೧೯೬೯ರಲ್ಲಿ ಪ್ರಭಾ ಅತ್ರೆ ಅವರ ಮೊದಲ ಕಛೇರಿ ನಡೆಯಿತು. ಅಂದಿನಿಂದ ದಣಿವಿಲ್ಲದೆ ಸಂಗೀತಕ್ಕೆ ಅರ್ಪಿಸಿಕೊಂಡ ಜೀವನ ಅವರದು. “ಸಂಗೀತದ ಬಗ್ಗೆ ವಿಶೇಷವಾದ ದೃಷ್ಟಿ, ಆಲೋಚನೆ, ಅದನ್ನು ಕಾರ್ಯಗತಗೊಳಿಸುವ ಪ್ರಬಲವಾದ ಕರ್ತೃತ್ವಶಕ್ತಿ ಪ್ರಭಾ ಅತ್ರೆ ಅವರಲ್ಲಿತ್ತು. ಅವಿವಾಹಿತರಾಗಿ ಉಳಿದು, ಸಂಗೀತವನ್ನೇ ಉಸಿರಾಗಿಸಿಕೊಂಡು ಬಾಳಿದ ಪ್ರಭಾ ಅತ್ರೆಯವರು ಪ್ರೀತಿ, ವಿದ್ಯೆ, ನಿಷ್ಠೆ, ಛಲ, ವಿಶಾಲತೆಗಳ ಸಂಕೇತವಾಗಿ ನಮಗೆ ಕಾಣುತ್ತಾರೆ. ಅವರ ಬದುಕು-ಸಂಗೀತಗಳು ತುಂಬ ಶ್ರದ್ಧೆಯಿಂದ, ಮುತುವರ್ಜಿಯಿಂದ ತನು-ಮನ-ಧನವನ್ನೆರೆದು ಕಟ್ಟಿದ, ಸಾವಿರಾರು ಜೀವಿಗಳಿಗೆ ಆಶ್ರಯ ನೀಡಬಲ್ಲಂತಹ ವಿಶಾಲವಾದ ಸರೋವರದಂತೆ ಕಾಣಿಸುತ್ತದೆ” ಎನ್ನುವುದು ಶ್ರೀಮತಿ ದೇವಿ ಅವರ ಮೆಚ್ಚುಗೆಯ ಮಾತಾಗಿದೆ.
ಸಾಹಿತ್ಯಕ್ಷೇತ್ರದಲ್ಲಿ ಮಹೋನ್ನತ ಸಾಧಕರಾದರೂ ಡಾ|| ಎಸ್.ಎಲ್. ಭೈರಪ್ಪ ಅವರು ಶಾಸ್ತ್ರೀಯ ಸಂಗೀತ ಎಂದೊಡನೆ ವಿನೀತರಾಗುತ್ತಾರೆ. ಅವರು ಹಿಂದುಸ್ತಾನಿ ಸಂಗೀತದ ಕಡು ಅಭಿಮಾನಿ. ಶಾಸ್ತ್ರೀಯ ಸಂಗೀತಕ್ಕೆ ಹೋಲಿಸಿದರೆ ಸಾಹಿತ್ಯವು ಏನೇನೂ ಅಲ್ಲ ಎಂದು ಅವರು ನೇರವಾಗಿಯೇ ಹೇಳಿದ್ದಾರೆ. ಅದೇಕೆ ಇದರ ಔನ್ನತ್ಯ ಅಷ್ಟೊಂದು ಹೆಚ್ಚು ಎನ್ನುವ ಪ್ರಶ್ನೆಯ ಉತ್ತರವು ಬಗೆದಂತೆ ಆಳವಾಗುತ್ತಹೋಗುವಂಥದು. ಅದಲ್ಲದೆ, ಜಗತ್ತಿನಲ್ಲಿ ಮಹಾನ್ ಎಂದು ಪರಿಗಣಿಸಲ್ಪಟ್ಟಿರುವ ಭಾರತೀಯ ಸಂಸ್ಕೃತಿಯಲ್ಲಿ ಶಾಸ್ತ್ರೀಯ ಸಂಗೀತವು ಅದರ ಅವಿಭಾಜ್ಯ ಅಂಗವಾಗಿದೆ. ಉತ್ತರೋತ್ತರವಾಗಿ ಶ್ರೇಷ್ಠವೆನಿಸಿರುವ ಭಾರತೀಯ ಸಂಸ್ಕೃತಿಯಂತೆಯೇ ಇಲ್ಲಿಯ ಶಾಸ್ತ್ರೀಯ ಸಂಗೀತ ಕೂಡ ಸಹಸ್ರಾರು ವರ್ಷಗಳಲ್ಲಿ ಬೆಳೆದುಬಂದಂಥದು. ಅದೆಷ್ಟೋ ಮಂದಿ ಇದಕ್ಕೆ ತಮ್ಮ ಕೊಡುಗೆಯನ್ನು ನೀಡಿದ್ದಾರೆ. ಅದನ್ನು ಬೆಳೆಸಿದ್ದಾರೆ; ಅದರೊಂದಿಗೆ ತಾವು ಕೂಡ ಬೆಳೆದಿದ್ದಾರೆ. ಅಂಥವರಲ್ಲಿ ಒಬ್ಬರು ಕಳೆದ ಜನವರಿ ೧೩ರಂದು ನಮ್ಮನ್ನಗಲಿದ ಹಿಂದುಸ್ತಾನಿ ಸಂಗೀತದ ಖ್ಯಾತ ಗಾಯಕಿ ಡಾ. ಪ್ರಭಾ ಅತ್ರೆ ಅವರು.
ಕನ್ನಡಕ್ಕೆ ‘ಸ್ವರಯಾತ್ರೆ’ ಎನ್ನುವ ಶೀರ್ಷಿಕೆಯಲ್ಲಿ ಅನುವಾದಗೊಂಡಿರುವ (ಅನುವಾದಕರು – ಸದಾನಂದ ಕನವಳ್ಳಿ) ಅವರ ಆತ್ಮಚರಿತ್ರೆ ‘Along the Path of Music’ನಲ್ಲಿ ಅವರು ಹೀಗೆ ಹೇಳಿದ್ದಾರೆ: “ಜೀವನದಲ್ಲಿ ದೃಢತೆಯನ್ನು ಸಾಧಿಸಲು ನಾನೇನು ಮಾಡಬೇಕು ಎನ್ನುವ ಬಗ್ಗೆ ನಾನು ಯೋಚಿಸಿದವಳೇ ಅಲ್ಲ. ಹೆಚ್ಚಿನ ಮಹಿಳೆಯರಿಗೆ ಬದುಕಿನ ಈ ಸಮಸ್ಯೆಯು ಮದುವೆಯ ಮೂಲಕ ಪರಿಹಾರಗೊಳ್ಳುತ್ತದೆ. ಅಪ್ಪ-ಅಮ್ಮ ತಮ್ಮ ಮಗಳು ಮದುವೆಯಾಗಬೇಕೆಂದು ಬಹುಶಃ ಭಾವಿಸಿರಬೇಕು; ಆದರೆ ನಾನು ಮದುವೆಯಾಗಲಿಲ್ಲ.”
ಸುದೀರ್ಘ ೯೨ ವರ್ಷಗಳ ಕಾಲ (ಜನನ: ಸೆಪ್ಟೆಂಬರ್ ೧೩, ೧೯೩೨; ಮರಣ: ಜನವರಿ ೧೩, ೨೦೨೪) ಅವರು ಇಂತಹ ನಿಷ್ಠೆಯಿಂದ ಜೀವಿಸಿದರು; ಬಹುಮುಖ ಪ್ರತಿಭೆಯ ಡಾ. ಪ್ರಭಾ ಅತ್ರೆ ಅವರು ಶಾಸ್ತ್ರೀಯ ಸಂಗೀತದೊಂದಿಗೆ ಶಿಕ್ಷಣ, ಸಾಹಿತ್ಯ, ಸಮಾಜಸೇವೆ ಮತ್ತಿತರ ಕ್ಷೇತ್ರಗಳಿಗೆ ಕೂಡ ಅಪೂರ್ವ ಕೊಡುಗೆಯನ್ನು ನೀಡಿದರು. “ಜೀವನದುದ್ದಕ್ಕೂ ಸ್ವತಃ ಜ್ಞಾನದಾಹಿಯಾಗಿ ಇದ್ದು, ಚಿಂತನಶೀಲರಾಗಿ ಬದುಕಿ, ಜೊತೆಗೆ ಓರ್ವ ಜವಾಬ್ದಾರಿಯುತ ಕಲಾವಿದೆಯಾಗಿ ತನ್ನ ಕರ್ತವ್ಯವೇನೆಂಬುದನ್ನು ಅರಿತು ಅದನ್ನು ಮುಂದಿನ ಪೀಳಿಗೆಗೂ ವರ್ಗಾಯಿಸಿದವರು; ಪರಿಶ್ರಮದ ಹಾದಿಯನ್ನು ಕಣ್ಣಮುಂದೆ ತೋರಿದವರು ಎಂದಿದ್ದಾರೆ ಲೇಖಕಿ, ಕಲಾವಿಮರ್ಶಕಿ ಶ್ರೀಮತಿ ದೇವಿ ಪಿ. ಮೈಸೂರು ಅವರು (ರಾಗಧನಶ್ರೀ ಮಾಸಪತ್ರಿಕೆ, ಫೆಬ್ರುವರಿ ೨೦೨೪ ಸಂಚಿಕೆ).
ಬಾಲ್ಯ, ವಿದ್ಯಾಭ್ಯಾಸ
ಸೆಪ್ಟೆಂಬರ್ ೧೩, ೧೯೩೨ರಂದು ಪ್ರಭಾ ಅತ್ರೆ ಪುಣೆಯಲ್ಲಿ ಜನಿಸಿದರು. ತಂದೆ ದತ್ತಾತ್ರೇಯ ಪಿಲಾಜಿ ಯಾನೆ ಅಬಾಸಾಹೇಬ್ ಅತ್ರೆ. ಅವರು ಪುಣೆಯ ರಾಸ್ತಾ ಪೇಠ್ ಎಜುಕೇಶನ್ ಸೊಸೈಟಿಯ ಶಾಲೆಯಲ್ಲಿ ಮುಖ್ಯಶಿಕ್ಷಕರಾಗಿದ್ದರು (ಈಗ ಆ ಶಾಲೆ ಅಬಾಸಾಹೇಬ್ ಅತ್ರೆ ಹೈಸ್ಕೂಲ್ ಮತ್ತು ಜೂನಿಯರ್ ಕಾಲೇಜು ಎನ್ನುವ ಹೆಸರಿನಲ್ಲಿ ಬೆಳೆದುನಿಂತಿದೆ). ಪ್ರಭಾ ಅವರ ತಾಯಿ ಇಂದಿರಾ ಅತ್ರೆ ಅವರು ಅದೇ ಶಾಲೆಯಲ್ಲಿ ಓರ್ವ ಶಿಕ್ಷಕಿಯಾಗಿದ್ದರು; ಆಕೆ ಮಕ್ಕಳ ಕಥೆ ಮತ್ತು ಪದ್ಯಗಳ ಲೇಖಕಿಯಾಗಿ ಹೆಸರು ಗಳಿಸಿದ್ದರು.
ಪ್ರಭಾ ಅವರು ಮೆಟ್ರಿಕ್ಯುಲೇಶನ್(ಎಸ್ಸೆಸ್ಸೆಲ್ಸಿ)ವರೆಗೆ ತನ್ನ ಹೆತ್ತವರು ಕಲಿಸುತ್ತಿದ್ದ ಶಾಲೆಯಲ್ಲೇ ಓದಿದರು. ಸಂಗೀತ ಕ್ಷೇತ್ರಕ್ಕೆ ಅವರ ಪ್ರವೇಶ ಯೋಜಿತ ನಿರ್ಧಾರಕ್ಕಿಂತ ಹೆಚ್ಚಾಗಿ ಒಂದು ಆಕಸ್ಮಿಕ ಸಂದರ್ಭವಾಗಿತ್ತು. ಆಕೆಗೆ ಎಂಟು ವರ್ಷವಿದ್ದಾಗ ತಾಯಿಗೆ ಅನಾರೋಗ್ಯವಾಯಿತು. ಆಗ ಕುಟುಂಬದ ಓರ್ವ ಸ್ನೇಹಿತರು ಸಂಗೀತದಿAದ ಆ ಕಾಯಿಲೆಯನ್ನು ಗುಣಪಡಿಸಬಹುದು (ಹೀಲಿಂಗ್ ಥೆರಪಿ) ಎಂದು ಸಲಹೆ ನೀಡಿದರು. ಆಗ ಬಾಲಕಿ ಪ್ರಭಾ ಮನೆಯಲ್ಲಿ ಹಾಡಲಾಗುತ್ತಿದ್ದ ಸಂಗೀತದ ಸ್ವರ ಮತ್ತು ನಾದಗಳನ್ನು ಆಸಕ್ತಿಯಿಂದ ಆಲಿಸಿದಳು; ಅದೇ ಆಕೆಯ ಶಾಸ್ತ್ರೀಯ ಸಂಗೀತದ ಆಲಿಕೆಗೊಂದು ಸ್ಫೂರ್ತಿಯಾಯಿತು.
ವಿಜಯ ಕರಂದೀಕರ್ ಅವರ ಬಳಿ ಆಕೆ ಸಂಗೀತಾಭ್ಯಾಸವನ್ನು ಆರಂಭಿಸಿದರು. ಪ್ರಸಿದ್ಧ ಸಂಗೀತಗಾರ ಸೋದರ-ಸೋದರಿಯಾದ ಸುರೇಶ್ಬಾಬು ಮಾನೆ ಮತ್ತು ಹೀರಾಬಾಯಿ ಬಡೋದೇಕರ್ ಅವರು ಪ್ರಭಾ ಅವರ ಹಿಂದುಸ್ತಾನಿ ಸಂಗೀತದ ಪ್ರಮುಖ ಗುರುಗಳು. ಅವರು ಕಿರಾನಾ ಘರಾಣದ ಸ್ಥಾಪಕರಾದ ಉಸ್ತಾದ್ ಅಬ್ದುಲ್ ಕರೀಂಖಾನ್ ಅವರ ಮಕ್ಕಳು. ಶಾಸ್ತ್ರೀಯ ಸಂಗೀತದೊಂದಿಗೆ ಪ್ರಭಾ ಅತ್ರೆ ಠುಮ್ರಿ, ದಾದ್ರಾ, ಗಜಲ್, ಭಜನ್ ಎಲ್ಲದರಲ್ಲೂ ವಿಶೇಷವಾದ ಆಸಕ್ತಿ ಹೊಂದಿ ತಮ್ಮದೇ ಆದ ವಿಭಿನ್ನ ಶೈಲಿಯನ್ನು ರೂಪಿಸಿಕೊಂಡಿದ್ದರು. ಅವರ ಹೆಚ್ಚಿನ ಆಸಕ್ತಿಯ ಕ್ಷೇತ್ರವೆಂದರೆ ಖ್ಯಾಲ್ (ವಾದ್ಯ ಸಂಗೀತದ ಸಹಕಾರದೊಂದಿಗೆ ಪ್ರಸ್ತುತಪಡಿಸುವ ಎರಡು ಚರಣದ ಹಾಡುಗಳು) ಸಂಗೀತದ ಸರಗಮ್ (ಸ್ವರಗಳು) ಗಾಯನ. ಖ್ಯಾಲ್ ಸಂಗೀತಕ್ಕೆ ಆಕೆ ಖ್ಯಾತ ಸಂಗೀತಗಾರರಾದ ಉಸ್ತಾದ್ ಅಮೀರ್ಖಾನ್ ಅವರನ್ನು ಮತ್ತು ಠುಮ್ರಿ ಗಾಯನಕ್ಕೆ ಬಡೇ ಗುಲಾಂ ಅಲಿಖಾನ್ ಅವರನ್ನು ಅನುಸರಿಸಿದರು.
“ರಾಗದ ಮಂಡನೆಯಲ್ಲಿ ಸರಗಮ್ನ ಆವಶ್ಯಕತೆ ಕೇವಲ ವ್ಯಾಕರಣ ಎನಿಸುತ್ತದೆ. ಅದು ಭಾವವನ್ನು ಹಿಡಿದಿಟ್ಟುಕೊಳ್ಳಲಾರದು ಎಂಬ ತೀವ್ರವಾದ ವಾದಕ್ಕೆ ಎದುರಾಗಿ ತಮ್ಮ ಆಧಾರಸಹಿತ-ತರ್ಕಬದ್ಧ ಉತ್ತರವಾಗಿ ಪ್ರಭಾ ಎಲ್ಲ ಕಛೇರಿಗಳಲ್ಲಿ ಸರಗಮ್ನ್ನು ಹಾಡುತ್ತಿದ್ದರು; ಮತ್ತು ಆ ಮೂಲಕ ಶ್ರೋತೃಗಳನ್ನು ಯಶಸ್ವಿಯಾಗಿ ಪ್ರಭಾವಿಸುತ್ತಿದ್ದರು; ಅದೇ ವಿಷಯದ ಮೇಲೆ ಪ್ರಬಂಧ ಮಂಡಿಸಿ ಅವರು ಪಿಎಚ್.ಡಿ ಪಡೆದಿದ್ದರು. ಸಂಗೀತದ ಜೊತೆಜೊತೆಗೆ ಆಕೆ ಶಾಸ್ತ್ರೀಯ ನೃತ್ಯ ಕಥಕ್ನಲ್ಲೂ ತರಬೇತಿ ಪಡೆದರು.
ಸಂಗೀತದ ಪಾಂಡಿತ್ಯ, ಪರಿಣತಿಯೊಂದಿಗೆ ಔಪಚಾರಿಕ ಶಿಕ್ಷಣದಲ್ಲೂ ಪ್ರಭಾ ಬಹಳ ಹಿರಿಮೆಯನ್ನು ಸಾಧಿಸಿದ್ದರು. ಫರ್ಗುಸನ್ ಕಾಲೇಜಿನಲ್ಲಿ ಕಲಿತು ವಿಜ್ಞಾನದಲ್ಲಿ ಪದವಿಯನ್ನು ಗಳಿಸಿದರು. ಅನಂತರ ಕಾನೂನು ಪದವಿಯನ್ನು ಗಳಿಸಿದರು. ಬಳಿಕ ಸಂಗೀತ ಅಲಂಕಾರ (ಮಾಸ್ಟರ್ ಆಫ್ ಮ್ಯೂಸಿಕ್) ಮತ್ತು ಸಂಗೀತ ಪ್ರವೀಣ್ (ಡಾಕ್ಟರ್ ಆಫ್ ಮ್ಯೂಸಿಕ್) ಪಡೆದರು. ಪುಣೆಯ ಗಂಧರ್ವ ಮಹಾವಿದ್ಯಾಲಯದಿಂದ ಪಡೆದ ಪಿಎಚ್.ಡಿ ಹಿಂದುಸ್ತಾನಿ ಸಂಗೀತದ ಸರಗಮ್ ಬಗೆಗಿನ ಮಹತ್ತ್ವದ ಕೃತಿ ಎನಿಸಿದೆ. ತಮ್ಮ ಜ್ಞಾನದಾಹವನ್ನು ಪಾಶ್ಚಾತ್ಯ ಸಂಗೀತದ ಕಡೆಗೂ ವಿಸ್ತರಿಸಿದ ಪ್ರಭಾ ಅತ್ರೆ ಲಂಡನ್ನ ಟ್ರಿನಿಟಿ ಕಾಲೇಜ್ ಆಫ್ ಮ್ಯೂಸಿಕ್ನಿಂದ ಪಾಶ್ಚಾತ್ಯ ಸಂಗೀತ ಥಿಯರಿ ಗ್ರೇಡ್ Iಗಿನ್ನು ಪಡೆದರು. ಮರಾಠಿ ನಾಟ್ಯ ಸಂಗೀತದಲ್ಲೂ ಅವರು ಸಾಕಷ್ಟು ಪ್ರಸಿದ್ಧಿ ಪಡೆದಿದ್ದರು.
ಹೊಸರಾಗ ಸೃಷ್ಟಿ
ಸಂಗೀತಕ್ಕೆ ಸಂಬಂಧಿಸಿ ಆಕೆ ಹಲವು ಬಂದಿಶ್ಗಳನ್ನು ರಚಿಸಿದ್ದು, ಅವುಗಳನ್ನು ಸ್ವರಾಂಗಿನಿ ಮತ್ತು ಸ್ವರಾಂಜಿನಿ ಎಂಬ ಹೆಸರಿನ ಎರಡು ಪುಸ್ತಕ ಮತ್ತು ಸಿಡಿಗಳಲ್ಲಿ ಪ್ರಕಟಿಸಿದ್ದಾರೆ. ಅಪೂರ್ವ ಕಲ್ಯಾಣ್, ದರ್ಬಾರಿ ಕೌಂಸ್, ತಿಲಂಗ್, ಪಟದೀಪ್ ಮಲ್ಹಾರ್, ಭೈರವ್, ಮಧುರ್ ಕೌಂಸ್, ರವಿಭೈರವ್ – ಇವು ಪ್ರಭಾ ಅವರು ರಚಿಸಿದ ಹೊಸರಾಗಗಳು. ಸ್ವರಮಯೀ, ಸುಸ್ವರಾಲೀ, ಎನ್ಲೈಟನಿಂಗ್ ದ ಲಿಸನರ್ ಮುಂತಾದವು ಪ್ರಭಾ ಅತ್ರೆ ಅವರು ಬರೆದ ಸಂಗೀತದ ಬಗೆಗಿನ ಪುಸ್ತಕಗಳು. ತಮ್ಮ ಪುಸ್ತಕದೊಂದಿಗೆ ಆಡಿಯೋ ಸಿಡಿಯನ್ನೂ ಇಟ್ಟು ಕೇಳುಗರ ಅಭಿರುಚಿಯನ್ನು ಬೆಳೆಸಲು ಅವರು ಶ್ರಮಿಸಿದ್ದಾರೆ. ಸರಗಮ್ ಜೊತೆ ಕರ್ನಾಟಕ ಸಂಗೀತದ ಗಮಕವನ್ನು ಸೇರಿಸಿ ಅದನ್ನು ಸೌಂದರ್ಯಾತ್ಮಕವಾಗಿ ಹಿಂದುಸ್ತಾನಿ ಸಂಗೀತಕ್ಕೆ ಅಳವಡಿಸಿದರು. ಅದರಿಂದ ಅವರ ಸಂಗೀತವು ಶ್ರೀಮಂತ, ಜೀವಂತ ಮತ್ತು ಹರ್ಷದಾಯಕವಾಯಿತು. ಸುರ ಸರಗಮ್ ಎನ್ನುವ ವಿಷಯ-ಆಧಾರಿತ (theme-based) ಕಛೇರಿಗಳು (ಅದರಲ್ಲಿ ಹಿಂದುಸ್ತಾನಿ ಸಂಗೀತದ ಜೊತೆಗೆ ಕರ್ನಾಟಕ ಸಂಗೀತದ ರಾಗಗಳು ಮತ್ತು ಸೂಕ್ಷ್ಮತೆಗಳು ಸೇರಿರುತ್ತವೆ), ರಾಗರಂಗ್ (ಅದರಲ್ಲಿ ಶಾಸ್ತ್ರೀಯ ಸಂಗೀತದ ಜೊತೆಗೆ ಲಘು ಶಾಸ್ತ್ರೀಯ, ಒಂದೇ ರಾಗದ ಬೇರೆಬೇರೆ ಲಘು ರೂಪಗಳು ಸೇರಿರುತ್ತವೆ) ಪ್ರಭಾವ ಅವರು ರೂಪಿಸಿ ಜನಪ್ರಿಯಗೊಳಿಸಿದಂಥವಾಗಿವೆ. ಆಕಾಶವಾಣಿಯ ಸಹಾಯಕ ನಿರ್ಮಾಪಕಿಯಾಗಿ ಕಾರ್ಯನಿರ್ವಹಿಸಿದ(೧೯೬೦-೭೦) ಪ್ರಭಾ ಅತ್ರೆ ಮುಂಬೈಯ ಎಸ್ಎನ್ಡಿಟಿ ವಿಶ್ವವಿದ್ಯಾಲಯದ ಮುಖ್ಯಸ್ಥರಾಗಿಯೂ (೧೯೭೯-೯೨) ಸೇವೆ ಸಲ್ಲಿಸಿದ್ದರು.
‘ಗಾನ ಗಂಧರ್ವ’ ಸಂಸ್ಥೆಯ ಅಧ್ಯಕ್ಷರಾಗಿ ೨೨ ವರ್ಷ ದುಡಿದಿದ್ದರು. ‘ಸ್ವರಮಯಿ’ ಎನ್ನುವ ಗುರುಕುಲವನ್ನು ಸ್ಥಾಪಿಸಿ, ಅದರ ಮೂಲಕ ಹಲವು ಬಗೆಯ ಸಂಗೀತದ ಚಟುವಟಿಕೆಗಳನ್ನು ನಡೆಸಿದ್ದರು. ಕುತೂಹಲದ ಸಂಗತಿಯೆಂದರೆ, ನಾಟಕರಂಗಕ್ಕೂ ಪ್ರವೇಶಿಸಿ ಹಲವು ಸಂಗೀತನಾಟಕಗಳಲ್ಲಿ ಆ ಕಾಲದ ಪ್ರಸಿದ್ಧ ನಟರೊಂದಿಗೆ ಪ್ರಭಾ ನಟಿಸಿದ್ದರು. ವಾಗ್ಗೇಯಕಾರರಾಗಿ ಅವರು ರಚಿಸಿದ ಸುಮಾರು ೫೫೦ ರಚನೆಗಳು ಮೂರು ಸಂಪುಟಗಳಲ್ಲಿ ಪ್ರಕಟವಾಗಿವೆ. ವಿದೇಶದ ವಿಶ್ವವಿದ್ಯಾಲಯಗಳು ಸೇರಿದಂತೆ ೯ ವಿಶ್ವವಿದ್ಯಾಲಯಗಳಲ್ಲಿ ಪ್ರಭಾ ಅತ್ರೆ ಸಂದರ್ಶಕ ಪ್ರಾಧ್ಯಾಪಕಿಯಾಗಿದ್ದರು. ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅವರ ಮಾರ್ಗದರ್ಶನದಲ್ಲಿ ಪಿಎಚ್.ಡಿ. ಮಾಡಿದವರು ಎಂಟು ಮಂದಿ.
ಪದ್ಮವಿಭೂಷಣ ಪ್ರಶಸ್ತಿ
೧೯೯೦ರಲ್ಲಿ ಪದ್ಮಶ್ರೀ, ೨೦೦೨ರಲ್ಲಿ ಪದ್ಮಭೂಷಣ ಹಾಗೂ ೨೦೨೨ರಲ್ಲಿ ಪದ್ಮವಿಭೂಷಣ ಪ್ರಶಸ್ತಿಗಳು ಅವರನ್ನು ಅಲಂಕರಿಸಿದವು. ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿಯು ೧೯೯೧ರಲ್ಲಿ ಲಭಿಸಿತು. ಪ್ರತಿಷ್ಠಿತ ಕಾಳಿದಾಸ್ ಸಮ್ಮಾನ್ ಕೂಡ ಅವರದಾಗಿತ್ತು. ಜೀವಿತಕಾಲದಲ್ಲಿ ಅವರಿಗೆ ಹಿಂದುಸ್ತಾನಿ ಸಂಗೀತದ ಮಹಾನ್ ಕಲಾವಿದೆ ಎನ್ನುವ ಗೌರವವಿತ್ತು. ವ್ಯಾಪಕ ವಿದೇಶ ಪ್ರವಾಸವನ್ನು ನಡೆಸಿದ ಅವರು, ವಿದೇಶಗಳಲ್ಲಿ ಸಂಗೀತ ಕಛೇರಿಯಲ್ಲದೆ ಉಪನ್ಯಾಸ, ಸೋದಾಹರಣ ಉಪನ್ಯಾಸಗಳನ್ನು ನಡೆಸಿದ್ದರು. ವಿಚಾರಸಂಕಿರಣ, ಕಾರ್ಯಾಗಾರಗಳಲ್ಲಿ ಭಾಗಿಯಾಗಿದ್ದರು.
ಅವರು ಮೇ ೨೦೦೦ರಲ್ಲಿ ಪುಣೆಯಲ್ಲಿ ಡಾ. ಪ್ರಭಾ ಅತ್ರೆ ಪ್ರತಿಷ್ಠಾನ (ಫೌಂಡೇಶನ್) ಎನ್ನುವ ಲಾಭ ದೃಷ್ಟಿಯಿಲ್ಲದ ಸಂಸ್ಥೆಯನ್ನು ಸ್ಥಾಪಿಸಿದರು. ಉದಯೋನ್ಮುಖ ಸಂಗೀತಗಾರರ ಶೋಧ, ಪ್ರೋತ್ಸಾಹ ಮತ್ತು ಸಜ್ಜುಗೊಳಿಸುವಿಕೆಗಳು ಅದರ ಪ್ರಮುಖ ಉದ್ದೇಶಗಳಾಗಿದ್ದವು. ಸಾಂಸ್ಕೃತಿಕ ಕಾರ್ಯಕ್ರಮಗಳು, ಉಪನ್ಯಾಸ, ವಿಚಾರಸಂಕಿರಣ, ಸಮ್ಮೇಳನ, ಕಾರ್ಯಾಗಾರ ಮತ್ತು ಸಾಹಿತ್ಯ ಸಮ್ಮೇಳನಗಳ ಸಂಘಟನೆಯನ್ನು ಕೂಡ ಪ್ರತಿಷ್ಠಾನದ ಮೂಲಕ ಮಾಡಲಾಯಿತು. ಸಾಹಿತ್ಯ ಕೃತಿಗಳ ಪ್ರಕಟಣೆ, ವಾಕ್-ಶ್ರವಣ ರೆಕಾರ್ಡಿಂಗ್, ಪ್ರಾಚ್ಯವಸ್ತು ಸಂಗ್ರಹ, ಸಂಗೀತ ಕ್ಷೇತ್ರದಲ್ಲಿ ಅಗತ್ಯವಿದ್ದ ವ್ಯಕ್ತಿ-ಸಂಸ್ಥೆಗಳಿಗೆ ನೆರವು – ಮುಂತಾಗಿ ಹತ್ತಾರು ಕೆಲಸಗಳನ್ನು ಪ್ರತಿಷ್ಠಾನವು ಮಾಡಿದೆ; ಮಾಡುತ್ತಿದೆ.
ಭೀಮಸೇನ ಜೋಶಿ ಅವರು ತಮ್ಮ ಗುರುಗಳ ಹೆಸರಿನಲ್ಲಿ ಆರಂಭಿಸಿದ ಸವಾಯಿ ಗಂಧರ್ವ ಸಂಗೀತ ಮಹೋತ್ಸವದಲ್ಲಿ ಜೋಶಿಯವರೇ ಕೊನೆಯ ಕಛೇರಿ ನಡೆಸಿ ಮಂಗಳ ಹಾಡುವ ಕ್ರಮವಿತ್ತು. ಮುಂದೆ ಅದೇ ಕಿರಾನಾ ಘರಾಣೆ ಪರಂಪರೆಗೆ ಸೇರಿದ ಪ್ರಭಾ ಅತ್ರೆ ಅವರು ಮಂಗಳ ಹಾಡುತ್ತಿದ್ದರು. ೨೦೦೬ರಿಂದ ಹಿಂದಿನ ವರ್ಷದವರೆಗೂ ಈ ವಾಡಿಕೆ ನಡೆದುಕೊಂಡು ಬಂದಿತ್ತು. ಕೊನೆಯವರೆಗೂ ಹಾಡುತ್ತಲೇ ಇದ್ದ ಪ್ರಭಾ ಅವರು ೯೨ರ ಇಳಿವಯಸ್ಸಿನಲ್ಲಿದ್ದರೂ ಅವರು ತೀರಿಕೊಂಡ ಮರುದಿನವೂ ನಿಗದಿಯಾದ ಕಾರ್ಯಕ್ರಮವಿತ್ತು. ಸಂಗೀತ ಬೋಧನೆಯಲ್ಲಿ ವಿಶೇಷ ಆಸ್ಥೆ ಹೊಂದಿದ್ದ ಅವರು ಅನೇಕ ಶಿಷ್ಯರನ್ನು ರೂಪಿಸಿದ್ದಾರೆ. ಅವರಲ್ಲಿ ಪ್ರಮುಖರಾದವರು ಚೇತನಾ ಬನಾವತ್, ಅಶ್ವಿನಿ ಮೋಡಕ್, ಅತೀಂದ್ರ ಸರ್ವಡೀಕರ್, ಆರತಿ ಕುಂಡಲ್ಕರ್, ರಸಿಕಾ ಕುಲಕರ್ಣಿ ಕರ್ಮಾಲೇಕರ್ ಹಾಗೂ ಡಾ. ಸಾಧನಾ ಶಿಲೇದರ್.
೧೯೬೯ – ಮೊದಲ ಕಛೇರಿ
೧೯೬೯ರಲ್ಲಿ ಪ್ರಭಾ ಅತ್ರೆ ಅವರ ಮೊದಲ ಕಛೇರಿ ನಡೆಯಿತು. ಅಂದಿನಿಂದ ದಣಿವಿಲ್ಲದೆ ಸಂಗೀತಕ್ಕೆ ಅರ್ಪಿಸಿಕೊಂಡ ಜೀವನ ಅವರದು. “ಸಂಗೀತದ ಬಗ್ಗೆ ವಿಶೇಷವಾದ ದೃಷ್ಟಿ, ಆಲೋಚನೆ, ಅದನ್ನು ಕಾರ್ಯಗತಗೊಳಿಸುವ ಪ್ರಬಲವಾದ ಕರ್ತೃತ್ವಶಕ್ತಿ ಪ್ರಭಾ ಅತ್ರೆ ಅವರಲ್ಲಿತ್ತು. ಅವಿವಾಹಿತರಾಗಿ ಉಳಿದು, ಸಂಗೀತವನ್ನೇ ಉಸಿರಾಗಿಸಿಕೊಂಡು ಬಾಳಿದ ಪ್ರಭಾ ಅತ್ರೆಯವರು ಪ್ರೀತಿ, ವಿದ್ಯೆ, ನಿಷ್ಠೆ, ಛಲ, ವಿಶಾಲತೆಗಳ ಸಂಕೇತವಾಗಿ ನನಗೆ ಕಾಣುತ್ತಾರೆ. ಅವರ ಬದುಕು-ಸಂಗೀತಗಳು ತುಂಬ ಶ್ರದ್ಧೆಯಿಂದ, ಮುತುವರ್ಜಿಯಿಂದ ತನು-ಮನ-ಧನವನ್ನೆರೆದು ಕಟ್ಟಿದ, ಸಾವಿರಾರು ಜೀವಿಗಳಿಗೆ ಆಶ್ರಯ ನೀಡಬಲ್ಲಂತಹ ವಿಶಾಲವಾದ ಸರೋವರದಂತೆ ಕಾಣಿಸುತ್ತದೆ” ಎನ್ನುವುದು ಶ್ರೀಮತಿ ದೇವಿ ಅವರ ಮೆಚ್ಚುಗೆಯ ಮಾತಾಗಿದೆ.
ಸಂದರ್ಶನದಲ್ಲಿ
ಡಾ. ಪ್ರಭಾ ಅತ್ರೆ ಅವರು ಮಾಧ್ಯಮಕ್ಕೆ ನೀಡಿದ ಒಂದು ಸಮಗ್ರ ಸಂದರ್ಶನದ ಆಯ್ದ ಭಾಗಗಳು ಹೀಗಿವೆ:
ಪ್ರಶ್ನೆ: ನೀವು ಸಂಗೀತಕ್ಕೆ ಬಂದ ಹಿನ್ನೆಲೆಯೇನು?
ಉತ್ತರ: ನಾನು ಸಂಗೀತಗಾರರ ಕುಟುಂಬದಿಂದ ಬಂದವಳಲ್ಲ. ನನಗೆ ಸಂಗೀತದ ಬಗ್ಗೆ ಯಾವುದೇ ಕೌಟುಂಬಿಕ ಹಿನ್ನೆಲೆಯಿಲ್ಲ. ನಮ್ಮ ಮನೆಯಲ್ಲಿ ಯಾರೂ ಶಾಸ್ತ್ರೀಯ ಸಂಗೀತವನ್ನು ಕೇಳುತ್ತಲೂ ಇರಲಿಲ್ಲ. ಆದರೆ ನಮ್ಮ ತಂದೆ ಶಾಲೆಯ ಎಲ್ಲ ಪಾಠ್ಯೇತರ ಚಟುವಟಿಕೆಗಳಲ್ಲಿ ಭಾಗವಹಿಸಲು ಒತ್ತಾಯಿಸುತ್ತಿದ್ದರು. ಹಾಡುವುದು ಅದರಲ್ಲೊಂದು. ಆದರೆ ನಾನು ಸಂಗೀತದ ಯಾವುದೇ ತರಗತಿಗೆ ಸೇರಿಕೊಳ್ಳಲಿಲ್ಲ. ನಿಜವೆಂದರೆ, ನಮ್ಮ ಮನೆಯಲ್ಲಿ ಸಂಗೀತಕ್ಕೆ ಪ್ರವೇಶವನ್ನು ದೊರಕಿಸಿಕೊಟ್ಟದ್ದು ಅಮ್ಮನ ಅನಾರೋಗ್ಯ. ತಾಯಿ ತನ್ನ ಅನಾರೋಗ್ಯದ ಬಗ್ಗೆ ಕೊರಗುತ್ತ ಇದ್ದರು. ಸಂಗೀತದಿAದ ಆರೋಗ್ಯ ಬರಬಹುದೆಂದು ಆಕೆ ಸಂಗೀತ ಪಾಠವನ್ನು ಹೇಳಿಸಿಕೊಳ್ಳತೊಡಗಿದರು. ನಾಲ್ಕೆöÊದು ಪಾಠಗಳಾಗುವಾಗ ಸಂಗೀತಪಾಠಕ್ಕೆ ವಿದಾಯವನ್ನೂ ಹೇಳಿದರು. ಸಮೀಪವೇ ಕುಳಿತಿರುತ್ತಿದ್ದ ನನಗೆ ಅಷ್ಟರೊಳಗೆ ಸಂಗೀತದಲ್ಲಿ ಆಸಕ್ತಿ ಮೂಡಿತ್ತು.
ಪೂರ್ಣಾವಧಿ ಸಂಗೀತಗಾರ್ತಿ
ಪ್ರಶ್ನೆ: ಈಗ ನೀವು ಪೂರ್ಣಾವಧಿ ಸಂಗೀತಗಾರ್ತಿ ಆಗಿದ್ದೀರಿ; ಇದು ನಿಮ್ಮ ಯೋಜನೆಯ ಪ್ರಕಾರ ನಡೆಯಿತೆ?
ಉ: ನನ್ನ ಹೆತ್ತವರಾಗಲಿ, ನಾನಾಗಲಿ ಈ ರೀತಿ ಯೋಜನೆ ಹಾಕಿಕೊಂಡದ್ದಿಲ್ಲ. ವಿಧಿಯೇ ನನ್ನನ್ನು ಸಂಗೀತಗಾರ್ತಿಯಾಗಿ ರೂಪಿಸಿತು. ಇದು ಸಹಜವಾಗಿಯೇ ನಡೆಯಿತು. ಜನ ನನ್ನ ಸಂಗೀತವನ್ನು ಮೆಚ್ಚಿದ್ದಷ್ಟೇ ಅಲ್ಲ; ಸಂಭಾವನೆ ಕೂಡ ಕೊಡಲಾರಂಭಿಸಿದರು. ಕಾಲೇಜು ಶಿಕ್ಷಣದ ಬಳಿಕ ೧೯೬೦ರಲ್ಲಿ ನಾನು ಆಕಾಶವಾಣಿಗೆ ಸೇರಿದೆ. ೧೯೭೦ರಲ್ಲಿ ಅಲ್ಲಿಯ ಹುದ್ದೆಗೆ ರಾಜೀನಾಮೆ ನೀಡಿ, ಸಂಗೀತವನ್ನು ಪೂರ್ಣಾವಧಿ ಉದ್ಯೋಗವನ್ನಾಗಿ ಆರಿಸಿಕೊಂಡೆ. ೧೯೭೯ರ ಹೊತ್ತಿಗೆ ಸಂಗೀತ ಶಿಕ್ಷಣದ ಬಗೆಗಿನ ನನ್ನ ಆಸಕ್ತಿ ಮೇಲಕ್ಕೆ ಬಂತು. ಅದರಿಂದಾಗಿ ಮುಂಬೈಯ ಎಸ್ಎನ್ಡಿಟಿ ಮಹಿಳಾ ವಿಶ್ವವಿದ್ಯಾಲಯಕ್ಕೆ ಸೇರಿಕೊಂಡೆ. ಅಲ್ಲಿ ೧೯೯೨ರವರೆಗೂ ಪ್ರೊಫೆಸರ್ ಮತ್ತು ಸಂಗೀತ ವಿಭಾಗ ಮುಖ್ಯಸ್ಥೆಯಾಗಿ ಕಾರ್ಯನಿರ್ವಹಿಸಿದೆ. ವಿಶ್ವವಿದ್ಯಾಲಯದಲ್ಲಿ ಕೆಲಸ ಮಾಡಿದ್ದರಿಂದ ನನ್ನ ಗಾಯನಕ್ಕೇನೂ ತೊಂದರೆಯಾಗಲಿಲ್ಲ; ಏಕೆಂದರೆ ಹೆಚ್ಚಿನ ಕಛೇರಿಗಳು ವಾರದ ಕೊನೆಯಲ್ಲಿ ನಡೆಯುತ್ತಿದ್ದವು. ಉತ್ತಮ ವೇದಿಕೆ ಕಲಾವಿದರಾಗಬೇಕಿದ್ದರೆ ವಿವಿಧ ದೃಷ್ಟಿಕೋನಗಳಿಂದ ಸಂಗೀತದ ಬಗ್ಗೆ ಅಧ್ಯಯನ ಮಾಡಬೇಕು; ಮತ್ತು ಅನುಭವವನ್ನು ಗಳಿಸಿಕೊಳ್ಳಬೇಕು. ಆಕಾಶವಾಣಿ ಮತ್ತು ಎಸ್ಎನ್ಡಿಟಿ ವಿಶ್ವವಿದ್ಯಾಲಯಗಳ ಸಹಯೋಗದಿಂದಾಗಿ ಸಂಗೀತದ ಬಗೆಗಿನ ನನ್ನ ಚಿಂತನೆ ತುಂಬ ಶ್ರೀಮಂತವಾಯಿತು.
ಪ್ರ: ಸಂಗೀತವನ್ನು ನೀವು ಯಾರಿಂದ ಕಲಿತಿರಿ?
ಉ: ಶಾಸ್ತ್ರೀಯ ಸಂಗೀತವನ್ನು ನಾನು ಮೊದಲಿಗೆ ಪುಣೆಯಲ್ಲಿ ವಿಜಯ ಕರಂದೀಕರ್ ಅವರ ಬಳಿ ಕಲಿತೆ. ಮುಂದೆ ಉನ್ನತ ಶಿಕ್ಷಣಕ್ಕಾಗಿ ಕಿರಾನಾ ಘರಾಣೆಯ ಪ್ರಖ್ಯಾತ ಸಂಗೀತಗಾರರಾದ ಸುರೇಶ್ಬಾಬು ಮಾನೆ ಮತ್ತು ಹೀರಾಬಾಯಿ ಬಡೋದೇಕರ್ ಅವರನ್ನು ಆಶ್ರಯಿಸಿದೆ. ಮುಂದೆ ೧೯೬೦ರಲ್ಲಿ ಉಸ್ತಾದ್ ಅಮೀರ್ಖಾನ್ ಅವರ ಹಿರಿಯ ಶಿಷ್ಯ ಶ್ರೀಕಾಂತ ಬಕ್ರೆ ಅವರ ಬಳಿ ಹೋದಾಗ ನನಗೆ ದಿ|| ಖಾನ್ ಸಾಹೇಬರ ಶೈಲಿಯ ಪರಿಚಯವಾಯಿತು. ಅದರಿಂದಾಗಿ ಸಂಗೀತದ ಬಗೆಗಿನ ನನ್ನ ಚಿಂತನೆಯಲ್ಲಿ ಪ್ರಮುಖ ಬದಲಾವಣೆಗಳು ಉಂಟಾದವು. ನನ್ನ ಠುಮ್ರಿ ಗಾಯನಕ್ಕಾಗಿ ಉಸ್ತಾದ್ ಬಡೇ ಗುಲಾಂ ಅಲಿಖಾನ್ ಅವರಿಗೆ ನಾನು ಅಷ್ಟೇ ಕೃತಜ್ಞಳಾಗಿದ್ದೇನೆ. ನಾನು ಅವರಿಂದ ಕಲಿಯದಿದ್ದರೂ ಕೂಡ ನನ್ನ ಠುಮ್ರಿ ಗಾಯನದ ಬೇರು ಅವರ ಶೈಲಿಯಲ್ಲಿದೆ.
ಒಂದೇ ರಾಗದ ಪಾಠ
ಪ್ರ: ಸುರೇಶ್ಬಾಬು ಮಾನೆ ಅವರ ಶಿಷ್ಯತ್ವ ಹೇಗೆ ದೊರೆಯಿತು?
ಉ: ಸುರೇಶ್ಬಾಬು ಅವರಂತಹ ಗುರುಗಳು ಸಿಗುವುದಕ್ಕೆ ಯಾರಾದರೂ ಪುಣ್ಯ ಮಾಡಿರಬೇಕು. ನನ್ನ ಸಂಗೀತವನ್ನು ಕೇಳಿದ ನನ್ನ ತಂದೆಯ ಗೆಳೆಯರೊಬ್ಬರು ಮಾನೆ ಅವರ ಹೆಸರು ಹೇಳಿದರು. ಅವರ ಫೀಸು ಕೊಡಲಾದೀತೇ ಎಂದು ನನ್ನ ತಂದೆ ಅನುಮಾನಿಸಿದರು. ಆದರೆ ಅವರ ಗೆಳೆಯ ಸುರೇಶ್ಬಾಬು ಅವರಿಗೆ ನನ್ನ ಸ್ವರ ಇಷ್ಟವಾದರೆ ಫೀಸು ಸಮಸ್ಯೆ ಆಗಲಾರದು ಎಂದು ಭರವಸೆ ನೀಡಿದರು. ಆ ಶುಭದಿನ ಬಂದೇ ಬಂತು. ಹೀರಾಬಾಯಿ ಮತ್ತು ಸುರೇಶ್ಬಾಬು ನನ್ನ ಮುಂದೆ ಕುಳಿತಾಗ ನಾನು ಮೊದಲಿಗೆ ಒಂದು ರಾಗವನ್ನು ಹಾಡಿದೆ; ಅನಂತರ ಒಂದು ಠುಮ್ರಿ. ಅನಂತರ ಸ್ವಲ್ಪ ಹೊತ್ತು ಭಾರೀ ತಳಮಳದಲ್ಲಿ ಕಾದೆ; ಆಗ ಸುರೇಶ್ಬಾಬು ಸಣ್ಣ ಸ್ವರದಲ್ಲಿ ಹೇಳಿದರು: ‘ಅವಳಿಗೆ ನಾನು ಕಲಿಸುತ್ತೇನೆ’ ಎಂಬುದಾಗಿ; ಆಗ ನನಗೆ ಕೇವಲ ೧೪ ವರ್ಷ.
ಯಮನ್ ರಾಗದ ತಾಲೀಮು
ಪ್ರ: ಸುರೇಶ್ಬಾಬು ಮಾನೆ ಅವರ ಬೋಧನೆಯ ಕ್ರಮ ಹೇಗೆ?
ಉ: ಅವರು ಯಾವಾಗಲೂ ಗುಣಮಟ್ಟ ಮತ್ತು ಸ್ವಂತಿಕೆಯನ್ನು ನಿರೀಕ್ಷಿಸುತ್ತಿದ್ದರು. ಅವರು ಇಡೀ ಒಂದು ವರ್ಷ ನನ್ನಿಂದ ಯಮನ್ ರಾಗದ ತಾಲೀಮು ಮಾಡಿಸಿದರು. ಒಂದು ದಿನ ನಾನು ಅವರಲ್ಲಿ ಬೇರೆ ಏನಾದರೂ ಕಲಿಸಿ ಎಂದು ಬೇಡಿಕೊಂಡೆ. ಆಗ ಅವರು ನನಗೆ ಯಮನ್ ರಾಗ ಪೂರ್ತಿ ಕರಗತವಾಯಿತೇ ಎಂದು ಕೇಳಿದರು. ನನಗೆ ‘ಹೌದು’ ಎಂದು ಹೇಳಲು ಸಾಧ್ಯವಾಗಲಿಲ್ಲ; ಅವರು ತುಂಟತನದ ನಗೆಯಾಡಿದರು. ಯಮನ್ನಂತಹ ಪ್ರಧಾನ ರಾಗದ ಮೇಲೆ ಪೂರ್ತಿ ಹಿಡಿತ ಸಿಕ್ಕಿದರೆ ಇತರ ರಾಗಗಳನ್ನು ಕಲಿಯುವುದು ಸುಲಭವಾಗುತ್ತದೆ ಎಂಬುದು ಅವರ ನಂಬಿಕೆಯಾಗಿತ್ತು. ಅವರ ಆ ಅಭಿಪ್ರಾಯ ಸರಿಯಾಗಿಯೇ ಇತ್ತು. ಯಮನ್ ರಾಗವನ್ನು ಕಲಿತ ಅನಂತರ ಇತರ ರಾಗಗಳನ್ನು ಕಲಿಯಲು ನನಗೆ ಯಾವುದೇ ಕಷ್ಟವಾಗಲಿಲ್ಲ. ಕೆಲವು ಸಲ ಸುರೇಶ್ಬಾಬು ಅವರು ನನಗೆ ರಾಗದ ಕೇವಲ ಆರೋಹ-ಅವರೋಹ ಮತ್ತು ಪಕಡ್ಗಳನ್ನು ಕಲಿಸಿ, ರಾಗವನ್ನು ಮುಂದುವರಿಸುವAತೆ ಹೇಳುತ್ತಿದ್ದರು. ತಾನು ಹಾಡುವಂತೆಯೇ ಹಾಡಬೇಕೆಂದು (ಅನುಕರಿಸುವುದು) ಅವರೆಂದೂ ಹೇಳಲಿಲ್ಲ. ಬದಲಾಗಿ ಹೊಸ ವಿನ್ಯಾಸಗಳನ್ನು ರೂಪಿಸಲು ಅವರು ಪ್ರೋತ್ಸಾಹಿಸಿದರು. ಅವರು ನನ್ನನ್ನು ಸ್ವತಂತ್ರ, ವಿಭಿನ್ನ ಹಾಗೂ ಸೃಷ್ಟಿಶೀಲಳನ್ನಾಗಿ ರೂಪಿಸಿದರು.
ಪ್ರ: ಸುರೇಶ್ಬಾಬು ಅವರ ನಿಧನದ ಅನಂತರ ಹೀರಾಬಾಯಿ ಬಡೋದೇಕರ್ ಅವರ ತಾಲೀಮು ನಿಮಗೆ ಹೇಗೆ ಸಹಕಾರಿಯಾಯಿತು?
ಹೀರಾಬಾಯಿ ಕಛೇರಿ ಕೌಶಲಗಳು
ಉ: ಹೀರಾಬಾಯಿ ಆಗ ತಮ್ಮ ವೃತ್ತಿಜೀವನದ ಉತ್ತುಂಗದಲ್ಲಿದ್ದರು; ದೇಶದ ಉದ್ದಗಲಕ್ಕೂ ಆಗಾಗ ಕಛೇರಿಗಳಿಗಾಗಿ ಪ್ರವಾಸ ಮಾಡುತ್ತಿದ್ದರು; ಆಗೆಲ್ಲ ನಾನು ಅವರೊಂದಿಗೆ ಹೋಗುತ್ತಿದ್ದೆ. ಅದರಿಂದ ಸಿಕ್ಕಿದ ಅನುಭವ ಅಪೂರ್ವವಾದದ್ದು; ವೇದಿಕೆಯ ಮೇಲೆ ಬಳಸುವಂತಹ ಉತ್ತಮ ಕೌಶಲಗಳನ್ನು ನಾನು ಅವರಿಂದ ಕಲಿತೆ.
ಪ್ರ: ನಿಮ್ಮ ಮೊದಲ ಕಛೇರಿ ಹೇಗಿತ್ತು?
ಉ: ನಮ್ಮ ಮಹಾರಾಷ್ಟ್ರದಲ್ಲಿ ಗಣೇಶೋತ್ಸವಗಳ ಒಂದು ಪರಂಪರೆಯಿದೆ. ನಾನು ಮೊದಲಾಗಿ ಹಾಡಿದ್ದು ಅಲ್ಲೇ. ಸುಮಾರು ಐವತ್ತು ವರ್ಷಗಳಾಗಿರಬಹುದು. ನೀವು (ಸಂದರ್ಶಕರು) ಆಗ ಹುಟ್ಟಿರಲಿಕ್ಕಿಲ್ಲ. (ನಗು) ಗಣೇಶೋತ್ಸವಗಳಲ್ಲಿ ನಾನು ಯಾವಾಗಲೂ ಹಾಡುತ್ತಿದ್ದೆ. ಅನಂತರ ನನ್ನನ್ನು ಕಛೇರಿಗಳಿಗೆ ಕರೆಯಲಾರಂಭಿಸಿದರು. ಮೊದಲ ಕಛೇರಿಗೆ ಮುನ್ನ ನಾನು ನಾನು ಸ್ವಲ್ಪ ಗಲಿಬಿಲಿಗೊಂಡಿರಬೇಕು. ಓರ್ವ ಗಾಯಕ (ಗಾಯಕಿ) ಪ್ರತಿಯೊಂದು ಕಛೇರಿಗೆ ಮುನ್ನ ಕೆಲವು ನಿಮಿಷ ಆತಂಕದಲ್ಲಿರುತ್ತಾರೆ. ಆರಂಭದಲ್ಲಿ ಗಲಿಬಿಲಿ ಇದ್ದರೂ ಕ್ರಮೇಣ ಅದು ನಿವಾರಣೆಯಾಗುತ್ತದೆ; ಮತ್ತೆ ಏನೂ ಚಿಂತೆ ಇರುವುದಿಲ್ಲ. ಆದರೆ ಎಲ್ಲ ಕಛೇರಿಗಳಲ್ಲಿ ಮೊದಲಾಗಿ ಶ್ರೋತೃಗಳನ್ನು ಎದುರಿಸುವಾಗ ಸ್ವಲ್ಪ ಗಲಿಬಿಲಿಯಾಗುತ್ತದೆ.
ಪ್ರ: ಕಿರಾನಾ ಘರಾಣೆಯ ವಿಶಿಷ್ಟ ಗುಣ-ಲಕ್ಷಣಗಳೇನು?
ಉ: ಸಾಮಾನ್ಯರಿಗೆ ಕಿರಾನಾದ ನಾದದ ಸವಿಯು ಮನಸ್ಸಿಗೆ ನೆಮ್ಮದಿಯನ್ನು ತರುತ್ತದೆ; ಮತ್ತು ವಿಶೇಷವಾದ ಭಾವನೆಗಳನ್ನು ಸ್ಫುರಿಸುತ್ತದೆ. ಸ್ವರವು (voice) ನೇರವಾಗಿ ಹೃದಯಕ್ಕೆ ಮುಟ್ಟುತ್ತದೆ. ಅದರಿಂದ ನಿಮಗೆ ರೋಮಾಂಚನವಾಗಬಹುದು. ಕಿರಾನಾ ಘರಾಣೆಯ ಸಂಗೀತವನ್ನು ಸವಿಯಲು ‘ಶಾಸ್ತ್ರ’ದ ಜ್ಞಾನ ಬೇಕಿಲ್ಲ. ಇದರಲ್ಲಿ ಗಾಯನದ ಶೈಲಿಯು ಹೆಜ್ಜೆಹೆಜ್ಜೆಗೂ ರಾಗದ ಸಂರಚನೆಯನ್ನು (structure) ಅರಳಿಸುತ್ತಹೋಗುತ್ತದೆ. ಪ್ರತಿಯೊಂದು ಸ್ವರವು (note) ಭಾವನೆಯಲ್ಲಿ ಅದ್ದಿದಂತಿದ್ದು, ಅದರಿಂದಾಗಿ ಸಾಮಾನ್ಯ ಶ್ರೋತೃವನ್ನು ಕೂಡ ಸಂಗೀತ ಸೃಷ್ಟಿಯಲ್ಲಿ ಒಳಗೊಳ್ಳುತ್ತದೆ. ಪಾವಿತ್ರ್ಯ ಮತ್ತು ಸವಿಯೇ ಇದರ ಸಾರ. ಒಂದು ರೀತಿಯಲ್ಲಿ ಈ ಘರಾಣೆ ಅಂತರ್ಮುಖಿಯಾದದ್ದು; ಪ್ರದರ್ಶನ, ಭಾವೋದ್ರೇಕಗಳಿಗೆ ಇಲ್ಲಿ ಅವಕಾಶವಿಲ್ಲ.
ಪ್ರ: ನಿಮ್ಮ ಸಂಗೀತದ ಬಗ್ಗೆ ನಿಮ್ಮ ಅನಿಸಿಕೆಯೇನು?
ಉ: ನನ್ನ ಶೈಲಿಯ ಆಧಾರ ಕಿರಾನಾ ಘರಾಣೆಯಾದರೂ ಅದಕ್ಕೊಂದು ಆಧುನಿಕ ಪರಿವೇಷವೂ (ಸ್ವರೂಪ) ಇದೆ. ಭಾರತೀಯರಿಂದ ಆರಂಭಿಸಿ ವಿದೇಶದ, ಜಗತ್ತಿನಾದ್ಯಂತದ ಎಲ್ಲ ಬಗೆಯ ಸಂಗೀತಗಳು ನನ್ನ ಸಂಗೀತವನ್ನು ಶ್ರೀಮಂತಗೊಳಿಸಿವೆ. ಎರಡನೆಯದಾಗಿ, ನನಗಿರುವ ಪ್ರಬಲ ಶೈಕ್ಷಣಿಕ ಹಿನ್ನೆಲೆ, ತರಬೇತಿ ಮತ್ತು ಅನುಭವಗಳಿಂದಾಗಿ ಪರಂಪರೆಯ ಹೆಸರಿನಲ್ಲಿ ನಾನು ಯಾವುದನ್ನೂ ಕುರುಡಾಗಿ ಸ್ವೀಕರಿಸುವುದಿಲ್ಲ. ವಸ್ತುನಿಷ್ಠತೆ, ವಿಶ್ಲೇಷಣಾ ಸಾಮರ್ಥ್ಯ, ಆಧುನಿಕತೆ, ಸ್ಪಂದನಶೀಲತೆ ಮತ್ತು ಆಯ್ಕೆಗಳು ನನ್ನ ಸಂಗೀತದಲ್ಲಿ ಮಹತ್ತ್ವ ಪಡೆಯುತ್ತವೆ. ನಾದದ ಸೌಂದರ್ಯ, ಭಾವಭರಿತವಾದ ಸ್ವರಗಳು, ನಾದದ ಸಂರಚನೆಯಲ್ಲಿ ಏರಿಳಿತ, ಆ ಮೂಲಕ ಭಾವನಾತ್ಮಕತೆ, ‘ಕಣ’ ಸ್ವರಗಳ ವಿಪುಲ ಬಳಕೆ, ಆಲಾಪದಲ್ಲಿ ದೀರ್ಘ ಮತ್ತು ನಯವಾದ ಇಳಿಜಾರುಗಳು, ಏಕಕಾಲದಲ್ಲಿ ಸರಳ ಮತ್ತು ಸಂಕೀರ್ಣವಾದ ಸುಂದರ ಸ್ವರಗುಚ್ಛಗಳು (phrases), ಆ ಮೂಲಕ ರಾಗದ ಸುಂದರ ಸಂರಚನೆ, ಖ್ಯಾಲ್, ಠುಮ್ರಿಯಂತಹ ವಿಶಿಷ್ಟ ರೂಪಗಳು, ಪರಂಪರೆ ಮತ್ತು ತರ್ಕಬದ್ಧತೆಯ ಆಧಾರದಲ್ಲಿ ರಾಗದ ವ್ಯಾಖ್ಯಾನ, ಪರಂಪರೆ ಮತ್ತು ಆಧುನಿಕತೆಯ ಸೂಕ್ತ ಸಮತೋಲನ, ವಿನ್ಯಾಸ, ಸ್ಪಷ್ಟತೆ ಮತ್ತು ತಾನ್ಗಳ ವೇಗ, ಸರಗಮ್ ಸ್ವರಗುಚ್ಛಗಳ ಮೇಲೆ ಒತ್ತು, ಕರ್ನಾಟಕ ಸಂಗೀತದ (ರಾಗಗಳು ಮತ್ತು ಗಮಕಗಳು) ಕಡೆಗೆ ಬಲವಾದ ಒಲವು, ರಾಗದ ಲಹರಿಯನ್ನು (ಮೂಡ್) ಉಳಿಸಿಕೊಳ್ಳುವುದಕ್ಕಾಗಿ ಬಡಾ ಮತ್ತು ಚೋಟಾ ಖ್ಯಾಲ್ಗಳ ಸಾಹಿತ್ಯದ ಬಳಕೆ, ಶಬ್ದಗಳ ಉಚ್ಚಾರದಲ್ಲಿ ಸ್ಪಷ್ಟತೆ, ತೀವ್ರವಾದ ಸೌಂದರ್ಯಪ್ರಜ್ಞೆ ಮತ್ತು ಭಾವನೆಗಳ ಶ್ರೀಮಂತಿಕೆ’ – ಇವೆಲ್ಲ ನನ್ನ ಸಂಗೀತದಲ್ಲಿವೆ ಎಂದು ಭಾವಿಸುತ್ತೇನೆ.
ಸ್ವರ–ಉಸಿರಾಟ
ಪ್ರ: ಶಾಸ್ತ್ರೀಯ ಸಂಗೀತದ ಗಾಯಕರಿಗೆ ಬೇಕಾದ ಪ್ರಮುಖ ಗುಣ-ಸ್ವಭಾವ-ಕೌಶಲಗಳೇನು?
ಉ: ಗಾಯಕರಿಗೆ ಮುಖ್ಯವಾದದ್ದು ಕಂಠ ಅಥವಾ ಸ್ವರ. ಒಳ್ಳೆಯ ಸ್ವರದ ಜೊತೆಗೆ ಉತ್ತಮ ಉಸಿರಾಟವಿದ್ದರೆ ಆಶ್ಚರ್ಯಕರ ಸಂಗತಿಗಳನ್ನು ಸಾಧಿಸಬಹುದು. ಒಳ್ಳೆಯ ಸ್ವರ ಇಲ್ಲದಿದ್ದರೆ ಸಂಗೀತ ಆಗಲೇ ತಿರಸ್ಕೃತವಾಗಬಹುದು. ತಲೆ(ಚಿಂತನೆ) ಮತ್ತು ಹೃದಯಗಳನ್ನು ಅರಿಯುವ ಮುನ್ನವೇ ಸುಂದರ ಮುಖದಿಂದ ಆಕರ್ಷಿತವಾಗುವಂತೆಯೇ ಇದು. ಸಹಜ ಸ್ವರವನ್ನು ಮತ್ತಷ್ಟು ಉತ್ತಮಗೊಳಿಸಿಕೊಳ್ಳಬೇಕು. ಉಸಿರಾಟದ ಮೇಲೆ ಒಳ್ಳೆಯ ನಿಯಂತ್ರಣ ಇರಬೇಕು. ಸಂಗೀತಗಾರನಿಗೆ ಒಂದು ಒಳ್ಳೆಯ ಚಿಂತನೆ ಮನಸ್ಸಿಗೆ ಬರುತ್ತಲೇ ಅದು ಸುಲಭದಲ್ಲಿ ಗಾಯನದಲ್ಲಿ ಕಾಣಿಸಬೇಕು. ಸಂಗೀತದ ಸೌಧವನ್ನು ನಿರ್ಮಿಸಲು ಒಳ್ಳೆಯ ಸ್ವರ ಮತ್ತು ಹಿಡಿತದಲ್ಲಿರುವ ಉಸಿರಾಟಗಳು ಅನಿವಾರ್ಯ. ಶಬ್ದಗಳ (ಸಾಹಿತ್ಯ) ಒಳ್ಳೆಯ ಉಚ್ಚಾರ ಮತ್ತು ಅವುಗಳಲ್ಲಿ ಅಡಗಿದ ಭಾವನೆಗಳನ್ನು ಪರಿಣಾಮಕಾರಿಯಾಗಿ ಹೊರಗೆ ತಂದು ಪ್ರದರ್ಶಿಸುವುದು ಕಛೇರಿಯ ಗುಣಮಟ್ಟವನ್ನು ಎತ್ತರಿಸುತ್ತವೆ. ಶಾಸ್ತ್ರೀಯ ಸಂಗೀತವನ್ನು ಸಾಮಾನ್ಯ ಶ್ರೋತೃವಿಗೆ ತಲಪಿಸುವಲ್ಲಿ ಪದಗಳು (ಸಾಹಿತ್ಯ) ಬಹಳಷ್ಟು ನೆರವಾಗುತ್ತವೆ. ಆತ ಸಂಗೀತವನ್ನು ಪದಗಳು ಹಾಗೂ ಅವುಗಳ ಅರ್ಥದ ಮೂಲಕ ಗ್ರಹಿಸುತ್ತಾನೆ. ಶಾಸ್ತ್ರೀಯ ಸಂಗೀತದ ಅಮೂರ್ತ ಸ್ವರೂಪವು ಸ್ಪಷ್ಟವಾದ ಅರ್ಥವನ್ನು ಪಡೆದುಕೊಳ್ಳುವುದು ರಾಗದ ವಿಸ್ತರಣೆಯ ವೇಳೆ ಬರುವ ಸಾಹಿತ್ಯದ ವಿವೇಚನೆಸಹಿತ ಬಳಕೆಯ ಮೂಲಕ.
ಸಂಗೀತಗಾರನು ಕಾಲಕಾಲಕ್ಕೆ ತನ್ನನ್ನು ಸಜ್ಜುಗೊಳಿಸಿಕೊಳ್ಳಬೇಕು (ಅಪ್ಡೇಟ್ ಆಗುವುದು); ವರ್ತಮಾನದ ಸನ್ನಿವೇಶಕ್ಕೆ ತನ್ನನ್ನು ಹೊಂದಿಸಿಕೊಳ್ಳಬೇಕು. ಭಾರತೀಯ ಸಂಗೀತವು ಅಂಧ ಅನುಕರಣೆಯನ್ನು ಪ್ರೋತ್ಸಾಹಿಸಿದರೂ ಕೂಡ ಕಲಾವಿದನು ಅದರಾಚೆಗೆ ಹೋಗಿ ತನ್ನ ಸರ್ಜನಶೀಲತೆಯ ವೈಯಕ್ತಿಕ ಛಾಪನ್ನು ಒತ್ತಬೇಕು; ಆ ಮೂಲಕ ತನ್ನ ಗುರು ಮತ್ತು ಸಮಕಾಲೀನ ಸಂಗೀತಗಾರರಿಂದ ವಿಭಿನ್ನವಾಗಬೇಕು. ಇದಕ್ಕೆ ಧಾರಾಳ ಒಳನೋಟ ಮತ್ತು ಪಕ್ವತೆಗಳು ಅಗತ್ಯ.
ಪ್ರ: ನೀವು ನಿಮ್ಮ ಡಾಕ್ಟರೇಟ್ಗೆ (ಪಿಎಚ್ಡಿ) ಸರಗಮ್ನ್ನು ಆರಿಸಿಕೊಂಡದ್ದೇಕೆ?
ಉ: ಇದರ ಕೀರ್ತಿ ನಮ್ಮ ಸಂಗೀತ ವಿಮರ್ಶಕರಿಗೆ ಸಲ್ಲುತ್ತದೆ. ವಿಶೇಷವಾಗಿ ಮಹಾರಾಷ್ಟ್ರದಲ್ಲಿ ಹೆಚ್ಚಿನ ವಿಮರ್ಶಕರು ವಿವಿಧ ಕಾರಣಗಳಿಗಾಗಿ ಗಾಯನದಲ್ಲಿ ಸರಗಮ್ ಬಳಸುವುದನ್ನು ವಿರೋಧಿಸಿದರು. ಅದರಿಂದಾಗಿ ನಾನು ಸರಗಮ್ನ ವಿವಿಧ ಅಂಶಗಳನ್ನು ಕುರಿತು ಚಿಂತಿಸುವಂತಾಯಿತು; ಅದರ ಮೂಲ, ಬೆಳವಣಿಗೆ, ತಾಲೀಮಿನಲ್ಲಿ ಅದರ ಬಳಕೆ, ಸಂಗೀತದ ವಸ್ತುವಿನ ವೈವಿಧ್ಯವನ್ನು ಹೊರತರುವಲ್ಲಿ ಅದರ ಸಾಮರ್ಥ್ಯ, ಒಟ್ಟಾರೆಯಾಗಿ ವೇದಿಕೆಯ ಕಾರ್ಯಕ್ರಮವನ್ನು ಶ್ರೀಮಂತಗೊಳಿಸುವುದು ಹಾಗೂ ಗಾಯನದ ವಿವಿಧ ಶೈಲಿಗಳು – ಹೀಗೆ ಸರಗಮ್ ಕಡೆಗೆ ಗಮನಹರಿಸಿದೆ.
ಸಂಗೀತಶಿಕ್ಷಣ–ಸಲಹೆ
ಪ್ರ: ಭಾರತದಲ್ಲಿನ ಸಂಗೀತ ಶಿಕ್ಷಣದ ಕುರಿತು ನಿಮ್ಮ ಅಭಿಪ್ರಾಯವೇನು?
ಉ: ಖಾಸಗಿಯಿರಲಿ ಅಥವಾ ಸಂಸ್ಥೆಗಳದ್ದಿರಲಿ, ಭಾರತದಲ್ಲೀಗ ಸಂಗೀತ ಶಿಕ್ಷಣವು ಕ್ರಮಬದ್ಧವಾಗಿ ನಡೆಯುತ್ತಿಲ್ಲ. ನಾನು ಓರ್ವ ವೃತ್ತಿಪರ ಸಂಗೀತಗಾರ್ತಿ ಮತ್ತು ಸಾಂಪ್ರದಾಯಿಕ ಗುರು-ಶಿಷ್ಯ ಪದ್ಧತಿಯಲ್ಲಿ ತಯಾರಾದವಳು. ಹಲವು ವರ್ಷ ನಾನು ಖಾಸಗಿಯಾಗಿ ಶಾಸ್ತ್ರೀಯ ಸಂಗೀತವನ್ನು ಕಲಿಸಿದ್ದೇನೆ; ಮತ್ತು ೧೩ ವರ್ಷ ಸಂಸ್ಥೆಯೊಂದರಲ್ಲಿ ಸಕ್ರಿಯವಾಗಿ ಸಂಗೀತವನ್ನು ಬೋಧಿಸಿದ್ದೇನೆ. ಎರಡೂ ವ್ಯವಸ್ಥೆಯಲ್ಲಿ ಏನೋ ಕೊರತೆಯಿದೆಯೆಂದು ನನಗೆ ಅನ್ನಿಸುತ್ತದೆ; ಏಕೆಂದರೆ ಅವರು ಏಕಮುಖ ಪದ್ಧತಿಯನ್ನು ಅನುಸರಿಸುತ್ತಾರೆ. ಗುರು-ಶಿಷ್ಯ ಸಂಪ್ರದಾಯದಲ್ಲಿ ವೇದಿಕೆಯ ಮೇಲಿನ ಕಾರ್ಯಕ್ರಮ ಹೇಗೆ ಎಂಬುದಕ್ಕೆ ಒತ್ತು ನೀಡಿದರೆ, ಸಾಂಸ್ಥಿಕ ಬೋಧನಾ ವ್ಯವಸ್ಥೆಯಲ್ಲಿ ಸಂಗೀತದ ಅಕಾಡೆಮಿಕ್ ಅಧ್ಯಯನಕ್ಕೆ ಒತ್ತು ನೀಡಲಾಗುತ್ತದೆ.
ಸಾಂಪ್ರದಾಯಿಕ ಗುರು-ಶಿಷ್ಯ ವ್ಯವಸ್ಥೆಗೆ ಜ್ಞಾನಪರವಾದ ಒಂದು ಸೈದ್ಧಾಂತಿಕ ಶಿಕ್ಷಣವು ಪೂರಕವಾಗಿ ಬರಬೇಕು; ಅದೇ ವೇಳೆ ಸಾಂಸ್ಥಿಕ ಶಿಕ್ಷಣ ಪದ್ಧತಿಯಲ್ಲಿ ವೇದಿಕೆ ಕಾರ್ಯಕ್ರಮದ ವೈಯಕ್ತಿಕ ತರಬೇತಿಗೆ ಅವಕಾಶ ಕಲ್ಪಿಸಬೇಕು. ಶ್ರೋತೃಗಳ ತರಬೇತಿಯ ಬಗ್ಗೆ ಸಾಮೂಹಿಕ ಶಿಕ್ಷಣವನ್ನು ಕೂಡ ಅನುಷ್ಠಾನಕ್ಕೆ ತರಬಹುದು.
ಶಾಸ್ತ್ರೀಯ ಸಂಗೀತದ ಹಲವು ಅಂಶಗಳನ್ನು ಈಗ ಅಲಕ್ಷಿಸಲಾಗುತ್ತಿದೆ. ಸರಿಯಾದ ಶಿಕ್ಷಣದಿಂದ ಸಂಗೀತಸಂಬಂಧಿ ಚಟುವಟಿಕೆಗಳು ಸುಧಾರಿಸಬಹುದು. ಅದಲ್ಲದೆ ಸಂಗೀತ ಶಿಕ್ಷಣವು ಉದ್ಯೋಗಪರವಾಗಿರಬೇಕು. ಅದಾದಾಗ ಮಾತ್ರ ಹೆಚ್ಚುಹೆಚ್ಚು ಜನ ಶಾಸ್ತ್ರೀಯ ಸಂಗೀತದತ್ತ ಬರಲು ಸಾಧ್ಯ.
ಪ್ರ: ನಿಮ್ಮ ಶಿಷ್ಯರ ಬಗ್ಗೆ ನಿಮಗೆ ಸಮಾಧಾನವಿದೆಯೆ?
ಉ: ಹಳೆಯ ಗುರು-ಶಿಷ್ಯ ಸಂಬಂಧವು ಈಗ ಉಳಿದಿಲ್ಲ. ಈಗ ಹಿಂದಿನಂತೆ ಗುರುವೊಬ್ಬನೇ ಜ್ಞಾನದ ಮೂಲವಲ್ಲ. ತಂತ್ರಜ್ಞಾನದ ಪ್ರಗತಿಯು ಸಂಗೀತವನ್ನೊಂದು ಮಾರುಕಟ್ಟೆಯ ಸರಕಾಗಿ ಪರಿವರ್ತಿಸಿದೆ. ಮಾರುಕಟ್ಟೆಯಲ್ಲೀಗ ಬಗೆಬಗೆಯ ಸಂಗೀತ ಪರಿಕರಗಳ ಪ್ರವಾಹವನ್ನೇ ಕಾಣಬಹುದು. ಸಂಗೀತದ ಸೈದ್ಧಾಂತಿಕ ವಿಷಯಗಳು ಹಾಗೂ ಸಂಗೀತದ ಬೋಧನೆಯ ಬಗ್ಗೆ ಈಗ ಉದ್ಗçಂಥಗಳು ಲಭ್ಯವಿವೆ. ಶೈಕ್ಷಣಿಕ ಸಂಸ್ಥೆಗಳು ಸಂಗೀತದ ಪದವಿಯನ್ನು ನೀಡುತ್ತಿವೆ. ಈ ಸಾಧನ-ಸಲಕರಣೆಗಳನ್ನು ಬಳಸಿಕೊಂಡು ಒಬ್ಬ ಪ್ರತಿಭಾವಂತ ವಿದ್ಯಾರ್ಥಿ ಗುರುವಿನ ಬಳಿಗೆ ಹೋಗದೆಯೇ ಒಂದಷ್ಟು ಸಾಧನೆಯನ್ನು ಮಾಡಬಹುದು.
ಗುರುವನ್ನು ಹುಡುಕಿಕೊಂಡು ಹೋಗುವಂತಹ ಒಂದು ಕಾಲವಿತ್ತು. ಈಗ ಗುರುಗಳೇ ಯೋಗ್ಯ ಶಿಷ್ಯರ ಹುಡುಕಾಟದಲ್ಲಿರುತ್ತಾರೆ. ಈಗ ಬಹಳಷ್ಟು ಸಂಗೀತ ವಿದ್ಯಾರ್ಥಿಗಳ ಗುರಿಯೆಂದರೆ, ಶೀಘ್ರವಾಗಿ ಸಾಧಕ ಎನಿಸುವುದು; ರೇಡಿಯೊ, ಟಿವಿಗಳಲ್ಲಿ ಕಾರ್ಯಕ್ರಮ ನೀಡುವುದು, ಕ್ಯಾಸೆಟ್-ಸಿಡಿಗಳನ್ನು ತರುವುದು – ಮುಂತಾದ ಕ್ರಮಗಳಿಂದ ದಿಢೀರಾಗಿ ಕೀರ್ತಿ, ಹಣ ಸಂಪಾದಿಸುವುದು. ಹಲವು ವರ್ಷಗಳ ಕಾಲ ಗುರುವಿನ ಬಳಿ ಕಲಿತಿದ್ದರೂ ಕೂಡ ಲಾಭ ಇಲ್ಲ ಎಂದಾದರೆ ಆ ಗುರುವಿನ ಹೆಸರು ಹೇಳದ ಎಷ್ಟೋ ಶಿಷ್ಯರು ಇಂದು ನಮ್ಮ ನಡುವೆ ಇದ್ದಾರೆ. ಇದು ಘೋರ ಅನ್ಯಾಯ. ಗುರುವಿಗೆ ಒಳ್ಳೆಯ ಹೆಸರು ತರಲು ಸಾಧ್ಯವಾಗದಿದ್ದರೂ ಕೂಡ ಶಿಷ್ಯರು ಕನಿಷ್ಠಪಕ್ಷ ಗುರುವನ್ನು ನೋಯಿಸಬಾರದು. ಏಕಕಾಲದಲ್ಲಿ ಹಲವು ಗುರುಗಳಿಂದ ಹಲವು ಬಗೆಯ ಸಂಗೀತಗಳನ್ನು ಕಲಿಯುವುದು ತಪ್ಪಲ್ಲ; ಆದರೆ ಅದನ್ನು ಅಕ್ರಮ ವಿಧಾನಗಳಿಂದ ಮಾಡಬಾರದು.
ಸಂಗೀತದ ಜನಪ್ರಿಯತೆ
ಪ್ರ: ಶಾಸ್ತ್ರೀಯ ಸಂಗೀತವು ಏಕೆ ಜನಪ್ರಿಯವಾಗುತ್ತಿಲ್ಲ? ಅದನ್ನು ಹೇಗೆ ಜನಪ್ರಿಯಗೊಳಿಸಬಹುದು?
ಉ: ಮೊದಲನೆಯದಾಗಿ, ಶಾಸ್ತ್ರೀಯ ಸಂಗೀತವು ಜನಸಮುದಾಯದ ಸಂಗೀತವಲ್ಲ ಎಂಬುದನ್ನು ನಾವು ನೆನಪಿನಲ್ಲಿಡಬೇಕು. ಅದು ಉದ್ದೇಶಪೂರ್ವಕವಾಗಿ ಸೌಂದರ್ಯಪ್ರಜ್ಞೆಯೊAದಿಗೆ ನಡೆಸಿದ ಒಂದು ಪ್ರಕ್ರಿಯೆಯ ಫಲ. ಹೀಗೆ ಇದು ರೂಪಗೊಂಡದ್ದರ ಹಿಂದೆ ಬಹಳಷ್ಟು ಚಿಂತನೆ ಮತ್ತು ಪ್ರಯೋಗಗಳು ನಡೆದಿವೆ. ಶಾಸ್ತ್ರೀಯ ಸಂಗೀತವು ಸಿನೆಮಾ ಸಂಗೀತದಷ್ಟು ಜನಪ್ರಿಯವಾಗಬೇಕೆಂದು ನಿರೀಕ್ಷಿಸುವುದು ಶುದ್ಧ ತಪ್ಪು.
ಎರಡನೆಯದಾಗಿ, ಶಾಸ್ತ್ರೀಯ ಸಂಗೀತವನ್ನು ಅರ್ಥೈಸಿಕೊಳ್ಳಬೇಕಾದರೆ (ಮೆಚ್ಚಬೇಕಾದರೆ) ನಮಗೆ ಸಂಗೀತ ಎಂದರೆ ಏನೆಂದು, ಅಂದರೆ ಶುದ್ಧ ಧ್ವನಿ (sound) ಮತ್ತು ಲಯವಿನ್ಯಾಸಗಳ ಅರ್ಥ ಏನೆಂದು ತಿಳಿಯಬೇಕು. ಇದಕ್ಕೆ ಅಧ್ಯಯನ, ಚಿಂತನೆಗಳ ಹಿನ್ನೆಲೆ ಬೇಕಾಗುತ್ತದೆ. ಸಾಮಾನ್ಯ ಮನುಷ್ಯನಿಗೆ ಇದಕ್ಕೆಲ್ಲ ತಾಳ್ಮೆ ಇರುವುದಿಲ್ಲ. ಆಗ ಆದ ಪದಗಳೇ (words) ಮುಖ್ಯವಾದ ಮತ್ತು ಲಯದ ಅಬ್ಬರ-ಚಮತ್ಕಾರಗಳಿರುವ ಲಘು ಸಂಗೀತದತ್ತ ಹೊರಳುತ್ತಾನೆ. ಈ ಸಂಗೀತ ಸರಳ, ಭಾವನಾತ್ಮಕ ಮತ್ತು ಆಕರ್ಷಕ ಲಯ (ತಾಳ) ಪ್ರಧಾನ.
ಮೂರನೆಯದಾಗಿ, ಶಾಸ್ತ್ರೀಯ ಸಂಗೀತಗಾರರು ತಂತ್ರಕ್ಕೆ ವಿಶೇಷ ಒತ್ತು ನೀಡಬೇಕಾಗುತ್ತದೆ. ಅದರಿಂದಾಗಿ ಸಂಗೀತವು ಶುಷ್ಕ ಮತ್ತು ಜೀವಂತಿಕೆಯಿಂದ ದೂರವಾಗುತ್ತದೆ. ಇಲ್ಲಿ ತಂತ್ರಗಾರಿಕೆಯು ಆರಂಭ ಮಾತ್ರ ಎಂಬುದನ್ನು ಸಂಗೀತಗಾರರು ಮರೆಯುತ್ತಾರೆ. ಸಂಗೀತವು ತಂತ್ರಗಾರಿಕೆಯಿಂದ ಆಚೆಗೆ ಹೋಗಿ ಜೀವನ ಮತ್ತು ನಿಸರ್ಗದೊಂದಿಗೆ ತನ್ನನ್ನು ಗುರುತಿಸಿಕೊಳ್ಳಬೇಕು; ಮೂರ್ತದಿಂದ ಅಮೂರ್ತದೆಡೆಗೆ ಚಲಿಸಬೇಕು. ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸುವುದೆಂದರೆ ಜನಪ್ರಿಯ ಅಥವಾ ಸಿನೆಮಾ ಸಂಗೀತ, ಪ್ರೇಮಿಗಳು ತಮ್ಮ ರುಚಿಯನ್ನು ಶಾಸ್ತ್ರೀಯ ಸಂಗೀತದತ್ತ ತಿರುಗಿಸುವುದಲ್ಲ. ಶಾಸ್ತ್ರೀಯ ಕಲೆಗಳನ್ನು ಯಾವಾಗಲೂ ಸೀಮಿತ ಸಂಖ್ಯೆಯ ಜನ ಮಾತ್ರ ಇಷ್ಟಪಡುತ್ತಾರೆ; ಅವರ ಸಾಮರ್ಥ್ಯ ಕೂಡ ವಿಭಿನ್ನವಾಗಿರುತ್ತದೆ. ಸೂಕ್ತ ಕ್ರಮದ ಮೂಲಕ ಶ್ರೋತೃಗಳ ಸಂಖ್ಯೆಯನ್ನು ಸ್ವಲ್ಪ ಹೆಚ್ಚಿಸಬಹುದು. ಆದರೆ ಶ್ರೋತೃವರ್ಗದ ಸಂಖ್ಯೆ ಯಾವುದೇ ಕಾಲದಲ್ಲಿ ಜನಪ್ರಿಯ ಸಂಗೀತದೊಂದಿಗೆ ಸ್ಪರ್ಧಿಸುವುದು ಅಸಂಭವ. ಶಾಸ್ತ್ರೀಯ ಸಂಗೀತವನ್ನು ಜನಸಮೂಹದ ಕಡೆಗೆ ಒಯ್ಯುವುದಾದರೆ ಆಗ ಸಮೂಹ ಮಾಧ್ಯಮಗಳು, ಸಂಗೀತ ಶಿಕ್ಷಣ, ಖಾಸಗಿ ಮತ್ತು ಸರ್ಕಾರೀ ಸಾಂಸ್ಕೃತಿಕ ಸಂಸ್ಥೆಗಳ ಬೆಂಬಲದತ್ತ ಗಮನಹರಿಸಬೇಕು. ಶಾಲೆ, ಕಾಲೇಜುಗಳಲ್ಲಿ ಕಡ್ಡಾಯ ಸಾಂಸ್ಕೃತಿಕ ತರಬೇತಿ ನೀಡಬೇಕು. ಇದರಿಂದ ಶಾಸ್ತ್ರೀಯ ಕಲೆಗಳ ಕಡೆಗೆ ಜನರ ಗಮನಹರಿಯಲು ಸಾಧ್ಯ.
ಸಂಗೀತದ ಭವಿಷ್ಯ
ಪ್ರ: ಶಾಸ್ತ್ರೀಯ ಸಂಗೀತದ ಭವಿಷ್ಯ ಏನು?
ಉ: ಶಾಸ್ತ್ರೀಯ ಸಂಗೀತವು ಯಾವುದಾದರೊಂದು ರೂಪದಲ್ಲಿ ಉಳಿದುಕೊಳ್ಳುತ್ತದೆ ಎಂಬುದರಲ್ಲಿ ನನಗೆ ಯಾವುದೇ ಸಂಶಯವಿಲ್ಲ; ಏಕೆಂದರೆ ಅದು ಪರಿಶುದ್ಧತೆ, ದೈವೀಕತೆ, ಏಕತೆ, ಸ್ಪಂದನೆ ಮತ್ತು ಸೌಂದರ್ಯಗಳ ಸಾರವಾಗಿದೆ. ತನ್ನ ಅಮೂರ್ತ ಗುಣದಿಂದಾಗಿ ಅದು ಸಮಗ್ರ, ಜ್ಞಾತ ಮತ್ತು ಅಜ್ಞಾತ ಎಲ್ಲವೂ ಆಗಿರುತ್ತದೆ. ಇಂದು ಹಿಂದುಸ್ತಾನಿ ಸಂಗೀತದ ಅತ್ಯಂತ ಜನಪ್ರಿಯ ರೂಪವಾಗಿರುವ ಖ್ಯಾಲ್ ಶಾಸ್ತ್ರೀಯ ಸಂಗೀತದ ಗಾಯನವನ್ನು ಪ್ರತಿನಿಧಿಸುತ್ತದೆ. ಹೊಸ ಸನ್ನಿವೇಶಗಳನ್ನು ಎದುರಿಸಲು ಮತ್ತು ಹೊಸ ಬೇಡಿಕೆಗಳನ್ನು ಪೂರೈಸಲು ಖ್ಯಾಲ್ ಬದಲಾಗುತ್ತಲೇ ಇದೆ. ‘ಮುಕ್ತ ಅಭಿವ್ಯಕ್ತಿ’ ಎನ್ನುವ ಶಾಸ್ತ್ರೀಯ ಸಂಗೀತ ಕ್ಷೇತ್ರವನ್ನು ಪ್ರವೇಶಿಸಿರುವ ಹೊಸ ಅಲೆ ಖ್ಯಾಲ್ ಗಾಯನಕ್ಕೆ ಸಾಕಷ್ಟು ಹಾನಿ ಎಸಗಿದೆ; ಆದರೂ ಅದು ಪ್ರತ್ಯೇಕ ಸೌಂದರ್ಯಾತ್ಮಕ ಸಂಗೀತ ರೂಪ ಎಂಬ ನೆಲೆಯಲ್ಲಿ ತನ್ನ ಉಳಿವಿನ ಹೋರಾಟವನ್ನು ಮುಂದುವರಿಸುತ್ತಲೇ ಇದೆ; ಇದು ಶ್ಲಾಘನೀಯ.
ಪ್ರ: ನೀವು ವಿದೇಶ ಪ್ರವಾಸ ಆರಂಭಿಸಿದ್ದೇಕೆ?
ಉ: ಭಾರತೀಯ ಸಂಗೀತವನ್ನು ವಿದೇಶೀಯರಿಗೆ ಪರಿಚಯಿಸುವ ಬಗ್ಗೆ ಪಂಡಿತ್ ರವಿಶಂಕರ್ ಅವರು ಬಹಳಷ್ಟು ಕೆಲಸ ಮಾಡಿದ್ದಾರೆ. ಆದರೆ ಅವರು (ವಿದೇಶೀಯರು) ಮುಖ್ಯವಾಗಿ ಕೇಳಿದ್ದು ವಾದ್ಯಸಂಗೀತ. ಗಾಯನದ ಒಂದು ಪೂರ್ಣ ಕಛೇರಿ ಅವರಿಗೆ ಹೊಸತಾಗಿತ್ತು. ಭಾರತೀಯ ಸಂಗೀತದ ಆತ್ಮವಾಗಿರುವ ಗಾಯನವನ್ನು ಅವರ ಮುಂದೆ ತೆರೆದಿಡುವುದು ನನ್ನ ಉದ್ದೇಶವಾಗಿತ್ತು. ಬಹುಶಃ ಪಾಶ್ಚಾತ್ಯ ಜಗತ್ತಿನಲ್ಲಿ ಪೂರ್ಣರೂಪದ ಹಿಂದುಸ್ತಾನಿ ಗಾಯನ ಕಛೇರಿಗಳನ್ನು ನೀಡಲು ವ್ಯಾಪಕ ಪ್ರವಾಸ ಮಾಡಿದ ಮೊದಲ ಮಹಿಳೆ ನಾನೇ.
ಶಾಸ್ತ್ರೀಯ–ಲಘುಸಂಗೀತ
ಪ್ರ: ಶಾಸ್ತ್ರೀಯ ಮತ್ತು ಲಘುಸಂಗೀತಗಳ ನಡುವೆ ಯಾವುದನ್ನು ಹಾಡುವುದು ನಿಮಗೆ ಇಷ್ಟ?
ಉ: ನನಗೆ ಎರಡೂ ಇಷ್ಟ; ಅವು ಪರಸ್ಪರ ಪೂರಕವಾಗಿವೆ. ಶಾಸ್ತ್ರೀಯ ಸಂಗೀತದಲ್ಲಿ ವ್ಯಾಖ್ಯಾನ ಮತ್ತು ವೈಯಕ್ತಿಕ ಅಭಿವ್ಯಕ್ತಿಗಳಿಗೆ ವಿಪುಲ ಅವಕಾಶಗಳಿವೆ. ವಿವಿಧ ಲಘುಸಂಗೀತಗಳಲ್ಲಿ ಸಾಹಿತ್ಯದ ಬಿಗಿಯಾದ ಕಟ್ಟು ಇರುತ್ತದೆ; ಭಾವನೆಯ ವಿಷಯವು ಅದರಲ್ಲೊಂದು. ಇದರಲ್ಲಿ ಸಂಗೀತವು ಪದಗಳನ್ನು (words) ಸುಂದರಗೊಳಿಸಲು ಬರುತ್ತದೆ. ಅದಕ್ಕೆ (ಸಂಗೀತಕ್ಕೆ) ಅಲ್ಲಿ ಸ್ವತಂತ್ರ ಅಭಿವ್ಯಕ್ತಿಯಿಲ್ಲ. ನಾನು ನನ್ನ ಕಛೇರಿಗಳಲ್ಲಿ ಖ್ಯಾಲ್, ಠುಮ್ರಿ ಮತ್ತು ಭಜನ್ಗಳನ್ನು ಹಾಡುತ್ತೇನೆ; ಖಾಸಗಿ ಸಂದರ್ಭಗಳಲ್ಲಿ ಗಜಲ್ಗಳನ್ನು ಕೂಡ ಹಾಡುತ್ತೇನೆ. ವಿವಿಧ ಪ್ರಕಾರದ ಸಂಗೀತಗಳನ್ನು ಹಾಡಲು ಸಾಧ್ಯವಿರುವುದು ಒಳ್ಳೆಯದೇ. ಅವು ಪ್ರತಿಯೊಂದಕ್ಕೂ ಪ್ರತ್ಯೇಕ ಸೌಂದರ್ಯ, ಬೇಡಿಕೆಗಳು ಮತ್ತು ಶ್ರೋತೃಗಳಿರುತ್ತಾರೆ.
ಪ್ರಭಾ ಠುಮ್ರಿಯ ವೈಶಿಷ್ಟ್ಯ
ಪ್ರ: ಕೆಲವು ಸಂಗೀತಗಾರರು ಖ್ಯಾಲ್ ಮತ್ತು ಠುಮ್ರಿಗಳನ್ನು ಚೆನ್ನಾಗಿ ಹಾಡುತ್ತಾರೆ. ಆದರೆ ನೀವು ಮಹಾರಾಷ್ಟ್ರದ ವಿಶೇಷ ಸ್ವರಭಾರವಿರುವ ಕಿರಾನಾ ಠುಮ್ರಿಯನ್ನು ಹಾಡುವುದಿಲ್ಲ. ನಿಮ್ಮ ಠುಮ್ರಿಯಲ್ಲಿ ಉತ್ತರ ಭಾರತದ ರುಚಿ ಮತ್ತು ಪ್ರಭಾ ಅತ್ರೆ ಅಚ್ಚು ಇದೆ. ಇದಕ್ಕೆ ನಿಮ್ಮ ವಿವರಣೆ ಏನು?
ಉ: ಠುಮ್ರಿ ಹಾಡಲು ಎಲ್ಲರಿಗೂ ಸಾಧ್ಯವಾಗುವುದಿಲ್ಲ; ಏಕೆಂದರೆ ಅದಕ್ಕೆ ಸ್ವರ ಬದಲಾವಣೆಯಲ್ಲಿ ನಿರ್ದಿಷ್ಟ ಪರಿಣತಿ, ಹೆಚ್ಚಿನ ಭಾವನಾತ್ಮಕ ಅಭಿವ್ಯಕ್ತಿ, ಯೋಗ್ಯ ಮನಃಸ್ಥಿತಿ ಮತ್ತು ಆಲೋಚನಾ ಕ್ರಮಗಳು ಅಗತ್ಯ. ವಿಚಿತ್ರವೆಂದರೆ, ಠುಮ್ರಿ ಮತ್ತು ಗೀತ್, ಗಜಲ್ ಹಾಗೂ ಭಜನ್ನಂತಹ ಲಘುಸಂಗೀತಗಳಲ್ಲಿ ನಾನು ಯಾವುದೇ ಔಪಚಾರಿಕ ತರಬೇತಿಯನ್ನು ಪಡೆದಿಲ್ಲ. ನಾನು ಸಣ್ಣವಳಿದ್ದಾಗ ಬಡೇ ಗುಲಾಂ ಅಲಿಖಾನ್, ರೋಫನಾರಾ ಬೇಗಮ್, ಬೇಗಂ ಅಖ್ತರ್ ಮತ್ತು ಚಿತ್ರನಟಿ-ಗಾಯಕಿ ನೂರ್ಜಹಾನ್ ಅವರ ಗಾಯನವನ್ನು ಕೇಳಿದ್ದೇನೆ. ಪಂಜಾಬ್ ಮತ್ತು ಪೂರ್ವದ ಶೈಲಿ ಎರಡೂ ನನಗೆ ಇಷ್ಟ. ಅದಲ್ಲದೆ ಬೇರೆ ಬಗೆಯ ಸಂಗೀತಗಳಲ್ಲಿನ ನನ್ನ ಆಸಕ್ತಿ ಕೂಡ ನನ್ನ ಚಿಂತನೆ ಹಾಗೂ ಅಭಿವ್ಯಕ್ತಿಗಳನ್ನು ಶ್ರೀಮಂತಗೊಳಿಸಿದೆ. ಶಾಸ್ತ್ರೀಯ ಸಂಗೀತದ ಬಲವಾದ ಹಿನ್ನೆಲೆ ಇರುವ ಕಾರಣ ಠುಮ್ರಿಯ ಪಠ್ಯವನ್ನು ವಿಸ್ತರಿಸಲು ನನಗೆ ಅನುಕೂಲವಾಗುತ್ತದೆ. ಶಬ್ದಗಳ ಸ್ಪಷ್ಟ ಉಚ್ಚಾರ, ಅಭಿವ್ಯಕ್ತಿಗೆ ಪೂರಕವಾದ ಸ್ವರ, ಅಚ್ಚುಕಟ್ಟಾದ, ಬಿಗಿಯಾದ ಪ್ರಸ್ತುತಿ (ಹಾಡಿಕೆ) ಮತ್ತು ಒಂದು ಮಟ್ಟದ ಸೂಕ್ಷ್ಮತೆಯ ಸ್ಪರ್ಶಗಳು ನನ್ನ ಠುಮ್ರಿಗೆ ಒಂದು ಆಧುನಿಕ ರುಚಿಯನ್ನು ನೀಡುತ್ತವೆ; ಆ ಮೂಲಕ ಇದು ಆಸ್ಥಾನಗಳಲ್ಲಿ ಹಾಡುತ್ತಿದ್ದ ಠುಮ್ರಿಗಿಂತ ಭಿನ್ನವಾಗಿ ನಿಲ್ಲುತ್ತದೆ.
ಪ್ರ: ನೀವು ಪ್ರಸಿದ್ಧ ಕಂಪೋಸರ್ (ಗೀತರಚನೆಕಾರರು); ಅದನ್ನು ನೀವು ಆರಂಭಿಸಿದ್ದು ಯಾವಾಗ? ಆಕಾಶವಾಣಿ ಕೆಲಸ ಏಕೆ ಬಿಟ್ಟಿರಿ?
ಉ: ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದಾಗ (೧೯೬೦-೭೦) ನಾನು ಗೀತರಚನೆ ಮಾಡಬಲ್ಲೆ ಎನಿಸಿತು. ಆರಂಭದಲ್ಲಿ ಅನಿವಾರ್ಯವಾಗಿ ರಚಿಸಿದರೂ ಕ್ರಮೇಣ ಅದರಲ್ಲಿ ಆಸಕ್ತಿ ಬಂತು. ಮತ್ತೆ ಅದೊಂದು ಗೀಳಾಯಿತು. ಗೀತರಚನಾ ಸಾಮರ್ಥ್ಯದಿಂದ ತುಂಬ ಪ್ರಯೋಜನವಿದೆ. ನಿಮ್ಮ ಶೈಲಿ ಮತ್ತು ಸ್ವಭಾವಕ್ಕೆ ಹೊಂದುವ ರಚನೆಯಿದ್ದರೆ ಸಂಗೀತ ಉತ್ತಮವಾಗುತ್ತದೆ. ಬೇರೆಯವರ ಹಾಡನ್ನು ತೆಗೆದುಕೊಂಡು ನಿಮ್ಮ ಅಗತ್ಯಕ್ಕೆ ತಕ್ಕಂತೆ ಕತ್ತರಿಸುವುದು ತಪ್ಪು.
ಆಕಾಶವಾಣಿಯಲ್ಲಿ ನನ್ನ ಕೆಲಸ ನನಗೆ ಇಷ್ಟವಾಗಿತ್ತು. ಜಾನಪದ, ಸಿನೆಮಾ ಸಂಗೀತ, ಲಘುಸಂಗೀತ, ಕರ್ನಾಟಕ ಸಂಗೀತ – ಹೀಗೆ ಬಗೆಬಗೆಯ ಸಂಗೀತಗಳು ಅಲ್ಲಿ ಪರಿಚಯವಾದವು. ಎರಡನೆಯದಾಗಿ, ಅದು ಪೂರ್ತಿ ಮೈಕ್ರೋಫೋನ್ ಮಾಧ್ಯಮವಾದ್ದರಿಂದ ನಮ್ಮ ಸ್ವರವನ್ನು ಉತ್ತಮಪಡಿಸುವುದರ ಮಹತ್ತ್ವ ಅಲ್ಲಿ ಗೊತ್ತಾಯಿತು. ಮೂರನೆಯದಾಗಿ, ಹೊಸ ಕಾರ್ಯಕ್ರಮಗಳ ನಿರ್ಮಾಣ, ರೆಕಾರ್ಡಿಂಗ್ ಮತ್ತು ಎಡಿಟಿಂಗ್ ತಂತ್ರಗಳ ಕಲಿಕೆ – ಇದೆಲ್ಲ ಅಲ್ಲಿ ಸಾಧ್ಯವಾಯಿತು. ನಾನು ಅಲ್ಲಿ ಪ್ರಯೋಗಗಳನ್ನು ನಡೆಸಬಹುದಿತ್ತು. ಹತ್ತು ವರ್ಷ ಅಲ್ಲಿ ಕೆಲಸ ಮಾಡುವಷ್ಟರಲ್ಲಿ ಸ್ವತಂತ್ರ ಗಾಯಕಿ ಆಗಬೇಕು ಎನಿಸಿತು.
ಸಂಗೀತದಲ್ಲಿ ಮಹಿಳೆ
ಪ್ರ: ಮಹಿಳೆಯರು ಸಂಗೀತವನ್ನು ವೃತ್ತಿಯಾಗಿ ತೆಗೆದುಕೊಳ್ಳಬಹುದೆ?
ಉ: ನಮ್ಮದು ಆಧುನಿಕ ಪ್ರಜಾಸತ್ತಾತ್ಮಕ ದೇಶ. ಇಂದಿನ ವಿಜ್ಞಾನಯುಗದಲ್ಲಿ ಕಲೆಗಳು ಹೊಸ ಆಯಾಮವನ್ನು ಪಡೆದುಕೊಂಡಿವೆ. ಇಂದು ಸಮಾಜದಲ್ಲಿ ಸಂಗೀತ ಮತ್ತು ಸಂಗೀತಗಾರರಿಗೆ ಒಳ್ಳೆಯ ಗೌರವವಿದೆ. ಆದರೆ ಭಾರತೀಯ ಸಮಾಜದಲ್ಲಿ ಕುಟುಂಬವು ಈಗಲೂ ಮೂಲಭೂತ ಘಟಕವಾಗಿದ್ದು, ಪತ್ನಿ ಹಾಗೂ ತಾಯಿಯಾಗಿ ಮಹಿಳೆಗೆ ಅಲ್ಲಿ ಬಿಡಲಾಗದ ಹೊಣೆಯಿದೆ. ಆದ್ದರಿಂದ ಆಕೆ ಮನೆ ಮತ್ತು ವೃತ್ತಿಜೀವನಗಳ ನಡುವೆ ಹೊಂದಾಣಿಕೆ ಮಾಡಬೇಕಾಗುತ್ತದೆ.
ಪ್ರದರ್ಶನ ಕಲೆಗಳಲ್ಲಿರುವ ಮಹಿಳೆಯರನ್ನು ನೋಡುವ ದೃಷ್ಟಿ ಕೂಡ ಇಂದು ಸಾಕಷ್ಟು ಬದಲಾಗಿದೆ. ಆದರೆ ವೃತ್ತಿಯಲ್ಲಿ ತೊಂದರೆಗಳು ಇದ್ದೇ ಇವೆ. ಉದಾಹರಣೆಗೆ, ಸುರಕ್ಷತೆ. ಸಂಗೀತದ ಬಗ್ಗೆ ಪ್ರಾಮಾಣಿಕವಾದ ನಿಷ್ಠೆ ಇದ್ದರೆ ಮಹಿಳೆ ಎಲ್ಲ ತೊಡಕುಗಳನ್ನು ದಾಟಿ ಇದನ್ನು ವೃತ್ತಿಯಾಗಿ ಸ್ವೀಕರಿಸಬಹುದು. ವಾಣಿಜ್ಯೀಕರಣದಿಂದಾಗಿ ಕೆಲವು ಹೊಸ ಸಮಸ್ಯೆಗಳು ತಲೆದೋರಿವೆ. ಉತ್ತಮ ಕಾರ್ಯಕ್ರಮ ನೀಡುವುದರ ಜೊತೆಗೆ ಪ್ರಚಾರ-ಜನಸಂಪರ್ಕಗಳಿಗೂ ಗಮನಕೊಡಬೇಕು; ಅದಕ್ಕೆ ತಂದೆ, ಸಹೋದರ, ಪತಿ, ಮಗ – ಹೀಗೆ ಎಲ್ಲರ ಸಹಕಾರ ಬೇಕಾಗುತ್ತದೆ. ನನಗೆ ಕೂಡ ತುಂಬ ಕಷ್ಟವಾಗಿತ್ತು. ನಮ್ಮದು ಸಂಗೀತಗಾರರ ಮನೆತನವಲ್ಲ; ಗುರು ಸುರೇಶ್ಬಾಬು ಬೇಗ ನಿಧನ ಹೊಂದಿದರು. ಇನ್ನೋರ್ವ ಗುರು ಹೀರಾಬಾಯಿ ಬಡೋದೇಕರ್ ಅನಾರೋಗ್ಯದ ಕಾರಣದಿಂದ ಕಛೇರಿ ಕೊಡುವುದನ್ನು ನಿಲ್ಲಿಸಿದರು. ನನಗೆ ಗಾಡ್ಫಾದರ್ ಇರಲಿಲ್ಲ. ಇಂದು ಮುಖ್ಯವಾದ ಜನಸಂಪರ್ಕ, ಪ್ರಚಾರಗಳಿಂದ ನಾನು ಸ್ವಲ್ಪ ದೂರ. ಆದರೂ ಶ್ರೋತೃಗಳು ಗಟ್ಟಿಯಾಗಿ ನನ್ನ ಹಿಂದೆ ನಿಂತ ಕಾರಣ ಇಲ್ಲಿಯವರೆಗೆ ಬರಲು ಸಾಧ್ಯವಾಯಿತು.
ಪ್ರ: ಈ ಕ್ಷೇತ್ರಕ್ಕೆ ಬಂದ ಬಗ್ಗೆ ನಿಮಗೆ ಬೇಸರವಿದೆಯೆ?
ಉ: ಈ ಪ್ರಶ್ನೆಗೆ ಎರಡು ಮುಖಗಳಿವೆ. ಹಾಡುವುದು ಮತ್ತು ಅದರ ಸಂತೋಷವನ್ನು ಇತರರ ಜೊತೆ ಹಂಚಿಕೊಳ್ಳುವುದು ಸಂತೋಷದ ವಿಷಯ. ಒಳ್ಳೆಯ ಸಂಗೀತವನ್ನು ಆಸ್ವಾದಿಸುವ ಸಾಮರ್ಥ್ಯ ಇರುವುದಕ್ಕೂ ಸಂತೋಷವಿದೆ. ಸಂಗೀತವು ನನ್ನ ಮುಂದೆ ವರ್ಣನಾತೀತವಾದ ಸ್ವರದ (sound) ಸೌಂದರ್ಯವನ್ನು ತೆರೆದಿಟ್ಟಿದೆ. ಈ ಸೌಂದರ್ಯದೊಂದಿಗೆ ಜಗತ್ತಿನ ಬೇರಾವುದೇ ವಸ್ತುವನ್ನು ಹೋಲಿಸುವಂತಿಲ್ಲ. ಸಂಗೀತವು ನನ್ನ ಅಸ್ತಿತ್ವಕ್ಕೆ ಅರ್ಥ ನೀಡಿದೆ; ಅದು ನನ್ನನ್ನು ಧ್ಯಾನದತ್ತ ಕರೆದೊಯ್ಯುತ್ತದೆ.
ಸರಿ, ವೃತ್ತಿಯಾಗಿ ಸಂಗೀತದತ್ತ ನೋಡಿದರೆ ಅದು ಪೂರ್ತಿ ಸಂತೋಷದಾಯಕವಲ್ಲ. ಇಲ್ಲಿ ಅರ್ಹತೆಯೇ ಆಧಾರವಾಗಿ ಉಳಿದಿಲ್ಲ. ಪ್ರಚಾರವು ಚಿಂತನೆಗೆ ನಿಲುಕದ ಆಯಾಮಗಳನ್ನು ಪಡೆದುಕೊಂಡಿದೆ. ಜನಸಂಪರ್ಕಕ್ಕೂ ಹಣಕ್ಕೂ ನೇರ ಸಂಬಂಧವಿದೆ. ಜೊತೆಗೆ ಕೀರ್ತಿ, ಪ್ರಶಸ್ತಿಗಳು, ಮಾರುಕಟ್ಟೆಯ ಇತರ ವಸ್ತುಗಳಂತೆ ನಿಮ್ಮನ್ನು ನೀವು ಮಾರಿಕೊಳ್ಳಬೇಕು, ಅಷ್ಟೆ.
ಪ್ರ: ಈಗ ಹೊಸ ರಾಗಗಳನ್ನು ಸೃಷ್ಟಿಸುವ ಸಂಗೀತಗಾರರ ಸಂಖ್ಯೆ ಹೆಚ್ಚಾಗಿದೆ. ರಾಗಗಳ ಕೊರತೆ ಅಷ್ಟೊಂದು ಬಾಧಿಸುತ್ತಿದೆಯೆ? ನೀವು ಹೊಸ ರಾಗಗಳನ್ನು ಸೃಷ್ಟಿಸಿದ್ದೀರಲ್ಲವೆ?
ಉ: ಹಿಂದುಸ್ತಾನಿ ಸಂಗೀತದಲ್ಲಿ ಈಗಾಗಲೇ ಇರುವ ರಾಗಗಳ ಜೊತೆಗೆ ಹೊಸರಾಗಗಳನ್ನು ಸೃಷ್ಟಿಸಲು ವಿಪುಲ ಅವಕಾಶವಿದೆ. ಸಾಂಪ್ರದಾಯಿಕ ರಾಗ್ಗಳು ಮತ್ತು ಅವುಗಳ ರಚನೆಗಳು ಈಗಾಗಲೇ ಬೇಕಾದಷ್ಟಿವೆ. ಹೊಸ ರಾಗ ಸೃಷ್ಟಿಗಿಂತ ಈಗಾಗಲೇ ಇರುವ ರಾಗಗಳಲ್ಲಿ ಹೊಸ ರಾಗದ ಸೃಷ್ಟಿ ಕಷ್ಟ. ಏನಿದ್ದರೂ ಇದು ಓರ್ವ ಕಲಾವಿದನ ಅಗತ್ಯಕ್ಕೆ ಸಂಬಂಧಿಸಿದ್ದು; ಪ್ರತಿಯೊಂದು ತಲೆಮಾರಿನವರು ಹೊಸರಾಗಗಳನ್ನು ಸೇರಿಸುತ್ತಲೇ ಬಂದಿದ್ದಾರೆ; ಮತ್ತು ಅವು ಈಗಲೂ ಉಳಿದುಕೊಂಡಿವೆ. ನಾನು ಕೂಡ ಸಾಂಪ್ರದಾಯಿಕ ರಾಗ್ಗಳಲ್ಲಿ ಹೊಸ ರಾಗ್ಗಳನ್ನು ಕಂಡುಹಿಡಿದಿದ್ದೇನೆ; ಮತ್ತು ಹೊಸ ರಚನೆಗಳನ್ನು ಮಾಡಿದ್ದೇನೆ. ಏನೋ ಹೊಸತನ್ನು ಹೇಳಲು ಅದು ಅಗತ್ಯವಾಗಿತ್ತು; ನನ್ನ ಶ್ರೋತೃಗಳು ಇದನ್ನು ಮೆಚ್ಚಿದ್ದಾರೆ.
ಕರ್ನಾಟಕ ಸಂಗೀತದ ಪ್ರಭಾವ
ಪ್ರ: ಕರ್ನಾಟಕ ಸಂಗೀತವು ನಿಮ್ಮ ಸಂಗೀತದ ಮೇಲೆ ತುಂಬ ಪ್ರಭಾವವನ್ನು ಬೀರಿದೆ. ನೀವು ಕರ್ನಾಟಕ ಸಂಗೀತವನ್ನು ಕಲಿತಿದ್ದೀರಾ? ಅದರಿಂದ ನಾವು ಏನನ್ನು ಪಡೆಯಬಹುದು?
ಉ: ಆಕಾಶವಾಣಿಯಲ್ಲಿ ಕೆಲಸ ಮಾಡುತ್ತಿದ್ದ ನನಗೆ ಕರ್ನಾಟಕ ಸಂಗೀತದ ಪರಿಚಯವಾಯಿತು. ಅವರ ಗಮಕಗಳು ಮತ್ತು ಸರಗಮ್ (ಸ್ವರಗಳು) ವಿನಿಕೆ ನನಗೆ ತುಂಬ ಇಷ್ಟವಾಯಿತು. ನಾನು ಕರ್ನಾಟಕ ಸಂಗೀತವನ್ನು ಕಲಿಯಬೇಕಿತ್ತು ಅನ್ನಿಸುತ್ತದೆ. ಅದರಿಂದ ನನಗೆ ಆ ಸಂಗೀತವು ಸುಲಭದಲ್ಲಿ ಅರ್ಥವಾಗುತ್ತಿತ್ತು.
ಪ್ರ: ಹಿಂದುಸ್ತಾನಿ ಸಂಗೀತದ ಬೋಧನಾಕ್ರಮದಲ್ಲಿ ಮತ್ತು ವಿಷಯದ ವ್ಯವಸ್ಥೆಯಲ್ಲಿ (content-structure) ಕ್ರಮಬದ್ಧತೆ ಬರಬೇಕೆ?
ಉ: ಸಂಗೀತವನ್ನು ಕಲಿಯಬಯಸುವ ಯಾವನೇ ಒಬ್ಬ ಹೊಸ ವಿದ್ಯಾರ್ಥಿಗೆ ಕ್ರಮಬದ್ಧವಾದ ಔಪಚಾರಿಕ ವ್ಯವಸ್ಥೆ ಇರಬೇಕು ಎನ್ನುವುದು ನನ್ನ ವೈಯಕ್ತಿಕ ಅಭಿಪ್ರಾಯ. ಮುಂದೆ ಅದನ್ನು ಗುರು ಹಾಗೂ ಶಿಷ್ಯನ ಸಾಮರ್ಥ್ಯಕ್ಕೆ ಬಿಡಬೇಕು. ಆರಂಭದಲ್ಲಿ ಕಲಿಸುವ ಸಂಗೀತದಲ್ಲಿ ಏನಿರಬೇಕೆನ್ನುವ ಒಂದು ವ್ಯವಸ್ಥೆಯನ್ನು ರೂಪಿಸಲು ನಾನು ಪ್ರಯತ್ನಿಸುತ್ತಿದ್ದೇನೆ. ಅದರಿಂದ ಸ್ವರ(ಸುರ್), ಲಯಗಳನ್ನು ಕಲಿಸಲು, ಸ್ವರ(voice)ದ ವ್ಯಾಪ್ತಿ ಚಿಂತನೆ ಮತ್ತು ಕೌಶಲಗಳನ್ನು ಉತ್ತಮಪಡಿಸಲು ನೆರವಾಗುತ್ತದೆ.
ಫ್ಯೂಶನ್ ಸಂಗೀತ
ಪ್ರ: ಭಾರತೀಯ ಶಾಸ್ತ್ರೀಯ ಸಂಗೀತಗಾರರು ಈಗ ಹೆಚ್ಚಾಗುತ್ತಿರುವ ಫ್ಯೂಶನ್ ಸಂಗೀತವನ್ನು ಮಾಡಬೇಕೆ?
ಉ: ಫ್ಯೂಶನ್ ಸಂಗೀತವು ಹೆಚ್ಚಾಗುತ್ತಿರುವುದು ನಮ್ಮ ಶ್ರೋತೃಗಳ ಅಭಿರುಚಿಯನ್ನು ತಿಳಿಸುತ್ತದೆ. ವಾಣಿಜ್ಯಾತ್ಮಕವಾದ ಇಂದಿನ ಜಗತ್ತಿನಲ್ಲಿ ಸಂಗೀತವು ಮಾರಾಟದ ವಸ್ತುವಾಗಿದೆ. ಬಹುಶಃ ಇದು ಕಾಲದ ಅಗತ್ಯವಾಗಿರಬೇಕು; ಅದರಿಂದಾಗಿ ನಮ್ಮ ಶಾಸ್ತ್ರೀಯ ಸಂಗೀತಗಾರರು ಫ್ಯೂಶನ್ ಕಡೆಗೆ ಹೋಗುತ್ತಿದ್ದಾರೆ. ಸರ್ಜನಶೀಲತೆಗೆ ಹೊರತಾದ್ದು ಇತರ ಅನೇಕ ಕಾರಣಗಳಿರಬೇಕು. ಫ್ಯೂಶನ್ ಅದಾಗಿಯೇ ಕೆಟ್ಟ ಸಂಗೀತವಲ್ಲ. ಅದು ಬೆಳೆದು ಪಕ್ವವಾಗಲು ನಾವು ಸಮಯ ಕೊಡಬೇಕು. ನನ್ನ ಏಕೈಕ ಆಸೆಯೆಂದರೆ, ಫ್ಯೂಶನ್ನಲ್ಲಿ ತೊಡಗಿರುವ ಸಂಗೀತಗಾರರು ಒಳ್ಳೆಯ ಶಾಸ್ತ್ರೀಯ ಸಂಗೀತವನ್ನು ಜನಪ್ರಿಯಗೊಳಿಸಲು ನೆರವಾಗಬೇಕು. ಎಲ್ಲ ಸಂಗೀತಗಳು ಕಾಲದ ಪರೀಕ್ಷೆಯನ್ನು ಎದುರಿಸಿ ನಿಲ್ಲಬೇಕು; ಆದ್ದರಿಂದ ಕಾದುನೋಡೋಣ.
ಪ್ರ: ದರ್ಬಾರ್ ಅಂತಹ ರಾಗವನ್ನು ೧೪ ನಿಮಿಷಗಳಲ್ಲಿ ಹಾಡುತ್ತಾರೆ ಅಥವಾ ನುಡಿಸುತ್ತಾರೆ. ಇದು ತುಂಬ ಕಡಮೆ ಆಗಲಿಲ್ಲವೆ?
ಉ: ರಾಗದ ಸಾರವನ್ನು ಹೊರತರುವಲ್ಲಿ ತೆಗೆದುಕೊಂಡ ಸಮಯವು ನಿರ್ಣಾಯಕವಲ್ಲ; ಕೇವಲ ನಾಲ್ಕೆöÊದು ನಿಮಿಷಗಳಲ್ಲಿ ಒಂದು ರಾಗವನ್ನು ಹಾಡಿದ ಅಥವಾ ನುಡಿಸಿದ ಹಳೆಯ ದಿಗ್ಗಜ ಸಂಗೀತಗಾರರ ರೆಕಾರ್ಡಿಂಗ್ಗಳು ನಮ್ಮಲ್ಲಿವೆ.
ಪ್ರ: ಶಾಸ್ತ್ರೀಯ ಸಂಗೀತಕ್ಕೆ ಉದ್ಯಮಸಂಸ್ಥೆಗಳ (ಕಾರ್ಪೊರೇಟ್ ವಲಯ) ಆಶ್ರಯ (ಪೋಷಕತ್ವ) ಬೇಕೆ?
ಉ: ಕಾರ್ಪೊರೇಟ್ ಸಂಸ್ಥೆಗಳ ಪೋಷಕತ್ವ ಇಲ್ಲದಿದ್ದರೆ ಲಕ್ಷಗಟ್ಟಲೆಗೆ ಹೋಗುವ ಸಂಗೀತಗಾರರ ಸಂಭಾವನೆಯನ್ನು ಕೊಡಲು ಸಂಘಟಕರಿಗೆ ಸಾಧ್ಯವೆ? ಕೇವಲ ಟಿಕೆಟ್ ಮಾರಾಟದಿಂದ ಬರುವ ಹಣವನ್ನು ಸ್ವೀಕರಿಸಲು ಕಲಾವಿದರು ಸಿದ್ಧರಿದ್ದಾರೆಯೆ?
ಇದೊಂದು ವಿಷಮ ವೃತ್ತವಾಗಿದ್ದು, ತಕ್ಷಣ ಇದಕ್ಕೆ ಪರಿಹಾರ ಕಾಣುತ್ತಿಲ್ಲ. ಕಾರ್ಪೊರೇಟ್ ಸಂಸ್ಥೆಗಳು ಕೇವಲ ಕೆಲವು ಉನ್ನತ ಸಂಗೀತಗಾರರ ಕಾರ್ಯಕ್ರಮಗಳ ಪ್ರಾಯೋಜನೆಯನ್ನು ಮಾಡುತ್ತವೆ; ಏಕೆಂದರೆ ಅವರಿಗೆ ಇದು ಕೂಡ ವ್ಯವಹಾರ. ಅವರು ನಮ್ಮ ಕಲಾವಿದರು ಮತ್ತು ಶ್ರೋತೃಗಳನ್ನು ಹಾಳುಮಾಡಿದ್ದಲ್ಲದೆ, ಶಾಸ್ತ್ರೀಯ ಸಂಗೀತ ಕ್ಷೇತ್ರದೊಳಗೆ ವಾಣಿಜ್ಯಾತ್ಮಕತೆಯನ್ನು ಕೂಡ ತಂದಿದ್ದಾರೆ. ಕಲಾವಿದರು ಹೆಚ್ಚುಹೆಚ್ಚು ಹಣ ಕೇಳುತ್ತಿದ್ದಾರೆ; ಮತ್ತು ಶ್ರೋತೃಗಳು ಶಾಸ್ತ್ರೀಯ ಸಂಗೀತ ಕೇಳಲು ಹಣ ಏಕೆ ಕೊಡಬೇಕೆಂದು ಕೇಳುತ್ತಿದ್ದಾರೆ.
ಘರಾಣೆಯ ವೈಶಿಷ್ಟ್ಯ
ಪ್ರ: ಒಂದು ಘರಾಣೆಗೆ ಅಂಟಿಕೊಂಡರೆ ಒಬ್ಬ ಕಲಾವಿದನ ಶೈಲಿ ಸೊರಗುವುದೆ?
ಉ: ನಾನು ಸಂಗೀತವನ್ನು ಕಲಿಯುತ್ತಿದ್ದಾಗ ಆಯ್ಕೆಗೆ ಅವಕಾಶವಿರಲಿಲ್ಲ; ಒಂದು ಘರಾಣೆಯಲ್ಲೇ ಕಲಿಯಬೇಕಿತ್ತು. ಈಗ ಕಲಾವಿದರು ಹೆಚ್ಚು ಸಂಗೀತಗಳಿಗೆ ತಮ್ಮನ್ನು ತೆರೆದುಕೊಳ್ಳುತ್ತಿದ್ದಾರೆ. ಆದರೆ ನನ್ನ ಗುರುಗಳು ಉದಾರಿಗಳೂ ವಿಶಾಲ ಮನಸ್ಸಿನವರೂ ಆಗಿದ್ದರು. ಹಲವು ಶೈಲಿಗಳನ್ನು ಅಳವಡಿಸಿಕೊಳ್ಳಲು ಅವರು ಅವಕಾಶ ನೀಡಿದರು; ಅದರಿಂದಾಗಿ ನಾನು ಗುಲಾಂ ಅಲಿಖಾನ್ ಸಾಹೇಬ್, ಅಮಿರ್ಖಾನ್ರಂತಹ ಹಲವು ಮಹಾನ್ ಕಲಾವಿದರ ಸಂಗೀತವನ್ನು ಕೇಳಿದೆ. ಒಂದು ಘರಾಣೆ ಒಬ್ಬ ಕಲಾವಿದನ ಶೈಲಿಯನ್ನು (ಬಿಗಿಯಾದ ಹಿಡಿತದಿಂದ) ಸೊರಗಿಸುತ್ತದೆ ಎಂದು ನಾನು ನಂಬುವುದಿಲ್ಲ. ಅದೇ ವೇಳೆ ನಾವು ನಮ್ಮನ್ನು ತೆರೆದುಕೊಂಡು ಹಲವು ಅಂಶಗಳನ್ನು ಕಲಿಯಬಹುದು.
ಪ್ರ: ಹಾಗಾದರೆ ಘರಾಣೆ ಪದ್ಧತಿಯ ಮಹತ್ತ್ವವೇನು?
ಉ: ನೋಡಿ, ಇಲ್ಲಿ ಮುಖ್ಯವಾದದ್ದೆಂದರೆ, ನಿಮ್ಮ ಸಂಗೀತಕ್ಕೆ ಭದ್ರವಾದ ಆಧಾರಬೇಕು. ಒಬ್ಬ ವಿದ್ಯಾರ್ಥಿ ಒಂದು ಶೈಲಿಯ ಪ್ರಮುಖ ಅಂಶಗಳನ್ನು ಕಲಿತನೆಂದರೆ, ಮುಂದಿನ ಬೆಳವಣಿಗೆಗೆ ಮತ್ತು ಸರ್ಜನಶೀಲತೆಗಳಿಗೆ ಅದು ಒಳ್ಳೆಯ ತಳಹದಿಯಾಗುತ್ತದೆ. ಆಗ ಆತ ಬೇರೆ ಶೈಲಿ(ಘರಾಣೆ)ಗಳಿಗೆ ತನ್ನನ್ನು ತೆರೆದುಕೊಳ್ಳಬಹುದು. ಆದರೆ ಮೂಲ ತಳಹದಿಯನ್ನು ಯಾವಾಗಲೂ ಒಬ್ಬ ಗುರುವಿನಿಂದ ಕಲಿಯುವ ಮೂಲಕ ಸಿದ್ಧಪಡಿಸಿಕೊಳ್ಳಬೇಕು. ಘರಾಣೆಯ ಮಹತ್ತ÷್ವ ಇರುವುದು ಇಲ್ಲೇ.
ಪ್ರ: ನೀವು ನಿಮ್ಮ ಗುರುವಿನಿಂದ ಪಡೆದು ನಿಮ್ಮ ಶಿಷ್ಯರಿಗೆ ವರ್ಗಾಯಿಸಬಯಸುವ ಸಂಗೀತದ ಲಕ್ಷಣಗಳೇನು?
ಉ: ನನ್ನ ಗುರುಗಳಿಗೆ ಸಂಬಂಧಿಸಿ ಹೇಳುವುದಾದರೆ, ನಾನು ನನ್ನ ಗುರುಗಳನ್ನು ಬಹಳ ಬೇಗ ಕಳೆದುಕೊಂಡೆ. ಅದರಿಂದ ನಾನು ಸ್ವಾವಲಂಬಿಯಾಗಬೇಕಾಯಿತು. ಆದರೆ ಆಕಾಶವಾಣಿಯ ಉದ್ಯೋಗದಲ್ಲಿದ್ದ ನಾನು ಯಾವಾಗಲೂ ಸಂಗೀತದ ಸಂಪರ್ಕದಲ್ಲಿದ್ದೆ. ರೆಕಾರ್ಡ್ಗಳು ಮತ್ತು ಕಛೇರಿಗಳನ್ನು ಕೇಳುತ್ತಿದ್ದೆ; ಅದು ನಿಲ್ಲಲೇ ಇಲ್ಲ. ಈ ಪ್ರಜ್ಞಾಪೂರ್ವಕ ಕೇಳ್ಮೆಯಿಂದಾಗಿ ನಾನು ಬೆಳೆಯಲು ಸಾಧ್ಯವಾಯಿತು. ಬೋಧಿಸುವಾಗ ನಾನು ಫ್ರೇಸ್ಗಳು ಮತ್ತು ರಚನೆಗಳ ನೊಟೇಶನ್ಗಳನ್ನು ನೀಡುತ್ತೇನೆ. ಅದಲ್ಲದೆ ನಾನು ತರಗತಿಗಳ ರೆಕಾರ್ಡಿಂಗ್ಗಳನ್ನು ಕೂಡ ನೀಡುತ್ತೇನೆ. ಈ ತಾಂತ್ರಿಕ ಸವಲತ್ತುಗಳ ಮೂಲಕ ಈಗ ಸಂಗೀತದ ಬೋಧನೆ ಮತ್ತು ಕಲಿಕೆಗಳನ್ನು ಸರಳಗೊಳಿಸಲು ಸಾಧ್ಯ.
ಪ್ರ: ನಿಮ್ಮ ಪ್ರಕಾರ ನಿಮ್ಮ ಅತ್ಯಂತ ಮಹತ್ತ್ವದ ಸಾಧನೆ ಯಾವುದು?
ಉ: ನಿಜವೆಂದರೆ, ನಾನು ಹಾಡಬಲ್ಲೆ ಎನ್ನುವುದೇ ನನ್ನ ಅತ್ಯಂತ ಮಹತ್ತ್ವದ ಸಾಧನೆ (ನಗು). ಉತ್ತಮ ಸಂಗೀತವನ್ನು ಸೃಷ್ಟಿಸುವುದು ಮತ್ತು ಅದನ್ನು ನನ್ನ ಶ್ರೋತೃಗಳಿಗೆ ಅರ್ಪಿಸುವುದೇ ನನಗೆ ತುಂಬ ಸಂತೋಷ ನೀಡುವ ವಿಷಯವಾಗಿದೆ. ಪ್ರಶಸ್ತಿಗಳನ್ನು ಸ್ವೀಕರಿಸುವುದು ಕೂಡ ಖುಷಿ ನೀಡುತ್ತದೆ… ಆದರೆ ಉತ್ತಮ ಸಾಧನೆ ಮಾಡದೆ ಪ್ರಶಸ್ತಿ ಸಿಗದು. ಆದ್ದರಿಂದ ವೇದಿಕೆಯಲ್ಲಿ ಉತ್ತಮ ಕಛೇರಿ ನೀಡುವುದೇ ಅತ್ಯಂತ ಮುಖ್ಯವಾದದ್ದು.
ಇಷ್ಟವಾದ ರಾಗ
ಪ್ರ: ನಿಮಗೆ ಅತ್ಯಂತ ಇಷ್ಟವಾದ ರಚನೆ ಅಥವಾ ರಾಗ ಯಾವುದು?
ಉ: ನನಗೆ ಒಂದು ರಾಗ ಇಷ್ಟವಾದರೆ ಹಲವು ತಿಂಗಳುಗಳ ಕಾಲ ಅದನ್ನು ನಾನು ಎಲ್ಲ ಕಛೇರಿಗಳಲ್ಲಿ ಹಾಡುತ್ತೇನೆ; ಅನಂತರ ಸುದೀರ್ಘ ಕಾಲ ಅದನ್ನು ಹಾಡುವುದಿಲ್ಲ. ಅದಕ್ಕೆ ಹೊರತಾಗಿ ಯಾವಾಗಲೂ ಹಾಡಲು ಇಷ್ಟಪಡುವ ರಾಗವೆಂದರೆ ಯಮನ್… ಅದರ ನಾದ ನನಗೆ ತುಂಬ ಇಷ್ಟ. ಆ ರಾಗ ಸುಂದರ ಎಂಬುದಷ್ಟೇ ಅಲ್ಲ; ಓರ್ವ ಯುವತಿಯಾಗಿ ಅದನ್ನು ಕಲಿತ ಆ ದಿನಗಳ ಸುಂದರ ನೆನಪುಗಳಿವೆ. ಗುರುಗಳಿಂದ ನಾನು ಮೊದಲು ಕಲಿತ ರಾಗಗಳಲ್ಲಿ ಅದೊಂದು.
ಪ್ರ: ನಿಮ್ಮ ಸಾಮಾನ್ಯ ದಿನಗಳು ಹೇಗಿರುತ್ತವೆ?
ಉ: ಬೆಳಗ್ಗೆ ಸುಮಾರು ೫ ಗಂಟೆಗೆ ನಾನು ಏಳುತ್ತೇನೆ. ಪೂಜೆ ಮುಗಿಸಿ ನನ್ನ ತಂಬೂರಿಯೊAದಿಗೆ ಕುಳಿತುಕೊಳ್ಳುತ್ತೇನೆ. ಅನಂತರ ಕೆಲವು ಶಿಷ್ಯರು ಬರುತ್ತಾರೆ; ಆಮೇಲೆ ಸ್ವಲ್ಪ ಮನೆಗೆಲಸ, ಬರುವ ಫೋನ್ ಕರೆಗಳ ಸ್ವೀಕಾರ, ಪತ್ರ ವ್ಯವಹಾರ, ಓದುವುದು, ಸಂಗೀತ ಕೇಳುವುದು, ಟಿವಿ ನೋಡುವುದು, ಮತ್ತೆ ಕೆಲವು ಶಿಷ್ಯರಿಗೆ ಪಾಠ, ಇನ್ನಷ್ಟು ಸಂಗೀತ, ಅಡುಗೆ ಮಾಡುವುದು ಇತ್ಯಾದಿ; ಅನಂತರ (ರಾತ್ರಿ) ಮಲಗುವುದು. ಏನಿದ್ದರೂ ನಾನು ಮಾಡುವುದೆಲ್ಲ ಸಂಗೀತಕ್ಕೆ ಸಂಬಂಧಿಸಿದ್ದು. ಸಂಗೀತವು ದಿನದ ೨೪ ಗಂಟೆಗಳ ಕೆಲಸ ಎಂಬುದು ನನ್ನ ನಂಬಿಕೆ.
ಪ್ರ: ನಿಮ್ಮದು ಧಾರ್ಮಿಕ ಪ್ರವೃತ್ತಿಯೆ?
ಉ: ಹೌದು. ನಾನು ಶಿವ (ಖಂಡೋಬಾ), ದೇವಿ ದುರ್ಗಾ (ಅಂಬಾಬಾಯಿ) ಮತ್ತು ಗಣೇಶನನ್ನು; ಹಾಗೆಯೇ ದೇವಿ ಸರಸ್ವತಿ ಮತ್ತು ಶ್ರೀಕೃಷ್ಣನನ್ನು ಕೂಡ ಪೂಜಿಸುತ್ತೇನೆ. ನಾನು ದೇವಾಲಯಗಳಿಗೆ, ಆಶ್ರಮಗಳಿಗೆ ಹೋಗುತ್ತೇನೆ; ಅಲ್ಲಿ ಹಾಡುತ್ತೇನೆ. ಅದು ನನಗೆ ತುಂಬ ಶಾಂತಿ, ಸಮಾಧಾನ ಮತ್ತು ಶಕ್ತಿಗಳನ್ನು ನೀಡುತ್ತದೆ.
ಪ್ರ: ನಿಮ್ಮ ಭವಿಷ್ಯದ ಯೋಜನೆಗಳೇನು?
ಉ: ಕೊನೆಯುಸಿರಿನ ತನಕ ಹಾಡುವುದು; ಗೀತರಚನೆ, ಬರವಣಿಗೆ, ಬೋಧನೆಗಳನ್ನು ಮಾಡುತ್ತಲೇ ಇರಬೇಕು. ಸಂಗೀತ, ಸಂಗೀತಗಾರರ ಬಗ್ಗೆ ಒಂದು ಪುಸ್ತಕ ಬರೆಯುವ ಸಿದ್ಧತೆಯಲ್ಲಿದ್ದೇನೆ.
ಪ್ರ: ನಿಮ್ಮನ್ನು ಏನೆಂದು ನೆನಪಿಡಬೇಕು?
ಉ: ಒಬ್ಬಾಕೆ ಒಳ್ಳೆಯ ಮನುಷ್ಯ ಜೀವಿ.