ಇಂಗ್ಲಿಷ್ ಮೂಲ: ಸೀತಾರಾಂ ಗೋಯಲ್
ಕನ್ನಡಕ್ಕೆ: ಎಸ್.ಆರ್.ಆರ್.
ಸಂಗ್ರಹವಾಗಿ ಹೇಳುವುದಾದರೆ ನೆಹರುವಾದವೇ ಸರ್ವಧರ್ಮ ಸಮಭಾವವೆಂದೂ ಭಾರತೀಯ ನಮೂನೆಯ ಸೆಕ್ಯುಲರಿಸಂ ಎಂದೂ ಪ್ರವರ್ತಿತವಾಯಿತು. ಈ ವಾದದಂತೆ ಹಿಂದೂಗಳು ಇತಿಹಾಸದುದ್ದಕ್ಕೂ ತಪ್ಪುಗಳನ್ನೇ ಮಾಡಿದರು. ಯಾವುದೇ ಕಾಲದಲ್ಲಿ ಯಾರೇ ಆಕ್ರಮಣ ಮಾಡಿರಲಿ; ತಪ್ಪು ಹಿಂದೂಗಳದೇ. ಈ ಚೌಕಟ್ಟಿಗೆ ಹೊಂದುವಂತೆ ಸ್ವಾತಂತ್ರ್ಯ ಆಂದೋಲನದ (೧೮೮೫–೧೯೪೭) ಚರಿತ್ರೆಯನ್ನು ತಿರುಚಲಾಯಿತು; ದೇಶವಿಭಜನೆಯ ದುರಂತಕ್ಕೂ ಹಿಂದೂಗಳೇ ಕಾರಣ ಎಂಬ ಮಂಡನೆಯಾಯಿತು. ಮುಸ್ಲಿಂ ಲೀಗ್ನ ಪಾಕಿಸ್ತಾನ ಬೇಡಿಕೆಯನ್ನು ಹಿಂದೂಮಹಾಸಭಾ, ಆರ್ಯಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮೊದಲಾದ ಹಿಂದೂ ಸಂಘಟನೆಗಳು ತೀಕ್ಷ್ಣವಾಗಿ ವಿರೋಧಿಸಿದ್ದುದು ಈ ಭಾರತೀಯ ಸೆಕ್ಯುಲರಿಸ್ಟರಿಗೆ ಗೋಚರಿಸಲೇ ಇಲ್ಲ.
ಆಧುನಿಕ ಪಾಶ್ಚಾತ್ಯ ಜಗತ್ತಿನಲ್ಲಿ ಸೆಕ್ಯುಲರಿಸಂ ಎಂಬ ಕಲ್ಪನೆಯು ಕ್ರೈಸ್ತ ಮತ್ತು ಇಸ್ಲಾಂ ಮತಗಳ ಪ್ರವರ್ತಕರಿಂದ ಕಟು ಟೀಕೆಗೂ ಅವಹೇಳನಕ್ಕೂ ಗುರಿಯಾದದ್ದು. ಈ ಎರಡೂ ಮತಗಳು ಮತಾಧಾರಿತ ಪ್ರಭುತ್ವವನ್ನು ಕಡ್ಡಾಯಗೊಳಿಸಿರುವವು. ಸರ್ಕಾರ ಅಥವಾ ರಾಜ್ಯವೆಂದರೆ ಚರ್ಚಿನ ಅಥವಾ ಉಮ್ಮಾದ ವ್ಯಾವಹಾರಿಕ ಅಂಗ ಎಂದೇ ಪರಿಗಣಿಸಲಾಗಿತ್ತು. ಫ್ರಾನ್ಸಿನ ಮಹಾಕ್ರಾಂತಿಗೆ ಮುಂಚಿನ ಕ್ರೈಸ್ತಮತದ ಇತಿಹಾಸವನ್ನೂ ಇಲ್ಲಿಯವರೆಗಿನ ಇಸ್ಲಾಮೀ ದೇಶಗಳ ಇತಿಹಾಸವನ್ನೂ ಸಮೀಕ್ಷಿಸಿದರೆ ಮೇಲಣ ಸಂಗತಿ ಸಿದ್ಧಪಡುತ್ತದೆ. ಕ್ರೈಸ್ತಮತವು ತನ್ನ ಮೂಲನೆಲೆಗಳಾದ ಯೂರೋಪ್-ಅಮೆರಿಕಗಳಲ್ಲಿ ಕ್ಷೀಣಾವಸ್ಥೆಗೆ ತಲಪಿರುವ ಕಾರಣದಿಂದಾಗಿ ಈಚೆಗೆ ಸೆಕ್ಯುಲರಿಸಂ ಕಲ್ಪನೆಯನ್ನು ಅಳವಡಿಸಿಕೊಂಡುಬಿಟ್ಟಿವೆ ಎಂಬುದು ಬೇರೆ ಮಾತು. ಈ ಬದಲಾವಣೆಗಳಿಂದಾಗಿ ಕ್ರೈಸ್ತಮತದ ಮೂಲ ಧೋರಣೆಯೇನೂ ಬದಲಾಗಿಲ್ಲ; ಅದು ಮತ್ತೆ ಹಿಂದಿನಂತೆ ಪ್ರಭಾವಶಾಲಿಯಾದಲ್ಲಿ ಮತಾಧಾರಿತ ರಾಜ್ಯವಿನ್ಯಾಸವನ್ನೇ ಪುನರುಜ್ಜೀವಿಸುವುದು ನಿಶ್ಚಿತ. ಇನ್ನು ಇಸ್ಲಾಂ ಮತವಂತೂ ತಾತ್ತ್ವಿಕವಾಗಿಯಾಗಲಿ ಆಚರಣೆಯಲ್ಲಾಗಲಿ ಸೆಕ್ಯುಲರಿಸಂ ನೀತಿಯನ್ನು ಸ್ವೀಕರಿಸುವ ಲಕ್ಷಣವನ್ನೇ ತೋರಿಲ್ಲ. ಪ್ರತಿಯಾಗಿ ಅಧಿಕಸಂಖ್ಯೆಯ ಇಸ್ಲಾಮೀ ದೇಶಗಳಲ್ಲಿ ಈಚೀಚೆಗೆ ಹಿಂದಿನ ಶುದ್ಧ (ಎಂದರೆ ಆದ್ಯ ಖಲೀಫ್ ಚತುಷ್ಟಯ ತೋರಿದ್ದ ಸರಿಯಾದ ಮಾರ್ಗಕ್ಕೆ ಅನುಗುಣವಾದ) ಮತೀಯಾಧಿಪತ್ಯವನ್ನೇ ಪುನರುಜ್ಜೀವಿಸುವ ಪ್ರಯತ್ನಗಳು ನಡೆದಿವೆ.
ಹೀಗಿರುವಾಗ ಭಾರತದೊಳಗಡೆ ಇರುವ ಕ್ರೈಸ್ತ ಮತ್ತು ಇಸ್ಲಾಂ ಮತಗಳಿಗೆ ಸೇರಿದ ಕಟ್ಟರ ಮೂಲಭೂತವಾದಿಗಳು, ಕ್ರೈಸ್ತ ಮಿಷನರಿಗಳು, ಮುಸ್ಲಿಂ ಮುಲ್ಲಾಗಳು ಭಾರತೀಯ ಸೆಕ್ಯುಲರಿಸಂ ನೀತಿಯನ್ನು ಉಚ್ಚಕಂಠದಲ್ಲಿ ಸಮರ್ಥಿಸುತ್ತಿರುವುದು ಸೋಜಿಗ ತರುತ್ತದೆ. ಇದು ಕಮ್ಯೂನಿಸ್ಟ್ ಸರ್ವಾಧಿಕಾರ ಪ್ರವರ್ತಕರು ಪ್ರಜಾಪ್ರಭುತ್ವದ ಪರವಾಗಿ ಅಬ್ಬರಿಸುವಷ್ಟೇ ವಿಚಿತ್ರವಾಗಿದೆ. ಕೇವಲ ಸೆಕ್ಯುಲರಿಸಂ ಮಾತಿನ ಮೋಹಕ್ಕೊಳಗಾಗಿ ಉದಾರವಾದ ಹಿಂದೂಧರ್ಮವನ್ನು ಇಸ್ಲಾಂ-ಕ್ರೈಸ್ತಮತಗಳಂತೆ ಸಂಕುಚಿತವಾದದ್ದೆಂದು ಟೀಕಿಸುವ ಒಂದು ಬಣವಿದೆ. (ಪಾಶ್ಚಾತ್ಯ ದೇಶಗಳಲ್ಲೂ ಇಂಥವರಿದ್ದಾರೆ.) ಈ ಬಣವನ್ನು ಹೊರತುಪಡಿಸಿ ಎಲ್ಲರೂ ಮೇಲಣ ವಿಚಿತ್ರ ಪರಿಸ್ಥಿತಿಯ ಅರ್ಥವೇನೆಂದು ಚಿಂತಿಸುತ್ತಿದ್ದಾರೆ.
ಹೊಸ ನಮೂನೆಯ ಸೆಕ್ಯುಲರಿಸಂ ಉಗಮ
ಸೆಕ್ಯುಲರಿಸಂ ಎಂಬ ಶಬ್ದ ಪಂ. ನೆಹರುರವರ ಲೇಖನ-ಭಾಷಣಗಳಲ್ಲಿ ಇರಲಿಲ್ಲ. ಅದರ ಇಂದಿನ ಪ್ರವರ್ತಕರ ಶಬ್ದಕೋಶದಲ್ಲಿಯೂ ಹಿಂದೆ ಅದು ಇರಲಿಲ್ಲ. ೧೯೫೦ರ ಜನವರಿ ತಿಂಗಳಲ್ಲಿ ಅಮಲಿಗೆ ಬಂದ ಭಾರತ ಸಂವಿಧಾನದಲ್ಲಿ ಪೀಠಿಕೆಯಲ್ಲಾಗಲಿ ಬೇರೆಡೆಯಲ್ಲಾಗಲಿ ಆ ಶಬ್ದ ಇರಲಿಲ್ಲ. ೧೯೭೫-೭೬ರ ತುರ್ತುಪರಿಸ್ಥಿತಿಯಲ್ಲಿ ಇಂದಿರಾಗಾಂಧಿ ತಮಗೆ ತೋರಿದಂತೆ ಆ ಶಬ್ದವನ್ನು ಸಂವಿಧಾನದೊಳಕ್ಕೆ ಸೇರ್ಪಡೆ ಮಾಡಿದರು. ಆದರೆ ಪಂ. ನೆಹರು ಕೈಗೆ ಕಾಂಗ್ರೆಸ್ಸಿನ ಹಾಗೂ ದೇಶದ ನಾಯಕತ್ವ ಬಂದಮೇಲೆ – ಸರ್ದಾರ್ ಪಟೇಲ್ ಅವರ ನಿಧನದ (ಡಿಸೆಂಬರ್ ೧೯೫೦) ತರುವಾಯ – ನೆಹರು ಆ ಶಬ್ದವನ್ನು ಹೆಚ್ಚುಹೆಚ್ಚಾಗಿ ಬಳಸತೊಡಗಿದುದನ್ನು ಕಾಣುತ್ತೇವೆ. ಅದರಂತೆ ಹಿಂದೂಗಳನ್ನೂ ಹಿಂದೂಧರ್ಮವನ್ನೂ ದ್ವೇಷಿಸುವುದನ್ನು ಬಿಟ್ಟರೆ ಬೇರಾವ ಸಮಾನಾಸಕ್ತಿಗಳೂ ಇಲ್ಲದ ರಾಜಕೀಯ ಪಕ್ಷಗಳ ಮಾತು-ಬರಹಗಳಲ್ಲಿಯೂ ಈ ಶಬ್ದ ಮೇಲಿಂದ ಮೇಲೆ ಕಾಣಿಸಿಕೊಳ್ಳತೊಡಗಿತು.
ಈಗಲಾದರೋ ಎಲ್ಲ ಹಿಂದೂದ್ವೇಷಿಗಳೂ ತಮ್ಮನ್ನು ಸೆಕ್ಯುಲರಿಸ್ಟರೆಂದು, ಸೆಕ್ಯುಲರ್ ಫೋರ್ಸಸ್ ಎಂದು, ಸೆಕ್ಯುಲರ್ ಫ್ರಂಟ್ ಎಂದು ಕರೆದುಕೊಳ್ಳುತ್ತಿದ್ದಾರೆ. ಹಿಂದೂ ಜಾತಿವಾದ ಎಂದು ಅವರು ಖಂಡಿಸುವ ಸಾಮಾಜಿಕತೆಯಿಂದ ಇವರೆಲ್ಲ ದೂರ ಉಳಿಯುತ್ತಾರೆ. ಎಲ್ಲ ಸೆಕ್ಯುಲರಿಸ್ಟರೂ ಅನೈತಿಕರಾಗದಿರಬಹುದು; ಆದರೆ ಈಗಿನ ನಾಯಕರಲ್ಲಿ ನೀತಿಗೆಟ್ಟವರೆಲ್ಲ ತಮ್ಮನ್ನು ಸೆಕ್ಯುಲರಿಸ್ಟರೆಂದೇ ಕರೆದುಕೊಳ್ಳುತ್ತಿರುವುದಂತೂ ವಾಸ್ತವ.
ಭಾರತೀಯ ಸೆಕ್ಯುಲರಿಸಂ ಜನಕ ಪಂ. ನೆಹರುರವರ ಸ್ವಾತಂತ್ರ್ಯಾನಂತರದ ಬರಹ-ಭಾಷಣಗಳನ್ನು ಅವಲೋಕಿಸಿದಲ್ಲಿ ಈ ಸಮಸ್ಯೆಗೆ ಉತ್ತರ ದೊರೆಯುತ್ತದೆ. ಅವರು ಆಧುನಿಕ ಪಾಶ್ಚಾತ್ಯ ಜಗತ್ತಿನಿಂದ ಎರವಲು ತಂದದ್ದು ಸೆಕ್ಯುಲರಿಸಂ ಎಂಬ ಶಬ್ದವನ್ನು ಮಾತ್ರವೇ ಹೊರತು ಅದಕ್ಕೆ ಪಾಶ್ಚಾತ್ಯ ಜಗತ್ತಿನ ರಾಜಕೀಯ ಪರಿಭಾಷೆಯಲ್ಲಿ ಇರುವ ಅರ್ಥವನ್ನಲ್ಲ.
೧೯೫೨ರ ಜೂನ್ ೨೨ರಂದು ಸಿ.ಡಿ. ದೇಶಮುಖ್ ಅವರಿಗೆ ಬರೆದ ಪತ್ರದಲ್ಲಿ ನೆಹರು ಹೀಗೆಂದಿದ್ದರು: ತುಂಬ ಪ್ರಸಿದ್ಧವಾದ ಮಾತುಗಳನ್ನೂ ಪದಪುಂಜಗಳನ್ನೂ ಕೂಡ ಈಗಿನವರು ವಿಕೃತ ಅರ್ಥಗಳಲ್ಲಿ ಬಳಸುವುದು ನನಗೆ ತುಂಬ ಆಶ್ಚರ್ಯ ತರುತ್ತದೆ. ಬಹುಶಃ ಎಲ್ಲ ಮಂದಿನಾಯಕರೂ ಹೀಗೆಯೇ ಮಾಡುವರೇನೋ. ಈ ಮಾತುಗಳನ್ನು ಆಡುವಾಗ ನೆಹರು ಇಲ್ಲವೆ ಅಪ್ರಾಮಾಣಿಕರಾಗಿದ್ದರು, ಇಲ್ಲವೆ ತಾವೇ ಮಂದಿನಾಯಕ (ಡೆಮಗಾಗ್)ರಾಗಿದ್ದರೆಂದು ಅರಿಯದೆಹೋಗಿದ್ದರು. ಏಕೆಂದರೆ ಪಾಶ್ಚಾತ್ಯ ರಾಜಕೀಯ ಪರಿಭಾಷೆಯ ಸೆಕ್ಯುಲರಿಸಂ ಎಂಬ ಪ್ರಸಿದ್ಧ ಶಬ್ದವನ್ನು ಹೆಕ್ಕಿಕೊಂಡು ಅದಕ್ಕೆ ಮೂಲದಲ್ಲಿರುವುದಕ್ಕೆ ಪೂರ್ಣ ವಿರುದ್ಧ ಅರ್ಥವನ್ನು ಅಂಟಿಸಿ ಬಳಸಿದವರು ಅವರೇ!
ಠಕ್ಕಿಗೆ ಆಕರ್ಷಕ ಕವಚ
ಸೆಕ್ಯುಲರಿಸಂ ಪಾಶ್ಚಾತ್ಯ ಜಗತ್ತಿನಲ್ಲಿ ಉಗಮಗೊಂಡದ್ದು ಕ್ರೈಸ್ತಮತದ ಅನುದಾರತೆಗೆ ವಿರುದ್ಧವಾಗಿಯೇ. ೧೫೦ ವರ್ಷಗಳಿಗೂ ಹೆಚ್ಚು ಕಾಲ ಅದರ ಬಳಕೆಯಾದುದು ರಾಜ್ಯವ್ಯವಸ್ಥೆಯನ್ನು ಚರ್ಚಿನ ಮುಷ್ಟಿಯಿಂದ ಬಿಡುಗಡೆಗೊಳಿಸಬೇಕೆಂಬ ಉದ್ದೇಶದಿಂದಲೇ. ಭಾರತದ ಸಂದರ್ಭದಲ್ಲಿ ಇಸ್ಲಾಮೀ ಪ್ರಭಾವದಿಂದ ರಾಜ್ಯವನ್ನು ಮುಕ್ತವಾಗಿರಿಸುವುದು ಎಂಬ ಅರ್ಥದಲ್ಲಿ ಆ ಶಬ್ದದ ಬಳಕೆ ಯುಕ್ತವಾಗುತ್ತಿತ್ತು. ಆದರೆ ನೆಹರುರವರು ಸೆಕ್ಯುಲರಿಸಂ ಎಂಬುದನ್ನು ಮುಸ್ಲಿಂ-ಕಮ್ಯೂನಿಸ್ಟ್-ಕ್ರೈಸ್ತ ಕೂಟವನ್ನು ಬಳಸಿ ಮುಖ್ಯಧಾರೆಯ ರಾಷ್ಟ್ರೀಯತೆಯನ್ನು ಕುಂಠಿತಗೊಳಿಸುವುದಕ್ಕಾಗಿಯೇ ಬಳಸಿದರು. ನೆಹರುರವರ ಇಸ್ಲಾಂ ಪಕ್ಷಪಾತ ಸುವಿದಿತ. ಅವರ ಗ್ಲಿಂಪ್ಸಸ್ ಆಫ್ ವರ್ಲ್ಡ್ ಹಿಸ್ಟರಿ, ದಿ ಡಿಸ್ಕವರಿ ಆಫ್ ಇಂಡಿಯಾ ಗ್ರಂಥಗಳಲ್ಲಿ ಈ ಪ್ರವೃತ್ತಿಯನ್ನು ಸ್ಪಷ್ಟವಾಗಿಯೇ ಕಾಣಬಹುದು. ಅಯೋಧ್ಯಾ ಆಂದೋಲನದ (೧೯೮೯) ಹಿನ್ನೆಲೆಯಲ್ಲಿ ಎಲ್.ಕೆ. ಆಡ್ವಾಣಿಯವರು ಭಾರತದಲ್ಲಿ ಸೆಕ್ಯುಲರಿಸಂ ಎನ್ನುವುದು ಹಿಂದೂದ್ವೇಷಕ್ಕೆ ಮತ್ತೊಂದು ಹೆಸರಾಗಿದೆ ಎಂದು ಹೇಳಿದುದು ಯಥಾರ್ಥವಾಗಿದೆ.
೧೯೫೧-೫೨ರಲ್ಲಿ ನೆಹರು ಹುಟ್ಟುಹಾಕಿದ ಸೆಕ್ಯುಲರಿಸಂ ಆಮೇಲಿನ ವರ್ಷಗಳಲ್ಲಿ ವ್ಯಾಪಕಗೊಂಡಿತು. ಈ ಠಕ್ಕಿಗೆ ಆಕರ್ಷಕ ಕವಚ ಒದಗಿಸಲು ನೆಹರುರವರು ಹಲವರು ಗಾಂಧಿವಾದಿಗಳ ಮತ್ತಿತರರ ಕೂಟವೊಂದನ್ನು ನಿರ್ಮಿಸಿಕೊಂಡರು. ಈ ಕೂಟದವರು ಬಹುಧರ್ಮೀಯವಾದ ಭಾರತದಮಟ್ಟಿಗೆ ಸೆಕ್ಯುಲರಿಸಂ ಎಂಬುದಕ್ಕೆ ಪಾಶ್ಚಾತ್ಯ ಪರಿಭಾಷೆಯಲ್ಲಿರುವಂತೆ ರಾಜ್ಯವ್ಯವಹಾರದಲ್ಲಿ ಧರ್ಮವು ಅಪ್ರಸಕ್ತ ಎಂಬುದು ಹೊಂದಲಾರದು, ಅದಕ್ಕೆ ಬೇರೊಂದು ಅರ್ಥದ ಆಯಾಮ ಕೊಡಬೇಕು; ಧರ್ಮದ ಅಪ್ರಸಕ್ತಿ ಎಂಬುದಕ್ಕೆ ಬದಲಾಗಿ ಭಾರತದಲ್ಲಿರುವ ಎಲ್ಲ ಧರ್ಮಗಳೂ (ಹಿಂದೂಧರ್ಮ, ಇಸ್ಲಾಂ, ಕ್ರೈಸ್ತಮತ, ಸಿಖ್ಮತ, ಜೈನಮತ, ಬೌದ್ಧಮತ, ಪಾರಸಿಗಳ ಜಾರತುಷ್ಟ್ರಮತ) ಪ್ರಸಕ್ತ ಎಂದು ಹೇಳಬೇಕು – ಎಂದು ವ್ಯಾಖ್ಯಾನಿಸಿದರು. ಸಂಕ್ಷಿಪ್ತವಾಗಿ ಭಾರತೀಯ ಸೆಕ್ಯುಲರಿಸಂ ಎಂಬುದಕ್ಕೆ (ಗಾಂಧಿ ಹೇಳಿದ್ದಂತೆ) ಸರ್ವಧರ್ಮ ಸಮಭಾವ ಎಂಬ ಅರ್ಥವನ್ನು ಪ್ರಚಲಿತಗೊಳಿಸಿದರು.
ಅರ್ಥದೂರವಾದ ಶಬ್ದಪ್ರವಾಹ
ಆದರೆ ಗಾಂಧಿಯವರ ಸರ್ವಧರ್ಮ ಸಮಭಾವ ಎಲ್ಲ ಧರ್ಮಗಳ ಬಗ್ಗೆ ಸಮಾನ ಆಚರಣೆ ಎಂಬಷ್ಟಕ್ಕೆ ನಿಲ್ಲಲಿಲ್ಲ; ಅದಕ್ಕಿಂತ ಮುಂದೆ ಎಲ್ಲ ಧರ್ಮಗಳೂ ಸಮಾನ ಆಧಾರ ಪಡೆದವು – ಎಂದು ಅರ್ಥ ಮಾಡಿದರು. ಎಲ್ಲ ಮತಗಳೂ ಹೇಳುವುದು ಒಂದೇ ಸತ್ಯವನ್ನೇ, ಎಲ್ಲ ಮತಗಳೂ ಏಕರೀತಿಯಾಗಿ ಆಧ್ಯಾತ್ಮಿಕ ಸಾಕ್ಷಾತ್ಕಾರಕ್ಕೆ ದಾರಿಮಾಡುತ್ತವೆ – ಎಂದು ಮೇಲಿಂದ ಮೇಲೆ ಹೇಳುತ್ತ ಬಂದರು. ಸರ್ವಧರ್ಮ ಸಮಭಾವದ ಈ ಎರಡನೆ ಆಯಾಮವು ಶ್ರೀರಾಮ, ಶ್ರೀಕೃಷ್ಣ, ಪ್ರವಾದಿ ಮಹಮ್ಮದ್, ಯೇಸುಕ್ರಿಸ್ತ, ಗುರುನಾನಕ್, ಮಹಾವೀರ, ಬುದ್ಧ – ಇವರ ಜನ್ಮದಿನಗಳಂದು ರಾಷ್ಟ್ರಾಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನಮಂತ್ರಿಗಳು, ರಾಜ್ಯ ಮುಖ್ಯಮಂತ್ರಿಗಳು ಪ್ರಸಾರ ಮಾಡಿದ ಸಂದೇಶಗಳ ಮೂಲಕ ಪ್ರಾಧಾನ್ಯ ಪಡೆದುಕೊಂಡಿತು. ಈ ಗಣ್ಯ ನಾಯಕರೆಲ್ಲ ಅಪ್ಪಣೆ ಕೊಡಿಸಿದಂತೆ ಪ್ರಮುಖ ಮತಗಳ ಸ್ಥಾಪಕರೆಲ್ಲ ಮಾನವ ಸೋದರಿಕೆ, ಸಾಮಾಜಿಕ ನ್ಯಾಯ, ಆರ್ಥಿಕ ಸಮಾನತೆ, ವಿಶ್ವಶಾಂತಿ, ಸ್ವಾರ್ಥತ್ಯಾಗ, ಅನುಕಂಪ ಮೊದಲಾದ ಗುಣಗಳನ್ನು ಅಳವಡಿಸಿಕೊಂಡ ಒಂದೇ ಮುಕ್ತಿಮಾರ್ಗವನ್ನು ಬೋಧಿಸಿದರು; ಅಂದಂದು ಫ್ಯಾಷನ್ನಿನಲ್ಲಿರುವ ಮೌಲ್ಯಗಳನ್ನು ಎತ್ತಿ ಹೇಳಿದರು. ಈ ಆಲಂಕಾರಿಕ ಶಬ್ದಪ್ರವಾಹ ಇಂದಿಗೂ ಹರಿದಿದೆ.
ಆದರೆ ವಿವಿಧ ಮತಗಳ ಮೂಲಗ್ರಂಥಗಳನ್ನು ಅಧ್ಯಯನ ಮಾಡಿದವರ ಕಣ್ಣಿಗೆ ಮೇಲಿನಂತೆ ಮಾತನಾಡುವ ಗಣ್ಯರು ಬಫೂನುಗಳಂತೆಯೇ ಕಂಡಾರು. ಉದಾರ ಪರಂಪರೆಯ ಹಿಂದೂಧರ್ಮ, ಬೌದ್ಧಧರ್ಮ, ಜೈನಧರ್ಮ, ಸಿಖ್ಧರ್ಮಗಳಿಗೂ ವ್ಯಕ್ತಿನಿಷ್ಠವೂ ಏಕದೇವತಾರಾಧಕವೂ ಆದ ಕ್ರೈಸ್ತಮತ-ಇಸ್ಲಾಂಗಳಿಗೂ ನಡುವೆ ಎಷ್ಟು ಮಾತ್ರವೂ ಸಾದೃಶ್ಯ ಇಲ್ಲವೆಂಬುದು ಧರ್ಮಗ್ರಂಥಗಳ ಪ್ರಾಥಮಿಕ ಅಧ್ಯಯನ ಮಾಡಿದವರಿಗೂ ಥಟ್ಟನೆ ಎದ್ದುಕಾಣುತ್ತದೆ. ಕ್ರೈಸ್ತ ಮತ್ತು ಇಸ್ಲಾಂ ಮತಗಳು ಮಾನವ ಸೋದರತೆಯನ್ನೂ ಸಾಮಾಜಿಕ ನ್ಯಾಯವನ್ನೂ ವಿಶ್ವಶಾಂತಿಯನ್ನೂ ಸ್ವಾರ್ಥತ್ಯಾಗವನ್ನೂ ಅನುಕಂಪವನ್ನೂ ಬೋಧಿಸುತ್ತವೆ – ಎಂದು ಹೇಳುವುದು ತೋಳವು ಸಸ್ಯಾಹಾರಿ ಎಂದಷ್ಟೇ ಸಮಂಜಸವಾಗುತ್ತದೆ. ಆದರೆ ಈ ಮೂಲಭೂತ ಸಂಗತಿ ರಾಜಕೀಯ ಗಣ್ಯರ ಕಕ್ಷೆಯಿಂದ ದೂರವೇ ಉಳಿಯಿತು. ಅವರ ಜಲ್ಪಗಳಿಂದ ಅಭಿವ್ಯಕ್ತವಾಗುವುದು ಸರ್ವಮತ ಸಮಾದರವಲ್ಲ; ಪ್ರತಿಯಾಗಿ ಎಲ್ಲ ಮತಗಳ ಬಗ್ಗೆ ಪೂರ್ಣ ಅಜ್ಞಾನವೇ. ಅವರ ಹೇಳಿಕೆಗಳ ತಥ್ಯವನ್ನು ಶಂಕಿಸುವವರು ಸಂಕುಚಿತ ದೃಷ್ಟಿಯವರೆನಿಸಿದರು, ಸಾಮಾಜಿಕ ಸಾಮರಸ್ಯದ ಭಂಜಕರೆನಿಸಿದರು. ಹೀಗೆ ಸರ್ವಧರ್ಮ ಸಮಭಾವವೆಂಬುದು ಭಾರತ ಸರ್ಕಾರದ ಆಶ್ರಯ ಪಡೆದ ಹೊಸದೊಂದು ಮೂಢನಂಬಿಕೆಯಾಯಿತು.
ಸರ್ಕಾರದ ಪಾತ್ರ
ಭಾರತ ಸರ್ಕಾರವು ಮೇಲಿನ ಅನಿಸಿಕೆಯನ್ನು ಹೇಳಿ ಅದನ್ನು ನಂಬುವುದನ್ನೂ ತಿರಸ್ಕರಿಸುವುದನ್ನೂ ಪ್ರಜೆಗಳ ಪಾಲಿಗೇ ಬಿಟ್ಟಿದ್ದಲ್ಲಿ ಸಮಂಜಸವಾಗುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಪ್ರತಿಯಾಗಿ, ಎಲ್ಲ ಮತಗಳ ಬೋಧನೆಯೂ ಒಂದೇ ಎಂದು ಸರ್ಕಾರವು ತಾನೇ ಸ್ಥಾಪಿಸಹೊರಟು ಅದನ್ನು ಟೀಕಿಸಿದವರನ್ನು ದಂಡಿಸಲೂ ಉಜ್ಜುಗಿಸಿತು. ಈ ಘನಕಾರ್ಯಕ್ಕಾಗಿ ಸೆಕ್ಯುಲರಿಸ್ಮ್ ಪ್ರವರ್ತಕರ ಮತ್ತು ಬುದ್ಧಿಜೀವಿಗಳ ದೊಡ್ಡ ಪಡೆಯೊಂದನ್ನೇ ಸಾಕತೊಡಗಿತು; ಇಸ್ಲಾಂ-ಕ್ರೈಸ್ತಮತಗಳಿಗೆ ಸುಣ್ಣ-ಬಣ್ಣ ಬಳಿಯುವವರಿಗೆ ಹೇರಳ ಹಣ ಕೊಟ್ಟಿತು. ಆ ಮತಗಳ ರಕ್ತಸಿಕ್ತ ಮತ್ತು ಪಾಶವೀ ಭಾಗಗಳನ್ನು ಜೋಕೆಯಿಂದ ಹೊರಗಿರಿಸಿ ಅವು ಸುಳ್ಳೆಂದು ಪ್ರತಿಪಾದಿಸಲು ಈ ಪಡೆಗಳು ಶ್ರಮಿಸಿವೆ. ಇದರ ಜೊತೆಗೇ ಭಾರತದ ಆಧ್ಯಾತ್ಮಿಕತೆಯ ಮತ್ತು ಉದಾರತೆಯ ಅಂಶಗಳನ್ನು ಅಲಕ್ಷ್ಯಕ್ಕೆ ಗುರಿಮಾಡುವ ಕೆಲಸವೂ ಈ ಪಡೆಗಳಿಂದ ನಡೆಯಿತು. ಈ ಪ್ರಕ್ರಿಯೆಯ ಫಲವಾಗಿ ಕ್ರೈಸ್ತಮತವೆಂದರೆ ಸೆರ್ಮನ್ ಆನ್ ದಿ ಮೌಂಟ್ ಮಾತ್ರ; ಇಸ್ಲಾಂ ಎಂದರೆ ಪ್ರತಿಯೊಬ್ಬರಿಗೂ ಅವರವರ ಉಪಾಸನಾ ಮಾರ್ಗ ಮತ್ತು ಧರ್ಮಾಚರಣೆಯಲ್ಲಿ ಬಲಾತ್ಕಾರಕ್ಕೆ ಸ್ಥಾನವಿಲ್ಲ – ಎಂದ ಖುರಾನಿನ (೧೦೯.೬ ಮತ್ತು ೨.೨೫೬) ಮಾತಿನ ತುಣುಕುಗಳು ಮಾತ್ರ, ಮತ್ತು ಹಿಂದೂ ಧರ್ಮವೆಂದರೆ ಬ್ರಾಹ್ಮಣ ಪ್ರಾಬಲ್ಯ, ಜಾತಿವಾದ, ಸತೀ, ಪಂಚಗವ್ಯ, ಅಸ್ಪೃಶ್ಯತೆ ಮೊದಲಾದವು ಮಾತ್ರ ಮತ್ತು ಈ ದೋಷಗಳ ವಿರುದ್ಧವೇ ಬೌದ್ಧಧರ್ಮ, ಜೈನಧರ್ಮ ಮತ್ತು ಸಿಖ್ ಧರ್ಮಗಳು ಬಂಡಾಯ ನಡೆಸಿದುದು – ಎಂಬ ವಿಚಿತ್ರ ಸಮೀಕರಣ ಏರ್ಪಟ್ಟಿತು. ಈ ಆಭಾಸಗಳೆಲ್ಲ ತಥೋಕ್ತ ಸರ್ವಧರ್ಮ ಸಮಭಾವದ ಕೂಸುಗಳೇ.
ಸ್ವೀಕರಿಸಿದವರು ಯಾರು?
ಮೇಲಣ ಸರ್ವಧರ್ಮ ಸಮಭಾವ ಕಲ್ಪನೆಯನ್ನು ಮುಸ್ಲಿಮರು, ಕ್ರೈಸ್ತರು, ನವಸಿಖ್ಖರು, ನವಬೌದ್ಧರು ಸ್ವೀಕರಿಸಿ ಬೌದ್ಧಧರ್ಮವನ್ನು ಗೌರವಿಸಿದ್ದಲ್ಲಿ ಸ್ವಲ್ಪವಾದರೂ ಸಮಾಧಾನಕ್ಕೆ ಕಾರಣವಿರುತ್ತಿತ್ತೇನೊ. ಆದರೆ ನಡೆದದ್ದು ಅದಕ್ಕೆ ವಿರುದ್ಧವೇ! ಇಸ್ಲಾಂ ಕ್ರೈಸ್ತಾದಿ ಪಂಥಗಳ ಬಗ್ಗೆ ಸರ್ವಧರ್ಮ ಸಮಭಾವವನ್ನು ಘೋಷಿಸಿ ಆಚರಿಸುವಂತೆ ಹಿಂದೂಗಳ ತಲೆತಿಂದು ಅವರನ್ನು ಬಲಾತ್ಕರಿಸಿದ್ದೂ ಆಯಿತು. ಆದರೆ ಮುಸ್ಲಿಮರು ಕ್ರೈಸ್ತರು ಮೊದಲಾದವರಿಗೆ ತಮ್ಮ ವಿಶಿಷ್ಟ ಮತಗಳನ್ನು ತಮಗೆ ತೋರಿದಂತೆ ಪ್ರಸಾರ ಮಾಡಲು ಅನುವು ಮಾಡಿಕೊಟ್ಟದ್ದಲ್ಲದೆ, ಆ ಮತಗಳವರು ಹಿಂದೂಧರ್ಮದ ಮೇಲೆ ಪ್ರಹಾರ ಮಾಡುವುದಕ್ಕೂ ಹಿಂದೂಗಳನ್ನು ಮತಾಂತರಿಸುವುದಕ್ಕೂ ಕೂಡ ಅವಕಾಶ ಮಾಡಿಕೊಡಲಾಯಿತು.
ಇವೆಲ್ಲದರ ಪರಿಣಾಮವಾಗಿ ಹಿಂದೂಗಳ ವಿರುದ್ಧವಾಗಿ ಮುಸ್ಲಿಮರು, ಕ್ರೈಸ್ತರು, ನವಸಿಖ್ಖರು, ನವಬೌದ್ಧರು, ನವಜೈನರು ಮೊದಲಾದ ತಥೋಕ್ತ ಅಲ್ಪಸಂಖ್ಯಾತರೆಲ್ಲರ ಸಂಯುಕ್ತರಂಗದ ಆವಿಷ್ಕಾರವಾಯಿತು. ಈ ಸೆಕ್ಯುಲರಿಸ್ಟ್ ಸಂಯುಕ್ತರಂಗ ನೀಡಿದ ವಿಚಿತ್ರಾರ್ಥವನ್ನು ಹಿಂದೂಗಳು ಸ್ವೀಕರಿಸಲೇಬೇಕೆಂದು ಒತ್ತಾಯಿಸಲಾಯಿತು. ಹೀಗೆ ಹಿಂದೂಗಳು ಅರಕ್ಷಿತರಾದರು.
ಹಿಂದೂಗಳೇ ಅಪರಾಧಿಗಳು!
ಸಂಗ್ರಹವಾಗಿ ಹೇಳುವುದಾದರೆ ನೆಹರುವಾದವೇ ಸರ್ವಧರ್ಮ ಸಮಭಾವವೆಂದೂ ಭಾರತೀಯ ನಮೂನೆಯ ಸೆಕ್ಯುಲರಿಸಂ ಎಂದೂ ಪ್ರವರ್ತಿತವಾಯಿತು. ಈ ವಾದದಂತೆ ಹಿಂದೂಗಳು ಇತಿಹಾಸದುದ್ದಕ್ಕೂ ತಪ್ಪುಗಳನ್ನೇ ಮಾಡಿದರು. ಯಾವುದೇ ಕಾಲದಲ್ಲಿ ಯಾರೇ ಆಕ್ರಮಣ ಮಾಡಿರಲಿ; ತಪ್ಪು ಹಿಂದೂಗಳದೇ. ಈ ಚೌಕಟ್ಟಿಗೆ ಹೊಂದುವಂತೆ ಸ್ವಾತಂತ್ರ್ಯ ಆಂದೋಲನದ (೧೮೮೫-೧೯೪೭) ಚರಿತ್ರೆಯನ್ನು ತಿರುಚಲಾಯಿತು; ದೇಶವಿಭಜನೆಯ ದುರಂತಕ್ಕೂ ಹಿಂದೂಗಳೇ ಕಾರಣ ಎಂಬ ಮಂಡನೆಯಾಯಿತು. ಮುಸ್ಲಿಂ ಲೀಗ್ನ ಪಾಕಿಸ್ತಾನ ಬೇಡಿಕೆಯನ್ನು ಹಿಂದೂ ಮಹಾಸಭಾ, ಆರ್ಯಸಮಾಜ, ರಾಷ್ಟ್ರೀಯ ಸ್ವಯಂಸೇವಕ ಸಂಘ ಮೊದಲಾದ ಹಿಂದೂ ಸಂಘಟನೆಗಳು ತೀಕ್ಷ್ಣವಾಗಿ ವಿರೋಧಿಸಿದ್ದುದು ಈ ಭಾರತೀಯ ಸೆಕ್ಯುಲರಿಸ್ಟರಿಗೆ ಗೋಚರಿಸಲೇ ಇಲ್ಲ. ಬ್ರಿಟಿಷ್ ಭಾರತದಲ್ಲಿದ್ದ ಶೇ. ೯೭ರಷ್ಟು ಮುಸ್ಲಿಮರು ೧೯೪೬ರಲ್ಲಿ ವಿಭಜನೆಯನ್ನು ಸ್ವಾಗತಿಸಿದ್ದರು; ಮುಸ್ಲಿಂ ಲೀಗಿನ ವಾದಕ್ಕೆ ಕಮ್ಯೂನಿಸ್ಟ್ ಪಕ್ಷವು ಸೈದ್ಧಾಂತಿಕವಾದ ಭೂಮಿಕೆಯನ್ನು ಜೋಡಿಸಿಕೊಟ್ಟಿತ್ತು; ಮುಸ್ಲಿಮರನ್ನೂ ಇಸ್ಲಾಮನ್ನೂ ಟೀಕಿಸಿದ ಹಿಂದೂಗಳ ಮೇಲೆ ಸಮಾಜವಾದಿಗಳು ವಿಷಕಾರಿದ್ದರು; ಜೂನ್ ೧೯೪೬ರಲ್ಲಿ ಮೌಂಟ್ಬ್ಯಾಟನ್ ಘೋಷಿಸಿದ ವಿಭಜನೆಯನ್ನು ಅಂಗೀಕರಿಸಿದುದು ಅ.ಭಾ.ರಾಷ್ಟ್ರೀಯ ಕಾಂಗ್ರೆಸ್; ದೇಶ ವಿಭಜನೆಯಾಗುವುದಾದರೆ ನನ್ನ ಹೆಣದ ಮೇಲೇ ಎಂದು ಪಂಜಾಬ್, ಸಿಂಧ್, ಬಂಗಾಳಗಳಲ್ಲಿ ಹಿಂದೂಗಳಿಗೆ ಮಾತುಕೊಟ್ಟಿದ್ದ ಗಾಂಧಿಯವರೇ ಕೊನೆ ಘಳಿಗೆಯಲ್ಲಿ ವಿಭಜನೆಯನ್ನು ನಿವಾರಿಸದೆ ಹೋದರು. ಈ ವಾಸ್ತವಗಳಾವುವೂ ಭಾರತೀಯ ಸೆಕ್ಯುಲರಿಸ್ಟರ ಕಣ್ಣಿಗೆ ಬೀಳಲೇ ಇಲ್ಲ! ಅವರು ಎಲ್ಲಕ್ಕೂ ಹಿಂದೂಗಳನ್ನೇ ಅಪರಾಧಿಗಳಾಗಿ ಮಾಡುತ್ತ ಮುಂದುವರಿದರು. ಕುರಿಯು ತಾನು ಕುರಿಯಾಗಿರುವ ಕಾರಣದಿಂದಲೇ ತೋಳಕ್ಕೆ ಪ್ರಚೋದನೆ ನೀಡಿದೆ ಎಂಬಂಥ ನಾಝಿವಾದವೇ ಭಾರತೀಯ ಸೆಕ್ಯುಲರಿಸ್ಟರ ತಂತ್ರವಾಯಿತು.
ಮತೀಯಾಧಿಪತ್ಯ
ಹೀಗೆ ಪಂ. ನೆಹರು ಮತ್ತು ಇತರ ಪಕ್ಷಗಳು ಹುಟ್ಟುಹಾಕಿದ ಭಾರತೀಯ ಸೆಕ್ಯುಲರಿಸಂ ಹಿಂದೂವಿರೋಧಿ ಬಣಗಳನ್ನು ಪ್ರಬಲಗೊಳಿಸುವುದರಲ್ಲಿ ಪರ್ಯವಸಾನವಾಯಿತು. ಉದಾರತೆಯನ್ನೂ ಉಪಾಸನಾಸ್ವಾತಂತ್ರ್ಯವನ್ನೂ ಮುಖ್ಯ ಲಕ್ಷಣವಾಗುಳ್ಳ ಹಿಂದೂಧರ್ಮವೇ ಈ ಹೊಸ ಪಡೆಗಳ ಪ್ರಹಾರಗಳನ್ನು ಎದುರಿಸಬೇಕಾಯಿತು. ಹೀಗೆ ಸೆಕ್ಯುಲರಿಸಂ ಹೆಸರಿನಲ್ಲಿ ಭಾರತ ಸರ್ಕಾರದ ಮೂಲಕ ಪ್ರವರ್ತಿತವಾಗಿರುವುದು ಒಂದು ನಮೂನೆಯ ಮತೀಯಾಧಿಪತ್ಯವೇ (ಥಿಯಾಕ್ರಸಿ) ಎಂದು ನಾವು ಗುರುತಿಸಬೇಕು.
ಭಾರತದ ರಾಜಕಾರಣದಲ್ಲಿ ಹೆಚ್ಚಿನ ಪ್ರಭಾವ ಪಡೆದುಕೊಂಡ ಕಮ್ಯೂನಿಸ್ಟರು, ಸಮಾಜವಾದಿಗಳು, ನಾನಾ ನಮೂನೆಯ ವಾಮಪಂಥಿಗಳು – ಈ ಭಾರತೀಯ ನಮೂನೆಯ ಮತೀಯಾಧಿಪತ್ಯದ ಪ್ರವರ್ತಕರು. ಮುಸ್ಲಿಂ ಮತ್ತು ಕ್ರೈಸ್ತ ದೇಶಗಳಲ್ಲಿ ವಾಮಪಂಥೀಯರು ಸಾಮಾನ್ಯವಾಗಿ ಮತೀಯಾಧಿಪತ್ಯವನ್ನು ಎಂದಿನಿಂದಲೂ ವಿರೋಧಿಸಿದ್ದಾರೆ. ಅವರು ಮತೀಯಾಧಿಪತ್ಯದ ಅಪ್ರತಿಮ ಪೋಷಕರಾಗಿರುವುದು ಭಾರತದಲ್ಲಿ ಮಾತ್ರ.
ವೈಚಾರಿಕತೆಗೆ ನಿಷೇಧ
ಮೇಲಣ ಭಾರತೀಯ ನಮೂನೆಯ ಥಿಯಾಕ್ರಸಿಯ ಪೂರ್ಣಲಾಭ ಪಡೆದು ಮುಸ್ಲಿಮರು ಇಸ್ಲಾಂ, ಅದರ ಪ್ರವಾದಿ, ಅದರ ಧರ್ಮಗ್ರಂಥಗಳು, ಅದರ ಚರಿತ್ರೆ ಮತ್ತು ಚಾರಿತ್ರಿಕ ಪುರುಷರು, ಅದರ ನೈತಿಕ-ವ್ಯಾವಹಾರಿಕ ನಿರ್ದೇಶನಗಳು – ಇವುಗಳ ವಸ್ತುನಿಷ್ಠ ಪರಾಮರ್ಶೆಯನ್ನೇ ನಿರಾಕರಿಸಿದ್ದಾರೆ, ಬೀದಿಗಲಭೆಗಳನ್ನು ನಡೆಸಿದ್ದಾರೆ, ಮುಗ್ಧ ಹಿಂದೂಗಳನ್ನೂ ಪೊಲೀಸರನ್ನೂ ಕೊಲೆ ಮಾಡಿದ್ದಾರೆ, ಇಸ್ಲಾಮಿಗೆ ಅಪಮಾನವಾಗಿದೆ ಎಂದು ತಮ್ಮ ನಾಯಕರಿಂದ ಕರೆ ಬಂದೊಡನೆ ಸಾರ್ವಜನಿಕ ಹಾಗೂ ಖಾಸಗೀ ಆಸ್ತಿಯ ಧ್ವಂಸ ಮಾಡಿದ್ದಾರೆ. ಹೀಗೆ ಭಾರತೀಯ ದಂಡಸಂಹಿತೆಯ (ಪೀನಲ್ ಕೋಡ್) ೧೫೩ ಮತ್ತು ೨೯೫ನೇ ವಿಧಿಗಳು, ಕಸ್ಟಮ್ಸ್ ಕಾನೂನಿನ ಅಂಥವೇ ವಿಧಿಗಳು – ಇವನ್ನು ಬಳಸಿ ಎಷ್ಟೋ ಪುಸ್ತಕಗಳ, ಲೇಖನಗಳ, ಚಲನಚಿತ್ರಗಳ ಮೇಲೆ ಸರ್ಕಾರದ ನಿಷೇಧ ಜಾರಿಯಾಗುವಂತೆ ಮಾಡಿದ್ದಾರೆ. ಇದರ ಜೊತೆಗೇ ಮಿಷನರಿಗಳ, ಆತಂಕವಾದಿಗಳ, ಭಯೋತ್ಪಾದಕರ ಪಡೆಗಳನ್ನು ನಿರ್ಮಾಣ ಮಾಡಿ ಅವಕ್ಕೆ ಆಶ್ರಯ ನೀಡುವ ಮುಖ್ತಾಬ್-ಮದ್ರಸಾಗಳ ದೊಡ್ಡ ಜಾಲವನ್ನೇ ನೆಲೆಗೊಳಿಸಿದ್ದಾರೆ. ಈ ವ್ಯಾಪಕ ಸಂರಚನೆಯೇ ರಾಜಕೀಯ ಪಕ್ಷಗಳ ವೋಟ್ ಬ್ಯಾಂಕ್ ಎನಿಸಿರುವುದು.
ಕ್ರೈಸ್ತರ ನಿಲವು
ಭಾರತದಲ್ಲಿ ಕ್ರೈಸ್ತರು ಸಾಮಾನ್ಯವಾಗಿ ಮುಸ್ಲಿಮರಂತೆ ವರ್ತಿಸುವುದಿಲ್ಲ. ಕ್ರೈಸ್ತ ಸಿದ್ಧಾಂತಗಳನ್ನೂ ಸಂಸ್ಥೆಗಳನ್ನೂ ಯೇಸುಕ್ರಿಸ್ತನನ್ನೂ ಕೂಡ ಯಾರು ಬೇಕಾದರೂ ಟೀಕಿಸಲು ಅವಕಾಶ ಇದೆ. ಇದಕ್ಕೆ ಅಡ್ಡಿ ಬಂದಿರುವುದು ಸರ್ವಧರ್ಮ ಸಮಭಾವದಿಂದ ಜನಿಸಿದ ಸಂಕೋಚವಷ್ಟೆ. ಆದರೆ ಭಾರತೀಯ ಸೆಕ್ಯುಲರಿಸಂಗೆ ಧಕ್ಕೆಯೊದಗಿದೆಯೆಂದು ಬೊಬ್ಬೆಹಾಕುವ ಕೆಲಸವನ್ನು ಕ್ರೈಸ್ತನಾಯಕರೂ ಮಾಡುತ್ತಾರೆ.
ಒಂದು ದೃಷ್ಟಿಯಿಂದ ಕ್ರೈಸ್ತಮತವು ಇಸ್ಲಾಂಗಿಂತ ಅನುಕೂಲ ಸ್ಥಿತಿಯಲ್ಲಿದೆ. ಶತಮಾನಗಳುದ್ದಕ್ಕೂ ಮುಸ್ಲಿಮರು ನಡೆಸಿದ ದಾಂಧಲೆಗಳ ನೆನಪು ಹಿಂದೂಗಳ ಮನಸ್ಸಿನಲ್ಲಿ ಅಚ್ಚೊತ್ತಿದೆ. ಆದರೆ ಅಷ್ಟೊಂದು ಹಾನಿ ಮಾಡುವಷ್ಟು ಸಮಯ ಕ್ರೈಸ್ತರಿಗೆ ದೊರೆತಿರಲಿಲ್ಲ. ಕ್ರೈಸ್ತರು ಈ ದೇಶಕ್ಕೆ ಬಂದದ್ದೇ ತಡವಾಗಿ; ಮತ್ತು ಅವರ ಹೆಚ್ಚಿನ ಪ್ರಭಾವವಿದ್ದದ್ದೂ ಪೋರ್ತುಗೀಸ್ – ಫ್ರೆಂಚ್ ಆಧಿಪತ್ಯದ ಸಣ್ಣ ಪ್ರದೇಶಗಳಲ್ಲಿ ಮಾತ್ರ. ಬ್ರಿಟಿಷರಿಗಾದರೋ ಯೇಸುಕ್ರಿಸ್ತನಿಗೆ ದೊಡ್ಡ ವೇದಿಕೆ ನಿರ್ಮಿಸುವುದಕ್ಕಿಂತ ಹೆಚ್ಚಾಗಿ ಆಸಕ್ತಿ ಇದ್ದದ್ದು ಬ್ರಿಟಿಷ್ ಸಾಮ್ರಾಜ್ಯವನ್ನು ದೃಢಪಡಿಸುವುದರಲ್ಲಿ. ಈ ಕಾರಣದಿಂದ – ವಿಶೇಷವಾಗಿ ೧೮೫೭ರ ಸಂಗ್ರಾಮದ ಅನಂತರ – ಕ್ರೈಸ್ತ ಮಿಷನರಿಗಳ ಚಟುವಟಿಕೆಯ ಮೇಲೆ ಬ್ರಿಟಿಷರು ನಿಯಂತ್ರಣ ಹೇರಿದರು. ಇದಕ್ಕೆ ಪೋಷಕವೆನಿಸುವಂತೆ ರಾಜಾ ರಾಮಮೋಹನರಾಯ್ರಿಂದ ಗಾಂಧಿಯವರವರೆಗಿನ ಪ್ರಮುಖರೆಲ್ಲ ಯೇಸುಕ್ರಿಸ್ತನನ್ನು ಕೀರ್ತಿಸುವ ಆವೇಶಕ್ಕೆ ಒಳಗಾಗಿದ್ದರು. ಕ್ರೈಸ್ತ ವಿದ್ಯಾಸಂಸ್ಥೆಗಳಲ್ಲಿ ಶಿಕ್ಷಣ ಪಡೆದ ಅಸಂಖ್ಯ ಹಿಂದೂಗಳು ಕ್ರೈಸ್ತಮತವೆಂದರೆ ಮಾನವಸೇವೆ ಎಂದೂ, ಇಂಥ ಸೇವೆಯನ್ನು ಹಿಂದೂಗಳು ಎಂದೂ ಮಾಡಿಯೇ ಇಲ್ಲವೆಂದೂ ನಂಬಿದರು. ಈ ಹಿನ್ನೆಲೆಯಲ್ಲಿ ಅಪರೂಪವಾಗಿ ಯಾರಾದರೂ ಕ್ರೈಸ್ತಮತವನ್ನು ಸೈದ್ಧಾಂತಿಕವಾಗಿ ಟೀಕಿಸತೊಡಗಿದರೆ ಯೇಸುವಿನ ಮತ್ತು ಮದರ್ ಥೆರೆಸಾ ಹೆಸರನ್ನು ಮುಂದೊಡ್ಡಿ ಆ ಟೀಕೆಗಳನ್ನು ಅಣಗಿಸಬಹುದು ಎಂದು ಕ್ರೈಸ್ತರು ವಿಶ್ವಾಸದಿಂದಿರುವುದು ಸಹಜ. ಹೇಗೂ ಕ್ರೈಸ್ತಮತವನ್ನು ಆಳವಾಗಿ ಸವಿವರವಾಗಿ ಅಧ್ಯಯನ ಮಾಡಿದ ಹಿಂದೂಗಳು ಅತ್ಯಂತ ವಿರಳ. ಕ್ರೈಸ್ತ ಪ್ರಚಾರಯಂತ್ರವಾದರೋ ವಿದೇಶಗಳಿಂದ ಅಪಾರ ಹಣ ಪಡೆದು ಎಲ್ಲೆಡೆ ಹರಡಿಕೊಂಡಿರುವ ಬೃಹಜ್ಜಾಲ. ಪಾಶ್ಚಾತ್ಯ ಜಗತ್ತು ಕ್ರೈಸ್ತಮತವನ್ನು ಅನುಪಯುಕ್ತವೆಂದು ತಿರಸ್ಕರಿಸಿದ್ದರೂ ಅದನ್ನು ಇತರ ಎಷ್ಟೋ ಕಳಪೆ ಸರಕುಗಳಂತೆ ಮೂರನೇ ವಿಶ್ವದ ದೇಶಗಳಿಗೆ ರಫ್ತು ಮಾಡುವ ಕೆಲಸವನ್ನು ಮುಂದುವರಿಸಿದೆ. ಭಾರತದ ಕ್ರೈಸ್ತರು ಹಿಂದೂ ಮೂಲಭೂತವಾದಿಗಳಿಂದ ತಮಗೆ ಹಾನಿಯಾಗುತ್ತಿದೆ ಎಂದು ಆವುಟ ಎಬ್ಬಿಸಿದಾಗೆಲ್ಲ ಅವರ ನೆರವಿಗೆ ಧಾವಿಸಲು ಪಾಶ್ಚಾತ್ಯ ಜಗತ್ತು ಸಿದ್ಧವಾಗಿರುತ್ತದೆ.
ಹಿಂದೂಧರ್ಮದ ಬಗ್ಗೆ ಅಪಕಲ್ಪನೆ
ಸರ್ವಧರ್ಮ ಸಮಭಾವವೆಂಬುದು ಹಿಂದೂಸ್ಥಾನದ ಪ್ರಾಚೀನ ಸಿದ್ಧಾಂತವೆಂದೂ ಅದು ಎಲ್ಲ ಹಿಂದೂ ಪಂಥಗಳಿಂದಲೂ ಅಂಗೀಕೃತವಾಗಿ ಎಲ್ಲೆಡೆ ಆಚರಣೆಯಲ್ಲಿ ಇದ್ದದ್ದೆಂದೂ ಹಿಂದೂ ಬುದ್ಧಿಜೀವಿಗಳು ಪ್ರಾಯಶಃ ನಂಬಿದ್ದಾರೆ. ಇದಕ್ಕಿಂತ ತಪ್ಪುಕಲ್ಪನೆ ಬೇರೆಯಿಲ್ಲ. ಸರ್ವಧರ್ಮ ಸಮಭಾವವೆಂಬ ಮಾತಾಗಲಿ ಕಲ್ಪನೆಯಾಗಲಿ ಯಾವುದೇ ಹಿಂದೂ ಶಾಸ್ತ್ರಗ್ರಂಥದಲ್ಲಿ ಕಾಣುವುದಿಲ್ಲ. ಆ ಪದಪುಂಜವನ್ನು ಸೃಷ್ಟಿಸಿ ಹಿಂದೂಗಳಿಗೆ ಅದನ್ನು ವಿಧಿಸಿದವರು ಗಾಂಧಿಯವರು.
ಹಿಂದೂಧರ್ಮದ ಇತಿಹಾಸದಲ್ಲಿ ಒಂದೆರಡು ಸರ್ವದರ್ಶನಸಂಗ್ರಹಗಳು ಕಾಣಸಿಗುತ್ತವೆ. ಅವು ವಿವಿಧ ದರ್ಶನಗಳ ಶಾಸ್ತ್ರವಿವರಣೆಗಳ ಸಂಕಲನಗಳಷ್ಟೆ. ಆದರೆ ಅಂಥ ಯಾವುದೇ ಗ್ರಂಥದಲ್ಲಿ ಎಲ್ಲ ದರ್ಶನ ಪ್ರಸ್ಥಾನಗಳೂ ಒಂದೇ ಎಂದಾಗಲಿ ಎಲ್ಲವೂ ಸಮಾನ ತಾತ್ತ್ವಿಕ ಅಧಿಷ್ಠಾನ ಪಡೆದವೆಂದಾಗಲಿ ಎಲ್ಲಿಯೂ ಹೇಳಿಲ್ಲ. ವಿವಿಧ ದೃಷ್ಟಿಕೋನಗಳ ಪರಿಚಯದೊಡನೆ ಸಂಕಲನಕಾರನ ಟೀಕೆಯನ್ನೂ ಅವು ಒಳಗೊಂಡಿರುತ್ತವೆ. ಚರ್ಚೆಯ, ಶಾಸ್ತ್ರಾರ್ಥದ ಪರಂಪರೆ ಹಿಂದೂಗಳಲ್ಲಿ ವೇದಕಾಲದಿಂದಲೇ ಇದೆ. ಅಲ್ಲಿಂದೀಚೆಗೆ ಸನಾತನಧರ್ಮದ ಪ್ರಮುಖ ಪ್ರಸ್ಥಾನಗಳಾದ ಬೌದ್ಧದರ್ಶನ, ಜೈನದರ್ಶನ, ವೇದಾಂತ, ಶೈವ-ಶಾಕ್ತ-ವೈಷ್ಣವ ಪಂಥಗಳು – ಇವುಗಳ ನಡುವೆ ದೀರ್ಘ ಶಾಸ್ತ್ರೀಯ ತರ್ಕಸಂವಾದಗಳು ದೀರ್ಘಕಾಲ ನಡೆದಿವೆ. ಈ ಒಂದೊಂದು ಪಂಥದಡಿಯಲ್ಲಿಯೂ ಅದನ್ನು ಸಮರ್ಥಿಸುವ ಮತ್ತು ಇತರ ಪಂಥಗಳನ್ನು ಖಂಡಿಸುವ ಅಪಾರ ಸಾಹಿತ್ಯ ನಿರ್ಮಾಣಗೊಂಡಿದೆ. ಈ ಒಂದೊಂದು ಪಂಥದ ಉಪಶಾಖೆಗಳ ನಡುವೆಯೂ ಎಷ್ಟೋ ವೇಳೆ ಈ ವಿವಾದಗಳಲ್ಲಿ ಕೆಳಮಟ್ಟದ ನಿಂದನೆಗಳೂ ಉಂಟು. ಮತ್ತು ಶಾಸ್ತ್ರಾರ್ಥವು ಗ್ರಂಥಗಳಿಗಷ್ಟೆ ಸೀಮಿತವಿರಲಿಲ್ಲ. ರಾಜರ ಆಸ್ಥಾನಗಳಲ್ಲೂ ಮಹಾಜನರ ಮತ್ತು ವಿದ್ವಾಂಸರ ಸಭೆಗಳಲ್ಲೂ ಇಂಥ ಚರ್ಚೆಗಳು ನಡೆಯುತ್ತಿದ್ದವು. ಒಂದು ಪಂಥದವರು ಇನ್ನೊಂದು ಪಂಥದವರನ್ನು ಶಬ್ದಗಳಿಂದ ಎಷ್ಟು ಸಾಧ್ಯವೋ ಅಷ್ಟೂ ಆವೇಶದಿಂದ ಟೀಕಿಸುತ್ತಿದ್ದುದುಂಟು.
ಆದರೆ ಶತಮಾನಗಳ ಶಾಸ್ತ್ರಾರ್ಥ ಪರಂಪರೆಯಲ್ಲಿ ಯಾವುದೋ ಪಂಥ ಅಸ್ತಿತ್ವದಲ್ಲೇ ಇರಬಾರದು ಎಂಬಂತೆ ಅದರ ವಿರುದ್ಧ ಇನ್ನೊಂದು ಪಂಥದವರು ಬೀದಿ ಮೆರವಣಿಗೆ ನಡೆಸಿದಂಥ ಉದಾಹರಣೆಗಳು ದೊರೆಯವು. ಇಂಥ ಕ್ರಮಗಳನ್ನು ಜಾರಿಗೊಳಿಸಿದ್ದು ಇಸ್ಲಾಂ.
ಕಬೀರ ಪಂಥ
ಅದರೆ ಪಾರಂಪರಿಕವಾಗಿ ಇಸ್ಲಾಮನ್ನು ಒಂದು ಧರ್ಮವೆಂದು ಹಿಂದೂಧರ್ಮವು ಎಂದೂ ಅಂಗೀಕರಿಸಲಿಲ್ಲ. ಇಸ್ಲಾಂ ಕೂಡ ಒಂದು ಉಪಾಸನಾಮಾರ್ಗ ಎಂದು ಹೇಳಿ ಅದು ಹಿಂದೂಧರ್ಮಕ್ಕೆ ಸದೃಶವಾದದ್ದು, ರಾಮ-ರಹೀಮರು ಸಮಾನ, ವೇದ-ಖುರಾನ್ಗಳು ಸಮಾನ, ಕಾಶೀ-ಕಾಬಾಗಳೂ ಪಂಡಿತ-ಮುಲ್ಲಾಗಳೂ ಸಮಾನ – ಎಂಬ ರೀತಿಯ ಸಮೀಕರಣಗಳು ಪ್ರಚಲಿತಗೊಂಡದ್ದು ಹದಿನಾಲ್ಕನೆ ಶತಮಾನದಲ್ಲಿ ಕಬೀರನ ನಿರ್ಗುಣೀ ಸಂತಮತ ಬಂದ ಮೇಲೆಯೇ. ಆದರೆ ಕಬೀರ ಪಂಥವು ಇಂಥ ಸಮೀಕರಣಗಳಿಗೆ ಚಾಲನೆಯಿತ್ತದ್ದು ಇಸ್ಲಾಂ ಮತ್ತು ಹಿಂದೂಧರ್ಮ ಎರಡರಲ್ಲಿಯೂ ರೂಢವಾಗಿದ್ದ ಬಾಹ್ಯಕಲಾಪ – ಕಟ್ಟಳೆಗಳನ್ನು ತುಚ್ಛೀಕರಿಸಿ ಆಧ್ಯಾತ್ಮಿಕ ಸಾಧನೆಯನ್ನೂ ಸದ್ಗುರು ಮಹಿಮೆಯನ್ನೂ ಎತ್ತಿಹಿಡಿಯುವ ಆಶಯದಿಂದ. ಉಳಿದಂತೆ ಹೆಚ್ಚಿನಂಶದಲ್ಲಿ ಕಬೀರನ ಸಂತಮತವು ಪುರಾಣಗಳಿಂದಲೂ ವಿಶೇಷವಾಗಿ ಭಾಗವತದಿಂದಲೂ ನಿಷ್ಪನ್ನಗೊಂಡ ಒಂದು ವೈಷ್ಣವ ಮತವೇ. ಅಪರೂಪಕ್ಕೊಮ್ಮೆ ಮನ್ಸೂರ್ ಅಲ್-ಹಲಾಜ್, ಅಬೂ ಯಾಜಿದ್, ಆದಂ ಸುಲ್ತಾನರಂತಹ ಸೂಫಿಗಳ ಪ್ರಸ್ತಾವ ಬರುತ್ತದೆ. ಆದರೆ ಆ ಸೂಫಿಗಳು ಆಮೇಲಿನ ಕಾಲದಲ್ಲಿ ಪ್ರಾಮುಖ್ಯ ಪಡೆದ ಸಿಲ್ಸಿಲಾ ಸೂಫಿಗಳಿಂದ ಪೂರ್ಣ ಭಿನ್ನರಾಗಿದ್ದವರೇ.
ಕಬೀರನ ಸಂತಮತ ಕೆಲವು ಶಾಖೆಗಳಾಗಿ ಉತ್ತರಭಾರತದಲ್ಲಿ ನೆಲೆಯೂರಿತು. ದಕ್ಷಿಣದಲ್ಲಿ ಅವು ಅಷ್ಟಾಗಿ ಕಾಣಿಸಿಕೊಳ್ಳಲಿಲ್ಲವೆಂದೇ ಹೇಳಬಹುದು. ಉತ್ತರದಲ್ಲಿಯೂ ಈ ಮತದ ಹೆಚ್ಚಿನ ಅನುಯಾಯಿಗಳು ಸಮಾಜದ ಕೆಲವು ಕೆಳವರ್ಗದ ಸಮುದಾಯಗಳಷ್ಟೆ. ಈ ಸಮದಾಯಗಳಲ್ಲಿ ಪೌರಾಣಿಕ ರೂಢಿಗಳು ಕಬೀರನಿಗಿಂತ ಹಿಂದಿನ ಕಾಲದಲ್ಲಿಯೇ ನೆಲೆಸಿದ್ದವು. ಕೆಲವೊಮ್ಮೆ ಏಕದೇವ-ವಾದ, ಗುರು-ವಾದ, ಬ್ರಾಹ್ಮಣವಿರೋಧ ಕಂಡರೂ ಒಟ್ಟಿನ ಮೇಲೆ ಸಂತಮತವು ಹಿಂದೂ ಮುಖ್ಯಧಾರೆಗೇ ಹೊಂದಿಕೊಂಡಿತು. ಹೀಗಿದ್ದರೂ ಹಿಂದೂಗಳ ಎಲ್ಲ ಜನವರ್ಗಗಳಲ್ಲಿ ಹರಡಿದ್ದ ಭಕ್ತಿಪಂಥದವರು ಸಂತಮತವನ್ನು ನಿಕೃಷ್ಟವಾಗಿಯೇ ಕಾಣುತ್ತಿದ್ದರು. ಆದರೆ ಸಂತಮತದ ಅನುಯಾಯಿಗಳಾರೂ ಇಸ್ಲಾಮಿಗೆ ಮತಾಂತರಗೊಂಡ ನಿದರ್ಶನಗಳಿಲ್ಲ. ಇಸ್ಲಾಮಿಗೆ ಹಿಂದೆಯೇ ಪರಿವರ್ತಿತರಾಗಿದ್ದ ಹಲವರು (ದಾದೂ, ಸಾಧನಾ ಮೊದಲಾದವರು) ಸಂತಮತದ ಅನುಯಾಯಿಗಳಾದರು ಎಂದು ತಿಳಿದಿದೆ.
ಹೀಗಿರುವುದರಿಂದ ಈಗಿನ ಅರ್ಥದ ಸರ್ವಧರ್ಮ ಸಮಭಾವ ಕಲ್ಪನೆಯು ಸಂತಮತದಿಂದ ಉತ್ಪನ್ನವಾಯಿತೆಂದು ಹೇಳಲಾಗದು. ಏಕೆಂದರೆ ಸಂತಮತದಲ್ಲಿ ಧ್ವನಿತವಾದದ್ದು ಎಲ್ಲ ಮತಗಳ ಬಗೆಗೆ ಸಮಾನ ಆದರವಲ್ಲ, ಪ್ರತಿಯಾಗಿ ಹಿಂದೂಧರ್ಮ, ಇಸ್ಲಾಂ ಸೇರಿದಂತೆ ಎಲ್ಲ ಮತಗಳ ಬಾಹ್ಯಾಚರಣೆ-ಕಲಾಪಗಳ ಬಗೆಗೆ ಸಮಾನ ತಾತ್ಸಾರ.
ಬ್ರಹ್ಮಸಮಾಜ, ರಾಮಕೃಷ್ಣ ಪಂಥ
ಈಗಿನ ಅರ್ಥದ ಸರ್ವಧರ್ಮ ಸಮಭಾವದ ಮೊದಲ ಸೂಚನೆಗಳು ಕಾಣುವುದು ಬ್ರಹ್ಮಸಮಾಜದಲ್ಲಿ. ಅದರ ಸ್ಥಾಪಕ ರಾಜಾ ರಾಮಮೋಹನ ರಾಯ್. ಕೆಲಕಾಲ ಇಸ್ಲಾಮೀ ಏಕದೇವ-ವಾದವನ್ನೂ ಕೆಲಕಾಲ ಯೇಸುಕ್ರಿಸ್ತನ ಮಹಿಮೆಯನ್ನೂ ಅವರು ಕೊಂಡಾಡಿದರು. ಅವರು ಈ ಅನ್ಯಮತಗಳ ಏಕದೇವ-ವಾದವನ್ನು ಉಪನಿಷತ್ತುಗಳ ಅದ್ವೈತವಾದದೊಡನೆ ಸಮೀಕರಿಸಿ ಗೊಂದಲ ಮಾಡಿಕೊಂಡರು. ಆದರೆ ಒಟ್ಟಾರೆ ಹಿಂದೂಧರ್ಮಕ್ಕೆ ನಿಷ್ಠರಾಗಿ ಉಳಿದರು; ಇಸ್ಲಾಮೀ-ಕ್ರೈಸ್ತ ಮಿಷನರಿಗಳ ಚಟುವಟಿಕೆಗಳನ್ನು ಪ್ರಬಲವಾಗಿ ಖಂಡಿಸಿದರು. ಕೇಶವಚಂದ್ರ ಸೇನ್ರವರನ್ನೂ ಸರ್ವಧರ್ಮ ಸಮಭಾವದ ಸಮರ್ಥಕರೆಂದು ಹೇಳಲಾಗದು. ಆತನಾದರೋ ತಮ್ಮದೇ ಹೊಸ ಪಂಥವೊಂದರ (ನವವಿಧಾನ) ಪ್ರವಾದಿಯೆಂದು ತಮ್ಮನ್ನು ಭಾವಿಸಿದರು; ತಮ್ಮದು ಎಲ್ಲ ಮತಗಳಿಗಿಂತ ಮೇಲ್ಮಟ್ಟದ್ದೆಂದು ಕಲ್ಪಿಸಿಕೊಂಡು ವಿಚಿತ್ರ ಮಂಡನೆಗಳನ್ನು ಮಾಡಿದರು. ಅದು ಹೇಗಾದರಿರಲಿ; ಬ್ರಹ್ಮಸಮಾಜದ ಪ್ರಭಾವವು ಬಂಗಾಳದ ಹಲ ಕೆಲ ಮಂದಿಗಷ್ಟೆ ಸೀಮಿತಗೊಂಡಿತು. ಅದರ ಒಂದು ಉಪಶಾಖೆಯಾದ ಆದಿಬ್ರಹ್ಮಸಮಾಜ ಬಹುಮಟ್ಟಿಗೆ ಹಿಂದೂಧರ್ಮದೊಡನೆಯೇ ತನ್ನನ್ನು ಗುರುತಿಸಿಕೊಂಡಿತು. ಅನಂತರ ಬಂದ ರವೀಂದ್ರನಾಥ ಠಾಕೂರರ ಕವನಗಳ ತುಂಬ ಕಾಣುವುದು ವೈದಿಕ ಪ್ರತಿಮೆಗಳು ಮತ್ತು ವೈಷ್ಣವ ಭಕ್ತಿಯೇ.
ಆದರೆ ಕೇಶವಚಂದ್ರಸೇನ್ರವರ ಪ್ರಯತ್ನವು ಪೂರ್ಣ ವ್ಯರ್ಥವಾಗಲಿಲ್ಲ. ಅದರ ಎಳೆಗಳನ್ನು ಸ್ವಾಮಿ ವಿವೇಕಾನಂದರ ನಿರ್ವಾಣಾನಂತರ ಉಳಿದಿದ್ದ ಶ್ರೀರಾಮಕೃಷ್ಣಾನುಯಾಯಿಗಳು ಹೆಕ್ಕಿಕೊಂಡರು. ಉತ್ತರೋತ್ತರ ಕಥಾಮೃತ (ಗಾಸ್ಪೆಲ್), ಶ್ರೀರಾಮಕೃಷ್ಣಜೀವನಚರಿತ್ರೆ ಮೊದಲಾದ ಶ್ರೇಷ್ಠ ಗ್ರಂಥಗಳನ್ನು ಸಂಕಲನ ಮಾಡಿದ ಶ್ರೀರಾಮಕೃಷ್ಣಗುರುಬಂಧುಗಳು ಕೇಶವಚಂದ್ರರ ತಂಡದವರು. ಎಲ್ಲ ಮತಗಳ ಸಮನ್ವಯ ಕಲ್ಪನೆಯನ್ನು ಅವರು ಕೇಶವಚಂದ್ರರಿಂದ ಪಡೆದಿದ್ದರು; ಆದ್ದರಿಂದ ಕ್ರೈಸ್ತಮತ ಇಸ್ಲಾಂ ಸೇರಿದಂತೆ ಎಲ್ಲ ಮತಗಳ ಸಾರವನ್ನು ತಮ್ಮ ಅವತಾರದಲ್ಲಿ ಗರ್ಭೀಕರಿಸಿಕೊಂಡ ಶ್ರೀರಾಮಕೃಷ್ಣರನ್ನು ಆದರ್ಶವಾಗಿ ಸ್ವೀಕರಿಸುವುದು ಅವರಿಗೆ ಕಷ್ಟವಾಗಲಿಲ್ಲ. ಹೀಗೆ ಕ್ರಮೇಣ ರಾಮಕೃಷ್ಣ ಪಂಥ ರೂಪತಳೆಯಿತು. ಆದರೆ ಈ ಹೊಸ ಪಂಥವನ್ನೂ ಸರ್ವಧರ್ಮ ಸಮಭಾವವೆಂದು ಕರೆಯಲಾಗದು. ಏಕೆಂದರೆ ಇದೂ ಒಂದು ದೃಷ್ಟಿಯಿಂದ ಎಲ್ಲ ಮತಾಚರಣೆಗಳೂ ಕ್ಷುದ್ರವೆಂಬ ಕೇಶವಚಂದ್ರರ ನಿಲುಮೆಯ ಒಂದು ಮಾರ್ಪಟ್ಟ ರೂಪವಷ್ಟೆ ಆಗಿತ್ತು. ಆದರೆ ರಾಮಕೃಷ್ಣ ಮಿಷನ್ ತಾನು ಘೋಷಿಸಿಕೊಂಡಿದ್ದ ನೆಲೆಗಟ್ಟನ್ನು ಉಳಿಸಿಕೊಳ್ಳಲಾಗದೆ ಬಹುಮಟ್ಟಿಗೆ ಕ್ರೈಸ್ತ ಮಿಷನ್ಗಳ ಅನುಕರಣೆಯೇ ಆಯಿತೆಂಬುದು ಪ್ರತ್ಯೇಕ ವಿಷಯ.
ಥಿಯಾಸಫಿ
ಸರ್ವಧರ್ಮ ಸಮಭಾವ ಕಲ್ಪನೆಯ ಮತ್ತೊಂದು ಮೊಳಕೆ ಥಿಯಾಸಫಿ. ಎಲ್ಲ ಮತಗಳೂ ಗೂಢ ಮಹಾತ್ಮರಿಗೆ ಮಾತ್ರ ತಿಳಿದಿದ್ದ ಪ್ರಾಚೀನ ರಹಸ್ಯ ಮತವೊಂದರಿಂದ ಜನ್ಯವಾದ ಬೇರೆ ಬೇರೆ ವಿಕೃತಿಗಳೇ – ಎಂದಿತು, ಥಿಯಾಸಫಿ. ಆದರೆ ಎಲ್ಲ ಮತಗಳೂ ಸಮಾನವಾಗಿ ಸತ್ಯವಾದವು ಎಂದು ಥಿಯಾಸಫಿ ಹೇಳಲಿಲ್ಲ. ಪ್ರತಿಯಾಗಿ ದಕ್ಷಿಣ ಭಾರತಕ್ಕೆ ಬಂದು ನೆಲೆಸಿದ ಆದ್ಯ ಥಿಯಾಸಫಿಸ್ಟರು ಹಿಂದೂಧರ್ಮದ ಬಗೆಗೇ ಹೆಚ್ಚಿನ ಒಲವು ತೋರಿದರು; ಕ್ರೈಸ್ತಮತವನ್ನೂ ಮಿಷನರಿ ಚಟುವಟಿಕೆಗಳನ್ನೂ ಖಂಡಿಸುವಂತೆ ಹಿಂದೂಗಳನ್ನು ಆ ಥಿಯಾಸಫಿಸ್ಟರು ಪ್ರೋತ್ಸಾಹಿಸಿದರು. ಆಮೇಲಿನ ದಿನಗಳಲ್ಲಿ ವಾರಣಾಸಿಯಲ್ಲಿ ಹಿಂದೂ ಕಾಲೇಜನ್ನು ಸ್ಥಾಪಿಸಿದ ಆನಿಬೆಸೆಂಟ್ರವರು ಇಸ್ಲಾಂ ಕುರಿತಂತೆ ಗಾಂಧಿಯವರ ಅಭಿಪ್ರಾಯವನ್ನು ತೀಕ್ಷ್ಣವಾಗಿ ವಿರೋಧಿಸಿದರು. ಸರ್ವಧರ್ಮ ಸಮಭಾವ ಕಲ್ಪನೆಯನ್ನು ಸ್ವಲ್ಪಮಟ್ಟಿಗೆ ಸ್ವೀಕರಿಸಿದವರು ಪ್ರಮುಖ ಇಸ್ಲಾಮೀ ನೆಲೆಯಾದ ಉತ್ತರ ಪ್ರದೇಶದ ಥಿಯಾಸಫಿಸ್ಟರು ಮಾತ್ರ. ಆ ಬಣಕ್ಕೆ ಸೇರಿದವರು ಡಾ|| ಭಗವಾನ್ದಾಸ್. ಭಗವಾನ್ದಾಸ್ರವರ ಮೇರುಕೃತಿಯೆನಿಸಿದ್ದು ‘Essential Unity of All Religions’. ಯಾವುದೇ ಧರ್ಮವನ್ನು ಆಳವಾಗಿ ಅಭ್ಯಾಸ ಮಾಡಿದವರಾರೂ ಭಗವಾನ್ದಾಸ್ರವರ ಪ್ರತಿಪಾದನೆಯನ್ನು ಗಂಭೀರವಾಗಿ ಪರಿಗಣಿಸಲಾರರು. ಕಾಡನ್ನು ಗುರುತಿಸದೆ ಮರಗಳನ್ನಷ್ಟೆ ಕಾಣುವ ಅಮಾಯಕತೆ ಆ ಬರಹದಲ್ಲಿ ತುಂಬಿದೆ. ಬೇರೆ ಬೇರೆ ಧರ್ಮಗ್ರಂಥಗಳಿಂದ ಮೂಲಸಂದರ್ಭಗಳನ್ನು ಗಮನಿಸದೆ ಇಲ್ಲೊಂದು ಅಲ್ಲೊಂದು ಬಿಡಿ ಬಿಡಿ ವಾಕ್ಯಗಳನ್ನು ಹೆಕ್ಕಿ ತೆಗೆದು ಪೋಣಿಸಲಾಗಿದೆ. ಆ ವಾಕ್ಯಗಳ ಮೂಲ ಆಶಯವನ್ನು ಪರಿಗಣಿಸದೆ ಅವುಗಳ ಮೇಲೆ ಅವರು ತಮ್ಮದೇ ಕಲ್ಪನೆಯ ಅರ್ಥಗಳನ್ನು ಆರೋಪಿಸಿದ್ದಾರೆ.
ಗಾಂಧಿಯವರ ಕೊಡುಗೆ
ಹೀಗೆ ಸರ್ವಧರ್ಮ ಸಮಭಾವದ ಪ್ರವಾದಿ ಎಂಬ ಅಭಿಧಾನ ಸಲ್ಲುವುದು ಗಾಂಧಿಯವರಿಗೇ. ಅವರ ಕೃತಿಸಂಗ್ರಹಗಳ ಸಂಪುಟಗಳಷ್ಟನ್ನೂ ನಾನು ಓದಿರುವೆ. ಹಿಂದೂಧರ್ಮದ ಬಗ್ಗೆ, ಹಿಂದೂಸಂಸ್ಕೃತಿಯ ವಾರಸಿಕೆಯ ಬಗ್ಗೆ, ಸಂಸ್ಕೃತಭಾಷೆಯ ಬಗ್ಗೆ, ಮೂರ್ತಿಪೂಜೆಯ ಬಗ್ಗೆ, ಯಜ್ಞೋಪವೀತದ ಬಗ್ಗೆ, ಗೋಪೂಜನೆಯ ಬಗ್ಗೆ, ವರ್ಣಾಶ್ರಮ ಧರ್ಮದ ಬಗ್ಗೆ ಗಾಂಧಿಯವರಿಗೆ ಅಸೀಮ ಶ್ರದ್ಧೆಯಿತ್ತೆಂಬುದು ನಿರ್ವಿವಾದ. ಹಿಂದೂಧರ್ಮವನ್ನು ಕುರಿತ ಅವರ ಗ್ರಹಿಕೆ ಎಷ್ಟೋ ಕಡೆಗಳಲ್ಲಿ ಆಳವಾದದ್ದೇ. ಉದಾಹರಣೆಗೆ: ಬೇರೆ ಧರ್ಮಗಳ ಸಾರವತ್ತಾದ ಅಂಶಗಳೆಲ್ಲ ಹಿಂದೂಧರ್ಮದಲ್ಲಿ ಇವೆ ಎಂದಿದ್ದಾರೆ, ಅವರು; ಹಿಂದೂಧರ್ಮವು ಸ್ಪರ್ಶಿಸದೆ ಬಿಟ್ಟ ಅಂಶಗಳು ಗೌಣವಾದವೆಂದೇ ಹೇಳಿದ್ದಾರೆ. ಭಗವದ್ಗೀತೆಗೆ ಮಿಕ್ಕೆಲ್ಲ ಶ್ರುತಿಗಳಿಗಿಂತ ಮೇಲಿನ ಸ್ಥಾನ ಸಲ್ಲುತ್ತದೆ ಎಂದಿದ್ದಾರೆ. (ಶ್ರೀಕೃಷ್ಣನ ಜೀವಿತಕಾರ್ಯದ ಸಂದೇಶದ ಬಗ್ಗೆ ಅವರ ಗ್ರಹಿಕೆ ಅಸಮಗ್ರವೆಂಬುದು ಪ್ರತ್ಯೇಕ ವಿಷಯ.) ಯೇಸುಕ್ರಿಸ್ತನ ಬಗ್ಗೆ ಅವರು ಆವೇಶದಿಂದ ಮಾತನಾಡಿದ್ದಾರೆ. ಅವರು ಯೇಸುಕ್ರಿಸ್ತನನ್ನು ಸೆರ್ಮನ್ ಆನ್ ದಿ ಮೌಂಟ್ ಜೊತೆಗೆ ಸಮೀಕರಿಸಿಕೊಂಡಿದ್ದಾರೆ. ಗಾಸ್ಪೆಲ್ಗಳ ಕಥನಗಳಲ್ಲಿ ಕಾಣುವ ಕ್ರಿಸ್ತನ ಬೋಧನೆ-ಕ್ರಿಯೆಗಳನ್ನೆಲ್ಲ ಅವರು ಉದಾಸೀನ ಮಾಡಿದ್ದಾರೆ. ಆದರೆ ಕ್ರಿಸ್ತ-ಬುದ್ಧರನ್ನು ಹೋಲಿಸುವಾಗ ಬುದ್ಧನೇ ಹೆಚ್ಚು ಉನ್ನತ ಎಂದೂ ಪರಿಗಣಿಸಿದ್ದಾರೆ. ಕ್ರೈಸ್ತ ಮಿಷನರಿ ಚಟುವಟಿಕೆಗಳನ್ನು ವಿಷಮಯವೆಂದು ಪ್ರಬಲವಾಗಿ ಟೀಕಿಸಿದ್ದಾರೆ. ಕ್ರೈಸ್ತಮತವು ರೋಮ್ ದೇಶವನ್ನು ಸ್ವಾಯತ್ತ ಮಾಡಿಕೊಂಡಾಗಿನಿಂದ ಅದೊಂದು ಸಾಮ್ರಾಜ್ಯವಾದಿ ಮತವಾಗಿಯೇ ಉಳಿದಿದೆ ಎಂದೂ ಗಾಂಧಿಯವರು ಒಂದು ಸಂದರ್ಭದಲ್ಲಿ ಹೇಳಿದ್ದಾರೆ.
ಇಸ್ಲಾಮಿಗೆ ಶರಣಾದವರು
ಅವರ ವಿಶ್ಲೇಷಣೆ ದೋಷಪೂರ್ಣವೆನಿಸುವುದು ಅವರು ಇಸ್ಲಾಂ ಮತವನ್ನು ಕುರಿತು ಮಾತನಾಡುವಾಗ. ಅವರು ದಕ್ಷಿಣ ಆಫ್ರಿಕದಲ್ಲಿದ್ದ ದಿನಗಳಲ್ಲಿಯೇ ಇಸ್ಲಾಂಗೆ ತಮ್ಮನ್ನು ಅರ್ಪಿಸಿಕೊಂಡುದನ್ನು ಕಾಣುತ್ತೇವೆ. ವಾಷಿಂಗ್ಟನ್ ಇರ್ವಿನ್ ಬರೆದ ಮಹಮ್ಮದನ ಜೀವನಚರಿತ್ರೆಯನ್ನು ಗುಜರಾತಿ ಭಾಷೆಗೆ ಅನುವಾದಿಸಿ ತಮ್ಮ ವಾರಪತ್ರಿಕೆಯಲ್ಲಿ ಪ್ರಕಟಿಸಲು ಆರಂಭಿಸಿದ್ದರು. ಅದನ್ನು ಮುಸ್ಲಿಮರು ಟೀಕಿಸಿ ಪ್ರಕಟಣೆಯನ್ನು ನಿಲ್ಲಿಸುವಂತೆ ಆಗ್ರಹಮಾಡಿದರು. ಅದಕ್ಕೆ ಎಳ್ಳಷ್ಟೂ ಪ್ರತಿಭಟಿಸದೆ ಗಾಂಧಿಯವರು ಪ್ರಕಟಣೆಯನ್ನು ನಿಲ್ಲಿಸಿಬಿಟ್ಟರು. ಪ್ರೊ|| ಭಾಯಿ ಪರಮಾನಂದ ದಕ್ಷಿಣ ಆಫ್ರಿಕಕ್ಕೆ ಭೇಟಿ ನೀಡಿದಾಗ ಅವರನ್ನು ಸತ್ಕರಿಸುವಂತೆ ಹಿಂದೂಗಳಿಗೆ ಗಾಂಧಿಯವರು ಕರೆಕೊಟ್ಟಿದ್ದರು. ಆದರೆ ಪರಮಾನಂದರು ಇಸ್ಲಾಂ ಮತವನ್ನು ಟೀಕಿಸಿ ಮಾತನಾಡತೊಡಗಿದೊಡನೆ, ಅವರಿಂದ ದೂರವಿರುವಂತೆ ಗಾಂಧಿಯವರು ಹಿಂದೂಗಳಿಗೆ ಸಲಹೆ ಮಾಡಿದರು. ಗಾಂಧಿಯವರು ಜನರಲ್ ಸ್ಮಟ್ಸ್ನೊಡನೆ ಒಪ್ಪಂದಕ್ಕೆ ಸಹಿ ಮಾಡಿ ಸತ್ಯಾಗ್ರಹವನ್ನು ನಿಲ್ಲಿಸಿದಾಗ ದಕ್ಷಿಣ ಆಫ್ರಿಕದ ಮುಸ್ಲಿಮರು ತಮ್ಮ ಹಿತವನ್ನು ಗಾಂಧಿಯವರು ಬಲಿಗೊಟ್ಟರೆಂದು ಟೀಕಿಸಿದರು. ಆ ಸಂದರ್ಭದಲ್ಲಿ ಪಠಾಣನೊಬ್ಬನು ಅವರ ಮೇಲೆ ಕೈ ಮಾಡಿದ್ದೂ ಉಂಟು. ಅವರ ಕಾರ್ಯಕ್ಕಾಗಿ ಕೊಟ್ಟಿದ್ದ ಹಣಕ್ಕೆ ಅವರು ಲೆಕ್ಕ ಸಲ್ಲಿಸಲಿಲ್ಲ ಎಂಬ ಕ್ಷುದ್ರ ಆಪಾದನೆಯನ್ನೂ ಗಾಂಧಿಯವರ ಮೇಲೆ ಮುಸ್ಲಿಮರು ಮಾಡಿದರು. ಆಗಲೂ ಗಾಂಧಿಯವರು ಮೌನವಾದರು.
ಇನ್ನಷ್ಟು ಅಧಃಪತನ
ಇಸ್ಲಾಮಿಗೆ ಗಾಂಧಿಯವರು ಸಂಪೂರ್ಣ ಶರಣಾದದ್ದು ಖಿಲಾಫತ್ ಆಂದೋಲನವನ್ನು ಬೆಂಬಲಿಸಿದಾಗ; ಅಸಹಕಾರ ಚಳವಳಿಯನ್ನು ಮುಲ್ಲಾಗಳ ಸಹಕಾರದಿಂದ ನಡೆಸುವಂತೆ ರಾಷ್ಟ್ರೀಯ ಕಾಂಗ್ರೆಸ್ಸಿಗೆ ಆದೇಶ ನೀಡಿದಾಗ, ಆ ಸಂದರ್ಭದಲ್ಲಿ ಇಸ್ಲಾಂಧರ್ಮ ಉದಾತ್ತವಾದದ್ದು ಇತ್ಯಾದಿಯಾಗಿ ಗಾಂಧಿಯವರು ಮಾಡಿದ ಉದ್ಗಾರಗಳು ಸನ್ನಿ ಹಿಡಿದವರ ಮಾತುಗಳಂತಿವೆ. ಮುಲ್ಲಾಗಳಿಗೆ ಸಹಜವಾಗಿಯೇ ಖುಷಿಯಾಯಿತು. ಆದರೆ ಚೌರಿಚೌರಾ ಘಟನೆಯ ಹಿಂದುಗೂಡಿ ಅಸಹಕಾರ ಚಳವಳಿಯನ್ನು ಗಾಂಧಿಯವರು ನಿಲ್ಲಿಸಿದಾಗ ತಮಗೆ ಗಾಂಧಿಯವರು ವಿಶ್ವಾಸದ್ರೋಹ ಮಾಡಿದರು – ಎಂದು ಅವರು ಆಪಾದಿಸಿದರು! ಇದಕ್ಕೆ ಗಾಂಧಿಯವರು ಪ್ರತ್ಯುತ್ತರ ಕೊಡುವ ಗೋಜಿಗೂ ಹೋಗಲಿಲ್ಲ. ಮುಲ್ಲಾಗಳು ಹೀನಾಮಾನ ಬೈಗುಳ ಸುರಿದಾಗಲೂ ಅವರು ತೆಪ್ಪಗಿದ್ದರು.
ಅದಾದ ಅಲ್ಪಕಾಲದ ಅನಂತರ ಗಾಂಧಿಯವರು ಇನ್ನಷ್ಟು ಅಧಃಪತನವನ್ನು ಸಾಧಿಸಿದರು. ಮಲಬಾರ್ ಪ್ರಾಂತದಲ್ಲಿ ಹಿಂದೂಗಳನ್ನು ನಿರ್ದಯವಾಗಿ ಹತ್ಯೆ ಮಾಡಿದ ಮೋಪ್ಲಾಗಳನ್ನು ಧೀರರೆಂದೂ ತಾವು ಅರ್ಥ ಮಾಡಿಕೊಂಡಂತೆ ತಮ್ಮ ಧರ್ಮಕ್ಕೆ ಅವರು ನಿಷ್ಠರಾಗಿದ್ದಾರೆ ಎಂದೂ ಪ್ರಶಂಸೆ ಮಾಡಿದರು; ಆ ಕೊಲೆಗಾರರನ್ನು ಹತ್ತಿಕ್ಕಿದುದಕ್ಕಾಗಿ ಬ್ರಿಟಿಷ್ ಸರ್ಕಾರವನ್ನು ಖಂಡಿಸಿದರು. (ಆ ಸಂದರ್ಭದಲ್ಲಿ ಬ್ರಿಟಿಷರ ದಂಡನೆಗೆ ಒಳಗಾದವರನ್ನು ಈಗ ಸ್ವಾತಂತ್ರ್ಯ ಹೋರಾಟಗಾರರು ಎಂದು ಕೀರ್ತಿಸಲಾಗುತ್ತಿದೆ!) ಭಾರತದ ಮೇಲೆ ಕ್ಷಿಪ್ರಾಕ್ರಮಣ ನಡೆಸುವಂತೆ ಆಫಘಾನಿಸ್ತಾನದ ಅಮೀರನನ್ನು ಮುಲ್ಲಾಗಳು ಆಮಂತ್ರಿಸಿದುದಕ್ಕೆ ಗಾಂಧಿಯವರ ಗಮನವನ್ನು ಸೆಳೆದಾಗ ಅವರು ಹೇಳಿದುದು ಮುಲ್ಲಾಗಳು ತಮ್ಮ ಧರ್ಮ ಬೋಧಿಸಿದಂತೆ ನಡೆದುಕೊಂಡಿದ್ದಾರೆ ಎಂದು ಮಾತ್ರ!
ಇಸ್ಲಾಮಿನ ಯಾವುದೇ ಬೋಧೆಯಲ್ಲಿ (ಅದು ಎಷ್ಟೇ ಅಸಹ್ಯವಾಗಿರಲಿ, ಕ್ರೂರವಾಗಿರಲಿ, ಅಮಾನವೀಯವಾಗಿರಲಿ) ಗಾಂಧಿಯವರಿಗೆ ದೋಷ ಕಣ್ಣಿಗೆ ಬೀಳಲೇ ಇಲ್ಲ. ಇದಕ್ಕೆ ಪ್ರತಿಯಾಗಿ ಆರ್ಯಸಮಾಜವನ್ನು ಕಂಠೋಕ್ತವಾಗಿ ಟೀಕಿಸಲು ಗಾಂಧಿಯವರು ಹಿಂದೆಗೆಯಲಿಲ್ಲ. ಹಿಂದೂಗಳನ್ನು, ವಿಶೇಷವಾಗಿ ಅಸ್ಪೃಶ್ಯ ವರ್ಗಗಳವರನ್ನು ಪ್ರಲೋಭನೆಗಳ ಮೂಲಕ ಇಸ್ಲಾಮೀಕರಿಸಿ ಹಿಂದೂಗಳಿಗೆ ಸರಿಗಟ್ಟುವಂತೆ ಮುಸ್ಲಿಮರ ಸಂಖ್ಯೆಯನ್ನು ಹೆಚ್ಚಿಸಬೇಕು ಎಂಬ ಹಸನ್ ನಿಜಾಮಿಯ ಯೋಜನೆಗೆ ಪ್ರತಿಕ್ರಿಯೆಯಾಗಿ ಸ್ವಾಮಿ ಶ್ರದ್ಧಾನಂದರು ಉಪಕ್ರಮಿಸಿದ ಶುದ್ಧಿ ಆಂದೋಲನವನ್ನೂ ಗಾಂಧಿಯವರು ಕಟುವಾಗಿ ಟೀಕಿಸಿದರು.
ವಿಕೃತ ವರ್ತನೆ
ಹಿಂದೂಸಮಾಜಕ್ಕೆ ವಿರುದ್ಧವಾಗಿ ಗಾಂಧಿಯವರು ನಡೆಸಿದ ಕ್ರಿಯಾಸರಣಿಗಳ ಪಟ್ಟಿ ದೀರ್ಘವಾದದ್ದು. ಈ ಜಾಡಿನ ವರ್ತನೆ ಅವರ ದುರಂತಮರಣದವರೆಗೂ ಸತತವಾಗಿ ಮುಂದುವರಿಯಿತು. ಅದರ ಕೆಲವು ಮಜಲುಗಳನ್ನಷ್ಟೆ ನಿದರ್ಶನಾರ್ಥ ಮೇಲೆ ಪ್ರಸ್ತಾವಿಸಿ ಆ ಪ್ರಕ್ರಿಯೆ ಹೇಗೆ ಪ್ರಾರಂಭಗೊಂಡಿತೆಂಬುದನ್ನು ಸೂಚಿಸಲಾಗಿದೆ.
ಗಾಂಧಿಯವರ ಈ ವಿಕೃತ ವರ್ತನೆಗೆ ಹಲವಾರು ವಿವರಣೆಗಳು ಇದ್ದಾವು. ಅವರಲ್ಲಿ ಸುಪ್ತವಾಗಿದ್ದ ಅಧೈರ್ಯವನ್ನೇ ಅವರು ಒಂದು ನೈತಿಕ ಸಿದ್ಧಾಂತವನ್ನಾಗಿ ಮಾರ್ಪಡಿಸಿದ್ದರು ಎನ್ನಬಹುದು. ಇಲ್ಲವೆ ಮುಸ್ಲಿಮರೂ ಸೇರಿದಂತೆ ಎಲ್ಲ ಸಮುದಾಯಗಳ ಮುಖಂಡ ತಾನು ಎನ್ನಿಸಿಕೊಳ್ಳುವ ಆಕಾಂಕ್ಷೆ ಇದಕ್ಕೆ ಕಾರಣವಾಗಿರಬಹುದು. ಬ್ರಿಟಿಷ್ ಆಡಳಿತದ ವಿರುದ್ಧದ ಸೆಣಸಾಟದಲ್ಲಿ ಮುಸ್ಲಿಮರ ಸಹಕಾರ ಪಡೆದುಕೊಳ್ಳುವ ಅನುಕೂಲಸಿಂಧು ವರ್ತನೆಯೂ ಅದಾಗಿರಬಹುದು. ಕಾರಣ ಏನೇ ಇರಲಿ. ತಮ್ಮ ಸರ್ವಧರ್ಮ ಸಮಭಾವ ಶೃಂಖಲೆಯಿಂದ ಅವರು ಹಿಂದೂಗಳ ಕೈಕಾಲುಗಳನ್ನು ಕಟ್ಟಿಹಾಕಿ ಇಸ್ಲಾಮೀ ದುಂಡಾವೃತ್ತಿಯನ್ನೆದುರಿಸುವುದರಲ್ಲಿ ಹಿಂದೂಗಳನ್ನು ಅಸಹಾಯರಾಗಿಸಿದರು ಎಂಬುದಂತೂ ವಸ್ತುಸ್ಥಿತಿ. ಇದರ ಜೊತೆಗೆ ಹಿಂದೂಗಳ ಬಗ್ಗೆ ಹೇಗೆ ಬೇಕಾದರೂ ವರ್ತಿಸಲು ಮುಸ್ಲಿಮರಿಗೆ ಪೂರ್ಣ ಸ್ವಾತಂತ್ರ್ಯವನ್ನು ಅವರು ಕಲ್ಪಿಸಿದರು.
ಮುಲ್ಲಾಗಳ ಮತ್ತು ಮುಸ್ಲಿಂ ಲೀಗಿನ ನೇತೃತ್ವದಡಿಯಲ್ಲಿ ಮುಸ್ಲಿಮರು ಏನೆಲ್ಲ ಮಾಡಿದರೆಂಬುದು ವಿವಾದಾತೀತವಾಗಿ ದಾಖಲೆಗೊಂಡಿದೆ. ಆದರೂ ಸರ್ವಧರ್ಮ ಸಮಭಾವ ತತ್ತ್ವವನ್ನು ಆಚರಿಸುವಂತೆ ಗಾಂಧಿಯವರು ಮುಸ್ಲಿಮರಿಗೆ ಒಂದೇ ಒಂದು ಸಲವಾದರೂ ಕರೆಕೊಡಬೇಕೆಂದು ಅವರಿಗೆ ಅನಿಸಿದ್ದೇ ಇಲ್ಲ! ಹಾಗೆ ಮಾಡಿದಲ್ಲಿ ತಾವು ಮುಸ್ಲಿಮರ ಮತಾವೇಶದಲ್ಲಿ ಹಸ್ತಕ್ಷೇಪ ಮಾಡಿದಂತಾಗುತ್ತದೆ ಎಂದು ಅವರು ಭಾವಿಸಿದರು.
ಕಲಸುಮೇಲೋಗರ
ತಾವು ಇಸ್ಲಾಂ ಸೇರಿದಂತೆ ಎಲ್ಲ ಮತ-ಧರ್ಮಗಳನ್ನು ಅಧ್ಯಯನ ಮಾಡಿರುವುದಾಗಿಯೂ ಎಲ್ಲದರಲ್ಲಿಯೂ ತಮಗೆ ಅಷ್ಟಿಷ್ಟು ದೋಷಗಳು ಕಂಡಿವೆಯೆಂದೂ ಗಾಂಧಿಯವರು ಹೇಳುತ್ತಿದ್ದರು. ಹಿಂದೂಧರ್ಮದ ಕೆಲವು ಕೊರತೆಗಳನ್ನು ಬೊಟ್ಟುಮಾಡಿ ತೋರಿಸಲು ಅವರು ಎಂದೂ ಹಿಂದೆಗೆಯಲಿಲ್ಲ. ಅಪರೂಪವಾಗಿ ಕ್ರೈಸ್ತಮತದ ದೋಷಗಳನ್ನು ಕುರಿತೂ ಅವರು ಮಾತನಾಡಿದರು. ಆದರೆ ಹತ್ತಾರು ಸಂಪುಟಗಳನ್ನು ತುಂಬಿರುವ ಅವರ ವಿಪುಲ ಬರಹ-ಭಾಷಣಗಳಲ್ಲಿ ಒಂದೇ ಒಂದು ಕಡೆಯೂ ಅವರು ಇಸ್ಲಾಮಿನ ನ್ಯೂನತೆಗಳನ್ನು ಕುರಿತು ಮಾತನಾಡಿಲ್ಲ. ಪ್ರತಿಯಾಗಿ ಇಸ್ಲಾಂಮತಗ್ರಂಥಗಳಲ್ಲಿಯೂ ಇತಿಹಾಸದಲ್ಲಿಯೂ ತಮ್ಮನ್ನು ಆಕರ್ಷಿಸಿದ ಕೆಲವೇ ವಾಕ್ಯಗಳನ್ನು ಆಯ್ದುಕೊಂಡು ಇಸ್ಲಾಂ ಅಷ್ಟೂ ಹಾಗೆಯೇ ಉದಾರವಾದದ್ದು ಎಂದು ಸಮೀಕರಿಸಿಬಿಟ್ಟರು, ಅವರು. ಡಾ|| ಭಗವಾನ್ದಾಸ್ ಮಾಡಿದುದೂ ಇದೇ ಕೆಲಸವನ್ನು. ಇತರ ಅನೇಕ ಗುರುಗಳಿಗಿದ್ದ ಚಪಲದಿಂದ ಅವರು ಮುಕ್ತರಾಗಲಿಲ್ಲ. ಆ ಚಪಲವೆಂದರೆ ತಾವು ಎಲ್ಲ ಮತ-ಧರ್ಮಗಳ ವಕ್ತಾರರೆಂದು ಕರೆಯಿಸಿಕೊಳ್ಳಬೇಕೆಂಬುದು. ಪರಿಣಾಮವಾಗಿ ಅವರು ಯಾವ ಧರ್ಮದ ಸಮರ್ಪಕ ವಕ್ತಾರರೂ ಆಗಲಿಲ್ಲ; ಒಂದೊಂದು ಮತದ ಬಗ್ಗೆ ಮಾತನಾಡುವಾಗಲೂ ಕಲಸುಮೇಲೋಗರವನ್ನೇ ಮಾಡಿಟ್ಟರು; ಧರ್ಮ-ಅಧರ್ಮಗಳನ್ನು ಪ್ರತ್ಯೇಕಿಸಲು ಯಾವುದೇ ಮಾನದಂಡವನ್ನು ಅವರು ಕಂಡುಕೊಳ್ಳಲು ಅಸಮರ್ಥರಾದರು.
ಕೆಲವು ಪ್ರಶ್ನೆಗಳು
ಇಲ್ಲಿ ಪ್ರಶ್ನೆ ಇರುವುದು ಇಸ್ಲಾಮಿನ ಬಗ್ಗೆ ಗಾಂಧಿಯವರು ಹೇಗೆ ವರ್ತಿಸಿದರು ಎಂಬುದು ಮಾತ್ರವಲ್ಲ. ಅದಕ್ಕಿಂತ ದೊಡ್ಡ ಪ್ರಶ್ನೆ ಉಳಿದಿದೆ. ಅದು ಸಾಮಾನ್ಯ ಹಿಂದೂಗಳು ಗಾಂಧಿಯವರ ಬಗ್ಗೆ ತಳೆದ ನಿಲವನ್ನು ಕುರಿತದ್ದು. ಗಾಂಧಿಯವರ ನಾಯಕತ್ವದ ಸ್ವೀಕಾರಾರ್ಹತೆಯನ್ನು ಶಂಕಿಸಿದ ಅರವಿಂದರು, ಸ್ವಾಮಿ ಶ್ರದ್ಧಾನಂದರು, ವೀರ ಸಾವರ್ಕರ್, ಭಾಯಿ ಪರಮಾನಂದ್, ಕೇಶವ ಬಲಿರಾಮ ಹೆಡಗೆವಾರ್, ಮಾಧವ ಸದಾಶಿವ ಗೋಲ್ವಲ್ಕರ್ – ಇಂಥ ಅಸಂಖ್ಯ ಪ್ರಖರ ದೇಶಭಕ್ತರ ಮಾತನ್ನು ಹಿಂದೂಗಳು ಅಲಕ್ಷಿಸಿದುದು ಏಕೆ? ಗಾಂಧಿಯವರ ಮಾತನ್ನು ಕೇಳಿಕೊಂಡು – ಪ್ರತಿಫಲವಾಗಿ ಏನನ್ನೂ ಪಡೆಯದೆ – ಹಿಂದೂಗಳು ತಮ್ಮ ಅತ್ಯಂತ ಶ್ರದ್ಧಾಜನ್ಯ ಹಿತಾಸಕ್ತಿಗಳನ್ನೆಲ್ಲ ಗಾಳಿಗೆ ತೂರಿದುದು ಏಕೆ? ಅವರನ್ನು ಮಹಾತ್ಮರ ಮಟ್ಟಕ್ಕೆ ಏರಿಸಿದುದು ಏಕೆ? ಗಾಂಧಿಯವರು ತಮ್ಮ ಖೊಟ್ಟಿ ಸರ್ಟಿಫಿಕೇಟ್ ನೀಡಿದರೆಂಬ ಒಂದೇ ಕಾರಣವನ್ನು ಬಳಸಿಕೊಂಡು ಭಾರತದ ಒಂದು ಭಾಗ ಮಾತ್ರವಲ್ಲ; ಇಡೀ ದೇಶವನ್ನೇ ದಾರ್-ಉಲ್-ಇಸ್ಲಾಂ ಆಗಿ ಪರಿವರ್ತಿಸಬೇಕೆಂದು ಘೋಷಿಸಿದ ದೇವಬಂದ್ ಪಡೆ, ಮೌಲಾನಾ ಆಜಾದ್ – ಇವರನ್ನೆಲ್ಲ ರಾಷ್ಟ್ರವಾದಿ ಮುಸ್ಲಿಮರು ಎಂದು ಹಿಂದೂಗಳು ಕೀರ್ತಿಸಿದುದು ಏಕೆ? ಅಪರೂಪವಾಗಿ ಮುಸ್ಲಿಮರ ವರ್ತನೆಯನ್ನು ವಿರೋಧಿಸುವ ಧೈರ್ಯ ತೋರಿದ ವಿರಳ ಹಿಂದೂಗಳ ಮೇಲೆ ಗಾಂಧಿಯವರು ಪಂ. ನೆಹರು, ಜಯಪ್ರಕಾಶ ನಾರಾಯಣ್, ಕಾಂಗ್ರೆಸ್-ಸೋಷಲಿಸ್ಟ್ ಪಡೆಗಳನ್ನು ಛೂ ಬಿಟ್ಟಾಗ ಹಿಂದೂಗಳೆಲ್ಲ ಮೌನವಾಗಿದ್ದುದೇಕೆ? ಇಸ್ಲಾಮನ್ನು ವಿರೋಧಿಸುತ್ತಿದ್ದ ಆರ್ಯ ಸಮಾಜಿಗಳು ಮಹಾತ್ಮರಡಿಯ ರಾಷ್ಟ್ರೀಯ ಕಾಂಗ್ರೆಸ್ಸಿನಲ್ಲಿ ಸೇರ್ಪಡೆಯಾದೊಡನೆ ಸೌಮ್ಯವಾಗಿಬಿಟ್ಟರೇಕೆ? ಮೂಳೆಯೇ ಇಲ್ಲದ ಒಂದು ವಿಚಿತ್ರ ಸೃಷ್ಟಿ (‘This boneless wonder of the East’) ಎಂದು ಮೋತಿಲಾಲರೇ ಕರೆದಿದ್ದ ಪಂ. ಜವಾಹರಲಾಲ್ ನೆಹರುರಂಥ ಆಜನ್ಮ ಹಿಂದೂದ್ವೇಷಿಯನ್ನು ಪರಮೋಚ್ಚ ನಾಯಕನೆಂದು ಹಿಂದೂಗಳು ಸ್ವೀಕರಿಸಿಬಿಟ್ಟುದು ಏಕೆ?
ಇದಕ್ಕಿಂತ ವಿಚಿತ್ರವೆಂದರೆ – ಹಿಂದೂಗಳು ಸಾಮೂಹಿಕವಾಗಿ ಎದೆಬಡಿದುಕೊಂಡು ಪಾಕಿಸ್ತಾನದ ಜನಕನನ್ನು ಭಾರತದ ರಾಷ್ಟ್ರಪಿತ (‘Father of the Nation’) ಎಂದು ಕೀರ್ತಿಸಿದುದು ಹೇಗೆ? ಅವರಾದರೋ ತಾವೇ ಹೊತ್ತಿಸಿದ ಬೆಂಕಿಗೆ ಆಹುತಿಯಾದವರು; ಮತ್ತು ವಿಭಜನಾನಂತರ ಹಿಂದೂಗಳ ಪರಮಾವಧಿ ದ್ವೇಷಕ್ಕೆ ಗುರಿಯಾಗಿದ್ದವರು.
ಇಷ್ಟೆಲ್ಲ ಇತಿಹಾಸವಿದ್ದರೂ ಈಗಲೂ ಹಿಂದುತ್ವಸಮರ್ಥಕ ವೇದಿಕೆಗಳು ಸಹ ಸರ್ವಧರ್ಮ ಸಮಭಾವವೆಂಬ ಅರ್ಥಶೂನ್ಯ ಶಬ್ದಪುಂಜವನ್ನು ಪುನರುಚ್ಚರಿಸುತ್ತ ಹಿಂದೂಗಳಲ್ಲಿಯೇ ಅಪರಾಧಪ್ರಜ್ಞೆಯನ್ನು ಮೂಡಿಸುತ್ತಿರುವುದು ಏಕೆ?
ಅಧೀನ ಮನೋಭಾವ
ಮೇಲಿನವು ಕೆಲವು ಪ್ರಶ್ನೆಗಳು ಮಾತ್ರ. ಇಸ್ಲಾಂ ವಿಷಯದಲ್ಲಿ ಗಾಂಧಿಯವರ ಧೋರಣೆ, ಹಿಂದೂ ರಾಷ್ಟ್ರೀಯತೆ ಮೊದಲಾದವಕ್ಕೆ ಸಂಬಂಧಿಸಿದಂತೆ ಇನ್ನೂ ಎಷ್ಟೋ ಪ್ರಶ್ನೆಗಳಿವೆ. ಈ ತುಂಬ ಮುಖ್ಯವಾದ ಪ್ರಶ್ನೆಗಳಿಗೆಲ್ಲ ಹಿಂದೂಗಳು ಪ್ರಾಮಾಣಿಕ ಉತ್ತರವನ್ನು ಕಂಡುಕೊಂಡು ಕ್ರಿಯಾಶೀಲರಾದ ಹೊರತು ಅವರು ಉಳಿಯಲಾರರು.
ಭಾರತದಲ್ಲಿ ಇಸ್ಲಾಮೀ ವಿಧ್ವಂಸಕಾರ್ಯದ ದೀರ್ಘ ಇತಿಹಾಸವನ್ನು ಅಭ್ಯಾಸ ಮಾಡಿರುವ ನನಗೆ ಅನಿಸಿವುದೆಂದರೆ – ಭೀತಿಗೆ ತುತ್ತಾದ ಹಿಂದೂಸಮಾಜವು ತನ್ನ ಅಧೀನತೆಯನ್ನು ರಕ್ತಗತವಾಗಿಸಿಕೊಂಡು ತನ್ನ ಹೇಡಿತನವನ್ನೇ ಉದಾತ್ತವರ್ತನೆ ಎಂದು ಪ್ರತಿಪಾದಿಸುತ್ತಿದೆ. ಇಸ್ಲಾಮನ್ನೂ ಮುಸ್ಲಿಮರನ್ನೂ ಪ್ರಶಂಸೆ ಮಾಡುವ ಅಧೀನ ಮನೋಭಾವದ ಗುಂಗಿನಿಂದ ಹಿಂದೂಸಮಾಜ ಇನ್ನೂ ಹೊರಬರಬೇಕಾಗಿದೆ. ಹೀಗೆ ನುಗ್ಗಾದ ಹಿಂದೂ ಮಾನಸಿಕತೆಯ ಶ್ರೇಷ್ಠ ನಿದರ್ಶನವೆಂದರೆ ಗಾಂಧಿಯವರು. ಕೊಲೆಯಾದ ಅನಂತರ ನಿರಾಧಾರ ಆರೋಪಗಳಿಂದ ರಾಷ್ಟ್ರೀಯ ಸ್ವಯಂಸೇವಕ ಸಂಘವು ತ್ರಸ್ತವಾದಂತೆಯೇ ಸರ್ಕಾರ ಘೋಷಿಸಿರುವ ಸೆಕ್ಯುಲರಿಸಂ ವಿರುದ್ಧವೂ ಅಸಹಾಯವಾದಂತಿದೆ.
ಸತ್ಯ ನುಡಿಯುವುದು ಅಪರಾಧ!
ಖೊರಾನಿನ, ಸಾಹಿಬ್ ಮುಸ್ಲಿಂ ಮೂಲ ವಾಕ್ಯಗಳ ಯಥಾರ್ಥ ವ್ಯಾಖ್ಯಾನವನ್ನಷ್ಟೆ ನೀಡಿರುವ ರಾಂಸ್ವರೂಪ್ ಅವರ ‘Understanding Islam Through Hadis’ ಗ್ರಂಥವನ್ನು ಪ್ರಕಟಿಸಿದ ಅಪರಾಧಕ್ಕಾಗಿ ಪ್ರಕೃತ ಲೇಖಕನು ಮೂರು ವರ್ಷ ದೆಹಲಿಯ ನ್ಯಾಯಾಲಯದ ಕಟ್ಟೆಯನ್ನು ಸವೆಸಬೇಕಾಯಿತು. ನಮ್ಮ ವಿರುದ್ಧದ ಆರೋಪಣೆ ನಿರಾಧಾರವೆಂದು ನ್ಯಾಯಾಲಯ ತೀರ್ಪಿತ್ತ ಮೇಲೆ ಸರ್ಕಾರದ ಗೃಹಖಾತೆ (ಅದರ ಡೆಪ್ಯುಟಿ ಸೆಕ್ರಟರಿ ಎಂ. ಯು. ಸಿದ್ದಿಕಿ ಎಂಬ ಮುಸ್ಲಿಮರಿದ್ದರು) ರಾಂಸ್ವರೂಪ್ ಗ್ರಂಥವನ್ನೂ ಅದರ ಹಿಂದೀ ಅನುವಾದವನ್ನೂ ಬ್ಯಾನ್ ಮಾಡಿರುವುದಾಗಿ ಘೋಷಿಸಿದರು.
ಅಮೆರಿಕದಲ್ಲಿಯೂ ಆಸ್ಟ್ರೇಲಿಯದಲ್ಲಿಯೂ ಹಿಂದೆಯೇ ಪ್ರಕಟಗೊಂಡಿದ್ದ ಕೋಲಿನ್ ಮೇಯ್ನ್ ಎಂಬವರ ಕೇವಲ ೧೬ ಪುಟಗಳ ‘The Dead Hand of Islam’ ಕಿರುಪುಸ್ತಿಕೆಯನ್ನು (ಅದು ಖೊರಾನ್, ಹದೀಸ್ಗಳ ೬೦ ನೇರ ಉದ್ಧೃತಗಳನ್ನು ಒಳಗೊಂಡಿತ್ತು) ಪುನಃ ಪ್ರಕಟಿಸಿದ ಅಪರಾಧಕ್ಕಾಗಿಯೂ ೧೧ ವರ್ಷಗಳಷ್ಟು ದೀರ್ಘಕಾಲ ನಾನು ದೆಹಲಿಯ ನ್ಯಾಯಾಲಯಗಳಲ್ಲಿ ಸೆಣೆಸಬೇಕಾಯಿತು.
ಪ್ರಕಾಶಕರ ಮತ್ತು ಮುದ್ರಕರ ವಿರುದ್ಧ ಆಪಾದನೆಗಳನ್ನೇನೋ ನ್ಯಾಯಾಲಯ ತಿರಸ್ಕರಿಸಿ ಅವರನ್ನು ಮುಕ್ತಗೊಳಿಸಿತು. ಆದರೆ ಆ ಪುಸ್ತಕಗಳ ಮೇಲಣ ನಿಷೇಧ ಈಗಲೂ [೧೯೯೮] ಮುಂದುವರಿದೇ ಇದೆ.
ಸೈಯದ್ ಶಹಾಬುದ್ದೀನ್ ಮಹಾಶಯರು ಕೇಂದ್ರಮಂತ್ರಿ ಪಿ.ಎಂ. ಸೈಯೀದ್ರಿಗೆ ಬರೆದ ಪತ್ರದ ಆಧಾರವೇ ಸಾಕೆಂದು ಕೇಂದ್ರಸರ್ಕಾರವು ರಾಂಸ್ವರೂಪ್ ಅವರ ‘Hindu View of Christianity and Islam’ ಗ್ರಂಥವನ್ನು ಬ್ಯಾನ್ ಮಾಡಹೊರಟಿತ್ತು. ಅದನ್ನು ನಿರೀಕ್ಷಿಸಿದ ರಾಂಸ್ವರೂಪ್ ಅವರೂ ನಾನೂ ನಿರೀಕ್ಷಣಾ ಜಾಮೀನನ್ನು ಪಡೆದುಕೊಂಡೆವು. ಆದರೆ ಸರ್ಕಾರ ತನ್ನ ಕ್ರಮವನ್ನು ಜಾರಿ ಮಾಡುವ ಮೊದಲೇ ಅರುಣ್ ಶೌರಿ ಮೊದಲಾದವರೆಲ್ಲ ನೀಡಿದ ಪ್ರಚಾರ, ಮೂಡಿಸಿದ ಜನಾಭಿಪ್ರಾಯದಿಂದಾಗಿ ಸರ್ಕಾರ ಹಿಂದೆ ಸರಿಯಿತು.
ಸಂಸ್ಕೃತಿ ವೈವಿಧ್ಯ
ಇಸ್ಲಾಮಿನ ಸಮರ್ಥಕರು ಪಾಶ್ಚಾತ್ಯ ದೇಶಗಳಲ್ಲಿಯೂ ಇದ್ದಾರೆ. ಅವರಲ್ಲಿ ಹಣ ತೆಗೆದುಕೊಂಡು ಅಭಿಪ್ರಾಯ ನೀಡುವ ಲೇಖಕರೂ ಸೇರಿದ್ದಾರೆ. ಎಷ್ಟೇ ಆಗಲಿ ಇಸ್ಲಾಂ ಕ್ರೈಸ್ತಮತದ ಸೋದರ ಧರ್ಮ ತಾನೇ. ಎರಡನೆ ಮಹಾಯುದ್ಧದ ಅನಂತರ – ವಿಶೇಷವಾಗಿ ತೈಲಸಮೃದ್ಧ ಮಧ್ಯಪ್ರಾಚ್ಯದಿಂದ ಹಣದ ಹೊಳೆ ಹರಿಯತೊಡಗಿದ ಮೇಲೆ ಪಾಶ್ಚಾತ್ಯ ದೇಶಗಳಲ್ಲಿ ಸಂಸ್ಕೃತಿ ವೈವಿಧ್ಯ (Multiculturaism) ಎಂಬ ಪಂಥವನ್ನು ಹುಟ್ಟುಹಾಕಲಾಯಿತು. ಇಸ್ಲಾಮನ್ನು ವೈಚಾರಿಕವಾಗಿಯೂ ಮಾನವೀಯವಾಗಿಯೂ ಪರೀಕ್ಷಿಸಹೊರಡುವವರನ್ನು ಈ ಹೊಸ ಪಂಥದವರು ಕಟುವಾಗಿ ಟೀಕಿಸುತ್ತಾರೆ. ಕಮ್ಯೂನಿಸಂ ಪತನಕ್ಕೆ ಪೂರ್ವದ ದಿನಗಳಲ್ಲಿ ಸ್ಟ್ಯಾಲಿನಿಸಂ ಮಾವೊಯಿಸಂಗಳ ಮೇಲೆ ಎಷ್ಟೋ ಜನ ವಿಚಾರವಂತರು ಪ್ರಶಂಸೆಯ ಮಳೆಗರೆದಿದ್ದರೆಂದು ಸ್ಮರಿಸಬಹುದು. ಅವರಿಂದ ಈ ಇಸ್ಲಾಂ ಸಮರ್ಥಕರೂ ಭಿನ್ನರೇನಲ್ಲ. ಈ ಬಣದವರು – ಭಾರತದಲ್ಲಿರುವಂತೆ – ಕೆಲವು ಪಾಶ್ಚಾತ್ಯ ವಿಶ್ವವಿದ್ಯಾಲಯಗಳಲ್ಲಿಯೂ ಮಾಧ್ಯಮಗಳಲ್ಲಿಯೂ ಭದ್ರವಾಗಿ ನೆಲೆಯೂರಿದ್ದಾರೆ. ಪಾಶ್ಚಾತ್ಯ ನಮೂನೆಯ ಮಲ್ಟಿಕಲ್ಚರಲಿಸಂಗೂ ಭಾರತದ ನಮೂನೆಯ ಸೆಕ್ಯುಲರಿಸಂಗೂ ತುಂಬ ಹೋಲಿಕೆ ಇದೆ. ಬಹುಸಂಖ್ಯಾತರ ಧರ್ಮದ ಮೇಲೆ ಭಾರತದ ಸೆಕ್ಯುಲರಿಸ್ಟರು ಸದಾ ಮಣ್ಣೆರಚುವಂತೆಯೇ ಮಲ್ಟಿಕಲ್ಚರಲಿಸ್ಮ್ ಬಣದವರು ಅಲ್ಲಿಯ ಬಹುಸಂಖ್ಯಾತರ ನಿಷ್ಠೆಗೆ ಪಾತ್ರವಾದ ಕ್ರೈಸ್ತಮತದ ಮೇಲೆ ಟೀಕೆಗಳನ್ನು ಸುರಿಸುತ್ತಾರೆ. ಆದರೆ ಈ ಮಲ್ಟಿಕಲ್ಚರಲಿಸ್ಮ್ನ ಅಪಲಾಪಗಳಿಗಾಗಲಿ ಇಸ್ಲಾಮೀ ಭಯೋತ್ಪಾದಕತೆಗಾಗಲಿ ಪಾಶ್ಚಾತ್ಯ ಮಾಧ್ಯಮಗಳು ಸಾಮಾನ್ಯವಾಗಿ ಸೊಪ್ಪು ಹಾಕುವುದಿಲ್ಲ.
[ಸೀತಾರಾಂ ಗೋಯಲ್ ಅವರು ಸಂಪಾದಿಸಿ ಪ್ರಕಟಿಸಿರುವ ಫ್ರೀಡಮ್ ಆಫ್ ಎಕ್ಸ್ಪ್ರೆಶನ್ ಗ್ರಂಥಕ್ಕೆ ಅವರು ಬರೆದಿರುವ ಪ್ರಸ್ತಾವನೆಯಿಂದ ಉದ್ಧೃತ.
‘Freedom of Expression: Secular Theocracy versus Liberal Democracy. Compiled and edited by SITA RAM GOEL. Pub: Voice of India. 2/18, Ansari Road, New Delhi – 110002. Pp: xxxv+179. Price: Rs. 120-00. 1998]