೫೦೦ ವರ್ಷಗಳಿಂದ ಅಯೋಧ್ಯೆಯಲ್ಲಿ ಕೆಡವಲಾಗಿದ್ದ ಮಂದಿರವನ್ನು ಪುನಃ ಕಟ್ಟಲೆಂದು ನಡೆದ ಅವಿರತ ಹೋರಾಟವು ಸ್ವಾತಂತ್ರ್ಯ ನಿಕಟಪೂರ್ವದ ದಿನಗಳಲ್ಲಿ ಸ್ಥಗಿತವಾಗಿತ್ತಷ್ಟೆ. ಸ್ವಾತಂತ್ರ್ಯ ಬಂದ ಪ್ರಾರಂಭದ ದಿನಗಳಲ್ಲಿ, ಬಾಬರಿಮಸ್ಜಿದ್ ಎಂದು ಕರೆಯಲಾಗುತ್ತಿದ್ದ ಆ ಪರಿತ್ಯಕ್ತ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ರಾಮಲಲಾ ವಿಗ್ರಹ ರೂಪದಲ್ಲಿ ಕಾಣಿಸಿಕೊಳ್ಳಬೇಕೇ? ಇದೇ ಸಮಯದಲ್ಲಿ ಸರ್ದಾರ್ ಪಟೇಲರ ಮುಂದಾಳ್ತನದಲ್ಲಿ ಗುಜರಾತಿನ ಸೋಮನಾಥನು ನೂತನವಾದ ಭವ್ಯ ಆವರಣದಲ್ಲಿ ಪ್ರಕಟಗೊಂಡ. ಅಯೋಧ್ಯೆಯ ಆಂದೋಲನಕ್ಕೆ ಅದರಿಂದ ಸಂಜೀವನಿ ಪ್ರಾಪ್ತವಾಯಿತು. ಸ್ವರ್ಗೀಯ ಅಶೋಕ ಸಿಂಘಾಲ್, ಆದರಣೀಯ ಲಾಲ್ಕೃಷ್ಣ ಆಡ್ವಾಣಿಯವರ ‘killer Instinct’ನ ನೇತೃತ್ವದಲ್ಲಿ ಆಂದೋಲನಕ್ಕೆ ರಭಸ ಬಂದು ಇದೀಗ ಅದಕ್ಕೆ ಯಶಸ್ವೀ ತಾರ್ಕಿಕ ಅಂತ್ಯ ಬಂದೇಬಿಟ್ಟಿತು! ಈ ಕ್ಷಣಕ್ಕೆ ನಾವುಗಳೆಲ್ಲರೂ ಸಾಕ್ಷಿಯಾದದ್ದು ನಮ್ಮ ಪುಣ್ಯವೇ ಸರಿ.

ರಾಮಲಲಾ ಹಮ್ ಆಯೇಂಗೇ, ಮಂದಿರ ವಹೀ ಬನಾಯೇಂಗೇ”, “ಕಟ್ಟುವೆವು ಕಟ್ಟುವೆವು ಮಂದಿರವಲ್ಲೇ ಕಟ್ಟುವೆವು” – ಇವು ೧೯೮೦ರ ದಶಕದಲ್ಲಿ ದೇಶಾದ್ಯಂತ ಮೊಳಗುತ್ತಿದ್ದ ಘೋಷಣೆಗಳು. ನಿಜ, ಅನೇಕರು ಅಲ್ಲಲ್ಲಿ ಇವುಗಳನ್ನು ಹಗುರವಾಗಿ ತೆಗೆದುಕೊಂಡರು ಅಥವಾ ಹಾಸ್ಯ ಮಾಡಿದರು. ಚುನಾವಣಾ ರಾಜಕೀಯದ ‘ಸ್ಟಂಟ್’ಗಳು ಎಂದೂ ಜರೆದರು. ಕೆಲವರಿಗೆ ಇದರಲ್ಲಿ ‘ಕೋಮು ಸೌಹಾರ್ದ’ವನ್ನು ಕೆಡಿಸುವ ‘ಹುನ್ನಾರ’ ಗೋಚರಿಸಿತು. ಕೆಲವರಿಗೆ ಇದರಲ್ಲಿ ‘ಮತೀಯ ಉನ್ಮಾದ’ ಕಾಣಿಸಿತು. ಇತಿಹಾಸವನ್ನು ತಿರುಚುವ ದುಷ್ಟತನ ಇದು ಅಂತಲೂ ಕೆಲವು ‘ಇತಿಹಾಸಜ್ಞ’ರು (ಅಥವಾ ಅಜ್ಞರೋ?) ಪ್ರಲಾಪಿಸಿದ್ದೂ ಆಯಿತು. ಆದರೆ ಅಸಂಖ್ಯಾತ ರಾಮಭಕ್ತರಿಗೆ ಇವು ಘೋಷಣೆಗಳು ಮಾತ್ರ ಆಗಿರಲಿಲ್ಲ. ರಾಮನಲ್ಲಿ ರಾಷ್ಟ್ರವನ್ನು ಕಂಡ ಈ ರಾಮಭಕ್ತರು ರಾಷ್ಟ್ರಭಕ್ತರಾಗಿದ್ದರು. ಹೀಗಾಗಿ ಇವರಿಗೆ ಇದೊಂದು ಹಗಲುಗನಸಾಗಿರಲಿಲ್ಲ; ಬದಲಾಗಿ ಹೇಗಾದರೂ ಸರಿ, ಕಂಡ ಕನಸನ್ನು ನನಸು ಮಾಡಲೇಬೇಕೆಂಬ ಸಂಕಲ್ಪದ ಅಭಿವ್ಯಕ್ತಿ ಆದುವು ಈ ಘೋಷಣೆಗಳು, ಅವರ ಪಾಲಿಗೆ ರಾಷ್ಟ್ರಮಂತ್ರಗಳೇ ಆದುವು ಎಂಬುದನ್ನು ಅನಂತರದಲ್ಲಿ ಒಂದಾದನಂತರ ಒಂದು ನಡೆದ ವಿದ್ಯಮಾನಗಳು ಪ್ರಮಾಣೀಕರಿಸಿವೆ. ಸಾಧಾರಣ ನಾಲ್ಕು ದಶಕಗಳ ನಂತರ ಆ ಕೋಟ್ಯಂತರ ರಾಮಭಕ್ತರು ಕಂಡ ಕನಸು ಇದೀಗ ನನಸಾಗುತ್ತಿದೆ. ಸಂಕಲ್ಪ ಸಾಕಾರವಾಗುತ್ತಿದೆ. ವಿರೋಧಿಸುತ್ತಿದ್ದ ಅನೇಕರು ಅನಿವಾರ್ಯವಾಗಿ ಇದನ್ನು ಸ್ವಾಗತಿಸುತ್ತಿರುವುದಷ್ಟೇ ಅಲ್ಲ, ಇದಕ್ಕೆ ತಮ್ಮನ್ನು ಆಮಂತ್ರಿಸಬೇಕು ಎಂದೂ ಹೇಳುತ್ತಿದ್ದಾರೆ. ರಾಮನನ್ನು ಕಾಲ್ಪನಿಕ ಎನ್ನುತ್ತಿದ್ದವರೂ ಕೂಡಾ ಈಗ ರಾಮ ಎಲ್ಲರಿಗೂ ಸೇರಿದವನು ಎನ್ನಲು ಪ್ರಾರಂಭಿಸಿದ್ದಾರೆ.
‘ಮಂದಿರ ವಹೀ ಬನಾಯೇಂಗೇ’ ಎಂಬುದು ಈಗ ‘ಮಂದಿರ ವಹೀ ಬನ್ರಹಾ ಹೈ’ ಆಗಿಹೋಗಿದೆ. ‘ಕಟ್ಟುವೆವು’ ಎಂಬ ಭವಿಷ್ಯತ್ ಕಾಲ ‘ಕಟ್ಟುತ್ತಿದ್ದೇವೆ’ ಎಂಬ ವರ್ತಮಾನ ಕಾಲವಾಗಿಹೋಯಿತು. ‘ಸೆಕ್ಯುಲರ್ ಇಂಡಿಯಾ’ದಲ್ಲಿ ಇದು ಅಸಂಭವ ಎಂಬ ಅಂದಿನ ಧೋರಣೆಯು ‘ರಾಷ್ಟ್ರೀಯ ಭಾರತ’ದಲ್ಲಿ ಇಂದು ‘ಸಂಭವ’ ಆಗುತ್ತಿರುವ ಅತ್ಯಂತ ಹಿತಕರವಾದ ಆಪ್ಯಾಯಮಾನವಾದ ಅನುಭವವೇ ಸರಿ.
ರಾಮಮಂದಿರದ ನೆಲಮಹಡಿಯ (Ground Floor) ಕಟ್ಟೋಣವು ಭವ್ಯ ಹಾಗೂ ದಿವ್ಯವಾಗಿ ಸಿದ್ಧಗೊಂಡಿದೆ. ದಿನಾಂಕ ೨೨ ಜನವರಿ ೨೦೨೪ರಂದು ದೇಶದ ಹೆಮ್ಮೆಯ ಪ್ರಧಾನಿ ಮತ್ತು ರಾಷ್ಟ್ರೀಯ ಸ್ವಯಂಸೇವಕ ಸಂಘದ ಸರಸಂಘಚಾಲಕರ ಉಪಸ್ಥಿತಿಯಲ್ಲಿ, ಸಹಸ್ರಾರು ಸಾಧುಸಂತರು ಮತ್ತು ಗಣ್ಯನಾಗರಿಕರು ಸಾಕ್ಷಿಗಳಾಗಿರುತ್ತಾ ರಾಮಲಲಾನ ಪ್ರಾಣಪ್ರತಿಷ್ಠೆಯ ಮಂಗಲ ವಿಧಿ ನೆರವೇರುತ್ತಿದೆ. ಕೋಟ್ಯಂತರ ರಾಮಭಕ್ತರಿಗೆ ಇದೊಂದು ಮೈಮನಗಳನ್ನು ಪುಳಕಿತಗೊಳಿಸುವ ಅಪರೂಪದ ವಿದ್ಯಮಾನ.
ರಾಮಮಂದಿರ ನಿರ್ಮಾಣದ ಅಭಿಯಾನವು ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದುವರೆಗೂ ರಾಷ್ಟ್ರ ಕಂಡಿರದ ಒಂದು ಅನನ್ಯ ಹಾಗೂ ಅಮೋಘ ರಾಷ್ಟ್ರೀಯ ಆಂದೋಲನ. ಇದರ ಅನನ್ಯತೆಗಳು ಹಲವಾರು. ಇವನ್ನು ಮೆಲುಕುಹಾಕುವುದೇ ಅತ್ಯಂತ ಹಿತಕರ ಅನುಭವ. ‘ಉತ್ಥಾನ’ದ ಓದುಗರೊಡನೆ ಇವುಗಳನ್ನು ಹಂಚಿಕೊಳ್ಳಲೆಂದೇ ಈ ಲೇಖನವನ್ನು ನಾನು ಬರೆಯುತ್ತಿದ್ದೇನೆ.
ಮೊತ್ತಮೊದಲಾಗಿ:
೫೦೦ ವರ್ಷಗಳಿಂದ ಅಯೋಧ್ಯೆಯಲ್ಲಿ ಕೆಡವಲಾಗಿದ್ದ ಮಂದಿರವನ್ನು ಪುನಃ ಕಟ್ಟಲೆಂದು ನಡೆದ ಅವಿರತ ಹೋರಾಟವು ಸ್ವಾತಂತ್ರ್ಯ ನಿಕಟಪೂರ್ವದ ದಿನಗಳಲ್ಲಿ ಸ್ಥಗಿತವಾಗಿತ್ತಷ್ಟೆ. ಸ್ವಾತಂತ್ರ್ಯ ಬಂದ ಪ್ರಾರಂಭದ ದಿನಗಳಲ್ಲಿ, ಬಾಬರಿಮಸ್ಜಿದ್ ಎಂದು ಕರೆಯಲಾಗುತ್ತಿದ್ದ ಆ ಪರಿತ್ಯಕ್ತ ಕಟ್ಟಡದಲ್ಲಿ ಇದ್ದಕ್ಕಿದ್ದಂತೆ ರಾಮಲಲಾ ವಿಗ್ರಹ ರೂಪದಲ್ಲಿ ಕಾಣಿಸಿಕೊಳ್ಳಬೇಕೇ? ಇದೇ ಸಮಯದಲ್ಲಿ ಸರ್ದಾರ್ ಪಟೇಲರ ಮುಂದಾಳ್ತನದಲ್ಲಿ ಗುಜರಾತಿನ ಸೋಮನಾಥನು ನೂತನವಾದ ಭವ್ಯ ಆವರಣದಲ್ಲಿ ಪ್ರಕಟಗೊಂಡ. ಅಯೋಧ್ಯೆಯ ಆಂದೋಳನಕ್ಕೆ ಅದರಿಂದ ಸಂಜೀವನಿ ಪ್ರಾಪ್ತವಾಯಿತು. ಸ್ವರ್ಗೀಯ ಅಶೋಕ ಸಿಂಘಾಲ್, ಆದರಣೀಯ ಲಾಲ್ಕೃಷ್ಣ ಆಡ್ವಾಣಿಯವರ ‘killer Instinct’ನ ನೇತೃತ್ವದಲ್ಲಿ ಆಂದೋಲನಕ್ಕೆ ರಭಸ ಬಂದು ಇದೀಗ ಅದಕ್ಕೆ ಯಶಸ್ವೀ ತಾರ್ಕಿಕ ಅಂತ್ಯ ಬಂದೇಬಿಟ್ಟಿತು! ಈ ಕ್ಷಣಕ್ಕೆ ನಾವುಗಳೆಲ್ಲರೂ ಸಾಕ್ಷಿಯಾದದ್ದು ನಮ್ಮ ಪುಣ್ಯವೇ ಸರಿ.
ಎರಡನೆಯದಾಗಿ:
ನಿಜವಾದ ಅರ್ಥದಲ್ಲಿ ರಾಷ್ಟ್ರೀಯ ಆಂದೋಲನವೇ. ಸಂಘ ಹಾಗೂ ಸಂಘಪರಿವಾರದ ಕರ್ಯಜಾಲ ಇಡೀ ಭಾರತದಾದ್ಯಂತ ಹರಡಿರುವ ಕಾರಣ, ಸಂಪೂರ್ಣ ಭಾರತದ ಅಂತಃಕರಣವನ್ನು ಬಡಿದೆಬ್ಬಿಸಿತು ಈ ಆಂದೋಲನ. ‘ಸೌಗಂಧ ರಾಮ ಕೀ ಖಾಯೇಂಗೇ ಹಮ್ ಮಂದಿರ ವಹೀ ಬನಾಯೇಂಗೇ – ಶ್ರೀರಾಮನ ಮೇಲಿನ ಆಣೆ, ನಾವು ಮಂದಿರವನ್ನು ಅಲ್ಲೇ ಕಟ್ಟುವೆವು…’ – ಎಂಬ ಸಂಕಲ್ಪದ ಉದ್ಘೋಷವು ರಾಷ್ಟ್ರಮಂತ್ರವಾಗಿ ಹೋಯಿತು. ಈ ಆಂದೋಲನದಲ್ಲಿ ರಭಸ ತರುವ ಸಲುವಾಗಿ ಕೈಗೊಂಡ ಒಂದೊAದು ಅಭಿಯಾನವೂ ಕ್ರಮಕ್ರಮವಾಗಿ ವಾತಾವರಣದಲ್ಲಿ ಕಾವೇರಿಸುತ್ತಹೋಯಿತು. ಇಟ್ಟಿಗೆಪೂಜೆಯಿಂದ ಮೊದಲ್ಗೊಂಡು ೧೯೯೩ರ ಕಾರಸೇವೆಯವರೆಗೆ ಕೈಗೊಂಡ ಒಂದೊAದು ಅಭಿಯಾನದಿಂದಲೂ ಇಡೀ ರಾಷ್ಟ್ರದಲ್ಲಿ ಶಿವಶಕ್ತಿಯ ಸಂಚಯವಾಗುತ್ತಹೋಯಿತು. ಕಡೆಗೆ ೧೯೯೨ರಲ್ಲಿ ಅನೂಹ್ಯವೂ, ಅನನ್ಯವೂ ಆದ ಉತ್ಸ್ಫೂರ್ತ (spontanious) ಕಾರಸೇವೆಯ ಪರಿಣಾಮವಾಗಿ ಅಪಮಾನದ ಸಂಕೇತ ಕುಸಿದುಬಿದ್ದು ಮಣ್ಣುಮುಕ್ಕಿತು ಹಾಗೂ ಅಲ್ಲೇ ರಾಮಲಲಾನಿಗೆ ಅವಸರದಲ್ಲಿ ಕಾರಸೇವಕರು ಒಂದು ನೆಲೆಯನ್ನೂ ಕಟ್ಟಿಬಿಟ್ಟರು. ಇದು ನಿಜಕ್ಕೂ ನಂಬಲಾಗದ ಆದರೆ ನಂಬಲೇಬೇಕಾದ ಚಮತ್ಕಾರ. ಇಡೀ ಜಗತ್ತೇ ಬೆರಗಾಗಿಹೋದ ಒಂದು ವಿಸ್ಮಯ! ಆ ಅಸ್ಥಾಯಿ ಗುಡಿಯೇ ಇಂದಿನ ಭವ್ಯಮಂದಿರಕ್ಕೆ ಆಧಾರವಾಯಿತು.
ಮೂರನೆಯದಾಗಿ:
ಭಾರತದ ರಾಜಕಾರಣಕ್ಕೆ ಕೆಲವು ರಾಹುಕೇತುವಿನಂತಹ ರಾಜಕಾರಣಿಗಳಿಂದ ಹಿಡಿದಿದ್ದ ತಥಾಕಥಿತ ಸೆಕ್ಯುಲರಿಸಂ ಎಂಬ ಗ್ರಹಣವು ಘೋರ ಮಿಥ್ಯೆಯಾಗಿಹೋಯಿತು, ಬಿಟ್ಟುಹೋಯಿತು. ಅಡ್ವಾಣಿಯವರು ಇದನ್ನು ಸ್ಯೂಡೋ ಸೆಕ್ಯುಲರಿಸಂ ಎಂದು ಕರೆದಿದ್ದಕ್ಕೆ ಜನರು ಛೋಡೋ ಸೆಕ್ಯುಲರಿಸಂ ಎಂದರು. Justice for all and appeasement of none ಎಂಬುದೇ ನಿಜವಾದ ಸೆಕ್ಯುಲರಿಸಂ ಅಂತ ಜನಜನಿತವಾಯಿತು. ಭಾರತದ ರಾಜಕಾರಣದಲ್ಲಿ ಅಸ್ಪೃಶ್ಯವಾಗಿದ್ದ, ತ್ಯಾಜ್ಯವಾಗಿದ್ದ ಹಿಂದುತ್ವ, ಕ್ರಮೇಣ ಗರಿಗೆದರಿಕೊಂಡು ರಾಜಕಾರಣದ ಪ್ರಬಲ ಕೇಂದ್ರಸ್ಥಾನದಲ್ಲಿ (powerful center-stage) ವಿರಾಜಮಾನವಾಗುತ್ತಹೋಯಿತು. ಅಸಂಗತವಾಗುವತ್ತ ಹೋಗುತ್ತಿದ್ದ ಭಾಜಪಾ ಸುಸಂಗತವಾಗಿದ್ದು ಅಷ್ಟೇ ಅಲ್ಲ, ಆಡಳಿತ ಪಕ್ಷವೇ ಆಗಿಹೋಯಿತು. ಇಂದು ಸ್ವಾತಂತ್ರ್ಯದ ನಂತರವೂ ಇಂಡಿಯಾವೇ ಆಗಿದ್ದ ನಮ್ಮೀ ದೇಶ ಹೆಚ್ಚೆಚ್ಚು ಭಾರತವಾಗುತ್ತಿದೆ. ಒಂದು ಹೊಸ ಗೌರವ, ಒಂದು ಹೊಸ ಮಾನ್ಯತೆ ಪಡೆಯುತ್ತಿದೆ, ಅಲ್ಲವೇ. ಇದು ನಿಜಕ್ಕೂ ಶ್ರೀರಾಮಜನ್ಮಭೂಮಿ ಆಂದೋಲನದ ಒಂದು ಫಲಶ್ರುತಿ.
ನಾಲ್ಕನೆಯದಾಗಿ:

ರಾಮಮಂದಿರ ಬನಾಮ್ ಬಾಬ್ರಿಮಸ್ಜಿದ್ ಖಟ್ಲೆಯಲ್ಲಿ ಭಾರತದ ಸರ್ವೋಚ್ಚ ನ್ಯಾಯಾಲಯ ನೀಡಿದಂತಹ ತೀರ್ಪು, ಐತಿಹಾಸಿಕ (landmark judgement).
ಅತ್ಯಂತ ಉದ್ದವಾಗಿ ಎಳೆಯುತ್ತಹೋದ ಈ ಖಟ್ಲೆ ರಾಷ್ಟ್ರದ ತಾಳ್ಮೆಯನ್ನು ಘಾಸಿಗೊಳಿಸಿತ್ತು. ರಾಮಮಂದಿರವು ನ್ಯಾಯಾಲಯದ ಪರಿಧಿಯ ಹೊರತಾದ, ಹಿಂದು ಜನಕೋಟಿಯ ಮೂಲಶ್ರದ್ಧೆಯ ವಿಷಯ ಎಂದು ನಾವು ಒತ್ತಿ ಒತ್ತಿ ಹೇಳಲಾರಂಭಿಸಿದೆವು. ಬಹುಶಃ ರಾಮನಿಗೇ ಅನ್ನಿಸಿರಬಹುದು, ಇನ್ನು ಭಕ್ತರ ತಾಳ್ಮೆಯನ್ನು ಪರೀಕ್ಷಿಸಬಾರದು ಎಂದು. ಸರ್ವೋಚ್ಚ ನ್ಯಾಯಾಲಯದ ಮುಖ್ಯನ್ಯಾಯಾಧೀಶ (Chief Justice)ರ ನೇತೃತ್ವದ ಪಂಚನ್ಯಾಯಾಧೀಶರ ಪೀಠವು ಸರ್ವಸಮ್ಮತಿಯಿಂದ ಒಂದು ಅಸಂದಿಗ್ಧ ನಿರ್ಣಯದಲ್ಲಿ ‘ಇದು ರಾಮಜನ್ಮಭೂಮಿಯೇ. ಇಲ್ಲಿ ಮಂದಿರವನ್ನೇ ಕಟ್ಟಬೇಕು ಮತ್ತು ಸರ್ಕಾರದ ವತಿಯಿಂದಲೇ ಅಗತ್ಯ ಪ್ರಕ್ರಿಯೆಗಳಾಗಬೇಕು’ ಎಂದು ಘೋಷಿಸಿಬಿಟ್ಟಿತು. ಈ ತಂಡದಲ್ಲಿ ಒಬ್ಬ ಮುಸ್ಲಿಂನ್ಯಾಯಾಧೀಶರೂ ಇದ್ದರೆಂಬುದು ಸತ್ಯವನ್ನು ಇನ್ನಷ್ಟು ಗಟ್ಟಿಯಾಗಿ ಎತ್ತಿಹಿಡಿಯಿತು. ಈ ನಿರ್ಣಯವನ್ನು ಸಂಪೂರ್ಣ ದೇಶವೇ ಸಂತೋಷದಿAದ ಸ್ವೀಕಾರ ಮಾಡಿದ್ದಷ್ಟೇ ಅಲ್ಲದೆ, ಎಲ್ಲಿಯೂ ಅತ್ಯುತ್ಸಾಹದ, ವಿವೇಕಮೀರಿದ ನಡವಳಿಕೆಯು ಕಂಡುಬರಲಿಲ್ಲ. ವಿರೋಧವೂ ವ್ಯಕ್ತವಾಗಲಿಲ್ಲ.
ಪ್ರಾಮಾಣಿಕವಾದ, ಎಡೆಬಿಡದ ಪುರುಷಪ್ರಯತ್ನಕ್ಕೆ ಭಗವಂತನ ಅನುಗ್ರಹ ಸಿಕ್ಕಿಯೇ ಸಿಗುತ್ತದೆ ಎಂಬ ಈ ದೇಶದ ಮೂಲನಂಬಿಕೆಯನ್ನು ಈ ಬೆಳವಣಿಗೆ ಸಾಬೀತುಪಡಿಸಿತು.
ಮಂದಿರದ ಪರವಾಗಿ ಅತ್ಯಂತ ಸಮರ್ಥವಾಗಿ ವಾದವನ್ನು ಮುಂದಿಟ್ಟ ನ್ಯಾಯವಾದಿಗಳ ತಂಡದ ಪ್ರಮುಖರಾಗಿದ್ದವರು ೯೦+ ವರ್ಷ ವಯಸ್ಸಿನ, ತಮಿಳುನಾಡಿನ ಜ್ಯೇಷ್ಠ ಹಾಗೂ ಶ್ರೇಷ್ಠ ವಕೀಲರು ಆದರಣೀಯ ಕೆ. ಪರಾಶರನ್. ಇವರಿಗೆ ಕೋಟ್ಯಂತರ ರಾಮಭಕ್ತರ ಕೋಟಿ ಕೋಟಿ ಅಭಿನಂದನೆಗಳು.
ಐದನೇ ಅನನ್ಯತೆ:

ಮಂದಿರನಿರ್ಮಾಣಕ್ಕೆ ನಾವು ಸರ್ಕಾರದ ನೆರವಿಗೆ ಕೈಚಾಚಲಿಲ್ಲ. ಇದು ಯಾವುದೇ ಕಾರಣಕ್ಕೂ ಸರ್ಕಾರೀ ಮಂದಿರವಾಗಬಾರದು. ಬದಲಾಗಿ ರಾಷ್ಟ್ರಮಂದಿರವೇ ಆಗಬೇಕು. ಮತ್ತು ಅಗತ್ಯವಾದ ಹಣ ಖಂಡಿತವಾಗಿಯೂ ಹಿಂದುಸಮಾಜ ಕೊಟ್ಟೇ ಕೊಡುತ್ತದೆ ಎಂಬ ವಿಶ್ವಾಸ ನಮ್ಮದು. ಹಿಂದು ಸಮಾಜವು ಕಲ್ಪತರುವಿನಂತೆ, ಕಾಮಧೇನುವಿನಂತೆ ಎಂದು ಹಿರಿಯರು ಹೇಳುತ್ತಿದ್ದರು. ಆದ್ದರಿಂದ ಮಂದಿರನಿರ್ಮಾಣಕ್ಕಾಗಿ ರಚಿತವಾಗಿದ್ದ ನ್ಯಾಸದಿಂದ ಜನತೆಗೆ ಕರೆ ಕೊಡಲಾಯಿತು. ನಿಜಕ್ಕೂ ಮುಂದಿನ ಗತಿವಿಧಿಗಳಿಗೆ ಭಿಕ್ಷುಕರಿಂದ ಮೊದಲ್ಗೊಂಡು ಕುಬೇರರವರೆಗೆ ಜನಕೋಟಿ ಭಕ್ತಿಯಿಂದ ಸ್ಪಂದಿಸಿದ ಪರಿ ಇದೆಯಲ್ಲ – ಇದು ‘ನ ಭೂತೋ ನ ಭವಿಷ್ಯತಿ’. ‘ಕೋವಿಡ್’ನ ಕರಾಳ ನೆರಳಿನಲ್ಲಿ ನಡೆದ ನಿಧಿ ಸಮರ್ಪಣೆಯ ಅಭಿಯಾನವು ಹಿಂದೆಂದೂ ಆಗಿರದ ಅಪೂರ್ವ ಯಶಸ್ವಿ ಅಭಿಯಾನ. ಇದೊಂದು ರಾಷ್ಟ್ರೀಯ ದಾಖಲೆ. ದೇಶದ ಎಲ್ಲ ದಿಕ್ಕುಗಳಿಂದ ಕಾಣಿಕೆ ಗಂಗೆಯಂತೆ ಹರಿದುಬಂತು. ಮೂರು ಸಾವಿರ ಕೋಟಿ ರೂಪಾಯಿಗಳ ಬೃಹತ್ ಮೊತ್ತ ನ್ಯಾಸದ ಬ್ಯಾಂಕ್ ಖಾತೆಗೆ ಜಮಾ ಆಗಿಯೇ ಹೋಯಿತು.
ನೋಡನೋಡುತ್ತಿದ್ದಂತೆ ಪ್ರಧಾನಿ ಮತ್ತು ಸಂಘದ ಸರಸಂಘಚಾಲಕರ ಮಂಗಲ ಉಪಸ್ಥಿತಿಯಲ್ಲಿ ಭೂಮಿಪೂಜೆ ನೆರವೇರಿತು. ಭರದಿಂದ ನಿರ್ಮಾಣಕಾರ್ಯ ನಡೆಯುತ್ತ ಬಂತು. ನೋಡನೋಡುತ್ತಿದ್ದಂತೆ ಭವ್ಯಮಂದಿರದ ನೆಲಮಹಡಿಯ ಕೆಲಸ ಪೂರ್ಣವಾಗಿ, ಇದೀಗ ರಾಮಲಲಾನ ಪ್ರತಿಷ್ಠಾಪನೆಗೆ ಎಲ್ಲವೂ ಸಜ್ಜಾಗಿದೆ. ನಾನು ೨೦೨೩ರ ನವೆಂಬರ್ ೪ ಮತ್ತು ೫ರಂದು ಅಯೋಧ್ಯೆಯಲ್ಲಿದ್ದೆ. ನಿರ್ಮಾಣವಾಗುತ್ತಿರುವ ಭವ್ಯ ದಿವ್ಯ ಕಟ್ಟಡ ನೋಡಿ ಮೈಮನಗಳು ಪುಳಕಿತವಾಗಿಹೋದುವು. ಉಸ್ತುವಾರಿ ಜವಾಬ್ದಾರಿ ನಿರ್ವಹಿಸುತ್ತಿರುವ ಕರ್ನಾಟಕದವರೇ ಆದ ಗೋಪಾಲಜೀ ಅವರ ಮುಖದಲ್ಲಿ ಒಂದು ಸಾರ್ಥಕತೆಯ ಧನ್ಯತೆಯ ಭಾವವನ್ನು ನಾನು ಕಂಡೆ. ಅವರೆಂದರು: “ಕೆಲಸ ಪ್ರಾರಂಭ ಆದಾಗಿನಿಂದ ಒಂದೇ ಒಂದು ಅಪಘಾತವಾಗಿಲ್ಲ. ಯಾವುದೇ ಬಗೆಯ ಅಡಚಣೆ, ವಿಘ್ನ ಬಂದಿಲ್ಲ. ಕಾರ್ಯಕರ್ತರಲ್ಲಿ ಯಾರೂ ಖಾಯಿಲೆ ಬಿದ್ದಿಲ್ಲ. ಸುಮಾರು ೩ ಸಾವಿರ ಜನರು ೨ ಪಾಳಿಯಲ್ಲಿ ಕಟ್ಟೋಣದ ಕಾಯಕದಲ್ಲಿ ಭಕ್ತಿಭಾವದಿಂದ ತೊಡಗಿದ್ದಾರೆ.”
ಶ್ರೀರಾಮನ ಶ್ರದ್ಧಾಳುಗಳಿಗೆ, ಆತ ಭಗವಂತನೇ. ಆದರೆ ಜಗತ್ತಿಗೆ ಅವನನ್ನು ಪರಿಚಯಿಸಿದ ವಾಲ್ಮೀಕಿಯ ದೃಷ್ಟಿಯಲ್ಲಿ ಅವನು ಮರ್ಯಾದಾಪುರುಷೋತ್ತಮ.
‘ರಾಮೋ ವಿಗ್ರಹವಾನ್ ಧರ್ಮಃ’ ಎಂದು ಕೇಳುತ್ತೇವೆ. ಅದು ನಿಜವೇ. ಅವನು ಧರ್ಮದ ಮೂರ್ತರೂಪನೇ, ಅನುಮಾನವಿಲ್ಲ. ಆದರೆ ಪ್ರಸಕ್ತ ರಾಮೋ ವಿಗ್ರಹವಾನ್ ರಾಷ್ಟ್ರಃ ಎಂಬುದೇ ಸರಿ. ರಾಮನು ರಾಷ್ಟ್ರದ ಪ್ರತಿರೂಪ, ಮೂರ್ತರೂಪ.
ಶ್ರೀರಾಮ ರಾಷ್ಟ್ರಪುರುಷ
ಶ್ರೀರಾಮಮಂದಿರ ರಾಷ್ಟ್ರಮಂದಿರ
ಅಯೋಧ್ಯೆ ರಾಷ್ಟ್ರೀಯ ತೀರ್ಥಕ್ಷೇತ್ರ
ಜಯ್ ಶ್ರೀರಾಮ್ ರಾಷ್ಟ್ರಮಂತ್ರ
ರಾಜ್ಯವು ರಾಮರಾಜ್ಯ.
ರಾಮಲಲಾನ ಪ್ರಾಣಪ್ರತಿಷ್ಠೆ ಎಂದರೆ ರಾಷ್ಟ್ರೀಯತೆಯ ಪುನಃಪ್ರತಿಷ್ಠೆ. ಅಲ್ಲಿ ನೋಡಲು ರಾಮಾ ಇಲ್ಲಿ ನೋಡಲು ರಾಮಾ ಎಲ್ಲೆಲ್ಲಿ ನೋಡಿದರೂ ಅಲ್ಲಿ ರಾಮಾ… ಎಂಬ ದಾಸವಾಣಿಯು ಸದಾ ಸರ್ವರಲ್ಲೂ ಶ್ರೀರಾಮ ನೆಲೆಸುವಂತೆ ಪ್ರೇರೇಪಿಸಲಿ.
ಶ್ರೀರಾಮ ಜಯರಾಮ ಜಯಜಯ ರಾಮ ಶ್ರೀರಾಮ ಜಯರಾಮ ಜಯಜಯ ರಾಮ
ಜೈ ಜೈ ಶ್ರೀರಾಮ್.