“ಅಹಿಂಸೆಯಿಂದಲೇ ಸ್ವಾತಂತ್ರ್ಯ ಸಿಕ್ಕಿದ್ದು ಅಂತ ನಾವೆಲ್ಲರೂ ಇಷ್ಟು ವರ್ಷ ಓದಿಕೊಂಡು ಬಂದಿದ್ದೇವೆ. ಇದು ಆ ರೀತಿಯ ಕಥೆ ಅಲ್ಲ…” ಎಂಬ ಹಿನ್ನೆಲೆ ಧ್ವನಿಯೊಂದಿಗೆ ಪ್ರಾರಂಭವಾಗುವ ಚಿತ್ರ, ಇದು ಇಷ್ಟು ವರ್ಷಗಳ ಕಾಲ ಮರೆಮಾಚಲ್ಪಟ್ಟಿರುವ ಸ್ವಾತಂತ್ರ್ಯ ಹೋರಾಟದ ಮತ್ತೊಂದು ಸಿದ್ಧಾಂತವನ್ನು ತಿಳಿಸುವ ಚಿತ್ರ – ಎಂದು ಪ್ರಾರಂಭದಲ್ಲೇ ಸೂಚ್ಯವಾಗಿ ತಿಳಿಸುತ್ತದೆ.
ಕಳೆದ ಎರಡು ದಶಕಗಳಿಂದ ಸಾವರಕರ್ ಅವರ ಪರ-ವಿರೋಧದ ಚರ್ಚೆಗಳು ದಿನನಿತ್ಯವೆಂಬಂತೆಯೆ ನಡೆಯುತ್ತಿದ್ದು, ಇದರ ಪರಿಣಾಮವಾಗಿ ದೇಶದ ಜನರಲ್ಲಿ ಸಾವರಕರ್ ಕುರಿತಾಗಿ ಕುತೂಹಲ ಹೆಚ್ಚಿದೆ ಮತ್ತು ಅದಕ್ಕೆ ಪೂರಕವಾಗಿ ಅನೇಕ ಗ್ರಂಥಗಳೂ ಹೊರಬಂದಿವೆ. ಇದೀಗ ಸಾವರಕರ್ ಕುರಿತಾದ ಹೊಚ್ಚಹೊಸ ಚಲನಚಿತ್ರವೊಂದು ಬಿಡುಗಡೆಯಾಗಿದ್ದು, ಜಗತ್ತಿನ ಗಮನಸೆಳೆದಿದೆ.
ಜಗತ್ತಿನಾದ್ಯಂತ ಕೋಟ್ಯಂತರ ದೇಶಭಕ್ತರು ಕಾತರದಿಂದ ಕಾಯುತ್ತಿದ್ದ ‘ಸ್ವಾತಂತ್ರö್ಯವೀರ ಸಾವರಕರ್’ ಚಲನಚಿತ್ರ ಮಾರ್ಚ್ ೨೨ರಂದು ಬಿಡುಗಡೆಯಾಯಿತು. ಈ ಚಿತ್ರವು ಮೊದಲಿಗೆ ಮರಾಠಿ ಭಾಷೆಯಲ್ಲಿ ಬಿಡುಗಡೆಗೊಳ್ಳಬೇಕಾಗಿತ್ತು. ಆದರೆ, ಸೆನ್ಸಾರ್ ಬೋರ್ಡಿನ ಹಿರಿಯ ಅಧಿಕಾರಿ ಸೈಯ್ಯದ್ ರಾಬಿ ಹಾಶಮಿ ಅವರು ಕೊನೆಯ ಘಳಿಗೆಯವರೆಗೂ ನಿರ್ಮಾಪಕರನ್ನು ಸತಾಯಿಸಿ, ಮಾರ್ಚ್ ೨೧ರಂದು ಮಧ್ಯಾಹ್ನ ೧.೩೦ಕ್ಕೆ ಹಿಂದಿ ಚಲನಚಿತ್ರ ಬಿಡುಗಡೆಗೆ ಅನುಮತಿ ಪತ್ರ ನೀಡಿದರು. ಹಿಂದಿ ಚಲನಚಿತ್ರಕ್ಕೆ ಅನುಮತಿ ನೀಡಿದ ನಂತರವೇ ಮರಾಠಿ ಚಿತ್ರಕ್ಕಾಗಿ ಅನುಮತಿ ಸಲ್ಲಿಸಬಹುದು. ಹೀಗಾಗಿ, ಮಾರ್ಚ್ ೨೨ರಂದು ಕೇವಲ ಹಿಂದಿ ಚಿತ್ರ ಪ್ರದರ್ಶನಗೊಳ್ಳಲು ಸಾಧ್ಯವಾಯಿತು. ಕುತೂಹಲದ ಸಂಗತಿಯೆಂದರೆ, ಯಾವ ಬ್ರಿಟನ್ ಸಾಮ್ರಾಜ್ಯದ ವಿರುದ್ಧ ಸಶಸ್ತ್ರ ಕ್ರಾಂತಿಯ ಬೃಹತ್ ಯೋಜನೆಯನ್ನು ಸಾವರಕರ್ ಯೋಜಿಸಿದ್ದರೋ, ಆ ಬ್ರಿಟನ್ ದೇಶದಲ್ಲಿ ಈ ಚಲನಚಿತ್ರಕ್ಕೆ ಯಾವುದೇ ತಕರಾರಿಲ್ಲದೆ ಅನುಮತಿ ಸಿಕ್ಕಿತು.
ರಣದೀಪ್ ಹೂಡಾ, ಯೋಗೇಶ್ ರಾಹರ್, ಆನಂದ್ ಪಂಡಿತ್ ಮತ್ತು ಸಂದೀಪ್ಸಿಂಗ್ ಅವರು ಜಂಟಿಯಾಗಿ ನಿರ್ಮಿಸಿರುವ ಈ ಚಿತ್ರವನ್ನು ರಣದೀಪ್ ಹೂಡಾ ಅವರೇ ನಿರ್ದೇಶನ ಮಾಡಿದ್ದು, ವಿನಾಯಕ ದಾಮೋದರ್ ಸಾವರಕರ್ ಪಾತ್ರಧಾರಿಯೂ ಆಗಿ ಮಿಂಚಿದ್ದಾರೆ. ಪವಿತ್ರ ರಿಷ್ತಾ ಖ್ಯಾತಿಯ ಅಂಕಿತಾ ಲೋಖಂಡೆ ಸಾವರಕರ್ ಪತ್ನಿಯ ಪಾತ್ರ ನಿರ್ವಹಿಸಿದ್ದಾರೆ. ವಿನಾಯಕ ಸಾವರಕರ್ ಅವರ ಹಿರಿಯ ಸಹೋದರ ಗಣೇಶ್ ಸಾವರಕರ್ ಪಾತ್ರವನ್ನು ಅಮಿತ್ ಸಿಯಾಲ್, ಕಿರಿಯ ಸಹೋದರ ನಾರಾಯಣರಾವ್ ಸಾವರಕರ್ ಪಾತ್ರವನ್ನು ಚೇತನ್ ಸ್ವರೂಪ್, ಮಹಾತ್ಮಾ ಗಾಂಧಿಯವರ ಪಾತ್ರವನ್ನು ರಾಕೇಶ್ ಖೇರ, ಡಾ|| ಬಿ.ಆರ್. ಅಂಬೇಡ್ಕರ್ ಪಾತ್ರವನ್ನು ಲೋಕೇಶ್ ಮಿತ್ತಲ್, ನೇತಾಜಿ ಸುಭಾಷ್ಚಂದ್ರ ಬೋಸ್ ಅವರ ಪಾತ್ರವನ್ನು ಬ್ರಜೇಶ್ ಝಾ, ಲೋಕಮಾನ್ಯ ಬಾಲಗಂಗಾಧರ ತಿಲಕ್ ಅವರ ಪಾತ್ರವನ್ನು ಸಂತೋಷ್ ಓಝಾ ನಿರ್ವಹಿಸಿದ್ದಾರೆ. ಚಲನಚಿತ್ರದ ಹಾಡುಗಳಿಗೆ ಅನು ಮಲ್ಲಿಕ್, ವಿಪಿನ್ ಪಟ್ವಾ ಸಂಗೀತ ಸಂಯೋಜನೆ ಮಾಡಿದ್ದಾರೆ.
ಚಿತ್ರದ ನಿರ್ದೇಶಕ ರಣದೀಪ್ ಹೂಡಾ ಈ ಚಲನಚಿತ್ರದ ನಿರ್ಮಾಣಕ್ಕಾಗಿ ಭಗೀರಥ ಪ್ರಯತ್ನ ಮಾಡಿದ್ದಾರೆ. ಸ್ವತಃ ಸಾವರಕರ್ ಪಾತ್ರದಲ್ಲಿ ಮಿಂಚಿದ ಅವರು, ಆ ಪಾತ್ರಕ್ಕಾಗಿ ೩೦ ಕೆ.ಜಿ. ತೂಕ ಇಳಿಸಿಕೊಂಡದ್ದಲ್ಲದೆ, ತಮ್ಮ ಸ್ವಂತ ಮನೆಯನ್ನು ಮಾರಾಟ ಮಾಡಿ ಚಿತ್ರ ನಿರ್ಮಾಣಕ್ಕೆ ಹಣವನ್ನು ಒಟ್ಟುಗೂಡಿಸಿದ್ದರು. ಸಾವರಕರ್ರವರು ಜೀವಾವಧಿ ಶಿಕ್ಷೆ ಅನುಭವಿಸಿದ ಅಂಡಮಾನಿನ ಸೆರೆಮನೆಗೆ ಭೇಟಿ ನೀಡಿ, ಅಲ್ಲಿನ ಪರಿಸರವನ್ನು ಸೂಕ್ಷ÷್ಮವಾಗಿ ಅಭ್ಯಸಿಸಿದ್ದ ರಣದೀಪ್ ಹೂಡಾ, ಸ್ವಲ್ಪ ಸಮಯ ಸಾವರಕರ್ ಇದ್ದ ಸೆಲ್ ಒಳಗೆ ತಮ್ಮನ್ನು ತಾವು ಲಾಕ್ ಮಾಡಿಕೊಂಡಿದ್ದರು. ಅದರ ಅನುಭವ ಅವರು ಹಂಚಿಕೊಂಡಿದ್ದು ಹೀಗೆ: “ಸಾವರಕರ್ರು ಒಟ್ಟು ೫೦ ವರ್ಷಗಳ ಎರಡು ಜೀವಾವಧಿ ಶಿಕ್ಷೆಗಾಗಿ ಬಂಧಿಸಲ್ಪಟ್ಟು, ಒಂದು ದಶಕಕ್ಕೂ ಹೆಚ್ಚು ಕಾಲ ಕಳೆದಿದ್ದ ಸೆರೆಮನೆಯಲ್ಲಿ ನನಗೆ ಇಪ್ಪತ್ತು ನಿಮಿಷ ಕುಳಿತುಕೊಳ್ಳಲೂ ಆಗಲಿಲ್ಲ!!” ಈ ಚಿತ್ರದ ನಿರ್ಮಾಪಕ, ನಿರ್ದೇಶಕ, ಲೇಖಕ ಮತ್ತು ನಟ – ಈ ನಾಲ್ಕೂ ಪಾತ್ರಗಳನ್ನು ಅವರೇ ನಿರ್ವಹಿಸಿ, ಎಲ್ಲರ ಮೆಚ್ಚುಗೆ ಗಳಿಸಿದ್ದಾರೆ.
ಈ ಚಲನಚಿತ್ರವು ಮೊದಲ ದಿನ ನಿರೀಕ್ಷೆಗಿಂತ ಕಡಮೆ ಹಣ ಗಳಿಸಿದರೂ, ನಂತರದ ದಿನಗಳಲ್ಲಿ ಇದು ಭರ್ಜರಿಯಾಗಿ ನಡೆಯುತ್ತಿದೆ. ಮೊದಲ ದಿನ ಕೇವಲ ೧.೧೫ ಕೋಟಿ ರೂಪಾಯಿ ಗಳಿಸಿದ ಚಿತ್ರ, ಮುಂದಿನ ಎರಡು ವಾರಗಳಲ್ಲಿ ಜಗತ್ತಿನಾದ್ಯಂತ ೨೧ ಕೋಟಿ ರೂಪಾಯಿ ಗಳಿಸಿದರೆ, ಭಾರತದಲ್ಲಿ ಸುಮಾರು ೨ ಕೋಟಿ ಆದಾಯ ಗಳಿಸಿದೆ.
“ಅಹಿಂಸೆಯಿಂದಲೇ ಸ್ವಾತಂತ್ರ್ಯ ಸಿಕ್ಕಿದ್ದು ಅಂತ ನಾವೆಲ್ಲರೂ ಇಷ್ಟು ವರ್ಷ ಓದಿಕೊಂಡು ಬಂದಿದ್ದೇವೆ. ಇದು ಆ ರೀತಿಯ ಕಥೆ ಅಲ್ಲ…” ಎಂಬ ಹಿನ್ನೆಲೆ ಧ್ವನಿಯೊಂದಿಗೆ ಪ್ರಾರಂಭವಾಗುವ ಚಿತ್ರ, ಇದು ಇಷ್ಟು ವರ್ಷಗಳ ಕಾಲ ಮರೆಮಾಚಲ್ಪಟ್ಟಿರುವ ಸ್ವಾತಂತ್ರ್ಯ ಹೋರಾಟದ ಮತ್ತೊಂದು ಸಿದ್ಧಾಂತವನ್ನು ತಿಳಿಸುವ ಚಿತ್ರ, ಎಂದು ಪ್ರಾರಂಭದಲ್ಲೇ ಸೂಚ್ಯವಾಗಿ ತಿಳಿಸುತ್ತದೆ.
ಸಾವರಕರ್ರ ಬಾಲ್ಯ ಜೀವನದಿಂದ ಪ್ರಾರಂಭವಾಗುವ ಕಥೆ, ಅವರ ಜೀವನದ ಅಂತ್ಯದವರೆಗಿನ ಎಲ್ಲ ಹಂತಗಳನ್ನೂ ವೀಕ್ಷಕರ ಮುಂದೆ ಬಿಚ್ಚಿಡುತ್ತಹೋಗುತ್ತದೆ. ಜೊತೆಜೊತೆಗೆ ಅಂದಿನ ರಾಜಕೀಯದ ಎರಡು ವಿಭಿನ್ನ ಗುಂಪುಗಳ ಕುರಿತಾಗಿಯೂ ಪರಿಚಯಿಸುತ್ತದೆ. ಕಾಂಗ್ರೆಸ್ ನಾಯಕರಾಗಿದ್ದ ಗೋಪಾಲಕೃಷ್ಣ ಗೋಖಲೆ ಮತ್ತು ಲೋಕಮಾನ್ಯ ಬಾಲಗಂಗಾಧರ ತಿಲಕರು ಎರಡು ವಿಭಿನ್ನ ಗುಂಪುಗಳ ನಾಯಕರಾಗಿದ್ದರು – ಗೋಖಲೆ ಮಂದಗಾಮಿಯಾದರೆ, ತಿಲಕ್ ತೀವ್ರಗಾಮಿ. ಇವರಿಬ್ಬರ ನಡುವಣ ಸಂಭಾಷಣೆಯನ್ನೂ ಚಿತ್ರ ತೋರಿಸುತ್ತದೆ. ಸಾವರಕರ್ ತಿಲಕರ ಅನುಯಾಯಿಯಾಗಿದ್ದು, ಭಾರತದ ಪ್ರಪ್ರಥಮ ರಹಸ್ಯ ಸಂಸ್ಥೆ ‘ಅಭಿನವ ಭಾರತ’ವನ್ನು ಪ್ರಾರಂಭಿಸಿದ್ದು, ಇಂಗ್ಲೆಂಡಿಗೆ ಹೋಗಿದ್ದು, ಹಡಗಿನಲ್ಲಿದ್ದ ಭಾರತೀಯ ಯುವಕರ ಪರಿಚಯ, ಅವರ ದೃಷ್ಟಿಯನ್ನು ದೇಶದ ಸ್ವಾತಂತ್ರ್ಯ ಹೋರಾಟದೆಡೆಗೆ ಸೆಳೆಯುವುದು, ಇಂಗ್ಲೆಂಡಿನಲ್ಲಿ ‘ಭಾರತ ಭವನ’ ಸೇರುವುದು, ಮೇಡಂ ಕಾಮಾ ಮತ್ತು ಶ್ಯಾಮಜಿ ಕೃಷ್ಣವರ್ಮಾ ಅವರ ಪರಿಚಯ, ಕ್ರಾಂತಿಕಾರಿ ಹೋರಾಟಕ್ಕೆ ಹೊಸ ಆಯಾಮ, ಬಾಂಬು ತಯಾರಿ, ಪಿಸ್ತೂಲುಗಳನ್ನು ಭಾರತಕ್ಕೆ ಕಳುಹಿಸುವುದು, ಮದನ್ಲಾಲ್ ಧಿಂಗ್ರಾನಿಂದ ಕರ್ಜನ್ ವಾಯ್ಲಿಯ ವಧೆ, ಸಾವರಕರ್ ಸಹೋದರರ ಬಂಧನ, ಹಡಗಿನಿಂದ ಹಾರಿ ತಪ್ಪಿಸಿಕೊಳ್ಳುವ ಪ್ರಯತ್ನ, ಅಂಡಮಾನಿನ ಕರಿನೀರಿನ ಶಿಕ್ಷೆ, ಅಲ್ಲಿ ಪಡುವ ಬವಣೆಗಳು, ಇತರ ಖೈದಿಗಳ ಮನೋಸ್ಥೈರ್ಯ ಹಿಗ್ಗಿಸುವ ಪ್ರಯತ್ನ, ಬ್ರಿಟಿಷ್ ಸರ್ಕಾರಕ್ಕೆ ತಮ್ಮನ್ನು ಬಿಡುಗಡೆ ಮಾಡುವಂತೆ ಕ್ಷಮಾಪತ್ರ, ಅದನ್ನು ಸರ್ಕಾರ ತಿರಸ್ಕರಿಸುವುದು, ೧೯೨೪ರಲ್ಲಿ ಬಿಡುಗಡೆಯಾದ ನಂತರ ರತ್ನಗಿರಿಯಲ್ಲಿ ಸ್ಥಾನಬದ್ಧತೆ, ಶುದ್ಧಿ ಚಳವಳಿ, ಗಾಂಧಿ ಭೇಟಿ, ಸುಭಾಷ್ಚಂದ್ರ ಬೋಸ್ ಭೇಟಿ ಹಾಗೂ ಅವರಿಗೆ ಜರ್ಮನಿ ಹಾಗೂ ಜಪಾನಿಗೆ ಹೋಗಿ ರಾಸ್ಬಿಹಾರಿ ಬೋಸ್ ಅವರೊಡನೆ ಸೇರಿಕೊಂಡು ಬ್ರಿಟಿಷರ ಮೇಲೆ ಸಮರ ಹೂಡುವಂತೆ ಪ್ರೇರಣೆ, ೧೯೪೭ರಲ್ಲಿ ಭಾರತ ಸ್ವಾತಂತ್ರ್ಯ ಮತ್ತು ವಿಭಜನೆ, ಗಾಂಧಿ ಹತ್ಯೆ, ಸಾವರಕರ್ ಬಂಧನ ಮತ್ತು ಬಿಡುಗಡೆ, ಮುಂದೆ ಪಾಕಿಸ್ತಾನಿ ಅಧ್ಯಕ್ಷ ಭಾರತಕ್ಕೆ ಭೇಟಿ ನೀಡಿದಾಗ ಮತ್ತೊಮ್ಮೆ ಸಾವರಕರ್ ಬಂಧನ, ಸಾವರಕರ್ ಜೀವನದ ಅಂತ್ಯ – ಹೀಗೆ ಎಲ್ಲವನ್ನೂ ಒಂದೊಂದಾಗಿ ವೀಕ್ಷಕರ ಮುಂದೆ ಇಡಲಾಗುತ್ತದೆ. ದೇಶದ ಸ್ವಾತಂತ್ರö್ಯ ಹೋರಾಟದಲ್ಲಿ ಬರುವ ಅನೇಕ ವ್ಯಕ್ತಿಗಳು – ಮಹಾತ್ಮಾ ಗಾಂಧಿಜೀ, ಡಾ|| ಬಿ.ಆರ್. ಅಂಬೇಡ್ಕರ್, ಸುಭಾಷ್ಚಂದ್ರ ಬೋಸ್, ಜವಾಹರಲಾಲ್ ನೆಹರು, ಬಾಲಗಂಗಾಧರ ತಿಲಕ್, ಗೋಪಾಲಕೃಷ್ಣ ಗೋಖಲೆ, ಮದನ್ಲಾಲ್ ಧಿಂಗ್ರಾ, ಮೇಡಂ ಭಿಕಾಜಿ ಕಾಮಾ, ಶ್ಯಾಮಜಿ ಕೃಷ್ಣವರ್ಮ, ದಾದಾಬಾಯಿ ನವರೋಜಿ, ಚಾಪೇಕರ್ ಸಹೋದರರು, ಇತ್ಯಾದಿ – ಇವರೆಲ್ಲರನ್ನೂ ದರ್ಶಿಸುತ್ತ, ಇಡೀ ಸ್ವಾತಂತ್ರ್ಯ ಹೋರಾಟದ ಸ್ಥೂಲ ಚಿತ್ರ ಕಣ್ಮುಂದೆ ಬರುತ್ತದೆ. ಜೊತೆಗೆ ಬ್ರಿಟಿಷ್ ನಾಯಕರಾದ ವಿನ್ಸ್ಟನ್ ಚರ್ಚಿಲ್, ಕ್ಲೆಮೆಂಟ್ ಆಟ್ಲೀ, ಲಾರ್ಡ್ ಮೌಂಟ್ಬ್ಯಾಟನ್, ಎಡ್ವಿನಾ ಮೌಂಟ್ಬ್ಯಾಟನ್, ಕರ್ಜನ್ ವಾಯ್ಲೀ, ರೆಜಿನಾಲ್ಡ್ ಕ್ರೆಡೋಕ್ ಮತ್ತು ಬ್ರಿಟನ್ನಿನ ದೊರೆ ಕಿಂಗ್ ಜಾರ್ಜ್ ಗಿI. ಮಹಾತ್ಮಾ ಗಾಂಧೀಜಿಯವರ ಹತ್ಯೆಗೈದ ನಾಥೂರಾಂ ಗೋಡ್ಸೆ ಪ್ರಸಂಗವೂ ಬರುತ್ತದೆ.
ಚಲನಚಿತ್ರದ ಕಥಾ ನಿರೂಪಣೆ, ನಿರ್ದೇಶನ ಉತ್ತಮವಾಗಿದೆ. ಪ್ರತಿಯೊಬ್ಬ ಕಲಾಕಾರನೂ(ಳೂ) ತನ್ನ ಪಾತ್ರಕ್ಕೆ ಜೀವ ತುಂಬಿದ್ದಾನೆ(ಳೆ).
ಸಾವರಕರ್ ಜೀವನದ ನೈಜ ಚಿತ್ರಣ ಇದಾಗಿದೆ. ಆದರೆ, ಚಲನಚಿತ್ರ ಗಾಂಧಿಯವರನ್ನು ತೋರಿಸುವಾಗ ಸ್ವಲ್ಪ ಎಡವಿದೆ ಎನಿಸುತ್ತದೆ. ಗಾಂಧಿಯವರನ್ನು ಬಹಳ ಹಗುರವಾಗಿ ತೋರಿಸಲಾಗಿದೆ ಮತ್ತು ಅವರೊಬ್ಬ ಹಾಸ್ಯಾಸ್ಪದ ವ್ಯಕ್ತಿ ಎನ್ನುವಂತೆ ಚಿತ್ರಿಸಲಾಗಿದೆ. ವಾಸ್ತವ ಅದಕ್ಕಿಂತ ಭಿನ್ನ. ಸಾವರಕರ್ ಹಾಗೂ ಗಾಂಧಿಯವರ ಸೈದ್ಧಾಂತಿಕ ವಿರೋಧವನ್ನು ತೋರಿಸಲು, ಗಾಂಧಿಯವರನ್ನು ಹಗುರ ಮಾಡದೆಯೇ ತೋರಿಸಿದ್ದರೆ ಚೆನ್ನಿತ್ತು ಎನಿಸುತ್ತದೆ. ಚಲನಚಿತ್ರದ ಒಟ್ಟು ಅವಧಿ ಮೂರೂವರೆ ಗಂಟೆಗಳು. ಒಂದೇ ಚಿತ್ರದಲ್ಲಿ ಎಲ್ಲವನ್ನೂ ತೋರಿಸುವ ಬದಲು, ಎರಡು ಭಾಗಗಳಲ್ಲಿ ತೋರಿಸಿದ್ದರೆ, ಮತ್ತಷ್ಟು ಸಮರ್ಥವಾಗಿ ತೋರಿಸಬಹುದಿತ್ತು ಮತ್ತು ಒಂದೊಂದು ಭಾಗವನ್ನೂ ಎರಡು ಗಂಟೆಗಳಿಗೆ ಸೀಮಿತಗೊಳಿಸಬಹುದಿತ್ತು ಎನಿಸುತ್ತದೆ. ಮೇಲ್ನೋಟಕ್ಕೆ ಬಹಳ ಸಮಯ ತಿನ್ನುವ ಚಿತ್ರ ಎನಿಸಿದರೂ, ಚಲನಚಿತ್ರ ಎಲ್ಲಿಯೂ ಬೋರ್ ಹೊಡೆಸುವುದಿಲ್ಲ. ನೋಡುಗರನ್ನು ಸ್ವಾತಂತ್ರ್ಯ ಹೋರಾಟದ ದಿನಗಳಿಗೆ ಕೊಂಡೊಯ್ಯುವ ಚಿತ್ರ, ಮರೆಮಾಚಲ್ಪಟ್ಟಿರುವ ಇತಿಹಾಸದ ಪುಟಗಳನ್ನು ಅನಾವರಣಗೊಳಿಸುವಲ್ಲಿ ಸಮರ್ಥವಾಗಿದೆ. ಒಟ್ಟಿನಲ್ಲಿ ಒಂದು ಉತ್ತಮ ಚಿತ್ರ ಇದೆನ್ನುವುದರಲ್ಲಿ ಸಂದೇಹವಿಲ್ಲ.