ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ–ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು ಅದೇ ವರ್ಷದ ಕೊನೆಯಲ್ಲಿ ವಾಪಸ್ಸಾದರು. ಆ ಸಮಯದಲ್ಲಿ ಅವರ ಪತ್ನಿ ಮತ್ತು ತಂದೆ ಬಹು ಕಾಳಜಿಯಿಂದ ದೇವಾಲಯದಲ್ಲಿ ಅರ್ಚನಾದಿಗಳನ್ನು ನಡೆಸುತ್ತಿದ್ದರು. ಶೇಖರಿಸಿದ ಹಣದಿಂದ ಶ್ರೀನಿವಾಸ ದೇವಾಲಯದಲ್ಲೇ ಎಲ್ಲ ಜಾತಿಯ ಮಕ್ಕಳಿಗೆ ಅವಕಾಶ ನೀಡಿ ಅನಾಥಾಲಯವನ್ನು ನಡೆಸತೊಡಗಿದರು. ಆ ಮಕ್ಕಳ ಪೂರ್ಣ ಜವಾಬ್ದಾರಿ ಹೊತ್ತು ಅವರ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಶಿಸ್ತಿನ ಬೆಳವಣಿಗೆಗಾಗಿ ಒಬ್ಬ ಉಪಾಧ್ಯಾಯರನ್ನು ನೇಮಿಸಿದರು.
ಲೋಕದಲ್ಲಿ ಮಾನವಜನ್ಮ ಅತಿಶ್ರೇಷ್ಠವಾದುದೆಂದು ಪರಿಗಣಿಸಿ ಅನೇಕಾನೇಕ ಮಹನೀಯರು ತಮ್ಮ ಇಡೀ ಜೀವನವನ್ನು ಸಮಾಜಸೇವೆಗಾಗಿಯೆ ಸಾರ್ಥಕಗೊಳಿಸಿರುವ ಅನೇಕ ದೃಷ್ಟಾಂತಗಳನ್ನು ನಾವು ಇತಿಹಾಸದಲ್ಲಿ ಕಾಣುತ್ತ ಬಂದಿದ್ದೇವೆ. ಇದೇ ರೀತಿಯ ಮಹತ್ತರ ತ್ಯಾಗವನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಲೌಕಿಕ ಆಶೋತ್ತರಗಳನ್ನು ದೂರೀಕರಿಸಿ ಬದುಕಿ-ಬಾಳಿದವರು ಎ. ಗೋಪಾಲಾಚಾರ್ಲು ಮತ್ತು ದೀನಬಂಧು ಎ. ಸಿಂಗಮ್ಮ ದಂಪತಿಗಳು. ಈಗ್ಗೆ ಹದಿಮೂರು ದಶಕಗಳಿಗೂ ಹಿಂದೆ, ಎಂದರೆ ಹತ್ತೊಂಬತ್ತನೇ ಶತಮಾನದ ಅಂತ್ಯಭಾಗದಲ್ಲಿ ಬೆಂಗಳೂರಿನಲ್ಲಿ ‘ಶ್ರೀನಿವಾಸ ಮಂದಿರಂ’ ಹೆಸರಿನ ಸೇವಾಸಂಸ್ಥೆಯನ್ನು ನಡೆಸಿ ಯಶಃಕಾಯರಾದವರು.
ಅಟ್ಕೊಂಡವಲ್ಲಿ ಗೋಪಾಲಾಚಾರ್ಲು ಅವರು ತೆಂಕಲ ಪಂಗಡಕ್ಕೆ ಸೇರಿದ ವೈಷ್ಣವರಾದ ಶ್ರೀರಂಗದ ಶನಿವಾರಂ ಶೇಷಾಚಾರ್ಯ ಎಂಬ ಗೌರವನೀಯ ಸನಾತನ ಧರ್ಮಾವಲಂಬಿಗಳ ಮೊಮ್ಮಗ (ಜನನ ೩೧-೮-೧೮೫೫). ತಂದೆ ಶ್ರೀನಿವಾಸಯ್ಯಂಗಾರ್. ಇವರು ಮೈಸೂರು ಸರ್ಕಾರದ ಆಧೀನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದರು ಹಾಗೂ ಮೈಸೂರಿನ ಮಹಾರಾಜರಾಗಿದ್ದ ಹತ್ತನೇ ಚಾಮರಾಜೇಂದ್ರ ಒಡೆಯರ್ ಅವರಿಗೆ ಕೆಲವು ಕಾಲ ಇಂಗ್ಲಿಷ್ ಪಾಠ ಹೇಳಿಕೊಡುತ್ತಿದ್ದು ‘ಅಂಗ್ರೇಜೀ ಅಯ್ಯಂಗಾರ್’ ಎಂದೇ ಅರಮನೆಯಲ್ಲಿ ಪರಿಚಿತರಾಗಿದ್ದರು. ಗೋಪಾಲಾಚಾರ್ಲು ಅವರ ಕಿರಿಯ ಸಹೋದರ ಆಟ್ಕೊಂಡವಲ್ಲಿ ಗೋವಿಂದಾಚಾರ್ಯರು (ಜನನ ೧೮೫೬) ಶ್ರೀರಾಮಾನುಜಾಚಾರ್ಯರ ವಿಶಿಷ್ಟಾದ್ವೈತ ಸಿದ್ಧಾಂತದಿಂದ ಪ್ರಭಾವಿತರಾಗಿ ಇಂಗ್ಲಿಷಿನಲ್ಲಿ ಕೆಲವು ಗ್ರಂಥಗಳನ್ನು ರಚಿಸಿದವರು, ಮತ್ತು ಮೈಸೂರು ಜಿಲ್ಲೆಯಲ್ಲಿ ಹರಿಜನೋದ್ಧಾರಕ್ಕಾಗಿ ಸಕ್ರಿಯವಾಗಿ ಶ್ರಮಿಸಿದವರು.
ಗೋಪಾಲಾಚಾರ್ಲು ಅವರು ಬಾಲ್ಯದಲ್ಲಿ ದೈವಭಕ್ತಿ ವೃಂದದಲ್ಲಿ ಬೆಳೆದು ತಕ್ಕಮಟ್ಟಿಗೆ ವಿದ್ಯಾಭ್ಯಾಸದ ನಂತರ ಚಿಕ್ಕಬಳ್ಳಾಪುರದ ನ್ಯಾಯಾಲಯ ಕಚೇರಿಯಲ್ಲಿ ಉದ್ಯೋಗದಲ್ಲಿದ್ದರು. ಬಡತನದಲ್ಲಿಯೇ ಹುಟ್ಟಿ ಬೆಳೆದ ಇವರು ಆಗಿನ ರೂಢಿಯಂತೆ ಬಹುಬೇಗ ವಿವಾಹವಾದರು. ಆದರೆ ಆ ಪತ್ನಿ ಅಲ್ಪಕಾಲದಲ್ಲಿ ತೀರಿಕೊಂಡರು. ಮೈಸೂರು ಸಂಸ್ಥಾನದಲ್ಲಿ ೧೮೭೫ರಿಂದ ೭೭ರಲ್ಲಿ ಎರಡೂವರೆ ವರ್ಷ ಮಳೆ ಬಾರದೆ ಘೋರ ಕ್ಷಾಮ ತಲೆದೋರಿತು. ಸಾವಿರಾರು ಜನರು ಅನ್ನ ನೀರಿಲ್ಲದೆ ಮರಣ ಹೊಂದಿದರು. ಜಾನುವಾರುಗಳಂತೂ ಎಲ್ಲೆಂದರಲ್ಲಿ ಧಾರುಣವಾಗಿ ಸತ್ತು ಬಿದ್ದಿರುತ್ತಿದ್ದ ದೃಶ್ಯವನ್ನು ಕಾಣಬಹುದಿತ್ತು.
ಆಗ ಸರ್ಕಾದವರು ಗೋಪಾಲಾಚಾರ್ಲು ಅವರನ್ನು ಚಿಕ್ಕಬಳ್ಳಾಪುರದಲ್ಲಿ ಕ್ಷಾಮ ನಿವಾರಣಾಧಿಕಾರಿಯಾಗಿ ನೇಮಿಸಿದರು. ಆ ಸಂದರ್ಭದಲ್ಲಿ ತಾನು ಬಡ ಜನರ ಹಾಗೂ ಅನಾಥರ ಸಹಜ ಸ್ಥಿತಿಗತಿಗಳು, ಕಷ್ಟಕಾರ್ಪಣ್ಯಗಳ ಪರಿಸ್ಥಿತಿಯನ್ನು ಕಂಡ ೨೧ ವರ್ಷ ವಯಸ್ಸಿನ ಗೋಪಾಲಾಚಾರ್ಲು ಅವರ ಮನಸ್ಸು ಕರಗಿತು. ೧೮೮೦ರಲ್ಲಿ ಪೆರಂಬೂರಿನವರಾದ ಎ.ಸಿಂಗಮ್ಮನವರನ್ನು ಎರಡನೆ ಲಗ್ನವಾದರು. ಸಿಂಗಮ್ಮನವರಿಗೆ ಆಗ ಕೇವಲ ಹತ್ತು ವರ್ಷ ವಯಸ್ಸು. ಪತಿಗೆ ತಕ್ಕ ಸತಿಯಾದ ಈ ದಂಪತಿಗಳು ಬಡತನದಲ್ಲಿದ್ದು ಸಂಸಾರವನ್ನು ಸಾಗಿಸುತ್ತಿದ್ದರು.
ಬಳೇಪೇಟೆ ವಾಸ್ತವ್ಯ
ಗೋಪಾಲಾಚಾರ್ಲು ಅವರು ೧೮೮೨ರಲ್ಲಿ ಸರ್ಕಾರಿ ಕೆಲಸಕ್ಕೆ ರಾಜೀನಾಮೆ ನೀಡಿ ಪತ್ನಿ ಸಿಂಗಮ್ಮನವರ ಜೊತೆ ಚಿಕ್ಕಬಳ್ಳಾಪುರದಿಂದ ಬೆಂಗಳೂರು ಪೇಟೆಗೆ ಆಗಮಿಸಿ ಬಳೇಪೇಟೆಯಲ್ಲಿ ವಾಸಿಸತೊಡಗಿದರು. ತಮ್ಮ ಲೌಕಿಕ ಆಶೋತ್ತರಗಳನ್ನು ತ್ಯಜಿಸಿದ ಈ ಆದರ್ಶ ದಂಪತಿಗಳು ಅವರಲ್ಲಿದ್ದ ಅಲ್ಪ ಸ್ವಲ್ಪ ಆಸ್ತಿಯನ್ನು ಆಧಾರವಾಗಿಟ್ಟುಕೊಂಡು ಬಳೇಪೇಟೆಯಲ್ಲಿ ಶಿಥಿಲಗೊಂಡಿದ್ದ ಶ್ರೀನಿವಾಸ ದೇವರ (ಬೇಟೆರಾಯನ ಗುಡಿ) ದೇವಾಲಯದ ಸ್ಥಿತಿಯನ್ನು ಕಂಡು ೧೮೮೩ರಲ್ಲಿ ಆ ದೇವಾಲಯದ ಜೀರ್ಣೋದ್ಧಾರ ಕಾರ್ಯಕ್ಕೆ ಕೈ ಹಾಕಿದರು. ಸಮಾಜಸೇವೆಗಾಗಿಯೇ ತಮ್ಮ ಜೀವನವನ್ನು ಮುಡುಪಾಗಿಟ್ಟ ಅವರು ಕಾವಿ ವಸ್ತçವನ್ನು ಧರಿಸಿ ಅನಂತರದಲ್ಲಿ ವಿರಕ್ತರಂತೆ ಇದ್ದು ಭಕ್ತಾದಿಗಳನ್ನೂ, ದೀನದಲಿತರನ್ನೂ ವಿಶೇಷ ರೀತಿಯಲ್ಲಿ ಆಕರ್ಷಿಸಿದರು.
ಹತ್ತನೇ ಚಾಮರಾಜೇಂದ್ರ ಒಡೆಯರ್ ಹಾಗೂ ಬೆಂಗಳೂರಿನ ಅನೇಕ ಭಕ್ತಾದಿಗಳ ನೆರವಿನೊಂದಿಗೆ ೧೮೮೬ರಲ್ಲಿ ಶ್ರೀನಿವಾಸ ದೇವರ ಸಂಪ್ರೋಕ್ಷಣಾ ಮಹೋತ್ಸವವನ್ನು ನಡೆಸಿ ನಿತ್ಯಸೇವೆಗಳಿಗೂ ವ್ಯವಸ್ಥೆ ಮಾಡಿದರು; ಮತ್ತು ಭಗವದ್ರಾಮಾನುಜರ ಸನ್ನಿಧಿಯಲ್ಲಿ ಶಾಸ್ತ್ರೋಕ್ತವಾಗಿ ಕೈಂರ್ಯಗಳು ಶಾಶ್ವತವಾಗಿ ನಡೆಯುವಂತೆ ಏರ್ಪಾಟು ಮಾಡಿದರು. ಕ್ರಮೇಣ ಅಭಿವೃದ್ಧಿಗೊಂಡ ಈ ದೇವಾಲಯವು ಕ್ರಮೇಣ ‘ಶ್ರೀನಿವಾಸ ಮಂದಿರಂ’ ಎಂದು ಪ್ರಸಿದ್ಧಿ ಪಡೆಯಿತು. ಬಳೇಪೇಟೆಯ ಮುಖ್ಯರಸ್ತೆ ಎಂದು ಹೆಸರಿದ್ದ ರಸ್ತೆಯಲ್ಲಿ ಶ್ರೀನಿವಾಸ ಮಂದಿರಂ ಇದ್ದುದರಿಂದ ರಸ್ತೆಯೂ ಸಹ ‘ಶ್ರೀನಿವಾಸ ಮಂದಿರಂ ರಸ್ತೆ’ ಎಂದೇ ಹೆಸರು ಗಳಿಸಿತು.
ಸುಪ್ರಸಿದ್ಧ ರಂಗಭೂಮಿ ನಟರಾಗಿದ್ದ ಎ.ವಿ. ವರದಾಚಾರ್ಯರು (೧೮೬೯-೧೯೨೬) ಚಿತ್ರದುರ್ಗದಲ್ಲಿ ಜನಿಸಿ ಅಲ್ಲಿಯೇ ಮೆಟ್ರಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ನಂತರ ಮುಂದಿನ ವ್ಯಾಸಂಗಕ್ಕಾಗಿ ಬೆಂಗಳೂರಿಗೆ ಆಗಮಿಸಿ, ಅವರ ಬಂಧುಗಳಾಗಿದ್ದ ಗೋಪಾಲಾಚಾರ್ಲು ಅವರ ಮನೆಯಲ್ಲೇ ಎರಡು ವರ್ಷ ಇದ್ದು, ಎಫ್.ಎ. ವ್ಯಾಸಂಗ ಮಾಡಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿ ರೆಸಿಡೆನ್ಸಿಯಲ್ಲಿ ಕಾರಕೂನರಾಗಿ ಕಾರ್ಯನಿರ್ವಹಿಸುತ್ತಿದ್ದರು ಎಂದು ಮಾಸ್ತಿ ವೆಂಕಟೇಶ ಅಯ್ಯಂಗರ್ಯರು ‘ಜೀವನ’ ಪತ್ರಿಕೆಯಲ್ಲಿ ದಾಖಲಿಸಿದ್ದಾರೆ.
ಅನಾಥಾಲಯ, ಸತ್ತ್ರ, ವಾಚನಾಲಯ
ಸಮಾಜಸುಧಾರಕರಾಗಿ ಅತ್ಯುನ್ನತ ಧ್ಯೇಯವನ್ನು ಇಟ್ಟುಕೊಂಡಿದ್ದ ಗೋಪಾಲಾಚಾರ್ಲು ಅವರು ಬರೀ ದೇವಸ್ಥಾನವಷ್ಟರಿಂದ ತೃಪ್ತಿ ಹೊಂದದೆ ಅನಾಥ ಮಕ್ಕಳಿಗಾಗಿ ಅನಾಥಾಲಯವನ್ನು ಪ್ರಾರಂಭಿಸಲು ಸಂಕಲ್ಪಿಸಿದರು. ಇದಕ್ಕಾಗಿ ತಮ್ಮ ಜೀವನವನ್ನೇ ಮುಡುಪಾಗಿಟ್ಟ ಗೋಪಾಲಾಚಾರ್ಲು ೧೮೮೮ರ ಪ್ರಾರಂಭದಲ್ಲಿ ದೇಶಾದ್ಯಂತ ಸಂಚರಿಸಿ ರಾಜ-ಮಹಾರಾಜರುಗಳನ್ನೂ ಹಾಗೂ ಶ್ರೀಮಂತರನ್ನೂ ಕಂಡು ಹಣವನ್ನು ಶೇಖರಿಸಿಕೊಂಡು ಅದೇ ವರ್ಷದ ಕೊನೆಯಲ್ಲಿ ವಾಪಸ್ಸಾದರು. ಆ ಸಮಯದಲ್ಲಿ ಅವರ ಪತ್ನಿ ಮತ್ತು ತಂದೆ ಬಹು ಕಾಳಜಿಯಿಂದ ದೇವಾಲಯದಲ್ಲಿ ಅರ್ಚನಾದಿಗಳನ್ನು ನಡೆಸುತ್ತಿದ್ದರು. ಶೇಖರಿಸಿದ ಹಣದಿಂದ ಶ್ರೀನಿವಾಸ ದೇವಾಲಯದಲ್ಲೇ ಎಲ್ಲ ಜಾತಿಯ ಮಕ್ಕಳಿಗೆ ಅವಕಾಶ ನೀಡಿ ಅನಾಥಾಲಯವನ್ನು ನಡೆಸತೊಡಗಿದರು. ಆ ಮಕ್ಕಳ ಪೂರ್ಣ ಜವಾಬ್ದಾರಿ ಹೊತ್ತು ಅವರ ಆರೋಗ್ಯ, ವಿದ್ಯಾಭ್ಯಾಸ ಹಾಗೂ ಶಿಸ್ತಿನ ಬೆಳವಣಿಗೆಗಾಗಿ ಒಬ್ಬ ಉಪಾಧ್ಯಾಯರನ್ನು ನೇಮಿಸಿದರು. ಪ್ರತಿ ವರ್ಷವೂ ಅವರ ಒಳ್ಳೆಯ ನಡತೆ ಮತ್ತು ಪಾಠ ಪ್ರವಚನಗಳಿಗನುಸಾರವಾಗಿ ಬಹುಮಾನಗಳನ್ನು ಕೊಟ್ಟು ಪ್ರೋತ್ಸಾಹಿಸಿದರು. ಅದೇ ರೀತಿ ಸಾರ್ವಜನಿಕರ ಅನುಕೂಲಕ್ಕಾಗಿ ಉಚಿತ ವಾಚನಾಲಯ ಮತ್ತು ಪುಸ್ತಕಭಂಡಾರವನ್ನು ೧೮೮೯ರಲ್ಲಿ ಪ್ರಾರಂಭಿಸಿದರು. ಇಷ್ಟೇ ಅಲ್ಲದೆ ಅತ್ಯವಶ್ಯವಿರುವ ಕಡುಬಡವರಿಗಾಗಿಯೂ, ಪ್ರತಿನಿತ್ಯ ಬೆಂಗಳೂರಿಗೆ ಬಂದು ಹೋಗುವ ಯಾತ್ರಿಕರಿಗಾಗಿಯೂ ಮತ್ತು ಸಂನ್ಯಾಸಿಗಳಿಗಾಗಿಯೂ ಊಟ ವಸತಿ ಏರ್ಪಾಟನ್ನು ಮಾಡಿದರು. ಮಿತಭಾಷಿಗಳಾಗಿದ್ದ ಗೋಪಾಲಾಚಾರ್ಲು ಅವರಿಗೆ ಪಾಶ್ಚಾತ್ಯ ಭಾಷೆಗಳಲ್ಲಿಯೂ ಒಳ್ಳೆಯ ಪಾಂಡಿತ್ಯವಿತ್ತು.
೩-೧೧-೧೮೯೨ರಂದು ಶ್ರೀನಿವಾಸ ಮಂದಿರಂನ ಏಳ್ಗೆಗಾಗಿ ಒಂದು ಬೃಹತ್ ಸಭೆ ನಡೆಸಿದರು. ಅಂದು ಮುಖ್ಯ ನ್ಯಾಯಾಧೀಶರಾಗಿದ್ದ ಟಿ.ಆರ್.ಎ. ತಂಬುಚೆಟ್ಟಿ, ತುಮಕೂರಿನ ಡಿ.ಸಿ. ಆಗಿದ್ದ ಬಿ.ಕೆ. ವೆಂಕಟವರದಯ್ಯಂಗಾರ್, ಜಿಲ್ಲಾ ನ್ಯಾಯಾಧೀಶರಾದ ಕೃಷ್ಣರಾವ್, ಅಂಡರ್ ಸೆಕ್ರೆಟರಿ ನಾರಾಯಣರಾವ್, ಅಸಿಸ್ಟೆಂಟ್ ಕಮಿಷನರ್ ರಾಮರಾವ್, ಪರಮಶಿವ ಅಯ್ಯರ್ ಮುಂತಾದವರು ಭಾಗವಹಿಸಿದ್ದರು.
ಬೆಂಗಳೂರಿನಲ್ಲಿ ‘ಮೈಸೂರು ವೃತ್ತಾಂತ ಬೋಧಿನೀ’ ಕನ್ನಡ ವಾರಪತ್ರಿಕೆ ೧೮೫೯ರಿಂದ ಪ್ರಕಟವಾಗುತ್ತಿತ್ತು. ಈ ಪತ್ರಿಕೆ ಹಲವಾರು ಕಾರಣಗಳಿಂದ ಸುಮಾರು ೧೮೯೦ರಲ್ಲಿ ತೊಂದರೆಗೊಳಗಾಯಿತು. ಆಗ ವರ್ತಮಾನ ಪತ್ರಿಕೆಯ ಗಂಧವೇ ಇಲ್ಲದಿದ್ದ ಗೋಪಾಲಾಚಾರ್ಲು ಅವರು ಆ ಪತ್ರಿಕೆಯ ಉಪಸಂಪಾದಕರಾಗಿ ಕೆಲ ವರ್ಷ ಬಹು ಶ್ರಮಪಟ್ಟು ಪತ್ರಿಕೆಯ ಕಾರ್ಯ ನಿರ್ವಹಿಸಿದರು.
ಕೃಷ್ಣರಾಜ ಒಡೆಯರ್ ಅವರ ಭೇಟಿ
ಇವರ ಕಾರ್ಯಕಲಾಪಗಳನ್ನು ಕಾಣಲು ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಪರಿವಾರಸಮೇತ ೩೧-೧೨-೧೯೦೪ರಂದು ಶ್ರೀನಿವಾಸ ಮಂದಿರಕ್ಕೆ ಭೇಟಿಯಿತ್ತು ಗೋಪಾಲಾಚಾರ್ಲು ಅವರ ಕಾರ್ಯಗಳನ್ನು ಹೊಗಳಿ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದರು.
ಮಂದಿರದಲ್ಲಿನ ಅನಾಥ ಬಾಲಕರ ವಾಸಸ್ಥಳವು ಮೊದಲು ದೇವಾಲಯದಲ್ಲಿದ್ದು ಅನಂತರ ಮಂದಿರಂನ ಎದುರುಗಡೆಯ ಹಳೇ ಕಟ್ಟಡದಲ್ಲಿತ್ತು. ಗೋಪಾಲಾಚಾರ್ಲು ಸೇವಾಕಾರ್ಯಗಳನ್ನು ಮೆಚ್ಚಿದ ಕೃಷ್ಣರಾಜ ಒಡೆಯರ್ ಅವರು ದೇವಾಲಯದ ಹತ್ತಿರ ಇದ್ದ ಖಾಲಿ ನಿವೇಶನವನ್ನು ದೊರಕಿಸಿಕೊಟ್ಟರು.
ಹೀಗೆ ನಡೆದಿದ್ದ ಶ್ರೀನಿವಾಸ ದೇವಾಲಯ, ಪುಸ್ತಕ ಭಂಡಾರ, ವಾಚನಾಲಯ, ಅನಾಥಾಲಯ ೧೯೦೫ರ ವೇಳೆಗೆ ಬೆಂಗಳೂರು ಪೇಟೆಯಲ್ಲಿ ಬಹು ಪ್ರಸಿದ್ಧಿ ಹೊಂದಿ ಎಲ್ಲರ ಮನೆಮಾತಾಗಿತ್ತು.
ಮಾತೃ ಮಂದಿರ
ತಮ್ಮ ಚಟುವಟಿಕೆಗಳ ವಿಸ್ತರಣೆಯ ಮುಂದಿನ ಅಂಗವಾಗಿ ಪತ್ನಿ ಸಿಂಗಮ್ಮನವರ ಸಹಕಾರದೊಂದಿಗೆ ‘ಸ್ತ್ರೀಶಾಖೆ’ಯನ್ನು ಮಹಿಳೆಯರಿಗೋಸ್ಕರ ಪ್ರತ್ಯೇಕವಾಗಿ ಶ್ರೀನಿವಾಸ ಮಂದಿರಂನಲ್ಲೇ ೧೯೦೭ರಲ್ಲಿ ಪ್ರಾರಂಭಿಸಿ ‘ಮಾತೃಮಂದಿರ’ ಎಂದು ಹೆಸರಿಟ್ಟರು. ಬಾಲಕಿಯರಿಗೆ ಸಂಗೀತ, ಕಲೆ, ಹೊಲಿಗೆ, ಕುಶಲ ವಿದ್ಯೆ, ವೃತ್ತಿ ಶಿಕ್ಷಣ, ಬೆತ್ತದ ಕೆಲಸ ಮುಂತಾದವುಗಳಿಗೆ ತರಬೇತಿ ವ್ಯವಸ್ಥೆಮಾಡಿದರು. ಜನಸಮುದಾಯದ ಏಳಿಗೆಗೆ ಸಿಂಗಮ್ಮನವರೂ ವಿಶೇಷವಾಗಿ ಗಮನಹರಿಸುತ್ತಿದ್ದರು. ದಿವಾನ್ ಟಿ. ಆನಂದರಾವ್ ಅವರ ಪತ್ನಿಯಾದ ಸುಂದರಾಬಾಯಿ ಹಾಗೂ ನಗರದ ಅನೇಕ ಗಣ್ಯವ್ಯಕ್ತಿಗಳ ಪತ್ನಿಯರು ಮಾತೃಮಂದಿರದಲ್ಲಿ ಸೇವೆ ಸಲ್ಲಿಸಲು ಮುಂದಾದರು. ಈ ರೀತಿಯ ಮಾತೃಮಂದಿರ ಪ್ರಾರಂಭವಾಗಿದ್ದು ಮೈಸೂರು ಸಂಸ್ಥಾನದಲ್ಲಿ ಇದೇ ಮೊದಲನೆಯದು.
ಹೀಗೆ ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರತವಾಗಿದ್ದ ‘ಶ್ರೀನಿವಾಸ ಮಂದಿರಂ’ ಸಂಸ್ಥೆಯು ಬೆಂಗಳೂರು ನಗರದಲ್ಲಷ್ಟೇ ಅಲ್ಲದೆ ಇಡೀ ಮೈಸೂರು ಸಂಸ್ಥಾನದಲ್ಲಿಯೆ ಮೊಟ್ಟಮೊದಲ ಸೇವಾಸಂಸ್ಥೆ ಎಂಬ ಹೆಗ್ಗಳಿಕೆ ಪಡೆದಿತ್ತು.
ಈ ಮಂದಿರದ ಕಾರ್ಯಕರ್ತರು ಶನಿವಾರ-ಭಾನುವಾರಗಳಂದು ಕೈಯಿಂದ ತಳ್ಳುವ ಪೆಟ್ಟಿಗೆ ಗಾಡಿಯೊಂದಿಗೆ ಚಾಮರಾಜಪೇಟೆ, ಬಸವನಗುಡಿ ಮತ್ತು ಮಲ್ಲೇಶ್ವರಂ ಭಾಗದಲ್ಲಿದ್ದ ಅಭಿಮಾನಿಗಳ ಮನೆಗಳಿಗೆ ಹೋಗಿ ದವಸ ಧಾನ್ಯಗಳನ್ನು ಸಂಗ್ರಹಿಸುವುದರ ಜೊತೆಗೆ ಸಂಸ್ಥೆಯ ಖರ್ಚು ವೆಚ್ಚಕ್ಕೆ ಹಾಗೂ ಸಿಬ್ಬಂದಿ ವೇತನಕ್ಕಾಗಿ ಕಾಣಿಕೆಗಳನ್ನು ಸ್ವೀಕರಿಸಿ ತರುತ್ತಿದ್ದರು.
ಶಾಲಾ ಕಾಲೇಜುಗಳ ಮುಖ್ಯೋಪಾಧ್ಯಾಯರು ಮತ್ತು ಪ್ರಾಂಶುಪಾಲರನ್ನು ಇಲ್ಲಿಗೆ ಆಹ್ವಾನಿಸಿ ಹಿಂದೂಧರ್ಮದ ಅನೇಕ ತತ್ತ್ವಗಳನ್ನು ಇಲ್ಲಿನ ವಿದ್ಯಾರ್ಥಿಗಳಿಗೆ ಬೋಧಿಸುವಂತೆ ಏರ್ಪಾಟು ಮಾಡಿದರು. ಜೊತೆಯಲ್ಲಿ ಸಂಸ್ಕೃತ, ಕನ್ನಡ ಮತ್ತು ಇಂಗ್ಲಿ಼ಷನ್ನು ಗೋಪಾಲಾಚಾರ್ಲು ಅವರು ಬೋಧಿಸುತ್ತಿದ್ದರು.
ಅನಾಥಾಲಯದ ಪ್ರವೇಶೋತ್ಸವ
ಅನಾಥಾಲಯಕ್ಕಾಗಿ ನಾಲ್ವಡಿಯವರು ೧೯೦೪ರಲ್ಲಿ ನೀಡಿದ್ದ ಖಾಲಿ ನಿವೇಶನದಲ್ಲಿ ಯುವರಾಜ ಕಂಠೀರವ ನರಸಿಂಹರಾಜ ಒಡೆಯರ್ ಅವರಿಂದ ದಿನಾಂಕ ೨೭-೧-೧೯೧೩ರಂದು ಬುನಾದಿ ಹಾಕಲ್ಪಟ್ಟು ಕಟ್ಟಡ ಪೂರ್ಣ ಮುಗಿದ ನಂತರ ಅವರ ಅಧ್ಯಕ್ಷತೆಯಲ್ಲಿಯೇ ನೂತನ ಕಟ್ಟಡದ ಪ್ರವೇಶೋತ್ಸವವು ದಿನಾಂಕ ೫-೨-೧೯೧೪ರಂದು ವೈಭವದಿಂದ ನಡೆಯಿತು. ಅಂದು ಯುವರಾಜರು ಮಾತನಾಡುತ್ತ “ನಾಸ್ತಿಕತನ ಹರಡುತ್ತಿರುವ ಈ ಕಾಲದಲ್ಲಿ ಸಮಾಜ ಸೇವೆ ಸೇರಿದಂತೆ ದೇವಸ್ಥಾನ, ಅನಾಥಾಲಯಗಳನ್ನು ಒಳಗೊಂಡ ಇಂಥ ಧರ್ಮ ಕಾರ್ಯವು ಹಿಂದೂ ಸಂಸ್ಕೃತಿಯ ಪ್ರತೀಕ” ಎಂದು ಪ್ರಶಂಸೆ ಮಾಡಿದರು.
ಶ್ರೀನಿವಾಸ ಮಂದಿರಂನ ೨೯ನೇ ವಾರ್ಷಿಕೋತ್ಸವ ಹಾಗೂ ಶ್ರೀ ರಾಮಾನುಜಾರ್ಯರ ಜನ್ಮ ದಿನೋತ್ಸವವನ್ನು ೨೩-೪-೧೯೧೨ರಂದು ಜನೋಪಕಾರಿ ದೊಡ್ಡಣ್ಣ ಶೆಟ್ಟರ ಹಾಲ್ನಲ್ಲಿ ವಿಜೃಂಭಣೆಯಿಂದ ನಡೆಸಲಾಯಿತು. ಅಂದು ಮದರಾಸಿನ ಅಡಿಯಾರ್ ಲೈಬ್ರರಿ ಉಪನಿರ್ದೇಶಕರಾಗಿದ್ದ ಜೋಹನ್ ವಾನ್ ಮೆನನ್ ಅವರು ಮುಖ್ಯಅಥಿತಿಯಾಗಿ ಆಗಮಿಸಿದ್ದು, ಎಫ್.ಜೆ. ರಿಚರ್ಡ್ ಅಧ್ಯಕ್ಷತೆ ವಹಿಸಿದ್ದರು. ಅಂದಿನ ಸಭೆಗೆ ನಗರದ ಅನೇಕ ಗಣ್ಯರು ಆಗಮಿಸಿದ್ದರು. ಚಕ್ರವರ್ತಿ, ಬಿ.ಜೆ. ಕುಮಾರಸ್ವಾಮಿ ನಾಯಕ್, ಚಂಗಯ್ಯಶೆಟ್ಟಿ, ಎಸ್. ಕೃಷ್ಣಸ್ವಾಮಿ ಅಯ್ಯಂಗಾರ್, ಎಂ.ಬಿ. ವರದರಾಜ ಅಯ್ಯಂಗಾರ್, ಕಾರಾಪುರ್ ಶ್ರೀನಿವಾಸರಾವ್, ಸಿ.ಬಿ. ಶೇಷಗಿರಿರಾವ್, ಕೆ. ರಾಮಚಂದ್ರರಾವ್, ಎಸ್. ನಾರಾಯಣರಾವ್, ಕೆ.ಎಚ್. ರಾಮಯ್ಯ, ಬಿ. ಸುಬ್ಬಣ್ಣ, ಹಿರಿಯಣ್ಣಯ್ಯ, ಬಿ. ಉಸ್ಮಾನ್ಖಾನ್, ಹನುಮಂತಪ್ಪ ಮುಂತಾದವರು ಹಾಜರಿದ್ದರು.
ಕಸ್ತೂರಿಬಾ ಅವರಿಗೆ ಸನ್ಮಾನ
ಪ್ರಥಮ ಬಾರಿಗೆ ಗಾಂಧಿಯವರು ಕಸ್ತೂರಿಬಾ ಅವರೊಡನೆ ರೈಲಿನಲ್ಲಿ ದಿನಾಂಕ ೮-೫-೧೯೧೫ ಶನಿವಾರದಂದು ಬೆಂಗಳೂರು ನಗರ ರೈಲ್ವೆ ನಿಲ್ದಾಣದಲ್ಲಿ ಬಂದು ಇಳಿದಾಗ ಗಾಂಧಿಯವರನ್ನು ನಗರದ ಗಣ್ಯವ್ಯಕ್ತಿಗಳು ಸ್ವಾಗತಿಸಿದರೆ, ಶ್ರೀನಿವಾಸಮಂದಿರದ ಮಾತೃಮಂದಿರದ ಸ್ತ್ರೀಯರು ಕಸ್ತೂರಿಬಾ ಅವರಿಗೆ ಹೂಮಾಲೆಗಳನ್ನು ಹಾಕಿ ಸ್ವಾಗತಿಸಿದರು. ಅಂದು ಮಧ್ಯಾಹ್ನ ಕಸ್ತೂರಿಬಾ ಅವರನ್ನು ಶ್ರೀನಿವಾಸ ಮಂದಿರಕ್ಕೆ ಕರೆದುಕೊಂಡು ಹೋಗಿ ಬೆಂಗಳೂರು ಸ್ತ್ರಿÃಯರ ಪರವಾಗಿ ಸಿಂಗಮ್ಮನವರೂ ಸುಂದರಾಬಾಯಿ ಟಿ. ಆನಂದರಾವ್ ಮತ್ತಿತರರೂ ಸನ್ಮಾನಿಸಿದರು.
ಗೋಪಾಲಾಚಾರ್ಲು ಅವರ ಸಾರ್ವಜನಿಕ ಸುಧಾರಣಾ ಕಾರ್ಯಗಳಿಗೆ ಮೆಚ್ಚಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಇವರಿಗೆ ಮೈಸೂರು ಅರಮನೆಯಲ್ಲಿ ನವರಾತ್ರಿ ವೇಳೆಯಲ್ಲಿ ನಡೆದ ದರ್ಬಾರಿನಲ್ಲಿ ದಿನಾಂಕ ೨೦-೧೦-೧೯೧೫ ಬುಧವಾರ ಸಂಜೆ ‘ಜನೋಪಕಾರಿ’ ಎಂಬ ಬಿರುದನ್ನು ನೀಡಿ ಗೌರವಿಸಿದರು.
೧೯೧೫ರ ನಂತರ ಪ್ರಾರಂಭವಾದ ಪ್ರಥಮ ಮಹಾಯುದ್ದದ ಸಮಯದಲ್ಲಿ ಮಂದಿರದಲ್ಲಿ ಒಂದು ವಿನೋದಾವಳಿ ಪ್ರದರ್ಶನ ಏರ್ಪಡಿಸಿ, ಇದರಿಂದ ಗಳಿಸಿದ ಹಣವನ್ನು ಯುದ್ಧ ನಿಧಿಗೆ ಅರ್ಪಿಸಿದರು.
* * *
ತಮ್ಮ ಜೀವನವನ್ನೇ ಸಮಾಜಕಾರ್ಯಗಳಿಗೆ ಧಾರೆಯೆರೆದ ಗೋಪಾಲಾಚಾರ್ಲುರವರಿಗೆ ಕೊನೆಯ ಒಂದು ವರ್ಷ ಆರೋಗ್ಯವು ಅಷ್ಟು ತೃಪ್ತಿಕರವಾಗಿರಲಿಲ್ಲ. ಆದರೂ ಅನೇಕ ತಿಂಗಳುಗಳ ಕಾಲ ಮಧ್ಯರಾತ್ರಿವರೆಗೂ ಮಂದಿರದ ಕಾರ್ಯಚಟುವಟಿಕೆ ಮತ್ತು ಅಭಿವೃದ್ಧಿ ಚಿಂತನೆಯಲ್ಲಿ ಮುಳುಗಿ ಪತ್ರ-ವ್ಯವಹಾರಾದಿಗಳನ್ನು ನಡೆಸುತ್ತಿದ್ದರು. ತಮ್ಮ ೬೧ನೇ ವಯಸ್ಸಿನಲ್ಲಿ ದಿನಾಂಕ ೨೦-೮-೧೯೧೬ ಭಾನುವಾರದಂದು ದೈವಾಧೀನರಾದರು. ದಿವಾನರೂ ಅಧಿಕಾರಿಗಳೂ, ನಾಟಕ ಶಿರೋಮಣಿ ವರದಾಚಾರ್, ಜನೋಪಕಾರಿ ದೊಡ್ಡಣ್ಣಶೆಟ್ಟಿಯವರು, ಕಲಾಮಂದಿರದ ಅ.ನ. ಸುಬ್ಬರಾವ್, ಪಾರ್ವತಮ್ಮ ಚಂದ್ರಶೇಖರ ಅಯ್ಯರ್ ಮುಂತಾದವರೂ ಈ ಸಂಸ್ಥೆಯನ್ನು ಪೋಷಿಸಿದ ಗಣ್ಯರು ಹಾಗೂ ಅಭಿಮಾನಿಗಳೂ ಶೋಕದಲ್ಲಿ ಮುಳುಗಿದರು.
ದೀನಬಂಧು ಸಿಂಗಮ್ಮನವರು
ಪತಿ ಗೋಪಾಲಾಚಾರ್ಲು ಅವರ ಅಗಲಿಕೆಯಿಂದಾಗಿ ಧೃತಿಗೆಡದೆ ಸಿಂಗಮ್ಮನವರು ಪತಿಯ ಹೆಜ್ಜೆಯಲ್ಲೇ ಹೆಜ್ಜೆಯನ್ನಿಟ್ಟು, ಹಿಂದಿನಿಂದ ನಡೆದುಕೊಂಡು ಬಂದಿದ್ದ ಎಲ್ಲ ಕಾರ್ಯಗಳಲ್ಲಿ ಸದಾ ನಿರತರಾದರು. ಪತಿ ಆರಂಭಿಸಿದ್ದ ಕಾರ್ಯಗಳನ್ನು ಅಷ್ಟೇ ಹುರುಪಿನಿಂದ ಇವರ ಪತ್ನಿಯಾದ ಸಿಂಗಮ್ಮನವರು ನಡೆಸಿಕೊಂಡು ಬಂದರು. ಕೆಲಸವೂ ಮೊದಲಿಗಿಂತ ಹೆಚ್ಚಾಯಿತು. ಹುಡುಗರೂ ಹೆಚ್ಚುತ್ತ ಬಂದರು. ಅನಾಥಾಲಯದ ಮಕ್ಕಳಿಗೆ ಮಾತೆಯೋಪಾದಿಯಲ್ಲಿದ್ದು, ಅವರ ಅಭಿವೃದ್ಧಿಗಾಗಿ ಯಜಮಾನರಂತೆ ತಮ್ಮ ಜೀವನವನ್ನು ಸಾಗಿಸುತ್ತ, ಈ ಧರ್ಮಸಂಸ್ಥೆಯ ಆಡಳಿತವನ್ನು ಮುಂದುವರಿಸಿದರು. ಮಂದಿರಂನ ವಿದ್ಯಾರ್ಥಿಗಳನ್ನು ೧೯೧೭ರಲ್ಲಿ ಗೋಪಾಲಾಚಾರ್ಲು ಅವರ ಸಮಕಾಲೀನರು ಹಾಗೂ ಮಹಾದಾನಿಗಳಾಗಿದ್ದ ದೊಡ್ಡಣ್ಣ ಶೆಟ್ಟರು ಸಿಟಿ ಮಾರುಕಟ್ಟೆ ಮುಂಭಾಗದಲ್ಲಿ ಪ್ರಾರಂಭಿಸಿದ್ದ (ಎಸ್.ಎಲ್.ಎನ್. ಧಾರ್ಮಿಕ ಸಂಸ್ಥೆ) ಉಚಿತ ಶೈಕ್ಷಣಿಕ ಮತ್ತು ಕೈಗಾರಿಕಾ ಶಾಲೆಗೆ ಕಳುಹಿಸುವ ವ್ಯವಸ್ಥೆ ಮಾಡಿದರು.
ಅನಾಥಾಲಯದ ಬಾಲಕ, ಬಾಲಕಿಯರ ಶರೀರ ಪೋಷಣೆ, ವಿದ್ಯಾರ್ಜನೆ, ಶುಚಿತ್ವ ಹಾಗೂ ನೈರ್ಮಲ್ಯಗಳಿಗೆ ಹೆಚ್ಚಿನ ಗಮನ ಕೊಡುತ್ತಿದ್ದರು. ಇವರು ತಮ್ಮ ಸ್ವಂತ ದುಡಿಮೆಯಿಂದ ಅತ್ಯಂತ ಅಮೂಲ್ಯವಾದ ಗಿಡಮೂಲಿಕೆಗಳಿಂದ ಹಾಗೂ ಹಸಿರೆಲೆಗಳಿಂದ ತಯಾರಿಸಿದ ‘ವಸಂತ ಮಾಲಿನಿ’ ಎಂಬ ತೈಲವನ್ನು ಅನೇಕ ಜನ ಉಪಯೋಗಿಸಿದರು. ಪತಿಯ ಹಾಗೆ ವಿರಾಗಿಗಳಂತೆ ಕಾವಿವಸ್ತ್ರವನ್ನು ಧರಿಸಿ ಕರದಲ್ಲಿ ಖಾದಿ ಚೀಲವನ್ನೂ, ಚೌಕವೊಂದನ್ನೂ ಹಿಡಿದುಕೊಂಡು ರ್ವದಾ ಹಸನ್ಮುಖಿಯಾಗಿ ಶ್ರೀನಿವಾಸ ಮಂದಿರಕ್ಕೆ ಸೇವೆ ಸಲ್ಲಿಸುತ್ತಿದ್ದರು. ಈಕೆ ಹೋಗದ ಮನೆಯಾಗಲಿ, ಸಂಭಾಷಣೆಯನ್ನು ಮಾಡದ ಜನರಾಗಲಿ, ಉಪನ್ಯಾಸವನ್ನು ಮಾಡದ ಸಭೆಯಾಗಲಿ ನಗರದಲ್ಲಿ ಇರಲಿಲ್ಲ ಎಂದೇ ಹೇಳಬಹುದು.
ಸಿಂಗಮ್ಮನವರು ತಮ್ಮ ವಯಸ್ಸು ಇಳಿಮುಖವಾಗುತ್ತಿರುವುದವನ್ನು ಹಾಗೂ ತಾವು ಸ್ಥಾಪಿಸಿದ ಧರ್ಮಕಾರ್ಯ ಕಲಾಪಗಳು ಹಾಗೂ ಸಂಬಂಧಪಟ್ಟ ಸ್ವತ್ತುಗಳ ಆದಾಯವನ್ನು ಭದ್ರಪಡಿಸುವ ಉದ್ದೇಶದಿಂದ ದಿನಾಂಕ ೨೬-೧-೧೯೨೯ರಲ್ಲಿ ಒಂದು ‘ವಿಲ್’ (ಮರಣ ಶಾಸನ) ಪತ್ರ ಬರೆಯಿಸಿದರು. ಇದಕ್ಕೆ ಬಿ.ವಿ. ಸುಬ್ಬರಾವ್, ವಿ.ಟಿ. ಸೆಟ್ಲೂರ್, ಎಂ. ಚಂಗಯ್ಯಶೆಟ್ಟಿ. ಬೇಲೂರು ಶ್ರೀನಿವಾಸಯ್ಯಂಗಾರ್ರವರುಗಳ ಸಹಿ ಇರುತ್ತದೆ. ಹಾಗೆಯೆ ಇದರಲ್ಲಿ ಮುಂದುವರೆದು “ಶ್ರೀನಿವಾಸ ಮಂದಿರದ ಅನಾಥಾಲಯದಲ್ಲಿ ಬೆಳೆದ ಹುಡುಗರು ವಿದ್ಯಾವಂತರಾಗಿ ಭಾರತದಲ್ಲಿ ಹಾಗೂ ಹೊರದೇಶಗಳಲ್ಲಿ ಇದ್ದು, ಈಗ ಹಾಲಿ ಬೆಂಗಳೂರಿನಲ್ಲಿರುವ ಹಳೇ ಹುಡುಗರ ಒಂದು ಸಲಹಾಸಮಿತಿ ಮಾಡಿಕೊಂಡು ಅವರನ್ನು ಸದಸ್ಯರನ್ನಾಗಿ ಮಾಡಿ ಈ ಧರ್ಮನಿರ್ವಾಹಕರ ಕೆಲಸಗಳಲ್ಲಿ ಅವರ ಸಲಹೆ, ಸೂಚನೆಗಳನ್ನು ಕಮಿಟಿಯವರು ತೆಗೆದುಕೊಳ್ಳತಕ್ಕದ್ದು” ಎಂದು ವಿಲ್ನಲ್ಲಿ ನಮೂದಿಸಿದ್ದರು.
ಸಿಂಗಮ್ಮನವರು ತಮ್ಮ ೬೨ನೇ ವಯಸ್ಸಿನಲ್ಲಿ ೧೭-೧-೧೯೩೨ರಂದು ದೈವಾಧೀನರಾದರು.
ಸಿಂಗಮ್ಮನವರ ಶ್ರಮದಿಂದ ಈ ಸಂಸ್ಥೆಗೆ ೨೫.೦೦೦ ರೂಪಾಯಿಗಳಿಗೂ ಮೇಲ್ಪಟ್ಟು ಪುದುವಟ್ಟು ನಿಧಿ ಕೂಡ ಇತ್ತು. ಅಲ್ಲದೆ ಬೆಂಗಳೂರು ಗ್ರಾಮಾಂತರ ಪ್ರದೇಶದಲ್ಲಿ ಹಲವು ಎಕರೆ ಖುಷ್ಕಿ ಜಮೀನು ಸಹ ಇತ್ತು ಎಂದು ತಿಳಿದು ಬರುತ್ತದೆ. ಪ್ರಾರಂಭದಿಂದಲೂ ಬೆಂಗಳೂರು ನಗರ ಮುನಿಸಿಪಾಲಿಟಿಯಿಂದ ಅನುದಾನ ಹಾಗೂ ಕುಡಿಯುವ ನೀರು ಸೌಲಭ್ಯ ಪಡೆಯುತ್ತಿತ್ತು. ಇದೇ ರೀತಿ ಮೈಸೂರು ಸರ್ಕಾರದ ಮುಜರಾಯಿ ಇಲಾಖೆಯಿಂದ ಪ್ರಾರಂಭದಿಂದಲೂ ಅನುದಾನ ಪಡೆಯುತ್ತಿತ್ತು. ಅನಂತರ ಮುಜರಾಯಿ ಇಲಾಖೆಯ ಆಡಳಿತಕ್ಕೆ ಒಳಪಟ್ಟಿತು.
ನೂತನ ಭವನ
ತಾವೇ ಸಂಗ್ರಹಿಸಿದ್ದ ಚಂದಾ ಹಣದಿಂದ ಸ್ತ್ರೀಶಾಖೆಯನ್ನು ನಡೆಸಲು ಒಂದು ದಿವ್ಯವಾದ ಭವನವನ್ನು ದೇವಾಲಯದ ಎದುರಿಗೆ ಸಿಂಗಮ್ಮನವರು ಕಟ್ಟಿಸಿದರು. ಹೊಸ ಕಟ್ಟಡದಲ್ಲಿ ಇಂಗ್ಲಿಷ್ ತರಗತಿಗಳನ್ನು ಪ್ರಾರಂಭಿಸಬೇಕೆಂದು ಏರ್ಪಾಟುಗಳನ್ನೆಲ್ಲಾ ಮಾಡಿದ್ದರು. ಇದರ ಉದ್ಘಾಟನೆ ದಿನಾಂಕ ೫-೪-೧೯೩೩ರಂದು ಶ್ರೀಮದ್ಯುವರಾಣಿಯವರಿಂದ ನಡೆಯಿತು.
೧೯೩೫ರಲ್ಲಿ ಸರ್ಕಾರದವರು ನೇಮಿಸಿದ ಕಾರ್ಯನಿರ್ವಾಹಕ ಮಂಡಲಿಯ ಮೊದಲನೆಯ ಅಧ್ಯಕ್ಷರು ಬೇಲೂರು ಶ್ರೀನಿವಾಸ ಅಯ್ಯಂಗಾರ್ರವರು. ಇವರು ಸುಮಾರು ೧೫ ವರ್ಷಗಳ ಕಾಲ ಅಧ್ಯಕ್ಷರಾಗಿದ್ದು ಈ ಧರ್ಮ ಸಂಸ್ಥೆಯ ಆಡಳಿತವನ್ನು ಯಶಸ್ವಿಯಾಗಿ ನಡೆಸಿಕೊಂಡು ಬಂದರು.
ಸ್ಮರಣೋತ್ಸವಗಳು
೨೫-೧೧-೧೯೩೫ರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ರವರು ಸ್ಥಾಪಕರ ಸ್ಮಾರಕೋತ್ಸವದ ಅಧ್ಯಕ್ಷತೆ ವಹಿಸಿದ್ದರು.
೧೯೮೮ರಲ್ಲಿ ನೂರಾರು ಹಳೆಯ ವಿದ್ಯಾರ್ಥಿಗಳ ನೆರವಿನೊಂದಿಗೆ ಶತಮಾನೋತ್ಸವವನ್ನು ಬಹಳ ವಿಜೃಂಭಣೆಯಿಂದ ಆಚರಿಸಲಾಯಿತು.
ಈಗ್ಗೆ ೧೪೦ ವರ್ಷಗಳ ಹಿಂದೆಯೇ ಸಮಗ್ರ ಸಮಾಜದ ಉದ್ಧಾರಕ್ಕೋಸ್ಕರ ನಿಃಸ್ವಾರ್ಥ ಸೇವೆ ಹಾಗೂ ಮಹಾತ್ಯಾಗದಿಂದ ಜೀವನಪೂರ್ತ ಶ್ರಮಿಸಿದ ಈ ಸಾರ್ಥಕ ಜೀವಿಗಳು ನಡೆಸಿದ ಶ್ರೀನಿವಾಸ ಮಂದಿರಂ ಧರ್ಮಸಂಸ್ಥೆಯು ಇದುವರೆವಿಗೂ ಸಾವಿರಾರು ಮಂದಿ ಅನಾಥ ಬಾಲಕ ಬಾಲಕಿಯರಿಗೆ ಆಶ್ರಯವಿತ್ತು ಅವರುಗಳನ್ನು ದೇಶದ ಸತ್ಪ್ರಜೆಗಳನ್ನಾಗಿ ಮಾಡಿ ಕೀರ್ತಿ ಪಡೆದಿದೆ.
ಈಗ ಮುಜರಾಯಿ ಇಲಾಖೆಗೆ ಒಳಪಟ್ಟಿರುವ ಇಲ್ಲಿನ ಹಳೆಯ ಕಟ್ಟಡಗಳು ಈಗ ವಾಣಿಜ್ಯ ಸಂಕೀರ್ಣವಾಗಿ ಮಾರ್ಪಟ್ಟಿದೆ, ಅನಾಥಾಲಯ, ವಿದ್ಯಾಮಂದಿರ, ವಾಚನಾಲಯ ಗ್ರಂಥಭಂಡಾರ ಯಾವುದೂ ಈಗ ಇರುವುದಿಲ್ಲ. ಗ್ರಂಥಭಂಡಾರದಲ್ಲಿದ್ದ ಅಳಿದುಳಿದ ಗ್ರಂಥಗಳನ್ನು ಕೆಲ ವರ್ಷಗಳ ಹಿಂದೆ ಮೈಸೂರು ಬ್ಯಾಂಕ್ ಸರ್ಕಲ್ಲಿನಲ್ಲಿರುವ ಭಾರತೀಯ ಇತಿಹಾಸ ಅನುಸಂಧಾನ ಪರಿಷತ್ಗೆ (ICHR) ದಾನ ಮಾಡಲಾಯಿತು.
ಇಪ್ಪತ್ತನೇ ಶತಮಾನದ ಪ್ರಾರಂಭದ ದಶಕಗಳಲ್ಲಿ ನಗರದ ಸಾಂಸ್ಕೃತಿಕ ಕ್ಷೇತ್ರದಲ್ಲಿ ಬಹು ಮುಖ್ಯ ಪಾತ್ರವಹಿಸಿದ್ದ ಶ್ರೀನಿವಾಸ ಮಂದಿರಂ ಸೇವಾ ಸಂಸ್ಥೆ ಬೆಂಗಳೂರು ನಗರದ ಇತಿಹಾಸದಲ್ಲಿ ಚಿರಸ್ಮರಣೀಯವಾಗಿದೆ.
ಆಕರಗಳು:
೧. ‘ಬೆಂಗಳೂರು ದರ್ಶನ’, ಸಂಪುಟ-೨ ಉದಯಭಾನು ಕಲಾ ಸಂಘ. ಮುದ್ರಣ ೨೦೧೬. ಪುಟ-೨೮೭.
೨. ಇತಿಹಾಸ ದರ್ಶನ’, ಸಂಪುಟ-೯ ಕರ್ನಾಟಕ ಇತಿಹಾಸ ಅಕಾಡೆಮಿ (ರಿ.), ಬೆಂಗಳೂರು-೧೮, ೧೯೯೪, ಪುಟ ೨೩೩ ರಿಂದ ೨೩೫.
೩. ‘ಇತಿಹಾಸ ದರ್ಶನ’, ಸಂಪುಟ-೨೬, ಕರ್ನಾಟಕ ಇತಿಹಾಸ ಅಕಾಡೆಮಿ (ರಿ.) ಬೆಂಗಳೂರು-೧೮, ೨೦೧೧, ಪುಟ ೪೫೮ ರಿಂದ ೪೬೨.
೪. ‘ಶ್ರೀ ಶ್ರೀನಿವಾಸ ಮಂದಿರಂ ಧರ್ಮಸಂಸ್ಥೆ’, ಶತಮಾನೋತ್ಸವ ಸಂಚಿಕೆ, ಸಂ: ಕೆ.ವಿ. ವೆಂಕಟನರಸಿಂಹಯ್ಯ, ಬೆಂಗಳೂರು-೦೩, ೧೯೮೮.
೫. ‘ತಿರುಮಲೆ ತಾತಾಚರ್ಯ ಶರ್ಮರ ಮೈಸೂರು ಸಂಸ್ಥಾನದ ವೃತ್ತ ಪತ್ರಿಕಾ ಇತಿಹಾಸ’, ೨೦೦೬, ಪುಟ-೧೯.
೬. ‘A Guide to Bangalore and Mysore Director’, 1905, By J.W. Morris, Page No-93 to 94
೭. ‘Karnataka State Gazetteer’, Bangalore District, Chief Editor: Suryanath U. Kamath, 1990, Page No-860
೮. ‘ಕಲಾ’ ಮಾಸಪತ್ರಿಕೆ, ಫೆಬ್ರುವರಿ ೧೯೩೨, ಪುಟ-೨೭೦ರಿಂದ ೨೭೨
೯. ‘ಜೀವನ’ ಮಾಸಪತ್ರಿಕೆ, ಸಂಪುಟ-೧೧, ಸಂಚಿಕೆ-೧, ಮೇ ೧೯೫೦
೧೦. ‘ವಿಶ್ವ ಕರ್ಣಾಟಕ’, ವಾರಪತ್ರಿಕೆ, ಸಂ: ತಿ.ತಾ. ಶರ್ಮ, ೧೯೩೦
೧೧. ‘ವೃತ್ತಾಂತ ಪತ್ರಿಕೆ’, ವಾರಪತ್ರಿಕೆ, ೧೯೧೫ ರಿಂದ ೧೯೨೯
ಸಂಸ್ಥೆಗೆ ಭೇಟಿ ಕೊಟ್ಟ ಕೆಲವು ಮಹನೀಯರ ಅಭಿಪ್ರಾಯಗಳು
His Highness the Maharaja visited this institution on the 31st December 1904. He was favourably impressed with the general arrangements of the Mandiram. He considers that the objects which the founder has in view and the manner in which he has worked to attain them, most praiseworthy.
5 January 1905
Pvt.Sec. to H. H. Maharaja of Mysore
One cannot fail to notice the broadmindedness evidenced in the choice of books and papers, and one would imagine that such an institution would axcel a healthy educational influence on the people of the neighbourhood.
24 August 1907
A.R.Fuller
Principal, Wesleyan High School, Bangalore city.
Lady Daly yesterday visited the Srinivasa Mandiram in order to attend the meeting at which the Electric installations, presented by Mrs. Ananda Rao was used for the first time. Lady Daly has always been greatly interested in the admirable work which is so unostentatiously done by Mr and Mrs.Gopalacharlu.
2 August 1914
H.Daly
It gave me much pleasure to visit the institution and to learn about its work. It is carrying out useful work in several directions.
1941
K.Changalaraya Reddy
Chief Minister
Many institutions in india are neglected after the founder passes away. It is difficult to find a successor who would enter into the spirt of the founder and carry it in the same spirit. What strikes me most in connection with this institution is the devotion with which the present lady superintendent helped her husband founder in his noble work and the greater devotion and enthusiasm with which she is continuing that work after him. This is unique.
19 April 1921
D. K. Karve
Organiser, India
Women’s University
It gave me much pleasure to visit the institution and to learn about its work. It is carrying out useful work in several directions.
1941
K.Changalaraya Reddy
Chief Minister
I am extreamely happy to pay visit to the institution run by the Srinivasa Mandiram Charities. They all bear witness to the nobility of that great benefactor janopakari A. Gopalacharlu of revered memory who toiled hard to serve the people and the country. This institution have all been doing excellent work.
25 April 1949
D.H.Chandrashekariya
Minister for Education