ನುಲೇನೂರು ಶ್ರೀಮೂರ್ತಿ ಎಂಬ ಗ್ರಂಥನಾಮದಿಂದ ಕನ್ನಡ ಓದುಗರಿಗೆ ಪರಿಚಿತರಾದವರು ಕಳೆದ ಎಂದರೆ ೨೦ನೇ ಶತಮಾನದಲ್ಲಿ ನಮ್ಮ ನಡುವೆ ಇದ್ದ ಶ್ರೀನಿವಾಸಮೂರ್ತಿ. ಕನ್ನಡದಲ್ಲಿ ಪಾರಮಾರ್ಥಿಕ ಸಾಹಿತ್ಯಕ್ಕೆ ಅನುಪಮವೂ ಅನನ್ಯವೂ ಆದ ಕೊಡುಗೆಯನ್ನು ನೀಡಿದ್ದವರು ನುಲೇನೂರು ಶ್ರೀಮೂರ್ತಿ. ಮೊತ್ತಮೊದಲಿಗೆ ಸ್ವಾಮಿ ರಾಮತೀರ್ಥರ ವೇದಾಂತೋಪನ್ಯಾಸಗಳನ್ನು ಅನುವಾದಿಸಿ ಕನ್ನಡ ಓದುಗರಿಗೆ ಮಹದುಪಕಾರ ಮಾಡಿದವರು ಶ್ರೀಮೂರ್ತಿ ಎಂಬುದು ಸುವಿದಿತವಾಗಿದೆ. ಇದಲ್ಲದೆ ಸ್ವಾಮಿ ರಾಮತೀರ್ಥರ ಜೀವನಚರಿತ್ರೆ, ಬನವಾಸಿಯ ಶ್ರೀ ದತ್ತಾತ್ರೇಯ ಯೋಗೀಂದ್ರ ಸದ್ಗುರುಗಳ ಚರಿತಾಮೃತ ಮೊದಲಾದ ಹಲವಾರು ಇತರ ಮಹತ್ತ್ವದ ಗ್ರಂಥಗಳನ್ನೂ ಅವರು ರಚಿಸಿದ್ದರು. ಮೈತ್ರೇಯಿ-ಯಾಜ್ಞವಲ್ಕ್ಯ ಸಂವಾದವನ್ನು ಕೇಂದ್ರವಾಗಿರಿಸಿಕೊಂಡ ಶಾಂಕರ ದರ್ಶನದ ಪ್ರತಿಪಾದನೆ, ಭಗವತೀ ಚೂಡಾಲಾ ಆಖ್ಯಾನ ವಿವರಣೆ – ಇವನ್ನು ಹೊರತಂದಿದ್ದರು. ದೈವ ಮತ್ತು ಪೌರುಷ, ದೇವರು ಯಾರು?, ಹೊಸ ಮನಸ್ಸು (ಫ್ರೆಶ್ ಮೈಂಡ್) ಮೊದಲಾದ ಪ್ರತ್ಯೇಕವಿ?ಯಕ ಚಿಂತನಗ್ರಂಥಗಳನ್ನು ರಚಿಸಿದ್ದರು.
ನುಲೇನೂರು ಶ್ರೀಮೂರ್ತಿ ಅವರ ಬರಹಗಳನ್ನು ವಿಶೇಷವಾಗಿಸಿದ್ದ ಸಂಗತಿಯೆಂದರೆ ಅವರು ಸಾಹಿತ್ಯೈಕದೃಷ್ಟಿಯಿಂದ ಬರೆದವರಲ್ಲ. ಅವರು ಸ್ವತಃ ಸಾಧಕರಾಗಿದ್ದವರು, ಆಶ್ರಮಜೀವನ ನಡೆಸುತ್ತಿದ್ದವರು; ಅವರ ದೀಕ್ಷಾಗುರುಗಳೂ ಆಗಿದ್ದ ಬನವಾಸಿಯ ಶ್ರೀ ದತ್ತರಾಜ ಯೋಗೀಂದ್ರರ ಆದೇಶದಂತೆ ಚಿತ್ರದುರ್ಗ ಜಿಲ್ಲೆಯ ನುಲೇನೂರಿನ ದತ್ತಾಶ್ರಮದ ಹೊಣೆಗಾರಿಕೆಯನ್ನು ವಹಿಸಿಕೊಂಡು ಐದು ದಶಕಗಳ ಕಾಲ (೧೯೩೯-೧೯೮೯) ಅದನ್ನೇ ತಮ್ಮ ಸಾಧನಕ್ಷೇತ್ರವಾಗಿ ಮಾಡಿಕೊಂಡಿದ್ದವರು. ಈ ಹಿನ್ನೆಲೆಯಿಂದಾಗಿ ಶ್ರೀಮೂರ್ತಿ ಅವರ ಬರಹಗಳಲ್ಲಿ ಅನೇಕ ವಿರಳ ಒಳನೋಟಗಳು ಲಭ್ಯವಿವೆ. ಶ್ರೀ ದತ್ತರಾಜ ಯೋಗೀಂದ್ರರಿಂದ ಮಂತ್ರೋಪದೇಶ ಪಡೆದು ಶ್ರೀಮೂರ್ತಿ ಅವರು ಆಜೀವವೂ ಅನು?ನ
ನಡೆಸಿದವರು.
ವಿದ್ಯಾಭ್ಯಾಸದುದ್ದಕ್ಕೂ ಮೊದಲ ದರ್ಜೆಯಲ್ಲಿ ಉತ್ತೀರ್ಣರಾಗಿದ್ದ ಶ್ರೀಮೂರ್ತಿ ಅವರು (ಜನನ: ೧೯೦೬) ೧೯೨೮ರ ಆರಂಭದಲ್ಲಿ ಉದ್ಯೋಗಕ್ಕೆ ಸೇರಿದರಾದರೂ ಅವರ ಉದ್ಯೋಗಜೀವನವೂ ಗೃಹಸ್ಥ ಸ್ಥಿತಿಯೂ ನಡೆದದ್ದು ಸುಮಾರು ಎರಡೂವರೆ ವರ್ಷಗಳ ಕಾಲವಷ್ಟೆ. ಅಲ್ಲಿಂದಾಚೆಗೆ ಅವರದು ಪೂರ್ಣಾವಧಿ ವಿರಕ್ತಜೀವನ.
ಆ ದಿನಗಳ ರಾಜ್ಯದೆಲ್ಲೆಡೆಯ ಸಾಧಕರ ಪರಿಚಯ ಗಳಿಸಿ ಎಲ್ಲರ ಅಭಿಮಾನಕ್ಕೆ ಅವರು ಪಾತ್ರರಾಗಿದ್ದರು. ಶೃಂಗೇರಿ ಪೀಠಾಧ್ಯಕ್ಷ ಶ್ರೀ ಚಂದ್ರಶೇಖರ ಭಾರತೀ ಮಹಾಸ್ವಾಮಿಗಳು, ಅವರ ಕರಕಮಲ ಸಂಜಾತ ಶ್ರೀಮದ್ ಅಭಿನವ ವಿದ್ಯಾತೀರ್ಥ ಮಹಾಸ್ವಾಮಿಗಳು, ಮಲ್ಲಾಡಿಹಳ್ಳಿಯ ಶ್ರೀ ರಾಘವೇಂದ್ರ ಸ್ವಾಮಿಗಳು, ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು, ಹೊಳೆನರಸೀಪುರದ ಶ್ರೀ ಸಚ್ಚಿದಾನಂದೇಂದ್ರ ಸರಸ್ವತೀ ಸ್ವಾಮಿಗಳು ಮೊದಲಾದ ಹಲವಾರು ಮಹಾತ್ಮರು ನುಲೇನೂರು ಶ್ರೀಮೂರ್ತಿ ಅವರಲ್ಲಿ ಆತ್ಮೀಯತೆ ತಳೆದಿದ್ದರು. ಶ್ರೀಮೂರ್ತಿ ಅವರಲ್ಲಿ ಅತಿಶಯ ಪೂಜ್ಯಭಾವನೆ ಬೆಳೆಸಿಕೊಂಡಿದ್ದಲ್ಲದೆ ಅವರ ಹಲವು ಪ್ರಮುಖ ಗ್ರಂಥಗಳ ಪ್ರಕಟನೆಗೆ ಕಾರಣವಾದದ್ದು ಬೆಂಗಳೂರಿನ ಶ್ರೀ ಖೋಡೆ ಲಕ್ಷ್ಮಣಸಾ – ಶ್ರೀ ಖೋಡೆ ರಾಮಚಂದ್ರಸಾ ಕುಟುಂಬ.
ಶ್ರೀಮೂರ್ತಿ ಅವರ ಎಲ್ಲ ಬರಹಗಳೂ ನಿರ್ದಿಷ್ಟ ಉದ್ದೇಶದಿಂದ ಪ್ರೇರಿತವಾದವು ಮತ್ತು ಶ್ರದ್ಧಾವಂತ ಜಿಜ್ಞಾಸುಗಳ ಆವಶ್ಯಕತೆಯನ್ನು ಪೂರೈಸುವಂತಹವು; ಧ್ಯಾನಸ್ಥ ಅಂತರ್ಮಥನದಿಂದ ರೂಪಿತಗೊಂಡವು. ಅವರ ಯಾವ ಬರಹಗಳೂ ಮೂಲ ವಾಙ್ಮಯದ ಕೇವಲ ಶಬ್ದಶಃ ರೂಪಾಂತರಗಳಲ್ಲ. ಅವರ ಕಾರ್ಯದ ನೆಲೆಯೇ ಶಬ್ದಲೋಕದಿಂದ ಆಚಿನದು. ಸ್ವಾಮಿ ರಾಮತೀರ್ಥರ ವೇದಾಂತೋಪನ್ಯಾಸಗಳ ಅನುವಾದವನ್ನು ಕೈಗೊಂಡಾಗ ಅವರು ಚಿಕ್ಕಮಗಳೂರಿನಲ್ಲಿ ಶ್ಮಶಾನದ ಏಕಾಂತದಲ್ಲಿ ಬೀಡುಬಿಟ್ಟು ಚಿಂತನೆ ನಡೆಸಿದರು. ದಿನದಲ್ಲಿ ಒಂದು ಹೊತ್ತು ಮಾತ್ರ ಸಪ್ಪೆಯ ಆಹಾರವನ್ನು ಅದೂ ಪರಿಮಿತ ಪ್ರಮಾಣದಲ್ಲಿ ಸೇವಿಸುತ್ತ ಸದಾ ಸದ್ಗುರುಚಿಂತನೆಯಲ್ಲಿ ಲೀನರಾಗಿರುತ್ತಿದ್ದರು. ಹೀಗೆ ಗುರುಕಾರುಣ್ಯವು ಅವರನ್ನು ಪ್ರವೇಶಿಸಿ ಅವರಿಂದ ಬರಹವನ್ನು ಹೊಮ್ಮಿಸುತ್ತಿತ್ತು. ಇನ್ನು ತಾರುಣ್ಯದ ಹೊಸ್ತಿಲಲ್ಲಿ ಇದ್ದಾಗಲೇ ತುಂಗಭದ್ರಾ ತೀರದ ಕೋರಗಲ್ಗ್ರಾ ಮದಲ್ಲಿ ಶ್ರೀ ಸಹಜಾನಂದ ಸದ್ಗುರುಗಳ ಸಮಾಧಿಸ್ಥಾನದಲ್ಲಿ ಗುರುಗಳ ಆದೇಶದಂತೆ ಶಿವದೇವಾಲಯ ನಿರ್ಮಾಣದಲ್ಲಿ ತೊಡಗಿರುವಾಗ ಧಾನ್ಯಭಿಕ್ಷೆ ಸಂಗ್ರಹಿಸಿ ಜೀವನಯಾಪನೆ ಮಾಡಿದ್ದರು. ಹೀಗೆ ತಪಃಪೂತ ಬದುಕಿಗಾಗಿಯೆ ಅವರ ಜನನ ಆಗಿದ್ದಿತೆನಿಸುತ್ತಿತ್ತು. ಶ್ರೀ ದತ್ತಗುರುಗಳು ಹೊಳೆಹೊನ್ನೂರಿನಲ್ಲಿ ವಾಸ್ತವ್ಯವಿದ್ದಾಗ ಅವರ ದರ್ಶನಕ್ಕಾಗಿ ೫೫ ಮೈಲಿ ದಾರಿಯನ್ನು ಶ್ರೀಮೂರ್ತಿ ಕಾಲ್ನಡಿಗೆಯಲ್ಲಿ ಕ್ರಮಿಸಿದ್ದರು.
ಈ ವಾಸ್ತವಗಳನ್ನು ಸ್ಮರಿಸುವಾಗ ತೋರುವುದು ಶ್ರೀಮೂರ್ತಿ ಅವರು ಸಾಹಿತ್ಯರಚನೆ ಮಾಡಿದುದೂ ಸೇವಾಭಾವನೆಯಲ್ಲಿ ಮತ್ತು ಕೈಂಕರ್ಯಮನೋವೃತ್ತಿಯಲ್ಲಿ ಎಂಬುದು.
ಶ್ರೀಮೂರ್ತಿ ಅವರು ಈಗ್ಗೆ ೫೫ ವರ್ಷಗಳಷ್ಟು ಹಿಂದೆ ರಚಿಸಿ ಹೊರತಂದಿದ್ದು ಅನೇಕ ವರ್ಷಗಳಿಂದ ಅಪ್ರಾಪ್ಯವಾಗಿದ್ದ ಚಿಚ್ಛಕ್ತಿ ಪ್ರಭಾವ ಉದ್ಗ್ರಂಥವು ಇದೀಗ ಲೋಕ ಶಿಕ್ಷಣ ಟ್ರಸ್ಟ್ ಸಂಸ್ಥೆಯಿಂದ ಪುನರ್ಮುದ್ರಣಗೊಂಡಿರುವುದು ಸಂತೋಷಪ್ರದವಾಗಿದೆ.
ಚಿಚ್ಛಕ್ತಿ ಪ್ರಭಾವ ಗ್ರಂಥದ ವೈಶಿಷ್ಟ್ಯವೆಂದರೆ ಇದರ ವಿಷಯವು ಏಕದೇಶೀಯವಾಗಿರದೆ ತತ್ತ್ವಶಾಸ್ತ್ರ, ವೇದಾಂತದರ್ಶನ, ಯೋಗಶಾಸ್ತ್ರ- ಮಂತ್ರಶಾಸ್ತ್ರಗಳು, ಭೌತವಿಜ್ಞಾನ, ಮನೋವಿಜ್ಞಾನ, ಸಾಕ್ಷಾತ್ಕಾರಾನುಸಂಧಾನ ಪ್ರಕ್ರಿಯೆ – ಈ ಅಷ್ಟೂ ಆಯಾಮಗಳನ್ನು ಒಳಗೊಂಡಿರುವುದು. ಈ
ವಿವಿಧ ಅನುಸಂಧಾನ ಸ್ತರಗಳೆಲ್ಲದರಲ್ಲೂ ಸಮಾನ ಅಂತರ್ವಾಹಿಯಾಗಿರುವ ಕಾರಣದಿಂದಲೇ ಚಿಚ್ಛಕ್ತಿಯನ್ನು ಕೇಂದ್ರವಾಗಿ ಶ್ರೀಮೂರ್ತಿ ಅವರು ಮಂಡಿಸಿರುವುದು. ಅಂತರಂಗಸಾಧನೆಯ ಈ ವಿವಿಧ ಸ್ತರಗಳು ಪರಸ್ಪರ ಪೂರಕಗಳೆಂಬುದು ಸ್ಪಷ್ಟವೇ ಆಗಿದೆ. ಹೀಗಿರುವುದರಿಂದ ಚಿಚ್ಛಕ್ತಿ ಪ್ರಭಾವವನ್ನು ವಿವಿಧ ಭಂಗ್ಯಂತರಗಳಿಂದ ಗ್ರಹಿಸುವುದು ಬೋಧಪ್ರದ. ಚಿಚ್ಛಕ್ತಿ ಪ್ರಭಾವ ಎಂಬ ಪ್ರಧಾನ ಶೀರ್ಷಿಕೆಯೊಡಗೂಡಿ ಸಮಗ್ರ ಜೀವನ ಎಂಬ ಉಪಶೀರ್ಷಿಕೆಯನ್ನು ಗ್ರಂಥಕ್ಕೆ ಲೇಖಕರು ನೀಡಿದ್ದಾರೆ.
ಚಿತ್ ಎಂದರೆ ಜ್ಞಾನ, ಅರಿವು, ತಿಳಿವು. ಶಕ್ತಿ ಎಂಬುದು ಶಾಖ-ಪ್ರಕಾಶ ರೂಪವಾದ ಪರಾಶಕ್ತಿ, ಮೇಧಾಶಕ್ತಿಯನ್ನೊಳಗೊಂಡ ಜ್ಞಾನಶಕ್ತಿ, ಸಂಕಲ್ಪದಾರ್ಢ್ಯವನ್ನೊಳಗೊಂಡ ಇಚ್ಛಾಶಕ್ತಿ ಫಲಸಾಧಕವಾದ ಕ್ರಿಯಾಶಕ್ತಿ, ಆಕರ್ಷಣ-ವಿಕರ್ಷಣ ರೂಪ ಪ್ರಾಣತತ್ತ್ವದ ಸಂಚಾಲಕವಾದ ಕುಂಡಲಿನೀಶಕ್ತಿ, ಭಗವನ್ನಾಮಮಹಿಮೆಯ ತಾದಾತ್ಮ್ಯಕ್ಕೆ ದಾರಿಮಾಡುವ ಮಂತ್ರಶಕ್ತಿ; – ಈ ಶಕ್ತಿ ವಿಶೇಷಗಳ ಒಟ್ಟಿಲು. ಚಿಚ್ಛಕ್ತಿ ಎಂಬ ಸಮಸ್ತ ಪದದಲ್ಲಿ ಚಿತ್ ಶಬ್ದವು ಚೇತನಪುರುಷನ ಮೂಲಸ್ವರೂಪವನ್ನೂ ಶಕ್ತಿ ಪದವು ಅಚೇತನಜಗತ್ತಿನ ಮೂಲಸ್ವರೂಪವನ್ನೂ ಧ್ವನಿಸುತ್ತವೆ. ಎಂದರೆ ಚಿತ್ ಎಂಬ ಅಂತರಂಗದ್ರವ್ಯವು ಪರಿಣಾಮಾವಸ್ಥೆಯಲ್ಲಿ ಭೌತಿಕ ಶಕ್ತಿಯಾಗಿ ಅಭಿವ್ಯಕ್ತಗೊಳ್ಳುತ್ತದೆ.
ಶ್ರೀಮೂರ್ತಿ ಅವರು ಹೇಳುತ್ತಾರೆ (ಪುಟ ೨೩೬):
“ಮಾನವಕುಲಕ್ಕೆ ಹಿನ್ನೆಲೆಯಲ್ಲಿ ಆಧಾರವಾಗಿರುವ ಜ್ಞಾನಶಕ್ತಿರೂಪ ಅಥವಾ ಚಿಚ್ಛಕ್ತಿಯ ಅನಂತಸಾಗರಕ್ಕೆ ಪ್ರತಿಯೊಬ್ಬ ವ್ಯಕ್ತಿಯೂ ಕಾಲುವೆ ಮಾತ್ರವೆಂದು ರಾಜಯೋಗವು ಸಾರಿಹೇಳುತ್ತದೆ. ಮನುಷ್ಯನಲ್ಲಿ ಆವಶ್ಯಕತೆಗಳೂ ಆಶೆಗಳೂ ಇರುವಂತೆ ಅವುಗಳನ್ನು ಪೂರೈಸಿಕೊಡುವ ಶಕ್ತಿಯೂ (ಚಿಚ್ಛಕ್ತಿಸಾಗರದ ಅಂಶವೇ ಆದ) ಅವನಲ್ಲಿಯೇ ಇದೆಯೆಂದು ಅದು ತಿಳಿಸುತ್ತದೆ. ಎಲ್ಲಿಯಾದರೂ ಯಾವಾಗಲಾದರೂ ಒಂದು ಆಶೆಯೋ ಒಂದು ಅಗತ್ಯವೋ ಒಂದು ಪ್ರಾರ್ಥನೆಯೋ ಸಫಲವಾಗಿದ್ದರೆ ಆ ಸಫಲತೆಯು ನಮ್ಮೆಲ್ಲರಲ್ಲಿಯೂ ಇರುವ ಆ ಅನಂತ ಚಿಚ್ಛಕ್ತಿಯ ಭಂಡಾರದಿಂದ
ಚಿಮ್ಮಿದ ಪೌರುಷದ ಸಾಧನೆಯೇ.
ಈ ಮೂಲಭೂತ ಪ್ರಕ್ರಿಯೆಯನ್ನೇ ವೇದಾಂತಶಾಸ್ತ್ರದಲ್ಲಿ ಅವ್ಯಕ್ತ ತತ್ತ್ವದಿಂದ ಮಹತ್ತತ್ತ್ವದ ಆವಿಷ್ಕರಣ ಎಂದು ವಿಸ್ತರಿಸಲಾಗಿದೆ. ಇದಕ್ಕೆ ಪೂರ್ಣವಾಗಲ್ಲದಿದ್ದರೂ ಹತ್ತಿರಹತ್ತಿರ ಸಂವಾದಿ ಎನ್ನಬಹುದಾದ ಬೌದ್ಧದರ್ಶನ, ಗ್ರೀಕ್ ತತ್ತ್ವಶಾಸ್ತ್ರ, ಆಧುನಿಕ ಭೌತವಿಜ್ಞಾನ ಮೊದಲಾದ ಧಾರೆಗಳ ಪ್ರಧಾನಾಂಶಗಳನ್ನೂ ಲೇಖಕರು ಪರಿಚಯಿಸಿದ್ದಾರೆ. ಚಿಚ್ಛಕ್ತಿ ಪ್ರಭಾವದ ಸಮಗ್ರ ಪ್ರತಿಪಾದನೆ ಲಭ್ಯವಿರುವುದು ಔಪನಿಷದ ವಾಙ್ಮಯದಲ್ಲಿ ಎಂಬ ಮಂಡನೆಯಂತೂ ಗ್ರಂಥದುದ್ದಕ್ಕೂ ಇದ್ದೇ ಇದೆ. (ವಿಜ್ಞಾನ ಎಂಬುದು ವೇದಾಂತದ ಸಂದರ್ಭದಲ್ಲಿ ತರ್ಕ-ಅನುಭವ ಎಂದರೆ ಜ್ಞಾತೃ-ಜ್ಞೇಯಗಳಿಗೆ ಆಧಾರವಾದ ಏಕತ್ವದ ಕಂಡುಕೊಳ್ಳುವಿಕೆ ಎಂದು ನೆನಪಿಡಬೇಕು.)
ಆವರಣ-ವಿಕ್ಷೇಪಗಳ ಉದ್ಗಮಸ್ಥಾನವಾದ ಅವಿದ್ಯೆಯಿಂದ ಸತ್ತ್ವಪ್ರಧಾನವಾದ ವಿದ್ಯೆಯ ಕಡೆಗಿನ ಕ್ರಮಣವೇ ಪ್ರಕಾಶಮಾರ್ಗ. ಅವಿದ್ಯೆಗೆ ಬ್ರಹ್ಮವಿದ್ಯೆಯೇ ಚಿಕಿತ್ಸಕ ಎಂಬುದಕ್ಕೆ ಯೋಗಶಾಸ್ತ್ರ-ಹಠಯೋಗ – ಮಂತ್ರಯೋಗಗಳು ಸಮರ್ಥಕಗಳು ಎಂಬುದನ್ನು ಲೇಖಕರು ವಿಸ್ತಾರವಾಗಿ ವಿವರಿಸಿದ್ದಾರೆ. ಸಾಂದರ್ಭಿಕವಾಗಿ ಈಶ್ವರನ ಉಪಾಧಿಯಾದ ಮಾಯೆಯ ಪರಾಮರ್ಶನೆ, ಸ್ಥೂಲ ಸೂಕ್ಷ್ಮ-ಕಾರಣ ಶ್ರೇಣೀಕರಣ, ನಾದೋಪಾಸನಾದಿ ಮಂತ್ರಶಾಸ್ತ್ರ ಪ್ರಕ್ರಿಯೆಗಳು, ಶ್ರೀಚಕ್ರೋಪಾಸನಾದಿ ತಂತ್ರಶಾಸ್ತ್ರ ಪ್ರಕ್ರಿಯೆಗಳ ಸಂಗತತೆ ಮೊದಲಾದವನ್ನು ಕುರಿತೂ ವ್ಯಾಖ್ಯೆ ಮಾಡಲಾಗಿದೆ. ಸ್ವರೂಪಪ್ರತಿಷ್ಠಾ ವಾ ಚಿತಿ-ಶಕ್ತ್ಯೇರಿತಿ ಇತ್ಯಾದಿ ಪಾತಂಜಲ ಸೂತ್ರೀಕರಣಗಳಿಂದ ಹಿಡಿದು ಅರ್ವಾಚೀನ ಥಿಯಾಸಫಿ ನೀಡಿರುವ ವಿಶ್ಲೇ?ಣೆಗಳು, ಅರವಿಂದ ದರ್ಶನಗಳವರೆಗೆ ಶ್ರೀಮೂರ್ತಿ ಅವರ ಅವಲೋಕನ ಪಸರಿಸಿದೆ. ಸಾಮಾನ್ಯವಾಗಿ ಪಾರಂಪರಿಕ ವಾಙ್ಮಯದಲ್ಲಿ ಹೆಚ್ಚು ವಿಸ್ತರಿಸಲ್ಪಡದ ಸೈಕಿಕ್ ಫೆನಾಮೆನಾ ಹಾಗೂ ಕಾರ್ಲ್ ಯುಂಗ್ ಮೊದಲಾದ ಆಧುನಿಕ ಮನಃಶಾಸ್ತ್ರಜ್ಞರ ಕಾಣ್ಕೆಗಳನ್ನೂ ಶ್ರೀಮೂರ್ತಿ ಅವರು ಪ್ರಸ್ತಾವಿಸಿದ್ದಾರೆ. ಚಿಚ್ಛಕ್ತಿವಿಲಾಸದ ವಿಲಕ್ಷಣ ರೂಪಗಳಾದ ಶರೀರಾತೀತ ದೃಷ್ಟಿ, ಇಂದ್ರಿಯಾತೀತ ಶ್ರವಣಶಕ್ತಿ, ವಶ್ಯಸುಪ್ತಿ ಮೊದಲಾದವುಗಳ ಪ್ರಕಟೀಕರಣಗಳ ಹಲವು ಇತ್ತೀಚಿನ ಪ್ರಸಂಗಗಳನ್ನೂ ದಾಖಲೆ ಮಾಡಿದ್ದಾರೆ (ಅಧ್ಯಾಯ ೫).
ಗ್ರಂಥದ ಉತ್ತರಭಾಗದಲ್ಲಿ ಐದು ಅಧ್ಯಾಯಗಳಿದ್ದು ಅವುಗಳಲ್ಲಿ ಜೀವನ್ಮುಕ್ತಿಯ ಪ್ರಯೋಜನಗಳನ್ನು ಕುರಿತು ವಿಸ್ತಾರವಾಗಿ ವರ್ಣಿಸಲಾಗಿದೆ. ಈ ಭಾಗವು ವ್ಯಕ್ತಿಯ ಸಂಪೂರ್ಣ ಸ್ವಸ್ಥತೆಯ ಕಲ್ಪನೆ, ಚಿಕಿತ್ಸೆಯಲ್ಲಿ ಪ್ರಾಣಶಕ್ತಿಯ ಹಾಗೂ ಮನಃಶಕ್ತಿ-ಚೈತನ್ಯಶಕ್ತಿಗಳ ಪ್ರಭಾವವನ್ನು ಕುರಿತು ಪರಾಮರ್ಶನೆ ಇರುವುದರಿಂದ ಈ ಭಾಗವು ನೇರವಾಗಿಯೆ ಪ್ರಯೋಜನಕರವಾಗಿದ್ದು ರೋಗಚಿಕಿತ್ಸೆಯಲ್ಲಿಯೂ ರೋಗ ನಿವಾರಣೆಯಲ್ಲಿಯೂ ಉಪಯುಕ್ತಗಳಾದ ತತ್ತ್ವಗಳನ್ನು ವಿವರಿಸಿವೆ. ಪರ್ಯಾಯ ವೈದ್ಯಪದ್ಧತಿಗಳೂ ಔಷಧಾವಲಂಬಿಯಲ್ಲದ ಚಿಕಿತ್ಸಾಕ್ರಮಗಳೂ ಹೆಚ್ಚಿನ ಆಸಕ್ತಿಯನ್ನು ಉಂಟುಮಾಡುತ್ತಿರುವ ಈಗಿನ ಪರಿಸರದಲ್ಲಿ ಸಂಗತವೆನಿಸುವ ದಿಕ್ಪ್ರದರ್ಶಕ ಅಂಶಗಳು ಈ ಭಾಗದಲ್ಲಿ ತುಂಬಿವೆ. ಆಧಿಭೌತಿಕ, ಆಧಿದೈವಿಕ, ಆಧ್ಯಾತ್ಮಿಕ – ಈ ಮೂರೂ ಆಯಾಮಗಳಲ್ಲಿ ಹರಡಿಕೊಂಡಿರುವ ಸಂಸಾರಕ್ಲೇಶಗಳನ್ನು ಚಿಚ್ಛಕ್ತಿಯ ಪ್ರಭಾವದಿಂದ ಹೇಗೆ ಪರಿಹರಿಸಿಕೊಳ್ಳಬಹುದು ಎಂಬುದರ ಪ್ರತಿಪಾದನೆ ಪ್ರಕೃತ ಗ್ರಂಥದಲ್ಲಿದೆ.
ಗ್ರಂಥದ ೧೯೬೩ರ ಪ್ರಥಮ ಆವೃತ್ತಿಯ ಬಗೆಗೆ ಕವಿವರ್ಯ ದ.ರಾ. ಬೇಂದ್ರೆ ಹೀಗೆಂದಿದ್ದರು:
“ನುಲೇನೂರು ಶ್ರೀ ದತ್ತಾಶ್ರಮದ ಶ್ರೀಮೂರ್ತಿಯವರು ಬರೆದ ಮಹಾಪ್ರಬಂಧ ಚಿಚ್ಘಕ್ತಿ ಪ್ರಭಾವವು ಮಾನವೀಯ, ವಿವೇಚನೀಯ ಗ್ರಂಥವಾಗಿದೆ. ಅದು ಸದ್ಯಃ ಕಾಲೋಚಿತವಾಗಿರುವುದು ಅಲ್ಲದೆ, ಮಾನವ ಸೌಹಾರ್ದದಲ್ಲಿ ಬಂದಿರುವ ಅವಘಡ ನಿರಸನವಾಗುವವರೆಗೂ ವಿಚಾರೋದ್ದೀಪಕವಾಗಿ ಪ್ರಚೋದಿಸುವ ಮಹಾ ಉರ್ಮಿಯಾಗಿ, ವಿವಿಧ ವ್ಯಕ್ತಿಗಳಿಗೆ ಎಚ್ಚರ ತರುವ ಸಾಧನೆಯಾಗಿ ಉಳಿದೀತು. ಪ್ರಾಚೀನ ಪರಂಪರೆ, ಅರ್ವಾಚೀನ ಅದ್ಭುತ ಒಂದನ್ನೊಂದು ಎದುರಿಸಿದಾಗ, ಇದಿರುಗೊಂಡಾಗ
ಉದ್ಭವಿಸುವ ಪರಿಣಾಮಕ್ರಮ ಎಂತಹದು ಎಂಬ ಸಮಾಲೋಚನೆಗೆ ತಕ್ಕವರನ್ನಾಗಿ ಹಲವು ವಾಚಕರನ್ನಾದರೂ ಇದು ಮಾಡೀತು; ಶ್ರೀಮೂರ್ತಿಗಳ ಶ್ರೀಗುರುಪ್ರೇರಣೆ ಅಂತಹದು.”
ಮೂಲಗ್ರಂಥಕ್ಕೆ ಸೇರಿರದಿದ್ದರೂ ಶ್ರೀಮೂರ್ತಿ ಅವರೇ ರಚಿಸಿದ ಭಾರತಮಾತೆಯ ಸ್ವಾತಂತ್ರ್ಯಸಂರಕ್ಷಣ ಎಂಬ ೪೨ ಪುಟಗಳ ರಾಷ್ಟ್ರಚಿಂತನಪ್ರಬಂಧವನ್ನೂ ಈ ಗ್ರಂಥದಲ್ಲಿ ಸೇರ್ಪಡೆಗೊಳಿಸಲಾಗಿದೆ.
ಕಳೆದ ೫೦ ವರ್ಷಗಳಿಂದ ಅಲಭ್ಯವಾಗಿದ್ದ ಚಿಚ್ಛಕ್ತಿ ಪ್ರಭಾವ ಗ್ರಂಥವು ನಮ್ಮ ಕಾಲದಲ್ಲಿ ಸಾಧಕರಾಗಿಯೂ ಜನಾನುರಾಗಿಗಳಾಗಿಯೂ ಹೆಸರಾಗಿದ್ದ ಚಿಕ್ಕಮಗಳೂರು ಜಿಲ್ಲೆಯ ಸಖರಾಯಪಟ್ಟಣದ ಶ್ರೀ ವೆಂಕಟಾಚಲ ಅವಧೂತರು ನೀಡಿದ ಪ್ರೇರಣೆ-ಸೂಚನೆಯಂತೆ ಮರು-ಆವೃತ್ತಿಯಲ್ಲಿ ಹೊರಬಂದು ಈಗ ಜಿಜ್ಞಾಸುಗಳಿಗೆ ಲಭ್ಯವಾಗಿರುವುದು ಒಂದು ಸುಸಂಯೋಗ. ಪುನಃಪ್ರಕಟನೆಯಲ್ಲಿ ನೆರವಾದ ಈಗಿನ ನುಲೇನೂರು ಶ್ರೀ ದತ್ತಾಶ್ರಮದ ವ್ಯವಸ್ಥಾಪಕ ಶ್ರೀ ಎನ್. ಆತ್ಮಾರಾಮ ಅವರಿಗೂ ಗ್ರಂಥವನ್ನು ಪುನರ್ಮುದ್ರಣಕ್ಕಾಗಿ ಪರಿಷ್ಕರಿಸಿಕೊಟ್ಟ ಮಾತಾ ಅಮೃತಾಮಯೀ ಅವರಿಗೂ ವಂದನೆ ಸಲ್ಲುತ್ತದೆ. ಗ್ರಂಥವನ್ನು ಸುಂದರವಾಗಿ ಮುದ್ರಿಸಿ ಪ್ರಕಾಶನಗೊಳಿಸಿರುವ ಲೋಕ ಶಿಕ್ಷಣ ಟ್ರಸ್ಟ್ನ ಅಧಿಕಾರಿಗಳು ಧನ್ಯವಾದಾರ್ಹರಾಗಿದ್ದಾರೆ.