ಸಂಗೀತಲೋಕದ ಹಾಡುಗಾರರಾಗಲಿ, ವಾಗ್ಗೇಯಕಾರರಾಗಲಿ ಸಾಮಾನ್ಯವಾಗಿ ಗಂಭೀರ ಸ್ವಭಾವದವರು ಎಂದೇ ಭಾವಿಸಲಾಗುತ್ತದೆ. ಬಹುತೇಕ ಇದು ಸರಿಯೂ ಹೌದು. ಸಂಗೀತವನ್ನು ರಚಿಸುವಾಗ ಅಥವಾ ಹಾಡುವಾಗ ಅವರ ಬುದ್ಧಿ ಮತ್ತು ಭಾವಗಳು, ಲಘುಲಹರಿಗೆ ಹೋದಲ್ಲಿ ಒಟ್ಟಾರೆ ಸಂಗೀತ ಅಥವಾ ಕೃತಿಯ ಸಾತತ್ಯಕ್ಕೆ ಚ್ಯುತಿ ಒದಗುವ ಸಾಧ್ಯತೆ ಇದೆ. ಆದರೂ ಹಾಸ್ಯಪ್ರಜ್ಞೆಯು ಸಂಗೀತದ ಹುರುಪನ್ನು ಮತ್ತು ಹೊಳಪನ್ನು ಹೆಚ್ಚಿಸುವ ಸಾಧ್ಯತೆಯೂ ಇದೆ. ಸಂಗೀತ ಪ್ರಪಂಚದಲ್ಲಿ ಇಂತಹ ಹಾಸ್ಯಪ್ರಸಂಗಗಳು ಅನೇಕ.

* * *
ತಮ್ಮ ವಿಶಿಷ್ಟ ಗಾಯನದಿಂದ ಸಂಗೀತ ರಸಿಕರ ಮನಸೂರೆಗೊಂಡಿದ್ದ ಮಧುರೈ ಮಣಿ ಅಯ್ಯರ್ ಅವರು ತಮ್ಮ ಹಾಸ್ಯಪ್ರಜ್ಞೆಗೆ ಹೆಸರಾಗಿದ್ದರು ಎಂಬುದು ಇಂದಿನ ಅನೇಕರಿಗೆ ತಿಳಿದಿಲ್ಲ. ಒಮ್ಮೆ, ಅವರು ತಮ್ಮ ಸಂಗೀತ ಕಚೇರಿಯಲ್ಲಿ ಮುತ್ತುಸ್ವಾಮಿ ದೀಕ್ಷಿತರ ಪೂರ್ವಿ ಕಲ್ಯಾಣಿ ರಾಗದ ಪ್ರಸಿದ್ಧ ಕೃತಿ “ಮೀನಾಕ್ಷಿ ಮೇ ಮುದಂ ದೇಹಿ…” ಎಂಬ ಕೃತಿಯನ್ನು ವಿಸ್ತಾರವಾಗಿ ಹಾಡುತ್ತಾ, ಸಂಗೀತ ರಸಿಕರನ್ನು ನಾದ ಸ್ವರ್ಗಕ್ಕೆ ಕೊಂಡೊಯ್ದರು.
ಪಲ್ಲವಿ ಮತ್ತು ಅನುಪಲ್ಲವಿಯನ್ನು ಮುಗಿಸಿ ಚರಣಕ್ಕೆ ಬಂದರು. ಕೃತಿಯ ಚರಣದ ಮೊದಲನೆಯ ಪಂಕ್ತಿಯಾದ “ಮಧುರಾಪುರಿ ನಿಲಯೇ ಮಣಿ ವಲಯೇ…” ಎಂಬುದು ಅದೆಷ್ಟು ಚಿತ್ತಾಕರ್ಷಕ ಎಂಬುದನ್ನು ಸಂಗೀತ ರಸಿಕರೆಲ್ಲರೂ ಬಲ್ಲರು. ರಸಿಕರ ನಾಡಿಮಿಡಿತವನ್ನು ಬಲ್ಲ ಮಣಿ ಅಯ್ಯರ್ ಅವರು ಈ ಒಂದು ಪಂಕ್ತಿಯನ್ನು ತಮ್ಮ ಮನೋಧರ್ಮ ಸಂಗೀತಕ್ಕೆ ಸಾಕ್ಷಿಯಾಗಿ ವಿಸ್ತಾರವಾಗಿ ಹಾಡತೊಡಗಿದರು. ಸ್ವಲ್ಪ ಹೊತ್ತಿನ ಬಳಿಕ ಈ ಪಂಕ್ತಿಯ ‘ಮಧುರ’ ಮತ್ತು ‘ಮಣಿ’ ಎಂಬ ಎರಡು ಪದಗಳ ಮೇಲೆ ವಿಶೇಷ ಒತ್ತು ಕೊಟ್ಟರು, ಅಲ್ಲದೆ ಈ ಎರಡು ಪದಗಳನ್ನು ಮಾತ್ರ ತಾರಸ್ಥಾಯಿಯಲ್ಲಿ ಹಾಡಿ ಮಿಕ್ಕ ಪದಗಳಾದ ಪುರಿ ನಿಲಯೇ, ವಲಯೇ ಪದಗಳನ್ನು ಕೇಳಿಸಿತೋ ಇಲ್ಲವೋ ಎನ್ನುವಷ್ಟು ಮಂದ್ರಸ್ಥಾಯಿಯಲ್ಲಿ ಹಾಡತೊಡಗಿದರು.
ಹಾಡುತ್ತಾ ಹಾಡುತ್ತಾ ಕೆಲವೊಮ್ಮೆ ಪಕ್ಕವಾದ್ಯದವರ ಕಡೆಗೆ; ಮತ್ತೆ ಕೆಲವೊಮ್ಮೆ ಪ್ರೇಕ್ಷಕರ ಕಡೆ ತುಂಟ ನಗೆಯಿಂದ ನೋಡಲು ಪ್ರಾರಂಭಿಸಿದರು. ನೆರೆದಿದ್ದ ಎಲ್ಲರಿಗೂ ಸಲ್ಪ ಹೊತ್ತು ಗಲಿಬಿಲಿ. ಆಗ ಮತ್ತೆ ಮಧುರೈ ಮಣಿ ಅಯ್ಯರ್ರವರು ಮಧುರ ಎಂಬ ಪದವನ್ನು ಗಟ್ಟಿಯಾಗಿ; ಪುರಿ, ನಿಲಯೇ ಎಂಬ ಪದಗಳನ್ನು ಮೆಲುದನಿಯಲ್ಲಿ ಹಾಡಿ, ‘ಮಣಿ’ ಎಂಬ ಪದವನ್ನು ಮತ್ತೆ ಗಟ್ಟಿಯಾಗಿ; ವಲಯೇ ಎಂಬ ಪದವನ್ನು ಮೆಲುದನಿಯಲ್ಲಿ ಹಾಡಿ, ತಮ್ಮ ಎದೆಯನ್ನು ತಟ್ಟಿಕೊಂಡರು. ಆಗಷ್ಟೆ ನೆರೆದಿದ್ದ ರಸಿಕರಿಗೆ ಅವರ ಹಾಸ್ಯಪ್ರಜ್ಞೆಯ ಅರಿವಾಯಿತು. ಮಧುರೈ ಮಣಿ ಅಯ್ಯರ್ ಅವರು ಅವರು ತಮ್ಮ ಹೆಸರಿನ ಮಧುರೈ ಮತ್ತು ಮಣಿ ಇವೆರಡು ಪದಗಳನ್ನು ಮುತ್ತುಸ್ವಾಮಿ ದೀಕ್ಷಿತರ ಕೃತಿಯ ಈ ಚರಣದ ಮಧುರ ಮತ್ತು ಮಣಿ ಎರಡು ಪದಗಳಿಗೆ ತಳಕು ಹಾಕಿ ಚಮತ್ಕಾರ ಮಾಡಿದ್ದರು. ಇದು ಅವರ ಹಾಸ್ಯಪ್ರಜ್ಞೆಯ ಒಂದು ತುಣುಕು ಮಾತ್ರ.
* * *