ವಿದುರಾಶ್ವತ್ಥದಲ್ಲಿ ವಿದುರನಾರಾಯಣನ ಪೂಜೆಯಲ್ಲಿ ತೊಡಗಿದ್ದ ಗರ್ಭಿಣಿ ಗೌರಮ್ಮನಿಗೆ ಗುಂಡು ಬಡಿದು ಸ್ಥಳದಲ್ಲೇ ಮಡಿದಳೆಂಬ ವಾರ್ತೆ ಎಲ್ಲೆಡೆ ಹರಡಿತು. ಈ ಹತ್ಯಾಕಾಂಡ ಕರಾಳ ಇತಿಹಾಸವನ್ನು ಸೃಷ್ಟಿಸಿತು. ಈ ಘಟನೆಯನ್ನು ಗಾಂಧಿ ಸೇರಿದಂತೆ ಹಲವು ಮಂದಿ ಹಿರಿಯ ರಾಷ್ಟ್ರೀಯ ನಾಯಕರು ಖಂಡಿಸಿದರು. ಅದರ ಬೆನ್ನಲ್ಲೇ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟು ಪ್ರತಿಭಟನಾ ಮೆರವಣಿಗೆಗಳು ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಜಿಲ್ಲೆಯಾದ್ಯಂತ ನಡೆದವು. ಚಿಕ್ಕಬಳ್ಳಾಪುರದ ಕೆ. ಸಂಪಂಗಿರಾಮಯ್ಯ, ಕೆ. ವೆಂಕಟಪ್ಪ, ಕೆ. ವೆಂಕಟಕೃಷ್ಣಪ್ಪ, ಚಿಕ್ಕಬಳ್ಳಾಪುರದ ಸಂಪತ್ಕುಮಾರನ್, ಯಲ್ದೂರು ನರಸಿಂಹಯ್ಯ, ಎ.ಸಿ. ಹನುಮಂತಯ್ಯ, ಎ. ಮುನಿಯಪ್ಪ ಮುಂತಾದವರು ನಿಷೇಧಾಜ್ಞೆಯನ್ನು ಮುರಿದು ಸತ್ಯಾಗ್ರಹ ನಡೆಸುವ ಮೂಲಕ ಬಂಧನಕ್ಕೊಳಗಾಗಿ ಮೂರು ತಿಂಗಳು ಕಾರಾಗೃಹದಲ್ಲಿದ್ದರು.
ದೇಶದೆಲ್ಲೆಡೆ ಸ್ವಾತಂತ್ರ್ಯ ಹೋರಾಟದ ಕಾವು ಪಡೆದುಕೊಳ್ಳುತ್ತಿದ್ದ ಕಾಲ ಅದು. ಎಲ್ಲ ಕಡೆ ಬ್ರಿಟಿಷರ ವಿರುದ್ಧ ಭಾರತೀಯರ ಹೋರಾಟ ಹೆಚ್ಚುತ್ತಲೇ ಇತ್ತು. ಮೈಸೂರು ಸಂಸ್ಥಾನದಲ್ಲಿಯೂ ಸ್ವಾತಂತ್ರ್ಯ ಹೋರಾಟದ ಕಹಳೆ ಮೊಳಗಿತ್ತು. ಹೀಗೆ ಹೋರಾಟ ಮುಂದುವರಿಯುತ್ತಿದ್ದಾಗ ಮೈಸೂರು ಕಾಂಗ್ರೆಸ್ಸಿನ ಮುಖಂಡರು 1938ರಲ್ಲಿ ಜವಾಬ್ದಾರಿ ಸರ್ಕಾರ ಅಸ್ತಿತ್ವಕ್ಕೆ ಬರಲು ಶ್ರಮಿಸುತ್ತಿದ್ದು ಸರ್ಕಾರದ ನಿಷೇಧಾಜ್ಞೆಗಳನ್ನು ಉಲ್ಲಂಘಿಸುತ್ತಿದ್ದರು. ಈ ಸಮಯದಲ್ಲಿ ಮಂಡ್ಯ ಜಿಲ್ಲೆಯ ಮದ್ದೂರು ಬಳಿಯ ಶಿವಪುರದಲ್ಲಿ 1938ರ ಏಪ್ರಿಲ್ 11ರಿಂದ 13ರವರೆಗೆ ಕಾಂಗ್ರೆಸ್ಸಿನ ಮೊದಲ ಅಧಿವೇಶನ (‘ಧ್ವಜ ಸತ್ಯಾಗ್ರಹ’) ಟಿ. ಸಿದ್ಧಲಿಂಗಯ್ಯನವರ ಅಧ್ಯಕ್ಷತೆಯಲ್ಲಿ ನಡೆಯಿತು. ಬಹುಯಶಸ್ಸಿಯಾಗಿ ನಡೆದ ಈ ಸತ್ಯಾಗ್ರಹದಿಂದ ಪುಳಕಿತಗೊಂಡ ಅನೇಕ ಸತ್ಯಾಗ್ರಹಿಗಳು ಆಯಾ ಕಾಂಗ್ರೆಸ್ ಸಮಿತಿಗಳ ಮೂಲಕ ‘ಧ್ವಜ ಸತ್ಯಾಗ್ರಹ’ ಚಳವಳಿಯನ್ನು ವಿದುರಾಶ್ವತ್ಥದಲ್ಲಿ ನಡೆಸಲು ನಿರ್ಧರಿಸಿದರು.
ವಿದುರಾಶ್ವತ್ಥ ದುರಂತ
ಬೆಂಗಳೂರಿಗೆ ಸುಮಾರು ನೂರು ಕಿ.ಮೀ. ದೂರ ಹಾಗೂ ಕೋಲಾರ ಜಿಲ್ಲೆಯ ಗೌರಿಬಿದನೂರಿಗೆ ಏಳು ಕಿ.ಮೀ. ದೂರವಿರುವ ಪುರಾಣಪ್ರಸಿದ್ಧವಾದ ಯಾತ್ರಾಸ್ಥಳ ವಿದುರಾಶ್ವತ್ಥ ಉತ್ತರ ಪಿನಾಕಿನಿ ನದಿಯ ಎಡದಲ್ಲಿದೆ. ಇಂತಹ ಪುಣ್ಯಕ್ಷೇತ್ರದಲ್ಲಿ ಪ್ರತಿ ವರ್ಷ ಏಪ್ರಿಲ್ ತಿಂಗಳಲ್ಲಿ ಚೈತ್ರಮಾಸದ ಹುಣ್ಣಿಮೆಯ ದಿನದ ಬೇಸಿಗೆಯಲ್ಲಿ ನಡೆಯುವ ದೊಡ್ಡ ಜಾತ್ರೆಯ ಸಂದರ್ಭದಲ್ಲಿ ಸುತ್ತಮುತ್ತಲ ಊರುಗಳಿಂದ ಸಾವಿರಾರು ಜನರು ಬಂದು ಸೇರುತ್ತಾರೆ. ಅದೇ ಸಮಯದಲ್ಲಿ ಅಂದರೆ 1938ರ ಏಪ್ರಿಲ್ ಕೊನೆಯ ವಾರದಲ್ಲಿ ಧ್ವಜ ಸತ್ಯಾಗ್ರಹವನ್ನು ಆಚರಿಸಿ ಬಹಿರಂಗ ಸಭೆಯನ್ನು ನಡೆಸಬೇಕೆಂದು ಕಾಂಗ್ರೆಸ್ ಕಾರ್ಯಕರ್ತರು ತೀರ್ಮಾನಿಸಿದರು. ಆದರೆ ಕಾಂಗ್ರೆಸ್ಸಿನ ಈ ಕಾರ್ಯಯೋಜನೆಯನ್ನು ತಪ್ಪಿಸಲು ಮುಂದಾದ ಕೋಲಾರ ಜಿಲ್ಲಾ ಮ್ಯಾಜಿಸ್ಟ್ರೇಟರು ತಾಲೂಕಿನಾದ್ಯಂತ 144ನೇ ಸೆಕ್ಷನ್ ಅನ್ವಯ ವಿದುರಾಶ್ವತ್ಥದ ಸುತ್ತ ಎರಡು ಮೈಲಿ ಸುತ್ತಳತೆಯಲ್ಲಿ ಮೆರವಣಿಗೆ, ಭಾಷಣ, ಧ್ವಜಾರೋಹಣಗಳನ್ನು ನಿಷೇಧಿಸಿ ಆಜ್ಞೆಯನ್ನು ಹೊರಡಿಸಿದರು. ಆದರೂ ಇದಾವುದನ್ನೂ ಲೆಕ್ಕಿಸದೆ ತಾಲ್ಲೂಕು ಕಾಂಗ್ರೆಸ್ ಮುಂದಾಳುಗಳಾದ ಎನ್.ಸಿ. ನಾಗಯ್ಯರೆಡ್ಡಿ, ಎನ್.ಸಿ. ತಿಮ್ಮಾರೆಡ್ಡಿ, ಎಸ್.ಸಿ. ಶ್ರೀನಿವಾಸರಾವ್, ಗೆದರೆ ಗ್ರಾಮದ ರಾಮಸ್ವಾಮಿ, ಜಿ. ವೆಂಕಟಸ್ವಾಮಿಗೌಡ ಮುಂತಾದವರು ಸುತ್ತಮುತ್ತಲಿನ ಊರುಗಳಲ್ಲಿ ಸಂಚರಿಸಿ ಜನರಲ್ಲಿ ಸ್ವಾತಂತ್ರ್ಯ ಚಳವಳಿಯ ಬೀಜ ಬಿತ್ತಿದರು. ಅವರ ಕರೆಗೆ ಓಗೊಟ್ಟ ಜಿಲ್ಲೆಯ ಜನತೆ ವಿದುರಾಶ್ವತ್ಥದಲ್ಲಿ ನೆರೆಯಲಾರಂಭಿಸಿದರು. ಜಾತ್ರೆಗೆ ಬಂದಿದ್ದ ಯಾತ್ರಾರ್ಥಿಗಳೂ ಇದರಲ್ಲಿ ಪಾಲ್ಗೊಂಡರು. 1938ರ ಏಪ್ರಿಲ್ 15ರಂದು ಪೊಲೀಸ್ ಮೀಸಲು ಪಡೆಯ 37 ಮಂದಿ ಉನ್ನತ ಅಧಿಕಾರಿಗಳೊಂದಿಗೆ ವಿದುರಾಶ್ವತ್ಥದಲ್ಲಿ ಜಮಾಯಿಸಿದರು. ಏಪ್ರಿಲ್ 18ರಿಂದ 21ರವರೆಗೆ ಯಾರೂ ನಿಷೇಧಾಜ್ಞೆಯನ್ನು ಉಲ್ಲಂಘಿಸಲಿಲ್ಲ. ಆದರೆ ಏಪ್ರಿಲ್ 22ರಂದು ನಿಷೇಧಾಜ್ಞೆಯನ್ನು ಮುರಿದ ಎನ್.ಸಿ. ನಾಗಯ್ಯರೆಡ್ಡಿ, ಶ್ರೀಪಾಲಯ್ಯ, ಗೆದರೆ ರಾಮಸ್ವಾಮಿ, ವೆಂಕಟಸ್ವಾಮಿ, ನರಸಿಂಹಪ್ಪ, ನಾರಾಯಣಪ್ಪ, ಸೂರ್ಯನಾರಾಯಣರಾವ್, ವೆಂಕಟರಾವ್, ಸಂಗಪ್ಪ ಮುಂತಾದ ಕಾಂಗ್ರೆಸ್ ಕಾರ್ಯಕರ್ತರನ್ನು ಬಂಧಿಸಿ ಸೆಕ್ಷನ್ ಐಪಿಸಿ-188 ಅನ್ವಯ ಚಾರ್ಜ್ಶೀಟ್ ಹಾಕಲಾಯಿತು. ಏಪ್ರಿಲ್ 23ರಂದು ಅನೇಕ ಕಾರ್ಯಕರ್ತರು ಸರಕಾರದ ವಿರುದ್ಧ ಕರಪತ್ರಗಳನ್ನು ಹಂಚಿ ಭಾಷಣ ಮಾಡುವ ಮೂಲಕ ವಾಕ್ಸ್ವಾತಂತ್ರ್ಯದ ಹಕ್ಕನ್ನು ಸ್ಥಾಪಿಸಿದರು. ರಾಷ್ಟ್ರಧ್ವಜದ ಗೌರವ ಕಾಪಾಡಲು, ಸರ್ಕಾರ ನಿಷೇಧಾಜ್ಞೆಯನ್ನು ಹಿಂದಕ್ಕೆ ಪಡೆಯುವವರೆಗೆ ಜನರೆಲ್ಲರೂ ಚಳವಳಿ ಮುಂದುವರಿಸಬೇಕೆಂದು ಕಾಂಗ್ರೆಸ್ ಪಕ್ಷ ಕರೆ ನೀಡಿತು.
ಶ್ರೀಪಾಲಯ್ಯ, ನಾಗಯ್ಯರೆಡ್ಡಿ, ಹೆಚ್. ರಾಮಸ್ವಾಮಿ, ಎಚ್.ಎಲ್. ವೆಂಕಟನಾರಾಯಣ ಮತ್ತು ಇನ್ನೂ ನಾಲ್ಕು ಮಂದಿಯನ್ನು ದಸ್ತಗಿರಿ ಮಾಡಲಾಯಿತು. ಊರಿನಲ್ಲಿ ಹರತಾಳ ಆಚರಿಸಿದರು. ಏಪ್ರಿಲ್ 24ರಂದು ಗೌರಿಬಿದನೂರಿನ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರು ಮತ್ತು ಕೋಲಾರ ಜಿಲ್ಲಾ ಅಧ್ಯಕ್ಷರಾದ ಟಿ. ರಾಮಾಚಾರ್ (ಮೈಸೂರು ಶಾಸನಸಭಾ ಸದಸ್ಯರು ಹಾಗೂ ವಕೀಲರು) ಭಾಷಣ ಮಾಡಿ ಮರುದಿನ ದೊಡ್ಡ ಮೆರವಣಿಗೆ ನಡೆಸಬೇಕೆಂದು ಕರೆ ನೀಡಿದರು. ಜನರನ್ನು ಹಾಗೂ ಸ್ವಯಂಸೇವಕರನ್ನು ವಿದುರಾಶ್ವತ್ಥಕ್ಕೆ ಬರುವಂತೆ ವಿಜ್ಞಾಪನೆ ಮಾಡಲಾಗಿತ್ತು. ಬಂಧನಕ್ಕೊಳಗಾದವರಿಗೆ ಬೆಂಬಲ ಸೂಚಿಸುವ ಸಲುವಾಗಿ ಕರಪತ್ರಗಳನ್ನು ಹಿಂದೂಪುರ, ಇಡಗೂರು, ರಾಮಪುರ, ಮರಳೂರು ಮುಂತಾಗಿ ವಿದುರಾಶ್ವತ್ಥದ ಸುತ್ತಮುತ್ತಲ ಊರುಗಳಲ್ಲೆಲ್ಲ ಹಂಚಲಾಯಿತು. ಏಪ್ರಿಲ್ 25 ಸೋಮವಾರದಂದು ಗೌರಿಬಿದನೂರಿನಲ್ಲಿ ಜಿಲ್ಲೆಯ ಕಾಂಗ್ರೆಸ್ ಮುಖಂಡರಾದ ಟಿ. ರಾಮಾಚಾರ್ ನಾಯಕತ್ವದಲ್ಲಿ ಬೃಹತ್ ಜನಸಂದಣಿ ಸೇರಿ ವಿದುರಾಶ್ವತ್ಥದ ಕಡೆಗೆ ಮೆರವಣಿಗೆ ಹೊರಟಿತು. ಧ್ವಜ ಹಾರಿಸಬಾರದೆಂಬ ನಿಷೇಧಾಜ್ಞೆಯನ್ನು ಉಪೇಕ್ಷಿಸಿ ಹುಡುಗರೂ ಸೇರಿದಂತೆ ಸುಮಾರು ಏಳು ಸಾವಿರಕ್ಕೂ ಮಿಗಿಲಾಗಿ ಜನಸಮೂಹವಿದ್ದು ಎಲ್ಲರೂ ಕೈಗಳಲ್ಲಿ ಧ್ವಜ ಹಿಡಿದಿದ್ದರು. ವೆಂಕಟಸ್ವಾಮಿಗೌಡರು ಅವರೊಂದಿಗಿದ್ದರು. ವಿದುರಾಶ್ವತ್ಥದಲ್ಲಿ ನಡೆದ ಅಂದಿನ ಬಹಿರಂಗ ಸಭೆಯಲ್ಲಿ ಕೋಲಾರ ಜಿಲ್ಲೆಯ ಎಲ್ಲೆಡೆಯಿಂದ ಸುಮಾರು ಇಪ್ಪತ್ತು ಸಾವಿರ ಜನ ಸೇರಿದ್ದರು. ಸತ್ಯಾಗ್ರಹಿಗಳ ತಂಡ ವಿದುರನಾರಾಯಣ ದೇವಸ್ಥಾನದ ಹಿಂಭಾಗದಲ್ಲಿ ನಿರ್ಮಿಸಿದ್ದ ಸಭಾವೇದಿಕೆಯಲ್ಲಿ ನಾರಾಯಣಸ್ವಾಮಿ, ಸೂರಣ್ಣ, ಶ್ರೀನಿವಾಸರಾವ್ ಇವರುಗಳು ರಾಷ್ಟ್ರೀಯ ದ್ವಜ ಹಾರಿಸಿದರು. ಹಿಂದೂಪುರದ ಕೆ. ಸುಬ್ಬರಾಯರು ಭಾಷಣ ಮಾಡಿದರು. ಸಭಾವೇದಿಕೆಯನ್ನು ಸುತ್ತುವರಿದು ನಿಂತಿದ್ದ ಪೊಲೀಸರು ಸತ್ಯಾಗ್ರಹಿಗಳಿಗೆ ಹಿಂದೆ ಹೋಗಲು ಹೇಳಿ ತಾವೂ ಹಿಂದೆ ಸರಿಯುವುದಾಗಿ ಹೇಳಿದರು. ಅದರಂತೆ ಟಿ. ರಾಮಾಚಾರ್ ಹಿಂದಕ್ಕೆ ಸರಿದರು.
ಅಷ್ಟರಲ್ಲಿಯೇ ಅಮಲ್ದಾರ್ ರಾಜಶೇಖರ್ ಒಡೆಯರ್ ಅವರು ಆಗಮಿಸಿ ‘ಇದು ಅಕ್ರಮಕೂಟ; ನೀವು ಇಲ್ಲಿಂದ ಐದು ನಿಮಿಷದೊಳಗಾಗಿ ಚದುರಬೇಕು’ ಎಂದಾಗ ಜನರು ‘ಸ್ವಾಮಿ, ಬಿಸಿಲು ಹೆಚ್ಚಾಗಿದೆ, ಬಿಸಿಲು ಇಳಿದ ಮೇಲೆ ಹೊರಟು ಹೋಗುತ್ತೇವೆ’ ಎಂದರು.
ಆದರೆ ಅದೇ ವೇಳೆಗೆ ಶ್ರೀನಿವಾಸರಾಯರ ನಾಯಕತ್ವದಲ್ಲಿ ಇನ್ನೊಂದು ತಂಡ ಸಭಾವೇದಿಕೆ ಹತ್ತಲು ಮುಂದಾದಾಗ ಅವರಿಗೆ ಚದುರಲು ಪೊಲೀಸರು ಆದೇಶಿಸಿದರು. ಆದರೆ ಯಾರೂ ಕದಲಲಿಲ್ಲ. ಬದಲಿಗೆ ನೆರೆದಿದ್ದವರು ಮುನ್ನುಗ್ಗಲಾರಂಭಿಸಿದರು. ಆಗ ಅವರನ್ನು ಬಂಧಿಸಲು ಪೊಲೀಸರು ಯತ್ನಿಸಿದಾಗ ಸೇರಿದ ಜನ ಆಕ್ರೋಶದಿಂದ ಪೊಲೀಸರೊಂದಿಗೆ ಮಾತಿಗಿಳಿದರು. ಕ್ರಮೇಣ ಹಿಡಿತ ತಪ್ಪಿತು. ಜನರನ್ನು ಚದುರಿಸಲು ತೋಪಿನಲ್ಲಿ ಶಾಂತಿಯಿಂದ ವಿಶ್ರಮಿಸಿಕೊಳ್ಳುತ್ತಿದ್ದ ನಿಶ್ಶಸ್ತ್ರರೂ ನಿಸ್ಸಹಾಯಕರೂ ಆದ ಯಾತ್ರಿಕರು, ವರ್ತಕರು ಹಾಗೂ ರೈತ ಮುಗ್ಧ ಜನರ ಮೇಲೆ ಲಾಠಿ ಪ್ರಹಾರ ಮಾಡಲು ಪ್ರಾರಂಭಿಸಿದರು. ಇದು ಪೊಲೀಸರಿಗೆ ಅನಿವಾರ್ಯವಾಗಿತ್ತು. ಅದಕ್ಕೂ ಜನಸ್ತೋಮ ನಿಯಂತ್ರಣಕ್ಕೆ ಬಾರದಾದಾಗ ಪೊಲೀಸರು ಮಧ್ಯಾಹ್ನ ಸುಮಾರು 12 ಗಂಟೆಯ ವೇಳೆಗೆ ಗೋಲೀಬಾರ್ಗೆ ಮುಂದಾದರು. ಜನ ದಿಕ್ಕಾಪಾಲು ಓಡಲು ಪ್ರಾರಂಭಿಸಿದರು. ಪುನಃ ಸಂಜೆ 4.30 ಗಂಟೆಗೆ ಪೊಲೀಸಿನವರು ಸಾರ್ವಜನಿಕ ಗುಂಪಿನ ಮೇಲೆ ಎರಡನೆ ಸಲ ಗುಂಡುಗಳನ್ನು ಹಾರಿಸಿದರು. ಒಟ್ಟು 96 ಸುತ್ತು ಗುಂಡು ಹಾರಿಸಿದರು. ಅದರಿಂದ ನೂರಾರು ಮಂದಿ ಗಾಯಾಳಾದರು. ಮೂವತ್ತೈದು ಮಂದಿ ಮರಣ ಹೊಂದಿದರು. ಇಡಗೂರು ಭೀಮಯ್ಯ, ನಾಮಾ ಅಶ್ವತ್ಥನಾರಾಯಣ ಶೆಟ್ಟಿ, ನರಸಪ್ಪ, ಹನುಮಂತಪ್ಪ, ಚೌಲೂರು ನರಸಪ್ಪ, ಗಚ್ಚನಗಾರಿ ನರಸಪ್ಪ, ಕಾರಂಡಹಳ್ಳಿ ಮಲ್ಲಯ್ಯ, ವೆಂಕಟಗಿರಿಯಪ್ಪ ಹಾಗೂ ಮರಳೂರಿನ ಗೌರಮ್ಮ – ಸರ್ಕಾರೀ ದಾಖಲೆಯ ಪ್ರಕಾರ ಈ 10 ಮಂದಿ ಮಡಿದವರಾಗಿದ್ದರು. ಅವರೆಲ್ಲರ ಪಾರ್ಥಿವ ಶರೀರಗಳಿಗೆ ವಿದುರಾಶ್ವತ್ಥದ ದೇವಾಲಯದ ಸಮೀಪದಲ್ಲಿರುವ ಉದ್ಯಾನವನದಲ್ಲೇ ಶವಸಂಸ್ಕಾರ ಮಾಡಲಾಯಿತು. ಆ ಸಮಯದಲ್ಲಿ ಗುಡಿಬಂಡೆಯ ರಾಮರಾಯರು ಗಾಯಾಳುಗಳಿಗೆ ಶುಶ್ರೂಷೆ ಮಾಡಿ ವರದಿ ತಯಾರಿಸಿ ರುಮಾಲೆ ಚನ್ನಬಸವಯ್ಯ ಮತ್ತು ನಂಜುಂಡರಾವ್ ಮೂಲಕ ಪಿ.ಟಿ.ಐ. ಹಾಗೂ ಲಂಡನ್ನಿನ ಬಿ.ಬಿ.ಸಿ.ಗಳಿಗೆ ಸುದ್ದಿ ಮುಟ್ಟಿಸಿದರು. ಜಗತ್ತಿನ ಪ್ರಮುಖ ಪತ್ರಿಕೆಗಳು ಈ ಪೈಶಾಚಿಕ ಕೃತ್ಯವನ್ನು ಖಂಡಿಸಿದವು. ಈ ದುರಂತದ ಸುದ್ದಿ ಹರಡುತ್ತಿದ್ದಂತೆ ದೊಡ್ಡ ಆಂದೋಲನವೇ ಆಯಿತು.
ಈ ಕಾರಣದಿಂದ ವಿದುರಾಶ್ವತ್ಥದ ದುರಂತ ಜಗಜ್ಜಾಹೀರಾಯಿತು. ಅಂದು ಐ.ಪಿ.ಸಿ. 188 ವಿಧಿಯ ಅನ್ವಯ ಬಂಧಿಸಲ್ಪಟ್ಟವರಲ್ಲಿ ಟಿ. ರಾಮಾಚಾರ್ ಮತ್ತವರ ಅನುಯಾಯಿಗಳಿದ್ದರು. ಪೊಲೀಸರ ಕ್ರಮವನ್ನು ರಾಜ್ಯಾದ್ಯಂತ ಸ್ವಾತಂತ್ರ್ಯ ಹೋರಾಟಗಾರರು ಪ್ರತಿಭಟಿಸಿದರು.
ವಿದುರಾಶ್ವತ್ಥದಲ್ಲಿ ವಿದುರನಾರಾಯಣನ ಪೂಜೆಯಲ್ಲಿ ತೊಡಗಿದ್ದ ಗರ್ಭಿಣಿ ಗೌರಮ್ಮನಿಗೆ ಗುಂಡು ಬಡಿದು ಸ್ಥಳದಲ್ಲೇ ಮಡಿದಳೆಂಬ ವಾರ್ತೆ ಎಲ್ಲೆಡೆ ಹರಡಿತು. ಈ ಹತ್ಯಾಕಾಂಡ ಕರಾಳ ಇತಿಹಾಸವನ್ನು ಸೃಷ್ಟಿಸಿತು. ಈ ಘಟನೆಯನ್ನು ಗಾಂಧಿ ಸೇರಿದಂತೆ ಹಲವು ಮಂದಿ ಹಿರಿಯರು ಖಂಡಿಸಿದರು. ಅದರ ಬೆನ್ನಲ್ಲೇ ಶಾಲಾ-ಕಾಲೇಜುಗಳು ಮುಚ್ಚಲ್ಪಟ್ಟು ಪ್ರತಿಭಟನಾ ಮೆರವಣಿಗೆಗಳು ಚಿಕ್ಕಬಳ್ಳಾಪುರ ಸೇರಿದಂತೆ ಕೋಲಾರ ಜಿಲ್ಲೆಯಾದ್ಯಂತ ನಡೆದವು. ಚಿಕ್ಕಬಳ್ಳಾಪುರದ ಕೆ. ಸಂಪಂಗಿರಾಮಯ್ಯ, ಕೆ. ವೆಂಕಟಪ್ಪ, ಕೆ. ವೆಂಕಟಕೃಷ್ಣಪ್ಪ, ಚಿಕ್ಕಬಳ್ಳಾಪುರದ ಸಂಪತ್ಕುಮಾರನ್, ಯಲ್ದೂರು ನರಸಿಂಹಯ್ಯ, ಎ.ಸಿ. ಹನುಮಂತಯ್ಯ, ಎ. ಮುನಿಯಪ್ಪ ಮುಂತಾದವರು ನಿಷೇಧಾಜ್ಞೆಯನ್ನು ಮುರಿದು ಸತ್ಯಾಗ್ರಹ ನಡೆಸುವ ಮೂಲಕ ಬಂಧನಕ್ಕೊಳಗಾಗಿ ಮೂರು ತಿಂಗಳು ಕಾರಾಗೃಹದಲ್ಲಿದ್ದರು. ಈ ದುರಂತದಲ್ಲಿ ಭಾಗವಹಿಸಿದ್ದ ಶ್ರೀನಿವಾಸಪುರ ತಾಲೂಕಿನ ಹೊಗಳಗೆರೆಯ ಜಿ. ನಾರಾಯಣಗೌಡರು ಬಂಧಿಸಲ್ಪಟ್ಟು ಮೂರು ದಿನ ಸೆರೆಮನೆಯಲ್ಲಿದ್ದರೆಂದು ತಿಳಿದುಬರುತ್ತದೆ. ಅದೇ ವರ್ಷ ಇವರು ಅಖಿಲ ಮೈಸೂರು ಕಾಂಗ್ರೆಸ್ ಸಮಿತಿಯ ಸದಸ್ಯರಾದರು.
ವಿದುರಾಶ್ವತ್ಥ ದುರಂತವನ್ನು ಪ್ರತಿಭಟಿಸಿ, ಬೆಂಗಳೂರಿನ ಚಿಕ್ಕಲಾಲ್ಬಾಗಿನಲ್ಲಿ ನಡೆದ ಬಹಿರಂಗ ಸಭೆಯಲ್ಲಿ ಕೆ.ಸಿ. ರೆಡ್ಡಿ ಹಾಗೂ ಎನ್.ಸಿ. ತಿಮ್ಮಾರೆಡ್ಡಿ ಭಾಷಣ ಮಾಡಿದ ಸಂದರ್ಭದಲ್ಲಿ ಲಾಠಿಚಾರ್ಜ್ ಆಗಿ ಪೆಟ್ಟು ತಿಂದವರಲ್ಲಿ ಪಿಲ್ಲಗುಂಡ್ಲಹಳ್ಳಿಯ ಪಿ.ವಿ. ಸೀತಾರಾಮ ಕಾಂತಾನಂದಜೀಯವರೂ ಒಬ್ಬರಾಗಿದ್ದರು. ಮುಳಬಾಗಿಲು-ಮೋತಕಪಲ್ಲಿಯ ಎಂ.ವಿ. ಕೃಷ್ಣಪ್ಪ ಹಾಗೂ ಕ್ಯಾಸಂಬಳ್ಳಿಯ ಕೆ.ಸಿ. ರೆಡ್ಡಿಯವರು ಅಲ್ಲಿಂದಾಚೆಗೆ ಆಂದೋಲನದಲ್ಲಿ ಪಾಲ್ಗೊಂಡರು.
ಮಹಾತ್ಮರ ಅಭಿಪ್ರಾಯ
ಈ ದುರಂತಕ್ಕೆ ಸಂಬಂಧಿಸಿದಂತೆ ಗಾಂಧಿಯವರು ಮೈಸೂರು ಸರ್ಕಾರಕ್ಕೆ ಬರೆದ ಪತ್ರದಲ್ಲಿ “ಮೈಸೂರು ಸರ್ಕಾರಕ್ಕೆ ಈಗಿನ ನಿರಂಕುಶಾಧಿಕಾರಿಗಳನ್ನು ಹಿಂದೆಗೆದು ಆಡಳಿತದ ಜವಾಬ್ದಾರಿಯನ್ನು ಜನತಾಪ್ರತಿನಿಧಿಗಳಿಗೆ ಒಪ್ಪಿಸುವುದೇ ಉತ್ಕೃಷ್ಟ ಹಾಗೂ ಏಕಮಾತ್ರ ಪರಿಹಾರ. ಮಹಾರಾಜರಿಗೂ ಮತ್ತು ದಿವಾನ್ ಮಿರ್ಜಾ ಇಸ್ಮಾಯಿಲ್ ಅವರಿಗೂ ಈ ಪ್ರಸಂಗದಲ್ಲಿ ನನ್ನ ಸೂಚನೆ, ಸಂಸ್ಥಾನಗಳ ಜನರು ಸ್ವಾತಂತ್ರ್ಯದ ಹೊಸ ಕನಸನ್ನು ಕಾಣತೊಡಗಿದ್ದಾರೆ. ಯಾವುದು ಅವರಿಗೆ ದೂರದ ಗುರಿ ಎಂದು ಕಾಣುತ್ತಿತ್ತೋ, ಅದು ಈಗ ಅವರಿಗೆ ವಿಳಂಬವಿಲ್ಲದೆ ಸಾಧಿತವಾಗುವ ಸಂಭವ ಏರ್ಪಟ್ಟಿದೆ” ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಈ ಘಟನೆಯಿಂದ ಸಾವಿರಾರು ಜನರು ಸ್ಫೂರ್ತಿ ಪಡೆದು ಏನೇ ಕಷ್ಟ ಬಂದರೂ ರಾಷ್ಟ್ರಧ್ವಜಕ್ಕಾಗಿ ಹೋರಾಡಲು ತೀರ್ಮಾನಿಸಿದರು. ಕ್ರಮೇಣ ಸರ್ಕಾರಕ್ಕೂ ಕಾಂಗ್ರೆಸ್ಸಿಗೂ ಒಂದು ಒಪ್ಪಂದವಾಯಿತು. ಹೀಗೆ ಚಳವಳಿಯ ಮೂಲಕ ಜನರು ವಾಕ್ಸ್ವಾತಂತ್ರ್ಯ ಮತ್ತು ಸಭೆ ಸೇರುವ ಸ್ವಾತಂತ್ರ್ಯ ಸ್ಥಾಪಿಸಿ ರಾಷ್ಟ್ರಧ್ವಜದ ಗೌರವವನ್ನು ಕಾಪಾಡಿಕೊಂಡರು.
ವಿಚಾರಣಾ ಸಮಿತಿ
ಸರ್ಕಾರದ ವರ್ತನೆಯನ್ನು ಖಂಡಿಸಿ, ಭೀಕರ ಕೃತ್ಯದ ನಿಜಾಂಶವನ್ನು ಅರಿಯಲು ಕಾಂಗ್ರೆಸ್ ಕಾರ್ಯಕಾರಿ ಸಮಿತಿಯು ಎಂ. ಲಕ್ಷ್ಮೀನಾರಾಯಣರ ಅಧ್ಯಕ್ಷತೆಯಲ್ಲಿ ಎಂ.ಎ. ದೊರೆಸ್ವಾಮಿ ಅಯ್ಯಂಗಾರ್, ಎಸ್. ನಿಜಲಿಂಗಪ್ಪ, ಕೆ.ಟಿ. ಸತ್ಯನಾರಾಯಣ ಶೆಟ್ಟಿ ಮತ್ತು ಹೆಚ್.ಕೆ. ವೀರಣ್ಣಗೌಡರನ್ನೊಳಗೊಂಡ ಒಂದು ಸಮಿತಿಯನ್ನು ರಚಿಸಿತು. ವೀರಣ್ಣಗೌಡರು ಗೌರಿಬಿದನೂರಿಗೆ ಹೋಗಿ ಅಲ್ಲಿದ್ದ ಸಂಪಂಗಿ ರಾಮಯ್ಯಶೆಟ್ಟರ ಹೊಸಮನೆಯಲ್ಲಿ ವಿಚಾರಣಾ ಸಮಿತಿಯ ಕಚೇರಿ ಪ್ರಾರಂಭಿಸಿದರು. ಸದಸ್ಯರೆಲ್ಲರೂ ಪ್ರತಿದಿನವೂ ಅಕ್ಕಪಕ್ಕದ ಹಳ್ಳಿಗಳು ಸೇರಿದಂತೆ ಹಿಂದೂಪುರಕ್ಕೂ ಹೋಗಿ ವಿಚಾರಣೆ ನಡೆಸಿದರು. ಇವರ ಪ್ರಯತ್ನದಿಂದ ಶಿವಪುರ ಧ್ವಜಸತ್ಯಾಗ್ರಹಕ್ಕಾಗಿ ಸೆರೆಮನೆಯಲ್ಲಿ ಶಿಕ್ಷೆ ಅನುಭವಿಸುತ್ತಿದ್ದ ಕಾಂಗ್ರೆಸ್ ಮುಖಂಡರ ಬಿಡುಗಡೆಯಾಯಿತು. ಈ ಮಧ್ಯೆ ಸರ್ಕಾರವೇ ವಿದುರಾಶ್ವತ್ಥದ ಗಲಭೆಯ ಕಾರಣಗಳನ್ನು ವಿಚಾರಿಸಲು ಸರ್ಕಾರದ ವತಿಯಿಂದ 1938ರ ಮೇ 6ರಂದು ಮದರಾಸ್ ಹೈಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳಾದ ವೇಪಾ ರಾಮೇಶಂ ಅವರ ಅಧ್ಯಕ್ಷತೆಯಲ್ಲಿ ಎ.ಆರ್. ನಾಗೇಶ್ವರಯ್ಯರ್ ಮತ್ತು ಡಾ|| ಎಫ್.ಎಕ್ಸ್. ಡಿಸೋಜಾ ಮತ್ತಿತರ ಸದಸ್ಯರುಳ್ಳ ಒಂದು ವಿಚಾರಣಾ ಸಮಿತಿಯನ್ನು ನೇಮಿಸಿತು. ಆಗ ಪ್ರಜಾಸ್ವಾತಂತ್ರ್ಯ ಸಂಘದವರು (Civil Liberties Union) ಪ್ರಜೆಗಳ ಪರ ವಾದಿಸಿದರು. ಸರ್ಕಾರದ ವರದಿ ಸಮರ್ಪಕವಾಗಿಲ್ಲವೆಂದು ಗಾಂಧಿಯವರು ‘ಹರಿಜನ’ ಪತ್ರಿಕೆಯಲ್ಲಿ ಟೀಕಿಸಿದರು. ಕಾಂಗ್ರೆಸ್ ಕಾರ್ಯಕಾರಿ ಸಮಿತಿ ತನ್ನ ವರದಿಯನ್ನು ಒಪ್ಪಿಸುವ ಅಗತ್ಯವಿಲ್ಲವೆಂದು ತೀರ್ಮಾನಿಸಿತು.
ವೇಪಾ ರಾಮೇಶಂ ವರದಿ
ಆದರೆ ಸರ್ಕಾರ ನೇಮಿಸಿದ ಸಮಿತಿಯು ಐದೂವರೆ ತಿಂಗಳು ವಿಚಾರಣೆ ನಡೆಸಿ 147 ಜನರ ಸಾಕ್ಷ್ಯವನ್ನು ಪಡೆದು ಒಂದು ವರದಿ ಒಪ್ಪಿಸಿತು. ಈ ಸಮಿತಿಯ ವರದಿಯಿಂದ ಮೈಸೂರು ಕಾಂಗ್ರೆಸ್ಸಿಗೆ ಸಮಾಧಾನವಾಗಲಿಲ್ಲ. ವರದಿಯು ಸಂಸ್ಥಾನದಲ್ಲೆಲ್ಲ ಅಸಮಾಧಾನವನ್ನೂ ಅತೃಪ್ತಿಯನ್ನೂ ಉಂಟುಮಾಡಿತು. ವರದಿಯಲ್ಲಿ ಮೈಸೂರು ಕಾಂಗ್ರೆಸ್ ಮೇಲಿನ ಟೀಕೆಗಳಿದ್ದವು. ಸರ್ಕಾರವು ವರದಿಯನ್ನು ಒಪ್ಪಿಕೊಂಡು ಕಾಂಗ್ರೆಸ್ ಮೇಲಿನ ಟೀಕೆಯನ್ನು ಅನುಮೋದಿಸಿತು. ಆದರೆ ವರದಿಯನ್ನೂ ಅದರ ಮೇಲಿನ ಸರ್ಕಾರದ ಆಜ್ಞೆಯನ್ನೂ ಎಲ್ಲ ಕಡೆಗಳಲ್ಲಿಯೂ ಜನರು ತೀವ್ರವಾಗಿ ಖಂಡಿಸಿದರು. ಸರ್ಕಾರದ ಬಗ್ಗೆ ಪ್ರಜೆಗಳಲ್ಲಿ ಜುಗುಪ್ಸೆ ಮತ್ತು ಅವಿಶ್ವಾಸ ಹೆಚ್ಚಿದವು.
ವಿದುರಾಶ್ವತ್ಥ ದುರಂತವು ಮೈಸೂರು ಸಂಸ್ಥಾನದಲ್ಲಿ ಅಷ್ಟೇ ಅಲ್ಲದೆ ಭಾರತದ ಉದ್ದಗಲಕ್ಕೂ ಮತ್ತು ವಿದೇಶಗಳಲ್ಲೂ ಪ್ರಚಾರಗೊಂಡದ್ದಲ್ಲದೆ, ಸಂಸ್ಥಾನದಾದ್ಯಂತ ಸ್ವಾತಂತ್ರ್ಯದ ಕಿಚ್ಚು ಹಚ್ಚಿತು. ಹೀಗೆ ಸಂಸ್ಥಾನದಲ್ಲಿ ರಾಜಕೀಯ ಅಶಾಂತಿ ಉದ್ಭವಿಸಿತು. ಮೈಸೂರು ಕಾಂಗ್ರೆಸ್ಸನ್ನು ರಾಜಕೀಯ ಪಕ್ಷವೆಂದು ಘೋಷಿಸಿ ರಾಜಕೀಯ ಸುಧಾರಣಾ ಸಮಿತಿಗೆ ಹೊಸದಾಗಿ ಕೆ.ಟಿ. ಭಾಷ್ಯಂ, ಹೆಚ್.ಸಿ. ದಾಸಪ್ಪ ಮತ್ತು ಆರ್. ಚೆನ್ನಿಗರಾಮಯ್ಯ ಅವರನ್ನು ಸೇರ್ಪಡೆ ಮಾಡಿಕೊಳ್ಳಲಾಯಿತು. ಇದರಿಂದ ಕಾಂಗ್ರೆಸ್ ಸಮಿತಿಯಲ್ಲಿ ಶಾಂತಿ ಸ್ಥಾಪಿತವಾಯಿತು. ರಾಷ್ಟ್ರನಾಯಕರೊಂದಿಗೆ ಒಪ್ಪಂದ ಮಾಡಿಕೊಂಡ ಸಂಸ್ಥಾನದ ಧ್ವಜದೊಡನೆ ರಾಷ್ಟ್ರಧ್ವಜವನ್ನೂ ಹಾರಿಸಲು ಒಪ್ಪಿಗೆ ಸಿಕ್ಕಿತು.
ವಿದುರಾಶ್ವತ್ಥ ದಿನಾಚರಣೆ
ತತ್ಪರಿಣಾಮವಾಗಿ 1938ರ ಅಕ್ಟೋಬರ್ 26ರಂದು ‘ವಿದುರಾಶ್ವತ್ಥ ದಿನಾಚರಣೆ’ಯನ್ನು ಆಚರಿಸಲಾಯಿತು. ಅಂದು ಕೆ.ಸಿ. ರೆಡ್ಡಿಯವರು ಮಾತನಾಡುತ್ತ ‘ಹೈಕೋರ್ಟಿನ ನ್ಯಾಯಮೂರ್ತಿಗಳಾದ ವೇಪಾ ರಾಮೇಶಂ ಅವರು ಸರ್ಕಾರ ವಿದುರಾಶ್ವತ್ಥದಲ್ಲಿ ಗೋಲೀಬಾರು ಮಾಡಿದ ಘಟನೆಯಲ್ಲಿ ಸರ್ಕಾರವನ್ನು ಅಪರಾಧಮುಕ್ತರನ್ನಾಗಿ ಮಾಡುತ್ತೇನೆ’ ಎಂದು ಪತ್ರ ಬರೆದಿರುವ ವಿಚಾರವನ್ನು ಬಯಲು ಮಾಡಿದರು.
ಮುಳಬಾಗಿಲು ತಾಲೂಕಿನ ಪದಕಾಷ್ಠಿ ಗ್ರಾಮದವರಾದ ಪಿ. ರಾಮೇಗೌಡರು, ಈ ಸತ್ಯಾಗ್ರಹ ನಂತರ ಬಂಧನಮುಕ್ತರಾಗಿ ಆವನಿ ಗ್ರಾಮಕ್ಕೆ ಬಂದರು. ಆಗ ಹೆಚ್.ಸಿ. ದಾಸಪ್ಪ ಹಾಗೂ ಯಶೋಧರಾ ದಾಸಪ್ಪ ಅವರೂ ಸಹ ಆವನಿ ಗ್ರಾಮದಲ್ಲಿ ಮಾಡಿದ ಭಾಷಣದಿಂದ ಪಿ. ರಾಮೇಗೌಡರು ಪ್ರಭಾವಿತರಾಗಿ, ಗೆಳೆಯ ಪುಟ್ಟಣ್ಣನವರೊಂದಿಗೆ ಹಳ್ಳಿಹಳ್ಳಿಗೆ ಹೋಗಿ ಕಾಂಗ್ರೆಸ್ಸಿಗೆ ಸದಸ್ಯರನ್ನು ನೋಂದಣಿಸುವ ಕಾರ್ಯದಲ್ಲಿ ತೊಡಗಿದರು. ಅಲ್ಲದೆ ಕೆ.ಸಿ. ರೆಡ್ಡಿ, ಪಟ್ಟಾಭಿರಾಮನ್, ಟಿ. ರಾಮಾಚಾರ್, ಎನ್.ಸಿ. ನಾಗಯ್ಯರೆಡ್ಡಿ ಮುಂತಾದ ನಾಯಕರ ಭಾಷಣಗಳನ್ನು ಗ್ರಾಮೀಣ ಪ್ರದೇಶಗಳಲ್ಲಿ ಏರ್ಪಡಿಸುವ ಮೂಲಕ ಕಾಂಗ್ರೆಸ್ಸಿನ ಜನಪ್ರಿಯತೆಗೆ ಕಾರಣರಾದರು. ಕೆ.ಟಿ. ಭಾಷ್ಯಂ ಅವರು 1938ರಲ್ಲಿ ಪದಕಾಷ್ಠಿ ಗ್ರಾಮಕ್ಕೆ ಆಗಮಿಸಿದ್ದಾಗ ಎಂ.ವಿ. ಕೃಷ್ಣಪ್ಪನವರ ಆದೇಶದಂತೆ, 12 ಎತ್ತುಗಳನ್ನು ಹೂಡಿದ ಅಲಂಕೃತ ಎತ್ತಿನಬಂಡಿಯಲ್ಲಿ ಭಾಷ್ಯಂರನ್ನು ಸಭಾ ಸ್ಥಳಕ್ಕೆ ಅದ್ಧೂರಿ ಮೆರವಣಿಗೆಯಲ್ಲಿ ಕರೆತರಲಾಯಿತು. ಈ ಸಭೆ ನಡೆಸದಿರಲು ಸರ್ಕಾರ ಬೆದರಿಕೆ ಹಾಕಿ ಚಪ್ಪರ ತೆಗೆಯಲು ಸೂಚಿಸಿತ್ತು. ಅದಕ್ಕೆ ಜಗ್ಗದೆ ಸಭೆಯನ್ನು ನಡೆಸಲಾಯಿತು. ಆದರೆ ಸಭೆಯ ನಂತರ ರಾಮೇಗೌಡರನ್ನು ಬಂಧಿಸಿ, ಆಸ್ತಿ ಜಫ್ತಿ ಮಾಡುವ ಯತ್ನ ನಡೆಯಿತಾದರೂ, ಸ್ಥಳೀಯರ ಬೆಂಬಲವಿದ್ದುದರಿಂದ ಅದು ವಿಫಲವಾಯಿತು.
ಬೆಂಗಳೂರಿನ ಭಾಷ್ಯಂ ಪಾರ್ಕ್ನಲ್ಲಿ 1938ರ ಏಪ್ರಿಲ್ 29ರಂದು ಜರುಗಿದ ಧ್ವಜಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಬಾಗೇಪಲ್ಲಿ ತಾಲೂಕಿನ ಪುಲಿಗಲ್ ಗ್ರಾಮದ ಬಾಲಕ ಪಿ.ಎನ್. ಲಕ್ಷ್ಮಣರಾವ್ ಲಾಠಿ ಏಟು ತಿಂದು ಬಂಧನಕ್ಕೊಳಪಟ್ಟು, ಸೆರೆಮನೆಯಲ್ಲಿ ರಾಗಿ ಬೀಸುತ್ತ 20 ದಿನದ ಸೆರೆಮನೆವಾಸ ಅನುಭವಿಸಿದನೆಂದು ತಿಳಿದುಬಂತು. ಈ ನಡುವೆ ಸಂಸ್ಥಾನದಾದ್ಯಂತ ತಾಲೂಕುಮಟ್ಟದಲ್ಲಿ ರೈತಸಭೆಗಳನ್ನು ಹಮ್ಮಿಕೊಳ್ಳಲಾಯಿತು. ಅಸಹಕಾರ ಚಳವಳಿ, ಈಚಲು ಮರಗಳನ್ನು ನಾಶಮಾಡುವಂತಹ ಚಟುವಟಿಕೆಗಳು ನಡೆದವು. ಈ ಸಂದರ್ಭದಲ್ಲಿ ಸರ್ಕಾರದವರು ತಾಯಿನಾಡು, ವಿಶ್ವಕರ್ನಾಟಕ, ನವಜೀವನ, ಪೌರವಾಣಿ ಹಾಗೂ ಜನವಾಣಿ ಪತ್ರಿಕೆಯ ಪ್ರಕಟನೆಗಳನ್ನು ಪ್ರತಿಬಂಧಿಸಿತು.
* * *
ವಿದುರಾಶ್ವತ್ಥದಲ್ಲಿ ನಡೆದ ಹತ್ಯಾಕಾಂಡ ಸ್ವಾತಂತ್ರ್ಯ ಸಾಧನೆಯ ಮಹೋದ್ಯಮದಲ್ಲಿ ಸಂಸ್ಥಾನದ ಪ್ರಜೆಗಳಿಗೆ ಶೀಲ, ಶೌರ್ಯ ಮತ್ತು ದೃಢಸಂಕಲ್ಪ ಶಕ್ತಿಯನ್ನು ಗಳಿಸಿಕೊಟ್ಟಿತು. ಮೈಸೂರು ಸಂಸ್ಥಾನದ ರಾಜಕೀಯ ಇತಿಹಾಸದಲ್ಲಿ ಈ ದುರಂತವು ಒಂದು ಮಹತ್ತ್ವದ ಘಟನೆಯಾಗಿ ಅನಂತರದಲ್ಲಿ ರಾಜಕೀಯ ಆಂದೋಲನ ಬಲಗೊಂಡಿತು.
ಒಂದು ದೃಷ್ಟಿಕೋನದಿಂದ ವಿವೇಚಿಸಿದರೆ ಮೈಸೂರು ಸಂಸ್ಥಾನದಲ್ಲಿ ಕಾಂಗ್ರೆಸ್ಸಿನ ಬೆಳವಣಿಗೆ ಹಾಗೂ ಅದರ ಪ್ರಭಾವಗಳಿಗೆ ಸರ್ಕಾರದ ನೀತಿಯೇ ಕಾರಣವಾಗಿ ಕಾಂಗ್ರೆಸ್ ವಿರುದ್ಧ ಕೈಗೊಂಡ ಪ್ರತಿಯೊಂದು ಕ್ರಮವೂ ಕಾಂಗ್ರೆಸ್ ಸಂಸ್ಥೆಯ ಶಕ್ತಿಯು ಮತ್ತೂ ಹೆಚ್ಚಾಗಿ ಬೆಳೆಯಲು ಸಹಾಯಕವಾಯಿತು. ಈ ದುರ್ಘಟನೆಯಿಂದ ಕಾಂಗ್ರೆಸ್ಸಿಗೆ ಇನ್ನೊಂದು ಶತಮಾನದಲ್ಲಿ ಬರಬಹುದಾಗಿದ್ದ ಶಕ್ತಿಯು ಅಲ್ಪಕಾಲದಲ್ಲಿಯೇ ಒದಗಿಬಂದಿತು.
ಆ ಸಮಯದಲ್ಲಿ ಪ್ರಕಟಗೊಳ್ಳುತ್ತಿದ್ದ ಕೆಲವೇ ಪತ್ರಿಕೆಗಳು ಇದನ್ನು “ಮೈಸೂರು ಜಲಿಯನ್ವಾಲಾಬಾಗ್” ಎಂದು ಕರೆದು ಸರ್ಕಾರವನ್ನು ಖಂಡಿಸಿ ಬರೆದವು.
ಪಟೇಲ್-ಮಿರ್ಜಾ ಒಪ್ಪಂದ
ಮಿರ್ಜಾ ಸರ್ಕಾರವು ತನ್ನ ತಪ್ಪನ್ನರಿತು ಸಮಸ್ಯೆ ಬಗೆಹರಿಸಲು ಗಾಂಧಿಯವರ ಪ್ರವೇಶವನ್ನು ಅಪೇಕ್ಷಿಸಿತು. ಈ ಗಲಭೆಯ ಪೂರ್ಣ ವಿವರಣೆಯನ್ನು ಪಡೆಯಲು ಗಾಂಧಿ ಅವರು ಸರ್ದಾರ್ ವಲ್ಲಭಭಾಯಿ ಪಟೇಲ್ ಮತ್ತು ಆಚಾರ್ಯ ಜೀವತರಾಮ ಭಗವಾನ್ದಾಸ್ ಕೃಪಲಾನಿಯವರನ್ನು ಮೈಸೂರು ಸಂಸ್ಥಾನಕ್ಕೆ 1938ರ ಮೇ 7ರಂದು ಕಳುಹಿಸಿದರು. (ಈ ಸಮಾವೇಶವನ್ನು ಸುಗಮಗೊಳಿಸುವುದರಲ್ಲಿ ಡಿ.ವಿ. ಗುಂಡಪ್ಪನವರ ಯೋಗದಾನವೂ ಇತ್ತು.) ಇಕ್ಕಟ್ಟಿನಿಂದ ಪಾರಾಗಲು ಸರ್ಕಾರಕ್ಕೆ ಒಂದು ಅವಕಾಶ ಬೇಕಾಗಿತ್ತು. ಸರ್ದಾರ್ ಪಟೇಲ್ ಮತ್ತು ಜೆ.ಬಿ. ಕೃಪಲಾನಿಯವರು ಸರ್ಕಾರದೊಡನೆ ಹಾಗೂ ಕಾಂಗ್ರೆಸ್ ವರಿಷ್ಠರೊಂದಿಗೆ ಚರ್ಚಿಸಿದರು. ಕೆಲವು ದಿನಗಳ ಚರ್ಚೆ ಮತ್ತು ಮಾತುಕತೆಗಳ ಫಲವಾಗಿ ಪಟೇಲ್-ಮಿರ್ಜಾ ಒಪ್ಪಂದವಾಯಿತು. ಒಪ್ಪಂದವನ್ನು ಸರ್ಕಾರವು 1938ರ ಮೇ 17ರಂದು ಪ್ರಕಟಿಸಿದ ಪ್ರಸಿದ್ಧ ಪತ್ರಿಕೆಯಲ್ಲಿ ಅದನ್ನು ಸೂಚಿಸಿತು. ಈ ಒಪ್ಪಂದದಂತೆ ಸರ್ಕಾರವು ಮೈಸೂರು ಕಾಂಗ್ರೆಸ್ ಸಂಸ್ಥೆಯನ್ನು ಒಂದು ರಾಜಕೀಯ ಪಕ್ಷವೆಂದು ಅಂಗೀಕರಿಸಿತು. ಕಾಂಗ್ರೆಸ್ಸಿನ ತ್ರಿವರ್ಣ ಧ್ವಜವನ್ನು ಮೈಸೂರು ಧ್ವಜದೊಡನೆ ಹಾರಿಸಬಹುದೆಂದು ಒಪ್ಪಿಕೊಂಡರು. ಎಲ್ಲ ರಾಜಕೀಯ ಬಂದಿಗಳನ್ನು ಬಿಡುಗಡೆ ಮಾಡಲು, ನಿಷೇಧಾಜ್ಞೆಗಳನ್ನು ಹಿಂದಕ್ಕೆ ತೆಗೆದುಕೊಳ್ಳಲು ಮತ್ತು ಅಷ್ಟರಲ್ಲಿ ನೇಮಿಸಲ್ಪಟ್ಟಿದ್ದ ಸುಧಾರಣಾ ಸಮಿತಿಗೆ, ಅದು ಇಚ್ಛಿಸಿದರೆ ಜವಾಬ್ದಾರಿ ಸರ್ಕಾರ ಸ್ಥಾಪನೆಗೆ ಒಂದು ಯೋಜನೆ ಶಿಫಾರಸು ಮಾಡಲು ಒಪ್ಪಿತು.
ಈ ಒಪ್ಪಂದದ ಅಂಶಗಳನ್ನೆಲ್ಲ ಅಂಗೀಕರಿಸಿ ಸರ್ಕಾರವು 1938ರ ಮೇ 17ರಂದು ಒಂದು ಪ್ರಕಟನೆಯನ್ನು ಹೊರಡಿಸಿತು. ರಾಜಕೀಯ ಬಂದಿಗಳನ್ನೆಲ್ಲ ಬಿಡುಗಡೆ ಮಾಡಿದರು ಮತ್ತು ಸುಧಾರಣಾ ಸಮಿತಿಗೆ ಮತ್ತೆ ಮೂರು ಜನ ಕಾಂಗ್ರೆಸ್ ಸದಸ್ಯರನ್ನು ನೇಮಿಸಿದರು. ಒಪ್ಪಂದದಿಂದ ಸಮಾಧಾನಗೊಂಡ ಕಾಂಗ್ರೆಸ್ ಇವೆಲ್ಲ ತನ್ನ ವಿಜಯವೆಂದು ಪರಿಗಣಿಸಿ ಒಪ್ಪಂದದಂತೆ ಸುಧಾರಣಾ ಸಮಿತಿಗೆ ಸಹಕಾರ ನೀಡುವುದರ ಜೊತೆಗೆ ಎಲ್ಲಾ ವಿಷಯಗಳಲ್ಲಿಯೂ ಒಪ್ಪಂದದಂತೆಯೇ ನಡೆಯಿತು. ಎಲ್ಲ ವಿಷಯಗಳು ಚರ್ಚಿಸಲ್ಪಟ್ಟರೂ ಬಿ.ಎನ್. ಗುಪ್ತಾರವರ ಮೇಲಿನ ಗಡೀಪಾರು ಆಜ್ಞೆಯನ್ನು ಹಿಂದಕ್ಕೆ ತೆಗೆದುಕೊಳ್ಳಲು ಮಿರ್ಜಾರವರು ಒಪ್ಪಲಿಲ್ಲ. ಪಟೇಲ್-ಮಿರ್ಜಾ ಒಪ್ಪಂದದಿಂದ ಶಿವಪುರದ ಕಾಂಗ್ರೆಸ್ ಅಧಿವೇಶನದ ಕೋರಿಕೆಗಳನ್ನು ಈಡೇರಿಸಿದಂತಾಯಿತು ಮತ್ತು ಧ್ವಜ ಸತ್ಯಾಗ್ರಹದ ಗುರಿ ಸಾಧಿಸಲಾಯಿತೆಂಬ ಭಾವನೆ ಬೆಳೆಯಿತು.
ವಿದುರಾಶ್ವತ್ಥದಲ್ಲಿಯೇ ಮೈಸೂರು ಕಾಂಗ್ರೆಸ್ನ ಎರಡನೆಯ ಅಧಿವೇಶನ: 1939
ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ ನಡೆದ ಮರುವರ್ಷ ಅಂದರೆ 1939ರ ಏಪ್ರಿಲ್ 10ರಂದು ಉದ್ದೇಶಪೂರ್ವಕವಾಗಿ ವಿದುರಾಶ್ವತ್ಥದಲ್ಲಿಯೇ ಎರಡನೆಯ ಕಾಂಗ್ರೆಸ್ ಅಧಿವೇಶನವನ್ನು ನಡೆಸಲು ಏರ್ಪಾಟು ಮಾಡಲು ಪೂರಕ ವ್ಯವಸ್ಥೆ ಮಾಡುವ ಸಭೆ ನಡೆಯಿತು. ಏಪ್ರಿಲ್ 15, 16 ಮತ್ತು 17ರಂದು ಅಧಿವೇಶನ ನಡೆಯುವಂತೆ ತೀರ್ಮಾನಿಸಲಾಯಿತು. ಅಧ್ಯಕ್ಷರಾಗಿ ಹೆಚ್.ಸಿ. ದಾಸಪ್ಪನವರನ್ನೂ ಸ್ವಾಗತಾಧ್ಯಕ್ಷರಾಗಿ ಎನ್.ಸಿ. ತಿಮ್ಮಾರೆಡ್ಡಿ ಅವರನ್ನೂ ಆಯ್ಕೆ ಮಾಡಲಾಯಿತು. ಅಧಿವೇಶನದ ಪೂರ್ಣ ಜವಾಬ್ದಾರಿಯನ್ನು ಬಂಗಾರಪೇಟೆಯ ಎಂ. ದೊರೆಸ್ವಾಮಿಯವರು ವಹಿಸಿಕೊಂಡರು. ಸಿದ್ಧತೆಗಾಗಿ ಮೂರು ಸಾವಿರ ಸ್ವಯಂಸೇವಕರು ಐದು ದಿವಸ ಮುಂಚಿತವಾಗಿಯೇ ಕಾರ್ಯನಿರ್ವಹಿಸತೊಡಗಿದರು. ಚಪ್ಪರಕ್ಕೆ ಬೇಕಾದ ಚಾಪೆಗಳನ್ನು ವಾನಿಯಂಬಾಡಿಯಿಂದ ಸರಕುರೈಲಿನ ಮೂಲಕ ತರಿಸಿಕೊಂಡರು. ಹತ್ತು ಎತ್ತಿನ ಗಾಡಿಗಳನ್ನು ಬಳಸಿಕೊಂಡು ದೂರದ ಸ್ಥಳದಿಂದ ತಂದಿದ್ದ ಎತ್ತರದ ಧ್ವಜಸ್ತಂಭವನ್ನು ನೆಟ್ಟು ಅಲಂಕರಿಸಿದರು. ಈ ಸಮಾವೇಶದಲ್ಲಿ ಮೂವತ್ತು ಸಾವಿರಕ್ಕೂ ಹೆಚ್ಚಿನ ಸಂಖ್ಯೆಯ ಜನರು ಪಾಲ್ಗೊಂಡಿದ್ದರು ಅಧಿವೇಶನದ ಅಧ್ಯಕ್ಷರಾದ ಹೆಚ್.ಸಿ. ದಾಸಪ್ಪನವರನ್ನು ಅಲಂಕೃತ ಕುದುರೆ ಮೇಲೆ ಕೂರಿಸಿಕೊಂಡು ಮೆರವಣಿಗೆಯಲ್ಲಿ ಸಭಾಸ್ಥಾನಕ್ಕೆ ವಿಜೃಂಭಣೆಯಿಂದ ಕರೆತರಲಾಯಿತು. ಸುಭಾಷ್ಚಂದ್ರಬೋಸ್, ಜವಾಹರಲಾಲ್ ನೆಹರು, ಎಸ್. ಶ್ರೀನಿವಾಸಯ್ಯಂಗಾರ್, ವಿ.ವಿ. ಗಿರಿ ಮುಂತಾದವರಿಂದ ಬಂದ ಶುಭಕಾಮನೆಗಳನ್ನು ಓದಲಾಯಿತು. ದಾಸಪ್ಪನವರು ಅಧ್ಯಕ್ಷಭಾಷಣವನ್ನು ಮಾಡುತ್ತ ಸರ್ಕಾರದ ವರ್ತನೆಯನ್ನು ತೀವ್ರವಾಗಿ ಖಂಡಿಸಿದರು. ಯಶೋಧರಾ ದಾಸಪ್ಪನವರೂ ಸಹ ಈ ಹತ್ಯಾಕಾಂಡದ ಘಟನೆಯನ್ನು ಕುರಿತು ತೀಕ್ಷ್ಣವಾದ ಭಾಷಣ ಮಾಡಿ ಸರ್ಕಾರ ಮತ್ತು ಪೊಲೀಸರ ಕ್ರೂರ ನೀತಿಯನ್ನು ಖಂಡಿಸಿದರು. ಪೊಲೀಸರು ಯಶೋಧರಮ್ಮನವರ ಭಾಷಣ ರಾಜದ್ರೋಹಕರವಾಗಿದೆ ಎಂದು ಅವರನ್ನು ಬಂಧಿಸಿ ನಂತರ ಬಿಡುಗಡೆ ಮಾಡಿದರು. ಈ ಘಟನೆಯ ನಂತರ ಯಶೋಧರಮ್ಮ ಮತ್ತು ಇನ್ನಿತರ 6 ಜನರಿಗೆ ಸರ್ಕಾರ 2 ತಿಂಗಳ ಕಾಲ ಭಾಷಣ ಮಾಡದ ಹಾಗೆ ದಿಗ್ಬಂಧನ ಹಾಕಿತು.
ಕೋಲಾರ ಜಿಲ್ಲಾ ಮ್ಯಾಜಿಸ್ಟ್ರೇಟರು 1939ರ ಏಪ್ರಿಲ್ 15ರಂದು ವಿದುರಾಶ್ವತ್ಥದಲ್ಲಿ ಮೊಕ್ಕಾಂ ಮಾಡಿದ್ದ ಕಮಲಾದೇವಿ ಚಟ್ಟೋಪಾಧ್ಯಾಯರಿಗೆ ಪತ್ರ ಬರೆದು, ಸಾರ್ವಜನಿಕ ಹಿತದೃಷ್ಟಿಯಿಂದ ರಾಜ್ಯದಲ್ಲಿ “ಅಖಿಲ ಕರ್ನಾಟಕ ಸೋಷಿಯಲಿಸ್ಟ್ ಕಾನ್ಫರೆನ್ಸ್” ನಡೆಸುವುದು ಅಪೇಕ್ಷಣೀಯವಲ್ಲವೆಂದೂ, ಆದರೆ ‘ನೀವು ಈ ಸಮಾವೇಶದಲ್ಲಿ ಪಾಲ್ಗೊಳ್ಳದೆ ಇರುವುದು, ಭಾಷಣ ಮಾಡದೆ ಇರುವುದು ಸೂಕ್ತ’ ಎಂದು ಸೂಚಿಸಿದ್ದರು.
ಕಮಲಾದೇವಿಯವರು ಅದೇ ದಿನ ಉತ್ತರಕೊಟ್ಟು, “ಈ ಬಗೆಯ ಸೂಚನೆ ಆಶ್ಚರ್ಯಕರವಾದದ್ದು. ಸಂಸ್ಥಾನದಲ್ಲಿ ಸಭೆಗಳಿಗೆ ಹೋಗುವುದು, ಸಾರ್ವಜನಿಕ ಭಾಷಣ ಮಾಡುವುದು, ಇದನ್ನು ಮಾಡಬೇಡಿರೆಂದು ಹೇಳುವುದು ನಿರೀಕ್ಷಣೀಯವಾದದ್ದೇ ಅಲ್ಲ. ಇಂತಹ ನಿಲವನ್ನು ನಾನು ವಿರೋಧಿಸುತ್ತೇನೆ. ಇದೆಲ್ಲ ನಾಗರಿಕನಿಗೆ ಇರುವ ಮೂಲಭೂತ ಅಧಿಕಾರ” ಎಂದು ಬರೆದರು.
ಈ ಅಧಿವೇಶನದಲ್ಲಿ ಕಾಂಗ್ರೆಸ್ಸಿಗರು ಜವಾಬ್ದಾರಿ ಸರ್ಕಾರಕ್ಕಾಗಿ ನಡೆಸುವ ಅಹಿಂಸಾತ್ಮಕ ಹೋರಾಟವನ್ನು ಹತ್ತಿಕ್ಕಲು ಮೈಸೂರು ಸರ್ಕಾರವು ಅನುಸರಿಸುತ್ತಿರುವ ದಮನಕಾರಿ ನೀತಿಯನ್ನು ಖಂಡಿಸಿದರಲ್ಲದೆ, ಜವಾಬ್ದಾರಿ ಸರ್ಕಾರದ ಕೋರಿಕೆ ಜನತೆಯ ಆಜನ್ಮಸಿದ್ಧ ಹಕ್ಕು ಎಂದೂ, ರಾಜಕೀಯ ಹೋರಾಟಗಳ ಕ್ಷೇತ್ರವು ಬ್ರಿಟಿಷ್ ಇಂಡಿಯಾದಿಂದ ದೇಶೀಯ ಸಂಸ್ಥಾನಗಳಿಗೆ ಸರಿಯುತ್ತಿದೆ ಎಂದೂ, ಸರ್ಕಾರವು ಕಾಂಗ್ರೆಸ್ ಕಾರ್ಯಕರ್ತರನ್ನು ದಸ್ತಗಿರಿಮಾಡಿ ನಿಷೇಧಾಜ್ಞೆ ಜಾರಿಗೆ ತಂದಿರುವುದರಿಂದ ಸರ್ಕಾರದ ವಿರುದ್ಧ ಹೋರಾಟಕ್ಕೆ ಸಿದ್ಧವಾಗಿರಬೇಕೆಂದೂ ನಿರ್ಣಯವನ್ನು ಅಂಗೀಕರಿಸಿತು. ಈ ಅಧಿವೇಶನದಲ್ಲಿ 13 ನಿರ್ಣಯಗಳು ಸರ್ವಾನುಮತದಿಂದ ಅಂಗೀಕೃತವಾದವು. ಅದರಲ್ಲಿ 7ನೆಯ ಮತ್ತು 13ನೆಯ ನಿರ್ಣಯಗಳನ್ನು ಕೆ.ಸಿ. ರೆಡ್ಡಿ ಅವರು ಸೂಚಿಸಿದ್ದರು.
7ನೆಯ ನಿರ್ಣಯದಂತೆ “ಮಹಾತ್ಮಗಾಂಧಿ ಅವರು ದೇಶೀಯ ಸಂಸ್ಥಾನಗಳಲ್ಲಿ ನಡೆಯುತ್ತಿರುವ ಸ್ವಾತಂತ್ರ್ಯ ಚಳವಳಿಯ ಮಾರ್ಗದರ್ಶಕತ್ವವನ್ನು ವಹಿಸಿಕೊಂಡಿರುವುದು ಬಹಳ ಉತ್ತೇಜನಕರವಾದುದೆಂದು ಈ ಅಧಿವೇಶನವು ಭಾವಿಸುತ್ತದೆ. ಅವರ ಮಾರ್ಗದರ್ಶಕತ್ವದಲ್ಲಿ ಶೀಘ್ರದಲ್ಲಿಯೇ ದೇಶೀಯ ಸಂಸ್ಥಾನಗಳಲ್ಲಿ ಸಂಪೂರ್ಣ ಜವಾಬ್ದಾರಿ ಸರ್ಕಾರವು ಸ್ಥಾಪನೆಯಾಗಿ ಸ್ವತಂತ್ರ ಭಾರತೋದಯಕ್ಕೆ ಸಹಾಯಕವಾಗುವುದೆಂದು ಈ ಅಧಿವೇಶನವು ಭರವಸೆಯುಳ್ಳದ್ದಾಗಿದೆ” ಎಂದು ಕೆ.ಸಿ. ರೆಡ್ಡಿ ಅವರು ತಿಳಿಸಿದರು.
13ನೆಯ ನಿರ್ಣಯದಂತೆ ಜನಸಾಮಾನ್ಯರ ಸ್ಥಿತಿಗತಿಗಳು ಉತ್ತಮವಾಗಬೇಕಾದರೆ ಪೂರ್ಣ ಜವಾಬ್ದಾರಿ ಸರ್ಕಾರವು ಸ್ಥಾಪಿತವಾಗಬೇಕೆಂದು ಹೇಳಿ, ಜವಾಬ್ದಾರಿ ಸರ್ಕಾರವು ಸ್ಥಾಪಿತವಾದಾಗ ಕೈಗೊಳ್ಳಬೇಕಾದ ಅನೇಕ ಮುಖ್ಯ ಕಾರ್ಯಗಳಲ್ಲಿ ಈ 12 ಅಂಶಗಳು ಪ್ರಮುಖವಾದವುಗಳು – ಎಂದಿತ್ತು.
1. ಶಕ್ತ್ಯನುಸಾರವೂ ನ್ಯಾಯವೂ ಆದ ತೆರಿಗೆಗಳ ಪದ್ಧತಿಯನ್ನು ಏರ್ಪಡಿಸುವುದು ಮತ್ತು ಆ ಆಡಳಿತ ವೆಚ್ಚವನ್ನು ವಿಚಕ್ಷಣೆಗೊಳಿಸುವುದು.
2. ಭೂ-ಕಂದಾಯವನ್ನೂ ತತ್ಸಂಬಂಧವಾದ ತೆರಿಗೆಗಳನ್ನೂ ಸೂಕ್ತವಾದ ರೀತಿಯಲ್ಲಿ ಕಡಮೆ ಮಾಡುವುದು ಮತ್ತು ಸಾಕಾದಷ್ಟು ಉತ್ಪನ್ನವಿಲ್ಲದ ಜಮೀನಿನ ಕಂದಾಯವನ್ನು ಮನ್ನಾ ಮಾಡುವುದು.
3. ಮದ್ಯಪಾನ ನಿರೋಧ ಕಾರ್ಯಗಳನ್ನು ಕೈಗೊಳ್ಳುವುದು.
4. ಸಾಧ್ಯವಾದ ಎಲ್ಲ ವಿಧದಲ್ಲಿಯೂ ವ್ಯವಸಾಯವನ್ನು ಅಭಿವೃದ್ಧಿಗೊಳಿಸುವುದು; ನಶಿಸಿಹೋಗಿಯೂ ಹೋಗುತ್ತಲೂ ಇರುವ ಗ್ರಾಮಕೈಗಾರಿಕೆಗಳನ್ನು ಪುನರುಜ್ಜೀವನಗೊಳಿಸುವುದು, ಹಾಗೆಯೇ ಮೂಲ ಕೈಗಾರಿಕೆಗಳನ್ನು ವೃದ್ಧಿಪಡಿಸುವುದು.
5. ಹಳ್ಳಿಗಾಡಿನ ಜನರ ಮೇಲ್ಮೆಗಾಗಿ ಅನ್ಯಾಯವೂ ಲಾಭದಾಯಕವಲ್ಲದ್ದೂ ಆದ ನಾನಾ ತರಹದವಾದ ಅರಣ್ಯಶಾಖೆಯ ರುಸುಂ (ಶುಲ್ಕ)ಗಳನ್ನು ಮನ್ನಾ ಮಾಡುವುದಲ್ಲದೆ, ಕಿರುಕುಳಗಳನ್ನು ಕೊಡುವ ಅವಕಾಶವನ್ನು ತೆಗೆದುಹಾಕುವುದು.
6. ಅತ್ಯಗತ್ಯವಾಗಿ ಕಂಡುಬರುವ ಸಂದರ್ಭಗಳಲ್ಲಿ ಸಾಲಗಾರರನ್ನು ಋಣಮುಕ್ತರನ್ನಾಗಿ ಮಾಡುವುದು, ಸಾಲಗಳ ಮೊತ್ತವನ್ನು ತೀರಿಸುವ ಬಗ್ಗೆ ತೃಪ್ತಿಕರವಾದ ಏರ್ಪಾಟುಗಳನ್ನು ಮಾಡುವುದು ಮತ್ತು ಸುಲಭ ದರದಲ್ಲಿ ಸಾಲ ದೊರೆಯುವಂತೆ ಅನುಕೂಲಗಳನ್ನು ಒದಗಿಸುವುದು.
7. ಯಾರೊಬ್ಬ ಸರ್ಕಾರೀ ನೌಕರರಿಗೂ ತಿಂಗಳಿಗೆ 500 ರೂಪಾಯಿಗಳ ಸಂಬಳಕ್ಕೆ ಹೆಚ್ಚಿಲ್ಲದಂತೆ ನಿಗದಿ ಮಾಡುವುದು ಮತ್ತು ಆಡಳಿತದ ಖರ್ಚನ್ನು ದಕ್ಷತೆಗೆ ಲೋಪಬಾರದಂತೆ ಕಡಮೆ ಮಾಡುವುದು.
8. ದೇಶಾದ್ಯಂತವೂ ಪ್ರಾಥಮಿಕ ಶಿಕ್ಷಣವನ್ನು ಕಡ್ಡಾಯವಾಗಿ ಏರ್ಪಡಿಸುವುದು ಮತ್ತು ಪ್ರಾಪ್ತವಯಸ್ಕರ ನಿರಕ್ಷರತೆಯನ್ನು ನಿರ್ಮೂಲಗೊಳಿಸುವುದು.
9. ಎಲ್ಲ ಆಡಳಿತ ಶಾಖೆಗಳಲ್ಲಿಯೂ ಲಂಚ ರುಷುವತ್ತುಗಳನ್ನು ತೊಡೆದುಹಾಕುವುದು.
10. ಗ್ರಾಮಾಂತರಗಳಲ್ಲಿ ಆರೋಗ್ಯ ಮತ್ತು ನೈರ್ಮಲ್ಯ, ವೈದ್ಯ ಸಹಾಯ, ನೀರಿನ ಒದಗಣೆ, ದೀಪದ ಸೌಕರ್ಯ, ರಸ್ತೆಗಳು, ಅಂಚೆ ಮತ್ತು ತಂತಿ ಸೌಕರ್ಯ, ವಿಹಾರ ಇತ್ಯಾದಿ ಬೇಕಾಗಿರುವ ಅನುಕೂಲಗಳನ್ನು ಕಲ್ಪಿಸುವುದು.
11. ಕೂಲಿಗಾರರಿಗೆ ಜೀವನಕ್ಕೆ ಸಾಕಾಗುವಷ್ಟು ಕೂಲಿಯನ್ನು ನೀಡಲಾಗುವಂತೆ ಭರವಸೆ ಕೊಡುವುದು ಮತ್ತು ಕೂಲಿಗಾರರ ಸಂಸ್ಥೆಗಳನ್ನು ಏರ್ಪಡಿಸಿಕೊಳ್ಳಲು ಸ್ವಾತಂತ್ರ್ಯವಿರತಕ್ಕದ್ದು ಮತ್ತು ಇತರ ವಿಚಾರಗಳಲ್ಲಿ ಶಾಸನ ಮಾಡತಕ್ಕದ್ದು.
12. ಆಡಳಿತ ಸ್ವಾತಂತ್ರ್ಯವುಳ್ಳ ಗ್ರಾಮ ಪಂಚಾಯಿತಿಗಳನ್ನು ಏರ್ಪಡಿಸುವುದು ಮತ್ತು ಅವುಗಳಿಗೆ ವಿಶೇಷ ಅಧಿಕಾರಿಗಳನ್ನು, ಸಾಕಾದಷ್ಟು ಹಣಕಾಸಿನ ಅನುಕೂಲಗಳನ್ನು ಕಲ್ಪಿಸುವುದು.
ಈ ಮೇಲಿನ ಎಲ್ಲ ಅಂಶಗಳು ಕೆ.ಸಿ. ರೆಡ್ಡಿ ಅವರಿಂದ ಸೂಚಿಸಲ್ಪಟ್ಟು ಸರ್ವಾನುಮತದಿಂದ ಅಂಗೀಕೃತವಾಯಿತು.
ಗಾಂಧಿಯವರ ಮಾರ್ಗದರ್ಶನ
1939ರ ನವೆಂಬರ್ 11ರಂದು ಕಾಂಗ್ರೆಸ್ ಕಮಿಟಿ ಸದಸ್ಯರಾದ ವಿ.ಎಸ್. ನಾರಾಯಣರಾವ್ ಮತ್ತಿತರರು ಬಿಡುಗಡೆ ಹೊಂದಲು ಹೆಚ್.ಸಿ. ದಾಸಪ್ಪ, ಕೆ.ಟಿ. ಭಾಷ್ಯಂ, ಕೆ.ಸಿ. ರೆಡ್ಡಿ ಅವರುಗಳು ಗಾಂಧಿಯವರ ಮಾರ್ಗದರ್ಶನ ಪಡೆಯಲು ವಾರ್ಧಾಕ್ಕೆ ಹೋದರು. ಗಾಂಧಿಯವರು ಪರಿಸ್ಥಿತಿಯ ಪರಿಶೀಲನೆಗೆ ಮಹಾದೇವ ದೇಸಾಯಿ ಅವರನ್ನು ಡಿಸೆಂಬರ್ನಲ್ಲಿ ಕಳುಹಿಸಿದರು. ದೇಸಾಯಿಯವರು ಹಾಸನ, ತುಮಕೂರು, ಚಿತ್ರದುರ್ಗ, ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಚರಿಸಿ ಅಲ್ಲಿನ ಸೆರೆಮನೆ, ಆಸ್ಪತ್ರೆಗಳನ್ನು ಸಂದರ್ಶಿಸಿ ಸತ್ಯಾಗ್ರಹಿಗಳನ್ನೂ ಅಲ್ಲದೆ ದಿವಾನರನ್ನೂ ಭೇಟಿ ಮಾಡಿ ವಾರ್ಧಾಕ್ಕೆ ವಾಪಸು ಹೊರಟರು.
ಒಟ್ಟಿನಲ್ಲಿ ವಿದುರಾಶ್ವತ್ಥ ಧ್ವಜ ಸತ್ಯಾಗ್ರಹ ಮೈಸೂರು ರಾಜ್ಯದಲ್ಲಿ ಜವಾಬ್ದಾರಿ ಸರ್ಕಾರ ಸ್ಥಾಪನೆಯಾಗಲು ಮುಖ್ಯ ಕಾರಣವಾಯಿತು.
ಘಟನೆಯ ಸ್ಮರಣಾರ್ಥ
ಈ ಘಟನೆಯ ಸ್ಮರಣಾರ್ಥವಾಗಿ ಸ್ವಾತಂತ್ರ್ಯಾನಂತರ ಕೋಲಾರ ಜಿಲ್ಲೆ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿದ್ದ ಎನ್.ಸಿ. ನಾಗಯ್ಯರೆಡ್ಡಿಯವರು ವಿದುರಾಶ್ವತ್ಥದಲ್ಲಿ 1959ರಲ್ಲಿ ಸತ್ಯಾಗ್ರಹ ಸ್ಮಾರಕ ಪ್ರೌಢಶಾಲೆಯನ್ನು ಸ್ಥಾಪಿಸಿದರು. ಈ ಶಾಲೆಯಿಂದ ಸುತ್ತಮುತ್ತಲ ಹಳ್ಳಿಯ ವಿದ್ಯಾರ್ಥಿಗಳಿಗೆ ಬಹಳ ಅನುಕೂಲವಾಯಿತು. 1962ರಲ್ಲಿ ದೇವಸ್ಥಾನದ ತೋಪಿನಲ್ಲಿ ಮರಣಹೊಂದಿದ ಸತ್ಯಾಗ್ರಹಿಗಳ ನೆನಪಿಗಾಗಿ ಸ್ಮಾರಕ ಸ್ತಂಭವನ್ನು ಸ್ಥಾಪಿಸಲಾಯಿತು. 2004ರಲ್ಲಿ ‘ವೀರಸೌಧ’ ಮತ್ತು ಸ್ತೂಪವನ್ನು ನಿರ್ಮಿಸಲಾಯಿತು. ವೀರಸೌಧದಲ್ಲಿ ಇಡೀ ಸ್ವಾತಂತ್ರ್ಯ ಹೋರಾಟದ ಕಾಲಘಟ್ಟವನ್ನು ಪರಿಚಯಿಸುವ ಫೋಟೋ ಗ್ಯಾಲರಿ ಪ್ರಾರಂಭವಾಗಿದ್ದು ಸ್ವಾತಂತ್ರ್ಯ ಸಂಗ್ರಾಮದ ಇತಿಹಾಸವನ್ನು ಅರಿಯಲು ಸಂಶೋಧಕರಿಗೆ ಮಾಹಿತಿಯುಕ್ತವಾಗಿದೆ. ಕೇಂದ್ರಸರ್ಕಾರದ ಆಶಯದಂತೆ 1987ರ ಆಗಸ್ಟ್ 15ರಂದು ನವದೆಹಲಿಯಲ್ಲಿ ಸ್ಥಾಪಿಸಲಾದ ‘ಸ್ವಾತಂತ್ರ್ಯ ವೃಕ್ಷ’ ಬೆಳೆಸುವ ಯೋಜನೆಯನ್ವಯ 40ನೆಯ ಸ್ವಾತಂತ್ರ್ಯ ವಾರ್ಷಿಕೋತ್ಸವದ ಸ್ಮರಣಾರ್ಥವಾಗಿ ದೇಶದ ವಿವಿಧ ಸ್ವಾತಂತ್ರ್ಯ ಸಂಗ್ರಾಮ ಕೇಂದ್ರಗಳಂತೆ ವಿದುರಾಶ್ವತ್ಥದಿಂದಲೂ ಪವಿತ್ರ ಮಣ್ಣನ್ನು ಸ್ವಾತಂತ್ರ್ಯ ಹೋರಾಟದಲ್ಲಿ ಪಾಲ್ಗೊಂಡಿದ್ದ ಜಿಲ್ಲೆಯ ಅನ್ನಪೂರ್ಣಾದೇವಿ ತಿಮ್ಮಾರೆಡ್ಡಿ ಅವರ ಮೂಲಕ ನವದೆಹಲಿಗೆ ಕಳುಹಿಸಲಾಯಿತು.
ಹೀಗೆ ಸ್ವಾತಂತ್ರ್ಯಕ್ಕಾಗಿ ದುಡಿದ ಸಾವಿರಾರು ಜನರ ತ್ಯಾಗ-ಬಲಿದಾನದಿಂದ ಇಂದು ನಾವು ಸ್ವಾತಂತ್ರ್ಯದ ಸುಖವನ್ನು ಅನುಭವಿಸುತ್ತಿದ್ದೇವೆ. ಸ್ವಾತಂತ್ರ್ಯಕ್ಕಾಗಿ ತಮ್ಮ ತನು-ಮನ ಎಲ್ಲವನ್ನೂ ಅರ್ಪಿಸಿದ ಹೋರಾಟಗಾರರನ್ನು ಎಂದೆಂದಿಗೂ ನಾವು ಮರೆಯಬಾರದು. ಇದು ನಮ್ಮ ಕರ್ತವ್ಯ.
ಹಿಂಸಾಚಾರದ ಗೋಲೀಬಾರನ್ನು ನೆನಪಿಗೆ ತರುವ ವೀರ ಲಾವಣಿಯೊಂದು ಹೀಗಿದೆ:
“ಸಾವಿರದ ಒಂಭೈನೂರ್ ಮೂವತ್ತೆಂಟನೆ ಏಪ್ರಿಲ್
ತಿಂಗಳ ಇಪ್ಪತ್ತೈದರೊಳು ತುಂಬಿರೆ
ಬಹು ಪ್ರಜೆ ಸಂಭ್ರಮದಿಂದಲಿ
ವಿದುರಾಶ್ವತ್ಥ ಜಾತ್ರೆಯೊಳು
ಸುತ್ತಮುತ್ತಲು ಲಾಠಿ ಹೊಡೆತಗಳ
ಮತ್ತು ಗುಂಡಿನ ಏಟುಗಳ್ ಸತ್ತ
ಹೆಣಗಳ
ಲೆಕ್ಕವಿಲ್ಲವು ಹೊತ್ತರೆಷ್ಟೋ
ಗುಪ್ತದೊಳ್”
ಆಧಾರ:
1. ‘ಕರ್ನಾಟಕ ರಾಜ್ಯ ಗ್ಯಾಸೆಟಿಯರ್’, ಕೋಲಾರ ಜಿಲ್ಲೆ (ಪರಿಷ್ಕೃತ ಆವೃತ್ತಿ), ಮು. ಸಂ: ಎಚ್. ಚಿತ್ತರಂಜನದಾಸ್, ಕ.ಆ.ಸೇ. 2005.
2. ‘ಕೋಲಾರ ಜಿಲ್ಲೆಯ ಇತಿಹಾಸ ಮತ್ತು ಪುರಾತತ್ತ್ವ’, ಸಂ. ಡಾ|| ಆರ್. ಗೋಪಾಲ್, 2004.
3. ‘ಮಹಾನ್ ಸಾಧಕ ಕೆ.ಸಿ. ರೆಡ್ಡಿ’, ಡಾ|| ಆರ್.ವಿ. ರವೀಂದ್ರನಾಥ್, 2002.
4. ‘ಕರ್ನಾಟಕದ ಕಸ್ತೂರಬಾ ಶ್ರೀಮತಿ ಯಶೋಧರಾ ದಾಸಪ್ಪನವರ ಜೀವನ ಮತ್ತು ಸಾಧನೆ’, ಡಾ|| ಶೈಲಜ ಸಿ.ವಿ., 2007.
5. ‘ಕೋಲಾರ ಸಿರಿ ಸಂಪುಟ’ ಎನ್. ಜಗನ್ನಾಥ ಪ್ರಕಾಶ್, 2001.
6. ‘ಸ್ವಾತಂತ್ರ್ಯಸೇನಾನಿ ಕೆ.ಟಿ. ಭಾಷ್ಯಂ ಅಯ್ಯಂಗಾರ್’ (ಜೀವನ ಚರಿತ್ರೆ), ವಿ.ಎಸ್. ನಾರಾಯಣರಾವ್, 1991.
7. ‘ಟಿ. ಸಿದ್ಧಲಿಂಗಯ್ಯ’, ಪ್ರತಿಭಾವಂತ ಸಂಸದೀಯ ಪಟುಗಳ ಬದುಕು ಬರಹ ಮಾಲಿಕೆ, 1999.
8. ‘ಮೈಸೂರು ಸಂಸ್ಥಾನದ ಸ್ವಾತಂತ್ರ್ಯ ಚಳವಳಿ’, ಕೆ. ವೀರಪ್ಪ, 1977.
9. ‘ಸತ್ಯಾಗ್ರಹಿಗಳ ನೆನಪುಗಳು’, ಪ್ರೊ|| ಡಿ. ಲಿಂಗಯ್ಯ, 1998
10.‘ಜಗನ್ಮೋಹನ ಭವನದಿಂದ ವಿದುರಾಶ್ವತ್ಥಕ್ಕೆ’, ತಿರುಮಲ ತಾತಾಚಾರ್ಯ ಶರ್ಮ, ಬೆಂಗಳೂರು, 1938.