ನೋವು, ದುಗುಡ, ಚಿಂತೆ, ಬಡತನಗಳ ನಡುವೆಯೂ ಮುನಿಸ್ವಾಮಿ ಅವರು ಕಲೆಯ ನವಿಲು ಕುಣಿಸುತ್ತಾರೆ. ಸೃಷ್ಟಿಗೆ ಮೂಲವಾದ `ಜಾಂಬವಂತನ ಕಥೆ’, ನೂರೆಂಟು ಜಾತಿಗಳು ಹುಟ್ಟಿದ `ಅರಂಜ್ಯೋತಮ್ಮನ ಕಥೆ’ ಹೇಳುತ್ತಾರೆ, ನಗುತ್ತಾರೆ, ನಗಿಸುತ್ತಾರೆ.
ಮುನಿಸ್ವಾಮಿ ಅವರನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸಿದವರು ಅಜ್ಜಿ ದೊಡ್ಡರಂಗಮ್ಮ. ತಳಸಮುದಾಯಗಳ ರೀತಿ-ರಿವಾಜು, ಕಟ್ಟಲೆಗಳ ಮೌಖಿಕ ದಾಖಲಾತಿಯಾಗಿರುವ `ದಕ್ಕಲ ಜಾಂಬವ ಪುರಾಣ’ ಕಲಿಸಿದವರೂ ಅವರೇ. ಅಜ್ಜಿಯನ್ನು ಅತ್ಯಂತ ಪೀತಿಯಿಂದ ನೆನಪಿಸಿಕೊಳ್ಳುವ ಮುನಿಸ್ವಾಮಿ ದೊಡ್ಡರಂಗಮ್ಮ ಅವರ ಹೆಸರನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ದೊಡ್ಡಬಳ್ಳಾಪುರದ ಮುತ್ಸಂದ್ರ ಬಳಿ ನಗರಸಭೆ ಪಾರ್ಕ್ ಸಮೀಪ ಗುಡಿಸಲು ಹಾಕಿಕೊಂಡು ವಾಸ ಮಾಡುತ್ತಿರುವ ದಕ್ಕಲ ಸಮುದಾಯದ ಮುನಿಸ್ವಾಮಿ ಅವರೊಬ್ಬ ಮಾಗಿದ ಕಲಾವಿದ. ಸುಖ-ದುಃಖಗಳಲ್ಲಿ ಮುಳುಗಿ-ತೇಲಿದ ಮಾಗಿದ ಮನಸ್ಸು ಅವರದು. ಕನ್ನಡ ಜಾನಪದ ಪರಂಪರೆಯು ಮೌಖಿಕ ಮಹಾಕಾವ್ಯ ಎಂದು ಗೌರವಿಸುವ ‘ದಕ್ಕಲ ಜಾಂಬವ ಪುರಾಣ’ವನ್ನು ಸಂಪೂರ್ಣವಾಗಿ ಹೇಳುವ ಕರ್ನಾಟಕದ ಕೆಲವೇ ಕೆಲವು ಕಲಾವಿದರಲ್ಲಿ ಅವರೂ ಒಬ್ಬರು.
ಹುಟ್ಟಿದ ಊರು, ತಂದೆ-ತಾಯಿಯ ಬಗ್ಗೆ ಹೆಚ್ಚಿನ ವಿವರಗಳು ಮುನಿಸ್ವಾಮಿ ಅವರಿಗೆ ತಿಳಿದಿಲ್ಲ. ತಂದೆಯ ಹೆಸರು ಮುನಿಸ್ವಾಮಿ, ತಾಯಿ ಮುನಿಯಮ್ಮ. ‘ಸಂಚಾರದಲ್ಲಿದ್ದಾಗ ಹುಟ್ಟಿದೆ, ಯಾವ ಊರಲ್ಲಿ ಹುಟ್ಟಿದ್ದೋ ಗೊತ್ತಿಲ್ಲ, ಈ ದೇಶವೇ ನನ್ನದು ಸ್ವಾಮಿ’ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆ ಹೊಸಕೋಟೆ ತಾಲ್ಲೂಕಿನ ಮಾದಿಗರ ಕೇರಿಗಳು ಮುನಿಸ್ವಾಮಿ ಅವರ ಹಕ್ಕಿನ ಎತ್ತುವಳಿ ಪ್ರದೇಶಗಳು. ಇಲ್ಲಿ ಅವರಿಗೆ ಗೌರವ ಮಾನ್ಯತೆಗಳು ಹೆಚ್ಚು. ‘ಎತ್ತುವಳಿ’ ಎನ್ನುವುದರ ಅರ್ಥ ಆ ಊರುಗಳ ಜನರು ಇವರು ಮತ್ತು ಇವರ ಕುಟುಂಬಸ್ಥರನ್ನು ಸಾಕುವ ಹೊಣೆ ಹೊಂದಿದ್ದಾರೆ ಎಂದು. ಮುನಿಸ್ವಾಮಿ ಅವರ ಪತ್ನಿ ಶಿವಮ್ಮ, ಮಗ ರವಿ ಟೈಲರ್ ವೃತ್ತಿ ಆಶ್ರಯಿಸಿದ್ದಾರೆ. ಸೊಸೆ ಕುಂತ್ಯಮ್ಮ, ಮೊಮ್ಮಗಳು ದಿವ್ಯಾ.
ಈ ದೇಶವೇ ನಮ್ಮದು ಎನ್ನುವ ದಕ್ಕಲರಿಗೆ ಬಡತನವೇ ಹತ್ತಿರದ ಬಂಧು. ಮುನಿಸ್ವಾಮಿ ಅವರ ಕುಟುಂಬವೂ ಅದಕ್ಕೆ ಹೊರತಲ್ಲ. ಇತ್ತೀಚೆಗೆ ಬೆಂಗಳೂರಿನ ಕನ್ನಡ ಭವನದಲ್ಲಿರುವ ‘ನಯನ’ ಸಭಾಂಗಣದಲ್ಲಿ ೨೦೨೨ರ ಆಗಸ್ಟ್ ೨೦ರಂದು ನಡೆದ ‘ಮನೆಯಂಗಳದ ಅತಿಥಿ’ ಕಾರ್ಯಕ್ರಮದಲ್ಲಿ ಮುನಿಸ್ವಾಮಿ ಅವರು ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಬೇಕೆಂಬ ಸಡಗರದಲ್ಲಿ ಒಂದು ವಾರ ‘ಎತ್ತುವಳಿ’ ಗೆ ಹೊಗಿರಲಿಲ್ಲ, ಅಂದರೆ ಆ ಒಂದು ವಾರ ಅವರದು ‘ಶೂನ್ಯ ಸಂಪಾದನೆ’. ಕೆಲ ವರ್ಷಗಳ ಹಿಂದೆ ಇವರ ಹೆಂಡತಿ ಶಿವಮ್ಮನವರು ಸೌದೆ ಆರಿಸಿ ತರಲೆಂದು ಕಾಡಿಗೆ ಹೋದಾಗ ಉರುಳಿ ಬಿದ್ದ ಕಾರಣ ಸೊಂಟದ ಸ್ವಾಧೀನ ಕಳೆದುಕೊಂಡಿದ್ದಾರೆ. ಸೂಕ್ತ ಚಿಕಿತ್ಸೆ ದೊರೆತರೆ ಅವರು ಮತ್ತೆ ನಡೆದಾಡಬಲ್ಲರು. ಪ್ರೀತಿಯ ಮಗಳು ತೀರಿಹೋದ ನೋವು ಇಂದಿಗೂ ಈ ಕುಟುಂಬವನ್ನು ಇನ್ನಿಲ್ಲದಂತೆ ಕಾಡುತ್ತಿದೆ. ಮಗ ಕುಲವೃತ್ತಿ ಬಿಟ್ಟು, ಟೈಲರ್ ಆಗಿದ್ದಾನೆ. ‘ನನ್ನ ನಂತರ ಈ ಕಲೆಯನ್ನು ಮುಂದುವರಿಸುವವರು ಯಾರೂ ಇಲ್ಲ’ ಎನ್ನುವ ಚಿಂತೆ ಮುನಿಸ್ವಾಮಿ ಅವರನ್ನು ಕಾಡುತ್ತಿದೆ.
ಇಷ್ಟೆಲ್ಲ ನೋವು, ದುಗುಡ, ಚಿಂತೆ, ಬಡತನಗಳ ನಡುವೆಯೂ ಮುನಿಸ್ವಾಮಿ ಅವರು ಕಲೆಯ ನವಿಲು ಕುಣಿಸುತ್ತಾರೆ. ಸೃಷ್ಟಿಗೆ ಮೂಲವಾದ ‘ಜಾಂಬವಂತನ ಕಥೆ’, ನೂರೆಂಟು ಜಾತಿಗಳು ಹುಟ್ಟಿದ ‘ಅರಂಜ್ಯೋತಮ್ಮನ ಕಥೆ’ ಹೇಳುತ್ತಾರೆ, ನಗುತ್ತಾರೆ, ನಗಿಸುತ್ತಾರೆ.
ಮುನಿಸ್ವಾಮಿ ಅವರನ್ನು ಸಾಕಿ, ಬೆಳೆಸಿ, ಮದುವೆ ಮಾಡಿಸಿದವರು ಅಜ್ಜಿ ದೊಡ್ಡರಂಗಮ್ಮ. ತಳಸಮುದಾಯಗಳ ರೀತಿ-ರಿವಾಜು, ಕಟ್ಟಲೆಗಳ ಮೌಖಿಕ ದಾಖಲಾತಿಯಾಗಿರುವ ‘ದಕ್ಕಲ ಜಾಂಬವ ಪುರಾಣ’ ಕಲಿಸಿದವರೂ ಅವರೇ. ಅಜ್ಜಿಯನ್ನು ಅತ್ಯಂತ ಪೀತಿಯಿಂದ ನೆನಪಿಸಿಕೊಳ್ಳುವ ಮುನಿಸ್ವಾಮಿ ದೊಡ್ಡರಂಗಮ್ಮ ಅವರ ಹೆಸರನ್ನು ಕೈಮೇಲೆ ಹಚ್ಚೆ ಹಾಕಿಸಿಕೊಂಡಿದ್ದಾರೆ.
ಮುನಿಸ್ವಾಮಿ ಅವರ ಮನೆಮಾತು ಕಂದೆಲಗು. ದಕ್ಕಲ ಸಮುದಾಯದವರು ಮಾತನಾಡುವ ಮರುಗು, ಕನ್ನಡ ಮತ್ತು ತೆಲುಗು ಭಾಷೆಗಳು ಅವರಿಗೆ ಸುಲಲಿತ. ಓದು, ಬರಹ ಬರುವುದಿಲ್ಲ. ತೆಲುಗಿನಲ್ಲಿರುವ ದಕ್ಕಲ ಜಾಂಬವ ಪುರಾಣವನ್ನು ‘ಮನೆಯಂಗಳದಲ್ಲಿ ಮಾತುಕತೆ’ ಕಾರ್ಯಕ್ರಮಕ್ಕಾಗಿ ಸ್ವತಃ ಅವರೇ ಕನ್ನಡಕ್ಕೆ ಅನುವಾದಿಸಿದ್ದರು. ಇನ್ನೂ ಅಕ್ಷರರೂಪಕ್ಕೆ ಬಂದಿರದ ಕೃತಿಯ ಸಾಲುಗಳನ್ನು ತೆಲುಗಿನಲ್ಲಿ ಹೇಳಿಕೊಂಡು, ಅದಕ್ಕೆ ಕನ್ನಡ ಪದಗಳನ್ನು ಜೋಡಿಸಿ, ನೆನಪಿನಲ್ಲಿ ಇರಿಸಿಕೊಳ್ಳುವುದು ಸುಲಭದ ಮಾತಲ್ಲ.
ಮುನಿಸ್ವಾಮಿ ಅವರು ಹೇಳುವ ದಕ್ಕಲರ ನಂಬಿಕೆ, ಆಚರಣೆ, ಕಥೆಗಳನ್ನು ಪುರಾಣದ ಚೌಕಟ್ಟಿನಲ್ಲಿಯೇ ಅರ್ಥೈಸಬೇಕು. ಪೌರಾಣಿಕ ಶಿಸ್ತು ಬೇರೆಯದ್ದೇ ಆದುದು. ಅದನ್ನು ಆಧುನಿಕತೆಯ ಪರಿಭಾಷೆಗಳಲ್ಲಿ ಇಣುಕಿನೋಡಿ ಮೂಢನಂಬಿಕೆ ಎಂದು ಜರಿದರೆ ಮುನಿಸ್ವಾಮಿ ಅವರಿಗೆ ಏನೂ ನಷ್ಟವಾಗುವುದಿಲ್ಲ.
ಕನ್ನಡ ಸಂಸ್ಕೃತಿಯ ಬೇರು
ಕನ್ನಡ ಸಂಸೃತಿಯ ಹಳೆಬೇರು, ಮೂಲ, ಕಾಂಡವನ್ನು ಪ್ರತಿನಿಧಿಸುವ ಜನಾಂಗ ದಕ್ಕಲಿಗರದು. ದಕ್ಕಲ ಜನಾಂಗದ ಮೂಲವನ್ನು ನಿರೂಪಿಸುವ ಸುಮಾರು ೭ ಕಥೆಗಳಿವೆ. ಪರಸ್ಪರ ವೈರುಧ್ಯವಿರುವ ಈ ಕಥೆಗಳು ಕರ್ನಾಟಕದಲ್ಲಿಯೇ ಚಾಲ್ತಿಯಲ್ಲಿವೆ. ‘ಜಾಂಬವಂತನೇ ಈ ಸಮುದಾಯದ ಮೂಲಪುರುಷ’ ಎನ್ನುವುದು ಎಲ್ಲ ಕಥೆಗಳಲ್ಲಿರುವ ಒಂದು ಸಾಮಾನ್ಯ ಅಂಶ. ಒಂದು ಕಾಲಕ್ಕೆ ಭಾರತೀಯ ಸಮಾಜದಲ್ಲಿ ಇಂದಿನಂತೆ ಜಾತಿಗಳು ಮತ್ತು ಅಸ್ಪೃಶ್ಯತೆ ಇರಲಿಲ್ಲ. ಎಲ್ಲರೂ ಸಹಬಾಳ್ವೆಯಿಂದ ಬದುಕುತ್ತಿದ್ದರು. ದೊಕ್ಕಲಿಗರು, ಮಾದಿಗರಿಂದ ಯಾವುದೋ ಕಾರಣಕ್ಕೆ ಬೇರೆಯಾದವರು. ಹಾಗಾಗಿಯೇ ಇಂದಿಗೂ ಅವರನ್ನು ಮಾದಿಗರು ಪ್ರೀತಿಯಿಂದ ಉಪಚರಿಸುತ್ತಾರೆ. ದಕ್ಕಲರು ಹಳೆ ಮಕ್ಕಳಾಗಿ ಹಕ್ಕು ಚಲಾಯಿಸುತ್ತಾರೆ.
ದಕ್ಕಲ ಸಮುದಾಯದ ಇಂದಿನ ತಲೆಮಾರಿಗೆ ‘ಎತ್ತುವಳಿ’ ಅವಮಾನ ಎನಿಸುತ್ತದೆ. ಕೆಲವರು ಓದಿ ಕೆಲಸಗಳಿಗೆ ಸೇರಿದ್ದಾರೆ. ಬಹುತೇಕರು ಸಣ್ಣಪುಟ್ಟ ವ್ಯಾಪಾರ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ವಿದ್ಯೆಯ ಬಗ್ಗೆ ಜಾಗೃತಿ ಮೂಡಿಲ್ಲ. ಸರ್ಕಾರದ ವಸತಿಶಾಲೆಗಳಲ್ಲಿ ಈ ಸಮುದಾಯದ ಮಕ್ಕಳಿಗೆ ಆದ್ಯತೆ, ಮೀಸಲಾತಿ ಸಿಗಬೇಕಿದೆ. ಇವರು ಒಂದೆಡೆ ನೆಲೆ ನಿಲ್ಲುವಂತೆ ಆಗಲು ಭೂಮಿ, ನಿವೇಶನ, ಮನೆಗೆ ಅನುದಾನ ಸಿಗಬೇಕಿದೆ. ವಸತಿ ಮತ್ತು ಭೂಮಿಯ ಹಕ್ಕುಗಳಿಗಾಗಿ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿ ನಡೆದ ಹೋರಾಟ ಯಶಸ್ವಿಯಾಗಿದೆ. ಆದರೆ ಇತರ ತಾಲ್ಲೂಕುಗಳಲ್ಲಿ ಈ ಸಮುದಾಯಕ್ಕೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ.
ದಕ್ಕಲ ಸಂಸ್ಕೃತಿ ಅಧ್ಯಯನ
ದಕ್ಕಲರ ಬಗ್ಗೆ ಹಲವು ಲೇಖನ ಮತ್ತು ಪುಸ್ತಕಗಳು ಪ್ರಕಟವಾಗಿವೆ. ಈ ಜನಾಂಗದ ಬಗ್ಗೆ ತಿಳಿಯಲು ಆಸಕ್ತಿಯಿರುವವರು ಗಮನಿಸಬಹುದಾದ ಕೆಲ ಪುಸ್ತಕಗಳಿವು:
೧. ದೊಕ್ಕಲು ಮಕ್ಕಳು: ಒಂದು ಅಧ್ಯಯನ (೧೯೯೭)
ದಿವಂಗತ ಎಂ.ಎ. ಕಲಬುರ್ಗಿ ಅವರ ಮಾರ್ಗದರ್ಶನದಲ್ಲಿ ರೂಪಗೊಂಡ ಪಿಎಚ್.ಡಿ. ಪ್ರಬಂಧ. ಡಾ. ಎಲ್ಲಪ್ಪ ಕೆ.ಕೆ. ಪುರ ಅವರ ಈ ಕೃತಿಯು ದಕ್ಕಲರ ಜೀವನದ ಬಗ್ಗೆ ಅಧಿಕೃತ ಮಾಹಿತಿ ಕೊಡುವ ಅಪರೂಪದ ಸಂಶೋಧನ ಗ್ರಂಥವಾಗಿದೆ.
೨. ದಕ್ಕಲಿಗ (೨೦೦೮)
ಇದು ಎಲ್ಲಪ್ಪ ಕೆ.ಕೆ. ಪುರ ಅವರ ಮಾರ್ಗದರ್ಶನದಲ್ಲಿ ರೂಪಗೊಂಡ ಕೃತಿ. ಕನ್ನಡ ಪುಸ್ತಕ ಪ್ರಾಧಿಕಾರವು ‘ಅಲೆಮಾರಿ ಸಮುದಾಯಗಳ ಅಧ್ಯಯನ ಮಾಲೆ’ಯಲ್ಲಿ ಈ ಕೃತಿಯನ್ನು ಪ್ರಕಟಿಸಿದೆ. ದಕ್ಕಲಿಗ ಸಮುದಾಯದ ಸಮೀಕ್ಷೆ ಮತ್ತು ಈ ಪುಸ್ತಕದ ಅತಿ ಮುಖ್ಯ ಅಂಶ. ಜಾನಕಲ್ ರಾಜಣ್ಣ ಈ ಕೃತಿಯ ಲೇಖಕರು.
೩. ಕರ್ನಾಟಕ ಆದಿಜಾಂಬವ ಮಾತಂಗ ಪರಂಪರೆ
ರಹಮತ್ ತರಿಕೆರೆ ಅವರ ಮಾರ್ಗದರ್ಶನದಲ್ಲಿ ಸಿದ್ದವಾದ ಪಿಎಚ್.ಡಿ. ಪ್ರಬಂಧ. ಇನ್ನೂ ಪ್ರಕಟವಾಗಬೇಕಿದೆ. ಕವಿ, ಹೋರಾಟಗಾರ ವಡ್ಡಗೆರೆ ನಾಗರಾಜಯ್ಯ ಅವರ ಈ ಕೃತಿ ದಕ್ಕಲರ ಬದುಕು, ಜೀವನಪದ್ದತಿ ಹಾಗೂ ಪ್ರಾದೇಶಿಕ ವೈವಿಧ್ಯದ ಬಗ್ಗೆ ಒಳನೋಟ ನೀಡುತ್ತದೆ.
ಉಳಿದಂತೆ ಬಿ. ಚೆಲುವರಾಜು ಅವರ ‘ದಕ್ಕಲ ಸಂಸೃತಿ’, ಡಾ ಕೆ. ಕೃಷ್ಣಪ್ಪ ಅವರ ‘ದಕ್ಕಲಿಗರು’ ಗಮನಾರ್ಹ ಕೃತಿಗಳಾಗಿವೆ. ಜಾನಪದ ಕೃತಿಗಳ ದಾಖಲಾತಿಯಲ್ಲಿ ಮಾರ್ಗದರ್ಶನ ಮಾಡುವ ಸಾಹಿತಿ ಸ. ರಘುನಾಥ ಅವರು ತೆಲುಗು ಲಿಪಿಯಲ್ಲಿರುವ ಜಾಂಬವ ಪುರಾಣ ಸಂಗ್ರಹಿಸಿ, ಅನುವಾದಿಸುವ ಪ್ರಯತ್ನ ಆರಂಭಿಸಿದ್ದಾರೆ.
ದಾಖಲಾತಿ ಅತ್ಯಗತ್ಯ
ದೊಡ್ಡಬಳ್ಳಾಪುರದಲ್ಲಿ ವಾಸವಿರುವ ಮುನಿಸ್ವಾಮಿ ಅವರು ದಕ್ಕಲ ಜನಾಂಗದ ರೀತಿ-ರಿವಾಜು ಹಾಗೂ ನಂಬಿಕೆ, ಕೃತಿಗಳ ವಿಚಾರದಲ್ಲಿ ಜೀವಂತ ವಿಶ್ವಕೋಶವಿದ್ದಂತೆ. ಅವರು ಹಾಡುವ ದಕ್ಕಲ ಜಾಂಬವ ಪುರಾಣ ಹಾಗೂ ಅರಂಜ್ಯೋತಮ್ಮನ ಕಥೆಯ ವ್ಯವಸ್ಥಿತ ವಿಡಿಯೊ ದಾಖಲಾತಿ ಹಾಗೂ ಅಕ್ಷರರೂಪಕ್ಕೆ ತರುವ ಪ್ರಯತ್ನ ತುರ್ತಾಗಿ ಆಗಬೇಕಿದೆ. ೨೦೧೧ರಲ್ಲಿ ಆಂಧ್ರದ ಪೊಲ್ಲಿ ಶ್ರೀರಾಮುಲು ವಿಶ್ವವಿದ್ಯಾಲಯವು ಜಾಂಬವ ಪುರಾಣವನ್ನು ರಂಗಭೂಮಿಗೆ ಅಳವಡಿಸಿತು. ಕರ್ನಾಟಕದಲ್ಲಿಯೂ ಅಂಥ ಪ್ರಯತ್ನಗಳು ನಡೆಯಬೇಕಿದೆ.
ದಕ್ಕಲ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಾಗಿದ್ದ ಸೌಕರ್ಯಗಳನ್ನು ದಕ್ಕಿಸಿಕೊಳ್ಳಲು ಈ ಜನಾಂಗ ನಡೆಸುತ್ತಿರುವ ಪ್ರಯತ್ನದಲ್ಲಿ ನಾವೆಲ್ಲರೂ ಕೈ ಜೋಡಿಸಬೇಕಿದೆ. ಕನ್ನಡ ಸಾರಸ್ವತ ಲೋಕದ ಸಹೃದಯ ಸ್ಪಂದನೆ ಈ ಸಮುದಾಯಕ್ಕೆ ಬೇಕಿದೆ.
(ರವೀಂದ್ರ ಕಲಾಕ್ಷೇತ್ರದಲ್ಲಿ ನಡೆದ ಮನೆಯಂಗಳದಲ್ಲಿ ಮಾತುಕತೆ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಆಡಿದ ಮಾತುಗಳ ಅಕ್ಷರರೂಪ)