ಆರಂಭದ ದಿನಗಳಲ್ಲಿ ನಟರು, ತಂತ್ರಜ್ಞರು, ನಿರ್ದೇಶಕರು ಪಟ್ಟ ಪರಿಶ್ರಮಕ್ಕೆ ಸಾಟಿಯಿಲ್ಲ. ಕನ್ನಡ ಚಿತ್ರರಂಗ ಸ್ಟುಡಿಯೋ ಹಾಗೂ ಪೋಸ್ಟ್–ಪ್ರೊಡಕ್ಷನ್ ಕೆಲಸಗಳಿಗೆ ಮದ್ರಾಸನ್ನೇ ಆಶ್ರಯಿಸಿಬೇಕಾಗಿದ್ದ ದಿನಗಳವು. ಸ್ಟುಡಿಯೋದಲ್ಲಿ ಮೊದಲ ಪ್ರಾಶಸ್ತ್ಯ ತಮಿಳು ಚಿತ್ರಗಳಿಗೆ. ಹಗಲಿನಲ್ಲೆಲ್ಲ ತಮಿಳು ಚಿತ್ರಗಳ ಶೂಟಿಂಗ್. ರಾತ್ರಿ ಮಾತ್ರ ಕನ್ನಡ ಸಿನೆಮಾಗಳಿಗೆ ಅವಕಾಶ. ಹೀಗಾಗಿ, ಕನ್ನಡ ನಟರಿಗೆ, ತಂತ್ರಜ್ಞರಿಗೆ ಒಂದು ರೀತಿಯ ಕಡ್ಡಾಯ ನೈಟ್ ಶಿಫ್ಟ್. ಇನ್ನು ಊಟ ಹಾಗೂ ಇತರ ಸೌಲಭ್ಯಗಳಿಗೆ ಕೂಡ ಅಷ್ಟಕ್ಕಷ್ಟೇ ಎಂಬಂತಹ ಸೇವೆ. ಇಲ್ಲಿ ಕೂಡ, ಕನ್ನಡ ಸಿನೆಮಾ ನಿರ್ಮಾಣವೆಂದರೆ ಹಿಂದೆ ಸರಿಯುವವರ ಸಂಖ್ಯೆಯೇ ಜಾಸ್ತಿ. ಸಿನೆಮಾಗೆ ದುಡ್ಡು ಸುರಿಯುವುದಕ್ಕಿಂತ ಯಾವುದಾದರೂ ವ್ಯಾಪಾರ ಮಾಡುವುದು ಲೇಸು ಎಂಬ ಮನೋಭಾವವಿದ್ದ ಕಾಲ.
ಇನ್ನೂ ಕೇವಲ ಹತ್ತೇ ಹತ್ತು ವರ್ಷಗಳು, ಬೆಳ್ಳಿತೆರೆ ಶತಮಾನೋತ್ಸವನ್ನು ಆಚರಿಸಲು. ಚಿತ್ರರಂಗದಲ್ಲಿರುವ ಹಿರಿಯರ ಜೊತೆ ಮಾತನಾಡಿದರೆ, “ಆಂ, ಆಗಲೇ ೯೦ ವರ್ಷಗಳಾಗಿಬಿಟ್ಟಿತಾ? ಇನ್ನೂ ನಮ್ಮ ಫಿಲ್ಮ್ ನಿನ್ನೆ ಮೊನ್ನೆ ಬಿಡುಗಡೆ ಮಾಡಿದ ಹಾಗಿದೆ” ಎಂದು ನೆನಪುಗಳ ಸುರುಳಿಯನ್ನೇ ಬಿಚ್ಚಲು ಮುಂದಾಗುತ್ತಾರೆ. ಮೂಕಿ ಚಿತ್ರಗಳ ಯುಗ ಮುಗಿದು ಟಾಕಿ ಚಿತ್ರಗಳು ಆರಂಭವಾದಾಗಿನಿಂದ ಲೆಕ್ಕ ಹಾಕಿದರೆ ಬೆಳ್ಳಿತೆರೆಗೆ ಈಗ ೯೦ ವರ್ಷಗಳ ಸಂಭ್ರಮ. ಯಾವುದಕ್ಕೆ ಸಂಭ್ರಮ ಪಡಬೇಕು? ಬರೀ ೯೦ ವರ್ಷಗಳಾಗಿದ್ದಕ್ಕಾಗಿಯೆ? – ಎಂದು ಪ್ರಶ್ನೆ ಕೇಳುವವರೂ ಇದ್ದಾರೆ. ಈ ಪ್ರಶ್ನೆಯ ಹಿಂದಿರುವ ಉದ್ದೇಶ ಚಿತ್ರರಂಗದ ಸಾಧನೆಯನ್ನು ಪ್ರಶ್ನಿಸುವುದಲ್ಲ, ಬದಲಾಗಿ ಚಿತ್ರರಂಗದ ಪ್ರಸಕ್ತ ಪರಿಸ್ಥಿತಿ ಹಾಗೂ ಇರಿಸಿಕೊಂಡಿರುವ ದೂರದೃಷ್ಟಿಯ ಕುರಿತಾಗಿದೆ. ಏನೇ ಆಗಲಿ, ೯೦ ವರ್ಷಗಳ ಕಾಲ ನಿಂತ ನೀರಾಗದೆ ಸದಾ ಚಲಿಸುತ್ತ, ಕಥಾವಸ್ತು-ತಂತ್ರಜ್ಞಾನ-ನಿರ್ಮಾಣ-ನಟನೆಯ ಕ್ಷೇತ್ರಗಳಲ್ಲಿನ ಬದಲಾವಣೆಗಳನ್ನು ಸ್ವೀಕರಿಸುತ್ತ, ಅದರಿಂದ ಮತ್ತೇನೋ ಹೊಸದನ್ನು ಸೃಷ್ಟಿಸುತ್ತ ಚಿತ್ರರಂಗ ಮುನ್ನಡೆದಿದೆ.
ಬೆಳ್ಳಿತೆರೆಯ ಆರಂಭ
ಭಾರತೀಯ ಚಿತ್ರರಂಗದ ಪಿತಾಮಹ ದುಂಡಿರಾಜ್ ಗೋವಿಂದ ಫಾಳ್ಕೆ ೧೯೧೩ರಲ್ಲಿ ಮೊದಲ ಚಲನಚಿತ್ರ ‘ರಾಜಾ ಹರಿಶ್ಚಂದ್ರ’ ನಿರ್ಮಿಸಿದ ನಂತರದ ಕೆಲವೇ ವರ್ಷಗಳಲ್ಲಿ ಕನ್ನಡ ನೆಲದಲ್ಲಿ ಕೂಡ ಚಿತ್ರ ನಿರ್ಮಾಣ ಆರಂಭವಾಯಿತು. ೧೯೨೪ರಲ್ಲಿ ನಿರ್ಮಾಣವಾದ ಸತಿ ಸುಲೋಚನಾ ಮೊಟ್ಟಮೊದಲ ಕನ್ನಡ ಟಾಕಿ ಚಲನಚಿತ್ರವಾಗಿದ್ದರೂ, ೧೯೨೧ರಿಂದಲೇ ಮೂಕಿ ಚಲನಚಿತ್ರಗಳು ಕನ್ನಡ ನೆಲದಲ್ಲಿ ನಿರ್ಮಾಣವಾಗತೊಡಗಿದ್ದವು. ಹಿರಿಯ ಪತ್ರಕರ್ತ ಗಂಗಾಧರ ಮೊದಲಿಯಾರ್ ಅವರ ಸಂಶೋಧನೆಯಂತೆ ೧೯೨೧ರಲ್ಲಿ ‘ರತ್ನಾವಳಿ ಥಿಯೇಟ್ರಿಕಲ್ ಕಂಪೆನಿ’ಯ ಅನಮಲಪಲ್ಲಿ ವೆಂಕಟವರದಾಚಾರ್ಯರು ಮೈಸೂರು ಅರಮನೆಯಲ್ಲಿ ‘ನಿರುಪಮಾ’ ಎಂಬ ನಾಟಕವನ್ನು ಪ್ರದರ್ಶಿಸುತ್ತಿದ್ದರು. ಇದು ಇಂಗ್ಲಿಷ್ ನಾಟಕದ ಅನುವಾದವಾಗಿತ್ತು. ಆಗ ಮೈಸೂರಿನ ಯುವರಾಜರಾಗಿದ್ದ ಕಂಠೀರವ ನರಹಿಂಹರಾಜ ಒಡೆಯರ್ ಅವರ ಬಳಿಯಿದ್ದ ಕೈಯಿಂದ ಸುತ್ತಿ ಚಿತ್ರ ತೆಗೆಯುವ ಕ್ಯಾಮರಾದಿಂದ ಈ ನಾಟಕವನ್ನು ಚಿತ್ರೀಕರಿಸಲಾಯಿತು. ಇದು ಕನ್ನಡದ ಮೊದಲ ಮೂಕಿ ಚಿತ್ರವೆನಿಸಿದೆ. ಅನಂತರ, ಗುಬ್ಬಿ ಕಂಪೆನಿಯ ‘ಮಹಾತ್ಮಾ ಕಬೀರ್’ ನಾಟಕ, ಕನ್ನಡದ ಎರಡನೇ ಮೂಕಿ ಚಿತ್ರವಾಯಿತು. ೧೯೩೦-೩೧ರ ಅವಧಿಯಲ್ಲಿ ಕೋಟ ಶಿವರಾಮ ಕಾರಂತರು ಕೂಡ ‘ಭೂತರಾಜ್ಯ’ ಹಾಗೂ ‘ಡೊಮಿಂಗೊ’ ಎಂಬ ಎರಡು ಮೂಕಿ ಚಿತ್ರಗಳನ್ನು ತಯಾರಿಸಿದರು. ‘ಡೊಮಿಂಗೊ’ ಹರಿಜನರ ಕುರಿತಾದ ಕಥಾವಸ್ತುವುಳ್ಳ ಚಿತ್ರ. ಈ ಚಿತ್ರದಲ್ಲಿ ಕಾರಂತರೂ ನಟಿಸಿದ್ದರು. ಚಿತ್ರಕಥೆ ಕೂಡ ಅವರದ್ದೇ ಆಗಿತ್ತು. ೧೯೩೦ನೇ ಇಸವಿಯಲ್ಲಿ ಕಾರಂತರು ಆಗ ಈ ಚಿತ್ರಕ್ಕೆ ಹೂಡಿದ ಬಂಡವಾಳ ನಾಲ್ಕುಸಾವಿರ ರೂಪಾಯಿಗಳು.
ಇದೇ ವೇಳೆ ಭಾರತದ ಇತರ ಭಾಗಗಳಲ್ಲಿಯೂ ಮೂಕಿ ಚಿತ್ರಗಳು ತಯಾರಾಗುತ್ತಿದ್ದವು. ಈ ಮೂಕಿ ಚಿತ್ರಗಳು ಪರದೆಯ ಮೇಲೆ ಧ್ವನಿ ಹೊರಡಿಸದಿದ್ದರೂ, ಹಾಡುಗಳ ದೃಶ್ಯಗಳ ಸಂದರ್ಭದಲ್ಲಿ ಗಾಯಕರು ಹಾಗೂ ಪಕ್ಕವಾದ್ಯದವರು ಥಿಯೇಟರ್ನಲ್ಲಿ ಪರದೆಯ ಸಮೀಪ ಕುಳಿತು ಸಂಗೀತ ಹೊಮ್ಮಿಸುತ್ತಿದ್ದರು. ಹೀಗೆ ನಡೆಯುತ್ತಿರಬೇಕಾದರೆ ೧೯೩೧ರಲ್ಲಿ ಭಾರತದ ಪ್ರಪ್ರಥಮ ಟಾಕಿ ಚಿತ್ರ ‘ಆಲಂ ಆರಾ’ ಬಿಡುಗಡೆಯಾಗುವುದರೊಂದಿಗೆ, ಮೂಕಿಚಿತ್ರಗಳ ತಯಾರಿಕೆ ಕೊನೆಗೊಂಡಿತು. ಕನ್ನಡದಲ್ಲಿ ೧೯೩೪ರಲ್ಲಿ ಯರಗಡಿಪತಿ ವರದರಾವ್ ಅವರ ನಿರ್ದೇಶನದ ‘ಸತಿ ಸುಲೋಚನ’ ಟಾಕಿ ಚಲನಚಿತ್ರ ಬಿಡುಗಡೆಯಾದಾಗಿನಿಂದ ಕನ್ನಡ ಚಿತ್ರರಂಗದ ಹೊಸ ಶಕೆಯೊಂದು ಆರಂಭವಾಯಿತು. (ಟಾಕಿ ಚಿತ್ರಗಳು ಆರಂಭವಾದರೂ ೧೯೮೭ರಲ್ಲಿ ಕಮಲ್ಹಾಸನ್ ನಟನೆಯ ಸಿಂಗೀತಂ ಶ್ರೀನಿವಾಸರಾವ್ ನಿರ್ದೇಶನದ ‘ಪುಷ್ಪಕ ವಿಮಾನ’ ಮೂಕಿ ಚಲನಚಿತ್ರ ಸೂಪರ್ ಹಿಟ್ ಆಯಿತು. ಬೆಂಗಳೂರಿನಲ್ಲಿಯೇ ೩೫ ವಾರ ಚಿತ್ರ ಓಡಿತು. ೯೦ರ ದಶಕದಲ್ಲಿ ದೂರದರ್ಶನದಲ್ಲಿ ವಾರಕ್ಕೊಮ್ಮೆ ಪ್ರಾದೇಶಿಕ ಭಾಷೆಗಳ ಚಲನಚಿತ್ರಗಳನ್ನು ಪ್ರಸಾರ ಮಾಡುತ್ತಿದ್ದರು. ‘ಪುಷ್ಪಕ ವಿಮಾನ’ ಮೂಕಿ ಚಲನಚಿತ್ರವಾಗಿದ್ದರೂ ಅದನ್ನು ದೂರದರ್ಶನದಲ್ಲಿ ಮಾತ್ರ ಕನ್ನಡ ಚಿತ್ರವೆಂದೇ ಪ್ರಸಾರ ಮಾಡುತ್ತಿದ್ದರು!) ಆರಂಭದಲ್ಲಿ ಬಂದ ಚಲನಚಿತ್ರಗಳು ನಾಟಕಗಳ ವಿಸ್ತರಣೆಗಳೇ ಆಗಿದ್ದರಿಂದ, ಆ ಚಲಚಿತ್ರಗಳಲ್ಲಿ ರಂಗಭೂಮಿ ವ್ಯಾಕರಣದ ದಟ್ಟ ಪ್ರಭಾವವನ್ನು ಕಾಣಬಹುದಾಗಿತ್ತು. ನಾಟಕದಲ್ಲಿ ದೃಶ್ಯ ಮುಗಿದ ಬಳಿಕ ನಟರೆಲ್ಲರೂ ಸೈಡ್ವಿಂಗ್ನಲ್ಲಿ ಎಕ್ಸಿಟ್ ತೆಗೆದುಕೊಳ್ಳುವ ಹಾಗೆ ಚಲನಚಿತ್ರದಲ್ಲಿಯೂ ದೃಶ್ಯಗಳಿರುತ್ತಿದ್ದವು. ಗಮನಿಸಬೇಕಾದ ಅಂಶವೆಂದರೆ ಭಾರತ ಆಗಿನ್ನೂ ದಾಸ್ಯದಲ್ಲಿದ್ದ ಕಾಲ. ಸ್ವಾತಂತ್ರ್ಯ ಪಡೆಯುವುದೇ ಪರಮೋಚ್ಚ ಆದ್ಯತೆಯಾಗಿರುವಾಗ ಮನರಂಜನೆಗೆಲ್ಲಿಯ ಜಾಗ? ಇಷ್ಟಾದರೂ ಚಿತ್ರರಂಗದ ಮಂದಿ ಮಾತ್ರ ಚಿತ್ರಗಳನ್ನು ನಿರ್ದೇಶಿಸುತ್ತಲೇ ನಡೆದರು. (ಈ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟವನ್ನು ಬಿಂಬಿಸುವ, ಬ್ರಿಟಿಷರ ದುರಾಡಳಿತವನ್ನು ವಿರೋಧಿಸುವ ಚಿತ್ರಗಳೂ ನಿರ್ಮಾಣವಾಗಿ, ಸ್ವಾತಂತ್ರ್ಯ ಚಳವಳಿಗೆ ಚಿತ್ರರಂಗ ತನ್ನದೇ ಕೊಡುಗೆಯನ್ನು ನೀಡಿತು. ಬ್ರಿಟಿಷರ ಕೈಗೊಂಬೆಯಾಗಿದ್ದ ಆಗಿನ ಸಿನೆಮಾ ಪ್ರಮಾಣೀಕರಣ ಮಂಡಳಿ, ಇಂತಹ ಚಿತ್ರಗಳಿಗೆ ಪ್ರಮಾಣಪತ್ರ ನೀಡದೆ ಸತಾಯಿಸುವುದೂ ಸಾಮಾನ್ಯವಾಗಿತ್ತು.)
ಆರಂಭದ ದಿನಗಳಲ್ಲಿ ನಟರು, ತಂತ್ರಜ್ಞರು, ನಿರ್ದೇಶಕರು ಪಟ್ಟ ಪರಿಶ್ರಮಕ್ಕೆ ಸಾಟಿಯಿಲ್ಲ. ಕನ್ನಡ ಚಿತ್ರರಂಗ ಸ್ಟುಡಿಯೋ ಹಾಗೂ ಪೋಸ್ಟ್-ಪ್ರೊಡಕ್ಷನ್ ಕೆಲಸಗಳಿಗೆ ಮದ್ರಾಸನ್ನೇ ಆಶ್ರಯಿಸಿಬೇಕಾಗಿದ್ದ ದಿನಗಳವು. ಸ್ಟುಡಿಯೋದಲ್ಲಿ ಮೊದಲ ಪ್ರಾಶಸ್ತ್ಯ ತಮಿಳು ಚಿತ್ರಗಳಿಗೆ. ಹಗಲಿನಲ್ಲೆಲ್ಲ ತಮಿಳು ಚಿತ್ರಗಳ ಶೂಟಿಂಗ್. ರಾತ್ರಿ ಮಾತ್ರ ಕನ್ನಡ ಸಿನೆಮಾಗಳಿಗೆ ಅವಕಾಶ. ಹೀಗಾಗಿ, ಕನ್ನಡ ನಟರಿಗೆ, ತಂತ್ರಜ್ಞರಿಗೆ ಇದು ಒಂದು ರೀತಿಯ ಕಡ್ಡಾಯ ನೈಟ್ಶಿಫ್ಟ್. ಇನ್ನು ಊಟ ಹಾಗೂ ಇತರ ಸೌಲಭ್ಯಗಳಿಗೆ ಕೂಡ ಅಷ್ಟಕ್ಕಷ್ಟೇ ಎಂಬಂತಹ ಸೇವೆ. ಇಲ್ಲಿ ಕೂಡ, ಕನ್ನಡ ಸಿನೆಮಾ ನಿರ್ಮಾಣವೆಂದರೆ ಹಿಂದೆ ಸರಿಯುವವರ ಸಂಖ್ಯೆಯೇ ಜಾಸ್ತಿ. ಸಿನೆಮಾಗೆ ದುಡ್ಡು ಸುರಿಯುವುದಕ್ಕಿಂತ ಯಾವುದಾದರೂ ವ್ಯಾಪಾರ ಮಾಡುವುದು ಲೇಸು ಎಂಬ ಮನೋಭಾವವಿದ್ದ ಕಾಲ. ಹಾಗಾಗಿ ಸಿನೆಮಾಗಳಿಗೆ ಸುಲಭವಾಗಿ ನಿರ್ಮಾಪಕರು ಸಿಗುತ್ತಿರಲಿಲ್ಲ. ೯೦ ವರ್ಷಗಳ ಬಳಿಕವೂ ಕೂಡ ಪರಿಸ್ಥಿತಿ ಭಿನ್ನವಾಗಿಲ್ಲ. ಇಂದಿಗೂ ಕೂಡ ಕಥೆಗಾರರು-ನಿರ್ದೇಶಕರು ಕಥೆ ಮಾಡಿಟ್ಟುಕೊಂಡು ನಿರ್ಮಾಪಕರನ್ನು ಹುಡುಕುತ್ತಿದ್ದಾರೆ. ಆದರೆ ಹಾಕುವ ದುಡ್ಡು ಮರಳಿ ಬಂದೇ ಬರುತ್ತದೆ ಎಂಬ ವಿಶ್ವಾಸವಿಲ್ಲದ್ದರಿಂದ ನಿರ್ಮಾಪಕರೂ ಹತ್ತು ಬಾರಿ ಯೋಚಿಸುತ್ತಿದ್ದಾರೆ. ಇದು ಒಂದೆಡೆಯಾದರೆ, ಸಿನೆಮಾ ಜಗತ್ತಿನ ಪರಿಚಯವಿಲ್ಲದ ಆದರೆ ನಿರ್ಮಾಪಕರಾಗಬೇಕೆನ್ನುವವರ ಕಡೆಯಿಂದ ಬಂಡವಾಳ ಹೂಡಿಕೆ ಮಾಡಿಸಿ ತಾರಮ್ಮಯ್ಯ ಆಟವಾಡಿಸುವ ನಿರ್ದೇಶಕರಿಗೇನೂ ಕೊರತೆಯಿಲ್ಲ. ಇನ್ನು, ಮೊದಲ ಶೆಡ್ಯೂಲ್ನಲ್ಲಿ ಮಾಡಿದ ಸಂಪೂರ್ಣ ರಶಸ್ಗಳನ್ನು ಸ್ಕ್ರ್ಯಾಪ್ ಎಂದು ಹೇಳಿ ರಿಶ್ಯೂಟ್ಗೆ ಮುಂದಾಗುವ ಹಿರಿಯ ಚಿತ್ರ ನಿರ್ದೇಶಕರೂ ಸಾಕಷ್ಟಿದ್ದಾರೆ. ಕನ್ನಡ ಚಿತ್ರರಂಗ ಈ ಎಲ್ಲ ಸವ್ಯ-ಅಪಸವ್ಯಗಳ ನಡುವೆ ೯೦ ವರ್ಷಗಳನ್ನು ಪೂರೈಸಿದೆ.
ಮೊದಲ ವಾಕ್ಚಿತ್ರ ‘ಸತಿ ಸುಲೋಚನ’ ನಿರ್ಮಿಸಿದ್ದು ವ್ಯಾಪಾರಿಗಳಾಗಿದ್ದ ಚಮನ್ಲಾಲ್ ಡೊಂಗಾಜಿ. ‘ಇಂದ್ರಜಿತ್ ವಧೆ’ ಎಂಬ ಪೌರಾಣಿಕ ಕಥೆಯನ್ನು ಇಟ್ಟುಕೊಂಡು ಬೆಳ್ಳಾವೆ ನರಹರಿಶಾಸ್ತಿçಗಳು ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಗೀತರಚನೆ ಮಾಡಿದರು. ಅದಾಗಲೇ ರಂಗಭೂಮಿಯಲ್ಲಿ ಹೆಸರುವಾಸಿಯಾಗಿದ್ದ ಎಂ.ವಿ. ಸುಬ್ಬಯ್ಯನಾಯ್ಡು ಇಂದ್ರಜಿತ್ ಆಗಿ, ಆರ್. ನಾಗೇಂದ್ರರಾವ್ ರಾವಣನಾಗಿ, ತ್ರಿಪುರಾಂಬ ಸುಲೋಚನೆಯಾಗಿ, ಲಕ್ಷ್ಮೀಬಾಯಿ ಮಂಡೋದರಿಯಾಗಿ ಪಾತ್ರ ನಿರ್ವಹಿಸಿದರು. ನಾಟಕದಂತೆಯೇ ಚಿತ್ರಕ್ಕೂ ಕೂಡ ಬೆಂಗಳೂರಿನಲ್ಲಿ ಒಂದು ತಿಂಗಳ ಕಾಲ ರಿಹರ್ಸಲ್ ನಡೆಯಿತು. ಚಿತ್ರೀಕರಣ ನಡೆದದ್ದು ಮಾತ್ರ ಕೊಲ್ಹಾಪುರದಲ್ಲಿ. ಚಿತ್ರ ತಯಾರಾಗಿ ಮೊದಲ ಪ್ರದರ್ಶನ ಕಂಡದ್ದು ಬೆಂಗಳೂರಿನ ಕೋಟೆ ಪ್ರದೇಶದಲ್ಲಿ ಆ ಕಾಲದಲ್ಲಿದ್ದ ದೊಡ್ಡಣ್ಣ ಹಾಲ್ನಲ್ಲಿ. ಬಿಡುಗಡೆಯ ದಿನಾಂಕ ಮಾರ್ಚ್ ೩, ೧೯೩೪. ಇದೇ ವೇಳೆ, ‘ಸತಿ ಸುಲೋಚನ’ ಸಿನೆಮಾಗೂ ಮೊದಲು ‘ಭಕ್ತ ಧ್ರುವ’ ಎಂಬ ಚಿತ್ರ ತಯಾರಾಗಿ ಪ್ರಮಾಣೀಕರಣ ಮಂಡಳಿಯಿಂದ ಸರ್ಟಿಫಿಕೇಟ್ ಪಡೆದರೂ, ೧೯೩೪ ಏಪ್ರಿಲ್ನಲ್ಲಿ ಬಿಡುಗಡೆಯಾಯಿತು. ಹೀಗಾಗಿ, ಮೊದಲ ವಾಕ್ಚಿತ್ರ ಎಂಬ ದಾಖಲೆ ‘ಸತಿ ಸುಲೋಚನಾ’ ಪಾಲಾಯಿತು.
ನಿಧಾನವಾಗಿ ಪೌರಾಣಿಕ ಕಥಾವಸ್ತುಗಳಿಂದ ಚಿತ್ರರಂಗದ ಗಮನ ಸಾಮಾಜಿಕ ಸಿನೆಮಾಗಳ ಕಡೆ ತಿರುಗಿತು. ಎರಡು ವರ್ಷಗಳ ನಂತರ ಅಂದರೆ ೧೯೩೬ರಿಂದ ಸಾಮಾಜಿಕ ಚಿತ್ರಗಳ ಸರಣಿ ಆರಂಭವಾಯಿತು. ಚಿತ್ರರಂಗ ಮನುಷ್ಯ ಸಂಬಂಧಗಳಿಂದ ಎಷ್ಟು ಪ್ರಭಾವಿತವಾಗಿತ್ತೆಂದರೆ ಕನ್ನಡದ ಪ್ರಥಮ ಸಾಮಾಜಿಕ ಚಿತ್ರದ ಹೆಸರೇ ‘ಸಂಸಾರ ನೌಕ’ ಎಂಬುದಾಗಿತ್ತು. (ನಿರ್ದೇಶನ: ಎಚ್.ಎಲ್.ಎನ್. ಸಿಂಹ.) ಮೊದಲಿಗೆ ನಾಟಕವಾಗಿ ಪ್ರಸಿದ್ಧವಾಗಿದ್ದು, ಅನಂತರ ಇದು ಚಲನಚಿತ್ರವಾಯಿತು. ಆಗೆಲ್ಲ ವರ್ಷಕ್ಕೆ ಒಂದು ಅಥವಾ ಎರಡು ವರ್ಷಕ್ಕೆ ಒಂದರಂತೆ ಕನ್ನಡ ಚಿತ್ರಗಳು ನಿರ್ಮಾಣವಾಗುತ್ತಿದ್ದವು. ವಾಕ್ಚಿತ್ರ ಬಿಡುಗಡೆಯಾದ ನಂತರದ ಕೆಲ ವರ್ಷಗಳಲ್ಲಿ ದ್ವಿತೀಯ ಮಹಾಯುದ್ಧ ಆರಂಭವಾದದ್ದು ಕನ್ನಡ ಚಿತ್ರರಂಗದ ಮೇಲೆ ಅಷ್ಟೇ ಅಲ್ಲ ಇಡೀ ಭಾರತೀಯ ಚಿತ್ರರಂಗದ ಮೇಲೆ ದೊಡ್ಡ ಹೊಡೆತವನ್ನೇ ನೀಡಿತು. ಚಿತ್ರಗಳಿಗೆ ಬೇಕಾಗಿದ್ದ ಫಿಲಂನ ಕೊರತೆ ಚಿತ್ರರಂಗವನ್ನು ಬಾಧಿಸಿತು. ಚಿತ್ರದ ಉದ್ದ ಎಂಟು ಸಾವಿರ ಅಡಿಗಿಂತ ಹೆಚ್ಚಿರಬಾರದು ಎಂಬ ನಿಯಮದಿಂದ ನಿರ್ಮಾಪಕರು ಕಂಗೆಟ್ಟರು. ಹೀಗಿದ್ದರೂ, ಗುಬ್ಬಿ ಕಂಪೆನಿಯಿಂದ ೧೯೩೫ರಲ್ಲಿ ‘ಸದಾರಮೆ’, ೧೯೪೧ರಲ್ಲಿ ‘ಸುಭದ್ರ’, ೧೯೪೨ರಲ್ಲಿ ‘ಜೀವನ ನಾಟಕ’, ೧೯೪೫ರಲ್ಲಿ ‘ಹೇಮರೆಡ್ಡಿ ಮಲ್ಲಮ್ಮ’ ಚಿತ್ರಗಳು ನಿರ್ಮಾಣವಾದವು. ಆರಂಭದ ವರ್ಷಗಳಲ್ಲಿ ಗುಬ್ಬಿ ಕಂಪೆನಿ ಕನ್ನಡ ಚಿತ್ರರಂಗಕ್ಕೆ ನೀಡಿದ ಕೊಡುಗೆ ಅನನ್ಯ. ಬೆಳ್ಳಿತೆರೆಯ ಆರಂಭಿಕ ವರ್ಷಗಳು ಕುಂಟುತ್ತ ಸಾಗಿದರೂ, ಅನಂತರದ ದಶಕಗಳಲ್ಲಿ ವೇಗ ಪಡೆದು ವರ್ಷಕ್ಕೆ ನೂರು, ಇನ್ನೂರು, ಮುನ್ನೂರು ಗಡಿ ದಾಟಿ, ೯೦ ವರ್ಷಗಳು ಪೂರೈಸಿರುವ ಈ ಹೊತ್ತಿನಲ್ಲಿ ಕನ್ನಡದಲ್ಲಿ ೫೦೦೦ಕ್ಕೂ ಹೆಚ್ಚು ಸಿನೆಮಾಗಳು ನಿರ್ಮಾಣಗೊಂಡಿವೆ. ನಿರ್ಮಾಣಗೊಂಡು ಯಾವಾವುದೋ ಕಾರಣಗಳಿಗೆ ಬಿಡುಗಡೆಯಾಗದ ಚಲನಚಿತ್ರಗಳ ಪಟ್ಟಿಯೂ ದೀರ್ಘವಾಗಿಯೇ ಇದೆ.
ದ್ವಿತೀಯ ಮಹಾಯುದ್ಧ ಮುಗಿದು ಕೆಲವೇ ವರ್ಷಗಳಲ್ಲಿ ಭಾರತಕ್ಕೆ ಸ್ವಾತಂತ್ರ್ಯ ದೊರಕಿದ ಮೇಲೆ ಚಿತ್ರ ನಿರ್ಮಾಣದ ಪ್ರಕ್ರಿಯೆ ಮತ್ತೆ ವೇಗ ಪಡೆದುಕೊಂಡಿತು. ಪುಣೆ, ಕೊಲ್ಹಾಪುರ, ಮದ್ರಾಸಿನ ಮೇಲೆ ಕನ್ನಡ ಚಿತ್ರರಂಗ ಅವಲಂಬಿತವಾಗಿದ್ದರೂ, ಅದಾಗಲೇ ಕನ್ನಡನೆಲದಲ್ಲಿ ಚಿತ್ರಗಳು ಸಂಪೂರ್ಣವಾಗಿ ನಿರ್ಮಾಣವಾಗಲು ಆರಂಭವಾಗಿದ್ದವು. ೧೯೪೭ರಲ್ಲಿಯೇ ಬಿ. ವಿಠಲಾಚಾರ್ಯ, ವಿಶ್ವನಾಥ ಶೆಟ್ಟಿ ಹಾಗೂ ಸ್ವಾತಂತ್ರ್ಯಹೋರಾಟಗಾರರೂ ಆಗಿದ್ದ ಡಿ. ಶಂಕರ್ಸಿಂಗ್ ಸೇರಿ ‘ಮಹಾತ್ಮಾ ಪಿಕ್ಚರ್ಸ್’ ಚಿತ್ರನಿರ್ಮಾಣ ಸಂಸ್ಥೆಯನ್ನು ಆರಂಭಿಸಿದರು. ಮಹಾತ್ಮಾ ಪಿಕ್ಚರ್ಸ್ನ ಮೂಲಕ ಡಿ. ಶಂಕರ್ಸಿಂಗ್ ಅವರು ನಿರ್ಮಿಸಿದ ಮೊದಲ ಚಿತ್ರ ‘ಕೃಷ್ಣಲೀಲಾ’. ಡಿ. ಕೆಂಪರಾಜ ಅರಸು, ಬಳ್ಳಾರಿ ಲಲಿತಾ ಅಭಿನಯಿಸಿದ್ದ ಈ ಚಿತ್ರ, ಹುಣಸೂರು ಕೃಷ್ಣಮೂರ್ತಿಯನರು ಕಥೆ ಹಾಗೂ ಸಂಭಾಷಣಕಾರರಾಗಿ ಕೆಲಸ ಮಾಡಿದ ಪ್ರಥಮ ಚಿತ್ರವೂ ಹೌದು. ಪಿ. ಕಾಳಿಂಗರಾವ್ ಸಂಗೀತ ನಿರ್ದೇಶಕರಾಗಿದ್ದ ಕೃಷ್ಣಲೀಲಾದ ವಿಶೇಷವೆಂದರೆ ಇದರ ನಿರ್ದೇಶಕ ಸಿ.ವಿ. ರಾಜು ಅವರೇ ಇದರ ಸಂಕಲನಕಾರರೂ ಆಗಿದ್ದರು. ಮಹಾತ್ಮಾ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲೇ ತಯಾರಾದ ಮತ್ತೊಂದು ಚಿತ್ರ ‘ಜಗನ್ಮೋಹಿನಿ’ ೩೬ ವಾರಗಳ ಕಾಲ ಓಡಿ ಹೊಸ ದಾಖಲೆಯನ್ನು ನಿರ್ಮಿಸಿತು.
ಕೆಲ ವರ್ಷಗಳ ಬಳಿಕ ರೂಪಗೊಂಡ ಆರ್. ನಾಗೇಂದ್ರರಾವ್ ಅವರ ‘ಆರ್.ಎನ್.ಆರ್. ಪಿಕ್ಚರ್ಸ್’, ಪ್ರಗತಿ ಪಿಕ್ಚರ್ಸ್ ಮುಂತಾದ ಸಂಸ್ಥೆಗಳು ನಿರ್ಮಿಸಿದ ಚಿತ್ರಗಳಲ್ಲಿ, ಇದೀಗ ಸುಪ್ರಸಿದ್ಧರಾಗಿರುವ ಅನೇಕ ಸಂಗೀತ ನಿರ್ದೇಶಕರು, ಹಿನ್ನೆಲೆ ಗಾಯಕರು, ಸಂಭಾಷಣೆಕಾರರು ತಮ್ಮ ವೃತ್ತಿಜೀವನ ಆರಂಭಿಸಿದರು.
ಕುಮಾರತ್ರಯರ ಆಗಮನ
ಕನ್ನಡ ಚಿತ್ರರಂಗದ ಆರಂಭಿಕ ಕಾಲಘಟ್ಟದಲ್ಲಿ ನಾಯಕನಟರಾಗಿ ಮಿಂಚಿದ್ದವರೆಲ್ಲ ಮರೆಯಾಗಿ ೧೯೫೦ರ ನಂತರ ರಾಜಕುಮಾರ-ಕಲ್ಯಾಣಕುಮಾರ-ಉದಯಕುಮಾರ ಅವರ ಆಗಮನವಾಯಿತು. ಈ ಕುಮಾರತ್ರಯರು ಮಾಡಿದ ಸಿನೆಮಾಗಳೆಲ್ಲವೂ ಹಿಟ್ ಆಗತೊಡಗಿದವು. ೧೯೫೪ರಲ್ಲಿ ‘ಬೇಡರ ಕಣ್ಣಪ್ಪ’ ಮೂಲಕ ರಾಜಕುಮಾರ, ಅದೇ ವರ್ಷ ‘ನಟಶೇಖರ’ ಚಿತ್ರದ ಮೂಲಕ ಕಲ್ಯಾಣಕುಮಾರ್ (ವೆಂಕಟರಂಗನ್) ಹಾಗೂ ೧೯೫೬ರಲ್ಲಿ ‘ಭಾಗ್ಯೋದಯ’ ಚಿತ್ರದ ಮೂಲಕ ಉದಯಕುಮಾರ (ಸೂರ್ಯನಾರಾಯಣ ಶಾಸ್ತ್ರಿ) ಕನ್ನಡ ಚಿತ್ರರಂಗವನ್ನು ಪ್ರವೇಶಿಸಿದರು. ‘ಬೇಡರ ಕಣ್ಣಪ್ಪ’ ಮೂಲಕ ರಾಜಕುಮಾರ ನಾಯಕನಟರಾಗಿ ತಮ್ಮ ಸಿನಿಪಯಣವನ್ನು ಆರಂಭಿಸಿದ್ದು ಕನ್ನಡ ಚಿತ್ರರಂಗದಲ್ಲಿ ಮಹತ್ತ್ವದ ಮೈಲಿಗಲ್ಲು. ಈ ಚಿತ್ರದ ನಿರ್ದೇಶಕರು ಎಚ್.ಎಲ್.ಎನ್. ಸಿಂಹ. ಪ್ರಥಮ ಸಾಮಾಜಿಕ ಚಿತ್ರ ನಿರ್ದೇಶಿಸಿದ್ದ ಸಿಂಹ ಅವರು ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಸೂಕ್ತ ನಟನ ಹುಡುಕಾಟದಲ್ಲಿದ್ದರು. ಆಗ ಅವರಿಗೆ ಕಣ್ಣಿಗೆ ಬಿದ್ದದ್ದೇ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ ಮುತ್ತುರಾಜ್ ಅಲಿಯಾಸ್ ರಾಜಕುಮಾರ್. ರಾಜಕುಮಾರ್, ಪಂಢರಿಬಾಯಿ, ಜಿ.ವಿ. ಅಯ್ಯರ್, ನರಸಿಂಹರಾಜು ನಟಿಸಿದ್ದ ಈ ಚಿತ್ರ ತನ್ನ ಕಥಾವಸ್ತು, ನಟನೆ, ಸಂಗೀತ, ಹಾಡುಗಳಿಂದ ಪ್ರಸಿದ್ಧವಾಯಿತು. ‘ಶಿವಪ್ಪ ಕಾಯೋ ತಂದೆ ಮೂರು ಲೋಕ ಸ್ವಾಮಿ ದೇವ ಹಸಿವೆಯನ್ನು ತಾಳಲಾರೆ ಕಾಪಾಡೆಯ’ ಎಂಬ ನಂಜು ಕವಿ (ಲಾವಣಿ ವಿದ್ವಾನ್ ನಂಜಪ್ಪ) ರಚನೆಯ, ಆರ್. ಸುದರ್ಶನಂ ಸಂಗೀತದ ಹಾಗೂ ಸಿ.ಎಸ್. ಜಯರಾಮನ್ ಹಾಡಿದ ಈ ಹಾಡು ಎಪ್ಪತ್ತು ವರ್ಷಗಳಾದರೂ ಜನರ ಬಾಯಲ್ಲಿ ನುಲಿಯುತ್ತಿದೆ.
೧೯೫೦ರ ದಶಕದಲ್ಲಿ ಚಲನಚಿತ್ರರಂಗಕ್ಕೆ ಮಹತ್ತ್ವದ ಕೊಡುಗೆ ನೀಡಿದವರಲ್ಲಿ ಬಿ.ಆರ್. ಪಂತುಲು ಕೂಡ ಒಬ್ಬರು. ಅವರ ‘ಪದ್ಮಿನಿ ಪಿಕ್ಚರ್ಸ್’ ಬ್ಯಾನರ್ಸ್ ಅಡಿಯಲ್ಲಿ ನಿರ್ಮಾಣವಾದ ‘ರತ್ನಗಿರಿ ರಹಸ್ಯ’, ‘ಸ್ಕೂಲ್ ಮಾಸ್ಟರ್’, ‘ಕಿತ್ತೂರು ಚೆನ್ನಮ್ಮ’ ಮುಂತಾದ ದಾಖಲೆ ಬರೆದ ಚಿತ್ರಗಳು ನಿರ್ಮಾಣವಾದವು.
೧೯೬೪ರಲ್ಲಿ ಬಿಡುಗಡೆಗೊಂಡ ಚಿತ್ರ ‘ಅಮರಶಿಲ್ಪಿ ಜಕಣಾಚಾರಿ’. ಇದು ಕನ್ನಡದ ಮೊಟ್ಟಮೊದಲ ವರ್ಣಚಿತ್ರ. ಈ ಮೊದಲು ಕೆಲವು ಚಿತ್ರಗಳಲ್ಲಿ ಬಣ್ಣಗಳನ್ನು ಬಳಸಲಾಗಿತ್ತಾದರೂ ಅವಾವುವೂ ಪೂರ್ಣ ಪ್ರಮಾಣದ ವರ್ಣಚಿತ್ರಗಳಾಗಿರಲಿಲ್ಲ. ಆದರೆ ಖ್ಯಾತ ನಿರ್ದೇಶಕ, ಛಾಯಾಗ್ರಾಹಕ, ತಂತ್ರಜ್ಞ ಹಾಗೂ ನಿರ್ಮಾಪಕರಾಗಿದ್ದ ಬಿ.ಎಸ್. ರಂಗಾ ಅವರು, ‘ಅಮರಶಿಲ್ಪಿ ಜಕಣಾಚಾರಿ’ ಚಿತ್ರವನ್ನು ಬಣ್ಣದಲ್ಲಿ ತಯಾರಿಸುವ ಮೂಲಕ ಹೊಸ ದಾಖಲೆ ಬರೆದರು. ಉದಯಕುಮಾರ್, ಕಲ್ಯಾಣಕುಮಾರ್, ಬಿ. ಸರೋಜಾದೇವಿ, ನರಸಿಂಹರಾಜು ನಟನೆಯ ಈ ಚಿತ್ರಕ್ಕೆ ೧೯೬೪ರಲ್ಲಿ ತಗುಲಿದ್ದ ವೆಚ್ಚ ೧೧ ಲಕ್ಷ. ಇದು ಆ ಕಾಲಕ್ಕೆ ನಿಜವಾಗಿಯೂ ಬಿಗ್ ಬಜೆಟ್ ಫಿಲ್ಮ್ ಆಗಿತ್ತು.
ಅನಂತರ ರಾಜ್ಯಸರ್ಕಾರ ಕನ್ನಡ ಚಿತ್ರಗಳಿಗೆ ಹಲವು ಮಾನದಂಡಗಳ ಮೇಲೆ ಸಬ್ಸಿಡಿ ನೀಡಲು ಆರಂಭಿಸಿದ್ದರಿಂದ ಬೆಳ್ಳಿತೆರೆ ಸ್ಥಿರತೆಯತ್ತ ಮುನ್ನಡೆಯಿತು. ಚಲನಚಿತ್ರರಂಗಕ್ಕೆ ಉದ್ಯಮದ ಸ್ವರೂಪ ಬಂದಿತು. ಅದಾಗಲೇ ಕುಮಾರತ್ರಯರ ಚಿತ್ರಗಳು ಸೇರಿದಂತೆ ಕಾದಂಬರಿ-ಆಧಾರಿತ ಸಿನೆಮಾಗಳೂ ತೆರೆಯ ಮೇಲೆ ಬಂದು ಜನಪ್ರಿಯವಾದ ಕಾರಣ ಚಿತ್ರರಂಗದ ಮತ್ತೊಂದು ಅಧ್ಯಾಯ ತೆರೆಯಿತು. ಇದೀಗ ನಿರ್ಮಾಪಕರು ಕೇವಲ ಭಾರತದಲ್ಲಷ್ಟೇ ಅಲ್ಲ, ವಿದೇಶದಲ್ಲೂ ಚಿತ್ರೀಕರಣಕ್ಕೆ ಮುಂದಾದರು. ೧೯೭೮ ಡಿಸೆಂಬರ್ ೨೩ರಂದು ಬಿಡುಗಡೆಗೊಂಡ ‘ಸಿಂಗಾಪೂರ್ನಲ್ಲಿ ರಾಜಾ ಕುಳ್ಳ’ ಸಿನೆಮಾ ವಿದೇಶದಲ್ಲಿ ಚಿತ್ರೀಕರಣಗೊಂಡ ಮೊದಲ ಸಿನೆಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಯಿತು. ದ್ವಾರಕೀಶ್, ಮಂಜುಳಾ, ವಿಷ್ಣುವರ್ಧನ್, ಲೋಕನಾಥ್, ತೂಗುದೀಪ ಶ್ರೀನಿವಾಸ್ ಸೇರಿದಂತೆ ಸಿಂಗಾಪೂರ್ನ ನಟರು ನಟಿಸಿದ್ದ ಈ ಚಿತ್ರವನ್ನು ನಿರ್ಮಿಸಿದ್ದು ದ್ವಾರಕೀಶ್. ನಿರ್ದೇಶಕರು ಸಿ.ವಿ. ರಾಜೇಂದ್ರನ್. ಸಂಭಾಷಣೆ ಮತ್ತು ಹಾಡುಗಳು ಚಿ. ಉದಯಶಂಕರ್. ಈ ಚಿತ್ರದಲ್ಲಿ ರಾಜನ್-ನಾಗೇಂದ್ರ ಜೋಡಿಯು ಸಂಗೀತ ನೀಡಿದ ಎಸ್.ಪಿ.ಬಿ., ಜೇಸುದಾಸ್, ಎಸ್. ಜಾನಕಿ, ಪಿ. ಸುಶೀಲ ಕಂಠದಾನ ಮಾಡಿದ ‘ಪ್ರೇಮ ಪ್ರೀತಿ ನನ್ನುಸಿರು, ನ್ಯಾಯ ನೀತಿ ನನ್ನುಸಿರು’, ‘ಬೆಳ್ಳಿಯ ರಾಜ ಬಾರೋ’, ‘ನಿನ್ನೆ ನಿನ್ನೆಗೆ ನಾಳೆ ನಾಳೆಗೆ’ ಹಾಡುಗಳು ಎವರ್ಗ್ರೀನ್ ಹಾಡುಗಳೆನಿಸಿದವು.
ಕಾದಂಬರಿ–ಆಧಾರಿತ ಚಲನಚಿತ್ರಗಳು
ಕಾದಂಬರಿ-ಆಧಾರಿತ ಚಿತ್ರಗಳು ಕನ್ನಡ ಬೆಳ್ಳಿತೆರೆಗೆ ಬರಲು ಆರಂಭಿಸಿದ್ದು ೧೯೬೦ರ ದಶಕದಲ್ಲಿ. ಕೃಷ್ಣಮೂರ್ತಿ ಪುರಾಣಿಕರ ಕಾದಂಬರಿ ‘ಧರ್ಮದೇವತೆ’ ಆಧರಿಸಿದ ಚಲನಚಿತ್ರ ‘ಕರುಣೆಯೇ ಕುಟುಂಬದ ಕಣ್ಣು’. ಇದು ಕಾದಂಬರಿ ಆಧರಿಸಿದ ಕನ್ನಡದ ಮೊದಲ ಚಿತ್ರ. ಅನಂತರದ ಅವಧಿಯಲ್ಲಿ ಕೃಷ್ಣಮೂರ್ತಿ ಪುರಾಣಿಕರ ‘ಕುಲವಧು’ ಕೂಡ ಚಲನಚಿತ್ರವಾಯಿತು. ತರಾಸು ಅವರ ಕಾದಂಬರಿಯನ್ನಾಧರಿಸಿ ‘ಚಂದವಳ್ಳಿಯ ತೋಟ’, ಅನಕೃ ಅವರ ‘ಸಂಧ್ಯಾರಾಗ’ ಚಲನಚಿತ್ರಗಳಾದವು. ಈ ಸಂದರ್ಭದಲ್ಲಿ ಸಾಹಿತಿಗಳು ಚಿತ್ರಕಥೆ ಅಥವಾ ಸಂಭಾಷಣಾ ರಚನೆಯಲ್ಲಿ ತೊಡಗುವುದು ಇಲ್ಲವೇ ಸಾಹಿತಿಗಳ ಕಥೆ-ಹಾಡುಗಳನ್ನು ಚಿತ್ರಗಳಲ್ಲಿ ಬಳಸಿಕೊಳ್ಳುವುದೂ ಹೆಚ್ಚಾಯಿತು. ಶಿವರಾಮ ಕಾರಂತ, ಯು.ಆರ್. ಅನಂತಮೂರ್ತಿ, ಕೆ.ಪಿ. ಪೂರ್ಣಚಂದ್ರ ತೇಜಸ್ವಿ, ಮಾಸ್ತಿ ವೆಂಕಟೇಶ್ ಅಯ್ಯಂಗಾರ್, ಎಸ್.ಎಲ್. ಭೈರಪ್ಪ, ತ್ರಿವೇಣಿ ಮುಂತಾದವರ ಕೃತಿಗಳು ಚಲನಚಿತ್ರಗಳಾದವು. ‘ಚೋಮನ ದುಡಿ’, ‘ಪಲ್ಲವಿ’, ‘ಅಬಚೂರಿನ ಪೋಸ್ಟಾಫೀಸು’, ‘ವಂಶವೃಕ್ಷ’, ‘ತಬ್ಬಲಿಯು ನೀನಾದೆ ಮಗನೆ’, ‘ಘಟಶ್ರಾದ್ಧ’, ‘ಹೇಮಾವತಿ’, ‘ಸಂಸ್ಕಾರ’, ‘ಕಾಡು’, ‘ಮೂರು ದಾರಿಗಳು’ – ಇಂತಹ ಕಾದಂಬರಿ ಆಧರಿಸಿದ ಚಲನಚಿತ್ರಗಳು ವ್ಯಾಪಕ ಪ್ರಶಂಸೆಯನ್ನು ಪಡೆದವು. ಕುವೆಂಪು ಅವರ ‘ನಾನೇ ವೀಣೆ ನೀನೇ ತಂತಿ’, ‘ದೋಣಿ ಸಾಗಲಿ ಮುಂದೆ ಹೋಗಲಿ’, ಗೋವಿಂದ ಪೈ ಅವರ ‘ತಾಯೆ ಬಾರ ಮೊಗವ ತೋರ’, ದ.ರಾ. ಬೇಂದ್ರೆಯವರ ‘ಮೂಡಣ ಮನೆಯ ಮುತ್ತಿನ ನೀರಿನ’, ‘ಯುಗಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ’, ‘ಇಳಿದು ಬಾ ತಾಯೆ ಇಳಿದು ಬಾ’, ‘ಕುಣಿಯೋಣ ಬಾ’, ‘ಉತ್ತರ ಧ್ರುವದಿಂ’, ‘ಬಂದಿತೋ ಶೃಂಗಾರ ಮಾಸ’, ‘ನೀ ಹಿಂಗ ನೋಡಬ್ಯಾಡ ನನ್ನ’, ಕೆ.ಎಸ್.ನ ಅವರ ‘ಇವಳು ಯಾರು ಬಲ್ಲೆಯೇನು’, ‘ರಾಯರು ಬಂದರು ಮಾವನ ಮನೆಗೆ’ ಹಾಡುಗಳು ಇಂದಿಗೂ ಮನೆಮಾತಾಗಿವೆ.
ಧುಮ್ಮಿಕ್ಕಿ ಹರಿದ ಹೊಸ ಕಲಾವಿದರ ಪ್ರತಿಭೆ
ಕುಮಾರತ್ರಯರ ನಂತರ ಕನ್ನಡ ಚಿತ್ರರಂಗಕ್ಕೆ ಹೊಸಹೊಸ ಕಲಾವಿದರು, ನಿರ್ದೇಶಕರು, ಸ್ಟುಡಿಯೋ ಮಾಲೀಕರು, ಛಾಯಾಚಿತ್ರಗ್ರಾಹಕರು, ಸಹ-ನಿರ್ದೇಶಕರು, ಸಂಭಾಷಣೆಕಾರರು, ಗೀತರಚನೆಕಾರರು, ಪ್ರಚಾರ ನೋಡಿಕೊಳ್ಳುವವರು, ಸಹ-ಕಲಾವಿದರನ್ನು ಪೂರೈಸುವವರು, ಪ್ರಸಾಧನ ಕಲಾವಿದರು ಪರಿಚಯವಾಗುತ್ತಲೇ ಹೋದರು. ಹೊಸ ನಟರ ಆಗಮನ ಕನ್ನಡ ಬೆಳ್ಳಿತೆರೆಯನ್ನು ಸುವರ್ಣಯುಗಕ್ಕೆ ಕೊಂಡೊಯ್ದಿತು. ಚಂದ್ರಶೇಖರ್ (ಎಡಕಲ್ಲು ಗುಡ್ಡದ ಮೇಲೆ), ಲೋಕೇಶ್ (ಭೂತಯ್ಯನ ಮಗ ಅಯ್ಯು), ಶ್ರೀನಾಥ್ (ಮಧುರ ಮಿಲನ), ಅನಂತ ನಾಗ್ (ಸಂಕಲ್ಪ), ಶಂಕರ ನಾಗ್ (ಒಂದಾನೊಂದು ಕಾಲದಲ್ಲಿ), ಜೈ ಜಗದೀಶ್ (ಫಲಿತಾಂಶ), ವಿಷ್ಣುವರ್ಧನ್ ಹಾಗೂ ಅಂಬರೀಷ್ (ನಾಗರಹಾವು), ಶ್ರೀಧರ್ (ಅಮೃತ ಘಳಿಗೆ) ಆಗಮನವಾಗುವ ಮೂಲಕ ವಿಭಿನ್ನ ಕಥಾವಸ್ತುವುಳ್ಳ, ತಮ್ಮದೇ ಮ್ಯಾನರಿಸಂ ಹೊಂದಿರುವ ನಟರುಗಳ ಪರಿಚಯವಾಯಿತು. ಈ ನಟರಲ್ಲಿ ಹಲವರು ತಮ್ಮ ಮೊದಲ ಚಲನಚಿತ್ರದಿಂದಲೇ ಹೆಸರು ಮಾಡಿದರೆ, ಮತ್ತೆ ಕೆಲವರು ಕಾಲಗರ್ಭದಲ್ಲಿ ಕಣ್ಮರೆಯಾಗಿಬಿಟ್ಟರು. ಕೆ.ಎಸ್. ಅಶ್ವತ್ಥ್, ನರಸಿಂಹರಾಜು, ಬಾಲಕೃಷ್ಣ, ತೂಗುದೀಪ ಶ್ರೀನಿವಾಸ, ಧೀರೇಂದ್ರ ಗೋಪಾಲ, ವಜ್ರಮುನಿ, ಸುಧೀರ್, ಮುಸುರಿ ಕೃಷ್ಣಮೂರ್ತಿ, ಶಿವರಾಂ, ಲೋಹಿತಾಶ್ವ, ಸುಂದರಕೃಷ್ಣ ಅರಸ್, ಸುಂದರರಾಜ್, ಸದಾಶಿವ ಬ್ರಹ್ಮಾವರರಂತಹ ನಟರಂತೂ ಎಂದೆಂದಿಗೂ ಫೇಮಸ್ ಆಗಿಯೇ ಉಳಿದಿದ್ದಾರೆ.
ಅನಂತರದ ದಶಕಗಳಲ್ಲಿ ಬಂದ ಶಿವರಾಜಕುಮಾರ್, ರವಿಚಂದ್ರನ್, ಜಗ್ಗೇಶ್, ದೇವರಾಜ್, ಶಶಿಕುಮಾರ್, ಉಪೇಂದ್ರ, ರಮೇಶ್ ಅರವಿಂದ್, ಸುದೀಪ್, ದರ್ಶನ್, ರಂಗಾಯಣ ರಘು, ಗಣೇಶ್, ರಕ್ಷಿತ್ ಶೆಟ್ಟಿ, ಶರಣ್, ಯಶ್, ವಿಜಯ್, ರಿಷಭ್ ಶೆಟ್ಟಿ, ವಿಜಯ್ ರಾಘವೇಂದ್ರ, ಶ್ರೀಮುರಳಿ ಹೊಸ ಅಲೆಯ ಚಿತ್ರಗಳಲ್ಲಿ ನಟಿಸಿ ಕನ್ನಡ ಚಿತ್ರರಂಗದ ಅಭಿವೃದ್ಧಿಯ ವೇಗವನ್ನು ತೀವ್ರವಾಗಿ ಹೆಚ್ಚಿಸಿದರು. ಹೊಸ ಅಲೆಯ ಹಲವು ನಟರು ನಟನೆಯ ಜೊತೆಗೆ ನಿರ್ದೇಶನ, ನಿರ್ಮಾಣಕ್ಕೂ ಇಳಿದಿರುವುದು ಚಿತ್ರರಂಗದ ದೃಷ್ಟಿಯಿಂದ ಆಗಿರುವ ಅತ್ಯುತ್ತಮ ಬೆಳವಣಿಗೆ.
ಬೆಳ್ಳಿತೆರೆಗೆ ನಮ್ಮ ನಿರ್ದೇಶಕ-ನಿರ್ಮಾಪಕರಂತೂ ಒಂದಕ್ಕಿಂತ ಒಂದು ಅತ್ಯುತ್ತಮ ಚಿತ್ರಗಳನ್ನು ನಿರ್ದೇಶಿಸಿ, ನಿರ್ಮಿಸಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡದ ಕೀರ್ತಿಯನ್ನು ಹಬ್ಬಿಸಿದ್ದಾರೆ. ‘ಬೇಡರ ಕಣ್ಣಪ್ಪ’ ಚಿತ್ರಕ್ಕೆ ಕೇಂದ್ರ ಪ್ರಶಸ್ತಿ ಬಂದಾಗಿನಿಂದ ಹಿಡಿದು ಕನ್ನಡದಲ್ಲಿ ಹಲವು ಚಿತ್ರಗಳು ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿವೆ. ಕು.ರಾ. ಸೀತಾರಾಮಶಾಸ್ತ್ರಿ, ದೊರೈ-ಭಗವಾನ್, ಎ.ವಿ. ಶೇಷಗಿರಿರಾವ್, ಬಿ.ಎಸ್. ರಂಗ, ಸಿದ್ದಲಿಂಗಯ್ಯ, ಎಚ್.ಆರ್. ಭಾರ್ಗವ, ಕೆ.ಎಸ್.ಎಲ್. ಸ್ವಾಮಿ, ಪಟ್ಟಾಭಿರಾಮರೆಡ್ಡಿ, ಎಸ್ ವಿ. ರಾಜೇಂದ್ರಸಿಂಗ್ ಬಾಬು, ಸುರೇಶ್ ಹೆಬ್ಳಿಕರ್, ಕಾಶೀನಾಥ್, ಕೆ.ವಿ. ರಾಜು, ಜಿ.ವಿ. ಅಯ್ಯರ್, ಉಮೇಶ್ ಕುಲಕರ್ಣಿ, ಗಿರೀಶ್ ಕಾಸರವಳ್ಳಿ, ಎಸ್. ನಾರಾಯಣ್, ಎಂ.ಎಸ್. ರಾಜಶೇಖರ್, ಫಣಿ ರಾಮಚಂದ್ರ, ಪಿ. ಶೇಷಾದ್ರಿ, ಸುನೀಲ್ಕುಮಾರ್ ದೇಸಾಯಿ, ನಾಗತಿಹಳ್ಳಿ ಚಂದ್ರಶೇಖರ್ ಹಾಗೂ ಇನ್ನೂ ಅನೇಕ ನಿರ್ದೇಶನ ನಿರ್ಮಾಣದ ಚಿತ್ರಗಳು ಚಿತ್ರರಂಗದಲ್ಲಿ ಶಾಶ್ವತ ಹೆಜ್ಜೆಗುರುತುಗಳನ್ನು ಮೂಡಿಸಿವೆ.
ಚಂದದ ಚಲುವಿನ ‘ತಾರೆ’
ತಮ್ಮ ಪ್ರತಿಭೆ ಮತ್ತು ಪರಿಶ್ರಮದಿಂದ ನಟನೆ, ಚಲನಚಿತ್ರ ನಿರ್ಮಾಣ, ನಿರ್ದೇಶನ, ಸಂಕಲನ ಕ್ಷೇತ್ರಗಳಲ್ಲಿ ಹಲವು ಮಹಿಳೆಯರು ಹೊರಹೊಮ್ಮಿದ್ದಾರೆ. ಬೆಳ್ಳಿತೆರೆ ಆರಂಭವಾದ ಕಾಲದಲ್ಲಿ ಚಲನಚಿತ್ರಗಳಲ್ಲಿ ನಟಿಸಲು ಮಹಿಳೆಯರು ಮುಂದೆ ಬರುತ್ತಲೇ ಇರಲಿಲ್ಲ. ಈ ಸಮಸ್ಯೆ ದಾದಾಸಾಹೇಬ್ ಫಾಲ್ಕೆಯವರಿಗೂ ಎದುರಾಗಿತ್ತು. ಕಾಲ ಬದಲಾದಂತೆ ಮಹಿಳೆಯರು ಚಲನಚಿತ್ರರಂಗದಲ್ಲಿ ತೊಡಗಿಸಿಕೊಳ್ಳಲು ಆರಂಭಿಸಿದರು. ಮೂಕಿ ಚಿತ್ರಗಳ ಕಾಲದಲ್ಲಿ ನಟಿ ಲಕ್ಷ್ಮೀಬಾಯಿ ಮೆರೆದರು. ಸಂಸಾರ ನೌಕದ ಎಂ.ವಿ. ರಾಜಮ್ಮ ನಟನೆಯನ್ನಷ್ಟೇ ಅಲ್ಲದೆ ಚಿತ್ರ ನಿರ್ಮಾಣವನ್ನೂ ಮಾಡಿದರು. ಅವರು ನಿರ್ಮಿಸಿದ ಮಲ್ಟಿಸ್ಟಾರರ್ ಚಿತ್ರ ವಿಜಯವಾಣಿ ಗಮನ ಸೆಳೆಯಿತು. ಬಿ. ಸರೋಜಾದೇವಿ ಕನ್ನಡ ಹಾಗೂ ತಮಿಳು ಚಲನಚಿತ್ರರಂಗಗಳೆರಡರಲ್ಲಿಯೂ ಅಪಾರ ಮೆಚ್ಚುಗೆ ಗಳಿಸಿದರು. ಪಂಢರಿಬಾಯಿ, ಬಿ. ಜಯಮ್ಮ, ಲಕ್ಷ್ಮೀದೇವಿ, ಜಯಂತಿ, ಕಲ್ಪನಾ, ಭಾರತಿ, ಲೀಲಾವತಿ, ಆರತಿ, ಮಂಜುಳಾ, ಗೀತಾ, ಲಕ್ಷ್ಮೀ, ಜಯಮಾಲಾ, ಸುಧಾರಾಣಿ, ಮಾಲಾಶ್ರೀ, ಉಮಾಶ್ರೀ, ತಾರಾ, ಶ್ರುತಿ, ಪ್ರೇಮಾ, ಪೂಜಾ ಗಾಂಧಿ, ಹೀಗೆ ಸಾಲು ಸಾಲು ನಟಿಯರು ಬೆಳ್ಳಿತೆರೆಯನ್ನು ಶ್ರೀಮಂತಗೊಳಿಸಿದರು. ಇಲ್ಲಿ ಹೆಸರಿಸಿದವರಲ್ಲಿ ಪ್ರತಿಯೊಬ್ಬರೂ ತಮ್ಮ ಮನೋಜ್ಞ ಅಭಿನಯದಿಂದ ಮನೆಮಾತಾದರು. ಎಷ್ಟೋ ಸಂದರ್ಭಗಳಲ್ಲಿ ನಾಯಕ ನಟರನ್ನು ಮೀರಿ ಮಿಂಚಿದರು. (ಆದರೆ ಸಂಭಾವನೆ ವಿಷಯಕ್ಕೆ ಬಂದಾಗ ನಟ-ನಟಿಯರ ನಡುವೆ ಇರುವ ತಾರತಮ್ಯದಿಂದ ಕನ್ನಡಚಿತ್ರರಂಗ ಇನ್ನೂ ಹೊರಬಂದಿಲ್ಲದೇ ಇರುವುದು ವಿಷಾದದ ವಿಷಯ) ಇವರಲ್ಲಿ ಹಲವು ನಟಿಯರು ಕನ್ನಡ ಮಾತ್ರವಲ್ಲದೆ ಭಾರತದ ದಕ್ಷಿಣ ಭಾಗದ ಭಾಷೆಗಳಲ್ಲಿ ಕೂಡ ಮನೆಮಾತಾದರು. ಇನ್ನು ಕೆಲವು ನಟಿಯರು ನಾಯಕರಿಗೆ ನಾಯಕಿಯಾಗಿ ನಟಿಸಿ, ಅನಂತರದ ದಿನಗಳಲ್ಲಿ ತಾಯಿಯಾಗಿಯೂ ನಟಿಸಿ ಸೈ ಎನಿಸಿಕೊಂಡರು. (ಇದೇ ವಿಷಯವನ್ನು ನಾಯಕರ ವಿಷಯದಲ್ಲಿ ಹೇಳುವುದು ಕಷ್ಟ). ಮಾಲಾಶ್ರೀ, ಶ್ರುತಿ, ಉಮಾಶ್ರೀಯವರಂತಹ ನಟಿಯರು ತಮ್ಮದೇ ಅಭಿಮಾನಿ ಬಳಗವನ್ನು ಪಡೆದುಕೊಂಡರು. ಹೊಸ ಕಾಲಘಟ್ಟದಲ್ಲಿಯಂತೂ ಹೊಸಹೊಸ ನಟಿಯರು ಬೆಳ್ಳಿತೆರೆಗೆ ಪರಿಚಯವಾಗುತ್ತಲೇ ಇದ್ದಾರೆ.
ಸಂಗೀತ–ಸಾಹಿತ್ಯ–ಹಿನ್ನೆಲೆ ಗಾಯನ
ಕನ್ನಡ ಚಲನಚಿತ್ರಗಳದ್ದಷ್ಟೇ ಅಲ್ಲ ಭಾರತೀಯ ಚಲನಚಿತ್ರಗಳ ಜೀವಾಳವೇ ಸಂಗೀತ-ಸಾಹಿತ್ಯ-ಹಿನ್ನೆಲೆ ಗಾಯನ. ಬೆಳ್ಳಿತೆರೆಯಲ್ಲಿ ಚಿತ್ರಗಳು-ಪಾತ್ರಗಳು ಎಷ್ಟು ನೆನಪಿವೆಯೋ ಗೊತ್ತಿಲ್ಲ, ಆದರೆ ಹಾಡುಗಳು ಮಾತ್ರ ಜನರ ಮನಸ್ಸಿನಲ್ಲಿ ಇಂದಿಗೂ ಮನೆ ಮಾಡಿವೆ. ಈ ಹಾಡುಗಳು ಎಷ್ಟು ಪ್ರಸಿದ್ಧವೆಂದರೆ ಈ ಹಾಡುಗಳಿಂದಲೇ ಚಲನಚಿತ್ರಗಳು ನೆನಪಿನಲ್ಲುಳಿಯುವಂತಾಗಿದೆ. ಈ ಹಾಡುಗಳು ನಟರಿಗೆ ತಾರಾಮೌಲ್ಯ ನೀಡಿವೆ. ಆರಂಭದಲ್ಲಿ ಬಂದ ಪೌರಾಣಿಕ ಚಲನಚಿತ್ರಗಳಲ್ಲಿ ಸಾಮಾನ್ಯವಾಗಿ ನಾಟಕದ ಹಾಡುಗಳನ್ನೇ ಬಳಸಿಕೊಳ್ಳಲಾಯಿತು. ನಾಟಕಗಳಲ್ಲಿ ಕಲಾವಿದರು, ಗಾಯಕರೂ ಆಗಬೇಕಾಗಿದ್ದರಿಂದ ಈ ಪರಂಪರೆ ಚಲನಚಿತ್ರಗಳಲ್ಲಿಯೂ ಮುಂದುವರಿಯಿತು. ಹಿನ್ನೆಲೆ ಗಾಯನ ಎಂಬ ಪರಿಕಲ್ಪನೆ ಅನಂತರದ ದಿನಗಳಲ್ಲಿ ಮುನ್ನಲೆಗೆ ಬಂತು. ಇದುವರೆಗೆ ಕನ್ನಡ ಚಲನಚಿತ್ರರಂಗ ಅದ್ಭುತ ಗಾಯಕರನ್ನೂ, ಅತ್ಯುತ್ತಮ ಸಂಗೀತ ನಿರ್ದೇಶಕರನ್ನೂ ನೀಡಿದೆ. ಎಸ್. ಜಾನಕಿ, ಘಂಟಸಾಲ, ಎಲ್.ಆರ್. ಈಶ್ವರಿ, ಬೆಂಗಳೂರು ಲತಾ, ಬಾಂಬೆ ಜಯಶ್ರೀ, ಎಸ್.ಪಿ. ಶೈಲಜಾ, ಬಿ.ಆರ್. ಛಾಯಾ, ಕೆ.ಎಸ್. ಚಿತ್ರ, ಪಿ. ಕಾಳಿಂಗರಾವ್, ಪಿ.ಬಿ. ಶ್ರೀನಿವಾಸ್, ಎಸ್.ಪಿ. ಬಾಲಸುಬ್ರಹ್ಮಣ್ಯಂ, ಕೆ.ಜೆ. ಯೇಸುದಾಸ್, ಡಾ. ರಾಜಕುಮಾರ್, ಶಿವಮೊಗ್ಗ ಸುಬ್ಬಣ್ಣ, ಸಿ. ಅಶ್ವತ್ಥ್, ವಿಜಯ್ ಪ್ರಕಾಶ್, ರಾಜೇಶ್ ಕೃಷ್ಣನ್, ವಾಸುಕಿ ವೈಭವ್, ಚಂದನ್ ಶೆಟ್ಟಿ – ಹೀಗೆ ಅಸಂಖ್ಯಾತ ಗಾಯಕರನ್ನು ಈ ನಿಟ್ಟಿನಲ್ಲಿ ಹೆಸರಿಸಬಹುದು. ಭೀಮಸೇನ ಜೋಷಿ ತರಹದ ಹಿಂದೂಸ್ತಾನಿ ಗಾಯಕರೂ ಕೂಡ ಚಲನಚಿತ್ರಗಳಿಗೆ ದನಿಯಾಗಿದ್ದಾರೆ. ಬೇರೆ ಭಾಷೆಯಿಂದ ಲತಾ ಮಂಗೇಶ್ಕರ್, ಆಶಾ ಭೋಸ್ಲೆ, ಮಹಮ್ಮದ್ ರಫಿ, ಮನ್ನಾಡೇ, ಸೋನು ನಿಗಮ್, ಸುನಿಧಿ ಚವ್ಹಾಣ್, ಶ್ರೇಯಾ ಘೋಷಾಲ್ ಸೇರಿದಂತೆ ಅನೇಕ ಗಾಯಕ-ಗಾಯಕಿಯರು ಕನ್ನಡ ಚಲನಚಿತ್ರಗಳನ್ನು ಸಮೃದ್ಧಗೊಳಿಸಿದ್ದಾರೆ. (ಪರಭಾಷೆಯಿಂದ ತಾರೆಯರನ್ನು ಕರೆತರುವುದಕ್ಕೆ ಹೇಗೆ ಆಕ್ಷೇಪವಿದೆಯೋ, ಹಾಗೆಯೇ ಪರಭಾಷೆ ಹಾಡುಗಾರರಿಂದ ಹಾಡು ಹೇಳಿಸಲು ಕೂಡ ಆಕ್ಷೇಪವಿದೆ. ಕನ್ನಡದ ಕೆಲವು ಉತ್ತಮ ಹಾಡುಗಳನ್ನು ಈ ಹಾಡುಗಾರರ ಅ ಕಾರ ಹ ಕಾರ ಸಮಸ್ಯೆಯಿಂದಾಗಿ, ಕೇಳಲು ಕಿರಿಕಿರಿಯಾಗುತ್ತದೆ ಎಂದು ಶ್ರೋತೃಗಳು ಆಕ್ಷೇಪಿಸುತ್ತಾರೆ.)
ಕನ್ನಡದ ಸಾಹಿತ್ಯಕ್ಕೆ ಅದ್ಭುತ ಸಂಗೀತ ನಿರ್ದೇಶನವನ್ನು ನೀಡಿದವರಲ್ಲಿ ಜಿ.ಕೆ. ವೆಂಕಟೇಶ್, ವಿಜಯಭಾಸ್ಕರ್, ಟಿ.ಜಿ. ಲಿಂಗಪ್ಪ, ಇಳಯರಾಜಾ, ಘಂಟಸಾಲ, ರಾಜನ್-ನಾಗೇಂದ್ರ, ಎಂ. ರಂಗರಾವ್, ವಿ. ಮನೋಹರ್, ಕೆ. ಕಲ್ಯಾಣ್, ಗುರುಕಿರಣ್, ಹಂಸಲೇಖ, ಅರ್ಜುನ್ ಜನ್ಯ, ವಿ. ಹರಿಕೃಷ್ಣ, ಅನೂಪ್ ಸಿಳೀನ್ – ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ.
ಅದೊಂದು ಕಾಲವಿತ್ತು. ಚಿತ್ರಮಂದಿರಗಳಲ್ಲಿ ಆಯಾ ಚಿತ್ರದ ಹಾಡುಗಳ ಪುಸ್ತಕವನ್ನು ಮಾರಲಾಗುತ್ತಿತ್ತು. ಮಧ್ಯಂತರದಲ್ಲಿ ಅಥವಾ ಚಿತ್ರ ಮುಗಿದ ಮೇಲೆ ಪ್ರೇಕ್ಷಕರು ಇದನ್ನು ಕೊಳ್ಳುತ್ತಿದ್ದರು. ಹಲವು ಹಾಡುಗಳನ್ನು ಮಕ್ಕಳಿಗೆ ಕಲಿಸಲಾಗುತ್ತಿತ್ತು. ಇತ್ತೀಚಿನ ಕೆಲವು ಸಿನೆಮಾಗಳ ಸಾಹಿತ್ಯವನ್ನು ನೋಡಿದರೆ, ಈ ರೀತಿಯಲ್ಲಿ ಗೀತರಚನೆ ಮಾಡಲು ಸಾಧ್ಯವಿದೆಯೆ ಅಥವಾ ಇದೂ ಒಂದು ಹಾಡಿನ ಸಾಲೆ ಎಂಬ ಪ್ರಶ್ನೆ ಮೂಡುತ್ತದೆ. ಏನೇ ಇರಲಿ, ಕು.ರಾ. ಸೀತಾರಾಮಶಾಸ್ತ್ರಿ, ಹುಣಸೂರು ಕೃಷ್ಣಮೂರ್ತಿ, ವಿಜಯನಾರಸಿಂಹ, ಚಿ. ಉದಯಶಂಕರ್, ಆರ್.ಎನ್. ಜಯಗೋಪಾಲ್, ದೊಡ್ಡರಂಗೇಗೌಡ, ಗೀತಪ್ರಿಯ, ಜಯಂತ ಕಾಯ್ಕಿಣಿ, ಕವಿರಾಜ್, ವಿ. ನಾಗೇಂದ್ರಪ್ರಸಾದ್ ಮುಂತಾದವರು ಬೆಳ್ಳಿತೆರೆಯನ್ನು ತಮ್ಮ ಗೀತರಚನೆಯಿಂದ ಶ್ರೀಮಂತಗೊಳಿಸಿದ್ದಾರೆ.
ಹಳಿ ತಪ್ಪಿದ್ದು
ಕಳೆದೆರಡು ಮೂರು ದಶಕಗಳಲ್ಲಿ ಬಂದಿರುವ ಚಲನಚಿತ್ರಗಳನ್ನು ಗಮನಿಸಿದಾಗ ಕೆಲವು ಅಪಸವ್ಯಗಳನ್ನೂ ಗುರುತಿಸಬಹುದು. ಯಾವುದೋ ಒಂದೆರಡು ಮಚ್ಚು-ಲಾಂಗು ಆಧಾರಿತ ಚಲನಚಿತ್ರಗಳು ಹಿಟ್ ಆದವೆಂಬ ಕಾರಣಕ್ಕೆ ಸಾಲುಸಾಲಾಗಿ ಇದೇ ರೀತಿಯ ಚಿತ್ರಗಳು ಬರಲಾರಂಭಿಸಿದವು. ಇದು ಪ್ರೇಕ್ಷಕನಿಗೆ ವಾಕರಿಕೆ ತರಿಸುವಷ್ಟು ಜಾಸ್ತಿಯಾದರೂ, ಇನ್ನೂ ಕೂಡ ಮಚ್ಚು-ಲಾಂಗಿನ ಹುಚ್ಚು ಕೆಲವು ನಿರ್ದೇಶಕರಿಗೆ ಹಾಗೂ ನಟರಿಗೆ ಇಳಿದಿಲ್ಲ. ಇಂತಹ ಚಿತ್ರಗಳಿಗೆ ಪೇಯ್ಡ್ ಪ್ರಮೋಷನ್ನಿಂದಾಗಿ, ಅವು ಒಂದು ವಾರ ಓಡಿದರೂ, ಅದನ್ನು ಹಿಟ್ ಎಂದು ಕರೆದು ಆ ನಾಯಕ ನಟನನ್ನು ಮೆರೆಸಲಾಗುತ್ತದೆ. ಇನ್ನು ಕೆಲವು ನಿರ್ಮಾಪಕ-ನಿರ್ದೇಶಕರಿಗೆ ನಟಿಯ ಮೈಮಾಟವೇ ಬಂಡವಾಳ. ಚಿತ್ರದಲ್ಲಿ ವ್ಯಾಪಕವಾಗಿ ನಟಿಯ ಮೈಮಾಟ ಇರಲೇಬೇಕು. ಆ ನಟಿಯನ್ನು ತೋರಿಸಲು ಅನಗತ್ಯವಾದ ಕ್ಯಾಬರೆ, ಐಟಂಸಾಂಗ್ ತುರುಕಿಸಬೇಕು. ನಟನ ಮೈಕಟ್ಟು ತೋರಿಸಬೇಕೆಂದು ಒಬ್ಬನೇ ನಟ ನೂರಾರು ಜನರನ್ನು ಹೊಡೆಯುವ ಅತ್ಯಂತ ಅವಾಸ್ತವಿಕ ಹಾಗೂ ಹೆಚ್ಚಿನ ಸಂದರ್ಭಗಳಲ್ಲಿ ಹಾಸ್ಯಾಸ್ಪದ ದೃಶ್ಯಗಳನ್ನೂ ತೋರಿಸಬೇಕು. ಒಂದು ಚಿತ್ರವೆಂದರೆ ಐದು ಹಾಡು, ಅದರಲ್ಲಿ ಒಂದು ಐಟಂಸಾಂಗ್, ನಾಲ್ಕು ಫೈಟು, ಅತಿಯಾದ ಹಿಂಸೆ ಎಂಬ ಸಿದ್ಧಸೂತ್ರವನ್ನಿಟ್ಟುಕೊಂಡಿರುವ ನಿರ್ಮಾಪಕರನ್ನು ನೋಡಿದರೆ ಮರುಕ ಹುಟ್ಟದಿರಲಾರದು.
* * *
ಒಂದು ಉದ್ಯಮದ ೯೦ ವರ್ಷಗಳೆಂದರೆ ಅದು ಸಾಮಾನ್ಯವಲ್ಲ. ಈ ೯೦ ವರ್ಷಗಳಲ್ಲಿ ಕಪ್ಪು-ಬಿಳುಪಿನಿಂದ ಚಿತ್ರ ವರ್ಣಮಯವಾಗಿದೆ. ೩ಡಿ ಆಗಿದ್ದು ವರ್ಚುವಲ್ ರಿಯಾಲಿಟಿಯಾಗಿದೆ. ಟಾಕಿಯಾಗಿದ್ದು ಡಾಲ್ಬಿಯಾಗಿ ೭.೧ ಆಗಿದೆ. ಗ್ರಾಫಿಕ್ ಇಫೆಕ್ಟ್ಗಳಿಲ್ಲದೆ ಹೊಸ ಚಿತ್ರಗಳನ್ನು ಊಹಿಸಿಕೊಳ್ಳುವುದೂ ಕಷ್ಟವಾಗಿದೆ. ಥಿಯೇಟರ್ಗಳು ಮುಚ್ಚಿ ಮಲ್ಟಿಸ್ಕ್ರೀನ್ಗಳು ಬಂದಿವೆ. ಹಳೇ ಥಿಯೇಟರುಗಳು ಮಾಲ್ಗಳಾಗಿವೆ. ಓಟಿಟಿಗಳು ದಾಂಗುಡಿಯಿಟ್ಟು ಪ್ರತಿಯೊಬ್ಬರ ಕಿಸೆಯಲ್ಲೇ ಥಿಯೇಟರುಗಳು ನಿರ್ಮಾಣಗೊಂಡಿವೆ. ಆದರೆ ಪ್ರಾಮಾಣಿಕ ಪ್ರಯತ್ನಗಳಿಗೆ ಓಟಿಟಿ ಕೂಡ ಪರಿಹಾರ ನೀಡಿಲ್ಲ ಎಂಬ ಕೂಗೂ ಇದೆ. ಓಟಿಟಿಯವರ ನಿಬಂಧನೆಗಳು ಹಾಗೂ ದರಕ್ಕೆ ಬೇಸತ್ತು ಎಷ್ಟೋ ನಿರ್ಮಾಪಕರು ಯೂಟ್ಯೂಬ್ನಲ್ಲಿ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಓಟಿಟಿಗಳ ಏಕಸ್ವಾಮ್ಯಕ್ಕೆ ಸೆಡ್ಡುಹೊಡೆದಿದ್ದಾರೆ. ಅಷ್ಟೇ ಅಲ್ಲ, ದೈತ್ಯ ಓಟಿಟಿಗಳಿಗೆ ಎಚ್ಚರಿಕೆಯ ಸಂದೇಶವನ್ನೂ ನೀಡಿದ್ದಾರೆ. ಯಾಕೆಂದರೆ ಇಂತಹ ಚಿತ್ರಗಳು ಯೂಟ್ಯೂಬ್ನಲ್ಲಿ ಬಿಡುಗಡೆಯಾದ ಕೆಲವೇ ದಿನಗಳಲ್ಲಿ ಲಕ್ಷಾಂತರ ವೀಕ್ಷಣೆಯನ್ನೂ, ಮೆಚ್ಚುಗೆಯನ್ನೂ ಪಡೆದಿವೆ. ಕಳೆದ ಕೆಲ ವರ್ಷಗಳಲ್ಲಿ ಚಿತ್ರರಂಗದಲ್ಲಿ ನಡೆದಿರುವ ಪ್ರಯೋಗಗಳಿಗೂ ಕೊರತೆಯಿಲ್ಲ. ಮುಂಗಾರು ಮಳೆ, ಆ ದಿನಗಳು, ಗೋಧಿ ಬಣ್ಣ ಸಾಧಾರಣ ಮೈಕಟ್ಟು, ರಂಗಿತರಂಗ, ಉಳಿದವರು ಕಂಡಂತೆ, ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು, ಕಾಂತಾರ, ಒಂದು ಮೊಟ್ಟೆಯ ಕಥೆ, ಆಪರೇಷನ್ ಅಲಮೇಲಮ್ಮ, ಕೋಳಿ ಎಸ್ರು, ಹದಿನೇಳೆಂಟು, ಟಗರುಪಲ್ಯ, ಆಚಾರ್ ಆಂಡ್ ಕೋ, ಒನ್ ಕಟ್ ಟೂ ಕಟ್ – ಹೀಗೆ ಅನೇಕ ಚಲನಚಿತ್ರಗಳು, ಕನ್ನಡ ಸಿನೆಮಾರಂಗದ ಕೌಶಲವನ್ನೂ ಪ್ರತಿಭೆಯನ್ನೂ ಅನಾವರಣಗೊಳಿಸಿವೆ. (ಮಾಸ್ ನಟರ ಚಿತ್ರಗಳು ನಿಜವಾಗಿಯೂ ಹಿಟ್ ಆಗಿವೆಯೆ ಎಂಬುದಕ್ಕೆ ಆ ನಟರುಗಳ ಆತ್ಮಸಾಕ್ಷಿಯೇ ಉತ್ತರಿಸಬೇಕು.)
ಇದೀಗ ಸರ್ಕಾರಗಳಿಗೆ ಸಿನೆಮಾ ಎನ್ನುವುದು ಎಷ್ಟು ಮುಖ್ಯ ಎಂಬ ಪ್ರಶ್ನೆಯೂ ಎದುರಾಗಿದೆ. ಸಬ್ಸಿಡಿ ಹಣ ತಡವಾಗಿ ಬಿಡುಗಡೆ ಮಾಡುವುದು, ಕಾಲಕಾಲಕ್ಕೆ ಘೋಷಿಸಬೇಕಾದ ಪ್ರಶಸ್ತಿಗಳನ್ನು ವಿಳಂಬಮಾಡಿ ಯಾವಾಗಲೋ ಘೋಷಿಸುವುದು, ತಮ್ಮ ವೈಯಕ್ತಿಕ ಇಷ್ಟ-ಆಯ್ಕೆಯಂತೆ ಕೆಲವು ಚಿತ್ರಗಳಿಗೆ ಮಾತ್ರ ತೆರಿಗೆ ವಿನಾಯತಿ ಘೋಷಿಸಿ, ಅಷ್ಟೇ ಅಥವಾ ಅದಕ್ಕಿಂತ ಉತ್ತಮವಾದ ಚಿತ್ರಗಳಿಗೆ ಕ್ಯಾರೆ ಎನ್ನದಿರುವುದು ಚಿತ್ರರಂಗಕ್ಕೆ ಬಿಸಿತುಪ್ಪವಾಗಿ ಪರಿಣಮಿಸಿದೆ.
ಇದೇ ವೇಳೆ, ಬೆಳ್ಳಿತೆರೆಯ ಮತ್ತೊಂದು ಮುಖದಲ್ಲಿ ಸಂಕಟವಿದೆ. ಇಲ್ಲಿ ಮಾರುಕಟ್ಟೆ ಅಧ್ಯಯನ ಮಾಡದೆ ಬಿಗ್ ಬಜೆಟ್ಗೆ ಕೈ ಹಾಕಿ ಆತ್ಮಹತ್ಯೆ ಮಾಡಿಕೊಂಡಿರುವ ಪ್ರತಿಭಾವಂತ ನಿರ್ದೇಶಕ, ನಿರ್ಮಾಪಕರದಿದ್ದಾರೆ. ಸಿನೆಮಾ ಅಂದರೆ ಹಗಲಿನಲ್ಲಿಯೇ ಬೆಚ್ಚಿಬೀಳುತ್ತಾರೆ. ಮನೆ ಮಠ ಆಸ್ತಿ ಮಾರಿಕೊಂಡು ಬೀದಿಗೆ ಬಂದವರಿದ್ದಾರೆ. ಆರ್ಥಿಕ ಏಟಿನಿಂದ ಜರ್ಜರಿತಗೊಂಡು ಸೋತವರಿದ್ದಾರೆ.
ಥಿಯೇಟರು ಹೊರಗಡೆ ಚಿತ್ರ ಚೆನ್ನಾಗಿಲ್ಲವೆಂದು ಮಾಧ್ಯಮದ ಜೊತೆ ಮಾತನಾಡಿದರೆ ಆ ನಟನ ಅಭಿಮಾನಿಗಳು ಹಲ್ಲೆಗೆ ಮುಂದಾಗುತ್ತಾರೆ. ಸಾಮಾಜಿಕ ಜಾಲತಾಣದಲ್ಲಿ ಚಿತ್ರ ಚೆನ್ನಾಗಿಲ್ಲವೆಂದೋ, ಇಷ್ಟವಾಗಲಿಲ್ಲವೆಂದೋ ಯಾರಾದರೂ ಮಾತನಾಡಿದರೆ ಅವರಿಗೆ ಬೆದರಿಕೆ ಹಾಕಿ ಸಂಜೆ ವೇಳೆಗೆ ಅಂತಹವರಿಂದ ಕ್ಷಮೆ ಕೇಳಿಸಲಾಗುತ್ತದೆ. ಇಂತಹ ಘಟನೆಗಳ ಕುರಿತು ಆಯಾಯಾ ನಟರು ಕೂಡ ಜಾಣಕುರುಡನ್ನು ಪ್ರದರ್ಶಿಸುತ್ತಾರೆ. ಹೀಗಾಗಿ ಚಿತ್ರವೊಂದಕ್ಕೆ ನಿರ್ಭೀತ ಅಭಿಪ್ರಾಯವನ್ನು ನೀಡಬೇಕಾದರೂ ಯೋಚನೆ ಮಾಡಿಕೊಂಡು ನೀಡುವಂತಾಗಿದೆ.
ಪ್ರೇಕ್ಷಕ ಬದಲಾಗಿದ್ದಾನೆಯೆ? ಬಹುಶಃ ಪ್ರೇಕ್ಷಕ ಅದೇ ಇದ್ದಾನೆ. ಆದರೆ ತಂತ್ರಜ್ಞಾನ ಬದಲಾಗಿದೆ. ಹಾಗಾಗಿ ಹೊಸ ಮಾರುಕಟ್ಟೆಯಲ್ಲಿ ಹೊಸ ತಂತ್ರಜ್ಞಾನದಲ್ಲಿ ಯಾವ ರೀತಿಯ ಸಿನೆಮಾಗಳು ಪ್ರೇಕ್ಷಕರನ್ನು ಮುಟ್ಟಬೇಕು ಎನ್ನುವುದನ್ನು ನಿರ್ದೇಶಕ-ನಿರ್ಮಾಪಕ-ಕಲಾವಿದರು-ತಂತ್ರಜ್ಞರು ಯೋಚಿಸಬೇಕಿದೆ. ಚಿತ್ರರಂಗದ ಒಳಿತಿಗೆ ಹೋಮ-ಹವನಗಳನ್ನು ಮಾಡಿ ದೇವರಲ್ಲಿ ಪ್ರಾರ್ಥನೆ ಮಾಡಿಕೊಳ್ಳುವುದರ ಜೊತೆಗೆ, ಚಿತ್ರರಂಗ ಹೊಸ ಆಲೋಚನೆಯೊಂದಿಗೆ ಮುಕ್ತಮನಸ್ಸಿನಿಂದ ಮುನ್ನಡೆದರೆ ಮಾತ್ರ, ಕನ್ನಡಚಿತ್ರರಂಗದ ಶತಮಾನೋತ್ಸವವನ್ನು ಸಾರ್ಥಕವಾಗಿ, ಆತ್ಮತೃಪ್ತಿಯಿಂದ ಆಚರಿಸಬಹುದು.
ಕನ್ನಡ ಚಲನಚಿತ್ರದ ಪ್ರಥಮಗಳು
- ಮೊದಲ ವರ್ಣಮಯ ಚಿತ್ರ – ಅಮರಶಿಲ್ಪಿ ಜಕ್ಕಣಾಚಾರಿ
- ಪ್ರಥಮ ಮಹಿಳಾ ನಿರ್ಮಾಪಕಿ – ಎಂ ವಿ ರಾಜಮ್ಮ (ಚಿತ್ರ – ರಾಧಾರಮಣ)
- ರಜತೋತ್ಸವ ಆಚರಿಸಿದ ಪ್ರಥಮ ಚಿತ್ರ – ಸತ್ಯ ಹರಿಶ್ಚಂದ್ರ (೧೯೪೩)
- ತಮಿಳಿಗೆ ಡಬ್ ಆದ ಭಾರತದ ಪ್ರಥಮ ಚಿತ್ರ – ಸತ್ಯ ಹರಿಶ್ಚಂದ್ರ
- ಕರ್ನಾಟಕ ನೆಲದಲ್ಲಿ ತಯಾರಾದ ಮೊದಲ ಚಿತ್ರ – ರಾಜಸೂಯಯಾಗ
- ಕಾದಂಬರಿ-ಆಧಾರಿತ ಚಿತ್ರ – ಕರುಣೆಯೇ ಕುಟುಂಬದ ಕಣ್ಣು (ಕೃಷ್ಣಮೂರ್ತಿ ಪುರಾಣಿಕರ ಧರ್ಮದೇವತೆ ಕಾದಂಬರಿ ಆಧಾರಿತ)
- ರಾಷ್ಟ್ರ ಪ್ರಶಸ್ತಿ ಪಡೆದ ಚಿತ್ರ – ಬೇಡರ ಕಣ್ಣಪ್ಪ
- ಸಾಮಾಜಿಕ ಚಲನಚಿತ್ರ – ಸಂಸಾರ ನೌಕ