ಪ್ರತಿಭಾವಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಒಮ್ಮೆ ತಾನು ತುಂಬ ಗೌರವದಿಂದ ಕಾಣುವ ಇಬ್ಬರು ಕನ್ನಡ ಸಾಹಿತಿಗಳನ್ನು ಹೆಸರಿಸಿ ಅದಕ್ಕೆ ಕಾರಣ ನೀಡಿದ್ದರು. ಶಿವರಾಮ ಕಾರಂತರ ಪ್ರಯೋಗಶೀಲತೆ ಮತ್ತು ಕುವೆಂಪು ಅವರ ಕಲಾತ್ಮಕತೆ ತಮಗಿಷ್ಟ ಎಂದು ಅವರು ಹೇಳಿದ್ದರು. ಕಾರಂತರು ಸಾಹಿತ್ಯದಲ್ಲಿ ಮಾತ್ರವಲ್ಲ; ತಮ್ಮ ಜೀವನದಲ್ಲೇ ಪ್ರಯೋಗಶೀಲತೆಯನ್ನು ಮೆರೆದವರು. ಅವರು ಕಾಲೇಜು ಮೆಟ್ಟಿಲನ್ನು ತುಳಿಯಲಿಲ್ಲ. ದೇಶ ಸುತ್ತಿದರು; ಕೋಶ ಓದಿದರು. ಯಾವುದೇ ಉದ್ಯೋಗ, ಸಂಪಾದನೆಯ ಮೂಲಕ್ಕೆ ಅಂಟಿಕೊಳ್ಳದೆ ಸ್ವಾತಂತ್ರ್ಯ ಹೋರಾಟ, ಖಾದಿಪ್ರಚಾರ, ರಂಗಭೂಮಿ, ನಾಟಕ ರಚನೆ-ನಿರ್ದೇಶನ, ಸಂಗೀತ-ನೃತ್ಯ, ಯಕ್ಷಗಾನ, ನಡುವೆ ಸಾಹಿತ್ಯರಚನೆ – ಇವುಗಳನ್ನೆಲ್ಲ ಮಾಡುತ್ತ ಬಂದರು. ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿದರು; ಮಾಡಬೇಕು ಅನಿಸಿದ್ದನ್ನು ಮಾಡುತ್ತಹೋದರು – 96ನೇ ವಯಸ್ಸಿನಲ್ಲಿ ಕಾಲಪುರುಷನಿಗೆ ಶರಣಾಗುವವರೆಗೆ.
ಆಧುನಿಕ ಕನ್ನಡ ಸಾಹಿತ್ಯದ ಬಗೆಗೆ ಹೇಳುವುದಾದರೆ ಅದರಲ್ಲಿ ಡಾ|| ಕೋಟ ಶಿವರಾಮ ಕಾರಂತರ ಹೆಸರು ಬಂದೇ ಬರುತ್ತದೆ – ಬೇಂದ್ರೆ, ಕುವೆಂಪು, ಕಾರಂತ, ಮಾಸ್ತಿ, ಡಿವಿಜಿ – ಹೀಗೆ. ಈ ಮೊದಲಿಗರಲ್ಲಿ ಕಾರಂತರ ವೈಶಿಷ್ಟ್ಯವನ್ನು ಹೇಳುವುದಾದರೆ ಅವರು ಗುಣಮಟ್ಟ ಮತ್ತು ಗಾತ್ರ (quality, quantity) ಎರಡನ್ನೂ ನೀಡಿದವರು. ಅವರು ಬರೆಯಲು ಆರಂಭಿಸಿದ ದಿನಗಳಲ್ಲಿ (1920-30ರ ದಶಕ) ಗುಣಮಟ್ಟದಷ್ಟೇ ಗಾತ್ರಕ್ಕೂ ಮಹತ್ತ್ವವಿತ್ತು. ಏಕೆಂದರೆ ಕನ್ನಡದಲ್ಲಿ ಪ್ರಸ್ತುತ ಅಂದು ಓದುವುದಕ್ಕೇನಿದೆ – ಎಂದು ಕೇಳಬಹುದಾಗಿದ್ದ ಕಾಲ ಅದು. ಕಥೆ, ಕಾವ್ಯ(ಕವನ), ಕಾದಂಬರಿ, ವಿಚಾರಸಾಹಿತ್ಯ ಎಲ್ಲದರಲ್ಲೂ ಹೆಚ್ಚೇನೂ ಇಲ್ಲದಿದ್ದ ಕಾಲವದು; ಎಲ್ಲವೂ ಇನ್ನಷ್ಟೇ ಬರಬೇಕು ಎಂಬಂತಿತ್ತು. ಕಾರಂತರು ಗತಿಸಿ ಈಗ ಇಪ್ಪತ್ತೈದು ವರ್ಷಗಳಾಗಿವೆ.
ಎ.ಆರ್. ಕೃಷ್ಣಶಾಸ್ತ್ರೀ ಅವರು 1919-20ರಲ್ಲಿ ಬರೆದ ‘ಕನ್ನಡ ಐತಿಹಾಸಿಕ ಕಾದಂಬರಿ’ ಮತ್ತು ‘ಮೈಸೂರು ಚರಿತ್ರೆಯ ಮೇಲಣ ಕಾದಂಬರಿಗಳಿಗೆ ಸಾಮಗ್ರಿಗಳು’ ಎಂಬ ಲೇಖನಗಳಲ್ಲಿ ಈ ಸಂಬಂಧವಾದ ಕಾಳಜಿಯನ್ನು ವ್ಯಕ್ತಪಡಿಸಿ, ಕನ್ನಡ ಸಾಹಿತ್ಯದ ಅಂದಿನ ವಿದ್ಯಮಾನವನ್ನು ಹೇಳಿದ್ದಾರೆ; ಮತ್ತು ಕಾದಂಬರಿ ಬರೆಯಲು ಯಾವೆಲ್ಲ ವಿಷಯಗಳನ್ನು ಎತ್ತಿಕೊಳ್ಳಬಹುದು ಎಂಬ ಸಲಹೆಗಳನ್ನೂ ನೀಡಿದ್ದಾರೆ. “ಕಾದಂಬರಿಯು ನಾವು ಇಂಗ್ಲಿಷ್ ಸಾಹಿತ್ಯ ಭಂಡಾರದಿಂದ ಮೆಚ್ಚಿ ತಂದ ಒಂದು ಸುಖಸಂತೋಷದಾಯಕವಾದ ವಸ್ತುವಾಗಿದೆ. ಇದು ಒಂದು ಆಧುನಿಕ ಸಾಹಿತ್ಯ ವಿಶೇಷ. ಇದನ್ನು ಕನ್ನಡದಲ್ಲಿ ಪ್ರಚಾರಕ್ಕೆ ತಂದವರು ಬಿ. ವೆಂಕಟಾಚಾರ್ಯರು. ಅವರು ಬಂಕಿಮಚಂದ್ರ ಚಟ್ಟೋಪಾಧ್ಯಾಯರೇ ಮುಂತಾದ ಬಂಗಾಳದ ಪ್ರಸಿದ್ಧ ಕಾದಂಬರಿ ಲೇಖಕರ ಗ್ರಂಥಗಳನ್ನು ಭಾಷಾಂತರ ಮಾಡಿದರು. ನಮ್ಮ ಕಡೆ (ಮೈಸೂರು ಪ್ರಾಂತದಲ್ಲಿ) ಇಷ್ಟು ಪ್ರಸಿದ್ಧರಲ್ಲದಿದ್ದರೂ ಅಷ್ಟೇ ಪ್ರಸಿದ್ಧಿಗೆ ಯೋಗ್ಯರಾದ ಮತ್ತೊಬ್ಬರು ವೆಂಕಟೇಶ ತಿರಕೋ ಕುಲಕರ್ಣಿ (ಗಳಗನಾಥ) ಅವರು. ಇವರು ಸ್ವತಂತ್ರವಾಗಿ ಗ್ರಂಥಗಳನ್ನು ಬರೆದಿದ್ದರೂ ಇವರು ಭಾಷಾಂತರ ಮಾಡಿರುವ ಗ್ರಂಥಗಳ ಬೆಲೆಯು ಅವಕ್ಕೆ (ಸ್ವಂತದ್ದಕ್ಕೆ) ಬರಲಾರದು. ಇವರ ಭಾಷಾಂತರಗಳೆಲ್ಲವೂ ಬಂಕಿಮಚಂದ್ರರಷ್ಟೇ ಸಮರ್ಥರೂ ಪ್ರಸಿದ್ಧರೂ ಆದ ಹರಿನಾರಾಯಣ ಆಪಟೆಯವರ ಕಾದಂಬರಿಗಳು” ಎಂದ ಕೃಷ್ಣಶಾಸ್ತ್ರಿಗಳು ಮುಂದುವರಿದು, “ಸ್ವತಂತ್ರ ಗ್ರಂಥಗಳಿಂದಲೇ ಭಾಷಾಸಾಹಿತ್ಯಗಳಿಗೆ ಗೌರವ. ಕನ್ನಡದಲ್ಲಿ ಸ್ವತಂತ್ರವಾಗಿ ಬರೆದ ಸಾಹಿತ್ಯವೇ ನಿಜವಾದ ಕನ್ನಡ ಸಾಹಿತ್ಯ” ಎಂದು ಭಾಷಾಂತರವಾದ ಸಾಹಿತ್ಯವನ್ನು ಅಲ್ಲಗಳೆಯುವವರನ್ನು ತರಾಟೆಗೆ ತೆಗೆದುಕೊಳ್ಳುತ್ತಾರೆ. “ಅನ್ಯಭಾಷೆಯಿಂದ ಸಾಹಿತ್ಯವನ್ನು ಅಭಿವೃದ್ಧಿಗೊಳಿಸಿಕೊಳ್ಳುವುದೆಂದರೆ ಪರರ ಮನೆಯ ಹೆಣ್ಣುಗಳನ್ನು ತಂದು ನಮ್ಮ ಮಕ್ಕಳಿಗೆ ಮದುವೆ ಮಾಡಿಕೊಳ್ಳುವ ಹಾಗೆ. ಆ ಹುಡುಗಿಯರು ಗಂಡನ ಮನೆಯಲ್ಲಿ ಬಾಳುತ್ತಿರುವವರೆಗೂ ಎರಡು ಕಡೆಗೂ ಸಂಬಂಧಪಟ್ಟವರು. ತೌರುಮನೆಯ ಸಂಬಂಧವು ಕ್ರಮೇಣ ಕಡಮೆಯಾಗುತ್ತಲೂ, ಆ ಕಡೆಯ ಪ್ರೇಮ ಬಂಧವು ಸಡಿಲಾಗುತ್ತಲೂ ಗಂಡನ ಮನೆಯ ಮೇಲಣ ಅಭಿಮಾನವು ಹೆಚ್ಚುತ್ತಲೂ ಹೋಗುವುದು. ಹೊರಗಿನಿಂದ ಬಂದ ಹುಡುಗಿಯೇ ಮುಂದೆ ಕುಲೋದ್ಧಾರಕರಾದ ಪುತ್ರರನ್ನು ಪಡೆದು ದಿನದಿನಕ್ಕೂ ಶಾಖೋಪಶಾಖೆಗಳಾಗಿ ಬೆಳೆಯುತ್ತ ಹೋಗುವ ಪತಿಯ ವಂಶವೃಕ್ಷಕ್ಕೆ ತಾಯಿಬೇರಾಗುವಳು. ‘ಸ್ತ್ರೀರತ್ನಂ ದುಷ್ಕುಲಾದಪಿ’ (ಹೆಣ್ಣು ತರುವುದಕ್ಕೆ ಕೆಟ್ಟ ಕುಲವಾದರೂ ಸರಿ) ಎಂದು ಹೇಳಿರುವ ಹಾಗೆ ಕಾವ್ಯರತ್ನಗಳನ್ನು – ಎಲ್ಲಿಂದಾದರೂ ಸರಿಯೆ – ತಂದು ನಮ್ಮ ಮನೆಗೆ ಸೇರಿಸಿಕೊಂಡರೆ ಅವುಗಳಿಂದ ಎಂದಿದ್ದರೂ ಶ್ರೇಯಸ್ಸೇ ಹೊರತು ಹೀನತೆಯಾಗಲಿ ಕೊರತೆಯಾಗಲಿ ಉಂಟಾಗಲಾರದು” ಎಂದು ಕೂಡ ಅವರು ಸಮರ್ಥಿಸಿದ್ದಾರೆ. ತಾತ್ಪರ್ಯವೆಂದರೆ, ಸ್ವಂತ ಸಾಹಿತ್ಯ ಮತ್ತು ಗ್ರಂಥಗಳ ಕೊರತೆಯಿರುವಾಗ ಅನುವಾದವಾದರೂ ಸರಿ ಎಂಬ ಸಮರ್ಥನೆ. ಹಾಗಾಗಿ ಸ್ವಂತ ಕಾವ್ಯ, ಸಾಹಿತ್ಯಕೃತಿಗಳಿಗೆ ಮೊದಲ ಸ್ಥಾನ ಇದ್ದೇ ಇದೆ. ಆ ಕಾಲದಲ್ಲಿ ಕನ್ನಡಕ್ಕೆ ಅಂತಹ ಮೊದಲ ಸ್ಥಾನದ ಸಾಹಿತ್ಯವನ್ನು ಬಹುದೊಡ್ಡ ಪ್ರಮಾಣದಲ್ಲಿ ನೀಡಿದವರು ಡಾ. ಶಿವರಾಮ ಕಾರಂತರು. ತತ್ಕಾರಣದಿಂದ ಕನ್ನಡ ಸಾಹಿತ್ಯದಲ್ಲಿ ಅವರದ್ದು ಶಾಶ್ವತ ಸ್ಥಾನ.
ಕಾದಂಬರಿಯ ವೈಶಾಲ್ಯ
ಅನಂತರದ ಮಹಾನ್ ಕಾದಂಬರಿಕಾರ ಡಾ. ಎಸ್.ಎಲ್. ಭೈರಪ್ಪ ಅವರೊಮ್ಮೆ “ಒಂದು ಭಾವಗೀತೆ ಬರೆಯುವುದಕ್ಕೆ ಏನೋ ಸ್ವಲ್ಪ ಸಾಮಗ್ರಿ (ಅನುಭವ, ಕಲ್ಪನೆ ಇತ್ಯಾದಿ) ಇದ್ದರೆ ಸಾಕು; ಆದರೆ ಕಾದಂಬರಿಗೆ ಅದೆಲ್ಲ ಸಾಕಾಗುವುದಿಲ್ಲ” ಎಂದು ಹೇಳಿದ್ದಿದೆ. ಈ ಮಾತು ಕಾರಂತರಿಗೆ ಬಹು ಚೆನ್ನಾಗಿ ಅನ್ವಯಿಸುತ್ತದೆ. ಸುಮಾರು ನಾಲ್ಕು ದಶಕಗಳಿಗೂ ಮಿಕ್ಕಿ ಅವರು ವರ್ಷಕ್ಕೊಂದರಂತೆ ಕಾದಂಬರಿ ಬರೆದವರು; ಪುಟ ಎಷ್ಟೆಂದು ಲೆಕ್ಕ ಹಾಕಿ ಬರೆದುದಲ್ಲ. ದೊಡ್ಡ ಕಾದಂಬರಿಗಳೇ ಅಧಿಕ. ವಿಶ್ವಕೋಶ ಮಾದರಿಯ ಎರಡು ಬೃಹದ್ ಗ್ರಂಥಗಳು. ಅದೆಷ್ಟೋ ನಾಟಕಗಳು ಕೂಡ ಅವರ ಲೇಖನಿಯಿಂದ ಹೊರಗೆ ಬಂದವು. ವಿವಿಧ ಕಲೆಗಳನ್ನು ಕುರಿತ ಪ್ರಬಂಧಸಂಗ್ರಹಗಳು, ಯಕ್ಷಗಾನದ ಬಗೆಗಿನ ಸಂಶೋಧನಾತ್ಮಕ ಗ್ರಂಥ, ಲೇಖನಗಳು – ಹೀಗೆ ಗಾತ್ರವನ್ನು ನೋಡುತ್ತಹೋದರೆ ಶಿವರಾಮ ಕಾರಂತರು ಅದ್ವಿತೀಯರಾಗಿ ನಿಲ್ಲುತ್ತಾರೆ ಎನ್ನಬಹುದು. ಮೊದಲೇ ಹೇಳಿದ ಹಾಗೆ ಅನುಭವವನ್ನು ಬೆಂಬತ್ತಿ ಹೋದ ಅವರ ಸಾಹಿತ್ಯ ಎಂದೂ ಹೂರಣದ ಕೊರತೆಯಿಂದ ಗುಣಮಟ್ಟದಲ್ಲಿ ಹಿಂದೆ ಬಿದ್ದದ್ದಿಲ್ಲ.
ಪ್ರತಿಭಾವಂತ ಸಾಹಿತಿ ಕೆ.ಪಿ. ಪೂರ್ಣಚಂದ್ರ ತೇಜಸ್ವಿ ಅವರು ಒಮ್ಮೆ ತಾನು ತುಂಬ ಗೌರವದಿಂದ ಕಾಣುವ ಇಬ್ಬರು ಕನ್ನಡ ಸಾಹಿತಿಗಳನ್ನು ಹೆಸರಿಸಿ ಅದಕ್ಕೆ ಕಾರಣ ನೀಡಿದ್ದರು. ಶಿವರಾಮ ಕಾರಂತರ ಪ್ರಯೋಗಶೀಲತೆ ಮತ್ತು ಕುವೆಂಪು ಅವರ ಕಲಾತ್ಮಕತೆ ತಮಗಿಷ್ಟ ಎಂದವರು ಹೇಳಿದ್ದರು. ಕುವೆಂಪು ಅವರ ತೀರ್ಥರೂಪರೂ ಹೌದು. ಕಾರಂತರಲ್ಲಿ ತೇಜಸ್ವಿ ಅವರು ಪ್ರಯೋಗಶೀಲತೆಯನ್ನು ಗುರುತಿಸಿದರೆನ್ನುವುದು ಗಮನಾರ್ಹ. ಕಾರಂತರು ಸಾಹಿತ್ಯದಲ್ಲಿ ಮಾತ್ರವಲ್ಲ; ತಮ್ಮ ಜೀವನದಲ್ಲೇ ಪ್ರಯೋಗಶೀಲತೆಯನ್ನು ಮೆರೆದವರು. ಗಾಂಧಿ ಅವರ ಅಸಹಕಾರ ಚಳವಳಿಯ ಕರೆಗೆ (1920) ಓಗೊಟ್ಟು ಕಾಲೇಜು (ಇಂಟರ್ಮೀಡಿಯೆಟ್) ಶಿಕ್ಷಣವನ್ನು ತೊರೆದ ಅವರು ಮತ್ತೆ ಕಾಲೇಜು ಮೆಟ್ಟಿಲನ್ನು ತುಳಿಯಲಿಲ್ಲ. ದೇಶ ಸುತ್ತಿದರು; ಕೋಶ ಓದಿದರು. ಯಾವುದೇ ಉದ್ಯೋಗ ಅಥವಾ ಸಂಪಾದನೆಯ ಮೂಲಕ್ಕೆ ಅಂಟಿಕೊಳ್ಳದೆ ಸ್ವಾತಂತ್ರ್ಯ ಹೋರಾಟ, ಖಾದಿಪ್ರಚಾರ, ರಂಗಭೂಮಿ, ನಾಟಕ ರಚನೆ-ನಿರ್ದೇಶನ, ಸಂಗೀತ-ನೃತ್ಯ, ಯಕ್ಷಗಾನ, ನಡುವೆ ಸಾಹಿತ್ಯರಚನೆ – ಇವುಗಳನ್ನೆಲ್ಲ ಮಾಡುತ್ತ ಬಂದರು. ಕಾಲಿಗೆ ಚಕ್ರ ಕಟ್ಟಿಕೊಂಡು ಅಲೆದಾಡಿದರು; ಮಾಡಬೇಕು ಅನಿಸಿದ್ದನ್ನು ಮಾಡುತ್ತಹೋದರು – 96ನೇ ವಯಸ್ಸಿನಲ್ಲಿ ಕಾಲಪುರುಷನಿಗೆ ಶರಣಾಗುವವರೆಗೆ. ಅವರ ಆಸಕ್ತಿಗಳು ಪ್ರಪಂಚದಗಲ ಹರಡಿಕೊಂಡಿದ್ದು, ಪರಿಣಾಮವಾಗಿ ಅವರ ಸಾಹಿತ್ಯಕೃತಿಗಳು ಒಂದು ಪ್ರಪಂಚವನ್ನೇ ನಿರ್ಮಿಸಿವೆ. 1960ರ ದಶಕದ ಕೊನೆಯ ಭಾಗದಲ್ಲಿ ಅವರಿಗೆ ಅರ್ಪಿಸಿದ ಬೃಹತ್ ಅಭಿನಂದನ ಗ್ರಂಥದ ಹೆಸರು ‘ಕಾರಂತ ಪ್ರಪಂಚ’ ಎಂದಿತ್ತು.
ಹೆಬ್ಬಾರರ ಕುಂಚದಲ್ಲಿ
ಕೆ.ಕೆ. ಹೆಬ್ಬಾರರು ರಚಿಸಿದ ಶಿವರಾಮ ಕಾರಂತರ ಚಿತ್ರದಲ್ಲಿ ಅವರು ತೊಡೆದುಹಾಕಿದ್ದ ಯಜ್ಞೋಪವೀತವನ್ನು ತೊಡಿಸಲಾಗಿದೆ ಎಂದ ಸಾಹಿತಿ ವಿ.ಎಂ. ಇನಾಂದಾರ್ ಅವರು, “ಭಾರತೀಯ ಸಂಸ್ಕøತಿಯ ಮೂಲಭೂತ ವಿಚಾರಗಳನ್ನು ಈ ವ್ಯಕ್ತಿತ್ವ ಪ್ರತಿನಿಧಿಸುತ್ತದೆ ಎಂಬ ಸೂಚನೆ ಇರಬಹುದು” ಎಂದು ಅಭಿಪ್ರಾಯಪಟ್ಟಿದ್ದರು. ಚಿತ್ರದ ಬ್ಯಾಲೆನ್ಸ್ಗಾಗಿ ಅದನ್ನು ಹಾಕಿದ್ದು ಎನ್ನುವ ಒಂದು ಕುತೂಹಲಕರ ಪ್ರತಿಕ್ರಿಯೆ ಕೂಡ ಆ ಕಾಲದಲ್ಲಿ ಬಂದಿತ್ತು.
ಸಾಮಾನ್ಯವಾಗಿ ಬರಹಗಾರರಾಗಲಿ, ಕಲಾವಿದರಾಗಲಿ ತಮ್ಮ ಕ್ಷೇತ್ರದಾಚೆಗೆ ದೃಷ್ಟಿಹರಿಸುವುದಿಲ್ಲ. ಇದಕ್ಕೆ ಕಾರಂತರು ಒಂದು ಅಪವಾದ. ಒಂದು ಹಂತದಿಂದ ಅವರಲ್ಲಿ ವಿಜ್ಞಾನ ವಿಷಯಗಳ ಆಸಕ್ತಿ ತುಂಬ ಬೆಳೆಯಿತು. ಅದರಿಂದ ಅವರಲ್ಲಿ ಬುದ್ಧಿಪ್ರಧಾನ ಮನೋವೃತ್ತಿ ವಿಶೇಷವಾಗಿ ಬೆಳೆದುಬಂತು. ಆದರೆ ಆ ಮನೋವೃತ್ತಿ ಅವರ ಕಲಾವಿದನ ಭಾವನೆ, ಸಂವೇದನೆಗಳನ್ನು ಕುಗ್ಗಿಸಲಿಲ್ಲ. ಬುದ್ಧಿ-ಭಾವ ಎರಡೂ ಸೇರಿಕೊಂಡ ಶ್ರೀಮಂತ ಸಂಯೋಗ ಅವರ ಮನಸ್ಸು. ಅಂಥ ಮನಸ್ಸು ಹತ್ತಾರು ಬಗೆಯಾಗಿ ದುಡಿದಿದೆ; ಅನ್ವೇಷಣೆ ನಡೆಸಿದೆ; ಕಲ್ಪನೆಯನ್ನು ಕಟ್ಟಿದೆ; ಭಾವನಾ ವಿಲಾಸವನ್ನು ಮೆರೆದಿದೆ; ಹಲವು ಬಗೆಯ ಸಿದ್ಧಿಯನ್ನು ತನ್ನದಾಗಿಸಿಕೊಂಡಿದೆ. ಅಷ್ಟೇ ಅಲ್ಲ; ವಯಸ್ಸು 90 ದಾಟಿದರೂ ಅವರು ಕ್ರಿಯಾಶೀಲರಾಗಿದ್ದರು. ಓದುತ್ತಿದ್ದರು, ಬರೆಯುತ್ತಿದ್ದರು. ಯಕ್ಷಗಾನ ಬ್ಯಾಲೆಗಾಗಿ ಗೆಜ್ಜೆ ಕಟ್ಟಿ ಕುಣಿಯುತ್ತಿದ್ದರು.
ಸಾಹಿತ್ಯ, ಸಂಗೀತ, ಚಿತ್ರಕಲೆ, ನೃತ್ಯ, ನಾಟಕ, ಯಕ್ಷಗಾನಗಳೆಲ್ಲವೂ ಅವರ ಆಸಕ್ತಿಯ ವಿಷಯಗಳಾದರೂ ಮೂಲತಃ ಅವರು ಬರಹಗಾರರು; ಸಾಹಿತ್ಯವೇ ಅವರ ಮುಖ್ಯ ಕಾರ್ಯಕ್ಷೇತ್ರ. ಉಳಿದ ಕ್ಷೇತ್ರಗಳ ಆಳವಾದ ಆಸಕ್ತಿ ಅವರ ಸಾಹಿತ್ಯಕಾರ್ಯವನ್ನು ಶ್ರೀಮಂತವಾಗಿಸಿತ್ತು. ಇತರ ಕ್ಷೇತ್ರಗಳತ್ತ ಕಾರಂತರು ಕೇವಲ ಕಣ್ಣು ಹಾಯಿಸಿದ್ದಲ್ಲ. ಬಹುಕಾಲ ಸಂಗೀತದ ಅಭ್ಯಾಸ ಮಾಡಿದ್ದಾರೆ. ಚಿತ್ರಗಳನ್ನು ಬಿಡಿಸಿದ್ದಾರೆ. ನಾಟಕ ಬರೆದು ನಟರಿಗೆ ತರಬೇತಿ ನೀಡಿದ್ದಾರೆ. ಸ್ವತಃ ಮೈಗೆ ಬಣ್ಣ ಬಳಿದುಕೊಂಡು ವೇದಿಕೆಯೇರಿ ಕುಣಿದಿದ್ದಾರೆ. ಮಕ್ಕಳ ಆಟಿಕೆ ತಯಾರಿಸಿದ್ದಾರೆ; ಮರ ಕೊರೆಯುವ ಯಂತ್ರವನ್ನು ರೂಪಿಸಿದ್ದಾರೆ; ಮುದ್ರಣಾಲಯ ನಡೆಸಿದ್ದಾರೆ. ರಾಜಕೀಯ, ಸಮಾಜಕಾರ್ಯ, ಗ್ರಾಮೀಣಾಭಿವೃದ್ಧಿ, ಪತ್ರಿಕೋದ್ಯಮ, ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಯೋಗ, ಪಠ್ಯಪುಸ್ತಕ ರಚನೆ, ಶಬ್ದಕೋಶ ರಚನೆ, ಎಡೆಬಿಡದ ದೇಶಸಂಚಾರ, ಮಕ್ಕಳಿಗೆ ವಿವಿಧ ವಸ್ತು-ವಿಷಯಗಳನ್ನು ಪರಿಚಯಿಸುವ ಮೂರು ಸಂಪುಟಗಳ ‘ಬಾಲಪ್ರಪಂಚ’, ವಿಜ್ಞಾನದ ಬೆಳವಣಿಗೆಯನ್ನು ಕುರಿತ ನಾಲ್ಕು ಸಂಪುಟಗಳ ‘ವಿಜ್ಞಾನ ಪ್ರಪಂಚ’ – ಇವು ಅವರ ಕೆಲವು ಸಾಹಸಗಳು. ರಂಗಭೂಮಿಯಲ್ಲಿ ನಾಟಕ, ಗೀತನಾಟಕ, ನೃತ್ಯನಾಟಕ, ಮೂಕನಾಟಕ, ಮೂಕಾಭಿನಯ, ಛಾಯಾನಾಟಕ ಇತ್ಯಾದಿ ಹಲವು ಪ್ರಯೋಗಗಳನ್ನು ನಡೆಸಿದ ಕಾರಂತರು ಮುಂದೆ ಯಕ್ಷಗಾನವನ್ನು ಎತ್ತಿಕೊಂಡು ಸಂಶೋಧನೆಯಲ್ಲದೆ ಪ್ರದರ್ಶನ ವಿಭಾಗದಲ್ಲೂ ಮೌಲಿಕ ಕೆಲಸಗಳನ್ನು ಮಾಡಿದರು. ಇಂತಹ ಎಡೆಬಿಡದ ದುಡಿಮೆಗೆ ನಿತ್ಯಕುತೂಹಲ, ತಿಳಿಯಬೇಕೆಂಬ ಹಂಬಲ, ತಿಳಿದುದನ್ನು ಉಳಿದವರಿಗೆ ತಿಳಿಸಬೇಕೆಂಬ ಆತುರಗಳೇ ಕಾರಣ. ಇದರ ಹಿಂದಿರುವುದು ಜ್ಞಾನದಾಹ, ಅನುಭವಾಕಾಂಕ್ಷೆ.
ಬಾಲ್ಯ, ಹುಟ್ಟೂರು
ಕೋಟ ಪೇಟೆಯಲ್ಲಿ ಬಟ್ಟೆ ಅಂಗಡಿ ಇಟ್ಟುಕೊಂಡಿದ್ದ ಶೇಷಕಾರಂತ ಮತ್ತು ಮಹಾಲಕ್ಷ್ಮಿ ಅಮ್ಮನವರ ನಾಲ್ಕನೇ ಮಗನಾಗಿ ಶಿವರಾಮ ಕಾರಂತರು ಅಕ್ಟೋಬರ್ 10, 1902ರಂದು ಜನಿಸಿದರು. ಹಿರಿಯ ಅಣ್ಣ ರಾಮಕೃಷ್ಣ ಕಾರಂತರು ಸ್ವಾತಂತ್ರ್ಯ ಹೋರಾಟಗಾರ, ಅವಿಭಜಿತ ಮದರಾಸು ಪ್ರಾಂತದಲ್ಲಿ ಕಂದಾಯ ಮಂತ್ರಿ ಆಗಿದ್ದು, ಮುಂದೆ ರಾಜಕೀಯ ತೊರೆದು ಹೈಕೋರ್ಟ್ ನ್ಯಾಯವಾದಿಯಾಗಿದ್ದರು. ಎರಡನೇ ಅಣ್ಣ ಕೋಟ ಲಕ್ಷ್ಮೀನಾರಾಯಣ ಕಾರಂತರು ಪ್ರೌಢಶಾಲೆ ಅಧ್ಯಾಪಕರು ಮತ್ತು ತೋಟಗಾರಿಕೆ, ನರ್ಸರಿ ನಡೆಸಿ ಅದಕ್ಕೆ ಉತ್ತಮ ಕೊಡುಗೆ ನೀಡಿದವರು. ಮೂರನೇ ಅಣ್ಣ ವಾಸುದೇವ ಕಾರಂತರು ಮದರಾಸು ಸರ್ಕಾರದಲ್ಲಿ ಉನ್ನತಹುದ್ದೆಯ ಇಂಜಿನಿಯರ್ ಆಗಿದ್ದು, ನಿವೃತ್ತಿಯ ಬಳಿಕ ಧಾರ್ಮಿಕ ಸಾಹಿತ್ಯ, ಸಂಘಟನೆಗಳಲ್ಲಿ ನಿರತರಾದರು. ಶಿವರಾಮ ಕಾರಂತರಿಗೆ ಮುಂದಿನ ಒಡಹುಟ್ಟಿದವರೂ ಇದ್ದರು.
ಕೋಟ ಪರಿಸರವು ಕಡಲಂಚಿನ ಪ್ರದೇಶವಾದರೂ ಅದು ನಿಸರ್ಗಸೌಂದರ್ಯಕ್ಕೆ ಹೊರತಾಗಿರಲಿಲ್ಲ. ಕಾರಂತರು ಒಂದೆಡೆ ಅದನ್ನು ಹೀಗೆ ನೆನಪಿಸಿಕೊಂಡಿದ್ದಾರೆ: “ನಮ್ಮ ಊರಿನ ಮೋಹಕವಾದ ತಂಪಾದ ಹಾಡಿಗಳನ್ನು ಬಿಟ್ಟರೆ ಹೆಚ್ಚಿನ ಭೂಮಿ ಸಮತಟ್ಟಾದ ಹೊಲಗದ್ದೆಗಳದು. ದಕ್ಷಿಣದ ಹಂಗಾರಕಟ್ಟೆಯಿಂದ ಉತ್ತರದ ಕುಂದಾಪುರದ ತನಕವೂ ಹನ್ನೆರಡು ಮೈಲು ಉದ್ದಕ್ಕೆ ಹಾಸಿದ ಬಯಲಿನ ಚಾಪೆಯದು. ಈ ಚಾಪೆಯನ್ನು ಕಿರಿಕಿರಿಯ ಅಂಕಣಗಳನ್ನಾಗಿ ಮಣ್ಣಿನ ದಂಡೆಗಳು ವಿಂಗಡಿಸಿ ಸಾವಿರಾರು ಹೊಲಗದ್ದೆಗಳಾಗಿವೆ. ಮಳೆಗಾಲಕ್ಕೆ ಮುಂಚೆ ಒಂದೆರಡು ಬೇಸಿಗೆಯ ಮಳೆಗೆ ಬೀಜ ಬಿತ್ತುತ್ತಾರೆ. ಹಾಗೆ ನೆಟ್ಟು ಅಗೇಡಿಗಳಿಗೆ ಬೇಲಿ ಹಾಕಿ ಗೋವುಗಳಿಂದ ರಕ್ಷಿಸಬೇಕಾದ ಪ್ರಮೇಯವೂ ಉಂಟು. ಈ ಬಿಳಿ ಮಣ್ಣಿನ ಭೂಮಿಗೆ ಕೆಸರು, ಗೊಬ್ಬರ ಹರವಿ ಭತ್ತದ ಬೇಸಾಯ ನಡೆಯುವ ನಾಲ್ಕು ತಿಂಗಳ ಕಾಲ ಅಲ್ಲಿ ಚೆಲ್ಲಾಡುವ ಎಳೆ ಹಸುರಿನ ಸಂಪತ್ತನ್ನು ವರ್ಣಿಸಿ ತೀರದು. ಕಿತ್ತು ತಿರುಗಿ ನೆಟ್ಟ ಅಗೆ ಬಲಿತು ದೊಡ್ಡದಾಗಿ ಬಯಲಿನ ಮೇಲೆ ಬೀಸುವ ಗಾಳಿಗೆ ತೂರಾಡುವಾಗ ಹಸುರೆಲೆಗಳ ಸಮುದ್ರ ಬಲಿತು ಹಳದಿ ಬಣ್ಣಕ್ಕೆ ತಿರುಗಿದ ತೆನೆ ತುಂಬಿದ ಕಾಲದ ಸೊಗಸು ಬಣ್ಣಿಸತೀರದು. ಅವು ತಾಳುವ ಗೋಪಿ, ನೆಲ್ಲು ಹಳದಿ ಬಣ್ಣಗಳ ವೈವಿಧ್ಯ ತುಂಬ ಮೋಹಕ. ಮಳೆಗಾಲದ ಉದ್ದಕ್ಕೂ ಈ ನೆಲವೆಲ್ಲ ಒರತೆ ನೀರಿನಿಂದ ತುಂಬುತ್ತದೆ. ಗದ್ದೆಗಳ ಎಡೆಯ ಹಿರಿಯ ಕಿರಿಯ ತೋಡುಗಳಲ್ಲಿ ಒರತೆ ನೀರು ಕಿಲಕಿಲಗುಡುತ್ತ ಹರಿಯುವ ಸೊಬಗು ಹೇಳತೀರದ್ದು. ಗದ್ದೆಗಳನ್ನು ವಿಂಗಡಿಸುವ ಏರಿಗಳು ಹಸುರುಹುಲ್ಲಿನ ಪಟ್ಟಿಗಳಾಗುತ್ತವೆ. ಜನ ಅವುಗಳ ನಡುವೆ ನಡೆಯುವುದರಿಂದ ಆ ದಾರಿ ಮರಳಿನ ಬಿಳಿ ಗೆರೆಯಾಗುತ್ತದೆ. ಬೇಸಿಗೆಯಲ್ಲಿ ಬೂದು ಇಲ್ಲವೆ ಕರಿಬೂದಾಗಿ ಕಾಣಿಸುವ ನೆಲ ಕೂಡ ಮಳೆಯ ನೀರಿನಿಂದ ಸ್ವಚ್ಛಗೊಂಡಾಗ ದಂತಕಾಂತಿಯ ಬಿಳಿಯ ಮರಳಿನ ಹಾಸುಗೆಯಾಗುತ್ತದೆ.
“ಮೊದಲ ಬೆಳೆ ಮುಗಿಯಿತೆಂದರೆ ಅಷ್ಟೊಂದು ದೊಡ್ಡ ಹಸುರು ಹಾಸಿಗೆ ರೋಮ ಕತ್ತರಿಸಿದ ಕುರಿಯ ಮೈಯಷ್ಟು ವಿಕಾರಗೊಂಡು ಕಾಣಿಸುತ್ತದೆ. ಆ ಗದ್ದೆಗಳಲ್ಲಿ ಕೆಲವರು ಧಾನ್ಯ ಬೆಳೆಸುತ್ತಾರೆ. ನೀರಿನ ಅನುಕೂಲತೆಯಿದ್ದರೆ ಭತ್ತ ಬೆಳೆಸಬಹುದು. ಒಟ್ಟಿನಲ್ಲಿ ನಮ್ಮೂರ ನೆಲಕ್ಕೆ ಜೀವ ಬರುವ ನಿಶ್ಚಿತ ಸಮಯವೆಂದರೆ ಮಳೆಗಾಲವೇ.” ಇದು ಶಿವರಾಮ ಕಾರಂತರು ತಮ್ಮ ಬಾಲ್ಯದಲ್ಲಿ ಕಂಡು ಸವಿದ ಸೌಂದರ್ಯ. ಅಂದರೆ ನೂರು ವರ್ಷಕ್ಕೂ ಹಿಂದಿನ ಸ್ಥಿತಿ. ಸುಮಾರು 30-40 ವರ್ಷಗಳಿಂದ ಇಲ್ಲಿ ಕೂಡ ಕಾಲಚಕ್ರದ ಓಟ, ತುಂಬ ವೇಗವನ್ನು ಪಡೆದುಕೊಂಡಿದ್ದು ಮುಖ್ಯವಾಗಿ ಇಲ್ಲಿಯ ಜನಸಂಖ್ಯೆ ಮತ್ತು ಇಲ್ಲಿ ಹಾದುಹೋಗುವ ರಾಷ್ಟ್ರೀಯ ಹೆದ್ದಾರಿಯಿಂದಾಗಿ ನೆಲದ ಬೆಲೆ ಹೊಸ ಹೊಸ ಎತ್ತರಗಳಿಗೆ ಏರುತ್ತಿದೆ. ತುಂಬ ಕಡೆ ಹಸುರು ಭತ್ತದ ಗದ್ದೆ-ಬಯಲನ್ನು ಕೃಷಿ ಮಾಡದ ಪಾಳುಭೂಮಿ, ಮನೆ, ಮನೆ ನಿವೇಶನಗಳು ಳನ್ನು ಆಕ್ರಮಿಸಿದೆ.
ಆಟ–ಈಜಾಟ
ಇರಲಿ; ಕಾರಂತರು ಬಾಲ್ಯದಲ್ಲಿ ಈ ನಿಸರ್ಗದ ಸೌಂದರ್ಯವನ್ನು ಧಾರಾಳವಾಗಿಯೇ ಸವಿದರು. ಊರಿನ ಪರಿಸರದಲ್ಲಿ ಬಹಳಷ್ಟು ಕೆರೆಗಳಿದ್ದು ಅಲ್ಲಿ ಗೆಳೆಯರೊಂದಿಗೆ ಬಹಳಷ್ಟು ಈಜುತ್ತಿದ್ದರು. ಸಮೀಪದ ಪಡುಕರೆಯ ದೊಡ್ಡಪ್ಪನ ಮನೆಯ ಬಳಿ ಕೂಡ ಸುಂದರ ಕೆರೆಯಿದ್ದು “ಆ ತಾವನ್ನು ‘ಮರಳಿ ಮಣ್ಣಿಗೆ’ಯ ರಾಮ ಐತಾಳರಿಗೆ ದಾನ ಮಾಡಿದ್ದೆ; ಕಾರಣ ಅದು ನನ್ನ ಎಳೆತನವನ್ನು ಮುಗ್ಧಗೊಳಿಸಿದ ರೀತಿ” ಎಂದವರು ಹೇಳಿದ್ದಿದೆ. ಹತ್ತು ವರ್ಷದವರೆಗೆ ಹುಟ್ಟೂರು ಕೋಟದಲ್ಲಿದ್ದ ಕಾರಂತರು ಮುಂದೆ ಹೈಸ್ಕೂಲು ಶಿಕ್ಷಣಕ್ಕೆ ಏಳು ಮೈಲು ದೂರದ ಕುಂದಾಪುರಕ್ಕೆ ಹೋದರು; ಮುಂದೆ 1919ರವರೆಗೆ ಅಲ್ಲಿದ್ದರು. ಮನೆಯ ಓದುವವರಿಗಾಗಿ ಅಲ್ಲಿ ಇವರ ಮನೆಯಿತ್ತು.
“ನನ್ನ ಬಾಲ್ಯಾವಸ್ಥೆಯಲ್ಲಿ ಈ ಪ್ರದೇಶಕ್ಕೆ ಪರಿಚಿತವಾಗಿದ್ದ ನಾಟಕದ ರೂಪವೆಂದರೆ ದಶಾವತಾರ ಆಟ (ಯಕ್ಷಗಾನ) ಮಾತ್ರ. ನನ್ನ ಬಾಲ್ಯದಲ್ಲಿ ನಾಟಕ ಕಲೆಯ ಯಾವುದೇ ಒಂದು ಪ್ರಭಾವ ನನ್ನ ಮನಸ್ಸಿನ ಮೇಲೆ ಬಿದ್ದಿದ್ದರೆ ಅದು ನಾನು ನೋಡಿದ ಬಯಲಾಟಗಳಿಂದ ಬಂದದ್ದು. ಹತ್ತು ವರ್ಷ ಆಗುವುದರೊಳಗೆ ನಾನು ನಾಲ್ಕಾರು ಆಟಗಳನ್ನು ಪೂರ್ಣವಾಗಿ ನೋಡಿದ್ದೆನೋ ಇಲ್ಲವೋ! ನನ್ನ ನೆನಪನ್ನು ಕೆದಕಿ ನೋಡಿದರೆ ಅಲ್ಲಿ ಉಳಿದಿರುವ ವಿಷಯಗಳು – ಅಂಥ ಬಯಲಾಟಗಳ ಕೆಲವು ದೃಶ್ಯಗಳ ಚೂರುಗಳು; ಆರಂಭದ ಬಾಲಗೋಪಾಲರು, ಸ್ತ್ರೀವೇಷಗಳು, ಕೆಲವು ವೇಷಗಳು, ಒಂದೆರಡು ಸನ್ನಿವೇಶಗಳು.” ಮನೆ ಸಮೀಪದ ಹಿರಿ ದೇವಸ್ಥಾನದ ಅಂಬಾಗಿಲಿನ ಮುಂದೆ ಮತ್ತು ಕೋಟ ಹಂದೆಯವರ ಮನೆಯ ಹೆಬ್ಬಾಗಿಲಿನ ಮುಂದಿನ ಅಂಗಳದಲ್ಲಿ ನೋಡಿದ ಆಟಗಳು ಮತ್ತು ಕೆಲವು ವೇಷಧಾರಿಗಳ ಹೆಸರು ನೆನಪಿದ್ದುದನ್ನು ಕಾರಂತರು ತಮ್ಮ ಆತ್ಮಚರಿತ್ರೆಯಲ್ಲಿ (ಸ್ಮೃತಿಪಟಲದಿಂದ) ಉಲ್ಲೇಖಿಸಿದ್ದಾರೆ.
ಮನೆಯಲ್ಲಿ ಪ್ರತಿವರ್ಷ ಮಳೆಗಾಲದಲ್ಲಿ ತಂದೆಯವರು ಭಾಗವತವನ್ನು ಒಬ್ಬರಿಂದ ಓದಿಸಿ ತಾವು ಅರ್ಥ ವಿವರಿಸುತ್ತಿದ್ದರು. (ವಾಚನ-ಪ್ರವಚನ). ಅದರಿಂದ ಪೌರಾಣಿಕ ಕಾಲ್ಪನಿಕ ಹಿನ್ನೆಲೆ ಅರಿವಿಗೆ ಬಂತು ಎಂದಿದ್ದಾರೆ.
ಕುಂದಾಪುರದಲ್ಲಿ
ಹತ್ತು ವರ್ಷ ಆಗುವಾಗ ಕುಂದಾಪುರವನ್ನು ಸೇರಿದವರ ಮೇಲೆ ಯಕ್ಷಗಾನಕ್ಕಿಂತ ಕಂಪೆನಿ ನಾಟಕಗಳೇ ಹೆಚ್ಚಿನ ಪ್ರಭಾವ ಬೀರಿದಂತೆ ಕಾಣಿಸುತ್ತದೆ; ಯಕ್ಷಗಾನ ನೋಡುವುದಕ್ಕಿಂತ ಹೆಚ್ಚಾಗಿ ಅವರು ವ್ಯವಸಾಯ ತಂಡಗಳ ನಾಟಕಗಳನ್ನೇ ನೋಡಿದರು; ಆ ಕಡೆಗೆ ಹೆಚ್ಚು ಆಕರ್ಷಿತರಾದರು ಎನ್ನಬಹುದು. ರಾಮಯ್ಯ ಅಡಪರ ಪೊಳಲಿ ರಾಜರಾಜೇಶ್ವರಿ ನಾಟಕ ಮಂಡಳಿಯು ಒಂದೆರಡು ವರ್ಷ ಕುಂದಾಪುರದಲ್ಲಿ ಹುಲ್ಲುಮಾಡಿನ ಥೇಟರಿನಲ್ಲಿ ನಾಟಕ ಆಡುತ್ತಿತ್ತು; ಅವರು ಓದುತ್ತಿದ್ದ ಹೈಸ್ಕೂಲಿಗೆ ಸಮೀಪ. ಪ್ರಭಾವತಿ ದರ್ಬಾರು, ಸದಾರಮೆ, ವಿಕ್ರಮ-ಶಶಿಕಲೆ, ಕಾಳಿದಾಸ ಅವರು ಆಡುತ್ತಿದ್ದ ನಾಟಕಗಳು. ಪದ್ಯಪ್ರಧಾನವಾಗಿದ್ದು, ಗದ್ಯಮಿಶ್ರಿತ ರಚನೆಯಾದ ನಾಟಕ. ಮಾತುಗಳ ಮಧ್ಯೆ ಮಧ್ಯೆ ಹಾಡು. ಜನರಿಗೆ ಹೆಚ್ಚು ಇಷ್ಟವಾಗುತ್ತಿದ್ದ ಕಂದಪದ್ಯಗಳು; ಅನೇಕ ಹಾಡುಗಳು ಯಾವ ನಾಟಕಕ್ಕಾದರೂ ಸರಿ ಎಂಬಂಥವು. ನಾಟಕವೆಲ್ಲ ಸುಖಾಂತ. ಒಬ್ಬಳು ಕನ್ಯೆಗೆ ಒಬ್ಬ ಯೋಗ್ಯ ವರ ಸಿಕ್ಕಿಯೇ ಸಿಗುತ್ತಿದ್ದ. ನಕಲಿ (ಹಾಸ್ಯ) ಪಾತ್ರಕ್ಕೆ ಗಣ್ಯ ಸ್ಥಾನವಿತ್ತು. ಉಡುಪಿಯ ಅಡ್ಡೆ ದಾಸಾಚಾರ್ಯ, ಕುದುರೆ ಗೋಪಾಲಾಚಾರ್ಯ, ವಡಭಾಂಡೇಶ್ವರ ಸುಬ್ಬಣ್ಣಭಟ್ಟರು ಮತ್ತವರ ತಮ್ಮ ವಾಸುಭಟ್ಟರ ಸ್ತ್ರೀವೇಷಗಳನ್ನು ನೆನಪಿಸಿಕೊಂಡ ಶಿವರಾಮ ಕಾರಂತರು, 1910-20ರ ದಶಕದ ದಕ್ಷಿಣ ಕರ್ನಾಟಕದ ಕಂಪೆನಿ ನಾಟಕಗಳೆಲ್ಲ ಅದೇ ರೀತಿ ಗದ್ಯ-ಪದ್ಯ ಸಾಹಿತ್ಯವನ್ನು ಹೊಂದಿದ್ದವು ಎಂದಿದ್ದಾರೆ.
ಎರಡು ಕಾರಣಗಳಿಗಾಗಿ ವ್ಯವಸಾಯ ನಾಟಕ ಮಂಡಳಿಗಳ ಜೊತೆಗಿನ ಕಾರಂತರ ಸಂಬಂಧ ಮುಖ್ಯವೆನಿಸುತ್ತದೆ: ಒಂದು, ಮುಂದೆ ಅವರು ಸ್ವತಃ ಆ ತಂಡಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು; ಮತ್ತು ಎರಡನೆಯದಾಗಿ ಮುಂದೆ ಅವರು ಬರೆದ ಕಾದಂಬರಿಗಳಿಗೆ ಬೇಕಾದ ಅನುಭವದ್ರವ್ಯವು ಈ ಕಂಪೆನಿಗಳ ಜೊತೆಗಿನ ಒಡನಾಟದಿಂದ ವಿಪುಲವಾಗಿ ಸಿಕ್ಕಿತೆನ್ನುವುದು.
ವರದಾಚಾರ್ಯರ ಕಂಪೆನಿ
ಕನ್ನಡದ ಓರ್ವ ಖ್ಯಾತ ನಟ ಎ.ವಿ. ವರದಾಚಾರ್ಯರ ರತ್ನಾವಳಿ ಥಿಯೇಟರ್ 1914ರಲ್ಲಿ ಕುಂದಾಪುರಕ್ಕೆ ಬಂದು ಬೀಡುಬಿಟ್ಟಿತು. ಆಗ ನಾಟಕ ಕಂಪೆನಿಗಳ ಟಿಕೆಟು ದರ ಸಾಮಾನ್ಯವಾಗಿ ನಾಲ್ಕಾಣೆಯಿಂದ ಎರಡು ರೂ.ವರೆಗಿದ್ದರೆ ಇವರದ್ದು ರಿಸರ್ವ್ ಕುರ್ಚಿಗೆ ಮೂರು ರೂ. ಸಾಮಾನ್ಯ ಪ್ರೇಕ್ಷಕರಿಂದ ಕಂಪೆನಿಗಳು ನಡೆಯುತ್ತಿದ್ದರೆ ಬಹುತೇಕ ಉಚಿತವಾಗಿ ಬರುವ ಗಣ್ಯರಿಂದ ಪ್ರದರ್ಶನಕ್ಕೆ ಘನತೆ ಬರುತ್ತಿತ್ತು; ಮತ್ತು ತಂಟೆ ತಕರಾರು ಬಾರದೆ ಪ್ರದರ್ಶನ ಸುಸೂತ್ರವಾಗಿ ನಡೆಯುತ್ತಿತ್ತಂತೆ. ಈ ಕಂಪೆನಿಯ ಪ್ರದರ್ಶನಗಳು ಬಾಲಕ ಕಾರಂತರ ಮುಗ್ಧಮನಸ್ಸಿನ ಮೇಲೆ ತುಂಬ ಪ್ರಭಾವ ಬೀರಿದವು. ಪ್ರಹ್ಲಾದಚರಿತ್ರೆ, ಲಂಕಾದಹನಗಳಲ್ಲಿ ಆಶ್ಚರ್ಯಕರ ದೃಶ್ಯಗಳನ್ನು ಅಳವಡಿಸಲಾಗಿತ್ತು. “ಇದರಿಂದ ನಮ್ಮ ಬಯಲಾಟಗಳಿಗಿಂತ ಕಂಪೆನಿ ನಾಟಕಗಳು ತುಂಬ ಸುಧಾರಿಸಿದಂಥವು ಎಂಬ ಭಾವನೆ ನನ್ನಲ್ಲಿ ಬೇರೂರಿತು. ಯಕ್ಷಗಾನದ ವೇಷಭೂಷಣಗಳ ಸೂಚ್ಯಶಕ್ತಿಯ ಪ್ರಭಾವ ಹೇಗೋ ಮರವೆಯಾಗಿ ಎಲ್ಲವನ್ನೂ ರಂಗಸ್ಥಳದಲ್ಲಿ ತಂದುತೋರಿಸುವ ಯಥಾತ್ಮಿಕತೆ ಆ ಸ್ಥಾನವನ್ನು ಪಡೆದುಕೊಂಡಿತ್ತು” ಎನ್ನುತ್ತಾರವರು. ವರದಾಚಾರ್ಯರ ವಿವಿಧ ಪಾತ್ರಗಳನ್ನು, ಮಾತಿನ ಶೈಲಿಯಲ್ಲಿ ತಮಗಿದ್ದ ಉಗ್ಗನ್ನು ಅಡಗಿಸುತ್ತಿದ್ದ ರೀತಿಯನ್ನು ಮೆಚ್ಚಿಕೊಂಡಿದ್ದಾರೆ. ಪ್ರಹ್ಲಾದ ಮಾಡುತ್ತಿದ್ದ ಮರಿರಾಯ, ಹಾಸ್ಯಪಾತ್ರದ ಕೃಷ್ಣಮೂರ್ತಿರಾಯರು, ಸ್ತ್ರೀ ಪಾತ್ರಧಾರಿ ನಾಗೇಂದ್ರರಾಯರು ಅವರ ನೆನಪಿನಲ್ಲಿ ಉಳಿದಿದ್ದರು. ವರದಾಚಾರ್ಯರ ಕಂದಪದ್ಯಗಳ ಹಾಡಿಕೆ ಮೇಲ್ಮಟ್ಟದ್ದಾಗಿತ್ತು. ಅವರ ಸಂವಾದಗೀತೆ (ರಾವಣ-ಆಂಜನೇಯ ಇತ್ಯಾದಿ) ಉತ್ತಮ. ನಾಟಕದ ಹಾಡುಗಳನ್ನು ಅವರು ಮುದ್ರಿಸಿ ಮಾರಾಟ ಮಾಡುತ್ತಿದ್ದರು ಕೂಡಾ.
ವರದಾಚಾರ್ಯರು ಎರಡನೇ ಬಾರಿ ಕುಂದಾಪುರಕ್ಕೆ ಬಂದಾಗ ಮನೆಯಲ್ಲಿ ಕೇಳದೆ ನಾಟಕಕ್ಕೆ ಹೋದ ಕಾರಣ ಅಣ್ಣ ದಂಡಿಸಿದ ಕಹಿನೆನಪು ಉಳಿದುಕೊಂಡಿತು. ಅಣ್ಣ ಮೆಟ್ರಿಕ್ ಮುಗಿಸಿ ಕುಂದಾಪುರ ಬಿಟ್ಟಾಗ ಶಿವರಾಮನೇ ಬಿಡಾರದ ಯಜಮಾನ ಆದರು. ಅಂಕೆಯಿಲ್ಲದ ಆ ಕಾಲದಲ್ಲಿ ಕಂಪೆನಿ ನಾಟಕ ನೋಡುವುದಕ್ಕೆ ಕಾಸಿನ ಕೊರತೆಯಲ್ಲದೆ ಮತ್ತಾವ ವಿಘ್ನವೂ ಇರಲಿಲ್ಲ.
ಶಿರಹಟ್ಟಿಯ ಸಂಗೀತ
ಶಿರಹಟ್ಟಿ ವೆಂಕೋಬರಾಯರ ಮಹಾಲಕ್ಷ್ಮೀ ಪ್ರಸಾದಿತ ನಾಟಕ ಮಂಡಳಿಯು 2-3 ವರ್ಷಕ್ಕೊಮ್ಮೆ ಕುಂದಾಪುರಕ್ಕೆ ಬರುತ್ತಿತ್ತು. “ಅವರಿಂದ ಉತ್ತರ ಕರ್ನಾಟಕದ ನಾಟಕಗಳ ಸವಿ ಸಿಕ್ಕಿತು. ಹಿಂದುಸ್ತಾನಿ ಸಂಗೀತದಿಂದ ಪ್ರಭಾವಿತರಾದ ಅವರ ಸಂಗೀತಶೈಲಿಯು ತನ್ನ ಮೋಹಕತೆಯ ಕಾರಣದಿಂದಾಗಿ ಆ ಮೊದಲು ನನ್ನ ಮೇಲೆ ಪ್ರಭಾವ ಬೀರಿದ್ದ ಕರ್ನಾಟಕಿ ಧಾಟಿಗಳನ್ನು ಮೂಲೆಗೆ ತಳ್ಳಿತು. ಹಾಡುವಾಗ ಅಪಸ್ವರ ಹೊರಟರೂ ಕೂಡ ಬಾಯಿ ತೆರೆದು ಹಾಡುವುದಕ್ಕೆ ಧೈರ್ಯ ಕೊಟ್ಟಿತು; ರಾಗ ಗುರುತಿಸುವ ಶಕ್ತಿ ಕ್ರಮೇಣ ಬಂತು. ಮರಾಠಿ ಚಾಲಿನ ಹಾಡುಗಳು ತುಂಬ ಇಷ್ಟವಾದವು. ಆ ಧಾಟಿಗಳ ನೆನವರಿಕೆಯಿಂದ 1924ರ ಹೊತ್ತಿಗೆ ಗೀತರಚನಕಾರನಾಗಿ ದೇಶಭಕ್ತಿಪರ ಹಾಡುಗಳನ್ನು ಹೊಸೆದೆ. ನಾರದನ ಹಾಡಿನ ಪ್ರಭಾವದಿಂದ ರಾಟಿ ಸುತ್ತುವ ಹಾಡು ಬರೆದದ್ದಲ್ಲದೆ ‘ರಾಷ್ಟ್ರಗೀತ ಸುಧಾಕರ’ ಎಂಬ ಚಿಕ್ಕ ಪದ್ಯಾವಳಿಯನ್ನು ಅಚ್ಚು ಹಾಕಿಸಿದೆ” ಎಂದು ಕಾರಂತರು ದಾಖಲಿಸಿದ್ದಾರೆ.
ಶಿರಹಟ್ಟಿ ನಾಟಕ ಮಂಡಳಿಯ ಧಾರವಾಡೀ ಮಾತುಗಾರಿಕೆ ನಮ್ಮ ಕಿವಿಗೆ ಹಿತವೆನಿಸುತ್ತಿರಲಿಲ್ಲ. ನಮ್ಮ ಹುಚ್ಚ ಅವರ ಹುತ್ಸನಾಗುತ್ತಿದ್ದ; ನಮ್ಮ ಉಚ್ಚಾರ ಅವರ ಉತ್ಸಾರವಾಗುತ್ತಿತ್ತು. ಕನ್ನಡಕ್ಕೆ ಇಂಗ್ಲಿಷ್ನ ಎಫ್ ಮತ್ತು ಝಡ್ಗಳನ್ನು ತಂದು ಕಸಿ ಮಾಡಿದವರು ಅವರು ಎನ್ನುತ್ತಾರೆ. ಹಾಸ್ಯಗಾರ ಲಕ್ಷ್ಮನಾಪುರಿ ಅವರ ವಿಕಟಹಾಸ್ಯ, ಸ್ತ್ರೀ ಪಾತ್ರಧಾರಿ ಅಸುಂಡಿ ಅವರ ಹಾಡಿಕೆ, ಚಂದ್ರಿ ಎಂಬ ಹುಡುಗಿ ಮುಖ್ಯ ಸ್ತ್ರೀ ಪಾತ್ರ ವಹಿಸುತ್ತಿದ್ದುದು ಇವುಗಳ ಜೊತೆಗೆ ವೆಂಕೋಬರಾಯರು, ಹಾರ್ಮೋನಿಯಂ ಗಿರಿಗೌಡರು ಮತ್ತು ತಬಲಾದ ಶಂಕರರಾಯರೆಂಬ ಮೂವರು ಕಾರಂತರ ಮನಸ್ಸಿನಲ್ಲಿ ಗಟ್ಟಿಯಾಗಿ ಉಳಿದರು.
ಮಂಗಳೂರು ಕಾಲೇಜಿಗೆ
ಕುಂದಾಪುರದಲ್ಲಿ ಮೆಟ್ರಿಕ್ (ಎಸೆಸೆಲ್ಸಿ) ಮುಗಿದು ಇಂಟರ್ಮೀಡಿಯೆಟ್ ಕಲಿಯುವ ಸಲುವಾಗಿ 1920ರ ಜೂನ್ನಲ್ಲಿ ಶಿವರಾಮ ಕಾರಂತರು ಮಂಗಳೂರಿಗೆ ಹೋದರು. ಅಲ್ಲಿ ಅಣ್ಣಂದಿರು ಕಲಿತ ಸರ್ಕಾರೀ ಕಾಲೇಜಿಗೆ (ಈಗ ವಿಶ್ವವಿದ್ಯಾಲಯ ಕಾಲೇಜು) ಸೇರಿದರು. ಗಾಂಧಿ ನೇತೃತ್ವದ ಅಸಹಕಾರ ಚಳವಳಿಯ ಕಾರಣದಿಂದಾಗಿ ಕಾಲೇಜು ಬಿಟ್ಟರು. ಮಂಗಳೂರಿನಲ್ಲಿ ಆಗ ಶಾಬು ಸಾಹೇಬರು ಎಂಬವರ ನಾಟಕ ಕಂಪೆನಿಯಿತ್ತು. ಚಿಕ್ಕ ಮುನಿಸ್ವಾಮಿ ಮತ್ತು ದೊಡ್ಡ ಮುನಿಸ್ವಾಮಿ ಎಂಬವರು ಅದರ ಪ್ರಮುಖ ನಟರು. ಮಂಜುನಾಥ ಶಾಲಿವಾಹನ ಮತ್ತು ಬಸ್ರೂರಿನ ಮಹಾಬಲ ಎಂಬ ಇತರ ನಟರೂ ಅಲ್ಲಿದ್ದರು. ಮುಂದೆ ಹತ್ತಿಪ್ಪತ್ತು ವರ್ಷಗಳ ಬಳಿಕ ಕಂಡ ಹುಚ್ಚ ಭಿಕ್ಷುಕ ಅದೇ ಚಿಕ್ಕಮುನಿಸ್ವಾಮಿ ಎನ್ನುವ ಆಘಾತಕಾರಿ ಘಟನೆಯನ್ನು ಕಾರಂತರು ನೆನಪಿಸಿಕೊಳ್ಳುತ್ತಾರೆ. ವಿದ್ಯಾಭ್ಯಾಸ ಅರ್ಧಕ್ಕೆ ನಿಂತ ಕಾರಣ ವರ್ಷದೊಳಗೆ ಕಾರಂತರು ಕುಂದಾಪುರಕ್ಕೆ ಮರಳಿದರು; ಮುಂದಿನ ಐದಾರು ವರ್ಷ ಕುಂದಾಪುರವೇ ಅವರ ಕಾರ್ಯರಂಗವಾಯಿತು. ಆ ದಿನಗಳಲ್ಲಿ ಶಾಲೆ, ಪ್ರೌಢಶಾಲೆಗಳ ವಾರ್ಷಿಕೋತ್ಸವಗಳಲ್ಲಿ ನಾಟಕ ಆಡುತ್ತಿರಲಿಲ್ಲ. ಅದರಿಂದಾಗಿ ತನ್ನ ಅಭಿರುಚಿಗೆ ಅವಕಾಶ ಸಿಕ್ಕಿರಲಿಲ್ಲ ಎನ್ನುವ ಒಂದು ಅಂಶ ಅವರ ನೆನಪಿನಲ್ಲಿತ್ತು.
ಕಾಂಗ್ರೆಸ್ ಪ್ರಚಾರ
ಕಾಲೇಜು ಬಿಟ್ಟ ಶಿವರಾಮ ಕಾರಂತರು ಕುಂದಾಪುರವನ್ನು ಕೇಂದ್ರವಾಗಿಟ್ಟುಕೊಂಡು ಕಾಂಗ್ರೆಸ್ನ ಪ್ರಚಾರ (ಸ್ವಾತಂತ್ರ್ಯ ಹೋರಾಟ) ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡರು; ಪ್ರಚಾರವೆಂದರೆ ಹಳ್ಳಿಹಳ್ಳಿಗೆ ಅಲೆದಾಟ, ಖಾದಿ ಪ್ರಚಾರ, ಖಾದಿ ಬಟ್ಟೆಗಳನ್ನು ಹೊತ್ತುಕೊಂಡು ಹೋಗಿ ಮಾರುವುದು ಇತ್ಯಾದಿ. ನಾಟಕಗಳ ಪ್ರಭಾವದ ದೃಷ್ಟಿಯಿಂದ ಅದು ಮುಖ್ಯ ಅವಧಿಯೇ ಆಗಿತ್ತು; ಆಗ ಇನ್ನೆರಡು ನಾಟಕ ಕಂಪೆನಿಗಳ ಪರಿಚಯವಾಯಿತು. ಗರೂಡ ಸದಾಶಿವರಾಯರ ಗದುಗಿನ ದತ್ತಾತ್ರೇಯ ನಾಟಕ ಕಂಪೆನಿ ಆರೇಳು ತಿಂಗಳು ಕುಂದಾಪುರದಲ್ಲಿ ಬಿಡಾರ ಹೂಡಿ ನಾಟಕಗಳನ್ನು ಪ್ರದರ್ಶಿಸುತ್ತಿತ್ತು. ಆ ಹೊತ್ತಿಗೆ ಆರ್ಥಿಕವಾಗಿ ಸೋತಿದ್ದ ಕಂಪೆನಿಗೆ ವ್ಯಾಪಾರಿ ಕೋಟ ಮಂಜುನಾಥ ಶ್ಯಾನುಭಾಗರು ನೆರವು ನೀಡಿ ಚೇತರಿಸಿಕೊಳ್ಳುವಂತೆ ಮಾಡಿದರು. ಆ ಕಂಪೆನಿಯದ್ದು ಕೂಡ ಸಾಗ್ರ ಸಂಗೀತ ನಾಟಕ. ಮಲತಾಯಿ ಮಲಮಗನನ್ನು ಮೋಹಿಸುವ ‘ವಿಷಮ ವಿವಾಹ’ ಎಂಬ ನಾಟಕವನ್ನು ಅವರು ಆಡುತ್ತಿದ್ದರು. ಕೊಪ್ಪಳದ ಸೀತಾರಾಮಭಟ್ಟ ಮುಖ್ಯ ಪಾತ್ರಧಾರಿಯಾದರೆ ನೀಲಕಂಠ ರಾಣಿಯ ಪಾತ್ರ ಮಾಡುತ್ತಿದ್ದರು. ಗರೂಡರು ಅಶೋಕ, ಕಬೀರದಾಸ ಪಾತ್ರಗಳನ್ನು ಮಾಡುತ್ತಿದ್ದರೆ, ಪಾವಂಜೆ ಎಂಬಾತ ವ್ಯಕ್ತಿತ್ವದಲ್ಲಿ ನಿರಾಕರ್ಷಕನಾದರೂ ಹಾಸ್ಯ ಉತ್ತಮ. ಈ ಕಂಪೆನಿಯ ಹಾಡುಗಾರಿಕೆ ಶಿರಹಟ್ಟಿ ಕಂಪೆನಿಯಷ್ಟು ಮೋಹಕವಾಗಿ ಕೇಳಿಸಲಿಲ್ಲ; ಸಂಗೀತಶೈಲಿ ಮರಾಠಿಯೇ ಎಂದಿದ್ದಾರೆ. ಈ ಐದು ವರ್ಷಗಳಲ್ಲಿ ಧಾರಾಳ ವಿರಾಮವಿದ್ದ ಕಾರಣ ನಾಟಕದ ಗೀಳು ಬಲವತ್ತರವಾಯಿತು. ನಾಲ್ಕಾರು ಸಹಪಾಠಿಗಳು ಅಲ್ಲಿದ್ದರು. ಬಸ್ರೂರು ಸಂಜೀವರಾಯರಂಥ ಗೆಳೆಯರು ಒಂದು ಕಡೆ ಸೇರಿ ಪ್ರತಿದಿನ ಸಂಗೀತಾಭ್ಯಾಸ ಮಾಡುತ್ತಿದ್ದರು. ಅಲ್ಲಿಗೆ ಹೋಗಿ ಬರುತ್ತ ಇವರು ಕೂಡ ಒಂದಿಷ್ಟು ಸಂಗೀತ ಕಲಿತರು; ಕೆಲವೊಂದು ರಾಗಗಳನ್ನೂ (ಹಿಂದುಸ್ತಾನಿ) ಹಾಡುಗಳನ್ನೂ ಕಿರಿಚುವುದಕ್ಕೆ ಕಲಿತೆ; ಯಾವುದಕ್ಕೂ ಧೈರ್ಯ ಮುಖ್ಯ ಎಂಬ ಸಿದ್ಧಾಂತದ ನೆಲೆಯಲ್ಲಿ ನನ್ನ ತಾರುಣ್ಯದ ಚಟುವಟಿಕೆಗಳು ಗುರಿಯಿಲ್ಲದೆ ಮುಂದೆ ಸಾಗುತ್ತಿದ್ದವು – ಎಂದಿದ್ದಾರೆ ಕಾರಂತರು.
1920ರ ದಶಕ ಮತ್ತು 30ರ ದಶಕದ ಮೊದಲ ಭಾಗ ಕಾರಂತರ ಅಲೆದಾಟದ ದಿನಗಳು. ಗ್ರಾಮಾಭಿವೃದ್ಧಿ, ಸಮಾಜಶಿಕ್ಷಣದ ಅಲೆದಾಟದಿಂದ ಸಮೃದ್ಧ ಜೀವನಾನುಭವ. ಅವರ ಆದರ್ಶವಾದದ ಹೊರತಾಗಿ ಬೇರೊಂದು ಕಾರ್ಯಾವಕಾಶದ ಹುಡುಕಾಟ. ಮಾಡುವ ಕೆಲಸ ಜೀವನಕ್ಕೆ ಪೋಷಕವಾಗಬೇಕೆಂದು ನಾಟಕ ಮಾಧ್ಯಮದತ್ತ ಗಮನಹರಿಸಿದರು. ಎಲ್ಲಕ್ಕೂ ಮಿಗಿಲಾಗಿ ಬಡತನಕ್ಕೆ ಹೊಂದಿಕೊಂಡು, ತನ್ನೊಬ್ಬನನ್ನೇ ನಂಬಿಕೊಂಡು ನಿರಂತರ ದುಡಿಮೆಗೆ ತನ್ನನ್ನು ಒಪ್ಪಿಸಿಕೊಂಡರು. ಬದುಕನ್ನು ಕಣ್ಣಾರೆ ನೋಡುತ್ತಿದ್ದ ಹಾಗೆ ಗಾಂಧಿಯವರ ಆದರ್ಶ ತನ್ನ ಆಕರ್ಷಣೆಯನ್ನು ಕಳೆದುಕೊಂಡರೂ ಕೂಡ ಅದು ಬಿತ್ತಿದ ಮನೋವೃತ್ತಿ ಬೇರೂರಿ ನಿಂತಿತು. ‘ಬಾಳ್ವೆಯೇ ಬೆಳಕು’ ಎಂಬ ಸ್ಥಿರ ನಂಬಿಕೆ ಬೆಳೆಯಿತು; ಸ್ವಾವಲಂಬನೆ, ಪ್ರಾಮಾಣಿಕತೆ ಮತ್ತು ಕಾರ್ಯನಿಷ್ಠೆಗಳು ಅದರ ತಿರುಳು. ಮುಂದಿನ ಸಾಧನೆಗೆ ಈ ಮನೋಧರ್ಮವೇ ಮೂಲ ಎಂದು ವಿ.ಎಂ. ಇನಾಂದಾರ್ ಗುರುತಿಸಿದ್ದಾರೆ. 1930ರ ದಶಕದಲ್ಲಿ ಪುತ್ತೂರಿಗೆ ಹೋಗಿ ನೆಲೆಸಿದಂದಿನಿಂದ ಕೊನೆಯತನಕ ಅವ್ಯಾಹತ ಕಾರ್ಯನಿಷ್ಠೆಯೇ ಕಾರಂತರ ವೈವಿಧ್ಯಪೂರ್ಣ ಸಾಧನೆಗೆ ಕಾರಣವೆಂದು ಗುರುತಿಸಲಾಗಿದೆ. ಒಂದು ಕೆಲಸ ಮಾಡಬೇಕಾದ್ದು ಎಂದು ಕಂಡಾಗ ಅವರು ಅದರ ಕಷ್ಟಗಳನ್ನು ಲೆಕ್ಕಹಾಕುತ್ತ ಕುಳಿತುಕೊಳ್ಳುವವರಲ್ಲ; ಅದಕ್ಕೆ ತಲೆಯೊಡ್ಡಿ ಆರಂಭಿಸಿಯೇಬಿಡುವವರು.
ಪತ್ರಿಕೆ–ಸಾಹಿತ್ಯ
ಕುತೂಹಲದ ಸಂಗತಿಯೆಂದರೆ, ಕಾರಂತರು ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ್ದು ಪತ್ರಿಕಾ ವ್ಯವಸಾಯದ ಮೂಲಕ. ‘ವಸಂತ’ ಎನ್ನುವ ಪಾಕ್ಷಿಕ ಪತ್ರಿಕೆಯನ್ನು 1924ರಲ್ಲಿ ಆರಂಭಿಸಿದರು. “ಅರ್ಧಶತಮಾನದ ನಂತರ ಇಂದು ಆ ಪತ್ರಿಕೆಯ ಪುಟಗಳನ್ನು ತಿರುವಿಹಾಕಿದರೆ ಅಲ್ಲಿ ಕಾಣುವ ವಸ್ತುವಿಷಯಗಳ ವೈವಿಧ್ಯ ಹಾಗೂ ಅದನ್ನು ಸಂಪಾದಿಸಿ ಪ್ರಕಟಿಸಿದವರ ಗಂಭೀರ ಉದ್ದೇಶ ಚಕಿತಗೊಳಿಸುತ್ತದೆ. ಮನೋರಂಜನೆಗಿಂತ ಮನೋವಿಕಾಸವೇ ಅದರ ಉದ್ದೇಶವಾಗಿತ್ತು. ಅಸ್ಪøಶ್ಯೋದ್ಧಾರ, ಕೈನೂಲಿನ ಬಟ್ಟೆ, ಪಾನನಿರೋಧ, ಬ್ರಹ್ಮಚರ್ಯ, ಅಹಿಂಸೆ ಮುಂತಾದ ಗಾಂಧಿಯವರ ಆದರ್ಶಗಳನ್ನು ‘ವಸಂತ’ ಪ್ರತಿಪಾದಿಸುತ್ತಿತ್ತು. ವಿಧವಾವಿವಾಹ, ಧಾರ್ಮಿಕ ಅಂಧಶ್ರದ್ಧೆಯಂತಹ ವಿಷಯಗಳಲ್ಲಿ ಪ್ರಗತಿಪರ ವಿಚಾರಗಳನ್ನು ಬೋಧಿಸುತ್ತಿತ್ತು. ಕಲೆ, ವಿಜ್ಞಾನ, ಚರಿತ್ರೆ, ರಾಜಕೀಯ, ಸಮಕಾಲೀನ ಸಾಮಾಜಿಕ ಸಮಸ್ಯೆಗಳನ್ನು ಕುರಿತು ಓದುಗನಿಗೆ ಯೋಚಿಸಲು ಅವಕಾಶ ಒದಗಿಸುವುದೇ ಗುರಿಯಾಗಿದ್ದುದರಿಂದ ಅಂಥ ಎಲ್ಲ ವಿಷಯಗಳ ಬಗ್ಗೆ ಬರೆಯಬೇಕಾಗಿತ್ತು. ಸಾಮಾನ್ಯ ಓದುಗನಿಗೆ ಕೆಲಮಟ್ಟಿನ ರಿಯಾಯಿತಿ ಎಂಬಂತೆ ಕಾರಂತರು ಬರೆದ ಕಥೆ, ಕಾದಂಬರಿಗಳನ್ನು ಅದರಲ್ಲಿ ಧಾರಾವಾಹಿಯಾಗಿ ಪ್ರಕಟಿಸುತ್ತಿದ್ದರು. ಸಂಪಾದಕರಾಗಿ ಅನೇಕ ಗಣ್ಯರಿಂದ ಲೇಖನಗಳನ್ನು ಬರೆಯಿಸುತ್ತಿದ್ದರು. ಹಣದ್ದೊಂದೇ ಕೊರತೆ. ಕಾರಂತರು ವಿಷಯಸಂಗ್ರಹ ಮಾಡಿ ತಾವೇ ಲೇಖನಗಳನ್ನು ತಯಾರಿಸುತ್ತಿದ್ದರು. ಚಿತ್ರಗಳನ್ನು ಬರೆಯುತ್ತಿದ್ದರು. ಅಚ್ಚಿನ ಕೆಲಸಗಳನ್ನು ನೋಡಿಕೊಳ್ಳುತ್ತಿದ್ದರು. ವಂತಿಗೆ ಸಂಗ್ರಹಿಸುವ ಸಲುವಾಗಿ ನಾಡಿನ ಉದ್ದಗಲಕ್ಕೂ ಸಂಚರಿಸುತ್ತಿದ್ದರು. ಅಗತ್ಯದ ವೆಚ್ಚಗಳನ್ನು ತುಂಬುವುದೇ ಕಷ್ಟವಾದಾಗ ಎರಡು ವರ್ಷ ನಡೆಸಿದ ಪತ್ರಿಕೆಯನ್ನು ನಿಲ್ಲಿಸಬೇಕಾಯಿತು ಎಂದು ಇನಾಂದಾರ್ ವಿವರಿಸಿದ್ದಾರೆ.
ಹೀಗೆ ಬರಹಗಾರ ಕಾರಂತರು ‘ವಸಂತ’ದ ಪುಟಗಳಲ್ಲಿ ಜನ್ಮತಾಳಿದರು. ರಷ್ಯಾವನ್ನು ಕುರಿತು ಕಾರಂತರು ಬರೆದ ಲೇಖನಮಾಲೆ ಪುಸ್ತಕವಾಗಿ ಪ್ರಕಟವಾದಾಗ ಅದಕ್ಕೆ ದೇವರಾಜ ಬಹಾದ್ದೂರ್ ಬಹುಮಾನ ಬಂತು. ಪತ್ತೇದಾರಿ ಕಥೆಗಳಾದ ವಿಚಿತ್ರಕೂಟ, ಭೂತಗಳು ವಸಂತ ಪತ್ರಿಕೆಯಲ್ಲೇ ಪ್ರಕಟವಾದವು. ಅವುಗಳಲ್ಲಿ ಕೃತಕ ಕಥಾರಚನೆಯೇ ಮುಖ್ಯವಾಗಿದ್ದು, ಮುಂದೆ ಬೆಳೆಯಲಿದ್ದ ಕಾದಂಬರಿಕಾರನ ಯಾವ ಸೂಚನೆಯೂ ಅಲ್ಲಿ ಸಿಗುವುದಿಲ್ಲ. ಆದರೆ ಮುಂದೆ ಒಂದೆರಡು ವರ್ಷಗಳಲ್ಲಿ ಬರೆದ ನಿರ್ಭಾಗ್ಯಜನ್ಮ, ದೇವದೂತರು ಮತ್ತು ಸೂಳೆಸಂಸಾರ ಕಾದಂಬರಿಗಳಲ್ಲಿ ಹೊಸದೃಷ್ಟಿಯು ಕಾಣಿಸುತ್ತದೆ ಎಂದು ವಿಮರ್ಶಕರು ಹೇಳಿದ್ದಾರೆ; ಅಷ್ಟುಹೊತ್ತಿಗೆ ಅವರು ರಂಗಭೂಮಿಯ ಅನುಭವದಿಂದ ಸಾಕಷ್ಟು ಬೆಳೆದರು ಎನಿಸುತ್ತದೆ. ಏಕೆಂದರೆ ‘ದೇವದೂತರು’ವಿನಲ್ಲಿ ಕಾಣುವ ವಿಡಂಬನೆ ಸಾಮಾನ್ಯಮಟ್ಟದ್ದಲ್ಲ. ಇದು ನಿಂತ ಮೂರು ವರ್ಷಗಳ ಬಳಿಕ ಮಂಗಳೂರಿನಿಂದ ವಸಂತವನ್ನು ಮಾಸಪತ್ರಿಕೆಯಾಗಿ ಮತ್ತೆ ಆರಂಭಿಸಿದರಾದರೂ ಅದೂ ಹೆಚ್ಚುಕಾಲ ನಡೆಯಲಿಲ್ಲ. ಮುಂದೆ ಮಂಗಳೂರಿನ ‘ಸ್ವದೇಶಾಭಿಮಾನಿ’ ಪತ್ರಿಕೆಗೆ ಅವರು ನೈಜ ಹಾಗೂ ಕಾಲ್ಪನಿಕ ವ್ಯಕ್ತಿಚಿತ್ರಗಳನ್ನು ಬರೆದರು. ದೇಹಜ್ಯೋತಿಗಳು, ಹಳ್ಳಿಯ ಹತ್ತು ಸಮಸ್ತರು ಆ ರೀತಿಯಲ್ಲಿ ಬಂದವು.
ಮುಂಬಯಿ ನಂಟು
“1922ರ ಬಳಿಕ ವರ್ಷಕ್ಕೊಮ್ಮೆ ಮುಂಬಯಿಗೆ ಹೋಗಿಬರುತ್ತಿದ್ದೆ. ಅಲ್ಲಿ ಕಂಡ ಮರಾಠಿ ನಾಟಕಗಳ ಪ್ರಭಾವ ನನ್ನ ಮೇಲೆ ಬೀಳತೊಡಗಿತು. ಅದರಲ್ಲೂ ಗಂಧರ್ವ ನಾಟಕ ಮಂಡಳಿಯ ಒಂದೆರಡು ನಾಟಕಗಳು, ಪೆಂಡಾರ್ಕರ್ ಅವರ ಕಂಪೆನಿಯ ನಾಟಕಗಳನ್ನು ಕಂಡ ಮೇಲೆ ನಾಟಕವನ್ನು ಕುರಿತು ಕೆಲವು ಅಂಶಗಳು ಚಿಂತನೆಗೆ ಗುರಿಯಾದವು. ಆ ನಾಟಕಗಳ ಸುಂದರ ಮರಾಠಿ ಚಾಲುಗಳು ಮುಂಬಯಿಯಿಂದ ಕುಂದಾಪುರಕ್ಕೂ ಬರತೊಡಗಿದ್ದವು. ಮುಂಬಯಿಗೆ ಹೋಗಿ ಬಂದವರು ಆ ಹಾಡುಗಳನ್ನು ನಮ್ಮೂರಿಗೂ ಆಮದು ಮಾಡುತ್ತಿದ್ದರು. ಕನ್ನಡ ನಾಟಕಗಳ ಚಾಲುಗಳಿಗಿಂತ ಆ ಚಾಲುಗಳು ಮೋಹಕವಾಗಿದ್ದವು. ಮರಾಠಿ ರಂಗಭೂಮಿಯಲ್ಲಿ ನನಗೆ ಕಾಣಿಸಿದ ಮತ್ತೊಂದು ಗಟ್ಟಿಯಾದ ಅಂಶವೆಂದರೆ ಕೆಲವು ಪಾತ್ರಗಳ ಅಭಿನಯ ಕೌಶಲ. ಅಲ್ಲಿಯ ಕೆಲವು ಪಾತ್ರಗಳು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿ ನಿಂತವು. ಲೋಕಮಾನ್ಯ, ಮಹಾತ್ಮ ಎಂಬಂಥ ಪದಗಳು (ಬಿರುದು), ದೇಶಭಕ್ತಿಯ ಘೋಷಣೆಗಳು ಜನರನ್ನು ವಿಶೇಷ ಅಭಿಮಾನ, ಉದ್ವೇಗಗಳಿಗೆ ಒಯ್ಯುತ್ತಿದ್ದವು. ಈ ಪ್ರಭಾವಗಳು ಮುಂದೆ ಸ್ವಲ್ಪ ಸಮಯದಲ್ಲಿ ನನ್ನನ್ನು ರಂಗಭೂಮಿಯ ಪ್ರಯೋಗಕ್ಕೆ ಸೇರಿಸಿದವು” ಎಂದು ಕಾರಂತರು ನೆನಪಿಸಿಕೊಂಡಿದ್ದರು.
ಬಳ್ಳಾರಿಯ ರಾವ್ಬಹದ್ದೂರ್ ಹನುಮಂತಗೌಡರು ಬರೆದ ‘ಪ್ರಹ್ಲಾದಚರಿತ್ರೆ’ ನಾಟಕವನ್ನು ಶಿವರಾಮ ಕಾರಂತರು ತಮ್ಮ ಕೋಟದಲ್ಲಿ ರಂಗಕ್ಕೆ ತಂದರು. ಅದರ ಪ್ರಥಮ ಪ್ರಯೋಗವನ್ನು ನೋಡಲು ತಂದೆ ಶೇಷ ಕಾರಂತರೂ ಬಂದಿದ್ದರಂತೆ. 1923-24ರಲ್ಲಿ ದುರ್ಗಾದಾಸ್ ಹಿಂದಿ ನಾಟಕವನ್ನು ಅನುವಾದಿಸಿ, ನಿರ್ದೇಶಿಸಿದರು. ಹಲ್ಸನಾಡು ಸೂರಪ್ಪಯ್ಯ, ಬಿ.ಕೆ. ಸರ್ವೋತ್ತಮ, ಯು.ಡಿ.ಆರ್. ಮಯ್ಯ, ವಾಸುದೇವ ನಾಯಕ್ ಅವರೆಲ್ಲ ಅದರಲ್ಲಿ ನಟಿಸಿದ್ದರು. ಕಾರಂತರಿಂದಾಗಿ ಅವರು ನಾಟಕದ ಹುಚ್ಚನ್ನು ದೀರ್ಘಕಾಲ ಉಳಿಸಿಕೊಂಡಿದ್ದರಂತೆ. ರಂಗಭೂಮಿಯ ಹೊಸ ಸಾಧ್ಯತೆಯತ್ತ ಗಮನಹರಿಸಿದ ಕಾರಂತರು ಸಮಾಜಸುಧಾರಣೆಗೆ ನಾಟಕಮಾಧ್ಯಮವನ್ನು ಬಳಸಬೇಕೆಂದು ಪ್ರಯತ್ನಿಸಿದರು. ಏಕೆಂದರೆ ಅವರಿಗೆ ವೃತ್ತಿರಂಗಭೂಮಿ ಕೆಟ್ಟಂತೆಯೂ, ಸ್ವತಃ ಕುಡುಕರಾದ ಅವರಿಂದ ಪಾನನಿಷೇಧ ಪರವಾದ ನಾಟಕವನ್ನು ಆಡಿಸಿದರೆ ಏನು ಪ್ರಯೋಜನ ಎಂಬಂತೆಯೂ ತೋರುತ್ತಿತ್ತು.
ಇನ್ನೊಂದೆಡೆ ಅವರ ಸಂಗೀತದ ಅಭ್ಯಾಸ ಮುಂದುವರಿದಿತ್ತು. ಕುಂದಾಪುರದಲ್ಲಿ ದರ್ಜಿಯ ವೃತ್ತಿ ನಡೆಸುತ್ತಿದ್ದ ರಾಮಕೃಷ್ಣ ಎಂಬಾತ ಕಾರವಾರದ ಬಾಲಕೃಷ್ಣ ಬುವಾರಿಂದ ಒಳ್ಳೆಯ ಹಿಂದುಸ್ತಾನಿ ಸಂಗೀತದ ಪಾಠ ಹೇಳಿಸಿಕೊಂಡು ಹೊಲಿಗೆ ವೃತ್ತಿಯ ಜೊತೆಗೆ ಸಂಗೀತವನ್ನೂ ಕಲಿಸುತ್ತಿದ್ದರು. ಸಂಜೆಯ ಹೊತ್ತಿಗೆ ಬಂದು ಇವರಿಗೆ ಪಾಠ ಮಾಡುತ್ತಿದ್ದರು. ಸಮಸ್ಯೆಯೆಂದರೆ ಆಗ ನೇರ ಮುಖಾಮುಖಿಯಾಗಿ ಕುಳಿತುಕೊಳ್ಳಲು ಕಷ್ಟ; ‘ಸ್ಪಿರಿಚ್ಯುವಾಲಿಟಿ’ ಸಮಸ್ಯೆ! ಆದರೂ ಅಂತಹ ಒಬ್ಬ ಗುರುವಿನ ಕೆಳಗೆ 2-3 ವರ್ಷ ಸಂಗೀತದ ಪಾಠ ಹೇಳಿಸಿಕೊಂಡರು. ಆರೆಂಟು ಚೀಜುಗಳು ಕರಗತವಾದವು. ಅಕ್ಷರ ಪ್ರಾಸಗಳು (ಸಂಗೀತದಲ್ಲಿ) ಭಾವವಿಲಾಸಕ್ಕೆ ನೀರಸವಸ್ತುಗಳು ಎಂಬುದು ಅವರ ಗಮನಕ್ಕೆ ಬಂತು.
ಕಂಪೆನಿಯ ಸಂಬಂಧ
ಮರಾಠಿ ನಾಟಕ ‘ಏಕಚ ಪ್ಯಾಲಾ’ ವನ್ನು ಕನ್ನಡಕ್ಕೆ ಅನುವಾದಿಸಿ ‘ನಿಶಾ ಮಹಿಮೆ’ ಎಂಬ ಹೆಸರಿನಲ್ಲಿ ರಂಗಕ್ಕೆ ತಂದರು. ಆ ಮೂಲಕ ನಾಟಕಕಾರ ಎಂಬ ಹೆಸರೂ ಬಂತು. ಮುಂಡಾಜೆ ರಂಗನಾಥಭಟ್ಟರ ಅಂಬಾ ಪ್ರಸಾದಿತ ನಾಟಕ ಮಂಡಳಿಯವರು ತಮ್ಮ ತಂಡಕ್ಕೆ ಇವರಿಂದ ತರಬೇತಿ ಕೊಡಿಸಿದರು. ಅದು ದಕ್ಷಿಣಕನ್ನಡ ಜಿಲ್ಲೆಯ ನಾಟಕ ಕಂಪೆನಿಯಾಗಿದ್ದು, ಆ ಮೂಲಕ ಕಾರಂತರು ವ್ಯವಸಾಯ ನಾಟಕ ಮಂಡಳಿಯೊಂದರ ಸಂಪರ್ಕಕ್ಕೆ ಬಂದರು; ಮತ್ತೆ ಈ ಕಸುಬು ಮುಂದುವರಿಯಿತು. “ಅಲ್ಲಿಯವರೆಗೆ ಕುಂದಾಪುರದಲ್ಲಿ ವಸಂತ ಪತ್ರಿಕೆಯನ್ನು ನಡೆಸುತ್ತಿದ್ದೆ; ಸಾಲದ ಹೊರೆಯಿಂದಾಗಿ ಎರಡು ವರ್ಷದಲ್ಲಿ ನಿಲ್ಲಿಸಬೇಕಾಯಿತು. ನಾನು ಸೇರಿದ್ದ ಕಾಂಗ್ರೆಸ್ ಚಳವಳಿ ಆಗಲೇ ಥಂಡಿ ಆಗಿತ್ತು. ಕುಂದಾಪುರದಲ್ಲೇ ಕುಳಿತು ಮಾಡುವ ಯಾವ ಉದ್ಯೋಗವೂ ಹೊಳೆಯಲಿಲ್ಲ. ಅಂತಹ ಸಂದರ್ಭ ನನ್ನನ್ನು ನಾಟಕ ಮಂಡಳಿಯೊಂದರ ಹಿಂದೆ ಓಡುವಂತೆ ಮಾಡಿತು” – ಇದು ಅಂದಿನ ಆ ಬೆಳವಣಿಗೆಯ ಬಗ್ಗೆ ಕಾರಂತರು ನೀಡಿದ ವಿವರಣೆ.
ಇದರ ಹಿನ್ನೆಲೆಯೆಂದರೆ ಕುಂದಾಪುರದಲ್ಲಿ ಪತ್ರಿಕೆ ನಡೆಸುತ್ತಿದ್ದಾಗ ಬಾರ್ಕೂರಿನ ವಿದ್ಯಾರ್ಥಿ ರಾಘವ ಎಂಬವ ಇವರ ಜೊತೆಗಿದ್ದ. ಆತನ ಸೋದರವರ್ಗದ ನಾಲ್ವರು ಬಾಲಕರು ಅಂಬಾ ಪ್ರಸಾದಿತ ಮಂಡಳಿಯಲ್ಲಿದ್ದರು. ರಾಘವನಿಂದಾಗಿ ಕಾರಂತರಿಗೆ ರಂಗನಾಥಭಟ್ಟರ ಪರಿಚಯವಾಗಿತ್ತು. ಅವರ ನಿಶಾಮಹಿಮೆಯ ತರಬೇತಿ ನೀಡುವಂತೆ ಹೇಳಿದರು. ಈ ಸಂಬಂಧವು ಏರಿಳಿತಗಳ ಸಹಿತ ನಾಲ್ಕಾರು ವರ್ಷ ಮುಂದುವರಿಯಿತು. ಕುಂದಾಪುರ ಬಿಟ್ಟ ಮೇಲೆ ಕಾರಂತರು ಅವರ ಕ್ಯಾಂಪ್ಗಳಿಗೆ ಹೋಗಿ ಬರುತ್ತಿದ್ದರು. ರಂಗನಾಥಭಟ್ಟರು ಕಂದಪದ್ಯ ಹಾಡುವುದರಲ್ಲಿ ವರದಾಚಾರ್ಯರಿಗೆ ಸಮ; ಆದರೆ ಅಭಿನಯ ಇತ್ಯಾದಿಗಳಲ್ಲಿ ಹೋಲಿಸುವಂತಿಲ್ಲ ಎಂಬುದು ಇವರ ವಿಶ್ಲೇಷಣೆ.
ಅಂದಿನ ನಾಟಕ ಕಂಪೆನಿಗಳಲ್ಲಿದ್ದ ಒಂದು ವಿದ್ಯಮಾನವೆಂದರೆ ನಾಟಕಗಳ ಅಪಹರಣ. ಒಂದು ಕಂಪೆನಿ ಒಂದು ನಾಟಕವನ್ನು ರಂಗಸ್ಥಳಕ್ಕೆ ತಂದು ಯಶಸ್ವಿಯಾಯಿತೆಂದರೆ ಆ ಕಂಪೆನಿಯನ್ನು ಬಿಟ್ಟು ಹೊರಗೆ ಬಂದ ಯಾವನಾದರೂ ಒಬ್ಬ ನಟನನ್ನು ಹಿಡಿದು ಅವನಿಗೆ ನೆನಪಿರುವ ಆ ನಾಟಕದ ಪಾತ್ರಗಳ ಮಾತುಗಳನ್ನು ಬರೆದುಕೊಂಡು, ಅದೇ ನಾಟಕವನ್ನು ಆಡುವುದು. ಆ ನಾಟಕದ ಹಾಡುಗಳೆಲ್ಲ ಅದಕ್ಕಿಂತ ಮೊದಲೇ ಸಾರ್ವಜನಿಕರ ಸ್ವತ್ತಾಗಿರುತ್ತಿದ್ದವು.
ನಾಟಕಗಳಿಗೆ ಪ್ರೇಕ್ಷಕರು ಬರುವಂತೆ ಮಾಡುವುದು ಮಂಡಳಿಯ ಯಜಮಾನನಿಗೆ ದೊಡ್ಡ ಸವಾಲಾಗಿತ್ತು. ಅದಕ್ಕಾಗಿ ಕಂಪೆನಿಗಳು ತಲಕಾಡು, ಚುಂಚನಕಟ್ಟೆ, ರಾಮಪುರ, ರಿತ್ತಿ, ತೊಗ್ಗರ್ಸಿ, ಹಾಸನ, ಕುರುವತ್ತಿ ಮೊದಲಾದ ಕಡೆ ನಡೆಯುವ ಜಾನುವಾರು ಜಾತ್ರೆಗಳಿಗೆ ಹೋಗುತ್ತಿದ್ದವು. ಅಲ್ಲಿ ಹದಿನೈದು ದಿನಗಳಿಂದ ತಿಂಗಳವರೆಗೆ ಪ್ರತಿದಿನ ನಾಟಕವಾಡಿ ಹಣ ಗಳಿಸಬಹುದು. ಅಲ್ಲಿ ದುರ್ದೈವದಿಂದ ಮೂರು ನಾಲ್ಕು ಕಂಪೆನಿಗಳು ಜಮಾಯಿಸಿದ್ದಾದರೆ ಯಾರ್ಯಾರ ನಸೀಬು ಎಷ್ಟೋ ಅಷ್ಟು ಮಾತ್ರ ಲಭ್ಯ. ಇನ್ನು ಆ ಪ್ರೇಕ್ಷಕರು ಎಂಥವರು? ದನ, ಎತ್ತು ಕೊಳ್ಳುವವರು ಮತ್ತು ಮಾರುವವರು ಹಣ ಹಿಡಿದುಕೊಂಡೇ ಅಲ್ಲಿಗೆ ಬರುತ್ತಾರೆ. ನಾಟಕದ ತಂಪನ್ನು ಬಿಟ್ಟರೆ ಅಲ್ಲಿ ಬೇರೆ ನೆರಳಿರುವುದಿಲ್ಲ. ಎಲ್ಲಾದರೂ ಮಲಗಿದರೆ ಕಿಸೆಗಳ್ಳರ ಭಯ. ಹೀಗಾಗಿ ನಾಟಕ ನೋಡಿ ಉಳಿದ ರಾತ್ರಿಯನ್ನು ಆ ಚಪ್ಪರದಲ್ಲೇ ಮಲಗಿ ಕಳೆಯಬಹುದು.
1926ರಲ್ಲಿ ಕಾರಂತರು ತುಂಗಾತೀರಕ್ಕೆ ಹಾಲಸಿದ್ದೇಶ್ವರ ನಾಟಕ ಮಂಡಳಿಯವರ ಜೊತೆಗೆ ರಾಮಪುರದ ಜಾನುವಾರು ಜಾತ್ರೆಗೆ ಹೋಗಿದ್ದರು. ಅಲ್ಲಿಗೆ ಶಿರಹಟ್ಟಿ ಕಂಪೆನಿಯೂ ಬಂದಿತ್ತು. ಪ್ರತಿದಿನವೂ ಸ್ಪರ್ಧೆ.
ಸಾಬರ್ಮತಿಗೆ ಭೇಟಿ
ರಂಗನಾಥ ಭಟ್ಟರ ಅಂಬಾ ಪ್ರಸಾದಿತ ನಾಟಕ ಮಂಡಳಿಯು ಪುತ್ತೂರಿನಲ್ಲಿ ದೀರ್ಘಾವಧಿ ಮೊಕ್ಕಾಮು ಹೂಡಿದಾಗ ಹೊಸ ನಾಟಕ ಮಾಡಬೇಕೆಂಬ ಯೋಚನೆ ಬಂದುದರಿಂದ ಕಾರಂತರಿಗೆ ಆಮಂತ್ರಣ ಹೋಯಿತು. ಸಂಪಾದಕನಾಗಿದ್ದ ಧೈರ್ಯದಿಂದ ಸ್ವಂತ ನಾಟಕ ಬರೆದರು. ಪೃಥ್ವೀರಾಜ-ಸಂಯುಕ್ತೆಯ ಕಥೆ. ಕೆಲವು ನಟರು ಚೆನ್ನಾಗಿ ಮಾಡಿದರು; ಗಳಿಕೆಯೂ ಆಯಿತು. ಕಂಪೆನಿಯು ಮುಂದೆ ಕೊಳ್ಳೇಗಾಲಕ್ಕೆ ಹೋಯಿತು. ‘ವಸಂತ’ ನಿಲ್ಲಿಸಿ ಬೇಸರವಾದ ಶಿವರಾಮ ಕಾರಂತರು ಸಾಬರ್ಮತಿ ಆಶ್ರಮಕ್ಕೆ ಹೋಗಿ ಅಲ್ಲಿ ಕೆಲವು ದಿನ ಕಳೆದು ಅಲೆದಾಡುತ್ತ ಕೊಳ್ಳೇಗಾಲಕ್ಕೆ ಹೋದರು. ಅಲ್ಲಿ ನಮಾಜು ಮಾಡಲು ಹೋದವನ ತಲೆಯ ಮೇಲೆ ಮಸೀದಿ ಬಿದ್ದಂತಹ ಘಟನೆ ನಡೆಯಿತು. ನಷ್ಟದಲ್ಲಿದ್ದ ಕಂಪೆನಿಗೆ ಸಾಲ ನೀಡಲು ಮುಂದೆ ಬಂದ ಒಬ್ಬ ಮಹನೀಯರು ಕಾರಂತರ ಮೇಲೆ ಕಂಪೆನಿಯ ಹೊಣೆ ಹೊರಿಸಿದರು. ಆಗ ಹತ್ತು ವರ್ಷದ ಪಾಂಡೇಶ್ವರ ಕಾಳಿಂಗ (ಗಾಯಕ ಕಾಳಿಂಗರಾವ್) ಕಂಪೆನಿಗೆ ಸೇರಿಕೊಂಡ. ತಬಲಜೀ ಬಂಟ್ವಾಳ ನಾರಾಯಣ ಕಾಮತರಿಂದ ಕಾಳಿಂಗನ ಗಂಟಲಿಗೆ ಒಳ್ಳೆಯ ಶಿಕ್ಷಣ ದೊರೆಯಿತು. ಆಡಳಿತದ ಹೊಣೆಯ ಮೇರೆಗೆ ಉತ್ತರ ಕರ್ನಾಟಕದಲ್ಲಿ ಹುಡುಕಾಡಿ ಕಂಪೆನಿಗೆ ಕೆಲವು ನಟರನ್ನು ತಂದು ಸೇರಿಸಿದೆ. ಇದೆಲ್ಲ ರಂಗನಾಥಭಟ್ಟರಿಗೆ ಇಷ್ಟವಾಗದ ಕಾರಣ ಕಂಪೆನಿ ಬಿಟ್ಟು ಹೊರಗೆ ಬಂದೆ – ಎಂದಿದ್ದಾರೆ ಕಾರಂತರು. ಅವರಿಗೆ ದೊರೆತ ಈ ಬಗೆಯ ಅನುಭವ ಅಮೂಲ್ಯವೇ ಸರಿ.
1927-28ರ ಸುಮಾರಿಗೆ ಮಂಗಳೂರಿನಲ್ಲಿ ನೆಲೆಸಿ ‘ವಸಂತ’ವನ್ನು ಮತ್ತೆ ಆರಂಭಿಸಿದರು. ಸರ್ಕಾರೀ ಟ್ರೈನಿಂಗ್ ಶಾಲೆಯ ವಿದ್ಯಾರ್ಥಿಗಳಿಗೆ ಒಂದೆರಡು ತಿಂಗಳು ತರಬೇತಿ ಕೊಟ್ಟು ಸತಿ ಸಂಯುಕ್ತೆ ಆಡಿಸಿದರು. ಅದಕ್ಕೆ ಚಿನ್ನದ ಪದಕದ ಬಹುಮಾನ ಬಂತು. ಅದರ ಬಗ್ಗೆ ಹೇಳುತ್ತ “ಆ ಕಾಲಕ್ಕೆ ಬೆಪ್ಪುತಕ್ಕಡಿ ಗಾಂಧಿವಾದಿಯಾಗಿದ್ದ ನಾನು ಸ್ವರ್ಣವೈರಾಗ್ಯವನ್ನು ತಾಳಿ ಅದನ್ನು ಗಾಂಧಿಯವರಿಗೆ ಕಳುಹಿಸಿಕೊಟ್ಟು ಕರ್ಣನಂತೆ ದಾನಶೂರನಾದೆ” ಎಂದಿದ್ದಾರೆ.
ಮಂಗಳೂರಿನ ಮೊದಲ ಮೂರು-ನಾಲ್ಕು ವರ್ಷ ನಾಟಕ ರಚಿಸಿ, ಅಭ್ಯಾಸಗಳ ದೃಷ್ಟಿಯಿಂದ ಪ್ರಯೋಜನಕಾರಿ ಆಯಿತು. ನಾಟಕದಲ್ಲಿ ಅವರಂತೆಯೇ ಆಸಕ್ತರಾಗಿದ್ದ ಸರ್ಕಾರೀ ಕಾಲೇಜಿನ ರಸಾಯನಶಾಸ್ತ್ರ ಪ್ರಾಧ್ಯಾಪಕ (ಹಾಸ್ಯ ಸಾಹಿತಿ) ಪಡುಕೋಣೆ ರಮಾನಂದ ರಾಯರ ಪರಿಚಯವಾಯಿತು. ಅವರ ಮೂಲಕ ಕಾಲೇಜಿನ ಗ್ರಂಥಾಲಯದಿಂದ ತುಂಬ ಪುಸ್ತಕಗಳನ್ನು ತರಿಸಿಕೊಂಡು ಓದಿದರು; ಈ ಪ್ರಯೋಜನ ನಿಡುಗಾಲ ಮುಂದುವರಿಯಿತು. ‘ಕರ್ಣಾರ್ಜುನ’ ನಾಟಕವನ್ನು ಬರೆದು ತರಬೇತಿ ನೀಡಿದರು. ಅಭಿನಯದ ಪ್ರಾಕ್ಟೀಸು ಮಾಡಿ ಮಾಡಿಸುವಾಗ ಪಾತ್ರಗಳಲ್ಲಿ ಭಾವತನ್ಮಯತೆ ಬರುತ್ತಿತ್ತು. ಅಭಿನಯದಲ್ಲೂ ಕಾದಂಬರಿಗಳ ಪಾತ್ರ ಪೋಷಕವಾದ ನಡೆನುಡಿಗಳ ಚಿತ್ರಣದಲ್ಲೂ ಈ ಬಗೆಯ ತಲ್ಲೀನತೆ ಅತ್ಯವಶ್ಯವಾದ ಮೂಲವಸ್ತು ಎಂಬುದನ್ನವರು ಕಂಡುಕೊಂಡರು.
ನಾಟಕ ಮತ್ತು ವಿವಾಹ
ವಿರಾಮದಿಂದಾಗಿ ನಾಟಕ ಬರೆಯುವ ಚಟ ಬೆಳೆಯಿತು. ಪೌರಾಣಿಕ ಸಾಕೆನಿಸಿ ಸಾಮಾಜಿಕ ನಾಟಕಗಳನ್ನು ಬರೆದರು. ಇಂಗ್ಲಿಷ್ ನಾಟಕಗಳ ಮಾದರಿಯಲ್ಲಿ ‘ಸಿಡಿಲು ಮಿಂಚು’ ಎನ್ನುವ ಐದಂಕದ ನಾಟಕ ಬರೆದರು. ಪ್ರದರ್ಶನಕ್ಕೆ ಟಿ.ಪಿ. ಕೈಲಾಸಂ ಅವರನ್ನು ಕರೆಸಿಕೊಂಡರು. ನಾಟಕ ನೋಡಿದ ಅವರು ಕಾರಂತರ ಬಳಿ “ಐದು ನಾಟಕಗಳನ್ನು ಒಂದರಲ್ಲೇ ತುರುಕಿದ್ದೀಯ” ಎಂದರಂತೆ. 1935ರ ವರೆಗೆ ನಾಲ್ಕಾರು ದೊಡ್ಡ ನಾಟಕಗಳನ್ನು ಬರೆದು ಮಂಗಳೂರಿನಲ್ಲಿ ಆಡಿಸಿದ್ದಾಯಿತು. ಮುಖ್ಯವಾಗಿ ಬೆಸೆಂಟ್ ಬಾಲಿಕೆಯರ ಪ್ರೌಢಶಾಲೆಯಲ್ಲಿ ಅವರ ಪ್ರಯೋಗಗಳು ನಡೆದವು; ಅಲ್ಲಿ ಸಂಗೀತನಾಟಕ, ನೃತ್ಯನಾಟಕಗಳೂ ನಡೆದವು; ತನ್ನಿಂದ ತರಬೇತಿ ಪಡೆದ ಲೀಲಾ ಆಳ್ವ ಅವರನ್ನು ವಿವಾಹವಾದರು. ಆ ಅಂತರ್ಜಾತಿ ವಿವಾಹದಿಂದ ಸ್ವಲ್ಪಮಟ್ಟಿನ ಕೋಲಾಹಲವೇ ಉಂಟಾಗಿ ಮತ್ತೆ ಶಾಂತವಾಯಿತು. ಕಾರಂತರ ಅಲೆದಾಟ ಕಡಮೆಯಾಗಿ ಸಹಕಾರಿ ರಂಗದ ನೇತಾರ ಮೊಳಹಳ್ಳಿ ಶಿವರಾಯರು ಒದಗಿಸಿದ ಆಶ್ರಯದ ಮೇರೆಗೆ ಪುತ್ತೂರಿಗೆ ಸ್ಥಳಾಂತರಗೊಂಡರು; ನಾಲ್ಕು ದಶಕಕ್ಕೂ ಮಿಕ್ಕಿ ಅಲ್ಲಿ ನೆಲೆಸಿದರು.
ಆ ಕಾಲದ ಬಹುದೊಡ್ಡ ಕಂಪೆನಿಯಾದ ಗುಬ್ಬಿ ಕಂಪೆನಿಯ ಯಜಮಾನರಾದ ಗುಬ್ಬಿ ವೀರಣ್ಣನವರ ಪರಿಚಯ ಶಿವರಾಮ ಕಾರಂತರಿಗೆ ಆದದ್ದಲ್ಲದೆ ಇವರ ‘ಗದಾಯುದ್ಧ’ ನಾಟಕದ ತರಬೇತಿ ಕೊಡುವಂತೆಯೂ ಅವರು ಕೋರಿದರು. ಅವರ ಹಲವು ಮೊಕ್ಕಾಮುಗಳಿಗೆ ಕಾರಂತರು ಹೋಗಿಬರುತ್ತಿದ್ದರು. ಸಿ.ಬಿ. ಮಲ್ಲಪ್ಪ, ಸುಬ್ಬಯ್ಯನಾಯ್ಡು, ವ್ಯಾಸರಾಯ, ನಾರಾಯಣಸ್ವಾಮಿ, ನಾಗೇಶರಾಯ ಅವರೆಲ್ಲ ಅಲ್ಲಿದ್ದ ನಟರು. ಪಾತ್ರಗಳ ಹಂಚಿಕೆಯಾಯಿತು. ವೀರಣ್ಣನವರೇ ದುರ್ಯೋಧನ ಮಾಡುವೆನೆಂದರು; ಆದರೆ ತಾಲೀಮು ಮುಂದುವರಿಯಲಿಲ್ಲ. ಆ ನಾಟಕ ಮುಂದೆ ‘ಕುರುಕ್ಷೇತ್ರ’ ಎನ್ನುವ ಹೆಸರಿನಿಂದ ಬೆಳೆಯಿತು; ಬಿ. ಪುಟ್ಟಸ್ವಾಮಯ್ಯ ಅದರ ಕೃತಿಕಾರರೆನಿಸಿದರಂತೆ.
ಹಲಗೇರಿ ಜೆಟ್ಟಪ್ಪನವರ ಹಾಲಸಿದ್ಧೇಶ್ವರ ನಾಟಕ ಮಂಡಳಿಗೆ ತಾನಾಜಿ, ಗೋಮಾತೆ ಮುಂತಾದ ನಾಟಕಗಳನ್ನು ಅವರು ನಿರ್ದೇಶಿಸಿದರು. ಕಂಪೆನಿಯ ಮುಖ್ಯ ನಟ ಹುಚ್ಚಪ್ಪನವರಿಂದ ಎರಡು ಚೀಜುಗಳನ್ನು ಕಲಿತರು. 1932-36ರ ನಡುವಣ ಹೆಚ್ಚಿನ ಸಮಯ ಮಂಗಳೂರಿನಲ್ಲಿ ಕಳೆದರು. ಶೇಕ್ಸ್ಪಿಯರನ ಹ್ಯಾಮ್ಲೆಟ್ ನಾಟಕವನ್ನು ಅನುವಾದಿಸಿ ರಂಗಕ್ಕೆ ತಂದರು. ಹೊಸರೂಪದಲ್ಲಿ ಬಂದ ಗದುಗಿನ ಗುರುಸಮರ್ಥ ನಾಟಕ ಮಂಡಳಿಗೆ ವಿಜಯನಗರದ ಕಥೆಯಿರುವ ತಮ್ಮ ‘ಕಠಾರಿ ಭೈರವ’ದ ತರಬೇತಿ ನೀಡಿದರು.
ಸಂಗೀತಕ್ಕೆ ಕತ್ತರಿ
“ತಾಲೀಮು ಮಾಸ್ತರನಾದ ನನಗೆ ಆ ಹೊತ್ತಿಗೆ ಸಾಗ್ರ ಸಂಗೀತ ನಾಟಕಗಳ ಅಡಚಣೆ ಗೋಚರಿಸಿತು. ಈ ಕಾರಣದಿಂದಾಗಿ ನಾನು ನನ್ನ ಹೆಚ್ಚಿನ ನಾಟಕಗಳನ್ನು ಕೇವಲ ಗದ್ಯದಲ್ಲೇ ಬರೆದು ಮುಗಿಸುತ್ತಿದ್ದೆ. ಬೇಕಿದ್ದರೆ ಮತ್ತೆ ಹಾಡು ಸೇರಿಸುತ್ತಿದ್ದರು. ಕಂಪೆನಿಗಳನ್ನು ಹೊಕ್ಕು ಹೊರಡುತ್ತ ಹಲವು ಹಾಡುಗಾರರ ಗುರುತಾದ ಮೇಲೆ ಅನೇಕ ನಾಟಕಿ ಚಾಲುಗಳು ತಾವಾಗಿ ಬಂದು ನನ್ನ ಬತ್ತಳಿಕೆಗೆ ಸೇರಿದವು. ನಾನು ಬರೆದ ನಾಟಕಗಳ ಗದ್ಯ ಅರ್ಥವಾಗದವರಿದ್ದರು. ಆದರೆ ನಾನು ಬರೆದ ಪದ್ಯಗಳಿಗೆ ಯಾರೂ ಆಕ್ಷೇಪಿಸಿದ್ದಿಲ್ಲ. ಇದರಿಂದ ಮುಂದೆ ನನಗಾದ ಪ್ರಯೋಜನವೆಂದರೆ ನಾನು ನಾಟಕದಿಂದ ಗದ್ಯವನ್ನು ಪ್ರತ್ಯೇಕಿಸಿ ಬರೆದಂತೆ ಗೀತರೂಪದಲ್ಲೇ ನಾಟಕಗಳನ್ನು ಏಕೆ ಬರೆಯಬಾರದೆನ್ನುವ ಯೋಚನೆ ಬಂತು. ಹೀಗೆ ನಾಟಕಮಾಧ್ಯಮ, ಅದರಲ್ಲೂ ಕಂಪೆನಿ ನಾಟಕಗಳೊಡನೆ ನಾನು ಬೆಳೆಸಿದ ಸಂಪರ್ಕವು ನನ್ನನ್ನು ಪ್ರಚೋದಿಸಿದ ರೀತಿಗಳು ನನ್ನ ವ್ಯಂಗ್ಯನೋಟಕ್ಕೆ ಸಾಕಷ್ಟು ಆಹಾರವನ್ನು ಒದಗಿಸಿದವು” ಎಂದು ಕಾರಂತರು ತಮ್ಮ ಸೃಷ್ಟಿಶೀಲತೆಯ ಒಂದು ಮುಖವನ್ನು ಅನಾವರಣಗೊಳಿಸಿದ್ದಾರೆ.
ನಾಟಕದಿಂದ ಸುಧಾರಣೆ
ಕಾರಂತರ ಪ್ರತಿಭೆ ನಿಂತ ನೀರಾಗಿರಲಿಲ್ಲ. ಹಂತಹಂತವಾಗಿ ಹೊಸತನ್ನು ಹುಡುಕುತ್ತಾ ಅವರು ತಮ್ಮನ್ನು ತಾವೇ ಮೀರುತ್ತ ಮುಂದುವರಿದರು. “ಪತ್ರಿಕಾ ವ್ಯವಸಾಯದಲ್ಲಿ ತೊಡಗಿದಂದಿನಿಂದ ಬರವಣಿಗೆ ನನ್ನ ಮನಸ್ಸಿನ ವಿಚಾರಗಳನ್ನು, ಕಲ್ಪನೆಗಳನ್ನು ಮತ್ತು ಭಾವನೆಗಳನ್ನು ತೋಡಿಕೊಳ್ಳುವುದಕ್ಕೆ ಅನುಕೂಲವಾದ ಒಂದು ಮಾಧ್ಯಮವನ್ನು ಒದಗಿಸಿತ್ತು. ಮುಂದಿನ ಐದು ವರ್ಷದೊಳಗೆ ಮೂರು-ನಾಲ್ಕು ಕಾದಂಬರಿಗಳನ್ನು ಬರೆದೆನಾದರೂ ರಂಗಭೂಮಿಯ ಮೋಹ ಅಂಟಿದ್ದುದರಿಂದ ಮತ್ತು ಜನರು ಪುಸ್ತಕ ಓದುವುದರಲ್ಲಿ ಅಷ್ಟೊಂದು ಆಸಕ್ತರಲ್ಲವೆಂದು ಅನ್ನಿಸಿದ್ದರಿಂದ ನೆಟ್ಟಗೆ ಅವರ ಕಿವಿಯೊಳಗೇನೆ ನನ್ನ ಅನಿಸಿಕೆಗಳನ್ನು ತುಂಬುವುದಕ್ಕೆ ನಾಟಕ ಆಕರ್ಷಕವಾದ ಒಂದು ಮಾಧ್ಯಮ ಅನಿಸಿತು. ನಾಟಕವೆಂದರೆ ಜನ ನೋಡಲು ಸೇರುತ್ತಾರೆ. ದುಡ್ಡಿಲ್ಲದ ಬಿಟ್ಟಿ ನಾಟಕವೆಂದರೆ ಪ್ರೇಕ್ಷಕ ಜಂಗುಳಿಗೆ ಸ್ಥಳವನ್ನು ಒದಗಿಸುವುದೇ ಕಷ್ಟವಾದೀತು. ಹೀಗಾಗಿ ನನಗೆ ತೋಚಿದ ವಿಷಯಗಳನ್ನು ನಾಟಕದ ಮೂಲಕ ತಿಳಿಸಿ ಜನರನ್ನು ಸುಧಾರಿಸಬಹುದು ಅನ್ನಿಸಿತು, ಸುಮಾರು ಹತ್ತು ವರ್ಷಗಳ ಕಾಲ ಇಂಥ ಪ್ರಯೋಗಗಳಲ್ಲಿ ನಿರತನಾದೆ. ಆ ಕಾಲಕ್ಕೆ ಒಂದು ಐದಂಕದ ಗದ್ಯನಾಟಕವನ್ನು ಬರೆಯುವುದಕ್ಕೆ ನನಗೆ ಐದು ದಿನಗಳು ಸಾಕಿತ್ತು. ನನ್ನಲ್ಲಿ ಸಮಾಜಸುಧಾರಣೆಯ ಹುಚ್ಚು ಎಷ್ಟೊಂದು ತೀವ್ರವಾಗಿತ್ತೆಂದರೆ, ವ್ಯವಸಾಯ ನಾಟಕಮಂಡಳಿಗಳಿಂದ ನನ್ನ ನಾಟಕಗಳನ್ನು ರಂಗಸ್ಥಳಕ್ಕೆ ತರಬಲ್ಲ ಸಾಧ್ಯತೆ ಕಣ್ಮರೆಯಾದಾಗ ನಾನೇ ಒಂದು ನಾಟಕ ಮಂಡಲಿಯನ್ನು ಕಟ್ಟಿದರೇನು ಎಂಬ ಹುಚ್ಚಿನ ತನಕವೂ ಹೋಗಿತ್ತು. ನನಗೆ ಬಂದ ತೊಡಕು ಇದು. ಯಾರ ಮೂಲಕ ಜನಕ್ಕೆ ನಾನು ನಿವೇದಿಸಬೇಕು? ಯಾವೆಲ್ಲ ದುರ್ಗುಣಗಳನ್ನು ನಾನು ಖಂಡಿಸಬಹುದೋ ಅವುಗಳ ಆಚರಣೆಯಲ್ಲಿ ನಿಸ್ಸೀಮರಾದ ನಟವರ್ಗದ ಮೂಲಕವೆ? ಕುಡಿದು ಕೆಡುತ್ತೀರಿ ಎಂಬ ಮಾತನ್ನು ಕುಡಿದೇ ರಂಗಭೂಮಿಯಲ್ಲಿ ಆಡುವವರ ಮೂಲಕವೆ? ಇಂಥ ಅನೇಕ ಸಂಶಯಗಳು ಕಾಡಿದವು. ನಾನು ಸೃಷ್ಟಿಸಬೇಕಾದ ನಾಟಕ ಮಂಡಳಿ ಅಪ್ಪಟ ಗಾಂಧಿಶಿಷ್ಯರ ತಂಡವೇ ಆಗಬೇಕಾದೀತು. ಆ ಬಗ್ಗೆ ಸಹಾಯ ಕೇಳುತ್ತ ಮೈಸೂರಿನಿಂದ ಪುಣೆ ತನಕ ಹೋಗಿದ್ದೆ. ಆದರೆ ಹಣ ಹಾಕುವ ಭಾಂಡುವಳಿಗರು ಸಿಗಲಿಲ್ಲ – ಎಂದು ನಿವೇದಿಸಿಕೊಂಡಿದ್ದಾರೆ.
ಬದಲಾವಣೆ
“ಆ ಕಾಲಕ್ಕೆ ಓದಿನಿಂದ, ಅನುಭವದಿಂದ ನನ್ನಲ್ಲಿ ಅನೇಕ ಹೊಸ ಪ್ರಶ್ನೆಗಳು ಮೂಡಿದವು. ನಾನು ಬರೆದ ನಾಟಕಗಳಲ್ಲಿ ಕಾಣಿಸುವಂತೆ – ಅಚ್ಚ ಕಪ್ಪು, ಅಚ್ಚ ಬಿಳುಪು ಜನರು ನನ್ನ ಸುತ್ತಣ ಪ್ರಪಂಚದಲ್ಲಿ ನಿಜಕ್ಕೂ ಇದ್ದಾರೆಯೆ? ನೈತಿಕವಾಗಿ ನನ್ನ ಕಣ್ಣಿಗೆ ಕಡಮೆ ಎಂದು ಕಾಣಿಸಿದ ನಟವರ್ಗದ ಜನರು ತಾವು ಬದುಕುವ ಸಮಾಜಕ್ಕಿಂತ ಕೀಳು ಜನರೆ? ನಾನು ಎತ್ತಿಕೊಂಡ ಅಥವಾ ಎತ್ತಬಹುದಾದ ಪ್ರಶ್ನೆಗಳು ಅಷ್ಟು ಸರಳವೆ? ಜನಜೀವನದಲ್ಲಿ ಲೈಂಗಿಕ ನೀತಿ ಎಂಥ ಬೃಹತ್ ಸ್ವರೂಪದ್ದು ಎಂಬುದರ ಅರಿವು ಆಗುತ್ತಿದ್ದ ಕಾಲದಲ್ಲೇ ಹಲವು ವಿಚಾರಶೀಲರ ಬರವಣಿಗೆಗಳನ್ನು ಓದಿದಾಗ ನನ್ನ ಅನುಭವ ಅವರ ಹಲವು ಸಂಶೋಧನೆಗಳನ್ನು ಸಮರ್ಥಿಸತೊಡಗಿತು. ನಾನು ನಿಂತಿದ್ದ ನೆಲವೇ ಕುಸಿದಂತಾಯಿತು. ಆರೆಂಟು ವರ್ಷಗಳಾದರೂ ಗಾಂಧಿ ಉಪದೇಶಗಳನ್ನು ಕಣ್ಮುಚ್ಚಿ ನಂಬಿದ ನನಗೆ ವಿವಿಧ ಕಾರಣಗಳಿಂದ ಮನುಷ್ಯವರ್ತನೆ ಎಷ್ಟೊಂದು ವಿಚಿತ್ರವಾಗಿ ರೂಪಗೊಳ್ಳುತ್ತದೆ ಎಂಬುದರ ಕಲ್ಪನೆ ಆಗತೊಡಗಿತು. ನಾನು ಒಪ್ಪುವ ನೀತಿಗಳು ಕೇವಲ ನನ್ನ ಭಾವನೆಗಳ ಸೃಷ್ಟಿ ಆಗಬಾರದು; ವಾಸ್ತವ ಜೀವನದಿಂದಲೇ ಪ್ರೇರಿತವಾಗಿರಬೇಕೆಂದು ಅನಿಸಿತು” ಮುಂತಾದ ಮಾತುಗಳಲ್ಲಿ ಕಾರಂತರಲ್ಲಾದ ಬದಲಾವಣೆ ವ್ಯಕ್ತವಾಗುತ್ತದೆ. ಮೊದಲಿಗೆ ಅವರಿಂದ ವ್ಯಂಗ್ಯ-ವಿಡಂಬನೆಗಳು ಹೆಚ್ಚಾಗಿ ಬಂದವು. ಈ ಅಸಹನೆ ಕಾಲಕ್ರಮದಲ್ಲಿ ಕಡಮೆಯಾಗಿ ತಿಳಿವಿನ ತಾಳ್ಮೆ ಬಂತು.
ಕಾರಂತರ ಹಲವಾರು ನಾಟಕಪ್ರಯೋಗಗಳಿಗೆ ಪುತ್ತೂರು ಒಂದು ಪ್ರಯೋಗಶಾಲೆಯಾಯಿತು. ಮಂಗಳೂರಿನಲ್ಲಿ ಬೆಸೆಂಟ್ ಸ್ಕೂಲ್ ಪ್ರಯೋಗದ ಕೇಂದ್ರವಾಯಿತು. ಪುತ್ತೂರಿನಲ್ಲಿ ಸುಮಾರು 9 ವರ್ಷ ವರ್ಷಕ್ಕೆ ಆರೇಳು ಹೊಸ ನಾಟಕಗಳನ್ನು ರಂಗಸ್ಥಳಕ್ಕೆ ತಂದರು. ಬೆಸೆಂಟ್ ಶಾಲೆ ವಸಂತೋತ್ಸವದ ವೇಳೆ ಇನ್ನೂ ಕೆಲವು ಪ್ರಯೋಗಗಳು ನಡೆದವು. ಪುತ್ತೂರಿನಲ್ಲಿ ಹಳ್ಳಿಶಾಲೆಗಳ ಉಪಾಧ್ಯಾಯರು ಮತ್ತು ಸ್ಥಳೀಯ ವಿದ್ಯಾರ್ಥಿಗಳು ಭಾಗಿಯಾದರೆ ಮಂಗಳೂರಿನಲ್ಲಿ ಕೇವಲ ವಿದ್ಯಾರ್ಥಿನಿಯರು. ಆ ಹೊತ್ತಿಗೆ ಕಾರಂತರು ಛಾಯಾನಾಟಕಗಳ ಪ್ರಯೋಗವನ್ನು ಕೂಡ ನಡೆಸಿದರು. “ಅನೇಕ ಬಾರಿ ನನಗೆ ವಾಸ್ತವಿಕ ನಾಟಕ ಚಿತ್ರಣಕ್ಕಿಂತ ವಾಸ್ತವತೆಯನ್ನು ದಾಟಿಸಬಲ್ಲ ಫ್ಯಾಂಟಸಿಗಳು ಪ್ರಿಯವಾಗಿ ಕಾಣಿಸಿವೆ. ಇಲ್ಲಿ ಮನಸ್ಸನ್ನು ಎಷ್ಟಕ್ಕೂ ಹಿಗ್ಗಿಸಬಲ್ಲ ಶಕ್ತಿ ಜಾಗೃತಗೊಳ್ಳುತ್ತದೆ” ಎಂದ ಕಾರಂತರು, ವಿದೂಷಕ ತಾನು ನಗದೆ ಪ್ರೇಕ್ಷಕರನ್ನು ನಗಿಸುವಂತೆ ನಾಟಕಕಾರನು ಪ್ರೇಕ್ಷಕರ ಸಂವೇದನೆಗಳನ್ನು ನೆಪಕ್ಕಷ್ಟೆ ಚುಚ್ಚಿ ಕೆರಳಿಸಿ ಅವರು ರಸಾನುಭವವನ್ನು ಪಡೆಯುವಂತೆ ಮಾಡಬೇಕು ಎಂದು ಕೂಡ ಹೇಳಿದ್ದಾರೆ.
ಗೀತನಾಟಕ
ಮುಂದಿನ ಹಂತದಲ್ಲಿ ಕಾರಂತರು ಕೆಲವು ಗೀತನಾಟಕಗಳನ್ನು ರಂಗದ ಮೇಲೆ ತಂದರು. ಅದರ ಸಂದರ್ಭ ಹೀಗಿದೆ. ಪುತ್ತೂರಿನ ದಸರಾದಲ್ಲಿ 9-10 ದಿನ ನಾಟಕ ಇರುತ್ತಿತ್ತು. ಸಂಜೆ ಸ್ವಲ್ಪ ಹೊತ್ತು ಮಕ್ಕಳಿಂದ ವ್ಯಾಯಾಮ ಪ್ರದರ್ಶನ, ಅನಂತರ ಯಾವುದಾದರೂ ವಿಷಯದ ಕುರಿತು ಉಪನ್ಯಾಸ, ಬಳಿಕ ಒಂದೆರಡು ತಾಸಿನ ನಾಟಕ ಇರುತ್ತಿತ್ತು. ಕೆಲವು ದಿನ ತಾಳಮದ್ದಲೆ, ಸಂಗೀತ ಕಛೇರಿಗಳೂ ಇರುತ್ತಿದ್ದವು. ಶಿಕ್ಷಕರು ಗದ್ಯ ಏಕಾಂಕ ನಾಟಕಗಳನ್ನು ಆಡುತ್ತಿದ್ದರು. ದಿನಗಳನ್ನು ತುಂಬಲು ಅಭ್ಯಾಸ ಕಡಮೆ ಸಾಕಾಗುವ ಹೊಸ ರೀತಿಯ ನಾಟಕ ಬೇಕಾಗಿತ್ತು. ಪದ್ಯರೂಪದಲ್ಲಿ ಬರೆದುಕೊಂಡು ಹಿಮ್ಮೇಳ ಅಥವಾ ಯಕ್ಷಗಾನ ಭಾಗವತರಂತೆ ಸ್ಟೇಜಿನ ಬದಿಯಲ್ಲಿ ಒಬ್ಬ ಕುಳಿತು ಹಾಡಿದರೆ ಪಾತ್ರಗಳು ವೇಷತೊಟ್ಟು ಹಿಮ್ಮೇಳದ ಸಾಹಿತ್ಯಕ್ಕೆ ನಟಿಸಬೇಕು. ಹಾಡು ಕಾರಂತರೇ ಬರೆಯುತ್ತಿದ್ದರು. ಪ್ರೇಕ್ಷಕರು ಹಾಡಿನ ಸಾಹಿತ್ಯದ ಕಡೆಗೆ ವಿಶೇಷ ಗಮನ ಕೊಡುತ್ತಿದ್ದರು. ಬೌದ್ಧಯಾತ್ರೆ, ನಾರೀರತ್ನಗಳು ಮುಂತಾಗಿ ಅಂತಹ ಹಲವು ಪ್ರಯೋಗಗಳು ನಡೆದವು. ಮುಂದೆ ಹಿಮ್ಮೇಳವಿಲ್ಲದೆ ನಟರೇ ನಿರ್ವಹಿಸುವ ಪ್ರಯೋಗವೂ ನಡೆಯಿತು. ‘ಮುಕ್ತದ್ವಾರ’ ಅಂತಹ ಒಂದು ಪ್ರಯೋಗ; ಅದರಲ್ಲಿ ಕಾಲಪುರುಷನ ಪಾತ್ರವನ್ನು ಕಾರಂತರೇ ನಿರ್ವಹಿಸಿದ್ದರು. ಕಿಸಾಗೌತಮಿ, ಸಾವಿತ್ರಿ-ಸತ್ಯವಾನ ಅದೇ ಬಗೆಯ ನಾಟಕಗಳಾಗಿದ್ದು, ಹೆಚ್ಚಿನ ಗೀತನಾಟಕಗಳಲ್ಲಿ ಹಿಂದುಸ್ತಾನಿ ಸಂಗೀತವನ್ನು ಬಳಸಿಕೊಂಡಿದ್ದರು.
ತಮ್ಮ ತಲೆಯಲ್ಲಿದ್ದ ಕಲ್ಪನೆಗೆ ಮಾತಿಲ್ಲದೆ ನಾದದಿಂದಲೇ ರೂಪ ಕೊಡುವ ಒಂದು ಪ್ರಯೋಗವನ್ನು ಕೂಡ ಕಾರಂತರು ನಡೆಸಿದರು. ಅದರ ಅನಿರ್ದಿಷ್ಟ ನಾದಲಹರಿಗೆ ಸಂಗೀತಗಾರರಿಂದ ಸ್ವರ ಪ್ರಸ್ತಾರ ಹಾಕಿಸಿಕೊಂಡರು. ಇಂತಹ ಪ್ರಯೋಗಗಳಲ್ಲಿ ವಾಸುದೇವ ನಾಯಕ್, ಎ.ವಿ. ಕೃಷ್ಣಮಾಚಾರ್ (ಪದ್ಮಚರಣ್) ಹಾಗೂ ಮಂಗಳೂರಿನ ಶ್ರೀನಿವಾಸ ಉಡುಪರ ಸಹಕಾರವನ್ನು ಪಡೆದುಕೊಂಡರು. ಸಾಹಿತ್ಯವಿಲ್ಲದ ನಾದಲಹರಿ ನದಿಯ ಹರಿವು, ಭೋರ್ಗರೆತವಾಗಿ ಬಂತು. ದುರಂತಕಥೆಯ ‘ಸೋಮಿಯ ಸೌಭಾಗ್ಯ’, ಗಾಳಿಸುದ್ದಿಗೆ ಸಂಬಂಧಿಸಿದ ‘ಯಾರೋ ಅಂದರು’ ಸಾಕಷ್ಟು ಜನಪ್ರಿಯವಾದವು. “ನನ್ನ ಸ್ಮರಣೆಯಲ್ಲಿದ್ದ ನೂರಾರು ಹಾಡಿನ ಧಾಟಿಗಳು ನನ್ನ ನಾಟಕದ ಗೀತರೂಪೀ ಪ್ರಬಂಧಗಳಿಗೆ ನೆರವಾದವು. ಅಲ್ಲಿಯತನಕ ನಾನು ಕನ್ನಡದ ಜಾನಪದ ಗೀತೆಗಳನ್ನು ಅಷ್ಟೊಂದು ಅಭ್ಯಾಸ ಮಾಡಿರಲಿಲ್ಲ. ವಿದೇಶೀ ವಿದ್ವಾಂಸ ಡಾ|| ಬಾಕೆ ಅವರಿಗೆ ಜಾನಪದ ಹಾಡುಗಳನ್ನು ಬರೆದುಕೊಡುತ್ತಿದ್ದೆ. ಮುಂದೆ ಪುತ್ತೂರಿನಲ್ಲಿದ್ದಾಗ ನನ್ನಲ್ಲಿ ಜಾನಪದ ಹಾಡುಗಳ ಸಂಗ್ರಹ ಬೆಳೆಯುತ್ತಹೋಯಿತು. ಅವುಗಳ ಪ್ರಯೋಜನ ಪಡೆಯುವ ರೀತಿಯಲ್ಲಿ ಸೋಮಿಯ ಸೌಭಾಗ್ಯವನ್ನು ಬರೆದೆ. ನನಗೆ ತುಂಬ ತೃಪ್ತಿಕೊಟ್ಟ ಒಂದು ಮಾಧ್ಯಮ ಈ ಗೀತನಾಟಕ ಮಾಧ್ಯಮ – ಎಂದಿದ್ದಾರೆ.
“ಆದರೆ ನನ್ನ ಎಲ್ಲ ಗೀತನಾಟಕ ಪ್ರಯೋಗಗಳು 1960ರ ಸುಮಾರಿಗೆ ಮುಗಿದುಹೋದವು. ಮುಂದೆ ಆ ನಾಟಕಗಳನ್ನು ಆಡಿಸುವ ಸಂದರ್ಭವೇ ಕಣ್ಮರೆಯಾಯಿತು. ಹಿಂದೆ ಮನಸ್ಸು ಹಾಡುಗಳ ಚಾಲಿಗೆ ರೂಢಿಗೊಂಡಿದ್ದರೆ ಇಪ್ಪತ್ತು ವರ್ಷ ಕಳೆಯುವಾಗ ಮನಸ್ಸೇ ಬರಡಾಗಿ ಕಂಡಿತು. ಸಂಗೀತವನ್ನು ಕೇಳುವ ಮತ್ತು ಬಳಸುವ ರೂಢಿಗಳು ತಪ್ಪಿ ವರ್ಷಗಳೇ ಸಂದಿದ್ದವು.”
ನೃತ್ಯನಾಟಕ
ನೃತ್ಯನಾಟಕಗಳು ಶಿವರಾಮ ಕಾರಂತರ ಇನ್ನೊಂದು ಆವಿಷ್ಕಾರವಾಗಿವೆ. “ಯಾವುದೇ ಪಾತ್ರದ ಕಲ್ಪನೆ ಅಥವಾ ಆ ಪಾತ್ರವು ತೊಡಬೇಕಾದ ಭಾವಾವೇಶವು ಮನಸ್ಸಿಗೆ ಬಂದರೆ ಅದನ್ನು ಬೇಕೆಂಬ ಹೊತ್ತಿಗೆ ಆವಿಷ್ಕರಿಸಿ ತನ್ಮಯನಾಗಬಲ್ಲ ಒಂದು ಸ್ವಭಾವ ನನಗೆ ಮೊದಲಿನಿಂದಲೂ ಬಂದಿತ್ತು. ಕ್ಷಣಕಾಲಕ್ಕೆ ನಾನು ಕಲ್ಪಿಸಿಕೊಂಡ ವೀರನೂ ಆಗಬಲ್ಲೆ, ಭೀರುವೂ ಆಗಬಲ್ಲೆ. ಈ ಪ್ರಸಂಗಗಳಲ್ಲಿ ನನಗೆ ಕಾಣಿಸಿದ ಇನ್ನೊಂದು ಪ್ರಧಾನ ಅಂಶವೆಂದರೆ, ನೃತ್ಯವೆಂಬುದು ಕೇವಲ ಹೆಜ್ಜೆಯ ಬಡಿತಕ್ಕೆ, ಪದಗತಿಗೆ ಸೀಮಿತವಲ್ಲ ಎಂಬುದು; ಅದು ಚಿಕ್ಕ ಮಗು ತನ್ನ ಭಾವನೆಗಳನ್ನು ಪ್ರಕಟಿಸುವಂತೆ” ಎಂದ ಅವರು ಮುಂದುವರಿದು, “ಇಂತಹ ಹಲವು ಪ್ರಶ್ನೆಗಳು ಕೆಲವು ವರ್ಷಗಳ ಕಾಲ ನನ್ನನ್ನು ಕಾಡುತ್ತಿದ್ದವು. ಬಿಡಿ ವಿಷಯಗಳ ಮೇಲೆ ನನ್ನದೇ ನೃತ್ಯ ರಚನೆ ಮಾಡಿದೆ – ನದಿ, ಜೇನ್ನೊಣ, ಹೂವು, ಹಾವು, ಹಾವಾಡಿಗ, ಉಯ್ಯಾಲೆ ಇತ್ಯಾದಿ. ಅವುಗಳನ್ನು ಬಿಂಬಿಸಲು ಹಿಂದುಸ್ತಾನಿ ರಾಗತಾಳಗಳ ಮೊರೆಹೊಕ್ಕು ಪ್ರಯೋಗ ನಡೆಸಿದೆ” ಎಂದು ವಿವರಿಸಿದ್ದಾರೆ.
ಈ ವಿಷಯದ ಶಿಕ್ಷಣ, ಇಲ್ಲವೆ ಯಾವ ಶಾಸ್ತ್ರದ ನೆರವೂ ಅವರಿಗಿರಲಿಲ್ಲ. ಭಾವನೆಗಳನ್ನು ಹೊಮ್ಮಿಸಲು ಶರೀರದ ನೈಸರ್ಗಿಕ ಶಕ್ತಿಗಳನ್ನು ಜಾಗೃತಗೊಳಿಸಬೇಕಾಯಿತು. ಹೀಗೆ ಸಂಪಾದಿಸಿದ ನೃತ್ಯ ಮಾಧ್ಯಮವನ್ನು ಏತಕ್ಕೆ ಒಂದು ನಾಟಕರೂಪದಲ್ಲಿ ಬಳಸಬಾರದು ಎಂಬ ಉತ್ಸಾಹ ಉಂಟಾಯಿತು. ಅಲ್ಲಿಂದ ಮುಂದೆ ಕೆಲವು ವರ್ಷ ಅಂತಹ ನೃತ್ಯನಾಟಕಗಳನ್ನು ಮಾಡಿದರು – ಶುಭದತ್ತ, ಆಲಿಬಾಬಾ ಮತ್ತು 40 ಕಳ್ಳರು, ಅಲ್ಲಾವುದ್ದೀನನ ಅದ್ಭುತ ದೀಪ, ಹಸನ್-ಪರ್ವೀನಾ ಇತ್ಯಾದಿ.
* * *
ಯಕ್ಷಗಾನದತ್ತ
‘ಈ ಅವಧಿಯಲ್ಲಿ ನನ್ನ ಅಭಿರುಚಿ ಯಕ್ಷಗಾನ ನೃತ್ಯದ ಕಡೆಗೆ ಹರಿಯತೊಡಗಿತ್ತು’ ಎಂದು ಕಾರಂತರು ಹೇಳಿದ್ದಾರೆ. ಅವರ ಪ್ರೌಢಶಾಲಾ ದಿನಗಳಿಂದ ಆರಂಭಿಸಿ ಪುತ್ತೂರಿನಲ್ಲಿ ಸಾಕಷ್ಟು ಕಾಲ ಕಳೆಯುವವರೆಗೂ ಯಕ್ಷಗಾನಕ್ಕೆ ಅವರ ಬಳಿ ಆದ್ಯತೆ ಇರಲಿಲ್ಲ ಎಂಬುದು ಗಮನಾರ್ಹ. ಪುತ್ತೂರಿನಲ್ಲಿ ದಸರೆಯ ಕಾರ್ಯಕ್ರಮಗಳನ್ನು ಆಯೋಜಿಸುವಾಗ ಒಂದು ಅಗತ್ಯದ ರೂಪದಲ್ಲಿ ಅವರಿಗೆ ಯಕ್ಷಗಾನದ ನೆನಪಾಗಿರಬೇಕು. ದಸರೆಗೆ ಎಂಟು ಹೊಸ ನಾಟಕಗಳು ಬೇಕಾಗಿದ್ದವು. ಅದರಲ್ಲಿ ಯಕ್ಷಗಾನವನ್ನು ಸೇರಿಸೋಣ; ಚೆನ್ನಾಗಿ ನಡೆದರೆ ಮುಂದುವರಿಸಿಕೊಂಡು ಹೋಗಬಹುದು ಅನ್ನಿಸಿತು. ಆದರೆ ಅವರಿದ್ದ ಪುತ್ತೂರು ಹುಟ್ಟೂರು ಕೋಟದಿಂದ ದೂರವಿದ್ದು, ಅಲ್ಲಿ ಅವರಿಗೆ ಬೇಕಾದ (ಬಡಗುತಿಟ್ಟು) ವ್ಯವಸಾಯ ಭಾಗವತರಾಗಲಿ, ಹಿಮ್ಮೇಳದವರಾಗಲಿ ಕಾಣಿಸಲಿಲ್ಲ. ಕೊನೆಗೆ ಭಾಗವತ ಶಂಕರನಾರಾಯಣ ತೋಳ್ಪಾಡಿತ್ತಾಯ ಹಾಗೂ ಮದ್ದಳೆಗೆ ಕುಂಜತ್ತಾಯ ಎಂಬವರ ಸಹಕಾರವನ್ನು ಪಡೆದುಕೊಂಡರು. ವಾದನಕ್ಕೆ ಕುಣಿದಾಗ ತಬಲೆಗಿಂತ ಮದ್ದಳೆ ಸ್ಫೂರ್ತಿಕರ ಎನಿಸಿತು. ಲಘು ಉಡುಗೆ ತೊಟ್ಟು ಕೀಚಕ-ಸೈರಂಧ್ರಿ ಪ್ರಸಂಗದ ಅಭ್ಯಾಸ ನಡೆಸಿದರು. ಈ ಹೊಸ ಪದ್ಧತಿಗೆ ಯಕ್ಷಗಾನ ಎನ್ನುವ ಬದಲು ‘ಕಿನ್ನರ ನೃತ್ಯ’ ಎನ್ನುವ ಹೆಸರು ಕೊಟ್ಟರು. ಎರಡನೇ ಸಲ ಹಟ್ಟಂಗಡಿ ರಾಮಭಟ್ಟರ ‘ಇಂದ್ರಕೀಲಕ’ ಪ್ರಸಂಗವನ್ನು ತೆಗೆದುಕೊಂಡು ಅದರಲ್ಲಿ ಮುಂದೆ ಪ್ರಸಿದ್ಧರಾದ ಕುರಿಯ ವಿಠಲಶಾಸ್ತ್ರಿ ಅವರಿಗೆ ಅರ್ಜುನನ ಪಾತ್ರ ನೀಡಿದರು.
1936ರಲ್ಲಿ ಅವರ ಕೆಲವು ನೃತ್ಯ, ಬಡಗುತಿಟ್ಟು ಸಾಂಪ್ರದಾಯಿಕ ಯಕ್ಷಗಾನದ ಎರಡು ತುಣುಕು ಸೇರಿಸಿ ಒಂದು ತಂಡವನ್ನು ಕಟ್ಟಿ ಮುಂಬಯಿ, ಬೆಂಗಳೂರು ಮತ್ತಿತರ ಕಡೆಗೆ ಪ್ರವಾಸ ಕೈಗೊಂಡರು. ಪ್ರಸಿದ್ಧ ವೇಷಧಾರಿ ಗಣಪತಿ ಪ್ರಭು, ಮಜ್ಜಿಗೆಬೈಲು ಚಂದಯ್ಯಶೆಟ್ಟಿ, ಬಣ್ಣದ ಕುಷ್ಟ, ವೀರಭದ್ರ ನಾಯಕ್ ಅದರಲ್ಲಿದ್ದರು. 1934-48ರ ಅವಧಿಯಲ್ಲಿ ಪ್ರಸಂಗಗಳ ವಿಚಾರದಲ್ಲಿ ತಾವು ಅಲ್ಲೊಮ್ಮೆ ಇಲ್ಲೊಮ್ಮೆ ಇಣುಕಿ ನೋಡಿದ್ದುಂಟು ಎಂದ ಕಾರಂತರು ಯಕ್ಷಗಾನದಲ್ಲಿ ಕೆಲವೆಡೆ ನಾಟಕದ ವೇಷ ಬಂದುದಕ್ಕೆ ಸೆಡ್ಡುಹೊಡೆದರು. ಯಕ್ಷಗಾನದಲ್ಲಿ ತಮ್ಮನ್ನು ಪೂರ್ತಿ ತೊಡಗಿಸಿಕೊಂಡು 1958ರಲ್ಲಿ ದೆಹಲಿಯಲ್ಲಿ ನಡೆದ ಭಾರತೀಯ ನೃತ್ಯಗಳ ವಿಚಾರಗೋಷ್ಠಿಯಲ್ಲಿ ಮೂವರು ಕಲಾವಿದರೊಂದಿಗೆ ಯಕ್ಷಗಾನವನ್ನು ಪ್ರತಿನಿಧಿಸಿದರು. ಐರೋಡಿ ರಾಮಗಾಣಿಗ, ಹಂದಾಡಿ ಸುಬ್ಬಣ್ಣಭಟ್ ಮತ್ತು ಸಕ್ಕಟ್ಟು ಸೀತಾರಾಮಯ್ಯ ಆ ಕಲಾವಿದರು.
ಅದೇ ವರ್ಷ ಬ್ರಹ್ಮಾವರದಲ್ಲಿ ಸ್ಥಳೀಯರ ಸಹಕಾರದೊಂದಿಗೆ ಪ್ರಥಮ ಯಕ್ಷಗಾನ ಸಮ್ಮೇಳನವನ್ನು ಸಂಘಟಿಸಿದರು. (1) ಯಕ್ಷಗಾನ (ಬಡಗುತಿಟ್ಟು)ದಲ್ಲಿ ಶಾಸ್ತ್ರೀಯವಾಗಿ ಕುಣಿತ ಕಲಿತವರಿಲ್ಲ; ಅದಕ್ಕಾಗಿ ಒಂದು ಯಕ್ಷಗಾನ ಶಾಲೆ ಸ್ಥಾಪನೆಗೊಳ್ಳಬೇಕು. (2) ಹಿಂದೆ ದೇವಸ್ಥಾನದವರು ತಮ್ಮ ಮೇಳದ ಸುಧಾರಣೆ ಬಗ್ಗೆ ಖರ್ಚು ಮಾಡುತ್ತಿದ್ದರು. ಈಗ ಮೇಳದ ಹರಾಜು ನಡೆಸುವುದಕ್ಕೆ ಸೀಮಿತವಾಗಿರುವ ಕಾರಣ ಮೇಳಗಳಿಗೆ ಆರ್ಥಿಕ ನೆರವು ಬೇಕು – ಎಂಬ ಎರಡು ಸಲಹೆಗಳನ್ನು ಸಮ್ಮೇಳನ ನೀಡಿತು.
ಯಕ್ಷಗಾನ ಬ್ಯಾಲೆ
ಮುಂದೆ 1961 ಮತ್ತು 62ರಲ್ಲಿ ಕಾರಂತರು ನಾಲ್ಕಾರು ಭಾಗವತರನ್ನು ಹಾಡಿಸಿ ರಾಗಗಳನ್ನು ದಾಖಲಿಸಿದರು. ಶೇಷಗಿರಿ ಕಿಣಿ, ಗುಂಡ್ಮಿ ನಾಮಚಂದ್ರ ನಾವಡ, ರಾಮಗಾಣಿಗ, ಶ್ರೀನಿವಾಸನಾಯಕ, ಅಂಪಾರು ಕೃಷ್ಣ ವೈದ್ಯ, ನಾರ್ಣಪ್ಪ ಉಪ್ಪೂರ ಮೊದಲಾದವರು ಅದರಲ್ಲಿ ಭಾಗವಹಿಸಿದ್ದರು. ಸುಮಾರು 80 ಧಾಟಿ(ರಾಗ)ಗಳ ಧ್ವನಿಮುದ್ರಿಕೆ ಮಾಡಿಕೊಳ್ಳಲಾಯಿತು. ಯಕ್ಷಗಾನದ ಮಾತನ್ನು ಕೈಬಿಟ್ಟು ಯಕ್ಷಗಾನ ಬ್ಯಾಲೆ ನಡೆಸುವ ಮೊದಲ ಪ್ರಯೋಗ ಶಿವರಾಮ ಕಾರಂತರಿಂದ 1962ರಲ್ಲಿ ನಡೆಯಿತು. 18-20 ಕಲಾವಿದರನ್ನು ಸೇರಿಸಿ ಉಡುಪಿಯಲ್ಲಿ ತರಬೇತಿ ನೀಡಿದರು. ಪ್ರಸಂಗ ಅಭಿಮನ್ಯು ವಧೆ ಮತ್ತು ಭೀಷ್ಮವಿಜಯ. ತಮ್ಮ ಕಿನ್ನರ ನೃತ್ಯದ ಬಂಡವಾಳವನ್ನು ಅದಕ್ಕೆ ಸೇರಿಸಿದರು. ಏಕೆಂದರೆ ಸಾಂಪ್ರದಾಯಿಕ ಯಕ್ಷಗಾನದಲ್ಲಿ ಭಾವಾಭಿವ್ಯಕ್ತಿಯ ಕೊರತೆ ಒಂದಾದರೆ ಅಂಗಭಂಗಿ ಮತ್ತು ಬಾಹು-ಹಸ್ತಗಳ ವಿನ್ಯಾಸ ಏನೂ ಸಾಲದೆನ್ನುವುದು ಕಾರಂತರ ನಿಲವು; ಮರುವರ್ಷ ಇನ್ನೂ ಎರಡು ಬ್ಯಾಲೆಗಳನ್ನು (ಬಭ್ರುವಾಹನ, ರತಿ ಕಲ್ಯಾಣ) ಸಿದ್ಧಪಡಿಸಿ ತಿರುಗಾಟ ಮಾಡಿದರು. ಬ್ಯಾಲೆಯ ಹಿಮ್ಮೇಳದಲ್ಲಿ ಮದ್ದಳೆ, ಚಂಡೆ ಜೊತೆಗೆ ವಯೊಲಿನ್ ಕ್ಲಾರಿಯೊನೆಟ್ ಸ್ಯಾಕ್ಸೊಫೋನ್ಗಳನ್ನು ಸೇರಿಸಿಕೊಂಡರು. ಈ ನಡುವೆ ಪುತ್ತೂರಿನ ದಸರಾ ಉತ್ಸವ ನಿಂತಿತ್ತು. ಮೊಳಹಳ್ಳಿ ಶಿವರಾಯರು ಆ ಊರನ್ನು ಬಿಡುವ ಸ್ವಲ್ಪ ಕಾಲ ಮೊದಲೇ (ಮದರಾಸಿಗೆ ತೆರಳಿದರು) ದಸರಾ ಉತ್ಸವ ನಿಂತಿತ್ತು. ಹೊರಗಿನ ಸಂಚಾರ ಜಾಸ್ತಿ ಆಗಿತ್ತು. ‘ವಿಜ್ಞಾನ ಪ್ರಪಂಚ’ದ ಬರವಣಿಗೆಯ ಕಾರಣದಿಂದ ವಿಜ್ಞಾನದ ಕಡೆಗೆ ಆಸಕ್ತಿ ಹೆಚ್ಚಿದ್ದರೂ ಮನಸ್ಸಿನಲ್ಲಿ ರಂಗಭೂಮಿಯ ಆಸಕ್ತಿ ಉಳಿದಿತ್ತು. ಮುಂದೆ ನಾನು ರಂಗಭೂಮಿಯ ವಿವಿಧ ಸಾಧ್ಯತೆಗಳನ್ನು ಮರೆತು ನಮ್ಮ ಜಿಲ್ಲೆಯ ಸಂಪತ್ತಾಗಿ ಉಳಿದು ಬಂದ ಯಕ್ಷಗಾನದ ಕುರಿತು ಹೆಚ್ಚಿನ ಅಭ್ಯಾಸ, ಆಸಕ್ತಿ, ಅನ್ವೇಷಣೆಗಳನ್ನು ಬೆಳೆಸಿದ್ದರೆ ಅದಕ್ಕೆ ದೊರೆತ ಪ್ರೇರಣೆ ಇಂಗ್ಲೆಂಡ್, ಫ್ರಾನ್ಸ್ಗಳಲ್ಲಿ ಕಂಡ ಬ್ಯಾಲೆ ಪ್ರದರ್ಶನಗಳು ಎಂದು ಕಾರಂತರು ಹೇಳಿದ್ದರು; ಮುಂದೆ ಅವರು ಯಕ್ಷರಂಗ ಎನ್ನುವ ಹೆಸರಿನಲ್ಲಿ ಬ್ಯಾಲೆ ನಡೆಸಿದರು. 1969ರಲ್ಲಿ ಮತ್ತು 1971ರಲ್ಲಿ ಉಡುಪಿಯಲ್ಲಿ ಎರಡು ಯಕ್ಷಗಾನ ಗೋಷ್ಠಿಗಳನ್ನು ಸಂಘಟಿಸಿದರು; ಐದು ದಿನ ಆರೆಂಟು ಭಾಗವತರನ್ನು ಸೇರಿಸಿ ಯಕ್ಷಗಾನ ರಾಗಗಳ ಸ್ಪಷ್ಟೀಕರಣವನ್ನು ನಡೆಸಿ 62 ರಾಗಗಳ ಧ್ವನಿಮುದ್ರಣ ಮಾಡಿದರು. ಕೇಂದ್ರ ಸಂಗೀತ ನಾಟಕ ಅಕಾಡೆಮಿಯ ಮುತುವರ್ಜಿಯಿಂದ ಉಡುಪಿಯಲ್ಲಿ ಯಕ್ಷಗಾನ ಕೇಂದ್ರವು ಆರಂಭಗೊಂಡಿತು. ಗುರು ವೀರಭದ್ರ ನಾಯಕ್, ಭಾಗವತ ನೀಲಾವರ ರಾಮಕೃಷ್ಣಯ್ಯ ಹಾಗೂ ಹಿರಿಯಡ್ಕ ಗೋಪಾಲರಾವ್ ಅಲ್ಲಿಯ ಮೊದಲ ಗುರುಗಳು.
* * *
ಕಾದಂಬರಿ ಶ್ರೇಣಿ
ಕಾರಂತರ ಕಾದಂಬರಿಗಳು ಅವರ ಕಾರ್ಯನಿಷ್ಠೆಯ ಪ್ರತೀಕ ಎನ್ನಬಹುದು. ಅವರ ತೊಂದರೆ-ತಾಪತ್ರಯಗಳು, ತಿರುಗಾಟಗಳು ಎಷ್ಟೇ ಇರಲಿ, ಕಾದಂಬರಿಗಳಂತೂ ನಿರಂತರವಾಗಿ ಬರುತ್ತಲೇ ಇದ್ದವು. ಅವುಗಳ ವಿಷಯವಸ್ತು ವೈವಿಧ್ಯ, ಅವು ತೋರಿಸುವ ಅನುಭವ ಪ್ರಪಂಚ, ಪಾತ್ರಗಳ ಸ್ವಭಾವ ವೈವಿಧ್ಯ ಅಪರಿಮಿತವಾದದ್ದು. ಮರಳಿಮಣ್ಣಿಗೆ, ಚೋಮನದುಡಿ, ಸರಸಮ್ಮನ ಸಮಾಧಿ, ಅಳಿದ ಮೇಲೆ, ಸಮೀಕ್ಷೆ, ಔದಾರ್ಯದ ಉರುಳಲ್ಲಿ, ನಂಬಿದವರ ನಾಕನರಕ, ಮೊಗಪಡೆದ ಮನ, ಧರ್ಮರಾಯನ ಸಂಸಾರ, ಕುಡಿಯರ ಕೂಡು, ಶನೀಶ್ವರನ ನೆರಳಿನಲ್ಲಿ, ಬತ್ತದ ತೊರೆ, ಮೈಮನಗಳ ಸುಳಿಯಲ್ಲಿ, ಒಂಟಿದನಿ, ಮೂಕಜ್ಜಿ ಕನಸುಗಳು ಮುಂತಾಗಿ ಸಾಗಿದ ಇವುಗಳಿಗೆಲ್ಲ ಅನುಭವದ್ರವ್ಯ ಎಲ್ಲಿಂದ ಬಂತು, ಅದೆಂತಹ ಅಕ್ಷಯ ಭಂಡಾರ ಎಂದು ಅಚ್ಚರಿ ಪಡುವುದಲ್ಲದೆ, ಅನ್ಯಮಾರ್ಗವಿಲ್ಲ.
ಕಾರಂತರು ವ್ಯಾಪಕವಾಗಿ ವಿಮರ್ಶಕರ ಮೆಚ್ಚುಗೆಗೂ ಪಾತ್ರರಾದವರು. ಆ ನಿಟ್ಟಿನಲ್ಲಿ ಡಾ| ಯು.ಆರ್. ಅನಂತಮೂರ್ತಿ ಅವರ ‘ಕಾರಂತರ ಅಥೆಂಟಿಕ್ ಪ್ರಪಂಚ’ ಎನ್ನುವ ಲೇಖನ ತುಂಬ ಪ್ರಸಿದ್ಧವಾದದ್ದು. ಕಾರಂತರ ಸತ್ಯನಿಷ್ಠೆ, ಸಾಚಾ ಹಾಗೂ ಅಧಿಕೃತವಾದುದನ್ನೇ ನೀಡಬೇಕೆನ್ನುವ ತುಡಿತಗಳನ್ನು ಅನಂತಮೂರ್ತಿ ಅಲ್ಲಿ ಎತ್ತಿಹಿಡಿಯುತ್ತಾರೆ. ಕವಿ ಡಾ| ಎನ್.ಎಸ್. ಲಕ್ಷ್ಮೀನಾರಾಯಣಭಟ್ಟರು ಹೀಗೆ ಹೇಳುತ್ತಾರೆ: “ಮರಳಿ ಮಣ್ಣಿಗೆಯಲ್ಲಿ ಅವರು ಚಿತ್ರಿಸಿರುವ ನಿಸರ್ಗ, ಅದರ ರುದ್ರರಮ್ಯ ನಾಟಕ, ಅದರ ತೆಕ್ಕೆಯಲ್ಲಿರುವ ಮನುಷ್ಯ ಮತ್ತು ಬದುಕಿಗಾಗಿ ಅವನ ಸಾಹಸ ಇವೆಲ್ಲ ಅದ್ಭುತವೆನಿಸುವಷ್ಟು ಪರಿಣಾಮಕಾರಿಯಾದವು. ಚೋಮನದುಡಿ ಮತ್ತು ಬೆಟ್ಟದ ಜೀವ ಕಾದಂಬರಿಗಳ ಎಷ್ಟೋ ಭಾಗಗಳು ಭಾವಗೀತೆಗಳಂತೆ ಹರಿಯುತ್ತವೆ. ತನ್ನ ಸುತ್ತಲ ಲೋಕವನ್ನು ಸುಧಾರಿಸುವ ಬಗ್ಗೆ, ಜೀವದ ಭಾವಾಲಾಪಗಳನ್ನು ಒಂದು ಶಿಸ್ತಿಗೊಳಪಡಿಸಿ ಅವುಗಳನ್ನು ಸಂಸ್ಕೃತಿಯಾಗಿ ಪರಿವರ್ತಿಸುವ ಬಗ್ಗೆ ಕಾರಂತರಿಗಿರುವ ಅಪಾರವಾದ ಕಳಕಳಿ ಅವರನ್ನು ನಮ್ಮ ಶ್ರೇಷ್ಠ ಬರಹಗಾರರಲ್ಲಿ ಒಬ್ಬರನ್ನಾಗಿ ಮಾಡಿದೆ.” ಕಾರಂತರ ಗಟ್ಟಿಮುಟ್ಟಾದ ವಿಚಾರವಂತಿಕೆಯನ್ನು, ದೃಷ್ಟಿ, ಚಿಂತನೆಗಳ ನಿಲವನ್ನು ತಿಳಿಯಬೇಕೆನ್ನುವವರು ಅವರ ‘ಬಾಳ್ವೆಯೇ ಬೆಳಕು’ ಎಂಬ ಪುಟ್ಟ ಪುಸ್ತಕವನ್ನು ತಪ್ಪದೆ ಓದಬೇಕೆಂದು ಎನ್ನೆಸ್ಸೆಲ್ ಸಲಹೆ ನೀಡಿದ್ದಾರೆ. ಇದು ಒಂದು ತಲೆಮಾರಿನ ಬಹುಜನರ ಮೇಲೆ ಗಾಢ ಪ್ರಭಾವವನ್ನು ಬೀರಿದ ಒಂದು ಪುಸ್ತಕ.
ಸಮಾಜಮುಖಿ ಜೀವನ
ಕಾರಂತರು ತಮ್ಮ ಜೀವಿತದಲ್ಲಿ ಉದ್ದಕ್ಕೂ ನಡೆಸಿಕೊಂಡು ಬಂದ ಎರಡು ಕೆಲಸಗಳೆಂದರೆ ಪರಿಸರ ಸಂರಕ್ಷಣೆಯ ಬಗೆಗಿನ ಹೋರಾಟ ಮತ್ತು ಯಾವುದೇ ಪ್ರಚಾರವಿಲ್ಲದೆ ಅಶಕ್ತರಿಗೆ ಸಹಾಯ ನೀಡುತ್ತ ಬಂದದ್ದು. ಮೊದಲು ಆರ್ಥಿಕ ಬಲ ಅಷ್ಟಾಗಿ ಇರಲಿಲ್ಲ. ಖರ್ಚು ಜಾಸ್ತಿ ಇತ್ತು. ಮುಂದೆ ಆರ್ಥಿಕ ಬಲ ಕೂಡಿದ ಬಳಿಕ ಮುಖ್ಯವಾಗಿ ಕೋಟ ಸಮೀಪದ ಸಾಲಿಗ್ರಾಮದಲ್ಲಿ ನೆಲೆಸಿದ್ದಾಗ ಯಕ್ಷಗಾನ ಕಲಾವಿದರು ಸೇರಿದಂತೆ ಬಹಳಷ್ಟು ಜನರಿಗೆ ಕ್ಲುಪ್ತವಾಗಿ ಸಹಾಯ ನೀಡುತ್ತ ಬಂದರು.
ಬದುಕನ್ನು ಸರಿಯಾಗಿ ಸಫಲವಾಗಿ ಬಾಳಲು ಹತ್ತಾರು ಬಗೆಯ ತಿಳಿವು ಅಗತ್ಯ ಎಂಬುದು ಕಾರಂತರ ನಂಬಿಕೆ. ಅವರು ತಮ್ಮ ಅಂಥ ನಂಬಿಕೆಗೆ ಕ್ರಿಯಾ ಮುಖ ಕೊಡದೆ ಬಿಡುವವರಲ್ಲ. ಅವರ ಬದುಕಿನ ರೀತಿ ತುಂಬ ಕಟ್ಟುನಿಟ್ಟಿನದು; ಅವ್ಯವಸ್ಥೆಗೆ ಅವರು ದೂರ. ಬೆಳಗ್ಗೆ ಏಳುವುದು ಇಷ್ಟು ಗಂಟೆಗೆ ಎಂದರೆ ಹಾಗೆಯೇ ಆಗಬೇಕು. ಬಹುಕಾಲ ಅವರು ಮುಂಜಾನೆ 5 ಗಂಟೆಗೆ ಏಳುತ್ತಿದ್ದರು. ನಾಲ್ಕೂ ಮುಕ್ಕಾಲಿಗೆ ಎಚ್ಚರಾದರೆ ಮಲಗಿದರೆ ಐದು ದಾಟಬಹುದೆಂದು ಅವರು ಮಲಗುತ್ತಿರಲಿಲ್ಲ. ಸಮಾರಂಭಕ್ಕೆ ಹೋಗುವುದಿರಲಿ, ಏನೇ ಇರಲಿ; ಸಮಯನಿಷ್ಠೆ ಅವರ ಸ್ವಭಾವದ ಪ್ರಮುಖ ಲಕ್ಷಣ.
ಅಸಹನೆ ಮತ್ತು ಮುಂಗೋಪಗಳು ಅವರ ವ್ಯಕ್ತಿತ್ವದ ಅವಿಭಾಜ್ಯ ಅಂಗಗಳೇ ಆಗಿದ್ದವು. ಅದರಿಂದಾಗಿ ರೇಗುವುದು, ಬೈಯುವುದು ಸಾಮಾನ್ಯ. ಹಲವರಿಗೆ ಅಂತಹ ಅನುಭವಗಳಾಗಿವೆ. ಮೊದಲು ಪತ್ನಿ ಮತ್ತು ಮಕ್ಕಳು ಆಕ್ಷೇಪಿಸಿದಾಗ ಕಾರಂತರು ಬಹುಬೇಗ ತನ್ನದು ತಪ್ಪಾಗಿದ್ದರೆ ಸರಿಪಡಿಸುತ್ತಿದ್ದರು. ಮುಂದೆ ಪತ್ನಿ, ಮಕ್ಕಳು ಅವರ ಸುತ್ತ ಇಲ್ಲದಾಗ ಈ ಕೆಲಸ ಅಷ್ಟಾಗಿ ಆಗಲಿಲ್ಲವೇನೋ! ಕೆಲವರಲ್ಲಿ ಕಹಿ ಉಳಿದಿತ್ತೇನೋ. ಎಲ್ಲ ಮಕ್ಕಳನ್ನು ಪ್ರೀತಿಸಿ ಅವರ ಜೊತೆಗೆ ನಕ್ಕು ನಲಿದವರು ಕಾರಂತರು. ಅಂತಹ ವ್ಯಕ್ತಿ ಕೊನೆಯ ಸುಮಾರು ಐದು ವರ್ಷ ಸ್ವಂತ ಮಕ್ಕಳನ್ನೇ ದೂರವಿಟ್ಟರು ಎನಿಸುತ್ತದೆ. ಆ ಬಗ್ಗೆ ಪುತ್ರಿ ಕ್ಷಮಾರಾವ್ ಅತೀವ ವೇದನೆ ವ್ಯಕ್ತಪಡಿಸಿದ್ದಿದೆ. ಈ ಬೆಳವಣಿಗೆಗೆ ಯಾರು ಕಾರಣ? ಅದೇಕೆ ಹಾಗಾಯಿತು?
ಡಾ|| ಶಿವರಾಮ ಕಾರಂತರು ನಿಧನ ಹೊಂದಿ ಇಪ್ಪತ್ತು ವರ್ಷಗಳಾಯಿತೆಂದರೆ ಹಲವರಿಗೆ ನಂಬುವುದಕ್ಕೆ ಕಷ್ಟವಾಗಬಹುದು. ಮೊನ್ನೆಯಷ್ಟೇ ಅವರ ಭಾಷಣ ಕೇಳಿದ್ದೇವಲ್ಲಾ ಎಂದವರು ಉದ್ಗರಿಸಬಹುದು. ಕೊನೆಯ ವರ್ಷಗಳಲ್ಲಿ ಮುಖ್ಯವಾಗಿ ಜ್ಞಾನಪೀಠ ಪ್ರಶಸ್ತಿ ಬಂದ ಅನಂತರ ಕರೆದಲ್ಲಿಗೆ ಹೋಗಿ ಅವರು ಭಾಷಣಗಳನ್ನು ಮಾಡಿದರು. ಕಾರ್ಯಕ್ರಮಗಳನ್ನು ಚೆಂದಗಾಣಿಸಿಕೊಟ್ಟರು; ಸಾರ್ವಜನಿಕ ಜೀವನಕ್ಕೆ ಘನತೆ-ಗೌರವ ತುಂಬಿದರು. ಸಮಾಜದಿಂದ ಪಡೆದುದಕ್ಕಿಂತ ಹೆಚ್ಚು ಮರಳಿಸಬೇಕು ಎಂಬುದು ಅವರ ನಂಬಿಕೆ. ಅದರಲ್ಲಿ ನಮಗೆಲ್ಲರಿಗೂ ಪಾಠ ಇದೆಯಲ್ಲವೆ?
(ಚಿತ್ರಗಳು : ಅಂತರ್ಜಾಲ)