ಪುರಾತನ ಕ್ಷೇತ್ರ ಕಾಶಿಗೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂದಾಳಿಕೋರರು ತಮ್ಮ ರೂಢಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ ಶಿವಮಂದಿರವನ್ನು ನಾಶಗೊಳಿಸಿದರು. ಆದರೆ ಹಿಂದೂಗಳ ಸ್ವಾಭಿಮಾನದಿಂದ ಕೆಲವರ್ಷಗಳಲ್ಲೇ ಕಾಶಿ ಮತ್ತೆ ತಲೆಯೆತ್ತಿ ನಿಂತಿತು. ೧೧೯೪ ಮಹಮ್ಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಐಬಕ್ ಇದನ್ನು ನಾಶಗೊಳಿಸಿದ. ಸಾವಿರ ಮಂದಿರಗಳು ಆಗ ಧ್ವಂಸಗೊಂಡವೆಂದು ಹೇಳಲಾಗುತ್ತದೆ. ಈ ಸುದ್ದಿ ತಿಳಿದ ಹಿಂದುಗಳು ಹಳ್ಳಿಹಳ್ಳಿಗಳಿಂದ ಕಾಶಿಗೆ ಧಾವಿಸಿದರು. ಕಾಶಿಯಲ್ಲಿ ಮುಂದಿನ ದಿನಗಳು ನಿತ್ಯ ಸಂಘರ್ಷ. ಸಾಧುಗಳು, ಮಹಂತರು, ಸ್ಥಳೀಯ ನಾಯಕರುಗಳ ನೇತೃತ್ವದಲ್ಲಿ ಗುಂಪುಗೂಡುವುದು ಮುಸಲ್ಮಾನ ಸಿಪಾಯಿ ತುಕಡಿಗಳೊಂದಿಗೆ ಕಾದಾಟ. ಕಡೆಗೂ ಹಿಂದೂ ಶಕ್ತಿ ಗೆದ್ದಿತು. ದೇವಾಲಯ ಧ್ವಂಸಗೊಂಡ ಇಪ್ಪತ್ತು ವರ್ಷದೊಳಗೆ ಅದೇ ಸ್ಥಳದಲ್ಲಿ ಮರುನಿರ್ಮಾಣವಾಯಿತು.
ಕಾಶಿ ಜಗತ್ತಿನ ಮಹಾದ್ಭುತ ನಗರ. ಎಣಿಕೆಗೆ ಸಿಗದ ಪ್ರಾಚೀನತೆ ಇದರದು. ಆಧುನಿಕರು ಮೂರು ಸಾವಿರ ವರ್ಷದ ಲೆಕ್ಕ ಹಿಡಿದಿದ್ದಾರೆ; ಆದರೆ ಯುಗಾಂತರಗಳ ಲೆಕ್ಕ ಆ ಶಿವನೇ ಬಲ್ಲ. ವೇದೋಪನಿಷತ್ತುಗಳು, ವಿಷ್ಣು-ಶಿವ-ಸ್ಕಾಂದ-ಗರುಡ ಇತ್ಯಾದಿ ಪುರಾಣಗಳು, ರಾಮಾಯಣ-ಮಹಾಭಾರತಾದಿ ಇತಿಹಾಸಗಳು, ಚಾರಿತ್ರಿಕ ದಾಖಲೆಗಳಲ್ಲಿಯೂ ಉಲ್ಲೇಖಿತವಾದ ಪುರಾತನ ಪಟ್ಟಣವಿದು. ಇಹಪರಗಳನ್ನು ಒಂದರೊಳಗೊAದು ಬೆಸೆದ ಮಾಯೆಯ ಅರಿವನ್ನು ನೀಡುವ ಜ್ಞಾನಕ್ಷೇತ್ರ. ಯಾತ್ರಿಯೋರ್ವ ತನ್ನ ಒಳಹೊರಗಿನ ಅಂತರ ಕಳಚಿ ಜನ್ಮಮೃತ್ಯುಗಳ ಸಂಕೋಲೆ ಮುರಿದು ಸಮಯಾತೀತನಾಗಬಲ್ಲ ಮಹೋನ್ನತ ಯಾನದ ಪಯಣಿಗನೆಂದು ಅರಿತು ದಿಗ್ಮೂಢನಾಗುವ ಸ್ಥಳ.
ಕಾಶಿಯೆಂದರೆ ಬೆಳಕು. ಪವಿತ್ರ ಗಂಗೆಯು ಹರಿಯುವ ಕಾರಣದಿಂದ ಅಲ್ಲಿ ಆ ಬೆಳಕಿನ ನಗರ ನಿರ್ಮಾಣವಾಯಿತೋ, ಅಥವಾ ಆ ಮಹಾದೇವನು ನೆಲೆಸಿರುವುದರಿಂದ ಗಂಗೆ ಅಲ್ಲಿ ಹರಿದಳೋ – ಒಟ್ಟಿನಲ್ಲಿ ಶಿವ, ಗಂಗೆ, ಕಾಶಿ ಮೂರೂ ಸೇರಿ ಆಸ್ತಿಕನಿಗೆ ಮಹಾಸೆಳೆತ. ಜೀವನಕಾಲದಲ್ಲಿ ಒಮ್ಮೆಯಾದರೂ ಆ ದಿವ್ಯ ಪಟ್ಟಣದಲ್ಲಿ ಕಾಲಿರಿಸಬೇಕು, ಗಂಗೆಯಲ್ಲಿ ಮಿಂದೇಳಬೇಕು, ಜ್ಯೋತಿರ್ಲಿಂಗಸ್ವರೂಪಿ ಶಿವನನ್ನು ಸ್ಪರ್ಶಿಸಬೇಕು, ಆ ಮಹಾಕಾಲಭೈರವನಿಗೆ ಅಡ್ಡಬಿದ್ದು ಪಾಪಗಳನ್ನು ಪರಿಹರಿಸೆಂದು ಕೇಳಿಕೊಳ್ಳಬೇಕು. ಅದೆಷ್ಟೋ ಪ್ರಾಚೀನಕಾಲದಿಂದ ಋಷಿಮುನಿಗಳ ತಪದಿಂದ ಪವಿತ್ರವಾದ ಆ ಪುಣ್ಯ ತೀರ್ಥಕ್ಷೇತ್ರದಲ್ಲಿ ಕೆಲಕಾಲವಾದರೂ ನೆಲೆಸಿ ಪಾವನರಾಗಬೇಕು ಎಂಬುದು ಎಲ್ಲರ ಮಹದಾಸೆ.
ಶಿವನಗರಿ ಕಾಶಿ
ಕಾಶಿ ಶಿವನ ಸ್ವಂತ ನೆಲ. ಅದು ಅನಾದಿ-ಅನಂತ. ಇಡೀ ಭೂಮಂಡಲವೇ ಪ್ರಳಯದಲ್ಲಿ ಲಯವಾದರೂ ಕಾಶಿಯನ್ನು ಆ ಶಿವನು ತ್ರಿಶೂಲದಲ್ಲಿ ಹಿಡಿದು ಮೇಲೆತ್ತಿ ನಿಲ್ಲುತ್ತಾನೆ. ಪ್ರಳಯ ನಿಂತ ನಂತರ ಮತ್ತೊಮ್ಮೆ ಅದೇ ಪ್ರಾಚೀನ ಕಾಶಿ ಭೂಮಿಯ ಮೇಲೆ ಪ್ರತಿಷ್ಠಾಪಿಸಲ್ಪಡುತ್ತದೆ. ಹೀಗಾಗಿ ಕಾಶಿ ಯುಗಯುಗಗಳ ನೆನಪನ್ನು, ಪವಿತ್ರತೆಯನ್ನು, ಮಹಾಶಕ್ತಿಯ ಕಂಪನಗಳನ್ನು ತನ್ನೊಳಗೆ ಹಿಡಿದಿಟ್ಟುಕೊಂಡಿದೆ. ಹಾಗೆಯೇ ಪ್ರತಿ ಹಿಂದುವೂ ಕಾಶಿಯಿಂದ ಆಕರ್ಷಿಸಲ್ಪಟ್ಟಿದ್ದಾನೆ. ಭಾರತದ ಪ್ರತಿ ಊರಿಗೂ ಕಾಶಿಯ ನಂಟಿದೆ. ಅನೇಕ ದೇವಾಲಯಗಳಲ್ಲಿರುವ ಗುಪ್ತ ಸುರಂಗಮಾರ್ಗಗಳು ಕಾಶಿಯನ್ನು ತಲಪುತ್ತಿತ್ತು ಎಂಬುದನ್ನು ಆಯಾ ದೇವಾಲಯಗಳ ಐತಿಹ್ಯಗಳು ಹೇಳುತ್ತವೆ. ಕಾಶಿಗೆ ಹೋಗಿ ವಿಶ್ವನಾಥನ ದರ್ಶನ ಮಾಡಿದವರು ಪುಣ್ಯವಂತರು. ಯಾತ್ರೆ ಮುಗಿಸಿ ಅಲ್ಲಿಂದ ಸುರಕ್ಷಿತವಾಗಿ ಹಿಂತಿರುಗಿದವರು ಪೂಜ್ಯರು ಎಂದು ಪ್ರಯಾಣ ಸೌಕರ್ಯಗಳು ಕಡಮೆಯಿದ್ದ ಕಾಲದಲ್ಲಿ ಜನರು ಭಾವಿಸುತ್ತಿದ್ದರು. ದಕ್ಷಿಣದ ಅನೇಕ ಪ್ರಮುಖ ಶಿವ ದೇವಾಲಯಗಳು ‘ದಕ್ಷಿಣ ಕಾಶಿ’ ಎಂದು ಗುರುತಿಸಲ್ಪಟ್ಟರೆ, ಅಲ್ಲಿನ ಕಲ್ಯಾಣಿ ನದಿತಟಗಳು ಗಂಗೆಯ ಸ್ವರೂಪವೆಂದು ಹೇಳಲಾಗುತ್ತದೆ.
ಶಿವಪುರಾಣದ ಉಕ್ತಿಯಂತೆ ವಿಷ್ಣು-ಬ್ರಹ್ಮರಲ್ಲಿ ಉಂಟಾದ ತಾನು ಮೇಲೆಂಬ ಜಗಳವನ್ನು ಪರಿಹರಿಸಲು ತನ್ನ ಮೂಲವನ್ನು ಹುಡುಕುವಂತೆ ಸವಾಲು ಹಾಕಿ ಬೃಹತ್ ಬೆಳಕಿನ ಕಂಬವಾಗಿ ಶಿವ ಬೆಳೆದು ನಿಂತನಂತೆ. ಬ್ರಹ್ಮನು ಹಂಸವಾಗಿ ಮೇಲೆ ಹಾರಿದರೆ ವಿಷ್ಣು ವರಾಹವಾಗಿ ಕೆಳಗಿಳಿದ. ಆದರೆ ಈ ಬೃಹತ್ ಸ್ತಂಭದ ತುದಿ ತಲಪಲು ಇಬ್ಬರಿಗೂ ಸಾಧ್ಯವಿಲ್ಲದಂತಾಯಿತು. ಶಿವ ತೋರಿದ ಆ ಬೃಹತ್ ಬೆಳಕಿನ ಸ್ತಂಭವೇ ಭೂಮಿಯ ಮೇಲೆ ಪ್ರಕಟಗೊಂಡ ಆದಿ ಜ್ಯೋತಿರ್ಲಿಂಗವಾಗಿ ಕಾಶಿಯಲ್ಲಿದೆ.
ವಿಷ್ಣು ಪಂದ್ಯದಲ್ಲಿ ಸೋತುಹೋದೆ ಎಂದು ಒಪ್ಪಿ ನಿಂತರೆ, ಬ್ರಹ್ಮ ತಾನು ತುದಿ ಮುಟ್ಟಿದೆನೆಂದು ಸುಳ್ಳು ಹೇಳಿದನಂತೆ. ಕ್ರೋಧಗೊಂಡ ಶಿವ ಮಹಾಭೈರವನಾಗಿ ಪಂಚಮುಖಿಯಾಗಿದ್ದ ಬ್ರಹ್ಮನ ಶಿರವೊಂದನ್ನು ಕಿತ್ತೆಸೆದು ಚತುರ್ಮುಖನನ್ನಾಗಿಸಿದ. ಆದರೆ ಕತ್ತರಿಸಲ್ಪಟ್ಟ ಆ ರುಂಡ ಆ ಮಹಾದೇವನ ಹಸ್ತಬಿಟ್ಟು ಬೀಳಲೇ ಇಲ್ಲ, ಎಲ್ಲಿ ಸುತ್ತಿದರೂ, ಏನು ಮಾಡಿದರೂ ಶಿವನನ್ನು ಬಿಡದ ಆ ದೋಷ ಪರಿಹಾರಕ್ಕೆಂದು ಕಾಶಿಗೆ ಬರಬೇಕಾಯಿತು. ಆ ಶಿವನು ಬ್ರಹ್ಮನ ರುಂಡದಿಂದ, ಬ್ರಹ್ಮಹತ್ಯಾದೋಷದಿಂದ ಬಿಡುಗಡೆಗೊಂಡದ್ದು ತನ್ನದೇ ನೆಲ ಕಾಶಿಯಲ್ಲಿ.
ಅಮರ ಕಾಶಿ – ಪ್ರಾಚೀನ ಕಾಶಿ
ಕಾಲಚಕ್ರದ ಆಟದಲ್ಲಿ ಕಾಶಿ ಅದೆಷ್ಟು ಬಾರಿ ಪುನರ್ನಿರ್ಮಾಣವಾಗಿದೆಯೋ, ಅದೆಷ್ಟು ಬಾರಿ ಪುನಃ ಪ್ರತಿಷ್ಠಾಪನೆಗಳಾಗಿವೆಯೋ, ಅದೆಷ್ಟು ನರೇಶರನ್ನು, ಸಾಮ್ರಾಜ್ಯಾಧಿಪತಿಗಳನ್ನು ಅರಗಿಸಿಕೊಂಡಿದೆಯೋ ನಿಜಕ್ಕೂ ಬಲ್ಲವರಿಲ್ಲ. ಜಗತ್ತಿನ ಪ್ರಸಿದ್ಧ ಪುರಾತನ ನಗರಗಳೆನಿಸಲ್ಪಟ್ಟ ರೋಮ್, ಈಜಿಪ್ಟ್, ಗ್ರೀಸ್ನ ಅಥೆನ್ಸ್ಗಳು ಕಣ್ಬಿಡುವುದಕ್ಕೂ ಮೊದಲೇ ಕಾಶಿ ನಗರ ಜನರಿಂದ ತುಂಬಿ ತುಳುಕುತ್ತಿತ್ತು. ಇತ್ತೀಚೆಗೆ ಆಧುನಿಕ ಉಪಕರಣಗಳ ಸಹಾಯದಿಂದ ನಡೆದ ಉತ್ಖನನಗಳು ಸಹ ಈಗಿನ ಕಾಶಿಯ ಕೆಳಭಾಗದಲ್ಲಿ ಮರ್ನಾಲ್ಕು ಪದರಗಳಲ್ಲಿದ್ದ ಪಟ್ಟಣಗಳ ಅವಶೇಷಗಳನ್ನು ಪತ್ತೆಹಚ್ಚಿವೆ. ಒಂದೊಂದು ಬಾರಿ ನೈಸರ್ಗಿಕ ಕಾರಣಗಳಿಂದ ಭೂಪ್ರದೇಶಗಳು ಮುಚ್ಚಿಹೋಗುವುದಕ್ಕೂ ಸಾವಿರಾರು ವರ್ಷಗಳು ಸಂದುಹೋಗಬೇಕು. ಅಂದಮೇಲೆ ಕಾಶಿಯ ಪುರಾತನತೆ ಎಷ್ಟಿರಬೇಕು?
ಭಾರತದ ಪ್ರಾಚೀನ ನಗರಗಳಲ್ಲಿಯೂ ಅತಿ ಪ್ರಾಚೀನ ಈ ಕಾಶಿ. ಇತಿಹಾಸಪ್ರಸಿದ್ಧ ನಾಲಂದಾದAತಹ ಬೃಹತ್ ವಿಶ್ವವಿದ್ಯಾಲಯಗಳು ಸಹ ಸಣ್ಣದೆನಿಸುವಷ್ಟು ಮಹಾನ್ ವಿದ್ಯಾಕೇಂದ್ರವಾಗಿದ್ದದ್ದು ಕಾಶಿ. ಜ್ಞಾನಪಿಪಾಸುಗಳನ್ನು, ಪಂಡಿತೋತ್ತಮರನ್ನು, ರಾಜಮಹಾರಾಜರುಗಳನ್ನು, ವ್ಯಾಪಾರೋದ್ಯಮಿಗಳನ್ನು, ಪಾಮರರನ್ನೂ ಸೂಜಿಗಲ್ಲಿನಂತೆ ಸೆಳೆಯುತ್ತಿದ್ದ, ಸೆಳೆಯುತ್ತಿರುವ ಚುಂಬಕ ನಗರ. ಜನರನ್ನು ಬಿಡಿ, ದೇವಾನುದೇವತೆಗಳನ್ನೇ ತನ್ನ ಆಕರ್ಷಣೆಯ ಸೂಜಿಗಲ್ಲಿನಿಂದ ಸೆಳೆದು ಬಂಧಿಸಿಟ್ಟಿರುವುದು ಕಾಶಿ. ಅದರ ಸಂಪತ್ತು ಅನಾದಿಕಾಲದಿಂದ ಅಗಣಿತ. ತಾನು ವಿಶ್ವಾಮಿತ್ರನಿಗೆ ಕೊಡಬೇಕಿದ್ದ ಅಪಾರ ಪ್ರಮಾಣದ ಹೊನ್ನನ್ನು ಹೊಂದಿಸಲು ಹರಿಶ್ಚಂದ್ರ ಅಡಿಯಿಟ್ಟದ್ದು ಕಾಶಿಗೆ.
ಕಾಶಿಯ ಸಾರನಾಥದಲ್ಲಿ ಬುದ್ಧನ ಮೊದಲ ಬೋಧನೆ ಆದದ್ದು. ಬುದ್ಧನ ಜಾತಕಕಥೆಗಳಲ್ಲಿ ಕಾಶಿಯ ಉಲ್ಲೇಖ ಬಹಳಷ್ಟು ಬಾರಿ ಕಾಣಿಸಿಕೊಂಡಿದೆ. ಹಲವಾರು ಜೈನಮುನಿಗಳ ಸಾಧನಾ ಕ್ಷೇತ್ರವೂ ಕಾಶಿ. ಜೈನಮಂದಿರಗಳೂ ಇಲ್ಲಿವೆ. ಜೈನ್ ಘಾಟ್ ಎಂದೇ ಕರೆಯಲ್ಪಡುವ ಸ್ನಾನಘಟ್ಟವೂ ಇಲ್ಲಿದೆ. ಆದಿಶಂಕರಾಚಾರ್ಯರಂತಹ ಅನೇಕಾನೇಕ ತಪೋಮಹಿಮರು ದರ್ಶಿಸಿದ, ಧ್ಯಾನಿಸಿದ ಕ್ಷೇತ್ರ ಕಾಶಿ ನಗರ.
ದೇವಾನುದೇವತೆಗಳ ಬಿಡದ ಕಾಶಿಯ ಮೋಹ
ಆ ಕೈಲಾಸದಂತೆ ಕಾಶಿಯೂ ಶಿವನ ಆವಾಸಸ್ಥಾನ. ಬ್ರಹ್ಮನೊಂದಿಗೆ ಒಪ್ಪಂದ ಮಾಡಿಕೊಂಡು ಇಲ್ಲಿನ ಸಾಮ್ರಾಜ್ಯವನ್ನು ಆಳುವುದಕ್ಕಾಗಿ ನೇಮಕಗೊಂಡ ದಿವೋದಾಸನೆಂಬ ರಾಜ. ದೇವಾನುದೇವತೆಗಳು ಕಾಶಿಯಲ್ಲಿದ್ದಲ್ಲಿ ಆಡಳಿತ ಕಷ್ಟವೆಂದು ಅವರೆಲ್ಲ ಅಲ್ಲಿಂದ ಬೇರೆ ಸ್ಥಳಗಳಿಗೆ ಹೊರಡಬೇಕೆಂದು ಪೂರ್ವಷರತ್ತನ್ನಿಟ್ಟಿದ್ದ. ಅದರಂತೆ ಕಾಶಿಯನ್ನು ತ್ಯಜಿಸಿದ ಶಿವ ನೀರಿನಿಂದ ಹೊರಬಂದ ಮೀನಿನಂತಾದ. ಹೇಗಾದರೂ ಮಾಡಿ ಆ ರಾಜನನ್ನು ಪದಚ್ಯುತಗೊಳಿಸಿದರೆ ಮಾತ್ರ ತಾನು ಪುನಃ ಕಾಶಿಪುರ ಪ್ರವೇಶಿಸಲು ಸಾಧ್ಯ ಎಂದು ಯೋಚಿಸಿ, ಅದನ್ನು ಕಾರ್ಯಗತಗೊಳಿಸಲು ಅರವತ್ನಾಲ್ಕು ಯೋಗಿನಿಯರನ್ನು, ಆದಿತ್ಯರನ್ನು, ತನ್ನ ಗಣದ ಅಧಿಪತಿಗಳನ್ನು ಒಬ್ಬೊಬ್ಬರನ್ನಾಗಿ ಕಾಶಿಗೆ ಕಳುಹಿಸಿದ. ಆದರೆ ಕಾಶಿಗೆ ಮನಸೋತ ಅವರಾರೂ ಮತ್ತೆ ಹಿಂತಿರುಗಲೇ ಇಲ್ಲ. ಅಲ್ಲಿಯೇ ನೆಲೆಸಿಬಿಟ್ಟರು. ಕಡೆಗೆ ಗಣಪತಿ ಉಪಾಯ ಮಾಡಿ ಜ್ಯೌತಿಷಿಯಂತೆ ನಟಿಸಿ ಆ ರಾಜನ ಮನವೊಲಿಸಿ ಮೋಕ್ಷಕ್ಕಾಗಿ ಎಲ್ಲವನ್ನೂ ಬಿಡುವಂತೆ ತಿಳಿಸಿ ಶಿವ ಮತ್ತೊಮ್ಮೆ ಕಾಶಿಗೆ ಬರಲು ನೆರವಾದನೆಂಬ ಕಥೆ ಪ್ರಚಲಿತವಿದೆ.
ಶಿವಾಲಯಗಳ ಮಹಾಕೇಂದ್ರ ಕಾಶಿ
ಇಲ್ಲಿ ಬ್ರಹ್ಮ, ವಿಷ್ಣು, ದೇವಿ, ಇಂದ್ರ, ನವಗ್ರಹಗಳು, ದೇವ-ಕಿನ್ನರ-ಯಕ್ಷ-ರಾಕ್ಷಸರಿಂದ ಹಿಡಿದು ನೂರಾರು ಮಹರ್ಷಿಗಳು ಸ್ಥಾಪಿಸಿದ, ಪೂಜಿಸಿದ ಶಿವಲಿಂಗಗಳಿವೆ. ಅವೆಲ್ಲಕ್ಕೂ ಮಂದಿರಗಳಿವೆ, ವಿಶಿಷ್ಟ ಪೂಜಾ ಕೈಂಕರ್ಯಗಳಿವೆ. ಸ್ವಯಂ ಕಾಲಭೈರವನೇ ಇಲ್ಲಿನ ಕ್ಷೇತ್ರ ರಕ್ಷಕ. ಇವನ ಸನ್ನಿಧಾನದಲ್ಲಿ ಕಾಣುವುದಂತೂ ಭಕ್ತಿಯ ಪರಾಕಾಷ್ಠೆ. ನವಗ್ರಹಗಳ ಪ್ರಭಾವವನ್ನು ಮಾತ್ರವಲ್ಲ ಯಮರಾಜನನ್ನೂ ನಿರ್ಬಂಧಿಸಿ ಜನರ ಪಾಪಗಳನ್ನು ಶೂನ್ಯಮಾಡುವ ಅಧಿಕಾರ ಇವನದೇ.
ಹೆಜ್ಜೆಗೊಂದರಂತೆ ದೇವಾಲಯಗಳು, ಋಷಿಮುನಿಗಳಿಂದ ಸ್ಥಾಪಿಸಲ್ಪಟ್ಟ ಮಂದಿರಗಳು ಮತ್ತು ವಿಭಿನ್ನ ಕಾಲಘಟ್ಟಗಳಲ್ಲಿ ತಮ್ಮ ಕಾಶಿಯಾತ್ರೆಯ ಸಂದರ್ಭದಲ್ಲಿ ನೆನಪಿಗಾಗಿ ರಾಜಮಹಾರಾಜರುಗಳು ನಿರ್ಮಿಸಿದ ಅಥವಾ ದುರಸ್ತಿಗೊಳಿಸಿದ ದೇವಾಲಯಗಳು. ಸಾಧುಸಂತರ ಅನೇಕಾನೇಕ ಅಖಾಡಾಗಳು, ಮಹಂತರ ಪೀಠಗಳು, ವಿವಿಧ ಮತಪಂಥಗಳ ಆಚಾರ್ಯರುಗಳು ನೆಲೆನಿಂತು ನಡೆಸಿದ ಯಜ್ಞಯಾಗ ಕ್ಷೇತ್ರಗಳು, ಋಷಿ ಆಶ್ರಮಗಳು, ಹೀಗೆ ಅಗಣಿತ ಸ್ಮೃತಿಗಳನ್ನು ಹೊತ್ತು ಕಾಶಿಯು ಕಂಗೊಳಿಸುತ್ತಿದೆ. ಪರಕೀಯ ದಾಳಿಗೊಳಪಟ್ಟು ನೆಲಸಮಗೊಂಡರೂ ಹಿಂದೂಗಳ ಅಂತಃಶಕ್ತಿಯ ಸಂಕೇತವಾಗಿ ಪುನರ್ನಿರ್ಮಾಣಗೊಂಡು ಮತ್ತೆ ಮತ್ತೆ ತಲೆಯೆತ್ತಿ ನಿಲ್ಲುತ್ತಿದ್ದ ಕಾಶಿಯು ಈಗಲೂ ಮೂರುಸಾವಿರ ಮಂದಿರಗಳ ನೆಲೆಯಾಗಿದೆಯೆಂದರೆ ಇನ್ನು ಸನಾತನವೇ ಉಚ್ಛ್ರಾಯ ಸ್ಥಿತಿಯಲ್ಲಿದ್ದಾಗ ಇನ್ನೆಷ್ಟು ಗುಡಿಗೋಪುರಗಳ ನೆಲೆಯಾಗಿದ್ದಿರಬಹುದು?
ಕಾಶಿ – ಶಾಶ್ವತ ಶ್ರದ್ಧಾಕೇಂದ್ರ
ಕಾಶಿ ಪೀಳಿಗೆಯಿಂದ ಪೀಳಿಗೆಗೆ ಅನಂತಕಾಲದಿಂದ ಶ್ರದ್ಧೆಯನ್ನೂ ಆಚರಣೆಗಳನ್ನೂ ದಾಟಿಸಿಕೊಂಡು ಬಂದ ಅಪೂರ್ವ ಸ್ಥಳ. ಸಾಕ್ಷಾತ್ ಶಿವನೇ ಸಪ್ತರ್ಷಿಗಳಿಗೆ ತಿಳಿಸಿದ ಪೂಜಾವಿಧಾನ ಇಂದಿಗೂ ಕಾಶಿಯಲ್ಲಿ ಅನುಸರಿಸಲ್ಪಡುತ್ತಿದೆ. ಭಕ್ತಾದಿಗಳು ಸ್ವತಃ ಜ್ಯೋತಿರ್ಲಿಂಗಕ್ಕೆ ಜಲಾಭಿಷೇಕ ಮಾಡುವ, ಸ್ಪರ್ಶಿಸುವ ಅವಕಾಶವೂ ಇದೆ. ಗಂಗಾ ಆರತಿಯೂ ಅನಾದಿಕಾಲದಿಂದ ಅನೂಚಾನವಾಗಿ ನಡೆದು ಬಂದ ಪದ್ಧತಿ. ಪ್ರತಿನಿತ್ಯವೂ ಸೂರ್ಯಾಸ್ತದ ನಂತರ ನಡೆಯುವ ಈ ಪೂಜೆ ದೈವಿಕ ವಾತಾವರಣದಲ್ಲಿರುವಂತೆ ಮಾಡುತ್ತದೆ. ಪಂಚಭೂತಗಳೆಡೆಗಿನ ನಮ್ಮ ಆರಾಧನಾಭಾವಕ್ಕೆ ಇದು ಸಾಕ್ಷಿಯಾಗಿದೆ.
ಪಂಚಕ್ರೋಸಿ ಪರಿಕ್ರಮವೂ ಪುರಾಣ ಉಲ್ಲೇಖಿತ ಸಾಧುಸಂತರ ಕಾಲದಿಂದ ಈಗಲೂ ಅದೇ ಪ್ರಾಚೀನ ಮಾರ್ಗದಲ್ಲಿಯೇ ನಡೆಯುತ್ತದೆ. ಪ್ರತಿವರ್ಷ ಸಾವಿರಾರು ಭಕ್ತರು ಆ ಹಾದಿಯಲ್ಲಿ ಕ್ರಮಿಸಿ ವಿಶ್ವನಾಥನಿಗೆ ಬೃಹತ್ ಪ್ರದಕ್ಷಿಣೆಯನ್ನು ಹಾಕುತ್ತಾರೆ. ದಾರಿಯುದ್ದಕ್ಕೂ ಇರುವ ೧೦೮ ಶಿವ ದೇವಾಲಯಗಳ ದರ್ಶನ, ಪೂಜೆಗಳನ್ನು ಕೈಗೊಳ್ಳುತ್ತಾರೆ. ಈ ಯಾತ್ರಿಕರು ರಾತ್ರಿ ತಂಗುವ ಧರ್ಮಛತ್ರಗಳು ಶತಮಾನಗಳಿಂದ ಇರುವಂತಹವುಗಳು. ಬಾಬಾ ವಿಶ್ವನಾಥನ ಜಯಕಾರ, ಮಂತ್ರಘೋಷ, ದೇವಾಲಯಗಳ ಘಂಟಾನಾದ ಬಾಹ್ಯ ಜಗತ್ತಿನ ಪರಿವೆಯನ್ನೇ ಇಲ್ಲವಾಗಿಸುತ್ತದೆ.
ಗಂಗೆಯ ಪವಿತ್ರ ಸ್ನಾನಘಟ್ಟಗಳು
ಗಂಗೆಯ ಎರಡು ಧಾರೆಗಳಾದ ವರುಣ ಮತ್ತು ಅಸ್ಸಿಗಳ ನಡುವೆ ಇರುವುದರಿಂದ ವಾರಣಾಸಿಯಾಗಿಯೂ, ಬನಾರಸ್ ಆಗಿಯೂ ಕರೆಸಿಕೊಳ್ಳುವ ಕಾಶಿಯಲ್ಲಿ ಗಂಗೆಯಂಚಿನ ತುಂಬಾ ಸ್ನಾನಘಟ್ಟಗಳ ಸಾಲು. ಹೀಗೆ ಇರುವುದು ೮೪ಕ್ಕೂ ಹೆಚ್ಚು ಸ್ನಾನಘಟ್ಟಗಳು. ಪ್ರವಾಹಕಾಲದಲ್ಲಿ ಉಕ್ಕಿ ಭೋರ್ಗರೆಯುವ, ಇನ್ನಿತರ ಸಮಯದಲ್ಲಿ ಶಾಂತವಾಗಿ ವಿಶಾಲವಾಗಿ ಹರಿಯುವ ಗಂಗೆಯ ತಟದ ಈ ಘಾಟ್ ಅಥವಾ ಸ್ನಾನಘಟ್ಟಗಳದ್ದೇ ಮತ್ತೊಂದು ಮಹಿಮಾನ್ವಿತ ಹಿನ್ನೆಲೆ. ಈ ಸ್ನಾನಘಟ್ಟಗಳ ಸೋಪಾನಗಳ ಮೇಲೆ ಕುಳಿತು ಅಥವಾ ಮಂದಗಮನ ದೋಣಿಯಲ್ಲಿ ಸಾಗುತ್ತ, ಗಂಗೆಯ ಅದ್ಭುತ ಪ್ರಾಕೃತಿಕ ಸೌಂದರ್ಯ ಮತ್ತು ಆಕೆಯ ಒಡಲಿನಲ್ಲಿ ಬಚ್ಚಿಟ್ಟುಕೊಂಡಿರುವ ಅಲೌಕಿಕ ಆಧ್ಯಾತ್ಮಿಕ ಸತ್ಯಗಳ ನಿಗೂಢತೆಯನ್ನು ಅಲ್ಲಿಯೇ ಇದ್ದು ಅನುಭವಿಸಬೇಕು.
ಇಲ್ಲಿನ ಸ್ನಾನಘಟ್ಟಗಳ ನಿರ್ಮಿತಿಗೆ ಮಹಾರಾಜರುಗಳ ಕೊಡುಗೆಯೂ ಸಾಕಷ್ಟು. ವಿಜಯನಗರದ ದೊರೆಗಳು ಕೇದಾರಘಾಟ್ ಅನ್ನು ನಿರ್ಮಿಸಿದರೆ, ಮಹಾರಾಜ ಚೇತ್ಸಿಂಗ್ ನಿರ್ಮಿಸಿದ್ದು ಚೇತ್ಸಿಂಗ್ಘಾಟ್. ನಾಗಪುರದ ಮರಾಠ ಬೋಂಸ್ಲೆ ಮಹಾರಾಜರದು ಬೋಂಸ್ಲೆ ಘಾಟ್, ಜೊತೆಗೆ ಯಮನಿಗೆಂದು ಯಮುನೇಶ್ವರ ದೇವಸ್ಥಾನ. ಹಿಂದಿನ ಕೇವಲಗಿರಿಘಾಟ್ ರಾಣಿ ಅಹಲ್ಯಾಬಾಯಿಯ ಗೌರವಾರ್ಥ ಅಹಲ್ಯಾಘಾಟ್ ಆಗಿದೆ. ದೇಶದ ಪ್ರತಿ ರಾಜಮಹಾರಾಜರೂ ತನ್ನ ಭೇಟಿಯ ನೆನಪಿಗಾಗಿ ಸ್ನಾನಘಟ್ಟಗಳ ನಿರ್ಮಾಣವೋ, ದುರಸ್ತಿಯನ್ನೋ ಮಾಡಿಸಿದ್ದು, ಪ್ರತಿ ಸ್ನಾನಘಟ್ಟಕ್ಕೂ ಮಹತ್ತರ ಹಿನ್ನೆಲೆಗಳಿವೆ.
ಬ್ರಹ್ಮದೇವನು ರಾಜ ದಿವೋದಾಸನಿಂದ ಹತ್ತು ಅಶ್ವಮೇಧಯಾಗಗಳನ್ನು ಮಾಡಿಸಿದ ಸ್ಥಳಕ್ಕೆ ದಶಾಶ್ವಮೇಧಘಾಟ್ ಎಂಬ ಹೆಸರು. ವಿಶ್ವನಾಥ ದೇವಳಕ್ಕೆ ಅತಿ ಸಮೀಪದಲ್ಲಿರುವ ಇದರ ಮೆಟ್ಟಿಲುಗಳ ಮೇಲೆ ನಡೆಯುವ ಗಂಗಾ ಆರತಿ ವಿಶ್ವ ಪ್ರಸಿದ್ಧ.
ರಾಮಾಯಣವನ್ನು ಉತ್ತರಭಾರತದಲ್ಲಿ ಮನೆಮನೆಗೆ ತಲಪಿಸಿದ ರಾಮಚರಿತ ಮಾನಸವನ್ನು ಅವಧಿ ಭಾಷೆಯಲ್ಲಿ ತುಳಸಿದಾಸರು ರಚಿಸಿದ್ದು ಇದೇ ಗಂಗಾತಟದಲ್ಲಿಯೇ. ಅಷ್ಟೇಕೆ, ಹನುಮಾನ ಚಾಲೀಸಾ ಬರೆದದ್ದೂ ಸಹ ಇಲ್ಲಿಯೇ. ಅದಕ್ಕೆ ತುಳಸಿಘಾಟ್ ಎಂದೇ ಹೆಸರಾಗಿದೆ. ಮಾತೆ ಗಂಗೆ ತನ್ನೊಡಲಿಗೆ ಆಕಸ್ಮಿಕವಾಗಿ ಬಿದ್ದ ರಾಮಚರಿತ ಮಾನಸದ ಹಸ್ತಪ್ರತಿಯನ್ನು ಮುಳುಗಿಸದೆ, ಚೆಲ್ಲಾಪಿಲ್ಲಿಯಾಗಿಸದೆ ಸುರಕ್ಷಿತವಾಗಿ ದಡಕ್ಕೆ ತಲಪಿಸಿದಳೆಂಬ ಘಟನೆ ಇಲ್ಲಿ ಕೇಳಿಬರುತ್ತದೆ.
ಶುಂಭನಿಶುಂಭರನ್ನು ಸಂಹರಿಸಿದ ದುರ್ಗಾಮಾತೆಯ ಖಡ್ಗ ಬಿದ್ದ ಜಾಗ ಅಸ್ಸಿಘಾಟ್. ಇನ್ನು ಪ್ರಸಿದ್ಧ ಹರಿಶ್ಚಂದ್ರಘಾಟ್ನ ಬಗ್ಗೆ ಯಾರಿಗೆ ಗೊತ್ತಿಲ್ಲ! ಹೀಗೆ ಪ್ರತಿ ಸ್ನಾನಘಟ್ಟಕ್ಕೂ, ಪ್ರತಿ ಸೋಪಾನಕ್ಕೂ ಇತಿಹಾಸವಿರುವ, ಪೌರಾಣಿಕತೆ ಇರುವ ನಗರ ಕಾಶಿ.
ಪ್ರತಿ ಮನುಷ್ಯನೂ ಜೀವಿತಕಾಲದಲ್ಲಿ ಒಮ್ಮೆ ಭೇಟಿ ನೀಡಲೇಬೇಕಾದ ಸ್ಥಳ ಮಣಿಕರ್ಣಿಕಾಘಾಟ್. ಸ್ವಯಂ ವಿಷ್ಣುವಿನ ಚಕ್ರದಿಂದ ನಿರ್ಮಿತವಾದ ತೀರ್ಥವಿದು. ಇಲ್ಲಿ ಒಂದಲ್ಲ ಒಂದು ಚಿತೆಯಲ್ಲಿ ಸದಾ ಅಗ್ನಿ ಉರಿಯುತ್ತಲೇ ಇರುತ್ತದೆ. ಯಾತ್ರಿಕರು ಕೆಲದಿನಗಳು ಅಥವಾ ಕೆಲ ಗಂಟೆಗಳು ಇಲ್ಲಿ ಕಳೆದರೆ ಸ್ಮಶಾನವಾಸಿ ರುದ್ರನ ಲೀಲೆ ತುಸುವಾದರೂ ಅರಿವಾದೀತು. ಕಣ್ಣ ಮುಂದೆ ಉರಿಯುತ್ತಿರುವ ಹಲವಾರು ಚಿತೆಗಳಲ್ಲಿ ದಿಗ್ಗನೇ ನಮ್ಮ ಪಾರ್ಥಿವವೇ ಕಂಡು ಮನಸು ದಿಙ್ಮೂಢತೆಗೆ ದೂಡಲ್ಪಟ್ಟೀತು. ಮಣಿಕರ್ಣಿಕಾಘಾಟ್ನಲ್ಲಿ ಶವ ದಹನಗೊಂಡರೆ ಜನ್ಮ-ಮೃತ್ಯು ಚಕ್ರದಿಂದ ಮನುಷ್ಯನಿಗೆ ಬಿಡುಗಡೆ, ಮೋಕ್ಷಪ್ರಾಪ್ತಿ ಎಂಬ ನಂಬಿಕೆಯಿಂದ ಇಲ್ಲಿ ಅಗ್ನಿದೇವನಿಗೆ ಬಿಡುವೇ ಇಲ್ಲ. ಮಣಿಕರ್ಣಿಕಾಘಾಟ್ ಮತ್ತು ಹರಿಶ್ಚಂದ್ರಘಾಟ್ಗಳಲ್ಲಿ ವಿಭಿನ್ನ ಸಾಧನಾ ಪಥದಲ್ಲಿರುವ ಅಘೋರಿಗಳನ್ನೂ ಕಾಣಬಹುದು.
ಅವಿನಾಶಿ ಕಾಶಿ
ಈ ಪುರಾತನ ಕ್ಷೇತ್ರಕ್ಕೆ ನಿರಂತರವಾಗಿ ಹೇಗೆ ಹಿಂದು ಶ್ರದ್ಧಾಳುಗಳು ಹರಿದುಬರುತ್ತಿದ್ದರೋ, ಅದೇ ರೀತಿ ಇದರ ರಕ್ಷಣೆಗಾಗಿ ತಮ್ಮ ರಕ್ತವನ್ನು ಗಂಗಾನದಿಯಂತೆಯೇ ಹರಿಸಬೇಕಾದಂತೆ ಆದದ್ದು ಭಾರತದ ಇತಿಹಾಸದ ದುರಂತ ಅಧ್ಯಾಯಗಳಲ್ಲೊಂದು. ಮತಾಂಧ ಮುಸ್ಲಿಂ ದಾಳಿಕೋರರು ತಮ್ಮ ಚಾಳಿಯಂತೆ ಹನ್ನೆರಡನೆ ಮತ್ತು ಹದಿನೈದನೆ ಶತಮಾನದಲ್ಲಿ ಈ ಪ್ರಾಚೀನ ಶಿವಮಂದಿರವನ್ನು ನಾಶಗೊಳಿಸಿದರು. ಆದರೆ ಹಿಂದೂಗಳ ಸ್ವಾಭಿಮಾನದಿಂದ ಕೆಲವರ್ಷಗಳಲ್ಲೇ ಕಾಶಿ ಮತ್ತೆ ತಲೆಯೆತ್ತಿ ನಿಂತಿತು. ೧೧೯೪-ಮಹಮ್ಮದ್ ಘೋರಿಯ ಸೇನಾಧಿಪತಿ ಕುತ್ಬುದ್ದೀನ್ ಐಬಕ್ ಇದನ್ನು ನಾಶಗೊಳಿಸಿದ. ಸಾವಿರ ಮಂದಿರಗಳು ಆಗ ಧ್ವಂಸಗೊಂಡವೆಂದು ಹೇಳಲಾಗುತ್ತದೆ. ಈ ಸುದ್ದಿ ತಿಳಿದ ಹಿಂದುಗಳು ಹಳ್ಳಿಹಳ್ಳಿಗಳಿಂದ ಕಾಶಿಗೆ ಧಾವಿಸಿದರು. ಕಾಶಿಯಲ್ಲಿ ಮುಂದಿನ ದಿನಗಳು ನಿತ್ಯಸಂಘರ್ಷ. ಸಾಧುಗಳು, ಮಹಂತರು, ಸ್ಥಳೀಯ ನಾಯಕರುಗಳ ನೇತೃತ್ವದಲ್ಲಿ ಗುಂಪುಗೂಡುವುದು, ಮುಸಲ್ಮಾನ ಸಿಪಾಯಿ ತುಕಡಿಗಳೊಂದಿಗೆ ಕಾದಾಟ. ಕಡೆಗೂ ಹಿಂದೂ ಶಕ್ತಿ ಗೆದ್ದಿತು. ದೇವಾಲಯ ಧ್ವಂಸಗೊಂಡ ಇಪ್ಪತ್ತು ವರ್ಷದೊಳಗೆ ಅದೇ ಸ್ಥಳದಲ್ಲಿ ಮರುನಿರ್ಮಾಣವಾಯಿತು. ಇದನ್ನು ಕಾರ್ಯಗತಗೊಳಿಸಿದ್ದು ಶ್ರೀಮಂತ ಗುಜರಾತಿ ವ್ಯಾಪಾರಿ ಸಮೂಹ ೧೨೧೧ರಲ್ಲಿ.
ಕನ್ನಡ ದೊರೆಯ ಕೊಡುಗೆ
ಸಿಕಂದರ್ ಲೋಧಿಯ ಆಕ್ರಮಣದಿಂದ ದೇವಾಲಯ ನೆಲಕಚ್ಚಿ ೧೪೪೮ರಿಂದಲೇ ನಿಂತುಹೋಗಿದ್ದ ಪೂಜಾಕಾರ್ಯಗಳನ್ನು ಮರುಸ್ಥಾಪಿಸಲು ಕೆಳದಿಯ ದೊರೆ ದೊಡ್ಡ ಸಂಕಣ್ಣನಾಯಕ ಸಹ ಪ್ರಯತ್ನಿಸಿದ್ದು ದಾಖಲಾಗಿದೆ. ಅಕ್ಬರನ ಆಸ್ಥಾನ ತಲಪಿದ ನಾಯಕ, ಅವನ ಮನವೊಲಿಸಿ ವಿಶ್ವನಾಥನಿಗೆ ಪೂಜೆ ಆರಂಭಿಸಿದ್ದರ ಜೊತೆಗೆ ಮುಸಲ್ಮಾನರ ವಶದಲ್ಲಿದ್ದ ಮಠವನ್ನು ಬಿಡಿಸಿಕೊಂಡು ಜೀರ್ಣೋದ್ಧಾರ ಮಾಡಿ ಜಂಗಮವಾಟಿ ಎಂದು ಹೆಸರಿಸಿದ. ಕಾಶಿಯ ವೃಷಭಧ್ವಜೇಶ್ವರ ಸೇರಿದಂತೆ ಕೆಲ ದೇವಸ್ಥಾನಗಳನ್ನು ಜೀರ್ಣೋದ್ಧಾರ ಮಾಡಿದ. ಅನೇಕ ಸ್ನಾನಘಟ್ಟಗಳಿಗೆ ಸೋಪಾನಗಳನ್ನು ನಿರ್ಮಿಸಿದ. ಇಂದಿಗೂ ಕಾಶಿಯ ಕಪಿಲಧಾರಾ ತೀರ್ಥದ ಮೆಟ್ಟಿಲುಗಳ ಮೇಲಿನ ಪರ್ಷಿಯನ್ ಶಾಸನಗಳಲ್ಲಿ ಈ ವಿವರಗಳು ದಾಖಲಾಗಿವೆ.
ಪುನರ್ನಿರ್ಮಾಣದ ಪ್ರಯತ್ನಗಳು
ವಿಶ್ವನಾಥನ ದೇವಾಲಯವನ್ನು ರಾಜಾ ತೋಡರಮಲ್ಲನ ಸಹಾಯದೊಂದಿಗೆ ಮರಾಠ ಪಂಡಿತರಾದ ನಾರಾಯಣಭಟ್ಟರ ನೇತೃತ್ವದಲ್ಲಿ ೧೫೯೫ರಲ್ಲಿ ಪುನರ್ನಿರ್ಮಿಸಲಾಯಿತು. ಇದಕ್ಕೂ ಮೊದಲು ರಾಜಾ ಮಾನ್ಸಿಂಗನು ದೇವಾಲಯ ನಿರ್ಮಿಸಿದನೆಂದು ಹೇಳಲಾಗುತ್ತಿದ್ದರೂ, ಆತ ತನ್ನ ಮನೆಯ ಹೆಣ್ಣುಮಕ್ಕಳನ್ನು ಅಕ್ಬರನ ಅಂತಃಪುರಕ್ಕೆ ಕಳಿಸಿದ್ದ ಎಂಬ ಹಿನ್ನೆಲೆಯಲ್ಲಿ ಹಿಂದುಗಳು ಅದನ್ನು ಬಹಿಷ್ಕರಿಸಿದ್ದರು. ತೀರ್ಥಯಾತ್ರಿಗಳ ನಿರಂತರ ಪ್ರವಾಹವನ್ನು ತಡೆಯುವುದಕ್ಕಾಗಿ, ಕಾಶಿಯ ಮಹಿಮೆಯನ್ನು ಕುಗ್ಗಿಸುವುದಕ್ಕಾಗಿ ಮೊಘಲ್ ದೊರೆಗಳು ಪ್ರಯತ್ನಿಸುತ್ತಲೇ ಇದ್ದರು. ಹಿಂದೂ ಯಾತ್ರಿಕರಿಗೆ ಕಾಶಿ ಪ್ರವೇಶಿಸಲು ದುಬಾರಿ ಸುಂಕವನ್ನು ವಿಧಿಸಿದರು. ಅಕ್ಬರ್, ಷಜಹಾನರೂ ಇದಕ್ಕೆ ಹೊರತಲ್ಲ. ಆದರೂ ಯಾತ್ರಿಕರ ಭೇಟಿ ನಿಲ್ಲಲೇ ಇಲ್ಲ. ಕರ್ನಾಟಕದ ಹೊಯ್ಸಳ ದೊರೆಗಳು ಅನೇಕ ಪ್ರದೇಶಗಳ ಉತ್ಪತ್ತಿಯನ್ನು ಹೀಗೆ ಕಾಶಿಗೆ ಹೋಗುವ ತೀರ್ಥಯಾತ್ರಿಕರ ಪರವಾಗಿ ತೆರಿಗೆ ಕಟ್ಟಲೆಂದೇ ನಿಗದಿ ಮಾಡಿದ್ದರು.
‘ಅಮರಪ್ರೇಮಿ’ ಷಹಜಹಾನ್ ೧೬೩೨ರಲ್ಲಿ ತನ್ನ ಸಂಬಂಧಿ ಬೈಜಾದ್ ಎನ್ನುವವನನ್ನು ಕಾಶಿಯ ನಾಶಕ್ಕೆ ದೊಡ್ಡ ಸೈನ್ಯದೊಂದಿಗೆ ಕಳುಹಿಸಿದ. ಆತ ಕಾಶಿಯಲ್ಲಿ ೭೬ ಮಂದಿರಗಳನ್ನು ಧ್ವಂಸಗೊಳಿಸಿದನಾದರೂ, ಜನಸಾಮಾನ್ಯ ಹಿಂದುಗಳ ಭಾರಿ ಪ್ರತಿರೋಧ ಮತ್ತು ಪ್ರಾಣಾರ್ಪಣೆಯಿಂದ ವಿಶ್ವನಾಥಮಂದಿರವನ್ನು ಧ್ವಂಸಗೊಳಿಸದೆ ಹಿಮ್ಮೆಟ್ಟಬೇಕಾಯಿತು.
ಔರಂಗಜೇಬನಿಂದ ಕುಠಾರಾಘಾತ
ಮೊಘಲರ ಅತಿ ಮತಾಂಧ ಸುಲ್ತಾನ ಔರಂಗಜೇಬ ೧೬೬೯ರಲ್ಲಿ ಮತ್ತೆಂದೂ ದೇವಾಲಯ ತಲೆಯೆತ್ತಬಾರದೆಂಬ ದುಷ್ಟತನದಿಂದ ಕಾಶಿಯ ವಿಶ್ವನಾಥನ ದೇವಸ್ಥಾನವನ್ನು ಧ್ವಂಸಗೊಳಿಸಿ ಅದರ ಅವಶೇಷಗಳ ಮೇಲೆಯೇ ಮಸೀದಿಯನ್ನು ನಿರ್ಮಿಸಿದ. ಪ್ರಬಲನಾಗಿದ್ದ ಮಿರ್ಜಾ ರಾಜಾ ಜೈಸಿಂಗ್ ವಿಧಿವಶನಾದದ್ದು ಔರಂಗಜೇಬನ ನಿರ್ಧಾರಗಳಿಗೆ ತಡೆಯಿಲ್ಲದಂತಾಯಿತು. ಆ ಹೋರಾಟದಲ್ಲಿ ದೇವಾಲಯದ ಪೂಜಾರಿಗಳೂ ಸೇರಿದಂತೆ ಅಸಂಖ್ಯ ಹಿಂದೂಗಳ ಬಲಿದಾನವಾಯಿತು. ಅಲ್ಲಿದ್ದ ಜ್ಞಾನವಾಪಿ ಹೆಸರಿನ ಬಾವಿಯ ಕಾರಣದಿಂದ ಈ ಮಸೀದಿಯೂ ಸಹ ಜ್ಞಾನವಾಪಿ ಮಸೀದಿಯೆಂದೇ ಕರೆಯಲ್ಪಟ್ಟಿತು. ದೇವಾಲಯದ ಪ್ರಮುಖ ಪುರೋಹಿತ ಪ್ರಧಾನ ಶಿವಲಿಂಗವನ್ನು ಹೊತ್ತು ಜ್ಞಾನವಾಪಿ ಬಾವಿಗೆ ಧುಮುಕಿ ಆತ್ಮಾರ್ಪಣೆ ಮಾಡಿಕೊಂಡ ಎಂದೂ ಹೇಳಲಾಗುತ್ತದೆ. ಫಿರಂಗಿಗಳನ್ನು ಬಳಸಿ ದೇವಾಲಯವನ್ನು ಧ್ವಂಸಗೊಳಿಸಿದ ಔರಂಗಜೇಬ ಅಷ್ಟಕ್ಕೇ ಸುಮ್ಮನಾಗಲಿಲ್ಲ. ಹಿಂದೂ ಸ್ವಾಭಿಮಾನಕ್ಕೆ ಸತತ ಪೆಟ್ಟು ಬೀಳುತ್ತಲೇ ಇರಲೆಂಬ ಕಾರಣದಿಂದ ದೇವಾಲಯದ ಪ್ರಾಕಾರದ ಅರೆಬರೆ ಧ್ವಂಸಗೊಳಿಸಿದ ಗೋಡೆಯನ್ನೇ ಉಳಿಸಿಕೊಂಡು ಅದರ ಮೇಲೆಯೇ ಮಸೀದಿಯ ಗುಮ್ಮಟ ನಿರ್ಮಿಸುವಂತೆ ಆಜ್ಞಾಪಿಸಿದ. ಈ ಕಟ್ಟಡವನ್ನು ನೋಡಿದಾಗಲೆಲ್ಲ ಹಿಂದುಗಳ ಮನದಲ್ಲಿ ದುಃಖ, ರೋಷ ಇಮ್ಮಡಿಸುತ್ತಿತ್ತು.
ಮಂದಿರ ಸ್ಥಾಪನೆಗೆ ನಿಲ್ಲದ ಪ್ರಯತ್ನಗಳು
ದೇವಾಲಯ ಧ್ವಂಸದಿಂದ ಹಿಂದುಗಳ ಮನಸ್ಸಿಗೆ ಘಾಸಿಯಾದರೂ, ಮಹದೇವನನ್ನು ಮರೆಯಲು ಆಗಲಿಲ್ಲ. ಔರಂಗಜೇಬನ ನಂತರ ಮಹಾರಾಷ್ಟ್ರದ ಮರಾಠರ ಶಕ್ತಿಯೇ ಅಧಿಕವಾಗಿ ಭಾರತದ ಬಹು ಪ್ರದೇಶ ಅವರ ಆಳ್ವಿಕೆಗೆ ಬಂದಿತು. ೧೭೦೦ರಿಂದ ೧೭೫೦ರವರೆಗೆ ಕಾಶಿಯು ಮರಾಠರ ಆಳ್ವಿಕೆಯಲ್ಲಿಯೇ ಇತ್ತು. ಆದರೂ ವಿಶ್ವನಾಥಮಂದಿರವಿದ್ದ ಪುರಾತನ ಸ್ಥಳದಲ್ಲಿಯೇ ಪುನಃ ದೇವಾಲಯವನ್ನು ಏಕೆ ನಿರ್ಮಿಸಲಿಲ್ಲ ಎಂಬುದು ಪ್ರಶ್ನೆಯಾಗಿಯೇ ಉಳಿದಿದೆ. ೧೭೪೨ರ ಸುಮಾರಿಗೆ ಇಂದೋರ್ನ ದೊರೆ ಮಲ್ಹಾರರಾವ್ ಹೋಳ್ಕರ್ ಜ್ಞಾನವಾಪಿ ಮಸೀದಿಯನ್ನು ಕೆಡವಲು ಯೋಜನೆ ರೂಪಿಸಿದನಾದರೂ, ಅವಧ್ನ ನವಾಬನ ಮಧ್ಯಪ್ರವೇಶದಿಂದ ಅದು ಕಾರ್ಯಸಾಧ್ಯವಾಗಲಿಲ್ಲ. ನವಾಬನು ಮರಾಠರ ಅಧೀನದಲ್ಲೇ ಇದ್ದರೂ ನಯವಂಚಕತನದಿಂದ ಹೋಳ್ಕರ್ನ ಯೋಜನೆಯನ್ನು ಕಾರ್ಯಗತವಾಗದಂತೆ ನೋಡಿಕೊಂಡ.
ಸರಿಸುಮಾರು ೧೭೫೦ರ ಹೊತ್ತಿಗೆ ಜೈಪುರದ ಮಹಾರಾಜ ಆ ಇಡೀ ಪ್ರದೇಶದ ಸರ್ವೆಯನ್ನೂ ಮಾಡಿಸಿದ್ದ. ಆ ಸಂಪೂರ್ಣ ಪ್ರದೇಶವನ್ನು ಹಣ ನೀಡಿ ಖರೀದಿಸಿ, ಮತ್ತೆ ಕಾಶಿ ವಿಶ್ವನಾಥಮಂದಿರವನ್ನು ಭವ್ಯವಾಗಿ ನಿರ್ಮಿಸುವುದು ಅವನ ಉದ್ದೇಶವಾಗಿತ್ತು. ಆ ಸಮೀಕ್ಷೆಯಲ್ಲಿ ಜ್ಞಾನವಾಪಿ ಮಸೀದಿಯ ಗೋಡೆಗೆ ಹೊಂದಿಕೊಂಡಂತೆ ಇದ್ದ ಪುರೋಹಿತರ ಮನೆಗಳನ್ನೂ ಗುರುತಿಸಲಾಗಿತ್ತು. ಆದರೂ ಅದು ಕಾರ್ಯಗತವಾಗಲಿಲ್ಲ. ಒಟ್ಟಿನಲ್ಲಿ ವಿಶ್ವನಾಥನ ಮಂದಿರ ಪುನರ್ನಿರ್ಮಿಸುವ ಪ್ರಯತ್ನಗಳು ನಿರಂತರ ನಡೆಯುತ್ತಲೇ ಇದ್ದವು.
೧೮೨೪ರಲ್ಲಿ ಬ್ರಿಟಿಷ್ ಯಾತ್ರಿಕ ರೆಜಿನಾಲ್ದ್ ಹೆಬರ್ ತನ್ನ ಪ್ರವಾಸಿ ದಿನಚರಿಯಲ್ಲಿ ‘ಔರಂಗಜೇಬ ಹಿಂದುಗಳ ಪವಿತ್ರ ಸ್ಥಳವನ್ನು ನಾಶಗೊಳಿಸಿ ಮಸೀದಿ ನಿರ್ಮಿಸಿದ. ಶತಮಾನಗಳಾದರೂ ಹಿಂದೂಗಳು ತಮ್ಮ ಪವಿತ್ರ ಕಾಶಿ ವಿಶ್ವನಾಥಮಂದಿರ ಧ್ವಂಸವಾದುದರ ಬಗೆಗೆ ತೀವ್ರವಾಗಿ ದುಃಖಿತರಾಗಿದ್ದರು. ಈಗಲೂ ಸಹ ಹಿಂದೆ ದೇವಸ್ಥಾನವಿದ್ದ ಸ್ಥಳವೇ ಪ್ರಸ್ತುತ ದೇವಾಲಯಕ್ಕಿಂತ ಹೆಚ್ಚು ಪವಿತ್ರವೆಂದು ಪರಿಗಣಿಸಲ್ಪಡುತ್ತಿದೆ’ ಎಂದು ದಾಖಲಿಸಿದ್ದಾನೆ.
ಮಹಾರಾಣಿಯ ಮಹಾನ್ ಪ್ರಯತ್ನ
ಈಗಿರುವ ದೇವಾಲಯ ಮಹಾರಾಣಿ ಅಹಲ್ಯಾಬಾಯಿ ಹೋಳ್ಕರ್ ೧೭೮೦ರಲ್ಲಿ ನಿರ್ಮಿಸಿದ್ದು. ಕಾಶಿಯಲ್ಲಿ ಶಿವನಿಗೆ ವೈಭವಯುತ ದೇವಾಲಯ ನಿರ್ಮಿಸಬೇಕೆಂಬ ಆಕೆಯ ತಂದೆ ಮಲ್ಹಾರರಾವ್ ಹೋಳ್ಕರ್ರ ಆಸೆಯೆ ಆಕೆಯ ಇಚ್ಛೆಯೂ ಆಗಿತ್ತು. ಆದರೆ ಹೊಸ ದೇವಾಲಯ ನಿರ್ಮಾಣಗೊಂಡಿದ್ದು ಮೂಲಸ್ಥಳದಲ್ಲಿ ಅಲ್ಲ; ಬದಲಾಗಿ ಹಿಂದಿದ್ದ ದೇವಾಲಯದಿಂದ ಕೆಲವೇ ಅಡಿಗಳ ದೂರದಲ್ಲಿ. ಈಗಲೂ ಹಳೆಯ ದೇಗುಲದ ಮುಂದಿದ್ದ ಶಿವನ ವಾಹನ ನಂದಿ ಮುಖಮಾಡಿರುವುದು ಜ್ಞಾನವಾಪಿ ಮಸೀದಿಯ ಕಡೆಗೆ. ಈ ದೇವಾಲಯ ನಿರ್ಮಾಣ ಹಿಂದುಗಳಲ್ಲಿ ಸ್ವಲ್ಪ ಸಮಾಧಾನವನ್ನು ತಂದಿತು. ಸಿಕ್ಖರ ಪ್ರಬಲ ದೊರೆ ಮಹಾರಾಜ ರಣಜಿತ್ಸಿಂಹ ೧೮೩೯ರಲ್ಲಿ ೮೦೦ ಕೆ.ಜಿ.ಗೂ ಹೆಚ್ಚು ತೂಕದ ಚಿನ್ನದಲ್ಲಿ ಈ ದೇವಾಲಯಕ್ಕೆ ಕಳಸ ಮತ್ತು ಮೇಲ್ಚಾವಣಿಗೆ ಹೊದಿಕೆ ಮಾಡಿಸಿದ.
ನಾಶಗೊಂಡಿದ್ದ ವಿಶಾಲಾಕ್ಷಿಯ ದೇವಾಲಯವನ್ನು ೧೮೯೩ರಲ್ಲಿ ಮತ್ತೆ ನಿರ್ಮಿಸಿದ್ದು ತಮಿಳುನಾಡಿನ ಚೆಟ್ಟಿಯಾರ್ಗಳು. ಈಗಲೂ ಅಲ್ಲಿ ಪೂಜೆಯ ನೇತೃತ್ವವನ್ನು ತಮಿಳುನಾಡಿನ ಪುರೋಹಿತರೇ ವಹಿಸಿಕೊಂಡಿದ್ದಾರೆ.
ಮೋಕ್ಷದಾಯಿನಿ ಕಾಶಿ
ಇಲ್ಲಿನ ಸಣ್ಣಸಣ್ಣ ಗಲ್ಲಿಗಳಲ್ಲಿ ಯಾತ್ರಿಕರು ಕಳೆದುಹೋಗುವ ಸಾಧ್ಯತೆ ಎಷ್ಟಿದೆಯೋ, ಇಲ್ಲಿನ ಪುರಾತನ ಜೀವಂತ ನೆಲದಲ್ಲಿ ನಿಶ್ಚಿಂತೆಯಿಂದ ಕೆಲದಿನ ತಂಗುವ ತೀರ್ಥಯಾತ್ರಿ ತನ್ನನ್ನು ತಾನು ಅರಿತುಕೊಳ್ಳುವ ಸಾಧ್ಯತೆಗಳೂ ಅಷ್ಟೇ ಇವೆ. ಒಂದು ದಿನದ ಪ್ರವಾಸಕ್ಕೆಂದು ಹೋದವರು ದಿನಗಟ್ಟಲೆ ಉಳಿದ ಅಥವಾ ಮತ್ತೆ ಮತ್ತೆ ದರ್ಶಿಸುವ ಅಭ್ಯಾಸ ಮಾಡಿಕೊಂಡ ಉದಾಹರಣೆಗಳು ಅಸಂಖ್ಯ. ಕಾಶಿಯೆಂಬ ಮಾಯೆ ಆಸ್ತಿಕನನ್ನು ಸದಾ ಸೆಳೆಯುತ್ತದೆ, ಹಾಗೆಯೆ ಮಾಯೆಯನ್ನು ಮೀರುವ ವಿದ್ಯೆಯನ್ನೂ ಒದಗಿಸುತ್ತದೆ.
ಸಾಯುವುದಾದರೆ ಕಾಶಿಯಲ್ಲಿ ಸಾಯಬೇಕು, ಇಲ್ಲಿ ಯಮದೂತರ ಪ್ರವೇಶವಿಲ್ಲ. ಶಿವದೂತರೇ ಕೈಲಾಸಕ್ಕೆ ಮೃತ ಜೀವಿಯನ್ನು ಒಯ್ಯುವವರು. ಗತಿಸಿದ ಮನೆಯ ಹಿರಿಯರ ಅಸ್ತಿಯನ್ನು ಗಂಗೆಯಲ್ಲಿ ವಿಸರ್ಜಿಸಬೇಕು. ಇಲ್ಲಿನ ತಟದಲ್ಲಿ ಪಿಂಡಪ್ರದಾನ ಮಾಡಬೇಕು ಎಂಬುದು ಹಿಂದುಗಳ ಮನದಲ್ಲಿ ಹುದುಗಿರುವ ಇಚ್ಛೆ. ಅದಕ್ಕೆ ವಿಶ್ವದಾದ್ಯಂತ ಇರುವ ಹಿಂದುಗಳು ಪಿತೃಕಾರ್ಯಕ್ಕಾಗಿ ಕಾಶಿಗೆ ಬರುತ್ತಾರೆ. ಈ ಸಂಖ್ಯೆ ಪ್ರತಿವರ್ಷ ಹೆಚ್ಚುತ್ತಿದೆಯೇ ಹೊರತು ಕುಸಿಯುವ ಪ್ರಮೇಯವೇ ಬರುತ್ತಿಲ್ಲ.
ಕಾಲದೇಶ ಮೀರಿದ ಕಾಶಿಯ ಸೆಳೆತ
ಆಧುನಿಕ ಕಾಲದಲ್ಲಿಯೂ ಕಾಶಿಯು ಜ್ಞಾನದ ಕಣಜ ಮತ್ತು ಕ್ರಾಂತಿಯ ಕಣವಾಗಿ ಹೆಸರಾಗಿದೆ. ಸಣ್ಣಪುಟ್ಟ ಗುರುಕುಲಗಳಿಂದ ಹಿಡಿದು ಬೃಹತ್ ವೇದಶಿಕ್ಷಣ ಮಹಾವಿದ್ಯಾಲಯಗಳವರೆಗೆ ಎಲ್ಲಕ್ಕೂ ಆಶ್ರಯ ನೀಡಿದ್ದು ಕಾಶಿ. ಮದನಮೋಹನ ಮಾಲವೀಯರು ಹಿಂದೂ ವಿಶ್ವವಿದ್ಯಾಲಯಕ್ಕೆ ಕಾಶಿಯನ್ನು ಆಯ್ಕೆ ಮಾಡಿಕೊಳ್ಳಲು ಇದೂ ಪ್ರಮುಖ ಕಾರಣ. ಚಂದ್ರಶೇಖರ್ ಆಜಾದ್, ಭಗವಾನ್ದಾಸ್ರಂತಹ ನೂರಾರು ಕ್ರಾಂತಿಕಾರಿಗಳ ಕರ್ಮಕ್ಷೇತ್ರವೂ ಕಾಶಿಯೇ. ಕಾಶಿಯಲ್ಲಿ ಪ್ರಧಾನಿ ಮೋದಿಯವರು ಸಂಸದರಾದ ಮೇಲೆ ೨೦೧೯ರಲ್ಲಿ ನಿರ್ಮಾಣವಾದ ಕಾರಿಡಾರ್ ಅದರ ಭವ್ಯತೆಗೊಂದು ಇಂಬನ್ನು ನೀಡಿದೆ.
ಕಾಶಿಯು ತನ್ನ ಪವಿತ್ರತೆ, ಪ್ರಾಚೀನತೆಗಳಿಂದ ಪ್ರಪಂಚದಾದ್ಯಂತ ಹಿಂದೂಗಳ ಹೃದಯದಲ್ಲಿ ಸದಾಕಾಲಕ್ಕೂ ಪೂಜನೀಯ ಸ್ಥಳವಾಗಿ ಪರಿಗಣಿಸಲ್ಪಟ್ಟಿದೆ. ಇದು ಕೇವಲ ನಗರವಲ್ಲ – ಆತ್ಮಾನುಸಂಧಾನದ ಭೂಮಿ. ಭಕ್ತಿಯು ಪರಾಕಾಷ್ಠೆ ಕಾಣುವ ದಿವ್ಯ ನೆಲೆ. ಸಹಸ್ರಾರು ಮಂದಿರಗಳ ಅಭಯಧಾಮ. ಕಾಶಿಯಲ್ಲಿ ಭಕ್ತರು ತಮ್ಮ ಆರಾಧ್ಯ ದೇವನ ದೈವಿಕ ಸಾನ್ನಿಧ್ಯದಲ್ಲಿ ತಮ್ಮನ್ನೇ ತಾವು ಮರೆಯುತ್ತಾರೆ. ಜನ್ಮಮೃತ್ಯು ಚಕ್ರದಿಂದ ಬಿಡಿಸುವ ಮಹಾದೇವನ ಆಶ್ರಯದಲ್ಲಿ ಜೀವನ ಸಾರ್ಥಕಪಡಿಸಿಕೊಳ್ಳುತ್ತಾರೆ.
ಇಲ್ಲಿ ದೇವಗಂಗೆಯು ನಿರಂತರವಾಗಿ ಹರಿಯುತ್ತ ಮಾತೆಯ ಕಾರುಣ್ಯವನ್ನು ಹರಿಸುತ್ತಿರುತ್ತಾಳೆ. ಕಾಶಿಯು ಆಸ್ತಿಕರ ಜೀವಕ್ಕೆ ಭರವಸೆ ನೀಡಿದೆ, ಭಕ್ತಿಮಾರ್ಗದ ದಾರಿದೀಪವಾಗಿ ಉಳಿದಿದೆ. ಯಾತ್ರಿಕರು ಮತ್ತು ಅಧ್ಯಾತ್ಮದ ಅನ್ವೇಷಕರನ್ನು ಮಹಾಚುಂಬಕದಂತೆ ತನ್ನತ್ತ ಸೆಳೆಯುತ್ತಲೇ ಇದೆ. ಕಾಶಿಯನ್ನು ರಕ್ಷಿಸಲು ಹಿಂದೂಗಳು ಮಾಡಿದ ತ್ಯಾಗಬಲಿದಾನಗಳು ಅವರ ಅಚಲ ಭಕ್ತಿ ಮತ್ತು ಕಾಲದೇಶದ ಗಡಿಗಳನ್ನು ಮೀರಿದ ಪ್ರಾಚೀನ ನಗರದ ಕುರಿತ ನಿರಂತರ ಪ್ರವಹಿಸುತ್ತಿರುವ ಶ್ರದ್ಧಾ ಪರಂಪರೆಗೆ ಸಾಕ್ಷಿಯಾಗಿದೆ.