
ನುಲೇನೂರು ಶ್ರೀಮೂರ್ತಿ ಎಂಬ ಗ್ರಂಥನಾಮದಿಂದ ಕನ್ನಡ ಓದುಗರಿಗೆ ಪರಿಚಿತರಾದವರು ಕಳೆದ ಎಂದರೆ ೨೦ನೇ ಶತಮಾನದಲ್ಲಿ ನಮ್ಮ ನಡುವೆ ಇದ್ದ ಶ್ರೀನಿವಾಸಮೂರ್ತಿ. ಕನ್ನಡದಲ್ಲಿ ಪಾರಮಾರ್ಥಿಕ ಸಾಹಿತ್ಯಕ್ಕೆ ಅನುಪಮವೂ ಅನನ್ಯವೂ ಆದ ಕೊಡುಗೆಯನ್ನು ನೀಡಿದ್ದವರು ನುಲೇನೂರು ಶ್ರೀಮೂರ್ತಿ. ಮೊತ್ತಮೊದಲಿಗೆ ಸ್ವಾಮಿ ರಾಮತೀರ್ಥರ ವೇದಾಂತೋಪನ್ಯಾಸಗಳನ್ನು ಅನುವಾದಿಸಿ ಕನ್ನಡ ಓದುಗರಿಗೆ ಮಹದುಪಕಾರ ಮಾಡಿದವರು ಶ್ರೀಮೂರ್ತಿ ಎಂಬುದು ಸುವಿದಿತವಾಗಿದೆ. ಇದಲ್ಲದೆ ಸ್ವಾಮಿ ರಾಮತೀರ್ಥರ ಜೀವನಚರಿತ್ರೆ, ಬನವಾಸಿಯ ಶ್ರೀ ದತ್ತಾತ್ರೇಯ ಯೋಗೀಂದ್ರ ಸದ್ಗುರುಗಳ ಚರಿತಾಮೃತ ಮೊದಲಾದ ಹಲವಾರು ಇತರ ಮಹತ್ತ್ವದ ಗ್ರಂಥಗಳನ್ನೂ ಅವರು ರಚಿಸಿದ್ದರು. ಮೈತ್ರೇಯಿ-ಯಾಜ್ಞವಲ್ಕ್ಯ ಸಂವಾದವನ್ನು ಕೇಂದ್ರವಾಗಿರಿಸಿಕೊಂಡ ಶಾಂಕರ ದರ್ಶನದ ಪ್ರತಿಪಾದನೆ, […]