೧೯೪೭ರ ಜನವರಿ ೧೬ರ ವೇಳೆಗೇ ಆಟ್ಲಿ ಭಾರತದಿಂದ ಬ್ರಿಟನ್ ನಿರ್ಗಮಿಸಲು ದಿನಾಂಕವೊಂದನ್ನು ಘೋಷಿಸಲೇಬೇಕಾಗುತ್ತದೆಂಬ ನಿಶ್ಚಯಕ್ಕೆ ಬಂದಿದ್ದುದು ಸ್ಪಷ್ಟ. ಈ ಘೋಷಣೆಗೆ ಮುಂಚೆ ಹಿಂದೂ-ಮುಸ್ಲಿಮರನ್ನು ಒಗ್ಗೂಡಿಸುವ ಒಂದು ಆಖೈರು ಪ್ರಯತ್ನ ಮಾಡಬೇಕೇ ಬೇಡವೇ, ಮೌಂಟ್ಬ್ಯಾಟನ್ನನ್ನು ನಿಯುಕ್ತಗೊಳಿಸುವ ಪ್ರಕಟಣೆಯಲ್ಲಿ ಈ ದಿನಾಂಕದ ಉಲ್ಲೇಖ ಇರಬೇಕೇ ಬೇಡವೇ – ಇವೆಲ್ಲ ಗೌಣವೇ ಆಗಿತ್ತು. ಸ್ವಾರಸ್ಯದ ಸಂಗತಿಯೆಂದರೆ – ನಿಶ್ಚಿತ ದಿನಾಂಕ ಘೋಷಿಸಿದ ಹೊರತು ತಾನು ವೈಸರಾಯ್ ಪದವಿಯನ್ನು ಸ್ವೀಕರಿಸುವುದಿಲ್ಲವೆಂದು ಮೌಂಟ್ಬ್ಯಾಟನ್ ಹಟ ಹಿಡಿದ.
೧೯೪೧ರ ಡಿಸೆಂಬರ್ ೭ರಂದು ಪರ್ಲ್ ಹಾರ್ಬರ್ ಮೇಲೆ ಜಪಾನ್ ನಡೆಸಿದ ಆಕ್ರಮಣವನ್ನು ಅಮೆರಿಕದ ಅಧ್ಯಕ್ಷ ರೂಸ್ವೆಲ್ಟ್ ಒಂದು ಘೋರ ಕಳಂಕದ ಸ್ಮಾರಕವಾಗಿ ಚರಿತ್ರೆಯಲ್ಲಿ ಉಳಿಯುತ್ತದೆ – ಎಂದು ವರ್ಣಿಸಿದ್ದರು. ನನ್ನ ದೃಷ್ಟಿಯಲ್ಲಿ ಭಾರತದಲ್ಲಿ ಮೌಂಟ್ಬ್ಯಾಟನ್ ವೈಸರಾಯ್ ಪದವಿಯ ಕೊನೆಯ ಐದು ದಿನಗಳಿಗೂ ಅದೇ ವರ್ಣನೆ ಸಲ್ಲುತ್ತದೆ.
– ಈ ತೀರ್ಮಾನಕ್ಕೆ ಬಂದಿರುವವರು ಪ್ರಸಿದ್ಧ ನ್ಯಾಯವಾದಿ ಎಚ್.ಎಂ. ಸೀರ್ವಾಯ್. ಹದಿನೇಳು ವರ್ಷ (೧೯೫೭-೭೪) ಮಹಾರಾಷ್ಟ್ರದ ಅಡ್ವೊಕೇಟ್-ಜನರಲ್ ಆಗಿದ್ದ ಹೋರ್ಮಸ್ಜೀ ಮಾನೆಕ್ಜೀ ಸೀರ್ವಾಯ್, ಸಂವಿಧಾನಿಕ ನ್ಯಾಯಶಾಸ್ತ್ರ ನಿಷ್ಣಾತರು. ಅವರ ಕಾನ್ಸ್ಟಿಟ್ಯೂಷನಲ್ ಲಾ ಆಫ್ ಇಂಡಿಯಾ (೧೯೬೭) ಪ್ರಸಿದ್ಧ ಆಕರಗ್ರಂಥವಾಗಿದೆ. ೧೯೭೨ರಲ್ಲಿ ರಾಷ್ಟ್ರಾಧ್ಯಕ್ಷರಿಂದ ಅವರಿಗೆ ಪದ್ಮವಿಭೂಷಣ ಮನ್ನಣೆ ದೊರೆಯಿತು. ೧೯೮೩ರಿಂದ ಅವರು ನಾಗರಿಕ ಹಕ್ಕುಗಳ ಜನಸಂಘಟನೆ (ಪಿಯುಸಿಎಲ್)ಯಲ್ಲೂ ಸಕ್ರಿಯರಾಗಿದ್ದರು. ಸೀರ್ವಾಯ್ ೧೯೮೯ರಲ್ಲಿ ಬರೆದ ಪಾರ್ಟಿಷನ್ ಆಫ್ ಇಂಡಿಯಾ: ಲೆಜೆಂಡ್ ಆಂಡ್ ರಿಯಾಲಿಟಿ ಗ್ರಂಥದಲ್ಲಿ ಭಾರತದ ಅಂತಿಮ ವೈಸರಾಯ್ ಮೌಂಟ್ಬ್ಯಾಟನ್ ಬಗೆಗೆ ಅವರು ನೀಡಿರುವ ಮೌಲ್ಯಮಾಪನ, ಮೇಲೆ ಉದ್ಧರಿಸಿದುದು. ೧೯೮೦ರ ದಶಕದ ವರ್ಷಗಳಲ್ಲಿ ಲಭ್ಯವಾದ ನೂರಾರು ದಾಖಲೆಗಳ ಗಾಢ ಅಧ್ಯಯನದ ಫಲ, ಸೀರ್ವಾಯ್ ಅವರ ಈ ಗ್ರಂಥ. (Emmenem Publications, ಮುಂಬಯಿ. ೧೯೮೯. ರೂ.೭೦).
ಒಂದು ಹಂತದಲ್ಲಿ ಜಿನ್ನಾರವರೇ ವಿಭಜನೆಯನ್ನು ಒಪ್ಪದಿದ್ದುದು, ಕ್ರಮೇಣ ಅವರ ಪಾಕಿಸ್ತಾನ ಬೇಡಿಕೆ ಹರಳುಗಟ್ಟಿದುದು, ಮುಸ್ಲಿಮರನ್ನೆಲ್ಲ ಪ್ರತಿನಿಧಿಸುವ ಪಕ್ಷ ಮುಸ್ಲಿಂ ಲೀಗ್ ಮತ್ತು ತಾವು ಮುಸ್ಲಿಮರ ಏಕೈಕ ವಕ್ತಾರರೆಂಬ ಜಿನ್ನಾರ ನಿಲವನ್ನು ಗಾಂಧಿ ಸ್ವೀಕರಿಸಿದುದು, ಕಾಂಗ್ರೆಸ್ ಸಂಸ್ಥೆ ಕ್ರಮೇಣ ಕೆಲವೇ ಮಂದಿಯ ಕೂಟವಾಗಿ ಮಾರ್ಪಟ್ಟಿದ್ದು – ಮೊದಲಾದ ಹಲವಾರು ಸಂಗತಿಗಳ ಬಗೆಗೆ ಸೀರ್ವಾಯ್ರ ವಿಶ್ಲೇಷಣೆ ಬೆಳಕು ಚೆಲ್ಲಿದೆ. ಗಾಂಧಿಯವರು ಹಿಂದೂ-ಮುಸ್ಲಿಂ ಐಕ್ಯದಲ್ಲಿ ತಮ್ಮ ವಿಶ್ವಾಸವನ್ನೇನೋ ಪದೇ ಪದೇ ಘೋಷಿಸಿದರು; ಆದರೆ ಸಮಸ್ಯೆಯ ಪರಿಹಾರವನ್ನು ದೈವದ ಕೈಗೆ ಒಪ್ಪಿಸುವುದಕ್ಕಿಂತ ಬೇರಾವ ಮಾರ್ಗವನ್ನೂ ಕಾಣದಾದರು. ರಾಜಕೀಯ ಸ್ವರೂಪದ ಸಮಸ್ಯೆಯೊಂದಕ್ಕೆ ರಾಜಕೀಯ ಸ್ವರೂಪದ ಪರಿಹಾರವನ್ನು ಅರಸುವುದರಲ್ಲಿ ಅವರು ಸಫಲರಾಗಲಿಲ್ಲ ಎಂಬ ಸೀರ್ವಾಯ್ರವರ ವ್ಯಾಖ್ಯೆ ಮಾರ್ಮಿಕವಾಗಿದೆ.
ಭಾರತ ವಿಭಜನೆಯನ್ನು ಕುರಿತ ಈವರೆಗಿನ ಗ್ರಂಥಗಳಿಗಿಂತ ಸೀರ್ವಾಯ್ರವರ ಗ್ರಂಥ ಭಿನ್ನವಾಗಿರುವುದು ಬ್ರಿಟಿಷ್ ಸರ್ಕಾರದ ಹಾಗೂ ಅದರ ಪ್ರತಿನಿಧಿಗಳ ಮನೋಧರ್ಮವನ್ನೂ ವರ್ತನೆಗಳನ್ನೂ ಒರೆಗಲ್ಲಿಗೆ ಹಚ್ಚಿರುವುದರಲ್ಲಿ. ಬಹುಮಟ್ಟಿಗೆ ಮಸಕಾಗಿಯೇ ಉಳಿದಿದ್ದ ವೈಸರಾಯ್ ವೇವೆಲ್ನ (೨೦-೧೦-೧೯೪೩ ರಿಂದ ೨೨-೩-೧೯೪೭) ಪ್ರಾಮಾಣಿಕತೆ, ಹೃದಯವಂತಿಕೆ, ವಿವೇಚನಾ ಸಾಮರ್ಥ್ಯಗಳನ್ನು ಸೀರ್ವಾಯ್ರ ಲೇಖನಿ ಎತ್ತಿ ತೋರಿಸಿದೆ; ಅಂತೆಯೇ ನೈಜ ಯೋಗ್ಯತೆಗೆ ಮೀರಿ ಪ್ರಶಂಸೆಗೆ ಹಾತೊರೆದ ಮೌಂಟ್ಬ್ಯಾಟನ್ನ ಕುಟಿಲ ತಂತ್ರಗಳನ್ನು ಕೂಡಾ. ವಾಸ್ತವವಾಗಿ ಭಾರತ ವಿಭಜನೆ ಅನಿವಾರ್ಯವಾಗಿರಲಿಲ್ಲ ಎಂಬ ಸತ್ಯಸ್ಥಿತಿ ಸೀರ್ವಾಯ್ರ ಬರಹದಲ್ಲಿ ಪುಷ್ಟಿಗೊಂಡಿದೆ.
೧೯೪೮ರ ಜೂನ್ ತಿಂಗಳಲ್ಲಿ ಇಂಗ್ಲೆಂಡಿಗೆ ಹಿಂತಿರುಗಿದ ಮೇಲೆ ಅಧಿಕಾರ ಹಸ್ತಾಂತರ ಒಟ್ಟಾರೆ ಶಾಂತಿಯುತವಾಗಿಯೇ ಆಯಿತು; ಎಲ್ಲೋ ಶೇ. ೩ರಷ್ಟು ಜನಸಂಖ್ಯೆ ಮಾತ್ರ ತೊಂದರೆಗೊಳಗಾಯಿತು ಎಂದ, ಮೌಂಟ್ಬ್ಯಾಟನ್. ಆದರೆ ಸಂಖ್ಯೆಯನ್ನು ಲೆಕ್ಕಹಾಕುವಾಗ ಇದು ಒಂದು ಕೋಟಿಗೂ ಹೆಚ್ಚು ಆಗುತ್ತದೆ! ಇಷ್ಟು ಅಧಿಕ ಪ್ರಮಾಣದ ಜನತೆ ಮೌಂಟ್ಬ್ಯಾಟನ್ನ ದೃಷ್ಟಿಯಲ್ಲಿ ಅಗಣ್ಯವೆನಿಸಿತು. ತನ್ನದು ಇತಿಹಾಸದಲ್ಲೇ ಮಹೋಜ್ಜ್ವಲವಾದ ಆಡಳಿತ ಅಭಿಯಾನ (‘greatest administrative operation in history’) ಎಂದೂ ಮೌಂಟ್ಬ್ಯಾಟನ್ ಕೊಚ್ಚಿಕೊಂಡ. ಆ ಬುರುಡೆ ಬಲೂನನ್ನು ಸೀರ್ವಾಯ್ರ ವಿಶ್ಲೇಷಣೆ ಸಮರ್ಥವಾಗಿ ಒಡೆದುಹಾಕಿದೆ.
ವೇವೆಲ್ನ ಪ್ರಯತ್ನ
೧೯೪೩ರ ಜುಲೈ ೨ರಂದು ವಿನ್ಸ್ಟನ್ ಚರ್ಚಿಲನ ಆದೇಶದಂತೆ ಭಾರತದ ವೈಸರಾಯ್ ಆಗಲು ಲಾರ್ಡ್ ವೇವೆಲ್ ಒಪ್ಪಿದ. ವೇವೆಲ್ನು ಪೂರ್ವಸ್ಥಿತಿಯನ್ನು – ಅಂದರೆ ಅನಿಶ್ಚಿತತೆಯನ್ನು – ಮುಂದುವರಿಸಿಯಾನೆಂದು ಚರ್ಚಿಲನ ನಿರೀಕ್ಷೆ ಇತ್ತು. ಆದರೆ ಸಾಕಷ್ಟು ದೀರ್ಘಕಾಲ ಮುರಿದುಬಿದ್ದಿದ್ದ ಮಾತುಕತೆಗಳಿಗೆ ಹೇಗಾದರೂ ಮತ್ತೆ ಜೀವದಾನ ಮಾಡಬೇಕೆಂದು ವೇವೆಲ್ ಶ್ರಮಿಸಿದ. ಏನೂ ಪ್ರಯತ್ನವನ್ನೇ ಮಾಡದಿರುವುದಕ್ಕಿಂತ ಪ್ರಯತ್ನ ಮಾಡಿ ವಿಫಲವಾದರೂ ಅದು ಗೌರವಾನ್ವಿತ ಕ್ರಮವೆಂಬುದು ವೇವೆಲ್ನ ಭಾವನೆಯಿತ್ತು. ಭಾರತಕ್ಕೆ ಬರುವುದಕ್ಕೆ ಮುಂಚೆಯೇ ವೇವೆಲ್ ಗಾಂಧಿ, ನೆಹರು ಮುಂತಾದ ನಾಯಕರನ್ನು ಬಿಡುಗಡೆ ಮಾಡಿ ವೈಸರಾಯ್ ಕಾರ್ಯನಿರ್ವಾಹಕ ಸಮಿತಿಯೊಳಕ್ಕೆ ಸೇರಿಸಿಕೊಳ್ಳಬೇಕೆಂದು ಶಿಫಾರಸು ಮಾಡಿದ್ದನೆಂಬ ಸಂಗತಿ ಕಾಂಗ್ರೆಸ್ ನಾಯಕರಿಗೇ ತಿಳಿದಿರಲಿಲ್ಲ. ಹೀಗೆ ಆರಂಭದಿಂದಲೇ ವೇವೆಲ್ ಬಗೆಗೆ ಕಾಂಗ್ರೆಸ್ ನಾಯಕರಿಗೆ ವಿಶ್ವಾಸವೇನೂ ಮೂಡಿರಲಿಲ್ಲ.
ಸಂಗ್ರಹವಾಗಿ ವೇವೆಲನ ಸೂಚನೆ ಹೀಗಿತ್ತು: ದೆಹಲಿಯ ವೈಸರಾಯ್ ಭವನದಲ್ಲಿ ರಹಸ್ಯ ಸಮಾಲೋಚನೆಗಾಗಿ ಗಾಂಧಿ, ನೆಹರು, ಜಿನ್ನಾ ಸೇರಿದಂತೆ ಹತ್ತು ಮಂದಿ ಪ್ರಮುಖ ಭಾರತೀಯರನ್ನು ವೈಸರಾಯ್ ವೈಯಕ್ತಿಕವಾಗಿ ಆಹ್ವಾನಿಸತಕ್ಕದ್ದು; ಮಹಾಯುದ್ಧ ಮುಗಿದೊಡನೆ ಭಾರತಕ್ಕೆ ಸ್ವಾತಂತ್ರ್ಯವನ್ನು ನೀಡುವ ಭರವಸೆಯನ್ನು ಬ್ರಿಟಿಷ್ ಸರ್ಕಾರದ ವತಿಯಿಂದ ವೇವೆಲ್ ವಾಗ್ದಾನ ಮಾಡತಕ್ಕದ್ದು; ಭಾರತದ ಭವಿಷ್ಯದ ಬಗೆಗೆ ಭಾರತೀಯ ನಾಯಕರೇ ನಿರ್ಣಯಿಸಿ ವೈಸರಾಯ್ಗೆ ಸಲಹೆ ನೀಡತಕ್ಕದ್ದು.
ಆದರೆ ಇಂಥ ಎಲ್ಲ ಸೂಚನೆಗಳನ್ನೂ ಚರ್ಚಿಲ್ ತಳ್ಳಿಹಾಕಿದನೆಂಬುದು ಸುವಿದಿತ. ವೇವೆಲನ ನಿಲವನ್ನು ಬ್ರಿಟಿಷ್ ಸರ್ಕಾರ ಬೆಂಬಲಿಸಿದ್ದಿದ್ದರೆ ವಿಭಜನೆ ತಪ್ಪುವ – ಅಥವಾ ರಕ್ತಪಾತದ ಪ್ರಮಾಣವಾದರೂ ತಗ್ಗುವ – ಸಂಭವವಿತ್ತೆನ್ನಬಹುದು.
೧೯೪೪ರ ಅಕ್ಟೋಬರ್ ೨೪ರಂದು ಚರ್ಚಿಲನಿಗೆ ಬರೆದ ಪತ್ರದಲ್ಲಿ ವೇವೆಲ್ ಹೀಗೆಂದಿದ್ದ: ನಾವು ಯಾವುದೇ ಕ್ರಮ ಕೈಗೊಂಡರೂ ಅದು ಭಾರತೀಯರ ಮಾನಸಿಕ ಭಾವನೆಗಳಿಗೆ ಸ್ವೀಕೃತವಾಗುವಂತಿರಬೇಕು. ಭಾರತದ ಬಗೆಗೆ ನಮ್ಮ [ಬ್ರಿಟಿಷರ] ಮನೋಭಂಗಿ ಬದಲಾಯಿಸಬೇಕಾಗಿದೆ.
ವೇವೆಲನ ಸೂಚನೆಗೆ ಹಲವಾರು ತಿಂಗಳ ಕಾಲ ಬ್ರಿಟಿಷ್ ಸರ್ಕಾರ ಯಾವ ಪ್ರತಿಕ್ರಿಯೆಯನ್ನೂ ತೋರಲಿಲ್ಲ; ತನ್ನ ಸೂಚನೆಯನ್ನು ಬ್ರಿಟಿಷ್ ಸರ್ಕಾರಕ್ಕೆ ವೈಯಕ್ತಿಕವಾಗಿ ವಿವರಿಸುವ ಅವಕಾಶವೂ ವೇವೆಲನಿಗೆ ದೊರೆಯಲಿಲ್ಲ. ೧೯೪೫ರ ಏಪ್ರಿಲ್-ಮೇ ತಿಂಗಳುಗಳಲ್ಲಿ ಇಂಗ್ಲೆಂಡಿನಲ್ಲಿ ನಡೆದ ಇಂಡಿಯಾ ಕಮಿಟಿಯ ನಾಲ್ಕಾರು ಸಭೆಗಳಲ್ಲಿ ಆವರೆಗಿನ ಎಲ್ಲ ಸೂಚನೆಗಳಲ್ಲಿ ಏನೇನು ಬಾಧಕಗಳಿದ್ದವೆಂಬ ಚರ್ಚೆ ನಡೆಯಿತೇ ಹೊರತು ಯಾವ ರಚನಾತ್ಮಕ ಸಲಹೆಗಳೂ ಹೊಮ್ಮಲಿಲ್ಲ. ವೇವೆಲ್ ತಾನು ಯೋಚಿಸಿದ್ದ ಜಾಡಿನ ಹೇಳಿಕೆಯೊಂದನ್ನು ನೀಡಲು ಬ್ರಿಟಿಷ್ ಸರ್ಕಾರದ ಅನುಮತಿ ಪಡೆದ. ಅದರಂತೆ ೧೯೪೫ರ ಜೂನ್ ೧೪ರಂದು ವೇವೆಲ್ ತನ್ನ ಸೂಚನೆಗಳನ್ನು ಪ್ರಸಾರ ಮಾಡಿದ. ಇದರ ಒಂದು ಫಲಿತವೇ ೧೯೪೫ರ ಜೂನ್ ೨೫ರಂದು ನಡೆದ ಪ್ರಸಿದ್ಧ ಸಿಮ್ಲಾ ಸಮ್ಮೇಳನ. ಜಿನ್ನಾನ ಹಠಮಾರಿತನದಿಂದಾಗಿ ಮಾತುಕತೆ ಮುರಿದುಬಿತ್ತು. ಅದರ ವೈಫಲ್ಯಕ್ಕೆ ವೇವೆಲ್ ತಾನು ಹೊಣೆಗಾರನೆಂದು ಹೇಳಿದ; ಆದರೆ ವೇವೆಲನ ಪ್ರಯತ್ನದ ಪ್ರಾಮಾಣಿಕತೆಯನ್ನು ಆಗಿನ ಕಾಂಗ್ರೆಸ್ ಅಧ್ಯಕ್ಷ ಮೌಲಾನಾ ಆಜಾದ್ ಸೇರಿದಂತೆ ಹಲವಾರು ಮಂದಿ ಒಪ್ಪಿದ್ದಾರೆ.
ಇಂಗ್ಲೆಂಡಿನಲ್ಲಿ ಕ್ಲೆಮೆಂಟ್ ಆಟ್ಲಿಯ ಲೇಬರ್ ಪಕ್ಷದ ವಿಜಯ, ೧೯೪೫ರ ಆಗಸ್ಟ್ನಲ್ಲಿ ಜಪಾನಿನ ಪತನ, ಭಾರತದ ಕೇಂದ್ರ ಹಾಗೂ ರಾಜ್ಯ ಶಾಸನಸಭೆಗಳಿಗೆ ಚುನಾವಣೆ, ೧೯೪೬ರ ಮಾರ್ಚ್ ತಿಂಗಳ ಕ್ಯಾಬಿನೆಟ್ ಆಯೋಗ – ಇವೆಲ್ಲ ಅನಂತರದ ಘಟನೆಗಳು.
ಕಾಂಗ್ರೆಸ್ ವರಿಷ್ಠರ ಮನಃಸ್ಥಿತಿ
೧೯೪೬ರ ಡಿಸೆಂಬರಿನಲ್ಲಿ ವೇವೆಲ್ ಲಂಡನ್ನಿಗೆ ನೀಡಿದ ಭೇಟಿಯ ಹಿನ್ನೆಲೆಯಲ್ಲಿ ಸಮಾಲೋಚನೆಗಾಗಿ ಸಿದ್ಧಪಡಿಸಿದ್ದ ಟಿಪ್ಪಣಿಯಲ್ಲಿ ಕಾಂಗ್ರೆಸ್ ವರಿಷ್ಠರ ಬಗೆಗೆ ಆತನಲ್ಲಿ ಉಂಟಾಗಿದ್ದ ಅನಿಸಿಕೆ ಸ್ಪಷ್ಟಗೊಂಡಿದೆ: ಅವರಲ್ಲಿ ಅಧಿಕಾರದಾಹ ಪ್ರಬಲವಾಗಿದೆ. ಒಮ್ಮೆ ಬ್ರಿಟಿಷ್ ಪ್ರಭಾವ ಮರೆಯಾಯಿತೆಂದರೆ ಸಂಸ್ಥಾನಿಕ ರಾಜರನ್ನೂ ಮುಸ್ಲಿಮರನ್ನೂ ಹಣದಾಸೆಯಿಂದಲೋ, ಬೆದರಿಕೆಯಿಂದಲೋ, ಅಪಪ್ರಚಾರದಿಂದಲೋ ನಿಭಾಯಿಸಬಲ್ಲೆವೆಂಬ ವಿಶ್ವಾಸ ಅವರಿಗೆ ಇರುವಂತಿದೆ.
ಬ್ರಿಟಿಷ್ ಆಳ್ವಿಕೆಯಿಂದ ವಿಚ್ಛೇದ ಪಡೆಯಬೇಕೆಂಬುದಕ್ಕಿಂತ ಕಾಂಗ್ರೆಸ್ ವರಿಷ್ಠರ ತಲೆಯಲ್ಲಿ ತಮ್ಮ ಕೈಗೆ ಎಟುಕಲಿದ್ದ ಅಧಿಕಾರದ ಬಗೆಗೇ ಹೆಚ್ಚಿನ ಆಸಕ್ತಿ ಇತ್ತೆಂಬುದು ಆ ಅವಧಿಯ ದಾಖಲೆಗಳಲ್ಲಿಯೂ ವೇವೆಲ್, ಆಟ್ಲಿ ಮುಂತಾದವರ ಪತ್ರವ್ಯವಹಾರದಲ್ಲಿಯೂ ಎದ್ದುನಿಲ್ಲುತ್ತದೆ. ವಿಹಿತ ರೀತಿಯ ಮಾತುಕತೆಗಳನ್ನು ಮುಂದುವರಿಸಬೇಕಾದರೆ ಬ್ರಿಟಿಷ್ ಸರ್ಕಾರ ತನ್ನ ಆಡಳಿತವನ್ನು ಕ್ರಮಕ್ರಮೇಣ ಮುಕ್ತಾಯಗೊಳಿಸುವ ಕಂಠೋಕ್ತ ಯೋಜನೆಯೊಂದನ್ನು ಪ್ರಕಟಿಸಲೇಬೇಕೆಂದು ವೇವೆಲ್ ತನ್ನ ಸರ್ಕಾರದ ಮೇಲೆ ಪದೇಪದೇ ಒತ್ತಾಯ ಹಾಕುತ್ತಿದ್ದರೂ ಅದರ ಬಗೆಗೆ ಕಾಂಗ್ರೆಸ್ ನಾಯಕರು ಉತ್ಸಾಹ ತಳೆಯದಿದ್ದುದೂ ವೇವೆಲ್ನನ್ನು ಬೆಂಬಲಿಸದಿದ್ದುದೂ ಮೇಲಿನದೇ ಕಾರಣದಿಂದ.
ದೀರ್ಘಕಾಲ ಎಳೆದಾಡಿದ ಮೇಲೆ ಭಾರತಕ್ಕೆ ೧೯೪೮ರ ಮಾರ್ಚ್ ೩೧ರೊಳಗೆ ಅಧಿಕಾರವನ್ನು ಹಸ್ತಾಂತರಿಸುತ್ತೇವೆ ಎಂಬ ಘೋಷಣೆಯನ್ನು ಇಂಗ್ಲೆಂಡಿನ ಸಂಸತ್ತಿನಲ್ಲಿ, ೧೯೪೭ರ ಜನವರಿ ೨೧ರ ಸಮಾವೇಶದಲ್ಲಿ ಮಾಡಲು ಆಟ್ಲಿ ಕೊನೆಗೂ ಒಪ್ಪಿದ.
ಲಾರ್ಡ್ ಮೌಂಟ್ಬ್ಯಾಟನ್ ಭಾರತದ ಮೇಲೆ ತನ್ನ ಪ್ರಭಾವಮುದ್ರೆಯನ್ನು ಬೀರಲು ನಿಶ್ಚಯಿಸಿದ್ದು ಈ ಹಂತದಲ್ಲಿ.
ಮೌಂಟ್ಬ್ಯಾಟನ್ ಪ್ರವೇಶ
ಟ್ರಾನ್ಸ್ಫರ್ ಆಫ್ ಪವರ್ ಗ್ರಂಥಶ್ರೇಣಿಯ ಕೊನೆಯ (೧೦;೧೧;೧೨) ಸಂಪುಟಗಳು ಆ ಘಟ್ಟದ ತೆರೆಯ ಹಿಂದಿನ ನಡಾವಳಿಗಳ ಮೇಲೂ ಮೌಂಟ್ಬ್ಯಾಟನ್ನ ಕೃತ್ರಿಮ ನೀತಿಯ ಮೇಲೂ ಬೆಳಕು ಚೆಲ್ಲಿವೆ. ಅದನ್ನು ಸೀರ್ವಾಯ್ ಅವರ ಮಾತುಗಳಲ್ಲಿಯೇ ನೋಡೋಣ:
೧೯೪೬ರ ಡಿಸೆಂಬರ್ ೧೮ರಂದು (ಅಂದರೆ ವೇವೆಲ್ ಭೇಟಿಗೆ ಎರಡು ದಿನ ಮುಂಚೆ) ಆಟ್ಲಿ ಮೌಂಟ್ಬ್ಯಾಟನ್ನನ್ನು ಕರೆದು ಭಾರತದ ವೈಸರಾಯ್ ಪದವಿಯನ್ನು ವಹಿಸಿಕೊಳ್ಳುವಂತೆ ಸೂಚಿಸಿದ. ತನ್ನ ಜವಾಬ್ದಾರಿಯ ನಿರ್ವಹಣೆಯಲ್ಲಿ ಉಂಟಾಗಬಹುದಾದ ಸಮಸ್ಯೆಗಳ ಬಗೆಗೆ ಸಲಹೆಗಳನ್ನು ವೇವೆಲ್ನಿಂದ ಪಡೆಯಲು ಮೌಂಟ್ಬ್ಯಾಟನ್ನಿಗೆ ಅವಕಾಶವಿತ್ತು. ಏಕೆಂದರೆ ಡಿಸೆಂಬರ್ ೨೨ರವರೆಗೆ ವೇವೆಲ್ ಲಂಡನ್ನಿನಲ್ಲಿಯೇ ಇದ್ದ. ನೀವು ಕೇಳಿದ ರೀತಿಯ ಭರವಸೆಯನ್ನು ನಿಮಗೆ ನೀಡಿದ್ದೇವೆ ಎಂಬ ಆಶ್ವಾಸನೆಯೊಂದಿಗೆ ಆಟ್ಲಿ ವೇವೆಲ್ನನ್ನು ಬೀಳ್ಕೊಟ್ಟಿದ್ದ. ಅದು ನಾಟಕವೆಂಬುದು ಸ್ಪಷ್ಟವಿದೆ; ಏಕೆಂದರೆ ವೇವೆಲ್ನನ್ನು ಪದವಿಯಿಂದ ತೆಗೆಯುವ ನಿರ್ಧಾರವನ್ನು ಆಟ್ಲಿ ಆಗಲೇ ಮಾಡಿಯಾಗಿತ್ತು. ಆತನಿಗಿದ್ದ ತೊಂದರೆ – ವೇವೆಲ್ನಂಥ ಗೌರವಸಂಪನ್ನ ವೈಸರಾಯನನ್ನು ಅಕಾರಣವಾಗಿ ತೆಗೆದುಹಾಕುವುದು ಸುಲಭವಾಗಿರಲಿಲ್ಲ, ಹಿತವೂ ಆಗಿರಲಿಲ್ಲ. ವೇವೆಲ್ ಭಾರತಕ್ಕೆ ನಿರ್ಗಮಿಸಿದ ಮೇಲೆ ಆಟ್ಲಿ, ಕ್ರಿಪ್ಸ್ ಮತ್ತು ಮೌಂಟ್ಬ್ಯಾಟನ್ ಕೂಡಿ ಯೋಜಿಸಿದ ತಂತ್ರವನ್ನು ಠಕ್ಕು ಎಂದು ಮಾತ್ರ ವರ್ಣಿಸಬಹುದು.
(ಸ್ಟಾಫರ್ಡ್ ಕ್ರಿಪ್ಸ್ ಬ್ರಿಟಿಷ್ ಸರ್ಕಾರದ ವಾಣಿಜ್ಯ ಮಂಡಳಿಯ ಅಧ್ಯಕ್ಷನಾಗಿದ್ದವ: ೧೯೪೬ರ ಮಾರ್ಚ್ ತಿಂಗಳಲ್ಲಿ ಭಾರತಕ್ಕೆ ಬಂದ ಕ್ಯಾಬಿನೆಟ್ ಆಯೋಗದ ಪ್ರಮುಖ ಸದಸ್ಯ.)
ಪರಿಸ್ಥಿತಿಯನ್ನು ಪುನರ್ವಿಮರ್ಶಿಸುವ ನೆವದಲ್ಲಿ ವೇವೆಲ್ನನ್ನು ಇಂಗ್ಲೆಂಡಿಗೆ ಮತ್ತೆ ಕರೆಯಿಸಿ ಹೇಗಾದರೂ ಆತನ ರಾಜೀನಾಮೆಯನ್ನು ಪಡೆಯಬೇಕೆಂಬುದು ಮೇಲಣ ಮೂವರೂ ಯೋಜಿಸಿದ ತಂತ್ರ. ೧೯೪೭ರ ಜನವರಿ ೪ರಂದು ಜಾರ್ಜ್ ದೊರೆಗೆ ಮೌಂಟ್ಬ್ಯಾಟನ್ ಬರೆದ ಪತ್ರ ಇದು: ವೇವೆಲ್ರನ್ನು ಕರಾಚಿಯಲ್ಲಿ ಭೇಟಿ ಮಾಡಿದಲ್ಲಿ ನನ್ನ ಸರ್ಕಾರದ ಧೋರಣೆಯ ಬಗೆಗೆ ಆತ ಅಸಮಾಧಾನ ಸೂಚಿಸಿಯಾರು; ಆಗ ನನ್ನ ಕೈಕಟ್ಟಿದಂತೆ ಆಗುತ್ತದೆ. ಆದ್ದರಿಂದ ಅವರನ್ನು ಇಂಗ್ಲೆಂಡಿಗೇ ಕರೆಸಿದಲ್ಲಿ ನನ್ನ ಪ್ರತಿಕ್ರಿಯೆಯನ್ನು ನಿಮಗೆ ತಿಳಿಸಲು ಅವಕಾಶವಾಗುತ್ತದೆ. ಅಲ್ಲದೆ ಅವರು ರಾಜೀನಾಮೆ ನೀಡಲು ನಿರಾಕರಿಸುವ ಸಂಭವ ಇದೆ. ಆದ್ದರಿಂದ ನೀವು ನೇರವಾಗಿ ಮುಖತಃ ಅವರಿಂದ ರಾಜೀನಾಮೆ ಕೇಳುವುದು ಸೂಕ್ತವಾಗುತ್ತದೆ. ಅದರಂತೆ ಜನವರಿ ೮ರಂದು ಆಟ್ಲಿ ವೇವೆಲ್ನಿಗೆ ಪತ್ರ ಬರೆದ.
ಇದರ ಹಿಂದಿದ್ದ ತಂತ್ರ ವೇವೆಲ್ನಿಗೆ ಥಟ್ಟನೆ ಅರ್ಥವಾಯಿತು. ನನ್ನ ರಾಜೀನಾಮೆ ಕೇಳುವುದಕ್ಕಾಗಿಯೇ ಇಂಗ್ಲೆಂಡಿಗೆ ನನ್ನನ್ನು ಕರೆಸುತ್ತಿದ್ದಾರೆ ಎನಿಸುತ್ತದೆ ಎಂದು ವೇವೆಲ್ ಜನವರಿ ೧೨ರ ದಿನಚರಿ ಟಿಪ್ಪಣಿಯಲ್ಲಿ ಬರೆದ. ಜನವರಿ ೧೭ರಂದು ವೇವೆಲ್ ಆಟ್ಲಿಗೆ ಉತ್ತರ ಬರೆದ: ನಾನು ಹೊಸದೇನೂ ಸಲಹೆಗಳನ್ನು ಮಾಡುವ ಸ್ಥಿತಿಯಲ್ಲಿ ಇಲ್ಲ. ಆದ್ದರಿಂದ ನಾನು ಈಗ ಇಂಗ್ಲೆಂಡಿಗೆ ಬರುವುದರಲ್ಲಿ ಅರ್ಥ ಕಾಣುತ್ತಿಲ್ಲ. ಅವಶ್ಯವಿದ್ದಲ್ಲಿ ಮಾರ್ಚ್ ಅಥವಾ ಏಪ್ರಿಲ್ ತಿಂಗಳಲ್ಲಿ ಬರುವೆ.
ವೇವೆಲ್ನ ಉತ್ತರಕ್ಕಾಗಿ ಮೌಂಟ್ಬ್ಯಾಟನ್, ಕ್ರಿಪ್ಸ್ ಮತ್ತು ಆಟ್ಲಿ ಕಾತರದಿಂದ ಕಾದಿದ್ದರು. ಮೂವರೂ ಉರಿದೆದ್ದರು. ಜನವರಿ ೨೮ರಂದು ಕ್ರಿಪ್ಸ್ ಆಟ್ಲಿಗೆ ಬರೆದ: ನಿರೀಕ್ಷಿತ ಉತ್ತರ ಬಂದಿದೆ. ನಾನು ನಿಮ್ಮಲ್ಲಿ ಹೇಳಿದ್ದಂತೆಯೇ ವೇವೆಲ್ ಸಮಸ್ಯೆಯಾಗಿಯೇ ಉಳಿದಿದ್ದಾರೆ. ಪ್ರಧಾನಿ ಮುಂದಿನ ಕ್ರಮವನ್ನು ಯೋಚಿಸುತ್ತಿದ್ದಾರೆಯೆ?
ವೇವೆಲ್ನನ್ನು ಇಂಗ್ಲೆಂಡಿಗೆ ಕರೆಸುವುದರಲ್ಲಿ ವಿಫಲನಾದರೂ ಆಟ್ಲಿ ವೇವೆಲ್ನನ್ನು ಕೆಲಸದಿಂದ ವಜಾ ಮಾಡಲು ಹಿಂತೆಗೆದ; ಇನ್ನೊಂದು ಸ್ವರ ಹಾಡತೊಡಗಿದ: ನಿಮ್ಮದು ಯುದ್ಧಸಮಯದ ಹಿನ್ನೆಲೆಯಲ್ಲಿ ಆಗಿದ್ದ ನೇಮಕ. ಅದರ ಮೂರು ವರ್ಷದ ನಿಗದಿತ ಅವಧಿ ಮುಗಿದಿದೆ. ಅಲ್ಲದೆ ನಿಮ್ಮ ಧೋರಣೆಗೂ ನಮ್ಮ ಸರ್ಕಾರದ ಧೋರಣೆಗೂ ನಡುವೆ ಭಿನ್ನತೆಗಳೂ ತೋರಿವೆ. ಈಗ ರೂಪಿಸಬೇಕಾದ ಹೊಸ ಧೋರಣೆಗೆ ದೀರ್ಘಕಾಲವೇ ಹಿಡಿದೀತು. ಆದ್ದರಿಂದ ಯುದ್ಧ ಸಮಯದಲ್ಲಿ ಫೀಲ್ಡ್ ಮಾರ್ಷಲ್ ವೈಕೌಂಟ್ ವೇವೆಲ್ ವಹಿಸಿಕೊಂಡಿದ್ದ ವೈಸರಾಯ್ ಪದವಿಯಿಂದ ಈಗ ನಿವೃತ್ತರಾಗುತ್ತಿದ್ದಾರೆ ಎಂದು ಪ್ರಕಟಣೆ ಹೊರಡಿಸಲು ಬಯಸಿದ್ದೇವೆ.
ವೇವೆಲ್ ರಾಜೀನಾಮೆ
ಈ ಬಲಾತ್ಕಾರಕ್ಕೂ ವೇವೆಲ್ ಸಗ್ಗಲಿಲ್ಲ. ೧೯೪೭ರ ಫೆಬ್ರುವರಿ ೫ರಂದು ಆಟ್ಲಿಗೆ ಉತ್ತರಿಸಿದ: ಧೋರಣೆಯ ಭಿನ್ನತೆಯನ್ನು ನೆವ ಮಾಡಿಕೊಂಡು ನನ್ನನ್ನು ಕೆಲಸದಿಂದ ತೆಗೆಯಬಯಸಿದ್ದೀರಿ. ನನಗೆ ತೋರುವಂತೆ ಭಿನ್ನತೆ ಇರುವುದು ಒಂದೇ ಅಂಶದಲ್ಲಿ. ಈ ಮಧ್ಯಂತರ ಅವಧಿಯ ಬಗೆಗೆ ಒಂದು ಅಸಂದಿಗ್ಧ ಧೋರಣೆಯನ್ನು ಘೋಷಿಸುವಂತೆ ನಾನು ಕೇಳುತ್ತಿದ್ದೇನೆ; ಆದರೆ ಸರ್ಕಾರ ಅದನ್ನು ಘೋಷಿಸಲು ನಿರಾಕರಿಸುತ್ತಿದೆ. ಇದನ್ನು ಕುರಿತು ನಾನು ಇನ್ನು ಹೆಚ್ಚು ವಾದ ಮಾಡಲು ಈ ಹಂತದಲ್ಲಿ ಬಯಸುವುದಿಲ್ಲ. ಆದರೆ ಭಾರತದಲ್ಲಿರುವ ಆಂಗ್ಲಪ್ರಭುತ್ವ ಪ್ರತಿನಿಧಿಯನ್ನು ಹೀಗೆ ಕೆಲಸದಿಂದ ವಜಾಮಾಡುವ ಕ್ರಮ ಈ ಪದವಿಯ ಘನತೆಗೆ ಹೊಂದುವುದಿಲ್ಲ ಎಂದು ಭಾವಿಸುತ್ತೇನೆ. ಎಲ್ಲ ವೈಸರಾಯರಿಗೂ ನಿವೃತ್ತಿಗೆ ಮುಂಚೆ ಆರು ತಿಂಗಳ ಅವಕಾಶ ಕೊಡುವುದು ಹಳೆಯ ಸಂಪ್ರದಾಯ. ನನಗೆ ಬದಲಾಗಿ ಬೇರೊಬ್ಬರನ್ನು ನೇಮಕ ಮಾಡುವ ಬಗೆಗೆ ನೀವು ಪರಿಶೀಲಿಸಬಹುದೆಂದು ನಾನು ಕಳೆದ ವರ್ಷ ಆಗಸ್ಟ್ ತಿಂಗಳ ಆರಂಭದಲ್ಲೇ ನಿಮಗೆ ಬರೆದಿದ್ದೆ. ಆದರೆ ಆಗ ನಿಮ್ಮಿಂದ ಇದಕ್ಕೆ ಯಾವ ಪ್ರತಿಕ್ರಿಯೆಯೂ ಬಂದಿರಲಿಲ್ಲ. ಅಲ್ಲಿಂದೀಚಿನ ಕೆಲವೇ ವಾರಗಳಲ್ಲಿ ವಜಾ ಮಾಡಿಸಿಕೊಳ್ಳುವಂಥ ಯಾವ ಅಪರಾಧವನ್ನು ನಾನು ಮಾಡಿದ್ದೇನೆಂದು ಅರಿಯೆ.
ವೇವೆಲ್ನ ಸ್ಪಷ್ಟ ನಿಲವು ಮತ್ತೆ ಆಟ್ಲಿಯ ಗಂಟಲಿಗೆ ಗಾಣವಾಯಿತು. ಮೌಂಟ್ಬ್ಯಾಟನ್ನನ್ನು ವೈಸರಾಯ್ ಆಗಿ ನಿಯುಕ್ತಿ ಮಾಡುತ್ತಿರುವ ಹಿನ್ನೆಲೆಯಲ್ಲಿ ವೇವೆಲ್ನಿಗೆ ಯುದ್ಧ ಸಮಯದಲ್ಲಿ ನೀಡಿದ್ದ ಜವಾಬ್ದಾರಿಯನ್ನು ಕೊನೆಗೊಳಿಸುವುದು ಯುಕ್ತವೆನಿಸಿದೆ – ಎಂದು ತಾನು ಹೇಳಿಕೆ ನೀಡಲಿರುವುದಾಗಿ ಆಟ್ಲಿ ಫೆಬ್ರುವರಿ ೧೨ರಂದು ವೇವೆಲ್ನಿಗೆ ಪತ್ರ ಬರೆದ.
ತನ್ನ ಪದವಿಯನ್ನು ಬ್ರಿಟಿಷ್ ಸರ್ಕಾರ ಕೊನೆಗೊಳಿಸಿದುದರ ಬಗೆಗೆ ಆಂಗ್ಲ ಸಂಸತ್ತಿನ ಮೇಲ್ಮನೆಯಲ್ಲಿ ಹೇಳಿಕೆಯೊಂದನ್ನು ನೀಡಲು ವೇವೆಲ್ ಬಯಸಿದಲ್ಲಿ ಅದಕ್ಕೆ ಅವಕಾಶ ಇತ್ತು. ಅದರಿಂದ ಮೇಲಣ ಹಿನ್ನೆಲೆ ಕಾರಸ್ಥಾನ ಬಯಲಾಗುತ್ತಿತ್ತು. ವೇವೆಲ್ನ ಹುದ್ದೆಯನ್ನು ಕೊನೆಗೊಳಿಸಿದುದರ ಬಗೆಗೆ ಬ್ರಿಟಿಷ್ ಪತ್ರಿಕೆಗಳಲ್ಲಿ ವಿವಾದವೂ ಆರಂಭವಾಗಿತ್ತು. ಆದರೆ ತನ್ನಿಂದಾಗಿ ಬ್ರಿಟಿಷ್ ಸರ್ಕಾರಕ್ಕೆ ಇರುಸುಮುರುಸು ಆಗಬಾರದೆಂಬ ಸೌಜನ್ಯಬುದ್ಧಿಯಿಂದ ವೇವೆಲ್ ೧೯೪೭ರ ಫೆಬ್ರುವರಿ ೨೧ರಂದು ಆಟ್ಲಿಗೆ ತಾರು ಕಳಿಸಿದ: ನನ್ನ ಉತ್ತರಾಧಿಕಾರಿಯ ಆಗಮನ ವಿವಾದಕ್ಕೆ ಎಡೆಗೊಡಬೇಕೆಂದು ನಾನು ಇಷ್ಟಪಡಲಾರೆ, ಆದ್ದರಿಂದ ಅವರನ್ನು ಸ್ವಾಗತಿಸಿ ನನ್ನಿಂದಾದ ಎಲ್ಲ ಸಹಕಾರವನ್ನು ನೀಡುವ ಭರವಸೆ ಕೊಡುತ್ತೇನೆ. ಆಟ್ಲಿ ವೇವೆಲ್ನನ್ನು ಹಾರ್ದಿಕವಾಗಿ ಅಭಿವಂದಿಸಿ ತಾರು ಕಳಿಸಿದ.
* * *
೧೯೪೭ರ ಮಾರ್ಚ್ ೨೩ರಿಂದ ಮೌಂಟ್ಬ್ಯಾಟನನ ದರ್ಬಾರು ಆರಂಭವಾಯಿತು. ವಾಸ್ತವ ಸಂಗತಿಯೆಂದರೆ ಯುದ್ಧ ವರ್ಷಗಳಲ್ಲಿ ಚರ್ಚಿಲ್ ಸಂಪುಟದಲ್ಲಿ ಉಪಪ್ರಧಾನಿಯಾಗಿದ್ದಾಗಿನಿಂದ ಆಟ್ಲಿ ವೇವೆಲ್ ಯೋಜನೆಗಳಿಗೆ ತೊಡರುಗಾಲು ಹಾಕುತ್ತಲೇ ಇದ್ದ; ಭಾರತದ ಪರಿಸ್ಥಿತಿಯನ್ನು ನಿಭಾಯಿಸಲು ವೇವೆಲ್ ಅಸಮರ್ಥನೆಂದು ತನ್ನಷ್ಟಕ್ಕೆ ನಿರ್ಧರಿಸಿಬಿಟ್ಟಿದ್ದ. ಹಾಗೆ ನೋಡಿದರೆ ಭಾರತದ ಬಗೆಗೆ ಆಟ್ಲಿಗಿದ್ದ ಪರಿಜ್ಞಾನ ಶೂನ್ಯವೆಂದೇ ಹೇಳಬಹುದು. ೧೯೨೮ರಲ್ಲಿ ಸೈಮನ್ ಆಯೋಗದ ಸದಸ್ಯನಾಗಿದ್ದುದನ್ನು ಬಿಟ್ಟರೆ ಆಟ್ಲಿಗೆ ಭಾರತದ ಸಂಪರ್ಕ ಇರಲಿಲ್ಲವೆಂದೇ ಹೇಳಬಹುದು. ವೇವೆಲ್ನಾದರೋ ಹದಿಮೂರು ವರ್ಷಕ್ಕೂ ಹೆಚ್ಚು ಕಾಲ ಭಾರತದಲ್ಲಿ ವಾಸಮಾಡಿದ್ದ. ಆತನ ಬಾಲ್ಯವನ್ನು ನೀಲಗಿರಿ ಪ್ರಾಂತದಲ್ಲಿಯೂ, ಸಬಾಲ್ಟರ್ನ್ ದರ್ಜೆಯಲ್ಲಿ ಐದು ವರ್ಷಗಳನ್ನು ಉತ್ತರಭಾರತದಲ್ಲಿಯೂ ಸವೆಸಿದ್ದುದಲ್ಲದೆ, ವೈಸರಾಯ್ ಸಂಪುಟ ಸದಸ್ಯನಾಗಿಯೂ ಎರಡು ವರ್ಷ ಕೆಲಸ ಮಾಡಿದ್ದ. ವೈಸರಾಯ್ ಪದವಿಗೆ ಏರಿದ ಮೇಲೆ ವೇವೆಲ್ನಷ್ಟು ವ್ಯಾಪಕವಾಗಿ ಭಾರತದ ವಿವಿಧ ಪ್ರಾಂತಗಳಲ್ಲಿ ಪ್ರವಾಸ ಮಾಡಿ ಸರ್ಕಾರದ ಪ್ರತಿನಿಧಿಗಳೊಡನೆಯೂ ಭಾರತೀಯರೊಡನೆಯೂ ನಿಕಟ ಸಂಪರ್ಕ ಬೆಳೆಸಿದ್ದ ವೈಸರಾಯ್ ಬೇರೆ ಇರಲಿಲ್ಲವೆಂದೇ ಹೇಳಬಹುದು.
ಆಟ್ಲಿ ಸರ್ಕಾರದ ಅನಿಶ್ಚಿತತೆ
ವೇವೆಲ್ನಿಗೂ ಆಟ್ಲಿ ಮೊದಲಾದವರಿಗೂ ನಡುವೆ ಗೋಡೆ ಎದ್ದುದಕ್ಕೆ ಕಾರಣ ವೇವೆಲ್ ತಳೆದಿದ್ದ ನ್ಯಾಯರೀತಿಯ ಧೋರಣೆ. ಬ್ರಿಟಿಷ್ ಸಮ್ರಾಟನಿಗೆ ೧೯೪೭ರ ಫೆಬ್ರುವರಿ ೨೪ರಂದು ಬರೆದ ಪತ್ರದಲ್ಲಿ ವೇವೆಲ್ ತನ್ನ ನಿಲವನ್ನು ಸ್ಫುಟಪಡಿಸಿದ್ದ: ನಾನು ವೈಸರಾಯ್ ಪದವಿಗೆ ನಿಯುಕ್ತನಾದಾಗ ಕೈಗೊಂಡ ಮೊದಲ ನಿರ್ಧಾರ ಇದು: ಭಾರತದ ಅಖಂಡತೆಯನ್ನು ಉಳಿಸಿ ಅದರೊಡನೆ ಇಂಗ್ಲೆಂಡಿನ ಸ್ನೇಹ ವರ್ಧಿಸುವಂತೆ ಶ್ರಮಿಸಬೇಕು. ಇಂಗ್ಲೆಂಡು ಭಾರತದಿಂದ ಹೊರಬರಬೇಕೆಂದೇ ಆದಲ್ಲಿ ಈ ಕಾರ್ಯ ಸುವ್ಯವಸ್ಥಿತವಾಗಿ ಆಗಬೇಕು.
ವೇವೆಲ್ನ ಈ ನಿಲವಿನ ಸಾಧುತ್ವವನ್ನು ಗ್ರಹಿಸುವ ಅವಧಾನವೂ ವಿವೇಚನೆಯೂ ಆಟ್ಲಿ ಸಂಪುಟದಲ್ಲಿ ಉಳಿದಿರಲಿಲ್ಲ. ಜಪಾನಿನೊಡನೆ ಯುದ್ಧ ಹೇಗೋ ಕೊನೆಗೊಂಡಿತ್ತಾದ್ದರಿಂದ ನಮ್ಮ ಸಾಮ್ರಾಜ್ಯ ಈಗಲೂ ಮುಂಚಿನಂತೆಯೇ ಇದೆ ಎಂಬ ಭ್ರಾಂತಿ ಮರುಕಳಿಸಿತ್ತು. ಭಾರತದ ವಿದ್ಯಮಾನಗಳಿಂದ ಬ್ರಿಟಿಷ್ ನಿರ್ಣಯಕರ್ತರು ಎಷ್ಟು ದೂರ ಇದ್ದರೆನ್ನಲು ದಾಖಲೆಗಳಿಗೆ ಕೊರತೆಯಿಲ್ಲ. ಉದಾಹರಣೆಗೆ ಇಂಗ್ಲೆಂಡು ಭಾರತದಿಂದ ನಿರ್ಗಮಿಸಲು ಖಚಿತ ದಿನಾಂಕವೊಂದನ್ನು ನಿಶ್ಚಯಿಸಬೇಕೆಂಬ ಸಲಹೆಯನ್ನು ವಿದೇಶಾಂಗ ಕಾರ್ಯದರ್ಶಿ ಅರ್ನೆಸ್ಟ್ ಬೆವಿನ್ ೧೯೪೭ರ ಜನವರಿ ೧ರಂದು ಬರೆದ ಪತ್ರದಲ್ಲಿ ತೀವ್ರವಾಗಿ ವಿರೋಧಿಸಿದ್ದಲ್ಲದೆ ವೇವೆಲ್ನದು ಹೇಡಿತನದ ಮನೋಧರ್ಮವೆಂದೂ ಟೀಕಿಸಿದ. ಆದರೆ ೧೯೪೮ರ ಮಾರ್ಚ್ ೩೧ರೊಳಗೆ ಭಾರತದಿಂದ ನಿರ್ಗಮಿಸುವ ಹೇಡಿತನದ ನಿರ್ಧಾರವನ್ನೇ ಆಟ್ಲಿ ಸಂಪುಟ ಕೈಗೊಳ್ಳುವಂತಾಯಿತು!
ಹೇಗಾದರೂ ವೇವೆಲ್ನ ಜಾಗದಲ್ಲಿ ತಾನು ಬಂದು ಕುಳಿತು ಅಧಿಕಾರ ಹಸ್ತಾಂತರದ ಕೀರ್ತಿಯನ್ನು ಪಡೆಯಲು ಮೌಂಟ್ಬ್ಯಾಟನ್ ಹವಣಿಸಿ, ಈ ಉದ್ದೇಶಕ್ಕಾಗಿ ಬಗೆಬಗೆಯ ಕುಟಿಲಗಳನ್ನು ನಡೆಸಿದನೆಂಬುದು ಸ್ಪಷ್ಟವಾಗಿದೆ. ಆ ಮುಂಚೆ ೧೯೪೮ರ ಮಾರ್ಚ್ ೩೧ ಎಂದು ನಿರ್ಧಾರವಾಗಿದ್ದ ಗಡಿ ದಿನಾಂಕವನ್ನು ಏಳೂವರೆ ತಿಂಗಳು ಹಿಂದೂಡಿದುದರಲ್ಲಿಯೂ ಮೌಂಟ್ಬ್ಯಾಟನ್ನ ಪ್ರತಿಷ್ಠಾಕಾಮನೆಯೇ ಮುಖ್ಯ ಪಾತ್ರ ವಹಿಸಿತ್ತೆನ್ನಬಹುದು. ಈ ಸ್ವಪ್ರತಿಷ್ಠೆಯನ್ನು ಆ ದಿನಗಳ ಪತ್ರವ್ಯವಹಾರದುದ್ದಕ್ಕೂ ಕಾಣುತ್ತೇವೆ. ಅಗಾಧ ಪ್ರಮಾಣದ ರಕ್ತಪಾತದ ಸಂಭವ ತಿಳಿದೂ ಗಡಿ ದಿನಾಂಕವನ್ನು ಹಿಂದೂಡಿ ಮೌಂಟ್ಬ್ಯಾಟನ್ ತಾನು ಸಮರ್ಥನೆಂಬ ಹೆಗ್ಗಳಿಕೆ ಪಡೆದ. ತನ್ನ ಪ್ರತಿಷ್ಠೆಯನ್ನು ಹೆಚ್ಚಿಸಿಕೊಳ್ಳಲು ಮೌಂಟ್ಬ್ಯಾಟನ್ ತಾನು ವೈಸರಾಯ್ ಹುದ್ದೆಯನ್ನು ಅಲಂಕರಿಸಬೇಕೆಂಬ ಆಹ್ವಾನವನ್ನೂ ಭಾರತದ ರಾಜಕೀಯ ಪಕ್ಷಗಳಿಂದ ಬಯಸಿದ್ದ! ಆವರೆಗಿನ ಹಿಂದಿನ ವೈಸರಾಯ್ಗಳನ್ನು ಬ್ರಿಟಿಷ್ ಸರ್ಕಾರ ಭಾರತದ ಮೇಲೆ ಹೇರುತ್ತ ಬಂದಿತ್ತೆಂದೂ, ತಾನು ಮಾತ್ರ ಭಾರತದ ಆಹ್ವಾನದಂತೆಯೇ ಆಗಮಿಸಿ ಕ್ಲಿಷ್ಟ ಪರಿಸ್ಥಿತಿಯನ್ನು ಸೇನಾ ಸಹಜ ದಕ್ಷತೆಯಿಂದ ನಿರ್ವಹಿಸಿದೆನೆಂದೂ ಇತಿಹಾಸದ ಪುಟಗಳಲ್ಲಿ ದಾಖಲೆ ಮಾಡಹೊರಟಿದ್ದ, ಮೌಂಟ್ಬ್ಯಾಟನ್. ಈ ಅಹಂಕಾರಕ್ಕಾಗಿ ಭಾರತ ತೆತ್ತ ಬೆಲೆ ಎಷ್ಟು ಅಗಾಧವಾದದ್ದೆಂಬುದು ಈಗ ಚರಿತ್ರೆಯ ವಿಷಯವಾಗಿಹೋಗಿದೆ. ಲಕ್ಷಾಂತರ ಜನರು ಸಾವುನೋವಿನ ಸವಾಲನ್ನು ಎದುರಿಸುತ್ತಿರುವಾಗ ಮೌಂಟ್ಬ್ಯಾಟನ್ ಮತ್ತು ಆಟ್ಲಿ ತಮ್ಮದೇ ಜುಜುಬಿ ನಾಟಕಗಳಲ್ಲಿ ನಿರತರಾಗಿದ್ದರು!
ಸೀರ್ವಾಯ್ ಹೇಳುತ್ತಾರೆ
೧೯೪೭ರ ಜನವರಿ ೧೬ರ ವೇಳೆಗೇ ಆಟ್ಲಿ ಭಾರತದಿಂದ ಬ್ರಿಟನ್ ನಿರ್ಗಮಿಸಲು ದಿನಾಂಕವೊಂದನ್ನು ಘೋಷಿಸಲೇಬೇಕಾಗುತ್ತದೆಂಬ ನಿಶ್ಚಯಕ್ಕೆ ಬಂದಿದ್ದುದು ಸ್ಪಷ್ಟ. ಈ ಘೋಷಣೆಗೆ ಮುಂಚೆ ಹಿಂದೂ-ಮುಸ್ಲಿಮರನ್ನು ಒಗ್ಗೂಡಿಸುವ ಒಂದು ಆಖೈರು ಪ್ರಯತ್ನ ಮಾಡಬೇಕೇ ಬೇಡವೇ, ಮೌಂಟ್ಬ್ಯಾಟನ್ನನ್ನು ನಿಯುಕ್ತಗೊಳಿಸುವ ಪ್ರಕಟಣೆಯಲ್ಲಿ ಈ ದಿನಾಂಕದ ಉಲ್ಲೇಖ ಇರಬೇಕೇ ಬೇಡವೇ – ಇವೆಲ್ಲ ಗೌಣವೇ ಆಗಿತ್ತು. ಸ್ವಾರಸ್ಯದ ಸಂಗತಿಯೆಂದರೆ – ನಿಶ್ಚಿತ ದಿನಾಂಕ ಘೋಷಿಸಿದ ಹೊರತು ತಾನು ವೈಸರಾಯ್ ಪದವಿಯನ್ನು ಸ್ವೀಕರಿಸುವುದಿಲ್ಲವೆಂದು ಮೌಂಟ್ಬ್ಯಾಟನ್ ಹಟ ಹಿಡಿದ. ಅದಕ್ಷತೆಗಾಗಿ ಆಟ್ಲಿ-ಮೌಂಟ್ಬ್ಯಾಟನ್ ಕೂಟ ಕರಾಮತ್ತು ನಡೆಸಿ ವಜಾಮಾಡಿದ್ದ ಬಡಪಾಯಿ ವೇವೆಲ್ ದೀರ್ಘಕಾಲದಿಂದ ಕೋರುತ್ತಿದ್ದುದಾದರೂ ಇದೇ ರೀತಿಯ ದಿನಾಂಕ ಘೋಷಣೆಯನ್ನು…. ಭಾರತದಿಂದ ಬ್ರಿಟನ್ ಕಾಲ್ತೆಗೆಯ ಬೇಕಾದರೆ, ಆ ಕೆಲಸ ಸೇನಾಸಹಜ ಸುವ್ಯವಸ್ಥೆಯಿಂದ ನಡೆಯಬೇಕೆಂದು ವೇವೆಲ್ ತಿಂಗಳುಗಟ್ಟಲೆ ಆಗ್ರಹಪಡಿಸಿದ್ದ.
ಈ ದಿಕ್ಕಿನಲ್ಲಿ ಆಟ್ಲಿಯಾಗಲಿ ಮೌಂಟ್ಬ್ಯಾಟನ್ ಆಗಲಿ ಯಾವ ರಚನಾತ್ಮಕ ಸೂಚನೆಯನ್ನೂ ಮಂಡಿಸಿರಲಿಲ್ಲವೆಂದು ಜಾರ್ಜ್ ದೊರೆಯೇ ದಿನಚರಿ ಟಿಪ್ಪಣಿ ಪುಸ್ತಕದಲ್ಲಿ ದಾಖಲೆ ಮಾಡಿದ್ದಿದೆ.
ವಿಭಜನೆ ದಿನಾಂಕ ಹಿಂದೂಡಿದ್ದೇಕೆ?
ವಿಭಜನೆ ಅನಿವಾರ್ಯವೆನಿಸಿತ್ತೆಂದು ಇರಿಸಿಕೊಂಡರೂ – ಜೂನ್ ೧೯೪೮ ಎಂದು ನಿಶ್ಚಯವಾಗಿದ್ದ ದಿನಾಂಕವನ್ನು ಅಕ್ಟೋಬರ್ ೧೯೪೭ಕ್ಕೆ, ಅನಂತರ ಅದೂ ದೂರವೆನಿಸಿ ೧೫ ಆಗಸ್ಟ್ ೧೯೪೭ಕ್ಕೆ ಮೌಂಟ್ಬ್ಯಾಟನ್ ಹಿಂದೂಡಿದ್ದು ಏಕೆ? ಮೌಂಟ್ಬ್ಯಾಟನ್ ನೀಡಿದ ಕಾರಣಗಳು – (೧) ಘಟನೆಗಳು ಹೇಗೆ ನಡೆಯಬೇಕೆಂಬುದನ್ನು ನಿರ್ಣಯಿಸುವವನು ತಾನು; (೨) ಈ ದಿನಾಂಕ (೧೫-೮-೧೯೪೭) ಮಹಾಯುದ್ಧದಲ್ಲಿ ಜಪಾನಿನ ಮೇಲೆ ವಿಕ್ರಮ ಸ್ಥಾಪಿಸಿದ್ದರ ಎರಡನೇ ವಾರ್ಷಿಕ; ಇತ್ಯಾದಿ. ಆದರೆ ಈ ಮತ್ತು ಇತರ ಕಾರಣಗಳೆಲ್ಲ ಉತ್ತರೋತ್ತರ ಮೌಂಟ್ಬ್ಯಾಟನ್ ಪೌಂಛಾವಣಿ ಮಾಡಿದ್ದೆನ್ನಬಹುದು.
ಕಾರಣಗಳು ಏನೇ ಇರಲಿ. ವಿಭಜನೆಯ ದಿನಾಂಕವನ್ನು ಹಿಂದೂಡಿ ಅವಸರಗೊಳಿಸಿದ್ದರ ಪರಿಣಾಮವಾಗಿ ಆರು ಲಕ್ಷಕ್ಕೂ ಹೆಚ್ಚು ನಿರಪರಾಧಿಗಳು ಸತ್ತು, ೧.೪ ಕೋಟಿ ಜನ ಅಕಾರಣವಾಗಿ ದೇಶಾಂತರಗೊಳ್ಳಬೇಕಾಯಿತು. ದಿನಾಂಕವನ್ನು ಏಕಾಏಕಿ ಹಿಂದೂಡದೆ ಇದ್ದಿದ್ದರೆ ಈ ದುರಂತದ ಪ್ರಮಾಣ ಗಣನೀಯವಾಗಿ ಕಡಮೆಯಾಗುತ್ತಿತ್ತು. ಮೌಂಟ್ಬ್ಯಾಟನ್ನಿಗೆ ಈ ದುರಂತದ ಸಂಭವದ ಪರಿಜ್ಞಾನ ಇರಲಿಲ್ಲವೆ?
ಸಂಭವನೀಯ ದುರಂತದ ಬಗೆಗೆ ಮೌಂಟ್ಬ್ಯಾಟನ್ನನ್ನು ಸ್ವಯಂ ಪಂಜಾಬಿನ ರಾಜ್ಯಪಾಲ ಇವಾನ್ ಜೆಂಕಿನ್ಸ್ನೇ ಎಚ್ಚರಿಸಿದ್ದ; ಗಡಿ ನಿರ್ಣಯ ಆಗುವುದಕ್ಕೆ ಮೊದಲು ಪಾಕಿಸ್ತಾನ ಮತ್ತು ಭಾರತ ಸರ್ಕಾರಗಳು ರಚನೆಯಾದಲ್ಲಿ ಸಿಖ್ಖರು ಬಂಡೇಳುವುದು ನಿಶ್ಚಯವೆಂದು ಸ್ಪಷ್ಟಪಡಿಸಿದ್ದ; ಗ್ಯಾನೀ ಕರ್ತಾರ್ಸಿಂಗರೊಡನೆ ನಡೆದ ಸಂವಾದವನ್ನೊಳಗೊಂಡ ರಹಸ್ಯ ವರದಿಯೊಂದನ್ನೂ ಕಳಿಸಿದ್ದ. ಮೂರು ದಿನಗಳ ತರುವಾಯ (೧೩ ಜುಲೈ) ಮತ್ತೊಂದು ಪತ್ರ ಬರೆದು ಪರಿಸ್ಥಿತಿ ಉಲ್ಬಣಿಸುತ್ತಿದೆ ಎಂದು ತಿಳಿಸಿ ಜನರು ಆತಂಕಗೊಂಡು ಒಂದು ಭಾಗದಿಂದ ಇನ್ನೊಂದಕ್ಕೆ ಧಾವಿಸುವುದನ್ನು ತಪ್ಪಿಸಲು (ಪಂಜಾಬ್ ವಿಭಜನೆ ಕುರಿತ) ರ್ಯಾಡ್ಕ್ಲಿಫ್ ಆಯೋಗದ ವರದಿಯನ್ನು ಆಗಸ್ಟ್ ೧೫ಕ್ಕೆ ಮುಂಚೆ ತರಿಸಿಕೊಂಡು ಪ್ರಕಟಿಸಬೇಕು ಎಂದು ಕೋರಿದ್ದ.
ಪಂಜಾಬಿನ ಜನರಿಗೆ ತಮ್ಮ ಮನೆ ಜಮೀನುಗಳ ಭವಿಷ್ಯದ ಬಗೆಗೆ ಅನಿಶ್ಚಿತತೆ ಮುಂದುವರಿದಲ್ಲಿ ಅವರು ಅಶಾಂತರಾಗುತ್ತಾರೆಂಬುದು ಸ್ವತಸ್ಸಿದ್ಧವಾಗಿತ್ತು. ಜೂನ್ ೨ರಂದು ಮೌಂಟ್ಬ್ಯಾಟನ್ ಭಾರತಕ್ಕೆ ಹಿಂದಿರುಗಲಿದ್ದ. ಅದಕ್ಕೆ ಮೊದಲೇ ಪಂಜಾಬಿನಲ್ಲಿ ಅಂತರ್ಯುದ್ಧದ ಹವೆ ಹರಡುತ್ತಿದ್ದುದಾಗಿ ಜೆಂಕಿನ್ಸ್ ತಿಳಿಸಿದ್ದ.
ಮೌಂಟ್ಬ್ಯಾಟನ್ನ ಜೀವನಚರಿತ್ರೆ ಬರೆದಿರುವ ಜೀಗ್ಲರ್ ಹೇಳುತ್ತಾನೆ: ಮೌಂಟ್ಬ್ಯಾಟನನ ಸ್ವಭಾವದೋಷಗಳೂ ದೈತ್ಯಪ್ರಮಾಣದವಾಗಿದ್ದವು. ಆತನ ಜಂಭ, ಅಹಂಕಾರಗಳಿಗೆ ಮಿತಿಯೇ ಇರಲಿಲ್ಲ… ತನ್ನ ಸಾಧನೆ ಎದ್ದುಕಾಣಬೇಕೆಂದು ಆತ ಚರಿತ್ರೆಯನ್ನೇ ತಿರುಚಲೆಳಸಿದ.
ನೆಹರು, ಜಿನ್ನಾ ಇಬ್ಬರ ಸಮ್ಮತಿಯನ್ನು ಪಡೆದ ಭಾರತ ವಿಭಜನೆಯ ಯೋಜನೆಯನ್ನು ಮೌಂಟ್ಬ್ಯಾಟನ್ ೧೯೪೭ರ ಜೂನ್ ೩ರಂದು ಪ್ರಕಟಗೊಳಿಸಿದ. ಜುಲೈ ೧೫ರಂದು ಇಂಗ್ಲೆಂಡಿನ ಸಂಸತ್ ಸಭೆ ತನ್ನ ಅಂಗೀಕಾರ ಘೋಷಿಸಿತು.
ನಿವಾರಣೀಯ ದುರಂತ
ವಿಭಜನೆ ಅನಿವಾರ್ಯವಾಗಿತ್ತೆ? – ಎಂಬ ಬಗೆಗೆ ಸೀರ್ವಾಯ್ ಹೇಳುತ್ತಾರೆ:
ವಿಭಜನೆಯನ್ನು ನಿವಾರಿಸುವ ಮೊದಲ ಅವಕಾಶ ೧೯೩೭ರ ಚುನಾವಣೆಯ ಅನಂತರ ಲಭ್ಯವಿತ್ತು. ಆ ಹಂತದಲ್ಲಿ ಜಿನ್ನಾ ಕೂಡಾ ಪ್ರತ್ಯೇಕ ಪಾಕಿಸ್ತಾನ ಬೇಕು ಎಂದಿರಲಿಲ್ಲ. ಲಿಯಾಖತ್ ಅಲಿ ಒಪ್ಪಂದ ಎರಡನೆಯ ಅವಕಾಶ ನೀಡಿತ್ತು. ಆದರೆ ಕಾಂಗ್ರೆಸ್ ಆ ಅವಕಾಶವನ್ನೂ ಬಳಸಿಕೊಳ್ಳಲಿಲ್ಲ. ಮೂರನೆಯ ಅವಕಾಶ ಕ್ಯಾಬಿನೆಟ್ ಆಯೋಗ ಯೋಜನೆಯಲ್ಲಿ ಲಭ್ಯವಿತ್ತು… ಆದರೆ ನಿರ್ಣಾಯಕ ಘಟ್ಟದಲ್ಲಿ ಕಾಂಗ್ರೆಸ್, ಬ್ರಿಟಿಷ್ ಸರ್ಕಾರ ಎರಡೂ ವಿಳಂಬ ಧೋರಣೆ ತಳೆದವು.
ಮಧ್ಯಂತರ ಅವಧಿಯಲ್ಲಿ ಮೌಂಟ್ಬ್ಯಾಟನ್ ಪೂರ್ಣ ನಿಯುಕ್ತ ಅಧಿಕಾರ ಹೊಂದಿದ್ದುದರಿಂದಲೂ ೧೯೪೭ರ ಆಗಸ್ಟ್ ೧೪ ಅವನ ಬ್ರಿಟಿಷ್ ಪ್ರತಿನಿಧಿತ್ವದ ಕಟ್ಟಕಡೆಯ ದಿನವಾಗಿದ್ದುದರಿಂದಲೂ ಅವನು ಆ ದಿನಾಂಕಕ್ಕೆ ಮೊದಲೇ ಪಂಜಾಬ್ ವಿಭಜನೆಗೆ ಸಂಬಂಧಿಸಿದ ವರದಿಯನ್ನು ಸಾರ್ವಜನಿಕಗೊಳಿಸುವುದು ಅಪೇಕ್ಷಣೀಯವಾಗಿತ್ತು. ಯಾವುದೇ ಹಠಾತ್ ನಿರ್ಣಯ ರಕ್ತಪಾತ ಕಗ್ಗೊಲೆಗಳಿಗೆ ಅವಕಾಶ ನೀಡುವ ಸಂಭವ ಎಳೆಮಕ್ಕಳಿಗೂ ಅರಿವಿಗೆ ಬಂದಿತ್ತು.
೧೯೪೭ರ ಜುಲೈ ೨೨ರಷ್ಟು ಹಿಂದೆಯೇ ಪಂಜಾಬ್ ವರದಿಯನ್ನು ತ್ವರಿತವಾಗಿ ಪ್ರಕಟಿಸಬೇಕೆಂದು ಮೌಂಟ್ಬ್ಯಾಟನನೇ ಸಿವಿಲ್ ರ್ಯಾಡ್ಕ್ಲಿಫ್ಗೆ ಬರೆದಿದ್ದ; ತನ್ನ ಕೈಗೆ ರ್ಯಾಡ್ಕ್ಲಿಫ್ ವರದಿ ತಲಪಿದೊಡನೆ ತಾನು ಅದನ್ನು ಪ್ರಕಟಿಸುತ್ತೇನೆಂಬ ಭ್ರಮೆಯನ್ನೂ ಹುಟ್ಟಿಸಿದ್ದ. ಆಗಸ್ಟ್ ೯ರಂದು ವೈಸರಾಯರ ಸಿಬ್ಬಂದಿ ಸಭೆ ಸೇರಿತ್ತು. ಆ ಸಭೆಯಲ್ಲಿ ವೈಸರಾಯರ ಪ್ರಚಾರಾಧಿಕಾರಿ ಕ್ಯಾಂಪ್ಬೆಲ್ ಜಾನ್ಸನ್, ಸಿಬ್ಬಂದಿ ಪ್ರಮುಖ ಲಾರ್ಡ್ ಇಸ್ಮೇ ಮೊದಲಾದವರಿದ್ದರು. (ಮೌಂಟ್ಬ್ಯಾಟನನ ನಂಬಿಕೆಗೆ ಪಾತ್ರರಾಗಿದ್ದ ವಿ.ಪಿ. ಮೆನನ್ ಅಂದು ಇರಲಿಲ್ಲ). ಅಲ್ಲಿಂದ ಕೆಲವೇ ತಾಸು ಆಚೆಗೆ ನಡೆದ ಭೀಕರ ಘಟನೆಗಳು ಅನಿರೀಕ್ಷಿತವಲ್ಲವೆಂಬುದು ಜುಲೈ ೨೨ರಿಂದೀಚಿನ ಮೌಂಟ್ಬ್ಯಾಟನ್, ರ್ಯಾಡ್ಕ್ಲಿಫ್, ಇವಾನ್ ಜೆಂಕಿನ್ಸ್ ಮೊದಲಾದವರ ನಡುವಣ ಪತ್ರವ್ಯವಹಾರಗಳಿಂದ ಸ್ಪಷ್ಟವಿದೆ.
ಸೋಜಿಗವೆಂದರೆ ಪಂಜಾಬನ್ನು ಕುರಿತ ವರದಿಯನ್ನು ಮೌಂಟ್ಬ್ಯಾಟನ್ ಪ್ರಕಟಿಸದೆ ಅದುಮಿಟ್ಟ. ಇದಕ್ಕೆ ಏಕೈಕ ಕಾರಣ, ಆಗಸ್ಟ್ ೧೫ರಂದು ತಾನು ವಿಭಕ್ತ ಭಾರತದ ಗವರ್ನರ್-ಜನರಲ್ ಆಗಿ ವಿರಾಜಿಸುವಾಗ ಯಾವುದೇ ಅಪಸ್ವರ-ಅಪಸ್ಮಾರಗಳ ವಾಸನೆ ಬೇಡವೆಂಬ ಮೌಂಟ್ಬ್ಯಾಟನನ ಬಯಕೆ. ತಾನು ಪೂರ್ಣ ವಿಶ್ವಾಸ ಇರಿಸಿದ್ದ ವಿ.ಪಿ. ಮೆನನ್ರಾಗಲಿ ಬೇರಾವ ಭಾರತೀಯರಾಗಲಿ ಆಗಸ್ಟ್ ೯ರ ಸಭೆಯಲ್ಲಿ ಹಾಜರಿರದಂತೆ ಮೌಂಟ್ಬ್ಯಾಟನ್ ಎಚ್ಚರ ವಹಿಸಿದ್ದುದು, ಮೊದಲಾದ ಸಂಗತಿಗಳು ಇದಕ್ಕೆ ಪೋಷಕವಾಗಿವೆ. ಮೌಂಟ್ಬ್ಯಾಟನ್ ಪಾತ್ರದ ಬಗೆಗೆ ಸೀರ್ವಾಯ್ ವಿಶ್ಲೇಷಣೆ ಕೆಳಗಿನಂತಿದೆ. ಅನಂತರದ ಕಾಲದಲ್ಲಿ ಲಬ್ಧವಾದ ಟ್ರಾನ್ಸ್ಫರ್ ಆಫ್ ಪವರ್ ಅಂತಿಮ ಸಂಪುಟಗಳ ದಾಖಲೆಗಳನ್ನು ಆಧರಿಸಿದ ಕಥನ ಇದು:
ಆದಷ್ಟು ಬೇಗ ಪಂಜಾಬ್ ವರದಿಯನ್ನು ಪಡೆದು ಪ್ರಕಟಿಸುವುದಾಗಿ ಇವಾನ್ ಜೆಂಕಿನ್ಸ್ನಿಗೂ ಪಂಜಾಬ್ ವಿಭಜನ ಸಮಿತಿಗೂ ತಾನೇ ನೀಡಿದ್ದ ಮಾತನ್ನು ಮೌಂಟ್ಬ್ಯಾಟನ್ ಮುರಿದ. ಕಾಂಗ್ರೆಸ್, ಮುಸ್ಲಿಂ ಲೀಗ್ ನಾಯಕರಿಂದಲೂ ನಿಜಸ್ಥಿತಿಯನ್ನು ಮುಚ್ಚಿಟ್ಟ. ತಾನು ಎಲ್ಲರ ಸಹಮತ ಪಡೆದಿರುವೆನೆಂದು ಬ್ರಿಟಿಷ್ ಸಂಪುಟಕ್ಕೂ ತಪ್ಪುಭಾವನೆ ನೀಡಿದ… ಆಗಸ್ಟ್ ೧೫ಕ್ಕೆ ಮುಂಚೆಯೇ ಪಂಜಾಬ್ ವಿಭಜನೆ ವರದಿಯನ್ನು ಪ್ರಕಟಿಸಬೇಕೆಂಬ ಉಳಿದೆಲ್ಲ ವರಿಷ್ಠರ ಅಪೇಕ್ಷೆಯನ್ನೂ ತಿರಸ್ಕರಿಸಿದ; ವರದಿಯನ್ನು ರಹಸ್ಯವಾಗಿಡುವ ವೈಯಕ್ತಿಕ ನಿರ್ಧಾರ ಕೈಗೊಂಡ. ದೇಶವಿಭಜನೆಯ ಸಮಯದಲ್ಲಿ ರಕ್ತಪಾತ-ಗಲಭೆಗಳು ನಡೆದಲ್ಲಿ ಸೇನೆಯನ್ನು ಬಳಸಿ ಪರಿಸ್ಥಿತಿಯನ್ನು ನಿಯಂತ್ರಿಸಲು ತಾನು ಸಜ್ಜಾಗಿರುವೆನೆಂದು ಮೌಲಾನಾ ಆಜಾದ್ರಿಗೆ ನೀಡಿದ್ದ ಅಸಂದಿಗ್ಧ ಆಶ್ವಾಸನೆಯನ್ನೂ ಮೌಂಟ್ಬ್ಯಾಟನ್ ಉಳಿಸಿಕೊಳ್ಳಲಿಲ್ಲ. ಪಂಜಾಬಿನ ದುರಂತಕ್ಕೆ ಮೌಂಟ್ಬ್ಯಾಟನ್ ಸಂಪೂರ್ಣ ಹೊಣೆ – ಎಂದು ಆಜಾದ್, ಲೆನರ್ಡ್ ಮೋಸ್ಲೇ ಇಬ್ಬರೂ ವ್ಯಾಖ್ಯೆ ಮಾಡಿರುವುದು ಸಹಜವಿದೆ… ಮೋಸ್ಲೇ ಹೇಳಿರುವಂತೆ ಭಾರತದಲ್ಲಿ ಬ್ರಿಟಿಷ್ ಅಧಿಕಾರದ ಕೊನೆಯ ಹಂತದಲ್ಲಿ ಅನಾವಶ್ಯಕ ರಕ್ತದ ಕೋಡಿ ಹರಿಯಿತೆಂದೇ ಇತಿಹಾಸದಲ್ಲಿ ದಾಖಲೆಯಾಗಬೇಕಾಗಿದೆ.
ವಿಭಜನಪೂರ್ವದಲ್ಲಿ, ಸಮಗ್ರ ಭಾರತವಷ್ಟೂ ತನ್ನ ಸಂಪೂರ್ಣ ಅಧಿಕಾರಕ್ಕೆ ಒಳಪಟ್ಟಿದ್ದಾಗ, ಕಗ್ಗೊಲೆಗಳನ್ನು ತಪ್ಪಿಸುವುದೂ, ಲಕ್ಷಾಂತರ ಜನರ ಆತಂಕದ ಸ್ಥಳಾಂತರ ಸುವ್ಯವಸ್ಥವಾಗಿ ನಡೆಯುವಂತೆ ಕ್ರಮ ಕೈಗೊಳ್ಳುವುದೂ ವೈಸರಾಯರಿಗೆ ಅಸಾಧ್ಯವಿರಲಿಲ್ಲ. ಆದರೆ ನಿರ್ಣಾಯಕ ಘಟ್ಟದ ಐದು ದಿವಸ (೯-೧೫ ಆಗಸ್ಟ್) ಮೌಂಟ್ಬ್ಯಾಟನ್ ಪೂರ್ಣ ನಿಷ್ಕ್ರಿಯತೆ ತಳೆದದ್ದು ದುರಂತಕ್ಕೆ ಕಾರಣವಾಯಿತು.
ಮೌಂಟ್ಬ್ಯಾಟನನ ಮನಸ್ಸಿನಲ್ಲಿ ಆದ್ಯತೆ ಪಡೆದಿದ್ದ ಏಕೈಕ ಸಂಗತಿ – ಅಂತಿಮ ವೈಸರಾಯ್ ಆಗಿ ಚರಿತ್ರಾರ್ಹ ಬೀಳ್ಕೊಡುಗೆ ಪಡೆದು ತೆರಳಬೇಕೆಂಬುದು!
೧೯೪೮ರ ಜೂನ್ ತಿಂಗಳಲ್ಲಿ ಮೌಂಟ್ಬ್ಯಾಟನ್ ಭಾರತದಿಂದ ನಿರ್ಗಮಿಸಿದ. ಆಗಿನ ಸಂಭ್ರಮ ಉಲ್ಲಾಸಗಳು ಜನಜನಿತವಾದವು; ಆದರೆ ೧೯೪೭ರ ಆಗಸ್ಟ್ ೯-೧೫ರ ಅವಧಿಯಲ್ಲಿ ಮೌಂಟ್ಬ್ಯಾಟನ್ ತಳೆದ ಧೋರಣೆ ಎಂಥ ಘೋರ ದುರಂತಕ್ಕೆ ಎಡೆಮಾಡಿತೆಂಬುದರ ವಿವರಗಳು ಮೌಂಟ್ಬ್ಯಾಟನ್ ನಿಕಟವರ್ತಿ ಸಿಬ್ಬಂದಿಗಷ್ಟೆ ತಿಳಿದಿತ್ತು. ಅನಂತರದ ಕಾಲದಲ್ಲಿ ಬೆಳಕು ಕಂಡ ಟ್ರಾನ್ಸ್ಫರ್ ಆಫ್ ಪವರ್ ಗ್ರಂಥಶ್ರೇಣಿಯ ಹನ್ನೆರಡನೆ ಸಂಪುಟದಲ್ಲಿ ಲಭ್ಯವಿರುವ ದಾಖಲೆಗಳನ್ನು ನೋಡಿದರೆ ದಿಗ್ಭ್ರಮೆಯಾಗುತ್ತದೆ; ಮೌಂಟ್ಬ್ಯಾಟನ್ ಬಗೆಗೆ ಹಿಂದೆ ಇದ್ದದ್ದಕ್ಕಿಂತ ಪೂರ್ಣ ಭಿನ್ನವೇ ಆದ ಚಿತ್ರ ಮೂಡುತ್ತದೆ.