ಎಷ್ಟಾದರೂ ನಾವು ಮಣ್ಣಿಗೆ ಅಂಟಿಕೊಂಡ ಜನ. ಮೇಲೇರಬೇಕು ಎಂಬಾಸೆ ಇದ್ದರೂ, ಮಣ್ಣನ್ನು ಬಿಡಲೊಲ್ಲೆವು.
‘ಮಣ್ಣಿನಲ್ಲೇನಿದೆ’ ಎಂಬ ಪ್ರಶ್ನೆಗೆ ‘ಮಣ್ಣಿನಲ್ಲೇನಿಲ್ಲ ಎಂದು ಕೇಳಬೇಕಾಗುತ್ತದೆ. ಮಣ್ಣಿಗೆ ಮನುಷ್ಯ ಅತ್ಯಂತ ಉನ್ನತ ಸ್ಥಾನ ಹಾಗೂ ಅಷ್ಟು ಕನಿಷ್ಠ ಸ್ಥಾನವನ್ನು ಕೊಟ್ಟಿರುವುದು ವಿಪರ್ಯಾಸ. ಹೆಣ್ಣು ಮತ್ತು ಹೊನ್ನು ಎಂದಾದ ಮೇಲೆ ಮಣ್ಣು ಬರುತ್ತದೆ. ಆದರೆ ಅದು ಕಡೆಯ ಸ್ಥಾನವಲ್ಲ. ಸಮಾನಾಂತರವಾಗಿ ಮಣ್ಣಿಗೂ ಮಣೆಹಾಕುತ್ತೇವೆ. ಹೆಣ್ಣು ಹಾಗೂ ಹೊನ್ನು ಎಲ್ಲರಿಗೂ ಸಿಗದಿರಬಹುದು ಆದರೆ ಮಣ್ಣು ಪ್ರತಿಯೊಬ್ಬನ ಪಾಲಿಗೂ ಇದೆ.
ತಲೆಗೆ ಹುಳ ಬಿಟ್ಟುಕೊಳ್ಳುವುದು ಅನೇಕರ ಹವ್ಯಾಸ. ನಾನು ಮಣ್ಣಿನಹುಳ ಅರ್ಥಾತ್ ಎರೆಹುಳ ಬಿಟ್ಟಕೊಂಡಿದ್ದೇನೆ. ಮಣ್ಣಿನ ಸಂಶೋಧನೆ ಮಾಡಬೇಕೆಂಬ ಹಠಕ್ಕೆ ಬಿದ್ದಿದ್ದೇನೆ. ’ಹುತ್ತಗಟ್ಟದೆ ಚಿತ್ತ ಮತ್ತೆ ಕೆತ್ತಿತೇನನು ಎಂಬ ಅಡಿಗರ ಸಾಲನ್ನು ನೆನಪಿಸಿಕೊಂಡರೆ ಅಹಂಕಾರದ ಮಾತಾದೀತು, ಪರವಾಗಿಲ್ಲ ಸಂದರ್ಭಕ್ಕೆ ಸರಿಯಾದುದರಿಂದ ಉಪಯೋಗಿಸುವುದರಲ್ಲಿ ತಪ್ಪೇನಿಲ್ಲ.
ಆಕರ್ಷಣೆ
ಚಿಕ್ಕಂದಿನಿಂದಲೇ ಎಲ್ಲ ಹುಡುಗರಂತೆ ನಾನೂ ಮಣ್ಣಿನಿಂದ ಆಕರ್ಷಿತನಾದವನು. ವಯಸ್ಸಾದ ಮೇಲೂ ಅದರ ಮೇಲಿನ ಆಸಕ್ತಿ ಕಿಂಚಿತ್ತೂ ಕಮ್ಮಿಯಾಗಿಲ್ಲ, ಇನ್ನೂ ಜಾಸ್ತಿಯಾಗಿದೆ. ತಲೆ ಮೇಲೆ ಮಣ್ಣು ಎರಚಿಕೊಳ್ಳುವುದು, ಇತರರಿಗೂ ಎರಚುವುದು ಪ್ರತಿಯೊಬ್ಬ ಹುಡುಗನು ಮಾಡಿಯೆ ದೊಡ್ಡವನಾಗುವುದು. ಬಾಲ’ಕೃಷ್ಣ’ನೊಬ್ಬನು ತನ್ನ ಬಾಯಿ ತೆರೆದು ಬ್ರಹ್ಮಾಂಡವನ್ನು ತಾಯಿಗೆ ಸಾಂಕೇತಿಕವಾಗಿ ತೋರಿಸಿರಬಹುದಷ್ಟೇ. ಮಿಕ್ಕ ಮಕ್ಕಳಿಗೆ ಮಣ್ಣೇ ಬ್ರಹ್ಮಾಂಡ. ಮಣ್ಣಿನ ತಾಣವೇ ನಮಗೆ ಕ್ರಿಡಾಂಗಣ. ಕಬಡ್ಡಿ, ಚಿನ್ನಿಕೋಲು, ಕೊ…ಕೊ… ಗೋಲಿ, ಬುಗುರಿ ವಗೈರೆ ಆಟಗಳಿಗೆ ಜನ್ಮಭೂಮಿ ಮಣ್ಣೇ. ಬೀದಿಬದಿ ಮಣ್ಣಿನಲ್ಲೇ ನಮ್ಮೆಲ್ಲ ಆಟಗಳು. ನಾಗರಿಕತೆಯ ಬೆಳವಣಿಗೆಯಿಂದಾಗಿ ನಮಗೆ ಮಣ್ಣು ಬೇಕಾದರೆ ಈಗ ಮೈದಾನಕ್ಕೆ ಹೋಗಬೇಕಾದ ದುಃಸ್ಥಿತಿ. ಹೀಗಾಗಿ ಇಂದಿನ ಮಕ್ಕಳಿಗೆ ಸುಲಭದಲ್ಲಿ ಮನೆಯ ಮುಂದೆ ಮಣ್ಣು ಸಿಗುವುದಿಲ್ಲ. ಪರಿಣಾಮವಾಗಿ ಅನೇಕ ಆಟಗಳು ಇತಿಹಾಸದ ಪುಟಗಳಿಗೆ ಸೇರಿಹೋಗಿವೆ.
ಗಣೀಶನ ಹಬ್ಬ ಬಂದಾಗ ಹೆಚ್ಚಿನ ಜನರು ಪರಿಸರ ಕಾಪಾಡಲು ಮಣ್ಣಿನ ಗಣೇಶನನ್ನೇ ತರುತ್ತಾರೆ. ವಿಸರ್ಜನೆ ಸುಲಭವೆಂಬುದು ಒಂದು ಕಾರಣವಾದರೆ, ಇನ್ನೊಂದು ಮುಖ್ಯ ಕಾರಣ ಗಣೇಶನ ಸೃಷ್ಟಿಯೆ ಮಣ್ಣಿನಿಂದ ಎಂಬುದು. ಸ್ನಾನಮಾಡಲು ಪಾರ್ವತಿ ಹೋದಾಗ ಕಾವಲು ಕೂಡಿಸಲು ಗಣೇಶನನ್ನು ಸೃಷ್ಟಿಸಿದ್ದು, ಪ್ರವೇಶವನ್ನು ತಡೆದದ್ದಕ್ಕಾಗಿ ಕೋಪಗೊಂಡ ಶಿವ ಕತ್ತು ಕತ್ತರಿಸಿ ಅನಂತರ ಆನೆತಲೆ ಜೋಡಿಸಿದ ಕಥೆ ಎಲ್ಲರಿಗೂ ಗೊತ್ತು. ’ಮಣ್ಣಿನಿಂದಲೇ ಕಾಯ….’ ಎನ್ನುವ ಹಾಡು ಗಣೇಶನಿಗೆ ಹೆಚ್ಚು ಅನ್ವಯವಾಗುತ್ತದೆಯಲ್ಲವೆ?
ಹಿಂದೂಸಂಸ್ಕೃತಿಯ ಗುರುತು ಮೊದಲು ದಕ್ಕಿದ್ದು ಹರಪ್ಪ- ಮಹೆಂಜೊದಾರದಲ್ಲಿ. ಅಲ್ಲಿ ಮಣ್ಣಿನ ಮುದ್ರೆಗಳು (Seals) ದೊರಕಿದವು. ಅವುಗಳಿಂದ ಸಿಂಧೂಲಿಪಿ ಲಭ್ಯವಾಯಿತು. ಮಣ್ಣಿಗೆ ಹುಲ್ಲನ್ನು ಬೆರಸಿ ಬಲಪಡಿಸುವ ಪ್ರಯತ್ನಗಳನ್ನು ವಿಲ್ಡ್ಯೂರಾಂಟ್ ತನ್ನ ಸ್ಟೋರಿ ಆಫ್ ಸಿವಿಲೈಸೇಷಿನ್ನಲ್ಲಿ ದಾಖಲಿಸಿದ್ದಾನೆ. ಮಣ್ಣಿನಿಂದಲೇ ಮನೆಕಟ್ಟಿದರೆ ಹೆಚ್ಚು ಬಾಳಿಕೆ ಬರುತ್ತದೆ ಎಂದು ಈಗಲೂ ಅನೇಕರು ದೃಢವಾಗಿ ನಂಬಿದ್ದಾರೆ. ಇಂಟರ್ಲಾಕ್ ಮಡ್ಬ್ಲಾಕ್ ಹೊಸ ಪರಿಕಲ್ಪನೆ. ಅಂತಹ ಕಟ್ಟಡಗಳಲ್ಲಿ ಸೆಕೆ (ಉಷ್ಣ) ಕಮ್ಮಿ ಇರುತ್ತದೆಯಂತೆ. ಅಂತಹ ಮನೆಗಳನ್ನು ಕಟ್ಟುವಾಗ ಕಾಲಂಗಳ, ಬೀಮುಗಳ ಆವಶ್ಯಕತೆ ಇರುವುದಿಲ್ಲ ಎಂಬುದು ಮತ್ತೊಂದು ಅನುಕೂಲ.
ರಾಮಾಯಣ–ಮಹಾಭಾರತ
ಹುಟ್ಟುವಾಗ ಅಣ್ಣ-ತಮ್ಮಂದಿರು, ಬೆಳೆಯುತ್ತಾ ದಾಯಾದಿಗಳಾಗುವುದು ಮಣ್ಣಿನ ಅರ್ಥಾತ್ ಭೂಮಿಯ ಕಾರಣಕ್ಕಾಗಿ. ಒಂದು ಸೂಜಿಮೊನೆಯಷ್ಟು ಜಾಗವನ್ನು ಕೊಡುವದಿಲ್ಲ ಎಂದು ದುರ್ಯೋಧನ ಹಠಹಿಡಿದಾಗ ಮಹಾಭಾರತಯುದ್ಧ ಸಂಭವಿಸಿತು. ಅದರಲ್ಲೂ ಪಾಂಡವರಿಗೆ ಕುರುಕ್ಷೇತ್ರದಲ್ಲಿ ಜಯ ಲಭಿಸಲೂ ಮಣ್ಣೇ ಕಾರಣವಾಯಿತು. ಕರ್ಣನ ರಥ ಮಣ್ಣಿನಲ್ಲಿ ಹೂತುಕೊಂಡಾಗ ಪಾರ್ಥಸಾರಥಿ ಅರ್ಜುನನಿಗೆ ಬಾಣಬಿಡಲು ಆದೇಶ ನೀಡುತ್ತಾನೆ. ಒಂದು ರೀತಿಯಲ್ಲಿ ರಾಮಾಯಣವಾಗುವುದಕ್ಕೂ ಮಣ್ಣೇ ಕಾರಣವಲ್ಲವೆ? ಜನಕ ಮಹಾರಾಜನಿಗೆ ಮಣ್ಣಿನಲ್ಲಿ ಸಿಕ್ಕ ಕುವರಿ ಸೀತೆಯಲ್ಲವೆ? ಅವಳಿಂದಲೇ ಅಥವಾ ಅವಳಿಗಾಗಿಯೇ ತಾನೆ ರಾಮಾಯಣ ನಡೆದದ್ದು. ಕಡೆಗೇನಾಯಿತು ಎಲ್ಲವನ್ನೂ ಗೆದ್ದುಬಂದರೂ ಸೀತೆ ತನ್ನ ತಾಯಿ ಮಡಿಲಲ್ಲೆ, ಭೂಮಿಯೊಳಗೆ ಹೋಗಬೇಕಾಯಿತಲ್ಲವೆ?
ಮಣ್ಣೇ ಗತಿ
ಮನುಷ್ಯರಂತೆ ಪ್ರಾಣಿಗಳಿಗೂ ಮಣ್ಣೇ ಆಸರೆ. ನೆವೆಯಾದಾಗ ಪ್ರಾಣಿಗಳು ಮಣ್ಣಿನಲ್ಲಿ ಮನಬಂದಂತೆ ಹೊರಳಾಡಿ ಸುಖಿಸುತ್ತವೆ. ವಿಶ್ರಾಂತಿಗಾಗಿ ಮಣ್ಣನ್ನೇ ಅವಲಂಬಿಸುತ್ತವೆ. ನಾಯಿಗಳಂತೂ ನಿಂತಲ್ಲೇ ಮೂರು ನಾಲ್ಕು ಸುತ್ತು ಗಿರಕಿಹೊಡೆದು ಒಂದು ಹಳ್ಳವನ್ನು ನಿರ್ಮಿಸಿ ಶಾಂತಿಯಿಂದ ಅದರಲ್ಲಿ ಮಲಗಿಬಿಡುತ್ತವೆ. ಕಾಲಿನಿಂದ ತನ್ನನ್ನು ತುಳಿದವರನ್ನು ರಕ್ಷಿಸುವ, ಪೋಷಿಸುವ ಗುಣ ಮಣ್ಣಿನದು. ಆಯತಪ್ಪಿ ಬಿದ್ದಾಗ ಅಥವಾ ಯಾರಾದರೂ ಪ್ರಯತ್ನಪೂರ್ವಕವಾಗಿ ನಮ್ಮನ್ನು ಕೆಡವಿದಾಗ ಆತ್ಮಿಯತೆಯಿಂದ ತಬ್ಬಿಕೊಳ್ಳುವುದು ಮಣ್ಣು. ’ಬದುಕು ಜಟಕಾ ಬಂಡಿ ವಿಧಿ ಅದರ ಸಾಹೇಬ ಕುದುರೆ ನೀನ್ ಅವನು ಹೆಳ್ದಂತೆ ಪಯಣಿಗರು ಮದುವೆಯೋ ಮಸಣಕೋ ಹೋಗೆಂದ ಕಡೆಗೋಡು ಪದಕುಸಿಯೇ ನೆಲವಿಹುದು- ಮಂಕುತಿಮ್ಮ’ ಎಂದು ನಾವು ಓದಿದ್ದೇವೆ. ಅಂದರೆ ಏನಾದರೂ ಆಗಲಿ ಕಡೆಗೆ ರಕ್ಷಣೆಗೆ ನೆಲವೊಂದಿದೆ, ಮಣ್ಣಿದೆ ಭಯಪಡಬೇಡ ಎನ್ನುತ್ತಾರೆ ಡಿ.ವಿ.ಜಿ.
ಕೆಳಗೆ ಬಿದ್ದವರನ್ನು ಕಾಪಾಡುವುದು ಮಣ್ಣಿನ ಸಹಜಗುಣ. ಬಹುಶಃ ಅದಕ್ಕೆ ಜಟ್ಟಿಗಳು ಕುಸ್ತಿ ಆಡುವುದು ಮಣ್ಣಿನ ಅಖಾಡದಲ್ಲಿ. ಬಿದ್ದರೂ ಪೆಟ್ಟಾಗದಿರಲಿ ಎಂದು. ಜಟ್ಟಿಗೂ ಮಿಟ್ಟಿಗೂ ಅವಿನಾಭಾವ ಸಂಬಂಧವಿದೆ. ’ಜಟ್ಟಿ ಜಾರಿಬಿದ್ದರೂ ಮೀಸೆ ಮಾಣ್ಣಾಗೊಲ್ಲ’ ಎಂಬ ಜನಪ್ರಿಯ ನುಡಿಯ ಹಿಂದೆ ಇರುವ ಸತ್ಯವೆಂದರೆ ಮನು?ನ ಅತ್ಯಂತ ಪ್ರತಿ?ಯ ಸ್ಥಾನ ಮೀಸೆ ಎಂಬ ಅಂಶ. ಏನಾದರಾಗಲಿ ಮೀಸೆಗೆ ಮಣ್ಣು ಮೆತ್ತಿಕೊಳ್ಳಬಾರದೆಂಬ ಹಠ ಕಾಣಿಸುತ್ತದೆ.
ಹೊನ್ನೆಲ್ಲ ಮಣ್ಣು…. ಎಂದು ಹೇಳುವುದಕ್ಕೆ ವೇದಾಂತಿಗಳೇ ಆಗಬೇಕಾದರೂ, ರೈತನು ಮಣ್ಣೆಲ್ಲ ಹೊನ್ನು ಎನ್ನಬಹುದು. ಹಿಂದಿನ ಕಾಲದಲ್ಲಿ ಹೊನ್ನನ್ನೇ ಪ್ರಕೃತಿಯಂತೆ ಮಣ್ಣಿನಲ್ಲೆ ಹೂತಿಡುತ್ತಿದ್ದರು. ರತ್ನ ಸಿಗಬೇಕಾದರೆ ಪ್ರಯತ್ನ ಬೇಕೆನ್ನುವ ಬೇಂದ್ರೆಯವರ ಮಾತನ್ನು, ಗೋಪಾಲಕೃ? ಆಡಿಗರು ಅಗೆವಾಗ್ಗೆ ಮೊದಲು ಕೋಶಾವಸ್ಥೆ ಮಣ್ಣು| ಕೆಳಕ್ಕೆ ತಳಕ್ಕೆ ಗುದ್ದಲಿಯೊತ್ತಿ ಕುಕ್ಕಿದರೆ ಕಂಡೀತು ಗೆರೆಯಿರಿವ ಚಿನ್ನದದಿರು ಎಂಬ ಸಾಲುಗಳು ಸ್ಪಷ್ಟೀಕರಿಸುತ್ತದೆ. ಕುಡಿಕೇಲಿ ಕೂಡಿಟ್ಟ ಹಣ ಎಷ್ಟು ದಿನ ಬರುತ್ತದೆ ಎನ್ನಬಹುದು. ಆದರೆ ಕುಡಿಕೆಯಲ್ಲಿ ಶುರುವಾದ ಕೂಡಿಕೆ (ಉಳಿತಾಯ) ಮುಂದೆ ಹೂಡಿಕೆಯಾಗಿ ನಮಗೆ ನಿರಂತರ ಆದಾಯ ಬರಲು ಕಾರಣವಾಗಬಹುದು.
ತಣ್ಣನೆಯ ನೀರಿಗೆ ಮಡಕೆ, ಮೊಸರಿಗೆ ಗಡಿಗೆ, ಉಪ್ಪಿನಕಾಯಿಗೆ ಜಾಡಿ, ಕಡೆಗೆ ಕೆಲವು ಕಡೆ ಕಾಫಿ ಟೀಗೂ ಮಡಕೆ ಬಳಸುವವರು ನಾವು. ಬಳಸಿ ಬಿಸಾಡುವ (ಯೂಸ್ ಅಂಡ್ ತ್ರೋ) ಪದ್ಧತಿಯನ್ನು ಮೊದಲು ಜಾರಿಗೆ ತಂದವರು ನಾವಲ್ಲವೆ? ಒಂದು ಕಡೆ ಆರೋಗ್ಯದೃಷ್ಟಿಯಿಂದ ಒಳ್ಳೆಯದಾದರೆ, ಇನ್ನೊಂದು ಗುಡಿ ಕೈಗಾರಿಕೆಯಾದ ಮಡಕೆ-ಕುಡಿಕೆಗಳಿಗೆ ಸದಾಕಾಲವೂ ಬೇಡಿಕೆಯಿದ್ದು ಬಡವನ ಆರ್ಥಿಕ ಸುಧಾರಣೆಯಾಗುವುದಿಲ್ಲವೆ? ಕೈಯಿಂದಲೇ ಮಾಡುವ ಈ ಕೈ-ಗಾರಿಕೆಗೆ ಹೆಚ್ಚು ಒತ್ತುಕೊಡಬೇಕಲ್ಲವೆ?
ಸಂಪ್ರದಾಯ ಸೌರಭ
ಹಬ್ಬ-ಹರಿದಿನಗಳಲ್ಲಿ ನಮಗೆ ಮಣ್ಣು ಬೇಕೇಬೇಕು. ಮಣ್ಣಿನ ಹಣತೆಯಿಲ್ಲದೆ ದೀಪಾವಳಿ ಇಲ್ಲ. ಭೀಮನಅಮಾವಾಸ್ಯೆ ದಿನ ಮಣ್ಣಿನಿಂದ ಶಿವ-ಪಾರ್ವತಿ ಆಕೃತಿಯನ್ನು ಕೊನಾಕಾರದಲ್ಲಿ ಮಾಡಿ ಸುಣ್ಣದಿಂದ ಚುಕ್ಕೆ ಇಟ್ಟು ಹೆಣ್ಣುಮಕ್ಕಳಿಂದ ಗಂಡನ ಪೂಜೆ ಮಾಡಿಸುವ ಸಂಪ್ರದಾಯ ಕೆಲವರಿಗಿದೆ. ಮಣ್ಣೆತ್ತಿನ ಅಮಾವಾಸ್ಯೆಯೆಂದು ಆಚರಿಸುವ ಪದ್ಧತಿಯಿದೆ. ಮಣ್ಣಿನಿಂದ ಎತ್ತುಗಳನ್ನು ರೂಪಿಸುತ್ತೇವೆ. ವೃಂದಾವನದಿಂದ ಮಣ್ಣನ್ನು ತಂದು ಮೃತ್ತಿಕೆ ಎಂದು ಕಣ್ಣಿಗೆ ಒತ್ತಿಕೊಂಡು ಪ್ರತಿನಿತ್ಯ ಅನೇಕರು ಸೇವಿಸುತ್ತಾರೆ.
ಬಸುರಿಯಾದಾಗ ಮಣ್ಣುತಿನ್ನುವ ಬಯಕೆ ಅನೇಕ ಮಹಿಳೆಯರಿಗೆ ಆಗುತ್ತದೆ. ಅದನ್ನು ಲಘುಧಾಟಿಯಲ್ಲಿ ನೋಡಿ ಆಕೆ ಮಣ್ಣುತಿನ್ನುವ ಕೆಲಸ ಮಾಡಿಕೊಂಡಿದ್ದಾಳೆ ಎಂದು ಹೇಳುವುದನ್ನು ಕೇಳಿದ್ದೇವೆ. ಏನೇ ಆಗಲಿ ನಾವು ಭೂಮಿಗೆ ಧಮುಕುವ ಮೊದಲೆ ಮಣ್ಣುಮುಕ್ಕುವ ಕೆಲಸ ಮಾಡಿರುತ್ತೇವೆ ಎಂದಾಯಿತಲ್ಲವೆ? ನಮ್ಮಮ್ಮನೇ ನಮಗೆ ಮೊದಲು ಮಣ್ಣುಮುಕ್ಕಿಸುವ ಕೆಲಸ ಮಾಡಿರುತ್ತಾಳೆ! ನಂತರದ ದಿನಗಳಲ್ಲಿ ಬೇರೆಯವರು ಮಣ್ಣುಮುಕ್ಕಿಸುವುದರಲ್ಲಿ ಆಶ್ಚರ್ಯವೇನಿಲ್ಲ. ಸತ್ತ ಮೇಲಂತೂ ಮಣ್ಣೇ ಗತಿ. ಎಲ್ಲರಿಂದಲೂ ಒಂದು ಹಿಡಿ ಮಣ್ಣು, ಬದುಕಿದ್ದಾಗಲೂ ಕೆಟ್ಟವರೆನಿಸಿಕೊಂಡವರಿಗೆ ಒಂದು ಹಿಡಿ ಮಣ್ಣು ಹಾಕಿ ಶಾಪ ನೀಡುವುದನ್ನು ಕಾಣುತ್ತೇವೆ.
ಹುಟ್ಟು-ಸಾವುಗಳಿಗೂ ಮಣ್ಣಿನ ನಂಟಿದೆ. ಬಂದ ಬಾಗಿಲು ಮಣ್ಣು; ಹೋಗುವ ಬಾಗಿಲು ಮಣ್ಣು; ನಡುವೆ ಕಾಪಾಡುವುದು ತಾಯಿ ಕಣ್ಣು ಎಂದು ನರಸಿಂಹಸ್ವಾಮಿಯವರು ಬರೆಯುತ್ತಾರೆ. ಬೇಂದ್ರೆಯವರು ತಮ್ಮ ಚೊಚ್ಚಲು ಮಗನನ್ನು ಕಳೆದುಕೊಂಡಾಗ ಮೊದಲ ಫಲವೊಂದು ಮೀಸಲು ಮಣ್ಣಿಗೆ ಎಂದು ಹೃದಯಸ್ಪರ್ಶಿ ಸಾಲುಗಳಲ್ಲಿ ತಮ್ಮ ನೋವನ್ನು ತೋಡಿಕೊಂಡಿದ್ದಾರೆ.
ಇಬ್ಬಗೆ ನೀತಿ
ಫಲವತ್ತಾಗಿ ರೈತರಿಗೆ ಬೆಳೆ ಬರಲು ಸರಿಯಾಗಿ ಮಣ್ಣಿನ ಪರೀಕ್ಷೆ ಮಾಡಿಸಲೇಬೇಕು. ಮಣ್ಣು ಪರೀಕ್ಷಕನಿಗೆ ಪೆಡೊಲಾಜಿಸ್ಟ್ ಎಂದು ಕರೆಯುತ್ತಾರೆ. ಸಾಹಿತ್ಯರಚಿಸುವುದಕ್ಕೂ ಕೃಷಿಯೆಂದು ಕರೆಯುವುದುಂಟು. ಹಾಗಾದರೆ ಅದರ ತಯಾರಿಕೆಗೆ ಬೇಕಾದ ಸಾಮಗ್ರಿಗಳ ಸತ್ತ್ವಪರೀಕ್ಷೆಯಾಗಬೇಡವೆ? ಹಾಗೆ ಮಾಡದೆ ರಚನೆಗಳಾಗುತ್ತಿದ್ದರೆ ಅವು ಮಣ್ಣುಪಾಲಾದರೆ ಸ್ವಲ್ಪವೂ ಅಚ್ಚರಿಯಿಲ್ಲ. ಓದುಗರ ಕಣ್ಣಿಗೆ ಮಣ್ಣೆರಚುವುದು ಸಾಧ್ಯವಿಲ್ಲ. ನಿಮ್ಮ ಬರವಣಿಗೆಯಲ್ಲಿ ಮಣ್ಣಿನವಾಸನೆಯೇ ಇಲ್ಲವೆಂದು ವಿಮರ್ಶಕರು ಆಕ್ಷೇಪಣೆ ಎತ್ತುತ್ತಾರೆ. ‘ಲೇಖನದಲ್ಲೇನಿದೆ ಮಣ್ಣು’ ಎಂಬ ಪ್ರಶ್ನೆಯನ್ನು ಅವರೇ ಕೇಳುತ್ತಾರೆ. ಮಣ್ಣು ಇರಬೇಕು ಎನ್ನುವವರೂ ಅವರೇ, ಇರಬಾರದು ಎಂದು ಹೇಳುವವರೂ ಅವರೆ!
ಸಂಕಷ್ಟದಲ್ಲಿದ್ದಾಗ ನಮ್ಮನ್ನು ಕಾಪಾಡುವುದು, ಹೆಣ್ಣು-ಹೊನ್ನು ಹಾಗೂ ಮಣ್ಣು. ಮೂರರ ವ್ಯಾಮೋಹವನ್ನು ಬಿಟ್ಟವರನ್ನು ಸಂನ್ಯಾಸಿ ಎನ್ನುತ್ತೇವೆ. ರಾಕ್ಷಸರೂಪದಲ್ಲಿ ತಲೆಯೆತ್ತಿರುವ ಗಗನಚುಂಬಿ ಕಟ್ಟಡಗಳನ್ನು ಮಣ್ಣು ಎಷ್ಟು ದಿನ ತಡೆದುಕೊಳ್ಳಬಲ್ಲದು? ನಗರಗಳಲ್ಲಿ ದೊಡ್ಡ ಮಳೆಯಿಂದಾಗಿ ನೀರು ಹರಿಯಲು ಜಾಗವಿಲ್ಲದೆ ಜಲಪ್ರಳಯವಾಗುತ್ತಿರುವುದು ದೊಡ್ಡ ದುರಂತ.
ಎಷ್ಟಾದರೂ ನಾವು ಮಣ್ಣಿಗೆ ಅಂಟಿಕೊಂಡ ಜನ. ಮೇಲೇರಬೇಕು ಎಂಬಾಸೆ ಇದ್ದರೂ, ಮಣ್ಣನ್ನು ಬಿಡಲೊಲ್ಲೆವು. ಬೇಕಾದರೆ ಪ್ರಾಣ ಬಿಡುತ್ತೇವೆ ಮಣ್ಣನ್ನು ಬಿಡುವುದಿಲ್ಲ. ಇದರಿಂದಾಗಿ ರಿಯಲ್ ಎಸ್ಟೇಟ್ ಎಲ್ಲದಕ್ಕಿಂತ ದೊಡ್ಡ ಉದ್ಯಮವಾಗುತ್ತಿದೆ. ಎಲ್ಲ ದುರಂತಗಳಿಗೆ, ಅನಾಹುತಗಳಿಗೆ, ಕೊಲೆ-ಸುಲಿಗೆಗಳಿಗೆ ಹೆದ್ದಾರಿಯಾಗಿದೆ.
ಒಂದಲ್ಲ ಒಂದು ದಿನ ಎಲ್ಲರೂ ಮಣ್ಣಾಗುವುದು ನಿಶ್ಚಿತ. ಇದ್ದಷ್ಟು ದಿನ ಒಳ್ಳೆಯ ಕೆಲಸಕ್ಕೆ ನಾವು ನೆಲೆಯಾಗಿ ನಿಲ್ಲಬೇಕು ಮಣ್ಣಿನಂತೆ. ಕುಸಿಯುವ ಮಣ್ಣಾಗಾದೆ ಏಳಿಗೆಯ ಏಣಿಯಾಗಬೇಕು. ಆಸರೆಯ ನೆಲೆಯಾಗಬೇಕು.