ಕಶ್ಮೀರ ಆವಿರ್ಭಾವವಾದಾಗಿನಿಂದ ಈ ಪ್ರದೇಶದಲ್ಲಿ ನಮ್ಮ ವಂಶದವರು ಸ್ಥಿರವಾಗಿ ಇದ್ದಾರೆ.
ಈಗ ನಾವು ಇದ್ದೇವೆ, ಮುಂದೆಯೂ ಇರುತ್ತೇವೆ. ನಮ್ಮ ಪ್ರಭು ಪರಮೇಶ್ವರನೂ ಇಲ್ಲಿಯೆ ಇರುತ್ತಾನೆ. ನಿಮ್ಮಂತಹ ತಾತ್ಕಾಲಿಕ ಪ್ರಭುಗಳೊಡನೆ ನಮಗೆ ಸಂಬಂಧವಿಲ್ಲ. ನಮ್ಮ ಸಂಬಂಧ ಇರುವುದು ನಮ್ಮ ದೈವದೊಡನೆ ಮಾತ್ರ. ಸನಾತನಧರ್ಮದೊಡನೆ ಮಾತ್ರ.
ಈ ಕಥೆ ಕ್ರಿ. ಪೂ. ೧೫ನೇ ಶತಮಾನಕ್ಕೆ ಸಂಬಂಧಿಸಿದುದು.
ದಾಮೋದರ ಮಹಾರಾಜನು ವಿಪ್ರಶಾಪಕ್ಕೊಳಗಾಗಿ ಸರ್ಪವಾಗಿ ಮಾರ್ಪಟ್ಟಿದ್ದುದರಿಂದ ಕಶ್ಮೀರ ದೇಶವೆಲ್ಲ ಅಲ್ಲೋಲಕಲ್ಲೋಲವಾಗಿತ್ತು. ಆ ಸಮಯದಲ್ಲಿ ಹುಷ್ಕನೆಂಬ ತುರುಷ್ಕನು ಕಶ್ಮೀರ ರಾಜ್ಯದ ಮೇಲೆ ಆಕ್ರಮಣ ನಡೆಸಿದ (‘ತುರುಷ್ಕ’ನೆಂದರೆ ಮಹಮ್ಮದೀಯನೆಂದಲ್ಲ; ತುರ್ಕಿಸ್ತಾನದಿಂದ ವಲಸೆ ಬಂದು ನೆಲೆಸಿದ ಬೌದ್ಧ ಪಂಡಿತಾದಿಗಳು ‘ತುರುಷ್ಕರೆನಿಸಿದ್ದರು.’)
ಕಶ್ಮೀರವನ್ನು ಆಕ್ರಮಿಸಿದ ಮೇಲೆ ಹುಷ್ಕನು ಇಲ್ಲಿಯ ಬಂಡಾಯಗಾರನ್ನೆಲ್ಲ ಹೇಳಹೆಸರಿಲ್ಲದಂತೆ ಮಾಡಿದ. ಪರ್ಯಟನೆ ಮಾಡುವಾಗ ಹುಷ್ಕನಿಗೆ ಒಂದು ಅತ್ಯಂತ ಸುಂದರ ಪ್ರದೇಶ ಗೋಚರಿಸಿತು. ಆ ಭಾಗವನ್ನು ‘ಕೈಲಾಸಗಿರಿ’ ಎನ್ನುತ್ತಾರೆ. ಅಲ್ಲಿ ಕೇವಲ ಸುಮಾರು ಹದಿನೈದು ಬ್ರಾಹ್ಮಣಕುಟುಂಬಗಳವರು ಮಾತ್ರ ನೆಲೆಸಿದ್ದರೆಂದೂ ತಿಳಿಯಿತು.
ಕಣ್ಣಿಗೆ ಹಬ್ಬವೆನಿಸುವ ವೃಕ್ಷರಾಶಿ, ಮುಗಿಲನ್ನು ಮುಟ್ಟುವ ಪರ್ವತಗಳು, ಮನಮೋಹಕ ನದಿ ಸರಸ್ಸುಗಳು ಹುಷ್ಕಮಹಾರಾಜನ ಹೃದಯವನ್ನು ಸೂರೆಗೊಂಡವು. ಇಲ್ಲಿಯ ಪ್ರಶಾಂತ ವಾತಾವರಣದಲ್ಲಿ ಸಂಮೋಹನಕರ ವಿಧಾತನ ಕಲಾಕೌಶಲಕ್ಕೆ ಕನ್ನಡಿ ಹಿಡಿದಂತೆ ಇದ್ದಿತು. ಈ ರಮ್ಯ ತಾಣದಲ್ಲಿ ಒಂದು ಚೈತ್ಯವನ್ನೂ ಬೌದ್ಧಭಿಕ್ಷುಗಳಿಗಾಗಿ ಮಠವನ್ನೂ ನಿರ್ಮಿಸಿ ತಾನು ಶಾಶ್ವತ ಕೀರ್ತಿಗೆ ಪಾತ್ರವಾಗಬೇಕೆಂಬ ಆಲೋಚನೆ ಹುಷ್ಕನ ಮನದಲ್ಲಿ ತಲೆದೋರಿತು.
ರಾಜನು ತನ್ನ ಅಭಿಲಾಷೆಯನ್ನು ಮಂತ್ರಿಗೆ ತಿಳಿಸಿದ. ಮಂತ್ರಿ ಶೇಖರನು ಈ ಯೋಜನೆಯನ್ನು ಸೇನಾಪತಿ ಶಾಕ್ಯವರ್ಧನನಿಗೆ ಸೂಚಿಸುತ್ತ ಎಚ್ಚರಿಕೆಯ ಮಾತೊಂದನ್ನೂ ಹೇಳಿದ: “ಕೈಲಾಸಗಿರಿಯಲ್ಲಿ ಇರುವ ಬ್ರಾಹ್ಮಣಕುಟುಂಬಗಳವರು ಕಶ್ಮೀರ ದೇಶ ಆವಿರ್ಭವಿಸಿದಾಗಿನಿಂದ ಇಲ್ಲಿಯೇ ನೆಲೆಸಿದ್ದಾರೆ. ಅವರಲ್ಲಿ ಪ್ರಮುಖನಾದ ಒಬ್ಬಾತ ವಿಶ್ವನಾಥಭಟ್ಟನೆಂಬ ಪಂಡಿತ. ದಾಮೋದರ ಮಹಾರಾಜನಿಗೆ ಸರ್ಪರೂಪ ತಳೆಯುವಂತೆ ಶಾಪಕೊಟ್ಟ ವಿಪ್ರರ ಗುಂಪಿನಲ್ಲಿ ಈತನೂ ಸೇರಿದ್ದ. ಅವರೆಲ್ಲ ಯುದ್ಧವಿದ್ಯೆಯಲ್ಲಿಯೂ ಪಾರಂಗತರು. ಮ್ಲೇಚ್ಛಗಣಗಳನ್ನು ಅಡಗಿಸುವುದರಲ್ಲಿ ಅಶೋಕ ಮಹಾರಾಜನಿಗೆ ನೆರವಾಗಿದ್ದ ಬ್ರಾಹ್ಮಣರ ವಂಶಕ್ಕೆ ಸೇರಿದವರು ಇವರು. ಆದುದರಿಂದ ಇವರೊಡನೆ ಅತ್ಯಂತ ಜಾಗ್ರತೆಯಿಂದ ವ್ಯವಹರಿಸಬೇಕು.”
ಸೇನಾಪತಿ ಶಾಕ್ಯವರ್ಧನನೂ ನಕ್ಕು “ಮಂತ್ರಗಳಿಗೂ ಶಾಪಗಳಿಗೂ ಹೆದರಬೇಕಾದ ದಿನಗಳು ಈಗ ಇಲ್ಲ. ಈಗ ಮಂತ್ರಗಳಲ್ಲಿ ಅಂತಹ ಶಕ್ತಿ ಉಳಿದಿಲ್ಲ. ಏಕೆಂದರೆ ಬ್ರಾಹ್ಮಣರಲ್ಲಿ ಹಿಂದೆ ಇದ್ದ ವಾಕ್ಶುದ್ಧಿ ಈಗ ಇಲ್ಲ. ಈಗ ಪ್ರಚಲಿತವಾಗಿರುವವು ಭಗವಾನ್ ಬುದ್ಧನ ದಿವ್ಯಬೋಧನೆಗಳು. ಈಗ ಶಾಪ-ಕೋಪಗಳಿಗೆ ಆಸ್ಪದವಿಲ್ಲ ಎಂದ.
ಆದರೆ ಆ ಸ್ಥಳಗಳನ್ನು ನಿಭಾಯಿಸುವುದು ಸುಲಭದ ಕೆಲಸವಲ್ಲವೆಂದು ಸೇನಾಪತಿಗೆ ಅರಿವಾಗಲು ಹೆಚ್ಚು ಸಮಯ ಹಿಡಿಯಲಿಲ್ಲ. ಅಲ್ಲಿದ್ದ ಹದಿನೈದು ಕುಟುಂಬಗಳವರು ಕೈಲಾಸಗಿರಿಯಲ್ಲಿರುವ ಒಂದು ದೇವಾಲಯ ಬಿಟ್ಟು ಹೊರಡಲು ಎಂತಹ ಸನ್ನಿವೇಶದಲ್ಲಿಯೂ ಒಪ್ಪಲಾರರೆಂಬುದು ಗೂಢಚಾರರ ಮೂಲಕ ತಿಳಿದುಬಂದಿತು. ಸೇನಾಪತಿಯು ಹತ್ತು ಮಂದಿ ಭಟರನ್ನು ಕಳಿಸಿ ಬೆದರಿಕೆಯೊಡ್ಡಿದುದೂ ಫಲಕಾರಿಯಾಗಲಿಲ್ಲ. ಅನಂತರ ಐವತ್ತು ಮಂದಿ ಸೈನಿಕರೊಡನೆ ಸ್ವಯಂ ಶಾಕ್ಯವರ್ಧನನೇ ಕೈಲಾಸಗಿರಿಗೆ ಬಂದಿಳಿದ.
ಅಲ್ಲಿ ಇದ್ದವರನ್ನು ಕೇಳಿದ: “ನಿಮ್ಮಲ್ಲಿ ವಿಶ್ವನಾಥಭಟ್ಟ ಯಾರು?” “ನಾನೇ” ಎಂದು ಅವರ ಪೈಕಿಯ ವೃದ್ಧ ಬ್ರಾಹ್ಮಣನೊಬ್ಬ ಉತ್ತರಿಸಿದ.
“ನಾವು ಹುಷ್ಕರಾಜನ ಆಜ್ಞೆಯಂತೆ ಬಂದಿದ್ದೇವೆ. ಕೈಲಾಸಗಿರಿಯ ದೇವಸ್ಥಾನ ಇರುವ ಕಡೆ ಒಂದು ಮಹಾಚೈತ್ಯವನ್ನು ನಿರ್ಮಾಣ ಮಾಡಬೇಕೆಂಬುದು ಪ್ರಭುಗಳ ಇಚ್ಛೆಯಾಗಿದೆ. ಆದುದರಿಂದ ಈ ಪ್ರಾಂತ್ಯವನ್ನು ಬಿಟ್ಟುಕೊಡಬೇಕೆಂದು ನಿಮ್ಮಲ್ಲಿ ವಿನಯಪೂರ್ವಕವಾಗಿ ಬೇಡುತ್ತಿದ್ದೇವೆ.”
ಯಾರೂ ಮಾತನಾಡಲಿಲ್ಲ. ಶಾಕ್ಯವರ್ಧನನೇ ಮುಂದುವರಿಸಿದ: “ನಿಮಗೆ ಐದು ದಿವಸಗಳ ಅವಕಾಶವನ್ನು ಕೊಡುತ್ತಿದ್ದೇನೆ. ಈ ಐದು ದಿವಸಗಳೊಳಗಾಗಿ ನಿಮ್ಮ ನಿರ್ಣಯವನ್ನು ತಿಳಿಸಿರಿ. ಯಾವುದೇ ಸಂದರ್ಭದಲ್ಲಿಯೂ ಇಲ್ಲಿಯ ಚೈತ್ಯನಿರ್ಮಾಣ ತಪ್ಪದು.”
ಐದು ದಿವಸಗಳಾದ ಮೇಲೆ ಶಾಕ್ಯವರ್ಧನ ಕೈಲಾಸಗಿರಿಗೆ ಮರಳಿದ.
ಈ ಸಲ ಅವನೊಡನೆ ನೂರು ಮಂದಿ ಸೈನಿಕರು ಇದ್ದರು.
“ನೀವು ಏನೆಂದು ನಿರ್ಣಯಿಸಿದ್ದೀರಿ?” ಎಂದು ಕೇಳಿದ.
ಯಾರೂ ಏನೂ ಮಾತನಾಡಲಿಲ್ಲ.
“ಮೌನವೆಂದರೆ ಅರ್ಧ ಅಂಗೀಕಾರವೆಂದು ಭಾವಿಸಬಹುದೆ?” ಎಂದ ಸೇನಾಪತಿ, ವ್ಯಂಗ್ಯವಾಗಿ.
“ಅರ್ಧ ಅಂಗೀಕಾರವೆಂದರೆ ಅರ್ಧ ಅನಂಗೀಕಾರವೆಂದೂ ಆಗುತ್ತದಲ್ಲವೆ?” ಎಂದ, ವಿಶ್ವನಾಥಭಟ್ಟ.
ಅವನ ಕಡೆಗೆ ತಿರಸ್ಕಾರದಿಂದ ನೋಡಿದ, ಶಾಕ್ಯವರ್ಧನ.
“ನಿಮ್ಮ ಅಂಗೀಕಾರ ಅಥವಾ ಅನಂಗೀಕಾರದೊಡನೆ ನಮಗೆ ಸಂಬಂಧವಿಲ್ಲ. ಮಹಾರಾಜರಿಗೆ ಈ ಸ್ಥಳ ಬೇಕಾಗಿದೆ. ನಾವು ಮರ್ಯಾದಾಪೂರ್ವಕ ನಿಮ್ಮನ್ನು ಕೇಳಿದ್ದೇವೆ. ನೀವು ಒಪ್ಪದಿದ್ದರೆ ಏನೂ ಮಾಡಲಾಗದು. ನಿಮಗೆ ಇನ್ನು ಒಂದುದಿನ ಸಮಯ ನೀಡುತ್ತಿದ್ದೇವೆ. ನಾಳೆ ಸೂರ್ಯೋದಯದೊಳಗಾಗಿ ನೀವು ಈ ಪ್ರಾಂತ ಬಿಟ್ಟು ತೆರಳಬೇಕು. ಇಲ್ಲದಿದ್ದಲ್ಲಿ ಆಲಯದೊಡನೆ ನಿಮ್ಮೆಲ್ಲರನ್ನೂ ನಿಶ್ಶೇಷಗೊಳಿಸುವೆ. ಮೊದಲೇ ಹುಷ್ಕ ಮಹಾರಾಜರಿಗೆ ಬೌದ್ಧೇತರರೆಂದರೆ ಅಸಹನೆ ಹೆಚ್ಚು” ಎಂದು ಎಚ್ಚರಿಸಿದ, ಶಾಕ್ಯವರ್ಧನ.
ಮರುದಿನ ಬೆಳಕು ಹರಿಯುವುದಕ್ಕೆ ಮುಂಚೆಯೇ ನೂರು ಮಂದಿ ಸೈನಿಕರೊಡನೆ ಕೈಲಾಸಗಿರಿ ತಲಪಿದ, ಶಾಕ್ಯವರ್ಧನ. ಆದರೆ ಯಾರೂ ಊರುಬಿಟ್ಟು ಹೊರಡುವ ಸುಳಿವು ಕಾಣಲಿಲ್ಲ!
ಸೈನಿಕರೊಬ್ಬರಿಗೆ ವಿಶ್ವನಾಥಭಟ್ಟನನ್ನು ಕರೆತರುವಂತೆ ಅಪ್ಪಣೆಮಾಡಿ ಕಳಿಸಿದ. ಅವರು ಪಾಳಯಕ್ಕೆ ಹಿಂದಿರುಗುವವರೆಗೆ ಶಾಕ್ಯವರ್ಧನನಿಗೆ ಮನಸ್ಸಿನ ನೆಮ್ಮದಿ ಇರಲಿಲ್ಲ.
ಸೈನಿಕರು ಬರುತ್ತಿದ್ದಂತೆ ಅಸಹನೆಯಿಂದ ಕೇಳಿದ – “ಅವನು ಬರುತ್ತಿದ್ದಾನೆಯೆ?”
“ಊರಿನ ಎಲ್ಲ ಬ್ರಾಹ್ಮಣಕುಟುಂಬಗಳವರೂ ಯಾವುದೋ ಒಂದು ವಾರದ ವ್ರತವನ್ನು ನಡೆಸುತ್ತಿದ್ದಾರಂತೆ – ಎಂದು ದೇವಾಲಯದ ಹತ್ತಿರ ಇದ್ದ ಹುಡುಗನೊಬ್ಬ ಹೇಳಿದ” ಎಂದರು ಸೈನಿಕರು ಭಯಗೊಂಡ ಧ್ವನಿಯಲ್ಲಿ.
ಶಾಕ್ಯವರ್ಧನ ಕೋಪದಿಂದ ಕುದಿದುಹೋದ.
“ಈಹೊತ್ತೇ ಅವರು ಊರು ಬಿಟ್ಟು ಹೋಗಬೇಕೆಂದು ಹೇಳಿದ್ದೆನಲ್ಲವೆ? ಹಾಗಿರುವಾಗ ಅವರು ಇಂದೇ ಈ ಪೂಜೆಯನ್ನೋ ವ್ರತವನ್ನೋ ಏಕೆ ಇಟ್ಟುಕೊಂಡಿದ್ದಾರೆ?” ಎಂದು ಅಬ್ಬರಿಸಿದ.
ಸೈನಿಕರು ನಡುಗುತ್ತ “ನಮಗೆ ತಿಳಿಯದು ಪ್ರಭುಗಳೇ” ಎಂದರು.
ಶಾಕ್ಯವರ್ಧನ ಕ್ರುದ್ಧನಾಗಿ ಕುದುರೆಯನ್ನೇರಿ ಹತ್ತು ಮಂದಿ ಸೈನಿಕರೊಡನೆ ದೇವಾಲಯದ ಕಡೆಗೆ ಧಾವಿಸಿದ.
ದೇವಾಲಯದ ಹೊರಗಡೆ ಒಂದಷ್ಟು ದೂರದಲ್ಲಿ ಹುಡುಗನೊಬ್ಬ ಅವರನ್ನು ಅಡ್ಡಗಟ್ಟಿದ. “ನೀವು ಒಳಕ್ಕೆ ಹೋಗುವಂತಿಲ್ಲ ಎಂದ.
“ನೀನು ಯಾರು?” ಎಂದ ಶಾಕ್ಯವರ್ಧನ ಗದರಿಕೆಯ ಧ್ವನಿಯಲ್ಲಿ.
“ನಾನು ದಾಮೋದರ ಭಟ್ಟ. ವಿಶ್ವನಾಥಭಟ್ಟರ ಮೊಮ್ಮಗ” ಎಂದ, ಆ ಹುಡುಗ.
ಆ ಹೆಸರನ್ನು ಕೇಳಿ ಶಾಕ್ಯವರ್ಧನ ಕೆಂಡವಾದ. ಇನ್ನೂ ಹತ್ತು ವರ್ಷವೂ ಆದಂತಿಲ್ಲ, ಆದರೂ ಅಹಂಕಾರ ತುಂಬಿಕೊಂಡಂತಿದೆ ಇವನಲ್ಲಿ – ಎಂದುಕೊಂಡ ಹಲ್ಲು ಮಸೆಯುತ್ತ.
“ಹೋಗಿ ವಿಶ್ವನಾಥಭಟ್ಟನನ್ನು ಕರೆದುಕೊಂಡು ಬಾ. ಇಲ್ಲವಾದರೆ ನಮಗೆ ಒಳಕ್ಕೆ ಹೋಗಲು ಬಿಡು” ಎಂದ ಶಾಕ್ಯವರ್ಧನ ಕೋಪದಿಂದ.
“ಅಜ್ಜನವರು ಪೂಜೆಯಲ್ಲಿ ಕುಳಿತಿದ್ದಾರೆ. ಇನ್ನೂ ಒಂದು ವಾರ ಅವರು ಕದಲುವುದಿಲ್ಲ. ನೀವು ಬೌದ್ಧರೇ ಆಗಿದ್ದರೂ ಭಕ್ತರಂತೆ ಒಳಗೆ ಹೋಗುವುದಾದಲ್ಲಿ ಅಭ್ಯಂತರ ಇರದು.”
ಈ ಹೊತ್ತಿಗೆ ಶಾಕ್ಯವರ್ಧನನ ಕ್ರೋಧ ತಾರಕಕ್ಕೆ ಏರಿತ್ತು. “ಆ ಹುಡುಗನನ್ನು ಪಕ್ಕಕ್ಕೆ ಸರಿಸು” ಎಂದು ಸೈನಿಕನಿಗೆ ಆಜ್ಞೆಯಿತ್ತ.
ಆ ಸೈನಿಕ ಅಲ್ಲಾಡಲಿಲ್ಲ!
ಶಾಕ್ಯವರ್ಧನನಿಗೆ ಕೋಪ ತಡೆದುಕೊಳ್ಳಲಾಗಲಿಲ್ಲ.
“ಹೇಳಿದೆನಲ್ಲಯ್ಯ – ಆ ಹುಡುಗನನ್ನು ಆಚೆಗೆ ದಬ್ಬು. ಇಲ್ಲದಿದ್ದರೆ ನನ್ನ ಕತ್ತಿ ನಿನ್ನ ಎದೆಯೊಳಕ್ಕೆ ಇಳಿಯುತ್ತದೆ, ಹುಷಾರು” ಎಂದ.
ಸೈನಿಕನು ತಲೆತಗ್ಗಿಸಿ ಹೇಳಿದ: “ಪ್ರಭುಗಳೇ! ಈ ಹುಡುಗನ ಮೇಲೆ ಕೈ ಮಾಡಿ ಬ್ರಾಹ್ಮಣಶಾಪಕ್ಕೆ ಗುರಿಯಾಗಿ ಹಾವೋ ಕಪ್ಪೆಯೋ ಆಗಿ ಬದುಕೂ ಇಲ್ಲದೆ ಸಾವೂ ಇಲ್ಲದೆ ಇರುವುದಕ್ಕಿಂತ ಒಂದೇ ಸಾರಿ ನಿಮ್ಮ ಕೈಯ ಕತ್ತಿಯಿಂದ ಸಾಯುವುದು ಮೇಲೆಂದು ಅನಿಸುತ್ತಿದೆ” ಎಂದ.
ಆ ಮಾತು ಕೇಳಿ ಶಾಕ್ಯವರ್ಧನನ ಎತ್ತಿದ ಕೈ ಹಾಗೆಯೇ ಸ್ತಬ್ಧಗೊಂಡಿತು.
ಸರ್ಪವಾಗುವಂತೆ ವಿಪ್ರಶಾಪಕ್ಕೆ ಗುರಿಯಾದ ದಾಮೋದರ ಮಹಾರಾಜನು ಇನ್ನೂ ಅದೇ ರೂಪದಲ್ಲಿ ಸಂಚರಿಸುತ್ತಿದ್ದುದನ್ನು ಎಷ್ಟೋ ಮಂದಿ ನೋಡಿದ್ದುದಾಗಿ ಶಾಕ್ಯವರ್ಧನ ಕೇಳಿದ್ದ.
ಶಾಕ್ಯವರ್ಧನ ಇತರ ಸೈನಿಕರ ಕಡೆಗೆ ನೋಡಿದ. ಅವರೂ ಕೂಡಾ ತಲೆತಗ್ಗಿಸಿಕೊಂಡಿದ್ದರು. ಎದುರಿಗಿದ್ದ ಹುಡುಗನನ್ನು ನಾನೇ ಏಕೆ ಪಕ್ಕಕ್ಕೆ ಸರಿಸಬಾರದು – ಎಂದು ಒಂದುಕ್ಷಣ ಯೋಚಿಸಿದ, ಶಾಕ್ಯವರ್ಧನ. ಆದರೆ ಧೈರ್ಯ ಬರಲಿಲ್ಲ. ಯಾವುದೋ ಹಿಂದಿನ ಸಂಸ್ಕಾರ ಅವನನ್ನು ಹಿಂದೆಗೆಯುವಂತೆ ಮಾಡಿತು. ಕತ್ತಿ ಕೆಳಗಿಳಿಸಿದ.
“ಹೋಗಲಿ. ಇನ್ನೊಂದು ವಾರ ಕಳೆದು ಬರುತ್ತೇನೆ. ಈ ಸಲ ಪೂಜೆಗೀಜೆ ಎಂದರೆ ನಡೆಯುವುದಿಲ್ಲ. ಇದೇ ಕೊನೆಯ ಎಚ್ಚರಿಕೆ” ಎಂದು ಹೂಂಕರಿಸಿ ನಿರ್ಗಮಿಸಿದ, ಶಾಕ್ಯವರ್ಧನ.
“ಇನ್ನೂ ಚೈತ್ಯನಿರ್ಮಾಣದ ಕೆಲಸವನ್ನು ಆರಂಭಿಸಿದಂತೆ ಇಲ್ಲವಲ್ಲ?” ಎಂದು ಸಭೆಯಲ್ಲಿ ಮಂತ್ರಿಯನ್ನು ಪ್ರಶ್ನಿಸಿದ ಹುಷ್ಕ ಮಹಾರಾಜ.
ಮಂತ್ರಿಯು ಸೇನಾಪತಿಯ ಕಡೆಗೆ ನೋಡಿದ.
ಶಾಕ್ಯವರ್ಧನ ಎದ್ದುನಿಂತು ಅರಿಕೆ ಮಾಡಿದ:
“ಆ ಊರಿನಲ್ಲಿರುವ ಬ್ರಾಹ್ಮಣರು ವಸತಿಗೆ ಬೇರೆ ಸ್ಥಳ ಹುಡುಕಿಕೊಳ್ಳಲು ಸಮಯ ಕೇಳಿದರು, ಪ್ರಭುಗಳೆ. ನಾಳೆಗೆ ಗಡುವು ಮುಗಿಯುತ್ತದೆ. ನಾಳಿದ್ದು ನಿಶ್ಚಿತವಾಗಿ ಆ ಸ್ಥಳ ನಮ್ಮ ವಶಕ್ಕೆ ಬಂದಿರುತ್ತದೆ.”
ಹುಷ್ಕ ಮಹಾರಾಜನು ಕೈಲಾಸಗಿರಿಯ ದೇವಾಲಯವನ್ನು ಕೆಡವಿ ಅದು ಇದ್ದ ಸ್ಥಳದಲ್ಲಿ ಚೈತ್ಯವನ್ನು ನಿರ್ಮಿಸಬೇಕೆಂದು ಸಂಕಲ್ಪಿಸಿದುದು, ಆದರೆ ಮಹಾರಾಜನ ಪಡೆಯನ್ನು ಹದಿನೈದು ಸ್ಥಳೀಯ ಬ್ರಾಹ್ಮಣಕುಟುಂಬಗಳು ವಿರೋಧಿಸಿದುದು – ಈ ಸುದ್ದಿಯು ಕಶ್ಮೀರದಲ್ಲೆಲ್ಲ ಹರಡಿತು. ಅಲ್ಲದೆ ಆ ಕುಟುಂಬಗಳವರು ಹಿಂದೆ ದಾಮೋದರ ಮಹಾರಾಜನಿಗೆ ಶಾಪವಿತ್ತಿದ್ದವರ ವಂಶಿಕರೆಂಬ ಸಂಗತಿ ಜನರ ಕುತೂಹಲವನ್ನು ಇಮ್ಮಡಿಗೊಳಿಸಿತು; ಮುಂದೆ ಏನಾದೀತೋ ಎಂಬ ಒಂದುರೀತಿಯ ಆತಂಕವನ್ನೂ ಸೃಷ್ಟಿಸಿತು. ಹುಷ್ಕ ಮಹಾರಾಜನ ಪಾಡು ಏನಾದೀತೋ ಎಂದು ಜನರು ಮಾತನಾಡಿಕೊಳ್ಳತೊಡಗಿದರು.
ಒಂದು ವಾರದ ಗಡುವು ಮುಗಿದೊಡನೆ ಶಾಕ್ಯವರ್ಧನನು ಐನೂರು ಜನರ ಸೈನ್ಯದೊಡನೆ ಆ ಪ್ರಾಂತವನ್ನು ಸುತ್ತುವರಿದ. ಈ ಬಾರಿ ಶಾಕ್ಯವರ್ಧನ ಅಲ್ಲಿಗೆ ಬರುವುದಕ್ಕೆ ಮುಂಚೆಯೇ ಜನರು ತಂಡೋಪತಂಡವಾಗಿ ಕೈಲಾಸಗಿರಿ ತಲಪಿದ್ದರು. ಅವರಲ್ಲಿ ಹೆಚ್ಚಿನವರು ಬೌದ್ಧಮತಾನುಯಾಯಿಗಳು.
ತನಗೆ ಎದುರಾದ ವಿಶ್ವನಾಥಭಟ್ಟನನ್ನು ಕುರಿತು ಶಾಕ್ಯವರ್ಧನ ಹೇಳಿದ:
“ನಿಮಗೆ ಕೊಟ್ಟಿದ್ದ ಗಡುವು ಮುಗಿದಿದೆ. ಆದರೆ ಇನ್ನೂ ಇಲ್ಲಿಂದ ನೀವು ತೆರಳಿಲ್ಲವಲ್ಲ? ಇನ್ನು ತಡಮಾಡದೆ ಇಲ್ಲಿಂದ ಹೊರಟುಹೋಗಿ.”
ವಿಶ್ವನಾಥಭಟ್ಟ ಮುಗುಳ್ನಕ್ಕನಷ್ಟೆ; ಮಾತನಾಡಲಿಲ್ಲ.
ಅವನ ನಗುಮುಖವನ್ನು ನೋಡಿ ಶಾಕ್ಯವರ್ಧನ ಇನ್ನಷ್ಟು ಕೆರಳಿದ:
“ನೀವು ಹೊರಡುತ್ತೀರೋ, ಇಲ್ಲ …….?”
“ಇಲ್ಲದಿದ್ದರೆ?”
“ಬಲವಂತವಾಗಿ ಹೊರಡಿಸಬೇಕೆನ್ನುತ್ತೀರಾ?”
ಇವರ ವಾಗ್ವಾದ ಹೀಗೆ ನಡೆದಿದ್ದಾಗಲೇ ಕೈಲಾಸಗಿರಿಯ ಇತರ ಕುಟುಂಬಗಳವರು ಬಂದು ಸೇರಿದ್ದರು. ಎಲ್ಲರೂ ಉತ್ಕಂಟಭರಿತರಾಗಿದ್ದರು.
“ಹೊರಡಿಸಿರಿ, ನೋಡೋಣವಂತೆ” ಎಂದು ವಿಶ್ವನಾಥಭಟ್ಟ ಹೇಳಿದಾಗ ಅವನ ಮೇಲೇರುವುದನ್ನು ಬಿಟ್ಟು ಶಾಕ್ಯವರ್ಧನನಿಗೆ ಬೇರೆದಾರಿ ಕಾಣಲಿಲ್ಲ. ಕತ್ತಿಯನ್ನು ಝಳಪಿಸುತ್ತ ಕುದುರೆಯನ್ನು ವಿಶ್ವನಾಥಭಟ್ಟನ ಕಡೆಗೆ ನುಗ್ಗಿಸಿದ.
ನೆರೆದಿದ್ದ ಜನರು ಹಾಹಾಕಾರ ಮಾಡಿದರು.
ವಿಶ್ವನಾಥಭಟ್ಟನಾದರೋ ವೃದ್ಧ; ಅಲ್ಲದೆ ನಿಶ್ಶಸ್ತ್ರನಾಗಿದ್ದವನು. ಅಂತಹವನ ಮೇಲೆ ಆಯುಧ ಹಿರಿದು ಎರಗುವುದು ಬೌದ್ಧರಿಗೂ ಕೂಡಾ ಹಿಡಿಸಲಿಲ್ಲ.
ಆದರೆ ಒಂದೆರಡೇ ಕ್ಷಣಗಳಲ್ಲಿ ವೇದನೆಯ ಹಾಹಾಕಾರಗಳಿಗೆ ಬದಲಾಗಿ ಉದ್ಗಾರಗಳು ಹೊರಟವು.
ಶಾಕ್ಯವರ್ಧನನು ತನ್ನನ್ನು ಸಮೀಪಿಸಿದೊಡನೆ ವಿಶ್ವನಾಥಭಟ್ಟನು ಕೆಳಕ್ಕೆ ಬಾಗಿ ಕತ್ತಿಯ ಪ್ರಹಾರವನ್ನು ನಿವಾರಿಸಿದ್ದಲ್ಲದೆ ಸೇನಾಪತಿಯ ಕೈಯ ಮಣಿಕಟ್ಟನ್ನು ಹಿಡಿದು ಅವನನ್ನು ಕುದುರೆಯ ಮೇಲಿನಿಂದ ಕೆಳಕ್ಕುರುಳಿಸಿ ಅವನ ಕೈಯಲ್ಲಿದ್ದ ಕತ್ತಿಯನ್ನು ಕಸಿದುಕೊಂಡು ಅವನ ಎದೆಯ ಮೇಲೆ ತನ್ನ ಕಾಲನ್ನೊತ್ತಿ ಕತ್ತಿಯನ್ನು ಅವನ ಕುತ್ತಿಗೆಗೆ ತಾಗಿಸಿ ನಿಂತ.
ಇದೆಲ್ಲ ಕ್ಷಣಮಾತ್ರದಲ್ಲಿ ನಡೆದುಹೋಯಿತು. ಸುತ್ತಲೂ ಜನರು ಪ್ರತಿಮೆಗಳಂತೆ ನಿಂತುಬಿಟ್ಟರು. ಸೈನಿಕರು ದಿಗ್ಭ್ರಾಂತರಾಗಿ ಹೆಜ್ಜೆ ಕದಲಿಸಲಾಗದೆ ಸ್ತಬ್ಧರಾದರು.
ಧರಾಶಾಯಿಯಾಗಿದ್ದ ಶಾಕ್ಯವರ್ಧನನಿಗೆ ತನ್ನ ಎದೆಯ ಮೇಲಿದ್ದ ವಿಶ್ವನಾಥಭಟ್ಟನ ಪಾದದ ಭಾರಕ್ಕಿಂತ ತನಗಾದ ಅವಮಾನದ ಭಾರವೇ ಹೆಚ್ಚಾಗಿತ್ತು.
ವಿಶ್ವನಾಥಭಟ್ಟ ಗಂಭೀರ ಧ್ವನಿಯಲ್ಲಿ ಹೇಳಿದ:
“ನಾವು ಶಾಂತಿಯನ್ನು ಇಚ್ಛಿಸುವ ಸಮುದಾಯದವರು. ಸಾಮಾನ್ಯವಾಗಿ ಯಾರು ‘ಏನು ಮಾಡಿದರೂ’ ಸಹಿಸಿಕೊಳ್ಳುತ್ತೇವೆ. ಆದರೆ ಯಾರಾದರೂ ನಮ್ಮ ಧರ್ಮಕ್ಕೆ ಬಾಧೆಯುಂಟು ಮಾಡಲು ಬಂದರೆ ಅವರಿಗೆ ಶಾಂತಿ ಇಲ್ಲದಂತೆ ಮಾಡುವ ಶಕ್ತಿಯೂ ನಮಗಿದೆ. ನಮ್ಮ ದೇವಾಲಯಗಳು ನಮ್ಮ ಧರ್ಮದ ಪ್ರತೀಕಗಳು. ನಮ್ಮ ಧರ್ಮವೇ ನಮಗಿರುವ ಬಲ.”
ಆ ಮಾತುಗಳನ್ನು ಕೇಳೀ ಶಾಕ್ಯವರ್ಧನನೂ ಅವನ ಸೈನಿಕರೂ ಮಾತ್ರವಲ್ಲದೆ ಅಲ್ಲಿ ನೆರೆದಿದ್ದವರೆಲ್ಲ ಚಕಿತರಾದರು.
ವಿಶ್ವನಾಥಭಟ್ಟ ಮುಂದುವರಿಸಿದ: “ನಾನು ಬಯಸಿದರೆ ನಿನ್ನನ್ನು ಒಂದು ಕ್ಷಣದಲ್ಲಿ ಮುಗಿಸಬಲ್ಲೆ. ಆದರೆ ಅನಾವಶ್ಯಕ ಹಿಂಸೆಗೆ ನಮ್ಮ ಧರ್ಮದಲ್ಲಿ ಆಸ್ಪದವಿಲ್ಲ. ನೀನು ಹೋಗಿ ನಿಮ್ಮ ರಾಜನಿಗೆ ಹೇಳು – ನಿಮ್ಮ ಮತದ ದೇವಾಲಯಗಳನ್ನು ನಿರ್ಮಿಸಿಕೊಳ್ಳಲು ಕಶ್ಮೀರದಲ್ಲಿ ಸುಂದರವಾದ ಬೇರೆ ಪ್ರದೇಶಗಳು ಬೇಕಾದಷ್ಟಿವೆ – ಎಂದು.”
ಹೀಗೆಂದವನೇ ಶಾಕ್ಯವರ್ಧನನ ಎದೆಯ ಮೇಲಿಂದ ತನ್ನ ಕಾಲನ್ನು ತೆಗೆದು ಕೈಯನ್ನು ನೀಡಿ ಅವನನ್ನು ಮೇಲಕ್ಕೆಬ್ಬಿಸಿ ಕತ್ತಿಯನ್ನು ಅವನ ಕೈಯಲ್ಲಿರಿಸಿ ಹೊರಟುಹೋಗುವಂತೆ ಸೂಚಿಸಿದ.
ಶಾಕ್ಯವರ್ಧನ ಎಷ್ಟು ಹತಪ್ರಭನಾಗಿದ್ದನೆಂದರೆ ಅವನಿಗೆ ಕತ್ತಿಯನ್ನು ಭದ್ರವಾಗಿ ಹಿಡಿದುಕೊಳ್ಳುವುದೇ ಕಷ್ಟವೆನಿಸಿತು, ಕುದುರೆಯನ್ನು ಏರುವುದೂ ಸುಲಭವೆನಿಸಲಿಲ್ಲ. ಈ ಸ್ಥಿತಿಯಲ್ಲಿರುವವನು ಶಾಕ್ಯವರ್ಧನನೆ, ಅಥವಾ ಅವನ ಶವವೆ? – ಎಂದು ಶಂಕೆಪಡತೊಡಗಿದರು ಪರಿಜನರು.
ಈ ಘಟನೆಯ ಸುದ್ದಿ ಕಶ್ಮೀರದಲ್ಲೆಲ್ಲ ಹರಡಲು ತಡವಾಗಲಿಲ್ಲ. ಜನರು ತಾವು ಕಂಡದ್ದನ್ನು ಹೇಳಿದರೂ ಇತರರಿಗೆ ಅದನ್ನು ನಂಬುವುದೇ ಕಷ್ಟವಾಯಿತು. ಒಬ್ಬ ಬ್ರಾಹ್ಮಣ ಮುದುಕನು ಬಲಾಢ್ಯ ಸೇನಾಪತಿಯನ್ನು ಪರಾಭವಗೊಳಿಸುವುದೆ?
ಮರುದಿನ ಬೆಳಗಾಗುವ ವೇಳೆಗೆ ಶಾಕ್ಯವರ್ಧನ ನಾಪತ್ತೆಯಾಗಿರುವುದಾಗಿ ತಿಳಿದುಬಂದಿತು. ಹಿಂದಿನ ದಿನದ ವಿಶ್ವನಾಥಭಟ್ಟ ಪ್ರಸಂಗವನ್ನು ನಂಬದೆ ಇದ್ದವರಿಗೂ ಈಗ ನಂಬಿಕೆ ಉಂಟಾಯಿತು. ಇಡೀ ಪ್ರಾಂತವೇ ಕುದಿಯುವ ನೀರಿನಂತೆ ಆಗಿತ್ತು.
ಹುಷ್ಕ ಮಹಾರಾಜನು ಈ ವಿಷಯವನ್ನು ಇಷ್ಟಕ್ಕೇ ಕೈಬಿಟ್ಟರೆ ಒಳ್ಳೆಯದು; ಅದು ಅವನಿಗೂ ಇಡೀ ದೇಶಕ್ಕೂ ಕ್ಷೇಮಕರವಾಗುತ್ತದೆ – ಎಂದುಕೊಂಡರು ಪ್ರಜೆಗಳು.
ನಡೆದಿದ್ದ ಘಟನೆಯ ವಿಷಯ ಕೇಳಿದಾಗ ಹುಷ್ಕ ಮಹಾರಾಜನಿಗೆ ಕೋಪದಷ್ಟೇ ಆಶ್ಚರ್ಯವೂ ಉಂಟಾಯಿತು. ಹಲವರು ಸೈನಿಕರನ್ನು ಬೇರೆಬೇರೆಯಾಗಿ ಕರೆಯಿಸಿ “ಇದು ನಿಜವೇ? ನೀವೇ ಕಣ್ಣಿಂದ ನೋಡಿದಿರಾ?” ಎಂದು ಪ್ರಶ್ನಿಸಿದ. ಆದರೂ ಸಂಶಯ ತೀರಲಿಲ್ಲ. ಕಡೆಗೆ ಮಂತ್ರಿಯನ್ನೆ ಕರೆದು ವಿಚಾರಿಸಿದ.
ಮಂತ್ರಿ ಶೇಖರ ಹೇಳಿದ: “ಇದು ನಡೆದದ್ದು ವಾಸ್ತವ, ಪ್ರಭುಗಳೇ. ಆ ಬ್ರಾಹ್ಮಣರು ಸಾಮಾನ್ಯರಲ್ಲ. ವಿಶ್ವನಾಥಭಟ್ಟನಂತೂ ಇನ್ನೂ ಹೆಚ್ಚು ಪ್ರಮಾದಕರ ವ್ಯಕ್ತಿ. ಈ ಯೋಜನೆಯನ್ನು ಇಷ್ಟಕ್ಕೇ ಕೈಬಿಡುವುದು ಒಳ್ಳೆಯದು.”
ಆದರೆ ಹಾಗೆ ಹಿಂದೆಗೆಯುವುದು ಹುಷ್ಕ ಮಹಾರಾಜನಿಗೆ ಸಮ್ಮತವಿರಲಿಲ್ಲ. ಅವನಿಗೆ ಇದು ಪ್ರತಿಷ್ಠೆಯ ವಿಷಯವಾಗಿತ್ತು. ಅಲ್ಲದೆ ತಾನೇ ಒಮ್ಮೆ ವಿಶ್ವನಾಥಭಟ್ಟನನ್ನು ನೋಡಬೇಕೆಂದು ಕುತೂಹಲವೂ ಇದ್ದಿತು.
“ನನಗೆ ವಿಶ್ವನಾಥಭಟ್ಟನನ್ನು ಭೇಟಿಯಾಗಬೇಕೆಂದೆನಿಸಿದೆ. ಅವನು ಯಾವ ವಿಶ್ವಾಸದಿಂದ ಶೂರಾಗ್ರಣಿ ಸೇನಾಪತಿಯನ್ನು ಎದುರಿಸಲು ಶಕ್ತನಾದನೋ ಅದನ್ನು ತಿಳಿದುಕೊಳ್ಳಬೇಕಾಗಿದೆ. ಒಮ್ಮೆ ವಿಶ್ವನಾಥಭಟ್ಟನನ್ನು ಕರೆಯಿಸಿರಿ” ಎಂದ.
“ಪ್ರಭುಗಳೇ! ವಿಶ್ವನಾಥಭಟ್ಟನು ಭಯಂಕರ ಅಗ್ನಿಯಂತೆ. ಬೆಂಕಿಯೊಡನೆ ಚೆಲ್ಲಾಟವಾಡಿದರೆ ಕೇಡಾಗುತ್ತದೆ” ಎಂದ ಮಂತ್ರಿ.
ಹುಷ್ಕ ಮಹಾರಾಜನು ನಕ್ಕು “ಮಂತ್ರಿವರ್ಯರೆ! ನಾನು ಬೆಂಕಿಯೊಡನೆ ಸರಸವಾಡಲು ಹೆದರುವವನಾದರೆ ಮುಳ್ಳಿನ ಕಿರೀಟದಂತಹ ಈ ರಾಜ್ಯಾಧಿಕಾರವನ್ನು ವಹಿಸಿಕೊಳ್ಳುತ್ತಿದ್ದೆನೆ?” ಎಂದ.
ಮರುದಿನ ಮಂತ್ರಿಯು ಹಲವಾರು ಪಂಡಿತರ ಸಂಗಡ ಕೈಲಾಸಗಿರಿಗೆ ಹೋದ. ವಿಶ್ವನಾಥಭಟ್ಟನು ಮಂತ್ರಿ ಶೇಖರನನ್ನು ಆದರದಿಂದ ಸ್ವಾಗತಿಸಿ ಕುಶಲಪ್ರಶ್ನೆ ಮಾಡಿದ.
“ಹುಷ್ಕ ಮಹಾರಾಜನು ತಮ್ಮನ್ನು ಒಮ್ಮೆ ದರ್ಶನಕ್ಕಾಗಿ ಬರುವಂತೆ ಕೋರಿದ್ದಾರೆ” ಎಂದ ಮಂತ್ರಿ.
“ಅಮಾತ್ಯರೇ! ನಾನು ವಯಸ್ಸಾದ ಮುದುಕ. ಈ ವೃದ್ಧಾಪ್ಯದಲ್ಲಿ ರಾಜನೊಡನೆಯೋ ರಾಜಕಾರ್ಯದೊಡನೆಯೋ ನನಗೇನು ಕೆಲಸ? ಅಲ್ಲದೆ ರಾಜ್ಯಭಾರವು ಸಮರ್ಪಕವಾಗಿ ನಡೆಯುತ್ತಿರುವವರೆಗೆ ಮಹಾರಾಜರ ದರ್ಶನದ ಆವಶ್ಯಕತೆ ಇರುವುದಿಲ್ಲ. ಒಂದು ವೇಳೆ ರಾಜನ ಕಡೆಯಿಂದ ಏನಾದರೂ ಅಪಸವ್ಯ ನಡೆದರೆ ಆಗ ರಾಜದರ್ಶನ ಮಾಡಿ ಲಾಭವೇನಾಗದು, ಅಲ್ಲವೆ? ಇಷ್ಟಾಗಿ ಈಗಿನ ಸಂದರ್ಭದಲ್ಲಿ ರಾಜನು ಒಬ್ಬ ಅಭ್ಯರ್ಥಿ. ಆತನಿಗೆ ಕೈಲಾಸಗಿರಿ ಬೇಕಾಗಿದೆ. ಯಾವುದೇ ಆಕಾಂಕ್ಷೆ ಇದ್ದಲ್ಲಿ ಅಭ್ಯರ್ಥಿಯು ವಿನಯಪೂರ್ವಕ ಬಂದು ಅಭ್ಯರ್ಥನೆ ಸಲ್ಲಿಸಬಕೇ ಹೊರತು ಆತನು ನನ್ನನ್ನೇ ತನ್ನ ಬಳಿಗೆ ಕರೆಯಿಸುವುದು ಮರ್ಯಾದಾಗುಣವೆ?”
ಮಂತ್ರಿ ವಿಶ್ವನಾಥಭಟ್ಟನಿಗೆ ನಮಸ್ಕರಿಸಿ ಮೌನವಾಗಿ ಹಿಂದಿರುಗಿದ.
ಮಂತ್ರಿಯು ಹೇಳಿದುದನ್ನು ಕೇಳಿ ಮಹಾರಾಜನು ಗಟ್ಟಿಯಾಗಿ ನಕ್ಕ. “ಹಾಗಾದರೆ ನಾಳೆಯೇ ಸಿದ್ಧತೆ ಮಾಡಿರಿ. ಸೈನ್ಯ ಪರಿವಾರ ಸಮೇತ ನಾನೇ ಕೈಲಾಸಗಿರಿಗೆ ಹೋಗುತ್ತೇನೆ. ವಿಶ್ವನಾಥಭಟ್ಟನೆಂದರೆ ಏನೆಂಬುದನ್ನು ನಾನೇ ನೋಡಿಬರುತ್ತೇನೆ” ಎಂದ.
ಮಹಾರಾಜನನ್ನು ಈ ದಾರಿಯಿಂದ ನಿವಾರಿಸಲು ಮಂತ್ರಿಯು ಯತ್ನಿಸಬಯಸಿದರೂ ಧೈರ್ಯಬಾರದೆ ಮೌನವಾದ.
ಮರುದಿನ ಇಡೀ ಕಶ್ಮೀರ ರಾಜಧಾನಿಯೇ ಕೈಲಾಸಗಿರಿಯ ಕಡೆಗೆ ಹೊರಟಂತೆನಿಸಿತು. ರಾಜನೊಡಗೂಡಿದ ಸೈನಿಕರ ಮತ್ತು ಪರಿಜನರ ನಡಿಗೆಯಿಂದ ಎದ್ದ ಧೂಳು ಮೋಡದಂತೆ ಮುಗಿಲವರೆಗೆ ಹರಡಿತ್ತು.
ರಾಜನು ಕೈಲಾಸಗಿರಿ ತಲಪಿದೊಡನೆ ವಿಶ್ವನಾಥಭಟ್ಟನು ತಾನೇ ಮುನ್ನಡಿಯಿಟ್ಟು ಮಹಾರಾಜನಿಗೆ ಸ್ವಾಗತ ಕೋರಿದ. ತನ್ನನ್ನು ಪರಿಚಯಿಸಿಕೊಂಡ.
“ಓ! ನೀನೇ ಆ ಅಹಂಕಾರಿಯೆ?”
“ನನ್ನಿಂದ ಅಭ್ಯರ್ಥನೆ ಮಾಡುವವನು ಅವನೇ ನನ್ನಲ್ಲಿಗೆ ಬರಲಿ ಎನ್ನುವುದು ಅಹಂಕಾರದ ಸಂಕೇತವಾದರೆ ನಾನು ಅಹಂಕಾರಿಯೆ” ಎಂದ ವಿಶ್ವನಾಥಭಟ್ಟ, ಸೌಮ್ಯಧ್ವನಿಯಲ್ಲಿ.
“ನೀನು ಅಹಂಕಾರಿ ಮಾತ್ರವಲ್ಲ, ಮಾಟಗಾರ ಕೂಡಾ” ಎಂದ ಹುಷ್ಕ ಮಹಾರಾಜ, ನಗುತ್ತ.
“ಮಾಟಗಾರನಷ್ಟೆ ಅಲ್ಲ, ಒಳ್ಳೆಯ ಶಸ್ತ್ರನಿಪುಣ ಕೂಡ” ಎಂದು ಸೇರಿಸಿದ, ಮಂತ್ರಿ.
“ಓಹೋ! ನೀವು ಬ್ರಾಹ್ಮಣರು ಖಡ್ಗವಿದ್ಯೆಯಲ್ಲಿಯೂ ನಿಪುಣರೆ?” ಎಂದ ಹುಷ್ಕ ಮಹಾರಾಜ, ವ್ಯಂಗ್ಯವಾಗಿ.
“ನಮ್ಮ ಧರ್ಮದಲ್ಲಿ ಎಲ್ಲರಿಗೂ ಎಲ್ಲ ವಿದ್ಯೆಗಳನ್ನೂ ಒಬ್ಬನೇ ಗುರು ಬೋಧಿಸುತ್ತಾನೆ. ಯಾರಿಗೆ ಯಾವುದರಲ್ಲಿ ವಿಶೇಷಪ್ರಾವೀಣ್ಯ ಇರುತ್ತದೋ ಆ ವಿದ್ಯೆಯ ವೃತ್ತಿಯಲ್ಲಿ ಅವನು ಸ್ಥಿರಗೊಂಡಿರುತ್ತಾನೆ. ಹಾಗೆ ನಾನು ಖಡ್ಗವಿದ್ಯೆಯನ್ನೂ ಬಲ್ಲೆ, ಮಂತ್ರಗಳನ್ನೂ ಬಲ್ಲೆ. ರಕ್ಷಣೆಗಾಗಿ ಖಡ್ಗವಿದ್ಯೆ; ಆತ್ಮದರ್ಶನಕ್ಕಾಗಿ ಸನಾತನಧರ್ಮಪಾಲನೆ” ಎಂದ, ವಿಶ್ವನಾಥಭಟ್ಟ.
ಮಹಾರಾಜನು ಪಲ್ಲಕ್ಕಿಯಿಂದ ಇಳಿದು ವಿಶ್ವನಾಥಭಟ್ಟನನ್ನು ಸಮೀಪಿಸಿದ.
ವಿಶ್ವನಾಥಭಟ್ಟನು ಮಹಾರಾಜನಿಗೆ ಇಡೀ ಕೈಲಾಸಗಿರಿಯ ದರ್ಶನ ಮಾಡಿಸಿದ. ಹಿಂದೆ ದೂರದಿಂದಷ್ಟೆ ಕೈಲಾಸಗಿರಿಯನ್ನು ಪರಿಚಯ ಮಾಡಿಕೊಂಡಿದ್ದ ಮಹಾರಾಜನು ಈಗ ಅದನ್ನು ಹತ್ತಿರದಿಂದ ನೋಡಿದ. “ಇಷ್ಟು ಅದ್ಭುತವಾದ ಪ್ರಕೃತಿಯ ಮಡಿಲಲ್ಲಿರುವ ನೀವು ಅದೃಷ್ಟವಂತರು” ಎಂದ.
ವಿಶ್ವನಾಥಭಟ್ಟನು ಮುಗುಳ್ನಕ್ಕು ಮಹಾರಾಜನನ್ನು ದೇವಾಲಯಕ್ಕೆ ಕರೆದುಕೊಂಡು ಹೋದ. ದ್ವಾರದ ಹತ್ತಿರ ಮಹಾರಾಜನು ನಿಂತು “ತುರುಷ್ಕನಾದ ನಾನು ನಿಮ್ಮ ದೇವಾಲಯದ ಒಳಕ್ಕೆ ಬರಬಹುದೆ?” ಎಂದು ಕೇಳಿದ.
ವಿಶ್ವನಾಥಭಟ್ಟನು ನಕ್ಕು ಉತ್ತರಿಸಿದ: “ಪ್ರಭುಗಳೆ! ನೀವು ತುರುಷ್ಕ ದೇಶಕ್ಕೆ ವಲಸೆಹೋದ ಬೌದ್ಧಪಂಡಿತ ವಂಶಕ್ಕೆ ಸೇರಿದವರು. ಇಷ್ಟಕ್ಕೂ ಬೌದ್ಧರು ಯಾರು? ಸನಾತನಧರ್ಮವನ್ನು ಬಿಟ್ಟು ಬೌದ್ಧಮತವನ್ನು ಸ್ವೀಕರಿಸಿದವರು. ಮತ ಬದಲಾದ ಮಾತ್ರಕ್ಕೆ ಮನುಷ್ಯ ಬದಲಾಗಿಬಿಡುತ್ತಾನೆಯೆ? ಅವನ ಮೈಯೊಳಗೆ ಹರಿಯುವ ಪೂರ್ವಿಕರ ರಕ್ತ ಬದಲಾಗಿಬಿಡುತ್ತದೆಯೆ; ಅವನ ಸಂಸ್ಕಾರಗಳು ಬದಲಾಗುತ್ತವೆಯೇ….? ಕಶ್ಮೀರ ನಮಗೆ ಪಾರ್ವತಿದೇವಿಗೆ ಸಮಾನ. ಕಶ್ಮೀರದ ರಾಜರು ಶಿವಾಂಶ ಸಂಭೂತರು. ಆದ್ದರಿಂದ ನೀವು ಹೌದೆಂದರೂ ಇಲ್ಲವೆಂದರೂ ನಿಮ್ಮ ಅಂತರಂಗದಲ್ಲಿ ಭಾರತೀಯ ಧರ್ಮಸಂಸ್ಕಾರವು ನಿಕ್ಷಿಪ್ತವಾಗಿರುವುದು ದಿಟ. ಈಗ ಹೇಳಿರಿ. ನಿಮಗೆ ನಮ್ಮ ಪ್ರಾಚೀನರ ಆಲಯದ ಪ್ರವೇಶದ ಅರ್ಹತೆ ಹೇಗೆ ಇಲ್ಲವಾಗುತ್ತದೆ?”
ವಿಶ್ವನಾಥಭಟ್ಟ ಮುಂದುವರಿಸಿದ: “ಮಹಾರಾಜರೇ! ನಮ್ಮ ಮಂದಿರಗಳೆಂದರೆ ದೈವದ ವಿಗ್ರಹಕ್ಕೆ ಪೂಜೆ ಮಾಡುವ ಸ್ಥಳವಷ್ಟೆ ಅಲ್ಲ. ನಮ್ಮ ದೇವಾಲಯಗಳು ನಮ್ಮ ಚಾರಿತ್ರಿಕ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಅಸ್ತಿತ್ವದ ರಕ್ಷಕಗಳು. ಇವು ಕೇವಲ ಕಲ್ಲು-ಮಣ್ಣಿನ ಕಟ್ಟಡಗಳಲ್ಲ; ನಮ್ಮ ಹೃದಯಸ್ಪಂದನಗಳ ಪ್ರತಿರೂಪಗಳು; ನಮ್ಮ ಧರ್ಮದ ಜೀವನಾಡಿಗಳು. ಇಂತಹ ಒಂದು ದೇವಾಲಯವನ್ನು ನೀವು ಕೆಡವಿ ಅದರ ಜಾಗದಲ್ಲಿ ನಿಮ್ಮ ಮತದ ಕಟ್ಟಡವನ್ನು ಎಬ್ಬಿಸುತ್ತೇವೆಂದರೆ ನಾವು ಹೇಗೆ ಒಪ್ಪಲಾದೀತು?”
ಹುಷ್ಕ ಮಹಾರಾಜನು ವಿಶ್ವನಾಥಭಟ್ಟನ ಕಡೆ ತೀಕ್ಷ್ಣವಾಗಿ ನೋಡುತ್ತಾ ಹೇಳಿದ: “ನನಗೆ ಈ ಪ್ರದೇಶ ಹಿಡಿಸಿದೆ. ಇಲ್ಲಿಯ ಸುಂದರ ಪ್ರಕೃತಿ ಹಿಡಿಸಿದೆ. ಇಲ್ಲಿ ನಮ್ಮ ಬೌದ್ಧಭಿಕ್ಷುಗಳು ಪ್ರಶಾಂತ ಜೀವನವನ್ನು ಸಾಗಿಸಬಹುದು. ಈ ವೃಕ್ಷರಾಜಗಳ ಕೆಳಗೆ ಭಗವಾನ್ ಬುದ್ಧನಿಗೆ ಸಾಂತ್ವನ ಸಿಗುತ್ತದೆ. ಹಾಗೆ ನನ್ನ ಹೆಸರು ಚಿರಸ್ಥಾಯಿಯಾಗಿ ಆಚಂದ್ರಾರ್ಕ ಉಳಿಯುತ್ತದೆ.”
“ಮಹಾರಾಜರೇ! ಇಲ್ಲಿ ನಿಮ್ಮ ಬುದ್ಧಭಗವಂತನಿಗಿಂತ ಮೊದಲೇ ಪರಮಶಿವನು ಸ್ಥಿರಗೊಂಡು ವಿರಾಜಮಾನನಾಗಿದ್ದಾನೆ. ಅವನ ಪ್ರಶಾಂತತೆಗೆ ನೀವೇಕೆ ಭಂಗ ತರುತ್ತಿದ್ದೀರಿ? ನೀವು ನಿಮ್ಮ ಹೆಸರನ್ನು ಶಾಶ್ವತಗೊಳಿಸಿಕೊಳ್ಳಬೇಕಾದರೆ ಇದಕ್ಕಿಂತ ಹೆಚ್ಚು ಸುಂದರವಾದ ಪ್ರದೇಶಗಳು ಕಶ್ಮೀರದಲ್ಲಿ ಅನೇಕ ಇವೆ. ಅವುಗಳಲ್ಲೊಂದನ್ನು ಆರಿಸಿಕೊಂಡು ನೀವು ಒಂದು ಭವ್ಯ ನಗರವನ್ನು ನಿರ್ಮಿಸಿಬಹುದು, ಹಾಗೆ ಸ್ಥಾಯಿಯಾದ ಖ್ಯಾತಿಯನ್ನು ಗಳಿಸಬಹುದು. ಈ ಸ್ಥಳದಲ್ಲಿಯೇ ಚೈತ್ಯವನ್ನು ನಿರ್ಮಿಸಬೇಕೆಂಬ ಹಠ ನಿಮಗೇಕೆ?”
“ಇದು ಈಗ ನನ್ನ ರಾಜ್ಯ. ನಾನು ಇಲ್ಲಿಯ ಭೂಭಾಗವಷ್ಟಕ್ಕೂ ಅಧಿಪತಿ. ನೀವೇ ಬೇರೆಲ್ಲಿಗಾದರೂ ಸ್ಥಳಾಂತರಗೊಳ್ಳಬಹುದಲ್ಲಾ? ಇಲ್ಲಿಯೇ ಉಳಿಯಬೇಕೆಂಬ ಹಠ ನಿಮಗೇಕೆ?” ಎಂದು ಮರುಪ್ರಶ್ನೆ ಹಾಕಿದ, ಮಹಾರಾಜ.
“ಮಹಾರಾಜ! ೨೨೫ ಕೋಟಿ ವರ್ಷ ಹಿಂದೆಯೇ ಎಂದರೆ ಸೃಷ್ಟಿಯ ಆರಂಭಕಾಲದಿಂದಲೇ ಕಶ್ಮೀರ ಭೂಭಾಗವಷ್ಟನ್ನೂ ಸತೀಸರೋವರವೆಂಬ ಸಮುದ್ರೋಪಮ ಸರಸ್ಸು ಆವರಿಸಿತ್ತು. ಈಗಿನ ವೈವಸ್ವತ ಮನ್ವಂತರದ ಆರಂಭದಲ್ಲಿ ಕಶ್ಯಪ ಪ್ರಜಾಪತಿಯು ಬ್ರಹ್ಮ ಉಪೇಂದ್ರ ರುದ್ರಾದಿ ದೇವತೆಗಳ ಅವತಾರ ಮಾಡಿಸಿದ. ಸತೀಸರೋವರದಲ್ಲಿ ಅಡಗಿಕೊಂಡಿದ್ದ ಜಲೋದ್ಭವನೆಂಬ ರಾಕ್ಷಸನನ್ನು ಸಂಹರಿಸಿ ಆ ಸರಸ್ಸಿನ ಒಂದು ಭಾಗವನ್ನು ಅನುಗೊಳಿಸಿ ಅಲ್ಲಿ ಕಶ್ಮೀರ ದೇಶವನ್ನು ನಿರ್ಮಿಸಿದ. ಕಶ್ಯಪನು ನಿರ್ಮಿಸಿದ ಮೇರು ಆದುದರಿಂದ ಇದು ಕಶ್ಮೀರವೆನಿಸಿತು. ವಿತಸ್ತಾನದಿಯ (ಈಗಿನ ಜೀಲಂ) ಹರಿವಿನುದ್ದಕ್ಕೂ ಆ ಜಲಕುಂಡವನ್ನು ಕೊಡೆಯಂತೆ ಹಿಡಿದ ನೀಲನಾಗನು ಅನಾದಿಕಾಲದಿಂದ ಈ ಭೂಮಿಯನ್ನು ರಕ್ಷಿಸುತ್ತಿದ್ದಾನೆ. ಪಾರ್ವತೀದೇವಿಯೇ ವಿತಸ್ತಾನದಿಯಾಗಿ ಅವತರಿಸಿರುವುದರಿಂದ ನಮಗೆ ಕಶ್ಮೀರವು ಪವಿತ್ರ; ಪಾರ್ವತೀದೇವಿಯ ಸ್ಥಾನ.”
ಮಹಾರಾಜನು ಏಕಾಗ್ರಚಿತ್ತದಿಂದ ಆಲಿಸುತ್ತಿದ್ದ.
ವಿಶ್ವನಾಥಭಟ್ಟ ಮುಂದುವರಿಸಿದ:
“ಕಶ್ಮೀರದ ರಾಜ ಮೊದಲ ಗೋನಂದನು ಬಲರಾಮನ ಕೈಯಿಂದ ಹತನಾದ ಮೇಲೆ ಗೋನಂದನ ಮಗ ದಾಮೋದರನು ರಾಜನಾದ. ದಾಮೋದರನು ತಂದೆಯ ವಧೆಯ ನೆನಪಿನಿಂದ ಹೊರಬರಲಾರದೆ ಕೃಷ್ಣನೊಡನೆ ವೈರ ಕಟ್ಟಿಕೊಂಡು ಸುದರ್ಶನಾಯುಧಕ್ಕೆ ಬಲಿಯಾದ. ಅವನ ಮಗ ಎರಡನೇ ಗೋನಂದನಿಂದ ಆರಂಭಿಸಿ ಲವಮಹಾರಾಜನವರೆಗೆ ಮೂವತ್ತೈದು ಮಂದಿ ರಾಜರು ಆಳಿದರು. ಅವನ ನಂತರ ಕ್ರಮವಾಗಿ ಕುಶ, ಖಗೇಂದ್ರ, ಸುರೇಂದ್ರ – ಇವರು ರಾಜರಾದರು. ಸುರೇಂದ್ರನಿಗೆ ಸಂತಾನವಾಗದ ಕಾರಣ ಬೇರೆ ಮನೆತನದ ಗೋಧರನು ರಾಜನಾದ. ಅವನ ತರುವಾಯ ಸುವರ್ಣ, ಜನಕ, ಶಚೀನರ – ಇವರು ಆಳಿದರು. ಶಚೀನರನಿಗೆ ಸಂತಾನವಿಲ್ಲದ ಕಾರಣ ಶಕುನಿಯ ಮೊಮ್ಮಗ (ಎಂದರೆ ಗಾಂಧಾರಿಯ ಸೋದರನ ಮೊಮ್ಮಗ) ಪಟ್ಟಕ್ಕೇರಿದ. ಅನಂತರ ಶಚೀನರನ ಚಿಕ್ಕಪ್ಪನ ಶಾಖೆಯ ಅಶೋಕಚಕ್ರವರ್ತಿ ರಾಜನಾದ. ಅಶೋಕನೇ ಶ್ರೀನಗರವನ್ನು ನಿರ್ಮಿಸಿದ್ದು, ಕಶ್ಮೀರದಲ್ಲಿ ಬೌದ್ಧಮತಪ್ರಚಾರಕ್ಕಾಗಿ ಭಿಕ್ಷುಗಳನ್ನು ಕಳಿಸಿದುದೂ ಆತನೇ. ಅಶೋಕನ ತಪಃಫಲವಾಗಿ ಜನಿಸಿದವನು ಜಲೌಕ. ಜಲೌಕನ ಮಗನೇ ದಾಮೋದರ ಮಹಾರಾಜ. ದಾಮೋದರ ಮಹಾರಾಜನು ವಿಪ್ರಶಾಪದ ಪರಿಣಾಮವಾಗಿ ಸರ್ಪವಾಗಿ ಮಾರ್ಪಟ್ಟ ಮೇಲೆ ರಾಜ್ಯದಲ್ಲಿ ಕ್ಷೆಭೆಯುಂಟಾಗಿ ಅದು ಈಗ ನಿಮ್ಮ ಅಧೀನಕ್ಕೆ ಬಂದಿದೆ.”
ಮಂತ್ರಮುಗ್ಧನಾಗಿ ಇದನ್ನೆಲ್ಲ ಕೇಳಿಸಿಕೊಳ್ಳುತ್ತಿದ್ದ ಹುಷ್ಕಮಹಾರಾಜನಿಗೆ ವಿಶ್ವನಾಥಭಟ್ಟ ಹೇಳಿದ: “ಮಹಾರಾಜರೆ! ನಾನು ಇದನ್ನೆಲ್ಲ ನಿಮಗೆ ಹೇಳಿದುದು ಏಕೆಂದರೆ – ಕಶ್ಮೀರ ಭೂಭಾಗಕ್ಕೆ ನೀವು ತಾತ್ಕಾಲಿಕ ಅಧಿಪತಿಗಳು ಮಾತ್ರ. ರಾಜರು ಬದಲಾಗುತ್ತಾರೆ, ರಾಜವಂಶಗಳು ಬದಲಾಗುತ್ತವೆ, ಹಾಗೆ ನಿಮ್ಮ ತರುವಾಯವೂ ಯಾರಾರೋ ಬಂದು ಸ್ವಲ್ಪಕಾಲವಿದ್ದು ಹೋಗುತ್ತಾರೆ. ಆದರೆ ಕಶ್ಮೀರ ಆವಿರ್ಭಾವವಾದಾಗಿನಿಂದ ಈ ಪ್ರದೇಶದಲ್ಲಿ ನಮ್ಮ ವಂಶದವರು ಸ್ಥಿರವಾಗಿ ಇದ್ದಾರೆ. ಈಗ ನಾವು ಇದ್ದೇವೆ, ಮುಂದೆಯೂ ಇರುತ್ತೇವೆ. ನಮ್ಮ ಪ್ರಭು ಪರಮೇಶ್ವರನೂ ಇಲ್ಲಿಯೆ ಇರುತ್ತಾನೆ. ನಿಮ್ಮಂತಹ ತಾತ್ಕಾಲಿಕ ಪ್ರಭುಗಳೊಡನೆ ನಮಗೆ ಸಂಬಂಧವಿಲ್ಲ. ನಮ್ಮ ಸಂಬಂಧ ಇರುವುದು ನಮ್ಮ ದೈವದೊಡನೆ ಮಾತ್ರ. ಸನಾತನಧರ್ಮದೊಡನೆ ಮಾತ್ರ. ನಮ್ಮದು ಹೀಗೆ ಶಾಶ್ವತ ಸಂಬಂಧ ಇರುವುದರಿಂದ ಮಧ್ಯಕಾಲದಲ್ಲಿ ಯಾವಾಗಲೋ ಬಂದು ಹೊರಟುಹೋಗುವ ನೀವೇ ನಿಮ್ಮ ಉದ್ದೇಶಕ್ಕಾಗಿ ಬೇರೆ ಸ್ಥಳವನ್ನು ಆರಿಸಿಕೊಳ್ಳುವುದು ಉತ್ತಮ” ಎಂದ ವಿಶ್ವನಾಥಭಟ್ಟ, ನಿಷ್ಕರ್ಷೆಯ ಧ್ವನಿಯಲ್ಲಿ.
ಈಗ ಗದರಿಕೆಯ ಧ್ವನಿಯಲ್ಲಿ ಹುಷ್ಕಮಹಾರಾಜ ಹೇಳಿದ: “ಸರಿಯೆ, ನನಗೆ ನಿಮ್ಮೊಡನೆ ಚರ್ಚೆ ಮಾಡಿ ಏನಾಗಬೇಕಾಗಿದೆ? ನನಗಿರುವ ಬಾಹುಬಲ – ಸೇನಾಬಲದಿಂದ ನಿಮ್ಮನ್ನೂ ನಿಮ್ಮ ಮಂದಿರವನ್ನೂ ಕೆಡವಬಲ್ಲೆ, ನಿಮ್ಮ ಮಂದಿರದ ಕುಸಿದ ಕಲ್ಲುಗಳನ್ನು ನಮ್ಮ ಚೈತ್ಯದ ಕಟ್ಟಡP ಅಡಿಪಾಯವಾಗಿ ಬಳಸಬಲ್ಲೆ. ನನ್ನ ಒಳ್ಳೆಯತನದಿಂದಾಗಿ ನಿಮ್ಮಲ್ಲಿ ಮರ್ಯಾದೆಯಿಂದ ಮಾತನಾಡಿರುವೆನೇ ಹೊರತು ಅಸಹಾಯಕತೆಯಿಂದಲ್ಲ.”
ಇದಕ್ಕೂ ವಿಶ್ವನಾಥಭಟ್ಟ ಮುಗುಳ್ನಕ್ಕನಷ್ಟೆ.
“ಮಹಾರಾಜ! ನೀವೀಗ ಹೇಳಿದಂತೆ ಮಾಡುವವರಾಗಿದ್ದರೆ ಮೊದಲು ಇಲ್ಲಿಗೆ ನಿಮ್ಮ ಸೈನ್ಯ ಬರುತ್ತಿತ್ತು. ನಾವು ನಮ್ಮ ಕೊನೆಯುಸಿರಿರುವವರೆಗೆ ನಮ್ಮ ಧರ್ಮದ ರಕ್ಷಣೆಗಾಗಿ ಹೋರಾಡಿ ಪ್ರಾಣಾರ್ಪಣೆ ಮಾಡಿರುತ್ತಿದ್ದೆವು. ಆದರೆ ನೀವು ಹಾಗೆ ಮಾಡಲಿಲ್ಲ. ನಿಜಕ್ಕೂ ನಿಮಗೆ ಇಲ್ಲಿ ಚೈತ್ಯವನ್ನು ನಿರ್ಮಿಸುವ ಆಕಾಂಕ್ಷೆ ಇದೆಯೆ ಎಂದು ನನಗೆ ಸಂದೇಹವಾಗುತ್ತಿದೆ. ನಮ್ಮ ಆತ್ಮವಿಶ್ವಾಸವನ್ನು ಪರೀಕ್ಷಿಸಲು ನೀವು ಬಂದಿರಿ. ನಿಮ್ಮ ಸೈನ್ಯವನ್ನು ನೋಡಿ ನಮ್ಮ ಆತ್ಮವಿಶ್ವಾಸ ಸಡಿಲಗೊಳ್ಳುತ್ತದೆಯೆ ಎಂದು ನೋಡಲು ಬಂದಿರಿ.”
ಮಹಾರಾಜನು ನಕ್ಕ.
“ಮಹಾರಾಜರೆ! ಚರಿತ್ರೆಯಲ್ಲಿ ನಿಮ್ಮ ಹೆಸರು ಚಿರಸ್ಥಾಯಿಯಾಗಿ ಹೇಗೆ ಉಳಿಯಬೇಕೆಂಬುದು ನೀವು ಇಚ್ಛಿಸುತ್ತೀರಿ? ಭವ್ಯವಾದ ಚೈತ್ಯಗಳನ್ನೂ ವಿಹಾರಗಳನ್ನು ನಿರ್ಮಾಣ ಮಾಡಿದವರೆಂದೆ? ಅಥವಾ ಈ ದೇಶದಿಂದ ಬೌದ್ಧಮತದ ಸಮೂಲ ಉಚ್ಚಾಟನೆಗೆ ನಾಂದಿಹಾಡಿದವರೆಂದೆ?”
“ಹಾಗೆಂದರೇನು?”
“ದೇವಾಲಯಗಳು ನಮ್ಮ ಜೀವನಾಡಿಗಳು. ನಿಮಗೆ ಈಗ ಶಸ್ತ್ರಬಲವೂ ಅಧಿಕಾರವೂ ಇದೆಯೆಂದು ನೀವು ನಮ್ಮನ್ನು ಅಡಗಿಸಿ ನಮ್ಮ ಆಲಯವಿರುವ ಕಡೆ ಚೈತ್ಯವನ್ನು ಕಟ್ಟಬಹುದು. ಆದರೆ ಪ್ರಕೃತಿಯಲ್ಲಿ ಪ್ರತಿಯೊಂದು ಚರ್ಯೆಗೂ ಒಂದು ಪ್ರತಿಚರ್ಯೆ ಏರ್ಪಡದಿರುವುದಿಲ್ಲ. ನೀವು ನಮ್ಮ ಆಲಯಗಳ ಮೇಲೆ ಆಕ್ರಮಣ ಮಾಡಿದುದನ್ನು ನಾವು ಮಾತ್ರವಲ್ಲ, ನಮ್ಮ ಮುಂದಿನ ಪೀಳಿಗೆಗಳವರೂ ಯಾರೂ ಸಹಿಸಲಾರರು. ಎಂದೋ ಒಂದು ದಿನ ಸನಾತನಧರ್ಮವು ಬಲಿಷ್ಠವಾಗುತ್ತದೆ. ಆಗ ನಿಮ್ಮ ಚೈತ್ಯಗಳ ಅವಶೇಷಗಳ ಸ್ಥಾನದಲ್ಲಿ ನಮ್ಮ ಮಂದಿರಗಳು ಮತ್ತೆ ಆವಿರ್ಭವಿಸುತ್ತವೆ. ಆಗ ನಿಮ್ಮ ಚೈತ್ಯಗಳು ಮಣ್ಣುಪಾಲಾಗುತ್ತವೆ. ನಮ್ಮ ಪರಶಿವನು ನಿತ್ಯವೂ ಪೂಜಿತನಾಗುತ್ತ ವೈಭವದಿಂದ ವಿರಾಜಿಸುತ್ತಾನೆ. ಇದು ಹಾಗೆ ಆಗುವುದು ಅನಿವಾರ್ಯ. ಅದಕ್ಕೆಲ್ಲ ಮೂಲಕಾರಣ ನೀವಾಗಬೇಡಿರಿ. ಆ ಅಪಖ್ಯಾತಿಯನ್ನು ನಿಮ್ಮ ತಲೆಗೆ ಕಟ್ಟಿಕೊಳ್ಳಬೇಡಿರಿ.
ಅವಿರೋಧೇ ತು ಯೋ ಧರ್ಮಃ ಸ ಧರ್ಮ ಇತಿ ನಿಶ್ಚಯಃ ||
ಇನ್ನೊಂದು ಮತದೊಡನೆ ಸಹಜೀವನ ನಡೆಸದೆ ಘರ್ಷಣೆಗೊಳಗಾಗುವುದು ನಿಜವಾದ ಧರ್ಮವಾಗದು. ಇತರ ಮತಗಳನ್ನು ವಿರೋಧಿಸದೆ ಎಲ್ಲ ಧರ್ಮಗಳೊಡನೆ ಐಕ್ಯಭಾವದಿಂದ, ಪರಸ್ಪರ ಸಹಕಾರದಿಂದ ವರ್ತಿಸುವುದೇ ನಿಜವಾದ ಮತ ಅಥವಾ ಧರ್ಮ. ಇನ್ನು ನಿಮ್ಮ ಇಷ್ಟ. ನೀವು ಶಿವಾಂಶಸಂಭೂತರಿದ್ದೀರಿ. ಆದುದರಿಂದ ನಾವು ನಿಮ್ಮ ವಿರುದ್ಧ ಕತ್ತಿ ಹಿರಿಯುವುದಿಲ್ಲ. ಆದರೆ ನೀವು ನಮ್ಮ ಧರ್ಮವನ್ನು ಕೆಟ್ಟ ದೃಷ್ಟಿಯಿಂದ ನೋಡಿದರೆ ನಾನು ಮಾತ್ರವಲ್ಲ ನಮ್ಮ ಮುಂದಿನ ತಲೆಮಾರುಗಳವರೂ ನಿಮ್ಮನ್ನು ನೆಮ್ಮದಿಯಿಂದ ಇರಬಿಡುವುದಿಲ್ಲ ಎಂದ, ವಿಶ್ವನಾಥಭಟ್ಟ.
ಹುಷ್ಕ ಮಹಾರಾಜನು ಎದ್ದುನಿಂತ. “ವಿಶ್ವನಾಥಭಟ್ಟರೆ, ನಮ್ಮ ಸೇನಾಪತಿಯ ಬಗೆಗೆ ನಿಮ್ಮ ವರ್ತನೆ ರಾಜದ್ರೋಹವೇ ಅಥವಾ ಸ್ವಧರ್ಮರಕ್ಷಣೆಯ ಆಶಯದ್ದೇ ಎಂದು ತಿಳಿದುಕೊಳ್ಳಲು ನಾನೇ ಖುದ್ದಾಗಿ ಇಲ್ಲಿಗೆ ಬಂದೆ. ನಿಮಗೆ ಶ್ರಮ ನೀಡಿದುದಕ್ಕಾಗಿ ಕ್ಷಮಿಸಿರಿ”- ಹೀಗೆಂದುದು ಮಾತ್ರವಲ್ಲದೆ ಅಲ್ಲಿದ್ದ ಮಂದಿರದ ಗೋಪುರಕ್ಕೆ ತಾನೇ ಬಂಗಾರದ ಕವಚ ಮಾಡಿಸುವುದಾಗಿ ಹೇಳಿ ಅಲ್ಲಿಂದ ನಿರ್ಗಮಿಸಿದ.
ಹುಷ್ಕ ಮಹಾರಾಜನು ಒಂದು ಆಯ್ದ ಸುಂದರ ಪ್ರದೇಶದಲ್ಲಿ ಹುಷ್ಕಪುರವನ್ನು (ಈಗ ‘ಉಷ್ಕೋರೋ’) ನಿರ್ಮಿಸಿ ಕೀರ್ತಿವಂತನಾದ. ಅವನ ಆದರ್ಶವನ್ನು ಅನುಸರಿಸಿ ಅವನ ಉತ್ತರಾಧಿಕಾರಿಗಳಾದ ಜುಷ್ಕ ಮತ್ತು ಕನಿಷ್ಕರು ಜುಷ್ಕಪುರವನ್ನೂ (ಈಗಿನ ಜೂಕೋರೋ) ಕನಿಷ್ಕಪುರವನ್ನೂ (ಕೊನೆಸ್ಸೂರ್) ನಿರ್ಮಿಸಿದರು. ಜುಷ್ಕ ಮಹಾರಾಜನಿಂದಲೇ ಜಯಸ್ವಾಮಿಪುರವೂ (ಜಿಹಾಸುರ್) ನಿರ್ಮಾಣಗೊಂಡಿತು. ಅಲ್ಲದೆ ಈ ರಾಜರು ಶುಷ್ಕಲೇತ್ರದಲ್ಲಿ (ಹುಕಲೇತ್ರ) ಅನೇಕ ಮಠಗಳನ್ನೂ ಚೈತ್ಯಗಳನ್ನೂ ನಿರ್ಮಿಸಿ ಮಹಾಪುರುಷರೆಂದು ಹೆಸರು ಪಡೆದರು.