೬೯ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ದೇಶವನ್ನು ಬಿಟ್ಟು ಪರಿಚಯವೇ ಇಲ್ಲದ ಮತ್ತೊಂದು ದೇಶದಲ್ಲಿ ಸುಮಾರು ೧೨ ವರ್ಷಗಳ ಕಾಲ ಸುತ್ತಾಡುತ್ತಾ ಹರೇ ರಾಮ ಮಂತ್ರವನ್ನು ಅಲ್ಲಿನ ಜನರ ಮೂಲಕ ನುಡಿಸುತ್ತಾ ಕೃಷ್ಣಪ್ರಜ್ಞೆಯನ್ನು ಹಬ್ಬಿಸಿದ ರೀತಿ ಅಮೋಘವೇ ಸರಿ. ಶ್ರೀಲ ಪ್ರಭುಪಾದರು ನಿಸ್ಸಂಶಯವಾಗಿ ಭಾರತವು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ ಶ್ರೇಷ್ಠ ಆಚಾರ್ಯರಲ್ಲೊಬ್ಬರು.
ನಾವೆಲ್ಲರೂ ನಮ್ಮ ನೈಜ ವ್ಯಕ್ತಿತ್ವವನ್ನು ಅರಿಯದೆ ಇರುವುದರಿಂದ ಹುಟ್ಟು ಅಜ್ಞಾನಿಗಳೇ. ಸಾಮಾನ್ಯವಾಗಿ ‘ದೇಹವೇ ನಾನು’ ಎಂದು ಭಾವಿಸಿಬಿಡುತ್ತೇವೆ. ಅದು ವಾಸ್ತವವಲ್ಲ. ಉದಾಹರಣೆಗೆ ನೀವು ನಿಮ್ಮ ಗೆಳೆಯನೊಬ್ಬನನ್ನು ಕಳೆದುಕೊಂಡಿರಿ ಎಂದಿಟ್ಟುಕೊಳ್ಳಿ. ಆತ ಅಚಾನಕ್ಕಾಗಿ ತೀರಿಕೊಂಡುಬಿಟ್ಟ ಎಂದು ಭಾವಿಸಿ. ನೀವು ಆ ಕೂಡಲೇ ‘ನನ್ನ ಗೆಳೆಯ ಇನ್ನಿಲ್ಲ’ ಎನ್ನುತ್ತೀರಿ. ಅರೆ! ಅದು ಹೇಗೆ ಸಾಧ್ಯ? ಕೈ-ಕಾಲುಗಳಿಂದ ಕೂಡಿರುವ ಇಡಿಯ ದೇಹ ನಿಮ್ಮೆದುರಿಗೇ ಇದೆಯಲ್ಲ ಮತ್ತು ನಿಮ್ಮ ಗೆಳೆಯ ಹೋದದ್ದಾದರೂ ಎಲ್ಲಿಗೆ? ಅಂದರೆ ನೀವು ನಿಮ್ಮ ನಿಜವಾದ ಗೆಳೆಯನನ್ನು ಭೇಟಿ ಮಾಡಿಲ್ಲವೆಂದೇ ಆಯ್ತು. ನೀವು ಬರಿ ಅವನ ದೇಹವನ್ನು ಮಾತ್ರ ಇಷ್ಟುದಿನ ಕಂಡಿದ್ದಿರಿ. ಇವು ಶ್ರೀಲ ಪ್ರಭುಪಾದರ ಮಾತುಗಳು.
ಇದನ್ನವರು ಆಡಿದ್ದು ಭಕ್ತಸಮೂಹದ ಮುಂದೆ ಎಂದು ಭಾವಿಸಿಬಿಡಬೇಡಿ. ಬೋಸ್ಟನ್ನಿನ ಖ್ಯಾತ ವಿಶ್ವವಿದ್ಯಾಲಯ ಎಮ್ಐಟಿಯ ತಂತ್ರಜ್ಞಾನಕ್ಕೆ ಸಂಬಂಧಪಟ್ಟ ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ್ದು! ಈ ಭಾಷಣದ ಉದ್ದಕ್ಕೂ ಅವರು ಕೃಷ್ಣಪ್ರಜ್ಞೆಯ ಮಹತ್ತ್ವವನ್ನು ವಿವರಿಸುತ್ತಾ, ‘ನಾವೆಲ್ಲ ವಸ್ತುವಿನ ಆಳಕ್ಕೆ ಇಳಿಯುವ ತಂತ್ರಜ್ಞಾನವನ್ನು ನಮ್ಮದಾಗಿಸಿಕೊಂಡಿದ್ದೇವೆ. ವ್ಯಕ್ತಿಯೊಬ್ಬನ ಇಂದ್ರಿಯಗಳ ಅನುಭವಕ್ಕೆ ಬರುವ ವಿಷಯಗಳನ್ನು ಸಾಕಷ್ಟು ಅರಿತಿದ್ದೇವೆ. ಅದಕ್ಕಿಂತಲೂ ಎತ್ತರದ ಮನಸ್ಸಿನ ಭಾವನೆಗಳನ್ನು ತಿಳಿದುಕೊಳ್ಳುವ ಶಾಸ್ತ್ರವನ್ನೂ ಅಧ್ಯಯನ ಮಾಡುತ್ತಿದ್ದೇವೆ. ಆದರೆ ಇದಕ್ಕಿಂತಲೂ ಮೇಲ್ಮಟ್ಟದ ಬೌದ್ಧಿಕತೆಯ, ಅದಕ್ಕಿಂತಲೂ ಶ್ರೇಷ್ಠವಾದ ಆತ್ಮವಿಜ್ಞಾನದ ಕುರಿತಂತೆ ಚಿಂತನೆ ಮಾತ್ರ ನಡೆದೇ ಇಲ್ಲ. ದುರದೃಷ್ಟಕರವೆಂದರೆ ದೇಹಸಂಬಂಧಿ ತಂತ್ರಜ್ಞಾನವನ್ನೆಲ್ಲ ಸಾಕಷ್ಟು ಅಭಿವೃದ್ಧಿ ಪಡಿಸಿರುವ ನಾವು ಆತ್ಮವಿಜ್ಞಾನವನ್ನು ಅರಿಯುವ ತಂತ್ರಜ್ಞಾನವನ್ನು ರೂಪಿಸುವಲ್ಲಿ ಸೋತುಹೋಗಿದ್ದೇವೆ’ ಎಂದು ವಿವರಿಸಿದ ಪ್ರಭುಪಾದರು, ಕೃಷ್ಣಪ್ರಜ್ಞೆ ಎನ್ನುವುದು ಅಧ್ಯಾತ್ಮವಿಜ್ಞಾನ ತಂತ್ರಜ್ಞಾನದ ಸಾರರೂಪ ಭಾಗ ಎಂದು ಹೇಳುವಾಗ ಪಶ್ಚಿಮದ ಭೋಗವಾದಿ ಸಂಸ್ಕೃತಿಯ ವಿದ್ಯಾರ್ಥಿಗಳು ಮೈಯೆಲ್ಲ ಕಣ್ಣಾಗಿ ಕುಳಿತಿದ್ದರು.
ಸಾಕಾರಗೊಂಡ ಭವಿಷ್ಯವಾಣಿ
ನಿಜಕ್ಕೂ ಅಚ್ಚರಿಯೇ ಸರಿ. ೬೯ ವರ್ಷ ವಯಸ್ಸಿನ ವ್ಯಕ್ತಿಯೊಬ್ಬರು ತಮ್ಮ ದೇಶವನ್ನು ಬಿಟ್ಟು ಪರಿಚಯವೇ ಇಲ್ಲದ ಮತ್ತೊಂದು ದೇಶದಲ್ಲಿ ಸುಮಾರು ೧೨ ವರ್ಷಗಳ ಕಾಲ ಸುತ್ತಾಡುತ್ತಾ ಹರೇ ರಾಮ ಮಂತ್ರವನ್ನು ಅಲ್ಲಿನ ಜನರ ಮೂಲಕ ನುಡಿಸುತ್ತಾ ಕೃಷ್ಣಪ್ರಜ್ಞೆಯನ್ನು ಹಬ್ಬಿಸಿದ ರೀತಿ ಅಮೋಘವೇ ಸರಿ. ಶ್ರೀಲ ಪ್ರಭುಪಾದರು ನಿಸ್ಸಂಶಯವಾಗಿ ಭಾರತವು ಜಗತ್ತಿಗೆ ಕೊಡುಗೆಯಾಗಿ ಕೊಟ್ಟ ಶ್ರೇಷ್ಠ ಆಚಾರ್ಯರಲ್ಲೊಬ್ಬರು. ಸುಮಾರು ೫೦೦ ವರ್ಷಗಳ ಹಿಂದೆ ಚೈತನ್ಯ ಮಹಾಪ್ರಭುಗಳು ‘ನನ್ನ ಭಕ್ತಾಗ್ರೇಸರನೊಬ್ಬ ಜಗತ್ತಿನಾದ್ಯಂತ ನಾಮಜಪದ ಮಹಿಮೆಯನ್ನು ಕೊಂಡಾಡಲಿದ್ದಾನೆ’ ಎಂದಿದ್ದರು. ೧೮೮೧ರಲ್ಲಿ ಶ್ರೇಷ್ಠ ವೈಷ್ಣವಸಂತ ಭಕ್ತಿವಿನೋದ ಠಾಕೂರ್ ಆದಷ್ಟು ಬೇಗ ಕೃಷ್ಣಪ್ರಜ್ಞೆಯನ್ನು ಜಗತ್ತಿಗೆಲ್ಲ ಪಸರಿಸುವ ಶ್ರೇಷ್ಠವ್ಯಕ್ತಿಯೊಬ್ಬ ಅವತರಿಸಲಿದ್ದಾನೆ ಎಂದಿದ್ದರು. ‘೫,೦೦೦ ವರ್ಷಗಳ ಹಿಂದೆ ಬ್ರಹ್ಮವೈವರ್ತ ಪುರಾಣದಲ್ಲಿ ಶ್ರೀಕೃಷ್ಣನ ಮಾತುಗಳು, ೫೦೦೦ ವರ್ಷಗಳ ನಂತರ ಶ್ರೇಷ್ಠಸಂತ ಮತ್ತು ನನ್ನ ನಾಮದ ಪೂಜೆಗೈಯುವವ ಅವತರಿಸಿ ಜಗತ್ತಿನಾದ್ಯಂತ ನನ್ನ ನಾಮಜಪದ ಮಹಿಮೆಯನ್ನು ಕೊಂಡಾಡಲಿದ್ದಾನೆ’ ಎಂದು ಹೇಳಿದ್ದು ನಮೂದಿಸಲ್ಪಟ್ಟಿದೆ. ಕೃಷ್ಣಪ್ರಜ್ಞೆ ಹಬ್ಬಿದ ರೀತಿಯನ್ನು, ತಮ್ಮ ಇಳಿವಯಸ್ಸಿನಲ್ಲಿ ಶ್ರೀಲ ಪ್ರಭುಪಾದರು ಮಾಡಿದ ಸಾಧನೆಯನ್ನು ಗಮನಿಸಿದರೆ ಈ ಎಲ್ಲ ಮಾತುಗಳು ಅವರ ಕುರಿತಂತೆಯೇ ಹೇಳಿದ್ದೇನೋ ಎನಿಸದೆ ಇರದು. ಭಗವಂತನ ಕೃಪೆ ಇಲ್ಲದೆ ಇಂಥದ್ದೊಂದು ಅಪರೂಪದ ಸಾಧನೆಯಾಗುವುದು ಅಸಾಧ್ಯವೇ ಸರಿ.
ಅವರ ಸಾಧನೆಗೆ ಭಗವತ್ಕೃಪೆಯೊಂದೇ ಕಾರಣವೆಂದು ಹೇಳಿ ಮುಗಿಸಲು ಬರುವುದಿಲ್ಲ. ಏಕೆಂದರೆ ಅಭಯಚರಣ ಎಂಬ ಸಾಮಾನ್ಯ ಹುಡುಗನೊಬ್ಬ ಮುಂದಿನ ದಿನಗಳಲ್ಲಿ ಅಭಯಚರಣಾರವಿಂದ ದಾಸ ಎಂದಾಗಿ ಅನಂತರ ಭಕ್ತಿವೇದಾಂತ ಸ್ವಾಮಿ ಪ್ರಭುಪಾದ ಎಂಬ ಗೌರವಕ್ಕೆ ಪಾತ್ರರಾಗಿ ಶ್ರೀಲ ಪ್ರಭುಪಾದರೆಂದು ಅಸಂಖ್ಯ ಶಿಷ್ಯರ ಮೂಲಕ ಕರೆಸಿಕೊಳ್ಳುವಂತಾಗುವಲ್ಲಿ ಶ್ರೀಲ ಭಕ್ತಿವೇದಾಂತ ಸರಸ್ವತಿ ಗೋಸ್ವಾಮಿಯವರ ಪಾತ್ರ ಬಲುದೊಡ್ಡದು. ಹೌದು, ಅವರು ಅಭಯಚರಣನನ್ನು ಶಿಷ್ಯನಾಗಿ ಸ್ವೀಕಾರ ಮಾಡುವಾಗಲೇ ಈತ ಹೇಗೆ ಬೆಳೆಯಲಿದ್ದಾನೆ ಎಂಬ ದೃಶ್ಯವನ್ನು ನಿಚ್ಚಳವಾಗಿ ಕಂಡಿದ್ದರು. ಶ್ರೀಲ ಪ್ರಭುಪಾದರು ತಮ್ಮ ಜೀವನದ ಎಲ್ಲ ಸಾಧನೆಗಳನ್ನು ಮಾಡಿರುವುದು ಒಂದೇ ಸಂಕಲ್ಪದ ಛತ್ರಛಾಯೆಯಡಿ. ಅದು ಯವುದು ಗೊತ್ತೆ? ಗುರುವಾಕ್ಯ ಪರಿಪಾಲನೆಯದ್ದು! ಗುರುಗಳು ಇವರನ್ನು ಮೊದಲ ಬಾರಿ ಭೇಟಿಯಾದಾಗಲೂ ಮತ್ತು ಆಗಾಗ, ಅಲ್ಲದೇ ದೇಹತ್ಯಾಗದ ೧೮ ದಿನಗಳ ಮುನ್ನವೂ ಒಂದೇ ಮಾತನ್ನು ಸ್ಪಷ್ಟವಾಗಿ ಹೇಳಿದ್ದರು, ಚೈತನ್ಯರ ಸಂದೇಶಗಳನ್ನು ಅವರು ವಿಶ್ವದಾದ್ಯಂತ ಇಂಗ್ಲಿಷಿನಲ್ಲಿ ಪ್ರಚಾರ ಮಾಡಬೇಕು ಎಂದು. ಬಾಯ್ಮಾತಿನಲ್ಲಿ ಹೇಳಿದರೆ ಸಾಲದು ಎಂದೇ ಕೊನೆಯದಾಗಿ ಅವರು ಒಂದು ಪತ್ರವನ್ನು ಬರೆದು ಅದರಲ್ಲೂ ಈ ವಿಚಾರವನ್ನು ಒತ್ತಿ ಹೇಳಿದ್ದರು. ಶ್ರೀಲ ಪ್ರಭುಪಾದರು ಆರಂಭದಿಂದಲೂ ಅಪಾರ ಪಾಂಡಿತ್ಯವನ್ನು ಹೊಂದಿದ ವ್ಯಕ್ತಿಯಾಗಿದ್ದರಲ್ಲದೆ ಏಕಸಂಧಿಗ್ರಾಹಿ ಕೂಡ. ಎಂತಹ ಸೂಕ್ಷ್ಮ ವಿಚಾರಗಳನ್ನೂ ಒಂದೇ ಗುಟುಕಿಗೆ ಅರೆದು ಕುಡಿದುಬಿಡಬಲ್ಲ ಸಾಮರ್ಥ್ಯ ಅವರಿಗಿತ್ತು. ಗುರುಗಳ ದೇಹತ್ಯಾಗದ ನಂತರ ಅವರ ಆಜ್ಞೆಯ ಮಾರ್ಗದಲ್ಲಿಯೇ ನಡೆಯುತ್ತಾ ಅವರು ಭಗವದ್ಗೀತೆಗೆ ಇಂಗ್ಲಿಷಿನಲ್ಲಿ ಭಾಷ್ಯ ಬರೆದು ಅದಕ್ಕೆ ಗೀತೋಪನಿಷತ್ತು ಎಂಬ ನಾಮಕರಣ ಮಾಡಿದರು.
ಗುರುವಿನ ಆಜ್ಞೆಯ ಪಾಲನೆ ಅವರ ಬದುಕಿನಲ್ಲಿ ಎಷ್ಟು ಹಾಸುಹೊಕ್ಕಾಗಿತ್ತೆಂದರೆ ತಮ್ಮ ಇಡಿಯ ಸಾಧನೆಯ ಬದುಕನ್ನು ಆ ದೃಷ್ಟಿಯಲ್ಲೇ ನಡೆಸಿಕೊಂಡು ಬಂದರು. ಮದುವೆಯಾಗಿ ಒಂದು ಮಗುವೂ ಅವರಿಗಿತ್ತು. ಇಂತಹ ಸ್ಥಿತಿಯಲ್ಲಿ ಗುರುಗಳ ಮಾತಿನಂತೆ ಸಾಧನೆ ನಡೆಸುವುದು ಅಸಾಧ್ಯವೇ ಆಗಿತ್ತು. ಆದರೆ ಗುರುಗಳ ವೇದತತ್ತ್ವಗಳ ಕುರಿತ ಚಿಂತನೆಗಳನ್ನು ಆಲಿಸುತ್ತಾ, ಆಲಿಸುತ್ತಾ ತಮ್ಮನ್ನು ತಾವು ಸೂಕ್ತವಾಗಿ ರೂಪಿಸಿಕೊಂಡರು. ಹಾಗೆಂದು ಬಲುಬೇಗ ಈ ದಿಕ್ಕಿಗೆ ಪೂರ್ಣಪ್ರಮಾಣದಲ್ಲಿ ತೆರೆದುಕೊಳ್ಳಲಿಲ್ಲ. ವೈದ್ಯರೊಬ್ಬರೊಡನೆ ಸಹಾಯಕರಾಗಿ ದುಡಿಯುತ್ತಾ ಮುಂದೆ ತಾವೇ ಔಷಧಾಲಯವೊಂದನ್ನು ಸ್ಥಾಪಿಸಿ ಅಲಹಾಬಾದಿನ ಪ್ರಯಾಗದಲ್ಲಿ ಕಂಪೆನಿಯೊಂದನ್ನು ನಿರ್ಮಾಣ ಮಾಡಿ ದೇಶಾದ್ಯಂತ ಔಷಧಿಗಳನ್ನು ವಿತರಿಸುವ ಪ್ರಯತ್ನವನ್ನೂ ಆರಂಭಿಸಿದರು. ಈ ಹೊತ್ತಿನಲ್ಲಿಯೇ ದೇಶ ಪರ್ಯಟನೆ ಮಾಡುತ್ತಾ ಅನೇಕ ಕಡೆಯಿರುವ ಕೃಷ್ಣಭಕ್ತರನ್ನು ಭೇಟಿಮಾಡುವ ಅವಕಾಶವೂ ಅವರಿಗೆ ದೊರೆಯಿತು.
ಸಮರ್ಪಣಪರ್ವ
ಉದ್ದಿಮೆ ತೀವ್ರಗತಿಯಲ್ಲಿ ನಡೆಯುತ್ತಾ ಸಮಾಜದಲ್ಲಿ ಜನಮೆಚ್ಚುಗೆಯ ಸ್ಥಾನವನ್ನು ಗಳಿಸಿರುವಾಗಲೇ ಗುರುಗಳ ಮಾತು ಅವರನ್ನು ಮತ್ತೆ ಆಕರ್ಷಿಸಲಾರಂಭಿಸಿತು. ಗುರುಗಳೇನು ದೇಹದಲ್ಲಿರಲಿಲ್ಲ ನಿಜ. ಆದರೆ ಸೂಕ್ಷ್ಮರೂಪದಲ್ಲಿ ಅವರು ಶಿಷ್ಯನನ್ನು ಚುಂಬಕದಂತೆ ಸೆಳೆಯುತ್ತಿದ್ದರು. ತಮ್ಮ ೫೮ನೇ ವಯಸ್ಸಿನಲ್ಲಿ ಇಡಿಯ ಬದುಕನ್ನು ಗುರುವಿನ ಮಾತಿಗೆ ಸಮರ್ಪಿಸಲು ನಿರ್ಧರಿಸಿದ ಪ್ರಭುಪಾದರು ಒಂದು ಕ್ಷಣವೂ ಆಲೋಚಿಸದೆ ಔಷಧ ತಯಾರಿಕಾ ಉದ್ಯಮ ಹಾಗೂ ಪ್ರಯಾಗದ ಫಾರ್ಮಸಿಗಳನ್ನೇ ಮುಚ್ಚಿಬಿಟ್ಟರು! ಅಂದಿನ ದಿನಗಳಲ್ಲಿ ಅದು ಸಾಹಸೀ ನಿರ್ಣಯವಾಗಿತ್ತು. ಲಾಭತರುವ ಉದ್ದಿಮೆಯನ್ನು ಬಿಟ್ಟು ಅಧ್ಯಾತ್ಮದ ಜಾಡುಹಿಡಿದು ಹೋಗುವ ವ್ಯಕ್ತಿಯನ್ನು ಜನ ಹುಚ್ಚರೆಂದೇ ಭಾವಿಸುವ ಕಾಲವದು. ಪ್ರಭುಪಾದರು ಹಿಂದೆ ನೋಡಲಿಲ್ಲ. ಒಂದರ್ಥದಲ್ಲಿ ಸೂಕ್ತ ಸಮಯದಲ್ಲಿಯೇ ಕೌಟುಂಬಿಕ ಜೀವನದಿಂದ ಬಿಡುಗಡೆ ಪಡೆದು ವಾನಪ್ರಸ್ಥಾಶ್ರಮ ಸ್ವೀಕರಿಸಿಬಿಟ್ಟಿದ್ದರು. ಹಾಗೆಂದು ಇಷ್ಟೂ ದಿನಗಳ ಕಾಲ ಅವರೇನು ಕೃಷ್ಣಪ್ರಜ್ಞೆಯಲ್ಲಿ ಇರಲಿಲ್ಲವೆಂದಲ್ಲ, ಔಷಧ ಕಂಪೆನಿ ನಡೆಸುವಾಗಲೇ ಅವರು ಝಾನ್ಸಿಯ ಗೀತಾ ಮಂದಿರದಲ್ಲಿ ಕೊಟ್ಟ ಪ್ರವಚನದಿಂದ ಸಾಕಷ್ಟು ವಿದ್ಯಾವಂತ ತರುಣರು ಅವರ ಸುತ್ತ ಗಿರಕಿ ಹೊಡೆಯಲಾರಂಭಿಸಿದ್ದರು. ಈ ವೇಳೆಯಲ್ಲಿಯೇ ಅವರು ಭಕ್ತವೃಂದವನ್ನು ಕಟ್ಟಿ ಕೃಷ್ಣಪ್ರಜ್ಞೆಯನ್ನು ಹಬ್ಬಿಸುವ ಪ್ರಯತ್ನ ಮಾಡಿದ್ದು.
ಅವರ ಪಾಲಿಗೆ ಕೃಷ್ಣನ ಕುರಿತ ಆಲೋಚನೆ, ನಾಮಜಪ, ಆತನ ಮಹಿಮೆಯನ್ನು ಕೊಂಡಾಡುವುದು ಮತ್ತು ಇತರರಿಗೆ ಆತನ ಮಹಿಮೆಯನ್ನು ತಲಪಿಸುವುದು ಇವಿಷ್ಟೂ ಸಾಧನೆಯ ಅವಿಭಾಜ್ಯ ಅಂಗಗಳು. ಕೃಷ್ಣನ ವಿಚಾರವನ್ನು ಹೆಚ್ಚು ಜನರಿಗೆ ತಲಪಿಸುವುದೇ ಮಾನವೀಯತೆಯ ವೈಭವಕ್ಕೆ ಅತ್ಯಂತ ಹೆಚ್ಚು ಪ್ರಯೋಜನಕಾರಿಯಾದದ್ದು ಎಂಬುದನ್ನು ಅವರು ದೃಢವಾಗಿ ನಂಬಿದ್ದರು. ಅವರ ಭಕ್ತವೃಂದವಂತೂ ಈ ಕೆಲಸವನ್ನೇ ಮಾಡುತ್ತಿತ್ತು. ಅದು ಸಾಲದೆಂಬಂತೆ ಗೌಡೀಯ ಮಠದ ನಿಯತಕಾಲಿಕೆಯೊಂದರ ಸಂಪಾದನದಲ್ಲಿ ತಮ್ಮ ಸಮಯವನ್ನು ವ್ಯಯಿಸಿದರು. ಮುಂದೆ ದೆಹಲಿಗೆ ಹೋಗುವ ಅವಕಾಶ ಸಿಕ್ಕಾಗ ಅಲ್ಲಿನ ಮಠದ ಮಾಸಿಕ ಸಜ್ಜನ ತೋಷನೀ ಪತ್ರಿಕೆಗೆ ಸಂಪಾದಕರಾಗಿ ನಿರಂತರವಾಗಿ ದುಡಿದರು. ಹಾಗೆಂದು ಎಲ್ಲವೂ ಸುಸೂತ್ರವಾಗಿಯೇ ನಡೆದಿತ್ತು ಎಂದೇನೂ ಭಾವಿಸಿಬಿಡಬೇಡಿ. ಇವರನ್ನು ಈ ಮಠಕ್ಕೆ ಕರೆತಂದ ಭಕ್ತಸಾರಂಗ ಮಹಾರಾಜರಿಗೆ ಏನನ್ನಿಸಿತೋ ಏನೋ, ಪ್ರಭುಪಾದರು ಬರೆದ ಯಾವ ಪತ್ರಗಳಿಗೂ ಸೂಕ್ತ ಪ್ರತಿಕ್ರಿಯೆ ನೀಡುತ್ತಿರಲಿಲ್ಲ. ಅಷ್ಟೇ ಅಲ್ಲ, ಒಂದು ದಿನ ಇದ್ದಕ್ಕಿದ್ದಂತೆ ಪತ್ರಿಕೆಯ ಸಂಪಾದಕತ್ವದ ಕರ್ತವ್ಯದಿಂದ ಮುಕ್ತಗೊಳಿಸಿ ಮಠವನ್ನು ತೊರೆಯುವಂತೆಯೇ ಸೂಚಿಸಿಬಿಟ್ಟರು!
ಅದು ಹಾಗೆಯೇ. ಭಗವಂತ ತನ್ನ ಭಕ್ತರನ್ನು ಒಂದೆಡೆ ಪರಿಪೂರ್ಣವಾಗಿ ಅಂಟಿಕೊಳ್ಳಲು ಬಿಡುವುದೇ ಇಲ್ಲ. ಹಾಗೆ ಅವರು ಒಂದೆಡೆ ನೆಲೆನಿಂತುಬಿಟ್ಟರೆ ಅವನ ಲೀಲೆಯನ್ನು ಮುಂದುವರಿಸುವವರು ಯಾರು? ಹೀಗಾಗಿಯೇ ಸಮರ್ಥ ವ್ಯಕ್ತಿಗಳು ನಿರಂತರವಾಗಿ ದುಡಿಯುವಂತೆ ಮಾಡುತ್ತಾನೆ ಆತ. ಅದಕ್ಕೆ ಪೂರಕವಾಗಿ ತಾನೇ ಬೆನ್ನೆಲುಬಾಗಿ ನಿಂತು ಸಹಕರಿಸುತ್ತಾನೆ ಕೂಡ. ಗುರುವಾಕ್ಯದ ಮೇಲೆ ಅಪಾರ ಶ್ರದ್ಧೆಯಿದ್ದ ಪ್ರಭುಪಾದರು ಮಠಬಿಟ್ಟು ಹೊರಬಂದ ನಂತರ ಮುಂದೇನು ಎಂದು ಆಲೋಚಿಸುತ್ತ ಕೂರದೆ ಶ್ರೀಕೃಷ್ಣನ ಪದತಲಕ್ಕೆ ಸರ್ವಸ್ವವನ್ನೂ ಸಮರ್ಪಿಸಿದರು. ತುಂಬಿದ ಸಭೆಯಲ್ಲಿ ದ್ರೌಪದಿಯ ಮಾನಕ್ಕೆ ಭಂಗ ಬಾರದಂತೆ ಕಾಪಾಡಿದ ಕೃಷ್ಣ ಈಗ ತನ್ನ ಪ್ರಿಯಭಕ್ತನನ್ನು ಸಂಕಟಕ್ಕೆ ದೂಡುತ್ತಾನೇನು? ಅಲ್ಪಾವಧಿಯಲ್ಲಿ ಪ್ರಭುಪಾದರ ಸಂಪರ್ಕಕ್ಕೆ ಬಂದ ಅನೇಕರು ಈಗವರ ಜೀವನ ನಿರ್ವಹಣೆಗೆ ಜೊತೆಯಾದರು. ಸಹಜವಾಗಿಯೇ ಭಗವತ್ ಚಿಂತನೆಯ ಪ್ರಸಾರಕಾರ್ಯ ಮತ್ತೆ ಜೋರಾಗಿ ಆರಂಭವಾಯಿತು.
ಕ್ಲೇಶದ ಹಾದಿ
ಕಷ್ಟದ ಸಂದರ್ಭದಲ್ಲೂ ತನ್ನ ಗುಣಗಾನ ಮಾಡುವುದನ್ನು ಬಿಡದ ಈ ಪ್ರಿಯಭಕ್ತನ ಕುರಿತಂತೆ ಕೃಷ್ಣನ ಕರುಣೆಯ ಬೆಣ್ಣೆ ಕಾದು ತುಪ್ಪವಾಯ್ತು. ಅದೊಂದು ದಿನ ಬಿರ್ಲಾ ಮಂದಿರದ ಟ್ರಸ್ಟಿಗಳ ಬೆಂಬಲದಿಂದ ದೆಹಲಿಯ ಪ್ರಸಿದ್ಧ ಲಕ್ಷ್ಮಿನಾರಾಯಣ ಮಂದಿರದಲ್ಲಿ ಪ್ರಭುಪಾದರ ಸಾರ್ವಜನಿಕ ಸಭೆಯೊಂದು ಏರ್ಪಾಡಾಯಿತು.ಕಾರ್ಯಕ್ರಮಕ್ಕೆ ಬಂದಿದ್ದ ಅನೇಕ ಸಿರಿವಂತರು ಇವರ ಚಿಂತನಪ್ರವಾಹದಿಂದ ಪ್ರಭಾವಿತರಾಗಿ ಸಾಕಷ್ಟು ದೇಣಿಗೆ ನೀಡಿದರು. ಅದರ ಪರಿಣಾಮವಾಗಿಯೇ ‘ಬ್ಯಾಕ್ ಟು ಗಾಡ್ಹೆಡ್’ ಎಂಬ ಪತ್ರಿಕೆಯನ್ನು ಅವರು ಪುನರಾರಂಭಿಸಲು ಸಾಧ್ಯವಾಯಿತು. ಅವು ಬಲುಕಷ್ಟದ ದಿನಗಳು. ಪತ್ರಿಕಾ ಕಛೇರಿಗೆ ಗಾಡಿಗಳಲ್ಲಿ ಹೋದರೆ ಖರ್ಚಾಗುವುದೆಂದು ಭಾವಿಸಿ ನಡೆದುಕೊಂಡೇ ಹೋಗಿ ಕರಡು ತಿದ್ದುತ್ತಾ ಎಲ್ಲ ಕೆಲಸಗಳನ್ನು ಮುಗಿಸಿಕೊಂಡು ನಡೆದುಕೊಂಡೇ ಮನೆಗೆ ಬರುತ್ತಿದ್ದರು. ಪತ್ರಿಕೆ ಎಲ್ಲರ ಮನಸೂರೆಗೊಳ್ಳುವಂತೆ ಪ್ರಕಟವಾಗುತ್ತಿತ್ತು. ಶ್ರೀಕೃಷ್ಣನ ವೈಭವದ ಗುಣಗಾನ, ಆಧ್ಯಾತ್ಮಿಕ ಬದುಕಿಗೆ ಬೇಕಾದ ಮಾರ್ಗದರ್ಶನ ಎಲ್ಲವೂ ಪತ್ರಿಕೆಯನ್ನು ಸಿಂಗರಿಸುತ್ತಿದ್ದವು. ಮುಂದೆ ವೃಂದಾವನಕ್ಕೆ ತೀರ್ಥಯಾತ್ರೆಗೆ ಹೋಗಿದ್ದಾಗ ಅಲ್ಲಿಯೇ ತಮಗೊಂದು ವಸತಿಯನ್ನು ಕಂಡುಕೊಂಡರು ಪ್ರಭುಪಾದರು. ಭಿಕ್ಷಾವೃತ್ತಿಯಿಂದ ತಮ್ಮ ಜೀವನವನ್ನು ಸಾಗಿಸುತ್ತಾ ಪತ್ರಿಕೆಯ ಪ್ರಕಟಣೆಗೆ ಭಂಗ ಬರದಂತೆ ಆಗಾಗ ದೆಹಲಿಗೆ ಹೋಗಿ ಬರುತ್ತಿದ್ದರು. ಈ ನಡುವೆ ಅವರು ರಾಷ್ಟ್ರಪತಿ ಬಾಬು ರಾಜೇಂದ್ರ ಪ್ರಸಾದರಿಗೆ, ಪ್ರಧಾನಮಂತ್ರಿ ನೆಹರೂರವರಿಗೆ ಪತ್ರ ಬರೆದು ಅಧ್ಯಾತ್ಮ ವಿಚಾರದ ಚರ್ಚೆಗೆ ಸಮಯವನ್ನು ಕೇಳಿದ್ದರು. ನಾಯಕರಾರೂ ಪ್ರತಿಕ್ರಿಯಿಸುವ ಗೋಜಿಗೂ ಹೋಗಲಿಲ್ಲ. ಹೌದು, ಕಾಲವಿನ್ನೂ ಪಕ್ವವಾಗಿರಲಿಲ್ಲ.
ಪ್ರಭುಪಾದರ ನಿಜವಾದ ಬದುಕು ಆರಂಭವಾಗಿದ್ದು ೧೯೫೯ರ ಸೆಪ್ಟೆಂಬರ್ ೧೭ರ ನಂತರವೇ. ಕನಸಿನಲ್ಲಿ ಗುರುಗಳು ದರ್ಶನಕೊಟ್ಟು ಸಂನ್ಯಾಸವನ್ನು ಸ್ವೀಕರಿಸುವಂತೆ ಅವರಿಗೆ ಆದೇಶ ನೀಡಿದ ಮೇಲೆ ಅವರು ತ್ರಿದಂಡೀ ಸಂನ್ಯಾಸವನ್ನು ಸ್ವೀಕಾರ ಮಾಡಿದರು. ಅನಂತರವೇ ಅವರು ಅಭಯಚರಣಾರವಿಂದ ಭಕ್ತಿವೇದಾಂತ ಸ್ವಾಮಿ ಎಂದಾಗಿದ್ದು. ಸಂನ್ಯಾಸವೆಂದರೆ ಮರುಜನ್ಮವೆನ್ನಲಾಗುತ್ತದೆ. ಪ್ರಭುಪಾದರ ಪಾಲಿಗಂತೂ ಅದು ಸತ್ಯವೇ ಸರಿ. ಮುಂದೆ ಇಡೀ ಜಗತ್ತನ್ನು ಕೃಷ್ಣಪ್ರಜ್ಞೆಯಲ್ಲಿ ತೊಯ್ದುಹೋಗುವಂತೆ ಮಾಡುವ ಅವರ ಅದ್ಭುತವಾದ ಕೆಲಸ ಈಗ ಆರಂಭವಾಗಬೇಕಿತ್ತು. ಭಾಗವತವನ್ನು ಇಂಗ್ಲಿಷಿಗೆ ಅನುವಾದಿಸಬೇಕು ಎಂಬ ಬಯಕೆ ಅವರಲ್ಲಿ ಉದಿಸಿತು.
ವಿದ್ವತ್ಪೂರ್ಣವಾಗಿ ಇದರ ವ್ಯಾಖ್ಯಾನವನ್ನು ಬರೆದು ಪೂರ್ಣಗೊಳಿಸಲು ಕನಿಷ್ಠ ೬೦ ಸಂಪುಟಗಳಾದರೂ ಬೇಕಾಗಬಹುದು ಎಂಬುದು ಅವರಿಗೆ ಗೊತ್ತಿತ್ತು. ಇದಕ್ಕೆ ದೆಹಲಿ ಪ್ರಶಸ್ತವಾದ ಜಾಗ ಎಂದು ಅವರು ಭಾವಿಸುತ್ತಿರುವಾಗಲೇ ಭಗವಂತ ಅದಕ್ಕೆ ಪೂರಕವಾದ ವ್ಯವಸ್ಥೆಗಳನ್ನು ಮಾಡಿದ. ದೆಹಲಿಯ ಪಂಡಿತ್ ಕೃಷ್ಣಶರ್ಮ ಪ್ರಭುಪಾದರಿಗೆ ತಾವು ಮಹಂತರಾಗಿದ್ದ ಮಂದಿರದ ಮೇಲಿರುವ ಕೊಠಡಿಯಲ್ಲಿ ಉಳಿದುಕೊಳ್ಳುವ ವ್ಯವಸ್ಥೆ ಮಾಡಿದರು. ಇದು ಹಬ್ಬದ ಹೊತ್ತು. ಬೆಳಗ್ಗೆ ಸುಮಾರು ೧ ಗಂಟೆಗೆ ಏಳುತ್ತಿದ್ದ ಪ್ರಭುಪಾದರು ಸ್ನಾನ ಮುಗಿಸಿ ಜಪಕ್ಕೆಂದು ಕುಳಿತುಬಿಡುತ್ತಿದ್ದರು. ಸುಮಾರು ೩ ಗಂಟೆಯ ವೇಳೆಗೆ ಭಾಗವತದ ಭಾಷಾಂತರದ ಕಾರ್ಯ ಆರಂಭಿಸುತ್ತಿದ್ದರು. ದಿನದ ಬಹುಪಾಲು ಸಮಯವನ್ನು ಈ ಕೆಲಸದಲ್ಲೇ ಕಳೆದು ಮಧ್ಯೆ ಸ್ವಲ್ಪ ಸಮಯದಲ್ಲಿ ಬೆಳಗಿನ ನಡಿಗೆ, ಊಟ, ತಿಂಡಿ ಮತ್ತು ದೇವಸ್ಥಾನದ ಭೇಟಿಗೆಂದು ಮೀಸಲಾಗಿಡುತ್ತಿದ್ದರು.
ಕೆಲವು ತಿಂಗಳುಗಳ ನಿರಂತರ ಶ್ರಮದ ನಂತರ ಮೊದಲ ಸ್ಕಂಧದ ಅನುವಾದದ ಮೊದಲ ಭಾಗ ಸಿದ್ಧವಾಯಿತು. ಅದನ್ನು ಓದಿನೋಡಿದ ಪ್ರಸಿದ್ಧ ಗೀತಾಪ್ರೆಸ್ನ ಮಾಲೀಕರಾದ ಹನುಮಾನ್ ಪ್ರಸಾದ್ ಪೊದ್ದಾರ್ ಇದರ ಮುದ್ರಣಕ್ಕೆ ಬೇಕಾದ ಹಣವನ್ನು ಬಲು ಸಂತೋಷದಿಂದ ದಾನ ಮಾಡಿದರು. ಕೃಷ್ಣನೇ ಕೈಹಿಡಿದ ಮೇಲೆ ಉಳಿದುದರ ಚಿಂತೆ ಏತಕ್ಕೆ ಹೇಳಿ? ಪ್ರಭುಪಾದರ ವಿಷಯದಲ್ಲೂ ಇದು ಸತ್ಯವಾಯಿತು. ಈ ಪುಸ್ತಕಗಳು ಪ್ರಕಟಗೊಂಡ ನಂತರ ಅನೇಕರ ಮೆಚ್ಚುಗೆಯ ಮಾತುಗಳು ಕೇಳಿಬಂದವು. ವಿಮರ್ಶಾ ಲೇಖನಗಳು ಪ್ರಕಟಗೊಂಡವು. ಭಾಗವತದ ವಿಚಾರದಲ್ಲಿ ಅವರ ಪಾಂಡಿತ್ಯ ಪ್ರಶ್ನಾತೀತವೆನಿಸಿಬಿಟ್ಟಿತು. ಆಗ ತಾನೇ ಭಾರತದ ಉಪರಾಷ್ಟ್ರಪತಿಗಳಾಗಿದ್ದ ಡಾ. ಜಾಕಿರ್ ಹುಸೇನ್ರು ಮೆಚ್ಚುಗೆಯ ಪತ್ರ ಬರೆದರು. ಇದರ ಹಿಂದು-ಹಿಂದೆಯೇ ಅವರು ಮೊದಲ ಸ್ಕಂಧದ ಎರಡು ಮತ್ತು ಮೂರನೇ ಭಾಗಗಳ ಅನುವಾದಕ್ಕೆ ಕುಳಿತರು. ಅನೇಕ ತಿಂಗಳುಗಳ ನಂತರ ಈ ಅನುವಾದಗಳು ಪೂರ್ಣಗೊಂಡು ಅದು ಪ್ರಕಟವೂ ಆಯಿತು. ಇವುಗಳನ್ನು ಕಂಡು ಸ್ವತಃ ಅಂದಿನ ಪ್ರಧಾನಿ ಲಾಲ್ ಬಹಾದುರ್ ಶಾಸ್ತ್ರಿಯವರು ಸಂತಸ ವ್ಯಕ್ತಪಡಿಸಿದರಲ್ಲದೇ ಶಿಕ್ಷಣ ಸಚಿವಾಲಯದ ಮೂಲಕ ಅದನ್ನು ಗ್ರಂಥಾಲಯಗಳಿಗೆ ಕೊಳ್ಳುವಂತೆ ತಾಕೀತು ಮಾಡಿದರು.
ಗಡಿಯಾಚೆಗೆ…
ಇಷ್ಟೆಲ್ಲಾ ಮಾಡುವಾಗಲೂ ಅವರ ಮನಸ್ಸಿನಲ್ಲಿದ್ದ ದುಗುಡ ಒಂದೇ. ಗುರುವಿನ ಆಜ್ಞೆಯನ್ನು ಪೂರ್ಣಗೊಳಿಸಲಾಗಲಿಲ್ಲವಲ್ಲ ಎಂಬುದು. ಹೌದಲ್ಲವೇ ಮತ್ತೆ. ಪಶ್ಚಿಮದ ಜನರಿಗೆ ಅವರ ಭಾಷೆಯಲ್ಲಿ ತಿಳಿಯುವಂತೆ ಕೃಷ್ಣನ ಮಹಿಮೆಯನ್ನು ಹೇಳಬೇಕಲ್ಲ! ಅದರ ಮೊದಲ ಹಂತವಾಗಿ ಭಾಗವತದ ಅನುವಾದದ ಕಾರ್ಯವೇನೋ ಮುಗಿದಿದೆ. ಆದರೆ ಸ್ವತಃ ವಿದೇಶಗಳಿಗೆ ಹೋಗಿ ಅದನ್ನು ಪ್ರಚಾರ ಮಾಡುವುದು ಯಾವಾಗ? ಪ್ರಭುಪಾದರು ಅಮೆರಿಕಾಕ್ಕೆ ಹೋಗುವ ತಯಾರಿ ನಡೆಸಿದರು. ಮಿತ್ರರೊಬ್ಬರ ಸರಕು ಹಡಗಿನಲ್ಲಿ ಉಚಿತವಾಗಿ ಪ್ರಯಾಣ ಮಾಡುವ ಕನಸು ಕಟ್ಟಿಕೊಂಡರು. ನಿರಾಕ್ಷೇಪಣಾ ಪ್ರಮಾಣ ಪತ್ರ ಪಡೆದು ಪಾಸ್ಪೋರ್ಟನ್ನು ತಮ್ಮದಾಗಿಸಿಕೊಂಡು, ಪ್ರಕಟಗೊಂಡ ಭಾಗವತದ ಕೃತಿಗಳ ಎರಡು ಟ್ರಂಕ್ಗಳ ಸಮೇತ ಅಮೆರಿಕಾದೆಡೆ ಮುಖಮಾಡಿ ಹಡಗು ಹತ್ತಿ ಪ್ರಭುಪಾದರು ಕುಳಿತೇಬಿಟ್ಟರು. ಆಗ ಅವರ ಕಿಸೆಯಲ್ಲಿದ್ದದ್ದು ಒಟ್ಟಾರೆ ೪೦ ರೂಪಾಯಿಗಳು ಮಾತ್ರ! ಹೃದಯದ ತುಂಬೆಲ್ಲಾ ಕೃಷ್ಣಪ್ರಜ್ಞೆ ಮಾತ್ರ ಜಗತ್ತಿಗೆ ಕೊಟ್ಟ ನಂತರವೂ ಖಾಲಿಯಾಗದಷ್ಟು ಉಳಿದುಕೊಂಡಿತ್ತು. ಮತ್ತೊಮ್ಮೆ ನೆನಪು ಮಾಡಿಸಿಕೊಡುತ್ತೇನೆ: ಆಗ ಅವರಿಗೆ ೬೯ ವರ್ಷ! ಮಕ್ಕಳಿಗೆ ಅಧಿಕಾರವನ್ನು ಕೊಟ್ಟು ತಾವು ಆರಾಮದಾಯಕವಾದ ಬದುಕಿನ ಕನಸು ಕಾಣುವ ಕಾಲ ಅದು. ಆ ಹೊತ್ತಿನಲ್ಲಿ ಪ್ರಭುಪಾದರು ಅಮೆರಿಕಾಕ್ಕೆ ಹೋಗಿ ಕಷ್ಟಯಾತನೆಗಳನ್ನು ಅನುಭವಿಸುತ್ತಾ ಎಲ್ಲವನ್ನೂ ಕೃಷ್ಣಪ್ರಜ್ಞೆಯಲ್ಲಿಯೇ ಮರೆಯುತ್ತಾ ಒಂದು ವರ್ಷದ ನಂತರ ನ್ಯೂಯಾರ್ಕ್ ನಗರದಲ್ಲಿ ಅಂತರರಾಷ್ಟ್ರೀಯ ಕೃಷ್ಣಪ್ರಜ್ಞೆ ಎಂಬ ಹೆಸರಿನ ತಮ್ಮ ಧರ್ಮೋಪದೇಶದ ಸಂಘವನ್ನು ಅಧಿಕೃತವಾಗಿ ನೋಂದಾಯಿಸಿದರು.
ನ್ಯೂಯಾರ್ಕ್ನ ಮ್ಯಾನ್ಹಟನ್ನಲ್ಲಿ ಕೋಣೆಯೊಂದನ್ನು ಬಾಡಿಗೆಗೆ ಪಡೆದು ತಮ್ಮ ಮೊದಲ ದೇವಸ್ಥಾನವನ್ನು ಪ್ರಭುಪಾದರು ತೆರೆದರು. ಅಲ್ಲಿಂದಾಚೆಗೆ ಅವರು ಮತ್ತು ಅವರು ಕಟ್ಟಿದ ಸಂಸ್ಥೆ ಎಂದಿಗೂ ಹಿಂದಿರುಗಿ ನೋಡಲೇ ಇಲ್ಲ. ನಿರಂತರವಾಗಿ ಜ್ಞಾನಾಕಾಂಕ್ಷೆಯ, ಆಧ್ಯಾತ್ಮಿಕ ಮಾರ್ಗವನ್ನು ಅರಸುವ ತರುಣರಿಗೆ ಅವರು ಮಾರ್ಗದರ್ಶಕರಾಗಿ, ಗುರುವಾಗಿ ನಿಂತರು. ಇದೊಂದು ಭಕ್ತಿ ಚಳವಳಿಯಾಗಿಯೇ ಹಬ್ಬಿಕೊಂಡುಬಿಟ್ಟಿತು.
ಶಿಷ್ಯಾರ್ಜನೆ
ಯಾವ ಹಂತದಲ್ಲಿಯೂ ಪ್ರಭುಪಾದರು ಪಶ್ಚಿಮದ ಜನರನ್ನು ಆಕರ್ಷಿಸಬೇಕೆಂಬ ಧಾವಂತಕ್ಕೆ ಬಿದ್ದು ವೈಷ್ಣವ ನಿಯಮಗಳನ್ನು ಸಡಿಲಗೊಳಿಸಲೇ ಇಲ್ಲ. ಈ ಚಳವಳಿಯಲ್ಲಿ ಪಾಲ್ಗೊಳ್ಳಬೇಕೆಂಬ ಪ್ರತಿಯೊಬ್ಬರೂ ನಾಲ್ಕು ನಿಯಮಗಳನ್ನು ಪಾಲಿಸಲೇಬೇಕಿತ್ತು. ಮಾಂಸ, ಮೀನು, ಮೊಟ್ಟೆಗಳನ್ನು ತಿನ್ನುವಂತಿರಲಿಲ್ಲ. ಚಹಾ, ಕಾಫಿಯೂ ಸೇರಿದಂತೆ ಯಾವುದೇ ಮಾದಕ ವಸ್ತುಗಳನ್ನು ಸೇವಿಸುವಂತಿರಲಿಲ್ಲ. ಅಕ್ರಮ ಲೈಂಗಿಕತೆಯಲ್ಲಿ ತೊಡಗುವಂತಿರಲಿಲ್ಲ ಮತ್ತು ಜೂಜು-ಬಾಜಿಯಂತಹ ಚಟುವಟಿಕೆಯಲ್ಲಿ ಪಾಲ್ಗೊಳ್ಳುವಂತಿರಲಿಲ್ಲ. ಇಷ್ಟೂ ಸಾಲದೆಂಬಂತೆ ಹರೇ ಕೃಷ್ಣ ಮಂತ್ರದ ಕನಿಷ್ಠ ೧೬ ಮಾಲಾ ಸುತ್ತುಗಳನ್ನಾದರೂ ಪ್ರತಿನಿತ್ಯ ಜಪಿಸಬೇಕಾಗಿತ್ತು. ಅದು ತಲೆಯನ್ನು ಬೋಳಿಸಿಕೊಂಡು ಹಣೆಗೆ ನಾಮವನ್ನು ಧರಿಸಿ, ಸಂಪ್ರದಾಯವನ್ನು ಕಟ್ಟುನಿಟ್ಟಾಗಿ ಆಚರಣೆ ಮಾಡುವ ಮೂಲಕ!
ನಿಜಕ್ಕೂ ಪ್ರಭುಪಾದರ ಸಾಹಸವನ್ನು ಮೆಚ್ಚಲೇಬೇಕಾದ್ದು. ಪಶ್ಚಿಮದ ಭೋಗವಾದೀ ತರುಣರನ್ನು ಈ ರೀತಿಯ ಬಲವಾದ ಹಗ್ಗಗಳಿಂದ ಕಟ್ಟಿಹಾಕಿ ಕೃಷ್ಣನತ್ತ ಅವರನ್ನು ಎಳೆದೊಯ್ಯುವುದು ಸಾಹಸವಲ್ಲದೇ ಮತ್ತೇನು? ಸದಾ ಭೋಗದ ಚಿಂತನೆಯಲ್ಲಿಯೇ ಮೈಮರೆತಿದ್ದ ಈ ತರುಣರು ಈಗ ಬ್ರಹ್ಮಚರ್ಯದ ಜೀವನವನ್ನು ತಮ್ಮದಾಗಿಸಿಕೊಂಡು ಕೃಷ್ಣನ ಪಾದಕಮಲಗಳಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದು ಅಚ್ಚರಿಯೇ ಆಗಿತ್ತು. ಸುಮಾರು ೧೨ ವರ್ಷಗಳ ಕಾಲ ಜಗತ್ತಿನ ಪರ್ಯಟನೆಯನ್ನು ಮಾಡುತ್ತಾ ಪ್ರಭುಪಾದರು ಇಡಿಯ ಭೂಮಂಡಲವನ್ನು ಕೃಷ್ಣನಾಮದಿಂದ ತುಂಬಿಸಿಬಿಟ್ಟರು. ಅಮೆರಿಕಾದ ತರುಣರಂತೂ ಅಪಾರ ಅಸಮಾಧಾನದಿಂದ ಕುದಿಯುತ್ತಿದ್ದ ಕಾಲವದು. ಆಧುನಿಕವಾದ ಭೋಗಜೀವನ ಅವರಿಗೆ ಸಾಕೆನಿಸಿಬಿಟ್ಟಿತ್ತು. ವಿಯೆಟ್ನಾಂನ ವಿರುದ್ಧದ ಹೋರಾಟಕ್ಕೆ ಸರ್ಕಾರ ತಮ್ಮನ್ನು ಅನಿವಾರ್ಯವಾಗಿ ತಳ್ಳುತ್ತಿರುವುದು ಆ ತರುಣರಿಗೆ ಕಿರಿಕಿರಿ ಉಂಟುಮಾಡಿತ್ತು. ಹೀಗೆ ಭಾವನೆಗಳ ಓತಪ್ರೋತ ಪ್ರವಾಹಕ್ಕೆ ಸಿಲುಕಿ ತರಗೆಲೆಯಂತಾಗಿದ್ದ ಆ ಯುವ ಸಮೂಹವನ್ನು ಪ್ರಭುಪಾದರು ಶ್ರೀಕೃಷ್ಣನ ಯಜ್ಞಕ್ಕೆ ಆಹುತಿಯಾಗಿ ಸಮರ್ಪಿಸಿದರು.
ಬಿಂದುವಿನಿಂದ ಸಿಂಧು
ಪ್ರಭುಪಾದರ ಸಂಪರ್ಕಕ್ಕೆ ಬಂದು ಈ ರೀತಿ ತಮ್ಮನ್ನು ತಾವು ಸಮರ್ಪಿಸಿಕೊಂಡವರ ಬದುಕು ಧನ್ಯವೇ ಆಗಿಬಿಟ್ಟಿತು. ಮುಂದೆ ಇಸ್ಕಾನ್ನ ದೇವಾಲಯಗಳು ವೈಭವದ ಕೇಂದ್ರಗಳಾಗಿಬಿಟ್ಟವು. ವಾಷಿಂಗ್ಟನ್, ಫಿಲಡೆಲ್ಫಿಯಾ, ಬೋಸ್ಟನ್, ಬಫೆಲೊ, ಚಿಕಾಗೊ, ಡೆಟ್ರಾಯ್ಟ್, ಕ್ಲೀವ್ಲ್ಯಾಂಡ್, ಸಿಯಾಟಲ್, ಮಾಂಟ್ರಿಯಲ್ ಇತ್ಯಾದಿ ಎಲ್ಲೆಡೆ ದೇವಾಲಯಗಳು ಎದೆಯೆತ್ತಿ ನಿಂತವು. ಅಮೆರಿಕಾದ ಬೀದಿ-ಬೀದಿಗಳಲ್ಲಿ ತರುಣ-ತರುಣಿಯರು ಭಾವುಕರಾಗಿ ಕೃಷ್ಣನ ಗುಣಗಾನ ಮಾಡುತ್ತಾ ನೃತ್ಯ ಮಾಡುತ್ತಾ ಮೃದಂಗವನ್ನು ನುಡಿಸುತ್ತಾ, ಕೃಷ್ಣನ ಸಮ್ಮೋಹಕ ಶಕ್ತಿಗೆ ತಲೆದೂಗುತ್ತಾ ನಡೆಯುತ್ತಲಿದ್ದರೆ ಎಂಥವನೂ ಆಕರ್ಷಣೆಗೆ ಒಳಗಾಗುತ್ತಿದ್ದ. ಗುರುವಾಕ್ಯ ಅಕ್ಷರಶಃ ಈಗ ಪೂರ್ಣವಾಗಿತ್ತು. ಶಿಷ್ಯನೊಬ್ಬನಿಗೆ ಇದಕ್ಕಿಂತಲೂ ಶ್ರೇಷ್ಠವಾದ ಸಂಗತಿ ಮತ್ತೊಂದಿಲ್ಲ.
ಜಗತ್ತಿನ ಜನರಲ್ಲಿ ಕೃಷ್ಣಪ್ರಜ್ಞೆಯನ್ನು ಜಾಗೃತಗೊಳಿಸುವ ಪ್ರಭುಪಾದರ ಕಾರ್ಯ ಈಗ ಜಗತ್ತಿನಾದ್ಯಂತ ಹರೇ ಕೃಷ್ಣ ಚಳವಳಿಯಾಗಿ ಮಾರ್ಪಟ್ಟಿತ್ತು. ಆರಂಭದಲ್ಲೇ ಹೇಳಿದಂತೆ, ಅವರ ಇಡಿಯ ಬದುಕನ್ನು ರೂಪಿಸಿದ್ದು ಗುರುವಾಕ್ಯ ಪರಿಪಾಲನೆ ಎಂಬ ಒಂದೇ ಮಂತ್ರ. ಅದಕ್ಕಾಗಿ ಪ್ರಭುಪಾದರು ಎಲ್ಲ ಕಷ್ಟ-ನಷ್ಟಗಳನ್ನು ಎದುರಿಸಿದರು. ತಮ್ಮಿಡೀ ಪ್ರತಿಭೆಯನ್ನು ಧಾರೆ ಎರೆದರು. ತಮ್ಮಲ್ಲಿದ್ದ ಕೊನೆಯ ರಕ್ತದ ಹನಿಯನ್ನೂ ಬಸಿದರು. ಮುಂದೆ ಇದೇ ವಿದೇಶೀ ಶಿಷ್ಯರ ದೊಡ್ಡ ಗುಂಪಿನೊಂದಿಗೆ ಭಾರತಕ್ಕೆ ಆಗಮಿಸಿ ಇಲ್ಲೂ ಕೂಡ ಕೃಷ್ಣಪ್ರಜ್ಞೆಯ ಮಹಾ ಚಳವಳಿಗೆ ನಾಂದಿ ಹಾಡಿದರು. ಹಾಗೆಂದು ಭಜನೆಯಷ್ಟೇ ಮಾಡಿಕೊಂಡು ಉಳಿಯಲಿಲ್ಲ. ಕೃಷ್ಣ ಪರಂಪರೆಯ ಕುರಿತಂತೆ ೭೦ಕ್ಕೂ ಹೆಚ್ಚು ಕೃತಿಗಳನ್ನು ಬರೆದು ಮುಂದಿನ ಪೀಳಿಗೆಗೆ ಅವುಗಳು ಕಂದೀಲಾಗುವಂತೆ ನೋಡಿಕೊಂಡರು. ಈ ಕೃತಿಗಳು ೭೬ ಭಾಷೆಗಳಿಗೆ ಅನುವಾದಗೊಂಡಿರುವುದು ವಿಶಿಷ್ಟವಾದ್ದು.
೧೨೫ ವರ್ಷಗಳ ಹಿಂದೆ ಹುಟ್ಟಿದ ಜೀವವೊಂದು ಇಡೀ ಜಗತ್ತನ್ನು ಕೃಷ್ಣಮಯವಾಗಿಸಿದ ಈ ಸಂಗತಿಗಳು ಇಂದು ನಿಂತುನೋಡುವ ನಮಗೆಲ್ಲ ಪುರಾಣ ಕಥೆ ಎನಿಸಬಹುದು. ಆದರೆ ರಕ್ತ, ಮಾಂಸಗಳಿಂದೊಡಗೂಡಿದ ವ್ಯಕ್ತಿಯೊಬ್ಬ ತನ್ನಿಡೀ ಬದುಕನ್ನೇ ಗುರುವಿನ ಆಣತಿಯನ್ನು ಪೂರ್ಣಗೊಳಿಸಲು ಪರೀಕ್ಷೆಗೆ ಒಡ್ಡಿದ ಈ ಘಟನೆಗಳು ನಮ್ಮ ಕಾಲಘಟ್ಟದಲ್ಲೇ ನಡೆದಂಥವು ಎಂಬುದು ಬಲು ರೋಚಕ! ಪ್ರಭುಪಾದರ ಕೃಪೆಯಿಂದ ನಮ್ಮ ಬದುಕೂ ಕೃಷ್ಣಪ್ರಜ್ಞೆಯಿಂದ ತುಂಬಿಹೋದರಷ್ಟೇ ಸಾಕು.