ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ೮ ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲಾನ ವಿಗ್ರಹವನ್ನು ಇರಿಸಲಾಗುತ್ತದೆ. ರಾಜಸ್ಥಾನದ ಕುಶಲಕರ್ಮಿಗಳು ಸಿಂಹಾಸನವನ್ನು ತಯಾರಿಸಿದ್ದಾರೆ. ಈ ಸಿಂಹಾಸನವು ೮ ಅಡಿ ಎತ್ತರ,
೩ ಅಡಿ ಉದ್ದ ಮತ್ತು ೪ ಅಡಿ ಅಗಲ ಇದೆ.
ರಾಮಮಂದಿರ ದೇವಸ್ಥಾನಕ್ಕೆ ೧೨ ಮೀ. ಆಳದ ಅಡಿಪಾಯ ನಿರ್ಮಿಸಲಾಗಿದೆ. ಅಡಿಪಾಯದ ನಂತರ ಭಾರವಾದ ಕಲ್ಲುಗಳನ್ನು ಬಹಳ ಎಚ್ಚರಿಕೆಯಿಂದ ವೈಜ್ಞಾನಿಕವಾಗಿ ಪರಿಶೀಲಿಸಿ ತರಲಾಯಿತು. ಚೆನ್ನೈ ಐಐಟಿ ಮತ್ತು ಸೆಂಟ್ರಲ್ ಬಿಲ್ಡಿಂಗ್ ರಿಸರ್ಚ್ ಇನ್ಸ್ಟಿಟ್ಯೂಷನ್ನ ತಜ್ಞರು ಕಲ್ಲುಗಳ ತೂಕ, ಒತ್ತಡ-ಕಂಪನಗಳನ್ನು ತಡೆಯಲು ಕಲ್ಲುಗಳು ಹೇಗಿರಬೇಕು, ಆಸರೆ ಎಲ್ಲಿರಬೇಕು, ಭೂಕಂಪದAತಹ ಪ್ರಾಕೃತಿಕ ವಿಕೋಪಗಳನ್ನು ತಡೆಯಲು ಏನು ಮಾಡಬೇಕು ಎಂದು ಪರಿಶೀಲಿಸಿ ಸೂಚನೆ ನೀಡಿದರು. ಅದರಂತೆ ಕಾರ್ಯವನ್ನು ಮುನ್ನಡೆಸಲಾಗುತ್ತಿದೆ.
ಸದ್ಯದ ಅಂದಾಜಿನ ಪ್ರಕಾರ, ದೇವಸ್ಥಾನದಲ್ಲಿ ಒಟ್ಟು ೩೫೦ ಕಲ್ಲಿನ ಕಂಬಗಳು ಇರಲಿವೆ. ಅದರಲ್ಲಿ ೧೭೦ ಕಂಬಗಳು ಕೆಳಮಹಡಿಯಲ್ಲಿ ಇರಲಿದ್ದು, ಪ್ರತಿ ಕಂಬದಲ್ಲಿಯೂ ೨೫ ರಿಂದ ೩೦ ಚಿತ್ರಗಳಿರುತ್ತವೆ. ಈ ಕಂಬಗಳಲ್ಲಿರುವ ಚಿತ್ರಗಳು ಒಂದಕ್ಕೊಂದು ಸಂಬಂಧಪಟ್ಟಿದ್ದು, ನಾಗರಶೈಲಿ ಹಾಗೂ ಅಯೋಧ್ಯೆ ದೇಗುಲದ ಶೈಲಿಯಲ್ಲಿವೆ. ದೇವಾಂಗಣದ ವಿವಿಧ ಭಾವಗಳನ್ನು ಈ ಚಿತ್ರಗಳ ಮೂಲಕ ತುಂಬಲಾಗಿದೆ. ಇದರ ಹಿಂದೆ ವಿಶೇಷವಾದ ಶಿಲ್ಪವಿಜ್ಞಾನ ಅಡಗಿದೆ.
ಇಡೀ ದೇವಸ್ಥಾನದ ಒಟ್ಟು ವಿಸ್ತೀರ್ಣದಲ್ಲಿ ನಡೆದುಹೋದರೆ ಒಟ್ಟು ೭೫೦ ಹೆಜ್ಜೆಗಳು ಆಗುತ್ತವೆ. ಪ್ರತಿ ಹೆಜ್ಜೆಯಲ್ಲಿಯೂ ರಾಮಕಥೆಯನ್ನು ಹೇಳುತ್ತ ಹೋಗಬೇಕು ಎಂಬ ಉದ್ದೇಶದಿಂದ ಗೋಡೆ ಮತ್ತು ಕಂಬಗಳ ಮೇಲೆ ನೂರಾರು ಚಿತ್ರಗಳ ಮೂಲಕ ರಾಮಕಥೆಯನ್ನು – ದಶರಥನಿಗೆ ಪುತ್ರಸಂತಾನದ ವರಪ್ರಾಪ್ತಿಯಿಂದ ವನವಾಸ ಮುಗಿಸಿ ಬಂದ ಶ್ರೀರಾಮನ ಪಟ್ಟಾಭಿಷೇಕದವರೆಗೆ – ಹೇಳಲಾಗಿದೆ. ಕಂಬಗಳ ಕೆಳಭಾಗದಲ್ಲಿ ರಾಮಕಥೆ ಇರುತ್ತದೆ. ಈ ಕೆಲಸ ಈಗಾಗಲೇ ಪ್ರಾರಂಭವಾಗಿದ್ದು, ಡಿಸೆಂಬರ್ ೨೦೨೪ರ ವೇಳೆಗೆ ಮುಗಿಯಲಿದೆ.
ಸಂಪೂರ್ಣ ಭಿತ್ತಿಚಿತ್ರಗಳು ೨೦೨೪ರ ಜೂನ್ ವೇಳೆಗೆ ಸಿದ್ಧವಾಗಿರುತ್ತವೆ. ಮೊದಲಿಗೆ ಪ್ರಖ್ಯಾತ ಕಲಾವಿದ ವಾಸುದೇವ ಕಾಮತ್ ಅವರು ಆರ್ಟ್ ವರ್ಕ್ ಮಾಡಲಿದ್ದಾರೆ. ಅವರಿಗೆ ವಾಲ್ಮೀಕಿ ರಾಮಾಯಣದ ಶ್ಲೋಕಗಳನ್ನು ಆಯ್ಕೆ ಮಾಡಿ ನೀಡಲಾಗಿದ್ದು, ಅವರು ಆ ಶ್ಲೋಕಗಳಲ್ಲಿರುವ ಘಟನೆಯನ್ನು ಕಲ್ಪಿಸಿಕೊಂಡು, ಅದನ್ನು ಮಣ್ಣಿನಲ್ಲಿ ಮೂಡಿಸುತ್ತಾರೆ. ಅನಂತರ ಅದನ್ನು ಫೈಬರ್ನಲ್ಲಿ ಮೂಡಿಸಿ, ಕೊನೆಯ ಹಂತವಾಗಿ ಕಲ್ಲಿನಲ್ಲಿ ಕೆತ್ತಲಾಗುತ್ತದೆ.
ರಾಮಮಂದಿರಕ್ಕೆ ಭಕ್ತರು ಪೂರ್ವದ ದ್ವಾರದಿಂದ ಪ್ರವೇಶಿಸಿ ಸುರಂಗಮಾರ್ಗದ ಮೂಲಕ ಒಳಬಂದು ನಂತರ ಮೇಲಕ್ಕೆ ಹತ್ತಿ ಹೋಗಬೇಕು. ಅಲ್ಲಿ ಸ್ವಾಗತದ್ವಾರ ಸಿಗುತ್ತದೆ. ಸಿಂಹದ ಮೂರ್ತಿಯಿರುವ ಸಿಂಹದ್ವಾರ, ಅನಂತರ ಗಜದ್ವಾರ, ಕೊನೆಯಲ್ಲಿ ಹನುಮಂತ, ಇನ್ನೊಂದು ಕಡೆಯಲ್ಲಿ ಗರುಡ ಇರುತ್ತಾರೆ. ಇದು ಭಕ್ತರ ಸ್ವಾಗತಕ್ಕೆ ಇರುವ ದೇಗುಲದ ಪ್ರವೇಶ. ಇದು ಅಯೋಧ್ಯೆಯ ಸಾಂಪ್ರದಾಯಿಕ ದೇವಸ್ಥಾನಗಳ ಶೈಲಿಯಲ್ಲಿಯೇ ನಿರ್ಮಾಣವಾಗಿದೆ. ನಂತರ ಒಳಹೋಗುತ್ತಿದ್ದಂತೆ ೫ ಮಂಟಪಗಳಿವೆ. ಮಂಟಪಗಳ ಕೆಳಮಹಡಿಗಳು ಈಗಾಗಲೇ ಸಂಪೂರ್ಣವಾಗಿವೆ. ನೆಲಮಹಡಿಯ ಮೂಲಕ ಒಳಬಂದು ಅಲ್ಲಿಂದ ಗರ್ಭಗುಡಿಯತ್ತ ಸಾಗಿ ದೇವರ ದರ್ಶನ ಪಡೆದು ಮತ್ತೊಂದು ಕಡೆಯಿಂದ ಹೊರಬರಬೇಕು.
ರಾಮಲಲಾ ಮೂರ್ತಿ
ರಾಮಮಂದಿರದ ಗರ್ಭಗೃಹದ ಒಂದು ಕಡೆಯಿಂದ ಗುರುಮಂಟಪ, ರಂಗಮಂಟಪ, ನೃತ್ಯಮಂಟಪ ಮತ್ತು ಪ್ರಾರ್ಥನಾಮಂಟಪಗಳು ಇರುತ್ತವೆ. ದೇವಾಲಯ ಪ್ರವೇಶಿಸಿದ ಬಳಿಕ ಬಲಗಡೆ ತಿರುಗಿದರೆ ಗರ್ಭಗೃಹ ಸಿಗುತ್ತದೆ. ಇದೇ ಗರ್ಭಗುಡಿಯ ಮುಂಭಾಗದಲ್ಲಿ ಆಗಸ್ಟ್ ೫, ೨೦೨೦ರಂದು ಪ್ರಧಾನಿ ನರೇಂದ್ರ ಮೋದಿ ಪೂಜೆಯನ್ನು ನೆರವೇರಿಸಿದ್ದರು; ಅಂದಿನಿಂದ ಕೆಲಸ ಪ್ರಾರಂಭವಾಗಿತ್ತು.
ಈಗಾಗಲೇ ಗರ್ಭಗುಡಿಯ ನಿರ್ಮಾಣಕಾರ್ಯ ಪೂರ್ಣಗೊಂಡಿದ್ದು, ನೆಲ ಅಂತಸ್ತು ಸಿದ್ಧವಾಗಿದ್ದು, ಮೊದಲ ಅಂತಸ್ತಿನ ಶೇ. ೮೦ರಷ್ಟು ಕಾಮಗಾರಿ ಪೂರ್ಣಗೊಂಡಿದೆ.
ಈಗ ತಾತ್ಕಾಲಿಕ ದೇವಾಲಯದಲ್ಲಿರುವ ರಾಮಲಲಾ ಮೂರ್ತಿಯನ್ನು ಎಲ್ಲ ಗೌರವಗಳೊಂದಿಗೆ ಹೊಸ ರಾಮಲಲಾ ಜೊತೆಗೆ ಪ್ರತಿಷ್ಠಾಪನೆ ಮಾಡಲಾಗುತ್ತದೆ. ನಮಗೆಲ್ಲ ತಿಳಿದಿರುವಂತೆ ಸರ್ವೋಚ್ಚ ನ್ಯಾಯಾಲಯದಲ್ಲಿ ‘ಅರ್ಜಿದಾರ’ ಎಂದು ಗುರುತಿಸಿರುವುದು ಇದೇ ರಾಮಲಲಾನನ್ನು. ಅದನ್ನು ಆಧರಿಸಿಯೇ ತೀರ್ಪು ಬಂದಿದೆ. ರಾಮಲಲಾ ಏಕೆ ಅರ್ಜಿದಾರ ಆಗಬೇಕೆಂದು ಪ್ರಸ್ತುತ ದೇಗುಲದ ಟ್ರಸ್ಟಿಗಳಾಗಿರುವ ನ್ಯಾಯವಾದಿ ಕೆ. ಪರಾಶರನ್ ಅವರು ೫೦ ಗಂಟೆಗಳ ಕಾಲ ವಾದಿಸಿದ್ದರು. ನ್ಯಾಯಾಲಯ ಅವರ ವಾದವನ್ನು ಒಪ್ಪಿತ್ತು.
ವಾಲ್ಮೀಕಿ-ಶಬರಿ ದೇವಾಲಯ: ಜನರ ನಂಬಿಕೆಗೆ ತಕ್ಕಂತೆ ದೇವಸ್ಥಾನವು ಸಾಮಾಜಿಕ ಸಾಮರಸ್ಯವನ್ನು ಸಾರುವಂತಿರಬೇಕು ಎಂದು ನಿರ್ಧರಿಸಲಾಗಿದ್ದು, ಅದಕ್ಕಾಗಿ ಮಹರ್ಷಿ ವಾಲ್ಮೀಕಿ, ನಿಷಾದರಾಜ, ಶಬರಿ ಮಾತೆ ಮೊದಲಾದವರ ೭ ದೇವಸ್ಥಾನಗಳನ್ನು ಪ್ರಾಂಗಣದ ಹೊರಗೆ ಒಂದೇ ಆವರಣದಲ್ಲಿ ನಿರ್ಮಿಸಲಾಗುತ್ತದೆ. ಅವುಗಳಿಗೆ ಸ್ಥಳ ಗುರುತಿಸಲಾಗಿದೆ. ಬೇರೆ ಬೇರೆ ರೀತಿಯ ಭಕ್ತರು ಒಂದೇ ಕಡೆ ಬಂದು ನೋಡುವ ಅವಕಾಶ ಇಲ್ಲಿ ಸಿಗಲಿದೆ. ಈ ಭಾಗಗಳ ನಿರ್ಮಾಣಕಾರ್ಯ ಮಾರ್ಚ್ ೨೦೨೪ರ ನಂತರ ಪ್ರಾರಂಭವಾಗುತ್ತದೆ.
ಐತಿಹಾಸಿಕ ಕಲಾಕೃತಿಗಳು: ರಾಮಮಂದಿರದ ಅಸ್ತಿತ್ವವನ್ನು ದೃಢಪಡಿಸುವ ಅನೇಕ ಕಲಾಕೃತಿಗಳು ಉತ್ಖನನ ಮುಂತಾದ ಸಂದರ್ಭಗಳಲ್ಲಿ ದೊರೆತಿವೆ. ಆ ಕಲಾಕೃತಿಗಳು ದೇವಸ್ಥಾನದ ಶೈಲಿಗೆ ಹೊಂದುವುದಿಲ್ಲ. ಆದರೆ ಅವುಗಳಿಗೆ ಒಂದು ಇತಿಹಾಸವಿದೆ. ಇತಿಹಾಸದ ಕಾಲಮಾನ ನಿರ್ಧರಿಸಲು ಅವೂ ಸಹಾಯಕವಾದವು. ಮೂರು ಅಂತಸ್ತಿನ ಒಂದು ಮ್ಯೂಸಿಯಂ ನಿರ್ಮಿಸಿ ಅಲ್ಲಿ ಇವುಗಳನ್ನು ಪ್ರದರ್ಶನಕ್ಕಿಡಲು ಯೋಜಿಸಲಾಗಿದೆ. ‘ರಾಮಕಥಾ ಮ್ಯೂಸಿಯಂ’ ಎಂಬ ಹೆಸರಿನ ಈ ಮ್ಯೂಸಿಯಂ ಹೆದ್ದಾರಿಯಲ್ಲಿ ನಿರ್ಮಾಣಗೊಳ್ಳಲಿದೆ. ಉತ್ತರಪ್ರದೇಶ ಸರ್ಕಾರದ ಬಳಿ ಮನವಿ ಮಾಡಲಾಗಿದ್ದು, ಸರ್ಕಾರವೂ ಒಪ್ಪಿದೆ. ನ್ಯಾಯಾಲಯದ ಮುಂದೆ ಸಲ್ಲಿಸಲಾಗಿದ್ದ ಎಲ್ಲ ಗ್ರಂಥಗಳು, ಡಾಕ್ಯುಮೆಂಟ್ಗಳು, ೫೦೦ ವರ್ಷಗಳ ಕಾನೂನು ಹೋರಾಟದ ವಿವರಗಳು, ಅನಂತರ ದೇವಸ್ಥಾನ ಕಟ್ಟಿದ ಪ್ರಕ್ರಿಯೆ – ಎಲ್ಲವನ್ನೂ ಇಲ್ಲಿ ಸಂಗ್ರಹಿಸಿ ಇಡಲಾಗುತ್ತದೆ.
ಕಲಾವಿದರು, ಕುಶಲಕರ್ಮಿಗಳು: ಕೆಳಹಂತದ ಸ್ತಂಭಗಳ ನಿರ್ಮಾಣಕ್ಕೆ ಟೆಂಡರ್ ಮೂಲಕ ಶಿಲ್ಪಿಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದ್ದು, ಸಾಮಾನ್ಯವಾಗಿ ಅವರೆಲ್ಲ ಒಡಿಸ್ಸಾ, ಸಾರನ್ಪುರ, ಆಗ್ರಾಗಳ ನುರಿತ ಶಿಲ್ಪಿಗಳು ಮತ್ತು ಫೈಬರ್ ಹಾಗೂ ಶಿಲೆಗಳ ಕೆತ್ತನೆಯಲ್ಲಿ ಪರಿಣತರು. ಕಂಚಿನಮೂರ್ತಿ ಕೆತ್ತನೆಗೆ ಬೇರೆ ಕಲಾವಿದರಿದ್ದಾರೆ. ರಾಮನ ವಿವಿಧ ಆದರ್ಶಗಳನ್ನು ಬಿಂಬಿಸುವ ನೂರಾರು ಕಲಾಕೃತಿಗಳನ್ನು ಪ್ರಾಂಗಣದ ಬೇರೆ ಬೇರೆ ಕಡೆಗಳಲ್ಲಿ ಸ್ಥಾಪಿಸಲಾಗುವುದು. ಮರ್ಯಾದಾಪುರುಷೋತ್ತಮನ ಆದರ್ಶಗಳು ಸನಾತನಧರ್ಮದಲ್ಲಿ ಹೇಗೆ ಬಿಂಬಿತವಾದವು ಎಂಬುದನ್ನು ಸಾರುವ ಕಥೆಗಳು ಕಂಚಿನ ಮ್ಯೂರಲ್ಗಳಲ್ಲಿ ಮೂಡಲಿವೆ. ಪುಣೆಯ ಪ್ರಸಿದ್ಧ ಕಥಾವಾಚಕ ಸ್ವಾಮಿ ಗೋವಿಂದದೇವ್ಗಿರಿ ಹಾಗೂ ಯತೀಂದ್ರ ಮಿಶ್ರಾ ಅವರು ಈ ಕಥೆಗಳನ್ನು ಆರಿಸಿದ್ದಾರೆ. ಆ ಚಿತ್ರಗಳನ್ನು ಮೊದಲು ಮಣ್ಣಿನಲ್ಲಿ, ತದನಂತರ ಫೈಬರ್ನಲ್ಲಿ ಮಾಡಿ ಕೊನೆಯದಾಗಿ ಕಂಚಿನಲ್ಲಿ ಮೂಡಿಸಲಾಗುತ್ತದೆ.
ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯೊಳಗೆ ೮ ಅಡಿ ಎತ್ತರದ ಚಿನ್ನದ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ರಾಮಲಲಾನ ವಿಗ್ರಹವನ್ನು ಇರಿಸಲಾಗುತ್ತದೆ. ರಾಜಸ್ಥಾನದ ಕುಶಲಕರ್ಮಿಗಳು ಸಿಂಹಾಸನವನ್ನು ತಯಾರಿಸಿದ್ದಾರೆ. ಈ ಸಿಂಹಾಸನವು ೮ ಅಡಿ ಎತ್ತರ, ೩ ಅಡಿ ಉದ್ದ ಮತ್ತು ೪ ಅಡಿ ಅಗಲ ಇದೆ.
ದೇವರ ಮೂರ್ತಿಯ ಆಯ್ಕೆ ಅಂತಿಮ ಹಂತದಲ್ಲಿದೆ. ಈಗಾಗಲೇ ಮೂವರು ಶಿಲ್ಪಿಗಳು ಬಾಲರಾಮನ ಮೂರು ವಿಗ್ರಹಗಳನ್ನು ಕೆತ್ತುತ್ತಿದ್ದಾರೆ. ವಿಗ್ರಹ ಹೇಗಿರಬೇಕು, ಎಷ್ಟು ಎತ್ತರ, ಯಾವ ವಯಸ್ಸು, ಕೈಯಲ್ಲಿ ಏನಿರಬೇಕು – ಎಂಬ ಮೂರ್ತಿಯ ಕುರಿತ ಎಲ್ಲ ಮಾಹಿತಿಯನ್ನು ಶಿಲ್ಪಿಗಳಿಗೆ ನೀಡಲಾಗಿದೆ. ಅವರ ಕೆಲಸ ಮುಗಿದ ನಂತರ ಆ ಮೂರು ಮೂರ್ತಿಗಳಲ್ಲಿ ಒಂದನ್ನು ಆರಿಸಲಾಗುತ್ತದೆ.
ಜನವರಿ ೧೪, ೨೦೨೪ರಿಂದ ಪ್ರಾರ್ಥನೆಗಳು ಆರಂಭವಾಗುತ್ತವೆ. ಅಲ್ಲಿಂದ ಜ. ೨೪ರವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಪ್ರಧಾನಿ ನರೇಂದ್ರ ಮೋದಿ ಅವರಿಂದ ಜನವರಿ ೨೨ರಂದು ಶ್ರೀರಾಮಮೂರ್ತಿಯ ಪ್ರಾಣಪ್ರತಿಷ್ಠೆ ನಡೆಯಲಿದೆ.
(ಡಿಸೆಂಬರ್ ೧೫, ೨೦೨೩ಕ್ಕೆ ಮುನ್ನ, ವಿವಿಧ ಮಾಧ್ಯಮಗಳಿಗೆ ನೀಡಿದ ಸಂದರ್ಶನಗಳಿಂದ ಆಯ್ದ ಸಂಗ್ರಹರೂಪ.)