ಬಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. ೧೦ರಷ್ಟು ಇರುವ ಹಿಂದೂ ಸಮುದಾಯವನ್ನು ಬಂಗ್ಲಾದೇಶದಿಂದ ಉಚ್ಚಾಟಿಸಬೇಕೆಂಬುದೇ ಇಸ್ಲಾಮೀ ಪಡೆಗಳು ಹಿಂದಿನಿಂದ ರೂಢಿಸಿಕೊಂಡು ಬಂದಿರುವ ಮಾನಸಿಕತೆ. ಅದರ ಮುಂದುವರಿಕೆಯೇ ಈಗಿನ ಬಂಗ್ಲಾ ವಿದ್ಯಮಾನಗಳ ಮೂಲದಲ್ಲಿರುವುದು. ಆದ್ದರಿಂದ ತೀವ್ರ ರಾಜತಾಂತ್ರಿಕ ಮಾರ್ಗಗಳ ಬಗೆಗೆ ಭಾರತಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕಾಗಿದೆ.
ಆಧುನಿಕತೆಯ ದಾಪುಗಾಲು ಹೆಜ್ಜೆಗಳು ಎಷ್ಟೇ ರಭಸದವಾಗಿದ್ದರೂ ಮತಾಂಧತೆಯ ಮಾನಸಿಕತೆ ಮಾತ್ರ ಬದಲಾಗದೆಂಬುದನ್ನು ಇತ್ತೀಚಿನ ಬಂಗ್ಲಾದೇಶ ವಿದ್ಯಮಾನಗಳು ಮತ್ತೊಮ್ಮೆ ಸಾಬೀತುಪಡಿಸಿವೆ. ಈ ವರ್ಷದ ನವರಾತ್ರಿ ಪೂಜಾಪರ್ವದ ದಿನಗಳಲ್ಲಿ ಬಂಗ್ಲಾದೇಶದೆಲ್ಲೆಡೆ ಹಿಂದೂ ಸಮುದಾಯದ ಮೇಲೂ ದುರ್ಗಾಪೂಜಾ ಮಂಟಪಗಳ ಮೇಲೂ ಇಸ್ಲಾಮೀಯರಿಂದ ಸರಣಿ ದಾಳಿಗಳು ಹಾಡಹಗಲೇ ನಡೆದುದು ಭಾರತೀಯರನ್ನೆಲ್ಲ ಚಿಂತಾಕ್ರಾಂತಗೊಳಿಸಿದೆ. ನೆರೆಯ ದೇಶದಲ್ಲಿ ಹಿಂದೂ ಅಲ್ಪಸಂಖ್ಯಾತರದು ಎಷ್ಟು ಅಭದ್ರ ಸ್ಥಿತಿಯಾಗಿದೆಯೆಂಬುದು ಮತ್ತೊಮ್ಮೆ ಬಯಲಾಗಿದೆ. ಇದು ಜಮಾತೆ-ಇಸ್ಲಾಮೀ ಮೊದಲಾದ ಸಂಘಟನೆಗಳವರ ಕಾರ್ಯವೆಂಬುದು ಬಂಗ್ಲಾದೇಶ ಸರ್ಕಾರಕ್ಕೂ ಸುವಿದಿತವೇ ಆಗಿದೆ. ಜನಾಂಗೀಯ ವಿದ್ವೇಷವೇ ಈ ದಾಳಿಗಳಿಗೆ ಪ್ರೇರಕವಾಗಿದೆಯೆಂಬುದೂ ಸ್ಪಷ್ಟವೇ ಆಗಿದೆ. ಬಂಗ್ಲಾ ಸರ್ಕಾರವು ಒಂದಷ್ಟು ಪೆರಾಮಿಲಿಟರಿ ಪಡೆಗಳನ್ನು ತೊಡಗಿಸಿತಾದರೂ ದಾಳಿಕೋರರದೇ ಮೇಲುಗೈಯಾಯಿತು.
ನನುಯಾರ್ ದಿಘಿರ್ಪಾರ್ ಎಂಬಲ್ಲಿ ದುರ್ಗಾಪೂಜೆಯ ಪೆಂಡಾಲಿನಲ್ಲಿ ಗಣೇಶಮೂರ್ತಿಯ ಕಾಲ ಬಳಿ ಖುರಾನ್ ಪ್ರತಿಯೊಂದನ್ನು ದುಷ್ಕರ್ಮಿಗಳು ತಂದಿರಿಸಿದರೆಂದೂ ಅದರ ಫೋಟೋಗಳನ್ನು ಫೇಸ್ಬುಕ್ನಲ್ಲಿ ಪ್ರಸಾರ ಮಾಡಿ ಹಿಂಸಾಚರಣೆಗೆ ಕಾರಣರಾದರೆಂಬುದೂ ಒಂದು ಕಥನ. ಲಬ್ಧ ಸಾಕ್ಷ್ಯಗಳನ್ನಾಧರಿಸಿ ಹಲಕೆಲವು ಜಮಾತೆ-ಇಸ್ಲಾಮೀ ಪುಂಡರನ್ನು ಬಂಧಿಸಲಾಯಿತು. ಕೊಮಿಲ್ಲಾ ಜಿಲ್ಲೆಯಲ್ಲಿಯೂ ಬೇರೆಡೆಗಳಲ್ಲಿಯೂ ಹೆಚ್ಚಿನ ಭದ್ರತಾಕ್ರಮಗಳನ್ನು ಏರ್ಪಡಿಸಲಾಯಿತು. ಹೀಗೆ ಬಂಗಾಲಿ ಹಿಂದೂಗಳ ಪೂಜಾಸಂಭ್ರಮವೆಲ್ಲ ಕೊಚ್ಚಿಹೋಯಿತು. ಸನಾತನಿ ಪೂಜಾನಿರತರು ಖುರಾನನ್ನು ಅವಮಾನಿಸಲೆಳಸಿದರೆಂಬ ಕಥನ ಅಕಾಂಡತಾಂಡವವಷ್ಟೆ.
ಇದು ದುಷ್ಕರ್ಮಿಗಳ ದುರುದ್ದೇಶಪೂರಿತ ಕೃತ್ಯವೆಂಬುದು ಸುಸ್ಪಷ್ಟ.
ಇಷ್ಟಾಗಿ ಇದೊಂದು ವಿಕ್ಷಿಪ್ತ ಪ್ರತ್ಯೇಕ ಘಟನೆಯೇನಲ್ಲ. ಬಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ಇಂತಹ ದಾಳಿಗಳು ನಡೆಯುವುದು ಮಾಮೂಲೆನಿಸಿದೆ.
ಕಳೆದ ವರ್ಷ (೨೦೨೦) ಮಾರ್ಚ್ ತಿಂಗಳಲ್ಲಿ ಬಂಗ್ಲಾದೇಶದ ಸುನಾಂಗಂಜ್ ಎಂಬ ಗ್ರಾಮದಲ್ಲಿ ಹಿಂದೂ ಕುಟುಂಬಗಳಿಗೆ ಸೇರಿದ ೮೦ ಮನೆಗಳ ಮೇಲೆ ಹೆಫಾಜತೆ-ಇಸ್ಲಾಂ ಸಂಘಟನೆಯ ಪಡೆಗಳು ದಾಳಿ ನಡೆಸಿ ಅವರ್ಣನೀಯ ಹಾನಿ ಮಾಡಿದ್ದವು. ಆ ಸಂಘಟನೆಯ ಪ್ರಮುಖ ಮೌಲಾನಾ ಮುಫ್ತಿ ಹಖ್ನನ್ನು ಫೇಸ್ಬುಕ್ನಲ್ಲಿ ಯಾರೋ ಟೀಕಿಸಿದ್ದರೆಂಬ ವ್ಯಾಜವೇ ಈ ದಾಳಿ ಸರಣಿಗೆ ಕಾರಣವಾಗಲು ಸಾಕಾಗಿತ್ತು.
ಇಂತಹ ಅಸಂಖ್ಯ ಘಟನೆಗಳು ಹಿಂದೆಯೂ ಇತ್ತೀಚೆಗೂ ನಡೆದಿವೆ, ಈಗಲೂ ನಡೆಯುತ್ತಿವೆ.
ದೂತಾವಾಸ ಸ್ತರದಲ್ಲಿ ಈ ಹೇಯ ಕೃತ್ಯಾವಳಿಯನ್ನು ಬಂಗ್ಲಾ ಅಧಿಕಾರಿಗಳೊಡನೆ ಗಂಭೀರವಾಗಿ ಚರ್ಚಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿಯವರಲ್ಲಿಯೂ ಗೃಹಸಚಿವ ಅಮಿತ್ ಶಹಾರಲ್ಲಿಯೂ ಪಶ್ಚಿಮಬಂಗಾಳ ಶಾಸನಸಭೆಯ ವಿರೋಧಪಕ್ಷ ನಾಯಕ ಸುವೇಂದು ಅಧಿಕಾರಿ ಮತ್ತಿತರ ಪ್ರಮುಖರು ಕೋರಿದ್ದಾರೆ.
ಜಮಾತೆ-ಇಸ್ಲಾಮೀ ಮತ್ತು ಬಂಗ್ಲಾದೇಶ ನ್ಯಾಶನಲಿಸ್ಟ್ ಪಾರ್ಟಿ (ಬಿ.ಎನ್.ಪಿ.) ಪಡೆಗಳ ಪುಂಡರಿಂದ ಇಂತಹ ದೌರ್ಜನ್ಯಗಳು ಮೇಲಿಂದ ಮೇಲೆ ನಡೆದಿವೆ.
ಕಳೆದ (೨೦೨೧) ಅಕ್ಟೋಬರ್ ದುರ್ಘಟನೆಗಳ ಹಿನ್ನೆಲೆಯಲ್ಲಿ ಅವಾಮಿ ಲೀಗ್ ಕಾರ್ಯಕರ್ತರೂ ಸ್ಥಳೀಯ ಪೊಲೀಸರೂ ಪ್ರಮುಖ ಸ್ಥಳಗಳಲ್ಲಿ ದುರ್ಗಾಪೂಜಾ ಪೆಂಡಾಲುಗಳಿಗೆ ವಿಶೇಷ ಭದ್ರತೆಯನ್ನು ಒದಗಿಸಬೇಕಾಯಿತು.
ಇಸ್ಲಾಮೀ ಪಡೆಗಳ ದುರ್ವರ್ತನೆಯನ್ನು ಖಂಡಿಸಿ ಪಶ್ಚಿಮ ಬಂಗಾಳದಲ್ಲಿಯೂ ಅನ್ಯರಾಜ್ಯಗಳಲ್ಲಿಯೂ ಇಸ್ಕಾನ್ ಸಂಸ್ಥೆ ಸೇರಿದಂತೆ ಹಲವಾರು ಸಂಘಟನೆಗಳಿಂದ ಪ್ರತಿಭಟನೆಗಳು ನಡೆದಿವೆ.
ಗಲಭೆಗಳು ಇನ್ನೂ ತೀವ್ರ ಸ್ವರೂಪ ಪಡೆಯುವುದನ್ನು ನಿವಾರಿಸಲು ಗಡಿಸೇನೆಯ ನಾಲ್ಕು ಪ್ಲೆಟೂನುಗಳನ್ನೇ ತೊಡಗಿಸಬೇಕಾಯಿತು.
ಈ ಹಿಂದೆಯೇ ಚಿತ್ತಗಾಂವ್, ಕಾಕ್ಸ್ ಬಜಾರ್ ಮೊದಲಾದ ಹತ್ತಾರೆಡೆ ಮುಸ್ಲಿಂಪಡೆಗಳಿಂದ ದಾಳಿಗಳು ನಡೆದಿವೆ. ಬಂಗ್ಲಾದೇಶ ಹಿಂದೂ-ಬೌದ್ಧ ಐಕ್ಯ ಪರಿಷದ್ ಘಟಕಗಳು ಉತ್ಸವಾಚರಣೆಗಳನ್ನು ಪರಿಮಿತಗೊಳಿಸಿ ಧಾರ್ಮಿಕ ಕಲಾಪಗಳಷ್ಟನ್ನೇ ನಡೆಸಬೇಕಾಯಿತು.
ಫೇಸ್ಬುಕ್ ಮೊದಲಾದ ಜಾಲಗಳ ದುರುಪಯೋಗವನ್ನು ಸಾಧನವಾಗಿ ವ್ಯಾಪಕವಾಗಿ ಬಳಸಲಾಗುತ್ತಿರುವುದರಿಂದ ಸೋಷಲ್ ಮೀಡಿಯಾಗಳನ್ನು ಸರ್ಕಾರ ನಿಯಂತ್ರಿಸಬೇಕಾದುದು ಅನಿವಾರ್ಯವಾಗಿದೆಯೆಂದು ಬಂಗ್ಲಾ ಅಧಿಕಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಇದೀಗ ಬಂಗ್ಲಾದೇಶದ ಒಟ್ಟು ಜನಸಂಖ್ಯೆಯಲ್ಲಿ ಶೇ. ೧೦ರಷ್ಟು ಇರುವ ಹಿಂದೂ ಸಮುದಾಯವನ್ನು ಬಂಗ್ಲಾದೇಶದಿಂದ ಉಚ್ಚಾಟಿಸಬೇಕೆಂಬುದೇ ಇಸ್ಲಾಮೀ ಪಡೆಗಳು ಹಿಂದಿನಿಂದ ರೂಢಿಸಿಕೊಂಡು ಬಂದಿರುವ ಮಾನಸಿಕತೆ. ಅದರ ಮುಂದುವರಿಕೆಯೇ ಬಂಗ್ಲಾ ವಿದ್ಯಮಾನಗಳ ಮೂಲದಲ್ಲಿರುವುದು. ಆದ್ದರಿಂದ ತೀವ್ರ ರಾಜತಾಂತ್ರಿಕ ಮಾರ್ಗಗಳ ಬಗೆಗೆ ಭಾರತಸರ್ಕಾರ ಗಂಭೀರವಾದ ಚಿಂತನೆ ನಡೆಸಬೇಕಾಗಿದೆ.