ನೀರು ಹೊತ್ತ ನೀರೆಯರು
ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ರವಿ ಹೆಗಡೆ, ಪ್ರಸ್ತುತ ಬೆಂಗಳೂರಿನ ಪ್ರತಿಷ್ಠಿತ ನಿಮ್ಹಾನ್ಸ್‌ನಲ್ಲಿ ಸಂಶೋಧನಾ ಅಭ್ಯರ್ಥಿ. ತೀರ ಎಳವೆಯಲ್ಲೇ ಛಾಯಾಗ್ರಹಣ, ಚಿತ್ರಕಲೆ, ಪರಿಸರ ಮುಂತಾದ ವಿವಿಧ ಕ್ಷೇತ್ರಗಳಲ್ಲಿ ಆಸಕ್ತಿ ರೂಢಿಸಿಕೊಂಡು ಬಂದ ರವಿ, ಸತತ ಐದು ವರ್ಷಗಳ ಕಾಲ ಪ್ರಜಾವಾಣಿ ಮಕ್ಕಳ ದೀಪಾವಳಿ ವರ್ಣಚಿತ್ರಕಲಾ ಸ್ಪರ್ಧೆಯಲ್ಲಿ ಬಹುಮಾನ ಗೆದ್ದು ದಾಖಲೆ ನಿರ್ಮಿಸಿದ್ದಿದೆ. ಉತ್ತರ ಕನ್ನಡದ ಕಡಲ ತೀರದ ಕಲ್ಬಂಡೆಗಳು, ಪಶ್ಚಿಮ ಘಟ್ಟದ ಮಳೆಕಾಡು ಮತ್ತು ವಿನಾಶದ ಅಂಚಿನಲ್ಲಿರುವ ಸಿಂಗಳೀಕಗಳ ರಕ್ಷಣೆಗೆ ಸಾಕಷ್ಟು ಕೆಲಸ ಮಾಡುತ್ತಿರುವ ರವಿ ಹೆಗಡೆ, ಜಗತ್ತಿನ ಪ್ರತಿಷ್ಠಿತ ನ್ಯಾಷನಲ್ ಜಿಯೊಗ್ರ್ಯಾಫಿಕ್‌ನಲ್ಲಿ ತಮ್ಮ ಛಾಯಾಚಿತ್ರ ಪ್ರಕಟಿಸಿದ ಹಿರಿಮೆ ಹೊಂದಿರುವವರು.
ಈ ಚಿತ್ರ ಪಡುವಣ ಕಡಲ ತೀರದ ತೆಂಗು-ಕಂಗುಗಳಿಂದ ಕಂಗೊಳಿಸುವ ಹಳ್ಳಿಗಳ ಚಿರಪರಿಚಿತ ಚಿತ್ರಣ. ಸೂರ್ಯಾಸ್ತದ ದೃಶ್ಯ ಮನಮೋಹಕ. ಹೊಂಬಣ್ಣದೋಕುಳಿ, ಕಡಲ ಮೊರೆತ, ನೀರ ಕೊಡಪಾನ ಹೊತ್ತು ನಡೆವ ನೀರೆಯರು, ಮುಸ್ಸಂಜೆಯ ನೆರಳು-ಬೆಳಕಿನಾಟ – ಇವೆಲ್ಲ ಕಣ್ಣಿಗೆ ಹಬ್ಬ, ಮನಸ್ಸಿಗೆ ಇಂಪು ನೀಡುವಂಥದ್ದು. ಉತ್ತರ ಕನ್ನಡದ ಹಳ್ಳಿಯ ದೃಶ್ಯ ರವಿ ಹೆಗಡೆ ಅವರ ಮನಸ್ಸಿನಲ್ಲಿ ಅಚ್ಚೊತ್ತಿ ಎಳವೆಯಲ್ಲಿ, ಅಂದರೆ ಪ್ರೌಢಶಾಲಾ ವಿದ್ಯಾರ್ಥಿಯಾಗಿದ್ದಾಗ, ಬಣ್ಣದಲ್ಲಿ ಅಭಿವ್ಯಕ್ತಿಗೊಂಡಿದ್ದು ಹೀಗೆ.
ಬ್ಲಾಗ್:
http://biologisthegde.wix.com/ravihegde
ಫೇಸ್‌ಬುಕ್:
https://www.facebook.com/biologisthegde
ಇಮೇಲ್:
[email protected]