ರಾತ್ರಿ ಸೂರ್ಯನಿರದಿದ್ದರೇನಂತೆ, ದೀಪದ ಸಹಾಯದಿಂದ ವಸ್ತುಗಳನ್ನು ನೋಡಬಹುದು. ರವಿಕಿರಣ, ದೀಪಗಳೆಲ್ಲ ಬೆಳಕು ಕೊಡುತ್ತಿವೆ ಸರಿ… ಆದರೆ ಅವನ್ನು ನೋಡುವ ಬೆಳಕಾವುದು? ಅವನ್ನೆಲ್ಲ ಕಣ್ಣಿನಿಂದ ನೋಡುತ್ತೇವಾದ್ದರಿಂದ ಕಣ್ಣೇ ಬೆಳಕೆನ್ನಬಹುದು.
ಕಣ್ಣೇ ಬೆಳಕು ಎನ್ನುವುದಾದರೆ, ಆ ಕಣ್ಣುಗಳನ್ನು ಮುಚ್ಚಿದಾಗಲೂ ಏನೇನೋ ಚಿತ್ರಗಳನ್ನು ಕಾಣುವೆಯಲ್ಲ, ನೆನಪು–ಕನಸುಗಳ ಏನೇನೋ ಕಲಸಿಟ್ಟ ಚಿತ್ರಗಳಿವೆಯಲ್ಲ…
ಕಣ್ಣು ಮುಚ್ಚಿದಾಗಲೂ ಅವನ್ನೆಲ್ಲ ತೋರುತ್ತಿರುವ ಬೆಳಕಾವುದದು?
‘ತಮಸೋ ಮಾ ಜ್ಯೋತಿರ್ಗಮಯ…’ ಕತ್ತಲಿನಿಂದ ಬೆಳಕಿನೆಡೆಗೆ ಎಂಬುದನ್ನು ನಮ್ಮ ಸಂಸ್ಕೃತಿ ಅವೆಷ್ಟೋ ಸಹಸ್ರ ವರ್ಷಗಳ ಹಿಂದೆ ಸಾರಿತು.
ಬೇರೊಂದು ನಂಬುಗೆ ತನ್ನ ದೇವರ ಕಲ್ಪನೆ ಬಿಚ್ಚಿಡುತ್ತ ಹೇಳುತ್ತದೆ – ಸೃಷ್ಟಿಕ್ರಿಯೆಯಲ್ಲಿ ದೇವರು ಹೇಳಿದ ಮೊದಲ ಶಬ್ದವೇ ಬೆಳಕಾಗಲಿ… ಲೆಟ್ ದೇರ್ ಬಿ ಲೈಟ್ – ಎಂದು.
ದೇವರ ಮುಂದೊಂದು ದೀಪ ಹಚ್ಚಿಡು ಎನ್ನುವುದು ನಮ್ಮ ಶ್ರದ್ಧೆಯ ಪ್ರಾರಂಭಬಿಂದು. ಮತ್ತೇನು ಪೂಜಾಪಾಠಗಳನ್ನು ಮಾಡಲಾಗದಿದ್ದರೂ ಅದೊಂದಾದರೂ ಮಾಡಲೇಬೇಕಾದ ಕಾರ್ಯ ಎಂಬರ್ಥದ ಒತ್ತಾಸೆಯೊಂದು ಅಲ್ಲಿದೆ.
ಹಿರಿಯರು-ಗುರುಗಳ ಚಿತ್ರಗಳನ್ನು ಪ್ರಸ್ತುತಪಡಿಸುವಾಗ ಅವರ ಶಿರೋಭಾಗದಲ್ಲಿ ಬೆಳಕಿನ ಪ್ರಭಾವಳಿಯೊಂದನ್ನು ತೋರಿಸುತ್ತೇವೆ.
ಹೀಗೆಲ್ಲ ಉದಾಹರಣೆಗಳನ್ನು ವಿಸ್ತರಿಸುತ್ತ ಹೋಗಬಹುದು. ತಾತ್ಪರ್ಯವಿಷ್ಟೆ – ದೇವರು- ಸೃಷ್ಟಿತತ್ತ್ವವನ್ನು ಅರ್ಥಮಾಡಿಕೊಳ್ಳುವ ಯತ್ನದಲ್ಲಿ ಮಾನವನು ಬೆಳಕನ್ನೇ ಬಹುವಾಗಿ ನೆಚ್ಚಿದ್ದಾನೆ. ಅದರ ಬೆನ್ನೇರಿ ಹೋಗುವುದು ಸಾಧ್ಯವಾದರೆ ಹಲವು ರಹಸ್ಯಗಳು ತೆರೆದುಕೊಳ್ಳಬಹುದೆಂಬ ನಂಬಿಕೆ-ಆಸ್ಥೆಗಳಿವೆ.
ಲೋಕವನ್ನು ಬೆಳಗಿಸುವ, ನಮ್ಮೊಳಗೂ ಇದೆಯೆಂದು ಜ್ಞಾನಿಗಳು ಹೇಳುವ ಈ ಬೆಳಕು ಯಾವುದದು ಎಂಬುದರ ಮೇಲೆ ತತ್ತ್ವಜ್ಞಾನದ ಆಸಕ್ತರ ಯಾನ.
ವಿಜ್ಞಾನದ ಬೆಳಕಿನ ಸವಾರಿ
ತತ್ತ್ವಜ್ಞಾನದ ಮಾತು ಹಾಗಿರಲಿ, ವಿಜ್ಞಾನವಂತೂ ಬೆಳಕೆಂದರೆ ಏನು ಅಂತ ಸೀಳಿ ಇಟ್ಟುಬಿಟ್ಟಿದೆ ಎಂದು ನೀವು ಹೇಳುತ್ತೀರೇನೋ.
ಇಲ್ಲ, ಒಂದು ಭೌತಿಕ ವಸ್ತುವಾಗಿ ಬೆಳಕನ್ನು ವ್ಯಾಖ್ಯಾನವೊಂದಕ್ಕೆ ವಿಜ್ಞಾನ ತಂದು ಕೂರಿಸಿದೆಯಾದರೂ, ಆ ವ್ಯಾಖ್ಯಾನ ಯಾವತ್ತಾದರೂ ಬದಲಾದರೂ ಆಗಬಲ್ಲದು! ಏಕೆಂದರೆ, ವಿಜ್ಞಾನದ ಪಾಲಿಗೂ ಬೆಳಕಿನ ಬೆರಗೆಂಬುದು ಪೂರ್ತಿ ಮುಗಿದುಹೋಗಿದೆ ಅಂತೇನಿಲ್ಲ. ಏಕೆಂದರೆ, ಈಗೊಂದು ಐದುನೂರು ವರ್ಷಗಳ ಹಿಂದೆ ಯಾವುದನ್ನು ಆಧುನಿಕ ವಿಜ್ಞಾನ ಎಂದು ಕರೆಯಬಹುದಾಗಿತ್ತೋ ಅದು ಬೆಳಕನ್ನು ವ್ಯಾಖ್ಯಾನಿಸಿದ್ದಕ್ಕೂ ಇವತ್ತಿನ ವಿಜ್ಞಾನ ಬೆಳಕನ್ನು ವ್ಯಾಖ್ಯಾನಿಸುವ ರೀತಿಗೂ ಅಂತರವಿದೆ. ಅಷ್ಟೇ ಅಲ್ಲ, ಈ ವ್ಯಾಖ್ಯಾನ ಬದಲಾವಣೆ ಎಂಬುದು ವಿಜ್ಞಾನದಲ್ಲಿ ಸರಾಸರಿ ನೂರು ವರ್ಷಗಳಿಗೊಮ್ಮೆ ಆಗುತ್ತಲೇ ಬಂದಿದೆ. ಹೀಗಾಗಿ, ಇವತ್ತಿನ ವಿಜ್ಞಾನವು ‘ನೋಡಿ, ಬೆಳಕು ಅಂದರೆ ಹೀಗೆ…’ ಎಂದು ಏನನ್ನು ಹೇಳುತ್ತಿದೆಯೋ ಅದು ಇನ್ನೊಂದು ಐವತ್ತು-ನೂರು ವರ್ಷಗಳಲ್ಲಿ ಬದಲಾದರೂ ಆದೀತು.
ಡೆಕಾರ್ತೆ (Rene Descartes) ಎಂಬಾತ ೧೫೯೬ ಮತ್ತು ೧೬೫೦ರ ಕಾಲದಲ್ಲಿದ್ದ ಫ್ರೆಂಚ್ ತತ್ತ್ವಜ್ಞಾನಿ, ವಿಜ್ಞಾನಿ. ಆಧುನಿಕ ವಿಜ್ಞಾನವು ಪಶ್ಚಿಮದ ತತ್ತ್ವಜ್ಞಾನದ ದಾರಿಯಲ್ಲೇ ಕುಡಿಯೊಡೆಯಿತೆಂಬುದೂ ಇಲ್ಲಿ ಗೊತ್ತಾಗುತ್ತದೆ. ಈ ಆಧುನಿಕ ವಿಜ್ಞಾನದಿಂದ ತುಂಬ ಹಿಂದಿನ ಕಾಲಕ್ಕೆ ಜೀಕಿದರೆ, ಸಾಮಾನ್ಯ ಶಕೆಗಿಂತಲೂ ಆರುನೂರು ವರ್ಷಗಳಷ್ಟು ಹಿಂದೆ ಇದ್ದ, ಅವತ್ತೇ ಅಣು ಸಿದ್ಧಾಂತ ನಿರೂಪಿಸಿದ್ದ ಕಣಾದ ಮಹರ್ಷಿಯಂಥವರು ತತ್ತ್ವಜ್ಞಾನಿಗಳೆಂದೇ ಕರೆಸಿಕೊಂಡಿದ್ದರು. ವಿಷಯಾಂತರವಾಗಿಬಿಡುತ್ತಾದ್ದರಿಂದ ನಾವಿಲ್ಲಿ ಆಧುನಿಕ ವಿಜ್ಞಾನವನ್ನಷ್ಟೇ ಗಮನದಲ್ಲಿಟ್ಟುಕೊಂಡು ಮತ್ತೆ ಡೆಕಾರ್ತೆ ಕಾಲಕ್ಕೆ ಬರೋಣ.
ಅವಕಾಶ ಅಥವಾ ಸ್ಪೇಸ್ ಅನ್ನು ಏಥರ್ ಎಂಬ ಕಣ್ಣಿಗೆ ಕಾಣದ ದ್ರವವೊಂದು ಆವರಿಸಿಕೊಂಡಿದೆ. ಈ ಮಾಧ್ಯಮದಲ್ಲಿ ಬರುವ ಒತ್ತಡದ ಅಲೆಯ ಸ್ವರೂಪವೇ ಬೆಳಕು – ಎಂಬುದು ಡೆಕಾರ್ತೆ ವ್ಯಾಖ್ಯಾನವಾಗಿತ್ತು. ಅವತ್ತಿಗೆ ಭೌತವಿಜ್ಞಾನವು ವಿಶ್ವದಲ್ಲಿರುವುದೆಲ್ಲ ಎರಡು ಆಯಾಮಗಳಲ್ಲಿವೆ – ಪದಾರ್ಥ (ಮ್ಯಾಟರ್) ಇಲ್ಲವೇ ಚರ (ಮೋಶನ್) ಎಂದು ಗ್ರಹಿಸಿತ್ತು. ಡೆಕಾರ್ತೆಯ ಪ್ರಕಾರ ಬೆಳಕೊಂದು ಚರ ಅರ್ಥಾತ್ ಚಲನೆ. ಗಾಳಿಯಲ್ಲಿ ಶಬ್ದ ಪ್ರಯಾಣಿಸಿದಂತೆ ಅದು ಏಥರ್ ಮಾಧ್ಯಮದಲ್ಲಿ ಚಲಿಸುತ್ತದೆ ಎಂಬ ಡೆಕಾರ್ತೆಯ ಬೆಳಕಿನ ವ್ಯಾಖ್ಯಾನವು ಆಗಿನ ಕಾಲಕ್ಕೆ ಪ್ರಸಿದ್ಧವೇ ಆಗಿತ್ತು.
ಅನಂತರ ಬಂದ ಐಸಾಕ್ ನ್ಯೂಟನ್ ಬೆಳಕೆಂದರೆ ಹಾಗಲ್ಲವೇ ಅಲ್ಲ ಎಂದ. ಗುರುತ್ತ್ವ, ಚಲನೆಯ ನಿಯಮಗಳು ಇತ್ಯಾದಿಗಳಿಗೆ ನ್ಯೂಟನ್ ಪ್ರಸಿದ್ಧ. ಆದರೆ, ೧೬೭೦-೭೨ರ ನಡುವೆ ಬೆಳಕಿನ ಬಗ್ಗೆ, ವಕ್ರೀಭವನವೂ ಸೇರಿದಂತೆ ಅದರ ಹಲವು ಆಯಾಮಗಳ ಬಗ್ಗೆ ವೈಜ್ಞಾನಿಕ ರೂಪರೇಖೆ ಕೊಟ್ಟ ಶ್ರೇಯಸ್ಸು ನ್ಯೂಟನನದ್ದು. ಆತ ಹೇಳಿದ – ಬೆಳಕೆಂದರೆ ಗಾಳಿಯಲ್ಲಿ ಪಯಣಿಸುವ ಚಿಕ್ಕ ಚಿಕ್ಕ ಕಣಗಳ ಪ್ರವಾಹ. ಈ ಕಣಕ್ಕೆ ಕಾರ್ಪಸ್ಲಸ್ ಅಂತ ಕರೆಯಲಾಯಿತು. ಗಾಜಿನ ತ್ರಿಭುಜದಲ್ಲಿ ಬಿಳಿ ಬೆಳಕನ್ನು ಹಾಯಿಸಿದಾಗ ಅದು ಬೇರೆ ಬೇರೆ ಬಣ್ಣಗಳಲ್ಲಿ ಹೊರಬರುವುದನ್ನು ಗಮನಿಸಿ ವಿವರಿಸಿದ ವಿಜ್ಞಾನಿಯೂ ನ್ಯೂಟನ್ನನೇ.
ಆದರೆ, ಇದೇ ನ್ಯೂಟನ್ ಕಾಲಘಟ್ಟದಲ್ಲಿಯೇ ಕ್ರಿಸ್ಟಿಯನ್ ಹುಗೆನ್ಸ್ (Christiaan Huygens) ಎಂಬ ವಿಜ್ಞಾನಿ ಇದ್ದ. ಬೆಳಕಿನ ವರ್ತನೆಗಳನ್ನು ಅಭ್ಯಸಿಸುವ ಆಪ್ಟಿಕ್ಸ್ ವಿಭಾಗದಲ್ಲಿ ಆತನ ಅಧ್ಯಯನವೂ ಆಳವಾಗಿತ್ತು. ಹಾಗೆಂದೇ ಆತ ದೂರದರ್ಶಕಗಳ ವಿನ್ಯಾಸ ಸುಧಾರಣೆಯ ಕೆಲಸಗಳಲ್ಲಿ ಯಶಸ್ಸು ಸಾಧಿಸಿ, ಶನಿಗ್ರಹದ ಸುತ್ತಲಿನ ಉಂಗುರವನ್ನೂ ಅದಕ್ಕಿರುವ ಟೈಟಾನ್ ಎಂಬ ಚಂದ್ರನನ್ನೂ ಮೊದಲಿಗೆ ಕಂಡುಕೊಂಡವ. ಈತ ಬೆಳಕೆಂದರೆ ಕಣವಲ್ಲ ಅದು ಅಲೆ ಅಂತ ಸಾರಿದ್ದನಾದರೂ ಅವತ್ತಿನ ಕಾಲಕ್ಕೆ ಆ ಧ್ವನಿ ನ್ಯೂಟನ್ ಥಿಯರಿಯನ್ನು ಮೀರಿಸಲಿಲ್ಲ.
೧೮೦೧ರ ಸುಮಾರಿಗೆ ಥಾಮಸ್ ಯೂಂಗ್ ಎಂಬ ವಿಜ್ಞಾನಿ ಲೇಸರ್ ಬೆಳಕಿನ ರಶ್ಮಿಯನ್ನು ಅಕ್ಕಪಕ್ಕದ ಎರಡು ರಂಧ್ರಗಳ ಮೂಲಕ ಹಾದು ಹಿಂದಿನ ಪರದೆಗೆ ಬೀಳುವ ‘ಡಬಲ್ ಸ್ಪ್ಲಿಟ್’ ಪ್ರಯೋಗ ಮಾಡಿದ. ಒಂದೇ ಮೂಲದಿಂದ ಹೊರಟು ಸೀಳಲ್ಪಟ್ಟ ಕಿರಣಗಳು ತಾವು ಹೋಗಿಬಿದ್ದ ಪರದೆಯ ಮೇಲೆ ಗಾಢ ಹಾಗೂ ಗಾಢರಹಿತ ಮುದ್ರೆಗಳನ್ನು ತೋರಿಸಿದವು. ಅಂದರೆ ಒಂದೇ ಮೂಲದಿಂದ ಹೊರಟ ಬೆಳಕು ಸೀಳಿಕೊಂಡು ಮತ್ತೊಂದೆಡೆ ಬಿದ್ದಾಗ ಅವು ಅಲೆಗಳಂತೆ ವರ್ತಿಸಿದ್ದು ಸ್ಪಷ್ಟವಾಯಿತು.
ಬೆಳಕಿನ ಅಲೆಯ ಸ್ವರೂಪವನ್ನು ಮತ್ತಷ್ಟು ಮನದಟ್ಟಾಗಿಸಿದ್ದಲ್ಲದೇ, ಬೆಳಕೆಂದರೆ ಕೇವಲ ದೃಗ್ಗೋಚರವಾಗುತ್ತಿರುವುದಷ್ಟೇ ಅಲ್ಲ ಎಂಬುದನ್ನು ಅರಿವಾಗಿಸಿದವ ಜೇಮ್ಸ್ ಕ್ಲಾರ್ಕ್ ಮ್ಯಾಕ್ಸ್ವೆಲ್ (೧೮೩೧-೧೮೭೯), ದೇಶಕಾಲದಲ್ಲಿ (space-time) ವಿದ್ಯುತ್ಕಾಂತೀಯ ವಲಯ (electromagnetic field)ದ ಇರುವನ್ನು ಸಾರಿದ.
ಹಾಗಾದರೆ ಬೆಳಕೆಂಬುದು ಕಾಲದೇಶವನ್ನು ತಾಗಿಕೊಂಡು ಹೋಗುತ್ತಿರುವ ಅಲೆಯಷ್ಟೇ ಅಂತ ಜಗತ್ತು ಗಟ್ಟಿಯಾಗಿ ಅಂದುಕೊಳ್ಳುವಷ್ಟರಲ್ಲಿ, ಬೆಳಕು ಕೆಲವೊಮ್ಮೆ ಕಣವಾಗಿಯೂ ವರ್ತಿಸುತ್ತದೆ, ಕೆಲವೊಮ್ಮೆ ಅಲೆಯಾಗಿಯೂ ವರ್ತಿಸುತ್ತದೆ ಎಂಬುದನ್ನು ಮೇಧಾವಿ ಆಲ್ಬರ್ಟ್ ಐನ್ಸ್ಟೈನ್ (೧೮೭೯-೧೯೫೫) ಮನದಟ್ಟಾಗಿಸಿದ. ಫೋಟೊ-ಎಲೆಕ್ಟ್ರಿಕ್ ಪರಿಣಾಮ ವಿವರಿಸುವಾಗ ಬೆಳಕನ್ನು ಇಂಥ ಇಬ್ಬಗೆಯ ನೆಲೆಯಲ್ಲಿ ನೋಡದಿದ್ದರೆ ಅರ್ಥವಾಗುವುದಿಲ್ಲ. ಬೆಳಕು ಲೋಹದ ಮೇಲ್ಮೈಗೆ ಹೊಡೆದಾಗ ಎಲೆಕ್ಟ್ರಾನ್ಗಳನ್ನು ಚಿಮ್ಮಿಸುತ್ತದೆ. ಆ ಪ್ರಕಾರ ಹೆಚ್ಚು ಎಲೆಕ್ಟ್ರಾನ್ ಚಿಮ್ಮಬೇಕೆಂದರೆ ಬೆಳಕಿನ ತೀವ್ರತೆ ಹೆಚ್ಚಿರಬೇಕು ಎಂದಾಗುತ್ತದಲ್ಲವೆ? ಉಹುಂ, ಇಲ್ಲಿ ಬೆಳಕಿನ ತೀವ್ರತೆಗೂ ಎಲೆಕ್ಟ್ರಾನ್ ಹೊರಹೊಮ್ಮುವುದಕ್ಕೂ ತಾಳೆಯಾಗುವುದಿಲ್ಲ. ಹಾಗಾದರೆ ಅದಕ್ಕೆ ಕಾರಣ ಯಾರೆಂದು ನೋಡಿದರೆ – ಫ್ರೀಕ್ವೆನ್ಸಿ. ಅಂದರೆ ಲೋಹದ ಮೇಲ್ಮೈಗೆ ಅಪ್ಪಳಿಸುವ ತರಂಗಾಂತರ ಎಷ್ಟಿರುತ್ತದೆ ಎನ್ನುವುದರ ಮೇಲೆ ಪರಿಣಾಮ ಸಿದ್ಧವಾಗುತ್ತದೆ.
ಹೀಗೆ, ಬೆಳಕು ಅಲೆಯೂ ಆಗಿ ತೋರ್ಪಡಿಸಿಕೊಳ್ಳಬಲ್ಲದು, ಕಣವೂ ಆಗಿರಬಲ್ಲದು ಎಂಬುದನ್ನು ಸಿದ್ಧಪಡಿಸುವುದಕ್ಕೆ ಐನ್ಸ್ಟೈನ್ ಅವಲಂಬಿಸಿಕೊಂಡಿದ್ದು ಮ್ಯಾಕ್ಸ್ ಪ್ಲಾಂಕ್ (೧೮೫೮-೧೯೪೭) ಎಂಬ ಮಹಾನುಭಾವ ಮಾಡಿದ್ದ ಅಧ್ಯಯನವೊಂದನ್ನು. ಶಕ್ತಿಯ ಹೊರಹೊಮ್ಮುವಿಕೆ ಇಲ್ಲವೇ ಹೀರಿಕೊಳ್ಳುವಿಕೆ ಅತಿಸಣ್ಣ ಪ್ಯಾಕೆಟ್ಟುಗಳಲ್ಲಿರುತ್ತದೆ, ಅದನ್ನು ಕ್ವಾಂಟಾ ಎನ್ನಬಹುದು ಎಂಬ ಈತನ ಸಿದ್ಧಾಂತವೇ ಇವತ್ತಿಗೆ ಹಲವು ಅಧ್ಯಯನಗಳಿಗೆ ಒಳಗಾಗುತ್ತಿರುವ ಭೌತಶಾಸ್ತçದ ಹೊಸಶಿಸ್ತು ‘ಕ್ವಾಂಟಂ ಮೆಕಾನಿಕ್ಸ್’ಗೆ ಜೀವಾಳ. ಈ ಪ್ಯಾಕೆಟ್ ಕಣವನ್ನು ‘ಫೋಟಾನ್’ ಎಂದು ಹೆಸರಿಸಿ ಐನ್ಸ್ಟೈನ್ ಫೋಟೊ-ಎಲೆಕ್ಟಿçಕ್ ಪರಿಣಾಮವನ್ನು ವಿವರಿಸಿದ. ಇವತ್ತಿನ ನಮ್ಮ ಡಿಜಿಟಲ್ ಕೆಮರಾಗಳು, ಸೌರಕೋಶಗಳೆಲ್ಲ ಸಾಕಾರವಾಗಿದ್ದು ಈ ಫೋಟೊ-ಎಲೆಕ್ಟ್ರಿಕ್ ಪರಿಣಾಮದ ಆಧಾರದಲ್ಲಿಯೇ.
ನಾವು ನೋಡುತ್ತಿರುವುದಷ್ಟೇ ಬೆಳಕಲ್ಲ ಎಂದು ಶತಮಾನಗಳ ಹಿಂದೆ ನಿರೂಪಿಸಿದ ವಿಜ್ಞಾನದ ಕತೆಗೊಂದು ಅಲ್ಪವಿರಾಮ ಕೊಟ್ಟು ಈಗ ಸ್ವಲ್ಪ ತಾತ್ತ್ವಿಕತೆಗೆ ಬರೋಣ.
ಮಿಂಚುವುದಷ್ಟೇ ಬೆಳಕೆ?
ಅತಿ ಕತ್ತಲು. ಅಲ್ಲೇ ಅತಿ ಸನಿಹದಲ್ಲಿ ತಲಪಬೇಕಾದ ಗುಡಿಸಲೊಂದಿದೆ. ದೀಪದ ಸಾಧನಗಳೇನೂ ಇಲ್ಲ. ಹೋಗಿ ತಲಪಬೇಕೆಂದಾದರೆ ಹೇಗೆ?
ಅದೋ ಮಿಂಚು ಕೋರೈಸಿ ಆ ಗುಡಿಸಲು ಕಂಡಿದೆ. ಕಂಡ ಚಿತ್ರವನ್ನೇ ಕಣ್ಣಲ್ಲಿರಿಸಿಕೊಂಡು, ಅದು ಯಾವ ದಿಕ್ಕಿನಲ್ಲಿದೆ ಎಂದು ಮನನ ಮಾಡಿಕೊಂಡು ಕತ್ತಲಲ್ಲೇ ಅತ್ತ ಸಾಗುತ್ತಹೋಗುವುದಾಗುತ್ತದೆ.
ಅದೇನೋ ಸರಿ. ಆದರೆ ಮಿಂಚು ಕೋರೈಸಲಿಲ್ಲವೆಂದುಕೊಂಡರೆ ಅಥವಾ ಅದರ ಆಧಾರದಲ್ಲೇ ಪೂರ್ಣ ಲೆಕ್ಕಾಚಾರ ಸಿಗಲಿಲ್ಲವೆಂದರೆ? ಅದೇ ಗುಡಿಸಲಿನ ಬುಡದಲ್ಲಿ ನಾಯಿಯೊಂದು ಸಣ್ಣಧ್ವನಿಯಲ್ಲಿ ಊಳಿಡುತ್ತಿರುವಂತಿದೆ. ಆ ಧ್ವನಿಯನ್ನೇ ಅನುಸರಿಸಿ ಹೋಗುವುದು. ಅಂದರೆ, ಇಲ್ಲಿ ನಿಜಕ್ಕೂ ದಾರಿಗೆ ಬೆಳಕಾಗುತ್ತಿರುವುದು ಬೆಳಕಲ್ಲ, ಬದಲಿಗೆ ಶಬ್ದವೇ ಬೆಳಕಾಯ್ತು.
ಇದರ ಬದಲಿಗೆ ಆ ಗುಡಿಸಲಿನಿಂದ ಯಾವುದೋ ತಿನಿಸು ಬೇಯುತ್ತಿರುವ ಪರಿಮಳವೊಂದು ನಾಸಿಕದವರೆಗೆ ತಲಪುತ್ತಿದೆ ಎಂದಾದರೆ ಅದನ್ನನುಸರಿಸಿ ಹೋಗಿ ಗುಡಿಸಲು ತಲಪಿಕೊಳ್ಳುವ ಪ್ರಯತ್ನ ಮಾಡಬಹುದು. ಅಲ್ಲಿ ವಾಸನೆಯೇ ಹಾದಿ ತೋರಿಸುವ ಬೆಳಕಾದಂತಾಯಿತು.
ನಮ್ಮ ಗ್ರಹಿಸುವ ಸಾಧ್ಯತೆಗಳು ಹಾಗೂ ಸಾಮರ್ಥ್ಯಾಭಿವೃದ್ಧಿಯನ್ನು ಅವಲಂಬಿಸಿ ಬೆಳಕು ನಮ್ಮೆದುರು ಇನ್ನಷ್ಟು ಮತ್ತಷ್ಟು ತೆರೆದುಕೊಳ್ಳುತ್ತ ಹೋಗುತ್ತದೆ. ನಮ್ಮಲ್ಲಿ ಯಾರಿಗೋ ಕಾಣದ ವಿಶೇಷ ಬೆಳಕೊಂದು ಇನ್ನೊಬ್ಬರಿಗೆ ಕಾಣುತ್ತಿದೆ ಎಂದಾದರೆ ಅಲ್ಲಿ ಕೇವಲ ಸುಳ್ಳು ಹೇಳುತ್ತಿರುವ ಅಥವಾ ಅವರಿಗೆ ಭ್ರಾಂತಿಯಾಗಿಬಿಟ್ಟಿರುವ ಸಾಧ್ಯತೆಯೇ ಇರಬೇಕು ಎಂದೇನಲ್ಲ; ಬದಲಿಗೆ ಆ ಬೆಳಕನ್ನು ಕಾಣಿಸಿಕೊಳ್ಳುವ ಸಾಮರ್ಥ್ಯ ನಮ್ಮ ಕಣ್ಣುಗಳಿಗಿಲ್ಲ ಎಂಬುದೂ ಇದ್ದಿರಬಹುದು! ನಮಗೆ ಈ ಕ್ಷಣಕ್ಕೆ ಗೊತ್ತಿಲ್ಲ ಅಷ್ಟೆ. ವಿಜ್ಞಾನದ ಮುಂದೆ ಕೆಲವು ಸಾಧ್ಯತೆಗಳನ್ನಿರಿಸಿದಾಗ ಅದು ಹೇಳುವುದೂ ಅಷ್ಟೆ – ಈಗ ಗೊತ್ತಿರುವ ಭೌತಿಕ ನಿಯಮಗಳ ಪ್ರಕಾರ ಇದು ಸಾಧ್ಯವಿಲ್ಲ.
ದೃಗ್ಗೋಚರ ಬೆಳಕು ಅರ್ಥಾತ್ ನಮ್ಮ ಕಣ್ಣಿಗೆ ಕಾಣುವ ಬೆಳಕೆಂಬುದು ಶಕ್ತಿಯ ಒಂದು ರೂಪವಷ್ಟೆ. ಕಾಲದೇಶವನ್ನು ದೃಗ್ಗೋಚರ ಬೆಳಕಿನ ವೇಗದಲ್ಲಿಯೇ ವ್ಯಾಪಿಸಿಕೊಳ್ಳುವ ವಿಧವಿಧದ ಕಿರಣಗಳಿವೆ, ಆ ಗುಚ್ಛದಲ್ಲಿ ದೃಗ್ಗೋಚರ ಬೆಳಕು ಒಂದು ನಿರ್ದಿಷ್ಟ ತರಂಗಾಂತರದ್ದು ಮಾತ್ರ. ಮೊದಲೇ ಹೇಳಿದ ಹಾಗೆ, ಈ ವಿದ್ಯುತ್ಕಾಂತೀಯ ವಲಯಗಳ ಬಗ್ಗೆ ಸೂತ್ರಬದ್ಧ ಸಿದ್ಧಾಂತ ಕೊಟ್ಟ ಖ್ಯಾತಿ ಜೇಮ್ಸ್ ಮ್ಯಾಕ್ಸ್ವೆಲ್ ಎಂಬ ವಿಜ್ಞಾನಿಗೆ ಸಲ್ಲುತ್ತದೆ. ಮುಂದೆ ಹೆನ್ರಿಕ್ ಹರ್ಟ್ಜ್ (Heinrich Hertz) ಎಂಬ ವಿಜ್ಞಾನಿ ರೇಡಿಯೊ ಅಲೆಗಳ ಮೇಲಿನ ಪ್ರಯೋಗ ಯಶಸ್ವಿಯಾಗಿಸಿದಾಗ ಮ್ಯಾಕ್ಸ್ವೆಲ್ ಸಿದ್ಧಾಂತವು ಗಟ್ಟಿಗೊಂಡಿತು ಎಂಬ ಪೀಠಿಕೆಯೊಂದಿಗೆ ವಿಜ್ಞಾನದ ಬೆಳಕಿನ ಕತೆಗೆ ಮರಳೋಣ.
ಕಡುಗತ್ತಲಲ್ಲೂ ದಿವ್ಯದೃಷ್ಟಿ – ಇದು ವಿಜ್ಞಾನ ಒದಗಿಸಿದ ದರ್ಶನ!
ಈಗೊಂದು ಮುನ್ನೂರು ವರ್ಷಗಳ ಹಿಂದೆ ‘ಪ್ರಗತಿಪರ ವಿಚಾರವಾದಿ’ ಎಂದು ಗುರುತಿಸಿಕೊಂಡಿರುವ ಯಾವುದಾದರೂ ವ್ಯಕ್ತಿ ಎದುರು, ಮನುಷ್ಯನಿಗೆ ಕತ್ತಲಿನಲ್ಲಿ ಸಹ ಗುರಿ ಇಟ್ಟು ಕೊಲ್ಲುವ ಶಕ್ತಿ ಇದೆ ಅಂತ ವಾದಿಸಿದ್ದರೆ, ಅವೆಲ್ಲ ಕತೆ-ಕಲ್ಪನೆಗಳಲ್ಲಿ ಸಾಧ್ಯವಷ್ಟೆ ಎಂದು ಆತ ಖಡಾಖಂಡಿತವಾಗಿ ಪ್ರತಿವಾದ ಮಾಡುತ್ತಿದ್ದ. ಆದರಿವತ್ತು ಕಾಶ್ಮೀರದ ಪರ್ವತದಲ್ಲಿ ಅಮಾವಾಸ್ಯೆ ರಾತ್ರಿ ಅಡಗಿರುವ ಉಗ್ರನನ್ನೂ ಭಾರತದ ಯೋಧ ‘ಕಾಣಬಲ್ಲ’, ಕೊಲ್ಲಬಲ್ಲ! ಬೆಳಕಿಲ್ಲದಿದ್ದರೂ ಕಂಡಿದ್ದು ಹೇಗೆ? – ಎಂದು ಕೇಳಿದರೆ, ಆತ ಕಣ್ಣಿಗೆ ಧರಿಸಿರುವ ಇನ್ಫ್ರಾ ರೆಡ್ ಕನ್ನಡಕ ತೋರಿಸಿ, ಬೆಳಕಿದೆಯಲ್ಲ ಮಾರಾಯ ಎನ್ನಬಹುದೇನೋ! ವ್ಯಕ್ತಿ ಅಥವಾ ಯಾವುದೇ ವಸ್ತುವಿನಲ್ಲಿರುವ ಶಾಖವು ಅತಿಗೆಂಪು ವಿಕಿರಣವನ್ನು ಹೊರಸೂಸುತ್ತದೆ. ವಿದ್ಯುತ್ಕಾಂತೀಯ ಗುಚ್ಛದಲ್ಲಿ ಅತಿಗೆಂಪಿನ ತರಂಗಾಂತರವನ್ನು ವಿಜ್ಞಾನ ವಿವರಿಸಿದ್ದರಿಂದ ಅದರ ಆಧಾರದಲ್ಲಿ ಕನ್ನಡಕ ಸೇರಿದಂತೆ ಹಲವು ಬಗೆಯ ಪರಿಶೀಲನಾ ಪರಿಕರಗಳನ್ನು ನಿರ್ಮಿಸುವುದು ಸಾಧ್ಯವಾಯ್ತು. ನಾವು ಈ ತಂತ್ರಜ್ಞಾನ ಆವಿಷ್ಕರಿಸಿಕೊಳ್ಳುವ ಮೊದಲೇ ಇದನ್ನು ನಿಸರ್ಗವು ಹಾವು ಮತ್ತು ಬಾವಲಿಗಳ ಕಣ್ಣಲ್ಲಿರಿಸಿತ್ತು. ಈ ಅತಿಗೆಂಪು ವಿಕಿರಣದ ಜಾಡು ಹತ್ತಿಕೊಂಡೇ ಅವು ರಾತ್ರಿ ವೇಳೆ ಬೇಟೆಯಾಡಿ ಆಹಾರ ದಕ್ಕಿಸಿಕೊಳ್ಳುತ್ತವೆ. ಜೇನ್ನೊಣವು ಹೂಗಳಲ್ಲಡಗಿರುವ ಮಕರಂದವನ್ನು ಪತ್ತೆಹಚ್ಚುವುದಕ್ಕೆ ಅದರ ಕಣ್ಣಿನ ವಿನ್ಯಾಸದಲ್ಲಡಗಿರುವ ನೇರಳಾತೀತ ದೃಷ್ಟಿ (ultraviolet) ಕೆಲಸಕ್ಕೆ ಬರುತ್ತದೆ. ನಾವದನ್ನು ಫ್ಲುರೊಸೆಂಟ್ ಟ್ಯೂಬ್ ಇತ್ಯಾದಿ ಬೆಳಕಿನ ಸಾಧನದಲ್ಲಿ ಬಳಸುತ್ತೇವೆ.
ಎಷ್ಟೋ ಸಾವಿರ ಕಿಲೊಮೀಟರುಗಳ ಆಚೆ ಮಾತನಾಡಿದವರ ಧ್ವನಿಯನ್ನು ದೂರವಾಣಿಯಲ್ಲಿ, ಅಲ್ಲೆಲ್ಲೋ ಕುಣಿದವರ ಹರ್ಷವನ್ನು ದೂರದರ್ಶನದಲ್ಲಿ ನಮಗೆ ‘ಕಾಣಿಸಿಕೊಡು’ವುದರಲ್ಲಿ ರೆಡಿಯೋ ಅಲೆಗಳ ಪಾತ್ರವಿದೆ. ದೇಹದೊಳಗೆ ಏನೋ ನೋವು, ಹಾಗೆಂದು ದೇಹ ಬಗೆದು ನೋಡಲಾಗುತ್ತದೆಯೆ? ಅದೇನೂ ಬೇಡ, ನಾನು ನಿನಗೆ ದೇಹದೊಳಗಿನದನ್ನು ‘ಕಾಣುವಂತೆ’ ಮಾಡುತ್ತೇನೆ ಎಂದು ಸಹಕರಿಸುತ್ತವೆ ವಿದ್ಯುತ್ಕಾಂತೀಯ ವಲಯದ ಎಕ್ಸ್ರೇ ಜಾತಿ. ದೇಹದ ಯಾವುದೋ ಅಂಗದಲ್ಲಿ ಗಡ್ಡೆಯಾದರೆ ಅದನ್ನು ದೃಗ್ಗೋಚರ ಬೆಳಕಲ್ಲಿ ನೋಡಿ ವೈದ್ಯರು ಶಸ್ತçಚಿಕಿತ್ಸೆ ಮಾಡಬಹುದು. ಆದರೆ ಕ್ಯಾನ್ಸರ್ ಗಡ್ಡೆ ಬರಿಗಣ್ಣಿಗೆ ದಕ್ಕಿಸಿಕೊಳ್ಳಲಾಗುವುದಿಲ್ಲ. ನಾನದನ್ನು ಕಂಡು ಬೇಟೆಯಾಡುತ್ತೇನೆ ಅಂತ ಹೊರಡುತ್ತವೆ ಗಾಮಾ ವಿಕಿರಣಗಳು.
ಇವೆಲ್ಲವೂ ಬೆಳಕಿನ ವೇಗದಲ್ಲೇ ಕೆಲಸ ಮಾಡುತ್ತವೆ. ಈ ವಿಶ್ವದಲ್ಲಿ ಬೆಳಕಿಗಿಂತ ವೇಗ ಮತ್ಯಾವುದಿಲ್ಲ ಹಾಗೂ ನಾವು ಬೆಳಕಿನ ವೇಗದಲ್ಲಿ ಪ್ರಯಾಣಿಸುವುದಕ್ಕಾಗುವುದಿಲ್ಲ. ಏಕೆಂದರೆ ಬೆಳಕಿಗೆ ಇರದ ದ್ರವ್ಯರಾಶಿ ನಮಗಿದೆ ಎನ್ನುತ್ತದೆ ಐನ್ಸ್ಟೈನ್ ಸಾಪೇಕ್ಷತಾವಾದ. ಒಟ್ಟಿನಲ್ಲಿ, ಇವತ್ತು ನಕ್ಷತ್ರಪುಂಜಗಳು, ಗ್ರಹಗಳು, ಕಪ್ಪುಕುಳಿಗಳು ಇಂಥವೆಲ್ಲವುದರ ಬಗ್ಗೆ ತಿಳಿಯುವುದಕ್ಕೆ ಸಿದ್ಧಾಂತಗಳನ್ನು ರೂಪಿಸುವುದಕ್ಕೆ ಬೆಳಕೇ ಕಾರಣ. ಬೆಳಕೆಂದರೆ ಕೇವಲ ದೃಗ್ಗೋಚರ ಬೆಳಕಲ್ಲ, ಬದಲಿಗೆ ವಿದ್ಯುತ್ಕಾಂತೀಯ ವಲಯದ ಎಲ್ಲ ವಿಕಿರಣಗಳು.
ವಿಜ್ಞಾನದ ಚಿತ್ತದಲ್ಲಿ ಬೆಳಕಿನ ಅಗಾಧ ಸಾಧ್ಯತೆ
ವಿದ್ಯುತ್ಕಾಂತೀಯ ಗುಚ್ಛದ ಎಲ್ಲ ವಿಕಿರಣಗಳನ್ನು, ಅವುಗಳ ಶಕ್ತಿಯನ್ನು ಇನ್ನು ಹೇಗೆಲ್ಲ ಬಳಸಿಕೊಳ್ಳಬಹುದು ಎನ್ನುವ ಶೋಧನೆಗಳು ನಿರಂತರ ನಡೆಯುತ್ತಲೇ ಇರುತ್ತವೆ. ಆದರೆ, ಬೆಳಕಿನ ಬೇರೆ ಸಾಧ್ಯತೆಗಳು ಸಹ ಏನೆಲ್ಲ ತಂತ್ರಜ್ಞಾನ ಉನ್ನತಿಗಳ ಭವಿಷ್ಯ ಸಾರುತ್ತಿವೆ.
ಉದಾಹರಣೆಗೆ, ಫೋಟಾನ್ ಅಥವಾ ಆಪ್ಟಿಕಲ್ ಕಂಪ್ಯೂಟರ್. ಈಗಿರುವ ಗಣಕಯಂತ್ರಗಳ ನರನಾಡಿಯಲ್ಲಿ ಎಲೆಕ್ಟಾçನ್ ಪ್ರವಹಿಸಿ ನಮಗೆ ಮಾಹಿತಿಗಳನ್ನು ಪೂರೈಸುತ್ತಿದೆ. ಎಲೆಕ್ಟ್ರಾನುಗಳೆಂದರೆ ಅಣುವಿನಲ್ಲಿ ನ್ಯೂಕ್ಲಿಯಸ್ ಸುತ್ತ ಸುತ್ತುವ ನೆಗೆಟಿವ್ ಚಾರ್ಜ್. ಇದು ಅಣುವಿನಲ್ಲಿ ಭಾರಿ ಜೋರಾಗಿಯೇ ಸುತ್ತಿಕೊಂಡಿರುತ್ತದೆ. ಆದರೆ, ಬೆಳಕಿನ ವೇಗಕ್ಕೆ ಹೋಲಿಸಿದರೆ ಎಲೆಕ್ಟಾçನುಗಳು ವಿದ್ಯುತ್ ಸರ್ಕ್ಯೂಟಿನಲ್ಲಿ ಸುತ್ತುವ ವೇಗ ತುಂಬ ಕಡಮೆಯೇ. ಈಗ ಈ ಜಾಗದಲ್ಲಿ ಬೆಳಕಿನ ಕಣರೂಪವನ್ನು ನೆನಪಿಸಿಕೊಳ್ಳಿ. ಅದುವೇ ಫೋಟಾನ್. ಈ ಫೋಟಾನ್ ಮೇಲೆ ಗಣಕವ್ಯವಸ್ಥೆಯನ್ನು ನಿಲ್ಲಿಸುವುದು ಸಾಧ್ಯವಾದರೆ ಆಗ ಮಾಹಿತಿಗಳು ಬೆಳಕಿನ ವೇಗದಲ್ಲಿ ಸಂಸ್ಕರಣಗೊಳ್ಳುತ್ತವೆ! ಗ್ರಂಥಾಲಯದಲ್ಲಿ ನೀವು ಯಾವುದೋ ಅಪೂರ್ವ ಪುಸ್ತಕ ಕೇಳುತ್ತೀರಿ, ಅದನ್ನು ಗ್ರಂಥಪಾಲಕ ಬೆಳಕಿನ ವೇಗದಲ್ಲಿ ನಿಮಗೆ ಪೂರೈಸಿದ ಅಂದುಕೊಳ್ಳಿ. ಫೋಟಾನ್ ಕಂಪ್ಯೂಟರ್ ಪರಿಕಲ್ಪನೆ ಅಂಥಾದ್ದು! ಇದೇನಾದರೂ ಸಾಕಾರವಾದರೆ ಏನೆಲ್ಲ ಕ್ಲಿಷ್ಟ ಸೂತ್ರಗಳು ಸರಾಗವಾಗಿ ಬಿಚ್ಚಿಕೊಂಡಾವು.
ತತ್ತ್ವಚಿಂತನೆಯ ಬೆಳಕು
ಸನಾತನ ತತ್ತ್ವದೃಷ್ಟಿಯು ಮೂರು ದೇಹಗಳ ಬಗ್ಗೆ ಮಾತನಾಡುತ್ತದೆ. ಪಂಚಭೂತಾತ್ಮಕವಾದ ಈ ಶರೀರ ಎಲ್ಲರಿಗೂ ಕಾಣುವಂಥದ್ದು. ಅದನ್ನು ‘ಸ್ಥೂಲ ಶರೀರ’ ಎನ್ನಲಾಗಿದೆ. ಈ ಭೌತಿಕ ಪರಿಪ್ರೇಕ್ಷ್ಯದಿಂದ ಹೊರತಾದ ‘ಸೂಕ್ಷ್ಮ ಶರೀರ’ವೊಂದಿದೆ, ಇದು ಮನಸ್ಸು, ಬುದ್ಧಿ ಮತ್ತು ಅಹಂಕಾರಗಳ ನೆಲೆ. ನಮ್ಮ ವಿಚಾರ ಮತ್ತು ಭಾವನೆಗಳು ಬೆಳಗುವುದು ಇಲ್ಲೇ ಎಂದು ಪ್ರತಿಪಾದಿಸಲಾಗುತ್ತದೆ. ಇದು ಮುಟ್ಟಲಾಗದಿದ್ದರೂ ಅನುಭವಕ್ಕೆ ಬರುವುದರಿಂದ ಒಂದುಮಟ್ಟದಲ್ಲಿ ಇದನ್ನು ‘ಕಂಡು’ಕೊಳ್ಳಬಹುದೇನೋ. ಆದರೆ ಮೂರನೆಯದಾದ ‘ಕಾರಣ ಶರೀರ’ವನ್ನು ಬೆಳಗುವ ಬೆಳಕಿನ ಜಾಡು ಮಾತ್ರ ಹೆಚ್ಚಿನವರಿಗೆ ಸಿಕ್ಕಿಲ್ಲ ಹಾಗೂ ಬಹುತೇಕರು ಈ ಬಗ್ಗೆ ಸಂದೇಹದಿಂದಿದ್ದಾರೆ. ಈ ಮೂರನೇ ಶರೀರವೇ ಎಂದೆಂದಿಗೂ ನಾಶವಾಗದ, ಬದಲಾಗದ ಪರಿಶುದ್ಧ ಪ್ರಜ್ಞೆ; ಅದುವೇ ಆತ್ಮ ಎಂದು ನಮ್ಮ ದೃಷ್ಟಾರರು, ಋಷಿಮುನಿಗಳೆಲ್ಲ ಸಾರಿದ್ದಾರೆ.
ಅದಕ್ಕೆ ಇನ್ಫ್ರಾರೆಡ್, ಎಕ್ಸರೇ ಅಥವಾ ಮುಂದೆ ಅನ್ವೇಷಿತವಾಗುವ ಯಾವ ಸಾಧನಗಳೂ ಸಹಕರಿಸಲಾರವು. ಅದನ್ನು ಕಂಡೊಡನೆ ಅದರಲ್ಲೇ ಲೀನವಾದಂತೆ. ಇದನ್ನು ಸಾಕ್ಷಾತ್ಕರಿಸಿಕೊಳ್ಳುವುದಕ್ಕೆ ವೇದ, ಉಪನಿಷತ್, ಭಗವದ್ಗೀತೆಗಳ ಬೆಳಕಲ್ಲಿ ಹಲವು ಜನ್ಮಗಳನ್ನು ಕಳೆಯಬೇಕು ಎನ್ನುತ್ತಾರೆ ಹಿರಿಯರು. ಆ ಬೆಳಕನ್ನು ಸಾಕ್ಷಾತ್ಕರಿಸಿಕೊಂಡು ಬೆಳಕೇ ಆಗಿಬಿಡುವುದೇ ಬದುಕಿನ ಪರಮ ಉದ್ದೇಶ ಅಂತ ಸನಾತನ ಸಂಸ್ಕೃತಿ ಕಿವಿಮಾತು ಹೇಳುತ್ತಲೇ ಬಂದಿದೆ.
ಮತ್ತೆ ವಿಜ್ಞಾನವೂ ಫಿಲಾಸಫಿ ಆಗಲಿದೆಯೆ?
ಬೆಳಕು ಅಲೆ(wave)ಯೂ ಆಗಿರಬಲ್ಲದು, ಕಣವೂ (particle) ಎಂಬ ತಿಳಿವಳಿಕೆ ಬಂದ ನಂತರವೇ ವಿಶ್ವವನ್ನು ವ್ಯಾಪಕವಾಗಿ ಅರ್ಥಮಾಡಿಕೊಳ್ಳುವುದಕ್ಕೆ ಸಾಧ್ಯವಾಯಿತು ಎಂಬುದು ಇಲ್ಲಿಯವರೆಗೆ ಪ್ರಸ್ತುತಪಡಿಸಲಾಗಿರುವ ಬೆಳಕಿನ ವಿಜ್ಞಾನಕಥನದಲ್ಲಿ ಸ್ಪಷ್ಟವಾಗಿದೆಯಷ್ಟೆ. ಈ ಅಲೆ-ಕಣಗಳ ದ್ವಂದ್ವಭಾವವೇ ಕ್ವಾಂಟಂ ವಿಜ್ಞಾನದ ಮೂಲಭೂತ ಪರಿಕಲ್ಪನೆಗಳಲ್ಲೊಂದು. ಐನ್ಸ್ಟೈನರ ಸಾಪೇಕ್ಷತಾ ಸಿದ್ಧಾಂತವು ವಿಶಾಲ ವಿಶ್ವವನ್ನು ಸೂತ್ರಬದ್ಧವಾಗಿಯೇ ವಿವರಿಸುತ್ತದೆಯಾದರೂ ಪರಮಾಣುವಿನ ವಿಶ್ಲೇಷಣೆಗೆ ಇಳಿದಾಗ ಅದು ಅಷ್ಟಾಗಿ ಸಹಾಯಕ್ಕೆ ಬರದೆಂಬ ಕಾರಣಕ್ಕಾಗಿಯೇ ಕ್ವಾಂಟಂ ಮೆಕಾನಿಕ್ಸ್ ೧೯೨೦ರಿಂದೀಚೆಗೆ ಅಭಿವೃದ್ಧಿಯಾಗುತ್ತ ಸಾಗಿತು. ಮ್ಯಾಕ್ಸ್ ಪ್ಲಾಂಕ್, ನೀಲ್ಸ್ ಬೋರ್, ಲೂಯಿಸ್ ಬ್ರಾಗ್ಲಿ, ವೆರ್ನರ್ ಹೈಸನ್ಬರ್ಗ್, ರಾಬರ್ಟ್ ಒಪನ್ಹೈಮರ್ ಸೇರಿದಂತೆ ಹಲವರು ಕ್ವಾಂಟಂ ಮೆಕಾನಿಕ್ಸ್ ಕುರಿತ ಹಲವು ಪ್ರಕಲ್ಪನೆ (hypothesis)ಗಳನ್ನು ಕೊಟ್ಟಿದ್ದಾರೆ. ಈ ಪೈಕಿ ಹೆಚ್ಚಿನವು ನಿಮಗೆ ಯಾವುದೋ ತತ್ತ್ವಶಾಸ್ತçದಂತೆ ಕಂಡರೆ ಆಶ್ಚರ್ಯವಿಲ್ಲ. ಏಕೆಂದರೆ ಫಿಲಾಸಫಿ ಹೇಳುವ ಮೂರು ಲೋಕಗಳು, ಮೂರು ದೇಹಗಳು ಇವೆಲ್ಲ ರಮ್ಯಕಲ್ಪನೆ ಅಂತ ನಿಮಗನಿಸಿದರೆ ಕ್ವಾಂಟಂ ಮೆಕಾನಿಕ್ಸ್ ವಿಜ್ಞಾನಿಗಳು ‘ಹಲವು ವಿಶ್ವ’ಗಳ ಮಾತನಾಡುತ್ತಾರೆ!
ಕ್ವಾಂಟಂ ಮೆಕಾನಿಕ್ಸ್ ಪ್ರತಿಪಾದನೆ ಏನೆಂದರೆ ಅಲೆ ಮತ್ತು ಕಣವಾಗಿ ಕಾಣಿಸಿಕೊಳ್ಳುವ ವರ್ತನೆ ಕೇವಲ ಬೆಳಕಿಗೆ ಮಾತ್ರವಲ್ಲ, ಪರಮಾಣುವಿನ ಸ್ಥಿತಿಗಿಳಿದಾಗ ಎಲ್ಲ ಪದಾರ್ಥ(matter)ಗಳಿಗೂ ಆ ವರ್ತನೆ ಇದೆ. ಪದಾರ್ಥವೊಂದು ಏಕಕಾಲದಲ್ಲಿಯೇ ಹಲವು ಸ್ಥಿತಿಗಳಲ್ಲಿರುತ್ತದೆ. ಕ್ವಾಂಟಂ ಮೆಕಾನಿಕ್ಸ್ ಪ್ರಕಾರ ಇಲ್ಲಿರುವ ಸಮಸ್ಯೆ ಅಳೆಯುವ ಪ್ರಕ್ರಿಯೆಯದ್ದು. ಅಳೆಯುವುದಕ್ಕೆ ಹೋದಾಗ ಪದಾರ್ಥವು ಒಂದು ಸ್ಥಿತಿಯಲ್ಲಷ್ಟೇ ಕಾಣಿಸಿಕೊಳ್ಳುತ್ತದೆ. ಪರಿಶೀಲನೆಗೊಳಪಟ್ಟ ಸಂದರ್ಭದಲ್ಲಿ ಪದಾರ್ಥದ ಅಲೆ ಕಾರ್ಯವು ಲಯವಾಗುತ್ತದೆ, ಹೀಗಾಗಿ ಪದಾರ್ಥವು ಒಂದು ಆಯಾಮದಲ್ಲಷ್ಟೇ ಅಳತೆಗೆ ಸಿಗುತ್ತದೆ ಎಂಬುದು ಇಲ್ಲಿನ ಪ್ರತಿಪಾದನೆ.
ಕ್ವಾಂಟಂ ವ್ಯಾಖ್ಯಾನದ ಸಂದರ್ಭದಲ್ಲಿ ಆಸ್ಟಿçಯಾದ ಭೌತಶಾಸ್ತçಜ್ಞ ಶ್ರೋಡಿಂಗರ್ ಪ್ರತಿಪಾದಿಸಿರುವ ಒಂದು ‘ವಿಚಾರ ಪ್ರಯೋಗ’ವಿದೆ. ಅದು ಶ್ರೋಡಿಂಗರ್ ಬೆಕ್ಕಿನ ಪ್ರಕರಣ (Schrodinger’s cat) ಎಂದೇ ಪ್ರಸಿದ್ಧ. ಇದನ್ನು ನೀವು ಪರಮಾಣು ಹಂತದಲ್ಲಿ ಕಲ್ಪನೆ ಮಾಡಿಕೊಳ್ಳಬೇಕು. ಮುಚ್ಚಿದ ಪೆಟ್ಟಿಗೆಯೊಂದರಲ್ಲಿ ಬೆಕ್ಕು, ವಿಕಿರಣ ಪದಾರ್ಥ ಹಾಗೂ ವಿಕಿರಣ ಅಳೆಯುವ ಸಾಧನವಿದೆ. ಒಂದು ತಾಸಿನ ಅವಧಿಯಲ್ಲಿ ಆ ವಿಕಿರಣ ಪದಾರ್ಥವು ಕ್ಷೀಣಿಸುವುದಕ್ಕೆ ಶುರುವಾಗುವ ಸಾಧ್ಯತೆ ಶೇ. ೫೦ರಷ್ಟಿದೆ. ಅದು ಅಳತೆ ಸಾಧನದ ಪತ್ತೆಗೆ ಸಿಗುತ್ತಲೇ ಪೆಟ್ಟಿಗೆಯಲ್ಲಿ ವಿಷಾನಿಲ ವ್ಯಾಪಿಸಿ ಬೆಕ್ಕನ್ನು ಕೊಲ್ಲುತ್ತದೆ. ಕ್ಸಾಸಿಕ್ ಭೌತನಿಯಮವನ್ನು ಅನ್ವಯಿಸಿದಾಗ, ಒಂದು ಗಂಟೆಯ ನಂತರ ಆ ಬೆಕ್ಕು ಬದುಕಿರುತ್ತದೆ ಇಲ್ಲವೇ ಸತ್ತಿರುತ್ತದೆ ಎಂಬ ಸಾಧ್ಯತೆ ಎದುರಿಗೆ ಬರುತ್ತದೆ. ಆದರೆ ಕ್ವಾಂಟಂ ಮೆಕಾನಿಕ್ಸ್ ಪ್ರಕಾರ ಆ ಬೆಕ್ಕು ಪೆಟ್ಟಿಗೆ ತೆಗೆದು ಪರಿಶೀಲನೆ ಮಾಡುವವರೆಗೂ ಸಾವು ಮತ್ತು ಬದುಕು ಎರಡೂ ಸ್ಥಿತಿಗಳಲ್ಲಿರುತ್ತದೆ, ಆದರೆ ಅಳತೆಗೊಳಪಟ್ಟಾಗ ಯಾವುದಾದರೂ ಒಂದು ಸ್ಥಿತಿಯಲ್ಲಿ ವ್ಯಕ್ತಗೊಳ್ಳುತ್ತದೆ!
ಅರೆ, ಇದೊಳ್ಳೆ ಕತೆಯಾಯ್ತಲ್ಲ! ಏಕಕಾಲದಲ್ಲಿ ಮೃತವಾಗಿಯೂ ಜೀವಂತವಾಗಿಯೂ ಇರುವುದು ಹೇಗೆ ಸಾಧ್ಯ ಅಂತೆಲ್ಲ ಶ್ರೋಡಿಂಗರ್ ಬೆಕ್ಕಿನ ಬಗ್ಗೆ ಶಾಸ್ತ್ರಬದ್ಧ ಚರ್ಚೆಗಳೆಲ್ಲ ಬಹಳ ನಡೆದಿವೆ. ಈ ಪೈಕಿ ಡೇವಿಡ್ ಡಾಯಿಶ್ ಎಂಬ ಬ್ರಿಟಿಷ್ ವಿಜ್ಞಾನಿಯು ಶ್ರೋಡಿಂಗರ್ ಬೆಕ್ಕಿನ ಪ್ರಕರಣ ವಿವರಿಸಿದ ಬಗೆ ಆಸಕ್ತಿಕರವಾಗಿದೆ. ನೋಡಿ… ಪರಮಾಣು ಹಂತದಲ್ಲಿ ಶ್ರೋಡಿಂಗರ್ ಬೆಕ್ಕಿನ ಬಾಕ್ಸ್ ಬಹುವಿಶ್ವಗಳಲ್ಲಿ ಏಕಕಾಲದಲ್ಲಿರುತ್ತದೆ. ಆ ಸಾಧನದಿಂದ ವಿಷಾನಿಲ ಚಿಮ್ಮುವ ಹಂತದವರೆಗೂ ಎಲ್ಲವೂ ಸೇಮ್ ಸೇಮ್. ಆ ನಂತರ ಕೆಲವು ವಿಶ್ವಗಳಲ್ಲಿ ಬೆಕ್ಕು ಸಾಯುತ್ತದೆ, ಇನ್ನು ಕೆಲವದರಲ್ಲಿ ಬದುಕುತ್ತದೆ. ಆನಂತರದ ಇತಿಹಾಸಪಥ ಬೇರೆ ದಾರಿಯಲ್ಲೇ ಸಾಗುತ್ತದೆ. ನೀವು ಪರಿಶೀಲನೆಗೊಳಪಡಿಸಿದ ವಿಶ್ವದಲ್ಲಿ ಬೆಕ್ಕು ಯಾವ ಸ್ಥಿತಿಯಲ್ಲಿತ್ತೆಂಬುದರ ಅಳತೆ ಮಾತ್ರ ನಿಮಗೆ ಸಿಗುತ್ತದೆ. ಏಕೆಂದರೆ ಈ ಸಮಾನಾಂತರ ವಿಶ್ವಗಳು ಒಂದರೊಂದಿಗೆ ಇನ್ನೊಂದು ಸಂವಾದಿಸುವ ವ್ಯವಸ್ಥೆ ಇಟ್ಟುಕೊಂಡಿಲ್ಲ. ಆದರೆ ಮುಂದೆ ಕ್ವಾಂಟಂ ಕಂಪ್ಯೂಟಿಂಗ್ ಏನಾದರೂ ಸಾಕ್ಷಾತ್ಕಾರವಾದರೆ ಅದೂ ಸಾಧ್ಯವಾದೀತೆಂಬುದು ಡಾಯಿಶ್ ಅವರ ಪರಿಕಲ್ಪನೆ.
ಈ ಕಲ್ಪನೆಯನ್ನು ನಮ್ಮ ಎದೆಗಿಳಿಸಿಕೊಳ್ಳಬೇಕೆಂದರೆ ೧೯೫೫ರಲ್ಲಿ ಹಗ್ ಎವರೆಟ್ ಎಂಬ ಸಂಶೋಧಕ ಪ್ರಸ್ತಾವಿಸಿದ ಐಡಿಯಾ ಒಂದನ್ನು ಗಮನಿಸಬಹುದು. ಅಮೀಬಾ ಎಂಬ ಸೂಕ್ಷ್ಮಜೀವಿ ತನ್ನನ್ನೇ ವಿಭಾಗಿಸಿಕೊಂಡು ಎರಡಾಗುತ್ತದಲ್ಲ… ಈ ಹಂತದಲ್ಲಿ ಅಮೀಬಾಕ್ಕೆ ಮಿದುಳೂ ಇದೆ ಎಂದು ಸುಮ್ಮನೆ ಕಲ್ಪಿಸಿಕೊಳ್ಳಿ. ಆಗ ಮುಖ್ಯಕೋಶದಿಂದ ಸೀಳಿ ಬೇರೆ ಅಮೀಬಾಗಳಾದವಕ್ಕೆ ಆ ಸೀಳುವಿಕೆ ಹಂತದವರೆಗೂ ಒಂದೇ ಸ್ಮೃತಿ, ಒಂದೇ ಅನುಭವ ಇದ್ದಿರುತ್ತದೆ ಅಲ್ಲವೆ? ಸೀಳಿ ಬೇರೆಯಾದ ನಂತರದಿಂದ ಒಂದಕ್ಕೊಂದು ಸಂಪರ್ಕವಿರುವುದಿಲ್ಲ, ಅಲ್ಲಿಂದ ಮುಂದೆ ಪ್ರತಿ ಅಮೀಬಾದ ಇತಿಹಾಸವೂ ಬೇರೆ. ಇದನ್ನೇ ನಾವು ಬೆಕ್ಕಿನ ಪ್ರಕರಣಕ್ಕೆ ಅನ್ವಯಿಸಿಕೊಂಡರೆ, ಆ ಪೆಟ್ಟಿಗೆಯೊಳಗಿನ ಸಾಧನವು ಕೆಲಸ ಮಾಡುವುದಕ್ಕೂ ಮುಂಚೆ ಅಲ್ಲಿದ್ದದ್ದು ಒಂದು ವಿಶ್ವ, ಒಂದು ಬೆಕ್ಕು, ಒಂದು ನೆನಪು. ಸಾಧನ ಟ್ರಿಗರ್ ಆದ ಕ್ಷಣದಲ್ಲೇ ವಿಶ್ವ ಎರಡಾಯಿತು, ಎರಡಕ್ಕೂ ಅವರದ್ದೇ ಆದ ಬೆಕ್ಕು ಹಾಗೂ ಪರಸ್ಪರ ಸಂಪರ್ಕವಿಲ್ಲ!
ಇದೇನಿದು, ವಿಜ್ಞಾನದ ಹೆಸರಲ್ಲಿ ವಿಚಿತ್ರ ಫಿಲಾಸಫಿ ಹೊಸೆಯಲಾಗುತ್ತಿದೆ ಎಂದಿರಾ… ಹಾಗಾದರೆ ತತ್ತ್ವಜ್ಞಾನಕ್ಕೇ ಮರಳೋಣ ಬಿಡಿ.
ಯಾವುದು ಬೆಳಕು?
ಕಿಂ ಜ್ಯೋತಿಸ್ತವ…? ನಿನಗೆ ಯಾವುದು ಬೆಳಕು ಎಂದು ಕೇಳುತ್ತ ಕೇಳುತ್ತ ಜಗದ್ಗುರು ಶಂಕರಾಚಾರ್ಯರು ಘನತತ್ತ್ವವೊಂದನ್ನು ಆದಷ್ಟೂ ಸರಳವಾಗಿ ಜನರಿಗೆ ಅರ್ಥ ಮಾಡಿಸಿದ ರೀತಿ ಮನಮುಟ್ಟುವಂತಿದೆ.
ಮಗೂ, ನಿನ್ನ ಪಾಲಿಗೆ ಬೆಳಕಾವುದಪ್ಪ?
ಈ ಪರಿ ಪ್ರಜ್ವಲಿಸುತ್ತಿದ್ದಾನಲ್ಲ ದಿನವೆಲ್ಲ ಸೂರ್ಯನು… ಆತನೇ ಬೆಳಕು. ನಮ್ಮ ಪಾಲಿಗೆ ಜಗವ ತೋರಿಸುವ ಬೆಳಕು.
ಹಾಗಾದರೆ ರಾತ್ರಿ ಯಾವುದು ಬೆಳಕು?
ರಾತ್ರಿ ಸೂರ್ಯನಿರದಿದ್ದರೇನಂತೆ, ದೀಪದ ಸಹಾಯದಿಂದ ವಸ್ತುಗಳನ್ನು ನೋಡಬಹುದು.
ರವಿಕಿರಣ, ದೀಪಗಳೆಲ್ಲ ಬೆಳಕು ಕೊಡುತ್ತಿವೆ ಸರಿ… ಆದರೆ ಅವನ್ನು ನೋಡುವ ಬೆಳಕಾವುದು?
ಅವನ್ನೆಲ್ಲ ಕಣ್ಣಿನಿಂದ ನೋಡುತ್ತೇವಾದ್ದರಿಂದ ಕಣ್ಣೇ ಬೆಳಕೆನ್ನಬಹುದು…
ಕಣ್ಣೇ ಬೆಳಕು ಎನ್ನುವುದಾದರೆ, ಆ ಕಣ್ಣುಗಳನ್ನು ಮುಚ್ಚಿದಾಗಲೂ ಏನೇನೋ ಚಿತ್ರಗಳನ್ನು ಕಾಣುವೆಯಲ್ಲ, ನೆನಪು-ಕನಸುಗಳ ಏನೇನೋ ಕಲಸಿಟ್ಟ ಚಿತ್ರಗಳಿವೆಯಲ್ಲ… ಕಣ್ಣು ಮುಚ್ಚಿದಾಗಲೂ ಅವನ್ನೆಲ್ಲ ತೋರುತ್ತಿರುವ ಬೆಳಕಾವುದದು?
ಕಣ್ಣುಮುಚ್ಚಿದರೂ ತೊಂದರೆ ಇಲ್ಲ, ಬುದ್ಧಿಯ ಮೂಲಕ ಅವನ್ನೆಲ್ಲ ನೋಡಬಹುದು…
ಅಲ್ಲಿಗೆ ಬುದ್ಧಿಯೇ ಬೆಳಕೆಂದಾಯಿತು… ಆದರೆ ಈ ಬುದ್ಧಿ ಎನ್ನುವುದಿದೆ ಎಂದು ಅದರ ಮೇಲೆ ಬೆಳಕು ಚೆಲ್ಲಿ ತೋರಿದವರಾರು, ಆ ಬೆಳಕು ಯಾವುದು?
ಅಂದರೆ… ಗುರುಗಳೇ… ನಾನೇ ಆ ಬೆಳಕು! ಆ ಬೆಳಕಲ್ಲೇ ಬುದ್ಧಿ ಹೊಳೆಯುತ್ತದೆ. ಬುದ್ಧಿಯ ಬೆಳಕಲ್ಲಿ ಕಣ್ಣು, ಅದು ಕಾಣುವ ಸೂರ್ಯಚಂದ್ರರು….ಇವೆಲ್ಲವನ್ನು ಬೆಳಗುತ್ತಿರುವ ಆ ಬೆಳಕು ನಾನೇ!
ಕಿಂ ಜ್ಯೋತಿಸ್ತವ ಭಾನುಮಾನಹನಿ ಮೇ ರಾತ್ರೌ ಪ್ರದೀಪಾದಿಕಂ
ಸ್ಯಾದೇವA ರವಿದೀಪದರ್ಶನವಿಧೌ ಕಿಂ ಜ್ಯೋತಿರಾಖ್ಯಾಹಿ ಮೇ |
ಚಕ್ಷುಸ್ತಸ್ಯ ನಿಮೀಲನಾದಿಸಮಯೇ ಕಿಂ ಧೀರ್ಧಿಯೋ ದರ್ಶನೇ
ಕಿಂ ತತ್ರಾಹಮತೋ ಭವಾನ್ ಪರಮಕಂ ಜ್ಯೋತಿಸ್ತದಸ್ಮಿ ಪ್ರಭೋ ||