ಆರ್ಥಿಕ ಸ್ವಾತಂತ್ರ್ಯದ ಹೊಸ್ತಿಲಲ್ಲಿ ಭಾರತ
ಸ್ವತಂತ್ರ ಭಾರತದ ಆರ್ಥಿಕ ಬೆಳವಣಿಗೆಯ ಇತಿಹಾಸದ ನೋಟ ಅತ್ಯಂತ ಕುತೂಹಲಕರವೂ, ವೈವಿಧ್ಯಮಯವೂ ಮತ್ತು ಆಸಕ್ತಿದಾಯಕವೂ ಆಗಿದೆ. ಅನೇಕ ಏಳುಬೀಳುಗಳನ್ನು ಎದುರಿಸಿ ಬೆಳೆದ ಈ ಉಪಖಂಡ ಆರ್ಥಿಕ ಬೆಳವಣಿಗೆಯಲ್ಲೂ ಏರುಪೇರುಗಳನ್ನು ದಾಟಿ ಬಂದಿದೆ. ಅದು ನಡೆದುಬಂದ ದಾರಿಯ ಬಗೆಗೆ ವಿರೋಧಾಭಾಸದ ಅಭಿಪ್ರಾಯಗಳು ವ್ಯಕ್ತವಾಗಿವೆ. ಆದರೆ ಅಭಿವೃದ್ಧಿಯ ವೇಗ ಸ್ವಾತಂತ್ರ್ಯಾನಂತರದ ಮೊದಲ ನಾಲ್ಕು ದಶಕಕ್ಕೂ ಹೆಚ್ಚು ಕಾಲದವರೆಗೆ ನಿರೀಕ್ಷಿತ ಮಟ್ಟದಲ್ಲಿರಲಿಲ್ಲವೆನ್ನುವುದು; ವಿಶ್ವದ ಬಹಳಷ್ಟು ದೇಶಗಳ ಅಭಿವೃದ್ಧಿಗೆ ಹೋಲಿಸುವ ಮಟ್ಟಕ್ಕೆ ಏರಲಿಲ್ಲವೆನ್ನುವುದು ಕಟು ಸತ್ಯ. ಕುಸಿತದ ಆರ್ಥಿಕ ಸ್ಥಿತಿ, ವ್ಯಾಪಕ ಅನಕ್ಷರತೆ, ನಿಲ್ಲದ ನಿರುದ್ಯೋಗ, ಹೃದಯ ಹಿಂಡುವ ಬಡತನ ಮತ್ತು ರೋಗ-ರುಜಿನಗಳು ದೇಶವನ್ನು ಆವರಿಸಿತ್ತು ಎನ್ನುವ ನೆನಪು ಮರೆಯಾಗುವಂಥದ್ದಲ್ಲ. ಬಲಿಷ್ಠವಲ್ಲದ ಆರ್ಥಿಕ ನೀತಿಗಳ ಕೊರತೆಯ ವರ್ಷಗಳನ್ನು ದಾಟಿ ಭಾರತವು ಉದಾರೀಕರಣ ಮತ್ತು ಮುಕ್ತ ಮಾರುಕಟ್ಟೆಗಳ ಯುಗಕ್ಕೆ ಈಗ ಕಾಲಿಟ್ಟಿದೆ.
ಬಡವ-ಶ್ರೀಮಂತ ವರ್ಗಗಳ ಅಂತರ, ಬಂಡವಾಳಗಾರರ ಮತ್ತು ಶ್ರಮಿಕರ ನಡುವಿನ ಸಂಘರ್ಷ ಮುಂತಾದ ಸಂಕಷ್ಟಗಳ ದಾರಿಯ ಅನೇಕ ಹಂತಗಳನ್ನು ಭಾರತವು ದಾಟುತ್ತ ಬರುತ್ತಿದೆ. ಈಗ ೭೫ನೇ ಸ್ವಾತಂತ್ರ್ಯ ಸಂಭ್ರಮದ ಹೊಸ್ತಿಲಲ್ಲಿ ಬಂದು ನಿಂತು ಒಮ್ಮೆ ಸಿಂಹಾವಲೋಕನ ಮಾಡುವಾಗ ಕ್ರಮಿಸಿದ ದಾರಿಯ ಪಯಣ ಅದ್ಭುತವೆನ್ನಿಸದಿರದು. ಅದರ ಈಗಿನ ಉತ್ಪಾದಕ ಶಕ್ತಿ ನಂಬಲಸಾಧ್ಯ. ಪ್ರಕೃತಿ, ಭಾಷೆ, ಸಂಸ್ಕೃತಿಗಳಲ್ಲಿ ವೈವಿಧ್ಯಮಯವೆನಿಸಿರುವ ದೇಶ ಈಗ ಜಿಡಿಪಿ ಮತ್ತು ಖರೀದಿಸುವ ಶಕ್ತಿಯಲ್ಲಿ ಜಗತ್ತಿನ ಅತಿ ದೊಡ್ಡ ಅರ್ಥಿಕ ಶಕ್ತಿಯ ಪಟ್ಟಿಯಲ್ಲಿ ಸ್ಥಾನಗಳಿಸಲು ಶಕ್ತವಾಗಿದೆ. ಅಂದಿನ ದಿನಗಳಿಂದ ಇಂದಿನವರೆಗೆ ನಡೆದು ಬಂದ ಆರ್ಥಿಕತೆಯ ಪಥದತ್ತ ಒಂದು ಕಿರುನೋಟ ಬೀರುವ ಸಮಯ ಇದಾಗಿದೆ.
ಸಮಾಜವಾದೀ ಆರ್ಥಿಕ ನೀತಿಗಳು (೧೯೪೭ರಿಂದ ೧೯೬೪)
ಗಾಂಧಿಯವರ ಆರ್ಥಿಕ ದೃಷ್ಟಿ ಭಾರತದ ಗಣರಾಜ್ಯವು ಸ್ಥಳೀಯ ತಂತ್ರಜ್ಞಾನ, ವಸ್ತು ಮತ್ತು ಪ್ರತಿಭೆಗಳನ್ನು ಬಳಸಿಕೊಳ್ಳುವ ಸ್ವಾವಲಂಬಿ ಹಳ್ಳಿಗಳ ನಿರ್ಮಾಣವಾಗಿತ್ತು. ಅವರ ಸೂತ್ರ ಮೂಲಭೂತ ಅಗತ್ಯಗಳಾದ ಆಹಾರ, ಬಟ್ಟೆ ಮತ್ತು ಆಶ್ರಯಕ್ಕಾಗಿ ಗ್ರಾಮಗಳು ಸ್ವಾವಲಂಬನೆಯನ್ನು ಸಾಧಿಸುವುದೇ ಆಗಿತ್ತು. ಆದರೆ ಗಾಂಧಿಯವರ ಅನುಯಾಯಿ ಪ್ರಧಾನಿ ಜವಾಹರಲಾಲ್ ನೆಹರೂ ಗಾಂಧಿಯವರ ಗ್ರಾಮಾಭಿವೃದ್ಧಿಯ ದೃಷ್ಟಿ ಅತಿ ಆದರ್ಶವಾದಿ ಮತ್ತು ವಾಸ್ತವಕ್ಕೆ ದೂರವೆಂದು ಭಾವಿಸಿದ್ದರು!
೧೯೪೭ರ ನಂತರದ ಹೊಸ ಭಾರತದ ಚರಿತ್ರೆಯನ್ನು ಗಮನಿಸಿದರೆ ವೇದ್ಯವಾಗುವ ಒಂದು ವಿಶೇಷವೆಂದರೆ, ದೇಶದ ಬುದ್ಧಿವಂತರೆನಿಸಿಕೊಡ ಒಂದು ಗುಂಪು ದೇಶದ ಸಂಪನ್ಮೂಲಗಳ ವಿತರಣೆಯ ಬಗೆಗೆ ಪಾರಮ್ಯ ಹೊಂದಿತ್ತು ಎನ್ನುವುದು. ಕೇವಲ ಕೆಲವೇ ಮಂದಿಯ ಹಿಡಿತದಲ್ಲಿ ಕೈಗಾರಿಕಾ ಅಭಿವೃದ್ಧಿಯ ಸೂತ್ರವಿದ್ದ ಕಾಲವದು. ಹಾಗಾಗಿ ನಗರಪ್ರದೇಶಗಳ ಆಯೋಜಕರಿಂದ ಕೈಗಾರಿಕಾ ಪರವಾನಗಿ ದೊರೆಯಬೇಕಿದ್ದು, ಸಾಮಾನ್ಯ ಜನರ ಮೇಲೆ ಅದು ಪ್ರಯೋಗವಾಗುತ್ತಲೂ, ಪ್ರಗತಿಯ ಭ್ರಮೆ ಹುಟ್ಟುಹಾಕುವಲ್ಲಿ ಯಶಸ್ವಿಯಾಗುತ್ತಲೂ ಇತ್ತು. ಅಂಥ ಗುಂಪಿನ ಬೆಂಬಲಕ್ಕೆ ಬುದ್ಧಿಜೀವಿಗಳು ಮತ್ತು ಕೆಲ ಮಾಧ್ಯಮಗಳು ಸದಾ ಒತ್ತಾಸೆ ಮತ್ತು ಬೆಂಬಲವನ್ನು ಸೂಚಿಸುತ್ತಿದ್ದವು! ಸಮಾಜವಾದವೆಂಬ ಚತುರ ಮಾತುಗಳ ನೀತಿಗಳಿಗೆ ಈ ಗುಂಪು ಸಹಕಾರ ಕೊಟ್ಟಿತು. ಆದುದರಿಂದಲೇ ರಾಜಕೀಯದಲ್ಲಿ, ವ್ಯಾಪಾರಗಳಲ್ಲಿ ವಂಶಪರಂಪರೆ ಮೆರೆಯತೊಡಗಿತು. ಅಷ್ಟೇ ಏಕೆ, ಮನರಂಜನೆ ಮತ್ತು ಕಲಾ ಪ್ರಪಂಚದಲ್ಲೂ ವಂಶಾಡಳಿತ ಅರಿವಿಲ್ಲದಂತೆ ತಮ್ಮ ಶಕ್ತಿಯನ್ನು ಸ್ಥಾಪಿಸತೊಡಗಿದವು! ೧೯೪೭ರಿಂದ ೧೯೯೦ರ ವರೆಗೆ ದೇಶದ ಆಗುಹೋಗುಗಳು ಕೆಲವೇ ಪಟ್ಟಭದ್ರ ಹಿತಾಸಕ್ತ ಜನರ ಹಿಡಿತದಲ್ಲಿದ್ದದ್ದು ವಿದಿತ.
ರಷ್ಯಾದಿಂದ ಎರವಲು ತಂದ ಸಮಾಜವಾದೀ ಮಾದರಿ ಆರ್ಥಿಕ ನೀತಿಯಲ್ಲಿ ನೆಹರೂ ನಂಬಿಕೆ ತಳೆದಿದ್ದರು: ಸರ್ಕಾರವೇ ದೇಶದ ದೊಡ್ಡ ಮತ್ತು ಮಧ್ಯಮ ಉದ್ಯಮಗಳನ್ನು ನಡೆಸುವ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುವುದು ಮತ್ತು ಬೆಲೆಗಳನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವುದು, ತನ್ಮೂಲಕ ಜನರಿಗೆ ಸಹಾಯವಾಗುವಂತೆ ಮಾಡುವುದು. ಈ ಹಿನ್ನೆಲೆಯಲ್ಲಿ ಭಾರತೀಯ ಯೋಜನಾ ಆಯೋಗವು ಸ್ಥಾಪಿತವಾಗಿ, ಪಂಚವಾರ್ಷಿಕ ಯೋಜನೆಗಳು ದೇಶದಲ್ಲಿ ಪ್ರಾರಂಭವಾದವು. ವ್ಯವಸಾಯಾಭಿವೃದ್ಧಿ ಮತ್ತು ಕೈಗಾರಿಕಾಭಿವೃದ್ಧಿಗೆ ಗಮನ ಕೊಡಲಾಯಿತು. ದಾದಾಭಾಯಿ ನವರೋಜಿ, ರಾನಡೆ, ಗೋಪಾಲಕೃಷ್ಣ ಗೋಖಲೆಯಂಥವರ ‘ರಾಷ್ಟ್ರೀಯವಾದಿ ಬಂಡವಾಳಶಾಹಿ ಹೂಡಿಕೆಗಳ’ ಬಗೆಗೆ ಮಾಡಿದ್ದ ಸಮರ್ಥನೆಗಳನ್ನು ನೆಹರೂ ದೂರವಿಟ್ಟ ಪರಿಣಾಮ ಸಮಾಜವಾದೀ ಧೋರಣೆಯ ಯೋಜನೆಗಳು ವೈಫಲ್ಯಗಳನ್ನೇ ಕಂಡವು. ಹಾಗಾಗಿಯೇ ಸಿ. ರಾಜಗೋಪಾಲಾಚಾರಿಯವರು ನೆಹರೂ ಸಮಾಜವಾದವನ್ನು ‘ಲೈಸನ್ಸ್ರಾಜ್ಯ’ ಎಂದು ಟೀಕಿಸಿದುದು.
ನೆಹರೂ ಕಾಲದಲ್ಲಿ ಮುಖ್ಯವಾಗಿ ಗುರುತಿಸಬಹುದಾದ ಯೋಜನೆಗಳೆಂದರೆ, ಭಾರತೀಯ ರಿಸರ್ವ್ ಬ್ಯಾಂಕ್ ಸರ್ಕಾರದ ವಶಕ್ಕೆ ಬಂದದ್ದು; ೧೯೫೦ರಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಜಾರಿಯಾದದ್ದು; ಖರಗ್ಪುರದಲ್ಲಿ ಮೊದಲ ಐಐಟಿ ಸ್ಥಾಪನೆಗೊಂಡದ್ದು; ೧೯೫೫ರಲ್ಲಿ ಭಾರತೀಯ ಸ್ಟೇಟ್ ಬ್ಯಾಂಕ್ ಪ್ರಾರಂಭ; ೧೯೫೬ರಲ್ಲಿ ಜೀವವಿಮಾ ನಿಗಮದ ರಾಷ್ಟ್ರೀಕರಣ ಮತ್ತು ೧೯೫೮ರಲ್ಲಿ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ಪ್ರಾರಂಭಿಸಲಾಗಿದ್ದು.
ಶಾಸ್ತ್ರಿಯವರ ಆಶಾದಾಯಕ ಆಡಳಿತ
ಲಾಲ್ಬಹದೂರ್ ಶಾಸ್ತ್ರಿಯವರು ದೇಶದ ಎರಡನೇ ಪ್ರಧಾನಿಯಾಗಿ ಕಾರ್ಯನಿರ್ವಹಿಸಿದ್ದು ಕೇವಲ ೧೯ ತಿಂಗಳು ಮಾತ್ರ. ಆ ಅಲ್ಪಕಾಲಾವಧಿಯಲ್ಲೇ ಅವರ ಉನ್ನತ ನಾಯಕತ್ವದ ಗುಣಗಳು ಪ್ರಕಟವಾದವು. ಪಾಕಿಸ್ತಾನದ ಮೇಲಿನ ಯುದ್ಧದಲ್ಲಿ ದೇಶವನ್ನು ಜಯದ ಬಾಗಿಲಿಗೆ ಕೊಂಡೊಯ್ದರು. ಹಾಗೆಯೇ ನೆಹರೂ-ಪ್ರಣೀತ ಧೋರಣೆಗಳಿಂದ ದೇಶದಲ್ಲಿ ಕೃಶವಾಗತೊಡಗಿದ್ದ ಕೃಷಿ ಕ್ಷೇತ್ರವನ್ನು ಮುಕ್ತಗೊಳಿಸಿ ಮಾರುಕಟ್ಟೆಯ ಕಡೆಯ ಬಾಗಿಲು ತೆರೆಯಲು ಪ್ರಯತ್ನಿಸಿದರು.
ಇಂದಿರಾಗಾಂಧಿ ಆಡಳಿತದ ಆರ್ಥಿಕ ಅಡೆತಡೆಗಳು (೧೯೬೫ರಿಂದ ೧೯೭೭)
ಇಂದಿರಾಗಾಂಧಿ ವೈಯಕ್ತಿಕವಾಗಿ ಸಮಾಜವಾದದ ಅಸ್ಪಷ್ಟ ಪರಿಕಲ್ಪನೆಯನ್ನು ಹೊಂದಿದ್ದರು. ಅವರ ಆರ್ಥಿಕ ನೀತಿಗಳು ಹೆಚ್ಚು ಸ್ವ-ಹಿತಾಸಕ್ತಿಯಿಂದಲೂ, ಸ್ಪಷ್ಟವಾದ ಸಮಾಜವಾದೀ ಧ್ಯೇಯಗಳ ಹೊರತಾಗಿಯೂ ಇದ್ದವು. ಅವರ ಆರ್ಥಿಕ ನೀತಿಯಿಂದ ಹೆಚ್ಚಿನ ಆದಾಯದ ಭಾರತೀಯರ ಮೇಲೆ ತೆರಿಗೆ ಹೆಚ್ಚಳದ ಭಾರ ಹೊರಿಸಲಾಯಿತು. ಬ್ಯಾಂಕ್ ರಾಷ್ಟ್ರೀಕರಣಗೊಳಿಸಿ ಬ್ಯಾಂಕ್ಕ್ಷೇತ್ರವನ್ನು ವಿಸ್ತರಿಸಲಾಯಿತು. ಹಸಿರು ಕ್ರಾಂತಿಯನ್ನು ಉತ್ತೇಜಿಸಲಾಯಿತು ಮತ್ತು ರಾಜಧನ ಪದ್ಧತಿಯನ್ನು ನಿಲ್ಲಿಸಲಾಯಿತು.
೧೯೬೭ರಲ್ಲಿ ರೂಪಾಯಿ ಅಪಮೌಲ್ಯೀಕರಣಗೊಳಿಸಲಾಯಿತು. ಆ ಕ್ರಮದಿಂದ ವ್ಯಾಪಾರಸ್ಥರು ಮತ್ತು ಗ್ರಾಹಕರು ತೊಂದರೆಗಳನ್ನು ಎದುರಿಸಬೇಕಾಯಿತು. ರಾಜಕೀಯದಲ್ಲಿ ತನ್ನ ಉಳಿವಿಗಾಗಿ ಇಂದಿರಾಗಾAಧಿ ‘ಗರೀಬೀ ಹಠಾವೊ’ ಎಂಬ ಘೋಷಣೆಯೊಂದಿಗೆ, ಬಡಭಾರತೀಯರ ಕನಸಿಗೆ ನೀರೆರೆಯತೊಡಗಿದರು. ಅಸಂಖ್ಯಾತ ಬಡ ಮತ್ತು ದುರ್ಬಲ ವರ್ಗದವರ ಹೃದಯವನ್ನು ಅವರು ಆ ಘೋಷಣೆಯೊಂದಿಗೆ ಗೆದ್ದಿದ್ದು ಈಗ ಇತಿಹಾಸ.
ಇಂದಿರಾಗಾಂಧಿ ದುರ್ಬಲ ಮತ್ತು ತೊಂದರೆಗೀಡಾಗುವ ಆರ್ಥಿಕತೆಯನ್ನು ಮುಂದುವರಿಸಿದರು. ೧೯೬೫ರಲ್ಲಿ ಪಾಕಿಸ್ತಾನದೊಂದಿಗಿನ ಯುದ್ಧದಿಂದ ಹಣಕಾಸಿನ ಸಮಸ್ಯೆಗಳು ತೀವ್ರವಾದವು. ಬರಗಾಲದಿಂದ ಉಂಟಾದ ಆಹಾರದ ಬಿಕ್ಕಟ್ಟು ದೇಶವನ್ನು ತೀವ್ರ ಕುಸಿತಕ್ಕೆ ದೂಡಿತು. ಆರ್ಥಿಕತೆಯನ್ನು ಉದಾರೀಕರಣಗೊಳಿಸುವ ಕ್ರಮಗಳು ಮತ್ತು ವಿದೇಶೀ ನೆರವಿನ ಪುನಃಸ್ಥಾಪನೆಗೆ ಪ್ರತಿಯಾಗಿ ಕರೆನ್ಸಿಯ ಅಪಮೌಲ್ಯೀಕರಣಕ್ಕೆ ಒಪ್ಪುವ ನಡೆಗಳನ್ನು ಅವರು ತೆಗೆದುಕೊಳ್ಳಬೇಕಾಯಿತು.
೧೯೬೭-೭೫ರ ಅವಧಿಯಲ್ಲಿ ಇಂದಿರಾರವರು ಸಮಾಜವಾದೀ ಧೋರಣೆಗಳ ಅನುಷ್ಠಾನಕ್ಕೆ ತೊಡಗಿದರು. ಇದು ೧೯೭೬ರಲ್ಲಿ ಅಧಿಕೃತವಾಗಿ ಘೋಷಣೆಯಾಯಿತೆನ್ನಬಹುದು. ಉದಾರೀಕರಣ ಕಾರ್ಯಕ್ರಮಗಳು ತ್ಯಜಿಸಲ್ಪಟ್ಟವು ಮುತ್ತು ಹೊಸ ಉದ್ಯಮಗಳಿಗೆ ಪರವಾನಗಿಗಳನ್ನು ವಿಸ್ತರಿಸಲಾಯಿತು. ೧೯೬೯ರಲ್ಲಿ ನಾಲ್ಕನೇ ಪಂಚವಾರ್ಷಿಕ ಯೋಜನೆಯನ್ನು ಪ್ರಾರಂಭಿಸಲಾಯಿತು. ಖಾಸಗಿ ವಲಯವನ್ನು ನಿಯಂತ್ರಿಸುವ ನೀತಿಗಳೂ ರೂಪುಗೊಂಡವು. ತುರ್ತುಪರಿಸ್ಥಿತಿ ದೇಶದಲ್ಲಿ ಹೇರುವ ಸಮಯಕ್ಕೆ ಐದನೇ ಪಂಚವಾರ್ಷಿಕ ಯೋಜನೆಯೊಂದಿಗೆ ೧೯೭೫ರ “ಇಪ್ಪತ್ತು (ಟ್ವೆಂಟಿ) ಅಂಶ ಕಾರ್ಯಕ್ರಮ”ವನ್ನು ಜಾರಿಗೆ ತರಲಾಯಿತು.
ಮೊದಲ ಕಾಂಗ್ರೆಸ್ ಹೊರತಾದ ಜನತಾ ಪಕ್ಷದ ಸರ್ಕಾರ (೧೯೭೭-೭೯)
ತುರ್ತುಪರಿಸ್ಥಿತಿಯ ವಿರುದ್ಧವಾಗಿ ಇಂದಿರಾಗಾಂಧಿಯನ್ನು ವಿರೋಧಿಸಿದ ಸಹಸ್ರಾರು ಜನ ಮತ್ತು ಜನನಾಯಕರುಗಳು ದೇಶದಾದ್ಯಂತ ಬಂಧನಕ್ಕೊಳಗಾದರು. ಆ ನಡೆಯಿಂದ ಪ್ರಜಾಪ್ರಭುತ್ವ ದಮನಕ್ಕೊಳಗಾಗಿ, ಇಂದಿರಾಗಾAಧಿ ತಮ್ಮ ಜನಪ್ರಿಯತೆಯನ್ನು ಕಳೆದುಕೊಳ್ಳಬೇಕಾಯಿತು. ಜಯಪ್ರಕಾಶ್ ನಾರಾಯಣ್ರ ನೇತೃತ್ವದಲ್ಲಿ ದೇಶದ ಬಹುತೇಕ ವಿರೋಧ ಪಕ್ಷಗಳು ಒಗ್ಗಟ್ಟಾಗಿ, ‘ಜನತಾ ಪಕ್ಷ’ ಎಂಬ ಹೆಸರಿನೊಂದಿಗೆ ಇಂದಿರಾರ ವಿರುದ್ಧ ಸಮರ ಸಾರಿದವು. ೧೯೭೭ರಲ್ಲಿ ನಡೆದ ಲೋಕಸಭಾ ಚುನಾವಣೆಯಲ್ಲಿ ಜನತಾ ಪಕ್ಷವು ಜಯಗಳಿಸಿ, ಮೊರಾರ್ಜಿ ದೇಸಾಯಿ ನೇತೃತ್ವದಲ್ಲಿ ಸರ್ಕಾರ ರಚಿಸಿತು.
ಆರ್ಥಿಕ ಸುಧಾರಣೆಗಳನ್ನು ಸಾಧಿಸುವಲ್ಲಿ ಜನತಾ ಸರ್ಕಾರವು ಹೆಚ್ಚಿನ ಯಶಸ್ಸು ಕಾಣಲಿಲ್ಲ. ಆರನೇ ಪಂಚವಾರ್ಷಿಕ ಯೋಜನೆಯನ್ನು ಜಾರಿಗೊಳಿಸಲಾಯಿತು. ಕೃಷಿ ಉತ್ಪಾದನೆ ಮತ್ತು ಗ್ರಾಮೀಣ ಕೈಗಾರಿಕೆಗಳ ಹೆಚ್ಚಳ, ಆರ್ಥಿಕ ಸ್ವಾವಲಂಬನೆ ಮತ್ತು ಸ್ಥಳೀಯ ಕೈಗಾರಿಕೆಗಳ ಉತ್ತೇಜನಕ್ಕೆ ಸರ್ಕಾರ ಪ್ರಯತ್ನಿಸಿತು. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಭಾರತೀಯ ಸಂಸ್ಥೆಗಳ ಸಹಭಾಗಿತ್ವಕ್ಕೆ ಒತ್ತು ನೀಡುವ ಬಗೆಗೆ ಸರ್ಕಾರವು ನಿರ್ಧಾರಗಳನ್ನು ತಳೆಯಿತು. ಈ ನೀತಿ ವಿವಾದಾತ್ಮಕವೆನಿಸಿ ವಿದೇಶೀ ಹೂಡಿಕೆ ಕುಂಠಿತಗೊಂಡಿತು. ಭಾರತದಿಂದ ಕೋಕಾ-ಕೋಲಾ ಮತ್ತು ಐಬಿಎಂನಂತಹ ಸಂಸ್ಥೆಗಳ ನಿರ್ಗಮನಕ್ಕೆ ಈ ನಿರ್ಧಾರಗಳು ಕಾರಣವಾಯಿತು. ಹಣದುಬ್ಬರ, ಇಂಧನ ಕೊರತೆ, ನಿರುದ್ಯೋಗ ಮತ್ತು ಬಡತನದ ಸಮಸ್ಯೆಗಳನ್ನು ಪರಿಹರಿಸುವುದರಲ್ಲಿ ಜನತಾ ಸರ್ಕಾರ ವಿಫಲಗೊಂಡಿತು. ಪಕ್ಷದ ಒಳಜಗಳಗಳಿಂದ ಮೊರಾರ್ಜಿ ದೇಸಾಯಿ ರಾಜೀನಾಮೆ ಕೊಡಬೇಕಾಯಿತು. ಅಲ್ಪಕಾಲಾವಧಿಗೆ ಚರಣ್ಸಿಂಗ್ ಪ್ರಧಾನಿಯಾದರು. ೧೯೭೯ರ ದ್ವಿತೀಯಾರ್ಧದಲ್ಲಿ ಚರಣ್ಸಿಂಗ್ ಆಳ್ವಿಕೆಯಲ್ಲಿ, ಹಣದುಬ್ಬರವು ಸರಾಸರಿ ೧೮%ರಷ್ಟು ಏರಿಕೆಯಾಯಿತು.
ಅಧಿಕಾರಕ್ಕೆ ಮರಳಿದ ಇಂದಿರಾಗಾಂಧಿ (೧೯೮೦-೧೯೮೪)
೧೯೮೦ರಲ್ಲಿ ಮತ್ತೆ ಲೋಕಸಭಾ ಚುನಾವಣೆಗಳಾಗಿ, ಇಂದಿರಾಗಾಂಧಿ ಪ್ರಧಾನಿಯಾದರು. ತಮ್ಮ ಎರಡನೆಯ ಅವಧಿಯಲ್ಲಿ ತೈಲ ಮತ್ತು ಆಹಾರ ಕೊರತೆಗಳಿಂದ ಹಣದುಬ್ಬರವನ್ನು ದೇಶ ಎದುರಿಸಬೇಕಾಯಿತು.
೧೯೮೨ರಲ್ಲಿ ಮೊದಲ ಉಪಗ್ರಹ ಬಣ್ಣದ ಟಿವಿ ಭಾರತಕ್ಕೆ ಬಂದಿತು. ಸಣ್ಣ ಕಾರುಗಳ ಉತ್ಪಾದನೆಗಾಗಿ ಮಾರುತಿ ಉದ್ಯೋಗ ಪ್ರಾರಂಭವಾಯಿತು. ೧೯೮೪ರಲ್ಲಿ ಜಪಾನಿನ ಸುಜುಕಿ ಸಂಸ್ಥೆಯ ಸಹಭಾಗಿತ್ವದಲ್ಲಿ ಮಾರುತಿ ಕಾರುಗಳ ಉತ್ಪಾದನೆ ಪ್ರಾರಂಭಗೊಂಡಿತು.
ರಾಜೀವ್ಗಾಂಧಿಯವರ ಹೊಸ ಆರ್ಥಿಕ ನೀತಿಗಳು (೧೯೮೪-೧೯೮೯)
ಇಂದಿರಾಗಾಂಧಿ ೧೯೮೪ರಲ್ಲಿ ಹತ್ಯೆಗೊಳಗಾದರು. ಆಗ ರಾಜೀವ್ಗಾಂಧಿ ತಮ್ಮ ನಲವತ್ತರ ಕಿರಿವಯಸ್ಸಿನಲ್ಲಿ ಪ್ರಧಾನಿಯಾಗಿ ಕಾಂಗ್ರೆಸ್ ಸಂಸದರಿಂದ ಆಯ್ಕೆಯಾದರು. ಅವರ ಆಡಳಿತದಲ್ಲಿ ವಿಜ್ಞಾನ, ತಂತ್ರಜ್ಞಾನ ಮತ್ತು ಕೈಗಾರಿಕೆಗಳಿಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಹೆಚ್ಚಿನ ಬೆಂಬಲ ದೊರೆಯಿತು. ತಂತ್ರಜ್ಞಾನ-ಆಧಾರಿತ ಕೈಗಾರಿಕೆಗಳ ಮೇಲೆ ವಿಶೇಷವಾಗಿ ಕಂಪ್ಯೂಟರ್, ವಿಮಾನಯಾನ, ರಕ್ಷಣೆ ಮತ್ತು ದೂರಸಂಪರ್ಕಗಳ ಮೇಲಿನ ಆಮದು ಕೋಟಾಗಳು, ತೆರಿಗೆಗಳು ಮತ್ತು ಸುಂಕಗಳನ್ನು ಕಡಿತಗೊಳಿಸಲಾಯಿತು. ೧೯೮೬ರಲ್ಲಿ ಅವರು ಉನ್ನತ ಶಿಕ್ಷಣದ ಆಧುನಿಕೀಕರಣಕ್ಕೆ ಮತ್ತು ವಿಸ್ತರಣೆಗೆ ರಾಷ್ಟ್ರೀಯ ಶಿಕ್ಷಣ ನೀತಿಯೊಂದನ್ನು ಘೋಷಿಸಿದರು. ಗ್ರಾಮೀಣ ಜನರಿಗೆ ಆರರಿಂದ ಹನ್ನೆರಡನೇ ತರಗತಿಯವರೆಗೆ ಉಚಿತ ವಸತಿ ಶಿಕ್ಷಣವನ್ನು ಒದಗಿಸುವ ಸರ್ಕಾರೀ ಶಿಕ್ಷಣಸಂಸ್ಥೆಗಳನ್ನು ಸ್ಥಾಪಿಸಿದರು. ೧೯೯೦ರ ನಂತರ ‘ಲೈಸನ್ಸ್ರಾಜ್’ ಅನ್ನು ಗಮನಾರ್ಹವಾಗಿ ಕಡಮೆ ಮಾಡುವ ಕ್ರಮಗಳನ್ನು ಕೈಗೊಂಡರು. ವ್ಯವಹಾರಸ್ಥರು ಮತ್ತು ವೈಯಕ್ತಿಕ ಬಂಡವಾಳಗಾರರು ಗ್ರಾಹಕ ಸರಕುಗಳನ್ನು ಖರೀದಿಸಲು ಮತ್ತು ನಿರ್ಬಂಧ ರಹಿತವಾಗಿ ಆಮದು ಮಾಡಿಕೊಳ್ಳಲು ಅವಕಾಶ ಮಾಡಿಕೊಟ್ಟರು.
ವಿ.ಪಿ. ಸಿಂಗ್ ಅಲ್ಪಾವಧಿ ಆಡಳಿತ (೧೯೮೯-೧೯೯೦)
ರಾಜೀವ್ಗಾಂಧಿಯವರೊಂದಿಗೆ ಭಿನ್ನಮತ ಹೊಂದಿದ ವಿ.ಪಿ. ಸಿಂಗ್ ನೇತೃತ್ವದಲ್ಲಿ ಕೆಲವು ಪಕ್ಷಗಳು ಕಲೆತು ಜನತಾ ದಳವನ್ನು ಸ್ಥಾಪಿಸಿ ೧೯೮೯ರಲ್ಲಿ ಕಾಂಗ್ರೆಸ್ ನಂತರದ ದೊಡ್ಡ ಪಕ್ಷವಾಗಿ ಹೊರಬಂತು. ವಿ.ಪಿ.ಸಿಂಗ್ ಅವರಿಗೆ ಭಾರತೀಯ ಜನತಾ ಪಕ್ಷವು ಬೆಂಬಲ ಸೂಚಿಸಿದ ಕಾರಣ ಪ್ರಧಾನಿಯಾಗಿ ಆಯ್ಕೆಯಾದರು. ಉತ್ತರೋತ್ತರ ಭಾರತೀಯ ಜನತಾ ಪಕ್ಷವು ಸರ್ಕಾರಕ್ಕೆ ಕೊಟ್ಟಿದ್ದ ಬೆಂಬಲ ಹಿಂಪಡೆಯಬೇಕಾಯಿತು. ಹಾಗಾಗಿ ೩೪೩ ದಿನಗಳ ಅವರ ಸರ್ಕಾರ ಕೊನೆಗೊಂಡಿತು. ಆ ನಂತರದಲ್ಲಿ ಚಂದ್ರಶೇಖರ್ ಕಾಂಗ್ರೆಸ್ ಪಕ್ಷದ ಬೆಂಬಲದೊಂದಿಗೆ ಪ್ರಧಾನಿಯಾಗಿ ಕೇವಲ ಏಳು ತಿಂಗಳ ಆಡಳಿತ ನಡೆಸಿದರು.
ಪಿ.ವಿ. ನರಸಿಂಹ ರಾವ್ ಅವರ ಉದಾರೀಕರಣ ನೀತಿ (೧೯೯೧ ರಿಂದ ೧೯೯೬)
ದುರದೃಷ್ಟದಿಂದ ರಾಜೀವ್ಗಾಂಧಿ ೧೯೯೧ ಮೇ ೨೧ರಂದು ತಮಿಳುನಾಡಿನ ಪೆರುಂಬುದೂರಿನಲ್ಲಿ ಶ್ರೀಲಂಕಾದ ಎಲ್ಟಿಟಿಯ ಕುಕೃತ್ಯದಿಂದ ಹತ್ಯೆಗೀಡಾದರು. ನಂತರ ನಡೆದ ಕೇಂದ್ರ ಚುನಾವಣೆಯಲ್ಲಿ ಕಾಂಗ್ರೆಸ್ ಪೂರ್ಣಬಹುಮತ ಪಡೆಯದಿದ್ದರೂ ಪ್ರಮುಖ ಪಕ್ಷವಾಗಿ ಹೊರಹೊಮ್ಮಿ ಪಿ.ವಿ. ನರಸಿಂಹರಾವ್ ಪ್ರಧಾನಿ ಚುಕ್ಕಾಣಿ ಹಿಡಿದರು.
ಪ್ರಮುಖ ಆರ್ಥಿಕ ಸವಾಲಿನೊಂದಿಗೆ ಪ್ರಾರಂಭವಾದ ನರಸಿಂಹರಾವ್ ಅವರ ಅಧಿಕಾರಾವಧಿಯಲ್ಲಿ ಅನೇಕ ಸುಧಾರಣಾ ಯೋಜನೆಗಳು ಜಾರಿಯಾದವು. ಆರ್ಥಿಕ ಸ್ಥಿತ್ಯಂತರವನ್ನು ತಹಬಂದಿಗೆ ತರಲು ಅವರು ಮನಮೋಹನಸಿಂಗ್ರನ್ನು ಅರ್ಥಮಂತ್ರಿಯಾಗಿ ನೇಮಿಸಿಕೊಂಡರು. ಬಹುತೇಕ ದಿವಾಳಿಯಾದ ರಾಷ್ಟçವನ್ನು ಆರ್ಥಿಕ ಕುಸಿತದಿಂದ ರಕ್ಷಿಸಲು ಅಂತರರಾಷ್ಟ್ರೀಯ ಹಣಕಾಸು ನಿಧಿ (ಐಎಂಫ್) ನೀತಿಗಳನ್ನು ಜಾರಿಗೆ ತರಲು ಸರ್ಕಾರ ನಿರ್ಧಾರ ಮಾಡಿದ ಕಾರಣ ಭಾರತದ ಬಾಗಿಲು ಜಾಗತೀಕರಣದತ್ತ ಸಾಗಿತು.
ಬೆಳೆಯುತ್ತಿರುವ ಹಣಕಾಸಿನ ಅಸಮತೋಲನದ ಆರ್ಥಿಕ ಬಿಕ್ಕಟ್ಟನ್ನು ತಪ್ಪಿಸಲು ೧೯೯೧ರಲ್ಲಿ ಅಂಗೀಕರಿಸಲ್ಪಟ್ಟ ಸುಧಾರಣೆಗಳಿಂದ ವಿದೇಶೀ ಹೂಡಿಕೆ ಬೆಳೆಯತೊಡಗಿತು. ಆ ಕಾರಣವಾಗಿ ಬಂಡವಾಳ ಮಾರುಕಟ್ಟೆಗಳು ಸುಧಾರಿಸತೊಡಗಿದವು. ದೇಶೀಯ ವ್ಯವಹಾರವನ್ನು ಮುಕ್ತಗೊಳಿಸಿದ್ದರಿಂದ ವ್ಯಾಪಾರ ಕ್ಷೇತ್ರಗಳಲ್ಲಿ ಹೆಚ್ಚು ಪ್ರಗತಿ ಕಾಣತೊಡಗಿತು. ಹಣಕಾಸಿನ ಕೊರತೆಯನ್ನು ಕಡಮೆ ಮಾಡುವುದು, ಸಾರ್ವಜನಿಕ ವಲಯ ಉದ್ಯಮಗಳ ಖಾಸಗೀಕರಣ ಮತ್ತು ಮೂಲಸೌಕರ್ಯದಲ್ಲಿ ಹೂಡಿಕೆಯನ್ನು ಹೆಚ್ಚಿಸುವುದು ಸರ್ಕಾರದ ಗುರಿಯಾಗಿದ್ದವು. ಭಾರತವನ್ನು ವಿದೇಶೀ ವ್ಯಾಪಾರಕ್ಕೆ ತೆರೆಯಲು ವ್ಯಾಪಾರ ಸುಧಾರಣೆಗಳು ಬಂದವು ಮತ್ತು ವಿದೇಶೀ ನೇರಹೂಡಿಕೆಯ ಪರಿಣಾಮವಾಗಿ ಅನೇಕ ಬದಲಾವಣೆಗಳಾದವು.
ಸೆಬಿ ಆಕ್ಟ್ ೧೯೯೨ ಮತ್ತು ಭದ್ರತಾ ಕಾನೂನುಗಳ (ತಿದ್ದುಪಡಿ) ಕಾನೂನುಗಳು ಜಾರಿಯಾದವು. ೧೯೯೨ರಲ್ಲಿ ಭಾರತದ ಶೇರು (ಇಕ್ವಿಟಿ) ಮಾರುಕಟ್ಟೆ ವಿದೇಶೀ ಸಾಂಸ್ಥಿಕ ಹೂಡಿಕೆದಾರರ ಹೂಡಿಕೆಗೆ ತೆರೆದುಕೊಂಡವು. ಜಾಗತಿಕ ಠೇವಣಿ ರಶೀದಿಗಳನ್ನು (ಜಿಡಿಆರ್) ನೀಡುವ ಮೂಲಕ ಅಂತರರಾಷ್ಟ್ರೀಯ ಮಾರುಕಟ್ಟೆಗಳಲ್ಲಿ ಬಂಡವಾಳವನ್ನು ಹೆಚ್ಚಿಸಲು ಭಾರತೀಯ ಸಂಸ್ಥೆಗಳಿಗೆ ಅನುಮತಿ ನೀಡಲಾಯಿತು. ಜಂಟಿ ಉದ್ಯಮಗಳಲ್ಲಿ ವಿದೇಶೀ ಬಂಡವಾಳದ ಪಾಲಿನ ಗರಿಷ್ಠ ಮಿತಿಯನ್ನು ಶೇಕಡಾ ೪೦ರಿಂದ ೫೧ಕ್ಕೆ ಹೆಚ್ಚಿಸುವ ಮೂಲಕ ವಿದೇಶೀ ನೇರಹೂಡಿಕೆಯನ್ನು ಉತ್ತೇಜಿಸುವ ಕಾರ್ಯಕ್ಕೆ ಸರ್ಕಾರ ಆದ್ಯತೆ ಕೊಟ್ಟಿತು.
ಲೋಕಸಭಾ ಚುನಾವಣೆಗಳು (೧೯೯೬ ಮತ್ತು ೧೯೯೮)
ಹನ್ನೊಂದನೇ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಯಾವುದೇ ಪಕ್ಷ ಬಹುಮತ ಪಡೆಯುವಲ್ಲಿ ವಿಫಲವಾಯಿತು. ಆದರೆ ಭಾರತೀಯ ಜನತಾ ಪಕ್ಷವು ಅತಿದೊಡ್ಡ ಪಕ್ಷವಾಗಿ ಹೊರಹೊಮ್ಮಿತು. ಅಟಲ್ ಬಿಹಾರಿ ವಾಜಪೇಯಿ ಪ್ರಧಾನಿಯಾಗಿ ಕೇವಲ ೧೩ ದಿನಗಳ ಆಡಳಿತ ನಡೆಸಿ ಬಹುಮತ ಸ್ಥಾಪಿಸುವಲ್ಲಿ ಸೋತರು. ಜನತಾ ದಳ ಮತ್ತು ಇತರ ಸಣ್ಣ ಪಕ್ಷಗಳ ಸಂಯುಕ್ತ ಗುಂಪು ಎಚ್.ಡಿ. ದೇವೇಗೌಡರನ್ನು ಪ್ರಧಾನಿಯಾಗಿ ಆರಿಸಿತು. ಆದರೆ ಅವರ ಆಡಳಿತ ಹನ್ನೊಂದು ತಿಂಗಳಲ್ಲೇ ಅಂತ್ಯವಾಗಿ, ಕಾಂಗ್ರ್ರೆಸ್ಸಿನ ಐ.ಕೆ. ಗುಜ್ರಾಲ್ ೧೯೯೭ ಏಪ್ರಿಲ್ನಲ್ಲಿ ಪ್ರಧಾನಿಯಾದರು. ಸಂಯುಕ್ತ ದಳದ ಆಂತರಿಕ ತಿಕ್ಕಾಟಗಳಿಂದ ಸರ್ಕಾರ ಉರುಳಿ ೧೯೯೮ರಲ್ಲಿ ಮತ್ತೊಮ್ಮೆ ಲೋಕಸಭೆಗೆ ಚುನಾವಣೆಗಳಾದವು.
ವಾಜಪೇಯಿಯವರ ಪ್ರಧಾನ ಆರ್ಥಿಕ ನಿರ್ಧಾರಗಳು (೧೯೯೮ – ೨೦೦೪)
೧೯೯೮ರ ಚುನಾವಣೆಯಲ್ಲಿ ಬಿಜೆಪಿ ಮತ್ತಿತರ ಸಮಾನ ನೀತಿಗಳ ಪಕ್ಷಗಳು ನ್ಯಾಷನಲ್ ಡೆಮೊಕ್ರಾಟಿಕ್ ಆಲಿಯನ್ಸ್ (ಎನ್ಡಿಎ) ವಾಜಪೇಯಿಯವರ ನೇತೃತ್ವದಲ್ಲಿ ರೂಪಿಸಿಕೊಂಡು ಬಹುಮತ ಪಡೆದವು. ಪ್ರಧಾನಿಯಾಗಿ ವಾಜಪೇಯಿ ಮೊತ್ತಮೊದಲ ಕಾಂಗ್ರೆಸೇತರ ಪ್ರಧಾನಿ ಎನಿಸಿದರು. ಎನ್ಡಿಎಯಿಂದ ಡಿಎಂಕೆ ಪಕ್ಷವು ಹೊರನಡೆದ ಕಾರಣ ೧೯೯೯ರಲ್ಲಿ ಮತ್ತೆ ಲೋಕಸಭೆಗೆ ಚುನಾವಣೆ ನಡೆಯಿತು. ಎನ್ಡಿಎ ೩೦೩ ಸ್ಥಾನಗಳನ್ನು ಪಡೆದು ಪ್ರಬಲ ಸರ್ಕಾರವನ್ನು ಮತ್ತೆ ವಾಜಪೇಯಿ ನೇತೃತ್ವದಲ್ಲಿ ರಚಿಸಿತು.
ಸರ್ಕಾರ ಆರ್ಥಿಕ ಸುಧಾರಣೆಗಳತ್ತ ಹೆಚ್ಚಿನ ಗಮನವಿರಿಸಿತು. ಹೈಟೆಕ್ ಮತ್ತು ಐಟಿ ಉದ್ಯಮ ವರ್ಧಿಸಿ ಉದ್ಯೋಗಗಳು ಸೃಷ್ಟಿಯಾದವು. ನಗರ ಆಧುನಿಕೀಕರಣ ಮತ್ತು ವಿಸ್ತರಣೆಯತ್ತ ಕಾರ್ಯಗಳು ರೂಪಿತವಾದವು. ಹಾಗಾಗಿ ೨೦೦೩ರಿಂದ ಪ್ರತಿ ವರ್ಷ ದೇಶದ ಜಿಡಿಪಿ ಬೆಳವಣಿಗೆ ಶೇ. ೭ನ್ನು ಮೀರತೊಡಗಿತು.
ವಾಜಪೇಯಿ ದೂರದೃಷ್ಟಿಯ ಆರ್ಥಿಕ ತಜ್ಞರಾಗಿದ್ದರು ಕೂಡ. ನಗರ ಮತ್ತು ಗ್ರಾಮೀಣ ಪ್ರದೇಶವನ್ನು ಉನ್ನತ ದರ್ಜೆಯ ರಸ್ತೆಗಳ ಮೂಲಕ ಸಂಪರ್ಕಿಸುವ ಯೋಜನೆಗಳನ್ನು ಜಾರಿಗೆ ತಂದರು. ಇದರಿಂದ ಆರ್ಥಿಕ ಬೆಳವಣಿಗೆ ಸಾಧ್ಯವೆಂದು ಅವರು ನಂಬಿದ್ದರು. ೨೦೦೧ರಲ್ಲಿ ಸರ್ವ ಶಿಕ್ಷಣ ಅಭಿಯಾನ ಯೋಜನೆ ಪ್ರಾರಂಭಿಸಲಾಯಿತು. ಇದರಿಂದ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲಿ ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುವ ಗುರಿಗೆ ಇಂಬು ದೊರಕಿತು.
೧೯೯೮ ಮೇ ತಿಂಗಳಲ್ಲಿ ಪೋಖ್ರಾನ್ ಪರೀಕ್ಷಾ ವ್ಯಾಪ್ತಿಯಲ್ಲಿ ಐದು ಪರಮಾಣು ಪರೀಕ್ಷೆಗಳನ್ನು ಭಾರತೀಯ ಸೇನೆ ನಡೆಸಿತು. ಪಾಕಿಸ್ತಾನ ಮತ್ತು ಚೀನಾದಿಂದ ನಿರಂತರವಾಗಿ ಹೆಚ್ಚುತ್ತಿದ್ದ ಯುದ್ಧ ಬೆದರಿಕೆಗಳ ಹಿನ್ನೆಲೆಯಲ್ಲಿ ಇದೊಂದು ಅತ್ಯಪೂರ್ವ ನಡೆಯಾಗಿತ್ತು. ಭಾರತವನ್ನು ಪರಮಾಣು ರಾಷ್ಟçವನ್ನಾಗಿ ಮಾಡಿದ ಶ್ರೇಯಸ್ಸು ವಾಜಪೇಯಿ ಅವರಿಗೆ ಸಲ್ಲುತ್ತದೆ. ಅವರ ಕಾಲದಲ್ಲೇ ಪಾಕಿಸ್ತಾನದ ವಿರುದ್ಧ ೧೯೯೯ರಲ್ಲಿ ಕಾರ್ಗಿಲ್ ಯುದ್ಧದಲ್ಲಿ ಭಾರತ ಜಯ ಸಾಧಿಸಿತು. ೨೦೦೧ರಲ್ಲಿ ಪಾರ್ಲಿಮೆಂಟ್ ಮೇಲೆ ಭಯೋತ್ಪಾದಕರ ದಾಳಿ ಮತ್ತು ೨೦೦೨ರಲ್ಲಿ ಗೋಧ್ರಾ ಪ್ರಕರಣಗಳು ನಡೆದವು.
ಮನಮೋಹನಸಿಂಗ್ ಆಡಳಿತ (೨೦೦೪ – ೨೦೧೪)
ಸಾರ್ವತ್ರಿಕ ಚುನಾವಣೆ ೨೦೦೪ರಲ್ಲಿ ನಡೆಯಿತು. ವಾಜಪೇಯಿ ಸರರ್ಕಾರದ ಸಾಧನೆಗಳನ್ನು ಜನ ಮೆಚ್ಚಿದ್ದಾರೆಂಬ ಸಾಮಾನ್ಯ ಅಭಿಪ್ರಾಯಕ್ಕೆ ವ್ಯತಿರಿಕ್ತವಾಗಿ ಕಾಂಗ್ರೆಸ್ ಮತ್ತು ೧೪ ಪಕ್ಷಗಳ ಯುಪಿಎ ಒಕ್ಕೂಟ ಎಡಪಕ್ಷಗಳ ಹೊರಗಿನ ಬೆಂಬಲದೊಂದಿಗೆ ಅಧಿಕಾರದ ಚುಕ್ಕಾಣಿ ಹಿಡಿಯಿತು. ಸೋನಿಯಾಗಾಂಧಿ ಅವರ ವಿದೇಶೀ ಪೌರತ್ವದ ಕಾರಣದಿಂದ ಪ್ರಧಾನಿಯಾಗುವ ಅವಕಾಶ ತಪ್ಪಿ, ಮನಮೋಹನಸಿಂಗ್ ಪ್ರಧಾನಿಯಾಗಿ ನಿಯುಕ್ತರಾದರು.
ಅವರ ಮೊದಲ ಐದು ವರ್ಷದ ಕಾಲಾವಧಿಯಲ್ಲಿ ವಾಜಪೇಯಿಯವರ ಸರ್ಕಾರದ ಕೆಲವು ಯೋಜನೆಗಳು ಮುಂದುವರಿದವು. ವಾಜಪೇಯಿ ಸರ್ಕಾರದ ಸುವರ್ಣ ಚತುರ್ಭುಜ ಮತ್ತು ಹೆದ್ದಾರಿ ಆಧುನಿಕೀಕರಣ ಕಾರ್ಯಕ್ರಮಗಳು ಮತ್ತೆ ಮುಂದುವರಿದವು. ಎಂಟು ಐಐಟಿಗಳನ್ನು ತೆರೆಯಲಾಯಿತು. ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಎನ್ಆರ್ಇಜಿಎ) ಮತ್ತು ಮಾಹಿತಿ ಹಕ್ಕು ಕಾಯ್ದೆ ಜಾರಿಗೆ ಬಂದಿತು. ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ ಕಾಯ್ದೆ ಜಾರಿಯಾಯಿತು.
೨೦೦೯ರ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಮಿತ್ರರಾಷ್ಟ್ರಗಳು ಬಹುಮತ ಗಳಿಸಿ, ಎರಡನೇ ಬಾರಿಗೆ ಮನಮೋಹನಸಿಂಗ್ ಪ್ರಧಾನ ಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಿದರು. ಈ ಎರಡನೇ ಅವಧಿಯಲ್ಲಿ ದೇಶ ಅನೇಕ ಹಗರಣಗಳನ್ನು ನೋಡಬೇಕಾಯಿತು. ಅನಗತ್ಯ ವಿವಾದಗಳಿಂದ ಸಿಂಗ್ ಅವರ ಹೆಸರು ಕಳಂಕಿತಗೊಂಡಿತು. ಸೋನಿಯಾರ ಆದೇಶದಂತೆ ನಡೆಯುವ ದುರ್ಬಲ ಪ್ರಧಾನಿ ಎಂದು ಅವರು ಅಂಕಿತಗೊಂಡರು.
೨ಜಿ ಸ್ಪೆಕ್ಟ್ರಮ್ ಹಗರಣ (೧.೭೬ ಲಕ್ಷ ಕೋಟಿಗಳು), ಕಾಮನ್ವೆಲ್ತ್ ಗೇಮ್ಸ್ ಹಗರಣ, ಕಲ್ಲಿದ್ದಲು ಹಗರಣ (೧.೮೬ ಲಕ್ಷ ಕೋಟಿ), ಚಾಪರ್ ಹಗರಣ ಮುಂತಾದವುಗಳಿಂದ ದೇಶ ಸಂಪೂರ್ಣವಾಗಿ ದುರ್ಬಲಗೊಂಡಿತು.
ಮೋದಿ ಅಲೆ ಮತ್ತು ಬಿಜೆಪಿ ಸರ್ಕಾರ (೨೦೧೪)
ಕಾಂಗ್ರೆಸ್ಸಿನ ಅನೇಕ ಹಗರಣಗಳಿಗೆ ಪ್ರಧಾನಮಂತ್ರಿ ಮನಮೋಹನಸಿಂಗ್ ಜವಾಬ್ದಾರರಾಗಬೇಕಾಯಿತು. ಭಾರತದ ಆರ್ಥಿಕ ಹಿನ್ನಡೆಗೂ ಅವರು ಹೊಣೆಗಾರರಾದರು. ಇದು ಪ್ರತಿಪಕ್ಷಗಳಿಗೆ ಮುಂದಿನ ಚುನಾವಣೆಯ ರಾಜಕೀಯ ಬೆಳವಣಿಗೆಗೆ ಮತ್ತು ಮತದಾರರ ಹೊಸ ಬದಲಾವಣೆಯ ಅಭೀಪ್ಸೆಗೆ ಕಾರಣವಾಯಿತು. ಈ ಹಿನ್ನೆಲೆಯ ಕಾರಣವಾಗಿ, ೨೦೧೪ರ ಸಾರ್ವತ್ರಿಕ ಚುನಾವಣೆಯ ಫಲಿತಾಂಶಗಳು ಭಾರತಕ್ಕೆ ಅಭೂತಪೂರ್ವವೆನಿಸಿದವು. ಮೂವತ್ತು ವರ್ಷಗಳ ನಂತರ ಲೋಕಸಭೆಯಲ್ಲಿ ಬಿಜೆಪಿ ಪಕ್ಷಕ್ಕೆ ಪೂರ್ಣ ಬಹುಮತ ಸಿಕ್ಕಿ, ನರೇಂದ್ರ ಮೋದಿ ಏಕಮೇವ ಒಮ್ಮತದ ಪ್ರಧಾನಿಯಾಗಿ ಸರ್ಕಾರದ ಚುಕ್ಕಾಣಿ ಹಿಡಿದರು.
ಸ್ವಾತಂತ್ರ್ಯಾನಂತರದಲ್ಲಿ ವಸಾಹತುಶಾಹಿ ಮತ್ತು ಪಶ್ಚಿಮ ದೇಶಗಳ ಕರಿನೆರಳು ಒಂದಲ್ಲ ಒಂದು ಬಗೆಯಲ್ಲಿ ದೇಶದ ಅನೇಕ ರಂಗಗಳಲ್ಲಿ ಚಾಚಿಕೊಂಡಿತ್ತು. ಅದೀಗ ಪೂರ್ಣವಾಗಿ ತೊಡೆದುಹೋಯಿತು. ಅನೇಕ ವ್ಯಾಖ್ಯಾನಕಾರರ ಅಭಿಪ್ರಾಯದಂತೆ, ಭಾರತ ಮೊಟ್ಟಮೊದಲ ಬಾರಿಗೆ ಸರ್ವತ್ರ ಸ್ವಾತಂತ್ರ್ಯದ ರುಚಿ ಅನುಭವಿಸಿತು. ಮೋದಿ ಹೊಸ ಭರವಸೆಯಾಗಿ ಹೊರಹೊಮ್ಮಿದರು ಮತ್ತು ಜನರನ್ನು ತಲಪಲು ಅವರು ನಾವಿನ್ಯ ತಂತ್ರಜ್ಞಾನ ಬಳಸಿ ಜನರೊಂದಿಗೆ ಸಂವಹನ ನಡೆಸಿದ ಅಭಿಯಾನ ಐತಿಹಾಸಿಕವೆನಿಸಿತು.
ಅಧಿಕಾರದ ಪ್ರಾರಂಭದಲ್ಲೇ ಸರ್ಕಾರ ಅತ್ಯಂತ ಸವಾಲಿನ ಸಮಸ್ಯೆಗಳನ್ನು ಎದುರಿಸಬೇಕಿತ್ತು. ಸತತ ಎರಡು ವರ್ಷಗಳ ಕಾಲ ದೇಶದ ಜಿಡಿಪಿ ಬೆಳವಣಿಗೆ ಶೇಕಡಾ ೫ರಷ್ಟಕ್ಕೆ ಇಳಿದು, ಉದ್ಯೋಗ ಸೃಷ್ಟಿ ಆದಾಯದ ಮೂಲ ಮತ್ತು ದೇಶದ ಹೂಡಿಕೆಗಳು ಕುಸಿತಗೊಂಡಿದ್ದವು.
ಮೋದಿ ಆರಂಭಿಸಿದ ಅಭಿವೃದ್ಧಿಯ ಅಭಿಯಾನಗಳು ಕ್ರಮೇಣ ಜನಸಾಮಾನ್ಯರನ್ನು ಮುಟ್ಟುವಲ್ಲಿ ಸಫಲವಾದವು. ಅವರು ಪ್ರಾರಂಭಿಸಿದ ಸ್ವಚ್ಛ ಭಾರತ, ಬೇಟೀ ಬಚಾವೊ, ಬೇಟೀ ಪಢಾವೊ, ಮೇಕ್ ಇನ್ ಇಂಡಿಯಾ ಅಭಿಯಾನಗಳು ಚಳವಳಿಯ ರೂಪ ತಳೆದು ಜನರು ಆಂದೋಲನದಲ್ಲಿ ಭಾಗವಹಿಸತೊಡಗಿದರು.
೨೦೧೪ ಆಗಸ್ಟ್ ೧೫ರಂದು ಮೋದಿ ‘ಪ್ರಧಾನ್ ಮಂತ್ರಿ ಜನ ಧನ್ ಯೋಜನೆ’ಯನ್ನು ಘೋಷಿಸಿ, ಎಲ್ಲ ಭಾರತೀಯರಿಗೆ ಬ್ಯಾಂಕ್ ಖಾತೆ ತೆರೆಯಲು, ಡೆಬಿಟ್ ಕಾರ್ಡ್ ಹೊಂದಲು, ವಿಮೆ ಮತ್ತು ಪಿಂಚಣಿಯಂತಹ ಸಾಮಾಜಿಕ ಭದ್ರತಾ ಯೋಜನೆಗಳ ಉಪಯೋಗ ಪಡೆಯಲು ದೊಡ್ಡ ಒತ್ತಾಸೆ ನೀಡಿದರು. ಈ ನಡೆಯ ಕಾರಣವಾಗಿ ಹಿಂದೆಂದೂ ಕಾಣದ ಪ್ರಮಾಣದಲ್ಲಿ ಯೋಜನೆಯು ಭಾರತದ ಅತಿ ಬಡವರ ಆರ್ಥಿಕ ಸ್ಥಿತಿ ಶಕ್ತಗೊಳಿಸುವಲ್ಲಿ ಸಫಲತೆ ಕಂಡಿತು. ಮೂರು ವರ್ಷಗಳ ಅವಧಿಯಲ್ಲಿ ಸುಮಾರು ೩೧ ಕೋಟಿ ಫಲಾನುಭವಿಗಳು ಈ ಯೋಜನೆಯಲ್ಲಿ ಸಹಭಾಗಿಗಳಾದರು. ಹಣಕಾಸು ಸೌಲಭ್ಯವನ್ನು ಕಡು-ಬಡವರೂ ಹೊಂದುವ ಈ ಯೋಜನೆ ಅಭೂತಪೂರ್ವವೆನಿಸಿತು. ವಿವಿಧ ತೆರಿಗೆಗಳ ಗೋಜಲುಗಳನ್ನು ತೆಗೆದುಹಾಕುವ ನಿಟ್ಟಿನಲ್ಲಿ ಸರ್ಕಾರವು ಏಕತೆರಿಗೆ ಜಿಎಸ್ಟಿ ಪದ್ಧತಿಯನ್ನು ಅನುಷ್ಠಾನಕ್ಕೆ ತಂದಿತು.
ರಸ್ತೆ, ರೈಲು, ಜಲಸಾರಿಗೆ, ಗಂಗಾನದಿ ಸ್ವಚ್ಛತೆ ಕಾರ್ಯಗಳ ಮಹತ್ತ್ವದ ನಿರ್ಧಾರಗಳು ಮತ್ತು ಅವನ್ನು ಪೂರ್ಣಗೊಳಿಸುವ ಸಾಮರ್ಥ್ಯವನ್ನು ಮೋದಿ ಮತ್ತು ಅವರ ತಂಡ ಹೊಂದಿದೆಯೆಂಬುದು ಜಗತ್ತಿಗೇ ಅರಿವಾಗತೊಡಗಿತು. ಕೇಂದ್ರಸರ್ಕಾರವೆಂದರೆ ಹಗರಣಗಳ ನೆಲೆ ಎಂಬ ಅಭಿಪ್ರಾಯವನ್ನು ಸಾರಾಸಗಟಾಗಿ ನಿರ್ಮೂಲನೆ ಮಾಡಿದ ಕೀರ್ತಿ ಮೋದಿಯವರಿಗೆ ಸಲ್ಲುತ್ತದೆ. ಯಾವುದೇ ಹಗರಣವಿಲ್ಲದೆ ಸರ್ಕಾರವನ್ನು ಪಾರದರ್ಶಕತೆಗೆ ಒಡ್ಡಿ, ಶುದ್ಧ ಆಡಳಿತವನ್ನು ನೀಡಿದ ಮೋದಿ ಭಾರತದ ರಾಜಕೀಯ ಇತಿಹಾಸದಲ್ಲಿಯೇ ಅತಿ ದೊಡ್ಡ ಸಾಧನೆ ಮಾಡಿದವರಾಗಿದ್ದಾರೆ.
ಮೋದಿ ಆಡಳಿತದ ಎರಡನೇ ಅವಧಿ (೨೦೧೯)
ಪ್ರಧಾನಿ ನರೇಂದ್ರ ಮೋದಿಯವರ ಎರಡನೇ ಅಧಿಕಾರದ ಅವಧಿ ಈಗ ಎರಡು ವರ್ಷಗಳನ್ನು ಪೂರೈಸಿದೆ. ಅವರ ಸಾಧನೆಗಳ ಪಟ್ಟಿಯಲ್ಲಿ ಹೆಚ್ಚಿನವು ಪರಿಣಾಮಾತ್ಮಕವಾಗಿವೆ. ಹಣದುಬ್ಬರ ನಿಯಂತ್ರಣಗೊಳ್ಳುತ್ತಿದೆ. ಕಳೆದ ಏಳು ವರ್ಷದಿಂದ ಭಾರತ ಸ್ಥಿರರೂಪದ ಸರ್ಕಾರವೊಂದನ್ನು ಕಂಡಿದೆ. ಭಾರತ ಜಿಡಿಪಿಯಲ್ಲಿ ವಿಶ್ವದ ಆರನೇ ಅತಿದೊಡ್ಡ ಮತ್ತು ಕೊಳ್ಳುವ ಶಕ್ತಿಯಲ್ಲಿ (ಪಿಪಿಪಿ) ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗಿದೆ. ಸರ್ಕಾರದ ಆರ್ಥಿಕ ನೀತಿಗಳ ಫಲವಾಗಿ ಅತಿ ಪ್ರಮುಖವೆನಿಸುವ ಕೆಲವು ಅಭಿವೃದ್ಧಿಗಳ ಮಾಪನ ಹೀಗೆ ಮಾಡಬಹುದು:
೧. ಜನ್ ಧನ್ ಯೋಜನೆಯಿಂದ ೪೨ ಕೋಟಿ ಖಾತೆಗಳ ಮೂಲಕ ಬ್ಯಾಂಕಿಂಗ್ ಪ್ರತಿ ಮೂಲೆಗಳನ್ನು ತಲಪಿರುವುದು.
೨. ಮುದ್ರಾ ಯೋಜನೆಯಲ್ಲಿ ೨೯ ಲಕ್ಷ ಕೋಟಿ ರೂ. ಸಾಲ ಮಂಜೂರಾಗಿ ಶೇಕಡಾ ೫೦ರಷ್ಟು ವಿತರಣೆಗೊಂಡು ಉದ್ಯಮಶೀಲತೆಯಲ್ಲಿ ಮಹತ್ ಕ್ರಾಂತಿಯಾಗಿರುವುದು. ಭಾರತವನ್ನು ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆಯ ದೇಶವನ್ನಾಗಿ ಪರಿವರ್ತಿಸಿದ ಸಾಧನೆ ಮಾಡಿರುವುದು.
೩. ಆರ್ಥಿಕ ನೀತಿ ನಿರೂಪಣೆಯನ್ನು ಅರ್ಥಮಾಡಿಕೊಳ್ಳಲು ಕೇಂದ್ರಸರ್ಕಾರಗಳು ಬಳಸುತ್ತಿದ್ದ ವಿಧಾನವನ್ನು ಮೋದಿ ಮೂಲಭೂತವಾಗಿ ಬದಲಾಯಿಸಿದ್ದಾರೆ. ರಾಜ್ಯಸರ್ಕಾರಗಳಿಗೆ ಸಲ್ಲಬೇಕಾದ ಆರ್ಥಿಕ ಮೊತ್ತಗಳು ಸಕಾಲದಲ್ಲಿ ಬಿಡುಗಡೆಯಾಗುತ್ತಿವೆ. ಸ್ವಾತಂತ್ರ್ಯಾನಂತರ ದೇಶದ ಎಲ್ಲ ಗ್ರಾಮಗಳನ್ನು ವಿದ್ಯುದೀಕರಿಸುವುದಾಗಲಿ, ಕಡುಬಡವರಿಗೆ ಸೂರು ನಿರ್ಮಿಸುವುದಾಗಲೀ, ಸರಿಯಾದ ನೈರ್ಮಲ್ಯ ವ್ಯವಸ್ಥೆ ಏರ್ಪಡಿಸುವುದಾಗಲೀ, ಆರೋಗ್ಯ ವ್ಯವಸ್ಥೆ ಜನಸಾಮಾನ್ಯರ ಕೈಗೆಟಕುವಂತೆ ಮಾಡುವುದಾಗಲೀ ಹಿಂದೆ ಸಾಧ್ಯವಾಗಿರಲಿಲ್ಲ. ಮೋದಿ ಆ ಅಸಮತೋಲನವನ್ನು ಬಹುಮಟ್ಟಿಗೆ ಸರಿಪಡಿಸಿದ್ದಾರಷ್ಟೇ ಅಲ್ಲದೆ ಪ್ರತಿ ಮನೆಗೆ ಒಂದಾದರೂ ನೀರಿನ ಸಂಪರ್ಕ ಸಿಗುವುದರ ಆದ್ಯತೆಯನ್ನೂ ಅದು ಮನಗಂಡಿದೆ. ಖಾಸಗೀಕರಣಕ್ಕಾಗಿ ನೀತಿ ಚೌಕಟ್ಟನ್ನು ರೂಪಿಸಿದಂತೆಯೇ ಕೃಷಿ ಕ್ಷೇತ್ರಕ್ಕೂ ಹೊಸ ಮಾದರಿ ಕಾನೂನುಗಳು ರೂಪುಗೊಂಡಿವೆ.
೪. ಒಂದು ಸೂರ್ಯ, ಒಂದು ವಿಶ್ವ, ಒಂದು ಗ್ರಿಡ್ (OSOWOG) ಮೋದಿಯವರ ಮಹತ್ತ್ವದ ಯೋಜನೆಯಾಗಿದ್ದು, ಭಾರತವು ತನ್ನ ಜಾಗತಿಕ ಸೌರ ನಾಯಕತ್ವವನ್ನು ಅಂತಾರಾಷ್ಟಿçÃಯ ಸೌರ ಒಕ್ಕೂಟದಲ್ಲಿ ಸ್ಥಾಪಿಸುತ್ತಿದೆ. ಸೌರಶಕ್ತಿಯ ಬಹುಪ್ರಯೋಜನಗಳನ್ನು (ಕಡಮೆ ವೆಚ್ಚ, ಶೂನ್ಯ ಮಾಲಿನ್ಯ ಇತ್ಯಾದಿ) ಜಾಗತಿಕವಾಗಿ ಹರಡಲು ಏಕ ಸೌರವಿದ್ಯುತ್ ಗ್ರಿಡ್ ಅನ್ನು ಹಂತಹಂತವಾಗಿ ಅಭಿವೃದ್ಧಿಪಡಿಸುವ ಯೋಜನೆ ಇದಾಗಿದೆ.
೫. ಒನ್ ಬೆಲ್ಟ್ ಒನ್ ರೋಡ್ ಎಂಬ ಚೀನಾದ ಉಪಕ್ರಮದ ನಿವಾರಣೆಯ ಭಾಗವಾಗಿ ಡೋಕ್ಲಾಮ್ ಮತ್ತು ಪಾಂಗೊಂಗ್ ಸರೋವರದಿಂದ ಚೀನಾವನ್ನು ಹಿಮ್ಮೆಟ್ಟುವಂತೆ ಮಾಡಲಾಗಿದೆ.
೬. ಕೇಂದ್ರಸರ್ಕಾರದಿಂದ ಕೋವಿಡ್ ನಿಯಂತ್ರಿಸುವಲ್ಲಿಯ ಕಾರ್ಯ ಯಶಸ್ವಿಯೆನಿಸಿ, ಲಸಿಕೆಯ ವಿತರಣೆ ದೇಶದ ಎಲ್ಲ ರಾಜ್ಯಗಳಿಗೆ ಅತ್ಯುತ್ತಮ ಮಟ್ಟದಲ್ಲಿ ನಡೆದಿದೆ. ಕಡಮೆ ಅವಧಿಯಲ್ಲಿ ಪರಿಣಾಮಕಾರಿಯಾದ ಲಸಿಕೆಯನ್ನು ಅಭಿವೃದ್ಧಿಪಡಿಸಿ ಭಾರತ ಅಚ್ಚರಿಯ ಸಾಧನೆ ಮಾಡಿದೆ.
೭. ದೇಶದ ವಿದೇಶಾಂಗ ನೀತಿಯಲ್ಲಿ ಅತ್ಯಂತ ಮಹತ್ತ್ವದ ಬದಲಾವಣೆಗಳಾಗಿವೆ. ದೀರ್ಘಾವಧಿ ರಾಷ್ಟ್ರೀಯ ಹಿತಾಸಕ್ತಿಯ ಹಿನ್ನೆಲೆಯಲ್ಲಿ ನಮ್ಮ ನೀತಿಗಳು ರೂಪಿತವಾಗುತ್ತಿವೆ.
೮. ಖಾಸಗಿ ಉದ್ಯಮಗಳು ಕಾನೂನು ಬದ್ಧ ಮತ್ತು ಗೌರವಯುತವಾಗಿದ್ದಲ್ಲಿ ಬೇಡಿಕೆ ಮತ್ತು ಲಾಭಗಳ ಮೇಲೆ ನಿರ್ಬಂಧವಿರುವುದಿಲ್ಲ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಿದೆ. ಮೋದಿ ಸ್ವತಃ ಉದ್ಯಮಿಗಳಿಗೆ ರಕ್ಷಣೆಯ ಮತ್ತು ರಾಷ್ಟ್ರನಿರ್ಮಾಣಕಾರರ ಸ್ಥಾನ ಕೊಡುವ ಪ್ರಸ್ತಾಪ ಮಾಡಿರುವುದರಿಂದ ಉದ್ಯಮಿಗಳಿಂದ ಅತ್ಯಂತ ಮಹತ್ತ್ವದ ಆರ್ಥಿಕ ಕೊಡುಗೆಗಳನ್ನು ದೇಶ ನಿರೀಕ್ಷಿಸಬಹುದಾಗಿದೆ.
ಮೋದಿಯವರ ಮೇ ೧೨, ೨೦೨೧ರ ಘೋಷಣೆಗಳು
ಮೋದಿಯವರು ರಾಷ್ಟçವ್ಯಾಪಿ ಲಾಕ್ಡೌನ್ ಜಾರಿಮಾಡಿದ ನಂತರ, ಮೇ ೧೨, ೨೦೨೧ರಂದು ರಾಷ್ಟçವನ್ನು ಉದ್ದೇಶಿಸಿ ಪ್ರಬಲ, ಸ್ವಾವಲಂಬಿ ರಾಷ್ಟ್ರವಾಗಿ ಭಾರತ ಹೊರಹೊಮ್ಮುವ ಸಾಮರ್ಥ್ಯದ ಬಗ್ಗೆ ಮಾತನಾಡಿದರು. ಅವರ ಮಾತುಗಳು ಕೋವಿಡ್ ಹಿನ್ನೆಲೆಯಲ್ಲಿ ಜನರ ವಿಷಾದ, ಹತಾಶೆ ಮತ್ತು ಅಪನಂಬಿಕೆಯನ್ನು ತೊಡೆಯುವ ಮಾರ್ಗದಲ್ಲಿತ್ತು. ಕೋವಿಡ್ ಪೀಡಿತ ಆರ್ಥಿಕತೆಯನ್ನು ಪುನರುಜ್ಜೀವಗೊಳಿಸಲು ಜಿಡಿಪಿಯ ಶೇ. ೧೦ಕ್ಕೆ ಸಮನಾದ ೨೦ ಲಕ್ಷ ಕೋಟಿ ರೂಪಾಯಿಗಳನ್ನು ‘ಆತ್ಮನಿರ್ಭರ ಭಾರತ ಅಭಿಯಾನ’ ಪ್ಯಾಕೇಜ್ ಅಡಿಯಲ್ಲಿ ಘೋಷಿಸಿದರು. ೨೧ನೇ ಶತಮಾನವನ್ನು ‘ಸ್ವಾವಲಂಬಿ ಭಾರತ’ ವನ್ನಾಗಿ ಪರಿವರ್ತಿಸಲು ಪ್ರತಿ ಪ್ರಜೆಯೂ ಪಣ ತೊಡಬೇಕೆನ್ನುವ ಆಶಯವನ್ನು ಅವರು ವ್ಯಕ್ತಪಡಿಸಿದರು.
ಸರ್ಕಾರವು ಸುಸ್ಥಿರ ಬೆಳವಣಿಗೆಯನ್ನು ಉತ್ತೇಜಿಸುವ ಕ್ರಮಗಳಿಗೆ ಹಣವನ್ನು ನೀಡುತ್ತದೆ ಎಂದು ಮೋದಿ ಸ್ಪಷ್ಟಪಡಿಸಿದರು. ಮುಖ್ಯವಾಗಿ, ಸ್ವಾವಲಂಬನೆಯ ಗುರಿಯನ್ನು ಉತ್ತೇಜಿಸುವ ಮೂಲಕ, ಪ್ರಧಾನಿ ಕೋವಿಡ್ ಪೀಡನೆಯಿಂದ ದೇಶವು ಎದುರಿಸುತ್ತಿರುವ ಸವಾಲುಗಳನ್ನು ನಿವಾರಿಸಲೆಂದೇ ಸರ್ಕಾರ ಆರ್ಥಿಕ ದೃಷ್ಟಿಕೋನವನ್ನು ಮರುಹೊಂದಿಸುತ್ತಿರುವ ಸಂಕೇತವನ್ನು ಜನತೆಗೆ ಮನದಟ್ಟು ಮಾಡಿದರು. ಸ್ಥಳೀಯ ಬ್ರಾಂಡ್ಗಳನ್ನು ಜಾಗತಿಕ ಮಟ್ಟಕ್ಕೆ ತರುವ ಉದ್ದೇಶ ಮತ್ತು ಜಗತ್ತಿಗೆ ಸಹಾಯ ಮಾಡುವ ಉದ್ಯಮಗಳನ್ನು ನಿರ್ಮಿಸುವ ಸಾಮರ್ಥ್ಯವನ್ನು ದೇಶ ಹೊಂದುವ ಆಶಯ ಅದಾಗಿತ್ತು.
ಆ ನಂತರದಲ್ಲಿ ಹಣಕಾಸು ಮಂತ್ರಿ ನಿರ್ಮಲಾ ಸೀತಾರಾಮನ್ ಆರ್ಥಿಕ ಪ್ಯಾಕೇಜ್ ಮತ್ತು ಸುಧಾರಣೆಗಳನ್ನು ಪ್ರಕಟಿಸಿದರು. ನಗರ ವಲಸಿಗರು, ರೈತರು, ಅತಿ ಸಣ್ಣ ಮತ್ತು ಮಧ್ಯಮ ಉದ್ಯಮಗಳು (ಎಂಎಸ್ಎಂಇ), ರಿಯಲ್ ಎಸ್ಟೇಟ್ ಮತ್ತು ವಿದ್ಯುತ್ ಕ್ಷೇತ್ರಗಳಿಗೆ ಪ್ಯಾಕೇಜ್ಗಳ ಘೋಷಣೆಗಳಾದವು. ಶಿಕ್ಷಣ, ಕಲ್ಲಿದ್ದಲು ಗಣಿಗಾರಿಕೆ ಮತ್ತು ಉತ್ಪಾದನಾ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡುವ ಪ್ರಕಟಣೆ ಮಾಡಲಾಯಿತು.
ಆರ್ಥಿಕ ತಜ್ಞರ ಅಭಿಪ್ರಾಯದಂತೆ ಮೋದಿಯವರ ‘ಸ್ವಾವಲಂಬಿ ಭಾರತ’ದ ಪರಿಕಲ್ಪನೆಯು ದತ್ತೋಪಂತ ಠೇಂಗಡಿಯವರ ಸ್ವದೇಶೀ ಅರ್ಥಶಾಸ್ತ್ರ ಪ್ರಣಾಳಿಕೆಗೆ ಅನುಸ್ರೂತವಾಗಿದೆ. ಬಂಡವಾಳಶಾಹಿ ಅಥವಾ ಸಮಾಜವಾದ ಎರಡೂ ಭಾರತಕ್ಕೆ ಪರಿಹಾರವಾಗಲಾರದು. ಜನರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿಯನ್ನು ಹೊಂದಿರುತ್ತಾರಾದ್ದರಿಂದ ಮತ್ತು ಪ್ರತಿ ದೇಶಕ್ಕೆ ಪ್ರಗತಿ ಮತ್ತು ಅಭಿವೃದ್ಧಿಯ ಮಾದರಿಯು ತನ್ನದೇ ಆದ ಸಾಂಸ್ಕೃತಿಕ ನೀತಿಗೆ ಅನುಗುಣವಾಗಿರಬೇಕು ಎನ್ನುವುದು ಆ ಸಿದ್ಧಾಂತದ ಅಡಿಪಾಯವಾಗಿದೆ.
ಈ ದಾರಿಯ ಚಿಂತನೆಗೆ ಪೂರಕವಾಗಿ, ೨೦೧೯ರಲ್ಲಿ ತಮ್ಮ ‘ಮನ್ ಕೀ ಬಾತ್’ ಕಾರ್ಯಕ್ರಮದಲ್ಲಿ ಮೋದಿ ಸ್ವದೇಶೀ ವಸ್ತುಗಳನ್ನು ಉತ್ತೇಜಿಸಲು ಸ್ಥಳೀಯ ಉತ್ಪನ್ನಗಳನ್ನು ಖರೀದಿಸುವಲ್ಲಿ ಜನರು ಪ್ರೇರಣೆಗೊಳ್ಳಬೇಕೆಂದು ಮನವಿ ಮಾಡಿದುದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದಾಗಿದೆ. “ಭಾರತದಲ್ಲಿ ನಮ್ಮ ಜನರಿಂದಲೇ ತಯಾರಿಸಿದ ಉತ್ಪನ್ನಗಳು, ದೇಶವಾಸಿಗಳ ಬೆವರಿನ ಸುಗಂಧವನ್ನು ಹೊತ್ತ ವಸ್ತುಗಳಾಗಿರುವುದರಿಂದ ಅವನ್ನು ಖರೀದಿಸಲು ನಾವು ಸಂಕಲ್ಪಿಸಲಾಗುವುದಿಲ್ಲವೇ? ಈ ಕೆಲಸವನ್ನು ಕೇವಲ ಸರ್ಕಾರದಿಂದ ಕೈಗೊಳ್ಳಲಾಗುವುದಿಲ್ಲ. ಆದರೆ ಯುವಜನರು ದೇಶದಾದ್ಯಂತ ಸಣ್ಣ ಸಂಸ್ಥೆಗಳನ್ನು ಸ್ಥಾಪಿಸಿ ಜನರನ್ನು ಪ್ರೇರೇಪಿಸಬೇಕು” ಎಂಬ ಮಾತುಗಳನ್ನು ಮೋದಿ ಆಡಿದ್ದರು.
ಮೋದಿಯವರ ಆ ಮಾತುಗಳು ದೇಶದ ಹೊಸ ಆರ್ಥಿಕ ಚಿಂತನೆಯ ದಿಶೆಯನ್ನು ಒಳಗೊಂಡಿತ್ತೆಂದು ನಾವು ಅರಿಯಬಹುದಾಗಿದೆ. ಭಾರತೀಯ ಉತ್ಪನ್ನಗಳತ್ತ ಜನರು ಮುಖ ಮಾಡಲೆನ್ನುವ ಆಶಯ ಅತಿಬಡವರ ಜೀವನದಲ್ಲೂ ಸಮೃದ್ಧಿಯನ್ನು ತರುವ ಒಂದು ಪ್ರಯತ್ನವೆಂದು ವಿಶ್ಲೇಷಿಸಬಹುದಾಗಿದೆ. ದೇಶದ ದೃಢತೆ, ಗ್ರಾಮ ಮತ್ತು ನಗರ ಸ್ವಾವಲಂಬನೆ, ಜನಸಾಮುದಾಯಿಕ ಉತ್ಪಾದನೆ, ಬಡತನ ನಿರ್ಮೂಲನ, ನಿರುದ್ಯೋಗ ನಿವಾರಣೆ, ವಿಜ್ಞಾನ ಮತ್ತು ತಂತ್ರಜ್ಞಾನಗಳ ಉತ್ತಮ ಬಳಕೆಯಾಗಿ ನಮ್ಮ ಸಮಾಜ ಪೂರ್ಣಪ್ರಮಾಣದಲ್ಲಿ ಆರ್ಥಿಕ ಅಭಿವೃದ್ಧಿ ಕಾಣುವಂತಾಗಬೇಕು. ಅಂತೆಯೇ, ನರೇಂದ್ರ ಮೋದಿಯವರಂತಹ ರಾಷ್ಟ್ರಪ್ರಜ್ಞೆಯ ನೇತಾರರಿಂದ ಅದು ಸಾಧ್ಯ ಎಂಬ ಪ್ರತಿ ಭಾರತೀಯನ ನಂಬಿಕೆ ಸಾಕಾರಗೊಳ್ಳಲಿ.