‘ಚಿಂತಾ’-’ಚಿಂತನೆ’ಗಳೆರಡೂ ಮನೋವ್ಯಾಪಾರಗಳೇ ಆದರೂ ಚಿಂತೆಯಿಂದ ಚಿಂತನವು ತೀರ ವಿಭಿನ್ನವಾದದ್ದು. ಚಿಂತನವು ಅದರ ಯೋಗ್ಯವಾದ, ಪೂಜ್ಯವಾದ, ಶಾಸ್ತ್ರೀಯವಾದ ವಿಷಯವನ್ನು ಕುರಿತದ್ದು. ಇದರಲ್ಲಿ ನೋವು, ವ್ಯಥೆ, ಶೋಕ ಯಾವುದೂ ಇಲ್ಲ. ಸ್ವಸಂತೋಷದಿಂದಲೇ ಮನಸ್ಸು ಚಿಂತನದಲ್ಲಿ ಪ್ರವೃತ್ತವಾಗುತ್ತದೆ. ಈ ಚಿಂತನದಲ್ಲಿಯೂ ಎರಡು ಬಗೆಯುಂಟು. ನಿರ್ಣೀತವಾದ ವಿಷಯವನ್ನೇ ಕುರಿತು ಅದರ ದೃಢತೆಗಾಗಿ ತನ್ನ ಸಂತೃಪ್ತಿಗಾಗಿ ಮತ್ತೆ ಮತ್ತೆ ರ್ಯಾಲೋಚಿಸುವುದು ಒಂದು ಬಗೆ. ಈ ಪ್ರಕಾರವಾದ ಚಿಂತನವನ್ನು ಮನನವೆನ್ನಬಹುದು.
ಹಂಸಾಃ ಶ್ವೇತೀಕೃತಾ ಯೇನ ಶುಕಾಶ್ಚ ಹರಿತೀಕೃತಾಃ |
ಮಯೂರಾಶ್ಚಿತ್ರಿತಾ ಯೇನ ಸ ತೇ ವೃತ್ತಿಂ ವಿಧಾಸ್ಯತಿ ||
ಯಾವಾತನು ಹಂಸಗಳನ್ನು ಬೆಳ್ಳಗೂ ಗಿಳಿಗಳನ್ನು ಹಸುರಾಗಿಯೂ ನಿರ್ಮಿಸಿದ್ದಾನೋ ನವಿಲುಗಳನ್ನು ಚಿತ್ರವರ್ಣದಿಂದ ಚಿತ್ರಿಸಿದ್ದಾನೋ ಅವನೇ ನಿನಗೆ ಜೀವನವೃತ್ತಿಯನ್ನು ಕಲ್ಪಿಸಿಕೊಡುವನು.”
ನನಗೆ ಬಿಡುವಾದಾಗಲೆಲ್ಲ ಮನಸ್ಸಿನಲ್ಲೊಂದು ಆಲೋಚನೆ ಅಂಕುರಿಸುತ್ತದೆ. ಒಂಟಿಯಾಗಿ ತಿರುಗಾಡುವಾಗ, ಬಸ್ಸಿನಲ್ಲಿ-ರೈಲಿನಲ್ಲಿ ಪ್ರಯಾಣ ಮಾಡುವಾಗ, ಇದು ನನ್ನನ್ನು ಆವರಿಸಿಬಿಡುತ್ತದೆ. ಈ ಆಲೋಚನೆಯನ್ನು, ಮನೋವ್ಯಾಪಾರವನ್ನು ಚಿಂತನವೆಂದು ಕರೆಯಬಹುದು. ಚಿಂತೆಗೂ ಚಿಂತನೆಗೂ ಮೂಲತಃ ಅರ್ಥದಲ್ಲಿ ಭೇದವಿಲ್ಲ. ಯೌಗಿಕವಾಗಿ ಈ ಎರಡೂ ಶಬ್ದಗಳ ಅರ್ಥ ಒಂದೇ. ಆದರೆ ರೂಢಿಯಲ್ಲಿ ಅರ್ಥಭೇದ ಉಂಟು. ಚಿಂತನವನ್ನು ಚಿಂತೆಯೆಂದು ಕರೆಯಲಾಗುವುದಿಲ್ಲ. ದೇಹದ ಅನಾರೋಗ್ಯವನ್ನೋ, ಗೃಹಕೃತ್ಯದ ತೊಡಕನ್ನೋ, ಉದ್ಯೋಗದ ಯಾವುದಾದರೊಂದು ಸಮಸ್ಯೆಯನ್ನೋ ಕುರಿತದ್ದು ಚಿಂತೆ. ತನ್ನ ಬಡತನವನ್ನೋ ತನಗಾದ ಅವಮಾನವನ್ನೋ ಕುರಿತು ಹುಟ್ಟಿದ್ದು ಚಿಂತೆ. ಆ ಚಿಂತೆಯಲ್ಲಿ ನೋವಿದೆ; ವ್ಯಥೆ ಇದೆ; ಶೋಕವಿದೆ. ‘ಚಿಂತಾಸಮ ನಾಸ್ತಿ ಶರೀರಶೋಷಣಂ’ ಎಂಬುದೂ ‘ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರ ವಿಶಿಷ್ಯತೇ’ ಎಂಬುದೂ ಈ ಬಗೆಯ ಚಿಂತೆಯನ್ನು ವಿಷಯೀಕರಿಸಿ ಹೇಳಿದವು. ಚಿಂತನವು ಈ ಬಗೆಯದಲ್ಲ. ಚಿಂತಾ-ಚಿಂತನೆಗಳೆರಡೂ ಮನೋವ್ಯಾಪಾರಗಳೇ ಆದರೂ ಚಿಂತೆಯಿಂದ ಚಿಂತನವು ತೀರ ವಿಭಿನ್ನವಾದದ್ದು. ಚಿಂತನವು ಅದರ ಯೋಗ್ಯವಾದ, ಪೂಜ್ಯವಾದ, ಶಾಸ್ತ್ರೀಯವಾದ ವಿಷಯವನ್ನು ಕುರಿತದ್ದು. ಇದರಲ್ಲಿ ನೋವು, ವ್ಯಥೆ, ಶೋಕ ಯಾವುದೂ ಇಲ್ಲ. ಸ್ವಸಂತೋಷದಿಂದಲೇ ಮನಸ್ಸು ಚಿಂತನದಲ್ಲಿ ಪ್ರವೃತ್ತವಾಗುತ್ತದೆ. ಈ ಚಿಂತನದಲ್ಲಿಯೂ ಎರಡು ಬಗೆಯುಂಟು. ನಿರ್ಣೀತವಾದ ವಿಷಯವನ್ನೇ ಕುರಿತು ಅದರ ದೃಢತೆಗಾಗಿ ತನ್ನ ಸಂತೃಪ್ತಿಗಾಗಿ ಮತ್ತೆ ಮತ್ತೆ ರ್ಯಾಲೋಚಿಸುವುದು ಒಂದು ಬಗೆ. ಈ ಪ್ರಕಾರವಾದ ಚಿಂತನವನ್ನು ಮನನವೆನ್ನಬಹುದು. ಉದಾಹರಣೆಗೆ, ಶಾಸ್ತ್ರಪ್ರತಿಪಾದಿತವಾದ ಒಂದು ಪ್ರಮೇಯವನ್ನು ಅನುಲಕ್ಷಿಸಿ ಶ್ರದ್ಧೆಯಿಂದ ಚಿಂತಿಸುವುದು; ಗುರುವಾಕ್ಯಶ್ರವಣದಿಂದ ಅದರ ಯೋಗ್ಯವಾದ ಒಂದು ವಿಷಯವನ್ನು ಮತ್ತೆ ಮತ್ತೆ ಭಾವಿಸಿಕೊಳ್ಳುವುದು. ಇನ್ನೊಂದು ಬಗೆಯ ರ್ಯಾಲೋಚನೆಯುಂಟು. ಅದರಲ್ಲಿ ಪ್ರಮೇಯವು ನಿರ್ಣೀತವೆಂದು ಹೇಳಲಾಗದು. ಆದರೆ ಅದು ನಿರ್ಣಯಯೋಗ್ಯವಾದದ್ದು. ಶಾಸ್ತ್ರವು ಏನನ್ನೇ ಹೇಳಲಿ, ಗುರುವಾದವನು ಏನನ್ನೇ ಬೋಧಿಸಲಿ, ಅದರಲ್ಲಿ ಬಹುಮಟ್ಟಿಗೆ ನಂಬಿಕೆ ಹುಟ್ಟಿದರೂ ಹೃದಯಾಂತರಾಳದಲ್ಲಿ ಏನೋ ಒಂದು ವಿಧವಾದ ಸಂಶಯ ಉಳಿದುಕೊಂಡಿರುತ್ತದೆ. ವಸ್ತುವಿನ ತತ್ತ್ವ ಹೀಗಿರಬಹುದೆ ಅಥವಾ ಹೀಗಿರಲಾರದೆ? – ಎಂದು ಅಂತರಾಳದಲ್ಲಿ ಅದನ್ನರಿಯುವ ತುಡಿತ ಉಳಿದುಕೊಂಡಿರುತ್ತದೆ. ಉದಾಹರಣೆಗೆ: ದೇವರು ಇದ್ದಾನೆಯೇ ಅಥವಾ ಇಲ್ಲವೇ? ಪಾಪಪುಣ್ಯಗಳಿಗೆ ತಕ್ಕ ಫಲ ದೊರೆಯುವುದು ನಿಶ್ಚಿತವೆ? ಜನ್ಮಾಂತರ ಇದೆಯೇ ಅಥವಾ ಇಲ್ಲವೇ? ವೇದಗಳು ಪೌರುಷೇಯಗಳೇ ಅಥವಾ ಅಪೌರುಷೇಯಗಳೇ? – ಇಂಥವು. ಈ ಬಗೆಯ ಚಿಂತನವು ಅತಿ ಗಾಢವಾದಾಗ ಒಂದು ರೀತಿಯ ಸಮಾಧಿಸ್ಥಿತಿಯುಂಟಾಗಿಬಿಡುತ್ತದೆ!
ಪ್ರಕೃತ ಲೇಖನಕ್ಕೆ ವಿಷಯವಾದದ್ದು ಮೇಲೆ ಹೇಳಿದುದರಲ್ಲಿ ಎರಡನೆಯ ವಿಧದ ಚಿಂತನ. ಇಂತಹ ಚಿಂತನ ಹಲವರಿಗೆ ಉಂಟಾಗುತ್ತಿರಬಹುದು. ಪ್ರಕೃತಿಯ ವೈಚಿತ್ರ್ಯವನ್ನು ಕಂಡಾಗ ಈ ಚಿಂತನಕ್ಕೆ ಸ್ಫೂರ್ತಿ ದೊರೆಯುತ್ತದೆ. ಮನಸ್ಸಿನ ಸಂಸ್ಕಾರ ಉದ್ದುದ್ದವಾಗಿ ತನ್ಮಯತೆಯಿಂದ ಆಲೋಚಿಸತೊಡಗುತ್ತದೆ. ಎಷ್ಟು ಪರಿಯಲ್ಲಿ ಎಷ್ಟು ಹೊತ್ತಿನವರೆಗೆ ಆಲೋಚಿಸಿದರೂ ಮುಗಿಯುವುದಿಲ್ಲ. ಸೃಷ್ಟಿಯ ಅಗಾಧವಾದ ನಿರ್ಮಾಣಶಕ್ತಿಯನ್ನೂ, ಊಹಾತೀತವಾದ ವಿಲಕ್ಷಣತೆಯನ್ನೂ ಗಮನಿಸಿ ನಿಬ್ಬೆರಗಿನಿಂದ ಚಿತ್ತವು ಏನನ್ನೂ ತರ್ಕಿಸಲಾರದೆ ದಿಙ್ಮೂಢವಾಗುತ್ತದೆ. ಯಾವ ದೃಷ್ಟಾಂತದಿಂದಲೂ ತರ್ಕಕ್ಕೆ ನೆಲೆ ಸಿಗುವುದಿಲ್ಲ. ಯಾವ ದೃಷ್ಟಾಂತವನ್ನು ಕಲ್ಪಿಸಿಕೊಂಡರೂ ಅದು ಪ್ರಕೃತಿಯ ಅಂಶವೇ ಆದ್ದರಿಂದ ಪ್ರಕೃತಿಸ್ವರೂಪದ ನಿರ್ಧಾರಣೆಗೆ ಅದು ದೃಷ್ಟಾಂತವೇ ಆಗುವುದಿಲ್ಲ. ಸೃಷ್ಟಿಯಲ್ಲಿ ಈ ವೈಚಿತ್ರ್ಯಗಳ ನಡುವೆ ಒಂದು ಹೊಂದಾಣಿಕೆಯೂ ತರ್ಕಬದ್ಧತೆಯೂ ಇದೆ. ಈ ಸೃಷ್ಟಿ ಯಾದೃಚ್ಛಿಕವಾದುದಲ್ಲ. ಅಂದಮೇಲೆ ಈ ಹೊಂದಾಣಿಕೆಯನ್ನೂ ತರ್ಕಬದ್ಧತೆಯನ್ನೂ ನೆನೆಸಿಕೊಂಡಾಗ ಇದರ ಹಿಂದೆ ಸರ್ವಜ್ಞವೂ ಸರ್ವಶಕ್ತವೂ ಆದ ಒಂದಾನೊಂದು ವಸ್ತುವಿದ್ದಿರಬೇಕು ಎನ್ನಿಸುತ್ತದೆ. ಇದ್ದರೆ ಆ ವಸ್ತು ಯಾವುದು? ಜಡವಾದ ಪ್ರಕೃತಿಗೆ ಕ್ರಿಯಾಶಕ್ತಿ ಇದ್ದರೂ ಜ್ಞಾನಶಕ್ತಿ, ಇಚ್ಛಾಶಕ್ತಿಗಳಿಲ್ಲ. ಅವು ಇರುವುದಾದರೆ ಪ್ರಕೃತಿಯು ಜಡವಲ್ಲ, ಅದು ಚೇತನವೇ ಎನ್ನಬೇಕಾಗುತ್ತದೆ. ನಾವು ನೋಡುತ್ತಿರುವ ಪೃಥಿವ್ಯಾದಿವಸ್ತುಗಳಿಗೆ ಜ್ಞಾನೇಚ್ಛೆಗಳಿಲ್ಲ. ಕ್ರಿಯೆ ಉಂಟು. ಹಾಗಾದರೆ ಈ ಪಂಚಭೂತಗಳನ್ನು ಬಿಟ್ಟು ಅತಿರಿಕ್ತವಾದದ್ದು ಇದೆಯೇ? ಇದ್ದರೆ ಅದು ಯಾವುದು? ಅದರ ಸ್ವರೂಪವೇನು? ಹಾಗೆ ಅತಿರಿಕ್ತವಾದದ್ದು ಇಲ್ಲವಾದರೆ ಸೃಷ್ಟಿಯಲ್ಲಿ ಊಹಾತೀತವಾದ ವೈಚಿತ್ರö್ಯ ಹೇಗೆ ಉಂಟಾಗುತ್ತದೆ? – ಇದು ಚಿಂತನೆಯ ವಿಷಯ, ಚಿಂತನೆಯ ಒಂದು ಪ್ರಕಾರ. ಸಂಕ್ಷೇಪವಾಗಿ ಕೆಲವೇ ಪದಾರ್ಥಗಳ ಕೆಲವೇ ವೈಚಿತ್ರ್ಯಗಳನ್ನಿಲ್ಲಿ ಪ್ರಸ್ತಾವಿಸಬಹುದು.
ಮಾನವಶರೀರ
ವಿಜ್ಞಾನವೂ ತಂತ್ರಜ್ಞಾನವೂ ವಿಶೇಷವಾಗಿ ಅಭಿವೃದ್ಧಿಯಾಗಿರುವ ಈ ಕಾಲದಲ್ಲಿ ಆಶ್ಚರ್ಯಕರವಾದ ಯಂತ್ರಗಳ ನಿರ್ಮಾಣವಾಗಿದೆ. ಈ ಯಂತ್ರಗಳ ಕಾರ್ಯಧಾಟಿಯನ್ನು ನೋಡಿದಾಗ ಮಾನವನು ಮೂಕವಿಸ್ಮಿತನಾಗುವುದು ಸಹಜ. ಆದರೂ ಸಹ ಜಗತ್ತಿನಲ್ಲಿ ಅತ್ಯಂತ ಪ್ರಾಚೀನವೆನ್ನಬಹುದಾದ ಮಾನವಶರೀರವು ಆಧುನಿಕ ಯಂತ್ರಗಳೆಲ್ಲವನ್ನೂ ಮೀರಿಸುವ ಅದ್ಭುತ ಯಂತ್ರವೆಂದು ನನಗೆ ತೋರುತ್ತದೆ. ಅಂಗ-ಪ್ರತ್ಯಂಗಗಳ ರಚನೆ, ಆಹಾರ ಜೀರ್ಣವಾಗುವ ಬಗೆ, ರಕ್ತಸಂಚಾರ, ಹೃದಯ, ಶ್ವಾಸಕೋಶ, ಜ್ಞಾನೇಂದ್ರಿಯ-ಕರ್ಮೇಂದ್ರಿಯಗಳ ಕಾರ್ಯವೈಖರಿ – ಇವು ಮಹತ್ತರವಾದ ವಿಸ್ಮಯವನ್ನುಂಟುಮಾಡುತ್ತವೆ. ಈ ಭೂಮಂಡಲದಲ್ಲಿ ಕೋಟಿ ಕೋಟಿ ಜನಗಳಿದ್ದಾರೆ. ಹಿಂದೆ ಹುಟ್ಟಿ ಸತ್ತವರು, ಮುಂದೆ ಹುಟ್ಟತಕ್ಕವರು – ಇವರೆಲ್ಲ ಸೇರಿ ಅಸಂಖ್ಯಾತ ಕೋಟಿಗಳಷ್ಟು ಜನರು ಆಗುವರಲ್ಲವೇ? ಇವರಲ್ಲಿ ಒಬ್ಬರ ಮುಖದಂತೆ ಇನ್ನೊಬ್ಬರ ಮುಖವಿಲ್ಲ. ಒಬ್ಬರ ಧ್ವನಿಯಂತೆ ಇನ್ನೊಬ್ಬರ ಧ್ವನಿಯಿಲ್ಲ. ಗಂಡು ಧ್ವನಿ ಬೇರೆ, ಹೆಣ್ಣು ಧ್ವನಿ ಬೇರೆ. ಒಬ್ಬ ವ್ಯಕ್ತಿಯಲ್ಲಿಯೇ ವಯೋಭೇದದಿಂದ ಧ್ವನಿಭೇದಗಳು. ಬರಿಯ ಧ್ವನಿಯಿಂದಲೇ ಮಾತನಾಡತಕ್ಕವನು ಮಗು, ಬಾಲಕ, ಪ್ರಾಯದವನು, ಮುದುಕ ಎಂಬುದನ್ನು ಗುರುತಿಸಲಾದೀತು. ಅಲ್ಲಿಗೆ ಎಷ್ಟು ಕೋಟಿ ಧ್ವನಿಪ್ರಕಾರಗಳಾದವು! ಅಷ್ಟು ಪ್ರಕಾರದ ಧ್ವನಿಭೇದಗಳನ್ನು ಹುಟ್ಟಿಸುವ ಕಂಠ, ತಾಲು ಮುಂತಾದ ಪ್ರತ್ಯಂಗಗಳಲ್ಲಿ ಎಷ್ಟು ಸೂಕ್ಷ್ಮವಾದ ಭೇದಗಳಿದ್ದಿರಬೇಕು! ಹೆಣ್ಣು-ಗಂಡು ಧ್ವನಿಗಳಲ್ಲಿ ಭೇದವಿರಲು ನಿಮಿತ್ತವೇನು? ಭೇದವನ್ನಿಟ್ಟಿರುವ ಉದ್ದೇಶವೇನು?
ಕೈ, ಕಾಲು, ಕಣ್ಣು, ಮಿದುಳು – ಮೊದಲಾದವು ಕೆಲಸ ಮಾಡಿ ದಣಿದುಹೋಗುತ್ತವೆ. ಅವುಗಳಿಗೆ ವಿಶ್ರಾಂತಿ ಬೇಕು. ವಿಶ್ರಾಂತಿಯಿಲ್ಲದೆ ಅವು ಕೆಲಸ ಮಾಡಲಾರವು. ಹೃದಯ ಮತ್ತು ಶ್ವಾಸಕೋಶಗಳು ವಿಶ್ರಾಂತಿಯಿಲ್ಲದೆ ಒಂದೇ ಸಮವಾಗಿ ಕೆಲಸ ಮಾಡುತ್ತಲೇ ಇರುತ್ತವೆ. ಜನನದಿಂದ ಮರಣದವರೆಗೆ ಅವುಗಳಿಗೆ ವಿಶ್ರಾಂತಿಯೇ ಇಲ್ಲ. ಅವು ವಿಶ್ರಮಿಸಿದರೆ ಮನುಷ್ಯನ ಗತಿ ಮುಗಿದಂತೆಯೇ! ಅವುಗಳಿಗೆ ಪ್ರತಿದಿನ ದಣಿವಿನಿಂದ ವಿಶ್ರಮಿಸುವ ವ್ಯವಸ್ಥೆ ಏಕೆ ಇಲ್ಲ? ಅವುಗಳಿಗೇಕೆ ದಣಿವಾಗುವುದಿಲ್ಲ? ನಾವು ನಿದ್ರಿಸುವಾಗಲೂ ಅವು ತಮ್ಮ ಕಾರ್ಯವನ್ನು ಮಾಡುತ್ತಲೇ ಇರುವಂತೆ ಪ್ರೇರಿಸತಕ್ಕವರು ಯಾರು? ಸ್ವಪ್ರೇರಣೆಯಿಂದ ಮಾಡುವುದಾದರೆ ಅವುಗಳಿಗೆ ಜ್ಞಾನಶಕ್ತಿಯುಂಟೆ? ನಾವು ತಿನ್ನುವ ಆಹಾರದಿಂದ ಬೇಕಾದ ಅನ್ನಾಂಗಗಳನ್ನು ಪ್ರತ್ಯೇಕಿಸಿ ರಕ್ತವು ತಾನು ವೃದ್ಧಿಹೊಂದುವುದಲ್ಲದೆ ಶರೀರದ ಎಲ್ಲ ಪ್ರತ್ಯಂಗಗಳಿಗೂ ಹಂಚುತ್ತಹೋಗುತ್ತದೆ. ಮೂಳೆ, ಮಾಂಸ, ನರ, ಚರ್ಮ, ಉಗುರು, ಕೂದಲು – ಮುಂತಾದ ಸಕಲ ಪ್ರತ್ಯಂಗಗಳಿಗೂ ಬೇಕಾಗುವ ಬೇರೆ ಬೇರೆ ಅನ್ನಾಂಗಗಳನ್ನು ಅವುಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ಸರಬರಾಜು ಮಾಡುವ ಹೊಣೆಯನ್ನು ಅದು ಸದಾ ನಿರ್ವಹಿಸುತ್ತಲೇ ಇರುತ್ತದೆ. ಅತ್ಯಂತ ವಿವೇಕಶಾಲಿಯಾದ ಒಬ್ಬ ಬುದ್ಧಿವಂತನು ಮಾತ್ರ ಮಾಡಬಹುದಾದ ಕಾರ್ಯವಿದು. ರಕ್ತಕ್ಕೆ ಇಂತಹ ವಿವೇಕವೂ ಬುದ್ಧಿಶಕ್ತಿಯೂ ಇರಬಹುದೇ? ಅಥವಾ ತಮಗೆ ಬೇಕಾದ ಅನ್ನಾಂಗವನ್ನು ರಕ್ತದಿಂದ ಸೆಳೆದುಕೊಂಡು ಬೆಳೆಯುವ ತಿಳಿವಳಿಕೆ ಮೂಳೆ-ಮಾಂಸಖಂಡಗಳಿಗೆ ಇದ್ದಿರಬಹುದೆ?
ಅಸ್ಥಿಪಂಜರವೇ ಶರೀರದ ದೃಢಸ್ಥಿತಿಗೆ ಆಧಾರ. ಅದಿಲ್ಲದಿದ್ದರೆ ಶರೀರವು ಸೆಟೆದು ನಿಲ್ಲಲಾರದು. ಆದ್ದರಿಂದ ಶರೀರದೊಳಗೆ ಗಟ್ಟಿಯಾದ ಮೂಳೆಗಳನ್ನಿಟ್ಟಿರಬೇಕೆಂದು ಜಡಪ್ರಕೃತಿಗೆ ಕಲಿಸಿಕೊಟ್ಟವರು ಯಾರಿರಬಹುದು? ಕೈ, ಕಾಲು, ಸೊಂಟ, ಬೆರಳುಗಳಲ್ಲಿ ಕೀಲುಗಳನ್ನಿಡಬೇಕೆಂದೂ ಅವನ್ನು ಇಡದಿದ್ದರೆ ಮಾನವನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದೂ ಕೀಲುಗಳನ್ನು ನಿರ್ಮಿಸಿದ ಯಂತ್ರತಜ್ಞರು ಯಾರಿರಬಹುದು? ಒಂದು ವಸ್ತುವನ್ನು ಹಿಡಿದುಕೊಳ್ಳಲು ಕೈಗೆ ಐದು ಬೆರಳುಗಳು ಬೇಕೆಂದೂ ಅವುಗಳಲ್ಲಿ ನಾಲ್ಕು ಬೆರಳುಗಳಿಗೆ ಮೂರುಮೂರು ಕೀಲುಗಳು ಬೇಕೆಂದೂ ಹೆಬ್ಬೆರಳಿಗೆ ಮಾತ್ರ ಎರಡೇ ಕೀಲುಗಳು ಸಾಕೆಂದೂ ಚೌಕಾಸಿ ಮಾಡಿರುವ ಕುಶಲ ಶಿಲ್ಪಿ ಯಾರು? ಹೆಬ್ಬೆರಳು ನಾಲ್ಕು ಬೆರಳುಗಳ ಸಾಲಿನಲ್ಲಿಯೇ ಇರದೆ ದೂರಕ್ಕೆ ಪಕ್ಕದಲ್ಲಿದ್ದರೆಯೆ ಸೌಕರ್ಯವೆಂದು ಊಹಿಸಿದ ತಜ್ಞನು ಯಾರು?
ಮೃಗ–ಪಕ್ಷಿಗಳು
ಮೃಗಜಾತಿಯಲ್ಲಿ ಜಿಂಕೆ, ಆನೆ, ಎಮ್ಮೆ, ಹಸು ಮೊದಲಾದವು ಸಸ್ಯಾಹಾರಿಗಳು. ತೋಳ, ಹುಲಿ, ಸಿಂಹ ಮೊದಲಾದವು ಮಾಂಸಾಹಾರಿಗಳು. ಬೆಕ್ಕು, ನಾಯಿ ಮೊದಲಾದವು ಉಭಯಾಹಾರಿಗಳು. ಪಕ್ಷಿಗಳು ಸಾಮಾನ್ಯವಾಗಿ ಉಭಯಾಹಾರಿಗಳೆನ್ನಬಹುದು. ಅವು ಹುಳುಗಳನ್ನೂ ತಿನ್ನುತ್ತವೆ, ಕಾಳುಗಳನ್ನೂ ತಿನ್ನುತ್ತವೆ. ಡಾರ್ವಿನ್ ಮಹಾಶಯನ ವಿಕಾಸವಾದದ ಪ್ರಕಾರ ಯಾವ ಆಹಾರ ಮೊದಲು? ವಿಕಾಸಕ್ರಮದಂತೆ ಪ್ರಾಣಿಯು ಯಾವ ಆಹಾರವನ್ನು ಮುಂದೆ ಬಳಸಿಕೊಂಡಿತು? ಮನುಷ್ಯನೇನೋ ಉಭಯಾಹಾರಿಯಾಗಿದ್ದಾನೆ. ಮನುಷ್ಯನೇ ವಿಕಾಸಕ್ರಮದಲ್ಲಿ ಕಡೆಯವನೂ ಶ್ರೇಷ್ಠನೂ ಆಗಿದ್ದಾನೆ. ಮನುಷ್ಯನು ರೂಪಗೊಳ್ಳುವುದಕ್ಕೆ ಹಿಂದಿನ ಹಂತದಲ್ಲಿ ಕಪಿಯಾಗಿದ್ದನು. ಕಪಿಯು ಸಸ್ಯಾಹಾರಿ. ಮನುಷ್ಯನಿಗೆ ಮಾಂಸಾಹಾರ ಇದ್ದಕ್ಕಿದ್ದಂತೆ ಹೇಗೆ ಅಂಟಿಕೊಂಡಿತು? ಹುಲಿ, ಸಿಂಹ ಮುಂತಾದ ಹಿಂಸ್ರಜಂತುಗಳು ಪ್ರಾಣಿಗಳನ್ನು ಕೊಂದೇ ಬದುಕುತ್ತವೆ. ಸಾಯುವ ಪ್ರಸಂಗ ಬಂದರೂ ಅವು ಹುಲ್ಲನ್ನು ತಿನ್ನುವುದಿಲ್ಲ. ಪ್ರಕೃತಿಯ ವಿಕಾಸವು ಸೃಷ್ಟಿಯಲ್ಲಿಯೋ, ಲಯದಲ್ಲಿಯೋ? ಲಯದಲ್ಲಿ ವಿಕಾಸವೆನ್ನುವುದೇ ವಿರುದ್ಧವಾದ ನುಡಿ. ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿಯೇ ಹುಲಿಗಳ, ಸಿಂಹಗಳ ಸೃಷ್ಟಿಯೆನ್ನಬೇಕಾಗುತ್ತದೆ. ಆಗ ಅಹಿಂಸೆಯ ಸ್ಥಾನ ಕೃತಕವಾಗುತ್ತದೆ. ಅಹಿಂಸೆಯು ಪ್ರಕೃತಿಯ ಸಹಜಧರ್ಮವಲ್ಲವೆಂದು ಒಪ್ಪಬೇಕಾಗುತ್ತದೆ. ಅದು ತನ್ನ ಉಳಿವಿಗಾಗಿ ಮಾನವನು ನಿಯಮಿಸಿದ ಕಲ್ಪನಾವಿಲಾಸವೆಂದು ಹೇಳಬೇಕಾಗುತ್ತದೆ.
ಎತ್ತರವಿರುವ ಆನೆಗೆ ಆಹಾರವನ್ನು ತೆಗೆದುಕೊಳ್ಳಲು ಅನುವಾಗುವಂತೆ ಸೊಂಡಿಲನ್ನು ಪ್ರಕೃತಿ ನಿರ್ಮಿಸಿತು. ಕೆಳಗೆ ನೆಲದ ಮೇಲಿರುವ ಆಹಾರವನ್ನೂ ಮರದ ಮೇಲಿರುವ ಎಲೆಗಳನ್ನೂ ತಿನ್ನಲು ಆನೆಗೆ ಅನುಕೂಲವಾಯಿತು. ಒಂಟೆಗೆ ಮಾತ್ರ ಸೊಂಡಿಲಿಗೆ ಬದಲಾಗಿ ಉದ್ದನೆಯ ಕತ್ತನ್ನು ನೀಡಲಾಯಿತು. ಆದರೆ ನೆಲದ ಮೇಲಿರುವುದನ್ನು ಅದು ತಿನ್ನಲಾರದು. ತಿನ್ನದೇ ಇರಲೆಂದೇ ಪ್ರಕೃತಿ ಆಲೋಚಿಸಿರಬಹುದು. ಕೊಕ್ಕರೆಯ ಕಾಲು ಉದ್ದವಾದ್ದರಿಂದ ಮೀನನ್ನು ತಿನ್ನಲು ಅನುಕೂಲವಾಗಲೆಂದು ನೀಳವಾದ ಕತ್ತು ಬೇಕಾಯಿತು. ಆದರೆ ಕಾಲನ್ನು ಉದ್ದ ಮಾಡಿ ಕತ್ತನ್ನೇಕೆ ನೀಳವಾಗಿ ಇರಿಸಬೇಕು? ಅದು ಕಾಗೆಯ ಕಾಲಿನಷ್ಟು ಉದ್ದವಾಗಿದ್ದರೆ ಸಾಕಾಗಿತ್ತು. ಕತ್ತನ್ನು ನೀಳವಾಗಿ ಮಾಡಬೇಕಾದ ಶ್ರಮ ಬರುತ್ತಿರಲಿಲ್ಲ! ‘ಪ್ರಕ್ಷಾಲನಾದ್ಧಿ ಪಂಕಸ್ಯ ದೂರಾದಸ್ಪರ್ಶನಂ ವರಂ’ ಎಂಬುದು ಪ್ರಕೃತಿಗೆ ತಿಳಿಯದೇ ಹೋಯಿತಲ್ಲ – ಎಂದು ನನ್ನ ಚಿಂತೆ.
ಎತ್ತಿಗೆ ಕೋಡು ಮೂಡಿರುವುದು ಆತ್ಮರಕ್ಷಣೆಗಾಗಿ ಪ್ರಕೃತಿಯು ಕೊಟ್ಟ ವರವೆಂದು ಒಬ್ಬ ಮೇಧಾವಿಗಳಾದ ಪ್ರಕೃತಿಶಾಸ್ತ್ರಜ್ಞರು ಬರೆದಿದ್ದರು. ಆದರೆ ಕುದುರೆಗೇಕೆ ಕೋಡು ಇಲ್ಲ ಎಂದು ನನ್ನ ಚಿಂತನ. ಎಮ್ಮೆಗೆ ಕೋಡು ಇದ್ದರೂ ಹಿಂದಕ್ಕೆ ಬಾಗಿ ಆತ್ಮರಕ್ಷಣೆಗೆ ಸಮರ್ಥವಾಗದೆ ಹೋಗಿದೆಯಲ್ಲ ಎಂದು ನನಗೆ ಆಲೋಚನೆ ಹುಟ್ಟುತ್ತದೆ. ಅದು ಸಾಕುಪ್ರಾಣಿಯಾದ್ದರಿಂದ ತನ್ನ ರಕ್ಷಣೆ ಬೇಕಾಗದೆ ಹೋಯಿತು. ಮನುಷ್ಯನು ಅದನ್ನು ಪಳಗಿಸಿ ಸಾಕಲಾರಂಭಿಸಿದ ಮೇಲೆ ಕೋಡುಗಳು ಹಿಂದಕ್ಕೆ ಸರಿದವು ಎಂದು ಸಮಾಧಾನಪಟ್ಟುಕೊಳ್ಳುತ್ತೇನೆ. ಮರುಕ್ಷಣದಲ್ಲಿ ಜಿಂಕೆಗೆ ಕವಲುಕವಲಾದ ಕೊಂಬು ಏಕಿರಬಹುದು ಎಂದು ಚಿಂತನ ಪ್ರಾರಂಭವಾಗುತ್ತದೆ. ತನ್ನ ರಕ್ಷಣೆ ಇರಲಿ, ಹುಲಿಯಿಂದ ತನ್ನ ಭಕ್ಷಣೆಗೇ ಕವಲುಕೊಂಬು ಸಹಕಾರಿಯಾಗಿದೆ. ಕಾಡಿನಲ್ಲಿ ಓಡುವಾಗ ಪೊದೆಗಳಲ್ಲಿ ಸಿಕ್ಕಿಕೊಂಡು ಸುಲಭವಾಗಿ ಹುಲಿಯ ಬಾಯಿಗೆ ತುತ್ತಾಗಬಹುದು. ಅಲಂಕಾರಕ್ಕಾಗಿ ಆ ಬಗೆಯ ಕೊಂಬು ಇದೆಯೆನ್ನುವುದಾದರೆ ಹೆಣ್ಣುಜಿಂಕೆಗೆ ಏಕೆ ಇಲ್ಲ? ಅದಕ್ಕೆ ಅಲಂಕಾರ ಬೇಡವೆ? – ಎಂಬ ಶಂಕೆ ಅಡ್ಡಲಾಗುತ್ತದೆ. ಅಲ್ಲದೆ ಆ ಕೊಂಬು ಉದುರಿ ಮತ್ತೆ ಹುಟ್ಟುತ್ತದೆ. ಅದಕ್ಕೆ ಕಾರಣವೂ ತಿಳಿಯದು. ಕೋಣನ ಕೊಂಬು ಹಾಗೆ ಉದುರಿ ಹುಟ್ಟುವುದಿಲ್ಲ.
ಕೋಳಿಗಳನ್ನು ಮಾನವನು ಸಾಕಲಾರಂಭಿಸಿದ ಮೇಲೆ ಅವುಗಳಿಗೆ ಹಾರುವ ಅವಕಾಶ ತಪ್ಪಿದ್ದರಿಂದ ಕಾಗೆಗಳಂತೆ ಹಾರಾಡುವ ಶಕ್ತಿಯು ಹೋಗಿಬಿಟ್ಟಿತೆಂದು ಒಂದು ಪ್ರಬಂಧದಲ್ಲಿ ಓದಿದ್ದೇನೆ. ಕಾಡುಕೋಳಿಗಳಿಗೂ ನವಿಲುಗಳಿಗೂ ಆಕಾಶದಲ್ಲಿ ಹಾರಾಡುವ ಶಕ್ತಿಯು ಹೇಗೆ ಹೋಗಿಬಿಟ್ಟಿತೆಂಬುದನ್ನು ಅವರು ವಿವರಿಸಿರಲಿಲ್ಲ. ಸರ್ಪಗಳಿಗೆ ಆತ್ಮರಕ್ಷಣೆಗಾಗಿ ಹಲ್ಲಿನಲ್ಲಿ ವಿಷವಿದೆಯಂತೆ. ವಿಷವಿಲ್ಲದ ಹಾವುಗಳು ಹೇಗೆ ಆತ್ಮರಕ್ಷಣೆ ಮಾಡಿಕೊಳ್ಳುತ್ತವೆಯೋ ತಿಳಿಯದು. ರೇಷ್ಮೆಹುಳುಗಳು ತಮ್ಮ ರಕ್ಷಣೆಗಾಗಿ ಗೂಡು ಕಟ್ಟಿಕೊಳ್ಳುತ್ತವೆ. ರೆಕ್ಕೆ ಬಂದ ಮೇಲೆ ಹಾರಿ ಹೋಗಬಹುದು. ಅಲ್ಲಿಯವರೆಗೆ ತಮ್ಮನ್ನು ಘಾತಕರಿಂದ ಕಾಪಾಡಿಕೊಳ್ಳುವುದಕ್ಕಾಗಿ ರೇಷ್ಮೆಗೂಡುಗಳನ್ನು ನಿರ್ಮಾಣ ಮಾಡುತ್ತವೆಯೆಂದು ಒಬ್ಬ ಪ್ರಕೃತಿವಿಜ್ಞಾನಿ ಹೇಳಿದ್ದಾರೆ. ಆದರೆ ರೇಷ್ಮೆಗೂಡುಗಳೇ ರೇಷ್ಮೆಹುಳುಗಳಿಗೆ ಮಾರಕವಾಗಿ ಪರಿಣಮಿಸಿವೆಯಲ್ಲ! ಮನುಷ್ಯನು ದಿನವೂ ಕೋಟಿಗಟ್ಟಲೆ ಹುಳುಗಳನ್ನು ರೇಷ್ಮೆಗಾಗಿ ಜೀವಂತ ಬೇಯಿಸುತ್ತಿದ್ದಾನೆ. ದಡ್ಡ ಹುಳುಗಳು! ಇನ್ನಾದರೂ ಗೂಡು ಕಟ್ಟುವುದನ್ನು ಬಿಡಬಾರದೆ – ಎಂದು ನನಗೆ ಚಿಂತೆ ಹುಟ್ಟುತ್ತದೆ. ಅಥವಾ ಕಂಬಳಿಹುಳುಗಳಂತೆ ಮನುಷ್ಯನಿಗೆ ಉಪಯೋಗಕ್ಕೆ ಬಾರದ ಗೂಡುಗಳನ್ನಾದರೂ ನಿರ್ಮಿಸಿಕೊಳ್ಳಬಾರದೆ ಎನ್ನಿಸುತ್ತದೆ.
ಜೇಡರ ಹುಳುವಿಗೆ ಬಲೆ ನೆಯುವುದನ್ನು, ಗೀಜಗ ಹಕ್ಕಿಗೆ ಜಾಣ್ಮೆಯಿಂದ ಗೂಡನ್ನು ಕಟ್ಟಿಕೊಳ್ಳುವುದನ್ನು ಯಾರು ಹೇಳಿಕೊಟ್ಟಿರಬಹುದು – ಎಂದು ನನ್ನ ಚಿಂತನ ಮುಂದುವರಿಯುತ್ತದೆ. ಇತರ ಹಕ್ಕಿಗಳಿಗಿಲ್ಲದ ಜಾಣ್ಮೆ ಗೀಜಗಕ್ಕೆ ಹೇಗೆ ಬಂದಿರಬಹುದು? ವಿಕಾಸವಾದದ ಪ್ರಕಾರ ಪಕ್ಷಿಜಾತಿಗಳಲ್ಲಿ ಗೀಜಗವೇ ಮುಂದುವರಿದ ಹಕ್ಕಿಯಾಗಿರಬೇಕು ಎಂದು ಸಮಾಧಾನಪಟ್ಟುಕೊಳ್ಳುತ್ತೇನೆ. ಮನೆ ಕಟ್ಟುವ ಜಾಣ್ಮೆಯೇ ಹಾಗೆಯೇ ವಿಕಾಸವಾಗುತ್ತ ಮನುಷ್ಯಜನ್ಮದಲ್ಲಿ ಪೂರ್ಣ ವಿಕಸಿತವಾಯಿತೆಂದು ಸಂತೋಷವಾಗುತ್ತದೆ. ಅಷ್ಟರಲ್ಲಿ ಇನ್ನೊಂದು ಚಿಂತೆ ಹುಟ್ಟಿ, ಆ ಮನೆ ಕಟ್ಟುವ ಜಾಣ್ಮೆ ಹಿಂದಿನ ಕೋತಿಯ ಜನ್ಮದಲ್ಲಿ ಅದೇಕೆ ಪೂರ್ಣವಾಗಿ ಮರೆತುಹೋಗಿತ್ತೆಂದು ಮನಸ್ಸಿಗೆ ವಿಷಾದವಾಗುತ್ತದೆ. ಕೀಟಗಳಲ್ಲಿ ಇರುವೆ ಅತ್ಯಂತ ಬುದ್ಧಿಶಾಲಿಯೆಂದು ಕೀಟಶಾಸ್ತ್ರಜ್ಞರು ಹೇಳಿದ್ದಾರೆ. ಹಾಗೆಯೇ ಜೇನುಹುಳುವೂ ಬುದ್ಧಿಶಾಲಿಯೆಂದು ಗೊತ್ತಾಗಿದೆ. ‘ಬರುಬರುತ್ತ ಅಗಸನ ಕುದುರೆಗೆ ಕಿವಿ ಉದ್ದವಾಯಿತು’ ಎಂಬ ಗಾದೆಯಂತೆ ಮುಂದಿನ ನಾನಾ ವಿಕಾಸಸ್ಥಿತಿಗಳಲ್ಲಿ ಆ ಬುದ್ಧಿಶಕ್ತಿ ಎಲ್ಲಿ ಹೋಯಿತೆಂದು ನನ್ನ ಬುದ್ಧಿಗೆ ಮಂಕು ಬಡಿಯುತ್ತದೆ. ಪಶುಗಳಲ್ಲಿ ಕೆಲವು ಪಶುಗಳ ಬಾಯೊಳಗೆ ಎರಡು ಸಾಲುಗಳಲ್ಲಿಯೂ ಹಲ್ಲುಗಳಿವೆ, ಕೆಲವಕ್ಕೆ ಕೆಳಸಾಲಿನಲ್ಲಿ ಮಾತ್ರ ಹಲ್ಲುಗಳಿವೆ. ಕೆಲವು ಪಶುಗಳ ಕಾಲಲ್ಲಿ ಸೀಳಿದ ಗೊರಸುಗಳಿರುತ್ತವೆ. ಕೆಲವಕ್ಕೆ ಸೀಳಿಲ್ಲ. ಕೆಲವು ಪಶುಗಳು ಮೆಲುಕು ಹಾಕುತ್ತವೆ. ಕೆಲವು ಹಾಕುವುದಿಲ್ಲ. ಮೆಲುಕು ಹಾಕುವ ಪ್ರಾಣಿಗಳ ಹೊಟ್ಟೆಯ ರಚನೆಯೇ ಬೇರೆ ವಿಧ ಎಂದು ಕೇಳಿದ್ದೇನೆ. ಪಶುಗಳ ಈ ಅವಸ್ಥೆಯಲ್ಲಿ ಯಾವುದು ಹಿಂದುಳಿದದ್ದು, ಯಾವುದು ಸುಧಾರಿಸಿದ್ದು ಎಂಬ ಚಿಂತೆ ಆಗಾಗ ಬಾಧಿಸುತ್ತದೆ. ಉತ್ತರ ಹೊಳೆಯುವುದಿಲ್ಲ.
ಕಪಿಯು ಕಾಲಾಂತರದಲ್ಲಿ ಮನುಷ್ಯನಾದನಷ್ಟೆ. ಮನುಷ್ಯನಾದಾಗ ಆರಂಭದ ಸ್ಥಿತಿಯಲ್ಲಿ ಆತನಿಗೆ ಮೈತುಂಬ ಕಪಿಗಿರುವಂತೆ ಕೂದಲುಗಳಿದ್ದವು. ಅವನು ನಾಗರಿಕನಾಗಿ ಮುಂದುವರಿದ ಮೇಲೆ ವಸ್ತçಗಳನ್ನುಡಲು ಕಲಿತುಕೊಂಡನು. ಚಳಿಗಾಳಿಗಳಿಂದ ರಕ್ಷಣೆಗಾಗಿ ಕೂದಲು ಬೇಕು. ವಸ್ತ್ರಗಳನ್ನು ಧರಿಸತೊಡಗಿದ ಮೇಲೆ ಅನಾವಶ್ಯಕವಾದ್ದರಿಂದ ಮೈಮೇಲೆ ಬೆಳೆಯುವ ಕೂದಲು ಅದೃಶ್ಯವಾಗುತ್ತ ಬಂದಿತು – ಎಂದು ಒಬ್ಬ ವಿಕಾಸವಾದಿ ಹೇಳಿದರು. ಸರಿಯಾದ ಊಹೆ ಎಂದು ನಾನವರಿಗೆ ಹೇಳಿದ್ದೆ. ಒಂದು ದಿನ ನನ್ನ ಚಿಂತನ ನಡೆಯುತ್ತಿರುವಾಗ ಒಂದು ಶಂಕೆ ತಲೆದೋರಿತು. ಮನುಷ್ಯನಿಗೆ ತಲೆಯ ಮೇಲೆ ದಟ್ಟವಾಗಿ ಕೂದಲಿರುವ ಕಾರಣವೇನು? – ಎಂದು ವಿಚಾರ ಮಾಡುತ್ತ, ‘ಈತನಿಗೆ ತಲೆಯಲ್ಲಿ ಅಮೂಲ್ಯವಾದ ಮಿದುಳು ಇದೆ. ಇದರ ರಕ್ಷಣೆಗಾಗಿ ಕೂದಲು ಉಳಿದುಕೊಂಡಿದೆ’ ಎಂದು ಊಹಿಸಿದೆ. ಹಾಗಾದರೆ ಅಷ್ಟು ಉದ್ದ ಏಕೆ ಬೆಳೆಯಬೇಕು? ಹೆಚ್ಚೆಂದರೆ ನಾಲ್ಕು ಅಂಗುಲ ಬೆಳೆದರೆ ಸಾಕಾಗಿತ್ತು, ಕ್ಷೌರ ಮಾಡಿಸುವ ತಾಪತ್ರಯ ತಪ್ಪುತ್ತಿತ್ತು – ಎಂದು ನಿಟ್ಟುಸಿರು ಹೊರಟಿತು. ಅದರ ಹಿಂದುಗೂಡಿ ಇನ್ನೊಂದು ಪ್ರಶ್ನೆ ತಲೆದೋರಿತು. “ಮುಖದಲ್ಲಿ ಈ ಗಡ್ಡಮೀಸೆಗಳೇಕೆ?” – ಎಂದು. ಅದು ಪಳೆಯುಳಿಕೆಯಾಗಿರಬಹುದು ಎಂದುಕೊಂಡೆ.
ಹಾಗಾದರೆ ಹೆಂಗಸರಿಗೇಕೆ ಗಡ್ಡಮೀಸೆಗಳಿಲ್ಲ? – ಎಂಬ ಪ್ರಶ್ನೆ ಈಗ ಹುಟ್ಟಿಕೊಂಡಿತು. ಆಮೇಲೆ “ಹೆಂಗಸರು ಗಂಡಸರಿಗಿAತ ವಿಕಾಸಕ್ರಮದಲ್ಲಿ ಪ್ರಗತಿ ಹೊಂದಿದವರು. ಅವರಷ್ಟು ಪ್ರಗತಿಶೀಲರಾದ ಮೇಲೆ ಗಂಡಸರ ಗಡ್ಡಮೀಸೆಗಳೂ ಉದುರಿಹೋಗುತ್ತವೆ” ಎಂದು ಸಮಾಧಾನಪಡಿಸಿಕೊಂಡೆನು. “ಗಂಡಸರನ್ನೂ ಹೆಂಗಸರನ್ನೂ ಗುರುತಿಸಲು ಸೌಕರ್ಯವಾಗುವಂತೆ ಪ್ರಕೃತಿಯೇ ನಿರ್ಮಿಸಿದ ಏರ್ಪಾಡು ಗಡ್ಡಮೀಸೆ!” ಎಂದು ನನ್ನ ಸ್ನೇಹಿತರು ಹೇಳಿದರು. “ಹಾಗಿದ್ದರೆ ಕಂಕುಳು, ಎದೆಗಳ ಮೇಲಿನ ಕೂದಲಿನ ಪ್ರಯೋಜನವೇನು?” – ಎಂಬ ಪ್ರಶ್ನೆಗೆ ಅವರು ಉತ್ತರ ಹೇಳಲಿಲ್ಲ.
ಮರಗಿಡಬಳ್ಳಿಗಳು
ಮರ-ಗಿಡ-ಬಳ್ಳಿಗಳ ವಿಲಕ್ಷಣ ಸ್ವಭಾವವನ್ನು ಕುರಿತು ಚಿಂತನ ಮಾಡುವಾಗ ನನ್ನನ್ನು ನಾನೇ ಮರೆತುಬಿಡುತ್ತೇನೆ. ಮಾವು, ಹುಣಸೆ ಮೊದಲಾದ ಮರಗಳಿಗೆ ಕೊಂಬೆಗಳಿರುತ್ತವೆ. ಅಡಿಕೆ, ತೆಂಗು ಮೊದಲಾದವುಗಳಿಗೆ ಕೊಂಬೆಗಳಿಲ್ಲ. ಇದಕ್ಕೆ ಕಾರಣವೇನಿರಬಹುದು? ವಿಜ್ಞಾನಿಗಳು ಯಾವ ಕಾರಣವನ್ನು ಕಂಡುಹಿಡಿದಿದ್ದಾರೋ ಗೊತ್ತಿಲ್ಲ. ಹಲವರನ್ನು ವಿಚಾರಿಸಿದಾಗ ಉತ್ತರ ಸಿಗಲಿಲ್ಲ. ಬಾಳೆಮರ ಫಲವನ್ನು ಕೊಟ್ಟಮೇಲೆ ಸತ್ತುಹೋಗುತ್ತದೆ. ಅದು ಅಡಿಕೆಮರದಂತೆ ಮತ್ತೆ ಮತ್ತೆ ಏಕೆ ಫಲವನ್ನು ಕೊಡುವುದಿಲ್ಲ? ಒಂದೇ ನೆಲದಲ್ಲಿ ಬೆಳೆದ ಮೆಣಸಿನ ಗಿಡದ ಕಾಯಿ ಖಾರವಾಗಿರುತ್ತದೆ, ನಿಂಬೆ ಹುಳಿಯಾಗಿರುತ್ತದೆ, ಹಾಗಲಕಾಯಿ ಕಹಿ. ಈ ವೈಲಕ್ಷಣ್ಯಕ್ಕೆ ನಿಮಿತ್ತವೇನು? ಮಣ್ಣು, ನೀರು, ಗಾಳಿ ಇವು ಮೂರೇ ಈ ಗಿಡಗಳ ಆಹಾರ. ಈ ಆಹಾರದಲ್ಲಿ ಭಿನ್ನಭಿನ್ನ ರುಚಿಗಳನ್ನು ಹುಟ್ಟಿಸುವ ಮೂಲವಸ್ತುಗಳು ಯಾವುವು? ಆ ವಸ್ತುಗಳನ್ನು ಆಯಾ ಗಿಡಗಳು ಪ್ರತ್ಯೇಕಿಸಿ ಸೇವಿಸುತ್ತವೆಯೇ? ಮಣ್ಣು, ನೀರು, ಗಾಳಿ ಈ ಮೂರರಿಂದ ಸಿಹಿ, ಕಹಿ, ಹುಳಿ, ಒಗರು, ಖಾರದ ವಸ್ತುಗಳನ್ನು ವಿಜ್ಞಾನಿಗಳು ತಯಾರಿಸಬಲ್ಲರೇ? – ಇಂತಹ ಪ್ರಶ್ನೆಗಳು ಮೂಡಿದ ಹಾಗೆಯೇ ನಶಿಸಿಹೋಗುತ್ತವೆ. ನಾನಾ ಬಗೆಯ ಆಕೃತಿಯನ್ನೂ ವಿವಿಧ ಬಣ್ಣಗಳನ್ನೂ ಬಗೆಬಗೆಯ ಪರಿಮಳಗಳನ್ನೂ ಬೀರುವ ಹೂಗಳನ್ನು ನಿರ್ಮಿಸುವ ಶಕ್ತಿ ಬಳ್ಳಿಗಳಿಗೆ ಹೇಗೆ ಬರುತ್ತದೆ? ಶ್ರೀಗಂಧದ ಮರ ಸುಗಂಧವಾಗಿರುವುದಷ್ಟೆ; ಅದಕ್ಕಾಗಿ ಆ ಮರವು ಸೇವಿಸುವ ವಿಶಿಷ್ಟ ಆಹಾರ ಯಾವುದು? ನೀರುಳ್ಳಿ, ಆಲೂಗಡ್ಡೆ ಮೊದಲಾದವು ನೆಲದೊಳಗೆ ಫಲವನ್ನು ಕೊಟ್ಟರೆ ಮಾವು, ಕಿತ್ತಳೆ ಮೊದಲಾದವು ಮೇಲೆ ಕೊಂಬೆಗಳಲ್ಲಿ ಫಲವನ್ನು ನೀಡುತ್ತವೆ. ಹಲಸು ಕಾಂಡದಲ್ಲಿ ಸಹ ಫಲವನ್ನು ಕೊಡುತ್ತದೆ. ಹಲಸಿನ ಹಣ್ಣಿನಲ್ಲಿ ತೊಳೆಗಳಿದ್ದರೆ ಮಾವಿನಹಣ್ಣಿನಲ್ಲಿ ಇಲ್ಲ. ಮಾವಿನಹಣ್ಣಿನಲ್ಲಿ ಗರಟೆ ಇದ್ದರೆ ಬಾಳೆಹಣ್ಣಿನಲ್ಲಿ ಇಲ್ಲ. ಬಾಳೆಹಣ್ಣಿನಲ್ಲಿ ಸಿಪ್ಪೆ ಇದ್ದರೆ ಖರ್ಜೂರಕ್ಕೆ ಇಲ್ಲ. ಇದಕ್ಕೆಲ್ಲ ನಿಯಾಮಕವಾದದ್ದು ಯಾವುದು? ಚಿಕ್ಕ ಆಲದ ಬೀಜದಲ್ಲಿ ವಟವೃಕ್ಷವೆಂಬ ಹೆಮ್ಮರವನ್ನು, ದಪ್ಪವಾದ ತೆಂಗಿನಕಾಯಿಯಲ್ಲಿ ದಂಡಾಕಾರದ ಚಿಕ್ಕಮರವನ್ನೂ ಬೆಳೆಸುವ ವಿಚಿತ್ರ ಶಕ್ತಿಯ ರಹಸ್ಯವೇನಿರಬಹುದು?
ವಿಶ್ವದ ವೈಚಿತ್ರ್ಯ!
ಈ ನಮ್ಮ ಪ್ರಪಂಚ ಹುಟ್ಟುವ ಮೊದಲು ಗಗನದಲ್ಲಿ ಸಣ್ಣಸಣ್ಣ ಅಸಂಖ್ಯಾತ ಕಣಗಳು ಹಾರಾಡುತ್ತಿದ್ದವೆಂದೂ ಯಾವುದೊ ಒಂದು ಕಾಲದಲ್ಲಿ ಆ ಕಣಗಳು ಒಟ್ಟಾಗಿ ಸೇರಿ ಭೂಗೋಳವಾಯಿತೆಂದೂ ಪುಸ್ತಕಗಳಲ್ಲಿ ಓದಿದ್ದುಂಟು. ಈ ಭೂಮಿ ಮೊದಲು ಸಾವಿರಾರು ವರ್ಷಗಳವರೆಗೆ ತುಂಬ ಬಿಸಿಯಾಗಿದ್ದು ಆಮೇಲೆ ಆರಿತಂತೆ. ಅನಂತರ ಸಸ್ಯಗಳೂ ಕ್ರಿಮಿಗಳೂ ಹುಟ್ಟುತ್ತ ಕ್ರಮವಾಗಿ ಈ ಪ್ರಪಂಚ ನಿರ್ಮಿತವಾಗಿದೆ ಎಂದು ಓದಿದ್ದೇನೆ. ನನಗೆ ಹುಟ್ಟುವ ಚಿಂತನವೇನೆಂದರೆ, ಅಸಂಖ್ಯಾತ ಕಣಗಳು ಹಾರಾಡುತ್ತಿದ್ದಾಗ ಅವು ಒಟ್ಟಾಗಿ ಸೇರಲು ನಿಮಿತ್ತವೇನು? ಯಾವ ಶಕ್ತಿ ಅವನ್ನು ಒಟ್ಟುಗೂಡಿಸಿತು? ಸುಡುವ ನೆಲದ ಮೇಲೆ ನೀರು ಎಲ್ಲಿಂದ ಬಂದು ನೆಲಸಿ ಮಹಾಸಾಗರಗಳಾದವು? ಭೂಮಿಯು ಸೂರ್ಯನ ಸುತ್ತ ಸುತ್ತುವುದಕ್ಕೆ ಮೊದಲನೆಯ ಚಾಲನೆ ದೊರಕಿದ್ದು ಹೇಗೆ? ನಿಯತಕಾಲದಲ್ಲಿ ಬೇಸಿಗೆ ಮಳೆಗಾಲಗಳು ಬರುವಂತೆ ಗೊತ್ತು ಮಾಡಿದವರಾರು? ಸಮುದ್ರದ ನೀರು ಆವಿಯಾಗಿ ಮೇಲೇರಿ ಮೋಡದ ರೂಪದಲ್ಲಿ ಸುತ್ತಾಡಿ ಮಳೆ ಸುರಿಸಬೇಕೆಂದು ಜಡವಾದ ಪ್ರಕೃತಿಯು ನಿಯಮ ಮಾಡುವುದೆಂದು ಹೇಳಲಾದೀತೆ? ಮಳೆ ಸುರಿಸಿದರೆ ಸಸ್ಯಗಳು ಬೆಳೆಯುತ್ತವೆ, ಪ್ರಾಣಿಗಳು ಉಳಿಯುತ್ತವೆ ಎಂದು ಪ್ರಕೃತಿ ತಿಳಿದುಕೊಳ್ಳಬಲ್ಲದೆ?
ಸೂರ್ಯನು ಕೋಟಿ ಕೋಟಿ ವರ್ಷಗಳಿಂದ ಬೆಳಗುತ್ತಲೇ ಇದ್ದಾನೆ. ಸರ್ವದಾ ಅತ್ಯುಗ್ರವಾದ ಜ್ವಾಲೆಯ ಅಲೆಗಳನ್ನು ಹೊಮ್ಮಿಸುತ್ತಲೇ ಇದ್ದಾನೆ. ಇಷ್ಟು ಪ್ರಕಾಶಮಾನವಾಗಿ ಉರಿಯಲು ಸೂರ್ಯನಲ್ಲಿರುವ ಇಂಧನವಿಶೇಷ ಯಾವುದು? ಇಂಧನವಿಲ್ಲದೆ ಬೆಂಕಿ ಕ್ಷಣಮಾತ್ರವೂ ಇರಲಾರದು. ಸಮಾಪ್ತಿಯೇ ಇಲ್ಲದಂತೆ ಈ ಪ್ರಕಾರ ಪ್ರಜ್ವಲಿಸುವುದಕ್ಕೆ ಇಂಧನವಿಲ್ಲದೆ ಎಂದಿಗೂ ಶಕ್ಯವಿಲ್ಲವಷ್ಟೆ. ಕೋಟಿ ಕೋಟಿ ವರ್ಷಗಳಾದರೂ ಮುಗಿಯದಂತಹ ಆ ಇಂಧನ ಯಾವುದು? ಕ್ಲುಪ್ತ ಕಾಲದಲ್ಲಿ ಸೂರ್ಯಚಂದ್ರರ ಉದಯಾಸ್ತಗಳನ್ನು ಕ್ರಮಬದ್ಧವಾಗಿ ನಿಯಮಿಸುವ ಶಾಸಕನು ಯಾರು? ರಾತ್ರಿಯಲ್ಲಿ ತಲೆಯೆತ್ತಿ ನೋಡಿದರೆ ಲೆಕ್ಕವಿಲ್ಲದಷ್ಟು ತಾರಾಪುಂಜಗಳು ಗೋಚರಿಸುತ್ತವೆ. ಅವು ಮಿನುಮಿನುಗುತ್ತಲೇ ಕಾಲ ಕಳೆಯುವುದರ ಉದ್ದೇಶವೇನು?
ಮಾತಾಡುವ ಶಕ್ತಿ ಇಲ್ಲದಿದ್ದರೆ ಮನುಷ್ಯನ ಜ್ಞಾನಶಕ್ತಿ ಪಶುವಿಗೆ ಸಮಾನವಾಗಿರುತ್ತಿತ್ತು. ನಾವು ಬಾಯಾಡಿಸಿದರೆ ನಾನಾ ಬಗೆಯ ವರ್ಣಗಳೂ ಶಬ್ದಗಳೂ ಉಂಟಾಗಿ ನಮ್ಮ ಅಭಿಪ್ರಾಯವು ಇನ್ನೊಬ್ಬರಿಗೆ ತಿಳಿಯುತ್ತದೆ. ಭಾಷೆಯನ್ನು ಮನುಷ್ಯನೇ ರಚಿಸಿಕೊಂಡನೆಂದು ಒಪ್ಪೋಣ. ಆದರೆ ವಿವಿಧ ವರ್ಣದ ಶಬ್ದಗಳು ಏಕೆ ಹುಟ್ಟಬೇಕು? ಅವು ಎಲ್ಲೆಡೆಯೂ ವಿಸ್ತರಿಸಿ ಇನ್ನೊಬ್ಬರಿಗೆ ಏಕೆ ತಿಳಿಯಬೇಕು? – ಎನ್ನುವುದು ನನಗಿರುವ ಬಹು ದೊಡ್ಡ ಸಮಸ್ಯೆ.
* * *
ಮೇಲಿನವು ನನ್ನ ಚಿಂತನೆಯ ಸ್ಥೂಲವಾದ ರೂಪರೇಖೆಗಳು. ಇವನ್ನು ವಿಸ್ತರಿಸಿದರೆ ಒಂದು ದೊಡ್ಡ ಗ್ರಂಥವೇ ಆದೀತು. ಇವೆಲ್ಲವೂ ಉತ್ತರವನ್ನು ಕಂಡುಕೊಳ್ಳಲಾರದ ಸಮಸ್ಯೆಗಳೇ! ಕಡೆಗೆ ಈ ಲೇಖನದ ಆರಂಭದಲ್ಲಿ ಹೇಳಿದ ಶ್ಲೋಕವೇ ನೆನಪಾಗಿ ಆ ಸಮಯದ ಚಿಂತನ ಮುಗಿಯುತ್ತದೆ! ಹೀಗೆ ಹಾರಾಡುತ್ತಿದ್ದ ಮನಸ್ಸು –
ಋಷಯಃ ಪಿತರೋ ದೇವಾ ಮಹಾಭೂತಾನಿ ಧಾತವಃ |
ಜಂಗಮಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ ||
– ಎಂದುಕೊಂಡು ಆ ಸರ್ವಜ್ಞನಲ್ಲಿ ಸರ್ವಶಕ್ತನಲ್ಲಿ ಲಯಿಸಿ ಶಾಂತವಾಗುತ್ತದೆ.
* * *
(ಕೃಪೆ: “ಭಾರತೀ” – ಶ್ರೀ ಶ್ರೀ ಕೇಶವಾನಂದ ಭಾರತೀ ಶ್ರೀಪಾದಂಗಳವರ ಪೀಠಾರೋಹಣ ರಜತಮಹೋತ್ಸವ ಸಂಸ್ಮರಣ ಗ್ರಂಥ)