ಅಮ್ಮನಲ್ಲಿ ನಮ್ಮ ಮನಸ್ಸು ಬಿಚ್ಚಿ ಮಾತನಾಡಿದಂತೆ ನಾವು ಅಪ್ಪನಲ್ಲಿ ಮಾತಾಡಿದವರಲ್ಲ. ಇಂದು ಅಪ್ಪ ತಮ್ಮ ಹಳೆಯ ಅನುಭವಗಳ ಕಂತೆ ಬಿಚ್ಚುತ್ತಿದ್ದಾರೆ, ನಮ್ಮ ಕಥೆಗಳಿಗೆ ತಾನೂ ಕಿವಿಯಾಗುತ್ತಾ. ಅಪ್ಪನ ಕತೆಗಳನ್ನು ಕೇಳುತ್ತಾಕೇಳುತ್ತಾ ಅವರ ಬಗ್ಗೆಯೇ ಹೇಳಬೇಕೆನಿಸಿದೆ, ಹೇಳುವುದು ಬಹಳವಿದೆ…
ನಾನು ಒಂದನೆಯ ತರಗತಿಗೆ ಸೇರುವ ದಿನ, ಶಿಕ್ಷಕರಾಗಿದ್ದ ನನ್ನ ತಂದೆಯವರಿಗೂ ಅಂದೇ ವರ್ಗವಾಗಿ ಬೇರೆ ಶಾಲೆಯಿಂದ ನಮ್ಮದೇ ಶಾಲೆಗೆ ಬಂದಿದ್ದರು. ಅಪ್ಪನ ಕಿರುಬೆರಳನ್ನು ಹಿಡಿದುಕೊಂಡು ಅವರ ದೊಡ್ಡ ಹೆಜ್ಜೆಗೆ ನನ್ನ ಹೆಜ್ಜೆ ಸೇರಿಸಲಾಗದೇ ಓಡುತ್ತೋಡುತ್ತಾ ಶಾಲೆ ತಲಪಿದ್ದೆ. ಮುಖ್ಯೋಪಾಧ್ಯಾಯರ ಕೊಠಡಿಗೆ ಕರೆದೊಯ್ದ ಅಪ್ಪ ದಾಖಲಾತಿಯ ಕೆಲಸ ಮುಗಿದ ಮೇಲೆ ನನ್ನನ್ನು ತರಗತಿಗೆ ಕಳುಹಿಸಿ ತಾನು ಶಿಕ್ಷಕರ ಕೊಠಡಿಗೆ ತೆರಳಿದ್ದರು. ಭಯವಾದದ್ದು ಆಗಲೇ. ಮೊದಲಬೆಂಚಿನ ಒಂದು ಬದಿಯಲ್ಲಿ ಮುದುರಿಕೊಂಡೇ ಕುಳಿತಿದ್ದೆ. ಶಾಲೆಗೆ ಒಗ್ಗಿಕೊಂಡ ನಂತರ ಅಪ್ಪ ನನ್ನನ್ನು ತನ್ನೊಂದಿಗೆ ಕರೆದೊಯ್ಯದೇ ‘ಅಕ್ಕಂದಿರ ಜೊತೆಗೆ ಬಾ’ ಎಂದು ತಾನು ಒಂದು ಗಂಟೆ ಮುಂಚಿತವಾಗಿಯೇ ಹೋಗುತ್ತಿದ್ದರು. ಅಪರೂಪಕ್ಕೊಮ್ಮೆ ಬೇಗನೇ ಹೊರಟು ಅಪ್ಪನ ಜೊತೆಗೆ ಹೋದರೆ ಆ ದಿನ ನನ್ನ ಬಿಂಕ ಹೇಳತೀರದು. ದಾರಿಯುದ್ದಕ್ಕೂ ಸಿಗುವ ವಿದ್ಯಾರ್ಥಿ ಗಡಣವೆಲ್ಲ ಅಪ್ಪನನ್ನು ಕಂಡು ಭಯಭಕ್ತಿಯಿಂದ ‘ನಮ್ಕಾರ್ಸಾರ್’ (ನಮಸ್ಕಾರ ಸಾರ್ ಎನ್ನುವುದರ ಸುಲಭ ರೂಪ!) ಎನ್ನುತ್ತಿದ್ದರೆ ನನಗೆ ಒಳಗಿಂದೊಳಗೆ ಬಹಳ ಸಂಭ್ರಮ. ಮುಂದೆ ನಾನೂ ಶಿಕ್ಷಕಿಯಾಗಬೇಕೆಂಬ ಕನಸೊಂದು ಅರಳಿದ್ದು ಅಲ್ಲಿಂದಲೇ ಇರಬೇಕು.
ಅಪ್ಪ ಶಾಲೆಯ ಆವರಣದಲ್ಲಿ ಎಂದೂ ನಮ್ಮನ್ನು (ನಾನೂ ಇಬ್ಬರು ಅಕ್ಕಂದಿರೂ) ವಿಶೇಷವಾದ ಮನ್ನಣೆಯಿಂದ ನಡೆಸಿಕೊಂಡದ್ದಿಲ್ಲ. ಅಲ್ಲಿನ ನೂರಾರು ಮಕ್ಕಳ ನಡುವೆ ನಾವೂ ವಿದ್ಯಾರ್ಥಿನಿಯರು ಅಪ್ಪನಿಗೆ. ತಪ್ಪು ಮಾಡಿದಾಗ ಇತರರಿಗೆ ಸಿಗುವ ದಂಡನೆಯೇ ನಮಗೂ ಸಹ! ಅಪ್ಪ ಎಂದೂ ತಾರತಮ್ಯ ಮಾಡಲೇ ಇಲ್ಲ. ಪರೀಕ್ಷೆಯ ಉತ್ತರ ಪತ್ರಿಕೆಗಳನ್ನು ತಿದ್ದುವಾಗ ಟೋಟಲ್ ಮಾಡಿಕೊಡುವಂತೆ ಆಗೀಗ ಕರೆಯುತ್ತಿದ್ದರಾದರೂ ನಮ್ಮದೇ ಪತ್ರಿಕೆಗಳನ್ನು ತಿದ್ದುವಾಗ ಅಲ್ಲಿ ಕುಳಿತಿರಲು ತುಂಬಾ ಭಯ. ಅಪ್ಪ ಹೊಡೆದು ಬಡಿದು ಮಾಡುತ್ತಾರೆಂದಲ್ಲ. ಸುಲಭದ ಪ್ರಶ್ನೆಗಳಿಗೆ ನಾವೇನಾದರೂ ತಪ್ಪು ಉತ್ತರ ಬರೆದಿದ್ದರೆ ಅಪ್ಪನ ತೀಕ್ಷ್ಣ ನೋಟವೇ ನಮಗೆ ಹೊಟ್ಟೆಯಿಂದ ನಡುಕ ತರಿಸುತ್ತಿತ್ತು.
ಶಾಲೆಯಲ್ಲಿ ಅಪ್ಪಿತಪ್ಪಿಯೂ ನಮ್ಮ ಮನೆಮಾತಾದ ಹವ್ಯಕ ಕನ್ನಡದಲ್ಲಿ ಅಪ್ಪನೊಂದಿಗೆ ಮಾತಾಡುವಂತಿರಲಿಲ್ಲ. ಶಾಲೆಯ ಕನ್ನಡವೇ ಮಾತಾಡಬೇಕಿತ್ತು. ‘ಆರುಮಗಾ, ಇಲ್ಲಿ ಬಾ’ ಎಂದು ಮನೆಯಲ್ಲಿ ಹಿತವಾಗಿ ಕರೆಯುತ್ತಿದ್ದ ಅಪ್ಪ ‘ಏ ಹುಡುಗೀ, ಇಲ್ಲಿ ಬಾರಾ’ ಎಂದು ಶಾಲೆಯಲ್ಲಿ ಕರೆಯುವಾಗ ಅವರು ಶಾಲೆಯಲ್ಲಿ ಏಕೆ ಹೀಗೆ ಬದಲಾಗುತ್ತಾರೋ ಅರ್ಥವೇ ಆಗುತ್ತಿರಲಿಲ್ಲ. ಇತರ ಶಿಕ್ಷಕರೂ ಅಷ್ಟೇ. ಉಳಿದ ಮಕ್ಕಳಂತೆಯೇ ನಮ್ಮನ್ನು ಕಾಣುತ್ತಿದ್ದರೇ ವಿನಾ ವಿಶೇಷವಾದ ಉಪಚಾರ ನಮಗಿರಲಿಲ್ಲ. ಸಿಮೆಂಟಿನ ನೆಲದಲ್ಲಿ ಓಡಿ, ಕಾಲುಜಾರಿ ಬಿದ್ದರೆ ಕೈಕಾಲು ಪೆಟ್ಟಾದೀತೆಂಬ ಭಯದಲ್ಲಿ ಶಾಲಾ ಜಗುಲಿಯ ಮೇಲೆ ಯಾರಾದರೂ ಓಡುವುದು ಕಂಡರೆ ಮುಖ್ಯೋಪಾಧ್ಯಾಯರು ತಮ್ಮ ಕೊಠಡಿಗೆ ಕರೆಸಿ ಎರಡೇಟು ಹೊಡೆಯುತ್ತಿದ್ದರು. ಒಮ್ಮೆ ವಾರ್ಷಿಕೋತ್ಸವದ ನಾಟಕದ ಅಭ್ಯಾಸದ ಸಂದರ್ಭ. ಭಕ್ತ ಮಾರ್ಕಾಂಡೇಯ ನಾಟಕದಲ್ಲಿ ನಾನು ವಟುವಿನ ಪಾತ್ರ ಮಾಡಬೇಕಿತ್ತು. ಅಪ್ಪನೇ ನಿರ್ದೇಶಕರು. ಸಂಭಾಷಣೆ ಬರೆದುಕೊಂಡ ಪುಸ್ತಕ ತರಗತಿಯಲ್ಲಿ ಚೀಲದೊಳಗೆ ಬಿಟ್ಟಿದ್ದೆ. ಅಭ್ಯಾಸ ಮಾಡುವ ಕೊಠಡಿ ಮುಖ್ಯೋಪಾಧ್ಯಾಯರ ಕೊಠಡಿಯ ಪಕ್ಕದ್ದು. ಅವರು ಅಲ್ಲಿರಲಿಕ್ಕಿಲ್ಲವೆಂದು ಭರ್ರನೇ ಓಡಿದ್ದೆ. ನನ್ನ ಗ್ರಹಚಾರ ಕೆಟ್ಟಿತ್ತು. ಸಿಕ್ಕಿಬಿದ್ದೆ. ಒಳಗೆ ಕರೆದ ಮೇಷ್ಟ್ರು ಎರಡೂ ಕೈಗೂ ಗಾಳಿಬೆತ್ತದಲ್ಲಿ ಒಂದೊಂದು ಏಟು ಕೊಟ್ಟಿದ್ದರು. ಕೈಗೆ ಆದ ನೋವಿಗಿಂತ ಹೆಚ್ಚು ನನ್ನ ಅಭಿಮಾನಕ್ಕೆ ಪೆಟ್ಟು ಬಿದ್ದಿರಬೇಕು. ಕುಸುಕುಸು ಅತ್ತರೂ ಅಪ್ಪ ಕ್ಯಾರೇ ಮಾಡಲಿಲ್ಲ. ನಾಟಕದಲ್ಲಿ ನಾನು ಅಳುವ ಸನ್ನಿವೇಶ ಇತ್ತು. ‘ಆಗ ಅಲ್ಲಿ ಕೂತ್ಕೊಂಡು ಅಳ್ತಿದ್ದೆ ಅಲ್ವಾ? ಹಾಗೇ ಅತ್ತರಾಯಿತು’ ಎಂದಿದ್ದರು ಅಪ್ಪ! ನಾವೇನಾದರೂ ತಪ್ಪು ಮಾಡಿದರೆ ಇತರ ಶಿಕ್ಷಕರು ದಂಡಿಸಿದರೆ ಅಪ್ಪ ಎಂದೂ ಪ್ರಶ್ನಿಸಿದವರಲ್ಲ.
ಸಂಜೆ ಮನೆಗೆ ಹಿಂದಿರುಗುವಾಗ ಮಾತ್ರ ನಾನು ಎಂದೂ ಅಕ್ಕಂದಿರೊಂದಿಗೆ ಹೋಗುತ್ತಿರಲಿಲ್ಲ. ಅಪ್ಪನಿಗಾಗಿ ಶಾಲೆಯ ಗೇಟಿನ ಬಳಿನಿಂತು ಕಾಯುತ್ತಿದ್ದೆ. ನಾನು ನಿಲ್ಲುವ ಕಾರಣ ಅಪ್ಪನಿಗೆ ಸರಿಯಾಗಿ ಗೊತ್ತಿತ್ತು. ಅಪರೂಪಕ್ಕೊಮ್ಮೆ ಎದುರಿನ ಹೋಟೆಲ್ಲಿನಿಂದ ಗೋಳಿಬಜೆ, ಬನ್ಸು ಸಿಗುತ್ತಿತ್ತು. ನಾನು ಅಪ್ಪನೊಂದಿಗೆ ನಡೆದು ಹೋಗುವುದನ್ನು ನೋಡಿದವರೆಲ್ಲಾ ‘ಇವಳಿಗೆಷ್ಟು ಜಂಭ’ ಎಂದು ಮಾತಾಡಿಕೊಳ್ಳುತ್ತಿದ್ದರಂತೆ. ಏಕೆಂದರೆ ಅಮ್ಮ ನನಗೆ ತಲೆಬಾಚಿ ಕಟ್ಟುತ್ತಿದ್ದ ಕುದುರೇಬಾಲ ಜುಟ್ಟು ನನ್ನ
ನಡಿಗೆಯ ಲಯಕ್ಕೆ ಬದ್ಧವಾಗಿ ಕುಣಿಯುತ್ತಿತ್ತು. ಬಹಳ ಶಿಸ್ತಿನ ಸಿಪಾಯಿಯಂತಿದ್ದ ಅಪ್ಪನನ್ನು ಕಂಡರೆ ವಿದ್ಯಾರ್ಥಿಗಳಿಗೆಲ್ಲಾ ಸಿಕ್ಕಾಪಟ್ಟೆ ಭಯ. ‘ನಿನ್ನ ಅಪ್ಪನ ಕೈಯಿಂದ ನಾನು ಸಮಾ ಪೆಟ್ಟು ತಿಂದಿದ್ದೆ ಮಾರಾಯ್ತಿ…’ ಎಂದು ಅನೇಕ ಶಿಷ್ಯರು ನನ್ನಲ್ಲಿ ಬಲುಸಮಯದ ಬಳಿಕ ಹೇಳಿದ್ದಿದೆ. ಅಂಥದುದೇ ಪೆಟ್ಟು ನಾನು ಒಂದನೇ ತರಗತಿಯಲ್ಲಿ ಇರುವಾಗ ನನಗೂ ಬಿದ್ದಿತ್ತು. ಎಷ್ಟೆಂದರೆ ಒಂದು ತಿಂಗಳವರೆಗೆ ಪೆಟ್ಟಿನ ಗುರುತು ತೊಡೆಯ ಮೇಲಿತ್ತು! ಅದೇ ಕೊನೆ, ಅಪ್ಪ ಮತ್ಯಾವತ್ತೂ ನನಗೆ ಹೊಡೆದವರಲ್ಲ. ‘ಜೀವನದಲ್ಲಿ ಮತ್ತೆಂದೂ ತಪ್ಪೇ ಮಾಡಬಾರದೆಂದು ಅವತ್ತು ಅಪ್ಪ ಅಷ್ಟೊಂದು ಹೊಡೆದಿದ್ದಿರಬೇಕು’ ಎಂದು ಈಗ ಅನ್ನಿಸುತ್ತದೆ.
ಇಂತಿರ್ಪ ಅಪ್ಪನ ಕಣ್ಣಲ್ಲಿ ನೀರಾಡಿದ್ದನ್ನು ಕಂಡದ್ದು ಅಜ್ಜ ತೀರಿಕೊಂಡ ಹನ್ನೆರಡನೇ ದಿನಕ್ಕೆ. ಹದಿಮೂರು ವರ್ಷಗಳ ಕಾಲ ಮಲಗಿದಲ್ಲೇ ಇದ್ದ ಅಜ್ಜ ಒಂದು ರಾತ್ರಿ ನಿದ್ದೆಯಲ್ಲೇ ಶಾಂತವಾಗಿ ಕೊನೆಯುಸಿರೆಳೆದಾಗ ನಾವ್ಯಾರೂ ಅತ್ತಿರಲಿಲ್ಲ. ಆದರೆ ಅಪ್ಪನ ಎರಡು ಹನಿ ಕಣ್ಣೀರು ಕಂಡ ನಾನೂ ಅಕ್ಕನೂ ಮನೆಯ ಹಿಂದೆ ನಿಂತುಕೊಂಡು ಅತ್ತಿದ್ದೆವು.
ತನ್ನ ಹದಿನೇಳನೇ ವಯಸ್ಸಿನಿಂದಲೇ ಮನೆಯ ಸಂಪೂರ್ಣ ಜವಾಬ್ದಾರಿಯನ್ನು ಹೆಗಲಮೇಲೆ ಹೊತ್ತ ಅಪ್ಪನಿಗೆ ಬದುಕು ಎಂದೂ ಹೂವಿನ ಹಾಸಿಗೆಯಾಗಿರಲಿಲ್ಲ. ತನಗೆ ಬರುತ್ತಿದ್ದ ಕಿರುಮೊತ್ತದಲ್ಲಿ ಅಪ್ಪ ನಿಭಾಯಿಸಬೇಕಿದ್ದ ಹೊಣೆ ಬಹಳ ದೊಡ್ಡದಿತ್ತು. ಇಪ್ಪತ್ತು ಕಿ.ಮೀ. ದೂರದ ಶಾಲೆಗೆ ಹೋಗುವಾಗಲೂ ಅಪ್ಪ ನಡೆದೇಹೋದರು ವಿನಾ ತನಗಾಗಿ ಸೈಕಲ್ಲೊಂದನ್ನು ಕೊಂಡವರಲ್ಲ. ಬಸ್ಸಿನಲ್ಲಿ ಹೋದರೆ ಟಿಕೆಟಿಗಾಗಿ ವ್ಯಯಿಸಬೇಕಾದ ದುಡ್ಡನ್ನು ಉಳಿತಾಯ ಮಾಡಿ ಪುಸ್ತಕ ಕೊಂಡುಕೊಳ್ಳುತ್ತಿದ್ದರು. ಅಪ್ಪನ ಆಗಿನ ಸಂಗ್ರಹ ನಮಗೀಗ ಬಹಳ ಪ್ರಯೋಜನಕ್ಕೆ ಬರುತ್ತಿವೆ. ಓದಿನ ಹವ್ಯಾಸವನ್ನು ಕಲಿಸಿದ ಅಪ್ಪ, ಭಾಷಣ ಮಾಡಲು ಕಲಿಸಿದ ಅಪ್ಪ, ಬರವಣಿಗೆ ಕಲಿಸಿದ ಅಪ್ಪ, ಯಕ್ಷಗಾನದ ಹವ್ಯಾಸವನ್ನು ನನ್ನಲ್ಲಿ ಮೊಳೆಸಿ ಬೆಳೆಯಗೊಟ್ಟ ಅಪ್ಪ ಇಂದು ನಿವೃತ್ತ ಬದುಕನ್ನು ನಿರಂತರ ಓದಿನ ಜೊತೆಗೇ ಕಳೆಯುತ್ತಿದ್ದಾರೆ. ಎರಡೆರಡು ಬಾರಿ ಕಣ್ಣಿನ ಆಪರೇಷನ್ ಆದರೂ ಭೂತಗನ್ನಡಿ ಹಿಡಿದು ಓದುವ ಅವರ ಶ್ರದ್ಧೆ, ತಾಳ್ಮೆ ನಮಗೆ ಮಾದರಿ.
ಅಪ್ಪ ಮನಸ್ಸು ಬಿಚ್ಚಿ ಮಾತನಾಡಿದ್ದೇ ಕಡಮೆ. ಅವರ ನಲಿವನ್ನಾದರೂ ನಮ್ಮೊಂದಿಗೆ ಹಂಚಿಕೊಂಡಿರಬಹುದು ಆದರೆ ನೋವನ್ನೆಲ್ಲ ತಾನೇ ನುಂಗಿಕೊಂಡರು. ನಾವು ಅವರ ಅಂತರಂಗ ಕೆದಕುವ ಸಾಹಸವನ್ನು ಒಂದೆರಡು ಬಾರಿ ಮಾಡಿದರೂ ಅಪ್ಪ ತೆರೆದುಕೊಂಡವರಲ್ಲ. ಅಮ್ಮನಲ್ಲಿ ನಮ್ಮ ಮನಸ್ಸು ಬಿಚ್ಚಿ ಮಾತನಾಡಿದಂತೆ ನಾವೂ ಅವರಲ್ಲಿ ಮಾತಾಡಿದವರಲ್ಲ. ಇಂದು ಅಪ್ಪ ತಮ್ಮ ಹಳೆಯ ಅನುಭವಗಳ ಕಂತೆ ಬಿಚ್ಚುತ್ತಿದ್ದಾರೆ, ನಮ್ಮ ಕಥೆಗಳಿಗೆ ತಾನೂ ಕಿವಿಯಾಗುತ್ತಾ. ಅಪ್ಪನ ಕತೆಗಳನ್ನು ಕೇಳುತ್ತಾಕೇಳುತ್ತಾ ಅವರ ಬಗ್ಗೆಯೇ ಹೇಳಬೇಕೆನಿಸಿದೆ, ಹೇಳುವುದು ಬಹಳವಿದೆ…
ಹೆರುವವರೆಗೂ ಹೊರುವ ಅಮ್ಮ
ಹರೆಯದವರೆಗೂ ಹೊರುವ ಅಪ್ಪ
ಇಬ್ಬರ ಪ್ರೀತಿ ಸಮಾನಾದರೂ
ಅಪ್ಪ ಏಕೋ ಹಿಂದೆಯೇ ಉಳಿದುಬಿಟ್ಟ
ಕುಟುಂಬಕ್ಕಾಗಿ ಸಂಬಳವಿಲ್ಲದೇ
ದುಡಿಯುವ ಅಮ್ಮ
ದುಡಿದ ಸಂಬಳವನ್ನೆಲ್ಲ
ಕುಟುಂಬಕ್ಕೆ ನೀಡುವ ಅಪ್ಪ
ಇಬ್ಬರ ಶ್ರಮ ಸಮಾನಾದರೂ
ಅಪ್ಪ ಏಕೋ ಹಿಂದೆಯೇ ಉಳಿದುಬಿಟ್ಟ
ಎಂಬ ತೆಲುಗುಮೂಲದ ಕವಿತೆಯೊಂದು ವಾಟ್ಸಾಪಿನಲ್ಲಿ ಹರಿದುಬಂದದ್ದನ್ನು ಓದಿದ್ದೆ.
ಹೌದಲ್ಲ, ಬೆನ್ನೆಲುಬಾದ ಅಪ್ಪ ಹಿಂದೆಯೇ ಉಳಿದುಬಿಟ್ಟರು. ಬೆನ್ನೆಲುಬನ್ನು ಜತನ ಮಾಡಿದಂತೆ ಅಪ್ಪನನ್ನೂ ಜತನ ಮಾಡಿಕೊಳ್ಳಬೇಕಾದ ಬದ್ಧತೆಯೀಗ ನಮ್ಮದು.