಗೆ ಸಿಗದಷ್ಟು ಸೂಕ್ಷ್ಮತರವಾಗಿ ಆ ಹೋರಾಟವನ್ನು ಸಂಘಟಿಸಲಾಗಿತ್ತು.
ಬಿಡಿ, ಸಶಸ್ತ್ರ ಸ್ವಾತಂತ್ರ್ಯಸಂಗ್ರಾಮದ ಅಭೇದ್ಯ ಜಾಲಕ್ಕೆ ಸಂಬಂಧಿಸಿದಂತೆ ಪ್ರಪಂಚದ ಇತಿಹಾಸದಲ್ಲಿಯೇ ಅದೊಂದು ರೋಚಕ ಕಥೆಯೆನ್ನಿ. ಆದರೆ ಎಲ್ಲೆಡೆ ಏಕಕಾಲಕ್ಕೆ ಯಶಸ್ವಿಯಾಗಿ ಪ್ರಾರಂಭಗೊಳ್ಳಬೇಕಿದ್ದ ಆ ಹೋರಾಟವು; ಒಬ್ಬ ಕ್ರಾಂತಿಕಾರಿ ಸೈನಿಕನ ದುಡುಕಿನ ಕಾರಣಕ್ಕಾಗಿ ನಿಗದಿತ ಸಮಯಕ್ಕಿಂತ ಮುಂಚಿತವಾಗಿ ಒಂದೆಡೆ ಪ್ರಾರಂಭವಾಗಿ ಮುಂದೆ ಅಲ್ಲಿಇಲ್ಲಿ ಆಯೋಜಿತವಾಗಿ ಅವ್ಯವಸ್ಥಿತವಾಗಿ ಮುಂದುವರಿದು, ಆಂಗ್ಲರಿಗೆ ವಿಚಾರಣೆಯ ಮೂಲಕ ಅದರ ಜಾಲವನ್ನು ಭೇದಿಸಲು ಬೇಕಾದ ಸುಳಿವು ಹಾಗೂ ಮಟ್ಟಹಾಕಲು ಮಾಡಿಕೊಳ್ಳಬೇಕಾದ ತಯಾರಿಗೆ ಸಮಯಾವಕಾಶ ಲಭಿಸಿದ್ದರಿಂದ ಭಾರತೀಯರ ಅನ್ಯಾಯಯುತ ಸೋಲಿನೊಂದಿಗೆ ಅದು ಇತಿಹಾಸವಾಗಿಹೋಯಿತು.
ಎರಡು ಕವಲುಗಳಲ್ಲಿ ಎರಡನೆಯ ಘಟ್ಟ
ಎರಡನೆಯ ಘಟ್ಟ ಪ್ರಾರಂಭಗೊಂ ಡುದು ಮುಂದೆ ಸ್ವಾತಂತ್ರ್ಯ ಹೋರಾಟದಲ್ಲಿ ಪ್ರಧಾನ ಪಾತ್ರ ವಹಿಸಿದ ಕಾಂಗ್ರೆಸ್ ಸಂಸ್ಥೆಯನ್ನು ಆಂಗ್ಲನೇ ಆದ ಎ.ಓ. ಹ್ಯೂಮ್ ಹುಟ್ಟುಹಾಕುವುದರ ಮೂಲಕ. ಆತನ ಉದ್ದೇಶವೇನೋ ಭಾರತೀಯ ಹಿತದೃಷ್ಟಿಯಿಂದ ಕೂಡಿದುದಾಗಿತ್ತೇನೊ. ಆದರೆ ಒಂದು ಸ್ತರದಲ್ಲಿ ಸಮಗ್ರದೇಶ ಒಂದಾಗಿ ಆಂಗ್ಲರ ವಿರುದ್ಧ ಹೋರಾಟ ಸಂಘಟಿಸಬಲ್ಲ ಅದ್ಭುತ ಜಾಲವನ್ನು ಹೆಣೆದ ಭಾರತೀಯರಿಗೆ ಮತ್ತೊಂದು ಹೋರಾಟಗೈಯಲು ಬೇಕಾದ ಸಂಸ್ಥೆಯೊಂದನ್ನು ಹುಟ್ಟುಹಾಕಲು ಒಬ್ಬ ಆಂಗ್ಲನೇ ಬೇಕಾಯಿತೆನ್ನುವುದು ಅಭಿಮಾನದ ಸಂಗತಿಯಲ್ಲ. ಮೊದಮೊದಲ ವರ್ಷಗಳಲ್ಲಿ ಈ ಸಂಸ್ಥೆ ಆಂಗ್ಲರಲ್ಲಿ ಅಧೀನ ಅಧಿಕಾರವನ್ನು ಬೇಡುವ ಬಗೆಯ ಅರ್ಜಿಗಳನ್ನು ಸಲ್ಲಿಸುವುದರಲ್ಲಿಯೇ ಧನ್ಯತೆಯನ್ನು ಕಾಣುತ್ತಿತ್ತು. ಆಮೇಲೆ ಒಂದಷ್ಟು ‘ಹಾವು ಸಾಯಲೂಬಾರದು ಕೋಲು ಮುರಿಯಲೂಬಾರದು’ ಎಂಬ ರೀತಿಯ ಹೋರಾಟ. ಇದನ್ನು ಭಾರತೀಯರಿಗೆ ಬೇಕಾದ ಹೋರಾಟ ಎನ್ನುವುದಕ್ಕಿಂತಲೂ ಆಂಗ್ಲರಿಗೆ ಬೇಕಾದ ಹೋರಾಟ ಎನ್ನುವುದೇ ಹೆಚ್ಚು ಸೂಕ್ತ.
ಈ ಸಂಸ್ಥೆಯ ಹೋರಾಟಕ್ಕೆ ಸಮಾಂತರವಾಗಿ ಮೊದಲಘಟ್ಟದ ಹೋರಾಟದ ರೀತಿಯಿಂದ ಪ್ರೇರಿತರಾಗಿ ವಾಸುದೇವ ಬಲವಂತ ಫಡಕೆ ಮುಂತಾದವರು ಕ್ರಾಂತಿಕಾರ್ಯದ ಹೋರಾಟವನ್ನು ನಡೆಸಿದ್ದರು. ಆಂಗ್ಲರು ತಮ್ಮ ನಿಜ ಸವಾಲನ್ನು ಗುರುತಿಸಿದ ಹೋರಾಟವಿದು. ಜೊತೆಗೆ ಆಂಗ್ಲರು ಗಂಭೀರವಾಗಿ ಗುರುತಿಸಬಲ್ಲ ರೀತಿಯ ಹೋರಾಟವನ್ನು ಕಾಂಗ್ರೆಸ್ ಮಾಡಲು ಸಿದ್ಧವಿಲ್ಲವೇನೋ ಎಂಬಂತೆ ಮುನ್ನಡೆದಿತ್ತು. ಅಂಥ ಸಂದರ್ಭದಲ್ಲಿ ಕಾಂಗ್ರೆಸ್ಸಿನಲ್ಲಿ ತಿಲಕರ ಪ್ರವೇಶವಾಯಿತು. ಅವರು ಪೂರ್ಣ ಸ್ವರಾಜ್ಯದ ಕಲ್ಪನೆಯನ್ನು ಮುಂದಿರಿಸಿಕೊಂಡು ಹೋರಾಟವನ್ನು ಸಂಘಟಿಸಿದರು. ‘ಸ್ವರಾಜ್ಯ ನನ್ನ ಆಜನ್ಮಸಿದ್ಧ ಹಕ್ಕು’ ಎಂದು ಘೋಷಿಸಿ ಸ್ವರಾಜ್ಯದ ಕುರಿತು ಒಂದು ನಿಷ್ಕೃಷ್ಟವಾದ ಭಾಷ್ಯವನ್ನು ಕೊಟ್ಟರು. ಜೊತೆಗೆ ಕಾಂಗ್ರೆಸ್ಸಿನೊಳಗೆ ಆಂಗ್ಲರಿಗೆ ಸಂಕಟವಾಗದಂತೆ ಮಂದಶೈಲಿಯಲ್ಲಿ ಸಾಗುವ ಒಂದು ಗುಂಪೂ ಗೋಖಲೆಯವರ ನೇತೃತ್ವದಲ್ಲಿ ಕ್ರಿಯಾಶೀಲವಾಗಿ ಇದ್ದೇ ಇತ್ತು.
ಗಾಂಧಿ ಪ್ರಭಾವ
ಎರಡನೆಯ ಘಟ್ಟದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ನೇತೃತ್ವದ ದೃಷ್ಟಿಯಿಂದ ತಿಲಕರ ಬಳಿಕ ಪ್ರವೇಶವಾದವರು ಗಾಂಧಿ. ಗಾಂಧಿಯವರು ಮೂಡಿಬಂದುದು ತಿಲಕರ ಉತ್ತರಾಧಿಕಾರಿಯಾಗಿ, ಆದರವರದು ವೈಚಾರಿಕವಾಗಿ ಗೋಖಲೆಯವರ ಶಿಷ್ಯತ್ವ. ಹೀಗೆ ಅವರು ಒಬ್ಬರ ಅನುಯಾಯಿ, ಮತ್ತೊಬ್ಬರ ಉತ್ತರಾಧಿಕಾರಿ ಎಂಬಂತೆ ಸ್ವಾತಂತ್ರ್ಯಸಂಗ್ರಾಮದ ವೇದಿಕೆಯಲ್ಲಿ ಕಾಣಿಸಿಕೊಂಡರು. ಅವರಿಗೆ ಆ ಮೊದಲು ದಕ್ಷಿಣ ಆಫ್ರಿಕದಲ್ಲಿ ಆಂಗ್ಲರ ಅನ್ಯಾಯದ ವಿರುದ್ದ ಹೋರಾಟ ಮಾಡಿದ ಅನುಭವವಿತ್ತು. ಅದು ಶಾಂತಿಯಿಂದ ಕೂಡಿದ ನಿಃಶಸ್ತ್ರ ಹೋರಾಟವಾಗಿತ್ತು. ಅದನ್ನೇ ಇಲ್ಲಿಯೂ ಅನುಷ್ಠಾನಕ್ಕೆ ತರಲೆಳಸಿದರು. ಅಹಿಂಸೆಯಿಂದ ಕೂಡಿದ ಶಾಂತಿಯುತವಾದ ಆ ಹೋರಾಟಕ್ಕೆ ಅವರು ಕೊಟ್ಟ ಹೆಸರು ಸತ್ಯಾಗ್ರಹ.
ಸುಮಾರು ಮೂರು ದಶಕಗಳ ಕಾಲ ಅವರ ನೇತೃತ್ವದಲ್ಲಿ ನಡೆದ ಮೂರು ಮುಖ್ಯ ಹೋರಾಟಗಳಲ್ಲಿ ದೇಶಾದ್ಯಂತ ಜನ ಭಾರೀ ದೊಡ್ಡ ಪ್ರಮಾಣದಲ್ಲಿ ಪಾಲ್ಗೊಂಡಿದ್ದರು. ಪೊಲೀಸರೆಂದರೆ ಹೆದರುತ್ತಿದ್ದ ಮಂದಿ ಜೈಲು ಸೇರಲು ತುದಿಗಾಲಿನಲ್ಲಿ ನಿಲ್ಲುವಂತೆ ಮಾಡಿದ್ದು ಗಾಂಧಿಯವರ ಹೆಗ್ಗಳಿಕೆ. ಅವರಿಂದಾಗಿ ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೊಡ್ಡ ಪ್ರಮಾಣದಲ್ಲಿ ದೇಶಾದ್ಯಂತ ಜನಸಾಮಾನ್ಯರು ಪಾಲ್ಗೊಳ್ಳುವಂತಾಯಿತು. ಅಲ್ಲಿಯತನಕ ಸಾಮಾನ್ಯರ ಪಾತ್ರ ಗೌಣವೇ ಇತ್ತು. ಮುಖ್ಯವಾಗಿ ತರುಣರು ಅವರ ಕರೆಯಿಂದ ಆಕರ್ಷಿತರಾದರು. ಹಲವರು ಕಾಲೇಜು ಶಿಕ್ಷಣ ಬಿಟ್ಟು ಹೋರಾಟದಲ್ಲಿ ಪಾಲ್ಗೊಂಡರು. ಕೆಲವರು ಮನೆಮಠ ಬಿಟ್ಟು ಭಾಗವಹಿಸಿದರು. ಅನೇಕರು ತಮ್ಮ ವ್ಯಕ್ತಿಗತ ಬದುಕಿಗೆ ತಿಲಾಂಜಲಿ ಕೊಟ್ಟು ಧುಮುಕಿದರು. ಗಾಂಧಿಯವರು ಸಂಪೂರ್ಣ ದೇಶವನ್ನು ಪ್ರಭಾವಿಸಿದ ರೀತಿ ಅನನ್ಯ.
ಬೋಸರ ಪ್ರಭಾವಿ ಅಭಿಯಾನ
ಸ್ವಾತಂತ್ರ್ಯೋದ್ಯಮಕ್ಕೆ ಗಾಂಧಿ ಪ್ರವೇಶವಾದ ಸಂದರ್ಭದಲ್ಲಿ ಆ ಯಜ್ಞದಲ್ಲಿ ನೇತೃತ್ವ ಕೊಡಬಲ್ಲ ಬಗೆಯಲ್ಲಿ ತೊಡಗಿಕೊಂಡ ಇನ್ನೊಬ್ಬ ನಾಯಕ ಸುಭಾಷ್ ಚಂದ್ರ ಬೋಸ್. ಸ್ವರಾಜ್ಯಕ್ಕೆ ಸಂಬಂಧಿಸಿದಂತೆ ಅವರು ತಿಲಕರ ಧಾಟಿಯಲ್ಲಿ ಮತ್ತಷ್ಟು ತೀವ್ರವಾಗಿ ಆಲೋಚನೆಗಳನ್ನು ಹೊಂದಿದ್ದವರು. ಕಾಂಗ್ರೆಸ್ಸಿನೊಳಗೂ ಸಾಕಷ್ಟು ಪ್ರಭಾವವನ್ನೂ ಬೆಂಬಲವನ್ನೂ ಹೊಂದಿದ್ದವರು. ಅವರು ಕಾಂಗ್ರೆಸ್ ಅಧ್ಯಕ್ಷ ಗಾದಿಗೆ ನಿಂತಾಗ ಅದನ್ನು ವಿರೋಧಿಸಿ ಗಾಂಧಿ ತಮ್ಮ ಅಭ್ಯರ್ಥಿಯನ್ನು ನಿಲ್ಲಿಸಿದರು. ಚುನಾವಣೆಯಲ್ಲಿ ಬೋಸರೇ ಗೆದ್ದಾಗ ಗಾಂಧಿ ಪರೋಕ್ಷವಾಗಿ ತಮ್ಮ ಅಸಹಕಾರವನ್ನು ತೋರಿದರು. ಅವರ ಅಸಹಕಾರ ಎಷ್ಟು ತೀವ್ರವಾಗಿತ್ತೆಂದರೆ ಬೋಸರು ರಾಜೀನಾಮೆ ನೀಡಿ ಹೊರಹೋಗುವಷ್ಟು. ಅಹಿಂಸೆಯ ಪೂಜಾರಿಗೆ ಇಂಥ ಅಸಹನೆಯ ಕ್ರಮವನ್ನು ಕೈಗೊಳ್ಳಲು ಸಾಧ್ಯವಾದುದು ಒಂದು ವಿಸ್ಮಯವೇ ಹೌದು.
ಬೋಸರು ಕಾಂಗ್ರೆಸ್ಸಿನಿಂದಷ್ಟೆ ಹೊರಹೋದುದಲ್ಲ; ಮುಂದೆ, ಆಂಗ್ಲರ ವಿರುದ್ಧದ ತಮ್ಮ ಕಠೋರ ನಿಲವಿಗೆ ಬದ್ಧರಾಗಿ ದೇಶದಿಂದಲೇ ಹೊರಹೋಗಬೇಕಾಯಿತು. ವಿದೇಶದಲ್ಲಿದ್ದ ಭಾರತೀಯ ಸೈನಿಕರನ್ನು ಸಂಘಟಿಸಿ ಕೆಲವು ದೇಶಗಳ ಬೆಂಬಲವನ್ನೂ ಪಡೆದು ಆಂಗ್ಲರ ವಿರುದ್ಧ ಹೊರಗಿನಿಂದ ದಾಳಿಗೈದು ಹೋರಾಡುವಂಥ ಒಂದು ವಿನೂತನ ಸಂಗ್ರಾಮಕ್ರಮಕ್ಕೆ ಕೈಹಾಕಿದರು. ಆದರೆ ಇದರಲ್ಲಿ ಅಂತಿಮವಾಗಿ ಅವರಿಗೆ ಅಲ್ಪಯಶಸ್ಸನ್ನೇ ಗಳಿಸಲು ಸಾಧ್ಯವಾಯಿತು. ಇದು ಸ್ವಾತಂತ್ರ್ಯೋದ್ಯಮ ಎರಡನೆಯ ಘಟ್ಟದ ಒಂದು ರೋಚಕ ಕಥೆ.
ಸ್ವರಾಜ್ಯಮೂಲದ ಎರಡು ವಾದಗಳು
ಎರಡನೆಯ ಘಟ್ಟದಲ್ಲಿ ಸಂಗ್ರಾಮದ ದಾರಿಗೆ ಸಂಬಂಧಿಸಿದಂತೆ ಕಾಂಗ್ರೆಸ್ಸಿನ ನಿಲವುಗಳನ್ನು ವಿರೋಧಿಸಿ ಇನ್ನೊಂದೆಡೆ ಸಮಾಂತರವಾಗಿ ಕ್ರಾಂತಿಕಾರಿಗಳ ಕಾರ್ಯ ತೀವ್ರವಾಗಿ ನಡೆದೇ ಇತ್ತು. ಆಂಗ್ಲರಿಗದನ್ನು ಮಟ್ಟಹಾಕಲು ಅಸಾಧ್ಯವಾಗುವ ಬಗೆಯಲ್ಲಿ ತೀವ್ರವಾಗಿ ಸಾಗಿತ್ತು. ವಿದೇಶಗಳಲ್ಲಿಯೂ ತನ್ನ ಬೇರುಗಳನ್ನು ಹೊಂದಿದ್ದ ಅದು ಅಲ್ಲಲ್ಲಿ ಕೆಲವು ಕಾರ್ಯಾಚರಣೆಗಳನ್ನೂ ನಡೆಸಿತ್ತು.
ಕ್ರಾಂತಿಕಾರಿಗಳಿಗೆ ಪ್ರೇರಣೆಯಾಗಿ ಒದಗಿದ್ದು ಮೊದಲ ಘಟ್ಟದ ಸ್ವಾತಂತ್ರ್ಯಸಂಗ್ರಾಮ. ಅದೇ ಬಗೆಯಲ್ಲಿ ಬೋಸರ ಕಾರ್ಯದ ಪ್ರೇರಣೆಯಿಂದ ಇಲ್ಲಿಯ ಆಂಗ್ಲರ ಸೈನ್ಯದಲ್ಲಿದ್ದ ಭಾರತೀಯ ಸೈನಿಕರು ಜಾಗೃತರಾದರು. ಮತ್ತೊಮ್ಮೆ ಮೊದಲಘಟ್ಟದ ಶೈಲಿಯಲ್ಲಿ ಸೈನಿಕರು ತಯಾರಾಗುವ ಸಾಧ್ಯತೆಗಳು ದಟ್ಟವಾಗುತ್ತ ಹೋದವು. ಅದಕ್ಕೆ ಗಟ್ಟಿ ದೃಷ್ಟಾಂತವಾಗಿ ಲಭ್ಯವಾಗುವ ನೌಕಾ ಬಂಡಾಯವು ಪ್ರಸಿದ್ಧವಾದುದೇ ಆಗಿದೆ. ಇದೆಲ್ಲದರ ನಡುವೆ ಆಂಗ್ಲರು ದ್ವಿತೀಯ ಮಹಾಯುದ್ಧದಲ್ಲಿ ಜರ್ಜರಿತರಾಗಿದ್ದರು. ಗೆದ್ದೂ ಸೋತಂತಾಗಿದ್ದರು. ಭಾರತವನ್ನಷ್ಟೆ ಅಲ್ಲ, ಇನ್ನೂ ಕೆಲವು ವಸಾಹತುಗಳನ್ನು ಬಿಟ್ಟುಕೊಡಬೇಕಾದ ಅನಿವಾರ್ಯತೆಯಲ್ಲಿದ್ದರು. ಹೀಗೆ ಮಹಾಯುದ್ಧದಿಂದಾದ ಹಾನಿ, ಕ್ರಾಂತಿಕಾರಕವಾಗಿ ಜಾಗೃತವಾದ ಭಾರತೀಯ ಸೈನಿಕರ ರಾಷ್ಟ್ರಪ್ರೇಮ, ಸವಾಲಾಗಿ ನಿದ್ದೆಗೆಡಿಸುತ್ತಿದ್ದ ಕ್ರಾಂತಿಕಾರಿಗಳ ಕಾರ್ಯಗಳು – ಇವೆಲ್ಲವೂ ಸೇರಿ ಸ್ವರಾಜ್ಯಪ್ರಾಪ್ತಿಯಲ್ಲಿ ಕೆಲಸಮಾಡಿದವು ಎನ್ನುವುದು ಇತಿಹಾಸಕಾರರು ಮುಂದಿಡುವ ಒಂದು ರೀತಿಯ ಒಕ್ಕಣೆ. ಇದಕ್ಕವರು ಭಾರತಕ್ಕೆ ಸ್ವಾತಂತ್ರ್ಯವನ್ನು ಅನಿವಾರ್ಯವಾಗಿ ನೀಡಬೇಕಾದುದಕ್ಕೆ ಇಂಗ್ಲೆಂಡ್ ಸಂಸತ್ತಿನಲ್ಲಿ ಪ್ರಧಾನಿ ಆಟ್ಲಿ ಕೊಟ್ಟ ಕಾರಣಗಳ ದಾಖಲೆಗಳನ್ನು ತರ್ಕಬದ್ಧವಾಗಿ ಪ್ರಸ್ತುತಪಡಿಸುತ್ತಾರೆ. ಇನ್ನೊಂದೆಡೆ ಇನ್ನೊಂದು ಬಣದ ಇತಿಹಾಸಕಾರರು ಇವೆಲ್ಲವನ್ನು ಅಲ್ಲಗಳೆದು ಅಹಿಂಸಾ ಹೋರಾಟದಿಂದ ಮನಸೋತು ಆಂಗ್ಲರು ಸ್ವಾತಂತ್ರ್ಯವನ್ನು ಕೊಟ್ಟರು ಎಂದು ಭಾವಪ್ರಧಾನ ವಾದವನ್ನು ಮಂಡಿಸಿದ್ದಾರೆ.
ಹೀಗೆ ಎರಡೂ ರೀತಿಯ ವಾದಗಳೂ ಇಂದಿಗೂ ಬಲವಾಗಿ ಮಂಡಿತವಾಗುತ್ತಿವೆ. ಅಚ್ಚರಿಯೆಂದರೆ; ಇತಿಹಾಸಕಾರರ ಈ ಎರಡು ವಾದಗಳನ್ನು ಇಟ್ಟುಕೊಂಡು ಭಾವುಕರಾಗಿ ಮಾತಾಡುವ ಜನ ‘ಕ್ರಾಂತಿ’ಯಿಂದ ಸ್ವಾತಂತ್ರ್ಯಬಂತೆಂದು ತರ್ಕಶುದ್ಧವಾಗಿ ಹೇಳುತ್ತಾರೆ. ತರ್ಕಬದ್ಧವಾಗಿ ಮಾತಾಡುವ ಬುದ್ಧಿಜೀವಿ ವಲಯವು ಅದು ಅಹಿಂಸೆಯಿಂದ ಬಂತೆಂದು ಭಾವುಕರಾಗಿ ಹೇಳುತ್ತಾರೆ. ನಿಜಕ್ಕೂ ಇದು ಸೋಜಿಗ.
ಯುದ್ಧಾಂಗಣದಲ್ಲಿ ಪ್ರಯೋಗ
ಬುದ್ಧನು ಅಹಿಂಸೆಯನ್ನು ಕುರಿತು ಎಷ್ಟು ತೀವ್ರವಾಗಿ ಹೇಳಿದನೋ ಬಿಟ್ಟನೋ, ಅನಂತರದ ಜನ ಆತನ ಹೆಸರಿನಲ್ಲಿ ಅದನ್ನು ಒಂದು ತೀವ್ರತೆಗೆ ಕೊಂಡೊಯ್ದದ್ದಂತೂ ನಿಜ. ಮತ್ತು ಆ ತೀವ್ರತೆಯು ಮತೀಯ ನೆಲೆಯಲ್ಲಿ ಸಾಗಿತಷ್ಟೆ ಅಲ್ಲ, ರಾಜಕೀಯದ ಮೇಲೂ ಪ್ರಭಾವವನ್ನು ಬೀರಿತು. ಅದು ವೈರಿಯನ್ನೂ ಆತನನ್ನು ನಿರ್ವಹಿಸಬೇಕಾದ ಸೈನ್ಯವನ್ನೂ ನೋಡುವ ದೃಷ್ಟಿಯನ್ನೇ ಮಂದಗೊಳಿಸಿತು. ಅಶೋಕನದು ಆ ನಿಟ್ಟಿನಲ್ಲಿ ಒಂದು ಉದಾಹರಣೆ. ಆ ಸಂದರ್ಭದಲ್ಲಿ ಆತ ಮಾಡಿದ ನಿರ್ಣಯ ಸರಿಯೇ ಇದ್ದೀತು. ಏಕೆಂದರೆ ಆತ ಗೈದ ಯುದ್ಧ ಇಲ್ಲಿಯ ರಾಜರ ವಿರುದ್ಧವೇ. ಗೈಯಬೇಕಾಗಿಲ್ಲದ ಯುದ್ಧವದು. ಇಲ್ಲಿಯ ಸಂಸ್ಕೃತಿಗೆ ತೀರಾ ವ್ಯತಿರಿಕ್ತವಾಗಿರುವ ವಿರೋಧಿಗಳನ್ನು, ಇಲ್ಲಿಯದನ್ನು ನಷ್ಟಗೊಳಿಸಿ ತಮ್ಮದನ್ನು ಹೇರುವಲ್ಲಿ ಕ್ರೌರ್ಯ ತೋರುವ ವಿರೋಧಿಗಳನ್ನು ನೋಡಬೇಕಾದ ದೃಷ್ಟಿಗೂ ಇಲ್ಲಿಯದೇ ಸಂಸ್ಕೃಯನ್ನು ಉಸಿರಾಡುವ ರಾಜ್ಯ/ರಾಜರನ್ನು ನೋಡಬೇಕಾದ ದೃಷ್ಟಿಗೂ ಅಂತರವಿರಲೇಬೇಕಷ್ಟೆ. ಅಂತರವಿರಬೇಕಾಗಿದ್ದ ಈ ದೃಷ್ಟಿಯನ್ನು ಕೂಡಾ ಅಹಿಂಸೆಯು ಮಂದಗೊಳಿಸಿತೆನ್ನಬೇಕು. ಇಲ್ಲಿ ತತ್ತ್ವಜ್ಞಾನದ ತರ್ಕಗಳನ್ನಾಗಲಿ ವ್ಯಕ್ತಿಗತ ಅಧ್ಯಾತ್ಮಸಾಧನೆಯ ಗುಣಗಳನ್ನಾಗಲಿ ಅಪಾರ್ಥವಾಗಿ ತರಕೂಡದಷ್ಟೆ.
ವ್ಯಕ್ತಿಗತ ಸಾಧನೆಯಲ್ಲೇ ಅಹಿಂಸೆಯ ಪಾಲನೆಯನ್ನು ಮಾಡುವುದು ಕಷ್ಟಕರವಿದೆ. ಯಾರನ್ನೂ ಕೃತಿಯಿಂದ, ಮಾತಿನಿಂದ ನೋಯಿಸದಿರುವುದು ಸುಲಭವಾದೀತು. ಅನಾವಶ್ಯಕ ದ್ವೇಷಿಸುವ ಮಂದಿ ವ್ಯಕ್ತಿಗತವಾಗಿ ಕಾಡುತ್ತಿದ್ದಾಗ ಮನಸ್ಸಿನಿಂದಲೂ ಸಂಕಲ್ಪದಿಂದಲೂ ಅಹಿಂಸೆಯ ಸಾಧನೆ ಮಾಡುತ್ತ ಅದನ್ನು ತೀರಾ ಸೂಕ್ಷ್ಮತೆಗೊಯ್ಯುವುದು ದುಃಸಾಧ್ಯ. ಅಂಥಲ್ಲಿ ಯುದ್ಧದಂಥ ಸನ್ನಿವೇಶದಲ್ಲಿ ಅದನ್ನು ಜವಾಬ್ದಾರಿ ಸ್ಥಾನದಲ್ಲಿದ್ದವನು ಪ್ರಯೋಗದ ರೀತಿಯಲ್ಲಿ ಬಳಸುವುದು ತನ್ನನ್ನು ರಕ್ಷಿಸುವ ರಾಜನಾಗಿ ನಾಯಕನಾಗಿ ವಿಶ್ವಾಸದಿಂದ ಕಾಣುವವರಿಗೆ ಮಾಡುವ ದ್ರೋಹವಾಗಲಾರದೆ?
ನಮ್ಮೀ ನೆಲದ ಬಹುಪಾಲು ಭಾಗವು ಕೈಬಿಟ್ಟುಹೋದುದರ ಕಾರಣವನ್ನು ನಾವು ಈ ನೆಲೆಯಲ್ಲಿ ಕೂಡಾ ಅವಲೋಕಿಸಬೇಕಾಗಿದೆ.
ಅಸಾಧು ಯಶನಿರ್ಣಯ
ಸುದೀರ್ಘ ಕಾಲದ ಬಳಿಕ ಅಹಿಂಸೆಯನ್ನು ಮತ್ತೊಮ್ಮೆ ರಾಷ್ಟçಜೀವನದ ಮುಖ್ಯಸ್ರೋತವಾಗಿ ನಾವು ತಂದುಕೊಂಡದ್ದು ಸ್ವಾತಂತ್ರ್ಯಸಂಗ್ರಾಮದ ಎರಡನೆಯ ಘಟ್ಟದಲ್ಲಿ. ಆಗ ಅದನ್ನೊಂದು ಮತ್ತು ಅದೊಂದನ್ನೇ ಎಂಬಂತೆ ಸಂಗ್ರಾಮದ ಶಸ್ತçವಾಗಿಸಿದೆವು. ನಿಃಶಸ್ತ್ರವೇ ಶಸ್ತ್ರವಾದ ವಿಪರ್ಯಾಸ! ಅಲ್ಲಿಯವರೆಗೆ ವೈರಿಯನ್ನು ಈ ರೀತಿ ಎದುರಿಸಿದ ಉಲ್ಲೇಖವಿಲ್ಲ. ನಾವದನ್ನು ಪ್ರಯೋಗಿಸಿದ್ದು ಅತ್ಯಾಧುನಿಕ ಶಸ್ತ್ರಾಸ್ತ್ರಗಳನ್ನು ಬಳಸಿ ನಮ್ಮ ಮೇಲೆ ಕ್ರೌರ್ಯ ಮೆರೆದ ಆಂಗ್ಲರ ವಿರುದ್ಧ. ಮತ್ತದು ಪ್ರಯೋಗ ಮಾತ್ರ. ಮತ್ತದೇ ಮೊದಲ ಪ್ರಯೋಗ ಕೂಡಾ. ಇವು ಒಂದೊಂದೂ ಬಲು ರಣಭೀಕರ ತಪ್ಪುಗಳಾಗಿ ಗೋಚರಿಸುತ್ತವೆ.
ಇದೀಗ ಈ ಪ್ರಯೋಗದ ಯಶಸ್ಸಿನ ಕುರಿತು ಇದಮಿತ್ಥಮ್ ಎಂದು ಖಚಿತವಾಗಿ ಹೇಳುವಂತಿಲ್ಲ. ಏಕೆಂದರೆ ಅದಕ್ಕೆ ಸಮಾಂತರವಾಗಿ ತದ್ವಿರುದ್ಧ ರೀತಿಯ ಕ್ರಾಂತಿಕಾರ್ಯದ ಪ್ರಯಾಸವೂ ನಡೆದೇ ಇತ್ತು. ಆಂಗ್ಲರು ಬಿಟ್ಟುಹೋಗಬೇಕಾದ ರೀತಿಯ ಸನ್ನಿವೇಶವನ್ನುಂಟುಮಾಡುವ ಮಹಾಯುದ್ಧವೂ ನಡೆದಿತ್ತು. ಆಂಗ್ಲರನ್ನು ಇಲ್ಲಿಂದಗಲುವಂತೆ ಮಾಡುವಲ್ಲಿ ಅಹಿಂಸೆಯ ಹೊರತಾದ ಉಳಿದೆರಡು ಸಂಗತಿಗಳ ಪಾತ್ರವು ಯಾವುದೇ ಕಾರಣಕ್ಕೂ ಅಲ್ಲಗಳೆಯಲಾಗದ ರೀತಿಯಲ್ಲಿ ಬಲವಾಗಿಯೇ ಇದೆ. ಒಂದು ರೋಗಕ್ಕೆ ಆಲೋಪತಿ, ಹೋಮಿಯೋಪತಿ ಮತ್ತು ಆಯುರ್ವೇದ – ಹೀಗೆ ಮೂರು ಬಗೆಯ ಔಷಧಿಗಳನ್ನೂ
ತೆಗೆದುಕೊಂಡು ರೋಗ ಗುಣವಾದುದು ಆಲೋಪತಿಯಿಂದಲೇ ಎಂದು ಖಚಿತ ನಿಷ್ಕರ್ಷೆಗೆ ಹೇಗೆ ಬರಲಾಗದೋ ಹಾಗೆಯೇ ಇಲ್ಲೀಗ ಅಹಿಂಸೆಯ ಪ್ರಯೋಗದ ಯಶಸ್ಸಿನ ಕುರಿತು ನಿಷ್ಕರ್ಷೆ ತಾಳುವುದು ಸಾಧುವಾಗಲಾರದು.
ಅಂತಃಸಾಕ್ಷಿಯ ಒರೆಗಲ್ಲು
ದೇಶವನ್ನು ಆಸೇತುವಾಗಿ ಪ್ರಭಾವಿಸಿದ ಗಾಂಧಿಯವರ ವ್ಯಕ್ತಿತ್ವದಲ್ಲಿ ತಾನು ಉಳಿದವರಿಂದ ಪ್ರಭಾವಿತವಾಗುವ ಸುಂದರ ದ್ರವ್ಯವಿತ್ತು. ಬಾಲ್ಯದಲ್ಲಿ ಅವರು ನಾಟಕ ನೋಡಿ ಸತ್ಯ ಹರಿಶ್ಚಂದ್ರನಿಂದ ಪ್ರಭಾವಿತರಾದರು. ಅಹಿಂಸೆಯ ಜೊತೆಗೆ ಮುಂದೆ ಅವರು ಅಳವಡಿಸಿಕೊಂಡ ಸತ್ಯ, ಅಸ್ತೇಯ, ಬ್ರಹ್ಮಚರ್ಯ ಮತ್ತು ಅಪರಿಗ್ರಹಗಳು ಅಷ್ಟಾಂಗಯೋಗದ ಮೊದಲಂಗವಾದ ಯಮದ ವಿವಿಧ ವಿಧಗಳೇ ಆಗಿವೆ. ಅವರು ನಂಬಿದ ಸತ್ಯವನ್ನು ತರ್ಕಬದ್ಧವಾಗಿ ಅಲ್ಲ, ತಮ್ಮ ಅಂತಃಸಾಕ್ಷಿಗೆ ಬದ್ಧವಾಗಿ ಪಾಲಿಸುತ್ತಿದ್ದರು. ಜಾನ್ ರಸ್ಕಿನ್, ಲಿಯೋ ಟಾಲ್ಸ್ಟಾಯ್ ಮುಂತಾದವರೂ ಅವರ ಮೇಲೆ ಪ್ರಭಾವಬೀರಿದರು. ಕಾಲಕಾಲಕ್ಕೆ ತಮ್ಮ ಮೇಲೆ ಆದ ಪ್ರಭಾವಕ್ಕೆ ತಕ್ಕಂತೆ ತಮ್ಮ ನಿಲುಮೆ-ವಿಚಾರಗಳನ್ನು ಪರಿಷ್ಕರಿಸುತ್ತ ಹೋದರು. ಈ ಪರಿಷ್ಕಾರಗಳೆಲ್ಲವೂ ತಮ್ಮ ಅಂತಃಸಾಕ್ಷಿಗೆ ತಕ್ಕಂತೆ ರೂಪುಗೊಳ್ಳುವಂತೆ ನೋಡಿಕೊಂಡರು. ಹಾಗಾಗಿ ಪ್ರಾಮಾಣಿಕತೆಯ ನೆಲೆಯಲ್ಲಿ ಇದರಲ್ಲೇನೂ ಯಾವುದೇ ದೋಷವನ್ನು ಕಾಣಬೇಕಿಲ್ಲ.
ತಾಳಬೇಕಾದ ನಿಲುಮೆಗಳಿಗೆ ಅಂತಃಸಾಕ್ಷಿ ಎನ್ನುವುದು ಒಂದು ಒರೆಗಲ್ಲು ಆದೀತು, ಸರಿ. ಆದರೆ ಅಂತಃಸಾಕ್ಷಿಗೆ ಒರೆಗಲ್ಲು ಬೇಡವೆ? ಈ ಪ್ರಶ್ನೆಗೆ ಉತ್ತರಿಸುವುದು ಕಷ್ಟ, ಆದರೆ ಉತ್ತರ ಕಂಡುಕೊಳ್ಳಲೇಬೇಕಾದ ಪ್ರಶ್ನೆಯಿದು. ಏಕೆಂದರೆ ಮನಸ್ಸಿಗೆ ಬಂದ ಭಾವನೆಗಳೆಲ್ಲವೂ ಅಂತಃಸಾಕ್ಷಿಯಾಗುವ ಅಪಾಯವಿರುತ್ತದೆ. ಬಹುಶಃ ನಮಗೆ ಪರಂಪರೆಯಲ್ಲಿ ಸಿಗುವ ಸೂಚನೆಯಂತೆ ಆಪ್ತವಾಕ್ಯವು ಅದಕ್ಕೆ ಉತ್ತರವಾಗಬಲ್ಲದು. ಇದಕ್ಕೆ ಪೂರಕವಾಗಿ ಹಿರಿಯರು ನಡೆದಂತೆ ಕಿರಿಯರು ಅನುಸರಿಸುವ ಒಂದು ಪರಂಪರೆಯೂ ಇದೆಯಷ್ಟೆ. ಅಂತಃಸಾಕ್ಷಿಯ ಗೊಂದಲವುಂಟಾದಾಗ ಇದರ ಮೊರೆಹೋಗಬೇಕಾದೀತು. ಇಲ್ಲಿ ಹಿರಿಯರು ಎಂದರೆ, ಋಜುಮಾರ್ಗದಲ್ಲಿ ಯಶಃಪ್ರದವಾಗಿ ಸಾಗಿ ಸರ್ವಹಿತದ ಧ್ಯೇಯವನ್ನು ಸಾಕಾರಗೊಳಿಸಿಕೊಂಡವರೆನ್ನಬಹುದು. ಗಾಂಧಿ ಅಂಥ ಒಂದು ಸಾಧ್ಯತೆಯನ್ನು ಅಪ್ಪಿಕೊಂಡಂತೆ ಕಾಣುವುದಿಲ್ಲ, ಯಾಕೋ!
ಸಮಗ್ರವಲ್ಲದ ಸ್ವೀಕಾರ
ಅವರ ಆದರ್ಶನಾಗಿ ಸದಾ ರಾಮನಿದ್ದ. ಅವರು ನಿತ್ಯಪಠಣ ಮಾಡುತ್ತ ಮನನ ಮಾಡಿಕೊಳ್ಳುತ್ತಿದ್ದ ಗೀತೆಯ ಕೃಷ್ಣನೂ ಇದ್ದ. ಮತ್ತಿವರಿಬ್ಬರೂ ಮೇಲ್ಪಂಕ್ತಿಯ ಹಾಗೂ ಪ್ರೇರಣೆಯ ಪಾತ್ರಗಳಾಗಿ ಸಂಪೂರ್ಣ ಭಾರತೀಯ ಮಾನಸವನ್ನು ಆವರಿಸಿದ್ದಾರೆ. ಎಲ್ಲರ ಅಂತಃಸಾಕ್ಷಿಯಾಗಿ ಇರಬಲ್ಲ ಸಾಧ್ಯತೆಗಳನ್ನು ಇವರಲ್ಲಷ್ಟೆ ಕಾಣಬಹುದು. ತಪ್ಪಿದಾಗ ಸರಿದಾರಿ ತೋರಬಲ್ಲ ಶ್ರದ್ಧೆಯ ಗುರುವಾಗಿಯೂ ಆಪ್ತಸಖನಾಗಿಯೂ ಅತಿಹತ್ತಿರದ ಸಂಬಂಧಿಯಾಗಿಯೂ ತಾನೇ ಎಂಬ ಭಾವದ ಅಂತಃಕರಣವಾಗಿಯೂ – ಯಾವುದು ಬೇಕೋ ಅದಾಗಿ – ಈ ಪಾತ್ರಗಳನ್ನು ಇಟ್ಟುಕೊಳ್ಳಲು ಯಾವುದೇ ಅಡ್ಡಿಯಿರಲಾರದು. ಗಾಂಧಿ ರಾಮನ ಭಕ್ತರಾಗಿದ್ದರು. ಅವರು ಕೊನೆಗೆ ಹೇಳಿದರೆನ್ನಲಾದ ಮಾತು ‘ಹೇ ರಾಮ್’ ಎನ್ನಲಾಗಿದೆ. ಅದು ಅವರು ಪದೇಪದೇ ಉಚ್ಚರಿಸುತ್ತಿದ್ದ ಶಬ್ದವೂ ಆಗಿತ್ತಷ್ಟೆ. ಆದರೆ ತಮ್ಮ ಕಣ್ಣಮುಂದೆಯೇ ದುರ್ಬಲರ ಮೇಲೆ ಕ್ರೂರಿಗಳು ಅನ್ಯಾಯ ಮೆರೆದಾಗ ಕ್ರೂರಿ ರಾವಣನನ್ನು ಸದೆಬಡಿದ ರಾಮ ನೆನಪಾಗದೆ ಹೋದನೆ?
ಪಟ್ಟಾಭಿರಾಮನನ್ನು ನೆನಪಿಸಿಕೊಳ್ಳುವಾಗ ಪಟ್ಟಾಭಿಷೇಕಕ್ಕಿಂತ ಮುನ್ನ ದುಷ್ಟಸಂಹಾರಗೈದ ರಾಮನನ್ನೂ ನೆನಪಿಸಿಕೊಳ್ಳಬೇಕು. ಇಲ್ಲದೆಹೋದಲ್ಲಿ ಪಟ್ಟಾಭಿರಾಮನನ್ನು ನೆನಪಿಸುವ ಕ್ರಿಯೆ ಪೂರ್ಣಗೊಳ್ಳದು.
ಗಾಂಧಿಗೆ ಗುಹನನ್ನು ಆಲಿಂಗಿಸುವ ರಾಮ ಇಷ್ಟ; ಶಬರಿಗೆ ದರ್ಶನ ನೀಡಿದ ರಾಮ ಇಷ್ಟ. ಸುಗ್ರೀವಸಖ ರಾಮ ಇಷ್ಟ. ಶರಣಾಗತನಾಗಿ ಬಂದಲ್ಲಿ ರಾವಣನನ್ನೂ ಸ್ವೀಕರಿಸುವೆ ಎನ್ನುವ ರಾಮನಂತೂ ತುಂಬಾ ಇಷ್ಟ. ಹಾಗೆ ಒಲ್ಲದ ಸೀತಾಪಹಾರಕ ರಾವಣನನ್ನು ಸಂಹರಿಸಿದ ರಾಮನನ್ನು ಬೇಡವೆಂದರೆ?! ಶಿಷ್ಟಪರಿಪಾಲನೆ ಮಾಡಿದಾಗ ಇಷ್ಟವಾಗುವವನನ್ನು ದುಷ್ಟದಮನಗೈದಾಗ ಯುದ್ಧಕೋರನಂತೆ ಹಿಂಸಕನಂತೆ ಕಾಣುವುದೆಂದರೆ ಏನರ್ಥ? ನನ್ನ ರಾಮ ದಶರಥಪುತ್ರನಾದ ರಾಮನಲ್ಲ ಎಂದರೆ ಏನರ್ಥ?
ಗಾಂಧಿ ನಿತ್ಯವೂ ಗೀತೆಯನ್ನು ಪಠಿಸುತ್ತಿದ್ದರು. ಗೀತೆಯಲ್ಲಿ ಕೃಷ್ಣ ಹೇಳುವ ಸ್ಥಿತಪ್ರಜ್ಞನ ಲಕ್ಷಣ, ಭಕ್ತನ ಲಕ್ಷಣ ಇತ್ಯಾದಿ ವಿಷಯಗಳನ್ನು ತಮ್ಮಲ್ಲಿ ಅಳವಡಿಸಿಕೊಳ್ಳುವ ಸಾಧನೆಯ ನೆಲೆಯಲ್ಲಿ ಅವಲೋಕಿಸುತ್ತಿದ್ದರು. ಆದರೆ ಗೀತೆಯನ್ನು ಹೇಳಿದ ಸಂದರ್ಭವನ್ನು ನಿರಾಕರಿಸಿ, ತಮ್ಮೊಳಗೇ ಘಟಿಸುವ ಯುದ್ಧವೆಂದು ಅದನ್ನು ಬಣ್ಣಿಸಿ ತಮ್ಮೊಳಗಿನ ವೈರಿಯ ವಿರುದ್ಧದ ಹೋರಾಟವಾಗಿ ‘ಯುದ್ಧ ಮಾಡು’ ಎಂಬ ಕೃಷ್ಣನ ಆಜ್ಞೆಯನ್ನು ಕಾಣಬೇಕೆಂದು ವ್ಯಾಖ್ಯಾನಿಸುತ್ತಿದ್ದರು. ಇದನ್ನು ಈ ದೃಷ್ಟಿಯಿಂದಲೂ ನೋಡಲು ಸಾಧ್ಯವೇನೊ. ಆದರೆ ಅದೊಂದೇ ಸಾಧ್ಯತೆಯಿದೆಯೆನ್ನುವುದು ಸೂಚಿಸುವುದು ಅಸಹನೆಯನ್ನೇ ಅಲ್ಲವೆ?
ಕ್ರೌರ್ಯದ ನಿರ್ವಹಣೆ
ಹಿಂಸೆ ಎನ್ನುವುದು ಮೂಲಭೂತವಾದ ಜೀವಭಾವ. ಹಾಗಾಗಿ ಅಹಿಂಸೆಗೆ ಸ್ವತಂತ್ರವಾದ ಅಸ್ತಿತ್ವವಿಲ್ಲ. ಪದವೂ ಇಲ್ಲ! ಹಿಂಸೆಯನ್ನು ನಿರಾಕರಿಸಿಯೇ ಅಹಿಂಸೆಯನ್ನು ಸಾಧ್ಯವಾಗಿಸಿಕೊಳ್ಳಬೇಕು. ಅದೇ ರೀತಿ ಅಹಿಂಸೆ ಎಂಬ ಪದವನ್ನೂ ಕೂಡಾ. ತತ್ತ್ವಜ್ಞಾನವಾಗಿಯೂ ಅದಕ್ಕೊಂದು ಸ್ವತಂತ್ರ ಆಸ್ತಿತ್ವವಿಲ್ಲ. ಸಾಧನಾಮಾರ್ಗದಲ್ಲಿಯೂ ಅದು ಹತ್ತರ ಜತೆಗೆ ಒಂದು ಅಷ್ಟೆ. ಅದನ್ನೇ ಧರ್ಮವೆಂದೂ ಸ್ವೀಕರಿಸಲಾಗದು; ಧರ್ಮದ ಒಂದು ಲಕ್ಷಣವಾಗಿ ಸ್ವೀಕರಿಸಬಹುದಷ್ಟೆ. ಆಗ ಅಹಿಂಸೆಯು ಮಾತ್ರವಲ್ಲ, ಹಿಂಸೆಯೂ ಕೂಡಾ ಸಂದರ್ಭಕ್ಕೆ ತಕ್ಕಂತೆ ಧರ್ಮದ ಲಕ್ಷಣವಾಗಲು ಸಾಧ್ಯ.
ಸೃಷ್ಟಿಯಲ್ಲೇ ಹಿಂಸೆ ಇದೆ. ಇತರ ಪ್ರಾಣಿಗಳನ್ನು ತಿಂದೇ ಜೀವಿಸುವ ಪ್ರಾಣಿಗಳನ್ನೆಲ್ಲ ಇಲ್ಲವಾಗಿಸಲಾದೀತೆ? ಹಾಗೆ ಇಲ್ಲವಾಗಿಸಹೊರಟರೆ ಸೃಷ್ಟಿಯನ್ನೇ ಅಲ್ಲಗಳೆದಂತೆ ಅಲ್ಲವೇ!
ಇಲ್ಲಿ ಗಮನಿಸತಕ್ಕ ವಿಷಯವೊಂದಿದೆ. ಸೃಷ್ಟಿಯಲ್ಲಿ ಹಿಂಸೆಯಿದೆ ಸರಿ, ಆದರೆ ಕ್ರೌರ್ಯ ಇಲ್ಲ. ಸೃಷ್ಟಿಯದೇ ಅಂಗವಾಗಿರುವ ಮನುಷ್ಯನಲ್ಲಿ ಅದು ಇದೆ. ಇದೇನಚ್ಚರಿ! ಇನ್ನೊಂದನ್ನು, ಇನ್ನೊಬ್ಬನನ್ನು ಬದುಕಗೊಡಲಾರೆ ಎಂಬ ವೈರಸಾಧನೆ ಕಾಣುವುದು ಮನುಷ್ಯನಲ್ಲಿ ಮಾತ್ರ. ಇದಕ್ಕೆ ಪ್ರಕೃತಿಯೂ ಬಲಿಯಾಗುತ್ತಿದೆ, ಸಮಾಜ-ದೇಶಗಳೂ ಬಲಿಯಾಗುತ್ತಿವೆ, ಸಂಸ್ಕೃತಿ ಸಭ್ಯತೆಗಳೂ ಬಲಿಯಾಗುತ್ತಿವೆ. ಇಂಥ ಮನುಷ್ಯಕ್ರೌರ್ಯವನ್ನು ನಿಜಕ್ಕೂ ಸಶಕ್ತವಾಗಿ ನಿರ್ವಹಿಸಬೇಕಾಗಿದೆ. ಈ ನಿರ್ವಹಣೆಯಲ್ಲಿ ಹಿಂಸೆಯೂ ಘಟಿಸಬಹುದು. ಅಂಥ ನಿರ್ವಹಣೆಯಲ್ಲಿ ಹತ್ತುಪಟ್ಟು ಕ್ರೌರ್ಯವನ್ನು ತಡೆಗಟ್ಟಲು ಒಂದು ಪಟ್ಟು ಹಿಂಸೆಯು ಸಹನೀಯ. ಆದರೆ ಈ ಒಂದುಪಟ್ಟು ಹಿಂಸೆಯನ್ನು ಕ್ರೌರ್ಯವೆಂದು ಬಿಂಬಿಸಿ ಹತ್ತುಪಟ್ಟು ಕ್ರೌರ್ಯವನ್ನು ಸಹಿಸಬೇಕಾದ ಹಿಂಸೆಯೆಂದು ಉಪದೇಶಿಸುವುದು ಅಹಿಂಸಾವಾದಕ್ಕಿಂತ ವಿಪರೀತವಾದ ಕ್ರೌರ್ಯವಾದವೇ ಆದೀತು.
ನಮ್ಮ ಮಣ್ಣಿಗೆ ಕ್ರೌರ್ಯಕ್ಕೆ ಈಡಾಗಿ ಸಂಸ್ಕೃತಿ, ಸಮಾಜ, ದೇಶ ಇತ್ಯಾದಿಗಳನ್ನು ನಷ್ಟಪಡಿಸಿಕೊಂಡ ಅನುಭವವೂ ಇದೆ. ಕ್ರೌರ್ಯವನ್ನು ಅದರದೇ ಭಾಷೆಯಲ್ಲಿ ನಿರ್ವಹಿಸಿದ ಅನುಭವವೂ ಇದೆ. ಅದನ್ನು ಉದಾರವಾಗಿ ಕಂಡುಂಡ ಅನುಭವವೂ ಇದೆ. ನಮ್ಮ ಒಟ್ಟಾರೆ ಸ್ವಾತಂತ್ರ್ಯಸಂಗ್ರಾಮವನ್ನು ಈ ಎಲ್ಲ ಅನುಭವಗಳ ಒಂದು ಪಾಕವೆನ್ನಬಹುದು.