ಬಾಲಮುರಳಿಯವರ ಪ್ರತಿಭೆಯ ಬಗೆಗೆ ಮಾತನಾಡುವಾಗ ಅವರ ಸಮಕಾಲೀನರನ್ನು ನಾವು ಗಮನಿಸಲೇಬೇಕು. ಏಕೆಂದರೆ ಒಂದು ವಸ್ತುವಿನ ಮೌಲ್ಯಮಾಪನವು ನಡೆಯುವುದು ಅದಕ್ಕೆ ಸಂಬಂಧಪಟ್ಟ ವಾತಾವರಣದಲ್ಲಿಯೇ. ನಿರ್ವಾತದಲ್ಲಿ ಯಾವ ಮೌಲ್ಯಮಾಪನವೂ ನಡೆಯುವುದಿಲ್ಲ. ಇಂತಿದ್ದರೂ ಎಲ್ಲ ಮೌಲ್ಯಮಾಪನಗಳೂ ಸಾಪೇಕ್ಷ. ಹೀಗಾಗಿ ಬಾಲಮುರಳೀಕೃಷ್ಣರನ್ನು ಕಾಳಿದಾಸನ ಕವಿತೆಗೋ ಕುಮಾರವ್ಯಾಸನ ಕವಿತೆಗೋ ಹೋಲಿಸುವುದು ನಮ್ಮ ಅವಿವೇಕವಾದೀತು. ಅವರನ್ನು ಹೋಲಿಸಬೇಕಾದದ್ದು ತ್ಯಾಗರಾಜ, ಮುದ್ದುಸ್ವಾಮಿದೀಕ್ಷಿತ, ಶ್ಯಾಮಶಾಸ್ತ್ರಿ, ಸ್ವಾತಿ ತಿರುನಾಳ್ – ಇಂಥವರ ಜೊತೆಗೆ. ಇವರೆಲ್ಲರಿಗಿಂತ ಹೆಚ್ಚಿನ ಸೌಂದರ್ಯ ಅವರಲ್ಲಿ ಉಂಟು.
ಎಂ. ಬಾಲಮುರಳೀಕೃಷ್ಣ ಅವರ ಪ್ರತಿಭೆ ಮತ್ತು ಪಾಂಡಿತ್ಯಗಳನ್ನು ನೆನೆದಾಗ, ಅವರ ಸಾಧನೆ ಮತ್ತು ವ್ಯಕ್ತಿತ್ವಗಳನ್ನು ಗಮನಿಸಿದಾಗ, ಊಹಿಸಲಾಗದ ಒಂದು ದಂತಕಥೆಯೇ ನಮ್ಮ ಮುಂದೆ ಸರಿದುಹೋದಂತೆ ಭಾಸವಾಗುತ್ತದೆ. ಅವರ ವ್ಯಕ್ತಿತ್ವ ಎಷ್ಟು ವಿಲಕ್ಷಣವೋ ವಿಶಿಷ್ಟವೋ ಆಕರ್ಷಕವೋ ಅದಕ್ಕಿಂತಲೂ ತುಂಬ ಮಿಗಿಲಾದದ್ದು, ಲೋಕಾಕರ್ಷಕವಾದದ್ದು ಮತ್ತು ಚಿಂತನೆಗೆ ಅರ್ಹವಾದಂಥದ್ದು ಅವರ ಕಲೆ. ಸಂಗೀತವನ್ನು ಸರ್ವಜನಪ್ರಿಯವಾಗಿ, ಸರ್ವಜನಮನೋಭಿರಾಮವಾಗಿ ಮಾಡಿದವರು ಬಾಲಮುರಳಿ ಎಂದರೆ ಅತಿಶಯವಲ್ಲ. ಮತ್ತೂ ಮುಂದುವರಿದು ಹೇಳುವುದಾದರೆ, ಕರ್ನಾಟಕಸಂಗೀತಕ್ಕೆ ಎಲ್ಲರೂ ಕಿವಿಯೊಗ್ಗಿ ಆನಂದಿಸುವಂತೆ ಮಾಡಿದ ಕೆಲವೇ ಮಹನೀಯರಲ್ಲಿ ಅವರ ಹೆಸರು ಪ್ರಥಮಪಂಕ್ತಿಯಲ್ಲಿರುವುದು ಎಂಬುದರಲ್ಲಿ ಯಾವ ಸಂದೇಹವೂ ಇಲ್ಲ. ಯಾವುದೇ ದೊಡ್ಡ ಕಲಾವಿದನ ಲಕ್ಷಣವೇನೆಂದರೆ ಆತ ತನ್ನ ಕಲೆಯನ್ನು ಪಂಡಿತ-ಪಾಮರ ವರ್ಗಕ್ಕೆರಡಕ್ಕೂ ಆಪ್ಯಾಯನವಾಗುವಂತೆ ಮಾಡುತ್ತಾನೆ. ಅಷ್ಟಾಗದಿದ್ದರೆ, ಪಂಡಿತರು ಚಿಕಿತ್ಸಕದೃಷ್ಟಿಯಿಂದ ಅಥವಾ ಸಂದೇಹ-ಗೌರವ-ಅಸೂಯೆಗಳಿಂದಾದರೂ ಕಾಣುವಂತೆ ಮಾಡಿರುತ್ತಾನೆ. ಇನ್ನು ‘ಪಾಮರ’ರಾದರೋ ಸ್ವತಾವಿಸ್ಮೃತಿಯಿಂದ, ಆನಂದದಿಂದ, ಪ್ರೀತಿಯಿಂದ, ತನ್ಮಯತೆಯಿಂದ ಅದನ್ನು ಸ್ವೀಕರಿಸುವಂತೆ ಮಾಡಿರುತ್ತಾನೆ. ಈ ಅರ್ಥದಲ್ಲಿ ಬಾಲಮುರಳಿಯವರು ಪಂಡಿತ-ಪಾಮರರಿಗೆ, ಆಬಾಲವೃದ್ಧರಿಗೆ ಆಪ್ಯಾಯಮಾನವಾಗಿ ಒದಗಿಬಂದ ಅನನ್ಯ ಸಂಗೀತಪ್ರತಿಭೆ.
ಕರ್ನಾಟಕಸಂಗೀತವೆಂಬ ಸೋಪಾಧಿಕವೂ ಸವಿಶಿಷ್ಟವೂ ಆದ ಕಲೆಯನ್ನು ನಿರ್ವಿಶಿಷ್ಟವಾಗಿ ಮಾಡಿದ್ದೇ ಅವರ ವೈಶಿಷ್ಟ್ಯ. ಅವರು ಅದನ್ನು ಕೇವಲ ಸಂಗೀತವಾಗಿ ರೂಪಿಸಿದರು. ಕರ್ನಾಟಕಸಂಗೀತವನ್ನು ಸಂಗೀತವಾಗಿ, ಶಾಸ್ತ್ರೀಯಸಂಗೀತವನ್ನು ಗೀತವನ್ನಾಗಿ, ಗೀತವನ್ನು ಸ್ವರವನ್ನಾಗಿ, ಸ್ವರವನ್ನು ಶ್ರುತಿಯನ್ನಾಗಿ ಮಾಡಿದಂಥವರು. ಈ ದೃಷ್ಟಿಯಲ್ಲಿ ಕಂಡರೆ, ಅವರು ಎಲ್ಲಿಯೂ ಯಾವುದನ್ನೂ ಸಂಗೀತವನ್ನಾಗಿ ಮಾರ್ಪಡಿಸಬಲ್ಲ ಸಾಮರ್ಥ್ಯವನ್ನು ಹೊಂದಿದವರು. ಇದು ಮಹಾಪ್ರತಿಭೆಗೆ ಮಾತ್ರ ಸಾಧ್ಯವಾದದ್ದು.
ಬಾಲಮುರಳೀಕೃಷ್ಣರ ಸಾಧನೆಗಳ ಬಗೆಗೆ, ಜೀವನದ ಬಗೆಗೆ, ಪ್ರಶಸ್ತಿ-ಪುರಸ್ಕಾರಾದಿಗಳ ಬಗೆಗೆ ಬೇಕಾದಷ್ಟು ಮಾಹಿತಿಯಿದೆ. ಆದರೆ ಅವು ನಮಗೆ ಅಷ್ಟು ಮುಖ್ಯವಲ್ಲ. ಅದರಲ್ಲಿಯೂ ಬಾಲಮುರಳಿ ಕಂಡಂತೆ – ಅವರ ಬದುಕಿಗೂ ಕಲೆಗೂ ಸಂಬಂಧವುಂಟೇ? ಇದ್ದಲ್ಲಿ ಅದು ಸಮವೇ ವಿಷಮವೇ? – ಎಂಬುದಾಗಿ ಬಹಳ ದೊಡ್ಡ ಚರ್ಚೆಯನ್ನು ಮಾಡಬಹುದು. ಆದರೆ ಅದು ಸದ್ಯಕ್ಕೆ ಗೌಣ. ಅವರ ಮುಖ್ಯವಾದ ಕಲಾಸಾಧನೆಯನ್ನೂ ಕಲೆಯನ್ನೂ ಕಲೆಯಲ್ಲಿ ಅವರು ಕಂಡುಕೊಂಡ ಮತ್ತು ನಮಗೆ ಕಂಡರಿಸಿಕೊಟ್ಟ ವಿಶೇಷಗಳು ಯಾವುವೆಂಬುದನ್ನೂ ನಮಗಿರುವ ಮಿತಿಯಲ್ಲಿ ಸೂಕ್ಷ್ಮವಾಗಿ, ದಿಗ್ದರ್ಶಕವಾಗಿ ನೋಡುವುದಷ್ಟೇ ಪ್ರಕೃತೋದ್ಯಮ.
ಬಾಲಮುರಳಿಯವರು ಒಬ್ಬ ಜ್ಞಾತಶಿಲ್ಪಿ (Conscious Artist). ಹಾಗೆಂದ ಮಾತ್ರಕ್ಕೆ ಅವರಲ್ಲಿ ಅಜ್ಞಾತವಾದ, ಸ್ವಯಂಸ್ಫೂರ್ತಿಯಿಂದ ಬರುವ ಪ್ರಾತಿಭವು ಇಲ್ಲವೆಂದಲ್ಲ. ಆದರೆ, ಅದೆಲ್ಲವನ್ನೂ ಅವರು ತಮ್ಮ ನಿಶಿತವಾದ ಬುದ್ಧಿಶಕ್ತಿಯಿಂದ, ತರ್ಕಸಮನ್ವಯದಿಂದ ತುಂಬ ಚೆನ್ನಾಗಿ ನೇರ್ಪಾಗಿಸಿಕೊಂಡಿದ್ದರು. ಈ ಅರ್ಥದಲ್ಲಿ ಅವರು ಅಭಿಜಾತ ಪ್ರತಿಭೆ. ಅವರು ಅನಾಘ್ರಾತಕುಸುಮವಲ್ಲ, ಅನಾವಿದ್ಧರತ್ನವಲ್ಲ; ಹಾಗಲ್ಲದೆ ಅವರು ಶಾಣೋಲ್ಲೀಢಮಣಿಯಂತೆ ಅತ್ಯಂತಪರಿಷ್ಕೃತವಾದ ರೀತಿಯಲ್ಲಿ ತಮ್ಮ ಮಾಧ್ಯಮವನ್ನು, ತಮ್ಮ ಗುರಿಯನ್ನು ಸಾಧಿಸಿಕೊಂಡಂಥವರು. ತ್ಯಾಗರಾಜರ ಪರಂಪರೆಯಲ್ಲಿ ಬಂದ ಐದನೆಯವರಾದರೂ ತ್ಯಾಗರಾಜರ ಕೃತಿಗಳಿಗೆ ಮರುಹುಟ್ಟನ್ನು ಕೊಟ್ಟರು. ಆವರೆಗೆ ತ್ಯಾಗರಾಜರ ಕೃತಿಗಳನ್ನು ಹಾಡಿದಂತೆ ಅವರು ಹಾಡುತ್ತಿರಲಿಲ್ಲ. ಅವರೇನೋ ಉತ್ತರ ಹೇಳುತ್ತಿದ್ದರು – ಇದು ಶುದ್ಧವಾದ ಪರಂಪರೆಯೆಂದು. ಶುದ್ಧಿ-ಅಶುದ್ಧಿಗಳ ವಿಚಿಕಿತ್ಸೆಯನ್ನು ಸದ್ಯಕ್ಕೆ ಪಕ್ಕಕ್ಕೆ ಇಡೋಣ. ಅದು ಸಂತೋಷಕಾರಿಯೇ ಸುಂದರವೇ ಶ್ರುತಿಹಿತವೇ ಎಂದು ನೋಡಿದಾಗ ನಮಗೆ ಶುದ್ಧಿ-ಅಶುದ್ಧಿಗಳ ಪಾರಮಾರ್ಥ್ಯ ಏನೆಂಬುದು ಗೊತ್ತಾಗುತ್ತದೆ. ಎಷ್ಟೋ ಬಾರಿ ಕಲೆಯಲ್ಲಿ ಶುದ್ಧಿ-ಅಶುದ್ಧಿಗಳಿಗಿಂತ, ಸರಿ-ತಪ್ಪುಗಳಿಗಿಂತ, ಸಂತೋಷ-ಅಸಂತೋಷಗಳೇ, ಸುಖ-ದುಃಖಗಳೇ ಮುಖ್ಯವಾಗುತ್ತವೆ. ಈ ಅರ್ಥದಲ್ಲಿ ತ್ಯಾಗರಾಜರೂ ಸೇರಿದಂತೆ ಅನೇಕ ವಾಗ್ಗೇಯಕಾರರ ರಚನೆಗಳ ವಿನಿಕೆಯನ್ನು ಸೌಖ್ಯದ ಕಡೆಗೆ ತಿರುಗಿಸಿದ ದೊಡ್ಡ ಪ್ರತಿಭೆ ಬಾಲಮುರಳೀಕೃಷ್ಣ. ಅಷ್ಟು ಮಾತ್ರವಲ್ಲ, ಅವರು ಯಾವ ವಾಗ್ಗೇಯಕಾರನ ಕೃತಿಯನ್ನು ಹಾಡಿದರೂ ಕೂಡ ಆ ವಾಗ್ಗೇಯಕಾರನ ವಿಶಿಷ್ಟತೆಯನ್ನು ತೋರಿಸುತ್ತಲೇ ತಮ್ಮ ಅನನ್ಯತೆಯನ್ನೂ ಧ್ವನಿಸುತ್ತಿದ್ದರು. ದುರ್ದೈವವೇನೆಂದರೆ, ಅವರ ಶಿಷ್ಯರೆಂದು ಇಂದು ಮುಂದೆಬರುವ ಕೆಲವರು ಕಲೆಯಲ್ಲಿ ಮುಂದೆ ಬರಲು ಆಗಲಿಲ್ಲ; ಅವರ ಹಿಂದೆಯೇ ಉಳಿದರು. ಹಿಂದೆ ಉಳಿದದ್ದು ಅವರ ಬೆಳಕಿನಲ್ಲಿ ಅಲ್ಲ, ಅವರ ನೆರಳಿನಲ್ಲಿ. ಈ ಕಾರಣದಿಂದ ಅವರು ಬಾಲಮುರಳಿಯವರ ಸುದೂರ ಪೇಲವಚ್ಛಾಯೆಗಳಾದರೇ ಹೆÇರತು ಪ್ರಖರತೇಜಸ್ವಿಗಳಾಗಿ ಬೆಳಗಲಿಲ್ಲ. ಬಾಲಮುರಳಿಯವರಿಗೆ ತಮ್ಮದೆಂಬ ಪ್ರತ್ಯಕ್ಷಶಿಷ್ಯವೃಂದವಿಲ್ಲ. ಆದರೆ ಅವರ ಪ್ರಭಾವ ಮಾತ್ರ ಅವರಿಂದೀಚೆಗೆ ಬಂದ ಪ್ರತಿಯೊಬ್ಬ ಗಾಯಕನ ಮೇಲೂ ಕೂಡ – ಧನಾತ್ಮಕವಾಗಿಯೋ ಋಣಾತ್ಮಕವಾಗಿಯೋ (positive or negative) ಆಗಿಯೇ ಇದೆ. ಯಾವ ಮಟ್ಟಕ್ಕೆಂದರೆ, ಇಲ್ಲವೇ ಬಾಲಮುರಳಿಯವರನ್ನು ಒಪ್ಪಬೇಕು ಅಥವಾ ತಿರಸ್ಕರಿಸಬೇಕು. ಇದೆರಡಲ್ಲದೆ ತಟಸ್ಥವಾಗಿ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲ ಎಂಬ ಒಂದು ಪರಿಸ್ಥಿತಿಯನ್ನು ತಂದರು. ಇದು ಮಹತ್ತಾದ ಪ್ರತಿಭೆಯ ಒಂದು ಉಪಲಕ್ಷಣವೂ ಹೌದು.
ಬಾಲಮುರಳಿಯವರು ಅನೇಕ ವಾಗ್ಗೇಯಕಾರರ ರಚನೆಗಳನ್ನು ಹಾಡಿದರು. ಹಾಗಲ್ಲದೆ, ಮಾತು ಮಾತ್ರ ಇದ್ದು ಧಾತು ಇಲ್ಲದೆ ಹೋದ ರಚನೆಗಳಿಗೂ ಕೂಡ – ಧಾತುವನ್ನು ತಾವೇ ಸೇರಿಸಿಕೊಂಡು ಹಾಡಿದ ಪ್ರಸಂಗಗಳು ಎಷ್ಟೋ ಉಂಟು. ಅನ್ನಮಾಚಾರ್ಯರ ಕೃತಿಗಳನ್ನಾಗಲಿ ಅಥವಾ ಭದ್ರಾಚಲ ರಾಮದಾಸರ ರಚನೆಗಳನ್ನಾಗಲಿ, ಕನ್ನಡದ ಹರಿದಾಸರ ರಚನೆಗಳನ್ನಾಗಲಿ, ಸ್ವಾತಿತಿರುನಾಳರ ಕೃತಿಗಳನ್ನಾಗಲಿ, ಜಯದೇವನ ಅಷ್ಟಪದಿಗಳನ್ನಾಗಲಿ, ಅವರು ತಮ್ಮ ಪ್ರತಿಭೆಯಿಂದಲೇ ಹೆÇಸದಾದ ರೀತಿಯ ಸ್ವರಕಲ್ಪನೆಯನ್ನು ಮಾಡಿ ಜನರ ಮನಸ್ಸನ್ನು ತಣಿಸಿದ್ದಾರೆ. ಇವೆಲ್ಲದರಲ್ಲಿಯೂ ಅವರ ಅನನ್ಯವಾದ ಮುದ್ರೆ ಕಂಡುಬರುತ್ತದೆ.
ಬಾಲಮುರಳಿಯವರು ಎಳೆವಯಸ್ಸಿಂದಲೇ ಅವಲೀಲೆಯೋ ಎಂಬಂತೆ ಸಂಗೀತವನ್ನು ದಕ್ಕಿಸಿಕೊಂಡರೆಂದು ಅವರೇ ಹೇಳಿದ್ದಾರೆ. ಅವರು ಇನ್ನೂ ಒಂದು ಹಂತ ಮುಂದುವರಿದು, “ಸಂಗೀತ ನನಗೆ ಬಂದಿತು; ನಾನು ಸಂಗೀತವನ್ನು ಕಲಿತದ್ದಲ್ಲ. ಸಂಗೀತವೇ ನನ್ನ ಮೂಲಕ ಹಾಡುತ್ತದೆ. ನನಗಾವ ಸಂಗೀತವೂ ಗೊತ್ತಿಲ್ಲ, ಆದರೆ ಸಂಗೀತಕ್ಕೆ ಮಾತ್ರ ನಾನು ಚೆನ್ನಾಗಿ ಗೊತ್ತು” ಎನ್ನುತ್ತಾರೆ. ಹಾಗಾಗಿಯೇ ಅವರು ತಾವು ಸಂಗೀತಕ್ಕೆ ಒಂದು ಮಾಧ್ಯಮ ಎಂದು ಭಾವಿಸಿದರೇ ಹೆÇರತು ಸಂಗೀತ ತಮಗೆ ಒಂದು ಮಾಧ್ಯಮ ಎಂದು ಹೇಳಿಕೊಂಡಿಲ್ಲ. ಬಾಲಮುರಳಿ ಜಾಣ್ಮೆಯ ಮನುಷ್ಯರೂ ಹೌದು. ಅವರ ಕಾಣ್ಮೆ ಎಷ್ಟು ದೊಡ್ಡದೋ ಅವರ ಜಾಣ್ಮೆ ಅದಕ್ಕಿಂತಲೂ ಏನೂ ಕಡಮೆಯಿಲ್ಲದ್ದು. ಹೀಗೆ ಕಂಡಾಗ, ನಮ್ರತೆಗಿಂತ ಅವರಲ್ಲಿ ಇದ್ದದ್ದು ಅಹಂಭಾವವೇ, ಅಭಿಮಾನವೇ. ಆದರೆ ಸಮರ್ಥರಾದ ಕಾರಣ ಆ ಅಹಂಕಾರವೂ ಒಂದು ಆಭರಣವಾಗಿದೆ. ಆದರೆ ನಿರಾಭರಣ ಮತ್ತೂ ಶೋಭೆ. ಅದನ್ನೇಕೋ ದಕ್ಕಿಸಿಕೊಳ್ಳಲಿಲ್ಲ. ಈ ದೃಷ್ಟಿಯಿಂದ ನೋಡಿದಾಗ ಎಂ.ಎಸ್. ಸುಬ್ಬುಲಕ್ಷ್ಮಿ ಅವರಂಥವರು ನಿರಾಭರಣ ಸೌಂದರ್ಯದ ದೇದೀಪ್ಯಮಾನ ಸ್ಥಾನಕ್ಕೆ ಮುಟ್ಟುತ್ತಾರೆ. ಈ ದೃಷ್ಟಿಯಿಂದ ಕಂಡಾಗ, ಪ್ರತಿಭೆ, ಪಾಂಡಿತ್ಯ, ವ್ಯುತ್ಪತ್ತಿಗಳೆಲ್ಲವೂ ಕೂಡ ಸಮಪಾಕಗೊಂಡಾಗಲೂ “ಆವುದೋ ವಿವರವೊಂದಿರದೆ ಪೂರ್ಣವದಲ್ಲ; ಆ ವಿವರ ನಿನ್ನೊಳಗೆ ಮಂಕುತಿಮ್ಮ” ಎಂಬ ಡಿ.ವಿ.ಜಿ. ಅವರ ಮಾತು ನೆನಪಾಗದಿರದು. ಹೀಗೆಂದ ಮಾತ್ರಕ್ಕೆ ಬಾಲಮುರಳಿಯವರ ಸಾಧನೆಯನ್ನು ಯಾವುದೇ ದೃಷ್ಟಿಯಿಂದ ಉಪೇಕ್ಷಿಸಿದಂತಲ್ಲ. ಅವರ ಸಾಧನಸಂಪನ್ಮೂಲ ಬಹಳ ಮಿಗಿಲಾದದ್ದು.
ಬಾಲಮುರಳಿಯವರು ಗುರುಮುಖೇನ ಪಡೆದದ್ದು ಸ್ವಲ್ಪವೇ. ಅವರ ಪ್ರತಿಭೆ ಅಪಾರ. ಅವರ ಆ ಸಿದ್ಧಿ ಅಲ್ಪಪ್ರಯತ್ನದ್ದೇ ಆಗಿದ್ದಿರಬಹುದು. ಆದರೆ ಆ ಪ್ರತಿಭೆಗೆ ಒಂದು ಸ್ವಲ್ಪವಾದರೂ ಅಭ್ಯಾಸವಿತ್ತು, ಸಾಕಷ್ಟು ವ್ಯುತ್ಪತ್ತಿಯೂ ಇತ್ತು ಎಂಬುದನ್ನು ಮರೆಯುವಂತಿಲ್ಲ. ಬಾಲಮುರಳಿಯವರೂ ಸೇರಿದಂತೆ ಹಲವು ಅಭಿಜಾತಕಲಾವಿದರು ತಮ್ಮ ನಿರ್ಮಾಣಕಾಲವನ್ನು ಲೋಕಕ್ಕೆ ತೆರೆದಿಡುವುದಿಲ್ಲ. ಎಂಥ ಮಹಾವೃಕ್ಷಕ್ಕೂ ಮೊಳಕೆಯ ಸ್ಥಿತಿಯೊಂದು ಇತ್ತೆಂಬುದನ್ನು ಒಪ್ಪಿಕೊಂಡರೆ ಎಲ್ಲಿ ತಮ್ಮ ಅಭಿಮಾನಕ್ಕೆ ಅಡ್ಡವಾದೀತೋ ಎಂಬಂತೆ ಕೆಲವೊಮ್ಮೆ ನಡೆಯುವುದುಂಟು. ಅವರನ್ನು ಕಂಡು ಬರಿದೇ ಬೆರಗಾಗುವುದು ಉಳಿಯಿತು; ಅವರ ದಾರಿಯಲ್ಲಿ ನಡೆಯುವುದು ಅಳಿಯಿತು. ಹೀಗೆ ಪರಂಪರೆಯ ಅನುಸ್ಯೂತತೆಯ ದೃಷ್ಟಿಯಿಂದ, ತಾವು ನಡೆದ ಹಾದಿಯನ್ನು ಬಿಚ್ಚಿ ತೋರಿಸಿದಾಗ – ಅವರ ದಾರಿಯಲ್ಲಿ ನಡೆಯಲು ಯಾರಿಗೆ ಆಗುತ್ತದೆಯೋ ಇಲ್ಲವೋ ಗೊತ್ತಿಲ್ಲ – ಆದರೆ ಆದವರಿಗೆ ಬಹಳ ದೊಡ್ಡ ನೆಲೆ-ಬೆಲೆಗಳು ಸಿಗುತ್ತವೆ. ಇದನ್ನು ನಮ್ಮ ಪರಂಪರೆ ಸದಾ ಭಾವಿಸಿದೆ. ನಮ್ಮ ಶಾಸ್ತ್ರ
ಕಾರರೆಲ್ಲ ತಾವು ಸಿದ್ಧರಾದರೂ ಅಥವಾ ಸಾಧ್ಯರಾದರೂ ಯಾರೂ ಕೂಡ ಈ ಸಾಧನೆಯ ಪ್ರಕ್ರಿಯೆಯನ್ನು ಉಪೇಕ್ಷಿಸಿಲ್ಲ. ಯಾವುದೇ ವಿದ್ಯಾಸ್ಥಾನದ ಲಕ್ಷಣ ಇಲ್ಲುಂಟು. ಆ ಲಕ್ಷಣವನ್ನೂ ಅವರು ಪೂರ್ಣಮಾಡಿದ್ದಲ್ಲಿ ಅದಕ್ಕೆ ಇನ್ನೂ ಹೆಚ್ಚಿನ ಅರ್ಥ ಬರುತ್ತಿತ್ತು. ಎಲ್ಲಕ್ಕಿಂತ ಮಿಗಿಲಾಗಿ ನಮ್ಮಂಥ ಕಲಾಸ್ವಾದಕರಿಗೆ ಹೆಚ್ಚಿನ ಪರಮಾರ್ಥ ಸಿಗುತ್ತಿತ್ತೆನ್ನಿಸುತ್ತದೆ. ಆದರೆ ಇಲ್ಲದಿರುವುದಕ್ಕಾಗಿ ಮನಸ್ಸನ್ನು ಕ್ಷೋಭೆ ಮಾಡಿಕೊಂಡು ಇರುವುದನ್ನು ಉಪೇಕ್ಷಿಸುವುದು ಅನ್ಯಾಯ. ಡಿ.ವಿ.ಜಿ. ಅವರು ಹೇಳುತ್ತಾರೆ: “ಯಾವ ಹೂವು ಅರಳುವುದಕ್ಕೆ ಯಾವ ಗೊಬ್ಬರ ಬೇಕೋ” ಎಂದು; ಯಾವ ದ್ರವ್ಯವನ್ನು ಹಾಕಿದರೆ ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಹೊಮ್ಮತ್ತದೆಯೋ ಎಂದು. ಬಾಲಮುರಳಿಯವರು ಈ ಪ್ರಕ್ರಿಯೆಯ ಕಡೆ ಹೋಗಿದ್ದರೆ ಅವರಿಂದು ನಮಗಿತ್ತ ಅತ್ಯದ್ಭುತವಾದ ಫಲಗಳು ನಮ್ಮಿಂದ ದೂರವಾಗುತ್ತಿದ್ದವೋ ಏನೋ ಗೊತ್ತಿಲ್ಲ. ಇದೂ ಒಂದು ಬಗೆಯ ಸಮಾಧಾನ. ಮತ್ತೆ ಡಿ.ವಿ.ಜಿ. ಅವರ ಮಾತಿನಲ್ಲಿ ಹೇಳುವುದಾದರೆ, “ಇದೂ ಸಮಾಧಾನ, ಆದರೆ ಸಂತೋಷವಿಲ್ಲದ ಸಮಾಧಾನ.’’ ಆದರೆ ಈ ಅಸಂತೋಷವು ಆ ಮಹಾವಾಗ್ಗೇಯಕಾರನ ಸ್ವರಸಿದ್ಧಿಯನ್ನು ಆಸ್ವಾದಿಸುವ ಸೌಖ್ಯವನ್ನು ನಿರಾಕರಿಸುವ ಮಟ್ಟದ್ದಾಗಲಿ, ಅದನ್ನು ಮರೆಯುವ ಮಟ್ಟದ್ದಾಗಲಿ ಅಲ್ಲವೆನ್ನುವುದೇ ನಮ್ಮ ಭಾಗಧೇಯ.
ಬಾಲಮುರಳಿಯವರು ಪೂರ್ವಪ್ರಸಿದ್ಧವಾದ ಕೃತಿಗಳನ್ನು ಹಾಡಿದ್ದುಂಟು, ರಾಗಗಳನ್ನು ಹಾಡಿ ವಿಸ್ತರಿಸಿದ್ದುಂಟು. ಹಾಗೆ ಮಾಡುವಲ್ಲಿ ಒಂದು ನಾವೀನ್ಯವನ್ನು ತಂದುಕೊಡುತ್ತಿದ್ದರು. ಇದು ಅವರ ಮಹಾಸಿದ್ಧಿ. ಅವರ ಸಿದ್ಧಿಗಳು ಅನೇಕ; ಅದರೊಳಗೆ ಇದೂ ಒಂದು. ಪರಿಚಿತವನ್ನು ಅನೂಹ್ಯವಾದ ರೀತಿಯಲ್ಲಿ ಅಪರಿಚಿತವನ್ನಾಗಿಸಿ, ಆದರೆ ಅಪರಿಚಿತತೆಯ ವೈಷಮ್ಯವನ್ನು ತರದೆ, ಆ ಅಪರಿಚಿತತೆಯಲ್ಲಿ ಆನಂದವನ್ನು ತೀವುತ್ತಿದ್ದರು. ತನ್ಮೂಲಕವಾಗಿ ಪರಿಚಿತತೆಯಿಂದ ಉಂಟಾಗುವ ಉಪೇಕ್ಷೆಯನ್ನು ಕಡೆಗಣಿಸುವಂತೆ ಮಾಡಿ ಆಯಾ ರಾಗಗಳಿಗೆ, ಆಯಾ ಕೃತಿಗಳಿಗೆ ಪುನರ್ಜನ್ಮ ನೀಡುತ್ತಿದ್ದರು. ಈ ಅರ್ಥದಲ್ಲಿ ಅವರ ಕಟ್ಟಾ ವಿರೋಧಿಗಳೂ ಗಮನಿಸಬೇಕಾದ ಅಂಶವೆಂದರೆ – ಆ ರಾಗಗಳಿಗೆ, ಇನ್ನೂ ಹಲವು ಮುಖಗಳಿವೆ, ಆ ಕೃತಿಗಳಿಗೆ ಮತ್ತೂ ಹತ್ತೆಂಟು ದಿಕ್ಕುಂಟು ಎಂಬುದನ್ನು ತೋರಿಸಿಕೊಟ್ಟವರಾದ್ದರಿಂದ ಒಪ್ಪಲಿ ಬಿಡಲಿ, ಅವರ ಮಾರ್ಗದಲ್ಲಿ ಸತ್ತ್ವವಿದೆಯೆಂಬುದನ್ನು ಮಾತ್ರ ಗುರುತಿಸಲೇಬೇಕು. ಪ್ರತ್ಯಭಿಜ್ಞಾನವೇ ಬಹಳ ಮುಖ್ಯ. ಈ ರೀತಿಯಲ್ಲಿ ಅಪರಿಚಿತವಾದ, ಅಜ್ಞಾತವಾದ, ಅಚಿಂತ್ಯವಾದ ಎಷ್ಟೋ ರಾಗಗಳಿಗೆ – ಮೂರು ಸ್ವರಗಳ, ನಾಲ್ಕು ಸ್ವರಗಳ ರಾಗಗಳಿಗೆ; ಯಾವುದನ್ನು ಶಾಸ್ತçಕಾರರು ಸ್ವರಾಂತರವೇ ಮೊದಲಾಗಿ ಹೆಸರಿಸಿ, ರಾಗಗಳಾಗಿಯೇ ಗುರುತಿಸಲಿಲ್ಲವೋ ಅಂಥವಕ್ಕೂ – ರಂಜನೆಯನ್ನು ತಂದುಕೊಟ್ಟರು. ರಂಜನೆಯೇ ದೊಡ್ಡ ಪರಿಚಯವಲ್ಲವೇ? ಅದಕ್ಕಿಂತ ಮಿಗಿಲಾದ ಆತ್ಮೀಯತೆ ಏನುಂಟು? ಹೀಗಾಗಿ ಹೊಸ ಸ್ವರಸಂಗತಿಗಳಿಗೆ ಅವರು ಆತ್ಮೀಯತೆಯನ್ನೂ ಪ್ರೀತಿಯನ್ನೂ ತಂದುಕೊಟ್ಟರು. ಪ್ರೀತಿಗಿಂತ ಮಿಗಿಲಾದ ರಸವಿಲ್ಲವಷ್ಟೆ. ಹೀಗೆ ಕಂಡಾಗ ಪರಿಚಿತದಲ್ಲಿ ಅಪರಿಚತದ ಸ್ವಾರಸ್ಯವನ್ನೂ ಅಪರಿಚಿತದಲ್ಲಿ ಪರಿಚಿತದ ಸೌಲಭ್ಯವನ್ನೂ ತಂದುಕೊಡುವ ಮೂಲಕ ಸಂಗೀತದ ಎಷ್ಟೋ ದ್ವೀಪಗಳಿಗೆ ಅವರು ಶಾಶ್ವತವಾದ ಸ್ವರಸುವರ್ಣಸೇತುವೆಗಳನ್ನು ಕಟ್ಟಿದರು. ಇದು ಅವರ ದೊಡ್ಡ ಸಾಧನೆಯೆಂದು ನನ್ನ ಭಾವನೆ.
ಅವರು ಹೊಸ ರಾಗಗಳನ್ನೂ ತಾಳಗಳನ್ನೂ ರಚನೆಗಳನ್ನೂ ಮಾಡಿದರು. ಅವುಗಳಲ್ಲಿ ಗೆಲ್ಲುವಂಥವೂ ಸೋಲುವಂಥವೂ ಇವೆಯಾದರೂ ಸಲ್ಲುವಂಥವುಗಳ ಸಂಖ್ಯೆ ಹೆಚ್ಚು. ಇದಕ್ಕೆ ರಸಿಕಜಗತ್ತೇ ಸಾಕ್ಷಿಯಾಗಿದೆ. ಅವರ ಅನೇಕ ಸುಂದರ ಪೂರ್ವಪ್ರಸಿದ್ಧ ರಾಗಗಳ ರಚನೆಗಳನ್ನಾಗಲಿ ಅಥವಾ ಅವರಿಂದಲೇ ಸೃಷ್ಟವಾದ ಹೊಸ ರಾಗಗಳ ಸ್ವಾರಸ್ಯವನ್ನಾಗಲಿ ರಸಿಕಜಗತ್ತು ಅಂಗೀಕರಿಸಿದೆ. ಅಷ್ಟು ಮಾತ್ರವಲ್ಲ, ಶಾಸ್ತ್ರೀಯಸಂಗೀತದ ವಲಯದಲ್ಲಲ್ಲದೆ, ಸುಗಮಸಂಗೀತ ಅಥವಾ ಲಲಿತಸಂಗೀತದಲ್ಲಿ ಮತ್ತು ಯಾವುದನ್ನು ನಾವು ಅನ್ವಿತಸಂಗೀತ (Functional Music) ಎನ್ನುತ್ತೇವೆ ಅಲ್ಲಿ ಕೂಡ ಅವರ ರಚನೆಗಳ ಬಳಕೆಯಾಗಿದೆ. ಆದರೆ ಅವರು ಆಸ್ಥೆಯಿಂದ ರೂಪಿಸಿದ್ದ ಕೆಲವೊಂದು ಲೋಕಕ್ಕೆ ಆಪ್ಯಾಯನವಾಗಲಿಲ್ಲ. ತ್ರಿಮುಖೀ-ಪಂಚಮುಖೀ-ಸಪ್ತಮುಖಿಗಳೇ ಮುಂತಾದ ಹೊಸ ತಾಳವಿನ್ಯಾಸ ಇದಕ್ಕೆ ಪ್ರಖರ ಉದಾಹರಣೆ. (ಈ ಸಂದರ್ಭದಲ್ಲಿಯೇ ಅವರ ಸಂಗೀತಚಿಕಿತ್ಸೆಯ ಭ್ರಾಂತಿವಿಲಾಸದ ಬಗೆಗೂ ಹೇಳಬೇಕಾದರೆ ಅದು ಮಹಾಕಲಾವಿದನೊಬ್ಬನ ಮೈಮರೆವು ಅಥವಾ ಕಲೆಯೆಡವು ಎನ್ನಬೇಕು.) ತಾಳವಿನ್ಯಾಸದ ಬೆಳೆವಣಿಗೆಯೇ ಬಲುಮಟ್ಟಿಗೆ ಕೃತಕವೆಂದು ಪರಮಾರ್ಥತಃ ತಿಳಿದವರಿಗೆ, ಮೂಲಭೂತವಾದ ಗತಿಗಳಿಗಿಂತ ಭಿನ್ನವಾಗಿ ಯಾವ ತಾಳಗಳೂ ಸಹೃದಯನ ಕಿವಿಗೆ ಮುಟ್ಟುವುದಿಲ್ಲವೆಂದು ಗೊತ್ತಿದ್ದವರಿಗೆ ಇದೆಲ್ಲ ಕೇವಲ ಕೃತಕಪ್ರಯತ್ನಸಾಧ್ಯವಾದ ವಿರಚನೆಯೆಂದು ಎನಿಸದಿರದು. ಹೀಗಾಗಿ ಅವು ನಿಲ್ಲಲಿಲ್ಲ; ನಿಲ್ಲದ್ದಕ್ಕಾಗಿ ಯಾರೂ ದುಃಖಿಸಬೇಕಿಲ್ಲ.
ಆದರೆ ಅವರು ರಾಗದಲ್ಲಿ ಮಾಡಿದ ಸಾಧನೆ ಬಹಳ ದೊಡ್ಡದು. ವಸ್ತುತಃ ಭಾರತೀಯಸಂಗೀತವು ತಾಳಕ್ಕಿಂತಲೂ ರಾಗದಲ್ಲಿಯೇ ನೆಲೆನಿಂತಿರುವುದು. ಏಕೆಂದರೆ, ತಾಳವಿಲ್ಲದೆಯೂ ರಾಗ ನಿಲ್ಲುತ್ತದೆ, ಆದರೆ ರಾಗವಿಲ್ಲದೆ ತಾಳವು ಬಹುಕಾಲ ನಿಲ್ಲುವಂಥದ್ದಲ್ಲ. ಇದು ನಮಗೆ ಸ್ಪಷ್ಟವಾಗಿರುವುದರಿಂದ ಬಾಲಮುರಳಿಯವರ ರಾಗಸಿದ್ಧಿಯು ನಿಜವಾಗಿ ಸರ್ವಜನರ ಅನುರಾಗಸಿದ್ಧಿ. ಇಷ್ಟಾಗಿಯೂ ಅವರ ತಾಳಸಿದ್ಧಿ ಸೌಖ್ಯಪ್ರದವಲ್ಲವೆಂದಲ್ಲ. ನಿಜವಾಗಿಯೂ ನಿಶ್ಶಬ್ದಕ್ರಿಯೆಯ ಮೂಲಕ ತಾಳವನ್ನು ಶ್ರುತಿಹಿತವಾಗಿ ಮಾಡಿದವರು ಅವರು. ತಾಳದ ಅಬ್ಬರವಿಲ್ಲದೆ ಲಯಸೌಖ್ಯವನ್ನು ಸಾಧಿಸಿದವರು ಅವರಂತೆ ಹಲವರಿಲ್ಲ.
ಬಾಲಮುರಳಿಯವರು ಸಂಗೀತದ ಎಲ್ಲ ಪ್ರಕಾರಗಳಲ್ಲಿಯೂ – ಅದು ಗಾನವಿರಬಹುದು ಅಥವಾ ವಾದನವಿರಬಹುದು; ವಾದನದಲ್ಲಿ ಶ್ರುತಿವಾದ್ಯವಿರಬಹುದು, ಲಯವಾದ್ಯವಿರಬಹುದು; ಇನ್ನು ಗಾಯನದಲ್ಲಿ ಶುದ್ಧಶಾಸ್ತ್ರೀಯ, ಲಲಿತ, ಚಲನಚಿತ್ರವೇ ಮೊದಲಾದ ಹಲವು ಪ್ರಕಾರಗಳಲ್ಲಿ – ಅನನ್ಯವಾಗಿ ನಿಂತವರು. ಹಿಂದೂಸ್ತಾನಿ ಸಂಗೀತಗಾರರ ಜೊತೆಗೆ ಜುಗಲ್ಬಂದಿಯನ್ನು ಮಾಡಿ ತಮ್ಮದೇ ಆದ ಛಾಪನ್ನು ಒತ್ತಿದವರು. ಸಾಮಾನ್ಯವಾಗಿ ಉತ್ತರಭಾರತೀಯರಿಗೆ ದಾಕ್ಷಿಣಾತ್ಯ ಸಂಗೀತಗಾರರ ಬಗೆಗೆ ಒಂದು ವಿಧವಾದ ಉಪೇಕ್ಷೆ. ಇವರಿಗೆ ಯಾವ ಶ್ರುತಿಯಿದೆ? ಯಾವ ಸ್ವರಸೌಖ್ಯವಿದೆ? ಯಾವ ನಿರಾಲಂಬವಾದ ರಾಗವಿನ್ಯಾಸದ ಶಕ್ತಿಯುಂಟು? – ಎಂಬುದಾಗಿ. ಇವುಗಳಲ್ಲಿ ಒಂದಷ್ಟು ತಥ್ಯ ಒಂದಷ್ಟು ಮಿಥ್ಯೆಗಳು ಇದ್ದಿರಬಹುದು. ಇದೇ ರೀತಿಯ ವೈಷಮ್ಯವೋ ವಿರೋಧಭಾವವೋ ಉಪೇಕ್ಷೆಯೋ ದಾಕ್ಷಿಣಾತ್ಯರಿಗೆ ಉತ್ತರಭಾರತೀಯರ ಬಗೆಗೂ ಇದೆ. ಅವರದು ಪ್ರಬಂಧಾಶ್ರಿತವಾದ ಸಂಗೀತವಲ್ಲ; ತಾಳನಿಷ್ಕರ್ಷೆಯಿರುವ ಸಂಗೀತವಲ್ಲ. ಅವರಲ್ಲಿ ವ್ಯವಸ್ಥಿತವಾದ ಲಯಕ್ಕೆ ಅವಕಾಶವಿಲ್ಲ ಎಂಬುದಾಗಿ. ಆಗ್ರಹಗಳಿಗೆ ಕಾರಣ ಬೇಕಿಲ್ಲ. ಇಷ್ಟನ್ನು ಮಾತ್ರ ಹೇಳಬಹುದು: ಉತ್ತರಭಾರತದ ಸಂಗೀತಗಾರರೆಲ್ಲ ಇವರೊಬ್ಬರನ್ನು ಮಾತ್ರ ಪ್ರಶ್ನಾತೀತವೆಂಬಂತೆ ಗೌರವದಿಂದ ಕಾಣುತ್ತಿದ್ದರು. ಒಂದಿಷ್ಟು ಭಯವನ್ನೂ ಪಡುತ್ತಿದ್ದರೆಂದರೆ ಸರಿಯಾದೀತು. ಕಾರಣವೇನೆಂದರೆ, ಅವರೇನೇನು ಮಾಡಬಲ್ಲರೋ ಅದೆಲ್ಲವನ್ನೂ ಇವರು ಮಾಡಬಲ್ಲವರಾಗಿದ್ದರು, ಆದರೆ ಇವರು ಮಾಡಿದ್ದನ್ನೆಲ್ಲ ಅವರು ಮಾಡಲಾಗುತ್ತಿರಲಿಲ್ಲ. ಇವರು ಸಂಗೀತವನ್ನು ಯಾವುದೇ ಸೋಪಾಧಿಕವಾದ, ಸವಿಶಿಷ್ಟವಾದ ಚೌಕಟ್ಟಿನಲ್ಲಿ ಕಾಣದೆ ಶ್ರುತಿಯ ಮಟ್ಟದಲ್ಲಿ – ಕೇವಲ ಆಹತನಾದ, ಮತ್ತೂ ಮುಂದುವರಿದು ಕೇವಲ ಅನಾಹತನಾದದ ಮಟ್ಟದಲ್ಲಿಯೂ ಕೇಳಬಲ್ಲ ಸ್ಥೈರ್ಯವನ್ನು ಉಳಿಸಿಕೊಂಡವರು. ಅಲ್ಲದೆ ಈ ಸ್ಥೈರ್ಯ ತನಗುಂಟೆಂಬುದನ್ನು ನಗಾರಿ ಬಾರಿಸಿ ಲೋಕಕ್ಕೆಲ್ಲ ಸಾಬೀತು ಮಾಡಿಕೊಟ್ಟವರು. ಎಷ್ಟೋ ಜನರಿಗೆ ಪ್ರತಿಭೆಯಿದ್ದರೂ ಇಂಥ ಆತ್ಮಪ್ರತ್ಯಯವಿರುವುದಿಲ್ಲ. ಈ ದೃಷ್ಟಿಯಿಂದ ಕಂಡರೆ ಶ್ರೀಹರ್ಷ, ಪಂಡಿತರಾಜ ಜಗನ್ನಾಥ, ಆಂಧ್ರದ ಕವಿಸಾರ್ವಭೌಮ ಶ್ರೀನಾಥ – ಇಂಥವರ ಸಾಲಿಗೆ ಸಲ್ಲುವಂಥವರು ಅವರು. ಎಲ್ಲಿಯೂ ಎಂದೂ ಕೂಡ ತಮ್ಮ ವ್ಯಕ್ತಿತ್ವಕ್ಕೆ, ತಮ್ಮ ಅಸ್ಮಿತೆಗೆ ಚ್ಯುತಿಯಾಗದಂತೆ ನೋಡಿಕೊಳ್ಳುತ್ತಿದ್ದರು. ಇದು ಒಂದು ಗುಣವೂ ಹೌದು ದೋಷವೂ ಹೌದೆಂಬಂತೆ ತೋರುತ್ತಿತ್ತು. ರಸದ ಮಟ್ಟಕ್ಕೆ ಮುಟ್ಟಿದಾಗ ಎಲ್ಲ ಭಾವಗಳೂ ಆದರಣೀಯವಾಗುತ್ತವೆ. ಈ ಅರ್ಥದಲ್ಲಿ ಅವರ ಪಾಂಡಿತ್ಯವು ವೀರರಸದ ಮಟ್ಟಕ್ಕೆ ವೇದಿಕೆಯ ಮೇಲೆ ಮುಟ್ಟುತ್ತಿತ್ತು. ವೇದಿಕೆಯ ಆಚೆಯ ಅವರ ಬದುಕು ಎಚ್ಚರಿಕೆಯೇ ಹೊರತು ಸ್ಫೂರ್ತಿಯಾಗಲಾರದೇನೋ.
ಬಾಲಮುರಳಿಯವರಲ್ಲಿದ್ದ ಅತ್ಯದ್ಭುತವಾದ ಪ್ರಸಂಗಾವಧಾನ ತುಂಬ ಆಕರ್ಷಕವಾಗಿರುತ್ತಿತ್ತು. ಪಕ್ಕವಾದ್ಯದವರನ್ನು ನಡೆಸಿಕೊಳ್ಳುವುದಾಗಲಿ, ಸಹಕಲಾವಿದರೊಡನೆ ವರ್ತಿಸುವುದಾಗಲಿ ಎಲ್ಲದರಲ್ಲಿಯೂ ವಿಶ್ವಾಸ ಮತ್ತು ಸ್ನೇಹದ ಅಧಿಕಾರ ಎದ್ದುಕಾಣುತ್ತಿತ್ತು. ನಾನು ನಿನಗಿಂತ ಉತ್ತಮ; ಇದು ನಿನಗೇ ಗೊತ್ತಿದೆಯಲ್ಲವೇ ಎಂದು ಹೇಳುವಂಥ ಬಗೆ. ಹೀಗೆ ಸೂಜಿಮಲ್ಲಿಗೆಯಂತೆ ಅವರ ಮೊನಚುತನ. ಆ ಮೊನಚು ಘಾಸಿಮಾಡುವಂಥದ್ದಲ್ಲ. ಅವರು ಎಂದಿಗೂ ರಸಿಕರೊಡನೆ ಸ್ನೇಹದಿಂದ ನಡೆದವರು. ಅವರ ವರ್ತನೆಯಿಂದ ಯಾರಿಗಾದರೂ ನೋವಾಗಿದ್ದರೆ ಅವರು ಈರ್ಷ್ಯಾಳುಗಳಾಗಿದ್ದಿರಬೇಕು. ಅಂಥವರಿಗೆ ಮಾತ್ರ ಇವರ ವ್ಯಂಗ್ಯ ಮತ್ತು ಚಾಟೂಕ್ತಿಗಳು ನೋವುಂಟುಮಾಡಿರುತ್ತವೆ. ಅವರ ಸಂಗೀತಕ್ಕೆ ಒಲಿದವರಿಗೆ ಸರ್ವಥಾ ಅಲ್ಲ. ಇವರು ತಮ್ಮ ಹದಿಹರೆಯದಲ್ಲಿಯೇ ವಾಗ್ಗೇಯಕಾರರಾಗಿ ಮೇಳಕರ್ತಗಳೆಲ್ಲದರಲ್ಲಿಯೂ ರಚನೆ ಮಾಡಿದರು. ಅವರು ಹೇಳುವುದುಂಟು, “ಇವೆಲ್ಲವೂ ನನಗೆ ಅಯತ್ನವಾಗಿ ಬಂದವು” ಎಂದು. ಆದರೆ ಆ ಮಾತಿನ ಅರ್ಥ – ಪ್ರಯತ್ನವಿದೆ, ಆದರೆ ತಾನದನ್ನು ಗಮನಿಸಿಲ್ಲ ಎಂಬಂತೆ ತೋರುತ್ತದೆ. ಎಷ್ಟೋ ಬಾರಿ ನಮ್ಮ ಪ್ರೀತಿಯ ಸ್ಥಾನದಲ್ಲಿ ಮಾಡುವ ಪ್ರಯತ್ನ ನಮ್ಮರಿವಿಗೆ ಬರುವುದಿಲ್ಲ. ನಾವು ಎಷ್ಟೋ ಕಷ್ಟಗಳನ್ನು ಕೈಗೊಂಡಿರುತ್ತೇವೆ, ಆದರೆ ಸ್ವತಾವಿಸ್ಮೃತಿಯ ಕಾರಣ ಆ ಕಷ್ಟಗಳು ನಮ್ಮರಿವಿಗೆ ಬರುವುದಿಲ್ಲ. ಈ ದೃಷ್ಟಿಯಿಂದ ಬಾಲಮುರಳಿಯವರು “ನನಗೆ ಅವು ತಾವಾಗಿ ಬಂದವು” ಎಂದು ಹೇಳಿರಬೇಕು. “ಇಷ್ಟೇ ವಸ್ತುನ್ಯುಪಚಿತರಸಾಃ ಪ್ರೇಮರಾಶೀಭವಂತಿ” ಎಂಬ ಕಾಳಿದಾಸನ ಮಾತಿನಂತೆ ಪ್ರಯತ್ನವು ನಮ್ಮ ಮನೋಧರ್ಮದ್ದಾದಾಗ ಅದೂ ಒಂದು ಸೌಖ್ಯದ ಭಾಗ, ರಸದ ಭಾಗವಾಗಿರುತ್ತದೆ. ಕಲಾವಿದನ ಕಲಾನಿರ್ಮಾಣಕಾಲದ ಆನಂದ ಮಾತ್ರವಲ್ಲದೆ ಕಲಾಸಿದ್ಧತಾಕಾಲವೂ ಆನಂದಪ್ರಾಯವೇ ಹೌದು ಎನ್ನುವುದನ್ನು ನಾವು ನಚ್ಚುವುದಾದರೆ ಈ ಮಾತಿನ ಅರ್ಥ ಹೊಳೆದೀತು. ಅವರು ಮಾತು-ಧಾತುಗಳ ಪ್ರಬುದ್ಧತೆಗಾಗಿ ಪರಿಶ್ರಮಿಸಿರಬೇಕು. ಅದರಲ್ಲಿಯೂ ಮಾತುವಿಗೆ ಹೆಚ್ಚಾಗಿಯೆ ಪರಿಶ್ರಮಿಸಿರಬೇಕು ಎಂದು ತೋರುತ್ತದೆ. ಏಕೆಂದರೆ ಸಾಹಿತ್ಯವಿದ್ಯೆಯು ವ್ಯಾಸಂಗವಿಲ್ಲದೆ ಬಾರದು. ಅದರ ಕಲ್ಪನೆಯು ಬರಬಹುದಾದರೂ ಶಿಲ್ಪನೆಯೂ ಬರುವುದಿಲ್ಲ. ಶಿಲ್ಪನೆಯು ಬರಬೇಕೆಂದರೆ ವಾಗರ್ಥವ್ಯವಸಾಯವನ್ನು ಮಾಡಬೇಕು. ನಮ್ಮ ನಡುವೆ ಅವರ ಮಟ್ಟದಲ್ಲಿ ಇಷ್ಟು ಸಮರ್ಥವಾಗಿ ಮಾತು-ಧಾತುಗಳನ್ನು ಯಾರೂ ಕೂಡಿಸಿಕೊಂಡಿಲ್ಲ. ಈ ಅರ್ಥದಲ್ಲಿ ಅವರು ತ್ಯಾಗರಾಜರ ಪರಂಪರೆಯಲ್ಲಿ ಬಂದ ಎಲ್ಲ ವಾಗ್ಗೇಯಕಾರರಿಗಿಂತ ಉತ್ಕೃಷ್ಟವಾದ ವಾಕ್ಕಾರರು, ಒಳ್ಳೆಯ ಗೇಯಕಾರರೂ ಹೌದೆನಿಸುತ್ತದೆ.
ಬಾಲಮುರಳಿಯವರ ಪ್ರತಿಭೆಯ ಬಗೆಗೆ ಮಾತನಾಡುವಾಗ ಅವರ ಸಮಕಾಲೀನರನ್ನು ನಾವು ಗಮನಿಸಲೇಬೇಕು. ಏಕೆಂದರೆ ಒಂದು ವಸ್ತುವಿನ ಮೌಲ್ಯಮಾಪನವು ನಡೆಯುವುದು ಅದಕ್ಕೆ ಸಂಬಂಧಪಟ್ಟ ವಾತಾವರಣದಲ್ಲಿಯೇ. ನಿರ್ವಾತದಲ್ಲಿ ಯಾವ ಮೌಲ್ಯಮಾಪನವೂ ನಡೆಯುವುದಿಲ್ಲ. ಇಂತಿದ್ದರೂ ಎಲ್ಲ ಮೌಲ್ಯಮಾಪನಗಳೂ ಸಾಪೇಕ್ಷ. ಹೀಗಾಗಿ ಬಾಲಮುರಳೀಕೃಷ್ಣರನ್ನು ಕಾಳಿದಾಸನ ಕವಿತೆಗೋ ಕುಮಾರವ್ಯಾಸನ ಕವಿತೆಗೋ ಹೋಲಿಸುವುದು ನಮ್ಮ ಅವಿವೇಕವಾದೀತು. ಅವರನ್ನು ಹೋಲಿಸಬೇಕಾದದ್ದು ತ್ಯಾಗರಾಜ, ಮುದ್ದುಸ್ವಾಮಿದೀಕ್ಷಿತ, ಶ್ಯಾಮಶಾಸ್ತ್ರಿ, ಸ್ವಾತಿ ತಿರುನಾಳ್ – ಇಂಥವರ ಜೊತೆಗೆ. ಇವರೆಲ್ಲರಿಗಿಂತ ಹೆಚ್ಚಿನ ಸೌಂದರ್ಯ ಅವರಲ್ಲಿ ಉಂಟು. ಇದಕ್ಕೆ ಕಾರಣವೇನೆಂದು ಹುಡುಕಿದಾಗ ನನಗೆನಿಸುವುದು ಬಾಲಮುರಳಿ ಯವರು ಸಮೃದ್ಧವಾದ ಸಂಸ್ಕೃತಭಾಷೆಯ ಪರ್ಯಾವರಣವಿದ್ದ ತೆಲುಗಿನ ವಾತಾವರಣದಲ್ಲಿದ್ದುದು. ತಮಿಳು, ಕನ್ನಡ, ಮಲಯಾಳಂ ಮುಂತಾದ ಭಾಷೆಗಳಿಗೂ ಮಿಗಿಲಾಗಿ ತೆಲುಗಿನ ನಾದಮಯತೆ ಉತ್ಕೃಷ್ಟವಾಗಿದೆ. ಇದನ್ನು ನಾವು ಎಲ್ಲ ಆಂಧ್ರಮೂಲದ ಕಲಾವಿದರಲ್ಲಿಯೂ ಕಾಣಬಹುದು. ಅಪಾರ ಪದಸಿದ್ಧಿ ಮತ್ತು ಗುರುಬಾಹುಳ್ಯದ, ಲಘುಬಾಹುಳ್ಯದ, ದೀರ್ಘಾಕ್ಷರಯುಕ್ತ, ದೀರ್ಘಾಕ್ಷರರಹಿತ, ಸಾಜಾತ್ಯವರ್ಣ, ವೈಜಾತ್ಯವರ್ಣ – ಹೀಗೆ ಅನೇಕ ವಿಧವಾದ ವರ್ಣವೈಭವವುಳ್ಳ ಸಾಹಿತ್ಯಕ್ಕೆ ಬೇಕಾದ ಸೌಲಭ್ಯವು ಅಯತ್ನವೆಂಬಂತೆ ಸಂಸ್ಕೃತದಲ್ಲಿ ದಕ್ಕುತ್ತದೆ. ಅದನ್ನು ಹೆಚ್ಚಿನ ಮಟ್ಟಿಗೆ ತೆಲುಗಿನವರು ಉಳಿಸಿಕೊಂಡಿದ್ದಾರೆ. ಬಾಲಮುರಳಿಯವರ ಸಾಹಿತ್ಯವು ಅರ್ಥಾಲಂಕಾರಗಳಿಂದ ಪರಿಪ್ಲ್ಲುತವಾದದ್ದೇನೂ ಅಲ್ಲ. ಆದರೆ ಅದರಲ್ಲಿ ಕಂಡುಬರುವ ಶಬ್ದಾಲಂಕಾರಸೌಂದರ್ಯಕ್ಕೆ ಸಂಸ್ಕೃತಭಾಷೆ ದೊಡ್ಡ ದೋಹದವನ್ನು ಕೊಟ್ಟಿತು. ಚಿಕಿತ್ಸಕವಾಗಿ ಕಂಡಾಗ ಅವರ ಸಂಸ್ಕೃತದಲ್ಲಿ ವ್ಯಾಕರಣದೋಷವು ಕಾಣುವುದುಂಟು. ಭಾಷೆ ಮತ್ತು ಅದರ ಒಳಿತು-ಕೆಡುಕುಗಳೆಲ್ಲವೂ ತನಗೆ ಸಹಜಪ್ರಸಾದವೆಂದಲ್ಲಿ ಇದು ಸಹಜ. ಆದರೆ ಇವುಗಳ ಬಗೆಗೆ ನಮ್ರತೆಯಿರುವುದು ಒಳಿತು. ಅವರಿಗದು ಇರಲಿಲ್ಲವೆಂಬುದು ಸತ್ಯ. ಇವೆಲ್ಲವೂ ಗೌಣ. ಅದರಲ್ಲಿ ಅವರು ಸಾಧಿಸಿದ ಗಾನಮಾಧುರ್ಯ ಮತ್ತು ಲಯಸೌಖ್ಯ ಅದ್ಭುತವಾದದ್ದು. ಉದಾಹರಣೆಗೆ ಅವರು ಸರಸಾಂಗಿ ರಾಗದ “ಹನುಮಾ ಅನುಮಾ” ಎನ್ನುವ ಕೃತಿಯಲ್ಲಿ ಮತ್ತೆ ಮತ್ತೆ “ಮಾ” ಎಂಬ ಅಕ್ಷರ ಬಂದಂತೆಲ್ಲ ಮಧ್ಯಮಸ್ವರವು ಬರುತ್ತದೆ. ಈ ರೀತಿಯ ಸಾಹಿತ್ಯವನ್ನು ರಚನೆ ಮಾಡುವುದು ಅವರಿಗೆ ಲೀಲಾಜಾಲವಾಗಿತ್ತು. ಜತಿಗಳಿಗೆ ತಕ್ಕಂತೆ, ತಾಳ-ಗತಿಗಳಿಗೆ ತಕ್ಕಂತೆ, ಶುಷ್ಕಾಕ್ಷರಗಳಿಗೆ (ಪಾಟಾಕ್ಷರ) ತಕ್ಕಂತೆ ಪದಪುಂಜಗಳನ್ನು ಹೊಂದಿಸಬಲ್ಲವರಾಗಿದ್ದರು. ಹೀಗಾಗಿ ಅವರ ಮಾತಿನಲ್ಲಿ ಲಯಸಮತ್ವವು ತಾನಾಗಿ ಬರುತ್ತಿತ್ತು. “ಗಾಯಕ-ಕುಲ-ವರದಾಯಕ-ವರ-ವಾಗ್ಗೇಯಕಾರ-ಕುಲ-ವಂದನೀಯ-ಮಹನೀಯ-ತ್ಯಾಗರಾಯ” – ಇಂಥವೆಷ್ಟೋ ಪದಪುಂಜಗಳು ಬಹಳ ಸುಂದರವಾಗಿ ಹೆÇಮ್ಮುವಂತೆ ಆಗಿತ್ತು. ಇಂಥ ಪದಪುಂಜಗಳನ್ನೂ ರಾಗಗಳನ್ನೂ ಜೋಡಿಸುವಲ್ಲಿ ಅವರ ಸಮನಾದವರು ಪ್ರಾಯಶಃ ಸಂಗೀತಜಗತಿಯ ಮಟ್ಟಿಗೆ ಮತ್ತೊಬ್ಬರಿಲ್ಲ.
ಬಾಲಮುರಳಿಯವರ ಸಾಹಿತ್ಯದಲ್ಲಿ ಸೌಂದರ್ಯವಿದ್ದರೂ ಅದರ ಅರ್ಥದಲ್ಲಿ ನಾವೀನ್ಯವು ಹೆಚ್ಚಾಗಿಲ್ಲವೆಂದು ಗಮನಿಸಿದೆವಷ್ಟೆ. ಅವರು ತ್ಯಾಗರಾಜರು, ತಮ್ಮ ಗುರುಗಳು – ಹೀಗೆ ಕೆಲವರನ್ನು ಕುರಿತು ಮಾಡಿದ ರಚನೆಗಳನ್ನು ಹೊರತುಪಡಿಸಿದರೆ ಮಿಕ್ಕೆಲ್ಲವೂ ದೇವತಾಸ್ತುತಿಗಳೇ ಆಗಿವೆ. (ಹಲವೊಂದು ಸಂಗೀತಸ್ತುತಿಪರವಾದ ಕೃತಿಗಳೂ ಇವೆಯೆನ್ನಿ.) ಈ ಅರ್ಥದಲ್ಲಿ ಅವರು ಪೂರ್ವವಾಗ್ಗೇಯಕಾರರ ಹಾದಿಯಲ್ಲಿಯೇ ನಡೆದರು. ಅವರಲ್ಲಿ ಸಹಜವಾಗಿ ಇದ್ದ ಭಗವದ್ಭಕ್ತಿ ಉತ್ಕೃಷ್ಟವೋ ಅಲ್ಲವೋ ಅದು ಬೇರೆಯ ಮಾತು. ಆದರೆ ದೇವತಾಸ್ತೋತ್ರಗಳು, ದೇವತಾನಾಮಧೇಯಗಳು, ದೇವತಾವಿಶೇಷಣಗಳು ತುಂಬ ಇಂಪಾಗಿ, ಸಿದ್ಧಸಾಮಗ್ರಿಯಾಗಿ ಒದಗಿಬರುತ್ತವೆ. ಹೀಗಾಗಿ ಇಂಥ ಪೂರ್ವಸಿದ್ಧಸಾಮಗ್ರಿಯೂ ಅವರಿಗೆ ಸಾಕಷ್ಟು ಸಹಾಯವನ್ನು ಒದಗಿಸಿದೆ. ಆದರೆ ಧಾತುವಿನಲ್ಲಿ ಮಾತ್ರ ಅವರ ಸ್ವೋಪಜ್ಞಸಾಮಗ್ರಿಯ ಪ್ರಮಾಣ ಮಿಗಿಲಾದದ್ದು. ಈ ಕಾರಣದಿಂದಲೇ ಅವರು ದೊಡ್ಡ ಗಾಯಕ. ಇದನ್ನು ನಾವು ಮರೆಯುವಂತಿಲ್ಲ.
ಬಾಲಮುರಳಿಯವರು ಲಲಿತಸಂಗೀತವೆಂಬ ಪ್ರಕಾರಕ್ಕೆ ಸಲ್ಲಿಸಿದ ಕೊಡುಗೆ ತುಂಬ ವಿಶೇಷವಾದದ್ದು. ವಿಜಯವಾಡ ಆಕಾಶವಾಣಿಯಲ್ಲಿ ಅವರು ನಿರ್ಮಾಪಕರಾಗಿದ್ದಾಗ ಅನೇಕ ವರ್ಷಗಳ ಕಾಲ ಅವೆಷ್ಟೋ ಮಧುರಗೀತಗಳನ್ನೂ ಸ್ತೋತ್ರಗಳನ್ನೂ ಭಾವಗೀತೆಗಳನ್ನೂ ಸುಂದರವಾಗಿ ಸ್ವರಪಡಿಸಿ ಲೋಕಕ್ಕೆ ಮಹೋಪಕಾರ ಮಾಡಿದ್ದಾರೆ. ವಿಶೇಷತಃ ‘ಏಕಾಂತಸೇವ’ ಮುಂತಾದ ಗೇಯಪ್ರಬಂಧಗಳಿಗೆ ಅವರು ಸ್ವರಸಂಯೋಜನೆ ಮಾಡಿಕೊಟ್ಟ ಬಗೆ ಇಂದಿಗೂ ಆಂಧ್ರದಲ್ಲಿ ಮನೆಮಾತಾಗಿದೆ. ಅನೇಕ ಆಚಾರ್ಯರುಗಳ ಸ್ತೋತ್ರಗಳಿಗೂ ಕೂಡ ಅವರು ಸ್ವರಸಂಯೋಜನೆ ಮಾಡಿರುವುದು ಅದ್ಭುತವಾದ ಕೊಡುಗೆ ಎಂದು ಹೇಳಬೇಕು. ಒಂದು ಉದಾಹರಣೆಯಾಗಿ ಹೇಳುವುದಿದ್ದರೆ ಶಂಕರಭಗವತ್ಪಾದರದೆಂದು ಪ್ರಸಿದ್ಧವಾದ ಶಿವನಾಮಾವಲ್ಯಷ್ಟಕದ ಚರಣಗಳನ್ನು ಭಿನ್ನ-ಭಿನ್ನ ರಾಗಗಳಲ್ಲಿ ಸ್ವರಸಂಯೋಜನೆ ಮಾಡಿದಾಗಲೂ ಒಂದು ರಾಗದಿಂದ ಮತ್ತೊಂದು ರಾಗಕ್ಕೆ ಹೋಗುವಾಗ ಬಿರುಕಿಲ್ಲದ ಹಾರು (Seamless Gliding) ನಿರ್ವಿವಾದವಾಗಿ ತೋರುತ್ತದೆ. ಜೊತೆಗೆ ಆಯಾ ರಾಗಗಳಲ್ಲಿ ನಾವೀನ್ಯವನ್ನೂ ತಂದಿದ್ದಾರೆ. ಆ ಸಾಹಿತ್ಯದ ವಸಂತತಿಲಕಾ ಎಂಬ ಛಂದಸ್ಸು ಸುಲಲಿತವಾದ ಚತುರಶ್ರಗತಿಗೆ ಒಗ್ಗಿಬರುವಂತೆ ಮಾಡಿರುವ ಬಗೆ ಸಂಗೀತರಸಿಕರಿಗೆ ಬೆಲೆಯುಳ್ಳ ಪಾಠ ಕಲಿಸುತ್ತದೆಂದು ಹೇಳಬಹುದು. ಅವರು ಜಯದೇವನ ಅಷ್ಟಪದಿಗಳಿಗೆ ಮಾಡಿದ ಸ್ವರಸಂಯೋಜನೆಯಂತೂ ದಂತಕಥೆಯೇ ಆಯಿತು. ‘ಹಂಸಗೀತೆ’ ಎಂಬ ಚಲನಚಿತ್ರದ ಸ್ವರಸಂಯೋಜನೆಗಾಗಿ ಅವರು ಕೇಂದ್ರಪ್ರಭುತ್ವದ ಪ್ರಶಸ್ತಿಯನ್ನೂ ಪಡೆದರು. ಗಾಯಕರಾಗಿ, ಸ್ವರಸಂಯೋಜಕರಾಗಿ ಮತ್ತು ಶಾಸ್ತ್ರೀಯ ಗಾಯಕರಾಗಿ – ಚಲನಚಿತ್ರದ ಎರಡು ವಿಭಾಗಗಳಲ್ಲಿ ಮತ್ತು ಗೀತದ ಒಂದು ವಿಭಾಗದಲ್ಲಿ – ಮೂರು ಸ್ತರದಲ್ಲಿಯೂ ರಾಷ್ಟ್ರಪತಿಗಳ ಪುರಸ್ಕಾರವನ್ನು ಪಡೆದ ಏಕಮೇವಾದ್ವಿತೀಯ ವ್ಯಕ್ತಿ ಅವರೆಂದಾಯಿತು.
ಹಿರಿಯ ವಾಗ್ಗೇಯಕಾರರು ರಚನೆ ಮಾಡಿದ ಅಪೂರ್ವರಾಗಗಳ ಕೃತಿಗಳನ್ನು ಆ ವಾಗ್ಗೇಯಕಾರರ ಮುಂದೆಯೇ ಹಾಡಿ, ಅವರೂ ಕೂಡ “ನಮ್ಮ ಕಲ್ಪನೆಯನ್ನೂ ಮೀರಿದ್ದು ನಿಮ್ಮ ಹಾಡು” ಎಂದು ಮೆಚ್ಚುಗೆಯ ಮಾತುಗಳನ್ನಾಡುವಂತೆ ಮಾಡುತ್ತಿದ್ದರು. ಇಂಥ ಹಲವಾರು ಸಂದರ್ಭಗಳುಂಟು. ‘ದೇವಾಧಿsದೇವ’ ಎಂಬ ಸುನಾದವಿನೋದಿನಿಯ ಕೃತಿಯನ್ನು ಅದರ ನಿರ್ಮಾಪಕರಾದ ಮೈಸುರು ವಾಸುದೇವಾಚಾರ್ಯರ ಎದುರಿಗೆ ಹಾಡಿದಾಗ ವಾಸುದೇವಾಚಾರ್ಯರು “ನನ್ನ ಮೂಲಕೃತಿಯ ಸ್ಥಿತಿ ಬಡಮನೆಯ ಹೆಣ್ಣುಮಗಳೊಬ್ಬಳನ್ನು ಶ್ರೀಮಂತರ ಮನೆಗೆ ಮದುವೆ ಮಾಡಿಕೊಟ್ಟಿರುವಂತಾಗಿದೆ; ಆಮೇಲೆ ಅವಳು ಹೆರಿಗೆಗೆ ಬರುವಾಗ ಮೈದುಂಬಿಕೊಂಡು, ಮನದುಂಬಿಕೊಂಡು ನಗ-ನಾಣ್ಯಗಳಿಂದ ಶೋಭಿಸಿ ಬಂದಾಗ ಯಾವ ಅನಿರೀಕ್ಷಿತವಾದ ಆನಂದವಾಗುತ್ತದೆಯೋ ಆ ರೀತಿಯಾದ ಆನಂದ ನನ್ನ ರಚನೆಯನ್ನು ನಿಮ್ಮ ಬಾಯಲ್ಲಿ ಕೇಳಿದಾಗ ಆಯಿತು” ಎಂಬಂತೆ ಅವರು ಹೇಳಿರುವ ಸಂಗತಿ ಉಂಟು. ಸ್ವಯಂ ಕೃತಿರಚನೆ ಮಾಡದೆ ಇದ್ದರೂ ಅದನ್ನು ಮೂಲಕೃತಿಕಾರರೂ ಊಹಿಸದಂತೆ ಅನ್ಯಾದೃಶವಾಗಿ ಹಾಡಿದಾಗ ಆ ಕೃತಿ ಗಾಯಕರದ್ದಾಗುತ್ತದೆ. ಇದು ಲೋಕೋತ್ತರವಾದ ಚಮತ್ಕಾರ. ಇಂಥದ್ದನ್ನು ಅವರೆಷ್ಟೋ ಮಾಡಿದ್ದಾರೆ.
ಯಾರ ಕಂಠದಲ್ಲಿ ಉದ್ದಿಷ್ಟವಲ್ಲದ, ಅನುದ್ದಿಷ್ಟವೇ ಆದ ಸ್ವರ ಹೊಮ್ಮಿದಾಗಲೂ ಆ ಸ್ವರಕ್ಕೆ ತಕ್ಕ ಪರ್ಯಾವರಣವನ್ನು ರೂಪಿಸಿ ತನ್ಮೂಲಕ ಒಂದೇ ಸ್ವರವೆಂಬ ಬೀಜದ ಸುತ್ತಲೂ ಇಡಿಯ ರಾಗವೊಂದು ಹೆಪ್ಪುsಗಟ್ಟುವಂತೆ ಮಾಡಿದುದು ‘ಪ್ರತಿಮಧ್ಯಮಾವತಿ’ ಎಂಬ ರಾಗದ ನಿರ್ಮಾಣಸಂದರ್ಭವೆಂಬುದಾಗಿ ಬಲ್ಲವರು ಹೇಳುತ್ತಾರೆ. ಪ್ರಸಿದ್ಧವಾದ ಕೃತಿಯನ್ನು, ಪ್ರಸಿದ್ಧವಾದ ರಾಗವನ್ನು ಆರಿಸಿಕೊಂಡು ಹಾಡುವಾಗಲೂ ಅವರು ನಾವೀನ್ಯವನ್ನು ತರುತ್ತಿದ್ದರು. ಆ ಕೃತಿಯ ಪಲ್ಲವಿಯಲ್ಲಿ ನಾವು ವಿಶೇಷವಾದ ಸಂಗತಿಗಳನ್ನು ನಿರೀಕ್ಷೆ ಮಾಡಿದ್ದರೆ ಅಥವಾ ಮೂಲದ ವಾಗ್ಗೇಯಕಾರರು ಅದನ್ನು ಹಾಗೆ ರಚನೆ ಮಾಡಿದ್ದರೆ, ಕೆಲವೊಮ್ಮೆ ಅದನ್ನು ಪಕ್ಕಕ್ಕಿರಿಸಿ ಅನುಪಲ್ಲವಿಗೇ ಸಾಗುತ್ತಿದ್ದರು. ಅನುಪಲ್ಲವಿಯಲ್ಲಿ ವಿಶೇಷವಾದ, ಸ್ವಯಂಸಿದ್ಧವಾದ ಸಂಗತಿಗಳನ್ನು ಹಾಡುತ್ತಿದ್ದರು. ಹಾಗೆಯೇ ಚರಣದಲ್ಲಿ. ನೇರವಾಗಿ ಎಲ್ಲಿ ಚಮತ್ಕಾರ ಸಾಧ್ಯವಿಲ್ಲವೆಂಬ ಭಾವ ನಮಗಿರುತ್ತದೆಯೋ ಅಲ್ಲಿ ಚಮತ್ಕಾರವನ್ನು ಮಾಡಿ ತೋರಿಸುತ್ತಿದ್ದರು. ನಮ್ಮ ನಿರೀಕ್ಷೆ ಎಲ್ಲಿರುತ್ತದೆಯೋ, ಅಲ್ಲಿ ಆ ನಿರೀಕ್ಷೆಯನ್ನು ಭಂಗಿಸಿ ನಿರೀಕ್ಷಾಭಂಗದ ದುಃಖವಾಗದಂತೆ ಅದಕ್ಕೆ ಹತ್ತುಪಟ್ಟು ಹೆಚ್ಚಿನ ಅನಿರೀಕ್ಷಿತವಾದ ಆನಂದವನ್ನು ಕೊಡುತ್ತಿದ್ದರು. ಇದನ್ನೆಲ್ಲ ಕಂಡಾಗ “ಸರ್ವಂ ಬಲವತಾಂ ಪಥ್ಯಂ” ಎಂಬ ವ್ಯಾಸವಾಕ್ಯ ನೆನಪಾಗುತ್ತದೆ. “ನನು ಪಾಲಿಂಪ ನಡಚಿ ವಚ್ಚಿತಿವೋ” ಎಂಬ ಮೋಹನರಾಗದ ಕೃತಿಯನ್ನು ಅವರಂತೆ ಹಾಡಿದವರು ಮತ್ತೊಬ್ಬರಿಲ್ಲ. ಹಿಂದೋಳರಾಗದ ಎರಡು ಕೃತಿಗಳು – “ಸಾಮಜವರಗಮನ” ಮತ್ತು “ಮನಸುಲೋನಿ ಮರ್ಮಮು” – ಭಿನ್ನ-ಭಿನ್ನವಾಗಿ ಬೆಳೆದಂಥ ಕೃತಿಗಳು. ಅವುಗಳನ್ನು ಆ ಮನೋಧರ್ಮವನ್ನೇ ಗಮನಿಸಿ ಅವರು ಹಾಡಿದರು. ದೊಡ್ಡ ಉದಾಹರಣೆಯಾಗಿ ಹೇಳುವುದಾದರೆ ತ್ಯಾಗರಾಜರ ಪಂಚರತ್ನಕೃತಿಗಳನ್ನು ಹಾಡುವಾಗ ಯಾಂತ್ರಿಕವಾದ ತಾಳದ ಪೆಟ್ಟನ್ನೇ ಗಮನದಲ್ಲಿಟ್ಟುಕೊಂಡು ಸಾಹಿತ್ಯಕ್ಕೆ ಕವಡೆಯಷ್ಟೂ ಕಿಮ್ಮತ್ತು ಕೊಡದೆ ಎಲ್ಲ ಗಾಯಕರೂ ಹಾಡುತ್ತಿದ್ದಾಗ, ಸಾಹಿತ್ಯದ ವಿರಾಮವೆಲ್ಲಿದೆಯೆಂಬುದನ್ನು ಗಮನಿಸಿಕೊಂಡು, ಆ ವಿರಾಮದಲ್ಲಿ ಎದ್ದುತೋರುವಂತೆ ಉಚ್ಚರಿಸಿ, ಎಲ್ಲಿ ತಾಳದ ಆವರ್ತನದ ಪೆಟ್ಟು ಬೀಳುತ್ತದೆಯೋ ಅಲ್ಲಿ ನಿಶ್ಶಬ್ದಕ್ರಿಯೆ ಮಾಡಿ ಇಡಿಯ ಪಂಚರತ್ನಕೃತಿಗಳ ಸಾಹಿತ್ಯದ ಸ್ವಾರಸ್ಯವೇನೆಂಬುದನ್ನು ತೋರಿಸಿದರು. ಪೂರ್ವಕ್ರಮಕ್ಕೆ ಒಗ್ಗಿದ ಕಿವಿಗಳಿಗೆ ಯಾಂತ್ರಿಕವಾದ ಪೆಟ್ಟಿಗೆ-ಪೆಟ್ಟಿಗೆ, ಪ್ರಾಸಕ್ಕೆ-ಪ್ರಾಸಕ್ಕೆ ಬಂದು ಸೇರುವ ಲಯವು ಹೆಚ್ಚಿನ ಉಲ್ಲಾಸವನ್ನು ತಂದುಕೊಟ್ಟೀತು. ಆದರೆ ಬಾಲಮುರಳೀಗಾಯನದಲ್ಲಿ ಕೃತಿಯ ಹಿಂದಿರುವ ರಾಗದ, ರಾಗಕ್ಕೂ ಹಿಂದಿನ ಮನೋಧರ್ಮದ ನಮ್ರತೆ ಮತ್ತು ಉಪಶಾಂತಿಗಳು ಅನುಭವಕ್ಕೆ ಬರುತ್ತಿದ್ದವು. ಇದು ತ್ಯಾಗರಾಜರಿಗೆ ಮಾಡಿದ ಮಹೋಪಕಾರ.
ಪದವರ್ಣ-ತಾನವರ್ಣಾದಿಗಳನ್ನು ರಚನೆ ಮಾಡುವಲ್ಲಿಯೂ ಕೂಡ ತುಂಬ ದೊಡ್ಡ ನಾವೀನ್ಯವನ್ನು ಅವರು ತೋರಿಸುತ್ತಿದ್ದರು. ಅದಕ್ಕೆ ಒಂದು ಉದಾಹರಣೆ ಗಂಭೀರನಾಟ ವರ್ಣದಲ್ಲಿ ಬರುವಂಥ “ಶಿವೇ ಶಿವೇ ಶಿವೇ ವೇ ವೇಲ ವರಾಲ ರಾಶಿವೇ” ಎಂಬ ಯಮಕಾದಿಗಳು. ಅದಕ್ಕಿಂತಲೂ ಹತ್ತುಪಟ್ಟು ನೂರು ಪಟ್ಟು ವಿಶೇಷಗಳನ್ನೆಷ್ಟೋ ಅವರು ಮಾಡಿದ್ದಾರೆ. ಬೆಂಗಳೂರಿನ ಗಾಯನಸಮಾಜದ ಸಮಾವೇಶದಲ್ಲೊಮ್ಮೆ ವೀಣಾವಿದ್ವಾನ್ ಸಂಗೀತಕಲಾರತ್ನ ವಿ. ದೊರೆಸ್ವಾಮಿ ಅಯ್ಯಂಗಾರ್ಯರು ಆ ಅಧಿವೇಶನದ ಸರ್ವಾಧ್ಯಕ್ಷರಾಗಿದ್ದ ಸಂದರ್ಭದಲ್ಲಿ “ಯಾರೂ ಕೂಡ ರಾಗವನ್ನು ಸೃಷ್ಟಿ ಮಾಡಬಹುದು; ರಾಗಗಳ ಸೃಷ್ಟಿಗೆ ಕೊನೆ-ಮೊದಲಿಲ್ಲ” ಎಂದು ಹೇಳುತ್ತಾ, ಸಭೆಯಲ್ಲಿದ್ದವರನ್ನೇ ಕುರಿತು, “ನೀವು ಯಾವ ಯಾವ ಸ್ವರಗಳನ್ನು ಆಯ್ಕೆ ಮಾಡಿಕೊಡುವಿರೋ, ಅವಕ್ಕೆ ಯಾವ ಅಂಶ, ಗ್ರಹ, ನ್ಯಾಸ, ಅಲ್ಪತ್ವ, ಬಹುತ್ವಾದಿಗಳನ್ನು ಕೊಡುವಿರೋ ಅವಕ್ಕೇ ನಾನು ರಾಗತ್ವವನ್ನು ಕಲ್ಪಿಸಿಕೊಡುತ್ತೇನೆ” ಎಂದು ಹೇಳಿ ಸಾಧ್ಯವಿದ್ದ ಎಲ್ಲ ಸಂಕೀರ್ಣನಿಯಮಗಳನ್ನು ಕಲೆಹಾಕಿ ಅವನ್ನು ಸಮರ್ಥವಾಗಿ ಪಾಲಿಸಿ ‘ದೊರೈ’ ಎಂಬ ಹೊಸ ರಾಗವನ್ನು ನಿರ್ಮಿಸಿದ್ದಲ್ಲದೆ, ಅದನ್ನು ಅಲ್ಲಿಂದಲ್ಲಿಗೇ ಹಾಡಿ, ಆ ಸಂಜೆ ಅವರ ಕಛೇರಿಯಲ್ಲಿ ಅದೇ ರಾಗವನ್ನು ವಿಸ್ತೃತವಾಗಿ ಸಾಹಿತ್ಯಪುರಸ್ಸರವಾಗಿ ಹಾಡಿ ಸ್ವರವಿನ್ಯಾಸವನ್ನು ಮಾಡಿದ ನೆನಪು ಇನ್ನೂ ಹಸುರಾಗಿದೆ. ಇಂಥ ಸಂದರ್ಭಗಳು ಎಷ್ಟೋ.
ಅವರ ಕಾರ್ಯಕ್ರಮವೆಂದೂ ಜಡವಾಗುತ್ತಿರಲಿಲ್ಲ. ಕಲಾವಿದನು ತನ್ನತನವನ್ನು ಹಿತಕರವಾಗಿ ವ್ಯಕ್ತಪಡಿಸಿ, ಪ್ರೇಕ್ಷಕರು ನಿಬ್ಬೆರಗಾಗುವಂತೆ, ಸಂತೋಷದ ಸೋಲಿನ ಮೆಚ್ಚುಗೆಯ ನೋಟದಲ್ಲಿ ನೋಡುವಂತೆ ಮಾಡುವುದು ತುಂಬ ದೊಡ್ಡ ಸಾಧನೆ. ಅಭಿಜಾತ ಭಾರತೀಯಕಲೆಗಳ ವೈಶಿಷ್ಟ್ಯವೇ ಇಲ್ಲಡಗಿದೆ. ಪೂರ್ವಸಿದ್ಧತೆಯಿಲ್ಲದೆ ಬಂದು ಪ್ರತಿಯೊಂದು ಹಂತದಲ್ಲಿಯೂ ಉತ್ಕಟತೆಯನ್ನೂ ರೋಚಕತೆಯನ್ನೂ ಉಳಿಸಿ ಅದ್ಭುತವಾದ ಕಲಾಸೃಷ್ಟಿಯನ್ನು ಮಾಡುವುದು ಮತ್ತು ತನ್ಮೂಲಕ ನಿರತಿಶಯಾನಂದವನ್ನು ತಂದುಕೊಡುವುದು ಇದರ ಹಿರಿಮೆ.
ಬಾಲಮುರಳಿಯವರು ಸಕಲ ಸಂಗೀತಪ್ರಕಾರಗಳಿಗೂ ತಮ್ಮನ್ನು ತೆರೆದುಕೊಂಡಿದ್ದರು ಎನ್ನುವುದಕ್ಕೆ ಮತ್ತೊಂದು ನಿದರ್ಶನ ಹೀಗಿದೆ: ೨೦೦೫ರಲ್ಲಿ ಬಾಲಮುರಳಿಯವರು ಫ್ರಾನ್ಸಿಗೆ ತೆರಳಿದ್ದರು. ಅಲ್ಲಿ ಅವರ ಪೂರ್ವಾಪರವನ್ನು (Biodata) ಸಭೆಗೆ ವಿನಿಕೆಮಾಡಿದರು. ಗಾನದಲ್ಲಿ, ಸ್ವರಸಂಯೋಜನೆಯಲ್ಲಿ, ಮೃದಂಗದಲ್ಲಿ, ಖಂಜಿರದಲ್ಲಿ, ವಯೋಲಾದಲ್ಲಿ, ವಯೊಲಿನ್ನಿನಲ್ಲಿ ಮತ್ತು ಲಲಿತಸಂಗೀತದಲ್ಲಿ – ಈ ಎಲ್ಲದರಲ್ಲಿಯೂ ಆಕಾಶವಾಣಿಯ ‘ಎ ಆರ್ಟಿಸ್ಟ್’ ಇವರಾಗಿದ್ದಾರೆ ಎಂದು ಘೋಷಿಸಿದಾಗ, ಇದು ಹೇಗೆ ಸಾಧ್ಯ ಎಂದು ಅಲ್ಲಿದ್ದ ಒಬ್ಬ ಕಲಾವಿದರು ಕೇಳಿ, “ನಮ್ಮ ರಾಷ್ಟ್ರದ ಪ್ರಸಿದ್ಧವಾದ ಒಂದು ಗೀತವನ್ನು ನಾವು ಹಾಡುತ್ತೇವೆ, ಅದನ್ನು ನೀವು ಹಾಡುವಿರಾ ಅಥವಾ ನುಡಿಸುವಿರಾ?’’ ಎಂದು ಆತ್ಮೀಯವಾದ ಸವಾಲನ್ನೆಸೆದರು. ಆಗ ಬಾಲಮುರಳಿಯವರು “ನಾನು ಎರಡನ್ನೂ ಮಾಡುತ್ತೇನೆ” ಎಂದು ಹೇಳಿ ಏಕಸಂಧಿಗ್ರಾಹಿಯಾಗಿ ಇಡಿಯ ಹಾಡನ್ನು ಒಮ್ಮೆ ಕೇಳಿಸಿಕೊಂಡು ಮರುಕ್ಷಣವೇ ಹಾಡಿದ್ದಲ್ಲದೆ ಅದನ್ನು ವಯೋಲಾದಲ್ಲಿ ಒಡನೆಯೇ ನುಡಿಸಿ ತೋರಿಸಿದ್ದು, ಆ ಬಳಿಕ ಅವರಿಗೆ ಅಲ್ಲಿಯ ಪ್ರಸಿದ್ಧ ಪ್ರಶಸ್ತಿಯೊಂದು ಬಂದಿದ್ದು, ಇವೆಲ್ಲಾ ನಂಬಲಾಗದ ಸಂತೋಷದ ಸತ್ಯಗಳಾಗಿವೆ.
ಬಾಲಮುರಳಿಯವರ ತಿಲ್ಲಾನಗಳೂ ಕೂಡ ಅನ್ಯಾದೃಶವಾದವು. ಹಿಂದೊಮ್ಮೆ ನನ್ನ ಗುರುಗಳಾದ ಡಾ|| ನಾಗವಲ್ಲಿ ನಾಗರಾಜರ ಜೊತೆಗೂಡಿ ಅವರ ತಿಲ್ಲಾನಗಳ ಬಗೆಗೆ ವಿಶೇಷಕಾರ್ಯಕ್ರಮವೊಂದನ್ನು ರೂಪಿಸಿದಾಗ ಪ್ರತಿಯೊಂದು ತಿಲ್ಲಾನವನ್ನೂ ಚಿಕಿತ್ಸಕವಾಗಿ ಅಭ್ಯಾಸ ಮಾಡಿದ್ದುಂಟು. ಆ ತಿಲ್ಲಾನಗಳ ವೇಗವಂತೂ ಅವಕ್ಕೇ ಸಾಟಿಯಾದದ್ದು. ಸಾಮಾನ್ಯವಾಗಿ ಆ ವೇಗದಲ್ಲಿ ಮಾತನಾಡುವುದೇ ಸಾಧ್ಯವಿಲ್ಲ; ಇನ್ನು ಸ್ವರಗಳನ್ನೂ ಜತಿಗಳನ್ನೂ ನುಡಿಯುವುದೆಂದರೆ ಹೇಗೆ? ಅದರಲ್ಲಿಯೂ ಲಯತಪ್ಪದಿರುವುದೆಂದರೆ ಹೇಗೆ? ಇಂಥ ಅಸಾಮಾನ್ಯವಾದ ಅನೇಕ ಸಿದ್ಧಿಗಳನ್ನು ಮಾಡಿಕೊಂಡವರು ಅವರು.
ರಾಗಮುದ್ರಿಕೆಯನ್ನು ತರುವಲ್ಲಿ ಬಾಲಮುರಳಿಯವರು ತೋರಿಸುತ್ತಿದ್ದ ಚಮತ್ಕಾರವಂತೂ ಅವಿಸ್ಮರಣೀಯ. ಕಥನಕುತೂಹಲ ರಾಗ ಕದನಕುತೂಹಲ ಎಂದಾಗಿದೆ. ಇದು ತಮಿಳುಭಾಷೆಯ ಪ್ರಸಾದ. ಅದನ್ನವರು ಬಹಳ ಸೊಗಸಾಗಿ “ಮದನಕದನಕುತೂಹಲುಡು ರಮ್ಮನೆ ಬಿರಾನ ಬಿರಾನ ಬಿರಾನ ರಾವೆ” ಎಂದು ಹಾಡಿ ಕದನಕುತೂಹಲವನ್ನು ಕೃಷ್ಣನ ಮದನಕದನಕುತೂಹಲವನ್ನಾಗಿ ಮಾಡಿಬಿಟ್ಟರು! ಹೀಗೆ ರಣರಂಗವನ್ನು ಶೃಂಗಾರರಸರಂಗವನ್ನಾಗಿ ಮಾಡಿದ ಬಗೆ ದಿಟವಾಗಿ ಅದ್ಭುತ. ಅವರು ರಾಗಮಾಲಿಕೆಯಲ್ಲಿ ಮಾಡಿದ ಚಮತ್ಕಾರಗಳು ಹಲವಾರು. ರಾಗಠಾಯ ಎಂಬುದಾಗಿ ಗ್ರಹಭೇದದಿಂದ ಮೊದಲುಮಾಡುವುದು, ತಾಳಮಾಲಿಕೆಯಲ್ಲಿ ರಚಿಸುವುದು, ಸಮಾನ ರಾಗಕುಟುಂಬದೊಳಗೆ ರಚನೆ ಮಾಡುವುದು, ಅನೇಕ ಭಾಷೆಗಳಲ್ಲಿ ರಚನೆ ಮಾಡುವಾಗ ಆಯಾ ಭಾಷೆಗಳ ಜಾಯಮಾನಕ್ಕೆ ಒಪ್ಪುವಂತೆ ಮಾಡುವುದು – ಇವೆಲ್ಲವೂ ಅವರಿಗೆ ಮಾತ್ರ ಸಾಧ್ಯವಾದ ಸಾಹಸಗಳೆಂದರೆ ತಪ್ಪಾಗಲಾರದು. ತ್ಯಾಗರಾಜರನ್ನು ಕುರಿತು ರಚಿಸುವಾಗ ಅವರ ಶೈಲಿಯಲ್ಲಿಯೇ ಮಾಡುವುದು, ಮುದ್ದುಸ್ವಾಮಿದೀಕ್ಷಿತರನ್ನು ಕುರಿತು ‘ಸುಚರಿತ್ರ’ ಎಂಬ ಮೇಳಕರ್ತರಾಗದಲ್ಲಿ ರಚನೆ ಮಾಡುವಾಗ ಅವರ ಶೈಲಿಯನ್ನೇ ಆಶ್ರಯಿಸುವುದು – ಇವನ್ನೆಲ್ಲ ಕಂಡಾಗ ಅವರು ಪೂರ್ವಸೂರಿಗಳ ರಚನೆಗಳನ್ನು, ಅವುಗಳ ಕಲಾಸೂಕ್ಷ್ಮಗಳನ್ನು ಅದೆಷ್ಟು ಎಚ್ಚರಿಕೆಯಿಂದ ಗಮನಿಸಿದ್ದರೆಂದು ತಿಳಿಯದಿರದು.
ಬಾಲಮುರಳಿಯವರು ಚಲನಚಿತ್ರಸಂಗೀತಕ್ಕೆ ಕೊಟ್ಟ ಕೊಡುಗೆಯೂ ತುಂಬ ಮೇಲ್ಮಟ್ಟದ್ದು. ಸಾಮಾನ್ಯವಾಗಿ ಶಾಸ್ತ್ರೀಯಸಂಗೀತಗಾರರು ಚಲನಚಿತ್ರಗಳಲ್ಲಿ ಇಷ್ಟು ಉನ್ನತಮಟ್ಟದ ಹಾಡುಗಳನ್ನು ಹಾಡಿಲ್ಲ, ಮತ್ತು ಅವು ಅಷ್ಟು ಜನಪ್ರಿಯವೂ ಆಗಿಲ್ಲ. ಅವರಾದ ಬಳಿಕ ಸಿನೆಮಾಸಂಗೀತವನ್ನು ಹಲವು ಮಂದಿ ಶಾಸ್ತ್ರೀಯಸಂಗೀತಗಾರರು ಹಾಡಿದ್ದಾರಾದರೂ – ಅವರಲ್ಲಿ ಕೆಲವರು ಸರ್ವಾತ್ಮನಾ ಅದಕ್ಕೇ ತೆತ್ತುಕೊಂಡಿದ್ದರೂ ಕೂಡ – ಅವರ ಕಲೆ ಬಾಲಮುರಳಿಯವರ ಮಟ್ಟಕ್ಕೆ ಏರುವುದನ್ನು ನಾವು ಕಾಣುವುದಿಲ್ಲ. ಹೀಗಾಗಿ ಅವರ ಬಗೆಗೆ ಪ್ರಸ್ತಾವಿಸಲೇಬೇಕಿಲ್ಲ. ಹೀಗೆ ಮಹಾಗಾಯಕನೊಬ್ಬನು ಚಲನಚಿತ್ರರಂಗದಲ್ಲಿ ಸಮರ್ಥನಾದ ಹಿನ್ನೆಲೆಗಾಯಕನಾಗಿ ನಿಂತದ್ದು ದೊಡ್ಡ ಸಂಗತಿ.
ಚಲನಚಿತ್ರರಂಗದಲ್ಲಿ ಆಪಾತಮಾಧರ್ಯಕ್ಕೆ ಎಲ್ಲಿಲ್ಲದ ಬೆಲೆಯುಂಟು. ಕೇವಲ ಮೂರರಿಂದ ಐದು ನಿಮಿಷಗಳೊಳಗೆ ತನ್ನೆಲ್ಲ ಪ್ರತಿಭೆಯನ್ನು ತೋರಿಸಬೇಕೆಂಬ ನಿರ್ಬಂಧ ಅಲ್ಲಿದೆ. ಬಾಲಮುರಳಿಯವರು ಪ್ರತಿಭಾಸಂಪನ್ನರೂ ಶಾಸ್ತ್ರಕೋವಿದರೂ ಆದ ಕಾರಣದಿಂದಲೇ ಅವರನ್ನು ಈ ನಿರ್ಬಂಧಗಳಾವುವೂ ಕಟ್ಟಿಕ್ಕಲಾಗಲಿಲ್ಲ. ಎಲ್ಲೆಲ್ಲಿಯೂ ಅವರದ್ದು ಧೀರಸ್ವೈರವಿಹಾರ. ೧೯೫೭ರಿಂದಲೇ ಅವರು ಚಲನಚಿತ್ರಕ್ಕೆ ಬಂದರು. ಸಾಕಷ್ಟು ದೀರ್ಘಕಾಲದ ಅವರ ಈ ಯಾತ್ರೆಯಲ್ಲಿ ಅನೇಕ ಮೈಲಿಗಲ್ಲುಗಳಿವೆ. ಉದಾಹರಣೆಗೆ ಆ ಕಾಲದ ‘ಕಲೈಕೋವಿಲ್’ ಎಂಬ ಚಲನಚಿತ್ರದಲ್ಲಿ ಬರುವ ‘ತಂಗರಥಂ’ ಎಂಬ ಆಭೋಗಿರಾಗದ ರಚನೆ ಮತ್ತು ‘ನರ್ತನಶಾಲಾ’ ಚಲನ ಚಿತ್ರದಲ್ಲಿದ್ದ ಯಮುನಾಕಲ್ಯಾಣಿರಾಗದ ‘ಸಲಲಿತರಾಗಸುಧಾರಸ’ ಎಂಬ ರಚನೆಗಳಿಲ್ಲಿ ಸ್ಮರಣೀಯ. ಒಂದೊಂದೇ ರಾಗದಲ್ಲಿ ಅವರು ಹಾಡಿದ ಹಾಡುಗಳ ಪೈಕಿ ‘ಅಮ್ಮ’ ಕನ್ನಡ ಚಲನಚಿತ್ರಕ್ಕೆ ಹಾಡಿದ ಪುರಂದರದಾಸರ ‘ಧರ್ಮವೇ ಜಯ’ ಎಂಬ ಖರಹರಪ್ರಿಯ ರಾಗದ ಕೃತಿಯಾಗಲಿ, ‘ಗುಪ್ಪೆಡುಮನಸು’ ಎಂಬ ತೆಲುಗು ಚಲನಚಿತ್ರಕ್ಕೆ ಹಾಡಿದ ಸಾಮರಾಗದ ‘ಮೌನಮೆ ನೀ ಭಾಷ’ ಗೇಯವಾಗಲಿ, ‘ಮೇಘಸಂದೇಶಂ’ ಚಿತ್ರಕ್ಕೆ ಹಾಡಿದ ‘ಪಾಡನಾ ವಾಣಿ ಕಲ್ಯಾಣಿ’ ರಚನೆಯಾಗಲಿ ಅವಿಸ್ಮರಣೀಯ, ಇವಲ್ಲದೆ ಅವರು ರಾಗಮಾಲಿಕೆಯಾಗಿ ಹಾಡಿದ ಹಲವು ಹಾಡುಗಳುಂಟು. ಕ್ಲಿಷ್ಟವಾದ ಸಂಗತಿಗಳು, ಬಿಕ್ಕಟ್ಟಾದ ಸ್ವರಕಲ್ಪನೆ ಮತ್ತು ತಬ್ಬಿಬ್ಬಾಗಿಸುವ ಲಯವಿನ್ಯಾಸಗಳಿರುವ ರಚನೆಗಳೆಷ್ಟನ್ನೋ ಚಲನಚಿತ್ರಗಳಲ್ಲಿ ಹಾಡಿದ್ದಾರೆ. ವಿಶೇಷತಃ ‘ಸ್ವರ್ಣಗೌರಿ’ ಚಿತ್ರದಲ್ಲಿ ಅವರು ಹಾಡಿದ ‘ನಟವರ ಗಂಗಾಧರ’ ಎಂಬ ಮೂರು ರಾಗಗಳ ಮಾಲಿಕೆ, ‘ಭಕ್ತಪ್ರಹ್ಲಾದ’ ಚಿತ್ರದ ‘ಆದಿ ಅನಾದಿಯು ನೀ’ ಎಂಬ ಐದು ರಾಗಗಳ ರಾಗಮಾಲಿಕೆ, ‘ಶ್ರೀಮದ್ವಿರಾಟಪರ್ವಮು’ ಚಲನಚಿತ್ರದ ‘ಜೀವಿತಮೇ ಕೃಷ್ಣಸಂಗೀತಮು’ ಎಂಬುದಾಗಲಿ ‘ಋತುಗಾನ’ ಚಲನ ಚಿತ್ರದ ಶೀರ್ಷಕಗೀತವಾಗಲಿ ಸರ್ವಜನಪ್ರಿಯವಾಗಿವೆ. ಎಲ್ಲಕ್ಕಿಂತ ಮಿಗಿಲಾಗಿ ಅವರ ವ್ಯಕ್ತಿತ್ವವೇ ಎಂದು ತೋರುವ ‘ತಿರುವಿಳೈಯಾಡಲ್’ ಚಲನಚಿತ್ರದ ‘ಒರುನಾಳ್ ಪೋದುಮಾ’ ರಾಗಮಾಲಿಕೆಯಂತೂ ಅತ್ಯುತ್ಕೃಷ್ಟ ರಚನೆ.
ಬಾಲಮುರಳಿಯವರು ಸಂಗೀತದಲ್ಲಿ ತೋರುತ್ತಿದ್ದ ನವೀನತೆಗಳು ಮತ್ತೂ ಎಷ್ಟೋ ಇವೆ. ಅವೆಲ್ಲದರ ಬಗೆಗೆ ಬರೆಯುವುದಾದರೆ ಹಲವು ಗ್ರಂಥಗಳೇ ಆದಾವು. ಕೇವಲ ಕೆಲವನ್ನಷ್ಟೇ ನಾವೀಗ ಗಮನಿಸಬಹುದು. ಅವರು ಎಂದೂ ಸಾಹಿತ್ಯವನ್ನು ರಚಿಸಿ ಅನಂತರ ಸಂಗೀತಸಂಯೋಜನೆ ಮಾಡುತ್ತಿರಲಿಲ್ಲ; ಸಂಗೀತದ ಹಂದರವನ್ನು ಕಲ್ಪಿಸಿಕೊಂಡು ಅನಂತರ ಪದಗಳಿಗಾಗಿ ತಡಕಾಡುತ್ತಿರಲಿಲ್ಲ. ಅವೆರಡೂ ಒಟ್ಟಿಗೆ ಬರುತ್ತಿದ್ದವು. ನನಗೆ ಅವರು ಮುಖತಃ ಹೇಳಿದ್ದುಂಟು: “ಒಂದೇ ಲಹರಿಯಲ್ಲಿ ಎರಡೂ ಬರುತ್ತವೆ; ಅವನ್ನು ನಾನು ರೂಪಿಸಿಕೊಳ್ಳುತ್ತಾ ಹೋಗುತ್ತೇನೆ. ಕಟ್ಟಕಡೆಯಲ್ಲಿ ಗಮನಿಸಿದಾಗ ಅದು ಈಗಾಗಲೇ ಸಿದ್ಧವಾದ ರಾಗ-ತಾಳ ಆಗಿದ್ದರೆ ಸರಿ, ಇಲ್ಲವಾದರೆ ಅಲ್ಲಿರುವುದು ಹೊಸ ರಾಗ, ಹೊಸ ತಾಳ’’ ಎಂದು. ಮಗು ಹುಟ್ಟಿದ ಮೇಲೆ ಹೆಸರಿಡುವುದಲ್ಲದೆ ಹುಟ್ಟುವ ಮುನ್ನವೇ ಹೆಸರಿಡುವ ಪದ್ಧತಿ ಅವರದ್ದಲ್ಲ. ಆ ಮಟ್ಟಕ್ಕೆ ಅವರಿಗೆ ಸಂಗೀತ-ಸಾಹಿತ್ಯಗಳ ರಚನೆ ಸಹಜವಾಗಿತ್ತು.
ಅವರು ಹಳೆಯ ಹಾಗೂ ಪ್ರಸಿದ್ಧ ರಾಗಗಳಲ್ಲಿಯೂ ಹೊಸತನವನ್ನು ತರುತ್ತಿದ್ದುದಕ್ಕೊಂದು ಸುಂದರಸಾಕ್ಷಿ ‘ನಗು ಮೋಮು’ ಎಂಬ ಕೃತಿ. ಮೂರು ನಾಲ್ಕು ರೀತಿಗಳಲ್ಲಿ ಅದನ್ನು ಹಾಡಿ ಧ್ವನಿಮುದ್ರಣ ಮಾಡಿದ್ದುಂಟು. ಸಾವಿರಾರು ವೇದಿಕೆಗಳಲ್ಲಿ ಅವನ್ನು ಪ್ರಸ್ತುತಪಡಿಸಿದ್ದುಂಟು. ಅವೆಲ್ಲವೂ ಅನನ್ಯವಾದ ರೀತಿಯಲ್ಲಿವೆ. ಅಲ್ಲಿಯ ಆಭೇರಿರಾಗವು ತನ್ನ ಕೋಮಲತೆಗೂ ಆರ್ದ್ರತೆಗೂ ಶೃಂಗಾರದ ಛಾಯೆಯಿರುವ ಕರುಣಕ್ಕೂ ಪ್ರಸಿದ್ಧ. ಇಂಥ ರಾಗದಲ್ಲಿ ಒಂದು ಗಾಂಭೀರ್ಯವನ್ನೂ ಆಳವನ್ನೂ ವಿಷಾದದ ಗಹನತೆಯನ್ನೂ ತರುವ ಪ್ರಯತ್ನವನ್ನು ಅವರು ಮಾಡಿದರು. ಅದನ್ನು ಕೇಳಿದಾಗ ನನಗೆ ಬಹಳ ಆಶ್ಚರ್ಯವಾಯಿತು; “ಈ ರಾಗಕ್ಕೆ ಈ ಭಾವ ಹೇಗೆ ಬಂದಿತು?’’ ಎಂದು ಪರ್ಯಾಲೋಚಿಸಿದೆ. ಆಗ ಗೊತ್ತಾಯಿತು – ಅವರು ಆ ರಾಗದ ಆರೋಹದ ಮೇಲೆಯೇ ಹೆಚ್ಚಾಗಿ ಸಂಚರಿಸಿದ್ದಾರೆ ಎಂದು. ಆರೋಹವು ಶುದ್ಧಧನ್ಯಾಸಿ ಅಥವಾ ಉದಯರವಿಚಂದ್ರಿಕಾ ಎಂಬ ರಾಗದ್ದು. ಅಲ್ಲಿರುವ ಭಾರವು ಇವರ ಗಾನಕ್ಕೆ ಒಂದು ಬಗೆಯ ಬಿಕ್ಕಟ್ಟನ್ನು ತಂದು Sustained Melancholyಯನ್ನು ತೋರಿಸಿದೆ. ಈ ತೆರನಾದದ್ದು ಅವರ ಶಕ್ತಿ. ಯಾವುದೇ ರಾಗದ ಸ್ವರೂಪಕ್ಕೆ ಧಕ್ಕೆ ಬರದಂತೆ ಪ್ರತ್ಯೇಕವಾದ ಸ್ವರಸಂಕ್ರಮವನ್ನವರು ಇಟ್ಟುಕೊಳ್ಳುತ್ತಿದ್ದರು. ತನ್ಮೂಲಕ ರಾಗಮೂರ್ಚ್ಛನೆಯಲ್ಲಿಯೇ ತಮ್ಮದಾದ ಆಯ್ಕೆ ಮಾಡಿಕೊಂಡು ಇದುವರೆಗೆ ಆವಿಷ್ಕೃತವಾದ ವಾದಿ-ಸಂವಾದಿಗಳಿಗಿಂತ ಭಿನ್ನವಾದುದನ್ನು ತಾತ್ಕಾಲಿಕವಾಗಿಯಾದರೂ ತಂದು ನಮ್ಮನ್ನು ಒಪ್ಪಿಸುತ್ತಿದ್ದರು. ಆ ಬಗೆಯ ಪ್ರಾತಿಭ ತುಂಬ ವಿಶೇಷವಾದದ್ದು.
‘ಸುಬ್ಬಾಶಾಸ್ತ್ರಿ’ ಚಲನಚಿತ್ರಕ್ಕೆ ಸಂಗೀತನಿರ್ದೇಶನ ಮಾಡಿದವರು ಪ್ರಸಿದ್ಧ ವೀಣಾವಿದ್ವಾಂಸರಾದ ದೊರೈಸ್ವಾಮಿ ಅಯ್ಯಂಗಾರ್ಯರು ಮತ್ತು ಮೈಸೂರು ವಾಸುದೇವಾಚಾರ್ಯರ ಮೊಮ್ಮಗ ಎಸ್. ಕೃಷ್ಣಮೂರ್ತಿ. ಕೃಷ್ಣಮೂರ್ತಿಯವರೇ ನನಗೆ ಹೇಳಿದ ಸಂಗತಿ ನೆನಪಿಗೆ ಬರುತ್ತದೆ. ಆ ಚಲನಚಿತ್ರಕ್ಕೆ ಹಾಡಬೇಕೆಂದು ಬಾಲಮುರಳಿಯವರನ್ನು ಬರಮಾಡಿಕೊಂಡು ಧ್ವನಿಮುದ್ರಣಕ್ಕಾಗಿ ವ್ಯವಸ್ಥೆ ಮಾಡಿದಾಗ, ಅವರು ದೊಡ್ಡ ಪರಿವಾರದೊಡನೆ ಬಂದು ಅವರ ಜೊತೆಗಿನ ವಿಲಾಸದಲ್ಲಿಯೇ ಕಾಲಕ್ಷೇಪ ಮಾಡುತ್ತಿದ್ದರಂತೆ. ವಾದ್ಯಗೋಷ್ಠಿಯನ್ನು ಅಯ್ಯಂಗಾರ್ಯರೂ ಕೃಷ್ಣಮೂರ್ತಿಗಳೂ ಸಜ್ಜುಮಾಡಿ, ಸ್ವರಸಂಯೋಜನೆಯನ್ನು ಮಾಡಿ ಅದನ್ನು ಬಾಲಮುರಳಿಯವರಿಗೆ ತಂದುಕೊಟ್ಟರೆ ನೋಡಿದೊಡನೆಯೇ ಸಾಹಿತ್ಯವನ್ನು ಬರೆದುಕೊಂಡು, ಎತ್ತುಗಡೆಯ ಸ್ವರವನ್ನು ಮಾತ್ರ ಗುರುತು ಮಾಡಿಕೊಂಡು, ರಾಗ ಯಾವುದೆಂದು ನೋಡಿಕೊಂಡು “ಇಂತೇನಾ” ಎಂದು ತೆಲುಗಿನಲ್ಲಿ ಪ್ರತಿಕ್ರಿಯಿಸುತ್ತಿದ್ದರಂತೆ. ಆ ಬಳಿಕ ಅದನ್ನು ತತ್ಕ್ಷಣವೇ ಹಾಡಿದರಂತೆ. ಬೆಳ್ಳಿಯ ತೆರೆಯ ಮೇಲೆ ಆ ಹಾಡು ಎಷ್ಟು ಕಾಲ ಬರುವುದೋ ಅಷ್ಟೇ ಕಾಲದಲ್ಲಿ ಧ್ವನಿಮುದ್ರಣ ಮುಗಿದಿತ್ತಂತೆ! ಆಮೇಲೆ ಅವರು ಮತ್ತೆ ತಮ್ಮ ಪರಿವಾರದೊಂದಿಗೆ ಲೀನವಾಗುತ್ತಿದ್ದರಂತೆ. ಅಲ್ಲಿ ಅವರ ಹರಟೆ, ವಿನೋದ ನಿರಂತರವಾಗಿ ಸಾಗುತ್ತಿದ್ದವು. ಸಂಗೀತನಿರ್ದೇಶಕರು ಮತ್ತೆ ಮುಂದಿನ ಹಾಡನ್ನು ಎರಡು-ಮೂರು ಘಂಟೆಗಳಲ್ಲಿ ತಯಾರಿಸಿ ತಂದುಕೊಟ್ಟರೆ ಅದಕ್ಕೂ ಇದೇ ಗತಿ. ಹೀಗೆ ಒಂದು ದಿವಸದಲ್ಲಿಯೇ ಆ ಚಲನಚಿತ್ರದ ಎಲ್ಲ ಹಾಡುಗಳ ಧ್ವನಿಮುದ್ರಣವಾಯಿತು. ಆದರೆ ಅದೇ ಚಲನಚಿತ್ರದ ಮತ್ತೊಂದು ಹಾಡನ್ನು ಇನ್ನೊಬ್ಬ ಕಲಾವಿದರಿಂದ ಹಾಡಿಸುವಾಗ ಎರಡು ದಿವಸವಿಡೀ ಶ್ರಮಿಸಬೇಕಾಯಿತಂತೆ.
ಬಾಲಮುರಳಿಯವರ ಕ್ಯಾಸೆಟ್ ಧ್ವನಿಮುದ್ರಿಕೆಗಳೂ ಕೂಡ ಅಪಾರ ಜನಪ್ರೀತಿಯನ್ನು ಪಡೆದುಕೊಂಡವು. ಅದು ಅವರ ದೊಡ್ಡ ಯೋಗದಾನವಾಯಿತು. ಮುಖ್ಯವಾಗಿ ನಾವಿದಕ್ಕಾಗಿ ‘ಸಂಗೀತಾ’ ಸಂಸ್ಥೆಗೆ ಕೃತಜ್ಞರಾಗಿರಬೇಕು. ಇವಿಲ್ಲದಿದ್ದಲ್ಲಿ ಬಾಲಮುರಳೀಕೃಷ್ಣರ ಮಧ್ಯವಯಸ್ಸಿನಲ್ಲಿ ವಿಕಸಿಸಿದ ಗಾನಮಾಧುರ್ಯ ನಮ್ಮ ಪಾಲಿಗೆ ದಕ್ಕುತ್ತಿರಲಿಲ್ಲ.
ಬಾಲಮುರಳಿಯವರಂಥ ಮಹಾಪ್ರತಿಭೆಗೂ ಕೂಡ ವಿರೋಧ ಎದುರಾಯಿತೆಂದರೆ ಅದೊಂದು ಆಶ್ಚರ್ಯವಲ್ಲದ ಆದರೆ ಅನ್ಯಾಯದ ಸಂಗತಿ. ಈ ರೀತಿಯಾದ ಪ್ರತಿಭೆಯುಳ್ಳ ದೊಡ್ಡ ಕಲಾವಿದರಿಗೆ ಎಲ್ಲ ಕಾಲದಲ್ಲಿಯೂ ವಿರೋಧವಿದ್ದದ್ದೇ. ಮಾತೊಂದುಂಟಲ್ಲವೇ – ದೊಡ್ಡ ಕಲಾವಿದ ಬಂದಾಗ ಜಗತ್ತು ಮೊದಲು ತೋರುವುದು ವಿರೋಧ, ಆಮೇಲೆ ಉಪೇಕ್ಷೆ, ತದನಂತರ ಆರಾಧನೆ. ಪುಣ್ಯವಶಾತ್ ತುಂಬುಜೀವನವನ್ನು ನಡಸಿದ ಬಾಲಮುರಳಿಯವರು ಮೂರನೆಯ ಹಂತವನ್ನೂ ಚೆನ್ನಾಗಿ ಕಾಣುವಂತಾಯಿತು. ಎಷ್ಟೋ ಬಾರಿ ಅವೆಲ್ಲ ಸೇರಿ ಬರುತ್ತಿದ್ದುದೂ ಉಂಟು. ರಾಗಗಳ ಆವಿಷ್ಕಾರದ ಬಗೆಗಿನ ತಗಾದೆಯಿಂದಾಗಿ ಅವರನ್ನು ಅಹಂಬ್ರಹ್ಮೀಭವಿಸಿದ ಕೆಲವರು ಗಾಯಕರು ಹಾಗೂ ವಾದಕರು ತುಂಬ ಅನುದಾರವಾಗಿ ನಡಸಿಕೊಂಡರು. ಷಡ್ಯಂತ್ರವೊಂದನ್ನು ಕಲ್ಪಿಸಿ ಅವರನ್ನು ನ್ಯಾಯಾಲಯಕ್ಕೆ ಎಳೆದರು. ಆದರೆ ಬಾಲಮುರಳಿಯವರು ದಿಟ್ಟತನದಿಂದ ನಿಂತು ವಾದದಲ್ಲಿ ಗೆದ್ದದ್ದಲ್ಲದೆ ಅವರೆಲ್ಲರ ಶೃಂಗಭಂಗವನ್ನು ಸಭಾಮುಖದಲ್ಲಿಯೇ ಮಾಡಿದುದು ಒಂದು ಇತಿಹಾಸವೇ ಆಯಿತು. ಇಂತಹ ವಿಷಮಸಂದರ್ಭದಲ್ಲಿಯೂ ಅವರು ತರ್ಕನಿಷ್ಠೆಯನ್ನು ಮರೆಯಲಿಲ್ಲ. ಹಾಗೆಯೇ ಅವರು ಪೂರ್ವಾಚಾರ್ಯರನ್ನೂ ಸಮಕಾಲಿಕರನ್ನೂ ತಮ್ಮದಾದ ರೀತಿಯಲ್ಲಿ ವಿಮರ್ಶಿಸಲು ಸಾಧ್ಯವಾಯಿತು.
ಇದೇ ಸಂದರ್ಭದಲ್ಲಿ ಉಲ್ಲೇಖಾರ್ಹವಾದ ಮತ್ತೊಂದು ಸಂಗತಿಯಿದೆ. ಅವರನ್ನೊಮ್ಮೆ ಕೆಲವರು “ನೀವು ಸಂಪ್ರದಾಯವನ್ನು ಪಾಲಿಸುವುದಿಲ್ಲ, ದಾಕ್ಷಿಣಾತ್ಯಸಂಗೀತವನ್ನು ಹಾಡುವುದಿಲ್ಲ, ತ್ರಿಮೂರ್ತಿಸಂಗೀತವನ್ನು ಹೆಚ್ಚಾಗಿ ಹಾಡುವುದಿಲ್ಲ” ಎಂಬುದಾಗಿ ಆಕ್ಷೇಪ ಮಾಡಿದಾಗ ಅವರು, “ಯಾವುದು ಸಂಪ್ರದಾಯ? ನನಗಿರುವುದು ಒಂದೇ ಸಂಪ್ರದಾಯ – ಸ ರಿ ಗ ಮ ಪ ದ ನಿ. ಅದಕ್ಕಿಂತ ಮಿಗಿಲಲ್ಲ” ಎಂದಿದ್ದರು. ಬಾಲಮುರಳಿಯವರೇ ಹೇಳಿದ ಮತ್ತೊಂದು ಮಾತು: ಅವರ ವಿರೋಧಿಗಳು ಹೇಳುತ್ತಿದ್ದರಂತೆ, “ನಿಮ್ಮ ಶ್ರುತಿ ಮಿಕ್ಕೆಲ್ಲರೂ ಶ್ರುತಿಮಾಡಿಕೊಳ್ಳುವಷ್ಟು ಶುದ್ಧವಾದದ್ದು. ನಿಮ್ಮ ಲಯ ಬೇರೆಲ್ಲರನ್ನೂ ಲಯವಾಗಿಸುತ್ತದೆ. ನಿಮ್ಮ ಸಾಹಿತ್ಯಶುದ್ಧಿ ಸರಸ್ವತಿಯ ಸಿದ್ಧಿ. ಆದರೂ ನಿಮ್ಮ ಹಾಡು ಶಾಸ್ತ್ರೀಯವಲ್ಲ ಎಂದು. ಅವರು ಕೇಳಿದ್ದರಂತೆ, “ಹಾಗಿದ್ದರೆ ಶಾಸ್ತ್ರೀಯಸಂಗೀತಕ್ಕೆ ಶ್ರುತಿ-ಲಯಶುದ್ಧಿ, ಭಾವಸಿದ್ಧಿ ಮತ್ತು ಸಾಹಿತ್ಯಬುದ್ಧಿ ಬೇಡವೇ?’’ ಎಂದು. ಇಂಥವರನ್ನು ವಿಮರ್ಶಿಸುವುದು ದುಸ್ಸಾಹಸ ಮಾತ್ರವಲ್ಲ ಕಲೆಗೇ ಮಾಡುವ ಅಪಚಾರವಾದೀತು.
ಬಾಲಮುರಳಿಯವರು ಸಂಗೀತದಲ್ಲಿ ಎಷ್ಟೇ ದೊಡ್ಡ ಸಾಧನೆ ಮಾಡಿದರೂ ಅದನ್ನು ಸಂಗೀತವಾಗಿಯೇ ಉಳಿಸಿದರು. ಅದನ್ನು ಬೇರಾವುದೇ ಬಗೆಯ ‘ವಾಮಾಚಾರ’ಕ್ಕೂ ಬಳಸಲಿಲ್ಲ. ಈಚಿನ ಕೆಲವರು ಧೂರ್ತರಂತೆ ಸಾಮಾಜಿಕನ್ಯಾಯದ ನೆವದಲ್ಲಿ ಅವರು ತಮ್ಮ ಅಪಾರ ಪ್ರತಿಭೆಯನ್ನು ದುರ್ವಿನಿಯೋಗ ಮಾಡಲಿಲ್ಲ. ಆದರೆ ಅವರ ಪ್ರತಿಭೆಯಲ್ಲಿ ತಿಲಾಂಶವೂ ಇಲ್ಲದವರು, ಪ್ರಾಮಾಣಿಕತೆಯನ್ನೇ ಒಲ್ಲದವರು ಈ ರೀತಿಯಾದ ಅಡ್ಡದಾರಿಗಳನ್ನು ಹಿಡಿಯುತ್ತಿರುವುದನ್ನು ಕಂಡಾಗ ಪ್ರತಿಭಾರಹಿತನಾದ ಧೂರ್ತನೊಬ್ಬ ಯಾವೆಲ್ಲ ರೀತಿಯಲ್ಲಿ ಲೋಕಕಂಟಕನಾಗಬಲ್ಲ, ಮತ್ತು ಮಹಾಪ್ರತಿಭಾಶಾಲಿಯಾದವನು ಎಷ್ಟೆಲ್ಲಾ ಅನಂದವನ್ನು ಲೋಕಕ್ಕೆ ವಿತರಿಸಬಲ್ಲನೆಂಬುದು ತಿಳಿಯುತ್ತದೆ. ಕಲೆಯ ಮೂಲಕ ಆನಂದವನ್ನು ವಿತರಿಸಿಬಿಟ್ಟರೆ ಬೇರೆಲ್ಲ ಸಾಮಾಜಿಕನ್ಯಾಯಗಳೂ ಕಲಾವಿದನ ಕಡೆಯಿಂದ ಸಾಧಿತವಾಗಿಬಿಡುತ್ತವೆಂಬ ಸತ್ಯ ಅವರಿಗೆ ಆಂತರಂಗಿಕವಾಗಿ ತಿಳಿದಿತ್ತು. ಹಾಗಾಗಿಯೇ ಸಂಗೀತದ ಮೂಲಕವಾಗಿ ಅವರು ಬೇರಾವುದನ್ನೂ ಜನರಿಗೆ ಮುಟ್ಟಿಸುವುದಕ್ಕೆ ಇಷ್ಟಪಡಲಿಲ್ಲ; ಇದು ನಷ್ಟವೂ ಆಗಲಿಲ್ಲ.
ಸ್ವರಗಳಿಗೆ ನಿರುಪಾಧಿಕವಾದ ಕೇವಲಾದ್ವೈತಸ್ಥಿತಿಯನ್ನು ಕಲ್ಪಿಸಿದ ಈ ಮಹಾಕಲಾವಿದರಿಗೆ ನಮ್ಮ ದೇಶ ಎಷ್ಟೋ ಮುನ್ನವೇ ಭಾರತರತ್ನದಂಥ ಪ್ರಶಸ್ತಿಯನ್ನು ಕೊಡಬೇಕಿತ್ತು. ಮಿಕ್ಕ ಕೆಲವರು ಸಂಗೀತಗಾರರಿಗೆ ಈ ಪ್ರಶಸ್ತಿ ಬಂದಿರುವುದುಂಟು. ಅವರವರ ಸಾಧನೆಗಳು ಏನೇ ಇರಲಿ, ಅವೆಲ್ಲಕ್ಕೂ ಮಿಗಿಲಾದ ಸಮಗ್ರಸಾಧನೆ ಇವರದ್ದೆಂಬುದನ್ನು ಎಲ್ಲ ಗುಣಗ್ರಾಹಿಗಳೂ ಒಪ್ಪಬೇಕು. ಆ ಪ್ರಶಸ್ತಿಯನ್ನು ಅವರು ಭೌತಿಕವಾಗಿ ಇದ್ದಾಗಲೇ ಕೊಟ್ಟಿದ್ದರೆ ಮರ್ಯಾದೆಯ ಜೊತೆಗೆ ಸಂತೋಷವೂ ಇರುತ್ತಿತ್ತು. ಮುಂದೆಂದೋ ಬರಬಹುದು; ಮರ್ಯಾದೆ ದಕ್ಕೀತು, ಆದರೆ ಆನಂದ ಉಳಿದೀತೆ? ಇದನ್ನು ಅಧಿಕಾರದಲ್ಲಿರುವವರು ಗಮನಿಸಬೇಕು. ಯಾರೇ ಒಪ್ಪಲಿ ಬಿಡಲಿ ಬಾಲಮುರಳೀಕೃಷ್ಣ ಅವರು ನಮ್ಮ ಪಾಲಿಗೆ ‘ಇಸೈ ದೈವಂ’.