“ಭಾರತವೆಂದರೆ ವಸಾಹತುಶಾಹಿಯಿಂದ ಬಿಡುಗಡೆಗೊಂಡ ದೇಶವಷ್ಟೇ ಅಲ್ಲ; ತನ್ನ ಅಸ್ಮಿತೆಯನ್ನು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಖಚಿತ ಹೆಜ್ಜೆಗಳಿಂದ ಮುನ್ನಡೆಸಲು ಶಕ್ತವಾಗಿರುವ ದೇಶ ಎಂಬ ಸಂದೇಶವನ್ನು ಕೊಟ್ಟಿರುವುದೇ ಮೋದಿ ಸರ್ಕಾರದ ಪ್ರಮುಖ ಸಾಧನೆ. ಜಮ್ಮು-ಕಾಶ್ಮೀರದ ಪುನರ್ವಿಂಗಡಣೆ ಮತ್ತು ಅಲ್ಲಿಯ ೩೭೦ ಮತ್ತು ೩೫ಎ ವಿಧಿಗಳ ರದ್ದತಿ ಮುಂದಿನ ದಿನಗಳಲ್ಲಿ ಭಾರತ ತನ್ನ ಅಸ್ತಿತ್ವವನ್ನು ಹೇಗೆ ಪ್ರಬಲವಾಗಿ ಸ್ಥಾಪಿಸಬಯಸುತ್ತದೆ ಎಂಬುದಕ್ಕೆ ಸೂಚನೆ” ಎಂದು ಲೇಖಕ ಬೇಳೂರು ಸುದರ್ಶನ್ ಅವರು ತಮ್ಮ ಒಂದು ಲೇಖನದಲ್ಲಿ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಮತ್ತು ಅವರ ತಂಡ ಕೆಲಸ ಮಾಡುವ ರೀತಿ ಎಂದರೂ ಸಲ್ಲುತ್ತದೆ.
ರಾಷ್ಟ್ರಪತಿ ದಿ. ಪ್ರಣವ್ ಮುಖರ್ಜಿ ಅವರು ತಮ್ಮ The Presidential Years (೨೦೧೨-೧೭) ಪುಸ್ತಕದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಹೀಗೆ ಹೇಳಿದ್ದಾರೆ: “ಅವರು ಒಬ್ಬ ಪಕ್ಕಾ (To the core) ರಾಜಕಾರಣಿ. ಪಕ್ಷ (ಬಿಜೆಪಿ) ಅವರನ್ನು ಪ್ರಧಾನಿ ಅಭ್ಯರ್ಥಿ ಎಂದು ಘೋಷಿಸುವಾಗ ಅವರು ಗುಜರಾತಿನ ಮುಖ್ಯಮಂತ್ರಿಯಾಗಿದ್ದರು. ಅವರು ಸಮುದಾಯದೊಂದಿಗೆ ಸುಲಭವಾಗಿ ಕ್ಲಿಕ್ ಆಗುತ್ತಾರೆ.
ಪ್ರಧಾನಿ ಹುದ್ದೆಯನ್ನು ಅವರು ಅರ್ಹತೆಯಿಂದ ಗಳಿಸಿದರು. ಮತ್ತು ಅದರಲ್ಲಿ ಸಾಧಿಸಿದರು.”
ತಾವು ತಾತ್ತ್ವಿಕವಾಗಿ ಸಂಸದೀಯ ಪದ್ಧತಿಯಲ್ಲಿ ನಂಬಿಕೆ ಇದ್ದವರಾದ ಕಾರಣ ತಮಗೆ ಮೋದಿ ಅವರೊಂದಿಗೆ ಹಾರ್ದಿಕ ಸಂಬಂಧ ಇರಿಸಿಕೊಳ್ಳುವುದಕ್ಕೆ ಯಾವುದೇ ತೊಂದರೆ ಆಗಲಿಲ್ಲವೆಂದು ಕೂಡ ಮುಖರ್ಜಿ ಹೇಳಿದ್ದಾರೆ. ದೇಶವೇ ತಿಳಿದಿರುವಂತೆ ಅವರಿಬ್ಬರ ಸಂಬಂಧ ಉತ್ತಮವಾಗಿಯೇ ಇತ್ತು.
ಇಲ್ಲಿ ಪಕ್ಕಾ ರಾಜಕಾರಣಿ ಎನ್ನುವ ಮಾತು ಗಮನ ಸೆಳೆಯುತ್ತದೆ. ಮಾಜಿ ರಾಷ್ಟçಪತಿಯವರು ಅದನ್ನು ಯಾವುದೇ ಋಣಾತ್ಮಕವಾಗಿ ಹೇಳಿಲ್ಲ. ಅಂತಹ ‘ಪಕ್ಕಾ ರಾಜಕಾರಣಿ’ ಆಗಿರುವುದರಿಂದಲೇ ಮೋದಿ ಅವರು ವರ್ಷದಲ್ಲಿ ಒಂದೇ ಒಂದು ದಿನ ರಜೆ ತೆಗೆದುಕೊಳ್ಳದೆ ದಿನದ ೧೮-೨೦ ತಾಸು ದುಡಿಯುತ್ತಿದ್ದಾರೆ ಎನ್ನಬಹುದು.
ಇದು ಮೋದಿ ಅವರ ವ್ಯಕ್ತಿತ್ವದ ಬಗೆಗಿನ ಒಂದು ಅಂಶವಾದರೆ, ಇನ್ನೊಂದು ಅವರ ಗಟ್ಟಿ ವ್ಯಕ್ತಿತ್ವದಲ್ಲಿ ಕೆಲವೊಮ್ಮೆ ಅಭಿವ್ಯಕ್ತಗೊಳ್ಳುವ ಭಾವನಾತ್ಮಕ ಮತ್ತು ದಯಾರ್ದ್ರ ಹೃದಯದಲ್ಲಿ ಕಾಣಿಸುತ್ತದೆ. ಸಂದರ್ಭ: ಕಾಂಗ್ರೆಸ್ನ ಹಿರಿಯ ನಾಯಕ ಗುಲಾಂ ನಬಿ ಆಜಾದ್ ಅವರು ರಾಜ್ಯಸಭೆಯಿಂದ ನಿವೃತ್ತರಾದ ವೇಳೆ ಅವರಿಗೆ ಸದನದಲ್ಲಿ ವಿದಾಯ ಕೋರಿದ್ದು. ಅಲ್ಲಿ ಮಾತನಾಡುವಾಗ ಮೋದಿ ಭಾವುಕರಾದರು. ೨೦೦೬ರಲ್ಲಿ ಕಾಶ್ಮೀರದ ಮುಖ್ಯಮಂತ್ರಿಯಾಗಿದ್ದ ಗುಲಾಂ ನಬಿ ಅವರು, ಕಾಶ್ಮೀರದಲ್ಲಿ ಗುಜರಾತಿನ ಶಾಲಾಮಕ್ಕಳ ಮೇಲೆ ನಡೆದ ಭಯೋತ್ಪಾದಕ ದಾಳಿ-ಸಾವಿನ ಘಟನೆಯನ್ನು ಸ್ವತಃ ಫೋನ್ ಮಾಡಿ ಗುಜರಾತ್ ಮುಖ್ಯಮಂತ್ರಿಯಾಗಿದ್ದ ತನಗೆ ತಿಳಿಸಿದರು; ಆಗ ಅವರು ಅಳುತ್ತಿದ್ದರು – ಎಂದರು ಮೋದಿ. ಇದನ್ನು ನೆನಪಿಸಿಕೊಳ್ಳುವಾಗಲೂ ಮೋದಿ ಅತ್ತರು. ‘ಮೃದೂನಿ ಕುಸುಮಾದಪಿ’ (ಹೂವಿಗಿಂತಲೂ ಕೋಮಲ) ಎಂದರೆ ಇದೇ ಅಲ್ಲವೆ? ಹೃದಯದಲ್ಲಿ ಇಂತಹ ಪ್ರೀತಿ ಇಲ್ಲದಿದ್ದರೆ ಸಾರ್ವಜನಿಕ ಜೀವನದಲ್ಲಿ ಅಷ್ಟೊಂದು ಮೇಲೇರಲು ಅಸಾಧ್ಯ ಎನ್ನಬಹುದು; ಅಲ್ಲವೆ?
ಶತ್ರುದೇಶಗಳಿಗೆ ನೀಡಿದ ಸಂದೇಶ
“ಭಾರತವೆಂದರೆ ವಸಾಹತುಶಾಹಿಯಿಂದ ಬಿಡುಗಡೆಗೊಂಡ ದೇಶವಷ್ಟೇ ಅಲ್ಲ; ತನ್ನ ಅಸ್ಮಿತೆಯನ್ನು ಭೌಗೋಳಿಕವಾಗಿ, ಸಾಂಸ್ಕೃತಿಕವಾಗಿ, ರಾಜಕೀಯವಾಗಿ ಖಚಿತ ಹೆಜ್ಜೆಗಳಿಂದ ಮುನ್ನಡೆಸಲು ಶಕ್ತವಾಗಿರುವ ದೇಶ ಎಂಬ ಸಂದೇಶವನ್ನು ಕೊಟ್ಟಿರುವುದೇ ಮೋದಿ ಸರ್ಕಾರದ ಪ್ರಮುಖ ಸಾಧನೆ. ಜಮ್ಮು-ಕಾಶ್ಮೀರದ ಪುನರ್ವಿಂಗಡಣೆ ಮತ್ತು ಅಲ್ಲಿಯ ೩೭೦ ಮತ್ತು ೩೫ಎ ವಿಧಿಗಳ ರದ್ದತಿ ಮುಂದಿನ ದಿನಗಳಲ್ಲಿ ಭಾರತ ತನ್ನ ಅಸ್ತಿತ್ವವನ್ನು ಹೇಗೆ ಪ್ರಬಲವಾಗಿ ಸ್ಥಾಪಿಸಬಯಸುತ್ತದೆ ಎಂಬುದಕ್ಕೆ ಸೂಚನೆ” ಎಂದು ಲೇಖಕ ಬೇಳೂರು ಸುದರ್ಶನ್ ಅವರು ತಮ್ಮ ಒಂದು ಲೇಖನದಲ್ಲಿ ಹೇಳಿದ್ದಾರೆ. ಇದು ಪ್ರಧಾನಿ ಮೋದಿ ಮತ್ತು ಅವರ ತಂಡ ಕೆಲಸ ಮಾಡುವ ರೀತಿ ಎಂದರೂ ಸಲ್ಲುತ್ತದೆ.
ಜೊತೆಗೆ ಲಡಾಖನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಮಾಡಿ ಅಲ್ಲಿನ ಅಭಿವೃದ್ಧಿಗೆ ಒತ್ತು ನೀಡಲಾಯಿತು. ದೇಶದ ಭದ್ರತೆಯ ದೃಷ್ಟಿಯಿಂದಲೂ ಇದು ಮಹತ್ತ್ವಪೂರ್ಣ ಕ್ರಮವಾಗಿದೆ. ಕಾಶ್ಮೀರದ ೩೭೦ನೇ ವಿಧಿ, ರಾಜ್ಯದ ವಿಶೇಷ ಸ್ಥಾನಮಾನ ಇರಬೇಕೇ ಬೇಡವೇ ಎಂಬ ಚರ್ಚೆ ಎಷ್ಟು ಗಂಟೆ, ದಿನ, ವರ್ಷಗಳ ಕಾಲ ನಡೆದಿದೆಯೋ, ಎಷ್ಟು ರೀಮು ಕಾಗದವನ್ನು ತಿಂದುಹಾಕಿತ್ತೋ – ಮೋದಿ ಸರ್ಕಾರ ಅದನ್ನೇ ‘ರಾತ್ರಿ ಬೆಳಗಾಗುವುದರೊಳಗೆ’ ಮಾಡಿಯೇಬಿಟ್ಟಿತು! ಅವಾಕ್ಕಾದದ್ದು ಪಾಕಿಸ್ತಾನ ಮಾತ್ರವಲ್ಲ; ಅದರ ‘ಆಪ್ತ ಸ್ನೇಹಿತ’ ಚೀನಾ ಕೂಡ.
ಲಡಾಖ್ನಲ್ಲಿ ಭಾರತವು ಕೈಗೊಂಡ ಕ್ರಮ ಮುಂದೆ ತಮ್ಮ ‘ಕೈಯಲ್ಲಿರುವ ಅಕ್ಸಾಯ್ ಚಿನ್’ಗೂ ಭಂಗ ತರಬಹುದೇ ಎಂದು ಚೀನಾ ಚಿಂತಿತವಾಗಿರಬೇಕೆಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
೨೦೧೭ರಲ್ಲಿ ಭಾರತ-ಭೂತಾನ್-ಚೀನಾಗಳ ಗಡಿಗಳು ಸಂಧಿಸುವ ದೋಖಲಾಂನಲ್ಲಿ ಮೋದಿ ನೇತೃತ್ವದ ಭಾರತದ ಬಲ ಏನೆಂಬುದನ್ನು ಚೀನಾಕ್ಕೆ ಸ್ವಲ್ಪಮಟ್ಟಿಗೆ ತೋರಿಸಲಾಗಿತ್ತು. ‘ಹಾಗೆ ಮಾಡುತ್ತೇವೆ; ಹೀಗೆ ಮಾಡುತ್ತೇವೆ’ ಎಂದು ಬಡಾಯಿ ಕೊಚ್ಚಿಕೊಂಡ ಚೀನಾ ಗಡಿಯಲ್ಲಿ ಬಲವಾಗಿ ನಿಂತು ಕಣ್ಣಲ್ಲಿ ಕಣ್ಣಿಟ್ಟು ನೋಡಿದ ಭಾರತೀಯ ಸೇನೆಯ ಕೆಚ್ಚಿಗೆ ಮಣಿದು ವಾಪಸಾಗಿತ್ತು; ೭೩ ದಿನಗಳ ಕಾಲ ಗಡಿ ಕಾದದ್ದೇ ಬಂತು. ಆ ಘಟನೆಯೇ ಮೋದಿ ನಾಯಕತ್ವದ ಬಗ್ಗೆ ಜಗತ್ತಿನ ಗಮನ ಸೆಳೆದಿತ್ತು.
ಚೀನಾ ದುಸ್ಸಾಹಸ
ಈಗ ಎರಡನೇ ಬಾರಿ ಬಲಪರೀಕ್ಷೆಗೆಂಬಂತೆ ಚೀನಾ ಗಾಲ್ವನ್ ಕಣಿವೆ ಮತ್ತು ಪ್ಯಾಂಗಾAಗ್ ಸರೋವರಗಳ ಬಳಿ ಜಗಳಕ್ಕೆ ಕಾಲುಕೆರೆಯಿತು. ಗಾಲ್ವನ್ ಪ್ರದೇಶದ ಫಿಂಗರ್ ಒಂದರಿAದ ಎಂಟರವರೆಗಿನ ಪ್ರದೇಶ ತನ್ನದೆಂದು ಭಾರತ ಪ್ರತಿಪಾದಿಸುತ್ತಾ ಬಂದಿದೆ. ಹಾಗೆಂದು ಗಡಿ ನಿಯಂತ್ರಣ ರೇಖೆ (ಎಲ್ಎಸಿ) ಒಪ್ಪಂದದಲ್ಲೂ ಇದೆ. ಭಾರತ ಫಿಂಗರ್ ೫ರ ವರೆಗೆ ಕಚ್ಚಾರಸ್ತೆ ನಿರ್ಮಿಸಿ ಗಸ್ತು ನಡೆಸುತ್ತಿತ್ತು. ಕಳೆದ ವರ್ಷ ಮೇ-ಜೂನ್ನಲ್ಲಿ ಚೀನಾ ಸೇನೆ ಫಿಂಗರ್ ೮ನ್ನು ದಾಟಿ ಮೂರರವರೆಗೂ ಅತಿಕ್ರಮಣ ನಡೆಸಿತು. ಗಡಿಠಾಣೆ, ಬಂಕರ್, ರಸ್ತೆಗಳನ್ನೂ ನಿರ್ಮಿಸಿತು. ಫಿಂಗರ್ ೪ ಎರಡೂ ದೇಶಗಳಿಗೆ ಮಹತ್ತ್ವದ ಸ್ಥಳವಾಗಿದ್ದು, ಅಲ್ಲಿ ಭಾರತೀಯ ಸೇನೆಯ ಗಡಿಠಾಣೆ ಇದೆ. ಅಲ್ಲಿಂದ ಫಿಂಗರ್ ೮ರ ಆಚೆಗೂ ನಿಗಾ ಸಾಧ್ಯ. ಚೀನಾ ಅಲ್ಲಿನ ಠಾಣೆಯಿಂದ ಫಿಂಗರ್ ಒಂದರವರೆಗೂ ನಿಗಾ ಇಡುತ್ತದೆ.
ಕೊರೋನಾ ಕಾರಣದಿಂದ ಲಾಕ್ಡೌನ್ ಇದ್ದಾಗಲೇ ಚೀನಾ ಆಕ್ರಮಣ ನಡೆಸಿದ್ದು, ೨೦೨೦ರ ಜೂನ್ ೧೫ರಂದು ಆಕ್ರಮಣದ ತೀವ್ರತೆ ಗೊತ್ತಾಯಿತು. ಅತಿಕ್ರಮಣ ಮಾಡಿದ ಪ್ರದೇಶದಿಂದ ಚೀನೀ ಸೈನಿಕರನ್ನು ಹೊರಹಾಕಲು ಭಾರತೀಯ ಸೈನಿಕರು ಮುಂದಾದಾಗ ಘರ್ಷಣೆಯೇ ನಡೆಯಿತು; ಹೈದರಾಬಾದಿನ ಸಂತೋಷ್ಬಾಬು ಸೇರಿದಂತೆ ಇಪ್ಪತ್ತು ವೀರಯೋಧರ ಬಲಿದಾನವಾಯಿತು. ಚೀನಾದ ಕಡೆ ಸುಮಾರು ಅದರ ಎರಡು ಪಾಲು ಸೈನಿಕರು ಹತರಾಗಿದ್ದರು; ಆದರೆ ದುಷ್ಟ ಚೀನಾ ಆ ಬಗ್ಗೆ ಬಾಯಿಬಿಡಲೇ ಇಲ್ಲ. ಎರಡೂ ಕಡೆಯಿಂದ ಸುಮಾರು ೫೦ ಸಾವಿರ ಸೈನಿಕರ ನಿಯೋಜನೆಯಾಗಿ ಯಾವುದೇ ಕ್ಷಣದಲ್ಲಿ ಯುದ್ಧ ಸ್ಫೋಟಗೊಳ್ಳಬಹುದೆಂಬ ವಾತಾವರಣವಿತ್ತು.
ಮುಂದೆ ಚೀನೀ ಸೈನಿಕರು ಪ್ಯಾಂಗಾಂಗ್ ಸರೋವರದ ಬಳಿ ಅತಿಕ್ರಮಣ ನಡೆಸಿದ್ದು, ಅಲ್ಲಿ ಕೂಡ ಘರ್ಷಣೆ ಉಂಟಾಯಿತು. ಇಷ್ಟಾಗುವಾಗ “ಚೀನಾ ಸೇನೆ ಇರಲಿ, ಪಾಕಿಸ್ತಾನದ ಸೇನೆ ಇರಲಿ; ಅವುಗಳಿಗೆ ಅರ್ಥವಾಗುವುದು ಭಾರತ ಸರ್ಕಾರ ಮತ್ತು ಅದರ ಸೇನೆಗಳ ಆಕ್ರಮಣಕಾರಿ ಭಾಷೆ ಒಂದೇ; ಶಾಂತಿ ಮಾತುಕತೆ, ನೆರೆಹೊರೆ ಮೈತ್ರಿ ಅವುಗಳಿಗೆ ಅರ್ಥ ಆಗುವುದಿಲ್ಲ” ಎಂಬುದು ಮತ್ತೊಮ್ಮೆ ಸಾಬೀತಾಯಿತು.
ಬಹಿಷ್ಕಾರದ ಬಿಸಿ
ಮುಂದೆ ಮೋದಿ ದಿಟ್ಟವಾಗಿ ಚೀನಾದ ಸರಕು ಮತ್ತು ಸೇವೆಗಳಿಗೆ ಬಹಿಷ್ಕಾರ ಹೇರುವ ಅಭಿಯಾನವನ್ನು ಆರಂಭಿಸಿದರು. ಮೊದಲ ಬಾರಿಗೆ ಚೀನಾದ ೧೫೦ಕ್ಕೂ ಅಧಿಕ ಆ್ಯಪ್ಗಳನ್ನು ನಿಷೇಧಿಸಿದರು. ಜನಪ್ರಿಯ ಟಿಕ್ಟಾಕ್, ಪಬ್ಜಿ, ಶೇರ್ಇಟ್ ಮುಂತಾದವು ಅದರಲ್ಲಿ ಸೇರಿದ್ದವು. ಅದರಿಂದ ಕೋಪಗೊಂಡ ಚೀನಾ ಗಡಿಯಲ್ಲಿ ಇನ್ನಷ್ಟು ಕಿರಿಕಿರಿ ಉಂಟುಮಾಡಿತು; ಶಾಂತಿ ಮಾತುಕತೆ ನಡೆಸುವುದು, ಅದರಿಂದ ಹಿಂದೆ ಸರಿಯುವುದು – ಹೀಗೆಲ್ಲ ಆಟ ಆಡಿತು. ಮೋದಿ ಸರ್ಕಾರ ಅದಾವುದಕ್ಕೂ ಸೊಪ್ಪುಹಾಕದೆ ಚೀನಾಕ್ಕೆ ಅರ್ಥವಾಗುವ ಭಾಷೆಯಲ್ಲೇ ವ್ಯವಹರಿಸಿತು. ೧) ಎರಡೂ ಕಡೆಯವರು ಎಲ್ಎಸಿಯನ್ನು ಕಟ್ಟುನಿಟ್ಟಾಗಿ ಗೌರವಿಸಬೇಕು; ಮತ್ತು ನಿಯಮವನ್ನು ಪಾಲಿಸಬೇಕು. ೨) ಯಥಾಸ್ಥಿತಿಯನ್ನು ಏಕಪಕ್ಷೀಯವಾಗಿ ಬದಲಾಯಿಸಲು ಎರಡೂ ಕಡೆಯವರು ಪ್ರಯತ್ನಿಸಬಾರದು. ಮತ್ತು ೩) ಎಲ್ಲ ದ್ವಿಪಕ್ಷೀಯ ಒಪ್ಪಂದ ಮತ್ತು ತಿಳಿವಳಿಕೆಗಳನ್ನು ಸಂಪೂರ್ಣವಾಗಿ ಪಾಲಿಸಬೇಕು – ಎಂಬ ಮೂರು ತತ್ತ್ವಗಳಿಗೆ ಪಟ್ಟುಹಿಡಿದು ಚೀನಾವನ್ನು ಮಣಿಸಲು ಪ್ರಯತ್ನಿಸಿತು.
ಲಡಾಖನ್ನು ಭಾರತವು ಕೇಂದ್ರಾಡಳಿತ ಪ್ರದೇಶವಾಗಿ ಪರಿವರ್ತಿಸಿದಾಗ ಚೀನಾ “ಭಾರತ ತನ್ನ ಕಾಯ್ದೆಗಳನ್ನು ಏಕಪಕ್ಷೀಯವಾಗಿ ಬದಲಿಸುವ ಮೂಲಕ ಚೀನಾದ ಗಡಿಸಾರ್ವಭೌಮತ್ವವನ್ನು ಕಡೆಗಣಿಸುತ್ತಿದೆ; ಇದನ್ನು ನಾವು ಒಪ್ಪುವುದಿಲ್ಲ” ಎಂದು ಆಕ್ಷೇಪಿಸಿತ್ತು. ಭಾರತ ಅದನ್ನು ತಳ್ಳಿಹಾಕಿ “ಇದು ನಮ್ಮ ಆಂತರಿಕ ವಿಷಯ. ಚೀನಾ ಜೊತೆಗಿನ ಎಲ್ಎಸಿಗೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ತಿರುಗೇಟು ನೀಡಿತ್ತು. ವಿಚಾರದಲ್ಲಿ ಇಂತಹ ಸ್ಪಷ್ಟತೆ ಮತ್ತು ಅದರ ಹಿಂದೆ ಗಟ್ಟಿಯಾದ ಸೇನಾಬಲ ಇದ್ದ ಕಾರಣ ಚೀನಾಗೆ ಮಿಸುಕಾಡಲು ಸಾಧ್ಯವಾಗಲಿಲ್ಲ.
ಚೀನಾದ ಸಿಟ್ಟಿಗೆ ಮುಖ್ಯ ಕಾರಣವೆಂದರೆ, ಲಡಾಖ್ನ ಹಿಮತುಂಬಿದ ಗಡಿಯವರೆಗೂ ಭಾರತವರ್ಷದ ೧೨ ತಿಂಗಳು ಕೂಡ ಬಳಸಬಹುದಾದ ರಸ್ತೆಯನ್ನು ನಿರ್ಮಿಸಿದ್ದಾಗಿತ್ತು. ಅಲ್ಲಿಯ ತನಕ ಚೀನಾ ತನ್ನ ಕ್ಯಾಂಪಿನಿAದ ಒಂದು ಗಂಟೆಯೊಳಗೆ ಗಡಿಯಲ್ಲಿ ಸೇನೆಯನ್ನು ಜಮಾವಣೆ ಮಾಡುವಂತಿದ್ದರೆ ಭಾರತಕ್ಕೆ ಆ ಕೆಲಸಕ್ಕೆ ಮೂರು ದಿನ ಬೇಕಾಗುತ್ತಿತ್ತು. ಇದರಿಂದ ಕೂಡ ಭಾರತ ಮತ್ತೆ ಅಕ್ಸಾಯ್ ಚೀನಾ ಕೇಳಬಹುದೆಂದು ಚೀನಾಕ್ಕೆ ಆತಂಕ ಉಂಟಾಗಿತ್ತು.
ಲಡಾಖ್ ಗಡಿಯೊಂದೇ ಅಲ್ಲ; ಹಿಂದೆ ಚೀನಾ ಭಾರತದ ಗಡಿಗಳಲ್ಲಿ ಏಕಪಕ್ಷೀಯವಾಗಿ ರಸ್ತೆ ಇತ್ಯಾದಿ ನಿರ್ಮಿಸುತ್ತಿದ್ದರೆ ಮೋದಿ ಸರ್ಕಾರ ಅದರಲ್ಲಿ ಚೀನಾಕ್ಕಿಂತ ಒಂದು ಹೆಜ್ಜೆ ಮುಂದಾಗಿಯೇ ಇದೆ ಎನ್ನಬಹುದು.
ಚೀನಾಕ್ಕೆ ಅರ್ಥವಾಗುವ ಭಾಷೆಯಲ್ಲೇ ಉತ್ತರಿಸಿದ ಭಾರತೀಯ ಸೇನೆ ಪ್ಯಾಂಗಾAಗ್ ಸರೋವರದ ದಕ್ಷಿಣ ದಂಡೆಯಲ್ಲಿ ತುಂಬ ಎತ್ತರದ ಪ್ರದೇಶಗಳನ್ನು ಆಕ್ರಮಿಸಿ ಕುಳಿತು ಕಣ್ಣಿಡತೊಡಗಿತು. ಅದರಿಂದ ಚೀನೀ ಸೇನೆಗೆ ಪರಿಸ್ಥಿತಿ ಅರ್ಥವಾಯಿತೇನೋ! ಏಕಾಏಕಿ ೮ ಕಿ.ಮೀ. ಹಿಂದೆ ಹೋಗಲು ಒಪ್ಪಿಕೊಂಡಿತು. ಅದನ್ನು ಕಾರ್ಯಗತವೂ ಮಾಡಿತು. ಈಗ ಮಾಡಿಕೊಂಡಿರುವ ಒಪ್ಪಂದದ ಪ್ರಕಾರ ಭಾರತವು ಪಾಯಿಂಟ್ ೩ರ ಧನ್ಸಿಂಗ್ ಥಾಪಾ ಬೇಸ್ನಿಂದ ಮುಂದೆ ಹೋಗುವಂತಿಲ್ಲ; ಚೀನಾ ಫಿಂಗರ್ ೮ರಿಂದ ಈಚೆಗೆ ಬರುವಂತಿಲ್ಲ. ಪಾಯಿಂಟ್ ೩ರಿಂದ ೮ರ ವರೆಗೆ ಎರಡೂ ಕಡೆಯ ಸೈನಿಕರು ಗಸ್ತು (ಪೆಟ್ರೋಲಿಂಗ್) ನಡೆಸಬಾರದು. ಅದರಿಂದ ಆಗುವ ಲಾಭವೆಂದರೆ ಕೈ ಕೈ ಮಿಲಾಯಿಸುವುದು, ಕಲ್ಲು ತೂರಾಟ ಇತ್ಯಾದಿ ಆಗುವುದಿಲ್ಲ. ಗಾಲ್ವನ್ನಲ್ಲಿ ಶಸ್ತ್ರಾಸ್ತ್ರ ಬಳಕೆಗೆ ಅವಕಾಶವಿಲ್ಲದಿದ್ದರೂ ದುಷ್ಟ ಚೀನೀ ಸೈನಿಕರು ಮೊಳೆ ಚುಚ್ಚಿದ ಬಡಿಗೆಗಳಿಂದ ನಮ್ಮ ಸೈನಿಕರಿಗೆ ಹೊಡೆದಿದ್ದರೆನ್ನುವ ಆರೋಪವಿದೆ.
ಏನಿದ್ದರೂ ಚೀನಾವನ್ನು ನಂಬಲಾಗದು. ಅದರ ಬಗೆಬಗೆಯ ಕಿರುಕುಳಗಳು ಈಗಲೂ ನಿಂತಿಲ್ಲ. ತುಂಬ ಕೆಳಮಟ್ಟಕ್ಕೂ ಅದು ಇಳಿಯುತ್ತದೆ. ಮತ್ತು ನೈತಿಕವಾಗಿ ಹಾಗೂ ಆರ್ಥಿಕವಾಗಿ ದಿವಾಳಿ ಎದ್ದಿರುವ ಪಾಕಿಸ್ತಾನಕ್ಕೆ ಅಷ್ಟಿಷ್ಟು ಸಹಾಯ ಮಾಡುತ್ತಾ ಅದರ ಭಯೋತ್ಪಾದಕ ಕೃತ್ಯಗಳನ್ನು ಬೆಂಬಲಿಸುತ್ತಾ ಭಾರತದ ಮೇಲೆ ಛೂ ಬಿಡುತ್ತಿದೆ. ಅದಕ್ಕೆ ಇತ್ತೀಚಿನ ಉದಾಹರಣೆ ಡ್ರೋಣ್ಗಳ ದಾಳಿ. ಪಾಕಿಸ್ತಾನಕ್ಕೆ ಅರ್ಥವಾಗುವ ಭಾಷೆಯಲ್ಲಿ ಉತ್ತರಿಸುವ ಖಚಿತ ವಿಧಾನ ಮೋದಿ ಮತ್ತು ಭಾರತೀಯ ಸೇನೆಯ ಬಳಿ ಇದ್ದೇ ಇದೆ.
ಎಡಬಿಡಂಗಿ ಕಾಂಗ್ರೆಸ್
ಚೀನಾದ ಆಕ್ರಮಣ, ಘರ್ಷಣೆಗಳ ವೇಳೆ ದೇಶದ ಪ್ರಮುಖ ವಿರೋಧಪಕ್ಷವಾದ ಕಾಂಗ್ರೆಸ್ನ ಎಡಬಿಡಂಗಿತನ ಪ್ರಕಟವಾಯಿತೆಂದರೆ ತಪ್ಪಲ್ಲ. ಸರ್ಕಾರದ ಅಧಿಕೃತ ಹೇಳಿಕೆಗಳನ್ನು ಸುಳ್ಳೆಂದು ವಾದಿಸುತ್ತಾ ಬಂದ ಆ ಪಕ್ಷದ ನಾಯಕ ರಾಹುಲ್ಗಾಂಧಿ, ಭಾರತದ ಕೆಲವು ಭಾಗ ಚೀನಾ ವಶವಾಗಿದೆ ಎಂದು ಹೇಳಿಕೆ ನೀಡಿದರು. ಶತ್ರುವಿಗೆ ಅನುಕೂಲವಾಗುವ ಇಂತಹ ಮಾತುಗಳನ್ನು ಅವರು ಧಾರಾಳವಾಗಿ ಆಡುತ್ತಾರೆ. ಮೋದಿ ಅವರ ಗಟ್ಟಿಯಾದ ನಾಯಕತ್ವ ಇದ್ದ ಕಾರಣ ಭಾರತೀಯ ಸೇನೆಯಲ್ಲಿ ವಿಶ್ವಾಸವಿಟ್ಟು ಜನ ನೆಮ್ಮದಿಯಿಂದ ಇರಬಹುದಿತ್ತು. ಡಾ|| ಮನಮೋಹನ್ಸಿಂಗ್ ಅವರ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದಿದ್ದರೆ ಏನಾಗುತ್ತಿತ್ತೋ! ಬರಬೇಕಾದ ಯಾವುದೋ ಲಂಚ ಬರಲಿಲ್ಲವೆಂದು ಅತ್ಯಾಧುನಿಕ ಯುದ್ಧವಿಮಾನ ರಫೇಲ್ ಖರೀದಿಯನ್ನು ಅನಿರ್ದಿಷ್ಟಾವಧಿಯವರೆಗೆ ಮುಂದೂಡಿ, ಆ ಮೂಲಕ ನಮ್ಮ ವಾಯುಪಡೆ ವರ್ಷಗಳ ಕಾಲ ಸೊರಗುವಂತೆ ಮಾಡಿದವರು ಅವರು!
ಭಾರತದ ಗಡಿಯಲ್ಲಿ ಚೀನಾದ ದುಸ್ಸಾಹಸ, ಘರ್ಷಣೆಗಳಿಂದ ಉಂಟಾದ ಒಂದು ಲಾಭದಾಯಕ ಉಪಉತ್ಪನ್ನವೆಂದರೆ ಪ್ರಧಾನಿ ಮೋದಿಯವರ ವರ್ಚಸ್ಸು ಅಂತಾರಾಷ್ಟಿçÃಯ ಮಟ್ಟದಲ್ಲಿ ಗಗನಗಾಮಿಯಾದದ್ದು.
ಚೀನಾದ ಕುತ್ಸಿತ ಬುದ್ಧಿ ಮತ್ತು ವರ್ತನೆಗಳಿಂದ ನೊಂದವರೆಲ್ಲ ಮೋದಿ ಅವರಲ್ಲಿ ಆಶಾಕಿರಣವನ್ನು ಕಾಣಲು ಆರಂಭಿಸಿದರು. ಅದರಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೂಡ ಸೇರುತ್ತಾರೆ. ಜಪಾನ್, ಆಸ್ಟ್ರೇಲಿಯಾಗಳ ಮುಖ್ಯಸ್ಥರು, ಚೀನಾದ ನೆರೆಹೊರೆಯ ದೇಶಗಳು, ಚೀನಾ ದಕ್ಷಿಣಸಮುದ್ರದ ಸುತ್ತಲಿನ ದೇಶಗಳು ಮೋದಿ ಅವರ ಕಾರ್ಯಾಚರಣೆಯ ಶೈಲಿಯನ್ನು ಸೂಕ್ಷ್ಮವಾಗಿ ಗಮನಿಸಿದ್ದಾರೆ. ಈ ದೇಶಗಳೂ ಇಸ್ರೇಲ್ ಮುಂತಾದವೂ ಮೋದಿ ಅವರ ಬೆಂಬಲಕ್ಕಿದ್ದಾರೆ. ಇದು ಮೋದಿ ಅವರಿಗೆ ಆನೆ ಬಲವನ್ನು ತಂದುಕೊಟ್ಟಿದೆ. ಕೊರೋನಾ ಎರಡನೇ ಅಲೆ ದೇಶದಲ್ಲಿ ಉಲ್ಬಣಿಸಿ ಆಮ್ಲಜನಕ, ರೆಮ್ಡಿಸಿವಿರ್ ಔಷಧಿ ಇತ್ಯಾದಿ ಕೊರತೆಯಾದಾಗ ನೆರವು ಸ್ವೀಕರಿಸುವುದಾಗಿ ಮೋದಿ ಅವರು ಹೇಳುತ್ತಲೇ ನೆರವಿನ ಮಹಾಪೂರ ಹರಿದುಬಂದುದರಲ್ಲಿ ಮೋದಿ ಅವರ ವರ್ಚಸ್ಸಿನ ಒಂದು ಝಲಕನ್ನು ಕಾಣಬಹುದು.
ಸಾಧನಾ ಪರ್ವದ ಅನಂತರ
ಮೋದಿ ಸರ್ಕಾರದ ಮೊದಲ ಅವಧಿಯ ಐದು ವರ್ಷಗಳನ್ನು ‘ಸಾಧನಾ ಪರ್ವ’ ಎಂದು ಬಣ್ಣಿಸಲಾಗುತ್ತದೆ. ಎರಡನೇ ಅವಧಿಯಲ್ಲಿ ಸಾಧನಾ ಪರ್ವದ ಸತ್ಫಲಗಳು ಕೈಸೇರುವ ನಿರೀಕ್ಷೆಯಿತ್ತು. ಜೊತೆಗೆ ಇನ್ನಷ್ಟು ಸಾಧನೆಗಳನ್ನು ನಿರೀಕ್ಷಿಸಬಹುದಿತ್ತು. ಕಾಶ್ಮೀರದ ೩೭೦ನೇ ವಿಧಿಯ ರದ್ದತಿ ಬಹಳಷ್ಟು ಆಶೆಯನ್ನು ಹುಟ್ಟಿಸಿತ್ತು. ಆದರೆ ಅಷ್ಟರಲ್ಲಿ ೨೦೨೦ರ ಮಾರ್ಚ್ ವೇಳೆಗೆ ದೇಶದ ಮೇಲೆ ಬಂದೆರಗಿದ ಕೊರೋನಾ (ಕೋವಿಡ್-೧೯) ಲೆಕ್ಕಾಚಾರಗಳನ್ನೆಲ್ಲ ಬುಡಮೇಲು ಮಾಡಿತು; ಕೈಯಲ್ಲಿದ್ದುದನ್ನೆಲ್ಲ ಕೆಳಗೆ ಹಾಕಿ ಇದನ್ನು ಎತ್ತಿಕೊಳ್ಳುವಂತೆ ಮಾಡಿತು. ಸಾಲದೆಂಬಂತೆ, ಒಂದನೇ ಅಲೆ ಮುಗಿದು ಎಲ್ಲವೂ ಮತ್ತೆ ಹಳಿಗೆ ಬರಬಹುದು; ಆರ್ಥಿಕತೆ ಚಿಗುರಿಕೊಳ್ಳಬಹುದು ಎಂದು ಹಂಬಲಿಸುವಷ್ಟರಲ್ಲಿ ಮೊದಲಿನದಕ್ಕಿಂತ ಭೀಕರವಾದ ಎರಡನೇ ಅಲೆ ಇಡೀ ದೇಶವನ್ನು ವ್ಯಾಪಿಸಿತು. ಬಹುಬೇಗ ಇಡೀ ದೇಶದಲ್ಲಿ ಹರಡಿದ ಇದು ಆರ್ಥಿಕತೆ ಸೇರಿದಂತೆ ವಿವಿಧ ರಂಗಗಳಿಗೆ ದೊಡ್ಡ ಹೊಡೆತವನ್ನೇ ನೀಡಿತು.
ಅಷ್ಟಾದರೂ ಮೋದಿ ನೇತೃತ್ವದ ಎನ್ಡಿಎ ಸರ್ಕಾರ ದೇಶದ ಆರ್ಥಿಕತೆಯು ಸೊರಗದಂತೆ ಭಗೀರಥ ಪ್ರಯತ್ನವನ್ನೇ ಮಾಡುತ್ತಿದೆ. ಮತ್ತು ಅದರಲ್ಲಿ ಸಾಕಷ್ಟು ಯಶಸ್ವಿಯೂ ಆಗುತ್ತಿದೆ. ಆರ್ಥಿಕ ಕ್ಷೇತ್ರದ ಒಟ್ಟು ಏಳು ವರ್ಷಗಳ ಸಾಧನೆಯಂತೂ ಮೆಲುಕುಹಾಕುವಂತಿದೆ.
“ಕಳೆದ ಮೇ ೩೦ಕ್ಕೆ ಕೊನೆಗೊಂಡ ಏಳು ವರ್ಷಗಳು ಸ್ವತಂತ್ರ ಭಾರತದಲ್ಲಿ ತುಂಬ ಬದಲಾವಣೆ ಕಂಡ ಅವಧಿಯಾಗಿದೆ. ಕಾರಣ ಮೋದಿ ಸರ್ಕಾರದ ನಿರ್ಣಯಾತ್ಮಕ ನಿರ್ಧಾರಗಳು” ಎನ್ನುವ ಆರ್ಥಿಕತಜ್ಞ ಟಿ.ವಿ. ಮೋಹನದಾಸ ಪೈ ಅವರು, ಡಿಜಿಟಲ್ ಆರ್ಥಿಕತೆ ಆ ಬಗ್ಗೆ ಮಾಡಿದ ಹೂಡಿಕೆ, ಬಡತನ ನಿರ್ಮೂಲನಕ್ಕೆ ಕೈಗೊಂಡ ಪರಿಣಾಮಕಾರಿ ಕ್ರಮಗಳು, ಸಾಮಾಜಿಕ-ಆರ್ಥಿಕ ಪ್ರಗತಿಗೆ ಅನುಸರಿಸಿದ ಕ್ರಮಗಳನ್ನು ಉದಾಹರಿಸುತ್ತಾರೆ; ಮತ್ತು ಅವು ೨೦೨೦ರ ಹೊತ್ತಿಗೆ ತುಂಬ ಫಲ ನೀಡಿದವು ಎಂದು ದಾಖಲಿಸುತ್ತಾರೆ.
ಅಭಿವೃದ್ಧಿ, ಮೂಲಸವಲತ್ತಿನ ಬಗ್ಗೆ ಪ್ರಸ್ತುತ ಎನ್ಡಿಎ ಸರ್ಕಾರವು ಬಹುಮಾದರಿ (ಮಲ್ಟಿಮಾಡೆಲ್) ಕಾರ್ಯವಿಧಾನವನ್ನು ಅನುಸರಿಸುತ್ತಿದೆ; ಆರೋಗ್ಯ ಮತ್ತು ಎಲ್ಲ ಜನರ ಕ್ಷೇಮದ (Well-being) ಬಗ್ಗೆ ಕ್ರಮಕೈಗೊಳ್ಳುತ್ತಿದೆ. ಬಡವರು ಮತ್ತು ಅವಕಾಶವಂಚಿತರಿಗೆ ಮೋದಿ ಸರ್ಕಾರ ಕಳೆದ ಏಳು ವರ್ಷಗಳಲ್ಲಿ ಎಷ್ಟು ಮಾಡಿದೆಯೋ ಆ ರೀತಿ ಹಿಂದಿನ ಯಾವುದೇ ಸರ್ಕಾರ ಮಾಡಿಲ್ಲ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ.
ಎಲ್ಲರಿಗೂ ಮನೆ
೨೦೨೨ರೊಳಗೆ ಮನೆ ಇಲ್ಲದ ಎಲ್ಲ ದೇಶವಾಸಿಗಳಿಗೆ ಮನೆ ನೀಡಬೇಕೆನ್ನುವ ಗುರಿಯನ್ನು ಮೋದಿ ಸರ್ಕಾರ ತನ್ನ ಮುಂದೆ ಇರಿಸಿಕೊಂಡು ಕಾರ್ಯಪ್ರವೃತ್ತವಾಯಿತು. ನಗರಗಳಲ್ಲಿ ೧.೧೨ ಕೋಟಿ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ೨.೯೫ ಕೋಟಿ ಮನೆಗಳನ್ನು ಕಟ್ಟಿಸಿ ನೀಡಬೇಕೆನ್ನುವುದು ಗುರಿಯಾಗಿತ್ತು. ಇದುವರೆಗೆ ಅದರಲ್ಲಿ ಒಟ್ಟು ೧.೮೭ ಕೋಟಿ ಮನೆಗಳನ್ನು ನಿರ್ಮಿಸಿದ್ದು, ಗ್ರಾಮೀಣ ಪ್ರದೇಶದ ಗುರಿಯಲ್ಲಿ ಶೇ. ೭೫ರಷ್ಟನ್ನು ಸಾಧಿಸಲಾಗಿದೆ.
ದೇಶದ ದುರ್ಗಮ ಹಳ್ಳಿಗಳು ಸೇರಿದಂತೆ ಎಲ್ಲ ಭಾಗವನ್ನು ವಿದ್ಯುದೀಕರಣಕ್ಕೆ ಒಳಪಡಿಸುವುದು ಸರ್ಕಾರದ ಮುಂದಿದ್ದ ಇನ್ನೊಂದು ಗುರಿ. ೨೦೧೪ರಲ್ಲಿ ಮೋದಿ ಅವರು ಪ್ರಧಾನಿ ಆಗುವಾಗ ಅದು ಶೇ. ೯೬.೭ರಷ್ಟಿದ್ದು, ಕೇವಲ ೯೮೮ ದಿನಗಳಲ್ಲಿ ಶೇ. ೧೦೦ನ್ನು ಸಾಧಿಸಿದರು. ದೇಶದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡಿಕೆಯ ಗುರಿಯನ್ನು ಇರಿಸಿಕೊಂಡ ಕೇಂದ್ರಸರ್ಕಾರ ೨೦೧೭ರ ಅಕ್ಟೋಬರ್ನಿಂದ ಇದುವರೆಗೆ ೨.೬೩ ಕೋಟಿ ಮನೆಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಿದೆ.
ಶುದ್ಧ ಇಂಧನ ಪೂರೈಕೆಯ ಬೃಹತ್ ಆಂದೋಲನವನ್ನು ದೇಶಾದ್ಯಂತ ಕೈಗೊಂಡು ೩೬.೭ ಕೋಟಿ ಎಲ್ಇಡಿ ಬಲ್ಬ್ಗಳನ್ನು ವಿತರಿಸಿದ್ದಾರೆ. ಕಷ್ಟದ ಕೆಲವು ಪ್ರದೇಶಗಳಿಗೆ ಇನ್ನೂ ವಿದ್ಯುತ್ ತಲಪದೆ ಇರಬಹುದು; ಮತ್ತು ಸುಧಾರಣೆಗೆ ಅವಕಾಶ ಇದ್ದೀತು. ಆದರೂ ಒಟ್ಟಾರೆಯಾಗಿ ಇಂದು ಬಹುತೇಕ ಎಲ್ಲ ಭಾರತೀಯರಿಗೆ ವಿದ್ಯುತ್ ಲಭ್ಯವಾಗಿದೆ.
ನಲ್ಲಿ ನೀರು ಪೂರೈಕೆ
ಎನ್ಡಿಎ ೨ನೇ ಅವಧಿಯಲ್ಲಿ ದೇಶದ ಜನರಿಗೆ ಶುದ್ಧ ಕುಡಿಯುವ ನೀರನ್ನು ಒದಗಿಸುವ ಪ್ರಮುಖ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಅದರಂತೆ ೨೦೧೯ರಲ್ಲಿ ‘ಜಲ ಜೀವನ ಮಿಷನ್’ ಉಪಕ್ರಮವಾಯಿತು. ಈಗಾಗಲೇ ಗ್ರಾಮಾಂತರದ ೯೪ ಕೋಟಿ ಮನೆಗಳಿಗೆ ನಲ್ಲಿ ನೀರಿನ ಸಂಪರ್ಕ ಕಲ್ಪಿಸಲಾಗಿದೆ. ಅದರಂತೆ ೩.೩ ಕೋಟಿ (ಶೇ. ೧೭) ಇದ್ದ ಸಂಪರ್ಕವು ಈಗ ೭.೨ ಕೋಟಿಗೆ (ಶೇ. ೩೭.೬) ಏರಿದೆ. ೨೦೨೪ರೊಳಗೆ ೧೯.೨ ಕೋಟಿ ಮನೆಗಳನ್ನು ನಲ್ಲಿ ನೀರಿಗೆ ಜೋಡಿಸುವ ಮೂಲಕ ಶೇಕಡಾ ನೂರರ ಗುರಿ ಸಾಧಿಸಲು ಉದ್ದೇಶಿಸಲಾಗಿದೆ.
ಗ್ರಾಮೀಣ ರಸ್ತೆಗಳ ನಿರ್ಮಾಣಕ್ಕೆ ಕೇಂದ್ರಸರ್ಕಾರವು ವಿಶೇಷ ಗಮನ ನೀಡುತ್ತಿದೆ. ೨೦೧೪ರಲ್ಲಿ ದೇಶದ ಶೇ. ೫೬ರಷ್ಟು ಹಳ್ಳಿಗಳು ರಸ್ತೆ ಸಂಪರ್ಕವನ್ನು ಹೊಂದಿದ್ದರೆ ಈಗ ಅದು ಶೇ. ೯೭ಕ್ಕೇರಿದೆ; ೨೦೧೪ರ ಬಳಿಕ ೨.೩ ಲಕ್ಷ ಕಿ.ಮೀ. ರಸ್ತೆಗಳನ್ನು ಮಂಜೂರು ಮಾಡಲಾಗಿದೆ.
ಅನಿಲ ಸಂಪರ್ಕ
ಗ್ರಾಮೀಣ ಮಹಿಳೆಯರ ಸಂಕಷ್ಟ ನಿವಾರಣೆಯಲ್ಲಿ ಮೋದಿ ಸರ್ಕಾರವು ಹಲವು ಯೋಜನೆಗಳನ್ನು ಕಾರ್ಯಗತಗೊಳಿಸಿದೆ. ಉಜ್ವಲಾ ಯೋಜನೆಯು ಅದರಲ್ಲಿ ಪ್ರಮುಖವಾದದ್ದು. ೨೦೧೪ರಲ್ಲಿ ಒಟ್ಟು ೧೨ ಕೋಟಿ ಇದ್ದ ಅಡುಗೆ ಅನಿಲ ಸಂಪರ್ಕವು ಈಗ ೨೯ ಕೋಟಿಗೇರಿದೆ. ಅದರಲ್ಲಿ ೮ ಕೋಟಿ ಸಂಪರ್ಕವು ಗ್ರಾಮೀಣ ಮಹಿಳೆಯರಿಗೆ ಒದಗಿಸಿದ್ದಾಗಿದೆ. ಅದರಿಂದಾಗಿ ಅಡುಗೆಮನೆಗಳು ಹೊಗೆರಹಿತವಾಗಿ ಮಹಿಳೆಯರ ಆರೋಗ್ಯಕ್ಕೆ ದೊಡ್ಡ ಕೊಡುಗೆ ನೀಡಿದೆ.
ಮೋದಿ ಅವರು ಅಧಿಕಾರಕ್ಕೆ ಬಂದ ಕೆಲವೇ ತಿಂಗಳಲ್ಲಿ ‘ಸ್ವಚ್ಛ ಭಾರತ್’ ಕಾರ್ಯಕ್ರಮವನ್ನು ಅನಾವರಣಗೊಳಿಸಿದರು. ಆಗ ಬಯಲು ಶೌಚಾಲಯಮುಕ್ತ ಗ್ರಾಮಗಳು ಶೇ. ೩೮.೭ರಷ್ಟಿದ್ದು, ೨೦೧೯ರ ಗಾಂಧಿ ಜಯಂತಿ (ಅಕ್ಟೋಬರ್ ೨) ವೇಳೆಗೆ ಅದು ನೂರಕ್ಕೆ ನೂರು ಪ್ರಗತಿಯನ್ನು ಸಾಧಿಸಿತು. ಇದನ್ನು ಉಲ್ಲೇಖಿಸುವ ಮೋಹನದಾಸ ಪೈ ಮತ್ತು ನಿಶಾ ಹೊಳ್ಳ ಅವರು, “೨೦೧೪ರ ಚುನಾವಣೆಯಲ್ಲಿ ಗೆದ್ದು ಬಂದಾಗ ಅವರಿಗೆ ದೇಶವನ್ನು ಶಕ್ತಿಶಾಲಿಯಾಗಿಸಲು ಬೇಕಾದ ಕಾರ್ಯತಂತ್ರದ ಕಲ್ಪನೆ ಇತ್ತು. ಮೊದಲ ಭಾಷಣದಲ್ಲೇ ಅವರು ‘ಸ್ವಚ್ಛ ಭಾರತ್’ ಬಗ್ಗೆ ಹೇಳಿದರು. ಪ್ರತಿ ಮನೆಗೂ ಶೌಚಾಲಯ ಬೇಕು. ಬಯಲು ಶೌಚಾಲಯ ಗತಕಾಲ ಸೇರಬೇಕು. ಆ ಮೂಲಕ ಪ್ರತಿಯೊಬ್ಬ ನಾಗರಿಕನಿಗೆ, ವಿಶೇಷವಾಗಿ ಮಹಿಳೆಯರಿಗೆ ಘನತೆ ಸಲ್ಲಬೇಕು ಎಂದವರು ಘೋಷಿಸಿದರು. ಯೋಜನೆ ಅಡಿಯಲ್ಲಿ ೧೧.೪ ಕೋಟಿ ಶೌಚಾಲಯಗಳನ್ನು ನಿರ್ಮಿಸಲಾಯಿತು ಮತ್ತು ದೇಶದ ಎಲ್ಲ ಒಟ್ಟು ೬ ಲಕ್ಷಕ್ಕೂ ಅಧಿಕ ಗ್ರಾಮಗಳನ್ನು ಬಯಲು ಶೌಚಾಲಯ ಮುಕ್ತ (ಓಡಿಎಫ್) ಎಂದು ಘೋಷಿಸಲಾಯಿತು.
ಮಾನವ ಬಂಡವಾಳ
ದೇಶದ ಮಾನವ ಬಂಡವಾಳವನ್ನು ಉತ್ತಮಪಡಿಸಬೇಕು, ಕೌಶಲಪೂರ್ಣ ಉದ್ಯೋಗ, ತರಬೇತಿ ನೀಡಿ ನಿರುದ್ಯೋಗ ಸಮಸ್ಯೆಯನ್ನು ನಿವಾರಿಸಬೇಕು ಎಂಬ ನಿಟ್ಟಿನಲ್ಲಿ ಎನ್ಡಿಎ ಸರ್ಕಾರವು ವಿವಿಧ ಕ್ರಮಗಳನ್ನು ಕೈಗೊಂಡಿದೆ. ಈ ನಿಟ್ಟಿನಲ್ಲಿ ಸರ್ಕಾರ ಜಾರಿಗೊಳಿಸಲು ಬಯಸಿರುವ ಹೊಸ ಶಿಕ್ಷಣ ನೀತಿಯು ಒಂದು ಮಹತ್ತ್ವದ ಹೆಜ್ಜೆಯಾಗಿದೆ. ದೇಶದಲ್ಲಿ ೩೪ ವರ್ಷಗಳ ಅನಂತರ ಬರುತ್ತಿರುವ ಈ ಶಿಕ್ಷಣ ನೀತಿಯು ಹಲವು ಸ್ವರೂಪಾತ್ಮಕ ಬದಲಾವಣೆಗಳನ್ನು (Structural Changes)ತರಲು ಉದ್ದೇಶಿಸಿದೆ. ಇಂದಿನ ಜ್ಞಾನ ಆರ್ಥಿಕತೆಯಲ್ಲಿ ನಮ್ಮ ಯುವಜನರು ಸ್ಪರ್ಧಾತ್ಮಕವಾಗಿ ರೂಪುಗೊಳ್ಳಬೇಕೆಂಬ ಗುರಿ ಇದರ ಹಿಂದಿದೆ.
ಮಹಿಳಾ ಸಬಲೀಕರಣ ಮತ್ತು ಅವರನ್ನು ಸಾಮಾಜಿಕ ನಿರ್ಬಂಧಗಳಿಂದ ಮುಕ್ತಗೊಳಿಸುತ್ತಿರುವುದು ಪ್ರಧಾನಿ ಮೋದಿ ಅವರ ಒಂದು ಮಹತ್ತ್ವದ ಸಾಮಾಜಿಕ ಕೊಡುಗೆಯಾಗಿದೆ. ತಮ್ಮ ಸಂಪುಟದಲ್ಲಿ ಅವರಿಗೆ ಮಹತ್ತ್ವದ ಸ್ಥಾನ ನೀಡಿದ್ದಾರೆ. ಸೇನೆಯಲ್ಲಿ ಶಾಶ್ವತ ಹುದ್ದೆಯಂತಹ ವಿಶೇಷ ಅವಕಾಶಗಳನ್ನು ನೀಡಿದ್ದಾರೆ.
ಬಹುಕಾಲದಿಂದ ಜಾರಿಗೆ ಬರಬೇಕಿದ್ದರೂ ಯಾವಾವುದೋ ಕಾರಣದಿಂದ ಯಾರಿಂದಲೂ ಮಾಡಲು ಸಾಧ್ಯವಾಗದ ಅದೆಷ್ಟೋ ಕೆಲಸಗಳನ್ನು ನರೇಂದ್ರ ಮೋದಿ ಅವರು ಸಲೀಸಾಗಿ ಮಾಡಿ ಮುಗಿಸಿದ್ದಾರೆ. ಅದರಲ್ಲಿ ಎದ್ದು ಕಾಣುವಂಥದು ತ್ರಿವಳಿ ತಲಾಖ್ನ ನಿಷೇಧವನ್ನು ಜಾರಿಗೊಳಿಸಿದ್ದು. ಮುಸ್ಲಿಂ ಮಹಿಳೆಯರನ್ನು ಅತ್ಯಂತ ಕೀಳಾಗಿ ಕಾಣುವ ಮತ್ತು ಅವರಿಗೆ ಇನ್ನಿಲ್ಲದ ಅಭದ್ರತೆಯನ್ನು ನೀಡುವ ಈ ಕರಾಳ ಸಂಪ್ರದಾಯ (ಮೂರು ಬಾರಿ ತಲಾಖ್ ಎಂದು ಹೇಳಿ ಪುರುಷರು ವಿಚ್ಛೇದನ ನೀಡುವುದು) ೨೧ನೇ ಶತಮಾನದಲ್ಲೂ ಉಳಿದುಕೊಂಡಿದೆ ಎಂಬುದೇ ಆಶ್ಚರ್ಯ. ಹಲವು ಮುಸ್ಲಿಂ ದೇಶಗಳಲ್ಲೇ ಇಲ್ಲದಿದ್ದರೂ ಭಾರತದಲ್ಲಿ ಇದು ಉಳಿದುಕೊಂಡಿತ್ತು. ಇದನ್ನು ನಿವಾರಿಸುವ ದೃಢ ಕ್ರಮವನ್ನು ಮೋದಿ ಸರ್ಕಾರ ಕೈಗೊಂಡಿತು.
ಜನಧನ ಯೋಜನೆ
ಅಧಿಕಾರಕ್ಕೆ ಬಂದ ಆರಂಭದಲ್ಲೇ ಕಾರ್ಯಗತಗೊಳಿಸಿ ದೇಶದ ಕೋಟ್ಯಂತರ ಮನೆಗಳಲ್ಲಿ ಹರ್ಷ ತುಂಬುವಂತೆ ಮಾಡಿದ ಯೋಜನೆಗಳಲ್ಲಿ ಜನಧನ್ ಮತ್ತು ಮುದ್ರಾ ಯೋಜನೆಗಳು ತಪ್ಪದೆ ಸೇರುತ್ತವೆ. ದೇಶಕ್ಕೆ ಸ್ವಾತಂತ್ರ್ಯ ಬಂದು ಆರು ದಶಕಗಳು ದಾಟಿದರೂ ಬ್ಯಾಂಕ್ಗಳ ಮೆಟ್ಟಿಲು ತುಳಿಯದ ದೇಶಬಾಂಧವರಿಗೇನೂ ಕೊರತೆ ಇರಲಿಲ್ಲ. ಈ ಬಡ ಮುಗ್ಧ ಜನರಿಗೆ ಸಿಗಬೇಕಾದ ಸರ್ಕಾರೀ ಸೌಲಭ್ಯಗಳನ್ನು ಮಧ್ಯದಲ್ಲೇ ತಿಂದುಹಾಕಿ ನಿರಂತರವಾಗಿ ಶೋಷಿಸುತ್ತಿದ್ದ ಮಧ್ಯವರ್ತಿಗಳ ದೊಡ್ಡ ವರ್ಗವೇ ಭಾರತದಲ್ಲಿ ಹುಟ್ಟಿಕೊಂಡಿತ್ತು. “ನಾನು ಅನ್ಯಾಯದ ದುಡ್ಡನ್ನು ತಿನ್ನುವುದಿಲ್ಲ; ತಿನ್ನಲು ಬಿಡುವುದಿಲ್ಲ”
(ನ ಖಾವೂಂಗಾ, ನ ಖಾನೇ ದೂಂಗಾ) ಎನ್ನುವ ಮಾತನ್ನು ಘಂಟಾಘೋಷವಾಗಿ ಸಾರಿದ ಪ್ರಧಾನಿ ಮೋದಿ ಅದನ್ನು ಅಕ್ಷರಶಃ ಕಾರ್ಯಗತಗೊಳಿಸಲು ಹಲವು ಕ್ರಮಗಳನ್ನು ಕೈಗೊಂಡರು. ಅದರಲ್ಲಿ ಮುಖ್ಯವಾದದ್ದು ಜನಧನ ಯೋಜನೆ. ಅದರಂತೆ ೪೬ ಕೋಟಿಯಷ್ಟು ದೊಡ್ಡ ಸಂಖ್ಯೆಯ ಬ್ಯಾಂಕ್ ಖಾತೆಗಳನ್ನು ತೆರೆದು ಅಷ್ಟು ಜನರಿಗೆ ಬ್ಯಾಂಕ್ಗಳ ಪ್ರವೇಶ ಕಲ್ಪಿಸಲಾಯಿತು. ಸರ್ಕಾರ ನೀಡುವ ನೆರವು-ಸಹಾಯಧನಗಳು ನೇರವಾಗಿ ಆ ಖಾತೆಗಳಿಗೆ ಹೋಗುವ ಮೂಲಕ ಮಧ್ಯವರ್ತಿಗಳು ಹಿಂದೆಸರಿಯುವಂತಾಯಿತು.
ಈಚೆಗೆ ಕಾರ್ಯಗತಗೊಂಡ ‘ಕಿಸಾನ್ ಸಮ್ಮಾನ್’ ಯೋಜನೆಯು ದೇಶದ ರೈತರಿಗೆ ವಾರ್ಷಿಕ ೬,೦೦೦ ರೂ. ನೀಡಲು ಉದ್ದೇಶಿಸಿದೆ; ಅದು ಕೂಡ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಜಮಾವಣೆ ಆಗುವುದರೊಂದಿಗೆ ಒಂದು ಸ್ವಿಚ್ ಆನ್ ಮಾಡಿದಷ್ಟು ಸುಲಭವಾಗಿ ಕೆಲಸ ನಡೆಯುತ್ತಿದೆ.
ದೇಶದ ಯುವಜನರಲ್ಲಿ ಉದ್ಯಮಶೀಲತೆಯನ್ನು ಬೆಳೆಸುವ ಉದ್ದೇಶದಿಂದ ಆರಂಭಿಸಿದ ಮುದ್ರಾ ಯೋಜನೆ ಸಾಕಷ್ಟು ಉತ್ತಮ ಫಲವನ್ನು ನೀಡಿದೆ. ಆರ್ಥಿಕ ಬಲ (ಫಂಡ್) ಇಲ್ಲದವರಿಗೆ ಬಲ ನೀಡುವುದು ಇದರ ಉದ್ದೇಶ. ಇದರ ಕೆಳಗೆ ೨೯ ಸಾವಿರ ಜನರಿಗೆ ೧೫ ಲಕ್ಷ ಕೋಟಿ ರೂ. ಸಾಲವನ್ನು ವಿತರಿಸಲಾಗಿದೆ.
ಬದಲಾವಣೆಯ ಪರ್ವ
ದೇಶದಮಟ್ಟಿಗೆ ಪ್ರಧಾನಿ ಮೋದಿ ‘ಬದಲಾವಣೆಯ ಹರಿಕಾರ’ರೇ ಸರಿ. ದೇಶದ ಆರ್ಥಿಕ ನೀತಿ ನಿರೂಪಣೆಯು ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬುದನ್ನು ತಿಳಿಯಲು ಅವರು ಕೇಂದ್ರಸರ್ಕಾರದ ವಿಧಾನವನ್ನೇ ಮೂಲಭೂತವಾಗಿ ಬದಲಾಯಿಸಿದರು. ಹಿಂದೆ ಸ್ಥೂಲ ಅರ್ಥಶಾಸ್ತçದ (macro) ಮಾದರಿಯನ್ನು ಅನುಸರಿಸಲಾಗುತ್ತಿತ್ತು. ಅದು ಆಕರ್ಷಕ (ಗ್ಲಾಮರಸ್) ಎನಿಸಿತ್ತು; ಆ ಕಾರಣದಿಂದ ಸೂಕ್ಷ್ಮ (micro) ಅರ್ಥಶಾಸ್ತçದ ಮಾದರಿಯು ಹಿನ್ನೆಲೆಗೆ ಸರಿದಿತ್ತು; ಅಥವಾ ಮೈಕ್ರೋ ಆರ್ಥಿಕ ಮಾದರಿಯ ಕೆಲಸಗಳನ್ನು ರಾಜ್ಯಗಳಿಗೆ ವಹಿಸಿದ್ದರು. ಅದರ ಪರಿಣಾಮಕ್ಕೆ ಒಂದು ಉದಾಹರಣೆಯನ್ನು ಕೊಡುವುದಾದರೆ ಸ್ವಾತಂತ್ರ್ಯ ಬಂದು ೬೬ ವರ್ಷ ಕಳೆದರೂ ಸರ್ಕಾರ ಎಲ್ಲ ಹಳ್ಳಿಗಳ ವಿದ್ಯುದೀಕರಣದ ಬಗ್ಗೆ ಇನ್ನೂ ಪರದಾಡುತ್ತಿತ್ತು. ಇನ್ನು ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವುದಂತೂ ದೂರವೇ ಉಳಿಯಿತು. ಎಲ್ಲ ಹಳ್ಳಿಗಳಿಗೆ ನೈರ್ಮಲ್ಯ, ಎಲ್ಲ ಜನರಿಗೆ ಆರೋಗ್ಯಸೇವೆಗಳದ್ದೂ ಅದೇ ಕಥೆ. ಈ ಅಸಮತೋಲನವನ್ನು ಮೋದಿ ಸರಿಪಡಿಸಿದರು.
ಅದರಿಂದಾಗಿ ಈಗ ಪ್ರತಿಮನೆಗೆ ನಳ್ಳಿ ನೀರು ಒದಗಿಸುವುದಕ್ಕೆ ಆದ್ಯತೆ ಸಿಕ್ಕಿದೆ; ಕೃಷಿ ಕ್ಷೇತ್ರದ ಒಂದು ಶಾಸನದ ರಚನೆಗೆ ಸಿಗುವಷ್ಟು ಮಹತ್ತ್ವ ನಳ್ಳಿನೀರು ಪೂರೈಕೆಗೂ ಲಭಿಸಿದೆ.
ಈ ನಿಟ್ಟಿನಲ್ಲಿ ಮೋದಿ ಅವರ ಸಾಧನೆ ಅದ್ವಿತೀಯವಾಗಿ ನಿಲ್ಲುತ್ತದೆ.
ಡಿಜಿಟಲ್ ವ್ಯವಹಾರ
ಆಡಳಿತದಲ್ಲಿ ಆಧುನಿಕತೆಯನ್ನು ಅಳವಡಿಸುವಲ್ಲಿ ಪ್ರಧಾನಿ ಮೋದಿ ಸದಾ ಮುಂದಿರುತ್ತಾರೆ. ಮೊದಲ ಅವಧಿಯಲ್ಲಿ ಕೈಗೊಂಡ ನೋಟು ಅಮಾನ್ಯೀಕರಣದಿಂದ ದೇಶದಲ್ಲಿದ್ದ ಕಾಳಧನ ಒಮ್ಮೆ ಬೆಳಕಿಗೆ ಬಂತು. ಆ ಪ್ರಕ್ರಿಯೆ ನಿರಂತರವಾಗಿ ಕ್ರಿಯಾಶೀಲವಾಗಿರಬೇಕೆಂಬ ಉದ್ದೇಶದಲ್ಲಿ ಆನ್ಲೈನ್ ಪಾವತಿಗಳನ್ನು ಪ್ರೋತ್ಸಾಹಿಸಲಾಯಿತು. ಡಿಜಿಟಲ್ ವ್ಯವಹಾರವನ್ನು ಬೆಳೆಸಿದರು. ಇದರಲ್ಲಿ ಅದ್ಭುತ ಕ್ರಾಂತಿಯೇ ಸಂಭವಿಸಿದ್ದು, ಯುಪಿಐ ಮೂಲಕ ಡಿಜಿಟಲ್ ವ್ಯವಹಾರ ನಡೆದು, ಭಾರತ ಜಗತ್ತಿನ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆ ಎನಿಸಿತು. ಇದರಲ್ಲಿ ಅಮೆರಿಕದಂತಹ ತುಂಬಾ ಮುಂದುವರಿದ ದೇಶವನ್ನೇ ಭಾರತ ಹಿಂದೆ ಹಾಕಿದೆ; ಅಲ್ಲಿ ಈ ವ್ಯವಹಾರ ಇಷ್ಟು ಸುಲಭವಿಲ್ಲವಂತೆ!
ಎನ್ಡಿಎ ಸರ್ಕಾರದ ಅಡಿಯಲ್ಲಿ ಖಾಸಗಿ ಉದ್ಯಮಕ್ಕೆ ಗೌರವಸಂದಿದ್ದು, ಪ್ರಾಮಾಣಿಕ ವ್ಯವಹಾರ ನಡೆಸುವವರಿಗೆ ಯಾವುದೇ ಅಡಚಣೆ ಇಲ್ಲವಾಗಿದೆ. ಉದ್ಯಮಶೀಲರನ್ನು ಮೋದಿ ‘ರಾಷ್ಟ್ರದ ನಿರ್ಮಾಪಕ’ ರೆಂದು ಶ್ಲಾಘಿಸಿದ್ದಾರೆ. ಅದೀಗ ಸರ್ಕಾರದ ನೀತಿಯಾಗಿ ಬರುತ್ತಿದೆ. ಇದು ಕೂಡ ಮೋದಿ ಅವರ ಮಹತ್ತ್ವದ ಆರ್ಥಿಕ ಕೊಡುಗೆಯಾಗಿದೆ.
ಜಿಡಿಪಿ (ದೇಶದ ಒಟ್ಟು ಉತ್ಪಾದನೆ) ಆರ್ಥಿಕತೆಯ ಒಂದು ಪ್ರಮುಖ ಮಾನದಂಡವಾದರೂ ಪರಿಪೂರ್ಣವಲ್ಲ; ಏಕೆಂದರೆ ಅದು ಬಡವರ ಮೇಲಾಗುವ ಪರಿಣಾಮವನ್ನು ಗುರುತಿಸುವುದಿಲ್ಲ; ಹಾಗೂ ಅಸಮಾನತೆಯನ್ನು ಗಮನಿಸುವುದಿಲ್ಲ. ಆದರೂ ದೇಶದ ಆರ್ಥಿಕ ಸಾಧನೆಗೆ ಅದೇ ಸೂಚಕವೆನಿಸಿದೆ. ಮೋದಿ ಸರ್ಕಾರದ ಮೊದಲ ಆರು ವರ್ಷಗಳಲ್ಲಿ ಜಿಡಿಪಿ ಏರಿಕೆ ಶೇ. ೬.೮ ಇತ್ತು. ಈ ನಿಟ್ಟಿನಲ್ಲಿ ಮೋದಿ ೨೦೨೪-೨೫ರಲ್ಲಿ ದೇಶವು ೫ ಟ್ರಿಲಿಯನ್(ಲಕ್ಷ ಕೋಟಿ) ಡಾಲರ್ ಆರ್ಥಿಕತೆಯಾಗಬೇಕು ಎನ್ನುವ ಮಹತ್ತ್ವಾಕಾಂಕ್ಷೆಯ ಗುರಿಯನ್ನು ಇರಿಸಿಕೊಂಡಿದ್ದಾರೆ.
ಇನ್ನು ಹಣದುಬ್ಬರ ತಡೆಯಲ್ಲಿ ಸರ್ಕಾರದ ಸಾಧನೆ ಉತ್ತಮವಾಗಿದೆ. ಸಿಪಿಐ ವಾರ್ಷಿಕ ಏರಿಕೆಯು ಶೇ. ೪.೮ ಇದ್ದು, ಇದು ರಿಸರ್ವ್ ಬ್ಯಾಂಕ್ ಹೇಳುವ ಸಹ್ಯ ಮಿತಿಯ ಒಳಗೇ ಇದೆ. ವಿದೇಶೀ ವಿನಿಮಯದಲ್ಲಿ (ಫಾರೆಕ್ಸ್) ಭಾರೀ ಸಂಗ್ರಹ ಮಾಡಲಾಗಿದೆ. ೨೦೧೪ ಮೇ ೨೩ರಂದು ೩೧೩ ಬಿಲಿಯನ್ ಡಾಲರ್ ಇದ್ದ ವಿದೇಶೀ ವಿನಿಮಯ ಸಂಗ್ರಹವು ಮೇ ೨೧, ೨೦೨೧ರಂದು ೫೯೩ ಬಿಲಿಯನ್ ಡಾಲರ್ಗೇರಿತ್ತು.
ಆಹಾರ-ಕೃಷಿ
ಆರ್ಥಿಕತೆಯಲ್ಲಿ ಅತಿ ದೊಡ್ಡ ಸಂಖ್ಯೆಯ ಜನ ಭಾಗಿಯಾಗುವ ಕ್ಷೇತ್ರವೆಂದರೆ, ಆಹಾರ ಮತ್ತು ಕೃಷಿ. ಇದು ಮುಖ್ಯವಾಗಿ ಬಡವರಿಗೆ ಸಂಬಂಧಿಸಿದ್ದು. ಇದರಲ್ಲಿ ಏಳು ವರ್ಷಗಳಲ್ಲಿ ವಾರ್ಷಿಕ ಶೇ. ೩.೫ರಷ್ಟು ಪ್ರಗತಿಯನ್ನು ಸಾಧಿಸಲಾಗಿದೆ. ದೇಶದ ಆರ್ಥಿಕತೆಯನ್ನು ಕೊರೋನಾ ಮಹಾಮಾರಿ ಬಾಧಿಸುತ್ತಿದ್ದಾಗಲೇ ಅಂತಾರಾಷ್ಟ್ರೀಯ ಕಾರಣಗಳಿಂದಾಗಿ ರಸಗೊಬ್ಬರದ ಬೆಲೆ ಏರುವ ಸಂದರ್ಭ ಬಂತು. ಈ ಸಾಲಿನಲ್ಲಿ ಮೋದಿ ಸರ್ಕಾರ ಆಹಾರ ಮತ್ತು ರಸಗೊಬ್ಬರ ಸಬ್ಸಿಡಿ ನೀಡಿಕೆಯಲ್ಲಿ ಹಿಂದಿನ ಎಲ್ಲ ದಾಖಲೆಗಳನ್ನು ಮುರಿಯಿತು. ೬.೫೨ ಲಕ್ಷ ಕೋಟಿ ರೂ.ಗಳನ್ನು ಖರ್ಚು ಮಾಡಿತು. ಇದು ಕೇಂದ್ರಸರ್ಕಾರದ ಒಟ್ಟು ಆದಾಯದ ಶೇ. ೩೮.೫ ಭಾಗವಾಗಿದೆ. ಈ ವರ್ಷ ಮೇ ಕೊನೆಯ ಹೊತ್ತಿಗೆ ಕೇಂದ್ರದ ಆಹಾರಧಾನ್ಯ ಸಂಗ್ರಹವು ೧೦ ಕೋಟಿ ಟನ್ ಆಗಿತ್ತು; ಇನ್ನು ಸಮರ್ಪಕ ವಿತರಣೆಯಷ್ಟೇ ಆಗಬೇಕಾಗಿದೆ.
ಮೋದಿ ಅವರು ಬಯಸುವ ದೀರ್ಘಾವಧಿ ಅಭಿವೃದ್ಧಿಯಲ್ಲಿ ಮೂಲ ಸವಲತ್ತುಗಳ ಪಾತ್ರ ಮುಖ್ಯವಾದದ್ದು. ಅದರಲ್ಲಿ ವಿದ್ಯುತ್ತಿನ ಲಭ್ಯತೆ ಮೊದಲ ಸಾಲಿನಲ್ಲಿ ಬರುತ್ತದೆ. ಮನಮೋಹನ್ಸಿಂಗ್ ನೇತೃತ್ವದ ಯುಪಿಎ ಸರ್ಕಾರದ ಮೊದಲ ಏಳು ವರ್ಷಗಳಲ್ಲಿ ಆದ ವಿದ್ಯುತ್ ಉತ್ಪಾದನೆಯ ಇಮ್ಮಡಿಯಷ್ಟು ವಿದ್ಯುತ್ತನ್ನು ಈಗಿನ ಸರ್ಕಾರ ಉತ್ಪಾದಿಸಿದೆ.
ರಸಗೊಬ್ಬರ
ಕೃಷಿಗೆ ಸಂಬಂಧಿಸಿ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ. ಸದಾನಂದಗೌಡ ಅವರು ಒಂದು ಅಂಶವನ್ನು ತಿಳಿಸಿದ್ದಾರೆ: “ನನ್ನ ರಸಗೊಬ್ಬರ ಇಲಾಖೆಯಲ್ಲಿ ಈಚೆಗೆ ರಸಗೊಬ್ಬರದ ಬೇಡಿಕೆ ಏರಿತು. ಕೊರೋನಾದಿಂದಾಗಿ ಜನ ಹಳ್ಳಿಗೆ ಮರಳಿದ್ದರಿಂದ ಕೃಷಿ ಚಟುವಟಿಕೆ ಹೆಚ್ಚಿತು. ಕಾರ್ಖಾನೆಗಳಿಗೆ ಲಾಕ್ಡೌನ್ ಇದ್ದರೂ ಕೂಡ ಹೆಚ್ಚು ಉತ್ಪಾದಿಸಿ ಶೇ. ೨೧ರಷ್ಟು ಅಧಿಕ ರಸಗೊಬ್ಬರದ ಮಾರಾಟ ಮಾಡಲಾಯಿತು. ರಸಗೊಬ್ಬರ ಇಲಾಖೆಯನ್ನು ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ ಮುಚ್ಚಿದ್ದ ಐದು ದೊಡ್ಡ ಯೂರಿಯಾ ಕಾರ್ಖಾನೆಗಳನ್ನು ೫೦ ಸಾವಿರ ಕೋಟಿ ರೂ. ವೆಚ್ಚದಲ್ಲಿ ಪುನಶ್ಚೇತನಗೊಳಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು. ಇದರಿಂದ ದೇಶ ಯೂರಿಯಾ ಕ್ಷೇತ್ರದಲ್ಲಿ ಸ್ವಾವಲಂಬಿ ಆಗಲಿದೆ.”- ಎಂದು.
ದೇಶಾದ್ಯಂತ ಸರಕು ಮತ್ತು ಸೇವೆಗಳಿಗೆ ಸಮಾನವಾದ ತೆರಿಗೆ ವ್ಯವಸ್ಥೆಯನ್ನು ಜಾರಿಗೆ ತಂದ ಜಿಎಸ್ಟಿ ಮೋದಿ ಸರ್ಕಾರದ ಮೊದಲ ಅವಧಿಯ ಒಂದು ದೊಡ್ಡ ಸಾಧನೆಯಾಗಿದೆ; ದೇಶದಲ್ಲಿ ಮೊದಲ ಬಾರಿಗೆ ಅಂತಹ ಒಂದು ವ್ಯವಸ್ಥೆ ಬಂದಿತು. ದೇಶದ ಪೂರೈಕೆ ಜಾಲದ ವೆಚ್ಚವನ್ನು ಇಳಿಸುವಲ್ಲಿ ಜಿಎಸ್ಟಿಯ ಕೊಡುಗೆ ದೊಡ್ಡದು. ಈಗ ಅದು ಶೇ. ೧೪ ಆಗಿದೆ. ೧೭ ವಿವಿಧ ತೆರಿಗೆಗಳನ್ನು ಜಿಎಸ್ಟಿಯಲ್ಲಿ ಒಂದಾಗಿ ಅಳವಡಿಸಿಕೊಳ್ಳಲಾಗಿದೆ. ಸರ್ಕಾರದ ಆದಾಯ ಸೋರಿಕೆಯನ್ನು ಜಿಎಸ್ಟಿ ತಡೆಯುತ್ತಿದೆ.
ಅದರಿಂದಾಗಿ ಜಿಡಿಪಿ ಏರುತ್ತದೆ. ಇದರಿಂದ ನ್ಯಾಯಯುತ ಕ್ರಮಬದ್ಧ ಸಂಪನ್ಮೂಲ ಸಂಗ್ರಹಕ್ಕೆ ನಾಂದಿಯಾಗಿದ್ದು, ಕೇಂದ್ರ-ರಾಜ್ಯಗಳ ನಡುವೆ ಸೂಕ್ತ ಹಂಚಿಕೆಯಾಗಿ ತೆರಿಗೆ ಹಣದಲ್ಲಿ ಪೈಸೆ-ಪೈಸೆ ಲೆಕ್ಕ ಸಿಗುತ್ತಿದೆ. ಸದ್ಯ ಕೊರೋನಾ ಕಾರಣದಿಂದ ತೆರಿಗೆ ಸಂಗ್ರಹದಲ್ಲಿ ಏರುಪೇರಾಗುತ್ತಿದ್ದರೂ ಒಟ್ಟಾರೆಯಾಗಿ ದಾಖಲೆ ಮೊತ್ತಗಳು ಸಂಗ್ರಹವಾಗುವ ಮೂಲಕ ಇದೊಂದು ಸಾರ್ಥಕ ವ್ಯವಸ್ಥೆ ಎಂಬುದು ಸಾಬೀತಾಗಿದೆ. ಇದರಿಂದಾಗಿ ಪರೋಕ್ಷ ತೆರಿಗೆಗಳನ್ನು ಇಳಿಸಲಾಗಿದೆ. ಇದರ ಅಡಿಯಲ್ಲಿ ಮೊದಲ ತಿಂಗಳಿನಲ್ಲೇ ೫೬ ಲಕ್ಷ ಜನ ಮಾಹಿತಿ ಫೈಲ್ ಮಾಡಿದ್ದರು.
ಮೇಕ್ ಇನ್ ಇಂಡಿಯಾ
ಪ್ರಧಾನಿ ಮೋದಿ ಅವರು ಅಧಿಕಾರಕ್ಕೆ ಬಂದ ಹೊಸದರಲ್ಲೇ ‘ಮೇಕ್ ಇನ್ ಇಂಡಿಯಾ’ ಪರಿಕಲ್ಪನೆಯನ್ನು ದೇಶದ ಮುಂದೆ ಇರಿಸಿದರಾದರೂ ಆರಂಭದಲ್ಲಿ ಅದಕ್ಕೆ ದೊಡ್ಡ ಯಶಸ್ಸಾಗಲಿಲ್ಲ. ಏಕೆಂದರೆ ಅದು ಸಾಂಪ್ರದಾಯಿಕ ಅಚ್ಚಿನಲ್ಲಿತ್ತು. ನೀತಿ (ಪಾಲಿಸಿ) ಸಂಬಂಧ ಬದಲಾವಣೆಗಳು ಅದರಲ್ಲಿ ಇರಲಿಲ್ಲ. ಪ್ರೋತ್ಸಾಹಕ(ಇನ್ಸೆಂಟಿವ್)ಗಳು ಇರಲಿಲ್ಲ. ಮುಂದೆ ಉತ್ಪಾದನೆ-ಆಧಾರಿತ ಇನ್ಸೆಂಟಿವ್ (ಪಿಎಲ್ಐ) ಸ್ಕೀಮನ್ನು ಜಾರಿಗೆ ತಂದರು. ಅದರಿಂದ ಬೃಹತ್ ಪ್ರಮಾಣದ ಇಲೆಕ್ಟ್ರಿಕಲ್ಸ್ಗೆ ಅನುಕೂಲವಾಗಿ ದೇಶದಲ್ಲಿ ಮೊಬೈಲ್ ಉತ್ಪಾದನೆ ವೇಗವಾಗಿ ಬೆಳೆಯಿತು; ದೇಶ ಅದನ್ನು ರಫ್ತು ಮಾಡುವುದಕ್ಕೂ ಶುರು ಮಾಡಿತು. ಮೊಬೈಲ್ ಉತ್ಪಾದನೆಯಲ್ಲಿ ಭಾರತ ಜಗತ್ತಿನಲ್ಲಿ ಎರಡನೇ ಸ್ಥಾನಕ್ಕೇರಿತು (ಮೊದಲ ಸ್ಥಾನದಲ್ಲಿ ಚೀನಾ ಇದೆ).
ಪಿಎಲ್ಐ ಮುಂತಾದವುಗಳನ್ನು ‘ಆತ್ಮನಿರ್ಭರ ಭಾರತ’ ಅಭಿಯಾನದಲ್ಲಿ ಸೇರಿಸಿದರು; ಕೇವಲ ಒಂದೇ ವರ್ಷದಲ್ಲಿ ಪರಿಸ್ಥಿತಿ ಬದಲಾಯಿತು. ಮೋದಿ ಅವರ ಒಂದು ಘೋಷಣೆಯಿಂದ ಎಲ್ಲವೂ ಸಾಧ್ಯವಾಯಿತು. ಅದೇ ‘ಆತ್ಮನಿರ್ಭರ ಭಾರತ’ ಎಂಬ ಸ್ಫೂರ್ತಿದಾಯಕ ಪದ. ಈಗ ಎಲ್ಲರೂ ಅದರ ಪ್ರೇರಣೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕೊರೋನಾ ಲಸಿಕೆ ತಯಾರಿಕೆಯಲ್ಲಿ ಭಾರತ ಅಗ್ರದೇಶವಾಗಿ ಮೂಡಿಬಂದಿದೆ.
ಮೋದಿ ಅವರು ಮುಂದೆ ಮಹತ್ತ್ವ ನೀಡಿದ್ದು ಆರೋಗ್ಯ ಕ್ಷೇತ್ರಕ್ಕೆ. ‘ಆಯುಷ್ಮಾನ್ ಭಾರತ್’ ಆರಂಭಿಸಿ, ಆರೋಗ್ಯ ವಿಮೆಯನ್ನು ಅದರ ಕೆಳಗೆ ತಂದರು. ದೇಶದಲ್ಲಿ ವಿಮೆ ಇಲ್ಲದ ಕೋಟಿಗಟ್ಟಲೆ ಜನರಿಗೆ ಇದು ಅನ್ವಯವಾಯಿತು. ಅದರಂತೆ ೧೨.೬ ಕೋಟಿ ಇ-ಕಾರ್ಡ್ ನೀಡಲಾಗಿದೆ. ಮತ್ತು ೧.೨ ಕೋಟಿ ಜನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಮುಂದಿನದ್ದು ಭಾರತ್ ಹೆಲ್ತ್ ಸ್ಟ್ಯಾಕ್. ಅದರಿಂದ ಇನ್ನಷ್ಟು ಜನರಿಗೆ ಅನುಕೂಲವಾಗಲಿದೆ. ಜೀವನಾವಶ್ಯಕ ಔಷಧಿಗಳನ್ನು ಶೇ. ೧೫ರಿಂದ ೨೦ರಷ್ಟು ಅಗ್ಗದ ಬೆಲೆಯಲ್ಲಿ ಒದಗಿಸುತ್ತಿರುವ ಜೆನರಿಕ್ ಔಷಧಿ ಅಂಗಡಿಗಳು ಈಗ ವ್ಯಾಪಕವಾಗಿ ಕಾರ್ಯವೆಸಗಿ ಜನರಿಗೆ ಅಮೂಲ್ಯ ಸೇವೆ ಸಲ್ಲಿಸುತ್ತಿವೆ; ಪಿರಮಿಡ್ನ ತಳದಲ್ಲಿ ಇರುವವರಿಗೆ ಆದ್ಯತೆ ನೀಡುವುದು ಯಾವಾಗಲೂ ಮೋದಿ ಅವರ ಕಾರ್ಯಶೈಲಿ ಎಂದರೆ ತಪ್ಪಲ್ಲ.
ದೆಹಲಿಯಿಂದ ಒಂದು ರೂಪಾಯಿ ಬಿಡುಗಡೆಯಾದರೆ ಫಲಾನುಭವಿಗೆ ಸಿಗುವುದು ೧೫ ಪೈಸೆ ಮಾತ್ರ ಎಂದಿದ್ದ ದಿವಂಗತ ಪ್ರಧಾನಿ ರಾಜೀವ್ಗಾಂಧಿ ಅವರ ಮಾತನ್ನು ನೆನಪಿಸುವ ಬಿಜೆಪಿ ಕರ್ನಾಟಕದ ಅಧ್ಯಕ್ಷ ನಳಿನ್ಕುಮಾರ್ ಕಟೀಲ್ ಅವರು, ‘ಈಗ ಮೋದಿಜೀ ಒಂದು ಬಟನ್ ಒತ್ತಿದರೆ ಪೂರ್ತಿ ಹಣ ರೈತ ಇರಲಿ, ಯಾವುದೇ ಫಲಾನುಭವಿ ಇರಲಿ ಅವರ ಖಾತೆಗೆ ಸೇರುತ್ತದೆ; ಒಂದು ರೂಪಾಯಿ ಕೂಡ ಸೋರಿಕೆ ಆಗುವುದಿಲ್ಲ’ ಎಂದಿದ್ದಾರೆ. ಪ್ರಧಾನಿ ಜಾರಿಗೆ ತಂದ ಕನಿಷ್ಠ ಮೊತ್ತದ ಒಂದು ವಿಮಾ ಯೋಜನೆಯಲ್ಲಿ ಸೇರಿಕೊಂಡವರು ಅಕಾಲಿಕ ನಿಧನ ಹೊಂದಿದರೆ ಕುಟುಂಬಕ್ಕೆ ಎರಡು ಲಕ್ಷ ರೂ. ಸಿಗುತ್ತದೆ. ಹಿಂದೆ ಹೃದಯದ ಚಿಕಿತ್ಸೆಯ ಸ್ಟಂಟ್ಗೆ ದುಬಾರಿ ಖರ್ಚಾಗುತ್ತಿತ್ತು; ಮೋದಿ ಸರ್ಕಾರ ಈ ಖರ್ಚನ್ನು ತುಂಬ ಇಳಿಸಿದೆ ಎಂದು ಕೂಡ ಕಟೀಲ್ ಉಲ್ಲೇಖಿಸುತ್ತಾರೆ.
ನಮ್ಮಲ್ಲಿ ಸಾಮಾನ್ಯವಾಗಿ ರಾಜಕೀಯವು ಮುಖ್ಯವಾಗಿ ಅನುಷ್ಠಾನದಲ್ಲಿ ಹಿಂದೆ ಬೀಳುತ್ತದೆ. ಆದರೆ ಮೋದಿ ಅದನ್ನು ಬದಲಿಸಿದರು. ಅವರು ಯಾವುದೇ ವಿಷಯದಲ್ಲಿ ಸಾಧಿಸಲಾದ ಪ್ರಗತಿಯನ್ನು ಸ್ವತಃ ನೋಡುತ್ತಾರೆ. ಅನಗತ್ಯ ರಾಜಕೀಯದಲ್ಲಿ ಅವರಿಲ್ಲ.
ಅಭಿವೃದ್ಧಿ ಕೆಲಸದಲ್ಲಿ ಪಕ್ಷ ಏಕೆ?
ಇದೇ ಅಂಶವನ್ನು ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರ ಮಾತುಗಳಲ್ಲಿ ಪ್ರತಿಫಲಿಸಿದ್ದನ್ನು ಗಮನಿಸಬಹುದು: “ನಾನು ಚುನಾವಣೆಯಲ್ಲಿ ಮಾತ್ರ ಪಕ್ಷ ರಾಜಕೀಯವನ್ನು ಮಾಡುತ್ತೇನೆ. ಅಭಿವೃದ್ಧಿ ಕೆಲಸದಲ್ಲಿ ಪಕ್ಷ ಏಕೆ ನೋಡಬೇಕು? ನನ್ನ ಹತ್ತಿರ ಬರುವ ಯಾವುದೇ ಸಂಸದ ಐದು ಮಹಡಿ ಹತ್ತಿ ಆಯಾಸಗೊಂಡು ಜನರ ಕೆಲಸ ಮಾಡಲು ಬಂದಿರುತ್ತಾರೆ. ಕೆಲಸ ಆಗುವುದಾದರೆ ಆಗುತ್ತದೆ ಎನ್ನುತ್ತೇನೆ; ಇಲ್ಲವಾದರೆ ಇಲ್ಲ ಎನ್ನುತ್ತೇನೆ. ಸುಮ್ಮನೆ ಓಡಾಡಿಸುವುದು ನನಗೆ ಇಷ್ಟವಿಲ್ಲ. ಕಾಂಗ್ರೆಸ್, ಜೆಡಿಎಸ್ನವರನ್ನು ಕೇಳಿ; ಅವರು ತಂದ ಬಹುತೇಕ ಕೆಲಸ ಮಾಡಿಕೊಟ್ಟಿದ್ದೇನೆ. ಸ್ವತಃ ದೇವೇಗೌಡರೇ ನನ್ನ ಬಳಿ ‘ನಾನಾದರೂ ಇಷ್ಟು ಫೈಲ್ ಕ್ಲಿಯರ್ ಮಾಡುತ್ತಿರಲಿಲ್ಲ; ನೀವು ಬಹಳ ಬೇಗ ಮಾಡಿಕೊಡುತ್ತೀರಿ’ ಎಂದಿದ್ದರು. ಕೆಲಸ ಅಗತ್ಯವಿದ್ದರೆ, ಕಾನೂನಿನ ತೊಡಕು ಇಲ್ಲದಿದ್ದರೆ ನಾನು ಪಕ್ಷ ಯಾವುದೆಂದು ನೋಡುವುದಿಲ್ಲ.” ಇಂತಹ ಹಲವು ಅರ್ಹ ಸಚಿವರು ಮೋದಿ ಅವರ ತಂಡದಲ್ಲಿದ್ದಾರೆ.
ಕಲ್ಲಿದ್ದಲು-ಆತ್ಮನಿರ್ಭರ
ಡಾ|| ಮನಮೋಹನ್ಸಿಂಗ್ ಸರ್ಕಾರದ ಬೃಹತ್ ಹಗರಣಗಳಲ್ಲಿ ಕಲ್ಲಿದ್ದಲು ಕ್ಷೇತ್ರವೂ ಒಂದು. ಇದರಲ್ಲಿ ಸುಮಾರು ೨ ಲಕ್ಷ ಕೋಟಿ ರೂ.ಗೂ ಹೆಚ್ಚಿನ ಹಗರಣ ನಡೆದಿತ್ತು. ದೇಶದ ಕಲ್ಲಿದ್ದಲು ನಿಕ್ಷೇಪದ ಸಂಪತ್ತನ್ನು ಪೂರ್ಣವಾಗಿ ಬಳಸಿಕೊಳ್ಳುವ ಮೂಲಕ ಈ ಕ್ಷೇತ್ರದಲ್ಲಿ ಸ್ವಾವಲಂಬನೆ ಸಾಧಿಸುವ ಉದ್ದೇಶದಿಂದ ಮೋದಿ ಸರ್ಕಾರವು, ಇಂಧನ ಭದ್ರತೆ ಮತ್ತು ಇಂಧನ ಸುರಕ್ಷತೆಗೆ ದಿಟ್ಟ ಕ್ರಮವನ್ನು ಕೈಗೊಂಡಿದೆ. ಐದು ವರ್ಷಗಳಲ್ಲಿ ಆಮದನ್ನು ನಿಲ್ಲಿಸುವ ಗುರಿಯೊಂದಿಗೆ ಕಲ್ಲಿದ್ದಲು ಉತ್ಪಾದಿಸುತ್ತಿದೆ.
ಪ್ರಸ್ತುತ ಗಣಿ ಮತ್ತು ಕಲ್ಲಿದ್ದಲು ಸಚಿವರಾಗಿರುವ ಪ್ರಹ್ಲಾದ ಜೋಶಿ, ಆತ್ಮನಿರ್ಭರ ಭಾರತವು ಕಲ್ಲಿದ್ದಲು ಇಲಾಖೆಯಲ್ಲಿ ಜಾರಿಗೊಳ್ಳುತ್ತಿರುವ ವಿಧಾನವನ್ನು ವಿವರಿಸಿದ್ದಾರೆ. ಜೂನ್ ೧೦, ೨೦೨೦ರಂದು ಕಲ್ಲಿದ್ದಲು ಗಣಿಗಳ ವಾಣಿಜ್ಯ ಹರಾಜು ಆರಂಭವಾದಾಗ ಮೋದಿ ಹೀಗೆ ಹೇಳಿದ್ದರು: “ಕಲ್ಲಿದ್ದಲು ವಲಯದ ದಶಕಗಳ ಲಾಕ್ಡೌನ್ ಕೊನೆಗೊಳ್ಳಬೇಕು. ಈ ವಲಯ ಹೊಸ ಸ್ವರೂಪಕ್ಕೆ ಸಜ್ಜಾಗಬೇಕು.” – ಎಂದು.
ದೇಶದಲ್ಲಿ ಕೃಷಿಯ ಅನಂತರ ಅತಿ ಹೆಚ್ಚು ಉದ್ಯೋಗಾವಕಾಶವಿರುವ ಕ್ಷೇತ್ರ ಇದಾಗಿದ್ದು ೧.೧ ಕೋಟಿ ಜನರಿಗೆ ಉದ್ಯೋಗ ಮತ್ತು ೫.೫ ಕೋಟಿ ಜನರಿಗೆ ಜೀವನೋಪಾಯ ಕಲ್ಪಿಸುತ್ತಿದೆ. ಮೋದಿ ಸರ್ಕಾರದ ಪ್ರಯತ್ನದಿಂದಾಗಿ ಜಿಡಿಪಿಗೆ ಇದರ ಕೊಡುಗೆ ಶೇ. ೧.೭೫ರಿಂದ ೨.೫ಕ್ಕೇರಿದೆ; ಏಳು ವರ್ಷದಲ್ಲಿ ಇಮ್ಮಡಿಯಾಗಬೇಕೆನ್ನುವ ಗುರಿಯಿದೆ. ‘ಗಣಿ ಮತ್ತು ಖನಿಜಗಳ ಅಭಿವೃದ್ಧಿ ಹಾಗೂ ನಿಯಂತ್ರಣ ತಿದ್ದುಪಡಿ ಕಾಯ್ದೆ-೨೦೨೧’ನ್ನು ಜಾರಿಗೆ ತರಲಾಗಿದ್ದು, ಪರಿಣಾಮವಾಗಿ ಗಣಿವಲಯಕ್ಕೆ ಹೊಸ ಜೀವ ಬಂದಿದೆ. ಹರಾಜುಗಳು ಪಾರದರ್ಶಕವಾಗಿ ನಡೆಯುತ್ತಿವೆ. ಸುಗಮ ವ್ಯವಹಾರವು ಸಾಧ್ಯವಾಗಿ ಸ್ಪರ್ಧಾತ್ಮಕತೆ, ಉತ್ಪಾದಕತೆಗಳು ಹೆಚ್ಚುತ್ತಿವೆ ಎಂದು ಪ್ರಹ್ಲಾದ ಜೋಶಿ ತಿಳಿಸುತ್ತಾರೆ.
ರಾಮಮಂದಿರ
ಅಯೋಧ್ಯೆಯ ರಾಮಮಂದಿರ ನಿರ್ಮಾಣದ ಹಾದಿಯನ್ನು ಸುಗಮವಾಗಿಸಿಕೊಳ್ಳುವುದು ಪ್ರಧಾನಿ ಮೋದಿ ಅವರ ಮುಂದಿದ್ದ ಬಹುದೊಡ್ಡ ಸವಾಲಾಗಿತ್ತು. ಏಕೆಂದರೆ ಮಂದಿರದ ಬಗ್ಗೆ ದೇಶದಲ್ಲಿ ಎಷ್ಟು ರಾಜಕೀಯ ಪಕ್ಷಗಳಿವೆಯೋ ಅಷ್ಟು ಬಗೆಯ ಅಭಿಪ್ರಾಯ-ನಿಲವುಗಳಿದ್ದವೆಂದರೆ ತಪ್ಪಲ್ಲ. ಉದಾಹರಣೆಗೆ, ಕಾಂಗ್ರೆಸ್ಸನ್ನೇ ನೋಡಬಹುದು. ಇನ್ನೊಂದೆಡೆ ಮಂದಿರ ನಿರ್ಮಾಣವು ಶೀಘ್ರವೇ ಆಗಬೇಕೆನ್ನುವ ಸಂತರು, ವಿಶ್ವ ಹಿಂದೂ ಪರಿಷತ್ ಮುಂತಾದವರಿದ್ದರು; ಮತ್ತು ವಿಷಯ ನ್ಯಾಯಾಲಯದಲ್ಲಿತ್ತು. ಸಂವಿಧಾನ ರಕ್ಷಣೆಯ ಹೊಣೆ ಇತ್ತು. ನ್ಯಾಯಾಲಯಗಳಲ್ಲಿ ಹಂತಹಂತವಾಗಿ ಮಂದಿರ ನಿರ್ಮಾಣಕ್ಕೆ ಅನುಕೂಲವಾದದ್ದು ಒಂದೆಡೆಯಾದರೆ, ಮಂದಿರ ನಿರ್ಮಾಣದ ನಿರ್ಧಾರದಿಂದ ದೇಶದಲ್ಲಿ ಕೋಮು ಹಿಂಸಾಚಾರ ಸ್ಫೋಟವಾಗದಂತೆ ನೋಡಿಕೊಳ್ಳುವ ಹೊಣೆ ಇನ್ನೊಂದು. ಸುಪ್ರೀಂಕೋರ್ಟ್ ತೀರ್ಪಿನ ವೇಳೆ ದೇಶದಲ್ಲಿ ಯಾವುದೇ ಕೋಮುಗಲಭೆ ನಡೆಯದಂತೆ ಸರ್ಕಾರ ಎಚ್ಚರ ವಹಿಸಿತು. ತೀರ್ಪು ಬರುವ ಕೆಲವು ದಿನಗಳ ಮುನ್ನ ದೇಶದ ಪ್ರಮುಖ ಮುಸ್ಲಿಂ ಧರ್ಮಗುರುಗಳನ್ನು ಭೇಟಿ ಮಾಡಿದ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ಗೃಹಮಂತ್ರಿ ಅಮಿತ್ ಶಾ ಮುಂತಾದವರು ಪರಿಸ್ಥಿತಿಯ ಸೂಕ್ಷ್ಮತೆಯನ್ನು ಅವರಿಗೆ ಮನವರಿಕೆ ಮಾಡಿಕೊಟ್ಟರೆನ್ನಲಾಗಿದೆ.
ಕೃಷಿ ಕ್ಷೇತ್ರದ ಹಿತ
ಕೃಷಿ ಕ್ಷೇತ್ರಕ್ಕೆ ಸಂಬಂಧಿಸಿ ಮೋದಿ ಸರ್ಕಾರವು ತರಲು ಉದ್ದೇಶಿಸಿದ ಮೂರು ಶಾಸನಗಳನ್ನು ವಿರೋಧಿಸಿದ ರೈತರ ಒಂದು ವರ್ಗ ಏಳು ತಿಂಗಳುಗಳಿಂದ ಪ್ರತಿಭಟನೆಯನ್ನು ನಡೆಸುತ್ತಿದೆ; ಶಾಸನದಲ್ಲಿ ಬೇಕಾದ ತಿದ್ದುಪಡಿ ಮಾಡೋಣವೆಂದು ಸರ್ಕಾರ ಹೇಳಿದರೂ ಅವರು ಅದಕ್ಕೆ ಒಪ್ಪದೆ ಶಾಸನಗಳ ರದ್ದತಿಗೇ ಪಟ್ಟುಹಿಡಿದಿದ್ದಾರೆ. ಪರಿಣಾಮವಾಗಿ ಸಮಸ್ಯೆ ಜಟಿಲವಾಗಿ ಉಳಿದುಕೊಂಡಿದೆ. ನಿಜವೆಂದರೆ, ಸರ್ಕಾರ ತರಲು ಉದ್ದೇಶಿಸಿದ ಶಾಸನಗಳಿಂದ ದೇಶದ ರೈತರಿಗೆ ಬಹಳಷ್ಟು ಪ್ರಯೋಜನವಾಗುತ್ತದೆ; ಮತ್ತು ಪ್ರತಿಭಟನಕಾರರು ಮತ್ತು ಅವರನ್ನೀಗ ಬೆಂಬಲಿಸುತ್ತಿರುವ ಪಕ್ಷಗಳೇ ಹಿಂದೆ ಇದನ್ನು ಬಯಸಿದ್ದವು.
೨೦೨೦ರ ಸೆಪ್ಟೆಂಬರ್-ಅಕ್ಟೋಬರ್ನಲ್ಲಿ ಕೇಂದ್ರಸರ್ಕಾರ ಜಾರಿಗೆ ತಂದ ಮೂರು ಹೊಸ ಕೃಷಿ ಕಾನೂನುಗಳನ್ನು ರದ್ದು ಮಾಡಬಾರದೆಂದು ಕೃಷಿ ತಜ್ಞ ಡಾ|| ಎಂ.ಜಿ. ಚಂದ್ರಕಾAತ್ ಅವರು ವಿವರಿಸುತ್ತಾರೆ. ಎಪಿಎಂಸಿಗಳು ರೈತರನ್ನು ನಿರಂತರವಾಗಿ ಶೋಷಿಸುತ್ತಾ ಬಂದಿವೆ. ಗ್ರಾಹಕರು ಆಯಾ ವಸ್ತುವಿಗೆ ಕೊಡುವ ಬೆಲೆಯ ಅರ್ಧಭಾಗ ಕೂಡ ರೈತರಿಗೆ ಸಿಗುವುದಿಲ್ಲ. ಸಮೀಕ್ಷೆಯೊಂದರ ಪ್ರಕಾರ, ಆಲೂಗಡ್ಡೆಯ ಬೆಲೆಯ ಶೇ. ೨೮, ಈರುಳ್ಳಿಯ ಬೆಲೆಯ ಶೇ. ೩೩, ಅಕ್ಕಿಯ ಬೆಲೆಯ ಶೇ. ೪೯ ಮಾತ್ರ ರೈತರಿಗೆ ಸಿಗುತ್ತಿದೆ. ನಿಜವಾದ ಪರಿಸ್ಥಿತಿ ಇದಕ್ಕಿಂತಲೂ ಶೋಚನೀಯವಿದೆ. ಈಗ ಹೊಸ ಕಾನೂನುಗಳು ರೈತರಿಗೆ ಎಪಿಎಂಸಿಯ ಹೊರಗೆ ಕೂಡ ಮಾರಾಟ ಮಾಡಲು ಅವಕಾಶ ನೀಡುವ ಮೂಲಕ ಉತ್ತಮ ಬೆಲೆ ದೊರಕಿಸಿ ಕೊಡುತ್ತವೆ ಎಂದವರು ಹೇಳುತ್ತಾರೆ.
ಮಧ್ಯವರ್ತಿಗಳ ಹಾವಳಿ, ಪಾರದರ್ಶಕತೆ ಇಲ್ಲದಿರುವುದು, ಏಕಸ್ವಾಮ್ಯ ಇನ್ನಿತರ ಕ್ರಮಗಳು ಶೋಷಿತ ರೈತರ ಸ್ವಾತಂತ್ರ್ಯವನ್ನೇ ಕಸಿದಿವೆ. ೨೦೦೫ರಲ್ಲಿ ಎಪಿಎಂಸಿ ಕಾಯ್ದೆಯನ್ನು ರದ್ದು ಮಾಡಿರುವ ಬಿಹಾರದಲ್ಲಿ ರೈತರಿಗೆ ಸಾಕಷ್ಟು ಉತ್ತಮ ಬೆಲೆ ಸಿಗುತ್ತಿದೆ. ಇಂತಹ ವಾಸ್ತವಗಳು ನಮ್ಮ ಕಣ್ಣಮುಂದಿದ್ದರೂ ಕೆಲವು ರೈತನಾಯಕರು ಇದನ್ನೊಂದು ಪ್ರತಿಷ್ಠೆಯ ವಿಷಯ ಮಾಡಿಕೊಂಡು ರೈತರ ಹಿತಕ್ಕೆ ಅಡ್ಡಿ ಮಾಡುತ್ತಿದ್ದಾರೆ ಎಂದರೆ ತಪ್ಪಲ್ಲ. ಇನ್ನಾದರೂ ತಡಮಾಡದೆ ಬಿಕ್ಕಟ್ಟು ನಿವಾರಣೆಯಾಗಬೇಕು.
ಅಡ್ಡಗಾಲಿಟ್ಟ ಕೊರೋನಾ
ಈಗಾಗಲೇ ಉಲ್ಲೇಖಿಸಿದಂತೆ ಮೋದಿ ಅವರ ಎರಡನೇ ಅವಧಿಯ ಸಂಭಾವ್ಯ ಸಾಧನೆಗಳಿಗೆ ಕೊರೋನಾ ಬಲವಾದ ಬ್ರೇಕ್ ಹಾಕಿತು. ಸುಮಾರು ಒಂದೂವರೆ ವರ್ಷದಲ್ಲಿ ಎರಡು ಅಲೆಗಳಲ್ಲಿ ಈ ಮಹಾಮಾರಿ ದೇಶದ ಮೇಲೆ ಅಪ್ಪಳಿಸಿತು; ಎರಡು ಬಾರಿ ಲಾಕ್ಡೌನ್ ಹೇರಬೇಕಾಯಿತು. ಲಾಕ್ಡೌನ್ ಎಂದರೆ ಎಲ್ಲದಕ್ಕೂ ಪೆಟ್ಟು; ಆರ್ಥಿಕತೆಗಂತೂ ಚೇತರಿಸಿಕೊಳ್ಳಲು ತಿಂಗಳುಗಳೇ ಬೇಕಾಗುತ್ತವೆ.
ಹೀಗಿರುವಾಗ ಪ್ರಧಾನಿ ಮೋದಿ ಪ್ರಸ್ತುತ ಮಹಾಮಾರಿಯ ವೇಳೆ ದೇಶಕ್ಕೆ ಯಾವ ಬಗೆಯ ನಾಯಕತ್ವ ನೀಡಿದರು? ದೇಶವನ್ನು ಹೇಗೆ ಮುನ್ನಡೆಸಿದರು? ಜಗತ್ತಿನ ವಿವಿಧ ದೇಶಗಳ ನಡುವೆ ಈ ನಿಟ್ಟಿನಲ್ಲಿ ಭಾರತ ಎಲ್ಲಿ ನಿಲ್ಲುತ್ತದೆ ಎನ್ನುವ ಕುರಿತು ನೋಡಬಹುದು. ಕೇಂದ್ರ ಸಚಿವ ಗಡ್ಕರಿ ಅವರು ಈ ಬಗ್ಗೆ ಹೀಗೆಂದಿದ್ದಾರೆ: “ಲಾಕ್ಡೌನ್ ನಿರ್ಧಾರವು ನೇರವಾಗಿ ಮೋದಿ ಒಬ್ಬರೇ ತೆಗೆದುಕೊಂಡದ್ದಲ್ಲ. ಈ ಕಠಿಣ ನಿರ್ಧಾರಕ್ಕೆ ಬರುವ ಮುನ್ನ ಎಲ್ಲ ಮುಖ್ಯಮಂತ್ರಿಗಳು, ಹಿರಿಯ ಅಧಿಕಾರಿಗಳು, ಉದ್ಯಮ ಪ್ರತಿನಿಧಿಗಳು, ಆರೋಗ್ಯ ಪರಿಣತರೊಂದಿಗೆ ಚರ್ಚಿಸಿದ್ದಾರೆ. ಸರ್ಕಾರದ ಮೊದಲ ಕೆಲಸ ಜನರ ಆರೋಗ್ಯವನ್ನು ಕಾಪಾಡುವುದಾಗಿದೆ. ಆದ್ದರಿಂದ ಅನಿವಾರ್ಯವಾಗಿ ಲಾಕ್ಡೌನ್ ನಿರ್ಧಾರಕ್ಕೆ ಬರಲಾಯಿತು. ಮುಂದುವರಿದ ದೇಶಗಳಾದ ಅಮೆರಿಕ, ಬ್ರಿಟನ್, ಇಟಲಿ, ಫ್ರಾನ್ಸ್ಗಳಿಗಿಂತ ಸೋಂಕು ತಡೆಯುವಲ್ಲಿ ನಾವು ಹೆಚ್ಚು ಯಶಸ್ವಿಯಾಗಿದ್ದೇವೆ. ಇದಕ್ಕೆ ಮೂಲಕಾರಣ ಮೋದಿ ಸರ್ಕಾರ ಕೈಗೊಂಡ ಸಮಯೋಚಿತ ನಿರ್ಧಾರ.” ಇದು ಕೊರೋನಾ ಒಂದನೇ ಅಲೆಗೆ ಸಂಬಂಧಿಸಿ ಹೇಳಿದ್ದು, ಎರಡನೇ ಅಲೆಯ ಹೊತ್ತಿಗೆ ಅವರು ಲಾಕ್ಡೌನ್ ಹೇಳಿಕೆ ನಿರ್ಧಾರವನ್ನು ರಾಜ್ಯಗಳಿಗೆ ವಹಿಸಿದರೆನ್ನಬಹುದು. ಆದರೂ ರಾಜ್ಯ ಮಾತ್ರವಲ್ಲ; ಜಿಲ್ಲಾವಾರಾಗಿ ಕೂಡ ಕೊರೋನಾದ ಪರಿಸ್ಥಿತಿಯನ್ನು ದೆಹಲಿಯಿಂದಲೇ ಅವಲೋಕಿಸುತ್ತಾ ಕಾಲಕಾಲಕ್ಕೆ ಸಲಹೆ-ಸೂಚನೆಗಳನ್ನು ನೀಡುತ್ತಿದ್ದರು. ದೇಶಾದ್ಯಂತ ಉಚಿತ ಆಹಾರದ ಕಿಟ್ಗಳ ವಿತರಣೆಗೆ ವ್ಯವಸ್ಥೆ ಮಾಡಿದರು.
ಒಂದನೇ ಅಲೆಯ ಹೊತ್ತಿಗೆ ಸಕಾಲದಲ್ಲಿ ಲಾಕ್ಡೌನ್ ಘೋಷಿಸದಿದ್ದಿದ್ದರೆ ೧೩೮ ಕೋಟಿ ಜನಸಂಖ್ಯೆಯ ಈ ಬೃಹತ್ ದೇಶದಲ್ಲಿ ಅದನ್ನು ನಿಯಂತ್ರಿಸುವುದು, ಜನರ ಜೀವಗಳಿಗೆ ರಕ್ಷಣೆ ನೀಡುವುದು ನಿಜವಾಗಿಯೂ ದೊಡ್ಡ ಸಮಸ್ಯೆಯಾಗುತ್ತಿತ್ತು. ಅಮೆರಿಕ ಮುಂತಾದ ದೇಶಗಳ ಪರಿಸ್ಥಿತಿ ನಮ್ಮ ಮುಂದಿದೆ.
ಆಗ ಈ ಸೋಂಕು ರೋಗದ ಬಗ್ಗೆ ಯಾರಿಗೂ ಏನೂ ಖಚಿತವಾಗಿ ಗೊತ್ತಿರದಿದ್ದ ಕಾರಣ ಪ್ರತಿಯೊಂದು ಹೆಜ್ಜೆಯನ್ನೂ ಎಚ್ಚರದಿಂದ ಇಡಬೇಕಾಗಿತ್ತು.
೨ನೇ ಅಲೆ
ಕಳೆದ ವರ್ಷಾಂತ್ಯಕ್ಕೆ ಒಂದನೇ ಅಲೆ ಮುಗಿದು ಎರಡು ತಿಂಗಳು ನಿರುಮ್ಮಳವಾಗಿ ಇರುವಾಗಲೆ ಎರಡನೇ ಅಲೆ ಅಪ್ಪಳಿಸಿತು. ಇದು ತೀವ್ರವಾಗಿ ಇರಲಾರದೆಂಬ ನಿರೀಕ್ಷೆಯನ್ನು ಹುಸಿಗೊಳಿಸಿ ವಯಸ್ಸಿನ ಭೇದವಿಲ್ಲದೆ ಪ್ರಾಣಕ್ಕೇ ಸಂಚಕಾರ ತರತೊಡಗಿತು. ಜೀವ ಉಳಿಸಲು ಆಸ್ಪತ್ರೆಗೆ ದಾಖಲಿಸುವುದು, ಅದರಲ್ಲೂ ಆಮ್ಲಜನಕ ಪೂರೈಕೆ ಮಾತ್ರವಲ್ಲ; ಐಸಿಯು ಹಾಸಿಗೆಗಳೇ ಬೇಕೆಂಬ ವಾತಾವರಣ ಸಾರ್ವತ್ರಿಕವಾಗಿ ಲಭ್ಯವಿದ್ದ ಮೂಲಸವಲತ್ತು ಏನೇನೂ ಸಾಲದೆಂಬ ಸ್ಥಿತಿ ನಿರ್ಮಾಣವಾಯಿತು. ಪಾಸಿಟಿವಿಟಿ ದೇಶದ ಬಹಳಷ್ಟು ಕಡೆ ಶೇ. ೫೦ಕ್ಕೆ ಸಮೀಪವಾಗಿತ್ತೆಂದರೆ ಪರಿಸ್ಥಿತಿ ಹೇಗಿರಬೇಡ. ಸುಮಾರು ಒಂದು ತಿಂಗಳ ಕಾಲ ಪರಿಸ್ಥಿತಿ ಅಷ್ಟೊಂದು ಗಂಭೀರವಾಗಿದ್ದರೂ ಕೂಡ ಮೋದಿ ಸರ್ಕಾರ ಧೃತಿಗೆಡದೆ ಜನರ ಜೀವರಕ್ಷಣೆಗೆ ಕಟಿಬದ್ಧವಾಗಿ ನಿಂತು ಹಾನಿಯು ಕನಿಷ್ಠ ಪ್ರಮಾಣದಲ್ಲಿರುವಂತೆ ನೋಡಿಕೊಂಡಿತು.
ಈ ಕುರಿತು ಖ್ಯಾತ ಹೃದ್ರೋಗತಜ್ಞ ಮತ್ತು ಕೊರೋನಾಗೆ ಸಂಬAಧಿಸಿ ಸುಪ್ರೀಂಕೋರ್ಟ್ ನೇಮಿಸಿದ ಸಮಿತಿಯ ಸದಸ್ಯ ಡಾ|| ದೇವಿ ಶೆಟ್ಟಿ ಅವರ ಅಭಿಪ್ರಾಯ ಹೀಗಿತ್ತು: “ದೈನಿಕ ೧೦ ಸಾವಿರ ಇದ್ದ ಪ್ರಕರಣ ಒಂದೂಕಾಲು ತಿಂಗಳಲ್ಲಿ ೪ ಲಕ್ಷಕ್ಕೇರಿತು. ಇಂಥ ಸ್ಥಿತಿಗೆ ಯಾವ ವ್ಯವಸ್ಥೆ ಕೂಡಾ ತಯಾರಾಗಿರುವುದಿಲ್ಲ. ಯಾವ ದೇಶಕ್ಕೂ ಇದರ ನಿರ್ವಹಣೆ ಸಾಧ್ಯವಿಲ್ಲ. ಆರೋಗ್ಯ ಮೂಲಸೌಕರ್ಯಗಳು ಹೆಚ್ಚಾಗಿರುವ ಅಮೆರಿಕ, ಯೂರೋಪ್ಗಳಿಗೂ ನಿತ್ಯ ಇಷ್ಟೊಂದು ಪ್ರಕರಣಗಳ ನಿರ್ವಹಣೆ ಸಾಧ್ಯವಿಲ್ಲ. ಆದರೆ ಭಾರತ ಸರ್ಕಾರ ಮಾತ್ರ ಕೊರೋನಾ ನಿರ್ವಹಣೆಯಲ್ಲಿ ಅದ್ಭುತ ಕೆಲಸ ಮಾಡಿದೆ” ಎಂದವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕಳೆದ ವರ್ಷ ಒಂದನೇ ಅಲೆಯಲ್ಲಿ ಸೆಪ್ಟೆಂಬರ್ ೧೬ರಂದು ಗರಿಷ್ಠ ೯೭,೮೯೪ ಪ್ರಕರಣಗಳು ದಾಖಲಾಗಿದ್ದರೆ ಈ ಬಾರಿ ಮೇ ೬ರಂದು ಗರಿಷ್ಠ ೪.೧೪ ಲಕ್ಷ ಪ್ರಕರಣಗಳು ದಾಖಲಾಗಿದ್ದವು. ಆಮ್ಲಜನಕದ ಹಾಹಾಕಾರವನ್ನು ತಪ್ಪಿಸಲು ಕೇಂದ್ರಸರ್ಕಾರ ಬಹಳ ಶ್ರಮಪಟ್ಟಿದೆ. ೯೦೦ ಟನ್ ಇದ್ದ ಬೇಡಿಕೆ ಕೆಲವು ದಿನಗಳಲ್ಲಿ ೯೦೦೦ ಟನ್ ಆಗಿತ್ತು. ದೇಶದ ಪಶ್ಚಿಮ ಮತ್ತು ಪೂರ್ವ ಭಾಗದಲ್ಲಿ ಆಕ್ಸಿಜನ್ ಉತ್ಪಾದನೆಯಾದರೆ ರೋಗಿಗಳು ಅಧಿಕವಿದ್ದುದು ಬೇರೆ ಕಡೆ. ಅದನ್ನು ಸುಮಾರು ೧೫೦೦ ಕಿ.ಮೀ. ಸಾಗಿಸಬೇಕಿತ್ತು. ದ್ರವರೂಪದ ಆಕ್ಸಿಜನ್ ಹೊತ್ತ ಟ್ಯಾಂಕರ್ಗಳು ಗಂಟೆಗೆ ೩೦ ಮೈಲಿಗಿಂತ ವೇಗವಾಗಿ ಚಲಿಸುವಂತಿಲ್ಲ. ತಡವಾದರೆ ರೋಗಿಗಳ ಸಾವು ನಿಶ್ಚಿತ. ಅದಕ್ಕಾಗಿ ಸರ್ಕಾರ ರೈಲುಗಳ ವ್ಯವಸ್ಥೆ ಮಾಡಿತು; ಇದೆಲ್ಲವೂ ತುರ್ತಾಗಿ ಆಗಬೇಕಿತ್ತು.
ಇನ್ನು ಕೊರೋನಾ ವಿರುದ್ಧ ಪ್ರಬಲ ಅಸ್ತç ವ್ಯಾಕ್ಸಿನ್ ಮಾತ್ರ ಎಂಬುದನ್ನು ಮೊದಲ ಅಲೆಯ ವೇಳೆಗೇ ಮೋದಿ ಸರ್ಕಾರ ಕಂಡುಕೊಂಡಿತ್ತು. ವ್ಯಾಕ್ಸಿನ್ ಕಂಡುಹಿಡಿಯುವ ವಿಜ್ಞಾನಿಗಳ ತಂಡಕ್ಕೆ ಸೂಕ್ತ ಸೌಲಭ್ಯಗಳನ್ನು ನೀಡಿ ಪ್ರೋತ್ಸಾಹಿಸಿದರು. ಎರಡನೇ ಅಲೆಗೆ ಮುನ್ನವೇ ವ್ಯಾಕ್ಸಿನ್ ಅಭಿಯಾನಕ್ಕೆ ಚಾಲನೆ ನೀಡಿದ್ದಾಗಿತ್ತು.
ಒಟ್ಟಿನಲ್ಲಿ ಕೋವಿಡ್ ವಿರುದ್ಧ ಸಮರದಲ್ಲಿ ಭಾರತ ಮುಂಚೂಣಿ ದೇಶವಾಗಿ ಹೊರಹೊಮ್ಮಿದೆ. ಮೊದಲಿಗೆ ಭಾರತವು ಅಮೆರಿಕ ಸೇರಿದಂತೆ ೧೨೦ ದೇಶಗಳಿಗೆ ಜೀವರಕ್ಷಕ ಔಷಧಿಗಳನ್ನು ಕಳುಹಿಸಿತು. ಅನಂತರ ಸ್ವಂತ ಲಸಿಕೆ ಉತ್ಪಾದಿಸಿ ಕೆಲವು ದೇಶಗಳಿಗೆ ಉಚಿತವಾಗಿಯೂ ನೀಡಿತು. ಈಗ ದೇಶದೊಳಗೆ ಲಸಿಕೆಗೆ ಭಾರೀ ಬೇಡಿಕೆಯಿದ್ದು ವರ್ಷಾಂತ್ಯದೊಳಗೆ ಎಲ್ಲರಿಗೆ ನೀಡುವ ದೊಡ್ಡ ಸವಾಲು ಕೇಂದ್ರಸರ್ಕಾರದ ಮುಂದಿದೆ.
ಅದಕ್ಕವರು ಸಜ್ಜಾಗಿದ್ದಾರೆ. ಜೊತೆಗೆ ಮೋದಿ ಕೊರೋನಾಗೆ ಸಂಬಂಧಿಸಿದ ಯಾವುದೇ ವಸ್ತು-ವಿಷಯವನ್ನು ಜಗತ್ತಿನ ಯಾವುದೇ ದೇಶದೊಂದಿಗೆ ಹಂಚಿಕೊಳ್ಳಲು ಸಿದ್ಧ; ಭಾರತಕ್ಕೆ ‘ವಿಶ್ವವೇ ಕುಟುಂಬ’ ವಿದ್ದಂತೆ ಎಂದು ಘೋಷಿಸಿದ್ದಾರೆ.
ಧ್ರುವೀಕರಣದ ವ್ಯಕ್ತಿ
ಮೋದಿ ಅವರನ್ನು ‘ಧ್ರುವೀಕರಣದ ವ್ಯಕ್ತಿ’, ‘ನೈಜ ಬದಲಾವಣೆಯ ಏಜೆಂಟ್’ ಎಂದೆಲ್ಲ ಬಣ್ಣಿಸುತ್ತಾರೆ. ನಮ್ಮ ಪರಂಪರೆಯ ಜೊತೆಗೆ ಆಧುನಿಕತೆಯನ್ನು ಬೆಸೆದದ್ದು ಮೋದಿ ಅವರ ಬಹುದೊಡ್ಡ ಕೊಡುಗೆ. ಕಳೆದ ೭೦ ವರ್ಷಗಳಲ್ಲಿ ಏನಿತ್ತೋ ಅಂತಹ ಸ್ವರೂಪವನ್ನೇ (ಕ್ಯಾರೆಕ್ಟರ್) ಅವರು ಬದಲಿಸಿದರು. ಚೀನಾವನ್ನು ಎದುರಿಸಿದ್ದರಲ್ಲಿ ಅದು ಕಂಡುಬಂತು. ಹವಾಮಾನ ಬದಲಾವಣೆ, ಮುಕ್ತ ವ್ಯಾಪಾರ ಒಪ್ಪಂದಗಳಲ್ಲಿ ಮತ್ತು ದೊಡ್ಡ ಬಹುರಾಷ್ಟ್ರೀಯ ಕಂಪೆನಿಗಳು (ಎಂಎನ್ಸಿ) ಜಗತ್ತಿನ ಚಿಂತನ ಚಿಲುಮೆಗಳನ್ನು ಬುಲ್ಡೋಸ್ (ಬುಡಮೇಲು) ಮಾಡಿದಾಗ ಭಾರತದ ವಾದಕ್ಕೆ ಅವಕಾಶ ಇರಲಿಲ್ಲ; ಆದರೆ ಈಗ ೨೦೨೧ರ ಭಾರತ ೨೦೧೪ರ ಪೂರ್ವದ ಭಾರತ ಅಲ್ಲ ಎಂಬುದನ್ನು ಮೋದಿ ತೋರಿಸಿಕೊಟ್ಟಿದ್ದಾರೆ.
ಈಗಿನ ಸರ್ಕಾರದಲ್ಲಿ ಭಾರೀ ಬದಲಾವಣೆ ಕಂಡ ಒಂದು ಕ್ಷೇತ್ರ ವಿದೇಶಾಂಗ ವ್ಯವಹಾರ. ಈಗ ಅದು ನೈತಿಕ ಶಿಕ್ಷಣ, ಉಪನ್ಯಾಸಗಳಿಗೆ ಸೀಮಿತವಾಗಿಲ್ಲ. ಬದಲಾಗಿ ಶತಾಂಶ ರಾಷ್ಟ್ರೀಯ ಹಿತಾಸಕ್ತಿಯ ವಿಷಯವಾಗಿದೆ. ಈಗ ಅದರಲ್ಲಿ ಗ್ರಾಂಡ್ ಸ್ಟ್ಯಾಂಡಿಂಗ್ಗೆ ಬದಲಾಗಿ ನೈಜ ರಾಜಕೀಯವು ನಡೆಯುತ್ತಿದೆ: “ಮೋದಿ ಅವರು ತಂದಿರುವ ಬದಲಾವಣೆ ಎಂತಹದೆಂದರೆ ಅದು ಅದಕ್ಷತೆ ಮತ್ತು ಹೊಗಳುಭಟರದ್ದಲ್ಲ. ಏಳು ವರ್ಷಗಳಲ್ಲಿ ಈ ಬದಲಾವಣೆ ಸಾರ್ವಜನಿಕ ಜೀವನದ ಎಲ್ಲ ಕ್ಷೇತ್ರಗಳಲ್ಲಿ ಧ್ರುವೀಕರಣವನ್ನು ಮಾಡಿದೆ. ಅವರು ನೀಡಿದ ಬದಲಾವಣೆಯ ಭರವಸೆಯನ್ನು ನಂಬಿದ ಜನ ಎರಡು ಬಾರಿ ಮತ ಹಾಕಿ ಪ್ರಚಂಡವಾಗಿ ಗೆಲ್ಲಿಸಿದರು” ಎಂದವರು ಸ್ವಪನ್ ದಾಸಗುಪ್ತ ಅವರು. ದೇಶದಲ್ಲಿ ಒಂದೇ ಪಕ್ಷ ಬಹುಮತ ಗಳಿಸಿ ಅಧಿಕಾರಕ್ಕೆ ಬರುವುದು ೨೫ ವರ್ಷಗಳ ಹಿಂದೆಯೇ ಮುಗಿದುಹೋಗಿತ್ತು.
ಭ್ರಷ್ಟಾಚಾರದ ಇಳಿಕೆಯು ಮೋದಿ ಅವರು ತಂದ ಇನ್ನೊಂದು ದೊಡ್ಡ ಬದಲಾವಣೆಯಾಗಿದೆ. ಅವರು ಅಧಿಕಾರಕ್ಕೆ ಬರುವಾಗ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಭ್ರಷ್ಟಾಚಾರದ ಶಿಖರಗಳನ್ನೇ ಬಿಟ್ಟುಹೋಗಿತ್ತು. ಮೋದಿ ಅವರು ಸ್ವಂತ ಉದಾಹರಣೆಯ ಮೂಲಕ ಆಡಳಿತದ ಮೇಲ್ಭಾಗದಲ್ಲಿ ಬಹಳ ಬದಲಾವಣೆಗಳನ್ನು ತಂದರು; ಸರ್ಕಾರೀ ಕಚೇರಿಗಳಿಗೆ ಬಿಸಿ ಮುಟ್ಟಿಸಿ ಅಧಿಕಾರಿಗಳು ಸಕಾಲದಲ್ಲಿ ಕೆಲಸಕ್ಕೆ ಹಾಜರಾಗುವಂತೆ ಮಾಡಿದರು. ಈಗ ವಿಜಯ್ಮಲ್ಯ, ನೀರವ್ ಮೋದಿ, ಮೆಹುಲ್ ಚೋಕ್ಸಿ ಅವರಂತಹ ಖದೀಮರ ಬೆನ್ನುಹಿಡಿದು ಅವರು ನುಂಗಿದ ದೇಶದ ಸಂಪತ್ತನ್ನು ಕಕ್ಕಿಸುತ್ತಿದ್ದಾರೆ; ಆ ಬಗೆಯ ವಂಚನೆ ಈಗ ಸುಲಭವಿಲ್ಲ.
ಕುಂದದ ಜನಪ್ರಿಯತೆ
ಭಾರತದ ರಾಜಕೀಯದಲ್ಲಿ ಹಿಂದೆ ಇಲ್ಲದ ಅಥವಾ ತುಂಬ ಅಪರೂಪವಾಗಿದ್ದ ಒಂದು ವಿದ್ಯಮಾನ ಮೋದಿ ಅವರಲ್ಲಿದೆ; ಅದು ಅವರ ಜನಪ್ರಿಯತೆ. ವಿರೋಧಪಕ್ಷಗಳು ಮತ್ತು ಮಾಧ್ಯಮದ ಒಂದು ವಿಭಾಗ ಎಷ್ಟೇ ವಿರೋಧ ಮಾಡಿದರೂ ದೇಶದ ಜನ ಅವರನ್ನು ಇಷ್ಟಪಡುತ್ತಾರೆ ಎನ್ನುವ ಟಿ.ವಿ. ಮೋಹನ್ದಾಸ ಪೈ ಅದಕ್ಕೆ ಮೂರು ಕಾರಣಗಳನ್ನು ಗುರುತಿಸಿದ್ದಾರೆ. ನೀತಿಗಳ ಅನುಷ್ಠಾನದ ವೇಳೆ ಪರಿಣಾಮಕಾರಿಯಾದ ಕಾರ್ಯತಂತ್ರ; ಸಾಮಾಜಿಕ ಪಿರಮಿಡ್ನ ಕೆಳಭಾಗದ ಶೇ. ೬೦ ಜನರನ್ನು ಮೇಲೆತ್ತುವುದಕ್ಕೆ ಒತ್ತು ನೀಡುವುದು; ಮತ್ತು ಪಾರದರ್ಶಕ, ಭ್ರಷ್ಟಾಚಾರರಹಿತ ಆಡಳಿತ; – ಇವೇ ಆ ಕಾರಣಗಳು.
ವಿಜ್ಞಾನ-ತಂತ್ರಜ್ಞಾನ ಕ್ಷೇತ್ರಗಳ ಬೆಳವಣಿಗೆಗಳನ್ನು ಹತ್ತಿರದಿಂದ ಗಮನಿಸಿ ಪ್ರೋತ್ಸಾಹಿಸುವುದು ಮೋದಿ ಅವರ ಕಾರ್ಯಶೈಲಿಯ ಪ್ರಮುಖ ಅಂಶವಾಗಿದೆ. ೨೦೧೪ರಲ್ಲಿ ದೇಶದಲ್ಲಿ ಎರಡು ಮೊಬೈಲ್ ತಯಾರಿಕೆ ಘಟಕಗಳಿದ್ದರೆ ಈಗ ಅದು ಇನ್ನೂರಕ್ಕೇರಿದೆ. ಆಗ ೩೦೦ ಕೋಟಿ ಡಾಲರ್ ಮೌಲ್ಯದ ಆರು ಕೋಟಿ ಮೊಬೈಲ್ ಫೋನ್ಗಳು ದೇಶದಲ್ಲಿ ಉತ್ಪಾದನೆಯಾದರೆ ೨೦೧೯ರಲ್ಲಿ ಒಟ್ಟು ೩೦೦೦ ಕೋಟಿ ಡಾಲರ್ ಮೌಲ್ಯದ ೩೩ ಕೋಟಿ ಮೊಬೈಲ್ ಉತ್ಪಾದಿಸಲಾಗಿತ್ತು. ಇದರಲ್ಲಿ ಭಾರತ ಜಗತ್ತಿನ ಎರಡನೇ ಸ್ಥಾನದಲ್ಲಿದೆ.
ಸೋಲಾರ್ ವಿದ್ಯುತ್ ಉತ್ಪಾದನೆಯಲ್ಲಿ ಭಾರತ ಈಗ ಜಗತ್ತಿನ ಐದನೇ ಸ್ಥಾನಕ್ಕೇರಿದೆ. ಇಸ್ರೋ ಜಗತ್ತಿನ ನಾಲ್ಕನೇ ಅತ್ಯುತ್ತಮ ಬಾಹ್ಯಾಕಾಶ ಸಂಸ್ಥೆಯಾಗಿದೆ. ಮೋದಿ ಅವರ ಆಸಕ್ತಿ ಅಲ್ಲವಾಗಿದ್ದರೆ ಕೊರೋನಾ ಲಸಿಕೆ ಉತ್ಪಾದನೆಯಲ್ಲಿ ಇಷ್ಟು ಬೇಗ ಇಷ್ಟು ದೊಡ್ಡ ಸಾಧನೆ ಸಾಧ್ಯವಿರಲಿಲ್ಲ.
ಸವಾಲಿಗೆ ಸದಾ ಸಿದ್ಧ
ಬಿಜೆಪಿ ಪ್ರಧಾನ ಕಾರ್ಯದರ್ಶಿಯಾಗಿದ್ದ ಆರೆಸ್ಸೆಸ್ನ ರಾಂಮಾಧವ್ ಅವರು ಮೋದಿ ಅವರನ್ನು ‘ಸವಾಲುಗಳಿಗೆ ಎದೆ ಒಡ್ಡುವ ಗಂಡುಗಲಿ’ ಎಂದು ಬಣ್ಣಿಸುತ್ತಾರೆ: “ಮೋದಿಯವರು ಆಡಳಿತವನ್ನು ಸಲೀಸಾಗಿ ನಿಭಾಯಿಸುತ್ತಾರೆ. ಏನೇ ಸವಾಲು ಬರಲಿ; ಅದನ್ನು ಸೂಕ್ಷ್ಮವಾಗಿ ಗಮನಿಸಿ ಪರಿಣಾಮಕಾರಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಾರೆ. ತ್ರಿವಳಿ ತಲಾಖ್ ಮಸೂದೆಯನ್ನು ಜುಲೈ ೨೦೧೯ರಲ್ಲಿ ಪರಿಚಯಿಸಿ ತ್ವರಿತವಾಗಿ ಸಂಸತ್ತಿನಲ್ಲಿ ಮಂಡಿಸಿ ಅಂಗೀಕಾರವನ್ನು ಪಡೆದರು. ಸಂವಿಧಾನದ ೩೭೦ ಮತ್ತು ೩೫ಎ ವಿಧಿಗಳ ರದ್ದತಿಯ ಐತಿಹಾಸಿಕ ನಿರ್ಧಾರವನ್ನು ಕೈಗೊಂಡರು. ವರ್ಷದ ಕೊನೆಯ ವೇಳೆಗೆ ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ)ಯನ್ನು ಅಂಗೀಕರಿಸಿದರು. ಅದೇ ವರ್ಷ ನವೆಂಬರ್ನಲ್ಲಿ ರಾಮಮಂದಿರ ನಿರ್ಮಾಣದ ಬಗ್ಗೆ ಸುಪ್ರೀಂಕೋರ್ಟ್ ಒಪ್ಪಿಗೆ ನೀಡಿತು. ಮೋದಿ ಕೂಡಲೇ ಆ ಬಗ್ಗೆ ಜನರ ನೇತೃತ್ವದ ಟ್ರಸ್ಟ್ ರಚಿಸಿದರು” ಎನ್ನುವ ರಾಂಮಾಧವ್, ಮೋದಿ ಅವರಿಗೆ ಗೃಹ ಸಚಿವ ಅಮಿತ್ ಶಾ ಅವರು ನೀಡುವ ಸಾಥ್ನ್ನು ಉಲ್ಲೇಖಿಸಲು ಮರೆಯುವುದಿಲ್ಲ.
ತಮ್ಮ ಸರ್ಕಾರದ ಏಳನೇ ವರ್ಷಾಚರಣೆ ವೇಳೆ ಮೋದಿ ಹೀಗೆ ಹೇಳಿದರು: “ಸಬ್ಕಾ ಸಾಥ್, ಸಬ್ಕಾ ವಿಕಾಸ್, ಸಬ್ಕಾ ವಿಶ್ವಾಸ್ – ಇದು ಕಳೆದ ಏಳು ವರ್ಷಗಳಲ್ಲಿ ಎನ್ಡಿಎ ಸರ್ಕಾರದ ಮೂಲಮಂತ್ರವಾಗಿದ್ದು, ಈ ಅವಧಿಯಲ್ಲಿ ದೇಶ ಹಲವು ರಾಷ್ಟ್ರೀಯ ಹೆಮ್ಮೆಗಳಿಗೆ ಸಾಕ್ಷಿಯಾಗಿದೆ. ಭಾರತ ಇಂದು ಯಾವುದೇ ದೇಶದ ಒತ್ತಡಕ್ಕೆ ಒಳಗಾಗಿ ಮುಂದೆ ಸಾಗುತ್ತಿಲ್ಲ. ಬದಲಾಗಿ ತನ್ನದೇ ಮನೋನಿಶ್ಚಯದಂತೆ ಮುಂದೆ ಸಾಗುತ್ತಿದೆ. ಇಂತಹ ವಿಷಯಗಳೇ ನಮ್ಮ ಬಗ್ಗೆ ನಾವು ಹೆಮ್ಮೆ ಪಡುವಂತೆ ಮಾಡುತ್ತಿವೆ. ಸಂಚು ನಡೆಸುವವರಿಗೆ ಭಾರತ ಸೂಕ್ತ ತಿರುಗೇಟು ನೀಡುತ್ತಿದೆ ಎಂಬುದನ್ನು ನೋಡುವಾಗ ನಮ್ಮ ಆತ್ಮವಿಶ್ವಾಸ ಮುಗಿಲುಮುಟ್ಟುತ್ತದೆ. ನಾವು ಸರಿಯಾದ ದಿಕ್ಕಿನಲ್ಲಿ ಸಾಗುತ್ತಿದ್ದೇವೆ ಎಂಬ ಸಾರ್ಥಕತೆಯನ್ನು ನಾವು ಅನುಭವಿಸುತ್ತೇವೆ” ಎಂದವರು ಹೇಳಿದಾಗ ನಮ್ಮ-ನಿಮ್ಮೆಲ್ಲರ ಭಾವನೆಗಳು ಕೂಡ ಅದರೊಂದಿಗಿದ್ದವು ಎನ್ನಬಹುದಲ್ಲವೆ?
ಪಶ್ಚಿಮ ಬಂಗಾಳ ಚುನಾವಣೆ
ಪಶ್ಚಿಮಬಂಗಾಳದ ಚುನಾವಣೆಯ ಫಲಿತಾಂಶ ಬಿಜೆಪಿಯ ಸೋಲೇ ಅಥವಾ ಅದು ಪಕ್ಷದ ವೈಫಲ್ಯವೇ ಎನ್ನುವ ಪ್ರಶ್ನೆ ಒಮ್ಮೆ ಮುನ್ನೆಲೆಗೆ ಬಂತೆನ್ನಬಹುದು. ಆದರೆ ಸೋಲು-ಗೆಲವುಗಳ ತೀರ್ಮಾನ ಅಷ್ಟು ಸುಲಭವಲ್ಲ. ಮೇಲಾಗಿ ಹಿಂದೆ ಪಕ್ಷ ಅಲ್ಲಿ ಹೇಗಿತ್ತು ಮತ್ತು ಈಗ ಹೇಗಾಗಿದೆ ಎಂಬ ಪ್ರಶ್ನೆ ಕೂಡ ಮುಖ್ಯವಾಗುತ್ತದೆ. ಅದಕ್ಕೊಂದು ಹಿನ್ನೋಟವನ್ನು ಬೀರುವುದಾದರೆ, ೨೦೧೧ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ೨೮೯ ಕ್ಷೇತ್ರಗಳಲ್ಲಿ ಸ್ಪರ್ಧಿಸಿದಾಗ ಒಂದೇ ಒಂದು ಕ್ಷೇತ್ರದಲ್ಲೂ ಗೆಲ್ಲಲಿಲ್ಲ. ಆಗ ತೃಣಮೂಲ ಕಾಂಗ್ರೆಸ್ (ಟಿಎಂಸಿ) ೨೨೬ ಕ್ಷೇತ್ರಗಳಲ್ಲಿ ಸ್ಪರ್ಧಿಸಿ ೧೮೪ರಲ್ಲಿ ಜಯಗಳಿಸಿ ಅಧಿಕಾರಕ್ಕೆ ಬಂದಿತ್ತು. ಆ ಸಲ ಬಿಜೆಪಿಗೆ ಎಂತಹ ದಯನೀಯ ಸ್ಥಿತಿ ಇತ್ತೆಂದರೆ ಮೈತ್ರಿ ಮಾಡಿಕೊಳ್ಳಲು ಯಾರೂ ಸಿಗದೆ ಗೋರ್ಖಾ ಜನಮುಕ್ತಿ ಮೋರ್ಚಾದ ಜೊತೆ ಮೈತ್ರಿ ಮಾಡಿಕೊಳ್ಳಲಾಗಿತ್ತು; ಅದಕ್ಕೆ ಮೂರು ಸ್ಥಾನಗಳನ್ನು ನೀಡಿದ್ದು ಅವರೆಲ್ಲ ಗೆದ್ದಿದ್ದರು. ಆ ಸಲ ಟಿಎಂಸಿ ಶೇ. ೩೮.೯೩ ಮತ ಗಳಿಸಿದರೆ ಬಿಜೆಪಿ ಶೇ.೪.೦೬ ಮತಗಳಿಗೆ ಸೀಮಿತವಾಗಿತ್ತು. ಮುಂದೆ ೨೦೧೬ರ ಚುನಾವಣೆಯಲ್ಲಿ ಬಿಜೆಪಿ ೨೯೨ ಸ್ಥಾನಗಳಲ್ಲಿ ಸ್ಪರ್ಧಿಸಿದಾಗ ಸಿಕ್ಕಿದ್ದು ಕೇವಲ ಮೂರು. ಟಿಎಂಸಿ ೨೯೩ರಲ್ಲಿ ಸ್ಪರ್ಧಿಸಿ ೨೧೧ರಲ್ಲಿ ಜಯಗಳಿಸಿತ್ತು. ಆಗ ಟಿಎಂಸಿಯ ಮತಗಳಿಕೆ ಶೇ. ೪೪.೯೧ಕ್ಕೇರಿದರೆ ಬಿಜೆಪಿ ಶೇ. ೧೦.೧೬ ಮತ ಗಳಿಸಿತ್ತು. ಈ ಸಲ ಬಿಜೆಪಿ ತನ್ನ ಬಲವನ್ನು ೭೭ ಸ್ಥಾನಗಳಿಗೆ ಏರಿಸಿಕೊಂಡಿದೆ; ಮತ್ತು ಮತಗಳಿಕೆ ಶೇ. ೩೮.೧ಕ್ಕೇರಿದೆ. ಈ ಸಲ ಟಿಎಂಸಿ ಗಳಿಸಿದ ಶೇಕಡಾವಾರು ಮತ ೪೭.೯, ಸ್ಥಾನಗಳಿಕೆ ೨೧೩. ಎಲ್ಲ ಪ್ರತಿಕೂಲ ಪರಿಸ್ಥಿತಿ ಮತ್ತು ಟಿಎಂಸಿ ಮತ್ತದರ ನಾಯಕಿಯ ಅಪಸವ್ಯಗಳ ಎದುರು ಈ ಗಳಿಕೆ ಸಣ್ಣ ಸಾಧನೆಯಲ್ಲ.