ಗೀತಂ ವಾದ್ಯಂ ತಥಾ ನೃತ್ಯಂ ತ್ರಯಂ ಸಂಗೀತಮುಚ್ಯತೇ” ಎಂಬುದು ಶಾಸ್ತ್ರಕಾರರ ಅಭಿಮತ. ಅಂದರೆ ಗಾಯನ, ವಾದನ ಮತ್ತು ನೃತ್ಯಗಳ ಸಮ್ಮಿಲನವೇ ಸಂಗೀತವೆನ್ನಲಾಗಿದೆ. ಈ ನಿಟ್ಟಿನಲ್ಲಿ ವೈಣಿಕ ವಿದ್ವಾನ್ ಎಂ.ಆರ್. ಶಶಿಕಾಂತ್, ಅವರ ಧರ್ಮಪತ್ನಿ ನೃತ್ಯಪಟು ಡಾ|| ಮಾಲಾ ಶಶಿಕಾಂತ್ ಮತ್ತು ಇವರ ಏಕೈಕ ಸುಪುತ್ರಿ ಗಾಯಕಿ ಕುಮಾರಿ ಸಿಂಧು, ಸಂಗೀತ ಎಂಬ ಪದಕ್ಕೆ ಅನ್ವರ್ಥವಾದವರೆಂದೇ ಹೇಳಬಹುದು. ಈ ಕುಟುಂಬವು ಸಾಧನೆ, ಬೋಧನೆ, ವಿನಿಕೆ ಮತ್ತು ಪ್ರಚಾರದಲ್ಲಿ ತಮ್ಮನ್ನು ತಾವೇ ತೊಡಗಿಸಿಕೊಂಡು ಸಾರ್ಥಕಜೀವನ ನಡೆಸುತ್ತಿರುವುದು ಹೆಮ್ಮೆಯ ವಿಷಯ.
ಶ್ರೀ ಶಶಿಕಾಂತ್ರವರು ವಿದ್ವಾಂಸರುಗಳಾದ ಶಂಕರನಾರಾಯಣ ಶಾಸ್ತ್ರಿ ಮತ್ತು ಡಾ|| ವಿ. ದೊರೆಸ್ವಾಮಿ ಅಯ್ಯಂಗಾರ್ ಅವರುಗಳಲ್ಲಿ ವೀಣಾವಾದನದಲ್ಲಿ ಶಿಕ್ಷಣ ಪಡೆದು ಆಕಾಶವಾಣಿಯ ಎ-ದರ್ಜೆಯ ಕಲಾವಿದರಾಗಿ ದೇಶ-ವಿದೇಶಗಳಲ್ಲಲ್ಲದೆ ಸಂಗೀತ ಸಮ್ಮೇಳನಗಳಲ್ಲಿ ಮತ್ತು ತಿರುಮಲೆಯಲ್ಲಿ ನಡೆಯುವ “ನಾದ ನೀರಾಜನಂ” ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ.
ಗುರುಗಳಾದ ಡಾ|| ವಿ. ದೊರೆಸ್ವಾಮಿ ಅಯ್ಯಂಗರ್ಯರೊಂದಿಗೆ ಪಂಚವೀಣಾವಾದನದ ಸದಸ್ಯರಲ್ಲೊಬ್ಬರಾಗಿ ರಷ್ಯಾದಲ್ಲಿಯೂ (೧೯೮೭), ಜರ್ಮನಿಯಲ್ಲಿಯೂ (೧೯೯೧) ನಡೆದ ‘ಫೆಸ್ಟಿವಲ್ ಆಫ್ ಇಂಡಿಯಾ’ ಮತ್ತು ೨೦೦೭ರಲ್ಲಿ ಅಮೆರಿಕದಲ್ಲಿ ನಡೆದ ಅಕ್ಕ ಸಮ್ಮೇಳನದಲ್ಲಿ ಪಾಲ್ಗೊಂಡಿದ್ದಾರೆ. ಇವರ ಅರ್ಧಾಂಗಿ ಡಾ|| ಮಾಲಾ ಶಶಿಕಾಂತ್ರವರು ಆಯೋಜಿಸಿದ ಅನೇಕ ನೃತ್ಯರೂಪಕಗಳಿಗೆ ಸಂಗೀತ ಸಹಕಾರ ನೀಡಿರುವ ಶ್ರೀಯುತರು ‘ಗಾನಕಲಾಕಸ್ತೂರಿ’, ‘ಲಲಿತಾಕಲಾಸುಮ’ ಮುಂತಾದ ಪ್ರಶಸ್ತಿಗಳಿಂದ ಅಲಂಕೃತರಾಗಿದ್ದಾರೆ. ವೃತ್ತಿಯಲ್ಲಿ ಖ್ಯಾತ ವಕೀಲರಾಗಿದ್ದರೂ ವೀಣಾವಾದನವೇ ಇವರ ಉಸಿರೆಂದರೆ ತಪ್ಪಾಗಲಾರದು.
ಡಾ|| ಮಾಲಾ ಶಶಿಕಾಂತ್
ಒಂಭತ್ತು ವರ್ಷದ ಬಾಲಕಿ ಕುಮಾರಿ ಮಾಲಾ ಅವರಿಗೆ ನೃತ್ಯ-ಸಂಗೀತ ಆಧರಿಸಿದ ‘ತಿಲ್ಲಾನ ಮೋಹನಾಂಬಾಳ್’ ಎಂಬ ತಮಿಳು ಚಲನಚಿತ್ರವನ್ನು ವೀಕ್ಷಿಸಿ ನೃತ್ಯ ಕಲಿಯಬೇಕೆಂಬ ಆಸೆ ಮೂಡಿಬಂತು. ಇವರ ತಂದೆ-ತಾಯಿ ಶ್ರೀ ರಾಘವಾಚಾರಿ ಮತ್ತು ಶ್ರೀಮತಿ ಪದ್ಮಾವತಿ ಹಾಗೂ ಇವರ ಚಿಕ್ಕಪ್ಪ ಮತ್ತು ಚಿಕ್ಕಮ್ಮ – ಡಾ|| ಜಯಲಕ್ಷ್ಮಿ ಮತ್ತು ಡಾ|| ಸಂಪತ್ತಾಚಾರ್ ಬಾಲಕಿಯ ಕನಸು ನನಸಾಗಲು ಸರ್ವರೀತಿಯ ಪ್ರೋತ್ಸಾಹವನ್ನಿತ್ತು ಗುರುಗಳಾದ ನಾಟ್ಯಾಚಾರ್ಯ ಭರತ ಕಲಾಪ್ರವೀಣ ಶ್ರೀ ವಿ.ಎಸ್. ಕೌಶಿಕ್ ಅವರಲ್ಲಿ ನೃತ್ಯಶಿಕ್ಷಣವನ್ನು ದೊರಕಿಸಿಕೊಟ್ಟರು. ಗುರುಗಳಾದರೋ ಬಹಳ ಶಿಸ್ತಿನ ವ್ಯಕ್ತಿ. ಶಾಸ್ತ್ರ ಮತ್ತು ಪ್ರಯೋಗಗಳಲ್ಲಿ ಅತ್ಯುತ್ತಮದರ್ಜೆಯ ಕಲಾವಿದರಾಗಿದ್ದವರು. ಇವರಲ್ಲಿ ಶ್ರೀಮತಿ ಮಾಲಾರವರು ಹಲವು ದಶಕಗಳ ಕಾಲ ತರಬೇತಿ ಪಡೆದು ಗುರುಗಳ ಅನೇಕ ನೃತ್ಯರೂಪಕಗಳಲ್ಲಿ ಭಾಗವಹಿಸಿ ಉತ್ತಮ ನೃತ್ಯಪಟುವಾಗಿ ರೂಪಗೊಂಡರು.
ಇವರ ಕಲೆಯನ್ನು ಎಲ್ಲ ರೀತಿಯಲ್ಲೂ ಪ್ರೋತ್ಸಾಹಿಸುವ ಪತಿ ಶ್ರೀ ಶಶಿಕಾಂತ್, ಅತ್ತೆ ಶ್ರೀಮತಿ ರುಕ್ಮಿಣಿ ಮತ್ತು ಮಾವ ಶ್ರೀ ರಾಮಯ್ಯಂಗಾರ್ ಅವರುಗಳನ್ನು ಪಡೆದುದು ಇವರ ಸೌಭಾಗ್ಯವೇ ಸರಿ.
ಮುಂದೆ ಭರತಕಲಾಮಣಿ ಶ್ರೀ ರಾಧಾಕೃಷ್ಣ್ಣರವರಲ್ಲಿ ಬಹಳ ವರ್ಷಗಳ ಕಾಲ ಶಿಷ್ಯತ್ವ ನಡೆಸಿದರು.
‘ಕೈಶಿಕಿ ನಾಟ್ಯ ವಾಹಿನಿ’ ಎಂಬ ಕಲಾಮಂದಿರವನ್ನು ಸ್ಥಾಪಿಸಿ ಡಾ|| ಮಾಲಾ ನಾಲ್ಕು ದಶಕಗಳಿಂದ ಅಧ್ಯಯನ ಮತ್ತು ಬೋಧನೆಯಲ್ಲಿ ನಿರತರಾಗಿದ್ದಾರೆ. ನೂರಾರು ವಿದ್ಯಾರ್ಥಿಗಳಿಗೆ ಶಾಸ್ತ್ರ ಮತ್ತು ಪ್ರಯೋಗಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಇದಲ್ಲದೆ ಮೈಸೂರು ಶೈಲಿಯ ಭರತನಾಟ್ಯವನ್ನು ಕಾಪಾಡಲು ಸ್ಥಾಪಿತವಾಗಿರುವ ‘ಕರ್ನಾಟಕ ಭರತಾಗಮ’ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆಸಲ್ಲಿಸುತ್ತಿದ್ದಾರೆ. ರಾಷ್ಟ್ರದ ಅನೇಕ ವಿಶ್ವವಿದ್ಯಾಲಯಗಳಲ್ಲಿ ಪರೀಕ್ಷಕರಾಗಿ ಸೇವೆ ಸಲ್ಲಿಸಿದ್ದಾರೆ ಮತ್ತು ಅನೇಕ ಪ್ರಾತ್ಯಕ್ಷಿಕೆಗಳನ್ನು ನೀಡಿದ್ದಾರೆ.
ಎಲ್ಲ ಕಲಾಪ್ರಕಾರಗಳಲ್ಲಿರುವಂತೆ ಆಯಾ ಪ್ರಾಂತಗಳಲ್ಲಿ ಕಲಾ ಅಭಿವ್ಯಕ್ತಿಯಲ್ಲಿ ವಿಭಿನ್ನವಾದ ಶೈಲಿಗಳು ಇರುವುದು ಸಹಜ. ಹಾಗೆಯೇ ಭರತನಾಟ್ಯದಲ್ಲಿ ಮೈಸೂರು ಬಾನಿ ಶೈಲಿಯ ವಿಶಿಷ್ಟತೆಗಳನ್ನು ತಲಸ್ಪರ್ಶಿಯಾಗಿ ಅಧ್ಯಯನ ಮಾಡಿ ಈ ಭವ್ಯಪರಂಪರೆಗೆ ಬಹುದೊಡ್ಡ ಕೊಡುಗೆಯನ್ನು ನೀಡಿರುವವರಲ್ಲಿ ಡಾ|| ಮಾಲಾ ಸಹ ಒಬ್ಬರು.
ಭರತನಾಟ್ಯ-ಕಥಕಳಿ ಶೈಲಿಗಳ ಪರೀಕ್ಷೆಗಳಲ್ಲಿ ಉನ್ನತದರ್ಜೆಯಲ್ಲಿ ಉತ್ತೀರ್ಣತೆ ಹೊಂದಿ, ಭರತನಾಟ್ಯದಲ್ಲಿ ಎಂ.ಎ. ಮತ್ತು ಡಾಕ್ಟರೇಟ್ ಪಡೆದ ಹೆಗ್ಗಳಿಕೆ ಇವರದು. ಗುರು ವಿ.ಎಸ್. ಕೌಶಿಕ್ರವರು ಬರೆದ ‘ಭರತನಾಟ್ಯ ದಿಗ್ದರ್ಶನ’ಗ್ರಂಥ ನಿರ್ಮಾಣದಲ್ಲಿ ಸಹಾಯಕರಾಗಿ ಸೇವೆ ಸಲ್ಲಿಸಿದ್ದಾರೆ. ಕೇಂದ್ರ ಮತ್ತು ರಾಜ್ಯ ಸಂಸ್ಕೃತಿ ಇಲಾಖೆಗಳಿಂದ ಸಹಾಯಹಸ್ತ ಪಡೆದು ಡಾ|| ವೆಂಕಟಲಕ್ಷಮ್ಮನವರ ಮಾರ್ಗದರ್ಶನದಲ್ಲಿ ಮೈಸೂರು ನಾಟ್ಯಶೈಲಿಯ ಉಗಮ ಮತ್ತು ಬೆಳವಣಿಗೆಯ ಬಗ್ಗೆ ಅಧ್ಯಯನ ನಡೆಸಿದ್ದಾರೆ. ಇವೆಲ್ಲದರ ಫಲವಾಗಿ ‘ಪರಂಪರಧಾರಾ’ಎಂಬ ಗ್ರಂಥವನ್ನು ಬರೆದು ಮುಂದಿನ ಪೀಳಿಗೆಗೆ ಮಹದುಪಕಾರ ಮಾಡಿರುತ್ತಾರೆ. ಈ ಬಹು-ಉಪಯೋಗಿ ಗ್ರಂಥದಲ್ಲಿ ಮೈಸೂರು, ಕೋಲಾರ, ನಂಜನಗೂಡು ಮತ್ತು ಮೂಗೂರು ನಾಟ್ಯಪರಂಪರೆಗಳ ಉಗಮ ಮತ್ತು ಇಂದಿನ ದಿನಗಳವರೆಗಿನ ಬೆಳವಣಿಗೆಗಳ ಪಕ್ಷಿನೋಟವನ್ನು ನೀಡಿದ್ದಾರೆ ಮತ್ತು ಜನಸಾಮಾನ್ಯರಿಗೂ ಸುಲಭವಾಗಿ ಅರ್ಥವಾಗುವ ರೀತಿಯಲ್ಲಿ ಬರೆದಿದ್ದಾರೆ. ಗಿರಿಜಾ ಕಲ್ಯಾಣ, ಸೀತಾ ಸ್ವಯಂವರ, ಕೃಷ್ಣಾಲೀಲಾ, ಕರ್ನಾಟಕ ಶಿಲ್ಪವೈಭವ, ಗೋಕುಲ ವ್ರಜ ಸಂಭ್ರಮ, ನವರಸ ದ್ರೌಪದಿ, ನವರಸ ನಾಯಕ ಕೃಷ್ಣ, ಪುರಂದರನಮನ, ಬಸವೇಶ್ವರ ಮುಂತಾದ ಕಥಾವಸ್ತುಗಳನ್ನೊಳಗೊಂಡ ನೃತ್ಯರೂಪಕಗಳನ್ನು ಸಂಯೋಜಿಸಿ, ನಗರಗಳಲ್ಲಲ್ಲದೆ ಗ್ರಾಮಾಂತರ ಪ್ರದೇಶಗಳಲ್ಲೂ ಪ್ರದರ್ಶಿಸಿದ್ದಾರೆ. ಚಿತ್ರಕಲೆಯಲ್ಲೂ ನೈಪುಣ್ಯಗಳಿಸಿರುವ ಡಾ|| ಮಾಲಾರವರಿಗೆ ‘ಕೆಂಪೇಗೌಡ ಪ್ರಶಸ್ತಿ’, ‘ನರ್ತನ ನಿಪುಣೆ’, ‘ನೃತ್ಯವಿದ್ಯಾಪ್ರಕಾಶ’, ‘ಕಲಾಯೋಗಿ’ ಮುಂತಾದ ಬಿರುದು ಸನ್ಮಾನಗಳು ಸಂದಿವೆ.
ಕುಮಾರಿ ಸಿಂಧು, ತಾಯಿ ಡಾ|| ಮಾಲಾರವರಿಂದ ನೃತ್ಯವನ್ನು, ವಿದುಷಿಯರಾದ ವಸಂತಾ ಶ್ರೀನಿವಾಸನ್, ಆರ್. ಚಂದ್ರಿಕಾ ಮತ್ತು ನೀಲಾ ರಾಮಗೋಪಾಲ್ ಅವರ ಬಳಿ ಗಾಯನವನ್ನು ಕಲಿತು ಅನೇಕ ಕಛೇರಿಗಳನ್ನು ನೀಡುತ್ತ ಬಂದಿದ್ದಾರೆ. ಜೊತೆಗೆ ಬೋಧನೆಯನ್ನೂ ಮಾಡುತ್ತ ಎಂ.ಎಸ್. ಪದವೀಧರೆಯಾದ ಇವರು ಹೆಸರಾಂತ ಕಂಪೆನಿಯೊಂದರಲ್ಲಿ ಸಾಫ್ಟ್ವೇರ್ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ನಮ್ಮ ಸಂಗೀತ ಪರಂಪರೆಯನ್ನು ಸಂರಕ್ಷಿಸಲು ಹೊರಟಿರುವ ‘ಇಂಡಿಯನ್ ರಾಗ’ ಎಂಬ ಸಂಸ್ಥೆಯಲ್ಲಿಯೂ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಮುಂದೆ ಇವರು ನಮ್ಮ ನಾಡಿನ ಅತ್ಯುತ್ತಮ ಕಲಾವಿದೆಯಾಗಿ ರೂಪಗೊಳ್ಳುವುದರಲ್ಲಿ ಸಂದೇಹವಿಲ್ಲ.
ಈ ಮೂವರು ಕಲಾವಂತರಿಗೆ ಸಂಗೀತಮಯವಾದ ಸಂಸಾರವನ್ನು ಅನುಗ್ರಹಿಸಿದ ಸಂಗೀತಶಾರದೆಯ ಕೃಪಾಕಟಾಕ್ಷವು ನಿರಂತರವಾಗಿರಲೆಂದು ಆಶಿಸಿ ಶುಭವನ್ನು ಕೋರೊಣ.