ತ್ವಯಿ ರಕ್ಷತಿ ರಕ್ಷಕೈಃ ಕಿಮನ್ಯೈಃ
ತ್ವಯಿ ಚಾರಕ್ಷತಿ ರಕ್ಷಕೈಃ ಕಿಮನ್ಯೈಃ|
ಇತಿ ನಿಶ್ಚಿತಧೀಃ ಶ್ರಯಾಮಿ ನಿತ್ಯಂ
ನೃಹರೇ ವೇಗವತೀತಟಾಶ್ರಯಾಂ ತ್ವಾಮ್ ||
- ವೇದಾಂತದೇಶಿಕರು
“ನೀನು ನಮ್ಮನ್ನು ರಕ್ಷಿಸುತ್ತಿರುವಾಗ ಬೇರೆ ರಕ್ಷಕರಿಂದ ಏನು ಆಗಬೇಕಿದೆ? ನೀನೇ ರಕ್ಷಿಸದಿದ್ದಲ್ಲಿ ಇತರ ರಕ್ಷಕರಿಂದ ಏನು ತಾನೇ ಆದೀತು? ಹೀಗೆ ನಿಶ್ಚಯಿಸಿಕೊಂಡು ವೇಗವತೀ ನದೀ ತೀರದಲ್ಲಿ ನೆಲಸಿರುವ ನರಸಿಂಹನ ಸ್ವರೂಪದ ಭಗವಂತನೇ, ನಾನು ಸದಾ ಆಶ್ರಯಿಸುವುದು ನಿನ್ನನ್ನೇ.”
ದಕ್ಷಿಣಭಾರತದ ಒಂದು ದೊಡ್ಡ ಕೆರೆ. ಅದೊಂದು ವರ್ಷ ಕುಂಭದ್ರೋಣ ಮಳೆ ಸುರಿದು ಕೆರೆಯ ಕಟ್ಟೆ ಒಡೆಯುವ ಸ್ಥಿತಿ ಬಂದಿತ್ತು. ಹಾಗೆ ಆದಲ್ಲಿ ಸುತ್ತಲ ಹಳ್ಳಿಗಳ ಜಮೀನುಗಳಲ್ಲಿ ಬೆಳೆದು ನಿಂತಿದ್ದ ಬೆಳೆಯೆಲ್ಲ ಕೊಚ್ಚಿಹೋಗಿ ಜನರ ಮನೆಮಾರು ಕೂಡಾ ನೆಲಸಮ ಆಗಬಹುದಿತ್ತು. ಹಿಂದೆ ಹಾಗೆ ಆಗಿತ್ತು ಕೂಡಾ. ಆನರು ತಮ್ಮ ನೆರವಿಗೆ ಬರುವಂತೆ ಆಂಗ್ಲ ಕಲೆಕ್ಟರ್ ಕರ್ನಲ್ ಪ್ಲೇಸ್ ಎಂಬಾತನ ಮೊರೆಹೊಕ್ಕರು. ಆತನು ಅಧಿಕಾರಗಳ ಸಭೆ ಕರೆದು ಸಮಾಲೋಚನೆ ನಡೆಸಿದ. ಯಾವ ಕ್ರಮಗಳೂ ಪ್ರಯೋಜನಕರಗಳಾಗುವ ಸಾಧ್ಯತೆ ಕಾಣಲಿಲ್ಲ. ಕೆರೆನೀರಿನ ಮಟ್ಟ ಏರುತ್ತಲೇ ಇತ್ತು. ಆಗ ಅಲ್ಲಿದ್ದ ವಯಸ್ಸಾದ ಹಿರಿಯ ಅಧಿಕಾರಿಯೊಬ್ಬರು ಹೇಳಿದರು: “ಸಾಹೇಬರೆ, ಕೆರೆಯ ಹತ್ತಿರದ ಶ್ರೀರಾಮ ದೇವಾಲಯ ತುಂಬಾ ಜೀರ್ಣಾವಸ್ಥೆಯಲ್ಲಿದೆ. ಅದನ್ನು ದುರಸ್ತಿ ಮಾಡಿಸಿದರೆ ದೇವರ ಅನುಗ್ರಹವಾಗಿ ಈಗಿನ ವಿಪತ್ತು ನೀಗಬಹುದೇನೊ.” ಇದು ಕಲೆಕ್ಟರನ ಮನಸ್ಸಿಗೆ ಹಿಡಿಸಿತು. ಹೇಗೂ ಬೇರೇನೂ ಮಾನವಸಾಧ್ಯ ದಾರಿ ಇರಲಿಲ್ಲವಲ್ಲ. ಆತ ಕೆರೆಯ ಏರಿಯನ್ನು ಹತ್ತಿ ಕುಳಿತು ಕೈಜೋಡಿಸಿ ಪ್ರಾರ್ಥಿಸಿದ: “ದೇವರೇ! ಈ ಸನ್ನಿವೇಶದಲ್ಲಿ ನೀನು ಮಾತ್ರ ಕಾಪಾಡಬಲ್ಲೆ. ನೀನು ಕೃಪೆ ಮಾಡಿ ನಮ್ಮ ರಕ್ಷಣೆಗೆ ಬಂದಲ್ಲಿ ಈ ಜಾಗದಲ್ಲಿ ನಿನ್ನ ಮಹಾರಾಣಿ ಸೀತಾದೇವಿಯ ದೇವಾಲಯವನ್ನು ಕಟ್ಟಿಸುತ್ತೇನೆ” ಎಂದು ಹರಕೆ ಹೇಳಿಕೊಂಡ. ಅದೇನು ಪವಾಡವೋ! ಅಲ್ಪಕಾಲದಲ್ಲಿ ಮಳೆ ತಗ್ಗಿ ದೊಡ್ಡ ಅನಾಹುತ ತಪ್ಪಿತು. ಕಲೆಕ್ಟರನು ತಾನು ಹರಸಿಕೊಂಡಂತೆ ಸೀತಾಮಾತೆಯ ದೇವಾಲಯವನ್ನೂ ಕಟ್ಟಿಸಿದ.
ಆ ಸ್ಥಳದ ಹೆಸರು ಮಧುರಾಂತಕಂ. ತಮಿಳುನಾಡಿನ ಚೆಂಗಲ್‌ಪಟ್ಟು ಜಿಲ್ಲೆಯಲ್ಲಿದೆ. ಕಲೆಕ್ಟರ್ ಪ್ಲೇಸ್ ಕಟ್ಟಿಸಿದ ದೇವಾಲಯ ಈಗಲೂ ಇದೆ. ಅದರ ಹಿನ್ನೆಲೆಯನ್ನು ದಾಖಲೆ ಮಾಡಿರುವ ಶಿಲಾಶಾಸನವೂ ಅಲ್ಲಿದೆ.