ವೃತ್ತಿ ಜೀವನದ ಆರಂಭದಲ್ಲಿ ಶಂಕರನಾರಾಯಣನ್ ಅವರಿಗೆ ಎದುರಾದ ಒಂದು ಸವಾಲೆಂದರೆ ಮಧುರೆ ಮಣಿ ಅವರ ಶೈಲಿಗೆ ಹೊರತಾದ ಸ್ವಂತ ಶೈಲಿಯನ್ನು ರೂಪಿಸಿಕೊಳ್ಳುವುದು. ಮಣಿ ಅವರ ಕಛೇರಿಗಳಲ್ಲಿ ಹಿಂದೆ ಕುಳಿತ ಹುಡುಗ ಚೆನ್ನಾಗಿ ಹಾಡುತ್ತಿದ್ದುದನ್ನು ಶ್ರೋತೃಗಳು ಗಮನಿಸಿದ್ದರು; ವಿಮರ್ಶಕರು ಕೂಡ ಗುರುತಿಸಿದ್ದರು. ಅದರ ಫಲವಾಗಿ ಮಣಿ ಅವರ ಅನಂತರ ಶ್ರೋತೃಗಳು ಇವರ ಕಛೇರಿಗಳಿಗೆ ತುಂಬ ನಿರೀಕ್ಷೆಯಿಂದಲೇ ಬಂದರು. ಆದರೆ ಟಿವಿಎಸ್ ಅವರ ಒಂದೇ ಬಗೆಯ (version) ಸಂಗೀತ ಜನರಿಗೆ ಹೆಚ್ಚು ಕಾಲ ಇಷ್ಟವಾಗಲಿಲ್ಲ; ಇದು ‘ಅನುಕರಣೆ’ ‘ಮಿಮಿಕ್ರಿ’ ಎಂದು ಆಸಕ್ತಿ ಕಳೆದುಕೊಂಡರು. ಆಗ ಶಂಕರನಾರಾಯಣನ್ ವಕೀಲನೋ ಇನ್ನೇನೋ ಆಗಿ ಸಂಗೀತವನ್ನು ಕೈಬಿಡುವ ಅಪಾಯವಿತ್ತು. ಆದರೆ ಹಾಗಾಗಲಿಲ್ಲ. ಆತ್ಮಾವಲೋಕನವನ್ನು ಮಾಡಿಕೊಂಡ ಅವರು ತಾನಾಗಿ ಬೆಳೆಯತೊಡಗಿದರು.
ದಿನಾಂಕ ೧-೧-೧೯೬೦. ದಿನಾಂಕ ೧-೧-೧೯೬೦. ಕರ್ನಾಟಕ ಸಂಗೀತ ಲೋಕಕ್ಕೆ, ಅದರ ಕಲಾಸಕ್ತ ರಸಿಕರಿಗೆ ಅದು ಸಂಭ್ರಮದ ದಿನ. ಕಾರಣವೆಂದರೆ ಅಂದು ಪ್ರತಿಷ್ಠೆಯ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ವರ್ಷದ ಸಂಗೀತ ಕಳಾನಿಧಿ ಪ್ರಶಸ್ತಿ ಪ್ರದಾನ ಸಮಾರಂಭ. ಪ್ರಶಸ್ತಿಯನ್ನು ಪಡೆಯುವವರು ಅಂದಿನ ಮೂವರು ಮಹಾನ್ ಸಂಗೀತಗಾರರಲ್ಲಿ ಒಬ್ಬರಾದ ಮಧುರೆ ಮಣಿ ಅಯ್ಯರ್ (ಅದರಲ್ಲಿ ಇನ್ನಿಬ್ಬರು ಶೆಮ್ಮಂಗುಡಿ ಶ್ರೀನಿವಾಸ ಅಯ್ಯರ್ ಮತ್ತು ಜಿ.ಎನ್. ಬಾಲಸುಬ್ರಹ್ಮಣ್ಯಮ್). ಅಲ್ಲಿ ಸುಮಾರು ೧೫ ವರ್ಷದ ಒಬ್ಬ ಹುಡುಗ ಪ್ರೇಕ್ಷಕರ ಗಮನಸೆಳೆದ. ಏಕೆಂದರೆ ಪ್ರಶಸ್ತಿ ಪುರಸ್ಕೃತರಿಗೆ ದೃಷ್ಟಿದೋಷವಿದ್ದ ಕಾರಣ ತಮ್ಮ ಮಹತ್ತ್ವದ ಭಾಷಣವನ್ನು ಓದುವ ಜವಾಬ್ದಾರಿಯನ್ನು ಅವರು ತಮ್ಮ ಸೋದರಳಿಯನೂ ಶಿಷ್ಯನೂ ಆದ ಈತನಿಗೆ ವಹಿಸಿದ್ದರು. ಈ ಸಂದರ್ಭ ಸಾಂಕೇತಿಕ ಕೂಡ ಆಗಿತ್ತು. ಮತ್ತೆ ಎಂಟೇ ವರ್ಷದಲ್ಲಿ ಮಣಿ ಅಯ್ಯರ್ ಅಸ್ತಂಗತರಾದರು. ಆಗ ಅವರ ದೊಡ್ಡ ಪರಂಪರೆಯನ್ನೂ, ಬಾನಿಯನ್ನೂ ಮುಂದುವರಿಸಿದ್ದು ಇದೇ ಬಾಲಕ; ಮತ್ತು ಅದು ಅಲ್ಲಿಗೇ ಮುಗಿಯಲಿಲ್ಲ. ೪೩ ವರ್ಷಗಳ ಅನಂತರ ಅದೇ ಹುಡುಗ ತಾನೇ ಸಂಗೀತ ಕಳಾನಿಧಿ ಪ್ರಶಸ್ತಿಗೆ ಕೊರಳೊಡ್ಡಿದ. ಅವರೇ ಕೆಲವು ತಿಂಗಳ ಹಿಂದೆ (ಸೆಪ್ಟೆಂಬರ್ ೨, ೨೦೨೨) ಸಂಗೀತಲೋಕಕ್ಕೆ ವಿದಾಯ ಹೇಳಿ ಹೊರಟುಹೋದ ಪ್ರಸಿದ್ಧ ಗಾಯಕ ಟಿ.ವಿ. ಶಂಕರನಾರಾಯಣನ್. ಸಂಗೀತ ಕಳಾನಿಧಿ ದೊರೆಯುವಾಗಲೇ ಟಿವಿಎಸ್ ಎಂದು ಪರಿಚಿತರಾದ ಅವರಿಗೆ ಕೇಂದ್ರಸರ್ಕಾರದ ಪದ್ಮಭೂಷಣ ಪ್ರಶಸ್ತಿಯೂ ಬಂತು. ಮಾರ್ಚ್ ೭, ೧೯೪೫ರಲ್ಲಿ ಜನಿಸಿದ ಶಂಕರನಾರಾಯಣ್ ಅಂದಿನ ಹೊಸ ತಲೆಮಾರಿಗೆ ಸೇರಿದವರೆಂದು ಗುರುತಿಸಲ್ಪಟ್ಟವರು. ಇವರು ಪ್ರಾಯಕ್ಕೆ ಬರುವ ಹೊತ್ತಿಗೆ ಕರ್ನಾಟಕ ಸಂಗೀತದ ಹಳೆಕಾಲದ ಹಲವು ದಿಗ್ಗಜರು ವೇದಿಕೆಯಿಂದ ನಿರ್ಗಮಿಸುತ್ತಿದ್ದರು. ಆಗ ಈ ಸಂಗೀತಲೋಕಕ್ಕೆ ಹೊಸಗಾಳಿಯ ಉಸಿರು ನೀಡಿದವರು ಅವರು. ಅವರದ್ದು ಗಾಯನದ ಪರಿಪೂರ್ಣ ಶೈಲಿ ಎನ್ನುವ ಗೌರವಕ್ಕೆ ಪಾತ್ರವಾಗಿದೆ.
ತಂಜಾವೂರು ಸಮೀಪದ ಮಾಯಿಲಡತುರೈನಲ್ಲಿ ಅವರ ಜನನವಾಯಿತು. ತಂದೆ ವೆಂಬು ಅಯ್ಯರ್, ತಾಯಿ ಗೋಮತಿ ಅಮ್ಮಾಳ್; ಇಬ್ಬರೂ ಸಂಗೀತ ಬಲ್ಲವರು. ತಾಯಿಯ ಕಡೆಯಲ್ಲಿ ಅವರಿಗೆ ಮಹಾನ್ ಸಂಗೀತಗಾರರಿದ್ದರು. ಅಜ್ಜ (ತಾಯಿಯ ತಂದೆ) ಮಧುರೆ ರಾಮಸ್ವಾಮಿ ಅಯ್ಯರ್ ಸಂಗೀತ ವಿದ್ವಾಂಸರಾದರೆ, ಅವರ ಅಣ್ಣ ಮಧುರೆ ಪುಷ್ಪವನಮ್ ಪ್ರಸಿದ್ಧ ಸಂಗೀತಗಾರರು. ಐದು ವರ್ಷ ಆಗುವಾಗಲೇ ಶಂಕರನಾರಾಯಣನ್ ಹಾಡುಗಳ ಸ್ಥಾಯಿಗಳನ್ನು ಗುರುತಿಸುತ್ತಿದ್ದರು. ಅವರಿಗೆ ತಾಯಿಯೇ ಮೊದಲ ಸಂಗೀತ ಗುರು. ಬಾಲ್ಯದಲ್ಲಿ ಅವರು ಸೋದರಮಾವ ಮಣಿ ಅಯ್ಯರ್ ಜೊತೆಗೇ ಇರುತ್ತಿದ್ದರು. ಮಣಿ ಅವರು ಪ್ರತಿದಿನ ಪೂಜೆಯ ಅನಂತರ ಹಾಡುತ್ತಿದ್ದರು; ಸಂಗೀತಾಭ್ಯಾಸ ಮಾಡುತ್ತಿದ್ದರು. ಬಾಲಕ ರಾಮನ್ (ಆಪ್ತರು ಅವರನ್ನು ಆ ರೀತಿಯಲ್ಲಿ ಕರೆಯುತ್ತಿದ್ದರು) ಅದನ್ನು ಗಮನವಿಟ್ಟು ಕೇಳುತ್ತಿದ್ದ. ಒಂಬತ್ತು ವರ್ಷ ಆಗುವಾಗ ಮಣಿ ಅವರು ಇವನಿಗೆ ಸಂಗೀತಪಾಠ ಶುರು ಮಾಡಿದರು. ತಂದೆ ಟಿ.ಎಸ್. ವೆಂಬು ಅಯ್ಯರ್ ಕೂಡ ಮಣಿ ಅವರಿಂದ ಸಂಗೀತ ಕಲಿತಿದ್ದರು. ಬಾಲಕ ರಾಮನ್ ಎಂಟು ವರ್ಷ ಆಗುವಾಗಲೇ ವರ್ಣ ಹಾಡುತ್ತಿದ್ದ. ಮಣಿ ಅಯ್ಯರ್ (ಅಧಿಕೃತವಾಗಿ) ಕಲಿಸಿದ ಮೊದಲ ಕೃತಿ ‘ಗಿರಿರಾಜ ಸುತಾ ತನಯ’. ೧೨ ವರ್ಷ ಆಗುವಷ್ಟರಲ್ಲಿ ಮಾವ ಹಾಡುತ್ತಿದ್ದ ಹೆಚ್ಚಿನ ಕೃತಿಗಳನ್ನು ಈತ ಹಾಡಬಲ್ಲವನಾಗಿದ್ದ. ಕೆಲವು ಕಛೇರಿಗಳಲ್ಲಿ ಮಾವನೊಂದಿಗೆ ಸಹಗಾಯನವನ್ನೂ ಮಾಡುತ್ತಿದ್ದ. ಬಾಲ್ಯದಿಂದಲೇ ಶಂಕರನಾರಾಯಣ್ಗೆ ಉತ್ತಮ ಸ್ವರಜ್ಞಾನವಿತ್ತು; ‘ದೇವದಾಸ್’ನಂತಹ ಸಿನೆಮಾಗಳ ಸ್ವರಗಳನ್ನು ಹಾಡುತ್ತಿದ್ದರು. ಮಾಯಾವರಮ್ ಮುನಿಸಿಪಲ್ ಹೈಸ್ಕೂಲಿನಲ್ಲಿ ಆರನೇ ತರಗತಿ ಓದುವಾಗ ಅವರಿಗೆ ಕರ್ನಾಟಕ ಸಂಗೀತದ ಸ್ಪರ್ಧೆಗಳಲ್ಲಿ ಹಲವು ಬಹುಮಾನಗಳು ಲಭಿಸಿದ್ದವು.
ಮದ್ರಾಸಿಗೆ ಸ್ಥಳಾಂತರ
ಅವರಿಗೆ ಹನ್ನೊಂದು ವರ್ಷ ಆಗುವಾಗ ಕುಟುಂಬ ಮದ್ರಾಸಿಗೆ (ಚೆನ್ನೈ) ಸ್ಥಳಾಂತರಗೊಂಡಿತು. ಮದ್ರಾಸಿನಲ್ಲಿ ಎರಡನೇ ಫಾರ್ಮ್ (ಏಳನೆ ತರಗತಿ)ಗೆ ಸೇರಿದರು. ಮೊದಲಿಗೆ ನಾಲ್ಕು ವರ್ಷ ಲಜ್ ಚರ್ಚ್ ರಸ್ತೆಯಲ್ಲಿ ಅವರ ಮನೆಯಿತ್ತು. ಬಳಿಕ ಮೈಲಾಪುರದ ಕರ್ಪಾಗಂಬಾಳ್ ನಗರದಲ್ಲಿ ಮನೆ ಕಟ್ಟಿಸಿಕೊಂಡು ಕುಟುಂಬ ಅಲ್ಲಿ ನೆಲೆನಿಂತಿತು. ಲಜ್ ಚರ್ಚ್ ರಸ್ತೆಯಲ್ಲಿ ಸುಂದರ ಮರಗಳಿದ್ದವು. ಇಡೀ ಮೈಲಾಪುರ ಶಾಂತವಾಗಿತ್ತು. ಅದೇ ಪಿ.ಎಸ್. ಹೈಸ್ಕೂಲಿನಲ್ಲಿ ಎಸ್ಸೆಸ್ಸೆಲ್ಸಿ ಮುಗಿಯಿತು. ಆ ಕಾಲದಲ್ಲಿ ಮ್ಯೂಸಿಕ್ ಅಕಾಡೆಮಿಯ ಕಛೇರಿಗಳು ಪಿ.ಎಸ್. ಹೈಸ್ಕೂಲ್ ಆವರಣದಲ್ಲಿ ಹಾಕಿದ ಚಪ್ಪರದಲ್ಲಿ ನಡೆಯುತ್ತಿದ್ದವು. ಅದಕ್ಕೆ ಮುನ್ನ ೧೯೫೦ರ ದಶಕದ ಆರಂಭದಲ್ಲಿ ಸುಂದರೇಶ್ವರ ಹಾಲ್ನಲ್ಲಿ ಜರಗುತ್ತಿದ್ದವು. “ನಾನು ಎಸ್ಸೆಸ್ಸೆಲ್ಸಿಯಲ್ಲಿದ್ದಾಗ ಮಾಮಾ ಅವರಿಗೆ ಸಂಗೀತ ಕಳಾನಿಧಿ ದೊರೆಯಿತು. ಅವರ ಕಳಾನಿಧಿ ಭಾಷಣವನ್ನು ನಾನೇ ಓದಿದೆ. ಅದೊಂದು ದೊಡ್ಡ ಗೌರವವಾಗಿತ್ತು. ಆ ಕಾಲದ ರಸಿಕರು ಅದನ್ನು ಈಗಲೂ ನೆನಪಿಸಿಕೊಳ್ಳುತ್ತಾರೆ” ಎಂದು ತಮಗೆ ಕಳಾನಿಧಿ ದೊರೆತಾಗ ನೀಡಿದ ಒಂದು ಸಂದರ್ಶನದಲ್ಲಿ ಅವರು ಹೇಳಿದ್ದರು. ಅವರಿಗೆ ಕಳಾನಿಧಿ ದೊರೆಯುವಾಗ ೮೭ ವರ್ಷದ ತಂದೆ ಮತ್ತು ೮೦ ವರ್ಷ ವಯಸ್ಸಿನ ತಾಯಿ ಇಬ್ಬರೂ ಜೀವಿಸಿದ್ದರು. (ಮಧುರೆ ಮಣಿ ಅಯ್ಯರ್ ೧೯೬೮ರಲ್ಲಿ ಕಾಲವಾಗಿದ್ದರು).
ಮಾಮಾಗೆ ಪ್ರಶಸ್ತಿ ನೀಡಿದ ಸಂದರ್ಭವನ್ನು ನೆನಪಿಸಿಕೊಳ್ಳುತ್ತ, “ಅದು ವಾತಾನುಕೂಲ ಸಭಾಂಗಣಗಳ ಕಾಲವಲ್ಲ. ಅಂದಿನ ವಾತಾವರಣವೇ ಬೇರೆ. ಅಂದಿನ ಸಭಾಂಗಣಗಳ ಮಾಡು ಹುಲ್ಲಿನದ್ದು ಇರುತ್ತಿತ್ತು. ಎದುರಿನ ಸಾಲುಗಳಲ್ಲಿ ಸೋಫಾ ಇದ್ದರೆ ಹಿಂದೆ ಬೆತ್ತದ ಕುರ್ಚಿಗಳು ಇರುತ್ತಿದ್ದವು. ಧ್ವನಿವರ್ಧಕ ಇದ್ದರೂ ಕೂಡ ಕಛೇರಿಗೆ ಸೇರುತ್ತಿದ್ದ ಜನ ಭಾರೀ ಸಂಖ್ಯೆಯಲ್ಲಿದ್ದರು” ಎಂದಿದ್ದಾರೆ ಟಿವಿಎಸ್.
ಕ್ರಿಕೆಟ್ ಅಧ್ಯಾಯ
ಈ ನಡುವೆ ಅವರ ಸಂಗೀತಜೀವನಕ್ಕೆ ಒಂದು ತಡೆಯೋ ಎಂಬಂತೆ ಕ್ರಿಕೆಟ್ನ ಒಂದು ಅಧ್ಯಾಯ ಬಂದುಹೋಯಿತು. ಬಾಲಕನಾಗಿದ್ದಾಗ ಅವರು ಕ್ರಿಕೆಟ್ನ ಒಬ್ಬ ಫ್ಯಾನ್. ಶಾಲೆಗೆ ಹೋಗುವ ಸಮಯ ಬಿಟ್ಟರೆ ಉಳಿದ ಸಮಯವನ್ನು ಕ್ರಿಕೆಟ್ ಮೈದಾನದಲ್ಲಿ ಕಳೆಯುತ್ತಿದ್ದರು. ಸಂಗೀತ ಎರಡನೇ ಸ್ಥಾನಕ್ಕೆ ಸರಿದು ಅಭ್ಯಾಸ ಬಹುತೇಕ ನಿಂತುಹೋಗಿತ್ತು. ಆಗ ಅವರ ಎಸ್ಸೆಸ್ಸೆಲ್ಸಿ ಸಮಯ; ಶಾಲೆಯ ಓದು ಮತ್ತು ಕ್ರಿಕೆಟ್ ಎರಡೇ ಇದ್ದವು. ಪ್ರಸಿದ್ಧ ಕ್ರಿಕೆಟಿಗ ವೆಂಕಟರಾಘವನ್ ಅವರ ಕ್ಲಾಸ್ಮೇಟ್. ಅವರು ಒಟ್ಟಿಗೆ ಟೆಸ್ಟ್ಮ್ಯಾಚ್ ಆಡುತ್ತಿದ್ದರು. ಇವರು ಆಲ್ರೌಂಡರ್; ಒಳ್ಳೆಯ ಗೂಗ್ಲಿಯನ್ನು ಹಾಕುತ್ತಿದ್ದರು. “ನಾನು ಆಟವನ್ನು ಮುಂದುವರಿಸಿದ್ದರೆ ಅದರಲ್ಲೊಂದು ಗ್ರೇಡ್ ಪಡೆಯುತ್ತಿದ್ದೆ; ಚೆನ್ನಾಗಿ ಆಡುತ್ತಿದ್ದೆ. ಐದು ದಿನದ ಮ್ಯಾಚ್ಗಳನ್ನು ಪಟ್ಟುಹಿಡಿದು ಗದ್ದಲ ಮಾಡುತ್ತ ನೋಡುತ್ತಿದ್ದೆವು. ಹೆಚ್ಚಿನ ಪ್ರಾಕ್ಟೀಸ್ ನಮ್ಮ ಶಾಲಾ ಕ್ಯಾಂಪಸ್ನಲ್ಲೇ ನಡೆಯುತ್ತಿತ್ತು. ಪಿ.ಆರ್. ಉಮ್ರಿಗರ್ ನನ್ನ ಆದರ್ಶ ಆಟಗಾರ. ಪಂಕಜ್ ರಾ, ಗುಪ್ತೆ, ವಿನೂ ಮಂಕಡ್ ಅವರೆಲ್ಲ ಆಡುವುದನ್ನು ನಾನು ನೋಡಿದ್ದೇನೆ. ಗ್ಯಾರಿ ಸೋಬರ್ಸ್ (ವೆಸ್ಟ್ ಇಂಡೀಸ್) ಭಾರತ ಪ್ರವಾಸ ಮಾಡಿದಾಗ ಮದ್ರಾಸಿನಲ್ಲಿ ನಡೆದ ಟೆಸ್ಟ್ ಮ್ಯಾಚಿಗೆ ನಾನು ಎಲ್ಲ ದಿನ ಹೋಗಿದ್ದೆ. ಅದು ಕಾರ್ಪೊರೇಶನ್ ಸ್ಟೇಡಿಯಂನಲ್ಲಿ (ಈಗಿನ ನೆಹರು ಸ್ಟೇಡಿಯಂ) ನಡೆದಿತ್ತು. ಮುಂದೆ ಕ್ರಿಕೆಟ್ನಿಂದ ದೂರವಾಗುವ ಸಂದರ್ಭ ಬಂತು” ಎಂದು ಶಂಕರನಾರಾಯಣನ್ ಹೇಳಿದ್ದಾರೆ.
ಏಕೆಂದರೆ ಎಸ್ಸೆಸ್ಸೆಲ್ಸಿಯ ಅನಂತರ ವೃತ್ತಿಜೀವನದ ಬಗ್ಗೆ ನಿರ್ಧರಿಸಬೇಕಿತ್ತು. ಮನಸ್ಸಿನಲ್ಲಿ ಬದಲಾವಣೆ ಉಂಟಾಗಿ ಮಾವನ ಬಳಿ ಸಂಗೀತವನ್ನು ಗಂಭೀರವಾಗಿ ಕಲಿಯತೊಡಗಿದರು; ಅಲ್ಲದೆ ಮಾವ ಮಣಿ ಅಯ್ಯರ್ ‘ಕ್ರಿಕೆಟ್ ಅಥವಾ ಸಂಗೀತ ಎರಡರಲ್ಲಿ ಒಂದನ್ನು ಆರಿಸಿಕೋ’ ಎಂದರು. ಕ್ರಿಕೆಟ್ ಬಿಡುವುದು ಅವರಿಗೇನೂ ಕಷ್ಟವಾಗಲಿಲ್ಲ; ಸಂಗೀತ ಅವರ ಆಸಕ್ತಿಯ ವಿಷಯವೇ ಆಗಿತ್ತು; ಮುಂದಿನ ಎಂಟು ವರ್ಷ ಸಂಗೀತದ ಗಂಭೀರ ಅಧ್ಯಯನ ನಡೆಸಿದರು.
ಬೇರೆ ವೃತ್ತಿಜೀವನವನ್ನು ಆರಿಸಿಕೊಳ್ಳಬಹುದಾದ ಒಂದು ಸಂದರ್ಭ ಕೂಡ ಅವರ ಮುಂದಿತ್ತು. ೧೯೬೪ರಲ್ಲಿ ಬಿ.ಕಾಂ. ಪದವಿ ಗಳಿಸಿದ ಬಳಿಕ ಕಾನೂನು ಓದಿ ೧೯೬೭ರಲ್ಲಿ ಅದರ ಡಿಗ್ರಿ ಪಡೆದರು. ಶಾಲೆಯ ಓದಿನಲ್ಲಿ ಅವರು ಹಿಂದಿರಲಿಲ್ಲ. ಚೆನ್ನಾಗಿ ಓದುತ್ತಿದ್ದರು; ತರಗತಿ ತಪ್ಪಿಸುತ್ತಿರಲಿಲ್ಲ. ಮದ್ರಾಸಿನಲ್ಲಿ ನಡೆದ ಕಛೇರಿಗಳಿಗೆ ಮಾಮನೊಂದಿಗೆ ಹೋಗುತ್ತಿದ್ದರು; ಹೊರಗಿನ ಪ್ರವಾಸಗಳಿಗೆ ಅಷ್ಟಾಗಿ ಹೋಗುತ್ತಿರಲಿಲ್ಲ.
ಆ ಹೊತ್ತಿಗೆ ಸ್ವರ ಒಡೆಯಿತು. ಮೇಲೆ ಹೋಗುತ್ತಿರಲಿಲ್ಲ. ಅದರಲ್ಲಿ ತುಂಬ ಬದಲಾವಣೆಯಾಗಿದ್ದು, ಅದಕ್ಕಾಗಿ ತುಂಬ ಕಸರತ್ತು ನಡೆಸಬೇಕಾಯಿತು. ಹೊಸ ಸ್ವರವನ್ನು ಆರಿಸಿಕೊಂಡು ಅದರಲ್ಲಿ ಹಾಡಲು ತುಂಬ ಕಷ್ಟಪಡಬೇಕಾಯಿತು. ಅದಕ್ಕಾಗಿ ನಿರಂತರ ಅಭ್ಯಾಸ ಮಾಡಿದ ಟಿವಿಎಸ್ “ನನ್ನ ಗಾಯನದಿಂದ ನಾನು ಇಡೀ ಕರ್ಪಾಗಂಬಾಳ್ ನಗರವನ್ನೇ ಎಚ್ಚರಿಸುತ್ತಿದ್ದೆ” ಎಂದು ನಗೆಚಟಾಕಿ ಹಾರಿಸಿದ್ದಾರೆ!
ಕಾನೂನು ಪದವೀಧರ
ನಡುವೆ ಕಾನೂನು ಪದವೀಧರರಾದ ಅವರಿಗೆ ಕೆಲವು ಉದ್ಯೋಗಗಳ ಕರೆ ಕೂಡ ಬಂತು. ವಕೀಲರಾಗಿ ನೋಂದಾಯಿಸಿ ೧೫ ದಿನ ಆ ಕೆಲಸವನ್ನೂ ಮಾಡಿದರು. ಹಿರಿಯ ವಕೀಲರ ಕೆಳಗೆ ಜೂನಿಯರ್ ಆಗಿದ್ದ ಆ ದಿನಗಳಲ್ಲಿ ಸಂಗೀತಕ್ಕೆ ಸಮಯವೇ ಸಿಗಲಿಲ್ಲ. ಒಂದು ದಿನ ಮಾಮಾ ಕರೆದು ‘ನಿನ್ನ ಗಾಯನದ ಕತೆ ಏನಾಯಿತು?’ ಎಂದು ಕೇಳಿದರು. ಆಗ ಅವರೇ ನನ್ನ ವೃತ್ತಿಜೀವನವನ್ನು ನಿರ್ಧರಿಸುವ ಸ್ಥಾನದಲ್ಲಿದ್ದರು; ‘ಸಂಗೀತವನ್ನೇ ಹಿಡಿದುಕೋ’ ಎಂದಾಗ ಹಾಗೆಯೇ ಮಾಡಿದರು. ಆ ಕುರಿತು ಹೇಳುತ್ತ “ಇಂದಿನ ಯುವಕರಿಗೆ ತಾವೇನು ಮಾಡಬೇಕೆಂದು ಸರಿಯಾಗಿ ಗೊತ್ತಿರುತ್ತದೆ. ಅವರ ಗಮನ ಸದಾ ಆ ಕಡೆಗಿರುತ್ತದೆ. ಆದರೆ ಆ ಕಾಲದಲ್ಲಿ ನಮಗೆ ಏನು ಮಾಡಬೇಕೆಂದು ತಿಳಿಯುತ್ತಿರಲಿಲ್ಲ. ನಾನು ನನ್ನ ಬಗ್ಗೆ ನಿರ್ಧರಿಸುವುದನ್ನು ಮಾಮಾಗೆ ಒಪ್ಪಿಸಿದ್ದೆ. ಕಾನೂನು ಓದಬೇಕೆಂದು ಹೇಳಿದವರು ಅವರೇ. ಏಕೆಂದರೆ ಅವರಿಗೆ ಆ ಕಾಲದ ದೊಡ್ಡ ವಕೀಲರುಗಳ ಬಗ್ಗೆ ತುಂಬ ಮೆಚ್ಚುಗೆ ಇತ್ತು. ಕಾನೂನು ಓದಿದರೆ ನಮ್ಮ ದೃಷ್ಟಿಕೋನ ವಿಸ್ತಾರವಾಗುತ್ತದೆ ಎಂದವರು ನಂಬಿದ್ದರು. ಲಾ ಚೆನ್ನಾಗಿ ಓದಿದ ಶಂಕರನಾರಾಯಣನ್ ಅದರಲ್ಲಿ ಎರಡನೇ ರ್ಯಾಂಕನ್ನೂ ಗಳಿಸಿದ್ದರು. ಆದರೆ ಸಂಗೀತ ಮನೆತನದಲ್ಲೇ ಇತ್ತು. ಶಿಕ್ಷಣಕ್ಕಾಗಿ ಕಾನೂನು ಪದವಿ. ಬೇಕಾದ್ದನ್ನು ಆರಿಸಿಕೊಳ್ಳಬಹುದಿತ್ತು. ಸಂಗೀತವನ್ನು ಆರಿಸಿಕೊಳ್ಳುವಾಗ ಇದರಿಂದ ಹಣ ಬರುತ್ತದೆಯೇ, ಇದರಲ್ಲಿ ನಾನು ಯಶಸ್ವಿಯಾಗುವೆನೇ ಎಂದು ನಾನು ಯೋಚಿಸಿದ್ದಿಲ್ಲ. ಈಗ ಕೂಡ ನನ್ನನ್ನು ನಾನು ‘ವೃತ್ತಿಪರ’ ಎಂದು ಭಾವಿಸುವುದಿಲ್ಲ. ದೇವರ ಆಶೀರ್ವಾದದಂತೆ ಘಟನೆಗಳು ಆಗುತ್ತ ಹೋಗುತ್ತವೆ. ಸಂಗೀತ ಎಂದಿಗೂ ನನ್ನ ಜೀವನೋಪಾಯವೆಂದು ನಾನು ತಿಳಿದಿಲ್ಲ” ಇದು ಅವರ ಅರ್ಪಣಾ ಮನೋಭಾವ. ಕುತೂಹಲದ ಸಂಗತಿಯೆಂದರೆ, ಆಗ ಜನ ಸಂಗೀತಗಾರರಿಗೆ ಹೆಣ್ಣು ಕೊಡುತ್ತಿರಲಿಲ್ಲ. ಅದಕ್ಕಾಗಿ ಇವರು ೩೫ ವರ್ಷ ಆಗುವವರೆಗೆ ಮದುವೆಯಾಗುವ ಪ್ರಯತ್ನವನ್ನೇ ಮಾಡಲಿಲ್ಲವಂತೆ!
ಗುರೂಪದೇಶ
ಮಾವ ಮಣಿ ಅಯ್ಯರ್ ಅವರ ಉಪದೇಶ ಕೂಡ ಅದೇ ರೀತಿ ಇತ್ತು: “ಸಂಗೀತದಲ್ಲಿ ಮುಂದುವರಿ; ಚೆನ್ನಾಗಿ ಹಾಡು. ನೀನು ಚೆನ್ನಾಗಿ ಹಾಡಿದರೆ ಕಾರ್ಯಕ್ರಮಗಳು ನಿನ್ನನ್ನು ಅರಸಿಕೊಂಡು ಬರುತ್ತವೆ. ನೀನು ಅದರ ಹಿಂದೆ ಹೋಗಬೇಕಾಗಿಲ್ಲ. ಬೇರೆಯವರಿಗೆ ನಿನಗಿಂತ ಹೆಚ್ಚು ಕಛೇರಿಗಳು ಸಿಕ್ಕಿದವೆಂದು ಬೇಸರಿಸಬೇಡ. ನಿನ್ನ ಗಮನ ಕೆಲಸದ ಮೇಲಿರಲಿ. ಉಳಿದದ್ದು ತಾನಾಗಿಯೇ ಆಗುತ್ತದೆ. ಅದೇ ರೀತಿ ನಿನ್ನ ಕಛೇರಿಗೆ ಕೇವಲ ಹತ್ತು ಜನ ಬಂದರೆಂದು ಬೇಸರಿಸಬೇಡ. ನೀನು ಚೆನ್ನಾಗಿ ಹಾಡಿದರೆ ಈ ಹತ್ತು ನೂರಾಗುತ್ತದೆ; ಮತ್ತೆ ಕೂಡ ಬೆಳೆಯುತ್ತದೆ; ಮತ್ತು ಸಂಘಟಕರಿಗೆ ತೊಂದರೆ ಮಾಡಬೇಡ” ಎಂದವರು ಕಿವಿಮಾತು ಹೇಳಿದ್ದರು. ಟಿವಿಎಸ್ ಅವರ ಜೀವನವು ಹಾಗೆಯೇ ಸಾಗಿತೆಂದರೆ ತಪ್ಪಲ್ಲ.
ಮಣಿ ಅಯ್ಯರ್ ಅವರ ಮನೆಯ ದಕ್ಷಿಣಭಾಗದಲ್ಲಿದ್ದ ಶೆಡ್ನಲ್ಲಿ ಕುಳಿತು ರಾಮನ್ ಅಭ್ಯಾಸ ನಡೆಸುತ್ತಿದ್ದ. ಮಣಿ ಅವರು ಮನೆಯೊಳಗಿನ ತಮ್ಮ ಕೊಠಡಿಯಿಂದ ಇದನ್ನು ಕೇಳುತ್ತಿದ್ದರು. ಅನಂತರ ಇವರನ್ನು ಕರೆದು ರಾಗ ಮತ್ತು ಕೃತಿಯನ್ನು ತಾವು ಹಾಡುತ್ತಿದ್ದರು. ಶಿಷ್ಯ ಅದರಂತೆ ಹಾಡಬೇಕು. ಚೆನ್ನಾಗಿ ಹಾಡುವ ಸೂಕ್ಷ್ಮಗಳನ್ನು ಆಗ ಕಲಿಸಲಾಗುತ್ತದೆ. ಜೊತೆಗೆ ಕಛೇರಿಗಳಲ್ಲಿ ಗುರುಗಳೊಂದಿಗೆ ಹಾಡುವುದೂ ಇತ್ತು.
ಕೆಲವು ಗುರುಗಳು ತಮ್ಮ ಶಿಷ್ಯರು ಬೇರೆಯವರ ಸಂಗೀತ ಕೇಳುವುದನ್ನು ಇಷ್ಟಪಡುವುದಿಲ್ಲ; ಆ ಬಗ್ಗೆ ಕಟ್ಟಪ್ಪಣೆ ವಿಧಿಸುವವರು ಕೂಡ ಇದ್ದಾರೆ. ಆದರೆ ಮಧುರೆ ಮಣಿ ಅಯ್ಯರ್ ಅವರು ಹಾಗಲ್ಲ; “ಹಿರಿಯ ಸಂಗೀತಗಾರರ ಕಛೇರಿ ಕೇಳಬೇಕು; ಏಕೆಂದರೆ ಅದು ಹತ್ತು ದಿನ ತಾಲೀಮು (ಪ್ರಾಕ್ಟೀಸ್) ಮಾಡಿದ್ದಕ್ಕೆ ಸಮ” ಎಂದವರು ಸೂಚಿಸುತ್ತಿದ್ದರು. ಮಹಾನ್ ಸಂಗೀತಗಾರರು ಮಣಿ ಅವರ ಮನೆಗೆ ಬರುತ್ತಿದ್ದರು. ಅದರಿಂದ ಕೂಡ ಟಿವಿಎಸ್ಗೆ ಸಂಗೀತ ಕಲಿಯಲು ಅವಕಾಶವಾಯಿತು. ವಿದ್ಯಾರ್ಥಿಯಾಗಿ ಅವರು ಬೆಳಗ್ಗೆ ಸುಮಾರು ನಾಲ್ಕು ತಾಸು ಮತ್ತು ಸಂಜೆ ಸುಮಾರು ಮೂರು ತಾಸು ಸಂಗೀತದ ಅಭ್ಯಾಸ ನಡೆಸುತ್ತಿದ್ದರು. “ಕಠಿಣ ಪರಿಶ್ರಮ ಅಗತ್ಯ. ಅಂದಿನ ಅಂತಹ ತರಬೇತಿಯೇ ನನ್ನನ್ನು ಇಂದು ಈ ಸ್ಥಿತಿಯಲ್ಲಿ ನಿಲ್ಲಿಸಿದೆ. ಈ ದಿನಗಳಲ್ಲಿ (೨೦೦೩) ನನಗೆ ಬಹುತೇಕ ಪ್ರತಿದಿನ ಕಛೇರಿ ಇರುತ್ತದೆ; ಅಂದರೆ ಇದೇ ನನ್ನ ಪ್ರಾಕ್ಟೀಸ್ ಆಗಿದೆ” ಎಂದವರು ಹೇಳಿದ್ದರು.
ಪ್ರತಿದಿನ ಹಾಡಿದಾಗ ಸ್ವರ ಹಾಳಾಗುವುದಿಲ್ಲವೇ ಎಂದು ಕೇಳಿದಾಗ, “ಸ್ವರವನ್ನು ರಕ್ಷಿಸಿಕೊಳ್ಳಲು ಒಂದು ಉಪಾಯವಿದೆ; ಹೆಚ್ಚು ಶ್ರಮವಿಲ್ಲದೆ ಹಾಡಬಹುದು. ಅದು ಅನುಭವದಿಂದ ಬರುವಂಥದು. ಎಲ್ಲಕ್ಕಿಂತ ಮಿಗಿಲಾಗಿ ದೇವರ ಅನುಗ್ರಹ ಬೇಕು. ನನ್ನ ಇಂದಿನ ಸ್ಥಿತಿಗೆ ದೇವರ ಅನುಗ್ರಹವೇ ಕಾರಣ. ಗೋವಿಂದನೇ ನನ್ನ ಇಷ್ಟದೇವತೆ; ಅವನು ನನ್ನ ಬಗ್ಗೆ ಕರುಣಾಳು ಆಗಿದ್ದಾನೆ. ಅದಲ್ಲದೆ ಹಿರಿಯರ ಆಶೀರ್ವಾದ ಮತ್ತು ಪ್ರೀತಿಯೂ ಬೇಕು. ಶೆಮ್ಮಂಗುಡಿ ಅವರಿಂದ ಕೆ.ಎ.ಎನ್. ವರೆಗೆ ಎಲ್ಲರೂ ನನ್ನ ಮಾಮ ಮತ್ತು ತಂದೆಗೆ ನಿಕಟವಾಗಿದ್ದರು. ಅದರಿಂದ ಅವರ ಆಶೀರ್ವಾದ-ಪ್ರೀತಿ ಸಿಕ್ಕಿತು. ಪಕ್ಕವಾದ್ಯದವರು ಮತ್ತು ಸಮಕಾಲೀನರಿಗೆ ಕೂಡ ನಾನೆಂದರೆ ಇಷ್ಟ. ಇನ್ನು ಯುವ ಸಂಗೀತಗಾರರು ನನ್ನನ್ನು ಅವರ ಆದರ್ಶವೆಂದು ತಿಳಿಯುತ್ತಾರೆ. ನಾನು ಬಂದುದನ್ನು ಬಂದಂತೆ ಸ್ವೀಕರಿಸುವ ಮತ್ತು ಸಂತೋಷದಲ್ಲಿರುವ ಒಬ್ಬ ಒಳ್ಳೆಯ ಮನುಷ್ಯ. ಅನುಭವ ನನ್ನನ್ನು ಈ ರೀತಿ ರೂಪಿಸಿದೆ” ಎಂದವರು ಮುಕ್ತ ಮನಸ್ಸಿನಿಂದ ಮಾತನಾಡಿದ್ದಾರೆ.
ಮೊದಲ ಕಛೇರಿ
ಮಾಮಾ ಜೊತೆ ಸಹಗಾಯನದಲ್ಲಿ ಪಳಗಿದ್ದ ಶಂಕರನಾರಾಯಣನ್ರನ್ನು ಸೋಲೋ ಕಛೇರಿಗೆ ಏರಿಸುವ ಕಾರ್ಯ ಮಣಿ ಅವರ ಕೆಲವು ಸಂಗೀತಗಾರ ಸ್ನೇಹಿತರಿಂದಲೇ ನಡೆಯಿತು. ಆ ಮಟ್ಟಿಗೆ ಅವರು ಅದೃಷ್ಟಶಾಲಿಗಳು. ಮಾವನೊಂದಿಗೆ ಸಹಗಾಯನ ಮಾಡುವಾಗ ಹಲವು ಹಿರಿಯ ವಯೊಲಿನ್ ವಾದಕರು ಮತ್ತು ಹಿರಿಯ ಮೃದಂಗವಾದಕರ ಪರಿಚಯವಾಗಿತ್ತು. ಆ ಸಲಹೆ ವಯೊಲಿನ್ ದಿಗ್ಗಜ ಟಿ.ಎನ್. ಕೃಷ್ಣನ್ ಅವರಿಂದಲೇ ಬಂತು. ಮಣಿ ಅವರ ಮುಂದೆ ಹೇಳಿದಾಗ ಅದಕ್ಕೊಪ್ಪಿದರು. ಅದರಂತೆ ಫೆಬ್ರುವರಿ ೧, ೧೯೬೮ರಂದು ಟಿವಿಎಸ್ ಅವರ ಮೊದಲ ಕಛೇರಿ ಜರುಗಿತು. ಪಕ್ಕವಾದ್ಯದಲ್ಲಿ ಟಿ.ಎನ್. ಕೃಷ್ಣನ್, ವೆಲ್ಲೂರು ರಾಮಭದ್ರನ್ (ಮೃದಂಗ) ಮತ್ತು ಅಲಂಗುಡಿ ರಾಮಚಂದ್ರನ್ (ಘಟ) ಭಾಗವಹಿಸಿ ಪ್ರೋತ್ಸಾಹಿಸಿದ್ದರು. ಅದು ಅವರ ಮನೆಯಲ್ಲೇ ನಡೆದಿತ್ತು. ಮರುದಿನ ಮೈಲಾಪುರದ ಆಂಜನೇಯಸ್ವಾಮಿ ದೇವಾಲಯದಲ್ಲಿ ನಡೆದ ಕಛೇರಿಯಲ್ಲೂ ಕೃಷ್ಣನ್ ಸಾಥ್ ನೀಡಿದರು; ಆರಂಭದ ವರ್ಷಗಳಲ್ಲಿ ಇವರ ಹೆಚ್ಚಿನ ಕಛೇರಿಗೆ ಅವರದೇ ವಯೊಲಿನ್. ಅದೇವೇಳೆ ಇನ್ನೋರ್ವ ದಿಗ್ಗಜ ಲಾಲ್ಗುಡಿ ಜಯರಾಮನ್ ಮತ್ತು ಪಾಲ್ಘಾಟ್ ರಘು (ವಯೊಲಿನ್, ಮೃದಂಗ) ಕೂಡ ಆರಂಭದ ವರ್ಷಗಳಲ್ಲಿ ಸಹಕರಿಸಿದ್ದರು. ಇದರಿಂದ ಅವರಿಗೆ ಬಲ ಬಂತು. ಅವರೆಲ್ಲ ಮಧುರೆ ಮಣಿ ಕಛೇರಿಗಳಿಗೆ ನುಡಿಸಿದ್ದ ಕಾರಣ ಬಾಲ್ಯದಿಂದಲೇ ಇವರನ್ನು ಕಂಡಿದ್ದರು; ಪ್ರೀತಿ ತೋರಿಸುತ್ತ ಬಂದಿದ್ದರು. ಇದರಿಂದ ವೃತ್ತಿಜೀವನಕ್ಕೆ ಗಟ್ಟಿಯಾದ ಆರಂಭ ದೊರೆಯಿತು.
ಆಗಾಗ ಆರೋಗ್ಯ ಕೈಕೊಡುತ್ತಿದ್ದ ಮಧುರೆ ಮಣಿ ಅವರು ತಮ್ಮ ೫೬ರ ಹರೆಯದಲ್ಲಿ ಕಾಲವಾದರು. ಇದು ವೇದಿಕೆ ಏರುತ್ತಲೇ ಶಿಷ್ಯನಿಗೆ ಎದುರಾದ ಆಘಾತ. ಹೊಸ ಹೆಗಲಿನ ಮೇಲೆ ಗುರುವಿನ ಪರಂಪರೆಯನ್ನು ಮುಂದುವರಿಸುವ ದೊಡ್ಡ ಹೊರೆ. ಇವರ ಪಾಲಿಗೆ ಅವರು ಗುರು, ಮಾರ್ಗದರ್ಶಕ ಮತ್ತು ಮಾನವರೂಪದ ದೇವರೇ ಆಗಿದ್ದರು. ಮಾಮ ಕಾಲವಾದ ಬಳಿಕ ತಂದೆ ಗಾಯನದ ಕೆಲವು ರಹಸ್ಯಗಳನ್ನು ಹೇಳಿಕೊಟ್ಟರು. ತಂದೆ-ಮಗ ಒಟ್ಟಾಗಿ ಗಂಟೆಗಟ್ಟಲೆ ಹಾಡುತ್ತಿದ್ದರು. ಕಛೇರಿಗೆ ಹೇಗೆ ಪ್ಲಾನ್ ಮಾಡಬೇಕು ಎಂದು ತಂದೆ ಹೇಳಿಕೊಟ್ಟರು; ಒರಟಾಗಿದ್ದ ಕಲ್ಲನ್ನು ಕಡೆದು ರೂಪಿಸಿದರು. ತಾವು ವೇದಿಕೆ ಏರುವುದನ್ನು ಬಿಟ್ಟು ಮಗನ ಯಶಸ್ಸಿನಲ್ಲಿ ಸಾರ್ಥಕತೆಯನ್ನು ಕಂಡರು.
ಎಂ.ಎಸ್. ಗೋಪಾಲಕೃಷ್ಣನ್, ಟಿ.ಕೆ. ಮೂರ್ತಿ, ಮುರುಗಭೂಪತಿ, ಉಮಯಾಳಪುರಂ ಶಿವರಾಮನ್ ಅವರೆಲ್ಲ ಯುವಗಾಯಕ ಟಿವಿಎಸ್ಗೆ ಪಕ್ಕವಾದ್ಯ ನೀಡಿದರು.
ವೃತ್ತಿಜೀವನದ ಆರಂಭದಲ್ಲಿ ಶಂಕರನಾರಾಯಣ್ ಅವರಿಗೆ ಎದುರಾದ ಒಂದು ಸವಾಲೆಂದರೆ ಮಧುರೆ ಮಣಿ ಅವರ ಶೈಲಿಗೆ ಹೊರತಾದ ಸ್ವಂತ ಶೈಲಿಯನ್ನು ರೂಪಿಸಿಕೊಳ್ಳುವುದು. ಮಣಿ ಅವರ ಕಛೇರಿಗಳಲ್ಲಿ ಹಿಂದೆ ಕುಳಿತ ಹುಡುಗ ಚೆನ್ನಾಗಿ ಹಾಡುತ್ತಿದ್ದುದನ್ನು ಶ್ರೋತೃಗಳು ಗಮನಿಸಿದ್ದರು; ವಿಮರ್ಶಕರು ಕೂಡ ಗುರುತಿಸಿದ್ದರು. ಅದರ ಫಲವಾಗಿ ಮಣಿ ಅವರ ಅನಂತರ ಶ್ರೋತೃಗಳು ಇವರ ಕಛೇರಿಗಳಿಗೆ ತುಂಬ ನಿರೀಕ್ಷೆಯಿಂದಲೇ ಬಂದರು. ಆದರೆ ಟಿವಿಎಸ್ ಅವರ ಒಂದೇ ಬಗೆಯ(version) ಸಂಗೀತ ಜನರಿಗೆ ಹೆಚ್ಚು ಕಾಲ ಇಷ್ಟವಾಗಲಿಲ್ಲ; ಇದು ‘ಅನುಕರಣೆ’ ‘ಮಿಮಿಕ್ರಿ’ ಎಂದು ಆಸಕ್ತಿ ಕಳೆದುಕೊಂಡರು. ಆಗ ಶಂಕರನಾರಾಯಣನ್ ವಕೀಲನೋ ಇನ್ನೇನೋ ಆಗಿ ಸಂಗೀತವನ್ನು ಕೈಬಿಡುವ ಅಪಾಯವಿತ್ತು. ಆದರೆ ಹಾಗಾಗಲಿಲ್ಲ. ಆತ್ಮಾವಲೋಕನವನ್ನು ಮಾಡಿಕೊಂಡ ಅವರು ತಾನಾಗಿ ಬೆಳೆಯತೊಡಗಿದರು.
ಸ್ವಂತ ಶೈಲಿಯತ್ತ
ಆಗ ಅವರ ಎರಡನೇ ಬಗೆಯ ಸಂಗೀತ ಬಂದದ್ದು ಮಾತ್ರವಲ್ಲ, ತುಂಬ ಯಶಸ್ವಿಯೂ ಆಯಿತು; ಜನ ಅದನ್ನು ಇಷ್ಟಪಟ್ಟರು. ರಸಿಕರು ಮತ್ತೆ ಈ ಕಡೆಗೆ ಧಾವಿಸಿ ಬಂದರು; ಅದಕ್ಕೇನು ಕಾರಣ? ಅದು ತುಂಬ ಸರಳವೇ ಆಗಿತ್ತು. ಗುರುಗಳ ಬಾನಿಯನ್ನು ಉಳಿಸಿಕೊಂಡ ಶಂಕರನಾರಾಯಣನ್ ಅವರಿಗೆ ಇಷ್ಟವಾದ ಕೆಲವು ಕೃತಿಗಳನ್ನು ಹಾಡುತ್ತಿದ್ದರು. ಜೊತೆಗೆ ತನ್ನ ಸಂಗೀತದ ವ್ಯಕ್ತಿತ್ವವನ್ನು ಪ್ರಕಟಪಡಿಸಿದರು. ಮಧುರೆ ಮಣಿ ಅವರು ಹಾಡದಿದ್ದ ಕೃತಿ ಮತ್ತು ರಾಗಗಳನ್ನು ಕೂಡ ಹಾಡಿದರು. ಆ ಮಟ್ಟಿಗೆ ಇವರ ಸಂಗ್ರಹ ತುಂಬ ದೊಡ್ಡದಿತ್ತು; ಅದು ಬರಿದಾಗದ ಬತ್ತಳಿಕೆ.
ಆಲಾಪನೆ ಹಾಡುವಾಗ ಗುರುಗಳು ಬಳಸಿದ ಸಿಲೇಬಲ್ ಹಾಡಿದಾಗ ಮಾತ್ರ ಜನರಿಗೆ ಇಷ್ಟವಾಗುತ್ತಿತ್ತು. ಇವರು ಅದನ್ನು ಕೈಬಿಟ್ಟು ಸಾಮಾನ್ಯವಾದ ಸಿಲೇಬಲ್ ಬಳಸಿದರು. ಇವರ ಚಿಂತನೆಗೆ ಸ್ಫೂರ್ತಿ ಮಣಿ ಅಯ್ಯರ್ ಅವರದೇ; ಅದು ಫಲ ನೀಡಿತು. ಮಣಿ ಅಯ್ಯರ್ ಅವರ ಗಾಯನದಲ್ಲಿ ಜನಪ್ರಿಯವಾದ ಸರ್ವಲಘು ಇವರ ಗಾಯನದಲ್ಲಿ ಕೂಡ ಸ್ಥಾನ ಪಡೆಯಿತಾದರೂ ಮಿಮಿಕ್ರಿ ಆಗಲಿಲ್ಲ. ಮುಂದೆ ಕ್ರಮೇಣ ಇವರ ರಾಗಮಾಲಿಕಾ ಮತ್ತು ವಿರುತ್ತಗಳು ತುಂಬ ಜನಪ್ರಿಯವಾದವು. ಇವರು ಯಾವ ಸಾಲು(ಸಾಹಿತ್ಯ) ಯಾವ ರಾಗವನ್ನು ಆರಿಸಿಕೊಳ್ಳಬಹುದೆಂದು ಜನ ಕಾಯುತ್ತಿದ್ದರು. ರಾಗಂ ತಾನಂ ಪಲ್ಲವಿ (ಆರ್ಟಿಪಿ) ಸ್ವಲ್ಪವೇ ಸಮಯ ಇದ್ದರೂ ಕೂಡ ಅದರ ವಿವರಗಳು ಆಕರ್ಷಕವಾಗಿದ್ದವು. ಮಣಿ ಅಯ್ಯರ್ ಅವರ ಸ್ವರ ವಿನ್ಯಾಸ(Pattern)ಗಳನ್ನು ಕೂಡ ಶಂಕರನಾರಾಯಣನ್ ಚೆನ್ನಾಗಿ ಪ್ರಸ್ತುತಪಡಿಸಿದರು. ಕಛೇರಿಯ ಕೊನೆಭಾಗದ ಪುಟ್ಟರಚನೆ (ತುಕಡಾ)ಗಳ ಗಾಯನದಲ್ಲೂ ಟಿವಿಎಸ್ ಮಣಿ ಅವರಂತೆಯೇ ಉತ್ತಮ ರಂಜನೆ ನೀಡಿದರು; ಅವರ ಮುಂದೆ ಕೋರಿಕೆಯ ಚೀಟಿಗಳ ರಾಶಿ ಬೀಳುತ್ತಿತ್ತು; ಮುಗುಳ್ನಗುತ್ತಾ ಅದರಲ್ಲಿ ಸಾಧ್ಯವಾದಷ್ಟು ಹಾಡುತ್ತಿದ್ದರು. ಇವರ ಗಾಯನವು ‘ತೆರೆದ ಬಾಯಿಯ ಪೂರ್ಣಕಂಠದ ಗಾಯನ’ ಎನ್ನುವ ಹೆಸರನ್ನು ಪಡೆದುಕೊಂಡಿತು; ಭಾವನೆಗಳ ಪಾರಮ್ಯವಂತೂ ಇದ್ದೇ ಇತ್ತು.
ಶ್ರೇಷ್ಠತೆಯ ತುಡಿತ
“ದೊಡ್ಡ ಸಭಾ ಇರಲಿ, ಮದುವೆ ಸಂದರ್ಭದ ಕಛೇರಿ ಇರಲಿ; ನಾನು ನನ್ನ ಶ್ರೇಷ್ಠವಾದುದನ್ನು ಕೊಡದೆ ಇರುವುದಿಲ್ಲ. ಅದಕ್ಕೆ ಮೊದಲನೆಯದಾಗಿ ಸ್ವರ ಬೇಕು. ಸ್ವರ ಚೆನ್ನಾಗಿ ಇರಬೇಕಿದ್ದರೆ ದೈಹಿಕ ಸ್ಥಿತಿಯನ್ನು ಕಾಪಾಡಿಕೊಳ್ಳಬೇಕು. ಅದಕ್ಕೆ ಶಿಸ್ತಿನಿಂದ ಇರಬೇಕು. ಭಾವನೆಗಳ ವಿಷಯದಲ್ಲಿ ನಾನು ಯಾವಾಗಲೂ ಪಾಸಿಟಿವ್ ಆಗಿರುತ್ತೇನೆ (Feel good). ನಾನು ಸಂತೋಷದಲ್ಲಿದ್ದರೆ ಅದನ್ನು ಇತರರಿಗೆ ಕೊಡಬಹುದು. ಹಾಡುವಾಗ ನಾನು ಸಂತೋಷದಿಂದ ಹಾಡುತ್ತೇನೆ. ಆ ರೀತಿಯಲ್ಲಿ ಸಂತೋಷವನ್ನು ಹಂಚುತ್ತೇನೆ. ಅದನ್ನು ಶ್ರೋತೃಗಳು ಇಷ್ಟಪಡುತ್ತಾರೆ. ನನ್ನ ಜೊತೆ ಹಾಡುತ್ತಾರೆ. ಹಾಗೆ ನಮ್ಮ ನಡುವೆ ಸಂಬಂಧ ಏರ್ಪಡುತ್ತದೆ. ಮಾಮಾ ಅವರ ಗಾಯನ ಪರಂಪರೆಯನ್ನು ಅನುಸರಿಸುತ್ತೇನೆ; ಅದು ಜನರಿಗೆ ಇಷ್ಟ. ಜೊತೆಗೆ ನನ್ನದೇ ಶೈಲಿಯನ್ನು ಮಾಡಿಕೊಂಡಿದ್ದೇನೆ. ನನ್ನ ಸ್ವರದ ಪೂರ್ತಿ ಸಾಧ್ಯತೆಯನ್ನು ಬಳಸಿಕೊಳ್ಳುತ್ತೇನೆ. ಸೃಷ್ಟಿಶೀಲತೆ ಮತ್ತು opening singing ನನ್ನ ಸಂಗೀತದ ಇನ್ನೆರಡು ಅಂಶಗಳು. ನನ್ನ ಸಂಗೀತದಿಂದ ನಾನು ಆಕಾಶವನ್ನೇ ತುಂಬಬಯಸುತ್ತೇನೆ. ಜೀವನದಲ್ಲಿ ಸರಳವಾಗಿ ಇರುವುದು ಮತ್ತು ಕಛೇರಿಗೆ ತೊಡಗಿದಾಗ ಶ್ರೇಷ್ಠವಾದುದನ್ನು ಕೊಡುವುದು ನನ್ನ ಕ್ರಮ” ಎಂದು ಈ ಹಿರಿಯ ಸಂಗೀತಗಾರರು ಮುಕ್ತ ಮಾತುಗಳನ್ನಾಡಿದ್ದಾರೆ.
ಮಧುರೆ ಮಣಿ ಅವರ ಒರಿಜಿನಲ್ ಮತ್ತು ಆಕರ್ಷಕ ಶೈಲಿಗೆ ಶಂಕರನಾರಾಯಣನ್ ತಮ್ಮದನ್ನು ಅಳವಡಿಸಿದರು. ಅತ್ಯಂತ ಶ್ರುತಿಬದ್ಧತೆಯು ಇಬ್ಬರಲ್ಲೂ ಸಮಾನವಾಗಿತ್ತು. ಉತ್ಸಾಹದಿಂದ ಹಾಡುತ್ತಿದ್ದ ಶಿಷ್ಯ ಉತ್ತಮ ಕಾಲ ಪ್ರಮಾಣ ಮತ್ತು ಅದ್ಭುತ ಸ್ವರ ಪ್ರಸ್ತಾರಗಳನ್ನು ಹೊಂದಿದ್ದರು. ಮಣಿ ಅಯ್ಯರ್ ಒಂದು ರಾಗವನ್ನು ಒಡೆದು ಉತ್ತಮ ಸಂಗತಿಗಳೊಂದಿಗೆ ಪಂಚ್ ಮೂಲಕ ಕೊಡುತ್ತಿದ್ದರು. ಅದನ್ನು ನಕಲು ಮಾಡಿದ್ದರೆ ಇವರು ವಿಫಲರಾಗುತ್ತಿದ್ದರು. ಒಳ್ಳೆಯ ಸ್ವರವಿದ್ದ ಕಾರಣ ಇವರು ಮಾಮಾನ ಬಂಧ (Sturcture)ವನ್ನು ತೆಗೆದುಕೊಂಡು ಅದಕ್ಕೆ ತನ್ನದೇ ನುಡಿಗಟ್ಟನ್ನು ಸೇರಿಸಿದರು. ಕೃತಿ ವಿನಿಕೆ, ಸ್ವರ ಪ್ರಸ್ತಾರ ಮತ್ತು ವೇಗದ ಆಲಾಪನೆಯಲ್ಲಿ ಮಾವನ ಶೈಲಿಯ ಜೊತೆ ಹೊಂದಾಣಿಕೆ ಮಾಡಿಕೊಂಡರು. ಪುರುಷರ ಮಾನದಂಡದಿಂದ ನೋಡಿದರೆ ಟಿವಿಎಸ್ ಅವರ ಸ್ವರ ತಾರಸ್ಥಾಯಿಗೆ ಸೇರುವಂಥದು.
ಸೌಮ್ಯಸ್ವಭಾವದ ಸುಸಂಸ್ಕೃತ ನಡವಳಿಕೆಯ ಶಂಕರನಾರಾಯಣನ್ ಯಾರನ್ನೂ ನೋಯಿಸರು. ಪತ್ರಿಕಾ ವಿಮರ್ಶೆಯಲ್ಲಿ ಟೀಕೆ ಬಂದರೆ ಅವರೇನೂ ವಿಚಲಿತರಾಗುತ್ತಿರಲಿಲ್ಲ; ಸಕಾರಾತ್ಮಕ ಟೀಕೆ ಅಥವಾ ಯೋಗ್ಯ ಅಂಶಗಳಿದ್ದರೆ ಅದನ್ನು ಸ್ವೀಕರಿಸುತ್ತಿದ್ದರು. ಪ್ರಸಿದ್ಧ ಸಂಗೀತ ವಿಮರ್ಶಕ ಸುಬ್ಬುಡು ಅವರ ಬಗ್ಗೆ, “ಶಂಕರನಾರಾಯಣನ್ ಅವರು ನಿಜವಾಗಿಯೂ ಕರ್ನಾಟಕ ಸಂಗೀತಜಗತ್ತಿಗೊಂದು ಆಸ್ತಿಯಾಗಿದ್ದಾರೆ; ಉತ್ತಮ ಗಾಯಕರ ಸಂಖ್ಯೆ ಕ್ಷೀಣಿಸುತ್ತಿರುವಾಗ ಅದು ಇನ್ನಷ್ಟು ಸತ್ಯ” ಎಂದು ಹೇಳಿದ್ದರು. ತಮ್ಮ ಪಕ್ಕವಾದ್ಯದಲ್ಲಿ ಯುವಕರಿಗೆ ಅವಕಾಶ ನೀಡಿ ಪ್ರೋತ್ಸಾಹಿಸುತ್ತಿದ್ದರು. ತಮ್ಮ ಪಾಂಡಿತ್ಯ ಪ್ರದರ್ಶನ ಅವರನ್ನು ಗಲಿಬಿಲಿಗೊಳಿಸುತ್ತಿರಲಿಲ್ಲ; ಮತ್ತು ಒಳ್ಳೆಯದೇನಾದರೂ ಮಾಡಿದಾಗ ‘ಶಹಭಾಸ್’ ಹೇಳದೆ ಇರುತ್ತಿರಲಿಲ್ಲ. ಟಿವಿಎಸ್ ಅವರ ಸಂಗೀತವು ಭಕ್ತಿಸಹಿತ, ಶಕ್ತಿಶಾಲಿ ಮತ್ತು ಸಂತೋಷಭರಿತ ಎಂದು ವರ್ಣಿತವಾಗಿದೆ.
ಕಠಿಣ ಪರಿಶ್ರಮಕ್ಕೆ ಶಂಕರನಾರಾಯಣನ್ ಎಂದೂ ಬೆನ್ನು ಹಾಕಿದವರಲ್ಲ. “ಶಾರೀರದ ಗುಣಮಟ್ಟ, ಸೃಷ್ಟಿಶೀಲತೆ, ಪ್ರದರ್ಶನ ಕೌಶಲ, ವೃತ್ತಿಪರತೆ, ಜನಸಂಪರ್ಕ, ಸಂಘಟಕರ ಜೊತೆಗೆ ಉತ್ತಮ ಸಂಬಂಧ, ಶ್ರೋತೃಗಳನ್ನು ಮುಟ್ಟುವುದು ಎಲ್ಲವೂ ಅಗತ್ಯ. ಕಛೇರಿಗೆ ಬಂದ ಶ್ರೋತೃಗಳು ಸಂತೋಷದಿಂದ ಮರಳಬೇಕು. ಆ ಮೂರು ತಾಸು ಅವರಿಗೆ ಸಂತೋಷ ನೀಡಲು ನಾನು ಶ್ರಮಿಸುತ್ತೇನೆ. ಒಂದು ಕಛೇರಿಯಿಂದ ಇನ್ನೊಂದು ಕಛೇರಿಗೆ ನನ್ನ ಶ್ರೋತೃಗಳ ಸಂಖ್ಯೆ ಬೆಳೆಯಬೇಕು. ಸಂಘಟಕರ ಸಂಖ್ಯೆ ಹೆಚ್ಚಬೇಕು. ನಾನು ಕೂಡ ಒಬ್ಬ ಸಂಗೀತಗಾರನಾಗಿ ಮತ್ತು ವ್ಯಕ್ತಿಯಾಗಿ ಬೆಳೆಯಬೇಕು. ನಾನು ಸಣ್ಣ ವಿಷಯಗಳನ್ನು ದೊಡ್ಡದು ಮಾಡಿ ಅಸಮಾಧಾನ ಹೊರಹಾಕುವುದಿಲ್ಲ; ನಖರಾ ಇಲ್ಲ. ಸಾಧ್ಯವಾದಷ್ಟು ಸರಳವಾಗಿರಲು ಪ್ರಯತ್ನಿಸುತ್ತೇನೆ. ಜನರಿಗೆ ಉಪಯುಕ್ತವಾಗುವಂತೆ ನಾನಿರಬೇಕು. ನಾನು ಏನನ್ನೂ ಕೇಳುವುದಿಲ್ಲ; ಅದೇ ನನ್ನ ಯಶಸ್ಸಿಗೆ ಒಂದು ಕಾರಣ. ಮಾಮಾ ನನ್ನನ್ನು ಆ ರೀತಿಯಲ್ಲಿ ತಿದ್ದಿದ್ದಾರೆ. ಶಿಸ್ತು, ವಿನಯಗಳನ್ನು ಅವರು ನನಗೆ ಕಲಿಸಿದರು. ನಾನು ಸದಾ ಸರಳವಾಗಿಯೇ ಇರುತ್ತೇನೆ. ಕಛೇರಿಗೆ ವೇದಿಕೆ ಏರಿದಾಗ ಸಾಧ್ಯವಾದಷ್ಟು ಉತ್ತಮ ಕಾರ್ಯಕ್ರಮ ನೀಡುತ್ತೇನೆ” ಇದು ಅವರ ವ್ಯಕ್ತಿತ್ವವನ್ನು ಸೂಚಿಸುವ ಮಾತು.
ಸಂಗೀತ ಅಂದು
ಶಾಸ್ತ್ರೀಯ ಸಂಗೀತ ಕ್ಷೇತ್ರದಲ್ಲಿ ತಾವು ಬೆಳೆದ ದಿನಗಳ ಬಗ್ಗೆ ಹೇಳುತ್ತ “ಅಂದು ಮಾಧ್ಯಮಗಳ ಪ್ರಚಾರ ಸಿಗುತ್ತಿರಲಿಲ್ಲ; ಇಂದು ಕಾಣುವ ಪ್ರಾಯೋಜಕತ್ವವೂ ಇರಲಿಲ್ಲ. ಕ್ಯಾಸೆಟ್ಗಳಾಗಲಿ ಸಿಡಿಗಳಾಗಲಿ ಇರಲಿಲ್ಲ. ಕಛೇರಿ ಸಿಗುವುದು ಸುಲಭವಿರಲಿಲ್ಲ. ಬಾಯಿಂದ ಬಾಯಿಗೆ ಹೋಗಿಯೇ ಪ್ರಚಾರ ಸಿಗಬೇಕಿತ್ತು. ಮಾಮಾನೊಂದಿಗೆ ಜನ ನನ್ನನ್ನು ನೋಡಿದ್ದರು. ಅದರಿಂದ ಪರಿಚಯವಾಗಿ ಕರೆಯುತ್ತಿದ್ದರು. ಆಗ ಕಛೇರಿಗಳ ಸಂಖ್ಯೆಯೇ ಕಡಮೆ ಇತ್ತು. ಈಗಿನ ಹಾಗೆ ಇರಲಿಲ್ಲ. ಒಂದು ಕಛೇರಿಯಿಂದ ಇನ್ನೊಂದು ಕಛೇರಿಯವರೆಗೆ ಕಾಯಬೇಕಿತ್ತು. ನಮ್ಮ ಕ್ಯಾಸೆಟ್ಗಳನ್ನು ಬಿಡುಗಡೆ ಮಾಡುವ ಅವಕಾಶವೂ ಇರಲಿಲ್ಲ. ನನ್ನ ಮೊದಲ ಕ್ಯಾಸೆಟ್ ಬಂದದ್ದೇ ೧೯೮೩ರಲ್ಲಿ. ಆಗ ಇದ್ದುದು ಎಚ್ಎಂವಿ ಮಾತ್ರ. ಆಗ ನಾವು ಸ್ವೀಕೃತವಾಗುವುದು ಕೂಡ ಸುಲಭವಿರಲಿಲ್ಲ. ಸಂಗೀತಕ್ಷೇತ್ರದಲ್ಲಿ ಸಂಪ್ರದಾಯನಿಷ್ಠ ಹಿರಿಯರಿದ್ದು ಹೊಸಬರನ್ನು ಅವರು ಒಪ್ಪುತ್ತಿರಲಿಲ್ಲ. ಉದಾ – ಶೆಮ್ಮಂಗುಡಿ ಅಂಥವರು ಒಪ್ಪದೆ ನಮಗೆ ಮುಂದುವರಿಯಲು ಸಾಧ್ಯವಿರಲಿಲ್ಲ. ಆ ಒಪ್ಪಿಗೆ ಪಡೆಯುವುದು ತುಂಬ ಕಷ್ಟವಿತ್ತು. ದೊಡ್ಡ ಪರಂಪರೆಗೆ ಸೇರಿದ್ದು ನನ್ನ ಅದೃಷ್ಟ; ನನ್ನ ಪ್ರಥಮ ಕಛೇರಿಗೇನೇ ಪಕ್ಕವಾದ್ಯಕ್ಕೆ ಘಟಾನುಘಟಿಗಳು ಸಿಕ್ಕಿದ್ದರು” ಎಂದು ಟಿವಿಎಸ್ ಹೇಳಿದ್ದಾರೆ.
ಮುಂದುವರಿದು “ಮಾಧ್ಯಮದ ಪ್ರಚಾರ ಸಿಕ್ಕಿದ್ದೇ ಸಂಗೀತಕ್ಷೇತ್ರ ಬಿಗಿಹಿಡಿತದಿಂದ ಹೊರಬರಲು ಕಾರಣವಾಯಿತೆನ್ನಬಹುದು. ಈಗ ಇದು ಇತರ ಯಾವುದೇ ವೃತ್ತಿಯಂತಾಗಿದೆ. ಹಿಂದೆ ವಾಣಿಜ್ಯ ಉದ್ದೇಶಕ್ಕಾಗಿ ನಾವು ಯಾವುದನ್ನೂ ಬೇಗ ಒಪ್ಪಿಕೊಳ್ಳುವಂತಿರಲಿಲ್ಲ. ಈಗ ಅದು ಬಹಳಷ್ಟು ಬದಲಾಗಿದೆ. ಹಿಂದೆ ಭಕ್ತಿ, ಸಭಾಗಳು (ಸಂಘಟಕರು) ಮತ್ತು ಸದಸ್ (ಶ್ರೋತೃಗಳು) ಬಗ್ಗೆ ಗೌರವ, ಹಾಡುವ ಕೃತಿಗಳ ಕುರಿತು ಶ್ರದ್ಧೆ, ಕೆಲವು ಹಳೆಕಾಲದ ನಂಬಿಕೆಗಳು ನಮ್ಮ ನಡುವೆ ಪ್ರಚಲಿತವಾಗಿದ್ದವು. ಈಗ ಹೊಸ ತಲೆಮಾರಿನವರಲ್ಲಿ ನಾವು ಅದನ್ನೆಲ್ಲ ನಿರೀಕ್ಷಿಸುವಂತಿಲ್ಲ. ಇಂದು ನಾನು ‘ದೇವರು’ (God) ಎಂದರೆ ಯುವಜನರು ಅದೇ ರೀತಿಯಿಂದ ಭಕ್ತಿಯಿಂದ ಅದನ್ನು ಸ್ವೀಕರಿಸುತ್ತಾರೆಂದು ಹೇಳಲಾರದೆ. ನನ್ನ ತಲೆಮಾರಿನ ಭಕ್ತಿ ಈಗ ಎಲ್ಲಿದೆ? ಇದೇನೂ ನನ್ನ ತೀರ್ಪಲ್ಲ. ಆದರೂ ಕಾಲ ಬದಲಾಗಿದೆ. ನಾನೇ ಒಬ್ಬ ಪ್ರಗತಿಪರವಾಗಿ ಚಿಂತಿಸುವವ. ಆದರೂ ನಾನು ಒಂದು ಹಳೆಯ ವೃತ್ತಿ, ಸಂಪ್ರದಾಯ, ಕಂದಾಚಾರಗಳಿಗೆ ತಲೆಬಾಗಿದವನೇ ಸರಿ – ಎಂದು ಈ ಸಂಗೀತ ದಿಗ್ಗಜ ಪ್ರಾಂಜಲವಾಗಿ ನುಡಿದಿದ್ದಾರೆ.
ಆರಂಭ ನಿಧಾನವಾಗಿದ್ದರೂ ಟಿ.ವಿ. ಶಂಕರನಾರಾಯಣನ್ ಬಹುಬೇಡಿಕೆಯ ಗಾಯಕರಾಗಲು ಹೆಚ್ಚುಕಾಲ ಬೇಕಾಗಲಿಲ್ಲ. ಒಮ್ಮೆ ಕೇಳಿದವರಿಗೆ ಮತ್ತೊಮ್ಮೆ ಕೇಳಬೇಕು ಎನಿಸುತ್ತಿತ್ತು; ಅವರ ಅನುರಣಿಸುವ ಕಂಠಕ್ಕೆ ಅಂಥ ಆಕರ್ಷಣೆಯಿತ್ತು. ಮುಂಬಯಿಗೆ ಒಂದು ಕಛೇರಿಗೆಂದು ಹೋದವರು ಪುಣೆ, ಭೋಪಾಲ್, ದೆಹಲಿ, ಜಂಷೆಡ್ಪುರ, ಕಲ್ಕತ್ತಾ, ಹೈದರಾಬಾದ್ ಎಲ್ಲ ಕಡೆಗೆ ಸುತ್ತಾಡಿ ಬರಬೇಕಾಗುತ್ತಿತ್ತು. ಆಗ ಒಂದು ತಿಂಗಳೇ ಕಳೆದುಹೋಗುತ್ತಿತ್ತು; ಪ್ರತಿದಿನವೂ ಕಛೇರಿ ಎಂಬಂತಹ ಬೇಡಿಕೆ.
ವಿದೇಶದಲ್ಲಿ
ಕರ್ನಾಟಕ ಸಂಗೀತಗಾರರ ನಡುವೆ ಟಿವಿಎಸ್ ವಿದೇಶಗಳಲ್ಲೂ ಅಪಾರ ಶ್ರೋತೃಗಳನ್ನು ಹೊಂದಿದ ಕಲಾವಿದರಾಗಿದ್ದರು. ೧೯೭೫ರಷ್ಟು ಹಿಂದೆಯೇ ಅವರು ಅಮೆರಿಕ ಪ್ರವಾಸ ಕೈಗೊಂಡಿದ್ದರು. ಮರುವರ್ಷ ಸಂಗೀತದ ಜೊತೆಗೆ ಅಲ್ಲಿ ವಿಶ್ವವಿದ್ಯಾಲಯದಲ್ಲಿ ಭಾಷಣವೂ ಇತ್ತು. ೧೯೮೪ರಲ್ಲಿ ಕೆನಡಾ ಪ್ರವಾಸ ಕೈಗೊಂಡರೆ ೧೯೮೪ರಲ್ಲಿ ಸಿಂಗಾಪುರ, ಮಲೇಷ್ಯಾ ಪ್ರವಾಸವಿತ್ತು. ಮುಂದೆ ಹಲವು ಸಲ ಆಸ್ಟ್ರೇಲಿಯ, ಯುರೋಪ್ ಸೇರಿದಂತೆ ಹಲವೆಡೆ ಸಂಗೀತ ಪ್ರವಾಸ ಮಾಡಿ ಅಲ್ಲಿ ಕೂಡ ತಮ್ಮ ಅಭಿಮಾನಿ ಬಳಗವನ್ನು ಬೆಳೆಸಿದರು. “ವಿದೇಶ ಪ್ರವಾಸದಿಂದ ಆತ್ಮವಿಶ್ವಾಸ ಬೆಳೆಯಿತು; ವೃತ್ತಿಜೀವನಕ್ಕೆ ಪುಷ್ಟಿ ದೊರೆಯಿತು; ಸಂಚಾರಕ್ಕೆ ಧೈರ್ಯ ಬಂತು. ನನ್ನಿಂದಾಗಿ ಯುವ ಸಂಗೀತಗಾರರಿಗೆ ಅಲ್ಲಿ ಹೆಚ್ಚಿನ ಪ್ರೋತ್ಸಾಹ ದೊರೆಯಿತು” ಎಂದು ಟಿವಿಎಸ್ ತಿಳಿಸಿದ್ದಾರೆ.
ಅವರ ಈ ಬಿಡುವಿಲ್ಲದ ಪ್ರವಾಸಗಳಿಂದಾಗಿ ಏಟು ಬಿದ್ದುದು ಅವರ ಸಂಗೀತ ಬೋಧನೆಗೆ. ಆ ಬಗ್ಗೆ ಕೇಳಿದಾಗ “ನಿಜವೆಂದರೆ ಬೆರಳೆಣಿಕೆಯ ಶಿಷ್ಯರಿಗೆ ಮಾತ್ರ ನಾನು ಬೋಧಿಸಿದೆ. ಸಮಯವಿಲ್ಲದ ಕಾರಣ ಬೋಧನೆಯನ್ನು ಗಂಭೀರವಾಗಿ ನಡೆಸಲು ಸಾಧ್ಯವಾಗಲಿಲ್ಲ. ಇನ್ನೊಂದು ಅಂಶವೆಂದರೆ ಹುಡುಗಿಯರಿಗೆ ಕಲಿಸುವಾಗ ಹಾಡುವ ಶ್ರುತಿಯನ್ನು ಬದಲಿಸಿಕೊಳ್ಳಬೇಕಾಗುತ್ತದೆ. ಅದರಿಂದ ಸ್ವರ ಹಾಳಾಗುವ ಅಪಾಯ ಇರುತ್ತದೆ. ಅದಲ್ಲದೆ ಹಿಂದೆ ಹುಡುಗರು ಸಂಗೀತ ಕಲಿಯಲು ಹೆಚ್ಚು ಬರುತ್ತಿರಲಿಲ್ಲ; ಈಗ ಹಾಗಿಲ್ಲ (೨೦೦೩); ತುಂಬ ಜನ ಬರುತ್ತಾರೆ” ಎಂದಿದ್ದರು. ಆದರೆ ಮಕ್ಕಳಿಗೆ ಕಲಿಸದೆ ಇರಲಿಲ್ಲ. ಮಗಳು ಅಮೃತಾ ತಾಯಿಯಂತೆ ಸಂಗೀತದಲ್ಲಿ ಎಂ.ಎ. ಮಾಡಿದರು; ಮಗ ಮಹಾದೇವನ್ ಶಂಕರ ನಾರಾಯಣನ್ ತಂದೆಯೊಂದಿಗೆ ವೇದಿಕೆಯಲ್ಲಿ ಹಾಡುತ್ತ ಬಂದವರು. ಅವರು ಇನ್ನೊಬ್ಬ ಪ್ರಸಿದ್ಧ ಶಿಷ್ಯ ಆರ್. ಸೂರ್ಯಪ್ರಕಾಶ್.
ಇಂಗ್ಲಿಷ್ ಸಾಹಿತ್ಯದ ಓದು
ಟಿ.ವಿ. ಶಂಕರನಾರಾಯಣನ್ ಅವರ ವಿಷಯದಲ್ಲಿ ಹೇಳಲೇಬೇಕಾದ ಒಂದು ಅಂಶವೆಂದರೆ ಅವರ ಸಾಹಿತ್ಯದ ಓದು. “ನಾನು ತುಂಬ ಓದುತ್ತಿದ್ದೆ. ಕಾಲೇಜಿನ ದಿನಗಳಲ್ಲಿ ಮದ್ರಾಸಿನ ಎಲ್ಲ ಗ್ರಂಥಾಲಯಗಳ ಸದಸ್ಯನಾಗಿದ್ದೆ.” ಅದರಲ್ಲಿ ನಮ್ಮ ಕಾಲೇಜಲ್ಲದೆ ಮದ್ರಾಸ್ ವಿಶ್ವವಿದ್ಯಾಲಯ, ಬ್ರಿಟಿಷ್ ಕೌನ್ಸಿಲ್ಗಳೆಲ್ಲ ಇದ್ದವು. “ಬರ್ನಾರ್ಡ್ ಶಾ, ಆಸ್ಕರ್ ವೈಲ್ಡ್ ಸೇರಿದಂತೆ ಇಪ್ಪತ್ತನೇ ಶತಮಾನದ ಎಲ್ಲ ಲೇಖಕರು ನನಗೆ ಇಷ್ಟ. ನಾನು ಪಿ.ಜಿ. ವುಡ್ಹೌಸ್ನ ಓರ್ವ ಅಭಿಮಾನಿ. ಹಾಸ್ಯ ನನಗೆ ಇಷ್ಟವಾಗಿದ್ದು, ವುಡ್ಹೌಸ್ನ ಎಲ್ಲ ೯೬ ಕಾದಂಬರಿಗಳನ್ನು ಓದಿದ್ದೆ. ೧೯೭೫ರ ಸೆಪ್ಟೆಂಬರ್ನಲ್ಲಿ ಅಮೆರಿಕಕ್ಕೆ ಹೋದಾಗ ಆತನನ್ನು ಭೇಟಿ ಮಾಡಬೇಕೆಂದು ಬಯಸಿದ್ದೆ. ಆದರೆ ದುರದೃಷ್ಟವೆಂಬಂತೆ ಕೇವಲ ಒಂದು ತಿಂಗಳ ಹಿಂದೆ ಆತ ತೀರಿಹೋದ. ೧೯೯೬ರಲ್ಲಿ ಲಂಡನ್ಗೆ ಹೋದಾಗ ಆತ ಓದಿದ್ದ ಡಲ್ವಿಚಾ ಕಾಲೇಜಿಗೆ ತಪ್ಪದೆ ಭೇಟಿ ನೀಡಿದೆ. ಅವನ ಕ್ಲಾಸ್ರೂಮ್, ಆತ ಬಳಸಿದ ಟೈಪ್ರೈಟರ್ ಎಲ್ಲ ನೋಡಿದೆ” ಎಂದಿದ್ದಾರೆ.
ಓದಿನಿಂದಾದ ಪರಿಣಾಮವೇನೆಂದು ಕೇಳಿದಾಗ “ಹೆಚ್ಚು ಗಂಭೀರ (ಸೀರಿಯಸ್) ಆಗಿರಬಾರದು ಎಂಬುದನ್ನು ನಾನು ಸಾಹಿತ್ಯದಿಂದ ಕಲಿತೆ. ಬಂದುದನ್ನು ನಾನು ಹಾಗೇ ಸ್ವೀಕರಿಸುತ್ತೇನೆ; ಪ್ರತಿಯೊಂದು ವಿಷಯವನ್ನು ನಾನು ಲಘುಧಾಟಿಯಲ್ಲಿ (lighter side) ನೋಡಬಲ್ಲೆ. ನಾನು ತುಂಬ ಪಾಸಿಟಿವ್ ವ್ಯಕ್ತಿಯಾಗಿದ್ದೇನೆ. ಆಗುವುದೆಲ್ಲ ಒಳ್ಳೆಯದಕ್ಕಾಗಿ. ನನಗೆ ಇಂದು ಏನಾದರೂ ಸಿಗದಿದ್ದರೆ ನಾಳೆ ಅದು ಸಿಗುತ್ತದೆ. ವುಡ್ಹೌಸ್ ಬಗ್ಗೆ ನಾನು ಪ್ರಜ್ಞಾತ್ಮಕವಾಗಿ ಹೆಚ್ಚು ಯೋಚಿಸದಿದ್ದರೂ ಆತ ನನ್ನ ಜೀವನದ ಮೇಲೆ ಪ್ರಭಾವ ಬೀರಿರುವುದು ಸತ್ಯ. ವುಡ್ಹೌಸ್ ಏನೆಂದು ಓದಿಯೇ ತಿಳಿಯಬೇಕು. ನಮಗೇನಾದರೂ ಖಿನ್ನತೆ (depression) ಉಂಟಾಗಿದ್ದರೆ ಆತನ ಸಾಹಿತ್ಯದ ಹತ್ತುಪುಟ ಓದಿದರೆ ಸಾಕು; ನಿಮ್ಮಲ್ಲಿ ಚೈತನ್ಯ ತುಂಬಿಕೊಳ್ಳುತ್ತದೆ. ಈಗ ಕೂಡ ನಾನು ಸಮಯ ಸಿಕ್ಕಿದರೆ ಆತನ ಒಂದು ಪುಸ್ತಕವನ್ನು ಎತ್ತಿಕೊಳ್ಳುತ್ತೇನೆ. ಆದರೆ ಈಗ (೨೦೦೩) ಸಮಯವೇ ಸಿಗುವುದಿಲ್ಲ; ಎಲ್ಲೋ ಪ್ರವಾಸದಲ್ಲಿರುತ್ತೇನೆ” ಎಂದಿದ್ದಾರೆ.
ನಿಮ್ಮ ಗಾಯನದ ಶೈಲಿ ಏನೆಂದು ಕೇಳಿದಾಗ “ನನ್ನ ಶೈಲಿ ಎನ್ನುವುದಕ್ಕಿಂತ ಅದನ್ನು ಮಾಮಾ (ಮಧುರೆ ಮಣಿ) ಅವರ ಶೈಲಿಯ ವೈಶಿಷ್ಟ್ಯ ಎನ್ನುತ್ತೇನೆ. ಅದು ‘ಸರ್ವಲಘು’ವಿನ ಸುಲಭಗಾಯನ ಮತ್ತು ‘ಸ್ವರ’ಗಾಯನ. ತಾಳವಾದ್ಯವಿಲ್ಲದೆ ಸ್ವರಗಳನ್ನು ಹಾಡುವುದು; ಅದರಲ್ಲಿ ತುಂಬ ಸೃಷ್ಟಿಶೀಲತೆ ಇರುತ್ತದೆ; ಅದೇ ನಮ್ಮ ಶೈಲಿಯ ವಿಶೇಷ. ಗಾಯನದಲ್ಲಿ ಈ ಅಂಶವನ್ನು ತರಲು ನಾನು ಸಾಧ್ಯವಾದಷ್ಟು ಪ್ರಯತ್ನಿಸುತ್ತೇನೆ. ಸೃಷ್ಟಿಶೀಲತೆಯೊಂದಿಗೆ ಭಾವಸಹಿತವಾಗಿ ರಾಗವೊಂದನ್ನು ಪ್ರಸ್ತುತಪಡಿಸುವುದು, ಶ್ರುತಿ ಶುದ್ಧತೆ, ಲಯದ ಖಚಿತತೆ ಈ ಶೈಲಿಯ ಇತರ ಮುಖ್ಯಾಂಶಗಳು. ಇದರಿಂದ ಕಛೇರಿ ಕಳೆಗಟ್ಟುತ್ತದೆ. ಇನ್ನು ಕೃತಿಗಳ ಸಂಗ್ರಹವನ್ನು ಸದಾ ಬೆಳೆಸುತ್ತ ಹೋಗುತ್ತೇನೆ. ಮೂವರು ವಾಗ್ಗೇಯಕಾರರಿಂದ ಆರಂಭಿಸಿ ಈಚಿನವರೆಗಿನದನ್ನೂ ನಾನು ಕಲೆ ಹಾಕುತ್ತೇನೆ. ತಮಿಳಿನ ಕುರಿತು ನನ್ನ ಹೆಚ್ಚಿನ ಆಸಕ್ತಿ ಕೂಡ ಇದೆ. ತಮಿಳು ರಚನೆ ಹಾಡಿದಾಗ ಅದು ಇಲ್ಲಿನ ಹೆಚ್ಚು ಜನರನ್ನು ತಲಪುತ್ತದೆ; ಮತ್ತು ಸಾಹಿತ್ಯದ ಸೂಕ್ಷ್ಮಗಳಿಗೆ ಒತ್ತು ನೀಡಬಹುದು. ನಾನು ಕೆಲವು ತಮಿಳು ಪದ್ಯ ಬರೆದದ್ದೂ ಇದೆ” ಎಂದರು. ಗಾಯನದ ಕೃತಿ ರಚಿಸುವಿರಾ ಎನ್ನುವ ಪ್ರಶ್ನೆಗೆ ಉತ್ತರಿಸಿ, “ಇಲ್ಲ. ಮನೆಯವರು ಅದನ್ನು ಪ್ರೋತ್ಸಾಹಿಸಲಿಲ್ಲ; ಕೆಲವು ನಂಬಿಕೆಗಳು ಅದಕ್ಕೆ ಕಾರಣ” ಎಂದರು.
ತೆಲುಗಿನ ಅನುಕೂಲ
ವಿವಿಧ ಭಾಷೆಗಳ ಕೃತಿಗಳ ಗಾಯನದಲ್ಲಿರುವ ಅನುಕೂಲ-ಅನನುಕೂಲಗಳೇನು ಎಂದು ಕೇಳಿದ ಪ್ರಶ್ನೆಗೆ “ಹೆಚ್ಚು ಶಬ್ದಗಳು ಸ್ವರಾಕ್ಷರದಿಂದ ಮುಕ್ತಾಯವಾಗುವ ಭಾಷೆಯೆಂದರೆ ತೆಲುಗು. ಇದು ಸಂಗೀತಗಾರರಿಗೆ ಗಂಟಲು ತೆರೆದು ಸಂಗತಿಗಳನ್ನು ಹಾಡಲು ಅನುಕೂಲವಾಗುತ್ತದೆ; ಅದರಲ್ಲಿ ಉಸಿರಿನ ನಿಯಂತ್ರಣ ಸುಲಭ. ಈ ನಿಟ್ಟಿನಲ್ಲಿ ತಮಿಳು ಮತ್ತು ಸಂಸ್ಕೃತ ರಚನೆಗಳಲ್ಲಿ ಹೆಚ್ಚಿನ ಸಮಸ್ಯೆಯಿದೆ. ತಾಳದ ಪ್ರತಿಯೊಂದು ಆವೃತ್ತಿಯ ನಡುವೆ ಬಹಳಷ್ಟು ಶಬ್ದ (ಪದ)ಗಳನ್ನು ಉಚ್ಚರಿಸಬೇಕಾಗುವ ಕಾರಣ ಮಧ್ಯದಲ್ಲಿ ಮನೋಧರ್ಮವನ್ನು ತರುವುದಕ್ಕೆ ತೀರಾ ಸೀಮಿತವಾದ ಅವಕಾಶವಿರುತ್ತದೆ; ಆ ಭಾಷೆಗಳ ಕೊನೆಯಲ್ಲಿರುವ ವ್ಯಂಜನಗಳು ಸಂಗೀತದ ಸುಲಭ ಹರಿವಿಗೆ ತಡೆಯೊಡ್ಡುತ್ತವೆ” ಎಂದರು. ಬಾಗೇಶ್ರೀ, ದ್ವಿಜಾವಂತಿಯಂತಹ ಹಿಂದುಸ್ತಾನಿ ರಾಗಗಳನ್ನು ಶಂಕರನಾರಾಯಣನ್ ತಮ್ಮ ಕಛೇರಿಯೊಳಗೆ ತಂದು ಅವುಗಳಿಗೆ ನ್ಯಾಯ ಸಲ್ಲಿಸಿದ್ದಿದೆ. ಬೆಳಗಿನ ಕಛೇರಿಯಲ್ಲಿ ದ್ವಿಜಾವಂತಿಯನ್ನು ಹಾಡಿ ಹೇಗಾಯಿತೆಂದು ಓರ್ವ ಅಭಿಮಾನಿಯನ್ನು ಕೇಳಿ ಅಚ್ಚರಿಗೊಳಿಸಿದ್ದಿದೆ.
ಟಿವಿಎಸ್ ಅವರ ವೈಭವಯುತ ಸಂಗೀತ ಜೀವನವು ಕೊನೆಯ ಒಂದು ದಶಕದಷ್ಟು ಕಾಲ ಇಳಿಮುಖವನ್ನು ಕಂಡಿತೆನ್ನಬೇಕು, ಮುಂಚೂಣಿ (main spot)ಯಿಂದ ಅವರು ಹೊರಗುಳಿದರು. ಅವರು ವೃತ್ತಿಜೀವನದ ತುತ್ತತುದಿಯಲ್ಲಿ ಇದ್ದಾಗ ಸೇರಿದಂತೆ ಅವರ ಕಛೇರಿಗೆ ಜನ ಸೇರುತ್ತಿರಲಿಲ್ಲ. ಆದರೆ ಅವರ ಸಂಗೀತಗುಣಮಟ್ಟದಲ್ಲಿ ಇಳಿಕೆಯೇನೂ ಆಗಿರಲಿಲ್ಲ. ಅದು ಒಂದು ಮಟ್ಟ ಮುಟ್ಟಿದ ಮೇಲೆ ಹಾಗೇ ನಿಂತು ಸ್ಥಗಿತವಾದದ್ದೂ ಇರಬಹುದು. ಜನರ ರುಚಿ ಬದಲಾದದ್ದು ಕೂಡ ಅದಕ್ಕೆ ಕಾರಣವಿರಬಹುದು. ಅದಲ್ಲದೆ, ಬೌದ್ಧಿಕ ಸಂಗೀತವು ಸಹಜ (ಸ್ಪಾಂಟೇನಿಯಸ್) ಸಂಗೀತವನ್ನು ಸ್ಥಳಾಂತರಿಸಿದ್ದು ಕೂಡ ಅದಕ್ಕೆ ಕಾರಣವಿರಬಹುದೆಂದು ಟಿ.ಟಿ. ನರೇಂದ್ರನ್ (‘ಶ್ರುತಿ’ ಪತ್ರಿಕೆ) ಅಭಿಪ್ರಾಯಪಟ್ಟಿದ್ದಾರೆ.
“ಆರು ದಶಕಗಳಷ್ಟು ಸುದೀರ್ಘ ಕಾಲ ಕರ್ನಾಟಕ ಸಂಗೀತವನ್ನು ಕೇಳಿದ ನನ್ನ ಅನುಭವವೆಂದರೆ, ಸಂಗೀತವು ವಿಕಾಸ ಹೊಂದುತ್ತದೆ; ಶ್ರೋತೃಗಳು ಕೂಡ ವಿಕಾಸ ಹೊಂದುತ್ತಾರೆ. ಆದ್ಯತೆ ಮತ್ತು ಒತ್ತುಗಳು ಬದಲಾಗುತ್ತವೆ. ಆಗ ಒಬ್ಬ ಸಂಗೀತಗಾರನಿಗೆ ಕೆಲವು ದಶಕಗಳ ಅನಂತರ ತನ್ನ ಹಿಡಿತವನ್ನು ಇಟ್ಟುಕೊಳ್ಳಲು ಸಾಧ್ಯವಾಗುವುದಿಲ್ಲ” ಎಂದು ನರೇಂದ್ರನ್ ಸಮರ್ಥಿಸಿದ್ದಾರೆ. ಟಿವಿಎಸ್ ಬೌದ್ಧಿಕತೆಗಿಂತ ಸಹಜತೆಗೆ ಆದ್ಯತೆ ನೀಡಿದರು; ಲೆಕ್ಕಾಚಾರದ ಸ್ವರಗಾಯನ ಮಾಡಲಿಲ್ಲ. ಏನಿದ್ದರೂ ಅವರು ಬಹುಕಾಲ ಶ್ರೋತೃಗಳ ಮೇಲೆ ಮೋಡಿ ಮಾಡಿದ ಗಾಯಕ ಎಂಬುದರಲ್ಲಿ ಎರಡು ಮಾತಿಲ್ಲ.
ಶಂಕರನಾರಾಯಣನ್ ಅವರ ಕೊಡುಗೆಗೆ ಸರಿಯಾದ ಗುರುತಿಸುವಿಕೆ ಸಿಗಲಿಲ್ಲ ಎನ್ನುವ ಒಂದು ಅಭಿಪ್ರಾಯ ಕೂಡ ಇದೆ. ಏಕೆಂದರೆ ಅದೆಲ್ಲ ಕರ್ನಾಟಕ ಸಂಗೀತದ ಪ್ರಧಾನಧಾರೆಗೆ ಸೇರಿಹೋಯಿತು ಎನ್ನುವ ಸಮರ್ಥನೆಯೂ ಇದೆ. ಮಿಗಿಲಾಗಿ ಅವರು ಅಹಂ ಇಲ್ಲದ ಸರಳ ವ್ಯಕ್ತಿ; ತನ್ನನ್ನು ದೊಡ್ಡದು ಮಾಡಿ ಸೆಲ್ಫ್ ಪ್ರಮೋಶನ್ ಮಾಡಿದವರಲ್ಲ.
ವ್ಯಾಪಕ ಶ್ಲಾಘನೆ
ಟಿ.ವಿ. ಶಂಕರನಾರಾಯಣನ್ ಅವರ ನೇರ ಶಿಷ್ಯರ ಸಂಖ್ಯೆ ಕಡಮೆ ಇದ್ದರೂ ಪ್ರಭಾವಿತರು, ಪರೋಕ್ಷ ಶಿಷ್ಯರು ಬೇಕಾದಷ್ಟಿದ್ದಾರೆ; ಅವರಿಂದ ಈ ಸಂಗೀತ ದಿಗ್ಗಜರ ಕುರಿತು ಅಪಾರ ಶ್ಲಾಘನೆಗಳು ಬಂದಿವೆ. ಪ್ರಸಿದ್ಧ ಗಾಯಕ ಟಿ.ಎಂ. ಕೃಷ್ಣ ಅವರು “ಅವರ ಸ್ವರ ಕೇಳುತ್ತಲೇ ನಾನು ಎಲ್ಲಿದ್ದರೂ ಸಭಾಗೃಹದೊಳಗೆ ಓಡಿಬರುತ್ತಿದ್ದೆ. ಹಾಡಲು ಆರಂಭಿಸಿದಾಗ ಅವರಂತೆಯೇ ಹಾಡಲು ಬಯಸಿದೆ. ಅವರ ಉತ್ಸಾಹ, ರಮ್ಯತೆ (ರೊಮಾನ್ಸ್), ಅರಳುವಿಕೆ ಮತ್ತು ನಿರಂತರ ಹರಿವು ನನ್ನನ್ನು ಪ್ರಭಾವಿಸಿದವು. ಅವರು ನನ್ನನ್ನು ಸಂಗೀತದ ಪ್ರೀತಿಯಲ್ಲಿ ಸಿಕ್ಕುವಂತೆ ಮಾಡಿದರು” ಎಂದಿದ್ದಾರೆ.
ಇನ್ನೋರ್ವ ಖ್ಯಾತ ಗಾಯಕ ಸಂಜಯ ಸುಬ್ರಹ್ಮಣ್ಯಮ್ ಮ್ಯೂಸಿಕ್ ಅಕಾಡೆಮಿಯಲ್ಲಿ ೧೯೭೯ರಲ್ಲಿ ಕೇಳಿದ ಕಛೇರಿಯನ್ನು ನೆನಪಿಸಿಕೊಂಡು “ಕೊನೆಯಲ್ಲಿ ಅವರು ‘ಎಪ್ಪೋ ವರುವರೋ’ ಎತ್ತಿಕೊಳ್ಳುತ್ತಲೇ ಸಭಾಂಗಣದಿಂದ ಚಪ್ಪಾಳೆಯ ಅಲೆ ಎದ್ದಿತು. ಅದು ಕಿವಿ ತುಂಬಿಹೋದ ಚಪ್ಪಾಳೆ. ಮತ್ತೆ ಶ್ರೋತೃಗಳಿಂದ ಕೋರಿಕೆಗಳು ಬಂದವು. ಒಬ್ಬ ಇದನ್ನು ಕೇಳಿದರೆ ಇನ್ನೊಬ್ಬ ಬೇರೊಂದನ್ನು ಕೇಳುತ್ತಿದ್ದ. ಮತ್ತೆ ಅವರು ಒಂದು ಇಂಗ್ಲಿಷ್ ಸ್ವರ ಹಾಡಿ ಕಛೇರಿಯನ್ನು ಮುಗಿಸಿದರು. ಹೊರಗೆ ಬರುವಾಗ ನನ್ನ ಅಮ್ಮ ‘ಈತ ಮಧುರೆ ಮಣಿ ಅಯ್ಯರ್ ಆತ್ಮವನ್ನು ಇಲ್ಲಿಗೆ ತಂದ’ ಎಂದರು” ಎಂದು ಹೇಳಿದ್ದಾರೆ.
ಮ್ಯೂಸಿಕ್ ಅಕಾಡೆಮಿ ಅಧ್ಯಕ್ಷ ಎನ್. ಮುರಳಿ ಅವರು “ದಶಕಗಳ ಕಾಲ ಅವರು ಅಕಾಡೆಮಿಯಲ್ಲಿ ಹಾಡಿದರು. ಅವರ ಕಛೇರಿಗಳಿಗೆ ಭಾರೀ ಆಕರ್ಷಣೆಯಿತ್ತು; ಸಂಗೀತ ಕಳಾನಿಧಿ ಪ್ರಶಸ್ತಿಗೆ ಅವರು ಅತ್ಯಂತ ಅರ್ಹರಾಗಿದ್ದರು” ಎಂದು ಶ್ಲಾಘಿಸಿದರು.
ಹಿರಿಯ ಗಾಯಕಿ ಸುಧಾ ರಘುನಾಥನ್ ಅವರು ತಮ್ಮ ಹೇಳಿಕೆಯಲ್ಲಿ “ಟಿವಿಎಸ್ ಓರ್ವ ಅಪೂರ್ವ ಗಾಯಕ. ಅವರದ್ದು ಪರಿಶುದ್ಧ ಸಂಗೀತ. ರಾಗ, ಸ್ವರಗಳು ಅವರ ಕೈಯಲ್ಲಿ ಆವೆಮಣ್ಣಿನಂತೆ ಬೇಕಾದ ಆಕಾರ ಪಡೆಯುತ್ತಿದ್ದವು; ಅವುಗಳ ಜೊತೆ ಅವರು ಆಟವನ್ನೇ ಆಡುತ್ತಿದ್ದರು” ಎಂದಿದ್ದಾರೆ.
ಸರಳತೆಯಲ್ಲಿ ಸೌಂದರ್ಯ ಇದೆ ಎನ್ನುತ್ತಾರೆ. ಕೆಲವು ಸಲ ಅದು ಗಮನಕ್ಕೆ ಬಾರದೆ ಹೋಗಬಹುದು. ಒಂದು ಮಾಧ್ಯಮಕ್ಕೆ ಬೇಕಾದ ಸೂಕ್ಷ್ಮತೆಯನ್ನು ಹೊಂದಿರುವವರಿಗೆ ಹಾಗಾಗುವುದಿಲ್ಲ. ತಪ್ಪದೆ ತಿಳಿಯುತ್ತದೆ ಮತ್ತು ಅದರ ಆನಂದಾನುಭೂತಿಯೂ ಆಗುತ್ತದೆ. ಅಂತಹ ಒಂದು ಅಮೋಘ ಸಂಗೀತ ಟಿ.ವಿ. ಶಂಕರನಾರಾಯಣನ್ ಅವರದ್ದು.
ಮದುವೆಯನ್ನೇ ಮರೆತವರು!
ಸಂಗೀತಗಾರರಿಗೆ ಕನ್ಯಾಪಿತೃಗಳು ಹೆಣ್ಣು ಕೊಡುವುದು ಕಷ್ಟ ಎಂಬ ಸ್ಥಿತಿಯಿಂದ ಮೇಲೆದ್ದು ಬಂದು ಉತ್ತಮ ವೈವಾಹಿಕ ಜೀವನ ನಡೆಸಿದವರು ಟಿ.ವಿ. ಶಂಕರನಾರಾಯಣನ್. ಅದೇಕೆ ಅವರಲ್ಲಿ ಅಂತಹ ಒಂದು ಭಯ ಮೂಡಿತ್ತೋ ಗೊತ್ತಿಲ್ಲ. ಆದರೆ ೩೫ ವರ್ಷದವರೆಗೂ ಅವರು ಮದುವೆಯಾಗುವ ಪ್ರಯತ್ನ ಮಾಡದೆ ಇದ್ದುದಂತೂ ಸತ್ಯ. ತನ್ನ ಗಾಯನದಲ್ಲಿ ಅವರು ಎಷ್ಟೊಂದು ಮುಳುಗಿದ್ದರೆಂದರೆ ಆ ಬಗ್ಗೆ ಹುಡುಕಾಟ ನಡೆಸಿರಲೂ ಇಲ್ಲ; “ಅದಲ್ಲದೆ ನಾನು ಸ್ವಲ್ಪ ಆರ್ಥಿಕ ಬಲವನ್ನು ತೋರಿಸಬೇಕಾಗಿತ್ತು. ಏನಿದ್ದರೂ ಒಬ್ಬನೇ ಮಗನಾದ ಕಾರಣ ನಾನು ಮದುವೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿರಲಿಲ್ಲ. ನನ್ನ ಪತ್ನಿ ವಿಜಯಲಕ್ಷ್ಮಿ ಸ್ವತಃ ಓರ್ವ ಸಂಗೀತ ವಿದ್ಯಾರ್ಥಿಯಾಗಿದ್ದಳು. ಸಂಗೀತದಲ್ಲಿ ಎಂ.ಎ. ಮಾಡಿದ್ದಳು. ಕಲಿಯುವಿಕೆಯಲ್ಲಿ ಮುಂದಿದ್ದು ಚಿನ್ನದ ಪದಕವನ್ನು ಕೂಡ ಗಳಿಸಿದ್ದಳು. ಮದ್ರಾಸಿನ (ಚೆನ್ನೈ) ಪ್ರಮುಖ ಸಭಾಗಳಿಂದ ಆಕೆ ಬಹುಮಾನವಾಗಿ ಹಲವು ತಂಬೂರಿಗಳನ್ನು ಪಡೆದಿದ್ದಾಳೆ. ಆದರೆ ಮದುವೆಯ ಅನಂತರ ಬಹುತೇಕ ಗೃಹಿಣಿಯಾಗಿ ನಿಂತಳು. ಅವಳು ಅಲ್ಲವಾಗಿದ್ದರೆ ನಾನಿಂದು ಏನಾಗಿದ್ದೇನೋ ಅದಾಗಲು ಸಾಧ್ಯವಿರಲಿಲ್ಲ.”