ಸೀತಾರಾಮ ಗೋಯಲ್ (೧೬ ಅಕ್ಟೋಬರ್ ೧೯೨೧ – ೩ ಡಿಸೆಂಬರ್ ೨೦೦೩) ದೆಹಲಿ ವಿಶ್ವವಿದ್ಯಾಲಯದಿಂದ ಇತಿಹಾಸದಲ್ಲಿ ಎಂ.ಎ. ಪದವಿ ಪಡೆದವರು. ಗಾಂಧಿಯವರ ಸತ್ಯಾಗ್ರಹ, ಆರ್ಯಸಮಾಜ, ಮಾರ್ಕ್ಸ್ವಾದ – ಮೊದಲಾದ ಅಭಿಯಾನಗಳಲೆಲ್ಲ ಪಾಲ್ಗೊಂಡು ಅವನ್ನೆಲ್ಲ ಆಳವಾಗಿ ಅಧ್ಯಯನ ಮಾಡಿದವರು. ಕಮ್ಯುನಿಸ್ಟ್ ಪಕ್ಷದ ಪ್ರಚಾರಸಾಹಿತ್ಯ ಬರೆಯುವಷ್ಟರಮಟ್ಟಿಗೆ ಮಾರ್ಕ್ಸ್–ಲೆನಿನ್ ಹಿಂದೆ ಹೋಗಿದ್ದವರು ಗೋಯಲ್. ಭಾರತೀಯ ಹಿಂದು ಸಂಸ್ಕೃತಿಯ ಯಾವ ದಿವ್ಯ ಘಳಿಗೆಯೋ ಅವರು ಅವರ ಮಿತ್ರರಾದ ರಾಮಸ್ವರೂಪ್ರ ಮಾತಿಗೆ, ತಮ್ಮ ಅಂತರಂಗದ ಸತ್ಯದ ಧ್ವನಿಗೆ ಬೆಲೆಕೊಟ್ಟು ಕಣ್ಣುಬಿಟ್ಟು ಎಡಪಂಥದ ಸಾಹಿತ್ಯ ಮತ್ತು ಅದರ ಅಸಲಿ ಸ್ವರೂಪವನ್ನು ತಿಳಿಯಲು ಮುಂದಾದರು. ಯಾರನ್ನು ಗೋಯಲ್ ದೊಡ್ಡ ವಾಮಪಂಥದ ಚಿಂತಕರು ಎಂದು ನಂಬಿಕೊಂಡಿದ್ದರೋ ಅವರನ್ನು ರಾಮಸ್ವರೂಪ್ರ ಕೆಲವೇ ದಿನಗಳ ಸಹವಾಸದಲ್ಲಿ ಗೋಯಲ್ ಹಿಂದು ಧರ್ಮದ ಚಿಂತನೆಗೆ ಸೆಳೆದುಕೊಂಡರು.
೧೯೮೬ರಲ್ಲಿ ಅಯೋಧ್ಯೆಯ ರಾಮಜನ್ಮಭೂಮಿ ವಿಚಾರದಲ್ಲಿ ರೊಮಿಲಾ ಥಾಪರ್ ಮತ್ತು ಇನ್ನುಳಿದ ಕಮ್ಯುನಿಸ್ಟ್ ಇತಿಹಾಸಕಾರರೂ, ಪ್ರತಿಷ್ಠಿತ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರುಗಳೂ ಟೈಮ್ಸ್ ಆಫ್ ಇಂಡಿಯಾ ಪತ್ರಿಕೆಗೆ ಒಂದು ವಾಚಕರ ವಾಣಿ ಬರೆದು ಈ ರೀತಿ ಒಂದು ದೇವಾಲಯದ ಪ್ರಾಚೀನತೆಯ ಪ್ರಶ್ನೆಯನ್ನು ಇಟ್ಟುಕೊಂಡು ಎಷ್ಟು ಹಿಂದಕ್ಕೆ ಹೋಗುವುದು? ಇಸ್ಲಾಂ ದಾಳಿಕೋರರು ಹಿಂದು ಮಂದಿರಗಳನ್ನು ನಾಶಪಡಿಸಿದ್ದರು ಎಂದು ಹೇಳುತ್ತಿದ್ದೀರಲ್ಲಾ – ಹಿಂದುಗಳು ಎಷ್ಟು ಬೌದ್ಧ-ಜೈನ ಮಂದಿರಗಳನ್ನು ನಾಶಪಡಿಸಿಲ್ಲ? ಹಿಂದುಗಳು ಅದಕ್ಕೂ ಹಿಂದೆ ಎಷ್ಟು ನಿಸರ್ಗಾರಾಧಕರ ಪೂಜಾಸ್ಥಾನಗಳನ್ನು ನಾಶಪಡಿಸಿಲ್ಲ? ಎಂದು ಪ್ರಶ್ನೆಗಳನ್ನು ಎತ್ತಿದರು. ಸರಿ; ಇದಾದನಂತರ ಅಯೋಧ್ಯೆಯ ವಿವಾದ ಹೊತ್ತಿಕೊಂಡು ಉರಿಯಿತು. ೧೯೮೬ರಿಂದ ೨೦೧೯ರ ವರೆಗೂ ಅದು ಜೀವಂತವಾಗಿತ್ತು. ಈಗ ಹಿಂದು ಸಮಾಜವೇ ಮುಂದೆ ನಿಂತು ಅಲ್ಲಿ ಶ್ರೀರಾಮನಿಗೆ ಭವ್ಯವಾದ ಮಂದಿರವನ್ನು ನಿರ್ಮಿಸುತ್ತಿದೆ. ಈ ನಡುವೆ ೧೯೯೦-೧೯೯೧ರಲ್ಲಿ ಪ್ರಸಿದ್ಧ ಇತಿಹಾಸಕಾರ, ಕಾದಂಬರಿಕಾರ ಸೀತಾರಾಮ ಗೋಯಲ್ ಅವರು ತಮ್ಮ ಪ್ರಕಾಶನಸಂಸ್ಥೆಯಾದ ವಾಯ್ಸ್ ಆಫ್ ಇಂಡಿಯಾ ಮೂಲಕ ಹಿಂದು ಮಂದಿರಗಳು ಏನಾದವು? (ವಾಟ್ ಹ್ಯಾಪನ್ಡ್ ಟು ಹಿಂದು ಟೆಂಪಲ್ಸ್?) ಎಂಬ ಹೆಸರಿನಲ್ಲಿ ಎರಡು ಸಂಶೋಧನಪೂರ್ಣ ಸಂಪುಟಗಳನ್ನು ಪ್ರಕಟಿಸಿದರು. ಮೊದಲನೆಯ ಸಂಪುಟದಲ್ಲಿ ಅರುಣ್ ಶೌರಿ ಮತ್ತು ಇನ್ನು ಕೆಲವು ಲೇಖಕರು ಕೂಡ ಬರೆದಿದ್ದಾರೆ; ಎರಡನೆಯ ಸಂಪುಟವಷ್ಟನ್ನೂ ಸ್ವತಃ ಗೋಯಲರೇ ಬರೆದರು. ಅದರಲ್ಲಿ ನಮ್ಮ ದೇಶದ ಒಂದೊಂದು ರಾಜ್ಯದ ಕೆಲವಾರು ಜಿಲ್ಲೆಗಳಲ್ಲಿ ಕಳೆದ ಸಾವಿರ ವರ್ಷಗಳಲ್ಲಿ ಇಸ್ಲಾಂನಲ್ಲಿ, ಹದೀಸುಗಳಲ್ಲಿ, ಕುರಾನಿನಲ್ಲಿ, ಪ್ರವಾದಿ ಮಹಮ್ಮದರ ಬೋಧನೆಗಳಲ್ಲಿ ನಂಬಿಕೆ ಇರುವವರು ಹೇಗೆ ಯಾವ ತಾರೀಖಿನಲ್ಲಿ ಎಲ್ಲೆಲ್ಲಿ ಹಿಂದು, ಜೈನ ಮಂದಿರಗಳನ್ನು ಒಡೆದರು, ಆ ಕಲ್ಲುಕಂಬಗಳನ್ನು ಯಾವಯಾವ ಮಸೀದಿಗಳನ್ನು ಕಟ್ಟಲು ಉಪಯೋಗಿಸಿದರು – ಎಂದು ಪಟ್ಟಿಗಳನ್ನೇ ಕೊಟ್ಟರು. ಈ ಪುಸ್ತಕ ಭಾರಿ ಕೋಲಾಹಲವನ್ನು ಸೃಷ್ಟಿಸಿತು. ಮುಸಲ್ಮಾನರು ಅನ್ಯರ ಪ್ರಾರ್ಥನಾ ಸ್ಥಳಗಳಲ್ಲಿ ಪ್ರಾರ್ಥನೆ ಸಲ್ಲಿಸಲು ಅವರ ಮತದಲ್ಲಿ ಅವಕಾಶವೇ ಇಲ್ಲ – ಎಂದು ಸ್ವತಃ ಅನೇಕ ಹಿಂದು ಮುಖಂಡರು ಕೂಡ ಮಾತನಾಡುತ್ತಿದ್ದಾಗ ಬಂದ ಪುಸ್ತಕ ಇದು – ಎಂಬುದನ್ನು ಮರೆಯುವಂತಿಲ್ಲ.
ಈ ಪುಸ್ತಕದಲ್ಲಿ ನೂರಾರು ಅರಬ್ಬಿ, ಪಾರಸಿ, ಉರ್ದು ದಾಖಲೆಗಳನ್ನು ಕಷ್ಟಪಟ್ಟು ಇಂಗ್ಲಿಷಿಗೆ ಅನುವಾದ ಮಾಡಲಾಗಿತ್ತು. ಫ್ರಂ ದಿ ಹಾರ್ಸಸ್ ಮೌತ್ ಎಂದೇ ಒಂದು ಅಧ್ಯಾಯ ಇದರಲ್ಲಿ ಇದೆ. ಉತ್ತರಭಾರತದಲ್ಲಿ ಹೇಗೊ ಗೊತ್ತಿಲ್ಲ, ದಕ್ಷಿಣದಲ್ಲಿ ಅದರಲ್ಲೂ ಬೆಂಗಳೂರಿನೊಳಗೆ ಈ ಪುಸ್ತಕವನ್ನು ಜಯನಗರ, ಮೆಜೆಸ್ಟಿಕ್ ಮುಂತಾದ ಕಡೆ ಇರುವ ಪ್ರಸಿದ್ಧ ಪುಸ್ತಕ ವ್ಯಾಪಾರಿಗಳು ಅವರ ಅಂಗಡಿಗಳಲ್ಲಿ ಇಟ್ಟುಕೊಂಡು ಮಾರಾಟ ಮಾಡಲು ಹಿಂದೇಟು ಹಾಕಿದರು. ಯಾಕೆಂದರೆ ಅದರ ಕಂಟೆಂಟ್ ಅಷ್ಟು ಪ್ರಖರ ಮತ್ತು ನಿಖರವಾಗಿತ್ತು. ಅದರ ಹಿಂದೆ ಸೀತಾರಾಮ ಗೋಯಲರ ದಶಕಗಳ ಅಧ್ಯಯನವಿತ್ತು. ಹಿಂದುಗಳ ವಿರುದ್ಧ ಸತತವಾಗಿ ಬರಹ, ಭಾಷಣ, ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಮಾಡುತ್ತಿದ್ದ ಜವಾಹರ್ಲಾಲ್ ನೆಹರು ಯೂನಿವರ್ಸಿಟಿಯ ಅಧ್ಯಾಪಕ ವೃಂದವಾಗಲಿ, ಪ್ರಗತಿಪರ ಎಂದು ಕರೆದುಕೊಳ್ಳುವ ಯಾವುದೇ ಪತ್ರಿಕೆಗಳಾಗಲಿ ಇದರ ಬಗ್ಗೆ ರೆವ್ಯೂ ಕೂಡ ಬರೆಯಲಿಲ್ಲ. ಗೋಯಲ್ ವಿವಾದಕ್ಕೆ ಬುದ್ಧಿಜೀವಿಗಳ ವಲಯ ಅಘೋಷಿತ ಕರ್ಫ್ಯೂ ವಿಧಿಸಿಕೊಂಡಿತ್ತು! ಈ ಸಮಯದಲ್ಲಿ ಒಂದು ಸ್ವಾರಸ್ಯ ನಡೆಯಿತು. ಗೋಯಲರು ಈ ಪುಸ್ತಕದೊಡನೆ ಕೆಲವು ಪ್ರಶ್ನೆಗಳನ್ನು ಇಟ್ಟು ರೊಮಿಲಾ ಥಾಪರ್ ಅವರಿಗೆ ಕಳಿಸಿದರು. ಅದರಲ್ಲಿ ಅವರು ಕೇಳಿದ್ದೇನೆಂದರೆ – ಯಾವ ಹಿಂದು ರಾಜ ಎಲ್ಲಿ ಯಾವಾಗ ಎಷ್ಟೆಷ್ಟು ಜೈನ, ಬೌದ್ಧ ಮಂದಿರಗಳನ್ನು ಒಡೆಸಿದ? ಯಾವ ಹಿಂದು ರಾಜ ಹೀಗೆ ಒಡೆಸಿದ್ದೇ ಆದರೆ ಅದನ್ನು ಆ ಕಾಲದವರು, ನಂತರದ ಕಾಲದವರು ಸರಿ ಎಂದು ಸೈದ್ಧಾಂತಿಕವಾಗಿ ಸಮರ್ಥಿಸಿಕೊಂಡರೆ? – ಇತ್ಯಾದಿ.
ಈ ಪ್ರಶ್ನೆಗಳಿಗೆ ಶಾಸನ ಮತ್ತು ಪ್ರಾಚ್ಯ ಇತಿಹಾಸದ ಕನಿಷ್ಠ ಜ್ಞಾನವಿರುವವರು ಕ್ರಮಬದ್ಧವಾಗಿ ಇಂತಿಷ್ಟು ಮಂದಿರಗಳನ್ನು ಹಿಂದು ರಾಜರು ಒಡೆಸಿದರು ಎಂದು ಉತ್ತರ ಸಿದ್ಧವಿದ್ದರೆ ಕೂಡಲೆ ಕೊಡುತ್ತಾರೆ. ಇದು ಒಂದು ದಾರಿ. ಇನ್ನೊಂದು ಕ್ರಮವೆಂದರೆ ಇದರ ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆದಿಲ್ಲ, ಖಚಿತವಾಗಿ ಏನನ್ನೂ ಹೇಳುವುದು ಸಾಧ್ಯವಿಲ್ಲ ಎಂದು ಪ್ರಾಮಾಣಿಕವಾಗಿ ಉತ್ತರ ಕೊಡುತ್ತಾರೆ. ಆದರೆ ರೊಮಿಲಾ ಥಾಪರ್ ಅವರು ಸೀತಾರಾಮ ಗೋಯಲರಿಗೆ ನೀವು ಈ ವಿಷಯದಲ್ಲಿ ನಾನಾ ಪಂಥಗಳ ಇತಿಹಾಸಕಾರರು ಬರೆದದ್ದನ್ನು ಸಾಕಷ್ಟು ಓದಿಲ್ಲವೆನಿಸುತ್ತಿದೆ, ಮೊದಲಿಗೆ ನಾನೇ ಬರೆದ ಒಂದು ಪುಸ್ತಕವನ್ನು ಓದಿ ಎಂಬ ಅರ್ಥ ಬರುವಂತೆ ಪತ್ರ ಬರೆದರು.
ತನ್ನ ಬಾಲ್ಯದಲ್ಲಿ ಹಿಂದು ಧರ್ಮವನ್ನು, ನಂತರ ಆರ್ಯ ಸಮಾಜ, ಗಾಂಧಿ ವಿಚಾರಧಾರೆಯನ್ನು ಹತ್ತಿರದಲ್ಲಿ ಕಂಡವರು ಸೀತಾರಾಮ ಗೋಯಲ್ (ಜನನ: ೧೬ ಅಕ್ಟೋಬರ್ ೧೯೨೧; ಮರಣ: ೩ ಡಿಸೆಂಬರ್ ೨೦೦೩). ಮುಂದೆ ಇವುಗಳಿಗೆ ಬೆನ್ನು ತಿರುಗಿಸಿ ಕಮ್ಯುನಿಸ್ಟ್ ಪಕ್ಷದ ಪ್ರಚಾರಸಾಹಿತ್ಯ ಬರೆಯುವಷ್ಟರಮಟ್ಟಿಗೆ ಮಾರ್ಕ್ಸ್-ಲೆನಿನ್ ಹಿಂದೆ ಹೋಗಿದ್ದವರು ಗೋಯಲ್. ಭಾರತೀಯ ಹಿಂದು ಸಂಸ್ಕೃತಿಯ ಯಾವ ದಿವ್ಯ ಘಳಿಗೆಯೋ ಅವರು ಅವರ ಮಿತ್ರರಾದ ರಾಮಸ್ವರೂಪ್ರ ಮಾತಿಗೆ, ತಮ್ಮ ಅಂತರಂಗದ ಸತ್ಯದ ಧ್ವನಿಗೆ ಬೆಲೆಕೊಟ್ಟು ಕಣ್ಣುಬಿಟ್ಟು ಎಡಪಂಥದ ಸಾಹಿತ್ಯ ಮತ್ತು ಅದರ ಅಸಲಿ ಸ್ವರೂಪವನ್ನು ತಿಳಿಯಲು ಮುಂದಾದರು. ಯಾರನ್ನು ದೊಡ್ಡ ವಾಮಪಂಥದ ಚಿಂತಕರು ಎಂದು ನಂಬಿಕೊಂಡಿದ್ದರೋ ಅವರನ್ನು ರಾಮಸ್ವರೂಪ್ರ ಕೆಲವೇ ದಿನಗಳ ಸಹವಾಸದಲ್ಲಿ ಗೋಯಲ್ ಹಿಂದು ಧರ್ಮದ ಚಿಂತನೆಗೆ ತೊಡಗಿಕೊಂಡರು. ಇದು ಗೋಯಲರಿಗೆ ಅಚ್ಚರಿ ಮೂಡಿಸಿತಾದರೂ ಅವರು ಪಟ್ಟುಬಿಡದೆ ಪಶ್ಚಿಮದ ದೊಡ್ಡ ದೊಡ್ಡ ಚಿಂತಕರ ಹೆಸರು, ಪುಸ್ತಕಗಳನ್ನೆಲ್ಲ ಉಲ್ಲೇಖಿಸಿ ತಮ್ಮ ವಾದವನ್ನು ಸಮರ್ಥಿಸಿಕೊಳ್ಳಲು ನೋಡಿದರು. ರಾಮಸ್ವರೂಪ್ರು, ಜೀವನದ ಒಂದಲ್ಲ ಒಂದು ಹಂತದಲ್ಲಿ ತಾನು ಕೂಡ ಇವರನ್ನೆಲ್ಲಾ ಓದಿಯಾಗಿದೆ, ಆದರೆ ಜೀವನದ ನೇರ ಸಮಸ್ಯೆಗಳಿಗೆ ಇವರಿಂದೆಲ್ಲ ಯಾವ ಪ್ರಯೋಜನವೂ ಇಲ್ಲ, ಇವರ ಚಿಂತನೆಗಳು ಬೌದ್ಧಿಕ ವಿಲಾಸಗಳಷ್ಟೆ – ಎಂದು ಬಿಟ್ಟರು. ಗೋಯಲರ ಕಮ್ಯುನಿಸ್ಟ್ ಮಂಜಿನ ಮಹಲು ಅರಿವಿನ ಬೆಳಕಿನ ಮುಂದೆ ಕರಗಿಹೋಯಿತು. ಅವರು ನಿಜಾರ್ಥದಲ್ಲಿ ಹಿಂದುವಾದರು. ಈ ವಿವರಗಳನ್ನು ಸ್ವತಃ ಅವರೇ ನಾನು ಹೇಗೆ ಹಿಂದುವಾದೆ (ಹೌ ಐ ಬಿಕೇಮ್ ಎ ಹಿಂದು) ಪುಸ್ತಕದಲ್ಲಿ ಹೇಳಿಕೊಂಡಿದ್ದಾರೆ.
ಸಾಂಪ್ರದಾಯಿಕವಾಗಿ ಹಿಂದು ಸಂಸ್ಕಾರವಿರುವ ಮನೆಯಲ್ಲಿ ಬೆಳೆದು, ಆರೆಸ್ಸೆಸ್, ರಾಮಕೃಷ್ಣಾಶ್ರಮ, ಚಿನ್ಮಯ ಮಿಷನ್, ಆರ್ಯಸಮಾಜ ಅಥವಾ ಯಾವುದೇ ದಾರಿಯಲ್ಲಿ ಹಿಂದು ವಿಚಾರಗಳನ್ನು ಮುಂದುವರಿಸುವುದು ಒಂದು ಕ್ರಮವಾದರೆ, ಹೈಸ್ಕೂಲಿನವರೆಗೆ ಹಿಂದು ಧರ್ಮದ ಹಿಂಬಾಲಕರಾಗಿದ್ದು ಕಾಲೇಜಿನ ಮೆಟ್ಟಿಲು ತುಳಿದು ಅಲ್ಲಿಂದ ಹೊರಬರುವಷ್ಟರಲ್ಲಿ ಕಾರ್ಲ್ಮಾರ್ಕ್ಸ್, ಲೆನಿನ್, ಮಾವೋ, ನಾಸ್ತಿಕತೆ, ದೈವನಿಂದನೆ, ಆಚರಣೆಗಳ ಅಪಹಾಸ್ಯ ಮಾಡುವ ಮಟ್ಟಕ್ಕೆ ಹೋಗುವುದು ಇನ್ನೊಂದು ಕ್ರಮ. ಮುಂದೆ ತಿಳಿದಿದ್ದೂ ಎಡಪಂಥದ ಧರ್ಮವಿರೋಧಿ-ರಾಷ್ಟ್ರ ವಿರೋಧಿ ಚಿಂತನೆಯ ಜೊತೆಯಲ್ಲೇ ತೊಳಲುತ್ತಾ ಉಳಿದುಬಿಡುವುದು ಮೂರನೆಯ ಕ್ರಮ (ನನ್ನ ಪರಿಚಿತ ವಲಯದ ಹಲವಾರು ಕನ್ನಡ, ಇಂಗ್ಲಿಷ್, ಸಮಾಜಶಾಸ್ತ್ರ ಮುಂತಾದ ವಲಯಗಳವರು ಈ ಗುಂಪಿನವರು). ಗೋಯಲ್ರಾದರೋ ಉಪನಿಷತ್ತಿನ ನಚಿಕೇತನಂತೆ ದಿಟ್ಟವಾಗಿ ಹೆಜ್ಜೆ ಇಟ್ಟು ತಾವು ಇದುವರೆಗೂ ನಂಬಿಕೊಂಡು ಬಂದದ್ದರ ನಿಜ ಎಷ್ಟು ಎಂದು ಪ್ರಶ್ನಿಸಿಕೊಂಡರು. ಕಮ್ಯುನಿಸಂ ಭಾರತದ ಮೇಲೆ ರಷ್ಯಾ, ಚೀನಾದ ಆಮದು ವಿಚಾರಗಳ ಮುಖಾಂತರ ಎಷ್ಟು ದುಷ್ಪ್ರಭಾವ ಬೀರುತ್ತಿದೆ ಎಂಬುದನ್ನು ಬಯಲಿಗೆಳೆದರು. ಅವರ ವಿಚಾರಗಳ ಪ್ರಖರತೆ ಎಷ್ಟಿತ್ತೆಂದರೆ ಅಂದಿನ ಭಾರತದ ಗೃಹಮಂತ್ರಿ ಸರ್ದಾರ್ ಪಟೇಲರೂ ಅಂತಾರಾಷ್ಟ್ರೀಯವಾಗಿ ಕಮ್ಯುನಿಸಂ ಸದೆಬಡಿಯಲು ಅಥವಾ ಎದುರಿಸಲು ಗೋಯಲರ ಕಮ್ಯುನಿಸಂ ವಿರುದ್ಧದ ಬರವಣಿಗೆಗಳನ್ನು ಬಳಸುವುದರಲ್ಲಿ ಉತ್ಸಾಹ ತೋರಿಸಿದ್ದರು. ಗೋಯಲರು ಇದೇ ಉದ್ದೇಶಕ್ಕಾಗಿ ಒಂದು ಸಂಘಟನೆಯನ್ನು ಸಹ ಹುಟ್ಟುಹಾಕಿದ್ದರು.
ಅವರ ಅನೇಕ ಲೇಖನಗಳು ಪಾಂಚಜನ್ಯ, ಆರ್ಗನೈಸರ್ ಪತ್ರಿಕೆಗಳಲ್ಲಿ ನಿರಂತರವಾಗಿ ಪ್ರಕಟಗೊಂಡವು. ರಾಮಸ್ವರೂಪ್ರನ್ನು ಗೋಯಲ್ ತಮ್ಮ ಮಾರ್ಗದರ್ಶಕ-ಗುರು ಎಂದು ಪರಿಗಣಿಸಿದ್ದರು. ರಾಮಸ್ವರೂಪ್-ಸೀತಾರಾಮ ಗೋಯಲರ ಜೋಡಿ ಅವರ ಸ್ನೇಹಿತರ ವಲಯದಲ್ಲಿ ಒಂದು ಆದರ್ಶ ಸ್ನೇಹಿತರ ಜೋಡಿ. ರಾಮಸೀತಾ ಅಥವಾ ಸೀತಾರಾಮ ಎಂಬುದು ಸಂಯುಕ್ತ ಪದವಾಗಿತ್ತು. ಹಿಂದು ಫೆನಾಮೆನನ್ ಎಂಬ ಅದ್ಭುತ ಕೃತಿಯ ಕರ್ತೃ ಪತ್ರಕರ್ತ ಗಿರಿಲಾಲ್ ಜೈನ್, ರಾಮಮನೋಹರ ಲೋಹಿಯಾ, ಧರಂಪಾಲ್ ಮುಂತಾದವರು ಗೋಯಲರ ಸ್ನೇಹವಲಯದಲ್ಲಿದ್ದವರು.
ಮಾವೋ, ಸ್ಟಾಲಿನ್ ಆಡಳಿತಗಳು ನಡೆಸಿದ ಕ್ರೌರ್ಯವನ್ನು ಗೋಯಲ್ ತಮ್ಮ ಪುಸ್ತಕಗಳಲ್ಲಿ ತೆರೆದಿಟ್ಟರು. ಭಾರತದ ಸಿ.ಪಿ.ಐ. ಪಕ್ಷವು ನೇತಾಜಿ ಸುಭಾಷ್ಚಂದ್ರ ಬೋಸರನ್ನು ಅಪಹಾಸ್ಯ ಮಾಡಿದ್ದನ್ನು ಸಿ.ಪಿ.ಐ. ಅಂಡ್ ನೇತಾಜಿ ಪುಸ್ತಕದಲ್ಲಿ ವಿವರಿಸಿದರು. ನಮ್ಮ ದೇಶ ಕಂಡ ಪ್ರಚ್ಛನ್ನ ಸರ್ವಾಧಿಕಾರಿ ಎಂದರೆ ೧೯೪೭ರ ನಂತರದ ದೇಶದ ಮೊದಲ ಪ್ರಧಾನಿ ಜವಾಹರಲಾಲ್ ನೆಹರು. ನೆಹರು ವೈಚಾರಿಕತೆಯ ಸಮಸ್ಯೆಗಳು, ಆತ ಸ್ಟಾಲಿನ್ರಿಂದ, ರಷ್ಯಾದಿಂದ ಎರವಲು ಪಡೆದ ಚಿಂತನೆಗಳ ಬೀಜಗಳನ್ನು ಭಾರತದಲ್ಲಿ ಬಿತ್ತನೆ ಮಾಡುತ್ತಿರುವುದರ ಅಪಾಯಗಳನ್ನು (‘China debate: whom shall we believe?’; ‘Mind murder in Mao land’, ‘China is red with peasants’ blood; ‘CPI conspires for civil war’, ‘Red brother or Yellow slave? NEHRU’s FATAL FRIENDSHIP’, ‘In defence of Comrade Krishna Menon’; ಇತ್ಯಾದಿ) ‘Genesis and growth of Nehruism vol. 1, commitment to communism’
ಪುಸ್ತಕದಲ್ಲಿ ಸವಿವರವಾಗಿ ಚರ್ಚಿಸಿದರು. ಹಿಂದಿಯ ಪ್ರಸಿದ್ಧ ಕವಿ ರಾಮಧಾರಿ ಸಿಂಹ ದಿನಕರರು ಆಗ ಲೋಕದೇವ ನೆಹರು ಎ೦ಬ ಪುಸ್ತಕ ಬರೆಯುತ್ತಿದ್ದ ಕಾಲ. ರಾಜಕೀಯದ ಹಂತದಲ್ಲಿ ದೀನದಯಾಳರು, ಡಾ. ರಾಮಮನೋಹರ ಲೋಹಿಯಾ, ಪತ್ರಕರ್ತರಾಗಿ ಬಾಬುರಾವ್ ಪಟೇಲ್ ಮತ್ತು ಬೌದ್ಧಿಕ ಕ್ಷತ್ರಿಯನ ನೆಲೆಯಲ್ಲಿ ಸೀತಾರಾಮ ಗೋಯಲ್ ನೆಹರುವಿನ ವಿಚಾರ, ಯೋಜನೆಗಳ ಅಪಾಯವನ್ನು ದೇಶದ ಮುಂದೆ ತೆರೆದಿಟ್ಟರು.
ಭಾರತವನ್ನು ಕಾಡುತ್ತಿರುವ ಕ್ರೈಸ್ತ ಮತಾಂತರದ ವಿಚಾರದ ಆಳ ಅನೇಕರಂತೆ ಗೋಯಲರಿಗೂ ಮೊದಲಿಗೆ ಗೊತ್ತಿರಲಿಲ್ಲ. ೧೯೮೨ರಲ್ಲಿ ಗೋಯಲ್ ಆಗತಾನೆ ವಾಯ್ಸ್ ಆಫ್ ಇಂಡಿಯಾ ಪ್ರಕಟನೆ ಆರಂಭಿಸಿದ್ದರು. ಒಂದು ಬೆಳಗ್ಗೆ ಬಾಬಾ ಮಾಧವದಾಸ್ ಎಂಬ ಸಂತರು, ಈ ಮೊದಲು ಗೋಯಲ್ ಬರೆದ ದಿಗ್ಬಂಧನದಲ್ಲಿ ಹಿಂದು ಸಮಾಜ (ಹಿಂದು ಸೊಸೈಟಿ ಅಂಡರ್ ಸೀಜ್) ಓದಿದ್ದರು. ಅವರಿಗೆ ಮತಾಂತರದ ಅಪಾಯದ ನೇರ ಅನುಭವವಿತ್ತು. ಆದರೆ ಗೋಯಲ್ ಆಗಿನ್ನೂ ನಿಯೋಗಿ ಕಮಿಟಿಯ ವರದಿಯನ್ನು ಓದಿರಲಿಲ್ಲ. ಬಾಬಾರಿಗೆ ತಾನು ಅದನ್ನು ಪೂರ್ಣ ಓದುವುದಾಗಿ ಹೇಳಿ ಅವರು ಹಿಂದಿ, ಇಂಗ್ಲಿಷಿನಲ್ಲಿ ಪ್ರಕಟಿಸಿದ್ದ ವರದಿಯ ಪ್ರತಿಗಳನ್ನು ಖರೀದಿಸಿದರು. ವಾಯ್ಸ್ ಆಫ್ ಇಂಡಿಯಾ ಹಿಂದು ಸಮಾಜದ ಮೇಲೆ ಕಮ್ಯುನಿಸಂ, ಸೆಕ್ಯುಲರಿಸಂ, ಕ್ರೈಸ್ತ ಮತ್ತು ಇಸ್ಲಾಂ ಮಾಡುತ್ತಿರುವ ನಿರಂತರ ದಬ್ಬಾಳಿಕೆಯನ್ನು ಎಳೆಎಳೆಯಾಗಿ ಬಿಡಿಸಿಡಲು ಆರಂಭಿಸಿದ ಪ್ರಕಾಶನ ಸಂಸ್ಥೆ. ಅದಕ್ಕೆ ಮಾಲಿಕ, ಕೆಲಸಗಾರ ಎಲ್ಲವೂ ಸೀತಾರಾಮ ಗೋಯಲರೇ. ಸಣ್ಣವ್ಯಾಪಾರಿಗಳು ಉದಾರ ಹೃದಯದಿಂದ ನೀಡುತ್ತಿದ್ದ ದೇಣಿಗೆಗಳಿಂದ ಈ ಪ್ರಕಾಶನ ನಡೆಯಬೇಕಿತ್ತು. ಆದರೆ ಪ್ರಾಯಶಃ ಸ್ವಾತಂತ್ರ್ಯಾನಂತರದಲ್ಲಿ ಯಾವುದೇ ಸರ್ಕಾರ, ವಿಶ್ವವಿದ್ಯಾನಿಲಯ, ಶ್ರೀಮಂತರ ಬೆಂಬಲವಿಲ್ಲದೆ ಒಂದು ಪುಸ್ತಕ ಪ್ರಕಾಶನ ಸಂಸ್ಥೆ ಯಾವುದೇ ಆಕರ್ಷಕ ಮುಖಪುಟ, ಬೆನ್ನುಡಿ, ಬಿಡುಗಡೆಯ ಭಾಗ್ಯವಿಲ್ಲದೆ ನಿರಂತರ ಹಿಂದು ಸಮಾಜದ ಪರವಾಗಿ ನಿಂತ ಮತ್ತೊಂದು ಉದಾಹರಣೆಯಿಲ್ಲ. ಸೀತಾರಾಮ ಗೋಯಲ್, ರಾಮಸ್ವರೂಪ್, ಅರುಣ್ ಶೌರಿ, ಜಯ ದುಬಾಷಿ, ರಾಮಾ ಜೋಯಿಸ್, ನವರತ್ನ ರಾಜಾರಾಂ, ಕೋನ್ರಾಡ್ ಎಲ್ಸ್ಟ್, ಡೇವಿಡ್ ಫ್ರಾಲಿ, ಶ್ರೀಕಾಂತ ತಲಗೇರಿ, ಶಂಕರ ಸರನ್, ಮಾರ್ಗೊಲಿತ್, ಫಣಿಕ್ಕರ್ ಮುಂತಾದ ಗಣ್ಯ ಲೇಖಕರ ಪುಸ್ತಕಗಳನ್ನು ವಾಯ್ಸ್ ಆಫ್ ಇಂಡಿಯಾ ಇದುವರೆಗೂ ಪ್ರಕಟಿಸಿದೆ. ಅದರಲ್ಲಿ ಕೊಟ್ಟಿರುವ ಅಮೂಲ್ಯ ಮೂಲ ದಾಖಲೆಗಳು ಇರುವ ಪುಸ್ತಕಗಳು ಅನೇಕ ದೊಡ್ಡ ಪ್ರತಿಷ್ಠಿತ ಗ್ರಂಥಾಲಯಗಳಲ್ಲಿ ಕ್ರೈಸ್ತ ಮಿಷನರಿ, ಕಮ್ಯುನಿಸ್ಟ್, ಸೆಕ್ಯುಲರ್, ಇಸ್ಲಾಂ ಪರ ಮನಸ್ಸುಗಳ ಕರಾಮತ್ತಿನಿಂದ ಈಗ ದೊರಕುವುದಿಲ್ಲ. ಅಂತರ್ಜಾಲ, ಫೇಸ್ಬುಕ್, ಟ್ವಿಟ್ಟರ್ ಯಾವುದೂ ಇರದ ಕಳೆದ ಶತಮಾನದ ಎಂಬತ್ತರ ದಶಕದಿಂದ ಇಂದಿನವರೆಗೂ ಈ ಸಂಸ್ಥೆ ಸಲ್ಲಿಸಿರುವ ಋಷಿಋಣ ಬಹಳ ದೊಡ್ಡದು.
ಎಸ್.ಎಲ್. ಭೈರಪ್ಪನವರ ಆವರಣ ಕಾದಂಬರಿಯಲ್ಲಿ ಸೀತಾರಾಮ ಗೋಯಲ್ ಮತ್ತು ರಾಮಸ್ವರೂಪ್ರ ವಿಚಾರಗಳ ದಟ್ಟ ಪ್ರಭಾವ ಕಂಡುಬರುತ್ತದೆ. ಅದರಲ್ಲಿ ರಜಿಯಾ ಎಂಬ ಪಾತ್ರ ತನ್ನ ಮನೆಯಿಂದ ಪೊಲೀಸರು ಹೊತ್ತುಕೊಂಡು ಹೋದ ಪುಸ್ತಕಗಳ ಪಟ್ಟಿಯ ನೆನಪು ಮಾಡಿಕೊಳ್ಳುವಾಗ ಅದರಲ್ಲಿರುವ ಬಹುತೇಕ ಪುಸ್ತಕಗಳು ಸೀತಾರಾಮ ಗೋಯಲ್ ಪ್ರಕಟಿಸಿರುವ ಪುಸ್ತಕಗಳೇ ಎಂದು ಗೊತ್ತಾಗುತ್ತದೆ. ಈಗ ನಮ್ಮ ದೇಶದಲ್ಲಿ ಹೊಸ ಹಿಂದು ಅರಿವಿನ ಒಂದು ವೈಚಾರಿಕ ಅಲೆ ಎದ್ದಿದೆ. ಅದರಲ್ಲಿ ಸಕ್ರಿಯರಾಗಿರುವ (ನನ್ನನ್ನೂ ಸೇರಿದಂತೆ) ಪುಷ್ಪೇಂದ್ರ ಕುಲಶ್ರೇಷ್ಠ, ಸಂಜಯ ದೀಕ್ಷಿತ, ವಿಕ್ರಂ ಸಂಪತ್, ಸಂಜೀವ ಸನ್ಯಾಲ್, ಆನಂದ್, ಶಂಕರ ಸರನ್, ಜನರಲ್ ಜಿ.ಡಿ. ಭಕ್ಷಿ, ಮೀನಾಕ್ಷಿ ಜೈನ್, ರಾಜೀವ ಮಲ್ಹೋತ್ರಾ, ಎಸ್.ಆರ್. ರಾಮಸ್ವಾಮಿ, ಶತಾವಧಾನಿ ಡಾ. ಗಣೇಶ್, ಸೂರ್ಯಪ್ರಕಾಶ ಪಂಡಿತ್, ಸಂದೀಪ್ ಬಾಲಕೃಷ್ಣ, ಅನೂಜ್ ಧರ್ ಮುಂತಾದವರು ಸೀತಾರಾಮ ಗೋಯಲರ ಗುರುಕುಲದ ವಿದ್ಯಾರ್ಥಿಗಳೇ ಆಗಿದ್ದಾರೆನ್ನಬಹುದು.
ದೇಶದ್ರೋಹಿ ಚಿಂತನೆ, ಧರ್ಮಮಾರ್ಗವನ್ನು ನಾನಾ ರೀತಿಗಳಲ್ಲಿ ಅಪಹಾಸ್ಯ ಮಾಡುವ ಚಿಂತಕರು, ಪತ್ರಕರ್ತರು, ಟೆಲಿವಿಷನ್ ಮಾಧ್ಯಮದವರು ಒಂದಲ್ಲ ಒಂದು ರೀತಿಯಲ್ಲಿ ಸೀತಾರಾಮ ಗೋಯಲರ ವಿಚಾರಗಳನ್ನು ಸ್ವಲ್ಪವಾದರೂ ಬಲ್ಲವರೇ. ಆದರೆ ಕೋನ್ರಾಡ್ ಎಲ್ಸ್ಟ್ ನೆಗೇಷನಿಸ್ಮ್ ಇನ್ ಇಂಡಿಯಾ ಗ್ರಂಥದಲ್ಲಿ ವಿವರಿಸುವಂತೆ ಅವರು ಸತ್ಯವನ್ನು ನಿರಾಕರಿಸುತ್ತಿದ್ದಾರೆ (ಹಿರಿಯರಾದ ಎಸ್.ಆರ್. ರಾಮಸ್ವಾಮಿಯವರು ನೆಗೇಷನಿಸ್ಮ್ ಎಂಬುದನ್ನು ವ್ಯಧಿಕರಣ ಎಂದು ಕರೆದಿದ್ದಾರೆ). ಧನಬಲ, ವಿಕೃತವಾದ ವೈಖರಿ, ವಿತಂಡ ಇವುಗಳ ಅಸತ್ಯದ ಕತ್ತಲೆಯ ವಿರುದ್ಧ ಸೀತಾರಾಮ ಗೋಯಲರು ವೇದ, ಉಪನಿಷತ್ತು, ಭಗವಾನ್ ಬುದ್ದನ ಚಿಂತನೆ, ಮಹಾಭಾರತ, ಪ್ಲೇಟೊ, ಶಿವಾಜಿ, ರಾಣಾ ಪ್ರತಾಪರಿಂದ ಪ್ರೇರಣೆ ಪಡೆದು ಜೀವನಪೂರ್ತಿ ವೈಚಾರಿಕವಾಗಿ ಸೆಣಸಾಡಿದರು. ಅಸತ್ಯದ ಅನೇಕ ಕೋಟೆಗಳನ್ನು ವಶಪಡಿಸಿಕೊಂಡು ಧ್ವಂಸ ಮಾಡಿದರು. ರಾಮಸ್ವರೂಪ್ರು ನಿಧನರಾದಾಗ ಪತ್ರಕರ್ತ ಟಿ.ಜೆ.ಎಸ್. ಜಾರ್ಜ್ ಹಿ ಡಿಡ್ ದ ಕರಸೇವಾ ಥ್ರೂ ಹಿಸ್ ಪೆನ್ ಎಂದಿದ್ದರು. ಈ ಮಾತು ಸೀತಾರಾಮ ಗೋಯಲರಿಗೂ ಪೂರ್ಣ ಅನ್ವಯಿಸುತ್ತದೆ.
ಸ್ವತಃ ಪ್ರತಿಭಾವಂತ ವಾಗ್ಮಿ ಅವರು. ಜನಸಂಘದಿಂದ ಎರಡನೆಯ ಲೋಕಸಭೆಗೆ ಸ್ಪರ್ಧಿಸಿದ್ದರು. ಅವರದ್ದೇ ಸ್ವಂತ ವ್ಯಾಪಾರ ಹೊಂದಿದ್ದರು. ಆದರೆ ಭಾರತವಿರೋಧಿ ಶಕ್ತಿಗಳು ಅಧ್ಯಾತ್ಮದ ತವರುಮನೆಯ ಮೇಲೆ ಕುತಂತ್ರ, ಅಜ್ಞಾನದ ವಾದಗಳ ಬಾಣಪ್ರಯೋಗ ಮಾಡುತ್ತಿರುವಾಗ ಗೋಯಲರು ತಮ್ಮ ಸ್ವಾಧ್ಯಾಯ, ದೃಢಸಂಕಲ್ಪ, ಧೀಶಕ್ತಿ ಮೂಲಕ ಗ್ರಂಥಗಳು ಎಂಬ ಆಧುನಿಕ ಕ್ಷಿಪಣಿಗಳನ್ನು ೫೦ ವರ್ಷಗಳು ಪ್ರಯೋಗಿಸಿದರು. ಭಾರತದ ತೇಜಸ್ವಿಯಾದ ಜ್ಞಾನಪರಂಪರೆಯನ್ನು ಜತನದಿಂದ ಕಾಪಾಡಿಕೊಂಡು ಬಂದರು. ಇವತ್ತು ಜನತೆಗೆ ಪ್ರವಾದಿ ಮಹಮ್ಮದನ ಕ್ರೌರ್ಯ, ಮಿಷನರಿಗಳು ಮಾತ್ರವಲ್ಲ ಯೇಸುವಿನ ಪುನರಾಗಮನದ ಬರ್ಬರ ದೃಶ್ಯ, ನೆಹರು-ಕೃಷ್ಣಮೆನನ್ ದೇಶದೊಡನೆ ಆಡಿದ ಚೆಲ್ಲಾಟ, ಢೋಂಗಿ ಜಾತ್ಯತೀತವಾದದ ಪೊಳ್ಳುತನ, ಕುರಾನ್, ಹದೀಸ್, ಬೈಬಲ್ಗಳ ನಿಜಸ್ವರೂಪ ಸ್ವಲ್ಪಮಟ್ಟಿಗಾದರೂ ತಿಳಿದಿದ್ದರೆ ಅದರ ಹಿಂದೆ ಸೀತಾರಾಮ ಗೋಯಲರ ಜ್ಞಾನಯಜ್ಞದ ಹವಿಸ್ಸುಗಳಿವೆ.
ಮುಂದೆ ಬರುವ ಪೀಳಿಗೆ ಅವರಿಗೆ ಸಲ್ಲಿಸಬಹುದಾದ ಅತಿದೊಡ್ಡ ಗೌರವವೆಂದರೆ ಅವರು ಸ್ವತಃ ಬರೆದಿರುವ ಮತ್ತು ವಾಯ್ಸ್ ಆಫ್ ಇಂಡಿಯಾದ ಮೂಲಕ ಪ್ರಕಟಿಸಿರುವ ಪ್ರಬೋಧ ಸಾಹಿತ್ಯವನ್ನು ಮತ್ತೆ ಮತ್ತೆ ಓದಿ ಅಜ್ಞಾನದ ಗಾಳಿಗೆ ಅವರು ಹಚ್ಚಿದ ಹಿಂದುತ್ವದ ಹಣತೆ ಆರದಂತೆ ನೋಡಿಕೊಳ್ಳುವುದು. ಅವರ ದಾರಿಯಲ್ಲಿ ಮುಂದುವರಿದು ಸ್ವತಂತ್ರವಾಗಿ ಪುಸ್ತಕಗಳನ್ನು ರಚಿಸುತ್ತಾ ಹೋಗುವುದು. ಇರುಳ ವಿರುದ್ಧದ ಈ ಹಗಲಿನ ಯುದ್ಧಕ್ಕೆ ಕೊನೆಯೇ ಇಲ್ಲ. ಇದೇ ವೇದಗಳಲ್ಲಿ ಹೇಳಿರುವ ದೇವಾಸುರ ಸಂಗ್ರಾಮ. ನಮ್ಮ ಕಾಲದ ದೇವಾಸುರ ಸಂಗ್ರಾಮದಲ್ಲಿ ಆಸುರೀ ಶಕ್ತಿಗಳ ವಿರುದ್ಧ ಸತತವಾಗಿ ಹೋರಾಡಿದ ಬೌದ್ಧಿಕ ಕ್ಷತ್ರಿಯ ಮತ್ತು ವೈಚಾರಿಕ ಸೇನಾಪತಿ ಸೀತಾರಾಮ ಗೋಯಲರ ಧೀಶಕ್ತಿಗೆ ಶತಮಾನದ ಹೊತ್ತಿನಲ್ಲಿ ಶತಶತ ನಮನಗಳು.