ಭಾರತ ಅಧಿಕೃತವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಮುನ್ನವೇ (೨೧–೧೦–೧೯೪೩) ಸ್ವತಂತ್ರ ಭಾರತದ ಪ್ರಧಾನಿಯಂತೆ ಅನೇಕ ರಾಷ್ಟ್ರಗಳೊಂದಿಗೆ ವ್ಯವಹರಿಸಿದವರು ಸುಭಾಷ್ಚಂದ್ರ ಬೋಸರು. ಭಾರತಕ್ಕೆ ಸ್ವಾತಂತ್ರ್ಯ ಬರುವುದು ನಿಶ್ಚಿತ ಮತ್ತು ಈ ಸ್ವಾತಂತ್ರ್ಯ ಹಂಗಿನಡಿಯಲ್ಲಿರುವಂಥದ್ದಲ್ಲ; ಇದರ ಅಧಿಕೃತ ವಾರಸುದಾರರು ಭಾರತೀಯರೇ – ಎಂಬುದನ್ನು ಶತ–ಪ್ರತಿಶತ ದೃಢಗೊಳಿಸುವ ಸಲುವಾಗಿಯೇ ನೇತಾಜಿ ಸುಭಾಷ್ಚಂದ್ರ ಬೋಸರು ಹಂಗಾಮಿ ಭಾರತ ಸರ್ಕಾರವನ್ನು ರಚಿಸಿದ್ದು. ಅವರ ಈ ಹೆಜ್ಜೆ ಇಂಗ್ಲೆಂಡಿಗಷ್ಟೇ ಅಲ್ಲ, ಅನೇಕ ಭಾರತೀಯರಿಗೂ ವಿಸ್ಮಯವನ್ನುಂಟುಮಾಡಿತ್ತು.
ಕಳೆದ ವರ್ಷ ಭಾರತದ ಮೊದಲ ಪ್ರಧಾನಿ ನೇತಾಜಿ ಸುಭಾಷ್ಚಂದ್ರ ಬೋಸರು ಎಂಬರ್ಥದ ಮಾತುಗಳನ್ನು ಸಂಸತ್ತಿನಲ್ಲಾಡಿದ ಪ್ರಧಾನಮಂತ್ರಿ ನರೇಂದ್ರಮೋದಿ ಎಲ್ಲರ ಹುಬ್ಬು ಮೇಲೇರುವಂತೆ ಮಾಡಿಬಿಟ್ಟಿದ್ದರು. ಆನಂತರವೇ ಅನೇಕರು ಈ ಕುರಿತಂತೆ ಹುಡುಕಾಟ ನಡೆಸಲು ಆರಂಭಿಸಿದ್ದು. ಹೌದು, ಭಾರತ ಅಧಿಕೃತವಾಗಿ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆಯುವ ಮುನ್ನವೇ (೨೧-೧೦-೧೯೪೩) ಸ್ವತಂತ್ರ ಭಾರತದ ಪ್ರಧಾನಿಯಂತೆ ಅನೇಕ ರಾಷ್ಟ್ರಗಳೊಂದಿಗೆ ವ್ಯವಹರಿಸಿದವರು ಸುಭಾಷ್ಚಂದ್ರ ಬೋಸರು. ಭಾರತಕ್ಕೆ ಸ್ವಾತಂತ್ರ್ಯ ಬರುವುದು ನಿಶ್ಚಿತ ಮತ್ತು ಈ ಸ್ವಾತಂತ್ರ್ಯ ಹಂಗಿನಡಿಯಲ್ಲಿರುವಂಥದ್ದಲ್ಲ; ಇದರ ಅಧಿಕೃತ ವಾರಸುದಾರರು ಭಾರತೀಯರೇ – ಎಂಬುದನ್ನು ಶತ-ಪ್ರತಿಶತ ದೃಢಗೊಳಿಸುವ ಸಲುವಾಗಿಯೇ ಸುಭಾಷ್ಚಂದ್ರ ಬೋಸರು ಹಂಗಾಮಿ ಭಾರತ ಸರ್ಕಾರವನ್ನು ರಚಿಸಿದ್ದು. ಅವರ ಈ ಹೆಜ್ಜೆ ಇಂಗ್ಲೆಂಡಿಗಷ್ಟೇ ಅಲ್ಲ, ಅನೇಕ ಭಾರತೀಯರಿಗೂ ವಿಸ್ಮಯವನ್ನುಂಟುಮಾಡಿತ್ತು. ಈ ಸರ್ಕಾರ ನೇತಾಜಿಯವರ ಕಲ್ಪನೆಯ ಕೂಸು. ಜೊತೆಗೆ ಅವರ ಖಡಕ್ಕುತನದ ದ್ಯೋತಕವೂ ಹೌದು. ಬಹುಶಃ ತಿಲಕರ, ಸಾವರ್ಕರರ, ಅರವಿಂದರ ಚಟುವಟಿಕೆಗಳ ನಂತರ ಸಮಗ್ರ ಭಾರತೀಯರಲ್ಲಿ ಸ್ವಾತಂತ್ರ್ಯದ ಕನಸುಗಳು ಮತ್ತೆ ಮೊಳೆಯುವಂತೆ ಮಾಡಿದ್ದು ಸುಭಾಷ್ಚಂದ್ರ ಬೋಸರ ಈ ಪ್ರಯತ್ನವೇ ಎನ್ನುವುದರಲ್ಲಿ ಯಾವ ಅನುಮಾನವೂ ಇಲ್ಲ. ಇದೇ ಕಾರಣಕ್ಕೆ ಹೆದರಿದ್ದು ಕಾಂಗ್ರೆಸ್ಸೂ ಕೂಡ. ಇದಕ್ಕೂ ಮುನ್ನವೇ ಗಾಂಧಿಯವರು ಕ್ವಿಟ್ ಇಂಡಿಯಾ ಚಳವಳಿಯನ್ನು ಆರಂಭಿಸಿ, ಇಷ್ಟು ತರಾತುರಿ ಏಕೆ ಎಂದು ಹಲವರು ಕೇಳಿದ್ದಕ್ಕೆ, ಹೋಗಿ ಬೋಸರನ್ನು ಕೇಳಿ ಎಂದು ಗಾಂಧಿ ಹೇಳಿದ್ದರಲ್ಲ, ಅದರ ಹಿಂದೆಯೂ ಇದ್ದವು ಬೋಸರ ಈ ಬಗೆಯ ದೂರದೃಷ್ಟಿಯ ಚಿಂತನೆಗಳೇ.
ಪ್ರಾಗ್ಭೂಮಿಕೆ
೧೯೪೦ರ ಡಿಸೆಂಬರ್ ವೇಳೆಗಾಗಲೇ ಜಪಾನ್ ಇಂಗ್ಲೆಂಡಿನ ವಿರುದ್ಧ ಸೆಣೆಸುತ್ತಿತ್ತು. ಈ ಹೊತ್ತಿನಲ್ಲೇ ಮಲಯ, ಸಿಂಗಾಪೂರ, ಬರ್ಮಾ (ಈಗ ಮಯನ್ಮಾರ್) ಮುಂತಾದೆಡೆ ನೆಲೆಸಿರುವ ಭಾರತೀಯರನ್ನು ಮತ್ತು ಬ್ರಿಟಿಷರು ಬಿಟ್ಟು ಓಡಿಹೋಗಿರುವ ಭಾರತೀಯ ಯುದ್ಧಖೈದಿಗಳನ್ನು ಒಂದೆಡೆ ಸೇರಿಸಿ ಬ್ರಿಟಿಷರ ವಿರುದ್ಧ ಹೋರಾಟ ಸಂಘಟಿಸುವುದು ಸಾಧ್ಯವಾದರೆ ಅದು ಪರಿಣಾಮಕಾರಿಯಾಗಬಲ್ಲದು ಎಂದು ಸುಭಾಷರು ನಿರ್ಧರಿಸಿದ್ದರು. ಅವರ ಆಲೋಚನೆಗಳ ಸಾಮರ್ಥ್ಯವೇ ಹಾಗಿತ್ತು. ಭಾರತದಲ್ಲಿ ಗೃಹಬಂಧನದಿಂದ ಪರಾರಿಯಾದ ಸುಭಾಷರು ಜರ್ಮನಿಗೆ ಹೋಗಿ ಹರಸಾಹಸ ಮಾಡಿ ಹಿಟ್ಲರ್ನನ್ನು ಭೇಟಿಯಾಗಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳುವುದೊಳಿತು. ಭಾರತೀಯರೆಂದರೆ ಬ್ರಿಟಿಷರ ದಾಸ್ಯದಲ್ಲಿರುವ ಮಂದಿ ಎಂದು ತುಚ್ಛವಾಗಿ ಕಾಣುತ್ತಿದ್ದ ಹಿಟ್ಲರ್ ಸುಭಾಷರ ವ್ಯಕ್ತಿತ್ವದಿಂದ ಬಹುವಾಗಿ ಪ್ರಭಾವಿತನಾಗಿದ್ದ. ಆದರೆ ಭಾರತದ ಸ್ವಾತಂತ್ರ್ಯ ಸಂಗ್ರಾಮದಲ್ಲಿ ತನ್ನ ಪಾತ್ರ ಬಲುಕಡಮೆ ಎಂಬುದು ಅವನಿಗೆ ಗೊತ್ತಿತ್ತು. ಜರ್ಮನಿಯಲ್ಲಿರುವ ಭಾರತೀಯ ಯುದ್ಧಖೈದಿಗಳನ್ನು ಬ್ರಿಟಿಷರೊಂದಿಗೆ ಸೆಣಸಾಡಲು ಭಾರತಕ್ಕೆ ಕಳಿಸುವುದು ಹೆಚ್ಚುಕಡಮೆ ಅಸಾಧ್ಯವೇ ಆಗಿತ್ತು. ಹಾಗೆಂದು ಈ ಜಟಿಲತೆಯ ಅರಿವು ಸುಭಾಷರಿಗಿರಲಿಲ್ಲವೆಂದೇನೂ ಅಲ್ಲ. ಹಿಟ್ಲರ್ನ ಬೆಂಬಲ ಇದೆ ಎಂದು ಗೊತ್ತಾದರೆ ಇಂಗ್ಲೆಂಡಿನ ವಿರೋಧಿ ರಾಷ್ಟ್ರಗಳೆಲ್ಲವೂ ತಮ್ಮ ಬೆಂಬಲಕ್ಕೆ ನಿಲ್ಲುವುವೆಂಬ ದೃಢವಾದ ವಿಶ್ವಾಸ ಅವರದ್ದು. ಹಾಗೆಂದೇ ಅವರು ಹಿಟ್ಲರ್ನಿಂದ ನೈತಿಕ ಬೆಂಬಲವನ್ನು ಪಡೆದು ಒಂದು ಹಂತದವರೆಗೂ ತಮ್ಮ ಯೋಜನೆಯನ್ನು ಯಶಸ್ವಿಯಾಗಿಸಿಕೊಂಡಿದ್ದರು.
ಆದರೆ ನಿಜವಾದ ಪ್ರಶ್ನೆ ಇದ್ದದ್ದು ಪ್ರತ್ಯಕ್ಷ ಕದನಭೂಮಿಯಲ್ಲಿ ಹೋರಾಡಬಲ್ಲ ಸೈನಿಕರ ಸಂಘಟನೆ. ಅದಕ್ಕೆ ಸೂಕ್ತವಾದ ಭೂಮಿ ಭಾರತಕ್ಕೆ ಹೊಂದಿಕೊಂಡ ರಾಷ್ಟ್ರಗಳೇ ಆಗಿರಬೇಕು ಎಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಹಾಗೆಂದೇ ಅವರು ಜಪಾನ್, ಬರ್ಮಾಗಳ ಸಹಕಾರ ಪಡೆದು ಒಂದು ಭಾರತ ವಿಮೋಚನಾ ಸೇನೆಯನ್ನು ಒಟ್ಟುಹಾಕಿ ಬ್ರಿಟಿಷರ ಮೇಲೆರಗುವಂತೆ ಮಾಡಬೇಕೆಂದು ನಿಶ್ಚಯಿಸಿದರು. ಬರ್ಮಾಕ್ಕೆ ಹೊಂದಿಕೊಂಡ ಭಾರತದ ಗಡಿಯಲ್ಲಿ ಸ್ವಲ್ಪಮಟ್ಟಿಗೆ ಬ್ರಿಟಿಷರನ್ನು ಅಲುಗಾಡಿಸುವುದು ಸಾಧ್ಯವಾದರೂ ಭಾರತವಾಸಿಗಳಲ್ಲಿ ಮಹಾ ಸಂಚಲನವನ್ನೇ ಉಂಟು ಮಾಡಬಹುದೆಂದು ಅವರು ಅರ್ಥೈಸಿಕೊಂಡಿದ್ದರು.
ಇದಕ್ಕೆ ಪೂರಕವಾಗಿ ಯುದ್ಧದ ನಡುವೆಯೇ ಸಿಂಗಾಪೂರ ಬ್ರಿಟಿಷರ ತೆಕ್ಕೆಯಿಂದ ಜಪಾನಿನ ವಶವಾಯ್ತು. ಭಾರತದಿಂದ ಯುದ್ಧಕ್ಕೆಂದು ಒಯ್ದಿದ್ದ ಸೈನಿಕರನ್ನು ಸಿಂಗಾಪೂರ, ಮಲಯಗಳಲ್ಲಿ ಬಿಟ್ಟು ಬ್ರಿಟಿಷ್ ಪಡೆ ಓಡಿಹೋಗಿತ್ತು. ಈ ಯುದ್ಧಖೈದಿಗಳನ್ನು ಸೂಕ್ತವಾಗಿ ಸಂಘಟಿಸಿದರೆ ಭಾರತವನ್ನು ಬ್ರಿಟಿಷರ ಕಪಿಮುಷ್ಟಿಯಿಂದ ಬಿಡಿಸುವುದು ಅಸಾಧ್ಯವೇನಲ್ಲ ಎಂಬುದು ನೇತಾಜಿಯವರ ಕನಸು.
ಇಂಡಿಯನ್ ಇಂಡಿಪೆಂಡೆನ್ಸ್ ಲೀಗ್
ಹಾಗೆಂದು ಈ ಚಿಂತನೆಯನ್ನು ಅವರೇ ಮೊದಲು ಮಾಡಿದ್ದರೆಂದೇನೂ ಅಲ್ಲ. ಬ್ರಿಟಿಷ್ ಸರ್ಕಾರ ಭಾರತೀಯ ಯುದ್ಧಖೈದಿಗಳನ್ನು ಜಪಾನಿ ಸರ್ಕಾರಕ್ಕೆ ಹಸ್ತಾಂತರಿಸಿದ ಮರುಕ್ಷಣದಲ್ಲೇ ಜಪಾನ್ ಸರ್ಕಾರ ಕ್ಯಾಪ್ಟನ್ ಮೋಹನ್ಸಿಂಗರ ನೇತೃತ್ವಕ್ಕೆ ಈ ಸೈನಿಕರನ್ನು ಒಪ್ಪಿಸಿತು. ಮೋಹನ್ಸಿಂಗರು ಈ ಸೈನಿಕರನ್ನು ಹುರಿದುಂಬಿಸಿ ಆಜಾದ್ ಹಿಂದ್ ಫೌಜ್ ಸೇನೆಗೆ ಸೇರಿಸಿಕೊಂಡರು. ಒಂದೆಡೆ ನೇತಾಜಿ ಪಶ್ಚಿಮದಲ್ಲಿರುವ ಭಾರತೀಯರನ್ನು ಒಗ್ಗೂಡಿಸುತ್ತಿದ್ದರೆ, ಮತ್ತೊಂದೆಡೆ ಏಷ್ಯಾದಲ್ಲಿ ಈ ರೀತಿಯ ಚಟುವಟಿಕೆಗಳು ಭಿನ್ನ-ಭಿನ್ನ ಸ್ವರೂಪದಲ್ಲಿ ಗರಿಗೆದರಿ ನಿಂತಿದ್ದವು. ಜಪಾನಿನಲ್ಲಿ ಕೆಲವು ದಶಕಗಳಿಂದ ಈ ಚಟುವಟಿಕೆಯನ್ನು ವ್ಯಾಪಕವಾಗಿ ನಡೆಸುತ್ತಿದ್ದವರು ರಾಸ್ಬಿಹಾರಿ ಬೋಸ್. ಅವರು ಪೂರ್ವ ಏಷ್ಯಾದ ಇಂಡಿಯಾ ಇಂಡಿಪೆಂಡೆನ್ಸ್ ಲೀಗ್ನ ಅಸ್ತಿತ್ವಕ್ಕೆ ಕಾರಣರಾದ ವ್ಯಕ್ತಿ. ಮೊದಲ ವಿಶ್ವಯುದ್ಧದ ವೇಳೆ ಡಾರ್ಜಿಲಿಂಗ್ನ ಮಹಾವಿದ್ಯಾಲಯವೊಂದರ ಪ್ರಾಧ್ಯಾಪಕರಾಗಿ ಕೆಲಸ ಮಾಡುತ್ತಾ ಬ್ರಿಟಿಷರ ಮೂಗಿನಡಿಯಲ್ಲೇ ಅವರನ್ನು ಮಣಿಸಿ ಓಡಿಸುವ ಕ್ರಾಂತಿಕಾರ್ಯಕ್ಕೆ ಅಸ್ತಿಭಾರ ಹಾಕಿದ್ದವರು; ೧೮೫೭ರ ಸಂಗ್ರಾಮದ ಮಾದರಿಯಲ್ಲಿ ಸೈನಿಕರನ್ನೆಲ್ಲ ಬ್ರಿಟಿಷರ ವಿರುದ್ಧ ಎತ್ತಿಕಟ್ಟಿ ಯುದ್ಧದಂತಹ ವಿಷಮ ಪರಿಸ್ಥಿತಿಯ ವೇಳೆಗೆ ಅವರನ್ನು ಓಡಿಸಬೇಕೆಂಬ ಗುರಿಯೆಡೆಗೆ ದಾಪುಗಾಲಿಟ್ಟವರವರು. ಇದಕ್ಕೂ ಮುನ್ನವೇ ವೈಸ್ರಾಯ್ ಹಾರ್ಡಿಂಗ್ನ ಮೆರವಣಿಗೆ ಹೋಗುತ್ತಿದ್ದಾಗ ಬಾಂಬ್ ಎಸೆದು ಪೊಲೀಸರಿಗೆ ಸುಳಿವೂ ಸಿಗದಂತೆ ನುಣುಚಿಕೊಂಡುಬಿಟ್ಟಿದ್ದರು ಅವರು! ಮುಂದೆ ಪ್ರಥಮ ವಿಶ್ವಯುದ್ಧದ ವೇಳೆ ಇವರು ಮಾಡಬೇಕೆಂದಿದ್ದ ಕ್ರಾಂತಿಕಾರ್ಯದ ಸುಳಿವು ಸಿಕ್ಕು ಬ್ರಿಟಿಷರು ಅಟ್ಟಿಸಿಕೊಂಡು ಬರುವ ವೇಳೆಗೆ ಪರಾರಿಯಾಗಿ ಜಪಾನ್ ಸೇರಿಕೊಂಡಿದ್ದರು. ಅಲ್ಲಿ ಬೇಕರಿಯೊಂದರಲ್ಲಿ ಅಡಗಿಕೊಂಡು ಜಪಾನಿನ ನಾಗರಿಕತ್ವ ಪಡೆದ ನಂತರವೇ ಅವರು ಮುಕ್ತವಾಗಿ ತಿರುಗಾಡಲಾರಂಭಿಸಿದ್ದು. ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದ ಅನೇಕರಿಗೆ ಜಪಾನಿನಲ್ಲಿ ಆಶ್ರಯವಾಗಿದ್ದವರು ರಾಸ್ಬಿಹಾರಿ ಬೋಸ್. ಗದರ್ನ ಕ್ರಾಂತಿಕಾರಿಗಳೊಂದಿಗಿನ ಬಲವಾದ ಸಂಪರ್ಕದಿಂದ ಅವರು ಇಂಡಿಯಾ ಇಂಡಿಪೆಂಡೆನ್ಸ್ ಲೀಗ್ ಅನ್ನು ಆರಂಭಿಸಿ ಪೂರ್ವ ಏಷ್ಯಾದಲ್ಲಿ ತೀವ್ರತರವಾದ ಚಟುವಟಿಕೆ ನಡೆಸಿದ್ದರು. ಬ್ಯಾಂಕಾಕ್ನಲ್ಲಿ ಈ ಲೀಗ್ನ ವೈಶ್ವಿಕ ಸಮಾವೇಶ ನಡೆದಾಗ ರಾಸ್ಬಿಹಾರಿ ಬೋಸರೇ ಅಧ್ಯಕ್ಷತೆ ವಹಿಸಿದ್ದರು.
ಬ್ಯಾಂಕಾಕ್ ಸಮಾವೇಶ
ಈ ಪ್ರಯತ್ನಗಳಿಂದ ಕುಣಿದಾಡುತ್ತಿದ್ದ ಮನಸ್ಸೆಂದರೆ ನೇತಾಜಿಯವರದ್ದೇ! ಅವರು ಈ ಕಾರ್ಯಕ್ರಮಕ್ಕೆ ವಿಶೇಷವಾದ ಸಂದೇಶವನ್ನು ಕಳಿಸಿ ಬ್ರಿಟಿಷ್ ಸಾಮ್ರಾಜ್ಯದ ವಿರುದ್ಧದ ನಮ್ಮ ಹೋರಾಟದಲ್ಲಿ ಜಪಾನ್, ಜರ್ಮನಿ, ಇಟಲಿಗಳು ಸಹಕರಿಸಲಿವೆ ನಿಜ. ಆದರೆ ಅಂತಿಮವಾಗಿ ಭಾರತದ ಸ್ವಾತಂತ್ರ್ಯವನ್ನು ಸಂಪಾದಿಸಬೇಕಾದವರು ಭಾರತೀಯರೇ. ಬೇರೆಲ್ಲ ಮಾರ್ಗಗಳು ವಿಫಲವಾಗಿರುವ ಕಾರಣ ಕೊನೆಗೂ ಶಸ್ತ್ರಾಸ್ತ್ರ ಕಾರ್ಯಾಚರಣೆಯೊಂದೇ ಮಾರ್ಗವೆಂದು ನಮಗನಿಸಿದೆ. ಈ ಬ್ಯಾಂಕಾಕ್ ಸಮಾವೇಶವನ್ನು ನಮ್ಮ ವಿಜಯಮಾರ್ಗದ ಮಹತ್ತ್ವದ ಮೈಲಿಗಲ್ಲೆಂದು ಭಾವಿಸುತ್ತೇನೆ ಎಂದಿದ್ದರು. ಅಂದಿನ ದಿನಗಳಲ್ಲಿ ನೇತಾಜಿ ಸ್ಟಾರ್ ಅಟ್ರಾಕ್ಶನ್. ಅವರ ಈ ಸಂದೇಶವು ಮಿಂಚಿನ ಸಂಚಾರವುಂಟುಮಾಡಿತ್ತು.
ಜಪಾನ್, ಫಿಲಿಪೈನ್ಸ್, ಥಾಯ್ಲ್ಯಾಂಡ್, ಬರ್ಮಾ, ಮಲಯಾ ಮೊದಲಾದ ರಾಷ್ಟ್ರಗಳ ಭಾರತೀಯರು ತಮ್ಮನ್ನು ಬಲವಾಗಿ ಒಗ್ಗೂಡಿಸಿಕೊಂಡರು. ಇವೆಲ್ಲದರ ತಾತ್ಕಾಲಿಕ ಕೇಂದ್ರವಾಗಿ ಬ್ಯಾಂಕಾಕ್ ಗುರುತಿಸಿಕೊಳ್ಳಲ್ಪಟ್ಟಿತು. ಸಹಜವಾಗಿಯೇ ಸುಭಾಷರಿಗೆ ಪೂರ್ವ ಏಷ್ಯಾಕ್ಕೆ ಹೋಗಬೇಕೆಂದೆನಿಸಿದ್ದರಲ್ಲಿ ಅಚ್ಚರಿಯಿಲ್ಲ. ಒಂದೆಡೆ ನಿಜವಾದ ರಣರಂಗ ಪೂರ್ವ ಏಷ್ಯಾವೇ ಆಗಿತ್ತು. ಮತ್ತೊಂದೆಡೆ ಭಾರತದ ಸ್ವಾತಂತ್ರ್ಯಕ್ಕೆ ಉತ್ಸುಕರಾಗಿದ್ದ ಸಾವಿರಾರು ಮಂದಿ ಪ್ರತ್ಯಕ್ಷ ಯುದ್ಧಕ್ಕೆ ಧುಮುಕಲು ಸಿದ್ಧರಾಗಿ ನಿಂತಿದ್ದರು. ಕೊರತೆ ಇದ್ದದ್ದು ಸಮರ್ಥ ನಾಯಕತ್ವದ್ದು ಮಾತ್ರ.
ರಾಸ್ಬಿಹಾರಿ ಬೋಸರು ಬ್ರಿಟಿಷರ ವಿರುದ್ಧದ ಆಂದೋಲನವನ್ನು ಸಂಘಟಿಸುತ್ತಿದ್ದುದು ನಿಜವೇ. ಆದರೆ ಅವರು ಭಾರತವನ್ನು ಬಿಟ್ಟು ದಶಕಗಳೇ ಉರುಳಿದ್ದುದರಿಂದ ಮತ್ತು ಜಪಾನಿನಲ್ಲೂ ತಲೆಮರೆಸಿಕೊಂಡು ಇರಬೇಕಾದ ಅನಿವಾರ್ಯತೆಗೆ ಸಿಲುಕಿದ್ದುದರಿಂದ ಹೊಸಪೀಳಿಗೆಯ ತರುಣರಿಗೆ ಅವರ ಪರಿಚಯವಿರಲಿಲ್ಲ. ಸುಭಾಷರಾದರೆ ಹಾಗಲ್ಲ. ಅವರು ತಮ್ಮ ಕಾಂಗ್ರೆಸ್ಸಿನ ಅಧ್ಯಕ್ಷತೆಯ ಕಾರ್ಯಾವಧಿಯಲ್ಲಿಯೆ ನಾಡಿನ ತರುಣರ ಆರಾಧ್ಯರೆನಿಸಿಬಿಟ್ಟಿದ್ದರು. ಗಾಂಧಿಯವರ ವಿರೋಧದ ನಡುವೆಯೂ ಅವರು ಎರಡನೇ ಬಾರಿ ಜಯಗಳಿಸಿದಾಗ ತೀವ್ರ ಚಿಂತನೆಯುಳ್ಳ ತರುಣರು ನಿಂತಲ್ಲೇ ಕುಣಿದಾಡಿಬಿಟ್ಟಿದ್ದರು. ಅವರು ಗೃಹಬಂಧನದಿಂದ ತಪ್ಪಿಸಿಕೊಂಡು ಹೋದದ್ದು, ಹಿಟ್ಲರ್ನನ್ನು ಭೇಟಿಮಾಡಿದ್ದು, ರೇಡಿಯೊಗಳ ಮೂಲಕ ತಮ್ಮ ಪ್ರಖರ ವಾಕ್ಪ್ರವಾಹ ಹರಿಸಿದ್ದು – ಇವೆಲ್ಲವೂ ಅವರ ಕುರಿತ ಅಭಿಮಾನವನ್ನು ಹೆಚ್ಚು-ಹೆಚ್ಚು ಮಾಡುತ್ತಲೇಹೋಯಿತು. ಹೀಗಾಗಿ ಅವರ ನೇತೃತ್ವವೇ ಇದಕ್ಕೆ ಸೂಕ್ತವಾಗಿತ್ತು ಕೂಡ.
ನೇತಾಜಿ ನೇತೃತ್ವ
ಹಾಗೆಂದು ಅವರು ಬರೀ ಖ್ಯಾತನಾಮರಷ್ಟೇ ಆಗಿರಲಿಲ್ಲ. ಅಂತರರಾಷ್ಟ್ರೀಯ ವಿಚಾರಗಳಲ್ಲಿ ಅವರ ಬುದ್ಧಿ ಚುರುಕಾಗಿ ಕೆಲಸ ಮಾಡುತ್ತಿತ್ತು. ಒಂದೆಡೆ ಜರ್ಮನಿ, ಜಪಾನ್, ಇಟಲಿ ಸರ್ಕಾರಗಳ ಬೆಂಬಲ ಪಡೆದುಕೊಳ್ಳಲು ಪ್ರಯತ್ನಿಸುತ್ತಿರುವ ವೇಳೆಗೇ ಅವರು ಸೇನೆಯ ನಿರ್ಮಾಣದಲ್ಲಿ ನಿರಂತರವಾಗಿ ದುಡಿಯುತ್ತಿದ್ದರು. ಅಷ್ಟೇ ಅಲ್ಲ, ಯುದ್ಧಕ್ಕೆ ಪೂರಕವಾದ ವಾತಾವರಣವನ್ನು ಭಾರತದಲ್ಲಿ ನಿರ್ಮಾಣಮಾಡಲೂ ಅವರು ಸಾಕಷ್ಟು ಶ್ರಮಿಸುತ್ತಿದ್ದರು. ಯಾವ ಸುದ್ದಿ ಅಂತರರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಬಲ್ಲದೆಂಬುದು ಅವರಿಗೆ ಚೆನ್ನಾಗಿ ಗೊತ್ತಿತ್ತು. ಯುದ್ಧದ ಹೊತ್ತಿನಲ್ಲಿ ಬ್ರಿಟಿಷರಿಗೆ ಮುಜುಗರ ಉಂಟುಮಾಡಬಲ್ಲಂತಹ ಹೇಳಿಕೆಗಳನ್ನು ಕೊಡುತ್ತಿದ್ದ ಸುಭಾಷರು ಮತ್ತೊಂದೆಡೆ ಭಾರತೀಯ ಸೈನಿಕ-ಪೊಲೀಸರಿಗೆ ಭಾರತದ ಮುಕ್ತಿಗೆ ನೀವು ಸಹಕರಿಸದೇ ಹೋದಲ್ಲಿ ಭಾರತ ಸ್ವತಂತ್ರಗೊಂಡೊಡನೆ ಬ್ರಿಟಿಷ್ ಸರ್ಕಾರಕ್ಕೆ ನೆರವಿತ್ತ ಕಾರಣಕ್ಕೆ ನೀವು ಜನರಿಗೆ ಉತ್ತರಿಸಬೇಕಾದೀತು, ಎಚ್ಚರ ಎಂದೂ ಹೇಳುತ್ತಿದ್ದರು. ಹೀಗೆ ಅವರ ಚಟುವಟಿಕೆಗಳು ಏಕಕಾಲಕ್ಕೆ ಹತ್ತಾರು ದಿಕ್ಕಿನಲ್ಲಿ ನಡೆಯುತ್ತಿದ್ದುದರಿಂದ ಅವರನ್ನು ಅರ್ಥೈಸಿಕೊಳ್ಳುವುದಾಗಲಿ ಚಿಂತನೆಗಳನ್ನು ಜೀರ್ಣಿಸಿಕೊಳ್ಳುವುದಾಗಲಿ ಸುಲಭವಿರಲಿಲ್ಲ.
ನೇತೃತ್ವವೇನೋ ವಹಿಸಬೇಕು ನಿಜ. ಆದರೆ ಜರ್ಮನಿಯಿಂದ ಜಪಾನಿಗೆ ಹೋಗುವ ಬಗೆಯಾದರೂ ಹೇಗೆ? ಅದೂ ಯುದ್ಧದ ನಟ್ಟನಡುವೆ. ಹಿಟ್ಲರ್ ಈ ಪ್ರಯಾಣದ ಬಗೆಗೆ ತುಂಬಾ ಆಸಕ್ತಿ ತೋರಿಸುತ್ತಿಲ್ಲವೆಂದು ಅರಿವಾಗುವಾಗ ಸುಭಾಷ್ ಬಾಬು ಚಡಪಡಿಸಿಹೋಗಿದ್ದರು. ಕೊನೆಗೆ ಮುಸೊಲಿನಿಯನ್ನು ಸಂಪರ್ಕಿಸಿ ಆತನ ಪ್ರಭಾವವನ್ನು ಬಳಸಿ ಜಲಾಂತರ್ಗಾಮಿ ನೌಕೆಯೊಂದರ ಮೂಲಕ ಅವರು ಪರಾರಿಯಾಗಿಯೇಬಿಟ್ಟರು! ದಿನಗಟ್ಟಲೆ ಸಬ್ಮೆರೀನ್ನೊಳಗೆ ಕುಳಿತು ಭಾರತದ ಸ್ವಾತಂತ್ರ್ಯದ ಕುರಿತಂತೆಯೇ ಯೋಚಿಸುತ್ತಿದ್ದ ಸುಭಾಷರು ಜರ್ಮನಿಯಲ್ಲಿದ್ದಾಗ ಮೊಳಕೆಯೊಡೆದಿದ್ದ ಹಂಗಾಮಿ ಸರ್ಕಾರದ ಕನಸುಗಳಿಗೆ ಗೊಬ್ಬರ ಹಾಕಿ ನೀರೆರೆದರು. ಬಹುಶಃ ಈ ಸರ್ಕಾರದ ರೂಪರೇಖೆಗಳು, ಕಾರ್ಯವೈಖರಿಗಳೆಲ್ಲ ರೂಪುಗೊಂಡಿದ್ದು ಆಗಲೇ ಇದ್ದಿರಬೇಕು. ಜಪಾನಿಗೆ ಬಂದೊಡನೆ ಎಲ್ಲರಲ್ಲೂ ಇದ್ದ ಪ್ರಶ್ನೆ ಒಂದೇ: ಸುದೀರ್ಘಕಾಲ ಲೀಗ್ ಕಟ್ಟಿ ಬೆಳೆಸಿದ ರಾಸ್ಬಿಹಾರಿ ಬೋಸ್ರವರು ತಮ್ಮ ನಾಯಕತ್ವವನ್ನು ಸುಭಾಷರಿಗೆ ಬಿಟ್ಟುಕೊಡುತ್ತಾರೆಯೇ? ಜಪಾನಿ ಅಧಿಕಾರಿ ಕರ್ನಲ್ ಇವಾಕುರೋ ಈ ವಿಚಾರವನ್ನು ರಾಸ್ಬಿಹಾರಿಯವರ ಮುಂದಿಟ್ಟಾಗ ಆತ ನಮ್ಮಿಬ್ಬರ ಅಂತಿಮ ಗುರಿಯೂ ಭಾರತದ ಮುಕ್ತಿಯೇ. ನನ್ನ ಕೈಲಾದ್ದಷ್ಟನ್ನು ಮಾಡಿದ್ದೇನೆ. ಇನ್ನೀಗ ಸುಭಾಷ್ಚಂದ್ರ ಬೋಸರ ಸಮಯ. ಅವರು ತರುಣರು, ಉತ್ಸಾಹಿ ಕೂಡ. ಈ ಕಾರ್ಯವನ್ನು ಅವರೇ ಮುಂದುವರಿಸಲಿ ಎಂದು ಹೇಳಿ ತಮ್ಮ ದೊಡ್ಡತನವನ್ನು ಪ್ರದರ್ಶಿಸಿದ್ದರು. ಸುಭಾಷರನ್ನು ಭೇಟಿಯಾಗಿ ಒಂದು ಗಂಟೆಯ ಕಾಲ ಮಾತನಾಡಿದ ನಂತರ ರಾಸ್ಬಿಹಾರಿ ಬೋಸರು ಈಗ ನನ್ನ ಮನಸ್ಸು ನಿರಾಳವಾಗಿದೆ ಎಂದಿದ್ದರಂತೆ.
ಜಪಾನಿನ ಸಾಹಚರ್ಯ
ಸುಭಾಷರು ಬಲುಬೇಗ ಜಪಾನಿನ ಅಧಿಕಾರಿಗಳ ಮತ್ತು ರಾಜನೇತಾರರ ಮನಸ್ಸನ್ನು ಗೆದ್ದುಬಿಟ್ಟರು. ಪ್ರಧಾನಿ ಟೋಜೋ ಸುಭಾಷರ ಆಪ್ತನಾಗಿಬಿಟ್ಟ. ಅವರನ್ನು ಸಂಸತ್ತಿಗೆ ಕರೆದ ಟೋಜೋ, ಭಾರತದ ಸ್ವಾತಂತ್ರ್ಯ ಸಾಧನೆಯ ಪ್ರಯತ್ನಕ್ಕೆ ನಮ್ಮಿಂದಾದ ನೆರವನ್ನೆಲ್ಲಾ ನೀಡಲು ನಿರ್ಧರಿಸಿದ್ದೇವೆ. ಈಗ ನಡೆದಿರುವ ಯುದ್ಧದಲ್ಲಿ ಜಯ ನಮ್ಮದಾದರೆ ಮಾತ್ರ ಪೂರ್ವ ಏಷ್ಯಾದ ಜನಾಂಗಗಳೆಲ್ಲ ಮುಕ್ತವಾಗಬಲ್ಲವು ಎಂದಿದ್ದರು. ಇದು ನಿಸ್ಸಂಶಯವಾಗಿ ದೊಡ್ಡ ಗೆಲವೇ ಆಗಿತ್ತು. ಒಂದು ಸಮರ್ಥ ಸೇನೆಯಿಲ್ಲದ, ಆಳಲು ರಾಜ್ಯವಿಲ್ಲದ, ಒಬ್ಬ ಸಾಮಾನ್ಯ ವ್ಯಕ್ತಿಯನ್ನು ಜಪಾನ್ ಈ ರೀತಿ ಗೌರವಿಸಿತ್ತು! ಕೆಲವೇ ದಿನಗಳಲ್ಲಿ ಸುಭಾಷರು ಪತ್ರಕರ್ತರನ್ನು ಮಾತನಾಡಿಸುತ್ತಾ, ಬ್ರಿಟಿಷರಿಂದ ಭಾರತಕ್ಕೆ ದೊರೆತಿರುವುದಾದರೂ ಏನು? ಸಾಂಸ್ಕೃತಿಕ ಅವನತಿ, ಕಡುಬಡತನ, ಆಧ್ಯಾತ್ಮಿಕ ಕುಸಿತವಷ್ಟೇ. ಈ ರಾಕ್ಷಸೀ ಪ್ರಭುತ್ವವನ್ನು ಕೊನೆಗಾಣಿಸಲು ಭಾರತೀಯರು ಈಗ ಅಂತಿಮ ಪ್ರಯತ್ನ ನಡೆಸಿದ್ದಾರೆ. ಪ್ರಚಾರ ಏನೇ ಇರಲಿ. ಭಾರತೀಯರು ಬಯಸಿರುವುದು ಇಂಗ್ಲೆಂಡ್-ಅಮೆರಿಕಾಗಳ ಪರಾಭವವನ್ನೇ. ನಮ್ಮ ಈ ಶತ್ರುಗಳು ಯುದ್ಧದ ಭಾಷೆ ಬಳಸುತ್ತಿರುವುದರಿಂದ ನಾವೂ ಅದೇ ಭಾಷೆಯಲ್ಲಿ ಉತ್ತರಿಸುತ್ತಿದ್ದೇವೆ. ಏಷ್ಯಾದ ಪುನರ್ನಿರ್ಮಾಣದಲ್ಲಿ ಜಪಾನಿನ ಪಾತ್ರ ಮಹತ್ತ್ವದ್ದಾಗಿದ್ದು ಭಾರತೀಯರು ತಮ್ಮ ದೇಶದ ಆಗು-ಹೋಗುಗಳನ್ನು ರೂಪಿಸಲು ಜಪಾನಿನೊಡನೆ ಸಹಕರಿಸಲು ಬಯಸಿದ್ದಾರೆ ಎಂದು ಹೇಳಿದ್ದರು. ಇದು ಆಳುವ ಧಣಿಗಳಿಗೆ ಸ್ಪಷ್ಟ ಎಚ್ಚರಿಕೆ. ಇಷ್ಟೂ ದಿನ ಭೂಗತವಾಗಿದ್ದುಕೊಂಡು ಯಾರ ಕಣ್ಣಿಗೂ ಬೀಳದಂತಿದ್ದ ಸುಭಾಷರು ಈಗ ತಮ್ಮ ಇರುವನ್ನು ಘಂಟಾಘೋಷವಾಗಿ ಸಾರಿದ್ದರು. ಜೊತೆಗೆ ತಮ್ಮ ಕಾರ್ಯದ ಉದ್ದೇಶವನ್ನೂ ಕೂಡ. ಈ ಮಾತಿನ ನಂತರ ಬ್ರಿಟಿಷರಲ್ಲಿ ಚಡಪಡಿಕೆ ಶುರುವಾಯ್ತು. ಜಾಗತಿಕ ಮಟ್ಟದ ಒತ್ತಡವೂ ಹೆಚ್ಚತೊಡಗಿತ್ತು. ಮಹಾಯುದ್ಧ ಮುಗಿದೊಡನೆ ಭಾರತೀಯರಿಗೆ ಸ್ವಾತಂತ್ರ್ಯ ಕೊಟ್ಟುಬಿಡಬೇಕೆಂಬ ಆಗ್ರಹ ಎಲ್ಲ ಮೂಲೆಗಳಿಂದಲೂ ಕೇಳಿಬರಲಾರಂಭಿಸಿತು. ಅದಕ್ಕೆ ಪೂರಕವಾಗಿ ನೇತಾಜಿ ಸಿಂಗಾಪೂರಕ್ಕೆ ಹೋಗಿ ಆಜಾದ್ ಹಿಂದ್ ಸೇನೆಯ ಸೈನಿಕರನ್ನು ಉದ್ದೇಶಿಸಿ ಪ್ರಭಾವೀ ಭಾಷಣ ಮಾಡಿದರು.
ಅನಂತರ ಅಲ್ಲಿಯೇ ದೊಡ್ಡ ಜನಸಭೆಯನ್ನು ಉದ್ದೇಶಿಸಿ ಭರ್ಜರಿ ಭಾಷಣ ಮಾಡಿದರು. ಸುದೀರ್ಘಕಾಲ ಬ್ರಿಟಿಷರ ಸೇವೆಯಲ್ಲಿದ್ದ ಭಾರತೀಯ ಸೈನಿಕರ ಗುಲಾಮೀ ಮಾನಸಿಕತೆಗೆ ಇತಿಶ್ರೀ ಹಾಡಲು ಸಾಧಾರಣರಾದವರಿಂದ ಸಾಧ್ಯವಾಗುತ್ತಿರಲಿಲ್ಲ. ಸುಭಾಷರು ತಮ್ಮ ವರ್ಚಸ್ಸಿನಿಂದಲೂ ಪ್ರಖರ ವಕ್ತೃತ್ವದಿಂದಲೂ ಆ ಕೆಲಸವನ್ನು ಯಶಸ್ವಿಯಾಗಿ ಮಾಡಿದ್ದರು. ಸತ್ತುಬಿದ್ದ ಹಾವನ್ನು ಕಂಡಾಗಲೂ ಹೆದರಿಕೆಯಾಗುತ್ತದೆ. ಆದರೆ ಆ ಹಾವು ಏನೂ ಮಾಡಲಾರದು. ಇಂಗ್ಲೆಂಡ್ ಈಗ ಸತ್ತು ಬಿದ್ದಿರುವ ಹಾವಷ್ಟೇ. ನಿಮ್ಮ ದೇಶವನ್ನು ಕೈಗೆತ್ತಿಕೊಳ್ಳುವ ಹೊಣೆ ಇನ್ನು ನಿಮ್ಮದೇ ಎಂಬ ಸುಭಾಷರ ಮಾತು ಸಾಮಾನ್ಯ ಸೈನಿಕನಲ್ಲೂ ಹೋರಾಟದ ಕೆಚ್ಚನ್ನು ತುಂಬಿಬಿಡುತ್ತಿತ್ತು. ಈ ಹಂತದಲ್ಲೇ ತಮ್ಮ ಹಂಗಾಮಿ ಸರ್ಕಾರದ ಆಲೋಚನೆಗಳಿಗೆ ಅವರು ರೆಕ್ಕೆ-ಪುಕ್ಕ ಕಟ್ಟಿದ್ದು.
ಹಂಗಾಮಿ ಸರ್ಕಾರ
ಹೌದು, ಹಂಗಾಮಿ ಸರ್ಕಾರದ ಕುರಿತಂತೆ ಹೇಳುವಾಗ ಇಷ್ಟು ಪೀಠಿಕೆ ಅಗತ್ಯವಿದ್ದೇ ಇದೆ. ಏಕೆಂದರೆ ಸರ್ಕಾರವನ್ನು ಯಾರು, ಎಲ್ಲಿ, ಹೇಗೆ ಬೇಕಾದರೂ ರಚಿಸಿಬಿಡಬಹುದು. ಆದರೆ ಅದಕ್ಕೆ ಬೇಕಾದ ಮನೋಭೂಮಿಕೆಯನ್ನು ಒದಗಿಸಿಕೊಟ್ಟಿದ್ದಾಗ ಮಾತ್ರ ಇತರ ರಾಷ್ಟ್ರಗಳ ಗೌರವವನ್ನು ಸಂಪಾದಿಸಲು ಸಾಧ್ಯ. ಪ್ರಥಮ ವಿಶ್ವಯುದ್ಧದ ವೇಳೆಗೆ ಮೌಲ್ವಿ ಬರ್ಖತುಲ್ಲ್ಲಾ ಮತ್ತು ರಾಜಾ ಮಹೇಂದ್ರ ಪ್ರತಾಪ್ ಸಿಂಗ್ ಸೇರಿ ಈ ರೀತಿಯ ಸರ್ಕಾರ ರಚನೆ ಮಾಡಿದ್ದರು. ಆದರೆ ಅದಕ್ಕೆ ಬೇಕಾದ ಪೂರ್ವತಯಾರಿ ಸಾಕಷ್ಟಾಗಿರಲಿಲ್ಲ. ಹೀಗಾಗಿಯೇ ಅದನ್ನು ಇತರ ರಾಷ್ಟ್ರಗಳು ಮಾನ್ಯ ಮಾಡಲಿಲ್ಲ.
ಆದರೆ ಸುಭಾಷರು ಹಾಗಲ್ಲ. ಅವರು ಬಲಿಷ್ಠವಾದ ಸೇನೆಯೊಂದನ್ನು ಮೊದಲು ನಿರ್ಮಿಸಿಕೊಂಡಿದ್ದರು. ಈ ಸರ್ಕಾರಕ್ಕೆ ಬೇಕಾದ ಮಂತ್ರಿಗಳ ಪಟ್ಟಿಯನ್ನು ತಯಾರಿಸಿಕೊಂಡಿದ್ದರು. ಮಂತ್ರಿಮಂಡಲದ ಪ್ರತಿಯೊಬ್ಬ ಸದಸ್ಯನ ಕಾರ್ಯಗಳ ಸಂಪೂರ್ಣ ವಿವರಗಳನ್ನು ಅವರು ಸಂಗ್ರಹಿಸಿಕೊಂಡಿದ್ದರು. ಅಷ್ಟೇ ಅಲ್ಲ, ಭಾರತ ಸ್ವತಂತ್ರಗೊಂಡೊಡನೆ ನವನಿರ್ಮಾಣಕ್ಕಾಗಿ ಕೈಗೊಳ್ಳಬೇಕಾದ ಕಾರ್ಯಗಳ ಆದ್ಯತೆ ನಿರ್ಧರಿಸಲೂ ವ್ಯವಸ್ಥೆ ಮಾಡಿಕೊಂಡಿದ್ದರು. ಒಂದೇ ಮಾತಿನಲ್ಲಿ ಹೇಳುವುದಾದರೆ ಹೇಗೋ ಸರ್ಕಾರವೊಂದನ್ನು ರಚಿಸಿ ಉಳಿದದ್ದನ್ನು ಆಮೇಲೆ ನೋಡಿಕೊಂಡರಾಯ್ತು ಎಂಬ ಉಡಾಫೆ ಭಾವನೆ ಅವರಿಗೆ ಖಂಡಿತವಾಗಿಯೂ ಇರಲಿಲ್ಲ. ಹಾಗೆ ನೋಡಿದರೆ ಈ ಹಂಗಾಮಿ ಸರ್ಕಾರದ ಕೇಂದ್ರವು ಭಾರತಕ್ಕೆ ತಾಕಿಕೊಂಡ ಬರ್ಮಾದ ಗಡಿಯಲ್ಲಿಯೇ ಇರಬೇಕೆಂಬುದು ಅವರ ಮನಸ್ಸಾಗಿತ್ತು. ಅಲ್ಲಿನ ಸರ್ಕಾರದ ಅನುಮತಿ ದೊರೆಯಲಿಲ್ಲವೆಂಬ ಕಾರಣಕ್ಕೆ ಸಿಂಗಾಪೂರವನ್ನು ಕೇಂದ್ರವಾಗಿರಿಸಿಕೊಂಡು ಹಂಗಾಮಿ ಸರ್ಕಾರಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಯಿತು. ಜಪಾನ್ ಸರ್ಕಾರದ ಪೂರ್ಣಬೆಂಬಲ ಪಡೆಯಲು ಅವರು ಮರೆಯಲಿಲ್ಲ.
ಸಾಕಾರಗೊಂಡ ಕನಸು
ಸಿಂಗಾಪೂರದಲ್ಲೇ ೧೯೪೩ರ ಅಕ್ಟೋಬರ್ ೨೧ರಂದು ಸುಭಾಷ್ಚಂದ್ರ ಬೋಸರು ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ಆಜಿ ಹುಕುಮತ್-ಎ-ಆಜಾದ್ ಹಿಂದ್ ಸ್ಥಾಪಿಸಿ ತಾವೇ ಪ್ರಧಾನಿಯಾಗಿ ಪ್ರಮಾಣವಚ ಸ್ವೀಕರಿಸಿದರು. ಅಂದಿನ ಕಾರ್ಯಕ್ರಮ ಪರಮಾದ್ಭುತ. ಸಿಂಗಾಪುರದ ಕ್ಯಾಥೆ ಸಿನೆಮಾಂಗಣದಲ್ಲಿ ನಡೆದ ಆ ಸಮಾರಂಭ ಭವ್ಯವಾಗಿತ್ತು. ಇಡಿಯ ಕಟ್ಟಡ ನವವಧುವಿನಂತೆ ಸಿಂಗಾರಗೊಂಡಿತ್ತು. ಘೋಷಣಾ ಫಲಕಗಳು, ಭಿತ್ತಿಪತ್ರಗಳು ಈ ಸಂದೇಶವನ್ನು ಮೂಲೆ-ಮೂಲೆಗೆ ಮುಟ್ಟಿಸಿದ್ದವು. ಸುತ್ತಮುತ್ತಲಿನ ಭಾರತೀಯರು ಸಿನೆಮಾ ಮಂದಿರದೆಡೆಗೆ ಸಾಗರದೋಪಾದಿಯಲ್ಲಿ ಹರಿದುಬರುತ್ತಿದ್ದರು. ಭಾರತ ಸರ್ಕಾರ ರಚನೆಯಾಗಲಿರುವ ಸುದ್ದಿಯನ್ನು ಕೇಳಿ ವಿದೇಶಿ ಪತ್ರಕರ್ತರು, ಛಾಯಾಚಿತ್ರಗ್ರಾಹಕರು ಕಾದು ನಿಂತಿದ್ದರು. ಮಧ್ಯಾಹ್ನ ಸುಮಾರು ಮೂರೂಮುಕ್ಕಾಲಿಗೆ ಕಾರಿನಲ್ಲಿ ಸೈನಿಕ ವೇಷದ ನೇತಾಜಿ ಸಿನೆಮಾ ಮಂದಿರದ ಮುಂದೆಯೇ ಕೆಳಗಿಳಿದರು. ಅವರ ಅಕ್ಕ-ಪಕ್ಕದಲ್ಲಿ ಸಂಪುಟದ ಇತರೆ ಸದಸ್ಯರು, ಆಚೀಚೆ ಅಂಗರಕ್ಷಕರು. ನಾಲ್ಕು ಗಂಟೆಗೆ ವೇದಿಕೆ ಏರಿದ ನೇತಾಜಿ ಪ್ರಮಾಣವಚನ ಸ್ವೀಕರಿಸಿ ಮಂತ್ರಿಮಂಡಲದ ಇತರ ಸದಸ್ಯರಿಗೂ ಪ್ರಮಾಣವಚನ ಬೋಧಿಸಿದರು. ಯುದ್ಧ ಹಾಗೂ ವಿದೇಶೀ ಖಾತೆಯನ್ನು ತನ್ನ ಬಳಿಯಿಟ್ಟುಕೊಂಡು ಕ್ಯಾಪ್ಟನ್ ಲಕ್ಷ್ಮಿ, ಕರ್ನಲ್ ಚಟರ್ಜಿ, ಕರ್ನಲ್ ಭೋಂಸ್ಲೆ, ಕರ್ನಲ್ ಭಗತ್ ಮುಂತಾದವರಿಗೆ ಸೂಕ್ತವಾಗಿ ಜವಾಬ್ದಾರಿ ಹಂಚಲಾಗಿತ್ತು. ಪ್ರತಿಜ್ಞೆ ಸ್ವೀಕರಿಸಿದ ನೇತಾಜಿ ನಾನು ಸುಭಾಷ್ಚಂದ್ರ ಬೋಸ್, ಹಿಂದುಸ್ತಾನದ ಜನತೆಯ ಸ್ವಾತಂತ್ರ್ಯಕ್ಕಾಗಿ ಪ್ರತಿಜ್ಞೆ ಮಾಡುವುದೇನೆಂದರೆ ನನ್ನ ಕೊನೆಯುಸಿರಿನವರೆಗೂ ಸ್ವಾತಂತ್ರ್ಯ ಸಂಗ್ರಾಮದ ಯಜ್ಞವನ್ನು ನಡೆಸುತ್ತಲೇ ಇರುತ್ತೇನೆ ಎಂದಿದ್ದರು. ಆನಂತರ ಸುದೀರ್ಘವಾದ ಭಾಷಣ ಮಾಡಿದ ನೇತಾಜಿ ಸ್ವಾತಂತ್ರ್ಯ ಗಳಿಕೆಗಾಗಿ ನಡೆದ ಪ್ರಯತ್ನಗಳೆಲ್ಲವನ್ನೂ ಕಣ್ಣಮುಂದೆ ಕಟ್ಟುವಂತೆ ವಿವರಿಸಿದರು. ಗಾಂಧಿಯವರ ಸಾಹಸವನ್ನೂ ಉಲ್ಲೇಖಿಸಲು ಮರೆಯಲಿಲ್ಲ. ಪೂರ್ವ ಏಷ್ಯಾದಲ್ಲಿ ೨೦ ಲಕ್ಷ ಭಾರತೀಯರು ಸಂಘಟಿತರಾಗಿ ಚಲೋ ದಿಲ್ಲಿ ಘೋಷಣೆಯೊಂದಿಗೆ ಹೊರಟಿದ್ದಾರೆ. ಇಂಗ್ಲೆಂಡನ್ನೂ ಅದರ ಕೂಟ ರಾಷ್ಟ್ರಗಳನ್ನೂ ಪರಾಭವಗೊಳಿಸಲು ಸ್ವತಂತ್ರ ಭಾರತದ ಹಂಗಾಮಿ ಸರ್ಕಾರ ಕಟಿಬದ್ಧವಾಗಿದೆ ಎಂದು ಅವರು ಘೋಷಿಸುವಾಗ ಜನರ ಮೈಮೇಲೆ ಮುಳ್ಳುಗಳೆದ್ದಿರಲು ಸಾಕು!
ಸುಭಾಷರು ಎಲ್ಲಿಯೂ ಜಪಾನಿ ಸರ್ಕಾರದ ಕೈಗೊಂಬೆಯಾಗುವ ಲಕ್ಷಣವನ್ನೇ ತೋರಲಿಲ್ಲ. ಅವರ ಸ್ವತಂತ್ರ ಮನೋವೃತ್ತಿ ಅನೇಕ ಬಾರಿ ಜಪಾನಿನ ಪ್ರಮುಖರಿಗೂ ಕಿರಿಕಿರಿ ಉಂಟುಮಾಡುತ್ತಿತ್ತು. ಆದರೆ ಸ್ವಾತಂತ್ರ್ಯಕ್ಕಾಗಿ ಸುಭಾಷರಲ್ಲಿದ್ದ ಉತ್ಕಟೇಚ್ಛೆ ಜಪಾನಿಗರ ಮನಮುಟ್ಟದಿರಲಿಲ್ಲ. ಸುಭಾಷರು ಸರ್ಕಾರವನ್ನು ಹೇಗೆ ವ್ಯವಸ್ಥಿತವಾಗಿ ಸಜ್ಜುಗೊಳಿಸಿದ್ದರೆಂದರೆ ಮುಂದಿನ ದಿನಗಳಲ್ಲಿ ಅಂಡಮಾನ್ ಮುಂತಾದ ಒಂದೊಂದೇ ಪ್ರದೇಶಗಳು ವಶವಾದಂತೆಲ್ಲ ಅಲ್ಲಿಗೆ ಕಮಿಷನರ್ಗಳ ನೇಮಕ, ವಿವಿಧ ಸರ್ಕಾರೀ ಖಾತೆಗಳ ಹಾಗೂ ಗ್ರಾಮಮಟ್ಟದವರೆಗಿನ ಆಡಳಿತದ ಕಲ್ಪನೆಯ ನೀಲನಕ್ಷೆ ರೂಪಿಸಿಬಿಡುತ್ತಿದ್ದರು! ಹೊಸ ಸರ್ಕಾರದ ಪರವಾಗಿ ಹೊಸ ಕರೆನ್ಸಿ, ಅಂಚೆಚೀಟಿಗಳನ್ನು ರೂಪಿಸಿದರಲ್ಲದೇ ಆಜಾದ್ ಹಿಂದ್ ಬ್ಯಾಂಕನ್ನು ಸ್ಥಾಪಿಸಿ ಹಣಕಾಸು ವ್ಯವಹಾರವನ್ನು ನಡೆಸತೊಡಗಿದರು. ಬೇರೆ-ಬೇರೆ ಕಡೆಯಿಂದ ಯುದ್ಧದಲ್ಲಿ ಅಪೂರ್ವ ಸಾಮರ್ಥ್ಯವನ್ನು ತೋರಿದ್ದ ಐಎನ್ಎ ವೀರರಿಗೆ ವಿವಿಧ ಸ್ತರಗಳ ಮೆಡಲ್ ಗೌರವಗಳನ್ನು ನೀಡುವ ವ್ಯವಸ್ಥೆ ಮಾಡಿಕೊಂಡಿದ್ದರು. ಅಂದರೆ ಸುಭಾಷ್ಬಾಬು ಸ್ವತಂತ್ರ ಭಾರತಕ್ಕೆ ಬೇಕಾಗಬಹುದಾಗಿದ್ದ ಎಲ್ಲ ವ್ಯವಸ್ಥೆಯನ್ನೂ ಮಾಡಿಕೊಂಡೇ ಕಾರ್ಯರಂಗಕ್ಕೆ ಧುಮುಕಿದ್ದರು.
ಅಂತರರಾಷ್ಟ್ರೀಯ ಮಾನ್ಯತೆ
ಸರ್ಕಾರ ಸ್ಥಾಪನೆಯಾದ ಎರಡೇ ದಿನಗಳಲ್ಲಿ ಅದಕ್ಕೆ ಜಪಾನ್ ಅಧಿಕೃತ ಮಾನ್ಯತೆ ನೀಡಿತು. ಅದರ ಹಿಂದು-ಹಿಂದೆಯೇ ಜರ್ಮನಿ, ಇಟಲಿ, ಬರ್ಮಾ, ಫಿಲಿಪೈನ್ಸ್ಗಳಾದಿಯಾಗಿ ಎಂಟುಹತ್ತು ರಾಷ್ಟ್ರಗಳು ಈ ಸರ್ಕಾರವನ್ನು ಮಾನ್ಯ ಮಾಡಿದವು. ಹೀಗೆ ಈ ರಾಷ್ಟ್ರಗಳೆಲ್ಲ ಮಾನ್ಯಮಾಡಿದ ಸರ್ಕಾರವಾದುದರಿಂದಲೇ ಅವರನ್ನು ಮೊದಲ ಪ್ರಧಾನಿ ಎಂದಾಗ ಯಾರೂ ವಿರೋಧಿಸುವಂತಿರಲಿಲ್ಲ.
ನೇತಾಜಿಯವರ ಈ ಪ್ರಯತ್ನ ಅನೇಕರಲ್ಲಿ ಹೊಸ ಸಂಚಲನವುಂಟುಮಾಡಿತು. ಭಾರತದಲ್ಲಿ ನೇತಾಜಿಯವರನ್ನು ಜಪಾನಿನ ಏಜೆಂಟ್ ಎಂದು ಹೀಯಾಳಿಸುತ್ತಿದ್ದವರಿಗೆ ಈ ಬೆಳವಣಿಗೆಗಳು ಸಾಕಷ್ಟು ಇರುಸು-ಮುರುಸು ಉಂಟುಮಾಡಿತ್ತು. ನೇತಾಜಿ ಮಾತ್ರ ಬಂಡೆಯಂತೆ ಅಚಲವಾಗಿದ್ದರು. ಅವರೀಗ ಹೊರದೇಶಗಳಲ್ಲಿದ್ದ ಪ್ರತಿಯೊಬ್ಬ ಭಾರತೀಯರ ಪಾಲಿನ ಕಣ್ಮಣಿಯಾಗಿಬಿಟ್ಟಿದ್ದರು. ಪೂರ್ವ ಏಷ್ಯಾದಲ್ಲಂತೂ ಅವರೇ ಮನೆಮಾತು. ಪತ್ರಿಕೆಗಳ ಮುಖಪುಟದಲ್ಲಿ ಅವರದ್ದೇ ಚರ್ಚೆ. ಅನೇಕ ರಾಷ್ಟ್ರಗಳು ಸುಭಾಷರಿಗೆ ಸಹಕಾರ ಕೊಡಲು ಮುಂದೆ ಧಾವಿಸಿದ್ದು ನಿಜವಾದರೂ ಸುಭಾಷರು ಮಾತ್ರ ಸರ್ಕಾರ ನಡೆಸಲು ಬೇಕಾದ ಹಣವನ್ನು ಅಲ್ಲಿನ ಭಾರತೀಯರಿಂದಲೇ ಸಂಗ್ರಹಿಸುವ ಪಣತೊಟ್ಟಿದ್ದರು. ವೆಚ್ಚ ಏರುತ್ತಲೇ ಇದ್ದರೂ ಅವರು ತಮ್ಮ ಸಂಕಲ್ಪವನ್ನು ಬಿಡಲಿಲ್ಲ. ಭಾರತೀಯರ ಸ್ವಾಭಿಮಾನವನ್ನು ಬಡಿದೆಬ್ಬಿಸುತ್ತಾ ತಮ್ಮ ಸರ್ಕಾರದ, ಸೇನೆಯ ವೆಚ್ಚವನ್ನು ಸಾಧ್ಯವಾದಷ್ಟೂ ಭರಿಸಿಕೊಳ್ಳುವ ಪ್ರಯತ್ನವನ್ನು ಮಾಡುತ್ತಲೇ ಇದ್ದರು. ಆರಂಭದಲ್ಲಿ ಹಣ ಸಂಗ್ರಹವಾಗುತ್ತಿತ್ತು ನಿಜ. ಬರುಬರುತ್ತಾ ತೊಂದರೆಯಾಗಲಾರಂಭಿಸಿದಾಗ ಸಿರಿವಂತ ಭಾರತೀಯರಿಗೆ ಧಮಕಿ ಹಾಕಿಯಾದರೂ ಹಣ ವಸೂಲಿ ಮಾಡುತ್ತಿದ್ದರು ಸುಭಾಷರು. ಇತರ ರಾಷ್ಟ್ರಗಳು ಮಾಡಿದ ಧನಸಹಾಯವನ್ನು ಭಾರತ ಸರ್ಕಾರಕ್ಕೆ ಕೊಟ್ಟ ಸಾಲವೆಂದು ಭಾವಿಸುವಂತೆ ಹೇಳಿದ ಅವರ ಸ್ವಾಭಿಮಾನದ ನುಡಿಗಳು ನಿಜಕ್ಕೂ ನೆನಪಿಸಿಕೊಳ್ಳಬೇಕಾದಂಥದ್ದು! ಮುಂದೆ ಸುಭಾಷರು ಅಂಡಮಾನ್, ನಿಕೋಬಾರ್ ದ್ವೀಪಗಳನ್ನು ಜಪಾನಿ ಸರ್ಕಾರದಿಂದ ತಮ್ಮ ತೆಕ್ಕೆಗೆ ಪಡೆದುಕೊಂಡರು. ತಾವೇ ಖುದ್ದು ಭೇಟಿಕೊಟ್ಟು ಭಾರತದ ಧ್ವಜವನ್ನು ಅಲ್ಲಿ ಹಾರಾಡಿಸಿ ಹೆಮ್ಮೆ ತಾಳಿ ಬಂದಿದ್ದರು. ಮುಂದೆ ಇಂಡಿಯನ್ ನ್ಯಾಷನಲ್ ಆರ್ಮಿಯ ಪಡೆಯನ್ನು ಮುನ್ನುಗ್ಗಿಸಿ ಇಂಫಾಲಾದಲ್ಲಿ ಬ್ರಿಟಿಷರಿಗೆ ತೀವ್ರವಾದ ಹೊಡೆತ ಕೊಟ್ಟು ಅದನ್ನು ವಶಪಡಿಸಿಕೊಳ್ಳುವಾಗಲೂ ಅವರು ಖಡಕ್ಕಾಗಿಯೇ ವರ್ತಿಸಿದ್ದರು. ಪ್ರತಿಕೂಲ ಪರಿಸ್ಥಿತಿಗಳು ಉಂಟಾಗದೇ ಹೋಗಿದ್ದರೆ ಭಾರತವು ಸ್ವಾತಂತ್ರ್ಯವನ್ನು ಬ್ರಿಟಿಷರಿಗೆ ಬಡಿದೇ ಪಡೆದುಕೊಳ್ಳುತ್ತಿತ್ತು. ಮತ್ತು ಭಾರತದ ಅಧಿಕೃತ ಪ್ರಧಾನಿಯಾಗಿ ಸುಭಾಷ್ಬಾಬು ನಾಯಕತ್ವ ವಹಿಸಿರುತ್ತಿದ್ದರು. ಹಾಗೆಂದು ಪ್ರಧಾನಿಯಾಗುವುದು ಅವರ ಇಚ್ಛೆಯಾಗಿರಲಿಲ್ಲ. ಸ್ವಾತಂತ್ರ್ಯಾನಂತರ ನಾನು ಭಾರತದ ಸೇವಕನಷ್ಟೆ. ಭಾರತೀಯರು ಆಯ್ಕೆ ಮಾಡುವ ನಾಯಕನೇ ಪ್ರಧಾನಿ ಎನ್ನುತ್ತಿದ್ದರು ಅವರು. ಅಂತಹ ಅಮೂಲ್ಯವಾದ ರತ್ನ ನಮ್ಮಿಂದ ದೂರವಾಗಿಯೇ ಹೋಯ್ತು. ಹೌದು, ನಷ್ಟ ನಮ್ಮದೇ!