ಓಹ್! ಇಲ್ಲಿರುವ ಕಾಷ್ಠಶಿಲ್ಪದ ಚಿತ್ರಗಳು ಎಷ್ಟು ಸುಂದರವಾಗಿವೆ!! ಅವು ತೇರು ಅಥವಾ ರಥಗಳ ಭಿತ್ತಿಪತ್ತಿಗೆಯಲ್ಲಿ ಬಳಸುವ ಪೌರಾಣಿಕ ಕಥನಸನ್ನಿವೇಶದ ಲೀಲಾಮೂರ್ತಿಗಳು. ಅವುಗಳ ಶೈಲಿ, ಅಲಂಕಾರಗಳಲ್ಲಿ ಹೊಯ್ಸಳ ಕಾಲದ ನಂತರದ ವಿಜಯನಗರ, ಚೇರ, ಪಾಂಡ್ಯರ ಕಾಲದಲ್ಲಿಯ ವಿನ್ಯಾಸದ ಆಧಾರವಿದ್ದು, ಇಂದಿನ ಶಿಲ್ಪಕಲಾವಿದರು ಪ್ರಾಚೀನಕಾಲದ ಶಿಲ್ಪಕಲೆಯಲ್ಲಿ, ಶಿಲ್ಪಶಾಸ್ತ್ರದಲ್ಲಿ ತಿಳಿಸಲಾದ ಅಳತೆ, ತಾಳಮಾನ, ರೂಪಲಕ್ಷಣಗಳ ಜೊತೆಗೆ ಪುರಾಣಗಳನ್ನೂ, ಇತಿಹಾಸವನ್ನೂ ಸಮಗ್ರವಾಗಿ ಅಧ್ಯಯನ ಮಾಡಿ ಅದರಂತೆ ರಚಿಸಲು ಸಾಧ್ಯವೆಂಬುದನ್ನು ಸಮರ್ಥಿಸುವಂತಿವೆ.
ರಥಶಿಲ್ಪವು ಒಂದು ದೇವಾಲಯದ ವಿನ್ಯಾಸದಂತೆ ಅದರದೇ ಆದ ರಚನೆ, ಆಕಾರ, ತಂತ್ರಜ್ಞಾನಗಳನ್ನು ಹೊಂದಿದೆ. ದೇವಾಲಯದಲ್ಲಿ ರಚಿಸುವಂತೆ ಕಾಷ್ಠದ ಭಿತ್ತಿಪಟ್ಟಿಕೆಗಳಲ್ಲಿಯೂ ಭಾವ-ಭಂಗಿಯಿಂದ ಕೂಡಿದ ಶಿಲ್ಪವನ್ನು ಕಾಣಬಹುದು. ಇಲ್ಲಿಯೂ ಕಥಾಚಿತ್ರಗಳು, ನೃತ್ಯಮಾಡುವ ಸಾಲುಗಳು, ಕುಣಿದು ಕುಪ್ಪಳಿಸುವ ಆನೆ ಹಂಸಗಳ ಸಾಲುಗಳು, ಕುದುರೆಗಳು, ಸಿಂಹ-ಮಕರ-ಯಾಳಿಗಳು ಕೈಗಳನ್ನು ಮೇಲೆತ್ತಿದ ಭಂಗಿಯಲ್ಲಿ, ಲತೆಗಳಿಂದ ಕೂಡಿದ ಕುಸುರಿ ಕೆತ್ತನೆ ವ್ಯವಸ್ಥಿತವಾಗಿರುತ್ತದೆ.
ಇಲ್ಲಿ ಮೊದಲನೆ ಶಿಲ್ಪಪಟ್ಟಿಕೆಯಲ್ಲಿ – ಕೈಲಾಸದಲ್ಲಿ ಪರಶಿವನ ಒಡ್ಡೋಲಗವನ್ನು ಕಾಣಬಹುದು. ಇದು ಶಿವ-ಪಾರ್ವತಿಯರು ವಿವಾಹಾನಂತರದ ಸಂದರ್ಭದಲ್ಲಿ ಸುಖಾಸೀನರಾಗಿದ್ದು, ವಿವಿಧ ವಸ್ತ್ರಾಭರಣ ಭೂಷಿತರಾಗಿ ಜೊತೆಯಲ್ಲಿ ಗಣಪತಿ, ಸುಬ್ರಹ್ಮಣ್ಯ, ನಂದಿ, ಋಷಿ, ದ್ವಾರಪಾಲಕರು, ಗಂಧರ್ವರು ಪುಷ್ಪಗುಚ್ಛದೊಂದಿಗೆ ಸಪರಿವಾರವಾಗಿರುವ ಆನಂದಮಯ ಸನ್ನಿವೇಶ. ಹಂಸದೊಡನೆ ಲತಾಸುರುಳಿಯ ಪಟ್ಟಿಕೆಯು ಆನಂದಕ್ಕೆ ಪೂರಕವಾಗಿದೆ.
ಎರಡನೆಯ ಶಿಲ್ಪಪಟ್ಟಿಕೆಯಲ್ಲಿ – ಕಾಳಿಂಗಮರ್ದನ ಸನ್ನಿವೇಶವನ್ನು ನೋಡಬಹುದು. ಇಲ್ಲಿ ಕೃಷ್ಣಾವತಾರದಲ್ಲಿ ಕಾಳಿಂಗಸರ್ಪದಿಂದ ಯಮುನಾ ನದಿಯು ವಿಷಪೂರಿತವಾದಾಗ ಶ್ರೀಕೃಷ್ಣನು ಕಾಳಿಂಗವನ್ನು ಮರ್ದನಮಾಡಿ ಯಮುನಾ ನದಿಯು ವಿಷದಿಂದ ಕಲುಷಿತಗೊಂಡಿರುವುದನ್ನು ನಿವಾರಣೆ ಮಾಡುವ ಸಂದರ್ಭ.
ಮೂರನೆಯ ಶಿಲ್ಪಪಟ್ಟಿಕೆಯಲ್ಲಿ – ಶಿವಪಾರ್ವತಿಯರ ವಿವಾಹ ಸನ್ನಿವೇಶದಲ್ಲಿ ವಿಷ್ಣು ಪಾರ್ವತಿಯನ್ನು ಶಿವನಿಗೆ ಧಾರೆಯೆರೆದು ಕೊಡುತ್ತಿದ್ದು, ಪರಿವಾರವು ನೃತ್ಯದೊಂದಿಗೆ ವಾದ್ಯ ನುಡಿಸುತ್ತಿರುವುದು; ಶಿವನ ಲೀಲೆಯ ಊರ್ಧ್ವತಾಂಡವವು ಜೊತೆಯಲ್ಲಿದೆ.
ನಾಲ್ಕನೆಯ ಶಿಲ್ಪಪಟ್ಟಿಕೆಯಲ್ಲಿ – ಶಿವನ ನವತಾಂಡವ ನೃತ್ಯದ ಉಮಾ ತಾಂಡವ, ಗೌರೀ ತಾಂಡವ ಹಾಗೂ ಸಂಹಾರ ತಾಂಡವ – ಇದು ‘ಕಾಲ್ ಮಾರಿ ಆಡಿಯ ತಾಂಡವ’ – ಅಂದರೆ, ಕಾಲನ್ನು ಬದಲಿಸಿ ನರ್ತನ ಮಾಡುತ್ತಿರುವುದು.
ಐದನೆಯ ಶಿಲ್ಪಪಟ್ಟಿಕೆಯಲ್ಲಿ – ಸಂಹಾರತಾಂಡವದಲ್ಲಿ ಶಿವನು ಪರಿವಾರದೊಂದಿಗೆ ನಾಟ್ಯಮಾಡುವ ಸನ್ನಿವೇಶ. ಅಸುರಶಕ್ತಿಯನ್ನು ಸಂಹಾರ ಮಾಡುವ ತಾಂಡವ ನೃತ್ಯ.
ಆರನೆಯ ಶಿಲ್ಪಪಟ್ಟಿಕೆಯಲ್ಲಿ – ಗಣಪತಿಯು ವಿಭಿನ್ನ ಹಾವಭಾವದಲ್ಲಿ ನೃತ್ಯ ಮಾಡುತ್ತಿದ್ದು, ಗಣಪತಿಯನ್ನು ನಮಿಸುತ್ತಾ ಅನುಸರಿಸುತ್ತಿರುವ ಪರಿವಾರವೂ ಇದೆ.
ಏಳನೆಯ ಶಿಲ್ಪಪಟ್ಟಿಕೆಯಲ್ಲಿ – ವೇಣುಗೋಪಾಲಸ್ವಾಮಿಯು ಗೋವಿನೊಂದಿಗೆ ರುಕ್ಮಿಣಿ ಸತ್ಯಭಾಮೆ ಸಮೇತನಾಗಿ ಚತುರ್ಭುಜನಾಗಿರುವುದು; ಇಲ್ಲಿಯ ವಿಶೇಷ – ಸಂಗೀತ, ನೃತ್ಯ, ನಾದ ಸಮಾವಿಷ್ಟಗೊಂಡಿರುವುದು.
ಎಂಟನೆಯ ಶಿಲ್ಪಪಟ್ಟಿಕೆಯಲ್ಲಿ – ಗಣಪತಿ ನೃತ್ಯದಲ್ಲಿ ಪತ್ನೀ ಸಮೇತನಾಗಿ ಋಷಿ ಗಂಧರ್ವರೊಂದಿಗೆ ಉತ್ಸಾಹದ ವಾತಾವರಣದಲ್ಲಿರುವುದನ್ನು ಕಾಣಬಹುದು.
ಒಂಬತ್ತನೆಯ ಶಿಲ್ಪಪಟ್ಟಿಕೆಯಲ್ಲಿ – ಪಾರ್ವತೀ-ಪರಮೇಶ್ವರರು ಪರಿವಾರದೊಂದಿಗೆ ನೃತ್ಯದಲ್ಲಿ ತಲ್ಲೀನರಾಗಿದ್ದಾರೆ.
ಹತ್ತನೇ ಶಿಲ್ಪಪಟ್ಟಿಕೆಯಲ್ಲಿ – ಗಂಗೆಯು ನೀರಿನ ಕುಂಭದೊಂದಿಗೆ ತನ್ನ ವಾಹನ ಮಕರದ ಮೇಲೆ ನರ್ತಿಸುತ್ತಿರುವ ಮೋಹಕದೃಶ್ಯವನ್ನು ನೋಡಬಹುದು.
ಹನ್ನೊಂದನೇ ಶಿಲ್ಪಪಟ್ಟಿಕೆಯಲ್ಲಿ – ಇದೆಲ್ಲದಕ್ಕೂ ಸಾಕ್ಷಿಯಾಗಿರುವಂತೆ, ಸ್ಥಿತಿಯನ್ನು ಕಾಪಿಡಲು ಮಹಾವಿಷ್ಣುವು ಪತ್ನಿಯೊಂದಿಗೆ ಪರಿವಾರ ಸಮೇತನಾಗಿದ್ದು ಆಸೀನನಾಗಿದ್ದಾನೆ.
ಒಂದು ಶಿಲ್ಪವನ್ನು ನೋಡುವಾಗ ಅದರ ಅಂದ ಚಂದ ಹಾಗೂ ಅದರ ಕಲಾವಿಶೇಷತೆಯೊಂದಿಗೆ ಪೌರಾಣಿಕ ಕಥಾಸನ್ನಿವೇಶ ಅನುಭವಕ್ಕೆ ಬರುತ್ತದೆ. ಈ ಹಿನ್ನೆಲೆಯು ಕಲಾಪ್ರಜ್ಞೆಯೊಂದಿಗೆ ಜೀವನದ ಸದುದ್ದೇಶವು ಈಡೇರಲು ಧರ್ಮಾಧರ್ಮದ ಅರಿವಿಗೆ ಶಿಲ್ಪಗಳಲ್ಲಿ ಈ ಬಗೆಯ ಕಥನಗಳ ದೃಶ್ಯಾವಳಿಗಳ ನಿರೂಪಣೆಯು ಇರುತ್ತದೆ. ತಮ್ಮ ಮನಮೋಹಕ ಸೌಂದರ್ಯ, ಶೈಲಿಗಳಿಂದಾಗಿ ಅವು ನೋಡುಗರ ಮನದಲ್ಲಿ ಆಳವಾಗಿ ಉಳಿಯುತ್ತವೆ.
ಕೆಲವು ಸನ್ನಿವೇಶದ ಶಿಲ್ಪಗಳನ್ನು ಕಲಾರಸಿಕರ ರುಚಿಗನುಗುಣವಾಗಿ (ಶಿಲೆ, ಕಾಷ್ಠ, ಲೋಹ, ಮೃತ್ತಿಕೆ, ಚಿತ್ರಕಲೆ ಹಾಗೂ ಇತ್ತೀಚೆಗೆ ಪೇಪರ್ ಪಲ್ಪ್ ಅಥವಾ ಕಾಗದದ ರದ್ದಿ, ಸಿಮೆಂಟ್, ಫ಼ೈಬರ್ ಮಾಧ್ಯಮಗಳಲ್ಲಿ) ಗೃಹಾಲಂಕಾರವಾಗಿ, ಕೆಲವೊಂದು ಸೌಧಗಳಲ್ಲಿ, ವನಗಳಲ್ಲಿ ಶೋಭೆತರುವಂತೆ ಇಡುವ ಸಂಪ್ರದಾಯವೂ ಇದೆ. ಇದರಿಂದ ಕಲಾಪರಂಪರೆ ಉಳಿಯಲು ಸಹಕಾರಿಯಾಗಿದೆ.?