ಶ್ರೀಕೃಷ್ಣನ ಅಪರಂಪಾರ ದ್ವಂದ್ವಾತೀತ ಶಕ್ತಿಯನ್ನು ತೋರಿಸುವಂತೆ, ಕಡೆಗೋಲನ್ನು ಅರ್ಧ, ಅರ್ಧವಾಗಿ ತಿರುಗಿಸುತ್ತ, ಮನುಷ್ಯನ ಹೃದಯದಲ್ಲಿರುವ ಪ್ರಜ್ಞೆ ಎಂಬ ಕೆನೆಯನ್ನು ಕಡೆದಾಗ ಭಕ್ತಿ ಎನ್ನುವ ಬೆಣ್ಣೆ ತೇಲಿ ಬರುತ್ತದೆ. ಅದು ಕೃಷ್ಣನಿಗೆ ಅತಿಪ್ರಿಯವಾದದ್ದು, ನೈವೇದ್ಯಯೋಗ್ಯವಾದದ್ದು. ಈ ಯುಗದಲ್ಲಿ ಜ್ಞಾನ ಅಪರೂಪವಾದಾಗ, ಕರ್ಮ ಕಷ್ಟಸಾಧ್ಯವಾದಾಗ, ಭಕ್ತಿಯೊಂದೇ ನಮ್ಮನ್ನು ಕಾಯುವುದು, ಪೋಷಿಸುವುದು ಮತ್ತು ಉದ್ಧರಿಸುವುದು. ಆ ಭಕ್ತಿಯ ಉಗಮಕ್ಕೆ ಕಡೆಗೋಲು ಬೇಕು.
ನೂರಿಪ್ಪತ್ತೈದು ವರ್ಷ ನಮ್ಮ ಕಾಲಮಾನದಲ್ಲಿ ಸಣ್ಣ ಅವಧಿಯೇನಲ್ಲ. ಅಷ್ಟು ವರ್ಷಗಳ ಹಿಂದೆ ಬದುಕಿದ ಅನೇಕರ ಹೆಸರುಗಳು ನಮಗೆ ನೆನಪೇ ಇಲ್ಲ. ಸಮಯ ಎಲ್ಲವನ್ನು ಮರೆಸುತ್ತದೆ. ಈ ಮಾತು ವ್ಯಕ್ತಿಗಳು, ಗ್ರಂಥಗಳು ಮತ್ತು ಚಿಂತನೆಗಳಿಗೆ ಅನ್ವಯಿಸುತ್ತದೆ. ಇಂದು ಅತ್ಯಂತ ಚಲಾವಣೆಯಲ್ಲಿರುವ ಖ್ಯಾತನಾಮರೂ ಕಾಲ ಕಳೆದಂತೆ ಜನರ ನೆನಪುಗಳ ಮಂಜಿನಲ್ಲಿ ಕಳೆದುಹೋಗುತ್ತಾರೆ. ಅದರಂತೆ ಇಂದು ತುಂಬ ಚರ್ಚೆಗೆ ಒಳಪಡುವ ಅನೇಕ ಗ್ರಂಥಗಳು ಹತ್ತು ವರ್ಷ ಕಳೆಯುವುದರಲ್ಲಿ ಮರೆತೇ ಹೋಗುತ್ತವೆ. ಮತ್ತೆ ಆಗಿನ ಹೊಸ ಪುಸ್ತಕಗಳು ಚರ್ಚೆಗೆ ಒಳಪಡುತ್ತವೆ. ಹಾಗೆಯೇ ಅನೇಕ ಚಿಂತನೆಗಳು, ಆ ದಿನಗಳಲ್ಲಿ ಅತ್ಯಂತ ಕ್ರಾಂತಿಕಾರಕ ಎನ್ನಿಸಿಕೊಂಡವುಗಳು ಮುಂದೆ ಯಾರಿಗೂ ನೆನಪಿಲ್ಲದಂತೆ ಕರಗಿಹೋಗುತ್ತವೆ.
ಆದರೆ ಕೆಲವೇ ಕೆಲವು ವ್ಯಕ್ತಿಗಳು, ಗ್ರಂಥಗಳು ಮತ್ತು ಚಿಂತನೆಗಳು ಕಾಲ ಉರುಳಿದಂತೆ ಹೆಚ್ಚು ಪ್ರಖರವಾಗುತ್ತ, ಸರ್ವಮಾನ್ಯವಾಗುತ್ತ ಬರುತ್ತವೆ. ಜುಲೈ ೪, ೧೯೦೨ರಂದು ಸ್ವಾಮಿ ವಿವೇಕಾನಂದರು ದೇಹವನ್ನು ತೊರೆದಾಗ ಅವರಿಗೆ ಎಷ್ಟು ಜನ ಶಿಷ್ಯರಿದ್ದರೋ ಅದರ ಸಹಸ್ರಪಟ್ಟು ಜನ ಶಿಷ್ಯರು ಇಂದು ಇದ್ದಾರೆ. ಅದರಂತೆ ಈಗ್ಗೆ ನೂರಿಪ್ಪತ್ತೈದು ವರ್ಷಗಳ ಹಿಂದೆ ಜನಿಸಿದ್ದ ಶ್ರೀಲ ಪ್ರಭುಪಾದರಿಗೆ ಇಂದು ಪ್ರಪಂಚಾದ್ಯಂತ ಕೋಟಿ ಕೋಟಿ ಜನ ಭಕ್ತರಿದ್ದಾರೆ. ಐವತ್ತು ವರ್ಷಗಳ ಹಿಂದೆ ಭಗವದ್ಗೀತೆಯನ್ನು, ಮಂಕುತಿಮ್ಮನ ಕಗ್ಗವನ್ನು ಅದೆಷ್ಟು ಜನ ಓದುತ್ತಿದ್ದರೋ ತಿಳಿಯದು. ಆದರೆ ಇಂದು ಆ ಗ್ರಂಥಗಳನ್ನು ಓದುವವರ ಸಂಖ್ಯೆ ಅಗಾಧವಾಗಿ ಬೆಳೆದಿದೆ.
ಅದು ಯಾಕೆ ಹೀಗಾಗುತ್ತದೆ? ಕೆಲವೇ ಜನರ ವಿಷಯದಲ್ಲಿ ಮಾತ್ರ ಈ ಪ್ರಕ್ರಿಯೆ ವಿಲೋಮವಾಗುತ್ತದಲ್ಲ? ಸೂಕ್ಷ್ಮವಾಗಿ ಗಮನಿಸಿದರೆ ಅದಕ್ಕೆ ಉತ್ತರ ದೊರಕುತ್ತದೆ. ಯಾರ ಮಾತುಗಳೂ, ಚಿಂತನೆಗಳೂ ಸಾರ್ವಕಾಲಿಕವಾಗಿವೆಯೋ, ಎಲ್ಲ ಸಂದರ್ಭಗಳಲ್ಲಿ ಮನುಷ್ಯರಿಗೆ ತೃಪ್ತಿಯನ್ನು, ಸಮಾಧಾನವನ್ನು, ಬದುಕಿನಲ್ಲಿ ಆಶಾವಾದವನ್ನು ನೀಡುತ್ತವೆಯೋ ಅವರು ಶತಮಾನಗಳು ಕಳೆದರೂ ಜನಮಾನಸದಲ್ಲಿ ಸ್ಥಿರವಾಗಿ ನಿಲ್ಲುತ್ತಾರೆ. ಹೀಗೆ ತಮ್ಮ ಬದುಕನ್ನೇ ಮಾದರಿಯಾಗಿಸಿ, ಮುಂಬರುವ ಶತಮಾನಗಳಲ್ಲಿ ತರುಣರಿಗೆ ಅಧ್ಯಾತ್ಮಚಿಂತನೆಯನ್ನು ಧಾರೆಯಾಗಿಸಿದ ತತ್ತ್ವಜ್ಞಾನಿ, ವಿದ್ವಾಂಸ ಮತ್ತು ಸಂತ ಎ.ಸಿ. (ಅಭಯಚರಣ) ಭಕ್ತಿವೇದಾಂತ ಸ್ವಾಮಿ ಪ್ರಭುಪಾದರು ನಮ್ಮ ಪ್ರಪಂಚಕ್ಕೊಂದು ಧ್ರುವತಾರೆ.
ವಿಸ್ಮಯಕರ ಘಟನಾವಳಿ
ಅವರ ಬದುಕೇ ಒಂದು ವಿಸ್ಮಯ. ಬಾಲ್ಯದಿಂದಲೇ ಬಂದ ಕೃಷ್ಣಭಕ್ತಿ. ಕಲಿತದ್ದು ಸ್ಕಾಟಿಶ್ ಚರ್ಚ್ ಕಾಲೇಜಿನಲ್ಲಿ. ಮುಂದೆ ವೈವಾಹಿಕ ಜೀವನ, ವ್ಯಾಪಾರ. ಈ ಸಮಯದಲ್ಲಿ ಗೌಡೀಯ ಮಠದ ಸಂಸ್ಥಾಪನಾಚಾರ್ಯರಾದ ಶ್ರೀಲ ಭಕ್ತಿಸಿದ್ಧಾಂತ ಸರಸ್ಪತೀ ಠಾಕೂರರ ದರ್ಶನ. ಅದೊಂದು ಅಮೃತಕ್ಷಣ. ಗುರುಗಳು ಶಿಷ್ಯನಿಗೆ ಕೃಷ್ಣಪ್ರಜ್ಞೆಯನ್ನು ಪಾಶ್ಚಾತ್ಯ ರಾಷ್ಟ್ರಗಳಲ್ಲಿ ಹರಡಲು ಆದೇಶಿಸಿದರು. ಅದೊಂದು ಮಾತು ಸಾಕಾಯಿತು, ಇಡೀ ಜೀವನವನ್ನೇ ಅದಕ್ಕಾಗಿ ಮುಡುಪಿಡಲು. ಬ್ಯಾಕ್ ಟು ಗಾಡ್ಹೆಡ್ (ಮರಳಿ ಭಗವಂತನೆಡೆಗೆ) ಪತ್ರಿಕೆಯ ಪ್ರಕಟಣೆ, ಪ್ರಸಾರಕಾರ್ಯ ನಡೆಯಿತು. ಅವರ ಪರಿಶ್ರಮಕ್ಕೆ ಭಕ್ತಿ ವೇದಾಂತ ಎಂಬ ಬಿರುದು ಗರಿಗಟ್ಟಿತು. ಅನಂತರ ಕೌಟುಂಬಿಕ ಜೀವನದಿಂದ ನಿವೃತ್ತಿ ಪಡೆದು ಸಂನ್ಯಾಸದೀಕ್ಷೆ. ವೃಂದಾವನದಲ್ಲಿ ಕುಳಿತು ಅತ್ಯಮೂಲ್ಯವಾದ ಶ್ರೀಮದ್ ಭಾಗವತದ ಹದಿನೆಂಟು ಸಾವಿರ ಶ್ಲೋಕಗಳಿಗೆ ಅನುವಾದ-ತಾತ್ಪರ್ಯದ ಬರವಣಿಗೆ. ಗುರುವಾಜ್ಞೆಯಂತೆ ದಾನಿಯೊಬ್ಬರ ಸಹಾಯದೊಂದಿಗೆ ತಮ್ಮ ಎಪ್ಪತ್ತನೆಯ ವರ್ಷದಲ್ಲಿ ಅಮೆರಿಕಾ ಪ್ರಯಾಣ. ಹೊರಟಾಗ ಅವರೊಂದಿಗೆ ಇದ್ದದ್ದು ಕೇವಲ ನಲವತ್ತು ರೂಪಾಯಿಗಳು, ಕಬ್ಬಿಣದ ಟ್ರಂಕಿನಲ್ಲಿದ್ದ ಕೆಲವು ಗ್ರಂಥಗಳು ಮತ್ತು ಸಮುದ್ರದಷ್ಟು ಆಳವಾದ ಶ್ರದ್ಧೆ. ಅನಾಮಧೇಯರಾಗಿ ಆ ದೇಶವನ್ನು ಪ್ರವೇಶಿಸಿದ ಶ್ರೀಲ ಪ್ರಭುಪಾದರು ಮುಂದಿನ ಹನ್ನೆರಡು ವರ್ಷಗಳಲ್ಲಿ ಸಾಧಿಸಿದ್ದು ಬೆರಗುಹುಟ್ಟಿಸುವಂಥದ್ದು. ಅಂತಾರಾಷ್ಟ್ರೀಯ ಕೃಷ್ಣಪ್ರಜ್ಞಾ ಸಂಸ್ಥೆಯ ಸ್ಥಾಪನೆ, ಪ್ರಪಂಚದ ಪ್ರಮುಖ ನಗರಗಳಲ್ಲಿ ಕೃಷ್ಣಪ್ರಜ್ಞೆಯ ಪ್ರಸಾರ, ೧೦೮ ಕೃಷ್ಣ ದೇವಾಲಯಗಳ ಸ್ಥಾಪನೆ, ಸಹಸ್ರಾರು ಜನರ ಸದಸ್ಯತ್ವ, ಹದಿನಾಲ್ಕು ಬಾರಿ ಪ್ರಪಂಚ ಪರ್ಯಟನೆ, ಮನೆ ಮನೆಗಳಲ್ಲಿ, ಮನಮನಗಳಲ್ಲಿ ಹರೇ ಕೃಷ್ಣ ಹರೇ ಕೃಷ್ಣ, ಕೃಷ್ಣ ಕೃಷ್ಣ ಹರೇ ಹರೇ, ಹರೇ ರಾಮ ಹರೇ ರಾಮ, ರಾಮ ರಾಮ ಹರೇ ಹರೇ ನಾಮಜಪವನ್ನು ಸ್ಥಿರಗೊಳಿಸಿದ್ದು ಪವಾಡ ಸದೃಶ ಕಾರ್ಯ.
ಜ್ಞಾನಸೃಷ್ಟಿ
ಈ ಓಡಾಟ, ಪ್ರವಚನಗಳೆಂಬ ಜ್ಞಾನಪ್ರಸಾರ ಕಾರ್ಯದ ಮಧ್ಯೆ ಅವರು ಜ್ಞಾನಸೃಷ್ಟಿಯನ್ನು ಮರೆಯಲಿಲ್ಲ. ಅವರು ಸೃಜಿಸಿದ್ದು ಅಪಾರವಾದ ಅಧ್ಯಾತ್ಮಿಕ ಸಾಹಿತ್ಯ: ಭಾಗವತ, ಭಗವದ್ಗೀತೆ, ಈಶೋಪನಿಷತ್, ಸನಾತನಧರ್ಮ, ಸಾಂಖ್ಯಯೋಗ, ವೇದಾಂತ ದರ್ಶನ, ಆತ್ಮಾನ್ವೇಷಣೆ, ಕೃಷ್ಣಪ್ರಜ್ಞೆ ಹೀಗೆ ಎಲ್ಲ ವಿಷಯಗಳಲ್ಲಿ ಎಪ್ಪತ್ತು ಸಂಪುಟಗಳ ರಚನೆ ಮತ್ತು ಪ್ರಕಟಣೆ. ಅವು ಈಗ ಪ್ರಪಂಚದ ಇಪ್ಪತ್ತೆಂಟಕ್ಕೂ ಹೆಚ್ಚು ಭಾಷೆಗಳಲ್ಲಿ ಅನುವಾದಗೊಂಡು, ಕೋಟ್ಯಂತರ ಸಂಖ್ಯೆಯಲ್ಲಿ ಜನರನ್ನು ತಲಪಿವೆ. ಅವರ ಮೂಲ ಉದ್ದೇಶ, ವೈದಿಕ ಶಾಸ್ತ್ರಗಳನ್ನು ಇಂದಿನ ತರುಣರಿಗೆ ಅರ್ಥವಾಗುವ ರೀತಿಯಲ್ಲಿ ವಿವರಿಸುವುದು ಮತ್ತು ಅವರಲ್ಲಿ ಸನಾತನಧರ್ಮದ ಶ್ರದ್ಧೆಯನ್ನು ತುಂಬುವುದು, ಅವರಲ್ಲಿ ಭಕ್ತಿಯನ್ನು ನೆಲೆಯೂರಿಸುವುದು.
ಮಾತು ಮಾತು ಮಥಿಸಿ…
ದ್ವಾಪರದ ಕೃಷ್ಣ ಮಾಡಿದ್ದು ಇದೇ ಕಾರ್ಯ. ಆತ ನವನೀತ ಚೋರ! ಅಂದರೆ ಬೆಣ್ಣೆ ಕಳ್ಳ. ಅದೊಂದು ಸಾಂಕೇತಿಕ ದರ್ಶನ. ಅವನೇಕೆ ಬೇರೆಯವರ ಮನೆಗೆ ನುಗ್ಗಿ ಬೆಣ್ಣೆಯನ್ನು ಕದ್ದಾನು! ನಂದಗೋಪನ ಮನೆಯಲ್ಲೇ ಬೇಕಾದಷ್ಟು ಬೆಣ್ಣೆ ಇತ್ತಲ್ಲ? ಕೇಳಿದಷ್ಟು ಕೊಡುವುದಕ್ಕೆ ಪ್ರೇಮದ ಸಾಕಾರಮೂರ್ತಿಯಾಗಿದ್ದ ಯಶೋದೆ ಇದ್ದಳಲ್ಲ? ಕೃಷ್ಣನಿಗೆ ಬೇಕಾದದ್ದು ಈ ಬೆಣ್ಣೆಯಲ್ಲ, ಪ್ರತಿಯೊಬ್ಬರ ಮನಸ್ಸಿನಲ್ಲಿ ಹುಟ್ಟಿದ ಭಕ್ತಿಯೆಂಬ ಬೆಣ್ಣೆ. ಅದು ಅವನಿಗೆ ಬೇಕು. ಅಷ್ಟೇ ಅಲ್ಲ, ಪ್ರತಿಯೊಬ್ಬ ಮನುಷ್ಯರ ಹೃದಯದಲ್ಲಿ ಅದು ಹುಟ್ಟುವಂತೆ ನೋಡಿಕೊಳ್ಳಬೇಕು. ಅವರ ಮನಸ್ಸನ್ನು ಕಡೆದು ಭಕ್ತಿಯ ಬೆಣ್ಣೆ ಹೊರಬರಬೇಕು.
ಇದೇ ಕೆಲಸವನ್ನು ಶ್ರೀಲ ಪ್ರಭುಪಾದರು ಅತ್ಯಂತ ಸಮರ್ಥವಾಗಿ ಮಾಡಿದರು. ಈ ಮಥಿಸುವ ಅಂದರೆ ಕಡೆಯುವ ಕೆಲಸ ಅತ್ಯಂತ ಸಾಂಕೇತಿಕವಾದದ್ದು. ಕಡೆಗೋಲಿಗೆ ವೈಶಾಖ ಮತ್ತು ಮಂತು ಎಂಬ ಹೆಸರೂ ಇದೆ. ಇದೊಂದು ಸಾಮಾನ್ಯವಾಗಿ ಮರದ ಉಪಕರಣ. ಅದರ ಮೇಲೊಂದು ನೇರವಾದ ಕೋಲು, ಕೆಳಗೆ ಚಂಡಿನಾಕಾರ. ಆ ಕಡೆಯುವ ಚೆಂಡನ್ನು ಕತ್ತರಿಸಿ ಪಟ್ಟಿ ಪಟ್ಟಿಗಳಾಗಿ ಮಾಡಿರುತ್ತಾರೆ. ಅದನ್ನು ಕೆನೆಯಲ್ಲಿ ಮುಳುಗಿಸಿ, ಕೋಲವನ್ನು ತಿರುತಿರುಗಿಸಿ ಕಡೆಯಬೇಕು. ಕಡೆಗೋಲು ಕೆನೆಯನ್ನು ಕದಡುತ್ತದೆ, ಕಲಕುತ್ತದೆ. ಹೀಗೆ ಸತತವಾಗಿ ಕಡೆದು, ಕೆನೆಯಲ್ಲಿದ್ದ ಬೆಣ್ಣೆಯನ್ನು ಬೇರ್ಪಡಿಸಿ ಮೇಲಕ್ಕೆ ತಂದು ಬಿಡುತ್ತದೆ. ಕಡೆಗೋಲಿನ ಮೇಲಿನ ಕೋಲು ಶ್ರದ್ಧೆ. ಕೆಳಗೆ ಚೆಂಡಿನಲ್ಲಿರುವ, ಚಾಚಿಕೊಂಡಿರುವ ಪಟ್ಟಿಗಳು ನಮ್ಮ ಚಿಂತನೆಗಳು, ತಿಳಿವಳಿಕೆಗಳು ಮತ್ತು ಪಡೆದುಕೊಂಡಿದ್ದ ಜ್ಞಾನ. ತಾವು ಗಮನಿಸಿದ್ದೀರಿ, ಕಡೆಗೋಲನ್ನು ವೃತ್ತಾಕಾರವಾಗಿ ಗರಗರನೇ ತಿರುಗಿಸುವುದಿಲ್ಲ. ಬದಲಾಗಿ ಅರ್ಧವೃತ್ತಾಕಾರದಲ್ಲಿ ತಿರುಗಿಸಿ, ಮರುಕ್ಷಣ ವಿರುದ್ಧದಿಕ್ಕಿನಲ್ಲಿ ಮತ್ತೆ ಅರ್ಧವೃತ್ತಾಕಾರದ ತಿರುಗಣೆ. ಅಧ್ಯಾತ್ಮಸಾಧನೆಯಲ್ಲಿ ಒಂದೇ ಮುಖವಿಲ್ಲ. ಯಾವಾಗಲೂ ಎರಡು ದೃಷ್ಟಿಗಳು. ವಿಷ್ಣುಸಹಸ್ರನಾಮದಲ್ಲಿ ಹಾಡಿದಂತೆ ಭಗವಂತ
ಏಕ-ಅನೇಕ, ಆಕಾರಿ-ನಿರಾಕಾರಿ, ಅರ್ಥ-ಅನರ್ಥ, ಕ್ಷರ-ಅಕ್ಷರ, ಚಲ-ಅಚಲ, ಭಯಕೃತ್-ಭಯನಾಶನ, ಸ್ತವಪ್ರಿಯ-ರಣಪ್ರಿಯ. ಏಕಕಾಲದಲ್ಲಿ ಅವನು ಅದೂ ಹೌದು, ಇದೂ ಹೌದು. ಭಗವಂತನೆಂದರೆ ಎಲ್ಲವೂ ಹೌದು. ಒಮ್ಮೆ ಕೇವಲ ಉಡಿದಾರ, ಒಡ್ಯಾಣ ಕಟ್ಟಿಕೊಂಡು ನಿಂತರೆ ಮತ್ತೊಮ್ಮೆ ಕಡಗ, ಕಂಕಣ, ಕೇಯೂರ, ಪೀತಾಂಬರ, ಕಿರೀಟಗಳಿಂದ ಶೋಭಿಸುವ ಕಮನೀಯ ಮೂರ್ತಿ. ಒಮ್ಮೆ ಅವನಿಗೆ ಗರ್ಭಗುಡಿಯ ಕತ್ತಲು ಪ್ರಿಯ. ಮತ್ತೊಮ್ಮೆ ಮಂಟಪದ ತೊಟ್ಟಿಲು ಬೇಕು. ಒಮ್ಮೆ ಭಕ್ತರ ಹೆಗಲ ಮೇಲಿನ ಪಲ್ಲಕ್ಕಿಯಲ್ಲಿ ಸಂತೊಷ, ಮಗದೊಮ್ಮೆ ಗರುಡರಥದಲ್ಲಿ ವಿಮಾನಯಾನದ ತೃಪ್ತಿ. ಹೀಗೆ ತೋರಿಕೆಗೆ ವಿರುದ್ಧಗಳೆಂದು ತೋರುವ ಅರ್ಧದೃಷ್ಟಿಗಳು, ಮೂಲತಃ ಶ್ರೀಕೃಷ್ಣನ ಅಪರಂಪಾರ ದ್ವಂದ್ವಾತೀತ ಶಕ್ತಿಯನ್ನು ತೋರಿಸುವಂತೆ, ಕಡೆಗೋಲನ್ನು ಅರ್ಧ, ಅರ್ಧವಾಗಿ ತಿರುಗಿಸುತ್ತ, ಮನುಷ್ಯನ ಹೃದಯಲ್ಲಿರುವ ಪ್ರಜ್ಞೆ ಎಂಬ ಕೆನೆಯನ್ನು ಕಡೆದಾಗ ಭಕ್ತಿ ಎನ್ನುವ ಬೆಣ್ಣೆ ತೇಲಿ ಬರುತ್ತದೆ. ಅದು ಕೃಷ್ಣನಿಗೆ ಅತಿಪ್ರಿಯವಾದದ್ದು, ನೈವೇದ್ಯಯೋಗ್ಯವಾದದ್ದು.
ಭಕ್ತಿಯೆಂಬ ನವನೀತ
ಅದಕ್ಕೆಂದೇ ಶ್ರೀಲ ಪ್ರಭುಪಾದರು ಅಹರ್ನಿಶಿ ಜ್ಞಾನಪ್ರಸಾರ ಮತ್ತು ಜ್ಞಾನಸೃಷ್ಟಿ ಮಾಡುವ ಈ ಮಂಥನವನ್ನು ಕೈಗೊಂಡರು. ಸಹಸ್ರಾರು ತರುಣರ ಹೃದಯಗಳನ್ನು ತಟ್ಟಿ, ಅವರ ಹೃದಯಗಳಲ್ಲಿದ್ದ ಪ್ರಜ್ಞೆಯನ್ನು ಕಲಕಿ ಭಕ್ತಿಯನ್ನು ಮೂಡಿಸಿದರು. ಹೊಸ ಶ್ರದ್ಧೆಯ ತರುಣ ಪಡೆಯನ್ನೇ ಕಟ್ಟಿದರು. ಸಾಂಪ್ರತ ಯುಗದಲ್ಲಿ ಜ್ಞಾನ ಅಪರೂಪವಾದಾಗ, ಕರ್ಮ ಕಷ್ಟಸಾಧ್ಯವಾದಾಗ, ಭಕ್ತಿಯೊಂದೇ ನಮ್ಮನ್ನು ಕಾಯುವುದು, ಪೋಷಿಸುವುದು ಮತ್ತು ಉದ್ಧರಿಸುವುದು. ಆ ಭಕ್ತಿಯ ಉಗಮಕ್ಕೆ ಕಡೆಗೋಲು ಬೇಕು.
ಶ್ರೀಲ ಪ್ರಭುಪಾದರ ಮುಖ್ಯ ವೈದಿಕ ಬೋಧನೆಗಳು ಸಂಬಂಧ, ಅಭಿಧೇಯ ಮತ್ತು ಪ್ರಯೋಜನ. ಸಂಬಂಧವೆಂದರೆ ಭಗವಂತನೊಂದಿಗಿನ ಬಾಂಧವ್ಯ; ಅಭಿಧೇಯವೆಂದರೆ ಆ ಬಾಂಧವ್ಯದಲ್ಲಿಯ ಸರಸತೆ; ಮತ್ತು ಪ್ರಯೋಜನವೆಂದರೆ ಅವೆರಡರಿಂದ ದೊರೆಯುವ ಪರಿಪೂರ್ಣತೆ. ಬದುಕಿನುದ್ದಕ್ಕೂ ಆ ಪರಿಪೂರ್ಣತೆಯ ಬಗ್ಗೆ ತುಡಿಯುತ್ತ, ಅದನ್ನೇ ಪಸರಿಸುತ್ತ, ಕೃಷ್ಣಪ್ರಜ್ಞೆಯಲ್ಲಿ ಅದನ್ನು ಕಂಡರಿಸುತ್ತ, ಅನೇಕಾನೇಕ ಜೀವಿಗಳನ್ನು ಸನ್ಮಾರ್ಗಕ್ಕೆ ತಂದ ಮಹಾನ್ ಗುರು ಶ್ರೀಲ ಪ್ರಭುಪಾದರಿಗೆ ನಮ್ಮೆಲ್ಲರ ಕೃತಜ್ಞತೆ, ಗೌರವಗಳು ಸದಾಕಾಲ ಸಲ್ಲುತ್ತಲೇ ಇರುತ್ತವೆ.