ಡಿ.ವಿ.ಜಿಯವರು ಕ್ರಾಂತಿವಿರೋಧಿಗಳಲ್ಲ. ಆದರೆ ಅವರು ಶಾಂತಿಯಲ್ಲಿ ಪರ್ಯವಸಿಸದ ಕ್ರಾಂತಿಗಿಂತ ಮಾನವಲೋಕಕ್ಕೆ ಭೀಕರಶಾಪವಾಗುವಂಥದ್ದು ಮತ್ತಾವುದೂ ಇಲ್ಲವೆಂದೂ ಸಹ ಚೆನ್ನಾಗಿ ತಿಳಿದಿದ್ದರು. ವರ್ಷದಲ್ಲಿ ಮೂರು ತಿಂಗಳು ಮಾತ್ರ ಮಳೆಯಿರಬೇಕು, ಬಗ್ಗಡವಾಗಿ ಉಕ್ಕೇರಿಬರುವ ನದೀಪ್ರವಾಹವು ತಿಳಿಯಾಗದಿದ್ದಲ್ಲಿ ಆ ‘ಜೀವನ’ವೇ ಜಗತ್ತಿಗೆ ಜವನಾದೀತು. ಹೀಗೆಯೇ ಅವರಿಗೆ ಸಮಾಜಸುಧಾರಣೆಯಲ್ಲಿದ್ದ ಉತ್ಸಾಹವೂ ವಿವೇಕದಿಂದ ಕೂಡಿತ್ತು. ವೀರೇಶಲಿಂಗಂಪಂತುಲು ಅವರು ಆಯೋಜಿಸುತ್ತಿದ್ದ ವಿಧವಾವಿವಾಹಗಳಿಗೆ ಇವರೇ ಪುರೋಹಿತರು. ಆದರೆ ಬಾಲ್ಯವಿವಾಹನಿಷೇಧದ ಕಾನೂನನ್ನು ಎಚ್ಚರದಿಂದ ಅಳವಡಿಸಬೇಕೆಂದು ಹೇಳುತ್ತಿದ್ದರು. ದಲಿತರ ದೇವಾಲಯಪ್ರವೇಶಕ್ಕೆ ಅನುಮತಿ ಸಿಗಲೇಬೇಕೆಂದು ದುಡಿದವರವರು. ಅಂತೆಯೇ ದೇವಾಲಯಗಳಲ್ಲಿ ನೃತ್ಯಸೇವೆ ನಿಂತುಹೋಯಿತೆಂದು ಪರಿತಾಪ ಪಡುತ್ತಿದ್ದವರೂ ಹೌದು. ಹೀಗೆ ಯಾವುದೇ ವಿಚಾರದಲ್ಲಿಯೂ ತುಂಬ ಆಳವಾಗಿ, ವ್ಯಾಪಕವಾಗಿ, ಬಹುಮುಖವಾಗಿ ಚಿಂತಿಸಿ ಸಂಸ್ಕೃತಿಸಂಪನ್ನತೆಗಾಗಿ, ಸಮಷ್ಟಿಹಿತಕ್ಕಾಗಿ ದುಡಿಯುತ್ತಿದ್ದ ಮಹನೀಯರವರು.
ಡಿ.ವಿ.ಜಿ.ಯವರ ೧೨೮ನೇ ಜನ್ಮದಿನ (೧೭-೩-೨೦೧೫) ನಿಮಿತ್ತ ವಿಶೇಷ ಲೇಖನದ ೨ನೇ ಭಾಗ
‘ಚೆನ್ನಾಗಿ ನಮ್ಮನ್ನು ಆರ್ದ್ರರನ್ನಾಗಿಸುವ, ಹೃದ್ಭಾವಸಂಪನ್ನರಾಗಿಸುವ ಮೌಲ್ಯವೇ ಸೌಂದರ್ಯ’ – ಡಿ.ವಿ.ಜಿ.
ಸಂಸ್ಕೃತಿಸಂಪನ್ನತೆಯ ಪ್ರತಿಪಾದನೆ
ಡಿ.ವಿ.ಜಿ. ಅವರು ಎಂದೂ ಬರಿಯ ಸಾಹಿತಿಯಾಗಿಯೋ ಪತ್ರಕರ್ತನಾಗಿಯೋ ತಾತ್ತ್ವಿಕನಾಗಿಯೋ ಪರಿಮಿತರಾಗಿರಲಿಲ್ಲ. ಅವರು ಜಗದ ಬದುಕಿನ ಎಲ್ಲ ಮುಖಗಳಲ್ಲಿ ಸಹಾನುಭೂತಿಪೂರ್ಣವಾದ ಆಸಕ್ತಿಯನ್ನು ಇರಿಸಿದ್ದರು, ಚಿಂತನೆ-ಆಚರಣೆಗಳಿಗೂ ತೊಡಗಿದ್ದರು. ಹಿಗಾಗಿಯೇ ಕವಿ-ಕಲಾವಿದ, ಭಕ್ತ-ಪಂಡಿತ, ವಿಜ್ಞಾನಿ ಮತ್ತು ರಾಜನೀತಿಜ್ಞರಲ್ಲಿ ಅವರಿಗೆ ಭೇದವಿರಲಿಲ್ಲ. ಎಲ್ಲೆಡೆ ಸಮನ್ವಯ ಸಲ್ಲುತ್ತಿತ್ತು. ಅವರೇ ಹೇಳುವಂತೆ ಇವುಗಳ ಸಮನ್ವಯ ಹೀಗಿದೆ:
ಅಜ್ಞಾನವಾದುದನಭಾವವೆನೆ ನಾಸ್ತಿಕನು
ಅಜ್ಞೇಯವೆಂದದಕೆ ಕೈ ಮುಗಿಯೆ ಭಕ್ತ |
ಜಿಜ್ಞಾಸ್ಯವೆಂದು ಪರಿಕಿಸತೊಡಗೆ ವಿಜ್ಞಾನಿ
ಸ್ವಜ್ಞಪ್ತಿಶೋಧಿ ಮುನಿ – ಮಂಕುತಿಮ್ಮ || (ಪದ್ಯ ೧೦೭)
ರಾಮಣೀಯಕವೆಂದು ಬಿಸುಸುಯ್ಯಲದು ಕವಿತೆ
ಭೂಮಿಗದನೆಟುಕಿಸುವೆನೆಂಬೆಸಕ ರಾಷ್ಟ್ರಕತೆ |
ಆಮೂಲಮದರರಿವನ್ ಅರಸಲದು ವಿಜ್ಞಾನ
ಸಾಮಗ್ರ್ಯದಿಂ ಕಾಣಲದುವೆ ದಿವ್ಯಜ್ಞಾನ || (‘ಸಾಹಿತ್ಯಶಕ್ತಿ’)
ಸಮನ್ವಯಪಂಥ
ಅವರೆಷ್ಟು ಸಾಂಪ್ರದಾಯಿಕರೋ ಅಷ್ಟೇ ಆಧುನಿಕರಾಗಿದ್ದರು. ಬಾಬಾಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರು ತಾವೇ ಸ್ವಯಂ ತಮ್ಮ ಪುಸ್ತಕಗಳನ್ನು ಸಹಿಹಾಕಿ ಡಿ.ವಿ.ಜಿ.ಯವರ ಸಲಹೆ-ಸೂಚನೆಗಳಿಗಾಗಿ ಕಳುಹಿಸಿಕೊಡುತ್ತಿದ್ದರು. ದಿವಾನ್ ಮಿರ್ಜಾಸಾಹೇಬರು ಅವರನ್ನು ತಮ್ಮ ಸರಿ – ತಪ್ಪುಗಳ ವಿಮರ್ಶೆಗಿರುವ ಆದರ್ಶಮಿತ್ರನೆಂದೇ ಭಾವಿಸಿದ್ದರು. ಇವರಿಗೆ ಜಸ್ಟಿಸ್ಪಾರ್ಟಿಯ ಧೋರಣೆಗಳ ಬಗೆಗೆ ವೈಚಾರಿಕಭಿನ್ನತೆಯಿದ್ದರೂ ಅಲ್ಲಿಯ ಪ್ರಮುಖನಾಯಕರೊಡನೆ ವೈಯಕ್ತಿಕವಾಗಿ ಸ್ನೇಹವಿದ್ದಿತು.
ಸತ್ಯ-ಅಹಿಂಸೆ, ಅಸಹಕಾರಾಂದೋಲನ, ರಾಜನೀತಿವಿಧಾನಗಳ ಬಗೆಗೆ ಮಹಾತ್ಮ ಗಾಂಧಿಯವರೊಡನೆ ಎಷ್ಟೋ ಭಿನ್ನಮತವಿದ್ದರೂ ಅವರನ್ನು ೧೯೧೫ರಲ್ಲಿಯೇ ‘ದೈವಸಂಪನ್ಮಾರ್ಗದರ್ಶಕ’ರೆಂದು ಕೊಂಡಾಡಿ ಅವರನ್ನು ಮೊತ್ತಮೊದಲಿಗೆ ಬೆಂಗಳೂರಿಗೆ ಕರೆಯಿಸಿ ಆದರಿಸಿದ್ದರು ಡಿ.ವಿ.ಜಿ. ಕಡೆಯವರೆಗೂ ಈ ಗೌರವ ಉಳಿದಿತ್ತು.
ಭಾರತದೇಶವು ವಿಭಜನೆಗೊಳ್ಳದೆ ಅಖಂಡಸ್ವಾತಂತ್ರ್ಯವನ್ನು ಪಡೆಯಬೇಕೆಂದು ಅದೆಷ್ಟು ಕಾಳಜಿಯಿದ್ದಿತೋ ನೂರಾರು ದೇಶೀಯಸಂಸ್ಥಾನಗಳ ಪ್ರಜಾಹಿತದ ಬಗೆಗೂ ಅದೇ ಕಳಕಳಿಯಿದ್ದಿತು.
ವರ್ಣಪದ್ಧತಿಯ ತನ್ನದೇ ಆದ ಮೌಲ್ಯವನ್ನು ಮೆಚ್ಚಿ ಎತ್ತಿಹಿಡಿದವರಾದರೂ ಜಾತಿವೈಷಮ್ಯಕ್ಕೆ ಡಿ.ವಿ.ಜಿ. ಬದ್ಧವಿರೋಧಿಗಳಾಗಿದ್ದರು. ಈ ನಿಟ್ಟಿನಲ್ಲಿ ಅವರು ಮಹಾತ್ಮ ಗಾಂಧಿಯವರನ್ನು ನೂರಕ್ಕೆ ನೂರರಷ್ಟು ಹೋಲುತ್ತಿದ್ದರು. ತಾವು ಶ್ರೀಕೃಷ್ಣನನ್ನು ದೇವರ ಅವತಾರ ಎಂದು ಒಪ್ಪಿ ಆರಾಧಿಸುವ ಮನಸ್ಸಿನವರಾಗಿದ್ದರೂ ಹಾಗಲ್ಲದೆ ಆತನು ಕೇವಲ ಮಾನವನೆಂದು ಪ್ರತಿಪಾದಿಸಿ ದಿ|| ಪಿ. ಕೋದಂಡರಾಯರು ಬರೆದ ಲೇಖನವನ್ನು ಮೆಚ್ಚಿ ಪ್ರಕಟಿಸಿದ್ದರು. ಸಂಪ್ರದಾಯನಿಷ್ಠರೂ ಉತ್ತರೋತ್ತರ ಕೂಡಲಿ ಶಂಕರಮಠದ ಸ್ವಾಮಿಗಳೂ ಆದ ವೇ.ಬ್ರ. ಶ್ರೀ ಹಾನಗಲ್ ವಿರೂಪಾಕ್ಷಶಾಸ್ತ್ರಿಗಳ ಶಿಷ್ಯರಾಗಿ ವೇದಾಂತಪಾಠವನ್ನು ಕಲಿತಿದ್ದರೂ ಅದೆಷ್ಟೋ ವೈದಿಕಾಚಾರಗಳನ್ನು ಒಪ್ಪಿರಲಿಲ್ಲ, ಆಚರಿಸುತ್ತಲೂ ಇರಲಿಲ್ಲ. ವೇದಗಳ ಬಗೆಗೆ ಅಪಾರಶ್ರದ್ಧೆಯನ್ನಿರಿಸಿದ್ದರೂ ಪೂರ್ವಮೀಮಾಂಸಕರು ಹೇಳುವಂಥ ಅಪೌರುಷೇಯತ್ವವನ್ನು ಅವುಗಳಿಗೆ ಅಂಗೀಕರಿಸಿರಲಿಲ್ಲ. ಕೇವಲ ಅರ್ಥನಿತ್ಯತ್ವವನ್ನು ಮಾತ್ರ ಒಪ್ಪಿದ್ದವರಲ್ಲದೆ ಆನುಪೂರ್ವೀನಿತ್ಯತ್ವವನ್ನಲ್ಲ (ಈ ಬಗೆಗೆ ಆಸಕ್ತರು ‘ಜ್ಞಾಪಕಚಿತ್ರಶಾಲೆ’ಯ ‘ಮೈಸೂರಿನ ದಿವಾನರು’ ಭಾಗವನ್ನು [ಪುಟ ೨೫೬] ಗಮನಿಸಬಹುದು. ಅಂತೆಯೇ ‘ತೇನ ಪ್ರೋಕ್ತಂ’ ಎಂಬ ಪಾಣಿನಿಸೂತ್ರದ ಮೇಲಣ ಭಾಷ್ಯಾದಿಗಳನ್ನೂ ಪರಿಶೀಲಿಸಬಹುದು). ಸಂಗೀತದಲ್ಲಿ ತ್ಯಾಗರಾಜರ ತೆಲುಗಿನ ಕೃತಿಗಳನ್ನು ತುಂಬ ಮೆಚ್ಚಿದ್ದರೂ ಕನ್ನಡವು ಯಾವುದೇ ರೀತಿಯಲ್ಲಿ ಗೇಯಕೃತಿಗಳಿಗೆ ಸಮರ್ಥವಾದ ಭಾಷೆಯೆಂಬುದನ್ನು ಪ್ರತಿಪಾದಿಸುತ್ತಿದ್ದರು. ಗೋಪಾಲಕೃಷ್ಣ ಅಡಿಗರ ನವ್ಯಕವಿತೆಯೊಂದರ ಭಾಷೆಗೆ ಅಸಂಮತಿ ಸೂಚಿಸಿದ್ದವರಾದರೂ ಅನಂತಮೂರ್ತಿ, ಶಂಕರಮೊಕಾಶಿ ಪುಣೇಕರರಂಥವರ ಕಾದಂಬರಿಗಳನ್ನು ಮೆಚ್ಚಿದ್ದರು. ಮೂರ್ತಿರಾಯರೇ ಒಮ್ಮೆ ನಿಟ್ಟೂರರಿಂದ ಡಿ.ವಿ.ಜಿ.ಯವರ ಆಧುನಿಕವಿಚಾರಸಾಹಿತ್ಯವ್ಯಾಸಂಗದ ಸದ್ಯಸ್ಕತೆ (uptodateness)ಯನ್ನರಿತು ಬೆರಗಾಗಿದ್ದರು.
ಪರಮಾದರ್ಶ: ಉಪಶಾಂತಿ
ಮುಖ್ಯವಾಗಿ ಅವರದು ‘ism’ಗಳ ಹಠದಲ್ಲಿ ‘ಅಜೆಂಡಾ’ಗಳ ಆಗ್ರಹದಲ್ಲಿ ಕೊಚ್ಚಿಹೋದ ಮನಸ್ಸಲ್ಲ. ಇಂದು ಅನೇಕರಿಗೆ ಸ್ತ್ರೀವಾದದಿಂದಲೋ ದಲಿತವಾದದಿಂದಲೋ ಹೆಚ್ಚೆಂದರೆ ಮಾನವತಾವಾದದಿಂದಲೋ ಸಾಹಿತ್ಯವನ್ನೆಲ್ಲ, ಸಮಸ್ತಸಂಸ್ಕೃತಿ-ಜಗತ್ತುಗಳನ್ನೆಲ್ಲ ಅಳೆಯುವ ಉತ್ಸಾಹವಿರುತ್ತದೆ. ಅಂತೆಯೇ ಆಸ್ತಿಕ್ಯಕ್ಕೋ ನಾಸ್ತಿಕ್ಯಕ್ಕೋ ಜಗತೀಕರಣಕ್ಕೋ ನಿರ್ಜಗತೀಕರಣಕ್ಕೋ ಹೋರಾಡುವ missionary zeal ಇರುತ್ತದೆ. ಇಂಥ ತುಡಿತ-ದುಡಿತಗಳ ಫಲಾಫಲಗಳೇನೇ ಆಗಲಿ ಇವುಗಳನ್ನು ಆರೋಪಿಸಿಕೊಳ್ಳುವ ವ್ಯಕ್ತಿಗೆ ದಾರ್ಶನಿಕಸಮತ್ವವೂ ತನ್ಮೂಲಕವಾಗಿ ಬರುವ ಉಪಶಾಂತಿಯೂ ಇಲ್ಲವಾಗುತ್ತದೆ. ಆದರೆ ಡಿ.ವಿ.ಜಿ.ಯಂಥವರು ‘ಕಕ್ಷಿಗಾರನವೊಲೇ ಪೋರುತ್ತೆ ನ್ಯಾಯಕ್ಕೆ ಸಾಕ್ಷಿಯವೊಲು ಕಡೆಗೆ ತೀರ್ಪಾಗುವಂದು’ ಇರುತ್ತಾರೆ. ‘ಎರಡು ಕೋಣೆಗಳ ಮನದಾಲಯದಿ ಮಾಡಿ, ಹೊರಗೋಣೆಯಲಿ ಲೋಗರಾಟಗಳನಾಡಿ ಒಳಮನೆಯ ಶಾಂತಿಯಲಿ ಒಬ್ಬಂಟಿಯಾಗಿ’ ವಿರಮಿಸುತ್ತಾರೆ. ‘ಒಮ್ಮೆ ಹೂದೋಟದಲಿ ಒಮ್ಮೆ ಕೆಳೆಕೂಟದಲಿ ಒಮ್ಮೆ ಸಂಗೀತದಲಿ ಒಮ್ಮೆ ಶಾಸ್ತ್ರದಲಿ ಒಮ್ಮೆ ಸಂಸಾರದಲಿ ಮತ್ತೊಮ್ಮೆ ಮೌನದಲಿ ಬ್ರಹ್ಮಾನುಭವಿ’ಗಳಾಗುತ್ತಾರೆ. ಡಿ.ವಿ.ಜಿ.ಯವರು ೧೯೨೩ರಷ್ಟು ಹಿಂದೆಯೇ ತಮ್ಮ ‘ಆತ್ಮಗುರು’ ನರಸಿಂಹಮೂರ್ತಿಯವರಿಗೆ ಬರೆದ ಪತ್ರದಲ್ಲಿ ತಮ್ಮ ನಿಲವನ್ನು ಹೀಗೆ ಸ್ಪಷ್ಟೀಕರಿಸಿದ್ದಾರೆ: “ You ask whether I am conscious of any mission. What a question you ask! You know nothing of me if you do not know that I have always viewed life as a supreme ‘Leela’ – sport if you please. As such, how could I fall into the error of making a missionary of myself? It is only people wanting in modesty that conceive great ideas of themselves and their so-called missions here”. (‘ವಿರಕ್ತರಾಷ್ಟ್ರಕ’, ಪು ೧೨೮).
ಅನುಭವಶೋಧನೆ, ಅಖಂಡಾನಂದ
ಸಾಹಿತ್ಯ-ಕಲೆಗಳ ತತ್ತ್ವದೃಷ್ಟಿಯಿಂದಲೂ ಡಿ.ವಿ.ಜಿ.ಯವರ ನಿಲವು ದೃಢವಾಗಿತ್ತು. ಅವರು ಸಾಹಿತ್ಯ-ಕಲಾಕೃತಿಯೊಂದರ ಸ್ವನಿಷ್ಠ ರಸಾನುಭವಮೌಲ್ಯಕೇಂದ್ರಿತವಾದ ವಿಮರ್ಶೆ-ಮೀಮಾಂಸೆಗಳನ್ನೇ ಪ್ರಧಾನವೆಂದು ತಿಳಿದರಲ್ಲದೆ ಅನುಭವಬಾಹ್ಯವಾದ ಪ್ರತೀತಿಪಾರಮ್ಯದ ಐತಿಹಾಸಿಕ, ಸಾಮಾಜಿಕ, ರಾಜಕೀಯಾದಿ ವಿಶ್ಲೇಷಣೆಗಳನ್ನಲ್ಲ. ಈ ಎಲ್ಲ ಅಂಶಗಳೂ ಔಚಿತ್ಯವೆಂಬೊಂದು ತತ್ತ್ವದಲ್ಲಿ ಅಡಗುತ್ತವೆ. ಔಚಿತ್ಯವು ತೀರ ಸಾಪೇಕ್ಷ. ಆದರೆ ರಸವು ಹಾಗಲ್ಲ,* ಅದು ನಿರಪೇಕ್ಷ ಹಾಗೂ ಪರಾನುಭವ. ಅಂತೆಯೇ ಕಾವ್ಯವು ಕೇವಲ ಹಸಿಬಿಸಿ ಅನುಭವನಿವೇದನೆಯಲ್ಲ, ಅನುಭವದ ಧ್ವನಿಪೂರ್ಣ ನಿರೂಪಣೆಯೂ ಅಲ್ಲ. ಅದು ಅನುಭವವನ್ನು ಸತ್ತ್ವೋದ್ರಿಕ್ತವನ್ನಾಗಿಸಿ ಧ್ವನನಗೊಳಿಸುವ ವಾಗರ್ಥಗಳ ಸುಂದರ-ಸಮರಸ-ಪ್ರಕ್ರಿಯೆ. ಈಚೆಗೆ ಬರಿಯ ಅನುಭವಶೋಧನೆಯನ್ನೇ ಕಾವ್ಯ / ಕಲೆಯೆಂದು ಆಗ್ರಹಿಸುವ ಪರಿಪಾಟಿಯೊದಗಿದೆ. ಆದರೆ ಡಿ.ವಿ.ಜಿ.ಯವರಿಗೆ ಪರಮಾನುಭವದ ಹಾರ್ದಿಕಸಂವಹನವೂ ಕಾವ್ಯವಾಗುತ್ತದೆ. ಇದು ಭಾರತೀಯಕಾವ್ಯಮೀಮಾಂಸೆಗೆ ಅನುಗುಣವೂ ಆಗಿದೆ. ಅನುಭವಪರಿಪಾಕದ ವಕ್ರತಾತ್ಮಕಾಭಿವ್ಯಕ್ತಿಯು ಉತ್ತಮಕಾವ್ಯವೇ ಹೌದೆಂಬುದನ್ನು ಕುಂತಕನ ವಕ್ರೋಕ್ತಿಸಿದ್ಧಾಂತವೂ ಆನಂದವರ್ಧನನ ಗುಣೀಭೂತವ್ಯಂಗ್ಯಕಾವ್ಯಪರಿಕಲ್ಪನೆಯೂ ಸಾರಿವೆ. ಹಲವರಿಗೆ ಗುಣೀಭೂತವ್ಯಂಗ್ಯವೆಂಬುದು ಎರಡನೆಯ ದರ್ಜೆಯ ಕಾವ್ಯವೆಂಬ ಭ್ರಮೆಯುಂಟು. ಆದರೆ ಆನಂದವರ್ಧನನ ಅಭಿಪ್ರಾಯ ಹೀಗಲ್ಲ. ಪ್ರೊ|| ಕುಪ್ಪುಸ್ವಾಮಿಶಾಸ್ತ್ರಿ ಮತ್ತು ಡಾ|| ಕೆ. ಕೃಷ್ಣಮೂರ್ತಿಯವರೆನ್ನುವಂತೆ ಗುಣೀಭೂತವ್ಯಂಗ್ಯವು ಎರಡನೆಯ ಬಗೆಯ, ಅಂದರೆ ಬೇರೊಂದು ಆಕೃತಿಯ ಕಾವ್ಯವಷ್ಟೇ ಅಲ್ಲದೆ ಎರಡನೆಯ ದರ್ಜೆಯ ಅಂದರೆ ಬೇರೊಂದು ಆಶಯದ ಕಾವ್ಯವೆಂದಲ್ಲ.** ಅದೊಮ್ಮೆ ಕೆ.ರ್. ಕೃಪಲಾನಿ ಮತ್ತು ಕೆ.ಆರ್. ಶ್ರೀನಿವಾಸ ಅಯ್ಯಂಗಾರ್ಯರಿಗೆ ಡಿ.ವಿ.ಜಿ. ಹೇಳಿದ ಮಾತು ಸ್ಮರಣೀಯ: The highest use of literature is a certain grace and serenity.. ಅಂತೆಯೇ ಅವರೇ ಇನ್ನೊಂದೆಡೆ ಸತ್ಕಾವ್ಯ ಮತ್ತು ಸತ್ಕಲೆಗಳಿಂದ ಆಹ್ಲಾದ (ಉಲ್ಲಾಸ) ಹಾಗೂ ಸತ್ಪ್ರೇರಣೆಗಳು ಒಟ್ಟಿಗೇ ಉಂಟಾಗುವುವೆಂದಿರುವುದೂ ಗಮನಾರ್ಹ. ಈ ಮಾತು ನಾವು ಈ ಮುನ್ನವೇ ಕಂಡ ರಸದ ಸಚ್ಚಿದಾನಂದೈಕರೂಪಕ್ಕೆ ಸಂವಾದಿ.
ಭಾವಾನುಕೀರ್ತನವೇ ಕಲೆ
ಹೀಗಾಗಿಯೇ ಅಭಿನವಗುಪ್ತನಂಥ ಮಹಾದಾರ್ಶನಿಕ ಕಾವ್ಯಮೀಮಾಂಸಕನು ನಿರ್ಣಾಯಕವಾಗಿ ಸಾರಿದ: ನ ಚೈತೇ ಪ್ರೀತಿವ್ಯುತ್ಪತ್ತೀ ಭಿನ್ನರೂಪೇ ಏವ | ದ್ವಯೋರಪ್ಯೇಕವಿಷಯತ್ವಾತ್ (ಬೋಧ ಮತ್ತು ಮೋದಗಳಿಗೆ ರಸಸ್ಥಿತಿಯಲ್ಲಿ ವ್ಯತ್ಯಾಸವಿರುವುದಿಲ್ಲ) (ಧ್ವನ್ಯಾಲೋಕಲೋಚನ, ಪು ೧೪೯). ಅಂತೆಯೇ ಹಿರಿಯಣ್ಣನವರು ಹೇಳುವ “The purpose of Art is to transcend all purposes “ಎಂಬ ಮಾತೂ ಮಹಾವಿದ್ವಾಂಸರಾದ ವಿ.ಎಸ್. ಸುಕಥನಕರ್ ಅವರೆನ್ನುವ“The value to us of a great work of art or literature depends, I think, primarily on two factors: firstly, the intensity with which we are transported to a new world; and secondly, the nature of the world to which we are transported (‘On the Meaning of the Mahabharata’, p. 35) ಮಾತೂ ಅವಿಸ್ಮಾರ್ಯ.
ಕಲೆ / ಕಾವ್ಯಗಳಲ್ಲಿ ತರ್ಕವು ಇಲ್ಲವೆಂದಲ್ಲ, ಅದು ಲೌಕಿಕತರ್ಕಾತೀತವಾಗಿರುತ್ತದೆ. ಈ ಸ್ಥಿತಿಗೂ ತರ್ಕರಹಿತತೆಗೂ ತುಂಬ ವ್ಯತ್ಯಾಸವಿದೆ. ಬದುಕಿನಲ್ಲಿ ತರ್ಕರಾಹಿತ್ಯ ಹಾಗೂ ತರ್ಕಸಹಿತತೆಗಳೆರಡೂ ಇರುತ್ತವೆ. ಆದರೆ ಕಲೆ/ಕಾವ್ಯಗಳಲ್ಲಿ
ಈ ದ್ವಂದ್ವಗಳನ್ನು ಮೀರಿದ ಅಖಂಡಾನಂದಸಂವೇದನೆಯಿರುತ್ತದೆ.*** ಹೀಗಾಗಿಯೇ ಡಿ.ವಿ.ಜಿ.ಯಂಥವರ ಕೃತಿಗಳಲ್ಲಿ ಇಂದಿನ ವ್ಯಧಿಕರಣವಾದಿವಿಮರ್ಶಕರು ಬಯಸುವ ಮರ್ತ್ಯತರ್ಕವಾಗಲಿ ಸಾಮಾಜಿಕನ್ಯಾಯ, ಕ್ರಾಂತಿ, ಬಂಡಾಯಗಳಂಥವಾಗಲಿ ವಾಚ್ಯವಾಗಿರುವುದಿಲ್ಲ. ಮುಖ್ಯವಾಗಿ ಭಾರತೀಯರಸಸಿದ್ಧಾಂತವನ್ನು ಇಂದಿನ ಸಾಹಿತ್ಯಾಧ್ಯಾಪಕರೂ ವಿಮರ್ಶಕರೂ ಸರಿಯಾಗಿ ತಿಳಿಯದ ಕಾರಣ ಈ ಸೌಂದರ್ಯದರ್ಶನದೊಡನೆ ಗಾಢವಾಗಿ ಹೆಣೆದುಕೊಂಡಿರುವ ಡಿ.ವಿ.ಜಿ. ಮತ್ತವರ ಕಾಲದ ಸಾಹಿತ್ಯಚಿಂತಕ/ನಿರ್ಮಾಪಕರನ್ನು ಪ್ರಾಮಾಣಿಕವಾಗಿ ಅರ್ಥಮಾಡಿಕೊಳ್ಳಲೇ ಆಗುತ್ತಿಲ್ಲ. ಡಿ.ವಿ.ಜಿ.ಯವರ ‘ಸೌಂದರ್ಯ’ ಪದದ ನಿರ್ವಚನವೂ ಪ್ರಸಿದ್ಧ. ಚೆನ್ನಾಗಿ ನಮ್ಮನ್ನು ಆರ್ದ್ರರನ್ನಾಗಿಸುವ, ಹೃದ್ಭಾವಸಂಪನ್ನರಾಗಿಸುವ ಮೌಲ್ಯವೇ ಸೌಂದರ್ಯವೆಂದು ಅವರ ನಿಷ್ಕರ್ಷೆ. ಇಂಥ ಸೌಂದರ್ಯದ ನಿರ್ಮಾಣವು ಪರಿಚಿತ ಮತ್ತು ಅಪರಿಚಿತಾಂಶಗಳ ಪರಿಪಾಕ. ಪರಿಚಯದಿಂದ ಪ್ರೀತಿ-ಸಲುಗೆ, ಅಪರಿಚಿತದಿಂದ ಕುತೂಹಲ-ಆದರ. ಹೀಗೆ ಸೌಂದರ್ಯಾನುಭವವೊಂದು ರಸಯಾತ್ರೆ, ಆಸ್ವಾದಪ್ರಕ್ರಿಯೆ. ಇದರ ಹಾದಿಯೇ ಗುರಿ. ಇಲ್ಲಿ ಅಂತ್ಯವು ಆದ್ಯಂತದ ಹರಹೇ ಆಗಿದೆ. ಹೀಗಾಗಿಯೇ ಹಿರಿಯಣ್ಣನವರೆನ್ನುವಂತೆ “Art is a value, for, any value has an end in itself “- ಎಂಬ ಮಾತು ಒಪ್ಪುತ್ತದೆ. ಇಂಥ ಚಿಂತನೆಯ ಫಲವಾಗಿಯೇ ಡಿ.ವಿ.ಜಿ. ಅವರು ನವ್ಯರಂತೆ ತಮ್ಮ ಸೋಲು-ಸಂಕಟ, ಕಹಿ-ಕಪಟಗಳನ್ನು ಹೇಳಿಕೊಳ್ಳುವುದೇ ವಾಸ್ತವತೆಯೆಂದೂ ರಮ್ಯರಂತೆ ಬರಿಯ ತೋರಿಕೆಯ ಚೆಲುವು-ಮುದ್ದುಗಳನ್ನೇ ಉದ್ಗರಿಸಿ ಮುಗಿಸುವುದಷ್ಟೇ ಭಾವುಕತೆಯೆಂದೂ ಬಗೆಯದೆ “Art is not mere reality, but it is something added to it”ಎಂಬ ಹಿರಿಯಣ್ಣನವರ ಉಕ್ತಿಯಂತೆ – ‘ತ್ರೈಲೋಕ್ಯಸ್ಯಾಸ್ಯ ಸರ್ವಸ್ಯ ನಾಟ್ಯಂ ಭಾವಾನುಕೀರ್ತನಂ’ ಎಂಬ ಭರತಮುನಿಯ ಸಾರಸೂತ್ರದಂತೆ (ನಾಟ್ಯಶಾಸ್ತ್ರ – I-೧೦೭) ಜಗತ್ತಿನ ಅನುಕರಣಕ್ಕಿಂತ ಭಿನ್ನವಾದ ಅನುಕೀರ್ತನವನ್ನು ಕಲೆಯೆಂದರಿತು ಅದರಂತೆ ಬದುಕನ್ನೂ ರೂಪಿಸಿಕೊಂಡರು. ಆದುದರಿಂದಲೇ ಅವರು ತಲೆಪಾಗಿನೊಳಕೊಳಕ, ಪಂಚೆನಿರಿಯೊಳಹರಕ ತಿಳಿಸುವೆಯ ರಜಕಗಲ್ಲದೆ ಲೋಕರಿಂಗೆ? ಅಳಲು ದುಗುಡಗಳ ನಿನ್ನೊಳಗೆ ಬಯ್ತಿಡದೆ ನೀನಿಳೆಗೆ ಹರಡುವುದೇಕೊ? – ಮಂಕುತಿಮ್ಮ (ಪದ್ಯ ೭೧೯) ಎಂದು ಹೇಳಿಕೊಂಡರು. ಇದಕ್ಕಾಗಿಯೇ ತಮ್ಮ ಬದುಕಿನ ಆರ್ಥಿಕರಿಕ್ತತೆಯನ್ನು ಯಾರಿಗೂ ಹೇಳಿಕೊಳ್ಳದೆ, ಎಲ್ಲಿಯೂ ರಾಜಿ ಮಾಡಿಕೊಳ್ಳದೆ ಬಾಳಿದರು. ಇಂದಿನ ನಮ್ಮ ಲಬ್ಧಪ್ರತಿಷ್ಠರಾದ ಚಿಂತಕರೆಂದೂ ಸಾಹಿತಿಗಳೆಂದೂ ಮುಂಚೂಣಿಯಲ್ಲಿ ಮೆರೆಯುವ ಅದೆಷ್ಟುಮಂದಿಗೆ ತಾನೆ ನವೋದಯದ ಇಂಥ ಧೀಮಂತರ ಶುದ್ಧಜೀವನದ ಸತ್ತ್ವ-ಶಕ್ತಿಗಳುಂಟು? ಈ ಬದುಕಿಗೆ ಹತ್ತಿರವೂ ಬಾರದವರಿಗೆ ಆ ಬಗೆಯ ಬಾಳುಗಳ ನೆಲೆ-ಹಿನ್ನೆಲೆಗಳನ್ನು ತಮ್ಮೊಳಗೆ ತಂದುಕೊಳ್ಳುವುದಾದರೂ ಸಾಧ್ಯವಾದೀತೆ? ನನ್ನ ಈ ಮಾತುಗಳು ಕಟುವಾದರೂ ದಯಮಾಡಿ ಯಾರೂ ಅನ್ಯಥಾ ತಿಳಿಯಬಾರದು.
ಜೀವಶುದ್ಧಿ
ಡಿ.ವಿ.ಜಿ.ಯವರು ತಮ್ಮ ಬಾಳಿನಲ್ಲಿ ಅನೇಕರಿಗೆ ತಾವು ಸಲ್ಲಿಸಿದ ನೆರವಿಗಾಗಿ, ಸಲಹೆಗಳಿಗಾಗಿ ವೈಯಕ್ತಿಕ/ಸಾಂಸ್ಥಿಕಸ್ತರಗಳಿಂದ ಬಂದ ಚೆಕ್ಕುಗಳನ್ನು ನಗದಾಗಿಸಿಕೊಳ್ಳಲಿಲ್ಲವೆಂಬ ಸಂಗತಿ ದಂತಕಥೆಯೇ ಆಗಿದೆಯಷ್ಟೆ. ಇದಕ್ಕಿಂತ ಮಿಗಿಲಾದದ್ದೇನೆಂದರೆ ಅವರು ಯಾರ ಸ್ನೇಹ-ಪ್ರೀತಿಗಳನ್ನೂ ಯಾವುದೇ ಸ್ಥಾನ-ಮಾನಗಳನ್ನೂ ‘eಟಿಛಿಚಿsh’ ಮಾಡಿಕೊಳ್ಳಲಿಲ್ಲ. ಮುಖ್ಯವಾಗಿ ಅವರ ತಾತ್ತ್ವಿಕನೇಪಥ್ಯದ ಮಹತ್ತ್ವವನ್ನರಿಯಲು ಅವರ ಜೀವಶುದ್ಧಿಯನ್ನೂ ಲೋಕಪ್ರೀತಿಯನ್ನೂ ಗಮನಿಸಬೇಕು. ‘ಜ್ಞಾಪಕಚಿತ್ರಶಾಲೆ’ಯ ಸಂಪುಟಗಳಷ್ಟೇ ಸಾಕು, ಅವರ ಆ ಬಗೆಯ ಸಿದ್ಧಿಯನ್ನು ಸೊಗಸಾಗಿ ಧ್ವನಿಸುತ್ತವೆ. ವಸ್ತುತಃ ಈ ಸಂಪುಟಶ್ರೇಣಿಯನ್ನು ಡಿ.ವಿ.ಜಿ.ಯವರ ಆತ್ಮಜೀವನಮಹಾಕಾವ್ಯವೆನ್ನಬಹುದು. ಆದರೆ ಕೆಲವರಿಗೆ ಆ ಸಂಪುಟಗಳೂ ಅಹಿತವಾಗಿ ಕಂಡಿವೆ. ಅವರಿಗೆ ಡಿ.ವಿ.ಜಿ.ಯವರ ತತ್ತ್ವಸ್ಫೂರ್ತಿಯ ಗ್ರಂಥಗಳನ್ನೂ ಜೀವನಧರ್ಮವನ್ನೂ ಅಭ್ಯಸಿಸದೆ ನಿಸ್ತಾರ ಕಾಣದು. ಬದುಕಿನ ಒಂದೊಂದು ಕ್ಷಣವನ್ನೂ ಉತ್ಕಟವಾಗಿ, ವಿಶುದ್ಧವಾಗಿ ಬಾಳಲು ಹೆಣಗಿದ, ಅದರಲ್ಲಿಯೇ ಆನಂದವನ್ನು ಕಂಡ ಡಿ.ವಿ.ಜಿ.ಯವರ ಪಾಲಿಗೆ ಸಂಸ್ಕೃತಿಯೊಂದು ಮಹತ್ತ್ವದ ಸಂಗತಿಯಾಗಿ ಕಂಡಿರುವುದರಲ್ಲಿ ಅಚ್ಚರಿಯಿಲ್ಲ.
ಈಚೆಗೆ ‘ಮಾನವಶಾಸ್ತ್ರ’ ಮಾತ್ರವನ್ನೋ ವಾಮಪಂಥೀಯವಿಚಾರಮಾತ್ರವನ್ನೋ ಗಮನದಲ್ಲಿರಿಸಿ ಸಂಸ್ಕೃತಿಯ ವಿಶ್ಲೇಷಣೆಗೆ ಹೊರಟ ಹಲವರು ಡಿ.ವಿ.ಜಿ.ಯವರದ್ದು ವಸಾಹತುಶಾಹಿಯುಗದ ದೃಷ್ಟಿ, ಶಿಷ್ಟತೆಯ ಆಗ್ರಹವುಳ್ಳ ನೋಟವೆಂದು ಆಕ್ಷೇಪಿಸಿರುವುದುಂಟು. ಆದರೆ ಈ ಎಲ್ಲ ವಕ್ತಾರರು ಹೇಳುವಂಥ ‘ಸಂಸ್ಕೃತಿ’ ನಿರ್ವಚನವು ಕೇವಲ ಪ್ರಕೃತಿಮಾತ್ರವಾಗಿದೆ. ಇಂತಿರಲು ಸಂಸ್ಕೃತಿಯೆಂಬುದರ ಸಾರ್ಥಕ್ಯವೇನು? ಅದರ ಹೆಸರೇ ಹೇಳುವಂತೆ ಸಂಮ್ಯಕ್ಕರಣವೇ ಸಂಸ್ಕೃತಿ. ಡಿ.ವಿ.ಜಿ.ಯವರ ಪ್ರಕಾರ ಅದು ಜೀವನದ ನಾನಾ ವಿಷಯಗಳ, ನಾನಾ ಧ್ಯೇಯಗಳ, ನಾನಾ ತತ್ತ್ವಗಳ, ನಾನಾ ಧರ್ಮಮೌಲ್ಯ ತಾರತಮ್ಯಜ್ಞಾನದಿಂದಾದ ಸಮನ್ವಯಸ್ವಾರಸ್ಯ (ಡಿ.ವಿ.ಜಿ. ಕೃತಿಶ್ರೇಣಿ ಸಂ.I, ಪು. ೫೧೬). ಮಾತ್ರವಲ್ಲ, ನಮ್ಮ ಜೀವನವನ್ನು ಸಾಧುವನ್ನಾಗಿ ಮಾಡಿಕೊಳ್ಳುವ ವಿಧಾನವೇ ಸಂಸ್ಕೃತಿ. ಲೋಕದೊಡನೆ ನಮಗಾಗುವ ನಾನಾ ಸಂಪರ್ಕಗಳಲ್ಲಿ ನಾವು ಉಂಟಾಗಿಸುವ ಔಚಿತ್ಯವೇ ಸಂಸ್ಕೃತಿ (ಅದೇ, ಪು.೫೧೭). ಡಿ.ವಿ.ಜಿ.ಯವರು ಸಂಸ್ಕೃತಿಯ ಬಹುತ್ವವನ್ನು ಎಲ್ಲರಿಗಿಂತ ಮೊದಲೇ ತುಂಬಾ ವ್ಯಾಪಕವಾಗಿಯೇ ಪ್ರತಿಪಾದಿಸಿದ್ದಾರೆ (ಅದೇ, ಪು.೫೧೮), ಸಂಸ್ಕೃತಿಯೆಂಬುದು ಒಂದು ಅಂತರಂಗದ ಪರಿಪಾಕವೆಂದೂ ಅಲ್ಲಿಯೇ ಹೇಳಿದ್ದಾರೆ. ಸಮಗ್ರಜೀವನದ ಮೂಲಮೌಲ್ಯಗಳಾದ ಧರ್ಮಾರ್ಥಕಾಮಮೋಕ್ಷಗಳೆಂಬ ಪುರುಷಾರ್ಥಚತುಷ್ಟಯವನ್ನೂ ಸಂಸ್ಕೃತಿಯೊಂದಿಗೆ ಒಪ್ಪವಿರಿಸಿದ್ದಾರೆ (ಅದೇ, ಪು.೫೨೮-೫೩೧). ಇದಕ್ಕೆ ಪೂರಕವಾಗಿ ತಮ್ಮ ‘ಬಾಳಿಗೊಂದು ನಂಬಿಕೆ’ ಕೃತಿಯ ಆದ್ಯಂತ ನಡಸಿರುವ ಚರ್ಚೆ (ವಿಶೇಷತಃ ಪು.೪೪೪-೪೭೨; ೪೮೦-೪೯೦; ಡಿ.ವಿ.ಜಿ. ಕೃತಿಶ್ರೇಣಿ ಸಂ.I) ಗಮನಾರ್ಹ. ಅಂತೆಯೇ ‘ಸಂಸ್ಕೃತಿ’ ಗ್ರಂಥದಲ್ಲಿಯೇ ಇದಕ್ಕೆ ಪೂರಕವಾಗಿ ‘ರಾಜ್ಯಶಾಸ್ತ್ರ’ ಎಂಬ ಅವರ ಬೇರೊಂದು ಕೃತಿಯನ್ನು ಹೊಂದಿಸಿಕೊಳ್ಳಬೇಕೆಂದಿರುವುದೂ ಮನನೀಯ. ‘ಸಂಸ್ಕೃತಿ’ ಕೃತಿಯ ‘ಸಾಮಾನ್ಯ ಮತ್ತು ವಿಶೇಷ’ ಎಂಬ ಅಧ್ಯಾಯದಲ್ಲಿ (ಅದೇ, ಪು.೫೪೯-೫೫೪) ಹಾಗೂ ಇದರ ಮುಂದಿನ ಹಲವು ಪ್ರಕರಣಗಳಲ್ಲಿ ಡಿ.ವಿ.ಜಿ.ಯವರ ವ್ಯಾಪಕದೃಷ್ಟಿ ಅರಿವಾಗದಿರದು.
ಅನಾಗ್ರಹ
ಅವರು ತಮ್ಮ ವ್ಯಾಸಂಗದ ಪರಿಧಿಯೊಳಗೆ ನೀಡುವ ದೃಷ್ಟಾಂತ, ಉದಾಹರಣೆ, ಉದ್ಧರಣಗಳು ಅವರ ಸಂಸ್ಕೃತಿದೃಷ್ಟಿಕೋನವೇ ‘ಶಿಷ್ಟ’, ‘ಬ್ರಾಹ್ಮಣೀಕೃತ’ ಎಂದು ಅವಸರದ ತೀರ್ಮಾನಕ್ಕೆ ಹಲವರನ್ನು ತಂದಿರಿಸುವುದು ವಿಷಾದಕರ. ಡಿ.ವಿ.ಜಿ.ಯವರ ಭಾಷೆ ಮತ್ತು ಪರಿಭಾಷೆಗಳು ಆಭಿವ್ಯಕ್ತಿಕವಾಗಿ, ಅಂತೆಯೇ ಅವರ ಹಿನ್ನೆಲೆಗೆ ಸಹಜವಾಗಿ ‘ಬ್ರಾಹ್ಮಣೀಕೃತ’ ಎನ್ನಬಹುದಾದರೂ ಅವರಿಗೆ ಭಾವ ಮತ್ತು ಅನುಭಾವಗಳ ನೆಲೆಯಲ್ಲಿ ಆಶಯರೂಪವಾಗಿ ಈ ಜಗತ್ತಿನ ಎಲ್ಲ ‘ಶಿಷ್ಟ-ಪರಿಶಿಷ್ಟ’ ಎಂಬ ಹಣೆಪಟ್ಟಿಗೆ ಗುರಿಯಾದ ಸಂಸ್ಕೃತಿಮುಖಗಳಲ್ಲಿಯೂ ಆದರವಿತ್ತು, ಅಂಗೀಕೃತಿಯಿತ್ತು. ಅವರ ಕಾವ್ಯಸಂಸ್ಕೃತಿಯನ್ನೇ ಗಮನಿಸಿ ಇದಕ್ಕೊಂದು ದೃಷ್ಟಾಂತವನ್ನು ಹೇಳಬಹುದು. ಅವರಿಗೆ ಹಳಗನ್ನಡ ಮತ್ತು ಅಲ್ಲಿಯ ಛಂದೋಬಂಧಗಳ ಬಗೆಗೆ ಆದರ-ಅಭಿಮಾನಗಳಿದ್ದುವು, ಪ್ರಭುತ್ವ-ಪ್ರೀತಿಗಳಿದ್ದುವು. ಹೀಗಿದ್ದೂ ಪುರಾತನದಲ್ಲಿ ಸತ್ತ್ವವಿದ್ದರೆ ಅದು ನಮಗೆ ಕಾಲಾನುಕಾಲಕ್ಕೆ ಹಿಂದಿರುಗಿ ಬರುತ್ತದೆ. ಅದರಲ್ಲಿ ಸತ್ತ್ವವಿಲ್ಲದಿದ್ದಲ್ಲಿ ಅದರ ಅಳಿವಿಗಾಗಿ ಯಾರೂ ಅಳಬೇಕಾದದ್ದಿಲ್ಲ (‘ಜೀವನಧರ್ಮಯೋಗ’, ಪು.೨೦) ಎಂದು ನಿರ್ಮಮವಾಗಿ ಸಾರುತ್ತಾರೆ. ‘ನನಗೆ ಇನ್ನೊಂದು ಜಗನ್ನಾಥವಿಜಯ ಬೇಡ, ಮತ್ತೊಂದು ಗದಾಯುದ್ಧ ಬೇಕು’ ಎನ್ನುವಾಗಲೂ ಇಂಥದ್ದೇ ಆರೋಗ್ಯಕರದೃಷ್ಟಿ ತೋರುತ್ತದೆ. ಬಿರಿದಳಿವ ಹೂವೇಕೆ? ಕಿರಿಬಾಳದೇಕೆ? ಮರೆವೆಗಾಹುತಿಯಪ್ಪ ಕಿರುಗವಿತೆಯೇಕೆ? ಎಡೆಯುಂಟು ಸೃಷ್ಟಿತಾಯುದ್ಯಾನದೊಳಗೆ | ಬಡಹೂವು ಬಡಹಾಡು ಬಡಬಾಳುಗಳಿಗೆ ಎಂದು ತಮ್ಮನ್ನೇ ಅನುಲಕ್ಷಿಸಿಕೊಂಡು ಹೇಳುತ್ತಾರೆ (‘ವಸಂತಕುಸುಮಾಂಜಲಿ’, ಪು.೮). ‘ಪ್ರಹಸನತ್ರಯಿ’ಯಲ್ಲಿ ಅವರು ಬಳಸಿದ ಭಾವ-ಭಾಷೆಗಳಾಗಲಿ, ‘ವಿದ್ಯಾರಣ್ಯವಿಜಯ’ ನಾಟಕದ ಕಡೆಯಲ್ಲಿ ಅವರು ಕಾಣಿಸುವ ಕೋಲಾಟದ ಸಾಂಗತ್ಯಗೀತಗಳಾಗಲಿ ಇಂಥ ನೆಮ್ಮದಿಯ ನಿಲವಿಗೆ ಸುಂದರವಾದ ಲಘು ಮತ್ತು ಗಂಭೀರ ನಿದರ್ಶನಗಳು.
ದಿಟವೇ, ಡಿ.ವಿ.ಜಿ.ಯವರು ತಮ್ಮ ಕಾಲದ ಸಾಮಾಜಿಕ-ಸಾಂಸ್ಕೃತಿಕಪರಿಮಿತಿಗಳನ್ನು ಕೆಲಮಟ್ಟಿಗೆ ಒಪ್ಪುತ್ತಾರೆ, ಮೆಚ್ಚುತ್ತಾರೆ ಕೂಡ. ಅದಕ್ಕೆ ಮುಖ್ಯ ಕಾರಣ ಅವರು ಅಲ್ಲಿ ಗುರುತಿಸಿದ್ದ ಯಾವುದೋ ಸೊಗಸು, ಮಹತ್ತ್ವ, ಮೌಲ್ಯಗಳಲ್ಲದೆ ಅಂಧಾಗ್ರಹವಲ್ಲ. ಅವರ ‘ಜ್ಞಾಪಕಚಿತ್ರಶಾಲೆ’ಯ ಕೆಲವು ಚಿತ್ರಣಗಳನ್ನು (ಉದಾ: ಸೊಣ್ಣೇಗೌಡರ ಸಮಾರಾಧನೆ, ಹೃದಯಸೌಂದರ್ಯ ಒಂದು ಮಧುರಸ್ಮೃತಿ ಮುಂತಾದುವು) ಒಬ್ಬಿಬ್ಬರು ವಿಕೃತವಾಗಿ ವ್ಯಾಖ್ಯಾನಿಸಿರುವುದುಂಟು; ಡಿ.ವಿ.ಜಿ.ಯವರು ಹಿಂದುಳಿದ ಜನಾಂಗದ ಬಡತನವನ್ನೂ ದೈನ್ಯ-ನೈಚ್ಯಾನುಸಂಧಾನಗಳನ್ನೂ ಕೊಂಡಾಡಿ ಅವರು ಮುಂದುವರಿದವರೊಡನೆ ಅದೇ ಸ್ಥಿತಿಯಲ್ಲಿ ವರ್ತಿಸಬೇಕೆಂಬ ಇಂಗಿತವನ್ನು ಧ್ವನಿಸುತ್ತಾರೆಂದು ! ಆದರೆ ಡಿ.ವಿ.ಜಿ.ಯವರ ಸಮಗ್ರ ಜೀವನ-ಸಾಧನೆಗಳನ್ನು ಕಂಡವರಿಗೆ ಇಂಥ ಆಪಾದನೆಗಳಲ್ಲಿ ಹುರುಳಿಲ್ಲವೆಂದು ಸ್ಫುಟವಾಗದಿರದು. ಅವರು ತಮ್ಮ ‘ವೈದಿಕಧರ್ಮ – ಸಂಪ್ರದಾಯಸ್ಥರು’ ಕೃತಿಯಲ್ಲಿಯೂ ‘ಸಂಕೀರ್ಣಸ್ಮೃತಿಸಂಪುಟ’ದಲ್ಲಿಯೂ ಬಹಳಷ್ಟು ಬ್ರಾಹ್ಮಣರ ದಾರಿದ್ರ್ಯವನ್ನು ವರ್ಣಿಸಿ ಅದು ಹಾಗೆಯೇ ಮುಂದುವರಿಯಲೆಂದೂ ಆಶಿಸಿದ್ದಾರೆ ! ವರ್ತಕರಿಗೆ ಸರಳಜೀವನ ಅತ್ಯಾವಶ್ಯಕವೆಂದು ಅಲ್ಲಿಯ ನಾಯಕರಿಗೇ ಬುದ್ಧಿ ಹೇಳಿದ್ದುಂಟು (‘ಹೃದಯಸಂಪನ್ನರು’, ಪು.೬೩-೬೫). ಮುಖ್ಯವಾಗಿ ಡಿ.ವಿ.ಜಿ.ಯವರ ಸಂಸ್ಕೃತಿಯ ಕಾಳಜಿ ತುಂಬ ಮೂಲಭೂತವಾದದ್ದು; ಅದು ಆತ್ಮಪರಿಪಾಕವನ್ನೂ ಸಮಾಜದ ಮೂಲಘಟಕವಾದ ವ್ಯಕ್ತಿಯ ಸಂಸ್ಕಾರವನ್ನೂ ಅವಧರಿಸುವಂಥದ್ದು. ಹೀಗಾಗಿಯೇ ಸ್ವಸ್ಥಾನಪರಿಜ್ಞಾನ, ಪರೇಂಗಿತಪರಿಗ್ರಹಣ, ಸ್ವಾರ್ಥನಿಯಮನ, ಸಮನ್ವಯದೃಷ್ಟಿ ಮತ್ತು ಸರಸತೆ (ಡಿ.ವಿ.ಜಿ. ಕೃತಿಶ್ರೇಣಿ, ಸಂ.I, ಪು.೫೬೫-೫೮೪) ಎಂಬ ಉತ್ತರೋತ್ತರಹ್ಲಾದಕಾರಿಯೂ ಪೂರ್ವಪೂರ್ವಕ್ರಿಯಾಕಾರಿಯೂ ಪರಸ್ಪರಪೂರಕವಾಗಿಯೂ ಇರುವ ಐದು ಅಂಶಗಳನ್ನು ಸುಸಂಸ್ಕೃತಮಾನವನೊಬ್ಬನ ಪ್ರಧಾನಲಕ್ಷಣಗಳೆಂದು ಹೇಳಿದ್ದಾರೆ. ಸಿದ್ಧನ ಲಕ್ಷಣಗಳೆಲ್ಲವೂ ಸಾಧಕನಿಗೆ ಅಭ್ಯಾಸವಿದ್ಯೆಗಳೆಂಬ ನ್ಯಾಯವು ಇಲ್ಲಿಯೂ ಸಲ್ಲುತ್ತದೆ. ಈ ಗುಣಗಳು ಆಯಾ ವ್ಯಕ್ತಿಯ ಸಮಾಜ, ನೆಲೆ, ಹಿನ್ನೆಲೆಗಳಿಂದ ಹರಳುಗಟ್ಟುವುದು ಹೌದಾದರೂ ಕಡೆಗೆ ಅವುಗಳಿಗೆಲ್ಲ ಅತೀತವಾಗಿ ಕೇವಲ ಹೃದಯಪರಿಪಾಕದ ಐಕಾತ್ಮ್ಯಸ್ಥಿತಿಗೆ ಬರುವುದು ಅನುಭವವೇದ್ಯ. ಇದು ಡಿ.ವಿ.ಜಿ.ಯವರ ತಾತ್ತ್ವಿಕನೇಪಥ್ಯದ ಒಂದು ಮಹೋಪಲಕ್ಷಣ.
ಡಿ.ವಿ.ಜಿ.ಯವರ ಸಂಸ್ಕೃತಿಯ ಕಾಳಜಿ ತುಂಬ ಮೂಲಭೂತವಾದದ್ದು; ಅದು ಆತ್ಮಪರಿಪಾಕವನ್ನೂ ಸಮಾಜದ ಮೂಲಘಟಕವಾದ ವ್ಯಕ್ತಿಯ ಸಂಸ್ಕಾರವನ್ನೂ ಅವಧರಿಸುವಂಥದ್ದು.
“ನಮ್ಮ ಜೀವನವನ್ನು ಸಾಧುವನ್ನಾಗಿ ಮಾಡಿಕೊಳ್ಳುವ ವಿಧಾನವೇ ಸಂಸ್ಕೃತಿ”. – ಡಿ.ವಿ.ಜಿ.
ಸಮಷ್ಟ್ಯನುಭವ
ಮತ್ತೊಮ್ಮೆ ಸಂಕ್ಷೇಪಿಸಿ ಹೇಳುವುದಾದರೆ: ಡಿ.ವಿ.ಜಿ.ಯವರ ತಾತ್ತ್ವಿಕನೇಪಥ್ಯವು ಏಕಮೇವಾದ್ವಿತೀಯವಾದ ಸಚ್ಚಿದಾನಂದವೊಂದನ್ನೇ ಆದ್ಯಂತವಾಗಿ ನೆಮ್ಮಿತ್ತು. ಹೀಗಾಗಿಯೇ ಒಮ್ಮೆ (೧೯೭೧ರಲ್ಲಿ) ಅಮೆರಿಕದ ಪ್ರೊ|| ರಾಬರ್ಟ್ ಸ್ಲೇಟರ್ ಅವರು ಗಯಟೆ ಕವಿಯೇಕೆ ಭಾರತದಲ್ಲಿ ಅಷ್ಟಾಗಿ ಆದರಣೆ ಪಡೆದಿಲ್ಲ ಎಂದು ಕೇಳಿದಾಗ ‘ಆತ್ಯಂತಿಕದುಷ್ಟ’ (Eternal Evil) ಎಂಬಂಥ ಪರಿಕಲ್ಪನೆಯೇ ಅಭಾರತೀಯವೆಂದೂ ಆ ಕವಿಯ ಫೌಸ್ಟ್ ಕೃತಿಯಲ್ಲಿ ಇದರ ಹಿನ್ನೆಲೆ ಗಾಢವಾಗಿರುವುದರಿಂದಲೇ ಅದು ಅಷ್ಟಾಗಿ ಆದೃತವಾಗಲಿಲ್ಲವೆಂದೂ ಹೇಳಿದ್ದರು. ಇಡಿಯ ವಿಶ್ವವನ್ನು ಒಂದೇ ಸಮಷ್ಟಿಚೇತನವಾಗಿ ಅನುಭವಿಸುವುದೇ ಅವರ ತತ್ತ್ವ. ಸಂಘರ್ಷಕ್ಕಿಂತ ಸಾಮರಸ್ಯ, ಆಕೃತಿಗಿಂತ ಆಶಯ ಅವರ ದರ್ಶನದ ನಿಲವು. ಆದರೂ ಸಂಘರ್ಷ ಹಾಗೂ ಆಕೃತಿಗಳ ಸಾಂದರ್ಭಿಕಮಹತ್ತ್ವವನ್ನು ಅಲ್ಲಗಳೆದವರಲ್ಲ. ಪುರುಷಾರ್ಥಚತುಷ್ಟಯದ (‘ಪುರುಷ’ ಎಂದರೆ ದೇಹವೆಂಬ ಪುರದಲ್ಲಿ ನೆಲಸಿದ ಜೀವ ಎಂದಷ್ಟೇ ಅರ್ಥ. ಇಲ್ಲಿ ಸ್ತ್ರೀ-ಪುರುಷ ವಿವಕ್ಷೆ ಇಲ್ಲ) ಧರ್ಮ ಮತ್ತು ಅರ್ಥಗಳು ಅವರ ಪತ್ರಿಕೋದ್ಯಮ, ಸಮಾಜಸೇವೆ, ಸಾರ್ವಜನಿಕವಿಚಾರ, ನೀತಿ-ಮೌಲ್ಯಮೀಮಾಂಸೆಗಳಲ್ಲಿಯೂ ಕಾಮವು ಅವರ ಕಲೆ, ಕಾವ್ಯ, ಸ್ನೇಹ-ವಿನೋದಗಳಲ್ಲಿಯೂ ಮೋಕ್ಷವು ತತ್ತ್ವಾನುಸಂಧಾನದ ನಿಃಸ್ಪೃಹ-ನಿರ್ಮಮ ಜೀವನದಲ್ಲಿಯೂ ತೋರಿಕೊಂಡಿವೆಯೆಂದರೆ ಅತಿಶಯವಲ್ಲ, ಡಾ|| ವಿ. ರಾಘವನ್ ಅವರು ಗುರುತಿಸಿರುವಂತೆ ಭಾರತವು ವಿಶ್ವಸಂಸ್ಕೃತಿಗೆ ನೀಡಿದ ಕೊಡುಗೆಯನ್ನು ಮೂರು ಮಾತುಗಳಲ್ಲಿ ಸಂಗ್ರಹಿಸಬಹುದಾದರೆ ಅವು ರಸ, ಧರ್ಮ ಮತ್ತು ಬ್ರಹ್ಮ (ವಿಶ್ವಾತ್ಮ) ಎಂಬುದನ್ನೇ ಡಿ.ವಿ.ಜಿ.ಯವರ ತಾತ್ತ್ವಿಕದೃಷ್ಟಿಯ ನೆಲೆ-ಹಿನ್ನೆಲೆಗಳಿಗೂ ಒಪ್ಪವಿಟ್ಟರೆ ಸಾಕು, ಇಲ್ಲಿಯ ಮಂಡನೆ ಮುಗಿಯುತ್ತದೆ.
[ವಿ.ಸೂ:- ಈ ಬರೆಹದಲ್ಲಿ ತಲೆದೋರಿರಬಹುದುದಾದ ಏರು-ಪೇರುಗಳಿಗೆ ದಯಮಾಡಿ ಸಹಾನುಭೂತಿಯಿರಲಿ. ಡಿ.ವಿ.ಜಿ.ಯವರ ತಾತ್ತ್ವಿಕನೇಪಥ್ಯವೆಂಬ ಅತ್ಯಂತ ಸಂಕೀರ್ಣವೂ ವ್ಯಾಪಕವೂ ಆದ ವಿಷಯವನ್ನು ನಿರ್ವಹಿಸುವಲ್ಲಿ ಸಹಜವಾಗಿಯೇ ಈ ಲೇಖನದಲ್ಲಿ ಪ್ರತಿಪಾದನಕ್ರಮವು ಅತ್ತಿತ್ತ ಹಾರಾಡಿದೆ, ತಾರಾಡಿದೆ, ತೊಡಕೂ ಆಗಿದೆ. ಆದರೆ ವಿಷಯಕ್ಕೆ ನ್ಯಾಯವನ್ನೊದಗಿಸಬೇಕೆಂಬ ನನ್ನ ಹಪಾಹಪಿ ಹೀಗೆ ದುರ್ಲಲಿತವಾಗಿದೆ. ಇದನ್ನು ಸಹೃದಯರು ಮನ್ನಿಸಬೇಕೆಂದೂ ಈ ಬರೆವಣಿಗೆಗೆ ಆಸ್ಪದವಿತ್ತ ಎಲ್ಲರಿಗೂ ನಾನು ಋಣಿಯೆಂದೂ ಪ್ರಾರ್ಥಿಸಿ ವಿರಮಿಸುತ್ತೇನೆ.]
ಡಿ.ವಿ.ಜಿ.ಯವರ ಜೀವನ-ಸಾಧನೆಗಳನ್ನು ತಿಳಿದಲ್ಲದೆ ಅವರ ಬರೆಹಗಳ ಪರಮಾರ್ಥವು ಈ ಕಾಲದ ಅನೇಕರಿಗೆ ಸ್ಫುಟವಾಗವು. ಆದುದರಿಂದ ಆಸಕ್ತರು ಎಸ್. ಆರ್. ರಾಮಸ್ವಾಮಿಯವರ ‘ದೀವಟಿಗೆಗಳು’ ಗ್ರಂಥದ ಮೊದಲ ೯೫ ಪುಟಗಳನ್ನೂ ಡಿ.ಆರ್. ವೆಂಕಟರಮಣನ್ ಬರೆದ ‘ವಿರಕ್ತರಾಷ್ಟ್ರಕ ಡಿ.ವಿ.ಜಿ.’ ಗ್ರಂಥವನ್ನೂ ಚೆನ್ನಾಗಿ ಓದಿಕೊಳ್ಳಬೇಕಾಗಿ ವಿನಂತಿ.