ಅಯೋಧ್ಯೆಯ ರಾಮಜನ್ಮಭೂಮಿಯಲ್ಲೇ ಶ್ರೀರಾಮಮಂದಿರ ಮರುಸ್ಥಾಪಿಸಬೇಕೆಂಬ ಬೇಡಿಕೆಗೆ ಹಿಂದೂ ಸಮಾಜದಲ್ಲಿ ಇಷ್ಟೊಂದು ಅಭೂತಪೂರ್ವ ಬೆಂಬಲ ಸಿಕ್ಕಿದ್ದಾದರೂ ಹೇಗೆ? ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದು ಬೃಹತ್ ಚಳವಳಿಯಾಗಿ ಮೂಡಿಬರಲು ಕಾರಣವಾದರೂ ಏನು? ಶಾಂತಿ-ಸೌಹಾರ್ದಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಆಪ್ತ ರೀತಿಯಲ್ಲಿ ಪರಿಹಾರಗೊಳ್ಳಬಹುದಾಗಿದ್ದ ಮಂದಿರ-ಮಸೀದಿ ವಿವಾದ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಭಾರಿ ಕಂದರ ಏರ್ಪಡಿಸಲು ಯಾರು ಕಾರಣ? ೧೯೯೨ರ ಡಿಸೆಂಬರ್ ೬ರಂದು ಬಾಬರಿ ಕಟ್ಟಡ ಉರುಳಿ, ಆ ಜಾಗದಲ್ಲಿ ತಾತ್ಕಾಲಿಕ ರಾಮಮಂದಿರ ಸ್ಥಾಪನೆಯಾದ ಘಟನೆಯ ಹಿಂದೆ ಕಾಂಗ್ರೆಸ್ನ ‘ದ್ವಿಪಾತ್ರ’ ಕೆಲಸ ಮಾಡಲಿಲ್ಲವೇ?
ದೇಶಾದ್ಯಂತ ಸುಂಟರಗಾಳಿ ಎಬ್ಬಿಸಿದ ಅಯೋಧ್ಯೆ ಮಹಾ ಆಂದೋಲನವು ನನ್ನ ರಾಜಕೀಯ ಜೀವನದ ಅತ್ಯಂತ ಕ್ಲಿಷ್ಟಕರ ಮತ್ತು ಸ್ಥಿತ್ಯಂತರದ ವಿದ್ಯಮಾನ. ನಮ್ಮ ಸಮಾಜ ಮತ್ತು ರಾಜಕೀಯ ಸ್ಥಿತಿಗತಿಯ ಮೇಲೆ ಅಯೋಧ್ಯೆ ಚಳವಳಿ ಬೀರಿದ ಪರಿಣಾಮ ಗಾಢ. ಅದು ನಮ್ಮ ಅಂತರಾಳದ ರಾಷ್ಟ್ರೀಯ ಪ್ರಜ್ಞೆಯನ್ನು ಬಡಿದೆಬ್ಬಿಸಿದ ಪರಿ ಅಚ್ಚರಿ. ಈ ಅಂಶ ಆಧುನಿಕ ಭಾರತ ಇತಿಹಾಸ ಓದುವ ಪ್ರತಿಯೊಬ್ಬ ವಿದ್ಯಾರ್ಥಿಯ ಮನದ ಭಿತ್ತಿಯಲ್ಲಿ ಆಳವಾಗಿ ಛಾಪು ಒತ್ತುವಂಥದ್ದು.
೧೯೯೦ರಲ್ಲಿ ಗುಜರಾತ್ನ ಸೋಮನಾಥದಿಂದ ಉತ್ತರ ಪ್ರದೇಶದ ಅಯೋಧ್ಯೆಯ ತನಕ ನಡೆದ ಐತಿಹಾಸಿಕ ರಥಯಾತ್ರೆಯ ಸಾರಥ್ಯ ವಹಿಸಿದ್ದು ನನ್ನ ಪಾಲಿನ ಸೌಭಾಗ್ಯವೇ ಸರಿ. ಈ ಹೊಣೆಯನ್ನು ನಾನು ದೃಢ ನಿರ್ಧಾರ, ಪ್ರಾಮಾಣಿಕತೆ ಮತ್ತು ನನ್ನೊಳಗಿನ ಸಂಪೂರ್ಣ ಸಾಮರ್ಥ್ಯ ಬಳಸಿ ನಿಭಾಯಿಸಿದ್ದೇನೆ ಎಂದು ಭಾವಿಸಿದ್ದೇನೆ. ಹಾಗೆಯೇ, ‘ಭಾರತ ಶೋಧ’ ಎನ್ನುವ, ನನ್ನನ್ನು ನಾನು ಮರುಶೋಧಿಸಿಕೊಳ್ಳುವ ಪ್ರಯತ್ನವೂ ಆಗಿತ್ತು ಅಯೋಧ್ಯೆ ಚಳವಳಿ ಎನ್ನುವುದು ನನ್ನ ಪಾಲಿಗೆ, ‘ಕ್ರಿಯೆ’ಯೊಂದನ್ನು ಪ್ರೇರೇಪಿಸುವುದರ ಜತೆಗೆ, ಆಂತರ್ಯದ ಪ್ರತಿಬಿಂಬವನ್ನು ಉದ್ದೀಪಿಸುವ ‘ಪ್ರಕ್ರಿಯೆ’ಯೂ ಆಗಿತ್ತು.
ಅಯೋಧ್ಯೆಯ ರಾಮಜನ್ಮಭೂಮಿಯಲ್ಲೇ ಶ್ರೀರಾಮಮಂದಿರ ಮರುಸ್ಥಾಪಿಸಬೇಕೆಂಬ ಬೇಡಿಕೆಗೆ ಹಿಂದೂ ಸಮಾಜದಲ್ಲಿ ಇಷ್ಟೊಂದು ಅಭೂತಪೂರ್ವ ಬೆಂಬಲ ಸಿಕ್ಕಿದ್ದಾದರೂ ಹೇಗೆ? ಸ್ವಾತಂತ್ರ್ಯೋತ್ತರ ಭಾರತದಲ್ಲಿ ಇದು ಬೃಹತ್ ಚಳವಳಿಯಾಗಿ ಮೂಡಿಬರಲು ಕಾರಣವಾದರೂ ಏನು? ಶಾಂತಿ-ಸೌಹಾರ್ದಯುತವಾಗಿ, ಕಾನೂನಿನ ಚೌಕಟ್ಟಿನಲ್ಲಿ, ಆಪ್ತ ರೀತಿಯಲ್ಲಿ ಪರಿಹಾರಗೊಳ್ಳಬಹುದಾಗಿದ್ದ ಮಂದಿರ-ಮಸೀದಿ ವಿವಾದ ಹಿಂದೂ-ಮುಸ್ಲಿಂ ಸಮುದಾಯದ ನಡುವೆ ಭಾರಿ ಕಂದರ ಏರ್ಪಡಿಸಲು ಯಾರು ಕಾರಣ? ೧೯೯೨ರ ಡಿಸೆಂಬರ್ ೬ರಂದು ಬಾಬರಿ ಕಟ್ಟಡ ಉರುಳಿ, ಆ ಜಾಗದಲ್ಲಿ ತಾತ್ಕಾಲಿಕ ರಾಮಮಂದಿರ ಸ್ಥಾಪನೆಯಾದ ಘಟನೆಯ ಹಿಂದೆ ಕಾಂಗ್ರೆಸ್ನ ‘ದ್ವಿಪಾತ್ರ’ ಕೆಲಸ ಮಾಡಲಿಲ್ಲವೇ?
ಸೋಮನಾಥ ಮಂದಿರದ ಮರುನಿರ್ಮಾಣ
ಭಾರತದ ಪುನರುತ್ಥಾನಕ್ಕೆ ನಾಂದಿ
ರಾಮಮಂದಿರ ಆಂದೋಲನದ ಪೂರ್ವಾಪರ ಅರಿಯುವ ಮೊದಲು, ಗುಜರಾತ್ನ ಸೋಮನಾಥ ಮಂದಿರ ಮರುನಿರ್ಮಾಣದ ಹಿಂದಿನ ಕಥೆ ಹೇಳಲೇಬೇಕು. ಸೌರಾಷ್ಟ್ರ ಕರಾವಳಿಯ ಪ್ರಭಾಸಪಾಟಣ ಎಂಬ ಪ್ರದೇಶದಲ್ಲಿರುವ ಸೋಮನಾಥ ಮಂದಿರ ಮತ್ತೆ ತಲೆಯೆತ್ತಿ ನಿಂತಿದ್ದು ಸ್ವತಂತ್ರ ಭಾರತದ ನಿರ್ಣಾಯಕ ಮತ್ತು ಮಹತ್ತ್ವದ ಘಟನೆಗಳಲ್ಲೊಂದು.
ಭಾರತದ ಭವ್ಯ ಪೌರಾಣಿಕ ಪರಂಪರೆ ಮತ್ತು ಇತಿಹಾಸವನ್ನು ಅರಿಯದವರು ಮಾತ್ರ ಸೋಮನಾಥ ಮಂದಿರದ ಮರುಹುಟ್ಟನ್ನು ಪ್ರಶಂಸಿಸಲಾರರು. ಇದು ಕೇವಲ ಮಂದಿರವೊಂದರ ಮರುನಿರ್ಮಾಣವಾಗಿರಲಿಲ್ಲ, ಕಳೆದುಹೋಗಿದ್ದ ರಾಷ್ಟ್ರಗೌರವದ, ಸ್ವಾಭಿಮಾನದ ಮರುಪೂರಣಕ್ಕಾಗಿ ಮನಃಪೂರ್ವಕವಾಗಿ ನಡೆದ ದಿಟ್ಟ ಮತ್ತು ಯಶಸ್ವಿ ಹೋರಾಟಗಾಥೆ.
ನನ್ನ ಬಾಲ್ಯದ ದಿನಗಳಲ್ಲಿ ಡಾ. ಕೆ.ಎಂ. ಮುನ್ಶಿ ಅವರು ಬರೆದ ‘ಜೈ ಸೋಮನಾಥ್’ ಎಂಬ ಕೃತಿ ಓದಿದ್ದೆ. ಮೂಲ ಗುಜರಾತಿಯಲ್ಲಿರುವ ಆ ಗ್ರಂಥದ ಹಿಂದಿ ಅನುವಾದ ನನಗೆ ಲಭ್ಯವಾಗಿತ್ತು. ಆ ಕೃತಿ ನನ್ನ ಮೇಲೆ ಆಳವಾದ ಪರಿಣಾಮ ಬೀರಿತ್ತು. ಮುನ್ಶಿ ಅವರು ಈ ದೇಶ ಕಂಡ ಖ್ಯಾತ ಇತಿಹಾಸಕಾರರು; ಗುಜರಾತ್ ಮೂಲದ ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ. ಇಂದು ವಿಶ್ವಾದ್ಯಂತ ಭಾರತೀಯ ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಸಾರವನ್ನು ಪಸರಿಸುತ್ತಿರುವ ಭಾರತೀಯ ವಿದ್ಯಾಭವನದ ಸಂಸ್ಥಾಪಕ ಕುಲಪತಿ ಆಗಿದ್ದವರು. ನೆಹರು ಸಂಪುಟದಲ್ಲಿ ಅವರು ಸಚಿವರಾಗಿ ನಿರ್ವಹಿಸಿದ ಕಾರ್ಯ ಶ್ಲಾಘನೀಯ. ದೇಶಾದ್ಯಂತ ಇರುವ ೧೨ ಜ್ಯೋತಿರ್ಲಿಂಗಗಳಲ್ಲಿ ಒಂದನ್ನು ಹೊಂದಿರುವ ಸೋಮನಾಥ ಮಂದಿರದ ಪುನರುತ್ಥಾನದ ಕಥೆಯನ್ನು ಮುನ್ಶಿ ಈ ಕೃತಿಯಲ್ಲಿ ಎಳೆಎಳೆಯಾಗಿ ಬಿಡಿಸಿ ಹೇಳಿದ್ದಾರೆ.
ಹಿಂದೂ ಧರ್ಮದಲ್ಲಿ ಜ್ಯೋತಿರ್ಲಿಂಗಕ್ಕೆ ಅತ್ಯಂತ ಪವಿತ್ರ ಸ್ಥಾನವಿದೆ. ಸಂಸ್ಕೃತದಲ್ಲಿ ಜ್ಯೋತಿ ಎಂದರೆ ಬೆಳಕು. ಜ್ಯೋತಿರ್ಲಿಂಗ ಎಂದರೆ ಬೆಳಕಿನ ಸ್ತಂಭ, ಕೊನೆ ಇಲ್ಲದ ಮೊದಲಿಲ್ಲದ ಸರ್ವಾಂತರ್ಯಾಮಿ ಎಂದರ್ಥ. ಶಿವ-ಆತ್ಮಪ್ರತೀಕವಾದ, ಜಗತ್ತಿನ ಎಲ್ಲ ಆಗುಹೋಗುಗಳನ್ನು ನಿಯಂತ್ರಿಸುವ ಪುರುಷ ಸ್ವರೂಪ. ಶಕ್ತಿ ಎನ್ನುವುದು ಜಗತ್ತಿನ ಎಲ್ಲ ಬದಲಾವಣೆಗೆ ಮೂಲವಾದ ಸ್ತ್ರೀ ಸ್ವರೂಪ. ಶಿವಲಿಂಗ ಎನ್ನುವುದು ಶಿವ ಮತ್ತು ಶಕ್ತಿ ಸಂಗಮದ ಸಂಕೇತ. ಜೀವನ ಚಕ್ರದ ಚಲನೆಗೆ ಶಿವಲಿಂಗವೇ ಪ್ರೇರಕ ಶಕ್ತಿ.
ಹಿಮಾಲಯ ತಪ್ಪಲಿನ ಕೇದಾರನಾಥದಿಂದ ತಮಿಳುನಾಡಿನ ರಾಮೇಶ್ವರಂ ತನಕ ಒಟ್ಟು ೧೨ ಜ್ಯೋತಿರ್ಲಿಂಗಗಳು ಆವಿರ್ಭವಿಸಿವೆ. ರಾವಣನಿಂದ ಸೀತೆಯನ್ನು ಪಾರುಮಾಡಲು ಲಂಕೆಗೆ ಸೇತುವೆ ಕಟ್ಟುವ ಸಂದರ್ಭದಲ್ಲಿ ಶ್ರೀರಾಮ ರಾಮೇಶ್ವರಂನಲ್ಲಿರುವ ಶಿವಮಂದಿರದ ಜ್ಯೋತಿರ್ಲಿಂಗವನ್ನು ಪೂಜಿಸಿದ್ದ ಎಂಬ ಪ್ರತೀತಿ ಇದೆ. ವಿಶೇಷವೆಂದರೆ, ಈ ೧೨ ಜ್ಯೋತಿರ್ಲಿಂಗಗಳಿಗೂ ಪರಸ್ಪರ ಸಂಬಂಧವಿದೆ. ಪ್ರತಿ ಜ್ಯೋತಿರ್ಲಿಂಗದ ಹಿಂದೆಯೂ ಪೌರಾಣಿಕ ಮತ್ತು ದಂತಕಥೆಯ ಹಿನ್ನೆಲೆ ಇದೆ. ಈ ಎಲ್ಲ ತೀರ್ಥಕ್ಷೇತ್ರಗಳು ಜಾತಿ-ಮತ-ಧರ್ಮಗಳ ಕಟ್ಟಳೆ, ಭೌಗೋಳಿಕ ಗಡಿ ಅಥವಾ ಭಾಷೆಯ ಪರಿಧಿಯಿಂದ ಮುಕ್ತವಾಗಿವೆ. ಇದು ದೇಶದ ಸಮಗ್ರತೆ, ಏಕತೆ ಮತ್ತು ರಾಷ್ಟ್ರೀಯ ಛಾಪಿನ ಸಂಕೇತಗಳಾಗಿವೆ. ನಮ್ಮ ಶ್ರೀಮಂತ ಮತ್ತು ವೈವಿಧ್ಯಮಯ ಸಂಸ್ಕೃತಿ ಆಚಾರ-ವಿಚಾರಗಳ ನಡುವೆಯೇ, ಸಾವಿರಾರು ವರ್ಷಗಳ ಐತಿಹ್ಯ ಹೊಂದಿರುವ ಈ ದೇವಾಲಯಗಳೊಳಗೆ ಜನ ಕೇವಲ ಭಕ್ತಿ ಮತ್ತು ನಂಬಿಕೆಯ ಹಾದಿಯಲ್ಲಿ ನಡೆದುಬಂದು ಪ್ರವೇಶಿಸುತ್ತಾರೆ.
ಆಂಗ್ಲ ಬರಹಗಾರರಲ್ಲಿ ಮುಂಚೂಣಿಯಲ್ಲಿರುವ ರಮೇಶ್ ಮೆನನ್ ಅವರ ಇತ್ತೀಚಿನ ಕೃತಿಯಾದ ‘ಶಿವ: ಶಿವಪುರಾಣ ರಿಟೋಲ್ಡ್’ನಲ್ಲಿ ಉಲ್ಲೇಖಿಸಲಾದ ಕೆಲವು ಅಂಶಗಳು ಇಲ್ಲಿ ಗಮನಾರ್ಹ. ದೇಶಾದ್ಯಂತ ಇರುವ ದೇವಾಲಯಗಳು ವಿಶಾಲ ಭಾರತದ ಉದ್ದಗಲಕ್ಕೂ ನಾಗರಿಕರಲ್ಲಿ ಸಾಮಾನ್ಯ ವಿಚಾರಧಾರೆಯನ್ನು ಪಸರಿಸಿ ಸಮನ್ವಯ ಸಾಧಿಸುವಲ್ಲಿ ಮಹತ್ತ್ವದ ಪಾತ್ರ ನಿರ್ವಹಿಸಿವೆ. ಪುರಾಣಗಳಲ್ಲಿ ಪ್ರಸ್ತಾವಗೊಂಡಿರುವ ಸಂಗತಿಗಳು ಇಂದಿನ ಕಾಲದ ವ್ಯಕ್ತಿಗಳಿಂದ ರೂಪಿತವಾದ ಕೇವಲ ಕಟ್ಟುಕತೆಯಲ್ಲ. ಅವು, ಇಂದಿನವರೆಗೆ ಹರಿದುಬಂದಿರುವ ಸಾವಿರಾರು ವರ್ಷಗಳ ಮಾನವ ಇತಿಹಾಸದ ಬಣ್ಣನೆ. ಸುದೀರ್ಘ ವಿಶ್ವ ಇತಿಹಾಸದ ಪ್ರತಿಫಲನವನ್ನು ನಾವು ಪುರಾಣಗಳಲ್ಲಿ ಕಾಣಬಹುದು. ಪುರಾಣ ಬರೆದ ಲೇಖಕರು ಅನಾಮಿಕರಾಗಿರಬಹುದು, ಪುರಾಣದಲ್ಲಿನ ಪಾತ್ರಗಳು ಅತಿರಂಜಿತವಾಗಿ ಕಾಣಬಹುದು, ಆದರೆ ಆಯಾ ಪುರಾಣಗಳಲ್ಲಿನ ಸಾರವು ಸಾರ್ವಕಾಲಿಕ ದಾರಿದೀಪ.
ಸೋಮನಾಥ ಮಂದಿರದ ಅಮೋಘ ವಾಸ್ತುಶಿಲ್ಪ ಮಾತ್ರವಲ್ಲ, ಅದು ಇರುವ ಸ್ಥಳವೂ ರಮಣೀಯ. ಸಮುದ್ರ ತಟದ ಬೆಟ್ಟದ ಶೃಂಗದಲ್ಲಿರುವ (ಬಹಳಷ್ಟು ಹಿಂದೂ ಮಂದಿರಗಳು ಬೆಟ್ಟದ ಮೇಲೆಯೇ ಇವೆ. ಎತ್ತರದ ಸ್ಥಳ ಏರಿ ದೇವರ ದರುಶನ ಪಡೆಯುವುದೇ ಒಂದು ವಿಶಿಷ್ಟ ಅನುಭವ. ಸ್ವರ್ಗ ಮೇಲಿದೆ ಎಂಬ ಕಲ್ಪನೆಯೂ ಇದರ ಹಿಂದಿರಬಹುದು) ಈ ಮಂದಿರ ವೀಕ್ಷಕರನ್ನು ಪುಳಕಗೊಳಿಸುತ್ತದೆ. ನಾನು ಪ್ರಭಾಸ ಪಾವಣಕ್ಕೆ ಹೋಗಿ ಸೋಮನಾಥ ಮಂದಿರದ ಮೇಲೆ ಕಣ್ಣು ಹಾಯಿಸಿದೆ. ಸಮುದ್ರದ ಅಲೆಗಳು ಈ ದೇವಾಲಯದ ಪಾದಗಳ ಮೇಲೆ ಅಪ್ಪಳಿಸುತ್ತಿರುವುದನ್ನು ಕಂಡು ವಿಸ್ಮಿತನಾದೆ. ಹಿಂದೂಸ್ಥಾನದ ಕಾಲಾತೀತ ಇತಿಹಾಸಕ್ಕೆ ಈ ಮಂದಿರ ಹೇಗೆ ಸಾಕ್ಷಿಯಾಗಿ ನಿಂತಿದೆಯಲ್ಲ ಎಂದು ಬೆರಗಾದೆ.
ಮಧ್ಯಕಾಲೀನ ಅವಧಿಯಲ್ಲಿ ವಿದೇಶೀ ದಾಳಿಕೋರರ ಆಕ್ರಮಣಕ್ಕೆ ಸೋಮನಾಥ ಮಂದಿರ ಹೇಗೆ ಪ್ರತ್ಯಕ್ಷ ಸಾಕ್ಷಿ ಮತ್ತು ಗುರಿಯಾಗಿತ್ತು ಎನ್ನುವುದನ್ನು ಕೆ.ಎಂ. ಮುನ್ಶಿ ಅವರು ಕರಾರುವಾಕ್ಕಾಗಿ ವಿವರಿಸಿದ್ದಾರೆ:
ಆಫಘನಿಸ್ತಾನದ ಗಜನಿ ಪ್ರಾಂತದ ಮೊಹಮ್ಮದ್ ಗಜನಿ, ಕ್ರಿ.ಶ. ೧೦೦೧ರಿಂದ ೨೬ರವರೆಗೆ ೨೫ ವರ್ಷಗಳ ಅವಧಿಯಲ್ಲಿ ಭಾರತದ ಮೇಲೆ ೧೭ ಬಾರಿ ದಂಡೆತ್ತಿ ಬಂದಿದ್ದ. ಸೋಮನಾಥ ಮಂದಿರ ಆತನ ದಾಳಿಯ ಮುಖ್ಯ ಗುರಿಯಾಗಿತ್ತು. ಕ್ರಿ.ಶ. ೧೦೨೪ರಲ್ಲಿ ಸೋಮನಾಥ ಮಂದಿರ ರಕ್ಷಿಸಲು ಮುಂದಾದ ಸುಮಾರು ಸಾವಿರ ಹಿಂದೂಗಳನ್ನು ಆತ ಬಲಿ ತೆಗೆದುಕೊಂಡ. ಸ್ವತಃ ಗಜನಿ ಮೊಹಮ್ಮದ್ ಮಂದಿರದೊಳಗೆ ಕಾಲಿಟ್ಟು ಜ್ಯೋತಿರ್ಲಿಂಗವನ್ನು ಪುಡಿಗುಟ್ಟಿದ. ದೇವಸ್ಥಾನವನ್ನು ವಿಧ್ವಂಸಗೊಳಿಸಿದ ಬಳಿಕ ಆತ ಅಲ್ಲಿದ್ದ ಭಾರಿ ಪ್ರಮಾಣದ ಬಂಗಾರ ಮತ್ತು ಅಮೂಲ್ಯ ಆಸ್ತಿಯನ್ನು ಆಫಘನಿಸ್ತಾನಕ್ಕೆ ಕೊಂಡೊಯ್ದ. ಅಷ್ಟೇ ಅಲ್ಲ, ದೇವರ ಮೂರ್ತಿಗಳನ್ನು ಹೊತ್ತೊಯ್ದು ಅಲ್ಲಿಯ ಮಸೀದಿಯ ಬಾಗಿಲಿನಲ್ಲಿ ಹುದುಗಿಸಿ, ಜನ ಅವುಗಳನ್ನು ಮೆಟ್ಟುವಂತೆ ಮಾಡಿದ. ಭಾರತೀಯರು ಹೆಮ್ಮೆಪಡುವ ಸಂಗತಿ ಎಂದರೆ, ಪ್ರತಿ ಬಾರಿ ದಾಳಿ ನಡೆದಾಗಲೂ ಸೋಮನಾಥ ಮಂದಿರದ ರಕ್ಷಣೆಗಾಗಿ ಹಿಂದೂಗಳು ಕೆಚ್ಚೆದೆಯಿಂದ ಹೋರಾಡಿದರು. ಮತ್ತೆ ಮತ್ತೆ ಮಂದಿರ ಧ್ವಂಸಗೊಳಿಸಿದಾಗಲೂ ಅದನ್ನು ಮರುನಿರ್ಮಿಸಿದರು!
ಮೊಹಮ್ಮದ್ ಗಜನಿ ಯಾಕೆ ಮತ್ತು ಹೇಗೆ ಸೋಮನಾಥ ಮಂದಿರದ ಮೇಲೆ ದಾಳಿ ಮಾಡಿದ? ಈ ಬಗ್ಗೆ ಡಾ. ಬಿ.ಆರ್. ಅಂಬೇಡ್ಕರ್ ಬರೆದ ‘ಪಾಕಿಸ್ತಾನ್ ಆರ್ ದಿ ಪಾರ್ಟಿಷನ್ ಆಫ್ ಇಂಡಿಯಾ’ ಕೃತಿಯಲ್ಲಿ ಮೊಹಮ್ಮದ್ ಗಜನಿಯ ಇತಿಹಾಸಕಾರ ಅಲ್ ಉತ್ಬಿಯ ಉಲ್ಲೇಖವನ್ನು ಪ್ರಸ್ತಾವಿಸಿದ್ದಾರೆ. ದಾಳಿಯನ್ನು ಉತ್ಬಿ ಹೀಗೆ ವರ್ಣಿಸಿದ್ದಾನೆ – ಮೊಹಮ್ಮದ್ ಗಜನಿ ಭಾರತದ ಮೇಲೆ ಸರಣಿ ದಾಳಿ ಮಾಡಿ ಪ್ರಮುಖ ದೇವಾಲಯಗಳನ್ನು ನಾಶಪಡಿಸಿ ಮುಸ್ಲಿಂ ಧರ್ಮದ ಬೀಜ ಬಿತ್ತಿದ. ಭಾರತದ ನಗರಗಳನ್ನು ವಶಪಡಿಸಿಕೊಂಡ. ದೇವರಪೂಜೆ ಮಾಡುವವರನ್ನೆಲ್ಲ ಇಸ್ಲಾಂ ಧರ್ಮಕ್ಕೆ ಮತಾಂತರಿಸಿದ. ಪ್ರತಿ ವರ್ಷ ಹಿಂದೂಸ್ಥಾನದ ವಿರುದ್ಧ ‘ಪವಿತ್ರ ಯುದ್ಧ’ ಘೋಷಿಸಿದ…
ಸೋಮನಾಥ ಮಂದಿರದ ಮೇಲೆ ದಾಳಿ ಮಾಡಿದವನು ಮೊಹಮ್ಮದ್ ಗಜನಿ ಒಬ್ಬನೇ ಅಲ್ಲ. ೧೭೦೬ರಲ್ಲಿ ಮೊಘಲ್ ಸಾಮ್ರಾಜ್ಯದ ವೈಸರಾಯ್ ಆಗಿದ್ದ ಮೊಹಮ್ಮದ್ ಅಜಂ ಇಂಥದ್ದೇ ಕೃತ್ಯ ಎಸಗಿದ್ದ. ಏಕೆಂದರೆ, ಆಗಿನ ಮೊಘಲ್ ದೊರೆ ಔರಂಗಜೇಬ, ‘ಸೋಮನಾಥ ದೇವಾಲಯವನ್ನು ಇನ್ನೆಂದೂ ದುರಸ್ತಿ ಮಾಡಲಾಗದಂತೆ ನಾಶಪಡಿಸಿ’ ಎಂದು ಆದೇಶ ಹೊರಡಿಸಿದ್ದ. ಸೋಮನಾಥ ಮಂದಿರವು ಕೋಟ್ಯಂತರ ಭಕ್ತರ ನಂಬಿಕೆ ಮತ್ತು ವಿದೇಶೀ ದೊರೆಗಳ ದಾಳಿಗೆ ಸಾಕ್ಷಿಯಾಗಿ ಉಳಿಯಿತು. ಅದೇ ಹೊತ್ತಿಗೆ ಅದು, ‘ವಿದೇಶೀ’ ದಾಳಿಕೋರರನ್ನು ದಿಟ್ಟತನದಿಂದ ಎದುರಿಸಲು ಸ್ವಾಭಿಮಾನಿ ದೇಶವಾಸಿಗಳ ಪಾಲಿಗೆ ಸ್ಫೂರ್ತಿಯ ಸೆಲೆಯಾಗಿತ್ತು.
ಭಾರತಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಹಲವು ರಾಷ್ಟ್ರೀಯವಾದಿ ನಾಯಕರು ಸೋಮನಾಥ ಮಂದಿರದ ಪುನರುತ್ಥಾನದ ಪ್ರತಿಜ್ಞೆ ಮಾಡಿದರು. ಈ ನಿರ್ಧಾರದ ಹಿಂದೆ ‘ಮುಸ್ಲಿಂ ವಿರುದ್ಧ ಹಿಂದೂ ಸಮರ’ ಎಂಬ ಸೂತ್ರ ಇರಲೇ ಇಲ್ಲ. ವಿದೇಶೀ ದಾಳಿಕೋರರ ಆಕ್ರಮಣ, ಹಿಂಸೆ, ಲೂಟಿ ಮುಂತಾದ ದುಷ್ಕೃತ್ಯಗಳ ನೆನಪನ್ನು ಅಳಿಸಿ ಜಾತ್ಯತೀತತೆ, ಸಹನೆ, ಸೌಹಾರ್ದ, ರಾಷ್ಟ್ರಪ್ರಜ್ಞೆ ಮತ್ತು ಆತ್ಮಾಭಿಮಾನದ ಪ್ರತೀಕವಾಗಿ ಮಂದಿರಕ್ಕೆ ಈ ಕಾಯಕಲ್ಪ ಕೊಡುವುದಷ್ಟೇ ಗುರಿ ಆಗಿತ್ತು.
ಇಲ್ಲಿ ಇನ್ನೊಂದು ವಿಷಯವನ್ನು ನಾನು ಸ್ಪಷ್ಟಪಡಿಸಬೇಕಿದೆ. ಮೊಹಮ್ಮದ್ ಗಜನಿ ಮತ್ತು ಔರಂಗಜೇಬ ಈ ದೇಶದ ಸಂಸ್ಕೃತಿ-ಪರಂಪರೆಗೆ ವಿರುದ್ಧವಾಗಿ ವರ್ತಿಸಿದರು. ಎಲ್ಲ ಜನರನ್ನು ಸಮಾನವಾಗಿ ಕಾಣಬೇಕೆಂಬ ಈ ನೆಲದ ಕಾನೂನನ್ನು ಉಲ್ಲಂಘಿಸಿದರು. ಹಿಂದೂಗಳ ಮೇಲೆ ದೌರ್ಜನ್ಯ ಎಸಗಿದರು. ಬಲವಂತವಾಗಿ ತಮ್ಮ ಮತ ಹೇರಿದರು. ಏಕೆಂದರೆ ಅವರು ಈ ನೆಲದ ಮರ್ಮ ಅರಿಯದ ಪರಕೀಯ ಮುಸಲ್ಮಾನರು. ಆದರೆ, ಈಗ ಇಲ್ಲಿರುವ ಶೇ.೯೦ ಮುಸ್ಲಿಮರು ಈ ನೆಲದ ಶ್ರೀಮಂತ ಪರಂಪರೆಯಲ್ಲಿ ಹಾಸುಹೊಕ್ಕಾಗಿದ್ದವರೇ. ಏಕೆಂದರೆ ಅವರೆಲ್ಲ ಮೂಲತಃ ಹಿಂದೂಗಳು, ವಿದೇಶೀ ಆಕ್ರಮಣಕಾರರ ಬಲವಂತದಿಂದ ಇಸ್ಲಾಂಧರ್ಮಕ್ಕೆ ಮತಾಂತರ ಹೊಂದಿದ್ದವರು.
ಭಾರತದ ಇತಿಹಾಸ ಕುರಿತ ಸ್ವಾಮಿ ವಿವೇಕಾನಂದರ ವಿಶ್ಲೇಷಣೆ ಇಲ್ಲಿ ಉಲ್ಲೇಖನೀಯ – “ವಿದೇಶೀ ಆಕ್ರಮಣಕಾರರು ಭಾರತಕ್ಕೆ ದಾಂಗುಡಿಯಿಟ್ಟು ದೇವಾಲಯದ ಮೇಲೆ ದೇವಾಲಯ ಉರುಳಿಸುತ್ತ ಹೋದರು. ಆದರೆ ಮತ್ತೆ ಮತ್ತೆ ಮಂದಿರಗಳು ತಲೆಯೆತ್ತಿ ನಿಂತವು. ಗುಜರಾತ್ನ ಸೋಮನಾಥ ದೇವಾಲಯ ಮತ್ತು ದಕ್ಷಿಣ ಭಾರತದ ಹಲವು ಮಂದಿರಗಳು ನಿಮಗೆ ಯಾವುದೇ ಗ್ರಂಥಗಳಿಗಿಂತ ಹೆಚ್ಚಾಗಿ ದೇಶದ ಚರಿತ್ರೆಯ ಒಳನೋಟವನ್ನು ನೀಡುತ್ತವೆ. ನೂರಾರು ದೇವಾಲಯಗಳು ನೆಲಕ್ಕುರುಳಿದವು, ಅಷ್ಟೇ ವೇಗವಾಗಿ ಮತ್ತೆ ತಲೆಯೆತ್ತಿ ನಿಂತವು! ನಿರಂತರವಾಗಿ ದಾಳಿಗಳು ನಡೆದವು, ಅಷ್ಟೇ ಬೇಗ ಚೇತರಿಸಿಕೊಂಡು ಮತ್ತಷ್ಟು ಪ್ರಬಲವಾಗಿ ಕಂಗೊಳಿಸಿದವು. ಇದೇ ರಾಷ್ಟ್ರೀಯ ಮನೋಬಲ, ಇದೇ ರಾಷ್ಟ್ರೀಯ ಜೀವನ. ಅದನ್ನು ಅನುಸರಿಸಿ ಮುನ್ನಡೆಯಿರಿ… ಅದು ನಿಮ್ಮನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯುತ್ತದೆ…”
ಸೋಮನಾಥ ಮಂದಿರ ಮರು ನಿರ್ಮಿಸಿದ್ದು ಹೇಗೆ?
ಇದರ ಹಿಂದಿರುವುದು – ಸರ್ದಾರ್ ಪಟೇಲರ ದೃಢ ನಿರ್ಧಾರ, ಮಹಾತ್ಮ ಗಾಂಧಿಯವರ ಆಶಯ, ಕೆ.ಎಂ. ಮುನ್ಶಿಯವರ ದಿಟ್ಟ ಹೋರಾಟ ಮತ್ತು ರಾಜೇಂದ್ರ ಪ್ರಸಾದ್ರ ‘ರಾಷ್ಟ್ರಪತಿ ಮುದ್ರೆ’.
೧೯೪೭ – ಹಿಂದೂಸ್ಥಾನದ ಬಹುಪಾಲು ಜನರ ಪಾಲಿಗೆ ಇದು ಕೇವಲ ಬ್ರಿಟಿಷರಿಂದ ಸ್ವಾತಂತ್ರ್ಯ ಪಡೆದ ವರ್ಷ ಮಾತ್ರವಲ್ಲ; ಬ್ರಿಟಷ್ಪೂರ್ವ ಕಾಲದಲ್ಲಿ ಹಿಂದೂಗಳ ಮೇಲೆ ನಡೆದ ದೌರ್ಜನ್ಯ, ಅಸಂಖ್ಯ ಹಿಂದೂ ದೇವಾಲಯಗಳ ನೆಲಸಮ, ಹಿಂದೂ ದೇವರ ವಿಗ್ರಹಗಳ ಅಪವಿತ್ರೀಕರಣ ಮತ್ತು ಈ ನೆಲದ ಸನಾತನ ಸಂಪ್ರದಾಯ-ಸಂಸ್ಕೃತಿಯ ಮೇಲೆ ನಡೆದ ಅವಿಚ್ಛಿನ್ನ ಸಮರದ ಕರಿಛಾಯೆಯನ್ನು ಮರೆಯುವ ಕಾಲಘಟ್ಟವೂ ಹೌದು.
ದೇಶಕ್ಕೆ ಸ್ವಾತಂತ್ರ್ಯ ಬಂದಿತೆಂಬ ಸಂಭ್ರಮದ ನಡುವೆಯೇ, ಮುಸ್ಲಿಂ ಲೀಗ್ ಕೋಮು-ಆಧಾರಿತ ದೇಶವಿಭಜನೆಯ ಬೇಡಿಕೆಯನ್ನಿಟ್ಟು ರಕ್ತದ ಓಕುಳಿಯನ್ನೇ ಹರಿಸಿತು. ಗುಜರಾತ್ನ ಸೌರಾಷ್ಟ್ರ ವಲಯದಲ್ಲಿರುವ ಸಂಪದ್ಭರಿತ ಜುನಾಗಢ ರಾಜ್ಯದ ಮೇಲೂ ವಿಭಜನೆಯ ಛಾಯೆ ಆವರಿಸಿತು. ಐತಿಹಾಸಿಕ ಸೋಮನಾಥ ಮಂದಿರ ಇರುವುದು ಈ ಪ್ರದೇಶದಲ್ಲೇ. ಜುನಾಗಢದ ಜನಸಂಖ್ಯೆಯಲ್ಲಿ ಶೇ. ೮೦ರಷ್ಟು ಮಂದಿ ಹಿಂದೂಗಳಾಗಿದ್ದರು. ಆದರೆ ಅದರ ನವಾಬ ಮಾತ್ರ ಮುಸ್ಲಿಮನಾಗಿದ್ದ! ಭಾರತಕ್ಕೆ ಸ್ವಾತಂತ್ರ್ಯ ಲಭಿಸಿ ಪಾಕಿಸ್ತಾನದ ಉದಯವಾದ ತಕ್ಷಣ ಈ ನವಾಬ, ‘ನಮ್ಮ ರಾಜ್ಯ ಪಾಕಿಸ್ತಾನಕ್ಕೆ ಸೇರ್ಪಡೆಯಾಗುತ್ತದೆ’ ಎಂದು ಘೋಷಿಸಿಬಿಟ್ಟ. ಈ ನಿರ್ಧಾರದಿಂದ ಅಲ್ಲಿಯ ಹಿಂದೂಗಳು ದಂಗೆಯೆದ್ದರು. ಅಲ್ಲಿಯ ಹಿರಿಯ ಕಾಂಗ್ರೆಸಿಗ ಸಮಾಲ್ದಾಸ್ ಗಾಂಧಿ ನೇತೃತ್ವದಲ್ಲಿ ನವಾಬನ ಆಳ್ವಿಕೆಯ ವಿರುದ್ಧ ‘ಪರ್ಯಾಯ ಸರಕಾರ’ವೇ ಸ್ಥಾಪನೆಯಾಗಿಬಿಟ್ಟಿತು. ಸ್ಥಳೀಯ ನಾಗರಿಕರ ಏಕತೆಯ ಹೋರಾಟವು ಜುನಾಗಢವನ್ನು ಪಾಕಿಸ್ತಾನಕ್ಕೆ ಸೇರಿಸಬೇಕೆಂಬ ನವಾಬನ ಪ್ರಯತ್ನವನ್ನು ನಿಷ್ಫಲಗೊಳಿಸಿತು. ತನ್ನ ಎಲ್ಲ ಕುತಂತ್ರ ವಿಫಲವಾಗುತ್ತಲೇ ನವಾಬ ರಾತ್ರೋರಾತ್ರಿ ಪಾಕಿಸ್ತಾನಕ್ಕೆ ಪಲಾಯನ ಮಾಡಿದ. ಸಮಾಲ್ದಾಸ್ ಗಾಂಧಿ ಮತ್ತು ಜುನಾಗಢದ ದಿವಾನ ಸರ್ ಶಾ ನವಾಜ್ ಭುಟ್ಟೋ (ಇವರು ಪಾಕಿಸ್ತಾನದ ಪ್ರಧಾನಿಯಾಗಿದ್ದ ಜುಲ್ಟಿಕರ್ ಅಲಿ ಭುಟ್ಟೋ ಅವರ ತಂದೆ) ಒಂದಾಗಿ ನಿಂತು ‘ಜುನಾಗಢವು ಭಾರತ ಗಣರಾಜ್ಯದಲ್ಲಿ ಲೀನವಾಗುತ್ತದೆ’ ಎಂದು ಸಾರಿದರು. ಭಾರತದ ಉಕ್ಕಿನ ಮನುಷ್ಯ ಎಂದೇ ಕರೆಯಲಾಗುವ ಅಂದಿನ ಗೃಹ ಸಚಿವ ಮತ್ತು ಭಾರತ ಒಕ್ಕೂಟದ ಶಿಲ್ಪಿ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ಈ ವಿಷಯವನ್ನು ಕೆ.ಎಂ. ಮುನ್ಶಿ ಅವರಿಗೆ ತಿಳಿಸಲು ‘ಜೈ ಸೋಮನಾಥ್’ ಎಂಬ ಟೆಲಿಗ್ರಾಮ್ ಮಾಡಿದ್ದರಂತೆ! ಮುನ್ನಿ ಅವರು ‘ಪಿಲ್ಗ್ರಿಮೇಜ್ ಟು ಫ್ರೀಡಮ್’ ಎಂಬ ಕೃತಿಯಲ್ಲಿ ಈ ವಿಷಯ ಪ್ರಸ್ತಾವಿಸಿದ್ದಾರೆ.
ಜುನಾಗಢ ರಾಜ್ಯವನ್ನು ಭಾರತ ವಶಪಡಿಸಿಕೊಂಡ ನಾಲ್ಕು ದಿನಗಳ ಬಳಿಕ, ಅಂದರೆ ೧೯೪೭ರ ನವೆಂಬರ್ ೯ರಂದು ಸರ್ದಾರ್ ಪಟೇಲ್ ಅವರು ಸೌರಾಷ್ಟ್ರಕ್ಕೆ ಭೇಟಿ ನೀಡಿದ್ದರು. ಅವರ ಜತೆ ಲೋಕೋಪಯೋಗಿ ಮತ್ತು ನಿರಾಶ್ರಿತರ ಪುನರ್ವಸತಿ ಕಾರ್ಯ ಸಚಿವರಾಗಿದ್ದ ಎನ್.ವಿ. ಗಾಡ್ಗೀಳ್ ಕೂಡ ಇದ್ದರು. ಜುನಾಗಢದಲ್ಲಿ ಈ ನಾಯಕರಿಗೆ ಅಭೂತಪೂರ್ವ ಸ್ವಾಗತ ದೊರೆಯಿತು. ಈ ಸಂದರ್ಭದಲ್ಲಿ ಆಯೋಜಿಸಲಾಗಿದ್ದ ಸಾರ್ವಜನಿಕ ಸಮಾರಂಭದಲ್ಲಿ ಸರ್ದಾರ್ ಪಟೇಲ್ ಅವರು ಐತಿಹಾಸಿಕ ಮತ್ತು ದಿಟ್ಟ ಘೋಷಣೆಯೊಂದನ್ನು ಮೊಳಗಿಸಿದರು – “ಸೋಮನಾಥ ಮಂದಿರವನ್ನು ಭಾರತ ಸರಕಾರ ಮರು ನಿರ್ಮಿಸುತ್ತದೆ; ಅದು ಇದ್ದ ಸ್ಥಳದಲ್ಲೇ ಅದು ಮೂಲದಲ್ಲಿ ಹೇಗಿತ್ತೋ ಆ ಸ್ಥಿತಿಯಲ್ಲೇ. ಅಷ್ಟೇ ಅಲ್ಲ ಜ್ಯೋತಿರ್ಲಿಂಗವನ್ನೂ ನಾವು ಪ್ರತಿಷ್ಠಾಪನೆ ಮಾಡುತ್ತೇವೆ.”
ಆದರೆ ಈ ಪ್ರಸ್ತಾವಕ್ಕೆ ನೆಹರು ಸಂಪುಟದಲ್ಲಿ ಶಿಕ್ಷಣ ಸಚಿವರಾಗಿದ್ದ ಮೌಲಾನಾ ಅಬ್ದುಲ್ ಕಲಾಂ ಆಜಾದ್ ಭಿನ್ನರಾಗ ಎಳೆದರು. ಪಳೆಯುಳಿಕೆಯಂತಿದ್ದ ಸೋಮನಾಥ ಮಂದಿರವನ್ನು ಯಥಾಸ್ಥಿತಿಯಲ್ಲಿ ಪುರಾತತ್ತ್ವ ಸರ್ವೇಕ್ಷಣಾ ಇಲಾಖೆಗೆ ಒಪ್ಪಿಸಿ, ಅದನ್ನೊಂದು ಐತಿಹಾಸಿಕ ಸ್ಮಾರಕವನ್ನಾಗಿ ಇರಿಸಬೇಕೆಂಬುದು ಅವರ ಸಲಹೆಯಾಗಿತ್ತು. ಆದರೆ ಪಟೇಲರ ನಿರ್ಧಾರ ದೃಢವಾಗಿತ್ತು. ಈ ವಿಚಾರದಲ್ಲಿ ಯಾವುದೇ ರಾಜಿಗೆ ಅವರು ಬಿಲ್ಕುಲ್ ಸಿದ್ಧರಿರಲಿಲ್ಲ. ಅವರು ಸ್ಪಷ್ಟವಾಗಿ ಹೇಳಿದರು: “ಈ ಮಂದಿರ ಕುರಿತ ಕೋಟ್ಯಂತರ ಹಿಂದೂಗಳ ಭಾವನೆ ಬಲವಾಗಿದೆ ಮತ್ತು ವ್ಯಾಪಕವಾಗಿದೆ. ಮರುನಿರ್ಮಾಣ ಬಿಟ್ಟು ಬೇರೆ ಏನೇ ಮಾಡಿದರೂ ಅವರು ಸಂತುಷ್ಟರಾಗಲಾರರು. ದೇಗುಲವನ್ನು ಪುನರ್ನಿರ್ಮಿಸಿ ಜ್ಯೋತಿರ್ಲಿಂಗವನ್ನೂ ಪ್ರತಿಷ್ಠಾಪಿಸುವುದೊಂದೇ ಹಿಂದೂಗಳ ಭಾವನೆಯನ್ನು ಗೌರವಿಸಲು ನಮಗಿರುವ ಏಕೈಕ ದಾರಿ.”
ಪಟೇಲರ ಪ್ರಬಲ ಪ್ರತಿಪಾದನೆಗೆ ಸಚಿವ ಸಂಪುಟದ ಎಲ್ಲರೂ ಮಣಿಯಲೇಬೇಕಾಯಿತು. ಮಂದಿರ ಮರುನಿರ್ಮಾಣಕ್ಕೆ ನೆಹರು ಸಂಪುಟ ಒಪ್ಪಿಗೆ ನೀಡಿತು. ವಿಶೇಷವೆಂದರೆ, ಈ ನಿರ್ಣಯಕ್ಕೆ ಮಹಾತ್ಮ ಗಾಂಧಿಯವರ ಸಂಪೂರ್ಣ ಬೆಂಬಲ ಮತ್ತು ಹಾರೈಕೆ ಇತ್ತು. ಆದರೆ ಗಾಂಧಿಯವರ ಏಕೈಕ ಬೇಡಿಕೆ ಎಂದರೆ, ಮಂದಿರ ಮರುನಿರ್ಮಾಣದ ಹಣವನ್ನು ಸಾರ್ವಜನಿಕರಿಂದಲೇ ಸಂಗ್ರಹಿಸಬೇಕು, ಸರಕಾರದ ಖಜಾನೆಯಿಂದ ಒಂದು ಪೈಸೆಯನ್ನೂ ಇದಕ್ಕಾಗಿ ವ್ಯಯಿಸಕೂಡದು- ಎಂದು.
ಕೆ.ಎಂ. ಮುನ್ಶಿ ಅವರು ಒಬ್ಬ ಇತಿಹಾಸಕಾರ. ಆದರೆ ಸೋಮನಾಥ ಮಂದಿರದ ವಿಚಾರದಲ್ಲಿ ಅವರು – ಇತಿಹಾಸ ನಿರೂಪಣೆಕಾರರ ಪಾತ್ರ ನಿರ್ವಹಿಸಿದ್ದಷ್ಟೇ ಅಲ್ಲ, ಸ್ವಯಂ ಹೊಸ ಇತಿಹಾಸ ಸೃಷ್ಟಿಸಿದರು. ನೆಹರು ಸಂಪುಟದಲ್ಲಿ ಆಹಾರ ಮತ್ತು ಕೃಷಿ ಸಚಿವರಾಗಿದ್ದ ಅವರಿಗೆ ಮಂದಿರ ಮರುನಿರ್ಮಾಣ ಉಸ್ತುವಾರಿ ನೇತೃತ್ವ ವಹಿಸಲಾಯಿತು.
ಆದರೆ ನಿಜಕ್ಕೂ ಅದು ಸವಾಲಿನ ಕೆಲಸವಾಗಿತ್ತು. ೧೯೫೦ರ ಡಿಸೆಂಬರ್ ೧೫ರಂದು ಸರ್ದಾರ್ ಪಟೇಲ್ ಅವರ ಅಕಾಲಿಕ ನಿಧನದಿಂದಾಗಿ ಈ ಪ್ರಕ್ರಿಯೆ ಮತ್ತಷ್ಟು ಜಟಿಲವಾಯಿತು. ಪಟೇಲ್ ಅನುಪಸ್ಥಿತಿಯಲ್ಲಿ ಮಂದಿರ ಮರುನಿರ್ಮಾಣಕ್ಕೆ ಎಡಪಂಥೀಯ, ‘ವಿಚಾರವಾದಿ’ಗಳಿಂದ ಮಾತ್ರವಲ್ಲ, ಸ್ವತಃ ಪ್ರಧಾನಿ ನೆಹರು ಅವರಿಂದಲೇ ವಿರೋಧ ವ್ಯಕ್ತವಾಗತೊಡಗಿತು. ಈ ಕೆಲಸದಲ್ಲಿ ಕೇಂದ್ರ ಸರಕಾರ ಅಧಿಕೃತವಾಗಿ ಭಾಗಿಯಾಗುವುದು ದೇಶದ ‘ಜಾತ್ಯತೀತ’ ತತ್ತ್ವಕ್ಕೆ ವಿರುದ್ಧ – ಎಂದು ನೆಹರು ಗೊಣಗತೊಡಗಿದರು. ಪಟೇಲ್ ಇರುವಷ್ಟು ಕಾಲ ಈ ವಿಚಾರದಲ್ಲಿ ತೆಪ್ಪಗಿದ್ದ ನೆಹರು ಆ ಬಳಿಕ ಬಹಿರಂಗವಾಗಿಯೇ ವಿರೋಧ ವ್ಯಕ್ತಪಡಿಸಿದರು. ಮುನ್ಶಿ ಈ ವಿಚಾರದಲ್ಲಿ ಏಕಾಂಗಿಯಾದರು. ಸಂಪುಟದ ಬಹುತೇಕ ಸಹೋದ್ಯೋಗಿಗಳು ಇದಕ್ಕೆ ಖಾಸಗಿಯಾಗಿ ಬೆಂಬಲ ವ್ಯಕ್ತಪಡಿಸುತ್ತಿದ್ದರು. ಆದರೆ, ನೆಹರುರವರ ಅವಕೃಪೆಗೆ ತುತ್ತಾಗಬೇಕಾದೀತು ಎಂಬ ಕಾರಣದಿಂದ ಅವರು ಬಹಿರಂಗವಾಗಿ ತಮ್ಮ ಅನಿಸಿಕೆ ಹಂಚಿಕೊಳ್ಳುತ್ತಿರಲಿಲ್ಲ.
ಸಂಪುಟ ಸಭೆಯೊಂದರ ಬಳಿಕ ನೆಹರು ಅವರು ಮುನ್ಶಿಯವರನ್ನು ಕರೆದು ಹೇಳಿದರು: “ನೋಡಿ, ನೀವು ಸೋಮನಾಥ ಮಂದಿರವನ್ನು ಪುನರುಜ್ಜೀವನಗೊಳಿಸಲು ಪ್ರಯತ್ನಿಸುತ್ತಿರುವುದು ನನಗೆ ಸರಿ ಕಾಣುತ್ತಿಲ್ಲ. ಇದು ಕೇವಲ ಹಿಂದೂಗಳ ಭಾವನಾತ್ಮಕ ವಿಷಯ.”
ಇಷ್ಟಾದ ಮೇಲೂ ಮುನ್ಶಿ ತೆಪ್ಪಗೆ ಕೂರಲಿಲ್ಲ. ತಮ್ಮ ನಿರ್ಧಾರದಿಂದ ಹಿಂದೆಸರಿಯಲು ಬಯಸಲಿಲ್ಲ. ತಮ್ಮ ನಿರ್ಧಾರಕ್ಕೆ ಬದ್ಧರಾಗಿ ೧೯೫೧ರ ಏಪ್ರಿಲ್ ೨೪ರಂದು ಪ್ರಧಾನಿ ನೆಹರುಗೆ ಪತ್ರ ಬರೆದರು:
‘ನೆಹರುಜೀ, ಸಂಪುಟ ಸಭೆಯಲ್ಲಿ ನೀವು ಸೋಮನಾಥ ಕುರಿತು ಪ್ರಸ್ತಾವಿಸಿದ್ದೀರಿ. ಇದು ಕೇವಲ ಹಿಂದೂ ಭಾವನೆಗಳನ್ನು ಉದ್ದೀಪಿಸುವ ಪ್ರಯತ್ನ ಎಂದು ವ್ಯಾಖ್ಯಾನಿಸಿದ್ದೀರಿ. ಈ ಕಾರ್ಯ ಮಾಡುತ್ತಿರುವುದಕ್ಕೆ ನನಗೆ ಸಂತಸವಿದೆ. ಈ ವಿಚಾರದಲ್ಲಿ ನನ್ನ ಯೋಚನೆ ಮತ್ತು ಚಟುವಟಿಕೆಯಿಂದ ಹಿಂದೆಸರಿಯಲು ಬಯಸಲಾರೆ. ಸೋಮನಾಥ ಮಂದಿರವನ್ನು ಭಾರತ ಸರಕಾರವೇ ಮರುನಿರ್ಮಿಸುತ್ತಿರುವ ಬಗ್ಗೆ ದೇಶವಾಸಿಗಳು ಸಂತಸಗೊಂಡಿದ್ದಾರೆ. ಸ್ವತಂತ್ರ ಭಾರತದಲ್ಲಿ ನಮ್ಮ ಸರಕಾರ ಮಾಡುತ್ತಿರುವ ಮತ್ತು ಮಾಡಲಿರುವ ಎಲ್ಲ ಕೆಲಸಗಳಿಗಿಂತ ಮಂದಿರ ನಿರ್ಮಾಣ ಕಾರ್ಯಕ್ಕೆ ಹೆಚ್ಚು ಜನಬೆಂಬಲವಿದೆ ಎನ್ನುವುದನ್ನು ನಿಮಗೆ ಖಚಿತವಾಗಿ ಹೇಳಬಲ್ಲೆ.’
ಸಮಾಜಸುಧಾರಣೆಯಲ್ಲಿ ಸೋಮನಾಥ ಮಂದಿರ ಬೀರಲಿರುವ ಪರಿಣಾಮಗಳ ಬಗ್ಗೆಯೂ ಮುನ್ಶಿ ಪತ್ರದಲ್ಲಿ ಪ್ರಸ್ತಾವಿಸಿದ್ದರು:
‘ಈ ಮಂದಿರದಲ್ಲಿ ಹರಿಜನರಿಗೂ ಪ್ರವೇಶ ನೀಡುವ ನಿರ್ಧಾರದಿಂದ ಹಿಂದೂ ಸಮುದಾಯದ ಕೆಲವು ಸಂಪ್ರದಾಯವಾದಿಗಳನ್ನು ಕೆರಳಿಸಬಹುದು. ಆದರೆ, ಹರಿಜನರು ಮಾತ್ರವಲ್ಲ, ಹಿಂದೂಯೇತರರಿಗೂ ಅಲ್ಲಿ ಮುಕ್ತ ಅವಕಾಶವಿರುತ್ತದೆ…’
ಮುನ್ಶಿ ಅವರು ಪತ್ರವನ್ನು ಹೀಗೆ ಮುಗಿಸುತ್ತಾರೆ:
‘ನಮ್ಮ ಗತ ಸಂಗತಿಗಳು ಪ್ರಸಕ್ತ ಕಾರ್ಯನಿರ್ವಹಿಸಲು ಮತ್ತು ಭವಿಷ್ಯದತ್ತ ಆಶಾಭಾವನೆಯಿಂದ ನೋಡಲು ಬಲ ನೀಡಿವೆ ಎಂಬ ನಂಬಿಕೆ ನನ್ನದು. ಘಾಸಿಗೊಂಡಿರುವ ಕೋಟ್ಯಂತರ ಹಿಂದೂಗಳಿಗೆ ಸಾಂತ್ವನ ಸಿಗದ ಹೊರತು ನಮಗೆ ಸಿಕ್ಕಿರುವ ಸ್ವಾತಂತ್ರ್ಯಕ್ಕೆ ಬೆಲೆ ಇಲ್ಲ ಎಂಬ ಭಾವನೆ ನನ್ನದು. ಸೋಮನಾಥ ಮಂದಿರದ ನನ್ನ ಕನಸು ನನಸಾಗುತ್ತದೆ ಎಂದು ನಂಬಿದ್ದೇನೆ… ಅದೇ ಸ್ಥಳದಲ್ಲಿ ಮಂದಿರ ಪುನರುತ್ಥಾನಗೊಳ್ಳುವ ಮೂಲಕ ದೇಶವಾಸಿಗಳಲ್ಲಿ ಸಂಪೂರ್ಣ ಧಾರ್ಮಿಕ ಸ್ವಾತಂತ್ರ್ಯದ ಅನುಭವವಾಗಲಿದೆ…’
ನಾನಾ ರಾಜ್ಯಗಳನ್ನು ಭಾರತ ಒಕ್ಕೂಟದಲ್ಲಿ ಸೇರಿಸುವ ಪ್ರಕ್ರಿಯೆಯಲ್ಲಿ ಸರ್ದಾರ್ ಪಟೇಲರಿಗೆ ಸಹಾಯಕರಾಗಿದ್ದ ಸರಕಾರಿ ಅಧಿಕಾರಿ ವಿ.ಪಿ. ಮೆನನ್ ಈ ಪತ್ರವನ್ನು ಓದಿ ಪ್ರತಿಕ್ರಿಯಿಸಿದ್ದು ಹೀಗೆ: ‘ಮಾಸ್ಟರ್ ಪೀಸ್ನಂತಿರುವ ನಿಮ್ಮ ಪತ್ರ ಓದಿದೆ. ನಾನೂ ಕೂಡ ಸೋಮನಾಥ ಮಂದಿರಕ್ಕಾಗಿ ಈ ಜೀವ ಮೀಸಲಿಟ್ಟಿದ್ದೇನೆ. ಆವಶ್ಯಕವಾದರೆ, ಇದಕ್ಕಾಗಿ ನಾನು ಪ್ರಾಣತ್ಯಾಗ ಮಾಡಲೂ ಸಿದ್ಧ.’
ಈ ಎಲ್ಲ ಅಡ್ಡಿ-ಆತಂಕಗಳನ್ನು ಎದುರಿಸಿ ಮುನ್ಶಿ ಅವರು ಹೇಗೆ ಸೋಮನಾಥ ಆಂದೋಲನ ನಡೆಸಿ ಯಶಸ್ವಿಯಾದರು ಎಂಬ ಬಗ್ಗೆ ಅವರ ‘ಸೋಮನಾಥ್: ದಿ ಶೈನ್ ಎಟರ್ನಲ್’ ಎಂಬ ಕೃತಿಯಲ್ಲಿ ವಿವರವಿದೆ. ‘ಪಿಲ್ಗ್ರಿಮೇಜ್ ಟು ಫ್ರೀಡಮ್’ ಪುಸ್ತಕದ ಕೆಲವು ಅಧ್ಯಾಯಗಳಲ್ಲೂ ಈ ಬಗ್ಗೆ ಉಲ್ಲೇಖವಿದೆ: ‘ಸರ್ದಾರ್ ಪಟೇಲ್ ಮತ್ತು ಮಹಾತ್ಮ ಗಾಂಧಿ ನಿಧನದ ಬಳಿಕ ‘ಜಾತ್ಯತೀತ’ ಎಂಬ ಪದ ಹಿಂದೂಗಳಿಗೆ ಅಪಥ್ಯವಾಗಿದ್ದನ್ನೂ ಮುನ್ಶಿ ವರ್ಣಿಸಿದ್ದಾರೆ. ‘ಜಾತ್ಯತೀತ’ ಪದವನ್ನು ರಾಜಕಾರಣಿಗಳು ಅಲ್ಪಸಂಖ್ಯಾತರನ್ನು ಓಲೈಸಿ ಅಧಿಕಾರ ಬಲಪಡಿಸಿಕೊಳ್ಳುವುದಕ್ಕಾಗಿ ಬಳಸಿಕೊಂಡರು. ಈ ಪದ ಹಿಂದೂಗಳಿಗೆ ಅಪಥ್ಯವಾಗತೊಡಗಿದ್ದೇ ಸೋಮನಾಥ ಪುನರುಜ್ಜೀವನ ಘಟನಾವಳಿಯಿಂದ… ಇದೇ ಪ್ರವೃತ್ತಿ ಬೆಳೆಯುತ್ತ ಹೋದರೆ ಬಹುಸಂಖ್ಯಾತರ ಆಕ್ರೋಶ ಭುಗಿಲೇಳುತ್ತ ಹೋಗಬಹುದು. ಹಿಂದೂಗಳ ಪವಿತ್ರ ಪುಣ್ಯಕ್ಷೇತ್ರಗಳಾದ ಬನಾರಸ್, ಮಥುರಾ ಮತ್ತು ಹೃಷಿಕೇಶಗಳು ಬೃಹತ್ ಕೈಗಾರಿಕೆಗಳಿಂದ ಸೃಷ್ಟಿಯಾದ ಕೊಳಚೆ ಪ್ರದೇಶಗಳಲ್ಲಿ ಲೀನವಾದರೆ ಸಾಂಪ್ರದಾಯಿಕ ಸಹಿಷ್ಣುತೆ ಮಸುಕಾಗಬಹುದು. ಬಹುಸಂಖ್ಯಾತರ ತಾಳ್ಮೆ, ಸಹನೆಗೆ ಪೂರಕವಾಗಿ ಅಲ್ಪಸಂಖ್ಯಾತರು ಹೊಂದಾಣಿಕೆ ಸ್ವಭಾವವನ್ನು ರೂಢಿಸಿಕೊಳ್ಳಬೇಕು. ಇದರ ಹೊರತು, ಭವಿಷ್ಯದಲ್ಲಿನ ಕೋಮುದಳ್ಳುರಿಯನ್ನು ತಪ್ಪಿಸಲು ಸಾಧ್ಯವೇ ಇಲ್ಲ…’
ಅಂತೂ ಇಂತೂ ಸೋಮನಾಥ ಮಂದಿರ ಮರುನಿರ್ಮಾಣದ ಕನಸು ನನಸಾಯಿತು. ಇದರ ಉದ್ಘಾಟನೆ ನೆರವೇರಿಸಲು ಮುನ್ಶಿಯವರು ಅಂದಿನ ರಾಷ್ಟ್ರಪತಿ ಡಾ. ರಾಜೇಂದ್ರ ಪ್ರಸಾದ್ ಅವರನ್ನು ಆಮಂತ್ರಿಸಿದರು. ‘ರಾಷ್ಟ್ರಪತಿಯೊಬ್ಬರು ಹಿಂದೂ ದೇವಾಲಯವನ್ನು ಉದ್ಘಾಟಿಸುವುದು ಜಾತ್ಯತೀತ ತತ್ತ್ವಕ್ಕೆ ವಿರುದ್ಧ ಎಂದು ನೆಹರು ಆಕ್ಷೇಪ ವ್ಯಕ್ತಪಡಿಸುವುದು ಖಚಿತ. ಈ ವಿಚಾರ ರಾಜೇಂದ್ರ ಪ್ರಸಾದ್ ಅವರಿಗೂ ಚೆನ್ನಾಗಿ ಗೊತ್ತಿದೆ. ಹಾಗಾಗಿ ಅವರು ಈ ಕೋರಿಕೆಯನ್ನು ಸ್ಪಷ್ಟವಾಗಿ ತಿರಸ್ಕರಿಸುತ್ತಾರೆ’ – ಎಂದು ಮುನ್ಶಿ ಅಂದುಕೊಂಡಿದ್ದರು. ಆದರೆ ಆದದ್ದೇ ಬೇರೆ. ದೇವಾಲಯದ ಉದ್ಘಾಟನೆ ನೆರವೇರಿಸಲು ರಾಜೇಂದ್ರ ಪ್ರಸಾದ್ ಖುಷಿಯಿಂದ ಒಪ್ಪಿಕೊಂಡರು!
‘ಆರೆ! ನಾನು ದೇಗುಲ ಉದ್ಘಾಟಿಸುವುದರಲ್ಲಿ ತಪ್ಪೇನಿದೆ? ಮಸೀದಿ ಅಥವಾ ಚರ್ಚ್ ಉದ್ಘಾಟನೆಗೆ ಆಹ್ವಾನಿಸಿದರೂ ನಾನು ಹೋಗುವೆ’ ಎಂದುಬಿಟ್ಟರು ರಾಜೇಂದ್ರ ಪ್ರಸಾದ್! ನಮ್ಮ ದೇಶ ಧರ್ಮಾಧಾರಿತವೂ ಅಲ್ಲ, ಧರ್ಮದ ವಿರುದ್ಧವೂ ಅಲ್ಲ. ಇದು ನಮ್ಮ ಜಾತ್ಯತೀತ ತತ್ತ್ವದ ಮುಖ್ಯ ತಿರುಳು – ಎಂದವರು ಅರ್ಥಪೂರ್ಣವಾಗಿ ವ್ಯಾಖ್ಯಾನಿಸಿದರು.
ನಿರೀಕ್ಷೆಯಂತೆಯೇ ರಾಜೇಂದ್ರ ಪ್ರಸಾದ್ ಅವರ ಈ ನಡೆಗೆ ನೆಹರು ವಿರೋಧ ವ್ಯಕ್ತಪಡಿಸಿದರು. ಆದರೆ ರಾಷ್ಟ್ರಪತಿ ತಾವು ಕೊಟ್ಟ ಮಾತು ಮುರಿಯಲು ಒಪ್ಪದೆ ಗುಜರಾತ್ಗೆ ಆಗಮಿಸಿದರು. ಮಂದಿರ ಉದ್ಘಾಟನೆ ಸಂದರ್ಭದಲ್ಲಿ ರಾಜೇಂದ್ರ ಪ್ರಸಾದ್ ಆಡಿದ ಮಾತುಗಳು ನೈಜ ಜಾತ್ಯತೀತ ಸಂದೇಶ ಸಾರಿ ಹೇಳಿದವು.
‘ಈ ಜಗತ್ತಿನ ಸೃಷ್ಟಿಕರ್ತ ಬ್ರಹ್ಮನೇ ಭಗವಾನ್ ವಿಷ್ಣುವಿನ ಹೃದಯಭಾಗದಲ್ಲಿ ನೆಲೆಸಿದ್ದಾನೆ ಎನ್ನುತ್ತಾರೆ. ಹಾಗೆಯೇ ಪ್ರತಿಯೊಬ್ಬ ಮನುಷ್ಯನಲ್ಲೂ ನಂಬಿಕೆ ಮನೆಮಾಡಿರುತ್ತದೆ. ಮಾಡುವ ಪ್ರತಿ ಕಾರ್ಯದ ಹಿಂದೆಯೂ ನಂಬಿಕೆಯ ಶಕ್ತಿ ಅಡಗಿರುತ್ತದೆ. ಪ್ರಾಚೀನ ಕಾಲದಲ್ಲಿ ಹಿಂದೂಸ್ಥಾನವೆಂದರೆ ಚಿನ್ನ-ಬೆಳ್ಳಿಯ ಖಜಾನೆಯಾಗಿತ್ತು. ಜಗತ್ತಿನಲ್ಲಿರುವ ಒಟ್ಟು ಬಂಗಾರದ ಬಹುಪಾಲು ಭಾರತದ ದೇವಾಲಯಗಳ ಗರ್ಭದಲ್ಲಿ ಅಡಗಿರುತ್ತಿತ್ತು. ಅಂಥ ಸಂಪದ್ಭರಿತ ದೇವಾಲಯಗಳಲ್ಲಿ ಒಂದಾಗಿದ್ದ ಸೋಮನಾಥ ಮಂದಿರದ ಮರುನಿರ್ಮಾಣವಾದರೆ ನಮ್ಮ ದೇಶ ಮತ್ತೆ ಹಿಂದಿನಂತೆ ಸಂಪದ್ಭರಿತವಾದಂತೆ. ಈ ನಿಟ್ಟಿನಲ್ಲಿ ಈ ಮಂದಿರ ಸಾಂಕೇತಿಕವಾಗಿ ತಲೆಯೆತ್ತಿದೆ.’
ಸೋಮನಾಥ ಮಂದಿರ ರಾಷ್ಟ್ರೀಯ ನಂಬಿಕೆಯ ಸಂಕೇತ ಎಂದು ಸ್ಪಷ್ಟವಾಗಿ ಘೋಷಿಸಿದ್ದ ರಾಜೇಂದ್ರಬಾಬು, ‘ಈ ಮಂದಿರ ಬೂದಿಯಿಂದ ಮೇಲಕ್ಕೆದ್ದು ನಿಂತಿದೆ. ಜನರ ಹೃದಯದಲ್ಲಿ ಶಾಶ್ವತ ಸ್ಥಾನ ಪಡೆದಿರುವ ಈ ಸೀಮಾತೀತ ನಂಬಿಕೆಯ ಸಂಕೇತವನ್ನು ವಿಶ್ವದ ಯಾವುದೇ ವ್ಯಕ್ತಿ, ಶಕ್ತಿ ಅಥವಾ ಅಧಿಕಾರದಿಂದ ನಾಶಪಡಿಸಲಾಗದು ಎಂಬುದನ್ನು ಈ ಮಂದಿರ ಸಾರಿ ಹೇಳಿದೆ. ಇಂದು ನಮ್ಮ ಪ್ರಯತ್ನ ಗತ-ಇತಿಹಾಸವನ್ನು ಬದಲಿಸಲಾಗದು. ಆದರೆ ಅದು ನಮ್ಮ ಧಾರ್ಮಿಕ ನಂಬಿಕೆ ಮತ್ತು ಮೌಲ್ಯವನ್ನು ಮರುಸ್ಥಾಪಿಸಬಲ್ಲದು…’ ಎಂದರು.
ಸೋಮನಾಥ ಮಂದಿರದ ಮರುನಿರ್ಮಾಣ ಪಾಕಿಸ್ತಾನದಲ್ಲೂ ಪ್ರತಿಧ್ವನಿಸಿತು. ಕರಾಚಿಯಲ್ಲಿ ಬೃಹತ್ ಸಾರ್ವಜನಿಕ ಸಭೆ ಏರ್ಪಡಿಸಿ ಭಾರತ ಸರಕಾರದ ನಿಲವನ್ನು ಖಂಡಿಸಲಾಯಿತು.
ಈಗ ತಲೆಯೆತ್ತಿ ನಿಂತಿರುವ ಸೋಮನಾಥ ಮಂದಿರ ದೇಶಕ್ಕೆ ಎಚ್ಚರಿಕೆಯ ಗಂಟೆಯಾಗಿದೆ. ದೇಶ ದುರ್ಬಲವಾಗಿ ವಿದೇಶೀ ಮೂಲದ ದಾಳಿಕೋರರು ಆಕ್ರಮಣ ಮಾಡಿದರೆ, ರಾಜಕೀಯ ಪಾರಮ್ಯ ಮಾತ್ರವಲ್ಲ, ಹಿಂದೂಸ್ತಾನದ ಹೃದಯ ಮತ್ತು ಆತ್ಮವಾಗಿರುವ ಸಾಂಸ್ಕೃತಿಕ ಬೇರುಗಳಿಗೇ ಸಂಚಕಾರ ಎಂಬ ಸಂದೇಶ ಸಾರುತ್ತದೆ. ಸೋಮನಾಥ ಮಂದಿರದ ಮರುನಿರ್ಮಾಣ ಸ್ವತಂತ್ರ ಭಾರತ ಸರಕಾರದ ದಿಟ್ಟ ಮತ್ತು ತ್ವರಿತ ಮಹತ್ಕಾರ್ಯಗಳಲ್ಲಿ ಪ್ರಮುಖವಾದದ್ದು. ಈ ನಿಟ್ಟಿನಲ್ಲಿ ಮಹಾತ್ಮ ಗಾಂಧಿ ಮತ್ತು ರಾಜೇಂದ್ರ ಪ್ರಸಾದ್ ಅವರ ಆಶೀರ್ವಾದದಡಿ ಸರ್ದಾರ್ ವಲ್ಲಭಭಾಯಿ ಪಟೇಲ್ ಹಾಗೂ ಕೆ.ಎಂ. ಮುನ್ಶಿ ನಿರ್ವಹಿಸಿದ ಕಾರ್ಯ ಶ್ಲಾಘನೀಯ. ಈ ಎಲ್ಲ ಹಿನ್ನೆಲೆಯಲ್ಲಿ ಸೋಮನಾಥ ದೇವಾಲಯವು, ದೇಶದ ಸಾವಿರಾರು ದೇವಾಲಯಗಳ ನಡುವೆ ಅನನ್ಯವಾಗಿ ನಿಲ್ಲುತ್ತದೆ.
* * *
ಅಯೋಧ್ಯೆಯಲ್ಲಿ ಸೋಮನಾಥದ ಪ್ರತಿಧ್ವನಿ
ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಬೇಕೆಂಬ ಕೂಗು ೧೯೮೦ರ ದಶಕದಲ್ಲಿ ದೇಶಾದ್ಯಂತ ಮಾರ್ದನಿಸಿತ್ತಲ್ಲ, ಅದರ ಮೂಲ ಸೆಲೆ ಇರುವುದು ಸೋಮನಾಥ ಮಂದಿರದಲ್ಲಿ. ರಾಮಮಂದಿರ ಆಂದೋಲನದ ಹೊಣೆಯನ್ನು ನಮ್ಮ ಪಕ್ಷ ಹೊತ್ತುಕೊಂಡಾಗ, ನನ್ನ ಮನದಲ್ಲಿ ಗುನುಗುನಿಸುತ್ತಿದ್ದುದು ಸೋಮನಾಥ ಮಂದಿರ ಮರುನಿರ್ಮಾಣ ಚಳವಳಿ ಸಂದರ್ಭದಲ್ಲಿ ಮಹಾತ್ಮ ಗಾಂಧಿ, ರಾಜೇಂದ್ರ ಪ್ರಸಾದ್, ಸರ್ದಾರ್ ವಲ್ಲಭಭಾಯಿ ಪಟೇಲ್, ಕೆ.ಎಂ. ಮುನ್ಶಿ ಅವರಾಡಿದ ಮಾರ್ಮಿಕ ಮಾತುಗಳು ಹಾಗೂ ಆ ದಿಶೆಯಲ್ಲಿ ಅವರು ಮಾಡಿದ ದಿಟ್ಟ ಕಾರ್ಯಗಳು. ನನ್ನ ಪ್ರಕಾರ, ಸೋಮನಾಥ ಮಂದಿರದ ಮರುಸ್ಥಾಪನೆ ಸ್ಫೂರ್ತಿಯ ಮುಂದುವರಿದ ಭಾಗವೇ ಅಯೋಧ್ಯೆ ಚಳವಳಿ.
೧೯೯೦ರಲ್ಲಿ ನಾನು ಬಿಜೆಪಿ ಅಧ್ಯಕ್ಷನಾಗಿದ್ದಾಗ, ನಮ್ಮ ಪಕ್ಷ ದೇಶವಾಸಿಗಳಲ್ಲಿ ಆಯೋಧ್ಯೆಯ ಕುರಿತು ಜಾಗೃತಿ ಮೂಡಿಸಲು ಐತಿಹಾಸಿಕ ರಾಮರಥಯಾತ್ರೆ ಆಯೋಜಿಸಿತ್ತು. ಅದರ ನೇತೃತ್ವ ವಹಿಸಿದ್ದ ನಾನು ಸೋಮನಾಥದಿಂದಲೇ ಯಾತ್ರೆ ಆರಂಭಿಸಿದ್ದು ಸಹಜವೇ ಆಗಿತ್ತು. ಏಕೆಂದರೆ, ಸೋಮನಾಥ ಆಂದೋಲನ ನನ್ನ ಮನಸ್ಸಿನಲ್ಲಿ ಅಷ್ಟೊಂದು ಆಳವಾಗಿ ಬೇರೂರಿತ್ತು. ೧೯೫೦ರ ದಶಕದಲ್ಲಿ ಸೋಮನಾಥ ಆಂದೋಲನ ದೇಶದ ರಾಜಕೀಯ ಮತ್ತು ಬುದ್ದಿಜೀವಿ ವಲಯದ ಧ್ರುವೀಕರಣಕ್ಕೆ ನಾಂದಿ ಹಾಡಿತ್ತು.
ಸೋಮನಾಥ ಆಂದೋಲನ ಸಂದರ್ಭದಲ್ಲಿ ಕೆ.ಎಂ. ಮುನ್ಶಿ ಅವರು ಹೇಳಿದ ಎರಡು ಮಾತುಗಳು ಅಯೋಧ್ಯೆ ಸಂದರ್ಭದಲ್ಲಿ ಪ್ರಸ್ತುತವಾಗಿತ್ತು. ಅವರು ಹೇಳಿದಂತೆ, ಜಾತ್ಯತೀತ ಪದ ಹಿಂದೂಗಳಿಗೆ ಮತ್ತೊಮ್ಮೆ ಅಪಥ್ಯವಾಗಿತ್ತು. ಎರಡನೆಯದಾಗಿ, ಅಲ್ಪಸಂಖ್ಯಾತರನ್ನು ಓಲೈಸುತ್ತ ಹೋದರೆ ಬಹುಸಂಖ್ಯಾತರ ಆಕ್ರೋಶ ಸ್ಫೋಟಗೊಳ್ಳುವುದನ್ನು ತಡೆಯಲಾಗದು – ಎಂದಿದ್ದುದು ಸತ್ಯವಾಗಿತ್ತು. ಅಯೋಧ್ಯೆಯಲ್ಲಿ ೧೯೯೨ರ ಡಿಸೆಂಬರ್ ೬ರಂದು ಅಸಂಖ್ಯ ಕರಸೇವಕರಿಂದ ವಿವಾದಿತ ಕಟ್ಟಡ ನೆಲಕಚ್ಚಿತು… ಜನರ ‘ಅಸಮಾಧಾನದ ಸ್ಫೋಟ’ ಬಾಬರಿ ಕಟ್ಟಡವನ್ನು ಧ್ವಂಸಗೊಳಿಸಿದ್ದಷ್ಟೇ ಅಲ್ಲ, ಆ ಸ್ಥಳದಲ್ಲಿ ತಾತ್ಕಾಲಿಕ ಮಂದಿರವನ್ನೂ ನಿರ್ಮಿಸಿ ರಾಮಲಲಾ ವಿಗ್ರಹವನ್ನೂ ಪ್ರತಿಷ್ಠಾಪಿಸಿತು.
{‘ನನ್ನ ದೇಶ ನನ್ನ ಜೀವನ’ ಪುಸ್ತಕದಿಂದ ಆಯ್ದ ಭಾಗ.
ಪ್ರಕಾಶಕರು: ಸ್ವಪ್ನ ಬುಕ್ ಹೌಸ್, ಬೆಂಗಳೂರು. ಪ್ರಕಟಣೆ: ೨೦೦೮}
ಬಾಬರ್ ದುರಾಕ್ರಮಣ
೧೫೨೭ರಲ್ಲಿ ರಾಣಾ ಸಂಗ್ರಾಮಸಿಂಹನನ್ನು ಸೋಲಿಸಿದ ಬಳಿಕ ಬಾಬರನಿಗೆ ಬಲವಾದ ಎದುರಾಳಿ ಉತ್ತರ ಭಾರತದಲ್ಲಿ ಇಲ್ಲವಾಯಿತು. ದೇವಾಲಯ ಧ್ವಂಸ, ಐಶ್ವರ್ಯದ ಲೂಟಿಗಳು ತಡೆಯಿಲ್ಲದಂತೆ ನಡೆದವು. ಆತನ ಸೇನಾಪತಿ ಮೀರ್ಬಾಕಿ ಅಯೋಧ್ಯೆಯತ್ತ ನುಗ್ಗಿ ಬಂದ. ತನ್ನ ಮತೀಯ ಉನ್ಮಾದದಿಂದ ಹಿಂದುಗಳ ತೀವ್ರ ಪ್ರತಿರೋಧ ಹೋರಾಟದ ನಡುವೆಯೂ ಶ್ರಿರಾಮಜನ್ಮಭೂಮಿಯಲ್ಲಿದ್ದ ದೇವಾಲಯವನ್ನು ಧ್ವಂಸಗೊಳಿಸಿ ಮಸೀದಿಯನ್ನು ನಿರ್ಮಿಸಿದ. ಅದಕ್ಕೆ ತನ್ನ ಒಡೆಯ ಬಾಬರನ ಹೆಸರಿಟ್ಟ ಎಂದು ಹೇಳಲಾಗುತ್ತಿದ್ದರೂ, ೧೯೪೦ರವರೆಗೂ ಅದನ್ನು ಜನ್ಮಸ್ಥಾನ್ ಮಸ್ಜಿದ್ ಎಂದೇ ಕರೆಯಲಾಗುತ್ತಿದ್ದುದು. ಅನಂತರ ಅಯೋಧ್ಯೆಯೆಂಬ ಸಂಸ್ಥಾನದ ಹೆಸರು ಅವಧ್ ಎಂದೂ, ಅನಂತರ ಔಧ್ ಎಂದೂ ಕರೆಯಲ್ಪಡುತ್ತಿತ್ತು. ಆಡಳಿತಾತ್ಮಕವಾಗಿ ಅಯೋಧ್ಯೆ ಊರು ಫೈಜಾಬಾದ್ ಜಿಲ್ಲೆಗೆ ಸೇರಿತು. ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸಂಕಲ್ಪದಿAದ ಇದೀಗ ಇಡೀ ಜಿಲ್ಲೆಗೆ ಅಯೋಧ್ಯಾ ಎಂದು ಮರುನಾಮಕರಣ ಮಾಡಲಾಗಿದೆ.
ಅಯೋಧ್ಯೆಯಲ್ಲಿ ನಿಲ್ಲದ ಸಂಘರ್ಷ
ದೇಗುಲಗಳ ಪಟ್ಟಣವಾಗಿದ್ದ ಅಯೋಧ್ಯೆಯಲ್ಲಿನ ಅನೇಕ ದೇವಾಲಯಗಳು ಮುಸಲ್ಮಾನರ ಆಳ್ವಿಕೆಯಲ್ಲಿ ನಾಶಗೊಂಡವು. ಕೆಲವು ದೇವಾಲಯಗಳನ್ನು ಹಿಂದುಗಳೂ ಮರೆತರು. ಆದರೂ ಜನ್ಮಸ್ಥಾನದ ದೇಗುಲದ ನೆನಪನ್ನು ಮಾತ್ರ ಹಿಂದೂ ಸಮಾಜ ಎಂದೆಂದಿಗೂ ಮರೆಯದೇ ಉಳಿಸಿಕೊಂಡು ಬಂದಿದೆ, ಮಾತ್ರವಲ್ಲ ಅದನ್ನು ಹಿಂಪಡೆಯಲು ನಿರಂತರ ಸಂಘರ್ಷಗಳನ್ನು ಮಾಡುತ್ತಲೇ ಇತ್ತು.
ಇತಿಹಾಸಕಾರರ ಪ್ರಕಾರ, ಅಯೋಧ್ಯೆಯಲ್ಲಿ ವಿವಾದಿತ ಕಟ್ಟಡ ಮೇಲೆದ್ದ ದಿನದಿಂದ ಇಲ್ಲಿಯವರೆಗೂ ಶ್ರೀರಾಮಜನ್ಮಸ್ಥಾನವನ್ನು ಮರಳಿ ಪಡೆಯಲು ಸರಿಸುಮಾರು ೮೦ ಯುದ್ಧಗಳಾಗಿವೆ. ೩ ಲಕ್ಷಕ್ಕೂ ಹೆಚ್ಚು ಹಿಂದುಗಳ ಬಲಿದಾನವಾಗಿದೆ. ಅನೇಕ ಬಾರಿ ಆ ಪ್ರದೇಶ ಹಿಂದುಗಳ ವಶಕ್ಕೂ ಬಂದಿದೆ. ಅಲ್ಲಿನ ನವಾಬನಿಗೆ ಬೇರೆ ಭೂಮಿ ಅಥವಾ ಹಣ ಕೊಟ್ಟು ಆ ಪ್ರದೇಶವನ್ನು ತೆಗೆದುಕೊಳ್ಳುವ ಪ್ರಯತ್ನವೂ ನಡೆದಿದೆ. ಒಟ್ಟಿನಲ್ಲಿ ಹಿಂದೂಗಳ ಜನಮನದಿಂದ ಶ್ರೀರಾಮದೇಗುಲದ ಸಂಗತಿ ಎಂದೂ ದೂರವಾಗಲಿಲ್ಲ.
ಅಯೋಧ್ಯೆಯಲ್ಲಿ ಗೋಹತ್ಯೆ
೧೮೫೭ರ ಸಮಯದಲ್ಲಿ ಮುಸಲ್ಮಾನರಲ್ಲಿ ಮೂಡಿದ್ದ ಸೌಹಾರ್ದದ ಭಾವನೆಯನ್ನು ನಾಶಗೊಳಿಸುವುದರಲ್ಲಿ ಮೂಲಭೂತವಾದಿ ಮೌಲ್ವಿಗಳು ಯಶಸ್ವಿಯಾದರು. ಬ್ರಿಟಿಷ್ ಅಧಿಕಾರಿಗಳ ಕುಮ್ಮಕ್ಕೂ ಇತ್ತು. ಇದರಿಂದಾಗಿ ಆಗಾಗ ಅಯೋಧ್ಯೆಯಲ್ಲಿ ಸಂಘರ್ಷ, ದೊಂಬಿ, ಚಿಕ್ಕಪುಟ್ಟ ಹೋರಾಟಗಳು ನಡೆಯುತ್ತಲೇ ಇದ್ದವು. ೧೯೩೪ರಲ್ಲಿ ಅಯೋಧ್ಯೆಯ ಮುಸಲ್ಮಾನರು ಹಿಂದುಗಳನ್ನು ಕೆಣಕಲೆಂದೇ ಸಾರ್ವಜನಿಕವಾಗಿ ಗೋವನ್ನು ಕಡಿದರು. ಹಿಂದೂಸಮಾಜ ಇದರಿಂದ ಸಿಡಿದೆದ್ದಿತು. ಗೋಹಂತಕರು ಕೊಲೆಯಾದರು. ಉಗ್ರಾವತಾರ ತಾಳಿದ ಹಿಂದು ಯುವಕರು ವಿವಾದಿತ ಪ್ರದೇಶಕ್ಕೆ ನುಗ್ಗಿ ಮೂರೂ ಗುಂಬಜ್ಗಳ ಮೇಲೇರಿ ಬಹಳ ಹಾನಿಯನ್ನುಂಟು ಮಾಡಿದರು. ಬ್ರಿಟಿಷರು ಭಾರಿ ಬಲಪ್ರಯೋಗದಿಂದ ಹಿಂದುಗಳನ್ನು ಚದುರಿಸಿದರು. ಈ ಹೋರಾಟದ ನಂತರ ಮುಸಲ್ಮಾನರು ಈ ಕಟ್ಟಡಕ್ಕೆ ಕಾಲಿಡಲೇ ಇಲ್ಲ.
ಈ ವಿವಾದ ಜೀವಂತವಾಗಿರಲೆಂದು ಬಯಸಿದ ಫೈಜಾಬಾದಿನ ಕಲೆಕ್ಟರ್ ನಿಕಲ್ಸನ್ ಹಿಂದೂಗಳಿಂದ ಪುಂಡುಗಂದಾಯ ಸಂಗ್ರಹಿಸಿ ಗುಂಬಜ್ಗಳಿಗೆ ಆಗಿದ್ದ ಹಾನಿಯನ್ನು ಸರಿಪಡಿಸಿದ. ಹೀಗಾಗಿ ಒಂದು ರೀತಿಯಲ್ಲಿ ಇದು ಬ್ರಿಟಿಷರು ಮರುನಿರ್ಮಿಸಿದ ಕಟ್ಟಡ. ಆದರೂ ಇಡೀ ಪ್ರದೇಶವು ಹಿಂದುಗಳ ಪ್ರವೇಶಕ್ಕೆ ಲಭ್ಯವಿತ್ತು, ಹಾಗೂ ವಿವಾದಿತ ಕಟ್ಟಡದ ಹೊರಗೆ ರಾಮಚಬೂತರದಲ್ಲಿ ಅಡೆತಡೆಯಿಲ್ಲದೆ ವಿಗ್ರಹಗಳ ಪೂಜೆ ಪುನಸ್ಕಾರಗಳು ಸಾಗಿದ್ದವು.