ಯಾವ ದೇಶ ತನ್ನನ್ನು ಮತ್ತು ತನ್ನ ನಿಜವಾದ ಅಸ್ಮಿತೆಯನ್ನು ಮರೆಯುತ್ತದೆಯೋ ಅದು ಗುಲಾಮಗಿರಿಗೆ ಒಳಗಾಗುತ್ತದೆ. ಅದು ಪ್ರತ್ಯಕ್ಷ ವಿದೇಶೀ ಜನರ ಆಡಳಿತ ಅಥವಾ ರಾಜಕೀಯ ಪರಾಧೀನತೆ ಮಾತ್ರವಲ್ಲ; ಸಾಮಾಜಿಕ, ಸಾಂಸ್ಕೃತಿಕ ಮತ್ತು ಆರ್ಥಿಕ ಸ್ವರೂಪದಲ್ಲಿಯೂ ಗುಲಾಮಗಿರಿ ಆವರಿಸಬಹುದು. ಇದನ್ನು ಕುರಿತು ಸದಾ ಎಚ್ಚರಿಸುವ, ನಮ್ಮತನದ ಅರಿವು ಮೂಡಿಸುವ ಪ್ರಯತ್ನಗಳನ್ನು ಯಾವ ಸಮಾಜ, ದೇಶದಲ್ಲಿ ಸರ್ವದಾ ನಡೆಯುತ್ತಿರುತ್ತದೆಯೋ ಆ ದೇಶ ತನ್ನ ಸ್ವಾತಂತ್ರ್ಯವನ್ನು ಎಂದಿಗೂ ಕಳೆದುಕೊಳ್ಳದು. ಹಿಂದೆ ಋಷಿ-ಮುನಿ-ಸಂತ-ಸಂನ್ಯಾಸಿಗಳು, ಗುರುಕುಲಗಳು ಈ ಜಾಗರಣಕಾರ್ಯವನ್ನು ಯಶಸ್ವಿಯಾಗಿ ಮಾಡುತ್ತಿದ್ದವು. ಅವು ಲುಪ್ತವಾದಂತೆ ಭಾರತದ ಭವಿತವ್ಯದ ಪುನಃಸ್ಥಾಪನೆಗೆ ಹೊಸ ವ್ಯವಸ್ಥೆ, ವಿಧಾನ, ಸಂಘಟನೆ ಆವಶ್ಯಕವಾಯಿತು.
ಭಾರತ ಶಾಂತಿಯನ್ನು ಸದಾ ಬಯಸುತ್ತದೆ. ನಾವೊಂದು ‘ಶಾಂತಿಪ್ರಿಯ’ ರಾಷ್ಟ್ರ. ಶಾಂತಿಯನ್ನು ಖಾಯಂಗೊಳಿಸಲು ಯಾವುದೇ ತ್ಯಾಗಕ್ಕೂ ಭಾರತೀಯ ಸಿದ್ಧ ಎಂಬ ನಂಬಿಕೆಯನ್ನು ನಮ್ಮಲ್ಲಿ ಬೆಳೆಸಲಾಗಿದೆ. ಅಹಿಂಸೆಯ ವ್ರತದ ವಾರಸುದಾರರು ನಾವು ಮತ್ತು ಅದೇ ನಮ್ಮ ಪ್ರತ್ಯೇಕತೆಯ ಚಿಹ್ನೆ ಎಂಬುದಾಗಿ ನಾವು ಭಾವಿಸಿದ್ದೇವೆ. ಇದಕ್ಕೆ ಕಾರಣ ನಮ್ಮ ಬಗ್ಗೆ ನಮ್ಮಲ್ಲಿ ತುಂಬಿಸಲಾದ ವಿಚಾರ.
ನಮ್ಮದೇ ಕಥೆಯನ್ನು ನಾವು ಕಾಲ್ಪನಿಕ ಮತ್ತು ಭ್ರಾಮಕ ವಿಚಾರಗಳ ಬೆಳಕಿನಲ್ಲಿ ಓದುತ್ತಿದ್ದೇವೆ. ನಮ್ಮ ಇತಿಹಾಸ ಪದ್ಧತಿಯಿಂದ ಹೊರತಾದ ಇತಿಹಾಸವನ್ನು ಯೂರೋಪಿನ ಇತಿಹಾಸಕಾರರು ಬರೆದಿಟ್ಟರು. ನಮ್ಮ ಬಗ್ಗೆ, ನಮ್ಮ ಗತವನ್ನು ಕುರಿತು ಪೂರ್ವಜರು ತಲೆತಲಾಂತರಗಳಿಂದ ದಾಟಿಸುತ್ತಿದ್ದ ವಿಚಾರಗಳನ್ನು ಸುಳ್ಳೆಂದು ತಳ್ಳಿಹಾಕಿ, ನಮ್ಮನ್ನು ಗುಲಾಮರನ್ನಾಗಿಸಿಕೊಳ್ಳಲು ವಿದೇಶೀಯರು ಹವಣಿಸಿದವರು, ಆಳುತ್ತಿದ್ದ ಅವರು ಬರೆದಿಟ್ಟದ್ದನ್ನು ಓದಿದವರು ವಿದ್ಯಾವಂತರೆನಿಸಿಕೊಂಡು ಉಳಿದ ಸಮಾಜಕ್ಕೆ ಅದನ್ನೆ ಮಾರ್ಗದರ್ಶನ ಮಾಡುವ ಹಂತಕ್ಕೆ ಬಂದುಬಿಟ್ಟರು.
ಬ್ರಿಟಿಷ್ ಚರಿತ್ರಕಾರರು ನಮ್ಮನ್ನು ಪತಿತರೆಂದು ಬರೆಯಲೇಬೇಕಾಗಿತ್ತು, ನಮ್ಮನ್ನುದ್ಧರಿಸಲೆಂದೇ ಬಿಳಿಯರು ಬಂದವರೆಂಬ ಭಾವನೆಯನ್ನು ನಮ್ಮಲ್ಲಿ ಮೂಡಿಸಬೇಕಾಗಿತ್ತು. ಆಗಲೇ ಅಲ್ಲವೆ ಭಾರತದ ಮೇಲಿನ ದಾಳಿಯನ್ನು ಅವರು ಸಮರ್ಥಿಸಿಕೊಳ್ಳಲು ಸಾಧ್ಯ? ಈ ಉದ್ದೇಶದಿಂದ ನಮ್ಮ ಬಗ್ಗೆ ಅವರು ಪ್ರಚುರಗೊಳಿಸಿದ್ದನ್ನು ಅವರದೇ ಭಾಷೆಯಲ್ಲಿ ನಾವು ಓದಿಕೊಂಡು ಪ್ರಾಜ್ಞರೆನಿಸಿಕೊಂಡೆವು. ಕೆಲವರು ಭಾರತೀಯರು ಅದರಲ್ಲೂ ಸಂವೇದನಶೀಲತೆಯನ್ನು ಉಳಿಸಿಕೊಂಡು ಕಲಿತವರು, ನಾವು ಈ ದೇಶವನ್ನು ಬಿಳಿಯರ ಬೆಳಕಿನಲ್ಲಿ ಪುನರ್ನಿರ್ಮಿಸಬೇಕು ಎಂದುಕೊಂಡರು. ಅವರಲ್ಲಿ ನಿಜವಾಗಿಯೂ ಸಮಾಜದ ಬಗ್ಗೆ ಕರುಣೆಯಿತ್ತು, ಭಾರತದ ಬಗೆಗೆ ಕಾಳಜಿಯಿತ್ತು, ಮನಸ್ಸಿನಲ್ಲಿ ನಿಃಸ್ವಾರ್ಥವೂ ಇತ್ತು. ಆದರೆ ಅವರ ಲಕ್ಷ್ಯಗಳು ಭಾರತೀಯವಾಗಿರಲಿಲ್ಲ. ಅವರು ತಿಳಿದೋ ತಿಳಿಯದೆಯೋ ಬಿಳಿಯರು ಒದಗಿಸಿದ ಉಪಕರಣಗಳನ್ನೇ ನಮ್ಮ ಉದ್ಧಾರದ ಮಾರ್ಗವನ್ನು ನಿರ್ಮಿಸಲು ಬಳಸಿಕೊಂಡರು.
ವಸಾಹತುಪೂರ್ವದ ಸಮಾಜಸುಧಾರಕರ ಪಾಲಿಗೆ ಈ ನಾಡು ಕತ್ತಲಿನ ಮನೆಯಾಗಿಯೇ ಕಾಣುತ್ತಿತ್ತು. ಬೆಳಕೆಂಬುದು ಮತ್ತೆಲ್ಲಿಂದಲೋ ಇಲ್ಲಿಗೆ ಬರಬೇಕೆಂದು ಅವರು ಬಯಸಿದ್ದರು. ನಮ್ಮದು ಕ್ಷಾತ್ರ ಹೋರಾಟದ ಹಾದಿಯಲ್ಲ ಎಂದು ಭಾವಿಸಿದವರಲ್ಲಿ ಗಾಂಧಿ ಮೊದಲಿನವರೇನಲ್ಲ. ಗಾಂಧಿಗೂ ಗುರುಗಳಿದ್ದರಲ್ಲವೆ! ಆಗಿನ ಕಾಲದ ಬಹುತೇಕ ಇಂಗ್ಲಿಷ್ ಶಿಕ್ಷಿತರ ಮನೋಭಾವ ಇದೇ ಆಗಿತ್ತು. ತಿಲಕ್, ಸುಭಾಷರಂತಹ ಕ್ಷಾತ್ರಜೀವಿಗಳು ಮೂಲೆಗುಂಪಾಗುವ ವ್ಯವಸ್ಥೆಯು ಆಗಿನ ರಾಜಕೀಯ ವಾತಾವರಣದಲ್ಲೇ ಬೆಳೆದುಬಿಟ್ಟಿತ್ತು.
ಅಹಿಂಸೆಯ ಸಮ್ಮೋಹಕ ಮಾತುಗಳು ಅತಿಶೀಘ್ರವಾಗಿ ಪ್ರಭಾವಹೀನವಾಯಿತೆಂಬುದಕ್ಕೆ ವಿಭಜನೆಯ ಸಮಯದ ಘಟನೆಗಳೇ ಸಾಕ್ಷಿ. ಗೋವೆಯ ವಿಮೋಚನೆಯಾಗಲಿ, ಕಾಶ್ಮೀರ ಉಳಿಸಿಕೊಳ್ಳುವುದಾಗಲಿ, ಹೈದರಾಬಾದ್, ಜುನಾಗಢ ಸೇರಿದಂತೆ ಭಾರತದ ಕೆಲ ಸಂಸ್ಥಾನಗಳನ್ನು ಒಂದುಗೂಡಿಸುವುದು ಸೈನ್ಯ ಕಾರ್ಯಾಚರಣೆಯಿಲ್ಲದೆ ಸಾಧ್ಯವಾಗಲಿಲ್ಲ.
ನಾವು ಯುದ್ಧಪಿಪಾಸುಗಳಲ್ಲ, ಆದರೆ ಹಿಂಸೆಯ ಭಯದಿಂದ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದಕ್ಕಾಗಲಿ ಅಥವಾ ಧರ್ಮಾಚರಣೆಯನ್ನು ನಿಲ್ಲಿಸುವುದಕ್ಕಾಗಲಿ ಒಪ್ಪುತ್ತಿರಲಿಲ್ಲ. ಸತ್ಯ ಮತ್ತು ಧರ್ಮ ರಕ್ಷಣೆಯ ಮಾರ್ಗದಲ್ಲಿ ಹಿಂದೆ ಸರಿಯುವವರೂ ಅಲ್ಲ ಎಂಬುದು ಭಾರತೀಯ ರಾಜರುಗಳ, ಯೋಧರುಗಳ ನಿಜವಾದ ಶೌರ್ಯದ ಕಥೆ ಬರೆದವರು ಕಂಡುಕೊಂಡ ಸತ್ಯ. ಕ್ಷಣಿಕ ಜೀವವನ್ನು ರಣಾಂಗಣದಲ್ಲಿ ಚೆಲ್ಲಿದರೆ ಸ್ವರ್ಗವೇ ದಕ್ಕುವುದೆಂದು ಖುಷಿಯಿಂದ ರಣಾಂಗಣಕ್ಕೆ ಹೊರಡುತ್ತಿದ್ದವರು ನಮ್ಮವರು. ಅಷ್ಟೇಕೆ ಅವರ ಮನೆಯ ತಾಯಂದಿರುಗಳು ಸಹ ಮಕ್ಕಳನ್ನು ಆರತಿಯೆತ್ತಿ ಯುದ್ಧಕ್ಕೆ ಕಳುಹಿಸುತ್ತಿದ್ದರು. “ವಿಜಯಶಾಲಿಯಾಗಿ ಬಾ; ಇಲ್ಲದಿದ್ದರೆ ವೀರಮರಣವನ್ನಾದರೂ ಹೊಂದು” – ಎಂದು ಪುರಾಣಕಾಲದಿಂದ ಹಿಡಿದು ಪೇಶ್ವೆಗಳ ಕಾಲದವರೆಗೆ ಇಲ್ಲಿನ ಪ್ರತಿಯೊಬ್ಬನ ಸೋದರಿ, ಪತ್ನಿ, ಮಾತೆಯರು ಹಾರೈಸಿ ಕಳುಹಿಸುತ್ತಿದ್ದರು.
ವೀರರಸವುಕ್ಕುವ ಅದೆಷ್ಟೋ ಋಕ್ಕುಗಳು ವೇದಗಳಲ್ಲಿವೆ. ಶಾಂತಿ ಬರುವುದು ಶಕ್ತಿಯ ಬೆನ್ನಿಗೆ ಎಂದು ನಂಬಿದ್ದ ಸಮಾಜವನ್ನು ನಿರ್ವೀರ್ಯಗೊಳಿಸಲಾಗಿತ್ತು. ಮಹಾವೀರ ಬುದ್ಧರ ಕಾಲದ ನಂತರವೂ ಹೋರಾಟವನ್ನು ಯಾರೂ ಬಿಟ್ಟುಕೊಟ್ಟಿರಲಿಲ್ಲ. ಧರ್ಮಸ್ಥಾಪನೆಗೆ ಚಾಣಕ್ಯ ಉಪವಾಸ ಮಾಡಲಿಲ್ಲ, ಬದಲಾಗಿ ಸಂಘಟನೆಯ ಹೊಸ ಸೂತ್ರವನ್ನೇ ಬರೆದ; ಗುರುಕುಲಗಳು ಮತ್ತು ಅಲ್ಲಿನ ವಿದ್ಯಾರ್ಥಿಗಳ ಮೂಲಕ ಅಜೇಯ ಶಕ್ತಿಯನ್ನು ನಿರ್ಮಿಸಿದ. ಆಗ ಮೂಡಿದ್ದು ಧರ್ಮರಕ್ಷಣೆಗಾಗಿ ವಿಜಯಾಕಾಂಕ್ಷೆಯೇ ಹೊರತು ಯುದ್ಧೋನ್ಮಾದವಲ್ಲ. ಸಮಾಜದ ಜೀವಂತಿಕೆಗೆ, ಸ್ವಾತಂತ್ರ್ಯ ರಕ್ಷಣೆಗೆ ಇಂತಹ ಜಾಗೃತಿ ಮತ್ತು ಸಂಘಟನೆ ಅತಿ ಆವಶ್ಯಕ.
ಶಾಲಿವಾಹನ, ವಿಕ್ರಮಾದಿತ್ಯ, ವಿದ್ಯಾರಣ್ಯರಿಂದ ಹಿಡಿದು ರಾಣಾ ಪ್ರತಾಪ, ಶಿವಾಜಿ, ಗುರುಗೋವಿಂದ, ಛತ್ರಸಾಲರೆಲ್ಲರೂ ಜನಸಂಘಟನೆಯ ರಹಸ್ಯ ಬಲ್ಲವರೇ. ಅವರು ರಾಜರ ಹಿಂಬಾಲಕರಾಗದೆ ಸಮಾಜಜಾಗೃತಿಯ ಮಾರ್ಗ ಹಿಡಿದರು. ವಿದೇಶೀಯರ ಉಪಟಳವನ್ನು ಮಟ್ಟಹಾಕಿ ಸ್ವಾತಂತ್ರ್ಯ ಜ್ಯೋತಿಯನ್ನು ಸಾಧ್ಯವಾದಷ್ಟೂ ವಿಸ್ತಾರವಾಗಿ ಹರಡುವಂತೆ ಮಾಡಿದರು. ವಾಸ್ತವದಲ್ಲಿ ಪ್ರತಿ ಭಾರತೀಯನೂ ಸ್ವಾತಂತ್ರ್ಯ ಪ್ರೇಮಿಯೇ. ನಗರವಾಸಿ, ಗ್ರಾಮವಾಸಿ, ವನವಾಸಿ ಯಾರೇ ಆಗಿರಲಿ, ಆತ ಏನು ಬೇಕಾದರೂ ತ್ಯಜಿಸಬಲ್ಲ; ಆದರೆ ಗುಲಾಮನಾಗಲು ಸಿದ್ಧನಿಲ್ಲ. ಈ ಸ್ವಾಭಿಮಾನ ಮರೆತು ನಾವು ಪರಕೀಯರ ಕಾಲು ಹಿಡಿಯಲು ಸಿದ್ಧರಾದದ್ದು ವೈಭವಶಾಲಿ ಚರಿತ್ರೆಯನ್ನು ಮರೆತಾಗ ಎಂಬುದನ್ನು ಕೆಲವರಾದರೂ ಅರ್ಥ ಮಾಡಿಕೊಂಡದ್ದು ಈ ನೆಲದ ಪುಣ್ಯ.
‘ಅಹಿಂಸಾ ಪರಮೋ ಧರ್ಮಃ’ ಎಂಬ ತತ್ತ್ವ ಹಿಂದೂಸಮಾಜದ ರೋಮರೋಮದಲ್ಲೂ ವ್ಯಾಪಿಸಿದೆ. ಆದ್ದರಿಂದ ಉಳಿದವರಿಗೂ ಅಹಿಂಸೆಯ ಪಾಠ ಕಲಿಸುವ ಹೊಣೆಗಾರಿಕೆ ಹಿಂದುಗಳದ್ದೇ ಆಗಿದೆ. ಆದರೆ ಇತರರು ನಮ್ಮ ವಿಚಾರಕ್ಕೆ ಕಿವಿಗೊಡಬೇಕಾದರೆ ನಮ್ಮಲ್ಲಿ ತಕ್ಕ ಸಾಮರ್ಥ್ಯ ಇರಬೇಕು. ದುರ್ಬಲ ಸಮಾಜದ ಉಪದೇಶವನ್ನು ಹಿಂಸಾವೃತ್ತಿಯ ಜನ ಎಳ್ಳಷ್ಟೂ ಲೆಕ್ಕಿಸುವುದಿಲ್ಲ. ಹಿಂದೂಸ್ಥಾನದಲ್ಲಿ ಅಹಿಂಸೆಯ ಸಾಮ್ರಾಜ್ಯ ಸ್ಥಾಪಿಸುವ ಇಚ್ಛೆ ನಮಗಿದ್ದಲ್ಲಿ, ಹಿಂದು ಸಮಾಜದ ದುರ್ಬಲತೆಯನ್ನು ದೂರಗೊಳಿಸಿ ಅದನ್ನು ಬಲಿಷ್ಠಗೊಳಿಸಬೇಕಾದ ಅಗತ್ಯವಿದೆ – ಇದು ಸಂಘಸ್ಥಾಪಕರು ಚಿಂತಿಸಿದ ರೀತಿ.
ಈ ನೆಲದ ಸ್ವಾಭಿಮಾನದ ಅಂತಃಸತ್ತ್ವವನ್ನು ಬಡಿದೆಬ್ಬಿಸುವುದರಿಂದ ಭವ್ಯ ಭವಿತವ್ಯ ಸಾಧ್ಯ ಎಂದು ಕಂಡುಕೊAಡವರು ಅನೇಕರು. ಆದರೆ ಗಾಂಧಿ ವಿಚಾರವೆಂಬ ಆಗಿನ ಪ್ರಖರ ಬೆಳಕಿನಲ್ಲಿ ಎಲ್ಲರ ಕಾಣ್ಕೆಯೂ ಮಸುಕಾಗಿಬಿಟ್ಟಿತ್ತು. ಹಲವು ಮಂದಿ ಯಾವುದೋ ಒಂದು ರೀತಿ ಸ್ವಾತಂತ್ರ್ಯ ಸಂಗ್ರಾಮ ಮುಂದುವರಿಯುತ್ತಿದೆಯಲ್ಲಾ ಎಂದುಕೊಂಡು ಪೂರ್ಣ ಸಹಮತವಿಲ್ಲದಿದ್ದರೂ ಸರ್ವಸ್ವವನ್ನೂ ತ್ಯಾಗ ಮಾಡಿ ಕಾಂಗ್ರೆಸ್ನ ಜೊತೆಗೂಡಿದರು. ಆದರೆ ಮಹಾತ್ಮರೆನಿಸಿಕೊಂಡವರ ಕೆಲ ಅಪ್ರಾಯೋಗಿಕ ಭ್ರಾಮಕ ಕಲ್ಪನೆಗಳು ಭಾರತದ ಭವಿಷ್ಯವನ್ನು ದಿಕ್ಕುಗೆಡಿಸುತ್ತವೆ ಎಂದು ವಿಚಾರವಂತರಿಗೆ ಅರಿಯಲು ಕಷ್ಟವಾಗಲಿಲ್ಲ.
ಅರವಿಂದರು ಯೋಗಿಯಾದರೂ ಸಂತರೆನಿಸಿಕೊಳ್ಳುತ್ತಿದ್ದ ಗಾಂಧಿಯವರ ಹಾದಿ ಹಿಡಿಯಲಿಲ್ಲ. ಬದಲಾಗಿ ತರುಣರು ಕ್ರಾಂತಿಕಾರ್ಯಕ್ಕೆ ಧುಮುಕಿ ವೀರಮೃತ್ಯುವನ್ನು ಹೊಂದುವಂತೆ ಪ್ರೇರೇಪಿಸುತ್ತಿದ್ದರು. ಇದು ವಿವೇಕಾನಂದರ ವಾಣಿಯ ಪ್ರಭಾವ. ಇಡೀ ಪಂಜಾಬ್ ‘ಗದರ್’ನ ರಣಕಹಳೆಗೆ ಕೊಟ್ಟಷ್ಟು ಮಹತ್ತ್ವವನ್ನು ಚರಕಕ್ಕೆ ನೀಡಲಿಲ್ಲ. ಬಂಗಾಳ, ಮಹಾರಾಷ್ಟ್ರಗಳೂ ಕ್ರಾಂತಿಯ ಕಿಡಿಯನ್ನು ಹೊತ್ತಿಸುತ್ತಲೇ ಇದ್ದವು. ಇವೆಲ್ಲವೂ ಮಹತ್ತರವೇ ಆದರೂ ಅಖಂಡ ಭಾರತವನ್ನು ಏಕ-ಪ್ರಕಾರವಾಗಿ ಆವರಿಸಿಕೊಳ್ಳುವಲ್ಲಿ ಸೋತವು. ಆ ಸೋಲಿಗೆ ಕಾರಣ ಮಹತ್ತರ ಉದ್ದೇಶಕ್ಕಾಗಿ ಇಡೀ ಸಮಾಜವನ್ನು ಅಣಿಗೊಳಿಸುವಲ್ಲಿ ವಿಫಲವಾಗಿದ್ದೇ ಆಗಿತ್ತು. ಕೆಲವೇ ಮಂದಿ ನಡೆಸುವ ಗುಪ್ತ ಕಾರ್ಯವಿಧಾನದ ಸಂಘಟನೆಗಳು ಬಹುವಾಗಿ ವಿಸ್ತರಿಸುವುದು ಅಸಾಧ್ಯ. ಕೆಲವೊಮ್ಮೆ ಸಾಂದರ್ಭಿಕ ಆವೇಶಗಳು ಮೇಲೆದ್ದು ಸ್ವಾತಂತ್ರ್ಯದ ಮಹೋದ್ದೇಶಕ್ಕಿಂತ ಸೇಡು ತೀರಿಸಿಕೊಳ್ಳುವ ಸೀಮಿತ ಉದ್ದೇಶ ಪ್ರಮುಖವಾಗಿ ಬಿಡುವುದೂ ಇತ್ತು.
ದೇಶ ಎದುರಿಸುತ್ತಿದ್ದ ಯಾವುದೇ ದಯನೀಯ ಪರಿಸ್ಥಿತಿಗೆ ಪರರನ್ನು ದೂಷಿಸುವುದರಿಂದ ಪ್ರಯೋಜನವಿಲ್ಲ. ನಾವು ಪ್ರಚಂಡ ಶಕ್ತಿಶಾಲಿಗಳಾಗಿದ್ದರೆ ನಮ್ಮ ಮೇಲೆ ಕಣ್ಣೆತ್ತಿ ನೋಡುವ ದುಸ್ಸಾಹಸವನ್ನು ಯಾರೂ ಕೂಡ ಮಾಡಲಾರರು. ಇತಿಹಾಸದ ಅನೇಕ ಕ್ಷಣಗಳಲ್ಲಿ ತಾತ್ಕಾಲಿಕ ಉದ್ದೇಶ, ಉನ್ಮಾದಗಳಿಂದ ಒಟ್ಟುಗೂಡಿದ ಜನರೂ ಸಹ ಕ್ರಾಂತಿಗಳನ್ನು ಮಾಡಿದ್ದಾರೆ. ಸಿಂಹಾಸನಗಳನ್ನು ಪಲ್ಲಟಗೊಳಿಸಿದ್ದಾರೆ. ಆದರೆ ಅದನ್ನು ಉಳಿಸಿಕೊಳ್ಳುವಲ್ಲಿ ಸೋತಿದ್ದಾರೆ. ಅದಕ್ಕೆ ಕಾರಣ ಸುಸಂಘಟಿತ ಶಕ್ತಿ ಮತ್ತು ಸಂಸ್ಕಾರಗಳ ಕೊರತೆ.
“ಸ್ವಾತಂತ್ರ್ಯವನ್ನು ದಿನ ಕಳೆಯುವುದರೊಳಗಾಗಿ ಪಡೆದುಕೊಳ್ಳಬಹುದು, ಆದರೆ ಅದನ್ನು ಕಾಪಾಡಿಕೊಳ್ಳುವ ಸಮರ್ಥ ವ್ಯಕ್ತಿಗಳನ್ನು ನನಗೆ ತೋರಿಸಬಲ್ಲಿರೇ?” ಎಂದು ಸ್ವಾಮಿ ವಿವೇಕಾನಂದರು ಪ್ರಶ್ನಿಸಿದ್ದರು. ಸದಾಕಾಲ ಸಮಾಜದ ಕುರಿತು ಚಿಂತಿಸುವ, ಸತರ್ಕದಿಂದಿರುವ ಜನರು ಮಾತ್ರವೇ ತಮ್ಮ ದೇಶದ ಸ್ವಾತಂತ್ರ್ಯವನ್ನು ಕಾಪಾಡಿಕೊಳ್ಳಬಲ್ಲರು. ಡಾಕ್ಟರ್ ಕೇಶವ ಬಲಿರಾಮ ಹೆಡಗೆವಾರ್ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘದ ಮೂಲಕ ಈ ರೀತಿಯ ಶಕ್ತಿಯನ್ನು ನಿರ್ಮಿಸಿದರು.
ಸಂಘಟನೆಯೇ ರಾಷ್ಟ್ರದ ಮುಖ್ಯಬಲ. ಜಗತ್ತಿನ ಯಾವುದೇ ಸಮಸ್ಯೆಯನ್ನು ಬಗೆಹರಿಸಬೇಕಾದರೂ ಶಕ್ತಿಯ ಆಧಾರ ಬೇಕು. ಶಕ್ತಿಹೀನ ರಾಷ್ಟ್ರದ ಯಾವ ಆಕಾಂಕ್ಷೆಯೂ ಎಂದಿಗೂ ಈಡೇರದು. ಅದೇ ಸಂಘಟಿತ ಶಕ್ತಿಶಾಲಿ ರಾಷ್ಟ್ರವು ಯಾವಾಗ ಏನು ಕೆಲಸವನ್ನಾದರೂ ತನ್ನಿಚ್ಛೆಯ ರೀತಿಯಲ್ಲಿ ಮಾಡಬಲ್ಲುದು.
ಸಂಘಟನೆ, ಸ್ವಾಭಿಮಾನಜಾಗೃತಿಯ ಮೂಲಕ ವ್ಯಕ್ತಿನಿರ್ಮಾಣ ಮತ್ತು ಶಕ್ತಿಯ ಸಾಕ್ಷಾತ್ಕಾರ. ಸಮಾಜಕ್ಕಾಗಿ ಆ ಶಕ್ತಿಯ ವಿನಿಯೋಗ. ಧರ್ಮ ಮತ್ತು ಸ್ವಾತಂತ್ರ್ಯ ರಕ್ಷಣೆಗೆ ಇದಕ್ಕಿಂತ ಸುಲಭ ಸೂತ್ರ ಮತ್ತೊಂದಿಲ್ಲ. ಇದನ್ನು ಕಂಡುಕೊಂಡಿದ್ದು ಇಡೀ ವಿಶ್ವಕ್ಕೆ ಡಾಕ್ಟರ್ಜೀಯವರ ಮಹತ್ತ್ವದ ಕೊಡುಗೆ. ಈ ಸೂತ್ರ ಇಲ್ಲಿನ ನೆಲದ ಚಿಂತನೆಗಳಿಂದ ರೂಪುಗೊಂಡಿದ್ದೇ ಆಗಿದೆ. ಇಲ್ಲಿನ ಜೀವಂತ ಮೌಲ್ಯಗಳ ಪುನಶ್ಚೇತನಕ್ಕೆಂದೇ ಆದ ದರ್ಶನವಿದು, ಹಾಗಾಗಿ ಡಾಕ್ಟರ್ಜೀ ಓರ್ವ ದ್ರಷ್ಟಾರ ಎನಿಸಿದರು.
ಅವರ ಚಿಂತನೆ ಮಹತ್ತ್ವದ್ದು; ಆದರೆ ಅನುಷ್ಠಾನದ ಸೂತ್ರ ಸರಳ. ಈ ದೇಶದ ಪ್ರತಿಯೊಬ್ಬನಲ್ಲಿ ಭಾರತಮಾತೆಯ ಕುರಿತು ಮೂಡಿಸಿದ ಜಾಗೃತಿಯ ಕಾರ್ಯ ‘ಅಣುವನ್ನು ಬೃಹತ್ತನ್ನಾಗಿಸುವ’ ಪವಾಡವನ್ನೇ ಮಾಡಿಬಿಟ್ಟಿತು. ವಂದೇ ಮಾತರಂ ಎಂದು ಹೇಳಿ ಬಂಕಿಮರು ದೇಶವು ಮರೆತಿದ್ದ ಮೌಲ್ಯಕ್ಕೆ ಮರುಜೀವವನ್ನಿತ್ತರೆ ಅದರ ವ್ಯಾಪಕತೆಗೆ, ಸಾರ್ಥಕತೆಗೆ, ಆ ಮಹಾನ್ ಘೋಷಣೆಯ ಅನ್ವಯಕ್ಕೆ ಸಾಧನವಾಗಿ ಸಂಘವನ್ನಿತ್ತವರು ಡಾಕ್ಟರ್ಜೀ. ಬಹುಶಃ ಈ ಉದ್ದೇಶಕ್ಕೆಂದೇ ವಿಧಿ ಅವರನ್ನು ವಿದ್ಯಾಭ್ಯಾಸದ ನೆಪದಲ್ಲಿ ಬಂಗಾಳಕ್ಕೆ ಒಯ್ದಿತ್ತೇನೋ?
ಆಲೋಚನೆಗಳು ಅನೇಕರಿಗೆ ಬರುತ್ತವೆ, ಆದರೆ ಪ್ರತಿಕೂಲ ಸನ್ನಿವೇಶಗಳಲ್ಲಿಯೂ ಅವನ್ನು ಕೃತಿರೂಪಕ್ಕಿಳಿಸುವುದಕ್ಕೆ ಮನದಲ್ಲಿ ಭೀಮಬಲವಿರಬೇಕು. ಇಂತಹುದೇ ವಾತಾವರಣಗಳಲ್ಲಿ ಸಂಘವನ್ನು ಕಟ್ಟಿದ್ದೇ ಒಂದು ಯಶೋಗಾಥೆ. ಡಾಕ್ಟರ್ಜೀಯವರ ವಿಚಾರವು ಮನ ಮುಟ್ಟುವಂತಿದ್ದರೆ ಅವರ ಆಚಾರಗಳು ಹೃದಯವನ್ನೇ ತಟ್ಟುತ್ತಿದ್ದವು. ಸ್ವತಃ ಆದರ್ಶವಾಗದೆ ಉಪದೇಶಕ್ಕೆ ಬೆಲೆಯಿಲ್ಲ. ಸ್ವಂತಹಿತವನ್ನು ರಾಷ್ಟçಹಿತದೊಂದಿಗೆ ಏಕರೂಪಗೊಳಿಸುವ ಅತ್ಯದ್ಭುತ ವಿಧಾನವನ್ನು ಲಕ್ಷಾಂತರ ತರುಣರಲ್ಲಿ ಉದ್ದೀಪನಗೊಳಿಸುವುದು ಎಂದರೆ ಅದೆಂತಹ ದಿವ್ಯಶಕ್ತಿಯು ಧ್ಯೇಯರೂಪ ಧರಿಸಿತ್ತು ಎಂಬ ಅಚ್ಚರಿ ಮೂಡುತ್ತದೆ.
ಪರಕೀಯರ ಆಳ್ವಿಕೆ ಎಂಬುದು ನಮ್ಮ ದೋಷವೇ ಹೊರತು ಅವರ ಹೆಚ್ಚುಗಾರಿಕೆಯಲ್ಲ. ನಾವು ಯಾರೆಂಬ ವಿಚಾರದ ಅರಿವು ಸದಾ ಇದ್ದರೆ ಜಗತ್ತಿನ ಯಾವ ಶಕ್ತಿಗೂ ತಲೆಬಾಗುವ ಅಗತ್ಯವಿಲ್ಲ. ಅದನ್ನು ಜಾಗೃತಗೊಳಿಸಬೇಕು ಎಂಬುದು ಡಾಕ್ಟರ್ಜೀಯವರ ಚಿಂತನೆ. ಕೇವಲ ದೇಶವು ಗುಲಾಮವಾಗಿದ್ದಾಗಲಷ್ಟೇ ಅಲ್ಲ, ಎಲ್ಲ ರೀತಿಯ ಪರಿಸ್ಥಿತಿಗಳಲ್ಲೂ ಇದು ಅನಿವಾರ್ಯ. ಈ ವಿಚಾರದ ಅರಿವಿಲ್ಲದವರು ಮಾತ್ರ ದೇಶದಲ್ಲಿ ಮುಸಲ್ಮಾನರ ಉಪಟಳ ಇದ್ದಿದ್ದರಿಂದ ಸಂಘ ಪ್ರಸಿದ್ಧವಾಯಿತು ಎಂದೆಲ್ಲ ಭಾವಿಸುತ್ತಾರೆ. ಆದರೆ ಇದನ್ನು ಕುರಿತು ತಮ್ಮ ಜೀವಿತಕಾಲದಲ್ಲೇ ಡಾಕ್ಟರ್ ಹೆಡಗೆವಾರ್ ಸ್ಪಷ್ಟನೆಯನ್ನು ಕೊಟ್ಟಿದ್ದಾರೆ: ಸಂಘದ ಕಾರ್ಯ ಹಿಂದು ಸಂಘಟನೆಯೇ ಹೊರತು ಮತ್ಯಾವುದೂ ಅಲ್ಲ. ಒಬ್ಬನೇ ಒಬ್ಬ ಮುಸಲ್ಮಾನ ಭಾರತದಲ್ಲಿ ಇಲ್ಲದಿದ್ದರೂ ಸಂಘವು ಇದ್ದೇ ಇರುತ್ತಿತ್ತು – ಎಂದು.
ಮನುಷ್ಯನ ಭಾವನೆಯಂತೆ ನಡವಳಿಕೆ ಇರುತ್ತದೆ. ಮೊಘಲ್ ದೊರೆಯನ್ನು ಧೂಳಿಪಟ ಮಾಡಿ ಕಾಲಡಿ ಹೊಸಕಿ ಹಾಕುವ ಸಾಮರ್ಥ್ಯವಿದ್ದರೂ ರಾಜ ಜಯಸಿಂಗ ಆರಿಸಿಕೊಂಡದ್ದು ಅದೇ ಔರಂಗಜೇಬನ ಚಾಕರಿಯನ್ನು. ಆದರೆ ಆತ್ಮಗೌರವ ಹೊಂದಿದ್ದ ಶಿವಾಜಿ ನಿರ್ಮಿಸಿದ್ದು ಅಜೇಯ ಸಾಮ್ರಾಜ್ಯವನ್ನು. ಈ ಆತ್ಮಗೌರವದ ಭಾವ ಎಚ್ಚರಿಸುವ ಕಾರ್ಯಕ್ಕೆಂದೇ ಸಂಘವನ್ನು ಆರಂಭಿಸಿದ್ದು. ಹಿಂದು ಸಂಘಟನೆಯು ಸಮಾಜದಲ್ಲಿ ವಿಶ್ವಾಸವನ್ನು ತುಂಬಬೇಕು. ಸಂಘವು ಯಾರನ್ನೂ ವಿರೋಧಿಗಳೆಂದು ಭಾವಿಸುವುದಿಲ್ಲ, ಆದರೆ ರಾಷ್ಟ್ರಹಿತದ ವಿರೋಧಿಯನ್ನು – ಆತನಿಗೆ ಸಂಘದ ಅರಿವೇ ಇಲ್ಲದಿರಲಿ – ಸ್ವಯಂಸೇವಕ ನಿಶ್ಚಿತವಾಗಿ ವಿರೋಧಿಸುತ್ತಾನೆ.
ಸಂಘವು ತರುಣರನ್ನು ಸೈನ್ಯೀಕರಣ ಮಾಡುತ್ತಿದೆ, ಚಿಂತನೆಗೆ ಆಸ್ಪದವೇ ಅಲ್ಲಿಲ್ಲ ಎಂಬುದೊಂದು ಮಿಥ್ಯಾರೋಪ. ಪ್ರತಿಯೊಬ್ಬ ಸ್ವಯಂಸೇವಕನೂ ವಿಚಾರದಲ್ಲಿ ಸರ್ವತಂತ್ರ ಸ್ವತಂತ್ರ. ಸಂಘವೆಂದರೆ ಮಂದಬುದ್ಧಿಯ ಕಲ್ಪನಾಶೂನ್ಯ ಅನುಯಾಯಿಗಳನ್ನು ತಯಾರಿಸುವುದಲ್ಲ. ಬದಲಾಗಿ ಪ್ರತಿಯೊಬ್ಬ ಸಂಘಶಿಕ್ಷಿತನೂ ನೇತೃತ್ವ ವಹಿಸಲು ಸಿದ್ಧನಾಗುವಂತೆ ಡಾಕ್ಟರ್ಜೀ ಅಪೇಕ್ಷೆಯನ್ನು ಹೊಂದಿದ್ದರು. ಅದನ್ನು ಅರಿತ ತರುಣರು ಸಹ ತಮ್ಮ ಕಾಲೇಜು ಶಿಕ್ಷಣ ಮುಗಿಯುತ್ತಲೇ ಜೀವನವನ್ನು ಸಂಘಕ್ಕೆ ಮುಡಿಪಿಡುತ್ತಿದ್ದರು. ದೇಶದ ಮೂಲೆಮೂಲೆಗೆ ಸಂಘಟನೆಯನ್ನು ಕೊಂಡೊಯ್ದರು.
ಶಕ್ತಿಯ ನಿರ್ಮಿತಿ ಕಾಲದ ಅಗತ್ಯ. ಶಕ್ತಿ ಇದ್ದರೆ ಅದನ್ನು ಯಾವ ಕಾರ್ಯಕ್ಕೂ ಬಳಸಬಹುದು. ಸಿರಿವಂತನೊಬ್ಬ ತನ್ನ ಸಂಪತ್ತಿನ ಬಲದಿಂದ ಯಾವ ಆತಂಕವಿಲ್ಲದೆ ನಿವೇಶನ ಕೊಂಡು ಮನೆ ನಿರ್ಮಿಸುತ್ತಾನೆ. ಆದರೆ ಬಡವನಾದರೋ ಪ್ರತಿಯೊಂದು ಹಂತದಲ್ಲೂ ತಡೆತಡೆದು, ವೆಚ್ಚ ಸರಿದೂಗಿಸಿಕೊಂಡು ಗೃಹನಿರ್ಮಾಣ ಮಾಡಬೇಕಾಗುತ್ತದೆ. ದೇಶಕ್ಕಾಗಿ ಜೀವನ ನಡೆಸುವ ಸಂಸ್ಕಾರಯುತ ಜನರ ಸಂಘಟನೆ ದೇಶದ ಶಕ್ತಿ ಮತ್ತು ಸಂಪತ್ತು. ಈ ಮಹಾನ್ ಶಕ್ತಿ ಯಾವುದೇ ಅಪಾಯವನ್ನು ಎದುರಿಸಿ ನಿಲ್ಲಬಲ್ಲದು, ಹಾಗೆಯೇ ಶಾಂತಿಕಾಲದಲ್ಲಿಯೂ ಯಾವುದೇ ಅಭಿವೃದ್ಧಿಯನ್ನೂ ಮಾಡಬಲ್ಲದು. ಜನಮಾನಸದಲ್ಲಿ ಸಕಾರಾತ್ಮಕ ಪರಿವರ್ತನೆ ತರಬಲ್ಲ ಅನುಶಾಸನಯುಕ್ತ ಶಕ್ತಿಯೇ ಸಂಘ.
ಸಂಘವು ದೇಶವಿಭಜನೆಯ ಕಾಲದಲ್ಲಿ ಮುಸಲ್ಮಾನರ ಆಕ್ರಮಣಗಳಿಂದ ಹಿಂದುಗಳನ್ನೂ, ಪಾಕಿಸ್ತಾನದ ಆಕ್ರಮಣದಿಂದ ಕಾಶ್ಮೀರವನ್ನೂ ಉಳಿಸುವಲ್ಲಿ ನಿರ್ವಹಿಸಿದ ಪಾತ್ರದ ಜೊತೆಗೆ ಸ್ವಾತಂತ್ರ್ಯ ಪ್ರಾಪ್ತಿಯ ನಂತರವೂ ದೇಶದ ಗತಿಯನ್ನು ನಿರ್ಧರಿಸುವಂತಹ ಶಕ್ತಿಯಾಗಿ ಉಳಿದದ್ದು ತನ್ನ ಉದ್ದೇಶದಲ್ಲಿದ್ದ ಸ್ಪಷ್ಟತೆಯ ಕಾರಣದಿಂದಲೇ. ಗೋವಾ ವಿಮೋಚನೆ, ತುರ್ತುಪರಿಸ್ಥಿತಿಯ ಹೋರಾಟಗಳಿಂದ ಹಿಡಿದು, ಅಮರನಾಥ, ರಾಮಸೇತುಗಳ ಸಂರಕ್ಷಣೆ, ರಾಮಮಂದಿರ ನಿರ್ಮಾಣಗಳವರೆಗೂ ಸಾಧಿಸಿದ ಶಕ್ತಿಯೂ ಅದೇ. ಹಾಗೆಯೇ ಪ್ರವಾಹ, ಕ್ಷಾಮ, ಭೂಕಂಪ, ಸುನಾಮಿಯಂತಹ ಪ್ರಾಕೃತಿಕ ವಿಕೋಪಗಳಿಂದ ಹಿಡಿದು ವಿಮಾನ ದುರಂತ, ರೈಲು ಅವಘಡ – ಹೀಗೆ ಯಾವುದೇ ವಿಪತ್ತಿನ ಕಾಲದಲ್ಲಿ ಸಂಘದ ಸಂಘಟಿತ ಶಕ್ತಿ ಕ್ಷಣ ಮಾತ್ರದಲ್ಲಿ ಪರಿಸ್ಥಿತಿಯ ನಿಯಂತ್ರಣಕ್ಕೆ ಧುಮುಕುತ್ತದೆ. ಪ್ರಸ್ತುತ ಕೊರೊನಾ ಸಂದರ್ಭದಲ್ಲಿಯಂತೂ ಅಕ್ಷರಶಃ ಲಕ್ಷಾಂತರ ಸ್ವಯಂಸೇವಕರು ಸೇವಾಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ.
ಡಾಕ್ಟರ್ಜೀಯವರು ಕೆಲ ಹಿಡಿಯಷ್ಟು ಮಂದಿಯೊಂದಿಗೆ ಸಂಘವನ್ನು ಆರಂಭಿಸಿದರೂ ದೇಶದ ಸ್ವಾತಂತ್ರ್ಯಪ್ರಾಪ್ತಿ, ಅದಕ್ಕೂ ಮುಂದಿನ ದಿನಗಳಲ್ಲಿ ಹಿಂದೂ ಸಮಾಜ ಹಾಗೂ ದೇಶದ ಕುರಿತು ಇರಲೇಬೇಕಾದ ನಿರಂತರ ಸ್ಪಂದನ, ರಾಷ್ಟ್ರ ರಕ್ಷಣೆಯ ಜೀವ ಮುಡಿಪಿಡುವ ಜಾಗೃತ ಸಂಕಲ್ಪಶಕ್ತಿಯ ನಿರ್ಮಾಣದ ಸ್ಪಷ್ಟವಾದ ಕಲ್ಪನೆಯನ್ನು ಹೊಂದಿದ್ದರು. ಅವರೇ ಹೇಳುವಂತೆ “ಇದು ಬಹು ಪ್ರಚಂಡ ಕಾರ್ಯ. ಇದನ್ನು ಪೂರ್ತಿಗೊಳಿಸಲು ನಾವು ಪ್ರಯತ್ನದ ತುತ್ತತುದಿಯನ್ನೇ ಮುಟ್ಟಬೇಕಾಗುತ್ತದೆ.’’
ಕುಶಲ ಸಂಘಟಕರಾದ ಡಾಕ್ಟರ್ಜೀಯವರು ರಾಜಕೀಯ ಅಥವಾ ಸಶಸ್ತ್ರ ಸಂಘಟನೆಗೆ ಕೈಹಾಕದೇ ಸಮಾಜದಲ್ಲಿ ಸಂಸ್ಕಾರ, ಶೌರ್ಯ, ಮೌಲ್ಯಗಳನ್ನು ತುಂಬುವ ಸಾಂಸ್ಕೃತಿಕ ಸ್ವರೂಪದ ಸಂಘಟನೆ ನಿರ್ಮಿಸುವುದರ ಹಿಂದಿನ ಆಳಚಿಂತನೆಯೇ ಸಂಘವನ್ನು ಸರ್ವಕಾಲಕ್ಕೂ ಪ್ರಸ್ತುತ ಮತ್ತು ಆವಶ್ಯಕವೆನಿಸುವಂತೆ ಮಾಡಿದೆ.
“ಈ ಬಗ್ಗೆ ನಾವು ಚೆನ್ನಾಗಿ ಯೋಚಿಸಿಯೇ ಸಂಘ ಕಾರ್ಯಕ್ಕಾಗಿ ನಮ್ಮ ಸರ್ವಶಕ್ತಿಗಳನ್ನೂ ಒಗ್ಗೂಡಿಸುವ ಸಂಕಲ್ಪ ಮಾಡಿದ್ದೇವೆ. ರಾಷ್ಟ್ರೀಯ ಸ್ವಯಂಸೇವಕ ಸಂಘವು ಪೂರ್ಣ ವಿಚಾರ ಮಾಡಿಯೇ ತನ್ನ ಕಾರ್ಯಕ್ಷೇತ್ರವನ್ನು ನಿರ್ಧರಿಸಿದೆ. ಆದ್ದರಿಂದಲೇ ಇನ್ನಾವ ಗೊಂದಲಕ್ಕೂ ಸಿಕ್ಕಿಹಾಕಿಕೊಳ್ಳುವ ಇಚ್ಛೆ ಅದಕ್ಕಿಲ್ಲ. ಧ್ಯೇಯದ ಮೇಲೆಯೇ ದೃಷ್ಟಿಯಿಟ್ಟು ನಮ್ಮ ನಿಶ್ಚಿತ ಹಾದಿಯಲ್ಲಿ ನಾವು ಮುಂದಾಗಬೇಕು. ನಮ್ಮ ಜೀವನದ ಪ್ರತಿಕ್ಷಣವೂ ಈ ಅತ್ಯಗತ್ಯ ಪವಿತ್ರ ಕಾರ್ಯಕ್ಕಾಗಿಯೇ ಹೇಗೆ ಉಪಯೋಗವಾದೀತು ಎಂಬುದೊಂದೇ ಆಲೋಚನೆ ಹಗಲಿರುಳೂ ನಮ್ಮಲ್ಲಿರಲಿ. ಜೊತೆಜೊತೆಗೇ, ಈ ವಿಚಾರಕ್ಕೆ ಅನುಗುಣವಾಗಿ ಆಚರಣೆಗೂ ತೊಡಗಬೇಕು. ನಮ್ಮ ಸಂಘಟನೆಯನ್ನು ಕ್ಷಣಕ್ಷಣಕ್ಕೂ ಯಾವ ರೀತಿ ಬೆಳೆಸಬೇಕೆಂಬ ಒಂದೇ ಹಂಬಲ ಸದಾ ನಮಗಿರಬೇಕು” – ಎಂಬAತಹ ಮಾತುಗಳು ದೂರದೃಷ್ಟಿಯುಳ್ಳ ಓರ್ವ ಕುಶಲ ಸಂಘಟಕನಿಂದ ಮಾತ್ರ ಹೊರಬರಲು ಸಾಧ್ಯ.
ಯಾವುದೇ ಪ್ರಾಂತದ, ಯಾವುದೇ ರಾಜ್ಯಕ್ಕೆ ಸೇರಿದ ಸ್ವಯಂಸೇವಕ ದೇಶದ ಮತ್ತಾವುದೇ ಪ್ರದೇಶಕ್ಕೆ ಹೋದರೂ ಸಂಘಕಾರ್ಯಕ್ಕಾಗಿ ಜೀವನ ಮುಡಿಪಿಡುತ್ತಾನೆಂದರೆ ತಾಯಿ ಭಾರತಿಯ ಕಲ್ಪನೆಯನ್ನು ಹೃದಯದಲ್ಲಿ ಪ್ರಜ್ವಲಿಸಿಕೊಂಡಿದ್ದಾನೆಂದೇ ಅರ್ಥ. ಹೀಗಾಗಿ ಯಾವುದೇ ವಿರೋಧವೂ ಅವನಿಗೆ ಭಯದ ಬದಲಿಗೆ ಇನ್ನಷ್ಟು ಪ್ರೇರಣೆಯನ್ನು ತುಂಬುತ್ತದೆ. ಆತನ ಕಾರ್ಯಕ್ಕೆ ಮತ್ತಷ್ಟು ವೇಗವನ್ನು ನೀಡುತ್ತದೆ. ಸಂಘವು ಈ ಸಮಾಜದೊಂದಿಗೆ ಏಕಾತ್ಮ ಭಾವವನ್ನು ಅವನಲ್ಲಿ ತುಂಬಿಸಿದೆ.
ಈ ಭಾವನೆಯನ್ನು ಹೊಂದಿದ ಸ್ವಯಂಸೇವಕ ಅದ್ಭುತಗಳನ್ನು ಸಾಧಿಸಿದ, ಇನ್ನೂ ಸಾಧಿಸುತ್ತಿದ್ದಾನೆ. ಇದನ್ನು ಗುರುತಿಸುತ್ತಿರುವ ಸಮಾಜವು ಸಂಘವನ್ನು ಸ್ವೀಕರಿಸಿದೆ, ಸ್ವಯಂಸೇವಕನನ್ನು ಪ್ರಶಂಸಿಸುತ್ತಿದೆ. ಆದರೆ ಹೊಗಳಿಕೆಯಲ್ಲಿ ಮೈಮರೆಯುವುದು ಪತನದ ದಾರಿ. ಇದನ್ನು ಅಂದೇ ಕಂಡುಕೊಂಡು ಎಚ್ಚರಿಸಿದ್ದವರು ಡಾಕ್ಟರ್ಜೀ. ‘ಇತ್ತೀಚೆಗೆ ನಮ್ಮ ಸಂಘಟನೆಯ ಬಗ್ಗೆ ಬಹಳ ಹೊಗಳಿಕೆ ಕೇಳಿಬರುತ್ತಿದೆ. ಆದರೆ ಇದರಿಂದ ಉಬ್ಬಿಹೋಗಿ ನಾವು ಏನೋ ಮಹತ್ಕಾರ್ಯ ಸಾಧಿಸಿದ್ದೇವೆಂದು ಎಣಿಸಿ ಕೂಡುವಂತಾಗಬಾರದು. ಈ ರೀತಿಯ ವೈಯಕ್ತಿಕ ಅಭಿಮಾನವಂತೂ ಕೆಟ್ಟದ್ದೇ. ಆದರೆ ಸಾಂಘಿಕವಾಗಿ ಸಹ ಇದು ಯೋಗ್ಯವಲ್ಲ. ನಮ್ಮ ಕಾರ್ಯವು ಜನರಿಗೆ ಪ್ರಿಯವಾಗತೊಡಗಿದೆ ಎಂಬುದೇ ಅದರ ಹೊಗಳಿಕೆಯ ಅರ್ಥ. ಅಂದ ಮೇಲೆ ನಾವು ಅದರಿಂದ ಹಿಗ್ಗಿ ಮೈಮರೆಯದೆ, ಇನ್ನಷ್ಟು ತತ್ಪರತೆಯಿಂದ ಕಾರ್ಯದಲ್ಲಿ ತೊಡಗಿಕೊಳ್ಳಬೇಕು. ಪ್ರಶಂಸೆ ಕೇಳಿ ಮನಸ್ಸೇನೋ ಸಂತಸಗೊಳ್ಳುತ್ತದೆ, ನಿಜ. ಆದರೆ ಜೊತೆ ಜೊತೆಗೇ ನಮ್ಮ ಜವಾಬ್ದಾರಿಯೂ ಹೆಚ್ಚುತ್ತಹೋಗುತ್ತದೆ ಎಂಬುದನ್ನೂ ನಾವು ಮರೆಯಬಾರದು’ – ಇದು ಡಾಕ್ಟರ್ಜೀಯವರ ಹಿತವಚನ. ಇಂತಹ ವಿಚಾರ ಹೊಂದಿದ, ಮೈಮರೆಯದ ಜಾಗೃತ ಜನಶಕ್ತಿ ಇರುವವರೆಗೂ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವ ಯಾವುದೇ ಭೀತಿ ಆ ರಾಷ್ಟçಕ್ಕಿರುವುದಿಲ್ಲ. ಇದಕ್ಕೆಂದೇ ಸಂಘವೆಂಬುದು ಒಂದು ತಾತ್ಕಾಲಿಕ ಚಳವಳಿಯಲ್ಲ, ಇದೊಂದು ಶಾಶ್ವತ ಭಾವನೆ, ಸದಾ ಸಕ್ರಿಯವಾಗಿರಲೇಬೇಕಾದ ಸಂಘಟನಶಕ್ತಿ. ಯಾವಾಗ ಇಡೀ ಸಮಾಜವೇ ಈ ಮನೋಭಾವವನ್ನು ತನ್ನದಾಗಿಸಿಕೊಳ್ಳುವುದೋ ಆಗ ಸಮಾಜವೇ ಸಂಘವಾಗುತ್ತದೆ; ಸಂಘಟನೆಯು ಸಾರ್ಥಕತೆಯನ್ನು ಕಾಣುತ್ತದೆ.