ರಾಮಜನ್ಮಭೂಮಿ ಚಳವಳಿಯ ಟೀಕಾಕಾರರು ಇದನ್ನು ಆರ್ಎಸ್ಎಸ್-ಬಿಜೆಪಿ ಆರಂಭಿಸಿದ ಆಂದೋಲನ ಎಂದು ಹೇಳುತ್ತಾರೆ. ಆದರೆ ವಿವಾದದ ಇತಿಹಾಸ ಗಮನಿಸಿದರೆ, ಹಾಗೆನ್ನುವುದು ವಾಸ್ತವಕ್ಕೆ ದೂರವಾಗಿದೆ. ಅಲ್ಲದೆ ಇದು ರಾಷ್ಟ್ರೀಯ ಸ್ವಾವಲಂಬನೆಯನ್ನು ಮರಳಿ ಪಡೆಯಲು ಬಹಳ ಹಿಂದೆಯೇ ಪ್ರಾರಂಭವಾದ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಯಾಗಿದೆ. ಭಗವಾನ್ ರಾಮನನ್ನು ಈ ನೆಲದ ನಾಗರಿಕ ಮೌಲ್ಯವಾಗಿ ಪ್ರತಿನಿಧಿಸಲಾಗುತ್ತದೆ. ಹೀಗಾಗಿ, ರಾಮಜನ್ಮಭೂಮಿ ಆಂದೋಲನ ಲಕ್ಷಾಂತರ ಜನರ ಮನಸ್ಸು ಮುಟ್ಟಲು ಸಾಧ್ಯವಾಯಿತು. ಅಲ್ಲದೆ, ರಾಮನ ಪರವಾಗಿ ನಿಂತ ಪಕ್ಷವು ರಾಜಕೀಯವಾಗಿ ಬೆಳೆಯಿತು. ಆದರೆ, ಇದೊಂದೇ ಕಾರಣದಿಂದಾಗಿ ಇಡೀ ಆಂದೋಲನವನ್ನು ಅಪಮೌಲ್ಯಗೊಳಿಸಲು ಸಾಧ್ಯವೂ ಇಲ್ಲ.
ರಾಮರಾಜ್ಯ ನಿರ್ಮಿಸೋಣ! – ಇದು ಭಾರತ ರಾಜಕೀಯ ವ್ಯವಸ್ಥೆಯ ಧ್ಯೇಯವಾಕ್ಯ. ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗಿನ ಹತ್ತಾರು ಸ್ತರದಲ್ಲಿರುವ ಸರ್ಕಾರಗಳನ್ನು ನಡೆಸಲು ಬಯಸುವ ಎಲ್ಲ ಪ್ರಧಾನರು ಮತ್ತು ಪ್ರಧಾನಿಗಳು ಕಾಣುವ ಕನಸು ಕೂಡ ರಾಮರಾಜ್ಯದ್ದೇ. ಆಳಿದರೆ ರಾಮನಂತೆ ರಾಜ್ಯವಾಳಬೇಕು! ಸ್ವಾತಂತ್ರ್ಯಪೂರ್ವದ ಗಾಂಧಿಯವರಿಂದ ಹಿಡಿದು ಸುವರ್ಣ ಸ್ವಾತಂತ್ರ್ಯದ ಸಂಭ್ರಮದಲ್ಲಿರುವ ಪ್ರಧಾನಿ ನರೇಂದ್ರ ಮೋದಿಯವರವರೆಗಿನ ಎಲ್ಲ ರಾಜಕಾರಣಿಗಳ ಜಪವೂ – ರಾಮರಾಜ್ಯವೇ. ನಾಳೆ ಅಧಿಕಾರ ನಡೆಸಲು ಕನಸು ಕಾಣುವ ಭಾರತೀಯರ ಪಾಲಿಗೂ ರಾಮರಾಜ್ಯದ ಕನಸು ಬೀಳಲೇಬೇಕು!
ರಾಮರಾಜ್ಯ ಹೇಗಿತ್ತು ಎಂಬುದರ ಬಗ್ಗೆ ನಮಗೀಗ ಸಾಕ್ಷ್ಯಗಳು ಸಿಗದಿರಬಹುದು, ಆದರೆ ಪುರಾಣಗಳು ದೊಡ್ಡ ಕಥೆಯನ್ನೇ ಹೇಳುತ್ತವೆ. ಹೀಗಾಗಿಯೇ ಗಾಂಧಿಯವರೂ ರಾಮರಾಜ್ಯದ ಕನಸು ಕಂಡಿದ್ದರು; ಸ್ವತಂತ್ರ ಭಾರತದಲ್ಲಿ ರಾಮರಾಜ್ಯದ ಸಾಕಾರವಾಗಬೇಕೆಂದು ಪ್ರತಿಪಾದಿಸಿದ್ದರು.
ರಾಮನಾದರೋ ಪಿತೃವಾಕ್ಯ ಪರಿಪಾಲಕ ಮಾತ್ರವಲ್ಲ, ತನ್ನ ದೇಶದ ಶ್ರೀಸಾಮಾನ್ಯ ಅಗಸ ಬಂಧುವಿನ ಮಾತಿಗೂ ಬೆಲೆ ನೀಡಿದ ಮಹಾರಾಜ. ಭರವಸೆ, ಆಶ್ವಾಸನೆಗಳು ರಾಮನ ಮಾತಿನಂತೆ ಇರಬೇಕು ಎಂಬುದು ಇದರ ತಾತ್ಪರ್ಯವೇ? ರಾಮ ಬಿಟ್ಟ ಬಾಣ ಗುರಿ ಮುಟ್ಟಿಯೇ ತೀರುತ್ತದೆ ಎಂಬುದು ಈ ದೇಶದಲ್ಲಿ ಜನಜನಿತವಾಗಿರುವ ಇನ್ನೊಂದು ನಾಣ್ಣುಡಿ. ಕೊಟ್ಟ ಮಾತು, ಒಪ್ಪಿಕೊಂಡ ಕೆಲಸ – ಎರಡೂ ಗುರಿ ಮುಟ್ಟಲೇಬೇಕು ಎಂಬುದಷ್ಟೆ ಇದರ ಸಾರವೇ? ಇರಬಹುದು. ಏಕೆಂದರೆ ರಾಮನು ಈ ಮಣ್ಣಿನ ‘ಡಿಎನ್ಎ’ ಆಗಿಹೋಗಿದ್ದಾನೆ. ಈ ದೇಶದಲ್ಲಿ ಊರಿಗೊಬ್ಬನಲ್ಲ, ಹುಡುಕಿದರೆ ಹತ್ತಿಪ್ಪತ್ತು ರಾಮನ ಹೆಸರಿನ ವ್ಯಕ್ತಿಗಳು ಸಿಗಬಹುದು. ‘ರಾಮನ ಪಾದ ಪೂಜೆಯ ಮಾಡೋ ಪುಣ್ಯದ ಭೂಮಿ ನಮದಮ್ಮ’ ಎಂದಿಲ್ಲಿ ಕವಿಗಳು ಸಾವಿರಾರು ಹಾಡು ಬರೆದಿದ್ದಾರೆ. ಪುರಾಣ ಇಲ್ಲವೇ ಇತಿಹಾಸದ ರಾಜನೊಬ್ಬ ಈ ಪರಿ ಆವರಿಸಿಕೊಂಡಿರುವುದು ಜಗತ್ತಿನ ಬೇರಾವ ದೇಶದಲ್ಲೂ ನೋಡಲು ಸಾಧ್ಯವಿಲ್ಲ ಎನಿಸುತ್ತದೆ.
ಶ್ರೀರಾಮ ಎಂಬ ಶಬ್ದವೇ ಜಗತ್ತಿನೆಲ್ಲೆಡೆ ಪಸರಿಸಿರುವ ಹಿಂದೂಗಳ ಪಾಲಿಗೆ ಒಂದು ಪರಿಚಾಯಕ. ರಾಮನನ್ನು ನಾವು ಗುರುತಿಸುವುದೇ ಮರ್ಯಾದಾ ಪುರುಷೋತ್ತಮನಾಗಿ, ರಾಮರಾಜ್ಯದ ಭವ್ಯ ಪರಿಕಲ್ಪನೆಯೊಂದಿಗೆ.
ಹಾಗಾಗಿಯೇ ಸ್ವಾತಂತ್ರ್ಯೋತ್ತರ ಭಾರತದಲ್ಲಿ ನಡೆದ ರಾಮಮಂದಿರ ಆಂದೋಲನ ಭಾರತೀಯರ ಸಾಂಸ್ಕೃತಿಕ ರಾಷ್ಟ್ರರಾಜಕಾರಣಕ್ಕೆ ಹೊಸ ಆಯಾಮವನ್ನೇ ನೀಡಿದೆ.
“ಮಂದಿರ್ ವಹೀ ಬನಾಯೇಂಗೇ” ಎಂಬುದು ಆಂದೋಲನದ ಘೋಷಣೆಯಾದರೆ, ಅಂಥ ಮಂದಿರ ನಮಗೆ ಬೇಕು ಎಂಬುದು ಭಾರತೀಯರ ಮನದಾಳದ ಬಯಕೆಯೇ ಆಗಿತ್ತು. ಏಕೆಂದರೆ, ಬಹುಜನರ ಪಾಲಿಗೆ ರಾಮಮಂದಿರ ಅದು ರಾಷ್ಟ್ರಮಂದಿರವೂ ಹೌದು!
ಇಂಥ ರಾಮಮಂದಿರ ಬಹಳ ಸರಳವಾಗಿ ನಿರ್ಮಾಣವಾಗುತ್ತಿರುವುದೇನಲ್ಲ. ದೊಡ್ಡ ಆಂದೋಲನವೇ ನಡೆಯಿತು. ಇದು ರಾಮಭಕುತರಿಗೆ ರಾಜ್ಯಾಧಿಕಾರವನ್ನೇ ನೀಡಿತು. ಆಂದೋಲನದ ನೇತೃತ್ವ ವಹಿಸಿದ್ದ ಬಿಜೆಪಿ ಇಂದು ಪಂಚಾಯಿತಿಯಿಂದ ಪಾರ್ಲಿಮೆಂಟ್ವರೆಗೆ ಆಡಳಿತದ ಚುಕ್ಕಾಣಿ ಹಿಡಿದಿದೆ ಎಂದರೆ ಅದಕ್ಕೆ ಪ್ರಭು ಶ್ರೀರಾಮನೇ ಕಾರಣ. ಇಂಥದ್ದೊಂದು ಆಂದೋಲನ ನಡೆದದ್ದು ಹೇಗೆ? ಮೆಲುಕು ಹಾಕೋಣ.
ಮೊದಲೇ ಹೇಳಿದ ಹಾಗೆ, ರಾಮನು ಹಿಂದೂಗಳ ಪಾಲಿನ ಹೆಗ್ಗುರುತು. ರಾಮನು ನಮಗೆ ಎಲ್ಲದರಲ್ಲೂ ಆದರ್ಶವಾಗಿಯೇ ಕಾಣುತ್ತಾನೆ. ಆದರೆ, ಸ್ವಾತಂತ್ರ್ಯೋತ್ತರ ಸಂದರ್ಭದಲ್ಲಿ ನಮ್ಮ ರಾಜಕೀಯ ಹರವು ‘ಜಾತ್ಯತೀತತೆ’ಗೆ ಹೊರಳಿದ ಕಾರಣದಿಂದಾಗಿ ನಮ್ಮ ಧರ್ಮ, ದೇವರು ಹೆಚ್ಚಾಗಿ ಕಾಣಿಸಿಕೊಳ್ಳಲಿಲ್ಲ. ಅದು ನಮ್ಮ ಆಳುವವರ ತಪ್ಪೋ ಅಥವಾ ನಮ್ಮ ಆಯ್ಕೆ ತಪ್ಪೋ ಎಂಬುದೂ ಗೊತ್ತಾಗಲಿಲ್ಲ. ಆ ಸಂದರ್ಭದಲ್ಲಿ ಜಾತ್ಯತೀತತೆ ಎಂಬುದು ನಮ್ಮ ಕೈ ಕಟ್ಟಿಹಾಕಿತು ಎಂಬುದಂತೂ ಸತ್ಯ. ಬೇರೆ ಎಲ್ಲ ದೇಶಗಳು ಅಲ್ಲಿನ ಧರ್ಮ ಮತ್ತು ನಂಬುಗೆಯ ಮೇಲೆ ಗುರುತನ್ನು ಕಟ್ಟಿಕೊಂಡರೆ, ಇಲ್ಲಿ ಜಾತ್ಯತೀತತೆಯ ಮೇಲೆ ಗುರುತು ಕಟ್ಟಿಕೊಳ್ಳುವ ಪ್ರಯತ್ನ ಮಾಡಲಾಯಿತು. ಶೇ.೮೦ಕ್ಕಿಂತ ಹೆಚ್ಚು ಹಿಂದೂಗಳೇ ಇದ್ದರೂ, ಹಿಂದೂರಾಷ್ಟ್ರವೆAದು ಅಥವಾ ಹಿಂದೂ ಧರ್ಮವನ್ನು ಪ್ರಮುಖವಾಗಿ ಕಾಣುವ ಮನಃಸ್ಥಿತಿಯು ಆಗ ಕಾಣಲಿಲ್ಲ.
ರಾಮನ ವಿಚಾರದಲ್ಲಿ ರಾಜಕೀಯದ ಒಂದು ಭಾಗವೆಂದರೆ ಜವಾಹರಲಾಲ್ ನೆಹರು ಅವರಿಂದ ರಾಜೀವ್ ಗಾಂಧಿವರೆಗೆ ಕಾಂಗ್ರೆಸ್ ಅನ್ನು ಓಲೈಸುವ ಕೆಲಸವನ್ನೇ ಮಾಡಿದರು. ಆ ಕಾಲದ ಯೂರೋಪ್-ಕೇಂದ್ರಿತವೆನ್ನಬಹುದಾದ ಕಾಂಗ್ರೆಸ್ ನಾಯಕತ್ವವು ರಾಷ್ಟ್ರದ ಮನಸ್ಸಿನ ಮೇಲೆ ‘ನೆಹರೂವಿಯನ್ ಜಾತ್ಯತೀತತೆ’ ಎಂಬ ಹೊಸ ಕಲ್ಪನೆಯನ್ನು ಅಳವಡಿಸಲು ಪ್ರಯತ್ನಿಸಿತು. ರಾಮ ಜನ್ಮಭೂಮಿಯಲ್ಲಿ ರಾಮಮಂದಿರ ನಿರ್ಮಾಣದ ನಿಜವಾದ ಬೇಡಿಕೆಯನ್ನು ಕೋಮುವಾದಿ ಎಂದು ಕರೆಯಲಾಯಿತು. ಶೈಕ್ಷಣಿಕ ಮತ್ತು ಶೈಕ್ಷಣಿಕ ಸಂಸ್ಥೆಗಳಲ್ಲಿ ಆಡಳಿತ ನಡೆಸಿದ ಎಡಪಂಥೀಯರು ಈ ಸರ್ಕಾರದ ಹಿಂದೂವಿರೋಧಿ ನಿಲವಿಗೆ ತಕ್ಕಂತೆ ನಿರೂಪಣೆಗಳನ್ನು ರೂಪಿಸಿದರು. ಎಡಪಂಥೀಯರು ರಾಮಜನ್ಮಭೂಮಿ ವಿಷಯಕ್ಕೆ ‘ವರ್ಗ ಯುದ್ಧ’ ಆಯಾಮವನ್ನು ತರಲು ಪ್ರಯತ್ನಿಸಿದರು. ಎಡಪಂಥೀಯ ಇತಿಹಾಸಕಾರರಾದ ಇರ್ಫಾನ್ ಹಬೀಬ್ ಮತ್ತು ರೊಮಿಲಾ ಥಾಪರ್ ಅವರು ರಾಮಜನ್ಮಭೂಮಿ ವಿವಾದವನ್ನು ಸೌಹಾರ್ದಯುತವಾಗಿ ಬಗೆಹರಿಸಲು ಹೇಗೆ ಅಡ್ಡಿಪಡಿಸಿದರು ಎಂದು ಪುರಾತತ್ತ್ವಶಾಸ್ತ್ರಜ್ಞ ಡಾ. ಕೆ.ಕೆ. ಮುಹಮ್ಮದ್ ಹೇಳಿದ್ದಾರೆ.
ರಾಮಜನ್ಮಭೂಮಿ ಚಳವಳಿಯ ಟೀಕಾಕಾರರು ಇದನ್ನು ಆರ್ಎಸ್ಎಸ್-ಬಿಜೆಪಿ ಆರಂಭಿಸಿದ ಆಂದೋಲನ ಎಂದು ಹೇಳುತ್ತಾರೆ. ಆದರೆ ವಿವಾದದ ಇತಿಹಾಸ ಗಮನಿಸಿದರೆ, ಈ ನಿರೂಪಣೆ ವಾಸ್ತವಕ್ಕೆ ದೂರವಾಗಿದೆ. ಅಲ್ಲದೆ ಇದು ರಾಷ್ಟ್ರೀಯ ಸ್ವಾವಲಂಬನೆಯನ್ನು ಮರಳಿ ಪಡೆಯಲು ಬಹಳ ಹಿಂದೆಯೇ ಪ್ರಾರಂಭವಾಗಿದ್ದ ಸಾಂಸ್ಕೃತಿಕ ಪುನರುಜ್ಜೀವನ ಚಳವಳಿಯಾಗಿದೆ. ಭಗವಾನ್ ರಾಮನನ್ನು ಈ ನೆಲದ ನಾಗರಿಕ ಮೌಲ್ಯವಾಗಿ ಪ್ರತಿನಿಧಿಸಲಾಗುತ್ತದೆ. ಹೀಗಾಗಿ, ರಾಮಜನ್ಮಭೂಮಿ ಆಂದೋಲನವು ಲಕ್ಷಾಂತರ ಜನರ ಮನಸ್ಸನ್ನು ಮುಟ್ಟಲು ಸಾಧ್ಯವಾಯಿತು. ಅಲ್ಲದೆ, ರಾಮನ ಪರವಾಗಿ ನಿಂತ ಪಕ್ಷವು ರಾಜಕೀಯವಾಗಿಯೂ ಬೆಳೆಯಿತು. ಆದರೆ, ಇದೊಂದೇ ಕಾರಣದಿಂದಾಗಿ ಇಡೀ ಆಂದೋಲನವನ್ನು ಅಪಮೌಲ್ಯಗೊಳಿಸಲು ಸಾಧ್ಯವೂ ಇಲ್ಲ.
ರಾಮನ ಬಗ್ಗೆ ಆಡ್ವಾಣಿ ಅವರು ರಥಯಾತ್ರೆ ಕೈಗೊಳ್ಳಲು ಕಾರಣಗಳೂ ಇದ್ದವು. ಅವರು ಈ ದೇಶವಾಸಿಗಳು ರಾಮನೊಂದಿಗೆ ಇರಿಸಿಕೊಂಡಿದ್ದ ಆಳವಾದ ಸಂಪರ್ಕವನ್ನು ಅರಿತುಕೊಂಡಿದ್ದರು. ರಾಮನು ಜನರ ಜೀವನದಲ್ಲಿ ಜೀವಂತ ವಾಸ್ತವವಾಗಿದ್ದಾನೆ; ಈ ಮಣ್ಣಿನಲ್ಲಿ, ಸಾಂಸ್ಕೃತಿಕ ಪ್ರಜ್ಞೆಯಲ್ಲಿ ಬೆರೆತಿದ್ದಾನೆ. ರಾಮನು ಧರ್ಮದ ಅಂತಿಮ ಸಾಕಾರ ರೂಪ ಎಂಬ ಕಲ್ಪನೆಯು ಭಾರತದ ಭೌಗೋಳಿಕ ಸ್ಥಳ ಮೀರಿ ಪ್ರಯಾಣಿಸಿದ್ದು, ಬೇರೆಬೇರೆ ದೇಶಗಳಲ್ಲಿಯೂ ಆತನ ಬೇರುಗಳಿವೆ. ಮುಸ್ಲಿಂ ಬಹುಸಂಖ್ಯಾತ ಇಂಡೋನೇಷ್ಯಾಕ್ಕೆ ರಾಮನು ಸ್ಫೂರ್ತಿದಾಯಕ ವ್ಯಕ್ತಿಯಾಗಿ ಮುಂದುವರಿದಿದ್ದಾನೆ. ಬೌದ್ಧ ಥೈಲ್ಯಾಂಡ್ನಲ್ಲಿ, ರಾಜನನ್ನು ರಾಮನ ವಂಶಸ್ಥ ಎಂದು ಪರಿಗಣಿಸಲಾಗುತ್ತದೆ. ಇದೆಲ್ಲವೂ ಆಡ್ವಾಣಿಯವರಿಗೆ ಚೆನ್ನಾಗಿಯೇ ಗೊತ್ತಿತ್ತು. ಹಾಗಾಗಿ ರಥಯಾತ್ರೆ ಕೈಗೊಂಡರು.
ಇದು ಆರಂಭವಾದ ಸಂದರ್ಭವನ್ನು ಅರಿಯೋಣ.
ಅದು ೧೯೮೦ರ ದಶಕ. ಆ ದಿನಗಳಲ್ಲಿಯೇ ದೇಶದಲ್ಲೊಂದು ಐಡೆಂಟಿಟಿ ಸಮರ ಶುರುವಾಯಿತು. ಇದಕ್ಕೆ ರಾಮಜನ್ಮಭೂಮಿ ಆಂದೋಲನ ಎಂದು ಕರೆಯಬಹುದಾದರೂ, ಅದು ಹಿಂದೂಗಳ ಗುರುತಿನ ಪ್ರಶ್ನೆಯಾಗಿ ಮೂಡಿದ್ದು ರೋಚಕ. ೧೯೪೯ರ ಗುಜರಾತ್ನಲ್ಲಿನ ಸೋಮನಾಥ ಮಂದಿರದ ಪುನರ್ ನಿರ್ಮಾಣದ ಉದಾಹರಣೆಯನ್ನೇ ಇರಿಸಿಕೊಂಡ ಆರ್ಎಸ್ಎಸ್, ಜನಸಂಘ ಮತ್ತು ವಿಶ್ವ ಹಿಂದು ಪರಿಷತ್ನಂಥ ಸಂಘಟನೆಗಳು, ರಾಮನ ಜನ್ಮಸ್ಥಳವಾದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗಬೇಕು ಎಂಬ ಆಂದೋಲನವನ್ನು ಶುರುಮಾಡಿದವು. ಹಾಗೆಂದು ಇದು ಏಕಾಏಕಿ ಶುರುವಾದದ್ದಲ್ಲ, ಆರಂಭದಲ್ಲಿ ರಾಜಕೀಯ ಪ್ರಜ್ಞೆ ಅಥವಾ ರಾಜಕೀಯ ಲಾಭಕ್ಕಾಗಿಯೂ ಹುಟ್ಟಿಕೊಂಡಂಥದ್ದಲ್ಲ. ಆದರೆ, ಅನಂತರದ ದಿನಗಳಲ್ಲಿ ಇದು ರಾಜಕೀಯವಾಗಿ, ಸಾಮಾಜಿಕವಾಗಿಯೂ ಹೆಚ್ಚು ಪ್ರಭಾವಿತವಾಗಿತ್ತು ಎಂಬುದು ಸುಳ್ಳಲ್ಲ. ಇದರಿಂದ ಈಗ ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಗೆ ಲಾಭವಾಯಿತು. ಕಾಂಗ್ರೆಸ್ನ ರಾಜಕೀಯ ಸ್ಥಾನವನ್ನು ಬಿಜೆಪಿ ಕಸಿದುಕೊಂಡಿತು. ಹಾಗೆಯೆ, ಶ್ರೀರಾಮ ಮತ್ತು ಅಯೋಧ್ಯೆಯ ರಾಮಮಂದಿರ ಭಾರತದಲ್ಲಿ ದೊಡ್ಡದೊಂದು ರಾಜಕೀಯ ಮನ್ವಂತರಕ್ಕೂ ಕಾರಣವಾಯಿತು.
ಈ ವಿಚಾರದಲ್ಲಿ ಮತ್ತೆ ೧೯೮೦ ಮತ್ತು ೧೯೯೦ರ ದಶಕದತ್ತಲೇ ವಾಲಬೇಕು. ಆರಂಭ ಹೀಗೆ ಸಾಗುತ್ತದೆ: ೧೯೮೪ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿ ಸ್ಪರ್ಧೆ ಮಾಡಿದ್ದ ಬಿಜೆಪಿಯ ಪ್ರಣಾಳಿಕೆಯಲ್ಲಿ ಅಯೋಧ್ಯೆಯಾಗಲಿ, ರಾಮಜನ್ಮಭೂಮಿಯಾಗಲಿ ಕಾಣಿಸಿಕೊಂಡಿರಲಿಲ್ಲ. ವಿಶೇಷವೆಂದರೆ, ರಾಜಕೀಯ ಪಕ್ಷವಾಗಿ ಬಿಜೆಪಿಯ ಮೊದಲ ಪ್ರಣಾಳಿಕೆಯೂ ಇದಾಗಿತ್ತು. ಆದರೆ, ಮೊದಲಬಾರಿಗೆ ಕಾಣಿಸಿದ್ದು ೧೯೮೯ರಲ್ಲಿ. ಆಗ ಬಿಜೆಪಿ ಪ್ರಣಾಳಿಕೆಯು ಈ ವಿಷಯದ ಬಗ್ಗೆ ಈ ಕೆಳಗಿನಂತೆ ಹೇಳುತ್ತದೆ: “೧೯೪೮ರಲ್ಲಿ ಕೇಂದ್ರಸರ್ಕಾರವು ನಿರ್ಮಿಸಿದ ಸೋಮನಾಥ ಮಂದಿರದ ಮಾದರಿಯಲ್ಲಿ ಅಯೋಧ್ಯೆಯಲ್ಲಿ ರಾಮಜನ್ಮ ಮಂದಿರವನ್ನು ಪುನರ್ನಿರ್ಮಿಸಲು ಅವಕಾಶ ನೀಡದೆ ಇರುವ ಮೂಲಕ, ಸರ್ಕಾರವು ಉದ್ವಿಗ್ನತೆಯನ್ನು ಹೆಚ್ಚಿಸಲು ಅವಕಾಶ ಮಾಡಿಕೊಟ್ಟಿದೆ ಮತ್ತು ಸಾಮಾಜಿಕ ಸಾಮರಸ್ಯವನ್ನು ತೀವ್ರವಾಗಿ ಹದಗೆಡಿಸಿದೆ.”
ಇದಕ್ಕೆ ಕಾರಣವೂ ಇದೆ. ಸುಪ್ರೀಂಕೋರ್ಟ್ನ ಶಹಬಾನೋ ತೀರ್ಪಿನ ಬಳಿಕ ರಾಜೀವ್ ಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ವರ್ಚಸ್ಸು ಕಡಮೆಯಾಗಿತ್ತು. ಇದನ್ನು ಮರೆಮಾಚುವ ಸಲುವಾಗಿ ೧೯೮೫ರಲ್ಲಿ ಬಾಬರಿ ಮಸೀದಿಯ ಬೀಗಗಳನ್ನು ತೆರೆಯಲು ಸರ್ಕಾರ ನಿರ್ಧರಿಸಿತ್ತು. ಈ ಮೂಲಕ ಕೋಮುಸಮೀಕರಣಗಳನ್ನು ಸಮತೋಲನಗೊಳಿಸುವ ಪ್ರಯತ್ನಕ್ಕೆ ಕಾಂಗ್ರೆಸ್ ಸರ್ಕಾರ ಕೈಹಾಕಿತ್ತು ಎಂದು ವಿಶ್ಲೇಷಿಸಲಾಗಿತ್ತು. ಹೀಗಾಗಿ, ೧೯೮೯ರಲ್ಲಿ ಬಿಜೆಪಿ ಮೊದಲ ಬಾರಿಗೆ ರಾಮಜನ್ಮಭೂಮಿ ವಿಚಾರವನ್ನು ತನ್ನ ಪ್ರಣಾಳಿಕೆಯಲ್ಲಿಯೆ ಸೇರಿಸಿತು.
೧೯೯೧ರ ಪ್ರಣಾಳಿಕೆಯಲ್ಲಿ ಅಯೋಧ್ಯೆಯ ವಿಚಾರದಲ್ಲಿ ಬಿಜೆಪಿಯ ಧ್ವನಿ ಇನ್ನಷ್ಟು ಬಲಗೊಂಡಿತ್ತು. “ಐತಿಹಾಸಿಕ ತಪ್ಪುಗಳನ್ನು ಸಾಂಕೇತಿಕವಾಗಿ ಸರಿಪಡಿಸುವ ಮೂಲಕ ಮಾತ್ರ ಅಯೋಧ್ಯೆಯಲ್ಲಿ ರಾಮಜನ್ಮಭೂಮಿಯನ್ನು ಪುನಃಸ್ಥಾಪಿಸಲು ಅದು ಬಯಸುತ್ತದೆ, ಇದರಿಂದ ಹಳೆಯ ಅಸಮಾಧಾನದ ಅಧ್ಯಾಯವನ್ನು ಕೊನೆಗೊಳಿಸಬಹುದು ಮತ್ತು ಭವ್ಯ ರಾಷ್ಟ್ರೀಯ ಸಾಮರಸ್ಯವನ್ನು ಸಾಧಿಸಬಹುದು” ಎಂದು ಹೇಳಿತು.
೧೯೯೦ರಲ್ಲಿ ಲಾಲ್ಕೃಷ್ಣ ಆಡ್ವಾಣಿ ಅವರು ಸೋಮನಾಥದಿಂದ ಅಯೋಧ್ಯೆಗೆ ರಥಯಾತ್ರೆ ಕೈಗೊಂಡ ಬಳಿಕ ಬಿಜೆಪಿ ೧೯೯೧ರ ಚುನಾವಣೆಯನ್ನು ಎದುರಿಸಿತು.
೧೯೯೨ರಲ್ಲಿ ಬಾಬರಿ ಕಟ್ಟಡದ ಧ್ವಂಸದ ನಂತರ ನಡೆದ ೧೯೯೬ರ ಚುನಾವಣೆಯಲ್ಲಿ, ಬಿಜೆಪಿ ಈ ವಿಷಯದ ಬಗ್ಗೆ ತನ್ನ ಧ್ವನಿಯನ್ನು ಮರುಪರಿಶೀಲಿಸಿತು. “ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ, ಅಯೋಧ್ಯೆಯ ಜನ್ಮಸ್ಥಾನದಲ್ಲಿ ಭವ್ಯವಾದ ಶ್ರೀರಾಮಮಂದಿರವನ್ನು ನಿರ್ಮಿಸಲು ಅನುಕೂಲ ಮಾಡಿಕೊಡುತ್ತದೆ, ಇದು ಭಾರತಮಾತೆಗೆ ಗೌರವವಾಗಿದೆ” ಎಂದು ೧೯೯೬ರ ಪ್ರಣಾಳಿಕೆಯಲ್ಲಿ ಹೇಳಿತು.
೧೯೯೮ರ ಪ್ರಣಾಳಿಕೆಯಲ್ಲಿಯೂ ಇದೇ ರೀತಿಯ ಸಾಲುಗಳಲ್ಲಿ ಭರವಸೆ ನೀಡಿತು. ಕುತೂಹಲಕಾರಿ ಸಂಗತಿಯೆಂದರೆ, ಪಕ್ಷವು ೧೯೯೯ರ ಚುನಾವಣೆಯಲ್ಲಿ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್ಡಿಎ) ಪ್ರಣಾಳಿಕೆಯೊಂದಿಗೆ ಚುನಾವಣೆಗೆ ಹೋಯಿತು ಆಗ ಅದರಲ್ಲಿ ಅಯೋಧ್ಯೆಯ ಉಲ್ಲೇಖವೇ ಇರಲಿಲ್ಲ.
ಆದರೆ, ೨೦೦೪ರಲ್ಲಿ ತನ್ನ ಧ್ವನಿ ಬದಲಿಸಿಕೊಂಡ ಬಿಜೆಪಿ, “ಈ ವಿಷಯದಲ್ಲಿ ನ್ಯಾಯಾಂಗದ ತೀರ್ಪನ್ನು ಎಲ್ಲರೂ ಒಪ್ಪಿಕೊಳ್ಳಬೇಕು ಎಂಬ ತನ್ನ ನಿಲವಿಗೆ ಪಕ್ಷ ಬದ್ಧವಾಗಿದೆ. ಆದಾಗ್ಯೂ, ಪರಸ್ಪರ ನಂಬಿಕೆ ಮತ್ತು ಸದ್ಭಾವನೆಯ ವಾತಾವರಣದಲ್ಲಿ ಮಾತುಕತೆ ಮತ್ತು ಮಾತುಕತೆಯ ಪರಿಹಾರವು ಈ ಗುರಿಯನ್ನು ಸಾಧಿಸುವ ಅತ್ಯುತ್ತಮ ಮಾರ್ಗವಾಗಿದೆ ಎಂದು ನಾವು ನಂಬುತ್ತೇವೆ. ಮಾತುಕತೆಯ ಪ್ರಕ್ರಿಯೆಯನ್ನು ತ್ವರಿತಗೊಳಿಸುವಂತೆ ಮತ್ತು ಅದನ್ನು ಸೌಹಾರ್ದಯುತ ಮತ್ತು ಶೀಘ್ರವಾಗಿ ಫಲಪ್ರದಗೊಳಿಸುವಂತೆ ಹಿಂದೂ ಮತ್ತು ಮುಸ್ಲಿಂ ಸಮುದಾಯಗಳ ಧಾರ್ಮಿಕ ಮತ್ತು ಸಾಮಾಜಿಕ ಮುಖಂಡರಿಗೆ ಬಿಜೆಪಿ ಮನವಿ ಮಾಡುತ್ತದೆ” ಎಂದು ಹೇಳಿತು.
ಪ್ರಣಾಳಿಕೆಯಿಂದ ಮುಂದಕ್ಕೆ ಸರಿದು, ಬಿಜೆಪಿ ತೆಗೆದುಕೊಂಡ ಮತ ಹಂಚಿಕೆಯನ್ನು ಗಮನಿಸಿದರೆ, ಏರಿಕೆಯ ಅಂಶವನ್ನು ನೋಡಬಹುದು. ಅಂದರೆ, ೧೯೮೦ರಲ್ಲಿ ಬಿಜೆಪಿ ಅಸ್ತಿತ್ವಕ್ಕೆ ಬರುವ ಮೊದಲು, ಅದರ ಸೈದ್ಧಾಂತಿಕ ಮಾತೃ ರಾಷ್ಟ್ರೀಯ ಸ್ವಯಂಸೇವಕ ಸಂಘವು ಭಾರತೀಯ ಜನಸಂಘ (ಬಿಜೆಎಸ್) ಎಂಬ ರಾಜಕೀಯ ಅಂಗವನ್ನು ಹೊಂದಿತ್ತು. ಅದು ೧೯೫೧ರಲ್ಲಿ ರೂಪಗೊಂಡು ೧೯೭೭ರಲ್ಲಿ ಜನತಾ ಪಕ್ಷದಲ್ಲಿ ವಿಲೀನಗೊಂಡಿತು. ಜನತಾ ಪಕ್ಷದೊಂದಿಗೆ ವಿಲೀನಗೊಳ್ಳುವ ಮೊದಲು ೧೯೬೭ ಮತ್ತು ೧೯೭೧ರ ಚುನಾವಣೆಗಳಲ್ಲಿ ಬಿಜೆಎಸ್ ಶೇ.೯.೩ ಮತ್ತು ಶೇ.೭.೪ ಮತಗಳನ್ನು ಹೊಂದಿತ್ತು. ೧೯೮೪ರಲ್ಲಿ ಬಿಜೆಪಿಯ ಮತ ಹಂಚಿಕೆ ೧೯೭೧ರಲ್ಲಿ ಬಿಜೆಎಸ್ ಹೊಂದಿದ್ದರ ಶೇ.೭.೪ರಷ್ಟಿತ್ತು.
೧೯೮೯ರಲ್ಲಿ ಇದು ಶೇ.೧೧.೪ರಷ್ಟಿತ್ತು, ಇದು ಕಾಂಗ್ರೆಸ್ನ ಶೇ. ೩೯.೫ಕ್ಕಿಂತ ಕಡಮೆ. ೧೯೮೯ರಿಂದ ೧೯೯೧ರ ಅವಧಿಯಲ್ಲಿ ಬಿಜೆಪಿ ತನ್ನ ಮತ ಹಂಚಿಕೆಯ ಅನುಪಾತದಲ್ಲಿ ಅತಿದೊಡ್ಡ ಜಿಗಿತವನ್ನು ಕಂಡಿತು. ಇದು ತನ್ನ ಪಾಲನ್ನು ೧.೮ ಪಟ್ಟು ಹೆಚ್ಚಿಸಿ ಶೇ.೨೦.೧ ತಲಪಿತು. ೨೦೦೯ ಹೊರತುಪಡಿಸಿದರೆ, ೧೯೯೧ರ ನಂತರ ಬಿಜೆಪಿ ಶೇ.೨೦ಕ್ಕಿಂತ ಕೆಳಗಿಳಿಯಲಿಲ್ಲ.
ಕಾಂಗ್ರೆಸ್ ನಂತರ ಒಂದಕ್ಕಿಂತ ಹೆಚ್ಚು ಚುನಾವಣೆಗಳಲ್ಲಿ ಶೇ.೨೦ಕ್ಕಿಂತ ಹೆಚ್ಚು ಮತಗಳನ್ನು ಪಡೆದ ಎರಡನೇ ಪಕ್ಷ ಬಿಜೆಪಿ.
ಈ ಹೆಚ್ಚುವರಿ ಶೇ.೧೦ ಮತ ಹಂಚಿಕೆಯು ಬಿಜೆಪಿಯನ್ನು ಭಾರತೀಯ ರಾಜಕೀಯದಲ್ಲಿ ಎರಡನೇ ಪ್ರಮುಖ ಪಾಲುದಾರನನ್ನಾಗಿ ಮಾಡಿತು. ಇದು ರಾಮಜನ್ಮಭೂಮಿ ಚಳವಳಿಯಿಂದ ಬಿಜೆಪಿಗೆ ದೊರೆತ ಸ್ಪಷ್ಟ ಲಾಭವಾಗಿದೆ.
ಆದಾಗ್ಯೂ, ಬಿಜೆಪಿ ತನ್ನ ಪ್ರಸ್ತುತ ರಾಜಕೀಯ ಪ್ರಾಬಲ್ಯಕ್ಕೆ ರಾಮಮಂದಿರ ವಿಷಯಕ್ಕೆ ಮಾತ್ರ ಋಣಿಯಾಗಿದೆ ಎಂದು ಭಾವಿಸುವುದು ಸಂಪೂರ್ಣವಾಗಿ ತಪ್ಪು. ೧೯೯೧ ಮತ್ತು ೨೦೦೯ರ ನಡುವೆ ಬಿಜೆಪಿಯ ಮತ ಹಂಚಿಕೆ ಶೇ.೨೦ರಷ್ಟಿತ್ತು. ೨೦೧೪ರಲ್ಲಿ ನರೇಂದ್ರ ಮೋದಿ ನಾಯಕತ್ವ ವಹಿಸಿಕೊಂಡ ನಂತರವೇ ಬಿಜೆಪಿ ಶೇ.೩೦ ಮತ ಹಂಚಿಕೆಯ ಮಿತಿಯನ್ನು ದಾಟಿದ್ದು ಲೋಕಸಭೆಯಲ್ಲಿ ಸಂಪೂರ್ಣ ಬಹುಮತ ಪಡೆಯಿತು; ಇದು ೨೦೧೯ರಲ್ಲಿಯೂ ಹೆಚ್ಚಾಯಿತು.
೧೯೮೯ ಮತ್ತು ೧೯೯೧ರ ನಡುವೆ ಹಿಂದಿ ಭಾಷಿಕರ ರಾಜ್ಯಗಳಲ್ಲಿ ಬಿಜೆಪಿ ಪ್ರಾಬಲ್ಯ ಹೆಚ್ಚಾಯಿತು. ಮತ ಹಂಚಿಕೆ ಪ್ರಮಾಣವೂ ಜಾಸ್ತಿಯಾಯಿತು. ೧೯೮೯ರ ನಂತರ ಕಾಂಗ್ರೆಸ್ನ ಮತಗಳನ್ನು ಬಿಜೆಪಿ ಸೆಳೆಯಿತು.
೧೯೯೧ರಲ್ಲಿ ಪಶ್ಚಿಮದಲ್ಲಿ ಬಿಜೆಪಿ ಮತ ಪ್ರಮಾಣ ಶೇ.೩೦ ಮೀರಿತ್ತು. ೨೦೧೯ರಲ್ಲಿ ಬಿಜೆಪಿಯು ಶೇ.೩೦ ಅಥವಾ ಅದಕ್ಕಿಂತ ಹೆಚ್ಚಿನ ಮತ ಹಂಚಿಕೆಯನ್ನು ಹೊಂದಿರುವ ಇತರ ಉಪ ಪ್ರದೇಶಗಳೆಂದರೆ ಪೂರ್ವ ಮತ್ತು ಈಶಾನ್ಯ. ಈ ಅಂಕಿ-ಅಂಶಗಳು ರಾಮಮಂದಿರ ವಿಷಯವು ಬಿಜೆಪಿಗೆ ತಂದ ಚುನಾವಣಾ ಲಾಭಗಳನ್ನು ಮುಂದಿಡುತ್ತವೆ. ಹಿಂದಿ ಭಾಷಿಕ ರಾಜ್ಯಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಹಿಂದಿಕ್ಕಿ ರಾಷ್ಟ್ರೀಯ ಮಟ್ಟದಲ್ಲಿ ನೆಲೆಯೂರಲು ಬಿಜೆಪಿಗೆ ಇದರಿಂದ ಸಾಧ್ಯವಾಗಿದೆ. ನರೇಂದ್ರ ಮೋದಿ ಮತ್ತು ಅಮಿತ್ ಶಾ ಅವರನ್ನೊಳಗೊಂಡ ಭಾರತೀಯ ಜನತಾ ಪಕ್ಷದ ನಾಯಕತ್ವದ ಅಯೋಧ್ಯೆಯ ನಂತರದ ಪೀಳಿಗೆಯು ಅಖಿಲ ಭಾರತ ಪ್ರಾಬಲ್ಯವಾಗಿ ಪಕ್ಷದ ರಾಷ್ಟ್ರೀಯ ಪಕ್ಷದ ಸ್ಥಾನಮಾನವನ್ನು ಬಲಪಡಿಸಿದೆ.
ಮಂಡಿಯೂರಿದ ವೋಟ್ಬ್ಯಾಂಕ್ ರಾಜಕಾರಣ
ಶಾಹಬಾನೊ ಪ್ರಕರಣದಲ್ಲಿ ತೀವ್ರ ಟೀಕೆಗೆ ಒಳಗಾಗಿದ್ದ ಅಂದಿನ ಪ್ರಧಾನಿ ರಾಜೀವ್ ಗಾಂಧಿ ಹಿಂದುಗಳಿಗೆ ಜನ್ಮಸ್ಥಾನದ ಜಾಗ ಒಪ್ಪಿಸಲು ಸಿದ್ಧರಾಗಿದ್ದರು. ಆಗ ಬಾಬರಿ ಮಸೀದಿ ಕ್ರಿಯಾ ಸಮಿತಿ ‘ಇಸ್ಲಾಂ ಅಪಾಯದಲ್ಲಿದೆ ಎಂಬ ಗುಲ್ಲೆಬ್ಬಿಸಿ, ಗಣರಾಜ್ಯೋತ್ಸವ ಬಹಿಷ್ಕರಿಸುವ’ ಕರೆ ನೀಡಿತು. ಇದಕ್ಕೆ ಹೆದರಿದ ರಾಜೀವ್ ಗಾಂಧಿ ಅರ್ಧದಾರಿಯಲ್ಲಿ ನಿಂತರು. ಅನಂತರ ಬಿಜೆಪಿಯ ಬೆಂಬಲದಿಂದ ಪ್ರಧಾನಿಯಾದ ವಿ.ಪಿ. ಸಿಂಗ್ ‘ಅರೆ ಭಾಯ್ ಮಸ್ಜೀದ್ ಹೈ ಕಂಹಾ? ಅಲ್ಲಿರುವುದು ಮಂದಿರ, ನಿತ್ಯ ಪೂಜೆ ನೆಡೆಯುತ್ತಿದೆ. ಆ ಹಳೆ ಕಟ್ಟಡ ತೀರಾ ದುರ್ಬಲವಾಗಿದೆ. ಸ್ವಲ್ಪ ತಳ್ಳಿದರೂ ಉರುಳಿಬಿಳುತ್ತದೆ’ ಎಂದಿದ್ದು ದೊಡ್ಡ ಸುದ್ದಿಯಾಗಿತ್ತು. ಈ ಮಾತನ್ನು ವಿ.ಪಿ. ಸಿಂಗ್ ಹೇಳಿದ್ದು ದೆಹಲಿಯ ರಾಮನಾಥ್ ಗೋಯಾಂಕರ ಕಟ್ಟಡದಲ್ಲಿ ನಡೆದ ಗಣ್ಯರ ಸಭೆಯಲ್ಲಿ ಎಂಬುದನ್ನು ಅರುಣ್ ಶೌರಿ ತಮ್ಮ ಪುಸ್ತಕದಲ್ಲಿ ವಿವರಿಸಿದ್ದಾರೆ. ಆದರೆ ಪ್ರಧಾನಿಯಾದ ವಿ.ಪಿ. ಸಿಂಗ್ ಹಿಂದುಗಳಿಗೆ ಜಾಗ ಒಪ್ಪಿಸಲು ಧೈರ್ಯ ಸಾಕಾಗಲಿಲ್ಲ.