ಹೈಕೋರ್ಟ್ ಪೀಠದ ಮೂವರು ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪುಗಳನ್ನು ನೀಡಿದರು. ಹಿಂದುಗಳು, ನಿರ್ಮೋಹಿ ಅಖಾಡಾ ಮತ್ತು ಮುಸ್ಲಿಮರು – ಹೀಗೆ ಎಲ್ಲ ಮೂರು ಪಾರ್ಟಿಗಳಿಗೆ ಸಮಾನವಾಗಿ ಜಾಗದ ೧/೩ ಭಾಗವನ್ನು ನೀಡಬಹುದೆಂದು ಎಸ್.ಯು. ಖಾನ್ ಮತ್ತು ಅಗರ್ವಾಲ್ ಇಬ್ಬರೂ ಹೇಳಿದರು. ನ್ಯಾ. ಖಾನ್ ಅವರು, “ತಲಾ ೧/೩ ಭಾಗ ನೀಡಿದಾಗ ಸಂಬಂಧಪಟ್ಟವರು ಅದರಂತೆ ಪೂಜೆಗೆ ಬಳಸಬಹುದು. ವಿಗ್ರಹ ಇಟ್ಟಿರುವ ಮಧ್ಯದ ಗುಮ್ಮಟದ ಕೆಳಗಿನ ಜಾಗವನ್ನು ಹಿಂದುಗಳಿಗೆ ಕೊಡಬಹುದು. ನಿರ್ಮೋಹಿ ಅಖಾಡಾಕ್ಕೆ ರಾಮ್ಚಬೂತ್ರ ಮತ್ತು ಸೀತಾರಸೋಯಿ ಇದ್ದ ಜಾಗವನ್ನು ಕೊಡಬಹುದು. ಜಾಗ ಹಂಚಿಕೆಯ ವೇಳೆ ಕೊಡು-ಕೊಳ್ಳು (ಸಣ್ಣ ಹೊಂದಾಣಿಕೆ) ಮಾಡಬಹುದು. ಒಂದು ಪಾರ್ಟಿಗೆ ನಷ್ಟವಾಗುವುದಾದರೆ ತಾಗಿಕೊಂಡಿರುವ, ಕೇಂದ್ರಸರ್ಕಾರ ಸ್ವಾಧೀನಪಡಿಸಿದ ಜಾಗದಲ್ಲಿ ಕೊಡಬಹುದು” ಎಂದು ಸೂಚಿಸಿದರು.
ಶತಮಾನಗಳ ಕಾಲ ಒಂದು ವಿವಾದವಾಗಿ ನಡೆದುಕೊಂಡು ಬಂದ ಅಯೋಧ್ಯೆ ರಾಮಜನ್ಮಭೂಮಿಯ ಸಮಸ್ಯೆಗೆ ಕೊನೆಗೂ ಪರಿಹಾರ ಲಭಿಸಿದೆ. ಇದು ಹಿಂದುಗಳ ಒಂದು ಅಪೂರ್ವ ಶ್ರದ್ಧಾಕೇಂದ್ರ ಎಂಬುದಕ್ಕಾಗಿಯೆ ಅದನ್ನು ಈ ಸಮುದಾಯ ತನ್ನ ಸ್ವಾಮ್ಯದಲ್ಲಿ ಇಟ್ಟುಕೊಳ್ಳುವುದಕ್ಕೆ ಸುಮಾರು ಐದು ಶತಮಾನಗಳ ಕಾಲ ಹೋರಾಟ ನಡೆಸುತ್ತ ಬಂದಿದೆ. ಈ ಹೋರಾಟದ ಭಾಗವಾಗಿ ಅದೆಷ್ಟೋ ಸರ್ಕಾರೀ ಆದೇಶಗಳು ಬಂದಿವೆ; ಅದಕ್ಕಿಂತ ಮುಖ್ಯವಾಗಿ ವಿವಿಧ ಹಂತಗಳ ನ್ಯಾಯಾಲಯಗಳು ವಿವಾದವನ್ನು ಪರಿಹರಿಸಲು ಶ್ರಮಿಸುತ್ತ ಬಂದಿವೆ. ಆದರೂ ಈ ವಿವಾದ-ಸಮಸ್ಯೆಗಳು ಪರಿಹಾರ ಕಂಡಿರಲೇ ಇಲ್ಲ. ಅಲಹಾಬಾದ್ ಹೈಕೋರ್ಟ್ ೨೦೧೦ರಲ್ಲಿ ನೀಡಿದ ತೀರ್ಪು ಕೂಡ ಅದೇ ಸಾಲಿಗೆ ಸೇರುವಂತಾಯಿತು. ಅಂತಿಮವಾಗಿ ಸರ್ವೋಚ್ಚ ನ್ಯಾಯಾಲಯದ ಐವರು ಸದಸ್ಯರ ಪೀಠ ೨೦೧೯ರಲ್ಲಿ ಸರ್ವಸಮ್ಮತವೆನಿಸುವ ತೀರ್ಪನ್ನು ನೀಡಿತು. ಶ್ರೀರಾಮನ ಜನ್ಮಸ್ಥಳದಲ್ಲಿ ಭವ್ಯಮಂದಿರವನ್ನು ನಿರ್ಮಿಸಬೇಕೆನ್ನುವ ಹಿಂದೂ ಶ್ರದ್ಧಾಳುಗಳ ಕನಸು ಕೂಡ ಸಾಕಾರವಾಗುವ ಹಂತದಲ್ಲಿ ರಾಷ್ಟ್ರವೀಗ ಬಂದು ನಿಂತಿದೆ. ಜಿಗುಟಾದ ಈ ಸಮಸ್ಯೆಯನ್ನು ಪರಿಹರಿಸಲು ಸರ್ವೋಚ್ಚ ನ್ಯಾಯಾಲಯಕ್ಕೆ ಹೇಗೆ ಸಾಧ್ಯವಾಯಿತು ಎಂಬುದು ಈ ಶತಮಾನದ ಒಂದು ಮಹತ್ತ್ವದ ಘಟನೆ ಎನ್ನಲಡ್ಡಿಯಿಲ್ಲ. ಇದೊಂದು ವಿದ್ವತ್ಪೂರ್ಣವೂ ವಿವೇಕಯುತವೂ ಆದ ಸಾಧನೆ ಎಂಬುದನ್ನು ಸಾವಿರಕ್ಕೂ ಮಿಕ್ಕಿ ಇರುವ ತೀರ್ಪಿನ ಪುಟಗಳು ಸಾರಿಹೇಳುತ್ತವೆ. ಜನ್ಮಭೂಮಿ-ಬಾಬ್ರಿ ಕಟ್ಟಡದ ಬಗೆಗಿದ್ದ ಎಲ್ಲ ದಾವೆಗಳನ್ನು ತನ್ನ ಬಳಿಗೆ ತರಿಸಿಕೊಂಡ ಸರ್ವೋಚ್ಚ ನ್ಯಾಯಾಲಯ, ಸಂಬಂಧಿತ ಎಲ್ಲ ಅಂಶಗಳನ್ನು ಪರಿಶೀಲಿಸಿ ಈ ತೀರ್ಪನ್ನು ನೀಡಿದೆ.
ಸರಯೂ ತೀರದಲ್ಲಿ
ಇದು ಸರಯೂ ನದಿ ದಡದ ಅಯೋಧ್ಯೆ ಪಟ್ಟಣದ ದಕ್ಷಿಣಭಾಗದ ೧,೫೦೦ ಚದರಗಜ ಜಾಗಕ್ಕೆ ಸಂಬAಧಿಸಿ ಹಿಂದುಗಳು ಮತ್ತು ಮುಸ್ಲಿಮರ ನಡುವಣ ತಕರಾರು. ಹಿಂದುಗಳಿಗೆ ಅದು ವಿಷ್ಣುವಿನ ಅವತಾರವಾದ ರಾಮ ಹುಟ್ಟಿದ ಜಾಗವಾದರೆ, ಮುಸ್ಲಿಮರಿಗೆ ಮೊದಲ ಮೊಘಲ್ ಚಕ್ರವರ್ತಿ ಬಾಬರ್ ತನ್ನ ವಿಜಯದ ಸಂಕೇತವಾಗಿ ಕಟ್ಟಿಸಿದ ಮಸೀದಿ ಇರುವ ಸ್ಥಳ. ಪ್ರಸ್ತುತ ಬಾಬ್ರಿ ಮಸೀದಿಯನ್ನು ೧೫೨೮ರಲ್ಲಿ ನಿರ್ಮಿಸಲಾಯಿತು. ಮೊಘಲರ ಕಾಲ, ಬ್ರಿಟಿಷರ ಕಾಲಗಳನ್ನು ದಾಟಿ ಸ್ವಾತಂತ್ರ್ಯಾನಂತರ ಕೂಡ ಈ ವಿವಾದ ಮುಂದುವರಿದಿತ್ತು. ಅಂದಿನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ರಂಜನ್ ಗೊಗೈ, ಮತ್ತು ನ್ಯಾಯಮೂರ್ತಿಗಳಾದ ಎಸ್.ಎ. ಬೊಬ್ಡೆ, ಡಾ. ಡಿ.ವೈ. ಚಂದ್ರಚೂಡ್ (ಈಗಿನ ಮುಖ್ಯ ನ್ಯಾಯಮೂರ್ತಿಗಳು), ಅಶೋಕ್ಭೂಷಣ್ ಹಾಗೂ ಎಸ್. ಅಬ್ದುಲ್ ನಜೀರ್ ೪೧ ದಿನಗಳ ಕಾಲ ಈ ದಾವೆಯ ವಿಚಾರಣೆ ನಡೆಸಿದರು.
ವಿವಾದಿತ ಭೂಮಿಯು ಕೋಟ್ ರಾಮಚಂದ್ರ ಗ್ರಾಮದಲ್ಲಿದೆ; ಅದು ಅಯೋಧ್ಯೆಯ ರಾಮಕೋಟೆ. ೧೯೯೨ರ ಡಿಸೆಂಬರ್ ೬ರವರೆಗೆ ಅಲ್ಲೊಂದು ಹಳೆಯ ಮಸೀದಿ ಕಟ್ಟಡ ಇತ್ತು. ಅದಕ್ಕೆ ಮೂರು ಗುಮ್ಮಟಗಳು. ಅದೇ ಜಾಗದಲ್ಲಿ ಶ್ರೀರಾಮ ಜನಿಸಿದ; ಮತ್ತು ಅಲ್ಲಿ ರಾಮನ ಹಳೆಯ ದೇವಸ್ಥಾನ ಇತ್ತು. ಬಾಬರ್ ಅದನ್ನು ಕೆಡವಿದ ಎಂದು ಹಿಂದುಗಳು ತಿಳಿಯುತ್ತಾರೆ. ಖಾಲಿ ಜಾಗದಲ್ಲಿ ಮಸೀದಿಯನ್ನು ಕಟ್ಟಿಸಲಾಯಿತೆಂಬುದು ಮುಸ್ಲಿಮರ ವಾದವಾಗಿತ್ತು. ಆದರೆ ಹಿಂದುಗಳಿಗೆ ಅದು ಪವಿತ್ರಸ್ಥಳ ಎಂಬುದನ್ನು ಮುಸ್ಲಿಮರು ನಿರಾಕರಿಸುವುದಿಲ್ಲ.
೧೯೫೦ರಿಂದ ೧೯೮೯ರವರೆಗಿನ ಅವಧಿಯನ್ನು ರಾಮಜನ್ಮಭೂಮಿ ಸಂಬಂಧವಾಗಿ ಐದು ದಾವೆಗಳು ದಾಖಲಾದವು; ಮೊದಲಿಗೆ ೧೯೫೦ರ ಜನವರಿಯಲ್ಲಿ ಅಯೋಧ್ಯೆ ನಿವಾಸಿ ಗೋಪಾಲಸಿಂಗ್ ವಿಶಾರದ್ ಎಂಬವರು ಫೈಜಾಬಾದ್ ಸಿವಿಲ್ ನ್ಯಾಯಾಧೀಶರ ಮುಂದೆ ದಾವೆ ಹೂಡಿ, ಆಗ ಮಸೀದಿಯ ಮಧ್ಯಭಾಗದಲ್ಲಿದ್ದ ರಾಮಲಲಾ ವಿಗ್ರಹದ ಸಮೀಪ ತನಗೆ ಪೂಜೆ ಮಾಡಲು ಅವಕಾಶ ನೀಡಬೇಕೆಂದು ಪ್ರಾರ್ಥಿಸಿದ್ದರು. ಪರಮಹಂಸ ರಾಮಚಂದ್ರದಾಸ್ ಎಂಬವರು ಹೂಡಿದ ಎರಡನೇ ದಾವೆಯಲ್ಲಿ ಕೂಡ ತನಗೆ ಪೂಜಿಸುವ ಅವಕಾಶ ನೀಡಬೇಕೆಂದು ಫೈಜಾಬಾದ್ ಸಿವಿಲ್ ನ್ಯಾಯಾಲಯದಲ್ಲಿ ಪ್ರಾರ್ಥಿಸಲಾಗಿತ್ತು.
ಹಿಂದುಗಳ ಒಂದು ಪಂಥವಾದ ರಾಮಬಂದಿ ಬೈರಾಗಿಗಳ ನಿರ್ಮೋಹಿ ಅಖಾಡಾದವರು ೧೯೫೯ರಲ್ಲಿ ಜನ್ಮಭೂಮಿ ಆಡಳಿತದ ಪೂರ್ತಿ ಅಧಿಕಾರವನ್ನು ತಮಗೆ ನೀಡಬೇಕೆಂದು ಅದೇ ಫೈಜಾಬಾದ್ ನ್ಯಾಯಾಲಯದಲ್ಲಿ ಕೇಳಿದ್ದರು. ವಿವಾದಿತ ಸ್ಥಳದಲ್ಲಿದ್ದ ಎಲ್ಲ ಕಟ್ಟಡಗಳು ಹಿಂದೆ ತಮ್ಮ ಆಡಳಿತಕ್ಕೆ ಸೇರಿದ್ದವು ಎಂದವರು ವಾದಿಸಿದ್ದರು.
ಮುಂದೆ ಡಿಸೆಂಬರ್ ೧೮, ೧೯೬೧ರಂದು ಉತ್ತರಪ್ರದೇಶ ಸುನ್ನಿ ಸೆಂಟ್ರಲ್ ವಕ್ಫ್ ಬೋರ್ಡ್ ಅದೇ ಫೈಜಾಬಾದ್ ನ್ಯಾಯಾಲಯದಲ್ಲಿ ಹೂಡಿದ ದಾವೆಯಲ್ಲಿ ಇಡೀ ಜಾಗವನ್ನು ಸಾರ್ವಜನಿಕ ಮಸೀದಿ ಎಂದು ಘೋಷಿಸಬೇಕೆಂದು ಪ್ರಾರ್ಥಿಸಿದರು. ಅವರ ಪ್ರಕಾರ ಅಯೋಧ್ಯೆಯ ಹಳೆಯ ಕಟ್ಟಡ ಮಸೀದಿಯಾಗಿದ್ದು, ಬಾಬರನ ಆದೇಶದ ಮೇರೆಗೆ ಅವನ ದಂಡನಾಯಕ ಮೀರ್ ಬಾಕಿ ಅದನ್ನು ಕಟ್ಟಿಸಿದ. ಅಲ್ಲಿದ್ದ ದೇವಳವನ್ನು ಕೆಡವಿ ಮಸೀದಿಯನ್ನು ಕಟ್ಟಿಸಲಾಯಿತು ಎಂಬುದನ್ನು ನಿರಾಕರಿಸಿದ ಅವರು, ಹಿಂದುಗಳು ಅಲ್ಲಿ ದೇವರ ಮೂರ್ತಿಗಳನ್ನಿಟ್ಟು ಅಪವಿತ್ರಗೊಳಿಸುವವರೆಗೆ (೨೩ ಡಿಸೆಂಬರ್ ೧೯೪೯) ನಿರಂತರವಾಗಿ ಅಲ್ಲಿ ನಮಾಜ್ ನಡೆಯುತ್ತಿತ್ತು ಎಂದು ವಾದಿಸಿದರು.
ರಾಮನ ಹೆಸರಿನಲ್ಲಿ ದಾವೆ
ಮುಂದೆ ಸ್ವತಃ ಶ್ರೀರಾಮನೇ ಕೋರ್ಟ್ ಮೆಟ್ಟಿಲೇರಿದ ಸಂದರ್ಭ ನಡೆಯಿತು! ಜುಲೈ ೧, ೧೯೮೯ರಂದು ಫೈಜಾಬಾದ್ ನ್ಯಾಯಾಲಯದಲ್ಲಿ ಹೂಡಿದ ಆ ದಾವೆಯಲ್ಲಿ ಆಸ್ಥಾನ ಶ್ರೀರಾಮಜನ್ಮಭೂಮಿಯ ಭಗವಾನ್ ಶ್ರೀರಾಮ ವಿರಾಜಮಾನನೇ ಕಕ್ಷಿಗಾರ. ಓರ್ವ ಆಪ್ತ ಸ್ನೇಹಿತರ ಮೂಲಕ ದಾವೆ ಹೂಡಿದಂತೆ ತೋರಿಸಲಾಗಿತ್ತು. ಆರಾಧನೆಗೆ ಸಂಬಂಧಿಸಿ ರಾಮ ಹುಟ್ಟಿದ ಸ್ಥಳವನ್ನು ಪವಿತ್ರ ಎನ್ನಬಹುದು. ಆದ್ದರಿಂದ ಅದರ ಪಟ್ಟಾ ನೀಡಬೇಕೆಂಬುದು ಈ ದಾವೆ.
ಅಲಹಾಬಾದ್ ಹೈಕೋರ್ಟ್ ಇದನ್ನು ನಾಲ್ಕು ದಾವೆಗಳಾಗಿ ಪರಿಗಣಿಸಿ ತನ್ನಲ್ಲಿಗೆ ವರ್ಗ ಮಾಡಿಕೊಂಡು ವಿಚಾರಣೆ ನಡೆಸಿತು. ೨೦೧೦ರ ಸೆಪ್ಟೆಂಬರ್ ೩೦ರಂದು ನೀಡಿದ ತೀರ್ಪಿನಲ್ಲಿ ಹೈಕೋರ್ಟ್ ಮುಖ್ಯವಾಗಿ ಇದು ಜಮೀನಿಗೆ (ಜಾಗ) ಸಂಬಂಧಿಸಿದ ವ್ಯಾಜ್ಯ ಎಂದು ಪರಿಗಣಿಸಿತು. ಮೂವರು ಸದಸ್ಯರ ಪೀಠದಲ್ಲಿ ನ್ಯಾಯಮೂರ್ತಿಗಳಾದ ಎಸ್.ಯು. ಖಾನ್, ಸುಧೀರ್ ಅಗರ್ವಾಲ್ ಹಾಗೂ ಡಿ.ವಿ. ಶರ್ಮ ಅವರಿದ್ದರು; ೨:೧ರ ವಿಭಜಿತ ತೀರ್ಪು ಬಂತು. ವಿವಾದಿತ ಸ್ಥಳಕ್ಕೆ ಹಿಂದುಗಳು ಮತ್ತು ಮುಸ್ಲಿಮರು ಜಂಟಿ ಮಾಲೀಕರಾಗಿದ್ದು, ಅವರಿಗೆ ಜಮೀನಿನ ತಲಾ ೧/೩ ಭಾಗವನ್ನು ನೀಡಬೇಕು, ಉಳಿದುದನ್ನು ನಿರ್ಮೋಹಿ ಅಖಾಡಾಕ್ಕೆ ನೀಡಬೇಕೆಂದು ಡಿಕ್ರಿ ಹೊರಡಿಸಿದರು. ಮೇಲ್ಮನವಿ (ಅಪೀಲು) ಸಲ್ಲಿಸಿದ ಕಾರಣ ಅದು ರದ್ದಾಯಿತು.
ತೀರ್ಪಿನಲ್ಲಿ ಎಸ್.ಯು. ಖಾನ್ ಅವರು ವಿಭಿನ್ನ ನಿಲವು ತಳೆದರೂ ಕೂಡ “ಆ ಜಾಗ ಮಸೀದಿ ನಿರ್ಮಿಸಲು ಆದೇಶ ನೀಡಿದ ಬಾಬರ್ಗೆ ಸೇರಿತ್ತೆಂದು ಸಾಧಿಸಲು ಮುಸ್ಲಿಮರಿಗೆ ಸಾಧ್ಯವಾಗಿಲ್ಲ” ಎಂದಿದ್ದರು. ನ್ಯಾ. ಅಗರ್ವಾಲ್ ಅವರು, “ಮಸೀದಿ ಕಟ್ಟಿಸಿದ ಜಾಗದ ಮಾಲೀಕತ್ವಕ್ಕೆ ಕಕ್ಷಿಗಾರರು ದಾಖಲೆ ಒದಗಿಸಿಲ್ಲ” ಎಂದರು. ನ್ಯಾ. ಡಿ.ವಿ. ಶರ್ಮ ಅವರು, “ಆದ್ದರಿಂದ ತಜ್ಞರ ಅಭಿಪ್ರಾಯ, ದಾಖಲೆಗಳ ಸಾಕ್ಷö್ಯ, ಸಾಂದರ್ಭಿಕ ಸಾಕ್ಷ್ಯ ಮತ್ತು ಇತಿಹಾಸದ ವಿವರಗಳ ಆಧಾರದಲ್ಲಿ ಹೇಳಬಹುದಾದ್ದೆಂದರೆ ದೇವಾಲಯ ಉರುಳಿಸಿ ಆ ಜಾಗದಲ್ಲಿ ಮಸೀದಿಯನ್ನು ನಿರ್ಮಿಸಿದರು; ಬಾಬರ್ ಆದೇಶದಂತೆ ಮೀರ್ ಬಾಕಿ ಅದನ್ನು ಮಾಡಿದ್ದ” ಎಂದು ತೀರ್ಪಿನಲ್ಲಿ ಹೇಳಿದ್ದರು.
ಭಗವಾನ್ ಶ್ರೀರಾಮ ವಿರಾಜಮಾನ್ ದಾವೆಯಲ್ಲಿ (ಐದನೇ ದಾವೆ) “ಮಹಾರಾಜ ವಿಕ್ರಮಾದಿತ್ಯನ ಕಾಲದಲ್ಲಿ (೧೨ನೇ ಶತಮಾನ) ರಾಮಜನ್ಮಭೂಮಿಯಲ್ಲಿ ಒಂದು ಪ್ರಾಚೀನ ದೇವಾಲಯವಿತ್ತು. ಅದನ್ನು ಭಾಗಶಃ ನಾಶಮಾಡಿ ಮಸೀದಿಯನ್ನು ಕಟ್ಟಲಾಯಿತು. ಬೃಹತ್ ಕಂಬಗಳು ಸೇರಿದಂತೆ ದೇವಾಲಯದ ವಸ್ತುಗಳನ್ನು ಅದಕ್ಕೆ ಬಳಸಿಕೊಳ್ಳಲಾಯಿತು. ಅದಕ್ಕೆ ತೀವ್ರ ವಿರೋಧವಿತ್ತು. ಮಸೀದಿ ನಿರ್ಮಾಣವನ್ನು ತಡೆಯಲು ಹಿಂದುಗಳಿಂದ ಹಲವು ಯುದ್ಧಗಳು ನಡೆದಿವೆ. ಇಂದಿಗೂ ಆ ಮಸೀದಿಗೆ ಮಿನಾರ್ಗಳಿಲ್ಲ. ಪ್ರಾರ್ಥನೆ ಹೊತ್ತಿನ ವಜೂಗೆ ಬೇಕಾದ ನೀರು ಸಂಗ್ರಹದ ಸ್ಥಳವಿಲ್ಲ. ಆ ಯುದ್ಧಗಳಲ್ಲಿ ಹಲವರು ಸತ್ತಿದ್ದಾರೆ. ಅಂತಹ ಕೊನೆಯ ಯುದ್ಧ ೧೮೫೫ರಲ್ಲಿ ನಡೆಯಿತು. ಬಾಬರ್ ಕಟ್ಟಿಸಿದ ವಿವಾದಿತ ಕಟ್ಟಡ ಸಹಿತ ರಾಮಜನ್ಮಭೂಮಿಯು ಆಗ ಹಿಂದುಗಳ ನಿಯಂತ್ರಣ ಮತ್ತು ಸ್ವಾಮ್ಯದಲ್ಲಿತ್ತು” ಎನ್ನುವ ವಿವರಗಳಿವೆ – ಎಂದು ಸರ್ವೋಚ್ಚ ನ್ಯಾಯಾಲಯದ ತೀರ್ಪು ಉಲ್ಲೇಖಿಸಿದೆ.
ಬಾಬರ್ ಕಟ್ಟಿಸಿದ ಮಸೀದಿ
ಫೈಜಾಬಾದ್ ಜಿಲ್ಲಾ ಗೆಜೆಟಿಯರ್ನ ೧೯೨೮ರ ಆವೃತ್ತಿಯಲ್ಲಿ ಹೀಗಿದೆ: “೧೫೨೮ರಲ್ಲಿ ಬಾಬರ್ ಅಯೋಧ್ಯೆಗೆ ಬಂದು ಒಂದು ವಾರ ಇಲ್ಲಿದ್ದ. ಆ ಸ್ಥಳದಲ್ಲಿದ್ದ ಪ್ರಾಚೀನ ದೇವಾಲಯವನ್ನು ನಾಶಮಾಡಿ ಅಲ್ಲಿ ಮಸೀದಿಯನ್ನು ಕಟ್ಟಿಸಿದ. ಅದಕ್ಕೆ ದೇವಾಲಯದ ಸಾಮಗ್ರಿಗಳನ್ನು ಬಳಸಿಕೊಳ್ಳಲಾಯಿತು; ಕಸೌಟಿ ಕಲ್ಲಿನ ಕಂಬ ಇತ್ಯಾದಿ ಅದರಲ್ಲಿ ಸೇರಿವೆ. ವಕ್ಫ್ಬೋರ್ಡ್ ಪರ ದಾವೆಯಲ್ಲಿ ಹಲವು ಜನ ಮುಸ್ಲಿಮರು ಅಫಿಡೆವಿಟ್ ಸಲ್ಲಿಸಿದ್ದರು. ಆದರೆ ಅವರ ಪಾಟೀಸವಾಲು ನಡೆಯದ ಕಾರಣ ಅವರ ಹೇಳಿಕೆ ವಿಶ್ವಾಸಾರ್ಹವಲ್ಲ ಎಂದು ಹೈಕೋರ್ಟ್ ಹೇಳಿದೆ.
ಅಯೋಧ್ಯೆ ರಾಮಜನ್ಮಭೂಮಿಯು ನಿರಂತರ ಘರ್ಷಣೆಗಳ ತಾಣವಾಗಿತ್ತು. ೧೮೫೬-೫೭ರಲ್ಲಿ ಬಾಬ್ರಿ ಮಸೀದಿ ಜಾಗದಲ್ಲಿ ಹಿಂದೂ-ಮುಸ್ಲಿಂ ಗಲಭೆ ನಡೆದಿತ್ತು. ಆಗ ಕಾನೂನು ಸುವ್ಯವಸ್ಥೆಗಾಗಿ ಬ್ರಿಟಿಷ್ ಸರ್ಕಾರ ಅಲ್ಲೊಂದು ಬಫರ್ ವಲಯ (ಕಾಪುಸ್ಥಾನ) ಮಾಡಲು ಯತ್ನಿಸಿತು. ಅದಕ್ಕಾಗಿ ಇಟ್ಟಿಗೆ ಮತ್ತು ಗ್ರಿಲ್ಗಳಿಂದ ಆರೇಳು ಅಡಿ ಎತ್ತರದ ಗೋಡೆಯನ್ನು ಕಟ್ಟಿಸಿದರು. ಆ ಮೂಲಕ ಸ್ಥಳವನ್ನು ಎರಡಾಗಿ ಒಡೆದು, ಒಳಗಿನ ಮಸೀದಿಯ ಗುಮ್ಮಟಗಳಿದ್ದ ಜಾಗವನ್ನು ಮುಸ್ಲಿಮರು ಬಳಸಬೇಕು (ಒಳ-ಅಂಗಳ). ಹೊರಭಾಗದ ಅಂಗಳವನ್ನು ಹಿಂದುಗಳು ಬಳಸುವುದು ಎಂದಾಯಿತು. ಅದರಂತೆ ಹೊರ-ಅಂಗಳದಲ್ಲಿ ಹಿಂದುಗಳಿಗೆ ಪವಿತ್ರವಾದ ಹಲವು ನಿರ್ಮಾಣಗಳು, ಕಟ್ಟಡಗಳು ಬಂದವು. ಮುಖ್ಯವಾದದ್ದು ರಾಮಚಬೂತ್ರ ಎನ್ನುವ ವೇದಿಕೆ (ಪ್ಲಾಟ್ಫಾರ್ಮ್); ಇನ್ನು ಸೀತಾ ಕೀ ರಸೋಯಿ ಮತ್ತು ಭಂಡಾರ.
ರಾಮನವಮಿಯಂತಹ ವಿಶೇಷ ಸಂದರ್ಭಗಳಲ್ಲಿ ಜನರು ರಾಮಜನ್ಮಭೂಮಿಗೆ ದೊಡ್ಡಸಂಖ್ಯೆಯಲ್ಲಿ ಬರುತ್ತಿದ್ದ ಕಾರಣ ಜನದಟ್ಟಣೆಯಾಗಿ ಅಪಾಯವಾಗಬಾರದೆಂದು ವಸಾಹತು ಸರ್ಕಾರ ೧೮೭೭ರಲ್ಲಿ ಹೊರಗಿನ ಅಂಗಳದ ಉತ್ತರಭಾಗದಲ್ಲಿ ಇನ್ನೊಂದು ಬಾಗಿಲನ್ನು ತೆರೆಯಿತು (ಹಿಂದೆ ಪೂರ್ವದಲ್ಲೊಂದು ಬಾಗಿಲಿತ್ತು). ಅದರ ನಿಯಂತ್ರಣ ಮತ್ತು ಉಸ್ತುವಾರಿಯನ್ನು ಹಿಂದುಗಳಿಗೆ ನೀಡಿದರು. ಆದರೆ ಮೇಲಿನ ವಿಭಜನೆಯಿಂದ ಜಗಳ ಪರಿಹಾರವಾಗಲಿಲ್ಲ. ಮಧ್ಯದ ಗುಮ್ಮಟದ ಕೆಳಗಿನ ಜಾಗ ರಾಮ ಜನಿಸಿದ ಸ್ಥಳ ಎಂಬುದರಿಂದ ಆ ಕಡೆಗಿನ ಆಕರ್ಷಣೆ ಇದ್ದೇ ಇತ್ತು.
ದೇವಳ ಕಟ್ಟಲು ಅರ್ಜಿ
೧೮೮೫ರ ಜನವರಿಯಲ್ಲಿ ಮಹಾಂತ ರಘುವರದಾಸ್ ಎಂಬವರು ರಾಮಜನ್ಮಭೂಮಿಯ ಮಹಾಂತ ಎಂಬ ನೆಲೆಯಲ್ಲಿ ಫೈಜಾಬಾದ್ ಸಬ್-ಜಡ್ಜ್ರ ಮುಂದೆ ಒಂದು ಅರ್ಜಿ ಸಲ್ಲಿಸಿ ಹೊರ-ಅಂಗಳದ ಚಬೂತ್ರದಲ್ಲಿ ೧೭೨೧ ಅಡಿಯ ಪುಟ್ಟ ದೇವಸ್ಥಾನ ಕಟ್ಟಲು ಅನುಮತಿ ಕೊಡಿ ಎಂದು ಕೇಳಿದರು. ಆದರೆ ಆ ಅರ್ಜಿ ವಜಾಗೊಂಡಿತು. ಅಲ್ಲಿ ದೇವಸ್ಥಾನ ಕಟ್ಟಿದರೆ ಎರಡು ಸಮುದಾಯಗಳ ನಡುವೆ ಗಲಭೆಯಾದೀತು; ಏನಿದ್ದರೂ ಚಬೂತ್ರದ ಮೇಲಿನ ಹಿಂದುಗಳ ಸ್ವಾಮ್ಯವನ್ನು ಪ್ರಶ್ನಿಸುವ ಹಾಗಿಲ್ಲ – ಎಂದು ಜಡ್ಜ್ ಹೇಳಿದರು; ಆದರೆ ಮಹಾಂತರ ಮಾಲೀಕತ್ವವನ್ನು ಒಪ್ಪಿಕೊಳ್ಳಲಿಲ್ಲ; ಮೇಲ್ಮನವಿ ಕೂಡ ವಜಾ ಆಯಿತು. ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಹೊಸ ದೇವಸ್ಥಾನ ಬೇಡ ಎಂದರು. ಅದು ಚರಣ ಪಾದುಕೆ ಇಟ್ಟ ಸ್ಥಳವೆಂದು ಮಂದಿರ ಕಟ್ಟಲು ಅವಕಾಶ ಕೇಳಿದ್ದು, ಬಾಬ್ರಿ ಮಸೀದಿಯ ಮುತವಲ್ಲಿಯಿಂದಲೂ ಅದಕ್ಕೆ ವಿರೋಧ ಬಂದಿತ್ತು. ಯಥಾಸ್ಥಿತಿ ಕಾಪಾಡಲು ಹೇಳಿದ ನ್ಯಾಯಾಂಗ ಕಮಿಷನರ್ “ಹಿಂದುಗಳು ರಾಮನ ಜನ್ಮಸ್ಥಳ ಎಂದು ತಿಳಿಯುವ ಕಡೆ ಮಸೀದಿ ನಿರ್ಮಾಣವಾದದ್ದು ದುರದೃಷ್ಟಕರ; ಆದರೆ ಈಗ ಯಥಾಸ್ಥಿತಿಯನ್ನು (ಸ್ಟೇಟಸ್-ಕೋ) ಉಳಿಸಬೇಕಿದೆ” ಎಂದಿದ್ದರು.
ಹಿಂದುಗಳಿಗೆ ದಂಡ
೧೯೩೪ರ ಬಕ್ರೀದ್ ಹಬ್ಬದ ವೇಳೆ ಬಾಬ್ರಿ ಮಸೀದಿಯ ಬಳಿ ಕೋಮುಗಲಭೆ ಉಂಟಾಗಿ ಮಸೀದಿಯ ಗುಮ್ಮಟಗಳಿಗೆ (ಡೋಮ್) ಸಾಕಷ್ಟು ಹಾನಿಯಾಯಿತು. ಬ್ರಿಟಿಷರು ಒಬ್ಬ ಮುಸ್ಲಿಂ ಗುತ್ತಿಗೆದಾರನ ಮೂಲಕ ಅದರ ದುರಸ್ತಿ ಮಾಡಿಸಿದರು. “ಅಯೋಧ್ಯೆಯ ಬೈರಾಗಿಗಳು ಮತ್ತು ಹಿಂದುಗಳು ಉದ್ದೇಶಪೂರ್ವಕವಾಗಿ ದಾಳಿ ನಡೆಸಿ ಭಾರೀ ಹಾನಿ ಎಸಗಿದರು; ದುರಸ್ತಿಗೆ ತುಂಬಾ ಹಣ ಬೇಕು. ೧೫ ಸಾವಿರ ರೂ. ಖರ್ಚಾಗಬಹುದು. ಅದನ್ನು ಹಿಂದುಗಳಿಂದ ವಸೂಲು ಮಾಡಿ” ಎಂದು ಮುಸ್ಲಿಮರು ಪ್ರಾರ್ಥಿಸಿದರು. ಆ ಮೊತ್ತವನ್ನು ಮಂಜೂರು ಮಾಡಿದ ಅಯೋಧ್ಯೆಯ ಜಿಲ್ಲಾಧಿಕಾರಿ, ಹಿಂದುಗಳ ಮೇಲೆ ದಂಡ ವಿಧಿಸಿದ್ದೂ ಆಯಿತು. ದುರಸ್ತಿಯ ಬಳಿಕ ಮಸೀದಿಯನ್ನು ಸ್ವಚ್ಛಗೊಳಿಸಿ ಮತ್ತೆ ನಮಾಜ್ಗೆ ಅವಕಾಶ ನೀಡಿದರು. ಆದರೆ ಅನಂತರ ಅಲ್ಲಿ ಶುಕ್ರವಾರದ ನಮಾಜ್ ಮಾತ್ರ ನಡೆಯುವ ಕ್ರಮ ಬಂತು. ಪೊಲೀಸ್ ಬಂದೋಬಸ್ತ್ ಇರುತ್ತಿತ್ತು.
೧೯೪೯ರ ಡಿಸೆಂಬರ್ ೧೦ರಂದು ವಕ್ಫ್ ಇನ್ಸ್ಪೆಕ್ಟರ್ ಈ ಬಗೆಗೆ ಒಂದು ವರದಿಯನ್ನು ನೀಡಿದರು: “ಹಿಂದುಗಳು ಮತ್ತು ಸಿಖ್ಖರ ಭಯದಿಂದಾಗಿ ಮಸೀದಿಯಲ್ಲಿ ಯಾರೂ ಪ್ರಾರ್ಥನೆ ಮಾಡುತ್ತಿಲ್ಲ ಎಂಬುದು ನನ್ನ ಗಮನಕ್ಕೆ ಬಂತು. ರಾತ್ರಿ ಯಾರಾದರೂ ಮಸೀದಿಯಲ್ಲಿ ಉಳಿದುಕೊಂಡರೆ ಅವರಿಗೆ ಹಿಂದುಗಳು ಕಿರುಕುಳ ನೀಡುತ್ತಾರೆ. ಹೊರಗಿನ ಅಂಗಳದಲ್ಲಿ ಹಿಂದುಗಳ ಒಂದು ದೇವಸ್ಥಾನವಿದ್ದು ಅಲ್ಲಿ ತುಂಬಾ ಜನ ಹಿಂದುಗಳು ವಾಸವಿದ್ದಾರೆ. ಮಸೀದಿಗೆ ಹೋಗುವ ಯಾವನೇ ಮುಸ್ಲಿಮನಿಗೆ ಅವರು ಬೈಯುತ್ತಾರೆ. ನಾನು ಅಲ್ಲಿಗೆ ಭೇಟಿ ನೀಡಿ ವಿಚಾರಿಸಿದಾಗ ಅವರು ಹೇಳಿದ್ದೆಲ್ಲ ಸತ್ಯ ಎಂದು ತಿಳಿಯಿತು. ಗೋಡೆಯನ್ನು ದುರ್ಬಲ ಮಾಡುವ ಮೂಲಕ ಮಸೀದಿಗೆ ಹಿಂದುಗಳಿಂದ ಅಪಾಯವಿದೆ ಎಂದು ಜನ ಹೇಳಿದರು. ಇದನ್ನು ಫೈಜಾಬಾದ್ ಜಿಲ್ಲಾಧಿಕಾರಿಯವರಿಗೆ ಲಿಖಿತವಾಗಿ ತಿಳಿಸಿ ಮಸೀದಿಯಲ್ಲಿ ನಮಾಜ್ ಮಾಡುವ ಮುಸ್ಲಿಮರಿಗೆ ಹಿಂದುಗಳು ಕಿರುಕುಳ ನೀಡದಂತೆ ತಡೆಯಬೇಕು.” ಇದನ್ನು ನೋಡಿದರೆ ಆ ೧೯೪೯ರ ಡಿಸೆಂಬರ್ ೧೬ರಂದು ಅಲ್ಲಿ ನಡೆದ ಶುಕ್ರವಾರದ ಜುಮ್ಮಾ ನಮಾಜೇ ಅಂತಿಮ ಇರಬೇಕೆಂದು ಅಭಿಪ್ರಾಯಪಡಲಾಗಿದೆ.
ಅದೇ ಡಿಸೆಂಬರ್ ೨೨-೨೩ರ ರಾತ್ರಿ ೫೦-೬೦ ಜನ ಹಿಂದುಗಳು ಬಾಗಿಲಿನ ಬೀಗ ಮುರಿದು ಮಸೀದಿಯನ್ನು ಪ್ರವೇಶಿಸಿ ದೇವರ ವಿಗ್ರಹಗಳನ್ನು ಮಸೀದಿಯ ಮಧ್ಯದ ಗುಮ್ಮಟದ ಕೆಳಗಿನ ಜಾಗದಲ್ಲಿ ಇರಿಸಿದರು; ಅದರಿಂದ ಮಸೀದಿ ಅಪವಿತ್ರವಾಯಿತೆನ್ನುವ ಗುಲ್ಲೆದ್ದಿತು. ಅದಕ್ಕೆ ಮುನ್ನ ನವೆಂಬರ್ ೧೨ರಂದು ಸ್ಥಳದಲ್ಲಿ ಪೊಲೀಸ್ ಪಿಕೆಟ್ ಹಾಕಿದ್ದರು. ನವೆಂಬರ್ ೨೯ರಂದು ಫೈಜಾಬಾದ್ ಜಿಲ್ಲಾ ಪೊಲೀಸ್ ಅಧಿಕಾರಿ (ಎಸ್ಪಿ) ಕೆ.ಕೆ. ನಯ್ಯರ್ ಅವರು ಜಿಲ್ಲಾಧಿಕಾರಿಯವರಿಗೆ ಪತ್ರ ಬರೆದು ಹಿಂದುಗಳು ಮಸೀದಿಗೆ ಬಲಾತ್ಕಾರವಾಗಿ ಪ್ರವೇಶಿಸಬಹುದು ಎಂಬ ಆತಂಕವನ್ನು ವ್ಯಕ್ತಪಡಿಸಿದರು. ಆದರೆ ಜಿಲ್ಲಾಧಿಕಾರಿಯವರು ಡಿಸೆಂಬರ್ ೬ರಂದು ಉತ್ತರಪ್ರದೇಶ ಗೃಹಕಾರ್ಯದರ್ಶಿಯವರಿಗೆ ಪತ್ರ ಬರೆದು, ಮುಸ್ಲಿಮರ ಭಯಕ್ಕೆ ಮಹತ್ತ್ವ ನೀಡುವ ಅಗತ್ಯವಿಲ್ಲ ಎಂದು ತಿಳಿಸಿದರು. ಈ ನಡುವೆ ಮಸೀದಿಗೆ ಹೋಗುವ ಮುಸ್ಲಿಮರಿಗೆ ಹಿಂದುಗಳು ಕಿರುಕುಳ ನೀಡುತ್ತಾರೆ ಎನ್ನುವ ವಕ್ಫ್ ಇನ್ಸ್ಪೆಕ್ಟರ್ ವರದಿಯೂ ಬಂತು. ಆದರೂ ಮಸೀದಿಯಲ್ಲಿ ವಿಗ್ರಹ ಇರಿಸುವ ಘಟನೆ ನಡೆದೇಹೋಯಿತು.
ಬಲಾತ್ಕಾರದ ಪ್ರತಿಷ್ಠಾಪನೆ
ವಿಗ್ರಹ ಇರಿಸಿದ ಘಟನೆಯ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿದರು. ಅದರಲ್ಲಿ ತಾನು ರಾಮಜನ್ಮಭೂಮಿಯ ಪೂಜಾರಿ ಎಂದು ಹೇಳಿಕೊಂಡಿದ್ದ ಬಾಬಾ ಅಭಿರಾಂ ದಾಸ್ನನ್ನು ಮೊದಲ ಆರೋಪಿ ಎಂದು ಗುರುತಿಸಲಾಯಿತು; ಮುಂದೆ ನ್ಯಾಯಾಲಯಕ್ಕೆ ಸಲ್ಲಿಸಿದ ದೋಷಾರೋಪ ಪಟ್ಟಿಯಲ್ಲಿ ಕೂಡ ಹಾಗೆಯೇ ಇತ್ತು. ಆ ಬಗ್ಗೆ ಜಿಲ್ಲಾ ಮ್ಯಾಜಿಸ್ಟ್ರೇಟ್ ಅವರು (ಜಿಲ್ಲಾಧಿಕಾರಿ) “ಗುಂಪನ್ನು ನಿಯಂತ್ರಿಸಿ ಅಭಿರಾಂ ದಾಸ್, ರಾಮಶುಕ್ಲದಾಸ್ ಮತ್ತು ಸುದರ್ಶನದಾಸ್ ಎಂಬವರನ್ನು ವಿಗ್ರಹಗಳ ಭೋಗಕ್ಕೆ (ಪೂಜೆ) ಒಳಗೆ ಬಿಡಲಾಯಿತು” ಎಂದಿದ್ದಾರೆ. ಅಭಿರಾಂ ದಾಸ್ ಪ್ರತಿವರ್ಷ ಜಯಂತಿ, ಸಮಾರೋಪ ನಡೆಸಲು ಅನುಮತಿ ಪಡೆದಿದ್ದು ಆತ ಮತ್ತು ಜನ್ಮಭೂಮಿ ಸೇವಾಸಮಿತಿಯವರು ಪ್ರತಿವರ್ಷ ಅದನ್ನು ಆಚರಿಸುತ್ತಿದ್ದರು. ೧೯೬೨ರ ಜಯಂತಿ ಸಮಾರೋಪದ ಬಗ್ಗೆ ದಾಖಲೆ ಲಭ್ಯವಿದೆ.
ಜಿಲ್ಲಾ ಪೊಲೀಸ್ ಅಧಿಕಾರಿ ನಯ್ಯರ್ ಅವರು ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದು ತನ್ನ ಸೂಚನೆಯನ್ನು ಅಲಕ್ಷಿಸಿದ ಕಾರಣ ವಿಗ್ರಹ ಇರಿಸುವ ಘಟನೆ ನಡೆಯಿತೆನ್ನುವ ಅಭಿಪ್ರಾಯವನ್ನು ವ್ಯಕ್ತಪಡಿಸಿದರು.
ಮಸೀದಿಯಿಂದ ವಿಗ್ರಹಗಳನ್ನು ತೆಗೆಸಿ ಎಂದು ರಾಜ್ಯಸರ್ಕಾರ ಆದೇಶವನ್ನು ಹೊರಡಿಸಿತು; ಆದರೆ ಜಿಲ್ಲಾಧಿಕಾರಿ ಅದನ್ನು ಜಾರಿ ಮಾಡಲಿಲ್ಲ. ಯಾವನೇ ಒಬ್ಬ ಹಿಂದು ರಾಮಲಲಾ ಮೂರ್ತಿಯನ್ನು ಮಸೀದಿಯಿಂದ ತೆಗೆಯಲು ಒಪ್ಪುತ್ತಿಲ್ಲವೆಂದು ಸ್ವತಃ ಎಸ್ಪಿಯವರೇ ಹೇಳಿದರು. ಮಸೀದಿಯನ್ನು ಅಟ್ಯಾಚ್ ಮಾಡಬೇಕು; ಕನಿಷ್ಠ ಸಂಖ್ಯೆಯ ಪೂಜಾರಿಗಳ ಹೊರತಾಗಿ ಹಿಂದೂ-ಮುಸ್ಲಿಂ ಇಬ್ಬರನ್ನೂ ಅಲ್ಲಿಂದ ಹೊರಗೆ ಹಾಕಬೇಕು. ಹಕ್ಕಿನ ಬಗ್ಗೆ ಸಿವಿಲ್ ಜಡ್ಜ್ರಲ್ಲಿ ಕೇಳಬೇಕೆಂದು ತೀರ್ಮಾನಿಸಲಾಯಿತು.
ಫೈಜಾಬಾದ್-ಅಯೋಧ್ಯೆಯ ಹೆಚ್ಚುವರಿ ಮ್ಯಾಜಿಸ್ಟ್ರೇಟರು ಅಪರಾಧ ಸಂಹಿತೆ ಸೆಕ್ಷನ್ ೧೪೫ರ ಕೆಳಗೆ ಇದು ‘ತುರ್ತು ಸಂದರ್ಭ’ ಎಂದು ಒಂದು ಆದೇಶವನ್ನು ಹೊರಡಿಸಿದರು. ಜೊತೆಗೆ ಅಟ್ಯಾಚ್ಮೆಂಟ್ ಆದೇಶ ಕೂಡ ಬಂತು. ಫೈಜಾಬಾದ್ ಮುನಿಸಿಪಲ್ ಬೋರ್ಡ್ ಅಧ್ಯಕ್ಷರನ್ನು ಒಳ-ಅಂಗಳದ (ಮಸೀದಿ ಭಾಗ) ರಿಸೀವರ್ ಎಂದು ನೇಮಿಸಿದರು. ಆರಾಧನೆಯ ಹಕ್ಕು ಮತ್ತು ಮಾಲೀಕತ್ವದ ವಿವಾದದಿಂದಾಗಿ ಶಾಂತಿಭಂಗ ಆಗಬಹುದೆಂದು ೨-೩ ಜನ ಪೂಜಾರಿಗಳಿಗೆ ಮಾತ್ರ ವಿಗ್ರಹ ಇರಿಸಿದ ಜಾಗಕ್ಕೆ ಪ್ರವೇಶ ನೀಡಿದರು; ಸಾಮಾನ್ಯಜನರಿಗೆ ಪ್ರವೇಶ ನಿರಾಕರಿಸಿದರು. ಗ್ರಿಲ್ ಮತ್ತು ಇಟ್ಟಿಗೆಯ ಗೋಡೆಯ ಆಚಿನಿಂದ ಅವರಿಗೆ ದರ್ಶನದ ಅವಕಾಶವನ್ನು ಮಾತ್ರ ನೀಡಲಾಯಿತು.
ತೆರೆದ ಬಾಗಿಲು
ಜನವರಿ ೨೫, ೧೯೮೬ರಂದು ಉಮೇಶಚಂದ್ರ ಎಂಬವರು ವಿಚಾರಣಾ ನ್ಯಾಯಾಲಯಕ್ಕೆ ಒಂದು ಅರ್ಜಿ ಸಲ್ಲಿಸಿ ಗ್ರಿಲ್ ಮತ್ತು ಇಟ್ಟಿಗೆಗೋಡೆಯ ಮೇಲಿನ ಬೀಗವನ್ನು ಒಡೆದು ಸಾರ್ವಜನಿಕರಿಗೆ ಒಳ-ಅಂಗಳದಲ್ಲಿದ್ದ ದೇವದರ್ಶನಕ್ಕೆ ಅವಕಾಶ ಮಾಡಿಕೊಡಿ ಎಂದು ಪ್ರಾರ್ಥಿಸಿದರು. ಅದೇ ಫೆಬ್ರುವರಿ ೨ರಂದು ಜಿಲ್ಲಾ ನ್ಯಾಯಾಧೀಶರು ಬೀಗ ಒಡೆಯಲು ನಿರ್ದೇಶನ ನೀಡಿದರು; ಆ ಮೂಲಕ ವಿವಾದಿತ ಕಟ್ಟಡದ ಒಳಗೆ ಹೋಗಿ ದೇವರ ದರ್ಶನ ಮಾಡಲು ಅವಕಾಶ ದೊರೆಯಿತು. ಅದರಿಂದ ದೇಶಾದ್ಯಂತ ಸಂಚಲನ ಉಂಟಾಯಿತು. ಮುಸ್ಲಿಮರು ಹೈಕೋರ್ಟ್ಗೆ ಒಂದು ರಿಟ್ ಅರ್ಜಿಯನ್ನು ಸಲ್ಲಿಸಿ ಮೇಲಿನ ಆದೇಶವನ್ನು ಪ್ರಶ್ನಿಸಿದರು. ಕೆಲವೇ ದಿನಗಳಲ್ಲಿ ಆ ಬಗ್ಗೆ ಮಧ್ಯಾವಧಿ ಆದೇಶ ಬಂತು. ಮುಂದಿನ ಆದೇಶದವರೆಗೆ ಆಸ್ತಿಯ ಸ್ವರೂಪದಲ್ಲಿ ಯಾವುದೇ ಬದಲಾವಣೆ ಸಲ್ಲದೆಂದು ಅದರಲ್ಲಿ ತಿಳಿಸಲಾಯಿತು.
ಭಗವಾನ್ ಶ್ರೀರಾಮ ವಿರಾಜಮಾನ್ನಿಂದ ವಿವಾದಿತ ಸ್ಥಳದ ಪಟ್ಟಾ ತಮಗೆ ಕೊಡಿಸುವಂತೆ ದಾವೆ ದಾಖಲಾಗುತ್ತಲೇ ೧೦-೭-೧೯೮೯ರಂದು ಎಲ್ಲ ದಾವೆಗಳನ್ನು ಹೈಕೋರ್ಟಿಗೆ ವರ್ಗಾಯಿಸಲಾಯಿತು. ಅಲ್ಲಿ ಮೂವರು ನ್ಯಾಯಮೂರ್ತಿಗಳ ಪೀಠವನ್ನು ರಚಿಸಲಾಯಿತು. ಉತ್ತರಪ್ರದೇಶ ಸರ್ಕಾರದ ಅರ್ಜಿ ಮೇರೆಗೆ ಹೈಕೋರ್ಟ್ ಮಧ್ಯಾವಧಿ ಆದೇಶ ನೀಡಿ, ಅಯೋಧ್ಯೆಯ ವಿವಾದಿತ ಜಾಗದ ವಿಷಯದಲ್ಲಿ ಯಥಾಸ್ಥಿತಿಯನ್ನು ಕಾಪಾಡುವಂತೆ ಸೂಚಿಸಿತು.
ಹೈಕೋರ್ಟಿನಲ್ಲಿ ದಾವೆಯ ವಿಚಾರಣೆ ಬಾಕಿ ಇರುವಾಗಲೇ ಉತ್ತರಪ್ರದೇಶ ಸರ್ಕಾರವು ವಿವಾದಿತ ಜಾಗ ಸೇರಿದಂತೆ ಅಲ್ಲಿಯ ಒಟ್ಟು ೨.೭೭ ಎಕರೆ ಮತ್ತು ಸಮೀಪದ ಸ್ವಲ್ಪ ಜಾಗವನ್ನು ಸ್ವಾಧೀನಪಡಿಸಿಕೊಂಡಿತು (ಅಕ್ಟೋಬರ್ ೧೯೯೧). ಸ್ವಾಧೀನದ ಉದ್ದೇಶ ಅಭಿವೃದ್ಧಿ ಮತ್ತು ಅಯೋಧ್ಯೆಯ ಯಾತ್ರಿಕರಿಗೆ ಸವಲತ್ತುಗಳನ್ನು ಒದಗಿಸುವುದಾಗಿತ್ತು. ಒಂದು ರಿಟ್ ಅರ್ಜಿಯ ಮೂಲಕ ಭೂಸ್ವಾಧೀನವನ್ನು ಪ್ರಶ್ನಿಸಿದ್ದು, ೧೯೯೨ರ ಡಿಸೆಂಬರ್ ೧೧ರಂದು ಬಂದ ತೀರ್ಪು ಭೂಸ್ವಾಧೀನವನ್ನು ಅನೂರ್ಜಿತಗೊಳಿಸಿತು.
ವಿವಾದಿತ ಕಟ್ಟಡನಾಶ
೧೯೯೨ರ ಡಿಸೆಂಬರ್ ೬ರಂದು ಅಯೋಧ್ಯೆಯಲ್ಲಿ ಇಡೀ ದೇಶವನ್ನು ನಿಬ್ಬೆರಗಾಗಿಸಿದ ಘಟನೆ ನಡೆಯಿತು. ಅಯೋಧ್ಯೆಯಲ್ಲಿ ಸಹಸ್ರ-ಸಹಸ್ರ (ಲಕ್ಷ) ಸಂಖ್ಯೆಯಲ್ಲಿ ಸೇರಿದ್ದ ಕರಸೇವಕರು ಬಾಬ್ರಿ ಮಸೀದಿ ಎನ್ನುವ ಅಯೋಧ್ಯೆಯ ವಿವಾದಿತ ಕಟ್ಟಡವನ್ನು ಉರುಳಿಸಿಬಿಟ್ಟರು. ಮೂರು ಗುಮ್ಮಟಗಳಿದ್ದ ಹಳೆಕಾಲದ ಬೃಹತ್ಕಟ್ಟಡ ಒಂದೇ ದಿನದಲ್ಲಿ ನೆಲಸಮವಾಗಿತ್ತು. ಮಸೀದಿಯಲ್ಲದೆ ಬೌಂಡರಿವಾಲ್ (ಗಡಿಗೋಡೆ), ರಾಮಚಬೂತ್ರಗಳನ್ನು ಕೂಡ ಗುಂಪು ಕೆಡವಿತು. ಆ ಜಾಗದಲ್ಲಿ ದೇವಾಲಯದ ಒಂದು ತಾತ್ಕಾಲಿಕ ರಚನೆಯನ್ನು ಮಾಡಿ, ಹಿಂದೆ ಇದ್ದ ಮಧ್ಯದ ಗುಮ್ಮಟದ ಕೆಳಗಿನ ಜಾಗದಲ್ಲಿ ದೇವರ ವಿಗ್ರಹಗಳನ್ನು ಇರಿಸಿದರು. ಅಲ್ಲೇ ಜನರ ಪೂಜೆ ಪ್ರಾರ್ಥನೆಗಳು ಆರಂಭವಾದವು.
ವಿವಾದಿತ ಜಾಗ ಸೇರಿದಂತೆ ಕೇಂದ್ರಸರ್ಕಾರ ಅಲ್ಲಿ ಸುಮಾರು ೬೮ ಎಕರೆ ಜಾಗವನ್ನು ಸ್ವಾಧೀನಪಡಿಸಿಕೊಂಡಿತು. ಈ ನಡುವೆ ರಾಷ್ಟ್ರಪತಿಯವರು ಆ ಜಾಗದಲ್ಲಿ ಹಿಂದೆ ಹಿಂದೂ ದೇವಾಲಯ ಅಥವಾ ಹಿಂದೂ ಧಾರ್ಮಿಕ ಕಟ್ಟಡ ಇತ್ತೇ ಎನ್ನುವ ಪ್ರಶ್ನೆಯನ್ನು ಮುಂದಿಟ್ಟರು. ಅದರ ವಿಚಾರಣೆ ನಡೆಸಿ ರಾಷ್ಟ್ರಪತಿಯವರ ಪ್ರಶ್ನೆ ಸಂಗತತೆಯಿಲ್ಲದ್ದು (superfluous) ಮತ್ತು ಅನಗತ್ಯವಾದದ್ದು, ಅದಕ್ಕೆ ಉತ್ತರಿಸಬೇಕಿಲ್ಲ – ಎಂದು ಹೇಳಿ ಗೌರವಪೂರ್ಣವಾಗಿ ನ್ಯಾಯಾಧೀಶರು ಅದನ್ನು ವಾಪಸ್ ಮಾಡಿದರು.
ಹೈಕೋರ್ಟ್ ೧೯೯೬ರ ಜುಲೈನಲ್ಲಿ ಮೌಖಿಕ ಹೇಳಿಕೆಗಳ ದಾಖಲಾತಿಯನ್ನು ಪ್ರಾರಂಭಿಸಿತು. ಅಕ್ಟೋಬರ್ ೨೩, ೨೦೦೨ರಂದು ಭಾರತೀಯ ಪ್ರಾಚ್ಯವಸ್ತು ಸಂಶೋಧನ ಸಂಸ್ಥೆಗೆ (ಎಎಸ್ಐ) ವೈಜ್ಞಾನಿಕ ಸಮೀಕ್ಷೆ (ಸಂಶೋಧನೆ) ನಡೆಸಲು ಸೂಚಿಸಿತು. ಗ್ರೌಂಡ್ ಪೆನೆಟ್ರೇಟಿಂಗ್ ಟೆಕ್ನಾಲಜಿ ಅಥವಾ ಜಿಯೋ ರೇಡಿಯಾಲಜಿಯನ್ನು (ಜಿಪಿಆರ್) ನಡೆಸಲು ಹೇಳಿತು. ಎಎಸ್ಐ ೨೦೦೩ ಫೆಬ್ರುವರಿಯಲ್ಲಿ ಜಿಪಿಆರ್ ವರದಿಯನ್ನು ಸಲ್ಲಿಸಿತು. ಅದರಲ್ಲಿ ಪರಸ್ಪರ ವಿರೋಧಿಯಾದ ಹಲವು ಅಂಶಗಳು ಕಂಡುಬAದವು. ಪ್ರಾಚೀನದ ಜೊತೆಗೇ ಸಮಕಾಲೀನದಂತೆ ತೋರುವ ರಚನೆಗಳು ಅಲ್ಲಿದ್ದವು. ಉದಾಹರಣೆಗೆ, ಕಂಬಗಳು, ತಳಪಾಯಗಳು, ಗೋಡೆಯ ಚಪ್ಪಡಿಗಳು (slabs), ವಿವಾದಿತ ಸ್ಥಳದ ಹೆಚ್ಚಿನ ಭಾಗಕ್ಕೆ ವಿಸ್ತರಿಸಿದ ನೆಲ (ಫ್ಲೋರಿಂಗ್) ಇತ್ಯಾದಿ.
ಇನ್ನಷ್ಟು ವಿಶ್ಲೇಷಣೆ ನಡೆಸುವ ಸಲುವಾಗಿ ಅಲಹಾಬಾದ್ ಹೈಕೋರ್ಟ್ ವಿವಾದಿತ ನಿವೇಶನದಲ್ಲಿ ಉತ್ಖನನ ನಡೆಸುವಂತೆ ಸೂಚಿಸಿತು. ಆ ಬಗ್ಗೆ ೧೪ ಜನರ ತಂಡವನ್ನು ರಚಿಸಲಾಯಿತು. ಅದರಂತೆ ಸೈಟ್ ಪ್ಲಾನ್ ಮಾಡಿ ಹಲವು ಗುಂಡಿ (ಟ್ರೆಂಚ್) ತೋಡಿ ಉತ್ಖನನ ನಡೆಸಲು ನಿರ್ಧರಿಸಲಾಯಿತು. ASI ಆಗಸ್ಟ್ ೨೨, ೨೦೦೩ರಂದು ಅಂತಿಮ ವರದಿಯನ್ನು ಸಲ್ಲಿಸಿತು.
ಹೈಕೋರ್ಟ್ ತೀರ್ಪು
ಹೈಕೋರ್ಟ್ ಪೀಠದ ಮೂವರು ನ್ಯಾಯಮೂರ್ತಿಗಳು ಪ್ರತ್ಯೇಕ ತೀರ್ಪುಗಳನ್ನು ನೀಡಿದರು. ಹಿಂದುಗಳು, ನಿರ್ಮೋಹಿ ಅಖಾಡಾ ಮತ್ತು ಮುಸ್ಲಿಮರು – ಹೀಗೆ ಎಲ್ಲ ಮೂರು ಪಾರ್ಟಿಗಳಿಗೆ ಸಮಾನವಾಗಿ ಜಾಗದ ೧/೩ ಭಾಗವನ್ನು ನೀಡಬಹುದೆಂದು ಎಸ್.ಯು. ಖಾನ್ ಮತ್ತು ಅಗರ್ವಾಲ್ ಇಬ್ಬರೂ ಹೇಳಿದರು. ನ್ಯಾ. ಖಾನ್ ಅವರು, “ತಲಾ ೧/೩ ಭಾಗ ನೀಡಿದಾಗ ಸಂಬಂಧಪಟ್ಟವರು ಅದರಂತೆ ಪೂಜೆಗೆ ಬಳಸಬಹುದು. ವಿಗ್ರಹ ಇಟ್ಟಿರುವ ಮಧ್ಯದ ಗುಮ್ಮಟದ ಕೆಳಗಿನ ಜಾಗವನ್ನು ಹಿಂದುಗಳಿಗೆ ಕೊಡಬಹುದು. ನಿರ್ಮೋಹಿ ಅಖಾಡಾಕ್ಕೆ ರಾಮ್ಚಬೂತ್ರ ಮತ್ತು ಸೀತಾರಸೋಯಿ ಇದ್ದ ಜಾಗವನ್ನು ಕೊಡಬಹುದು. ಜಾಗ ಹಂಚಿಕೆಯ ವೇಳೆ ಕೊಡು-ಕೊಳ್ಳು (ಸಣ್ಣ ಹೊಂದಾಣಿಕೆ) ಮಾಡಬಹುದು. ಒಂದು ಪಾರ್ಟಿಗೆ ನಷ್ಟವಾಗುವುದಾದರೆ ತಾಗಿಕೊಂಡಿರುವ, ಕೇಂದ್ರಸರ್ಕಾರ ಸ್ವಾಧೀನಪಡಿಸಿದ ಜಾಗದಲ್ಲಿ ಕೊಡಬಹುದು” ಎಂದು ಸೂಚಿಸಿದರು.
ನ್ಯಾ. ಸುಧೀರ್ ಅಗರ್ವಾಲ್ ಅವರು ತಮ್ಮ ತೀರ್ಪಿನಲ್ಲಿ “ಮಧ್ಯದ ಗುಮ್ಮಟದ ಕೆಳಗಿನ ಜಾಗದಲ್ಲಿ ಯಾರೂ ಹಸ್ತಕ್ಷೇಪ ಮಾಡಬಾರದು. ಹೊರ-ಅಂಗಳದ ಮುಕ್ತ ಜಾಗವನ್ನು ನಿರ್ಮೋಹಿ ಅಖಾಡಾ ಮತ್ತು ಐದನೇ ದಾವೆಯ ಕಕ್ಷಿಗಾರರು (ಶ್ರೀರಾಮ ವಿರಾಜಮಾನ್ ಕಡೆಯವರು – ಹಿಂದುಗಳು) ಹಂಚಿಕೊಳ್ಳಬಹುದು. ಮುಸ್ಲಿಮರಿಗೆ ನೀಡುವ ಸ್ಥಳವು ೧/೩ಕ್ಕಿಂತ ಕಡಮೆ ಆಗಬಾರದು. ಅಗತ್ಯವಾದರೆ ಹೊರ-ಅಂಗಳದ ಸ್ವಲ್ಪ ಜಾಗವನ್ನು ಅವರಿಗೆ ಕೊಡಬಹುದು. ಹೊಂದಾಣಿಕೆ ವೇಳೆ ನಷ್ಟವಾದವರಿಗೆ ಕೇಂದ್ರಸರ್ಕಾರ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಸ್ವಲ್ಪ ಕೊಡಬಹುದು” ಎಂದರು.
ನ್ಯಾ. ಡಿ.ವಿ. ಶರ್ಮ ಅವರು ಬಹುತೇಕ ದಾವೆ ೫ರ ಕಕ್ಷಿಗಾರರ ವಾದದಂತೆ ತೀರ್ಪು ನೀಡಿದರು. ದಾವೆ ೩ ಮತ್ತು ೪ಕ್ಕೆ ಲಿಮಿಟೇಶನ್ ಇರುವ ಕಾರಣ ಆ ಜಾಗ ಪೂರ್ತಿಯಾಗಿ ದಾವೆ ೧ ಮತ್ತು ೨ರ ಕಕ್ಷಿಗಾರರಿಗೆ (ಹಿಂದುಗಳು) ಸೇರಬೇಕು. ಪ್ರತಿವಾದಿಗಳು ಇದರಲ್ಲಿ ಹಸ್ತಕ್ಷೇಪ ಮಾಡಬಾರದು; ಆಕ್ಷೇಪ ಎತ್ತಬಾರದು. ರಾಮಮಂದಿರ ನಿರ್ಮಿಸುವುದಕ್ಕೆ ತಡೆ ಒಡ್ಡಬಾರದು” ಎಂದು ಸೂಚಿಸಿದರು. ಪಾರ್ಟಿಗಳು ಈಗ ತೀರ್ಪಿನ ವಿರುದ್ಧ ಹಲವು ಸಿವಿಲ್ ಮೇಲ್ಮನವಿ ಮತ್ತು ವಿಶೇಷ ಲೀವ್ ಪಿಟಿಶನ್ಗಳನ್ನು ಹಾಕಿದವು.
ಹೈ ತೀರ್ಪಿಗೆ ತಡೆ
ಮೇ ೯, ೨೦೧೧ರಂದು ಸರ್ವೋಚ್ಚ ನ್ಯಾಯಾಲಯದ ಇಬ್ಬರು ನ್ಯಾಯಮೂರ್ತಿಗಳ ಪೀಠವು ಹಲವು ಮೇಲ್ಮನವಿಗಳನ್ನು ಸ್ವೀಕರಿಸಿ ಹೈಕೋರ್ಟ್ ತೀರ್ಪಿಗೆ ತಡೆ ನೀಡಿತು. ಮೇಲ್ಮನವಿಗಳ ವಿಚಾರಣೆಗೆ ಬಾಕಿ ಇರುವಾಗ ಜಾಗ ಯಥಾಸ್ಥಿತಿಯನ್ನು ಕಾಪಾಡಬೇಕೆಂದು ಸಂಬಂಧಪಟ್ಟವರಿಗೆ ಸೂಚಿಸಿತು. ಮೂವರ ಪೀಠದಲ್ಲಿ ಕೆಲವು ವಿಚಾರಣೆಗಳು ನಡೆದವು. ಕೊನೆಗೆ ದಿ. ೮-೧-೨೦೧೯ರಂದು ಮುಖ್ಯ ನ್ಯಾಯಮೂರ್ತಿಗಳು ತಾವು ಸೇರಿದಂತೆ ಐವರ ಪೀಠವನ್ನು ರಚಿಸಿದರು. ಮೊದಲಿಗೆ ಕೋರ್ಟ್ ಮಾತುಕತೆಯ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕೆಂದು ಸೂಚಿಸಿತು. ಅದರಂತೆ ನಿವೃತ್ತ ನ್ಯಾಯಾಧೀಶ ಫಕೀರ್ ಮೊಹಮದ್ ಇಬ್ರಾಹಿಂ ಖಲೀಫುಲ್ಲಾ, ಶ್ರೀ ಶ್ರೀ ರವಿಶಂಕರ್ ಗುರೂಜೀ ಹಾಗೂ ಹಿರಿಯ ವಕೀಲ ಶ್ರೀರಾಮ್ ಪಂಚೂ ಅವರನ್ನು ಒಳಗೊಂಡ ಸಂಧಾನಕಾರರ ಸಮಿತಿಯನ್ನು ನೇಮಿಸಿದರು. ಸಂಧಾನಕಾರರಿಗೆ ನೀಡಿದ ಸಮಯವನ್ನು ವಿಸ್ತರಿಸಿದರೂ ಕೂಡ ಪರಿಹಾರ ದೂರವೇ ಉಳಿಯಿತು. ಹಗ್ಗಜಗ್ಗಾಟ ಸಾಕಷ್ಟು ನಡೆದರೂ ಕೂಡ ಒಮ್ಮತ ಸಾಧ್ಯವಾಗಲಿಲ್ಲ. ಸಮಿತಿಯ ಸದಸ್ಯರ ಪ್ರಯತ್ನದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪೀಠ, ಅದನ್ನು ಬರಖಾಸ್ತುಗೊಳಿಸಿತು. ವಿಚಾರಣೆಯ ವೇಳೆ ಸರ್ವೋಚ್ಚ ನ್ಯಾಯಾಲಯ ೧೯೩೪ರ ಅನಂತರ ಬಾಬ್ರಿ ಮಸೀದಿಯು ಮುಸ್ಲಿಮರ ವಶದಲ್ಲಿಯೆ ಇಲ್ಲ. ಅಲ್ಲಿ ಪ್ರತಿದಿನ ನಮಾಜ್ ನಡೆಯುತ್ತಿಲ್ಲ. ಜನ ಅದನ್ನು ದೇವಾಲಯ ಎಂದು ಕರೆಯುತ್ತಾರೆ – ಎಂಬ ಅಂಶವನ್ನು ಕಂಡುಕೊಂಡಿತು.
ಮಸೀದಿ ಕೆಳಗೆ ಏನಿತ್ತು?
ಅಯೋಧ್ಯೆ ರಾಮಜನ್ಮಭೂಮಿಯ ವಿವಾದವನ್ನು ಇತ್ಯರ್ಥಪಡಿಸುವಲ್ಲಿ ಪ್ರಾಚ್ಯವಸ್ತು ಸಂಶೋಧನ ಸಂಸ್ಥೆಯ (ಎಎಸ್ಐ) ವರದಿಯ ಪಾತ್ರ ಮುಖ್ಯವಾದದ್ದು. ಮಸೀದಿಗೆ ಮುನ್ನ ಅಲ್ಲಿದ್ದ ರಚನೆ(ಕಟ್ಟಡ)ಗಳೇನು? ಶತಮಾನಗಳಿಂದ ಆ ಜಾಗದಲ್ಲಿ ಏನೆಲ್ಲ ನಡೆದಿದೆ ಎಂಬ ಅಂಶಗಳತ್ತ ಎಎಸ್ಐ ವರದಿ ಬೆಳಕು ಚೆಲ್ಲಿತು. ಮುಖ್ಯವಾಗಿ ಅಲ್ಲಿ ನಡೆಸಿದ ಉತ್ಖನನದಿಂದ ಹಲವು ವಿಷಯಗಳು ಹೊರಗೆ ಬಂದವು.
“ರಾಮಚಬೂತ್ರ ಪ್ರದೇಶಕ್ಕೆ ತಾಗಿರುವ ಗರ್ಭಗೃಹದ ಉತ್ತರ ಮತ್ತು ದಕ್ಷಿಣದ ಮುಖ್ಯ ವೇದಿಕೆಯಲ್ಲಿ ಹೊಂದಾಣಿಕೆ ಕಾಣಿಸುವುದಿಲ್ಲ. ಅಲ್ಲಿ ಒಂದು ಬಗೆಯ ಗೋಡೆಯ ತಳಪಾಯವಿತ್ತು. ಚಬೂತ್ರ ಸ್ಥಳದಲ್ಲಿ ಅಡ್ಡಲಾಗಿ ಈ ರಚನೆಗಳಿದ್ದವು. ಇದರಿಂದ ತಿಳಿಯುವ ಅಂಶವೆಂದರೆ, ಅವು ಒಂದೇ ಕಾಲದ ರಚನೆಗಳಲ್ಲ. ಬೇರೆಬೇರೆ ಕಾಲದಲ್ಲಿ ಆದಂಥವು. ಚಬೂತ್ರ ಪ್ರದೇಶದ ದಕ್ಷಿಣದಲ್ಲಿ ಫ್ಲೋರಿಂಗ್ನಂತಹ ರಚನೆ ಕಾಣಿಸುತ್ತದೆ. ಅದರ ಮೂಲ ಪ್ರಾಚೀನವಾದರೆ ಅದು ಕಲ್ಲಿನ ಚಪ್ಪಡಿ ಇರಬಹುದು” ಎಂದು ವರದಿ ತಿಳಿಸಿದೆ.
“ನಿವೇಶನದ ಪೂರ್ವದ ಇಡೀ ಗಡಿಯಲ್ಲಿ (ಬೌಂಡರಿ) ಮೂರನೇ ರೀತಿಯ ಹೂತುಹೋದ ರಚನೆ ಕೂಡ ಕಾಣಿಸುತ್ತದೆ. ಅದರಲ್ಲಿ ಹೂತುಹಾಕಿದ ಮಣ್ಣಿನ ದಿಬ್ಬಗಳಿವೆ. ಅದರಲ್ಲಿ ಕೆಲವು ಒಳರಚನೆಗಳಿದ್ದು, ಅವು ಕುಸಿದಂತೆ ಕಾಣಿಸುತ್ತವೆ. ನೈಋತ್ಯ ಭಾಗದಲ್ಲಿ (ಇಳಿಜಾರು ಜಾಗ) ಹೊಂದಾಣಿಕೆಯಾಗದ ರಚನೆಗಳು ಕಾಣಿಸುತ್ತವೆ.”
“ಒಟ್ಟಿನಲ್ಲಿ ಜಿಪಿಆರ್ ಸಮೀಕ್ಷೆಯು ಐದರಿಂದ ಐದೂವರೆ ಮೀ. ಆಳದವರೆಗಿನ ವೈರುಧ್ಯಗಳನ್ನು ತೋರಿಸುತ್ತದೆ. ಅದರಲ್ಲಿ ಕಂಬಗಳು, ತಳಪಾಯ, ಗೋಡೆ, ಚಪ್ಪಡಿ, ನಿವೇಶನದ ದೊಡ್ಡಭಾಗವನ್ನು ಆವರಿಸುವ ಫ್ಲೋರಿಂಗ್(ನೆಲ)ನಂತಹ ಪ್ರಾಚೀನ ಮತ್ತು ಸಮಕಾಲೀನ ರಚನೆಗಳು ಸೇರಿವೆ. ಪ್ರಾಚ್ಯವಸ್ತುಗಳ ಟ್ರೆಂಚ್ನಿಂದ ಈ ವೈರುಧ್ಯಗಳ ನಿಜಸ್ವರೂಪವನ್ನು ತಿಳಿಯಬಹುದು” ಎಂದು ತಿಳಿಸಿದಾಗ ಅಲಹಾಬಾದ್ ಹೈಕೋರ್ಟ್, ವಿವಾದಿತ ಜಾಗದಲ್ಲಿ ಉತ್ಖನನ ಮಾಡುವಂತೆ ಸೂಚಿಸಿತು. ದೇವರ ವಿಗ್ರಹಗಳಿದ್ದ ಜಾಗದ ಸುತ್ತ ಹತ್ತು ಅಡಿ ಜಾಗದಲ್ಲಿ ಉತ್ಖನನ ಬೇಡವೆಂದ ನ್ಯಾಯಾಲಯ, ಸಿಕ್ಕಿದ ವಸ್ತುಗಳು ಎಷ್ಟು ಆಳದಲ್ಲಿ ಸಿಕ್ಕಿದವೆಂದು ದಾಖಲಿಸಬೇಕೆಂದು ಸೂಚಿಸಿತು. ಎರಡೂ ಸಮುದಾಯದವರ ಸಮ್ಮುಖದಲ್ಲಿ ಉತ್ಖನನ ನಡೆಯಿತು.
ಕೆಳಗೊಂದು ದೇವಾಲಯ
ಅಲ್ಲಿ ತೋಡಿದ ಗುಂಡಿಗಳಲ್ಲಿ ಆ್ಯಂಟಿಕ್ ಆಸಕ್ತಿಯ ವಸ್ತುಗಳು, ಹೊಳೆಯುವ ಮಡಕೆ ಚೂರುಗಳು, ಹೆಂಚು, ಮೂಳೆತುಂಡುಗಳು ಸಿಕ್ಕಿದವು. ಪೂರ್ವಭಾಗದಲ್ಲಿ ಹಿಂದಿನ ಕಾಲಘಟ್ಟದ ನೆಲ (floor), ಗೋಡೆಗಳು ಕಾಣಿಸಿದವು; ಇದು ರಾಮಚಬೂತ್ರಕ್ಕೆ ಸಮೀಪದ ಸ್ಥಳ. ಪ್ರವೇಶದ್ವಾರದ ಬಳಿ ಅಮೃತಶಿಲೆಯ (ಮಾರ್ಬಲ್) ಚಪ್ಪಡಿಯನ್ನು ಹಾಸಿದ್ದು, ಅಲ್ಲಿ ಸುಣ್ಣದ ಗಾರೆ, ಕಾಂಕ್ರೀಟ್ ನೆಲಗಳಿವೆ. ಆ ಮಾರ್ಬಲ್ ಕ್ರಿ.ಶ. ೧೧೫೦ರ ಅನಂತರದವು. ಮೊಘಲರ ಕಾಲದ ಕುಲುಮೆ, ಒಲೆಗಳು ಅಲ್ಲಿ ಕಂಡವು. ದಕ್ಷಿಣದ ಎತ್ತರದ ವೇದಿಕೆ ಪ್ರದೇಶದಲ್ಲಿ ೨೩ ಗುಂಡಿಗಳನ್ನು ತೋಡಿದ್ದು, ಅಲ್ಲಿ ಪ್ರಾಚೀನಕಾಲದ ೫೦ ಕಂಬಗಳ ತಳಪಾಯ ಕಂಡುಬಂತು. ಈ ಕಂಬಗಳ ತಳಪಾಯದ ಕೆಳಗೆ ಮತ್ತೂ ಹಿಂದಿನ ಕಂಬಗಳ ತಳಪಾಯ ಕಂಡುಬಂತು. ಈ ಭಾಗದಲ್ಲಿ ಇಟ್ಟಿಗೆಯ ವೃತ್ತಾಕಾರದ ಪವಿತ್ರಸ್ಥಳ (shrine) ಕಾಣಿಸಿತು. ಅದಕ್ಕೆ ಪೂರ್ವದಲ್ಲಿ ಆಯತಾಕಾರದ ಪ್ರದೇಶವಿದೆ.
ಹಳೆಕಾಲದ ಇಟ್ಟಿಗೆಗೋಡೆಯ ಮೇಲೆ ವಿವಾದಿತ ಕಟ್ಟಡದ ಭಾಗಗಳಿದ್ದವು. ೫೦ಕ್ಕೂ ಮಿಕ್ಕಿದ ಕಂಬಗಳ ತಳಪಾಯಗಳ ಮಧ್ಯೆ ಸುಣ್ಣದ ಗಾರೆ ಮಾಡಿದ ಗೋಡೆ, ನೆಲ ಕಾಣಿಸಿತು. ಅಲ್ಲೊಂದು ಮರಳುಗಲ್ಲಿನ (sandstone) ಬ್ಲಾಕ್ ಕಾಣಿಸಿತು. ಮತ್ತೆ ತುಂಬಾ ಇಳಿಜಾರಾದ ಕಾರಣ ಉತ್ಖನನವು ಸಾಧ್ಯವಾಗಲಿಲ್ಲ. ೧೦.೮೪ ಮೀ. ಆಳದಲ್ಲಿ ನೈಜ ಮಣ್ಣು (ನೆಲ) ಸಿಕ್ಕಿತು. ೧೩.೨೦ ಮೀ. ವರೆಗೂ ಅಗೆದು ಎಎಸ್ಐಯವರು ಅದನ್ನು ಖಚಿತಪಡಿಸಿಕೊಂಡರು. ಪಶ್ಚಿಮದಲ್ಲಿ ಇಟ್ಟಿಗೆಗೋಡೆಯ ಅವಶೇಷ ಕಾಣಿಸಿತು. ಉತ್ತರ-ದಕ್ಷಿಣವಾಗಿ ದೊಡ್ಡದಾದ ಇಟ್ಟಿಗೆಗೋಡೆ ಅಲ್ಲಿತ್ತು. ಈ ಹಂತದ ಕೆಳಗೆ ಮತ್ತೊಂದು ಗೋಡೆ ಕಾಣಿಸಿತು. ಮೇಲಿನ ಮೂರು ಫ್ಲೋರ್ಗಳು ಮತ್ತು ಕಂಬಗಳ ತಳಪಾಯಗಳು ಮೇಲ್ತುದಿಯ ಫ್ಲೋರಿಗೆ ತಾಗಿಕೊಂಡಿದ್ದವು.
ಇನ್ನು ಎಎಸ್ಐ ಸಾಂಸ್ಕೃತಿಕ ಕಾಲಾವಧಿಗಳ ಪ್ರಕಾರ ತಾನು ಕಂಡುದನ್ನು ವಿಶ್ಲೇಷಿಸಿತು. ೧೦.೮೦ ಮೀ. ಆಳದವರೆಗೆ ಒಟ್ಟು ಕಂಡ ಸಾಂಸ್ಕೃತಿಕ ಕಾಲಾವಧಿಗಳು ೯. ಮಡಕೆ ಚೂರುಗಳು, ಕಟ್ಟಡದ ಅವಶೇಷಗಳು, ಇತರ ಅಂಕಿಅಂಶಗಳೇ (ಡಾಟಾ) ಅದಕ್ಕೆ ಆಧಾರ. ಕ್ರಿಸ್ತಪೂರ್ವ ಕೊನೆಯ ಐದಾರು ಶತಮಾನಗಳಲ್ಲಿ, ಮುಖ್ಯವಾಗಿ ಕುಶಾನರ ಕಾಲದಲ್ಲಿ ಅಲ್ಲಿ ಕಟ್ಟಡಗಳ ನಿರ್ಮಾಣಕಾರ್ಯ ಆರಂಭವಾಗಿ ಗುಪ್ತರ ಕಾಲ ಮತ್ತು ಗುಪ್ತೋತ್ತರ ಕಾಲದಲ್ಲಿ ಮುಂದುವರಿಯಿತು. “ವಿವಾದಿತ ಕಟ್ಟಡದ ಜಾಗದಲ್ಲಿ ನಿರಂತರವಾಗಿ ನಿರ್ಮಾಣಕಾರ್ಯ ನಡೆದಿದೆ. ಕುಶಾನರ ಕಾಲದ ಇಟ್ಟಿಗೆಗಳು ಮತ್ತು ಕಲ್ಲಿನ ರಚನೆಗಳು ಅಲ್ಲಿವೆ. ಮುಂದೆ ಗುಪ್ತರ ಕಾಲ ಮತ್ತು ಅನಂತರ ಮಣ್ಣಿನ ದಿಬ್ಬ ಏರುತ್ತಹೋಯಿತು. ಹಿಂದಿನ ಅವಶೇಷಗಳ ಮೇಲೆ ಮತ್ತೆ ಕಟ್ಟಡ ಕಟ್ಟುವಾಗ ದಿಬ್ಬದ ಸುತ್ತ ತೋಡಿದ ಮಣ್ಣನ್ನು ಅಲ್ಲೇ ಸೇರಿಸುತ್ತ ಬಂದರು. ಮೇಲಿನ ಹಂತಗಳಲ್ಲೂ ಇದೇ ರೀತಿ ನಡೆಯಿತು. ಮಸಿಕೆಂಡದ (ಚಾರ್ಕೋಲ್) ಮಾದರಿಗಳು ಕೂಡ ಸಾಕ್ಷ್ಯ ಒದಗಿಸಿವೆ.”
ಸಾಂಸ್ಕೃತಿಕ ಕಾಲಾವಧಿ
ಎಎಸ್ಐ ಅಲ್ಲಿಯ ಸಾಂಸ್ಕೃತಿಕ ಕಾಲಾವಧಿಗಳನ್ನು ೧) ಕ್ರಿ.ಪೂ. ೬ರಿಂದ ೩ನೇ ಶತಮಾನದ ಅವಧಿ ೨) ಶುಂಗರ ಕಾಲ ೩) ಕುಶಾನರ ಕಾಲ ೪) ಗುಪ್ತರ ಕಾಲ ೫) ಗುಪ್ತೋತ್ತರ-ರಜಪೂತರ ಕಾಲ ೬) ಮಧ್ಯಕಾಲ-ಸುಲ್ತಾನರ ಕಾಲ ೭) ಮಧ್ಯಕಾಲ (೧೨-೧೬ನೇ ಶತಮಾನ) ೮) ಮೊಘಲರ ಕಾಲ ೯) ಮೊಘಲೋತ್ತರ ಕಾಲ – ಎಂದು ವಿಭಾಗಿಸಿದೆ. ಕಾಲಾನುಕ್ರಮವಾಗಿ ಅಲ್ಲಿ ಕಂದುಪಾತ್ರೆ, ಕೆಂಪುಪಾತ್ರೆ, ಸಿರಾಮಿಕ್ಸ್, ಕಿವಿಯ ಆಭರಣ, ಕಬ್ಬಿಣದ ಚಾಕು, ಗಾಜಿನ ಮಣಿ, ಟೆರಾಕೊಟಾ ವಸ್ತುಗಳು, ಬಳೆ, ಬಾಲ್, ಚಕ್ರ, ಮುರಿದ ಮುದ್ರೆ, ಬ್ರಾಹ್ಮಿ ಲಿಪಿ, ಕಲ್ಲಿನ ಮುಚ್ಚಳದ ತುಂಡು, ಹೇರ್ಪಿನ್, ದಂತದ ಆಟದ ಸಾಮಾನು, ಮಡಿಕೆ ಚೂರು, ದೊಡ್ಡಒಲೆ, ಕೆಂಪುಇಟ್ಟಿಗೆ ಮುಂತಾದವು ಸಿಕ್ಕಿವೆ.
ವಿವಾದಿತ ಕಟ್ಟಡದ ಕೆಳಗೆ ಹಿಂದೆ ಒಂದು ಬೃಹತ್ ಕಟ್ಟಡ ಇದ್ದುದನ್ನು ಊಹಿಸಬಹುದು. ಉತ್ತರ-ದಕ್ಷಿಣಕ್ಕೆ ೧೭ ಸಾಲು ಕಂಬದ ತಳಪಾಯಗಳು, ಪ್ರತಿ ಸಾಲಿನಲ್ಲಿ ಐದು ಕಂಬಗಳು – ಇದರಿಂದ ತಳಪಾಯದ ಮೂಲಸ್ವರೂಪ ತಿಳಿಯುತ್ತದೆ. ಇಟ್ಟಿಗೆಯ ತಳಪಾಯ, ಫ್ಲೋರ್ಗಳು, ಕಂಬಗಳು, ಅವುಗಳ ವಿನ್ಯಾಸದಿಂದ ತಿಳಿಯುವ ಅಂಶವೆಂದರೆ, ಕಂಬಗಳ ಸಹಿತ ಆ ಕಟ್ಟಡದ ಮಧ್ಯಭಾಗವು ಮುಖ್ಯವಾದದ್ದು; ವಾಸ್ತುಶಿಲ್ಪದಲ್ಲಿ ಅದಕ್ಕೆ ಮಹತ್ತ್ವ ನೀಡಲಾಗಿದೆ. ಅಲ್ಲಿಯ ಕಟ್ಟಡದ ವಿನ್ಯಾಸವು ನಿಶ್ಚಿತವಾಗಿ ೧೨ನೇ ಶತಮಾನದ್ದು; ಅದು ಸಾರನಾಥ ವಿಹಾರದ ಹಾಗೆಯೇ ಇದೆ. ದೀರ್ಘವೃತ್ತಾಕಾರದ ಅಲ್ಲಿಯ ದೇವಳದ ಕಟ್ಟಡ ೧೦ನೇ ಶತಮಾನದ್ದು ಇರಲೂಬಹುದು ಎಂದು ಅಂದಾಜಿಸಲಾಗಿದೆ.
ವಿವಿಧ ವಸ್ತುಗಳು ಪತ್ತೆ
ಸಾರಾಂಶವೆಂದರೆ, ಈ ಕಟ್ಟಡದ ಮೇಲೆ ೧೬ನೇ ಶತಮಾನದ ಆರಂಭದಲ್ಲಿ (ಬಾಬ್ರಿ) ಮಸೀದಿಯನ್ನು ನಿರ್ಮಿಸಲಾಯಿತು. ಕೆಳಗಿನ ಬೃಹತ್ ನಿರ್ಮಾಣವು ಉತ್ತರ-ದಕ್ಷಿಣವಾಗಿ ೫೦ ಮೀ. ಉದ್ದ, ೩೦ ಮೀ. ಅಗಲವಿತ್ತು; ಇಟ್ಟಿಗೆಯಿಂದ ನಿರ್ಮಿಸಿದ ಅದರಲ್ಲಿ ಮರಳುಗಲ್ಲಿನ ಬ್ಲಾಕ್ಗಳಿವೆ. ಮಸೀದಿಯ ಮಧ್ಯದ ಚೇಂಬರ್ನ ಮಧ್ಯಭಾಗವು ಹಿಂದಿನ ದೊಡ್ಡ ಗೋಡೆಯ ಉದ್ದದ ಮಧ್ಯಭಾಗ(ಪಾಯಿಂಟ್)ದಲ್ಲಿದೆ. ಅಲ್ಲಿ ತಾತ್ಕಾಲಿಕ ದೇವಳದ ರಾಮಲಲಾ ಮೂರ್ತಿಯನ್ನು ಇಟ್ಟಿರುವ ಕಾರಣ ಅದರ ಉತ್ಖನನ ಸಾಧ್ಯವಾಗಲಿಲ್ಲ. ಎತ್ತರದ ವೇದಿಕೆಯ ಈ ಜಾಗ ೧೫x೧೫ ಮೀ. ಗಾತ್ರದ್ದು. ವಿವಿಧ ಟ್ರೆಂಚ್ಗಳಲ್ಲಿ ಟೆರಾಕೋಟಾ ದೀಪಗಳು ಸಿಕ್ಕಿವೆ.
ಒಟ್ಟಿನಲ್ಲಿ ಮಸೀದಿಯ ಕೆಳಗೆ ಸುದೀರ್ಘ ಕಾಲ ಸಾರ್ವಜನಿಕ ಬಳಕೆಯ ಜಾಗವಿತ್ತು. ಅದರ ಸುತ್ತ ಜನವಸತಿ ಇತ್ತೆಂಬುದು ಮಡಿಕೆಚೂರು, ಗೃಹಸಂಕೀರ್ಣ, ಚರಂಡಿ, ಬಾವಿ, ಒಲೆ, ಕುಲುಮೆ, ಮುಂತಾದವುಗಳ ಅವಶೇಷಗಳಿಂದ ತಿಳಿಯುತ್ತದೆ ಎಂದ ಎಎಸ್ಐ ಅಂತಿಮವಾಗಿ, “ವಿವಾದಿತ ಕಟ್ಟಡದ ಕೆಳಗೆ ಬೃಹತ್ ಕಟ್ಟಡವಿತ್ತು. ೧೦ನೇ ಶತಮಾನದ ಅನಂತರ ಅಲ್ಲಿ ವಿವಿಧ ಹಂತಗಳಲ್ಲಿ ಕಲ್ಲು, ಅಲಂಕೃತ ಇಟ್ಟಿಗೆಗಳಿಂದ ನಿರ್ಮಿಸಿದ ಕಟ್ಟಡಗಳಿದ್ದವು” ಎಂದು ಹೇಳಿದೆ.
ನ್ಯಾ| ಎಸ್.ಯು. ಖಾನ್ ತಮ್ಮ ತೀರ್ಪಿನಲ್ಲಿ ಎಎಸ್ಐ ವರದಿಯಿಂದ ಪ್ರಯೋಜನವಿಲ್ಲ ಎಂದಿದ್ದರು. ಅದಕ್ಕೆ ಆಕ್ಷೇಪಿಸಿದ ಸರ್ವೋಚ್ಚ ನ್ಯಾಯಾಲಯ, ಶೋಧ, ಉತ್ಖನನಗಳನ್ನು ನಡೆಸಿ ವರದಿ ನೀಡಲು ಹೈಕೋರ್ಟ್ ಸೂಚಿಸಿತ್ತು, ಆದ್ದರಿಂದ ವಿವೇಚನೆ ಮಾಡದಿರುವುದು ಸರಿಯಲ್ಲ. ಅಲ್ಲಿ ಹಿಂದೆ ಧಾರ್ಮಿಕ ರಚನೆ (ಕಟ್ಟಡ) ಇತ್ತೇ ಎಂಬುದು ಎಎಸ್ಐ ಮುಂದಿದ್ದ ಪ್ರಶ್ನೆ. ಅಲ್ಲಿ ದೀರ್ಘ ವೃತ್ತಾಕಾರದ ದೇವಳ ಇದ್ದಿರಬೇಕೆಂದು ಎಎಸ್ಐ ಹೇಳಿದ್ದು, ನ್ಯಾ. ಖಾನ್ ಅದನ್ನು ಕೂಡ ಗಮನಿಸಲಿಲ್ಲ ಎಂದು ಅಸಮಾಧಾನ ಹೊರಹಾಕಿತು.
ಬದಲಾದ ವಾದ
ನ್ಯಾ. ಸುಧೀರ್ ಅಗರ್ವಾಲ್ ತಮ್ಮ ತೀರ್ಪಿನಲ್ಲಿ “ಸುನ್ನಿ ವಕ್ಫ್ಬೋರ್ಡ್ನವರು ಮೊದಲಿಗೆ ಮಸೀದಿಯ ಕೆಳಗೆ ಏನೂ ಇರಲಿಲ್ಲ ಎಂದರು. ಉತ್ಖನನದ ವಿವರಗಳು ಬರುತ್ತಲೇ ಅದು ಈದ್ಗಾ ಅಥವಾ ಕನಾತಿ ಮಸೀದಿ ಇರಬಹುದು ಎಂದು ಮಾತು ಬದಲಿಸಿದರು. ಆದರೆ ಕಂಬಗಳ ತಳಪಾಯ ದೇವಾಲಯದ ಅಸ್ತಿತ್ವವನ್ನು ಹೇಳುತ್ತದೆಯೇ ಹೊರತು ಕಂಬಗಳಿಲ್ಲದ ಈದ್ಗಾ ಬಗೆಗಲ್ಲ” ಎಂದಿದ್ದಾರೆ. ಮುಂದುವರಿದು, “ಅದು ದೀರ್ಘವೃತ್ತಾಕಾರದ ದೇವಾಲಯ ಇರಬಹುದೇ ಹೊರತು ಮುಸ್ಲಿಮರ ಗೋರಿ ಅಥವಾ ಮಸೀದಿ ಅಲ್ಲ. ದೇವರ ಅಭಿಷೇಕದ ನೀರು ಹೊರಗೆ ಹೋಗುವ ಮಕರ ಪ್ರಣಾಳ ಕೂಡ ಅಲ್ಲಿತ್ತು. ಒಟ್ಟಿನಲ್ಲಿ ಮಸೀದಿಯನ್ನು ಕಟ್ಟಿಸಿದ್ದು ಖಾಲಿ ಜಾಗದ ಮೇಲಲ್ಲ. ಅಲ್ಲೊಂದು ಕಟ್ಟಡವಿತ್ತು. ಮಸೀದಿ ನಿರ್ಮಿಸಿದವರು ಹಿಂದಿನ ಕಟ್ಟಡವನ್ನು, ಅದರ ವಸ್ತುಗಳನ್ನು ಬಳಸಿಕೊಂಡರು. ಉತ್ಖನನದ ವೇಳೆ ಸಿಕ್ಕಿದ ವಸ್ತುಗಳು ಮುಸ್ಲಿಮರಿಗೆ ಸಂಬಂಧಿಸಿದವಲ್ಲ; ಬದಲಾಗಿ ಹಿಂದೂಧಾರ್ಮಿಕ ಸ್ಥಳದಲ್ಲಿ ಕಾಣುವಂಥವು. ಅಲ್ಲಿ ಕಂಡುಬಂದ ಕಂಬಗಳಲ್ಲಿ ಹನುಮಂತ, ನರಸಿಂಹ, ಶಿವ, ಗಣೇಶ, ನಂದಿ, ಗರುಡ, ದುರ್ಗಾ ಮುಂತಾಗಿ ಹಿಂದೂದೇವರ ಮೂರ್ತಿಗಳು, ಚಿತ್ರಗಳು ಸಿಕ್ಕಿವೆ” ಎಂದು ಕೂಡ ಹೇಳಿದ್ದರು.
ಈ ಅಭಿಪ್ರಾಯಗಳನ್ನು ಸುಪ್ರೀಂಕೋರ್ಟ್ ಒಪ್ಪಿಕೊಂಡಿದೆ. ವಿವಾದಿತ ಕಟ್ಟಡ (ಮಸೀದಿ) ಕಟ್ಟಿಸಿದವನಿಗೆ ಹಿಂದೆ ಇದ್ದ ಕಟ್ಟಡದ ವಿವರಗಳು, ಅದರ ಬಲ, ದೃಢತೆ, ಗೋಡೆಗಳ ಗಾತ್ರ ಮುಂತಾದವು ಚೆನ್ನಾಗಿ ತಿಳಿದಿತ್ತು. ಆದ್ದರಿಂದ ಆತ ಆ ಕಟ್ಟಡದ ಗೋಡೆ ಮುಂತಾದವುಗಳನ್ನು ಬದಲಿಸದೆ ಇದ್ದ ಹಾಗೆಯೇ ಬಳಸಿಕೊಳ್ಳಲು ಹಿಂದೆಗೆಯಲಿಲ್ಲ ಎಂದು ಕೂಡ ನ್ಯಾ. ಅಗರ್ವಾಲ್ ಅಭಿಪ್ರಾಯಪಟ್ಟಿದ್ದಾರೆ.
೧೦-೧೫ ಲಕ್ಷ ಭಕ್ತರು
ಹಿಂದುಗಳ ದಾವೆ ಮತ್ತು ಮುಸ್ಲಿಮರ (ವಕ್ಫ್ಬೋರ್ಡ್) ದಾವೆ ಎರಡರಲ್ಲೂ ಹಲವರು ಸಾಕ್ಷಿ ಹೇಳಿದರು. ಶ್ರೀ ರಾಮನಾಥ ಮಿಶ್ರಾ ಯಾನೆ ಬನಾರ್ಸಿ ಪಂಡಾ ಎಂಬವರು ತನ್ನ ಸಾಕ್ಷö್ಯದಲ್ಲಿ ೧೯೩೨ರಿಂದಲೇ ಅಯೋಧ್ಯೆ ರಾಮಜನ್ಮಭೂಮಿಗೆ ಬರುತ್ತಿದ್ದುದಾಗಿ ಹೇಳಿದರು. ಅವರ ಮಾವ (ಪತ್ನಿಯ ತಂದೆ) ಅಲ್ಲಿ ತೀರ್ಥಪುರೋಹಿತರು; ರಾಮನವಮಿಯ ವೇಳೆ ಸುಮಾರು ೧೦-೧೫ ಲಕ್ಷ ರಾಮಭಕ್ತರು ಅಯೋಧ್ಯೆಗೆ ಬರುತ್ತಿದ್ದರು. ಸರಯೂ ನದಿಯಲ್ಲಿ ಸ್ನಾನ ಮಾಡಿ ಜನ್ಮಭೂಮಿಯ ದರ್ಶನ ಮಾಡುತ್ತಿದ್ದರು. ರಾಮಚಬೂತ್ರದ ಮೇಲೆ ಮಾತ್ರವಲ್ಲ; ಅಲ್ಲಿಯ ಅಶ್ವತ್ಥ (ಅರಳಿ) ಮತ್ತು ಬೇವಿನ ಮರಗಳ ಕೆಳಗೆ ಕೂಡ ದೇವರ ಮೂರ್ತಿಗಳಿದ್ದವು (ಗಣೇಶ, ಶಂಕರ ಇತ್ಯಾದಿ).
ಗ್ರಿಲ್-ಬ್ರಿಕ್ ಗೋಡೆಯ ಒಳಭಾಗವನ್ನು ‘ಗರ್ಭಗೃಹ’ ದೇವಾಲಯ ಎಂದು ಕರೆಯುತ್ತಿದ್ದರು. ಆ ಕಟ್ಟಡಕ್ಕೆ ಮೂರು ಗುಮ್ಮಟಗಳಿದ್ದು, ಮಧ್ಯದ ಗುಮ್ಮಟದ ಕೆಳಗಿನ ಸ್ಥಳವೇ ರಾಮ ಜನಿಸಿದ ಜಾಗ ಎಂದು ಜನ ಹೇಳುತ್ತಿದ್ದರು. ಅಲ್ಲಿ ರಾಮನ ಚಿತ್ರವೊಂದನ್ನು ನೇತಾಡಿಸಿದ್ದರು – ಮುಂತಾಗಿ ರಾಮನಾಥ ಮಿಶ್ರಾ ಹೇಳಿದ್ದರು.
ಗಮನಾರ್ಹ ಸಂಗತಿಯೆಂದರೆ, ಹಿಂದುಗಳು ಇದನ್ನು ಶ್ರೀರಾಮ ಹುಟ್ಟಿದ ಸ್ಥಳವೆಂದು ತಿಳಿಯುವ ಅಂಶವನ್ನು ಮುಸ್ಲಿಂ ಸಾಕ್ಷಿಗಳು ಕೂಡ ಉಲ್ಲೇಖಿಸಿದ್ದರು. ಜಾಗದ ವಿವರ ಮತ್ತು ಪೂಜಾಕ್ರಮದ ಬಗ್ಗೆ ಇಬ್ಬರೂ ಹೇಳಿದ್ದು ಅವು ಸಮಾನವಾಗಿವೆ.
ಬಾಬ್ರಿ ಮಸೀದಿಯ ಕಟ್ಟಡವನ್ನು ಉರುಳಿಸಿದಾಗ (೬ ಡಿಸೆಂಬರ್ ೧೯೯೨) ಸಿಕ್ಕಿದ ಅವಶೇಷಗಳಲ್ಲಿ ವಿಷ್ಣು ಹರಿ ಶಾಸನವೂ ಇತ್ತು. ಆ ನಿವೇಶನದಲ್ಲಿ ಹಿಂದೆ ವಿಷ್ಣು ಹರಿ ದೇವಾಲಯವಿತ್ತು. ಅದು ೧೨ನೇ ಶತಮಾನದ ಮಧ್ಯಭಾಗದ ಶಾಸನವಾಗಿದ್ದು, ಅದು ಸಂಸ್ಕೃತದಿಂದ ಉತ್ತರಭಾರತದ ಪ್ರಾದೇಶಿಕ ಭಾಷೆಗಳಿಗೆ ಬದಲಾಗುತ್ತಿದ್ದ ಕಾಲ. ವಿಷ್ಣು ಹರಿ ದೇವಾಲಯವನ್ನು ಉರುಳಿಸಿ ಕೆಡವಿ ಮಸೀದಿಯನ್ನು ಕಟ್ಟಿಸಿರಬಹುದೆಂದು ಅಭಿಪ್ರಾಯಪಡಲಾಗಿದೆ. ಗಢವಾಲ ವಂಶದ ರಾಜ ಗೋವಿಂದಚಂದ್ರನ (೧೧೧೪-೧೧೫೫) ಬಗ್ಗೆ ಈ ಶಾಸನ ಉಲ್ಲೇಖಿಸಿದೆ.
ವಿದೇಶೀ ಪ್ರವಾಸಿಗರ ಸಾಕ್ಷ್ಯ
ನ್ಯಾಯಾಲಯವು ವಿದೇಶೀ ಪ್ರವಾಸಿಗರ ಬರಹಗಳನ್ನು ಕೂಡ ಸಾಕ್ಷö್ಯವಾಗಿ ಬಳಸಿಕೊಂಡಿದೆ. ಅದರಲ್ಲಿ ೧೬೦೮-೧೧ರ ಹೊತ್ತಿಗೆ ಅಯೋಧ್ಯೆಗೆ ಭೇಟಿ ನೀಡಿದ ವಿಲಿಯಂ ಫಿಂಚ್ “ಇಲ್ಲಿ ರಾಮಚಂದ್ರನ ಕೋಟೆ ಮತ್ತು ಮನೆಗಳ ಅವಶೇಷವಿದೆ. ದೊಡ್ಡ ದೇವರು ಅಲ್ಲಿ ಅವತಾರವೆತ್ತಿದ್ದನೆಂದು ಭಾರತೀಯರು ತಿಳಿಯುತ್ತಾರೆ. ಅಲ್ಲಿಯ ಮಣ್ಣಿನ ದಿಬ್ಬವನ್ನು ರಾಮನ ಕೋಟೆ ಎನ್ನುತ್ತಾರೆ” ಎಂದು ಹೇಳಿದ್ದಾನೆ.
೧೭೪೩ರ ಹೊತ್ತಿಗೆ ಅಯೋಧ್ಯೆಗೆ ಭೇಟಿ ನೀಡಿದ ಟೀಫನ್ಥಾಲರ್, “ಅಯೋಧ್ಯೆಯ ಮುಖ್ಯರಸ್ತೆ ಉತ್ತರ-ದಕ್ಷಿಣಕ್ಕೆ ಸುಮಾರು ಒಂದು ಮೈಲು ಉದ್ದವಿದೆ. ಪಟ್ಟಣದ ಅಗಲ ಅದಕ್ಕಿಂತ ಸ್ವಲ್ಪ ಕಡಮೆ ಇದೆ. ಅಲ್ಲಿಯ ಮುಖ್ಯ ಸ್ಥಳ ‘ಸ್ವರ್ಗದ್ವಾರ’ ಎಂಬ ದೇವಳವಾಗಿದ್ದು, ಶ್ರೀರಾಮ ಅಲ್ಲಿಯ ನಿವಾಸಿಗಳನ್ನು ಸ್ವರ್ಗಕ್ಕೆ ಕರೆದೊಯ್ದ. ಆಗ ಬಹುತೇಕ ನಿರ್ಜನವಾದ ನಗರವನ್ನು ಮತ್ತೆ ಜನವಸತಿಯ ಮಟ್ಟಕ್ಕೆ ತಂದವನು ವಿಕ್ರಮಾದಿತ್ಯ ಎಂದು ಜನ ಹೇಳುತ್ತಾರೆ. ಒಂದು ಕಾಲದಲ್ಲಿ ಅಲ್ಲಿದ್ದ ಮನೆಯಲ್ಲಿ ಶ್ರೀರಾಮ ಜನಿಸಿದ. ಅದನ್ನು ಔರಂಗಜೇಬ ಅಥವಾ ಬಾಬರ್ ನಾಶಮಾಡಿದರು. ಆ ಜಾಗದಲ್ಲಿ ಜನ ಈಗಲೂ ಮೂರು ಸುತ್ತು (ಪರಿಕ್ರಮ) ಬಂದು ನಮಸ್ಕಾರ ಮಾಡುತ್ತಾರೆ. ಅಲ್ಲಿ ರಾಮನ ಜನ್ಮದಿನವನ್ನು (ರಾಮನವಮಿ) ಆಚರಿಸುತ್ತಾರೆ. ರಾಮಕೋಟೆಯು ನದಿಯ ದಂಡೆಯ ಮೇಲಿದೆ; ಅಲ್ಲೊಂದು ಬೇಡಿ (ತೊಟ್ಟಿಲು) ಇದೆ” ಎಂದು ದಾಖಲಿಸಿದ್ದಾನೆ.
ಫೈಜಾಬಾದ್ನ ಕಮಿಷನರ್ ಮತ್ತು ಸೆಟ್ಲ್ಮೆಂಟ್ ಅಫೀಸರ್ ಕಾರ್ನೇಗಿ ಅಯೋಧ್ಯೆ-ಫೈಜಾಬಾದ್ ಬಗೆಗೆ ಒಂದು ಇತಿಹಾಸದ ಪುಸ್ತಕವನ್ನು ಬರೆದಿದ್ದು, ಅದರಲ್ಲಿ ಆತ ಮುಸಲ್ಮಾನರಿಗೆ ಮೆಕ್ಕಾ ಹೇಗೋ, ಯಹೂದಿಗಳಿಗೆ ಜೆರುಸಲೇಂ ಹೇಗೋ, ಅದೇರೀತಿ ಹಿಂದುಗಳಿಗೆ ಅಯೋಧ್ಯೆ ಎಂದಿದ್ದಾನೆ. “೧೮೫೫ರಲ್ಲಿ ಅಯೋಧ್ಯೆಯಲ್ಲೊಂದು ಹಿಂದೂ-ಮುಸ್ಲಿಂ ಘರ್ಷಣೆ ನಡೆಯಿತು. ಹಿಂದುಗಳು ಹನುಮಾನ್ಘಡಿಯಲ್ಲಿದ್ದರೆ, ಮುಸ್ಲಿಮರು ಜನ್ಮಸ್ಥಾನವನ್ನು ವಶಮಾಡಿಕೊಂಡಿದ್ದರು. ಮುಸ್ಲಿಮರು ಹನುಮಾನ್ಘಡಿಯ ಮೇಲೆ ದಾಳಿಗೆ ಯತ್ನಿಸಿದ್ದು, ಅದಕ್ಕೆ ಹಿಂದುಗಳು ಪ್ರತಿರೋಧವೊಡ್ಡಿದರು. ಆಗ ಘರ್ಷಣೆಯುಂಟಾಗಿ ೭೫ ಜನ ಮುಸ್ಲಿಮರು ಮೃತಪಟ್ಟರು; ಅವರನ್ನು ಸಮೀಪದ ಗೋರಿಗಳಲ್ಲಿ ಹೂತರು; ಮತ್ತು ಹಿಂದುಗಳು ರಾಮಜನ್ಮಸ್ಥಾನವನ್ನು ತಮ್ಮ ವಶಕ್ಕೆ ತೆಗೆದುಕೊಂಡರು” ಎಂದಾತ ಹೇಳಿದ್ದಾನೆ.
ಹಿಂದು-ಮುಸ್ಲಿಂ ಏಕತೆ
ಕಾರ್ನೇಗಿಯ ಪ್ರಕಾರ ಈ ಘಟನೆಯ ತನಕ ಜನ್ಮಸ್ಥಾನದಲ್ಲಿ ಹಿಂದೂ-ಮುಸ್ಲಿಂ ಇಬ್ಬರೂ ಒಟ್ಟಾಗಿ ಪ್ರಾರ್ಥನೆ-ಆರಾಧನೆ ನಡೆಸುತ್ತಿದ್ದರು. ಈ ಘಟನೆಯ ಬಳಿಕ ವಸಾಹತು ಸರ್ಕಾರ ಅಲ್ಲೊಂದು ರೈಲಿಂಗ್ ಹಾಕಿ, ಬೇಲಿಯ ಒಳಗೆ ಮುಸ್ಲಿಮರು, ಹೊರಗೆ ಹಿಂದುಗಳ ಪ್ರಾರ್ಥನೆ, ಆಚರಣೆ ಎಂದಿತು. ಹಿಂದುಗಳು ಅಲ್ಲೊಂದು ಪ್ಲ್ಲಾಟ್ಫಾರ್ಮ್(ಚಬೂತ್ರ) ಮಾಡಿಕೊಂಡರು. ಗಲಭೆಗೆ ಮುನ್ನ ಅದು ಎರಡೂ ಜೊತೆಗಿದ್ದ ‘ಮಸೀದಿ-ದೇವಳ’ವಾಗಿತ್ತು.
ಅಯೋಧ್ಯೆಯ ಘಟನಾವಳಿಗಳನ್ನು ವಿಶ್ಲೇಷಿಸಿದ ಸುಪ್ರೀಂಕೋರ್ಟಿನ ಪಂಚಸದಸ್ಯರ ಪೀಠ, (ರಾಮಜನ್ಮಸ್ಥಳದ) ಒಳಾಂಗಣ-ಹೊರಾಂಗಣಗಳ ನಡುವೆ ರೈಲಿಂಗ್ ಹಾಕಿದ್ದೆಂದರೆ ಆಸ್ತಿ ಹಕ್ಕನ್ನು ಸೆಟ್ಲ್ ಮಾಡಿದ್ದು ಎಂದಲ್ಲ; ಕಾನೂನು-ಸುವ್ಯವಸ್ಥೆಗಾಗಿ ಕೈಗೊಂಡ ತುರ್ತುಕ್ರಮ ಆಗಿತ್ತಷ್ಟೆ ಎಂದು ಹೇಳಿದೆ.
೧೮೫೮ರಿಂದ ೧೮೮೩ರವರೆಗಿನ ವಿವಾದಗಳಿಂದ ತಿಳಿಯುವ ಅಂಶವೆಂದರೆ, ವಿವಾದಗಳು ಮತ್ತೆ ಕೂಡ ಮುಂದುವರಿದ ಕಾರಣ ಹಿಂದುಗಳನ್ನು ಒಳಗಿನ ಅಂಗಳದಿಂದ ತಡೆಯುವ ಅಗತ್ಯವಿತ್ತು; ಆದ್ದರಿಂದ ಹೊರಗಿನ ಅಂಗಳದಲ್ಲಿ ಅವರ ಚಟುವಟಿಕೆ ಮುಂದುವರಿದಿದೆ ಎಂದರ್ಥ. ೧೮೭೭ರಲ್ಲಿ ವಸಾಹತು ಆಡಳಿತವು ಹೊರ-ಅಂಗಳಕ್ಕೆ ಇನ್ನೊಂದು ದ್ವಾರವನ್ನು ಮಾಡಿದ ಕಾರಣವೆಂದರೆ, ಹಿಂದುಗಳಿಗೆ ಅದರ ಅಗತ್ಯವಿತ್ತು ಎಂದರ್ಥ. ಆ ದ್ವಾರದ ಬಗ್ಗೆ ಬಂದ ಆಕ್ಷೇಪಗಳನ್ನು ತಳ್ಳಿಹಾಕಲಾಯಿತು. ಅಲ್ಲಿ ಆಗ ತುಂಬಾ ಭಕ್ತರು ಬರುತ್ತಿದ್ದರು ಎಂಬುದು ಇದರಿಂದ ತಿಳಿಯುತ್ತದೆ.
ರಾಮಚಬೂತ್ರ, ಸೀತಾರಸೋಯಿ – ಹೀಗೆ ಹಲವು ಕಡೆ ಹಿಂದುಗಳು ಪೂಜೆ ಮಾಡುತ್ತಿದ್ದರು. ಅಲ್ಲಿದ್ದ ಭಂಡಾರವು (ಸ್ಟೋರ್ ರೂಮ್) ಅವರ ನಿಯಂತ್ರಣದಲ್ಲಿತ್ತು. ಅಲ್ಲಿ ಅವರು ವಿವಿಧ ಚಟುವಟಿಕೆಗಳನ್ನು ನಡೆಸುತ್ತಿದ್ದರು.
೧೮೫೭ ಮತ್ತು ೧೯೪೯ರ ನಡುವೆ ರಾಮಜನ್ಮಭೂಮಿಯಲ್ಲಿ ಹಲವು ಘಟನೆಗಳು ನಡೆದಿವೆ. ಅದರ ಅರ್ಥವೆಂದರೆ, ಒಳ-ಅಂಗಳದ ಮಾಲೀಕತ್ವದ ಬಗ್ಗೆ ಗಂಭೀರವಾದ ಸ್ಫರ್ಧೆಯಿತ್ತು. ಮುಸ್ಲಿಮರಿಗೆ ಹೊರ-ಅಂಗಳದ ಮೇಲೆ ಯಾವುದೇ ಅಧಿಕಾರ ಇರಲಿಲ್ಲ. ೧೮೫೮ರ ಅನಂತರ ಒಳ-ಅಂಗಳದ ಬಳಕೆ ಒಬ್ಬರದೇ (ಮುಸ್ಲಿಮರು) ಕೈಯಲ್ಲಿತ್ತು ಎಂಬುದಕ್ಕೆ ಸಾಕ್ಷö್ಯಗಳ ಕೊರತೆಯಿದೆ. ಎರಡೂ ಅಂಗಳಗಳು ವಕ್ಫ್ ಆಸ್ತಿ ಎಂಬುದು ನಾಲ್ಕನೇ ದಾವೆಯವರ ವಾದ. ಅದನ್ನು ಒಪ್ಪಲಾಗದು. ಏಕೆಂದರೆ ಹಿಂದುಗಳ ಪೂಜೆ ನಡೆಯುತ್ತಲೇ ಇದೆ. ಸುನ್ನಿ ವಕ್ಫ್ಬೋರ್ಡ್ನ ವಾದವನ್ನು ಒಪ್ಪಿದರೆ ಹಿಂದುಗಳ ಹಕ್ಕನ್ನು ನಿರಾಕರಿಸಬೇಕಾಗುತ್ತದೆ. ಮಸೀದಿಯನ್ನು ನಿರ್ಮಿಸಿದ ಕಾರಣ ಆ ಜಾಗವು ಅಂದಿನಿಂದಲೇ ತಮ್ಮ ವಶದಲ್ಲಿತ್ತು ಎಂದವರು ವಾದಿಸುತ್ತಾರೆ. ಆದರೆ ೧೫೨೮-೧೮೬೦ರ ಅವಧಿಯ ಮಾಲೀಕತ್ವದ ಯಾವುದೇ ದಾಖಲೆ ಅವರ ಬಳಿ ಇಲ್ಲ – ಎಂದು ಸರ್ವೋಚ್ಚ ನ್ಯಾಯಾಲಯ ಸ್ಪಷ್ಟಪಡಿಸಿದೆ.
ಪಟ್ಟಾ ನಿರ್ಧರಿಸುವಾಗ
“ಪಟ್ಟಾದ ಬಗ್ಗೆ ನಿರ್ಧರಿಸುವಾಗ ಆ ಜಾಗದಲ್ಲಿ ಮಸೀದಿ ಇದ್ದುದನ್ನು ಗಮನಿಸಬೇಕು. ಆದರೆ ಅದು ಪ್ರಶ್ನಾತೀತ ಅಲ್ಲ. ಅದಕ್ಕಾಗಿ ಸುದೀರ್ಘಕಾಲದ ವಿದ್ಯಮಾನಗಳನ್ನು ನೋಡಿ ನಿರ್ಧರಿಸಬೇಕು. ಹೊರ-ಅಂಗಳದಲ್ಲಿ ರಾಮಚಬೂತ್ರ, ಸೀತಾರಸೋಯಿ ಮುಂತಾದವು ಇದ್ದವೆಂಬುದನ್ನು ಹಿಂದೂ-ಮುಸ್ಲಿಂ ಎರಡೂ ಕಡೆಯ ಸಾಕ್ಷಿಗಳು ಒಪ್ಪಿದ್ದಾರೆ. ಅಲ್ಲಿ ಹಿಂದುಗಳ ಪೂಜೆ, ಪ್ರಾರ್ಥನೆ ನಿರಂತರವಾಗಿತ್ತು. ಆದ್ದರಿಂದ ಆ ಭಾಗಕ್ಕೆ ಅವರ ಮಾಲೀಕತ್ವವು ದೃಢವಾಗುತ್ತದೆ.
ಹಿಂದುಗಳ ಅಚಲ ಭಕ್ತಿ
೧೮೫೭ರಲ್ಲಿ ಗ್ರಿಲ್ ಮತ್ತು ಇಟ್ಟಿಗೆಯ ಗೋಡೆ ನಿರ್ಮಿಸಿದರೂ ಕೂಡ ಹಿಂದುಗಳು ಒಳ ಮತ್ತು ಹೊರ ಅಂಗಳದ ವಿಭಜನೆಯನ್ನು ಒಪ್ಪಿಕೊಳ್ಳಲೇ ಇಲ್ಲ. ಅವರ ಮಟ್ಟಿಗೆ ಇಡೀ ಸಂಕೀರ್ಣವು ಧಾರ್ಮಿಕ ಮಹತ್ತ್ವದ್ದು. ಕೇವಲ ಕಾನೂನು-ಸುವ್ಯವಸ್ಥೆಗಾಗಿ ಬ್ರಿಟಿಷರು ಹಾಗೆ ಗುರುತಿಸಿದರಷ್ಟೆ. ಅವರ ಪ್ರಕಾರ ಗರ್ಭಗೃಹವೇ (ಮಸೀದಿಯ ಮಧ್ಯದ ಗುಮ್ಮಟದ ಕೆಳಗಿನ ಜಾಗ) ರಾಮನ ಜನ್ಮಸ್ಥಳ. ಯಾತ್ರಿಕರು ರೈಲಿಂಗ್ನ ಹೊರಗೆ ನಿಂತು ಗರ್ಭಗೃಹದ ಕಡೆಗೆ ನೋಡುತ್ತಾ ಪ್ರಾರ್ಥನೆ ಮಾಡುತ್ತಿದ್ದರು ಎಂಬುದರಿಂದ ಇದು ಸಾಬೀತಾಗುತ್ತದೆ. ನಿಹಾಂಗ್ ಸಂಘದ ವಿರುದ್ಧ ಬಾಬ್ರಿ ಮಸೀದಿಯ ಮೋಝಿನ್ ೧೮೫೮ರಲ್ಲಿ ಮಾಡಿದ ದೂರಿನಿಂದಲೂ ಈ ವಿಷಯ ತಿಳಿಯುತ್ತದೆ.
ಹಿಂದೆ ಶತಮಾನಗಳ ಕಾಲ ರಾಮಜನ್ಮಸ್ಥಾನದ ಗುರುತು ಅಲ್ಲಿತ್ತು; ಮತ್ತು ಹಿಂದುಗಳು ಮೂರು ಗುಮ್ಮಟಗಳ ಕಟ್ಟಡದ ಒಳಗೇ ಪೂಜೆ ಸಲ್ಲಿಸುತ್ತಿದ್ದರು ಎಂದು ಸಾಕ್ಷಿಗಳು ಹೇಳಿದ್ದಾರೆ. ನಿವೇಶನವನ್ನು ವಿಭಜಿಸುವ ಹೊತ್ತಿಗೆ ಹಿಂದುಗಳು ಕೆಲವು ಜಾಗಗಳಲ್ಲಿ (ರಾಮಚಬೂತ್ರ, ಸೀತಾರಸೋಯಿ ಮುಂತಾದ ಕಡೆ) ಹಲವು ರೀತಿಯಲ್ಲಿ (ಪರಿಕ್ರಮ ಇತ್ಯಾದಿ) ಪೂಜೆ, ಪ್ರಾರ್ಥನೆ ಸಲ್ಲಿಸುತ್ತಿದ್ದರು. ರೈಲಿಂಗ್ ಹಾಕಿದ ಮೇಲೆ ಹೊರ ಅಂಗಳದ ಅರಳಿ, ಬೇವು ಮರಗಳ ಕೆಳಗೂ ಮೂರ್ತಿಗಳನ್ನಿಟ್ಟು ಪೂಜಿಸಿದರು. ಅಂದರೆ ಹೊರ-ಅಂಗಳವು ಸುಭದ್ರವಾಗಿ ಅವರ ಕೈಯಲ್ಲಿತ್ತು. ಅಂದರೆ ಗರ್ಭಗೃಹವು ರಾಮನ ಜನ್ಮಸ್ಥಳ ಎಂಬುದು ಹಿಂದುಗಳ ದೃಢವಾದ ನಂಬಿಕೆಯಾಗಿದ್ದು, ರೈಲಿಂಗ್ ಗೋಡೆ ನಿರ್ಮಿಸಿದರೂ ಅದು ಬದಲಾಗಲಿಲ್ಲ; ರೈಲಿಂಗ್ ಒಳಗಿನ ಜಾಗವನ್ನು ಮುಸ್ಲಿಮರು ಬಳಸುತ್ತಿದ್ದರೂ ಆ ಬಳಕೆ ವಿವಾದಗ್ರಸ್ತವಾಗಿತ್ತು. ಅದು ಎಲ್ಲ ಕಡೆಯಿಂದಲೂ ಬೇರೆಯವರ ಭೂಮಿಯಿಂದ ಸುತ್ತುವರಿದ (landlocked) ಜಾಗ; ಅಲ್ಲಿಗೆ ಹೋಗಲು ದಾರಿಯಿಲ್ಲ. ಹೊರ-ಅಂಗಳದ ಎರಡು ದ್ವಾರಗಳ ಮೂಲಕವೇ ಅವರು ಹೋಗಬೇಕು; ಆ ಜಾಗ ಯಾವಾಗಲೂ ಹಿಂದುಗಳ ಸ್ವಾಧೀನದಲ್ಲಿತ್ತು.
ಜಾಗಕ್ಕೆ ದಾಖಲೆ ಇಲ್ಲ
ಸುನ್ನಿ ವಕ್ಫ್ಬೋರ್ಡ್ನ ದಾವೆಯನ್ನು ಗಮನಿಸುವುದಾದರೆ ೧೮೬೦ಕ್ಕೆ ಮುನ್ನ ಮಸೀದಿ ನಿರ್ವಹಣೆಗೆ ಬ್ರಿಟಿಷರು ಖರ್ಚು ಮಾಡಿದ ದಾಖಲೆ ಮಾತ್ರ ಇದೆ; ಅದನ್ನು ಒಪ್ಪಿಕೊಂಡರೂ ಕೂಡ ವಿವಾದಿತ ಜಾಗದ ಪಟ್ಟಾದ ಬಗ್ಗೆ ಅದು ಹೇಳುವುದಿಲ್ಲ. ಅದು ಕಂದಾಯವಿಲ್ಲದ ಭೂಮಿ; ಅಂದರೆ ಸುಮಾರು ೩೨೫ ವರ್ಷಗಳ ಬಗ್ಗೆ ದಾಖಲೆಯ ಅಭಾವವಿದೆ ಎಂದು ಪೀಠ ಗಮನಿಸಿದೆ.
೧೮೫೬-೫೭ರಲ್ಲಿ ರೈಲಿಂಗ್ ಗೋಡೆ ಹಾಕಿದ ಕಾರಣ ಹಿಂದುಗಳು ಕೂಡಲೆ ಚಬೂತ್ರವನ್ನು ಮಾಡಿಕೊಂಡರು. ಅದಕ್ಕೆ ಮುನ್ನ ಎರಡೂ ಸಮುದಾಯದವರು ಒಟ್ಟಿಗೇ ಪೂಜೆ, ಪ್ರಾರ್ಥನೆ ಮಾಡುತ್ತಿದ್ದರು; ಹಿಂದುಗಳು ಮಧ್ಯದ ಗುಮ್ಮಟದ ಕೆಳಗೆ ಹೋಗಿ ಪೂಜಿಸುತ್ತಿದ್ದರು. ೧೮೫೮ರ ನವೆಂಬರ್ನಲ್ಲಿ ನಿಹಾಂಗ್ಸಿಂಗ್ ಒಂದು ಹವನ ಮಾಡಿಸಿದ; ಮತ್ತು ಮಸೀದಿಯ ಆವರಣದೊಳಗೆ ‘ಶ್ರೀ ಭಗವಾನ್’ ಎಂಬ ಗುರುತನ್ನು (ಸಿಂಬಲ್) ನೆಟ್ಟ. ಅನಂತರ ಅನೇಕ ಘಟನೆಗಳು ನಡೆದು ಹಿಂದುಗಳನ್ನು ಪೂರ್ತಿಯಾಗಿ ಹೊರಗೆ ಹಾಕಲಾಯಿತು. ಆದರೂ ಅದು ಪೂರ್ತಿ ಜಾರಿ ಆಗಲಿಲ್ಲ. ನಿಹಾಂಗ್ಸಿಂಗ್ ಹೊರಗೆ ಹಾಕಿದ್ದಕ್ಕೆ ವಿರೋಧ ಬಂತು. ಮುಂದೆ ಅದೇ ಡಿಸೆಂಬರ್ನಲ್ಲಿ ಮಸೀದಿಯ ಒಂದು ಧ್ವಜವನ್ನು ಕಿತ್ತುಹಾಕಿದರು; ನಿಹಾಂಗ್ಸಿಂಗ್ನನ್ನು ಉಚ್ಚಾಟಿಸಿದ್ದಾರೆಂದು ದಾಖಲಿಸಲಾಯಿತು.
೧೮೬೦ರ ನವೆಂಬರ್ನಲ್ಲಿ ಮಸೀದಿಯ ಸಿಬ್ಬಂದಿ ರಜ್ಜಬ್ ಅಲಿ ಎಂಬಾತ ಖಬರಸ್ತಾನದಲ್ಲಿ ಹೊಸ ಚಬೂತ್ರವನ್ನು ನಿರ್ಮಿಸುತ್ತಿದ್ದಾರೆಂದು ದೂರು ನೀಡಿದ. ಮಸೀದಿಯ ಮೋಜಿನ್ ಆಜಾನ್ ಕೂಗುವಾಗ ಹಿಂದುಗಳು ಶಂಖ ಊದಿ ಅಡ್ಡಿಪಡಿಸುತ್ತಾರೆಂದು ಕೂಡ ದೂರು ಬಂತು. ಆ ರೀತಿಯಲ್ಲಿ ಅಲ್ಲಿ ಮತೀಯ ಆಚರಣೆ ಬಗ್ಗೆ ಸ್ಪರ್ಧೆಯೇ ನಡೆದಿತ್ತೆಂದು ಕೋರ್ಟ್ ವಿಶ್ಲೇಷಿಸಿದೆ.
‘ಸುಪ್ರೀಂ’ ತೀರ್ಪು
ವಿಚಾರಣೆಯಿಂದ ವ್ಯಕ್ತವಾಗುವ ಅಂಶಗಳನ್ನು ಪಟ್ಟಿ ಮಾಡಿದ ಸರ್ವೋಚ್ಚ ನ್ಯಾಯಾಲಯದ ಪಂಚಸದಸ್ಯರ ಪೀಠವು, ಮಸೀದಿಯ ತಳಪಾಯವನ್ನು ಹಿಂದೆ ಇದ್ದ ಒಂದು ಬೃಹತ್ ಕಟ್ಟಡದ ಮೇಲೆ ರಚಿಸಲಾಗಿದೆ; ಆ ಹಿಂದಿನ ಕಟ್ಟಡವು ಸುಮಾರು ೧೨ನೇ ಶತಮಾನದ್ದು; ನಾಶಮಾಡಲಾದ ಕಟ್ಟಡವು ಹಿಂದೂಧಾರ್ಮಿಕ ಕಟ್ಟಡವಾಗಿರಬೇಕು. ವಿವಾದಿತ ಸ್ಥಳವು ರಾಮನ ಜನ್ಮಸ್ಥಳ ಎಂಬುದು ಹಿಂದುಗಳ ನಂಬಿಕೆಯಾಗಿತ್ತೆಂಬುದು ವಿದೇಶೀ ಪ್ರವಾಸಿಗರ ಬರಹಗಳಿಂದ ಕೂಡ ತಿಳಿಯುತ್ತದೆ. ವಿವಾದಿತ ಸ್ಥಳದ ಬಳಿ ಅವರು ಪೂಜೆ, ಪರಿಕ್ರಮಗಳನ್ನು ಮಾಡುತ್ತಿದ್ದರು. ಈ ನಿವೇಶನದಲ್ಲಿ ಮಸೀದಿ ಇದ್ದರೂ ಕೂಡ ಹಿಂದುಗಳು ತಮ್ಮ ಪೂಜೆ-ಆರಾಧನೆಗಳನ್ನು ನಿಲ್ಲಿಸಲಿಲ್ಲ. ಅಂದರೆ ಜನ್ಮಭೂಮಿ ಬಗೆಗಿನ ಅವರ ನಂಬಿಕೆ ಅಚಲವಾಗಿತ್ತು. ಮಸೀದಿಯ ಒಳಗೇ ಪೂಜಿಸಬೇಕೆಂದು ಹಿಂದುಗಳು ಪಟ್ಟುಹಿಡಿದ ಕಾರಣ ಗಲಭೆಯುಂಟಾಗಿ ಸರ್ಕಾರ ೧೮೫೭ರಲ್ಲಿ ರೈಲಿಂಗ್ ಹಾಕಿತು. ಆಗಲೇ ಹಿಂದುಗಳು ರಾಮಚಬೂತ್ರ ಮಾಡಿಕೊಂಡರು; ಆದರೂ ಮಧ್ಯದ ಗುಮ್ಮಟದ ಕೆಳಗೆ ಪೂಜೆ ಮಾಡಬೇಕೆನ್ನುವ ತಮ್ಮ ಹಕ್ಕಿನ ಬಗ್ಗೆ ಅವರು ಒತ್ತಾಯಿಸುತ್ತಲೇ ಇದ್ದರು. ಒಳಗಿನ ‘ಗರ್ಭಗೃಹ’ದ ಕಡೆಗೆ ನೋಡುತ್ತಿದ್ದರು. ಇದಕ್ಕೆ ಪ್ರತಿಯಾಗಿ ಮುಸ್ಲಿಮರ ಬಳಿ ಯಾವುದೇ ಸಾಕ್ಷ್ಯಗಳಿಲ್ಲ.
ರಾಮಚಬೂತ್ರ, ಸೀತಾರಸೋಯಿ, ಭಂಡಾರ, ತೊಟ್ಟಿಲು ಮುಂತಾದವುಗಳಿಂದ ತಿಳಿದುಬರುವ ಅಂಶವೆಂದರೆ, ಹೊರ-ಅಂಗಳವು ನಿರಂತರವಾಗಿ ಹಿಂದುಗಳ ಸ್ವಾಧೀನದಲ್ಲಿತ್ತು. ಮುಸ್ಲಿಮರಿಗೆ ಅಲ್ಲಿ ಏನೂ ಇರಲಿಲ್ಲ. ೧೮೭೭ರಲ್ಲಿ ಹಿಂದುಗಳ ಕೋರಿಕೆಯ ಮೇರೆಗೆ ಹೊರ-ಅಂಗಳದಲ್ಲಿ ಮತ್ತೊಂದು ದ್ವಾರವನ್ನು ತೆರೆಯಲಾಯಿತು. ಅದಕ್ಕೆ ಬಂದ ವಿರೋಧವನ್ನು ಬ್ರಿಟಿಷ್ ಆಡಳಿತ ತಳ್ಳಿಹಾಕಿತು; ಅಂದರೆ ಹಿಂದೂ ಯಾತ್ರಿಕರು ಅಲ್ಲಿಗೆ ಭಾರೀ ಸಂಖ್ಯೆಯಲ್ಲಿ ಬರುತ್ತಿದ್ದ ಕಾರಣ ಎರಡನೇ ಬಾಗಿಲು ಅಗತ್ಯವಾಗಿತ್ತು. ರಾಮನವಮಿ, ಸಾವನ್ ಝೂಲಾ, ಕಾರ್ತಿಕ ಪೂರ್ಣಿಮೆ, ಪರಿಕ್ರಮ ಮೇಳ, ರಾಮವಿವಾಹ ಮುಂತಾದ ವಿಶೇಷ ಸಂದರ್ಭಗಳಲ್ಲಿ ವಿವಾದಿತ ಸ್ಥಳದಲ್ಲಿ ದರ್ಶನಕ್ಕಾಗಿ ಯಾತ್ರಿಕರು ಭಾರೀ ಸಂಖ್ಯೆಯಲ್ಲಿ (ಲಕ್ಷಾಂತರ) ಬರುತ್ತಿದ್ದರು. ಮಸೀದಿಯ ಒಳಗಿನ ಕಸೌಟಿ ಕಲ್ಲಿನ ಕಂಬಗಳಿಗೆ ಹಿಂದುಗಳು ಪೂಜೆ ಸಲ್ಲಿಸುತ್ತಿದ್ದರೆಂದು ಸಾಕ್ಷಿಗಳು ಹೇಳಿದ್ದಾರೆ. ಮಸೀದಿಯ ಒಳಗೆ, ಹೊರಗೆ ಎರಡೂ ಕಡೆ ಹಿಂದೂ ಗುರುತುಗಳು ಇದ್ದುದನ್ನು ಮುಸ್ಲಿಂ ಸಾಕ್ಷಿಗಳು ಕೂಡ ಹೇಳಿದ್ದಾರೆ. ಮೂರು ಗುಮ್ಮಟದ ಹೊರಭಾಗದಲ್ಲಿ ವರಾಹ, ಜಯ-ವಿಜಯ, ಗರುಡ ಕೆತ್ತನೆಗಳಿದ್ದವು; ಅದರಿಂದ ನಂಬಿಕೆ ಮಾತ್ರವಲ್ಲ; ಅಲ್ಲಿ ಆರಾಧನೆಯೂ ಇತ್ತೆಂದು ತಿಳಿಯಬಹುದು – ಎಂದಿದೆ ಪೀಠ.
ಜಾಗಕ್ಕಾಗಿ ಗಲಭೆ
ಹಿಂದುಗಳು ಒಳ-ಅಂಗಳದ (ವಿವಾದಿತ ಜಾಗ) ಸ್ವಾಧೀನಕ್ಕೆ ಯತ್ನಿಸಿದಾಗ ೧೯೩೪ರಲ್ಲಿ ಕೋಮು ಹಿಂಸಾಚಾರ ನಡೆಯಿತು, ಮತ್ತು ಆಗ ಮಸೀದಿಯ ಗುಮ್ಮಟಗಳಿಗೆ ಹಾನಿಯಾಗಿ ದುರಸ್ತಿ ಮಾಡಬೇಕಾಯಿತು. ಈ ಘಟನೆಯ ಬಳಿಕ ಮಸೀದಿಯಲ್ಲಿ ಶುಕ್ರವಾರದ ನಮಾಜ್ ಮಾತ್ರ ನಡೆಯುತ್ತಿತ್ತು; ೧೯೪೯ರ ಅನಂತರ ಅದು ಕೂಡ ನಿಂತಿತು. ನಮಾಜ್ ಮಾಡಲು ಹೊರ-ಅಂಗಳದ ಮೂಲಕ ಹೋಗಬೇಕಿದ್ದ ಕಾರಣ ಅಲ್ಲಿದ್ದ ಬೈರಾಗಿಗಳು ಅಡ್ಡಿಪಡಿಸುತ್ತಿದ್ದರು. ೧೯೪೯ರ ಡಿಸೆಂಬರ್ ೨೨-೨೩ರ ರಾತ್ರಿ ೫೦-೬೦ ಜನ ಹಿಂದುಗಳು ಮಸೀದಿಯೊಳಗೆ (ಜನ್ಮಸ್ಥಳ) ದೇವರ ವಿಗ್ರಹಗಳನ್ನಿಟ್ಟರು. ಅದರಿಂದ ಮಸೀದಿ ಅಪವಿತ್ರವಾಯಿತೆಂದು ಮುಸ್ಲಿಮರು ದೂರಿದರು. ಅನಂತರ ಒಳ-ಅಂಗಳವನ್ನು ಅಟ್ಯಾಚ್ ಮಾಡಿ ರಿಸೀವರ್ಗೆ ಒಪ್ಪಿಸಲಾಯಿತು.
ಡಿಸೆಂಬರ್ ೬, ೧೯೯೨ರಂದು ವಿವಾದಿತ ಮಸೀದಿ ಕಟ್ಟಡವನ್ನು ಭಾರೀ ಸಂಖ್ಯೆಯ ಕರಸೇವಕರು ಉರುಳಿಸಿದರು; ಇದು ಅಲ್ಲಿ ಯಥಾಸ್ಥಿತಿ ಕಾಪಾಡಬೇಕೆಂಬ ಆದೇಶಕ್ಕೆ ವಿರುದ್ಧವಾಗಿತ್ತು; ಒಟ್ಟಿನಲ್ಲಿ ಹೊರ-ಅಂಗಳ ಹಿಂದುಗಳ ಸ್ವಾಧೀನದಲ್ಲಿದೆ; ಒಳ-ಅಂಗಳ (ಮೂರು ಗುಮ್ಮಟದ ಕಟ್ಟಡ)ದಲ್ಲಿ ಪೂಜೆ ಸಲ್ಲಿಸುವುದು ತಮ್ಮ ಹಕ್ಕೆಂದು ಹಿಂದುಗಳು ಹೇಳಿದರೆ ಮುಸ್ಲಿಮರು ಅದನ್ನು ವಿರೋಧಿಸಿದ್ದಾರೆ.
ಹೈಕೋರ್ಟ್ ತೀರ್ಪಿಗೆ ಆಕ್ಷೇಪ
ಅಲಹಾಬಾದ್ ಹೈಕೋರ್ಟಿನ ತೀರ್ಪನ್ನು ವಿಶ್ಲೇಷಿಸಿದ ಸರ್ವೋಚ್ಚ ನ್ಯಾಯಾಲಯ, ಅವರು ರಾಮಜನ್ಮಭೂಮಿಯ ಜಾಗವನ್ನು ಮೂರು ಭಾಗವಾಗಿ ವಿಭಜಿಸಿ ಮೂರು ಪಾರ್ಟಿಗಳಿಗೆ ನೀಡಿದರು; ಮುಖ್ಯವಾಗಿ ಅವರ ಮುಂದಿದ್ದ ದಾವೆ ವಿಭಜನೆಗೆ ಸಂಬಂಧಿಸಿದ್ದಲ್ಲ; ಅವರು ಅನುಸರಿಸಿದ ಸೂತ್ರ ಕ್ರಮಬದ್ಧವಾಗಿರಲಿಲ್ಲ; ಅವರ ಮುಂದೆ ಐದು ವಿಭಿನ್ನ ದಾವೆಗಳಿದ್ದವು. ನಿರ್ಮೋಹಿ ಅಖಾಡಾಕ್ಕೆ ಒಂದು ಸ್ವತಂತ್ರ ಪಾಲನ್ನು ಕೊಟ್ಟದ್ದು ಸರಿಯೆನಿಸುವುದಿಲ್ಲ – ಎಂದು ಹೇಳಿದೆ.
ಅಂತಿಮ ತೀರ್ಪಿನ ಬಗ್ಗೆ ಹೇಳುತ್ತ, ದಾವೆ ೪ ಮತ್ತು ೫ನ್ನು ಗಮನಿಸಿ ಹೇಳುವುದಾದರೆ ಮಸೀದಿಯನ್ನು ಕಳೆದುಕೊಂಡ ಮುಸ್ಲಿಮರಿಗೆ ಆ ಬಗ್ಗೆ ಬದಲಿ ನಿವೇಶನವನ್ನು ಕೊಡುವುದು ಅಗತ್ಯ. ಅದಕ್ಕಾಗಿ ಅಯೋಧ್ಯೆ ಪಟ್ಟಣದ ಬೇರೆ ಕಡೆ ಐದು ಎಕರೆ ಜಾಗವನ್ನು ಕೊಡಬೇಕು. ಕೇಂದ್ರಸರ್ಕಾರ ಸ್ವಾಧೀನಪಡಿಸಿಕೊಂಡ ಜಾಗದಲ್ಲಿ ಅಥವಾ ಉತ್ತರಪ್ರದೇಶ ಸರ್ಕಾರ ಅದನ್ನು ನೀಡಬಹುದು; ಸುನ್ನಿ ಸೆಂಟ್ರಲ್ ವಕ್ಫ್ಬೋರ್ಡ್ಗೆ ನೀಡಬೇಕು. ಒಳ ಮತ್ತು ಹೊರ-ಅಂಗಳ ಎರಡನ್ನೂ ಕೇಂದ್ರಸರ್ಕಾರ ರಚಿಸಿದ ಒಂದು ಟ್ರಸ್ಟ್ಗೆ ಅಥವಾ ಅಂತಹ ವ್ಯವಸ್ಥೆಗೆ ಒಪ್ಪಿಸಬೇಕು. ನಿರ್ಮೋಹಿ ಅಖಾಡಾದ ವಾದವನ್ನು ತಿರಸ್ಕರಿಸಲಾಗಿದೆ – ಎಂದು ತಿಳಿಸಲಾಗಿದೆ.
ಟ್ರಸ್ಟ್ ರಚನೆಗೆ ಮೂರು ತಿಂಗಳ ಅವಧಿ ನೀಡಲಾಗಿತ್ತು. ಗಮನಿಸಬೇಕಾದ ಒಂದು ಅಂಶವೆAದರೆ, ಹೈಕೋರ್ಟ್ ತೀರ್ಪು ೨೦೧೦ರಲ್ಲಿ ಬಂದರೂ ಕೂಡ ೨೦೧೪ರ ವರೆಗೆ ಸರ್ಕಾರದ ಕಡೆಯಿಂದ ಮಾಡಬೇಕಾದ ಕೆಲಸಗಳು ಕುಂಟುತ್ತಾ ಸಾಗಿದ್ದವು. ನರೇಂದ್ರ ಮೋದಿ ಅವರು ಕೇಂದ್ರದಲ್ಲಿ ಅಧಿಕಾರವಹಿಸಿಕೊಂಡ ಅನಂತರ ಅಯೋಧ್ಯೆ ರಾಮಜನ್ಮಭೂಮಿ ವಿವಾದ ಪರಿಹಾರ ಮತ್ತು ಮಂದಿರನಿರ್ಮಾಣದ ನಿಟ್ಟಿನಲ್ಲಿ ದೃಢವಾದ ಮತ್ತು ಕ್ರಮಬದ್ಧವಾದ ಹೆಜ್ಜೆಗಳನ್ನಿಟ್ಟುದನ್ನು ಗಮನಿಸಬಹುದು. ನ್ಯಾಯಾಂಗ ವ್ಯವಸ್ಥೆಯ ಬಗೆಗಿನ ತಮ್ಮ ಅಚಲ ವಿಶ್ವಾಸದ ಮೂಲಕ ಅವರು ಶೀಘ್ರವೇ ಮಂದಿರ ನಿರ್ಮಾಣವಾಗಬೇಕೆನ್ನುವ ಭಾವುಕ ಆಕ್ರೋಶಗಳಿಗೆ ಉತ್ತರಿಸುತ್ತಾ ಬಂದರು. ಎತ್ತ ಸಾಗಬೇಕು ಎನ್ನುವುದು ಅವರಿಗೆ ಖಚಿತವಾಗಿ ತಿಳಿದಿತ್ತು ಎನಿಸುತ್ತದೆ – ಅವರ ಇತರ ಹಲವು ನಡೆಗಳ ಹಾಗೆಯೇ.
ಸುನ್ನಿ ಸೆಂಟ್ರಲ್ ವಕ್ಫ್ಬೋರ್ಡ್ನವರು ತಮಗೆ ನೀಡಲಾಗುವ ಜಾಗದಲ್ಲಿ ತಮ್ಮ ಇಷ್ಟದಂತೆ ಮಸೀದಿಯನ್ನು ನಿರ್ಮಿಸಬಹುದು. ಹೊಸದಾಗಿ ರಚಿಸುವ ಟ್ರಸ್ಟ್ನಲ್ಲಿ ನಿರ್ಮೋಹಿ ಅಖಾಡಾದವರಿಗೆ ಪ್ರಾತಿನಿಧ್ಯ ನೀಡುವ ಬಗ್ಗೆ ಕೇಂದ್ರಸರ್ಕಾರ ಕ್ರಮಕೈಗೊಳ್ಳಬಹುದು – ಎಂದ ಸುಪ್ರೀಂ ಪಂಚಸದಸ್ಯರ ಪೀಠ, ನ್ಯಾಯದಾನದಲ್ಲಿ ತಮ್ಮ ವಿದ್ವತ್ತು, ದಕ್ಷತೆಗಳ ಮೂಲಕ ಉತ್ತಮ ಸಹಕಾರ ನೀಡಿದ ದಾವೆ ೫ರ ನ್ಯಾಯವಾದಿ ಕೆ. ಪರಾಶರನ್ ಮತ್ತು ವಕ್ಫ್ಬೋರ್ಡ್ನ ನ್ಯಾಯವಾದಿ ಡಾ. ರಾಜೀವ್ ಧವನ್ ಅವರಿಗೆ ತನ್ನ ಮೆಚ್ಚುಗೆಯನ್ನು ವ್ಯಕ್ತಪಡಿಸಿದೆ.
ಅಯೋಧ್ಯೆ ತೀರ್ಪಿನ ‘ಸುಪ್ರೀಂ’ ಪೀಠಿಕೆ
ಅಯೋಧ್ಯೆ ರಾಮಜನ್ಮಭೂಮಿ ಬಗೆಗಿನ ಈ ದಾವೆಯಲ್ಲಿ ನಿಜಾಂಶಗಳು, ಸಾಕ್ಷ್ಯಗಳು ಮತ್ತು ಮೌಖಿಕ ವಾದಗಳು, ಇತಿಹಾಸ, ಪ್ರಾಚ್ಯವಸ್ತು ಶಾಸ್ತ್ರ, ಮತಧರ್ಮ ಮತ್ತು ಕಾನೂನುಗಳ ವ್ಯಾಪ್ತಿಗೆ ವಿಸ್ತರಿಸಿವೆ. ಇತಿಹಾಸ, ಸಿದ್ಧಾಂತ ಮತ್ತು ಮತಧರ್ಮಗಳಿಗೆ ಸಂಬಂಧಿಸಿದ ರಾಜಕೀಯ ವಾದಗಳನ್ನು ಮೀರಿ ಕಾನೂನು ನಿಲ್ಲಬೇಕು. ಪ್ರಾಚ್ಯವಸ್ತುಗಳ ಉಲ್ಲೇಖಗಳಿಂದ ತುಂಬಿದ ಈ ದಾವೆಯಲ್ಲಿ ವ್ಯವಹರಿಸುವಾಗ ನಾವು ಕಾನೂನು ಇದಕ್ಕೊಂದು ತಳಹದಿಯನ್ನು ನೀಡುತ್ತದೆ; ಮತ್ತು ಅದರ ಮೇಲೆ ನಮ್ಮ ಬಹುಸಂಸ್ಕೃತಿಯ ಸಮಾಜವು ನಿಂತಿದೆ ಎಂಬುದನ್ನು ನೆನಪಿಡಬೇಕು. ಕಾನೂನು ರೂಪಿಸುವ ತಳಹದಿಯ ಮೇಲೆ ಇತಿಹಾಸ, ಸಿದ್ಧಾಂತ ಮತ್ತು ಧರ್ಮ ಸಂಬಂಧಿ ವಿಷಯಗಳು ಪರಸ್ಪರ ಸ್ಪರ್ಧಿಸಬಹುದು. ಅವುಗಳ ಮಿತಿಗಳನ್ನು ನಿರ್ಧರಿಸುವ ಮೂಲಕ ಅಂತಿಮ ನಿರ್ಧಾರಕ ವಾದ ಈ ನ್ಯಾಯಾಲಯವು ಒಬ್ಬ ನಾಗರಿಕನ ನಂಬಿಕೆಯು ಇನ್ನೊಬ್ಬ ನಂಬಿಕೆಯಲ್ಲಿ ಹಸ್ತಕ್ಷೇಪ ಮಾಡಬಾರದು; ಅಥವಾ ಇನ್ನೊಬ್ಬನ ಸ್ವಾತಂತ್ರ್ಯ-ನಂಬಿಕೆಗಳ ಮೇಲೆ ಪ್ರಾಬಲ್ಯವನ್ನು ಸ್ಥಾಪಿಸಬಾರದು ಎಂಬ ಸಮತೋಲನವನ್ನು ಕಾಯ್ದುಕೊಳ್ಳಬೇಕಾಗಿದೆ.
೧೯೪೭ರ ಆಗಸ್ಟ್ ೧೫ರಂದು ಒಂದು ರಾಷ್ಟ್ರವಾಗಿ ಭಾರತ ಸ್ವಯಂನಿರ್ಧಾರದ ಹಂತವನ್ನು ತಲಪಿತು. ಜನವರಿ ೨೬, ೧೯೫೦ರಂದು ನಾವು ನಮ್ಮ ಸಂವಿಧಾನವನ್ನು ಸ್ವೀಕರಿಸಿದೆವು. ಇದು ನಮ್ಮ ಸಮಾಜವನ್ನು ವ್ಯಾಖ್ಯಾನಿಸುವ ಮೌಲ್ಯಗಳ ಬಗೆಗಿನ ನಮ್ಮ ಬದ್ಧತೆಯಾಗಿದೆ. ಸಮಾನತೆಗೆ ಬದ್ಧತೆ ಮತ್ತು ಕಾನೂನಿನ ಪಾರಮ್ಯಗಳು ನಮ್ಮ ಸಂವಿಧಾನದ ಹೃದಯವೆನಿಸಿವೆ. ನಮ್ಮ ಸಂವಿಧಾನದ ಅಡಿಯಲ್ಲಿ ಎಲ್ಲ ನಂಬಿಕೆ, ಶ್ರದ್ಧೆ, ಪಂಥಗಳ ನಾಗರಿಕರು ತಮ್ಮ ಶ್ರದ್ಧೆಗೆ ಅನುಸಾರವಾಗಿ ಜೀವಿಸುತ್ತ ಕಾನೂನಿಗೆ ಒಳಪಡುತ್ತಾರೆ; ಮತ್ತು ಕಾನೂನಿನ ಮುಂದೆ ಸಮಾನರಾಗಿದ್ದಾರೆ. ಈ ನ್ಯಾಯಾಲಯದ ಎಲ್ಲ ನ್ಯಾಯಮೂರ್ತಿಗಳು ಸಂವಿಧಾನದ ಬಗೆಗಿನ ಕೆಲಸವನ್ನು ನಿರ್ವಹಿಸುವುದಷ್ಟೇ ಅಲ್ಲ; ಸಂವಿಧಾನ ಮತ್ತದರ ಮೌಲ್ಯಗಳನ್ನು ಎತ್ತಿಹಿಡಿಯಲು ಪ್ರತಿಜ್ಞಾಬದ್ಧರಾಗಿದ್ದಾರೆ.
ನಮ್ಮ ಸಂವಿಧಾನವು ಎರಡು ಧರ್ಮಗಳ ನಂಬಿಕೆ-ಶ್ರದ್ಧೆಗಳ ನಡುವೆ ಯಾವುದೇ ತಾರತಮ್ಯವನ್ನು ಮಾಡುವುದಿಲ್ಲ. ಎಲ್ಲ ಬಗೆಯ ನಂಬಿಕೆ, ಆರಾಧನೆ ಮತ್ತು ಪ್ರಾರ್ಥನೆಗಳು ಇಲ್ಲಿ ಸಮಾನವಾಗಿವೆ. ಸಂವಿಧಾನವನ್ನು ವ್ಯಾಖ್ಯಾನಿಸುವುದು, ಅದನ್ನು ಜಾರಿ ಮಾಡುವುದು ಮತ್ತು ಅದರಲ್ಲಿ ತಮ್ಮನ್ನು ತೊಡಗಿಸಿಕೊಳ್ಳುವುದರಿಂದ ಈ ನ್ಯಾಯಮೂರ್ತಿಗಳು ಹಿಂದೆ ಸರಿದಲ್ಲಿ ನಮ್ಮ ಸಮಾಜ ಮತ್ತು ರಾಷ್ಟ್ರಗಳು ಅವನತಿಗೆ ಗುರಿಯಾಗುವುದರಲ್ಲಿ ಸಂಶಯವಿಲ್ಲ. ತನ್ನನ್ನು ವ್ಯಾಖ್ಯಾನಿಸುವ ನ್ಯಾಯಾಧೀಶರೊಂದಿಗೆ, ಅದನ್ನು ಯಾರು ಜಾರಿ ಮಾಡಬೇಕೆಂಬುದನ್ನು ನಿರ್ಧರಿಸುವವರೊಂದಿಗೆ ಮತ್ತು ತಮ್ಮ ಜೀವನದ ಅವಿಭಾಜ್ಯ ಅಂಗವೆಂದು ಅದರಲ್ಲಿ ನಿರತರಾದ ನಾಗರಿಕರೊಂದಿಗೆ ಈ ಸಂವಿಧಾನವು ಮಾತನಾಡುತ್ತದೆ. ಪ್ರಸ್ತುತ ದಾವೆಯಲ್ಲಿ ಈ ನ್ಯಾಯಾಲಯವು ಅಪೂರ್ವ ಆಯಾಮದ ಒಂದು ನ್ಯಾಯದಾನದ ಕೆಲಸದಲ್ಲಿ ತನ್ನನ್ನು ತೊಡಗಿಸಿಕೊಳ್ಳಬೇಕಾಗಿದೆ.
ಜನ್ಮಭೂಮಿ: ೧೯೩೪-೩೮ರಲ್ಲಿ
ಅಯೋಧ್ಯೆಯ ರಾಮಜನ್ಮಭೂಮಿಯ ಬಗೆಗೆ ಸ್ಥಳೀಯ ಜನ ಯಾವ ರೀತಿ ಮಿಡಿಯುತ್ತಿದ್ದರು ಎನ್ನುವ ಅಂಶ ನ್ಯಾಯಾಲಯದಲ್ಲಿ ಸಾಕ್ಷಿ ಹೇಳುವಲ್ಲಿ ಧಾರಾಳವಾಗಿ ವ್ಯಕ್ತವಾಯಿತು. ರಾಮ ಹುಟ್ಟಿದ ಸ್ಥಳವನ್ನು ಬಾಬ್ರಿ ಮಸೀದಿ ಆಕ್ರಮಿಸಿಕೊಂಡದ್ದು ಮತ್ತು ಆ ಜಾಗದಲ್ಲಿ ದೇವಸ್ಥಾನ, ಪೂಜೆಗಳು ಇಲ್ಲದ ಬಗ್ಗೆ ಅವರ ಆಕ್ರೋಶವೂ ಸ್ಫೋಟಗೊಳ್ಳುತ್ತಿತ್ತು. ಹರಿಹರಪ್ರಸಾದ್ ತಿವಾರಿ ಎನ್ನುವ ೮೫ ವರ್ಷದ (೨೦೦೨ರಲ್ಲಿ) ಓರ್ವ ವೃದ್ಧರು ಹೀಗೆ ಸಾಕ್ಷ್ಯ ಹೇಳಿದ್ದರು: “ಅಯೋಧ್ಯೆ ಒಂದು ಪ್ರಾಚೀನ ಮತ್ತು ಅತಿ ಪವಿತ್ರವಾದ ಯಾತ್ರಾಸ್ಥಳ. ಪರಂಬ್ರಹ್ಮ ಪರಮೇಶ್ವರ ಭಗವಾನ್ ವಿಷ್ಣು ರಾಜಾ ದಶರಥನ ಮಗ ಶ್ರೀರಾಮನಾಗಿ ಅವತಾರವೆತ್ತಿದ ಸ್ಥಳ ಅದು. ಭಗವಾನ್ ವಿಷ್ಣು ಶ್ರೀರಾಮನಾಗಿ ಅಯೋಧ್ಯೆಯಲ್ಲಿ ಜನಿಸಿದನೆಂದು ಹಿಂದುಗಳು ಅನಾದಿಕಾಲದಿಂದ ನಂಬಿಕೊAಡು ಬಂದಿದ್ದಾರೆ. ಆದ್ದರಿಂದ ಈ ಸ್ಥಳ ಆರಾಧನಾಯೋಗ್ಯವಾದದ್ದು. ಈ ನಂಬಿಕೆ ಮತ್ತು ಶ್ರದ್ಧೆಯಿಂದ ಜನ ಶ್ರೀರಾಮಜನ್ಮಭೂಮಿಯ ದರ್ಶನ ಮತ್ತು ಇಲ್ಲಿ ಪ್ರದಕ್ಷಿಣೆ (ಪರಿಕ್ರಮ) ಮಾಡುವುದಕ್ಕಾಗಿ ಇಲ್ಲಿಗೆ ಬರುತ್ತಾರೆ. ನನ್ನ ಮನೆಯವರು, ನನ್ನ ಅಜ್ಜ, ಹಿರಿಯರು, ಸಂತರು, ಸಂನ್ಯಾಸಿಗಳು (ಬೈರಾಗಿಗಳು) ಶ್ರೀರಾಮ ಇದೇ ಸ್ಥಳದಲ್ಲಿ ಜನಿಸಿದ ಎಂದು ಹೇಳುತ್ತಿದ್ದರು. ವಿದ್ಯಾಭ್ಯಾಸದ ಸಲುವಾಗಿ ೧೯೩೪ರಿಂದ ೩೮ರವರೆಗೆ ನಾನು ಇಲ್ಲಿದ್ದೆ. ಇದು ರಾಮಜನ್ಮಭೂಮಿ ಎನ್ನುವಲ್ಲಿ ಸಂಶಯವಿಲ್ಲ. ಅಂತಹ ನಂಬಿಕೆಯಿಂದ ನಾನು ರಾಮಜನ್ಮಭೂಮಿಯ ದರ್ಶನಕ್ಕೆ ಹೋಗುತ್ತಿದ್ದೆ. ನನ್ನ ವಿದ್ಯಾಭ್ಯಾಸ ಮುಗಿದು ಬೇರೆ ಕಡೆಗೆ ಹೋದರೂ ಕೂಡ ಅಯೋಧ್ಯೆಗೆ ಭೇಟಿ ನೀಡಿದಾಗಲೆಲ್ಲ ಜನ್ಮಭೂಮಿಯ ದರ್ಶನಕ್ಕೆ ಹೋಗುತ್ತಿದ್ದೆ. ಕಳೆದ ೮-೯ ವರ್ಷಗಳಿಂದ ನಾನು ಅಯೋಧ್ಯೆ ರಾಮಕೋಟ್ನ ಸುಗ್ರೀವ ಕಿಲಾದಲ್ಲಿ ವಾಸಿಸುತ್ತಿದ್ದೇನೆ; ರಾಮಜನ್ಮಭೂಮಿಯ ದರ್ಶನಕ್ಕೆ ಹೋಗುತ್ತಿರುತ್ತೇನೆ. ಈ ಜಾಗ ಹೊರ-ಅಂಗಳಕ್ಕೆ ಹನುಮತ್ ದ್ವಾರ ಮತ್ತು ಸಿಂಗ್ದ್ವಾರ ಎನ್ನುವ ಎರಡು ದ್ವಾರಗಳ ಮೂಲಕ ಹೋಗಬಹುದು. ಅಲ್ಲಿ ಸೀತಾರಸೋಯಿ, ರಾಮಚಬೂತ್ರ ಮತ್ತು ಭಂಡಾರಗಳಿವೆ. ರಾಮನವಮಿ ಮುಂತಾದ ವಿಶೇಷ ಸಂದರ್ಭಗಳಲ್ಲಿ ಯಾತ್ರಿಕರು ಇಲ್ಲಿಗೆ ಭಾರೀ ಸಂಖ್ಯೆಯಲ್ಲಿ ಬರುತ್ತಾರೆ. ಪ್ರತಿದಿನ ನೂರಾರು ಜನ ಇಡೀ ಜಾಗಕ್ಕೆ ಪ್ರದಕ್ಷಿಣೆ ಹಾಕುತ್ತಾರೆ. ಇಲ್ಲಿಯ ವಿವಾದಿತ ಕಟ್ಟಡದಲ್ಲಿ ಯಾವನೇ ಒಬ್ಬ ಮುಸ್ಲಿಂ ನಮಾಜು ಮಾಡಿದ್ದನ್ನು ನಾನು ಕಂಡಿಲ್ಲ. ೧೯೩೪-೩೮ರ ಹೊತ್ತಿಗೆ ವಿವಾದಿತ ಸ್ಥಳದ ಒಳಭಾಗದಲ್ಲಿ ರಾಮನ ವಿಗ್ರಹವೇನೂ ಇರಲಿಲ್ಲ; ಗೋಡೆಯ ಮೇಲೆ ರಾಮನ ಫೋಟೋವೊಂದನ್ನು ನೇತಾಡಿಸಿದ್ದು, ಅದು ಗೇಟಿನ ಹೊರಗಿನಿಂದ ಕಾಣಿಸುತ್ತಿತ್ತು. ಗೇಟಿಗೆ ಬೀಗ ಹಾಕಿದ್ದ ಕಾರಣ ಹೊರಗಿನಿಂದಲೇ ನೋಡಬೇಕಿತ್ತು.”
ಕಾನೂನು ಸಂಘರ್ಷ
೧೯೫೦-೬೦ರ ದಶಕಗಳಲ್ಲಿ ರಾಮಭಕ್ತ ಗೋಪಾಲಸಿಂಗ್ ವಿಶಾರದ, ನಿರ್ಮೋಹಿ ಅಖಾಡಾ, ಸುನ್ನಿ ವಕ್ಫ್ ಬೋರ್ಡ್ ಮೊದಲಾದವರಿಂದ ನ್ಯಾಯಾಲಯದಲ್ಲಿ ವಿವಾದಿತ ಜಾಗದ ವಶಕ್ಕಾಗಿ ಖಟ್ಲೆಗಳು ದಾಖಲೆಗೊಂಡವು. ಅಂದಿನಿಂದ ೨೦೧೯ರ ಸರ್ವೋಚ್ಚ ನ್ಯಾಯಾಲಯದ ತೀರ್ಪಿನವರೆಗೆ ವಿವಿಧ ಕೋರ್ಟುಗಳಲ್ಲಿ ವಿಚಾರಣೆ ನಡೆಯುತ್ತ ಬಂದಿದೆ. ವಿವಾದವನ್ನು ಪರಿಹರಿಸಲು ಅನೇಕ ಪ್ರಯತ್ನಗಳು ನ್ಯಾಯಾಲಯದ ಒಳಗೆ ಮತ್ತು ಹೊರಗೆ ನಡೆದವು.
ಕೇಂದ್ರಸರ್ಕಾರವು ಆ ಜಾಗದಲ್ಲಿ ಮೊದಲು ಮಂದಿರವಿತ್ತು ಎಂದು ಸಾಬೀತಾದರೆ ಜಾಗವನ್ನು ಹಿಂದೂಗಳಿಗೆ ನೀಡುವ ವಾಗ್ದಾನ ನೀಡಿ ೧೯೯೪ರಲ್ಲಿ ನ್ಯಾಯಾಯಲಕ್ಕೆ ಅಫಿಡವಿಟ್ ಸಲ್ಲಿಸಿತು. ನ್ಯಾಯಾಲಯದ ಆದೇಶದಂತೆ ಪುರಾತತ್ತ್ವ ಇಲಾಖೆ ನಡೆಸಿದ ಉತ್ಖನನದಲ್ಲಿ ಹಿಂದೆ ಅಲ್ಲಿ ಭವ್ಯ ಮಂದಿರವಿತ್ತು ಎನ್ನುವುದೂ ಸಾಬೀತಾಗಿದೆ. ಇದನ್ನು ೨೦೧೦ರಲ್ಲಿ ಅಲಹಾಬಾದ್ ಹೈಕೋರ್ಟ್ ತೀರ್ಪಿನಲ್ಲಿ ಎತ್ತಿ ಹಿಡಿದಿದೆ. ಮತ್ತು ಮಂದಿರದ ಅವಶೇಷದ ಮೇಲೆ ಮಸೀದಿಯನ್ನು ನಿರ್ಮಿಸಲಾಗಿತ್ತು ಎಂದಿದೆ. ಈ ತೀರ್ಪಿನಲ್ಲಿ ವಿವಾದಿತ ೨.೭೭ ಎಕರೆ ಜಾಗವನ್ನು ಮೂರು ಭಾಗ ಮಾಡಿ ರಾಮಲಲಾ, ನಿರ್ಮೋಹಿ ಅಖಾಡಾ ಮತ್ತು ಸುನ್ನಿ ವಕ್ಫ್ ಬೋರ್ಡ್ಗೆ ಸಮನಾಗಿ ಹಂಚಿತ್ತು. ಈ ತೀರ್ಪನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನಿಸಲಾಯಿತು. ಅನೇಕ ತೊಡಕುಗಳು ಮತ್ತು ಸುದೀರ್ಘ ವಿಚಾರಣೆಯ ನಂತರ ಸರ್ವೋಚ್ಚ ನ್ಯಾಯಾಲಯವು ೨೦೧೯ರಲ್ಲಿ ರಾಮಜನ್ಮಭೂಮಿ ವಿವಾದಕ್ಕೆ ಶಾಶ್ವತವಾಗಿ ತೆರೆ ಎಳೆಯಿತು. ಭವ್ಯ ರಾಮಮಂದಿರ ನಿರ್ಮಾಣಕ್ಕೆ ಅಗತ್ಯ ಸಮಿತಿಯನ್ನು ರಚಿಸುವಂತೆ ಸರ್ಕಾರಕ್ಕೆ ಸೂಚಿಸಿತು.
ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ನ್ಯಾ. ರಂಜನ್ ಗೊಗೊಯ್, ನ್ಯಾ. ಎಸ್.ಎ. ಬೋಬ್ಡೆ, ನ್ಯಾ. ಅಶೋಕ್ ಭೂಷಣ್, ನ್ಯಾ. ಡಿ.ವೈ. ಚಂದ್ರಚೂಡ್, ನ್ಯಾ. ಅಬ್ದುಲ್ ನಜೀರ್ – ಈ ಐವರು ನ್ಯಾಯಾಧೀಶರನ್ನು ಹೊಂದಿದ್ದ ಪಂಚಸದಸ್ಯಪೀಠವು ೨೦೧೯ರ ಸೆಪ್ಟೆಂಬರ್ನಿಂದ ಅಕ್ಟೋಬರ್ವರೆಗೂ ಸತತ ೪೦ ದಿನಗಳ ವಿಚಾರಣೆಯ ನಂತರ ನವೆಂಬರ್ ೯ರಂದು ಏಕಧ್ವನಿಯಲ್ಲಿ ರಾಮಜನ್ಮಭೂಮಿಯಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲು ಆದೇಶಿಸಿತು. ಇದು ೧೦೪೫ ಪುಟಗಳ ತೀರ್ಪಾಗಿದ್ದು, ಸುಪ್ರೀಂ ಕೋರ್ಟ್ನ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡ ಪ್ರಕರಣವಾಗಿದೆ.
೧೯೪೯ರಲ್ಲಿ ಅಯೋಧ್ಯೆ: ವಕ್ಫ್ ಇನ್ಸ್ಪೆಕ್ಟರ್ ವರದಿ
ರಾಮಜನ್ಮಭೂಮಿ ಅಯೋಧ್ಯೆಯ ಶತಮಾನಗಳ ಇತಿಹಾಸದಲ್ಲಿ ಕಂಡುಬರುವ ಒಂದು ಪ್ರಮುಖ ಅಂಶವೆAದರೆ, ಆ ಜಾಗದ ಬಗೆಗೆ ಹಿಂದುಗಳು ತಮ್ಮ ಶ್ರದ್ಧೆ-ಭಕ್ತಿಗಳನ್ನು ನಿರಂತರವಾಗಿ ಉಳಿಸಿಕೊಂಡು ಪೂಜೆ-ಆರಾಧನೆಗಳನ್ನು ಮಾಡುತ್ತಾ ಬಂದದ್ದು. ೧೯೪೯ರ ಡಿಸೆಂಬರ್ ೨೨-೨೩ರ ರಾತ್ರಿ ರಾಮಜನ್ಮಭೂಮಿಯ ಘಟನಾವಳಿಗಳಲ್ಲಿ ಮಹತ್ತ್ವ ಪಡೆದುಕೊಂಡ ಒಂದು ಸಂದರ್ಭವಾಗಿದೆ. ಹಲವು ದಿನಗಳಿಂದ ಅಲ್ಲಿ ಬಿಗುಮಾನದ ವಾತಾವರಣವಿದ್ದು, ಸ್ಥಳೀಯ ವಕ್ಫ್ ಇನ್ಸ್ಪೆಕ್ಟರ್ ೨೨ರಂದು ಅಲ್ಲಿಗೆ ಭೇಟಿ ನೀಡಿ ವರದಿ ಸಲ್ಲಿಸಿದ್ದರು. ಅದರ ಮುಖ್ಯಾಂಶಗಳು ಹೀಗಿವೆ: “ಮಸೀದಿ ಸಮೀಪದ ಖಬರಸ್ತಾನವನ್ನು (ಶವಹೂಳುವ ಸ್ಥಳ) ನೋಡುವ ಸಲುವಾಗಿ ಡಿಸೆಂಬರ್ ೨೨ರಂದು ಅಲ್ಲಿಗೆ ಹೋದೆ. ಮೂರು ತಿಂಗಳ ಹಿಂದೆ ಬಾಬಾ ರಘುನಾಥದಾಸ್ ಅವರು ಜನ್ಮಸ್ಥಾನಕ್ಕೆ ಭೇಟಿ ನೀಡಿದ್ದರು. ಅವರು ಅಲ್ಲಿಯ ಬೈರಾಗಿ ಮತ್ತು ಪೂಜಾರಿಗಳಿಗೆ ರಾಮಾಯಣ ಪಾಠ (ಪಾರಾಯಣ) ಮಾಡುವಂತೆ ಬಲವಾಗಿ ಸೂಚಿಸಿದ್ದರು. ಈ ಸಂದೇಶ ಸುತ್ತಲೆಲ್ಲ ಪ್ರಚಾರವಾಯಿತು. ರಘುವರದಾಸ್ ಅವರು ಹೋಗಿ ಒಂದು ತಿಂಗಳ ಅನಂತರ ಸಾವಿರಾರು ಜನ ಹಿಂದುಗಳು, ಪೂಜಾರಿಗಳು, ಪಂಡಿತರು ಅಲ್ಲಿ ಸೇರಿ ರಾಮಾಯಣ ಪಾರಾಯಣ ಮಾಡಿದರು. ಅದು ವಾರಗಟ್ಟಲೆ ನಡೆಯಿತು. ಈ ನಡುವೆ ಬೈರಾಗಿಗಳು ಮಸೀದಿಯ ಹೊರಗೆ ಎದುರುಗಡೆ ಮತ್ತು ಖಬರಸ್ತಾನದ ಸ್ವಲ್ಪ ಜಾಗವನ್ನು ಸಮತಟ್ಟು ಮಾಡಿದರು. ಕೆಲವು ಗೋರಿಗಳ ಜಾಗದಲ್ಲಿ ಕಲ್ಲು ರಾಶಿ ಹಾಕಿದರು. ರಾಮಾಯಣ ಪಾಠದ ಹೊತ್ತಿಗೆ ಪೊಲೀಸ್ ಬಂದೋಬಸ್ತ್ ಇತ್ತು. ಆದರೂ ಬೈರಾಗಿಗಳು ಗೋರಿಗಳನ್ನು ತೆಗೆದು ಜಾಗ ಸಮತಟ್ಟು ಮಾಡಿದರು. ಪೊಲೀಸರು ನಾಲ್ಕು ಜನರನ್ನು ಬಂಧಿಸಿ ಅನಂತರ ಬಾಂಡ್ ಮೇಲೆ ಬಿಟ್ಟರು. ಖಬರಸ್ತಾನದ ಸಮೀಪ ಖ್ವಾಜಾ ರಹಮತುಲ್ಲಾ ಅವರ ಗೋರಿ ಸ್ವಲ್ಪ ಎತ್ತರದ ದಿಬ್ಬದ ಮೇಲಿದ್ದು ಅದನ್ನು ಕೂಡ ಅಗೆದು ಜಾಗವನ್ನು ಸಮತಟ್ಟು ಮಾಡಿದರು.
ಒಬ್ಬ ಬೈರಾಗಿ ಅಲ್ಲಿ ವಾಸಿಸಲು ಆರಂಭಿಸಿದ. ಮಸೀದಿಯ ಗೋಡೆಗಳಿಗೆ ತಾಗಿರುವ ಅಂಗಳದ ಬಾಗಿಲಿಗೆ ಸಮೀಪದ ಗೋರಿಯ ಬಳಿ ಬೈರಾಗಿಗಳು ನೆಲದಲ್ಲಿ ಕುಳಿತಿದ್ದಾರೆ. ಅಲ್ಲೊಂದು ಗುಡಿಸಲು ಹಾಕಿಕೊಂಡಿದ್ದಾರೆ. ಪಾರಾಯಣದ ಆರಂಭಕ್ಕೆ ಮುನ್ನ ಬೈರಾಗಿಗಳು ಲೂಟಿ ಮಾಡಿದರು; ಬೇಲಿಯನ್ನು ಮುರಿದರು. ಮಸೀದಿಯ ಮುಝಿನ್ಗೆ ಹೊಡೆದರು. ಮಸೀದಿ ಮೇಲಿನ ಕೆತ್ತನೆ(ಬರಹ)ಯನ್ನು ಕಿತ್ತುಹಾಕಲು ಯತ್ನಿಸಿದರು. ಅವರ ಹಲ್ಲೆಯಿಂದ ಇಬ್ಬರು ಮುಸ್ಲಿಮರಿಗೆ ಗಂಭೀರ ಗಾಯಗಳಾದವು. ಈಗ ಮಸೀದಿಯ ಹೊರಗೆ ಎರಡು ಕ್ಯಾಂಪ್ಗಳಿವೆ. ಒಂದರಲ್ಲಿ ಪೊಲೀಸರಿದ್ದರೆ, ಇನ್ನೊಂದರಲ್ಲಿ ಸೈನಿಕರಿದ್ದಾರೆ. ಒಟ್ಟು ಏಳೆಂಟು ಜನ ಇದ್ದಾರೆ. ಈಗ ಮಸೀದಿಗೆ ಬೀಗ ಹಾಕಿದೆ. ಆಜಾನ್(ನಮಾಜ್ಗೆ ಕರೆಯುವುದು)ಗೆ ಅನುಮತಿ ಇಲ್ಲ. ಶುಕ್ರವಾರದ ಜುಮ್ಮಾ ಪ್ರಾರ್ಥನೆ ಬಿಟ್ಟು ಬೇರೆ ದಿನ ನಮಾಜ್ಗಳು ನಡೆಯುತ್ತಿಲ್ಲ. ಮಸೀದಿಯ ಬೀಗ ಬೀಗದ ಕೈ ಮುಸ್ಲಿಮರ ಬಳಿ ಇದ್ದರೂ ಪೊಲೀಸರು ಅವರಿಗೆ ಬಾಗಿಲು ತೆರೆಯಲು ಬಿಡುತ್ತಿಲ್ಲ. ಶುಕ್ರವಾರ ೨-೩ ತಾಸು ಮಾತ್ರ ಬಾಗಿಲು ತೆರೆಯುತ್ತಾರೆ. ಆಗ ಮಸೀದಿಯನ್ನು ಸ್ವಚ್ಛಗೊಳಿಸಿ ಪ್ರಾರ್ಥನೆ ಮಾಡುತ್ತಾರೆ. ಅನಂತರ ಬೀಗ ಹಾಕುತ್ತಾರೆ. ಜುಮ್ಮಾ ಹೊತ್ತಿಗೆ ತುಂಬಾ ಸಂದಣಿ ಇರುತ್ತದೆ. ಆದರೆ ನಮಾಜಿಗಳು ಕೆಳಗೆ (ಮಸೀದಿಯೊಳಗೆ) ಹೋಗುವಾಗ ಅವರ ಮೇಲೆ ಚಪ್ಪಲಿ ಮತ್ತು ಮಣ್ಣಿನ ಹೆಂಟೆಗಳನ್ನು ಎಸೆಯುತ್ತಾರಂತೆ. ಆದರೆ ಮುಸ್ಲಿಮರು ಭಯದ ಕಾರಣದಿಂದ ಅದಕ್ಕೆ ಪ್ರತಿರೋಧ ತೋರುವುದಿಲ್ಲ.
ರಘುವರದಾಸ್ ಅನಂತರ ಲೋಹಿಯಾ ಕೂಡ ಅಯೋಧ್ಯೆಗೆ ಬಂದಿದ್ದರು. ಅವರು ಜನರನ್ನುದ್ದೇಶಿಸಿ ಭಾಷಣ ಮಾಡಿ, ಗೋರಿಗಳಿದ್ದ ಕಡೆ ಹೂವಿನಗಿಡಗಳನ್ನು ನೆಡುವುದಕ್ಕೆ ಹೇಳಿದ್ದಾರೆ. ಲಕ್ನೋದಿಂದ ಒಬ್ಬ ಮಂತ್ರಿ ಕೂಡ ಬಂದಿದ್ದರು. ಮಸೀದಿಯೇ ಜನ್ಮಭೂಮಿ ಎಂದು ಬೈರಾಗಿಗಳು ಮಂತ್ರಿಗೆ ಹೇಳಿ ಆ ಜಾಗ ತಮಗೆ ಕೊಡಿಸುವಂತೆ ವಿನಂತಿಸಿದ್ದಾರೆ. ಅದಕ್ಕೆ ಮಂತ್ರಿ ಬಲಾತ್ಕಾರದಿಂದ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ. ಆಗ ಬೈರಾಗಿಗಳಿಗೆ ಮಂತ್ರಿಯ ಮೇಲೆ ಕೋಪ ಬಂದಿದ್ದು ಆತ ಪೊಲೀಸ್ ರಕ್ಷಣೆಯಲ್ಲಿ ಫೈಜಾಬಾದ್ಗೆ ಮರಳಬೇಕಾಯಿತು.
ಈ ನಡುವೆ ಅಯೋಧ್ಯೆಯ ಕನಕಭವನ ಮಂದಿರದಲ್ಲಿ ಮಹಂತ ಬಾಬಾಸ್ಥಾನ್, ಮಹಾಂತ ರಘುವರದಾಸ್, ವೇದಾಂತಜೀ, ನಾರಾಯಣದಾಸ್, ಆಚಾರ್ಯಜೀ ಅವರೆಲ್ಲ ಸೇರಿ ಮುಸ್ಲಿಮ್ ನಾಯಕರನ್ನು ಮಾತುಕತೆಗಾಗಿ ಅಲ್ಲಿಗೆ ಕರೆದರು. ಜರೂರ್ ಅಹಮದ್ ಅವರ ಹೊರತು ಬೇರೆ ಯಾರೂ ಅಲ್ಲಿಗೆ ಬರಲಿಲ್ಲ. ಮಸೀದಿಯನ್ನು ತಮಗೆ ಕೊಡಿಸಿ ಎಂದು ಹಿಂದುಗಳು ಆತನಲ್ಲಿ ಕೇಳಿದರು. ಕೊಡಿಸಿದರೆ ನಾವು ಸಹೋದರರು; ಇಲ್ಲವಾದರೆ ವೈರಿಗಳು ಎಂದವರು ತಿಳಿಸಿದರು.
ಅಂದು ರಾತ್ರಿ ನಾನು (ವಕ್ಫ್ ಇನ್ಸ್ಪೆಕ್ಟರ್) ಅಯೋಧ್ಯೆಯಲ್ಲೇ ಉಳಿದೆ. ಬೈರಾಗಿಗಳು ಬಲಾತ್ಕಾರವಾಗಿ ಮಸೀದಿಯನ್ನು ಆಕ್ರಮಿಸಲು ಪ್ರಯತ್ನಿಸಿದ್ದಾರೆಂದು ಬೆಳಗ್ಗೆ ನನಗೆ ತಿಳಿಯಿತು. ಇಂದು ಜುಮ್ಮಾ ಶುಕ್ರವಾರ (ಡಿಸೆಂಬರ್ ೨೩). ನಾನು ಸ್ಥಳಕ್ಕೆ ಹೋದಾಗ ೧೦-೧೫ ಜನ ಬೈರಾಗಿಗಳು ದೊಣ್ಣೆ ಮತ್ತು ಕೊಡಲಿಗಳನ್ನು ಹಿಡಿದುಕೊಂಡು ಮಸೀದಿಯ ಅಂಗಳದಲ್ಲಿ ನಿಂತಿದ್ದರು. ದೊಣ್ಣೆಗಳನ್ನು ಹಿಡಿದ ಹಲವು ಜನ ಬೈರಾಗಿಗಳು ಮಸೀದಿಯ ಬಾಗಿಲಿನ ಬಳಿ ಕುಳಿತಿದ್ದರು. ಸುತ್ತಲಿನ ಹಿಂದುಗಳು ಕೂಡ ಅಲ್ಲಿ ಸೇರುತ್ತಿದ್ದರು. ನಗರದ ಮ್ಯಾಜಿಸ್ಟ್ರೇಟ್, ನಗರದ ಪೊಲೀಸ್ ಅಧಿಕಾರಿ ಹಾಗೂ ಪೊಲೀಸ್ ಸಿಬ್ಬಂದಿಯನ್ನು ಸಾಕಷ್ಟು ಸಂಖ್ಯೆಯಲ್ಲಿ ಅಲ್ಲಿ ನೇಮಿಸಲಾಗಿತ್ತು. ಫೈಜಾಬಾದ್ನ ಮುಸ್ಲಿಮರು ಶುಕ್ರವಾರದ ಜುಮ್ಮಾ ಪ್ರಾರ್ಥನೆಗಾಗಿ ಅಲ್ಲಿಗೆ ಬರುವವರಿದ್ದರು. ಪರಿಸ್ಥಿತಿ ಏನಾಗಬಹುದೋ ಎಂದು ನನಗೆ ಭಯವಾಯಿತು; ನದಿ ದಾಟಿ ನಾನು ಅಲ್ಲಿಂದ ಹೊರಟೆ.”
ಇದು ವಕ್ಫ್ ಇನ್ಸ್ಪೆಕ್ಟರ್ ಅವರ ವರದಿ. ಅಂದು ಶುಕ್ರವಾರದ ಪ್ರಾರ್ಥನೆ ನಡೆಯಲಿಲ್ಲ. ಅದೇ ದಿನ ರಾತ್ರಿ ಶ್ರೀರಾಮ ಮುಂತಾದ ದೇವರ ವಿಗ್ರಹಗಳನ್ನು ಮಸೀದಿಯ ಮಧ್ಯದ ಗುಮ್ಮಟದ ಕೆಳಗೆ ಇರಿಸಲಾಯಿತು.