ಅನಿವಾರ್ಯವೆಂಬಂತೆ ಆನ್ಲೈನ್ ತರಗತಿಗಳ ನೆಪದಲ್ಲಿ ಮೊಬೈಲು ಮಕ್ಕಳ ಸ್ವತ್ತಾಗಿದೆ. ಕೊಂಚ ಮೈಮರೆತರೂ, ಮಕ್ಕಳ ಮೇಲಿನ ಗಮನ ಕಳೆದುಕೊಂಡರೂ ಅವರ ಬಾಲ್ಯವೂ ಕೌಮಾರ್ಯವೂ ಹೇಳಹೆಸರಿಲ್ಲದಂತೆ ಕಳೆದುಹೋಗುವ ಭೀತಿಯಲ್ಲಿ ನಾವಿದ್ದೇವೆ. ಇನ್ನು, ಅಪ್ಪ–ಅಮ್ಮ ಇಬ್ಬರೂ ಕೆಲಸಕ್ಕಾಗಿ ತೆರಳಿ, ಮನೆಯಲ್ಲಿ ಮಗುವೊಂದೇ ಉಳಿದರಂತೂ ಪರಿಸ್ಥಿತಿ ಹೇಗಾದೀತು ಹೇಳಿ! ಮೊಬೈಲಿನಲ್ಲಿ ಹಲವು ಭದ್ರತಾ ಆಯ್ಕೆಗಳಿರಬಹುದು ನಿಜ. ಆದರೆ ಅಪ್ಪ ಅಮ್ಮ ಚಾಪೆಯಡಿಯಲ್ಲಿ ತೂರುವಾಗ ಮಕ್ಕಳು ರಂಗೋಲಿಯಡಿಯಲ್ಲಿ ತೂರದೇ ಇರುತ್ತಾರೆಯೇ?
ಹಲವು ದಿನಗಳಿಂದ ಪತ್ರಿಕೆಗಳನ್ನು ತೆಗೆದು ಓದೋಣವೆಂದರೆ ಅತ್ಯಾಚಾರದ್ದೇ ಸುದ್ದಿ. ಸುದ್ದಿ ವಾಹಿನಿಗಳನ್ನು ನೋಡೋಣವೆಂದರೆ ಅಲ್ಲೂ ಎಳೆಎಳೆಯಾಗಿ ತೆರೆದುಕೊಳ್ಳುವ ಪ್ರಕರಣದ ವಿವರಗಳು. ಮೈ ಮರಗಟ್ಟುವಂತೆ, ಮನಸ್ಸು ಕುದಿಯುವಂತೆ ಮಾಡುವ ಈ ಸುದ್ದಿಗಳನ್ನು ಕಂಡರೆ, ಕೇಳಿದರೆ ವಾರಗಟ್ಟಲೆ ಮನಸ್ಸೆಲ್ಲಾ ಅದರ ಸುತ್ತಲೇ ಸುಳಿಯುವ ಯಾತನೆ. ಅಷ್ಟು ಸಾಲದ್ದೆಂಬಂತೆ ಹದಿಮೂರರ ಮಗಳು, ಹತ್ತರ ಮಗ ಪದೇ ಪದೇ ಕೇಳುತ್ತಾರೆ, ಅಮ್ಮಾ, ಈ ಅತ್ಯಾಚಾರ ಎಂದರೇನು? ಅವರಿಗೆ ಅರ್ಥವಾಗುವಂತೆ ವಿವರಿಸುವುದಾದರೂ ಹೇಗೆ? ಒಬ್ಬರಿಗೆ ಇಷ್ಟವಾಗದಂತೆ ಅವರೊಂದಿಗೆ ನಡೆದುಕೊಳ್ಳುವುದೆಂದೋ, ಶಾರೀರಿಕವಾಗಿ ಘಾಸಿಗೊಳಿಸುವುದೆಂದೋ ಅಥವಾ ಶಾಲೆಯಲ್ಲಿ ಕಲಿಸಿರುವ ಗುಡ್ ಟಚ್ ಬ್ಯಾಡ್ ಟಚ್ಗಳ ಆಧಾರದ ಮೇಲೆಯೇ ಒಂದಿಷ್ಟು ಹೇಳಿಬಿಡಬಹುದು ನಿಜ. ಆದರೆ ಅದರಾಚೆಗೆ ಅರ್ಥ ಮಾಡಿಸಲಾಗದ ವೇದನೆಯೊಂದಿದೆಯಲ್ಲ… ಅದಕ್ಕೇನು ಪರಿಹಾರ?
ಇಂಥ ಪ್ರಶ್ನೆಗಳು ಹುಟ್ಟಿಕೊಂಡಾಗಲೆಲ್ಲ ಮತ್ತೆ ಮತ್ತೆ ಯೋಚನೆ ತಿರುಗುವುದು ಮನೆಯತ್ತಲೇ. ಕಲಿಸಲಾರೆವೇ ಮನೆಯ ಮಕ್ಕಳಿಗೆ, ಪರಸ್ಪರ ಪ್ರೀತಿ ಗೌರವಗಳಿಂದ ಬದುಕಬೇಕೆಂಬುದನ್ನು? ಕಲಿಸಲಾರೆವೇ ಮನೆಯ ಮಗನಾದವನು ತಂಗಿಯ ಅಥವಾ ಅಕ್ಕನ ಬಗೆಗೆ ಕಾಳಜಿ ಮಾಡಲೇಬೇಕೆಂಬುದನ್ನು? ಕಲಿಸಲಾರೆವೇ ತಂಗಿಯಾದವಳು ಅಣ್ಣನ ಒತ್ತಡಗಳನ್ನು ಅರ್ಥ ಮಾಡಿಕೊಂಡು ವ್ಯವಹರಿಸಬೇಕೆಂಬುದನ್ನು? ಮಾತುಮಾತಿಗೂ ಮಂದಿ ಒಬ್ಬರನ್ನೊಬ್ಬರು ತಬ್ಬಿಕೊಂಡು ಶುಭಕೋರುವ ಸಂದರ್ಭಗಳನ್ನು ಕಂಡಾಗಲೆಲ್ಲ ದೂರ ನಿಂತು ಮಾತಾಡಿದರೆ ಸಾಕು. ಮೈಮುಟ್ಟಿ ಮಾತಾಡಿಸಕೂಡದು ಎಂದು ಬಾಲ್ಯದಲ್ಲಿ ಪದೇಪದೇ ಕೇಳಿಸಿಕೊಂಡ ಪಾಠ ನೆನಪಾಗುತ್ತದೆ. ಅಣ್ಣತಮ್ಮಂದಿರೆಂದಲ್ಲ, ನಾವು ಅಕ್ಕತಂಗಿಯರೇ ಆದರೂ ತಬ್ಬಿಕೊಂಡು ಮಾತಾಡುವ ಪ್ರಮೇಯವೇ ಇರಲಿಲ್ಲ. ಒಂದು ತಲೆಮಾರಿನಿಂದ ಮುಂದಿನದಕ್ಕಾಗುವಾಗ ಬದುಕು ಹೇಗೆ ಬದಲಾಗುತ್ತದೆ!
ಕಾರ್ಪೋರೇಟ್ ಸಂಸ್ಕೃತಿಯ ಹೆಸರಿನಲ್ಲಿ ಗೊತ್ತಿದ್ದೋ ಗೊತ್ತಿಲ್ಲದೆಯೋ ಶೇಕ್ ಹ್ಯಾಂಡ್ ಮಾಡುವುದರೊಂದಿಗೆ ಪ್ರಾರಂಭವಾದ ಶುಭಾಶಯ ಕೋರಿಕೆ ಸಣ್ಣಗೆ ಹೆಗಲು ತಾಗಿಸುವವರೆಗೆ ಬಂದಿದೆ. ಇನ್ನೂ ಆಪ್ತರೆಂದರೆ ಇನ್ನಷ್ಟು ಹತ್ತಿರವೆಂಬ ಪರಿಸ್ಥಿತಿ. ಅಗತ್ಯವಿದ್ದರೂ ಇಲ್ಲದಿದ್ದರೂ ಸ್ಪರ್ಶಿಸುವ ಮನಃಸ್ಥಿತಿ. ಮಿಗಿಲಾಗಿ ಅದೆಲ್ಲವೂ ಮುಕ್ತಮನಸ್ಸಿನ ಸಂಕೇತವೆಂಬ ಭ್ರಮೆಗಳು ನಮ್ಮನ್ನು ಆವರಿಸಿಕೊಂಡದ್ದು ಯಾವಾಗಲೋ ಅರ್ಥವೇ ಆಗುವುದಿಲ್ಲ. ಆದರೆ ಎಲ್ಲೋ ಇಲ್ಲೇ ಶಾಲಾಬಸ್ಸಿನೊಳಗೇ ಗಂಡುಮಕ್ಕಳು ಹೆಣ್ಣುಮಕ್ಕಳು ಅಂತರ ಮರೆತು ವ್ಯವಹರಿಸುವುದನ್ನು ಕಂಡರೆ ಸ್ವಾತಂತ್ರ್ಯದ ಬದಲು ಸ್ವೇಚ್ಛೆಯನ್ನು ಕಲಿಸುತ್ತಿದ್ದೇವೆಯೇ ಎಂಬ ಆತಂಕ ಇನ್ನಿಲ್ಲದಂತೆ ಕಾಡುತ್ತದೆ. ಯಾರು ಏನೇ ಮಾಡಲಿ, ಸಮಾಜ ಬೈದುಕೊಳ್ಳುವುದು ಹೆತ್ತವರನ್ನು, ಅದರಲ್ಲೂ ಅಮ್ಮಂದಿರನ್ನು. ಹಾಗಿದ್ದರೆ ಬದುಕು ಸ್ವಚ್ಛವಾಗಿರಬೇಕೆಂದು ಕಲಿಸುವುದು ಬರಿಯ ಅಮ್ಮಂದಿರ ಹೊಣೆಯೇ? ಅದು ಮನೆಯ ಎಲ್ಲ ಸದಸ್ಯರದ್ದೂ ಹೌದು ಎಂಬುದನ್ನು ಮರೆಯಲಾದೀತೇ?
ಎಳವೆಯಲ್ಲಿ ಆಟ-ಪಾಠ-ಜಗಳಗಳ ನಡುವೆ ದಿನಗಳು, ವರ್ಷಗಳು ಉರುಳಿಹೋಗುತ್ತವೆ, ಹದಿಹರೆಯ ಕಾಲಿಡುತ್ತಲೇ ಮನವು ಗರಿಗೆದರಿದ ಹಕ್ಕಿ. ಆದರೆ ಕೇವಲ ಕಾಲ್ಪನಿಕವಾಗಿ ಹರಿದು ಬರುವ ಬದುಕಿನ ಚಿತ್ರಗಳು ಈಗ ಮೊಬೈಲಿನ ಹೆಸರಿನಲ್ಲಿ ದೃಶ್ಯಗಳಾಗಿ ಮಕ್ಕಳ ಅಂಗೈಗೇ ಬಂದು ಕುಳಿತಿವೆ. ಅನಿವಾರ್ಯವೆಂಬಂತೆ ಆನ್ಲೈನ್ ತರಗತಿಗಳ ನೆಪದಲ್ಲಿ ಮೊಬೈಲು ಮಕ್ಕಳ ಸ್ವತ್ತಾಗಿದೆ. ಕೊಂಚ ಮೈಮರೆತರೂ, ಮಕ್ಕಳ ಮೇಲಿನ ಗಮನ ಕಳೆದುಕೊಂಡರೂ ಅವರ ಬಾಲ್ಯವೂ ಕೌಮಾರ್ಯವೂ ಹೇಳಹೆಸರಿಲ್ಲದಂತೆ ಕಳೆದುಹೋಗುವ ಭೀತಿಯಲ್ಲಿ ನಾವಿದ್ದೇವೆ. ಇನ್ನು, ಅಪ್ಪ-ಅಮ್ಮ ಇಬ್ಬರೂ ಕೆಲಸಕ್ಕಾಗಿ ತೆರಳಿ, ಮನೆಯಲ್ಲಿ ಮಗುವೊಂದೇ ಉಳಿದರಂತೂ ಪರಿಸ್ಥಿತಿ ಹೇಗಾದೀತು ಹೇಳಿ! ಮೊಬೈಲಿನಲ್ಲಿ ಹಲವು ಭದ್ರತಾ ಆಯ್ಕೆಗಳಿರಬಹುದು ನಿಜ. ಆದರೆ ಅಪ್ಪ ಅಮ್ಮ ಚಾಪೆಯಡಿಯಲ್ಲಿ ತೂರುವಾಗ ಮಕ್ಕಳು ರಂಗೋಲಿಯಡಿಯಲ್ಲಿ ತೂರದೇ ಇರುತ್ತಾರೆಯೇ? ಅಷ್ಟಕ್ಕೂ ತಂತ್ರಜ್ಞಾನದ ಬಳಕೆಯಲ್ಲಿ ನಮಗಿಂತ ಮಕ್ಕಳೇ ಮುಂದು. ಕ್ಷಣಕ್ಷಣವನ್ನೂ ಅತ್ಯಂತ ಜಾಗರೂಕತೆಯಿಂದ ಕಳೆಯಬೇಕಾದ ದಿನಗಳಿವು. ಮನೆಯ ಹೊರಗೆ ಕಾಡುವ ಕೊರೋನಾವಾದರೆ ಮನೆಯೊಳಗೇ ಕಾಡುವ ಸುದ್ದಿ ಮಾಧ್ಯಮಗಳು, ಜತೆಗೆ ಮೊಬೈಲು. ಭಗವಂತಾ, ತಲ್ಲಣಗಳಿಗಾದರೂ ಒಂದು ಮಿತಿ ಬೇಡವೇ?
ಸಮಯದ ಅಭಾವದಿಂದಲೂ ಕಡಮೆ ಕುತೂಹಲಿಯಾಗಿರುವುದರಿಂದಲೂ ನಾನು ಸಿನೆಮಾಗಳನ್ನು ನೋಡುವುದು ಕಡಮೆ. ಇತ್ತೀಚೆಗೆ ವೆಬ್ ಸೀರೀಸ್ಗಳ ಬಗ್ಗೆ ಕೇಳಿದ್ದೆನೇ ಹೊರತು, ಎಂದೂ ನೋಡಿರಲಿಲ್ಲ. ಒಂದು ದಿನ ವಿರಾಮದ ಹೊತ್ತಿನಲ್ಲಿ ಗೆಳತಿ, ಇಲ್ಲಿ ಬನ್ನಿ ಒಂದು ನಿಮಿಷ ಎಂದವರು ಅದಾವುದೋ ವೆಬ್ ಸೀರೀಸ್ನ ಒಂದೆರಡು ಕ್ಲಿಪಿಂಗ್ ತೋರಿಸಿದರು. ಪಟ್ಟಣಗಳ ಕರಾಳಮುಖವನ್ನು ನೈಜವಾಗಿ ತೋರಿಸುವಂತಿದ್ದ ಅವುಗಳಲ್ಲಿ ಹಸಿಬಿಸಿ ದೃಶ್ಯಗಳ ಭರಾಟೆ. ಮನರಂಜನೆಯ ಉದ್ದೇಶವೋ ಮನವನ್ನು ಕೆರಳಿಸುವ ಉದ್ದೇಶವೋ ಅರ್ಥವಾಗದೇ ಗಾಬರಿಗೊಂಡೆ. ಅದರಲ್ಲೂ ಅಲ್ಲಿ ಅಭಿನಯಿಸಿದ ನಟಿಯರ ಬಗ್ಗೆ ನಿಜವಾಗಿಯೂ ವ್ಯಥೆಯಾಯಿತು. ಅದಾವ ಅನಿವಾರ್ಯತೆಯಿಂದಾಗಿ ಅಂತಹ ಕಡೆ ಸಿಕ್ಕಿ ಹಾಕಿಕೊಳ್ಳುತ್ತಾರೋ! ಅದರಲ್ಲಿ ಹಲವರಾದರೂ ಆರ್ಥಿಕ ಮುಗ್ಗಟ್ಟಿನಿಂದ ಒದ್ದಾಡಿ ಸಂಪಾದನೆಯ ದಾರಿಯಾಗಿ ಇದನ್ನು ಆಯ್ದುಕೊಂಡವರೇ ಇರಬೇಕೆನಿಸಿತು. ಯಾಕೆಂದರೆ ಅವರಾರೂ ನಾನು ಗಮನಿಸಿದಂತೆ ಮುಖ್ಯವಾಹಿನಿಯಲ್ಲಿ ಹೆಸರಾಂತವರಲ್ಲ. ಎಲ್ಲರೂ ಎಳೆಯ ವಯಸ್ಸಿನ ನಟಿಯರು. ಅಷ್ಟೊಂದು ಮುಕ್ತವಾಗಿ ಅಭಿನಯಕ್ಕೆ ತೊಡಗುವ ಕಥೆ ಹಾಗಿರಲಿ, ಆ ಒಂದೊಂದು ದೃಶ್ಯವೂ ಓಕೆ ಅನ್ನಿಸಿಕೊಳ್ಳಬೇಕಾದರೆ ಅದೆಷ್ಟು ಸಲ ಮರು ಚಿತ್ರೀಕರಣಗೊಂಡಿರುವುದಿಲ್ಲ! ಹಿಂದೊಮ್ಮೆ ಡಕಾಯಿತರಾಣಿಯೆಂದೇ ಖ್ಯಾತಿವೆತ್ತ ಫೂಲನ್ದೇವಿಯ ಜೀವನದ ಕುರಿತ ಸಿನೆಮಾ ಬಂದಾಗ ಸ್ವತಃ ಆಕೆಯೇ ನೊಂದುಕೊಂಡಿದ್ದರಂತೆ, ತನ್ನ ಮೇಲಾದ ಅನಾಚಾರಕ್ಕಿಂತ ಭೀಕರವಾಗಿ ಈ ನಟಿಯ ಮೇಲೆ ಆದಂತಿದೆ, ಎಲ್ಲವನ್ನೂ ಜಗತ್ತಿಗೆ ಹೇಳುವ ಭರಾಟೆಯಲ್ಲಿ ಆಕೆಯನ್ನು ಪೂರ್ಣ ಬೆತ್ತಲಾಗಿ ಅಷ್ಟು ಮಂದಿಯ ಮುಂದೆ ಅಭಿನಯಿಸುವಂತೆ ಮಾಡಿರುವುದು ಅತಿದೊಡ್ಡ ಕ್ರೌರ್ಯ ಎಂದು. ಹೌದಲ್ಲ, ಅಮಾನುಷ ಎನಿಸುವ ಸಂಗತಿಗಳು ನಮ್ಮ ನಡುವೆ ಹಲವು ಇವೆ. ಅರ್ಥ ಮಾಡಿಕೊಳ್ಳುವ ಮನಸ್ಸುಗಳೇ ಮರೆಯಾಗುತ್ತಿವೆ.
ಮನೆಯೊಳಗೆ ಅಪ್ಪ-ಅಮ್ಮ ಪರಸ್ಪರರೊಂದಿಗೆ ನಡೆದುಕೊಳ್ಳುವ ರೀತಿ, ಅಜ್ಜ-ಅಜ್ಜಿಯನ್ನು ನಡೆಸಿಕೊಳ್ಳುವ ರೀತಿ ಪ್ರತ್ಯಕ್ಷವಾಗಿಯೂ ಪರೋಕ್ಷವಾಗಿಯೂ ಮಕ್ಕಳ ಮನಸ್ಸನ್ನು ಪ್ರಭಾವಿಸುತ್ತದೆ. ಅವರ ನಡುವಿನ ಅನ್ಯೋನ್ಯತೆಯೋ ಸಂಘರ್ಷವೋ ಹಲವು ಪಾಠಗಳನ್ನು ಮಕ್ಕಳಿಗೆ ಹೇಳಿರುತ್ತದೆ. ಕೇಳಿದ್ದನ್ನು ಕಲಿಯುವುದಕ್ಕಿಂತ ನೋಡಿದ್ದರಿಂದ ಹೆಚ್ಚು ಗ್ರಹಿಸುವುದು ನಿಜವಷ್ಟೇ! ಆದರೆ ಅನುಬಂಧವಿರಬೇಕಾದಲ್ಲಿ ಜಗಳಗಳೇ ಇದ್ದರೆ, ದೈಹಿಕವಾಗಿ ದಂಡಿಸುವುದನ್ನು ಮಕ್ಕಳು ನೋಡುತ್ತಲೇ ಬೆಳೆದರೆ ಅದೇ ನಿಜವಾದ ಬದುಕು ಎಂದುಕೊಳ್ಳುವ ಸಾಧ್ಯತೆಯೂ ಇದೆಯಲ್ಲ. ಸರಿತಪ್ಪುಗಳ ಚರ್ಚೆ ನಡೆಯುವುದು ಮನೆಮನೆಗಳ ಕಥೆ ಇರಬಹುದು. ಆದರೆ ಪ್ರತಿಬಾರಿಯೂ ಸರಿಯಾದದ್ದು ಗೆಲ್ಲಬೇಕು ಅನ್ನುವುದಕ್ಕಿಂತ ಯಾರು ಗೆಲ್ಲಬೇಕು ಎಂಬುದೇ ಮುಖ್ಯವಾಗುತ್ತಾ ಹೋದರೆ ಮಕ್ಕಳ ಯೋಚನೆಯ ಪಥವೇ ಹಳಿತಪ್ಪಿದ ಬಂಡಿಯಾಗುತ್ತದೆ.
ಮಕ್ಕಳು ಸಜ್ಜನರಾಗಿ ಬೆಳೆಯುವಲ್ಲಿ ಮನೆಯೊಳಗಿನ ಪ್ರತಿ ಸ್ಪರ್ಶವೂ ಮುಖ್ಯವಾಗುತ್ತದೆ, ಅದು ಮನೆಯ ಮಗನಿಗಿರಲಿ, ಅಥವಾ ಮಗಳಿಗಿರಲಿ. ಕೆಲವೊಮ್ಮೆ ತೀರಾ ಹತ್ತಿರದ ಬಂಧುಗಳಾದವರು ಅತಿಸಲುಗೆಯಿಂದ ಮನೆಮಕ್ಕಳೊಂದಿಗೆ ವರ್ತಿಸಿದರೂ ಅದನ್ನು ನಿರಾಕರಿಸುವಂತೆ ಮಕ್ಕಳಿಗೆ ತಿಳಿಹೇಳುವುದು ಎಷ್ಟು ಅಗತ್ಯವೋ, ಅಷ್ಟೇ ಅಗತ್ಯ ಮನೆಯಲ್ಲಿ ಸಹೋದರ ಸಹೋದರಿಯರ ನಡುವೆ ಆರೋಗ್ಯಕರ ಅಂತರವಿರಲಿ ಎಂಬುದು. ಪತ್ರಿಕೆಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ ಮನೆಯೊಳಗೇ ನಡೆಯುವ ಅದೆಷ್ಟೋ ದುರ್ವರ್ತನೆ ಕಾಣಿಸುತ್ತವೆ. ಮಗಳನ್ನು ತನ್ನ ತೃಷೆಗಾಗಿ ಬಳಸಿಕೊಳ್ಳುವ ತಂದೆ, ತಂಗಿಯನ್ನೇ ಕಾಡುವ ಅಣ್ಣ, ಬದುಕು ಕೊಡುವ ನೆಪದಲ್ಲಿ ಹೆಣ್ಣುಮಗಳ ತಾಯಿಯಾದ ಎಳೆಯ ವಿಧವೆಯನ್ನೋ ವಿಚ್ಛೇದಿತೆಯನ್ನೋ ಮದುವೆಯಾದವರು ಬೈ ವನ್ ಗೆಟ್ ವನ್ ಫ್ರೀ ಎಂಬ ಕೆಟ್ಟ ಯೋಚನೆಯಲ್ಲಿ ಮಗಳಂತೆ ಕಾಣಬೇಕಾದವಳನ್ನೂ ಇನ್ನಿಲ್ಲದಂತೆ ದೈಹಿಕವಾಗಿ ಬಳಸಿಕೊಳ್ಳುವುದು… ಇತ್ಯಾದಿ. ಛೇ, ಭವಿಷ್ಯದ ದಾರಿಯಲ್ಲಿ ಮುಳ್ಳುಗಳೇ ಜಾಸ್ತಿಯಾಗುತ್ತಿವೆಯೇ?
ಮನೆಯೆಂಬುದು ಮನೆಯಾಗಿ ಉಳಿಯಲಿ. ಮಕ್ಕಳು ಮೃಗಗಳಾಗದಂತೆ ಬದುಕಲಿ. ಅದಕ್ಕೆ ಬೇಕಾದ ವಾತಾವರಣವನ್ನು ಮನೆಯ ಮಂದಿ ಕಲ್ಪಿಸಲಿ. ಅದಕ್ಕಿಂತ ಇನ್ನೇನು ಹಾರೈಸೋಣ?