ಅಭಿನವ ತ್ಯಾಗರಾಜರು ಎಂದೇ ಪ್ರಸಿದ್ಧರಾಗಿದ್ದ ಮೈಸೂರು ವಾಸುದೇವಾಚಾರ್ಯರ ಬಗ್ಗೆ ತಿಳಿಯದವರು ಬಹಳ ಕಡಮೆ. ಮೈಸೂರು ರಾಜಸಭೆಯ ವಾಗ್ಗೇಯಕಾರರಾಗಿ ಅವರು ಮಾಡಿದ ಸಂಗೀತಸೇವೆ ಅಪಾರವಾದದ್ದು. ಅವರು ರಚಿಸಿದ ಇನ್ನೂರಕ್ಕೂ ಹೆಚ್ಚು ಕೃತಿಗಳು ಇಂದಿಗೂ ಹಸಿರಾಗಿವೆ ಮತ್ತು ಹೆಸರಾಗಿವೆ.
ವಾಸುದೇವಾಚಾರ್ಯರು ತಮ್ಮ ಜೀವಿತದ ಕೊನೆಯ ಅವಧಿಯನ್ನು ಚೆನ್ನೈನ ಅಡಿಯಾರನಲ್ಲಿರುವ ಕಲಾಕ್ಷೇತ್ರದಲ್ಲಿ ಸಂಗೀತ ಪ್ರಾಧ್ಯಾಪಕರಾಗಿ ಕಳೆದರು. ಕಲಾಕ್ಷೇತ್ರದ ಸಂಸ್ಥಾಪಕರು ಮತ್ತು ಪ್ರಖ್ಯಾತ ನೃತ್ಯ ಕಲಾವಿದರೂ ಆದ ರುಕ್ಮಿಣಿದೇವಿ ಅರುಂಡೇಲ್, ವಾಸುದೇವಾಚಾರ್ಯರ ಸೇವೆಯನ್ನು ಬಯಸಿ ತಮ್ಮ ಕಲಾಕ್ಷೇತ್ರಕ್ಕೆ ಕರೆಸಿಕೊಂಡಿದ್ದರು. ಅವರಿಬ್ಬರೂ ಸೇರಿ ರಚಿಸಿದ ರಾಮಾಯಣದ ನೃತ್ಯನಾಟಕವು ಅಪಾರ ಜನಮನ್ನಣೆಯನ್ನು ಪಡೆಯಿತು. ಈ ನೃತ್ಯನಾಟಕವನ್ನು ನೋಡಿದ ರಾಜಾಜಿಯವರು “ಈ ನೃತ್ಯನಾಟಕವು ಶ್ರೀರಾಮಚಂದ್ರನಿಗೆ ಕಟ್ಟಿದ ದೇವಾಲಯವೇ ಸರಿ” ಎಂದು ಕೊಂಡಾಡಿದ್ದರು.
ಒಮ್ಮೆ ‘ರಾಮಾಯಣ’ ನೃತ್ಯನಾಟಕದ ಪ್ರದರ್ಶನಕ್ಕೆ ಅಪಾರ ಜನಸ್ತೋಮ ಸೇರಿತ್ತು. ಆ ಜನಸ್ತೋಮದಲ್ಲಿ ಸದಭಿರುಚಿಯ ಪ್ರಮುಖರೊಬ್ಬರು ಭಾಗವಹಿಸಿದ್ದರು. ಅವರಿಗೆ ನೃತ್ಯನಾಟಕದ ವಿವರಗಳು ತಿಳಿದಿರಲಿಲ್ಲ. ತಿಳಿದುಕೊಳ್ಳುವ ಕುತೂಹಲದಿಂದ ಅವರು ಅಲ್ಲಿಯೇ ನಿಂತಿದ್ದ ವಾಸುದೇವಾಚಾರ್ಯರನ್ನು “ಈ ನೃತ್ಯ-ನಾಟಕಾನಿಕಿ ರಚಯಿತ ಎವರು?” ಎಂದು (ತೆಲುಗಿನಲ್ಲಿ) ಕೇಳಿದರು.
ವಾಸುದೇವಾಚಾರ್ಯರು ತೆಲುಗಿನಲ್ಲಿನಲ್ಲಿ “ವಾರು” (ಕನ್ನಡದಲ್ಲಿ, ವಾರು ಎಂಬುದರ ಅರ್ಥ ‘ಅವರು’ ಎಂದಾಗುತ್ತದೆ) ಎಂದು ಉತ್ತರಿಸಿದರು.
ಗಲಿಬಿಲಿಗೊಂಡ ಆ ರಸಿಕ ಮಹಾಶಯರು, ಮತ್ತೆ “ವಾರು ಅಂಟೆ ಎವರಂಡಿ?” (ಅವರು ಎಂದರೆ ಯಾರು ಸ್ವಾಮಿ?) ಎಂದು ತುಸು ಕೋಪದಿಂದಲೇ ಕೇಳಿದರು.
ಆಗ ವಾಸುದೇವಾಚಾರ್ಯರು ನಗುತ್ತಾ “ವಾ ಅಂಟೆ ವಾಸುದೇವಾಚಾರ್ಯ; ‘ರು’ ಅಂಟೆ ರುಕ್ಮಿಣಿದೇವಿ” ಎಂದು ನಗೆ ಚೆಲ್ಲಿದರು.
“ವಾರು” ಪದವನ್ನು ಸಂಗೀತರೂಪಿಸಿದ ತಮ್ಮ ಅಂದರೆ ವಾಸುದೇವಾಚಾರ್ಯ ಹೆಸರಿನ ಮೊದಲಕ್ಷರ ‘ವಾ’ ಅಕ್ಷರವನ್ನು ಮತ್ತು ನೃತ್ಯ ರೂಪಿಸಿದ ರುಕ್ಮಿಣಿದೇವಿ ಅವರ ಹೆಸರಿನ ಮೊದಲಕ್ಷರ ‘ರು’ ಅಕ್ಷರವನ್ನು ಸೇರಿಸಿ ಚಮತ್ಕಾರದ ಉತ್ತರವನ್ನು ಕೊಟ್ಟು ತಮ್ಮ ಹಾಸ್ಯಪ್ರಜ್ಞೆಯನ್ನು ಮೆರೆದಿದ್ದರು.