ಮೊದಮೊದಲು ಪಾಶ್ಚಾತ್ಯ ರಾಷ್ಟ್ರಗಳು ಜಿ-20 ಈ ಸಮಾವೇಶ ಮಹತ್ತ್ವದ್ದೆಂದು ಗಣಿಸದೆ ಅಲಕ್ಷ್ಯ ಮಾಡಿದ್ದವು. ಆದರೆ ಅಲ್ಪಕಾಲದಲ್ಲಿ ಅವು ತಮ್ಮ ಧೋರಣೆಯನ್ನು ಬದಲಾಯಿಸಲೇಬೇಕಾಯಿತು. ಅಲ್ಲದೆ ರಷ್ಯಾ–ಯುಕ್ರೇನ್ಗಳ ನಡುವೆ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯು ಈ ಸಮಾವೇಶದ ಮಹತ್ತ್ವವನ್ನು ಕುಗ್ಗಿಸಬಹುದೆಂಬ ವ್ಯಾಪಕ ಅನಿಸಿಕೆಯೂ ಇತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸಮಾವೇಶದ ಮುಖ್ಯ ಫಲಿತವಾದ ಘೋಷಣಾಪತ್ರವು ವಿವಾದಗಳಿಗೆ ಸಿಲುಕಿ ದುರ್ಬಲಗೊಳ್ಳಬಹುದೆಂಬ ಶಂಕೆಯು ವ್ಯಾಪಕವಾಗಿತ್ತು. ಆದರೆ ಭಾರತದ ಮತ್ತು ವಿದೇಶಗಳ ಎಲ್ಲರೂ ಅಚ್ಚರಿಗೊಳ್ಳುವಂತೆ ನರೇಂದ್ರ ಮೋದಿಯವರು ಭಾರತ ಸಿದ್ಧಪಡಿಸಿದ್ದ ಘೋಷಣಾಪತ್ರಕ್ಕೆ ಸಮಾವೇಶದ ಮೊದಲ ದಿನದಂದೇ ಸರ್ವಾನುಮತದ ಅನುಮೋದನೆಯನ್ನು ಪಡೆದು ಪವಾಡವನ್ನೇ ಮಾಡಿದರು.
ಹಲವು ದೃಷ್ಟಿಗಳಿಂದ ಈಚೆಗೆ ಮುಗಿದ G-20 ಅಂತರರಾಷ್ಟ್ರೀಯ ಸಮಾವೇಶ ವಿಶಿಷ್ಟವೆನಿಸಿತು. ಆರ್ಥಿಕವಾಗಿಯೂ ಸೈನಿಕಶಕ್ತಿಯಾಗಿಯೂ ಭಾರತದ ಏರುಮುಖವಾಗಿರುವ ವರ್ಚಸ್ಸನ್ನು ಈಗ ಜಗತ್ತೆಲ್ಲ ಅಂಗೀಕರಿಸಿದಂತಾಗಿದೆ.
ನರೇಂದ್ರ ಮೋದಿಯವರ ನಾಯಕತ್ವಗುಣಗಳನ್ನು ಅಸಂದಿಗ್ಧವಾಗಿ ಪ್ರಕಟೀಕರಿಸಿದ ಸಂದರ್ಭವೂ ಇದಾಯಿತು. ಜಗತ್ತಿನ ವಾಣಿಜ್ಯದ ಶೇ. 75ರಷ್ಟು ನಡೆಯುವುದು G-20 ರಾಷ್ಟ್ರಗಳಲ್ಲಿಯೇ; ಮತ್ತು ಇಡೀ ಜಗತ್ತಿನ ಸಗಟು ರಾಷ್ಟ್ರೋತ್ಪನ್ನದ (ಜಿ.ಡಿ.ಪಿ.) ಶೇ. 85ರಷ್ಟು ಸೃಷ್ಟಿಯಾಗುತ್ತಿರುವುದು G-20 ಒಕ್ಕೂಟಕ್ಕೆ ಸೇರಿದ ರಾಷ್ಟ್ರಗಳಲ್ಲಿಯೇ – ಎಂಬುದನ್ನು ಗಮನಿಸಿದಾಗ G-20 ವೇದಿಕೆಯ ಸಮುನ್ನತಿಯ ಕಲ್ಪನೆಯಾದೀತು. ಸರದಿಯ ಪ್ರಕಾರ ಒಂದೊಂದು ಸದಸ್ಯರಾಷ್ಟ್ರ ಒಂದೊಂದು ವರ್ಷದ ಅವಧಿಗೆ G-20 ಒಕ್ಕೂಟದ ಅಧ್ಯಕ್ಷತೆ ವಹಿಸುತ್ತದೆ. ಅದರಂತೆ 2022 ಡಿಸೆಂಬರ್ 1ರಿಂದ 2023 ನವೆಂಬರ್ ಅಂತ್ಯದವರೆಗಿನ ಒಂದು ವರ್ಷದ ಅಧ್ಯಕ್ಷಸ್ಥಾನದ ಗೌರವ ಭಾರತಕ್ಕೆ ಸಂದಿತ್ತು. ಇದರ ಹೊರತಾಗಿಯೂ ದೇಶವಿದೇಶಗಳೊಡನೆ ರಾಜತಾಂತ್ರಿಕ ಸಂಬಂಧಗಳ ನಿರ್ವಹಣೆಯಲ್ಲಿಯೂ ಅಂತರರಾಷ್ಟಿçÃಯ ಸಮಸ್ಯೆಗಳ ಪರಿಶೀಲನೆಯಲ್ಲಿಯೂ ಭಾರತ ತೋರಿರುವ ಪ್ರಬುದ್ಧತೆ ವ್ಯಾಪಕ ಪ್ರಶಂಸೆಗೆ ಪಾತ್ರವಾಗಿದೆ. G-20ಗೆ ಆರು ತಿಂಗಳ ಹಿಂದೆಯೇ (2023 ಮಾರ್ಚ್) ‘ಕ್ವಾಡ್’ ದೇಶಗಳ ವಿದೇಶಾಂಗ ಮಂತ್ರಿಗಳ ಸಮಾವೇಶವನ್ನು ಭಾರತ ಯಶಸ್ವಿಯಾಗಿ ನಡೆಸಿಕೊಟ್ಟಿತ್ತು.
ಸಂಬಂಧಗಳ ದೃಢೀಕರಣ
ಅನ್ಯದೇಶಗಳೊಡನೆ ಭಾರತದ ಸಂಬಂಧಗಳನ್ನು ದೃಢಗೊಳಿಸಲು ಹಾಗೂ ಜಾಗತಿಕ ಸಮಸ್ಯೆಗಳನ್ನು ಕುರಿತು ಸಮಾಲೋಚಿಸಲು ಅಮೆರಿಕ, ಫ್ರಾನ್ಸ್, ಜಪಾನ್, ದಕ್ಷಿಣ ಆಫ್ರಿಕ, ಆಸ್ಟ್ರೇಲಿಯ ಮೊದಲಾದ ನಾಲ್ಕಾರು ದೇಶಗಳಿಗೆ ನರೇಂದ್ರ ಮೋದಿಯವರ ಯಶಸ್ವೀ ಪರ್ಯಟನಗಳು ಆಗಿವೆ. ಭಾರತದ ವಿದೇಶಾಂಗ ಧೋರಣೆ ಎಲ್ಲೆಡೆ ಮೆಚ್ಚಿಕೆ ಗಳಿಸಿಕೊಂಡಿದೆ. ರಷ್ಯಾ-ಯುಕ್ರೇನ್ ಯುದ್ಧಕ್ಕೆ ಸಂಬಂಧಿಸಿದಂತೆ ಭಾರತ ತಳೆದ ನಿಲವು ಸಮಂಜಸವಾಗಿದೆಯೆಂದು ಮಾಜಿ ಪ್ರಧಾನಿ ಮನಮೋಹನ್ಸಿಂಗ್ ಅವರೂ ಪ್ರಶಂಸೆಯನ್ನು ವ್ಯಕ್ತಪಡಿಸಿದ್ದಾರೆ.
ಜಗತ್ತನ್ನು ಇದೀಗ ಬಾಧಿಸುತ್ತಿರುವ ಹಲವು ಆರ್ಥಿಕ ಸಮಸ್ಯೆಗಳ ಪರಿಹಾರಕ್ಕೆ ಯುಕ್ತ ವೇದಿಕೆಯನ್ನಾಗಿ G-20 ಒಕ್ಕೂಟವನ್ನು ಭಾರತ ಬೆಳೆಸಿದೆ – ಎಂದು ಅಮೆರಿಕದ ಅಧ್ಯಕ್ಷ ಜೋ ಬೈಡೆನ್ ಶ್ಲಾಘಿಸಿದ್ದಾರೆ. ಬಲಿಷ್ಠ ದೇಶಗಳು ತಮ್ಮ ಧೋರಣೆಗಳನ್ನು ಅನ್ಯ ದೇಶಗಳ ಮೇಲೆ ಹೇರುವುದರ ಅತಾರ್ಕಿಕತೆಯು ಈ ಉನ್ನತ ವೇದಿಕೆಯಲ್ಲಿ ಪ್ರತಿಪಾದಿತವಾಗುವಂತೆ ಮಾಡಿರುವುದಕ್ಕಾಗಿ ಭಾರತಕ್ಕೆ ಮೆಚ್ಚಿಕೆ ಸಲ್ಲುತ್ತದೆ – ಎಂದಿದ್ದಾರೆ ರಷ್ಯಾದ ವಿದೇಶಾಂಗ ಮಂತ್ರಿ ಸೆಗ್ರಿ ಲಾವ್ರೋವ್. ಅಭಿವೃದ್ಧಿಶೀಲ ರಾಷ್ಟ್ರಗಳ ಸಮಸ್ಯೆಗಳಿಗೆ ಭಾರತ ನೇತೃತ್ವದ ಈ ವೇದಿಕೆ ಧ್ವನಿಯನ್ನೊದಗಿಸಿದುದಕ್ಕೆ ಧನ್ಯವಾದ ಸಲ್ಲುತ್ತದೆ – ಎಂದು ಉದ್ಗರಿಸಿದ್ದಾರೆ ಬ್ರೆಜಿಲಿನ ಅಧ್ಯಕ್ಷ ಲುಲಾ ಡೆಸಿಲ್ವಾ.
ಇತ್ತೀಚಿನ ಪಿ.ಟಿ.ಐ. ಸಂದರ್ಶನದಲ್ಲಿ ನರೇಂದ್ರ ಮೋದಿ ಹೇಳಿದಂತೆ ಈ ಸಮಾವೇಶವು ‘ಮೂರನೇ ವಿಶ್ವ’ದ ದೇಶಗಳ ಆತ್ಮವಿಶ್ವಾಸವನ್ನು ವರ್ಧಿಸಿದೆ.
G-20 ವೇದಿಕೆಯ ಜಾಗತಿಕ ಸ್ವರೂಪದ ಹಿನ್ನೆಲೆಯನ್ನು ಬಳಸಿಕೊಂಡು ನರೇಂದ್ರ ಮೋದಿಯವರು ಉಗ್ರವಾದಕ್ಕೂ ಅದರ ಬಗೆಗೆ ಇಂಗ್ಲೆಂಡ್, ಕೆನಡಾ ಮೊದಲಾದ ದೇಶಗಳು ದ್ವಂದ್ವನೀತಿ ತಳೆದಿರುವುದಕ್ಕೂ ಗಮನ ಸೆಳೆದದ್ದು ಸಮುಚಿತವಾಗಿತ್ತು.
* * *
ಈಗಾಗಲೆ ಹಲವು ಬಹುರಾಷ್ಟ್ರ ಒಕ್ಕೂಟಗಳಿರುವಾಗ G-20ಯಂತಹ ಇನ್ನೊಂದು ವೇದಿಕೆಯ ಸಾರ್ಥಕತೆ ಏನು? – ಎಂಬ ಪ್ರಶ್ನೆಗೆ ಸಮಾಧಾನ ಸ್ಪಷ್ಟವೇ ಆಗಿದೆ. G-7, ಕ್ವಾಡ್, ಬ್ರಿಕ್ಸ್, ಶಾಂಘೈ ಕೋಆಪರೇಶನ್ ಆರ್ಗಾನಿಸೇಷನ್ ಮೊದಲಾದವು ವಿಶೇಷ ಹಿತಾಸಕ್ತಿಗಳಿಂದ ಸಂಬದ್ಧಗಳಾದ ರಾಷ್ಟ್ರಗಳ ಕೂಟಗಳು; G-20ಯಾದರೋ ಅಮೆರಿಕ ಇಂಗ್ಲೆಂಡ್ ರಷ್ಯಾ ಚೀನಾಗಳಿಂದ ಹಿಡಿದು ‘ಮೂರನೇ ವಿಶ್ವ’ ದೇಶಗಳವರೆಗೆ ಎಲ್ಲ ಪ್ರಮುಖ ರಾಷ್ಟ್ರಗಳನ್ನೊಳಗೊಂಡು ಹೆಚ್ಚು ಪ್ರಾತಿನಿಧಿಕವಾಗಿದೆ. 1999ರಲ್ಲಿ G-20 ಆರಂಭವಾದಾಗಿನಿಂದ ಈಚಿನ ವರ್ಷಗಳಲ್ಲಿ ಭಾರತದಂತಹ ಹಲವು ರಾಷ್ಟ್ರಗಳು ಆರ್ಥಿಕ ಉಚ್ಛ್ರಾಯವನ್ನು ಸಾಧಿಸಿರುವುದರಿಂದ ಈಗ G-7 ಒಕ್ಕೂಟದ ಸಂಗತತೆ ಕಡಮೆಯಾಗಿದೆ. 24 ವರ್ಷಗಳ ಹಿಂದೆ ಮಾರುಕಟ್ಟೆಯ ವೈಫಲ್ಯದಿಂದಾಗಿ ವಿಷಮಸ್ಥಿತಿ ನಿರ್ಮಾಣವಾಗಿತ್ತು. ಈಗಿನ ಸಮಸ್ಯೆಗಳು ರಾಜಕೀಯ ಮತ್ತು ಆರ್ಥಿಕ – ಎರಡೂ ಕ್ಷೇತ್ರಗಳನ್ನು ವ್ಯಾಪಿಸಿರುವುದರಿಂದ ಹೆಚ್ಚಿನ ಸುಸಂಘಟನೆಯ ಆವಶ್ಯಕತೆ ಇದೆ. ಅಮೆರಿಕ-ರಷ್ಯಾಗಳನ್ನು ಪ್ರತ್ಯೇಕಗೊಳಿಸಿರುವಂತಹ ಸೈದ್ಧಾಂತಿಕ ಪರಿಗಣನೆಗಳಿಂದ G-20 ಅನಿರ್ಬದ್ಧವಾಗಿರುವುದು ಹೆಚ್ಚಿನ ಅರ್ಥಪೂರ್ಣ ಸಂವಾದವನ್ನು ಸಾಧ್ಯವಾಗಿಸಿದೆ.
ನೆರವಿನೊಡನೆ ಹೊಣೆಗಾರಿಕೆ
ಭಾರತ ಹೆಚ್ಚಿನ ರಾಷ್ಟ್ರಗಳ ಗೌರವವನ್ನು ಗಳಿಸಿಕೊಂಡಿರುವುದಕ್ಕೆ ಕಾರಣಗಳಿವೆ. ಅಮೆರಿಕದ್ದು ಶುಷ್ಕ ಉಪನ್ಯಾಸಗಳ ಬಡಾಯಿ ಆಗಿದೆ. ನೆರವು-ಸಾಲ ನೀಡಿಕೆಯ ಸಾಧನವನ್ನು ಬಳಸಿಕೊಂಡು ಚೀನಾ ಸಂತ್ರಸ್ತ ದೇಶಗಳ ಸ್ವಾಯತ್ತತೆಗೇ ಮುಳುವಾಗಿದೆ. ಶ್ರೀಲಂಕಾ, ನೇಪಾಳ – ಇವು ಇತ್ತೀಚಿನ ನಿದರ್ಶನಗಳು. ಹಣವನ್ನು ಉತ್ಪಾದಕ ಯೋಜನೆಗಳಲ್ಲಿ ಹೂಡಲಾಗದೆ, ಸಾಲವನ್ನು ತೀರಿಸಲೂ ಆಗದೆ ಶ್ರೀಲಂಕಾ ತನ್ನ ಜೀವನಾಡಿಯಂತಿದ್ದ ಹಂಬಂತೋಟ ಬಂದರನ್ನು ಚೀನಾಕ್ಕೆ 99 ವರ್ಷಗಳಿಗೆ ಗುತ್ತಿಗೆಗೆ ಕೊಡಬೇಕಾಯಿತು. ನೇಪಾಳ 29 ಕೋಟಿ ಡಾಲರ್ ಸಾಲವೆತ್ತಿ ವಿಮಾನನಿಲ್ದಾಣಗಳನ್ನೂ ಜಲವಿದ್ಯುಜ್ಜನಕ ಕೇಂದ್ರಗಳನ್ನೂ ಸಾಕಷ್ಟು ಪೂರ್ವಾಲೋಚನೆ ಇಲ್ಲದೆ ನಿರ್ಮಿಸಿದುದರಿಂದ ಉತ್ಪಾದನೆ ಇಲ್ಲದೆ ಸಾಲದ ಹೊರೆ ಹೆಗಲ ಮೇಲೆ ಕುಳಿತಿದೆ. ಅವಕ್ಕೆ ಹೋಲಿಸಿದರೆ ಭಾರತ ಅನ್ಯ ದೇಶಗಳಿಗೆ ನೆರವೀಯುವುದರ ಜೊತೆಗೇ ಹೊಣೆಗಾರಿಕೆಗೂ ಗಮನ ಕೊಡುತ್ತ ಬಂದಿದೆ. ನೇಪಾಳದ ಜಲವಿದ್ಯುಜ್ಜನಕಗಳಲ್ಲಿ ಚೀನಾದ ಹಣಹೂಡಿಕೆ ಇರಬಹುದೆಂಬ ಗುಮಾನಿ ಇರುವುದರಿಂದ ನೇಪಾಳದಿಂದ ವಿದ್ಯುತ್ತನ್ನು ಕೊಳ್ಳಲು ಭಾರತ ಹಿಂದೆಗೆದಿದೆ.
ಪಾಶ್ಚಾತ್ಯ ದೇಶಗಳ ದ್ವೈಧ ಧೋರಣೆಗಳಿಂದ ಉಳಿದ ದೇಶಗಳು ಆಯಾಸಗೊಂಡಿವೆ. ಜಗತ್ತಿನ ಅತಿ ದೊಡ್ಡ ಪ್ರಜಾಪ್ರಭುತ್ವ ದೇಶವಾದ ಭಾರತದಲ್ಲಿ ಮಾನವಹಕ್ಕುಗಳ ಉಲ್ಲಂಘನೆಯಾಗಿದೆಯೆಂಬ ಅಮೆರಿಕದ ನಿರಾಧಾರ ಕಥನಗಳನ್ನು ಏಕಾದರೂ ಸಹಿಸಬೇಕು? ಭಾರತದ 70 ವರ್ಷಗಳ ಪ್ರಜಾಪ್ರಭುತ್ವಾನುಗುಣ ಸಾಧನೆ ವ್ಯರ್ಥವೆ? ಅಂತೆಯೇ ಉದಾರಧೋರಣೆಯ ಹೆಸರಿನಲ್ಲಿ (ಇಂಗಾಲ ನಿಯಂತ್ರಣ ಮೊದಲಾದ ವಿಷಯಗಳಲ್ಲಿ) ಪ್ರಚ್ಛನ್ನವಾಗಿ ಸ್ವಾರ್ಥ ಸಾಧಿಸಿಕೊಳ್ಳುತ್ತಿರುವ ಯೂರೋಪಿನ ದೇಶಗಳನ್ನು ಸಹವಾಸಯೋಗ್ಯಗಳೆಂದು ಹೇಗೆ ಭಾವಿಸಲು ಸಾಧ್ಯ?
ಸತರ್ಕ ನಿರ್ಣಯಗಳು
ಈ ಭೂಮಿಕೆಯಲ್ಲಿಯೆ G-20 ಹಾಗೂ ಇತರ ವೇದಿಕೆಗಳಲ್ಲಿ ನರೇಂದ್ರ ಮೋದಿಯವರು ಪದೇ ಪದೇ ಹೇಳುತ್ತಿರುವುದು – ‘ನೆರವು-ಸಾಲಗಳ ವಿಷಯ ಹಾಗಿರಲಿ; ಒಂದು ದೇಶದ ಸ್ವಾಯತ್ತತೆಯ ಉಳಿಯುವಿಕೆಗೆ ಪೂರ್ವ ಶರತ್ತೆಂದರೆ ಪೂರ್ವಾಪರ ಯೋಚಿಸಿ ಮುಖ್ಯ ನಿರ್ಣಯಗಳನ್ನು ಕೈಗೊಳ್ಳುವುದು’ – ಎಂದು. ನೆರವಿನ ತುರ್ತು ಆವಶ್ಯಕತೆ ಇದ್ದ ಶ್ರೀಲಂಕಾಗೆ ಭಾರತ ಉಪನ್ಯಾಸ ನೀಡಿ ತೆಪ್ಪಗಾಗಲಿಲ್ಲ; ಅವಶ್ಯವಿದ್ದ ನೆರವನ್ನು ನೀಡಿತು. ಹಿಂದೆ ಆಫಘಾನಿಸ್ತಾನ ಅಶಕ್ತ ಸ್ಥಿತಿಯಲ್ಲಿದ್ದಾಗ ಭಾರತ ಬಿಡಿಬೀಸಾಗಿ ಹಣ ನೀಡುವುದಕ್ಕೆ ಬದಲಾಗಿ ಅಲ್ಲಿಗೆ ಹೈವೇ-ರಹದಾರಿಗಳನ್ನೂ ಆಣೆಕಟ್ಟುಗಳನ್ನೂ ನಿರ್ಮಿಸಿಕೊಟ್ಟಿತ್ತು. ಇದು ಭಾರತದ ರಾಜಮಾರ್ಗ. ಪಾಶ್ಚಾತ್ಯದೇಶಗಳದಕ್ಕಿಂತ ಮತ್ತು ಚೀನಾದ ದಾರಿಗಳಿಂದ ಭಿನ್ನವಾದ ಈ ವಿಧಾನವನ್ನೇ ಮೋದಿ ‘human-centric’ ವಿಧಾನವೆಂದಿರುವುದು. ಇದರ ಪ್ರವರ್ತನೆಗೆ ಭಾರತ ತನ್ನ G-20 ಅಧ್ಯಕ್ಷತಾವಧಿಯಲ್ಲಿ ವಿಶೇಷ ಗಮನ ಕೊಟ್ಟಿದೆ. G-7ನಂತೆ G-20 ಕೇವಲ ಒಂದು ಆಢ್ಯರ ಕ್ಲಬ್ ಆಗಬಾರದೆಂಬ 1990ರ ದಶಕದ ತ್ರಯಸ್ಥರ ಚಿಂತನೆ ಎರಡು ದಶಕಗಳ ತರುವಾಯ ಭಾರತದ ನೇತೃತ್ವದಲ್ಲಿ ಕಾರ್ಯಗತವಾಗತೊಡಗಿರುವುದು ವಿವಿಧ ರಾಷ್ಟ್ರಗಳ ಶ್ಲಾಘನೆಗೆ ಪಾತ್ರವಾಗಿದೆ.
ಸಮಾವೇಶದೊಡಗೂಡಿದ ಭಾರತದ ಸಾಂಸ್ಕೃತಿಕ ಶ್ರೀಮಂತಿಕೆಯ ದರ್ಶನವೂ ವಿದೇಶ ಪ್ರಮುಖರ ವ್ಯಾಪಕ ಪ್ರಶಂಸೆಗೆ ಪಾತ್ರವಾಯಿತು.
ಐಕಮತ್ಯ
G-20 ಸಮಾವೇಶದ ವಿಶೇಷ ಉಪಲಬ್ಧಿಯೆಂದರೆ G-7, G-8 ಮೊದಲಾದವಂತೆ ಆಯ್ದ ಆಢ್ಯ ರಾಷ್ಟ್ರಗಳ ಕೂಟವಾಗಿರದೆ ಸರ್ವದೇಶಸ್ಪರ್ಶಿಯಾಗಿರುವ ಸಂಗತಿಯು ನಿಚ್ಚಳವಾಗಿ ಪ್ರಕಾಶಗೊಳ್ಳುವಂತೆ ಆದದ್ದು. ಇದನ್ನು ಸಾಧ್ಯವಾಗಿಸಿದ್ದು ನರೇಂದ್ರ ಮೋದಿ ನೇತೃತ್ವವೆಂಬುದು ಅಸಂದಿಗ್ಧ.
ಮೊದಮೊದಲು ಪಾಶ್ಚಾತ್ಯ ರಾಷ್ಟ್ರಗಳು ಈ ಸಮಾವೇಶ ಮಹತ್ತ್ವದ್ದೆಂದು ಗಣಿಸದೆ ಅಲಕ್ಷ್ಯ ಮಾಡಿದ್ದವು. ಆದರೆ ಅಲ್ಪಕಾಲದಲ್ಲಿ ಅವು ತಮ್ಮ ಧೋರಣೆಯನ್ನು ಬದಲಾಯಿಸಲೇಬೇಕಾಯಿತು. ಅಲ್ಲದೆ ರಷ್ಯಾ-ಯುಕ್ರೇನ್ಗಳ ನಡುವೆ ಮುಂದುವರಿದಿರುವ ಸಂಘರ್ಷದ ಹಿನ್ನೆಲೆಯು ಈ ಸಮಾವೇಶದ ಮಹತ್ತ್ವವನ್ನು ಕುಗ್ಗಿಸಬಹುದೆಂಬ ವ್ಯಾಪಕ ಅನಿಸಿಕೆಯೂ ಇತ್ತು. ಈ ಎಲ್ಲ ಹಿನ್ನೆಲೆಯಲ್ಲಿ ಸಮಾವೇಶದ ಮುಖ್ಯ ಫಲಿತವಾದ ಘೋಷಣಾಪತ್ರವು ವಿವಾದಗಳಿಗೆ ಸಿಲುಕಿ ದುರ್ಬಲಗೊಳ್ಳಬಹುದೆಂಬ ಶಂಕೆಯು ವ್ಯಾಪಕವಾಗಿತ್ತು. ಆದರೆ ಭಾರತದ ಮತ್ತು ವಿದೇಶಗಳ ಎಲ್ಲರೂ ಅಚ್ಚರಿಗೊಳ್ಳುವಂತೆ ನರೇಂದ್ರ ಮೋದಿಯವರು ಭಾರತ ಸಿದ್ಧಪಡಿಸಿದ್ದ ಘೋಷಣಾಪತ್ರಕ್ಕೆ ಸಮಾವೇಶದ ಮೊದಲ ದಿನದಂದೇ ಸರ್ವಾನುಮತದ ಅನುಮೋದನೆಯನ್ನು ಪಡೆದು ಪವಾಡವನ್ನೇ ಮಾಡಿದರು. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಈ ರೀತಿಯ ಘೋಷಣಾವಾಙ್ಮೂಲಗಳಿಗೆ ಸದಸ್ಯರಾಷ್ಟ್ರಗಳು ಹಲವಾರು ತಿದ್ದುಪಡಿಗಳನ್ನೂ ಬದಲಾವಣೆಗಳನ್ನೂ (ಹಲವೊಮ್ಮೆ ವಿರೋಧವನ್ನೂ) ಸೂಚಿಸುವುದು ರೂಢಿಗತವೇ ಆಗಿದೆ. ಆದರೆ ಈ ಬಾರಿ ಭಾರತದ ಕರಡು ಒಂದೇ ಒಂದು ಬದಲಾವಣೆಯೂ ಆಗದೆ ಸರ್ವಾಂಗೀಕೃತವಾದದ್ದು ಇತಿಹಾಸಾರ್ಹವಾಯಿತು. ಇದು ಅಭೂತಪೂರ್ವವೆಂದು ದಾಖಲೆಗೊಳ್ಳುವಂತಾಯಿತು.
1999ರಿಂದ G-20 ಸಂಘಟನೆಗೆ ಯಾವುದೇ ಹೊಸ ರಾಷ್ಟ್ರದ ಸೇರ್ಪಡೆಯಾಗಿರಲೇ ಇಲ್ಲ. 55 ದೇಶಗಳನ್ನೊಳಗೊಂಡ ಆಫ್ರಿಕದ ಒಕ್ಕೂಟವನ್ನು G-20 ಸಂಘಟನೆಯಲ್ಲಿ ಸೇರಿಸಿಕೊಳ್ಳಬೇಕೆಂಬ ನರೇಂದ್ರ ಮೋದಿಯವರ ಪ್ರಸ್ತಾವಕ್ಕೂ ಈ ಸಮಾವೇಶದಲ್ಲಿ ಅನುಮೋದನೆ ದೊರೆತದ್ದು ಅಭೂತಪೂರ್ವವೆನಿಸಿತು.
ವಾಣಿಜ್ಯ ಕಾರಿಡಾರ್
ಎಲ್ಲಕ್ಕಿಂತ ಗಮನಸೆಳೆದದ್ದೆಂದರೆ ಭಾರತ, ಮಧ್ಯಏಷ್ಯ, ಯೂರೋಪ್ಗಳನ್ನು ಬೆಸೆಯುವ ವಾಣಿಜ್ಯ ಕಾರಿಡಾರ್ ಏರ್ಪಡಬೇಕೆಂಬ ಮೋದಿಯವರ ಅತ್ಯಂತ ಮಹತ್ತ್ವಪೂರ್ಣ ಪ್ರಸ್ತಾವಕ್ಕೆ ಸಮಾವೇಶದ ಅನುಮೋದನೆ ಲಬ್ಧವಾದದ್ದು. ಈ ಯೋಜನೆಯಾದರೋ ಚೀನಾ ನಿರ್ಮಿಸುತ್ತಿರುವ ‘ಬೆಲ್ಟ್ ರೋಡ್’ಗೆ ನೇರ ಸ್ಪರ್ಧೆಯನ್ನೊಡ್ಡಿ ಅದನ್ನು ಅಸಂಗತಗೊಳಿಸಬಲ್ಲದ್ದು, ಚೀನಾ-ಪಾಕಿಸ್ತಾನ ಕೂಟದ ಯೋಜನೆಗೆ ಸವಾಲಿನ ರೀತಿಯದು.
ಈ ವಾಣಿಜ್ಯ ಮಾರ್ಗವು ಸೌದಿ ಅರೇಬಿಯ, ಇಸ್ರೇಲ್, ಇಟಲಿಗಳ ಮೂಲಕ ಮುಂಬಯಿಗೂ ಯೂರೋಪಿಗೂ ನಡುವೆ ಸಂಪರ್ಕವನ್ನೇರ್ಪಡಿಸುತ್ತದೆ. ಪಾಕಿಸ್ತಾನ-ಚೀನಾಗಳ ಉದ್ದಿಷ್ಟ ವಾಣಿಜ್ಯ ಸಾಧನಪ್ರಾಬಲ್ಯಾಕಾಂಕ್ಷೆಗೆ ಭಾರತ-ಸಂಯೋಜಿತ ‘ಕಾರಿಡಾರ್’ ಹೆದ್ದನ(ಬ್ರೇಕ್)ವನ್ನೊಡ್ಡಿದೆ.
ಈ ಬೆಳವಣಿಗೆಗಳು ಪ್ರತ್ಯೇಕಗಳಂತೆ ಕಂಡರೂ G-20ಯನ್ನು ಹೆಚ್ಚು ದೃಢಗೊಳಿಸುವ ದಿಕ್ಕಿನದಾಗಿವೆ. ಉದಾಹರಣೆಗೆ: ಆಫ್ರಿಕ ದೇಶಗಳ ಒಕ್ಕೂಟದ ಸೇರ್ಪಡೆ ಜಾಗತಿಕವಾಗಿ G-20ಯನ್ನು ಹೆಚ್ಚು ಪ್ರಾತಿನಿಧಿಕಗೊಳಿಸಲಿದೆಯೆಂಬುದು ಸ್ಪಷ್ಟವೇ ಆಗಿದೆ. ಇಂತಹ ಒಂದೊಂದು ವಿವರದಲ್ಲಿಯೂ ನರೇಂದ್ರ ಮೋದಿಯವರ ಮತ್ತು ಅಮಿತಾಭ ಕಾಂತ್ರನ್ನೊಳಗೊಂಡ ಸಹಕಾರಿ ಸಿಬ್ಬಂದಿಯ ಮುತ್ಸದ್ದಿತನ ಎದ್ದುಕಾಣುತ್ತದೆ. ಆಫ್ರಿಕ ದೇಶಗಳ ಸೇರ್ಪಡೆಗೆ ಸಂಬಂಧಿಸಿದಂತೆಯಂತೂ ನರೇಂದ್ರ ಮೋದಿಯವರು ಹಲವು ತಿಂಗಳ ಹಿಂದಿನಿಂದಲೇ ಅನ್ಯ ದೇಶಗಳ ಮನವೊಲಿಸಿ ಭೂಮಿಕೆಯನ್ನು ಹದಗೊಳಿಸಿದ್ದರು. ಹೀಗೆ ಎಲ್ಲ ಕಲಾಪಗಳೂ ಸುಸೂತ್ರವಾಗಿಯೂ ಪೂರ್ವಯೋಜಿತ ರೀತಿಯಂತೆಯೂ ನಡೆದದ್ದು ಎಲ್ಲ ಉಪಸ್ಥಿತ ಸದಸ್ಯರ ಪ್ರಶಂಸೆ ಪಡೆಯಿತು.
ಅವಿರೋಧ ಸಾಧನೆ
ಇದು ನಾಜೂಕಿನ ಕೆಲಸವೂ ಆಗಿತ್ತು. ಉದಾಹರಣೆಗೆ: ರಷ್ಯಾದ ಧೋರಣೆಯನ್ನು ಘೋಷಣಾಪತ್ರದಲ್ಲಿ ಖಂಡಿಸಬೇಕೆಂಬ ಪಾಶ್ಚಾತ್ಯ ದೇಶಗಳ ಅಪೇಕ್ಷೆಗೆ ಮಣಿಯದೆ ಪರ್ಯಾಯವಾಗಿ ಎಲ್ಲ ದೇಶಗಳೂ ಸರಹದ್ದುಗಳನ್ನೂ ಅನ್ಯ ದೇಶಗಳ ಸ್ವಾಯತ್ತತೆಯನ್ನೂ ಗೌರವಿಸಬೇಕೆಂಬುದನ್ನು ಒತ್ತಿ ಹೇಳಲಾಯಿತು. ಭಾರತದ ಈ ಅಂಗೀಕಾರಾರ್ಹ ನಿಲವು ರಷ್ಯಾದ ವಿದೇಶಾಂಗ ಸಚಿವ ಸರ್ಜಿ ಲಾವ್ರೋವ್, ಇಂಗ್ಲೆಂಡಿನ ಪ್ರಧಾನಿ ರಿಷಿ ಸುನಕ್, ಫ್ರಾನ್ಸಿನ ಅಧ್ಯಕ್ಷ ಎಮಾನ್ಯುಯೆಲ್ ಮ್ಯಾಕ್ರೊನ್ ಸೇರಿದಂತೆ ಎಲ್ಲರ ಪ್ರಶಂಸೆಗೆ ಪಾತ್ರವಾಯಿತು. ಹಿಂದಿನ ವರ್ಷದ ಬಾಲಿ ಸಮಾವೇಶದಲ್ಲಿ ಇಂತಹ ಸಮಾಧಾನವೂ ಸರ್ವಸಂತೃಪ್ತಿಯೂ ಸಾಧ್ಯವಾಗಿರಲಿಲ್ಲ.
ಹೀಗೆ G-20 ಸಮಾವೇಶವು ಪ್ರಮುಖ ಆಶಯಗಳಲ್ಲಿ ಸಾಫಲ್ಯ ಸಾಧಿಸಿದುದಲ್ಲದೆ, ಭಾರತದ ರಚನಾತ್ಮಕ ನಿಲವು, ನಿರ್ವಹಣಕೌಶಲ, ರಾಷ್ಟ್ರ-ರಾಷ್ಟ್ರ ಸಂಬಂಧ ಪರಿಜ್ಞಾನದ ಪ್ರಬುದ್ಧತೆಗೂ ಸಾಕ್ಷ್ಯತೆಯನ್ನೊದಗಿಸಿ ಕೀರ್ತಿಕರವಾಯಿತು.